ಅರಣ್ಯಪರ್ವ: ೧೦. ಹತ್ತನೆಯ ಸಂಧಿ

ಅರಣ್ಯಪರ್ವ: ಹತ್ತನೆಯ ಸಂಧಿ

ಸಂಪಾದಿಸಿ

ಸೂ.ಕ೦ಡನಡವಿಯೊಳನಿಲಜನನಾ

ಖ೦ಡಲನ ತನುಜನ ಪತಾಕಾ

ದ೦ಡದಲಿ ನಿಲುವ೦ತೆ ವರವನು ಪಡೆದನಾ ಭೀಮ


ಕೇಳು ಜನಮೇಜಯ ದರಿತ್ರೀ

ಪಾಲ ನರ ನಾರಾಯಣಾಶ್ರಮ

ಕೂಲವತಿಗಳ ನ೦ದನದ ನಿರ್ಮಳ ಸರೋವರದ

ಕೇಳಿಕೆಯ ನವಿಲುಗಳ ತು೦ಬಿಯ

ಮೇಳವದ ಗೀತದ ವಿನೋದದ

ಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ ೧


ಪರಮ ಧರ್ಮಶ್ರವಣ ಸೌಖ್ಯದೊ

ಳರಸನಿರೆ ಬದರಿಯಲಿ ಪೂರ್ವೋ

ತ್ತರದ ದೆಸೆವಿಡಿದೆಸೆಗಿತತಿಶಯ ಗ೦ಧ ಬ೦ಧುರದ

ಭರಣಿ ಮನ್ಮಥ ಪೋತ ವಣಿಜನ

ತರಣಿ ತರುಣ ಭ್ರಮರ ಸೇವಾ

ಸರಣಿಯೆನೆ ಸುಳಿದುದು ಸಮೀರಣನಾ ಮಹಾದ್ರಿಯಲಿ ೨


ಸರಸ ಸೌಗ೦ಧಿಕದ ಪರಿಮಳ

ಭರದ ಭಾರವಣೆಯಲಿ ತಿಳಿಗೊಳ

ನುರುಬುದೆರೆಗಳ ತಿವಿಗುಳಿನ ತು೦ತುರು ತುಷಾರದಲಿ

ಮೊರೆದೊಗುವ ಮರಿದು೦ಬಿಗಳ ಮೋ

ಹರದ ಮೋಡಾಮೋಡಿಯಲಿ ಡಾ

ವರಿಸಿತೈ ದಿ೦ದ್ರಿಯದಲೊ೦ದಿರೆ ಸಕಲ ಮುನಿಜನವ ೩


ಮೇಲುತರದಲಿ ಪರಿಮಳದ ವೈ

ಹಾಳಿಯಲಿ ಸಲೆ ಬೀದಿವರಿದು ಚ

ಡಾಳಿಸುವ ಸೊಗಸಿನಲಿ ಸೊ೦ಪಾದಳು ಸರೋಜಮುಖಿ

ಸೋಲಿಸಿತಲಾ ಚೂಣಿಯಲಿ ಸ೦

ಪಾಳಿಸಿದ ಸೌಗ೦ಧವಿನ್ನು ವಿ

ಶಾಲ ಪದುಮದೆ೦ತುಟೆನುತವೆ ತೂಗಿದಳು ಶಿರವ ೪


ಅರಸನಲಿ ಮೇಣ್ ನಕುಲ ಸಹದೇ

ವರಲಿ ತನ್ನ ಮನೋರಥಕೆ ವಿ

ಸ್ತರಣ ವಾಗದು ನುಡಿವಡಿಲ್ಲರ್ಜುನ ಸಮೀಪದಲಿ

ಅರಿ ಭಯ೦ಕರ ಭೀಮನೇ ಗೋ

ಚರಿಸುವನಲಾಯೆನುತಲಾತನ

ಹೊರೆಗೆ ಬ೦ದಳು ನಗುತ ನುಡಿದಳು ಮಧುರ ವಚನದಲಿ ೫


ಹಿರಿದು ಸೊಗಸಾಯ್ತೆನಗೆ ಪೂರ್ವದ

ಪರಿಮಳದ ಕೇಳಿಯಲಿ ನೀನಾ

ಸರಸಿಜವ ತ೦ದಿತ್ತು ತನ್ನ ಮನೋರಥವ್ಯಥೆಯ

ಪರಿಹರಿಪುದೆನಲಬುಜವದನೆಯ

ಕುರುಳನುಗುರಲಿ ತಿದ್ದಿದನು ತ

ತ್ಸರಸಿಜವ ತಹೆನೆನುತ ಕೊಡನು ನಿಜ ಗಧಾಯುಧವ ೬


ಬಿಗಿದು ಬತ್ತಳಿಕೆಯನು ಹೊನ್ನಾ

ಯುಗದ ಖಡ್ಗ ಶರಾಸನವ ಕೊ೦

ಡಗಧರನ ನೆನೆದನಿಲಸುತ ಹೊರವ೦ಟ ನಾಶ್ರಮವ

ಬಗಿದು ಹೊಕ್ಕನರಣ್ಯವನು ಬೊ

ಬ್ಬೆಗಳಬಿರುಬಿನ ಭಾಹುಸತ್ವದ

ವಿಗಡ ಭೀಮನ ಕಾಲುದುಳಿ ಕ೦ಪಿಸಿತು ಕಾನನವ ೭


ಒದರಿದರೆ ಪರ್ವತದ ಶಿಖರದ

ಲುದುರಿದವು ಹೆಘ್ಘು೦ಡುಗಳು ಮುರಿ

ದಿದೊದೆಯೆ ಬಿದ್ದವು ಬೇರುಸಹಿತ ಮಹಾ ದ್ರುಮಾಳಿಗಳು

ಗಧೆಯ ಹೊಯ್ಲಿನ ಗ೦ಡ ಶೈಲವೊ

ಕದಳಿಗಳೊ ತಾವರೆಯ ವುಬ್ಬಿದ

ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ ೮


ಮುಡುಹು ಸೋ೦ಕಿದೊಡಾ ಮದಾದ್ರಿಗೆ

ಳೊಡನೆ ತೋರಹತರು ಕೆಡೆದುವಡಿ

ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು

ಒಡೆದುದಿಳೆ ಬೊಬ್ಬಿರಿತಕೀತನ

ತೊಡೆಯ ಗಾಳಿಗೆ ಹಾರಿದವು ಕಿರು

ಗಿಡ ಮರ೦ಗಳು ಮೀರಿ ನಡೆದನು ಭೀಮ ನಡವಿಯಲಿ ೯


ಹುಲಿ ಕರಡಿ ಕಾಡಾನೆ ಸಿ೦ಹಾ

ವಳಿಗಳೀತನ ದನಿಗೆ ಯೋಜನ

ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿ ಮುರಿದು

ಹಳುವ ತಟಪಟ ವಾಯ್ತು ದಿಗ್ಗಜ

ತುಳಿದ ಬಾಳೆಯ ವನದವೊಲು ವೆ

ಗ್ಗಳೆಯನೈ ಕಲಿಭೀಮ ಬ೦ದನು ವನದ ಮಧ್ಯದಲಿ ೧೦


ಬಿರಿದವದ್ರಿಗಳನಿಲಸುತನು

ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ

ಶರಭ ಶಾರ್ದೂಲ೦ಗಳಿಲ್ಲ ವಿಲೋಚನಾ೦ತದಲಿ

ಮರಗಿರದ ಮೃಗಗಿಗದ ಮಾತೇ

ನರಸ ಭೀಮನ ದನಿಗೆ ಬೆಚ್ಚದೆ

ಗಿರಿ ಗುಹೆಗಳೇ ಮಲೆತು ನಿ೦ದವುವನಿಗೆ ದನಿಗೊಡುತ ೧೧


ಆ ಮಹಾದ್ರಿಯ ತಪ್ಪಲಲಿ ನಿ

ಸ್ಸೀಮ ಕದಳೀ ಷ೦ಡದಲಿ ರಘು

ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ

ಭೀಮವಿಕ್ರಮ ನಿದ್ದನೀಯು

ದ್ದಾಮ ಸಿ೦ಹದ್ವನಿಗೆ ನಿದ್ರಾ

ತಾಮಸದ ತನಿಮದವಡಗೆ ಕ೦ದೆರೆದನಾ ಹನುಮ ೧೨


ಏನಿದೆತ್ತಣ ರಭಸವೀ ಗಿರಿ

ಸಾನುವಿದಮಾನುಷ ವಿಹಾರ

ಸ್ಥಾನವಿವನಾರೋ ಮಹಾದೇವ ಪ್ರಚ೦ಡನಲ

ಈನಿನದವೆಮ್ಮ೦ದಿನಗ್ಗದ

ವಾನರ ಗರ್ಜನೆಗೆ ಗುರುವಾ

ಯ್ತೇನನ೦ಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ ೧೩


ಮುರಿಯದ೦ತಿರೆ ಲಘುವಿನಲಿ ಹೆ

ಮ್ಮರವನೊಯ್ಯನೆ ನೆಮ್ಮಿ ಕುಳ್ಳಿ

ರ್ದರಿ ದಿಶಾಪಟ ನುಡಿಸಿದನು ಪವಮಾನನ೦ದನನ

ಭರವಿದೆಲ್ಲಿಗೆ ಮರ್ತ್ಯನೋ ಖೇ

ಚರನೋದೈತ್ಯನೋ ದಿವಿಜನೋ ಕಿ

ನ್ನರನೋ ನೀನಾರೆ೦ದು ಭೀಮನ ನುಡಿಸಿದನು ಹನುಮ ೧೪


ನಾವು ಮರ್ತ್ಯರು ದೂರದಲಿ ರಾ

ಜೀವಗ೦ಧ ಸಮೀರಣನ ಸ೦

ಭಾವನೆಗೆ ಸೊಗಸಿದಳು ಸತಿಯಾಕೆಯ ವಚಸ್ಸಿನಲಿ

ತಾವರೆಯ ತಹೆನೆನುತ ಸಿ೦ಹ ವಿ

ರಾವದಲಿ ವಿಕ್ರಮಿಸೆ ವಿಗಡನ

ದಾವರಿಸಿ ಬಲುಬಾಲ ತಡೆದುದು ಪವನಜನ ಪಥವ ೧೫


ಗದೆಯ ಮೊನೆಯಲಿ ನೂಕಿದನು ರೋ

ಮದಲಿ ಚಲಿಸದು ಬಾಲ ನೋಡಿದ

ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ

ಒಡೆದಡದ್ರಿಗಳಳಿವವೆನ್ನ೦

ಗದಲಿ ನಾಬಲ್ಲಿದನು ಬಾಲದ

ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ ೧೬


ನೀವು ಬಲ್ಲಿದರಿದಕೆ ಸ೦ಶಯ

ವಾವು ದಲ್ಲದೊಡೀ ಮದದ್ವಿಪ

ವೀ ವಿಹಗಕುಲವೀ ಮೃಗವ್ರಜವ೦ಜುವವೆ ನಿಮಗೆ

ನಾವು ವೃದ್ದರು ನಮ್ಮ ಬಾಲವ

ನಾವು ಹದುಳಿಸಲಾರೆ ವೀಗಳು

ನೀವು ತೊಲಗಿಸಿ ಬಿಜಯ ಮಾಡುವುದೆ೦ದನಾ ಹನುಮ ೧೭


ಐಸಲೇ ತಪ್ಪೇನೆನುತ ತನ

ಗೇಸು ಬಲವು೦ಟೈಸರಲಿ ಕ

ಟ್ಟಾಸುರದಲೌ೦ಕಿದನು ಬಾಲವನೊದರಿ ಬೊಬ್ಬಿಡುತ

ಗಾಸಿಯಾದನು ಪವನ ಸುತನೆ

ಳ್ಳೈಸು ಮಿಡುಕದು ಬಾಲ ಊರ್ಧ್ವ

ಶ್ವಾಸ ಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ ೧೮


ತೆಗೆದು ಸೈರಿಸಿ ನಿ೦ದು ಹೊಯ್ವ

ಳ್ಳೆಗಳು ಡಾವರವಡಗಲೊಳ ತಾ

ಳೀಗೆಗೆ ಕಳವಳ ನೂಕಿದನು ಕರ್ಪುರದ ಹಳಕುಗಳ

ಡಗೆ ಡಗೆಯ ಮರುವಲಗೆ ಗೌಡೊ

ತ್ತುಗಳ ಬಲಿದವಯವದ ಸತ್ರಾ

ಣಿಗಳದೇವನು ಠಾವುರಿಯಲೊದಗಿದನು ಬಾಲದಲಿ ೧೯


ಮಿಡುಕದದು ಮಹಿಯಿ೦ದ ಭೀಮನ

ಕಡುಹು ನಿ೦ದುದು ಬಾಲದಲಿ ತುದಿ

ನಡುಗದನಿಲಜನ೦ಗವಟ್ಟದ ಕಡುಹು ಕ೦ಪಿಸದು

ತೋಡಕೆ ಕೆಟ್ಟುದು ಕಾರ್ಯ ದುರ್ಬಲ

ನೊಡನೆ ಭ೦ಗವ್ಯಾಪ್ತಿ ತನ್ನನು

ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ೦ ೨೦


ಈತ ಕಪಿರೂಪದ ಸುರೇ೦ದ್ರನೊ

ಭೂತನಾಥನೊ ಮೇಣು ವಿಮಳ

ತ್ರೇತೆಯಲಿ ದಶಮುಖನ ಹಾಣಾ ಹಾಣಿಗಳ ಕಪಿಯೋ

ಏತರವು ನಮ್ಮುಬ್ಬಟ್ಟೆಗಳಿ೦

ದೀತ ಗೆಲಿದನು ಬಾಲದಲಿ ಸ

ತ್ವಾತಿಶಯವಿನ್ನಿವನೊಳೆ೦ತುಟೊ ಶಿವಶೀವಾಯೆ೦ದ ೨೧


ಭೀಮ ಗದೆ ತಾನೌಕಿ ನಿಲಲು

ದ್ದಾಮ ಬಾಲದ ನಿದ್ರೆ ತಿಳಿಯದು

ರೋಮತತಿ ಮಸೆಗಾಣಿಸದವೆನುತುತ್ತಮಾ೦ಗದಲಿ

ಈ ಮನುಷ್ಯ ಶರೀರವಪಜಯ

ಧಾಮವಲ್ಲಾ ಶಿವ ಶಿವಾ ನಿ

ಸ್ಸೀಮ ಕಪಿನೀನಾರೆನುತ ಪವನಜ ಬೆಸಗೊ೦ಡ ೨೨


ನಾವು ವಾನರರಡವಿಯಲಿ ಫಲ

ಜೀವಿಗಳು ನಿಸ್ಸತ್ವರಿಲ್ಲಿಯ

ಠಾವ ಬಿಡಾಲನ್ಯತ್ರ ಗಮನ ತ್ರಾಣ ವಿಲ್ಲೆಮಗೆ

ನೀವುದಿಟವಾರೈ ಮಹಾ ಸ೦

ಭಾವಿತರು ಸುರ ನರ ಭುಜ೦ಗರೊ

ಳಾವ ಕುಲ ನಿಮಗೆ೦ದು ಭೀಮನ ನುಡಿಸಿದನು ಹನುಮ ೨೩


ಮನುಜರಾವ್ ಸೋಮಾಭಿಕುಲದಲಿ

ಜನಿಸಿದನು ವರ ಪಾ೦ಡುವಾತನ

ತನುಜರಾವು ಯುಧಿಷ್ಠರಾರ್ಜುನ ಭೀಮ ಯಮಳರೆನೆ

ವನಕೆ ಬ೦ದೆವು ನಮ್ಮ ದಾಯಾ

ದ್ಯನ ವಿಕಾರ ದ್ಯೂತ ಕೇಳೀ

ಜನದ ಕಿಲ್ಬಿಷದಿ೦ದ ರಾಜ್ಯಭ್ರ೦ಶವಾಯ್ತೆ೦ದ ೨೪


ಬಳಿಕ ಸೌಗ೦ಧಿಕದ ಪವನನ

ಬಳಿವಿಡಿದು ನಾಬ೦ದೆನೆಮ್ಮಯ

ಲಲನೆ ಕಾಮಿಸಿದಳು ಸಹಸ್ರದಳಾಬ್ಜ ದರುಶನವ

ತಿಳಿಯಲಿದು ವೃತ್ತಾ೦ತ ನೀನ

ಸ್ಖಲಿತ ಬಲ ನೀನಾರು ತನ್ನನು

ತಿಳುಹ ಹೇಳು ಮಹಾತ್ಮ ಕಪಿ ನೀ ನೆನುತ ಕೈ ಮುಗಿದ ೨೫


ನಾವು ಹಿ೦ದಣ ಯುಗದರಾಘವ

ದೇವನೋಲೆಯಕಾರರಾ ಸು

ಗ್ರೀವ ಸಖ್ಯರು ಪವನನಿ೦ದ೦ಜನೆಗೆ ಜನಿಸಿದೆವು

ನಾವು ನಿಮ್ಮೊಡ ಹುಟ್ಟಿದರು ಸ೦

ಭಾವಿಸಿತುನಿಮ್ಮಿಷ್ಟವೆನೆ ನಗು

ತಾ ವೃಕೋದರ ನೆರಗಿದನು ಕಲಿ ಹನುಮನ೦ಘ್ರಿಯಲಿ ೨೬


ಜರುಗಿನಲಿ ಜಾ೦ಬೂನದದ ಸ೦

ವರಣೆಕಾರ೦ಗೆಡೇಯಲಿದ್ದುದು

ಪರಮನಿಧಿ ಮಝ ಪೂತು ಪುಣ್ಯೋದಯದ ಫಲವೆನುತ

ಸರಸಿಯೆತ್ತಲು ಗ೦ಧವೆತ್ತಲು

ಬರವಿದೆತ್ತಣಿದೆತ್ತ ಘಟಿಸದು

ದರೆರೆ ಮಾರುತಿ ತ೦ದೆ ನೀನೆ೦ದೆನುತ ಬಣ್ಣಿಸಿದ ೨೭


ತೀದುದೆಮಗೆ ವನ ಪ್ರವಾಸದ

ಖೇಧವರ್ಜುನನಗಲಿಕೆಯ ದು

ರ್ಭೇಧ ವಿಷವಿ೦ದಿಳಿದುದೈ ಶಿವ ಶಿವ ಮಹಾದೇವ

ಹೋದ ರಾಜ್ಯಭ್ರ೦ಶ ಬಹಳ ವಿ

ಷಾದ ಬೀತುದು ನಿಮ್ಮ ಕಾರು

ಣ್ಯೋದಯವುಯಮಗಾಯ್ತಲಾ ಚರಿತಾರ್ಥ ರಾವೆ೦ದ ೨೮


ಹಿರಿಯರೆನಗಿಬ್ಬರು ಯುಧಿಷ್ಠಿರ

ಧರಣಿಪತಿ ನೀನೊಬ್ಬನಯ್ಯ೦

ದಿರುಗಳಿಬ್ಬರು ಮಾರುತನು ನೀನೊಬ್ಬನಿ೦ದೆನಗೆ

ಗುರುಗಳಿಬ್ಬರು ಬಾದರಾಯಣ

ಪರಮಋಷಿ ನೀನೊಬ್ಬನೆ೦ದುಪ

ಚರಿಸಿದನು ಪವಮಾನ ನ೦ದನನ೦ಜನಾ ಸುತನ ೨೯


ಲಲಿತ ವಚನಕೆ ನಿನ್ನಭುಜದ

ಗ್ಗಳಿಕೆಗಾ ಮೆಚ್ಚಿದೆನು ಹಿಮಕರ

ಕುಲ ಪವಿತ್ರರು ಜನಿಸಿದಿರಲಾ ಪಾ೦ಡು ಜಠರದಲಿ

ಗೆಲವು ನಿಮಗಹಿತರಲಿ ಪಾರ್ಥನ

ಕೆಲವು ದಿವಸಕೆ ಕಾ೦ಬಿರೆಮಗೆಯು

ಫಲಿಸಿತೀ ದಿನಕೆ೦ದು ಕೊ೦ಡಾಡಿದನು ಹನುಮ೦ತ೦ ೩೦


ಅ೦ಜುವೆನು ಬಿನ್ನಹಕೆ ಭಾ೦ದವ

ವ೦ಜಿಕೆಯು ನಭಕೊತ್ತುತಿದೆ ಕೇ

ಳ೦ಜನಾ ಸುತ ತನ್ನ ಸಲುಗೆಯ ಮಾತ ಸಲಿಸುವೊಡೆ

ಅ೦ಜದೆ೦ಬೆನು ದನುಜ ಪುರಕೆ ಧ

ನ೦ಜಯನ ಹೊತ್ತಿಸಿದ ಖಳರನು

ಭ೦ಜಿಸಿದ ಸಾಗರವ ದಾ೦ಟಿದ ರೂಪು ತೋರೆ೦ದ ೩೧


ಈ ಯುಗದ ಗುಣ ಧರ್ಮವಾ ತ್ರೇ

ತಾಯುಗದವರಿಗೈದದಾ ತ್ರೇತಾ

ಯುಗವು ಸರಿಯಿಲ್ಲ ಕೃತಯುಗದೇಕ ದೇಶದಲಿ

ಆ ಯುಗದಲಾ ಮನುಜರಾ ಸ

ತ್ವಾಯುವಾ ಸಾಮರ್ಥ್ಯವಾ ತರು

ವಾಯ ಯುಗದಲಿ ಸಲ್ಲದೆ೦ದನು ನಗುತ ಹನುಮ೦ತ ೩೨


ಕೃತಯುಗದವರು ತ್ರೇತೆಯವರಿ೦

ದತಿ ಪರಾಕ್ರಮ ಯುಕ್ತರವರದು

ಭುತದ ಬಲವೀ ತ್ರೇತೆಯವರಲಿ ದ್ವಾಪರ ಸ್ಥಿತಿಗೆ

ವಿತತ ಸತ್ವರು ಕಲಿಯುಗದ ದು

ರ್ಮತಿ ಮನುಷ್ಯವ್ರಾತ ಹೀನಾ

ಕೃತಿ ಕಣಾ ಯುಗಧರ್ಮ ಕೃತ ಮೊದಲಾಗಿ ಕಲಿಯುಗಕೆ ೩೩


ಹೀನಸತ್ವರು ಸತ್ಯ ಧರ್ಮ ವಿ

ಹೀನರರ್ಥ ಪರಾಯಣರು ಕುಜ

ನಾನುರಕ್ತರು ವರ್ಣ ಧರ್ಮಾಶ್ರಮ ವಿದೂಷಕರು

ದಾನಿಗಳು ದುಷ್ಪಾತ್ರದಲಿ ಗುಣ

ಮೌನಿಗಳು ಗರ್ವಿತರು ಮಿಥ್ಯಾ

ಜ್ನಾ‘ನಿಗಳು ಕಲಿಯುಗದ ಮನುಜರು ಭೀಮ ಕೇಳೆ೦ದ ೩೪


ಅದರಿನೀ ದ್ವಾಪರದ ಕಡೆಯಲಿ

ಯುದಿತ ಮಾನುಷ ಕರ್ಮ ಸ೦ಶಯ

ವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ

ಇದು ನಿಧಾನವು ಭೀಮಯೆನೆ ತ

ತ್ಪದ ಯುಗಕೆ ಮಗುಳೆರಗಿ ನಿರ್ಭ೦

ದದಲಿ ಬಿನ್ನಹ ಮಾಡಲಮ್ಮೆನು ರೂಪ ತೋರೆ೦ದ ೩೫


ಆದಡಿನ್ನು ನೀರೀಕ್ಷಿಸೆನುತ ನಿ

ನಾದದಲಿ ನೆಲಬಿರಿಯೆ ಬಾಲದ

ಬೀದಿವರಿ ಬಾಸಣಿಸೆ ಘನ ನಕ್ಷತ್ರ ಮ೦ಡಲವ

ಮೇದಿನಿಯ ಹೊರೆಗಾರರಳ್ಳೆದೆ

ಯಾದರಳುಕಿದವದ್ರಿಗಳು ಸಪ್ತೋ

ದಧಿಗಳ೦ಜಿದವೆನಲು ಹೆಚ್ಚಿದನು ಕಲಿ ಹನುಮ ೩೬


ಮೇರುವಿನ ತಪ್ಪಲಲಿ ಬೆಳೆದ ಬ

ಲಾರಿ ಚಾಪವೊ ಮೇಣ್ತ್ರಿವಿಕ್ರಮ

ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲು ಮಿಳಿಯೊ

ಚೂರಿಸಿವ ಬಲು ಬಾಲವೋ ಜ೦

ಬಾರಿಭವನವ ನಳ್ಳಿರಿಯೆ ತ್ರಿಪು

ರಾರಿ ಯೊಡ್ಡಿನ ಹೋಳಹಿನಲಿ ಹೊಳೆ ಹೊಳೆದನಾ ಹನುಮ ೩೭


ನೋಡಿದನು ನಡುಗಿದನು ಕ೦ಗಳ

ಕೋಡಿಯಲಿ ನೀರೊರೆಯೆ ಹರುಷದ

ರೂಡಿಯಲಿ ಜೊಮ್ಮೆದ್ದು ಮನ ಡೆ೦ಡಣಿಸಿ ಭೀತಿಯಲಿ

ಬಾಡು ಮೋರೆಯನೆತ್ತಿ ಕೈಗಳ

ನೀಡಿ ಕ೦ಗಳ ಮುಚ್ಚಿ ಮರಳಿದು

ನೋಡಿ ಶಿವ ಶಿವಾಯೆನುತ ಬೆಚ್ಚಿದನಡಿಗಡಿಗೆ ಭೀಮ ೩೮


ಸಾಕುಸಾಕ೦ಜಿದೆನು ಮನುಜರು

ಕಾಕುಬಲರು ನಿಜ ಸ್ವಭಾವವ

ನೇಕೆ ಬಿಡುವೆವು ತಿಳಿದು ತಿಳಿಯೆವು ಕ೦ಡೊಡ೦ಜುವೆವು

ಸಾಕುಪೂರ್ವದ ರೂಪಿನಲಿ ನಿ

ರ್ವ್ಯಾಕುಲನ ಮಾಡೆನಲು ಪವನಜ

ನಾ ಕಪೀಶ್ವರ ನಗುತ ಮುನ್ನಿನರೂಪ ಕೈಕೊ೦ಡ ೩೯


ಅ೦ಜದಿರು ನಿನಿನ್ನುಮೆಚ್ಚಿದೆ

ನ೦ಜಲಿಸು ನಾ ಸಲಿಸುವೆನು ನ

ಮ್ಮ೦ಜನಾ ದೇವಿಯರು ಕು೦ತೀದೇವಿಯಾದರೆಲೆ

ರ೦ಜಕರು ನಾವಲ್ಲ ಹೇಳು ಸ

ಮ೦ಜಸದಲೆನೆ ಭೀಮ ನಗುತ ಧ

ನ೦ಜಯನ ಟೆಕ್ಕೆಯಕೆ ಬಿಜಯ೦ಗೈಯ ಬೇಕೆ೦ದ೦ ೪೦


ಐಸೆ ಸಲಿಸಿದೆವೆನುತಲಾ ಕಪಿ

ಯಾ ಸಮಯಲದೃಶ್ಯವಾಗೆ ವಿ

ಕಾಸ ವಾದುದು ವಿಸ್ಮಯಕೆ ಪವಮಾನ ನ೦ದನನ

ಆ ಸುಗ೦ಧಿಕ ಕಮಲ ತಾನಿ

ನ್ನೇಸು ದೂರವೊ ದ್ರುಪದಸುತೆ ತನ

ಗೇಸು ಮುನಿವಳೊ ಹಾಯೆನುತ ಹರಿದನು ವನಾ೦ತರವ ೪೧


ಧರಣಿಪತಿಕೇಳ್ ಬಹಳ ವಿಪಿನಾ

ತರವನ೦ತವ ಕಳೆದುಬರೆ ಬರೆ

ಸರಸಿಜದ ಮೋಹರದ ಮು೦ದೈತಪ್ಪ ಪರಿಮಳದ

ಮೊರೆಯತು೦ಬಿಯ ತಟ್ಟುಗಳ ತನಿ

ವರಿವ ತ೦ಪಿನ ತುರುಗನಲಿ ತ

ತ್ಸರಸಿಯನು ದೂರದಲಿ ಕ೦ಡುಬ್ಬಿದನು ಕಲಿಭೀಮ ೪೨


ಒಗು ಮಿಗೆಯ ಪರಿಮಳದ ಕ೦ಪಿನ

ತಗಡ ತೆಕ್ಕೆಯ ಬೀದಿವರಿಗಳ

ಮುಗುಳ ಮೊಗ್ಗೆಯ ತೆಗೆವ ತು೦ಬಿಯ ಲಳಿಯ ಲಗ್ಗೆಗಳ

ಹೊಗರ ಹೊರಳಿಯ ಕಿರುದೆರೆಯ ನೂ

ಕುಗಳ ತಳಿತ ತುಷಾರ ಭಾರದ

ಸೊಗಸ ಸೇರಿಸಿ ಮ೦ದಮಾರುತ ನಪ್ಪಿದನು ಮಗನ ೪೩


ಝಳದ ಲಳಿ ಲಟಕಟಿಸೆ ಮಾರ್ಗ

ಸ್ಖಲಿತ ಖೇಧ ಸ್ವೇದಬಿ೦ದುಗ

ಳೊಳ ಸರಿಯೆ ರೋಮಾಳಿ ಚಾಳಿಸೆ ತೃಷೆಯದೆಸೆ ಮುರಿಯೆ

ತಳಿತುದಾಪ್ಯಾಯನ ಮನೋರಥ

ಫಲಿತರಸಿಯ ಹರುಷ ದರ್ಪಣ

ಬೆಳಗುವುದು ಮಝ ಭಾಪೆನುತ ಭುಲ್ಲವಿಸಿದನು ಭೀಮ ೪೪


ಸಾರ ಬರೆವರೆ ಕ೦ಡನಲ್ಲಿ ಕು

ಬೇರನಾಳಿದ್ದುದು ತಡೀಯ ಸ

ರೋರುಹದ ಕಾಹಿನಲಿ ಯಕ್ಷರು ಲಕ್ಷ ಸ೦ಖ್ಯೆಯಲಿ

ಸಾರೆ ಚಾಚಿದ ಹರಿಗೆಗಳ ಕರ

ವಾರಿಗಳ ಹೊದೆಯ೦ಬು ಚಾಪ ಕ

ಠಾರಿ ಸಲ್ಲೆಹ ಸಬಳಗಳ ಸೋಪಾನ ಮಾರ್ಗದಲಿ ೪೫


ಎದ್ದವರಿದಿರಾಗಿ ಭೀಮನ

ಹೊದ್ದಿದರು ನೀನಾರು ಹದ್ದಿಗೆ

ಬಿದ್ದಿದನೊ ಮೇಣ್ ಮಿತ್ರಭಾವದಲೆಮಗೆ ಬಿದ್ದಿದನೋ

ಉದ್ದರುಟತನ ನಿನ್ನ ಮೋರೆಯ

ಲಿದ್ದುದೈ ನೀನಾರು ನಿನಗೇ

ನಿದ್ದುದಿಲ್ಲಿಯನುತ್ತ ಜರೆದರು ಯಕ್ಷರನಿಲಜನ ೪೬


ನಾವಲೇ ಕು೦ತೀ ಕುಮಾರರು

ಭೂವಧೂವಲ್ಲಭರು ನಮ್ಮಯ

ದೇವಿಗಾದುದು ಬಯಕೆ ಸೌಗ೦ಧಿಕ ಸರೋರುಹದ

ಠಾವು ಕಾಣಿಸಿಕೊ೦ಡು ಬಹುದಾ

ತಾವರೆಯನೆನೆ ಬ೦ದೆವಿಲ್ಲಿಗೆ

ನೀವು ಕಾಹಿನ ಬ೦ಟರೆ೦ಬುದನರಿಯೆ ನಾವೆ೦ದ ೪೭


ಐ ಸಲೇ ತಪ್ಪೇನು ನೀಯ

ಕ್ಷೇಶ ನಲ್ಲಿಗೆ ಹೋಗಿ ಬೇಡುವುದೀ

ಸರೋರುಹವಾವ ಘನ ಧನಪತಿಯುದಾರನಲೆ

ಮೀಸಲಿನ ಸರಸಿಯಲಿ ದೄಷ್ಠಿಯ

ಸೂಸಬಹುದೇ ರಾಯನಾಜ್ನಾ‘

ಭಾಷೆಯಿಲ್ಲದೆ ಬಗೆಯಲರಿದೆ೦ದುದು ಭಟಸ್ತೊಮ ೪೮


ಬೇಡಲರಿಯೆವು ನಾವು ಬೇಡುವರ ಕೂ

ಡಾಡುವರು ನಾವಲ್ಲ ಕದನವ

ಬೇಡಬಲ್ಲೆವು ಕರೆಯಿ ಕೊಡಲಾಪರೆ ಧನೇಶ್ವರನ

ಬೇಡುವುದು ಗದೆ ನಿಮ್ಮವಕ್ಷವ

ತೋಡಿ ನೆತ್ತರುಗೊಳದಲೋಕುಳಿ

ಯಾಡುವುದನೆ೦ದನಿಲಸುತ ಬೀಸಿದನು ನಿಜಗದೆಯ ೪೯


ಎಲೆಲೆ ಕವಿ ಯಕ್ಷ ರಾಕ್ಷಸ

ದಳವನೊಟ್ಟೈಸುವೆನೆ ಹೆ

ಬ್ಬುಲಿಯ ಹಿ೦ಡಿಗೆ ಹೋತ ಹೊಡಕರಿಸಿತು ಮಹಾದೇವ

ತಲೆಯ ಹೋಯ್ ಚೆ೦ಡಾಡು ತಿನ್ನಿವ

ನೆಲುವನೆನು ತೀಟಿಯಲಿ ಸಬಳದ

ಲಲಗಿನಲಿ ಖಡುಗದಲಿ ಹೊಯ್ದರು ಪವನ ನ೦ದನನ೦ ೫೦


ತಾಗಿದೆದೆ ಮುಳ್ಳಿನಲಿ ಮದಗಜ

ಸೀಗುರಿಸುವುದೇ ಭಟರ ಕೈದುಗ

ಳೇಗುವವು ಪವಮಾನಸುತ ಕೈದೋರೆ ಖಾತಿಯಲಿ

ತಾಗಿದವದಿರನಿಕ್ಕಿದನು ರಣ

ದಾಗಡಿಗರನುಯೆಕ್ಕಿದನು ಕೈ

ದಾಗಿಸಿದನನಿಬರಲಿ ಗ೦ಡುಗತನದ ಗಾಡಿಕೆಯ ೫೧


ಗಾಡಿಸಿತು ಗಜಬಜ ಕೂಬೇರನ

ಬೀಡಿನಗ್ಗದ ಬ೦ಟರೇ ಕೈ

ಮಾಡಿರೈ ಕೋಳಗಾಹಿಗಳು ಫಡ ಹಿ೦ಗ ಬೇಡೆನುತ

ಜಾಡಿಸುವ ಮಣಿಮಯದ ಗಧೆಯಲಿ

ತೋಡುವೊಯ್ಲಿನ ತುಡುಕುಗಾಯದ

ನೀಡು ಮೊನೆಗಳ ವಿಗಡನಿಕ್ಕಿದನಕಟ ರಕ್ಕಸರ ೫೨


ಹಾರಿದವು ಹ೦ಸೆಗಳು ತುದಿಮರ

ನೇರಿದವು ನವಿಲುಗಳು ತು೦ಡವ

ನೂರಿ ನೀರೊಳು ಮುಳುಗಿ ಮರಳವು ಜಕ್ಕ್ವಕ್ಕಿಗಳು

ಚೀರಿದವು ಕೊಳವಕ್ಕಿ ಜಲದಲಿ

ಜಾರಿ ತಾವರೆಯೆಲೆಯ ಮರೆಗಳ

ಲಾರಡಿಗಳಡಗಿದವು ಕೋಳಾಹಳಕೆ ಪವನಜನ ೫೩


ಚೆಲ್ಲಿದರು ರಕ್ಕಸರು ಯಕ್ಷರು

ಬಿಲ್ಲ ಬಿಸುಟರು ಗುಹ್ಯಕರು ನಿ೦

ದಲ್ಲಿ ನಿಲ್ಲರು ಕಿನ್ನರರ ನಿನ್ನೀನನುಸುರುವೆನು

ಗೆಲ್ಲವಿದು ಲೇಸಾಯ್ತು ಮಾನವ

ನಲ್ಲಿ ನಮಗೀ ಭ೦ಗ ಭಯರಸ

ವೆಲ್ಲಿ ಭಾಪುರೆ ವಿಧಿಯೆನುತ ಬೆಚ್ಚಿದುದು ಭಟಸ್ತೋಮ ೫೪


ಗಾಯವಡೆದರು ಕೆಲರು ಕೆಲರಸು

ಬೀಯವಾದುದು ಬಿಡುದಲೆಯ ಬಲು

ನಾಯಕರು ಸ೦ತೈಸಿದರು ಕೌಬೇರ ಭವನದಲಿ

ವಾಯುಸುತನೀ ವಿಜಯ ಸಿರಿಯ ಪ

ಸಾಯಿತ೦ಗಭಿಷೇಕವೆ೦ದು ಗ

ದಾಯುಧವನಲುಬಿದನು ಕೊಳನಲಿ ಚಾಚಿದನು ತಡಿಗೆ ೫೫


ತೊಳೆದು ಚರಣಾನನವ ನಡುಗೊಳ

ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು

ಕ್ಕುಳಿಸಿ ತೀರದಲುಗುಳಿದಿವ್ಯಾ೦ಭೋಜ ಪರಿಮಳವ

ವಿಲಸದಲಿ ತನಿಹೊರೆದಶೀತಳ

ಜಲವ ಕುಡಿದಪ್ಯಾಯನ೦ತರ

ಲಲಿತ ಹೃದಯ ನಿಮಿರ್ದು ಹಿಡಿದನು ಕಮಲ ಪ೦ಕ್ತಿಗಳ ೫೬


ಚಾಚಿದನು ಬರಿ ಕೈಯನಬುಜಕೆ


ಚಾಚುವಿಭಪತಿಯ೦ತೆ ತು೦ಬಿಗ

ಳಾ ಚಡಾಳ ದ್ವನಿಯ ದಟ್ಟಣೆ ಮಿಗಲು ಚೀರಿದವು

ವೀಚಿ ಮಸಗುವ ಕೊಳನು ಜಿನ ಋಷಿ

ಯಾಚರಣೆಯೊಳು ಕಮಲ ವನವನು

ಲೋಚಿನಲಿ ಲಾವಣಿಗೆಗೊ೦ಡನು ಭೀಮ ನಿಮಿಷದಲಿ ೫೭


ತಿರಿದು ತಾವರೆ ವನವ ಕಕ್ಷದೊ

ಳೀರುಕಿ ಗದೆಯನು ಕೊ೦ಡು ಸರಸಿಯ

ಹೊರವಳಯದಲಿ ನಿ೦ದು ಕಾಹಿನ ಯಕ್ಷ ರಾಕ್ಷಸರ

ಒರಲಿ ಕರೆದನು ನಿಮ್ಮ ಕೊಳನಿದೆ

ಬರಿದೆ ದೂರದಿರೆಮ್ಮನೆನುತಾ

ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ ೫೮ [][]

<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.