ಈ ಪುಟವನ್ನು ಪ್ರಕಟಿಸಲಾಗಿದೆ

84/ ಕೇದಗೆ

ಈ ಲೇಖನದಲ್ಲಿ ಪ್ರಸ್ತಾವಿಸಿರುವ ವಿಷಯಗಳು ಮುಖ್ಯವಾಗಿ ತೆಂಕು ತಿಟ್ಟಿಗೆ ಸಂಬಂಧಿಸಿದವುಗಳು. ತೆಂಕುತಿಟ್ಟಿನ ಮುಖವರ್ಣಿಕೆಯಲ್ಲಿ ರೇಖಾವಿನ್ಯಾಸ ಗಳು ಹೆಚ್ಚಾಗಿದ್ದು, ಸ್ಪುಟವಾಗಿವೆ. ಇವು ವೀರಪ್ರಧಾನವಾದವುಗಳು. ತೆಂಕು ತಿಟ್ಟಿಗೂ, ತೆರುಕ್ಕುತ್ತಿಗೂ ಮುಖವರ್ಣಿಕೆಗಳಲ್ಲಿ ತುಂಬ ಸಾಮ್ಯವಿದೆ. ಬಡಗು ತಿಟ್ಟಿನ ಮುಖವರ್ಣಿಕೆಗಳು ಶೃಂಗಾರಪ್ರಧಾನವಾದವು. ಆದರೂ ಸ್ಕೂಲವಾಗಿ ಮುಖವರ್ಣಿಕೆಗಳು ಎರಡೂ ತಿಟ್ಟಿನಲ್ಲಿ ಒಂದೇ ಬಗೆಯಾಗಿವೆ.

ಈ ಮುಖವರ್ಣಿಕೆಗಳ ಅಜ್ಞಾತ ಮೂಲಪುರುಷರು ಅಸಾಧಾರಣ ಕಲಾವಿದರು. ಚಿತ್ರಕಲೆಯ ಉತ್ಕೃಷ್ಟ ಮಾದರಿಗಳನ್ನು ಸೃಷ್ಟಿಸಿದವರು. ಆಧಾರ ರೇಖೆಗಳ ಬಳಕೆ, ಸೌಂದಯ್ಯ, ವರ್ಣ ಸಂಯೋಜನೆ, ವರ್ಣವೈವಿಧ್ಯ, ಸಮತೋಲ, ಪರಸ್ಪರ ಪೂರಕತೆ, ಕೃತಕ ಆಕೃತಿಗಳಿಂದ ಭ್ರಮೆ (illusion) ನಿರ್ಮಾಣ, ನಾಜೂಕುತನ, ಸ್ವತಂತ್ರ ಶೈಲಿಯ ಸ್ಥಾಪನೆ ಈ ಎಲ್ಲ ಅಂಶಗಳಲ್ಲಿ ಯಕ್ಷಗಾನದ ಬಣ್ಣಗಾರಿಕೆ ಶ್ರೀಮಂತವಾಗಿದೆ, ಅದ್ಭುತವೆನಿಸುವಂತಿದೆ. ಬದಲಾವಣೆಯ ಆಘಾತಕ್ಕೆ ಸಿಕ್ಕಿ ಇದು ಮರೆಯಾಗುತ್ತಿರುವುದು ವ್ಯಸನಾಸ್ಪದವಾಗಿದೆ.

ಪರಂಪರೆಯ ಚೌಕಟ್ಟಿನಲ್ಲಿ ಹೊಸ ಮುಖವರ್ಣಿಕೆಗಳ ಸೃಷ್ಟಿಯ ಕೆಲಸವೂ ನಡೆದಿರುವುದು ಗಮನಾರ್ಹವಾಗಿದೆ. ದಿ. ಕುಂಬಳೆ ಕುಟ್ಯಪ್ಪು, ಚಂದ್ರಗಿರಿ ಅಂಬು, ಕರ್ಕಿ ಕೃಷ್ಣ ಹಾಸ್ಯಗಾರ ಮುಂತಾದವರು ಬಣ್ಣದ ವೇಷಗಳಲ್ಲಿ ಹೊಸ ರಚನೆಗಳನ್ನು ತೋರಿಸಿದ್ದಾರೆ. ಡಾ.ಶಿವರಾಮ ಕಾರಂತರು ಕೆಲವು ವೇಷಗಳಿಗೆ ಹೊಸ ಮುಖವರ್ಣಿಕೆಗಳನ್ನು ಸೃಷ್ಟಿಸಿದ್ದಾರೆ. (ನೋಡಿ: ಯಕ್ಷಗಾನ-ಮೈಸೂರು ವಿ. ವಿ. 1975) ಅಮೃತ ಸೋಮೇಶ್ವರರು ಕೆಲವು ಹೊಸ ವರ್ಣಿಕೆಗಳನ್ನು ಸೂಚಿಸಿ ಪ್ರಯೋಗ ಮಾಡಿಸಿದ್ದಾರೆ. ಇಂತಹ ಪ್ರಯೋಗಗಳು ಶೈಲಿಯನ್ನು ಶ್ರೀಮಂತಗೊಳಿಸುವ ಶ್ಲಾಘ ಯತ್ನಗಳಾಗಿವೆ. ಆದರೆ ದುರ್ಬಲ ವಾಸ್ತವಿಕತೆಯತ್ತ ಮುಖ ಮಾಡಿರುವ ಯಕ್ಷಗಾನದ ಇಂದಿನ ಪರಿವರ್ತನದ ಗತಿಯನ್ನು ಕಂಡಾಗ ಸಂಘಟಿತ ಪ್ರಯತ್ನವಾಗದಿದ್ದರೆ ರಮ್ಯಾದ್ಭುತ ಕಲ್ಪನಾಲೋಕವನ್ನು ತೆರೆದು ತೋರುವ ಶ್ರೀಮಂತ ಚಿತ್ರಶೈಲಿಯೊಂದರ ಬಹುಭಾಗ ಕಣ್ಮರೆಯಾಗುವ ಸ್ಪಷ್ಟ ಸಾಧ್ಯತೆ ಕಂಡು ಬರುತ್ತಿದೆ.


ಋಣಿ ಸೂಚಿಸಿ:

  1. ಸೇಡಿಯಾಪು ಕೃಷ್ಣ ಭಟ್ಟರ ಲೇಖನ, ಯಕ್ಷಗಾನ ಮಕರಂದ, ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, 1980
  2. ಬಣ್ಣದ ಪೇಪ, ಮುಳಿಯ ಮಹಾಬಲ ಭಟ್ಟ, ಕನ್ನಡ ಸಂಘ, ಮಂಗಳೂರು 1981
  3. ಶ್ರೀ ಅಮೃತ ಸೋಮೇಶ್ವರರು ನೀಡಿದ ಕೆಲವು ಮಾಹಿತಿಗಳು.

ತುಷಾರ ಮಣಿಪಾಲ, ಡಿಸೆಂಬರ್ 1985