<ಕುಮಾರವ್ಯಾಸಭಾರತ-ಸಟೀಕಾ
- ಭೀಮ ಕೊ೦ದನು ಕಲಿ ಜಟಾಸುರ
- ನಾ ಮಹಾ ಮಣಿಮಾನನನು ಬಳಿ
- ಕೀ ಮಹೀತಳಕಿಳಿದು ಕ೦ಡನು ಪಾರ್ಥನಗ್ರಜನ ||ಸೂ||
- ಪದವಿಭಾಗ-ಅರ್ಥ:ಭೀಮ ಕೊ೦ದನು ಕಲಿ(ವೀರ) ಜಟಾಸುರನ+ ಆ ಮಹಾ ಮಣಿಮಾನನನು, ಬಳಿಕ+ ಈ ಮಹೀತಳಕೆ (ಭೂಮಿಗೆ)+ ಇಳಿದು ಕ೦ಡನು ಪಾರ್ಥನು+ ಅಗ್ರಜನ.
- ಅರ್ಥ:ಭೀಮನು ವೀರ ಜಟಾಸುರನನ್ನೂ ಆ ಮಹಾ ಮಣಿಮಾನ ಎಂಬ ರಾಕ್ಷನನ್ನೂ ಕೊ೦ದನು. ಬಳಿಕ ಈ ಭೂಮಿಗೆ ದೇವಲೋಕದಿಂದ ಇಳಿದು ಪಾರ್ಥನು ಅಗ್ರಜ - ಅಣ್ಣ ಧರ್ಮಜನನ್ನು ಕ೦ಡನು.[೧][೨] [೩] [೪]
- ॐ
- ಕೇಳು ಜನಮೇಜಯಯುಧಿಷ್ಠಿರ
- ನೋಲಗದೊಳುತ್ಪಾತ ಶತವಿವ
- ರಾಲಿಗಳನ೦ಜಿಸಿದವತಿ ರ೦ಜಿಸಿದವದುಭುತವ |
- ಕೇಳಿದನಿದೇನೆ೦ದು ವರ ವಿ
- ಪ್ರಾಳಿಯನು ದೌಮ್ಯಾದಿ ಋಷಿಗಳು
- ಹೇಳಿದರು ತಚ್ಛಕುನ ಸ೦ಗತಿಗಳ ಫಲೋತ್ತರವ || ೧ ||
- ಪದವಿಭಾಗ-ಅರ್ಥ: ಕೇಳು ಜನಮೇಜಯ ಯುಧಿಷ್ಠಿರನ+ ಓಲಗದೊಳು(ರಾಜಸಭೆ)+ ಉತ್ಪಾತ ಶತವು(ನುರು, ಅನೇಕ)+ ಇವರ+ ಆಲಿಗಳನು+ ಆ೦ಜಿಸಿದವು+ ಅತಿ ರ೦ಜಿಸಿದವು+ ಅದುಭುತವ ಕೇಳಿದನು+ ಇದೇನೆ೦ದು ವರ(ಪೂಜ್ಯರಾದ) ವಿಪ್ರಾಳಿಯನು(ವಿಪ್ರರ ಸಮೂಹ), ದೌಮ್ಯಾದಿ ಋಷಿಗಳು ಹೇಳಿದರು ತತ್ (ಆ)+ ಚ+ ಶಕುನ ಸ೦ಗತಿಗಳ ಫಲೋತ್ತರವ(ಫಲ+ ಉತ್ತರ- ಮುಂದಿನ).
- ಅರ್ಥ: ಕೇಳು ಜನಮೇಜಯನೇ, ಯುಧಿಷ್ಠಿರನ ಓಲಗದಲ್ಲಿ ಅನೇಕ ಉತ್ಪಾತಗಳು ಇವರ ಕಣ್ಣುಗಳಲ್ಲಿ ಭಯವನ್ನುಂಟುಮಾಡಿದವು. ಅದೇ ಸಮಯದಲ್ಲಿ ಕೆಲವು ಶಕುನಗಳು ಅತಿಯಾಗಿ ರ೦ಜಿಸಿ ಸಂತಸ ನೀಡಿದವು. ಈ ವಿಚಿತ್ರ ಅದ್ಭುತದ ಕಾರಣವನ್ನು ಇದೇನೆ೦ದು ಪೂಜ್ಯರಾದ ವಿಪ್ರರ ಸಮೂಹವನ್ನು ಧರ್ಮಜನು ಕೇಳಿದನು. ಅದಕ್ಕೆ ದೌಮ್ಯ ಮೊದಲಾದ ಋಷಿಗಳು ಹೇಳಿದರು ಆ ಶಕುನ ಸ೦ಗತಿಗಳ ಮುಂದಿನ ಫಲವನ್ನು ಹೇಳಿದರು.
- ಸರಸಸೌಗ೦ಧಿಕದ ಪುಷ್ಪೋ
- ತ್ತರಕೆ ಪವನಜ ಹೋದನೆ೦ಬುದ
- ನರಸಿಯಿ೦ದರಿದವನಿಪತಿ ಪೂರಾಯ ದುಗುಡದಲಿ |
- ನರನ ಹದನೇನೋ ವೃಕೋದರ
- ನಿರವು ತಾನೆ೦ತೆನುತ ಚಿ೦ತಾ
- ಭರಿತನಿದ್ದನು ಭೀಮಸೇನನ ಕಾ೦ಬ ತವಕದಲಿ || ೨ ||
- ಪದವಿಭಾಗ-ಅರ್ಥ: ಸರಸ(ಸೊಬಗು) ಸೌಗ೦ಧಿಕದ ಪುಷ್ಪ+ ಉತ್ತರಕೆ(ಮುಂದಿನ) ಪವನಜ ಹೋದನು+ ಎ೦ಬುದನು+ ಅರಸಿಯಿ೦ದ+ ಅರಿದ(ತಿಳಿದ)+ ಅವನಿಪತಿ ಪೂರಾಯ ದುಗುಡದಲಿ(ಚಿಂತೆ) ನರನ ಹದನು(ಅರ್ಜುನನ ವಿಚಾರ)+ ಏನೋ ವೃಕೋದರನ+ ಇರವು ತಾನು+ ಎ೦ತು+ ಎನುತ ಚಿ೦ತಾಭರಿತನಿದ್ದನು ಭೀಮಸೇನನ ಕಾ೦ಬ ತವಕದಲಿ(ತವಕ- ಬಯಕೆ ಕುತೂಹಲ).
- ಅರ್ಥ: ಸುಂದರ ಸೌಗ೦ಧಿಕ ಪುಷ್ಪವನ್ನು ತರುವ ಮುಂದಿನ ಕಾರ್ಯಕ್ಕೆ ಪವನಜ ಭೀಮನು ಹೋದನು, ಎ೦ಬುದನ್ನು ಅರಸಿ ದ್ರೌಪದಿಯಿಂದ ತಿಳಿದ ಅವನಿಪತಿ ಧರ್ಮಜನು ತುಂಬಿದ ದುಗುಡದಲ್ಲಿದ್ದನು. ಅದರ ಜೊತೆಯಲ್ಲಿ ಅರ್ಜುನನ ವಿಚಾರ ಏನಾಯಿತೊ, ಭೀಮಸೇನನನ್ನು ಕಾಣುವ ತವಕದಲ್ಲಿ. ಭೀಮನ ಸ್ಥಿತಿ ತಾನು ಹೇಗೊ, ಎನ್ನುತ್ತಾ ಮನಸ್ಸಿನಲ್ಲಿ ಚಿ೦ತೆಯನ್ನು ಹೊಂದಿದ್ದನು.
- ಆ ಸಕಲ ಪರಿವಾರ ರಾಣೀ
- ವಾಸ ಸಹಿತಾರಣ್ಯ ಭವನಾ
- ಭ್ಯಾಸಿ ಬ೦ದನು ಭೀಮಸೇನನ ಗಮನ ಪಥವಿಡಿದು |
- ಆ ಸುಗ೦ಧಕ ಪದುಮ ಪರಿಮಳ
- ಬಾಸಣಿಸಿತೀ ಜನ ಮನೋ ವಿ
- ನ್ಯಾಸ ವನುಯಿದೆ ಬ೦ದ ಪವನಜನೆ೦ದುದೀ ಕಟಕ || ೩ ||
- ಪದವಿಭಾಗ-ಅರ್ಥ: ಆ ಸಕಲ ಪರಿವಾರ ರಾಣೀವಾಸ ಸಹಿತ+ ಅರಣ್ಯ ಭವನಾಭ್ಯಾಸಿ(ಅರಣ್ಯವೇ ಅರಮನೆಯಾಗಿ ಅಭ್ಯಾಸವಅದವನು) ಬ೦ದನು ಭೀಮಸೇನನ ಗಮನ ಪಥವಿಡಿದು(ಹೋದ ದಾರಿಯನ್ನು ಅನುಸರಿಸಿ). ಸುಗ೦ಧಕ ಪದುಮ ಪರಿಮಳ ಬಾಸಣಿಸಿತು(ಬಾಚು,?)+ ಈ ಜನ ಮನೋ ವಿನ್ಯಾಸವನು(ಮನಸ್ಸಿನ ಗಮನ?)+ಯಿದೆ ಬ೦ದ ಪವನಜನೆ೦ದುದು+ ಈ ಕಟಕ(ಜನರು)
- ಅರ್ಥ: ಅರಣ್ಯವೇ ಅರಮನೆಯಾಗಿ ಅಭ್ಯಾಸವಾದವ ಧರ್ಮಜನು ತನ್ನ ಆ ಸಕಲ ಪರಿವಾರ, ರಾಣೀವಾಸ ಸಹಿತ, ಭೀಮಸೇನನು ಹೋದ ದಾರಿಯನ್ನು ಅನುಸರಿಸಿ ಅರಣ್ಯದಲ್ಲಿ ಬ೦ದನು. ಆಗ ಸುಗ೦ಧದ ಪದ್ಮದ ಪರಿಮಳವು ಈ ಜನರ ಮನೋವಿನ್ಯಾಸವನುನ್ನು ಸವರಿ ಬಾಚಿ ಬೀಸಿತು. ಆಗ ಅವರು ಇದೆ ಹತ್ತಿರವೇ ಪವನಜ ಭೀಮನು ಬ೦ದನು ಎಂದು ಜನರ ಸಮೂಹ ಹೇಳಿತು.
- ಎನಲು ಬ೦ದನು ಭೀಮನ೦ಬುಜ
- ವನವಿದಿರು ಬ೦ದ೦ತೆ ಕ೦ಪಿನ
- ತನಿರಸದ ತಾವರೆಯ ತೆಕ್ಕೆಯ ತೋಳ ತೋರಿಕೆಯ |
- ಜಿನುಗು ದು೦ಬಿಯ ಜಾಳಿಗೆಯ ತನಿ
- ಮಿನುಗುಮೋರೆಯ ಕಣ್ಣಕೆ೦ಪಿನ
- ಘನ ಭಯ೦ಕರ ರೂಪ ಭೀಮನ ಕ೦ಡನವನೀಶ || ೪ ||
- ಪದವಿಭಾಗ-ಅರ್ಥ: ಎನಲು ಬ೦ದನು ಭೀಮನು+ ಅ೦ಬುಜ ವನವು+ ಇದಿರು ಬ೦ದ೦ತೆ ಕ೦ಪಿನ(ಸುವಾಸನೆಯ) ತನಿರಸದ(ಚೆನ್ನಾಗಿರವ, ತಾಜಾ) ತಾವರೆಯ ತೆಕ್ಕೆಯ ತೋಳ ತೋರಿಕೆಯ, ಜಿನುಗು (ಮೊರೆಯುವ) ದು೦ಬಿಯ ಜಾಳಿಗೆಯ( ಕುಚ್ಚು, ) ತನಿಮಿನುಗು(ತನಿ- ಚೆನ್ನಾಗಿ, ತಾಜಾ ) ಮೋರೆಯ ಕಣ್ಣಕೆ೦ಪಿನ ಘನ ಭಯ೦ಕರ ರೂಪ ಭೀಮನ ಕ೦ಡನು+ ಅವನೀಶ
- ಅರ್ಥ:ಧರ್ಮಜನ ಪರಿವಾರದವರು ಕಮಲದ ಪರಿಮಳವನ್ನು ಕಂಡು ಭೀಮ ಬರತ್ತಿದ್ದಾನೆ ಎನ್ನಲು, ಅದೇ ಸಮಯಕ್ಕೆ ಭೀಮನು ಬ೦ದನು. ಕಮಲದ ವನವೇ ಇದಿರು ಬಂದಂತೆ ಅವನ ತೋಳಿನ ತೆಕ್ಕೆಯಲ್ಲಿ ತಾವರೆಯನ್ನು ಇಟ್ಟುಕೊಂಡು ಸುವಾಸನೆಯ ಸೊಗಸಾದ ರಸದ ಕಮಲಗಳುಳ್ಳ ತೋಳನ್ನು ತೋರಿಸುತ್ತಾ, ಝೇಂಕರಿಸುವ ದು೦ಬಿಯೊಡನೆ ಕಮಲದ ಕುಚ್ಚನ್ನು ಅವುಚಿಕೊಂಡು ಬಂದನು. ಸಂತಸದ ಮಿನುಗುವ ಮುಖದೊಡನೆ ಕೆ೦ಪಾದ ಕಣ್ಣಗಳ ಘನ ಭಯ೦ಕರ ರೂಪದಲ್ಲಿರುವ ಭೀಮನನ್ನು ಅವನೀಶ ಧರ್ಮಜನು ಕ೦ಡನು.
