ಈ ಪುಟವನ್ನು ಪ್ರಕಟಿಸಲಾಗಿದೆ
ಸಂಬಂಧ ಸೂಚನೆ
೧೫೧

ರಣಮಸ್ತಖಾನನಿಗೆ ಸಂತಾಪವಾಗಿ “ಇಂಥವನು ಯಾವನವನು, ಹೆಸರು ಹೇಳಬಾರದೆ ಒಂದು ಕೈ ನೋಡಿಬಿಡುತ್ತೇನೆ” ಎಂದು ಗಟ್ಟಿಯಾಗಿ ನುಡಿಯಬೇಕೆಂದು ಆತನು ಮಾಡಿದ್ದನು. ಆದರೆ ಆತನು ಮಾಸಾಹೇಬರಂಥ ಆತ್ಮಸಂಯಮದ ಸ್ತ್ರೀಯ ಹೊಟ್ಟೆಯಲ್ಲಿ ಹುಟ್ಟಿದವನಾದ್ದರಿಂದ, ಅಷ್ಟಕ್ಕೆ ತಡಕೊಂಡು ಸುಮ್ಮನೆ ಎಲ್ಲ ವೃತ್ತಾಂತವನ್ನು ಕೇಳಿಕೊಂಡನು. ಲೈಲಿಯು ಅಳುವದನ್ನು ನೋಡಿ ಅತನ ಹೊಟ್ಟೆಯಲ್ಲಿ ಬಹಳ ಕಷ್ಟವಾಯಿತು. ಏನು ಮಾತಾಡಬೇಕೆಂಬುದು ಆತನಿಗೆ ತಿಳಿಯದಾಯಿತು. ಅಷ್ಟರಲ್ಲಿ ಲೈಲಿಯು ಮತ್ತೆ ಆತನಿಗೆ- “ಅಪ್ಪಾ, ನಿಮ್ಮ ಅವ್ವನು ಬಹು ದೊಡ್ಡ ಮನುಷ್ಯಳು, ಮಹಾಪತಿವ್ರತೆಯು, ಆಕೆಯ ಉಗುರಿನ ಯೋಗ್ಯತೆಯನ್ನು ಸಹ ಬೇರೆ ಪತಿವ್ರತಾ ಸ್ತ್ರೀಯರು ಹೋಲಲಾರರು” ಎಂದು ಹೇಳಿದಳು. ಅದನ್ನು ಕೇಳಿ ರಣಮಸ್ತಖಾನನಿಗೆ ಬಹು ಮಟ್ಟಿಗೆ ಸಮಾಧಾನವಾಯಿತು. ಆತನು ತನ್ನ ತಾಯಿಯ ಬಳಿಗೆ ಹೋಗಿ ಆಕೆಯ ಚರಣಗಳ ಮೇಲೆ ಮಸ್ತಕವನ್ನಿಟ್ಟು ತನ್ನನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದನು. ತಮ್ಮ ಮನಸ್ಸನ್ನು ನೋಯಿಸುವ ಇಂಥ ಪ್ರಸಂಗವನ್ನು ಇನ್ನು ಪುನಃ ಬರಗೊಡುವದಿಲ್ಲೆಂದು ಆತನು ನಿರ್ಧಾರದಿಂದ ಮಾಸಾಹೇಬರಿಗೆ ಹೇಳಿದನು, ಈ ಸಂಗತಿಯು ರಣಮಸ್ತಖಾನನು ವಿಜಯನಗರದ ವಕೀಲನಾಗಿ ಬರುವದಕ್ಕೆ ಮುಂಚೆ ಕೆಲವು ವರ್ಷಗಳ ಹಿಂದೆ ಒದಗಿತ್ತು. ಅದಕ್ಕೂ ಮೊದಲು ನಾಲ್ಕು ವರ್ಷಗಳ ಹಿಂದೆ ಮಾಸಾಹೇಬರೂ ಲೈಲಿಯೂ ರಣಮಸ್ತಖಾನನ್ನು ಕಟ್ಟಿಕೊಂಡು ಬಂದು ವಿಜಾಪುರದಲ್ಲಿ ಇರಹತ್ತಿದರು. ಮಾಸಾಹೇಬರ ಪರೋಪಕಾರ ಸ್ವಭಾವ, ಸಾಧುವೃತ್ತಿಗಳ ಮೂಲಕ ಅವರ ಕೀರ್ತಿಯು ನಾಲ್ಕೂ ಕಡೆಗೆ ಪಸರಿಸುತ್ತ ರಾಣಿಯ ಮುಖಾಂತರ ಸ್ವತಃ ಬಾದಶಹರವರ ಕಿವಿಯವರೆಗೆ ಹೋಯಿತು. ಮಾಸಾಹೇಬರ ಮೇಲೆ ರಾಣಿಯು ಆ ಪ್ರಸಂಗವನ್ನು ಒದಗಿಸಿಕೊಟ್ಟಳು. ಹೀಗೆ ದರ್ಶನವಾದ ದಿವಸದಿಂದ ಬಾದಶಹನು ದೃಢಭಕ್ತಿಯು ಮಾಸಾಹೇಬರಲ್ಲಿ ಉಂಟಾಗಿ, ಅವರ ಮಗನನ್ನು ತಾವು ಕೈಹಿಡಿದು ದೊಡ್ಡ ಪದವಿಗೇರಿಸಬೇಕೆಂದು ಅವರು ನಿಶ್ಚಯಿಸಿದರು. ಬಾದಶಹರ ಕೃಪೆಯಿಂದ ರಣಮಸ್ತಖಾನನು ದಿನದಿನಕ್ಕೆ ಉತ್ಕರ್ಷವನ್ನು ಪಡೆಯಹತ್ತಿದನು. ಆತನ ಉತ್ಕರ್ಷವನ್ನು ನೋಡಿ ಉಳಿದ ಮುಸಲ್ಮಾನ ಸರದಾರರು ಹೊಟ್ಟೆಕಿಚ್ಚು ಪಡಹತ್ತಿದರು. ಇದನ್ನು ನೋಡಿ ಮಾಸಾಹೇಬರು ಅಸಮಧಾನಪಟ್ಟರು. ಈ ಹೊಟ್ಟೆಕಿಚ್ಚಿನ ಜನರು “ಇವನು ಯಾರು, ಎಲ್ಲಿಯವನು ಯಾರ ಮಗನು” ಎಂದು ತಮ್ಮ ಮಗನನ್ನು ಕಟ್ಟಿಕೊಂಡು, ಇವರ ಉಪದ್ರವ ತಗಲದ ಸ್ಥಳದಲ್ಲಿ ಒತ್ತಟ್ಟಿಗೆ ಇರಬೇಕೆಂದು ಅವರು ನಿಶ್ಚಯಿಸಿದರು.