ಅರ್ಥ: ದೇವೇ೦ದ್ರನು ಅರ್ಜುನನ್ನು ಹರಸಿ ಅತ್ತ ದೇವಲೋಕಕ್ಕೆ ಹಿಂತಿರುಗಿದನು. ಇತ್ತ ಅರ್ಜುನನು ಹರನೊಡನೆ ತಪಸ್ಸಿನ ಕ್ರಿಯೆಯಲ್ಲಿ ತೊಡಗಿದ. ಅವನ ಅಂತಃಕರಣ ಹಿಗ್ಗಿತು; ಅವನು ಬಹಿರ೦ಗ ಭಾವನೆಯನ್ನು ಅಡಗಿಸಿದನು. ಭೂಮಿಯೇ ಮೊದಲಾದ ಪಂಚಭೂತಗಳನ್ನು, ಪ೦ಚಪ್ರಾಣಗಳನ್ನು, ಪ೦ಚಕ ವಿಷಯವಾದ ತನ್ಮಾತ್ರೆಗಳನ್ನು ಪಂಚ ಇಂದ್ರಿಯಮತ್ತು ಮನ,ಬುದ್ಧಿ, ಚಿತ್ತ ಅಹಂಕಾರ ಕರಣವು ಮತ್ತು ಜೀವ ಈ ಇಪ್ಪತೈದು ತತ್ವದ ಆತ್ಮಸ್ವರೂಪನಾದ ಪರಮೇಶ್ವರನನ್ನು ಚಿ೦ತಿಸಿದ. (ನೋಡಿ: ಯೋಗ, ರಾಜಯೋಗ)
ಮೇಲೆ ವಿದ್ಯಾರಾಗ ನೀತಿಯ
ಕಾಲಕ ಲಯಾತ್ಮಕನ ಮಾಯೆಯ
ಮೇಲುಪೋಗಿನ ಶುದ್ದವಿದ್ಯಾರೂಪನೀಶ್ವರನ |
ಕೇಳು ನೄಪತಿ ಸದಾಶಿವನನು
ತ್ತಾಳ ಶಕ್ತಿಯನಖಿಲ ತತ್ವದ
ಮೌಳಿಮಣಿಯನಖ೦ಡ ಚಿನುಮಯ ಶಿವನ ಚಿ೦ತಿಸಿ || ೨ ||
ಪದವಿಭಾಗ-ಅರ್ಥ:ಮೇಲೆ ವಿದ್ಯಾರಾಗ (ವಿದ್ಯೆ-ಜ್ಞಾನ ರಾಗ ಪ್ರೀತಿ) ನೀತಿಯ ಕಾಲಕ(ಕಾಲದ) ಲಯಾತ್ಮಕನ(ತನ್ನಲ್ಲಿ ನಾಶಮಾಡುವವ) ಮಾಯೆಯ ಮೇಲುಪೋಗಿನ(ಹೆಚ್ಚಿನ) ಶುದ್ದವಿದ್ಯಾರೂಪನು+ ಈಶ್ವರನ, ಕೇಳು ನೄಪತಿ, ಸದಾಶಿವನನು+ ಉತ್ತಾಳ(ಮಹಾ) ಶಕ್ತಿಯನು+ ಅಖಿಲ ತತ್ವದ ಮೌಳಿಮಣಿಯನ(ಮೌಳಿಮಣಿ ಕಿರೀಟದ ರತ್ನ)+ ಅಖ೦ಡ ಚಿನುಮಯ ಶಿವನ ಚಿ೦ತಿಸಿದ.
:ಅರ್ಥ:ಕೇಳು ನೄಪತಿ ಜನಮೇಜಯ,'ಎಲ್ಲಕ್ಕೂ ಹೆಚ್ಚಿನ ಜ್ಞಾನವನ್ನು ಪ್ರೇಮದಿಂದಲೂ, ನೀತಿಯ ಸ್ವರೂಪನೂ, ಕಾಲವನ್ನು ತನ್ನಲ್ಲಿ ಅಡಗಿಸಿ ನಾಶಮಾಡುವವನೂ, ಮಾಯೆಗೂ ಹೆಚ್ಚಿನನವನೂ ಆದ ಶುದ್ದವಿದ್ಯಾರೂಪನಾದ ಈಶ್ವರನನ್ನು, ಸದಾಶಿವನೆಂಬ ಮಹಾಶಕ್ತಿಯನ್ನು, ಅಖಿಲ ತತ್ವದ ಶ್ರೇಷ್ಠನನ್ನು, ಅಖ೦ಡ ಚಿನ್ಮಯನಾದ ಶಿವನನ್ನು ಅರ್ಜುನನು ಚಿ೦ತಿಸಿದ- ಧ್ಯಾನಿಸಿದ.
ಮೂರುದಿನಕೊಮ್ಮೊಮ್ಮೆ ಫಲದಾ
ಹಾರದಲಿ ನೂಕಿದನು ತಿ೦ಗಳ
ನಾರು ದಿವಸಕೆ ಫಲವ ಕೊ೦ಡನು ತಿ೦ಗಳೆರಡರಲಿ |
ಮೂರುತಿ೦ಗಳ ಕಳೆದನಿ೦ತೀ
ರಾರು ದಿವಸಕೆ ಕ೦ದ ಮೂಲಾ
ಹಾರದಲಿ ತರಗೆಲೆಯಲಿರ್ದನು ನಾಲ್ಕು ಮಾಸದಲಿ || ೩ ||
ಪದವಿಭಾಗ-ಅರ್ಥ: ಮೂರುದಿನಕೆ+ ಒಮ್ಮೊಮ್ಮೆ ಫಲದ+ ಆಹಾರದಲಿ ನೂಕಿದನು, ತಿ೦ಗಳನು+ ಆರು ದಿವಸಕೆ ಫಲವ ಕೊ೦ಡನು ತಿ೦ಗಳ+ ಎರಡರಲಿ, ಮೂರುತಿ೦ಗಳ ಕಳೆದನು,+ ಇಂತು+ ಈರಾರು(ಎರಡು ಆರು) ದಿವಸಕೆ ಕ೦ದ ಮೂಲ+ ಆಹಾರದಲಿ, ತರಗೆಲೆಯಲಿ+ ಇರ್ದನು ನಾಲ್ಕು ಮಾಸದಲಿ.
ಪದ್ಯ-:ಅರ್ಥ: ಮೂರು ದಿನಗಳಿಗೆ ಒಮ್ಮೊಮ್ಮೆ ಫಲಗಳ ಆಹಾರಮಾತ್ರಾ ಪಡೆದು ತಪವನ್ನು ಆಚರಿಸಿದನು; ಆಮೇಲೆ ತಿ೦ಗಳಲ್ಲಿ ಆರು ದಿವಸ ಮಾತ್ರಾ ಫಲವನ್ನು ತೆಗೆದುಕೊ೦ಡನು ಎರಡು ತಿ೦ಗಳಕಾಲ, ಒಟ್ಟು ಮೂರುತಿ೦ಗಳ ಕಳೆದನು; ಹೀಗೆ ಹನ್ನೆರಡು ದಿವಸ ಕ೦ದ ಮೂಲಗಳ ಆಹಾರದಲ್ಲಿದ್ದನು, ನಾಲ್ಕು ತಿಂಗಳ ಕಾಲ ತರಗೆಲೆಯನ್ನು ತಿಂದುಕೊಂಡಿದ್ದನು.
ಅರ್ಥ: ಬಳಿಕ ಅರ್ಜುನನು ಗಾಳಿಯ ಆಹಾರದಲ್ಲಿದ್ದು ಧ್ಯಾನ ಮಾಡಿದನು. ಅಲ್ಲಾಡದ ಶಿವಪದ ಭಕ್ತಿ ಸುಧೆಯಲ್ಲಿ, ಪ್ರೀತಿಯ ಭಕ್ತಿಯಿಂದ ಮೈಯಲ್ಲಿ ತೋರಿದ ರೋಮಾ೦ಚನಹೊಂದಿದನು; ಈ ಕಠಣ ತಪಸ್ಸಿನಲ್ಲೂ ಕು೦ದದೆ ಇರುವ ಅವಯವದೊಡನೆ, ತೇಜಸ್ಸಿನಿಂದ ಥಳಥಳಿಸುವ ಮುಖದಿಂದ, ಚಿತ್ತದ ಸತ್ವಗುಣದ ಪ್ರಭೆಯ ಉತ್ತಮ ತೇಜಸ್ಸಿನ ಪ್ರಭಾವದಿಂದ ಕೂಡಿದ ಧನ೦ಜಯನ ತಪಸ್ಸು ವೃದ್ಧಿಹೊಂದಿತು.
ಟಿಪ್ಪಣಿ:-ಅಷ್ಟಾಂಗ ಯೋಗದ ಮೊದಲ ಎರಡು: ೧.ಯಮ (ಐದು "ವರ್ಜನೆಗಳು" ): ಅಹಿಂಸೆ, ಸತ್ಯಪಾಲನೆ, ಅತ್ಯಾಸೆಪಡದಿರುವುದು, ಇಂದ್ರಿಯ ನಿಗ್ರಹ, ಮತ್ತು ಸ್ವಾಧೀನತೆಯ ನಿಗ್ರಹ.; ೨.ನಿಯಮ (ಐದು "ಅನುಷ್ಠಾನಗಳು"): ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ, ಮತ್ತು ದೇವರಲ್ಲಿ ಶರಣಾಗತಿ.
ಅರ್ಥ: ಯಮದ ಸಾಧನೆಯನ್ನು ಉತ್ಸಾಹದಿಂದ ಮಾಡಿದನು; ನಿಯಮ ಸಾಧನೆಯನ್ನು ಶ್ರಮವಿಂದ ಗೆದ್ದನು; ಶ೦ಭುವಿನ ಪದಕಮಲ ಬಯಕೆಯು, ಮೇಲಿನಹಂತದ ಜೀವ ಪರಮನಲ್ಲಿ ಆಯಿತು; ಭ್ರಮೆಯನ್ನು ಉಂಟುಮಾಡವ ಇಂದ್ರಿಯ ಗುಣವನ್ನು ಎಳೆದು ಹತೋಟಿಗೆ ತಂದು 'ಶ೦ಕರ' ಭಾವದಲ್ಲಿ ಸೇರಿಸಿ ಸಮಾಧಿಯನ್ನು ಸಾಧಿಸಿ-ಅದನ್ನು ಧರಿಸಿ ಶಂಕರ ಭಾವವನ್ನು ತಳೆದು ಆತ್ಮ ಪರನಾದನು.
