ಹೊಸ ಬೆಳಕು ಮತ್ತು ಇತರ ಕಥೆಗಳು (೧೯೫೨)
by ಶ್ರೀ ವೆ. ಮುಂ. ಜೋಶಿ
90946ಹೊಸ ಬೆಳಕು ಮತ್ತು ಇತರ ಕಥೆಗಳು — ಸಾಲ ಪರಿಹಾರ೧೯೫೨ಶ್ರೀ ವೆ. ಮುಂ. ಜೋಶಿ

ಸಾಲ ಪರಿಹಾರ.

"ಸಾsಮೀ? ”
"ಯಾರದು?"
"ನಾನು ಬುದ್ಧಿ, ಸೋಮ."
"ಓ, ಹೋ, ಸೋಮನೋ?" ರಾಮರಾಯರು ಹುಬ್ಬು ಗಂಟಿಕ್ಕಿ ಕೊಂಡೇ ಹೊರಬಂದರು. ಸೋಮ ಅವರನ್ನು ನೋಡಿ ಬಗ್ಗಿ ವಿನಯದಿಂದ ನಮಸ್ಕರಿಸಿ " ಏನೋ ಸುದ್ದಿ ಕೇಳಿದೆ, ತಮ್ಮ ತಾಂವಾ ಓಡಿ ಬಂದೆ."
"ಹೌದಪ್ಪಾ, ಮೂಗು ಮುಚ್ಚಿದರೇ ತಾನೇ ಬಾಯಿ ತೆರೆಯೋದು"

"ಇಷ್ಟು ದಿನಾ ತಡದಿದ್ದೀರಿ ಬುದ್ದಿ, ಇದೊಂದು ವರ್ಸ ತಡೆಯಾಕೆ ಆಗದೇ ಬುದ್ದಿ, ಈ ಸಲದ ಅಡಿಕೆ ಫಸಲು ಕೈಗೆ ಹತ್ತಿದಾಕ್ಷಣ, ತಮ್ಮ ರಕಮು ಬಡ್ಡಿ ಸಮೇತ ತಿರುಗುಸ್ತೇನೆ. ಬುದ್ಧಿ, ತಮ್ಮ ಕಾಲ ಬೀಳ್ತೆನೆ."

ಸೋಮನ ದೈನ್ಯದ ಕೂಗಿಗೆ ರಾಮರಾಯರ ಹೃದಯ ಕರಗಲಿಲ್ಲ. ರಾಮರಾಯರ ಹೃದಯ ಹಿಮಾಲಯದಂತೆ ಅಚಲ ಎಂದು ಊರಿಗೇ ಗೊತ್ತಿತ್ತು. ರಾಮರಾಯರ ಕಾಲಿಗೆ ಬಿದ್ದ ಆ ಸೋಮ ಕಣ್ಣೀರ ಕೋಡಿಯನ್ನೇ ಹರಿಸಿದ್ದ. ಆ ಕಣ್ಣೀರಿಗೆ ರಾಮರಾಯರ ಕಾಲಿನ ಹೊರಚರ್ಮ ಒದ್ದೆಯಾಗಿತ್ತೇ ಹೊರತು ಒಳಹೃದಯ ತೊಯ್ದಿರಲಿಲ್ಲ. ತಿರಸ್ಕೃತ ನಗುವಿನೊಂದಿಗೆ ರಾಮರಾಯರು ಹೇಳಿದರು:

"ನನ್ನ ಕಾಲಿಗೇಕೊ ಬೀಳೋದು, ದೇವರ ಕಾಲಿಗಾದರೂ ಬೀಳ್ಹೋಗು"

"ನನ್ನ ಪಾಲಿಗೆ ನೀವೇ ದೇವ್ರು.”

"ಸಾಲ ಕೊಡುವಾಗಷ್ಟೇ ನಾನು ದೇವರು. ತಿರುಗಿ ಕೇಳುವಾಗ ನಾನು ಭಸ್ಮಾಸುರ."

ಆಗಿನ ಅವರ ನಿಕಟಹಾಸ್ಯ ಅವರನ್ನು ಭಸ್ಮಾಸುರನನ್ನೇ ಹೋಲಿಸುತಿತ್ತು, ಆದರೂ ಅಂತಹ ರಕ್ಕಸನ ಕೈ ಕೆಳಗೆ ತಲೆಕೊಟ್ಟ ಹುಲ್ಲುಮಾನವನಿಗೆ ಮರಣಪರ್ಯಂತವೂ ಬದುಕಿನ ಆಸೆ ಬಿಟ್ಟಿದ್ದಲ್ಲ. ಸೋಮ ಇನ್ನೂ ಪ್ರಾರ್ಥಿಸುತ್ತಲೇ ಇದ್ದ.

"ಈ ಸಲ ನನ್ನ ಮಗಳು ಚಿನ್ನಿ ಮದ್ವೇ ಮಾಡಬೇಕು ಅಂತಾ ನಿರ್ಧಾರ ಮಾಡಿದ್ದೇನೆ ಸ್ವಾಮಿ. ಚಿನ್ನಿ ತಮ್ಮದೇ ಮಗಳು ಅಂತಾ....."

"ಅಂತಾ ಸಾಲಾ ಸೂಟ ಬಿಡಲಾ?”

"ಹಾಗೆ ಹೇಳಲಿಲ್ಲಾ ಬುದ್ಧಿ, ಇನ್ನೊಂದು ವರ್ಸ ತಡದ ಬಿಟ್ಟರೆ, ಖಂಡಿತ ತಮ್ಮದು ಅಸಲು ಬಡ್ಡಿ ಒಂದೇ ದಿನ ತಂದು ಒಪ್ಪಸ್ತೇನೆ.”

"ಒಂದು ವರ್ಸ ತಡೆದರೆ, ಮುಂದಿನ ಸಲ ಮಗಳ ಬಾಣಂತಿತನ ಅನ್ನುತ್ತಿ. ಲೋ ಸೋಮ, ಇದು ತೀರವ ವ್ಯವಹಾರ, ಸಾಲಗಾರ ಅತ್ತರೆ ಸಾವುಕಾರನ ಬಟ್ಟೆ ತೊಯ್ಯೋದಿಲ್ಲಾ, ಈ ವಾರದೊಳಗಾಗಿ ರಕಮು ಬಡ್ಡಿ ಸಹಿತ ನನ್ನ ತಿಜೋರಿ ಸೇರಬೇಕು.”

"ಕೈಯಲ್ಲಿ ಕಾಸೇ ಇಲ್ಲದಾಗ ಕೊಡೋದು ಹೇಗೆ ಸಾಮೀ ?" ಸೋಮನ ಧ್ವನಿಯಲ್ಲಿ ಕೊಂಚ ಮಾರ್ಪಾಟವಾಗಿತ್ತು, ದೈನ್ಯದ ಸುಳವನ್ನು ಕಾಠಿಣ್ಯ ವ್ಯಾಪಿಸಬಯಸುತ್ತಿತ್ತು.

ರಾಮರಾಯರು ಅಷ್ಟೇ ನಿಷ್ಫಲತೆಯಿಂದ ಉತ್ತರಿಸಿದರು.

"ಅದಕ್ಕೇ ನಿನ್ನ ಚನ್ನಪಟ್ಟಣ ಗಲ್ಲಿಯೊಳಗಿನ ಮನೆಯನ್ನು ಜಪ್ತಿಗೆ ತಂದದ್ದು. ಕಾಸಿಲ್ಲದಾಗ ಕಾಸು ಹೇಗೆ ಹುಟ್ಟುತ್ತೆ ನೋಡ್ತೇನೆ.”

ರಾಮರಾಯರ ಮಾತುಗಳಿಂದ ಸೋಮ ನಡುಗಿ ಹೋದ, ಅವನ ಯೋಚನೆಯ ಕಡಲೊಳಗೆ ಮದಗಜ ಹೊಕ್ಕು ಸರೋವರದ ಸ್ವಚ್ಛ ನೀರನ್ನು ಕದಡಿಸಿತ್ತು. ಚಿನ್ನಿಯ ಭವಿತವ್ಯ ಬೇರೆ ಅವನೆದುರು ಕುಣಿದಾಡತೊಡಗಿತು. ಸೋಮನ ಬುದ್ಧಿ ಮಂಕಾಯಿತು. ಮೈ ತುಂಬ ಬೆವರು ಹನಿ ಮೂಡಿತು. ಅದೇ ಸಮಯಕ್ಕೆ ವೇಣಕ್ಕ ಗಂಡನ ಎಲೆ ತಟ್ಟೆಯಲ್ಲಿ ಬದಾಮು ಹಾಕಲು ಒಳಮನೆಯಿಂದ ಹಜಾರಿಗೆ ಬಂದರು. ಸೋಮ ಬೆವತ ದ್ದನ್ನು ಕಂಡು “ಏನೋ ಸೋಮ, ಚಳಿಗಾಲದಲ್ಲಿಯೂ ಬೆಂವತಿದ್ದಿಯಲ್ಲೋ ” ಎಂದರು.

“ಹೊರಗೆ ಚಳಿ ಇದ್ದರೂ ಹೊರಗೆ ಸಾಲದ ಶಕೆ ಕುದಿಯುತ್ತಿದೆಯಮ್ಮಾ” ಎಂದುಹೇಳಿ ಮತ್ತೊಮ್ಮೆ ಬಗ್ಗಿ ನಮಸ್ಕರಿಸಿ ಭಾರವಾದ ಹೊರೆಯನ್ನು ಹೊತ್ತವನಂತೆ ಹೊರಟು ಹೋದ. ಸೋಮನ ಮಾತು ಕೇಳಿದ ವೇಣಕ್ಕನಿಗೆ ಏಕೋ ಹೃದಯ ಹಿಂಡಿದಂತಾಯ್ತು. ಕೊಂಕು ಮಾತುಗಳನ್ನರಿಯದ ಅವಳು ಸಹಜ ನಗೆಯಾಡುವದಕ್ಕೆ ಹಾಗೆ ಹೇಳಿದ್ದಳು. ಆ ನಗೆಮಾತು ಹೊಗೆಯ ನಾಂದಿಯಾಗುವದೆಂದು ಅವಳು ತಿಳಿದಿರಲಿಲ್ಲ. ಅರೆಕ್ಷಣ ವೇಣಕ್ಕ ಮೈಮರೆತು ನಿಂತಳು. ಗಂಡನ ಎಲೆ ಅಡಿಕೆ ತಟ್ಟೆಯಲ್ಲಿ ಬದಾಮ ಹಾಕುವದನ್ನು ಮರೆತು ಸೋಮ ಹೋದ ನೋಡುತ್ತ ನಿಂತಳು. ರಾಯರು ಮಾತ್ರ ಗಹಗಹಿಸಿ ನಕ್ಕರು. ಗಾಯದ ಮೇಲೆ ಉಪ್ಪುನೀರು ಚಿಮುಕಿಸಿದಂತಾಗಿ ವೇಣಕ್ಕ-

"ಹೀಗೆ ನಗೋದಕ್ಕೇನಾಯ್ತು ? ”
"ಇರಲಿ, ಬದಾಮು ಇಡು ಇಲ್ಲಿ. ಗಾಳಕ್ಕೆ ಮೀನ ಈಗ ತಾನೇ ಸಿಲುಕಿದೆ."

ವೇಣಕ್ಕ ಅಲ್ಲಿ ನಿಲ್ಲಲಿಲ್ಲ, ಅಡಿಕೆ ತಟ್ಟೆಯಲ್ಲಿ ಬದಾಮು ಚೆಲ್ಲಿ ನೇರಾಗಿ ಒಳನಡೆದರು, ದೇವರ ಕೋಣೆಗೆ ಹೋಗಿ ಮನಸೋ ಕಂಬನಿಗರೆಯಬೇಕೆಂದು ದೇವರ ಕೋಣೆಯತ್ತ ನಡೆದರು. ದೇವರ ಕೋಣೆಯ ಬಾಗಿಲು ಹಾಕಿತ್ತು. ಇನ್ನು ದೂಡುವವರಿದ್ದರು. ಆದರೆ ಒಳಗಣ ಧ್ವನಿ ಅವರನ್ನು ನಿಂತಲ್ಲಿಯೇ ನಿಲ್ಲಿಸಿತು.

"ದೇವರೇ, ಅವಳಿಗೆ ಮಕ್ಕಳಾಗಲಿಲ್ಲ ಅಂತ ರಾಯರು ನನ್ನ ಲಗ್ನವಾಗಿದ್ದಾರೆ. ಆದರೆ ಈಗ ಈ ತಿಂಗಳು ಅವಳು ಮುಟ್ಟೇ ಕೂಡಲಿಲ್ಲ. ತಿಂಗಳ ಮೇಲೆ ೩-೪ ದಿನಗಳಾಗಿ ಹೋಯಿತಲ್ಲ. ಅವಳ ಮದುವೆಯಾಗಿ ೧೧ ವರುಷವಾಗಿ ಹೋಯಿತು ಈ ಹನ್ನೊಂದು ವರುಷ ಸಂತಾನವಿಲ್ಲದಂತೆ ಮುಂದೂ ಸಂತಾನ ಕೊಡಬೇಡ. ಈ ನನ್ನ ಕೋರಿಕ ಫಲಿಸಿದರೆ ಈ ಸಲ

ಮಾರಮ್ಮನ ಜಾತ್ರೆಯಲ್ಲಿ ನಿನ್ನ ಹೆಸರ್ಲೆ ೨ ಕುರಿ......."

ಹೊರಗೆ ನಿಂತಿದ್ದ ವೇಣು ಕಿವಿಯ ಮೇಲೆ ಕೈಯಿಕ್ಕಿದಳು. ಅಲ್ಲಿಯೂ ಅವಳಿಗೆ ನಿಲ್ಲಲಾಗಲಿಲ್ಲ. ಮಾನವ ಜೀವಿಗಳ ಸಂಕುಚಿತ ಸ್ವಭಾವ ಅವರ ಮಾನಸಿಕ ಶಾಂತಿಯನ್ನು ಕೆಡಿಸಿತ್ತು. ವೇಣಕ್ಕೆ ನೇರಾಗಿ ತಮ್ಮ ಮಲಗುವ ಕೋಣೆಯ ಒಳಸೇರಿದರು. ಮಂಚದ ಮೇಲೆ ಮಲಗಿಯೇ ಮನಸೋಕ್ತ ಅತ್ತುಬಿಡಬೇಕೆಂದು ಹವಣಿಕೆಯಲ್ಲಿದ್ದರು. ಆದರೆ ಸಾಧ್ಯವಾಗಲಿಲ್ಲ ತಂಬಿಗೆ ಹುಡುಕಿ ತಂದು ಮೂಲೆಯಲ್ಲಿ ಕುಳಿತರು.

ಸ್ವಲ್ಪ ಸಮಯದಲ್ಲೇ ದೇವರ ಕೋಣೆಯ ಬಾಗಿಲ ತೆಗೆದ ಸಪ್ಪಳವಾಯಿತು. ವೇಣನ ಸವತಿ ಭಾಗೀರತಿ ಹೊರಬಂದಳು. ಬಂದವಳೇ ನೇರಾಗಿ ಪಡಸಾಲೆಯತ್ತ ಹೊರಟವಳು ಮೂಲೆಯಲ್ಲಿ ಕುಳಿತ ವೇಣಕ್ಯನನ್ನೂ ಮಗ್ಗುಲಲ್ಲಿ ಡಬ್ಬ ಬಿದ್ದ ತಂಬಿಗೆಯನ್ನೂ ನೋಡಿ ಹಿಗ್ಗಿ ಹೀರೆಕಾಯಿಯಾದಳು. ಔಪಚಾರದ ಎರಡು ಶಬ್ದ ಮಾತಾಡದೇ ಹೋದರೆ, ಸಭ್ಯತನಕ್ಕೆ ಸಲ್ಲದ್ದು ಎಂದು ತಿಳಿದು ಭಾಗೀರಥಿ “ಅಯ್ಯು ಅಕ್ಕಾ, ಇವತ್ತೇ ಕೂತುಬಿಟ್ರಾ? ಇನ್ನೂ ಪೂರ್ಣ ಒಂದು ತಿಂಗಳಾಗಲಿಲ್ಲವಲ್ಲಾ? ”

“ತಿಂಗಳ ಏಕಾಗಲಿಲ್ಲವಮ್ಮ, ತಿಂಗಳ ಮೇಲೆ ನಾಲ್ಕು ದಿನಗಳಾಗಿ ಹೊಯಿತಲ್ಲಮ್ಮಾ."

ದಿನಗಳ ಎಣಿಕೆ ಹಾಕಿದ ಭಾವ ಮುಖದ ಮೇಲೆ ತೋರಿಸುತ್ತ ಭಾಗೀರಥಿ--

"ಹೌದಲ್ಲರಿ, ತಿಂಗಳು ಮುಗಿದು ಹೋಗಿದೆ. ನನಗನಿಸಿತ್ತು, ಹಾಗಾದರೆ ಈ ಸಲ ಮುಟ್ಟು ನಿಂತೇ ಹೋಯಿತು. ತಾಯಿ ಆಗ್ತೀರಿ ಅಂತ ತಿಳಿದಿದ್ದೆ."

ಭಾಗೀರಥಿಯ ಮುಂಗಾಲುಪುಟಗೆಯ ಮಾತು ವೇಣಕ್ಕನನ್ನು ಕೆರಳಿಸಿತು-

“ನನ್ನ ಮುಟ್ಟು ಮುದಿಕೆಯಾದಾಗೇ ನಿಲ್ಲೋದು” ಅರ್ಧ ಸಿಟ್ಟು ಆರ್ಧ ನಿರಾಶೆಯ ಉಸಿರಿನಿಂದಲೇ ವೇಣಕ್ಕೆ ಉತ್ತರಿಸಿದಳು.

"ಇರಲಿ ಬಿಡಿ. ಅಕ್ಕ ಯಾವಾಗಲೂ ನಿಮ್ಮದು ಇದೇ ಮಾತು. ಈಗೇನು ನಿಮಗೆ ಮಹಾ ವಯಸ್ಸು ಆಗಿರೋದು, ಇನ್ನೂ ಮಕ್ಕಳಾಗೂ ವಯಸ್ಸು ಮೀರಿಲ್ಲಾ.”

"ಮುಖ್ಯ ಮಾರಮ್ಮನ ಕೃಪೆ ಬೇಕಲ್ಲಮ್ಮ ?"
"ಮಾರೆಮ್ಮನಿಗೆ ನೀವು ಹರಿಕೆ ಹೊರಬೇಕು."

“ಮನೆಯಲ್ಲಿ ಮಾರೆಮ್ಮನಿಗೆ ಕುರಿ ಕೋಳಿ ಹರಿಕೆ ಹೊರೋವರು ಇರತಾ ನಮ್ಮದೇನು ಮಹಾ ಹರಿಕೆ, ಫಲ ಪುಷ್ಪದ್ದು.”

ಈ ಮಾತು ಕೇಳಿ ಭಾಗೀರತಿಯ ಎದೆ ನಡುಗಿತು. ಮಾತನ್ನು ಮುಗಿಸುವದಕ್ಕಿಂತಲೂ ಮುಖವನ್ನೇ ಮರೆ ಮಾಡಬೇಕೆನ್ನಿಸಿತು ಅವಳಿಗೆ, ಮಾತಿನ ಮುಖ್ಯ ವಿಷಯ ಬದಲಿಸಿ ಭಾಗೀರತಿ “ಅಯ್ಯೋ, ಅವರು ಕೋಣೆಗೆ ಹೋಗಿಬಿಟ್ಟಿದ್ದಾರೆ. ಅವರಿಗೆ ಹಾಸಿಗೆ ಹಾಸಿ ಕೊಡೋದಿತ್ತಲ್ಲಾ” ಎನ್ನುತ್ತಲೇ ಭಾಗೀರತಿ ರಾಮರಾಯರ ಕೋಣೆ ಸೇರಿದಳು.

ಕೆಲ ನಿಮಿಷದಲ್ಲಿಯೇ ಬಾಗಿಲ ಒಳ ಚಿಲಕ ಹಾಕಿದ ಸಪ್ಪಳ ವೇಣಕ್ಕೆನಿಗೆ ಕೇಳಿಸಿತು. ಒಂದು ದೀರ್ಘ ಉಸಿರು ಬಿಟ್ಟು ಮೂಲೆಯಲ್ಲಿಯೇ ವೇಣಕ್ಕೆ ಅಡ್ಡಾದರು.



ರಾಮರಾಯರು ಸಿರಿವಂತ ತಂದೆ ತಾಯಿಯ ಹೊಟ್ಟೆಯಲ್ಲಿ ಜನಿಸಿರಲಿಲ್ಲ. ಅವರ ಕುಶಾಗ್ರ ಬುದ್ಧಿ ಅವರ ಮೈಯಿಂದ ಬೆವರು ಇಳಿಸದೇ ಭಾಗ್ಯಶ್ರೀಯನ್ನು ಒಲಿಸಿಕೊಂಡಿತ್ತು. ಶಿರ್ಶಿಯ ಹತ್ತಿರದ ಒಂದು ಸಣ್ಣ ಹಳ್ಳಿಯಲ್ಲಿಯ ಶಾನುಭೋಗಿಕೆಯೇ ಅವರ ಆನುವಂಶಿಕ ಆಸ್ತಿ, ಆ ಆಸ್ತಿಯನ್ನು ದ್ವಿಗುಣಿಸಿ ವರ್ಗಿಕರಿಸಿದ ಶ್ರೇಯವೆಲ್ಲ ರಾಮರಾಯರದು. ಅವರ ಕೈ ಮೇಲಿನ ಧನದ ಗೆರೆಯೇ ಹಾಗಿತ್ತೇನೋ? ಸಾಲೆಯಲ್ಲಿ ಸಂಪಾದಿಸಿದ ವಿದ್ಯೆ ಅಷ್ಟಕ್ಕಷ್ಟೆಯಾಗಿದ್ದರೂ ಕೈಚಳಕೆದ ಬುದ್ಧಿ ಅಪಾರವಾಗಿತ್ತು.

ಈ ರೀತಿಯಾಗಿ ಬೆಳೆಯುತ್ತಿರುವ ಅವರ ಸಂಪತ್ತು ಅವರ ಮೂಲದ ಮನಸ್ಸಿನಲ್ಲಿ ಮಾರ್ಪಾಟು ಮಾಡುತ್ತಿತ್ತು. ಚಿನಿವಾಲ ತನ್ನ ತಂಗಿಯ ಚಿನ್ನವನ್ನೂ ಕದಿಯುವದರಲ್ಲಿ ಹಿಂದೆ ಮುಂದೆ ನೋಡಲಾರ ಎಂಬ ನಾಣ್ಣುಡಿ ಇದ್ದಂತೆ, ಬರುವ ರೊಕ್ಕದಲ್ಲಿ, ಇವರು ತನ್ನವರು, ಇವರು ಬಳಗದವರು, ಎಂಬ ಭೇದ ಭಾವವನ್ನು ರಾಮರಾಯರು ಇಡುತ್ತಿರಲಿಲ್ಲ. ಈ ಒಂದು ವಿಷಯದಲ್ಲಿ ರಾಮರಾಯರು ನಿಷ್ಪಕ್ಷಪಾತಿಗಳೆಂದೇ ಹೇಳಬಹುದು. ಅವರ ಮೊದಲ ಲಗ್ನದ ವೇಳೆಗೆ ಒಂದು ಪ್ರಸಂಗ ನಡೆಯಿತಂತೆ. ಮಾತುಕತೆಯಾಡುವಾಗ ವರದಕ್ಷಿಣೆಯ ರಕಂ ೫೦೦ ಎಂದು ನಿಶ್ಚಯವಾಗಿತ್ತಂತೆ. ಆದರೆ ಸರಿಯಾಗಿ ಲಗ್ನದ ವೇಳೆಗೇನೇ ಆ ಬಡಪಾಯಿ ತಂದೆಗೆ ೫೦೦ ರೂ. ಕೂಡಿಸಿ ಕೊಡುವದಕ್ಕಾಗಲಿಲ್ಲವಂತೆ. ಅಲ್ಲಿ ಇಲ್ಲಿ ಕಾಡಿ ಬೇಡಿದರೂ, ರಕಂ ೪೦೦ ನ್ನು ದಾಟಲಿಲ್ಲ ಲಗ್ನವೇ ಮುರಿಯುವ ಪ್ರಸಂಗ ಬಂದಿತ್ತು. ಆದರೆ ರಾಮರಾಯರು ಬಡ್ಡಿ ದರ ಹಾಕಿ ಮಾವನ ಕಡೆಯಿಂದ ಪ್ರಾಮೇಶ್ವರೀ ನೋಟನ್ನು ಬರೆಸಿಕೊಂಡು ಲಗ್ನ ಮುರಿಯದ ಹಾಗೆ ನೋಡಿಕೊಂಡರು. ಮೊದಲೇ ಹಿಂಡಿ ಹಿಪ್ಪಿಯಾದ ಮಾವನಿಗೆ ಈ ಸಾಲ ತಿರುಗಿಸಲಿಕ್ಕಾಗಲಿಲ್ಲ. ಬಡ್ಡಿ ಅಸಲು ಕೂಡಿ ೮೦೦ ಆದಾಕ್ಷಣ, ರಾಮರಾಯರು ಮಾವನ ಮನೆಯನ್ನೆ ಗಿಟ್ಟಿಸಿ ಬಿಟ್ಟರು. ಮನೆ ಜಪ್ತಿಯಾದ ಸುದ್ದಿ ಕೇಳಿ ಅವರ ಮಾವ ಮರುಗಿಗೋಳಾಡಿ ಹಳ್ಳಿ ಸೇರಿದ.

ಆದರೂ ರಾಮರಾಯರ ನಿಷ್ಪಕ್ಷಪಾತ ಹೃದಯ ಅಳುಕಲಿಲ್ಲ. ಮಾವ ಹೊಟ್ಟೆಬಟ್ಟೆಗಾಗಿ ತಿರುಗಾಡಿ ತೊಳಲಾಡುತ್ತಿದ್ದುದನ್ನು ಊರಜನರೇ ನೋಡುತ್ತಿದ್ದರು. ರಾಮರಾಯರ ಉಳಿದ ಸಾಲಗಾರರು ಈ ದೃಶ್ಯ ನೋಡಿ ಅರೆಜೀವಿಗಳಾಗಿ ಬಿಟ್ಟಿದ್ದರು.



ಸೋಮ ರಾಯರ ಮನೆ ಬಿಟ್ಟು ಹೊರಬಂದನೇನೋ ನಿಜ, ಆದರೆ ಹೋಗುವದೆಲ್ಲಿ ತಿಳಿಯಲಿಲ್ಲ. ಅವನ ಮನಸ್ಸೇ ಸ್ಥಿರದಲ್ಲಿರಲಿಲ್ಲ. ಕಾಲು ಎಳೆದತ್ತ ಹೊರಟಿದ್ದ. ಮನಸ್ಸಿನಲ್ಲಿ ನೂರಾಎಂಟು ಯೋಚನೆಗಳು. ಒಳಗೆ ಮನಸ್ಸಿನ ದ್ವಂದ್ವ ನಡೆದೇ ಇತ್ತು. ಒಂದು ಮನಸ್ಸು ಹೇಳುತ್ತಿತ್ತು "ಸೇಡು. ಪ್ರಾಮಾಣಿಕತನದಿಂದ ದುಡಿದುದರ ಫಲವಿದು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು ಲೇಸು. ಇಂದು ರಾತ್ರಿಯೇ ರಾಯರನ್ನು ಮುಗಿಸು." ಇನ್ನೊಂದು ಮನಸ್ಸು ಅವಿರೋಧವಾಗಿ ಹೇಳುತ್ತಿತ್ತು.

"ತನ್ನ ಮೈ ಮೇಲೆ ಕಾಲು ಕೆಡಹಿದರೆಂದು ಕಡಿದು ಸೇಡು ತೀರಿಸಿಕೊಳ್ಳುವದು ಮುಳ್ಳಿನ ಧರ್ಮ. ಆದರೆ ಹೂವಿನದಲ್ಲ. ನೀನು ಮುಳ್ಳಿನಷ್ಟು ಕೀಳನಲ್ಲ. ಪ್ರಾಮಾಣಿಕತನಕ್ಕೆ ಇಂದಿಲ್ಲದಿದ್ದರೂ ನಾಳೆಯಾದರೂ ಸುಖ ಸಿಕ್ಕಿತಷ್ಟೇ? ಬಿತ್ತಿದ ಬೆಳೆಯು ಗಾಳಿ ಮಳೆ ಬಿಸಿಲುಗಳ ಹೊಡೆತ ಸಹಿಸಬೇಕು. ತದನಂತರವೇ ಅದು ಫಲಿಸುತ್ತೆ."

ಮೊದಲನೇದು ಮತ್ತೆ "ಹುಚ್ಚು ಹೋರಾಟ. ನೀನಂತೂ ಈಗ ಹಾಳಾಗುವದು ಖಂಡಿತ. ರಾಯರ ಮಾತನ್ನು ಜ್ಞಾಪಿಸಿಕೋ. ನಿನ್ನ ಚನ್ನಪಟ್ಟಣಗಲ್ಲಿಯೊಳಗಿನ ಮನೆ-- ಹ, ಹ, ಹ. ನೀನು ಹಾಳಾಗುವ ಮೊದಲೇ ನಿನ್ನ ಹಾಳು ಮಾಡಿದವರ ಕತೆಯನ್ನು ಮುಗಿಸು.” ಸೋಮ ಒಮ್ಮೆಲೆ ತಲೆಯನ್ನು ಮೇಲೆತ್ತಿದ, ಅದು ಅವನ ದಾನವೀ ತಪಸ್ಸಿನ ಧ್ವಜವಾಗಿತ್ತು. ಈಗಾಗಲೇ ಊರ ಹೊರಗಿನ ಹೊಲಿಗೇರಿಯ ಹತ್ತಿರ ಬಂದುಬಿಟ್ಟಿದ್ದ.

ಮಾದರ ಗಿಡ್ಡ ಬದಿಯಿ೦ದಲೇ ಹೊಲಸು ಲಾವಣಿ ತೊದಲಿಸುತ್ತ ನಡೆದಿದ್ದ. ಗಿಡ್ಡನ ಮೈ ಮೇಲೆ ಎಚ್ಚರವೇ ಇರಲಿಲ್ಲ. ಸೋಮ ಚಿಟಕಿ ಬಾರಿಸಿದ. ಅವನು ವಿಚಾರಿಸುತ್ತಲೇ ಕೂಗಿದ.

"ಓಯ್ ಗಿಡ್ಡ.”

ಗಿಡ್ಡ ಆರೆಎಚ್ಚರದಲ್ಲಿಯೇ ಹೊರಳಿದ. ಮಾತು ಹೊರಡುವ ಮೊದಲೇ ತಲೆಯನ್ನು ಹೊರಳಾಡಿಸಿದ.

"ಏಯ್, ಗಡಂಗ ಎಲ್ಲೈತೋ?”
"ಇಲ್ಲಿ, ನೀಲೇಕಣೆಗೆ ಹೋಗಬೇಕು?"
"ನಡೆ, ಬರ್ತೀಯಾ?"
"ಬ್ಯಾಡ್ರಿ, ನಂಗೆ ಮನೆಗೆ ಹೋಗ್ಬೇಕು.”
"ಬಾರೋ, ನಿಂಗೂ ಎರಡು ಬಾಟ್ಲಿ ಕೊಡಸ್ತೇನೆ."

ಮನೆ ಕಡೆ ಹೊರಳಿದ ಗಿಡ್ಡನ ಮುಖ ನಿಲೇಕಣಿಯ ಕೊರಳಿತು. ಸೋಮನ ಮುಖದ ಮೇಲಿನ ಚಿಂತೆಯ ಕಳೆ ಕಾಣಿಸದಾಗಿತ್ತು. ಹಾದಿಯಲ್ಲಿ ಇಬ್ಬರೂ ಕೂಡಿಯೇ ನಡೆದಿದ್ದರೂ ಯಾರೂ ಮಾತಾಡುತ್ತಿರಲಿಲ್ಲ. ಗಿಡ್ಡನ ಮೈ ಮೇಲೆ ಅರ್ಧ ಪರಿವೆಯೇ ಇರಲಿಲ್ಲ. ಮೇಲಾಗಿ ಮತ್ತೊಂದು ಬಾಟ್ಲಿಯ ಸುಖಸ್ವಪ್ನದಲ್ಲಿ ತಲ್ಲೀನನಾಗಿದ್ದ. ಇದರಿಂದ ಅವನ ಬಾಯಿಂದ ಮಾತು ಹೊರಡುವದಾದರೂ ಹೇಗೆ?

ಸೋಮನ ಮಾತೇ ಬೇರೆಯಾಗಿತ್ತು. ತನ್ನ ನಿರ್ಧಾರದ ವಿಚಾರವನ್ನೇ ಅವನು ಎಣಿಸುತ್ತಿದ್ದ. ಬಂದ ಸಂಕಟವನ್ನು ಮರೆಯುವದಕ್ಕಷ್ಟೇ ಸೆರೆ ಕುಡಿಯುವ ವಿಚಾರವನ್ನು ಮಾಡಿರಲಿಲ್ಲ. ಅದಕ್ಕೂ ಮುಂದಿನ ಮೆಟ್ಟಲನ್ನು ಏರಿದ್ದ. ಭರ್ತಿಯಾಗಿ ಸುರಾನಾನ ಮಾಡಿ, ಸರಿರಾತ್ರಿಗೆ ರಾಯರ ಪೂಜೆಯನ್ನು ಮುಗಿಸಬೇಕು ಎಂದು ಚಪಗೊಡಲಿಯನ್ನು ಆದಷ್ಟು ಸೆರೆ ಕುಡಿದನಂತರ ಮಸೆದಿಡಬೇಕು; ಎಂದು ಮನಸ್ಸಿನಲ್ಲಿ ವಿಚಾರಗಳನ್ನು ಮಸೆಯತೊಡಗಿದ್ದ. ಹಾದಿಯುದ್ದಕ್ಕೂ ಮತ್ತೆ ವಿಚಾರಗಳ ಗೊಂದಲವೇ. ತಾನು ಊರಲ್ಲಿ ಸಭ್ಯನೆಂದು ಪರಿಗಣಿಸಲ್ಪಟ್ಟಿದ್ದೇನೆ. ತಿಳಿಯುವ ವಯಸ್ಸಿನಿಂದ ಇಂದಿನವರೆಗೆ ರಾಯರ ಮನೆಯಲ್ಲಿ ಪ್ರಾಮಾಣಿಕತನದಿಂದ ದುಡಿದಿದ್ದೇನೆ. ಹೀಗಿದ್ದು ಇಂದು ಇಂಥ ಕಾರ್ಯಕ್ಕೆ ಕೈ ಹಾಕಬೇಕೇ ? ಇಂಥ ಕೆಲಸ ಮಾಡಿ ತನ್ನ ತಿಳಿಯಾದ ಪೂರ್ವ ಚಾರಿತ್ರ್ಯಕ್ಕೆ ರಾಡಿಯನ್ನೆಸೆದುಕೊಳ್ಳಬೇಕೆ, ಛೇ? ಇಲ್ಲ. ಆದರೆ ಸೇಡಿಗೆ ಸೇಡು ಬೇಕು. ನಾನು ಪ್ರಾಮಾಣಿಕನಾಗಿ ದುಡಿದಿದ್ದೇನೆ. ಅಷ್ಟೇ ಅಲ್ಲ ರಾಯರನ್ನು ಒಂದು ಸಲ ಉಳಿಸಿಯೂ ಇದ್ದೇನೆ. ಆವಾಗ--ಆ ವಕೀಲರ ಸೊಸೆ ಮನೆಗೆ ಬಂದಾಗ, ರಾಯರ ಆ ಹೊರಚಾಳಿಯು--ಥೂ, ಆ ಪ್ರಸಂಗದಲ್ಲಿಯೂ ನಾನು ಅವರ ಮಾನ ಹೋಗುವ ಪ್ರಸಂಗದಿಂದ ಅವರನ್ನು ಉಳಿಸಿದ್ದೇನೆ. ಇಷ್ಟೆಲ್ಲ ಇದ್ದೂ, ನನ್ನನ್ನು ಅವರು ಈಗ ಈ ಪರಿಸ್ಥಿತಿಗೆ ಇಳಿಸಬೇಕಂದ್ರೆ ? ಇಲ್ಲಿ, ಕೈಕೊಂಡ ಕೆಲಸದಲ್ಲಿ ಹಿಂಜರಿಯತಕ್ಕದ್ದಲ್ಲ. ಗಲ್ಲಿಗೆ ಹೋಗಬೇಕಾದೀತು ಅಷ್ಟೇನೇ ?

"ನೀಲೇಕಣಿ ಬಂತ್ರಿಯಪ್ಪಾ ? "

ಗಿಡ್ಡನ ಮಾತಿನಿಂದ ಸೋಮ ಎಚ್ಚರಗೊಂಡ, “ನಡೆ, ಊರಹೊರಗಿಂದನೇ ಗಡಂಗಕ್ಕೆ ಹೋಗೋಣ.” ಎಂದು ಗಿಡ್ಡನನ್ನು ಜತೆಯಲ್ಲಿ ಕರೆದುಕೊಂಡು ಸೋಮ ಮುಂದೆ ನಡೆದ. ಕತ್ತಲು ಕವಿದಿತ್ತು. ಅಮಾವಾಸ್ಯೆಯ ದಿನ. ಮನೆಮನೆಯಲ್ಲಿಯೂ ದೀಪದ ಬೆಳಕು ನಕ್ಷತ್ರಗಳಂತೆ ಮಿನುಗುತ್ತಿತ್ತು. ಗಡಂಗವು ಸನಿಯದಲ್ಲಿಯೇ ಇತ್ತು. ಗಡಂಗದಲ್ಲಿಯ ಗದ್ದಲ ಕರಗಿತ್ತು.

ಗಡಂಗದ ಯಜಮಾನ ಮಿಣುಕು ದೀಪದ ಬೆಳಕಿನಲ್ಲಿ ದುಡ್ಡನ್ನೆಣಿಸುತ್ತಿದ್ದ. ಸೋಮ ಒಳಗ್ಹೋದವನೇ ಅತ್ತಿತ್ತ ನೋಡಿದ, ಕಳ್ಳತನದಿಂದ ಒಳನುಗ್ಗಿ, ಬೆಕ್ಕಿನಂತೆ ಕಣ್ಣು ಮುಚ್ಚಿ ಹಾಲು ಕುಡಿಯಬಹುದೇ? ತನ್ನನ್ನಾರಾದರೂ ನೋಡಿಯಾರಲ್ಲ ಎಂಬ ಭಯ ಬೇರೆ. ಆದರೆ ಗಿಡ್ಡ ನೇರವಾಗಿ ಗುತ್ತಿಗೆದಾರನ ಹತ್ತಿರ ಹೋಗಿ ತಾನೇ ದುಡ್ಡನ್ನು ಕೊಡುವವರ ಹಾಗೆ “ಎರಡು ಬಾಟ್ಲಿ ಭಟ್ರೇ” ಎಂದು ಕೂಗಿದ.

"ಭಟ್ರೇ" ಎಂಬ ಶಬ್ದಕ್ಕೆ ಸೋಮ ಬೆರಗಾಗಿ ಹೊರಳಿನೋಡಿ ನಿಜಕ್ಕೂ ಸ್ಥಂಭಿತನಾಗಿಯೇ ಬಿಟ್ಟ. ಎದೆ ಧಸ್ಸೆಂದಿತು. ಗಡಂಗದ ಮಾಲಿಕ ಮತ್ತಾರೂ ಆಗಿರಲಿಲ್ಲ. ರಾಯರ ಮಾವ. ಲಗ್ನದ ವರದಕ್ಷಿಣೆಗಾಗಿ ಆಸ್ತಿಪಾಸ್ತಿ ಕಳೆದುಕೊಂಡ ಮಾವ. ಹಣವಿಲ್ಲದವನ ಬಾಳು ಹೆಣದಕಿಂತ ಕಡೆ. ಮಾನವಿಲ್ಲದವನು ಮೃತಸಮಾನ. ಮೊದಲೇ ಹೆಣವಾಗಿದ್ದ ಭಟ್ರು ಈ ಉದ್ಯೋಗಕ್ಕೆ ಕೈ ಹಾಕಿದರೇನೋ? ಸೋಮನ ಮನಸ್ಸಿನಲ್ಲಿ ಸೇಡು ಬೃಹದ್ ಆಕಾರ ತಾಳತೊಡಗಿತ್ತು. ಸ್ವಂತ ಮಾವನನ್ನೇ ಈ ಪರಿಸ್ಥಿತಿಗೆ ತಂದಿರಿಸಿದ ರಾಯರು ತನ್ನನ್ನೂ......."

"ಬನ್ನಿ ಸಾಮೀ" ಗಿಡ್ಡ ಮೊದಲು ಬಾಟ್ಲಿ ಖಾಲಿ ಮಾಡಿ ಚೋಲಿ ಹೊಡೆಯುತ್ತ ಕೂಗಿದ. ಸೋಮ ಹತ್ತಿರ ಸರಿದು ಗಿಡ್ಡನತ್ತ ಲಕ್ಷ ಕೊಡಗೆ ಭಟ್ಟರಿಗೆ "ಶರಣ್ರಿ ಭಟ್ಟರೆ" ಎಂದ.

"ಯಾರು ಸೋಮಣ್ಣ ಏನು" ಎಂದು ಸಾಮೋಪಚಾರದ ನಗು ನಕ್ಕರು ಭಟ್ಟರು. ಆ ನಗು ಸೊಮನಿಗೆ ಕರ್ಕಶ ನಗುವಾಗಿ ತೋರಿತು. ಸೋಮನೇ ಪ್ರಶ್ನಿಸಿದ"

“ತಾವು ಈ ಕೆಲಸಕ್ಕೆ ಕೈ ಹಾಕಬೇಕೇ?”
"......" ಭಟ್ಟರ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯ ಹತ್ತಿತು.
"ನಾಲ್ಕು ಮನೆ ಭಿಕ್ಷೆಗೆ ಹೋಗಿದ್ದರೆ ಹೊಟ್ಟೆ ತುಂಬ್ತಿತ್ತಲ್ಲ?"
"ನಾನೊಬ್ಬನೇ ಇದ್ದಿದ್ದರೆ ಆ ಭಿಕ್ಷೆ ಚಿಂತೇನೇ ಇರತಿರಲಿಲ್ಲ. ಅಂದೇ ಭಾಂವೀ ಬೀಳತಿದ್ದೆ."

ಸೋಮನಿಗೆ ತನ್ನ ಚಿನ್ನಿಯ ನೆನಪಾಯ್ತು. ಭಟ್ಟರು ಬದುಕಿದ್ದು ತಮ್ಮ ಮಕ್ಕಳ ಸಲುವಾಗಿ. ಈಗ ತಾನು ಏನೋ ಮಾಡಹೊರಟಿರುವೆ.

"ಹಾಗಾದರೆ ಈ ಕೆಲಸ ಮಾಡಬೇಕೇ?”

"ಯಾವದೇನಯ್ಯ ವೃತ್ತಿ? ಎರಡು ಕಾಸು ಕೈಯಲ್ಲಿ ಆಡುತ್ತಿರುವವನಿಗೆ ಮಾನ! ಜನ ದುಡ್ಡನ್ನು ಕೂಡಿಸುವ ರೀತಿಯನ್ನು ನೋಡುವದಿಲ್ಲ, ಕೂಡಿದ ದುಡ್ಡಿನ ರಾಸಿಯತ್ತ ನೋಡಿ, ಮನುಷ್ಯನ ಬೆಲೆಯನ್ನು ಕಟ್ಟುತ್ತಾರೆ.”

ಸೋಮನ ವಿಚಾರಚಕ್ರ ತಿರುಗತೊಡಗಿತು, ರೀತಿಗೂ ನೀತಿಗೂ ಯಾವದೇ ಸಂಬಂಧವಿಲ್ಲ ಬದುಕಬೇಕಾದರೆ ವೃತ್ತಿ ಯಾವದಾದರೇನು? ನಾಲ್ಕು ಜನ ಮೊದಲು ಮೂರು ದಿನ ಮೂಗು ಮುರಿಯುತ್ತಾರೆ. ಮುಂದೆ ಎಲ್ಲವೂ ಸಮ.

"ಯಪ್ಪಾ, ಹೊತ್ತಾಯ್ತು ಬುದ್ಧಿ, ಬೇಗ ಮುಗಿಸಿ” ಗಿಡ್ಡ ಜೋಲಿ ಹೊಡೆಯುತ್ತಲೇ ನುಡಿದ.
"ನಾನು ಆಗಲೇ ಮುಗಿಸಿ ಬಿಟ್ಟೆ” ಸೋಮ ಉತ್ತರಿಸಿದ.
"ಮತ್ತೆ ತುಂಬಿದ್ದು ಹಾಗೇ ಐತಲ್ರ್ತಿ"
"ಅಯ್ಯೋ, ನೀ ಹೆಚ್ಚಾಗಿ ಕುಡಿದಿದ್ದಿ ಮಬ್ಬೇ, ಅದು ಖಾಲಿ ಬಾಟ್ಲಿ" ಎಂದು ಹೇಳಿ ಸೋಮ ಬಾಟ್ಲಿಯನ್ನು ಮರಳಿ ತೆಗೆದು ಕೊಳ್ಳುವದಕ್ಕೆ ಭಟ್ಟರಿಗೆ ಹೇಳಿದ. ಸೆರೆಯಂಗಡಿ ತೆಗೆದ ಭಟ್ಟರನ್ನು ನೋಡಿದ ಸೋಮನ ಮೊದಲ ನಿರ್ಧಾರ ಕಳಚಿಬಿಟ್ಟಿತ್ತು. ಅದರ ಬದಲು ಬೇರೊಂದು ಆಶೆಯ ಮಹಾಮಂದಿರ ನಿರ್ಮಾಣವಾಗಿತ್ತು.

"ಬರ್‍ತೇನೆ ಭಟ್ಟರೇ ” ಎಂದು ಸೋಮ ಗಿಡ್ಡನ ಜತೆಯಲ್ಲಿ ಗಡಂಗದಿಂದ ಹೊರಬಿದ್ದ.



ಸೋಮ ಮನೆಗೆ ಬಂದ. ಆಕಾಶ ದಾಳಿ ಮುಗಿಯಿತೆಂದರೆ, ನೆಲಮನೆಯಿಂದ ಹೊರಗೆ ಬಂದ ಸೈನಿಕನಂತೆ ಹಾಯಾಗಿ ಉಸುರಿಸಿದ. ಆ ಉಸಿರನ್ನು ಕೇಳಿ ಚಿನ್ನಿ ಒಳಗಿನಿಂದಲೇ ಹೊರಬಂದಳು. ಅಪ್ಪನನ್ನು ಒಂದುಸಲ ದೃಷ್ಟಿಸಿ ದಳು. ಹೊಸಗಾಳಿ ಬೀಸಿದಾಗ ಕಲೆತ ಕಾರ್ಮೋಡಗಳು ಚಲವಿಚಲವಾಗಿದ್ದಂತೆ ಸೋಮನ ಮುಖ ನಿಚ್ಚಳವಾಗಿತ್ತು. ಅವನ ಮುಖದ ಮೇಲಿನ ಚರ್ಯೆಯನ್ನು ನೋಡಿ ಹೋದ ಕೆಲಸ "ಗಂಡು" ಎಂದು ಚಿನ್ನಿ ಮನದಲ್ಲಿಯೇ ನಿರ್ಧರಿಸಿದಳು. ಆದರೂ ಮನಸ್ಸಿಗೆ ಸಂದೇಹವನ್ನು ನಿವಾರಿಸಿ ಕೊಳ್ಳುವದಕ್ಕೆ-

"ಅಪ್ಪಾ ಹೋದ ಕೆಲಸs ಗಂಡೇ?"
"ಎರಡೂ ಅಲ್ಲ.”

ಚಿನ್ನಿ ಬಿಚ್ಚಿದಳು. ಅವನ ನಗುಮುಖ ನೋಡಿದರೆ ಸಂಕಟ ಮುಕ್ತತೆಯ ಸುಚಿನ್ಹ ಕಾಣುತ್ತಿತ್ತು. ಹಾಗಾದರೆ ? ಅಪ್ಪ ತನ್ನ ಜತೆಯಲ್ಲಿ ಸುಳ್ಳಾಡುತ್ತಿರಬಹುದೇ ? ಛೇ, ಹಿರೀ ಮೀನು ಕಿರಿ ಮೀನನ್ನು ನುಂಗುತ್ತಿರಬಹುದು. ನಾಯಿ ನಾಯಿಯನ್ನು ನೋಡಿ ಬೊಗಳಬಹುದು. ಆದರೆ ತನ್ನ ತಂದೆ-ತಾಯಿಯ ಸುಖವನ್ನೇ ಅರಿಯದ ತನಗೆ ಸೋಮನೇ ತಾಯಿಯಾಗಿದ್ದ. ತಾಯಿ ಮಗಳಿಗೆ ಎರಡು ಬಗೆಯಬಹುದೇ ?- ಅತಿ ವಿರಳ. ಆವಿರಳರಲ್ಲಿ ತನ್ನ ತಂದೆ ಕೂಡಲಾರ. ಮಗಳ ವಿಚಾರ, ಪ್ರಶ್ನಾರ್ಥಕ ಮುದ್ರೆ ನೋಡಿ ಸೋಮನೇ-

"ಅನ್ನ ಬೇಯಿಸಿದ್ದೀಯಾ?"
"ಇಲ್ಲ, ರಾಗಿ ಹಿಟ್ಟಿನ ಮುದ್ದೆ ತಿರಿದೀನಿ. ”

ಸೋಮ ಒಂದು ಸಲ ನಕ್ಕ. ಆ ನಗು ಶುಷ್ಕವಾಗಿತ್ತು. ಆ ನಗುವಿನ ಹಿಂದೆ ನೋವಿತ್ತು. ಹೆಣದ ಮೇಲೆ ಹೊದ್ದ ಶುಭ್ರ ವಸ್ತ್ರವಿರುತ್ತದಲ್ಲಾ .

"ಅಪ್ಪಾs… ಯಾಕೆ ನಕ್ಕೆ?”
"ಮತ್ತೇನು ಅಳಬೇಕೇ?”
"..........?" ಚಿನ್ನಿ ನಿರುತ್ತರಳಾದಳು.
"ಅಳು ಹೆಚ್ಚಾಯ್ತಂದ್ರೆ ನಗೂ ಬರ್ತದೆ ಕಣೆ?”

ಚಿನ್ನಿಗೆ ತಡೆಯಲಾಗಲಿಲ್ಲ. ಕಣ್ಣೀರು ಕೋಡಿಯಾಗಿ ಹರಿಯಿತು. ಸೋಮ ಚಿನ್ನಿಯನ್ನು ತಬ್ಬಿದ. ಆದರೆ ಅವನ ಕಣ್ಣಲ್ಲಿ ನೀರೇ ಬರಲಿಲ್ಲ. ಮತ್ತೆ ಅದೇ ತರಹದ ನಗು--ಎಷ್ಟು ಭೀಷಣವಾಗಿತ್ತು ಆ ನಗು.

ಆ ನಗು ನಾಳಿನ ಅಳುವಿಗೆ ನಾಂದಿಯಾಗುವಂತಿದ್ದರೆ––

ತಂದೆ ಮಗಳು ಕೂಡಿ ರಾಗಿ ಮುದ್ದೆಯನ್ನೆ ಊಟಮಾಡಿ ತಮ್ಮತಮ್ಮ ಹಾಸಿಗೆಯ ಮೇಲೆ ಒರಗಿದರು. ನಡುಮನೆಯಲ್ಲಿ ಹರಳೆಣ್ಣೆಯ ದೀಪ ಸಣ್ಣಾಗಿ ಮಿಣುಗುತ್ತಿತ್ತು. ತನ್ನ ಮನೆಯ ಪರಿಸ್ಥಿತಿಯನ್ನು ಆ ಮಿಣುಕು ಅಣಕವಾಡಿಸುವಂತೆ ಸೋಮನಿಗೆ ಗೋಚರಿಸಿತು. ಸೂರ್ಯ ಮುಳುಗಿದಾಗ ತನ್ನ ಜೀವನದಲ್ಲಿಯ ಮತ್ತೊಂದು ದಿನ ಪಾರಾಯಿತು ಎಂದು ಸಂತೋಷಪಟ್ಟ ಸೋಮನಿಗೆ ಈ ದೀಪದ ಬೆಳಕೂ ಸಹಿಸಲಸಾಧ್ಯವಾಯಿತು. ಎದ್ದು ದೀಪವನ್ನಾರಿಸಿದ. ಚಿನ್ನಿಗೆ ಕಂಡಿದ್ದು ಆ ಬತ್ತಿಯ ಹೊಗೆ ಮಾತ್ರ.

ಕೋಳಿ ಕೂಗಿದಾಕ್ಷಣ, ಚಿನ್ನಿ ಎದ್ದು ಅಡಿಗೆ ಮನೆಯ ಕೆಲಸಕ್ಕೆ ತೊಡಗಿದ್ದಳು. ಭಾಂಡಿಗಳನ್ನೆಲ್ಲ ತಿಕ್ಕಿ, ಮನೆ ಮುಂದಿನ ಅಂಗಳವನ್ನೆಲ್ಲ ಕಸಗುಡಿಸಿ ಎಮ್ಮೆ ತೊಳೆದು ಎರಡು ಎತ್ತಿಗೂ ಮೇವು ಹಾಕಿ, ಎಮ್ಮೆಯನ್ನು ಹಿಂಡಿ, ಒಲೆಯ ಮೇಲೆ ಗಂಜಿಗಿಟ್ಟು, ಹಾಲು ಕೊಡುವದಕ್ಕೆ ಹೊರಬಿದ್ದಳು. ಹಾಲುಕೊಟ್ಟು ತಿರುಗಿಬಂದರೂ ಮನೆಯಲ್ಲಿ ಅಪ್ಪ ಎದ್ದುದರ ಸುಳಿವೇ ಇಲ್ಲ. ಏನೋ ಮೈಯಲ್ಲಿ ಸ್ವಾಸ್ಥ್ಯವಿರಲಿಕ್ಕಿಲ್ಲವೆಂದು ಇಂದು ಮುಂಜಾನೆ ಅಪ್ಪ ಮಾಡುವ ಕೆಲಸವನ್ನು ತಾನೇ ಮಾಡಿದ್ದಳು. ಆದರೆ ೯ ಹೊಡೆದರೂ ಅಪ್ಪ ಎದ್ದಿರಲಿಲ್ಲ. ದಿನಾಲು ಇಷ್ಟು ಹೊತ್ತಿಗೆ ಎದ್ದು ಗಂಜೀ ಕುಡಿದು, ಗಳೇ ತೆಗೆದುಕೊಂಡು ಹೊಲಕ್ಕೆ ಹೊರಡುವವ ಇನ್ನೂ ಹಾಸಿಗೆಯ ಮೇಲೆಯೇ ಇದ್ದ. ಚಿನ್ನಿ ಅಪ್ಪನ ಹಾಸಿಗೆಯ ಬಳಿ ಹೋದಳು. ಸೋಮ ಹಾಸಿಗೆಯ ಮೇಲೆ ಬಡಬಡಿಸುತ್ತಿದ್ದ. ಚಿನ್ನಿಯ ಎದೆ ಧಸ್ಸೆಂದಿತು. ಹಾಗೆ ಕೆಲ ನಿಮಿಷ ಆಲಿಸಿದಳು:--

"......ಸಾsಲ...ನನ್ನ......ಚಿನ್ನಿ ಮದ್ವಿ......."
ಅಪ್ಪನನ್ನು ಕೈಮುಟ್ಟಿ ಚಿನ್ನಿ ಎಬ್ಬಿಸಹೋದಳು. ಸೋಮನ ಮೈಕಾದ ಕೆಂಡವಾಗಿತ್ತು. ಚಿನ್ನಿ ಮತ್ತೆ ನಡುಗಿದಳು. ಮೊದಲೇ ಸಾಲದ ಭಾರ, ಅಪ್ಪ ಜ್ವರದಿಂದ ಪೀಡಿತನಾಗಿ ಬಿಟ್ಟರೆ, ಔಷಧದ ವೆಚ್ಚಕ್ಕೆ ಎಲ್ಲಿಂದ ತರಬೇಕು ಎನ್ನುವ ಚಿಂತೆ ಅವಳಲ್ಲಿ ಮೂಡಿತು. ನಡುಗುವ ಕೈಗಳಿಂದಲೇ ಅಪ್ಪನನ್ನು ಎಬ್ಬಿಸಿದಳು.

“ಬಿಡಿ, ರಾಯರೇss ಕೈಗೆ ಹಗ್ಗ ಕಟ್ಟಬೇಡಿ, ನಾನು ಸಾಲ ಮುಟ್ಟಿಸುತ್ತೇನೆ” ಎಂದು ಸೋಮ ನಿದ್ದೆಗಣ್ಣಿನಲ್ಲಿಯೇ ಕೂಗಿಕೊಂಡ.

ಅದನ್ನು ಕೇಳಿದ ಚಿನ್ನಿಯ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಹರಿಯತೊಡಗಿತು. ಗಲ್ಲದ ಮೇಲೆ ಬಿದ್ದ ಕಣ್ಣೀರನ್ನು ಒರೆಸಿಕೊಳ್ಳದೇ ಚಿನ್ನಿ--

"ಅಪ್ಪಾ, ನಾನು ರಾಯರಲ್ಲ, ಚಿನ್ನಿ ನಿನ್ನ ಮಗಳು " ಎಂದು ಹೇಳಿದಳು.

"ಏನು ಚಿನ್ನಿsನಾ, ಇದ್ದೀಯಾ. ನಾನೇನೂ ತಿಳಿದಿದ್ದೆ ಸತ್ತೆ ಎಂದು, ಆ೦” ಎಂದು ಗಹಗಹಿಸಿ ನಕ್ಕ. ಚಿನ್ನಿ ಬಿಚ್ಚಿದಳು. ಅಪ್ಪನಿಗೆ ಎಲ್ಲಿ ಹುಚ್ಚು ಹಿಡಿಯಿತೋ ಎಂದಂಜಿದಳು. ಇದ್ದುದರಲ್ಲಿಯೇ ಧೈರ್‍ಯ ತಂದುಕೊಂಡು--

"ಅಪ್ಪಾ, ಒಂದು ಭಾಳ ಸಂತೋಷದ ಸುದ್ದಿ. ರಾಯರು ಅರ್ಧ ಸಾಲಾ ಸೂಟ ಬಿಡ್ತೇನೆ ಅಂತ ಹೇಳಿದರು" ಎಂದು ಸುಳ್ಳು ಹೇಳಿದಳು.

ಸಾಗರದ ಕಾಡು ಮರಳಿನಲ್ಲಿ ನಡೆಯುವವನಿಗೆ ನೀರು ಚಿಮುಕಿಸಿದಂತಾಗಿತ್ತು. ಸೋಮನ ಮುಖದ ಮೇಲಿನ ಹುಚ್ಚು ಕಳೆ ಮಾಯವಾಗತೊಡಗಿತು.

"ರಾಯರದು ದೊಡ್ಡ ಗುಣ. ದೇವರು ರಾಯರನ್ನು ಕಾಪಾಡಲಿ" ಎಂದು ಹೇಳಿ ಮತ್ತೆ ಹಾಸಿಗೆಯಲ್ಲಿ ಒರಗಿದ.

ಚಿನ್ನಿ ನಿಶ್ಚಿಂತೆಯ ದೀರ್ಘ ಶ್ವಾಸವನ್ನು ಬಿಟ್ಟಳು. ಏನೋ ಸುಳ್ಳು ಹೇಳಿ ಆ ವಿಷನಿಮಿಷವನ್ನು ದೂಡಿದ್ದಳು. ಆದರೆ ಮುಂದೆ? ಎಂಬ ಪ್ರಶ್ನೆ ಅವಳ ಎದುರಿನಲ್ಲಿ ಭೂತಾಕಾರವಾಗಿ ನಿಂತಿತು. ತನ್ನ ಅಪ್ಪನೇ ತನಗೆ ಸರ್ವಸ್ವ. ಅದೇ ತನ್ನ ಪಂಚಪ್ರಾಣ, ಅದನ್ನೇ ಕಳೆದುಕೊಂಡರೆ..?‍

ಇಲ್ಲ. ಏನನ್ನಾದರೂ ಮಾಡಿ ಅಪ್ಪನನ್ನು ಉಳಿಸಿಕೊಳ್ಳಬೇಕು ಎಂದು ಮನದಲ್ಲಿ ನಿರ್ಧರಿಸಿ ಹೊರಬಂದಳು. ತೊಟ್ಟಿಯಲ್ಲಿ ಕಟ್ಟಿದ ಎಮ್ಮೆ ಒಂದು ಸಲ ಒದರಿತು. ಪಾಪ, ಕೆಲಸದ ಗಡಿಬಿಡಿಯಲ್ಲಿ ಅದಕ್ಕೆ ನೀರು ಕುಡಿಸುವದಕ್ಕೆ ಮರೆತಿದ್ದಳು. ಚಿನ್ನಿ ಒಮ್ಮೆಲೆ ಬಾದ್ಲಿಯನ್ನು ತೆಗೆದುಕೊಂಡು ಅಂಗಳಕ್ಕೆ ಡೋಣಿಯಲ್ಲಿಯ ನೀರು ತೆಗೆದುಕೊಳ್ಳುವದಕ್ಕೆ ಬಂದಳು. ಸೂರ್ಯ ಕಿರಣಗಳು ಡೋಣಿಯ ನೀರಲ್ಲಿ ಬಿದ್ದುದರಿಂದ ನೀರು ಪಾರದರ್ಶಕ ಕನ್ನಡಿ ಯಂತೆ ಕಂಗೊಳಿಸುತ್ತಿತ್ತು. ಚಿನ್ನಿ ನೀರಿಗಾಗಿ ಬಗ್ಗಿದಾಗ ಅಲ್ಲಿ ಅವಳ ಪ್ರತಿಬಿಂಬ ನಿಚ್ಚಳವಾಗಿ ಕಾಣಿಸತೊಡಗಿತು. ಆರೆನಿಮಿಷ ಹಾಗೆಯೇ ಬಗ್ಗಿ ನಿಂತಳು. ಮೈ ಕೈ ತುಂಬಿಕೊಂಡ ದೇಹ, ಬಗ್ಗಿದಾಗ ಮೇಲಿನ ಸೆರಗು ಜಾರಿ ಹೋಗಿತ್ತು. ಭರದಿಂದ ಉಬ್ಬಿದ ಎದೆ. ಪುಟ ಚೆಂಡುಗಳನ್ನು ಬಿಗಿಯಾಗಿ ಕಟ್ಟಿದಂತೆ ಭಾಸವಾಗುತ್ತಿತ್ತು. ಆ ಚಿತ್ರವನ್ನು ನೋಡುತ್ತಿರುವಂತೆ ಚಿನ್ನಿಗೆ ಅಪ್ಪನ ಸ್ಥಿತಿ ನೆನಪಾಯ್ತು. ಅವನ ಸಾಲ,....ಜ್ವರ....ಹುಚ್ಚು.

ನೀರಲ್ಲಿಯ ಆ ಯೌವನ ಮೂರ್ತಿ, ಎದೆ ಮುಂದೆ ಮಾಡಿ ಮಾದಕನಗೆ ನಕ್ಕಂತೆ ಭಾಸವಾಯಿತು. ಎಮ್ಮೆ ಮತ್ತೊಂದು ಸಲ ಕೂಗಿಕೊಂಡದ್ದರಿಂದ, ಚಿನ್ನಿಯ ಸಮಾಧಿ ಭಂಗವಾಯಿತು. ಬಾದ್ಲಿಯನ್ನು ನೀರಲ್ಲಿ ಮುಣುಗಿಸಿದಳು. ನೀರು ಅಲ್ಲೋಲ ಕಲ್ಲೋಲವಾಯಿತು. ಸೂರ್ಯನ ಪರಿವರ್ತನ ಕಿರಣವೊಂದು ಅವಳ ಕಣ್ಣನ್ನು ಕುಕ್ಕಿಸಿತು. ಆ ಕಿರಣವೇ ಕತ್ತಲಲ್ಲಿ ಅವಳಿಗೆ ಆಶಾಕಿರಣವಾಗಿ ಗೋಚರಿಸಿತು. ನೀರಲ್ಲಿ ಹಾಗೇ ನೋಡುತ್ತಿರುನಂತೆ ಅವಳಿಗೆ ಅಲ್ಲಿ ಮತ್ತೊಂದು ಪ್ರತಿಬಿಂಬ ಕಾಣಿಸಿತು. ಚಿನ್ನಿ ಬೆಚ್ಚಿ ಹಿಂತುರಿಗಿ ನೋಡಿದಳು. ಮತ್ತಾರೂ ಇರಲಿಲ್ಲ ರಾಯರು ಕೈಯಲ್ಲಿ ಕಿರ್ದೀ ಬುಕ್ಕನ್ನು ಹಿಡಿದುಕೊಂಡು ಕಾಮಯುಕ್ತ ನಗೆಯನ್ನು ಬೀರುತ್ತಿದ್ದರು. ಮೊದಲು ಚಿನ್ನಿ ಅಂಜಿದಳು. ಆದರೂ ಮುಂದೆ ಚಿನ್ನಿ ಮಾದಕ ನಗೆಯನ್ನು ಬೀರಿದಳು. ರಾಯರು––

"ಸಾಲದ ಹಣ ಕೇಳಲು ಬಂದಿದ್ದೆ.”
"ರೂಪಾಯಿಗಳೇ ಬೇಕೇ?"
"ಮತ್ತೇನು?"
"ಅದರ ಬದಲು......."
"ಬಂಗಾರ, ಬೆಳ್ಳಿ, ಚಿನ್ನ ಏನಾದರೂ ಇದೆಯೇ?”
"ಅದರ ಬದಲು ಚಿನ್ನ."
"ಸರಿ, ಆಗಬಹುದು?"
"ಒಳಗೆ ಬನ್ನಿ"

ಚಿನ್ನಿ ರಾಯರನ್ನು ಕರೆದುಕೊಂಡು ತನ್ನ ತಂದೆ ಮಲಗಿದ್ದ ಪಡಸಾಲೆಯಿಂದಲೇ ಒಳಕೋಣೆಗೆ ಕರೆದುಕೊಂಡು ಹೋದಳು. ಸೋಮ ಅರ್ಧ ನಿದ್ದೆ ಯಲ್ಲಿದ್ದರೂ ಅವನಿಗೆ ಒಳಚಿಲಕ ಹಾಕಿದ ಸಪ್ಪಳ ಕೇಳಿಸಿತು, ಸೋಮನ ಒಂದು ದೀರ್ಘ ಉಸಿರು--ಅದಕ್ಕೆ ಹಿನ್ನೆಲೆ ಸಂಗೀತವಾಗಿ ಮಾರ್ಪಡಿಸಿತು. ಹಾಗೇ ಮತ್ತೆ ಕಣ್ಣು ಮುಚ್ಚಿದ--ಎದುರಿನಲ್ಲಿ ಗಡಂಗದಲ್ಲಿ ಭಟ್ಟರ ಮೂರ್ತಿ ಕಾಣಿಸಿತು.

ಇನ್ನು ಮಗಳನ್ನು ಹೀಯಾಳಿಸುವದರಲ್ಲಿ ಏನರ್ಥವೆಂದುಕೊಂಡ. ಸೋಮನ ವಿಚಾರ ಪ್ರವಾಹ ನಿಲ್ಲುವುದಕ್ಕೆ ಒಂದು ಘಂಟೆ ಹಿಡಿಯಿತು. ಆ ಘಂಟೆಯಲ್ಲಿ ಚಿನ್ನಿ ಪ್ರಾಮೇಶ್ವರಿ ನೋಟನ್ನು ಹಿಂದಕ್ಕೆ ಪಡೆದಿದ್ದಳು.