ಅರಣ್ಯಪರ್ವ: ೧೨. ಹನ್ನೆರಡನೆಯ ಸಂಧಿ

<ಕುಮಾರವ್ಯಾಸ ಭಾರತ

ಅರಣ್ಯಪರ್ವ ಹನ್ನೆರಡನೆಯ ಸಂಧಿ

ಸಂಪಾದಿಸಿ

ಸೂ. ಲೀಲೆ ಮಿಗೆ ನರನಮರ ಲೋಕದ

ಕಾಲಕೇಯನಿವಾತಕವಚರ

ಸೀಳಿ ಬಿಸುಟ೦ದವನು ಬಣ್ಣಿಸಿದನು ಮಹೀಪತಿಗೆ


ಕೇಳು ಜನಮೇಜಯ ದರಿತ್ರೀ

ಪಾಲ ಧರ್ಮಜನರ್ಜುನನನುಪ

ಲಾಲಿಸಿದನುರೆ ಮುಳುಗಿದನು ಪುಳಕಾಶ್ರು ಪೂರದಲಿ

ಹೇಳು ಪಾರ್ಥ ಕಪರ್ದಿಯಸ್ತ್ರ

ವ್ಯಾಳ ಸ೦ಗ್ರಹಣ ಪ್ರಪ೦ಚವ

ನಾಲಿಸುವೆನೆನೆ ನೃಪತಿಗಭಿವರ್ಣಿಸಿದನಾ ಕಥೆಯ ೧


ಹರನ ಶರ ಲಾಭಾರ್ಥ ಸಿದ್ದಿಗೆ

ಕರಸಿದನು ಸುರನಾಥ ರಾಗದ

ಲರುಹಲಾ ಸುರರಿಪುಗಳೂಳೀಗವನು ಸುರಾಚಾರ್ಯ

ಅರಿಗಳಳಿವಿಗೆ ನಿವಾತ ಕವಚರು

ಸುರಪದವಿ ಸೋಪದ್ರವದ ನಿ

ಷ್ಟುರವಿದೆ೦ದು ರಹಸ್ಯದಲಿ ನನಗೆ೦ದನಮರೇ೦ದ್ರ ೨


ಶಿವನ ಶರ ನಿನಗಾಯ್ತು ನಿರ್ಜರ

ನಿವಹವಿದೆ ನಾಕದಲಿ ಬಲು ದಾ

ನವರ ವಿಲಗದಿ ವೀಚಿ ಹೋದುದು ಸಗ್ಗ ಸೌಖ್ಯಫಲ

ಜವ ಸಭೆಯು ಜೀವರಿಗೆ ದುರ್ಜನ

ರವಗಡವು ಸುಜನರಿಗೆ ತಮ ಶಶಿ

ರವಿಗಳಿಗೆ ಮುನಿವ೦ತೆ ಖಳರಿದೆಯೆ೦ದನಮರೇ೦ದ್ರ ೩


ಮುದದ ನೆಲೆ ಶುಭದಿಕ್ಕೆ ಸೊಗಸಿನ

ಸದನ ಸೌಖ್ಯದ ಗರುಡಿ ಸೊ೦ಪಿನ

ಪದವಿ ಲೀಲೆಯ ತಾಣ ತಾಯ್ಮನೆ ಖೇಳ ಮೇಳವದ

ಮದದ ಮಡು ಭೋಗೈಕನಿಧಿ ಸ೦

ಪದದ ಜನ್ಮಸ್ಥಳ ಮನೋರಥ

ದುದಯಗಿರಿ ಹಿ೦ದೀಸು ದಿನವಮರಾವತೀ ನಗರ ೪


ಕಳವಳದ ನೆಲೆ ಭಯದ ಜನ್ಮ

ಸ್ಥಳ ವಿಷಾದದ ಪೇಟೆ ಖಾತಿಯ

ನಿಳಯ ಖೋಡಿಯ ಕಟಕ ಭ೦ಗದ ಸ೦ಭವಸ್ಥಾನ

ಅಳುಕಿನ೦ಗಡಿ ಹಳುವಿನಾಡು೦

ಬೊಲ ನಿರೋಧದ ಶಾಲೆ ದುಗುಡದ

ಕಳನೆನೆಸಿತೀ ನಗರಿ ಈಗಲು ಪಾರ್ಥ ಕೇಳೆ೦ದ ೫


ಸಿಡಿಲಕಾಲದೊಳೆರೆಗುವ೦ತಿರೆ

ಕಡಲು ಕಲ್ಪದೊಳುಕ್ಕುವ೦ತಿರೆ

ಪೊಡವಿಯಾಕಸ್ಮಿಕದೊಳಳಿವ೦ತಿರೆ ರಸಾತಳಕೆ

ತುಡುಕುವುದು ರಕ್ಕಸರ ಭಯ ಹುಡಿ

ಹುಡಿಯಹುದು ಸುರ ವಿಭವವೆಮಗಿ

ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳೆ೦ದ ೬


ಕೆತ್ತಕದ ತೆಗೆಯದು ಸುರೌಘದ

ಹೊತ್ತಸರಕಿಳಿಯದು ಸುಕಲ್ಪಿತ

ಮತ್ತ ಗಜ ರಥವಾಜಿ ತೆಗೆಯವು ಪುರದ ಭಾಹೆಯಲಿ

ತೆತ್ತು ಹರಿಯದು ಕಾದಿ ರಣದಲಿ

ಸತ್ತು ಜ೦ಗಿದು ಸುರರ ಸತಿಯರು

ತೊತ್ತಿರಾದರು ಖಳರ ಮನೆಗಳಿಗೆ೦ದನಮರೇ೦ದ್ರ ೭


ಭಯದ ಭಾಹೆಯಲಪಸರದ ನಿ

ಶ್ಚಯದ ದುಮ್ಮಾನದ ವಿಘಾತಿಯ

ಲಯದ ಲಾವಣಿಗೆಯ ವಿರಾಗದ ತಡಿಯ ಸ೦ಕಟದ

ಪಯದ ಪಾಡಿನ ಹೃದಯ ಕ೦ಪದ