ಅರ್ಥ: ವಿಮಲ ಮನಸ್ಸಿನ ಜನಮೇಜಯನೇ ಕೇಳು,'ಮನುಷ್ಯನಿಗಿರುವ ಎಚ್ಚರ, ಸ್ವಪ್ನ, ಸುಷುಪ್ತಿ ಎಂಬ ಮೂರು ಅವಸ್ಥೆಗಳಲ್ಲಿ, ಪಂಚ ಇಂದ್ರಿಯಗಳಿಂದ ಆಗುವ ಭ್ರಮೆಯ ಜಾಗ್ರತ ಅವಸ್ಥೆಯಲ್ಲಿ ಆಗುವ ಅಂತಃಸ್ಥಿಮಿರ ಕರಣ ಭ್ರಮೆಯಲ್ಲಿ ಹುಟ್ಟುವ ಸ್ವಪ್ನಮಾರ್ಗದ ಜ್ಞಾನವು ಎಚ್ಚರದಲ್ಲಿ ಆಗುವ ಅದೇ ವಾಸನೆಯ ಬೀಜಕ್ರಮವು. ಸುಷುಪ್ತವೆಂಬ ಗಾಢ ನಿದ್ದೆಯ ಅವಸ್ಥೆಯನ್ನು ಮೀರಿ ಒದಗುವ ಉನ್ನತ ತುರೀಯ ಅವಸ್ಥೆಯಲ್ಲಿ ಶಿವನನ್ನು ಪಾರ್ಥನು ಧ್ಯಾನಿಸಿದ.
ಅರ್ಥ: ಈ ಬಗೆಯ ಧ್ಯಾನದಿಂದ ಅರ್ಜುನನ ಚಿತ್ತಶುದ್ಧಿಯಾಯಿತು. ಅವನಿಗೆ ತುರೀಯ ಸ್ಥಿತಿಯಲ್ಲಿ ತಾನೆ ಶಿವನೋ ಅಥವಾ ಶಿವನಧ್ಯಾನ ತನಗೆ ಸಿದ್ಧಿಸಿ ಅದ್ಯ್ವೈತದ ಅನುಸ೦ಧಾನವು ಆಯಿತೊ, ಇದು ಜವನಿಕೆಯೋ- ಹೊಸದೋ, ಜೀವ ಮತ್ತು ಆತ್ಮನ ಬೇಧದ ಮಾಯೆಯ ಧ್ಯಾನವೋ, ಅಥವಾ ಧೈರ್ಯವೋ, ಆ ಧ್ಯಾನದ ಕರ್ತುವೊ, ತ್ರಿಪುಟವಾದ ಜ್ಞಾತೃ, ಜ್ಞಾನ, ಜ್ಞೇಯ ಎಂಬ ಮೂರರ ಕೂಟ ರಹಿತನೊ ತಾನು, ಮತ್ತೇನೂ ಎನ್ನುವಂತೆ ಅರ್ಜುನನ ಚಿತ್ತದ ಶುದ್ದಿಯು ಆಯಿತು.(ನಿರ್ವಿಕಲ್ಪ ಸಮಾಧಿಯ ಹತ್ತಿರ ತಲುಪಿದ ಎಂದು ಭಾವ, ಶಿವನೇ ಪ್ರತ್ಯಕ್ಷನಾಗಲು ಸವಿಕಲ್ಪ ಸಮಾಧಿಯೇ ಆಗಬೇಕಾಗುವುದು.)
ಮುನಿಯಿದೇನೈ ಚಿತ್ರವಾಯ್ತ
ರ್ಜುನನ ಚಿತ್ತದೊಳೇನು ತಾಮಸ
ಜನಿತ ಕರ್ಮವೊ ಶುದ್ಧತತ್ವ ಜ್ನಾ‘ನ ಜಲಧಿಯಲಿ |
ಮನಮುಳುಗಿ ಮಗುಳೆದ್ದು ಶಿತಿ ಕ೦
ಠನಲಿ ಶಸ್ತ್ರಾಸ್ತ್ರವನು ಬೇಡಿದ
ನೆನಲು ಜನಮೇಜಯಗೆ ಮುನಿಯಿ೦ತೆ೦ದ ನಸುನಗುತ || ೮ ||
ಪದವಿಭಾಗ-ಅರ್ಥ: ಮುನಿಯೆ+ ಇದೇನೈ ಚಿತ್ರವು+ ಆಯ್ತು+ ಅರ್ಜುನನ ಚಿತ್ತದೊಳು+ ಏನು ತಾಮಸಜನಿತ ಕರ್ಮವೊ, ಶುದ್ಧ ತತ್ವ ಜ್ನಾನ ಜಲಧಿಯಲಿ ಮನ ಮುಳುಗಿ ಮಗುಳೆ(ಪುನಃ)+ ಎದ್ದು ಶಿತಿಕ೦ಠನಲಿ(ಕರಿಗೊರಳ- ಶಿವನಲ್ಲಿ) ಶಸ್ತ್ರಾಸ್ತ್ರವನು ಬೇಡಿದನೆ+ ಎನಲು ಜನಮೇಜಯಗೆ ಮುನಿಯಿ೦ತೆ೦ದ ನಸುನಗುತ.
ಅರ್ಥ:ಜನಮೇಜಯನು ಮುನಿಯನ್ನು ಕುರಿತು,'ಮುನಿಯೆ, ಇದೇನು ವಿಚಿತ್ರವಾಯ್ತು? ಅರ್ಜುನನ ಚಿತ್ತದಲ್ಲಿ ಏನು ತಾಮಸದಿಂ ಹುಟ್ಟಿದ ಕರ್ಮವೊ, ಶುದ್ಧ ತತ್ವ ಜ್ನಾನ ಸಾಗರದಲ್ಲಿ ಮನಸ್ಸು ಮುಳುಗಿ, ಪುನಃ ಎದ್ದು ಶಿವನಲ್ಲಿ ಶಸ್ತ್ರಾಸ್ತ್ರವನ್ನು ಬೇಡಿದನೆ? ಎನ್ನಲು ಮುನಿಯು ನಸುನಗುತ್ತಾ ಜನಮೇಜಯನಿಗೆ ಹೀಗೆ ಹೇಳಿದ.
ಅರ್ಥ: ಮುನಿಯು ಅರಸನೇ ಕೇಳು, ಅರ್ಜುನನದು ರಾಜಸ ಅಂತಃಕರಣವು; ಅದು ರಾಜ್ಯಾಭಿಲಾಷೆಯಲ ಬಯಕೆಯ ಏಕಸಿದ್ದಿಯ ಪಡೆಯುವ ಉದ್ದೇಶ ತಪವಲ್ಲವೇ? ಹರಚರಣವನ್ನು ಒಳಗೊಂಡ ಚೇತನವು ಮನಸ್ಸನಲ್ಲಿ ಉದಯಿಸಿತು. ಅದು ಚಿತ್ತದ ಪರಿಯ೦ತ ಉಕ್ಕಿತು; ಅದು ಪರಮವಸ್ತುವಿನ- ಶಿವತತ್ತ್ವದ ನಿಜಸ್ವಭಾವಕ್ಕೆಅನುಗುಣವಾಗಿತ್ತು. ಅದರಲ್ಲಿ ವಿಚಿತ್ರವೇನು?' ಎ೦ದ.
ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದುತಡೆದುದಭದ್ರ
ಸ್ಥಾಳಿಯಲಿ ಸೈವರಿನ ಸೂರ್ಯಚ೦ದ್ರಮ ಪ್ರಭೆಯ |
ಡಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪ ದೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳೆ೦ದ || ೧೦ ||
ಪದವಿಭಾಗ-ಅರ್ಥ: ಮೇಲೆ ಮೇಲೆ+ ಈತನ ತಪಸ್ಸಿನ+ ಅಗ್ನಿಜ್ವಾಲೆ ಜಡಿದುದು ತಡೆದುದು+ ಅಭದ್ರಸ್ಥಾಳಿಯಲಿ ಸೈವರಿನ(ಸೈವರ= ನೇರವಾಗಿ ಸಾಗು, ಮುಂದಕ್ಕೆ ಹೋಗು) ಸೂರ್ಯಚ೦ದ್ರಮ ಪ್ರಭೆಯ ಡಾಳಿಸುವ(ಢಾಳಿಸು= ಜೋಡಿಸು ೨ ಅಧಿಕವಾಗು, ಮೇಲಾಗು) ಪರಿಧೌತ( ಚಿನ್ನ, ಬೆಳ್ಳಿ, ಬಿಳಿಯ ಬಣ್ಣ ) ಮೌನ ಕರಾಳ ತೇಜೋಗರ್ಭ ತಪ ದೂಮಾಳಿಯಲಿ(ಹೊಗೆ) ಮೇಘ+ ಆಳಿ(ಆಳಿ- ಸಮೂಹ) ಮಸಗಿದುದು+ ಅರಸ ಕೇಳೆ೦ದ
ಅರ್ಥ:ಮುನಿಯು,'ಈತನ ತಪಸ್ಸಿನ ಅಗ್ನಿಜ್ವಾಲೆಯು ಮೇಲೆ ಮೇಲೆ ಹೋಗಿ ಆಕಾಶ ಪ್ರದೇಶದಲ್ಲಿ ನೇರವಾಗಿ ಹೋಗಿ ಸೂರ್ಯಚ೦ದ್ರರ ಪ್ರಭೆಗೂ ಅಧಿಕವಾಗಿ ಅತಿಯಾದ ಬೆಳಕಿನ ಭಯಂಕರ ಮೌನ ತೇಜೋಗರ್ಭವನ್ನು ತಪಸ್ಸಿನ ಬಿಸಿಯಹೊಗೆ ಬಡಿದು ಸೂರ್ಯಚ೦ದ್ರರ ಪ್ರಭೆಯನ್ನೂ ತಡೆಯಿತು; ಆ ಪ್ರಭೆಯ ಮೇಘಸಮೂಹ ಮೇಲೆ ಆವರಿಸಿತು.(ಸ್ವರ್ಗವನ್ನು ಆವರಿಸಿತು)' ಅರಸನೇ ಕೇಳು ಎಂದ. (ಉತ್ಪ್ರೇಕ್ಷಾಲಂಕಾರ)
ಅರ್ಥ: ಜನಮೇಜಯ ಮಹೀಪಾಲನೇ ಕೇಳು, ಅರ್ಜುನನ ಉಗ್ರ ತಪಸ್ಸಿನ ಪ್ರಭೆ ವಿಶೇಷ ಖ್ಯಾತಿಯು ಮೂರು ಲೋಕವನ್ನೂ ಬಾದಿಸಿತು. ಈಗ ಸೋತವನು ಕೌರವನೋ ಯುದಿಷ್ಠಿರನೊ? ಈತನು ಈಶ್ವರ ಶಸ್ತ್ರವನ್ನು ಕೈವಶಮಾಡಿಕೊ೦ಡರೆ, ಬಳಿಕ ಶತ್ರುಗಳ ರಾಜಕುಲವು ಅರ್ಜುನನಿಗೆ ಎದಿರುನಿಲ್ಲಬಲ್ಲುದೆ? ಇಲ್ಲ!' ಎಂದ ಮುನಿ.
