ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೪)

<ಕುಮಾರವ್ಯಾಸಭಾರತ-ಸಟೀಕಾ

ಅರಣ್ಯಪರ್ವ: ೪ ನೆಯ ಸಂಧಿ

ಸಂಪಾದಿಸಿ
ಭಜಿಸಿದನು ನರನಿಂದ್ರಕೀಲದೊ
ಳಜ ಸುರಾರ್ಚಿತ ಚರಣ ಕಮಲನ
ತ್ರಿಜಗದಧಿಪತಿಯನು ಮಹಾನಟರಾಯ ಧೂರ್ಜಟಿಯ

ಪದವಿಭಾಗ-ಅರ್ಥ:ಭಜಿಸಿದನು ನರನು(ಅರ್ಜುನನು)+ ಇಂದ್ರಕೀಲದೊಳು+ ಅಜ(ಬ್ರಹ್ಮ) ಸುರ+ ಅರ್ಚಿತ(ದೇವತೆಗಳಿಂದ ಪೂಜಿಸಲ್ಪಟ್ಟ) ಚರಣಕಮಲನ (ಪಾದಪದ್ಮನ- ಕಮಲದಂತಿರುವ ಪಾದವುಳ್ಳವನ)+ ತ್ರಿಜಗದ+ ಅಧಿಪತಿಯನು(ಮೂರುಲೋಕದ ಒಡೆಯ) ಮಹಾನಟರಾಯ(ನಟರಾಜ) ಧೂರ್ಜಟಿಯ(ಈಶ್ವರನ).
ಅರ್ಥ:ಅರ್ಜುನನು ಇಂದ್ರಕೀಲ ಪರ್ವತದಲ್ಲಿ ಬ್ರಹ್ಮ ಮತ್ತು ದೇವತೆಗಳಿಂದ ಪೂಜಿಸಲ್ಪಟ್ಟ ಕಮಲದಂತಿರುವ ಪಾದವುಳ್ಳವನಾದ ಮೂರುಲೋಕದ ಒಡೆಯನಾದ, ನಟರಾಜನಾದ ಪರಮೇಶ್ವರನನ್ನು ಭಜಿಸಿದನು.[][] [] [][]

ನಲವಿಂದ ಹೊಕ್ಕರು ದ್ವೈತಕಾನನವ

ಸಂಪಾದಿಸಿ
ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರರಟವಿಯ
ಪಾಳಿಯಲಿ ಪರುಠವಿಸಿದರು ಪದಯುಗ ಪರಿಭ್ರಮವ |
ಲೋಲಲೋಚನೆ ಸಹಿತ ತತ್ಕುಲ
ಶೈಲದಲಿ ತದ್ವಿಪಿನದಲಿ ತ
ತ್ಕೂಲಪತಿಗಳ ತೀರದಲಿ ತೊಳಲಿದರು ಬೇಸರದೆ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಪಾಂಡು ಕುಮಾರರು+ ಅಟವಿಯ ಪಾಳಿಯಲಿ (ಅವಧಿ, ಬಾರಿ) ಪರುಠವಿಸಿದರು (ಅಣಿಗೊಳಿಸು; ವಿಸ್ತರಿಸು) ಪದಯುಗ ಪರಿಭ್ರಮವ ಲೋಲಲೋಚನೆ ಸಹಿತ ತತ್ಕುಲ ಶೈಲದಲಿ ತತ್+ದ್+ ವಿಪಿನದಲಿ ತತ್+ ಕೂಲಪತಿಗಳ(ಕೂಲ= ದಡ,ತಟ ) ತೀರದಲಿ ತೊಳಲಿದರು ಬೇಸರದೆ(ಬೇಸರದಿಂದ-X; ಬೇಸರಿಸದೆ ಬೇಸರಪಡದೆ).
ಅರ್ಥ:ಜನಮೇಜಯ ಧರಿತ್ರೀಪಾಲನೇ, 'ಕೇಳು, ಪಾಂಡು ಕುಮಾರರು ಕಾಡಿನ ೧೨ ವರ್ಷದ ಪಾಳಿಯಲ್ಲಿ ಲೋಲಲೋಚನೆಯಾದ ದ್ರೌಪದಿ ಸಹಿತ ಪದಯಾತ್ರೆಯ ಸಂಚಾರವನ್ನು ನೆಡೆಸಿದರು. ಆ ಕುಲಶೈಲದ ಬಳಿ ಇರುವ ಆ ಕಾಡಿನ ನದೀ ತೀರದಲ್ಲಿ ಬೇಸರಪಡದೆ ತೊಳಲಿದರು.
ಫಳ ಮೃಗಾವಳಿ ಸವೆದುದಿನ್ನೀ
ಹಳುವು ಸಾಕಿನ್ನೊಂದರಣ್ಯ
ಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ |
ಸುಲಭವೀ ವನವೆಂದು ತಮ್ಮೊಳು
ತಿಳಿದು ಪಾರ್ಥ ಯುಧಿಷ್ಠಿರರು ಮುನಿ
ಕುಲ ಸಹಿತ ನಲವಿಂದ ಹೊಕ್ಕರು ದ್ವೈತಕಾನನವ || ೨ ||
ಪದವಿಭಾಗ-ಅರ್ಥ:ಫಳ(ಫಲ) ಮೃಗಾವಳಿ(ಮೃಗಸಮೂಹ) ಸವೆದುದು(ಕಡಿಮೆಯಾತಿತು)+ ಇನ್ನು+ ಈ ಹಳುವು(ಕಾಡು) ಸಾಕು+ ಇನ್ನೊಂದು+ ಅರಣ್ಯಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ, ಸುಲಭವು+ ಈ ವನವೆಂದು ತಮ್ಮೊಳು ತಿಳಿದು ಪಾರ್ಥ ಯುಧಿಷ್ಠಿರರು ಮುನಿಕುಲ ಸಹಿತ ನಲವಿಂದ ಹೊಕ್ಕರು ದ್ವೈತಕಾನನವ.
ಅರ್ಥ:ಪಾಂಡವರು, ತಾವು ಬೀಡು ಬಿಟ್ಟಿದ್ದ ಸ್ಥಳದಲ್ಲಿ ಫಲಗಳು, ಮೃಗ ಸಮೂಹವು ಕಡಿಮೆಯಾತಿತು. ಇನ್ನು+ ಈ ಕಾಡು ಸಾಕು; ಇನ್ನೊಂದು ಅರಣ್ಯಸ್ಥಳವನ್ನು ನಮ್ಮ ವಿಪ್ರ ಸಂಕುಲದ ಜನರಸಮೂಹ ನೋಡಲಿ, ಹುಡುಕಲು ನಡೆಯಲಿ ಎಂದು ತಾವು ಬೀಡು ಬಿfಟಿದ್ದ ಸ್ಥಳದಿಂದ ಹೊರಟರು. ನಂತರ ಕಾಡಿನಲ್ಲ ಮುಂದೆ ಬರುತ್ತಾ ಒಂದು ವನಪ್ರೇಧೇಶವನ್ನು ಕಂಡು ಅವರು ಈ ವನವು ವಾಸಕ್ಕೆ ಸುಲಭವು, ಅನುಕೂಲವಾಗಿದೆ ಎಂದು ತಮ್ಮಲ್ಲಿ ತಿಳಿದು, ಪಾರ್ಥ ಯುಧಿಷ್ಠಿರರು ಮುನಿಕುಲ ಸಹಿತ ನಲವಿನಿಂದದ- ಸಂತಸದಿಂದ ದ್ವೈತಕಾನನವನ್ನು ಹೊಕ್ಕರು.
ಅರಸ ಕಳುಹಿದ ದೂತನಾ ಗಜ
ಪುರವ ಹೊಕ್ಕು ತದೀಯ ವಾರ್ತಾ
ಭರದ ವಿವರವನರಿದು ಬಂದನು ಕಂಡನವನಿಪನ ||
ಕುರುನೃಪಾಲನ ಮದವನಾತನ
ಸಿರಿಯನಾತನ ಬಲುಹನಾತನ
ಪರಿಯನರುಹಿದನಬುಜಮುಖಿ ಪವನಜರು ಕಳವಳಿಸೆ || ೩ ||
ಪದವಿಭಾಗ-ಅರ್ಥ: ಅರಸ ಕಳುಹಿದ ದೂತನು+ ಆ ಗಜಪುರವ ಹೊಕ್ಕು ತದೀಯ ವಾರ್ತಾಭರದ ವಿವರವನು+ ಅರಿದು ಬಂದನು ಕಂಡನು+ ಅವನಿಪನ(ಧರ್ಮಜನನ್ನು); ಕುರುನೃಪಾಲನ ಮದವನು+ ಆತನ ಸಿರಿಯನು+ ಆತನ ಬಲುಹನು+ ಆತನ ಪರಿಯನು+ ಅರುಹಿದನು (ಹೇಳಿ) ಅಬುಜಮುಖಿ (ಕಮಲ ಮುಖಿ, ದ್ರೌಪದಿ)ಪವನಜರು ಕಳವಳಿಸೆ.
ಅರ್ಥ: ಅರಸ ಧರ್ಮಜನು ಹಸ್ತಿನಾವತಿಗೆ ಕಳುಹಿಸಿದ ದೂತನು ಆ ಪುರವನ್ನು ಹೊಕ್ಕು ಅಲ್ಲಿಯ ವಾರ್ತೆಗಳ ವಿವರಗಳನ್ನು ತಿಳಿದುಕೊಂಡು ಬಂದನು. ಅವನು ಅಲ್ಲಿಂದ ಬಂದು ಧರ್ಮಜನನ್ನು ಬಂದು ಕಂಡನು; ಅವನು ಹಸ್ತಿನಾಪುರದಲ್ಲಿ ರಾಜ ಕೌರವನ ಮದವನ್ನೂ, ಆತನ ಸಿರಿ ಸಂಪತ್ತನ್ನೂ, ಆತನ ಬಲುಹನನ್ನೂ- ಸಾಮರ್ಥ್ಯವನ್ನೂ, ಆತನ ರೀತಿನೀತಿಯನ್ನೂ ಧರ್ಮಜನಿಗೆ ತಿಳಿಸಿದನು. ಅದನ್ನು ಕೇಳಿ ದ್ರೌಪದಿ ಭೀಮರು ಕಳವಳಪಟ್ಟರು.
ಮೂದಲಿಸಿದಳು ದ್ರುಪದ ತನುಜೆ ವೃ
ಕೋದರನನರ್ಜುನನವನಿಪ
ನಾದಿಯಾದೈವರನು ಕೌರವನೃಪನ ಪತಿಕರಿಸಿ |
ಆದೊಡಿದೆ ಕುರುರಾಜ ವಂಶ
ಚ್ಛೇದ ಧೀರ ಕುಠಾರವೆನುತ ವೃ
ಕೋದರನು ತೂಗಿದನು ಗದೆಯನು ಗಾಢಕೋಪದಲಿ || ೪ ||
ಪದವಿಭಾಗ-ಅರ್ಥ:ಮೂದಲಿಸಿದಳು(ಹಂಗಿಸಿ ದೂರಿದಳು) ದ್ರುಪದ ತನುಜೆ (ದ್ರೌಪದಿ) ವೃಕೋದರನನು (ಭೀಮನು)+ ಅರ್ಜುನನು+ ಅವನಿಪನ+ ಆದಿಯಾದ+ ಐವರನು, ಕೌರವನೃಪನ ಪತಿಕರಿಸಿ ಆದೊಡೆ(ಆದರೇನು)+ ಇದೆ ಕುರುರಾಜ ವಂಶಚ್ಛೇದ ಧೀರ ಕುಠಾರವು (ಕೊಡಲಿ)+ ಎನುತ ವೃಕೋದರನು ತೂಗಿದನು ಗದೆಯನು ಗಾಢಕೋಪದಲಿ.
ಅರ್ಥ:ದ್ರುಪದನ ಮಗಳು ದ್ರೌಪದಿಯು ವೃಕೋದರನನ್ನೂ, ಅರ್ಜುನನ್ನೂ ಅವನಿಪ ಧರ್ಮಜನನನ್ನೂ, ಆದಿಯಾಗಿ ಐವರನ್ನೂ ಕೌರವನೃಪನನ್ನು ವಿರೋಧಿಸದೆ ಅಂಗೀಕರಿಸಿದಕ್ಕಾಗಿ ಮೂದಲಿಸಿದಳು. ಆಗ ವೃಕೋದರನು,ಆದರೇನು ನನ್ನಲ್ಲಿ ಇಗೊ ಇದೆ ಈ ಧೀರ ಬಲವಾದ ಗದೆಯು; ಇದು ಕುರುರಾಜನ ವಂಶಚ್ಛೇದದ ಕುಠಾರ,' ಎನ್ನುತಾ ಗಾಢವಾದ ಕೋಪದಿಂದ ಗದೆಯನ್ನು ತೂಗಿದನು.
ಏಕಿದೇಕೆ ವೃಥಾ ನಿಶಾಟ
ವ್ಯಾಕರಣ ಪಾಂಡಿತ್ಯವಕಟ ವಿ
ವೇಕ ರಹಿತನೆ ನೀ ವೃಕೋದರ ದ್ರುಪದ ಸುತೆಯಂತೆ |
ಸಾಕು ಸಾಕೈ ತಮ್ಮ ಸತ್ಯವೆ
ಸಾಕು ನಮಗೆ ಮದೀಯ ಪುಣ್ಯ
ಶ್ಲೋಕತೆಯನುಳುಹೆಂದು ಗಲ್ಲವ ಹಿಡಿದನನಿಲಜನ || ೫ ||
ಪದವಿಭಾಗ-ಅರ್ಥ: ಏಕೆ+ ಇದೇಕೆ ವೃಥಾ ನಿಶಾಟ(ನಿಶಾಚರ, ರಾಕ್ಷಸ, ಪಿಶಾಚ) ವ್ಯಾಕರಣ ಪಾಂಡಿತ್ಯವು+ ಅಕಟ ವಿವೇಕ ರಹಿತನೆ ನೀ ವೃಕೋದರ, ದ್ರುಪದ ಸುತೆಯಂತೆ, ಸಾಕು ಸಾಕೈ ತಮ್ಮ, ಸತ್ಯವೆ ಸಾಕು ನಮಗೆ, ಮದೀಯ(ನನ್ನ) ಪುಣ್ಯಶ್ಲೋಕತೆಯನು+ ಉಳುಹು+ ಎಂದು ಗಲ್ಲವ ಹಿಡಿದನು+ ಅನಿಲಜನ(ಭೀಮನ)
ಅರ್ಥ:ಆಗ ಧರ್ಮಜನು,' ಏಕೆ, ಇದೇಕಪ್ಪಾ ವೃಥಾ ರಾಕ್ಷಸರ ಧರ್ಮಬಾಹಿರ ವ್ಯಾಕರಣ ಪಾಂಡಿತ್ಯವು. ಅಕಟ! ವೃಕೋದರ, ನೀನು ದ್ರೌಪದಿಯಂತೆ ವಿವೇಕರಹಿತನೆ? ಸಾಕು ಸಾಕೈಯ್ಯಾ ತಮ್ಮಾ, ಸತ್ಯವೆ ಸಾಕು ನಮಗೆ; ನನ್ನ ಪುಣ್ಯಶ್ಲೋಕತೆಯನು- ಸತ್ಯವಂತನೆಂಬ ಉತ್ತಮ ಹೆಸರನ್ನು ಉಳಿಸಪಪ್ಪಾ! ಎಂದು ಪ್ರೀತಿಯಿಂದ ಭೀಮನ ಗಲ್ಲವನ್ನು ಹಿಡಿದನು.
ಅರಸಿ ನಿನ್ನಯ ಶೋಕವಹ್ನಿಯೊ
ಳುರಿವುದರಿನೃಪಜಲಧಿ ಕೇಳಂ
ಬುರುಹಲೋಚನೆ ನಿನ್ನ ಲೋಚನವಾರಿ ಪೂರದಲಿ |
ಕುರುನೃಪಾಲನ ಸತಿಯ ಶೋಕ
ಸ್ಫುರದನಲನುಜ್ವಲಿಸುವುದು ರಿಪು
ವಿರಚಿತದ ವಿಪರೀತಕಿದು ವಿಪರೀತವಹುದೆಂದ || ೬ ||
ಪದವಿಭಾಗ-ಅರ್ಥ: ಅರಸಿ ನಿನ್ನಯ ಶೋಕವಹ್ನಿಯೊಳು+ ಉರಿವುದು+ ಅರಿನೃಪಜಲಧಿ(ಶತ್ರುರಾಜರ ಸಮುದ್ರ) ಕೇಳು+ ಅಂಬುರುಹಲೋಚನೆ(ಲೋಚನೆ ಕಣ್ಣುಳ್ಳವಳು; ಕಮಲಲೋಚನೆ) ನಿನ್ನ ಲೋಚನ+ ವಾರಿ(ನೀರು) ಪೂರದಲಿ ಕುರುನೃಪಾಲನ ಸತಿಯ ಶೋಕಸ್ಫುರದ+ ಅನಲನು+ ಜ್ವಲಿಸುವುದು(ಶೋಕದ ಉದಯದ ಬೆಂಕಿಯಲ್ಲಿ)(ಸಮುದ್ರದ ನೀರಿನಲ್ಲಿ ಹುಟ್ಟುವುದು ಪ್ರಳಯದ ಬಡಬಾನಲ- ಬೆಂಕಿ) ರಿಪು ವಿರಚಿತದ ವಿಪರೀತಕೆ(ಶತ್ರುಗಳು ರಚಿಸಿರುವ ಅತಿ ಕುತಂತ್ರಕ್ಕೆ )+ ಇದು ವಿಪರೀತವಹುದು(ಹೆಚ್ಚಿನ ಪರಣಾಮ ಬೀರುವುದು)+ ಎಂದ.
ಅರ್ಥ:ರಾಣಿ ದ್ರೌಪದಿ,ನಿನ್ನ ಶೋಕವ ಬೆಂಕಿಯಲ್ಲಿ, ಕೇಳು, ಕಮಲಲೋಚನೆ,ಮುಂದೆ ಅದರಿಂದ ಶತ್ರುರಾಜರ ಸಮುದ್ರವು ಉರಿಯುವುದು. ನಿನ್ನ ಕಣ್ಣಿನ ನೀರಿನ ಪ್ರವಾಹದಿಂದ ಕುರುನೃಪಾಲನ ಪತ್ನಿಯರ ಶೋಕದ ಬೆಂಕಿಯು ಉರಿಯುವುದು. ಶತ್ರುಗಳು ರಚಿಸಿರುವ ಅತಿ ಕುತಂತ್ರಕ್ಕೆ ಇದು ಹೆಚ್ಚಿನ ಪರಿಣಾಮ ಬೀರುವುದು' ಎಂದ.