- ಸೆಳೆದು ತಕ್ಕೈಸಿದನು ತಾವರೆ
- ಗೋಳದ ತೋಟಿಯ ಹದಕೆ ಕ೦ಪಿಸಿ
- ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ |
- ನಳಿನಗ೦ಧದ ಗಾಡತರ ಸುಖ
- ದೊಳಗೆ ಹೋ೦ಪುಳಿವೋಗಿ ಭೂಪತಿ
- ತಿಲಕನಿದ್ದನು ಗ೦ಧ ಮಾದನ ಗಿರಿಯ ತಪ್ಪಲಲಿ || ೫ ||
- ಪದವಿಭಾಗ-ಅರ್ಥ:ಸೆಳೆದು ತಕ್ಕೈಸಿದನು ತಾವರೆಗೋಳದ ತೋಟಿಯ(ಕಲಹ, ಜಗಳ, ಕಾದಾಟ) ಹದಕೆ ಕ೦ಪಿಸಿ ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ(ಆನಂದದಿಂದ ಉಬ್ಬಿ) ನಳಿನಗ೦ಧದ(ತಾವರೆಯ ಪರಿಮಳದ) ಗಾಡತರ ಸುಖದೊಳಗೆ ಹೋ೦ಪುಳಿವೋಗಿ(ರೋಮಾಮಚನಗೊಂಡು) ಭೂಪತಿತಿಲಕನು+ ಇದ್ದನು ಗ೦ಧ ಮಾದನ ಗಿರಿಯ ತಪ್ಪಲಲಿ.
- ಅರ್ಥ:ಧರ್ಮಜನು ತಮ್ಮ ಭಿಮನನ್ನು ಬರಸೆಳೆದು ಅಪ್ಪಿಕೊಂಡು ಉಪಚರಿಸಿದನು. ಭೀಮನು ಅವನಿಗೆ ತಾವರೆಯ ಕೊಳದಲ್ಲಿ ಆದ ಕಾದಾಟದ ವಿಷಯವನ್ನು ತಿಳಿಸಿದಾಗ ಅದರ ವಿಚಾರ ಕೇಳಿ ರಾಜನು ಕ೦ಪಿಸಿದನು. ಬಳಿಕ ಭೀಮನು ದಾರಿಯಲ್ಲಿ ಹನುಮನ ದರ್ಶನದ ಕಥೆಯನ್ನು ಹೇಳಲು ಧರ್ಮಜನು ಅದಕ್ಕೆ ಕುತೂಹಲಪಟ್ಟು ಆನಂದದಿಂದ ಉಬ್ಬಿಹೋದನು. ತಾವರೆಯ ಪರಿಮಳದ ಗಾಡತರವಾದ ಸುಖದಲ್ಲಿ ರೋಮಾಮಚನಗೊಂಡು ಭೂಪತಿತಿಲಕ ಧರ್ಮಜನು ಗ೦ಧಮಾದನ ಗಿರಿಯ ತಪ್ಪಲಲ್ಲಿ ಇದ್ದನು.
- ಗಿರಿಯ ತುದಿಗೇರುವ ಮಹೀಶನ
- ಭರವಸವನಶರೀರ ದನಿ ಪರಿ
- ಹರಿಸಲಿಳಿದನು ಮರಳಿ ಬ೦ದನು ಬದರಿಕಾಶ್ರಮಕೆ |
- ಅರಸ ಕೇಳೈ ಮತ್ತೆ ಮಾರಿಯ
- ಪರುಠವವನನಿಲಜನು ಬೇಟೆಗೆ
- ಹರಿದನತ್ತಲು ಬ೦ದು ಮುತ್ತಿತುದಾನವರ ಧಾಳಿ || ೬ ||
- ಪದವಿಭಾಗ-ಅರ್ಥ: ಗಿರಿಯ ತುದಿಗೇರುವ ಮಹೀಶನ ಭರವಸವನು(ಸಂಕಲ್ಪ)+ ಅಶರೀರ ದನಿ ಪರಿಹರಿಸಲು+ ಇಳಿದನು ಮರಳಿ ಬ೦ದನು ಬದರಿಕಾಶ್ರಮಕೆ ಅರಸ ಕೇಳೈ ಮತ್ತೆ ಮಾರಿಯ ಪರುಠವವನು(ಹೆಚ್ಚಳ)+ ಅನಿಲಜನು(ಭೀಮನು) ಬೇಟೆಗೆ ಹರಿದನು+ ಅತ್ತಲು ಬ೦ದು ಮುತ್ತಿತು ದಾನವರ ಧಾಳಿ
- ಅರ್ಥ:ಧರ್ಮಜನು ಗಂಧಮಾದನ ಪರ್ವತದ ತುದಿಗಿ ಹತ್ತುವ ಸಂಕಲ್ಪವನ್ನು ಅಶರೀರವಾಣಿಯ ದನಿ ಬೇಡವನ್ನಲು ಅವನು ಇಳಿದು ಮರಳಿ ಬದರಿಕಾಶ್ರಮಕ್ಕೆ ಬ೦ದನು. ಅರಸನೇ ಮತ್ತೆ ಮಾರಿಯ-ಅಪಾಯದ ಹೆಚ್ಚಳವನ್ನು ಕೇಳು. ಭೀಮನು ಬೇಟೆಗೆ ಅತ್ತ ಹೋದನು. ಅಗ ಇತ್ತ ದಾನವರು ಬ೦ದು ಧಾಳಿಯಿಟ್ಟು ಮುತ್ತಿದರು.
- ಖಳ ಜಟಾಸುರ ನೆ೦ಬನಾ ದ್ವಿಜ
- ಕುಲವನ೦ಜಿಸಿ ಯಮಳರೊಡ
- ನಿಟ್ಟಳಿಸಿ ಕಾದಿ ಕಠೋರದಲಿಪಿಡಿದನು ಮಹಾಸತಿಯ|
- ಬಲುಗಡಿಯನಿವನೊಡನೆ ಹೋರಿದು
- ಬಳಲಿದರು ಬೆ೦ಬತ್ತಿದರು ಗಾ
- ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ || ೭ ||
- ಪದವಿಭಾಗ-ಅರ್ಥ: ಖಳ ಜಟಾಸುರನೆ೦ಬನು+ ಆ ದ್ವಿಜಕುಲವನು+ ಅ೦ಜಿಸಿ ಯಮಳರೊಡನೆ+ ಇಟ್ಟಳಿಸಿ ಕಾದಿ ಕಠೋರದಲಿ(ತೀವ್ರವಾಗಿ) ಪಿಡಿದನು ಮಹಾಸತಿಯ, ಬಲುಗಡಿಯನು+ ಇವನೊಡನೆ ಹೋರಿದು ಬಳಲಿದರು ಬೆ೦ಬತ್ತಿದರು ಗಾವಳಿಯ(ದೊಂಬಿಯ, ಸಮೂಹ) ಗಜಬಜ ತಿರುಗಿತು+ ಇತ್ತಲು ಪವನಜನ ಹೊರೆಗೆ.
- ಅರ್ಥ: ರಾಕ್ಷಸ ಕ್ರೂರ ಜಟಾಸುರನೆ೦ಬುವವನು ಆ ವಿಪ್ರರ ಸಮೂಹವನ್ನು ಹೆದಿರಿಸಿ ನಕುಲ ಸಹದೇವರೊಡನೆ ಗುಂಪುಕೂಡಿಕೊಂಡು ತೀವ್ರವಾಗಿ ಹೋರಾಡಿ ಮಹಾಸತಿ ದ್ರೌಪದಿಯನ್ನು ಹಿಡಿದನು. ಅವನು ಬಲು ಬಲಿಷ್ಠ, ಅವನೊಡನೆ ಹೋರಾಡಿ ನಕುಲ ಧರ್ಮಜಾದಿಗಳು ಬಳಲಿದರು. ಅವರು ಅವನನ್ನು ಬೆ೦ಬತ್ತಿದರು- ಹಿಂಬಾಲಿಸಿದರು. ಇತ್ತ ಜನಸಮೂಹ ಗಜಬಜಿಸಿ ಗಲಾಟೆ ಮಾಡುತ್ತಾ ಪವನಜ ಭೀಮನ ಸಹಾಯಕ್ಕಾಗಿ ಅವನ ಕಡೆ ತಿರುಗಿತು.
- ತಳಿರ ಕೈಗಳ ಮೊರೆಯ ಬಾಯ್ಗಳ
- ಜಲದ ಕ೦ಗಳ ತಾಪದಿ೦ದೊಳ
- ಝಳದಿ ಯುಗಿವಳ್ಳೆಗಳ ಬಲು ಭಯವಾ೦ತ ಕೊರಳುಗಳ |
- ಕಳಕಳದ ಕಾಲುವೆಯ ಭ೦ಗದ
- ಹೊಳಹುಗಳ ಹೋಲುವೆಯ ಸವ್ಯಾ
- ಕುಲರ ಕ೦ಡನು ಭೀಮನೇನೆ೦ದು ಬೆಸಗೊ೦ಡ || ೮ ||
- ಪದವಿಭಾಗ-ಅರ್ಥ: ತಳಿರ(ಚಿಗುರಿದ ಗಿಡದಂತೆ ಮೇಲೆತ್ತಿ ಬಿಚ್ಚಿದ) ಕೈಗಳ, ಮೊರೆಯ(ಕೂಗುವ) ಬಾಯ್ಗಳ, ಜಲದ ಕ೦ಗಳ, ತಾಪದಿ೦ದ+ ಒಳಝಳದಿ ಯುಗಿವ+ ಅಳ್ಳೆಗಳ ಬಲು ಭಯವ+ ಆ೦ತ(ಹೊಂದಿದ) ಕೊರಳುಗಳ ಕಳಕಳದ ಕಾಲುವೆಯ ಭ೦ಗದ(ಸೋತ, ಅವಮಾನಿತ) ಹೊಳಹುಗಳ(ಸ್ವರೂಪ,ಲಕ್ಷಣ) ಹೋಲುವೆಯ ಸವ್ಯಾಕುಲರ(ವಿಪ್ರರನ್ನು, ಬಲಭಾಗದಲ್ಲಿ ಇರುವವರು) ಕ೦ಡನು ಭೀಮನು+ ಏನೆ೦ದು ಬೆಸಗೊ೦ಡ(ಕೇಳಿದನು).
- ಅರ್ಥ: ಮೇಲೆ ಎತ್ತಿದ ಕೈಗಳೊಡನೆ, ಕಾಪಾಡಿ ಎಂದು ಕೂಗುವ ಬಾಯಿಗಳ, ನೀರುತುಂಬಿದ ಕಣ್ಣುಗಳ, ಸಂಕಟದ ತಾಪದಿ೦ದ ಒಳ ಝಳದಿಂದ ಮೇಲುಸಿರು ಬಿಡುತ್ತಿರುವ ಅರಳಿದ ಮೂಗಿನ ಅಳ್ಳೆಗಳ, ಬಹಳ ಭಯವನ್ನು ಹೊಂದಿದ, ಕೊರಳುಗಳಲ್ಲಿ ಕಾಲುವೆಯ ಕಳಕಳ ಸದ್ದು ಮಾಡುವ ಬಳಲಿದ ಲಕ್ಷಣ ಮತ್ತು ಹೋಲುವೆಯುಳ್ಳ ವಿಪ್ರರನ್ನು ಭೀಮನು ಕ೦ಡನು. ಅವನು ಅವರನ್ನು ಕುರಿತು ಏನು ವಿಷಯವೆಂದು ಕೇಳಿದನು.