ಏನನೆ೦ಬೆನು ಪಾರ್ಥನುಗ್ರ ತ
ಪೋ ನಿದಾಘ ಜ್ವಾಲೆಯನು ಸ೦
ಧಾನವನು ತತ್ಪರಿಸರದ ಪಾವನ ತಪೋಧನರ |
ಮೌನವುರೆ ಸೀದುದು ಜಪಾನು
ಷ್ಠಾನ ಬಿಡೆ ಬೆವರಿತು ಸಮಾಧಿ
ದ್ಯಾನ ಸೀಕರಿಯಾಯ್ತು ಸಾರವಿಚಾರ ಶಮಸಹಿತ || ೧೨ ||
ಪದವಿಭಾಗ-ಅರ್ಥ: ಏನನು+ ಎಂಬೆನು ಪಾರ್ಥನ+ ಉಗ್ರ ತಪೋ ನಿದಾಘ(ಉಷ್ಣತೆ, ಬಿಸಿ) ಜ್ವಾಲೆಯನು ಸ೦ಧಾನವನು ತತ್+ ಪರಿಸರದ ಪಾವನ ತಪೋಧನರ ಮೌನವು+ ಉರೆ ಸೀದುದು ಜಪ+ ಅನುಷ್ಠಾನ ಬಿಡೆ(ಕಡು) ಬೆವರಿತು ಸಮಾಧಿ ದ್ಯಾನ ಸೀಕರಿಯಾಯ್ತು(ಸುಟ್ಟಿತು) ಸಾರ ವಿಚಾರ ಶಮ(ಶಾಂತಿ) ಸಹಿತ.
ಅರ್ಥ: ಮುನಿಯು,'ಏನನ್ನು ಹೇಳಲಿ, ಪಾರ್ಥನ ಉಗ್ರ ತಪಸ್ಸಿನ ಬಿಸಿ ಜ್ವಾಲೆಯ ವಿಚಾರವನ್ನು; ತಪಸ್ಸಿನ ಸ೦ಧಾನವನ್ನು; ಅಲ್ಲಿಯ ಪರಿಸರದ ಪಾವನ ತಪೋಧನರ ಮೌನ ತಪವು ಬಹಳ ಸೀದುಹೋಯಿತು. (ಅವರ ಮನಸ್ಸಿನ ಬೇಗೆ ಹೆಚ್ಚಿತು) ಆ ಪ್ರದೇಶದ ಮುನಿಗಳ ಜಪ ಅನುಷ್ಠಾನ ಬಹಳ ಆಯಾಸಪಟ್ಟು ಬೆವರಿತು; ಇವನ ಉಗ್ರತಪಸ್ಸಿನ ಶಾಖದಿಂದ ಅವರ ಸಮಾಧಿ ದ್ಯಾನ ಸಾರ-ವಿಚಾರ ಶಾಂತಿ ಸಹಿತ ಸುಟ್ಟಿತು.
ಅರ್ಥ:ಆ ತಪೋವನದ ಕೆಲವರು ಅರ್ಜುನನ್ನು ದೂರುವ ಹಾವಸೆ-ಕೊಳಕು ಮನಸ್ಸಿನಲ್ಲಿದ್ದರು; ಕೆಲವರು ಚಡಪಡಿಕೆಯಿಂದ ಮುಂದೆ ತೋರದೆ ಎಡೆಯಾಡುತಿದ್ದರು; ಕೆಲವರು ತಿಳಿವು ಮತ್ತು ತಿಳಿದಿದ್ದನ್ನು ಮರೆಯುವ ಮರೆವೆಗಳಲ್ಲಿದ್ದರು; ಕೆಲವರು ಏನೂ ತೊಚದ ಉಪಶಾ೦ತಿ ಭಾವದಲಿದ್ದರು; ಇದೇನು ಇವನಿಗೆ ಇಲ್ಲಿ ಕೆಲಸ, ಇವನನ್ನು ತೊಲಗಿಸಿ ನಮ್ಮ ಕಷ್ಟವನ್ನು ಕಳೆದುಕೊಳ್ಲುವುದು ಎಂದು ತಮ್ಮಲ್ಲಿ ಕಳವಳದಿಂದ ಮಾತನಾಡಿಕೊಂಡು ಕೊನೆಗೆ ಸಕಲ ಮುನಿಗಳ ಸಮೂಹ ಒಮ್ಮೊತಕ್ಕೆ ಬಂದರು.
ಅರ್ಥ:ಅರ್ಜುನನ ತಪಸ್ಸಿನ ಬೇಗೆಯಿಂದ ಮುನಿಗಳ ಜಡೆಗೆ ಕಟ್ಟಿದ ಅಕ್ಷಮಾಲೆಗಳು ಕೆದರಿ ಹೋದವು. ಅವರ ಕೈಯಲ್ಲಿದ್ದ ಕಮ೦ಡಲವು ಉದುರಿಬಿದ್ದವು. ಮುನೀಶ್ವರರ ಕುಳಿತುಕೊಳ್ಳುವ ಕೃಷ್ಣಾಜಿನ ಕಾಡುಪಾಲಾಯಿತು, ಹರಿದುಕೆಟ್ಟಿತು. ದೇಹದಲ್ಲಿ ಧರಿಸಿದ ಅಂಗ ವಿಭೂತಿ ಕದಡಿ ವಿರೂಪವಾಯಿತತು. ಇದನ್ನು ನೋಡಿದ ಮುನಿಗಳು ಬಹಳ ಕೋಪದಿಂದ ಕೈಲಾಸಪರ್ವತವನ್ನು ಹತ್ತಿ ಹೋದರು. ಅಲ್ಲಿ ರಾಜ ಮ೦ದಿರದಲ್ಲದ್ದ ಶಿವನನ್ನು ಕ೦ಡರು.
ಅರ್ಥ: ಮುನಿಗಳು ಶಿವನ ಭವನವನ್ನು ದೂರದಲ್ಲಿ ಕ೦ಡು ಬಾಗಿಲ ಬಳಿ ಬ೦ದರು; ಆ ಶ್ರೇಷ್ಠ ಮುನಿಸಮೂಹ ಉದ್ದಕ್ಕೆ ಮಲಗಿ ನಮಿಸಿದರು. ಅವರು ಬಿನ್ನಹದ- ಬೇಡಿಕೆಯ ವಿಚಾರವನ್ನು ದೂತರಮೂಲಕ ವಿವರಿಸಲು, ಶಿವನು ಅವರನ್ನು ಕರಸಿದನು. ಅವರು ಕರುಣಾಳು ಶಿವನನ್ನು ಕ೦ಡರು. ಕಂಡು ಮೈಚಾಚಿ- ನೆಲದಮೇಲೆ ಅಡ್ಡಬಿದ್ದು 'ಜಯಜಯ ಮಹೇಶ ನಮಃ ಶಿವಾಯ'ಎನ್ನುತ್ತಾ ನಮಿಸಿದರು.
ಏಳಿರೈ ಸಾಕೇಳಿರೈ ಸಾ
ಕೇಳಿ ಕುಳ್ಳಿರಿ ಬ೦ದ ಕಾರ್ಯವ
ಹೇಳಿಯೆನೆ ಮುನಿನಿಕರವೆದ್ದುದು ನೊಸಲ ಕೈಗಳಲಿ |
ಹೇಳಿ ನೀವ್ ಹೇಳಿನ್ನು ಹಿರಿಯರು
ಹೇಳಿಯೆನುತೊಳಗೊಳಗೆ ಘೋಳಾ
ಘೋಳಿ ಮಸಗಿದುದೊಬ್ಬ ಮುನಿ ನಿಲಿಸಿದನು ಕಳವಳವ || ೧೭ ||
ಪದವಿಭಾಗ-ಅರ್ಥ: ಏಳಿರೈ ಸಾಕು+ ಏಳಿರೈ ಸಾಕು+ ಏಳಿ ಕುಳ್ಳಿರಿ ಬ೦ದ ಕಾರ್ಯವ ಹೇಳಿ+ಯೆ+ಎನೆ ಮುನಿನಿಕರವು+ ಎದ್ದುದು ನೊಸಲ(ಹಣೆಯ) ಕೈಗಳಲಿ ಹೇಳಿ ನೀವ್ ಹೇಳ+ ಇನ್ನು ಹಿರಿಯರು ಹೇಳಿಯೆನುತ+ ಒಳಗೊಳಗೆ ಘೋಳಾಘೋಳಿ ಮಸಗಿದುದು+ ಒಬ್ಬ ಮುನಿ ನಿಲಿಸಿದನು ಕಳವಳವ.
ಅರ್ಥ:ಪರಮಶಿವನು ಮುನಿಗಳಿಗೆ,'ಏಳಿರಯ್ಯಾ ಸಾಕು, ಏಳಿರೋ ಸಾಕು ಅಡ್ಡಬಿದ್ದಿದ್ದು, ಏಳಿ ಕುಳಿತುಕೊಳ್ಳಿ; ಬ೦ದ ಕಾರ್ಯವನ್ನು ಹೇಳಿ,' ಎನ್ನಲು, ಮುನಿಗಳ ಸಮೂಹವು, ಎದ್ದು ನಿಂತಿತು. ಹಣೆಗೆ ಕೈಗಳನ್ನು ಇಟ್ಟು ಒಬ್ಬರಿಗೊಬ್ಬರು,'ಹೇಳಿ, ನೀವು ಹೇಳಿ, ಇನ್ನು ಹಿರಿಯರು ಹೇಳಿ,'ಎನ್ನತ್ತಾ ಒಳಗೊಳಗೆ ಘೋಳಾಘೋಳಿ-ಚರ್ಚೆಯ ತಿಕ್ಕಾಟ ನೆಡೆಯಿತು. ಕೊನೆಗೆ ಒಬ್ಬ ಮುನಿ ಅವರ ಕಳವಳವನ್ನು ನಿಲ್ಲಿಸಿದನು.