ದೇವ ವೇದವ್ಯಾಸ ಮುನಿರಾಯ ಬಂದ

ಸಂಪಾದಿಸಿ
ಆ ಸಮಯದಲಿ ಬಂದನಗ್ಗದ
ಭೂಸುರ ಶ್ರೀಕಂಠನೋ ಪ
ದ್ಮಾಸನನ ಪಲ್ಲಟವೊ ಕಮಲಾಂಬಕನ ಚುಂಬಕವೊ ||
ಭಾಸುರ ಕ್ರತುಶತದ ರೂಪ ವಿ
ಳಾಸವೊ ಶ್ರುತಿಕೋಟಿ ಕನ್ಯಾ
ವಾಸಭವನವೊ ದೇವ ವೇದವ್ಯಾಸ ಮುನಿರಾಯ || ೭ ||
ಪದವಿಭಾಗ-ಅರ್ಥ: ಆ ಸಮಯದಲಿ ಬಂದನು+ ಅಗ್ಗದ (ಶ್ರೇಷ್ಠ)ಭೂಸುರ (ಬ್ರಾಹ್ಮಣ) ಶ್ರೀಕಂಠನೋ(ಸಿರಿಕಂಠ -ಶಿವಧನುಸ್ಸು) ಪದ್ಮಾಸನನ(ಬ್ರಹ್ಮ) ಪಲ್ಲಟವೊ (ಮಾರ್ಪಾಟು- ಪ್ರತಿರೂಪ), ಕಮಲಾಂಬಕನ(ಕಮಲದಂತೆ ಅಂಬಕ -ಕಣ್ಣುಳ್ಳವನು- ವಿಷ್ಣವಿನ) ಚುಂಬಕವೊ (ಆಕರ್ಷಕ), ಭಾಸುರ (ಹೊಳೆಯುವ, ಪ್ರಕಾಶಿಸುವ ೨ ಅಂದವಾದ) ಕ್ರತುಶತದ(ನೂರು ಯಾಗ, ಯಜ್ಞ) ರೂಪ ವಿಳಾಸವೊ, ಶ್ರುತಿಕೋಟಿ ಕನ್ಯಾ(ಪ್ರಾಚೀನವಾದುದು ಕನ್ಯೆಯಂತಿರುವ(ಕೆಡದಿರುವುದು) ಋಕ್ಕುಗಳ)+ ಅವಾಸಭವನವೊ(ವಾಸಮಾಡುವ ಮಂದಿರ) ದೇವ ವೇದವ್ಯಾಸ ಮುನಿರಾಯ.
ಅರ್ಥ:ಪಾಂಡವರು ಕಳವಳಹೊಂದಿದ್ದ ಆ ಸಮಯದಲ್ಲಿ ಶ್ರೇಷ್ಠ ಭೂಸುರನಾದ ಸಿರಿಕಂಠನಾದ, ಬ್ರಹ್ಮನ ಪ್ರತಿರೂಪದಂತಿರುವ, ವಿಷ್ಣವಿನ ಆಕರ್ಷಕ ಶಕ್ತಿಯ ತೇಜಸ್ಸಿನಿಂದ ಪ್ರಕಾಶಿಸುತ್ತಿರುವ, ನೂರು ಯಾಗಗಳ ರೂಪ ವಿಲಾಸವೊ, ವೇದದ- ಕನ್ಯೆಯಂತಿರುವ ಶ್ರುತಿಕೋಟಿ ಋಕ್ಕುಗಳ ಅವಾಸಭವನವೊ, ಎನ್ನುವಂತಿರುವ ದೇವಸ್ವರೂಪನಾದ ವೇದವ್ಯಾಸ ಮುನಿರಾಯ ಬಂದನು. (ವ್ಯಾಸಮುನಿ ವಾಸ್ತವವಾಗಿ ಪಾಂಡವರಿಗೆ ಕೌರವರಿಗೆ ಅಜ್ಜ.)
ಹಾ ಮಹಾ ದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ |
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ || ೮ ||
ಪದವಿಭಾಗ-ಅರ್ಥ: ಹಾ ಮಹಾ ದೇವಾ+ ಯಿದಾರು ಮಹಾ ಮುನೀಶ್ವರರು+ ಎನುತ ಮುನಿಪಸ್ತೋಮವು+ ಎದ್ದುದು ಧರ್ಮನಂದನನು+ ಅವರಿಗೆ+ ಇದಿರಾಗಿ ಪ್ರೇಮ ಪುಳಕದ ನಯನ ಸಲಿಲದ(ಸಲಿಲ- ನೀರು) ರೋಮಹರ್ಷದ ಸತ್ಯಭಾವದ ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ.
ಅರ್ಥ:ಧರ್ಮಜನೊಂದಿಗೆ ಇದ್ದ ಮುನಿಗಳ ಸಮೂಹವು, ಹಾ ಮಹಾ ದೇವಾ! ಇದು+ ಯಾರು ಮಹಾ ಮುನೀಶ್ವರರು!' ಎನ್ನುತ್ತಾ ಮುನಿಗಳ ಗುಂಪು ಎದ್ದಿತು. ಧರ್ಮನಂದನನು, ಅವರನ್ನು ಎದುರುಗೊಂಡು ಪ್ರೇಮ ಪುಳಕದ ನಯನ ಸಲಿಲದ ರೋಮಹರ್ಷದ ಸತ್ಯಭಾವದ ಭೂಮಿಪತಿ ಧರ್ಮಜನು ಮುನಿಯ ಕಾಲಿಗೆ ಮೈಬಗ್ಗಿ ನಮಿಸಿದನು.
ವಿವಿಧ ಮುನಿಗಳ ಗೋತ್ರನಾಮ
ಪ್ರವರ ಸಹಿತಭಿವಾದ ಕರ್ಮೋ
ತ್ಸವವ ಕೈಕೊಳುತನಿಬರನು ಮನ್ನಿಸಿದನುಚಿತದಲಿ |
ಯುವತಿ ಪದಕೆರಗಿದೊಡೆ "ಭೂಯಾತ್
ತವ ಮನೋರಥ" ವೆನುತ ನಸುನಗು
ತವನಿಪಾಲನ ಪರ್ಣಶಾಲೆಗೆ ಮುನಿಪನೈತಂದ || ೯ ||
ಪದವಿಭಾಗ-ಅರ್ಥ: ವಿವಿಧ ಮುನಿಗಳ ಗೋತ್ರನಾಮ ಪ್ರವರ ಸಹಿತ+ ಅಭಿವಾದ(ನಮಸ್ಕಾರ) ಕರ್ಮೋತ್ಸವವ(ಕ್ರಿಯೆಯ ಉತ್ಸವ) ಕೈಕೊಳುತ+ ಅನಿಬರನು(ಎಲ್ಲರನ್ನೂ) ಮನ್ನಿಸಿದನು+ ಉಚಿತದಲಿ, ಯುವತಿ ಪದಕೆರಗಿದೊಡೆ "ಭೂಯಾತ್+ ತವ ಮನೋರಥ" ವೆನುತ ನಸುನಗುತ+ ಅವನಿಪಾಲನ ಪರ್ಣಶಾಲೆಗೆ ಮುನಿಪನು+ ಐತಂದ.
ಅರ್ಥ:ವಾದವ್ಯಾಸ ಮಹರ್ಷಿಯು ವಿವಿಧ ಮುನಿಗಳು ಮಾಡಿದ ಗೋತ್ರನಾಮ ಪ್ರವರ ಸಹಿತದ ನಮಸ್ಕಾರದ ಕ್ರಿಯೆಯ ಉತ್ಸವವನ್ನು ಕೈಗೊಳ್ಳುತ್ತಾ- ಸ್ವೀಕರಿಸುತ್ತಾ, ಎಲ್ಲರನ್ನೂ ಉಚಿತ ರೀತಿಯಲ್ಲಿ ಮನ್ನಿಸಿದನು. ಯುವತಿ ದ್ರೌಪದಿಯು ಮುನಿಯ ಪಾದಕ್ಕೆ ಎರಗಿದಾಗ,' "ಭೂಯಾತ್+ ತವ ಮನೋರಥ" (ನಿನ್ನ ಮನಸ್ಸಿನ ಆಸೆ ನೆರವೇರಲಿ) ಎನ್ನುತ್ತಾ ನಸುನಗುತಾ, ಅವನಿಪಾಲ ಧರ್ಮಜನ ಪರ್ಣಶಾಲೆಗೆ ವ್ಯಾಸಮುನಿಪನು ಬಂದನು.
ಇದೆ ಪವಿತ್ರ ಪಲಾಶ ಪತ್ರದ
ಲುದಕವರ್ಘ್ಯಾಚಮನ ಪಾದ್ಯ
ಕ್ಕಿದೆ ವಿಮಳ ದರ್ಭೋಪರಚಿತಾಸನ ವಿಳಾಸದಲಿ |
ಇದನು ಕಾಂಚನ ಪಾತ್ರಜಲವೆಂ
ದಿದು ವರಾಸನವೆಂದು ಕೈಕೊಂ
ಬುದು ಯಥಾ ಸಂಭವದಲೆಂದನು ಧರ್ಮನಂದನನು || ೧೦ ||
ಪದವಿಭಾಗ-ಅರ್ಥ: ಇದೆ ಪವಿತ್ರ ಪಲಾಶ(ಮುತ್ತುಗದ ) ಪತ್ರದಲಿ(ಎಲೆಯಲ್ಲಿ)+ ಉದಕವು(ನೀರು)+ ಅರ್ಘ್ಯಾಚಮನ ಪಾದ್ಯಕ್ಕೆ+ ಇದೆ ವಿಮಳ ದರ್ಭ+ ಉಪರಚಿತ+ ಆಸನ ವಿಳಾಸದಲಿ(ವೈಭವ) ಇದನು ಕಾಂಚನ(ಚಿನ್ನ) ಪಾತ್ರಜಲವೆಂದು+ ಇದು ವರಾಸನವೆಂದು ಕೈಕೊಂಬುದು ಯಥಾ ಸಂಭವದಲಿ(ಲಭ್ಯತೆ)+ ಎಂದನು ಧರ್ಮನಂದನನು
ಅರ್ಥ: ಧರ್ಮನಂದನನು ವ್ಯಾಸರಿಗೆ'ಪವಿತ್ರವಾದಮುತ್ತುಗದ ಎಲೆಯ ದೊನ್ನೆಯಲ್ಲಿ ಅರ್ಘ್ಯ ಆಚಮನ ಪಾದ್ಯಕ್ಕೆ ಇದೆ ಶುದ್ಧ ದರ್ಭೆಯಿಂದ ಉಪರಚಿತವಾದ ಉದಕವು ಇದೆ; ಕುಳಿತುಕೊಳ್ಲಲು ಅದೇ ದರ್ಭೆಯ ಆಸನ ವಿಶೇಷವು ಇದೆ. ಸ್ವೀಕರಿಸಿ. ಈ ದೊನ್ನೆಯ ನೀರನ್ನು ಚಿನ್ನದ ಪಾತ್ರೆಯ ಜಲವೆಂದು ಭಾವಿಸುವುದು; ಇದು ದರ್ಭಾಸನ, ಇದನ್ನು ಯಥಾ- ಇದ್ದಹಾಗೆ ಈಗಿನ ಸಂಭವದಲ್ಲಿ ವರಾಸನವೆಂದು ಸ್ವೀಕರಿಸುವುದು.' ಎಂದನು. (ಚಿನ್ನದ ಲೋಟ ತಟ್ಟೆಗಳು, ಸಿಂಹಾಸನ ಇಲ್ಲ, ಇದರಲ್ಲೇ ತೃಪ್ತಿಪಡಿರಿ. ಎಂದು ಭಾವ)
ಈ ಪವಿತ್ರೋದಕವಲೇ ದೋ
ಷಾಪಹರ ದರ್ಭಾಸನದಲಿಂ
ದೀ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ |
ಭೂಪಕೇಳೈ ಜೇನುನೊಣದ ಮ
ಧೂಪಚಯವವಕಿಲ್ಲಲೇ ಸ
ರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ || ೧೧ ||
ಪದವಿಭಾಗ-ಅರ್ಥ:ಈ ಪವಿತ್ರ+ ಉದಕವಲೇ ದೋಷ+ ಅಪಹರ ದರ್ಭಾಸನದಲಿ+ ಇಂದ+ ಈ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ; ಭೂಪ ಕೇಳೈ ಜೇನುನೊಣದ ಮಧು+ ಉಪಚಯವು(ಶೇಖರಣೆ, ರಾಶಿ, ಏಳಿಗೆ)+ ಅವಕೆ+ ಇಲ್ಲಲೇ ಸರ್ವ+ ಅಪಹಾರವು(ಹೊಗುವುದು) ಪರರಿಗೆ+ ಆ ಕೌರವನ ಸಿರಿ+ ಯೆ+ ಎಂದ.
ಅರ್ಥ:ವ್ಯಾಸ ಮಹರ್ಷಿಯು, 'ಈ ಪವಿತ್ರ ಉದಕವಲ್ಲವೇ ದೋಷ ಅಪಹರ- ಹೊಗುವುದು; ಮತ್ತು ಈ ದರ್ಭಾಸನದಿಂದ ಈ ಪೃಥಿವಿ ಸರ್ವಾಧಿಪತ್ಯವು ನಿನಗೆ ಸೇರುವುದು, ಭೂಪನೇ ಕೇಳು, ಜೇನುನೊಣದ ಮಧು ಶೇಖರಣೆಯು ಅವಕ್ಕೆ ಇಲ್ಲವಲ್ಲವೇ, ಅದು ತೆಗೆದವರ ಪಾಲಾಗುವುದು. ಆ ಕೌರವನ ಸಿರಿಸಂಪತ್ತು ಸರ್ವವೂ ಅಪಹಾರವಾಗಿ ಹೋಗುವುದು,' ಎಂದ.
ಒಡಲು ಬೀಳಲಿ ಮೇಣು ತಮ್ಮದಿಪರರಿಗೆ
ರಡವಿಯಲಿ ಹಾಯಿಕ್ಕಿ ಹೋಗಲಿ
ಮಡದಿ ಮುನಿಯಲಿ ಬಸಿದು ಬೀಳಲಿ ಧರಣಿ ಕುರುಪತಿಗೆ |
ಎಡೆಯಲುಳಿವಿವರಾಗು ಹೋಗಿನ
ಗೊಡವೆಯೆನಗಿಲ್ಲೆನ್ನ ಸತ್ಯದ
ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ || ೧೨ ||
ಪದವಿಭಾಗ-ಅರ್ಥ:ಧರ್ಮಜನು ಮುನಿಗೆ,'ಒಡಲು ಬೀಳಲಿ, ಮೇಣು ತಮ್ಮದಿಪರರಿಗೆ+ ಅರ(ಅಲ್ಪ, ಬರಿದಾಗದ)+ ಅಡವಿಯಲಿ ಹಾಯಿಕ್ಕಿ (ಹಾಯಿ + ಇಕ್ಕು= ಜೀವನವಿಡೀ ಹಾದುಹೋಗುವ ಗತಿ; ಅರ್ಪಿಸು, ಈಡುಮಾಡು)ಹೋಗಲಿ, ಮಡದಿ ಮುನಿಯಲಿ, ಬಸಿದು ಬೀಳಲಿ ಧರಣಿ ಕುರುಪತಿಗೆ, ಎಡೆಯಲಿ+ ಉಳಿವಿವರು+ ಆಗು-ಹೋಗಿನ ಗೊಡವೆ ಯೆ+ ಎನಗಿಲ್ಲ+ ಎನ್ನ ಸತ್ಯದನುಡಿಗೆ ಹಾದರವಿಲ್ಲದಂತೆ + ಇರೆ ಕರುಣಿಸುವುದು+ ಎಂದ
ಅರ್ಥ: ಧರ್ಮಜನು ವ್ಯಾಸಮುನಿಯನ್ನು ಕುರಿತು,'ಈ ದೇಹ ಬಿದ್ದುಹೋಗಲಿ, ಮತ್ತೆ ತನ್ನ ತಮ್ಮಂದಿರಾದ ಇವರಿಗೆ ಅಲ್ಪವಾದ ಅಡವಿಯಲ್ಲಿ ಈಡಾಗಿ ಹೋಗಲಿ, ಮಡದಿ ದ್ರೌಪದಿ ಸಿಟ್ಟುಮಾಡಲಿ, ಕುರುಪತಿ ಕೌರವನಗೆ ಸೋತು ಬಸಿದು ಧರಣಿಯು- ಭುಮಿಯು ಬೀಳಲಿ, ಈ ಎಡೆಯಲ್ಲಿ- ಸ್ಥಳದಲ್ಲಿ- ಜೀವನದಲ್ಲಿ ಬದುಕಿ ಉಳಿಯುವವರು, ಹೋಗುವವರು ಈ ಆಗು-ಹೋಗಿನ ಗೊಡವೆ ತನಗಿಲ್ಲ; ತನ್ನ ಸತ್ಯದನುಡಿಗೆ ಕೆಟ್ಟುಹೋಗುವ ಸ್ಥಿತಿ ಮುಂದೆ ಇಲ್ಲದಂತೆ ಇರುವಂತೆ- ಜೀವಿಸುವಂತೆ ಕರುಣಿಸುವುದು,' ಎಂದ.
ಬಾಧೆಯುಂಟೇ ನಿನ್ನ ಸತ್ಯಕೆ
ಸಾಧಿಸುವುದವಧಿಯನು ನಿನ್ನ ವಿ
ರೋಧಿಗಳಿಗೆ ನಿವಾಸವಹುದು ಕೃತಾಂತಲೋಕದಲಿ |
ಆಧಿಪತ್ಯ ಭ್ರಮಿತರಲಿ ರಾ
ಜ್ಯಾದಿಯಲಿ ಕಡೆಗೊಂಡಿರಖಿಲ ನಿ
ರೋಧವನು ಕಡನನು ಸವೃದ್ಧಿಕವಾಗಿ ಕೊಡಿಯೆಂದ || ೧೩ ||