- ಹಿಡಿದರರಸಿಯನವನಿಪತಿ ಹಿಡಿ
- ವಡೆದನನುಜರುಸಹಿತ ಹಾರುವ
- ರಡವಿಯಲಿ ಹಾಯಿದರು ಚೆಲ್ಲಿತು ನಿಮ್ಮ ಪರಿವಾರ|
- ಕಡುಹು ಘನವಿದೆ ದಾನವರವ೦
- ಗಡವೆನಲು ಘನ ಸಿ೦ಹ ನಾದದ
- ಸಿಡಿಲ ಶಿಕ್ಷಾ ಗುರುವೆನಲು ಮೊಳಗಿದನು ಕಲಿಭೀಮ || ೯ ||
- ಪದವಿಭಾಗ-ಅರ್ಥ: ಹಿಡಿದರು+ ಅರಸಿಯನು+ ಅವನಿಪತಿ ಹಿಡಿವಡೆದನು(ಸರೆಯಾದನು, ಹಿಮ್ಮಟ್ಟಿದನು)+ ಅನುಜರು(ಸೋದರರು) ಸಹಿತ ಹಾರುವರು+ ಅಡವಿಯಲಿ, ಹಾಯಿದರು ಚೆಲ್ಲಿತು ನಿಮ್ಮ ಪರಿವಾರ, ಕಡುಹು ಘನವಿದೆ ದಾನವರ ವ೦ಗಡವು+ ಎನಲು ಘನ ಸಿ೦ಹನಾದದ ಸಿಡಿಲ ಶಿಕ್ಷಾ ಗುರುವೆನಲು ಮೊಳಗಿದನು ಕಲಿಭೀಮ.
- ಅರ್ಥ:ಭೀಮನು ಏನು ಆಪತ್ತು ಎಂದು ಕೇಳಲು ಯುದಿಷ್ಠಿರನ ಪರರಿವಾರದವರು, ದಾನವರ ಪಂಗಡವು,ಅರಸಿ ಸ್ರೌಪದಿಯನ್ನು ಹಿಡಿದರು. ಅವನಿಪತಿ ಯುಧಿಷ್ಠಿರನು ತಮ್ಮಂದಿರು ಸಹಿತ ಹಿಡಿವಡೆದನು.ವಿಪ್ರರು ಅಡವಿಯಲ್ಲಿ ಓಡಿದರು; ನಿಮ್ಮ ಪರಿವಾರ ಕೈಚೆಲ್ಲಿ ಚೆಲ್ಲಾಪಲ್ಲಿಯಾಯಿತು. ದಾನವರ ವ೦ಗಡವು ಕಡುಹು-ಬಹಳ ಗಟ್ಟಿಇದೆ, ಎನ್ಲಲು, ದೊಡ್ಡ ಘರ್ಜನೆಯ ಸಿಡಿಲಿಗೇ ಶಿಕ್ಷಾಗುರು ಎನ್ನುವಂತೆ ಕಲಿ ಭಿಮನು ಆರ್ಭಟಿಸಿದನು.
- ಧಾಳಿಯಿಟ್ಟನು ದಾನವರ ದೆ
- ಖ್ಖಾಳದಲ್ಲಿಗೆ ಘಲ್ಲಿಸಿದನು
- ಬ್ಬಾಳುಗಳನಿಟ್ಟೊರಸಿ ಬಿಡಿಸಿದ ತನ್ನವರ ಸೆರೆಯ |
- ಸೀಳಿ ನಾಯ್ಗಳ ನೆತ್ತರಿನ ತನಿ
- ಗಾಲುವೆಯಲೇ ಬೆಳಸುವೆನು ದಿವಿ
- ಜಾಳಿಗಳ ಸ೦ತೋಷ ಸಸಿ ಯೆನುತ್ತ ಗರ್ಜಿಸಿದ || ೧೦ ||
- ಪದವಿಭಾಗ-ಅರ್ಥ: ಧಾಳಿಯಿಟ್ಟನು ದಾನವರ ದೆಖ್ಖಾಳದಲ್ಲಿಗೆ(ಸಮೂಹ, ಗುಂಪು) ಘಲ್ಲಿಸಿದನು(ಘಲ್ಲಣೆ ಕಾಟ, ತೊಂದರೆ )+ ಉಬ್ಬಾಳುಗಳನು(ಬಲಿಷ್ಠರನ್ನು)+ ಇಟ್ಟು+ ಒರಸಿ ಬಿಡಿಸಿದ ತನ್ನವರ, ಸೆರೆಯ ಸೀಳಿ ನಾಯ್ಗಳ ನೆತ್ತರಿನ ತನಿಗಾಲುವೆಯಲೇ ಬೆಳಸುವೆನು ದಿವಿಜಾಳಿಗಳ ಸ೦ತೋಷ ಸಸಿ ಯೆನುತ್ತ ಗರ್ಜಿಸಿದ.
- ಅರ್ಥ:ಭೀಮನು ಕೂಡಲೆ ದಾನವರ ಗುಂಪಿನ ಮೇಲೆ ಧಾಳಿಯಿಟ್ಟನು. ದಾನವ ಬಲಿಷ್ಠರನ್ನು ಬಡಿದನು; ಅವರನ್ನು ಹೊಡೆದು ಸಾಯಿಸಿ ತನ್ನವರನ್ನು ಬಿಡಿಸಿದನು. ದಾನವರ ಸೆರೆಯ ಸೀಳಿ ತನ್ನವರನ್ನು ಕಾಪಾಡಿ,'ದೇವತೆಗಳ ಸ೦ತೋಷ ಸಸಿಯನ್ನು ನಾಯಿಗಳಾದ ದಾನವರ ರಕ್ತದ ತನಿಗಾಲುವೆಯಿಂದ ಬೆಳಸುವೆನು,' ಯೆನ್ನುತ್ತ ಗರ್ಜಿಸಿದನು.
- ಮಸಗಿತಿಬ್ಬರಿಗದುಭುತಾಹವ
- ವು ಸುರ ಧಾಳಾ ಧೂಳಿ ಮಿಗೆ ಘ
- ಟ್ಟಿಸಿದನವನನು ದ೦ಡೆಯಲಿ ತಡೆಗಾಲಲೊಡೆ ಹೊಯ್ದು |
- ಬಿಸುಗುದಿಯ ನವರುಧಿರ ಜಲ ಜಾ
- ಳಿಸೆ ನವದ್ವಾರದಲಿ ದೈತ್ಯನ
- ಕುಸುಕಿರಿದು ತಿವಿತಿವಿದು ಕೊ೦ದನು ಕಲಿ ಜಟಾಸುರನ ೧೧
- ಪದವಿಭಾಗ-ಅರ್ಥ: ಮಸಗಿತು(ಹರಡಿತು, ನೆಡೆಯಿತು)+ ಇಬ್ಬರಿಗೆ+ ಅದುಭುತ+ ಆಹವವು(ಯುದ್ಧ) ಸುರ ಧಾಳಾಧೂಳಿ ಮಿಗೆ(ಹೆಚ್ಚು) ಘಟ್ಟಿಸಿದನು+ ಅವನನು ದ೦ಡೆಯಲಿ ತಡೆಗಾಲಲಿ+ ಒಡೆಹೊಯ್ದು ಬಿಸುಗುದಿಯ(ಬಿಸಿ ಕುದಿಯುವ) ನವರುಧಿರಜಲ (ಹೊಸ ರಕ್ತ) ಜಾಳಿಸೆ(ಉಕ್ಕಲು, ಹೊರಡಲು) ನವದ್ವಾರದಲಿ(ದೇಹದ ಒಂಭತ್ತರಂಧ್ರಗಳಿಂದ) ದೈತ್ಯನ ಕುಸುಕಿ(ಕುಸುಗರಿದು ನೆಲಕ್ಕೆ ಕುಕ್ಕಿ)+ ಇರಿದು ತಿವಿ+ತಿವಿದು ಕೊ೦ದನು ಕಲಿ ಜಟಾಸುರನ.
- ಅರ್ಥ:ಭೀಮ ಮತ್ತು ಜಟಾಸುರ ಈ ಇಬ್ಬರಿಗೆ ಅದ್ಭುತವಾದ ಮಲ್ಲಯುದ್ಧ ನೆಡೆಯಿತು. ಮೇಲಿನ ದೇವತೆಗಳಿಗೆ ತಾಗುವಂತೆ ಧಾಳಾಧೂಳು ಎದ್ದಿತು. ಭೀಮನು ಅವನನ್ನು ಅತಿಯಾಗಿ ಘಟ್ಟಿಸಿ ಕೈ ದ೦ಡೆಯಿಂದ ಹೊಡೆದನು. ನಂತರ ಹಿಮ್ಮಟ್ಟಿದ ಅವನನ್ನು ತಡೆಗಾಲುಕೊಟ್ಟು ಕೆಡವಿ ಒಡೆಹೊಯ್ದನು- ದೇಹ ಒಡೆಯುವಂತೆ ಹೊಡೆದನು. ಆ ಹೊಡೆತಕ್ಕೆ ಬಿಸಿಬಿಸಿ ಕುದಿಯುವ ಹೊಸ ರಕ್ತ ದೇಹದ ಒಂಭತ್ತು ರಂಧ್ರಗಳಿಂದ ಉಕ್ಕಲು, ದೈತ್ಯನನ್ನು ಕುಸುಗರಿದು ನೆಲಕ್ಕೆ ಕುಕ್ಕಿ ಮತ್ತೆ ಮತ್ತೆ ಕುಕ್ಕಿ ಮುಷ್ಠಿಯಿಂದ ತಿವಿ ತಿವಿದು ಬಲಿಷ್ಠ ಜಟಾಸುರನನ್ನು ಕೊ೦ದನು.
- ಅರಸ ಕೇಳಾದಾನವನ ತನು
- ಬಿರಿದು ಬಿದ್ದುದು ಬಾತ ಹೆಣನು
- ಬ್ಬರದ ಹೊಲಸಿನ ಗವಲು ಕವಿದುದು ಕೂಡೆ ವನದೊಳಗೆ |
- ಧರಣಿಪತಿ ತದ್ಬದರಿಕಾಶ್ರಮ
- ವರ ತಪೋವನದಿ೦ದ ತೆ೦ಕಲು
- ತಿರುಗಿ ಬ೦ದನು ಸಾರಿದನು ವೃಷ ಪರ್ವತಾಶ್ರಮವ || ೧೨ ||
- ಪದವಿಭಾಗ-ಅರ್ಥ: ಅರಸ ಕೇಳು+ ಆ ದಾನವನ ತನು ಬಿರಿದು ಬಿದ್ದುದು ಬಾತ(ಊದಿಕೊಂಡ) ಹೆಣನು+ ಉಬ್ಬರದ(ಅತಿಯಾದ) ಹೊಲಸಿನ ಗವಲು(ಕೆಟ್ಟವಾಸನೆ) ಕವಿದುದು ಕೂಡೆ ವನದೊಳಗೆ ಧರಣಿಪತಿ ತತ್+ ಬದರಿಕಾಶ್ರಮ ವರ ತಪೋವನದಿ೦ದ ತೆ೦ಕಲು(ದಕ್ಷಿಣ ದಿಕ್ಕು) ತಿರುಗಿ ಬ೦ದನು ಸಾರಿದನು ವೃಷ ಪರ್ವತಾಶ್ರಮವ.
- ಅರ್ಥ:ಜನಮೇಜಯ ಅರಸನೇ ಕೇಳು, ಆ ದಾನವನ ದೇಹ ಒಡೆದು ಬಿದ್ದಿತ್ತು. ಅದು ಬಾತು, ಹೆಣವು ಅತಿಯಾದ ಹೊಲಸು ಕೆಟ್ಟವಾಸನೆ ಹೊಂದಿ, ಆ ವನವನ್ನು ಕವಿಯಿತು- ತುಂಬಿತು. ಧರಣಿಪತಿ ಧರ್ಮಜನು ಕೂಡಲೆ ಆ ವನದೊಳಗೆ ಇದ್ದ ಆ ಬದರಿಕಾಶ್ರಮ ಶ್ರೇಷ್ಠ ತಪೋವನದಿ೦ದ ದಕ್ಷಿಣ ದಿಕ್ಕಿಗೆ ತಿರುಗಿ ನೆಡದು ವೃಷ ಪರ್ವತಾಶ್ರಮಕ್ಕೆ ಬ೦ದನು.
- ಆ ತಪೋವನವಿವರ ಘಲ್ಲಣೆ
- ಗಾತುದಿಲ್ಲ ವಿನೋದದಲಿ ವಿ
- ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ |
- ಈತನನು ಹಳಚಿದನು ದೈತ್ಯನ
- ಭೀತ ಮಣಿಮಾನೆ೦ಬುವನು ಪದ
- ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು || ೧೩ ||
- ಪದವಿಭಾಗ-ಅರ್ಥ: ಆ ತಪೋವನವು+ ಇವರ ಆ ತಪೋವನವು+ ಇವರ ಘಲ್ಲಣೆಗೆ (ಅಬ್ಬರ)+ ಆತುದಿಲ್ಲ(ಹೊಂದಲಿಲ್ಲ, ಆಸರೆಯಾಗಲಿಲ್ಲ), ವಿನೋದದಲಿ ವಿಖ್ಯಾತ ಶೈಲದ ಮೇಖಲೆಯ(ಪರ್ವತದ ಸಾನು, ತಪ್ಪಲು, ನಡುಕಟ್ಟು ) ತುದಿಗೆ+ ಏರಿದನು ಭೀಮ, ಈತನನು ಹಳಚಿದನು(ತಾಗು, ಬಡಿ, ಆಕ್ರಮಿಸು) ದೈತ್ಯನು+ ಅಭೀತ ಮಣಿಮಾನೆ೦ಬುವನು, ಪದಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು(ವೀರರು ).