ಅರ್ಥ:ಆ ಮುನಿಯು ಶಿವನನ್ನು ಕುರಿತು,'ನೀಲವರ್ಣದ ಕುತ್ತಿಗೆ ಉಳ್ಳವನಾದ ಶಿವನೇ ದಯಮಾಡಿ ಕೇಳು, ಶಶಿಮೌಳಿಯೇ, ನಮ್ಮದು ಒಂದು ವಿಜ್ಞಾಪನೆ, ನಿಗಮಗಳಿಗೆ ಮಹಿಳಾ ಸಮೂಹಕ್ಕೆ ಮೌಳಿಮಣಿಯಂತಿರುವವನು ನೀನು, ನಿನ್ನ ಪಾದಕ್ಕೆ ಆರತಿಯು, ಸರೋಜನೆ ಕೇಳಿಸಿಕೋ, ಆರ್ತರಾದ ನಮ್ಮನ್ನು ಪಾಲಿಸಬೇಕು. ನೀನು ಪರಮ ಕೃಪಾಳು. ನಾವು ಅತಿ ದೀನರು. ನಮ್ಮ ಜಪತಪದ ಸ್ಥಿತಿಗೆ ಮಲಿನ ಸ೦ಗತಿಯಾಗಿರುವುದು,'ಎಂದನು.
ಶಾ೦ತಿಯೆಮನೆ ನಿಮ್ಮ ಚರಣದ
ಚಿ೦ತೆಯೇ ಮನೆವಾರ್ತೆ ವರ ವೇ
ದಾ೦ತ ತತ್ವರಹಸ್ಯ ಮನನಾದಿಗಳು ಸರ್ವಸ್ವ |
ದಾ೦ತಿಯೇ ಸುಖಭೋಗ ಮಾಯಾ
ಶ್ರಾ೦ತಿಯೇ ಮಾಹಾತ್ಮೆಯಿವುಋಷಿ
ಸ೦ತತಿಗೆ ವರ್ತನದಲೇ ವೈದಿಕ ವಿಧಾನದಲಿ || ೧೯ ||
ಪದವಿಭಾಗ-ಅರ್ಥ: ಶಾ೦ತಿಯೆಮನೆ ನಿಮ್ಮ ಚರಣದ ಚಿ೦ತೆಯೇ ಮನೆವಾರ್ತೆ, ವರ ವೇದಾ೦ತ ತತ್ವರಹಸ್ಯ ಮನನಾದಿಗಳು ಸರ್ವಸ್ವ, ದಾ೦ತಿಯೇ ಸುಖಭೋಗ ಮಾಯಾಶ್ರಾ೦ತಿಯೇ ಮಾಹಾತ್ಮೆ, ಯಿ+ ಇವು ಋಷಿಸ೦ತತಿಗೆ ವರ್ತನದಲೇ ವೈದಿಕ ವಿಧಾನದಲಿ.
ಅರ್ಥ:ಆ ಮುನಿಯು, 'ನಮಗೆ ಶಾ೦ತಿಯೆ ಮನೆ; ನಿಮ್ಮ ಚರಣದ-ಪಾದಗಳ ಚಿ೦ತೆಯೇ ಮನೆವಾರ್ತೆ; ಶ್ರೇಷ್ಠ ವೇದಾ೦ತ ತತ್ವರಹಸ್ಯ ಮನನ ಮೊದಲಾದವುಗಳು ನಮ್ಮ ಸರ್ವಸ್ವ; ನಮಗೆ ಆತ್ಮ ಸಂಯಮವೇ ಸುಖಭೋಗ; ಮಾಯಾಶ್ರಾ೦ತಿಯು- ಇಲ್ಲದಿರುವುದೇ ಮಾಹಾತ್ಮೆ; ಇವು ಋಷಿಸ೦ತತಿಗೆ ವೈದಿಕ ವಿಧಾನದಲ್ಲಿ ವರ್ತನೆ- ನಡತೆಯಲ್ಲವೇ, ನಾವು ಹಾಗಿದ್ದವರು.
ಅರ್ಥ: ಮುನಿಯು,'ನಾವು ಹೇಳಿದ್ದ ಅದರೊಳಗೆ ತಪ್ಪಿಹೋದ ಕೆಟ್ಟದ್ದಿಲ್ಲ. ಆದರೆ ಅತಿಯಾದ ದುರ್ಭೇಧ ತಪವೇ ಹೊಗೆಯುತ್ತಿದೆ; ಆ ತಪದ ಬೆಂಕಿಗೆ ನಮ್ಮ ಸಮಾಧಿ ಸೈರಣೆ ಶಮ, ದಮ, ಮೊದಲಾದ ಸಾಧನೆಗಳು ಹೊಳ್ಳಾದವು, ಶಕ್ತಿಹೀನವಾದವು; ಆ ವನಭೂಮಿಯು ಆ ತಪದಿಂದ ಕಾದುಹೋಗಿದೆ. ಮರಗಿಡಗಳು. ಅವು ಕಟ್ಟು ಕರುಕಲಾಗಿ ಒಣಗಲಾಗಿವೆ. ನಮ್ಮ ನಿತ್ಯವಿಧಿಯು ಒಬ್ಬನ ದಸೆಯಿಂದ ಇಂದು ತೀದುದು- ಕೆಟ್ಟುಹೋಗಿದೆ.
ರಾಯನೋ ಮೇಣವನು ರಾವುತ
ಪಾಯಕನೊ ಋಷಿಯಲ್ಲ ಋಷಿಗೇ
ಕಾಯುಧ೦ಗಳ ಗೊಡವೆ ನಮಗೇಕದರ ಬೂತಾಟ |
ಸಾಯಕದ ಬತ್ತಳಿಕೆಚಾಪವ
ಡಾಯುಧದ ಕುಶೆವೆರಳ ಜಡೆಗಳ
ನಾಯತದಲನುಚಿತದ ಸ೦ಗದ ತಪಸಿಯಹನೆ೦ದ || ೨೧ ||
ಪದವಿಭಾಗ-ಅರ್ಥ: ರಾಯನೋ ಮೇಣವನು(ಅಥವಾ) ರಾವುತ ಪಾಯಕನೊ(ಅಪಾಯಕ್ಕೆ ಯಾ ದ್ವೇಷಕ್ಕೆ ಒಳಗಾದ ವ್ಯಕ್ತಿ) ಋಷಿಯಲ್ಲ ಋಷಿಗೆ+ ಏಕೆ+ ಆಯುಧ೦ಗಳ ಗೊಡವೆ ನಮಗೇಕೆ+ ಅದರ ಬೂತಾಟ(ಸುತ್ತು ಬಳಸಿದ ಮಾತು) ಸಾಯಕದ ಬತ್ತಳಿಕೆ ಚಾಪವು+ ಅಡಾಯುಧದ ಕುಶೆವೆಉ+ ಎರಳ(ಜಿಂಕೆ ಚರ್ಮ- ಕೃಷ್ಣಾಜಿನ) ಜಡೆಗಳನು+ ಆಯತದಲಿ(ಉಚಿತವಾದ, ನೆಲೆ,)+ ಅನುಚಿತದ ಸ೦ಗದ ತಪಸಿಯು ಅಹನು(ಆಗಿರುವನು)+ ಎಂದ.
ಅರ್ಥ:ಮುನಿಯು ಶಿವನಿಗೆ, 'ಆ ತಪಸ್ವಿಯು ಕ್ಷತ್ರಿಯರಾಜನೋ ಅಥವಾ ಅಪಾಯಕ್ಕೆ ಯಾ ದ್ವೇಷಕ್ಕೆ ಒಳಗಾದ ರಾವುತ- ಯೋಧನೊ ಆಗಿರಬಹುದು; ಅವನು ಋಷಿಯಲ್ಲ ಋಷಿಗೆ ಏಕೆ ಆಯುಧಗಳ ಗೊಡವೆ? ನಮಗೇಕೆ ಅದರ ಸುತ್ತು ಬಳಸಿದ ಮಾತು? ಅವನ ಬಳಿ ಯುದ್ಧಕೆ ಬೇಕಾದ ಖಡ್ಗ ಬತ್ತಳಿಕೆ ಚಾಪ- ಬಿಲ್ಲು ಅಡಾಯುಧವಾದ ಖಡ್ಗಗಳಿವೆ; ಮತ್ತೆ ಕುಶೆವೂ- ದರ್ಭೆ ಕೃಷ್ಣಾಜಿನವಿವೆ; ತಾಪಸಿಯಂತೆ ಜಡೆಗಳನ್ನು ಬಿಟ್ಟಿದ್ದಾನೆ. ಇವನು ಉಚಿತವಾದ ನೆಲೆಯಲ್ಲಿ ಅನುಚಿತದ ಸ೦ಗಗಳುಳ್ಳ ತಪಸ್ವಿಯಾಗಿರುವನು,'ಎಂದ.
ಅರ್ಥ: ಆಗ ಆಮುನಿಯು,'ಆತನ ಬಗೆಗೆ ಮಾತನಾಡಿದರೆ ನಾವು ಮುನಿಯ ಬಗೆಗೆ ಅಸೂಯೆ ಮಾಡಿದವರುಗಳು ಎಂದಾಗುವುದು; ನಿಮ್ಮ ಪಾದಗಳಬಳಿ ಬಂದು ಆಡದಿದ್ದರೆ- ಹೇಳದಿದ್ದರೆ ಅವನ ತಪಸ್ಸಿನ ಬಿಸಿಯ ರಾಶಿಯ ಉರಿಯಿಂದ ನಮ್ಮ ನಿತ್ಯವಿಧಿ ದೋಷದಿಂದ ಕೂಡಿ ಕೆಟ್ಟಿತು. ಆ ತಪಗೇಡಿಯನ್ನು ಅಲ್ಲಿರಲು ಬಿಡದೆ ಎಬ್ಬಿಸಿ- ತೊಲಗಿಸಿ, ನಮಗೆ ನೆಮ್ಮದಿಯಾಗಿರಲು ಎಡೆಮಾಡಿಕೊಡಬೇಕೆ೦ದು ಮತ್ತೆ ಎಲ್ಲಾ ಮುನಿಗಳೂ ಶಿವನ ಪಾದಕ್ಕೆ ಎರಗಿದರು- ಅಡ್ಡಬಿದ್ದರು.
ಅರ್ಥ:ಮುನಿಗಳು ಮುಂದುವರಿದು,'ಶಿವಪ್ರಭುವೇ, ಮತ್ತೆ ನಮ್ಮನ್ನು ಸ್ವಾರ್ಥಿಗಳೆಂದೇ ಭಾವಿಸಬಾರದು. ತಪಸ್ವಿಯ ತೀವ್ರ ತೇಜಸ್ಸಿನಿಂದ ತಪೋವನವು ವಿಪರೀತ ಹೊತ್ತಿ ಉರಿಯುತ್ತಿದೆ. ಇತ್ತ- ಈ ಕಡೆ ಒ೦ದು ಬೇರೆ ತಪೋವನವನ್ನು ನಮಗೆ ಕೊಟ್ಟು ಕರುಣಿಸು. ಅಥವಾ ಕಾರುಣ್ಯ ನಿಧಿಯೇ ಆ ವಿಕಾರಿಯನ್ನು ತೊಲಗಿಸಿ ನಮ್ಮ ಕಷ್ಟವನ್ನು ಕಳೆ,' ಎ೦ದು ಮೊರೆಇಟ್ಟರು.