ಪದವಿಭಾಗ-ಅರ್ಥ: ಬಾಧೆಯುಂಟೇ ನಿನ್ನ ಸತ್ಯಕೆ ಸಾಧಿಸುವುದು+ ಅವಧಿಯನು ನಿನ್ನ ವಿರೋಧಿಗಳಿಗೆ ನಿವಾಸವು+ ಅಹುದು(ಆಗುವುದು) ಕೃತಾಂತಲೋಕದಲಿ(ಯಮನಲೋಕ) ಆಧಿಪತ್ಯ ಭ್ರಮಿತರಲಿ ರಾಜ್ಯಾದಿಯಲಿ ಕಡೆಗೊಂಡಿರಿ(ನಿರಾಕರಿಸು, ಕಡೆಗಣಿಸು)+ ಅಖಿಲ(ಎಲ್ಲಾ) ನಿರೋಧವನು (<ಸಂ. ಬಾಧಾ- ನೋವು, ವೇದನೆ, ಕಾಟ, ಕಿರುಕುಳ) ಕಡನನು(ಕಡ= ಕಡ,ಸಾಲ,ಋಣ ಉಪಕಾರ ಋಣ,ಋಣಭಾರ) ಸವೃದ್ಧಿಕವಾಗಿ ಕೊಡಿಯೆಂದ.
ಅರ್ಥ:ವ್ಯಾಸನು ಧರ್ಮಜನಿಗೆ,'ನಿನ್ನ ಸತ್ಯಕ್ಕೆ ಬಾಧೆಯುಂಟೇ? ಇಲ್ಲ. ಈಗ ಮಾತು ಕೊಟ್ಟ ಹದಿಮೂರು ವರ್ಷದ ಅವಧಿಯನ್ನು ನೀವು ಸಾಧಿಸುವುದು. ಮುಗಿಸುವುದು. ನಂತರ ನಿನ್ನ ವಿರೋಧಿಗಳಿಗೆ ಯಮನಲೋಕದಲ್ಲಿ ನಿವಾಸವು- ವಾಸವು ನಿಶ್ಚಿತ. ರಾಜ್ಯದ ಆಧಿಪತ್ಯ ಸಿಕ್ಕಿತು ಎಂಬ ಭ್ರಮಿತರಲ್ಲಿ ಪಂದ್ಯವಾಡಿ ರಾಜ್ಯವೇ ಮೊದಲಾದ ಸಂಪತ್ತನ್ನು ಕಡೆಗಣಿಸಿದಿರಿ. ಈ ಎಲ್ಲಾ ವೇದನೆ ಕಿರುಕುಳಗಳ ಕಡವನ್ನು (ವೇದನೆಯ ಸಾಲವನ್ನು) ಬಡ್ಡಿ ಸೇರಿಸಿ ಚೆನ್ನಾಗಿ ಹಿಂತಿರುಗಿಸಿ ಕೊಡಿ,'ಎಂದ.
ಟಿಪ್ಪಣಿ:ಇವರ ವನವಾಸ ಅಜ್ಞಾತವಾಸದ ಹಿಂಸೆ ಕೌರವರಿಂದ ಪಡೆದ ಸಾಲ ಇದ್ದಂತೆ- ಅದನ್ನು ಸವೃದ್ಧಿಕವಾಗಿ(ಸ+ ವೃದ್ದಿಕವಾಗಿ - ಚೆನ್ನಾಗಿ ಹೆಚ್ಚುಮಾಡಿ ಕೊಡಿ), ಎಂದರೆ ಅದಕ್ಕೆ ಬಡ್ಡಿ ಸೇರಿಸಿ ಕೊಡಿ. (ನೀನು ಕೊಟ್ಟ ಕಷ್ಟಕ್ಕೆ ಬಡ್ಡಿಸೇರಿಸಿ ಹಿಂತಿರುಗಿಸುತ್ತೇನೆ ಎನ್ನವುದು ಗ್ರಾಮ್ಯದ ರೂಢಿ ಮಾತು;) ಧರ್ಮಜನಂತಹ ಸಾತ್ವಿಕನಿಗೆ ಕೌರವನು ಮೋಸ ಮಾಡಿದ್ದಕ್ಕೆ ವ್ಯಾಸ ಮಹರ್ಷಿಗಳಿಗೇ ಅಂತರಂಗದಲ್ಲಿ ಯಾವ ಬಗೆಯ ಸಿಟ್ಟಿತ್ತು ಎಂಬುದು ಇಲ್ಲಿ ಕಾಣುವುದು.) ಆದರೆ ಅವರಿಬ್ಬರೂ ವ್ಯಾಸರಿಗೆ ಖಾಸಾ ಮೊಮ್ಮಕ್ಕಳು. ಧೃತರಾಷ್ಟ್ರ ಪಾಂಡು ಇಬ್ಬರೂ ವ್ಯಾಸರ ನಿಯೋಗದಿಂದ ಹುಟ್ಟಿದವರು.
ಆವುದರಿದಿವರಿಗೆ ಭವತ್ಕರು
ಣಾವಲೋಕನವುಂಟು ಪುನರಪಿ
ದೇವಕೀ ನಂದನನಲೊದಗುವ ಮೇಲು ನೋಟದಲಿ |
ಈ ವಿಪತ್ತೇಸರದು ಪಾಂಡವ
ಜೀವಿಗಳು ನೀವಿಬ್ಬರಿರಲೆಂ
ದಾ ವಿಭಾಂಡಕ ಶೌನಕಾದಿಗಳೆಂದರಾ ಮುನಿಗೆ || ೧೪ ||
ಪದವಿಭಾಗ-ಅರ್ಥ: ಆವುದು+ ಅರಿದು(ಆರು- ಸಾಧ್ಯ, ಅರಿದು - ಅಸಾಧ್ಯ; ಮಾಡಲಾರೆನು- ಮಾಡಲು+ ಆರೆನು)+ ಇವರಿಗೆ ಭವತ್ (ನಿಮ್ಮ)+ ಕರುಣ+ ಅವಲೋಕನವುಂಟು(ದೃಷ್ಠಿಯುಂಟು) ಪುನರಪಿ ದೇವಕೀ ನಂದನನಲಿ+ ಒದಗುವ ಮೇಲು ನೋಟದಲಿ, ಈ ವಿಪತ್ತು+ ಏಸರದು ಪಾಂಡವ ಜೀವಿಗಳು, ನೀವಿಬ್ಬರು+ ಇರಲೆಂದು+ ಆ ವಿಭಾಂಡಕ ಶೌನಕಾದಿಗಳು+ ಎಂದರು+ ಆ ಮುನಿಗೆ
ಅರ್ಥ:ಆಗ ಅಲ್ಲಿದ್ದ ಆ ವಿಭಾಂಡಕ ಶೌನಕಾದಿಗಳು,'ಈ ಪಾಂಡವರಿಗೆ ಯಾವುದು ಅಸಾದ್ಯ? ಎಲ್ಲವೂ ಸಾಧ್ಯ; ಇವರಿಗೆ ನಿಮ್ಮ ಕರುಣೆಯ ದೃಷ್ಠಿಯುಂಟು; ಮತ್ತೂ ದೇವಕೀ ನಂದನ ಕೃಷ್ನನಿಂದ ಒದಗುವ ಮೇಲು ನೋಟವಿರಲು(ನಿಗಾ ಇರಲು), ಪಾಂಡವ ಜೀವಿಗಳಿಗೆ ನೀವಿಬ್ಬರು ಇರಲು ಈ ವಿಪತ್ತು ಯಾವ ಮಹಾದೊಡ್ಡದು?,'ಎಂದರು ಆ ವ್ಯಾಸಮುನಿಗೆ.
ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರಣದಲಿ ಕಿವಿಗೊಂಡ ಕಳಕಳವನು ವಿಭಾಡಿಸಿದ |
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ವಿಷಯ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ || ೧೫ ||
ಪದವಿಭಾಗ-ಅರ್ಥ:ಕರೆಸಿ ದ್ರುಪದಾತ್ಮಜೆಯ(ದ್ರೌಪದಿಯನ್ನು) ಕಂಬನಿಯ+ ಒರತೆಯು+ ಆರಲು ನುಡಿದನು+ ಆಕೆಯ ಕರಣದಲಿ(ಮನಸ್ಸಿನಲ್ಲಿ) ಕಿವಿಗೊಂಡ ಕಳಕಳವನು ವಿಭಾಡಿಸಿ, ದಧರಣಿಪತಿಗೆ+ ಏಕಾಂತ ಭವನದೊಳು+ ಒರೆದನು+ ಈಶ್ವರ ವಿಷಯ ಮಂತ್ರಾಕ್ಷರವನು+ ಅಂಗೋಪಾಂಗ ಮುದ್ರಾಶಕ್ತಿಗಳು ಸಹಿತ.
ಅರ್ಥ:ನಂತರ ವ್ಯಾಸ ಮಹರ್ಷಿಯು ದ್ರುಪದಾತ್ಮಜೆಯಾದ ದ್ರೌಪದಿಯನ್ನು ಕರೆಸಿ ಅವಳ ಕಂಬನಿಯ ಒರತೆಯನ್ನು- ದುಃಖವನ್ನು ಆರಿಸುವುದಕ್ಕೋಸ್ಕರ ಮತ್ತು ಆಕೆಯ ಮನಸ್ಸಿನಲ್ಲಿ ಸೇರಿಕೊಂಡ ಕಳವಳವನ್ನು ಹೋಗಲಾಡಿಸಲು ಹಿತವಚನಗಳನ್ನು ನುಡಿದನು. ನಂತರ ದಧರಣಿಪತಿ ಧರ್ಮಜನಿಗೆ ಏಕಾಂತ ಭವನದಲ್ಲಿ- ಕುಟೀರದಲ್ಲಿ ಈಶ್ವರ ವಿಷಯದ ಮಂತ್ರಾಕ್ಷರವನ್ನು ಅದರ ಅಂಗೋಪಾಂಗ ಮುದ್ರಾಶಕ್ತಿಗಳು ಸಹಿತ ಬೋದಿಸಿದನು.
ಇದು ಮಹೀಶರ ಶೋಕಹರವಿಂ
ತಿದು ವಿರೋಧಿಬಲ ಪ್ರಭಂಜನ
ವಿದು ಸಕಲ ಪುರುಷಾರ್ಥ ಸಾಧನವಖಿಳ ದುರಿತಹರ |
ಇದು ಮಹಾಧಿವ್ಯಾಧಿಹರವಿಂ
ತಿದನು ನೀ ಕೊಳ್ಳರ್ಜುನಂಗೊರೆ
ವುದು ರಹಸ್ಯದೊಳೆಂದು ಮುನಿ ಕರುಣಿಸಿದನರಸಂಗೆ || ೧೬ ||
ಪದವಿಭಾಗ-ಅರ್ಥ: ಇದು ಮಹೀಶರ ಶೋಕಹರವು(ಹರ- ನಾಶ)+ ಇಂತಿದು ವಿರೋಧಿಬಲ ಪ್ರಭಂಜನವು(ವಾಯು, ಬಿರುಗಾಳಿ, ಮುರಿಯುವುದು)+ ಇದು ಸಕಲ ಪುರುಷಾರ್ಥ ಸಾಧನವು+ ಅಖಿಳ ದುರಿತಹರ(ದುರಿತ- ಕಷ್ಟ, ಹರ- ನಾಶ), ಇದು ಮಹಾ+ ಆಧಿವ್ಯಾಧಿಹರವು(ಹುಟ್ಟಿನಿಂದಬಂದ ರೋಗ)+ ಇಂತಿದನು ನೀ ಕೊಳ್ಳು+ ಅರ್ಜುನಂಗ+ ಒರೆವುದು(ಹೇಳುವುದು ಬೋಧಿಸುವುದು) ರಹಸ್ಯದೊಳು+ ಎಂದು ಮುನಿ ಕರುಣಿಸಿದನು+ ಅರಸಂಗೆ.
ಅರ್ಥ:ವ್ಯಾಸನು ಧರ್ಮಜನಿಗೆ, ಇದು- ಈ ದಿವ್ಯ ಪರಮೇಶ್ವರನ ಮಂತ್ರವು, ರಾಜರ ಶೋಕವನ್ನು ಪರಿಹರಿಸುವುದು. ಹೀಗೆ ಇದು ವಿರೋಧಿಬಲವನ್ನು ಮುರಿಯುವುದು; ಇದು ಸಕಲ ಪುರುಷಾರ್ಥ ಸಾಧನವು; ಅಖಿಲ- ಎಲ್ಲಾ ಕಷ್ಟಗಳನ್ನು ನಾಶಮಾಡುವುದು; ಇದು ಮಹಾ ಆಧಿವ್ಯಾಧಿಗಳನ್ನು ಹೋಗಲಾಡಿಸುವುದು; ಹೀಗಿರುವ ಇದನ್ನು ನೀ ಸ್ವೀಕರಿಸು. ನಂತರ ಅರ್ಜುನನಿಗೆ ರಹಸ್ಯದಲ್ಲಿ ಬೋಧಿಸುವುದು,' ಎಂದು ಮುನಿಯು ಹೇಳಿ ಧರ್ಮಜನಿಗೆ ಆ ಮಂತ್ರವನ್ನು ಕರುಣಿಸಿದನು.
ಪಾರ್ಥನೈದುವುದಿಂದ್ರ ಕೀಲದೊ
ಳರ್ಥಿಸಲಿ ಶಂಕರನನಖಿಳ
ಸ್ವಾರ್ಥ ಸಿದ್ಧಿಗೆ ಬೀಜವಿದು ಬೇರೊಂದು ಬಯಸದಿರು
ವ್ಯರ್ಥರವದಿರು ನಿನ್ನ ಹಗೆಯ ಕ
ದರ್ಥನದೊಳಿನ್ನೇನು ಜಗಕೆ ಸ
ಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ ೧೭
ಪದವಿಭಾಗ-ಅರ್ಥ:ಪಾರ್ಥನು+ ಐದುವುದು(ಹೋಗಬೇಕು)+ ಇಂದ್ರ ಕೀಲದೊಳು+ ಅರ್ಥಿಸಲಿ(ಅರ್ಥಿ- ಬೇಡುವವನು) ಶಂಕರನನು+ ಅಖಿಳ ಸ್ವಾರ್ಥ ಸಿದ್ಧಿಗೆ ಬೀಜವು+ ಇದು ಬೇರೊಂದು ಬಯಸದಿರು, ವ್ಯರ್ಥರು+ ಅವದಿರು ನಿನ್ನ ಹಗೆಯ ಕತ್+ ದ್+ ಅರ್ಥನದೊಳು(ಒಳ್ಳೆಯ ನಡತೆ, ಶಿಷ್ಟಾಚಾರ ೪ ಧರ್ಮ, ನ್ಯಾಯ )+ ಇನ್ನೇನು ಜಗಕೆ ಸಮರ್ಥನು+ ಒಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ.
ಅರ್ಥ:ವ್ಯಾಸ ಮುನಿಯು ಹೇಳಿದನು,'ಪಾರ್ಥನು ಇಂದ್ರಕೀಲಕ್ಕೆ ಹೋಗಬೇಕು. ಇಂದ್ರ ಕೀಲದಲ್ಲಿ ಶಂಕರನನ್ನು (ಅಸ್ತ್ರಕ್ಕಾಗಿ) ಬೇಡಲಿ. ಅಖಿಲ ಸ್ವಾರ್ಥ- ಸ್ವಂತ ಅಗತ್ಯಗಳ ಸಿದ್ಧಿಗೆ ಇದು- ಈಮಂತ್ರವು ಬೀಜವು. (ಇನ್ನೊಬ್ಬರ ಮಾತು ಕೇಳಿ) ಬೇರೆ ಏನನ್ನೂ ಬಯಸಬೇಡ. ಅವರು- ಕೌರವರು ವ್ಯರ್ಥರು- ಪ್ರಯೋಜನವಿಲ್ಲದವರು. ನಿನ್ನ ಶತ್ರುವು ಧರ್ಮ, ನ್ಯಾಯದಲ್ಲಿ ಪ್ರಯೋಜನವಿಲ್ಲದ ವ್ಯರ್ಥರು. ಇನ್ನೇನು ಜಗತ್ತಿಗೆ ಸಮರ್ಥನಾದವನು ಒಬ್ಬನೆ, ಅವನೇ ಶಂಭು, ಅವನು ನಿನಗೆ ಕೃಪೆ ಮಾಡುವನು,' ಎಂದ.
ಇಂದುಮುಖಿಯನು ಭೀಮನನು ಯಮ
ನಂದನನರ್ಜುನನ ಯಮಳರ
ನಂದು ಕೊಂಡಾಡಿದನು ಮೈದಡವಿದನು ಮೋಹದಲಿ |
ಬಂದು ಸಂದಣಿಸಿದ ಮುನಿ ದ್ವಿಜ
ವೃಂದವನು ಮನ್ನಿಸಿ ನಿಜಾಶ್ರಮ
ಮಂದಿರಕೆ ಮುದದಿಂದ ಬಿಜಯಂಗೈದನಾ ಮುನಿಪ || ೧೮ ||
ಪದವಿಭಾಗ-ಅರ್ಥ:ಇಂದುಮುಖಿಯನು(ದ್ರೌಪದಿಯನ್ನು) ಭೀಮನನು, ಯಮನಂದನನು+ ಅರ್ಜುನನ ಯಮಳರನು+ ಅಂದು ಕೊಂಡಾಡಿದನು, ಮೈದಡವಿದನು, ಮೋಹದಲಿ, ಬಂದು ಸಂದಣಿಸಿದ (ಒಟ್ಟಾಗಿ ಬಂದ) ಮುನಿ ದ್ವಿಜ-ವೃಂದವನು(ಸಮೂಹವನ್ನು) ಮನ್ನಿಸಿ(ಸಮಾಧಾನ ಮಾಡಿ) ನಿಜಾಶ್ರಮ(ನಿಜ= ತನ್ನ) ಮಂದಿರಕೆ ಮುದದಿಂದ ಬಿಜಯಂಗೈದನು+ ಆ ಮುನಿಪ
ಅರ್ಥ:ಆ ಮುನಿಪನು ಪ್ರೀತಿಯಿಂದ ಚಂದ್ರವದನೆ ದ್ರೌಪದಿಯನ್ನೂ, ಭೀಮನನ್ನೂ, ಧರ್ಮಜನನ್ನೂ, ಅರ್ಜುನನ್ನೂ, ನಕುಲಸಹದೇವರನ್ನೂ ಅಂದು ಕೊಂಡಾಡಿದನು. ಮೈದಡವಿದನು; ನಂತರ ಬಂದು ಒಟ್ಟಾಗಿ ಬಂದು ಸೇರಿದ ಮುನಿಗಳನ್ನೂ ದ್ವಿಜ-ಸಮೂಹವನ್ನೂ ಸಮಾಧಾನ ಮಾಡಿ ತನ್ನ ಆಶ್ರಮದ ಕುಟೀರಕ್ಕೆ ಸಂತಸದಿಂದ ಹೋದನು.