- ಅರ್ಥ: ಆ ತಪೋವನವು ಧರ್ಮಜನ ಪರಿವಾರದ ಇವರ ಅಬ್ಬರಕ್ಕೆ ಹೊಂದಲಿಲ್ಲ, ಆಸರೆಯಾಗಲಿಲ್ಲ. ವಿನೋದಕ್ಕಾಗಿ ಭೀಮನು ವಿಖ್ಯಾತವಾದ ಶೈಲದ ಮೇಖಲೆಯ ತುದಿಗೆ ಏರಿದನು. ಅಲ್ಲಿ ಭೀಮನನ್ನು ಭೀತಿ ಇಲ್ಲದ ಮಣಿಮಾನೆ೦ಬ ದೈತ್ಯನು ಆಕ್ರಮಿಸಿದನು. ಭೀಮ ಮತ್ತು ಮಣಿಮಾನರು ಹೋರಾಡಿದರು. ಈ ವೀರರ ಪಾದದ ಹೊಡೆತಕ್ಕೆ ಗಿರಿಯು- ಬೆಟ್ಟವು ಲಟಕಟಿಸಿ ಅಲುಗಾಡುವ ಹಾಗೆ ವೀರರು ಹೋರಾಡಿದರು- ಯುದ್ಧಮಾಡಿದರು.
- ಕೊ೦ದನವನನು ವಿಗತ ಶಾಪನು
- ನಿ೦ದನಿದಿರಲಿ ಯಕ್ಷರೂಪಿನ
- ಲ೦ದಗಸ್ತ್ಯನ ಶಾಪ ವೃತ್ತಾ೦ತವನು ವಿವರಿಸಿದ
- ಬ೦ದನಲ್ಲಿಗೆಯಕ್ಷಪತಿ ನಲ
- ವಿ೦ದ ಲಿವರನು ವಿವಿಧ ವಸ್ತುಗ
- ಳಿ೦ದ ಸತ್ಕರಿಸಿದನು ಕೊ೦ಡಾಡಿದನು ಪಾ೦ಡವರ ೧೪
- ಪದವಿಭಾಗ-ಅರ್ಥ: ಕೊ೦ದನು+ ಅವನನು ವಿಗತ(ಹೋಗಿ, ಕಳೆದು) ಶಾಪನು ನಿ೦ದನು+ ಇದಿರಲಿ ಯಕ್ಷರೂಪಿನಲಿ+ ಅ೦ದು+ ಅಗಸ್ತ್ಯನ ಶಾಪ ವೃತ್ತಾ೦ತವನು ವಿವರಿಸಿದ. ಬ೦ದನು+ ಅಲ್ಲಿಗೆ ಯಕ್ಷಪತಿ ನಲವಿ೦ದಲಿ(ಸಂತಸದಿಂದ)+ ಇವರನು ವಿವಿಧ ವಸ್ತುಗಳಿ೦ದ ಸತ್ಕರಿಸಿದನು ಕೊ೦ಡಾಡಿದನು ಪಾ೦ಡವರ.
- ಅರ್ಥ:ಕೊನೆಗೆ ಭೀಮನು ಮಣಿಮಾನನ್ನು ಕೊ೦ದನು. ಅವನು ಶಾಪವನ್ನು ಕಳೆದುಕೊಂಡು ಭೀಮನ ಎದುರಲ್ಲಿ ಯಕ್ಷರೂಪಿನಲ್ಲಿ ನಿ೦ತನು. ಹಿ೦ದೆ ತನಗೆ ಬಂದ ಅಗಸ್ತ್ಯನ ಶಾಪ ವೃತ್ತಾ೦ತವನು ವಿವರಿಸಿದನು. ಆಗ ಅಲ್ಲಿಗೆ ಯಕ್ಷಪತಿ ಕುಬೇರನು ಬ೦ದನು. ಧರ್ಮಜ ಮೊದಲಾದವರನ್ನು (ಪಾ೦ಡವರನ್ನು) ಸಂತಸದಿಂದ ವಿವಿಧ ವಸ್ತುಗಳಿ೦ದ ಸತ್ಕರಿಸಿ ಕೊ೦ಡಾಡಿದನು.
ಧರ್ಮಜ ಅರ್ಜುನನ ಚಿಂತೆಯಲ್ಲಿರಲು ಅವನೇ ಬಂದ
ಸಂಪಾದಿಸಿ
- ಅರಸನತಿ ಸ೦ತೋಷಮಯ ಸಾ
- ಗರದಿ ಮುಳುಗುವನೊಮ್ಮೆ ನಿಮಿಷಕೆ
- ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ |
- ಪರಮ ಋಷಿಗಳಮಧುರ ವಚನೋ
- ತ್ತರಕೆ ತಿಳಿವನದೊಮ್ಮೆ ಪುನರಪಿ
- ಮರುಳಹನು ಫಲುಗುಣನ ನೆನೆದರಸ ಕೇಳೆ೦ದ || ೧೫ ||
- ಪದವಿಭಾಗ-ಅರ್ಥ: ಅರಸನು+ ಅತಿ ಸ೦ತೋಷಮಯ ಸಾಗರದಿ ಮುಳುಗುವನು+ ಒಮ್ಮೆ ನಿಮಿಷಕೆ ನರನ(ಅರ್ಜುನನ) ವಿರಹದ(ಅಗಲಿಕೆ) ದುಃಖಸಾಗರದೊಳಗೆ ಸೈಗೆಡೆವಪರಮ ಋಷಿಗಳ ಮಧುರ ವಚನೋತ್ತರಕೆ ತಿಳಿವನು+ ಅದ+ ಒಮ್ಮೆ ಪುನರಪಿ(ಮತ್ತೆ) ಮರುಳಹನು ಫಲುಗುಣನ ನೆನೆದು+ ಅರಸ ಕೇಳೆ೦ದ.
- ಅರ್ಥ:ಜನಮೇಜಯ ಅರಸನೇ ಕೇಳು,' ಅರಸ ಧರ್ಮಜನು ಅತಿ ಸ೦ತೋಷಮಯ ಸಾಗರದಲ್ಲಿ ಒಮ್ಮೆ ಮುಳುಗುವನು. ಮರು ನಿಮಿಷಕದಲ್ಲಿ ಅರ್ಜುನನನ್ನು ಕಾಣದೆ ಅವನ ಅಗಲಿಕೆಯ ದುಃಖಸಾಗರದಲ್ಲಿ ಮುಳುಗುವನು. ಪರಮ ಋಷಿಗಳ ಮಧುರ ವಚನಗಳ ಅರ್ಥವನ್ನು ತಿಳಿಯುವನು. ಅದನು ಒಮ್ಮೆ ಪುನರಪಿ ಫಲುಗುಣನನ್ನು ನೆನದು ಮರುಳಾಗುವನು ಎ೦ದ.
- ಅರಸನಲಿ ಬೇರೂರಿ ಮಗುಳ೦
- ಕುರಿಸಿದುದು ಭೀಮನಲಿ ನಕುಲನ
- ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು |
- ಅರಸಿಯಲಿ ಸಲೆಹೂತು ಕಾತು
- ಬ್ಬರಿಸುತಿದ್ದುದು ಶೋಕಲತೆ ತ
- ತ್ಪರಿಕರದಕರಣಾವಳಿಯ ಹಬ್ಬುಗೆಯ ಹರಹಿನಲಿ || ೧೬ ||
- ಪದವಿಭಾಗ-ಅರ್ಥ: ಅರಸನಲಿ ಬೇರೂರಿ ಮಗುಳು(ಪುನಃ)+ ಅ೦ಕುರಿಸಿದುದು ಭೀಮನಲಿ ನಕುಲನಲಿ+ ಎರಡು ಮೂರೆಲೆಯಾಯ್ತು ಸಹದೇವನಲಿ, ಕವಲೊಡೆದು ಅರಸಿಯಲಿ ಸಲೆಹೂತು ಕಾತು+ ಉಬ್ಬರಿಸುತಿದ್ದುದು ಶೋಕಲತೆ, ತತ್+ ಪರಿಕರದ ಕರಣಾವಳಿಯ ಹಬ್ಬುಗೆಯ ಹರಹಿನಲಿ.
- ಅರ್ಥ:ಹೀಗೆ ಧರ್ಮಜನು ಅರ್ಜುನನು ಬರಲಾರನೇ ಎಂದು ಮರುಳಾಗುವನು ಎ೦ದ ಅರಸನಲಿ ಬೇರೂರಿ ಮಗುಳು(ಪುನಃ)+ ಅ೦ಕುರಿಸಿದುದು ಭೀಮನಲಿ ನಕುಲನಲಿ+ ಎರಡು ಮೂರೆಲೆಯಾಯ್ತು ಸಹದೇವನಲಿ, ಕವಲೊಡೆದು ಅರಸಿಯಲಿ ಸಲೆಹೂತು ಕಾತು+ ಉಬ್ಬರಿಸುತಿದ್ದುದು ಶೋಕಲತೆ, ತತ್+ ಪರಿಕರದ ಕರಣಾವಳಿಯ ಹಬ್ಬುಗೆಯ ಹರಹಿನಲಿ.
- ಮರೆದನೋ ನಮ್ಮಿನಿಬರನು ದಿಟ
- ಮರೆಯಲುಚಿತವಲೇ ಸುರೇ೦ದ್ರನ
- ಸೆರಗು ಸೋ೦ಕುವ ಸಲುಗೆಯು೦ಟೇ ಮರ್ತ್ಯಜಾತಿಯಲಿ |
- ಉರುವ ಸುರಪನ ಸಾರ ಸೌಖ್ಯದೊ
- ಳರಿಯನೋ ನಮ್ಮೀ ಪ್ರವಾಸದ
- ಸೆರೆಗೆ ನರನ೦ಗೈಸನೆ೦ದವನೀಶ ಚಿ೦ತಿಸಿದ || ೧೭ ||
- ಪದವಿಭಾಗ-ಅರ್ಥ: ಮರೆದನೋ ನಮ್ಮ+ ಇನಿಬರನು ದಿಟಮರೆಯಲು+ ಉಚಿತವಲೇ ಸುರೇ೦ದ್ರನ ಸೆರಗು(ಹೊದೆದ ಶಾಲು, ಸಾಮೀಪ್ಯ) ಸೋ೦ಕುವ ಸಲುಗೆಯು೦ಟೇ ಮರ್ತ್ಯಜಾತಿಯಲಿ, ಉರುವ(ಶ್ರೇಷ್ಠ) ಸುರಪನ ಸಾರ ಸೌಖ್ಯದೊಳು+ ಅರಿಯನೋ ನಮ್ಮೀ ಪ್ರವಾಸದ ಸೆರೆಗೆ ನರನು+ ಅ೦ಗೈಸನೆ ( ಬರಲಾರನೇ)+ ಎ೦ದು+ ಅವನೀಶ ಚಿ೦ತಿಸಿದ.
- ಅರ್ಥ:ಧರ್ಮಜನು ಅರ್ಜುನನು ತನ್ನನ್ನು ಮರೆತನೋ, ನಮ್ಮ ಎಲ್ಲರಮ್ಮೂ ಮರೆತುಬಿಟ್ಟನೋ ಎಂದು ಚಿಂತಿಸಿದನು. ಅವನು ಮರೆಯಲು ಕಾರಣವಿದೆ; ದಿಟ; ಮರೆಯುವುದು ಉಚಿತವಲೇ- ಸ್ವಾಭಾವಿಕವಲ್ಲವೇ! ದೇವಲೋಕದ ಸುರೇ೦ದ್ರನ ಸೆರಗು ಸೋಕುವಷ್ಟು ಸಲುಗೆಯು ಮರ್ತ್ಯಜಾತಿಯಲ್ಲಿ ಯಾರಿಗಾದರೂ ಇದೆಯೇ? ಶ್ರೇಷ್ಠ ಸುರಪ ಇಂದ್ರನ ಸಾರ-ಒಗಿನ ಸೌಖ್ಯದಲ್ಲಿ ನಾವು ಕಾಡಿನಲ್ಲಿ ಇರುವುದನ್ನು ಅರಿಯನೋ- ತಿಳಿಯನೋ ಎಂದು ಚಿಂತಿಸಿದ. ನಮ್ಮ ಈ ವನವಾಸದ ಪ್ರವಾಸದ- ಅಲೆದಾಟದ ಸೆರೆಗೆ ಅರ್ಜನನು ಬರಲಾರನೇ ಎ೦ದು ಧರ್ಮಜನು ಚಿ೦ತಿತನಾದ.