ಅರ್ಥ:ಶಶಿಮೌಳಿ ಶಿವನು ಮುನಿಗಳ ದೂರನ್ನೂ ಕೇಳುತ್ತಾ,'ಅವನು ಯಾರೋ ಎಂದು, ತನ್ನ ವಿಮಲ ಜ್ನಾನ ದೃಷ್ಠಿಯಿಂದ ನೋಡಿ ತಪಸ್ಸು ಮಾಡುವ ವ್ಯಕ್ತಿಯನ್ನು ಅರಿತುಕೊಂಡನು. ಶಿವನು ತನ್ನ ಮನಸ್ಸಿನಲ್ಲಿ ಆ ತಾಪಸಿ ನಮ್ಮವನಲಾ ಎನ್ನುತ್ತಾ, ಬಿದಿಗೆ ಚಂದ್ರನನ್ನು ಹೋಲುವ ಮುಗಳುನಗೆಯು ಅವನ ಮುಖದಲ್ಲಿ ಮಿನುಗಲು, ಮುನಿಜನರ ಸಮೂಹವನ್ನು ನೋಡಿದನು.ಅವರ ಮೇಲೆ ಮನಸ್ಸನ್ನು ತಣಿಸುವ ಕೃಪೆಯ ಮಳೆಯನ್ನು ಕರೆದನು- ಸುರಿಸಿದನು.
ಅರಿದೆ ನಾನ೦ಜದಿರಿ ಹುಯ್ಯಲ
ಬರಿದೆ ತ೦ದಿರಿ ನಿಮ್ಮ ಗೆಲವಿ೦
ಗೆರಗುವವನಲ್ಲ ಬೇರಿಹುದಾತನ೦ಗವಣೆ |
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನೆಬ್ಬಿಸಿ
ತೆರಹ ಮಾಡಿಸಿಕೊಡುವೆನೆ೦ದನು ನಗುತ ಶಶಿಮೌಳಿ || ೨೫ ||
ಪದವಿಭಾಗ-ಅರ್ಥ: ಅರಿದೆ(ಅರಿತೆ- ತಿಳಿದೆ-ನು) ನಾನು ಅ೦ಜದಿರಿ ಹುಯ್ಯಲ ಬರಿದೆ ತ೦ದಿರಿ, ನಿಮ್ಮ ಗೆಲವಿ೦ಗೆ (ಸಾಧನೆಗೆ)+ ಎರಗುವವನಲ್ಲ(ತೊಂದರೆಕೊಡುವವನಲ್ಲ) ಬೇರೆ+ ಇಹುದು(ಬೇರೆ- ಕಾರಣ ಇದೆ)+ ಆತನ+ ಅ೦ಗವಣೆ ಅರುಹಲು+ ಏಕೆ(ಬೇಡ)(ಅರುಹು- ಹೇಳು)? ಭವತ್ ತಪೋವನ ನೆರೆ ನಿಮಗೆ ನಾನು+ ಅವನ+ ಎಬ್ಬಿಸಿ ತೆರಹ ಮಾಡಿಸಿಕೊಡುವೆನು+ ಎಂದನು ನಗುತ ಶಶಿಮೌಳಿ(ಚಂದ್ರನನ್ನು ತಲೆಯಲ್ಲಿ ಧರಿಸಿದವನು).
ಅರ್ಥ:ಮುನಿಗಳನ್ನು ಕುರಿತು ಶಶಿಮೌಳಿ ಶಿವನು ನಗುತ್ತ,'ನಾನು ಅವನ ಉದ್ದೇಶವನ್ನು ತಿಳಿದೆನು. ಅ೦ಜಬೇಡಿ, ಗೋಳಾಟದ ಹುಯ್ಯಲನ್ನು- ದೂರನ್ನು ಬರಿದೆ- ಏನಿಲ್ಲದೆ ಸುಮ್ಮನೆ ತ೦ದಿರಿ. ನಿಮ್ಮ ತಪ್ಪಸ್ಸಿನ ಗೆಲವಿಗೆ ಅವನು ಅಡ್ಡಬರುವವನಲ್ಲ- ತೊಂದರೆಕೊಡುವವನಲ್ಲ. ಆತನ ಇಚ್ಛೆ ಉದ್ದೇಶ ಬೇರೆ ಇದೆ. ಅದನ್ನು ಈಗ ಅದನ್ನು ಹೇಳುವುದು ಬೇಡ. ನಿಮ್ಮ ತಪೋವನನ್ನು ವಿಶೇಷವಾಗಿ ನಿಮಗೆ ನಾನು ಅವನನ್ನು ಅಲ್ಲಿಂದ ಎಬ್ಬಿಸಿ ತೆರವುಮಾಡಿಸಿಕೊಡುವೆನು,'ಎಂದನು.
ಏಳಿ ನೀವಾಶ್ರಮಕೆ ಪೋಗಿ ಚ
ಡಾಳಿಸದು ಮುನಿವರನ ತಪವಿ
ನ್ನೇಳಿ ದಿಟ ಭಯವಿಲ್ಲವೆ೦ದು ಕರಾ೦ಬುಜವ ನೆಗಹಿ |
ಬೀಳುಕೊಟ್ಟನು ಸಕಲ ಮುನಿಜನ
ಜಾಲವನು ಕರೆ ಭೂತ ನಿಕರವ
ಮೇಳವಿಸ ಹೇಳೆ೦ದು ನ೦ದೀಶ್ವರಗೆ ನೇಮಿಸಿದ || ೨೬ ||
ಪದವಿಭಾಗ-ಅರ್ಥ: ಏಳಿ ನೀವು+ ಆಶ್ರಮಕೆ ಪೋಗಿ, ಚಡಾಳಿಸದು(ಉಗ್ರವಾಗುವುದಿಲ್ಲ) ಮುನಿವರನ ತಪವು+ ಇನ್ನೇಳಿ ದಿಟ ಭಯವಿಲ್ಲವೆ೦ದು ಕರಾ೦ಬುಜವ(ಕರ+ ಅಂಬುಜ= ಕರಕಮಲ, ಕೈ- ಹಸ್ತ) ನೆಗಹಿ(ಎತ್ತಿ) ಬೀಳುಕೊಟ್ಟನು ಸಕಲ ಮುನಿಜನಜಾಲವನು(ಜಾಲ- ಸಮೂಹ- ಗುಂಪು), ಕರೆ ಭೂತ ನಿಕರವ ಮೇಳವಿಸ ಹೇಳು+ ಎಂದು ನ೦ದೀಶ್ವರಗೆ ನೇಮಿಸಿದ.
ಅರ್ಥ:ಶಿವನು ಮುನಿಗಳಿಗೆ,'ಏಳಿ, ನೀವು ಆಶ್ರಮಕೆ ಹೋಗಿ. ಆ ಮುನಿವರನ ತಪಸ್ಸು ಇನ್ನು ಉಗ್ರವಾಗುವುದಿಲ್ಲ. ಇನ್ನು ಏಳಿ; ಇದು ದಿಟ- ನಿಜ; ಇನ್ನು ನಿಮಗೆ ಭಯವಿಲ್ಲವೆ೦ದು ತನ್ನ ಕಮಲದಂತಹ ಹಸ್ತನ್ನು ಎತ್ತಿ ಸಕಲ ಮುನಿಜನಜಾಲವನ್ನೂ ಬೀಳ್ಕೊಟ್ಟನು. ನಂತರ ನ೦ದೀಶ್ವರನಿಗೆ,'ಕರೆ ಭೂತ ಸಮೂಹನ್ನು, ಒಟ್ಟಾಗಲು ಹೇಳು,' ಎಂದು ನೇಮಿಸಿದ- ಆಜ್ಞಾಪಿಸಿದನು.
ಅರ್ಥ:ವೈಶಂಪಾಯನ ಮುನಿಯು ಜನಮೇಜಯ ಅರಸನೇ ಕೇಳಯ್ಯಾ,'ಬೇಟೆಯೆ೦ದು ಈಶ್ವರನ ಗಣಗಳ ಸೇನೆಯಲ್ಲಿ ಕೂಗಿ ಹೇಳಿದರು; ಜೊತೆಗೆ ಎಲ್ಲಾ ಮೂರು ಲೋಕಕ್ಕೂ ಕೇಳುವ ಡ೦ಗುರದ ದನಿಯ ಗದ್ದಲದಲ್ಲಿ ಅರ್ಜುನನಿದ್ದ ತಪೋವನಕ್ಕೆ ಬಂದಿತು. ಪರಮ ಕರುಣಾಸಿ೦ಧುವಾದ ಶಿವನು ಭಕ್ತನನ್ನು ಕಾಪಾಡುವ ಅವಸರದಲ್ಲಿ ದೊಡ್ಡ ಬೇಟೆಗೋಸ್ಕರ ಬೇಡನ ರೂಪದಲಿ ಶೋಭಿಸಿದನು.
ತೆಗೆದು ತಲೆ ಮಾಲೆಯನು ಹಸುರ೦
ಗಿಗಳ ತೊಟ್ಟನು ಸುತ್ತಬರೆ ಹೀ
ಲಿಗಳ ಹರಹಿನ ಪಾರಿವದ ಚಲ್ಲಣವನಳವಡಿಸಿ |
ಬಿಗಿಜಡೆಯ ಶಶಿ ಮುಖಕೆ ಪತ್ರಾ
ಳಿಗಳ ಕಟ್ಟಿ ಕಿರಾತವೇಷದ
ವಿಗಡ ದೇವರ ದೇವಕೊ೦ಡನು ಚಾಪ ಮಾರ್ಗಣವ || ೨೮||
ಪದವಿಭಾಗ-ಅರ್ಥ: ತೆಗೆದು ತಲೆ ಮಾಲೆಯನು ಹಸುರ೦ಗಿಗಳ ತೊಟ್ಟನು, ಸುತ್ತಬರೆ ಹೀಲಿಗಳ(ನವಿಲುಗರಿ) ಹರಹಿನ ಪಾರಿವದ(ಕಂದು ಬಣ್ಣ, ಕಪಿಲವರ್ಣ) ಚಲ್ಲಣವನು+ ಅಳವಡಿಸಿ ಬಿಗಿಜಡೆಯ ಶಶಿ(ಚಂದ್ರ) ಮುಖಕೆ ಪತ್ರಾಳಿಗಳ ಕಟ್ಟಿ ಕಿರಾತವೇಷದ ವಿಗಡ(ಪರಾಕ್ರಮಿ) ದೇವರ ದೇವಕೊ೦ಡನು ಚಾಪ ಮಾರ್ಗಣವ(ಬಿಲ್ಲು ಬಾಣ)
ಅರ್ಥ:ಶಿವನು ತನ್ನ ತಲೆ ಮಾಲೆಯನ್ನು ತೆಗೆದು ಹಸಿರು ಅ೦ಗಿಯನ್ನು ತೊಟ್ಟನು. ತಲೆಯ ಸುತ್ತ ಬರುವಂತೆ ನವಿಲುಗರಿ ಹರಹಿನ ತಲೆಗಟ್ಟು ಕಟ್ಟಿದನು. ಕಪಿಲವರ್ಣದ ಚಲ್ಲಣವನ್ನು ಸೊಂಟಕ್ಕೆ ಅಳವಡಿಸಿದನು; ಬಿಗಿಜಡೆಯನ್ನು ಕಟ್ಟಿ ಅಲ್ಲಿದ್ದ ಚಂದ್ರನ ಮುಖಕ್ಕೆ ಎಲೆಗಳನ್ನು ಕಟ್ಟಿ ಮರೆಮಾಡಿದನು. ಹೀಗೆ ಕಿರಾತವೇಷದ ಪರಾಕ್ರಮಿ ದೇವರ ದೇವನು ಕಿರಾತವೇಷದಲ್ಲಿ ಬಿಲ್ಲು ಬಾಣಗಳನ್ನು ಕೈಗೆ ತೆಗೆದುಕೊ೦ಡನು.
ದೇವನನುರೂಪದಲಿ ನಿ೦ದರು
ದೇವಿಯರು ಗುಹ ಗಣಪತಿಗಳೆ
ಲ್ಲಾ ವಿನೋದವ ನೋಡಿ ದರಿಸಿದರೊಲಿದು ಶಾಬರವ |
ಆ ವಿಗಡ ನ೦ದೀಶ ವೀರಕ
ದೇವಲಕ ರೇಣುಕ ಮಹೋದರ
ದಾವಶಿಖಿಮುಖ ವೀರಭದ್ರಾದ್ಯಖಿಲ ಭೂತಗಣ || ೨೯ ||
ಪದವಿಭಾಗ-ಅರ್ಥ: ದೇವನ+ ಅನುರೂಪದಲಿ ನಿ೦ದರು ದೇವಿಯರು ಗುಹ(ಭೂತಗಣ) ಗಣಪತಿಗಳೆಲ್ಲಾ ವಿನೋದವ ನೋಡಿ ದರಿಸಿದರ+ ಒಲಿದು(ಪ್ರೀತಿಯಿಂದ) ಶಾಬರವ, ಆ ವಿಗಡ ನ೦ದೀಶ ವೀರಕ ದೇವಲಕ ರೇಣುಕ ಮಹೋದರದಾವಶಿಖಿಮುಖ ವೀರಭದ್ರಾದಿ+ ಅಖಿಲ ಭೂತಗಣ.
ಅರ್ಥ: ದೇವ ಶಂಕರನ ಅನುರೂಪವಾದ ಬೇಡರ ರೂಪದಲ್ಲಿ ಕೈಲಾಸದ ದೇವಿಯರು ಸಹ ಹೊರಟು ನಿ೦ತರು. ಭೂತಗಣಗಣಗಳು ಗಣಗಳಪತಿಗಳು ಎಲ್ಲಾ ವಿನೋದವ ನೋಡಿ ತಾವೂ ಪ್ರೀತಿಯಿಂದ ಆ ಶೂರ ನ೦ದೀಶ ವೀರಕ ದೇವಲಕ ರೇಣುಕ ಮಹೋದರ ದಾವಶಿಖಿಮುಖ ವೀರಭದ್ರಾದಿ ಅಖಿಲ ಭೂತಗಣವೂ ಶಾಬರ-ಬೇಡರ ವೇಶವನ್ನು ದರಿಸಿದರು.
ಅರ್ಥ:ಶಿವನ ಬೇಡರ ಬಳಗ, 'ಶ್ರುತಿಗಳ ಸೇವಕರು, ತರ್ಕಶಾಸ್ತ್ರದ ಗತಿಯನ್ನು ಹುಡುಕುವ ಬೇಟೆಗಾರರು, ಮ೦ತ್ರಮಯ ಸ೦ತತಿಯ ಸಂತೋಷಪಡುವರು, ವಿವಿಧ ಜಪ ಯಜ್ನಾ‘ದಿಗಳ ಬಲೆಯ ವ್ರತದವರು, ಜ೦ತ್ರದ- ರಾಟೆಯ ಅಥವಾ ಏತದ ಕಣ್ಣಿಗಳ- ಹಗ್ಗಗಳು, ಹಗ್ಗವುಳ್ಲವರು, ಸತ್ಕೃತಿಯೆಂಬ ಕೋಲು- ಗುಂಡು ಹಿಡಿದವರು, ಯೋಗಸ್ಥಿತಿಯ ಸರಳಿನ ಬೇಡರ ಪಡೆ ಶಿವನನ್ನು ಬಳಸಿ ಸುತ್ತುವರಿದು ಇಂದ್ರಕೀಲಕ್ಕೆ ಬಂದಿತು.
ಶ್ರವಣ ಮನನದ ಬೀಸುವಲೆ ಶಾ೦
ಭವ ಸುವೇದಾ ದೀಕ್ಷೆಗಳ ಬಲು
ಗವಣೆಗಳ ಪಶುಪಾಶ ಬ೦ಧದ ಬೋಳೆಯ೦ಬುಗಳ |
ನವವಿಧಾಮಲ ಭಕ್ತಿಗಳ ರಣ
ತವಕದೀಹದ ಹುಲ್ಲೆಗಳ ಮೃಗ
ಭವ ವಿದಾರಣ ಸುಭಟರೈದಿತು ಶಿವನ ನೇಮದಲಿ || ೩೫ ||
ಪದವಿಭಾಗ-ಅರ್ಥ: ಶ್ರವಣ ಮನನದ ಬೀಸುವಲೆ(ಬೀಸುಬಲೆ) ಶಾ೦ಭವ ಸುವೇದಾ ದೀಕ್ಷೆಗಳ ಬಲುಗವಣೆಗಳ, ಪಶುಪಾಶ ಬ೦ಧದ ಬೋಳೆಯ೦ಬುಗಳ, ನವವಿಧಾಮಲ ಭಕ್ತಿಗಳ, ರಣ ತವಕದ+ ಈ ಹದ ಹುಲ್ಲೆಗಳ, ಮೃಗಭವ ವಿದಾರಣ, ಸುಭಟರು+ ಐದಿತು ಶಿವನ ನೇಮದಲಿ(ಆಜ್ಞೆಯಲ್ಲಿ)
ಅರ್ಥ:ಶಿವನ ಬೇಟೆಯಲ್ಲಿ, ಶ್ರವಣ ಮನನದ ಬೀಸುಬಲೆ; ಶಾ೦ಭವ- ಶಂಭುವಿನ ಸುವೇದಾ ದೀಕ್ಷೆಗಳ ಬಲು- ಗಟ್ಟಿ ಕವಣೆಗಳು; ಪಶುಪಾಶ ಬ೦ಧದ ಬೋಳೆಯ- ದೇವತೆಯ/ ಬೋಳಯಿಸುವ- ಸಮಾಧಾನಪಡಿಸುವ ಅ೦ಬುಗಳು; ಕತ್ತು ಅವು ನವವಿಧದ ಅಮಲ-ಶುದ್ಧ ಭಕ್ತಿಗಳು; ರಣತವಕದ- ಯುದ್ಧದಬಯಕೆಯ ಈ ಹದ- ಈ ಬಗೆಯ ಹುಲ್ಲೆಗಳ, ಮೃಗಭವ-ಮೃಗವೆಂಬ ಭವ- ಪ್ರಾಪಂಚಿಕ ಬಂಧನವನ್ನು- ವಿದಾರಣ- ಕತ್ತರಿಸುವ, ಸುಭಟರಾದ- ಶಿವನ ಪರಿವಾರ ಶಿವನ ಆಜ್ಞೆಯಂತೆ ಇಂದ್ರಕೀಲ ತಪೋವನಕ್ಕೆ ಬಂದಿತು.
ಅರ್ಥ: ಶಿವನ ಬೇಟೆಯಲ್ಲಿ, ಕಾಡಿನಲ್ಲಿ ಪ್ರಾಣಿಗಳನ್ನು ಸೋಹಿ ಹುಡುಕಿದಾಗ ದೆಸೆದೆಸೆಗೆ ಓಡಿದವು-> ಮೋಹ ತಮ ಡ೦ಭಾದಿಗಳು ಮತ್ತು ಅರಿಷಡ್ವರ್ಗವಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಮೃಗಸಮೂಹ; ಕಾಡಿನ-> ತೋಪಿನ ಬೇಟೆಯಲ್ಲಿ ಒಡ್ಡುವ ಆಕರ್ಷಣೆಗೆ ಬಿದ್ದುದು ಮಹಾಪಾತಕ ಮದೇಭ-ಚಯ-> ಆನೆಯ ಹಿಂಡು, ಮೋಹ ಮದ, ಮಾತ್ಸರ್ಯ, ದ್ರೋಹಾದಿ ಇಹಲೋಕದಾಸೆಯ ಮಹಾ ಮೃಗವು. ಅಸೂಯೆಯೆಂಬ ವರಾಹ ಸ೦ಕೀರ್ಣವೂ ಉಪಪಾತಕ-ಕೆಟ್ಟದ್ದೆಂಬ ದೇಹವು ಅಳಿದವು- ಹೋದವು. ಶಿವನ ಬೇಟೆಯ ಅನಂತರದಲ್ಲಿ.
ಟಿಪ್ಪಣಿ:-(ಸಾಧಕನ ಚಿತ್ತದ ಅಂತರಂಗದಲ್ಲಿ ಶಿವನು ಬಂದಾಗ ಅವನ ಕಟಾಕ್ಷದಿಂದ ಅಗುವ ದುರ್ಗುಣಗಳ- ಅಥವಾ ತಮೋ-ರಾಜಸ ಗುಣಗಳ ನಾಶವನ್ನು ಹೇಳಿದೆ. ಅವುಗಳ ನಾಶವೇ ಮೃಗಯಾ ಬೇಟೆ. 'ಪಶುಪತಿಯಾದ ಶಿವನು ಪ್ರಾಣಿಗಳನ್ನು ಬೇಟೆಯಾಡಿ ಕೊಂದನು' ಎನ್ನುವ ವಿಚಾರ ಕವಿಯ ಮನಸ್ಸಿಗೆ ಒಪ್ಪಿಗೆಯಾಗಿಲ್ಲವೆಂದು ತೋರುವುದು.)
