ಈ ಪುಟವನ್ನು ಪ್ರಕಟಿಸಲಾಗಿದೆ

೨೦೨

ಕನ್ನಡಿಗರ ಕರ್ಮಕಥೆ

ಮಾಡಿ ನನ್ನನ್ನು ಅಗಲಿಹೋಗುತ್ತಿದ್ದನು. ಈಗಿನಂತೆ ರಾಮರಾಜನ ಸ್ನೇಹವನ್ನು ಸಂಪಾದಿಸುತ್ತಿದ್ದಿಲ್ಲ. ತಿರುಗಿ ಕೇಳಿದರೆ ಆತನು ರಾಮರಾಜನ ಶಾಸನದ ಉಪಾಯವನ್ನು ಯೋಚಿಸಬಹುದಾಗಿತ್ತು. ಇಂದು ಹೇಳೋಣ, ನಾಳೆ ಹೇಳೋಣವೆಂದು ನಾವು ದಿನಮೇಕ ಮಾಡಿದ್ದು ನೆಟ್ಟಗಾಗಲಿಲ್ಲ. ಇರಲಿ, ಹೋದಮಾತು ಇನ್ನು ಬರುವ ಹಾಗಿಲ್ಲ. ಇದನ್ನು ನೀನು ಕರೀಮಬಕ್ಷನನ್ನು ಸಂಗಡ ಕರೆದುಕೊಂಡು ರಣಮಸ್ತನಿದ್ದಲ್ಲಿಗೆ ಹೋಗಿ ಅವನಿಗೆ ನಮ್ಮ ಯಾವತ್ತು ನಿಜವಾದ ವರ್ತಮಾನವನ್ನು ಹೇಳಿಬಿಡು. ಮಾರ್ಜೀನೆ, ನೀನು ಹೋಗು, ನನ್ನದಿಷ್ಟು ಕಡೆಯ ಕೆಲಸವನ್ನು ಮಾಡಿಬಿಡು, ನೀನು ಮಾಡುತ್ತೇನೆಂದು ಒಮ್ಮೆ ಒಪ್ಪಿಕೊಂಡು ಬಳಿಕ ಮುಂದೆ ಎಷ್ಟು ಸಂಕಟಗಳು ಒದಗಿದರೂ ಅದನ್ನು ಲೆಕ್ಕಿಸದೆ ನೀನು ಕೆಲಸವನ್ನು ಮಾಡತಕ್ಕವಳು. ಹೋಗು, ಇದೇ ಕಡೆಯ ಕೆಲಸವು ಇನ್ನು ಪುನಃ ನನ್ನ ಕೆಲಸ ಮಾಡುವ ಪ್ರಸಂಗವು ನಿನಗೆ ಬರಲಿಕ್ಕಿಲ್ಲ, ಎಂದು ಹೇಳಿದಳು, “ಇದೇ ಕಡೆಯ ಕೆಲಸವು, ಇದೇ ಕಡೆಯ ಕೆಲಸವು” ಎಂದು ಮೂರುಸಾರೆ ಮೆಹರಜಾನಳು ಅಂದದ್ದನ್ನು ಕೇಳಿ ಮಾರ್ಜೀನೆಯು-"ತಾವು ಹೇಳುವ ಕಾರ್ಯವನ್ನು ನಾನು ಅವಶ್ಯವಾಗಿ ಮಾಡುವೆನು; “ಇದೇ ಕಡೆಯ ಕೆಲಸ”ವೆಂದು ನೀವು ಮೇಲೆ ಮೇಲೆ ಯಾಕೆ ಅನ್ನುತ್ತೀರಿ? ಇನ್ನು ಮೇಲೆ ನೀವು ನನ್ನನ್ನು ಬಿಟ್ಟು ಎಲ್ಲಿಗಾದರೂ ಹೋಗುವಿರೋ ಏನು? ನೀವು ನನ್ನನ್ನು ಅಗಲಿ ಹೋಗುವ ಹಾಗಿದ್ದರೆ, ನಾನು ನಿಮ್ಮ ಕಡೆಯ ಕೆಲಸವನ್ನು ಮಾಡುವದಕ್ಕಿಂತ ನೀವೇ ನನ್ನ ಕಡೆಯ ಕೆಲಸ ಮಾಡಿಬಿಡಿರಿ. ನೀವು ಪುಷ್ಕರಣಿಯಲ್ಲಿ ನನ್ನನ್ನು ನೂಕಿಬಿಟ್ಟರೆ ಕೆಲಸವು ಮುಗಿದುಹೋಗುವುದು.”

ಮಾರ್ಜೀನೆಯ ಈ ಮಾತುಗಳನ್ನು ಕೇಳಿ ಮೆಹೆರಜಾನಳ ಮನಸ್ಸಿಗೆ ಹ್ಯಾಗೆಹ್ಯಾಗೋ ಆಯಿತು! ಈಕೆಗೆ ತನ್ನ ವಿಚಾರವು ಗೊತ್ತಾಗಿರಬಹುದೋ ಎಂಬ ಸಂಶಯವು ಮೆಹೆರಜಾನಳನ್ನು ಬಾಧಿಸಹತ್ತಿತು ; ಆದರೆ ವಿಚಾರಾಂತದಲ್ಲಿ ಹಾಗೆ ಗೊತ್ತಾಗುವ ಸಂಭವವಿಲ್ಲೆಂದು ತರ್ಕಿಸಿ ಆಕೆಯು ಮಾರ್ಜೀನೆಯನ್ನು ಕುರಿತು- “ಅಲ್ಲೇ, ಮಾರ್ಜೀನೆ, ಕಡೆಯ ಕೆಲಸವೆಂದರೆ, ಮಹತ್ವದ ಕೆಲಸಗಳಲ್ಲಿ ಕಡೆಯದೆಂದು ನಿನಗಿಷ್ಟು ತಿಳಿಯಬಾರದೇನು? ಈ ಜನ್ಮದಲ್ಲಿ ನಮ್ಮಿಬ್ಬರಿಗೆ ಬಿಡುವ ಹಾಗಿದೆಯೇ? ನಿನ್ನ ಬಿಟ್ಟರೆ ನನಗೆ ಗತಿಯಿಲ್ಲ, ನನ್ನ ಬಿಟ್ಟರೆ ನಿನಗೆ ಗತಿಯಿಲ್ಲ. ನಿನ್ನನ್ನು ನನ್ನ ಈ ಕೈಗಳಿಂದ ಪುಷ್ಕರಣಿಯಲ್ಲಿ ನೂಕಲಾ? ಹಾಗೆ ಮಾಡುವದಕ್ಕಿಂತ ನಾವಿಬ್ಬರು ತೆಕ್ಕೆಬಿದ್ದು ಒಮ್ಮೆಲೆ ಪುಷ್ಕರಣಿಯಲ್ಲಿ ಹಾರಿಕೊಳ್ಳುವದು ನೆಟ್ಟಗಲ್ಲವೇ ? ಕಡೆಗೆ ಹಾಗೆಯೇ ಮಾಡೋಣವಂತೆ. ಮೊದಲು ರಣಮಸ್ತನಿಗೆ