ಅರ್ಜುನನಿಗೆ ಧರ್ಮಜನ ಉಪದೇಶ

ಸಂಪಾದಿಸಿ
ಅರಸ ಕೇಳೈ ಮುನಿಪನತ್ತಲು
ಸರಿದನಿತ್ತಲು ಪಾರ್ಥನನು ನೃಪ
ಕರೆದು ವೇದವ್ಯಾಸನಿತ್ತುಪದೇಶ ವಿಸ್ತರವ |
ಅರುಹಿದನು ಕೈಲಾಸ ಸೀಮಾ
ವರುಷದಲ್ಲಿಹುದಿಂದ್ರ ಕೀಲದ
ಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ || ೧೯ ||
ಪದವಿಭಾಗ-ಅರ್ಥ: ಅರಸ ಕೇಳೈ ಮುನಿಪನು+ ಅತ್ತಲು ಸರಿದನು+ ಇತ್ತಲು ಪಾರ್ಥನನು ನೃಪ(ರಾಜ) ಕರೆದು ವೇದವ್ಯಾಸನು+ ಇತ್ತ+ ಉಪದೇಶ ವಿಸ್ತರವ ಅರುಹಿದನು; ಕೈಲಾಸ ಸೀಮಾ ವರುಷದಲ್ಲಿಹುದು+ ಇಂದ್ರ ಕೀಲದಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ.
ಅರ್ಥ:ಅರಸ ಕೇಳಯ್ಯಾ,'ವ್ಯಾಸ ಮುನಿಪನು ಅತ್ತ ತನ್ನ ಆಶ್ರಮಕ್ಕೆ ಹೋದನು. ಇತ್ತ ಧರ್ಮಜನು ಪಾರ್ಥನನ್ನು ಕರೆದು ವೇದವ್ಯಾಸನು ಕೊಟ್ಟ ಉಪದೇಶವನ್ನು ವಿಸ್ತಾರವಾಗಿ ಪಾರ್ಥನಿಗೆ ಉಪದೇಶಮಾಡಿದನು. ಅವನು ಪಾರ್ಥನನ್ನು ಕುರಿತು ಅವನು ಕೈಲಾಸ ಸೀಮಾ ಪ್ರದೇಶದಲ್ಲಿರವ ಇಂದ್ರ ಕೀಲದಗಿರಿಯಲ್ಲಿ ಮಹೇಶ ಕ್ಷೇತ್ರವು. ಅಲ್ಲಿಗೆ ನೀನು ಹೋಗಿ ಶಿವನನ್ನು ಮೆಚ್ಚಿಸಿ ವರವನ್ನು(ಅಸ್ತ್ರ) ಪಡೆ ಎಂದ.
ಅಲ್ಲಿ ಭಜಿಸುವದಮಳ ಗಿರಿಜಾ
ವಲ್ಲಭನನಾಮ್ನಾಯ ಜಿಹ್ವೆಗೆ
ದುರ್ಲಭನನಧಿ ದೈವವನು ಬ್ರಹ್ಮೇಂದ್ರ ಭಾಸ್ಕರರ
ಬಲ್ಲೆನೆಂಬರ ಬಹಳ ಗರ್ವವ
ಘಲ್ಲಿಸುವ ಗಡ ತನ್ನ ಭಕ್ತರು
ಬಲ್ಲಿದರು ತನಗೆಂಬ ಬೋಳೆಯರರಸನಿಹನೆಂದ ೨೦
ಪದವಿಭಾಗ-ಅರ್ಥ: ಅಲ್ಲಿ ಭಜಿಸುವದು+ ಅಮಳ(ಅಮಲ- ಪರಿಶುದ್ಧ, ಶ್ರೇಷ್ಠ) ಗಿರಿಜಾವಲ್ಲಭನನು+ ಆಮ್ನಾಯ(ವೇದ, ಪರಂಪರಾಗತ ಪದ್ಧತಿ ) ಜಿಹ್ವೆಗೆ (ನಾಲಿಗೆ, ಶಬ್ಧ) ದುರ್ಲಭನು(ಸಿಕ್ಕಲಾರನು)+ ಅನಧಿ(ಕಡಿಮೆ) ದೈವವನು ಬ್ರಹ್ಮ+ ಇಂದ್ರ ಭಾಸ್ಕರರ ಬಲ್ಲೆನು+ ಎಂಬರ ಬಹಳ ಗರ್ವವ ಘಲ್ಲಿಸುವ(ಜೊಂದರೆಕೊಡು, ನಿವಾರಿಸುವ) ಗಡ ತನ್ನ ಭಕ್ತರು ಬಲ್ಲಿದರು ತನಗೆ+ ಎಂಬ ಬೋಳೆಯರ+ ಅರಸನಿಹನು+ ಎಂದ
ಅರ್ಥ:ಧರ್ಮಜನು ಅರ್ಜುನನಿಗೆ, ಅಲ್ಲಿ ನೀನು ಶ್ರೇಷ್ಠನಾದ ಗಿರಿಜಾವಲ್ಲಭನನ್ನು- ಶಿವನನ್ನು ಭಜಿಸು. ಅವನು ವೇದಗಳಿಗೂ ಜಿಹ್ವೆಗೂ ದುರ್ಲಭನು. ಕಡಿಮೆಯ ದೈವವನ್ನು ಬ್ರಹ್ಮ, ಇಂದ್ರ, ಭಾಸ್ಕರರನ್ನು ಬಲ್ಲೆನು ಎಂಬುವವರ ಬಹಳ ಗರ್ವವುಳ್ಳವರನ್ನು ನಿವಾರಿಸುವನು ಗಡ; ಶಿವನು ತನ್ನ ಭಕ್ತರು ತನಗೆ ದೊಡ್ಡವರು,ಮುಖ್ಯರು ಎಂಬ ಮುಗ್ಧರ ಅರಸನಾಗಿದ್ದಾನೆ,' ಎಂದ.
ಏಳು ನೀ ಪ್ರತ್ಯೂಷದಲಿ ಶಶಿ
ಮೌಳಿ ಮೈದೋರಲಿ ತದೀಯ ಶ
ರಾಳಿಗಳು ಸಿದ್ಧಿಸಲಿ ಸೇರಲಿ ಶಿವನ ಕೃಪೆ ನಿನಗೆ |
ಸೋಲದಿರು ಸುರಸತಿಯರಿಗೆ ಸ
ಮ್ಮೇಳವಾಗದಿರವರೊಡನೆ ಕೈ
ಮೇಳವಿಸುವುದು ಕಾಮವೈರಿಯ ಚರಣಕಮಲದಲಿ || ೨೧ ||
ಪದವಿಭಾಗ-ಅರ್ಥ: ಏಳು ನೀ ಪ್ರತ್ಯೂಷದಲಿ ಶಶಿಮೌಳಿ ಮೈದೋರಲಿ, ತದೀಯ ಶರಾಳಿಗಳು(ಅಸ್ತ್ರಗಳು) ಸಿದ್ಧಿಸಲಿ, ಸೇರಲಿ ಶಿವನ ಕೃಪೆ ನಿನಗೆ, ಸೋಲದಿರು ಸುರಸತಿಯರಿಗೆ(ಅಪ್ಸರೆಯರು) ಸಮ್ಮೇಳವಾಗದಿರು+ ಅವರೊಡನೆ ಕೈಮೇಳವಿಸುವುದು(ಒಟ್ಟಾಗು, ಸೇರು, ಹೋರಾಡು, ಸಿದ್ಧಿಸು, ನೆರವೇರು, ಸಮರ್ಪಿಸು) ಕಾಮವೈರಿಯ(ಶಿವನ) ಚರಣಕಮಲದಲಿ(ಪಾದಗಳಲ್ಲಿ).
ಅರ್ಥ:ಧರ್ಮಜನು ಅರ್ಜುನನಿಗೆ ಹೇಳಿದ, 'ಏಳು ನೀನು ಬೆಳಗಿನ ಜಾವ ಶಿವನು ಮೈದೋರಲಿ- ಪ್ರತ್ಯಕ್ಷನಾಗಲಿ. ಅವನಲ್ಲಿರುವ ಅಸ್ತ್ರಗಳು ನಿನಗೆ ಸಿದ್ಧಿಸಲಿ. ನಿನಗೆ ಶಿವನ ಕೃಪೆಯಾಗಲಿ, ಸುರಸತಿಯರಾದ ಅಪ್ಸರೆಯರಿಗೆ ಸೋಲಬೇಡ, ಅವರೊಡನೆ ಜೊತೆಗೂಡಬೇಡ; ಕಾಮವೈರಿ ಶಿವನ ಕೃಪೆಯನ್ನು ಪಡೆಯಲು ಹೋರಾಡು, ಅವನ ಪಾದಗಳಲ್ಲಿ ಸಮರ್ಪಿಸಿಕೊಂಡು ಸಿದ್ಧಿಸು.
ಮುಗ್ಗದಿರು ಮಾಯೆಯಲಿ ಮದದಲಿ
ನೆಗ್ಗದಿರು ರೋಷದ ವಿಡಂಬದ
ಲಗ್ಗಳೆಯತನದಿಂದಹಂಕೃತಿ ಭರದಿ ಮೆರೆಯದಿರು
ಅಗ್ಗಿಸದಿರಾತ್ಮನನು ಲೋಭದೊ
ಳೊಗ್ಗದಿರು ಲಘುವಾಗದಿರು ಮಿಗೆ
ಹಿಗ್ಗದಿರು ಹೊಗಳಿಕೆಗೆ ಮನದಲಿ ಪಾರ್ಥ ಕೇಳೆಂದ ೨೨
ಪದವಿಭಾಗ-ಅರ್ಥ: ಮುಗ್ಗದಿರು(ಹೀನನಾಗಬೇಡ) ಮಾಯೆಯಲಿ, ಮದದಲಿ(ಅಹಂಕಾರದಿಂದ) ನೆಗ್ಗದಿರು(ಕೀಳಾಗಬೇಡ) ರೋಷದ ವಿಡಂಬದಲಿ+ ಅಗ್ಗಳೆಯತನದಿಂದ+ ಅಹಂಕೃತಿ ಭರದಿ ಮೆರೆಯದಿರು; ಅಗ್ಗಿಸದಿರು+ ಆತ್ಮನನು ಲೋಭದೊಳು+ ಒಗ್ಗದಿರು; ಲಘುವಾಗದಿರು(ಅಲ್ಪ); ಮಿಗೆ(ಬಹಳ) ಹಿಗ್ಗದಿರು ಹೊಗಳಿಕೆಗೆ ಮನದಲಿ, ಪಾರ್ಥ ಕೇಳು+ ಎಂದ
ಅರ್ಥ: ಧರ್ಮಜನು ಪಾರ್ಥನೇ ಕೇಳು,'ಮಾಯೆಯ ಪಾಶದಿಂದ ಹೀನನಾಗಬೇಡ, ಅಹಂಕಾರದಿಂದ ರೋಷದ ವಿಡಂಬದಿಂದ- ಉಬ್ಬಿನಿಂದ ಕೀಳಾಗಬೇಡ; ತಾನು ಶ್ರೇಷ್ಠನು ಎಂಬ ಭಾವದ ಅಹಂಕಾರದ ಭರದಿಂದ ಮೆರೆಯದಿರು; ರು ಆತ್ಮನನ್ನು ಅಲ್ಪವಾಗಿಸಬೇಡ, ಕುಗ್ಗಿಸಬೇಡ; ಲೋಭದ ಗಣಕ್ಕೆ ಒಗ್ಗಿಕೊಳ್ಳಬೆಡ; ಅಲ್ಪನಾಗಬೇಡ; ಹೊಗಳಿಕೆಗೆ ಮನಸ್ಸಿನಲ್ಲಿ ಬಹಳ ಹಿಗ್ಗದಿರು,'ಎಂದ.
ಆಡದಿರಸತ್ಯವನು ಕಪಟವ
ಮಾಡದಿರು ನಾಸ್ತಿಕರೊಡನೆ ಮಾ
ತಾಡದಿರು ಕೆಳೆಗೊಳ್ಳದಿರು ವಿಶ್ವಾಸಘಾತಕರ |
ಖೋಡಿಗಳೆಯದಿರಾರುವನು ಮೈ
ಗೂಡದಿರು ಪರವಧುವಿನಲಿ ರಣ
ಖೇಡನಾಗದಿರೆಂದು ನುಡಿದನು ನೃಪತಿಯರ್ಜುನಗೆ || ೨೩ ||
ಪದವಿಭಾಗ-ಅರ್ಥ: ಆಡದಿರು+ ಅಸತ್ಯವನು, ಕಪಟವ ಮಾಡದಿರು, ನಾಸ್ತಿಕರೊಡನೆ ಮಾತಾಡದಿರು, ಕೆಳೆಗೊಳ್ಳದಿರು(ಕೆಳೆ- ಸ್ನೇಹ) ವಿಶ್ವಾಸಘಾತಕರ ಖೋಡಿಗಳಯದಿರು(ಖೋಡಿ= ಕೆಟ್ಟ ವ್ಯಕ್ತಿ,)+ ಆರುವನು(ಯಾರನ್ನೂ); ಮೈಗೂಡದಿರು ಪರವಧುವಿನಲಿ; ರಣಖೇಡನಾಗದಿರು+ ಎಂದು ನುಡಿದನು ನೃಪತಿಯು+ ಅರ್ಜುನಗೆ.
ಅರ್ಥ:ಯುಧಿಷ್ಟಿರ ನೃಪತಿಯು ಅರ್ಜುನನಿಗೆ,'ಅಸತ್ಯವನ್ನು ಆಡಬೇಡ; ಕಪಟವನ್ನು ಮಾಡಬೇಡ; ನಾಸ್ತಿಕರೊಡನೆ ಮಾತಾಡಬೇಡ;, ವಿಶ್ವಾಸಘಾತಕರ ಜತೆ ಸ್ನೇಹ ಮಾಡಬೇಡ; ಯಾರನ್ನೂ ನಿಂದಿಸಬೇಡ; ಯಾರನ್ನೂ ಕೆಟ್ಟವನೆಂದು ತೆಗಳಬೇಡ; ಪರರ ಪತ್ನಿಯ ಜೊತೆ ಮಲಗಬೇಡ; ರಣರಂಗದಲ್ಲು ಹಿಮ್ಮಟ್ಟಬೇಢ ಎಂದನು.
ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿ ಜೀವರಿಗೆ |
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ ಪರಲೋಕವಿಲ್ಲೆಂದ || ೨೪ ||
ಪದವಿಭಾಗ-ಅರ್ಥ: ಕ್ರೂರರಿಗೆ ಶಠರಿಗೆ(ಹಠಗೇಡಿಗಳ) ವೃಥಾ+ ಅಹಂಕಾರಿಗಳಿಗೆ+ ಅತಿ ಕುಟಿಲರಿಗೆಯು(ಕುತಂತ್ರ)+ ಉಪಕಾರಿಯ+ ಅಪಘಾತರಿಗೆ ಭೂತದ್ರೋಹಿ ಜೀವರಿಗೆ(ಪ್ರಾಣಿಗಳ ಹಿಂಸಕರಿಗೆ) , ಜಾರರಿಗೆ ಜಡರಿಗೆ ನಿಕೃಷ್ಟ+ ಆಚಾರರಿಗೆ ಪಿಸುಣರಿಗೆ ಧರ್ಮವಿದೂರರಿಗೆ ಕಲಿಪಾರ್ಥ ಕೇಳ್ ಪರಲೋಕವು+ ಇಲ್ಲ+ ಎಂದ
ಅರ್ಥ:ಧರ್ಮಜನು ಮುಂದುವರಿದು ಅರ್ಜುನನಿಗೆ, 'ಕ್ರೂರರಿಗೆ, ಹಠಗೇಡಿಗಳಿಗೆ ವೃಥಾ ಅಹಂಕಾರಿಗಳಿಗೆ, ಅತಿ ಕುಟಿಲರಿಗೆಯು, ಉಪಕಾರಿಗೆ ಅಪಘಾತ ಮಾಡುವವರಿಗೆ, ಪ್ರಾಣಿಗಳ ಹಿಂಸೆಕೊಡುವ ಜೀವರಿಗೆ, ಜಾರರಿಗೆ- ಪರಸ್ತ್ರೀ ಸಂಗ ಮಾಡುವವರಿಗೆ, ಜಡರಿಗೆ- ಸೋಮಾರಿಗಳಿಗೆ ನಿಕೃಷ್ಟ- ಕೀಳು ಆಚಾರವುಳ್ಳವರಿಗೆ, ಪಿಸುಣರಿಗೆ-ಲೋಭಿ- ಜುಗ್ಗರಿಗೆ, ಧರ್ಮಬಿಟ್ಟವರಿಗೆ ಉತ್ತಮ ಪರಲೋಕವು ಇಲ್ಲ,' ಕೇಳು- ತಿಳಿ ಎಂದ.
ಭ್ರಾತೃ ಮಿತ್ರ ವಿರೋಧಿಕಗೆ ಪಿತೃ
ಮಾತೃಘಾತಿಗೆ ಖಳನಿಗುತ್ತಮ
ಜಾತಿನಾಶಕನಿಂಗೆ ವರ್ಣಾಶ್ರಮ ವಿದೂಷಕಗೆ |
ಜಾತಿಸಂಕರಕಾರಗಾ ಕ್ರೋ
ಧಾತಿರೇಕಗೆ ಗಾಢ ಗರ್ವಿಗೆ
ಭೂತವೈರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ || ೨೫ ||
ಪದವಿಭಾಗ-ಅರ್ಥ: ಭ್ರಾತೃ ಮಿತ್ರ ವಿರೋಧಿಕಗೆ, ಪಿತೃಮಾತೃ+ ಘಾತಿಗೆ ಖಳನಿಗೆ+ ಉತ್ತಮ ಜಾತಿನಾಶಕನಿಂಗೆ, ವರ್ಣಾಶ್ರಮ ವಿದೂಷಕಗೆ, ಜಾತಿಸಂಕರಕಾರಗು+ ಆ ಕ್ರೋಧಾತಿರೇಕಗೆ, ಗಾಢ ಗರ್ವಿಗೆ, ಭೂತವೈರಿಗೆ, ಪಾರ್ಥ ಕೇಳ್ ಪರಲೋಕವು+ ಇಲ್ಲ+ ಎಂದ;
ಅರ್ಥ:ಧರ್ಮಜನು,' ಸೋದರರು ಮತ್ತು ಮಿತ್ರರಿಗೆ ವಿರೋಧಮಾಡವವನಿಗೆ, ಪಿತೃಮಾತೃಗಳಗೆ ಹಿಂಸೆಮಾಡುವವನಿಗೆ, ಖಳನಿಗೆ- ದುಷ್ಟನಿಗೆ, ಉತ್ತಮ ಜಾತಿಯವರನ್ನು ನಾಶಮಾಡುವವನಿಗೆ, ವರ್ಣಾಶ್ರಮವನ್ನು ಅಪಹಾಸ್ಯಮಾಡುವವನಿಗೆ, ಜಾತಿಸಂಕರ ಮಾಡುವವನಿಗೆ, ಆ ಅತಿರೇಕವಾಗಿ ಕ್ರೋಧ- ಸಿಟ್ಟು ಮಾಡುವವನಿಗೆ, ಗಾಢ- ಅತಿಯಾದ ಗರ್ವವುಳ್ಳವನಿಗೆ, ಭೂತ- ಪ್ರಾಣಿಗಳನ್ನು ಕೊಲ್ಲುವ, ದ್ವೇಷಮಾಡುವ ಪ್ರಾಣಿವೈರಿಗೆ, ಪಾರ್ಥನೇ ಕೇಳು ಅವರಿಗೆ ಉತ್ತಮ ಪರಲೋಕವು ಇಲ್ಲ, ಎಂದ.(ವರ್ಣಾಶ್ರಮವನ್ನು ಅಪಹಾಸ್ಯಮಾಡುವವನಿಗೆ, ಜಾತಿಸಂಕರ ಮಾಡುವವನಿಗೆ: ಈಗ ಕ್ರಿ.ಶ.19,20, 21ನೇ ಶತಮಾನದಲ್ಲಿ ತಾತ್ವಿಕವಾಗಿ ಈ ಲೋಕನೀತಿ ಬದಲಾಗಿದೆ. ಆದರೆ ಭಾರತದಲ್ಲಿ ಜಾತಿ ಪದ್ದತಿ ಮಾತ್ರಾ ವರ್ಷ ವರ್ಷಕ್ಕೂ ಬಲಿಷ್ಠವಾಗುತ್ತಿದೆ.)
ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ |
ಗ್ರಾಮಣಿಗೆ ಪಾಷಂಡಗಾತ್ಮ ವಿ
ರಾಮಕಾರಿಗೆ ಕೂಟಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ || ೨೬ ||
ಪದವಿಭಾಗ-ಅರ್ಥ: ಸ್ವಾಮಿಕಾರ್ಯ ವಿಘಾತಕಂಗೆ,+ ಅತಿಕಾಮುಕಗೆ, ಮಿಥ್ಯಾಪವಾದಿಗೆ,ಭೂಮಿದೇವ ದ್ವೇಷಿಗೆ,+ ಅತ್ಯಾಶಿಗೆ ಬಕವ್ರತಿಗೆ(ಕಪಟಿ, ವಂಚಕ, ಬಕಪಕ್ಷಿಯು ಧ್ಯಾನದ ಸಾಧುವಿನಂತೆ ನಿಂತಿದ್ದು, ಮೀನು ಹತ್ತಿರ ಬಂದಾಗ ಹಿಡಿಯುವುದು.), ಗ್ರಾಮಣಿಗೆ(ಈಡುಗಾರ- ಗುರಿಗಾಗಿ ಆಟಕ್ಕಾಗಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವವ) ಪಾಷಂಡಗೆ,+ ಆತ್ಮ ವಿರಾಮಕಾರಿಗೆ, ಕೂಟಸಾಕ್ಷಿಗೆ, ನಾಮಧಾರಿಗೆ(ಹೊಟ್ಟೆಪಾಡಿಗಾಗಿ ನಾಮಧರಿಸಿದವನಿಗೆ), ಪಾರ್ಥ ಕೇಳ್ ಪರಲೋಕವಿಲ್ಲ+ ಎಂದ
ಅರ್ಥ:ಧರ್ಮಜನು,'ಸ್ವಾಮಿಕಾರ್ಯವನ್ನು ಕೆಡಿಸುವವನಿಗೆ, ಅತಿಕಾಮುಕನಿಗೆ, ಸುಳ್ಳು ಅಪವಾದ ಮಾಡುವವನಿಗೆ, ಭೂಮಿಯನ್ನೂ,ದೇವರನ್ನೂ ದ್ವೇಷ ಮಾಡುವವನಿಗೆ, ಅತಿ ಆಸೆಬುರುಕನಿಗೆ, ಕಪಟಿಗೆ- ವಂಚಕನಿಗೆ, ಗ್ರಾಮಣಿ- ಈಡುಗಾರನಿಗೆ, ಪಾಷಂಡಗೆ- ವೈದಿಕ ಸಂಪ್ರದಾಯಕ್ಕೆ ವಿರುದ್ಧವಾದ ಮತವುಳ್ಲವನಿಗೆ ಅಥವಾ ಧರ್ಮ ಶ್ರದ್ಧೆಯಿಲ್ಲದವನಿಗೆ, ಆತ್ಮ ವಿರಾಮಕಾರಿಗೆ- ಆತ್ಮಹತ್ಯೆಮಾಡಿಕೊಂಡವನಿಗೆ, ಕೂಟಸಾಕ್ಷಿಗೆ- ಸುಳ್ಳು ಸಾಕ್ಷಿ ಹೇಳುವವನಿಗೆ, ನಾಮಧಾರಿಗೆ(ಹೊಟ್ಟೆಪಾಡಿಗಾಗಿ ನಾಮಧರಿಸಿದವನಿಗೆ), ಪಾರ್ಥನೇ ಕೇಳು ಪರಲೋಕವಿಲ್ಲ, ಎಂದ
ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದ ಚೈತ
ನ್ಯದಲಿ ನಿನ್ನನೆ ಬೆರಸಿ ಕಾಬುದು ನಿನ್ನ ತನುವೆಂದು |
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ || ೨೭ ||
ಪದವಿಭಾಗ-ಅರ್ಥ: ಅದರಿಂ+ನ+ ಆವಂಗಂ+ ಉಪಹತಿಯ(ತೊಂದರೆ) ಮಾಡದಿರು; ಸಚರಾಚರದ ಚೈತನ್ಯದಲಿ ನಿನ್ನನೆ ಬೆರಸಿ ಕಾಬುದು(ಕಾಂಬುದು, ಕಾಣುವುದು) ನಿನ್ನ ತನುವೆಂದು ಬೆದರದಿರು ಬಲು+ ಉತಪಕೆ(ಕಷ್ಟಕ್ಕೆ), ಶೂಲಿಯ(ಶಿವನ) ಪದಯುಗವ ಮರೆಯದಿರು, ಹರಿಯನು ಹೃದಯದಲಿ ಪಲ್ಲಟಿಸದಿರು, ಸುಖಿಯಾಗು ಹೋಗು+ ಎಂದ
ಅರ್ಥ:ಧರ್ಮಜನು,'ಈ ಎಲ್ಲಾ ವಿಚಾರದ ಕಾರಣದಿಂದ ಯಾರಿಗೂ ತೊಂದರೆ, ಹಿಂಸೆಯನ್ನ ಮಾಡದೆ ತಪಸ್ಸುಮಾಡು; ಚಲಿಸುವ ಚಲಿಸದಿರುವ ಸಚರಾಚರದ ಚೈತನ್ಯದಲ್ಲಿ ನಿನ್ನನ್ನೇ ಬೆರಸಿಕೊಂಡು ಜಗತ್ತನ್ನು ಕಾಣುವುದು. ನೋವಾದಾಗ ಇದು ಬಲು ಕಷ್ಟಕ್ಕೆ ಸಿಕ್ಕಿದಾಗ ಇದು ನಿನ್ನ ತನುವೆಂದು-ದೇಹವೆಂದು ಬೆದರಬೇಡ. ಶಿವನ ಪಾದಗಳನ್ನು ಮರೆಯದಿರು. ಹಾಗೆಯೇ, ಹರಿಯನ್ನು(ಕೃಷ್ಣನನ್ನು) ಹೃದಯದಲ್ಲಿ ಸದಾನೆನಸು, ಅದರಿಂದ ಪಲ್ಲಟಿಸದಿರು- ಅಲುಗಾಡಿ ಬೇರೆಯಾಗಬೇಡ, ಸುಖಿಯಾಗಿರು- ನಿನಗೆ ಸುಖವಾಗಲಿ ಹೋಗು.' ಎಂದ.
ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು |
ಸುರರು ವಸುಗಳು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ಮನು ಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ || ೨೮ ||
ಪದವಿಭಾಗ-ಅರ್ಥ:ಕರುಣಿಸಲಿ ಕಾಮಾರಿ(ಶಿವ, ಕಾಮನ ಅರಿ ಶತ್ರು) ಕೃಪೆಯಿಂ ವರ ಮಹಾಸ್ತ್ರವನು+ ಇಂದ್ರ, ಯಮ, ಭಾಸ್ಕರ, ಹುತಾಶನ(ಅಗ್ನಿ), ನಿರುತಿ, ವರುಣ, ಕುಬೇರ, ಮಾರುತರು, ಸುರರು, ವಸುಗಳು, ಸಿದ್ಧ, ವಿದ್ಯಾಧರ, ಮಹೋರಗ, ಯಕ್ಷ, ಮನು, ಕಿಂಪುರುಷರು+ ಈಯಲಿ(ಕೊಡಲಿ) ನಿನಗೆ ವಿಮಳ ಸ್ವಸ್ತಿವಾಚನವ.
ಅರ್ಥ:ಧರ್ಮಜನು ಆಶೀರ್ವಾದ ಮಾಡುತ್ತಾನೆ,'ಕರುಣಿಸಲಿ ಕಾಮಾರಿ ಶಿವನು,ಕೃಪೆಯಿಂದ ಶ್ರೇಷ್ಠ ಮಹಾಸ್ತ್ರವನ್ನೂ, ಇಂದ್ರ, ಯಮ, ಭಾಸ್ಕರ(ಸೂರ್ಯ), ಅಗ್ನಿ, ನಿರುತಿ, ವರುಣ, ಕುಬೇರ, ಮಾರುತರು- ವಾಯುದೇವತೆಗಳು, ಸುರರು- ದೇವತೆಗಳು, ವಸುಗಳು, ಸಿದ್ಧರು, ವಿದ್ಯಾಧರರು, ಮಹೋರಗರ- ನಾಗರು, ಯಕ್ಷರು, ಮನುಗಳು, ಕಿಂಪುರುಷರು, ಅರ್ಜುನಾ, ನಿನಗೆ ಅಸ್ತ್ರಗಲನ್ನು ಕೊಡಲಿ. ನಿನಗೆ ವಿಮಲವಾದ ಪವಿತ್ರವಾದ ಸ್ವಸ್ತಿವಾಚನವನ್ನು ಕೊಡಲಿ,' ಎಂದನು.
ಎನೆ ಹಸಾದವೆನುತ್ತೆ ಯಮ ನಂ
ದನಗೆ ಭೀಮಂಗೆರಗಿದನು ಮುನಿ
ಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಘದಲಿ |
ವನಜಮುಖಿ ಮುನಿ ವಧುಗಳಾಶೀ
ರ್ವಿನುತ ದಧಿ ದೂರ್ವಾಕ್ಷತೆಯನು
ಬ್ಬಿನಲಿ ಕೈಕೊಳುತನಿಬರನು ಮನ್ನಿಸಿದನುಚಿತದಲಿ || ೨೯ ||
ಪದವಿಭಾಗ-ಅರ್ಥ: ಎನೆ(ಎನ್ನಲು) ಹಸಾದವು+ ಎನುತ್ತೆ ಯಮ ನಂದನಗೆ ಭೀಮಂಗೆ+ ಎರಗಿದನು, ಮುನಿಜನಕೆ ಮೈಯಿಕ್ಕಿದನು, ಮುಳುಗಿದನು+ ಅಕ್ಷತೌಘದಲಿ, ವನಜಮುಖಿ ಮುನಿ ವಧುಗಳ+ ಆಶೀರ್ವಿನುತ-ಆಶೀರ್+ ವಿನುತ ದಧಿ ದೂರ್ವಾಕ್ಷತೆಯನು+ ಉಬ್ಬಿನಲಿ(ಆನಂದದಿಂದ) ಕೈಕೊಳುತ+ ಅನಿಬರನು(ಎಲ್ಲರನ್ನೂ) ಮನ್ನಿಸಿದನು+ ಉಚಿತದಲಿ
ಅರ್ಥ:ಧರ್ಮಜನು ಶುಭವಾಗಲಿ ಎನ್ನಲು, ಅರ್ಜುನನು ತಮ್ಮ ಅನುಗ್ರವು ಎನುತ್ತಾ, ಹಿರಿಯರಾದ ಯಮನಂದನ ದರ್ಮಜನಿಗೆ, ಭೀಮನಿಗೆ ಎರಗಿ ನಮಿಸಿದನು. ಮುನಿಜನರಿಗೆ ಉದ್ದಕ್ಕೆ ಅಡ್ಡಬಿದ್ದು ನಮಸ್ಕರಿಸಿದನು. ಅವರೆಲ್ಲರು ಆಶೀರ್ವಾದ ಪೂರ್ವಕ ಹಾಕಿದ ಮಂಗಳಾಕ್ಷತೆಯ ಕಾಳಿನ ರಾಶಿಯಲ್ಲಿ ಮುಳುಗಿದನು. ವನಜಮುಖಿರಾದ ಮುನಿ ವಧುಗಳ ಆಶೀರ್ವಾದದ ಪವಿತ್ರ ಮೊಸರು ದೂರ್ವಾಕ್ಷತೆಗಳನ್ನು ಆನಂದದಿಂದ ತೆಗೆದುಕೊಳ್ಲುತ್ತಾ ಅವರೆಲ್ಲರನ್ನೂ ಉಚಿತರೀತಿಯಲ್ಲಿ ಗೌರವಿಸಿದನು.
ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ |
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪದಿಯೆರಗಿದಳು ಪಾರ್ಥನ ಪದಾಬ್ಜದಲಿ || ೩೦ ||
ಪದವಿಭಾಗ-ಅರ್ಥ:ನೆನೆಯದಿರು ತನುಸುಖವ(ದೇಹಸುಖವ) ಮನದಲಿ, ನೆನೆ ವಿರೋಧಿಯ ಸಿರಿಯನು+ ಎನ್ನಯ ಘನತರದ ಪರಿಭವವ(ಅವಮಾನವನ್ನು) , ನೆನೆ ನಿಮ್ಮ+ ಅಗ್ರಜರ(ಅಣ್ಣನ) ನುಡಿ, ಮುನಿವರನ(ವ್ಯಾಸರ) ಮಂತ್ರೋಪದೇಶವ ನೆನೆವುದ+ ಅಭವನ(ಹುಟ್ಟಿಲ್ಲದವ- ವಿಷ್ನು- ಕೃಷ್ಣನ) ಚರಣ ಕಮಲವನು+ ಎನುತ ದುರುಪದಿ+ಯೆ+ ಎರಗಿದಳು ಪಾರ್ಥನ ಪದಾಬ್ಜದಲಿ(ಪಾದ ಪದ್ಮದಲ್ಲಿ).
ಅರ್ಥ: ದ್ರೌಪದಿಯು ಅರ್ಜುನನಿಗೆ ಶಿವನನ್ನು ಒಲಿಸಿಕೊಳ್ಳುವಾಗ ಮನದಲ್ಲಿ ದೇಹಸುಖವನ್ನ ನೆನೆಯದಿರು ಎಂದಳು. 'ನೀನು ವಿರೋಧಿಯಾದ ಕೌರವನ ಸಿರಿ ಸಂಪತ್ತನ್ನೂ ನಮ್ಮ ದೀನ ಸ್ಥಿತಿಯನ್ನೂ ನೆನೆಪಿಸಿಕೊ,' ಎಂದಳು. ಮತ್ತು 'ನನಗಾದ ಘನತರದ ದೊಡ್ಡ ಅವಮಾನವನ್ನು ನೆನೆ' ಎಂದಳು. 'ನಿಮ್ಮ ಅಣ್ಣನ ನುಡಿಗಳನ್ನು ನೆನೆಪಿಟ್ಟಕೋ,' ಎಂದಳು. ಮುನಿವರ ವ್ಯಾಸರ ಮಂತ್ರೋಪದೇಶವನ್ನು ನೆನೆಯುವುದು ಮತ್ತು ಕೃಷ್ಣನ ಪಾದಕಮಲವನು ನೆನೆಯುವುದು,'ಎನ್ನುತ್ತಾ ದ್ವಪದಿ ಪಾರ್ಥನ ಪಾದ ಪದ್ಮಗಳಿಗೆ ಎರಗಿದಳು.
ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯಮಾರ್ಗಣವ |
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ || ೩೧ ||
ಪದವಿಭಾಗ-ಅರ್ಥ: ಹರನ ಚರಣವ(ಪಾದವನ್ನು) ಭಜಿಸುವೆನು ದುರ್ಧರ ತಪೋನಿಷ್ಠೆಯಲಿ ಕೇಳೆಲೆ ತರುಣಿ ಪಾಶುಪತಾಸ್ತ್ರವ+ ಆದಿಯ ದಿವ್ಯಮಾರ್ಗಣವ ಪುರಹರನ(ತ್ರಿಪುರ ಸಂಹಾರಕ- ಶಿವ) ಕೃಪೆಯಿಂದ ಪಡೆದು+ ಆ ನರಿಗಳನು ಸಂಹರಿಸಿ ನಿನ್ನಯ ಪರಿಭವ+ ಅಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ
ಅರ್ಥ: ಅರ್ಜುನನು ದ್ರೌಪದಿಯನ್ನು ಕುರಿತು,'ದುರ್ಧರವಾದ ಅಚಲವಾದ ತಪೋನಿಷ್ಠೆಯಲ್ಲಿ ಹರನ ಚರಣವನ್ನು ಭಜಿಸುವೆನು; ಆ ಪಾರ್ಥನು, 'ಕೇಳು ಎಲೆ ತರುಣಿ ದ್ರೌಪದಿ, ಪಾಶುಪತಾಸ್ತ್ರ ಮೊದಲಾದ ದಿವ್ಯ ಅಸ್ತ್ರಗಳನ್ನು ಶಿವನ ಕೃಪೆಯಿಂದ ಪಡೆದು ಆ ಕೌರವ ನರಿಗಳನ್ನು ಸಂಹರಿಸಿ ನಿನ್ನ ಅವಮಾನದ ದುಃಖದ ಅಗ್ನಿಯನ್ನು ನಂದಿಸುವೆನು, ಎದ್ದುನಿಲ್ಲು,' ಎಂದನು.