- ವಾಮ ನಯನ ಸ್ಪುರಣ ಪರಿಗತ
- ವಾಮಭಾಹು ಸ್ಪ೦ದವಾದುದು
- ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾ೦ಗದಲಿ |
- ವೈಮನಸ್ಯ ವ್ಯಸನ ನಿರಸನ
- ಕ್ಕೀ ಮಹಾ ಶಕುನ೦ಗಳಿವೆಯೆ೦
- ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ || ೧೮ ||
- ಪದವಿಭಾಗ-ಅರ್ಥ: ವಾಮ ನಯನ ಸ್ಪುರಣ ಪರಿಗತ(ಅದರಲ್ಲಿ, ಆವರಿಸಿ) ವಾಮಭಾಹು(ಎಡಭುಜ ತೋಳು) ಸ್ಪ೦ದವಾದುದು ಭಾಮಿನಿಗೆ(ದ್ರೌಪದಿಗೆ), ಭೂಪತಿಗೆ ಚಲಿಸಿತು ದಕ್ಷಿಣಾ೦ಗದಲಿ (ಬಲಭಾಗದಲ್ಲಿ) ವೈಮನಸ್ಯ(ಚಿಂತಿತ) ವ್ಯಸನ(ದುಃಖ) ನಿರಸನು+ ಇಕ್ಕಿ(ಕೊಡುವ- ಸೂಚಿಸುವ) + ಈ ಮಹಾ ಶಕುನ೦ಗಳಿವೆ+ ಯೆ+ ಎ೦ದು+ ಆ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ.
- ಅರ್ಥ:ಧರ್ಮಜನು ಹೀಗೆ ಅರ್ಜುನನ ಬಗಗೆ ಚಿಂತಿಸುದ್ದಿನು. ಅದೇ ಸಮಯದಲ್ಲಿ ದ್ರೌಪದಿಗೆ ಎಡ ಕಣ್ಣಿನಲ್ಲಿ, ಸ್ಪುರಣ-ಉದ್ದೀಪನಗೊಂಡು ಸ್ಪ೦ದಿಸಿತು. ಭೂಪತಿ ಧರ್ಮಜನಿಗೆ ಬಲಭಾಗದಲ್ಲಿ ಭುಜವು ಮಿಡಿಯಿತು. ಅರಸನು, ಚಿಂತೆ ಮತ್ತು ದುಃಖಕ್ಕೆ ಕೊನೆಯನ್ನು ಸೂಚಿಸುವ ಈ ಮಹಾ ಶಕುನಗಳು ಆಗುತ್ತಿವೆ, ಎಂದು ಆ ಮಹೀಪತಿ ಧರ್ಮಜನು ಫಲ್ಗುಣನ ಬರವನ್ನು ನೆನೆಯುತ್ತಿದ್ದನು.
- ಅರಸ ಕೇಳೈ ಹಿಮದ ಹೊಯ್ಲಿನ
- ಸರಸಿಜಕೆ ರವಿಯ೦ತೆ ಶಿಶಿರದ
- ಸರಿದಲೆಯ ವನದಲಿ ವಸ೦ತನ ಬರವಿನ೦ದದಲಿ |
- ಸುರವಿಮಾನ ಶ್ರೇಣಿಗಳ ನವ
- ಪರಿಮಳದ ಪೂರದಲಿ ಭಾರತ
- ವರುಷಕಿಳಿದನು ಪಾರ್ಥ ಬ೦ದನು ಧರ್ಮಜನ ಹೊರೆಗೆ || ೧೯ ||
- ಪದವಿಭಾಗ-ಅರ್ಥ: ಅರಸ ಕೇಳೈ ಹಿಮದ ಹೊಯ್ಲಿನ ಸರಸಿಜಕೆ(ಕಮಲ) ರವಿಯ೦ತೆ ಶಿಶಿರದ ಸರಿದ+ ಅಲೆಯ ವನದಲಿ(ವನ- ನೀರು) ವಸ೦ತನ ಬರವಿನ೦ದದಲಿ ಸುರವಿಮಾನ (ಸುರ- ದೇವ) ಶ್ರೇಣಿಗಳ ನವಪರಿಮಳದ ಪೂರದಲಿ(ತುಂಬು) ಭಾರತವರುಷಕೆ+ ಇಳಿದನು ಪಾರ್ಥ ಬ೦ದನು ಧರ್ಮಜನ ಹೊರೆಗೆ(ಹೊರೆ- ಸಮಿಪ, ರಕ್ಷಣೆ ).
- ಅರ್ಥ: ಜನಮೇಜಯ ಅರಸನೇ ಕೇಳಯ್ಯಾ,'ಮಂಜಿನ ಸುರಿಯುವಿಕೆಯ ಅಲೆಯ ನೀರಿನಲ್ಲಿದ್ದ ಕಮಲಕ್ಕೆ ಶಿಶಿರಕಾಲವು ಸರಿದು ವಸಂತ ಕಾಲದ ಸೂರ್ಯನು ಬಂದ ಹಾಗೆ, ದೇವತೆಗಳ ವಿಮಾನ ಶ್ರೇಣಿಗಳ- ಸಾಲಿನ ಹೊಸ ಪರಿಮಳ ತುಂಬಿರಲು ಪಾರ್ಥನು ಭಾರತವರುಷಕ್ಕೆ ವಿಮಾನದಿಂದ ಇಳಿದು ಧರ್ಮಜನ ರಕ್ಷಣೆಗೆ ಅವನ ಬಳಿಗೆ ಬ೦ದನು.
- ಏನನೆ೦ಬೆನು ಜೀಯ ಕು೦ತೀ
- ಸೂನು ಕ೦ಡನು ದೂರದಲಿ ಸುರ
- ಮಾನಿನೀಜನದ೦ಗವಟ್ಟದಪೂರ್ವ ಪರಿಮಳದ ||
- ಆನನೆ೦ದುಗಳಾಭರಣ ಮು
- ಕ್ತಾನುಕೃತ ತಾರಾ ಮಯೂಖ ವಿ
- ತಾನದಲಿ ಹೊಳೆ ಹೊಳೆದು ಮೆರೆವ ಮಹೇ೦ದ್ರ ಮಣಿರಥವ || ೨೦ ||
- ಪದವಿಭಾಗ-ಅರ್ಥ: ಏನು+ ಎ೦ಬೆನು ಜೀಯ, ಕು೦ತೀಸೂನು(ಧರ್ಮಜನು) ಕ೦ಡನು ದೂರದಲಿ ಸುರಮಾನಿನೀಜನದ+ ಅ೦ಗವಟ್ಟದ (ಹೊದೆಯುವ ಬಟ್ಟೆ ; ವಲ್ಲಿ; ಮೈಕಟ್ಟು; ಸೌಂದರ್ಯ)+ ಅಪೂರ್ವ(ವಿಶೇಷವಾದ) ಪರಿಮಳದ ಆನನೆ೦ದುಗಳ(ಆನನ -ಮುಖ+ ಇಂದು ಚಂದ್ರ)+ ಅಭರಣ ಮುಕ್ತಾನುಕೃತ(ಮುಕ್ತ- ಮುತ್ತು, ಅನುಕೃತ- ಸೌಕರ್ಯ, ಶ್ರೀಮಂತಿಕೆ) ತಾರಾ ಮಯೂಖ(ಕಿರಣ, ರಶ್ಮಿ, ಕಾಂತಿ) ವಿತಾನದಲಿ(ವಿಸ್ತಾರ, ಆಧಿಕ್ಯ, ಹೆಚ್ಚಳ, ಸಮೂಹ) ಹೊಳೆ ಹೊಳೆದು ಮೆರೆವ ಮಹೇ೦ದ್ರ ಮಣಿರಥವ.
- ಅರ್ಥ:, ಏನು ಹೇಳಲಿ ಜೀಯ- ರಾಜನೇ, ಧರ್ಮಜನು ದೂರದಲ್ಲಿ ಸುಂದರ ಮೈಕಟ್ಟಿನ ಅಪೂರ್ವ ಪರಿಮಳದ ದೇವತಾ ಸ್ತ್ರೀ ಜನರಾದ ಚಂದ್ರವದನೆಯರನ್ನು ಕ೦ಡನು. ಮುತ್ತಿನ ಅಭರಣಗಳನ್ನು ಧರಿಸಿ ತಾರೆಗಳಂತೆ ಕಾಂತಿಯಿಂದ ಹೊಳೆಯುವ ದೇವಕನ್ಯೆಯರ ಸಮೂಹದಲ್ಲಿ ಹೊಳೆ ಹೊಳೆದು ಮೆರೆಯುವ ಮಹೇ೦ದ್ರನ- ಇಂದ್ರನ ಮಣಿರಥವನ್ನು ಕಂಡನು.
- ಆರದೀರಥವೆನುತತಿರುಗಿ ಮ
- ಹೀರಮಣನಾಲಿಗಳು ಹರಿದವು
- ಭಾರಣೆಯ ಜನ ನಯನ ಕೋಟಿಯ ಕೊಲ್ಲಣಿಗೆ ಮಿಗಿಲು |
- ಭೂರಿ ಮಣಿ ರಶ್ಮಿಗಳ ಚಿಮ್ಮುವ
- ಚಾರು ಚಮರಿಯ ತುರಗ ನಿಕರ ಗ
- ಭೀರ ಹೇಷಾರವದಲಿಳಿದುದು ರಥ ಸುರೇಶ್ವರನ || ೨೧ ||
- ಪದವಿಭಾಗ-ಅರ್ಥ: ಆರದು+ ಈ+ ರಥವೆನುತ ತಿರುಗಿ ಮಹೀರಮಣನ (ಮಹೀ- ಭೂ+ಪತಿ)+ ಆಲಿಗಳು(ಕಣ್ಣುಗಳು) ಹರಿದವು(ಚಲಿಸಿವು, ತಿರುಗಿದವು- ನೋಡಿದವು) ಭಾರಣೆಯ(ಮಹಿಮೆ, ಗೌರವ) ಜನ ನಯನ(ಕಣ್ಣು) ಕೋಟಿಯ ಕೊಲ್ಲಣಿಗೆ(ವಿನೋದ, ಸಂಚಾರ, ದಟ್ಟಣೆ, ಸಂದಣಿ) ಮಿಗಿಲು, ಭೂರಿ(ಹೆಚ್ಚು, ಅಧಿಕ, ಚಿನ್ನ,) ಮಣಿ ರಶ್ಮಿಗಳ ಚಿಮ್ಮುವ ಚಾರು(ಸುಂದರ) ಚಮರಿಯ(ಕೂದಲು, ಚಮರಿ ಮೃಗದ-ಕೂದಲಿನ ಚಾಮರ, ), ತುರಗ ನಿಕರ(ಕುದುರೆಗಳ ಸಮೂಹ) ಗಭೀರ ಹೇಷಾರವದಲಿ(ಕುದುರೆಯ ಕೂಗು)+ ಇಳಿದುದು ರಥ ಸುರೇಶ್ವರನ(ಇಂದ್ರನ)
- ಅರ್ಥ:ಮಹೀರಮಣ ಧರ್ಮಜನು ಯಾರದ್ದು ಹೊಳೆಯುವ ಈ ರಥವೆನ್ನತ್ತಾ ತಿರುಗಿ, ಆ ದಿಕ್ಕಿನಲ್ಲಿ ಕಣ್ಣುಗಳ ದೃಷ್ಠಿಯನ್ನು ಹರಿಸಿದನು. ಅಲ್ಲಿ ಅವನು ಮಹಿಮೆಯುಳ್ಳ ಕೋಟಿ ಜನರ ಕಣ್ನಗಳ ಸಂದಣಿಗೆ ಮಿಗಿಲಾಗಿ ಬಹಳ ಮಣಿ ರಶ್ಮಿಗಳ-ಕಿರಣಗಳನ್ನು ಚಿಮ್ಮುವ ಸುಂದರ ಕೂದಲಿನ ಕುದುರೆಗಳ ಸಮೂಹವು ಗಂಭೀರ ಹೇಷಾರವವನ್ನು ಮಾಡುತ್ತಾ ಇಂದ್ರನ ರಥವು ಇಳಿದುದನ್ನು ಕಂಡನು.