ಅರ್ಥ: ನಿಖಿಳ- ಎಲ್ಲಾ ಜಗತ್ತೂ ಶ್ರುತಿಚಯ- ವೇದಗಳೂ ಜಯ ಜಯ ಎಂದು ಅಧಿಕವಾಗಿ ಹೊಗಳುತ್ತಿತ್ತು. ಸಾಕ್ಷಾತ್ ಪರಮ ಶಿವತತ್ವವು ನಯನ ಗೋಚರವಾಯ್ತು- ಪ್ರತ್ಯಕ್ಷವಾಯಿತು. ಜಗತ್ತಿನ ಲಯದ, ಜನನದ- ಸೃಷ್ಠಿಯ ಸುಳಿಯ-ಆರಂಭದ ಸ೦ಸ್ಕೃತಿಮಯ ಸಮುದ್ರವನ್ನು ಸುರಿದು, ಭಕ್ತರಿಗೆ ನಿರ್ಭಯವು ಎಂಬಂತೆ ಎಲ್ಲಡೆ ಮಹಾಶಬ್ದ ಆವರಿಸಿತು.
ಅರ್ಥ:ವೈಶಂಪಾಯನ ಮುನಿಯು ಜನಮೇಜಯನನ್ನು ಕುರಿತು,'ಕೇಳು ನೄಪ ಜನಮೇಜಯ, ಕೈಲಾಸವಾಸಿಯಾದ ಶಿವನ ಲೀಲೆಯನ್ನು ಹೇಳುವುದಾದರೆ ಅದು ರೋಮಾ೦ಚನವಾಗುವುದು, ತನ್ನ ಭಕ್ತನ ಸ೦ದರ್ಶನ ಮಾಡುವ ಉದ್ದೇಶದಿಂದ ಶಿವನು ತನ್ನೊಡನೆ ಕಿರಾತ ಸೇನೆಯೊಡನೆ ನೆಡೆತ೦ದು- ಬಂದನು. ಆ ಸೇನೆ ಇ೦ದ್ರಕೀಲದ ಪರ್ವತ ಪ್ರದೇಶವನ್ನು ತುಂಬಿತು. ಕಿರಾತರ ವಿನೋದ, ವಿಜೃಂಭಣೆಯ, ಆ ಮಹಾ ಅದ್ಭುತದ ಹಿರಿಮೆಯನ್ನು ಏನು ಹೇಳಲಿ!' ಎಂದನು.
ಇ೦ಬಿನಲ್ಲಿಹ ಮೂಕ ದಾನವ
ನೆ೦ಬನೊಬ್ಬನು ತನ್ಮಹಾದ್ರಿ ನಿ
ತ೦ಬ ವನದ ನಿಕು೦ಜದಲಿ ನಿರ್ಭಯ ವಿಹಾರದಲಿ |
ಚು೦ಬಿಸಿತು ಬಲು ರಭಸವೆನೆ ವಿಲ
ಯಾ೦ಭುದಿಯ ಕಳಕಳವನಮರರ
ತಿ೦ಬೆನೀಕ್ಷಣವೆನುತ ಖಳನಾಲಿಸಿದನಾದ್ವನಿಯ || ೩೯ ||
ಪದವಿಭಾಗ-ಅರ್ಥ: ಇ೦ಬಿನಲ್ಲಿ+ ಇಹ(ಅಡಗುತಾಣದಲ್ಲಿರುವ) ಮೂಕ ದಾನವನೆ೦ಬನು+ ಒಬ್ಬನು ತನ್+ ಮಹಾ+ ಅದ್ರಿ (ಆಮಹಾಬೆಟ್ಟದ) ನಿತ೦ಬ ವನದ(ದಟ್ಟವಾಗಿ ಬೆಳೆದ ಕಾಡಿನ) ನಿಕು೦ಜದಲಿ(ಬಳ್ಳಿಯ ಪೊದೆ, ಗವಿ) ನಿರ್ಭಯ ವಿಹಾರದಲಿ ಚು೦ಬಿಸಿತು ಬಲು ರಭಸವು+ ಎನೆ ವಿಲಯಾ೦ಭುದಿಯ(ಪ್ರಳಯಕಾಲದ ಸಮುದ್ರದ) ಕಳಕಳವನು+ ಅಮರರ(ದೇವತೆಗಳನ್ನು) ತಿ೦ಬೆನು+ ಈ ಕ್ಷಣವೆ+ ಎನುತ ಖಳನು+ ಆಲಿಸಿದನು+ ಆ ದ್ವನಿಯ
ಅರ್ಥ: ಶಬರ ಸಂಕರನ ಪಡೆ ಬರಲು ಅವರ ಸದ್ದನ್ನು ಅಡಗುತಾಣದಲ್ಲಿರುವ ಮೂಕ ದಾನವನೆ೦ಬುವವನು ಆ ಮಹಾಬೆಟ್ಟದ ದಟ್ಟವಾಗಿ ಬೆಳೆದ ಕಾಡಿನ ಬಳ್ಳಿಯ ಪೊದೆಉ ಗವಿಯಲ್ಲಿ ನಿರ್ಭಯನಾಗಿ ವಿಹಾರದಲ್ಲಿದ್ದನು ಆಗ ಅವನಿಗೆ ಆ ಸದ್ದು ತಾಗಿತು. ಅವನು ಅವರ ಬರುವಿನಿಂದಾದ ಪ್ರಳಯಕಾಲದ ಸಮುದ್ರದ ಬಲು ರಭಸವ ಕಳಕಳವದ ಸದ್ದನ್ನು ಆಲಿಸಿದನು. ಆಗ ಅವನು ಅಮರರನ್ನು ಈ ಕ್ಷಣವೆ ತಿನ್ನುವೆನು ಎನ್ನತ್ತಾ ಆ ಖಳನು ಆ ದ್ವನಿಯನ್ನು ಆಲಿಸಿದನು.
ಅರ್ಥ:ಆ ದಾನವನು ಹ೦ದಿಯ ರೂಪ ತಾಳಿದನು. ಅವನು ಆ ಬೆಟ್ಟದ ಗುಹೆಯಿಂದ ಹೊರಹೊರಟು ಬೇಟೆಯ ಜನರೊಳಗೆ ನುಗ್ಗಿದನು. ಅವನು ಆಗ ಅಡ್ಡ ಬಿದ್ದ-ಬಂದ ಅವರನ್ನು ತನ್ನ ಕೋರೆಯಿಂದ ಎತ್ತಿದನು. ಶಬರರು ಓ ಹ೦ದಿಯೋ ತಡೆ, ನಾಯಗಳನ್ನು ಛೂ ಬಿಡಿ, ಹಿ೦ದೆ ಹಿಡಿ, ಅದು ಕೆಡೆಯಲು ಬೀಳಲು, ಹೊಡೆ, ಬಡಿ, ಚಚ್ಚು, ಹೀಗೆ ಬೇಟೆಯನ್ನು ಕೈಗೊಳ್ಳಿರಿ ಎಂದು ಬೇಟೆಗಾರರ ಗುಂಪು ಗಹನವಾದ ಬೇಟೆಯ ಮದ್ಯದಲ್ಲಿ ಗಜಬಜಿಸಿ ಗದ್ದಲ ಮಾಡಿತು.
ಅರ್ಥ: ಎಳೆಯ ಚಂದ್ರನ ಮಧ್ಯೆ ಚಂದ್ರನ ನಡುವೆ ಇದ್ದ ರಾಹುವಿಗೆ ಅಳವಡುವ ಬಾಲಚಂದ್ರನ ಬದಿಯ ಕೊಂಬುಗಳಂತೆ ಹೊಳೆಯುವ ದಾಡೆಗಳನ್ನುಳ್ಳ ವರಾಹವು, ಮಿತಿಮೀರಿ ಬೆಳೆದ ನೀಲಾಚಲ ಪರ್ವತಕ್ಕೆ ಸರಿ ಎನ್ನುವಂತೆ ಬೆಳದ ಹೇರೊಡಲ- ದೊಡ್ಡದೇಹದ ಹಾಹಂದಿ ಮುಳಿದು ಗರ್ಜಿಸಿ ಕಿಡಿಗಳನ್ನು ಸುರಿಸುವ ಕಣ್ಣುಗಳಲ್ಲಿ ರೌದ್ರಾಟೋಪದಿಂದ ಕೆಕ್ಕಳಿಸದೆ ಇಕ್ಕೆಲ- ಎರಡೂ ಕಡೆ, ಆಕಡೆ ಈಕಡೆ ದೇವಸ೦ತತಿಯಾದ ಶಿವಪಡೆಯ ಶಬರರನ್ನು ನೋಡುತ್ತಿತ್ತು.
ಕೂಡೆ ಕಟ್ಟಿತು ಭೂತಗಣ ದ್ವನಿ
ಮಾಡಿಜಡಿದಬ್ಬರಿಸಿ ಮೋರೆಯ
ನೀಡಿ ನಾಯ್ಗಳು ತುಡುಕಿದವು ತಿರುಗಿದೊಲೆ ಹಿಮ್ಮಡಿಯ |
ಝಾಡಿಸುತ ಕವಿದೆತ್ತಲೊ೦ದೇ
ದಾಡೆ ಬರತುದು ನೂರು ಗಾಯವ
ನೋಡುತಿರ್ದುದು ಸೇನೆ ಕ೦ಡನು ಶೂಲಿ ಸೂಕರನ || ೪೨ ||
ಪದವಿಭಾಗ-ಅರ್ಥ: ಕೂಡೆ(ಕೂಡಲೆ) ಕಟ್ಟಿತು ಭೂತಗಣ ದ್ವನಿಮಾಡಿ ಜಡಿದು+ ಅಬ್ಬರಿಸಿ ಮೋರೆಯ ನೀಡಿ ನಾಯ್ಗಳು ತುಡುಕಿದವು(ಆಕ್ರಮಿಸಿದವು); ತಿರುಗಿದೊಲೆ ಹಿಮ್ಮಡಿಯ ಝಾಡಿಸುತ ಕವಿದು (ಮುತ್ತಿ, ನುಗ್ಗಿ)+ ಎತ್ತಲು+ ಒಂದೇ ದಾಡೆ ಬರತುದು(ಭರತ, ಕಟ್ಟುಮಸ್ತಾದ -ವಿಕ್ಷನರಿ) ನೂರು ಗಾಯವ, ನೋಡುತಿರ್ದುದು ಸೇನೆ, ಕ೦ಡನು ಶೂಲಿ ಸೂಕರನ(ಹಂದಿಯನ್ನು).
ಅರ್ಥ:ಆ ಹಂದಿಯನ್ನು ಭೂತಗಣ ಕೂಡಲೆ ದ್ವನಿಮಾಡಿ ಜಡಿದು- ತಮ್ಮಟೆ ಮೊದಲಾದವನ್ನು ಬಡಿದು ಅಬ್ಬರಿಸಿ ಅದರ ದಾರಿಯನ್ನು ಕಟ್ಟಿತು. ನಾಯಿಗಳು ಮೋರೆಯ ನೀಡಿ- ಹಲ್ಲುಕಿರಿದು ಹಂದಿಯನ್ನು ಆಕ್ರಮಿಸಿದವು; ಅದು ತಿರುಗಿ ತೊಲೆಯಂತಿರುವ ಹಿಮ್ಮಡಿಯ ಝಾಡಿಸುತ, ನುಗ್ಗಿ ಅವನ್ನು ಎತ್ತಲು, ಅದರ ಗಟ್ಟಿಯಾದ ಒಂದೇ ದಾಡೆಯಿಂದ ನೂರು ಗಾಯವನ್ನು ಮಾಡಿತು, ಇದನ್ನು ಶಿವನ ಸೇನೆ ನೋಡುತ್ತಿತ್ತು, ಶೂಲಿ ಶಿವನೂ ಸಹ ಸೂಕರನ ಸಾಮರ್ಥ್ಯವನ್ನು ಕ೦ಡನು.
ಅರ್ಥ:ಆ ಭೀಕರ ಹಂದಿಯು, ಚುಚ್ಚುವ ಕೋರೆದಾಡೆಯ ಬಲಿಷ್ಠದೇಹ ದೊಡ್ಡ ಬೆಂಕಿಯ ಕಿಡಿಯನ್ನು ಉಗುಳುವ ಬಾಯಿಯ ಧಾರೆಯ, ಕಚ್ಚಿಪುಡಿಮಾಡಿ ಹರಡುವ ಮಹೋಗ್ರತರ ನಾಯಿಗಳ ಹಿಂಡನ್ನು ಕಡಿದು ಕೆಡಗಿ, ಬೇಡರ ಬೇಡತಿಯರನ್ನು ಕೆಡವಲು ನುಗ್ಗಿ, ಅತಿಯಾಗಿ ಘುಡಿಘುಡಿಸಿ ಆಕ್ರಮಿಸಿ ಬರಲು ಶಿವನ ಗಣಸಮೂಹವೇ ಬೆದರಿತು.
ಅರ್ಥ:ಆಗ ಇದೇ ಸರಿಯಾದ ಸಮಯ ಎಂದು, ಬಾಣವನ್ನು ಹೂಡಿದನು. ಬತ್ತಳಿಕೆಯಿಂದ ಬಾಣವನ್ನು ಉಗಿದು ಸರಿಯಾಗಿ ತೂಗಿನೋಡಿ ಗುರಿಯಿಟ್ಟು ಪಿನಾಕಿಯು- ಶಿವನು ಯೆಚ್ಚನು ಮೂಕದಾನವನನ್ನು ಹೊಡೆದನು. ಆ ಹಂದಿಯು ಕಾನ್ನು ಕೊಡವಿ ಹಾಯ್ದು ಓಡಿತು. ಶಿವನು ಹೊಡೆದ ಬಾಣದ ಗರಿ ಅದರ ಹೊಟ್ಟಯ ಒಂದು ಬದಿಯಲಿ ತೋರುತ್ತಿತ್ತು. ಅದು ಮೈಯನ್ನು ಕೊಡವಿ ಗೋಳಿಡುತ್ತಾ ಹೊತ್ತಕಣೆಯ ಸಹಿತ ಧನ೦ಜಯನತ್ತ ಹೋಯಿತು.
ಬ೦ದು ಗಿರಿ ಕ೦ದರದೊಳಿಹ ಮುನಿ
ವೃ೦ದದೊಳಗಡಹಾಯ್ದು ಕೆಡಹುತ
ಹ೦ದಿ ಮೋರೆಯ ನೆಗಹಿ ಗಜರಿ ಗರ್ಜಿಸಿತು |
ಮ೦ದಿ ಬೆದರುತ ಗೋಳಿಡುತಲಾ
ಇ೦ದುಧರನೇ ಬಲ್ಲ ಶಿವ ಶಿವ
ಯೆ೦ದು ಮೊರೆಯಿಡೆ ಕೇಳಿ ಕ೦ದೆರೆದೆದ್ದನಾ ಪಾರ್ಥ || ೪೫ ||
ಪದವಿಭಾಗ-ಅರ್ಥ: ಬ೦ದು ಗಿರಿ ಕ೦ದರದೊಳು ಇಹ(ಗುಹೆಗಳಲ್ಲಿದ್ದ) ಮುನಿವೃ೦ದದ+ ಒಳಗೆ+ ಅಡಹಾಯ್ದು ಕೆಡಹುತ, ಹ೦ದಿ ಮೋರೆಯ ನೆಗಹಿ, ಗಜರಿ(ಆರ್ಭಟಿಸಿ) ಗರ್ಜಿಸಿತು. ಮ೦ದಿ(ಜನರು) ಬೆದರುತ ಗೋಳಿಡುತಲಿ ಆ ಇ೦ದುಧರನೇ ಬಲ್ಲ, ಶಿವ ಶಿವಯೆ೦ದು ಮೊರೆಯಿಡೆ, ಕೇಳಿ ಕ೦ದೆರೆದು(ಕಣ್ಣು ತೆರೆದು)+ ಎದ್ದನು+ ಆ ಪಾರ್ಥ
ಅರ್ಥ: ಆ ದಾನವ ಹಂದಿಯು, ಬ೦ದು ಬೆಟ್ಟದ ಗುಹೆಗಳಲ್ಲಿದ್ದ ಮುನಿಗಳ ಸಮೂಹದ ಒಳಗೆ ಅಡಹಾಯ್ದು ಅವರನ್ನು ಕೆಡವುತ್ತಾ, ಹ೦ದಿಯು ತನ್ನು ಸುಂಡಿಯನ್ನು ಮೇಲಕ್ಕೆ ಎತ್ತಿಕೊಂಡು ಗಜರಿ ಗರ್ಜಿಸಿತು. ಮುನಿಜನರು ಹೆದರುತ್ತಾ ಗೋಳಿಡುತ್ತಾ ಈ ಅನಾಹುತ ಏನೆಂದು ಆ ಇ೦ದುಧರ ಶಿವನೇ ಬಲ್ಲ, ಶಿವ ಶಿವಾ ಎಂದು ಮೊರೆಯಿಡಲು, ಅದನ್ನು ಕೇಳಿ ಆ ಪಾರ್ಥನು ಕಣ್ಣು ತೆರೆದು ಎದ್ದನು.
ಕ೦ಡನರ್ಜುನನೀ ವರಾಹನ
ದ೦ಡಿ ಲೇಸಲ್ಲೆನುತ ಬಾಣವ
ಗಾ೦ಡೀವದೊಳಳವಡಿಸಿ ಬೊಬ್ಬಿರಿದೆಚ್ಚನಾ ಖಳನ |
ದಿ೦ಡುಗೆಡೆದುದು ಕಾಲ ಕೊಡಹುತ
ಗ೦ಡಶೈಲದವೋಲು ಭೂತವ
ದಿ೦ಡುವರಿಯುವ ಹ೦ದಿ ಬಿದ್ದುದು ಪಾರ್ಥನೆದುರಿನಲಿ || ೪೬ ||
ಪದವಿಭಾಗ-ಅರ್ಥ: ಕ೦ಡನು+ ಅರ್ಜುನನು+ ಈ ವರಾಹನ ದ೦ಡಿ ಲೇಸಲ್ಲ+ ಎನುತ ಬಾಣವ ಗಾ೦ಡೀವದೊಳು+ ಅಳವಡಿಸಿ ಬೊಬ್ಬಿರಿದು+ ಎಚ್ಚನು ಆ ಖಳನ, ದಿ೦ಡುಗೆಡೆದುದು(ದಿಂಡುಗೆಡೆ- ತರಿ,ಕತ್ತರಿಸಿ ಕೆಡೆ- ಬೀಳು, ಉರಳಿಸು,ಬೀಳಿಸು, ಸವರು) ಕಾಲ ಕೊಡಹುತ ಗ೦ಡಶೈಲದವೋಲು ಭೂತವ ದಿ೦ಡುವರಿಯುವ ಹ೦ದಿ ಬಿದ್ದುದು ಪಾರ್ಥನ ಎದುರಿನಲಿ.
ಅರ್ಥ: ಕ೦ಡನು+ ಅರ್ಜುನನು+ ಈ ವರಾಹನ ದ೦ಡಿ ಲೇಸಲ್ಲ+ ಎನುತ ಬಾಣವ ಗಾ೦ಡೀವದೊಳು+ ಅಳವಡಿಸಿ ಬೊಬ್ಬಿರಿದು+ ಎಚ್ಚನು ಆ ಖಳನ, ದಿ೦ಡುಗೆಡೆದುದು ಕಾಲ ಕೊಡಹುತ ಗ೦ಡಶೈಲದವೋಲು ಭೂತವ ದಿ೦ಡುವರಿಯುವ ಹ೦ದಿ ಬಿದ್ದುದು ಪಾರ್ಥನ ಎದುರಿನಲಿ.
ಅರ್ಥ:ಪರಮೇಶ್ವರನು ಅಲ್ಲಿಗೆ ಬ೦ದನು. ಅವನು ಇದು ನಾವು ಹೊಡೆದು ಕೆಡವಿದ ಹ೦ದಿ. ಆದ್ದರಿಂದ ಅದು ನಮ್ಮದು. ನೀನು ತೆಗೆ, ಬಿಡು ಎನ್ನಲು, ಅರ್ಜುನನು ಹೇಳಿದನು,'ಇದು ನಮ್ಮ ಅಂ೦ಬಿನ ಹೊಡೆತಕ್ಕೆ ಬಿದ್ದುದು, ಆದ್ದರಿಂದ ನೀನು ಸಾರು- ಹೋಗು,' ಎನ್ನಲು, ಪಾರ್ಥನ ಚಿತ್ತದಲ್ಲಿ, ಕಾಮಿಪ- ಬಯಕೆಯ ಕಾರಣ ವಿರೋಧದ ದೋಷ ಬ೦ದಿತೇ? ಪಾರ್ಥನು ಬಾಲೇ೦ದುಧರನಾದ ಶಿವನು, ಇವನು ಎ೦ದು, ಎತ್ತ ಬಲ್ಲನು,ಅವನಿಗೆಲ್ಲಿ ಗೊತ್ತು? ಅರ್ಜುನನು ಶಿವನನ್ನು ಕಣಕಿದನು.