<ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೧.-ಆದಿಪರ್ವ::ಸಂಧಿ-೮)
ಸಂಪಾದಿಸಿ
- ವಾಯುಸುತನುರಿಮನೆಯ ಕೌರವ
- ರಾಯ ಕೃತಕವ ಕಳೆದು ಹೊಕ್ಕನು
- ತಾಯಿ ವೊಡಹುಟ್ಟಿದರು ಸಹಿತ ಮಹಾ ವನಾಂತರವ||ಸೂ.||
ಪದವಿಭಾಗ-ಅರ್ಥ: ವಾಯುಸುತನು(ಭೀಮನು)+ ಉರಿಮನೆಯ ಕೌರವರಾಯ ಕೃತಕವ ಕಳೆದು (ತಪ್ಪಿಸಿಕೊಂಡು)= ಭೀಮನು ಉರಿಯುತ್ತಿರುವ ಮನೆಯಿಂದ, ಕೌರವನ ಸಾಯಿಸುವ ಕುಟಿಲ ತಂತ್ರವನ್ನು ತಪ್ಪಿಸಿಕೊಂಡು, ಹೊಕ್ಕನು ತಾಯಿ ವೊಡಹುಟ್ಟಿದರು ಸಹಿತ= ತಾಯಿ ಮತ್ತು ಸಹೋದರರ ಸಹಿತ ಪ್ರವೇಶಿಸಿದನು., ಮಹಾ ವನಾಂತರವ= ಘೋರವಾದ ಅರಣ್ಯವನ್ನು.
ಅರ್ಥ: ಭೀಮನು ಉರಿಯುತ್ತಿರುವ ಮನೆಯಿಂದ, ಕೌರವನು ಪಾಂಡವರನ್ನು ಸಾಯಿಸುವ ಕುಟಿಲ ತಂತ್ರದಿಂದ ತಪ್ಪಿಸಿಕೊಂಡು, ತಾಯಿ ಮತ್ತು ಸಹೋದರರ ಸಹಿತ ಘೋರವಾದ ಅರಣ್ಯವನ್ನು ಪ್ರವೇಶಿಸಿದನು.||ಸಾರಾಂಶ||[೧] [೨] [೩] [೪]
~~ಓಂ~~
♠♠♠
ಹಸ್ತಿನಾವತಿಯಲ್ಲಿ ಕೌರವ ಪಾಂಡವರ ಜಗಳ
ಸಂಪಾದಿಸಿ
- ಕೇಳು ಜನಮೇಜಯ ಧರಿತ್ರೀ
- ಪಾಲ ಗಜನಗರಿಯಲಿ ಕೌರವ
- ರಾಳ ಪಾಂಡವರಾಳ ಸೆಣಸಿನ ಕಾಲು ಮೆಟ್ಟುಗಳ ||
- ಸೂಳು ಮತ್ಸರ ಬಿರುದು ಪಾಡಿನ
- ಚೂಳಿಗಲಹದ ಕದಡು ಜೂಜಿನ
- ತೋಳುವಲರೊಳತೋಟಿ ಮಸಗಿತು ದಿವಸ ದಿವಸದಲಿ || (೧)
- ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ, ಗಜನಗರಿಯಲಿ ಕೌರವರ+ ಆಳ= ಆಳುತನ, ಗಟ್ಟಿತನ, ಪಾಂಡವರ+ ಆಳ, ಸೆಣಸಿನ= ಜಗಳದ, ಕಾಲು ಮೆಟ್ಟುಗಳ= ಸೂಳು= ಆರ್ಭಟ, ಬೊಬ್ಬೆ, ಮತ್ಸರ= ಅಸುಯೆ, ಬಿರುದು ಪಾಡಿನ= ಚೂಳಿ+ಗ- ಕಲಹದ= ಚೂಳಿ= ಆರಂಭ, ಜಗಳದ, ಕದಡು = ಗಲಾಟೆ (ಕೆಸರು,) ಜೂಜಿನ ತೋಳುವಲರು (ಸ್ಪರ್ಧೆ, ತೋಳಿಗೆ ತೋಳುಸೇರಿಸುವನೆಡೆ )+ ಒಳತೋಟಿ= ಮನಸ್ಸಿನಲ್ಲಿ ದ್ವೇಷ, ಒಳಜಗಳ. ಮನಸ್ಸಿನ ಹೊಯ್ದಾಟ; ಮಸಗಿತು = ಹೆಚ್ಚಾಯಿತು, ದಿವಸ ದಿವಸದಲಿ = ದಿನದಿನಕ್ಕೆ.
- ಅರ್ಥ: ಕೇಳು ಜನಮೇಜಯ ರಾಜನೇ, ಹಸ್ತಿನಾವತಿಯಲ್ಲಿ ಕೌರವರ ಗಟ್ಟಿತನ ಮತ್ತು ಪಾಂಡವರ ಆಳುತನದ ಪ್ರದರ್ಶನದ ಜಗಳದ, ಕಾಲನ್ನ ಅಪ್ಪಳಿಸಿಬೆದರಿಸುವುದು, ಆರ್ಭಟ, ಅಸೂಯೆ, ಬಿರುದುಗಳನ್ನು ಹೊಗಳಿಸಿಕೊಳ್ಳುವುದು, ಕಲಹಕ್ಕೆ ಕೆಣಕುವುದು, ಜಗಳದ ಗಲಾಟೆ (ಕೆಸರು,) ಜೂಜಿನ ಮೇಲಾಟ, ತೋಳುಬಲದ ಸ್ಪರ್ಧೆ, ತೋಳಿಗೆ ತೋಳುಸೇರಿಸುವ ನೆಡಾವಳಿ, ಮನಸ್ಸಿನಲ್ಲಿ ದ್ವೇಷ, ಒಳಜಗಳ, ಮನಸ್ಸಿನ ಹೊಯ್ದಾಟ, ದಿನದಿನಕ್ಕೆ ಹೆಚ್ಚಾಯಿತು,
- ಬೀದಿಗಲಹದ ಕದಡು ಬೀಡಿನ
- ಲೈದೆ ಹಬ್ಬಿತು ಬೀಡುಗಲಹದ
- ಕೈದೊಳಸು ಕೊಂಡೆಸಗಿ ನಟಿಸಿತು ನಾಡು ನಾಡಿನಲಿ ||
- ಅದುದೆರಡರಸಿಭಪುರಿಗೆ ಕಾ
- ಳಾದುದಿನ್ನೇನೆಂದು ಪುರಜನ
- ವೈದೆ ಹೆದರಿತು ಭೀಮ ದುರ್ಯೋಧನರ ಹೋರಟೆಗೆ || (೨) ||
- ಪದವಿಭಾಗ-ಅರ್ಥ: ಬೀದಿಗಲಹದ= ಬೀದಿ+ ಕಲಹದ, ಕದಡು= (ಕೌರವರು ಪಾಂಡವರು) ಬೀದಿಗಳಲ್ಲಿ ಬಹಿರಂಗವಾಗಿ ಜಗಳವಾಡಿದ ಗಲಾಟೆ ಹಬ್ಬಿತು. ಬೀಡಿನಲಿ+ ಐದೆ ಹಬ್ಬಿತು ಬೀಡುಗಲಹದ= ಬೀಡು+ ಕಲಹದ ಕೈದೊಳಸು=ಕೈ+ ತೊಳಸು,= ಜನರ (ಹಳ್ಳಿ - ಗ್ರಾಮ)ಬೀಡುಗಳಿಗೆ ಹೋದರೆ ಅಲ್ಲಿಯೂ ಕೈ-ಹೊಯ್ ಎಂಬ ಹೊಡೆದಾಟ ನೆಡೆಯುತ್ತಿತ್ತು. ಕೊಂಡು+ ಎಸಗಿ ನಟಿಸಿತು ನಾಡು ನಾಡಿನಲಿ= ಹೀಗೆ ಪರವಿರೋಧದ ಕಲಹ ಊರುಊರಿಗೇ ಹಬ್ಬಿತು. ಅದುದೆರಡರಸು+ ಇಭಪುರಿಗೆ ಕಾಳಾದುದು+ ಇನ್ನೇನೆಂದು= ಇಭಪುರಿಗೆ-ಹಸ್ತಿನಾವತಿಗೆ ಎರಡು ಅರಸರುಗಳಾಗಿ ಕೆಟ್ಟದಾಯಿತು, ಪುರಜನವು+ ಐದೆ (ಇವರು ಬರಲು)= ದೇಶಕ್ಕೆ ಕೆಡುಕಾಯಿತು ಎಂದು, ನಗರದ ಜನ ಹೆದರಿತು; ಭೀಮ ದುರ್ಯೋಧನರ ಹೋರಟೆಗೆ= ಹೋರಾಟದಿಂದ (ದೇಶಕ್ಕೆ ಕೆಡುಕಾಯಿತು ಎಂದು, ನಗರದ ಜನರು ಹೆದರಿತು).
- ಅರ್ಥ:ಕೌರವರು ಪಾಂಡವರು ಬೀದಿಗಳಲ್ಲಿ ಬಹಿರಂಗವಾಗಿ ಜಗಳವಾಡಿ ಗಲಾಟೆ ಹಬ್ಬಿತು. ಗ್ರಾಮ ಹಳ್ಳಿಯ ಬೀಡುಗಳಿಗೆ ಹೋದರೆ ಅಲ್ಲಿಯೂ ಕೈ-ಹೊಯ್ ಎಂಬ ಹೊಡೆದಾಟ ನೆಡೆಯುತ್ತಿತ್ತು. ಹೀಗೆ ಪರವಿರೋಧದ ಕಲಹ ಊರು ಊರಿಗೇ ಹಬ್ಬಿತು. ಹಸ್ತಿನಾವತಿಗೆ ಎರಡು ಅರಸರುಗಳಾಗಿ ಕೆಟ್ಟದಾಯಿತು, ದೇಶಕ್ಕೆ ಕೆಡುಕಾಯಿತು ಎಂದು, ನಗರದ ಜನರು ಇವರು ಬರಲು ಹೆದರಿದರು; ಭೀಮ ದುರ್ಯೋಧನರ ಹೋರಾಟದಿಂದ ದೇಶಕ್ಕೆ ಕೆಡುಕಾಯಿತು ಎಂದು, ನಗರದ ಜನರು ಹೆದರಿದರು.
- ಬೇರೆ ಪಾಂಡುವರಿರಲಿ ರಾಯನ
- ನೂರು ಮಕ್ಕಳು ಪುರವನಾಳಲಿ
- ಬೇರೆ ಕೌರವರಿರಲಿ ಪಾಂಡವರಾಳಲಿಭ ಪುರಿಯ ||
- ನೂರರೊಡನೈವರನು ಧರಿಸಿರ
- ಲಾರದೀ ಪುರಿಯೆನುತ ದುಗುಡವ
- ಹೇರಿ ಹೊದಕುಳಿಗೊಳುತಲಿರ್ದುದು ಹಸ್ತಿನಾನಗರ || (೩) ||
- ಪದವಿಭಾಗ-ಅರ್ಥ: ಬೇರೆ ಪಾಂಡುವರು+ ಇರಲಿ ರಾಯನ ನೂರು ಮಕ್ಕಳು ಪುರವನು+ ಆಳಲಿ ಬೇರೆ ಕೌರವರಿಉ+ ಇರಲಿ ಪಾಂಡವರು+ ಆಳಲಿ+ ಇಭಪುರಿಯ (ಇಭಪುರಿ= ಹಸ್ತಿನಾವತಿ)= ನೂರರೊಡನೆ+ ಐವರನು ಧರಿಸಿರಲು+ ಆರದ+ ಈ ಪುರಿಯೆನುತ ದುಗುಡವ ಹೇರಿ= ಚಿಂತೆಯನ್ನು ಹೊಂದಿ, ಹೊದಕುಳಿಗೊಳುತಲಿರ್ದುದು= ವ್ಯಥೆಪಡುತ್ತಿದ್ದರು. ಹಸ್ತಿನಾನಗರ= ಹಸ್ತಿನಾನಗರದ ಜನರು.
- ಅರ್ಥ: ಪಾಂಡುವರು ಬೇರೆ ಇರಲಿ, ಧೃತರಾಷ್ಟ್ರರಾಯನ ನೂರು ಮಕ್ಕಳು ಪುರವನ್ನು ಆಳಲಿ, ಅಥವಾ ಕೌರವರಿಉ ಬೇರೆ ಇರಲಿ ಪಾಂಡವರು ಹಸ್ತಿನಾಪುರವನ್ನು ಆಳಲಿ. ಹಸ್ತಿನಾವತಿಯು ಕೌರವರು ನೂರರೊಡನೆ ಪಾಂಡವರು ಐವರನ್ನು ಸೇರಿಕೊಂಡಿರಲು ಸಾಧ್ಯವಿಲ್ಲ ಎನ್ನುತ್ತಾ ಚಿಂತೆಯನ್ನು ಹೊಂದಿ ಹಸ್ತಿನಾನಗರದ ಜನರುವ್ಯಥೆಪಡುತ್ತಿದ್ದರು.
ದುರ್ಯೋಧನನ ಚಿಂತೆ, ಕರ್ಣನ ಯುದ್ಧೋತ್ಸಾಹ
ಸಂಪಾದಿಸಿ
- ಒಂದು ದಿವಸ ಸುಯೋಧನನು ನಿಜ
- ಮಂದಿರದೊಳೇಕಾಂತದಲಿ ಮನ
- ನೊಂದು ನುಡಿದನು ಶಕುನಿ ಕರ್ಣ ಜಯದ್ರಥಾದ್ಯರಿಗೆ ||
- ಅಂದು ಭೀಮಾರ್ಜುನರು ದ್ರುಪದನ
- ತಂದು ದಕ್ಷಿಣೆಯಿತ್ತು ಗುರುವಿಗೆ
- ಸಂದರೈ ಸಮರದಲಿ ಪರಿಭವವಾಯ್ತು ತಮಗೆಂದ || (೪) ||
- ಪದವಿಭಾಗ-ಅರ್ಥ: ಒಂದು ದಿವಸ ಸುಯೋಧನನು ನಿಜಮಂದಿರದೊಳು(=ತನ್ನ ಅರಮನೆಯಲ್ಲಿ)+ ಏಕಾಂತದಲಿ ಮನನೊಂದು ನುಡಿದನು ಶಕುನಿ ಕರ್ಣ ಜಯದ್ರಥ+ ಆದ್ಯರಿಗೆ= ಮೊದಲಾದವರಿಗೆ, ಅಂದು ಭೀಮಾರ್ಜುನರು ದ್ರುಪದನ ತಂದು ದಕ್ಷಿಣೆಯಿತ್ತು = ಗುರುದಕ್ಷಿಣೆಯನ್ನು ಕೊಟ್ಟು, ಗುರುವಿಗೆ ಸಂದರೈ= ಆಪ್ತರಾದರು, ಸಮರದಲಿ ಪರಿಭವವಾಯ್ತು= ಯುದ್ಧದಲ್ಲಿ ತಮಗೆ ಸೋಲಾಯಿತಲ್ಲಾ, ತಮಗೆ+ ಎಂದ.
- ಅರ್ಥ:ಒಂದು ದಿವಸ ಸುಯೋಧನನು ತನ್ನ ಅರಮನೆಯಲ್ಲಿ ಏಕಾಂತದಲ್ಲಿ ಆಪ್ತರೊಡನೆ ಇದ್ದಾಗ ಮನಸ್ಸಿನಲ್ಲಿ ನೊಂದುಕೊಂಡು, 'ಶಕುನಿ ಕರ್ಣ ಜಯದ್ರಥ ಮೊದಲಾದವರಿಗೆ ಹೇಳಿದನು, ಅಂದು ಪಾಚಾಲನೊಡನೆ ಯುದ್ಧದಲ್ಲಿ ಭೀಮಾರ್ಜುನರು ದ್ರುಪದನನ್ನು ತಂದು ಗುರುದಕ್ಷಿಣೆಯಾಗಿ ಕೊಟ್ಟು, ಗುರುವಿಗೆ ಆಪ್ತರಾದರು. ನಮಗೆ ಆ ಯುದ್ಧದಲ್ಲಿ ನಮಗೆ ಸೋಲಾಯಿತಲ್ಲಾ, ಎಂದ.
- ವನಜ ವನದಲಿ ತುರುಚೆ ಕಬ್ಬಿನ
- ಬನದಿ ಕದಸಿಗೆ ಚೂತಮಯ ಕಾ
- ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ ||
- ಇನಿತು ಪಾರ್ಥನ ಮೇಲೆ ಯಮಳರ
- ಜಿನುಗಿನಲಿ ಜಾರೆನು ಯುಧಿಷ್ಠಿರ
- ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲೆಂದ || (೫) ||
- ಪದವಿಭಾಗ-ಅರ್ಥ: ವನಜ ವನದಲಿ ತುರುಚೆ= ಕಮಲದ ವನದಲ್ಲಿ ಮುಟ್ಟಿದರೆ ಮೈತುರಿಸುವ ತುರಚೆಗಿಡ, ಕಬ್ಬಿನಬನದಿ ಕದಸಿಗೆ= ಕಬ್ಬಿನ ತೋಟದಲ್ಲಿ ಕಹಿಕೊಡಸ, ಚೂತಮಯ ಕಾನನದಿ ಬೊಬ್ಬುಲಿ= ಮಾವಿನತೋಪಿನಲ್ಲಿ ಹೆಬ್ಬುಲಿ ಇದ್ದರೆ ಹೇಗೋ ಹಾಗೆ, ಭೀಮಸೇನನಯಿರವು= ಭೀಮಸೇನನು ನಮ್ಮ ಮಧ್ಯೆ ಇದ್ದಾನೆ. ತಮ್ಮೊಳಗೆ= ನಮ್ಮ ಮಧ್ಯೆ; ಇನಿತು= ಈಬಗೆಯ ಬೇಸರ, ಪಾರ್ಥನ ಮೇಲೆ ಯಮಳರ ಜಿನುಗಿನಲಿ ಜಾರೆನು= ಅರ್ಜುನ, ನಕುಲಸಹದೇವರ ಮೇಲೆ ಅವರು ಸುಳಿದರೂ ಬೇಸರವಿಲ್ಲ. ಯುಧಿಷ್ಠಿರ ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲೆಂದ= ಧರ್ಮರಾಯನು ರಾಜನಾದರೂ, ಆಗದಿದ್ದರೂ,ಅವನ ಬಗ್ಗೆ ಭಯವಿಲ್ಲ ಎಂದನು.
- ಅರ್ಥ: ಕಮಲದ ವನದಲ್ಲಿ ಮುಟ್ಟಿದರೆ ಮೈತುರಿಸುವ ತುರಚೆಗಿಡ ಇದ್ದ ಹಾಗೆ, ಕಬ್ಬಿನ ತೋಟದಲ್ಲಿ ಕಹಿಕೊಡಸದ ಗಿಡದಂತೆ, ಮಾವಿನತೋಪಿನಲ್ಲಿ ಹೆಬ್ಬುಲಿ ಇದ್ದರೆ ಹೇಗೋ ಹಾಗೆ, ಈ ಭೀಮಸೇನನು ನಮ್ಮ ಮಧ್ಯೆ ಇದ್ದಾನೆ. ಈ ಬಗೆಯ ಬೇಸರ, ಅರ್ಜುನ, ನಕುಲಸಹದೇವರ ಮೇಲೆ ಅವರು ನಮ್ಮ ಮಧ್ಯೆ ಸುಳಿದರೂ ಬೇಸರವಿಲ್ಲ. ಧರ್ಮರಾಯನು ರಾಜನಾದರೂ, ಆಗದಿದ್ದರೂ,ಅವನ ಬಗ್ಗೆ ಭಯವಿಲ್ಲ ಎಂದನು.
- ಹುದು ನಡೆಯದಿವರೊಡನೆ ನಮ್ಮಲಿ
- ಕದನವೇ ಕೈಗಟ್ಟುವುದು ಕಾ
- ದಿದೊಡೆ ಹೆಬ್ಬಲವಹುದು ದುರ್ಬಲ ದೈವಗತಿ ಬೇರೆ ||
- ನದಿಗಳರಳೆಯ ಹಾಸು ನವ ವಿಷ
- ವುದರ ದೀಪನ ಚೂರ್ಣವಾವಂ
- ಗದಲಿ ಸಾಪತ್ನರಲಿ ಸದರವ ಕಾಣೆ ತಾನೆಂದ || (೬) ||
- ಪದವಿಭಾಗ-ಅರ್ಥ: ಹುದು (ಹುದು- ಹುದುಗು= ಮೃದುವಾಗು, ಮೃದುತ್ವ, ಮೆತ್ತಗಾಗು,- ಹಿಟ್ಟು ಹುದುಗು ಬಂದಿದೆ- ಉಬ್ಬಿ ಮೆತ್ತಗಾಗಿದೆ.) ನಡೆಯದು+ ಇವರೊಡನೆ ನಮ್ಮಲಿ ಕದನವೇ ಕೈಗಟ್ಟುವುದು= ಮೃದುಸ್ವಭಾವ ಇವರೊಡನೆ ನೆಡೆಯುವುದಿಲ್ಲ, ಕಾದಿದೊಡೆ ಹೆಬ್ಬಲವಹುದು (ಹೆಚ್ಚು+ ಬಲ+ ಅಹುದು)= ಯುದ್ಧಮಾಡಿದರೆ ಅವರದು ಹೆಚ್ಚು ಬಲವಂತರಾಗಿ ಕಾಣುವರು. ದುರ್ಬಲ ದೈವಗತಿ ಬೇರೆ= ದೈವಗತಿ ದುರ್ಬಲವಾಗಿ ಇದ್ದಂತೆ ಬೇರೆ ಕಾಣುವುದು, ನದಿಗಳು,=ನದಿ ವಿಹಾರ, ರಳೆಯ ಹಾಸು,= ಮೆತ್ತನೆಯ ಅರಳೆಹತ್ತಿಗೆಯ ಹಾಸಿಗೆ, ನವ ವಿಷವು+ ಉದರ ದೀಪನ ಚೂರ್ಣವು+ ಆವಂಗದಲಿ= ಈ ಸ್ಥಿತಿಯಲ್ಲಿ ಉಂಡಿದ್ದು ಜೀರ್ಣವಾಗುವುದಿಲ್ಲ, ಅದಕ್ಕಾಗಿ ಊಟವನ್ನು ಜೀರ್ಣಿಸಲು ಉದರದೀಪನ ಚೂರ್ಣದ- ಔಷಧಿಯನ್ನು ತಿಂದರೆ - ಅದೇ ನವ ವಿಷವು ಆಗುವುದು, ಸಾಪತ್ನರಲಿ= ಈ ದಯಾದಿಗಳಲ್ಲಿ, ಸದರವ ಕಾಣೆ= ದೌರ್ಬಲ್ಯವನ್ನೇ ಕಾಣುತ್ತಿಲ್ಲ, ತಾನು, ಎಂದ. (ಶತ್ರುಗಳ ದೌರ್ಬಲ್ಯವನ್ನು ಗುರುತಿಸಿ ಅದರ ಮೂಲಕ ನಾಶಮಾಡುವುದು ನೀತಿ.)
- ಅರ್ಥ:ಪಾಂಡವರೊಡನೆ ನಮ್ಮಲಿ ಸದಾ ಕದನವೇ ಕೈಗಟ್ಟುತ್ತದೆ- ಕೈಗೂಡುತ್ತದೆ, ಮೃದುಸ್ವಭಾವ ಇವರೊಡನೆ ನೆಡೆಯುವುದಿಲ್ಲ, ಯುದ್ಧಮಾಡಿದರೆ ಅವರದು ಹೆಚ್ಚು ಬಲವಂತರಾಗಿ ಕಾಣುವರು. ದೈವಗತಿಯೂ ನಮಗೆ ದುರ್ಬಲವಾಗಿ ಇದ್ದಂತೆ ಬೇರೆ ಕಾಣುವುದು, ನದಿ ವಿಹಾರ, ಮೆತ್ತನೆಯ ಅರಳೆಹತ್ತಿಗೆಯ ಹಾಸಿಗೆ ಸುಖ ಕೊಡುವುದಿಲ್ಲ, ಈ ಸ್ಥಿತಿಯಲ್ಲಿ ಉಂಡಿದ್ದು ಜೀರ್ಣವಾಗುವುದಿಲ್ಲ, ಅದಕ್ಕಾಗಿ ಊಟವನ್ನು ಜೀರ್ಣಿಸಲು ಉದರದೀಪನ ಚೂರ್ಣದ- ಔಷಧಿಯನ್ನು ತಿಂದರೆ - ಅದೇ ನವವಿಷವು- ಹೊಸಬಗೆ ವಿಷ ಆಗುವುದು. ಹೊಕ್ಕು ಹೊಡೆಯಲು ತಾನು ಈ ದಯಾದಿಗಳಲ್ಲಿ, ದೌರ್ಬಲ್ಯವನ್ನೇ ಕಾಣುತ್ತಿಲ್ಲ, ಎಂದ ದುರ್ಯೋದನ. (ಶತ್ರುಗಳ ದೌರ್ಬಲ್ಯವನ್ನು ಗುರುತಿಸಿ ಅದರ ಮೂಲಕ ನಾಶಮಾಡುವುದು ನೀತಿ.)
- ದುಗುಡವೇತಕೆ ಜೀಯ ಡೊಂಬಿನ
- ಜಗಳವನು ತೆಗೆದರಿನೃಪರ ಸುಂ
- ಟಗೆಯನಾಯ್ಸುವೆನವರ ತನುವನು ಯುದ್ಧ ರಂಗದಲಿ ||
- ದಿಗು ಬಲಿಯ ಕೊಡಿಸುವೆನು ಸಾಕಿ
- ನ್ನೊಗುಮಿಗೆಯ ಚಿಂತಾಂಗನೆಯನೋ
- ಲಗಿಸದಿರು ಕುರುರಾಯ ಚಿತ್ತೈಸೆಂದನಾ ಕರ್ಣ || (೭) ||
- ಪದವಿಭಾಗ-ಅರ್ಥ: ದುಗುಡವ+ ಏತಕೆ ಜೀಯ,=ಫ್ರಭು ದುಃಖವೇಕೆ? ಡೊಂಬಿನ ಜಗಳವನು = ಸುಳ್ಳು ನೆವದಿಂದ ಪಾಂಡವರೊದನೆ ಜಗಳವನ್ನು ತೆಗೆದು+ ಅರಿನೃಪರ ಸುಂಟಗೆಯನು ಆಯ್ಸುವೆನು+ ಅವರ= ಶತ್ರು ರಾಜಕುಮಾರರ ದೇಹದಿಂದ ಸುಡುವ ಸಲಾಕಿಯನ್ನು ಹಾಯಿಸಿ ಮಾಂಸವನ್ನು ತೆಗೆಯುತ್ತೇನೆ. ತನುವನು= ದೇಹವನ್ನು, ಯುದ್ಧ ರಂಗದಲಿ ದಿಗು ಬಲಿಯ ಕೊಡಿಸುವೆನು= ಅವರ ದೇಹಗಳನ್ನು ಭೂತಗಳಿಗೆ ದಿಕ್‍ಬಲಿ ಹಾಕಿಸುತ್ತೇನೆ, ಸಾಕಿನ್ನು+ ಒಗುಮಿಗೆಯ ಚಿಂತಾಂಗನೆಯನು+ ಓಲಗಿಸದಿರು ಕುರುರಾಯ ಚಿತ್ತೈಸು+ ಎಂದನು+ ಆ ಕರ್ಣ= ಅಲ್ಲಿದ್ದ ಆ ಕರ್ಣನು ಇನ್ನು ಸಾಕು ನೀನು ಬಹಳವಾದ ಚಿಂತೆಯನ್ನು ಮಾಡಬೇಡ (ಚಿಂತಾಂಗನೆಯನು+ ಓಲಗಿಸದಿರು= ಚಿಂತೆ ಎಂಬ ವನಿತೆಯನ್ನು ಆದರಿಸಬೇಡ); ಕೌರವ ರಾಯನೇ ನಾನು ಹೇಳಿದುದನ್ನು ಮನಸ್ಸಿಗೆ ತೆಗೆದುಕೊ ಎಂದನು.
