ಕಾಲ ಮಹಿಮೆ.
ತಮ್ಮ ಮಗಳು ಶೀಲಾ ತಂದ ಸುದ್ದಿಯಿಂದ ಕೇಶವರಾಯರು ಆನಂದ ಹೊಂದಿದ್ದರೂ, ಮನೆಯ ಹೊಸ್ತಿಲನ್ನು ದಾಟಿ ಬೀದಿಗೆ ಇಳಿಯುವ ಮೊದಲೇ ಕಾಗೆಯೊಂದು ಬಲದಿಂದ ಎಡಬದಿಗೆ ಹಾರಿಹೋದದ್ದನ್ನು ಕಂಡು, ಅವರ ಮನಸ್ಸು ಸ್ವಲ್ಪ ಅಸ್ತವ್ಯಸ್ತವಾಯಿತು. ಹಕ್ಕಿಗಳ ಹಾರಾಟದ ಶಕುನಾಪಶಕುನಗಳನ್ನು ಎಣಿಸುವಷ್ಟು ಸನಾತನ ಶರಿಣರಾಗಿರಲಿಲ್ಲ ಕೇಶವರಾಯರು. ಆದರೂ ಮಾಡಹೊರಟ ಕೆಲಸವೇ ಅಷ್ಟೊಂದು ಮಹತ್ವದ್ದಿತು. ಅದಕ್ಕೆ–
ದಿನವೂ ಶಾಲೆಗೆ ಹೋಗುವ ವಿದ್ಯಾರ್ಥಿ, ಮನೆ ಬಿಟ್ಟಾಕ್ಷಣ, ಎದುರು ಯಾರು ಬಂದರು ಎಂಬುದನ್ನು ಪರಿಗಣಿಸಲಾರ. ಆದರೆ ಪರೀಕ್ಷೆಯ ದಿನ ಮಾತ್ರ, ಎದುರಿಗೆ ಬಂದ ವ್ಯಕ್ತಿಯನ್ನ ದೃಷ್ಟಿಸಿ ಅದರ ಮೇಲಿಂದ ತಮ್ಮ ಶಕುನಾಪಶಕುನದ ಫಲಗಳನ್ನು ಕಟ್ಟುತ್ತಾರಲ್ಲವೇ?
ಹಾಗೇ ಕೇಶವರಾಯರು ಈ ಮೊದಲು ಎಷ್ಟೋ ಸಲ ಮನೆ ಬಿಟ್ಟು ಹೊರಬಿದ್ದುದೂ ಉಂಟು. ಆದರೆ ಎಂದೂ ಶಕುನಾಪಶಕುನದತ್ತ ಲಕ್ಷವನ್ನೇ ಕೊಡದವರು ಇಂದೇಕೋ, ಆ ಬದಿಗೆ ತಮ್ಮ ಲಕ್ಷವನ್ನು ಹೊರಳಿಸಿದ್ದರು.
"ಎಲಾ ನಿನs" ಎಂದು ತಮ್ಮಷ್ಟಕ್ಕೆ ತಾವೇ ಮನಸ್ಸಿನಲ್ಲಿ ಆ ಕಾಗೆಯನ್ನು ಶಪಿಸುತ್ತ ಹಾಗೇ ಮುಂದುವರಿದರು.
ದಾರಿಯುದ್ದಕ್ಕೂ ನಡೆದಂತೆ ನಿರಾಶೆ ಅವರನ್ನು ಮುತ್ತತೊಡಗಿತ್ತು. ಕಾಗೆ ಎಡಗಟ್ಟಿದುದರ ಪರಿಣಾಮ ಅದು. ಆದರೂ ಅವರಲ್ಲಿಯ ಸುಧಾರಕತೆ, ಅವರ ಮನಸ್ಸಿಗೆ ಸಮಾಧಾನ ತಂದುಕೊಟ್ಟು ಆ ನಿರಾಶೆಯನ್ನು ಹೊಡೆದೋಡಿಸುತ್ತಿತ್ತು. ಅಕ್ಕಪಕ್ಕದಲ್ಲಿ ನಡೆದ ಜನರ ಚಲನವಲನದತ್ತ ಅವರ ಲಕ್ಷವೇ ಇರಲಿಲ್ಲ. ನಡಿಗೆಯಲ್ಲಿ ಸ್ವಲ್ಪ ಶೀಘ್ರತೆಯನ್ನು ತಂದು ದಾರಿಯನ್ನು ಆಕ್ರಮಿಸ ತೊಡಗಿದರು. ಅವರ ಮನಸ್ಸಿನ ಮುಂದೆ ಕುಣಿಯುತ್ತಿದ್ದುದು ಅವರ ಮಗಳು ಶೀಲೆಯ ಮದುವೆಯ ಸಮಸ್ಯೆ.