- ರಥ ಮಹೇ೦ದ್ರನ ದೀತನೆಮ್ಮತಿ
- ರಥನಲಾ ನೆರೆ ನೋ೦ತು ಪಡೆದಳೋ
- ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ |
- ಮಥಿತ ರಿಪುವವಧಾನ ಲೋಕ
- ಪ್ರಥಿತ ನಿರುಪಮವೆ೦ಬ ಸುರ ಸಾ
- ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾ ರಥವ || ೨೨ ||
- ಪದವಿಭಾಗ-ಅರ್ಥ: ರಥ ಮಹೇ೦ದ್ರನದು+ ಈತನು+ ಎಮ್ಮ+ ಅತಿರಥನಲಾ(ಅರ್ಜುನ) ನೆರೆ(ಹೆಚ್ಚು) ನೋ೦ತು(ಹರಕೆಮಾಡಿ) ಪಡೆದಳೋ ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ(ಉಳಿದವರ?) ನಗುತ ಮಥಿತ ರಿಪುವು(ರಿಪು- ಶತ್ರುಗಳನ್ನು, ಮಥಿತ, ನಾಶಮಾಡಿದವ) + ಅವಧಾನ(ಎಚ್ಚರ,ಗಮನವಿಡಿ) ಲೋಕಪ್ರಥಿತ (ಪ್ರಸಿದ್ಧ) ನಿರುಪಮವೆ೦ಬ(ಸಮಾನರಿಲ್ಲದ) ಸುರ ಸಾರಥಿಯ ನೆಲನ+ ಉಗ್ಗಡಣೆಯಲಿ (ಸದ್ದು, ಉದ್ಘೋಷಣೆ) ನಗುತ+ ಇಳಿದನು+ ಆ ರಥವ.
- ಅರ್ಥ:ಧರ್ಮಜನ ಪರಿವಾರದವರೂ ಅತ್ತ ತಿರುಗಿ ನೋಡಿ, ಈ ರಥವು ಮಹೇ೦ದ್ರನದು. ಅದರಿಂದ ಇಳಿದ ಈತನು ನಮ್ಮ ಅತಿರಥ ಅರ್ಜುನನಲಾ! ಯಾವ ದೊಡ್ಡ ಹರಕೆ ಮಾಡಿಕೊಂಡು ಪಡೆದಳೋ ಕುಂತಿಯು ಇಂಥಾ ಮಗನನ್ನು ಎನ್ನತ್ತಾ, ಮುನಿಗಳ ಸಮೂಹವೂ, ಉಳಿದವರೂ ನಗುತ್ತಾ ಅರ್ಜುನನ್ನೂ ರಥವನ್ನೂ ಕವಿಯಿತು- ಮುತ್ತಿತು. ಶತ್ರುಸಂಹಾರಕ ಬಂದಿದ್ದಾನೆ, ಅವಧಾನ! ಲೋಕದಲ್ಲಿ ಹೆಸರುವಾಸಿಯಾದವನು, ಸರಿಸಮಾನರಿಲ್ಲದ ಸುರಸಾರಥಿಯ ರಥದಗಾಲಿಯು ನೆಲಕ್ಕೆ ತಾಗಿದ ಸದ್ದಿನೊಡನೆ ಪಾರ್ಥನು ನಗುತ್ತಾ ಆ ರಥವನ್ನು ಇಳಿದನು.
- ಅರಸ ಕೇಳುಬ್ಬಿನಲಿ ಧೌಮ್ಯನ
- ಧರಣಿಪನ ರೋಮಶನ ಭೀಮನ
- ಚರಣದಲಿ ಮೈಯಿಕ್ಕಿ ಕೈ ಮುಗಿದೆರಗಿ ಮುನಿಜನಕೆ |
- ಹರಸಿದನು ಹೊರವ೦ಟ ನಕುಲಾ
- ದ್ಯರನು ಮಧುರ ಪ್ರೀತಿ ವಚನ
- ಸ್ಪುರದ ಮ೦ದಸ್ನೇಹದಲಿ ನೋಡಿದನು ಪರಿಜನವ || ೨೩ ||
- ಪದವಿಭಾಗ-ಅರ್ಥ: ಅರಸ ಕೇಳು+ ಉಬ್ಬಿನಲಿ ಧೌಮ್ಯನ ಧರಣಿಪನ ರೋಮಶನ ಭೀಮನ ಚರಣದಲಿ ಮೈಯಿಕ್ಕಿ ಕೈ ಮುಗಿದು+ ಎರಗಿ ಮುನಿಜನಕೆ, ಹರಸಿದನು ಹೊರವ೦ಟ ನಕುಲ+ ಆದ್ಯರನು ಮಧುರ ಪ್ರೀತಿ ವಚನ ಸ್ಪುರದ ಮ೦ದ ಸ್ನೇಹದಲಿ ನೋಡಿದನು ಪರಿಜನವ.
- ಅರ್ಥ: ಅರಸಬೇ ಕೇಳು, ಅರ್ಜುನನು ಸಂತಸದ ಉಬ್ಬಿನಲ್ಲಿ ಪುರೋಹಿತ ಧೌಮ್ಯನನ್ನೂ, ಧರಣಿಪ ಧರ್ಮಜನನ್ನೂ, ರೋಮಶ ಮಹರ್ಷಿಯನ್ನೂ ಭೀಮನನ್ನೂ ಪಾದಗಳಿಗೆ ಮೈಚಾಚಿ ನಮಿಸಿದನು. ಉಳಿದ ಮುನಿಜನರಿಗೆ ಒಟ್ಟಿಗೆ ಕೈ ಮುಗಿದು ನೆಲಕ್ಕೆ ಬಿದ್ದು ನಮಿಸಿದನು; ನಂತರ ಅವನ ಬ ಬಳಿ ಬಂದ ನಕುಲ ಮೊದಲಾದ ಎಲ್ಲಾ ಕಿರಯರನ್ನೂ ಮಧುರವಾದ ಪ್ರೀತಿಯ ಮಾತುಗಳನ್ನು ಹೇಳಿ, ಹರಸಿದನು. ಪರಿಜನರನ್ನು ಮ೦ದ ಸ್ನೇಹದಲಿ ನೋಡಿದನು.
- ಬಿಗಿದ ಗವಸಣಿಗೆಯಲಿ ಸೂರ್ಯನ
- ನುಗಿವವೋಲ್ ಮಾಣೀಕ್ಯ ಮಣಿ ರ
- ಶ್ಮಿಗಳ ರಹಿ ರ೦ಜಿಸೆ ಸುರೇಶ್ವರನಿತ್ತ ಭೂಷಣವ |
- ತೆಗೆತೆಗೆದು ಯಮನ೦ದನ೦ಗೋ
- ಲಗಿಸಿ ಭೀಮ೦ಗಿತ್ತು ನಕುಲಾ
- ದಿಗಳ ಮೈಯಲಿ ತೊಡೀಸಿದನು ಕೈಯಾರೆಕಲಿ ಪಾರ್ಥ || ೨೪ ||
- ಪದವಿಭಾಗ-ಅರ್ಥ: ಬಿಗಿದ ಗವಸಣಿಗೆಯಲಿ(ಹೊದಿಕೆ,ಮುಚ್ಚುವಕವಚ,) ಸೂರ್ಯನನು+ ಉಗಿವವೋಲ್ ಮಾಣೀಕ್ಯ ಮಣಿ ರಶ್ಮಿಗಳಹೊಳೆಯುವ) ರಹಿ(ವೈಭವ, ಆಡಂಬರ) ರ೦ಜಿಸೆ ಸುರೇಶ್ವರನಿತ್ತ ಭೂಷಣವ(ತೊಡುವ ವಡವೆ ವಸ್ತುಗಳ) ತೆಗೆತೆಗೆದು ಯಮನ೦ದನ೦ಗೆ+ ಓಲಗಿಸಿ(ಉಡುಗೊರೆ ಮಾಡಿ) ಭೀಮ೦ಗೆ+ ಇತ್ತು(ಕೊಟ್ಟು) ನಕುಲಾದಿಗಳ ಮೈಯಲಿ ತೊಡೀಸಿದನು ಕೈಯಾರೆ ಕಲಿ ಪಾರ್ಥ.
- ಅರ್ಥ:ಕಲಿ ಪಾರ್ಥನು ಹೊದಿಕೆಯ ಗವಸಿನಲ್ಲಿ ಕಟ್ಟದ್ದ ಸುರೇಶ್ವರನು ಕೊಟ್ಟ ಭೂಷಣವ ವೈಭವದ ವಡವೆ ವಸ್ತುಗಳನ್ನು ಸೂರ್ಯನನ್ನು ಉಗಿದು ತೆಗೆಯುವಂತೆ ಮಾಣೀಕ್ಯ, ಮಣಿರಶ್ಮಿಗಳ ವೈಭವದ ವಸ್ತುಗಳನ್ನು ಮನವು ರ೦ಜಿಸುತ್ತಿರಲು ತೆಗೆತೆಗೆದು ಯಮನ೦ದನ ದರ್ಮಜನಿಗೆ ಉಡುಗೊರೆ ಮಾಡಿ, ಭೀಮನಿಗೆ ಕೊಟ್ಟು ನಕುಲಾದಿಗಳ ಮೈಯಲ್ಲಿ ಕೈಯಾರೆ ತೊಡೀಸಿದನು.
- ಕರಸಿ ಕಾಣಿಸಿದನು ಧನ೦ಜಯ
- ಸುರಪತಿಯ ಸಾರಥಿಯನಮರೇ
- ಶ್ವರ ವರೂಥದ ಸನ್ನಿವೇಶದಸಕಲ ಶೋಭೆಗಳ |
- ಅರಸ ಮೊದಲಾದಖಿಳ ಜನಭೂ
- ಸುರರು ಕ೦ಡರು ಮಾತಲಿಯ ಸ
- ತ್ಕರಿಸಿ ಸ೦ಭಾವಿಸಿದನವನೀಪತಿ ಸರಾಗದಲಿ || ೨೫ ||
- ಪದವಿಭಾಗ-ಅರ್ಥ: ಕರಸಿ ಕಾಣಿಸಿದನು ಧನ೦ಜಯ(ಅರ್ಜುನ) ಸುರಪತಿಯ ಸಾರಥಿಯನು+ ಅಮರೇಶ್ವರ ವರೂಥದ ಸನ್ನಿವೇಶದ ಸಕಲ ಶೋಭೆಗಳ, ಅರಸ ಮೊದಲಾದಖಿಳ ಜನಭೂಸುರರು ಕ೦ಡರು ಮಾತಲಿಯ ಸತ್ಕರಿಸಿ ಸ೦ಭಾವಿಸಿದನು(ಗೌರವಿಸಿದನು)+ ಅವನೀಪತಿ ಸರಾಗದಲಿ.
- ಅರ್ಥ:ಅರ್ಜುನನು ಸುರಪತಿಯಾದ ಇಂದ್ರನ ಸಾರಥಿಯನ್ನು ಕರಸಿ ಎಲ್ಲರಿಗೂ ತೋರಿಸಿದನು. ಅಮರೇಶ್ವರ- ಇಂದ್ರನ ರಥದ ಸನ್ನಿವೇಶದ ಸಕಲ ಶೋಭೆಗಳನ್ನೂ- ವೈಭವಗಳನ್ನೂ, ಅರಸ ಧರ್ಮಜ ಮೊದಲಾದ ಅಖಿಲ ಜನರಿಗೂ ಭೂಸುರರಾದ ವಿಪ್ರರಿಗೂ ತೋರಿಸಿದನು. ಅವರು ಅದನ್ನು ನೋಡಿ, ಅವನೀಪತಿ ಧರ್ಮಜನು ಪ್ರೀತಿಗೌರವಗಳಿಂದ ಮಾತಲಿಯನ್ನು ಸತ್ಕರಿಸಿ ಸ೦ಭಾವಿಸಿದನು.
- ಕುಶಲವೇ ದೇವೇ೦ದ್ರನಾತನ
- ಶಶಿವದನೆಯರು ಸುಖಿಗಳೇ ರಾ
- ಕ್ಷಸರು ವಶವರ್ತಿಗಳೆ ನಿರ್ಜರ ನಗರಿ ನಿರ್ಭಯವೇ |
- ದೆಸೆಯವರು ಮೂಲೆಗೆಳೆವರು ಮ
- ನ್ನಿಸುವರೇ ಸುರಲೋಕ ಸುಖವನು
- ವ್ಯಸನಭರ ಭ೦ಗಿಸದಲೇ ಹೇಳೆ೦ದನಾ ಭೂಪ || ೨೬ ||
- ಪದವಿಭಾಗ-ಅರ್ಥ: ಕುಶಲವೇ ದೇವೇ೦ದ್ರನು+ ಆತನ ಶಶಿವದನೆಯರು(ಚಂದ್ರವದನೆಯರು- ಪತ್ನಿಯರು) ಸುಖಿಗಳೇ, ರಾಕ್ಷಸರು ವಶವರ್ತಿಗಳೆ, ನಿರ್ಜರ(ಜರ- ಮುಪ್ಪು; ಮುಪ್ಪಿಲ್ಲದವನು, ದೇವತೆ) ನಗರಿ ನಿರ್ಭಯವೇ, ದೆಸೆಯವರು ಮೂಲೆಗೆಳೆವರು ಮನ್ನಿಸುವರೇ, ಸುರಲೋಕ ಸುಖವನು ವ್ಯಸನಭರ ಭ೦ಗಿಸದಲೇ ಹೇಳೆ೦ದನು+ ಆ ಭೂಪ(ಧರ್ಮಜ).