ಪಾರ್ಥನು ಇಂದ್ರಕೀಲ ಪರ್ವತಕ್ಕೆ ಹೋದನು

ಸಂಪಾದಿಸಿ
ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ |
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗಿಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ || ೩೨ ||
ಪದವಿಭಾಗ-ಅರ್ಥ: ಬಿಗಿದ ಬತ್ತಳಿಕೆಯನು, ಹೊನ್ನಾಯುಗದ ಖಡುಗ ಕಠಾರಿ, ಚಾಪವ ತಗೆದು+ ಅನಳವಡೆಗಟ್ಟಿ ಬದ್ದುಗೆದಾರ(ಸೊಂಟದಪಟ್ಟಿ ) ಗೊಂಡೆಯವ, ದುಗುಡ(ಚಿಂತೆ) ಹರುಷದ ಮುಗಿಲ ತಲೆಯೊತ್ತುಗಳಿಗೆ+ ಇಟ್ಟೆಡೆಯಾಗಿ(ಇಕ್ಕಟ್ಟು, ಅನಿವಾರ್ಯತೆ) ಗುಣ ಮೌಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜ+ ಅಗ್ರಜನ
ಅರ್ಥ:ಪಾರ್ಥನು ಹೆಗಲಿಗೆ ಬತ್ತಳಿಕೆಯನ್ನು ಬಿಗಿದು, ಹೊನ್ನಾಯುಗದ- ಚಿನ್ನದ ಹಿಡಿಯ ಖಡ್ಗ, ಕಠಾರಿ, ಚಾಪವ- ಬಿಲ್ಲನ್ನು ತಗೆದು, ಸೊಂಟದಪಟ್ಟಿಯನ್ನು ಅದರ ಗೊಡೆಯನ್ನೂ ಗಟ್ಟಿಯಾಗಿ ಕಟ್ಟಿಕೊಂಡು, ಶಿವನ ಒಲಿಸುವ ಚಿಂತೆ, ಶಿವನನ್ನು ಕಾಣುವ ಹರುಷದ ಮುಗಿಲನ್ನು- ಕನಸನ್ನು ತಲೆಯಲ್ಲಿ ತುಂಬಿಕೊಂಡು, ಅನಿವಾರ್ಯವಾಗಿ ಗುಣ ಮೌಳಿಗಳ ಮಣಿ ಕಲಿಪಾರ್ಥನು ತನ್ನ ಅಗ್ರಜ ಧರ್ಮಜನನ್ನು ಬೀಳ್ಕೊಂಡು ಇಂದ್ರಕೀಲಕ್ಕೆ ಹೊರಟನು.
ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತಮಾಗೆ ಸೂರ್ಯೋದಯದ ಸಮಯದಲಿ |
ಹರಿಣ ಭಾರದ್ವಾಜನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ || ೩೩ ||
ಪದವಿಭಾಗ-ಅರ್ಥ: ಹರಡೆ(ಶಕುನದ ಹಕ್ಕಿ) ವಾಮದೊಳು+ ಉಲಿಯೆ ಮಧುರ ಸ್ವರದಲಿ+ ಅಪಸವ್ಯದಲಿ(ಎಡ, ಬಲಗಡೆಯ, ದಕ್ಷಿಣ ಭಾಗದ) ಹಸುಬನ(ಹಸಿರುಬಣ್ಣದ ಪಾರಿವಾಳ; ಬೆನ್ನಚೀಲ, ಹಸುಬೆ; ) ಸರ(ಸದ್ದು) ಸಮಾಹಿತಮಾಗೆ ()ಸೇರಿರಲು, ಸೂರ್ಯೋದಯದ ಸಮಯದಲಿ, ಹರಿಣ ಭಾರದ್ವಾಜ ನುಡಿಕೆಯ(ಜಿಂಕೆ, ಭಾರದ್ವಾಜ ಹಕ್ಕಿಯ ಸ್ವರದ ಸರಟ ಸದ್ದು ) ಸರಟ ನಕುಲನ ತಿದ್ದುಗಳ(ಮುಂಗಸಿಯ ನೆಡಿಗೆ,) ಕುಕ್ಕುರನ( ನಾಯಿಯ) ತಾಳಿನ(ಹಲ್ಲುಕಿರಿ, ನಾಲಿಗೆ) ಶಕುನವನು ಕೈಕೊಳುತ ನಡೆತಂದ(ನೆಡೆದನು)
ಅರ್ಥ:ಅರ್ಜುನನು ಹೊಡುವಾಗ ಶುಭಶಕುನಗಳಾದವು, ಹರಡೆಎಂಬ ಶಕುನದ ಹಕ್ಕಿ ಎಡದ ದಿಕ್ಕಿನಲ್ಲಿ ಮಧುರ ಸ್ವರದಲ್ಲಿ ಕೂಗಿತು; ಬಲದಲ್ಲಿ ಹಸುಬ ಎಂಬ ಹಸಿರುಬಣ್ಣದ ಪಾರಿವಾಳ ಸದ್ದುಮಾಡಿತು; ಇವೆಲ್ಲ ಶಕುನಗಳು ಸೇರಿರಲು, ಸೂರ್ಯೋದಯದ ಸಮಯದಲ್ಲಿ, ಜಿಂಕೆ, ಭಾರದ್ವಾಜ ಹಕ್ಕಿಯ ಸ್ವರದ ಸರಟ ಸದ್ದುಮಾಡಲು, ಮುಂಗಸಿಯ ನೆಡಿಗೆಯನ್ನುಕಾಣುತ್ತಾ ನಾಯಿಯು ಹಲ್ಲುಕಿರಿದು ನಾಲಿಗೆ ಚಾಚಿ, ಬಾಲ ಆಡಿಸುವ ಶಕುನವನ್ನು ಪಡೆಯುತ್ತಾ ಮುಂದೆ ಇಂದ್ರಕೀಲದ ಕಡೆ ನೆಡೆದನು.
ನೀಲಕಂಠನ ಮನದ ಬಯಕೆಗೆ
ನೀಲಕಂಠನೆ ಬಲಕೆ ಬಂದುದು
ಮೇಲುಪೋಗಿನ ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ |
ಕಾಲಗತಿಯಲಿ ಮೇಲೆ ಪರರಿಗೆ
ಕಾಲಗತಿಯನು ಕಾಬೆನೈಸಲೆ
ಶೂಲಧರನೇ ಬಲ್ಲನೆನುತೈತಂದನಾ ಪಾರ್ಥ || ೩೪ ||
ಪದವಿಭಾಗ-ಅರ್ಥ: ನೀಲಕಂಠನ ಮನದ ಬಯಕೆಗೆ ನೀಲಕಂಠನೆ ಬಲಕೆ ಬಂದುದು ಮೇಲುಪೋಗಿನ(ಉನ್ನತ) ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ ಕಾಲಗತಿಯಲಿ ಮೇಲೆ (ಉತ್ತಮಸ್ಥಿತಿ) ಪರರಿಗೆ ಕಾಲಗತಿಯನು ಕಾಬೆನು(ಕಾಂಬೆನು)+ ಐಸಲೆ ಶೂಲಧರನೇ ಬಲ್ಲನು+ ಎನುತ+ ಐತಂದನು+ ಆ ಪಾರ್ಥ
ಅರ್ಥ: ಆ ಪಾರ್ಥನು, ನೀಲಕಂಠನಾದ ಶಿವನನ್ನು ನೋಡಬೇಕೆಂಬ ಮನದ ಬಯಕೆಗೆ ನೀಲಕಂಠದ ನವಿಲೇ ಬಲಕ್ಕೆ- ಎದುರು ಬಂದಿತು; ತನ್ನ ಉನ್ನತ ಸಿದ್ಧಿಯು ದೈತ್ಯಾಂತಕನಾದ ಕೃಷ್ಣನ ಬುದ್ಧಿಯಲ್ಲಿ ಕಾಲಗತಿಯಲ್ಲಿ- ಸಕಾಲದಲ್ಲಿ ದೊರಕಿಸುವುದು. ಪರರಿಗೆ ಉತ್ತಮ ಸ್ಥಿತಿಯನ್ನು ಉತ್ತಮನು (ಕಾಲಗತಿಯಲ್ಲಿ-) ಸಕಾಲದಲ್ಲಿ ಕಾಣುವನು(ಕಾಣುವೆನು), ಐಸಲೆ- ಹೀಗಲ್ಲವೇ ವಿಧಿಯ ನಿಯಮ? ವಿಧಿನಿಯಮಗಳನ್ನು ಆ ಶೂಲಧರ ಶಿವನೇ ಬಲ್ಲನು,' ಎನ್ನುತ್ತಾ ಇಂದ್ರಕೀಲದ ಕಡೆಗೆ ನೆಡೆದನು.
ಅರಸ ಕೇಳೈ ಬರುತ ಭಾರತ
ವರುಷವನು ದಾಂಟಿದನು ತಂಪಿನ
ಗಿರಿಯ ತಪ್ಪಲನಿಳಿದಿನಾ ಹರಿವರುಷ ಸೀಮೆಯಲಿ |
ಬೆರಸಿದನು ಬಳಿಕುತ್ತರೋತ್ತರ
ಸರಣಿಯಲಿ ಸೈನಡೆದು ಹೊಕ್ಕನು
ಸುರರ ಸೇವ್ಯವನಿಂದ್ರಕೀಲ ಮಹಾ ವನಾಂತರವ || ೩೫ ||
ಪದವಿಭಾಗ-ಅರ್ಥ: ಅರಸ ಕೇಳೈ ಬರುತ ಭಾರತ ವರುಷವನು ದಾಂಟಿದನು, ತಂಪಿನಗಿರಿಯ ತಪ್ಪಲನು+ ಇಳಿದಿನು+ ಆ ಹರಿವರುಷ(ರುಷ= ಮನುಷ್ಯನಿಂದ ಮಾಡ ಲಾಗದುದು)) ಸೀಮೆಯಲಿ ಬೆರಸಿದನು ಬಳಿಕ+ ಉತ್ತರೋತ್ತರ ಸರಣಿಯಲಿ ಸೈನಡೆದು ಹೊಕ್ಕನು ಸುರರ(ದೇವತೆಗಳ) ಸೇವ್ಯವನು+ ಇಂದ್ರಕೀಲ ಮಹಾ ವನಾಂತರವ.
ಅರ್ಥ:ಅರಸ ಕೇಳಯ್ಯಾ, ಅರ್ಜುನನು ಮುಂದೆ ಬರುಬರುತ್ತಾ ಭರತವರ್ಷವನ್ನು ದಾಟಿದನು. ಮುಂದಿನ ತಂಪಿನ ಗಿರಿಯತಪ್ಪಲನ್ನು ಇಳಿದಿನು. ಆ ದೇವಭೂಮಿಯ ಸೀಮೆಯಲ್ಲಿ ಸೇರಿಕೊಂಡನು. ಬಳಿಕ ಉತ್ತರೋತ್ತರವಾಗಿ ಸರಣಿಯಲಿ ಸೈನಡೆದು- ಒಂದೇ ಸಮನೆ ನೆಡೆದು ದೇವತೆಗಳು ಸೇವೆಗೊಳ್ಳುವ ಇಂದ್ರಕೀಲ ಮಹಾ ವನಾಂತರವನ್ನು ಹೊಕ್ಕನು.