ಹಾಗೆ ನೋಡಿದರೆ ಕೇಶವರಾಯರಿಗೆ ತಮ್ಮ ಮಗಳ ಲಗ್ನದ ಚಿಂತೆಯೇ ಇರಲಿಲ್ಲ. ಶೀಲೆ ಮತ್ತು ವಸಂತನ ಪ್ರೇಮ ಬೆಳೆದು ಬಂದುದು ಅವರಿಗೆ ಗೊತ್ತಿತ್ತು ಅವರಿಬ್ಬರು ಈ ಮೊದಲೇ ಪರಸ್ಪರರು ವಚನದದ್ಧರಾದುದೂ ಅವರಿಗೆ ಗೊತ್ತಿತ್ತು. ವಸಂತ ಕೇಶವರಾಯರಿಗೆ ಅಪರಿಚಿತನಲ್ಲ, ದೂರಿನವನೂ ಅಲ್ಲ, ವಸಂತ ಅವರ ಸೋದರಳಿಯ. ತಾಯಿಯನ್ನು ಕಳೆದುಕೊಂಡ ನಂತರ ವಸಂತ ಸ್ವಲ್ಪ ದೂರಿನವನಾಗಿದ್ದ. ಆದರೂ ವಸಂತನ ತಂದೆ ಮಾಧವರಾಯರು, ಕೇಶವರಾಯರಿಗೆ ಸ್ನೇಹಿತರಾಗಿಯೇ ಉಳಿದಿದ್ದರು. ನಡುವಿನ ಸೇತುವೆ ಮುರಿದಷ್ಟಕ್ಕೆ ಸಂಬಂಧ ಬಿಡಬಾರದೆಂದು, ಮಾಧವರಾಯರು ತಮ್ಮ ಹೆಂಡತಿ ತೀರಿದ ನಂತರ ತಮ್ಮ ಮಗ ವಸಂತನಿಗೆ, ಕೇಶವರಾಯನ ಮಗಳು ಶೀಲೆಯನ್ನು ತೆಗೆದುಕೊಂಡು, ಮುರಿದುಹೋದ ಸಂಬಂಧವನ್ನು ಭದ್ರಪಡಿಸಬೇಕೆಂದು ನಿಶ್ಚಯಿಸಿದ್ದರು. ಅವರ ಈ ಇಚ್ಛೆಯಿಂದ ಕೇಶವರಾಯರ ತಲೆಯ ಮೇಲಿನ ದೊಡ್ಡ ಭಾರ ಇಳಿದಂತಾಗಿತ್ತು.
ಇದೆಲ್ಲಕ್ಕೂ ಕಾರಣವೆಂದರೆ, ಕೇಶವರಾಯರ ಮತ್ತು ಮಾಧವರಾಯರ ಅನ್ಯೋನ್ಯ ಸ್ನೇಹ ಸಂಬಂಧ. ಮೇಲಾಗಿ ಇಬ್ಬರೂ ಸಮದುಃಖಿಗಳು. ಇಬ್ಬರೂ ಅಷ್ಟು ಶಿರಿವಂತರಾಗಿರಲಿಲ್ಲ. ಅವರಿಬ್ಬರೂ ಅದೇ ಊರಲ್ಲಿ ಬೇರೆ ಬೇರೆ ಕಚೇರಿಯಲ್ಲಿ ಕಾರಕೂನರಾಗಿದ್ದರು, ಈ ಮೊದಲು ಇಬ್ಬರೂ ಒಂದೇ ಓಣಿಯಲ್ಲಿ ಅಕ್ಕ ಪಕ್ಕದವರಾಗಿಯೇ ಇರುತ್ತಿದ್ದರು. ಆಗಿನಿಂದಲೇ ವಸಂತ ಮತ್ತು ಶೀಲೆಯರಲ್ಲಿ ಹೆಚ್ಚು ಸ್ನೇಹ ಬೆಳೆದು ಬಂದಿತ್ತು. ಮೇಲಾಗಿ ತಮ್ಮಿಬ್ಬರ ಮದುವೆಯಾಗುವದೇ ಖಂಡಿತ ಎಂಬುದು ಇಬ್ಬರಿಗೂ ಗೊತ್ತಾಗಿದ್ದರಿಂದ, ಅವರ ಸ್ನೇಹ, ಪರಿಚಯ, ಪ್ರೇಮಕ್ಕೆ ಯಾವ ಬಂಧನವೂ ಇರಲಿಲ್ಲ. ಇದೆಲ್ಲ ೫ ವರುಷಗಳ ಹಿಂದಿನವರೆಗೆ ಸುಸೂತ್ರವಾಗಿ ಸಾಗಿತ್ತು. ಮುಂದೆ ಮಾತ್ರ ಜಗತ್ತಿನಲ್ಲಿ ಮಹಾಯುದ್ಧ ಪ್ರಾರಂಭವಾಯಿತು. ಮಧ್ಯಮ ವರ್ಗದ ಜನ ಚಡಪಡಿಸಲಾರಂಭಿಸಿದರು. ಬಂದ ಪಗಾರವನ್ನು ಹೊಟ್ಟೆಗಾಗಿ ವೆಚ್ಚ ಮಾಡಿದರೆ, ಬಟ್ಟೆಗೆ ಕೊರತೆ ಬಿದ್ದು ಬತ್ತಲೇ ಇರುವ ಪ್ರಸಂಗ, ಬಟ್ಟೆಗೆ ವೆಚ್ಚ ಮಾಡಿದರೆ ಬರೀ ಹೊಟ್ಟೆಯಿಂದಿರಬೇಕಾದ ಪ್ರಸಂಗ ಅವರಿಗೆ ಬರ ತೊಡಗಿದವು. ಆದರೆ ಹೊಟ್ಟೆ ಬಟ್ಟೆಗಳನ್ನು ಪುಕ್ಕಟೆ ನೋಡಿಕೊಂಡು ಮೇಲೆ ಮತ್ತೆ ರೂಪಾಯಿಗಳನ್ನು ಕೊಡುವ ಮಹಾಯುದ್ಧ ಇಂಥ ಮಧ್ಯಮ ವರ್ಗದವರಿಗೊಂದು ಮಹಾದ್ವಾರವನ್ನೇ ತೆರೆಯಿಸಿತು. ೧೯೩೯ನೇ ಇಸ್ವಿ ಕೆಲವರಿಗೆ ಕಷ್ಟ ತಂದೊಡ್ಡಿದರೂ ಇನ್ನು ಕೆಲವರಿಗೆ ಸಂತೋಷಗೊಳಿಸಿತು. ಇದು ಮಹಾಯುದ್ಧದ ಮೋಡಗಳ ಮರೆಯಲ್ಲಿ ಅವಿತ ಸುಂದರ ಸೌದಾಮಿನಿ.
ಕಾರಕೂನಿಕೆಯಲ್ಲಿ ಬೇಸತ್ತು ಹೋದ ಮಾಧವರಾಯರು, ತಮ್ಮ ಮಗ ವಸಂತನನ್ನು ನಿರ್ಭಯರಾಗಿ ಸೈನ್ಯಖಾತೆಗೆ ಕಳಿಸಿಬಿಟ್ಟರು. ಕೇಶವರಾಯರಿಗೂ ಮಗಳಿರುವ ಬದಲು ಮಗನೇ ಇದ್ದಿದ್ದರೆ, ಅವರೂ ಮಾಧವರಾಯರ ಮಾರ್ಗವನ್ನೇ ಅವಲಂಬಿಸುತ್ತಿದ್ದರು. ಆದರೆ ದುರ್ದೈವಕ್ಕೆ ಅವರು ಹೆಣ್ಣಿನ ತಂದೆಯಾಗಿದ್ದರು. ಆದೂ ಹಿಂದುಸ್ಥಾನದಲ್ಲಿ, ಮೇಲಾಗಿ ಕರ್ನಾಟಕದಲ್ಲಿ.
ವಸಂತ ಸೈನ್ಯ ಖಾತೆಯನ್ನು ಸೇರಿದಂದಿನಿಂದ, ಮಾಧವರಾಯರಿಗೆ ಶುಕ್ರದೆಸೆ ಪ್ರಾರಂಭವಾಯಿತು. ಮನೆಯಲ್ಲಿ ಊಟ ಉಪಚಾರದ ಖರ್ಚು ತಮ್ಮೊಬ್ಬರದೇ. ಆದರೆ ಬರುವ ಸಂಬಳ ಇಮ್ಮಡಿಯಾಯಿತು. ವಸಂತನಿಂದ ಪ್ರತಿತಿಂಗಳು ತಪ್ಪದೇ ದುಡ್ಡು ಬರುತ್ತಿತ್ತು. ಮುಂದೆ ಅವನು ಇಟಲಿ ರಣರಂಗಕ್ಕೆ ಹೋದಮೇಲೆಯೂ ಮೊದಲಿನಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫ್ಯಾಮಿಲಿ ಅಲಾಟಮೆಂಟ ಬರತೊಡಗಿತು. ಇದೆಲ್ಲದರ ಪರಿಣಾಮದಿಂದ ಮಾಧವರಾಯರ ಇರುವಿನಲ್ಲಿ ಕೊಂಚ ಮಾರ್ಪಾಟಾಗತೊಡಗಿತು. ಅವರು ಊರೊಳಗಿನ ಬಾಡಿಗೆ ಮನೆ ಬಿಟ್ಟು ಮಾಳಮರಡಿಯಲ್ಲಿ ಮನೆಯನ್ನು ಬಾಡಿಗೆಗೆ ತೆಗೆದುಕೊಂಡರು. ಮುಂದೆ ವಸಂತ ಇಟಲಿಯಲ್ಲಿ ತುಂಬ ಶೌರ್ಯದಿಂದ ಕಾದುದರ ಪರಿಣಾಮವಾಗಿ ಅವನಿಗೆ M. B. E. ಪದವಿ ದೊರಕಿತು.
ಈ ಪದವಿಯ ಬಲದಿಂದ ಮಾಧವರಾಯರು ಮಾಳಮರಡಿಯಲ್ಲಿ ಒ೦ದು ಬಂಗಲೆಯನ್ನೇ ಮಾರಲಿಕ್ಕೆ ತೆಗೆದುಕೊಂಡು ಇರತೊಡಗಿದರು. ಇದೆಲ್ಲ ಮಾರ್ಪಾಡು ಕೇಶವರಾಯರು ತಮ್ಮ ಕಣ್ಣುಗಳಿಂದಲೇ ನೋಡಿದ್ದರು. ಅದರ ವಿರುದ್ಧ ರೀತಿಯಲ್ಲಿ ತಮ್ಮ ಅವನತಿಯಾಗುತ್ತಿರುವದನ್ನು ಅವರು ಗಮನಿಸಿದ್ದರು. ಬೆಲೆಗಳು ಏರಿದರೂ ತಮ್ಮ ಸಂಬಳ ಬೆಳೆಯುವ ಲಕ್ಷಣಗಳೇ ಅವರಿಗೆ ತೋರುತ್ತಿರಲಿಲ್ಲ. ತನ್ನ ಮತ್ತು ಮಗಳ ಹೊಟ್ಟೆ ಬಟ್ಟೆಗೆ ಎಲ್ಲ ಸಂಬಳ, ಮುಗಿದು ಹೋಗುತ್ತಿತ್ತು. ಪ್ರತಿ ತಿಂಗಳು ಮನೆಯ ಬಾಡಿಗೆಯನ್ನು ಕೊಡುವದು ಅವರಿಗೆ ದುಸ್ತರವಾಗುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ಮಾಧವರಾಯರ ಹಾಗೆ ತಾವೂ ಮನೆ ಕೊಳ್ಳುವ ಮಾತು ಅವರಾಡುವದು ಸಾಧ್ಯವಿರಲಿಲ್ಲ. ಒಂದು ವೇಳೆ ಅವರು ಆಡಬೇಕೆಂದಿದ್ದರೆ, ಅವರನ್ನು ಜನ ಹುಚ್ಚರಲ್ಲಿ ಎಣಿಸುತ್ತಿದ್ದರೆಂಬುದಕ್ಕೆ ಸಂದೇಹವೇ ಇಲ್ಲ.
ಆದರೂ ಕೇಶವರಾಯರಿಗೆ ಒಂದು ಸಮಾಧಾನವಾಗಿತ್ತು. ತಾವು ಸಿರಿವಂತರಾಗಲಿಲ್ಲವಾದರೂ ತನ್ನ ಅಳಿಯನಾದರೂ ಆ ಮಟ್ಟವನ್ನು ಮುಟ್ಟಿದನಲ್ಲಾ ಎಂದು ಶೀಲೆಯ ಸುಂದರ ಭವಿತವ್ಯದ ಸ್ವಪ್ನ ಅವರಿಗೆ ಅಂಥ ಬಡತನದಲ್ಲಿಯೂ ಆನಂದ ತಂದು ಕೊಡುತ್ತಿತ್ತು.
ಆ ಕನಸು ಇಂದು ನನಸಾಗುವದರಲ್ಲಿದೆ. ವಸಂತ ಇಂದು ೫ ವರುಷಗಳ ನಂತರ ಇಟಲಿ ರಣರಂಗದಿಂದ, ರಜೆಯನ್ನು ಪಡೆದುಕೊಂಡು ಮನೆಗೆ ಬಂದ ಸುದ್ದಿ ಕೇಳಿ ಕೇಶವರಾಯರು ಮಾಧವರಾಯರ ಮನೆಯತ್ತ ಶೀಲೆಯ ಮದುವೆಯ ಮಾತನ್ನಾಡುವದಕ್ಕೆ ನಡೆದಿದ್ದರು. ಈ ಐಯ್ದು ವರುಷಗಳ ಅವಧಿಯಲ್ಲಿ ಕೇಶವರಾಯರಿಗೆ ಮಾಧವರಾಯರು ಎರಡು ಮೂರು ಸಲ ಭೆಟ್ಟಿಯಾಗಿದ್ದರು. "ಮನೆ ದೂರಾಗಿದೆ" ಎಂಬ ನೆವ ಹೇಳಿ ತಮ್ಮ ಅಪರೂಪತೆಯನ್ನು ಮಾಧವರಾಯರು ಮರೆಮಾಡಿಕೊಳ್ಳತ್ತಿದ್ದರು.
ದಾರಿಯುದ್ದಕ್ಕೂ ನಡೆದಂತೆ ಕೇಶವರಾಯರ ಮನಸ್ಸಿನ ಮುಂದೆ ಹಿಂದಿನ ಈ ಕಥೆಯಲ್ಲ, ಚಲಚ್ಚಿತ್ರದಂತೆ ನುಸುಳಿ ಮಾಯವಾಯಿತು. ಈ ವೇಳೆಗಾಗಲೇ ಅವರು ಮಾಧವರಾಯರ ಬಂಗಲೆಯ ಗೇಟಿಗೆ ಬಂದಿದ್ದರು. ಮಾಧವರಾಯರ ಮನೆಯ ಬಾಗಿಲು ವಾಡಿಕೆಯಂತೆ ಮುಚ್ಚಿತ್ತು. ಅದೂ ಒ೦ದು ಕೇಶವರಾಯರಿಗೆ ಅಪಶಕುನವಾಗಿ ತೋರಿತು. ಆದರೂ ಬಾಗಿಲಿನಲ್ಲಿಯೇ ಇದ್ದ ಕಾಲ್ ಬೆಲ್ (ಕರೆಯುವ ಗಂಟೆ) ಕಂಡು ಧೈರ್ಯ ತಂದುಕೊಂಡ. ಅದರ ಬಿರಡೆಯನ್ನು ಅದುಮಿದರು. ಬಿರಡೆಯನ್ನು ಅದಮುವಾಗ ತಮ್ಮ ಕೈಗಳು ನಡುಗುತ್ತಿರುವುದು ಅವರ ಲಕ್ಷಕ್ಕೆ ಬಂದಿತು. ಎಷ್ಟಂದರೂ ತಾನು ಹೆಣ್ಣಿನ ತಂದೆಯಲ್ಲವೇ ಎಂದು ಸಮಾಧಾನ ತಂದುಕೊಂಡರು.
ಮರುಕ್ಷಣ ಬಾಗಿಲು ತೆರೆಯಿತು. ಬಾಗಿಲು ತೆಗೆದವನು ಬೇರೆ ಯಾರು ಆಗಿರಲಿಲ್ಲ ವಸಂತನೇ ಬಾಗಿಲನು ತೆಗೆದಿದ್ದ. ಆದರೆ ಕೇಶವರಾಯರು ಅವನನ್ನು ಮೊದಲು ಗುರುತಿಸದೇ ಹೋದರು. ವಸಂತನಲ್ಲಿ ಅಷ್ಟೊಂದು ಮಾರ್ಪಾಡು ಆಗಿ ಹೋಗಿತ್ತು. ಆದರೂ ತಮ್ಮ ಸೋದರಳಿಯನನ್ನು ಗುರುತಿಸುವದು ಅಸಾಧ್ಯವೇ? ಕೇಶವರಾಯರು ಅವನನ್ನು ಗುರುತಿಸಿ ಸಾಮೋಪಚಾರವಾಗಿ ಮಾತನಾಡಿಸಿದರು:
"ವಸಂತಾ, ಎಷ್ಟು ಸುಂದರನಾಗಿ ಬಿಟ್ಟಿದ್ದೀಯಪಾ, ಯಾವಾಗ ಬಂದೆ?"
"ತಾವು ಯಾರು ?"
ವಸಂತನ ಈ ಪ್ರಶ್ನೆಯಿ೦ದ ಕೇಶವರಾಯರು ನೆಲಕ್ಕೆ ಇಳಿದುಬಿಟ್ಟರು. ಆದರೂ ತಮ್ಮನ್ನು ಸಾವರಿಸಿಕೊಂಡು ಮತ್ತೆ ತೊದಲುತ್ತ ಹೇಳಿದರು:
"ನಾನು ಕೇಶವರಾಯಾ, ನಿನ್ನ ಮಾಮಾ, ಏನು ಗುರುತು ಹತ್ತಲಿಲ್ಲೇನು?"
"ಓಹೋ, ಕೇಶೂಮಾಮಾ ಏನು? ಬರ್‍ರಿ ಒಳಗ." ಎಂದು ಹೇಳಿ ಒಳಗೆ ಕರೆದೊಯ್ದು, ಕೂಡಿಸಿ, ಮತ್ತೆ–-
"ಕೂಡ್ರಿ, ನಾಯೀಗ ಅಪ್ಪನ್ನ ಕರಕೊಂಡು ಬರ್‍ತೀನಿ” ಎಂದು ಹೇಳಿ ವಸಂತ ಒಳಗೆ ಹೋದ.
ಮುಂದೆ ೫ ನಿಮಿಷಗಳ ನಂತರ ಮಾಧವರಾಯರು ಹೊರಬಂದ ಬದಿಯಲ್ಲಿಯೇ ಕುಳಿತರು. ನಮಸ್ಕಾರ ಕ್ಷೇಮಸಮಾಚಾರದ ಮಾತು ಮುಗಿದ ಮೇಲೆ ಕೇಶವರಾಯರೇ ತಮ್ಮ ಮುಖ್ಯ ಮಾತಿನತ್ತ ಹೊರಳಿದರು.
"ಈಗ ವಸಂತ ಹ್ಯಾಂಗಾದರೂ ೪ ತಿಂಗಳ ರಜಾ ತಗೊಂಡು ಬಂದಾನ ಮತ್ತು ಈಗ ಕಾರ್ತಿಕ ಮಾಸ, ಶುಭ ಮುಹೂರ್ತ ನೋಡಿ ಮದುವೆ ಮಾಡಿ ಬಿಡೋಣ"
"ಮದುವಿ, ಯಾರ ಕೂಡೋ? ಕನ್ಯಾ ಗಿನ್ಯಾ ಠರಾಯಿಸದೇ, ಲಗ್ನ ಒಮ್ಮೆಲೆ ಆಗಂದ್ರ ಹ್ಯಾಂಗಪಾ. ಈಗ ಎರಡು ಮೂರು ಕನ್ಯಾ ಬಂದು ಹೋಗಾವ, ಕನ್ಯಾ ಇನ್ನೂ ಅವನ ಮನಸಿಗೆ ಬಂದಿಲ್ಲ. ವರದಕ್ಷಿಣೇನೂ ನನ್ನ ಮನಸಿಗೆ ಬಂದಿಲ್ಲ." ಮಾಧವರಾಯರ ಈ ಮಾತು ಕೇಳಿಯಂತೂ ಕೇಶವರಾಯರು ಅಲ್ಲಿಯೆ ಪ್ರಾಣ ಬಿಡುವ ಸ್ಥಿತಿಗೆ ಬಂದರು. ಆದರೇನು, ಅವರು ಅಷ್ಟು ಪುಣ್ಯವಂತರಲ್ಲವೇನೋ, ಜೀವಂತರಾಗಿಯೇ ಉಳಿದಿದ್ದರು. ನಿರಾಶೆಯ ಧ್ವನಿಯಲ್ಲಿಯೆ ಕೇಶವರಾಯರು ಬಿನ್ನವಿಸಿಕೊಂಡರು:
"ಮಾಧೂ, ನೀ ಹಿಂಗ ಮಾತಾಡೀ ಅಂತ ಕಲ್ಪನಾ ಇರಲಿಲ್ಲವಾ ನನಗ. ಹಿಂದ, ನಾವಿಬ್ಬರೂ ಠರಾಯಿಸಿಕೊಂಡದ್ದು ಮರತಿ ಏನು? ಅದನ್ನು ಮರೆತರೂ ವಸಂತ, ಶೀಲಾ ಇಬ್ಬರೂ ಒಬ್ಬರಮ್ಯಾಲೊಬ್ಬರು ಎಷ್ಟು ಪ್ರೇಮದಿಂದ ಇದ್ದಾರೆ ಅನ್ನೋದು ನಿನಗೆ ಗೊತ್ತದ. ಅವರ ಪವಿತ್ರ ಪ್ರೇಮದ ಸಲುವಾಗಿಯಾದರೂ ನೀವು ಈ ಲಗ್ನಕ್ಕೆ ಒಪ್ಪಬೇಕು."
ಅವರ ಮಾತಿನತ್ತ ಲಕ್ಷಗೊಡದೆ "ಪ್ರೇಮ ಗೀಮ ನನಗೆ ಗೊತ್ತಿಲ್ಲ. ಅದನ್ನ ಅವಗs ಕೇಳಿಕೋ" ಎಂದು ಮಾಧವರಾಯರು ಒಳ ನಡೆದುಬಿಟ್ಟರು. ಅವರ ಬೆನ್ನ ಹಿಂದೆಯೇ ಬಂದು ನಿಂತಿದ್ದ ವಸಂತ, ಅಪ್ಪನ ಮಾತು ಮುಗಿದಾಕ್ಷಣ, ಖಡಾಖಂಡಿತವಾಗಿ ಹೇಳಿಬಿಟ್ಟ:
"ಸಣ್ಣ ಹುಡುಗರು ಆಟಾ ಆಡೂ ಮುಂದ ಲಗ್ನ ಮಾಡತಿರ್‍ತಾರ ಅಂತ ಹೇಳಿ, ಅದು ಖರೇ ಅಂತ ತಿಳಿಯೋದೇನು ಮಾಮಾ." ನನಗ ಈಗ ಐದು ಸಾವಿರ ರೂಪಾಯಿ ವರದಕ್ಷಿಣೆ ಕೊಡಲಿಕ್ಕೆ ತಯಾರಾಗೇದ ಮಂದಿ. ಅದ ಏನು ನಿನ್ನ ತಾಕತ್ತು. ನಾ ಈಗ ಕ್ಯಾಪ್ಟನ್ ವಸಂತ ಆಗೇನಿ. ನನ್ನ ಅಂತಸ್ತಿಗೆ ಸರಿಯಾಗಿ ಆಗಬೇಕಲ್ಲ."
"ಮನುಷ್ಯತ್ವದ ಮುಂದ ಅಂತಸ್ತು ಗಿಂತನ್ನು ಸುಳ್ಳಪಾ. ನನಗ ಅಂತಸ್ತು ಅಂದರೆ ಏನಂಬುದೇ ಗೊತ್ತಿಲ್ಲಪ್ಪಾ."
"ಅದು ಗೊತ್ತಿದ್ದರೆ ನೀ ಇಲ್ಲೀ ತನಕಾ ಬರಿದ್ದಿಲ್ಲ."
ಆ ಉತ್ತರದಿಂದ ಕೇಶವರಾಯರು ಸಂತ್ರಪ್ತರಾಗಿ ಎದ್ದು ಬಿಟ್ಟರು. ಆದರೆ ತಮ್ಮ ಸಿಟ್ಟನ್ನು ಯಾರ ಮೇಲೆ ತೋರಿಸುವದು? ವರಾನ್ವೇಷಣೆಗೆ ಬಂದ ತಂದೆ ಎಷ್ಟು ನಮ್ರನಾಗಿದ್ದರೂ ಕಡಿಮೆಯೇ. ಶೀಲೆ, ತಂದೆಯ ಹಾದಿಯನ್ನೇ ಕಾಯುತ್ತ ಕುಳಿತಿದ್ದಳು. ಕೇಶವರಾಯರು ಮನೆಗೆ ಬಂದು ಮಗಳಿಗೆ ನಡೆದ ಕತೆಯನ್ನು ಹೇಳಿದರು. ಸುದ್ದಿಯಿಂದ ಶೀಲೆ ಹತಾಶಳಾಗಿ ಹಾಸಿಗೆಯನ್ನೇ ಹಿಡಿದಳು. ತನ್ನ ಹಿಂದಿನ ದಿನಗಳನ್ನು ಜ್ಞಾಪಿಪಿಸಿಕೊಂಡು ಕಣ್ಣೀರನ್ನು ಕೋಡಿಯಾಗಿ ಹರಿಸಿದಳು. ತನ್ನ ಮತ್ತು ವಸಂತನಲ್ಲಿ ನಡೆದ ಪ್ರೇಮದ ಮಾತುಗಳನ್ನು ಜ್ಞಾಪಿಸಿ ಮತ್ತೆ ಮತ್ತೆ ಅಳುವದು ಅವಳಿಗೆ ಅಭ್ಯಾಸವಾಯಿತು. ನಡುನಡುವೆ ಕೇಶವರಾಯರು "ಬೇರೆ ಚಲೋ ವರ ನೋಡಿ ಮದುವೀ ಮಾಡಿ ಕೊಡ್ತೀನಿ, ವರಗಳಿಗೇನು ಕಡಿಮೆ" ಎಂದು ಮಗಳನ್ನು ಸಾಂತ್ವನಗೊಳಿಸುತ್ತಿದ್ದರು
ಮಾಸಗಳುರುಳುತ್ತಿದ್ದವು. ಹಾಗೆಯೇ ಒಂದು ವರ್ಷ ಕಳೆಯಿತು. ಒಂದು ದಿನ ಅಕಸ್ಮಾತ್ತಾಗಿ, ಶೀಲೆಯ ಹೆಸರಿನ ಪಾಕೀಟೊಂದನ್ನು ಪೋಸ್ಟಮನ್ ಕೇಶವರಾಯರ ಕೈಗಿರಿಸಿ ಹೋದ. ಕೇಶವರಾಯರು ಆಶ್ಚರ್ಯಚಕಿತರಾಗಿ ಪೋಸ್ಟಿನ ಮುದ್ರೆಯನ್ನು ನೋಡಿದರು. ಅದು ಪರದೇಶದ ಮುದ್ರೆಯಾಗಿತ್ತು. "ಶೀಲಾ" ಎಂದು ಕೇಶವರಾಯರು ಮಗಳನ್ನು
ಕೂಗಿದರು.
ಮನೆಗೆಲಸದಲ್ಲಿ ತೊಡಗಿದ ಶೀಲಾ ಒಮ್ಮೆಲೇ ಧಾವಿಸಿ ತಂದೆಯ ಬಳಿಗೆ ಬಂದಳು. ಕೇಶವರಾಯರು ಪಾಕೀಟನ್ನು ಮಗಳ ಕೈಗಿರಿಸುತ್ತ "ನೋಡು, ನಿನ್ನ ಹೆಸರ್ಲೆ ಪಾಕೀಟು ಬ೦ದದ. ಒಡದು ಓದು. ಯಾರದದ ನೋಡು. ಬಹುಶಃ ವಸಂತ೦ದು ಅ೦ತ ಕಾಣಸ್ತದ. ಶೀಲಾ ಮರುಮಾತಾಡದೇ ಪತ್ರವನ್ನು ನಡುಗುವ ಕೈಗಳಿಂದಲೇ ಒಡೆದು ಓದತೊಡಗಿದಳು.
ಪ್ರಿಯ ಶೀಲೆಗೆ––
ನಿನ್ನ ವಸಂತನ ಪ್ರೇಮಪೂರ್ವಕ ಆಶೀರ್ವಾದಗಳು. ತರುವಾಯ, ನೀನು ಮತ್ತು ಮಾವಾ ಇಬ್ಬರೂ ನನ್ನ ಮೇಲೆ ಕೋಪಿಸಿಕೊಂಡಿರಬಹುದು. ಆದರೆ, ನೀವು ಕೋಪಿಸಿಕೊಳ್ಳಬೇಡಿ. ನಾನು ಅಂದು ಐಶ್ವರ್ಯದ ಮದದಲ್ಲಿ ಏನನ್ನೋ ಮಾಮಾನಿಗೆ ಆಡಿಬಿಟ್ಟೆ. ಈಗ ನನಗೆ ತುಂಬಾ ಪಶ್ಚಾತ್ತಾಪವಾಯಿತು. ಮನುಷ್ಯತ್ವದ ಮುಂದೆ ಅಂತಸ್ತು ಗಿಂತಸ್ತು ಎಲ್ಲ ಸುಳ್ಳು ಎಂದು ಮಾಮಾ ಆಡಿದ ಮಾತು ನನ್ನ ಮನಸ್ಸನ್ನು ವಿಚಾರಕ್ಕೆ ಗುರಿಮಾಡಿತು. ಈಗ ನಿನ್ನ ಜತೆಯಲ್ಲಿಯೇ ಲಗ್ನವಾಗುವದನ್ನು ನಿರ್ಧರಿಸಿದ್ದೇನೆ. ಮಾಮಾ ನನ್ನ ಮೇಲೆ ತುಂಬಾ ಕೋಪಿಸಿಕೊಂಡಿರಬಹುದೆಂದು, ಪತ್ರವನ್ನು ಅವರಿಗೆ ಬರೆಯದೇ ನಿನಗೆ ಬರೆಯುತ್ತಿದ್ದೇನೆ. ಬಹುಶಃ ನಾಳೆಯೇ ನಮ್ಮ ದೇಶಕ್ಕೆ ತಲುಪಬಹುದು. ಇದೇ ತಿಂಗಳು ಕೊನೆಗೆ ನಾನು ರಜೆಯ ಮೇಲೆ ಊರಿಗೆ ಬರುತ್ತೇನೆ. ಲಗ್ನಕ್ಕೆ ನಿನ್ನ ತಂದೆ ಒಪ್ಪಿದರೆ ಈ ರಜೆಯಲ್ಲಿಯೇ ಲಗ್ನವಾಗಿ ಹೋಗಲಿ. ಆದರೆ ಒಂದು ಮಾತು. ಲಗ್ನ ವೈದಿಕ ಪದ್ಧತಿಯಿಂದಾಗುವದಕ್ಕೆ ನನಗೆ ಸಮ್ಮತವಿಲ್ಲ ರಜಿಸ್ಟರ್ ಪದ್ಧತಿಯಂತೆ ಲಗ್ನವಾಗಬೇಕು. ಮಾಮಾ ಇದಕ್ಕೆ ಒಪ್ಪುತ್ತಾರೋ ಇಲ್ಲವೋ ತಿಳಿಸು.
ಇತಿ ನಿನ್ನವ
ವಸಂತ.
ಓದು ಮುಗಿಸಿದಾಗ ಕೇಶವರಾಯರ ಕಣ್ಣಲ್ಲಿ ಆನಂದ ಬಾಷ್ಪಗಳು ಕಾಣಿಸಿಕೊಂಡುವು. ಶೀಲೆಯೂ ಸದ್ಗದಿತಳಾಗಿಯೇ ಹೇಳಿದಳು: "ಅಪ್ಪಾ, ವಸಂತ ಅಂಥಾ ಕೆಟ್ಟ ಮನುಷ್ಯ ಅಲ್ಲ ಅನ್ನೋದು ನನಗೆ ಗೊತ್ತಿತ್ತು"
"ಹೌದು, ಯಾರ ಅಕ್ಕನ ಮಗ ಅಂವ" ಎಂದು ಅಭಿಮಾನದಿಂದ ಕೇಶವರಾಯರು ನುಡಿದರು.
ಆ ಮಾತಿನಲ್ಲಿಯೇ ರಜಿಸ್ಟರ ಪದ್ಧತಿಯ ವಿವಾಹಕ್ಕೆ ಅವರ ಸಮ್ಮತಿ ಸಿಕ್ಕು ಹೋಗಿತ್ತು.
ವಸಂತ ಸುಶೀಲೆಯರ ಮದುವೆ ರಜಿಸ್ಟರ ಪದ್ಧತಿಯಿಂದ, ಬೆಳಗಿನಲ್ಲಿಯೇ ಜರುಗಿ ಹೋಗಿತ್ತು. ವಸಂತ ಸೂಟು ಬೂಟಿನಲ್ಲಿಯೇ ತನ್ನ ಕೋಣೆಯನ್ನು ಪ್ರವೇಶಿಸಿ ಮಂಚದ ಮೇಲೆ ಕುಳಿತ. ಗೆಳತಿಯರ ತಂಡ ಶೀಲೆಯನ್ನು ಎಳೆದುಕೊಂಡು ತಂದು ಅವನ ಕೋಣೆಯಲ್ಲಿ ಬಿಟ್ಟು ಬಾಗಿಲನ್ನು ಎಳೆದುಕೊಂಡು ನಡೆದರು. ಶೀಲೆ ತನ್ನಷ್ಟಕ್ಕೆ ತಾನೇ ಅಭಿನಂದಿಸಿಕೊಂಡಳು. ಕೊನೆಗಾದರೂ ದೈವ ತನಗೆ ಬೆಂಬಲ ನೀಡಿತೆಂದು ಅವಳಿಗೆ ಸಂತೋಷವಾಗಿತ್ತು. ಅವಳಿಗೆ ಆನಂದ ಅಪರಿಮಿತವಾಗಿತ್ತು. ಆ ಆನಂದಭರದಲ್ಲಿ ವಸಂತನ ಬಳಿ ಬಂದು, ಅವನ ಕಾಲಡಿಯಲ್ಲಿಯೇ ಕುಳಿತು, ಅವನ ಬೂಟುಗಳನ್ನು ಬಿಚ್ಚತೊಡಗಿದಳು. ವಸಂತ ನಿಶ್ಚಿಂತನಾಗಿ ಸಿಗರೇಟನ್ನು ಎಳೆಯತೊಡಗಿದ್ದ.
ಬೂಟ್ಸುಗಳನ್ನು ಕಳಚುತ್ತಿದ್ದಂತೆ ಶೀಲೆ ಒಮ್ಮೆಲೆ ಹೌಹಾರಿದಳು.
ವಸಂತ ಕರ್ಕಶ ನಗು ನಗುತ್ತ "ಏಕೆ ಅಂಜುತ್ತಿ. ಅದು ಜೋಡಿಸಿದ ಕಾಲು, ಕಟ್ಟಿಗೆಯ ಕಾಲು. ಅದರಿಂದೇನೂ ಅಪಾಯವಿಲ್ಲ. ಮಹಾಯುದ್ಧದಲ್ಲಿ ಕಾಲನ್ನು ಕಳೆದುಕೊಂಡೆ. ಅದರ ಬದಲು ಈ ಕಾಲನ್ನು ಕೂಡಿಸಬೇಕಾಯಿತು. ಕಾಲ ಮಹಿಮೆ!"
"ಕಾಲ ಮಹಿಮೆ" ಶೀಲೆ ಅಳುತ್ತ ಮುಖವನ್ನು ಮುಚ್ಚಿಕೊಂಡಳು.