ಪ್ರತಿಭಾ ಗ್ರಂಥಮಾಲೆ ಧಾರವಾಡ, ವರ್ಷ ಒಂಬತ್ತು ಕಿರಣ ಆರು
ಹೊಸ ಬೆಳಕು
ಮತ್ತು
ಇತರ ಕಥೆಗಳು.
¤
ಶ್ರೀ. ವೆಂ. ಮು. ಜೋಶಿ.
ಚಂದಾದಾರರಲ್ಲಿ ನಿವೇದನೆ.
ಪ್ರತಿಭಾ ಗ್ರಂಥಮಾಲೆಯ ಒಂಬತ್ತನೆಯ ವರುಷವು ಈ 'ಹೊಸಬೆಳಕಿ'ನೊಂದಿಗೆ ಪೂರ್ತಿಯಾಗುತ್ತಿದೆ. ಈ ವರುಷ ಐದು ಕಾದಂಬರಿಗಳನ್ನೂ ಒಂದು ಕಥಾಸಂಕಲನವನ್ನೂ ಚಂದಾದಾರರಿಗೆ ಸಲ್ಲಿಸಿದಂತಾಯ್ತು. ಯೋಜನೆಯ ಮಾಲೆಯು ಒಂಬತ್ತುನೂರು ಪುಟ ಸಾಹಿತ್ಯವನ್ನು ಸಕಾಲಕ್ಕೆ ನೀಡಿದೆಯೆಂದು ತಿಳಿಸಲು ಅಭಿಮಾನವೆನಿಸುತ್ತದೆ. ಜನೆವರಿ ೧೯೫೩ಕ್ಕೆ ಹೊಸವರ್ಷಾರಂಭವಾಗುವದು.
ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ನಮ್ಮ ನಿಯಮಿತವಾದ ಸೇವೆಯನ್ನು ಮೆಚ್ಚಿ ಕನ್ನಡಾಭಿಮಾನಿಗಳು ಕೊಡುತ್ತಿರುವ ಬೆಂಬಲವೇ ಇದಕ್ಕೆ ಕಾರಣವಾಗಿದೆ.
ಆದಷ್ಟು ಸುಂದರವಾದ ಕೃತಿಗಳನ್ನೇ ಪ್ರಕಟಿಸಬೇಕೆಂದು ಮಾಲೆಯ ನಿರ್ಧರಿಸಿದೆ. ಬರುವ ವರುಷದಲ್ಲಿ ಶ್ರೀ. ಅ. ನ. ಕೃಷ್ಣರಾಯರು, ಶ್ರೀ. ಬಸವರಾಜ ಕಟ್ಟಿಮನಿ, ಶ್ರೀ ಕೃಷ್ಣಮೂರ್ತಿ ಪುರಾಣಿಕ, ಶ್ರೀ ನೇವ ನಮಿರಾಜಮಲ್ಲ, ಶ್ರೀ ಜನಾರ್ದನ ಗುರ್ಕಾರ್ ಮೊದಲಾದ ಹೆಸರಾಂತ ಲೇಖಕರ ಉತ್ತಮ ಕಾದಂಬರಿಗಳನ್ನು ಪ್ರಕಟಿಸಬೇಕೆಂದು ನಿರ್ಧರಿಸಲಾಗಿದೆಯೆಂದು ಅರಿಕೆ ಮಾಡಿಕೊಳ್ಳಲು ಸಂತೋಷವಾಗುತ್ತದೆ.
ಪ್ರತಿ ಪುಸ್ತಕಕ್ಕೂ ದ್ವಿವರ್ಣ ಚಿತ್ರವುಳ್ಳ ರಕ್ಷಾಪತ್ರದ ಏರ್ಪಾಡುಮಾಡಿದ್ದೇವೆ. ಹೊಸ ವರುಷದ ಹೊಸ ಯೋಜನೆಯಿದು. ಆದುದರಿಂದ ಈಗಿದ್ದ ಎಲ್ಲ ಚಂದಾದಾರರು ಶಾಶ್ವತ ಉಳಿಯಬೇಕೆಂದೂ ಮತ್ತೆ ಹೊಸ ಹೊಸ ಜನರು ಚಂದಾದಾರವಾಗಿ ಪ್ರೋತ್ಸಾಹಿಸಬೇಕೆಂದೂ ಬೇಡಿಕೊಳ್ಳುತ್ತೇವೆ.
ಈ ಕಥಾಸಂಕಲವನ್ನು ಕೊಟ್ಟು ಮಾಲೆಗೆ ಸಹಾಯ ಮಾಡಿದ ಶ್ರೀ. ವೆಂ. ಮು. ಜೋಶಿಯವರಿಗೂ, ಮುನ್ನುಡಿಕಾರರಾದ ಶ್ರೀ. ಬೆಟಗೇರಿ ಕೃಷ್ಣಶರ್ಮರಿಗೂ ಮತ್ತು ಚಿತ್ರಕಾರರಾದ ಶ್ರೀ. ಮೂರ್ತಿಯವರಿಗೂ ಕೃತಜ್ಞರಾಗಿದ್ದೇವೆ.
ಬಡತನದ ಬೇಗೆಯಿಂದ ನನ್ನ ಶಿಕ್ಷಣ ಅಪೂರ್ತಿ
ಯಾಗುವ ಅಂಜಿಕೆ ಇದ್ದಾಗ
ಸಹಾಯ ಮಾಡಿದ
ಉದಾರ ಹೃದಯಿಗಳಾದ
ಗದುಗಿನ
ಡಾಕ್ಟರ್ ದ. ವಾ. ಚಾಫೇಕರ
ಮತ್ತು
ಸೌ. ಅನ್ನಪೂರ್ಣಾತಾಯಿ ಚಾಫೇಕರ
ಇವರಿಗೆ
ಅರ್ಪಿತ.
ಅರಿಕೆ.
ನನ್ನ ಮೊದಲ ಕಥಾಸಂಕಲನ "ಚಿನ್ನದ ಪದಕ" ಅಚ್ಚಾಗಿ ಒಂದು ವರುಷ ಸಂದಿದ ಮೇಲೆ ಇದೀಗ ಎರಡನೆಯ ಕಥಾಸಂಕಲನ "ಹೊಸ ಬೆಳಕು” ಬೆಳಕಿಗೆ ಬರುತ್ತಲಿದೆ. ಕತೆಗಳ ಮೊದಲು 'ಅರಿಕೆ' ಎಂದು ಹೇಳಿ ಪುಟಪುಟಗಳನ್ನು ತುಂಬಿ ಕೊಡುವದು ನನಗೆ ಸೇರದು. ನನ್ನ ಕಥೆಗಳ ಬಗ್ಗೆ ನಾನೇನು ಹೆಚ್ಚಿಗೆ ಹೇಳಲಾರೆ. ಆ ಕೆಲಸ ಸಹೃದಯ ವಾಚಕರದು, ನಿಸ್ಸಂಗ ಮನೋವೃತ್ತಿಯ ವಿಮರ್ಶಕರದು.
ಒಂದು ಮಾತನ್ನು ಹೇಳಬಹುದು. 'ಹೊಸ ಬೆಳಕಿ'ನಲ್ಲಿ ಕಾಣುವ ಕತೆಗಳೆಲ್ಲವೂ ಹೊಸ ರೀತಿಯಲ್ಲಿ ಮೂಡಿ ಬಂದಿದೆ. ಅನುಭವ ಹೆಚ್ಚಾದಂತೆ ಕತೆಗಳಲ್ಲಿ ಪರಿಪಕ್ವತೆ ಕಾಣಬರುತ್ತದೆ. ಲೇಖಕನ ಪ್ರತಿಭೆ ಹೂವಿನಷ್ಟು ಕೋಮಲವೆಲ್ಲ, ಕಬ್ಬಿಣದಷ್ಟು ಕಠಿಣ. ಸಾಂಸ್ಕೃತಿಕ ಹಿನ್ನೆಲೆ, ಶಿಕ್ಷಣದ ಪರಿಣಾಮ, ಜೀವನದಲ್ಲಿಯ ಸಿಹಿ ಕಹಿ ಅನುಭವ, ವಿವಿಧ ವಾಚನದ ಪರಿಣಾಮ, ಸಮಾಜದಲ್ಲಿಯ ಸ್ಥಿತ್ಯಂತರದ ಪರಿಣಾಮ ಇವೆಲ್ಲವುಗಳ ಮಿಶ್ರಣದ ಕಾವಿನಿಂದ ಲೇಖಕನ ಪ್ರತಿಭೆ ಕಾಯ್ದ ರಸವಾಗುತ್ತದೆ. ಆ ಎರಕದಿಂದಲೇ ಸುಂದರ ಕತೆಗಳ ನಿರ್ಮಾಣವಾಗುತ್ತದೆ. 'ಹೊಸ ಬೆಳಕಿ'ನಲ್ಲಿಯ ಕತೆಗಳಲ್ಲಿ ಅಂಥ ಮಿಶ್ರಣದ ಕೆಲವಂಶವಾದರೂ ಇದೆ ಎಂಬುದು ನನ್ನ ಮನವರಿಕೆ.
ಈ ಸಂಕಲನವನ್ನು ನನ್ನ ಗೆಳೆಯ ಶ್ರೀ. ಭಾಲಚಂದ್ರ ಘಾಣೇಕರರೇ ತಮ್ಮ ಮಾಲೆಯಲ್ಲಿ ಪೋಣಿಸಿ ಉಪಕಾರಮಾಡಿದ್ದಾರೆ. ಅವರಿಗೆ ನನ್ನ ಅನಂತ ವಂದನೆಗಳು.
ಶ್ರೀ. ಕವಿಭೂಷಣ ಬೆಟಗೇರಿ ಕೃಷ್ಣಶರ್ಮರು ತಮ್ಮ ಮಹತ್ವದ ಕೆಲಸಗಳನ್ನು ಬದಿಗಿರಿಸಿ ಈ ಕಥಾಸಂಗ್ರಹಕ್ಕೆ ಸುಂದರವಾದ ವಿಸ್ತ್ರತ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆದುಕೊಟ್ಟು ತುಂಬಾ ಉಪಕಾರ ಮಾಡಿದ್ದಾರೆ. ಅವರಿಗೆ ನಾನೆಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ.
೧೯೫೨
ಮುನ್ನುಡಿ.
ಸಂಪಾದಿಸಿನಮ್ಮ ಜೀವನದಲ್ಲಿಯ ಯಾವುದೇ ಸಾಮಾನ್ಯ ಘಟನೆಯಿರಲಿ, ಹೇಳುವವನ ಚಾತುರ್ಯದಿಂದ ಅದೊಂದು ಸ್ವಾರಸ್ಯವಾದ ಕತೆಯಾಗಿ ರೂಪುಗೊಂಡು ನಿಲ್ಲಬಹುದು. ಒಂದು ವಿಶಿಷ್ಟ ಘಟನೆಯನ್ನು ಹಲವಾರು ಜನರು ಕಣ್ಣಾರೆ ಕಂಡಿರುವರು. ಆದರೆ ಆ ಘಟನೆಯಲ್ಲಿಯ ವೈಶಿಷ್ಟ್ಯವನ್ನು ಕಂಡುಹಿಡಿದು ಅದರ ಮೇಲೆ ಬೆಳಕು ಕೆಡಹಿ, ಅದರ ಬೆಳಕು ಹೆಚ್ಚಾಗಿ ತೋರುವಂತೆ ಕಂಡವರಿಗೆಲ್ಲ ಹೇಳಲಿಕ್ಕೆ ಸಾಧ್ಯವಿರುವುದಿಲ್ಲ. ಇದು ನಾಧ್ಯವಿದ್ದವನು ಖಂಡಿತವಾಗಿ ಕತೆಗಾರನಾಗಬಲ್ಲನು, ಸಾಮಾನ್ಯ ಘಟನೆಯನ್ನೂ ರಸವತ್ತಾಗಿ ಕತೆಮಾಡಿ ಹೇಳಬಲ್ಲ ಕತೆಗಾರ, ಜೀವನದಲ್ಲಿಯ ವೈಚಿತ್ರ್ಯಪೂರ್ಣ ಘಟನೆಗಳನ್ನು ಎಷ್ಟೊಂದು ಸುಂದರವಾದ ಕತೆಗಳನ್ನಾಗಿ ಹೇಳಲಾರ ? ಶ್ರೀಯುತ ವೆಂ. ಮು. ಜೋಶಿಯವರು ವಯಸ್ಸಿನಿಂದ ತರುಣರಾದರೂ ಅನೇಕ ಜನ ಹಿರಿಯರಿಗಿಂತ ಜೀವನದ ಕಹಿ ಸಿಹಿ ಅನುಭವಗಳನ್ನು ಹೆಚ್ಚಾಗಿ ಕಂಡವರಿದ್ದಾರೆ; ಉಂಡವರಿದ್ದಾರೆ.
ಕಳೆದ ಮಹಾ ಯುದ್ಧದಲ್ಲಿ ಸೈನಿಕರಾಗಿ ಕೆಲಸ ಮಾಡಿದ ಕತೆಗಾರ ಜೋಶಿಯವರು ಭಾರತದ ಅನೇಕ ಭಾಗಗಳನ್ನು ಸುತ್ತಿ ಅಲ್ಲಲ್ಲಿಯ ಪರಿಸ್ಥಿತಿಗಳನ್ನು ಕಣ್ಣಾರೆ ಕಂಡಿದ್ದಾರೆ. ಇಷ್ಟೇ ಅಲ್ಲ, ಪ್ರತ್ಯಕ್ಷ ಯುದ್ಧರಂಗದಲ್ಲಿ ಭಾಗವಹಿಸಿ ಬ್ರಹ್ಮದೇಶ ಮಲಯಾಗಳಲ್ಲಿ ಓಡಾಡಿ ಬಂದವರಾಗಿದ್ದಾರೆ. ಸ್ವಾಭಾವಿಕ ಸಾಹಿತ್ಯಪ್ರಿಯರಾದ ಶ್ರೀ. ಜೋಶಿಯವರು ನೋಡಿದುದನ್ನು ಬರಿ ಹೊರಗಣ್ಣಿಂದ ನೋಡಿ ಬಿಡದೆ, ಒಳಗಣ್ಣಿಂದ ನೋಡಿ ಮನದ ತೆರೆಯಮೇಲೆ ಮೂಡಿಸಿಕೊಂಡು ಬಿಟ್ಟಿದ್ದಾರೆ. ಆದುದರಿಂದಲೇ ಈ ಕತೆಗಾರರು ತಮ್ಮ ಕಥಾವಸ್ತುವಿಗೆ ಯಾವುದೇ ಭೌಗೋಲಿಕ ಹಿನ್ನೆಲೆಯನ್ನು ತೆಗೆದುಕೊಂಡರೂ ಅದನ್ನು ಯಥಾವತ್ತಾಗಿ ಚಿತ್ರಿಸಿ ತೋರಿಸಬಲ್ಲರು. ಅನೇಕ ಸಲ ಇವರ ಕತೆಗಳು ಪ್ರಾದೇಶಿಕ ಹಿನ್ನೆಲೆಯ ಚಿತ್ರಣದ ಮೂಲಕವಾಗಿಯೇ ವೈಶಿಷ್ಟ್ಯಪೂರ್ಣವಾಗಿ ತೋರಿ ವಾಚಕರ ಮನಸ್ಸನ್ನು ಕುತೂಹಲಗೊಳಿಸುವುವು.
ಈ ಕತೆಗಾರರು ಹೆಚ್ಚಾಗಿ ವಾಸ್ತವ ಮಾರ್ಗಾವಲಂಬಿಗಳು. ಎಂತಲೇ ತಮ್ಮ ಕತೆಗಳಿಗಾಗಿ ವಸ್ತುಗಳನ್ನು ಕಲ್ಪಿಸುತ್ತ ಕೂಡುವವರಲ್ಲ. ಜೀವನದಲ್ಲಿ ಕಣ್ಣಾರೆ ಕಂಡ-ಕಿವಿಗಳಿಂದ ಕೇಳಿದ-ವಾಸ್ತವ ಸಂಗತಿಗಳಿಂದಲೇ ವಸ್ತುಗಳನ್ನು ಆಯ್ದು ಕೊಳ್ಳುವವರು. ಆ ವಸ್ತುವಿಗೆ ತಕ್ಕ ಪಾತ್ರಗಳನ್ನು ಸೃಷ್ಟಿಸಿ ಆ ಪಾತ್ರಗಳ ಸ್ವಭಾವ ವೈಶಿಷ್ಟವು ಆ ಮುಖ್ಯ ಘಟನೆಗೆ ಹೇಗೆ ಕಾರಣವಾದು ಎಂಬುದನ್ನು ಹೇಳಲು ಹವಣಿಸುವವರು, ಈ ಸಂಗ್ರಹದಲ್ಲಿಯ ಒಂಬತ್ತು ಕತೆಗಳಲ್ಲಿಯೂ ಕಂಡುಬರುವ ಮುಖ್ಯ ಘಟನೆಗಳು ಬಹಳ ಜನರಿಗೆ ಕಂಡು ಕೇಳಿದ ಘಟನೆಗಳಾಗಿ ತೋರಬಹುದು. ಎಂತಲೇ ಈ ಕತೆಗಳಲ್ಲಿ ಬರುವ ಪಾತ್ರಗಳನ್ನು ವಾಸ್ತವ ವ್ಯಕ್ತಿಗಳಿಗೆ ಹೋಲಿಸಿ ನೋಡುವ ತವಕವೂ ಉಂಟಾಗಬಹುದು. ಇದೊಂದು ವಾಸ್ತವ ಮಾರ್ಗದ ಸಾಹಿತ್ಯದ ವೈಲಕ್ಷಣ್ಯ. ಆದುದರಿಂದಲೆ ವಾಚಕರು ಇವನ್ನೆಲ್ಲ ಕತೆಗಳೆಂದು ಓದಬೇಕೇ ಹೊರತು ನಡೆದ ಸಂಗತಿಯ ಸತ್ಯ ಸ್ಥಿತಿಯೆಂದು ತಿಳಿಯಲಾಗದು.
ಇಂದು ಪ್ರಪಂಚದ ಯಾವ ಭಾಷೆಯ ಸಾಹಿತ್ಯದಲ್ಲಿಯೂ ಸಾಮಾಜಿಕ ಪ್ರಜ್ಞೆಗೆ ಪ್ರಮುಖವಾದ ಸ್ಥಾನವನ್ನು ಕೊಡಲಾಗುತ್ತಿದೆ. ವಿಜ್ಞಾನದ ಪ್ರಗತಿಯು ಇಂದು ಎಲ್ಲ ದೇಶಗಳಲ್ಲಿಯೂ ಹಳೆಯ ಸಾಮಾಜಿಕ ಕಟ್ಟು-ಕಟ್ಟಳೆಗಳನ್ನು ಸಡಲಿಸಿ ಬಿಟ್ಟುದರಿಂದ, ಎಲ್ಲ ದೇಶಗಳಲ್ಲಿಯೂ ಒಂದಿಲ್ಲೊಂದು ಬಗೆಯಾಗಿ ಸಾಮಾಜಿಕ ವೈಷಮ್ಯ-ಅಶಾಂತಿಗಳು ತಾಂಡವವಾಡುತ್ತಲಿವೆಯೆಂಬುದನ್ನು ಬೇರೆಯಾಗಿ ಹೇಳಬೇಕಾಗಿಯೇ ಇಲ್ಲ. ಆದುದರಿಂದಲೇ ಎಲ್ಲದೇಶದ ಸಾಹಿತ್ಯಕರೂ ಇಂದು ಸಮಾಜದ ಸಮತೆ-ಶಾಂತಿಗಳಿಗಾಗಿ ಪ್ರಚಾರವನ್ನು ತಮ್ಮ ಸಾಹಿತ್ಯ ನಿರ್ಮಿತಿಯ ಮೂಲಕ ನಡೆಯಿಸಿದ್ದಾರೆ. ಸಮತೆ-ಶಾಂತಿಗಳಿದ್ದಾಗ ಸಾಹಿತ್ಯ ಸೌಂದರ್ಯ ಸಿದ್ಧಿ-ಸೌಂದರ್ಯದರ್ಶನಗಳ ಕಾರ್ಯ ಮಾಡುವುದು; ವೈಷಮ್ಯ-ಅಶಾಂತಿಗಳಿದ್ದಲ್ಲಿ ವ್ಯಕ್ತಿಧರ್ಮ-ಸಮೂಹ ಧರ್ಮಗಳ ಪ್ರಚಾರ ಕಾರ್ಯ ಮಾಡಬೇಕಾಗುವುದು. ಆಧುನಿಕ ಕನ್ನಡ ಸಾಹಿತ್ಯವೂ ಈ ಜಾಗತಿಕ ಚಟುವಟಿಕೆಯಲ್ಲೇ ಭಾಗವಹಿಸಿದೆಯೆಂದು ಹೇಳಿದರೆ ಇದನ್ನು ಯಾರೂ ಒಪ್ಪಿಕೊಳ್ಳದಿರಲಾರರು. ಶ್ರೀ. ಜೋಶಿಯವರೂ ತರುಣ ಕನ್ನಡ ಕತೆಗಾರರು. ಅವರ ಮನಸ್ಸು-ಬುದ್ಧಿಗಳನ್ನು ಕೆರಳಿಸಿದುದು ಇಂದಿನ ಸಾಮಾಜಿಕ ಪರಿಸ್ಥಿತಿಯ ಪ್ರಭಾವವೇ ಎಂಬುದನ್ನು ಇಲ್ಲಿಯ ಪ್ರತಿಯೊಂದು ಕತೆಯಲ್ಲಿಯೂ ನೋಡಬಹುದು.
ಇಂದು ಸಮಾಜದ ವೈಷಮ್ಯಕ್ಕೆ ಕಾರಣವಾದುವೆಂದರೆ ಹೆಣ್ಣು ಗಂಡಿನ ಹೊಂದಿಕೆಯು ತೊಡಕು; ಬಡತನ-ಸಿರಿತನಗಳಲ್ಲಿಯ ಜಗಳಾಟ; ಅಧಿಕಾರ-ಅನಧಿಕಾರಗಳಲ್ಲಿಯ ಹೋರಾಟ. ಇವೇ ಮೂರು ಪ್ರಮುಖವಾದ ಪ್ರಶ್ನೆಗಳು ಎಲ್ಲೆಲ್ಲಿಯೂ ತಲೆಹೊರೆಯಾಗಿ ಕುಳಿತಿವೆ. ಹೆಣ್ಣು-ಗಂಡಿನ ತೊಡಕಿನ ಮೂಲಕ ವ್ಯಕ್ತಿ-ವ್ಯಕ್ತಿಗಳಲ್ಲಿ ಅತೃಪ್ತಿ ಹೆಚ್ಛತಲಿದೆ. ಬಡತನ-ಸಿರಿತನಗಳ ಕಾರಣಗಳ ಮೂಲಕ ಕುಟುಂಬ ಕುಟುಂಬಗಳಲ್ಲಿಯೂ ಆಶಾಂತಿ ತಲೆಯೆತ್ತಿದೆ, ಅಧಿಕಾರ-ಅನಧಿಕಾರಗಳ ಮೂಲಕ ರಾಷ್ಟ್ರ-ರಾಷ್ಟ್ರಗಳಲ್ಲಿ ದ್ವೇಷ- ಮತ್ಸರಗಳು ಹೆಚ್ಚುತ್ತಲಿವೆ. ವರ್ತಮಾನ ಸಾಹಿತ್ಯಿಕರ ಲಲಿತ ಸಾಹಿತ್ಯಕ್ಕಾಗಲಿ, ವಿಚಾರ ಸಾಹಿತ್ಯಕ್ಕಾಗಲಿ-ಇವೇ ಮೂರು ಸಮಸ್ಯೆಗಳೇ ಮುಖ್ಯ ವಿಷಯಗಳಾಗಿರುತ್ತವೆ.
ಇಲ್ಲಿಯ 'ಹೊಸ ಬೆಳಕು' 'ಮತಾಂತರ' 'ನಡುವಿನ ಪರದೆ' ಈ ಕಥೆಗಳಿಗೆ ಹೆಣ್ಣು-ಗಂಡಿನ ಸಮಸ್ಯೆ ವಸ್ತುಗಳನ್ನು ಒದಗಿಸಿಕೊಟ್ಟಿದ್ದರೆ, 'ಸಾಲ ಪರಿಹಾರ' 'ವಿಜ್ಞಾನದ ವಿಷ' 'ಕಾಲಮಹಿಮೆ' ಗಳಿಗೆ ಬಡತನ-ಸಿರಿತನದ ಸಮಸ್ಯೆ-ವಸ್ತುಗಳನ್ನು ಸಂಗ್ರಹಿಸಿ ಕೊಟ್ಟಿದೆ. 'ಕೆಳಗಿನ ನೆರಳು' 'ಹೊಗೆಯಿಂದ ಹೊರಗೆ' ಈ ಕತೆಗಳು ಅಧಿಕಾರ-ಅನಧಿಕಾರಗಳ ಹೋರಾಟದಿಂದ ಪ್ರಚೋದಿತವಾದವುಗಳು. 'ವೈರಾಗ್ಯ-ವೈಯ್ಯಾರ' ಎಂಬ ಕತೆಯು ಮನೋವಿಶ್ಲೇಷಣೆಯ ರಾಜ್ಯಕ್ಕೆ ಸೇರಿದುದು.
ಎಲ್ಲ ಕತೆಗಳಲ್ಲಿಯೂ ಶ್ರೀ. ಜೋಶಿಯವರು ಘಟನಾ ಚಮತ್ಕೃತಿಗಳಿಗೆ ವಿಶೇಷ ಲಕ್ಷ ಕೊಟ್ಟಿದ್ದಾರೆ. 'ಹೊಸ ಬೆಳಕು' 'ನಡುವಿನ ವರದೆ' ಈ ಕತೆಗಳಲ್ಲಿಯ ಸೌಂದರ್ಯವನ್ನು ನಾನು ಸಂಪೂರ್ಣವಾಗಿ ಮೆಚ್ಚಿದ್ದೇನೆ 'ಕೆಳಗಿನ ನೆರಳು' 'ಸಾಲ ಪರಿಹಾರ, 'ವಿಜ್ಞಾನದ ವಿಷ' ಕತೆಗಳ ಪ್ರಚಾರ ಚಾತುರ್ಯವನ್ನು ಮನವಾರೆ ಒಪ್ಪಿಕೊಂಡಿದ್ದೇನೆ.
ಶ್ರೀಮಾನ್ ಜೋಶಿಯವರ ಜೀವನದ ಅಭ್ಯಾಸ ಅನುಭವಗಳು ಇನ್ನೂ ಹೆಚ್ಚಾಗಲಿ; ಅವರ ಕತೆಗಳಿಂದ ಕನ್ನಡ ಸಾಹಿತ್ಯದೇವಿಯ ಶೃಂಗಾರದ ಸಂವರ್ಧನೆಯಾಗಲಿ.
ಧಾರವಾಡ
ಹೊಸ ಬೆಳಕಿನಲ್ಲಿ ಕಾಣುವ ಕತೆಗಳು.
ಸಂಪಾದಿಸಿ೧. ಹೊಸ ಬೆಳಕು |
೧-೧೯ |
೨. ಕೆಳಗಿನ ನೆರಳು |
೨೦-೩೬ |
೩೭-೪೯ |
೪. ಸಾಲ ಪರಿಹಾರ |
೫೦-೬೪ |
೫. ಮತಾಂತರ |
೬೫-೭೫ |
೭೬-೮೪ |
೭. ನಡುವಿನ ಪರದೆ |
೮೫-೯೮ |
೮. ವಿಜ್ಞಾನದ ವಿಷ |
೯೯-೧೦೯ |
೯. ಕಾಲ ಮಹಿಮೆ |
೧೧೦-೧೧೮ |
ಪ್ರಕಾಶಕರು ಮತ್ತು ಮುದ್ರಕರು:
ಭಾಲಚಂದ್ರ ವೆಂಕಟೇಶ ಘಾಣೇಕರ,
( ಭಗತಸಿಂಗ ಬೀದಿ )
ಧಾರವಾಡ.
ಪ್ರಕಾಶನ ಸ್ಥಳ:
ಪ್ರತಿಭಾ ಗ್ರಂಥಮಾಲೆ,
ಧಾರವಾಡ.
ಮುದ್ರಣ ಸ್ಥಳ:
ಪ್ರತಿಭಾ ಮುದ್ರಣ,
ಧಾರವಾಡ.
"ಚಿನ್ನದ ಪದಕ" ದ ಬಗ್ಗೆ ಕೆಲವು ಅಭಿಪ್ರಾಯಗಳು.
"……… ಜೋಶಿಯವರು ವಯಸ್ಸಿನಲ್ಲಿ ಕಿರಿಯವರಾದರೂ ಅನುಭವದಲ್ಲಿ ಹಿರಿಯರೆಂದೇ ಹೇಳಬೇಕು. ಬಾಳಿನ ನಾನಾರಂಗಗಳಲ್ಲಿ ವಿವಿಧ ರೀತಿಯ ಅಮೂ ಅನುಭವ ಗಳಿಸಿ ಈ ಸುಂದರ ಕೃತಿಯನ್ನು ನಿರ್ಮಿಸಿದ್ದಾರೆ. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಮೊದಲನೆಯ ಬಾರಿಗೆ ಇಂಡೋನೇಶಿಯ, ಮಲಯ ಮುಂತಾದ ಹೆಸರುಗಳನ್ನೂ ಅಲ್ಲಿಯ ವರ್ಣನೆಗಳನ್ನೂ ನಾವಿಲ್ಲಿ ಕಾಣುತ್ತೇವೆ.
………"ಶ್ರೀ. ಜೋಶಿಯವರಿಗೆ ಕಂಡದ್ದನ್ನು ಕಂಡ ಹಾಗೆ ಧೈರ್ಯವಾಗಿ ಹೇಳುವ ಕೆಚ್ಚಿದೆ; ಜೀವನವನ್ನು ಆಳವಾಗಿ ನೋಡುವ ಕಣ್ಣಿದೆ; ಕಥೆಯನ್ನು ಸ್ವಾರಸ್ಯವಾಗಿ ಬೆಳೆಸಿಕೊಂಡು ಹೋಗುವ ಶಕ್ತಿಯಿದೆ. ನಾವು ಈ ಕಥೆಗಳನ್ನು ಓದುತ್ತಿದ್ದರೆ ಅಕ್ಷರಗಳು ಮಾಯವಾಗುವವು, ಓದಿದ ವಿಷಯವನ್ನು ಮಾತ್ರ ಗ್ರಹಿಸುತ್ತೇವೆ ಲೇಖಕರಿಗೂ ಓದುಗರಿಗೂ ಮಧ್ಯ ಇದ್ದ ಗೋಡೆ ಮಾಯನಾಗುವದು. ಇದೇ ಸದಾ ಕಾಲಕ್ಕೂ ಉಳಿಯುವ ಬರೆಹದ ಚಿನ್ಹೆ.”
"……… ಈ ಏಳು ಕತೆಗಳು ಶ್ರೀ. ವೆಂ ಮ. ಜೋಶಿಯವರ ಕಥನ ಕಲೆಯ ಒಳ್ಳೆ ನಿದರ್ಶನಗಳಾಗಿವೆ. ಕಥಾವಸ್ತುಗಳು ಊರ್ಧ್ವಮುಖಿಯಾಗಿವೆ. ನಿರುದ್ದಿಷ್ಟವಾದ ಒಂದು ಕತೆಯೂ ಇದರಲ್ಲಿ ಸಿಕ್ಕುವದಿಲ್ಲ.”
"……… ಈ ಸಂಗ್ರಹದಲ್ಲಿ ಎಲ್ಲ ಕಥೆಗಳು ಘಟನಾಪ್ರಧಾನವಾಗಿವೆ. ಘಟನೆ, ವರ್ಣನೆ, ಸಂವಾದಗಳನ್ನು ಹವಣಾಗಿ ಹೆಣೆದು ಹೇಳುವ ಕತೆಗಾರಿಕೆ ಕಂಡುಬರುತ್ತದೆ. ಶ್ರೀ. ಜೋಶಿಯವರು ಓದುಗರಲ್ಲಿ ನಿರೀಕ್ಷೆ ಹುಟ್ಟುವಂತೆ ಸ್ವಾರಸ್ಯ ಹೆಚ್ಚುವಂತೆ ಕಥೆಯ ಘಟನೆ, ಹಿನ್ನೋಟ ಮತ್ತು ಅದರ ಸಂದರ್ಭಗಳನ್ನು ನಿರೂಪಿಸುವ ಶೈಲಿಯನ್ನು ಬಳಸಿದ್ದಾರೆ. ”
ಚಿನ್ನದ ಪದಕ ( ವೆಂ. ಮು. ಜೋಶಿ ) ಸಮರಾಂಗಣದ ಕತೆಗಳು
ಶ್ರೀ. ವೆಂ. ಮು. ಜೋಶಿ.
೨೬ ವಯಸ್ಸಿನ ಉತ್ಸಾಹಿ ತರುಣರು.ಎರಡನೆಯ ಮಹಾಯುದ್ಧದ ಸಮಯದಲ್ಲಿ ಭಾರತೀಯ ಸೈನ್ಯದಲ್ಲಿ ಸೇರಿ ಮಲಾಯಾ, ಸಿಂಗಾಪುರ ಮೊದಲಾದ ಹೊರನಾಡುಗಳಿಗೆ ಹೋಗಿಬಂದಿದ್ದಾರೆ. ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಆಭಿರುಚಿಯುಳ್ಳವರು. ಸೈನ್ಯ ಖಾತೆಯಿಂದ ಹೊರಬಂದ ನಂತರ ಕನ್ನಡಿಗರಿಗೆ ಉದಯೋನ್ಮುಖ ಕತೆಗಾರರೆಂದು ಪರಿಚಿತರಾಗಿದ್ದಾರೆ. ಇವರ ಮೊದಲನೆಯ ಕಥಾಸ೦ಗ್ರಹ "ಚಿನ್ನದ ಪದಕ" ಎಲ್ಲರಿಂದಲೂ ಮನ್ನಣೆ ಹೊಂದಿದೆ.