- ಸುಂಟಗೆ::1. ಸುಂಟಗೆ (ಮಾಂಸದ ತುಂಡು)(ಅಥವಾ ಸಣ್ಣ ಕೈ ಸಲಾಕಿ). 2. ಸಲಾಕಿಯಲ್ಲಿಟ್ಟು ಸುಡಲು (ಮುಖ್ಯವಾಗಿ) ತೆಗೆದುಕೊಳ್ಳುವ ದೇಹದ ಭಾಗ.
- ಅರ್ಥ: ಫ್ರಭು ದುಃಖವೇಕೆ? ಸುಳ್ಳು ನೆವದಿಂದ ಪಾಂಡವರೊದನೆ ಜಗಳವನ್ನು ತೆಗೆದು ಶತ್ರು ರಾಜಕುಮಾರರ ದೇಹದಿಂದ ಸುಡುವ ಸಲಾಕಿಯನ್ನು ಹಾಯಿಸಿ ಮಾಂಸವನ್ನು ತೆಗೆಯುತ್ತೇನೆ. . ಅವರ ದೇಹಗಳನ್ನು ಭೂತಗಳಿಗೆ ದಿಕ್‍ಬಲಿ ಹಾಕಿಸುತ್ತೇನೆ. ಅಲ್ಲಿದ್ದ ಆ ಕರ್ಣನು ಇನ್ನು ಸಾಕು ನೀನು ಬಹಳವಾದ ಚಿಂತೆಯನ್ನು ಮಾಡಬೇಡ. ಕೌರವರಾಯನೇ ನಾನು ಹೇಳಿದುದನ್ನು ಮನಸ್ಸಿಗೆ ತೆಗೆದುಕೊ ಎಂದನು.
- ಹೊಡೆದು ಹೊಡೆ ಚೆಂಡಾಡಿ ರಿಪುಗಳ
- ಗಡಣವನು ಯಮರಾಜಧಾನಿಗೆ
- ನಡೆಸುವೆನು ನೀ ನೋಡುತಿರು ಸಾಕೊಂದು ನಿಮಿಷದಲಿ ||
- ಕೊಡು ತನೆಗೆ ನೇಮವನು ದುಗುಡವ
- ಬಿಡು ಮನಸ್ಸಿನ ಕಂದು ಕುಂದನು
- ಹಿಡಿಯದಿರು ಕುರುರಾಯ ಚಿತ್ತೈಸೆಂದನಾ ಕರ್ಣ || (೮) ||
- ಪದವಿಭಾಗ-ಅರ್ಥ: ಹೊಡೆದು ಹೊಡೆ ಚೆಂಡಾಡಿ ರಿಪುಗಳ ಗಡಣವನು (ಸಮೂಹ, ಗುಂಪು)= ನಿನ್ನ ಶತ್ರುಗಳನ್ನು ಹೊಡೆದು ಹೊಡೆ= ಹೊಡೆದು ಕೆಡಗಿದ ತಲೆಗಳನ್ನು, ಚೆಂಡಾಡಿ, ಶತ್ರು ಸಮೂಹವನ್ನು, ಯಮರಾಜಧಾನಿಗೆ ನಡೆಸುವೆನು= ಕಳಿಸುತ್ತೇನೆ. ನೀ ನೋಡುತಿರು, ಸಾಕು+ ಒಂದು ನಿಮಿಷದಲಿ= ನನಗೆ ಒಂದೇ ನಿಮಿಷ ಸಾಕು, ಕೊಡು ತನೆಗೆ ನೇಮವನು= ನನಗೆ ಯುದ್ಧಮಾಡಲು ಅನುಮತಿ ಕೊಡು, ದುಗುಡವ ಬಿಡು= ದುಃಖವನ್ನು ಬಿಡು, ಮನಸ್ಸಿನ ಕಂದು= ಸಪ್ಪಗಾದ ಕುಂದನು= ದೋಷವನ್ನು, ಹಿಡಿಯದಿರು= ಮನಸ್ಸಿನಲ್ಲಿ ಕಂದಿದ ದೋಷವನ್ನು ಇಟ್ಟುಕೊಳ್ಳಬೇಡ, ಕುರುರಾಯ= ದುರ್ಯೋಧನನೇ, ಚಿತ್ತೈಸೆಂದನಾ= ಚಿತ್ತೈಸು+ ಎಂದನು+ ಆ ಕರ್ಣ.
- ಅರ್ಥ:ಆಗ ಆ ಕರ್ಣನು, ನಿನ್ನ ಶತ್ರುಗಳನ್ನು ಹೊಡೆದು ಹೊಡೆದು, ಕೆಡಗಿದ ತಲೆಗಳನ್ನು, ಚೆಂಡಾಡಿ, ಶತ್ರು ಸಮೂಹವನ್ನು, ಯಮರಾಜಧಾನಿಗೆ ಕಳಿಸುತ್ತೇನೆ. ನೀ ನೋಡುತ್ತಿರು ಸಾಕು. ನನಗೆ ಒಂದೇ ನಿಮಿಷ ಸಾಕು, ನನಗೆ ಯುದ್ಧಮಾಡಲು ಅನುಮತಿ ಕೊಡು; ದುಃಖವನ್ನು ಬಿಡು, ಮನಸ್ಸಿನ ಕುಗ್ಗಿಸುವ ದೋಷವನ್ನು ಇಟ್ಟುಕೊಳ್ಳಬೇಡ, ಕುರುರಾಯ= ದುರ್ಯೋಧನನೇ. ನಾನು ಹೇಳಿದುದನ್ನು ದಯಮಾಡಿ ಕೇಳಿಸಿಕೊ, ಎಂದನು.
- ಹಬ್ಬುಗೆಯ ಹದಿನಾಲ್ಕು ಲೋಕದ
- ಮೊಬ್ಬುಗಳನೀಡಾಡಿನಭದೊಳ
- ಗೊಬ್ಬನೇ ರವಿ ತೊಳಗಿ ಬೆಳಗುವವೋಲು ಪಾಂಡವರ |
- ಕೊಬ್ಬುಗಳ ನಿಲುಸುವೆನು ಧರೆಯೊಳ
- ಗೊಬ್ಬನೇ ದುರ್ಯೋಧನನು ಮ
- ತ್ತೊಬ್ಬರಿಲ್ಲೆಂದೆನಿಸಿ ತೋರುವೆನೆಂದನಾ ಕರ್ಣ || (೯)
- ಪದವಿಭಾಗ-ಅರ್ಥ: ಹಬ್ಬುಗೆಯ= ಹಬ್ಬಿರುವ, ಹದಿನಾಲ್ಕು ಲೋಕದ ಮೊಬ್ಬುಗಳ= ಹದಿನಾಲ್ಕು ಲೋಕದ ಕತ್ತಲೆಯನ್ನು, ನೀಡಾಡಿ= ಹೋಗಲಾಡಿಸಿ, ನಭದೊಳಗೆ+ ಒಬ್ಬನೇ ರವಿ= ಆಕಾಶದಲ್ಲಿ ಸೂರ್ಯನೊಬ್ಬನೇ, ತೊಳಗಿ ಬೆಳಗುವವೋಲು= ಚೆನ್ನಾಗಿ ಪ್ರಕಾಶಿಸುವಂತೆ, ಪಾಂಡವರ ಕೊಬ್ಬುಗಳ ನಿಲುಸುವೆನು= ಪಾಂಡವರ ಸೊಕ್ಕನ್ನು ಅಡಗಿಸುವೆನು. ಧರೆಯೊಳಗೆ+ ಒಬ್ಬನೇ= ಭೂಮಿಯಮೇಲೆ ಒಬ್ಬನೇ, ದುರ್ಯೋಧನನು ಮತ್ತೊಬ್ಬರು+ ಇಲ್ಲ+ ಎಂದೆನಿಸಿ ತೋರುವೆನು+ ಎಂದನು+ ಆ ಕರ್ಣ
- ಅರ್ಥ: ಹಬ್ಬಿರುವ, ಹದಿನಾಲ್ಕು ಲೋಕದ ಹದಿನಾಲ್ಕು ಲೋಕಗಳ ಕತ್ತಲೆಯನ್ನು ಹೋಗಲಾಡಿಸಿ, ಆಕಾಶದಲ್ಲಿ ಸೂರ್ಯನೊಬ್ಬನೇ, ಚೆನ್ನಾಗಿ ಪ್ರಕಾಶಿಸುವಂತೆ, ಪಾಂಡವರ ಸೊಕ್ಕನ್ನು ಅಡಗಿಸುವೆನು. ಭೂಮಿಯ ಮೇಲೆ ಒಬ್ಬನೇ, ದುರ್ಯೋಧನನು, ಮತ್ತೊಬ್ಬರು ಇಲ್ಲ ಎಂದೆನಿಸಿ ತೋರುವೆನು. ಎಂದನು, ಆ ಕರ್ಣ.
- ವಿದುರ ಭೀಷ್ಮಾದಿಗಳು ನಿನ್ನಯ
- ಸದನದೊಳಗುಂಡುಟ್ಟು ಪರರ
- ಭ್ಯುದಯೆವನೆ ಬಯಸುವರು ದೂರುವರೆಮ್ಮನವರುಗಳ ||
- ಹದನ ನೀನೇ ಬಲ್ಲೆ ಸಾಕಿ
- ನ್ನದರ ಮಾತೇಕೆಂದ ತನ್ನಯ
- ಕದನವನು ಚಿತ್ತೈಸು ಸಾಕಿನ್ನೆಂದನಾ ಕರ್ಣ || (೧೦) ||
- ಪದವಿಭಾಗ-ಅರ್ಥ:ವಿದುರ ಭೀಷ್ಮಾದಿಗಳು ನಿನ್ನಯ ಸದನದೊಳಗೆ+ ಉಂಡುಟ್ಟು ಪರರ+ ಅಭ್ಯುದಯೆವನೆ ಬಯಸುವರು= ವಿದುರ ಮತ್ತು ಭೀಷ್ಮರು ಮತ್ತೂ ಕೆಲವರು, ನಿನ್ನಯ ಸದನದೊಳಗೆ+ ಉಂಡುಟ್ಟು= ನಿನ್ನ ಮನೆಯಲ್ಲಿ ಉಂಡು, ಪರರ, ಅಭ್ಯುದಯೆವನೆ ಬಯಸುವರು; ದೂರುವರು+ ಎಮ್ಮನು+ ಅವರುಗಳ ಹದನ= ವಿಚಾರ, ವಿಷಯ; ನೀನೇ ಬಲ್ಲೆ= ಅವರು ನಮ್ಮನ್ನು ದೂರುವರು, ಈ ವಿಷಯವನ್ನು ನೀನೇ ಬಲ್ಲೆ; ಈ ವಿಚಾರ ಸಾಕು+ ಇನ್ನದರ ಮಾತು+ ಏಕೆ+ ಎಂದ, ತನ್ನಯ ಕದನವನು ಚಿತ್ತೈಸು ಸಾಕಿನ್ನು+ ಎಂದನು+ ಆ ಕರ್ಣ = ಈ ವಿಚಾರ ಸಾಕು. ಇನ್ನು ಅದರ ಮಾತು ಏಕೆ? ಅವರ ವಿಷಯ ಬೇಡ ಎಂದ. ತನ್ನಯ ಕದನವನು ಚಿತ್ತೈಸು= ನನ್ನ ಯುದ್ಧವನ್ನು ನೋಡು. ಇನ್ನು ಮಾತು ಸಾಕು; ಸಾಕಿನ್ನು+ ಎಂದನು+ ಆ ಕರ್ಣ =
- ಅರ್ಥ: ವಿದುರ ಮತ್ತು ಭೀಷ್ಮರು ಮತ್ತೂ ಕೆಲವರು, ನಿನ್ನ ಮನೆಯಲ್ಲಿ ಉಂಡು, ಪರರ ಅಭ್ಯುದಯೆವನ್ನು ಬಯಸುವರು; ಅವರು ನಮ್ಮನ್ನು ದೂರುವರು, ಈ ವಿಷಯವನ್ನು ನೀನೇ ಬಲ್ಲೆ; ಈ ವಿಚಾರ ಸಾಕು. ಇನ್ನು ಅದರ ಮಾತೇಕೆ? ಅವರ ವಿಷಯ ಬೇಡ ಎಂದ. ನನ್ನ ಯುದ್ಧವನ್ನು ನೋಡು. ಇನ್ನು ಮಾತು ಸಾಕು; ಅಪ್ಪಣೆ ಕೊಡು ಎಂದನು ಆ ಕರ್ಣ.
- ಸಹಜವೀ ನುಡಿ ಕರ್ಣನಾಡಿದ
- ನಹುದು ಪಾಂಡವರೆಂಬವರು ಕಡು
- ಸಹಸಿಗಳು ಗೆಲಲರಿದು ಕುಹಕೋಪಾಯ ಮಾರ್ಗದಲಿ |
- ಅಹಿತರನು ಗೆಲಬಹುದು ಪರಿಕರ
- ಸಹಿತವರುಗಳ ನಿಮ್ಮ ಚಿತ್ತಕೆ
- ಬಹರೆ ತನ್ನಭಿಮತವನವಧರಿಸೆಂದನಾ ಶಕುನಿ || (೧೧)
- ಪದವಿಭಾಗ-ಅರ್ಥ:ಸಹಜವು+ ಈ ನುಡಿ= ಮಾತು; ಕರ್ಣನಾಡಿದನು+ ಅಹುದು ಪಾಂಡವರೆಂಬವರು ಕಡುಸಹಸಿಗಳು= ಬಹಳ ಶೂರರು. ಗೆಲಲು+ ಅರಿದು= ಅಸಾದ್ಯ. ಕುಹಕೋಪಾಯ= ಕೆಟ್ಟ ಉಪಾಯದಿಂದ, ಮಾರ್ಗದಲಿ ಅಹಿತರನು= ಶತ್ರುಗಳನ್ನು ಗೆಲಬಹುದು; ಪರಿಕರಸಹಿತ (ಸಂಪತ್ತಿನ ಸಹಿತ?)+ ಅವರುಗಳ= ನಿಮ್ಮ ಚಿತ್ತಕೆ ಬಹರೆ= ನಿನ್ನ ಮನಸ್ಸಿಗೆ ಬಂದರೆ, ತನ್ನ+ ಅಭಿಮತವನು (ಅಭಿಪ್ರಾಯವನ್ನು)+ ಅವಧರಿಸು-ಕೇಳು+ ಎಂದನು ಆ ಶಕುನಿ
- ಅರ್ಥ: ಕರ್ಣನು ಆಡಿದನ ಮಾತು ಸಹಜವು. ಈ ನುಡಿ ಅಹುದು, ಸತ್ಯ; ಆದರೆ ಪಾಂಡವರೆಂಬವರು ಸಾಮಾನ್ಯರಲ್ಲ, ಬಹಳ ಶೂರರು. ಕರ್ಣನು ಗೆಲ್ಲವೆನೆಂದರೂ ಗೆಲ್ಲಲು ಅಸಾದ್ಯ. ಅವರನ್ನು ಕುಟಿಲ ಉಪಾಯದಿಂದ ಗೆಲ್ಲಬಹುದು. ಈಅಸಾದ್ಯ ಶತ್ರುಗಳನ್ನು ಸಂಪತ್ತಿನ ಸಹಿತ ಉಪಾಯದಿಂದ ಗೆಲ್ಲಬಹುದು. ನಿನ್ನ ಮನಸ್ಸಿಗೆ ಬಂದರೆ ತನ್ನ ಅಭಿಪ್ರಾಯವನ್ನು (ಉಪಾಯವನ್ನು) ಕೇಳು ಎಂದನು ಆ ಶಕುನಿ.
- ಐದು ಮುಖವೀರೈದುಭುಜ ಹದಿ
- ನೈದು ಕಂಗಳ ವಿಗಡ ರುದ್ರನು
- ಮೇದಿನಿಯ ಮೇಲೊಂದು ಶಿರ ಭುಜವೆರಡನಳವಡಿಸಿ |
- ಆದಿಪುರುಷನು ಭೀಮ ಪೆಸರಿನ
- ಲೈದೆ ಜನಿಸಿದನಾತನಿದಿರಲಿ
- ಕೈದುಕಾರನದಾವನೈ ಹೇಳೆಂದನಾ ಶಕುನಿ || (೧೨)
- ಪದವಿಭಾಗ-ಅರ್ಥ: ಐದು ಮುಖವು+ ಈರೈದುಭುಜ, ಹದಿನೈದು ಕಂಗಳ ವಿಗಡ ರುದ್ರನು= ಐದು ಮುಖದ ಎರಡು+ಐದು ಹತ್ತುಭುಜದ ಹದಿನೈದು ಕಣ್ಣುಗಳ ವಿಗಡ= ಪರಾಕ್ರಮಿ, ರುದ್ರನು, ಮೇದಿನಿಯ ಮೇಲೊಂದು ಶಿರ ಭುಜವು+ ಎರಡನು+ ಅಳವಡಿಸಿ = ಭೂಮಿಯ ಮೇಲೆ ಒಂದು ತಲೆಯನ್ನೂ, ಎರಡುಭುಜಗಳನ್ನು ಅಳವಡಿಸಿ, ಆದಿಪುರುಷನು= ಆದಿಪುರುಷನಾದ ರುದ್ರನು, ಭೀಮ ಪೆಸರಿನಲೈದೆ= ಭೀಮನೆಂಬ ಹೆಸರಿನಲ್ಲಿ ಭೂಮಿಗೆ ಬರಲು ಜನಿಸಿದನು+ ಆತನ+ ಇದಿರಲಿ= ಎದುರು ನಿಲ್ಲುವ ಕೈದುಕಾರನು(ಶಸ್ತ್ರಧಾರಿಯು)+ ಅದು+ ಆವನೈ ಹೇಳು+ ಎಂದನು+ ಆ ಶಕುನಿ
- ಅರ್ಥ: ಐದು ಮುಖದ, ಹತ್ತುಭುಜದ, ಹದಿನೈದು ಕಣ್ಣುಗಳ ಪರಾಕ್ರಮಿ, ರುದ್ರನು, ಭೂಮಿಯ ಮೇಲೆ ಒಂದು ತಲೆಯನ್ನೂ, ಎರಡುಭುಜಗಳನ್ನು ಅಳವಡಿಸಿಕೊಂಡು, ಆದಿಪುರುಷನಾದ ರುದ್ರನು, ಭೀಮನೆಂಬ ಹೆಸರಿನಲ್ಲಿ ಭೂಮಿಗೆ ಬರುವ ಬಯಕೆಯಿಂದ ಹುಟ್ಟಿ ಬಂದಿದ್ದಾನೆ. ಅವನ ಎದುರು ನಿಲ್ಲುವ ಶಸ್ತ್ರಧಾರಿಯು) ಅದು ಯಾವವನಿದ್ದಾನಪ್ಪಾ ಹೇಳು ಎಂದನು, ಆ ಶಕುನಿ.
- ಅರಸ ಕೇಳ್ಬಿಲು ವಿದ್ಯದಲಿ ಮೂ
- ವರು ಕಣಾ ಸಾಮರ್ಥ್ಯ ಪುರುಷರು
- ಧರೆಯೊಳೊಬ್ಬರಿಗೊಂದು ಗುಣ ಪಾರ್ಥಂಗೆ ಮೂರು ಗುಣ |
- ಭರಿತವಾಗಿಹುದಾತನೊಬ್ಬನ
- ಸರಿಸದಲಿ ಮಾರಾಂತು ಜೀವಿಸಿ
- ಮರಳ ಬಲ್ಲವನಾವನೈ ಹೇಳೆಂದನಾ ಶಕುನಿ || (೧೩)
- ಪದವಿಭಾಗ-ಅರ್ಥ: ಅರಸ ಕೇಳ್+ ಬಿಲು ವಿದ್ಯದಲಿ ಮೂವರು ಕಣಾ ಸಾಮರ್ಥ್ಯ ಪುರುಷರು, ಧರೆಯೊಳು+ ಒಬ್ಬರಿಗೊಂದು ಗುಣ, ಪಾರ್ಥಂಗೆ ಮೂರು ಗುಣ, ಭರಿತವಾಗಿಹುದು+ ಆತನು+ ಒಬ್ಬನ ಸರಿಸದಲಿ ಮಾರಾಂತು= ಯುದ್ಧದಲ್ಲಿ ಎದುರು ನಿಂತು, ಜೀವಿಸಿ ಮರಳಿ ಬರ ಬಲ್ಲವನು+ ಆವನೈ ಹೇಳೆಂದನು+ ಆ ಶಕುನಿ
- ಅರ್ಥ: ಅರಸನೇ ಕೇಳು, ಬಿಲ್ಲು ವಿದ್ಯೆಯಲ್ಲಿ ಮೂವರು ಸಾಮರ್ಥ್ಯ ಪುರುಷರು ಕಣಯ್ಯಾ., ಅಂಥವರಲ್ಲಿ ಒಬ್ಬರಿಗೊಂದು ವಿಶೇಷ ಗುಣವಿದೆ. ಪಾರ್ಥನಲ್ಲಿ ಮೂರೂ ಗುಣಗಳು ಭರಿತವಾಗಿದೆ. ಆತನ ಒಬ್ಬನ ಸರಿಸಮಾನವಾಗಿ ಯುದ್ಧದಲ್ಲಿ ಎದುರು ನಿಂತು ಜೀವಿಸಿ ಮರಳಿ ಬರ ಬಲ್ಲವನು ಆವನಯ್ಯಾ ದುರ್ಯೋಧನಾ, ಹೇಳು, ಎಂದನು ಆ ಶಕುನಿ .
- ರಾಮಚಂದ್ರನ ಚರಣಯುಗ ನಿ
- ಸ್ಸೀಮ ಭೀಷ್ಮಾಚಾರಿಯರ ಶಿರ
- ವಾ ಮಹಾರಥ ದ್ರೋಣನೆದೆ ನಡುಗುವುದು ಸಮರದಲಿ ||
- ಸೌಮನಸ್ಯನು ನಿಷ್ಪ್ರಕಂಪ ಸ
- ನಾಮನರ್ಜುನ ದೇವನಿದಿರಲಿ
- ಭೂಮಿಯಲಿ ಬಿಲ್ಲಾಳದಾವವನೆಂದನಾ ಶಕುನಿ || (೧೪) ||
- ಪದವಿಭಾಗ-ಅರ್ಥ: ರಾಮಚಂದ್ರನ ಚರಣಯುಗ,=ಮಹಾ ಬಿಲ್ಲುಗಾರರಾದ ಶ್ರೀ ರಾಮಚಂದ್ರನ ಪಾದಗಳು, ನಿಸ್ಸೀಮ ಭೀಷ್ಮಾಚಾರಿಯರ ಶಿರವು+ ಆ ಮಹಾರಥ ದ್ರೋಣನ+ ಎದೆ ನಡುಗುವುದು ಸಮರದಲಿ= ಸಾಟಿಯಿಲ್ಲದ ಭೀಷ್ಮಾಚಾರ್ಯರ ಎದೆ, ಆ ಮಹಾರಥ ದ್ರೋಣನ ಎದೆ ನಡುಗುವುದು ಯುದ್ಧದಲ್ಲಿ. ಸೌಮನಸ್ಯನು ನಿಷ್ಪ್ರಕಂಪ ಸನಾಮನು+ ಅರ್ಜುನ ದೇವನ+ ಇದಿರಲಿ= ಉತ್ತಮ ಮನಸ್ಸುಳ್ಳ, ಎಂದಿಗೂ ನಡುಗದಿರುವ, ಹೆಸರಿಗೆ ತಕ್ಕಂತೆ ಇರುವ ಅರ್ಜುನದೇವನ ಎದುರಿನಲ್ಲಿ, ಭೂಮಿಯಲಿ ಬಿಲ್ಲಾಳು+ ಅದಾವ+ ಅವನು+ ಎಂದನಾ ಶಕುನಿ= ನಿಂತುಯುದ್ಧಮಾಡುವ ಶೂರನು ಭೂಮಿಯಲ್ಲಿ ಅದು ಯಾವನಿದ್ದಾನೆ, ಎಂದನು ಶಕುನಿ.
- ಅರ್ಥ: ಬಿಲ್ಲುಗಾರರಾದ ಶ್ರೀ ರಾಮಚಂದ್ರನ ಪಾದಗಳು, ಸಾಟಿಯಿಲ್ಲದ ಭೀಷ್ಮಾಚಾರ್ಯರ ತಲೆ, ಆ ಮಹಾರಥ ದ್ರೋಣನ ಎದೆ ಯುದ್ಧದಲ್ಲಿ ನಡುಗುವುದು. ಸೌಮನಸ್ಯನು ನಿಷ್ಪ್ರಕಂಪ ಸನಾಮನು+ ಅರ್ಜುನ ದೇವನ+ ಇದಿರಲಿ= ಉತ್ತಮ ಮನಸ್ಸುಳ್ಳ, ಎಂದಿಗೂ ನಡುಗದಿರುವ, ಹೆಸರಿಗೆ ತಕ್ಕಂತೆ ಇರುವ ಅರ್ಜುನದೇವನ ಎದುರಿನಲ್ಲಿ, ಭೂಮಿಯಲಿ ಬಿಲ್ಲಾಳು+ ಅದಾವ+ ಅವನು+ ಎಂದನಾ ಶಕುನಿ= ನಿಂತುಯುದ್ಧಮಾಡುವ ಶೂರನು ಭೂಮಿಯಲ್ಲಿ ಅದು ಯಾವನಿದ್ದಾನೆ, ಎಂದನು ಶಕುನಿ.
- ಶತ್ರುಗಳ ಸಂಹರಿಸಿ ರಾಜ್ಯವ
- ನೊತ್ತಿಯಾಳುವೆನೆಂಬ ಸಾಹಸ
- ಸತ್ವಗುಣ ನಿನಗಿಲ್ಲ ಪಾಂಡವರತುಲ ಭುಜಬಲರು ||
- ಕೃತ್ರಿಮದ ಮುಖದಿಂದ ರಿಪುಗಳ
- ಕಿತ್ತು ಹಾಯಿಕಿ ನೆಲನನೇಕ
- ಚ್ಛತ್ರದಲಿ ಸಲಹುವುದು ಮತ ಕೇಳೆಂದನಾ ಶಕುನಿ || (೧೫) ||
- ಪದವಿಭಾಗ-ಅರ್ಥ: ಶತ್ರುಗಳ ಸಂಹರಿಸಿ ರಾಜ್ಯವನು+ ಒತ್ತಿಯಾಳುವೆನು+ ಎಂಬ ಸಾಹಸಸತ್ವಗುಣ ನಿನಗಿಲ್ಲ= ಶತ್ರುಗಳನ್ನು ಸಂಹರಿಸಿ ರಾಜ್ಯವನು ವಿಸ್ತರಿಸಿ ಆಳುವೆನು ಎಂಬ ಸಾಹಸಸತ್ವಗುಣವು ದುರ್ಯೋಧನಾ ನಿನಗಿಲ್ಲ. ಪಾಂಡವರು+ ಅತುಲ ಭುಜಬಲರು= ಪಾಂಡವರು ಮಹಾ ಪರಾಕ್ರಮಿಗಳು.; ಕೃತ್ರಿಮದ= ಮೋಸದ ಮುಖದಿಂದ= ಮಾರ್ಗದಿಂದ, ರಿಪುಗಳ= ಶತ್ರುಗಳನ್ನು, ಕಿತ್ತು ಹಾಯಿಕಿ= ಇಲ್ಲದಂತೆ ಮಾಡಿ, ನೆಲನನು+ ಏಕಚ್ಛತ್ರದಲಿ ಸಲಹುವುದು ಮತ= ರಾಜ್ಯವನ್ನು ಏಕಛತ್ರದಲ್ಲಿ ನೀನೊಬ್ಬನೇ ಆಳಬೇಕೆಂಬುದು ನನ್ನ ಅಭಿಪ್ರಾಯ, ಕೇಳು ಎಂದನು+ ಆ ಶಕುನಿ
- ಅರ್ಥ:'ಶತ್ರುಗಳನ್ನು ಸಂಹರಿಸಿ ರಾಜ್ಯವನು ವಿಸ್ತರಿಸಿ ಆಳುವೆನು ಎಂಬ ಸಾಹಸಸತ್ವಗುಣವು ದುರ್ಯೋಧನಾ ನಿನಗಿಲ್ಲ. ಪಾಂಡವರು ಮಹಾ ಪರಾಕ್ರಮಿಗಳು. ಅವರನ್ನು ಮೋಸದ ಮಾರ್ಗದಿಂದ, ಆ ಶತ್ರುಗಳನ್ನು ಇಲ್ಲದಂತೆ ಮಾಡಿ, ರಾಜ್ಯವನ್ನು ಏಕಛತ್ರದಲ್ಲಿ ನೀನೊಬ್ಬನೇ ಆಳಬೇಕೆಂಬುದು ನನ್ನ ಅಭಿಪ್ರಾಯ, ಕೇಳು ಎಂದನು ಆ ಶಕುನಿ.
- ಸೋದರರುಗಳು ನೀವು ನಿಮ್ಮೊಳು
- ಭೇದ ಮಂತ್ರವ ಮಾಡುವುದು ಮ
- ರ್ಯಾದೆಯೇ ನಾವ್ ನಿಮ್ಮಡಿಯಲರಮನೆಯ ಸೇವಕರು ||
- ವಾದಿಸುವರಿತ್ತಂಡ ಸರಿ ನಮ
- ಗಾದರೆಯು ಕಂಡುದ ನುಡಿಯ ಬೇ
- ಕಾದರಿಸು ಮೇಣ್ ಮಾನು ಬಿನ್ನಹವೆಂದನಾ ಶಕುನಿ || (೧೬) ||
- ಪದವಿಭಾಗ-ಅರ್ಥ: ಸೋದರರುಗಳು ನೀವು= ನೀವು ಕೌರವರು ಪಾಂಡವರು ಸೋದರರು, ನಿಮ್ಮೊಳು ಭೇದ ಮಂತ್ರವ ಮಾಡುವುದು ಮರ್ಯಾದೆಯೇ= ನಿಮ್ಮಲ್ಲಿ ಒಡಕು ಭಾವನೆ ಬಿತ್ತುವುದು ಗೌರವದ ಕೆಲಸವೇ? ಉಚಿತವೇ? ನಾವ್ ನಿಮ್ಮಡಿಯಲಿ+ ಅರಮನೆಯ ಸೇವಕರು= ನಾವಾದರೋ ನಿಮ್ಮ ಹಂಗಿನಲ್ಲಿರುವ ಸೇವಕರು (ಶಕುನಿಯು ದುರ್ಯೋಧನನ ತಾಯಿ ಗಾಂಧಾರಿಯ ಅಣ್ಣ ಸೋದರಮಾವ). ವಾದಿಸುವರೆ+ ಇತ್ತಂಡ ಸರಿನಮಗು (ವು)+ ಆದರೆಯು= ವಾದಮಾಡುವುದಾದರೆ - ವಿಚಾರಮಾಡಿ ನೋಡಿದರೆ ನಮಗೆ ಎರಡೂ ಪಕ್ಷದವರು ಸರಿಸಮವು. ಕಂಡುದ ನುಡಿಯ ಬೇಕಾದ+ ಇರಿಸು(ಧರ್ಮಸಂಕಟ)= ಆದರೆ ಕಂಡುದನ್ನು - ಸತ್ಯವನ್ನು ಹೇಳಲೇಬೇಕಾದ ಧರ್ಮಸಂಕಟ. ಮೇಣ್= ಮತ್ತೆ -(ಆದರೆ) (ನಾನು ಹೇಳಿದುದನ್ನ)ಒಪ್ಪು ಅಥವಾ ಮಾನು= ಮನ್ನಸದಿರು- ಬಿಡು; ಬಿನ್ನಹವು+ ಎಂದನು+ ಆ ಶಕುನಿ
- ಅರ್ಥ:ನೀವು ಕೌರವರು ಪಾಂಡವರು ಸೋದರರು, ನಿಮ್ಮಲ್ಲಿ ಒಡಕು ಭಾವನೆ ಬಿತ್ತುವುದು ಗೌರವದ ಕೆಲಸವೇ? ಉಚಿತವೇ? ನಾವಾದರೋ ನಿಮ್ಮ ಹಂಗಿನಲ್ಲಿರುವ ಸೇವಕರು (ಶಕುನಿಯು ದುರ್ಯೋಧನನ ತಾಯಿ ಗಾಂಧಾರಿಯ ಅಣ್ಣ ಸೋದರಮಾವ). ವಿಚಾರಮಾಡಿ ನೋಡಿದರೆ ನಮಗೆ ಎರಡೂ ಪಕ್ಷದವರು ಸರಿಸಮವು. ಆದರೆ ಕಂಡುದನ್ನು - ಸತ್ಯವನ್ನು ಹೇಳಲೇಬೇಕಾದ ಧರ್ಮಸಂಕಟ. ಮತ್ತೆ (ನಾನು ಹೇಳಿದುದನ್ನ)ಒಪ್ಪು ಅಥವಾ ಮನ್ನಿಸದಿರು- ಬಿಡು; ನಿನ್ನಲ್ಲಿ ವಿಜ್ಞಾಪನೆ ಮಾಡುತ್ತಿದ್ದೇನೆ ಎಂದನು ಆ ಶಕುನಿ.
- ಪಕ್ಷವರಡೇ ಲೋಕದೊಳ್ ಪಿತೃ
- ಪಕ್ಷ ಮೇಣಾ ಮಾತೃಪಕ್ಷ ವಿ
- ಪಕ್ಷ ತಂದೆಯ ದೆಸೆ ಸಪಕ್ಷವು ತಾಯ ದೆಸೆಯವರು |
- ತಕ್ಷಕನ ತೆರನಂತೆ ನಿಮ್ಮನು
- ಭಕ್ಷಿಸುವರಾವಂಗದಲಿ ನೀ
- ನೀಕ್ಷಿಸುವುದೈ ಪಾಂಡು ಪುತ್ರರನೆಂದನಾ ಶಕುನಿ || (೧೭)
- ಪದವಿಭಾಗ-ಅರ್ಥ: ಪಕ್ಷವರಡೇ ಲೋಕದೊಳ್= ಸಮಾಜದಲ್ಲಿ ಮನುಷ್ಯನಿಗೆ ಎರಡೇ (ಬಂಧುಗಳ) ಪಕ್ಷಗಳಿವೆ. ಪಿತೃಪಕ್ಷ ಮೇಣಾ ಮಾತೃಪಕ್ಷ= ಒಂದು ತಂದಯಕಡೆಯ ಬಂಧುಗಳು, ಮತ್ತು ತಾಯಿಯ ಕಡೆಯವರು. ವಿಪಕ್ಷ ತಂದೆಯ ದೆಸೆ= ತಂದೆಯ ಕಡೆಯವರು ವಿಪಕ್ಷದವರು- ಅಹಿತರು; ಸಪಕ್ಷವು ತಾಯ ದೆಸೆಯವರು= ತಾಯಿಯ ಕಡೆಯವರು ಸಪಕ್ಷದವರು ಹಿತೈಷಿಗಳು. ತಕ್ಷಕನ ತೆರನಂತೆ ನಿಮ್ಮನು ಭಕ್ಷಿಸುವರು ಆವ+ ಅಂಗದಲಿ(ಯಾವ ಬಗೆಯಲ್ಲಿ)= ವಿಷಸರ್ಪದಂತೆ ನಿಮ್ಮನ್ನು ಯಾವ ಬಗೆಯಲ್ಲಿ ನುಂಗುವರೋ ಅದನ್ನು, ನೀನು+ ಈಕ್ಷಿಸುವುದೈ= ನೋಡುತ್ತಿರಬೇಕು, ಪಾಂಡು ಪುತ್ರರನೆಂದನು+ ಆ ಶಕುನಿ= ದುರ್ಯೋಧನನೇ ನೀನು ಪಾಡವರನ್ನು ಎಚ್ಚರಿಕೆಯಿಂದ ನೋಡಬೇಕಯ್ಯಾ ಎಂದನು ಆ ಶಕುನಿ. (ಪಿತೃಪಕ್ಷದವರು - ಕಡೆಯವರು ದಾಯಾದಿಗಳು - ಆಸ್ತಿಗೆ ಹೊಂಚುವವರು ಮತ್ತು ತಮ್ಮ ದಾಯಾದಿಗಳ ಏಳಿಗೆಯನ್ನು ಸಹಿಸರು; ಮಾತೃ ಪಕ್ಷದವರಿಗೆ ಆಸ್ತಿಯ ಹಕ್ಕಿಲ್ಲ, ಆದ್ದರಿಂದ ಅಸೂಯೆ - ಸ್ವಾರ್ಥವಿಲ್ಲ - ತಮ್ಮವರ ಏಳಿಗೆಯನ್ನು ಬಯಸುವರು- ಇದು ಶಕುನಿಯು ಹೇಳಿದ ವಾಸ್ತವತೆಯ ಸಮಾಜಿಕ ನ್ಯಾಯ ಮತ್ತು ನೀತಿ)
- ಟಿಪ್ಪಣಿ: ತಾನು ದುರ್ಯೋಧನನಿಗೆ ಸೋದರಮಾವನಾಗಿದ್ದು ಸಪಕ್ಷದವನು ಮತ್ತು ಹಿತೈಷಿಯೆಂದು ಭಾವ.
- ಅರ್ಥ:ಸಮಾಜದಲ್ಲಿ ಮನುಷ್ಯನಿಗೆ ಎರಡೇ (ಬಂಧುಗಳ) ಪಕ್ಷಗಳಿವೆ. ಪಿತೃಪಕ್ಷ ಮೇಣಾ ಮಾತೃಪಕ್ಷ- ಒಂದು ತಂದಯಕಡೆಯ ಬಂಧುಗಳು, ಮತ್ತು ಎಡನೆಯದು ತಾಯಿಯ ಕಡೆಯ ಬಂಧುಗಳು. ತಂದೆಯ ಕಡೆಯವರು ವಿಪಕ್ಷದವರು- ಅಹಿತರು; ತಾಯಿಯ ಕಡೆಯವರು ಸಪಕ್ಷದವರು ಹಿತೈಷಿಗಳು. ವಿಷಸರ್ಪದಂತೆ ಪಾಡವರು ನಿಮ್ಮನ್ನು ಯಾವ ಬಗೆಯಲ್ಲಿ ನುಂಗುವರೋ ಅದನ್ನು ದುರ್ಯೋಧನನೇ, ನೀನು ಎಚ್ಚರಿಕೆಯಿಂದ ನೋಡಬೇಕಯ್ಯಾ ಎಂದನು ಆ ಶಕುನಿ.
- ಮೊಳೆಯಲೇ ಮುರುಡಿಸಲು ಬೇಹುದು
- ಬಲಿದ ಬಳಿಕದು ನಿನ್ನ ಹವಣೀ
- ಇಳೆಯೊಳಧರ್ವನಿತ್ತು ರಿಪುಗಳ ಹೆಚ್ಚಿಸಿದ ಬಳಿಕ ||
- ಗೆಲುವನಾವನು ದೇವ ದಾನವ
- ರೊಳಗೆ ಭೀಮಾರ್ಜುನರ ಕೈ ಮನ
- ದಳವನರಿಯಾ ಭಾರವೈ ಮೇಲೆಂದನಾ ಶಕುನಿ || (೧೮) ||
- ಪದವಿಭಾಗ-ಅರ್ಥ: ಮೊಳೆಯಲೇ ಮುರುಡಿಸಲು ಬೇಹುದು=ಶತ್ರುವನ್ನು ಮೊಳಕೆಯಲ್ಲೇ ಇಲ್ಲವಾಗಿಸಬೇಕು, ಆರಂಭದಲ್ಲೇ ತೆಗೆಯಬೇಕು, ಇಲ್ಲ ಎನಿಸಬೇಕು, ಬಲಿದ ಬಳಿಕ+ ಅದು ನಿನ್ನ ಹವಣೀ= ಬಲಿತ ಮೇಲೆ ಅದನ್ನು ತೆಗೆಯಲು ನಿನಗೆ ಸಾಧ್ಯವೇ? ಇಳೆಯೊಳು+ ಅರ್ಧವನು+ ಇತ್ತು ರಿಪುಗಳ ಹೆಚ್ಚಿಸಿದ ಬಳಿಕ= ರಾಜ್ಯದಲ್ಲಿ ಅರ್ಧವನ್ನು ಕೊಟ್ಟು ಶತ್ರುಗಳನ್ನು ಹೆಚ್ಚುವಂತೆ ಮಾಡಿದ ಮೇಲೆ, ಗೆಲುವನು+ ಆವನು= ಗೆಲ್ಲುವವನು ಯಾವನಿದ್ದಾನೆ! ದೇವದಾನವರೊಳಗೆ= ದೇವದಾನವರಲ್ಲಿ ?- ಭೀಮಾರ್ಜುನರ ಕೈ ಮನದ+ ಅಳವನು (ಅಳವು = ಶಕ್ತಿಯನ್ನು)+ ಅರಿಯಾ (ತಿಳಿ) ಭಾರವೈ ಮೇಲೆ+ ಎಂದನು+ ಆ ಶಕುನಿ (ಅದು ನಿನ್ನ ಮೇಲಿನ ಭಾರವು)
- ಮುರುಟು =1. ಹೋಗು. 2. ಹರಿ. 3. ಹೆದರು. 4. ಮುರುಟು. 5. ಇಲ್ಲವಾಗು. 6. ತೆಗೆ.= ಮುರುಟಿಸು, ಮುರುಡಿಸು- ಮುರುಡಿಸಲು
- ಅರ್ಥ:ಶತ್ರುವನ್ನು ಮೊಳಕೆಯಲ್ಲೇ ಇಲ್ಲವಾಗಿಸಬೇಕು, ಆರಂಭದಲ್ಲೇ ತೆಗೆಯಬೇಕು. ಅದು ಬಲಿತ ಮೇಲೆ ಅದನ್ನು ತೆಗೆಯಲು ನಿನಗೆ ಸಾಧ್ಯವೇ? ರಾಜ್ಯದಲ್ಲಿ ಅರ್ಧವನ್ನು ಕೊಟ್ಟು ಶತ್ರುಗಳನ್ನು ಹೆಚ್ಚುವಂತೆ ಮಾಡಿದ ಮೇಲೆ, ದೇವದಾನವರಲ್ಲಿ ಪಾಂಡವರನ್ನು ಗೆಲ್ಲುವವನು ಯಾವನಿದ್ದಾನೆ! ಭೀಮಾರ್ಜುನರ ಕೈ ಮತ್ತು ಮನಸ್ಸಿನ ಶಕ್ತಿಯನ್ನು ತಿಳಿಯಪ್ಪಾ, ಅದು ನಿನ್ನ ತಲೆಯಮೇಲಿನ ದೊಡ್ಡ ಭಾರವು ಎಂದನು ಆ ಶಕುನಿ.
- ಧಾರುಣಿಯೊಳು ಪಿಪೀಲಿಕೆಯು ವಿ
- ಸ್ತಾರದಲಿ ಮಾಡಿದ ಮನೆಯ ಕಾ
- ಳೋರಗನು ಹೋಗುವಂತೆ ರಿಪು ಕುಂತೀಕುಮಾರಕರು ||
- ವೈರದಲಿ ಸಪ್ತಾಂಗವನು ಕೈ
- ಸೂರೆಗೊಂಬರು ತಪ್ಪದಿದಕೆ ವಿ
- ಚಾರವನು ಕಾಲದಲಿ ಮಾಡುವುದೆಂದನಾ ಶಕುನಿ || (೧೯) ||
- ಪದವಿಭಾಗ-ಅರ್ಥ: ಧಾರುಣಿಯೊಳು= ಭೂಮಿಯೊಳಗೆ, ಪಿಪೀಲಿಕೆಯು ವಿಸ್ತಾರದಲಿ ಮಾಡಿದ ಮನೆಯ= ಇರುವಯು ಕಟ್ಟಿದ ವಿಶಾಲ ಗೂಡಿನಲ್ಲಿ, ಕಾಳೋರಗನು ಹೋಗುವಂತೆ= ಹಾವು ಬಂದು ಸೇರಿಕೊಳ್ಲುವಮತೆ, ರಿಪು ಕುಂತೀಕುಮಾರಕರು= ಶತ್ರುಗಳಾದ ಕುಂತಿಯ ಮಕ್ಕಳು, ವೈರದಲಿ ಸಪ್ತಾಂಗವನು ಕೈಸೂರೆಗೊಂಬರು= ನಿನ್ನನ್ನು ವಿರೋಧಿಸಿ ರಾಜ್ಯದ ಸಪ್ತಾಂಗವಾದ ಸರ್ವಸ್ವನ್ನೂ ಕೈವಶಮಾಡಿಕೊಳ್ಳುವರು, ತಪ್ಪದು+ ಇದಕೆ ವಿಚಾರವನು ಕಾಲದಲಿ ಮಾಡುವುದು+ ಎಂದನು+ ಆ ಶಕುನಿ= ಇದು ತಪ್ಪುವುದಿಲ್ಲ. ಆದ್ದರಿಂದ ಇದಕ್ಕೆ ಸಕಾಲದಲ್ಲಿ ವಿಚಾರಮಾಡತಕ್ಕದ್ದು ಎಂದನು ಆ ಶಕುನಿ.
- ಸಪ್ತಾಂಗ:ರಾಜ್ಯಾಂಗ ಸಪ್ತಕ:- ೧.ಸ್ವಾಮಿ, ೨. ಅಮಾತ್ಯ, ೩.ಸುಹೃತ್, ೪.ಕೋಶ, ೫.ರಾಷ್ಟ್ರ,, ೬.ದುರ್ಗ, ೭.ಬಲ.- ಅಥವಾ-ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ ಮತ್ತು ಮಿತ್ರ ಎಂಬ ರಾಜ್ಯಾಡಳಿತದ ಏಳು ಅಂಗಗಳು.
- ಅರ್ಥ:ಭೂಮಿಯೊಳಗೆ, ಇರುವಯು ಕಟ್ಟಿದ ವಿಶಾಲ ಗೂಡಿನಲ್ಲಿ ಹಾವು ಬಂದು ಸೇರಿಕೊಳ್ಲುವಮತೆ, ಶತ್ರುಗಳಾದ ಕುಂತಿಯ ಮಕ್ಕಳು, ನಿನ್ನನ್ನು ವಿರೋಧಿಸಿ ರಾಜ್ಯದ ಸಪ್ತಾಂಗವಾದ ಸರ್ವಸ್ವನ್ನೂ ಕೈವಶಮಾಡಿಕೊಳ್ಳುವರು. ಇದು ತಪ್ಪುವುದಿಲ್ಲ. ಆದ್ದರಿಂದ ಇದಕ್ಕೆ ಸಕಾಲದಲ್ಲಿ ವಿಚಾರಮಾಡತಕ್ಕದ್ದು ಎಂದನು ಆ ಶಕುನಿ.
- ಹಿಂದೆ ನೀನವರುಗಳ ನಾನಾ
- ಚಂದದಲಿ ನೋಯಿಸಿದೆ ಮನದಲಿ
- ಕಂದು ಕುಂದದು ಕಷ್ಟ ವೃತ್ತಿಯನಾಚರಿಸುತಿಹರು |
- ಇಂದು ನೀನಾ ಪಾಂಡುಪುತ್ರರ
- ನಂದಗೆಡಿಸದೆ ಬಿಟ್ಟೆಯಾದೊಡೆ
- ಮುಂದೆ ಬೆಟ್ಟಿತು ರಾಜಕಾರಿಯವೆಂದನಾ ಶಕುನಿ || (೨೦)
- ಪದವಿಭಾಗ-ಅರ್ಥ: ಹಿಂದೆ ನೀನು+ ಅವರುಗಳ ನಾನಾ ಚಂದದಲಿ= ರೀತಿಯಲ್ಲಿ ನೋಯಿಸಿದೆ,= ಈ ಹಿಂದೆ ನೀನು ಅವರನ್ನು ನಾನಾ ರೀತಿಯಲ್ಲಿ ನೋಯಿಸಿದ್ದೀಯೆ; ಮನದಲಿ ಕಂದು ಕುಂದದು= ಅವರ ಮನಸ್ಸಿನಲ್ಲಿ ಆ ಕಷ್ಟ ಮರೆಯುವುದಿಲ್ಲ. ಕಷ್ಟ ವೃತ್ತಿಯನು+ ಆಚರಿಸುತಿಹರು ಇಂದು= ಈಗ ಅವರು ಕಷ್ಟದ ಸ್ಥಿತಿಯಲ್ಲಿದ್ದಾರೆ. ನೀನು+ ಆ ಪಾಂಡುಪುತ್ರರನು+ ಅಂದಗೆಡಿಸದೆ ಬಿಟ್ಟೆಯಾದೊಡೆ= ನೀನು ಈಗ ಆ ಪಾಂಡುಪುತ್ರರನ್ನು ನಾಶಪಡಿಸದೆ ಬಿಟ್ಟೆಯಾದರೆ, ಮುಂದೆ ಬೆಟ್ಟಿತು ರಾಜಕಾರಿಯವು+ ಎಂದನು+ ಆ ಶಕುನಿ= ಮುಂದೆ ಅದು ರಾಜಕಾರ್ಯದಲ್ಲಿ ದೊಡ್ಡ ವಿಪ್ಪತ್ತಾಗುವುದು, ಎಂದನು ಆ ಶಕುನಿ
- ಅರ್ಥ: ಈ ಹಿಂದೆ ನೀನು ಅವರನ್ನು ನಾನಾ ರೀತಿಯಲ್ಲಿ ನೋಯಿಸಿದ್ದೀಯೆ; ಅವರ ಮನಸ್ಸಿನಲ್ಲಿ ಆ ಕಷ್ಟ ಮರೆಯುವುದಿಲ್ಲ. ಈಗ ಅವರು ಕಷ್ಟದ ಸ್ಥಿತಿಯಲ್ಲಿದ್ದಾರೆ. ನೀನು ಈಗ ಆ ಪಾಂಡುಪುತ್ರರನ್ನು ನಾಶಪಡಿಸದೆ ಬಿಟ್ಟೆಯಾದರೆ, ಮುಂದೆ ಅದು ರಾಜಕಾರ್ಯದಲ್ಲಿ ದೊಡ್ಡ ವಿಪ್ಪತ್ತಾಗುವುದು, ಎಂದನು ಆ ಶಕುನಿ.
- ಇರುಬಿನಲಿ ಸಿಕ್ಕಿರ್ದ ಹುಲಿಯನು
- ಮುರಿದು ಕಳೆಯದೆ ತಳಪಟಕೆ ಬಿ
- ಟ್ಟಿರಿಯ ಬಹುದೇ ಕೊಂದು ಕೂಗದೆ ಬಿಡುವುದೇ ಬಳಿಕ |
- ಕರುಬರಹ ಪಾಂಡವರಿಗೀಗಲೆ
- ಹರುವ ನೆನೆ ಹೊರಬಿದ್ದರಾದೊಡೆ
- ತರಿದು ಬಿಸುಡದೆ ಮಾಣ್ವರೇ ಹೇಳೆಂದನಾ ಶಕುನಿ || (೨೧)
- ಪದವಿಭಾಗ-ಅರ್ಥ: ಇರುಬಿನಲಿ(ಇಕ್ಕಟ್ಟಿನ ಹಗ್ಗದ ಕುಣಿಕೆ ಗಂಟು) ಸಿಕ್ಕಿರ್ದ ಹುಲಿಯನು ಮುರಿದು= ಕೊಂದು, ಕಳೆಯದೆಪರಿ- ಹರಿಸಿಕೊಳ್ಳದೆ= ಹುಲಿಯನ್ನು ಹಿಡಿಯಲು ಕಟ್ಟಿದ ಇಕ್ಕಟ್ಟಿನ ಮಲುಕಿನ ಇರುಬಿನಲ್ಲಿ ಸಿಕ್ಕಿಬಿದ್ದ ಹುಲಿಯನ್ನು ಕೊಂದು ತೊಂದರೆಯನ್ನು ಪಹರಿಸಿಕೊಳ್ಳದೆ, ತಳಪಟಕೆ= ಸಮತಲವಾದ ಪ್ರದೇಶ. ಬಯಲಿಗೆ, ಬಿಟ್ಟು+ ಇರಿಯ ಬಹುದೇ = ಇರಿದು ಕೊಲ್ಲಲು ಆಗುವುದೇ?ಕೊಂದು ಕೂಗದೆ ಬಿಡುವುದೇ= (ಬೇಟೆಗಾರನನ್ನು) ಕೊಂದು ಗರ್ಜಿಸದೆ ಬಿಡುವುದೇ? ಬಳಿಕ ಕರುಬರು (ಜ್ವಲಿಸು. ಸುಡು.)+ ಅಹ- ಆಗುವ= ಪ್ರಜ್ವಲಿಸುವ ಪಾಂಡವರಿಗೆ+ ಈಗಲೆ ಹರುವು (ಹರ- ನಿವಾರಿಸು ಹರಿ -(ಕನ್ನಡ) =ತಂಡಾಗು ಹರಿಯುವ ಬಗೆ- ಹರುಹು ) ನೆನೆ= ನಿವಾರಿಸುವುದನ್ನು ಯೋಚಿಸು; ಹೊರಬಿದ್ದರಾದೊಡೆ= ಅವರು ಈಗ ತಪ್ಪಸಿಕೊಂಡು ಹೊರಬಿದ್ದರೆ, ತರಿದು ಬಿಸುಡದೆ ಮಾಣ್ವರೇ= ನಿಮ್ಮನ್ನು ಕತ್ತರಿಸಿ ಬಿಸುಡದೇ ಬಿಡುವರೇ? ಹೇಳು+ ಎಂದನು+ ಆ ಶಕುನಿ.
- ಅರ್ಥ: ಹುಲಿಯನ್ನು ಹಿಡಿಯಲು ಕಟ್ಟಿದ ಇಕ್ಕಟ್ಟಿನ ಮಲುಕಿನ ಇರುಬಿನಲ್ಲಿ ಸಿಕ್ಕಿಬಿದ್ದ ಹುಲಿಯನ್ನು ಕೊಂದು ತೊಂದರೆಯನ್ನು ಪಹರಿಸಿಕೊಳ್ಳದೆ, ಬಯಲಿಗೆ ಬಿಟ್ಟು ಇರಿದು ಕೊಲ್ಲಲು ಆಗುವುದೇ? ಅದು ಬೇಟೆಗಾರನನ್ನು ಕೊಂದು ಗರ್ಜಿಸದೆ ಬಿಡುವುದೇ? ಈ ಬಳಿಕ ಪ್ರಜ್ವಲಿಸುವ ಪಾಂಡವರನ್ನು ಈಗಲೇ ನಿವಾರಿಸುವುದನ್ನು ಯೋಚಿಸು. ಅವರು ಈಗ ತಪ್ಪಸಿಕೊಂಡು ಹೊರಬಿದ್ದರೆ ನಿಮ್ಮನ್ನು ಕತ್ತರಿಸಿ ಬಿಸುಡದೇ ಬಿಡುವರೇ? ಹೇಳು+ ಎಂದನು, ಆ ಶಕುನಿ.
- ಹರಿಹಯನು ವೃತ್ರಾಸುರನ ಸಂ
- ಹರಿಸಲರಿಯದೆ ಗರುವದಿಂದಿರು
- ತಿರಲವನು ದಿನದಿನದೊಳಣುವಣು ಮಾತ್ರವನು ಬೆಳೆದು ||
- ಧರೆಯ ತುಂಬಲು ತನ್ನ ಸತ್ವದ
- ನೆರವಣಿಗೆಗೈದಿಸದೆ ನಾನಾ
- ತೆರದೊಳಾಯಸಗೊಳ್ಳನೇ ಹೇಳೆಂದನಾ ಶಕುನಿ || (೨೨) ||
- ಪದವಿಭಾಗ-ಅರ್ಥ:ಹರಿಹಯನು= ಇಂದ್ರನು, ವೃತ್ರಾಸುರನ ಸಂಹರಿಸಲು+ ಅರಿಯದೆ= ವೃತ್ರಾಸುರನನ್ನು ಸಂಹರಿಸಬೇಕೆಂದು ಅರಿತುಕೊಳ್ಳದೆ, ಗರುವದಿಂದ+ ಇರುತಿರಲು+ ಅವನು ದಿನದಿನದೊಳು+ ಅಣುವಣು ಮಾತ್ರವನು ಬೆಳೆದು= ಅಹಂಕಾರದಿಂದ ಇದ್ದಾಗ, ದಿನದಿನಗಳಲ್ಲಿ ವೃತ್ರನು ಚ್ವಲ್ಪ ಸ್ವಲ್ಪ ಮಾತ್ರವೇ ಬೆಳೆದು, ಧರೆಯ ತುಂಬಲು= ಭೂಮಿಯನ್ನೇ ಆವರಿಸಿದನು. ತನ್ನ ಸತ್ವದ ನೆರವಣಿಗೆಗೆ+ ಐದಿಸದೆ (ಐದು- ಬರು, ಬರಿಸು, ಹೋಗು, ಒಳಗಾಗಿಸಲು ಆಗದೆ)= ಆಗ ಇಂದ್ರನು ತನ್ನ ಮೂಲ ಶಕ್ತಿಯ ಸಾಮರ್ಥ್ಯಕ್ಕೆ ಮಣಿಸಲಾದಲಿಲ್ಲ. ನಾನಾತೆರದೊಳು+ ಆಯಸಗೊಳ್ಳನೇ= ನಾನಾ ರೀತಿಯಲ್ಲಿ ಕಷ್ಟಕ್ಕೊಳಗಾಗಲಿಲ್ಲವೇ? ಹೇಳು+ ಎಂದನು+ ಆ ಶಕುನಿ.
- ಅರ್ಥ:ಇಂದ್ರನು ಮೊದಲೇ ವೃತ್ರಾಸುರನನ್ನು ಸಂಹರಿಸಬೇಕೆಂದು ಅರಿತುಕೊಳ್ಳದೆ, ಅಹಂಕಾರದಿಂದ ಇದ್ದಾಗ, ದಿನದಿನಗಳಲ್ಲಿ ವೃತ್ರನು ಚ್ವಲ್ಪ ಸ್ವಲ್ಪ ಮಾತ್ರವೇ ಬೆಳೆದು, ಭೂಮಿಯನ್ನೇ ಆವರಿಸಿದನು. ಆಗ ಇಂದ್ರನು ಅವನನ್ನು ತನ್ನ ಮೂಲ ಶಕ್ತಿಯ ಸಾಮರ್ಥ್ಯಕ್ಕೆ ಮಣಿಸಲಾದಲಿಲ್ಲ. ಅದರಿಂದ ಅವನು ನಾನಾ ರೀತಿಯಲ್ಲಿ ಕಷ್ಟಕ್ಕೊಳಗಾಗಲಿಲ್ಲವೇ? ಹೇಳು ಎಂದನು ಆ ಶಕುನಿ.
- ಅಡವಿಯಲಿ ಜನಿಸಿದರು ಬೆಳವಿಗೆ
- ಯಡವಿಯೊಳಗಿನ್ನವರ ಬಾಳಿಕೆ
- ಗಡವಿಯೇ ನೆಲಮನೆಯದಲ್ಲದೆ ಪಾಂಡು ಪುತ್ರರಿಗೆ |
- ಪೊಡವಿಯೊಡೆತನ ಸಲ್ಲದವರನು
- ನಡೆಸುವುದು ಕಾಲದಲಿ ರಾಜ್ಯವ
- ಕೊಡುವುದಾವಂಗದಲಿ ಮತವಲ್ಲೆಂದನಾ ಶಕುನಿ || (೨೩)
- ಪದವಿಭಾಗ-ಅರ್ಥ: ಅಡವಿಯಲಿ ಜನಿಸಿದರು ಬೆಳವಿಗೆಯು+ ಅಡವಿಯೊಳಗೆ+ ಇನ್ನವರ ಬಾಳಿಕೆಗೆ+ ಅಡವಿಯೇ ನೆಲಮನೆಯು+ ಅದಲ್ಲದೆ= ಅಡವಿಯಲ್ಲಿ ಹುಟ್ಟಿದರು ಬೆಳೆಇದ್ದು ಅಡವಿಯಲ್ಲಿ, ಇನ್ನು ಅವರು ಬಾಳಬೇಕಾದುದು ಅಡವಿಯೇ. ಅದೇ ನೆಲೆ ಮತ್ತು ಮನೆ. ಅದಲ್ಲದೆ ಪಾಂಡು ಪುತ್ರರಿಗೆ |ಪೊಡವಿಯ+ ಒಡೆತನ ಸಲ್ಲದು+ ಅವರನು= ಪಾಂಡುಪುತ್ರರಿಗೆ ರಾಜ್ಯದ ಒಡೆತನ ಕೊಡುವುದು ಸರಿಯಲ್ಲ. ಅವರಿಗೆ ನಡೆಸುವುದು(ಉದಾರವಾಗಿ ನೆಡದು) ಕಾಲದಲಿ (ಮುಂದೆ)= ಅವರಿಗೆ ಮುಂದೆ ಬರುವ ಕಾಲದಲಿ ಉದಾರವಾಗಿ ನೆಡದು, ರಾಜ್ಯವ ಕೊಡುವುದು ಆವ+ ಅಂಗದಲಿ ಮತವಲ್ಲ+ ಎಂದನು ಆ= ರಾಜ್ಯವನ್ನು ಕೊಡುವುದು ಯಾರೀತಿಯಲ್ಲೂ ಸಮ್ಮತವಲ್ಲ ಎಂದನು ಆ ಶಕುನಿ.
- ಅರ್ಥ:ಅಡವಿಯಲ್ಲಿ ಹುಟ್ಟಿದರು ಬೆಳೆಇದ್ದು ಅಡವಿಯಲ್ಲಿ, ಇನ್ನು ಅವರು ಬಾಳಬೇಕಾದುದು ಅಡವಿಯೇ. ಅದೇ ನೆಲೆ ಮತ್ತು ಮನೆ. ಅದಲ್ಲದೆ ಪಾಂಡುಪುತ್ರರಿಗೆ ರಾಜ್ಯದ ಒಡೆತನ ಕೊಡುವುದು ಸರಿಯಲ್ಲ. ಅವರಿಗೆ ಮುಂದೆ ಬರುವ ಕಾಲದಲಿ ಉದಾರವಾಗಿ ನೆಡದು, ರಾಜ್ಯವನ್ನು ಕೊಡುವುದು ಯಾರೀತಿಯಲ್ಲೂ ಸಮ್ಮತವಲ್ಲ ಎಂದನು ಆ ಶಕುನಿ.
- ತಿಮಿರವಡಗಿದ ಲೋಕ ಶಿಕ್ಷಾ
- ಕ್ರಮಣವಡಗಿದ ದಂತಿ ಕರ್ಮ
- ಭ್ರಮೆಗಳಡಗಿದ ಯೋಗಿ ರುಜೆಯಡಗಿದ ನರೋತ್ತಮನು ||
- ಹಿಮವಡಗಿದ ಸರೋಜದಂತಿಹು
- ದಮಲ ಮತ ಕೇಳ್ವಗೆಗಳಡಗಿದ
- ಡಮರ ಪದವೆನಿಸುವುದು ಚಿತ್ತೈ ಸೆಂದನಾ ಶಕುನಿ || (೨೪) ||
- ಪದವಿಭಾಗ-ಅರ್ಥ: ತಿಮಿರವು+ ಅಡಗಿದ ಲೋಕ= ಕತ್ತಲೆಯು ಅಡಗಿದಮೇಲೆ ಬೆಳಕಾದ ಲೋಕ; ಶಿಕ್ಷಾ ಆಕ್ರಮಣವು+ ಅಡಗಿದ ದಂತಿ= ಶಿಕ್ನಣದ ತರಬೇತಿಯಿಂದ ಆಕ್ರಮಣವು ಸ್ವಭಾವವು ಅಡಗಿದ ಆನೆ; ಕರ್ಮದ ಭ್ರಮೆಗಳು+ ಅಡಗಿದ ಯೋಗಿ= ಫಲಕೊಡುವ ಯಜ್ಞಯಾಗಗಳನ್ನು ಮಾಡುವ ಕರ್ಮದ ಭ್ರಮೆಗಳನ್ನು ದಾಟಿದ ಯೋಗಿ; ರುಜೆಯು+ ಅಡಗಿದ ನರೋತ್ತಮನು= ರೋಗ ರುಜಿನಗಳು ಇಲ್ಲದ ಮನುಷ್ಯ; ಹಿಮವು+ ಅಡಗಿದ ಸರೋಜದಂತೆ+ ಇಹುದು+ ಅಮಲ ಮತ= ಮಂಜು ಹರಿದ ಬಳಿಕ ಶೋಬಿಸುವ ಕಮಲದಂತೆ; ಇಹುದು+ ಅಮಲ ಮತ (ಶ್ರೇಷ್ಠವಾದ ಅಭಿಪ್ರಾಯವು)= ಶ್ರೇಷ್ಠವಾದ ಅಭಿಪ್ರಾಯವು ಇರುವುದು. ಕೇಳ್+ ಹಗೆಗಳು+ ಅಡಗಿದಡೆ+ ಅಮರಪದವು+ ಎನಿಸುವುದು ಚಿತ್ತೈಸು+ ಎಂದನು+ ಆ ಶಕುನಿ= ಹಾಗೆಯೇ, ಕೇಳು ಶತ್ರುಗಳು ಇಲ್ಲವಾದ ಬಳಿಕ ನಿನ್ನ ರಾಜತ್ವವು ಸ್ವರ್ಗದ ಇಂದ್ರಪದವಿಯೆಂದು ಎನಿಸುವುದು. ಮನಗೊಟ್ಟು ಕೇಳು ಎಂದನು ಆ ಶಕುನಿ.
- ಅರ್ಥ:ಕತ್ತಲೆಯು ಅಡಗಿದಮೇಲೆ ಬೆಳಕಾದ ಲೋಕದಂತೆ; ಶಿಕ್ನಣದ ತರಬೇತಿಯಿಂದ ಆಕ್ರಮಣ ಸ್ವಭಾವವು ಅಡಗಿದ ಆನೆಯಂತೆ; ಫಲಕೊಡುವ ಯಜ್ಞಯಾಗಗಳನ್ನು ಮಾಡುವ ಕರ್ಮದ ಭ್ರಮೆಗಳನ್ನು ದಾಟಿದ ಯೋಗಿಯಂತೆ; ರೋಗ ರುಜಿನಗಳು ಇಲ್ಲದ ಮನುಷ್ಯನಂತೆ; ಮಂಜು ಹರಿದ ಬಳಿಕ ಶೋಬಿಸುವ ಕಮಲದಂತೆ, ಇವೆಲ್ಲವುಗಳ ಹಾಗೆಯೇ, ಶತ್ರುಗಳು ಇಲ್ಲವಾದ ಬಳಿಕ ನಿನ್ನ ರಾಜತ್ವವು ಸ್ವರ್ಗದ ಇಂದ್ರಪದವಿಯೆಂದು ಎನಿಸುವುದು. ಕೇಳು ಇದು ಶ್ರೇಷ್ಠವಾದ ಅಭಿಪ್ರಾಯವಾಗಿರುವುದು. ಮನಗೊಟ್ಟು ಕೇಳು ಎಂದನು ಆ ಶಕುನಿ.
- ಬಿಡದೆ ಸುಖ ದುಃಖಗಳೊಳೊಂದನು
- ಹಿಡಿದು ಸದ್ವ್ಯವಹಾರ ಮುಖದಲಿ
- ನಡೆಯಲೊಂದರ ತುಷ್ಟಿಯೊಂದರ ನಷ್ಟ ತನಗಹುದು |
- ಹಿಡಿವುದಿಹಪರವೆರಡರೊಳಗಳ
- ವಡಿಕೆ ತನಗಹುದೊಂದನೊಂದನು
- ಬಿಡುವುದಲ್ಲದೆ ಬೇರೆ ಮತವಿಲ್ಲೆಂದನಾ ಶಕುನಿ || (೨೫)
- ಪದವಿಭಾಗ-ಅರ್ಥ:ಬಿಡದೆ(ಗಟ್ಟಿಯಾಗಿ) ಸುಖ ದುಃಖಗಳೊಳು+ ಒಂದನು ಹಿಡಿದು= ಸುಖ ದುಃಖಗಳಲ್ಲಿ ಒಂದನ್ನು ಗಟ್ಟಿಯಾಗಿ ಹಿಡಿದು, ಸದ್ವ್ಯವಹಾರ= ಸತ್ + ವ್ಯವಹಾರ ಮುಖದಲಿ ನಡೆಯಲು+ ಒಂದರ= ಒಳ್ಳೆಯ ವ್ಯವಹಾರ ಮಾರ್ಗದಲ್ಲಿ, ನಡೆಯಲು+ ಒಂದರ ತುಷ್ಟಿಯು (ಹೆಚ್ಚು ದೊರೆಯುವಿಕೆ)+ ಒಂದರ ನಷ್ಟ ತನಗೆ+ ಅಹುದು= ನಡೆದಾಗ ಒಂದು ಹೆಚ್ಚು ದೊರೆಯುವುದು. ಮತ್ತೊಂದರ ಒಂದರ ನಷ್ಟ ತನಗೆ ಆಗುವುದು. ಹಿಡಿವುದು ಇಹಪರವು+ ಎರಡರೊಳಗೆ+ ಅಳವಡಿಕೆ= ಇಹದ ಸುಖ ಮತ್ತು ಪರಲೋಕದ ಸದ್ಗತಿಯು ಈ ಹಿತಗಳಲ್ಲಿ ಸಂಧಿಗ್ಧತೆಯುಂಟಾದಾಗ ಎರಡನ್ನೂ ಪಡೆಯವ ಮಾರ್ಗ ಇಲ್ಲವಾದಾಗ, ಎರಡರೊಳಗೆ ತನಗೆ ಸುಖ ಕೊಡುವ ಇಹವನ್ನು ಅಥವಾ ಪರವನ್ನು ಬಿಡಬೇಕಾಗುವುದು. ಅಳವಡಿಕೆ ತನಗೆ+ ಅಹುದು (ಅನುಕೂಲ ಒಳಿತು)+ ಒಂದನು+ ಒಂದನು ಬಿಡುವುದು+ ಅಲ್ಲದೆ ಬೇರೆ ಮತವಿಲ್ಲ+ ಎಂದನು+ ಆ ಶಕುನಿ.
- ಟಿಪ್ಪಣಿ: ಇಹ= ಈ ಲೋಕದ ಕಷ್ಟ - ಸುಖ, ಈ ಲೋಕದ ವ್ಯವಹಾರ; ಪರ= ಭೂಮಿಯಲ್ಲಿ ಜೀವಿಸಿದಾಗ ಮಾಡಿದ ಕರ್ಮಕ್ಕೆ ಸಿಗುವ ಪರಲೋಕಕ್ಕೆ ಸಂಬಂಧಪಟ್ಟ ಸುಖ - ದುಃಖ, ಸ್ವರ್ಗ- ನರಕ ಪ್ರಾಪ್ತಿಗಳು.
- ಅರ್ಥ: ಇಹದ ಸುಖ ಮತ್ತು ಪರಲೋಕದ ಸದ್ಗತಿಯು ಈ ಹಿತಗಳಲ್ಲಿ ಸಂಧಿಗ್ಧತೆಯುಂಟಾದಾಗ ಎರಡನ್ನೂ ಪಡೆಯವ ಮಾರ್ಗ ಇಲ್ಲವಾದಾಗ, ಎರಡರೊಳಗೆ ತನಗೆ ಸುಖ ಕೊಡುವ ಇಹವನ್ನು ಹಿಡಿದು, ಪರವನ್ನು ಬಿಡಬೇಕಾಗುವುದು.
- ಇಹ- ದುರ್ಯೋಧನನಿಗೆಹಿತವಾದುದು- ಶತ್ರುವಿಲ್ಲದರಾಜ್ಯ, ಪರ- ಮರಣಾನಂತರ ಸ್ವರ್ಗಲೋಕ ವಾಸ, ಈ ಎರಡದನ್ನೂ ಸಾಧಿಸುವ ಮಾರ್ಗ ಇಲ್ಲದೆಹೋದಾಗ, ಒಂದನ್ನು ಬಿಡಬೇಕಾಗುವುದು. ತನಗೆ ಯಾವುದರಿಂದ ಒಳಿತಾಗುವದೋ ಆ ಒಂದನ್ನು ಅಳವಡಿಸಿಕೊಳ್ಳಬೇಕು ಅಥವಾ ಅನುಸರಿಸಬೇಕು. ಆಗ ಮತ್ತೊಂದನ್ನು ಬಿಡುವುದು. ಅಲ್ಲದೆ ಬೇರೆ ಮಾರ್ಗವಿಲ್ಲ ಎಂದನು, ಆ ಶಕುನಿ. ಇಹಸುಖ-ಪಾಂಡವರನ್ನು ಮೋಸದಿಂದ ಇಲ್ಲವಾಗಿಸಿದರೆ ಇಹಲೋಕದಲ್ಲಿ ರಾಜನಾಗಿ ಸುಖ ಪಡಬಹುದು. ಪರಲೋಕದ ಸುಖ: ಅದು- ಪಾಂಡವರನ್ನು ಹತ್ಯೆಮಾಡಿದರೆ, ಅಧರ್ಮವಾದರೆ ಪರಲೋಕದಲ್ಲಿ ಸ್ವರ್ಗವಿಲ್ಲ. ಅದಲ್ಲದೆ ದಯೆ,ಧರ್ಮದಿಂದ ನೆಡೆದು ಸತ್ತನಂತರ ಸ್ವರ್ಗಪಡೆಯುವ ಆಸೆ ಇದ್ದರೆ, ಪಾಂಡವರನ್ನು ಬದುಕಲು ಬಿಟ್ಟು, ಪಾಂಡವರೊಡನೆ ರಾಜ್ಯ ಹಂಚಿಕೊಂಡರೆ ಅವರು ಪ್ರಬಲರಾಗಿ ಅವರ ಏಳಿಗೆಯನ್ನು ನೋಡುತ್ತಾ ದುಃಖಪಡಬೇಕಾಗುವುದು.
- ಭಾವ ಮೈದುನನಣ್ಣ ತಮ್ಮನು
- ಮಾವನಳಿಯನು ಪುತ್ರ ಮಿತ್ರರು
- ಸೇವಕರು ಸಜ್ಜನರು ಸುಜನರು ಸತ್ಯಯುತರೆಂದು |
- ಭಾವಿಸದಿರಾರುವನು ನಿನ್ನಯ
- ಜೀವವುಳ್ಳನ್ನೆಬರ ನಿನ್ನಯ
- ದೈವಗತಿಯೆಂದು ನಂಬಿಹುದೆಂದನಾ ಶಕುನಿ || (೨೬)
- ಪದವಿಭಾಗ-ಅರ್ಥ: ಭಾವ ಮೈದುನನು+ ಅಣ್ಣ, ತಮ್ಮನು,ಮಾವನು, ಅಳಿಯನು, ಪುತ್ರ. ಮಿತ್ರರು, ಸೇವಕರು, ಸಜ್ಜನರು, ಸುಜನರು, ಸತ್ಯಯುತರು,- ಎಂದು ಭಾವಿಸದಿರು+ ಆರುವನು= ಯಾರನ್ನೂ, ನಿನ್ನಯ ಜೀವವುಳ್ಳ+ ಅನ್ನೆಬರ= ನಿನ್ನ ಜೀವ ಇರುವ ಅಲ್ಲಿಯವರೆಗೂ, ನಿನ್ನ ಜೀವ ಇರುವತನಕವೂ; ನಿನ್ನಯ ದೈವಗತಿಯೆಂದು ನಂಬಿ+ ಇಹುದು+ ಎಂದನು+ ಆ ಎಲ್ಲವೂ ಶಕುನಿ= ಆ ಎಲ್ಲವೂ ನಿನ್ನ ದೈವಗತಿಯೆಂದು ನಂಬಿ ಬದುಕಿರು, ಎಂದನು ಆ ಶಕುನಿ
- ಅರ್ಥ: ಇವನು ಭಾವನು, ಮೈದುನನು, ಅಣ್ಣ, ತಮ್ಮನು, ಮಾವನು, ಅಳಿಯನು, ಪುತ್ರನು. ಮಿತ್ರರು, ಸೇವಕರು, ಸಜ್ಜನರು, ಸುಜನರು, ಸತ್ಯಯುತರು,- ಎಂದು ಭಾವಿಸದಿರು, ನಿನ್ನ ಜೀವ ಇರುವತನಕವೂ ಯಾರನ್ನೂ ನಂಬಬೇಡ. ಆ ಎಲ್ಲವೂ ನಿನ್ನ ದೈವಗತಿಯೆಂದು ನಂಬಿ ಬದುಕಿರು, ಎಂದನು ಆ ಶಕುನಿ
- ಶತ್ರುಶೇಷವಿದಲ್ಪವೆಂದಳು
- ಹುತ್ತ ಬರಲಾಗದು ಕಣಾ ಭೂ
- ಪೋತ್ತಮರುಗಳು ವೈರಿ ರಾಯರ ವಂಶ ಬೀಜವನು |
- ಬಿತ್ತುವರೆ ನೇತ್ರಾವಳಿಯ ಮೀ
- ಟೆತ್ತಿ ಕಾರಾಗಾರದೊಳಗೆ ಕ
- ಳತ್ರ ಸಹಿತನಶನದಲಧಿಕ ವ್ರತವ ಮಾಡೆಂದ || (೨೭) ||
- ಪದವಿಭಾಗ-ಅರ್ಥ: ಶತ್ರುಶೇಷವು+ ಇದು+ ಅಲ್ಪವೆಂದು+ ಅಳುಹುತ್ತ (ಅಳುಹು- ಬಯಸು- ಪೋಶಿಸುತ್ತಾ) ಬರಲಾಗದು ಕಣಾ ಭೂಪೋತ್ತಮರುಗಳು= ಶತ್ರುಗಳ ಶೇಷ- ಅಂಶವು, ಕುಡಿಯು ಇದು ಸಣ್ಣದು ಎಂದು ಪೋಶಿಸುತ್ತಾ (ಉದಾಸೀನ ಮಾಡುತ್ತಾ?)ಬರಬಾರದು ಕಣಯ್ಯಾ, ರಾಜರಾದವರು. ವೈರಿ ರಾಯರ ವಂಶ ಬೀಜವನು ಬಿತ್ತುವರೆ = ವೈರಿ ರಾಜರ ವಂಶ ಬೀಜವನ್ನು ಬಿತ್ತಿ ಬೆಳಸುತ್ತಾರೆಯೇ? ಹಾಗೆ ವೈರಿಗಳನ್ನು ಬೆಳೆಯಲು ಬಿಟ್ಟರೆ, ನೇತ್ರಾವಳಿಯ= ಎರಡು ಕಣ್ಣಗಳನ್ನು, ಮೀಟಿ+ ಎತ್ತಿ= ಕಿತ್ತಿಸಿಕೊಂಡು ಕಣ್ಣಿಲ್ಲದೆ, ಕಾರಾಗಾರದೊಳಗೆ= ಕಾರಾಗ್ರಹದಲ್ಲಿ ಕಳತ್ರ= ಪತ್ನಿ ಸಹಿತ+ ಅನಶನದಲಿ (ಉಪವಾಸ)+ ಅಧಿಕ (ಬಹಳಕಾಲ) ವ್ರತವ ಮಾಡು+ ಎಂದ= ನಿನ್ನ ಎರಡೂ ಕಣ್ಣಗಳನ್ನು ಮೀಟಿ ಕಿತ್ತಿಸಿಕೊಂಡು ಕಣ್ಣಿಲ್ಲದೆ, ಕಾರಾಗ್ರಹದಲ್ಲಿ ಪತ್ನಿ ಸಹಿತ ಉಪವಾಸ ವ್ರತವನ್ನು ಬಹಳಕಾಲ ಮಾಡು, (ಮಾಡಬೇಕಾಗುವುದು) ಎಂದ.
- ಅರ್ಥ:ಶತ್ರುಗಳ ಶೇಷ- ಅಂಶವು ಅಥವಾ ಕುಡಿಯು ಇದು ಸಣ್ಣದು ಎಂದು ಪೋಷಿಸುತ್ತಾ -ಉದಾಸೀನ ಮಾಡುತ್ತಾ ಬೆಳೆಯಲು ಬಿಡಬರಬಾರದು ಕಣಯ್ಯಾ, ರಾಜರಾದವರು. ವೈರಿ ರಾಜರ ವಂಶ ಬೀಜವನ್ನು ಯಾರಾದರೂ ಬಿತ್ತಿ ಬೆಳಸುತ್ತಾರೆಯೇ? ಹಾಗೆ ವೈರಿಗಳನ್ನು ಬೆಳೆಯಲು ಬಿಟ್ಟರೆ, ನಿನ್ನ ಎರಡೂ ಕಣ್ಣಗಳನ್ನು ಮೀಟಿ ಕೀಳಿಸಿಕೊಂಡು ಕಣ್ಣಿಲ್ಲದೆ, ಕಾರಾಗ್ರಹದಲ್ಲಿ ಪತ್ನಿ ಸಹಿತ ಉಪವಾಸ ವ್ರತವನ್ನು ಬಹಳಕಾಲ ಮಾಡು, (ಮಾಡಬೇಕಾಗುವುದು) ಎಂದ.
- ವಿಷವನಣುವೆಂದಳುಕದುಪಭೋ
- ಗಿಸಲು ಕೊಲ್ಲದೆ ಬಿಡುವುದೇ ಕರ
- ಗಸದ ನಡು ಬಡವಾದರೆಯು ಕುಯ್ದಿಕ್ಕದೇ ತರುವ ||
- ಶಿಶುವಿವನು ಸಾಮರ್ಥ್ಯಪುರುಷನೆ
- ಪುಸಿ ಕಣಾಯೆಂದುಳುಹಿದೊಡೆ ರ
- ಕ್ಕಸನಹನು ಮುಂದಕ್ಕೆ ತನಗವನೆಂದನು ಶಕುನಿ || (೨೮) ||
- ಪದವಿಭಾಗ-ಅರ್ಥ: ವಿಷವನು+ ಅಣುವೆಂದು (ಸ್ವಲ್ಪ))+ ಅಳುಕದೆ+ ಉಪಭೋಗಿಸಲು ಕೊಲ್ಲದೆ ಬಿಡುವುದೇ= ವಿಷವನ್ನು ಸ್ವಲ್ಪವೆಂದು ಹೆದರದೆ ತಿಂದರೆ ಕೊಲ್ಲದೆ ಬಿಡುವುದೇ? ಕರಗಸದ ನಡು ಬಡವಾದರೆಯು ಕುಯ್ದು+ ಇಕ್ಕದೇ= ಕರಗಸದ ನಡುವಿನ ಭಾಗ ಸಣ್ಣವಾಗಿದ್ದರೂ ಮರವನ್ನು ಕುಯ್ದುಹಾಕುವುದಿಲ್ಲವೇ? ತರುವ ಶಿಶುವು+ ಇವನು= ಅನಾಥವಾದ ಶತ್ರುವಿನ ತರುವ= ತೆಗೆದುಕೊಂಡುಬರುವ, ಶಿಶುವನ್ನು ಇವನು; ಸಾಮರ್ಥ್ಯ ಪುರುಷನೆ ಪುಸಿ= ಸುಳ್ಳು, ಕಣಾಯೆಂದು+ ಉಳುಹಿದೊಡೆ ( ಬದಕಲು ಬಿಟ್ಟರೆ)= ಇವನು ಶಕ್ತಿವಂತ ಪುರುಷನೇ- ಸುಳ್ಳು, ಎಂದು ಬದಕಲು ಬಿಟ್ಟರೆ; ರಕ್ಕಸನು+ ಅಹನು= ಆಗುವನು, ಮುಂದಕ್ಕೆ ತನಗೆ+ ಅವನು+ ಎಂದನು ಶಕುನಿ.
- ಅರ್ಥ: ವಿಷವನ್ನು ಸ್ವಲ್ಪವೆಂದು ಹೆದರದೆ ತಿಂದರೆ ಕೊಲ್ಲದೆ ಬಿಡುವುದೇ? ಕರಗಸದ ನಡುವಿನ ಭಾಗ ಸಣ್ಣವಾಗಿದ್ದರೂ ಮರವನ್ನು ಕುಯ್ದುಹಾಕುವುದಿಲ್ಲವೇ? ಅನಾಥವಾದ ಶತ್ರುವಿನ ತರುವ ಶಿಶುವನ್ನು, ಇವನು ಸಾಮರ್ಥ್ಯ ಪುರುಷನೆ ಸುಳ್ಳು, ಎಂದು ಬದಕಲು ಬಿಟ್ಟರೆ; ಮುಂದೆ ಅವನು ತನಗೆ ರಾಕ್ಷಸನು ಆಗುವನು,ಎಂದನು ಶಕುನಿ.
- ಕಾಲವನು ಗೂಗೆಗಳು ನಿರ್ಜರ
- ರೇಳಿಗೆಯನಾ ದೈತ್ಯರುಗಳು ತ
- ಮಾಳಿ ರವಿರಶ್ಮಿಗಳನಾ ಬಲು ನಿದ್ರೆಯನು ಚೋರ ||
- ಕಾಲ ಭುಜಗನು ಗರುಡನುಳಿವನು
- ತಾಳದಂದದಿ ಪಾಂಡವರು ನಿ
- ನ್ನೇಳಿಗೆಯ ಸೈರಿಸರು ಚಿತ್ತೈಸೆಂದನಾ ಶಕುನಿ || (೨೯) ||
- ಪದವಿಭಾಗ-ಅರ್ಥ: ಕಾಲವನು(ಹಗಲು) ಗೂಗೆಗಳು, ನಿರ್ಜರರ (ದೇವತೆಗಳ ಜರೆ ಎಂದರೆ ಮುಪ್ಪು ಇಲ್ಲದವರು)+ ಏಳಿಗೆಯನು+ ಆ ದೈತ್ಯರುಗಳು, ತಮ+ ಆಳಿ= ಕತ್ತಲೆಯ ಗುಂಪು ರಾಶಿ, ರವಿರಶ್ಮಿಗಳನು, + ಆ ಬಲು ನಿದ್ರೆಯನು ಚೋರ, ಕಾಲ ಭುಜಗನು ಗರುಡನ+ ಉಳಿವನು ತಾಳದ (ಸಹಿಸದ)+ ಆಂದದಿ= ರೀತಿಯಲ್ಲಿ, ಪಾಂಡವರು ನಿನ್ನ+ ಏಳಿಗೆಯ ಸೈರಿಸರು, ಚಿತ್ತೈಸು+ ಎಂದನಾ ಶಕುನಿ.
- ಅರ್ಥ:ಹಗಲುಕಾಲವನ್ನು ಗೂಗೆಗಳೂ, ದೇವತೆಗಳನ್ನು ಏಳಿಗೆಯನ್ನು ಆ ದೈತ್ಯರುಗಳೂ, ಕತ್ತಲೆಯು ರವಿರಶ್ಮಿಗಳನ್ನೂ, ಆ ಒತ್ತಿಬರುವ ನಿದ್ರೆಯನ್ನು ಕಳ್ಳನೂ,, ಕಾಳಸರ್ಪವು ಗರುಡನು ಇರುವುದನ್ನೂ, ಸಹಿಸದ ರೀತಿಯಲ್ಲಿ, ಪಾಂಡವರು ನಿನ್ನ ಏಳಿಗೆಯ ಸೈರಿಸರು. ಕೇಳು ಎಂದನು ಆ ಶಕುನಿ.
- ವಿಗಡ ರುದ್ರನು ಲೋಚನಾಗ್ನಿಯೊ
- ಳೊಗುಮಿಗೆಯ ಕೋಪದಲಿ ಕಾಮನ
- ಮಿಗೆ ದಹಿಸಿದಂದದಲಿ ರಿಪು ಕುಂತೀಕುಮಾರಕರ ||
- ಹೊಗೆದು ಕಳೆ ಲಾಕ್ಷಾಭವನದಲಿ
- ಹಗೆಗೆ ಹರಿವಹುದಲ್ಲದಿರ್ದೊಡೆ
- ವಿಗಡಿಸುವುದೈ ರಾಜಕಾರ್ಯವಿದೆಂದನಾ ಶಕುನಿ || (೩೦) ||
- ಪದವಿಭಾಗ-ಅರ್ಥ: ವಿಗಡ ರುದ್ರನು= ವೀರ ರುದ್ರನು, ಲೋಚನಾಗ್ನಿಯೊಳು(ಲೋಚನ- ಹಣೆಗಣ್ಣಿನ ಅಗ್ನಿಯಿಂದ)+ ಉಗುಮಿಗೆಯ= ಮಹಾ, ಕೋಪದಲಿ, ಕಾಮನ ಮಿಗೆ= ಕಾಮನನ್ನು - ಚೆನ್ನಾಗಿ ಪೂರಾ- ಮನ್ಮಥನನ್ನು, ದಹಿಸಿದ+ ಅಂದದಲಿ= ಸುಟ್ಟರೀತಿಯಲ್ಲಿ, ರಿಪು= ಶತ್ರುಗಳಾದ, ಕುಂತೀಕುಮಾರಕರ= ಕುಂತಿಯಮಕ್ಕಳಾದ ಪಾಂಡವರನ್ನು, ಹೊಗೆದು ಕಳೆ= ಸುಟ್ಟು ಇಲ್ಲವಾಗಿಸು, ಲಾಕ್ಷಾಭವನದಲಿ= ಅರಗಿನ ಮನೆಯಲ್ಲಿ. ಹಗೆಗೆ=ಶತ್ರುಗಳಿಗೆ ಹರಿವು(ತುಂಡಾಗುವುದು - ನಾಶ)+ ಅಹುದು(ಆಗುವುದು)+ ಅಲ್ಲದಿರ್ದೊಡೆ ವಿಗಡಿಸುವುದೈ (ವಿಗಡಿಸು= ಕಷ್ಟಕರವಾಗು)= ಇಲ್ಲದಿದ್ದರೆ ರಾಜಕಾರ್ಯವು+ ಇದು= ಈ + ಎಂದನು+ ಆ ಶಕುನಿ.
- ಅರ್ಥ: ವೀರ ರುದ್ರನು ತನ್ನ ಹಣೆಗಣ್ಣಿನ ಅಗ್ನಿಯಿಂದ ಮಹಾ ಕೋಪದಿಂದ ಮನ್ಮಥನನ್ನು ಪೂರಾ ಸುಟ್ಟರೀತಿಯಲ್ಲಿ, ಶತ್ರುಗಳಾದ ಕುಂತಿಯಮಕ್ಕಳಾದ ಪಾಂಡವರನ್ನು ಅರಗಿನ ಮನೆಯಲ್ಲಿ ಸುಟ್ಟು ಇಲ್ಲವಾಗಿಸು, ಹಗೆಗಳ ನಾಶವಾಗುವುದು. ಇಲ್ಲದಿದ್ದರೆ ಈ ರಾಜಕಾರಣವು ಮುಂದೆ ಕಷ್ಟಕರವಾಗುವುದು, ಎಂದನು ಆ ಶಕುನಿ.
- ಹಿಡಿವ ಫಣಿಯನು ಹೊಡೆವ ಸಿಡಿಲನು
- ಜಡಿವ ಮಾರಿಯ ನಲಿವ ರುಜೆಯನು
- ಮಡಿವ ದಿನವನು ಹಾನಿವೃದ್ಧಿಯ ಹೆಚ್ಚು ಕುಂದುಗಳ |
- ಕಡಿವ ಹಗೆಯನು ಕಾಲಕರ್ಮದ
- ಗಡಣವನು ಸುಖದುಃಖದುದಯದ
- ಕಡೆ ಮೊದಲ ಕಾಣಿಸುವನಾವವನೆಂದನಾ ಶಕುನಿ || (೩೧)
- ಪದವಿಭಾಗ-ಅರ್ಥ: ಹಿಡಿವ ಫಣಿಯನು= ಕಚ್ಚುವ ಸರ್ಪವನ್ನು, ಹೊಡೆವ ಸಿಡಿಲನು, ಜಡಿವ ಮಾರಿಯ= ಹೊಡೆದು ಕೊಲ್ಲವ ಮಾರಿಯನ್ನು, ನಲಿವ ರುಜೆಯನು= ಹೆಚ್ಚುವ ರೋಗವನ್ನು, ಮಡಿವ ದಿನವನು= ಸಾಯುವ ದಿನವನ್ನು, ಹಾನಿ- ವೃದ್ಧಿಯ, ಹೆಚ್ಚು ಕುಂದುಗಳ= ಏರುವಿಕೆ - ಇಳಿಯುವಿಕೆಗಳನ್ನು, ಕಡಿವ ಹಗೆಯನು= ಕತ್ತರಿಸುವ ಶತ್ರುವನ್ನ, ಕಾಲಕರ್ಮದ ಗಡಣವನು= ಕಾಲಕಾಲಕ್ಕೆ ಒದಗಿವ ಆಪತ್ತಿನ ಕೂಟವನ್ನು, ಆಪತ್ತುಗಳನ್ನು, ಸುಖದುಃಖದ+ ಉದಯದ ಕಡೆ ಮೊದಲ=ಸುಖದುಃಖಗಳ ಆರಂಭ- ಅಂತ್ಯಗಳನ್ನು ಕಾಣಿಸುವವನು+ ಆವನು+ ಎಂದನಾ ಶಕುನಿ
- ಅರ್ಥ: ಆಕಸ್ಮಿಕವಾಗಿ ಕಚ್ಚುವ ಸರ್ಪವನ್ನು, ಹೊಡೆಯುವ ಸಿಡಿಲನ್ನು, ಹೊಡೆದು ಕೊಲ್ಲವ ಮಾರಿಯನ್ನು, ಹೆಚ್ಚುವ ರೋಗವನ್ನು, ಸಾಯುವ ದಿನವನ್ನು, ಹಾನಿ- ವೃದ್ಧಿಯ ಮತ್ತು ಜೀವನದ ಏರುವಿಕೆ - ಇಳಿಯುವಿಕೆಗಳನ್ನು, ಆಕಸ್ಮಿಕ ಬಂದು ಕತ್ತರಿಸುವ ಶತ್ರುವನ್ನು, ಕಾಲಕಾಲಕ್ಕೆ ಒದಗುವ ಆಪತ್ತಿನ ಕೂಟವನ್ನು, ಆಪತ್ತುಗಳನ್ನು, ಸುಖದುಃಖಗಳ ಆರಂಭ- ಅಂತ್ಯಗಳನ್ನು ಮೊದಲೇ ತೋರಿಸುವವನು ಯಾವನು ಇದ್ದಾನೆ, ಎಂದನಾ ಶಕುನಿ.
- ಇನಿತು ಚಿಂತಿಸಲೇಕೆ ಕೌರವ
- ಜನಪ ನಿಮ್ಮಡಿಗಳಿಗೆ ತಾನೊಂ
- ದನುವ ಬಿನ್ನಹ ಮಾಡುವೆನು ಪಾಂಡವರ ನೆಳಲಿರಲು ||
- ನಿನಗೆ ರಾಜ್ಯವನಾಳ್ವ ಫಲ ಸಂ
- ಜನಿಸಲರಿಯದು ಕಾಲದಲಿ ನೀ
- ನೆನೆ ಉಪಾಯವನೊಂದನೆಂದು ಕಳಿಂಗ ಕೈ ಮುಗಿದ || (೩೨) ||
- ಪದವಿಭಾಗ-ಅರ್ಥ: ಇನಿತು ಚಿಂತಿಸಲೇಕೆ ಕೌರವಜನಪ= ಕೌರವರಾಜನೇ ಬಹಳ ಯೊಚನೆಯನ್ನು ಮಾಢುವುದ ಏಕೆ? (ಬಿಡು ಚಿಂತೆಯನ್ನು). ನಿಮ್ಮಡಿಗಳಿಗೆ ತಾನೊಂದನುವ ಬಿನ್ನಹ ಮಾಡುವೆನು= = ನಿಮ್ಮ ಪಾದಗಳಲ್ಲಿ ನಾನು ಒಂದು ಅರಿಕೆ ಮಾಡುವೆನು. ಪಾಂಡವರ ನೆಳಲಿರಲು ನಿನಗೆ ರಾಜ್ಯವನು+ ಆಳ್ವ ಫಲ ಸಂಜನಿಸಲು= ಉಂಟಾಗಲು (ಫಲ ಸಂಜನಿಸಲು ರಾಜ್ಯದ ಹಣ್ಣು ಉಂಟಾಗಲು ಸಾಧ್ಯವಿಲ್ಲ)+ ಅರಿಯದು (ಆಗದು)= ಪಾಂಡವರ ನೆರಳು ಈ ಭೂಮಿಯ ಮೇಲೆ ಇರುವ ತನಕ, ಈ ಕಾಲದಲ್ಲಿ ನಿನಗೆ ರಾಜ್ಯವನ್ನು ಆಳುವ ಯೋಗಫಲ ಉಂಟಾಗದು ಕಾಲದಲಿ, ನೀನು+ ಎನೆ(ಹೇಳು ಎಂದರೆ) ಉಪಾಯವನು+ ಒಂದನು+ ಎಂದು ಕೈ ಮುಗಿದ = ನೀನು ಹೇಳು ಎಂದರೆ ಒಂದು ಉಪಾಯವನ್ನು ಹೇಳುವೆನು ಎಂದು ಶಕುನಿ ಕೈ ಮುಗಿದನು.
- ಅರ್ಥ: ಕೌರವರಾಜನೇ ಬಹಳ ಯೊಚನೆಯನ್ನು ಮಾಢುವುದ ಏಕೆ? (ಬಿಡು ಚಿಂತೆಯನ್ನು ಅದಕ್ಕೆ ಉಪಾಯ ಉಂಟು). ರಾಜನೇ ನಿಮ್ಮ ಪಾದಗಳಲ್ಲಿ ನಾನು ಒಂದು ಅರಿಕೆ ಮಾಡುವೆನು. ಪಾಂಡವರ ನೆರಳು ಈ ಭೂಮಿಯ ಮೇಲೆ ಇರುವ ತನಕ, ಈ ಕಾಲದಲ್ಲಿ ನಿನಗೆ ರಾಜ್ಯವನ್ನು ಆಳುವ ಯೋಗಫಲವು ಉಂಟಾಗದು. ನೀನು ಹೇಳು ಎಂದರೆ ಒಂದು ಉಪಾಯವನ್ನು ಹೇಳುವೆನು ಎಂದು ಶಕುನಿ ಕೈ ಮುಗಿದನು.
- ದೇವ ದಾನವರಂತೆ ಹದ್ದಿನ
- ಹಾವಿನೋಲತಿ ವೈರ ಬಂಧದ
- ಠಾವು ಠವಣಿಯ ನೀರು ಭೇದಿಸುವಂತೆ ಭೇದಿಸುತ ||
- ಕಾವರ ಕಾವುತ್ತ ಕಂಟಕ
- ಜೀವಿಗಳನಪಹರಿಸುತಂತ
- ರ್ಭಾವಶುದ್ಧಿಯೊಳಿಳೆಯನಾಳುವುದೆಂದನಾ ಶಕುನಿ || (೩೩) ||
- ಪದವಿಭಾಗ-ಅರ್ಥ: ದೇವ ದಾನವರಂತೆ ಹದ್ದಿನ ಹಾವಿನೋಲ್+ ಆತಿ ವೈರ ಬಂಧದ ಠಾವು(ನೆಲೆ)= ದೇವ ದಾನವರಂತೆ ಮತ್ತು ಹದ್ದು ಹಾವಿನಂತೆ, ಆತಿ ವೈರದ ಸ್ಥಾನದ ನೆಲೆಯನ್ನುತಿಳಿ; ಠವಣಿಯ= ಒಟ್ಟುಮಾಡಿದ್ದು ಒಡ್ಡು-ಕಟ್ಟೆಯನ್ನು ನೀರು ಭೇದಿಸುವಂತೆ ಭೇದಿಸುತ= ಕಟ್ಟಿದ ಒಡ್ಡನ್ನು ನೀರು ಭೇದಿಸುವಂತೆ, ಭೇದಿಸುತ= ನಾಶ ಮಾಡುತ್ತಾ, ಕಾವರ ಕಾವುತ್ತ= ಕಾವರ= ರಕ್ಷಿಬೇಕಾದವರನ್ನು ರಕ್ಷಿಸುತ್ತಾ, ಕಂಟಕ ಜೀವಿಗಳನು+ ಅಪಹರಿಸುತ+ ಅಂತರ್ಭಾವ ಶುದ್ಧಿಯೊಳು+ ಇಳೆಯನು (ಭೂಮಿಯನ್ನು)+ ಆಳುವುದೆಂದನು+ = ನಿನಗೆ ಕಂಟಕವಾದ ಜನಗಳನ್ನು ಸಂಹರಿಸುತ್ತಾ ಅಂತರಂಗದಲ್ಲಿ ಚಿಂತೆಯಿಲ್ಲದೆ ಶುದ್ಧವಾದ ಮನಸ್ಸಿನಿಂದ ಭೂಮಿಯನ್ನು ರಾಜನೇ ನೀನು ಆಳಬೇಕು, ಎಂದನು ಆ ಶಕುನಿ.
- ಅರ್ಥ:ದೇವ ದಾನವರಂತೆ ಮತ್ತು ಹದ್ದು ಹಾವಿನಂತೆ, ಆತಿ ವೈರಿಗಳಿರುವ ಸ್ಥಾನದ ನೆಲೆಯನ್ನು ತಿಳಿ. ಕಟ್ಟಿದ ಒಡ್ಡನ್ನು ನೀರು ಭೇದಿಸುವಂತೆ, ನಾಶ ಮಾಡುತ್ತಾ, ರಕ್ಷಿಬೇಕಾದವರನ್ನು ರಕ್ಷಿಸುತ್ತಾ, ನಿನಗೆ ಕಂಟಕವಾದ ಜನಗಳನ್ನು ಸಂಹರಿಸುತ್ತಾ, ಅಂತರಂಗದಲ್ಲಿ ಚಿಂತೆಯಿಲ್ಲದೆ ಶುದ್ಧವಾದ ಮನಸ್ಸಿನಿಂದ ಭೂಮಿಯನ್ನು ರಾಜನೇ ನೀನು ಆಳಬೇಕು, ಎಂದನು ಆ ಶಕುನಿ.
- ಮೃತ್ಯುವಿನ ತಾಳಿಗೆಯೊಳಗ್ಗದ
- ಶತ್ರುಗಳ ಸಾಮೀಪ್ಯದಲಿ ದು
- ರ್ವೃತ್ತರೋಲಗದೊಳಗೆ ಸಿಂಹದ ಗುಹೆಯೊಳಹಿಪತಿಯ ||
- ಹುತ್ತಿನೊಳಗಿಹವೋಲು ಸಲೆ ಬಾ
- ಳುತ್ತ ಲಂತಃಪುರದೊಳರಸಿರ
- ಲತ್ಯಧಿಕವೆಚ್ಚರಿಕೆಯಿರ ಬೇಕೆಂದನಾ ಶಕುನಿ || (೩೪) ||
- ಪದವಿಭಾಗ-ಅರ್ಥ: ಮೃತ್ಯುವಿನ ತಾಳಿಗೆಯೊಳು+ ಅಗ್ಗದ ಶತ್ರುಗಳ ಸಾಮೀಪ್ಯದಲಿ, ದುರ್ವೃತ್ತರ+ ಓಲಗದೊಳಗೆ ಸಿಂಹದ ಗುಹೆಯೊಳು+ ಅಹಿಪತಿಯ ಹುತ್ತಿನೊಳಗೆ+ಇಹವೋಲು ಸಲೆ ಬಾಳುತ್ತಲಿ+ ಅಂತಃಪುರದೊಳು+ ಅರಸಿರಲು+ ಅತ್ಯಧಿಕವು+ ಎಚ್ಚರಿಕೆಯಿರ ಬೇಕೆಂದನು+ಆ ಶಕುನಿ
- ಮೃತ್ಯುವಿನ ತಾಳಿಗೆಯೊಳು= ದವಡೆಯಲ್ಲಿ, ಅಗ್ಗದ= ಉತ್ತಮ- ಬಲಿಷ್ಠ ಶತ್ರುಗಳ ಸಾಮೀಪ್ಯದಲಿ, ದುರ್ವೃತ್ತರ= ದುರಾಚಾರಿಗಳ, ಓಲಗದೊಳಗೆ= ಸಭೆಯಲ್ಲಿ,- ಈ ಪ್ರದೇಶಗಳಲ್ಲಿ ಸಿಂಹದ ಗುಹೆಯೊಳು= ಗುಹೆಯಲ್ಲಿ ಮತ್ತು ಅಹಿಪತಿಯ= ಸರ್ಪರಾಜನ ಹುತ್ತದಲ್ಲಿ + ಇಹವೋಲು= ಇರುವಂತೆ, ಸಲೆ=ಚೆನ್ನಾಗಿ, ಬಾಳುತ್ತಲಿ+ ಅಂತಃಪುರದೊಳು+ ಅರಸಿರಲು= ಅರಸಿಯೊಡನೆ ಇದ್ದಾಗಲೂ, ಅತ್ಯಧಿಕವು+ ಎಚ್ಚರಿಕೆಯಿರ= ಎಚ್ಚರಿಕೆಯಿಂದ ಇರ ಬೇಕೆಂದನು, ಆ ಶಕುನಿ
- ಅರ್ಥ:ರಾಜನಾದವನು, ಮೃತ್ಯುವಿನ ದವಡೆಯಲ್ಲಿ, ಬಲಿಷ್ಠ ಶತ್ರುಗಳ ಸಾಮೀಪ್ಯದಲ್ಲಿ, ದುರಾಚಾರಿಗಳ ಸಭೆಯಲ್ಲಿ,- ಈ ಪ್ರದೇಶಗಳಲ್ಲಿ ಸಿಂಹದ ಗುಹೆಯಲ್ಲಿ ಗುಹೆಯಲ್ಲಿ ಮತ್ತು ಸರ್ಪರಾಜನ ಹುತ್ತದಲ್ಲಿ ಇರುವಂತೆ, ಎಚ್ಚರಿಕೆಯಿಂದ ಚೆನ್ನಾಗಿ ಬಾಳುತ್ತಾ ಇರಬೇಕು ಮತ್ತು ಅಂತಃಪುರದಲ್ಲಿ ಅರಸಿಯೊಡನೆ ಇದ್ದಾಗಲೂ ಅತ್ಯಧಿಕ ಎಚ್ಚರಿಕೆಯಿಂದ ಇರಬೇಕೆಂದನು, ಆ ಶಕುನಿ.
- ಹಗೆಯ ಹೆಂಗಳನರಮನೆಗಳೊಳು
- ಪೊಗಿಸಲಾಗದು ತನಗವರು ಹೇ
- ಳಿಗೆಯ ಹಾವಿನವೋಲು ಸುಖತರವಲ್ಲವರಿ ನೃಪರ ||
- ಮಗಳ ಮಕ್ಕಳ ದೆಸೆಯವರನೋ
- ಲಗಿಸುವರ ಬಾಹತ್ತರ ನಿಯೋ
- ಗಿಗಳ ನಂಬುವುದುಚಿತವೇ ಹೇಳೆಂದನಾ ಶಕುನಿ || (೩೫) ||
- ಪದವಿಭಾಗ-ಅರ್ಥ: ಹಗೆಯ= ಶತ್ರುಗಳ ಹೆಂಗಳನು+ ಅರಮನೆಗಳೊಳು ಪೊಗಿಸಲಾಗದು= ಸೇರಿಸಬಾರದು; ತನಗೆ+ ಅವರು ಹೇಳಿಗೆಯ=ಬುಟ್ಟಿಯ ಹಾವಿನವೋಲು ಸುಖತರವು+ ಅಲ್ಲವು+ ಅರಿ ನೃಪರ= ಶತ್ರುರಾಜರ, ಮಗಳ ಮಕ್ಕಳ ದೆಸೆಯವರನು= ಕಡೆಯವರನ್ನು+ ಓಲಗಿಸುವರ= ಓಲೈಸುವ ಬಾಹತ್ತರ ನಿಯೋಗಿಗಳ=ರಾಜ- ರಾಣಿಯರಿಗೆ, ಸಂಚಿ, ಕನ್ನಡಿ ಹಿಡಿಯುವುದೇ ಮುಂತಾದ ಎಪ್ಪತ್ತೆರಡು ಬಗೆಯ ಸೇವೆ ಮಾಡುವವರನ್ನು, ನಂಬುವುದು+ ಉಚಿತವೇ ಹೇಳೆಂದನು+ ಆ ಶಕುನಿ
- ಅರ್ಥ:ಶತ್ರುಗಳ ಹೆಂಗಸರನ್ನು ಅರಮನೆಗಳಲ್ಲಿ ಸೇರಿಸಬಾರದು; ರಾಜನಾದವನಿಗೆ ಅವರು ಬುಟ್ಟಿಯ ಹಾವಿನಂತೆ ಸುಖತರುವರಲ್ಲ. ಶತ್ರುರಾಜರ ಮಗಳನ್ನೂ ಮಕ್ಕಳ ಕಡೆಯವರನ್ನೂ ಓಲೈಸುವ ಎಪ್ಪತ್ತೆರಡು ಬಗೆಯ- ರಾಜ- ರಾಣಿಯರಿಗೆ, ಸಂಚಿ, ಕನ್ನಡಿ ಹಿಡಿಯುವುದೇ ಮುಂತಾದ ಎಪ್ಪತ್ತೆರಡು ಬಗೆಯ ಸೇವೆ ಮಾಡುವ ನಿಯೋಗಿಗಳನ್ನು ನಂಬುವುದು ಸರಿಯೇ ಹೇಳು; ಅದು ಉಚಿತವಲ್ಲ, ಎಂದನು ಆ ಶಕುನಿ.
- ದೈವ ಹೊಡೆದಂದದಲಿ ಬೆರತು ಸ
- ಭಾ ವಲಯದಲಿ ಗರ್ವ ವಿಭ್ರಮ
- ಭಾವ ಭೂಷಿತನಾಗಿ ವೈಹಾಯಸವನೀಕ್ಷಿಸುತ ||
- ಹಾವಿನಂದದೊಳಿರದೆ ಹಾಸ್ಯ ರ
- ಸಾವಲಂಬನಾಗದೆಯು ಸುಖ
- ಜೀವಿಯಾಗಿಹುದುತ್ತಮವು ಕೇಳೆಂದನಾ ಶಕುನಿ || (೩೬) ||
- ಪದವಿಭಾಗ-ಅರ್ಥ: ದೈವ ಹೊಡೆದ+ ಅಂದದಲಿ= ರೀತಿಯಲ್ಲಿ, ಬೆರತು ಸಭಾ ವಲಯದಲಿ ಗರ್ವ ವಿಭ್ರಮಭಾವ ಭೂಷಿತನಾಗಿ (ಹುಬ್ಬನ್ನು ಗಂಟಿಕ್ಕಿ) = ರಾಜಸಭೆಯಲ್ಲಿ ದೆವ್ವಹೊಡೆದಂತೆ ಗರ್ವಿತನಾಗಿ ಹುಬ್ಬನ್ನು ಗಂಟಿಕ್ಕಿ ಉಗ್ರನಾಗಿರದೆ, ವೈಹಾಯಸವನು (ಆಕಾಶವನ್ನು)+ ಈಕ್ಷಿಸುತ (ಈಕ್ಷಿಸು-ನೋಡು) ಹಾವಿನಂದದೊಳು+ ಇರದೆ= ಆಕಾಶವನ್ನು ನೋಡುತ್ತಾ ಅಥವಾ ಹಾವಿನಂತೆ ಬುಸುಗುಟ್ಟುತ್ತಾ ಇರದೆಇರಬೇಕು; ಹಾಸ್ಯ ರಸಾವಲಂಬನ+ ಆಗದೆಯು ಸುಖಜೀವಿಯಾಗಿಹುದು+ ಉತ್ತಮವು= ಅಥವಾ ಅದಕ್ಕೆ ವಿರುದ್ಧವಾಗಿ ನಗುತ್ತಾ ಹಾಸ್ಯರಸವನ್ನು ಅವಲಂಬಿಸಿಯೂ ಇರದೆ, ಸುಖಜೀವಿಯಾಗಿಹುದು+ ಉತ್ತಮವು= ಸಹಜ ಗಂಭೀರ ಸುಖಮುಖಮುದ್ರೆಯುಲ್ಲಿ ಇರುವುದು ಉತ್ತಮವು ಕೇಳೆಂದನು- ಆ ಶಕುನಿ.
- ಅರ್ಥ:ರಾಜನು ರಾಜಸಭೆಯಲ್ಲಿ ದೆವ್ವಹೊಡೆದಂತೆ ಗರ್ವಿತನಾಗಿ ಹುಬ್ಬನ್ನು ಗಂಟಿಕ್ಕಿ ಉಗ್ರನಾಗಿರದೆ, ಆಕಾಶವನ್ನು ನೋಡುತ್ತಾ ಅಥವಾ ಹಾವಿನಂತೆ ಬುಸುಗುಟ್ಟುತ್ತಾ ಇರದೆ - ಇರಬೇಕು ಅಥವಾ ಅದಕ್ಕೆ ವಿರುದ್ಧವಾಗಿ ನಗುತ್ತಾ ಹಾಸ್ಯರಸವನ್ನು ಅವಲಂಬಿಸಿಯೂ ಇರದೆ, ಸಹಜ ಗಂಭೀರ ಸುಖಮುಖಮುದ್ರೆಯುಲ್ಲಿ ಇರುವುದು ಉತ್ತಮವು ಕೇಳೆಂದನು, ಆ ಶಕುನಿ.
- ಹೀನಮುಖ ಬಹುಮುಖ ಪರಾಙ್ಮುಖ
- ದೀನಮುಖ ವಾಚಾಲಮುಖವ
- ಜ್ಞಾನಮುಖವಂತರ್ಮುಖ ಬಹಿರ್ಮುಖದ ಕಾರ್ಯದಲಿ |
- ಆ ನರೇಂದ್ರನ ವರ್ತನಕೆ ದು
- ಸ್ಥಾನವಾಗದೆ ಬಿಡದು ಸಂಶಯ
- ವೇನಿದಕೆ ಕುರುರಾಯ ಚಿತ್ತೈಸೆಂದನಾ ಶಕುನಿ || (೩೭) ||
- ಪದವಿಭಾಗ-ಅರ್ಥ: ಹೀನಮುಖ= ಸೋತಿರುವಂತೆ ಜೊಲುಮುಕವಾಗಿರುವುದು, ಬಹುಮುಖ= ಸದಾಅತ್ತಿತ್ತ ನೋತಿರುಗಿ ನೋಡುವುದು, ಪರಾಙ್ಮುಖ= ಎತ್ತಲೋ ತಿರುಗಿ ಯೊಚಿಸುವ ಮುಖ,, ದೀನಮುಖ= ದೈನ್ಯವನ್ನು ಹೊಂದಿದ ಮುಕ, ವಾಚಾಲಮುಖವ= ಅತಿ ಮಾತಿನ ಚಪಲತೆಯ ಮುಖ, ಜ್ಞಾನಮುಖವ+ ಆಂತರ್ಮುಖ,= ಅರ್ಧಕಣ್ಣು ಮುಚ್ಚಿದ ಮುಖ ಮತ್ತು ಕಣ್ಣುಮುಚ್ಚಿ ಅಥವಾ ಬಿಟ್ಟು ಸಭೆಯನ್ನು ಗಮನಿಸದೆ ತನ್ನಲ್ಲೇ ಏನೋ ಚಿಂತಿಸುವುದು, ಬಹಿರ್ಮುಖದ= ಸಭೆಯ ನಡೆವಲಿಕೆಗೆ ಅತಿಯಾಗಿ ಪ್ರತಿಕ್ರಿಯೆ ಮುಖ,, ಕಾರ್ಯದಲಿ ಆ ನರೇಂದ್ರನ ವರ್ತನಕೆ ದುಸ್ಥಾನವಾಗದೆ ಬಿಡದು= ಸಭಯಲ್ಲಿ ಈ ಬಗೆಯ ವರ್ತನೆಗಳು ರಾಜನಿಗೆ ಅವನ ಕಾರ್ಯ ಸಾಧನೆಗೆ, ಕೆಟ್ಟ ಪರಿಣಾಮ ಉಂಟು ಮಾಡುವುದು. ಸಂಶಯವೇನು+ ಇದಕೆ ಕುರುರಾಯ= ಕುರುರಾಯನೇ ಇದರಲ್ಲಿ ಸಂಶಯವಿಲ್ಲ, ಚಿತ್ತೈಸು- ಕೇಳು+ ಎಂದನು+ ಆ ಶಕುನಿ
- ಅರ್ಥ:ಸೋತಿರುವಂತೆ ಜೊಲುಮುಕವಾಗಿರುವುದು, ಸದಾಅತ್ತಿತ್ತ ನೋತಿರುಗಿ ನೋಡುವುದು, ಎತ್ತಲೋ ತಿರುಗಿ ಯೊಚಿಸುವ ಮುಖ, ದೈನ್ಯವನ್ನು ಹೊಂದಿದ ಮುಖ, ಅತಿ ಮಾತಿನ ಚಪಲತೆಯ ಮುಖ, ಅರ್ಧಕಣ್ಣು ಮುಚ್ಚಿದ ಮುಖ ಮತ್ತು ಕಣ್ಣುಮುಚ್ಚಿ ಅಥವಾ ಬಿಟ್ಟು ಸಭೆಯನ್ನು ಗಮನಿಸದೆ ತನ್ನಲ್ಲೇ ಏನೋ ಚಿಂತಿಸುವ ಮುಖಮುದ್ರೆ, ಸಭೆಯ ನಡೆವಲಳಿಕೆಗೆ ಅತಿಯಾಗಿ ಪ್ರತಿಕ್ರಿಯೆ ಮುಖ, ಸಭಯಲ್ಲಿ ಈ ಬಗೆಯ ವರ್ತನೆಗಳು ರಾಜನಿಗೆ ಅವನ ಕಾರ್ಯ ಸಾಧನೆಗೆ, ಕೆಟ್ಟ ಪರಿಣಾಮ ಉಂಟು ಮಾಡುವುದು. ಕುರುರಾಯನೇ ಇದರಲ್ಲಿ ಸಂಶಯವಿಲ್ಲ, ಚಿತ್ತೈಸು- ಕೇಳು+ ಎಂದನು+ ಆ ಶಕುನಿ
- ಶಯನದಲಿ ವಹ್ನಿಯಲಿ ವೈಹಾ
- ಳಿಯಲಿ ಬೇಟೆಯಲೂಟದಲಿ ಕೇ
- ಳಿಯಲಿ ಸುರತ ಕ್ರೀಡೆಯಲಿ ಮಜ್ಜನದ ಸಮಯದಲಿ ||
- ಜಯದ ಜೋಕೆಯಲೋಲಗದ ಮರ
- ವೆಯಲಿ ವಾರಸ್ತ್ರೀಯರುಗಳಲಿ
- ಲಯವನೈದಿಸಬಹುದು ಚತ್ತೈಸೆಂದನಾ ಶಕುನಿ || (೩೮) |
- ಪದವಿಭಾಗ-ಅರ್ಥ:(ಶತ್ರುವು) ಶಯನದಲಿ = ಮಲಗಿದಾಗ, ವಹ್ನಿಯಲಿ= ಬೆಂಕಿಯಿಂದ, ವೈಹಾಳಿಯಲಿ= ವಿಹಾರ ಮಾಡವಾಗ, ಬೇಟೆಯಲಿ+ ಊಟದಲಿ= ಬೇಟೆಯಾಡುವಾಗ, ಅಥವಾ ಊಟದಲ್ಲಿ ವಿಷದಿಂದ, ಕೇಳಿಯಲಿ= ಆಟವಾಡುವಾಗ, ಸುರತ ಕ್ರೀಡೆಯಲಿ= ಹೆಣ್ಣಿನೊಡನೆಇದ್ದು ಮೈಮರೆತಾಗ, ಮಜ್ಜನದ ಸಮಯದಲಿ= ಸ್ನಾನ ಮಾಡುವಾಗ, ಜಯದ ಜೋಕೆಯಲಿ+ ಓಲಗದ ಮರವೆಯಲಿ= ವಿಜಯೋತ್ಸವದಲ್ಲಿ, ರಾಜಸಭೆಯಲ್ಲಿ ಮೈಮರೆತಾಗ, ವಾರಸ್ತ್ರೀಯರುಗಳಲಿ= ವೇಶ್ಯೆಯರ ಮೂಲಕ, ಲಯವನು (ನಾಶವನ್ನು)+ ಐದಿಸಬಹುದು (ಮಾಡಬಹುದು), ಚತ್ತೈಸೆಂದನಾ- ಚಿತ್ತೈಸು=ಕೇಳು,ಎಂದನು ಆ ಶಕುನಿ
- ಅರ್ಥ: ಶತ್ರುವು ಮಲಗಿದಾಗ, ಬೆಂಕಿಯಿಂದ, ವಿಹಾರ ಮಾಡವಾಗ, ಬೇಟೆಯಾಡುವಾಗ, ಅಥವಾ ಊಟದಲ್ಲಿ ವಿಷದಿಂದ, ಆಟವಾಡುವಾಗ, ಹೆಣ್ಣಿನೊಡನೆ ಇದ್ದು ಮೈಮರೆತಾಗ, ಸ್ನಾನ ಮಾಡುವಾಗ, ವಿಜಯೋತ್ಸವದಲ್ಲಿ, ರಾಜಸಭೆಯಲ್ಲಿ ಮೈಮರೆತಾಗ, ವೇಶ್ಯೆಯರ ಮೂಲಕ, ಶತ್ರುವನ್ನು ನಾಶವನ್ನು ಮಾಡಬಹುದು, ಕೇಳು,ಎಂದನು ಆ ಶಕುನಿ.
- ರುಜೆಯನಲುಗುವ ರದನವ ದ್ರುಗು
- ರಜವನನುಚಿತಜಾಯಜಾತ ಧೂಮ
- ಧ್ವಜವ ರುಣವನವಿದ್ಯೆಯನು ಗೃಹವಾಸ ಕುಂಡಲಿಯ ||
- ವೃಜಿನವನು ಕಂಪಿತವ ವೈರಿ
- ವ್ರಜವನುಳುಹುವನೆಗ್ಗನೆಂಬಿದು
- ಸುಜನರಭಿಮತ ನಿನ್ನ ಮತವೇನೆಂದನಾ ಶಕುನಿ || (೩೯) ||
- ಪದವಿಭಾಗ-ಅರ್ಥ: ರುಜೆಯನು+ ಅಲುಗುವ ರದನವ= ರೋಗವನ್ನು, ಅಲುಗುವ ಹಲ್ಲನ್ನು, ದ್ರುಗುರಜವನು+ ಅನುಚಿತಜಾಯಜಾತ ಧೂಮಧ್ವಜವ= ಕಣ್ನಿನಲ್ಲಿ ಬಿದ್ದ ಧೂಳನ್ನು, ಅನುಚಿತವಾದ ಹೊಗೆಯಾಡುವ ಬೆಂಕಿಯನ್ನು, ರುಣವನು+ ಅವಿದ್ಯೆಯನು,= ಸಾಲವನ್ನು, ಅವಿದ್ಯೆ ಅಥವಾ ಅಜ್ಞಾನವನ್ನು, ಗೃಹವಾಸ ಕುಂಡಲಿಯ= ಮನೆಯಲ್ಲಿರುವ ಸುರುಳಿ ಸುತ್ತಿಕೊಂಡ ಹಾವನ್ನು, ವೃಜಿನವನು,= ಪಾಪವನ್ನು, ಕಂಪಿತವ = ಅಲುಗಾಡುವ ಕಂಬ ಗೋಡೆಗಳನ್ನು, ವೈರಿವ್ರಜವನು+ ಉಳುಹುವನು+ ಎಗ್ಗನು+ ಎಂಬಿದು=ವೈರಿಗಳ ಗುಂಪನ್ನು, ಉಳಿಸುವವನು ದಡ್ಡನು ಎನ್ನುವುದು, ಸುಜನರ+ ಅಭಿಮತ ನಿನ್ನ ಮತವೇನು+ ಎಂದನು+ ಆ= ತಿಳಿದವರ ಅಭಿಮತವು- ಅಭಿಪ್ರಾಯವು, ನಿನ್ನ ಅಭಿಪ್ರಾಯವೇನು ಎಂದನು, ಆ ಶಕುನಿ.
- ಅರ್ಥ:ರೋಗವನ್ನು, ಅಲುಗುವ ಹಲ್ಲನ್ನು, ಕಣ್ನಿನಲ್ಲಿ ಬಿದ್ದ ಧೂಳನ್ನು, ಅನುಚಿತವಾದ ಹೊಗೆಯಾಡುವ ಬೆಂಕಿಯನ್ನು, ಸಾಲವನ್ನು, ಅವಿದ್ಯೆ ಅಥವಾ ಅಜ್ಞಾನವನ್ನು, ಮನೆಯಲ್ಲಿರುವ ಸುರುಳಿ ಸುತ್ತಿಕೊಂಡ ಹಾವನ್ನು, ಪಾಪವನ್ನು, ಅಲುಗಾಡುವ ಕಂಬ ಗೋಡೆಗಳನ್ನು, ವೈರಿಗಳ ಗುಂಪನ್ನು, ಉಳಿಸುವವನು ದಡ್ಡನು ಎನ್ನುವುದು ತಿಳಿದವರ ಅಭಿಮತವು- ಅಭಿಪ್ರಾಯವು, ನಿನ್ನ ಅಭಿಪ್ರಾಯವೇನು ಎಂದನು, ಆ ಶಕುನಿ.
- ಮಣಿದು ಕೂಪದ ಜೀವನವ ಕಡೆ
- ಗಣಿಸದೇ ಘಟಯಂತ್ರ ಮೃಗರಿಪು
- ಹಣಿಗಿದರೆ ಹರಿಣಂಗೆ ಗೆಲವೇ ಕಾರ್ಯಗತಿಯರಿದು ||
- ಮಣಿವುದಳುಕುವುದಾವ ಪರಿಯಿಂ
- ದೆಣಿಸಿ ಮನದಲಿ ವೈರಿ ರಾಯರ
- ಹಣಿದವಾಡುವುಪಾಯವಿದು ಕೇಳೆಂದನಾ ಶಕುನಿ || (೪೦) ||
- ಪದವಿಭಾಗ-ಅರ್ಥ: ಮಣಿದು=ವಿವಿನಯದಿಂದ ಬಗ್ಗಿ, ಕೂಪದ= ಬಾವಿಯ ಜೀವನವ, ಕಡೆಗಣಿಸದೇ= ಬಾವಿಯ ಜೀವನವನ್ನು- ಕಡೆಗಾಣಿಸದೇ-ಬಾವಿಯ ನೀರನ್ನು ಇಲ್ಲಗೊಳಿಸದೇ ಘಟಯಂತ್ರ (ಬಾವಿಯ ರಾಟೆ)? = ಬಾವಿಯ ರಾಟೆಯು ಬಾವಿಗೆ ತಾನು ಬಾಗಿ ನಮಿಸುವಂತೆ ನಟಿಸಿ, ನೀರನ್ನು ಎಳೆದು ನೀರನ್ನು ಇಲ್ಲದಂತೆ ಮಾಡುವುದಿಲ್ಲವೇ? ಮೃಗರಿಪು= ಸಿಂಹ, ಹಣಿಗಿದರೆ(ಹಣಿಕಿ ನೋಡು) ಹರಿಣಂಗೆ ಗೆಲವೇ= ಸಿಂಹವು ಅಡಗಿ ಕುಳಿತು ಸುಮ್ಮನೆ ಹಣಿಕಿ ನೋಡಿತ್ತಿದ್ದರೆ, ಅದು ಜಿಂಕೆಗೆ ಹೆದರಿದಂತಯೇ? ಅದು ಜಿಂಕೆಯ ಗೆಲುವೇ? ಕಾರ್ಯಗತಿಯ+ ಅರಿದು ಮಣಿವುದು+ ಅಳುಕುವುದು+ ಆವ ಪರಿಯಿಂದ (ಏಕೆ) ಆವ ಪರಿಯಿಂದ= ಯಾವ ರೀತಿಯಿಂದ+ ಎಣಿಸಿ(ಯೋಚಿಸಿ) ಮನದಲಿ ವೈರಿ ರಾಯರ (ಪಾಂಡವರ) ಹಣಿದವಾಡುವ (ಹಣಿ(ಕ್ರಿ)-ಹೊಡೆ, ಹೊಡೆಯುವ - ನಾಶಮಾಡುವ)+ ಉಪಾಯವು+ ಇದು ಕೇಳೆಂದನು+ ಆ ಶಕುನಿ
- ಅರ್ಥ:ಬಾವಿಯ ರಾಟೆಯು ಬಾವಿಯಲ್ಲಿ ವಿವಿನಯದಿಂದ ಬಗ್ಗಿ, ಬಾವಿಯ ಜೀವನವಾದ ಬಾವಿಯ ನೀರನ್ನು ಇಲ್ಲಗೊಳಿಸದೇ? ಬಾವಿಯ ರಾಟೆಯು ಬಾವಿಗೆ ತಾನು ಬಾಗಿ ನಮಿಸುವಂತೆ ನಟಿಸಿ, ನೀರನ್ನು ಎಳೆದು ನೀರನ್ನು ಇಲ್ಲದಂತೆ ಮಾಡುವುದಿಲ್ಲವೇ? (ಅರ್ಥ: ಹಾಗೆ ವಿನಯವನ್ನು ನಟಿಸಿ, ಬಲಿಷ್ಠ ಶತ್ರುವನ್ನು ಇಲ್ಲವಾಗಿಸಬೇಕು). ಸಿಂಹವು ಅಡಗಿಕೊಂಡು ಬೇಟೆಗಾಗಿ ಶಾಂತವಾಗಿದ್ದು ಹಣಿಕಿ ನೋಡಿದರೆ ಅದು ಜಿಂಕೆಗೆ ಹೆದರಿದಂತೆಯೇ? ಅದು ಜಿಂಕೆಯ ಗೆಲುವೇ? (ರಾಜ ನೀತಿ: ಸಿಂಹದ ಹಾಗೆ ಶಾಂತವಾಗಿ ಇದ್ದಂತೆ ನಟಿಸಿ, ಹೊಂಚುಹಾಕಿ ಮರೆಯಿಂದ ಮೇಲೆ ಬಿದ್ದು ಶತ್ರುವನ್ನು ನಾಶಮಾಡಬೇಕು). ರಾಟೆಯಂತೆ ಮಣಿಯುವುದು-ಬಗ್ಗಿ ಸೋತಂತೆ ನಟಿಸುವುದು, ಕಾರ್ಯಸಾದನೆಗೆ ಅಳುಕುವುದು-ಭಯಪಟ್ಟು ಹಿಂದೇಟು ಹಾಕಿದಂತೆ ನಟಿಸುವುದು, ಈ ಕ್ರಮ ಯಾವ ರೀತಿಯಿಂದ ಎಂದು ಮನಸ್ಸಿನಲ್ಲಿ ಯೋಚಿಸಿ ವೈರಿಗಳಾದ ಪಾಂಡವರನ್ನು ನಾಶಮಾಡುವ ಉಪಾಯವು- ಇದು, ಹೀಗೆ, ಕೇಳು ಎಂದನು ಆ ಶಕುನಿ.([೫])
- ಅಹಿಯ ಬಾಧೆಯ ಬಲೆಗೆ ಸಿಲುಕಿದ
- ಮಿಹಿರ ಬಿಂಬದವೋಲು ಮಾಯಾ
- ವಿಹರಣದ ವೀಥಿಯಲಿ ಸಿಕ್ಕದ ಜೀವರುಗಳಂತೆ |
- ಅಹಿತರುಪಟದೊಳಗೆ ಸಿಲುಕದೆ
- ಕುಹಕರವ ದಿರ ಹರಿವ ನೆನೆ ಲೇ
- ಸಹುದು ಕಾಲಕ್ಷೇಪವಿದಕೇನೆಂದನಾ ಶಕುನಿ || (೪೧)
- ಪದವಿಭಾಗ-ಅರ್ಥ: ಅಹಿಯ(ಹಾವು- ರಾಹು) ಬಾಧೆಯ ಬಲೆಗೆ ಸಿಲುಕಿದ ಮಿಹಿರ ಬಿಂಬದವೋಲು= ರಾಹುವಿನ (ಬಾಯಿಗೆ ಸಿಕ್ಕ) ಬಾಧೆಯ ಬಲೆಗೆ ಸಿಕ್ಕಿದ ಸೂರ್ಯ ಬಿಂಬದಂತೆ, ಮಾಯಾ ವಿಹರಣದ ವೀಥಿಯಲಿ ಸಿಕ್ಕದ ಜೀವರುಗಳಂತೆ= ಮಾಯೆಯ ವಿನೋದದ ಜಾಲದಲ್ಲಿ ಸಿಕ್ಕಿರುವ ಜೀವಿಗಳಂತೆ; ಅಹಿತರ+ ಉಪಟದೊಳಗೆ ಸಿಲುಕದೆ= ಶತ್ರುಗಳ ಕೋಟಲೆಗೆ ಸಿಕ್ಕಿಕೊಳ್ಳದೆ, ಕುಹಕರು+ ಅವದಿರ(ಅವರ) ಹರಿವ(ನಾಶವ) ನೆನೆ(ಯೋಚಿಸು)= ಕುಹಕಿಗಳಾದ- ಕೇಡಿಗರಾದ ಅವರ ನಾಶವನ್ನು ಯೋಚಿಸು. ಲೇಸಹುದು= ಒಳ್ಳಯದಾಗುವುದು. ಕಾಲಕ್ಷೇಪವಿದಕೇನೆಂದನಾ - ಕಾಲಕ್ಷೇಪವು+ ಇದಕೆ+ ಏನು? ಎಂದನು+ ಆ ಶಕುನಿ= ಕಾಲಕ್ಷೇಪವು (ಕಾಲ ಕಳೆಯುವುದು ಇದಕ್ಕೆ (ಏಕೆ?); ನಿನ್ನಮತ ಏನು? ಎಂದನು ಆ ಶಕುನಿ.
- ಅರ್ಥ: ರಾಹುವಿನ ಬಾಯಿಗೆ ಸಿಕ್ಕು ಅದರ ಬಾಧೆಯ ಬಲೆಗೆ ಸಿಕ್ಕಿದ ಸೂರ್ಯ ಬಿಂಬದಂತೆ, ಮಾಯೆಯ ವಿನೋದದ ಜಾಲದಲ್ಲಿ ಸಿಕ್ಕಿರುವ ಜೀವಿಗಳಂತೆ; ಶತ್ರುಗಳ ಕೋಟಲೆಗೆ ಸಿಕ್ಕಿಕೊಳ್ಳದೆ, ಕುಹಕಿಗಳಾದ- ಕೇಡಿಗರಾದ ಪಾಂಡವರ ನಾಶವನ್ನು ಯೋಚಿಸು. ಒಳ್ಳಯದಾಗುವುದು. ಕಾಲಕ್ಷೇಪವಿದಕೇನೆಂದನಾ - ಇದಕ್ಕೆ ಕಾಲ ಕಳೆಯುವುದೇಕೆ? ನಿನ್ನಮತ ಏನು? ಎಂದನು ಆ ಶಕುನಿ.
- ನಂಬುವರ ನೆರೆ ನಂಬು ನಂಬದ
- ಡಂಬಕರ ನಂಬದಿರು ಸಂಗರ
- ವೆಂಬ ಮಾತಿಗೆ ಹಂಬಲಿಸಿ ಬೆಂಬೀಳ್ವಬಾಹಿರರ |
- ನಂಬಿರದಿರರಿರಾಯ ಹನನ ವಿ
- ಳಂಬನವ ಮಾಡದಿರು ರೋಷಾ
- ಡಂಬರವ ರಚಿಸದಿರು ಬಹಿರಂಗದಲಿ ನೀನೆಂದ || (೪೨) ||
- ಪದವಿಭಾಗ-ಅರ್ಥ: ನಂಬುವರ ನೆರೆ(ಚೆನ್ನಾಗಿ) ನಂಬು= ನಿನ್ನನ್ನು ನಂಬುವವರನ್ನು ಚೆನ್ನಾಗಿ) ನಂಬು; ನಂಬದ ಡಂಬಕರ ನಂಬದಿರು= ನಿನ್ನನ್ನು ನಂಬದ ಮೋಸಗಾರರನ್ನು ನಂಬಬೇಡ; ಸಂಗರ= (ಯುದ್ಧ) ವೆಂಬ ಮಾತಿಗೆ ಹಂಬಲಿಸಿ ಬೆಂಬೀಳ್ವ ಬಾಹಿರರ ನಂಬಿ+ ಇರದಿರು= ಯುದ್ಧವನ್ನೇ ಬಯಸಿ ನಿನ್ನನ್ನು ಹಿಂಬಾಲಿಸುವ ಹೊರಗಿನವರನ್ನು ನಂಬಬೇಡ. ಇರದಿರು+ ಅರಿರಾಯ ಹನನ ವಿಳಂಬನವ ಮಾಡದಿರು= ಶತ್ರುಗಳ ರಾಜರನ್ನು ನಾಶಮಾಡುವುದ ವಿಚಾರದಲ್ಲಿ ತಡಮಾಡಬೇಡ. ರೋಷಾಡಂಬರವ ರಚಿಸದಿರು ಬಹಿರಂಗದಲಿ= ನೀನು ಬಹಿರಂಗವಾಗಿ ರೋಷದ ಆಡಂಬರವನ್ನು ತೋರಿಸಬೇಡ ನೀನು+ ಎಂದ.
- ಅರ್ಥ: ನಿನ್ನನ್ನು ನಂಬುವವರನ್ನು ಚೆನ್ನಾಗಿ) ನಂಬು; ನಿನ್ನನ್ನು ನಂಬದ ಮೋಸಗಾರರನ್ನು ನಂಬಬೇಡ; ಯುದ್ಧವನ್ನೇ ಬಯಸಿ ನಿನ್ನನ್ನು ಹಿಂಬಾಲಿಸುವ ಹೊರಗಿನವರನ್ನು ನಂಬಬೇಡ. ಶತ್ರುಗಳ ರಾಜರನ್ನು ನಾಶಮಾಡುವುದ ವಿಚಾರದಲ್ಲಿ ತಡಮಾಡಬೇಡ. ನೀನು ಬಹಿರಂಗವಾಗಿ ರೋಷದ ಆಡಂಬರವನ್ನು ತೋರಿಸಬೇಡ, ಎಂದ.
- ಖೂಳನಹ ದಾತಾರನನು ದು
- ರ್ಮೇಳನಹ ಮಿತ್ರನನು ತನಗನು
- ಕೊಲೆಯಲ್ಲದ ಸತಿಯನಂತರ್ದಾಯಿಯಹ ನರನ ||
- ವ್ಯಾಳಯುತವಹ ನಿಳಯವಿನಿತುವ
- ಕಾಲದಲಿ ವರ್ಜಿಸುವುದಲ್ಲದೊ
- ಡೂಳಿಗವು ಹಿರಿದಹುದು ಚಿತ್ತೈಸೆಂದನಾ ಶಕುನಿ || (೪೩) ||
- ಪದವಿಭಾಗ-ಅರ್ಥ: ಖೂಳನಹ ದಾತಾರನನು= ದುಷ್ಟಬಾದ ಯಜಮಾನನ್ನೂ, ದುರ್ಮೇಳನಹ ಮಿತ್ರನನು= ಕೆಟ್ಟ ಮೇಳ- ಕೆಟ್ಟ ಸಂಗಾತಿಗಳನ್ನುಳ್ಳ ಸ್ನೇಹಿತನನ್ನೂ, ತನಗ+ ಅನುಕೊಲೆಯಲ್ಲದ= ಹೇಳಿ ಮಾತುಕೇಳದ ಸತಿಯನು+ ಅಂತರ್ದಾಯಿಯು ()+ ಅಹ ನರನ, ವ್ಯಾಳಯುತವು+ ಅಹ ನಿಳಯವ+ ಇನುತುವ ಕಾಲದಲಿ ವರ್ಜಿಸುವುದು+ ಅಲ್ಲದೊಡೆ+ ಊಳಿಗವು ಹಿರಿದಹುದು ಚಿತ್ತೈಸೆಂದನಾ ಶಕುನಿ
- ಖೂಳನಹ ದಾತಾರನನು= ದುಷ್ಟಬಾದ ಯಜಮಾನನ್ನೂ, ದುರ್ಮೇಳನಹ ಮಿತ್ರನನು= ಕೆಟ್ಟ ಮೇಳ- ಸಂಗಾತಿಗಳನ್ನುಳ್ಳ ಸ್ನೇಹಿತನನ್ನೂ, ತನಗ+ ಅನುಕೊಲೆಯಲ್ಲದ ಸತಿಯನು+ ಅಂತರ್ದಾಯಿಯು (ಮನಬಿಚ್ಚಿಮಾತನಾಡದ ಮನುಷ್ಯನ)+ ಅಹ= ಆಗಿರುವ, ನರನ, =ಮನಬಿಚ್ಚಿಮಾತನಾಡದ ಮನುಷ್ಯನಾಗಿರುವಮನುಷ್ಯನನ್ನೂ, ವ್ಯಾಳಯುತವು (ಹಾವು ಸೇರಿಕೊಂಡಿರುವ)+ ಅಹ (ಸೇರಿಕೊಂಡಿರುವ)ನಿಳಯವ (ಮನೆಯನ್ನು)+ ಇನುತುವ= ಇವೆಲ್ಲವನ್ನೂ, ಕಾಲದಲಿ(ಕೂಡಲೆ- ಸಕಾಲದಲ್ಲಿ) ವರ್ಜಿಸುವುದು(ಬಿಡಡಬೇಕು) + ಅಲ್ಲದೊಡೆ (ಇಲ್ಲದಿದ್ದರೆ,)+ ಊಳಿಗವು= ಸೇವೆಕನಾಗುವ (ಕಷ್ಟದ ಜೀವನವು ಮುಂದೆ) ಹಿರಿದಹುದು (ಬಹಳ - ದೊಡ್ಡದಿರುವುದು.) ಚಿತ್ತೈಸೆಂದನಾ= ಕೇಳು ಎಂದನು ಶಕುನಿ.
- ಅರ್ಥ: ದುಷ್ಟಬಾದ ಯಜಮಾನನ್ನೂ, ಕೆಟ್ಟ ಮೇಳ- ಸಂಗಾತಿಗಳನ್ನುಳ್ಳ ಸ್ನೇಹಿತನನ್ನೂ, ತನಗ ಅನುಕೊಲೆಯಲ್ಲದ ಪತ್ನಿಯನ್ನೂ, ಮನಬಿಚ್ಚಿಮಾತನಾಡದ ಮನುಷ್ಯನಾಗಿರುವಮನುಷ್ಯನನ್ನೂ, ಹಾವು ಸೇರಿಕೊಂಡಿರುವ ಸೇರಿಕೊಂಡಿರುವ ಮನೆಯನ್ನೂ, ಇವೆಲ್ಲವನ್ನೂ ಕೂಡಲೆ ಸಕಾಲದಲ್ಲಿ ಬಿಡಡಬೇಕು. ಇಲ್ಲದಿದ್ದರೆ, ಬಹಳ ಕಷ್ಟದ ಜೀವನವು ಮುಂದೆ ಬರುವುದು, ಕೇಳು ಎಂದನು ಆ ಶಕುನಿ.
- ಎಲ್ಲರಿಂ ಬಹುಧನವ ಕೊಳು ನಿ
- ನ್ನಲ್ಲಿ ಕಾಣಿಯ ಬರಿದೆ ಸೋಲದಿ
- ರಿಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು ||
- ಒಳ್ಳಿದನು ನಮಗೆಂಬ ನಯ ನುಡಿ
- ಯೆಲ್ಲರಲಿ ಬೆಚ್ಚಂತೆ ರಿಪುಗಳ
- ಗೆಲ್ಲಗೆಡಹುವ ಮಂತ್ರವಿದು ಕೇಳೆಂದನಾ ಶಕುನಿ || (೪೪)||
- ಪದವಿಭಾಗ-ಅರ್ಥ: ಎಲ್ಲರಿಂ ಬಹುಧನವ ಕೊಳು= ಎಲ್ಲರಿಂದ ಬಹಳ ಧನವನ್ನು ತೆಗೆದುಕೊ. ನಿನ್ನಲ್ಲಿ ಕಾಣಿಯ ಬರಿದೆ ಸೋಲದಿರು+ ಇಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು= ನಿನ್ನಲ್ಲಿರುವ ಕಾಣಿಯನ್ನೂ ಕಾಸನ್ನೂ ಕೊಡಬೇಡ, ಕೊಡುವಿದಿಲ್ಲ ಎಂದು ಹೇಳದೆ ಕಾಲವನ್ನು ಕಳೆ. ಒಳ್ಳಿದನು ನಮಗೆಂಬ ನಯ ನುಡಿಯೆಲ್ಲಿ+ ಇರಲಿ= ಇವನು ನಮಗೆ ಒಳ್ಳೆಯವನು ಎಂಬ ಮಾತು ಅವರಲ್ಲಿ ಬರುವಂತೆ ಮಾಡು (ಹೆದರಿ ?). ಬೆಚ್ಚಂತೆ ರಿಪುಗಳ ಗೆಲ್ಲಗೆಡಹುವ ಮಂತ್ರವಿದು= ಬೆಚ್ಚುವಂತೆ ಶತ್ರುಗಳನ್ನುಗೆದ್ದು ಕೆಡಗುವ ಮಂತ್ರ ಇದು. ಕೇಳು ಎಂದನು ಆ ಶಕುನಿ
- ಅರ್ಥ: ಎಲ್ಲರಿಂದ ಬಹಳ ಧನವನ್ನು ತೆಗೆದುಕೊ. ನಿನ್ನಲ್ಲಿ ಕಾಣಿಯ ಬರಿದೆ ಸೋಲದಿರು+ ಇಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು= ನಿನ್ನಲ್ಲಿರುವ ಕಾಣಿಯನ್ನೂ- ಕಾಸನ್ನೂ ಕೊಡಬೇಡ, ಕೊಡುವಿದಿಲ್ಲ ಎಂದು ಹೇಳದೆ ಕಾಲವನ್ನು ಕಳೆ. ಇವನು ನಮಗೆ ಒಳ್ಳೆಯವನು ಎಂಬ ಮಾತು ಅವರಲ್ಲಿ ಬರುವಂತೆ ಮಾಡು (ಹೆದರಿ ?). ಬೆಚ್ಚುವಂತೆ ಶತ್ರುಗಳನ್ನು ಗೆದ್ದು ಕೆಡಗುವ ಮಂತ್ರ ಇದು. ಕೇಳು ಎಂದನು ಆ ಶಕುನಿ.
- ಧನವನಿತ್ತಾ ದೊಡೆಯು ಸಹ ಭೋ
- ಜನವನುಂಡಾದೊಡೆಯು ಮೇಣ್ ನಿಜ
- ತನುಜೆಯರನಿತ್ತಾದೊಡೆಯು ಬಳಿಸಂದು ಬೇಸರದೆ ||
- ತನುವ ಬೆರಸಿದ್ದಾದೊಡೆಯು ನೂ
- ತನಗುಣವ ನುಡಿದಾದೊಡೆಯು ರಿಪು
- ಜನಪತಿಯ ವಶ ಮಾಳ್ಪುದುಚಿತವಿದೆಂದನಾ ಶಕುನಿ || (೪೫) ||
- ಪದವಿಭಾಗ-ಅರ್ಥ:ಧನವನಿತ್ತಾದೊಡೆಯು= ಹಣವನ್ನು ಕೊಟ್ಟಾದರೂ, ಸಹ ಭೋಜನವನುಂಡಾದೊಡೆಯು= ಜೊತೆಯಲ್ಲಿ ಭೋಜನ ಮಾಡಿಯಾದರೂ, ಮೇಣ್= ಅಥವಾ - ಮತ್ತೆ, ನಿಜತನುಜೆಯರನು+ ಇತ್ತಾದೊಡೆಯು= ನಿಜ-ತನ್ನ ಪುತ್ರಿಯರನ್ನು ಕೊಟ್ಟಾದರೂ, ಬಳಿಸಂದು ಬೇಸರದೆ= ಹತ್ತಿರವಿದ್ದು- ಬೇಸರಪಡದೆ, ತನುವ(ದೇಹವನ್ನು) ಬೆರಸಿದ್ದಾದೊಡೆಯು(ಸೇರಿಇಕೊಂಡು- ಅಪ್ಪಿಕೊಂಡು)= ಅಪ್ಪಿಕೊಂಡಾದರೂ, ನೂತನಗುಣವ ನುಡಿದಾದೊಡೆಯು= ಹೊಸ ಸದ್ಗುಣವನ್ನು- ಇಲ್ಲದಿದ್ದರೂ ಹೊಗಳಿ, ರಿಪುಜನಪತಿಯ= (ಪ್ರಬಲ) ಶತ್ರುರಾಜನನ್ನು ವಶ ಮಾಳ್ಪುದು+ ಉಚಿತವಿದು= ವಶಪಡಿಸಿಕೊಳ್ಳುವುದು ಉಚಿತವು, ಎಂದನಾ ಶಕುನಿ.
- ಅರ್ಥ: ಪ್ರಬಲ ಶತ್ರುರಾಜನನ್ನು, ಹಣವನ್ನು ಕೊಟ್ಟಾದರೂ, ಜೊತೆಯಲ್ಲಿ ಭೋಜನ ಮಾಡಿಯಾದರೂ, ಅಥವಾ, ತನ್ನ ಪುತ್ರಿಯರನ್ನು ಕೊಟ್ಟಾದರೂ, ಬೇಸರಪಡದೆ ಹತ್ತಿರವಿದ್ದು- ಅಪ್ಪಿಕೊಂಡಾದರೂ, ಹೊಸ ಸದ್ಗುಣವನ್ನು- ಅವನಲ್ಲಿ ಇಲ್ಲದಿದ್ದರೂ ಹೊಗಳಿ, ವಶಪಡಿಸಿಕೊಳ್ಳುವುದು ಉಚಿತವು, ಎಂದನು ಆ ಶಕುನಿ.
- ಕೋಶ ಪಾನದಿಗಳ ಮಾಡಿ ಮ
- ಹೀಸುರರ ಮೇಲಾಯುಧಂಗಳ
- ಸೂಸಿ ದೈವವ ಮುಟ್ಟಿ ದಿವ್ಯಾಜ್ಞೆಗಳಲೋಡಬಡಿಸಿ ||
- ಹೇಸದರಿ ಭೂಪಾಲರನು ನಿ
- ಶ್ಯೇಷವೆನಿಸುವುದಲ್ಲದಿರ್ದೊಡೆ
- ಪೈಸರಿಸುವುದು ರಾಜಕಾರ್ಯವಿದೆಂದನಾ ಶಕುನಿ || (೪೬) ||
- ಪದವಿಭಾಗ-ಅರ್ಥ: ಕೋಶ= ಬಂಢಾರ, ಪಾನದಿಗಳ= ಕುಡಿಯುವ ಹಾಲು- ಮಧ್ಯ, ಮಾಡಿ= ಇವುಗಳನ್ನು ಕೊಟ್ಟು, ಜೊತೆಯಲ್ಲಿ ಪಾನಮಾಡಿ, (ಅಥವಾ ಇವುಗಳ ಮೇಲೆ ಆಣೆಮಾಡಿ) ಮಹೀಸುರರ ಮೇಲಾಯುಧಂಗಳ ಸೂಸಿ= ಬ್ರಾಹ್ಮಣರಿಗೆ ಆಯುಧಗಳನ್ನು ಎತ್ತಿ ಹೊಡೆಯುವುದಾಗಿ ಹೇಳಿ (ಈ ಮಾತಿಗೆ ತಪ್ಪಿದರೆ ಬ್ರಾಹ್ಮಣರನ್ನು ಕೊಲ್ಲುತ್ತೇನೆ ಎಂಬ ಪ್ರತಿಜ್ಞೆ- ಆಪಾಪಕ್ಕೆ ಹೋಗುತ್ತೇನೆ,), ದೈವವ ಮುಟ್ಟಿ ದಿವ್ಯಾಜ್ಞೆಗಳಲಿ ಒಡಬಡಿಸಿ= ದೇವರನ್ನು ಮುಟ್ಟಿ ದೇವರ ಹೆಸರು - ಆಜ್ಞೆಗಳನ್ನು (ದೇವರಾಣೆ ಇತ್ಯಾದಿ) ಹೇಳಿ, ಹೇಸದರಿ= ಈ ಯಾವುದಕ್ಕೂ ಹೇಸದೆ ಇರಬೇಕು, ಭೂಪಾಲರನು ನಿಶ್ಯೇಷವೆನಿಸುವುದು+ ಅಲ್ಲದಿರ್ದೊಡೆ= ಪ್ರಬಲ ಶತ್ರುವನ್ನು ಪೂರ್ಣವಾಗಿ ನಾಶಮಾಡಬೇಕು; ಅದಲ್ಲದಿದ್ದರೆ, ಪೈಸರ= ಹೆಚ್ಚು, 1. ಜಾರು. 2. ಇಲ್ಲವಾಗು. 3. ತಪ್ಪಿಸಿಕೊಳ್ಳು. ಹಿಂದಕ್ಕೆಸರಿಯುವುದು, 10. ಸಡಿಲವಾಗು 1 ಬಿಡು 1 ಕೆಡು); ಪೈಸರಿಸುವುದು ರಾಜಕಾರ್ಯವು+ ಇದು+= ರಾಜಕಾರ್ಯವು ಕೆಡುವುದು. ಇದು ರಾಜನೀತಿ ಎಂದನಾ ಶಕುನಿ.
- ಅರ್ಥ: ಬಂಢಾರ, ಕುಡಿಯುವ ಹಾಲು- ಮಧ್ಯ, ಇವುಗಳನ್ನು ಕೊಟ್ಟು, ಜೊತೆಯಲ್ಲಿ ಪಾನಮಾಡಿ, (ಅಥವಾ ಇವುಗಳ ಮೇಲೆ ಆಣೆಮಾಡಿ) ಬ್ರಾಹ್ಮಣರಿಗೆ ಆಯುಧಗಳನ್ನು ಎತ್ತಿ ಹೊಡೆಯುವುದಾಗಿ ಹೇಳಿ (ಈ ಮಾತಿಗೆ ತಪ್ಪಿದರೆ ಬ್ರಾಹ್ಮಣರನ್ನು ಕೊಲ್ಲುತ್ತೇನೆ- ಎಂಬ ಪ್ರತಿಜ್ಞೆ), ದೇವರನ್ನು ಮುಟ್ಟಿ ದೇವರ ಹೆಸರು - ಆಜ್ಞೆಗಳನ್ನು (ದೇವರಾಣೆ ಇತ್ಯಾದಿ) ಹೇಳಿ, (ಈ ಯಾವುದಕ್ಕೂ ಹೇಸದೆ ಇರಬೇಕು), ಪ್ರಬಲ ಶತ್ರುರಾಜರನ್ನು ಪೂರ್ಣವಾಗಿ ನಾಶಮಾಡಬೇಕು; ಅಲ್ಲದಿದ್ದರೆ, ರಾಜಕಾರ್ಯವು ಕೆಡುವುದು. ಇದು ರಾಜನೀತಿ ಎಂದನಾ ಶಕುನಿ.
- (ಇನ್ನೊಂದು ಅರ್ಥ:ಕೋಶಪಾನ= ಸಂಸ್ಕೃತದಲ್ಲಿ, ದೇವತಾವಿಗ್ರಹಕ್ಕೆ ಅಭಿಷೇಕ ಮಾಡಿದ ನೀರು- ತೀರ್ಥ - ಇದನ್ನು ದೇವರಮೇಲೆ ಆಣೆಮಾಡಿ ಕುಡಿದು ಶತ್ರುವನ್ನು ನಂಬಿಸಿ, ನಂತರ ಮೋಸದಿಂದ ಕೊಲ್ಲಬೇಕು, ಇದಕ್ಕೆ ಹೇಸಬಾರದು, ಹೆದರಬಾರದು. ಇಲ್ಲದಿದ್ದರೆ ರಾಜಕಾರ್ಯವು ಕೆಡುವುದು)([೬])
- ನರಕವಿಲ್ಲದ ನರರು ನಾರಿಯ
- ರುರುಬೆಯಿಲ್ಲದ ಯತಿಗಳಸುರರ
- ವಿರಸವಿಲ್ಲದ ಸುರರು ಮಾಯಪಾಶವನು ಹರಿದ ||
- ಪರಮ ತತ್ವಜ್ಞಾನಿಯವೋಲೀ
- ಧರೆಯ ನರಪಾಲಕರುಗಳು ಹಗೆ
- ಹರಿದು ಹೋಗಲಸಾಧ್ಯವಹುದೇನೆಂದನಾ ಶಕುನಿ || (೪೭) ||
- ಪದವಿಭಾಗ-ಅರ್ಥ: ನರಕವಿಲ್ಲದ ನರರು= ನರಕದ ಫಲವಿಲ್ಲದ(ಭಯವಿಲ್ಲದ) ಮನುಷ್ಯರೂ, ನಾರಿಯರ+ ಉರುಬೆಯಿಲ್ಲದ (ಉರುಬೆ=1. ಮೇಲೆ ಬೀಳುವಿಕೆ. 2. ರಭಸ.)ಯತಿಗಳು= ಹೆಣ್ನಿನ ಕಾಟವಿಲ್ಲದ ಯತಿಗಳೂ, ಯತಿಗಳು+ ಅಸುರರ ವಿರಸವಿಲ್ಲದ ಸುರರು= ರಾಕ್ಷಸರ ವಿರೋಧವಿಲ್ಲದ ದೇವತೆಗಳೂ, ಮಾಯಪಾಶವನು ಹರಿದ ಪರಮ ತತ್ವಜ್ಞಾನಿಯವೋಲ್+ ಈ ಧರೆಯ= ಮಾಯಪಾಶವನು ಕಳೆದುಕೊಂಡ ಪರಮ ತತ್ವಜ್ಞಾನಿಯಂತೆ ಇರಲು, ನರಪಾಲಕರುಗಳು ಹಗೆಹರಿದು ಹೋಗಲು+ ಅಸಾಧ್ಯವು+ ಅಹುದೇನು?+= ರಾಜರು ಶತ್ರುಗಳ ಕಾಟವನ್ನು ಕಳೆದುಕೊಂಡಮೇಲೆ ಇರಲು ಅಸಾಧ್ಯವೇನು? ಎಂದನು ಆ ಶಕುನಿ
- ಅರ್ಥ: ನರಕದ ಫಲವಿಲ್ಲದ(ಭಯವಿಲ್ಲದ) ಮನುಷ್ಯರಂತೆ, ಹೆಣ್ನಿನ ಕಾಟವಿಲ್ಲದ ಯತಿಗಳಂತೆ, ರಾಕ್ಷಸರ ವಿರೋಧವಿಲ್ಲದ ದೇವತೆಗಳಂತೆ, ಮಾಯಪಾಶವನು ಕಳೆದುಕೊಂಡ ಪರಮ ತತ್ವಜ್ಞಾನಿಯಂತೆ ಇರಲು, ರಾಜರು ಶತ್ರುಗಳ ಕಾಟವನ್ನು ಕಳೆದುಕೊಂಡಮೇಲೆ ಅಸಾಧ್ಯವೇನು? ಎಂದನು ಆ ಶಕುನಿ
- ಮಸಗೆ ಮೂಡಿದ ಹೊಲನು ದುಷ್ಟ
- ಪ್ರಸರದೇಳಿಗೆ ಪಾಪಿಯೋಲಗ
- ಹುಸಿಯ ಬಾಳುವೆ ಹುದುವಿನಾರಂಭದ ಫಲೋದಯವು ||
- ನಸಿದು ಹೋಗದೆ ಲೋಕದೊಳಗವು
- ಹೆಸರುವಡೆವವೆ ಹಗೆಯ ಹೆಚ್ಚುಗೆ
- ಹಸನ ಕೊಡುವುದೆ ರಾಯ ಚಿತ್ತೈಸೆಂದನಾ ಶಕುನಿ || (೪೮) ||
- ಪದವಿಭಾಗ-ಅರ್ಥ: ಮಸಗೆ ಮೂಡಿದ ಹೊಲನು= ಚೌಳು ಮಣ್ಣಿನ ಹೊಲ; ದುಷ್ಟಪ್ರಸರದ+ ಏಳಿಗೆ=ದುಷ್ಟರ ಗುಂಪಿನ ಏಳಿಗೆ; ಪಾಪಿಯ+ ಓಲಗ= ಪಾಪಿಯ ಸಭೆ, ಹುಸಿಯ ಬಾಳುವೆ= ಸುಳ್ಳಿನಿಂದ ನೆಡೆಸುವ ಜೀವನ, ಹುದುವಿನ+ ಆರಂಭದ ಫಲೋದಯವು= ಜವಳುಹೊಲದ ವ್ಯವಸಾಯದ ಫಸಲು; ನಸಿದು ಹೋಗದೆ= ಹಾಳಾಗದೆ ಇರುವುದೇ/ - ಲೋಕದೊಳಗೆ+ ಅವು ಹೆಸರು +ವಡೆವವೆ= ಜಗತ್ತಿನಲ್ಲಿ ಅವು ಕೀರ್ತಿ ಪಡೆಯುವುವೇ? ಹಗೆಯ= ಶತ್ರು, ಹೆಚ್ಚುಗೆ ಹಸನ ಕೊಡುವುದೆ= ಶತ್ರುಗಳು ಹೆಚ್ಚಿದರೆ ಒಳ್ಳೆಯದಾಗುವುದೇ? ರಾಯ ಚಿತ್ತೈಸು+ ಎಂದನಾ ಶಕುನಿ
- ಅರ್ಥ:ಚೌಳು ಮಣ್ಣಿನ ಹೊಲ; ದುಷ್ಟರ ಗುಂಪಿನ ಏಳಿಗೆ; ಪಾಪಿಯ ಸಭೆ; ಸುಳ್ಳಿನಿಂದ ನೆಡೆಸುವ ಜೀವನ; ಜವಳುಹೊಲದ ವ್ಯವಸಾಯದ ಫಸಲು; ಹಾಳಾಗದೆ ಇರುವುದೇ? - ಜಗತ್ತಿನಲ್ಲಿ ಅವು ಕೀರ್ತಿ ಪಡೆಯುವುವೇ? ಇಲ್ಲ! ಶತ್ರುಗಳು ಹೆಚ್ಚಿದರೆ ಏಳಿಗೆ ಪಡೆದರೆ ಒಳ್ಳೆಯದಾಗುವುದೇ? ರಾಜನೇ ಕೇಳು ಎಂದನಾ ಶಕುನಿ.
- ಜಾತಿ ಬಾವನ್ನದಲಿ ಸರ್ಪದ
- ಭೀತಿ ಸತ್ಪುರುಷರಿಗೆ ದುರ್ಜನ
- ಭೀತಿ ದೇವಾದ್ಯರಿಗೆ ದನುಜಾದಿಗಳ ಬಲು ಭೀತಿ ||
- ಜಾತ ಮಾತ್ರಕೆ ಜನನ ಮರಣದ
- ಭೀತಿ ಬೆಂಬಿಡದಂತೆ ಗೋತ್ರಜ
- ಭೀತಿ ಭೂಪಾಲರಿಗೆ ಹಿರಿದಹುದೆಂದನಾ ಶಕುನಿ || (೪೯) ||
- ಪದವಿಭಾಗ-ಅರ್ಥ: ಜಾತಿ ಬಾವನ್ನದಲಿ ಸರ್ಪದಭೀತಿ= ಉತ್ತಮ ಶ್ರೀಗಂಧದ ಮರದಲ್ಲಿ ಸರ್ಪದ ಭಯ; ಸತ್ಪುರುಷರಿಗೆ ದುರ್ಜನಭೀತಿ= ಸಜ್ಜನರಿಗೆ ದುರ್ಜನರಿಂದ ಭಯ; ದೇವಾದ್ಯರಿಗೆ ದನುಜಾದಿಗಳ ಬಲು ಭೀತಿ= ದೇವತೆಗಳಿಗೆ ರಾಕ್ಷಸರ ಅತಿ ಭಯ; ಜಾತ ಮಾತ್ರಕೆ ಜನನ ಮರಣದ ಭೀತಿ= ಹುಟ್ಟಿದ ಎಲ್ಲರಿಗೆ ಮರಣದ ಭಯ; ಬೆಂಬಿಡದಂತೆ= ಇವು ಬೆನ್ನಟ್ಟಿ ಬರುವಂತೆ, ಗೋತ್ರಜಭೀತಿ ಭೂಪಾಲರಿಗೆ= ರಾಜರಿಗೆ ತಮ್ಮಗೋತ್ರದಲ್ಲಿ ಜನಿಸಿದ ದಾಯಾದಿಗಳ ಭಯವು, ಹಿರಿದಹುದು+ ಎಂದನಾ = ದೊಡ್ಡದು ಎಂದನಾ ಶಕುನಿ.
- ಅರ್ಥ: ಉತ್ತಮ ಶ್ರೀಗಂಧದ ಮರದಲ್ಲಿ ಸರ್ಪದ ಭಯ; ಸಜ್ಜನರಿಗೆ ದುರ್ಜನರಿಂದ ಭಯ; ದೇವತೆಗಳಿಗೆ ರಾಕ್ಷಸರ ಅತಿ ಭಯ; ಹುಟ್ಟಿದ ಎಲ್ಲರಿಗೆ ಮರಣದ ಭಯ; ಇವು ಬೆನ್ನಟ್ಟಿ ಬರುವಂತೆ, ರಾಜರಿಗೆ ತಮ್ಮ ಗೋತ್ರದಲ್ಲಿ ಜನಿಸಿದ ದಾಯಾದಿಗಳ ಭಯವು, ದೊಡ್ಡದು ಎಂದನಾ ಶಕುನಿ.
- ಕರುಣಿಕರು ಕರಣಿಕರೊಡನೆ ಸಹ
- ಚರರು ಸಹಚರರೊಡನೆ ಸಾವಂ
- ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು ||
- ತರುಣಿಯರು ತರುಣಿಯರೊಡನೆ ಪರಿ
- ಕರರು ಪರಿಕರರೊಡನೆಯಿರಲೊರ
- ಸೊರಸು ಮಿಗೆ ಮಸೆವುದು ಕಣಾ ಭೂಭುಜನೆ ಕೇಳೆಂದ || (೫೦) ||
- ಪದವಿಭಾಗ-ಅರ್ಥ: ಕರುಣಿಕರು (ಲೆಕ್ಕ ಬರೆಯುವವರು) ಕರಣಿಕರೊಡನೆ; ಸಹಚರರು ಸಹಚರರೊಡನೆ= ರಾಜರ ಪರಿವಾರದವರು ಮತ್ತೊಂದು ಪರಿವಾರದವರೊಡನೆ; ಸಾವಂತರಲಿ ಸಾವಂತರುಗಳು+ ಆ= ಸಾಮಂತರಾಜರು ಉಳಿದ ಸಾಮಂತರಾಜರೊಡನೆ; ಮಂತ್ರಿಯಲಿ ಮಂತ್ರಿಗಳು= ಮಂತ್ರಿಯಜೊತೆ ಮಂತ್ರಿಗಳು; ತರುಣಿಯರು ತರುಣಿಯರೊಡನೆ= ಹೆಣ್ಣಿನೊಡನೆ ಹೆಣ್ಣು; ಪರಿಕರರು ಪರಿಕರರೊಡನೆ= ಸೇವಕರು ಸೇವಕರೊಡನೆ; (ಯಿ)ಇರಲು+ ಒರಸು+ ಒರಸು= ಇರುವುದಕ್ಕೆ ಪರಸ್ಪರ ವಿರೋಧ ಅಸೂಯೆ. ಮಿಗೆ= ಹೆಚ್ಚಿದರೆ, ಮಸೆವುದು= ಹೊಡೆದಾಟಕ್ಕೆ ತಿರುಗುವುದು, ಕಣಾ= ಅದು ಹೆಚ್ಚಾದರೆ ಘರ್ಷಣೆಗೆ ಯೊಡಗುವುದು, ಭೂಭುಜನೆ= ರಾಜನೇ ಕೇಳೆಂದ.
- ಅರ್ಥ:ಕರುಣಿಕರು ಕರಣಿಕರೊಡನೆ; ರಾಜರ ಪರಿವಾರದವರು ಮತ್ತೊಂದು ಪರಿವಾರದವರೊಡನೆ; ಸಾಮಂತರಾಜರು ಉಳಿದ ಸಾಮಂತರಾಜರೊಡನೆ; ಮಂತ್ರಿಯಜೊತೆ ಮಂತ್ರಿಗಳು; ಪ್ರಾಯದ ಹೆಣ್ಣಿನೊಡನೆ ಹೆಣ್ಣು; ಸೇವಕರು ಸೇವಕರೊಡನೆ; ಇದ್ದಾಗ ಪರಸ್ಪರ ವಿರೋಧ ಅಸೂಯೆ ಹುಟ್ಟುವುದು. ಅದು ಹೆಚ್ಚಾದರೆ ಘರ್ಷಣೆಗೆ ಯೊಡಗುವುದು,ರಾಜನೇ ಕೇಳೆಂದ ಶಕುನಿ.
- ವ್ಯಾಕುಲಿತ ವಿಪ್ರರ ವಿಸತಿಯ ದಿ
- ವಾಕರನ ಲೋಕಾಯತರ ರ
- ತ್ನಾಕರನ ಲಾವಕರ ಹಿಸುಳರ ದಾಯಭಾಗಿಗಳ ||
- ಶೋಕಿಗರ ಮಾಯಾವಿಗಳ ದ
- ರ್ವೀಕರನ ವಿನಿಯೋಗಿಗಳ ಸ
- ರ್ವೈಕ ಮತ್ಸರದೊಳಗೆ ಬದುಕುವನಾವ ಪೇಳೆಂದ || (೫೧) ||
- ಪದವಿಭಾಗ-ಅರ್ಥ: ವ್ಯಾಕುಲಿತ ವಿಪ್ರರ= ದುಃಖಿತರಾದ ಬ್ರಾಹ್ಮಣರಿಂದ, ವಿಸತಿಯ= ಸತಿತ್ವವಿಲ್ಲದ ಪತ್ನಿಯಿಂದ, ದಿವಾಕರನ= ಸೂರ್ಯನನ್ನು ಧಿಕ್ಕರಿಸಿ, ಲೋಕಾಯತರ= ಚರ್ವಾಕರ ತರ್ಕವನ್ನು , ರತ್ನಾಕರನ= ಸಮುದ್ರವನ್ನು, ಲಾವಕರ= ಕೆಡುಕ.ನ್ನು ಎದುರಿಸಿ, ಹಿಸುಳರ= ಚಾದಿಕೋರರ?- ದಾಯಭಾಗಿಗಳ= ದಾಯಾದಿಗಳನ್ನು, ಶೋಕಿಗರ= ಅತಿ ದುಃಖಿಗಳನ್ನು, ಮಾಯಾವಿಗಳ= ಮೊಸಗಾರರನ್ನು, ದರ್ವೀಕರನ= (ದರ್ವೀಕರ= ಹೆಡೆಯುಳ್ಳುದು) ಸರ್ಪವನ್ನು, ವಿನಿಯೋಗಿಗಳ= (ದೀಪ, ಬೆಂಕಿ ಮೊದಲಾದುವು ಹತ್ತಿಕೊಳ್ಳುವಂತೆ ಮಾಡು) ಅಡಿಗೆಯವರನ್ನು, ಅರಮನೆಯ ದೀಪ ಹಚ್ಚುವವರನ್ನು, ಇವರೆಲ್ಲರ ಸರ್ವೈಕ ಮತ್ಸರದೊಳಗೆ= ಅತಿ ಮತ್ಸರಕ್ಕೆ ಒಳಗಾದರೆ, ಬದುಕುವನು+ ಆವ= ಬದುಕುವವನು ಯಾವನು? ಯಾರು ಇಲ್ಲ. ಪೇಳು+ ಎಂದ.
- ಅರ್ಥ: ದುಃಖಿತರಾದ ಬ್ರಾಹ್ಮಣರಿಂದ, ಸತಿತ್ವವಿಲ್ಲದ ಪತ್ನಿಯಿಂದ, ಸೂರ್ಯನನ್ನು ಧಿಕ್ಕರಿಸಿ, ಚರ್ವಾಕರ ತರ್ಕವನ್ನು ಎದುರಿಸಿ, ಸಮುದ್ರವನ್ನು, ಕೆಡುಕರನ್ನು ಎದುರಿಸಿ,ಚಾದಿಕೋರರ?- ದಾಯಾದಿಗಳನ್ನು, ಅತಿ ದುಃಖಿಗಳನ್ನು, ಮೊಸಗಾರರನ್ನು, ಸರ್ಪವನ್ನು ಎದುರಿಸಿ, ಅಡಿಗೆಯವರನ್ನು, ಅರಮನೆಯ ದೀಪ ಹಚ್ಚುವವರನ್ನು, ಇವರೆಲ್ಲರ ಅತಿ ಮತ್ಸರಕ್ಕೆ ಒಳಗಾದರೆ, ಬದುಕುವವನು ಯಾವನು? ಯಾರು ಇಲ್ಲ. ಹೇಳು ಎಂದ.
- ಮಂಜು ಮಹಿಯನು ಮುಸುಕುವಂತೆ ಧ
- ನಂಜಯನು ಕಾನನವ ಸುಡುವಂ
- ತಂಜಿಕೆಗಳುಮ್ಮಾಹವನು ಹೊಯ್ದೊರಸುವಂದದಲಿ ||
- ರಂಜಕರು ಪಾಂಡವರು ನಿನ್ನನು
- ಭಂಜಿಸುವರಾವಂಗದಲಿ ನವ
- ಕುಂಜರನ ಕಾಲಾಟ ಸಿಂಹಕೆ ಸೇರುವುದೆಯೆಂದ || (೫೨) ||
- ಪದವಿಭಾಗ-ಅರ್ಥ: ಮಂಜು ಮಹಿಯನು ಮುಸುಕುವಂತೆ= ಮಂಜು ಭೂಮಿಯನ್ನು ಮುಸುಕುವಂತೆ, ಧನಂಜಯನು(ಅಗ್ನಿ) ಕಾನನವ ಸುಡುವಂತೆ= ಅಗ್ನಿಯು ಕಾಡನ್ನು ಸುಡುವಂತೆ+ಅಂಜಿಕೆಗಳು+ ಉಮ್ಮಾಹವನು(ಉಮ್ಮಹ= ಉತ್ಸಾಹ, ಸಂತೋಷ)= ಭಯವು, ಹೊಯ್ದು+ ಅರಸುವಂದದಲಿ= ಉತ್ಸಾಹ ಸಂತೋಷಗಳನ್ನು ಹೊಡೆದು ಇಲ್ಲವಾಗಿಸುವಂತೆ, ರಂಜಕರು ಪಾಂಡವರು= ಈಗ ನಿನಗೆ ರಂಜನೆ ಅಥವಾ ಸಂತೋಷ ಕೊಡುವ ಪಾಂಡವರು- ನಿನ್ನನು ಭಂಜಿಸುವರು+ ಆವಂಗದಲಿ= ನಿನ್ನನ್ನು ತಿಂದುಹಾಕುತ್ತಾರೆ, ನಾಶಮಾಡುತ್ತಾರೆ, ಭಂಜಿಸುವರು+ ಆವಂಗದಲಿ= ಯಾವ ರೀತಿ ಎಂದರೆ, ನವಕುಂಜರನ= ಪ್ರಾಯದ ಅನೆಯ, ಕಾಲಾಟ= (ಸಂತಸದ) ತಿರುಗಾಟ, ಸಿಂಹಕೆ ಸೇರುವುದೆ+ ಯೆಂದ= ಸಿಂಹವು ಸಹಿಸುವುದೇ? ಸಿಂಹದಂತಿರುವ ಪಾಂಡವರು ಹರೆಯದ ಸಲಗದಂತಿರುವ ನಿನ್ನ ಸಂಭ್ರಮದ ಬಾಳನ್ನು ಸಹಿಸುವರೇ? ಎಂದ.
- ಅರ್ಥ: ಮಂಜು ಭೂಮಿಯನ್ನು ಮುಸುಕುವಂತೆ, ಅಗ್ನಿಯು ಕಾಡನ್ನು ಸುಡುವಂತೆ, ಭಯವು ಉತ್ಸಾಹ ಸಂತೋಷಗಳನ್ನು ಹೊಡೆದು ಇಲ್ಲವಾಗಿಸುವಂತೆ, ಈಗ ನಿನಗೆ ರಂಜನೆ ಅಥವಾ ಸಂತೋಷ ಕೊಡುವ ಪಾಂಡವರು- ನಿನ್ನನ್ನು ತಿಂದುಹಾಕುತ್ತಾರೆ, ನಾಶ ಮಾಡುತ್ತಾರೆ, ಯಾವ ರೀತಿ ಎಂದರೆ, ಪ್ರಾಯದ ಅನೆಯ ಸಂತಸದ ತಿರುಗಾಟವನ್ನು ಸಿಂಹವು ಸಹಿಸುವುದೇ? ಸಿಂಹದಂತಿರುವ ಪಾಂಡವರು ಹರೆಯದ ಸಲಗದಂತಿರುವ ನಿನ್ನ ಸಂಭ್ರಮದ ಬಾಳನ್ನು ಸಹಿಸುವರೇ? ಎಂದ.
- ದನಿಗೆ ನಡೆದೊಳ ಪೊಕ್ಕು ಮರ ಗೂ
- ಡಿನಲಿ ಸಿಲುಕಿದ ಹುಲಿಯವೋಲ್ ಕಾ
- ನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನ ಸೋಲ್ದು ||
- ಹನನವರಿಯದ ಮೃಗದವೋಲಿರು
- ಬಿನಲಿ ಕೆಡಹಿದ ಕರಿಯವೋಲ್ ರಿಪು
- ಜನಪರಭ್ಯುದಯದ ವಿನಾಶವನೆಸಗಬೇಕೆಂದ || (೫೩) ||
- ಪದವಿಭಾಗ-ಅರ್ಥ: ದನಿಗೆ ನಡೆದು+ ಒಳ ಪೊಕ್ಕು ಮರಗೂಡಿನಲಿ ಸಿಲುಕಿದ ಹುಲಿಯವೋಲ್= ಬೇಟೆಗಾರನು ಕಟ್ಟಿದ ಆಡಿನ ಕೂಗಿನ ದನಿಗೆ ಮರಗೂಡಿನ ಬೋನಿನಲ್ಲಿ ಹುಲಿಯು ಹೋಗಿ ಸಿಕ್ಕಿಕೊಳ್ಳವಂತೆ, ಕಾನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನಸೋಲ್ದು ಹನನವ (ಕೊಲ್ಲುವ ಸಂಚನ್ನು)+ ಅರಿಯದ (ತಿಳಿಯದ) ಮೃಗದವೋಲ್ (ಮೃಗ= ಜಿಂಕೆ)= ಕೊಳಲ ಗಾನಕ್ಕೆ ಮನಸೋತು ಬೇಟೆಗಾರನು ಬೀಸಿದ ಬಲೆಯಲ್ಲಿ ಸಿಕ್ಕಿಕೊಳ್ಳವ ಜಿಂಕೆಯಂತೆ, ಮೃಗದವೋಲ್+/ ಇರುಬಿನಲಿ ಕೆಡಹಿದ ಕರಿಯವೋಲ್= ನೆಲದಲ್ಲಿ ತೋಡಿದ ಗುಂಡಿಯ ಬೀಳುಬೋನಿನಲ್ಲಿ ಬೀಳಿಸಿದ ಆನೆಯಂತೆ, ರಿಪುಜನಪರ+ ಅಭ್ಯುದಯದ= ಶತ್ರುಗಳ ಏಳಿಗೆಯ, ವಿನಾಶವನು+ ಎಸಗಬೇಕು+= ಅಂತ್ಯವನ್ನು ಮಾಡಬೇಕು -ಎಂದ ಶಕುನಿ.
- ಅರ್ಥ:ಬೇಟೆಗಾರನು ಕಟ್ಟಿದ ಆಡಿನ ಕೂಗಿನ ದನಿಗೆ ಮರುಳಾಗಿ ಮರಗೂಡಿನ ಬೋನಿನಲ್ಲಿ ಹುಲಿಯು ಹೋಗಿ ಸಿಕ್ಕಿಕೊಳ್ಳವಂತೆ, ಕೊಳಲ ಗಾನಕ್ಕೆ ಮನಸೋತು ಕೊಲ್ಲುವ ಸಂಚನ್ನು ತಿಳಿಯದೆ ಬೇಟೆಗಾರನು ಬೀಸಿದ ಬಲೆಯಲ್ಲಿ ಸಿಕ್ಕಿಕೊಳ್ಳವ ಜಿಂಕೆಯಂತೆ, ನೆಲದಲ್ಲಿ ಕಾಣದಂತೆ ತೋಡಿದ ಗುಂಡಿಯಲ್ಲಿ (ಬೀಳುಬೋನಿನಲ್ಲಿ) ಬೀಳಿಸಿದ ಆನೆಯಂತೆ, ಶತ್ರುಗಳ ಏಳಿಗೆಯ ಅಂತ್ಯವನ್ನು ಮಾಡಬೇಕು, -ಎಂದ ಶಕುನಿ.
- ಎಂದು ದುರ್ಬೋಧೆಗಳ ನಾನಾ
- ಚಂದದಲಿ ಬೋಧಿಸಿ ಸುನೀತಿಯ
- ನಂದಗೆಡಿಸಿ ತದೀಯ ವಂಶಚ್ಛೇದ ಮಾರ್ಗವನು ||
- ಒಂದುಗೂಡಿ ಸುಯೋಧನಂಗಾ
- ನಂದವೆನಿಸಿ ಕಳಿಂಗ ಲೋಕವ
- ಕೊಂದನೈ ಜನಮೇಜಯ ಕ್ಷಿತಿಪಾಲ ಕೇಳೆಂದ || (೫೪) ||
- ಪದವಿಭಾಗ-ಅರ್ಥ: ಎಂದು ದುರ್ಬೋಧೆಗಳ ನಾನಾ ಚಂದದಲಿ ಬೋಧಿಸಿ= ಈ ರೀತಿಯಲ್ಲಿ ಶಕುನಿಯು ದುರ್ಯೋಧನನಿಗೆ ನಾನಾ ವಿಧದ ದುರ್ಬೋಧೆಗಳನ್ನು ಮನ ಮುಟ್ಟುವಂತೆ ಬೋದಿಸಿದನು. ಸುನೀತಿಯನು+ ಅಂದಗೆಡಿಸಿ ತದೀಯ ವಂಶಚ್ಛೇದ ಮಾರ್ಗವನು= ಸನ್ಮಾರ್ಗದ ನೀತಿಯ ಕ್ರಮವನ್ನು ವಿರೋಪಗೊಳಿಸಿ, ತಮ್ಮ ವಂಶದವರನ್ನೇ ನಾಶ ಮಾಡುವ ಮಾರ್ಗವನ್ನು, ಒಂದುಗೂಡಿ ಸುಯೋಧನಂಗೆ+ ಆನಂದವೆನಿಸಿ= ದುರ್ಯೋಧನನಿಗೆ ಆನಂದವಾಗುವಂತೆ, ಕಳಿಂಗ ಲೋಕವ ಕೊಂದನೈ= ಶಕುನಿಯು ಲೋಕದ ಜನರನ್ನು ಕೊಂದನು, ಜನಮೇಜಯ ಕ್ಷಿತಿಪಾಲ ಕೇಳೆಂದ= ಜನಮೇಜಯ ರಾಜನೇ ಕೇಳು ಎಂದ ವೈಶಂಪಾಯನ ಮುನಿ.
- ಅರ್ಥ:ಈ ರೀತಿಯಲ್ಲಿ ಶಕುನಿಯು ದುರ್ಯೋಧನನಿಗೆ ನಾನಾ ವಿಧದ ದುರ್ಬೋಧೆಗಳನ್ನು ಮನ ಮುಟ್ಟುವಂತೆ ಬೋದಿಸಿದನು. ಸನ್ಮಾರ್ಗದ ನೀತಿಯ ಕ್ರಮವನ್ನು ವಿರೋಪಗೊಳಿಸಿ, ತಮ್ಮ ವಂಶದವರನ್ನೇ ನಾಶ ಮಾಡುವ ಮಾರ್ಗವನ್ನು ಒಟ್ಟಾಗಿ ದುರ್ಯೋಧನನಿಗೆ ಆನಂದವಾಗುವಂತೆ ಹೇಳಿ, ಶಕುನಿಯು ಲೋಕದ ಜನರನ್ನು ಕೊಂದನು, ಜನಮೇಜಯ ರಾಜನೇ ಕೇಳು ಎಂದ ವೈಶಂಪಾಯನ ಮುನಿ.
- ಎಮ್ಮ ಬಹುಮಾನಾವಮಾನವು
- ನಿಮ್ಮದಲ್ಲದೆ ಬೇರೆ ನಮ್ಮಯ
- ಸೊಮ್ಮು ಸಂಬಂಧದಲಿ ಹಿತವರ ಕಾಣೆ ನಾನಿನ್ನು ||
- ಸಂಮತದೆ ಪಾಂಡವರಿಗಗ್ನಿಯ
- ಲೊಮ್ಮೆ ಹರಿವನು ನೆನೆವೆನೊದವಿದ
- ಡೆಮ್ಮ ಸುಕೃತೋದಯದ ಫಲವೆಂದನು ಸುಯೋಧನನು || (೫೫) ||
- ಪದವಿಭಾಗ-ಅರ್ಥ: ಎಮ್ಮ ಬಹುಮಾನ+ ಅವಮಾನವು ನಿಮ್ಮದಲ್ಲದೆ ಬೇರೆ ನಮ್ಮಯ ