ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೧)

<ಕುಮಾರವ್ಯಾಸಭಾರತ-ಸಟೀಕಾ

ಸಭಾಪರ್ವ: ೧ನೆಯ ಸಂಧಿ

ಸಂಪಾದಿಸಿ
ಸಭೆಯೊಳೋಲಗದೊಳು ವಿರಿಂಚಿ
ಪ್ರಭವನನುಮತದಿಂದ ಧರಣೀ
ವಿಭು ಮಹಾಕ್ರತು ರಾಜಸೂಯವನೊಲಿದು ಕೈಕೊಂಡ ||ಸೂ||

ಪದವಿಭಾಗ-ಅರ್ಥ: ಸಭೆಯೊಳು+ ಓಲಗದೊಳು ವಿರಿಂಚಿಪ್ರಭವನ (ಬ್ರಹ್ಮನ ಜನಕ- ತಂದೆ- ವಿಷ್ಣು- ಕೃಷ್ಣ)+ ಅನುಮತದಿಂದ(ಒಪ್ಪಗೆ) ಧರಣೀವಿಭು (ಭೂ ಒಡೆಯ, ರಾಜ ಧರ್ಮಜನು) ಮಹಾಕ್ರತು(ಯಾಗ) ರಾಜಸೂಯವನು+ ಒಲಿದು ಕೈಕೊಂಡ (ಮಾಡಲು ನಿರ್ಧರಿಸಿದನು).
ಅರ್ಥ:ಇಂದ್ರಪ್ರಸ್ತದ ಧರ್ಮಜನ ರಾಜಸಭೆಯ ಓಲಗದಲ್ಲಿ ಕೃಷ್ಣನ ಅನುಮತಿ ಪಡೆದು ಧರ್ಮರಾಯನು ರಾಜಸೂಯ ಮಹಾಯಾಗವನ್ನು ಸಂತಸದಿಂದ ಮಾಡಲು ನಿರ್ಧರಿಸಿದನು. [][] [] []

ಖಾಂಡವದಹನ ಕಾರ್ಯ ಮುಗಿಸಿ ಕೃಷ್ನನು ದ್ವಾರಕೆಗೆ ಹೋದನು

ಸಂಪಾದಿಸಿ
ಕೇಳು ಜನಮೇಜಯ ಧರಿತ್ರೀ
ಪಾಲ ಖಾಂಡವ ವನದ ವಹ್ನಿ
ಜ್ವಾಲೆ ತೆಗೆದುದು ಕೂಡೆ ಹೊಗೆದುದು ಹೊದರ ಹೊಸ ಮೆಳೆಯ |
ಮೇಲುಗಾಳಗದುಬ್ಬಿನಲಿ ಸಿರಿ
ಲೋಲ ಸಹಿತರ್ಜುನನು ವಿಕ್ರಮ
ದೇಳಿಗೆಯ ಪರಿತೋಷದಲಿ ತಿರುಗಿದನು ಪಟ್ಟಣಕೆ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ, ಖಾಂಡವ ವನದ ವಹ್ನಿಜ್ವಾಲೆ (ಬೆಂಕಿಯ ಜ್ವಾಲೆ) ತೆಗೆದುದು, ಕೂಡೆ ಹೊಗೆದುದು ಹೊದರ (ಪೊದೆ) ಹೊಸ ಮೆಳೆಯ ಮೇಲುಗಾಳಗದ (ಕಾಳಗದ ಮೇಲು- ಗೆಲುವಿನ)+ ಉಬ್ಬಿನಲಿ ಸಿರಿಲೋಲ(ಸಿರಿ- ಶ್ರೀ- ಲೋಲ; ಕೃಷ್ಣ) ಸಹಿತ+ ಅರ್ಜುನನು ವಿಕ್ರಮದ+ ಏಳಿಗೆಯ (ವಿಜಯದ ಹೆಮ್ಮಯ) ಪರಿತೋಷದಲಿ (ಸಂತಸದಲ್ಲಿ) ತಿರುಗಿದನು ಪಟ್ಟಣಕೆ.
ಅರ್ಥ: ವೈಶಂಪಾಯನನು ಹೇಳಿದ; ಕೇಳು ಜನಮೇಜಯ ರಾಜನೇ, ಕೃಷ್ಣಾರ್ಜುನರ ಸಾಹಸದಿಂದ ಖಾಂಡವವನವು ಬೆಂಕಿಯ ಜ್ವಾಲೆಯಲ್ಲಿ ಸುಟ್ಟಿತು. ಅದಾದ ಕೂಡಲೆ ಪೊದೆಗಳ ಹೊಸ ಮೆಳೆಯ ಚಿಗುರು ಹೊಗೆಯಾಡಿತು. ಅರ್ಜುನನು ಖಾಂಡವದಹನದ ಕಾಲದಲ್ಲಿ ಇಂದ್ರನೊಡನೆ ಕಾಲಗದಲ್ಲಿ ಗೆದ್ದ ಉಬ್ಬಿನಲ್ಲಿ - ಸಂತಸದಲ್ಲಿ ಕೃಷ್ಣನ ಸಹಿತ ಅರ್ಜುನನು ವಿಕ್ರಮದ ವಿಜಯದ ಹೆಮ್ಮಯ ಸಂತಸದಲ್ಲಿ ರಾಜಧಾನಿ ಇಂದ್ರಪ್ರಸ್ಥ ಪಟ್ಟಣದಕಡೆ ಪ್ರಯಾಣಬೆಳಸಿದನು.
ದೂತರೈದಿದರಿವರ ಸೂರೆಯ
ಕೈತವಕಿಗರು ಕೃತಕ ವಾರ್ತಾ
ಭೀತ ಪುರಜನ ಮುಖದ ದುಗುಡದ ದಡ್ಡಿಗಳನುಗಿದು
ಬೀತುದಿಂದ್ರನ ಬಲುಹು ವಿಗಡನ
ವೀತಿಹೋತ್ರನ ವಿಲಗ ತಿದ್ದಿ ವಿ
ಧೂತರಿಪುಬಲ ಬಂದನಿದೆಯೆಂದರು ಮಹೀಪತಿಗೆ ೨
ಪದವಿಭಾಗ-ಅರ್ಥ: ದೂತರು+ ಐದಿದರು(ಬಂದರು)+ ಇವರ ಸೂರೆಯ(ಕೊಳ್ಳೆ, ಲೂಟಿ) ಕೈತವಕಿಗರು (ಕೈತವ- ವಂಚನೆ, ಮೋಸ) ಕೃತಕ ವಾರ್ತಾಭೀತ ಪುರಜನ ಮುಖದ ದುಗುಡದ ದಡ್ಡಿಗಳನು+ ಉಗಿದು(ಬಿಟ್ಟು) ಬೀತುದು (ಕುಗ್ಗಿತು)+ ಇಂದ್ರನ ಬಲುಹು ವಿಗಡನ(ವೀರನ) ವೀತಿಹೋತ್ರನ(ಅಗ್ನಿಯ) ವಿಲಗ (ಹೊಂದಿಕೆಯಿಲ್ಲದಿರುವಿಕೆ ೨ ತೊಂದರೆ, ಕಷ್ಟ, ಸಂರಕ್ಷಣೆ, ಆಶ್ರಯ, ಅನುಚಿತ ಕಾರ್ಯ) ತಿದ್ದಿ ವಿಧೂತ(ಅಲುಗಾಡುವ, ಅಲ್ಲಾಡುವ, ತೊರೆದ, ತ್ಯಜಿಸಿದ, ಕೆದರಿಸಲ್ಪಟ್ಟ, ಚೆದರಿಸಿದ) ರಿಪುಬಲ ಬಂದನು+ ಇದೆಯೆಂದರು ಮಹೀಪತಿಗೆ.
ಅರ್ಥ:ಧರ್ಮಜನ ಬಳಿಗೆ ದೂತರು ಬಂದರು. ಅವರು, ಪಾಂಡವರಿಗೆ ಆಗದ ವಂಚಕರು, ಅವರ ಕೃತಕ ವಾರ್ತೆಯಯಿಂದ ಭೀತರಾದ ಪುರಜನರು ಮುಖದಲ್ಲಿ ದುಗುಡವನ್ನು ಹೊಂದಿದ್ದರು. ದಡ್ಡಿಗಳ ಮಾತುಗಳಿಗೆ ವಿರೋಧವಾಗಿ ಇಂದ್ರನ ಬಲವು ಕುಗ್ಗಿತು. ಅಗ್ನಿಯ ಕಷ್ಟವನ್ನು ಪರಿಹರಿಸಿದ ರಿಪುಬಲವನ್ನು ಚದುರಿಸಿದ- ಓಡಿಸಿದ ಅರ್ಜುನನು ಇದೆ- ಈಗ ಬಂದನು,'ಎಂದರು.
ಹೂತುದರಸನ ಹರುಷಲತೆ ಪುರು
ಹೂತ ವಿಜಯದ ವಿಜಯ ವಾರ್ತಾ
ಶ್ರೋತ್ರ ಸುಖಸಂಪ್ರೀತಿ ನಯನ ಜಲಾಭಿಷೇಕದಲಿ |
ಮಾತು ಹಿಂಚಿತು ಮುಂಚಿದುದು ನಯ
ನಾತಿಥಿವ್ರಜ ಮುಸುಕಿತಸುರ ವಿ
ಘಾತಿ ಪಾರ್ಥನನನಿಲಸುತ ನಕುಲಾದಿ ಬಾಂಧವರ || ೩ ||
ಪದವಿಭಾಗ-ಅರ್ಥ: ಹೂತುದು+ ಅರಸನ ಹರುಷಲತೆ ಪುರುಹೂತ ವಿಜಯದ ವಿಜಯ ವಾರ್ತಾಶ್ರೋತ್ರವಿಜಯದ ವಾರ್ತೆಯನ್ನಕೇಳಿ, ಸುಖಸಂಪ್ರೀತಿ ನಯನ(ಕಣ್ಣು) ಜಲಾಭಿಷೇಕದಲಿ (ಆನಂದ ಭಾಷ್ಪದಲ್ಲಿ), ಮಾತು ಹಿಂಚಿತು (ಹಿಂಚು- ತಡ, ಸಾವಕಾಶ, ಹಿಂದಾಗು), ಮುಂಚಿದುದು (ಮುಂಚು- ಮೊದಲು, ಮುಂದು) ನಯನ+ ಅತಿಥಿವ್ರಜ(ಅತಿಥಿ ಸಮೂಹ) ಮುಸುಕಿತು+ ಅಸುರ ವಿಘಾತಿ(ಅಸುರರನ್ನು ನಾಶಮಾಡಿದ) ಪಾರ್ಥನನು+ ಅನಿಲಸುತ (ಭೀಮ) ನಕುಲಾದಿ ಬಾಂಧವರ.
ಅರ್ಥ: ದೂತರು ಬಂದು ಅರ್ಜುನನು ಖಾಂಡವದಹನದಲ್ಲಿ ವಿಜಯಿಯಾಗಿ ಬರುತ್ತಿದ್ದಾನೆ ಎಂದು ದೂತರು ಹೇಳಲು, ಅರ್ಜುನನ ವಿಜಯ ವಾರ್ತೆಯನ್ನು ಕೇಳಿ, ಅರಸ ಧರ್ಮಜನ ಮನದ ಹರ್ಷವೆಂಬ ಬಳ್ಳಿಯು ಹೂಬಿಟ್ಟು ಅಳಿದಂತಾಯಿತು. ಸುಖದ ಸಂಪ್ರೀತಿಯಿಂದ ಕಣ್ಣಿನಲ್ಲಿ ಆನಂದ ಭಾಷ್ಪದನಿರು ಸುರಿದು ಅದರಿಂದ ಅಭಿಷೇಕವಾದಂತಾಯಿತು. ಮಾತು ಹಿಂಗಿತು, ಕಣ್ಣಿನಲ್ಲಿ ಆನಂದಭಾಷ್ಪದ ಅತಥಿಗಳ ಸಮೂಹದಂತೆ ಹನಿಗಳು ಮುಂಚಿದವು- ಮುಂದೆ ಬಂದು ಮುಸುಗಿದವು - ಮುತ್ತಿದವು. ಅಸುರರನ್ನು ನಾಶಮಾಡಿದ ಪಾರ್ಥನನ್ನು ಅನಿಲಸುತ ಭೀಮ ನಕುಲಾದಿ ಬಾಂಧವರ ಸಹಿತ ಎದುರುಗೊಂಡು ಸ್ವಾಗತಿಸಲು ರಾಜನು ಸಿದ್ಧನಾದ. (ಉತ್ಪ್ರೇಕ್ಷೆ, ರೂಪಕ, ಉಪಮಾನ ಉಪಮೇಯ ಎಲ್ಲವನ್ನೂ ಒಂದೇಕಡೆ ಜೊಡಿಸಿದ್ದಾನೆ ಕವಿ.)
ತಳಿತ ಗುಡಿಗಳು ಸಾಲ ಕಲಶದ
ನಿಳಯ ನಿಳಯದ ಬೀದಿ ಬೀದಿಯ
ತಳಿರ ತೋರಣದೋರಣದ ನವ ಮಕರತೋರಣದ |
ತಳಿಗೆ ತುಂಬುಲದಾರತಿಯ ಮಂ
ಗಳಿತ ರಭಸದೊಳಖಿಳ ರಾಜಾ
ವಳಿಗಳೊಸಗೆಯೊಳಿವರು ಹೊಕ್ಕರು ರಾಜಮಂದಿರವ || ೪ ||
ಪದವಿಭಾಗ-ಅರ್ಥ: ತಳಿತ(ಚಿಗುರಿದ, ಚಿಗುರಿದಂತೆ ಹಾರುತ್ತಿರುವ) ಗುಡಿಗಳು(ಬಾವುಟಗಳು) ಸಾಲ ಕಲಶದನಿಳಯ ನಿಳಯದ (ನಿಲಯದ-, ವಾಸದ ಮನೆಗಳ) ಬೀದಿ ಬೀದಿಯ ತಳಿರ ತೋರಣದ+ ಓರಣದ (ಒಪ್ಪವಾಗಿ ಜೋಡಿಸಿದ )ನವ ಮಕರತೋರಣದ,- ಹೊಸ ಬೀದಿಯಲ್ಲಿ ಅಡ್ಡಲಾಗಿ ಎತ್ತರದಲ್ಲಿ ಹಾಕಿದ ಹಸಿರುತೋರಣದ ತಳಿಗೆ(ಹರಿವಾಣದಲ್ಲಿ- ಅಗಲ ತಟ್ಟೆಯಲ್ಲಿ) ತುಂಬುಲದ (ತಾಂಬೂಲದ)+ ಅರತಿಯ, ಮಂಗಳಿತ(ಮಂಗಳಕರವಾದ) ರಭಸದೊಳು+ ಅಖಿಳ ರಾಜಾವಳಿಗಳ+ ಒಸಗೆಯೊಳಿವರು ಹೊಕ್ಕರು ರಾಜಮಂದಿರವ
ಅರ್ಥ:ಧರ್ಮಜನು ಪಾರ್ಥನನ್ನು ಸಹೊದರರು ಸಹಿತ ಎದುರುಗೊಂಡು ಸ್ವಾಗತಿಸಿ, ದಾರಿಯುದ್ದಕ್ಕೂ ಹಾರುತ್ತಿರುವ ಬಾವುಟಗಳು ಸಾಲು ಸಾಲು ಕಲಶವನ್ನು ಹಿಡಿದ (ವನಿತೆಯರೊಡನೆ) ವಾಸದ ಮನೆಗಳ ಬೀದಿ ಬೀದಿಯ ತಳಿರ ತೋರಣವನ್ನು ಒಪ್ಪವಾಗಿ ಜೋಡಿಸಿದ ಮಾರ್ಗದಲ್ಲಿ ಹೊಸ ಮಕರತೋರಣದ ಸ್ವಾಗತದೊಡನೆ,ಅಗಲ ತಟ್ಟೆಯಲ್ಲಿ ತಾಂಬೂಲದ ಮತ್ತು ಅರತಿಯ ಮಂಗಳಕರವಾದ ರಭಸದಲ್ಲಿ- ವೈಭವದಲ್ಲಿ ಅಖಿಲ ರಾಜಾವಳಿಗಳ ಒಸಗೆಯಲ್ಲಿ- ಹೇಳಿಕೆಯೊಡನೆ ಇವರು ರಾಜಮಂದಿರವನ್ನು ಹೊಕ್ಕರು.
ಹಿರಿಯರಂಘ್ರಿದ್ವಯಕೆ ಮಣಿದರು
ಕಿರಿಯರುಚಿತ ಕ್ಷೇಮ ಕುಶಲದಿ
ಪರಿ ರಚಿತ ಪರಿರಂಭ ಮಧುರ ವಚೋವಿಳಾಸದಲಿ |
ಅರಸನಿವರನು ಮನ್ನಿಸಿದನಾ
ದರಿಸಿತನ್ಯೋನ್ಯಾನುರಾಗ
ಸ್ಫುರಿತ ತೇಜೋಭಾವ ವಿಭ್ರಮ ಭೂಪತಿವ್ರಾತ || ೫ ||
ಪದವಿಭಾಗ-ಅರ್ಥ: ಹಿರಿಯರ+ ಅಂಘ್ರಿದ್ವಯಕೆ (ಎರಡು ಪಾದಗಳಿಗೆ) ಮಣಿದರು (ನಮಿಸಿದರು); ಕಿರಿಯರ+ ಉಚಿತ ಕ್ಷೇಮ ಕುಶಲದಿ, ಪರಿರಚಿತ (ರೂಢಿಯ) ಪರಿರಂಭ (ಅಪ್ಪುಗೆ, ಆಲಿಂಗನ) ಮಧುರ ವಚೋವಿಳಾಸದಲಿ (ವಚ- ವಚನ; ಹಿತವಾದ ಮಾತಿನ ಆನಂದದಲ್ಲಿ) ಅರಸನು+ ಇವರನು ಮನ್ನಿಸಿದನು+ ಆದರಿಸಿತ+ ಅನ್ಯ+ ಅನ್ಯಾನುರಾಗ ಸ್ಫುರಿತ(ಇತರರೂ ಪ್ರೀತಿಪೂರ್ವಕದ ಉಪಚಾರದಿಂದ ಉಂಟಾದ) ತೇಜೋಭಾವ ವಿಭ್ರಮ(ವಿನೋದ, ವಿಜೃಂಭಣೆ) ಭೂಪತಿವ್ರಾತ (ರಾಜ ಸಮೂಹ)
ಅರ್ಥ:ಅರಮನೆಗೆ ಬಂದ ವಿಜಯಶಾಲಿ ಕೃಷ್ಣ ಅರ್ಜುನರು ಹಿರಿಯರ ಪಾದಗಳಿಗೆ ನಮಿಸಿದರು; ಕಿರಿಯರನ್ನು ಉಚಿತವಾದ ಕ್ಷೇಮ ಕುಶಲಗಳನ್ನು ರೂಢಿಯ ಅಪ್ಪುಗೆಯಿಂದ ಮನ್ನಸಿದರು. ಮತ್ತು ಅರಸ ಧರ್ಮಜನು ಆನಂದದ ಮಧುರ ಮಾತಿನಲ್ಲಿ ಇವರನ್ನು ಮನ್ನಿಸಿದನು.ಆಗ ಆದರಿಸಲ್ಪಟ್ಟ ಅನ್ಯರೂ ಪ್ರೀತಿಪೂರ್ವಕದ ಉಪಚಾರದಿಂದ ಉಂಟಾದ ತೇಜೋಭಾವ ವಿನೋದ, ವಿಜೃಂಭಣೆಯಿಂದ ರಾಜ ಸಮೂಹವನ್ನು ಮನ್ನಿಸಿದನು.
ಅರಸ ಕೇಳೈ ಬಳಿಕ ಹರಿ ನಿಜ
ಪುರಕೆ ಬಿಜಯಂಗೆಯ್ವ ವಾರ್ತೆಯ
ನೊರೆದನವನೀಪತಿಗೆ ಭೀಮ ಧನಂಜಯಾದ್ಯರಿಗೆ |
ಅರಸಿಯರಿಗಭಿಮನ್ಯು ಧರ್ಮಜ
ನರ ವೃಕೋದರಸೂನು ಮೊದಲಾ
ಗಿರೆ ಸಮಸ್ತಜನಂಗಳನು ಮನ್ನಿಸಿದನುಚಿತದಲಿ || ೬ ||
ಪದವಿಭಾಗ-ಅರ್ಥ: ಅರಸ ಕೇಳೈ ಬಳಿಕ ಹರಿ ನಿಜಪುರಕೆ (ತನ್ನ ನಗರ- ದ್ವಾರಕೆಗೆ) ಬಿಜಯಂಗೆಯ್ವ (ಹೋಗುವ) ವಾರ್ತೆಯನು+ ಒರೆದನು(ಹೇಳಿದನು)+ ಅವನೀಪತಿಗೆ (ರಾಜ ಧರ್ಮಜ ಮತ್ತು) ಭೀಮ ಧನಂಜಯ+ ಆದ್ಯರಿಗೆ ಅರಸಿಯರಿಗೆ+ ಅಭಿಮನ್ಯು ಧರ್ಮಜ ನರ (ಅರ್ಜುನ) ವೃಕೋದರ ಸೂನು (ಮಗ- ಘಟೋದ್ಗಜ) ಮೊದಲಾಗಿರೆ, ಸಮಸ್ತ ಜನಂಗಳನು ಮನ್ನಿಸಿದನು+ ಉಚಿತದಲಿ.
ಅರ್ಥ:ಜನಮೇಜಯ ಅರಸನೇ ಕೇಳು,'ಆ ಬಳಿಕ ಕೃಷ್ಣನು ತನ್ನ ನಗರ- ದ್ವಾರಕೆಗೆ ಹೋಗುವ ವಾರ್ತೆಯನ್ನು ಹೇಳಿದನು. ಅವನು ರಾಜ ಧರ್ಮಜ ಮತ್ತು ಭೀಮ ಧನಂಜಯ ಮೊದಲಾದವರಿಗೂ ತಿಳಿಸಿದನು. ಅವನುಪಾಂಡವರ ಅರಸಿಯರಿಗೆ, ತಂಗಿಯ ಪುಟ್ಟ ಮಗ ಮೂರು ವರ್ಷದ ಅಭಿಮನ್ಯು, ಧರ್ಮಜ, ಅರ್ಜುನ ವೃಕೋದರನ ಮಗ ಬಾಲಕ ಘಟೋದ್ಗಜ ಮೊದಲಾಗಿ ಸಮಸ್ತ ಜನರನ್ನೂ ಉಚಿತರೀತಿಯಲ್ಲಿ ಮಾತನಾಡಿಸಿ ಮನ್ನಿಸಿದನು. (ಮಹಿಳೆಯರನ್ನೂ ಚಿಕ್ಕಬಾಲಕರನ್ನೂ ಸಹ ಪ್ರೀತಿಯಿಂದ ಮಾತನಾಡಿಸಿ "ಹೊಗಿಬರುವೆನು' ಎಂದು ಹೇಳಿ ಬೀಳ್ಕೊಂಡನು. ಇದು ದೊಡ್ಡವರ ನೆಡೆ)
ವರಮುಹೂರ್ತದೊಳಮೃತ ಯೋಗೋ
ತ್ಕರ ಶುಭಗ್ರಹ ದೃಷ್ಟಿಯಲಿ ಹಿಮ
ಕರಶುಭಾವಸ್ಥೆಯಲಿ ಕೇಂದ್ರಸ್ಥಾನ ಗುರುವಿನಲಿ |
ಧರಣಿಸುರರಾಶೀರ್ವಚನ ವಿ
ಸ್ತರಣ ದಧಿ ದೂರ್ವಾಕ್ಷತೆಗಳು
ಬ್ಬರದ ವಾದ್ಯ ಗಡಾವಣೆಯಲಸುರಾರಿ ಹೊರವಂಟ || ೭ ||
ಪದವಿಭಾಗ-ಅರ್ಥ: ವರಮುಹೂರ್ತದೊಳು+ ಅಮೃತ ಯೋಗೋತ್ಕರ (ಉತ್ಕರ- ಸಮೂಹ), ಶುಭಗ್ರಹ, ದೃಷ್ಟಿಯಲಿ ಹಿಮಕರ(ಚಂದ್ರ) ಶುಭ+ ಅವಸ್ಥೆಯಲಿ ಕೇಂದ್ರಸ್ಥಾನ ಗುರುವಿನಲಿ, ಧರಣಿಸುರರ+ (ವಿಪ್ರರ)+ ಆಶೀರ್ವಚನ ವಿಸ್ತರಣ ದಧಿ ದೂರ್ವಾಕ್ಷತೆಗಳ+ ಉಬ್ಬರದ ವಾದ್ಯ ಗಡಾವಣೆಯಲಿ+ ಅಸುರಾರಿ ಹೊರವಂಟ.
ಅರ್ಥ:ಕೃಷ್ಣನು ಇಂದ್ರಪ್ರಸ್ತದಿಂದ ದ್ವಾರಕೆಗೆ, ಉತ್ತಮ ಮುಹೂರ್ತದಲ್ಲಿ, ಹೆಚ್ಚಿನ ಅಮೃತಯೋಗದಲ್ಲಿ, ಶುಭಗ್ರಹ ದೃಷ್ಟಿಯಲ್ಲಿ, ಚಂದ್ರನ ಶುಭಸ್ಥಾನದ ಅವಸ್ಥೆಯಲ್ಲಿ, ಕೇಂದ್ರಸ್ಥಾನದಲ್ಲಿ ಗುರು ಇರುವಾಗ, ವಿಪ್ರರ ವಿಸ್ತಾರ ಆಶೀರ್ವಚನವಾಗುವಾಗ ದಧಿ-ಮೊಸರು, ದೂರ್ವೆ ಅಕ್ಷತೆಗಳ ಮತ್ತು ಉಬ್ಬರದ ವಾದ್ಯ ಸದ್ದಿನನಡುವೆ ಅಸುರಾರಿಕೃಷ್ಣನು ಹೊರಹೊರಟನು.
ಕರಯುಗದ ಚಮ್ಮಟಿಕೆ ವಾಘೆಯ
ಲರಸ ರಥವೇರಿದನು ಮುಕ್ತಾ
ಭರದ ಭಾರದ ಸತ್ತಿಗೆಯ ಪಲ್ಲವಿಸಿದನು ಭೀಮ |
ಹರಿಯುಭಯಪಾರ್ಶ್ವದಲಿ ಸಿತ ಚಾ
ಮರವ ಚಿಮ್ಮಿದನರ್ಜುನನು ಬಂ
ಧುರದ ಹಡಪದ ಹೆಗಲಲೈದಿದರರ್ಜುನಾನುಜರು || ೮ ||
ಪದವಿಭಾಗ-ಅರ್ಥ: ಕರಯುಗದ (ಎರಡೂ ಕೈ,) ಚಮ್ಮಟಿಕೆ (ಚಾಟಿ) ವಾಘೆಯಲಿ(ಕುದುರೆಯ ಲಗಾಮು- ಹಗ್ಗ)+ ಅರಸ ರಥವೇರಿದನು, ಮುಕ್ತಾಭರದ(ಮುತ್ತಿನಿಂದ ನೇಯಿದ) ಭಾರದ ಸತ್ತಿಗೆಯ (ಛತ್ರಿ) ಪಲ್ಲವಿಸಿದನು(ಪಲ್ಲವಿಸು - ಅರಳು), ಭೀಮ ಹರಿಯ+ ಉಭಯಪಾರ್ಶ್ವದಲಿ ಸಿತ (ಬಿಳಿ) ಚಾಮರವ ಚಮರೀ ಮೃಗದ ಕೂದಲಿನಿಂದ ಮಅಡಿದ ಬಿಳಯ ಗಾಳಿಬೀಸುವ ಗೊಂಡೆ) ಚಿಮ್ಮಿದನು+ ಅರ್ಜುನನು, ಬಂಧುರದ(ಚೆಲುವಾಗಿ ಬಾಗಿರುವುದು) ಹಡಪದ (ಅಡಕೆ ಎಲೆಯ ಚೀಲ, ಸಂಚಿ )ಹೆಗಲಲಿ ಐದಿದರು+ ಅರ್ಜುನ+ ಅನುಜರು ಅರ್ಜುನನ ತಮ್ಮಂದಿರು- ನಕುಲ ಸಹದೇವರು.
ಅರ್ಥ:ಕೃಷ್ಣನು ಹೊರಡುತ್ತಲೆ ಅವನ ರಥದ ವಾಘೆಯನ್ನೂ, ಚಾಟಿಯನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಅರಸ ಧರ್ಮಜನೇ ರಥವೇರಿ ರಥವನ್ನು ನೆಡೆಸಿದನು. ಮುತ್ತಿನಿಂದ ಮಾಡಿದ ಭಾರದ ಛತ್ರಿಯನ್ನು ಭೀಮನು ಅರಳಿಸಿ ಕೃfಣನಿಗೆ ಹಿಡಿದನು. ಹರಿಯ ಆ ಕಡೆ ಈಕಡೆ ಎರಡು ಪಕ್ಕದಲ್ಲಿ ಬಿಳಿಯ ಚಾಮರವನ್ನು ಅರ್ಜುನನು ಚಿಮ್ಮಿದನು, ಚೆಲುವಾಗಿ ಬಾಗಿರುವ ಹಿಡುಕೈಯಿರುವ ಅಡಕೆ ಎಲೆಯ ಚೀಲ/ ಸಂಚಿಯಯನ್ನು ಅರ್ಜುನನ ತಮ್ಮಂದಿರಾದ ನಕುಲ ಸಹದೇವರು ಹೆಗಲಲ್ಲಿ ಹೊತ್ತುಕೃಷ್ಣನೊಡನ ನೆಡೆದರು. ಹೀಗೆ ಕೃಷ್ಣನನ್ನು ಪಾಂಡವರು ಬೀಳ್ಕೊಟ್ಟರು.
ಪೌರಜನ ಪುರಜನ ನೃಪಾಲ ಕು
ಮಾರ ಸಚಿವ ಪಸಾಯ್ತ ಭಟ ಪರಿ
ವಾರ ಧೌಮ್ಯಪ್ರಮುಖ ಸೂರಿ ಸಮಾಜರೊಗ್ಗಿನಲಿ |
ತೇರ ಬಳಿವಿಡಿದೈದಿದರು ಮುರ
ವೈರಿ ವಿರಹ ವಿಧೂತ ವದನಾಂ
ಭೋರುಹರ ಸಂತೈಸಿ ಬೀಳ್ಕೊಟ್ಟನು ಕೃಪಾಜಲಧಿ || ೯ ||
ಪದವಿಭಾಗ-ಅರ್ಥ: ಪೌರಜನ ಪುರಜನ ನೃಪಾಲಕುಮಾರ (ರಾಜ ಧರ್ಮಜನ ಮಗ,) ಸಚಿವ, ಪಸಾಯ್ತ ಭಟ (ಉಡುಗೆತೊಡಿಗೆಗಳನ್ನು ಇಟ್ಟುಕೊಳ್ಲುವ ಅಧಿಕಾರಿ) ಪರಿವಾರ ಧೌಮ್ಯಪ್ರಮುಖ ಸೂರಿ ಸಮಾಜರು (ಪಂಡಿತ, ವಿದ್ವಾಂಸ ಜನ)+ ಒಗ್ಗಿನಲಿ(ಒಗ್ಗೂಡಿಕೊಂಡು) ತೇರ(ರಥ) ಬಳಿವಿಡಿದು+ ಐದಿದರು ಮುರ ವೈರಿವಿರಹ ವಿಧೂತ(ತ್ಯಜಿಸಿದ, ತೊರೆದ) ವದನಾಂಭೋರುಹರ()ವದನ- ಮುಖ, ಅಂಬೋರುಹ- ಕಮಲ) ಸಂತೈಸಿ ಬೀಳ್ಕೊಟ್ಟನು ಕೃಪಾಜಲಧಿ()ಕೃಪೆಯ ಸಮುದ್ರನು- ಕೃಷ್ನನು
ಅರ್ಥ:ಕೃಷ್ಣನು ದ್ವಾರಕೆಗೆ ಹೋಗಲು ಹೊರಟಾಗ ಪಾಂಡವರ ಸೇವೆಯ ಜೊತೆಗೆ, ಪೌರಜನರು, ಪುರಜನರೂ, ರಾಜ ಧರ್ಮಜನೃಪಾಲನ ಕುಮಾರ, ಸಚಿವ, ಉಡುಗೆತೊಡಿಗೆಗಳನ್ನು ಇಟ್ಟುಕೊಳ್ಳುವ ಅಧಿಕಾರಿ ಮತ್ತು ಪರಿವಾರ, ಧೌಮ್ಯಪ್ರಮುಖರು, ಪಂಡಿತ ವಿದ್ವಾಂಸ ಸಮಾಜರು ಒಗ್ಗೂಡಿಕೊಂಡು ಕೃಷ್ಣನ ತೇರ ಬಳಿಹಿಡಿದು ಜೊತೆಯಲ್ಲಿ ಸ್ವಲ್ಪ ದೂರ ಹೋದರು. ಮುರವೈರಿ, ವೈರಿವಿರಹತ್ಯಜಿಸಿದ, ಕೃಪಾಜಲಧಿ, ಕಮಲಮುಖದ ಕೃಷ್ಣನು ಅವರನ್ನಲ್ಲಾ ಸಂತೈಸಿ ಬೀಳ್ಕೊಟ್ಟನು. (ಬಂಧುಗಳು ಮನೆಯಿಂದ ಹೊರಟಾಗ ಸ್ವಲ್ಪದೂರ ಬಂಧುಗಳ ಜೊತೆ ಹೋಗಿ ಬೀಳ್ಕೊಡುವುದು ಹಿಂದಿನ ಸಂಪ್ರದಾಯ. ನೆಂಟನು, ನಾವಿನ್ನು ಹೋಗುತ್ತೇವೆ ನೀವು ಹಿಂತಿರುಗಿ ಎಂದು ಬಳಿಗೊಳಿಸಲು ಬಂದವರನ್ನು ಕಳಿಸುವರು; ಕನ್ನಡದಲ್ಲಿ ನೆಂಟರನ್ನು ಬಳಿಗೊಳಿಸುವುದು)
ಅರಿನೃಪರು ಕುಹಕಿಗಳು ನೀವೇ
ಸರಸ ಹೃದಯರಧರ್ಮಶೀಲರು
ಪರರು ನೀವತಿ ಧರ್ಮನಿಷ್ಠರು ಹಾನಿಯುಂಟದಕೆ |
ಅರಸನಾರೋಗಣೆ ವಿಹಾರದೊ
ಳಿರುಳು ಹಗಲು ಮೃಗವ್ಯಸನದೆ
ಚ್ಚರಿನೊಳಿಹುದೆಂದನಿಬರನು ಬೀಳ್ಕೊಟ್ಟನಸುರಾರಿ || ೧೦ ||
ಪದವಿಭಾಗ-ಅರ್ಥ: ಅರಿನೃಪರು (ಶತ್ರು ರಾಜರು- ಕೌರವರು) ಕುಹಕಿಗಳು ನೀವೇ ಸರಸ ಹೃದಯರು+ ಅಧರ್ಮಶೀಲರು ಪರರು; ನೀವು+ ಅತಿ ಧರ್ಮನಿಷ್ಠರು ಹಾನಿಯುಂಟದಕೆ; ಅರಸನ+ ಆರೋಗಣೆ ವಿಹಾರದೊಳು+ ಇರುಳು ಹಗಲು (ಹಗಲುರಾತ್ರಿಗಳಲ್ಲೂ) ಮೃಗವ್ಯಸನದಿ+ ಎಚ್ಚರಿನೊಳು+ ಇಹುದೆಂದು+ ಅನಿಬರನು ಬೀಳ್ಕೊಟ್ಟನು+ ಅಸುರಾರಿ (ಕೃಷ್ಣ)
ಅರ್ಥ:ಕೃಷ್ಣನು ದ್ವಾರಕೆಗೆ ಹೋಗುವಾಗ ಬೀಳ್ಕೊಡಲು ಬಂದ ಪಾಂಡವರಿಗೆ ಕೊನೆಯದಾಗಿ, ನಿಮಗೆ ಅರಿನೃಪರಾದ ಕೌರವರು ಕುಹಕಿಗಳು, ನೀವೇ ಸರಳ ಹೃದಯದವರು; ನಿಮಗೆ ಪರರು- ವಿರೋಧಿಗಳು ಅಧರ್ಮಶೀಲರು; ನೀವು ಅತಿ ಧರ್ಮನಿಷ್ಠರು. ಆದ್ದರಿಂದ ಅದಕ್ಕೆ ಹಾನಿಯುಂಟು- ಅಪಾಯವಿದೆ; ಅರಸ ಧರ್ಮಜನನ ಊಟ, ವಿಹಾರದಲ್ಲಿ, ಹಗಲುರಾತ್ರಿಗಳಲ್ಲೂ- ಸದಾ, ಮತ್ತು ಮೃಗಬೇಟಯ ಸಮಯದಲ್ಲಿ ಮೈಮರೆಯದೆ ಎಚ್ಚರದಿಂದ ಇರಬೇಕು, ಎಂದು ಪಾಂಡವರನ್ನು ಎಚ್ಚರಿಸಿ, ಎರೆಲ್ಲರನ್ನೂ ಕೃಷ್ಣನು ಬೀಳ್ಕೊಟ್ಟನು.
ನಾಲಗೆಗಳಸುರಾರಿ ಗುಣ ನಾ
ಮಾಳಿಯಲಿ ತುರುಗಿದವು ಕಂಗಳು
ನೀಲಮೇಘಶ್ಯಾಮನಲಿ ಬೆಚ್ಚವು ವಿಹಾರದಲಿ |
ಬಾಲಕೇಳೀ ಕಥನ ಸುಧೆಯೊಳ
ಗಾಳಿ ಮುಳುಗುತ ಕಳುಹುತನಿಬರು
ಸಾಲಭಂಜಿಕೆಯಂದವಾದರು ಕೃಷ್ಣವಿರಹದಲಿ || ೧೧ ||
ಪದವಿಭಾಗ-ಅರ್ಥ: ನಾಲಗೆಗಳು+ ಅಸುರಾರಿ (ಕೃಷ್ಣ) ಗುಣ ನಾಮಾಳಿಯಲಿ ತುರುಗಿದವು (ತುಂಬಿದವು) ಕಂಗಳು ನೀಲಮೇಘಶ್ಯಾಮನಲಿ (ಕೃಷ್ಣನಲ್ಲಿ) ಬೆಚ್ಚವು(ಬೆಚ್ಚು ಹೆದರು; ಬೆಚ್ಚವು ಹೆದರವು- ಹೆದರುವುದಿಲ್ಲ, ಹಿಂಜರಿಯುವುದಿಲ್ಲ.) ವಿಹಾರದಲಿ ಬಾಲಕೇಳೀ ಕಥನ (ಭಾಲಲೀಲೆಯ ಕಥೆ) ಸುಧೆಯೊಳಗೆ (ಕಥೆಯ ಹಾಲು, ಸವಿ)+ ಆಳಿ ಮುಳುಗುತ, ಕಳುಹುತ+ ಅನಿಬರು (ಎಲ್ಲರೂ) ಸಾಲಭಂಜಿಕೆಯ (ಸಾಲಾಗಿ ನಿಲ್ಲಿಸಿದ ವಿಗ್ರಹಗಳು)+ ಆಂದವಾದರು(ರೀತಿಯಾದರು) ಕೃಷ್ಣವಿರಹದಲಿ (ಕೃಷ್ಣನನ್ನು ಅಗಲಿದ ದುಃಖದಲ್ಲಿ).
ಅರ್ಥ:ಕೃಷ್ಣನ್ನು ಬೀಳ್ಕೊಡಲು ಬಂದವರ ನಾಲಗೆಗಳು ಅಸುರಾರಿಯಾದ ಕೃಷ್ಣನ ಗುಣ ನಾಮಗಳನ್ನು ಹೇಳುವ ಕಾರ್ಯದಲ್ಲಿ ತುಂಬಿದವು. ಅವರ ಕಣ್ಣುಗಳು ನೀಲಮೇಘಶ್ಯಾಮನಾದ ಕೃಷ್ಣನನ್ನು ನೋಡಿ ಹಿಂಜರಿಯುವುದಿಲ್ಲ- ತಣಿಯುವುದಿಲ್ಲ. ಮಾತಿನ ವಿಹಾರದಲ್ಲಿ ಅವನ ಬಾಲಕೇಳೀ ಕಥನದ ಸುಧೆಯೊಳಗೆ ಇಳಿದು ಮುಳುಗುತ್ತಾ ಇದ್ದರು. ಕೃಷ್ಣನನ್ನು ಕಳುಹಿಸುತ್ತಾ ರಲ್ಲರೂ ಕೃಷ್ಣನನ್ನು ಅಗಲಿದ ದುಃಖದಲ್ಲಿ ಸಾಲಭಂಜಿಕೆಯ ರೀತಿಯಾಗಿ ನಿಂತರು (ಚಲನೆ ಇಲ್ಲದೆ ನಿಂತರು).
ಕಳುಹಿ ಕಂಗಳು ಮರಳಿದವು ಮನ
ಕಳುಹದಾ ದ್ವಾರಾವತಿಗೆ ಮಂ
ಗಳ ಮಹೋತ್ಸವದೊಸಗೆ ನುಡಿಯಲಿ ಹೊಕ್ಕನಸುರಾರಿ |
ಬಳಿಕಿವರು ನಿಜ ರಾಜಭವನ
ಸ್ಥಳಕೆ ಬಂದರು ಸೌಮನಸ್ಯದ
ಲಿಳೆಯ ಪಾಲಿಸುತಿರ್ದರವನೀಪಾಲ ಕೇಳೆಂದ || ೧೨ ||
ಪದವಿಭಾಗ-ಅರ್ಥ: ಕಳುಹಿ ಕಂಗಳು ಮರಳಿದವು, ಮನಕಳುಹದು+ ಆ ದ್ವಾರಾವತಿಗೆ ಮಂಗಳ ಮಹೋತ್ಸವದ+ ಒಸಗೆ ನುಡಿಯಲಿ ಹೊಕ್ಕನು+ ಅಸುರಾರಿ; ಬಳಿಕಿವರು ನಿಜ ರಾಜಭವನ ಸ್ಥಳಕೆ ಬಂದರು ಸೌಮನಸ್ಯದಲಿ(ಸಂತಸದಲ್ಲಿ)+ ಇಳೆಯ (ರಾಜ್ಯವನ್ನು) ಪಾಲಿಸುತಿರ್ದರು+ ಅವನೀಪಾಲ ಕೇಳೆಂದ.
ಅರ್ಥ:ಮುನಿ ವೈಶಂಪಾಯನು,ಅವನೀಪಾಲ ಜನಮೇಜಯಬೇ,'ಕೃಷ್ಣನ್ನು ಬೀಳ್ಕೊಡಲು ಬಂದವರ ಕಣ್ಣುಗಳು ಅವನನ್ನು ಕಳುಹಿಸಿ ದೃಷ್ಠಿಗಳು ಮರಳಿ-ಮೊದಲಿನಂತೆ ಉಳಿದಕಡೆ ಗಮನ ಹರಿಸಿದವು. ಜನರ ಮನಸ್ಸು ಅವನನ್ನು ಆ ದ್ವಾರಾವತಿಗೆ ಕಳುಹಿಸದು. ಹೀಗಿರುವಾಗ ಅಸುರಾರಿ ಕೃಷ್ಣನು ಆ ಕಡೆ ಮಂಗಳ ಮಹೋತ್ಸವದಲ್ಲಿ ಒಸಗೆ ಆಶೀರ್ವಾದದ ಹರಕೆಯ ನುಡಿಯನ್ನು ಹೇಳುತ್ತಿರುವಾಗ ದ್ವಾರಕೆಯನ್ನು ಹೊಕ್ಕನು. ಬಳಿಕ ಇವರು ಸಂತಸದಲ್ಲಿ ನಿಜ ರಾಜಭವನ ಸ್ಥಳಕೆ ಬಂದರು.ಮತ್ತು ರಾಜ್ಯವನ್ನು ಇಳೆಯ ಪಾಲಿಸುತಿದ್ದರು.'ಎಂದ.