- ಅರ್ಥ:ಆಗ ಆ ಧರ್ಮಜನು ಸಂಪ್ರದಾಯದಂತೆ, 'ದೇವೇ೦ದ್ರನು ಕುಶಲವೇ? ಆತನ ಪತ್ನಿಯರು ಸುಖವಾಗಿರುವರೇ? ರಾಕ್ಷಸರು ಇಂದ್ರನ ವಶವಾಗಿದ್ದು ವರ್ತಿಸುರೆ- ನೆಡದುಕೊಳ್ಳುವರೆ?, ನಿರ್ಜರನಗರವಾದ ಅಮರಾವತಿ ನಿರ್ಭಯವಾಗಿದೆಯೇ? ದೆಸೆಗಳನ್ನು ಕಾಯುವ ಮತ್ತು ಮೂಲೆ ದಿಕ್ಕುಗಳನ್ನು ಕಾಯುವ ದಿಕ್ಪಾಲಕರು ಇಂದ್ರನ ಅಧೀನರಾಗಿ ಮನ್ನಿಸುವರೇ? ಸುರಲೋಕವ ಸುಖವನ್ನು ಯಾವುದೇ ವ್ಯಸನದ ಭಾರ ಭ೦ಗಿಸಿ ತೊಂದರೆಕೊಡದೆ ಶಾಂತವೇ? ಹೇಳು,' ಎ೦ದನು.
- ಅಷ್ಟ ದಿಕ್ಕುಗಳು:- ೧.ಪೂರ್ವ, ೨.ಆಗ್ನೇಯ, ೩.ದಕ್ಷಿಣ, ೪.ನೈರುತ್ಯ, ೫.ಪಶ್ಚಿಮ, ೬.ವಾಯವ್ಯ, ೭.ಉತ್ತರ, ೮.ಈಶಾನ್ಯ
- ಅಷ್ಟ ದಿಕ್ಪಾಲಕರು:-೧.ಇಂದ್ರ, ೨.ಅಗ್ನಿ, ೩.ಯಮ, ೪.ನಿರುತಿ,(ನೈರುತಿ), ೫.ವರುಣ, ೬.ವಾಯು, ೭.ಕುಬೇರ, ೮.ಈಶಾನ
- ಭಜಿಸಿದೈ ಭರ್ಗನನು ಶಾ೦ಭವ
- ಯಜನ ಸಾರ ಸಮಾಧಿ ಶಿವಪದ
- ರಜವ ಬೆರಸಿತೆ ಬಗೆಯ ಕುಣಿತೆವರಾಯ್ತೆ ತಡಿದೆಗೆದು |
- ವಿಜಯ ಶಬ್ದವು ಪಾರ್ಥ ಕೃತಿಯಲಿ
- ಯಜಡವಲ್ಲಲೆ ವೈರಿ ರಾಯರ
- ಕುಜನತಾ ವಿಚ್ಛೇದ ಸಾದ್ಯವೆಯೆ೦ದನಾ ಭೂಪ || ೨೭ ||
- ಪದವಿಭಾಗ-ಅರ್ಥ: ಭಜಿಸಿದೈ ಭರ್ಗನನು( ಶಿವ, ಈಶ್ವರ) ಶಾ೦ಭವ ಯಜನ(ಅರ್ಚನೆ) ಸಾರ ಸಮಾಧಿ ಶಿವಪದ(ಶಿವನ ಪಾದ) ರಜವ(ಧೂಳು) ಬೆರಸಿತೆ ಬಗೆಯ ಕುಣಿ(ಬಗೆಯ- ಮನಸ್ಸಿನ ಜಿಗಿದಾಟ, ಗೂಡು)+ ತೆವರುರಾಯ್ತೆ(ತೆವರು- ಅಟ್ಟು, ಓಡಿಸು, ಶುದ್ಧವಾಯಿತೆ?) ತಡಿದೆಗೆದು(ತಡಿ- ತೀರ,ಕೆಸರು ತೆಗೆದು- ತೆವರಾಯ್ತೆ- ತಡಿತೆಗೆದು) ವಿಜಯ ಶಬ್ದವು ಪಾರ್ಥ ಕೃತಿಯಲಿಯ ಜಡವಲ್ಲಲೆ(ನಿಶ್ಪ್ರಯೋಜಕ) ವೈರಿರಾಯರ ಕುಜನತಾ(ಕೆಟ್ಟಜನರ) ವಿಚ್ಛೇದ(ನಾಶ) ಸಾದ್ಯವೆ?ಯೆ೦ದನಾ ಭೂಪ (ಧರ್ಮಜ).
- ಅರ್ಥ:ಧರ್ಮಜನು ಅರ್ಜುನನ್ನು ಕುರಿತು,'ನೀನು ಶಿವನನ್ನು ಭಜಿಸಿದೆಯಲ್ಲವೇ; ಶಾ೦ಭವನ ಅರ್ಚನೆಯ ಸಾರಸಮಾಧಿಯಲ್ಲಿ ಶಿವನ ಪಾದದ ಧೂಳು ಮನಸ್ಸಿನ ಚಂಚಲತೆಯನ್ನು ಓಡಿಸಿತೆ; ಮನಸ್ಸಿನ ಕೆಸರು ತೆಗೆದು ಶುದ್ಧವಾಯಿತೆ ;ಪಾರ್ಥನೇ ನಿನಗೆ ಬಂದ 'ವಿಜಯ' ಶಬ್ದವು- ಹೆಸರು ಕೃತಿಯಲ್ಲಿ ನಿಶ್ಪ್ರಯೋಜಕವಾಗದು ಅಲ್ಲವೇ? ನಮ್ಮ ವೈರಿರಾಯರನ್ನು, ಆ ಕುಜನತಾವಿಚ್ಛೇದ- ದುಷ್ಟಜನರ ನಾಶ ಸಾಧ್ಯವೇಎ೦ದು ಕೇಳಿದನು.
- ಜೀಯ ಚಿತ್ತೈಸಿ೦ದ್ರನಲ್ಲಿ ಸ
- ಹಾಯವಾದನು ಶಿವನ ಕಾರು
- ಣ್ಯಾಯುಧವೆ ಮಸೆದುದು ಸುರೇ೦ದ್ರ ಸ್ನೇಹ ಸಾಣೆಯಲಿ |
- ಆಯಿತೀ ದೂರ್ಜಟಿಯ ಶರ ಲೋ
- ಕಾಯಿತರಿಗೇನೆ೦ಬೆನದು ನಿ
- ರ್ದಾಯದಲಿ ವಶವರ್ತಿಯಾಯ್ತೆನಗೆ೦ದನಾ ಪಾರ್ಥ || ೨೮ ||
- ಪದವಿಭಾಗ-ಅರ್ಥ: ಜೀಯ(ರಾಜನೇ, ಒಡೆಯನೇ) ಚಿತ್ತೈಸು(ದಯಮಾಡಿ ಕೇಳು)+ ಇ೦ದ್ರನು+ ಅಲ್ಲಿ ಸಹಾಯವಾದನು, ಶಿವನ ಕಾರುಣ್ಯ+ ಆಯುಧವೆ ಮಸೆದುದು(ಕಾಂತಿ, ಹೊಳಪು, ತೀವ್ರಗೊಳ್ಳು) ಸುರೇ೦ದ್ರ ಸ್ನೇಹ ಸಾಣೆಯಲಿ, ಆಯಿತು+ ಈ ದೂರ್ಜಟಿಯ ಶರ, ಲೋಕಾಯಿತರಿಗೆ(ಲೋಕಾಯತ- ನಾಸ್ತಿಕ)+ ಏನೆ೦ಬೆನು+ ಅದು ನಿರ್ದಾಯದಲಿ(ದಾಯ- ತೊಂದರೆ ಕುಯುಕ್ತಿ) ವಶವರ್ತಿಯಾಯ್ತು+ ಎನಗೆ+ ಎ೦ದನು+ ಆ ಪಾರ್ಥ.
- ಅರ್ಥ: ಜೀಯ ರಾಜನೇ, ದಯಮಾಡಿ ಕೇಳು, 'ಇ೦ದ್ರನು ಅಲ್ಲಿ ನನಗೆ ಸಹಾಯವಾದನು. ಶಿವನ ಕಾರುಣ್ಯದ ಆಯುಧವು ಸುರೇ೦ದ್ರನ ಸ್ನೇಹ ಸಾಣೆಯಲ್ಲಿ ಅದರ ಕಾತಿ ಹೆಚ್ಚಿತು. ಈ ಇಲ್ಲಿ ನನ್ನ ಬಳಿ ಇರುವ ದೂರ್ಜಟಿ ಶಿವನ ಅಸ್ತ್ರ ನನಗೆ ವಶ ಆಯಿತು. ನಾಸ್ತಿಕರಿಗೆ ಏನೂ ಹೇಳಲಾರೆ. ಅದು ತೊಂದರೆ ಇಲ್ಲದೆ ನನಗೆ ವಶವರ್ತಿಯಾಯ್ತು,'ಎ೦ದನು.
- ಹರನ ಕರುಣಾಲಾಭ ಲೋಕೋ
- ತ್ತರದ ಪರಿತೋಷದಲಿ ನಾನಿರೆ
- ಸುರಪ ಕಳುಹಿದನೀ ರಥವನೀ ವಿಮಳ ಮಾತಲಿಯ |
- ಕರಸಿದನು ನಿಜ ನಗರಿಗಾ ನಿ
- ರ್ಜರ ನಿಕರವಾ ಸತಿಯರಾ ದಿ
- ಕ್ಪರಿವೃಢರು ಕೊ೦ಡಾಡಿತೆನ್ನಯ ರಾಯ ಕೇಳೆ೦ದ || ೨೯ ||
- ಪದವಿಭಾಗ-ಅರ್ಥ: ಹರನ ಕರುಣಾಲಾಭ ಲೋಕೋತ್ತರದ ಪರಿತೋಷದಲಿ(ಅತಿಯಾದ ಸಂತೋಷದಲ್ಲಿ) ನಾನು+ ಇರೆ, ಸುರಪ ಕಳುಹಿದನು+ ಈ ರಥವನ+ ಈ ವಿಮಳ(ಶ್ರೇಷ್ಠ) ಮಾತಲಿಯ ಕರಸಿದನು ನಿಜ(ತನ್ನ) ನಗರಿಗೆ+ ಆ ನಿರ್ಜರ(ಮುಪ್ಪಿಲ್ಲದ) ನಿಕರವು+ ಆ ಸತಿಯರು+ ಆ ದಿಕ್+ ಪರಿವೃಢರು (ಒಡೆಯರು, ಪ್ರಭು) ಕೊ೦ಡಾಡಿತು+ ಎನ್ನಯ ರಾಯ ಕೇಳೆ೦ದ.
- ಅರ್ಥ:ಅರ್ಜುನನು ರಾಯನೇ ಕೇಳು,' ನಾನು ಹರನ ಕರುಣೆಯ ಲಾಭದಿಂದ ಅಸ್ತ್ರಗಳನ್ನು ಪಡೆದು ಲೋಕೋತ್ತರವಾದ ಪರಿತೋಷದಲ್ಲಿ ಇದ್ದಾಗ, ಸುರಪ ಇಂದ್ರನು ಈ ರಥವನ್ನು ಈ ವಿಮಲ ಮಾತಲಿಯನ್ನು ಕಳುಹಿದನು. ಅವನು ನನ್ನನ್ನು ತನ್ನ ನಗರ ಅಮರಾವತಿಗೆ ಕರಸಿಕೊಂಡನು. ಆ ನಿರ್ಜರ- ದೇವತೆಗಳ ಸಮೂಹವು, ಆ ದೇವಸತಿಯರು, ಆ ದಿಕ್ಕುಗಳ ಒಡೆಯರ ಸಮೂಹ ನನ್ನನ್ನು ಕೊ೦ಡಾಡಿತು,'ಎ೦ದ.
- ಪಾಶುಪತ ಶರ ಭುವನದೂರ್ದ್ವ
- ಶ್ವಾಸ ಕೃತಿ ಕೋವಿದನಲೆ ಚಿ
- ತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ |
- ಆ ಶರವಲೇ ಸೇರಿತೆನಗೆ ಮ
- ಹೇಶನಿ೦ದಲ್ಲಿ೦ದ ಬಳಿಕ ಸು
- ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿ || ೩೦||
- ಪದವಿಭಾಗ-ಅರ್ಥ: ಪಾಶುಪತ ಶರ ಭುವನದ(ಲೋಕದ)+ ಊರ್ದ್ವಶ್ವಾಸ ಕೃತಿ(ಸಂಹಾರ ಕಾರ್ಯ) ಕೋವಿದನಲೆ(ಕೋವಿದ= ವಿದ್ವಾಂಸ ), ಚಿತ್ತೈಸಿ(ಕೇಳಿ ತಿಳಿದು) ಬಲ್ಲಿರಿ ನಿಮ್ಮಡಿಗಳ+ ಆಮ್ನಾಯ(ವೇದ, ಪರಂಪರಾಗತ ಪದ್ಧತಿ) ವೀಧಿಯಲಿ( ಕ್ರಮದಲ್ಲಿ), ಆ ಶರವಲೇ ಸೇರಿತು+ ಎನಗೆ ಮಹೇಶನಿ೦ದ+ ಅಲ್ಲಿ೦ದ ಬಳಿಕ ಸುರೇಶನು+ ಅತಿ ಮನ್ನಿಸಿದನು(ಗೌರವಿಸಿದನು)+ ಅಮರಾವತಿಯೊಳು+ ಒಲವಿನಲಿ (ಪ್ರೀತಿಯಿಂದ).
- ಅರ್ಥ:ಅರ್ಜುನನು,'ರಾಜನೇ, ಈಗ ನಾನು ಪಾಶುಪತ ಶರಪಡದು ಈ ಲೋಕದ ಊರ್ದ್ವಶ್ವಾಸ ಕೃತಿಯ ಪಂಡಿತನಾದೆನು. ಇದನ್ನು ನೀವು ಚಿತೈಸಿ ಬಲ್ಲಿರಿ. ನಿಮ್ಮಡಿಗಳ ಪರಂಪರಾಗತ ಪದ್ಧತಿ ಕ್ರಮದಲ್ಲಿ, ಆ ಶರವು ಮಹೇಶನಿ೦ದ ನನ್ನ ಕೈ ಸೇರಿತು. ಅಲ್ಲಿ೦ದ ಬಳಿಕ ಸುರೇಶನಾದ ಇಂದ್ರನು ನನ್ನನ್ನು ಅತಿಯಾಗಿ ಅಮರಾವತಿಯಲ್ಲಿ ಪ್ರೀತಿಯಿಂದ ಮನ್ನಿಸಿದನು,' ಎಂದನು
- ಖ್ಯಾತಿವಡೆದನು ಶಿವನ ಕಾರು
- ಣ್ಯಾತಿಶಯಕಿದು ಫಲವೇ ಸಾಕಿ
- ನ್ನೇತಕಿದು ರಾಜಸ ವಿಡ೦ಬ ವಿಕಾರಕುಚಿತವಲೆ |
- ವೀತಿಹೋತ್ರ ಪರೇತಪತಿ ಪುರು
- ಹೂತ ವರುಣಾದಿಗಳು ಕಾ೦ಡ
- ವ್ರಾತದಲಿ ತೊಳೆದರು ಮನೋರಥಕಲಿತ ಕರ್ದಮವ |\ ೩೧||
- ಪದವಿಭಾಗ-ಅರ್ಥ: ಖ್ಯಾತಿವಡೆದನು ಶಿವನ ಕಾರುಣ್ಯಾತಿಶಯಕೆ+ ಇದು ಫಲವೇ ಸಾಕಿನ್ನು+ ಏತಕೇ+ ಇದು ರಾಜಸ ವಿಡ೦ಬ ವಿಕಾರಕೆ+ ಉಚಿತವಲೆ ವೀತಿಹೋತ್ರ(ಅಗ್ನಿ) ಪರೇತಪತಿ(ಭೂತ, ಪ್ರೇತಪತಿ) ಪುರುಹೂತ(ಇಂದ್ರ) ವರುಣಾದಿಗಳು ಕಾ೦ಡವ್ರಾತದಲಿ(ಕರ್ಮಕಾಂಡ -ವೇದ/ಗಿಡದದಂಟು, ಸಮೂಹ ) ತೊಳೆದರು ಮನೋರಥ ಕಲಿತ(ಕೂಡಿದ, ಸೇರಿದ) ಕರ್ದಮವ(ಕೊಳೆ).
- ಅರ್ಥ:ಅರ್ಜುನನು ಪಡೆದ ಶಿವನ ಕಾರುಣ್ಯಾತಿಶಯಕ್ಕೆ ಖ್ಯಾತಿಯನ್ನು ಪಡೆದನು. ಇದು- ಇಷ್ಟು ಫಲವೇ ಸಾಕು. ರಾಜಸ-ಕ್ಷತ್ರಿಧರ್ಮದ ಶೌರ್ಯ ಪ್ರತಾಪದ ವಿಡ೦ಬ ವಿಕಾರಕ್ಕೆ ಉಚಿತವೇ? ಇನ್ನೇತಕ್ಕೆ ರಾಜ್ಯ ಸುಖ ಬೇಕು. ಅಗ್ನಿ, ಭೂತಪತಿ ಶಿವ, ಪುರುಹೂತ-ಇಂದ್ರ ವರುಣಾದಿಗಳು ಮತ್ತು ವೇದಗಳ ವಾಕ್ಯಗಳಿಂದ ಮನಸ್ಸಿನಲ್ಲಿ ಕೂಡಿದ ಕೊಳೆಯನ್ನು ತೊಳೆದರು.
- ಕೇಳಿ ಮಿಗೆ ಹಿಗ್ಗಿದನು ತನು ಪುಳ
- ಕಾಳಿ ತಳಿತುದು ಹರುಷವಾರಿಗ
- ಳಾಲಿ ಹೂಳಿದವು ತೂಳಿದವ೦ತರವ್ಯಥೆಯ |
- ತೋಳ ಹಿಡಿದೆಳದಪ್ಪಿ ಪಾರ್ಥನ
- ಬೋಳವಿಸಿದನು ಪೌರವಾನ್ವಯ
- ಪಾಲಕನೆಯೆ೦ದರಸ ಮು೦ಡಾಡಿದನು ಫಳುಗುಣನ || ೩೨ |
- ಪದವಿಭಾಗ-ಅರ್ಥ: ಕೇಳಿ ಮಿಗೆ(ಬಹಳ) ಹಿಗ್ಗಿದನು ತನು(ದೇಹದಲ್ಲಿ) ಪುಳಕಾಳಿ(ರೋಮಾಂಚನ) ತಳಿತುದು(ಚಿಗುರಿಯು, ಉಂಟಾಯಿತು) ಹರುಷವಾರಿಗಳು(ಆನಂದಬಾಷ್ಪ)+ ಆಲಿ ಹೂಳಿದವು(ಕಣ್ನಲ್ಲಿ ತುಂಬಿದವು) ತೂಳಿದವು(ಹೋದವು)+ ಅ೦ತರವ್ಯಥೆಯ(ಮನಸ್ಸಿನ ಚಿಂತೆ) ತೋಳ ಹಿಡಿದು+ ಎಳದಪ್ಪಿ ಪಾರ್ಥನ ಬೋಳವಿಸಿದನು ಪೌರವಾನ್ವಯ(ಪುರೂರವನ ಚಂದ್ರವಂಶದ) ಪಾಲಕನೆಯೆ೦ದು+ ಅರಸ ಮು೦ಡಾಡಿದನು ಫಳುಗುಣನ.
- ಅರ್ಥ: ಧರ್ಮಜನು ಶಿವನ ಅಷ್ಟದಿಕ್ಪಾಲಕರ ಅನುಗ್ರಹದ ವಿಷಯವನ್ನು ಕೇಳಿ ಬಹಳ ಹಿಗ್ಗಿದನು. ಅವನ ದೇಹದಲ್ಲಿ ರೋಮಾಂಚನ ಉಂಟಾಯಿತು. ಅವನ ಕಣ್ಣುಗಳಲ್ಲಿ ಆನಂದಬಾಷ್ಪ ಉಕ್ಕಿದವು. ಅವನ ಮನಸ್ಸಿನ ಚಿಂತೆ ಹೋಯಿತು. ಅರ್ಜುನನ ತೋಳನ್ನು ಹಿಡಿದು ಎಳದುಕೊಂಡು ಅಪ್ಪಿ ಪ್ರೀತಿಯಿಂದ ಅವನ ತಲೆಯನ್ನು ಸವರಿದನು. ಪುರೂರವನ ಚಂದ್ರವಂಶದ ಪಾಲಕನು ನೀನು ಎಂದು ಅರಸಧರ್ಮಜನು ಪನಃ ಫಲ್ಗುಣನನನು ಮು೦ಡಾಡಿದನು- ತಲೆಯನ್ನು ನೇವರಿಸಿದನು, ಮುದ್ದಿಸಿದನು.
- ಮುರಿದುದೀನ್ನೇನಹಿತ ಬಲ ಹಗೆ
- ಹರಿದುದೀ ದ್ರೌಪದಿಯ ಮೌಳಿಗೆ
- ಕರುಬಿದವರಿಗೆ ಕಾಣಲಾಯ್ತು ಕೃತಾ೦ತನೋಲಗವ |
- ಕರೆದನೇ ಕರುಣವನು ಹರಹರ
- ಹೆರೆನೊಸಲ ಬಲುದೈವವಿನಿತರ
- ಹೊರಿಗೆ ಗದುಗಿನ ವೀರ ನಾರಾಯಣನ ಕರುಣದಲಿ || ೩೩ ||
- ಪದವಿಭಾಗ-ಅರ್ಥ: ಮುರಿದುದು+ ಇನ್ನೇನು+ ಅಹಿತಬಲ(ಶತ್ರುಬಲ) ಹಗೆಹರಿದುದು(ಶತ್ರುನಾಶವಾಯಿತು)+ ಈ ದ್ರೌಪದಿಯ ಮೌಳಿಗೆ(ತಲೆಗೆ) ಕರುಬಿದವರಿಗೆ(ಅಸುಯೆಪಟ್ಟು ಎಳೆದವರಿಗೆ) ಕಾಣಲಾಯ್ತು ಕೃತಾ೦ತನ(ಯಮನ)+ ಓಲಗವ(ಯಮನಸಭೆಯನ್ನು ಕಾಣಬಹುದು), ಕರೆದನೇ(ಸುರಿಸಿದನೇ, ಸುರಿದನು) ಕರುಣವನು, ಹರ ಹರಹೆರೆ(ಹರಹು- ವ್ಯಾಪಿಸುವಂತೆ ಮಾಡು, ಹೆಚ್ಚಳ; ಹರನು-ಹರಹೆರೆ= ಹರಹೆ- ಹರಸಲು, ಹರಸಿದರೆ?) ನೊಸಲ(ಹಣೆಯನ್ನು ಹರನು ಕಾದರೆ) ಬಲುದೈವವು+ ಇನಿತರ(ಇನಿತರು- ಇವರೆಲ್ಲರ) ಹೊರಿಗೆ(ಹೊರೆ- ಹೊರಿಗೆ; ಹೊಣೆಗಾರಿಕೆ; ಭಾರ, ಕ್ಷೇಮದ ಹೊರೆ) ಗದುಗಿನ ವೀರ ನಾರಾಯಣನ ಕರುಣದಲಿ.
- ಅರ್ಥ: ಪಾಂಡವರ ಶತ್ರುಬಲ ಇನ್ನು ನಾಶವಾದಂತೆ. ಅಲ್ಲಿಗೆ ಶತ್ರುದ್ವೇಷವೂ ನಾಶವಾಯಿತು. ಈ ದ್ರೌಪದಿಯ ತಲೆಗೆ ಅಸೂಯೆಪಟ್ಟು ಎಳೆದವರಿಗೆ ಯಮನ ಮನೆಯ ಸಭೆಯನ್ನು ಕಾಣುವಂತಾಯಿತು., ಹರ - ಶಿವನು ಕರುಣೆಯನ್ನು ಸುರಿಸಿದನು. ಒಂದುಕಡೆ ಹರನು ಇವರ ಹಣೆಯನ್ನು(ತಲೆಯನ್ನು) ಕಾದರೆ, ಬಲು ದೊಡ್ಡದೈವವಾದ ಗದುಗಿನ ವೀರ ನಾರಾಯಣನ- ಕೃಷ್ಣನ ಕರುಣೆಯಲ್ಲಿ ಇವರೆಲ್ಲರ ಕ್ಷೇಮದ ಹೊರೆ- ಭಾರ ಇದೆ- ಹೊಣೆಗಾರಿಕೆ ಇದೆ; (ನಿಂತಿದೆ).
♠♠♠
ॐ
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೭)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೮)
- ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೦೯)
|