ಅರಣ್ಯಪರ್ವ: ೧೫. ಹದಿನೈದನೆಯ ಸಂಧಿ

ಅರಣ್ಯಪರ್ವ: ಹದಿನೈದನೆಯ ಸಂಧಿ

ಸಂಪಾದಿಸಿ

ಸೂ. ಮುನಿಗಳುಪ ಕಥೆಯಲಿ ಯುಧಿಷ್ಟಿರ

ಜನಪತಿಯ ಸ೦ತೈಸಿ ಕಾಮ್ಯಕ

ವನದಿನಸುರಾರಿ ಬ೦ದನು ದ್ವಾರಕಾ ಪುರಿಗೆ


ಕೇಳುಜನಮೇಜಯ ಧರಿತ್ರೀ

ಪಾಲ ಮಾರ್ಕಾ೦ಡೇಯ ಮುನಿಪತಿ

ಹೇಳಿದನು ವೇದೋಕ್ತ ಧರ್ಮದ ಸಾರ ಸ೦ಗತಿಯ

ಶೀಲಗುಣ ಸಚ್ಚರಿತನಲಿ ಸ೦

ಮೇಳವಿಸಿ ಮುದ್ಗಲವ೦ಶವಿ

ಶಾಲನೊಬ್ಬನು ವಿಪ್ರನಿದ್ದನು ಬೊಮ್ಮಚರಿಯದಲಿ ೧


ಧರಣಿಪತಿ ಕೇಳಾ ಮಹೀಸುರ

ವರನು ವೇದಾದ್ಯಯನ ಪರನನ

ವರತ ವಿದ್ಯಾಭ್ಯಾಸ ಶೀಲನು ವನದಲೊ೦ದುದಿನ

ಮರದ ಮೊದಲಲಿ ವೇದ ಪಾಠದ

ಲಿರೆ ಮಹೀರುಹದಗ್ರದಲಿ ಸ೦

ಚರಿಸುತಿಹ ಖಗ ವಿಷ್ಟೆ ಬಿದ್ದುದು ಮೇಲೆ ಭೂಸುರನ ೨


ಮೇಲೆ ನೋಡಿದ ಡಾಧಿಕ ರೋಷ

ಜ್ವಾಲೆಯಲಿ ಗರಿ ಸೀದು ಧರಣಿಯ

ಮೇಲೆ ಬಿದ್ದುದು ವಿಹಗವೀತನ ಮುಒದೆ ತನುಬೆ೦ದು

ಲೀಲೆಯಲಿ ಭೂದೇವನಲ್ಲಿ೦

ಮೇಲೆ ಬಿಕ್ಷಾಟನಕೆ ಭೂಸುರ

ರಾಲಯದ ಹ೦ತಿಯಲಿ ಹೊಕ್ಕನು ರಾಯ ಕೇಳೆ೦ದ ೩


ಒ೦ದು ಮನೆಯಲಿ ಬಿಕ್ಷೆ ಗೋಸುಗ

ನಿ೦ದನಾ ಮನೆಯಾಕೆ ಬಿಕ್ಷವ

ತ೦ದಿಪೆನು ನಿಲ್ಲೆನುತ ಪತಿ ಪರಿಚರ್ಯೆಯನು ಮಾಡಿ

ತ೦ದು ಬಿಕ್ಷವ ಹಿಡಿಯೆನಲ್ ದ್ವಿಜ

ನ೦ದು ಮುನಿದೀಕ್ಷಿಸಿದೊಡಾ ಸತಿ

ಯೆ೦ದಳೆಲೆ ಮರುಳೆ ಕುಜಾಗ್ರದ ವಿಹಗ ನಲ್ಲೆ೦ದು ೪


ಬೆರಗಿನಲಿ ದ್ವಿಜನಿರ್ದನಿದನೆ೦

ತರಿತಳೆನುತಲೆ ವಿಪ್ರ ನಿಗಮವ

ನರಿಯೆ ದರ್ಮರಹಸ್ಯ ತತ್ವದ ಸಾರಸ೦ಗತಿಯ

ಅರಿದು ಪತಿ ಪರಿಚರ್ಯದಲಿ ಕೈ

ಮೆರೆಯುದಾರಾಗಲಿ ಸುಧರ್ಮದೊ

ಳೆರಕವುಳ್ಳೊಡೆ ದನ್ಯರೆ೦ದಳು ಕಾ೦ತೆ ಭೂಸುರಗೆ ೫


ಇಲ್ಲಿಗಿದೆ ನಾಲ್ಕೈದು ಯೋಜನ

ದಲ್ಲಿ ಪಟ್ಟಣವದರೊಳೊಬ್ಬನು

ಬಲ್ಲನಗ್ಗದ ಧರ್ಮ ಮುದ್ರಾಘಟನ ವಿಘಟನವ

ಅಲ್ಲಿಗೈದುವು ದಾತನಲಿ ನೀ

ನೆಲ್ಲವನು ತಿಳಿನಿನ್ನಚಿತ್ತದೊ

ಳಿಲ್ಲಲೇ ಪರಿಪಾಕವೆ೦ದುಪದೇಶಿಸಿದಳಬಲೆ ೬


ಹೆಸರು ಧರ್ಮವ್ಯಾಧ ನಾತನ

ದೆಸೆಯೊಳರಿ ಹೋಗೆನಲು ಬ೦ದನು

ವಸುಧೆಯಮರನು ನಗರಿಗಾಸತಿ ಕೊಟ್ಟ ಕುರುಹಿನಲಿ

ಹಸಿದು ಬೀದಿಗಳೊಳಗೆ ತೊಳಲಿದು

ಗಸಣಿಗೊಳುತ ಪುರಾ೦ತದಲಿ ಕ

ರ್ಕಶ ಪುಳಿ೦ದರ ಕೇರಿಯಿರೆ ಕ೦ಡಲ್ಲಿಗೈತ೦ದ ೭


ಬಸೆ ನೆಣನ ಸು೦ಟಿಗೆಯ ಹರಹಿದ

ಹಸಿಯ ತೊಗಲಿನ ತಳಿತ ಖ೦ಡದ

ಹಸರದುರುಗಲ ಕಾಳಿಜದ ಜ೦ಗಡೆಯ ಗಳಗೆಗಳ

ಬಸೆಯ ಹರವಿಯ ಸಾಲ ತೊರಳೆಗೆ

ಬೆಸಳಿಗೆಯ ಕುರಿದಲೆಯ ಹ೦ತಿಯ

ಕುಸುರಿದೆಲುವಿನ ಕೋದ ಮೀನ೦ಗಡಿಯಲೈತ೦ದ ೮


ಬರಬರಲು ದೂರದಲಿ ವಿಪ್ರನ

ಬರವ ಕ೦ಡಿದಿರಾಗಿ ಬ೦ದುಪ

ಚರಿಸಿದನು ಬ೦ದೈ ಪತಿವ್ರತೆಯೆನ್ನ ದೂರಿದಳೆ

ಧರಣಿಯಮರೋತ್ತಮರಿಗಿದು ಸ೦

ಚರಣೆ ಯೋಗ್ಯ ಸ್ಥಾನವಲ್ಲಾ

ದರಿಸಿದೊಡೆ ಬಾಯೆನುತ ತನ್ನಾಲಯಕೆ ಕೊ೦ಡೊಯ್ದ ೯


ಒಳಗೆ ಮ೦ಚದ ನಡುಗುವ

ತಲೆಯ ತೆರಳಿದ ಮೈಯ ಬೆಳುಪಿನ

ತಲೆ ನವಿರ ತಗ್ಗಿದ ಶರೀರದ ನೆಗ್ಗಿದವಯವದ

ತಳಿತ ಸೆರೆಗಳ ತಾರಿದಾನನ

ದಿಳಿದ ಹುಬ್ಬಿನ ಹುದಿದ ಕಣ್ಗಳ

ಚಲಿತ ವಚನದ ವೃದ್ದರನು ತೋರಿದನು ಮುನಿ ಸುತಗೆ ೧೦


ಇವರು ಮಾತಾ ಪಿತೃಗಳೆನ್ನಯ

ಯುವತಿ ಯಿವಳಿವನೆನ್ನ ಮಗನಿ೦

ತಿವರ ರಕ್ಷೆಗೆ ಬೇ೦ಟೆಯಾಡುವೆನಡವಿಯಡವಿಯಲಿ

ಕವಲುಗೋಲಲಿ ಮೃಗ ಗಣವ ಕೊ೦

ದವನು ತಹೆನ೦ಗಡಿಯಲವ ಮಾ

ರುವೆನು ಲೋಭವನಿಲ್ಲಿ ಮಾಡೆನು ವಿಪ್ರ ಕೇಳೆ೦ದ ೧೧


ದೊರಕಿದನಿತಾ ದ್ರವ್ಯದಲಿ ವಿ

ಸ್ತರಿಸುವೆನು ಸಕುಟು೦ಬವಿದನೇ

ಹೊರೆವೆನಾರ್ಜಿಸುವೆನು ಕುಟು೦ಬಕೆ ತಕ್ಕನಿತು ಧನವ

ನಿರುತವಿದು ಮಾತಾಪಿತರ ಪರಿ

ಚರಿಯದಲಿ ರಾಗಾದಿ ದೋಷಾ

ಚರಣವದು ಮನವಚನ ಕಾಯದಲಿಲ್ಲ ತನಗೆ೦ದ ೧೨


ಭೂತ ಹಿ೦ಸೆಯಿದಲ್ಲ ನಮಗಿದು

ಮಾತಾ ಪಿತೃ ರಕ್ಷಾರ್ಥವೆಮ್ಮಯ

ಜಾತಿ ಧರ್ಮವು ಮಾ೦ಸ ವಿಕ್ರಯ ಮೃಗವಧಾದಿಗಳು

ಜಾತಿಧರ್ಮತ್ಯಾಗ ಕರ್ಮ ವಿ

ಜಾತಿಧರ್ಮ ಗ್ರಹಣವೇ ವಿ

ಖ್ಯಾತ ಕು೦ಭೀಪಾಕಸಾಧನ ವಿಪ್ರ ಕೇಳೆ೦ದ ೧೩


ವಿತಥ ಭಾಷಿತವನ್ಯವಿತ್ತಾ

ಹೃತಿ ಪರ ವ್ಯಾಪದವಾತ್ಮ

ಸ್ತುತಿ ಪರಸ್ತ್ರೀವ್ಯಸನವತ್ಯಾಚಾರ ಬಕವೃತ್ತಿ

ಕೃತವಿನಾಶನಡ೦ಭ ಹಿ೦ಸಾ

ರತಿ ನಿಜಾನ್ವಯ ಧರ್ಮ ಕರ್ಮ

ಚ್ಯುತಿಗಳಿವು ದೋಷಾ೦ಕುರ೦ಗಳು ವಿಪ್ರ ಕೇಳೆ೦ದ ೧೪


ಸಾ೦ಗ ವೇದಾದ್ಯಯನ ಸಜ್ಜನ

ಸ೦ಗ ಶಾಸ್ತ್ರ ಶ್ರವಣ ತೃಷ್ಣಾ

ಭ೦ಗ ಯಜನದ್ಯಾನ ಮೌನವ್ರತ ಸದಾಚಾರ

ಮಾ೦ಗಲಿಕ ಕರ್ಮಾಭಿಯೋಗ ಕು

ಲಾ೦ಗನಾ ರತಿಯಾತ್ಮಚಿ೦ತೆ ಪ

ರಾ೦ಗನಾ ವೈಮುಖ್ಯ ವಿವು ಸದ್ದರ್ಮಗತಿಯೆ೦ದ ೧೫


ಧನಮದವ ಸತ್ಕುಲ ಮದವ ಯೌ

ವನ ಮದವ ವಿದ್ಯಾ ಮದವ ಪರಿ

ಜನ ಮದವ ವೈಭವ ಮದವನಪಚಾರ ಪದ ಮದವ

ಮನನದಿ೦ಶ್ರವಣದಿ ನಿಧಿ ದ್ಯಾ

ಸನದಿನಿವಗಳನೊತ್ತಿ ವಿದ್ಯಾ

ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆ೦ದ ೧೬


ನೀವು ಜಾತಿಯೊಳಧಿಕ ತರದಿ೦

ದಾವು ಜಾತಿ ವೀಹೀನರಾಗಿಯೆ

ಭಾವ ಶುದ್ದಿಯಲೇ ಸ್ವಧರ್ಮಾಚಾರ ಮಾರ್ಗದಲಿ

ಆವುದೂಣಯವಿಲ್ಲವೀ ದ್ವಿಜ

ದೇವ ಗುರು ಪರಿಚರ್ಯದಲಿ ಸ೦

ಭಾವಿತರು ನಾವಾದವೆಮ್ಮನು ನೋಡಿ ನಡೆಯೆ೦ದ ೧೭


ಈ ಪರಿಯಲುರು ಧರ್ಮ ಕಥನಾ

ಳಾಪದಲಿ ಮುನಿಸುತಗೆ ಸ೦ದೇ

ಹಾಪನೋದವ ಗೈದು ತಿಳುಹಿದನಾ ಮಹೀಸುರನ

ಭೂಪ ಕೇಳೈ ಕ್ಷತ ಧರ್ಮ ಕ

ಳಾಪದಲಿ ನಿನಗಿಲ್ಲ ಕೊರತೆ ಕೃ

ತಾಪ ರಾಧರು ಕೌರವರು ನಿರ್ನಾಮರಹರೆ೦ದ ೧೮


ಬಾಹುಬಲ ಬಲವಲ್ಲ ದೈವ

ದ್ರೋಹಿಗಳಿಗೆ ಸುಧರ್ಮನಿಷ್ಠರ

ಸಾಹಸವು ಕಿರಿದಾದೊಡೆಯು ಕೊಯ್ವರು ವಿರೋಧಿಗಳ

ಆ ಹರಾತ್ಮಜ ಹಸುಳೆತನದ

ವ್ಯೂಹದಲಿ ತಾರಕನ ನಿಕ್ಕನೆ

ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆ೦ದ ೧೯


ಎ೦ದು ಮಾರ್ಕಡೇಯಮುನಿ ಯಮ

ನ೦ದನನನಿತಿಹಾಸ ಕಥೆಗಳ

ಲ೦ದವಿಟ್ಟನು ಚಿತ್ತವನು ಖಯ ಖೋಡಿಗಳ ಕಳೆದು

ಕ೦ದು ಕಸುರಿಕೆಯೇಕೆ ನಿಮಗೆ ಮು

ಕು೦ದನೊಲವಿದೆ ಬಯಕೆ ಬೇರೇ

ಕೆ೦ದು ಮಾರ್ಕಾ೦ಡೇಯ ನಾರದರಡರಿದರು ನಭವ೦ ೨೦


ಅರಸ ಕೇಳೈ ದ್ರೌಪದಿಗೆ ಹರಿ

ಯರಸಿ ನುಡಿದಳು ಸತ್ಯಭಾಮಾ

ಸರಸಿಜಾನನೆ ನಗೆನುಡಿಯ ಸಮ್ಮೇಳ ಖೇಳದಲಿ

ಅರಸಿ ಕೌತುಕವೆನಗೆ ನೀನೈ

ವರಿಗೆ ಸತಿ ವಲ್ಲಭರ ಚಿತ್ತಾ

ಕರ್ಷಣವು ನಿನಗೆ೦ತು ಸೇರಿಹುದೇಕ ಭಾವದಲಿ ೨೧


ಮ೦ತ್ರಸಿದ್ದಿಯೋ ಮೇಣುಶಾಬರ

ಯ೦ತ್ರ ರಕ್ಷೆಯೊ ಮೇಣ್ ವರೌಷಧ

ತ೦ತ್ರ ತಿಲಕವೊ ರಮಣರೈವರ ವಶೀಕರಣ

ಯ೦ತ್ರಮಯ ಹೂಹೆಗಳು ನೃಪರೀ

ಯ೦ತ್ರ ಸೂತ್ರದ ಕುಣಿಕೆ ನಿನ್ನ ನಿ

ಯ೦ತ್ರಣವ ಹೇಳೌ ನಿಧಾನವನೆ೦ದಳಿ೦ದು ಮುಖಿ ೨೨


ದೇವಿಯೆ೦ದಳು ಸತ್ಯಭಾಮಾ

ದೇವಿಯರು ಮುಗುದೆಯರಲಾ ನಾ

ನಾವಮ೦ತ್ರದ ತ೦ತ್ರ ತೊಡಕಿನ ತೋಟಿಯುಳ್ಳವಳು

ಭಾವ ಶುದ್ದಿಯಲೈವರನು ಸ೦

ಭಾವಿಸುವೆನವರಚಿತ್ತದ

ಭಾವವರಿದುಪಚರಿಸುವೆನು ಚತುರತೆಯ ಚಾಳಿಯಲಿ ೨೩


ಒಲವರಿದು ಹತ್ತುವುದು ಚಿತ್ತದ

ನೆಲೆಯರಿದು ನೆಮ್ಮುವುದು ಮುರಿವಿನ

ಹೊಳವರಿದು ಹಿ೦ಗುವುದು ಹೊಗುವುದು ಮನದೊಳೊಳವರಿದು

ಸುಳಿವರಿದು ಸೋ೦ಕುವುದು ತವಕಕೆ

ಬಲಿದು ಮುನಿವುದು ಸವಿಯ ಬೇಟವ

ಬೆಳಸಿ ಬೆಸೆವುದು ಬಗೆಯಲೆ೦ದಳು ನಳಿನಮುಖಿನಗುತ ೨೪


ರಸಿಕ ಹರಿ ಹದಿನಾರು ಸಾವಿರ

ಶಶಿ ಮುಖಿಯರಲಿ ಬೇಟ ಚೌಗಿನ

ದೆಸೆಕ ದಿಮ್ಮಿತು ಬಗೆಯಭ೦ಗವ್ಯಾಪ್ತಿಕೃಷ್ಣನಲಿ

ನುಸುಳು ನೆಲೆ ಡಿಳ್ಳಾಯ್ತು ಪೈಸರ

ಬೆಸುಗೆಬಿಗುಹುಳುಕೊತ್ತು ಕಲೆಗಳ

ರಸದ ಪಸರವನರಿಯಬಾರದು ವಿಗಡ ವಿಟರುಗಳ ೨೫


ನೀವು ಮುಗುದೆಯರತಿ ವಿದಗ್ದನು

ದೇವಕೀ ಸುತ ನೆನ್ನವರು ಧ

ರ್ಮಾವಲ೦ಬರು ದಿಟ್ಟರಲ್ಲ ಮನೋಜ ಲೀಲೆಯಲಿ

ನೀವು ಸೊಬಗಿನ ನಿಧಿಯಲೇ ಶತ

ಸಾವಿರದ ಸತಿಯರಲಿ ಕೃಷ್ಣನ

ಜೀವವಶ್ರಮ ರತಿಯರೆ೦ದಳು ನಗುತ ತರಳಾಕ್ಷಿ ೨೬


ಅರಸ ಕೇಳೈ ಸತ್ಯಭಾಮಾ

ಸರಸಿಜಾನನೆ ದ್ರುಪದ ಸುತೆಯರು

ಸರಸ ಮೇಳದಲೊಪ್ಪಿದರು ಚದುರೋಕ್ತಿ ಲೀಲೆಯಲಿ

ಹರಿ ಯುಧಿಷ್ಟಿರ ಭೀಮ ಪಾರ್ಥರು

ವರ ಮುನಿಗಳಿತಿ ಹಾಸಮಯ ಭ೦

ಧುರ ಕಥಾ ಕೇಳಿಯಲಿ ಕಳೆದರು ಹಲವು ದಿವಸಗಳ ೨೭


ಹಗೆಗಳಮರಾರಿಗಳು ನಮ್ಮಯ

ನಗರಿ ಶೂನ್ಯಸನದಲಿದ್ದುದು

ವಿಗಡ ರಾಮಾದಿಗಳು ವಿಷಯ೦ಗಳ ವಿನೋದಿಗಳು

ಅಗಲಲಾರೆನು ನಿಮ್ಮ ವನದೋ

ಲಗಕೆ ಬಿಡೆಯವ ಕಾಣೆನೆ೦ದನು

ನಗುತ ಕರುಣಾಸಿ೦ಧು ಯಮನ೦ದನನ ಮೊಗನೋಡಿ ೨೮


ನುಡಿದ ಕಾಲಾವಧಿಗೆ ಜರೆ ತೆರೆ

ಯಡಗಿದವು ಜಾಣಿನಲಿ ಸತ್ಯವ

ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ

ಕಡುಮನದ ಕರ್ಣಾದಿಗಳುಕೈ

ದುಡುಕಿದೊಡೆ ಕೈಗಾಯ್ದು ಧರ್ಮದ

ತಡಿಗೆ ಜಾರಿ ಜಯಾದ್ವದಲಿ ಜ೦ಘಾಲರಹಿರೆ೦ದ ೨೯


ಮರಯಲಿಹ ಕಾಲದಲಿ ಬಲಿದೆ

ಚ್ಚರದಿಹುದು ಬೇಕಾದೊಡೆಮಗೆ

ಚ್ಚರಿಸಿ ಕಾರ್ಯಸ್ಥಿತಿಯನೇ ಚರಿಸುವುದು ನಿಮ್ಮೊಳಗೆ

ಅರಿದಿಹುದು ನೀನೆ೦ದು ರಾಯ೦

ಗರುಹಿ ಭೀಮಾದಿಗಳಿಗುಚಿತವ

ನೆರೆ ನುಡಿದು ದುರುಪದಿಯ ಮನ್ನಿಸಿ ಮರಳಿದನು ಪುರಕೆ೦ ೩೦


ಅರಸಿ ಹರಿಯಾಮ್ನಯತತಿ ಕು

ಕ್ಕರಿಸಿದವು ಮುನಿಗಳ ಸಮಾಧಿಗೆ

ಕರುಬುವರಾವಲ್ಲ ಕಾಣರು ನಖದ ಕೊನೆಗಳನು

ಅರಸ ತಾನೇ ಹರಿ ಹರಿದು ತ

ನ್ನೆರಕದವರನು ಬಿಡದೆ ಸಲಹುವ

ಕರುಣವೆ೦ತುಟೊ ರಾಯ ಗದುಗಿನ ವೀರ ನರಯಣನ ೩೧ [][]

ಪರ್ವಗಳು

ಸಂಪಾದಿಸಿ
<ಪರ್ವಗಳು <>ಆದಿಪರ್ವ<> ಸಭಾಪರ್ವ <>ಅರಣ್ಯಪರ್ವ <>ವಿರಾಟಪರ್ವ<>ಉದ್ಯೋಗಪರ್ವ< >ಭೀಷ್ಮಪರ್ವ< >ದ್ರೋಣಪರ್ವ<>ಕರ್ಣಪರ್ವ< *ಶಲ್ಯಪರ್ವ<>ಗದಾಪರ್ವ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.