ದಾನವ ಶಿಲ್ಪಿ ಮಯನಿಂದ ಅದ್ಬುತ ಸಭಾಮಂಟಪ ನಿರ್ಮಾಣ

ಸಂಪಾದಿಸಿ
ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗಿವ ಕೃತಜ್ಞನಲೆ |
ಕಿರಣ ಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವಶಿವಾಯೆನೆ ಮೆರೆದುದಾಸ್ಥಾನ || ೧೩ ||
ಪದವಿಭಾಗ-ಅರ್ಥ:ಮುರಹರನ (ಕೃಷ್ನನ) ನೇಮದಲಿ (ಆಜ್ಞೆಯಂತೆ) ಮಯ ವಿಸ್ತರಿಸಿದನು ಪದಿನಾಲ್ಕು ತಿಂಗಳು ವರ ಸಭಾಮಂಟಪವನು+ ಅನಿಬರಿಗೆ+ ಇವ(ಮಯ) ಕೃತಜ್ಞನಲೆ ಕಿರಣ ಲಹರಿಯ ವಿವಿಧ ರತ್ನೋತ್ಕರದ ರಚನಾಶಿಲ್ಪವಿದು ದೇವರಿಗ+ ಅಸಾಧ್ಯವು ಶಿವಶಿವಾಯೆನೆ ಮೆರೆದುದು+ ಆಸ್ಥಾನ
ಅರ್ಥ:ದಾನವ ಶಿಲ್ಪಿ ಮಯನು ಖಾಂಡವದಹನ ಸಮಯದಲ್ಲಿ ಸಿಲುಕಿ ಕೊಂಡಿದ್ದ, ಅವನನ್ನು ಅರ್ಜುನ ತಪ್ಪಿಸಿ ಕಾಪಾಡಿದ. ಅದಕ್ಕಾಗಿ ಮಯನು ಏನಾದರೂ ಕಾಣಿಕೆಯನ್ನು ಕೇಳು ಎಂದಾಗ ಅರ್ಜುನ ಏನೂ ಬೇಡವೆಂದು ಹೇಳಿದ. ಮಯನ ಯತ್ತಾಯಕ್ಕೆ ಮಣಿದು ಕೃಷ್ಣನು ಮಯನಿಗೆ, ಧರ್ಮಜನಿಗಾಗಿ ಒಂದು ಭವ್ಯ ಆಸ್ಥಾನ ಸಬಾಮಂಟಪವನ್ನು ನಿರ್ಮಿಸಿಕೊಡಲು ಹೇಳಿದ. ಹಾಗೆ ಕೃಷ್ನನ ಆಜ್ಞೆಯಂತೆ ಮಯನು ಪದಿನಾಲ್ಕು ತಿಂಗಳುಕಾಲದಲ್ಲಿ ಶ್ರೇಷ್ಠ ಸಭಾಮಂಟಪವನ್ನು ನಿರ್ಮಿಸಿದ. ಕೃಷ್ಣ ಮತ್ತು ಅರ್ಜುನ ಇವರಿಗೆ ಮಯನು ಕೃತಜ್ಞನಲ್ಲವೇ! ಕಿರಣ ಬೀರುವ ವಿವಿಧ ರತ್ನೋತ್ಕರದ ರಚನಾಶಿಲ್ಪವಾಗಿತ್ತು ಆ ಸಭಾಮಂಟಪ. ಈ ರಚನೆ ದೇವರಿಗೆ ಸಹ ಅಸಾಧ್ಯವು, ಶಿವಶಿವಾಯೆನ್ನುವಂತೆ ಆ ಆಸ್ಥಾನಮಂಟಪವು ಮೆರೆದಿತ್ತು.
ಹತ್ತು ಸಾವಿರ ಕೈ ಪ್ರಮಾಣದ
ಸುತ್ತುವಳಯದ ಮಣಿಯ ಶಿಲೆಗಳ
ತತ್ತವಣೆಗಳ ತೆಕ್ಕೆವೆಳಗಿನ ಲಳಿಯ ಲಹರಿಗಳ |
ಸುತ್ತುವಳಯದ ಪದ್ಮರಾಗದ
ಭಿತ್ತಿಗಳ ವೈಡೂರ್ಯ ಶಿಲೆಗಳ
ಮತ್ತವಾರಣ ವರ ವಿಧಾನದಲೆಸೆದುದಾಸ್ಥಾನ || ೧೪ ||
ಪದವಿಭಾಗ-ಅರ್ಥ: ಹತ್ತು ಸಾವಿರ ಕೈ ಪ್ರಮಾಣದ ಸುತ್ತುವಳಯದ, ಮಣಿಯ, ಶಿಲೆಗಳ, ತತ್+ ವಣೆಗಳ(ಕೂರುವ ಮಣೆಗಳ) ತೆಕ್ಕೆವೆಳಗಿನ (ಸುತ್ತಿ ಸೇರಿಕೊಂಡ) ಸುರುಳಿಯಾಗಿರುವಿಕೆ- ಬೆಳಕಿನ), ಲಳಿಯ (ರಭಸ ವೇಗ)ಲಹರಿಗಳ (ಕೌಶಲ್ಯ, ಚಮತ್ಕಾರ ೪ ಕಾಂತಿ), ಸುತ್ತುವಳಯದ ಪದ್ಮರಾಗದ ಭಿತ್ತಿಗಳ ವೈಡೂರ್ಯ ಶಿಲೆಗಳ, ಮತ್ತವಾರಣ(ಮದ್ದಾನೆಯ) ವರ(ಉತ್ತಮ) ವಿಧಾನದಲಿ+ ಎಸೆದುದು+ ಆಸ್ಥಾನ
ಅರ್ಥ: ಮಯನು ಹತ್ತು ಸಾವಿರ ಕೈ ಪ್ರಮಾಣದ ಸುತ್ತುವಲಯದ, ಮಣಿಗಳಿಂದ ಕೂಡಿದ, ಉತ್ತಮ ಶಿಲೆಗಳ ಕೂರುವ ಮಣೆಗಳ, ತೆಕ್ಕೆಯಾಗಿ ಸುತ್ತಿಕೊಂಡಿರುವ ಬೆಳಕಿನ, ಚುರುಕಾದ ಚಮತ್ಕಾರ ಮತ್ತು ಕಾಂತಿಯ, ಸುತ್ತು- ವಲಯದಲ್ಲಿ ಪದ್ಮರಾಗದ ಹರಳುಗಳ ಭಿತ್ತಿಗಳಿಂದ ಕೂಡಿದ, ವಜ್ರ ವೈಡೂರ್ಯ ಶಿಲೆಗಳ, ಮದ್ದಾನೆಯಂತೆ ಗಟ್ಟಿಮುಟ್ಟಾದ ಉತ್ತಮ ವಿಧಾನದಲ್ಲಿ ಆ ಆಸ್ಥಾನ ಮಂಟಪ ಶೋಭಿಸುತ್ತತ್ತು. ಆ ಬಗೆಯ ಸಭಾ ಆಸ್ಥಾನ ಮಂಟಪವನ್ನು ಮಯನು ನಿರ್ಮಿಸಿದನು.
ಕರೆಸಿದನು ಮಯನೆಂಟು ಸಾವಿರ
ಸರಿಗ ರಕ್ಕಸ ಕಿಂಕರರ ನಿಜ
ಶಿರದೊಳಾಂತರು ತಂದರಿಂದ್ರಪ್ರಸ್ಥಪುರವರಕೆ |
ಅರಸ ಕಾಣಿಸಿಕೊಂಡನದನಾ
ದರಿಸಿದನು ಭೀಮಂಗೆ ಭಾರಿಯ
ವರ ಗದಾದಂಡವನು ಕಾಣಿಕೆಯಿತ್ತು ಪೊಡವಂಟ || ೧೫ ||
ಪದವಿಭಾಗ-ಅರ್ಥ: ಕರೆಸಿದನು ಮಯನು+ ಎಂಟು ಸಾವಿರ ಸರಿಗ (ಗಟ್ಟಿಮುಟ್ಟಾದ) ರಕ್ಕಸ ಕಿಂಕರರ (ಸೇವಕರ) ನಿಜ(ತಮ್ಮ) ಶಿರದೊಳು+ ಆಂತರು (ತಮ್ಮ ತಲಯಮೇಲೆ ಹೊತ್ತರು) ತಂದರು+ ಇಂದ್ರಪ್ರಸ್ಥಪುರ ವರಕೆ, ಅರಸ ಕಾಣಿಸಿಕೊಂಡನು+ ಆದನು+ ಆದರಿಸಿದನು, ಭೀಮಂಗೆ ಭಾರಿಯ ವರ (ಉತ್ತಮ) ಗದಾದಂಡವನು ಕಾಣಿಕೆಯಿತ್ತು ಪೊಡವಂಟು (ಪೊಡಮಡು, ಪೊಡಮಟ್ಟ. ನಮಿಸಿದ, ನಮಸ್ಕರಿಸು, ಶರಣಾಗು )
ಅರ್ಥ:ದಾನವ ಶಿಲ್ಪಿಯೂ- ನಿರ್ಮಾಪಕನೂ ಆದ ಮಯನು, ಎಂಟು ಸಾವಿರ ಗಟ್ಟಿಮುಟ್ಟಾದ ರಕ್ಕಸ ಸೇವಕರನ್ನು ಕರೆಸಿದನು. ಅವರು ತಮ್ಮ ತಲೆಯಮೇಲೆ ಆ ಮಂಟಪವನ್ನು ಹೊತ್ತು ಇಂದ್ರಪ್ರಸ್ಥಪುರ ಶ್ರೇಷ್ಠ ನಗರಕ್ಕೆ ತಂದರು. ಅರಸ ಧರ್ಮಜನು ಅವನಿಗೆ ದರ್ಶನ ಕೊಟ್ಟು ಆದನ್ನು ಆ ಮಟಪವನ್ನು ಆದರದಿಂದ ಸ್ವೀಕರಿಸಿದನು, ಮಯನು ಭೀಮನಿಗೆ ಭಾರಿಯಾದ ಉತ್ತಮ ಗದಾದಂಡವನ್ನು ಕಾಣಿಕೆಯಾಗಿ ಕೊಟ್ಟು ನಮಿಸಿದನು.
ಇದು ಪುರಾತನ ಸಗರ ವಂಶಾ
ಭ್ಯುದಯ ದುರ್ಜಯ ಯೌವನಾಶ್ವನ
ಗದೆ ಕೃತಾಂತನ ಕರದ ದಂಡವನಂಡಲೆವ ಬಲದ |
ಮದದಲೊಪ್ಪುವುದೆನುತ ಮಯನತಿ
ಮುದದಿ ಬಳಿಕಾ ದೇವದತ್ತಾ
ಖ್ಯದ ಮಹಾ ಶಂಖವನು ಪಾರ್ಥಗೆ ಕೊಟ್ಟು ಕೈಮುಗಿದ || ೧೬ ||
ಪದವಿಭಾಗ-ಅರ್ಥ: ಇದು ಪುರಾತನ ಸಗರ ವಂಶಾಭ್ಯುದಯ ದುರ್ಜಯ (ಜಯಿಸಲಾಗದ) ಯೌವನಾಶ್ವನ ಗದೆ, ಕೃತಾಂತನ (ಯಮನ) ಕರದ ದಂಡವನು+ ಅಂಡಲೆವ (ಪೀಡಿಸುವ) ಬಲದ ಮದದಲಿ+ ಒಪ್ಪುವುದು+ ಎನುತ ಮಯನು+ ಅತಿ ಮುದದಿ; ಬಳಿಕ+ ಆ ದೇವದತ್ತಾಖ್ಯದ(ದೇವದತ್ತ ಎಂಬ ಹೆಸರಿನ) ಮಹಾ ಶಂಖವನು ಪಾರ್ಥಗೆ ಕೊಟ್ಟು ಕೈಮುಗಿದ.
ಅರ್ಥ:ಮಯನು ಭೀಮನಿಗೆ,'ಇದು ಪುರಾತನ ಸಗರ ವಂಶಾಭ್ಯುದಯದ ದುರ್ಜಯನಾದ ಯೌವನಾಶ್ವನ ಗದೆಯು. ಯಮನ ಕರದ ದಂಡವನ್ನು ಪೀಡಿಸುವ ಬಲದ ಮದದಿಂದ ಒಪ್ಪುವುದು,' ಎಂದು ಅತಿ ಮುದದಿಂದ ಭೀಮನಿಗೆ ಗದೆಯನ್ನು ಕೊಟ್ಟನು. ಬಳಿಕ ಆ ದೇವದತ್ತ ಎಂಬ ಹೆಸರಿನ ಮಹಾ ಶಂಖವನ್ನು ಪಾರ್ಥನಿಗೆ ಕೊಟ್ಟು ಕೈಮುಗಿದನು.
ಒಸಗೆ ಮೆರೆದುದು ಮಯನ ಮಿಗೆ ಮ
ನ್ನಿಸಿದನವನಿಪನಂಗಚಿತ್ತದೊ
ಳಸುರ ಕಿಂಕರರನಿಬರನು ಸನ್ಮಾನ ದಾನದಲಿ |
ಒಸೆದು ಕಳುಹಿದನಾತನನು ದೆಸೆ
ದೆಸೆಯ ಯಾಚಕ ನಿಕರ ನೂಕಿತು
ಮುಸುಕಿತೈ ಧರ್ಮಜನ ಕೀರ್ತಿಯ ಝಾಡಿ ಮೂಜಗವ || ೧೭ ||
ಪದವಿಭಾಗ-ಅರ್ಥ: ಒಸಗೆ (ಕಾಣಿಕೆ, ಉಡುಗೊರೆ) ಮೆರೆದುದು ಮಯನ ಮಿಗೆ(ಬಹಳ) ಮನ್ನಿಸಿದನು+ ಅವನಿಪನು+ ಅಂಗಚಿತ್ತದೊಳು (ಮನಃಪೂರ್ವಕ)+ ಅಸುರ ಕಿಂಕರರ (ಸೇವಕರ)+ ಅನಿಬರನು(ಎಲ್ಲರನ್ನೂ) ಸನ್ಮಾನ ದಾನದಲಿ; ಒಸೆದು (ಒಸೆ - ಪ್ರೀತಿಸು) ಕಳುಹಿದನು+ ಆತನನು ದೆಸೆದೆಸೆಯ ಯಾಚಕ ನಿಕರ (ದಿಕ್ಕು ದಿಕ್ಕಿನಿಂದ ಬಂದ ಸಹಾಯ ಕೇಳುವವರ ಸಮೂಹ) ನೂಕಿತು (ಬಂದಿತು) ಮುಸುಕಿತೈ (ಆವರಿಸಿತು, ಮುತ್ತಿತು.) ಧರ್ಮಜನ ಕೀರ್ತಿಯ ಝಾಡಿ (ಹೆಚ್ಚಳ) ಮೂಜಗವ.
ಅರ್ಥ:ಅರಸ ಧರ್ಮಜನಿಂದ ಮಯನಿಗೆ ಕಾಣಿಕೆ, ಉಡುಗೊರೆಗಳ ಕೊಡುಗೆಯ ಸಡಗರ ಮೆರೆಯಿತು. ಹೀಗೆ ಅರಸನು ಅವನಿಗೆ ಒಸಗೆಯನ್ನು ಕೊಟ್ಟು ಮಯನನ್ನು ಬಹಳವಾಗಿ ಗೌರವಿಸಿದನು. ರಾಜ ಸಭಾಭವನವನ್ನು ಹೊತ್ತು ತಂದ ಮಯನ ಹತ್ತುಸಾವಿರ ಅಸುರ ಸೇವಕರೆಲ್ಲರನ್ನೂ ಸನ್ಮಾನದಿಂದ ದಾನದಿಂದ ತೃಪ್ತಿಪಡಿಸಿ ಪ್ರೀತಿಯಿಂದ ಕಳುಹಿದನು. ಅದಲ್ಲದೆ ದಿಕ್ಕು ದಿಕ್ಕಿನಿಂದ ಸಹಾಯ ಕೇಳುವವರ ಸಮೂಹ ಬಂದು ಅರಸನನ್ನು ಮುತ್ತಿತು. ಧರ್ಮಜನ ಕೀರ್ತಿಯ ಝಾಡಿ- ಬಿರುಗಾಳಿ ಮೂರುಜಗತ್ತಿನಲ್ಲಿ ಹಬ್ಬಿತು.
ದಿವಸ ದಿವಸದೊಳುಂಡುದವನೀ
ದಿವಿಜ ಸಂತತಿ ಹತ್ತು ಸಾವಿರ
ವವರನೇನೆಂದೆಣಿಸುವೆನು ಮಾರ್ಗಣ ಮಹೋದಧಿಯ |
ವಿವಿಧ ರತ್ನಾಭರಣ ಕಾಂಚನ
ನವ ದುಕೂಲದ ದಿಂಡಿನಲಿ ಬುಧ
ನಿವಹ ದಣಿದುದನಂತ ಕೃಪಣಾನಾಥ ಜನಸಹಿತ || ೧೮ ||
ಪದವಿಭಾಗ-ಅರ್ಥ:ದಿವಸ ದಿವಸದೊಳು+ ಉಂಡುದ+ ಅವನೀದಿವಿಜ (ವಿಪ್ರರ) ಸಂತತಿ ಹತ್ತು ಸಾವಿರವು+ ಅವರನು+ ಏನೆಂದು+ ಎಣಿಸುವೆನು ಮಾರ್ಗಣ (ಯಾಚಕ, ಬೇಡುವವನು) ಮಹೋದಧಿಯ(ಸಮುದ್ರ) ವಿವಿಧ ರತ್ನಾಭರಣ ಕಾಂಚನನವ ದುಕೂಲದ ದಿಂಡಿನಲಿ(ದಿಂಡು- ಹೊರೆ) ಬುಧನಿವಹ(ಬ್ರಾಹ್ಮಣ ಸಮೂಹ) ದಣಿದುದು+ ಅನಂತ (ಲೆಕ್ಕವಿಲ್ಲದಷ್ಟು) ಕೃಪಣ (ಜುಗ್ಗ, ಲೋಬಿ)+ ಅನಾಥ ಜನಸಹಿತ.
ಅರ್ಥ:ಇಂದ್ರಪ್ರಸ್ತದ ರಾಜಧಾನಿಯಲ್ಲಿ ದಿವಸ ದಿವಸದಲ್ಲಿಯೂ ಹತ್ತು ಸಾವಿರವ ವಿಪ್ರರ ಸಂತತಿ ಉಂಡುದನ್ನು- ಅವರನ್ನು ಏನೆಂದು ಎಣಿಸಿ ಹೇಳಲಿ! ಯಾಚಕರ ಸಮುದ್ರವು, ಅವರಿಗೆ ವಿವಿಧ ರತ್ನಾಭರಣ ಕಾಂಚನನವ ದುಕೂಲದ- ಬಟ್ಟೆಯ ಹೊರೆಯಲ್ಲಿ ಬ್ರಾಹ್ಮಣ ಸಮೂಹ, ಲೆಕ್ಕವಿಲ್ಲದಷ್ಟು ಕೃಪಣರು ಅನಾಥ ಜನಸಹಿತ ದಣಿಯಿತು.
ಆ ಮಹೋತ್ಸವದೇಳು ದಿನವಭಿ
ರಾಮರಂಜಿತವಾಯ್ತು ಶುಭದಿನ
ರಾಮಣೀಯಕ ಲಗ್ನದಲಿ ಹೊಕ್ಕನು ಮಹಾಸಭೆಯ |
ಭೂಮಿಪಾಲರನಂತ ಸುಜನ
ಸ್ತೋಮವನುಜರಮರ್ತ್ಯರೆನಿಪ ಸ
ನಾಮರಿದ್ದರು ರಾಯನೆಡಬಲವಂಕದಿದಿರಿನಲಿ || ೧೯ ||
ಪದವಿಭಾಗ-ಅರ್ಥ: ಆ ಮಹೋತ್ಸವದ+ ಏಳು ದಿನವು+ ಅಭಿರಾಮರಂಜಿತವಾಯ್ತು(ಅಭಿರಾಮ- ಸುಂದರವಾದ); ಶುಭದಿನ ರಾಮಣೀಯಕ(ಸುಂದರ, ಉತ್ತಮ) ಲಗ್ನದಲಿ ಹೊಕ್ಕನು ಮಹಾಸಭೆಯ; ಭೂಮಿಪಾಲರ+ ಅನಂತ(ಲೆಕ್ಕವಿಲ್ಲದಷ್ಟು) ಸುಜನಸ್ತೋಮವನು(ಶ್ರೇಷ್ಠಜನರ ಸಮೂಹ) ಜರಮರ್ತ್ಯರು+ ಎನಿಪ ಸನಾಮರು(ವಂದಿ ಮಾಗಧರು- ?)+ ಇದ್ದರು ರಾಯನ+ ಎಡಬಲವಂಕದ+ ಇದಿರಿನಲಿ
ಅರ್ಥ: ಯುಧಿಷ್ಠರನಿಗಾಗಿ ಮಯನು ನಿರ್ಮಿಸಿದ ಸಭಾಮಂಟಪದ ಪ್ರವೇಶದ ಆ ಮಹೋತ್ಸವದ ಏಳು ದಿನವೂ ವೈಛವದಿಂದ ರಂಜಿತವಾಯ್ತು; ಧರ್ಮಜನು ಶುಭದಿನದ ಉತ್ತಮ ಲಗ್ನದ ಮುಹೂರ್ತದಲ್ಲಿ ಆ ಮಹಾಸಭೆಯನ್ನು ಪ್ರವೇಶಮಾಡಿದನು; ಅವನು ಭೂಮಿಪಾಲರ- ರಾಜರ ದೊಡ್ಡ ಶ್ರೇಷ್ಠಜನರ ಸಮೂಹದೊಡನೆ ಸಭಾಮಂದಿರವನ್ನು ಹೊಕ್ಕನು. ಆ ಸಮಯದಲ್ಲಿ ಅವನ ಎಡಬಲವಂಕದಲ್ಲಿ, ಇದಿರಿನಲ್ಲಿ, ಜರಮರ್ತ್ಯರು ಎಂಬ ಹೊಗಳುಭಟ್ಟರು ಇದ್ದರು.
ಹೊಳೆಹೊಳೆದುದಾಸ್ಥಾನ ಕಾಂತಾ
ವಳಿಯ ಕಂಗಳ ಬೆಳಕಿನಲಿ ತನಿ
ಮುಳುಗಿತೋಲಗ ಲಲಿತರಸ ಲಾವಣ್ಯಲಹರಿಯಲಿ |
ವಿಳಸದಖಿಳಾಭರಣ ರತ್ನಾ
ವಳಿಯ ರಶ್ಮಿಯಲಡಿಗಡಿಗೆ ಪ್ರ
ಜ್ವಲಿಸಿತಾ ಸಭೆ ದೀಪ್ತಿಮಯ ವಿವಿಧಾನುಭಾವದಲಿ || ೨೦ ||
ಪದವಿಭಾಗ-ಅರ್ಥ: ಹೊಳೆಹೊಳೆದುದು+ ಆಸ್ಥಾನ, ಕಾಂತಾವಳಿಯ (ಕಾಂತೆಯರ ಆವಳಿ- ಸಮೂಹ) ಕಂಗಳ ಬೆಳಕಿನಲಿ, ತನಿ (ಅತಿಶಯವಾಗಿ) ಮುಳುಗಿತು+ ಓಲಗ ಲಲಿತರಸ (ಆನಂದರಸ) ಲಾವಣ್ಯಲಹರಿಯಲಿ(ಸೌಂದರ್ಯದ ಭಾವದಲ್ಲಿ) ವಿಳಸದ+ ಅಖಿಳ (ಎಲ್ಲಾ)+ ಆಭರಣ ರತ್ನಾವಳಿಯ ರಶ್ಮಿಯಲಿ (ಬೆಳಕಿನಲ್ಲಿ)+ ಅಡಿಗಡಿಗೆ ಪ್ರಜ್ವಲಿಸಿತು+ ಆ ಸಭೆ ದೀಪ್ತಿಮಯ ವಿವಿಧ+ ಅನುಭಾವದಲಿ
ಅರ್ಥ: ಧರ್ಮಜನು ಹೊಸ ಸಭಾಮಂಟಪವನ್ನು ಹೊಗುವಾಗ ಸಭಾ ಆಸ್ಥಾನವು ಕಾಂತೆಯರ ಸಮೂಹದ ಹೊಳೆಯುವ ಕಣ್ಣುಗಳ ಬೆಳಕಿನಲ್ಲಿ ಹೊಳೆಹೊಳೆದು ಬೆಳಗಿತು. ಅತಿಶಯವಾಗಿ ಓಲಗವು ಆನಂದರಸದಲ್ಲಿ ಮುಳುಗಿತು. ಸೌಂದರ್ಯದ ಭಾವದ ವಿಲಾಸದ ಎಲ್ಲಾ ಆಭರಣ ರತ್ನಾವಳಿಯ ಬೆಳಕಿನಲ್ಲಿ ಅಡಿಗಡಿಗೆ ಪ್ರಜ್ವಲಿಸಿತು. ಆ ಸಭೆ ದೀಪ್ತಿಮಯ ವಿವಿಧ ಅನುಭಾವದಲಿ ಮುಳುಗಿತು.
ಮೇಳದಲಿ ಗಂಧರ್ವರಿಪ್ಪ
ತ್ತೇಳು ತುಂಬುರ ಸಹಿತ ಶುದ್ಧದ
ಸಾಳಗದ ಸಂಕೀರ್ಣ ದೇಶಿಯ ವಿವಿಧ ರಚನೆಗಳ |
ಬಾಳೆಯರ ಸುರಗಣಿಕೆಯರ ಮುಖ
ಚಾಳೆಯರ ಸಂಗೀತ ತಾಳದ
ತೂಳುವರೆ ತುಂಬಿದುದು ಕುಸುಮಾಯುಧನ ಕಳವಳವ || ೨೧ ||
ಪದವಿಭಾಗ-ಅರ್ಥ: ಮೇಳದಲಿ ಗಂಧರ್ವರು+ ಇಪ್ಪತ್ತೇಳು, ತುಂಬುರ ಸಹಿತ ಶುದ್ಧದಸಾಳಗದ(ಒಂದು ರಾಗ,) ಸಂಕೀರ್ಣ ದೇಶಿಯ ವಿವಿಧ ರಚನೆಗಳ ಬಾಳೆಯರ (ಬಾಲೆಯರ) ಸುರಗಣಿಕೆಯರ(ದೇವಕನ್ಯೆಯರು, ಅಪ್ಸರೆಯರು) ಮುಖಚಾಳೆಯರ (ಅಲಂಕರಿಸುವವರು) ಸಂಗೀತ ತಾಳದ ತೂಳುವರೆ(ನೂಕು, ನುಗ್ಗು, ಒತ್ತರಿಸಿ) ತುಂಬಿದುದು ಕುಸುಮಾಯುಧನ (ಮನ್ಮಥನ) ಕಳವಳವ.
ಅರ್ಥ: ಮಯನು ನಿರ್ಮಿಸಿದ ಸಭಾಂಗಣದ ಉದ್ಘಾಟನೆಯ ಮೇಳದಲ್ಲಿ, ಗಂಧರ್ವರು ಇಪ್ಪತ್ತೇಳುಜನ ತುಂಬುರ ಸಹಿತ ಬಂದಿದ್ದರು. ಅವರು ಶುದ್ಧದಸಾಳಗ ರಾಗದಲ್ಲಿ, ಸಂಕೀರ್ಣ ದೇಶಿಯ ವಿವಿಧ ರಚನೆಗಳನ್ನು ಹಾಡಿದರು. ಸಭೆಯಲ್ಲಿ ಬಾಲೆಯರ, ದೇವಕನ್ಯೆಯರ, ಮುಖಚಾಳೆಯರಾದ ಅಲಂಕಾರಿಕರು ಸೇರಿದ್ದರು; ಸಭೆಯ ಸಂಗೀತ ತಾಳದ ಮಧ್ಯೆ ಇವರಲ್ಲರ ನೂಕುನುಗ್ಗಲು ತುಂಬಿತ್ತು. ಈ ಮಹಿಳೆಯರ ಸೌಂದರ್ಯದ ಆಕರ್ಷಣೆ ಕುಸುಮಾಯುಧನಾದ ಮನ್ಮಥನನ್ನು ತಾನು ವ್ಯರ್ಥನಾಗುವೆನಲ್ಲಾ ಎಂದು ಕಳವಳವಳಕ್ಕೆ ಈಡುಮಾಡುವಂತಿತ್ತು.
ಆ ಮಹಾಸಭೆಯಲಿ ಯುಧಿಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸದಳ ನಯನ ಸನ್ನಿಭ ಭಾವ ಭಾವಿತನ |
ಹಾ ಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾ ದೆಸೆಯ || ೨೨ ||
ಪದವಿಭಾಗ-ಅರ್ಥ: ಆ ಮಹಾಸಭೆಯಲಿ ಯುಧಿಷ್ಠಿರ ಭೂಮಿಪತಿ ದೂರದಲಿ ಕಂಡನು, ತಾಮರಸದಳ ನಯನ (ಕಮಲದಳದ ಕಣ್ಣಿನ) ಸನ್ನಿಭ(ಸದೃಶ, ಸಮಾನವಾದ) ಭಾವ ಭಾವಿತನ (ಮನಸ್ಸಿನಲ್ಲಿ ನೆನೆಯಬಹುದಾದವನನ್ನು); ಹಾ ಮಹಾದೇವ+ ಎತ್ತಣ+ ಅದುಭುತ ಧಾಮವು(ಅದ್ಭುತ ಕಾಂತಿ, ಪ್ರದೇಶ)+ ಇದು ದಿನಮಣಿಯ (ಸೂರ್ಯನ) ತೇಜಸ್ತೋಮವು (ಸುರ್ಯನ ಪ್ರಕಾಶದ ದಟ್ಟನೆ)+ ಎರಡರ ಧಾತುಯೆನುತ(ಧಾತು- ತೇಜಸ್ಸು)+ ಈಕ್ಷಿಸಿದರು (ನೋಡಿದರು)+ ಆ ದೆಸೆಯ(ದಿಕ್ಕನ್ನು).
ಅರ್ಥ:ಆ ಮಹಾಸಭೆಯಲ್ಲಿದ್ದ ಯುಧಿಷ್ಠಿರ ಭೂಪತಿಯು ದೂರದಲ್ಲಿ ಕಮಲದಳದೋತಿರುವ ವಿಶಾಲ ಕಣ್ಣಿನ ಭಾವ ಭಾವಿತನನ್ನು ಕಂಡನು. ಧರ್ಮಜ ಮತ್ತು ಇತರರು, ಹಾ ಮಹಾದೇವ ಇದು ಎಲ್ಲಿಯ ಅದ್ಭುತ ಕಾಂತಿ, ಇದು ಸೂರ್ಯನ ತೇಜಸ್ಸಿನ ಪ್ರಕಾಶದ ಎರಡರಷ್ಟಿರುವ ತೇಜಸ್ಸು ಎನುತ್ತಾ ಆ ದಿಕ್ಕನ್ನು ನೋಡಿದರು.
ಲಲಿತ ತೇಜಃಪುಂಜ ಮಿಗೆ ಥಳ
ಥಳಿಸಿತತಿ ದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಳೆ ತೋರಿತಾಕಾರ |
ತಳಿತುದವಯವ ಶುದ್ಧವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ || ೨೩ ||
ಪದವಿಭಾಗ-ಅರ್ಥ: ಲಲಿತ (ಸುಂದರ) ತೇಜಃಪುಂಜ ಮಿಗೆ ಥಳಥಳಿಸಿತು+ ಅತಿ ದೂರದಲಿ, ಬೆಳಗಿನ ಗೊಳಸನು ( ಕುಣಿಕೆ, ಕೊಂಡಿ)+ ಉಡಿದಂತೆ (ಉಡಿ- ಮೊಳಕೆ, ಚಿಗುರು)+ ಆದುದು+ ಆಗಳೆ ತೋರಿತು+ ಆಕಾರ, ತಳಿತುದು(ಪಡೆದು) (ರೂಪುಗೊಂಡಿತು.)+ ಅವಯವ ಶುದ್ಧವರ್ಣ ಸ್ಥಳವು ನಿಮಿಷಕೆ ಮುನಿವರ+ ಆಕೃತಿ ಹೊಳೆದುದು+ ಆಕ್ಷಣವು+ ಈತ ನಾರದನೆಂದುದು+ ಅಖಿಳಜನ.
ಅರ್ಥ:ಧರ್ಮಜ ಮತ್ತು ಸಭಾಸದರು ನೋಡುತ್ತಿದ್ದಂತೆ ದುರದಲ್ಲಿ ಒಂದು ಸುಂದರ ತೇಜಃಪುಂಜ- 'ಪ್ರಕಾಶದ ಗೋಲ' ಅತಿ ದೂರದಲ್ಲಿ ದೊಡ್ಡದಾಗಿ ಥಳಥಳಿಸಿ ಬೆಳಗಿತು. ಅದು ಬೆಳಗಿನ ಕೊಂಡಿಯಂತೆ ಇದ್ದುದು ವಿಸ್ತರಿಸಿ ಆಗಲೆ- ತಕ್ಷಣ ಆಕಾರ ಪಡೆದು ರೂಪುಗೊಂಡು ಆ ಸ್ಥಳವು ನಿಮಿಷಕೆ ಶುದ್ಧವರ್ಣದ ಅವಯವಗಳನ್ನು ತೋರಿತು. ಅಲ್ಲಿ ಮುನಿವರನ ಆಕೃತಿ ಹೊಳೆದು ಕಂಡಿತು. ಆ ಕ್ಷಣವೇ ಅಖಿಲಜನರೂ ಈತ ನಾರದನು ಎಂದರು.