ಇಂದ್ರಕೀಲದಲ್ಲಿ ಅರ್ಜುನನ ತಪಸ್ಸು

ಸಂಪಾದಿಸಿ
ಗಿಳಿಯ ಮೃದು ಮಾತುಗಳ ಮರಿಗೋ
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿ ನವಿಲ ಕೇಕಾ ರವದ ನಯಸರದ |
ಮೆಲುದನಿಯ ಪಾರಿವದ ತುಂಬಿಯ
ಲಲಿತ ಗೀತದ ವನ ವನದ ಸಿರಿ ಬಗೆ
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ || ೩೬ ||
ಪದವಿಭಾಗ-ಅರ್ಥ: ಗಿಳಿಯ ಮೃದು ಮಾತುಗಳ, ಮರಿಗೋಗಿಲೆಯ ಮಧುರ ಧ್ವನಿಯ, ಹಂಸೆಯ ಕಳರವದ, ಮರಿ ನವಿಲ ಕೇಕಾ ರವದ, ನಯಸರದ ಮೆಲುದನಿಯ ಪಾರಿವದ, ತುಂಬಿಯ ಲಲಿತ ಗೀತದ ವನ, ವನದ ಸಿರಿ ಬಗೆಗೊಳಿಸಿತೈ(ಬಗೆ- ಮನಸ್ಸು) ಪೂರ್ವಾಭಿಭಾಷಣದಲಿ(ಅಭ್ಯಾಸ, ಪುನರಾವರ್ತನೆ, ಪೂರ್ವಾಭಿಪ್ರಾಯ; ) ಧನಂಜಯನ.
ಅರ್ಥ:ಆ ಇಂದ್ರಕೀಲ ವನದಲ್ಲಿ ಕೇಳುವ, ಗಿಳಿಯ ಮೃದು ಮಾತುಗಳ, ಮರಿಗೋಗಿಲೆಯ ಮಧುರ ಧ್ವನಿಯ, ಹಂಸ ಪಕ್ಷಿಯ ಕಳರವದ, ಮರಿ ನವಿಲ ಕೇಕಾ ರವದ-ಕೂಗಿನ, ನಯವಾದ ಸ್ವರದ ಮೆಲುದನಿಯ ಪಾರಿವಾಳಗಳ, ತುಂಬಿಗಳ- ಜೇನುಗಳ ಲಲಿತ ಗೀತದ ವನವು ಅರ್ಜುನನ ಮನಸೆಳೆಯಿತು. ಆ ವನದ ಸಿರಿ ಪೂರ್ವಾಭಿಭಾಷಣದಿಂದ- ಹಿಂದಿನ ಅನುಭವದ ಪುನರಾವರ್ತನೆಯಿಂದ ಅರ್ಜುನನ ಮನಸ್ಸನ್ನು ಸೂರೆಗೊಳಿಸಿತು.
ಸೊಂಪೆಸೆವ ಕೋಗಿಲೆಯ ಸರ ದೆಸೆ
ತಂಪೆಸೆವ ತಂಬೆಲರ ಹುವ್ವಿನ
ಜೊಂಪವನು ಜೊಂಪಿಸುವ ಮರಿದುಂಬಿಗಳ ಮೇಳವದ |
ಪೆಂಪೊಗುವ ತಾವರೆಗೊಳಂಗಳ
ತಂಪಿನೊದವಿನ ವನದ ಸೊಗಸಿನ
ಸೊಂಪು ಸೆಳೆದುದು ಮನವನೀತನನರಸ ಕೇಳೆಂದ || ೩೭ ||
ಪದವಿಭಾಗ-ಅರ್ಥ: ಸೊಂಪ(ಮನಸ್ಸಿಗೆ ಸುಖ- ಆನಂದ)+ ಎಸೆವ ಕೋಗಿಲೆಯ ಸರ ದೆಸೆ- ತಂಪೆಸೆವ ತಂಪು+ಬೆ+ ಎಲರ ಹುವ್ವಿನ ಜೊಂಪವನು ಜೊಂಪಿಸುವ(ಝೇಂಕರಿಸುವ) ಮರಿದುಂಬಿಗಳ ಮೇಳವದ ಪೆಂಪು+ ಒಗುವ(ಹೊರಹೊಮ್ಮುವಿಕೆ, ಆವರಿಸು, ಮುತ್ತು, ಹರಡು, ವ್ಯಾಪಿಸು) ತಾವರೆಗೊಳಂಗಳ ತಂಪಿನ+ ಒದವಿನ ವನದ ಸೊಗಸಿನ ಸೊಂಪು ಸೆಳೆದುದು ಮನವನು+ ಈತನನು+ ಅರಸ ಕೇಳೆಂದ.
ಅರ್ಥ:ಅರಸನೇ ಕೇಳು,'ಆ ಕಾಡಿನ ಪ್ರದೇಶದ ವಾತಾವರಣ ಸೊಂಪನ್ನು ಬೀರುತ್ತಿತ್ತು; ಕೋಗಿಲೆಯ ಇಂಪಾದ ಹಾಡಿನ ಸ್ವರ ದೆಸೆ-ದಿಕ್ಕುಗಳನ್ನು ತುಂಬುತ್ತಿತ್ತು; ತಂಪನ್ನು ಬೀರುವ ಚಿಗುರು ಎಲೆಗಳು, ಹೂವ್ವಿನ ಜೊಂಪ- ತೂಗಾಟವನ್ನು ಹೆಚ್ಚಿಸುವ ಝೇಂಕರಿಸುವ ಮರಿದುಂಬಿಗಳ ಸಂಗೀತದ ಮೇಳದ ಪೆಂಪು- ಸೊಗಸು; ತಾವರೆಯ ಕೊಳಗಳಿಂದ ಹೊರಹೊಮ್ಮುವ ತಂಪಿನ ಒದಗು- ಲಾಭ; ಈ ವನದ ಸೊಗಸಿನ ಸೊಂಪು -ಸುಖದ ಅನುಭವ ಅರ್ಜುನನ ಮನವನ್ನು ಸೆಳೆಯಿತು.' ಎಂದ ಮುನಿ.
ಚಾರುತರ ಪರಿಪಕ್ವ ನವ ಖ
ರ್ಜೂರ ರಸಧಾರಾ ಪ್ರವಾಹ ಮ
ನೋರಮೇಕ್ಷು ವಿಭೇದ ವಿದ್ರುಮರಸದ ದಾಳಿಂಬ
ಭೂರಿ ಜಂಬ ಮಧೂಕ ಪನಸ
ಸ್ಫಾರ ರಸಪೂರಾನುಕಲಿತ ವಿ
ಹಾರ ಸುರಮಹಿಳಾಭಿರಂಜಿಸುವಖಿಳ ವನಭೂಮಿ ೩೮
ಪದವಿಭಾಗ-ಅರ್ಥ: ಚಾರುತರ(ಸುಂದರ) ಪರಿಪಕ್ವ ನವ ಖರ್ಜೂರ ರಸಧಾರಾ ಪ್ರವಾಹ, ಮನೋರಮ+ ಇಕ್ಷು(ಕಬ್ಬು) ವಿಭೇದ(ಬೇರೆ ಬೇರೆಬಗೆಯ), ವಿದ್ರುಮರಸದ (ಚಿಗುರು ದೊಡ್ಡ ಮರ) ದಾಳಿಂಬ, ಭೂರಿ ಜಂಬ(ಜಂಬು- ನೇರಿಲೆ) ಮಧೂಕ ಪನಸಸ್ಫಾರ(ಪಿಪ್ಪಲಿ, ಸರ್ಪಿ, ಸಿತ, ಕ್ಷೌದ್ರ, ಪಯಸ್ಸುಗಳೆಂಬ ಐದು ಬಗೆಯ ಸಾರಗಳು, ಪಂಚಸಾರ) ರಸಪೂರ+ ಅನುಕಲಿತ(ಕಲಿತ= ಕೂಡಿದುದು, ಸೇರಿದುದು) ವಿಹಾರ ಸುರಮಹಿಳ (ದೇವಕನ್ಯೆ)+ ಅಭಿರಂಜಿಸುವ+ ಅಖಿಳ ವನಭೂಮಿ.
ಅರ್ಥ:ಆ ವನದಲ್ಲಿ, ಸುಂದರವಾದ ಪರಿಪಕ್ವ ಹೊಸ ಖರ್ಜೂರ ರಸಧಾರೆಯ ಪ್ರವಾಹ ಇತ್ತು; ಮನಸ್ಸನ್ನು ಸೆಳೆಯುವ (ಬೇರೆ ಬೇರೆಬಗೆಯ ಕಬ್ಬುಗಳಿದ್ದವು, ದೊಡ್ಡ ಗಿಡದಲ್ಲಿ ರಸಭರಿತ ದಾಳಿಂಬವಿತ್ತು; ದೊಡ್ಡ ನೇರಿಲೆ ಮರವಿತ್ತು; ಮಧೂಕವೆಎಂಬ ಗಿಡ, ಪನಸಸ್ಫಾರವಾದ ಪಿಪ್ಪಲಿ, ಸರ್ಪಿ, ಸಿತ, ಕ್ಷೌದ್ರ, ಪಯಸ್ಸುಗಳೆಂಬ ಐದು ಬಗೆಯ ಸಾರಗಳ ರಸಪೂರ ಫಲದಿಂದ ಕೂಡಿದ ಗಿಡಗಳಿದ್ದವು; ಅಪ್ಸರ ಸ್ತ್ರೀಯರ ವಿಹಾರದಿಂದ ಕೂಡಿತ್ತು; ಆ ಎಲ್ಲಾ ಬಗೆಯಲ್ಲಿ ಬಹಳ ರಂಜಿಸುವ ವನಭೂಮಿ ಅಲ್ಲಿತ್ತು.
ವಿಲಸದಭ್ರದಲಿಹ ಮಹಾ ತರು
ಕುಲದಿನಮರನದೀಸ್ತನಂಧಯ
ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ |
ಸುಳಿವ ಪರಿಮಳ ಪವನನಿಂ ಕಂ
ಗೊಳಿಸಿತರ್ಜುನ ಕಾಮ್ಯ ಸಿದ್ಧಿ
ಸ್ಥಳದೊಳಂತರ್ಮಿಥುನ ಕಾನನವರಸ ಕೇಳೆಂದ || ೩೯ ||
ಪದವಿಭಾಗ-ಅರ್ಥ: ವಿಲಸದ(ವಿಲಾಸದ- ಅಂದ, ಸೊಬಗು)+ ಅಭ್ರದಲಿ(ಮೋಡ, ಆಕಾಶ )+ ಇಹ ಮಹಾ ತರುಕುಲದಿ(ತರ- ಮರ)ನ+ ಅಮರನದೀ (ಗಂಗೆ) ಸ್ತನಂಧಯ(ಸ್ತನ್ಯಪಾನ ಮಾಡುವ ಮಗು, ಹಸು ಗೂಸು) ಫಲರಸದ ಸವಿಗಳಲಿ ದಿಕ್+ ಕೂಲಂಕಷ+ ಉನ್ನತಿಯ+ ಸುಳಿವ ಪರಿಮಳ ಪವನನಿಂ(ವಾಯು- ಗಾಳಿಯಿಂದ) ಕಂಗೊಳಿಸಿತು+ ಅರ್ಜುನ ಕಾಮ್ಯ ಸಿದ್ಧಿಸ್ಥಳದೊಳು+ ಅಂತರ್ಮಿಥುನ(ಅಂತರ್+ ಮಿಥುನ -ಎರಡು) ಕಾನನವು+ ಅರಸ ಕೇಳು+ ಎಂದ
ಅರ್ಥ:ವೈಶಂಪಾಯನ ಮುನಿಯು,'ಆ ವನದ ಅಂದ, ಸೊಬಗು, ಆಕಾಶದಲ್ಲಿ ಮೋಡ ಇರುವ ಮಹಾ ಮರಗಳ ಮಧ್ಯೆ ಗಂಗೆಯ ಸ್ತನ್ಯಪಾನ ಮಾಡುವ ಮಗುವಿನಂತೆ, ತಪದ ಫಲರಸದ ಸವಿಗಳನ್ನು ಪಡೆಯಲು, ದಿಕ್‍ ಶುದ್ಧಿಯನ್ನು ಗಮನಿಸಿ, ಕೂಲಂಕಷವಾದ ಉನ್ನತಿಯ ಸುಳಿವನ್ನು ತೋರುವ ಪರಿಮಳ ಬೀರುವ ಗಾಳಿಯಿಂದ ಆ ವನವು ಕಂಗೊಳಿಸಿತು. ಅರ್ಜುನನು ತನ್ನ ಕಾಮ್ಯ- ಅಪೇಕ್ಷೆಗಾಗಿ ತಪಸ್ಸು ಮಾಡುವ ಸಿದ್ಧಿಸ್ಥಳದಲ್ಲಿ ಆಕಾಶ- ಭೂಮಿಯ ಎರಡು ಬಗೆಯ ಸುಂದರ್ಯ ಸೇರಿದ ಆ ಕಾನನವು ಕಂಗೊಳಿಸಿತು,' ಅರಸನೇ ಕೇಳು ಎಂದ.
ಇಲ್ಲಿ ನಿಲ್ಲರ್ಜುನ ತಪೋವನ
ಕಿಲ್ಲಿ ನೆಲೆ ಶ್ರುತಿಯುವತಿ ಸೂಸುವ
ಚೆಲ್ಲೆಗಂಗಳ ಮೊನೆಗೆ ಮೀಸಲುಗುಡದ ಮೈಸಿರಿಯ |
ದುರ್ಲಲಿತದಷ್ಟಾಂಗ ಯೋಗದ
ಕೊಲ್ಲಣಿಗೆಯಲಿ ಕೂಡದಪ್ರತಿ
ಮಲ್ಲ ಶಿವನ ಕ್ಷೇತ್ರವಿದೆಯೆಂದುದು ನಭೋನಿನದ || ೪೦ ||
ಪದವಿಭಾಗ-ಅರ್ಥ: ಇಲ್ಲಿ ನಿಲ್ಲು+ ಅರ್ಜುನ ತಪೋವನಕೆ+ ಇಲ್ಲಿ ನೆಲೆ ಶ್ರುತಿಯುವತಿ(ವೇದಮಾತೆ) ಸೂಸುವ ಚೆಲ್ಲೆಗಂಗಳ ಮೊನೆಗೆ(ಮನೋಹರ ಕೃಪಾದೃಷ್ಟಿಗೆ) ಮೀಸಲು+ ಗುಡದ(ಗುಡಿಸಲು; ಬೆಳ್ಳಗಿರುವುದು, ಮತ್ತಿಯ ಮರ, ಪಾಂಡವರಲ್ಲಿ ಒಬ್ಬ, ಹುಲ್ಲು) ಮೈಸಿರಿಯ ದುರ್ಲಲಿತದ(ದುರ್+ ಲಲಿತ= ಕೋಮಲವಲ್ಲದ- ಕಠಿಣವಾದ)+ ಅಷ್ಟಾಂಗ ಯೋಗದ ಕೊಲ್ಲಣಿಗೆಯಲಿ(ಕೊಲ್ಲಣಿಗೆ- ಅವರ ಇವತ್ತಿನ ಕೊಲ್ಲಣಿಗೆ ಚನ್ನಾಗಿತ್ತು), ಗೆಯ್ತ, ಗೆಯ್ಮೆ,) ಕೂಡದ(ಒಲಿಯದ) ಪ್ರತಿಮಲ್ಲ ಶಿವನ ಕ್ಷೇತ್ರವು+ ಇದೆಯೆಂದುದು ನಭೋನಿನದ(ಆಕಾಶದ ಧ್ವನಿ )
ಅರ್ಥ: ಆಗ ಒಂದು ಆಕಾಶವಾಣಿಯು ನುಡಿಯಿತು. ಅದು,'ಅರ್ಜುನ ಇಲ್ಲಿಯೇ ನಿಲ್ಲು; ನಿನ್ನ ತಪೋವನಕ್ಕೆ ಇಲ್ಲಿ ನೆಲೆಯಾಗಲಿ; ಈ ಸ್ಥಳ ವೇದಮಾತೆ ಸೂಸುವ- ಮನೋಹರ ಕೃಪಾದೃಷ್ಟಿಗೆ ಮೀಸಲಾಗಿದೆ. ಅರ್ಜುನನ ಮೈಸಿರಿಯ ಕಠಿಣವಾದ ಅಷ್ಟಾಂಗ ಯೋಗದ ಸಾಧನೆಗೆ ಸುಲಭಕ್ಕೆ ಒಲಿಯದ ಪ್ರತಿಮಲ್ಲ ಶಿವನ ಕ್ಷೇತ್ರವು ಇದೆಯೇ,' ಎಂದಿತು.
ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿ ಸಾಧನವೆನಿಪ ಗಿರಿವನವ |
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂದ್ಯಾಭಿಮುಖದಲಿ
ತರಣಿಗರ್ಘ್ಯವನಿತ್ತು ದೇವವ್ರಜಕೆ ಕೈಮುಗಿದ || ೪೧ ||
ಪದವಿಭಾಗ-ಅರ್ಥ: ಧರಣಿಪನ ಬೀಳ್ಕೊಂಡು ಮಾರ್ಗಾಂತರದೊಳು+ ಆರಡಿಗೈದು(ಆರಡಿ= ನೋವು, ಸಂಕಟ) ಹೊಕ್ಕನು ಹರನ ಕರುಣಾ ಸಿದ್ಧಿ ಸಾಧನವು+ ಎನಿಪ ಗಿರಿವನವ ಮರುದಿವಸದ+ ಉದಯದಲಿ ಮಿಂದನು (ಸ್ನಾನ ಮಾಡಿದನು) ಸರಸಿಯಲಿ(ಸರೋವರದಲ್ಲಿ) ಸಂದ್ಯಾಭಿಮುಖದಲಿ ತರಣಿಗೆ+ ಅರ್ಘ್ಯವನು+ ಇತ್ತು(ಕೊಟ್ಟು)(ಅರ್ಘ್ಯವನ್ನು ಮೂರು ಸಂಧ್ಯಾಕಾಲದಲ್ಲಿ ಕೊಡುವ ಕ್ರಮವಿದೆ; ಪ್ರಾತರ್ ಸಂಧ್ಯಾ, ಮದ್ಯಾಹ್ನ ಸಂಧ್ಯಾ, ಮತ್ತು ಸಾಯಂ ಸಂಧ್ಯಾ- ಇವು ಮುರು ತ್ರಿಸಂಧ್ಯಾಕಾಲಗಳು.) ದೇವವ್ರಜಕೆ(ವ್ರಜ= ಸಮೂಹ) ಕೈಮುಗಿದ.
ಅರ್ಥ:ಅರ್ಜುನನು ಧರಣಿಪ ಧರ್ಮಜನನ್ನು ಬೀಳ್ಕೊಂಡು ಇಂದ್ರಕೀಲ ಪರ್ವತದ ತಪ್ಪಲಿನ್ನು ತಲುಪಲು ಮಾರ್ಗ ಮಧ್ಯದಲ್ಲಿ ನೋವು, ಸಂಕಟಗಳನ್ನು ಅನುಭವಿಸಿ ಆ ಪರ್ವತದ ತಪ್ಪಲಾದ ಹರನ ಕರುಣೆಯನ್ನು ಪಡೆಯುವ ಸಿದ್ಧಿ ಸಾಧನವು ಎನ್ನುವ ಗಿರಿವನವನ್ನು ಹೊಕ್ಕನು. ಮರುದಿವಸದಲ್ಲಿ ಸೂರ್ಯ ಉದಯದಲ್ಲಿಯೇ ಎದ್ದು ಅಲ್ಲಿದ್ದ ಸರಸ್ಸಿನ ನೀರಿನಲ್ಲಿ ಮಿಂದನು. ಅವನು ಸೂರ್ಯೊದಯದ ಸಂದ್ಯಾಕಾಲದಲ್ಲಿ ಪೂರ್ವಕ್ಕೆ ಅಭಿಮುಖವಾಗಿ ನಿಂತು ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು, ದೇವತೆಗಳ ಸಮೂಹಕ್ಕೆ ಕೈಮುಗಿದ- ಅಷ್ಟದಿಕ್ಪಾಲಕರಿಗೆ ಕೈಮುಗಿದ.
ವಿನುತ ಶಾಂಭವ ಮಂತ್ರಜಪ ಸಂ
ಜನಿತ ನಿರ್ಮಲ ಭಾವಶುದ್ಧಿಯ
ಮನದೊಳರ್ಜುನನೆತ್ತಿ ನಿಂದನು ದೀರ್ಘ ಬಾಹುಗಳ |
ನೆನಹು ನೆಮ್ಮಿತು ಶಿವನನಿತರದ
ನನೆಕೊನೆಯ ತೆರಳಿಕೆಯ ತೊಡಚೆಯ
