ಹೋಗಿ ಇವರಿಗೆ ಆ ಕಾಳಹೊಳೆಯ ಸ್ಥಳವನ್ನು ತೋರಿಸು, ಎಂದು ಅಜ್ಞಾಪಿಸಿದನು. ಅದಕ್ಕೆ ರಣಮಸ್ತನು ಹಿಂದೆ-ಮುಂದೆ ನೋಡಹತ್ತಲು, ರಾಮರಾಜನು ಆತನನ್ನು ಕುರಿತು-ಯಾಕೆ, ಇಷ್ಟು ಅಸಂತೋಷವೇಕೆ ? ನೀನು ಈ ಕೆಲಸವನ್ನು ಬಹಳ ಉತ್ಸುಕತೆಯಿಂದ ಮಾಡಲಿಕ್ಕೆಬೇಕು. ಅನ್ನಲು ರಣಮಸ್ತನು ಸರಕಾರ್, ನನ್ನ ಅಸಂತೋಷಕ್ಕೆ ಒಂದೇ ಕಾರಣವಿರುವುದು. ತಮ್ಮನ್ನು ಅಗಲಿ ದೂರ ಹೋಗಲಿಕ್ಕೆ ನನ್ನ ಮನಸ್ಸು ಮೆಚ್ಚುವದಿಲ್ಲ. ನನ್ನನ್ನು ತಾವು ಅಂಗರಕ್ಷಕನನ್ನಾಗಿ ನಿಯಮಿಸಿಕೊಂಡಿದ್ದು, ನಮ್ಮನ್ನು ಆಗಲಿ ಎಲ್ಲಿಯೂ ಹೋಗಲಾಗದೆಂದು ತಾವು ನನ್ನನ್ನು ಈ ಮೊದಲೆ ಆಜ್ಞಾಪಿಸಿರುವದರಿಂದ ಸ್ವಲ್ಪ ಅನುಮಾನಿಸಿದೆನು ಎಂದು ಹೇಳಿದನು.
ರಣಮಸ್ತನ ಈ ಮಾತುಗಳನ್ನು ಕೇಳಿ, ರಾಮರಾಜನಿಗೆ ಬಹಳ ಕೌತುಕವಾಯಿತು. ಆತನು ಕೂಡಲೆ ರಣಮಸ್ತವನ್ನು ಕುರಿತು- ಸರಿ, ಒಳ್ಳೆಯ ಮಾತು ಸೂಚಿಸಿದೆ, ನನ್ನ ಇಚ್ಚೆಯಾದರೂ ನೀನು ನನ್ನನ್ನು ಅಗಲಿ ಹೋಗಬಾರದೆಂತಲೇ ಇರುವದು. ನಿನ್ನ ನಂಬಿಗೆಯ ಇಬ್ಬರು ಚಾರರನ್ನು ಇವರ ಸಂಗಡ ಆ ಸ್ಥಳವನ್ನು ತೋರಿಸಲಿಕ್ಕೆ ಕಳಿಸಿಕೊಟ್ಟರಾಯಿತು, ಎಂದು ಹೇಳಿದನು. ಕೂಡಲೆ ರಣಮಸ್ತನು ತನ್ನ ನಂಬಿಗೆಯ ಇಬ್ಬರು ಸೇವಕರನ್ನು ಕಳಿಸಲು, ತಿರುಮಲ-ವೆಂಕಟಾದ್ರಿಗಳು ತಮ್ಮ ತಮ್ಮ ಸೈನ್ಯಗಳನ್ನು ಕಟ್ಟಿಕೊಂಡು ಆ ಸೇವಕರೊಡನೆ ನಡೆದರು, ಇತ್ತ ಸ್ವತಃ ರಾಮರಾಜನ ಆಧಿಪತ್ಯಕ್ಕೆ ಒಳಪಟ್ಟಿದ್ದ ಸೈನ್ಯವೂ ಮಾತ್ರ ಉಳಿದವು. ರಾಮರಾಜನು ತಾನು ಮಾಡಿದ ಈ ವ್ಯವಸ್ಥೆಯೆಲ್ಲ ತನಗೆ ಬಹು ಅನುಕೂಲವಾದದ್ದೆಂದು ತಿಳಿದು ಸಂತೋಷಪಟ್ಟನು. ರಾಮರಾಜನು ಶತ್ರುಗಳ ಸುಳಿದಾಟವನ್ನು ಕಣ್ಣು ಮುಟ್ಟಿ ನೋಡುವನೋ ಅನ್ನುವಂತೆ ಆತನ ಚಾರರೂ, ರಣಮಸ್ತಖಾನನ ಚಾರರೂ ಆಗಾಗ್ಗೆ ಶತ್ರುಗಳ ಕಡೆಯ ಸುದ್ದಿಗಳನ್ನು ಹೇಳುತ್ತಲಿದ್ದರು. ಹೀಗೆ ಒಂದೆರಡು ದಿನ ರಾಮರಾಜನು ಸಮಾಧಾನದಿಂದ ಕಾಲಹರಣ ಮಾಡಿರಬಹುದು; ಆದರೆ ಅಷ್ಟರಲ್ಲಿ ಆತನ ಮನಸ್ಸು ವಿಕಲ್ಪಕ್ಕೆ ಒಳಗಾಯಿತು. ಆತನು ರಣಮಸ್ತಖಾನನನ್ನು ಕರಸಿ- “ಶತ್ರುಗಳು ಹೀಗೆ ದೌಡು ಮಾಡಿದರೆ ಹಾಗ್ಯಾದೀತು ? ನಾವು ಅವರ ಮೇಲೆ ಈ ಕಡೆಯಿಂದ ಸಾಗಿಹೋದರೆ ಹ್ಯಾಗಾದಿತು” ಇತ್ಯಾದಿ ಹಲವು ಪ್ರಶ್ನೆಗಳನ್ನು ಕೇಳಿದ ಮೇಲೆ- “ರಣಮಸ್ತ ನಮ್ಮನ್ನು ಮೋಸಗೊಳಿಸುವದಕ್ಕಾಗಿ ಶತ್ರುಗಳು ಹೀಗೆ ಹಿಂದೆಗೆಯುವ ಸೋಗು ಹಾಕಿರಬಹುದೇನು ? ಒಟ್ಟುಗೂಡಿದ ನಮ್ಮ ಸೈನ್ಯದ ಕಸುವು ಕಡಿಮೆ ಮಾಡುವದಕ್ಕಾಗಿ ಅವರು ಈ ಹಂಚಿಕೆ ತೆಗೆದಿರಬಹುದೋ?” ಎಂದು