ನಾರದನ ಆಗಮನ - ಅವನಿಂದ ನೀತಿಬೋಧೆ

ಸಂಪಾದಿಸಿ
ದಣಿಯದಾತನ ಬೆರಳು ನಾರಾ
ಯಣರವದ ವೀಣೆಯಲಿ ಹೃದಯಾಂ
ಗಣದ ಸೀಮೆಗೆ ಬಿಡಯವಾಗದು ಕೃಷ್ಣಪದ ಕೇಳಿ |
ಪ್ರಣವರೂಪದ ಭಾವಶುದ್ಧಿಯ
ಕಣಿ ಮುರಾರಿಯ ತನ್ಮಯದ ನಿ
ರ್ಗುಣಮುನೀಶ್ವರನಿಳಿದನಿಂದ್ರಪ್ರಸ್ಥಪುರವರಕೆ ೨೪
ಪದವಿಭಾಗ-ಅರ್ಥ: ದಣಿಯದ+ ಆತನ ಬೆರಳು ನಾರಾಯಣ ರವದ(ಶಬ್ದದ) ವೀಣೆಯಲಿ, ಹೃದಯ+ ಅಂಗಣದ ಸೀಮೆಗೆ (ಕೋಣೆ- ಅಂಕಣದ ಪ್ರದೇಶಕ್ಕೆ- ಸ್ಥಳಕ್ಕೆ) ಬಿಡಯವಾಗದು(ವಿಶ್ರಾಂತಿ, ಸಂಕೋಚವಾಗದು) ಕೃಷ್ಣಪದ ಕೇಳಿ ಪ್ರಣವರೂಪದ (ಪ್ರಣವ- ಓಂಕಾರ) ಭಾವಶುದ್ಧಿಯ ಕಣಿ(ಕಾಣ್ಕೆ ) ಮುರಾರಿಯ ತನ್ಮಯದ ನಿರ್ಗುಣ ಮುನೀಶ್ವರನು+ ಇಳಿದನು+ ಇಂದ್ರಪ್ರಸ್ಥ ಪುರವರಕೆ(ವರ- ಶ್ರೇಷ್ಠ).
ಅರ್ಥ:ನಾರದನು ವೀಣೆಯನ್ನು ನುಡಿಸುತ್ತಿದ್ದೆರೆ, ನಾರಾಯಣ ಶಬ್ದವನ್ನು ವೀಣೆಯಲ್ಲಿ ನುಡಿಸುವ ಬೆರಳು ಆತನ ದಣಿಯದು. ನಾರಾಯಣ ಶಬ್ದ ತುಂಬಿದ ಅವನ ಹೃದಯದ ಅಂಗಣದ ಸೀಮೆಗೆ ವಿಶ್ರಾಂತಿ ಇರುವುದಿಲ್ಲ. ಕೃಷ್ಣಪದವನ್ನು ಕೇಳಿ ಪ್ರಣವರೂಪದ ಭಾವಶುದ್ಧಿಯ ಕಾಣ್ಕೆಯು ಮುರಾರಿಯಲ್ಲಿ ತನ್ಮಯನಾಗಿರುವ ನಿರ್ಗುಣ ಮುನೀಶ್ವರ ನಾರದನು ಇಂದ್ರಪ್ರಸ್ಥ ವರ ಪುರಕ್ಕೆ ಇಳಿದನು.
ಬಂದನರಮನೆಗಾ ಮುನಿಯನಭಿ
ವಂದಿಸಿದುದಾಸ್ಥಾನವಿದಿರಲಿ
ನಿಂದುಬಿಜಯಂಗೈಸಿ ತಂದರು ಸಿಂಹವಿಷ್ಟರಕೆ |
ಸಂದ ಮಧುಪರ್ಕಾದಿ ಸತ್ಕೃತಿ
ಯಿಂದ ಪೂಜಿಸಿ ವಿನಯ ಮಿಗೆ ನಗು
ತೆಂದನವನೀಪಾಲನುಚಿತೋಕ್ತಿಯಲಿ ನಾರದನ || ೨೫ ||
ಪದವಿಭಾಗ-ಅರ್ಥ:ಬಂದನು+ ಅರಮನೆಗೆ+ ಆ ಮುನಿಯನು+ ಅಭಿವಂದಿಸಿದುದು+ ಆಸ್ಥಾನವು+ ಇದಿರಲಿ ನಿಂದು ಬಿಜಯಂಗೈಸಿ(ಬರಮಾಡಿಕೊಂಡು) ತಂದರು ಸಿಂಹ ವಿಷ್ಟರಕೆ(ಸಿಂಹಾಸನಕ್ಕೆ) ಸಂದ (ಕೊಟ್ಟ) ಮಧುಪರ್ಕಾದಿ ಸತ್ಕೃತಿಯಿಂದ ಪೂಜಿಸಿ, ವಿನಯ ಮಿಗೆ (ಬಹಳ) ನಗುತ+ ಎಂದನು+ ಅವನೀಪಾಲನು (ರಾಜನು)+ ಉಚಿತೋಕ್ತಿಯಲಿ ನಾರದನ.
ಅರ್ಥ:ಆಕಾಶದಿಂದ ಇಳಿದ ನಾರದನು ಧರ್ಮಜನ ಅರಮನೆಗೆ ಬಂದನು. ಆ ಮುನಿಯನ್ನು ಧರ್ಮಜನು ಮತ್ತು ಆಸ್ಥಾನವು ಅಭಿವಂದಿಸಿತು. ಪಾಂಡವರು ಮುನಿಯ ಎದುರಲ್ಲಿ ನಿಂತು ಬರಮಾಡಿಕೊಂಡು ಮುನಿಯನ್ನು ಸಿಂಹಾಸನಕ್ಕೆ ಕರೆತಂದರು. ಮಧುಪರ್ಕ ಮೊದದಲಾದ ಸತ್ಕಾರಗಳೊಡನೆ ಸತ್ಕೃತಿಯಿಂದ ಪೂಜಿಸಿ, ಬಹಳ ವಿನಯದಿಂದ ನಗುತ್ತಾ ರಾಜನು ಉಚಿತ ಮಾತಿನಲ್ಲಿ ನಾರದನನ್ನು ಕುರಿತು ಹೀಗೆಂದನು.
ಕುಶಲವೇ ನಿಮ್ಮಂಘ್ರಿಗಳಿಗಿಂ
ದೊಸಗೆಯಾಯಿತು ನಮಗೆ ದರುಶನ
ವಸಮ ಸಂಸ್ಕೃತಿ ವಹ್ನಿದಗ್ಧರಿಗಮೃತ ವರ್ಷವಲೆ |
ಪಶುಪತಿಯ ಪರಮೇಷ್ಠಿಯಾ ಮುರ
ದ್ವಿಷನ ಸಾಮರ್ಥ್ಯದ ಸಗಾಢದ
ದೆ(ಎ)ಸಕ ನಿಮಗುಂಟೆಂದು ಕೊಂಡಾಡಿದನು ನಾರದನ || ೨೬ ||
ಪದವಿಭಾಗ-ಅರ್ಥ:ಕುಶಲವೇ ನಿಮ್ಮ+ ಅಂಘ್ರಿಗಳಿಗೆ (ನಿಮ್ಮಪಾದಗಳಿಗೆ- ಎನ್ನುವುದು ವಿನಯ ಸೂಚಕ - ನಿಮಗೆ)+ ಇಂದು+ ಒಸಗೆಯಾಯಿತು (ಶುಭ, ಮಂಗಳಕಾರ್ಯ, ಕಾಣಿಕೆ, ಉಡುಗೊರೆ) ನಮಗೆ ದರುಶನವು+ ಅಸಮಸಂಸ್ಕೃತಿ(ಸಂಸ್ಕೃತಿ ಕೊರತೆಯೆಂಬ) ವಹ್ನಿದಗ್ಧರಿಗೆ(ವಹ್ನಿ- ಬೆಂಕಿ, ದಗ್ಧ- ಸುಟ್ಟಿರುವುದು)+ ಅಮೃತ ವರ್ಷವಲೆ(ಮಳೆ) ಪಶುಪತಿಯ ಪರಮೇಷ್ಠಿಯ+ ಆ ಮುರದ್ವಿಷನ(ಮುರ- ನರಕಾಸುರನ ಪರಿವಾರದಲ್ಲಿದ್ದ ಒಬ್ಬ ರಾಕ್ಷಸ, ವಿಷನ- ಸಂಹರಿಸಿದವನ) ಸಾಮರ್ಥ್ಯದ ಸಗಾಢದ (ಹೆಚ್ಚಾದ, ಅತಿಶಯವಾದ)+ ಅದು+ ಎಸಕ(ಕಾಂತಿ, ತೇಜಸ್ಸು, ಸೊಬಗು, ಶೋಭೆ, ವೈಭವ,) ನಿಮಗೆ+ ಉಂಟೆಂದು ಕೊಂಡಾಡಿದನು ನಾರದನ.
ಅರ್ಥ:ಧರ್ಮಜನು ನಾರದರನ್ನು ಸಂಪ್ರದಾಯದಂತೆ, ಈ ದಿನಗಳಲ್ಲಿ ನಿಮ್ಮಪಾದಗಳಿಗೆ ಕುಶಲವೇ ಎಂದು ವಿಚಾರಿಸಿದನು. 'ನಮಗೆ ನಿಮ್ಮ ದರ್ಶನವು ಒಂದು ಶುಭದ ಉಡುಗೊರೆಯಾಯಿತು. ಸಂಸ್ಕೃತಿಯ ಕೊರತೆಯೆಂಬ ಬೆಂಕಿಯಲ್ಲಿ ಸುಟ್ಟಿರುವ ನಮಗೆ ಅಮೃತದ ಮಳೆಸುರಿದಂತಾಯಿತು. ನೀವು ಪಶುಪತಿಯೂ ಪರಮೇಷ್ಠಿಯೂ ಆದ ಮತ್ತು ಮುರನನ್ನು ಸಂಹರಿಸಿದವ ಶಿವನ ಸಾಮರ್ಥ್ಯದ ಅತಿಶಯವಾದ ತೇಜಸ್ಸು ನಿಮಗೆ ಉಂಟು,' ಎಂದು ನಾರದನನ್ನು ಕೊಂಡಾಡಿದನು.
ಕುಶಲವೆಮಗಿಂದೈದೆ ನೀನೀ
ವಸುಮತೀವಧುಗೊಳ್ಳಿದನೆ ಶೋ
ಭಿಸುವುದೇ ಭವದಾಜ್ಞೆಯಲಿ ವರ್ಣಾಶ್ರಮಾಚಾರ |
ದೆಸೆದೆಸೆಗಳಮಳಾಗ್ನಿಹೋತ್ರ
ಪ್ರಸರ ಧೂಮಧ್ವಜಗಳೇ ನಿಂ
ದಿಸರಲೇ ದುರ್ಜನರು ಸುಜನನರನೆಂದನಾ ಮುನಿಪ || ೨೭ ||
ಪದವಿಭಾಗ-ಅರ್ಥ: ಕುಶಲವು+ ಎಮಗೆ+ ಇಂದು+ ಐದೆ(ಬಂದಿರುವುದು) ನೀನು+ ಈ ವಸುಮತೀ ವಧುಗೆ (ಭೂಮಿಪತಿ- ರಾಜ; ಭೂಮಿಗೆ)+ ಒಳ್ಳಿದನೆ ಶೋಭಿಸುವುದೇ ಭವದ+ ಆಜ್ಞೆಯಲಿ (ಭವ- ನಿನ್ನ) ವರ್ಣಾಶ್ರಮಾಚಾರ ದೆಸೆದೆಸೆಗಳ (ಎಲ್ಲಾದಿಕ್ಕಿನಲ್ಲಿ)+ ಅಮಳ+ ಅಗ್ನಿಹೋತ್ರ ಪ್ರಸರ(ಪ್ರಸರ - ಸಮೂಹ, ವಿಸ್ತಾರ) ಧೂಮಧ್ವಜಗಳೇ ನಿಂದಿಸರಲೇ ದುರ್ಜನರು ಸುಜನನರನು+ ಎಂದನಾ ಮುನಿಪ
ಅರ್ಥ:ನಾರದನು,ನಾವು ಕುಶಲವು; ನಮಗೆ ಇಂದು ಇಲ್ಲಿಗೆ ಬಂದಿರುವ ಅಗತ್ಯವೇನೆಂದರೆ ನಿನ್ನು ವಿಚಾರಿಸುವುದು; ನೀನು ಈ ಭೂಮಿಗೆ ರಾಜನಾಗಿರುವುದು, ಜನರ ದೃಷ್ಟಿಯಲ್ಲಿ ಒಳಿತಾಗಿ ಶೋಭಿಸುವುದೇ? ನಿನ್ನ ಆಜ್ಞೆಯಲ್ಲಿ ವರ್ಣಾಶ್ರಮದ ಆಚಾರಗಳು ದಿಕ್ಕು ದಿಕ್ಕಿನಲ್ಲಿ ಅಮಲ- ಪರಿಶುದ್ದ ಅಗ್ನಿಹೋತ್ರಗಳ ಸಮೂಹಗಳು ಮಅಡಿದ ಯಜ್ನದ ಹೊಗೆ ಧೂಮಧ್ವಜಗಳಾಗಿ ಕಾಣುತ್ತಿವೆಯೇ? (ಎಲ್ಲಾಕಡೆ ಯಜ್ಞಯಾಗಗಲು ನೆಡೆಯುತ್ತಿವೆಯೇ?); ದುರ್ಜನರು ಸುಜನರನ್ನು , ನಿನ್ನನ್ನು, ನಿಂದಿಸುವುದಿಲ್ಲ ಅಲ್ಲವೇ? ಎಂದನು ಆ ಮುನಿಪ
ಅರ್ಥದಿಂ ಧರ್ಮವನು ಧರ್ಮದಿ
ನರ್ಥವನು ಧರ್ಮಾರ್ಥವೆರಡನು
ವ್ಯರ್ಥಕಾಮದಲಳಿಯಲೇ ರಾಜ್ಯಾಭಿಲಾಷೆಯಲಿ |
ಅರ್ಥಸಾಧನ ಧರ್ಮಸಾಧನ
ವರ್ಥಧರ್ಮದಲುಭಯಲೋಕಕ
ನರ್ಥಸಾಧನ ಕಾಮವೆಂದನು ಮುನಿ ನೃಪಾಲಂಗೆ ೨೮
ಪದವಿಭಾಗ-ಅರ್ಥ: ಅರ್ಥದಿಂ (ಅರ್ಥ - ಹಣ - ಸಂಪತ್ತು) ಧರ್ಮವನು ಧರ್ಮದಿಂ+ ನ+ ಅರ್ಥವನು, ಧರ್ಮ+ ಅರ್ಥವ+ ಎರಡನು ವ್ಯರ್ಥಕಾಮದಲಿ (ಉಪಯೋಗವಿಲ್ಲದ ಆಸೆಗಾಗಿ)+ ಅಳಿಯಲೇ(ಅಳಿಯಲೇ?- ಅಳಿಯಲು ಬಿಡದೆ' ನಾಶಮಾಡದೆ) ರಾಜ್ಯಾಭಿಲಾಷೆಯಲಿ (ರಾಜ್ಯವನ್ನು ಪಡೆಯುವ ಆಸೆಯಲ್ಲಿ) ಅರ್ಥಸಾಧನ ಧರ್ಮಸಾಧನವು+ ಅರ್ಥ-ಧರ್ಮದಲಿ+ ಉಭಯಲೋಕಕೆ+ ಅನರ್ಥಸಾಧನ ಕಾಮವು+ ಎಂದನು ಮುನಿ ನೃಪಾಲಂಗೆ. (ಅಧ್ಯಾಹಾರವೆಂದು ಅನೇಕ ಪದಗಳನ್ನು ಸೇರಿಸಿಕೊಳ್ಳಬೇಕಾಗುವುದು.)
ಅರ್ಥ: ನಾರದ ಮುನಿಯು ನೃಪಾಲನಿಗೆ,'ಅರ್ಥದಿಂದ ಧರ್ಮವನ್ನೂ, ಧರ್ಮದಿಂದ ಅರ್ಥ- ಸಂಪತ್ತನ್ನೂ ಪಡೆಯಬೇಕು; ಧರ್ಮ ಮತ್ತು ಅರ್ಥ ಇವೆರಡನ್ನೂ ಉಪಯೋಗವಿಲ್ಲದ ಆಸೆ ಪೂರೈಕೆಗಾಗಾಗಿ ರಾಜ್ಯವನ್ನು ಪಡೆಯುವ, ವಿಸ್ತರಿಸುವ ಆಸೆಯಲ್ಲಿ ಅಥವಾ ಭೊಗಲಾಲಸೆಯಲ್ಲಿ (ಧರ್ಮ ಮತ್ತು ಅರ್ಥಗಳನ್ನು) ನಾಶಮಾಡದೆ ಇರಬೇಕು; ಅರ್ಥಸಾಧನವು ಧರ್ಮಸಾಧನವಾಗತಕ್ಕದ್ದು. ಅರ್ಥವು-ಸಂಪತ್ತು ಧರ್ಮದಲ್ಲಿ ಇರುವುದು ಉಭಯಲೋಕಕ್ಕೆ- ಇಹ ಮತ್ತು ಪರಕ್ಕೆ ಸಾಧನವು; ಕಾಮವು- ಯಾವುದೇ ಅತಿಯಾಸೆಯು ಅನರ್ಥಸಾಧನವಾಗುವುದು ಎಂದನು.
ಮಾನ್ಯರನು ಧಿಕ್ಕರಿಸೆಯಲೆಯವ
ಮಾನ್ಯರನು ಮನ್ನಿಸೆಯಲೇ ಸಂ
ಮಾನ್ಯರನು ಸತ್ಕರಿಸುವಾ ಹಳಿವಾ ವಿಕಾರಿಗಳ |
ಅನ್ಯರನು ನಿನ್ನವರ ಮಾಡಿಯ
ನನ್ಯರನು ಬಾಹಿರರ ಮಾಡಿವ
ದಾನ್ಯರನು ನಿಗ್ರಹಿಸೆಯೆಲೆ ಭೂಪಾಲ ಕೇಳೆಂದ || ೨೯ ||
ಪದವಿಭಾಗ-ಅರ್ಥ: ಮಾನ್ಯರನು(ಮಾನವಂತರನ್ನು) ಧಿಕ್ಕರಿಸೆಯಲೆ (ಎಯಲೆ ಯಲೆ= ಎಲೆ?;- ಈಯದೆ/- ಧಿಕ್ಕರಿಸದೆ)+ ಯ+ ಅವಮಾನ್ಯರನು ಮನ್ನಿಸೆಯಲೇ(ಅಯೋಗ್ಯರನ್ನು ಮನ್ನಿಸದೆ); ಸಂಮಾನ್ಯರನು (ಯೋಗ್ಯರನ್ನು) ಸತ್ಕರಿಸುವ+ ಆ ಹಳಿವ (ದೂರುವ)+ ಆ ವಿಕಾರಿಗಳ ಅನ್ಯರನು ನಿನ್ನವರ ಮಾಡಿಯನೆ (ಮಾಡದೆ೦+ ಅನ್ಯರನು ಬಾಹಿರರ ಮಾಡಿವದ+ ಅನ್ಯರನು ನಿಗ್ರಹಿಸೆಯೆ+ ಎಲೆ ಭೂಪಾಲ ಕೇಳೆಂದ
ಅರ್ಥ:ನಾರದನು ರಾಜನೇ,'ಮಾನವಂತರನ್ನು ಧಿಕ್ಕರಿಸದೆ, ಮಾನವಂತರಲ್ಲದ ಅವಮಾನ್ಯರನ್ನು- ಅಯೋಗ್ಯರನ್ನು ಮನ್ನಿಸದೆ ಇರಬೇಕು; ಸಂಮಾನ್ಯರದವರನ್ನು ಯೋಗ್ಯರನ್ನು ಸತ್ಕರಿಸಬೇಕು. ಆ ದೂರುವ- ಪರನಿಂದೆಮಾಡುವ ಆ ವಿಕಾರಿಗಳಾದ ಅನ್ಯರನ್ನು ನಿನ್ನ ಆಪ್ತರನ್ನಾಗಿ ಮಾಡದೆ ಇರಬೇಕು. ಆಪ್ತರಾಗಲು ಯೋಗ್ಯರಲ್ಲದ ಅನ್ಯರನ್ನು ಬಾಹಿರರಾಗಿ - ದೂರದಲ್ಲಿರುವಂತೆ ಮಾಡಿ, ಆ ಅನ್ಯರನು ನಿಗ್ರಹಿಸು, ಎಲೆ ಭೂಪಾಲ,' ಕೇಳು+ ಎಂದ.
ಖಳರ ಖಂಡಿಸುವಾ ಮದವ್ಯಾ
ಕುಲರ ದಂಡಿಸುವಾ ದರಿದ್ರರ
ನೊಲಿದು ರಕ್ಷಿಸುವಾ ಸುಮಾಯಾವಿಗಳ ಶಿಕ್ಷಿಸುವ
ಕುಲಯುತರ ಕೊಂಡಾಡುವಾ ರಿಪು
ಬಲದ ತಲೆ ಚೆಂಡಾಡುವಾ ದು
ರ್ಬಲರನತಿ ಬಾಧಿಸೆಯಲೇ ಭೂಪಾಲ ಕೇಳೆಂದ ೩೦
ಪದವಿಭಾಗ-ಅರ್ಥ: ಖಳರ ಖಂಡಿಸುವಾ(ದುಷ್ಟರನ್ನು ನಾಶಮಾಡುವ), ಮದವ್ಯಾಕುಲರ ದಂಡಿಸುವಾ(ಅಹಂಕಾರದ ದೋಷಹೊಂದಿದ ಶಿಕ್ಷಿಸುವ) ದರಿದ್ರರನು+ ಒಲಿದು(ಪ್ರೀತಿಯಿಂದ) ರಕ್ಷಿಸುವಾ, ಸು- ಮಾಯಾವಿಗಳ(ಮಾತಿನಿಂದ ಮರುಳುಮಾಡು ಅವರು) ಶಿಕ್ಷಿಸುವ; ಕುಲಯುತರ ಕೊಂಡಾಡುವಾ (ಉತ್ತಮ ಕುಲದವನ್ನು ಹೊಗಳುವ,) ರಿಪುಬಲದ(ಶತ್ರು ಸೇನೆಯ) ತಲೆ ಚೆಂಡಾಡುವಾ- (ನಾಶಮಾಡುವ) ದುರ್ಬಲರನು+ ಅತಿ ಬಾಧಿಸೆಯಲೇ(ಯಲೇ- ಬಾಧಿಸದೆ) ಭೂಪಾಲ ಕೇಳೆಂದ
ಅರ್ಥ: ನಾರದನು ಧರ್ಮಜನನ್ನು ಕುರಿತು, 'ದುಷ್ಟರನ್ನು ನಾಶಮಾಡುವ, ಮದದಿಂದ ಮನಸ್ಸನ್ನು ಕೆಡಿಸಿಕೊಂಡವರನ್ನು (ಅಹಂಕಾರದ ದೋಷಹೊಂದಿದವರನ್ನು ಶಿಕ್ಷಿಸುವ ಕೆಲಸವನ್ನು ಮಾಡುತ್ತಿರುವೆಯಾ? ದರಿದ್ರರನ್ನು ಪ್ರೀತಿಯಿಂದ ರಕ್ಷಿಸುವವುದು, ಮಾತಿನಿಂದ ಜನರನ್ನು ಮರುಳುಮಾಡುವವರನ್ನು ಶಿಕ್ಷಿಸುವುದು; ಸತ್ಕುಲಯುತರನ್ನು ಕೊಂಡಾಡುವವು, ಶತ್ರು ಸೇನೆಯವರ ತಲೆಯನ್ನು ತೆಗೆಯುವುದು, ದುರ್ಬಲರನ್ನು ಅತಿ ಬಾಧಿಸದಿರುವುದು, ಇವುಗಳನ್ನು ಪಾಲಿಸುತ್ತಿರು,' ಎಂದ
ಜಾತಿಸಂಕರವಿಲ್ಲಲೇ ಜನ
ಜಾತದಲಿ ಹೀನೋತ್ತಮರು ನಿ
ರ್ಣೀತರೇ ನಿಜಮಾರ್ಗದಲಿ ಕುಲವಿಹಿತ ಧರ್ಮದಲಿ|
ಖ್ಯಾತರೇ ಸತ್ಪುರುಷರಧಿಕ
ದ್ಯೂತಕೇಳಿಗಳಿಲ್ಲಲೇ ಮೃಗ
ಯಾತಿರೇಕವ್ಯಸನ ಕಿರಿದೇ ರಾಯ ನಿನಗೆಂದ || ೩೧ ||
ಪದವಿಭಾಗ-ಅರ್ಥ:ಜಾತಿಸಂಕರವಿಲ್ಲಲೇ (ಜಾತಿಸಂಕರವಿಲ್ಲ ಅಲ್ಲವೇ?- ಲೇ) ಜನ ಜಾತದಲಿ(ಹುಟ್ಟಿನಲ್ಲಿ) ಹೀನ+ ಉತ್ತಮರು ನಿರ್ಣೀತರೇ? ನಿಜ (ತಮ್ಮ)ಮಾರ್ಗದಲಿ ಕುಲವಿಹಿತ ಧರ್ಮದಲಿ ಖ್ಯಾತರೇ? ಸತ್ಪುರುಷರು+ ಅಧಿಕ ದ್ಯೂತಕೇಳಿಗಳಿಲ್ಲಲೇ(ಇಲ್ಲವಲ್ಲವೇ?) ಮೃಗ ಯಾ+ ಅತಿರೇಕ ವ್ಯಸನಕೆ ಇರಿದೇ?(ಅವಕಾಶ ಇರದು ಅಲ್ಲವೇ?) ರಾಯ ನಿನಗೆಂದ.
ಅರ್ಥ:ನಾರದನು ರಾಜನನ್ನು ಕುರಿತು,'ನಿನ್ನ ರಾಜ್ಯದಲ್ಲಿ ಜಾತಿಸಂಕರವಿಲ್ಲ ಅಲ್ಲವೇ? ಹುಟ್ಟಿದವರಲ್ಲಿ, ಹುಟ್ಟಿನಲ್ಲಿ ಹೀನರು, ಉತ್ತಮರು ಎಂದು ನಿರ್ಣಯವಾಗಿರುವರೇ? ಸತ್ಪುರುಷರು ಅವರ ತಮ್ಮ ಕುಲಧರ್ಮದ ಕುಲವಿಹಿತವಾದ ಧರ್ಮದಲ್ಲಿ ನೆಡೆದು ಖ್ಯಾತರಾಗಿರುವರೇ? ರಾಜ್ಯದ ಜನರಲ್ಲಿ ಅಧಿಕ ದ್ಯೂತಕೇಳಿಗಳು ಇಲ್ಲವಲ್ಲವೇ? ನಿನಲ್ಲಿ ಮೃಗ ಬೇಟೆಯಯ ಅತಿರೇಕ ವ್ಯಸನಕ್ಕೆ ಅವಕಾಶ ಇರದು ಅಲ್ಲವೇ?' ಎಂದ.
ಗಸಣಿಯಿಲ್ಲಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡಧರ್ಮದಲಿರದಲೇ ವೈದಿಕ ವಿಧಾನದಲಿ |
ಸಸಿನವೇ ನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಞರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ || ೩೨ ||
ಪದವಿಭಾಗ-ಅರ್ಥ:ಗಸಣಿಯಿಲ್ಲಲೆ (ತೊಂದರೆ) ನಿನಗೆ ಸಪ್ತವ್ಯಸನದಲಿ(ಏಳು ಬಗೆಯ ಕೆಟ್ಟಹವ್ಯಾಸ- ಸ್ತ್ರೀ, ಅಕ್ಷ, ಮೃಗಯ, ಪಾನ, ವಾಕ್ಪಾರುಷ್ಯ, ದಂಡಪಾರುಷ್ಯ ಮತ್ತು ಅರ್ಥದೂಷಣೆ ಎಂಬ ಏಳು ಬಗೆಯ ಗೀಳು, ದುರಭ್ಯಾಸ) ನಿನ್ನ+ ಅನುಜ ತನುಜರ (ತಮ್ಮಂದಿರು ಮತ್ತು ಮಕ್ಕಳ) ಮುಸುಡ ಧರ್ಮದಲಿರದಲೇ (ಮುಖದಾಕ್ಷಿಣ್ಯದ ಧರ್ಮದಲ್ಲಿ ಇರದೆ ಇರುವೆಯಲ್ಲವೇ) ವೈದಿಕ ವಿಧಾನದಲಿ ಸಸಿನವೇ(ನೇರ; ಸರಿಹೊಂದುವ; ಯುಕ್ತವಾಗಿದೆಯೇ?) ನಿನ್ನ+ ಅರಿತ(ಪರಿಚಿತ) ಖಳರಿಗೆ ಹುಸಿಕರಿಗೆ(ಸುಳ್ಳುಬುರಕರು) ಡಂಬಕರಿಗೆ (ತಮಗಿಲ್ಲದ ಗುಣವನ್ನು ಇದೆ ಎಂದು ತೋರಿಸಿಕೊಂಡು ಜಂಬಪಡುವವರು)+ ಅಜ್ಞರಿಗೆ(ದಡ್ಡರಿಗೆ) ಉಸುರುವಾ(ಉಸುರು- ಹೇಳು,ವಾ- ಕೂಡದು) ನಿನ್ನಂತರಂಗವನು+ ಎಂದನು+ ಆ ಮುನಿಪ
ಅರ್ಥ:ನಾರದನು ಧರ್ಮಜನನ್ನು ಕುರಿತು,' ನಿನಗೆ ಸಪ್ತವ್ಯಸನದ ಗೀಳು ತೊಂದರೆ ಇಲ್ಲವಲ್ಲವೇ? ನಿನ್ನ ಸೋದರರ, ಮತ್ತು ಮಕ್ಕಳ ಮುಖದಾಕ್ಷಿಣ್ಯದ ಧರ್ಮದಲ್ಲಿ ಇರದೆ ಇರುವೆಯಲ್ಲವೇ? ವೈದಿಕ ವಿಧಾನದಲಿ ಸರಿಹೊಂದುವರೀತಿ ನೆಡೆಯುವೆಯಾ? ನಿನ್ನ ಪರಿಚಿತ ದುಷ್ಟರಿಗೆ ಸುಳ್ಳರಿಗೆ ಡಂಬಕರಿಗೆ. ಅಜ್ಞರಿಗೆ ನಿನ್ನ ಅಂತರಂಗವನನ್ನು ಹೇಳಕೂಡದು,' ಎಂದನು.
ಹುರುಡಿಗರನೇಕಾಂತದೊಳಗಾ
ದರಿಸುವರು ಭೇದಕರ ಬುದ್ಧಿಗೆ
ತೆರಹುಗೊಡುವರು ಕುಟಿಲರಿಗೆ ವಿಶ್ವಾಸಹೀನರಿಗೆ |
ಮರುಳುಗೊಂಬರು ಖೂಳರಿಗೆ ಭಂ
ಡರಿಗೆ ತೆರುವರು ಧನವನೀ ಧರೆ
ಯರಸುಗಳಿಗಿದು ಸಹಜ ನಿನ್ನಂತಸ್ಥವೇನೆಂದ || ೩೩ ||
ಪದವಿಭಾಗ-ಅರ್ಥ: ಹುರುಡಿಗರನು (ಹುರುಡು- ಶಕ್ತಿ, ಸಾಮರ್ಥ್ಯ; ಮತ್ಸರ; ಪೈಪೋಟಿ, ಸ್ಪರ್ಧೆ)+ ಏಕಾಂತದೊಳಗೆ+ ಆದರಿಸುವರು, ಭೇದಕರ (ಆತ್ಮಿಯರನ್ನು ದೂರಮಾಡುವವರು) ಬುದ್ಧಿಗೆ ತೆರಹುಗೊಡುವರು (ಅವಕಾಶ ಕೊಡುವರು; ತೆರಹು- ವಿರಾಮ + ಕೊಡುವರು), ಕುಟಿಲರಿಗೆ ವಿಶ್ವಾಸ ಹೀನರಿಗೆ ಮರುಳುಗೊಂಬರು, ಖೂಳರಿಗೆ ಭಂಡರಿಗೆ ತೆರುವರು ಧನವನು (ಹಣವನ್ನು)+ ಈ ಧರೆಯ(ಭೂಮಿಯ)+ ಅರಸುಗಳಿಗೆ+ ಇದು ಸಹಜ, ನಿನ್ನ+ ಅಂತಸ್ಥವು(ಅಂತರಂಗ, ನಿಗೂಢ,ಗುಪ್ತ)+ ಏನು+ ಎಂದ.
ಅರ್ಥ:ನಾರದನು, ಈ ಭೂಮಿಯ ಅರಸುಗಳು, ಶಕ್ತಿವಂತರಿಗೆ ಹೆದರಿ ಏಕಾಂತದಲ್ಲಿ ಆದರಿಸುವರು. ಆತ್ಮಿಯರ ಮನಸ್ಸನ್ನ್ನು ಒಡೆದು ದೂರಮಾಡುವವರ ಬುದ್ಧಿವಂತಿಕೆಗೆ ಅವಕಾಶ ಕೊಡುವರು. ಕುತಂತ್ರಮಾಡುವ ಕುಟಿಲರಿಗೆ ವಿಶ್ವಾಸ ಹೀನರಿಗೆ ಮರುಳಾಗುವರು, ದುಷ್ಟರಾದ ಖೂಳರಿಗೆ ಭಂಡರಿಗೆ ಹಣವನ್ನು ಕೊಡುವರು. ಈ ಧರೆಯ ಅರಸುಗಳಿಗೆ ಇದು ಸಹಜ. ನಿನ್ನ ಅಂತರಂಗದ ನೆಡೆ ಹೇಗೆ, ಏನು?' ಎಂದ.
ಒಳಗೆ ಕುಜನರು ಹೊರಗೆ ಧರಣೀ
ವಳಯಮಾನ್ಯರು ಛತ್ರಚಮರದ
ನೆಳಲು ಖೂಳರಿಗಾತಪದ ಬಲುಬೇಗೆ ಬುಧಜನಕೆ |
ಒಳಗೆ ರಾಜದ್ರೋಹಿಗಳು ಹೊರ
ವಳಯದಲಿ ಪತಿಕಾರ್ಯನಿಷ್ಠರು
ಬಳಸಿಹುದು ನೃಪಚರಿತ ನಿನ್ನಂತಸ್ಥವೇನೆಂದ || ೩೪ ||
ಪದವಿಭಾಗ-ಅರ್ಥ: ಒಳಗೆ ಕುಜನರು(ದುಷ್ಟರು,) ಹೊರಗೆ ಧರಣೀವಳಯದ ಮಾನ್ಯರು (ರಾಜ್ಯದ ಸಜ್ಜನ ಮಾನವಂತರು) ಛತ್ರಚಮರದ(ಚಾಮರ-) ನೆಳಲು(ರಾಜನ ಸಮೀಪದ) ಖೂಳರಿಗೆ ಆತಪದ(ಆಶ್ರಯ,ಆತಪ- ಬಿಸಿಲು) ಬಲುಬೇಗೆ (ದೊಡ್ಡ ಸಂಕಟ) ಬುಧಜನಕೆ (ಪಂಡಿತರು, ಬ್ರಾಹ್ಮಣರಿಗೆ) ಒಳಗೆ ರಾಜದ್ರೋಹಿಗಳು ಹೊರವಳಯದಲಿ( ದೂರದಲ್ಲಿ) ಪತಿಕಾರ್ಯನಿಷ್ಠರು (ಸ್ವಾಮಿನಿಷ್ಠರು) ಬಳಸಿಹುದು ನೃಪಚರಿತ ನಿನ್ನಂತಸ್ಥವು ಏನೆಂದ.
ಅರ್ಥ:ನಾರದನು ಧರ್ಮರಾಜನೇ,'(ಅನೇಕ ಕಡೆ,) ರಾಜನ ಸಮೀಪದಲ್ಲಿ ದುಷ್ಟರು, ರಾಜನಿಂದ ದೂರದಲ್ಲಿ ಹೊರಗೆ ರಾಜ್ಯದ ಸಜ್ಜನ ಮಾನವಂತರು ಇರುವರು. ರಾಜನ ಸಮೀಪದಲ್ಲಿ ಖೂಳರಿಗೆ ಆಶ್ರಯವಾದರೆ, ಸಜ್ಜನರು, ಪಂಡಿತರು, ಬ್ರಾಹ್ಮಣರಿಗೆ ದೊಡ್ಡ ಸಂಕಟವು; ರಾಜನ ಅಂತರಂಗದ ಜನರಲ್ಲಿ ರಾಜದ್ರೋಹಿಗಳೂ, ಹೊರವಲಯದಲ್ಲಿ ರಾಜಕಾರ್ಯನಿಷ್ಠರು- ಸ್ವಾಮಿನಿಷ್ಠರೂ ಬಳಸಿರುವುದು ಸಾಮಾನ್ಯರಾಜರ ಚರಿತವಾಗಿರುವುದು. ನಿನ್ನ ಅಂತಸ್ಥವು- ಒಳ ಹೊರಗಿನ ಜನ ಸಂಬಂಧದ ಸ್ಥಿತಿ ಏನು,' ಎಂದ.
ಖೂಳರೊಡನೆ ವಿನೋದ ಭಂಡರೊ
ಳಾಳಿ ಸ್ವಾಮಿದ್ರೋಹರೊಡನೆ ಸ
ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ |
ಸೂಳೆಯರು ಸಮಜೀವಿಗಳು ಕುಲ
ಬಾಲಕಿಯರೋಗಡಿಕೆಯವರು ನೃ
ಪಾಲಜನಕಿದು ಸಹಜ ನಿನ್ನಂತಸ್ಥವೇನೆಂದ || ೩೫ ||
ಪದವಿಭಾಗ-ಅರ್ಥ: ಖೂಳರೊಡನೆ(ಖೂಳ- ದುಷ್ಟ, ನೀಚ) ವಿನೋದ, ಭಂಡರೊಳು ಆಳಿ(ಉದಾಸೀನ, ಗೆಳತನ), ಸ್ವಾಮಿದ್ರೋಹರೊಡನೆ ಸಮೇಳ (ಸಹವಾಸ), ನಂಬುಗೆ ಡಂಭರೊಡನೆ, ವಿಕಾರಿಯ+ ಒಡನಾಟ; ಸೂಳೆಯರು ಸಮಜೀವಿಗಳು, ಕುಲಬಾಲಕಿಯರೋ ಗಡಿಕೆಯವರು, ನೃಪಾಲಜನಕೆ+ ಇದು ಸಹಜ, ನಿನ್ನ+ ಅಂತಸ್ಥವು+ ಏನು+ ಎಂದ.
ಅರ್ಥ:ನಾರದನು ಧರ್ಮಜನಿಗೆ,'ಖೂಳರೊಡನೆ ವಿನೋದವಾಗಿರುವುದು, ಭಂಡರೊಡನೆ ಗೆಳತನ, ಸ್ವಾಮಿದ್ರೋಹರೊಡನೆ ಸಹವಾಸ- ನಂಬುಗೆ, ಡಂಭರೊಡನೆ, ವಿಕಾರಿಯೊಡನೆ- ಸಜ್ಜನಿಕೆ ಇಲ್ಲದವನೊಡನೆ ಒಡನಾಟ; ಸೂಳೆಯರು ಸಮಜೀವಿಗಳು, ಕುಲಬಾಲಕಿಯರನ್ನು ಗಣಿಕೆಯವರಂತೆ ನೋಡುವುದು, ನೃಪಾಲಜನರಿಗೆ- ರಾಜರಿಗೆ ಇದು ಸಹಜ, ನಿನ್ನ ಅಂತಸ್ಥವು- ಸ್ಥಾನವುಹೇಗಿದೆ? ಏನು? ಎಂದ.
ಆರು ಗುಣದೊಳುಪಾಯ ನಾಲ್ಕರೊ
ಳೇರಿಹುದೆ ಮನ ರಾಜಧರ್ಮದ
ಮೂರುವರ್ಗದೊಳೆಚ್ಚರುಂಟೇ ನಯವಿಧಾನದಲಿ |
ಮೂರು ಶಕ್ತಿಗಳೊಳಗೆ ಮನ ಬೇ
ರೂರಿಹುದೆ ಸಪ್ತಾಂಗದಲಿ ಮೈ
ದೋರಿಹೈ ಬೇಸರೆಯೆಲೇ ಭೂಪಾಲ ನೀನೆಂದ || ೩೬||