ಮನದ ಸಂಚಲವೀಚುವೋದುದು ಕಲಿ ಧನಂಜಯನ || ೪೨ ||
ಪದವಿಭಾಗ-ಅರ್ಥ: ವಿನುತ(ಬ್ರಹ್ಮನಿಂದ ಸ್ತುತಿಸಲ್ಪಡತಕ್ಕವನು, ಶ್ರೇಷ್ಠ) ಶಾಂಭವ(ಶಿವನ, ಶಂಭು- ಶಾಂಭವ) ಮಂತ್ರಜಪ ಸಂಜನಿತ (ಹುಟ್ಟಿದ) ನಿರ್ಮಲ ಭಾವಶುದ್ಧಿಯ ಮನದೊಳು+ ಅರ್ಜುನನು+ ಎತ್ತಿ ನಿಂದನು ದೀರ್ಘ ಬಾಹುಗಳ, ನೆನಹು ನೆಮ್ಮಿತು(ನೆಮ್ಮು- ಆತುಕೊಳ್ಳು) ಶಿವನನು+ ಇತರದನನೆ ಕೊನೆಯ ತೆರಳಿಕೆಯ ತೊಡಚೆಯ(ತೊಡೆದುಹಾಕುವ) ಮನದ ಸಂಚಲ ವೀಚುವೋದುದು(ಮರೆಯಾಗು, ಅದೃಶ್ಯವಾಗು- ದಾಸಸಾಹಿತ್ಯ ನಿಘಂಟು.) ಕಲಿ ಧನಂಜಯನ.
ಅರ್ಥ: ಬ್ರಹ್ಮನಿಂದ ಸ್ತುತಿಸಲ್ಪಟ್ಟವವಾದ ಶಿವನ ಮಂತ್ರಜಪದಿಂದ ಹುಟ್ಟಿದ ನಿರ್ಮಲ ಭಾವಶುದ್ಧಿಯ ಮನಸ್ಸಿನಿಂದ ಅರ್ಜುನನು ತನ್ನ ಎರಡೂ ದೀರ್ಘ ಬಾಹುಗಳನ್ನು ಎತ್ತಿ ನಿಂತನು. ಧ್ಯಾನದಲ್ಲಿ ತೊಡಗಿದಾಗ ಅವನ ಮನಸ್ಸಿನ ನೆನಹು- ಪ್ರಜ್ಞೆಯು ಶಿವನನ್ನು ನೆಮ್ಮಿತು- ಆತುಕೊಂಡಿತು.(ಅವನ ಮನಸ್ಸು ಶಿವನನ್ನು ಆವರಿಸಿತು) ಇತರ ವಿಚಾರವನ್ನು ನೆನೆಯದೆ ಕೊನೆಯ ತೆರಳಿಕೆಯ- ಹಂತದಲ್ಲಿ ಶಿವನ ವಿನಃ ಎಲ್ಲಾ ಭಾವಗಳನ್ನೂ ತೊಡೆದುಹಾಕುವ ಕ್ರಿಯೆಯಿಂದ, ಶೂರ ಧನಂಜಯನ ಮನದ ಸಂಚಾರ- ಚಂಚಲ ಸ್ವಭಾವ ಮರೆಯಾಯಿತು.
ಮುಗುಳುಗಂಗಳ ಮೇಲು ಗುಡಿದೋ
ಳುಗಳ ಮಿಡುಕುವ ತುಟಿಯ ತುದಿಗಾ
ಲುಗಳ ಹೊರಿಗೆಯ ತಪದ ನಿರಿಗೆಯ ನಿಷ್ಪ್ರಕಂಪನದ |
ಬಿಗಿದ ಬಿಲ್ಲಿನ ಬೆನ್ನ ಬತ್ತಳಿ
ಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸತಪಸಿ ತೊಡಗಿದನು ಬಲುತಪವ || ೪೩ ||
ಪದವಿಭಾಗ-ಅರ್ಥ: ಮುಗುಳು+ಗಂ+ ಕಂಗಳ ಮೇಲು ಗುಡಿ+ ದೋ+ ತೋಳುಗಳ ಮಿಡುಕುವ ತುಟಿಯ ತುದಿಗಾಲುಗಳ ಹೊರಿಗೆಯ(ಹೊಣೆಗಾರಿಕೆ) ತಪದ ನಿರಿಗೆಯ ನಿಷ್ಪ್ರಕಂಪನದ(ನಿಷ್+ ಕಂಪನದ- ಅಲುಗದ) ಬಿಗಿದ ಬಿಲ್ಲಿನ ಬೆನ್ನ ಬತ್ತಳಿಕೆಗಳ(ಎರಡು ಬಾಣ ತುಂಬಿದ ಬತ್ತಳಿಕೆಗಳು) ಕಿಗ್ಗಟ್ಟಿನ (ಕಿರು+ ಕಟ್ಟಿನ; ಕಿರುಗತ್ತಿ; ಕಿರುಗುಡ್ಡ;) ಕಠಾರಿಯ ಹೆಗಲ+ ಅಡಾಯುಧ(ಒಂದು ಬಗೆಯ ಕತ್ತಿ, ಖಡ್ಗ) ಹೊಸತಪಸಿ ತೊಡಗಿದನು ಬಲುತಪವ.
ಅರ್ಥ:ಅರ್ಜುನ ತಪಸ್ಸಿಗೆ ನಿಂತ ಕ್ರಮ ಹೇಗಿತ್ತೆಂದರೆ: ಅರ್ಧಮುಚ್ಚಿದ ಕಣ್ಣುಗಳು, ಮೇಲೆ ಎತ್ತಿ ಜೋಡಿಸಿದ ತೋಳುಗಳು, ಸಣ್ಣಗೆ ಮಿಡುಕುವ- ಶಿವನ ಜಪದಲ್ಲಿ ನಡುಗುವ ತುಟಿಗಳು; ತುದಿಗಾಲುಗಳಲ್ಲಿ ನಿಂತು, ಅಸ್ತ್ರ ಪಡೆಯುವ ಹೊಣೆಗಾರಿಕೆಯ ತಪದಲ್ಲಿರುವ, ಉಟ್ಟ ಪಟ್ಟೆಯ ನಿರಿಗೆಯೂ ಅಲುಗದ, ಬಿಲ್ಲಿನ್ನು ಬತ್ತಳಿಕೆಗಳನ್ನೂ ಬೆನ್ನಿಗೆ ಬಿಗಿದಿರುವ, ಸೊಂಟಕ್ಕೆ ಕಿರುಗತ್ತಿ ಮತ್ತು ಕಠಾರಿಯನ್ನು ಕಟ್ಟಿದ, ಹೆಗಲಮೇಲೆ ದೊಡ್ಡ ಖಡ್ಗ ಹೊತ್ತಿರುವ, ಹೊಸಬಗೆಯ ತಪಸ್ವಿ ಅರ್ಜುನನು ಬಲು ಕಥಿನವಾದ ತಪಸ್ಸಿಗೆ ತೊಡಗಿದನು.
ಅರಸ ಕೇಳೈ ವಿಪ್ರವೇಷವ
ಧರಿಸಿ ಧರೆಗಿಳಿದನು ಸುರೇಶ್ವರ
ತರಹರಿಸದೀ ಮಾತನೆಂದನು ನಿಜಕುಮಾರಂಗೆ |
ಮರಿಚ ಮೌಕ್ತಿಕ ಲೋಹ ಹೇಮಾ
ಭರಣ ಚರ್ಮ ದುಕೂಲ ಮಿಳಿ ಹಾ
ದರಿಯ ಹೂವಿನ ದಂಡೆಗೇಕನಿವಾಸವೇಕೆಂದ || ೪೪ ||
ಪದವಿಭಾಗ-ಅರ್ಥ: ಅರಸ ಕೇಳೈ ವಿಪ್ರವೇಷವ(ಬ್ರಾಹ್ಮಣ ವೇಷ) ಧರಿಸಿ ಧರೆಗೆ(ಭೂಮಿ)+ ಇಳಿದನು ಸುರೇಶ್ವರ, ತರಹರಿಸದೆ(ತಡಮಾಡದೆ) ಈ ಮಾತನು+ ಎಂದನು ನಿಜಕುಮಾರಂಗೆ(ನಿಜ- ತನ್ನ), ಮರಿಚ(ಮರಿಚ- ಮೆಣಸು; ಮರಿಜ-ಮರವಜ್ರ, ಒಂದು ಬಗೆಯ ದರ್ಭೆ) ಮೌಕ್ತಿಕ(ಮುತ್ತು) ಲೋಹ ಹೇಮಾಭರಣ(ಹೇಮ- ಚಿನ್ನದ ಆಭರಣ) ಚರ್ಮ, ದುಕೂಲ(ಬಟ್ಟೆ), ಮಿಳಿ(ಮಿಳಿತವಾಗು) ಹಾದರಿಯ ಹೂವಿನ(ಪಾಟಲ ವೃಕ್ಷ, ಪಾದರಿಹೂವಿನ ಮರ) ದಂಡೆಗೆ+ ಏಕ ನಿವಾಸವು+ ಏಕೆ+ ಎಂದ
ಅರ್ಥ:ಜನಮೇಜಯ ಅರಸನೇ ಕೇಳು,' ವಿಪ್ರವೇಷವನ್ನು ಧರಿಸಿಕೊಂಡು ಸುರೇಶ್ವರನಾದ ಇಂದ್ರನು ಧರೆಗೆ ಇಳಿದು ಬಂದನು. ಅವನು ತಡಮಾಡದೆ ಈ ಮಾತನ್ನು ತನ್ನ ಕುಮಾರ ಅರ್ಜುನನಿಗೆ ಹೇಳಿದನು. ವಜ್ರ, ಮುತ್ತು, ಲೋಹ, ಚಿನ್ನದ ಆಭರಣ, ಚರ್ಮದ ಮಿಳಿತವಾದ ಉಡುಗೆ, ಪಾಟಲ ವೃಕ್ಷದ ಪಾದರಿಹೂವಿನ ಹಾರ-ದಂಡೆಗಳು ಮಿಳಿತವಾಗಿವೆ; ಹೀಗೆ ಒಂದೇಕಡೆ ಸೇರಿರುವ ಕ್ರಮದ ತಪಸ್ಸು ಏಕೆ ಮಾಡುತ್ತಿರುವೆ,' ಎಂದ.
ಆವ ಸೇರಿಕೆ ಜಪಕೆ ಚಾಪ ಶ
ರಾವಳಿಗೆ ಶಮೆ ದಮೆಗೆ ಖಡ್ಗಕಿ
ದಾವ ಸಮ್ಮೇಳನ ವಿಭೂತಿಗೆ ಕವಚ ಸೀಸಕಕೆ |
ಆವುದಿದರಭಿಧಾನ ತಪವೋ
ಡಾವರಿಗ ವಿದ್ಯಾ ಸಮಾಧಿಯೊ
ನೀವಿದೆಂತಹ ಋಷಿಗೆಳೆಂಬುದನರಿಯೆ ನಾನೆಂದ || ೪೫ ||
ಪದವಿಭಾಗ-ಅರ್ಥ: ಆವ ಸೇರಿಕೆ ಜಪಕೆ ಚಾಪ(ಬಿಲ್ಲು) ಶರಾವಳಿಗೆ(ಬಾಣಗಳು), ಶಮೆ ದಮೆಗೆ(ಶಾಂತಿ, ಇಂದ್ರಿಯ ನಿಗ್ರಹ) ಖಡ್ಗಕೆ+ ಇದು+ ಆವ ಸಮ್ಮೇಳನ; ವಿಭೂತಿಗೆ ಕವಚ ಸೀಸಕಕೆ ಆವುದು+ ಇದರ+ ಅಭಿಧಾನ(ಹೆಸರು, ಅಭಿಧಾನ ನೆಪ, ನಿಮಿತ್ತ ) ತಪವೋ ಡಾವರಿಗ ವಿದ್ಯಾ ಸಮಾಧಿಯೊ ನೀವು+ ಇದು+ ಎಂತಹ ಋಷಿಗೆಳೆಂಬುದನು+ ಅರಿಯೆ ನಾನೆಂದ(ಸಂ. ಡಾಮರ) ಬರಗಾಲ, ಹಿಂಸೆ, ಸೂರೆ, ತೀವ್ರತೆ, ರಭಸ ದಗೆ, ತಾಪ, ಉತ್ಕಟವಾದ ಇಚ್ಛೆ, ಭಯಂಕರವಾದುದು, ಭೀಷಣತೆ.)
ಅರ್ಥ:ಬ್ರಾಹ್ಮಣ ವೇಶದ ಇಂದ್ರನು ಅರ್ಜುನನ್ನು ಕುರಿತು,' ಇದೇನು, ಇದು ಯಾವ ಸೇರಿಕೆ -ನೀನು ಮಾಡುವ ಜಪಕ್ಕೂ ಬಿಲ್ಲು ಬಾಣಗಳಿಗೂ ಯಾವ ಜೋಡಣೆ; ಯೋಗ ಸಾಧನೆಯ ಮಾರ್ಗದ ಶಮೆ ದಮೆಗೂ, ನೀನು ಧರಿಸಿರುವ ಖಡ್ಗಕ್ಕೂ ಇದು ಯಾವ ಸಮ್ಮೇಳನ; ಧರಿಸಿರುವ ಭಸ್ಮ- ವಿಭೂತಿಗೂ , ನಿನ್ನ ಸೀಸಕದ ಕವಚಕ್ಕೂ ಯಾವುದು ಸಂಬಂಧ? ನೀನು ಮಾಡುತ್ತಿರುವ ಇದರ ಹೆಸರು, ತಪವೋ ಅಥವಾ ಡಾವರಿಗ- ಉಗ್ರಹಿಂಸೆಯ ವಿದ್ಯಾ ಸಮಾಧಿಯೊ? ನೀವು ಇದು ಯಾವ ಬಗೆಯ ಋಷಿಗೆಳು ಎಂಬುದನ್ನು ನಾನು ಅರಿಯದಂತಾಗಿದೆ,'ಎಂದ.
ಕಂದೆರೆದು ನೋಡಿದನು ನೀವೇ
ನೆಂದರೆಯು ಹೃದಯಾಬ್ಜ ಪೀಠದ
ಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ |
ಇಂದಿನೀ ಬಹಿರಂಗ ಚಿಹ್ನೆಯ
ಕುಂದು ಹೆಚ್ಚಿಸಲೇನು ಫಲವೆನ
ಲಂದು ತಲೆದೂಗಿದನು ಸುರಪತಿ ತೋರಿದನು ನಿಜವ || ೪೬ ||
ಪದವಿಭಾಗ-ಅರ್ಥ: ಕಂದೆರೆದು(ಕಣ್ಣು+ ತೆರೆದು) ನೋಡಿದನು ನೀವು+ ಏನೆಂದರೆಯು(ಏನು ಎಂದಾದರೂ) ಹೃದಯಾಬ್ಜ(ಹೃದಯಕಮಲ) ಪೀಠದಲಿ+ ಇಂದುಮೌಳಿಯನು+ ಇರಿಸಿ ಮೆಚ್ಚಿಸುವೆನು ಸಮಾಧಿಯಲಿ. ಇಂದಿನ+ ಈ ಬಹಿರಂಗ ಚಿಹ್ನೆಯ ಕುಂದು ಹೆಚ್ಚಿಸಲು+ ಏನು ಫಲವು+ ಎನಲು+ ಅಂದು ತಲೆದೂಗಿದನು ಸುರಪತಿ ತೋರಿದನು ನಿಜವ.
ಅರ್ಥ:ಇಂದ್ರನು ಪ್ರಶ್ನೆಮಾಡಲು ಅರ್ಜುನನು ಕಣ್ಣು ತೆರೆದು ನೋಡಿ 'ನೀವು ಏನು ಎಂದಾದರೂ ಭಾವಿಸಿಕೊಳ್ಳಿ. ನಾನು ನನ್ನ ಹೃದಯಕಮಲದ ಪೀಠದಲ್ಲಿ ಇಂದುಮೌಳಿ ಪರಮೇಶ್ವರನನ್ನು ಇರಿಸಿ, ಧ್ಯಾನದಿಂದ ಅವನನ್ನು ಸಮಾಧಿಯಲ್ಲಿ ಮೆಚ್ಚಿಸುವೆನು,'ಎಂದನು. ಇಂದಿನ ಈ ಬಹಿರಂಗ ಚಿಹ್ನೆಯ ಕುಂದನ್ನು ಹೆಚ್ಚಿಸಿ ಪ್ರಶ್ನಿಸಿದರೆ ಏನು ಪ್ರಯೋಜನ? ಎನ್ನಲು, ಇಂದ್ರನು ಆಗ ಅವನ ವಿನಯಕ್ಕೆ ತಲೆದೂಗಿದನು- ಮೆಚ್ಚಿದನು. ಆಗ ಸುರಪತಿ ಇಂದ್ರನು ತನ್ನ ನಿಜದ ರೂಪವನ್ನು ತೋರಿದನು.
ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ |
ಹಗೆಗೆ ಹರಿವಹುದೆಂದು ಸುರ ಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ || ೪೭ ||
ಪದವಿಭಾಗ-ಅರ್ಥ:ಮಗನೆ ನಿನ್ನಯ ಮನದ ನಿಷ್ಠೆಗೆ ಸೊಗಸಿದೆನು ಪಿರಿದಾಗಿ(ಹಿರಿದಾಗಿ- ಬಹಳ), ಹರನು+ ಇಲ್ಲಿಗೆ ಬರಲಿ, ಕರುಣಿಸಲಿ ನಿನ್ನ ಮನದ+ ಅಭಿವಾಂಛಿತವ(ಅಪೇಕ್ಷೆಯ), ಹಗೆಗೆ ಹರಿವು(ಶತ್ರುವಿಗೆ ನಾಶವು ಆಗುವುದು)+ ಅಹುದೆಂದು ಸುರ ಮೌಳಿಗಳ(ದೇವತೆಗಳ ,ತಲೆ ಸಿಂಗರಿಸಿದ ಮುಡಿ ಕಿರೀಟ) ಮಣಿ (ವಜ್ರ) ಸರಿದನು ವಿಮಾನದಲಿ+ ಅಗಧರನ(ಅಗ= ಬೆಟ್ಟ, ಧರ- ಹೊತ್ತವ , ಗೋವರ್ಧನಗಿರಿಯನ್ನು ಹೊತ್ತವನಾದ) ಮೈದುನನ ಮಹಿಮೆಯನು+ ಇನ್ನು ಕೇಳೆಂದ.
ಅರ್ಥ:ಇಂದ್ರನು ಅರ್ಜುನನಿಗೆ,'ಮಗನೆ ನಿನ್ನ ಮನಸ್ಸಿನ ನಿಷ್ಠೆಗೆ ಬಹಳ ಮೆಚ್ಚಿದೆನು; ಹರನು ಇಲ್ಲಿಗೆ ಬಂದು ನಿನಗೆ ಪ್ರತ್ಯಕ್ಷನಾಗಲಿ! ನಿನ್ನ ಮನಸ್ಸಿನ ಅಪೇಕ್ಷೆಯನ್ನು ಕರುಣಿಸಿ ಕೊಡಲಿ; ನಿಮ್ಮ ಶತ್ರುವಿಗೆ ನಾಶವು ಆಗುವುದು,' ಎಂದು ಹರಸಿ ದೇವತೆಗಳ ಕಿರೀಟದ ವಜ್ರದಂತಿರುವ ಇಂದ್ರನು ವಿಮಾನದಲ್ಲಿ ಅಮರಾವತಿಗೆ ಹೋದನು. ಗೋವರ್ಧನಗಿರಿಯನ್ನು ಹೊತ್ತವನಾದ ಕೃಷ್ಣನ ಮೈದುನ ಅರ್ಜುನನ ಮಹಿಮೆಯನ್ನು ಇನ್ನು ಮುಂದೆ ಕೇಳು,' ಎಂದು ವೈಶಂಪಾಯನ ಮುನಿ ರಾಜನಿಗೆ ಹೇಳಿದ.
♠♠♠

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಕರ್ನಾಟ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಕನ್ನಡದ ಪದಗಳಿಗೆ ಅರ್ಥ -ಕನ್ನಡ ಸಾಹಿತ್ಯ ಪರಿಷತ್ ನಿಘಂಟು,
  3. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  4. ದಾಸ ಸಾಹಿತ್ಯ ನಿಘಂಟು
  5. ಸಿರಿಗನ್ನಡ ಅರ್ಥಕೋಶ