ಮಂಕುತಿಮ್ಮನ ಕಗ್ಗ - ಬಾಳಿಗೆ ನಕಾಸೆ

ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ

ಬಾಳಿನ ನಕಾಸೆ

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೋ? |
ಸುರರಟ್ಟಹಾಸದಿನೆ ನರಭಕ್ತಿಯೆರಲೋ? ||
ಪರಿಕಿಸುವರೇನವರ್ಗೆಳನ್ಯೋನ್ಯಶಕ್ತಿಗಳ? |
ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ || ೨೪

(ಸುರರ+ಅಟ್ಟಹಾಸದಿನೆ) (ಪರಕಿಸುವರು+ಏನು+ಅವರುಗಳ+ಅನ್ಯೋನ್ಯ) (ಧರುಮವು+ಎಲ್ಲಿ+ಇದರಲ್ಲಿ)

ಮನುಷ್ಯರಲ್ಲಿರುವ ಭಯ ಮತ್ತು ಬಯಕೆಗಳು, ದೇವತೆಗಳ ತಾಯಿ ಮತ್ತು ತಂದೆಗಳೋ?
ಮನುಷ್ಯರ ಭಕ್ತಿಯಿಂದ ಕೂಡಿದ ಕೂಗು(ಓರಲು), ಆ ದೇವತೆಗಳ ಜಂಬದ ನಗುವಿಗೆ(ಸುರರ ಅಟ್ಟಹಾಸದಿನೆ)
ಹೆದರಿದೆಯೋ? ಅವರ ಪರಸ್ಪರ ಬಲಾಬಲಗಳನ್ನು ಇವರು ಪರೀಕ್ಷಿಸುತ್ತಿರುವರೋ? ಹಾಗಿದ್ದಲ್ಲಿ ಇದರಲ್ಲಿ ಧರ್ಮದ ಪ್ರಶ್ನೆ ಎಲ್ಲಿಂದ ಬಂತು?

ಜೀವಗತಿಗೊಂದು ರೇಖಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? |
ಆವುದೀ ಜಗಕಾದಿ? - ಮಂಕುತಿಮ್ಮ || ೨೫

(ಭಾವಿಸುವುದು+ಎಂತು+ಅದನು) (ಜಗಕೆ+ಆದಿ)
ರೇಖಲೇಖ - ಅಕ್ಷಾಂಶಗಳನ್ನು ರೇಖಾಂಶಗಳನ್ನು ಗುರುತಿಸುವ ಒಂದು ಪಟ; ಮತ್ತು ದಿಕ್ಕುಗಳನ್ನು ಸೂಚಿಸುವ ದಿಕ್ಸೂಚಿ
ಹಡಗು ಮತ್ತು ದೋಣಿಗಳನ್ನು ನಡೆಸುವವನಿಗೆ ದಿಕ್ಕು ಮತ್ತು ದಿನ ತೋರಿಸಲು, ಒಂದು ದಿಕ್ಸೂಚಿ ಇರುವಂತೆ,
ಈ ಬಾಳನ್ನು ನಡೆಸಲು ಸಹ ಒಂದು ಸರಿಯಾದ ದಾರಿಯಿರಬೇಕು. ಈ ದಾರಿಗೆ ಇರುವ ಮೊದಲು ಮತ್ತು ಕೊನೆ ಎರಡು
ಕಾಣಿಸದಿದ್ದಲ್ಲಿ, ಇದನು ಊಹಿಸುವುದು ಹೇಗೆ? ಈ ಜಗತ್ತಿಗೆ ಮೊದಲು ಯಾವುದು? ಯಾರಿಗಾದರು ತಿಳಿದಿದೆಯೆ?

ಸೄಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ||
ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ || ೨೬

(ಸೃಷ್ಟಿ+ಆಶಯವು+ಅದು+ಏನು+ಅಸ್ಪಷ್ಟ) (ದಿವ್ಯ+ಗುಣಗಳು+ಒಂದು) (ಘೋರಂಗಗಳು+ಇನ್ನೊಂದು)

ಈ ಸೃಷ್ಟಿಯ ಉದ್ದೇಶವಾದರು ಏನು? ಅದು ಸ್ಪಷ್ಟವಾಗಿಲ್ಲ. ಸರಿಯಾಗಿ ತಿಳಿಯಲಾಗುವುದಿಲ್ಲ.
ಅದರ ಜೊತೆಗೆ, ಬಹಳ ತೊಡಕಾದದ್ದೂ(ಸಂಶ್ಲಿಷ್ಟ) ಹೌದು. ಒಂದು ಕಡೆ, ನಮಗೆ
ಪ್ರೀತಿಪಾತ್ರವಾಗಿರುವ ಮತ್ತು ಮರುಳುಗೊಳಿಸುವ, ಸುಂದರ ಸ್ವ್ಭಾವಗಳು. ಇನ್ನೊಂದು ಕಡೆ
ಕಠಿಣ ಹಾಗು ಅಸಹ್ಯವಾಗಿರುವ(ಬೀಬತ್ಸ) ಭಯಂಕರಗಳು. ಈ ರೀತಿಯಾಗಿ,
ಈ ಬ್ರಹ್ಮಸೃಷ್ಟಿ ಅರ್ಥ ಮಾಡಿಕೊಳ್ಳುವುದಕ್ಕೆ ಬಹಳ ಕಷ್ಟವಾದದ್ದು(ಕ್ಲಿಷ್ಟ).

ಧರೆಯ ಬದುಕೇನದರ ಗುರಿಯೇನು ಫಲವೇನು? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಕಗಕಿಂತ |
ನರನು ಸಾಧಿಪುದೇನು? - ಮಂಕುತಿಮ್ಮ|| ೨೭

(ಬದುಕು+ಏನು+ಅದರ)

ಈ ಪ್ರಪಂಚದ ಬದುಕಿನ ಉದ್ದೆಶ ಮತ್ತು ಅದರ ಪ್ರಯೋಜನಗಳೇನು? ಇವು ವ್ಯರ್ಥವಾದ ಕೇವಲ ಓಡಾಟ,
ಹೊಡೆದಾಟ ಮತ್ತು ತೊಳಲಾಟ ಮಾತ್ರವೇ? ಸುತ್ತಿ ಸುತ್ತಿ ತನ್ನ ಹೊಟ್ಟೆಯನ್ನು ತುಂಬಿಕೊಳ್ಳುವ ಪ್ರಾಣಿ ಮತ್ತು
ಪಕ್ಷಿಗಳಿಗಿಂತ ಹೆಚ್ಚಿನದೇನನ್ನಾದರೂ ಮನುಷ್ಯನು ಸಾಧಿಸುತ್ತಾನೆಯೋ?

ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ |
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ||
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ |
ತೋರುವುದಾವುದು ದಿಟವೊ - ಮಂಕುತಿಮ್ಮ || ೨೮

(ಕಾರಣಂ+ಏನಿಪ್ಪವೊಲು) (ತೊರ್ಪುದು+ಒಂದು) (ಕಟುಕಥೆಗಳು+ಏನಿಪುದು+ಇನ್ನೊಂದು) (ತೋರದು+ಆವುದು)

ಮರುಕ, ವಿನೋದ, ಹಾಸ್ಯ ಮತ್ತು ಸೌಂದರ್ಯಗಳೇ, ಈ ಸೃಷ್ಟಿಗೆ ಕಾರಣವೆಂದು ಕೆಲವು ಸಲ ಅನ್ನಿಸುತ್ತದೆ.
ಇನ್ನೊಂದು ಸಲ ಬಡತನ, ಜಿಪುಣತನ ಕೃರತನಗಳೇ, ಈ ಸೃಷ್ಟಿಯ ಉದ್ದೇಷವೆಂದೆನುಸುತ್ತದೆ.
ಈ ಎರಡರಲ್ಲಿ ನಿಜ ಯಾವುದು ಎನ್ನುವುದು ನಮ್ಮ ಮನಸ್ಸಿಗೆ ಗೋಚರವಾಗುವುದಿಲ್ಲ.

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