ಪದವಿಭಾಗ-ಅರ್ಥ: ಆರು ಗುಣದೊಳು+ (ಷಟ್ ಧರ್ಮ:- ಆಧಾರ ೧.ಸತ್ಯ, .೨.ದೀಕ್ಷಾ, ೩.ಬ್ರಹ್ಮ, ೪.ಋತ, ೫.ತಪ, ೬.ಯಜ್ಞ. )
ಉಪಾಯ ನಾಲ್ಕರೊಳು+ (೧. ಸಾಮ (ಸಮಾಧಾನ ಪಡಿಸುವುದು) ೨.ದಾನ (ಲಂಚ ಕೊಡುವುದು) .೩ ಬೇಧ (ಕಲಹ ಹುಟ್ಟಿಸುವುದು) .೪. ದಂಡ (ಶಿಕ್ಷಿಸುವುದು)) ಏರಿಹುದೆ(ತೊಡಗಿರುವುದೇ?) ಮನ;
ರಾಜಧರ್ಮದ ಮೂರು ವರ್ಗದೊಳು+ (ರಾಜ ತೇಜಸ್ತ್ರಯ :- ೧.ಯುದ್ಧದಲ್ಲಿ ಹಿಂತಿರುಗದ ಗುಣ ೨.ಯುದ್ಧಕ್ಕೆ ಕರೆದರೆ ಹೋಗುವುದು. ೩.ಭಾರ್ಯಾಸಾ ಸಂರಕ್ಷಣ- ಪತ್ನಿಯ ರಕ್ಷಣೆ) ಎಚ್ಚರುಂಟೇ,
ನಯ ವಿಧಾನದಲಿ ಮೂರು ಶಕ್ತಿಗಳೊಳಗೆ (ಶಕ್ತಿ ತ್ರಯ :- ೧. ಪ್ರಭು ೨. ಮಂತ್ರ. ೩. ಉತ್ಸಾಹ) ಮನ ಬೇರೂರಿಹುದೆ,
ಸಪ್ತಾಂಗದಲಿ (ರಾಜ್ಯಾಂಗ ಸಪ್ತಕ:- ೧.ಸ್ವಾಮಿ, ೨. ಅಮಾತ್ಯ, ೩.ಸುಹೃತ್, ೪.ಕೋಶ, ೫.ರಾಷ್ಟ್ರ,, ೬.ದುರ್ಗ, ೭.ಬಲ) ಮೈದೋರಿಹೈ (ಮೈದೊರು- ಪಸರಿಸು,ಕಾಣಿಸಿಕೊಳ್ಳು)- ಬೇಸರೆಯೆಲೇ (ಬೇಸರವಿಲ್ಲವಲ್ಲವೇ, ಈ ವಿಚಾರಗಳಲ್ಲಿ ಉದಾಸೀನವಿಲ್ಲ ಅಲ್ಲವೇ?) ಭೂಪಾಲ ನೀನೆಂದ
ಅರ್ಥ: ;ನಾರದನು ಧರ್ಮಜನಿಗೆ,ಆರು ಉತ್ತಮ ಗುಣಗಳಲ್ಲಿಯೂ ನಾಲ್ಕು ಉಪಾಯಗಳಲ್ಲಿಯೂ ಮನಸ್ಸುಕೊಟ್ಟಿರುವೆಯಾ- ಗಮನವಿಟ್ಟಿರುವೆಯಾ? ರಾಜಧರ್ಮದ ಮೂರು ವರ್ಗದಲ್ಲಿ ಸದಾ ಎಚ್ಚರಿಕೆಯಿಂದ ಇರುವೆಯಾ? ರಾಜನೀತಿಯ ನಯ ವಿಧಾನದ- ಪ್ರಭು, ಮಂತ್ರ, ಉತ್ಸಾಹ ಈ ಮೂರು ಶಕ್ತಿಗಳೊಳಗೆ ನಿನ್ನ ಮನಸ್ಸು ಬೇರೂರಿರುವುದೆ? ರಾಜ್ಯ ಸಪ್ತಾಂಗಗಳಲ್ಲಿ ನಿನಗೆ ಉದಾಸೀನವಿಲ್ಲ ಅಲ್ಲವೇ?,'ಎಂದ.
ಪ್ರಜೆಗಳನುರಾಗಿಗಳೆ ಸುಭಟ
ವ್ರಜಕೆ ಜೀವಿತ ಸಂದಿಹುದೆ ವರ
ಸುಜನರಿಗೆ ಸಂತೋಷವೇ ಮಧುರೋಕ್ತಿ ರಚನೆಯಲಿ |
ವಿಜಯ ಭೀಮರು ಯಮಳರಿವರ
ಗ್ರಜರೊಳನುಜರಭಿನ್ನರೇ ಗಜ
ಬಜಿಕೆಯಂತಃಪುರದೊಳಿಲ್ಲಲೆ ರಾಯ ಕೇಳೆಂದ || ೩೭ ||
ಪದವಿಭಾಗ-ಅರ್ಥ: ಪ್ರಜೆಗಳು+ ಅನುರಾಗಿಗಳೆ?(ರಾಜನಲ್ಲಿ ಪ್ರೀತಿಯುಳ್ಳವರೇ?) ಸುಭಟವ್ರಜಕೆ (ಸೈನಿಕರಿಗೆ) ಜೀವಿತ ಸಂದಿಹುದೆ?(ವೇತನ ಪಾವತಿಯಾಗಿದೆಯೇ?) ವರ(ಉತ್ತಮ) ಸುಜನರಿಗೆ ಸಂತೋಷವೇ ಮಧುರೋಕ್ತಿ ರಚನೆಯಲಿ? ವಿಜಯ(ಅರ್ಜುನ) ಭೀಮರು ಯಮಳರು+ ಇವರು+ ಅಗ್ರಜರೊಳು(ಅಣ್ಣ- ನಿನ್ನಲ್ಲಿ)+ ಅನುಜರು+ ಅಭಿನ್ನರೇ (ಅ- ಇಲ್ಲ+ ಭಿನ್ನ- ಬೇರೆ ಅಬಿಪ್ರಾಯ; ಒಮ್ಮತದವರೇ) ಗಜಬಜಿಕೆಯ (ತೊಂದರೆ)+ ಅಂತಃಪುರದೊಳು+ ಇಲ್ಲಲೆ ರಾಯ ಕೇಳೆಂದ.
ಅರ್ಥ:ನಾರದನು ಧರ್ಮಜನಿಗೆ,' ಪ್ರಜೆಗಳುರಾಜನಲ್ಲಿ ಪ್ರೀತಿಯುಳ್ಳವರೇ? ಸೈನಿಕರಿಗೆ ಜೀವಿತ ವೇತನ ಪಾವತಿಯಾಗಿದೆಯೇ? ಉತ್ತಮರಾದ ಸುಜನರಿಗೆ ಮಧುರೋಕ್ತಿ ರಚನೆಯಲ್ಲಿ ಸಂತೋಷವೇ? ಅರ್ಜುನ ಭೀಮರು, ಯಮಳ- ನಕುಲ ಸಹದೇವ, ಇವರು ಅಣ್ಣನಾದ ನಿನ್ನಲ್ಲಿ ಒಮ್ಮತದವರೇ? ಅಂತಃಪುರದಲ್ಲಿ ತೊಂದರೆ ಇಲ್ಲವಲ್ಲವೇ? ಎಂದ.
ವಿಹಿತಕಾಲದ ಮೇಲೆ ಸಂಧಿಯ
ನಹಿತರೊಳು ವಿರಚಿಸುವ ಮೇಣ್ವಿ
ಗ್ರಹದ ಕಾಲಕೆ ವಿಗಡಿಸುವುದೆಂಬರಸು ನೀತಿಯಲಿ |
ವಿಹಿತವೇ ಮತಿ ವೈರಿ ರಾಯರ
ವಿಹರಣವನವರಾಳು ಕುದುರೆಯ
ಬಹಳತೆಯನಲ್ಪತೆಯನರಿವೈ ರಾಯ ನೀನೆಂದ || ೩೮ ||
ಪದವಿಭಾಗ-ಅರ್ಥ: ವಿಹಿತಕಾಲದ ಮೇಲೆ ಸಂಧಿಯನು+ ಅಹಿತರೊಳು (ಶತ್ರುಗಳಲ್ಲಿ) ವಿರಚಿಸುವ (ಮಾಡಿಕೊಳ್ಳುವ) ಮೇಣ್ +ವಿಗ್ರಹದ (ವಿರೋಧಸುವ) ಕಾಲಕೆ ವಿಗಡಿಸುವುದು (ಎದುರಿಸಿ ಹೊರಾಡುವುದು)+ ಎಂಬ+ ಅರಸು ನೀತಿಯಲಿ ವಿಹಿತವೇ( ಔಚಿತ್ಯಪೂರ್ಣವೇ) ಮತಿ (ಬುದ್ಧಿ) ವೈರಿ ರಾಯರ ವಿಹರಣವನು (ವಿಹಾರ- ಸಂಚಾರವನ್ನು)+ ಅವರಾಳು ಕುದುರೆಯ ಬಹಳತೆಯನು+ ಅಲ್ಪತೆಯನಉ+ ಅರಿವೈ ರಾಯ ನೀನೆಂದ.
ಅರ್ಥ: ನಾರದನು ಧರ್ಮಜನನ್ನು ಕುರಿತು,’ರಾಜನೇ. ನಿನಗೆ ಅನುಕುಲವಾದ ವಿಹಿತಕಾಲದಲ್ಲಿ. ಶತ್ರುಗಳಲ್ಲಿ ಸಂಧಿಯನ್ನು ಮಾಡಿಕೊಳ್ಳುವ, ಮತ್ತು ವಿರೋಧಸುವ ಕಾಲದಲ್ಲಿ ಎದುರಿಸಿ ಹೊರಾಡುವುದು ಎಂಬ ಅರಸು ನೀತಿಯಲ್ಲಿ ನಿನ್ನ ಬುದ್ಧಿ ಉಚಿತರೀತಿಯಲಿ ್ಲ ನೆಡೆಯುವುದೇ? ವೈರಿ ರಾಯರ ಚಲನೆಯನ್ನು, ಅವರ ಆಳು ಕುದುರೆಯ ಸಂಖ್ಯೆ ಬಹಳವೋ, ಅಲ್ಪವೋ ಎಂಬುದನ್ನು ನೀನು ಅರಿಯುತ್ತಿರುವೆಯಾ? ,’ ಎಂದ.
ಒಂದರಾಯಕೆ ಬೀಯ ಸರಿ ಮ
ತ್ತೊಂದು ಕಡೆಯಲಿ ಹೀನ ಫಲವಿ
ನ್ನೊಂದು ಕಾರ್ಯದುಪೇಕ್ಷತೆಗೆ ಮೊದಲಿಲ್ಲ ಕಡೆಯಿಲ್ಲ |
ಒಂದು ದುರ್ಘಟ ದೈವ ಸಾಧಿತ
ವೊಂದು ಶಂಕಿತ ಫಲವೆನಿಪ್ಪವ
ಹಿಂದುಗಳೆವೈ ಮಂತ್ರದಲಿ ಭೂಪಾಲ ಕೇಳೆಂದ || ೩೯ ||
ಪದವಿಭಾಗ-ಅರ್ಥ: ಒಂದರ+ ಆಯಕೆ ಬೀಯ (ಖರ್ಚು, ಕೊರತೆ, ಅನ್ನ,, ಅಮೃತ), ಸರಿ ಮತ್ತೊಂದು ಕಡೆಯಲಿ ಹೀನ ಫಲವು (ದುರ್ಭಿಕ್ಷ)+ ಇನ್ನೊಂದು ಕಾರ್ಯದ+ ಉಪೇಕ್ಷತೆ, (ದುರ್ಭಿಕ್ಷವಾದ ಪ್ರದೇಶವನ್ನು ಉಪೇಕ್ಷಿಸುವುದು ಎಲ್ಲಾಕಡೆ ಇದೆ ಅದಕ್ಕೆ ) ಮೊದಲಿಲ್ಲ ಕಡೆಯಿಲ್ಲ; ಒಂದು ದುರ್ಘಟ ದೈವ ಸಾಧಿತವು+ ಇನ್ನೊಂದು ಶಂಕಿತ ಫಲವು + ಎನಿಪ್ಪವ (ಹೀಗಿರುವ) ಹಿಂದುಗಳೆವೈ (ಉದಾಸೀನಮಾಡಿ ನಿರ್ಲಕ್ಷ್ಯ ಮಾಡುವೆಯಾ ) ಮಂತ್ರದಲಿ (ಮಂತ್ರಾಲೋಚನೆಯಲ್ಲಿ- ವಿಚಾರಮಾಡುವಾಗ) ಭೂಪಾಲ ಕೇಳೆಂದ.
ಅರ್ಥ: ನಾರದನು,’ ರಾಜನೇ ಒಂದು ಪ್ರದೇಶದ ಆದಾಯಕೆ ಕೊರತೆ, ಸರಿ ಮತ್ತೊಂದು ಕಡೆಯಲ್ಲಿ ಹೀನ ಫಲವು- ದುರ್ಭಿಕ್ಷ. ಹೀಗಿತುವಾಗ ಒಂದು ಭಾಗದ ದುರ್ಭಿಕ್ಷವಾದ ಪ್ರದೇಶವನ್ನು ಉಪೇಕ್ಷಿಸುವುದು ಎಲ್ಲಾ ಕಡೆ ಇದೆ. ಅದಕ್ಕೆ ಮೊದಲಿಲ್ಲ ಕಡೆಯಿಲ್ಲ; ಒಂದು ದುರ್ಘಟನೆಯು ದೈವ ಸಾಧಿತವು; ಇನ್ನೊಂದು ಶಂಕಿತ ಫಲವ- ಮಾನವ ಪ್ರಯತ್ನ,, ಎನ್ನಿಸುವುದು - ಹೀಗಿರುವಾಗ ವಿಚಾರಮಾಡುವಾಗ ಉದಾಸೀನಮಾಡಿ ನಿರ್ಲಕ್ಷ್ಯ ಮಾಡುವೆಯಾ/.’ ಕೇಳು ಎಂದ.
ನೆನೆದ ಮಂತ್ರವ ನಿನ್ನೊಳಾಲೋ
ಚನೆಯ ನಿಶ್ಚಯವಿಲ್ಲದಿರಲೊ
ಬ್ಬನಲಿ ಮೇಣ್ ಹಲಬರಲಿ ಜಡರಲಿ ಮತಿವಿಹೀನರಲಿ |
ಮನಬರಡರಲಿ ಸಲೆ ವಿಧಾವಂ
ತನಲಿ ಮಂತ್ರಾಲೋಚನೆಯ ಸಂ
ಜನಿಸಿ ಹರಹಿನೊಳಳಿಯೆಲೇ ಭೂಪಾಲ ಕೇಳೆಂದ || ೪೦ ||
ಪದವಿಭಾಗ-ಅರ್ಥ: ನೆನೆದ ಮಂತ್ರವ ನಿನ್ನೊಳು+ ಆಲೋಚನೆಯ ನಿಶ್ಚಯವಿಲ್ಲದಿರಲು+ ಒಬ್ಬನಲಿ ಮೇಣ್ ಮತ್ತು ಹಲಬರಲಿ, ಜಡರಲಿ (ಸೋಮಾರಿಗಳಲ್ಲಿ) ಮತಿವಿಹೀನರಲಿ (ದಡ್ಡರಲ್ಲಿ) ಮನಬರಡರಲಿ (ಆಸಕ್ತ ಇಲ್ಲ್ಲದವರಲ್ಲಿ) ಸಲೆ (ಹೆಚ್ಚಾಗಿ) ವಿಧಾವಂತನಲಿ (ವಿಧ- ವಿವಿಧ ಜನರಲ್ಲಿ) ಮಂತ್ರಾಲೋಚನೆಯ ಸಂಜನಿಸಿ (ಹುಟ್ಟು, ಆಗು, ಮಾಡಿ) ಹರಹಿನೊಳು (ಸಾರ್ವಜನಿಕರಲ್ಲಿ ಹರಡಿ + ಅಳಿಯೆಲೇ (ಅಲೇ- ಬೇಡ, ನಾಶ ಪಡಿಸಲು ಬೇಡ ) ಭೂಪಾಲ ಕೇಳೆಂದ
ಅರ್ಥ: ರಾಜನೇ, ನೀನು ಆಲೋಚಿಸಿದ ರಾಜಕರ್ಯವನ್ನು –ಮಂತ್ರಾಲೋಚನೆಯನ್ನು ನಿನ್ನಲ್ಲೇ ಆಲೋಚನೆಯ ಬಗ್ಗೆ ನಿಶ್ಚಯವಿಲ್ಲದಿರಉವಾಗ, ಒಬ್ಬನಲಿ ಮತ್ತು ಹಲವರಲ್ಲಿ, ಸೋಮಾರಿಗಳಲ್ಲಿ, ದಡ್ಡರಲ್ಲಿ, ಆಸಕ್ತ್ತಿ ಇಲ್ಲ್ಲದವರಲ್ಲಿ, ಹೆಚ್ಚಾಗಿ ವಿಧ- ವಿವಿಧ ಜನರಲ್ಲಿ ಮಂತ್ರಾಲೋಚನೆಯನ್ನು ಮಾಡಿ ಸಾರ್ವಜನಿಕರಲ್ಲಿ ಹರಡಿ ನಾಶ ಪಡಿಸಲು ಬೇಡ. ಭೂಪಾಲ ಕೇಳು ಎಂದ
ಕಿರಿದುಪೇಕ್ಷೆಯ ಬಹಳ ಫಲವನು
ಹೊರೆವುದಿದು ಮೇಣಲ್ಪಭೇದಕೆ
ಮುರಿವುದಿದು ವಿಕ್ರಮಕೆ ವಶವಿದು ನೀತಿಸಾಧ್ಯವಿದು |
ಹರಿವುದಿದು ನಯ ಶಕ್ತಿಗೆಂಬುದ
ನರಿದು ನಡೆವೈ ರಾಜಧರ್ಮದ
ಹೊರಿಗೆಯನು ಮರೆದಿರೆಯೆಲೇ ಭೂಪಾಲ ಕೇಳೆಂದ || ೪೧ ||
ಪದವಿಭಾಗ-ಅರ್ಥ: ಕಿರಿದು+ ಉಪೇಕ್ಷೆಯ ಬಹಳ ಫಲವನು ಹೊರೆವುದು+ ಇದು ಮೇಣ್+ ಅಲ್ಪಭೇದಕೆ ಮುರಿವುದಿದು, ವಿಕ್ರಮಕೆ ವಶವಿದು, ನೀತಿಸಾಧ್ಯವಿದು, ಹರಿವುದಿದು, ನಯ ಶಕ್ತಿಗೆ+ ಎಂಬುದನು+ ಅರಿದು ನಡೆವೈ, ರಾಜಧರ್ಮದ ಹೊರಿಗೆಯನು ಮರೆದಿರೆಯೆಲೇ (ಮರೆಯಬೇಡ ಎಲೆ) ಭೂಪಾಲ ಕೇಳೆಂದ.
ಅರ್ಥ: ರಾಜನೇ, ಸಣ್ಣ ಉಪೇಕ್ಷೆಯ ಬಹಳ ಫಲವನು ಕೊಡುವುದು; ಇದು ಮತ್ತೆ ಅಲ್ಪಭೇದ ಉಪಾಯದಿಂದ ಸಮಸ್ಯೆ ಪರಿಹಾರವಗುವುದು ವಿಕ್ರಮ- ಪರಾಕ್ರಮಕ್ಕೆ ಇದು ವಶವಾಗುವುದು, ನೀತಿಯಿಂದ ಇದು ಸಾಧ್ಯವು, ನಯವಾದ ಶಕ್ತಿಗೆ ಈ ಸಮಸ್ಯೆ ಪರಿಹರಿಯುವುದು, ಎಂಬುದನ್ನು ಅರಿತು ನಡೆಯಪ್ಪಾ, ರಾಜಧರ್ಮದ ಹೊಣೆಯನ್ನು ಮರೆಯಬೇಡ ಎಲೆ ಭೂಪಾಲ ಕೇಳು ಎಂದ.
ಪರರು ಮಾಡಿದ ಸದ್ಗುಣಂಗಳ
ಮರೆಯೆಯಲೆ ಪರರವಗುಣಂಗಳ
ಮರೆದು ಕಳೆವಾ ಮಾನ್ಯರಿಗೆ ನೀ ಮಾಡಿದವಗುಣವ |
ಮೆರೆಯೆಯಲೆ ನೀ ಮಾಡಿದುಚಿತವ
ಮರೆದು ಕಳೆವಾಚಾರವಿದು ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ || ೪೨ ||
ಪದವಿಭಾಗ-ಅರ್ಥ: ಪರರು ಮಾಡಿದ ಸದ್ಗುಣಂಗಳ ಮರೆಯೆಯಲೆ (ಮರೆಯಬೇಡ) ;ಪರರ+ ಅವಗುಣಂಗಳ ಮರೆದು ಕಳೆವಾ (ಮರೆತು ಕಳೆ); ಮಾನ್ಯರಿಗೆ (ಮಾನವಂತರಿಗೆ) ನೀ (ನೀನು) ಮಾಡಿದ+ ಅವಗುಣವ (ಅವಮಾನವನ್ನು) ಮೆರೆಯೆಯಲೆ (ಮೆರೆಯಬೇಡ) ; ನೀ ಮಾಡಿದ+ ಉಚಿತವ (ದಾನವನ್ನು) ಮರೆದು ಕಳೆವಾ (ಮರತುಬಿಡು)+ ಆಚಾರವು+ ಇದು ಸತ್ಪುರುಷರ+ ಅಭಿಮತವು+ ಇದು ಕಣಾ ಭೂಪಾಲ ಕೇಳು+ ಎಂದ
ಅರ್ಥ: ನಾರದನು ಧರ್ಮಜನಿಗೆ,’ಪರರು ಮಾಡಿದ ಸದ್ಗುಣಗಳ ಕೆಲಸಗಳನ್ನು ಮರೆಯಬೇಡ ; ಪರರ ಅವಗುಣಗಳನ್ನು ಮರೆತು ಕಳೆಯುವುದು; ಮಾನ್ಯರಿಗೆ ನೀನು ಮಾಡಿದ ಅವಮಾನ ತೊಂದರೆಗಳನ್ನು ಮೆರೆಯಬೇಡ ; ನೀನು ಮಾಡಿದ ಉಚಿತವ- ದಾನವನ್ನು ಮರತುಬಿಡು. ಇದು ಆಚಾರವು, ಇದು ಸತ್ಪುರುಷರ ಅಭಿಮತವು ಕಣಾ,’ ಎಂದ
ಭಜಿಸುವಾ ಭಕ್ತಿಯಲಿ ದೈವ
ದ್ವಿಜ ಗುರುಸ್ಥಾನವನು ದೇಶ
ಪ್ರಜೆಯನರ್ಥಾಗಮದ ಗಡಣೆಗೆ ಘಾಸಿ ಮಾಡೆಯೆಲೆ |
ಕುಜನರಭಿಮತಮಗ್ರ ದಂಡ
ವ್ಯಜನದಲಿ ಜನ ಜಠರ ವಹ್ನಿಯ
ಸೃಜಿಸೆಯೆಲೆ ಭವದೀಯ ರಾಜ್ಯಸ್ಥಿತಿಯ ಹೇಳೆಂದ || ೪೩ ||
ಪದವಿಭಾಗ-ಅರ್ಥ: ಭಜಿಸುವಾ ಭಕ್ತಿಯಲಿ ದೈವ, ದ್ವಿಜ (ವಿಪ್ರ), ಗುರುಸ್ಥಾನವನು, ದೇಶ, ಪ್ರಜೆಯನು+ ಅರ್ಥಾಗಮದ ಗಡಣೆಗೆ (ಸಮೂಹ- ದುಡಿಮೆಯ ದಾರಿಗಳಿಗೆ ಕೇಡನ್ನು) ಘಾಸಿ ಮಾಡೆಯೆಲೆ (ಮಾಡಬೇಡ) ಕುಜನರ+ ಅಭಿಮತಮ(ಮ್; ವನ್ನು)+ ಅಗ್ರ ದಂಡ ವ್ಯಜನದಲಿ (ವ್ಯಜನ- ಬೀಸಣಿಗೆ; ತಡೆಯುವುದು), ಜನ ಜಠರ ವಹ್ನಿಯ (ಹೊಟ್ಟೆಯ ಬೆಂಕಿ-(ಹಸಿವು) ಕಿಚ್ಚು?) ಸೃಜಿಸೆಯೆಲೆ (ಸೃಜಿಸು- ಹುಟ್ಟಿಸು; ಯಲೆ- ಬಾರದು) ಭವದೀಯ (ನಿನ್ನ) ರಾಜ್ಯಸ್ಥಿತಿಯ ಹೇಳೆಂದ
ಅರ್ಥ: ನಾರದನು ಧರ್ಮಜನ್ನು ಕುರತು,’ಭಜಿಸುವಾ ಭಕ್ತಿಯಲ್ಲಿ, ದೈವ, ದ್ವಿಜ, ಗುರುಸ್ಥಾನವನ್ನು, ಆ ದೇಶವನ್ನೂ- ಆ ಪ್ರದೇಶದ ಪದ್ಧತಿಯನ್ನೂ ಗಮನಿಸಿ ಮಾಡಬೇಕು., ಪ್ರಜೆಗಳ ಕ್ಷೇಮಕ್ಕಾಗಿ ಅವನ ಅರ್ಥಾಗಮದ- ಹಣದ ದುಡಿಮೆಯ ದಾರಿಗಳಿಗೆ ಘಾಸಿ – ಕೇಡನ್ನು ಮಾಡಬಾರದು. ಕುಜನರ- ದುಷ್ಟರ ಅಭಿಮತವನ್ನು ಬಲವಾದ ದಂಡzವನ್ನು ಬೀಸಿ - ಉಪಯೋಗಿಸಿ ತಡೆಯುವುದು ನೀತಿ. ಜನರ ಹೊಟ್ಟೆಯಲ್ಲಿ ಬೆಂಕಿ-ಹಸಿವನ್ನು - ಸಿಟ್ಟನ್ನು ಹುಟ್ಟಿ¸ ಬಾರದು. ಇದು ನೀತಿ. ನಿನ್ನ ರಾಜ್ಯದ ಸ್ಥಿತಿಯನ್ನು ಹೇಳು,’ ಎಂದ
ಆಣೆಗಪಜಯವಿಲ್ಲಲೇ ಕೀ
ಳಾಣೆ ಟಂಕದೊಳಿಲ್ಲಲೇ ನಿ
ತ್ರಾಣದಲಿ ಸಂಗರವ ಹೊಗೆಯೆಲೆ ಶೌರ್ಯ ಗರ್ವದಲಿ |
ವಾಣಿಯವನುಚಿತದಲಿ ಧರ್ಮದ
ಲೂಣೆಯವನಹಿತರಲುಪೇಕ್ಷೆಯ
ಕೇಣವನು ದಾನದಲಿ ಮಾಡೆಲೆ ರಾಯ ಕೇಳೆಂದ || ೪೪ ||
ಪದವಿಭಾಗ-ಅರ್ಥ: ಆಣೆಗೆ + ಅಪಜಯವಿಲ್ಲಲೇ (ಪ್ರಮಾಣ ಮಾಡಿ ಹೇಳಿದ ಮಾತಿಗೆ ತಪ್ಪುವುದಿಲ್ಲ ಅಲ್ಲವೇ) ಕೀಳಾಣೆ ಟಂಕದೊಳು+ ಇಲ್ಲಲೇ (ನಿನ್ನ ನಾಣ್ಯವನ್ನು ಮುದ್ರಿಸುವ ಟಂಕಸಾಲೆಯಲ್ಲಿ ಲೆಕ್ಕವಿಲ್ಲದೆಮುದ್ರಿಸಿದ ‘ಕೀಳಾಣೆ ಇಲ್ಲ ಅಲ್ಲವೇ? ನಿತ್ರಾಣದಲಿ ಸಂಗರವ ಹೊಗೆಯೆಲೆ (ಸೈನ್ಯ ಶಕ್ತಿ ಕಡಿಮೆ ಇದ್ದಾಗ ಯುದ್ಧವನ್ನು ), ವಾಣಿಯವನು+ ಉಚಿತದಲಿ ಶೌರ್ಯ ಗರ್ವದಲಿ (ಶೌರ್ಯ ಪ್ರದರ್ಶನದ ಗರ್ವದಿಂದ ಯದ್ಧದ ಮಾತನ್ನು ಆಡಬೇಡ.) ಧರ್ಮದ ಲೂಣೆಯವನು (ಲೂನ- ಕತ್ತರಿಸಿದ, ಹೆಕ್ಕಿದ ಕಡಿದ)+ ಅಹಿತರಲಿ- ಶತ್ರುಗಳಲ್ಲಿ ಉಪೇಕ್ಷೆಯ ಕೇಣವನು (ಅಸೂಯೆ, ದೀರ್ಘವಿಚಾರ) ; ದಾನದಲಿ ಮಾಡೆಲೆ –(ಮಾಡಬೇಡ.) ರಾಯ ಕೇಳೆಂದ
ಅರ್ಥ: ನಾರದನುಮ ಧರ್ಮಜನಿಗೆ, ಪ್ರಮಾಣ ಮಾಡಿ ಹೇಳಿದ ಮಾತಿಗೆ ತಪ್ಪುವುದಿಲ್ಲ ಅಲ್ಲವೇ? ನಾಣ್ಯವನ್ನು ಮುದ್ರಿಸುವ ನಿನ್ನ ಟಂಕಸಾಲೆಯಲ್ಲಿ ಲೆಕ್ಕವಿಲ್ಲದೆ ಮುದ್ರಿಸಿದ ‘ಕೀಳಾಣೆ ಇಲ್ಲ ಅಲ್ಲವೇ? ಸೈನ್ಯ ಶಕ್ತಿ ಕಡಿಮೆ ಇದ್ದಾಗ ಯುದ್ಧವನ್ನು ಮಾಡಬೇಡ; ಶೌರ್ಯ ಪ್ರದರ್ಶನದ ಗರ್ವದಿಂದ ಯದ್ಧದ ಮಾತನ್ನು ಆಡಬೇಡ, . ಧರ್ಮದ ಮಾರ್ಗವ£ ಕಡಿದ ಶತ್ರುಗಳಲ್ಲಿ ದಾನದಲ್ಲಿ ಉಪೇಕ್ಷೆಯ ದೀರ್ಘವಿಚಾರವನ್ನು ಮಾಡಬೇಡ; ರಾಯ ಕೇಳು,’ ಎಂದ
ಕಳವು ಪುಸಿ ಹಾದರ ವಿರೋಧ
ಸ್ಖಲಿತವಾರಡಿಬಂದಿ ದಳವುಳ
ಬೆಳಗವಿತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ |
ಪಳಿವು ವಂಚನೆ ಜಾತಿ ಸಂಕರ
ಕೊಲೆ ವಿರೋಧವು ವಿಕೃತ ಮಾಯಾ
ವಳಿಗಳೆಂಬಿವು ನಿನ್ನೊಳಿಲ್ಲಲೆ ರಾಯ ಕೇಳೆಂದ || ೪೫ ||
ಪದವಿಭಾಗ-ಅರ್ಥ: ಕಳವು, ಪುಸಿ(ಸುಳ್ಳು), ಹಾದರ (ವ್ಯಬಿಚಾರ) ವಿರೋಧ ಸ್ಖಲಿತವವು (ಸ್ಕಲಿತ-> ತಪ್ಪು, ಅಪರಾಧ,ಜಾರಿಬಿದ್ದ, ಕಳಚಿ ಬಿದ್ದಿರುವ)+ ಆರಡಿ ಬಂದಿ ದಳವುಳ ಬೆಳಗವತೆಯ ನ್ಯಾಯ (ಆರಡಿ- ದುಂಬಿ, ಸಂಜೆ ಕಮಲ ಮುದುಡುವಾಗ ಅದರಲ್ಲಿ ಬಂದಿಯಾಗಿ ಬೆಳಗಾದಾಗ ಬಿಡುಗಡೆಯಾಗುವುದು- ವಿನಾಕಾರಣ ಜನರನ್ನು ಬಂಧಿಸಿಡುವುದು), ಪರಿಭವ(ಸೊಲು) ಠಕ್ಕು ಡೊಳ್ಳಾಸ(ಅವ್ಯವಹಾರ, ಕಪಟ, ) ಪಳಿವು(ಪಳಿವು- ಪರರನ್ನು ಹಳಿಯುವುದು) ವಂಚನೆ ಜಾತಿ ಸಂಕರ, ಕೊಲೆ, ವಿರೋಧವು, ವಿಕೃತ ಮಾಯಾವಳಿಗಳು (ಜನರಿಗೆ ಕಣ್ಣುಕಟ್ಟಿದಂತೆ ಸುಳ್ಳನ್ನು ನಂಬುವಂತೆ ಮಾಡಿ ಮೋಸಮಾಡವುದು,),+ ಎಂಬಿವು ನಿನ್ನೊಳು+ ಇಲ್ಲಲೆ(ಇಲ್ಲವಲ್ಲವೇ) ರಾಯ ಕೇಳೆಂದ
ಅರ್ಥ:ನಾರದನು,' ರಾಜನೇ ಕೇಳು, ಕಳವು, ಸುಳ್ಳು ಹೇಳುವುದು, ವ್ಯಬಿಚಾರ, ಅನಗತ್ಯ ವಿರೋಧ, ಉದ್ದೇಶಪುರ್ವಕ ತಪ್ಪು ಮಾಡುವುದು, ವಿನಾಕಾರಣ ಜನರನ್ನು ಬಂಧಿಸಿಡುವುದು, ತಪ್ಪುನಿರ್ಘಾರದಿಂದ ಸೋಲು, ಠಕ್ಕು- ಮೋಸ, ಅವ್ಯವಹಾರ, ಕಪಟ, ಪರರನ್ನು ಹಳಿಯುವುದು, ವಂಚನೆ, ಜಾತಿ ಸಂಕರ, ಕೊಲೆ, ಸಜ್ಜನರ ವಿರೋಧವು, ವಿಕೃತ ಮಾಯಾವಳಿಗಳು, ಎಂಬ ಈ ಬಗೆಯ ದುರ್ಗುಣಗಳು ನಿನ್ನಲ್ಲಿ ಇಲ್ಲವಲ್ಲವೇ? ರಾಜಾದವನಲ್ಲಿ ಇವು ಇರಬಾರದು,' ಎಂದ
ರಣಮುಖದೊಳಂಗನೆಯೊಳಾರೋ
ಗಣೆಯಲರಿಗಳ ಕೂಟದಲಿ ವಾ
ರಣ ತುರಗದೇರಾಟದಲಿ ವಿವಿಧಾಯುಧಂಗಳಲಿ |
ಎಣೆ ನೃಪರ ಸೋಂಕಿನಲಿ ಸೆಜ್ಜೆಯ
ಲಣಿಯ ಮಜ್ಜನದಲಿ ಮಹಾಮೃಗ
ಗಣನೆಯೊಳಗೆಚ್ಚರಿಕೆಯುಂಟೇ ರಾಯ ನಿನಗೆಂದ || ೪೬ ||
ಪದವಿಭಾಗ-ಅರ್ಥ: ರಣಮುಖದೊಳು(ಯುದ್ಧದಸಮಯ)+ ಅಂಗನೆಯೊಳು+ ಆರೋಗಣೆಯಲಿ (ಊಟ),+ ಅರಿಗಳ ಕೂಟದಲಿ, ವಾರಣ (ಆನೆ) ತುರಗದ+ ಎರಾಟದಲಿ (ಸ್ಪರ್ಧೆ) ವಿವಿಧಾಯುಧಂಗಳಲಿ, ಎಣೆ (ಸಮ, ಸಾಟಿ) ನೃಪರ ಸೋಂಕಿನಲಿ, ಸೆಜ್ಜೆಯಲಿ, ಅಣಿಯ(ಅಚ್ಚುಕಟ್ಟು, ಸಿದ್ಧತೆ) ಮಜ್ಜನದಲಿ, ಮಹಾಮೃಗ ಗಣನೆಯೊಳಗೆ+ ಎಚ್ಚರಿಕೆಯುಂಟೇ? ರಾಯ ನಿನಗೆ+ ಎಂದ
ಅರ್ಥ:ನಾರದನು,'ರಾಜನೇ ನಿನಗೆ, ರಣಮುಖದಲ್ಲಿ ಶತ್ರುಗಳನ್ನು ಎದುರಿಸುವಾಗ, ಹೆಣ್ಣಿನ ಜೊತೆ ಊಟಮಾಡುವಾಗ, ಶತ್ರುಗಳ ಜೊತೆ ಒಡನಾಡವಾಗ, ಆನೆ ಕುದುರೆಗಳ ಸ್ಪರ್ಧೆಯ ಸಮಯದಲ್ಲಿ, ವಿವಿಧ ಆಯುಧಗಳ ಪ್ರಯೋಗ ಸಮಯದಲ್ಲಿ, ಸಮಸಾಟಿ ರಾಜರೊಡನೆ ಹತ್ತಿರ ಇರುವಾಗ, ಸೆಜ್ಜೆಯಲ್ಲಿ ಪತ್ನಿಯೊಡನೆ ಇರುವಾಗ, ದಿನಕಾರ್ಯದ ಸಿದ್ಧತೆಯ ಮಜ್ಜನದ- ಸ್ನಾನದ ಸಮಯದಲ್ಲಿ, ಬೇಟೆಯ ಮಹಾಮೃಗ ಗಣನೆಯೊಳಗೆ- ಗಮನಿಸುವಾಗ - ಈ ಸಮಯಗಳಲ್ಲಿ ಮೈರೆಯುವುದು ಸಹಜ; ಆಗ ರಾಜರಿಗೆ ಅಪಾಯವುಂಟು. ನಿನಗೆ ಆ ಸಮಯಗಳಲ್ಲಿ ನಿನಗೆ ಎಚ್ಚರಿಕೆಯುಂಟೇ? ಎಂದ.
ನುಡಿದೆರಡನಾಡದಿರು ಕಾರ್ಯವ
ಬಿಡದಿರಾವನೊಳಾದರೆಯು ನಗೆ
ನುಡಿಯ ಕುಂದದಿರೊಡೆಯದಿರು ಹೃದಯವನು ಕಪಟದಲಿ |
ಬಡಮನವ ಮಾಡದಿರು ಮಾರ್ಗದೊ
ಳಡಿಯಿಡದಿರನುಜಾತ್ಮಜರೊಳೊ
ಗ್ಗೊಡೆಯದಿರು ನೃಪನೀತಿಯಿದು ಭೂಪಾಲ ಕೇಳೆಂದ || ೪೭ ||
ಪದವಿಭಾಗ-ಅರ್ಥ: ನುಡಿದು+ ಎರಡನು+ ಆಡದಿರು ಕಾರ್ಯವ ಬಿಡದಿರು+ ಆವನೊಳಾದರೆಯು ನಗೆನುಡಿಯ ಕುಂದದಿರು+ ಒಡೆಯದಿರು ಹೃದಯವನು ಕಪಟದಲಿ, ಬಡಮನವ ಮಾಡದಿರು, ಮಾರ್ಗದೊಳು ಅಡಿಯಿಡದಿರು+ ಅನುಜಾತ್ಮಜರೊಳು (ತಮ್ಮಂದಿರಲ್ಲಿ)+ ಒಗ್ಗೊಡೆಯದಿರು ನೃಪ ನೀತಿಯಿದು ಭೂಪಾಲ ಕೇಳೆಂದ.
ಅರ್ಥ: ನಾರದನು ಮುಂದುವರಿದುಮ,'ಒಪ್ಪಿಗೆಯ ಮಾತು ನುಡಿದು ಅದಕ್ಕೆ ವಿರುದ್ಧವಾದ ಎರಡನ್ನು ಆಡಬೇಡ; ಮಾಡಬೇಕಅದ ಕಾರ್ಯವನ್ನು ಬಿಡಬೆಡ; ಯಾವನೊಳಾದರೂ ನಗೆನುಡಿಯನ್ನು ಆಡಿ ಅಪಹಾಸ್ಯ ಮಾಡಿ ಕುಂದಿಸಬೇಡ- ಮನಕುಗ್ಗಿಸಬೇಡ; ಯಾರ ಹೃದಯವನ್ನೂ ಕಪಟತನದಿಂದ ಒಡೆಯದಿರು. ಬಡಮನವನ್ನು- ನೆಡತೆಯ ಮಾರ್ಗದಲ್ಲಿ ಜಿಪುಣರು ಅಲ್ಪರು ಮಾಡುವ ಸಣ್ಣತನದ ಕಲಸ ಮಾಡದಿರು, ತಮ್ಮಂದಿರಲ್ಲಿ ಒಗ್ಗಟ್ಟನ್ನು ಒಡೆಯಬೇಡ, ಆ ಕೆಲಸಕ್ಕೆ ಹೆಜ್ಜೆ ಯಿಡದಿರು. ನೃಪ ಧರ್ಮಜನೇ ಇದು ಜೀವನದಲ್ಲಿ ಅನುಸರಿಸಬೇಕಾದ ನೀತಿಯು,' ಎಂದ. .
ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು |
ಆತ್ತ ಜಯದಿಂ ಧರ್ಮ ಧರ್ಮ ಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ನೀನೆಂದ || ೪೮ ||
ಪದವಿಭಾಗ-ಅರ್ಥ: ನೀತಿವಿಡಿದ+ ಅರಸಂಗೆ ಬಹಳ ಖ್ಯಾತವು+ ಅದು, ಜನರಾಗ (ರಾಗ- ಪ್ರೀತಿ) ರಾಗವ್ರಾತದಿಂ (ವ್ರಾತ- ಸಮೂಹ, ಗುಂಪು) ಧನ. ಧನದಿ ಪರಿಕರ, ಪರಿಕರದಿ ಜಯವು; ಆತ್ತ ಜಯದಿಂ, ಧರ್ಮ, ಧರ್ಮ ಸಮೇತದಿಂ ಸುರತುಷ್ಟಿ (ದೇವತೆಗಳ ತೃಪ್ತಿ), ತುಷ್ಟಿಯ ನೀತಿಯಿಂದ+ ಇಹಪರವ ಗೆಲುವೈ (ಗೆಲ್ಲವೆ) ರಾಯ ನೀನೆಂದ.
ಅರ್ಥ:ನಾರದನು,'ನೀತಿಯ ದಾರಿಯನ್ನು ಹಿಡಿದ ಅರಸನಿಗೆ ಬಹಳ ಪ್ರಖ್ಯಾತಿ ಬರುವುದು. ಜನರ ಪ್ರೀತಿ ಸಿಗುವುದು; ಜನರ ಅಧಿಕ ಪ್ರೀತಿಯಿಂದ ಧನಪ್ರಾಪ್ತಿಯಾಗುವುದು. ಧನದಿಂದ ರಾಜ್ಯಾಡಳಿತಕ್ಕೆ ರಕ್ಷಣೆಗೆ ಅಗತ್ಯ ಪರಿಕರಗಳು ಬರುವುದು. ಪರಿಕರದಿಂದ ಜಯವು ಸಿಗುವುದು; ಆತ್ತ ಜಯದಿಂದ ಧರ್ಮಸಾಧನೆ ಮಾಡುವುದು; ಧರ್ಮ ಸಮೇತದಿಂದ (ಕಾರ್ಯದಳಿಂದ) ದೇವತೆಗಳು ಸಂತುಷ್ಠಿ ಪಡುವರು. ಜನರ ಮತ್ತು ಅವರ ತುಷ್ಟಿಯ ನೀತಿಯಿಂದ ರಾಯನೇ ನೀನು ಇಹಪರವನ್ನು ಗೆಲ್ಲುವೆ,'ಎಂದ.
ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು |
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರವೆನಿಸಲ್ಕರಿವುದೇ ಭೂಪಾಲ ಕೇಳೆಂದ || ೪೯ ||
ಪದವಿಭಾಗ-ಅರ್ಥ: ಮಂತ್ರವುಳ್ಳವನು(ಸಂಧಿ- ವಿಗ್ರಹ, ರಹಸ್ಯಾಲೋಚನೆ, ಮಂತ್ರಾಲೋಚನೆ, ವಿಚಾರ, ಆಲೋಚನೆ )+ ಅವನೆ ಹಿರಿಯನು, ಮಂತ್ರವುಳ್ಳವನು+ ಅವನೆ ರಾಯನು, ಮಂತ್ರವುಳ್ಳವನು+ ಅವನೆ ಸಚಿವ, ನಿಯೋಗಿಯೆನಿಸುವನು, ಮಂತ್ರವಿಲ್ಲದ ಬರಿಯ ಬಲು ತಳತಂತ್ರದಲಿ(ಪಡೆ, ಸೈನ್ಯ) ಫಲವಿಲ್ಲವೈ, ಸ್ವಾತಂತ್ರವೆನಿಸಲ್ಕೆ+ ಅರಿವುದೇ ಭೂಪಾಲ ಕೇಳೆಂದ.
ಅರ್ಥ:ನಾರದನು ಧರ್ಮಜನನ್ನು ಕುರಿತು,'ಸಂಧಿ- ವಿಗ್ರಹ, ಮೊದಲಾದ ವಿಚಾರಗಳಲ್ಲಿ ರಹಸ್ಯಾಲೋಚನೆ, ಮಂತ್ರಾಲೋಚನೆ, ವಿಚಾರವಿಮರ್ಶೆ, ಇವುಗಳುಳ್ಳ- ಅವನೆ ಹಿರಿಯನು, ಮಂತ್ರವುಳ್ಳವನು, ಅವನೆ ರಾಯನು- ರಾಜನು; ಈ ಬಗೆಯ ರಾಜಕೀಯ ಮಂತ್ರವುಳ್ಳವನು- ಅವನೆ ಸಚಿವ, ರಾಯಭಾರಿ- ನಿಯೋಗಿಯೆನಿಸುವನು; ಮಂತ್ರವಿಲ್ಲದ ಬರಿಯ ಬಲು ದೊಡ್ಡ ಸೇನಾಪಡೆ, ಸೈನ್ಯ ಫಲವಿಲ್ಲವು; ಇದು ರಾಜ್ಯವು ಸ್ವಾತಂತ್ರವುಳ್ಳದ್ದು ಎನಿಸಿಕೊಳ್ಳಲು ಇವನ್ನು ಅರಿಯುವುದೇ ಮುಖ್ಯ, ಭೂಪಾಲನೇ ಕೇಳು.'ಎಂದ.
ಸತ್ಯವುಳ್ಳರೆ ಧರಣಿ ಸಾರುಗು
ಸತ್ಯವುಳ್ಳರೆ ಪದವಿ ಸಾರುಗು
ಸತ್ಯವುಳ್ಳರೆ ಸಕಲರಾಜ್ಯದ ವೀರಸಿರಿ ಸಾರ್ಗು |
ಸತ್ಯವೇ ಬೇಹುದು ನೃಪರಿಗಾ
ಸತ್ಯ ಭುಜಬಲಗೂಡಿ ಮಂತ್ರದ
ಸತ್ಯವೇ ಸತ್ವಾಧಿಕವು ಭೂಪಾಲ ಕೇಳೆಂದ || ೫೦ ||
ಪದವಿಭಾಗ-ಅರ್ಥ: ಸತ್ಯವುಳ್ಳರೆ(ಸತ್ಯವಿದ್ದರೆ) ಧರಣಿ ಸಾರುಗು (ಸಾರು- ನೆಡೆ, ಬರುವುದು, ಬಳಿಸಾರು, ಹತ್ತಿರಬಾ); ಸತ್ಯವುಳ್ಳರೆ ಪದವಿ; ಸಾರುಗ; ಸತ್ಯವುಳ್ಳರೆ ಸಕಲರಾಜ್ಯದ ವೀರಸಿರಿ; ಸಾರ್ಗುಸತ್ಯವೇ ಬೇಹುದು (ಬೇಹು- ಗೂಢಚರ್ಯೆ?) ನೃಪರಿಗೆ+ ಆ ಸತ್ಯ ಭುಜಬಲಗೂಡಿ ಮಂತ್ರದ ಸತ್ಯವೇ ಸತ್ವಾಧಿಕವು ಭೂಪಾಲ ಕೇಳೆಂದ.
ಅರ್ಥ:ನಾರದನು,'ಸತ್ಯವಿದ್ದರೆ ಧರಣಿ- ರಾಜ್ಯ ನೆಡೆಯುವುದು; ಸತ್ಯವುಳ್ಳರೆ ಪದವಿ ಬರುವುದು; ಸತ್ಯವಿದ್ದರೆ ಸಕಲರಾಜ್ಯದ ವೀರಸಿರಿ ರಾಜನ ಬಳಿ ಸಾರುವುದು ; ಸತ್ಯವೇ ನೆಡೆಯುವುದು; ರಾಜರಿಗೆ ಸತ್ಯವೇ ಬೇಕಾದುದು. ನೃಪರಿಗೆ ಆ ಸತ್ಯ ಮತ್ತು ಭುಜಬಲ ಕೂಡಿ, ಮಂತ್ರಾಲೋಚನೆಯ ಸತ್ಯವೇ ಸತ್ವಾಧಿಕವು- ಅಧಿಕವಾದ ಸತ್ಯವು; ಭೂಪಾಲ ಕೇಳು,'ಎಂದ.
ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರವ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ |
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹೆಬ್ಬುಗೆಯವನ ಸಿರಿ ಭೂಪಾಲ ಕೇಳೆಂದ || ೫೧ ||
ಪದವಿಭಾಗ-ಅರ್ಥ: ಮೇಲನು (ಕೀಳು X ಮೇಲು; ಉತ್ತಮವು ಆಭಿವೃದ್ಧಿ)+ ಅರಿಯದ ನೃಪನ ಬಾಳಿಕೆ ಗಾಳಿಗೊಡ್ಡಿದ ಸೊಡರು (ದೀಪ), ನೀರವಜಾಲದ (ಮೌನದ ಜಾಲ)+ ಒಡ್ಡಣೆ(ಮೊತ್ತ,) ಸುರಧನುವಿನ (ಕಾನಬಿಲ್ಲಿನ)+ ಆಕಾರ; ಶವದುಡಿಗೆ(ಶವದ ಶೃಂಗಾರ) ಬಾಳಿಗೆ+ ಔಕಿದ(ಔಕು- ಅಮುಕು- ಒತ್ತು) ಕೊರಳು, ಭುಜಗನ(ಹಾವಿನ) ಹೇಳಿಗೆಯಲಿ (ಹಾವುಗಳನ್ನು ಇಡುವ ಬಿದಿರಿನ ಬುಟ್ಟಿ)+ ಇಕ್ಕಿದ ಕರವು; ಬೆಳ್ಳಾರ ( ಹತ್ತಿ ಹಿಂಜುಗೆ; ಉರುಲು ಆಮಿಷ,ಪ್ರಲೋಭನ,ಮೋಹಜಾಲ) ಹೆಬ್ಬುಗೆಯು (ದೊಡ್ಡರಾಶಿ)+ ಅವನ ಸಿರಿ ಭೂಪಾಲ ಕೇಳೆಂದ.
ಅರ್ಥ:ನಾರದನು,' ರಾಜನೇ, ಉತ್ತಮವು ಯಾವುದು, ತನ್ನ, ಮತ್ತು ರಾಜ್ಯದ ಆಭಿವೃದ್ಧಿ ಯಾವುದು ಎಂದು ಅರಿಯದ ನೃಪನ ಬಾಳು ಗಾಳಿಗೊಡ್ಡಿದ ದೀಪದಂತೆ ಅಶಾಶ್ವತ. ಅದು ಪ್ರಯೋಜನವಿಲ್ಲದ ನಿಸ್ಸಾರವಾದ ಮೌನದ ಜಾಲದ ಮೊತ್ತ; ಕಾಮನಬಿಲ್ಲಿನಂತೆ ಕ್ಷಣಿಕ ಆಕಾರದ್ದು; ಅದು ಶವದ ಶೃಂಗಾರಂತೆ ಅರ್ಥಹೀನ; ಅದು ನೃಪನ ಬಾಳಿಗೆ ಅಮುಕಿದ ಕೊರಳಹಾಗೆ; ಹಾವಿನ ಬಿದಿರು ಬುಟ್ಟಿಯಲ್ಲಿ ಇಟ್ಟ ಕೈ ಇದ್ದಂತೆ; ಹತ್ತಿ ಹಿಂಜುಗೆಯ ರಾಶಿ ಅಥವಾ; ಮೋಹಜಾಲದ ಹರವು ಅವನ ಸಿರಿ,' ಎಂದ.
ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಗಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ |
ನ್ಯಾಯವಿಲ್ಲದ ನಡವಳಿಯನ
ನ್ಯಾಯ ಹೊದ್ದುವ ಪಾತಕವ ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳೆಂದ || ೫೨ ||
ಪದವಿಭಾಗ-ಅರ್ಥ: ಆಯವಿಲ್ಲದ ಬೀಯವನು(ಬೀಯ- ಬರಡು; ತೌಡನ್ನು ತೆಗೆದ ಅಕ್ಕಿ, ವ್ಯಯ, ಹಾಳು, ನಷ್ಟ) ಪೂರಾಯವಿಲ್ಲದ(ಪೂರಾಯ- ಪರಿಪೂರ್ಣ, ವಾಸಿಯಾಗದ, ಪರಿಹಾರವಿಲ್ಲದ) ಗಾಯವನು, ನಿರ್ದಾಯವಿಲ್ಲದ(ಸಂಪೂರ್ಣ. ಸುಲಭ.) ಮಂತ್ರವನು (ಮಂತ್ರಾಲೋಚನೆ- ವಿಚಾರ,ಸಲಹೆ) ಲೇಸಾಗಿ ಮಿಗೆ ರಚಿಸಿ ನ್ಯಾಯವಿಲ್ಲದ ನಡವಳಿಯನು+ ಅನ್ಯಾಯ ಹೊದ್ದುವ ಪಾತಕವ ನಿಜಕಾಯದಲಿ(ನೀನು ಇರುವಾಗ) ನೀ ಧರಿಸೆಯೆಲೆ (ಧರಿಸಬೇಡ) ಭೂಪಾಲ ಕೇಳೆಂದ.
ಅರ್ಥ:ನಾರದನು,' ರಾಜನೇ ಕೇಳು, ಆಯವಿಲ್ಲದ ಬರಡು ಭೂಮಿಯನ್ನು; ವಾಸಿಯಾಗದ, ಪರಿಹಾರವಿಲ್ಲದ ಗಾಯವನ್ನು, ಸಾಧಿಸಲು ಸುಲಭವಲ್ಲದ ಮಂತ್ರಾಲೋಚನೆ- ಸಲಹೆಗಳನ್ನು ಚೆನ್ನಾಗಿ ರಚಿಸಿ, ನ್ಯಾಯವಿಲ್ಲದ ನಡವಳಿಕೆಯನ್ನು, ಅನ್ಯಾಯ ಹೊದ್ದುವ- ತಲುಪುವ ಪಾತಕದ ಕೆಲಸವನ್ನು ನೀನು ಇರುವಾಗ ನೀನು ಅನುಸರಿಸಬೇಡ,'ಎಂದ.
ಫಲವಹುದ ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಳೆಯ ಕರದರ್ಥವನು ತೆಗೆವೈ ಪ್ರಜೆಯ ನೋಯಿಸದೆ |
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ || ೫೩ ||
ಪದವಿಭಾಗ-ಅರ್ಥ: ಫಲವು (ಹಣ್ಣು)+ ಅಹುದ ಕೆಡಲು+ ಈಯದ (- ಕೊಡದ, ಅವಕಾಶಕೊಡದ)+ ಅಳಿ(ದುಂಬಿ) ಪರಿಮಳವ ಕೊಂಬ (ತೆಗೆದುಕೊಳ್ಲುವ - ರೀತಿಯಲ್ಲಿ->)+ ಅಂದದಲೆ ನೀನು+ ಆಳ್ವಿಳೆಯ ಕರದ (ತೆರಿಗೆ)+ ಅರ್ಥವನು ತೆಗೆವೈ; ಪ್ರಜೆಯ ನೋಯಿಸದೆ ಹಲವು ಸನ್ಮಾನದಲಿ ನಯದಲಿ ಚಲಿಸದಿಪ್ಪ+ ಅಂದದಲಿ ರಾಜ್ಯವ ನಿಲಿಸುವ (ಕಾಪಾಡುವ)+ ಅಭಿಮತ ಮಂತ್ರಿಯುಂಟೇ ರಾಯ ನಿನಗೆಂದ.
ಅರ್ಥ:ನಾರದನು ಹೇಳಿದ,'ಹಣ್ಣು ಆಗುವುದನ್ನು ಕೆಡದಹಾಗೆ ದುಂಬಿಯು ಹೂವಿನ ಪರಿಮಳವನ್ನು ಗೆದುಕೊಳ್ಳುವ ರೀತಿಯಲ್ಲಿ, ನೀನು ಆಡಳಿತದ ಕರದ- ತೆರಿಗೆಯ ಧನವನ್ನು ಸಂಗ್ರಹಿಸು; ಪ್ರಜೆಯನ್ನು ನೋಯಿಸದೆ ಹಲವು ಸನ್ಮಾನದಲಿ- ಗೌರವದಿಂದ ನಯವಾದ ರೀತಿಯಲ್ಲಿ ಗೌರವ ಚಲಿಸದ- ಹೋಗದ ರೀತಿಯಲ್ಲಿ ಸಂಗ್ರಹಿಸಬೇಕು. ಹೀಗೆ ರಾಜ್ಯವವನ್ನು ಸ್ಥರವಾಗಿ ನಿಲ್ಲಿಸುವ-ಕಾಪಾಡುವ ಅಭಿಮತದ ಮಂತ್ರಿಯು ನಿನ್ನ ಬಳಿ ಇರುವರೇ?,' ಎಂದ.
ಸೂಕರನ ತುಂಬಿಯ ಮರಾಳನ
ಭೇಕವೈರಿಯ ಕಾರುರಗ ಕಪಿ
ಕೋಕಿಲನ ಬರ್ಹಿಯ ಸುಧಾಕಿರಣನ ದಿನಾಧಿಪನ|
ಆಕಸದ ದರ್ಪಣದ ಬಕ ರ
ತ್ನಾಕರನಲೊಂದೊಂದುಗುಣವಿರ
ಬೇಕು ನೃಪರಿಗೆ ನಿನ್ನೊಳುಂಟೇ ರಾಯ ಹೇಳೆಂದ || ೫೪ ||
ಪದವಿಭಾಗ-ಅರ್ಥ:ಸೂಕರನ(ಹಂದಿ, ವರಾಹ), ತುಂಬಿಯ, ಮರಾಳನ(ಹಂಸಪಕ್ಷಿ, ಕುದುರೆ ) ಭೇಕವೈರಿಯ(ಭೇಕ=ಕಪ್ಪೆ, ವೈರಿ- ಹಾವು) ಕಾರುರಗ (ಕಾರು+ ಉರಗ- ಕಪ್ಪು ಸರ್ಪ- ಕಾಳಿಂಗಸರ್ಪ) ಕಪಿ ಕೋಕಿಲನ, (ಕಪಿ- ಕೋಗಿಲೆಯ) ಬರ್ಹಿಯ(ಹುಲ್ಲು, ನವಿಲು) ಸುಧಾಕಿರಣನ(ಚಂದ್ರ) ದಿನಾಧಿಪನ (ಸೂರ್ಯನ), ಆಕಸದ (ಆಕಾಶದ), ದರ್ಪಣದ(ಕನ್ನಡಿ) ಬಕ (ಪಕ್ಷಿ) ರತ್ನಾಕರನಲಿ (ಸಮುದ್ರ)+ ಒಂದೊಂದು ಗುಣವಿರಬೇಕು ನೃಪರಿಗೆ; ನಿನ್ನೊಳು+ ಉಂಟೇ ರಾಯ ಹೇಳೆಂದ.
ಅರ್ಥ: ಹಂದಿಯ, ತುಂಬಿಯ, ಹಂಸಪಕ್ಷಿಯ, ಕುದುರೆಯ, ಹಾವಿನ, ಕಾಳಿಂಗಸರ್ಪದ ಕಪಿಯ, ಕೋಗಿಲೆಯ, ನವಿಲಿನ, ಚಂದ್ರನ ಸೂರ್ಯನ, ಆಕಾಶದ, ಕನ್ನಡಿಯ, ಬಕಪಕ್ಷಿ, ಸಮುದ್ರದ ಒಂದೊಂದು ಗುಣವು ನೃಪರಿಗೆ ಇರಬೇಕು; ನಿನ್ನಲ್ಲಿ ಅವು ಉಂಟೇ ರಾಜನೇ? ಎಂದ.
ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆರಡರಲಿ ಸತ್ಯವನು ಚಲಿಸದಿರು |
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳೆಂದ || ೫೫ ||
ಪದವಿಭಾಗ-ಅರ್ಥ: ನೆಚ್ಚದಿರು (ನಂಬಿಕೊಂಡಿರಬೇಡ) ಸಿರಿಯನು ವೃಥಾ ಮದ+ಗಿ+ ಕಿಚ್ಚಿನ ಉರಿಯಲಿ ಬೇಯದಿರು, ಮಿಗೆ(ಹೆಚ್ಚು- ಮತ್ತೂ) ಬೆಚ್ಚಿ ಬೆದರದಿರು+ ಎರಡರಲಿ, ಸತ್ಯವನು ಚಲಿಸದಿರು, ಮೆಚ್ಚದಿರು+ ಅಸತ್ಯವನು; ಗುಣವನು ಮುಚ್ಚದಿರು; ಅಪಕೀರ್ತಿ-ನಾರಿಯ ಮೆಚ್ಚದಿರು; ಮರುಳಾಗದಿರು; ಭೂಪಾಲ ಕೇಳೆಂದ.
ಅರ್ಥ:ನಾರದನು,'ರಾಜನೇ, ಸಿರಿಯನ್ನು- ಸಂಪತ್ತನ್ನು ಶಾಶ್ವತವೆಂದು ನಂಬಿರಬೇಡ; ವೃಥಾ ಮದದ ಬೆಂಕಿಯ ಉರಿಯಲ್ಲಿ ಬೇಯದಿರು; ಮತ್ತೂ ಈ ಎರಡು ವಿಷಯದಲ್ಲಿ ಬೆಚ್ಚಿ ಬೆದರದಿರು- ಸತ್ಯವನ್ನು ಬಿಟ್ಟು ಚಲಿಸದಿರು; ಅಸತ್ಯವನ್ನು ಮೆಚ್ಚದಿರು; ಪರರ ಉತ್ತಮ ಗುಣವನ್ನು ಮುಚ್ಚದಿರು; ಅಪಕೀರ್ತಿಎಂಬ ನಾರಿಯನ್ನು ಮೆಚ್ಚದಿರು; ಯಾವುದಕ್ಕೂ ಮರುಳಾಗದಿರು,'ಎಂದ.
ಹಲವು ವಿನಿಯೋಗದಲಿ ಸುದತಿಯ
ರೊಲುಮೆಯಲಿ ಸಕಲಾಂಗದಲಿ ನಿ
ಸ್ಖಲಿತ ನಿಜವನೆ ಧರಿಸುವಾಶ್ರಮ ವರ್ಣಭೇದದಲಿ |
ಹಳಿವು ನಿನಗಾವಂಗದಲಿ ಬಳಿ
ಸಲಿಸದಲೆ ಪರತತ್ತ್ವದಲಿ ವೆ
ಗ್ಗಳಿಸದಲೆ ವೈರಾಗ್ಯಮತ ಭೂಪಾಲ ನಿನಗೆಂದ || ೫೬ ||
ಪದವಿಭಾಗ-ಅರ್ಥ:ಹಲವು ವಿನಿಯೋಗದಲಿ ಸುದತಿಯರ+ ಒಲುಮೆಯಲಿ ಸಕಲಾಂಗದಲಿ ನಿಸ್ಖಲಿತ(ಪರಿಶುದ್ಧ) ನಿಜವನೆ ಧರಿಸುವ+ ಆಶ್ರಮ ವರ್ಣಭೇದದಲಿ ಹಳಿವು(ದೋಷ- ಹಳಿ- ತೆಗಳು, ಹಳಿವು- ದೋಷ) ನಿನಗಾವ+ ಅಂಗದಲಿ ಬಳಿಸಲಿಸದಲೆ- (ಕೊಡಬೇಕಾದ್ದನ್ನು ಕೊಡದೆ, ದುಂದು ಮಾಡದೆ), ಪರತತ್ತ್ವದಲಿ ವೆಗ್ಗಳಿಸದಲೆ (ಹೆಚ್ಚಾಗದೆ) ವೈರಾಗ್ಯಮತ (ಅನಾಸಕ್ತಿ) ಭೂಪಾಲ ನಿನಗೆ+ ಎಂದ
ಅರ್ಥ: ಹಲವು ವಿನಿಯೋಗದಲ್ಲಿ- ಕಾರ್ಯದಲ್ಲಿ, ವನಿತೆಯರ ಒಲುಮೆಯಲ್ಲಿ, ಸಕಲ ಕಾರ್ಗಯಾಂಗದಲ್ಲಿ ಪರಿಶುದ್ಧ ನಿಜವನ್ನೇ ಧರಿಸುವ ಗೃಹಸ್ಥಾಶ್ರಮ ಮತ್ತು ವರ್ಣಭೇದದಲ್ಲಿ ದೋಷವನ್ನು ಹೇಳುವರು; ಭೋಗದಲ್ಲಿ ದುಂದು ಮಾಡದೆ ಪರತತ್ತ್ವದಲಿ ಹೆಚ್ಚುತೊಡಗದೆ ಇರಬೇಕು; ನಿನಗೆ ಯಾವ ವಿಷಯದಲ್ಲಿ - ಅನಾಸಕ್ತಿಯುಂಟು, ಭೂಪಾಲ,' ಎಂದ.
ಪರಿಜನಕೆ ದಯೆಯನು ಪರಸ್ತ್ರೀ
ಯರಲಿ ಭೀತಿಯ ಹಗೆಗಳಲಿ ನಿ
ಷ್ಕರುಣತೆಯ ಬಡವರಲಿ ದಾನವ ದೈವ ಗುರು ದ್ವಿಜರ |
ಚರಣಸೇವೆಯಲಾರ್ತತೆಯ ಪಿಸು
ಣರ ನುಡಿಗಳಲಿ ಮೂರ್ಖತೆಯ ನೀ
ವಿರಚಿಪೆಯೊ ಬೇಸರುವೆಯೋ ಭೂಪಾಲ ಕೇಳೆಂದ || ೫೭ ||
ಪದವಿಭಾಗ-ಅರ್ಥ: ಪರಿಜನಕೆ(ಸೇವಕರಿಗೆ) ದಯೆಯನು, ಪರಸ್ತ್ರೀಯರಲಿ ಭೀತಿಯ, ಹಗೆಗಳಲಿ ನಿಷ್ಕರುಣತೆಯ, ಬಡವರಲಿ ದಾನವ, ದೈವ ಗುರು ದ್ವಿಜರ,ಚರಣಸೇವೆಯಲಿ+ ಆರ್ತತೆಯ(ಕಷ್ಟಕ್ಕೆ ಸಿಕ್ಕಿದವ- ಪರಿಹಾರ ಬಯಸುವವ), ಪಿಸುಣರ(ಜಿಪುಣರ) ನುಡಿಗಳಲಿ ಮೂರ್ಖತೆಯ, ನೀ, ವಿರಚಿಪೆಯೊ ಬೇಸರುವೆಯೋ? (ಭೆಸರದಿಂದ)ನಿರ್ಲಕ್ಷಿಸುವೆಯೋ) ಭೂಪಾಲ ಕೇಳು+ ಎಂದ.
ಅರ್ಥ: ನಾರದನು, ರಾಜನೇ ಸೇವಕರಿಗೆ ದಯೆಯನು ತೋರುವೆಯಾ? ಪರಸ್ತ್ರೀಯರಲ್ಲಿ ಒಡನಾಡಲು ಭೀತಿಯನ್ನು ಹೊಂದಿರುವೆಯಾ?, ಹಗೆ- ಶತ್ರುಗಳಲ್ಲಿ ನಿಷ್ಕರುಣತೆಯನ್ನು ತೋರುತ್ತಿರುವೆಯಾ?, ಬಡವರಲ್ಲಿ ದಾನವನ್ನು ಮಾಡುವೆಯಾ? ದೈವ ಗುರು ದ್ವಿಜರ- ವಿಪ್ರರ,ಚರಣಸೇವೆಯಲ್ಲಿ ತೊಡಗುವೆಯಾ- ಅವರ ಕಷ್ಟಕ್ಕೆ ಪರಿಹಾರ ಕೊಡುವೆಯಾ?, ಜಿಪುಣರ ಮಾತುಗಳಲ್ಲಿ ಮೂರ್ಖತೆಯನ್ನು ಕಾಣುವೆಯಾ?, ನೀನು ಇವನ್ನು ನೆಡೆಸುವೆಯೊ ಬೇಸರುವೆಯೋ? ಅಥವಾ ಬೇಸರದಿಂದ ನಿರ್ಲಕ್ಷಿಸುವೆಯೋ? ಇವನ್ನು ನೆಡೆಸುವುದು ಒಳಿತು, ಕೇಳು,' ಎಂದ.
ಮೋಹದವಳಲಿ ವೈದ್ಯರಲಿ ಮೈ
ಗಾಹಿನವರಲಿ ಬಾಣಸಿಗರಲಿ
ಬೇಹ ಮಂತ್ರಿಗಳಲಿ ವಿಧಾವಂತರಲಿ ಹಿರಿಯರಲಿ |
ದೇಹರಕ್ಷಕರಲಿ ಸದೋದಕ
ವಾಹಿಯಲಿ ಹಡಪಾಳಿಯಲಿ ಪ್ರ
ತ್ಯೂಹವನು ವಿರಚಿಸೆಯಲೇ ಭೂಪಾಲ ಕೇಳೆಂದ || ೫೮ || *
ಪದವಿಭಾಗ-ಅರ್ಥ: ಮೋಹದವಳಲಿ (ಪ್ರೇಯಸಿ) ವೈದ್ಯರಲಿ, ಮೈಗಾಹಿನವರಲಿ, ಬಾಣಸಿಗರಲಿ (ಅಡಿಗೆಯವರಲ್ಲಿ) ಬೇಹ(ಗುಪ್ತಚಾರಿಕೆ , ಕಾವಲು) ಮಂತ್ರಿಗಳಲಿ, ವಿಧಾವಂತರಲಿ(ಆಡಳಿತಗಾರರಲ್ಲಿ) ಹಿರಿಯರಲಿ, ದೇಹರಕ್ಷಕರಲಿ ಸದೋದಕ ವಾಹಿಯಲಿ (ದಾಯಾದಿ ಸಮೂಹದಲ್ಲಿ), ಹಡಪಾಳಿಯಲಿ(ಕ್ಷೌರಿಕ, ಅಡಕೆ ಎಲೆಯ ಚೀಲ ಹೊರುವವ), ಪ್ರತ್ಯೂಹವನು (ವಿರೋಧ ಮಾಡಿಕೊಳ್ಳುವ ಯೋಜನೆಯನ್ನು) ವಿರಚಿಸಯಲೇ (ನೆಡೆಸಬೇಡ) ಭೂಪಾಲ ಕೇಳು+ ಎಂದ
ಅರ್ಥ:ನಾರದನು, ರಾಜನೇ ನಿನ್ನ ಮೋಹದ ಪ್ರೇಯಸಿಯೊಡನೆ, ವೈದ್ಯರೊಡನೆ, ಮೈಗಾವಲಿನವರಲ್ಲಿ, ಅಡಿಗೆಯವರಲ್ಲಿ, ಗುಪ್ತಚಾರಿಕರು ಮತ್ತು ಕಾವಲಿನವರಲ್ಲಿ, ಮಂತ್ರಿಗಳಲ್ಲಿ, ಆಡಳಿತಗಾರರಲ್ಲಿ, ಹಿರಿಯರಲ್ಲಿ, ದೇಹರಕ್ಷಕರಲ್ಲಿ, ದಾಯಾದಿ ಸಮೂಹದಲ್ಲಿ, ಕ್ಷೌರಿಕರು, ಅಡಕೆ ಎಲೆಯ ಚೀಲ ಹೊರುವ ಹಡಪರಲ್ಲಿ, ವಿರೋಧ ಮಾಡಿಕೊಳ್ಳುವ ಯೋಜನೆಯನ್ನು ನೆಡೆಸಬೇಡ,' ಎಂದ
ತರುಣಿಯಲಿ ಹಗೆಗಳಲಿ ಬಹಳೈ
ಶ್ವರಿಯದಲಿ ಶಸ್ತ್ರಾಂಗಿಯಲಿ ಸಂ
ಸ್ತರಣದಲಿ ಮದ್ಯಪನಲಬಲಾರ್ಥಿಯಲಿ ಶೃಂಗಿಯಲಿ |
ಉರಗನಲಿ ನದಿಯಲಿ ಸಖಿಯರಾ
ತುರಿಯದಲಿ ದುರ್ಮಂತ್ರಿಯಲಿ ದು
ಶ್ಚರಿತನಲಿ ವಿಶ್ವಾಸಿಸೆಯಲೇ ಭೂಪ ಕೇಳೆಂದ || ೫೯ ||
ಪದವಿಭಾಗ-ಅರ್ಥ: ತರುಣಿಯಲಿ, ಹಗೆಗಳಲಿ, ಬಹಳ+ ಐಶ್ವರಿಯದಲಿ, ಶಸ್ತ್ರಾಂಗಿಯಲಿ, ಸಂಸ್ತರಣದಲಿ (ಸಂಸ್ತರ-ಹಾಸಿಗೆ; ಹಾಸಿಗೆಯಲ್ಲಿರವವರಲ್ಲಿ), ಮದ್ಯಪನಲಿ+ ಅಬಲಾರ್ಥಿಯಲಿ, ಶೃಂಗಿಯಲಿ(ಕೋರೆಯುಳ್ಳದ್ದು, ಆನೆ), ಉರಗನಲಿ, ನದಿಯಲಿ, ಸಖಿಯರ+ ಆತುರಿಯದಲಿ, ದುರ್ಮಂತ್ರಿಯಲಿ, ದುಶ್ಚರಿತನಲಿ (ಕೆಟ್ಟನೆಡತೆಯವ), ವಿಶ್ವಾಸಿಸೆಯಲೇ(ವಿಶ್ವಾಸ ಬೇಡ) ಭೂಪ ಕೇಳೆಂದ
ಅರ್ಥ:ನಾರದನು,'ರಾಜನೇ ತರುಣಿಯರಲ್ಲಿ,, ಶತ್ರುಗಳಲ್ಲಿ, ಬಹಳ ಐಶ್ವರ್ಯದ ಶ್ರೀಮಮತನಲ್ಲಿ, ಶಸ್ತ್ರವನ್ನು ಹಿಡಿದವನಲ್ಲಿ, ಹಾಸಿಗೆಯಲ್ಲಿ, ಮದ್ಯವ್ಯಸನದವನಲ್ಲಿ; ಅಬಲಾರ್ಥಿಯಲ್ಲಿ- ಹೆಣ್ಣಿನ ಬಯಕೆಯವನಲ್ಲಿ, ಆನೆಯಲ್ಲಿ, ಸರ್ಪದಲ್ಲಿ, ನದಿಯಲ್ಲಿ, ಸಖಿಯರ ಆತುರ್ಯದಲ್ಲಿ- ಸಮೂಹದಲ್ಲಿ?, ದುರ್ಮಂತ್ರಿಯಲ್ಲಿ, ದುಶ್ಚರಿತನಲ್ಲಿ, ವಿಶ್ವಾಸವನ್ನು ಇಡಬೇಡ ಕೇಳು, ' ಎಂದ.
ಢಾಳರನು ಢವಳರನು ಠಕ್ಕಿನ
ಠೌಳಿಕಾರರ ಕೃತಕ ಮಾಯಾ
ಜಾಲರನು ಕಾಹುರರನಂತರ್ವಾಹಕರ ಶಠರ |
ಖೂಳರನು ಖಳರನು ವಿಕಾರಿಯ
ಜಾಳು ನುಡಿಗಳ ಜಡಮತಿಯನೀ
ನಾಳಿಗೊಂಬೆಯೊ ಲಾಲಿಸುವೆಯೊ ರಾಯ ಹೇಳೆಂದ || ೬೦ ||
ಪದವಿಭಾಗ-ಅರ್ಥ: ಢಾಳರನು ಢವಳರನು (ಕಪಟಿಗಳು, ಮೋಸಗಾರ) ಠಕ್ಕಿನ ಠೌಳಿಕಾರರ (ರೌಳಿ- ಮೋಸ, ವಂಚನೆ) ಕೃತಕ ಮಾಯಾಜಾಲರನು ಕಾಹುರರನು(ಕ್ರೂರ ದುಷ್ಟ)+ ಅತರ್ವಾಹಕರ ಶಠರ ಖೂಳರನು ಖಳರನು ವಿಕಾರಿಯ ಜಾಳು ನುಡಿಗಳ ಜಡಮತಿಯ ನೀನು+ ಆಳಿಗೊಂಬೆಯೊ(ಉದಾಸೀನ ) ಲಾಲಿಸುವೆಯೊ (ಆದರಿಸುವೆಯೊ) ರಾಯ ಹೇಳೆಂದ.
ಅರ್ಥ:ನಾರದನು,'ಕಪಟಿಗಳು, ಮೋಸಗಾರರಾದ ಢಾಳರು, ಢವಳರು, ಠಕ್ಕಿನ ವಂಚಕರು, ಕೃತಕ ಮಾಯಾಜಾಲರು ಕಾಹುರಾದ ಕ್ರೂರರು, ಅತರ್ವಾಹಕರು, ಹಠಗೇಡಿಗಳು, ಖೂಳರು, ಖಳರು, ಮಾನಸಿಕ ವಿಕಾರಿಗಳು ಜಾಳು ನುಡಿಗಳನ್ನು ಹೇಳುವ ಜಡಮತಿಗಳು -ಮೊದಲಾದ ಇವರನ್ನು ನೀನು ಉದಾಸೀನ ಮಾಡುವೆಯೋ ಅಥವಾ ಲಾಲಿಸುವೆಯೊ ರಾಜನೇ, ಹೇಳು ಎಂದ.
ಆವಕಾಲದೊಳಾವಕಾರ್ಯವ
ದಾವನಿಂದಹುದವನ ಮನ್ನಿಪ
ಠಾವಿದೆಂಬುದನರಿದಿಹೈ ಮೃಗಜೀವಿಯಂದದಲಿ |
ಲಾವಕರ ನುಡಿ ಕೇಳಿ ನಡೆದರೆ
ಭೂವಳದೇಕಾಧಿಪತ್ಯದ
ಠಾವು ಕೆಡುವುದನರಿದಿಹೈ ಭೂಪಾಲ ಕೇಳೆಂದ || ೬೧ ||
ಪದವಿಭಾಗ-ಅರ್ಥ: ಆವಕಾಲದೊಳು+ ಆವಕಾರ್ಯವ+ ಅದು+ ಆವನಿಂದ+ ಅಹುದು+ ಅವನ ಮನ್ನಿಪಠಾವು (ಠಾವು- ಸ್ಥಾನ)+ ಇದೆಂಬುದನು+ ಅರಿದಿಹೈ(ಅರಿ- ತಿಳಿ)? ಮೃಗಜೀವಿಯಂದದಲಿ ಲಾವಕರ(ಚಾಡಿಕೋರ, ಪಿಸುಣ, ಕೆಡುಕ, ದುಷ್ಟ) ನುಡಿ (ಮಾತು ಕೇಳಿ ನಡೆದರೆ, ಭೂವಳದ+ ಏಕಾಧಿಪತ್ಯದ ಠಾವು ಕೆಡುವುದನು+ ಅರಿದಿಹೈ? ಭೂಪಾಲ ಕೇಳೆಂದ.
