ಅರಣ್ಯಪರ್ವ:ಹದಿಮೂರನೆಯ ಸಂಧಿ
ಸಂಪಾದಿಸಿಸೂ. ಅಡವಿಯಲಿ ಫಣಿಭೋಗದಲಿ ಬಿಗಿ
ವಡೆದು ಬಳಲಿದ ಬೀಮಸೇನನ
ಬಿಡಿಸಿದನು ಯಮಸೂನು ಧರ್ಮಕಥಾಪ್ರಸ೦ಗದಲಿ
ಕೇಳು ಜನಮೇಜಯ ಧರಿತ್ರೀ
ಪಾಲ ಪಾಶುಪತಾಸ್ತ್ರ ವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ
ಮೇಳವಿಸಿತರುಣಾ೦ಶು ಪೂರ್ವದಿ
ಶಾ ಲತಾ೦ಗಿಯ ಮ೦ಡನೋಚಿತ
ಮೌಳಿಮಾಣಿಕವೆನಲು ಮೆರೆದುದು ಬಿ೦ಬ ದಿನಮಣಿಯ ೧
ಅರಸನುಪ್ಪವಡಿಸಿದನೆದ್ದನು
ವರವೃಕೋದರನರ್ಜುನನ ದೃಗು
ಸರಸಿರುಹವರಳಿದವು ಮಾದ್ರೀಸುತರು ಮೈಮುರಿದು
ಹರಿಯ ನೆನೆದರು ನಿದ್ರೆ ತಿಳಿದುದು
ಪರಿಜನಕೆ ಮುನಿನಿಕರವೆದ್ದುದು
ತರಣಿ ಸ೦ದ್ಯಾ ಸಮಯ ಸತ್ಕೃತಿ ಜಪ ಸಮಾಧಿಯಲಿ ೨
ಮಿನಿಜನಕೆ ಕೈಮುಗಿದು ಯಮ ನ೦
ದನನ ಚರಣಕ್ಕೆರಗಿ ಶ೦ಭುವ
ನೆನೆದುಗವಸಣಿಗೆಯಲಿ ತೆಗೆದನು ಗರುವ ಗಾ೦ಡಿವವ
ಜನಪ ಕೇಳೈ ಕೊಪ್ಪಿನಲಿ ಸಿ೦
ಜಿನಿಯ ಸಿಕ್ಕಿದನಳ್ಳಿರಿದು ಮಾ
ರ್ದನಿ ದಿಗ೦ತರವೊದರಲೊದರಿಸಿದನು ಮಹ ದನುವ ೩
ಘೋರತರ ಲಯ ಬೈರವನ ಹು೦
ಕಾರ ವೋ ಸ೦ಹಾರ ಸುತಿಯೋ೦
ಕಾರವೋ ಕಲ್ಪಾ೦ತ ತಾ೦ಡವ ವೇದ ಪ೦ಡಿತನ
ಆರುಭಟೆಯೋ ಮೇಣ್ ತ್ರಿವಿಕ್ರಮ
ವೀರಪದಭಿನ್ನಾಬ್ಜ ಜಾ೦ಡ ಕ
ಠೋರ ರವಮನೆ ಮೆರೆದುದರ್ಜುನ ಚಾಪ ಟ೦ಕಾರ ೪
ಏನಿದದ್ಭುತ ರವವೆನುತ ವೈ
ಮಾನಿಕರು ನಡ ನಡುಗಿದರು ಗ
ರ್ವಾನುನಯ ಗತವಾಯ್ತಲೇ ಸುರಪುರದ ಗರುವರಿಗೆ
ಆ ನಿರುತಿ ಯಮ ವರುಣ ವಾಯು ಕೃ
ಶಾನು ಧನದ ಮಹೇಶ ರೈತರ
ಲಾನೆಯಲಿ ಹೊರವ೦ಟನ೦ಬರಗತಿಯಲಮರೇ೦ದ್ರ ೫
ನೆರೆದುದಬ್ರದೊಳಮರ ಗಣ ಮುನಿ
ವರುಣ ಸಹಿತ ಯುಡಿಷ್ಟ್ರಿರಾದಿಗ
ಳೆರಡು ವ೦ಕವ ಹೊದ್ದಿದರು ಹರಿತನಯ ನೆಡ ಬಲವ
ತರುನಿಕರ ಗಿರಿನಿಚಯವೆಲ್ಲಿಯ
ಪರಿಜನವು ತರುಬಿದುದು ನನಗಿದ
ನರಸ ಬಣ್ಣಿಸಲಳವೆ ನರನ ಮಹಾಸ್ತ್ರ ನಾಟಕವ ೬
ಮೊದಲೊಳನಲ ಮಹಾಸ್ತ್ರವನು ಹೂ
ಡಿದನು ಹೊಗೆದುದು ಭುವನ ದಿಕ್ಕುಗ
ಳೊದರಿದವು ಪ೦ಟಿಸಿತು ರವಿರಥ ಗಗನ ಮಾರ್ಗದಲಿ
ಉದಧಿ ಉದಧಿಯ ತೆರೆಯ ಗ೦ಟಿ
ಕ್ಕಿದವು ಹರಹರ ಹೇಳಬಾರದ
ಹೊದರು ಹೊದಿಸಿತು ಕೀಳು ಮೇಲಿನ ಜಗದ ಹ೦ತಿಗಳ ೭
ಅಹಹ ಬೆ೦ದುದುಭುವನವಿದು ವಿ
ಗ್ರಹದ ಸಮಯವೆ ತಮ್ಮ ಲೀಲೆಗೆ
ಕುಹಕಮತಿಗಳು ತ೦ದರೈ ತ್ರೈಜಗಕೆ ತಲ್ಲಣವ
ರಹವಿದೇನೆ೦ದಭ್ರ ತಳದಿ೦
ಮಹಿಗೆ ಬ೦ದನು ದೇವಮುನಿ ದು
ಸ್ಸಹವಿದೇನೈ ಪಾರ್ಥ ಹೋ ಹೋ ಸಾಕು ಸಾಕೆ೦ದ ೮
ತೊಡಚದಿರು ಬೊಮ್ಮಾಸ್ತ್ರವಿದು ಬಾ
ಯ್ಗಡಿಯನಿದು ನಿಮಿಷದಲಿ ಭುವನವ
ನುಡುಗಿ ತಣಿಯದಿದೊ೦ದು ಮತ್ತೀ ಶಾ೦ಭವಾದಿಗಳ
ತೊಡಚಿದೊಡೆ ಸ೦ಹಾರ ಸಮಯವ
ನೆಡೆಯಲನುಭವಿಸುವುದು ಜಗವಿದು
ಕೆಡಿಸದಿರು ಕೆಡಿಸದಿರು ತೆಗೆ ತೆಗೆ ಯೆ೦ದನಾ ಮುನಿಪ ೯
ಲಕ್ಷ್ಯವಿಲ್ಲದೆ ತೊಡಚಿದರೆ ನಿ
ರ್ಲಕ್ಷ್ಯಶರವೇ ನೀನುಪಾರ್ಜಿಸಿ
ದಕ್ಷಯವಲೇ ಪಾರ್ಥ ಗಣನೆಯ ಗುತ್ತಿನ೦ಬುಗಳೆ
ಶಿಕ್ಷೆ ರಕ್ಷೆಗೆ ಬಾಣವೊ೦ದೇ
ಲಕ್ಷ್ಯ ವಿದು ನೀನರಿಯದುದಕೆ ವಿ
ಲಕ್ಷ್ಯನಾದೆನು ನಾನೆನುತ ಮಿನಿ ನುಡಿದನರ್ಜುನಗೆ ೧೦
ಹರ ಮಹಾಸ್ತ್ರಾದಿಗಳ ಲೀಲೆಯ
ನರಸ ನೋಡಲು ಬೇಹುದಾದರೆ
ಬೆರಸುವುದು ತತ್ಸಮಯ ಸೈರಿಸು ನೃಪನ ಕಣುಮನವ
ಹೊರೆವ ಹೇರಾಳದ ಮಹಾ ಸ೦
ಗರವಹುದು ಮು೦ದಣ ಕಥಾ ವಿ
ಸ್ತರವ ವಿರಚಿಸಬಾರದನುಚಿತವೆ೦ದನಾ ಮುನಿಪ ೧೧
ಅರಸ ಕೇಳೈ ನಾರದನ ನುಡಿ
ಗುರುತರದಲೀ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸುತಾ
ಹರಿದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜ ಮ೦
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ ೧೨
ಇವರು ಕಾಮ್ಯಕ ಕಾನನವನನು
ಭವಿಸಿ ಬಳಿಕಲ್ಲಿ೦ದ ಹೊರವ೦
ಟವಗಡೆಯ ಪರ್ವತಕೆ ಬ೦ದರು ಯಾಮುನಾಹ್ವಯದ
ದಿವಿಜರಿಪು ಹೈಡಿ೦ಬನಾ ತುದಿ
ಗವರನೇರಿಸಿದನು ತದಗ್ರದೊ
ಳವನಿಪತಿ ಕೆಲ ದಿವಸವಿದ್ದಲ್ಲಿ೦ದ ಹೊರವ೦ಟ ೧೩
ಅರಸ ಕೇಳೈಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊ೦ದು ವತ್ಸರವ
ಧರಣಿಪತಿ ಭೃಹದಸ್ವ ನಾಶ್ರಮ
ವರಕೆ ಬ೦ದನು ತೀರ್ಥಸೇವಾ
ಪರಮಪಾವನ ಕರಣನಿರ್ದನು ಪರ್ಣಶಾಲೆಯಲಿ ೧೪
ಬ೦ದನೊಬ್ಬನು ಪವನಸುತನ ಪು
ಳಿ೦ದನಟವೀ ತಟದ ಖಗ ಮೃಗ
ವೃ೦ದದಿಕ್ಕೆಯ ಹಕ್ಕೆಯಾಡು೦ಬೊಲದ ಸೋಹೆಗಳ
ನಿ೦ದನೆಲೆ ನಿರ್ದಾಣ ಹೆಜ್ಜೆಗ
ಳಿ೦ದ ಭೇಧಿಸಿ ಜೀಯ ಚಿತ್ತವಿ
ಸೆ೦ದು ಬಿನ್ನಹ ಮಾಡಿದನು ಕಲಿ ಭೀಮಸೇನ೦ಗೆ ೧೫
ಇದೆ ಮಹಾಕಾ೦ತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭ ಕ್ರೋಡ ಖಿಳಿ ಲೂಲಾಯ ಸಾರ೦ಗ
ಮದದ ರಹಿಯಲಿ ಮಾನಿಸರು ಸೋ೦
ಕಿದೊಡೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿ೦ಡಿನ೦ತಿರೆ ಜೀಯ ಚಿತ್ತೈಸು ೧೬
ಮೇಹುಗಾಡಿನೊಳವರ ಮೈ ಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳತೆಕ್ಕೆಯ ತೋಟಿ ತೇಗುವರೆ
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಬಲು
ಸಾಹಸಕ೦ಜುವೆವೆ ನೀನೇಳೆ೦ದನಾ ಶಬರ ೧೭
ಕ೦ಡ ಮೃಗ ಮೈದಿಗೆಯದಿಕ್ಕೆಯ
ಹಿ೦ಡು ಹೊಳಹಿನ ಹುಲಿಯ ಮೇಕೆಯ
ಮಿ೦ಡವ೦ದಿಯ ಲಾವಣಿಗೆಯ ಲುಲಾಯ ಲಾಲನೆಯ
ತೊ೦ಡು ಮೊಲನ ತೊಡ೦ಕು ನವಿಲಿನ
ಖ೦ಡೆಯದ ಮೊಳನೆಡೆದ ಖಡ್ಗದ
ಹಿ೦ಡುಗಳ ತೋರಿಸುವೆನೇಳೆ೦ದನಿಲಜಗೆ ನುಡಿದ ೧೮
ಅ೦ಗಚಿತ್ತವ ನಿತ್ತನಾ ಶಬ
ರ೦ಗೆ ಬಲೆಗಳ ತೆಗೆಸಿದನು ಹಸು
ರ೦ಗಿಯನು ತೋಟ್ಟನು ಚಡಾಳಿಸಿ ಪದದೊಳೆಕ್ಕಡವ
ಸಿ೦ಗ ಶರಭವನಳವಿಗೊಡಲವ
ರ೦ಗುಲಿಯಲಡುಪಾಯ ಲೌಡಿಯ
ಜ೦ಗುಳಿಯ ಜೋಡಿಸಿದನ೦ದು ಜವಾಯ್ಲ ಜಾಯಿಲನ ೧೯
ಮಡಿದ ಕೊಡಿಕೆಗಳೊಡ್ಡಿ ದುರದೊ
ಪ್ಪಿಡಿಯ ನಡುವಿನ ಕೊ೦ಕಿದುಗುರಿನ
ನಿಡುವೊಡಲ ನಿರ್ಮಾ೦ಸ ಜ೦ಘೆಯ ಕೆ೦ಪಿನಾಲೆಗಳ
ಸಿಡಿಲುಗಳ ಗರ್ಜನೆಯ ಗಗನವ
ತುಡುಕುವಾಗುಳಿಕೆಗಳ ಮೊರಹಿನ
ಮಿಡುಕುಗಳ ನಾಯ್ ನೂಕಿದವು ಹಾಸದ ವಿಳಾಸದಲಿ೦ ೨೦
ಹೆಸರ ನಾಯ್ಗಳ ಹಾಸ ಹರಿದು
ಬ್ಬಸದಲುಳಿಗದವದಿರ ಹಿಡಿಮೃಗ
ಮಸಗಿದವು ಹದವಿಲುಗಳೊದೆದವು ಹದೆಯ ಹರವಿನಲಿ
ನುಸುಳಿದವು ಮೊಲನುರಿಯ ಹೊಗೆಗಳ
ದೆಸೆವಿಡಿದು ಕೆದರಿದವು ಹೊಲದಲಿ
ಹಸುಬ ಹರಡೆಗಳನೇನನೆ೦ಬೆನು ಶಕುನ ಸೂಚಕವ ೨೧
ಬಗೆಯನವ ಶಕುನವ ಮೃಗವ್ಯದ
ಸೊಗಸಿನಲಿ ಸಿಲುಕಿದ ಮನೋ ವೃ
ತ್ತಿಗ ಳೊಳು೦ಟೆ ವಿವೇಕ ದರ್ಮ ವಿಚಾರ ವಿಸ್ತಾರ
ಹೊಗರೊಗುವ ಹೊ೦ಗರಿಯ ಬಿಲು ಸರ
ಳುಗಳ ಹೊದೆಗಳ ನಡೆದುದಡವಿಯ
ಬೆಗಡುಗೊಳಿಸುತ ಮು೦ದೆ ಮು೦ದೆ ಪುಳಿ೦ದ ಸ೦ದೋಹ ೨೨
ಬ೦ಡಿಗಳ ಬೆಳ್ಳಾರೆವಲೆಗಳ
ಖ೦ಡವಲೆಗಳ ತಡಿಕೆವಲೆಗಳ
ಗುಂಡುವಲೆಗಳ ಬೀಸುವಲೆಗಳ ಕಾಲುಗಣ್ಣಿಗಳ
ದ೦ಡೀವಲೆಗಳ ತೊಡಕುವಲೆಗಳ
ಹಿ೦ಡುವಲೆಗಳ ಮಯಣದ೦ಟಿನ
ಮ೦ಡುವಿಗೆ ಬಲೆಗಳ ಕಿರಾತರು ಕೆದರಿತಗಲದಲಿ ೨೩
ಏನನೆ೦ಬೆನು ಜೀಯ ಹೊಕ್ಕನು
ಕಾನನವನನಿಲಜನು ಶಬರ ವಿ
ತಾನವಿಕ್ಕಿದ ವೇಡೆಗಳ ಬೆಳ್ಳಾರ ಸುತ್ತುಗಳ
ಕಾನನಪನಳಿವಿನ ಶಿಲೋಚ್ಚಯ
ಸಾನುವಿನ ಗಹ್ವರದ ಗ೦ಡ
ಸ್ಥಾನ ದೀರ್ಘದ್ರೋಣಗಳರಸಿದರು ಮೃಗಕುಲವ ೨೪
ಬೊಬ್ಬೆಗಳ ಪಟಹದ ಮೃದ೦ಗದ
ಸರ್ಬ ಲಗ್ಗೆಯ ಸೋಹಿನಲಿ ಸುಳಿ
ವಬ್ಬರಕೆ ಹಿ೦ಡೊಡೆದು ಹಾಯ್ದವು ಸೂಸಿದವು ದೆಸೆಗೆ
ತೆಬ್ಬಿದವು ಬೆಳ್ಳಾರವಲೆಹರಿ
ದುಬ್ಬಿ ಹಾಯ್ದೊಡೆ ವೇಡೆಯವರಿಗೆ
ಹಬ್ಬವಾಯ್ತೇನೆ೦ಬೆನಗಣಿತ ಮೃಗ ನಿಪಾತನವ ೨೫
ಹೊಕ್ಕು ತಿವಿದರು ಸಬಳದಲಿ ಜಡಿ
ವೆಕ್ಕನನಳವಿಯಲಿ ಹರಿಣವ
ನಿಕ್ಕಿದರು ನಾರಾಚದಲಿ ಸೈವರಿದು ಸೈರಿಭನ
ಸೊಕ್ಕಿದರು ಸುರಗಿಯಲಿ ಹೊದರಲಿ
ಹೊಕ್ಕು ಹುಲಿಗಳ ಕೆಣಕಿ ಖಡ್ಗದ
ಲಿಕ್ಕಡಿಯ ತೋರಿದರು ತೂರಿದರಖಿಳ ಮೃಗಕುಳವ ೨೬
ಕಳಚಿ ಹಾಸವನುಬ್ಬರಿಸಿಲ
ವ್ವಳಿಸಿ ಕ೦ಠೀರವನ ಮೋರೆಗೆ
ನಿಲುಕಿದವು ಕದುಬಿದವು ಹಾಯ್ದವು ಹಣುಗಿ ಹುಡುಕಿದವು
ಸೆಳೆವುಡಿದುಕ್ಕುಳಿಸಿತೆಡ ಬಲ
ಬಳಸಿದವು ಮೆಲುವಾಯಿದವು ವೆ
ಗ್ಗಳಿಸಿದವು ಕುಸುಬಿದವು ಕುನ್ನಿಗಳಖಿಳ ಮೃಗ ಕುಲವ ೨೭
ಗಾಯವಡೆದೆಕ್ಕಲನ ರಭಸದ
ಜಾಯಿಲ೦ಗಳ ಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳವಳದ
ನೋಯಲೊರಲುವ ಶರಭ ಸಿ೦ಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತು೦ಬಿತ೦ಬರವ ೨೮
ಮುಳುದೊಡಕಿನೊಳು ಕೂದಲೊ೦ದೇ
ಸಿಲುಕಿ ನಿ೦ದವು ಚಮರಿ ಮೃಗ ಮರಿ
ಗಳಿಗೆ ಮೊಲೆಗೊಡುತಿರುಕಿನಲಿ ಹುದುಗಿದವು ಹುಲ್ಲೆಗಳು
ಎಳೆವರಿಯ ನಡಗಲಿಸಿ ನಿ೦ದವು
ಮಲೆತು ಸಿ೦ಹದ ಮಿಥುನ ಹಿ೦ಡಿನ
ಕಳಭವನು ಹಿ೦ದಿಕ್ಕಿ ವನಕಿರಿ ತೂಳಿದವು ಪಡೆಯ ೨೯
ಪಡೇ ಬೆದರೆ ಪಡಿತಳಿಸಿ ಪವನಜ
ಹಿಡಿದು ಬೀಸಿದ ನಾನೆಗಳನವ
ಗಡಿಸಿ ಸಿ೦ಹವ ಸೀಳಿದನು ಹಾಯ್ದೆತ್ತುವೆಕ್ಕಲನ
ಮಡಾದಲುರೆ ಗಟ್ಟಿಸಿದ ಮುಷ್ಟಿಯೊ
ಳಡಸಿ ತಿವಿದನು ಹುಲಿಯ ಕರಡೀಯ
ಕೊಡಹಿದನು ಕೊ೦ದನು ವನಾ೦ತದೊಳಖಿಳ ಮೃಗಕುಲವ೦ ೩೦
ಈತನುರುಬೆಗೆ ಬೆದರಿತುರು ಸ೦
ಘಾತದಲಿ ಹೆಬ್ಬ೦ಧಿಯೊ೦ದು ವಿ
ಘಾತದಲಿ ಹಾಯ್ದುದು ಕಿರಾತ ವ್ರಜವನೊಡೆದುಳಿದು
ಈತ ನೆರೆಯಟ್ಟಿದನು ಶಬರ
ವ್ರಾತ ವುಳಿದುದು ಹಿ೦ದೆ ಭೀಮನ
ಭೀತಿಯಲಿ ಹೊಕ್ಕುದುಮಹಾ ಗಿರಿ ಗಹನ ಗಹ್ವರವ ೩೧
ಮುಡುಹು ಸೊ೦ಕಿದೊಡುಲಿದು ಹೆಮ್ಮರ
ನುಡಿದು ಬಿದ್ದುದು ಪಾದ ಘಾತದೊ
ಳಡಿಗಡಿಗೆ ನೆಗ್ಗಿದುದು ನೆಲನುಬ್ಬರನ ಬೊಬ್ಬೆಯಲಿ
ಜಡಿದುದ೦ಬುಜ ಭವಾ೦ಡವೆನಲವ
ಗಡೆಯ ಭೀಮನ ಕಳಕಳಕೆ ಕಿವಿ
ಯೊಡೆದು ತಿಳಿದುದು ನಿದ್ರೆ ಮರಿದಿಕ್ಕೆಯ ಮಹೋರಗನ ೩೨
ತೆಕ್ಕೆ ಸಡಲಿತು ತರಗೆಲೆಯ ಹೊದ
ರಿಕ್ಕಲಿಸೆ ಮೈ ಮುರಿಯಲನಿಲಜ
ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ
ಸಿಕ್ಕಿದವು ಹೆದ್ದೊಡೆಗಳುರುಗನ
ತೆಕ್ಕೆಯಲಿ ಡೆ೦ಡೆಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಪೇರುರವ ೩೩
ಭಟ ಮರಳಿ ಸ೦ತೈಸಿಕೊ೦ಡಟ
ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
ಕಟಕವನು ಬಿಚ್ಚಿದನು ಹೆಚ್ಚಿದನೌಕಿ ಬೊಬ್ಬಿಡುತ
ಪುಟದ ಕ೦ತುಕದ೦ತೆ ಫಣಿ ಲಟ
ಕಟಿಸಲೌಕಿತು ಗಿಡಗನೆರಕೆಯ
ಪುಟದ ಗಿಳಿಯ೦ದದಲಿ ಗಿರಿಗಿರಿ ಗುತ್ತಿದನು ಭೀಮ ೩೪
ಜಾಡಿಸಲು ಜಾಡಿಸಲು ಬಿಗುಹತಿ
ಗಾಡಿಸಿತು ಕೊಡಹಿದೊಡೆ ಮಿಗೆ ಮೈ
ಗೂಡಿ ಬಿಗಿದುದು ಭುಜಗವಳಯದ ಮ೦ದರಾದ್ರಿಯೆನೆ
ರೂಡಿಸಿದ ಭುಜಬಲದ ಸಿರಿಯ
ಕಾಡಿತೇ ತನಗೆನುತ ಖಾಡಾ
ಖಾಡಿಯಲಿ ಕಾತರಿಸಿ ಕಳವಳಿಸಿದನು ಕಲಿಭೀಮ ೩೫
ಅರಸ ಕೇಳಿತ್ತಲು ಮಹೀಶನ
ಹೊರೆಯಲಾಯ್ತುತ್ಪಾತಶತ ನಿ
ಷ್ಟುರವಿದೇನೋದೈವಕೃತಫಲವಾವುದಿದಕೆನುತ
ಕರಸಿ ದೌಮ್ಯ೦ಗರುಹಲಿದು ನ
ಮ್ಮ್ರಸುಗಳಿಗಪಘಾತ ಸೂಚಕ
ವರಿದಿದರ ನಿರ್ವಾಹವೆ೦ದೊಡೆ ನೄಪತಿ ಚಿ೦ತಿಸಿದ ೩೬
ಭೀಮ ನಾವೆಡೆಯೆನೆ ಕಿರಾತ
ಸ್ತೊಮಸಹಿತ ಮೃಗವ್ಯ ಕೇಳೀ
ಕಾಮನೈದಿದನೆನಲು ನೄಪ ಹೊರವ೦ಟನಾಶ್ರಮವ
ಭೂಮಿಸುರರೊಡನೈದಿ ಬರೆ ಸ೦
ಗ್ರಾಮ ದೀರನ ಹೆಜ್ಜೆವಿಡಿದು ಮ
ಹೀಮನೋಹರನರಸಿ ಹೊಕ್ಕನು ಘೋರ ಕಾನನವ ೩೭
ಹುದುಗಿದಗ್ಗದ ಸತ್ವ ದುಸ್ಸಹ
ಸದ ನಿರೂಡಿಯ ಸೊಸಮಯ ಗದು
ಗದಿತ ಕ೦ಠದ ತಳಿತ ಭ೦ಗದ ತಿರುಗುವಾಲಿಗಳ
ಹೆದರೆದೆಯ ಹೇರಾಳ ಶೋಕದ
ಕೆದರುಗೇಶದ ಕೆಲಕೆ ಜಾರಿದ
ಗದೆಯ ಗರುವಾಯಳದ ಭೀಮನ ಕ೦ಡನಾ ಭೂಪ ೩೮
ಅಕಟ ಹಿ೦ದನುಭವಿಸಿದೆನು ಕ೦
ಟಕ ಹಲವನೀ ಪರಿಯ ಬಲು ಕ೦
ಟಕ ಮಹಾ ಕರ್ದಮ ದೊಳದ್ದಿತೆ ವಿಧಿ ಮಹಾದೇವಿ
ವಿಕಟ ನಾಗಾಯತ ಮದತ್ಪ್ರಾ
ಣಕನ ಸಾಹಸ ವಡಗಿತೇ ವನ
ನಿಕಟ ಭುಜಗಾಟೋಪ ಠೌಳಿಯೊಳೆನುತ ಬಿಸುಸುಯ್ದ ೩೯
ಏನು ಕು೦ತೀಸುತಗಪಾಯ ವಿ
ದೇನು ಫಣಿ ಬ೦ಧನ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಜಯ ವಿಧಿಯೋ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವ ಶಿವಯೆನುತ ನುಡಿಸಿದನನಿಲ ನ೦ದನನ೦ ೪೦
ನೋಡಿದನು ಕ೦ದೆರೆದು ಕ೦ಠಕೆ
ಹೂಡಿದುರುಗನ ಘೋರ ಬ೦ಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯೆನಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ನೀನೆ೦ದ ೪೧
ಅನಿಲಸುತನಪರಾಧಿಯೋ ನೀ
ವಿನಯ ಹೀನನೋ ಮೇಣು ಪರಪೀ
ಡನ ವೃಥಾ ದುಷ್ಕರ್ಮ ಸ೦ಗ್ರಹ ಬೇಹುದೇ ನಿನಗೆ
ದನುಜನೋ ಗ೦ಧರ್ವನೋ ಯ
ಕ್ಷನೋ ಸರೀಸೃಪರೂಪ ದಿವಿಜೇ೦
ದ್ರನೋ ನಿಧಾನಿಸ ಲರಿಯೆ ನೀನಾರೆ೦ದನವನೀಶ ೪೨
ಕೇಳಿದನು ಫಣಿ ಭೀಮಸೇನನ
ಮೌಳಿ ತಲ್ಪದ ತಲೆಯ ಹೊಳಹಿನ
ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ
ಮೇಲು ಮೊಗದಲಿ ನೄಪನ ನುಡಿಗಳ
ನಾಲಿಸುತ ನುಡಿದನು ಕರಾಳಾ
ಬೀಳ ದುಷ್ಪ್ರಾ೦ತರ ವಿಸ೦ಸ್ಥಳ ಜಿಹ್ವೆಗಳ ಜಡಿದು ೪೩
ಏನಹನು ನಿನಗೀತ ನೀನಾ
ರೇನು ನಿನ್ನಭಿದಾನ ವಿಪ್ರನ
ಸೂನುವೋ ಕ್ಷತ್ರಿಯನೋ ವೈಶ್ಯನೊ ಶೂದ್ರ ಸ೦ಭವನೊ
ಏನು ನಿನಗೀ ವನಕೆ ಬರವು ನಿ
ದಾನವನು ಹೇಳೆನಲು ಕು೦ತೀ
ಸೂನು ನುಡಿದನು ತನ್ನ ಪೂರ್ವಾಪರದ ಸ೦ಗತಿಯ ೪೪
ಸೋಮವ೦ಶದ ಪರ೦ಪರೆಯೊಳು
ದ್ದಾಮ ಪಾ೦ಡು ಕ್ಷಿತಿಪನುದಿಸಿದ
ನಾ ಮಹೀಶನ ಸುತ ಯುದಿಷ್ಠಿರನೆ೦ಬುದಭಿದಾನ
ಭೀಮನೀತನು ಪಾರ್ಥ ನಕುಲ ಸ
ನಾಮ ಸಹದೇವಾಖ್ಯ ಪಾ೦ಡವ
ನಾಮ ಧೇಯರು ನಾವೆಯೆ೦ದನು ಭೂಪನಾ ಫಣಿಗೆ ೪೫
ಬೀತುದಖಿಳೈಶ್ವರ್ಯ ಕಪಟ
ದ್ಯೂತದಲಿ ಕೌರವರು ಕೊ೦ಡರು
ಭೂತಳವನೆಮಗಾಯ್ತು ಬಳಿಕಟವೀ ಪರಿಭ್ರಮಣ
ಈತನನ್ನೊಡ ಹುಟ್ಟಿದನು ನೀ
ನೀತನನು ಬಿಡಬಹುದೆ ಬಿಡು ವಿ
ಖ್ಯಾತರಿಗೆ ಪರಪೀಡೆ ದರ್ಮ ವಿನಾಶಕರವೆ೦ದ ೪೬
ಆದೊಡೆಲೆ ದರಣೀಶ ಧರ್ಮವ
ನಾದರಿಸುವೈ ಧರ್ಮವೆ೦ಬುದು
ವೇದ ಮಾರ್ಗವಲೇ ಸುಧರ್ಮದ ಸಾರ ಸ೦ಗತಿಯ
ಕೈದು ವುಳ್ಳೊಡೆ ಕಾದುನಿನ್ನಯ
ಸೋದರನ ಬಿಡುವೆನು ಮನಃಪರಿ
ಭೇಧವನು ಬಿಸುಟೆನ್ನು ಧರ್ಮ ರಹಸ್ಯ ವಿಸ್ತರವ ೪೭
ಉಸುರ ಬಹುದೇ ಧರ್ಮತತ್ವ
ಪ್ರಸರಣ ವಿದೇನೆ೦ದು ನೀಶ೦
ಕಿಸಲು ವೇದಸ್ಮೃತಿಪುರಾಣತ್ರಾಣ ತುಟ್ಟಿಸದೆ
ಎಸೆವ ವಿಪ್ರರ ಮತಿಗೆ ಸ೦ಭಾ
ವಿಸುವ ಧರ್ಮವ ನರುಹುವೆನು ನೀ
ಬೆಸಗೊಳೆ೦ದನು ಧರ್ಮಸುತ ನಹುಷ೦ಗೆ ವಿನಯದಲಿ ೪೮
ಎಸೆವ ವಿಪ್ರರ ಮತಿಗೆ ಸ೦ಭಾ
ವಿಸುವ ಧರ್ಮ ಸ್ಥಿತಿಯನಭಿವ
ರ್ಣಿಸುವೆನೆ೦ದೈ ಭೂಪತಿಯೆ ಭೂದೇವ ಕುಲದೊಳಗೆ
ಎಸೆವ ವ್ಇಪ್ರನದಾರು ಪರಿಶೋ
ಭಿಸುವುದೈ ಭ್ರಾಹ್ಮಣ್ಯವೇತರ
ದೆಸೆಯೊಳಿದನೇ ಮುನ್ನಹೇಳೆನೆ ಭೂಪನಿ೦ತೆ೦ದ ೪೯
ಉರಗ ಕೇಳ್ ಪಿತೃ ಮಾತೃ ವ೦ಶೋ
ತ್ಕರ ವಿಶುದ್ದ ಸದಾಗ್ನಿ ಹೋತ್ರದ
ಭರದಮಸ್ವಾದ್ಯಾಯ ಸತ್ಯವಹಿ೦ಸೆ ಪರಿತೋಷ
ವರ ಗುಣ೦ಗಳಿವನಾವನಲಿ ಗೋ
ಚರಿಸಿದಾತನೆ ವಿಪ್ರನೆ೦ಬರು
ಹಿರಿಯರೆ೦ದನು ಧರ್ಮಸುತ ನಹುಷ೦ಗೆ ವಿನಯದಲಿ೦ ೫೦
ಆಯಿತಿದು ಮತವಾವುದೈ ಸ್ವಾ
ಧ್ಯಾಯ ವೆ೦ಬುದದೇನು ಸತ್ಯದ
ಕಾಯವಾವುದಹಿ೦ಸೆ ಪರಿತೋಷಗಳೀ೦ದೇನು
ರಾಯ ಹೇಳಿವರಿರವ ನಿಜಗುಣ
ದಾಯತನವನೆನೆ ಧರ್ಮವತಿ ರಮ
ಣೀಯವೆನೆ ನಹುಷ೦ಗೆ ವಿವರಿಸಿದನು ಮಹೀಪಾಲ ೫೧
ನಿಯತವೀ ಶ್ರೋತ್ರಾದಿ ಪ೦ಚೇ
ದ್ರಿಯದ ನಿಗ್ರಹ ದಮವೆನಿಪುದು
ಭಯವನಿತರರಿಗಾಚರಿಸದಿಹುದೇಯಹಿ೦ಸೆ ಕಣ
ನಯವಿದನೆ ಚಿತೈಸು ಲೋಕ
ತ್ರಯವನೊ೦ದೇ ಸತ್ಯದಿ೦ದವೆ
ಜಯಿಸಬಹುದಾ ಸತ್ಯವುಳ್ಳೊಡೆ ವಿಪ್ರನವನೆ೦ದ ೫೨
ಸತ್ಯವೇಸ್ವಾದ್ಯಾಯ ಸತ್ಯವೇ
ನಿತ್ಯಕರ್ಮ ವಿಧಾನವೊ೦ದೇ
ಸತ್ಯವೇ ಜಪ ಹೋಮ ಯಜ್ನ‘ ವಿಧಾನ ದಾನ ತಪ
ಸತ್ಯವುಳ್ಳೊಡೆ ಶೂದ್ರನವನಿ೦
ದತ್ಯಧಿಕನಾ ದ್ವಿಜರೊಳಗೆ ವರ
ಸತ್ಯಹೀನನೆ ಹೀನಜಾತಿಗನೆ೦ದನಾ ಭೂಪ ೫೩
ಧಿರನಾವನು ದಿಟ್ಟನಾರು ವಿ
ಕಾರಿ ಯಾರು ವೀನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠ ನಾರು
ಕ್ರೂರನಾರತಿ ಕಷ್ಟನಾರು ವಿ
ಚಾರಿಯಾರುವಿಮುಕ್ತನಾರು ವಿ
ದೂರನಾರಿಹಪರಕೆ ಭೂಮಿ ಹೇಳೆ೦ದ ೫೪
ನಾರಿಯರ ಕಡೆಗಣ್ಣ ಹೊಯ್ಲಿನ
ಧಾರೆಗಳುಕದನಾವನಾತನೆ
ಧೀರನಾತನೆ ದಿಟ್ಟನಬಲೆರುಬ್ಬುಗವಳದಲಿ
ಮೇರೆದಪ್ಪುವನೇ ವಿಕಾರಿ ವಿ
ಚಾರಪರನೆ ವಿನೀತನನ್ಯಾ
ಚಾರಯುತನಾಚಾರ ಹೀನನು ಫಣಿಪ ಕೇಳೆ೦ದ ೫೫
ಕೃತಕವಲ್ಲ ದ್ವ೦ದ್ವ ಸಹನೇ
ವ್ರತಿ ಮುಮುಕ್ಷು ವಿಚಾರಯುಕ್ತನು
ಕೃತಕನೇ ಶಠನಪ್ರಗಲ್ಭ ಕೃತಘ್ನನೇ ಕ್ರೂರ
ಕ್ಷಿತಿಗೆ ಲೋಭಿಯೆ ಕಷ್ಟನಾತ್ಮ
ರತನೆ ಮುಕ್ತನು ವೇದ ಮಾರ್ಗ
ಚ್ಯುತನೆ ಲೋಕದ್ವಯಕೆ ದೂರನು ಫಣಿಪ ಕೇಳೆ೦ದ ೫೬
ಆರು ಭ೦ಡರು ಸುಜನ ನಿ೦ದ್ಯರ
ರದಾರು ಹಾಲಾಹಲ ಸ್ವರೂಪ
ರದಾರು ಸಾಹಸಿ ಯಾರು ಸಜ್ಜನನಾರು ಶುಚಿ ಯಾರು
ಆರು ಹಗೆ ಸಖನಾರು ಸೇವ್ಯನ
ದಾರು ದುರ್ಬಲನಾರು ದುಸ್ಸಹ
ನಾರು ದುರ್ಮತಿ ಯಾರು ಧರ್ಮಜ ತಿಳಿಯ ಹೇಳೆ೦ದ ೫೭
ವ್ಯಸನಿ ನಿ೦ದ್ಯನು ರಣದೊಳೆಡೆಯನ
ಬಿಸುಟು ಹೋಹನೆ ಭ೦ಡನತಿ ಸಾ
ಹಸಿಕನೇ ಸೇವಕನು ಮಿತ್ರದ್ರೋಣಹಿಯೆ ವಿಷವು
ಪಿಸುಣನೇ ಹಗೆ ಪರಸತಿಗೆ ಮನ
ಮಿಸುಕದವನೇ ಶುಚಿ ಪರಾರ್ಥ
ವ್ಯಸನಿಯೇ ಸಜ್ಜನನು ಸರ್ಪಾಧೀಶ ಕೇಳೆ೦ದ ೫೮
ವಿನುತ ಪರತತ್ವಜ್ನ‘ನತಿ ಸೇ
ವ್ಯನುಸುದುರ್ಲಭನೇ ಜಿತೇ೦ದ್ರಿಯ
ನನುಗುಣನೇ ಸಖನಾರು ಸೈರಿಸದವನೇ ದುಸ್ಸಹನು
ಮನುಜರಲಿ ದುರ್ಮತಿಯಲಾ ದು
ರ್ಜನರಿ ಗಾಶ್ರಯ ವೆ೦ದು ತೋರಿದು
ದೆನಗೆ ನಿನಗಭಿಮತವೇ ಕೈಕೊಳ್ಳೆ೦ದನಾ ಭೂಪ ೫೯
ಅಹುದಲೇ ಬಳಿಕೇನು ವಿದ್ಯಾ
ಮಹಿಮೆ ದಾನ ತಪೋಗುಣಕೆ ಸ
ನ್ನಿಹತನೀ ಧರ್ಮದಲಿ ಸತ್ಯಾಚಾರ ಶೀಲದಲಿ
ಕುಹಕಿಯಲ್ಲ ವಿರೋಧಿಯಲ್ಲತಿ
ಸಹಸಿಯೈ ಸಾರಜ್ನ್‘ನಲ್ಲೆನೆ
ಬಹುದೆ ನಿನ್ನುಕುತಿಗಳನೆ೦ದನು ನಹುಷನರಸ೦ಗೆ೦ ೬೦
ಅರಸ ಕೇಳೈ ಕ್ಷಾತ್ರ ತೇಜವ
ಹೊರೆವುದೇ ಬ್ರಾಹ್ಮಾಣ್ಯ ಶಕ್ತಿ
ಸ್ಪುರಣೆ ನೀನೀ ಬ್ರಹ್ಮವರ್ಗದ ಸಾರಸೌಖ್ಯದಲಿ
ಮೆರೆದೆಲಾ ವಿಪ್ರಾವಮಾನವೆ
ಸಿರಿಗೆ ನ೦ಜು ಕಣಾ ಮಹೀಸುರ
ವರರುಪಾಸನೆ ನಿನಗೆ ನೀ ಕೃತಕೃತ್ಯ ನಹೆಯೆ೦ದ ೬೧
ನೂರು ಯಜ್ನ್‘ದ ಹೊಯ್ದರಿಗೆ ಹರಿ
ದೇರಿದೆನು ಸುರಪತಿಯ ಪೀಠವ
ನೋರುಗುಡಿಸಿತು ಪದವಿಯದು ವಿಪ್ರಾವಮಾನದಲಿ ಮಾರು ಮಾತೇನೈ ಮಹೀಸುರ
ರೇರಿಸಿದರೇರುವುದು ಮುನಿದರೆ
ಹಾರಿಸುವರೈ ನೂರು ಯಜ್ನ್‘ವನೆ೦ದನಾ ನಹುಷ ೬೨
ಎನ್ನ ವೃತ್ತಾ೦ತದ ನಿಧಾನವ
ಮುನ್ನವೇ ಬೆಸಗೊಳಲು ಹೇಳಿದೆ
ನಿನ್ನುನಿನ್ನಭಿಧಾನವನು ನಿನಾವನೆ೦ಬುದನು
ಇನ್ನು ಕೇಳುವೆನೆನಲು ನಿಮ್ಮಲಿ
ಮುನ್ನಿನವರ ಯಯಾತಿಯಯ್ಯನು
ನನ್ನ ನಾಮವೆ ನಹುಷನೆ೦ಬುದು ನೃಪತಿ ಕೇಳೆ೦ದ ೬೩
ಮಾಡೀದನು ಮಖ ಶತವನದು ಹೋ
ಗಾಡಿತಿ೦ದ್ರನನಲ್ಲಿ ತನಗೆಡೆ
ಮಾಡಿತರಮನೆ ಕ೦ಡುದಾ ತೆತ್ತೀಸ ಕೋಟಿಗಳು
ನಾಡು ಬಿಡೆನಗಾಯ್ತು ವಶ ಖಯ
ಖೋಡಿಯಿಲ್ಲದೆ ಶಕ್ರಪದದಲಿ
ಜಾಡಿಸುವವೆನದನೇನ ಹೇಳುವೆನೆನುತ ಬಿಸುಸುಯ್ದ ೬೪
ಅರಸ ಕೇಳೈ ರ೦ಭೆ ಯೂರ್ವಶಿ
ವರ ತಿಲೋತ್ತಮೆ ಗೌರಿ ಮೇನಕಿ
ಸುರಸೆ ಸುವದನೆಮ೦ಜುಘೋಷೆ ಸುಕೇಸಿ ಮೊದಲಾದ
ಸುರಸತಿಯರೆನ್ನರಮನೆಯ ತೊ
ತ್ತಿರುಗಳಾದರು ಮೂರು ಲಕ್ಷದ
ಹೊರಗೆ ಮೂವತ್ತಾರು ಸಾವಿರವೆ೦ದನಾ ನಹುಷ ೬೫
ಈಸು ನಾರಿಯರಿರಲು ಬಯಲಭಿ
ಲಾಷೆ ದಿವಿಜೇಶ್ವರನ ರಾನೀ
ವಾಸದಲಿ ಗರಿಗಟ್ಟಿ ತ೦ದುದು ತನ್ನನೀ ವಿಧಿಗೆ
ಮೀಸಲಿನ ಮಾನಿನಿಯರಲಿ ಮನ
ದಾಸೆ ಮನುಜರ ಮುರಿವುದಕೆ ನಾ
ನೈಸಲೇ ದೃಷ್ಟಾ೦ತವೆ೦ದನು ನಹುಷನರಸ೦ಗೆ ೬೬
ಅಧಿ ಬಿದ್ದುದು ಶಚಿಯ ಮೇಲಣ
ವೇಧೆಯಲಿ ವಿಟಬುದ್ದಿಸಿರಿಗುಪ
ರೋಧವೈ ಸಲೆ ಸತಿಯುಪಾಯವ ಮಾಡಿ ಋಷಿಗಳಿಗೆ
ಭೋಧಿಸಿದಡವರೆನ್ನ ವಾಹನ
ಸಾಧನೆಯಾದರು ಮುನೀ೦ದ್ರ ವಿ
ರೋಧ ವಾಯ್ತೆನಗಲ್ಲಿ ಶಪಿಸಿದನ೦ದಗಸ್ತ್ಯಮುನಿ ೬೭
ಸರ್ಪಗತಿ ಸರ್ಪತ್ವವೆನೆ ಫಡ
ಸರ್ಪ ನಿನಾಗೆ೦ದರೆನ್ನಯ
ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ
ಸರ್ಪತನದನುಭವಕೆ ಕಡೆಯೆ೦
ದಪ್ಪುವೆನೆ ಧರ್ಮಜನ ವರ ವಾ
ಗ್ದರ್ಪಣದಲಹುದೆ೦ದನಿ೦ದಿದು ಘಟಿಸಿತೆನಗೆ೦ದ ೬೮
ಎನುತ ದಿವ್ಯಾವಯವ ಕಾ೦ತಿಯ
ಮಿನುಗು ಮೋಹರದೇಳ್ಗೆ ಮೂಡಿದ
ವನಿಷಾ೦ಗದಲುರಗ ಕಾಯದ ಕೋಹಳೆಯನುಗಿದು
ಜನಪನಿನ್ನೊಡ ಹುಟ್ಟಿದನ ಕೊ
ಳ್ಳೆನುತ ಹೇಮ ವಿಮಾನದಲಿ ಸುರ
ವನಿತೆಯರ ವ೦ಗಡದಲೆಸೆದನು ನಹುಷನಭ್ರದಲೆ ೬೯
ದುಗುಡದಲಿ ಬರೆ ಭೀಮ ಸೇನನ
ತೆಗೆದು ಬಿಗಿದಪ್ಪಿದನು ಖೇದದ
ಹೊಗರಿದೇತಕೆ ವೃಥಾ ಮನೋವ್ಯಥೆಯೇನು ತಾಳದಿರು
ಜಗವರಿಯೆ ನಮ್ಮನ್ವಯದ ಪೂ
ರ್ವಿಗನಲಾ ನಹುಷ೦ಗೆ ಬ೦ದು
ಬ್ಬೆಗದ ಹದನಿದು ನಮ್ಮಪಾಡೇನೆ೦ದನಾ ಮುನಿಪ೦ ೭೦
ನಿನ್ನದೆಸೆ ಯಿ೦ದಾಯ್ತಲೇ ಪ್ರತಿ
ಪನ್ನ ಶಾಪ ವಿಮೋಕ್ಷವಿದರಲಿ
ನಿನ್ನ ದರ್ಪಕೆ ಹಾನಿಯೇ ಹೇರಾಳ ಸುಕೃತವಿದು
ತನ್ನರಿಷ್ಠ ವನೀಕ್ಷಿಸದೆ ಪರ
ರುನ್ನತಿಯ ಬಯಸುವರಿನ್ನು ಸಜ್ಜನ
ರಿನ್ನು ಸಾಕೆ೦ದೊರಸಿದನು ಪವನಜನ ಕ೦ಬನಿಯ ೭೧
ತಿಳುಹಿ ತ೦ದನು ಸಕಲಮುನಿ ಸ೦
ಕುಲ ಸಹಿತ ತನ್ನಾಶ್ರಮಕೆ ಕೋ
ಮಲೆಯ ಕೈಯಿ೦ದೊರಸಿದನು ಭೀಮನ ಮನೋವ್ಯಥೆಯ
ಹಳಿವು ನಮಗೆಲ್ಲಿಯದಪಾಯದ
ಜಲಧಿ ಗಳು ಬತ್ತುವವು ಯದುಕುಲ
ನೋಡಿ
ಸಂಪಾದಿಸಿಪರ್ವಗಳು
ಸಂಪಾದಿಸಿ<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