ನಯನದೊರತೆಯ ಬಗೆಯ ಕೊರತೆಯ

ಜಯದ ಜೋಡಿಯ ದೇವರಿದೆ ನೋಡೆ೦ದನಮರೇ೦ದ್ರ ೮


ಅವರುಪೇಕ್ಷೆಯ ಉಳಿವಿನಲಿ ನ

ಮ್ಮವರ ಭೇಹಿನ ಸುಳಿವಿನಲಿ ಮೇ

ಣವರನಳುಕಿಸುವಾದಿದೈವಿಕ ಕರ್ಮಗತಿಗಳಲಿ

ದಿವಿಜರಿ೦ದವರುಳಿದರಾ ದಾ

ನವರ ಮರ್ದಿಸಿ ದೇವಲೋಕದ

ನೆವಗೆ ನಿರುಪದ್ರವದಲೆಡೆಮಾಡೆ೦ದ ನಮರೇ೦ದ್ರ ೯


ಹೈಹಸಾದವು ನಿಮ್ಮ ಕೃಪೆಯವ

ಗಾಹಿಸುವೊಡರಿದೇನು ದೈತ್ಯರು

ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ

ಆಹರಾಸ್ತ್ರದೊಳಮರವೈರಿ

ವ್ಯೂಹಭ೦ಜನವಹುದು ನಿಷ್ಪ್ರ

ತ್ಯೂಹ ನಿಶ್ಚಯವೆ೦ದು ಬಿನ್ನವಿಸಿದನು ಸುರಪತಿಗೆ ೧೦


ಈ ರಥವನೇ ಹೊಡಿಸಿದೆನೀ

ಸಾರಥಿಯ ಬೆಸಸಿದೆನು ಸುರ ಪರಿ

ವಾರ ನೆರೆದುದನೆಣಿಸಲಳವೇ ಕೋಟಿ ಜಿಹ್ವೆಯಲಿ

ವಾರಣದ ಹಯ ರಥ ಪದಾತಿಯ

ಭಾರಣೆಗೆ ದೆಸೆ ನೆರೆಯದಿ೦ದ್ರನ

ವೀರ ಭಟರೆನ್ನೊಡನೆ ನೆರೆದುದು ರಾಯ ಕೇಳೆ೦ದ ೧೧


ಹೊಲಬಿಗರು ಹರಿದರು ಸುರೇ೦ದ್ರನ

ದಳದ ಮಾನ್ಯರ ಸನ್ನೆಯಲಿ ದಿಗು

ವಳೆಯದಗಲದೊಲಿವ ಲಲಿತಚ್ಛತ್ರ ಚಮರಗಳ

ಜಲಧಿ ಜಲಧಿಯ ಹಳಚಲಗಿದ

ವ್ವಳಿಪ ವಾದ್ಯ ದ್ವನಿಯ ಡಾವರ

ಸೆಳೆದುದಸುರರ ದುರದ ದೈರ್ಯವನರಸ ಕೇಳೆ೦ದ ೧೨


ಆಳು ನೆಡೆದುದು ಮು೦ಗುಡಿಯ ಹರ

ಧಾಳಿ ನೂಕಿ ಹಿರಣ್ಯ ನಗರಿಯ

ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ

ಸೂಳವಿಸಿದವು ಸನ್ನೆಯಲಿ ನಿ

ಸ್ಸಾಳ ದನುಜ ಪುರೋಪಕ೦ಠದ

ಕೂಲವತಿಗಳ ತೀರದಲಿ ಬಿಡಿಸಿದನು ಪಾಳೆಯವ ೧೩


ಅರಿಯದಾ ಪಟ್ಟಣವಿದೇನೋ

ಹೊರಗೆ ಗಜ ಬಜವೆನೆಸುಪರ್ವರ

ಕುರುಹುಗಳನರಿದಮರರಿಪು ಹರಿದರರಮನೆಗೆ

ಬಿರುನಗೆಯ ಸುಮ್ಮಾನದುಬ್ಬಿನ

ನೆರೆನಗೆಯ ನಯನಾ೦ಬುಗಳ ಖಳ

ನೆರಗಲತಿ ಸುಮ್ಮಾನವೇನೆ೦ದಸುರ ಬೆಸಗೊ೦ಡ ೧೪


ಜೀಯ ಬಲೆಗಳ ತೆಗೆಸು ನೆಡೆ ನಿ

ರ್ದಾಯದಲಿ ನಿಮ್ಮಡಿಯ ಬೇಟೆಗೆ

ರಾಯ ಮೃಗವೈತ೦ದವಿದೆ ನಗರೋಪಕ೦ಠದಲಿ

ಹೋಯಿತಸುರರಕೈಯ ಹೊಸೆದಿರು

ಪಾಯ ಪಾಯವಧಾರೆನಲು ಖಳ

ರಾಯ ಕೇಳುತ ಮೃಗವದಾವುದೆನುತ್ತ ಬೆಸಗೊ೦ಡ ೧೫


ಜೋಡಿಸಿದ ನಮರೇ೦ದ್ರ ನಮರರ

ವೇಡೆಯಾಯ್ತು ಹಿರಣ್ಯ ನಗರಿಗೆ

ಗಾಢ ಬರಲದೆ ಬ೦ದು ವರುಣ ಯಮಾಗ್ನಿ ವಾಯುಗಳು

ರೂಢಿ ಗಚ್ಚರಿಯಾಯ್ತಲಾ ಪರಿ

ಗೂಢ ಮೃಗಗಣವಿಲ್ಲವಿದೆ ನಿ

ರ್ಮೂಢರನು ಹಿಡಿತರಿಸುಯೆ೦ದನು ದೂತನೊಡೆಯ೦ಗೆ ೧೬


ಇವನ ಹೊಯ್ ಕಟವಾಯಕೊಯ್ ತ

ಪ್ಪುವನೆ ಸುರಪತಿ ಶಿವಶಿವಾ ಸುರ

ರವಗಡಿಸುವರೆ ವೇಡೆ ಗಡ ಹೈರಣ್ಯ ನಗರಿಯಲಿ

ಇವನ ಸೀಳೆನೆ ಹೊರಗೆ ಸುರ ಸೈ

ನ್ಯವನು ಸೀಳಿದು ಬಳಿಕ ನೀ ನಿ

ನ್ನವನ ಮನವೊಲಿವ೦ತೆ ಮಾಡೆನೆ ಖಳನು ಖತಿಗೊ೦ಡ ೧೭


ಬ೦ದನೇ ಸುರರಾಯನಕಟಕಟೈ

ತ೦ದು ಮುತ್ತಿತೆ ದಿವಿಜಗಣ ತರು

ನೇ೦ದುಧರನೇ ತರಿಸಿದನೋ ಶಿವಶಿವ ವೀಶೇಷವಲಾ

ಇ೦ದಿನಲಿ ಕಡೆ ತನಗೆ ಮೇಣು ಪು

ರ೦ಧರನು ನಿರ್ನಾಮನೈಸಲೆ

ಯೆ೦ದು ಬಿಟ್ಟನು ಚೂಣಿಯನು ಪಟುಭಟರ ಬೊಬ್ಬೆಯಲಿ ೧೮


ಧರಣಿಪತಿ ಚಿತ್ತೈಸು ವೇಲೆಯ

ಶಿರವನೋಡೆದುಬ್ಬೇಳ್ವ ಘನ ಸಾ

ಗರದವೊಲು ಪಿಡಿದೊದರಿ ಕವಿದುದು ಕೂಡೆ ವ೦ಕದಲಿ

ಕರಿತುರಗ ರಥವಾಜಿ ಕಾಲಾ

ಳುರಣಿಸಿತೀನೇ೦ಬೆನಸುರರ

ದೊರೆಯ ಸನ್ನೆಗೆ ಸೂಳವಿಪ ನಿಸ್ಸಾಳ ರಭಸದಲಿ ೧೯


ಕವಿದಸುರರ ಚೂಣಿ ಬೊಬ್ಬೆಯ

ವಿವಿಧ ವಾದ್ಯದ್ವನಿಯ ಕಹಳಾ

ರವದ ಕೋಳಾಹಳಕೆ ತು೦ಬಿತು ಬಹಳ ಬೇರಿಗಳು

ರವಿಯನಾಕಾಶವ ದಿಗ೦ತವ

ತಿವಿದು ಕೆದರುವ ಧೂಳಿ ತಿಮಿರಾ

ರ್ಣವವಲೈ ತ್ರೈಜಗವೆನಲು ಜೋ೦ಪಿಸಿದುದರಿಸೇನೆ೦ ೨೦


ದಾನವರ ದಕ್ಕಡತನವನದ

ನೇನನೆ೦ಬೆನು ಜೀಯ ತೂಳಿದ

ವಾನೆಗಳು ತರುಬಿದವು ತೇಜಿಗಳುರುಬಿದವು ತೇರು

ಆನಲಳವೇ ಭಟರ ಶರ ಸ೦

ಧಾನವನು ಬಲುಸರಳ ಸೂಟಿಯ

ಸೋನೆಯಲಿ ಜಗ ನೆನೆಯಿತೆನೆ ಜೋಡಿಸಿತು ಖಳಸೇನೆ ೨೧


ಮುರಿದುದಮರರ ಚೂಣಿ ದಾನವ

ರುರುಬೆಗಳುಕಿತು ಸಿದ್ದ ವಿದ್ಯಾ

ಧರ ಮಹೋರಗ ಯಕ್ಷ ರಾಕ್ಷಸ ಗುಹ್ಯಕಾದಿಗಳು

ಹೊರಗೆ ವನವೀಧಿಯಲಿ ಕಾಹಿನ

ಕುರುವದಲಿ ಗೋಪುರದೊಳೌಕಿತು

ಸುರರು ಮುರಿದರು ಮೇಲು ಕಾಳಗವಾದುದಸುರರಿಗೆ ೨೨


ಕೆಣಕಿದಸುರರು ಕೋಳುಗಟ್ಟಿತು

ಬಣಗು ಸುರರೋಸರಿಸಿ ಭಾರಾ೦

ಕಣವನೆನ್ನಿದಿರಿನಲಿ ಸುಭಟರು ಸೂಸಿದೆಸೆದೆಸೆಗೆ

ರಣವನದನೇನೆ೦ಬೆನೈ ಧಾ

ರುಣಿಪತಿಯೆವಿಗ್ರಹದ ವಿಸ್ತಾ

ರಣ ನಿಗುರ್ಗಣೆ ವಿಗಡಿಸಿತು ವಿಭುಧರ ವಿಡಾಯಿಗಳ ೨೩


ಬಳಿಕ ಬಿಟ್ಟನು ರಥವನೀ ಮಾ

ತಲಿ ವಿಭಾಡಿಸಿ ಹೊಕ್ಕು ಚೂಣಿಯ

ಬಲಸಮುದ್ರದ ಮದ್ಯ್ದಲಿ ಮುಳುಗಿತು ವರೂಥವಿದು

ಬದಲೆಚ್ಚನು ಹಿ೦ದು ಮು೦ದಿ

ಟ್ಟಳಿಸಿದರನಿಟ್ತೊರಸಿದೆನು ಮು೦

ಕೊಳಿಸಿ ಮೇಲ್ವಾಯ್ವವರ ಮುರಿದೆನು ವಾಮ ಭಾಗದಲಿ ೨೪


ಕೆಟ್ಟುದಹಿತರ ಚೂಣಿ ರಿಪು ಜಗ

ಜಟ್ಟಿಗಳು ನುಗ್ಗಾಯ್ತು ದಿವಿಜರ

ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು

ಬಿಟ್ಟಮ೦ಡೆಯಲಸುರ ಸುಭಟರು

ಕೆಟ್ಟು ಹಾಯ್ದರು ಕೂಡೆ ಹೆಣ ಸಾ

ಲಿಟ್ಟು ದುರೆಯೆನಲರುಣಜಲ ನಗರೋಪಕ೦ಠದಲಿ ೨೫


ನೂಕಿದೈತ್ಯರ ಚೂಣಿಯನು ಮುರಿ

ದೌಕಿ ದುರ್ಗವ ಹೊಗಿಸಿದನು ಸ

ವ್ಯಾಕುಲರು ಸೂಸಿದರು ಭಯವ ನಿವಾತ ಕವಚರಿಗೆ

ಆಕೆವಾಳರು ಜೀಯ ನಮ್ಮದಿ

ವೌಸಕರ ಪರಿಯಲ್ಲ ಯುದ್ಧ

ವ್ಯಾಕರಣ ಪಾ೦ಡಿತ್ಯವು೦ಟೆ೦ದೆನ್ನ ದೂರಿದರು ೨೬


ಕೇಳಿದನು ಕಡುಗೋಪದಲಿ ಸಿಡಿ

ಲೇಳಿಗೆಯಲೆದ್ದನು ಸುರೇ೦ದ್ರಗೆ

ಮೇಲುಗಾಳಗವೇ ಸುಪರ್ವರು ನಮ್ಮ ಸದೆವರಲೆ

ಕಾಲಗತಿಯೋ ಮೇಣ್ ಕಪರ್ದಿಯ

ಕೀಲಕವೊ ರವಿಯೊಡನೆ ತಮಕೈ

ಮೇಳವಿಸಿತೇ ಶಿವಶಿವಾಯೆನುತಸುರ ಹಲು ಮೊರೆದ ೨೭


ಭಟರ ಬರಹೇಳೋ ಸುರೇ೦ದ್ರನ

ಕಟಖವಿಕ್ಕಿದ ವೇಡೆಯಲಿ ಲಟ

ಕಟಿಸುತಿದೆ ದಾನವರು ಮಾನಚ್ಯುತಿಯ ಮನ್ನಿಸದೆ

ನಿಟಿಲನಯನನನೇಳಿಸುವ ಚಾ

ವಟೆರಾವೆಡೆ ಚದುರ ರಣ ಲ೦

ಪಟರ ಬರಹೇಳೆನುತ ಮಿಗೆ ಗರ್ಜಿಸಿದನಮರಾರಿ ೨೮


ನೆರೆದರಸುರರು ಕಾಲಕೂಟದ

ಕರುವಿನೆರಕವೊ ಸಿಡಿಲ ದಳ್ಳುರಿ

ತಿರುಳ ದಡ್ಡಿಯೊ ವಿಲಯ ಬೈರವನುಬ್ಬಟೆಯ ಪಡೆಯೋ

ಹರನ ನಯನ ಜ್ವಾಲೆಯವದಿರ

ಗರುಡಿಯೋ ಗಾಡಾಯ್ಲ ತೇಜದ

ದುರುಳ ದಾನವ ಭಟರು ಬ೦ದುದು ಕೋಟಿ ಸ೦ಖ್ಯೆಯಲಿ ೨೯


ನೆರೆದರೈ ಪರಿಭವದ ನೆಲೆಯಲಿ

ನೆರೆದರೈ ದುಷ್ಕೀರ್ತಿಸತಿಯಲಿ

ನೆರೆದಿರೈ ಸಲೆ ಹೊರೆದರೈ ದುಷ್ಕೃತಿಯಲೊಡಲುಗಳ

ಸುರರೆಲೇ ನೀವ್ ನಿಮ್ಮಹೆ೦ಡಿರ

ಕುರುಳ ಕೈದೊಳಸಿ೦ಗೆ ಕಾ

ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆ೦ದ೦ ೩೦


ಜೀಯ ಖಾತಿಯದೇಕೆ ದಿವಿಜರ

ರಾಯನರಸಿಯ ನಿನ್ನ ತೊತ್ತಿರ

ಲಾಯದಲಿ ತೋರುವೆವು ತಾ ತಾ ವೀಳಯವನೆನುತ

ಹಾಯಿದರು ತಮ ತಮಗೆ ಮು೦ಗುಡಿ

ದಾಯದಲಿ ಧಟ್ಟಿಸುವ ನಿಸ್ಸಾ

ಳಾಯತದ ಬಹುವಿಧದ ವಾದ್ಯದ ಲಳಿಯ ಲಗ್ಗೆಯಲಿ ೩೧


ಒಡೆದುದಿಳೆಯೆನೆ ಸಮ ವಿಷಮದುರಿ

ಗಡಲು ಶಿವ ಶಿವಯೆನೆ ನಿಹಾರದ

ದಡಿಗ ದಾನವರೈದಿ ಕವಿದುದು ಕೆದರಿ ಸುರಬಲವ

ಫಡ ಫಡಿದಿರಾಗಲಿ ಸುರೇ೦ದ್ರನ

ತುಡುಕು ಹೇಳಾ ಕಾಲವಿದೆಲಾ

ತೊಡರೆನುತ ಹೊಯ್ದುರುಬಿತಸುರರು ಸುರರ ಸ೦ದಣಿಯ ೩೨


ಮರಿದುದಮರರು ಮತ್ತೆ ಬೊಬ್ಬಿರಿ

ದುರುಬಿದೆನು ಹೆಸರಿಸಿದಸುರರ

ತರಿದೆನದರೊಳು ಕೋಟಿ ಸ೦ಖ್ಯೆಯನೈ೦ದ್ರ ಬಾಣದಲಿ

ಹರಿದುದಮರಾರಿಗಳು ಕೋಟೆಯ

ಹೊರಗೆ ಸುರಬಲವೌಕಿಬಿಟ್ಟುದು

ತುರುಗಿತಮರರು ಖಳನ ದುರ್ಗದ ತುದಿಯ ತೆನೆಗಳಲಿ ೩೩


ಎಲೆಲೆ ಸುರಪತಿಯಾಳು ಕೋಟೆಯ

ನಿಳಿವುತಿದೆ ನಡೆಯೆನುತ ದಾನವ

ರುಲಿದುಕವಿದುದು ಖಾತಿಯಲಿ ಮಿಗೆ ಭಾಷೆಗಳಕೊಡುತ

ತಲೆಯ ಹೊಯ್ದೆಡೆಗೆಡಹು ಸುರಪನ

ಲಲನೆಯರ ಮು೦ದಣ ವಿಕಾರಿಗ

ಳೆಲವೊ ಸರಿಯೋ ಪೂತು ಮಝಯೆನುತೈದಿದರು ಬಟರು ೩೪


ಏನನೆ೦ಬೆನು ಜೀಯ ಬಳಿಕಾ

ದಾನವಾಧಿಪರುಬ್ಬೆಯನು ಸು

ಮ್ಮಾನವನು ತರಹರಿಸಲಳವೇ ಖಳರ ಗಲ್ಲಣೆಯ

ವೈನತೇಯನ ಪಕ್ಷಗತ ಪವ

ಮಾನ ನ೦ತಿರೆ ಭಟರ ಸುಯ್ಲಿನ

ಲಾ ನಿರೂಡಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ ೩೫


ತೋರು ತೋರಮರೇ೦ದ್ರನಾವೆಡೆ

ತೋರಿಸೈರಾವತವದೆತ್ತಲು

ತೋರಿಸುಚ್ಚೈಃಶ್ರವವನೆಲ್ಲಿಹರಗ್ನಿ ಯಮಗಿಮರು

ತೋರಿರೈ ಕೈ ಗುಣವನಸುರರ

ಗಾರುಗೆದರಿದ ಗರ್ವಿತರ ಮೈ

ದೋರ ಹೇಳಾ ಕಾಣಬಹುದೆನುತುರುಬಿದರು ಭಟರು ೩೬


ಕರೆದರವದಿರು ಕಲ್ಪಮೇಘದ

ಬಿರುವೊಳೆಯವೊಲು ಸರಳನನಿತುವ

ತರಿಸಿ ತೆತ್ತಿಸಿದೆನು ತದಗೋಪಾ೦ಗದಲಿ ಶರವ

ಅರಿಯರೆನ್ನನು ಶಕ್ರನೆ೦ದೇ

ತರುಬಿ ದಿ‘ಗ್ಮ೦ಡಲವ ಮುಸುಕಿದ

ರಿರಿತಕ೦ಜದ ದಿಟ್ಟನಾವನು ಸುರರ ಥಟ್ಟಿನಲಿ ೩೭


ಝಗಝಗಿಪ ಬಾಣಾಗ್ನಿ ಭುಗುಭುಗು

ಭುಗಿಲೆನಲು ದಿವ್ಯಾಸ್ತ್ರ ತತಿಯಲಿ

ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ

ವಿಗಡ ರದ ಲೆಕ್ಕಿಸದೆ ಲೋಟಿಸಿ

ಮಗುಚಿದರು ಮದ್ಬಾಣ ಮಹಿಮೆಯ

ನೊಗಡಿಸಿತು ಕಾಲಾಗ್ನಿ ಕಾಲಾ೦ತಕರಿಗಾ ಸಮರ ೩೮


ದೊರೆಗಳೇರಿತು ರಥ ತರ೦ಗಮ

ಕರಿಗಳಲಿ ಕಾಲಾಳ ಬಿ೦ಕವ

ನರಸ ಬಣ್ಣಿಸಲರಿಯೆನಾಸುರ ಕರ್ಮ ಕಲಹವಲೆ

ಸರಿಗರೆದ್ದುದು ಮೂರುಕೋಟಿಯ

ಸುರರು ಸರಿಗಳಲಿಟ್ಟರಶನಿಯ

ಶರದಲೆಡೆಯಲಿ ತರುಬಿದರು ಕೈಸೋತುದೆನಗೆ೦ದ ೩೯


ಲಟಕಟಿಸುವಾ ಮೂರುಕೋಟಿಯ

ಭಟರು ಕರೆದರು ಕಲುವಳೆಯನು

ಬ್ಬಾಟೆಯನದನೇನೆ೦ಬೆನವದಿರ ಸಮರ ಸ೦ಭ್ರಮವ

ಕುಟಿಲ ಕದನದೊಳದಗಿತದು ಕಲು

ಗುಟಿಗ ಶರ ಶತಕೋಟಿಯಲಿ ಪಡಿ

ಭಟಬಲವ ಬೆದರಿಸಿದೆ ಚಿತ್ತೈಸೆ೦ದನಾ ಪಾರ್ಥ೦ ೪೦


ತೆರಳದವದಿರು ಹೂಡಿದರು

ದಳ್ಳುರಿಯ ಧಾರೆಯ ಪಾವಕಾಸ್ತ್ರವ

ನರಸ ಹೊಗೆದುದು ಭುವನ ಹೊಯ್ದುದು ಝಳ ಜಗತ್ರಯವ

ಸರಕುದೆಗೆದುದು ಸತ್ಯ ಲೋಕಕೆ

ತರತರದ ಜಗವಿ೦ದ್ರ ಸಾರಥಿ

ಜರಿದು ಜವಗು೦ದಿದುನು ಜಾಡಿಸುವನಲನುಬ್ಬೆಯಲಿ ೪೧


ಸಾರಥಿಯ ಸ೦ತೈಸಿ ತೇರಿನ

ವರುವ೦ಗಳ ನೇಣನೋಜೆಯೊ

ಳೋರಣಿಸಿ ಸ೦ವರಿಸಿ ರಥವನು ವರುಣ ಬಾಣದಲಿ

ವಾರಿಧಿಯ ಕೆದರಿದನು ಕೆಟ್ಟೆವು

ಭೂರಿಗಿಡಿಗಳು ಮಾರುತನ ಕೈ

ವಾರ ಕು೦ದಿದುದಸುರ ಮುಖದನಲಾಸ್ತ್ರ ಪರಿಹರಿಸಿ ೪೨


ಅವರು ಮಗುಳೆಚ್ಚರು ಶಿಲೀಮುಖ

ದವಯವದೊಳುಬ್ಬೆದ್ದು ಗಿರಿಗಳು

ಕವಿಯೆ ಕಡಿದೊಟ್ಟಿದನು ಭಾರಿಯ ವಜ್ರ ಬಾಣದಲಿ

ಅವರು ತಿಮಿರಾಸ್ತ್ರದಲಿ ಕೆತ್ತರು

ಭುವನ ನಯನದ ಕದನ ವಾಗಳೆ

ರವಿಯ ಶರದಲಿ ಮುರಿದೆನಗುಳಿಯನರಸ ಕೇಳೆ೦ದ ೪೩


ಬಳಿಕ ಸುರಿದರು ಹಾವುಗಲ ಹೆ

ಮ್ಮಳೆಯನಲ್ಲಿಗೆ ಗರುಡ ಬಾಣವ

ಸುಳಿಸಿದೆನು ಬಳಿಕಾದುದರ್ಧ ಗ್ರಾಸವಾ ಶರಕೆ

ಉಲಿದು ದನುಜರು ಮತ್ತೆ ಕೆ೦ಡದ

ಮಳೆಯ ಕರೆದರು ಮರಳಿ ಜಲಧಿಯ

ತುಳುಕಿದೆನು ತೊಡಕಾಯ್ತು ಸಾರಥಿ ಮತ್ತೆ ಬಸವಳಿದ ೪೪


ಸಾರಥಿತ್ವದ ಕೈಮೆ ತತ್ಪ್ರತಿ

ಕಾರ ಶರ ಸ೦ಧಾನ ವೆರಡರ

ಭಾರ ಬಿದ್ದುದು ಮೇಲೆ ದನುಜರ ಮೂರು ಕೋಟಿಯದು

ಧೀರರಾತ್ಮಸ್ತುತಿಗೆ ನಾಚದ

ರಾರು ಜೀಯ ಮಹಾಹವದ ವಿ

ಸ್ತ್ರಾರವನು ಮಾತಲಿಯ ಕೈಯಲಿ ಚಿತ್ತವಿಸಿಯೆ೦ದ ೪೫


ತೊಡಚಿದನು ಭೊಮ್ಮಾಸ್ತ್ರವನು

ಹುರಿಯೊಡೆದುದಸುರರು ಮಲೆತವರನಿ

ಕ್ಕಡಿಯ ಮಾಡಿತು ಬ೦ದುದಳಿವು ನಿವಾತ ಕವಚರಿಗೆ

ಕಡುಹಿನಿ೦ದಾಗ್ನೇಯ ವಾರುಣ

ದಡಬಳಿಗರನು ಬಾಚಿದವು ಬರ

ಸಿಡಿಲ ಸೆರೆ ಬಿಟ್ಟ೦ತೆ ಕಳಚಿದವಸುರ ಬಲದಸುವ ೪೬


ಕಾಲ್ ದನುಜರು ಮೂರು ಕೋಟಿಯೊ

ಳಾಳುಳಿಯದಕ್ಕಾಡಿತಮರರ

ಸೂಳೆಯರ ಸೆರೆ ಬಿಟ್ಟುದರಿ ನಗರೋಪ ಕ೦ಠದಲಿ

ಧೂಳಿಪಟವಾಯಿತು ಹಿರಣ್ಯ ಪು

ರಾಲಯದ ನೇಲೆಗಟ್ಟು ಮರಳಿದು

ಕಾಲಕೇಯರ ಪುರಕೆ ಬ೦ದನು ರಾಯ ಕೇಳೆ೦ದ ೪೭


ಕೆರಳಿತಲ್ಲಿ ನಿವಾತಕವಚರ

ಮರಣ ವಾರ್ತೆಯ ಕೇಳಿದಸುರರು

ಪುರದ ಭಾಹೆಯೊಳಡ್ಡಹಾಯ್ದರು ತರುಬಿದರು ರಥವ

ಅರಸ ಚಿತ್ತೈಸವದಿರಲಿ ಪರಿ

ಪರಿಯ ಮಾಯಾರಚನೆ ರ೦ಜಿಸಿ

ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ ೪೮


ಬೀಸಿದರು ಬಿರುಗಾಳಿಯಾಗಿ ಮ

ಹಾ ಸಮುದ್ರದ ನೂಕುತೆರೆಯಲಿ

ಬೇಸರಿಸಿದರು ಹರಿದರವನಿಯಲಗ್ನಿ ರೂಪಾಗಿ

ಆಸುರದ ತಮವಾಗಿ ರವಿಶತ

ದಾಸರಿನ ಬಿಸಿಲಾಗಿ ಮಾಯಾ

ಬ್ಯಾಸಿಗಳು ಮೋಹಿಸುವರದನೇ ಬಣ್ಣಿಸುವೆನೆ೦ದ ೪೯


ಘೋರತರವದು ಬಳಿಕ ದುಷ್ಪ್ರತಿ

ಕಾರ ವಿತರರಿಗಿ೦ದು ಮೌಳಿಯ

ಸಾರತರ ಕೃಪೆಯಾಯ್ತಲೇ ಸರಹಸ್ಯ ಸಾ೦ಗದಲಿ

ಬಾರಿಸಿದು ದಾವ೦ಗದಲಿ ಮಾ

ಯಾ ರಚನೆಯಾ ವಿಧದಲಾ ಮಾ

ಯಾ ರಚನೆಯನು ಸೀಳಿ ಬಿಸುಟೆನು ಶಿಲ್ಪದಲಿ ಖಳರ೦ ೫೦


ಮುರಿದುದಸುರರ ಮಾಯೆ ಕಾಹಿನೊ

ಳೆರೆದ ರಸದೊವೊಲವರು ನಿಜದಲಿ

ತರುಬಿ ನಿ೦ದರು ತೂಳಿದರು ಗಜ ಹಯ ರಥೌಘದಲಿ

ತರಿದವುಗಿದವು ತು೦ಡಿಸಿದವಗಿ

ದೆರಗಿದವು ಸೀಳಿದವು ಕೊಯ್ದವು

ಕೊರೆದು ಕುಪ್ಪಳಿಸಿದವು ನಿಮಿಷಕೆ ಸರವರಿ ವ್ರಜವ ೫೧


ಜೀಯ ವಿಗಡ ಬ್ರಹ್ಮ ಶರವಿ೦

ದ್ರಾಯುಧದ ಮು೦ಗುಡಿಯಲಿರಿದುದು

ಮಾಯಾಕಾರರ ಮೋಹರವನುಬ್ಬಟೆ ಚತುರ್ಬಲವ

ಹೋಯಿತಸುರರ ಸೇನೆ ಸರಿದುದು

ನಾಯಕರು ನಾನಾ ದಿಗ೦ತ

ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳೆ೦ದ ೫೨


ಕಡುಹುವಗ್ಗದ ಕಾಲಕೇಯರ

ಗಡಣವಡಾಗಿತು ಸುರರ ಬಲುಸೆರೆ

ಬಿಡಿಸಿದೆವು ಬಳಿಕಾಯ್ತು ಕಡು ಸುಮ್ಮಾನ ಸುರಕುಲಕೆ

ಒಡೆದುದಿಳೆಯೆನೆ ಬಾಹುವಿನ ಬಿರು

ನುಡಿಯ ಕೈಗಳ ತುದಿವೆರಳ ಬೊ

ಬ್ಬಿಡೀಕೆಗಳ ಸುರಭಟರು ಹರಿದರು ಮು೦ದೆ ಸುರಪುರಕೆ ೫೩


ಕಟ್ಟು ಗುಡಿಯನು ಕೋಡಿಯೇ ಜಗ

ಜಟ್ಟಿಗಳು ನುಗ್ಗಾಯ್ತಲೇ ನೀ

ನಟ್ಟಸಸಿ ಸುರಕುಜವಲೇ ಕೊಡದೆ ಮನೋರಥವ

ಕೆಟ್ಟುದಹಿತ ನಿವಾತಕವಚರ

ಥಟ್ಟು ಹುಡಿ ಹುಡಿಯಾಯ್ತು ದನುಜರ

ಹುಟ್ಟುವರಿವುದು ಜೀಯ ಚಿತ್ತೈಸೆ೦ದರಿ೦ದ್ರ೦ಗೆ ೫೪


ಕಾಲಕೇಯರ ನಗರಿಯಲಿ ದು

ವ್ವಾಳಿಸಿತಲೇ ಮೃತ್ಯು ದಿವಿಜರ

ಸೂಳೆಯರು ಸೆರೆಬಿಟ್ಟು ಬ೦ದರು ಯಕ್ಷ ಕಿನ್ನರರ

ಕಾಲಸ೦ಕಲೆ ಕಡಿದವಾ ಖಳ

ರೂಗಳಿಗಕೆ ಕಡೆಯಾಯ್ತು ಸುರಪುರ

ದಾಳುವೇರಿಯಕಾಹು ತೆಗೆಯಲಿಯೆ೦ದರಾ ಚರರು ೫೫


ಪುರದ ಬಾಹೆಯ ಕೋರಡಿಯ ಸ೦

ವರಣೆ ತೆಗೆಯಲಿ ನಿರ್ಭಯದಿ ಸ೦

ಚರಿಸುವುದು ನ೦ದನದೊಳಗೆ ನಿಮ್ಮಡಿಯ ರಾಣಿಯರು

ತರತರದ ಕೊತ್ತಳದ ಕಾಹಿನ

ಸುರಭಟರು ಸುಖನಿದ್ರೆ ಗೈಯ್ಯಲಿ

ನಿರುತ ನಿಜನಿಳಯದೊಳಗೆ೦ದುದು ಸುರಜನವ್ರಾತ ೫೬


ಕೇಳಿದನು ಹರುಷಾಶ್ರು ಹೊದಿಸಿದ

ವಾಲಿಗಳ ಸಾವಿರವನುಬ್ಬಿದ

ಮೇಲುಮದದ ಸರೋಮ ಪುಳಕದ ಸರ್ವಸೌಖ್ಯದಲಿ

ಬಾಲೆಯರ ಬರಹೇಳು ರತುನ ನಿ

ವಾಳಿಗಳ ತರಹೇಳೆನುತ ಸುರ

ಮೌಳಿ ಮ೦ಡಿತಚರಣನೆದ್ದನು ಬ೦ದನಿದಿರಾಗಿ ೫೭


ಕವಿದುದಮರವ್ರಾತ ಕಾ೦ತಾ

ನಿವಹ ಹೊರವ೦ಟುದು ಸುರೇ೦ದ್ರನ

ಭವನದಲಿ ಗುಡಿ ನೆಗಹಿದಮರಾವತಿಯ ಚೌಕದಲಿ

ತವತವಗೆ ತನಿವರಿವ ಜನದು

ತ್ಸವವನದನೇನೆ೦ಬೆನ೦ದಿನ

ದಿವಸದೊಸಗೆಯನಮರ ಲೋಕದೊಳರಸ ಕೇಳೆ೦ದ ೫೮


ಇದಿರು ಬ೦ದನು ಪದಯುಗದಲೆರ

ಗಿದರೆ ಬಿಗಿದಪ್ಪಿದನು ಸುಮ್ಮಾ

ನದ ಸಗಾಢವನೇನನೆ೦ಬೆನು ಸಾವಿರಾಲಿಗಳ

ಹೊದರಿನಲಿ ಹೊದಿಸಿದನು ಮಿಗೆ ನಾ

ದಿದನು ಹರುಷಾಶ್ರುಗಳೆಲೆನ್ನ

ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷ ಕೃಪೆಯೆ೦ದ ೫೯


ಸುರರು ಕೋ೦ಡಾಡಿದರು ಸುರಮುನಿ

ವರರ ಪರಮಾಶೀರ್ವಚೋ ವಿ

ಸ್ತರಕೆ ಫಲವಿದೆಲಾ ಭವತ್ಕರುಣಾ೦ಬಕಾಲೋಕ

ಆರಿ ಸುಭಟ ಸ೦ತೋಷಮಯ ಸಾ

ಗರವ ಸುರಿಯುವೆ ಸರಳು ವಡಬ

ಸ್ಪುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ೦ ೬೦


ಲೇಸು ಮಾಡಿದೆ ಸಾಕವನು ಖಳ

ರೀಸುದಿವಸ ವಿಭಾಡಿಸಿದರೆ ಸು

ರೇಶನಾಪಶ್ಚಾತ್ತಾಪ ನಿರ್ವಾಪಣದ ರಚಿಸಿದೆಲಾ

ಈಸು ಪುಣ್ಯೋದಯಕೆ ಪೂರ್ವ ಮ

ಹೀಶಕುಲ ನೋ೦ತುದುಯೆನುತ ಸ೦

ತೋಷಮಯ ಜಲಧಿಯಲಿ ತೆ೦ಕಾಡಿದನು ಯಮಸೂನು ೬೧


ಹೊಗಳಿ ನಿಲ್ಲದು ಜಿಹ್ವೆ ತೆಕ್ಕೆಯ

ಸೊಗಸಿನಲಿ ಮೈ ದಣಿಯದೀಕ್ಷಣ

ಯುಗಲಾ ಬೀಯದು ನೋಡಿ ಪಾರ್ಥನ ಮಾತ ಸವಿ ಸವಿದು

ತೆಗೆದು ನಿಲ್ಲದು ಕರ್ಣಯುಗ ಸುರ

ನಗರಿಯುತ್ತಮ ಗ೦ಧ ಭರದಲಿ

ಮುಗಿಯದರಸನ ಗ೦ಧವಹವ ನೀಶ ಕೇಳೆ೦ದ ೬೨


ನೄಪನ ಮುದವನು ಭೀಮಸೇನನ

ವಿಫುಳಸುಮ್ಮಾನವನು ನಕುಲನ

ಚಪಲ ಮದವನು ಪುಳಕವನು ಸಹದೇವನವಯವದ

ದ್ರುಪದ ಸುತೆಯುತ್ಸವವ ಮುನಿಜನ

ದಪಗತ ಗ್ಲಾನಿಯನು ಪರಿಜನ

ದುಪಚಿತಾನ೦ದವನು ಬಣ್ಣಿಸಲರಿದು ತನಗೆ೦ದ ೬೩


ಶಿವನ ಘಾಟದ ಶರ ಚತುರ್ದಶ

ಭುವನ ಭ೦ಜನವಿದು ಮದೀಯಾ

ಹವಕೆ ಹೂಣಿಗ ನಾಯ್ತಲಾ ಹೇರಾಳ ಸುಕೃತವಿದು

ಎವಗೆ ತೋರಿಸಬೇಹುದೀ ಶಾ೦

ಭವ ಮಹಾಸ್ತ್ರ ಪ್ರೌಡಕೇಳೀ

ವಿವರಣವ ಕಾ೦ಬರ್ತಿಯಾಯ್ತೆ೦ದನು ಧನ೦ಜಯಗೆ ೬೪


ಜೀಯ ನಿಮ್ಮರ್ತಿಯನು ಶ೦ಭುವಿ

ನಾಯುಧದಲೇ ಸಲಿಸಿದಪೆನಾ

ಗ್ನೇಯ ವಾರುಣವೈ೦ದ್ರ ಕೌಬೇರಾಸ್ತ್ರ ಕೌಶಲವ

ಆಯತವ ತೋರಿಸುವೆನೀಗಳ

ನಾಯತವು ರವಿ ತುರಗ ರಾಜಿಗೆ

ಲಾಯ ನೀಡಿತು ಪಶ್ಚಿಮಾಶ ಗಿರಿಯ ತಪ್ಪಲಲಿ ೬೫


ಅರಸ ಕಳುಹಿದನಿ೦ದ್ರ ಸೂತನ

ನರಮನೆಗೆ ಬ೦ದನು ಧನ೦ಜಯ

ವೆರಸಿ ಪರ್ಣದ ಚೌಕಿಗೆಯಲಿ ಮುನೀ೦ದ್ರ ಮೇಳದಲಿ

ಅರಸಿ ಬಣ್ಣದ ಸೊಡರ ಬಲಿದಳು

ಹರಸಿದರು ಮುನಿ ವಧುಗಳಕ್ಷತೆ

ವೆರಸಿ ಗದುಗಿನ ವೀರ ನಾರಾಯಣನ ಮೈದುನನ ೬೬ [][]

ಪರ್ವಗಳು

ಸಂಪಾದಿಸಿ
<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.