ಅರ್ಥ:ನಾರದನು,'ರಾಜನೇ ಕೇಳು, ಯಾವಕಾಲದಲ್ಲಿ ಯಾವಕಾರ್ಯವನ್ನು ಅದು ಯಾವನಿಂದ ಆಗುವುದು ಅದನ್ನು ತಿಳಿದು ಅವನನ್ನು ಮನ್ನಿಸುವ ಸ್ಥಾನವು ಇದು ಎಂಬುದನನ್ನು ಅರಿತಿರುವೆಯಾ? ವಿಚಾರ ಶಕ್ತಿ ಇಲ್ಲದ ಮೃಗಜೀವಿಯಂತೆ ಚಾಡಿಕೋರರ, ದುಷ್ಟರ ಮಾತನ್ನು ಕೇಳಿ ನಡೆದರೆ, ಭೂವಲಯದ ಏಕಾಧಿಪತ್ಯದ ಸ್ಥಾನ ಕೆಡುವುದನ್ನು ಅರಿತಿರುವೆಯಾ? ಎಂದ.
ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಭಿನ್ನಪವನಿನ್ನಾರು ಕೇಳುವರು |
ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ || ೬೨ ||
ಪದವಿಭಾಗ-ಅರ್ಥ: ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ(ಗುಂಪು) ಬಡವರ ಭಿನ್ನಪವನು+ ಇನ್ನಾರು ಕೇಳುವರು, ಉರಿ- ವುರಿವುತಿದೆ ದೇಶ, ನಾವ+ ಇನ್ನು+ ಇರಲು ಬಾರದು+ ಎನುತ್ತ ಜನ ಬೇಸರಿನ ಬೇಗೆಯಲಿರದು+ ಅಲೇ(ಇಲ್ಲ, ಬೇಡ) ಭೂಪಾಲ ಕೇಳೆಂದ.
ಅರ್ಥ:ನಾರದನು,'ರಾಜನೇ, ಅರಸು ರಾಕ್ಷಸ, ಮಂತ್ರಿಯೆಂಬುವನು ಘರ್ಜಿಸುವ ಹುಲಿಯಂತಿರುವನು, ಅರಸನ ಪರಿವಾರ ಕುಕ್ಕಿ ತಿನ್ನುವ ಹದ್ದಿನ ಗುಂಪು, ಬಡವರ ಭಿನ್ನಪವನು ಇನ್ನಾರು ಕೇಳುವರು? ಉರಿ-ಉರಿಯುತ್ತಿದೆ, ದೇಶ, ನಾವು ಇನ್ನು ಈ ದೇಶದಲ್ಲಿ ಇರಲು ಬಾರದು ಎನ್ನುತ್ತಾ ಜನರು ಬೇಸರಿನ ಬೇಗೆಯಲ್ಲಿ ಇಲ್ಲ ಅಅಲ್ಲವೇ ಕೇಳು,' ಎಂದ.
ಧನದಲುರು ಧಾನ್ಯದಲಿ ನೆರೆದಿಂ
ಧನದಲುದಕದ ಹೆಚ್ಚುಗೆಯಲಂ
(ಬಿನಲಿ ಶಸ್ತ್ರೌಘದಲಿ ಶಿಲ್ಪಿಗಳಲಿ ಶಿಲಾಳಿಯಲಿ
ವನವಳಯ ಕೋಟಾವಳಯ ಜೀ
ವನವಳಯ ಗಿರಿವಳಯ ದುರ್ಗಮ
ವೆನಿಪ ದುರ್ಗಾವಳಿ ಸಮಗ್ರವೆ ಭೂಪ ಕೇಳೆಂದ || ೬೩ ||
ಪದವಿಭಾಗ-ಅರ್ಥ:ಧನದಲಿ+ ಉರು(ಬಹಳ) ಧಾನ್ಯದಲಿ ನೆರೆದ+ ಇಂಧನದಲಿ+ ಉದಕದ(ನೀರು) ಹೆಚ್ಚುಗೆಯಲಿ+ ಅಂಬಿನಲಿ ಶಸ್ತ್ರೌಘದಲಿ(ಶಸ್ತ್ರಗಳ ರಾಶಿ) ಶಿಲ್ಪಿಗಳಲಿ ಶಿಲಾಳಿಯಲಿ(ಆಳಿ- ಸಮೂಹ) - ಪಾವನವಳಯ ಕೋಟಾವಳಯ ಜೀವನವಳಯ ಗಿರಿವಳಯ ದುರ್ಗಮವು+ ಎನಿಪ ದುರ್ಗಾವಳಿ ಸಮಗ್ರವೆ ಭೂಪ ಕೇಳೆಂದ.
ಅರ್ಥ:ನಾರದನು, ರಾಜನೇ,ಧನದಲ್ಲಿ, ಹೆಚ್ಚಿನ ಧಾನ್ಯದಲ್ಲಿ, ನೆರೆದ- ಸಾಕಷ್ಟುಇರುವ ಇಂಧನದಲ್ಲಿ, ಹೆಚ್ಚಾಗಿ ಇರುವ ನೀರಿನಲ್ಲಿ, ಅಂಬುಗಳಲ್ಲಿ, ಶಸ್ತ್ರಗಳ ರಾಶಿಯಲ್ಲಿ, ಶಿಲ್ಪಿಗಳಲ್ಲಿ, ಶಿಲೆಗಳ ರಾಶಿಯಲ್ಲಿ, ಪಾವನವಲಯ, ಕೋಟಾವಲಯ, ಜೀವನವಲಯ, ಗಿರಿವಲಯ, ದುರ್ಗಮವು ಎನ್ನಿಸುವ ದುರ್ಗಗಳ ಸಮೂಹದಲ್ಲಿ ನಿನ್ನ ರಾಜ್ಯ ಸಮಗ್ರವೆ ಭೂಪ,' ಕೇಳು ಎಂದ.
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದವ ಜನದಿ |
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ || ೬೪ ||
ಪದವಿಭಾಗ-ಅರ್ಥ: ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದು(ಪಸರು- ಹಬ್ಬು,)+ ಆ ಕೃಷಿಯನು+ ಉದ್ಯೋಗಿಸುವ ಜನವನು ಪಾಲಿಸುವುದು+ ಆ ಜನಪದವ ಜನದಿ ವಸು ತೆರಳುವುದು, ವಸುವಿನಿಂ(ವಸು- ಐಶ್ವರ್ಯ, ಸಂಪತ್ತು) ಸಾಧಿಸುವಡೆ+ ಆವುದು+ ಅಸಾಧ್ಯವು+ ಅದರಿಂ ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ.
ಅರ್ಥ:ನಾರದನು,'ಕೃಷಿಯೇ ಸರ್ವಕ್ಕೂ ಮೊದಲು; ಕೃಷಿಯಿದ ಸರ್ವವೂ ಹಬ್ಬುವುದು; ಆ ಕೃಷಿಯನ್ನು ಉದ್ಯೋಗವಾಗಿ ಜೀವಿಸುವ ಜನರನ್ನು ಪಾಲಿಸುವುದು ಮುಖ್ಯ; ಆ ಜನಪದವನ್ನು ಪಾಲಿಸುವುದು ಮುಖ್ಯ; ಜನರಿಂದ ಸಂಪತ್ತು; ಜನರಿಂದ ಸಂಪತ್ತು ತೆರಳುವುದು; ಸಂಪತ್ತಿನಿಂದ ಸಾಧಿಸುವುದಾದರೆ ಯಾವುದು ಅಸಾಧ್ಯವು? ಅದರಿಂದ ಕೃಷಿವಿಹೀನನ ದೇಶವು ಅದು ದುರ್ದೇಶ ಕೇಳು,' ಎಂದ.
ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ ||
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳೆಂದ || ೬೫ ||
ಪದವಿಭಾಗ-ಅರ್ಥ: ಸತಿಯರ+ ಒಲುಮೆಯ ವಿಟರುಗಳನು+ ಆಸತಿಯರ ಸ್ಥಿತಿಗತಿಗೆ ತಾನೆಂದು+ ಅತಿಶಯೋಕ್ತಿಯ ನುಡಿವವರನು+ ಅರಮನೆಯ ಕಾಹಿಂಗೆ ಪತಿಕರಿಸುದರೆ (ದಯೆತೋರು, ಅನುಗ್ರಹಿಸು, ಅಂಗೀಕರಿಸು, ಸ್ವೀಕರಿಸು, ) ಜಗವರಿಯಲು+ ಆ ಕ್ಷಿತಿಪರ+ ಅಭಿಮಾನವು ಮುಹೂರ್ತಕೆ ಗತವಹುದು(ಹೋಗುವುದು) ನೀನು+ ಅರಿದಿಹೈ ಭೂಪಾಲ ಕೇಳೆಂದ.
ಅರ್ಥ: ನಾರದನು,'ಧರ್ಮಜನೇ, ಸತಿಯರ ಪ್ರೇಮಿಸಿದ ವಿಟರುಗಳನನ್ನು, ಆ ಸತಿಯರ ಸ್ಥಿತಿಗತಿಗೆ ತಾನೇ ಹೊಣೆಯೆಂದು ಅತಿಶಯೋಕ್ತಿಯನ್ನು ನುಡಿಯುವವರನ್ನು ಅರಮನೆಯ ಕಾವಲಿಗೆ ಅಂಗೀಕರಿಸಿದರೆ, ಜಗದ ಜನ ಅರಿಯುವ ಹಾಗೆ ಆ ರಾಜರ ಅಭಿಮಾನವು ಕ್ಷಣ- ಮುಹೂರ್ತದಲ್ಲಿ ಹೋಗುವುದು. ನೀನು ಇದನ್ನು ತಿಳಿದಿರು.,' ಎಂದ.
ಖಡುಗ ಧಾರೆಯ ಮಧು ಮಹಾಹಿಯ
ಹೆಡೆಯ ಮಾಣಿಕ ವಜ್ರದಿಂ ಬಿಗಿ
ದೊಡಲಿಗೊಡ್ಡಿದ ಸುರಗಿ ಕಡುಗೆರಳಿದ ಮೃಗಾಧಿಪನ |
ನಡುಗುಹೆಯೊಳಿಹ ಸುಧೆಯ ಘಟವೀ
ಪೊಡವಿಯೊಡೆತನ ಸದರವೇ ಕಡು
ಬಡವರಿಗೆ ದೊರೆಕೊಂಬುದೇ ಭೂಪಾಲ ಕೇಳೆಂದ || ೬೬ ||
ಪದವಿಭಾಗ-ಅರ್ಥ: ಖಡುಗ ಧಾರೆಯ ಮಧು ಮಹ+ ಅಹಿಯ ಹೆಡೆಯ(ಅಹಿ- ಸರ್ಪ) ಮಾಣಿಕ ವಜ್ರದಿಂ ಬಿಗಿದು+ ಒಡಲಿಗೆ+ ಒಡ್ಡಿದ ಸುರಗಿ(ಕತ್ತಿ) ಕಡು+ ಗೆ+ ಕೆರಳಿದ ಮೃಗಾಧಿಪನ(ಸಿಂಹದ) ನಡುಗುಹೆಯೊಳು+ ಇಹ ಸುಧೆಯ ಘಟವು(ಹಾಲಿ ಮಡಕೆ)+ ಈ ಪೊಡವಿಯ+ ಒಡೆತನ; ಸದರವೇ (ಸುಲಭವೇ?) ಕಡುಬಡವರಿಗೆ (ದುರ್ಬಲರಿಗೆ) ದೊರೆಕೊಂಬುದೇ ಭೂಪಾಲ ಕೇಳೆಂದ.
ಅರ್ಥ:ನಾರದನು,'ಭೂಪಾಲನೇ, ಖಡ್ದದ ಧಾರೆಯ ಮಧು, ದೊಡ್ಡ ಸರ್ಪದ ಹೆಡೆಯ ಮಾಣಿಕ; ವಜ್ರದಿಂದ ಬಿಗಿದ ಒಡಲಿಗೆ ಒಡ್ಡಿದ ಕತ್ತಿ, ಕಡು - ಬಹಳ ಕೆರಳಿದ ಸಿಂಹದ ನಡುಗುಹೆಯಲ್ಲಿ ಇರುವ ಹಾಲಿ ಮಡಕೆ,- ಹೀಗಿದೆ ಈ ರಾಜ್ಯದ ಒಡೆತನವು; ಸಸುಲಭವೇ? ದುರ್ಬಲರಿಗೆ ದೊರೆಯುವುದೇ? ಇಲ್ಲ,' ಎಂದ.
ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಕುಲದ ವಿದ್ಯವಿದು |
ಬಗೆಯ ನಿನ್ನೊಡಹುಟ್ಟಿದರು ಮಂ
ತ್ರಿಗಳೊಳಾಪ್ತರಖಿನ್ನರೇ ದಾ
ಯಿಗರೊಳಂತರ್ಬದ್ಧವುಂಟೇ ರಾಯ ನಿನಗೆಂದ || ೬೭ ||
ಪದವಿಭಾಗ-ಅರ್ಥ: ಮಗಗೆ ಮುನಿವನು ತಂದೆ, ತಂದೆಗೆ ಮಗ ಮುನಿವನು,+ ಒಡಹುಟ್ಟಿದರು ಬಲು ಪಗೆ(ಹಗೆ- ದ್ವೇಷ) ಕಣಾ, ತನ್ನೊಳಗೆ ಭೂಪರ ಕುಲದ ವಿದ್ಯವಿದು; ಬಗೆಯ ನಿನ್ನ + ಒಡಹುಟ್ಟಿದರು ಮಂತ್ರಿಗಳೊಳು+ ಆಪ್ತರು+ ಅಖಿನ್ನರೇ (ಯಾವುದೇ ಚಿಂತೆಯಿಲ್ಲದವರೇ?) ದಾಯಿಗರೊಳು+ ಅಂತರ್ಬದ್ಧವುಂಟೇ (ಕಲಹ) ರಾಯ ನಿನಗೆ+ ಏಂದ.
ಅರ್ಥ:ನಾರದನು,'ತನ್ನ ಮಾತು ಕೇಳನು ಎಂದು ಮಗನಿಗೆ ತಂದೆಯು ಮುನಿಯುವನು. ತನ್ನ ಮಾತು ಕೇಳನು ಎಂದು ತಂದೆಗೆ ಮಗ ಮುನಿವನು; ಒಡಹುಟ್ಟಿದರು ತಮ್ಮೊಳಗೆ ಪರಸ್ಪರ ಬಲು ದ್ವೇಷ ಪಡುವರು ಕಣಾ; ಭೂಪರ-ಬಗೆಯ- ಮನಸ್ಸಿನ ಕುಲದ ವಿದ್ಯವು ಇದು; ರಾಜಮನೆತನದಲ್ಲಿ ಇದು ಸಹಜ; ನಿನ್ನ ಒಡಹುಟ್ಟಿದವರು ಮಂತ್ರಿಗಳಲ್ಲಿ ಆಪ್ತರು ಯಾವುದೇ ಚಿಂತೆ ಯಿಲ್ಲದವರೇ? ದಾಯಿಗರಲ್ಲಿ- ದಾಯಾದಿಗಳಲ್ಲಿ ರಾಯನೇ ನಿನಗೆ ಕಲಹವುಂಟೇ,' ಏಂದ.
ಮಲೆವ ರಾಯರ ಬೆನ್ನ ಕಷ್ಟವ
ನಲಗಿನಲಿ ಕೊಂಡಾಂತ ಮನ್ನೆಯ
ಕುಲದ ತಲೆ ಚೆಂಡಾಡಿ ಗಡಿಗಳ ದುರ್ಗದಲಿ ತನ್ನ |
ಬಲು ಸಚಿವರನು ನಿಲಿಸಿ ತಾ ಪುರ
ದಲಿ ವಿನೋದದಲಿರುತ ಹರುಷದ
ಲಿಳೆಯ ಪಾಲಿಸುವವನರಸು ಭೂಪಾಲ ಕೇಳೆಂದ || ೬೮ ||
ಪದವಿಭಾಗ-ಅರ್ಥ:ಮಲೆವ (ವಿರೋಧಿಸುವ) ರಾಯರ ಬೆನ್ನ ಕಷ್ಟವನು+ ಅಲಗಿನಲಿ ಕೊಂಡು+ ಆಂತ (ಎದುರಿಸಿದ) ಮನ್ನೆಯ ಕುಲದ ತಲೆ ಚೆಂಡಾಡಿ, ಗಡಿಗಳ ದುರ್ಗದಲಿ ತನ್ನ ಬಲು ಸಚಿವರನು ನಿಲಿಸಿ, ತಾ ಪುರದಲಿ ವಿನೋದದಲಿ+ ಇರುತ ಹರುಷದಲಿ+ ಇಳೆಯ ಪಾಲಿಸುವವನು+ ಅರಸು ಭೂಪಾಲ ಕೇಳೆಂದ.
ಅರ್ಥ:ನಾರದನು,'ವಿರೋಧಿಸುವ ರಾಜರಿಂದ ಬರುವ ಬೆನ್ನ ಕಷ್ಟವನ್ನು ಕತ್ತಿ ಅಲುಗಿನಲಿ ಕೊಂಡು ಎದುರಿಸಿ, ಎದುರಿಸಿದ ಮನ್ನೆಯ- ವೀರ ಕುಲದವರ ತಲೆಯನ್ನು ಚೆಂಡಾಡಿ, ಗಡಿಗಳ ದುರ್ಗದಲ್ಲಿ ತನ್ನ ಬಲುಸಮರ್ಥ ಸಚಿವರನ್ನು ನಿಲ್ಲಿಸಿ, ತಾನು ಪುರದಲ್ಲಿ ವಿನೋದದಿಂದ ಇರುತ್ತಾ ಹರ್ಷದಲ್ಲಿ ಭೂಮಿಯನ್ನು ಪಾಲಿಸುವವನು ಜಾಣ ಅರಸನು ಭೂಪಾಲನೇ ಕೇಳು,'ಎಂದ.
ಮನ್ನಣೆಯೊಳಲ್ಪತೆಯ ನುಡಿಯೊಳ
ಗುನ್ನತಿಯನೆಸಗುವುದು ಪರರಿಗೆ
ತನ್ನವರಿಗುಗ್ಗಡದ ಪರಿಕರಣೆಯನು ಮಾತಿನಲಿ |
ಭಿನ್ನವನು ತೋರುವುದು ರಾಯರ
ಗನ್ನಗತಕ ಕಣಾ ವಿಪುಳ ಸಂ
ಪನ್ನಮತಿ ನಿನಗುಂಟೆ ಭೂಮೀಪಾಲ ಕೇಳೆಂದ || ೬೯ ||
ಪದವಿಭಾಗ-ಅರ್ಥ: ಮನ್ನಣೆಯೊಳು+ ಅಲ್ಪತೆಯ, ನುಡಿಯೊಳಗೆ+ ಉನ್ನತಿಯನು+ ಎಸಗುವುದು(ಮಾಡುವುದು), ಪರರಿಗೆ ತನ್ನವರಿಗೆ+ ಉಗ್ಗಡದ(ಉತ್ಕಟ- ಹೆಚ್ಚಿಗೆಯ) ಪರಿಕರಣೆಯನು ಮಾತಿನಲಿ, ಭಿನ್ನವನು ತೋರುವುದು; ರಾಯರ ಗನ್ನಗತಕ (ಮೋಸ, ವಂಚನೆ) ಕಣಾ, ವಿಪುಳ ಸಂಪನ್ನಮತಿ ನಿನಗೆ+ ಉಂಟೆ ಭೂಮೀಪಾಲ ಕೇಳೆಂದ.
ಅರ್ಥ:ನಾರದನು,'ಗೌರವಿಸುವಾಗ ಅಲ್ಪತೆಯನ್ನು ತೋರಿ, ಮಾತಿನಲ್ಲಿ ಉನ್ನತಿಯನ್ನು ಹೊಗಳಿ- ಈ ಕ್ರಮದಿಂದ ಪರರಿಗೆ ವಂಚನೆ ಮಾಡುವುದು, ತನ್ನವರಿಗೆ ಹೆಚ್ಚಿನ ಪರಿಕರಣೆಯನು ಮಾತಿನಲ್ಲಿ, ಭಿನ್ನವಾಗಿ ನೆಡೆಯುವುದು, ತೋರುವುದು; ಇದು ರಾಜರ ಮೋಸಕ್ರಮ ಕಣಾ; ವಿಪುಲ ಸಂಪನ್ನಮತಿಯಾದ ನಿನಗೆ ಈ ಗುಣ ಉಂಟೆ ಭೂಮೀಪಾಲನೇ ಕೇಳು,'ಎಂದ.
ಧನದಿ ಪಂಡಿತರಶ್ವತತಿಯಾ
ಧನದಿ ಧಾರುಣಿ ಮಾನ ಮೇಣಾ
ಧನದಿ ಕಾಂತೆಯರಖಿಳ ವಸ್ತುಗಳೈದೆ ಸೇರುವುದು |
ನೆನಹು ತೃಪ್ತಿಯೊಳೈದದದರಿಂ
ಧನವೆ ಸಾಧನವರಸಿಗಾ ಧನ
ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ || ೭೦ ||
ಪದವಿಭಾಗ-ಅರ್ಥ: ಧನದಿ ಪಂಡಿತರು+ ಅಶ್ವತತಿಯು+ ಆ ಧನದಿ ಧಾರುಣಿ, ಮಾನ, ಮೇಣ್+ ಧನದಿ ಕಾಂತೆಯರು+ ಅಖಿಳ ವಸ್ತುಗಳು ಐದೆ, ಸೇರುವುದು;ನೆನಹು- ಮನಸ್ಸು ಐದುದು(ಬಂದು, ಹೋಗಿ)- ಹೋಗಿ ತೃಪ್ತಿಯಲ್ಲಿ ಸೇರುವುದು; ಅದರಿಂ ಧನವೆ ಸಾಧನವು+ ಅರಸಿಗೆ+ ಆ ಧನವ+ ಅನಿತು(ಅಷ್ಟು) ದೊರಕೊಳಲು(ಪಡೆಯಲು)+ ಇದಿರದಾರೈ ಧಾತ್ರಿಪತಿಗಳಲಿ(ರಾಜರಲ್ಲಿ ಬಹಳ ಮಂದಿ).
ಅರ್ಥ:ನಾಎದನು,'ಧನದಿಂದ ಪಂಡಿತರು ಬದುಕುವರು; ಅದರಿಂದ ಅಗತ್ಯ ಅಶ್ವಗಳ ಸಮೂಹ ಬರುವುದು; ಆ ಧನದಿ ಧಾರುಣಿ- ಭೂಮಿ, ಮಾನ, ದೊರಕುವುವುದು; ಮತ್ತೆ ಧನದಿಂದ- ಅದು ಇದ್ದರೆ ಉತ್ತಮ ಕಾಂತೆಯರು ಸಿಗುವರು; ಅಖಿಲ ವಸ್ತುಗಳು ಬರಲು, ನೆನಹು- ಮನಸ್ಸು ಐದುದು(ಬಂದು, ಹೋಗಿ)- ಹೋಗಿ ತೃಪ್ತಿಯಲ್ಲಿ ಸೇರುವುದು; ಅದರಿಂದ ಅರಸರಿಗೆ ಧನವೆ ಎಲ್ಲದಕ್ಕೂ ಸಾಧನವು. ಆ ಧನವನ್ನು ಸಾಕಷ್ಟು ಪಡೆಯಲು ರಾಜರಲ್ಲಿ ಬಹಳ ಮಂದಿ ಇದಿರಾದರು- ಪ್ರಯತ್ನಶೀಲರಾಗಿದ್ದಾರೆ.
ಶೂರ ಧೀರನುದಾರ ಧರ್ಮೋ
ದ್ಧಾರ ವಿವಿಧ ವಿಚಾರ ಸುಜನೋ
ದ್ಧಾರ ರಿಪುಸಂಹಾರ ಚತುರೋಪಾಯ ಸಾಕಾರ |
ಸಾರಮಂತ್ರ ವಿಚಾರ ಭುವನಾ
ಧಾರ ಸುಜನಸ್ವಾಮಿ ಕಾರ್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ || ೭೧ ||
ಪದವಿಭಾಗ-ಅರ್ಥ: ಶೂರ ಧೀರನು+ ಉದಾರ ಧರ್ಮೋದ್ಧಾರ, ವಿವಿಧ ವಿಚಾರ ಸುಜನೋದ್ಧಾರ, ರಿಪುಸಂಹಾರ ಚತುರೋಪಾಯ ಸಾಕಾರ, ಸಾರಮಂತ್ರ ವಿಚಾರ, ಭುವನಾಧಾರ ಸುಜನಸ್ವಾಮಿ ಕಾರ್ಯಾಗಾರನು+ ಎನಿಸುವ ಮಂತ್ರಿಯುಂಟೇ ರಾಯ ನಿನಗೆಂದ.
ಅರ್ಥ:ನಾರದನು,'ಶೂರನು, ಧೀರನು, ಉದಾರ ಧರ್ಮೋದ್ಧಾರನು, ವಿವಿಧ ವಿಚಾರ ಸುಜನರ ಉದ್ಧಾರಕನೂ, ರಿಪುಸಂಹಾರಕನೂ, ಚತುರೋಪಾಯ ಸಾಕಾರನೂ,, ಸಾರಮಂತ್ರ ವಿಚಾರಶೀಲನೂ, ಭುವನಕ್ಕೆ- ಭೂಮಿಗೆ ಆಧಾರನೂ ಸುಜನಸ್ವಾಮಿಯೂ, ಕಾರ್ಯಾಗಾರನು- ಕಾರ್ಯಶೀಲನೂ, ಎನ್ನಿಸುವ ಮಂತ್ರಿ ರಾಜನೇ ನಿನಗೆ ಉಂಟೇ?'ಎಂದ.
ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರಿಕ ಮಂ
ಡಲಿಕ ಸಾವಂತರನಶೇಷರನಿಂಗಿತವನರಿತು |
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕೃತ ದುಷ್ಕೃತ
ಫಲಿತ ಕಾರ್ಯಕೆ ಮಂತ್ರಿಯುಂಟೇ ರಾಯ ನಿನಗೆಂದ || ೭೨ ||
ಪದವಿಭಾಗ-ಅರ್ಥ: ತಿಳಿದವನ(ವಿದ್ವಾಂಸನ), ಮತಿವಿದನ (ಬುದ್ಧಿವಂತನ), ಭಾಷಾವಳಿ ಲಿಪಿಜ್ಞನ(ಅನೇಕ ಭಾಷೆ, ಲಿಪಿಗಳನ್ನು ಬಲ್ಲವನ) ಸ+ ಅಕ್ಷರಿಕ (ವಿದ್ಯಾವಂತ)ಮಂಡಲಿಕ ಸಾವಂತರನು+ ಅಶೇಷರನು(ಸಂಪೂರ್ಣ)+ ಇಂಗಿತವನರಿತು ಸಲೆ ಕರೆವ ಕಳುಹಿಸುವ ನಿಲಿಸುವ ಬಲುಹನುಳ್ಳನ ಸುಕೃತ ದುಷ್ಕೃತ-ಫಲಿತ ಕಾರ್ಯಕೆ ಮಂತ್ರಿಯುಂಟೇ ರಾಯ ನಿನಗೆಂದ.
ಅರ್ಥ:ನಾರದನು,'ವಿದ್ವಾಂಸನೂ, ಬುದ್ಧಿವಂತನೂ, ಅನೇಕ ಭಾಷೆ, ಲಿಪಿಗಳನ್ನು ಬಲ್ಲವನೂ, ವಿದ್ಯಾವಂತರೂ ಆದ ಮಾಂಡಲಿಕರು, ಸಾವಂತರನ್ನೂ, ಸಂಪೂರ್ಣವಾಗಿ ಮನಸ್ಸಿನ ಇಂಗಿತವನ್ನು ಅರಿತುನೆಡೆಯುವವರನ್ನೂ, ಮತ್ತೆ ವಿಶೇಷವಾಗಿ ಕರೆಯವ, ಕಳುಹಿಸುವ, ನಿಲಲಿಸುವ ಬಲುಹನು- ಶಕ್ತಿಯನ್ನ ಉಳ್ಳವನಾದ ಸುಕೃತ ದುಷ್ಕೃತಗಳಿಗೂ ಫಲಿತ- ಸಾಧಿಸುವ ಕಾರ್ಯಕ್ಕೆ ರಾಜನೇ,ನಿನಗೆ ಮಂತ್ರಿಯುಂಟೇ,' ಎಂದ.
ಜರೆ ನರೆಯ ಮೈಸಿರಿಯ ಕುಲವೃ
ದ್ಧರನು ಹೀನಾಂಗರನು ಹಿಂಸಾ
ಚರಿತರನು ಜಾತ್ಯಂಧರನು ಧನದಾಸೆಯಳಿದವರ |
ಅರಮನೆಯ ಸಂರಕ್ಷಣಾರ್ಥದೊ
ಳಿರಿಸಿದರೆ ಮಾನೋನ್ನತಿಕೆ ವಿ
ಸ್ತರಣವಹುದಿದನರಿದಿಹೈ ಭೂಪಾಲ ಕೇಳೆಂದ || ೭೩ ||
ಪದವಿಭಾಗ-ಅರ್ಥ: ಜರೆ(ಮುಪ್ಪು) ನರೆಯ(ನರೆ- ಬೆಳ್ಳಗಾದ ಕೂದಲು, ಬಿಳಿಕೂದಲು ೨ ಮುಪ್ಪು, ವಾರ್ಧಕ್ಯ) ಮೈಸಿರಿಯ ಕುಲವೃದ್ಧರನು ಹೀನಾಂಗರನು ಹಿಂಸಾಚರಿತರನು ಜಾತ್ಯಂಧರನು(ಕುರುಡರು) ಧನದಾಸೆಯಳಿದವರ ಅರಮನೆಯ ಸಂರಕ್ಷಣ+ ಅರ್ಥದೊಳು+ ಇರಿಸಿದರೆ ಮಾನ+ ಉನ್ನತಿಕೆ ವಿಸ್ತರಣವಹುದು(ಹಿಗ್ಗುವುದು,ಅಭಿವೃದ್ಧಿ ನೀತಿ)+ ಇದನು+ ಅರಿದಿಹೈ ಭೂಪಾಲ ಕೇಳೆಂದ.
ಅರ್ಥ: ನಾರದನು,'ಬಿಳಿಕೂದಲು ಬಂದ ಮುಪ್ಪು ಬಂದವರನ್ನೂ, ಮೈಸಿರಿಯ- ಕುಲವೃದ್ಧರನ್ನೂ, ಹೀನಾಂಗರನ್ನೂ, ಹಿಂಸಿಸುವವರ-ಹಿಂಸಾಚರಿತರನ್ನೂ- ಜಾತ್ಯಂಧರನ್ನೂ, ಧನದಾಸೆಯು ಅಳಿದವರ- ಇಲ್ಲದವರನ್ನೂ, ಅರಮನೆಯ ಸಂರಕ್ಷಣೆಯ ಉದ್ದೇಶಕ್ಕೆ ಇರಿಸಿದರೆ ಮಾನದ ಉನ್ನತಿಕೆಗೆ ವಿಸ್ತರಣವಾಗುವುದು, ಇದನ್ನು ಅರಿತುಕೊಂಡಿರು, ಭೂಪಾಲ, ಕೇಳು,'ಎಂದ.(??)
ಗುಳಿತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯಗತಿಗಳಲಿ |
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಧಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ || ೭೪ ||
ಪದವಿಭಾಗ-ಅರ್ಥ: ಗುಳಿ- ತೆವರನು (ದಿಣ್ಣೆ, ದಿಬ್ಬ, ಹೊಲದ ಬದು, ಒಡ್ಡು)+ ಈಕ್ಷಿಸುತ ಬಟ್ಟೆಯ(ದಾರಿಯ) ಮೆಳೆ ಮರಂಗಳ ಹೊಯ್ಲ(ಏಟು, ಹೊಡೆತ) ತಪ್ಪಿಸಿ, ನೆಳಲನು+ ಅರಸುತ ವೇಗಗತಿ ಸಾಮಾನ್ಯ ಗತಿಗಳಲಿ ಬಳಿವಿಡಿದು(ಹತ್ತಿರದಲ್ಲಿ ಇದ್ದು) ಭೂಭುಜರ ಯಾನಂಗಳೊಳಗೆ (ಪ್ರಯಾಣದಲ್ಲಿ)+ ಅಳುಕದೆ ಧಗೆಯ ಸೈರಿಸಿ, ಬಳಸುವವನೇ ಛತ್ರಧಾರಕನು+ ಅರಸ ಕೇಳೆಂದ
ಅರ್ಥ:ನಾರದನು,'ತಗ್ಗು- ಗುಳಿ, ದಿಣ್ಣೆಗಳನ್ನು ನೋಡುತ್ತಾ ದಾರಿಯ, ಮೆಳೆ-ಪೊದೆ, ಮರಗಳ ಹೊಡೆತ- ತಾಗುವಿಕೆ ತಪ್ಪಿಸಿ, ನೆಳಲನ್ನು ಅರಸುತ್ತಾ ವೇಗಗತಿ- ಸಾಮಾನ್ಯ ಗತಿಗಳಲ್ಲಿ ಹತ್ತಿರದಲ್ಲಿ ಇದ್ದು ರಾಜರ ಪ್ರಯಾಣದಲ್ಲಿ ಅಳುಕದೆ ಧಗೆಯ- ಸೆಖೆ- ಆಯಾಸ ಸಹಿಸಿಕೊಂಡು, ಬಳಸುವವನೇ ಯೋಗ್ಯ ಛತ್ರಧಾರಕನು, ಅರಸನೇ ಕೇಳು,'ಎಂದ
ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆ ವೇ
ಡೈಸಿ ಕಡಿದರೆಯಟ್ಟುವಂದದಲಹಿತ ಬಲದೊಳಗೆ ||
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳೆಂದ || ೭೫ ||
ಪದವಿಭಾಗ-ಅರ್ಥ: ಬೇಸರದೆ ಕಾಳೋರಗನನು+ ಅಡ್ಡೈಸಿ (ಅಡ್ಡಗಟ್ಟು, ಕರಿಸರ್ಪವನ್ನು ಎದುರಿಸಿ) ಕಟ್ಟಿರುವೆಗಳು ಮಿಗೆ ವೇಡೈಸಿ (ಹಿಂದಕ್ಕಟ್ಟು, ಬೆನ್ನಟ್ಟು, ಮುತ್ತಿ) ಕಡಿದು+ ಅರೆಯಟ್ಟುವಂದದಲಿ+ ಅಹಿತ ಬಲದೊಳಗೆ ಓಸರಿಸದೆ+ ಒಳಹೊಕ್ಕು ಸಮರ ವಿಳಾಸವನು(ವಿಲಾಸ- ಸಾಹಸ ಪ್ರದರ್ಶನ) ನೆರೆ ಮೆರೆದು ಕೇಶಾಕೇಶಿಯಲಿ (ಜುಟ್ಟು- ಜುಟ್ಟು ಹಿಡಿದು) ಹಿಡಿದು+ ಇರಿವವನೆ ಕಾಲಾಳು, ಕೇಳು,'ಎಂದ
ಅರ್ಥ:ನಾರದನು,'ಬೇಸರವಿಲ್ಲದೆ ಕರಿಸರ್ಪವನ್ನು ಅಡ್ಡನಿಂತು, ಮತ್ತೆ ಕಟ್ಟಿರುವೆಗಳು ಮುತ್ತಿ ಕಡಿದು ಬೆನ್ನಟ್ಟುವಂತೆ ಶತ್ರುಸೇನೆಯೊಳಗೆ ಹಿಮ್ಮಟ್ಟದೆ ಒಳಹೊಕ್ಕು ಸಮರ ಸಾಹಸ ಪ್ರದರ್ಶನವನ್ನು ನೆರೆ- ಬಹಳ ಮೆರೆದು ಜುಟ್ಟು- ಜುಟ್ಟು ಹಿಡಿದು ಇರಿಯುವವನೆ ಶೂರ ಕಾಲಾಳು, ಕೇಳು,ಎಂದ
ಬಿಟ್ಟ ಸೂಠಿಯಲರಿನೃಪರ ನೆರೆ
ಯಟ್ಟಿ ಮೂದಲಿಸುತ್ತ ಮುಂದಣ
ಥಟ್ಟನೊಡೆಹಾಯ್ದಹಿತ ಬಲದೊಳಗಾನೆವರಿವರಿದು |
ಹಿಟ್ಟುಗುಟ್ಟುತ ಹೆಣನ ಸಾಲುಗ
ಳೊಟ್ಟು ಮೆರೆಯಲು ಕಳನ ಚೌಕದ

