ಕನ್ನಡವೇ ಸತ್ಯ - ಎಲ್ಲಾದರು ಇರು ಎಂತಾದರು ಇರು

ಕವಿ: ಕುವೆಂಪು

ಗಾಯನ: ಡಾ. ರಾಜ್‍ಕುಮಾರ್

ಸಂಕಲನ / ಧ್ವನಿಸುರುಳಿ: ಕನ್ನಡವೇ ಸತ್ಯ

ಸಂಗೀತ: ಸಿ.ಅಶ್ವಥ್


ಎಲ್ಲಾದರು ಇರು ಎಂತಾದರು ಇರು ||೨||

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ


ಕನ್ನಡ ಗೋವಿನ ಓ ಮುದ್ದಿನ ಕರು ||೨||

ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು


ನೀ ಮೆಟ್ಟುವ ನೆಲ, ಅದೆ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ

ನೀ ಮೆಟ್ಟುವ ನೆಲ, ಅದೆ ಕರ್ನಾಟಕ

ನೀನೇರುವ ಮಲೆ ಸಹ್ಯಾದ್ರಿ


ನೀ ಮುಟ್ಟುವ ಮರ ಶ್ರೀಗಂಧದ ಮರ ||೨||

ನೀ ಕುಡಿಯುವ ನೀರ್ ಕಾವೇರಿ


ಪಂಪನ ಓದುವ ನಿನ್ನಾ ನಾಲಗೆ

ಕನ್ನಡವೇ ಸತ್ಯ

ಕುಮಾರವ್ಯಾಸನ ಆಲಿಪ ಕಿವಿಯದು

ಕನ್ನಡವೇ ನಿತ್ಯ


ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು


ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ

ಹರಿಹರ ರಾಘವರಿಗೆ ಎರಗುವ ಮನ

ಹಾಳಾಗಿಹ ಹಂಪೆಗೆ ಕೊರಗುವ ಮನ


ಬೆಳ್ಗೊಳ ಬೇಲೂರ್‍ಗಳ ನೆನೆಯುವ ಮನ


ಮಲೆನಾಡಿಗೆ ಹೊಂಪುಳಿ ಹೋಗುವ ಮನ

ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ

ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ

ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ


ಮಾವಿನ ಹೊಂಗೆಯ ತಳಿರಿನ ತಂಪಿಗೆ


ರೋಮಾಂಚನಗೊಳುವಾ ತನು ಮನ

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗು ನೀ ಕನ್ನಡವಾಗಿರು


ಎಲ್ಲಿದ್ದರೆ ಏನ್ ಎಂತಿದ್ದರೆ ಏನ್

ಎಲ್ಲಿದ್ದರೆ ಏನ್ ಎಂತಿದ್ದರೆ ಏನ್


ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಅನ್ಯವೆನಲದೆ ಮಿಥ್ಯ



ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