ಲಟ್ಟಿಯಾಡಿಸಬಲ್ಲವನೆ ರಾವುತನು ಕೇಳೆಂದ || ೭೬ ||

ಪದವಿಭಾಗ-ಅರ್ಥ:ಬಿಟ್ಟ ಸೂಠಿಯಲಿ(ಸೂಟಿ-ವೇಗದಲ್ಲಿ, ವೇಗವಾಗಿ)+ ಅರಿನೃಪರ ನೆರೆಯಟ್ಟಿ (ಬೆರೆ- ಬಹಳ; ಅಟ್ಟಿ- ಓಡಿಸಿ) (ಶತ್ರುಗಳನ್ನು ಓಡಿಸಿ) ಮೂದಲಿಸುತ್ತ(ಅಣಕಿಸುತ್ತ) ಮುಂದಣ ಥಟ್ಟನು (ಸೇನೆಯನ್ನು)+ ಒಡೆಹಾಯ್ದು (ಎದುರಿಸಿ)+ ಅಹಿತ ಬಲದೊಳಗೆ (ಶತ್ರು ಸೇನೆಯಲ್ಲಿ)+ ಆನೆವರಿವ (ಬಲವಾಗಿ ಅರಿಯುವ- ಚುಚ್ಚುವ)+ ಅರಿದು(ಕತ್ತರಿಸಿ) ಹಿಟ್ಟುಗುಟ್ಟುತ (ಶತ್ರುಗಳನ್ನು ಪುಡಿಮಾಡುತ್ತಾ) ಹೆಣನ ಸಾಲುಗಳ+ ಒಟ್ಟು(ಒಡ್ಡು- ರಾಶಿಯಲ್ಲಿ) ಮೆರೆಯಲು(ಆರ್ಭಟಿಸಲು) ಕಳನ ಚೌಕದಲಿ (ರಣರಂಗದಲ್ಲಿ)+ ಅಟ್ಟಿಯಾಡಿಸಬಲ್ಲವನೆ(ಹೋದಲ್ಲಿ ಬೆನ್ನಟ್ಟುವವನೇ) ರಾವುತನು ಕೇಳೆಂದ.
ಅರ್ಥ:ನಾರದನು,' ಯುದ್ಧಕ್ಕೆ ಹೊರಟ ತಕ್ಷಣ ವೇಗವಾಗಿ ಶತ್ರುರಾಜರ ಬಹಳವಾಗಿ ಓಡಿಸಿ ಮೂದಲಿಸುತ್ತ ಮುಂದಿನ ಸೇನೆಯನ್ನು ಎದುರಿಸಿ ಶತ್ರು ಸೇನೆಯಲ್ಲಿ ಬಲವಾಗಿ ಅರಿಯುವ, ಅರಿದು- ಕತ್ತರಿಸಿ ಶತ್ರುಗಳನ್ನು ಪುಡಿಮಾಡುತ್ತಾ ಹೆಣಗಳ ಸಾಲುಗಳ ರಾಶಿಯಲ್ಲಿ ಮೆರೆಯಲು- ಆರ್ಭಟಿಸವ, ರಣರಂಗದಲ್ಲಿ ಹೋದಹೋದಲ್ಲಿ ಬೆನ್ನಟ್ಟುವವನೇ, ರಾವುತನು, ಕೇಳೆಉ,'ಎಂದ.
ಹೆಬ್ಬಲವನೊಡತುಳಿದು ಧರಣಿಯ
ನಿಬ್ಬಗಿಯ ಮಾಡಿಸುತ ಪಾಯ್ದಳ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳಮೇಲೆ |
ಬೊಬ್ಬಿರಿದು ಶರಮಳೆಯ ಕರೆವುತ
ಲಬ್ಬರಿಸಿ ಬವರದಲಿ ರಿಪುಗಳಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ || ೭೭ ||
ಪದವಿಭಾಗ-ಅರ್ಥ: ಹೆಬ್ಬಲವನು (ಹಿರಿದು ಬಲ- ದೊಡ್ಡಸೇನೆ)+ ಒಡತುಳಿದು ಧರಣಿಯನು+ ಇಬ್ಬಗಿಯ ಮಾಡಿಸುತ, ಪಾಯ್ದಳದ+ ಒಬ್ಬುಳಿಯ(ಗುಂಪು, ಸಮೂಹ) ಹರೆಗಡಿದು(ಹರೆ-ವ್ಯಾಪಿಸುವುದನ್ನು+ - ಕಡಿದು) ಕಾದಿಸುತ(ಯುದ್ಧಮಾಡುತ್ತಾ)+ ಆನೆಗಳಮೇಲೆ ಬೊಬ್ಬಿರಿದು ಶರಮಳೆಯ ಕರೆವುತಲಿ(ಮಳೆಯನ್ನು ಸುರಿಸುತ್ತಾ )+ ಅಬ್ಬರಿಸಿ ಬವರದಲಿ(ಯುದ್ಧದಲ್ಲಿ) ರಿಪುಗಳಿಗೆ+ ಉಬ್ಬಸವನು+ ಎಸಗುವನೆ ಜೋಧನು (ಆನೆಯ ಸವಾರಿಮಾಡುವ ಮಾವುತ ಯೋಧ) ರಾಯ ಕೇಳೆಂದ.
ಅರ್ಥ:ನಾರದನು,'ದೊಡ್ಡಸೇನೆಯನ್ನು ಆನೆಯಕಾಲಿನಿಂದ ಒಡಯುವಂತೆ ತುಳಿದು, ಭೂಮಿಯನ್ನು ಇಬ್ಭಾಗ ಮಾಡುವಂತೆ ಆನೆಯ ನೆಡೆಯಿಂದ ಮಾಡಿಸುತ್ತಾ, ಪಾಯದಳದ ಗುಂಪುನ್ನು ಹರೆಗಡಿದು ಯುದ್ಧಮಾಡುತ್ತಾ ಆನೆಗಳಮೇಲೆ ಬೊಬ್ಬಿರಿದು ಬಾಣಗಳ ಮಳೆಯನ್ನು ಸುರಿಸುತ್ತಾ ಅಬ್ಬರಿಸಿ ಯುದ್ಧದಲ್ಲಿ ಶತ್ರುಗಳಿಗೆ ಉಬ್ಬಸವನ್ನು- ಆಯಾಸವನ್ನು ಉಂಟುಮಾಡುವವನೆ ಜೋಧನು- ಆನೆಯ ಸವಾರಿಮಾಡುವ ಮಾವುತ ಯೋಧನು, ರಾಜನೇ ಕೇಳು,'ಎಂದ.
ಒಂದುಕಡೆಯಲಿ ದಳ ಮುರಿದು ಮ
ತ್ತೊಂದು ದಿಕ್ಕಲಿ ಮನ್ನೆಯರು ಕವಿ
ದೊಂದು ದೆಸೆಯಲಿ ಬಲದೊಳೊಂದನೆಯಧಿಕಬಲವೆನಿಸಿ |
ಬಂದು ಸಂತಾಪದಲಿ ಕಾಳಗ
ದಿಂದ ಪುರದಲಿ ನಿಂದು ಕರಿಕರಿ
ಗುಂದುವ ಕ್ಷಿತಿಪಾಲನೇ ಭೂಪಾಲ ಕೇಳೆಂದ || ೭೮ ||
ಪದವಿಭಾಗ-ಅರ್ಥ: ಒಂದುಕಡೆಯಲಿ ದಳ(ಸೇನೆ) ಮುರಿದು(ಸೋಲಿಸಿ) ಮತ್ತೊಂದು ದಿಕ್ಕಲಿ ಮನ್ನೆಯರು(ನೆಚ್ಚಿನ ವೀರರು) ಕವಿದ(ಮುತ್ತಿದ)+ ಒಂದು ದೆಸೆಯಲಿ ಬಲದೊಳು(ದಿಕ್ಕಿನ ಸೈನ್ಯದಲ್ಲಿ) + ಒಂದನೆಯ+ ಅಧಿಕಬಲವೆನಿಸಿ ಬಂದು ಸಂತಾಪದಲಿ ಕಾಳಗದಿಂದ ಪುರದಲಿ ನಿಂದು(ನಿಂತು) ಕರಿಕರಿಗುಂದುವ ಕ್ಷಿತಿಪಾಲನೇ(ರಾಜನೇ) ಭೂಪಾಲ ಕೇಳೆಂದ
ಅರ್ಥ:ನಾರದನು,'ರಾಜನೇ ಕೇಳು, ಒಂದುಕಡೆಯಲ್ಲಿ ಸೇನೆಯನ್ನು ಸೋಲಿಸಿ, ಮತ್ತೊಂದು ದಿಕ್ಕಿನಲ್ಲಿ ನೆಚ್ಚಿನ ವೀರರು ಮುತ್ತುವಂತೆ ಮಾಡಿ, ಒಂದು ದಿಕ್ಕಿನ ಸೈನ್ಯದಲ್ಲಿ ಮತ್ತೊಂದನೆಯ ಕಡೆಯಲ್ಲಿ ಅಧಿಕಬಲದ ಸೇನೆಯು ಎಂದು ಹೇಳುವಂತೆ ಬಂದು ಸಂತಾಪದಲಿ- ಸಿಟ್ಟಿನಿಂದ ಕಾಳಗಮಾಡುತ್ತಾ ನಗರದಲ್ಲಿ ನಿಂತು ಕರಿಕರಿಗುಂದುವ(ಚಿಂತಿತನಾದ) ರಾಜನೇ, ಭೂಪಾಲನು,'ಎಂದ.
ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೋವುತ
ಲಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ |
ಸದೆದು ಮರಳುವ ಲಾಗುವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳೆಂದ || ೭೯ ||
ಪದವಿಭಾಗ-ಅರ್ಥ:ಕುದುರೆಗಳನು+ ಆರೈದು ರಥವನು ಹದುಳಿಸುತ (ಸೌಖ್ಯ, ಕ್ಷೇಮ, ಉತ್ಸಾಹ, ಹುರುಪು, ವಿಶ್ವಾಸ, ಪ್ರೀತಿ) ಸಾರಥಿಯನು+ ಓವುತಲಿ(ಓವು- ಕಾಪಾಡು)+ ಇದಿರ ಮುರಿವುತ ತನ್ನ ಕಾಯಿದುಕೊಳುತ, ಕೆಲಬಲನ (ಅಕ್ಕಪಕ್ಕ) ಸದೆದು ಮರಳುವ ಲಾಗುವೇಗದ(ಕೈಚಳಕದ ವೇಗವಾಗಿ ಆಯುಧಪ್ರಯೋಗಿಸಿವ) ಕದನ ಕಾಲ+ ಅನಲನು (ಪ್ರಳಯಾಗ್ನಿಯು, ಯಮ ಮತ್ತು ಅಗ್ನಿಯು)+ ಅವನು ತಾ ಮೊದಲಿಗನಲೈ ರಥಿಕರಿಗೆ, ಭೂಪಾಲ ಕೇಳು' ಎಂದ
ಅರ್ಥ:ನಾರದನು,'ಕುದುರೆಗಳನ್ನು ಆರೈಕೆ ಮಾಡಿಕೊಂಡು, ರಥವನ್ನು ಕ್ಷೇಮವಾಗಿಡುತ್ತಾ, ಸಾರಥಿಯನನ್ನು ಕಾಪಾಡತ್ತಾ, ಎದುರಿನ ಶತ್ರುಗಳನ್ನು ಮುರಿಯುತ್ತಾ, ತನ್ನನ್ನು ಕಾಯ್ದುಕೊಳ್ಳುತ್ತಾ, ಅಕ್ಕಪಕ್ಕದ ಶತ್ರುಗಳನ್ನು ಸದೆದು- ಹೊಡೆದು, ಮರಳುವ- ಹಿಂತಿರುಗಿಬರುವ ಕೈಚಳಕದ ವೇಗವಾಗಿ ಆಯುಧಪ್ರಯೋಗಿಸುವ ಕದನದ ಪ್ರಳಯಾಗ್ನಿಯು. ಅವನು ತಾನು ರಥಿಕರಿಗೆ ಮೊದಲಿಗನು ಎಲೈ ಭೂಪಾಲ ಕೇಳು' ಎಂದ
ದೊರೆಯ ಕಾಣುತ ವಂದಿಸುತ್ತಂ
ಕರಿಸುತಂತರಿಸುತ್ತ ಮಿಗೆ ಹ
ತ್ತಿರನೆನಿಸದತಿ ದೂರನೆನಿಸದೆ ಮಧ್ಯಗತನೆನಿಸಿ |
ಪರಿವಿಡಿಯಲೋಲೈಸುತರಸನ
ಸಿರಿಮೊಗವನೀಕ್ಷಿಸುತ ಬೆಸೆಸಲು
ಕರಯುಗವನಾನುವನೆ ಸೇವಕನರಸ ಕೇಳೆಂದ || ೮೦ ||
ಪದವಿಭಾಗ-ಅರ್ಥ:ದೊರೆಯ ಕಾಣುತ, ವಂದಿಸುತ್ತ+ ಅಂಕರಿಸುತ (ಅಂಕೆ- ಹತೋಟಿ, ಹಿಡಿತ, ಆಜ್ಞೆ, ಅಪ್ಪಣೆ)+ ಅಂತರಿಸುತ್ತ (ಅಂತರ - ದೂರ), ಮಿಗೆ ಹತ್ತಿರನು+ ಎನಿಸದ+ ಅತಿ ದೂರನು+ ಎನಿಸದೆ ಮಧ್ಯಗತನು+ ಎನಿಸಿ ಪರಿವಿಡಿಯಲಿ(ವ್ಯವಸ್ಥಿತವಾದ ಕ್ರಮ)+ ಓಲೈಸುತ (ಸೇವೆಮಾಡುವ)+ ಅರಸನ ಸಿರಿಮೊಗವನು+ ಈಕ್ಷಿಸುತ(ನೋಡುತ್ತಾ) ಬೆಸೆಸಲು(ಹೇಳಲು) ಕರಯುಗವನು(ಎರಡುಕೈಗಳನ್ನು)+ ಆನುವನೆ(ಚಾಚುವವನು) ಸೇವಕನು+ ಅರಸ ಕೇಳೆಂದ.
ಅರ್ಥ:ನಾರದನು,'ದೊರೆಯನ್ನು ಕಾಣುತ್ತಲೆ ಅವನಿಗೆ ವಂದಿಸುತ್ತ ಹತೋಟಿಯಲ್ಲದ್ದು, ಅಪ್ಪಣೆ ಬೇಡುತ್ತಾ, ಅರಸನಿಂದ ಸಾಕಷ್ಟು ಅಂತರ - ದೂರದಲ್ಲಿ ನಿಂತು, ಮತ್ತಿ ಅತಿ ದೂರವಲ್ಲದಂತೆ ನಿಂತು, ತೀರಾ ಹತ್ತಿರನು ಎನಿಸದೆ ಇರುವ, ಅತಿ ದೂರನು ಎನಿಸದೆ ಇರವ, ಮಧ್ಯಗತನು ಎನಿಸಿಕೊಂಡ, ವ್ಯವಸ್ಥಿತವಾದ ಕ್ರಮದಲ್ಲಿ ಸೇವೆಮಾಡುವ ಅರಸನ ಸಿರಿಮುಖವನ್ನು ನೋಡುತ್ತಾ, ಹೇಳಲು ಎರಡುಕೈಗಳನ್ನು ನಮಿಸಿ ಚಾಚುವವನು ಸೇವಕನುಮ, ಅರಸನೇ ಕೇಳು,'ಎಂದ.
ನರಕ ಕರ್ಮವ ಮಾಡಿಯಿಹದೊಳು
ದುರಿತಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾ ಯೋನಿಯಲಿ ಸುಳಿದು |
ಹೊರಳುವರು ಕೆಲಕೆಲರು ಭೂಪರು
ಧರಿಸುವರಲೈ ರಾಜಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ || ೮೧ ||
ಪದವಿಭಾಗ-ಅರ್ಥ: ನರಕ ಕರ್ಮವ ಮಾಡಿ+ ಯಿ+ ಇಹದೊಳು(ಈ ಲೋಕದಲ್ಲಿ) ದುರಿತಭಾಜನರಾಗಿ (ಕೆಟ್ಟಕರ್ಮಕ್ಕೆ ಒಳಗಾಗಿ), ಕಡೆಯಲಿ+ ಪರಕೆ ಬಾಹಿರರಾಗಿ (ಅಯೋಗ್ಯರಾಗಿ), ನಾನಾ ಯೋನಿಯಲಿ(ಗರ್ಭದಲ್ಲಿ) ಸುಳಿದು ಹೊರಳುವರು ಕೆಲಕೆಲರು ಭೂಪರು (ರಾಜರು) ಧರಿಸುವರಲೈ; ರಾಜಧರ್ಮದ ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ.
ಅರ್ಥ:ನಾರದನು,' ನರಕಕ್ಕೆಹೋಗುವ ಕರ್ಮಗಳನ್ನು ಮಾಡಿ ಈ ಲೋಕದಲ್ಲಿ ಕೆಟ್ಟಕರ್ಮಕ್ಕೆ ಒಳಗಾಗಿ, ಮರಣಕಾಲದ ಕಡೆಯಲ್ಲಿ ಉತ್ತಮ ಪರಲೋಕಕ್ಕೆ ಹೋಗಲು ಬಾಹಿರರಾಗಿ, ಕೆಲವು ರಾಜರು ನಾನಾ ಜನ್ಮದ ಗರ್ಭದಲ್ಲಿ ಹುಟ್ಟಿ ಹೊರಳುವರು. ಅವರು ರಾಜಧರ್ಮವನ್ನು ಮೀರಿದ ಹೊರೆಯನ್ನು ಧರಿಸಿ ಹಾಗೆ ಆಗುವರು.ಆದ್ದರಿಂದ ರಾಜಧರ್ಮದ ಹೊರೆಯನ್ನು- ಹೊಣೆಯನ್ನು ಮರೆತು ಇರಬೇಡ ಭೂಪಾಲನೇ, ಕೇಳು,'ಎಂದ.
ನೃಗನ ಭರತನ ದುಂದುಮಾರನ
ಸಗರನ ಪುರೂರನ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ |
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ || ೮೨ ||
ಪದವಿಭಾಗ-ಅರ್ಥ: ನೃಗನ ಭರತನ ದುಂದುಮಾರನ ಸಗರನ ಪುರೂರನ ಯಯಾತಿಯಮಗನ ನಹುಷನ ಕಾರ್ತವೀರ್ಯನ ನಳನ ದಶರಥನ ಹಗಲಿರುಳು ವಲ್ಲಭರ ವಂಶದ ವಿಗಡರಲಿ (ಶೂರರಲ್ಲಿ) ಯಮಸೂನು ಸರಿಯೋ ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ
  • ಟಿಪ್ಪಣಿ: ಷೋಡಷ ಮಹಾರಾಜರು ಗಯ, ಅಂಬರೀಷ, ಶಶಿಬಿಂದು, ದಂತಿ, ಪೃಥು, ಮರುತ್ವಂತ, ಭರತ, ಸುಹೋತ್ರ, ರಾಮ, ದಿಲೀಪ, ರಘು, ರಂತಿದೇವ, ಯಯಾತಿ, ಮಾಂಧಾತೃ, ನೃಗ, ಭಗೀರಥ.
ಅರ್ಥ: ನೃಗನ, ಭರತನ, ದುಂದುಮಾರನ, ಸಗರನ, ಪುರೂರವನ, ಯಯಾತಿಯಮಗ ಯದುವಿನ, ನಹುಷನ, ಕಾರ್ತವೀರ್ಯನ, ನಳನ, ದಶರಥನ, ಹಗಲಿರುಳು ದೇವಕನ್ಯೆಯರ ವಲ್ಲಭರಾಗಿರುವ ಈ ರಾಜವಂಶದ ಶೂರರಲ್ಲಿ "ಯಮಸೂನು ಧರ್ಮಜ"ನು ಅವರಿಗೆ ಸರಿಯೋ ಮಿಗಿಲೊ ಎನ್ನಿಸುವ ನೀತಿಯು ಇದೆಯೇ? ಧರ್ಮರಾಯನೇ ನಿನಗೆ?' ಎಂದ.

ಧರ್ಮಜನ ಸಂತಸ ಮತ್ತು ನಾರದನಲ್ಲಿ ಬಿನ್ನಪ

ಸಂಪಾದಿಸಿ
ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶ ಮಧುವ್ರತ(ಕರಣ?)ವುಬ್ಬಿತೊಲವಿನಲಿ |
ರೋಮ ಪುಳಕದ ರುಚಿರ ಭಾವ
ಪ್ರೇಮಪೂರಿತ ಹರುಷರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳೆಂದ || ೮೩ ||
ಪದವಿಭಾಗ-ಅರ್ಥ:ಆ ಮುನೀಂದ್ರನ ವಚನ ರಚನಾ ತಾಮರಸ ಮಕರಂದ(ಕಮಲದ ಮಕರಂದ - ಮದು) ಕೇಳಿಯಲಿ+ ಈ ಮಹೀಶ ಮಧುವ್ರತ(ಕರಣ?)ವು(ತುಂಬಿ, ಭ್ರಮರ,)+ ಉಬ್ಬಿತು+ ಒಲವಿನಲಿ(ಪ್ರೀತಿ) ರೋಮಪುಳಕದ ರುಚಿರ(ರೋಮಾಂಚನದ ಸುಂದರ) ಭಾವಪ್ರೇಮಪೂರಿತ ಹರುಷರಸದ+ ಉದ್ದಾಮ ನದಿಯಲಿ ಮುಳುಗಿ ಮೂಡಿದನು+ ಅರಸ ಕೇಳು+ ಎಂದ.
ಅರ್ಥ:ಧರ್ಮಜನು ಆ ನಾರದ ಮುನೀಂದ್ರನ ವಚನ ರಚನೆಯೆಂಬ ಕಮಲದ ಮಧುವಿನ ವಿನಾದದಲ್ಲಿ, ಈ ಮಹೀಶನೆಂಬ ತುಂಬಿಯು ಸಂತಸದಿಂದ ಉಬ್ಬಿತು. ಅವನು ಆ ಒಲವಿನಲ್ಲಿ ರೋಮಾಂಚನದ ಸುಂದರ ಭಾವಪ್ರೇಮದಿಂದ ತುಂಬಿ, ಹರುಷರಸದ ಶ್ರೇಷ್ಠವಾದ ನದಿಯಲ್ಲಿ ಮುಳುಗಿ ಮೂಡಿದನು- ತೋರಿಕೊಂಡನು. ಜನಮೇಜಯ ಅರಸನೇ ಕೇಳು,' ಎಂದ, ವೈಶಂಪಾಯನ ಮುನಿ.
ಎಲೆ ಮುನಿಯೆ ನೀವ್ ರಚಿಸಿದೀ ನಿ
ರ್ಮಳ ನೃಪಾಲ ನಯ ಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ |
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವಮುನಿ ನಿನಗಾರು ಸರಿಯೆಂದ || ೮೪ ||
ಪದವಿಭಾಗ-ಅರ್ಥ: ಎಲೆ ಮುನಿಯೆ ನೀವ್ ರಚಿಸಿದ+ ಈ ನಿರ್ಮಳ ನೃಪಾಲ ನಯ(ನೀತಿ-) ಪ್ರಪಂಚವ(ವಿಸ್ತಾರ) ಬಳಸಿದೆನು ಕೆಲ ಕೆಲವನು,+ ಇನ್ನು+ ಉರೆ(ಹೆಚ್ಚು) ಬಳಸುವೆನು ಕೆಲವ ಇಳಿದು ಧರಣಿಗೆ ಸುಳಿದು ನೀತಿಸ್ಖಲಿತ(ನೀತಿಜಾರಿದ) ಜಡರನು ತಿದ್ದಿ ತಿಳುಹುವ ಸುಲಭತನದಲಿ ದೇವಮುನಿ ನಿನಗೆ+ ಆರು ಸರಿಯೆಂದ
ಅರ್ಥ:ಧರ್ಮಜನು,'ಎಲೆ ಮುನಿಯೆ ನೀವು ವಿವರಿಸಿದ ಈ ನಿರ್ಮಲವಾದ ರಾಜನೀತಿ ಪ್ರಪಂಚದಲ್ಲಿ ಕೆಲ ಕೆಲವನ್ನು ಬಳಸಿ, ಅನುಸರಿಸಿದೆನು; ಇನ್ನು ಉಳಿದ ಕೆಲವು ಹೆಚ್ಚಿನದನ್ನು ಮುಂದೆ ಬಳಸುವೆನು. ನೀವು ಈ ಭೂಮಿಗೆ ಇಳಿದು ಸುಳಿದು ನೀತಿಜಾರಿದ ಜಡರನ್ನು ತಿದ್ದಿ ಸುಲಭತನದಲ್ಲಿ ತಿಳಿಸುವ ದೇವಮುನಿಯೇ ನಿನಗೆ ಯಾರು ಸರಿಸಾಟಿ? ಯಾರೂ ಇಲ್ಲ,'ಎಂದ.
ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ |
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜ ಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ || ೮೫ ||
ಪದವಿಭಾಗ-ಅರ್ಥ: ಮುನಿಯೆ ಬಿನ್ನಹವು(ಖೇಳಿಕೆ)+ ಇಂದು ನೀವು+ ಇಂದ್ರನ, ವಿರಿಂಚಿಯ (ಬ್ರಹ್ಮನ), ಯಮನ, ವರುಣನ, ಧನಪತಿಯ, ಶೇಷನ ಸಭಾಮಧ್ಯದಲಿ ಸುಳಿವಿರಲೆ(ಹೋಗುವಿರಲ್ಲವೇ); ಇನಿತು(ಇವೆಲ್ಲದರ) ರಚನೆಗೆ (ಸಭಾರಚನೆಗೆ) ಸರಿಯೊ ಮಿಗಿಲೋ, ಮನುಜ ಯೋಗ್ಯಸ್ಥಾನವೋ ಮೇಣ್,+ ಎ ನಲು ನಗುತ+ ಎಂದನು ಮುನೀಶ್ವರನು+ ಆ ಯುಧಿಷ್ಠಿರಗೆ.
ಅರ್ಥ:ಧರ್ಮಜನು ನಾರದನನ್ನ ಕುರಿತು,'ಮುನಿಯೆ, ನಿಮ್ಮಲ್ಲಿ ಒಂದು ವಿಜ್ಞಾಪನೆ,- ಇಂದು- ಈಗೀಗ ನೀವು ಇಂದ್ರನ, ಬ್ರಹ್ಮನ, ಯಮನ, ವರುಣನ, ಧನಪತಿ- ಕುಬೇರನ, ಶೇಷನ ಸಭಾಮಧ್ಯದಲ್ಲಿ ತಿರುಗಾಡುತ್ತಾ ಹೋಗುವಿರಲ್ಲವೇ; ಇವೆಲ್ಲದರ ಸಭಾರಚನೆಗೆ ನಮ್ಮ ಈ ಸಭಾಮಂಟಪವು ಸರಿಸಮಾನವೋ, ಅವಕ್ಕೂ ಮಿಗಿಲೋ, ಅವು ಮನುಜ ಯೋಗ್ಯಸ್ಥಾನವೋ ಅಥವಾ ಅಲ್ಲವೋ? ಎನ್ನಲು, ಮುನಿಯು ನಗುತ್ತಾ ಯುಧಿಷ್ಠಿರಗೆ. ಹೀಗೆ ಎಂದನು.

ನಾರದನ ಉತ್ತರ- ರಾಜಸೂಯ ಯಾಗಕ್ಕೆ ಪೀಠಿಕೆ

ಸಂಪಾದಿಸಿ
ಜನಪ ಕೇಳುತ್ಸೇದ ಶತ ಯೋ
ಜನ ತದರ್ಧದೊಳಗಲದಳತೆಯಿ
ದೆನಿಪುದಿಂದ್ರಸ್ಥಾನವಲ್ಲಿಹುದಖಿಳ ಸುರನಿಕರ |
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ || ೮೬ ||
ಪದವಿಭಾಗ-ಅರ್ಥ:ಜನಪ ಕೇಳು+ ಉತ್ಸೇದ(ಉದ್ದ ಎತ್ತರ) ಶತ(ನೂರು) ಯೋಜನ ತದ-ತತ್ (ಆ)+ ಅರ್ಧದೊಳು+ ಅಗಲದ+ ಅಳತೆಯಿದೆ+ ಎನಿಪುದ+ ಇಂದ್ರಸ್ಥಾನವು+ ಅಲ್ಲಿ+ ಇಹುದು+ ಅಖಿಳ ಸುರನಿಕರ(ದೇವತೆಗಳ ಸಮೂಹ) ಜನಪರು(ರಾಜರು)+ ಅಲ್ಲಿ ಯಯಾತಿಯು+ ಆತನಜನಕ ನೃಗ, ನಳ, ಭರತ, ಪೌರವರು+ ಎನಿಪರು+ ಅಖಿಳ ಕ್ರತುಗಳಲಿ ಸಾಧಿಸಿದರು+ ಆ ಸಭೆಯ.
ಅರ್ಥ:ನಾರದನು,'ಜನಪ ಧರ್ಮಜನೇ ಕೇಳು, ಉದ್ದ ಎತ್ತರದಲ್ಲಿ ಶತ ಯೋಜನ, ಅದರ ಅರ್ಧದ ಅಗಲದ ಅಳತೆಯಿದೆ ಹೀಗೆ ಇದು ಇಂದ್ರಸ್ಥಾನವು ಎನ್ನಿಸುವುದು. ಅಲ್ಲಿ ಅಖಿಲ ಸುರರ ಸಮೂಹ ಮತ್ತು ರಾಜರು ಇರುವರು, ಅಲ್ಲಿ ಯಯಾತಿಯು, ಆತನ ಜನಕ-ತಂದೆ ನೃಗ, ನಳ, ಭರತ, ಪುರೂರವನ ಮಕ್ಕಳಾದ ಪೌರವರು ಎನ್ನುವಂಥವರು ಅಖಿಲ ಯಾಗ-ಕ್ರತುಗಳನ್ನು ಸಾಧಿಸಿದವರು ಆ ಸಭೆಯಲ್ಲಿ ಇರುವರು,'ಎಂದನು.
ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿರಾಯರು ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿ ಮಿಗಿಲು |
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ ೮೭
ಪದವಿಭಾಗ-ಅರ್ಥ: ವೈದಿಕೋಕ್ತಿಗಳಲಿ(ವೇದದ ಉಕ್ತಿ- ಹೇಳಿಕೆ) ಹರಿಶ್ಚಂದ್ರಾದಿರಾಯರು ರಾಜಸೂಯದೊಳು+ ಆದರು+ ಅನಿಬರೊಳು+ ಅಗ್ಗಳೆಯರು (ಶ್ರೇಷ್ಠರು)+ ಇಂದ್ರಂಗೆ ಸರಿ ಮಿಗಿಲು ಆದೊಡೆ+ ಆ ಪುರುಹೂತ(ಇಂದ್ರ) ಸಭೆಯೋಪಾದಿ(ಉಪಾದಿ- ಹಾಗೆ) ಯಮನ+ ಆಸ್ಥಾನವು+ ಅಲ್ಲಿ ವಿಷಾದದಲಿ ನಿಮ್ಮ+ ಅಯ್ಯನು (ತಂದೆ)+ ಇಹನು+ ಆತನ ಸಮೀಪದಲಿ.
ಅರ್ಥ:ನಾಆರದನು,'ಧರ್ಮಜನೇ, ವೈದಿಕೋಕ್ತಿಗಳಲ್ಲಿ ಹೇಳಿದಂತೆ ಹರಿಶ್ಚಂದ್ರಾದಿರಾಯರು ಮಾಡಿದ ರಾಜಸೂಯದ ಯಾಗಗಳಿಂದ ಆದರು ಎಲ್ಲರಲ್ಲಿ ಶ್ರೇಷ್ಠರಾದರು, ಅವರು ಇಂದ್ರನಿಗೆ ಸರಿ ಮಿಗಿಲು ಆದರೆ ಆ ಇಂದ್ರನ ಸಭೆಯ ಹಾಗೆ, ಯಮನ ಆಸ್ಥಾನವು ಇದೆ. ಅಲ್ಲಿ ವಿಷಾದ ಭಾವದಲ್ಲಿ ನಿಮ್ಮ ತಂದೆಯು ಆತನ ಸಮೀಪದಲ್ಲಿ ಇರುವನು.' ಎಂದನು.
ವರುಣ ಸಭೆಯೊಳಗಿಹವು ಭುಜಗೇ
ಶ್ವರ ಸಮುದ್ರ ನದೀನದಾವಳಿ
ಗಿರಿ ತರು ವ್ರಜವೆನಿಪ ಸಂಖ್ಯಾರಹಿತ ವಸ್ತುಗಳು |
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ || ೮೮ ||
ಪದವಿಭಾಗ-ಅರ್ಥ: ವರುಣ ಸಭೆಯೊಳಗೆ+ ಇಹವು ಭುಜಗೇಶ್ವರ ಸಮುದ್ರ ನದೀ-ನದಾವಳಿ(ನದ- ಹೊಳೆ+ ಆವಳಿ- ಸಮೂಹ) ಗಿರಿ ತರು ವ್ರಜವೆನಿಪ(ವ್ರಜ- ಸಮೂಹ)+ ಸಂಖ್ಯಾರಹಿತ(ಬಹಳ) ವಸ್ತುಗಳು, ಅರಸ ಕೇಳು ಕುಬೇರ ಸಭೆಯು+ ಆಪರಿಯ+ ಅಗಲವು+ ಎಂಭತ್ತು ಯೋಜನ, ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ.
ಅರ್ಥ:ನಾರದನು, 'ವರುಣ ಸಭೆಯಲ್ಲಿ ಇಹವು ಭುಜಗೇಶ್ವರ- ವಾಸುಕಿ ಸಮುದ್ರ, ನದಿ, ಹೊಳೆಗಳ ಸಮೂಹ, ಗಿರಿ- ಬೆಟ್ಟ, ತರು- ಮರಗಳ ಸಮೂಹ ಮತ್ತು ಬಹಳ ವಸ್ತುಗಳು, ಅರಸನೇ ಕೇಳು ಕುಬೇರನ ಸಭೆಯ ಆಪರಿಯ ಅಗಲವು ಎಂಭತ್ತು ಯೋಜನ; ಹರಸಖನ ಸಿರಿ ಸದರವೇ-ಸಾಮಾನ್ಯವೇ ಭೂಪಾಲನೇ ಕೇಳು,'ಎಂದ.
ಬಗೆಯೊಳಗೆ ಮೊಳೆವುದು ಚತುರ್ದಶ
ಜಗವೆನಲು ಜಾವಳವೆ ತಸ್ಯೋ
ಲಗದ ಸಿರಿ ಪರಮೇಷ್ಟಿಗೇನರಿದೈ ಮಹೀಪತಿಯೆ |
ಸುಗಮ ಗಾನಿಯರುಪನಿಷದ ವಿ
ದ್ಯೆಗಳು ವೇದಕ್ರತು ಪುರಾಣಾ
ದಿಗಳು ಬಿರುದಾವಳಿಯ ಪಾಠಕರಾತನಿದಿರಿನಲಿ || ೮೯ ||
ಪದವಿಭಾಗ-ಅರ್ಥ: ಬಗೆಯೊಳಗೆ(ಬಗೆ-ಮನಸ್ಸು) ಮೊಳೆವುದು ಚತುರ್ದಶಜಗವು (ಹದಿನಾಲ್ಕು ಜಗ)+ ಎನಲು ಜಾವಳವೆ (ಸಮಾನ್ಯ, ಸಾಧಾರಣ) ತಸ್ಯ+ ಓಲಗದ ಸಿರಿ, ಪರಮೇಷ್ಟಿಗೆ+ ಏನರಿದೈ ಮಹೀಪತಿಯೆ (ರಾಜನೇ), ಸುಗಮ ಗಾನಿಯರು+ ಉಪನಿಷದ ವಿದ್ಯೆಗಳು ವೇದಕ್ರತು ಪುರಾಣಾದಿಗಳು ಬಿರುದಾವಳಿಯ ಪಾಠಕರು+ ಆತನ+ ಇದಿರಿನಲಿ
ಅರ್ಥ:ನಾರದನು,'ಬ್ರಹ್ಮನು ಮನಸ್ಸುಮಾಡಿದ ಮಾತ್ರದಿಂದಲೆ ಮೊಳೆಯುವುದು ಚತುರ್ದಶಜಗತ್ತುಗಳು ಎನ್ನುವಾಗ ಸಮಾನ್ಯವೇ ಆತನ ಓಲಗದ ಸಿರಿ- ಸಂಪತ್ತು. ರಾಜನೇ ಪರಮೇಷ್ಟಿ ಬ್ರಹ್ಮನಿಗೆ ಏನು ಅಸಾಧ್ಯವು! ಸುಗಮ ವೇದಗಾನಮಾಡುವ ವನಿತೆಯರು, ಉಪನಿಷತ್ತು ವಿದ್ಯೆಗಳು, ವೇದಕ್ರತು ಪುರಾಣಾದಿಗಳು, ಬಿರುದಾವಳಿಯ ಪಾಠಕರು ಆತನ ಇದಿರಿನಲಿ ಇರುವರು,'ಎಂದನು
ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನ ಚತುರ್ದಶ ವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿ ಯಾವುದೈ ನೃಪತಿ ೯೦
ಪದವಿಭಾಗ-ಅರ್ಥ: ಮುನಿಗಳೇ ಮಾಣಿಯರು(ವಟು, ಬ್ರಹ್ಮಚಾರಿ, ಶಿಷ್ಯ,) ಮಂತ್ರಾಂಗನೆಯರು+ ಓಲೆಯಕಾರತಿಯರು(ಸುದ್ದಿ ಕೊಡುವವರು,), ಸುರಜನವೆ ಕಿಂಕರಜನವು(ದೇವತೆಗಳೇ ಸೇವಕರು) ಸೂರ್ಯಾದಿಗಳೆ ಸಹಚರರು, ಘನ ಚತುರ್ದಶ ವಿದ್ಯೆ ಪಾಠಕ ಜನವಲೈ, ಪಾಡೇನು ಪದುಮಾಸನನ ಪರುಠವವು(ಪರಿಸ್ಥಾನ, ವಿಸ್ತಾರ, ಹರಹು, ಹೆಚ್ಚಳ,)+ ಆ ಸಭೆಗೆ ಸರಿ ಯಾವುದೈ ನೃಪತಿ!.
ಅರ್ಥ:ನಾರದನು ಹೇಳಿದ,'ಬ್ರಹ್ಮನ ಸಭಾಮಂಟಪದಲ್ಲಿ- ಲೋಕದಲ್ಲಿ ಮುನಿಗಳೇ ಶಿಷ್ಯರು, ಮಂತ್ರಾಂಗನೆಯರು ಓಲೆಯಕಾರ್ತಿಯರು, ದೇವತೆಗಳೇ ಸೇವಕರು, ಸೂರ್ಯಾದಿಗಳೆ ಸಹಚರರು, ಘನ ಚತುರ್ದಶ ವಿದ್ಯೆ ಪಾಠಕರಾದವರು ಅವನ ಸಭೆಯ ಜನವಲ್ಲವೇ, ಅದರ ಪಾಡು- ಸ್ಥಿತಿ ಏನು ಹೇಳಲಿ! ಪದ್ಮಾಸನನಾದ ಬ್ರಹ್ಮನ ಸಭೆಯ ವಿಸ್ತಾರವನ್ನು ಏನೆಂದು ಹೇಳಲಿ! ವರ್ಣಿಸಲು ಆಗದು. ಆ ಸಭೆಗೆ ಸರಿ ಯಾವುದಯ್ಯಾ ನೃಪತಿ ಧರ್ಮಜ!'
ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು |
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಘನವನರಿಯಾ ಧರ್ಮನಂದನಯೆಂದನಾ ಮುನಿಪ || ೯೧ ||
ಪದವಿಭಾಗ-ಅರ್ಥ: ಇನಿಬರ(ಇವರೆಲ್ಲರ)+ ಆಸ್ಥಾನದಲಿ ಸುಕೃತಿಗಳು+ ಎನಿಪ ತೇಜಸ್ವಿಗಳು ಗಡ, ಸುರಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು ಜನಪನ (ತಂದೆಯ)+ ಅಪದೆಸೆಗೆ+ ಏನು ದುಷ್ಕೃತವೆನಲು ನಕ್ಕನು ರಾಜಸೂಯದ ಘನವನು (ಶ್ರೇಷ್ಠತೆಯನ್ನು)+ ಅರಿಯಾ ಧರ್ಮನಂದನ+ ಯೆಂ+ ಎಂದನು+ ಆ ಮುನಿಪ
ಅರ್ಥ:ಧರ್ಮಜನು ನಾರದನನ್ನು ಕುರಿತು,'ಇವರೆಲ್ಲರ ಆಸ್ಥಾನಗಳಲ್ಲಿ ಸುಕೃತಿಗಳು ಎನ್ನುವ ತೇಜಸ್ವಿಗಳು ಗಡ, ಸುರಮುನಿಯೇ, ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು? ನನ್ನ ತಂದೆಯ ಅಪದೆಸೆಗೆ ಏನು ದುಷ್ಕೃತವು ಕೆಟ್ಟಕೆಲಸವನ್ನು ಏನು ಮಾಡಿದನು,' ಎಂದು ಕೇಳಿದನು. ಅದಕ್ಕೆ ನಾರದನು ನಕ್ಕನು, ಧರ್ಮಜನಿಗೆ,'ಧರ್ಮನಂದನ ರಾಜಸೂಯ ಯಾಗದ ಮಹತ್ವವನ್ನು- ಘನವನ್ನು ಅರಿತುಕೋ. ಅದರ ಫಲದಿಂದ ಆ ರಾಜರು ಇಂದ್ರನ ಓಲಗದಲ್ಲಿ ಗೌರವ ಪಡೆದಿದ್ದಾರೆ,'ಎಂದನು.
ಈ ಮಹಾಕ್ರತುವರವ ನೀ ಮಾ
ಡಾಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ |
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ || ೯೨ ||
ಪದವಿಭಾಗ-ಅರ್ಥ: ಈ ಮಹಾಕ್ರತು(ಮಹಾಯಾಗ) ವರವ(ಉತ್ತಮ) ನೀ ಮಾಡು+ ಆ ಮಹೀಶ್ವರ ಪಂಕ್ತಿಯಲ್ಲಿ ನಿರಾಮಯನು(ನೆಮ್ಮದಿ, ಸಂತೋಷ) ನಿಮ್ಮ+ ಅಯ್ಯನು+ ಇಹನು ಸತೇಜದಲಿ ಬಳಿಕ ಸೋಮವಂಶದ ರಾಯರೊಳಗೆ+ ಉದ್ದಾಮರು+ ಅಹ(ಆಗಿರುವ) ಬಲುಗೈ ಕುಮಾರ ಸ್ತೋಮ(ವೀರ ಕುಮಾರರ ಸಮೂಹ) ನೀವಿರಲು+ ಅಯ್ಯಗೆ (ನಿಮ್ಮ ತಂದೆಗೆ)+ ಏನು+ ಅರಿದು (ಅಸಾಧ್ಯ)+ ಎಂದನು+ ಅ ಮುನಿಪ.
ಅರ್ಥ:ನಾರದನುಧರ್ಮಜನನ್ನು ಕುರಿತು,'ಉತ್ತಮವಾದ ಈ ಮಹಾಯಾಗವನ್ನು ನೀನು ಮಾಡು. ಆ ಮಹೀಶ್ವರರ ಪಂಕ್ತಿಯಲ್ಲಿ ನಿಮ್ಮ ತಂದೆಯು ಬಳಿಕ ನೆಮ್ಮದಿ, ಸಂತೋಷದಿಂದ ತೇಜಸ್ಸಿನಿಂದಕೂಡಿ ಇರುವನು; ಸೋಮವಂಶದ ರಾಯರಲ್ಲಿ ನಿಮ್ಮ ತಂದೆಗೆ ವೀರ ಕುಮಾರರ ಸಮೂಹ ನೀವು ಇರುವಾಗ ಏನು ತಾನೆ ಅಸಾಧ್ಯ,'ಎಂದನು;

ಧರ್ಮಜನ ಚಿಂತೆ

ಸಂಪಾದಿಸಿ
ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು |
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಞದ
ನೆನವು ಭಾರವಣೆಯಲಿ ಬಿದ್ದುದು ಧರ್ಮನಂದನನ || ೯೩ ||

ಪದವಿಭಾಗ-ಅರ್ಥ: ಮುನಿಯ ಮಾತಿನ ಬಲೆಗೆ ಸಿಲುಕಿತು ಜನಪತಿಯ(ಧರ್ಮಜನ) ಚೈತನ್ಯಮೃಗವು (ಮೃಗ ಜಿಂಕೆ, ಮಿಕ)+ ಈತನ ವಚೋ ವರುಷದಲಿ (ಮಾತಿನ ವರ್ಷ- ಮಳೆ) ನೆನೆದವು ಕರಣವೃತ್ತಿಗಳು (ಭಾವಗಳು) ಮನದಲಿ+ ಅಂಕುರವಾಯ್ತು (ಹುಟ್ಟಿತು, ಹುರಹೊಮ್ಮಿತು) ನಾಲಿಗೆ+ಗೊನೆ + ಕೊನೆಯಲಿ ಯಲಿ+ ಎರಡು+ ಎಲೆಯಾಯ್ತು, ಯಜ್ಞದ ನೆನವು ಭಾರವಣೆಯಲಿ ಬಿದ್ದುದು ಧರ್ಮನಂದನನ.
ಅರ್ಥ:ನಾರದನ ಮುನಿಯ ಮಾತಿನ ಬಲೆಯಲ್ಲಿ ಧರ್ಮಜನ ಜೀವವೆಂಬ ಮಿಕ ಸಿಕ್ಕಿಕೊಂಡಿತು.ತ ಅವನ ಮಾತಿನ ಸುರಿಮಳೆಯಲ್ಲಿ ಧರ್ಮಜನ ಮನಸ್ಸಿನ ಭಾವಗಳು ನೆನೆದವು. ಅವನ ಮನಸ್ಸಿನಲ್ಲಿ ನಾಲಿಗೆಯಕುಡಿ ಚಿಗುರಿ ಎರಡು ಎಲೆ ಅಂಕುರವಾಯ್ತು. ಆಗ ಅವನ ಮನಸ್ಸು ನಾರದನು ಹೇಳಿದ ಯಜ್ಞದ ನೆನವಪಿನಿಂದ ಅದನ್ನು ಮಾಡುವ ಹೊಣೆಗಾರಿಕೆಯ ಭಾರದಿಂದ ಧರ್ಮನಂದನನ ಮನಸ್ಸು ಬಿದ್ದಿತ್ತು. ರಾಜಸೂಯ ಯಾಗವನ್ನು ಮಾಡಲು ಧರ್ಮಜನು ಮನಸ್ಸು ಮಾಡಿದ ಕೂಡಲೆ ಅದರ ಹೊಣೆಗಾರಿಕೆಯಿಂದ ಅವನ ಮನಸ್ಸು ಭಾರವಾಯಿತು.

  • ಟಿಪ್ಪಣಿ:- ಇದು ಮುಂದೆ ಮಹಾ ಯುದ್ಧಕ್ಕೆ ನಾಂದಿಯಾಯಿತು.ಅಲ್ಲಿ ಅವಮಾನಿತ ಸುಯೋಧನನ ಸೇಡು- ದ್ಯೂತ; ಯುದ್ಧ.

ಕಳುಹಿದನು ಸುರಮುನಿಯ
ನುದರದೊಳಿಳಿದುದಂತಸ್ತಾಪ ಯಜ್ಞದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ |
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರನರಯಣನ || ೯೪ ||

ಪದವಿಭಾಗ-ಅರ್ಥ:ಕಳುಹಿದನು ಸುರಮುನಿಯನು+ ಉದರದೊಳು+ ಇಳಿದುದು+ ಅಂತಸ್ತಾಪ (ಸಂಕಟ) ಯಜ್ಞದ ಬಲುಹ (ಕಠಿಣತೆಯ ಭಾರ) ನೆನೆದು+ ಅಡಿಗಡಿಗೆ ಕಂಪಿಸಿ(ನಡುಗಿ) ಕೈಯ ಗಲ್ಲದಲಿ ಒಲೆದು+ ಒಲೆದು, ಭಾವದಲಿ ಮಿಗೆ ಕಳವಳಿಸಿ, ಪದುಳಿಸಿಕೊಳುತ, ಭೂಪತಿ ತಿಲಕ(ಶ್ರೇಷ್ಠ) ಚಿಂತಿಸಿ ನೆನೆವುತಿದ್ದನು ವೀರನರಯಣನ.
ಅರ್ಥ:ಧರ್ಮಜನು ನಾರದಮುನಿಯನ್ನು ಕಳುಹಿಸಿಕೊಟ್ಟನು. ನಂತರ ಅವನ ಹೊಟ್ಟೆಯಲ್ಲಿ ಅಂತಸ್ತಾಪ- ಸಂಕಟವು ಇಳಿಯಿತು. ನಾರದನ ಸೂಚನೆಯಂತೆ ತಾನು ಮಾಡಬೇಕಾದ ರಾಜಸೂಯ ಯಜ್ಞದ ಕಠಿಣತೆಯ ಭಾರವನ್ನು ನೆನೆದು ಅಡಿಗಡಿಗೆ ನಡುಗಿದನು. ಅಂಗೈಯನ್ನು ಗಲ್ಲದಲ್ಲಿ ಇಟ್ಟು ಹಾಗಲ್ಲ- ಹೀಗೆ ಎಂದು ಚಿಂತಿಸಿ, ಒಲೆದು ಒಲೆದು, ಮನಸ್ಸಿನಲ್ಲಿ ದೇಶದ ರಾಜರನ್ನೆಲ್ಲಾ ಗೆಲ್ಲುವ ಬಗ್ಗೆ ಬಹಳ ಕಳವಳಿಪಟ್ಟು, ಹಾಗೆಯೇ ಸಮಾಧಾನ ಪಟ್ಟುಕೊಳ್ಳುತ್ತಾ ಭೂಪತಿ ತಿಲಕ(ಧರ್ಮಜನು ಚಿಂತಿಸಿ ವೀರನಾರಯಣನಾದ ಕೃಷ್ಣನನ್ನು ನೆನೆಯುತಿದ್ದನು.

♠♠♠

ಸಭಾಪರ್ವ

ಸಂಪಾದಿಸಿ
  1. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೧)
  2. ಕುಮಾರವ್ಯಾಸ ಭಾರತ/ಸಟೀಕಾ (೨.ಸಭಾಪರ್ವ::ಸಂಧಿ-೨)

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು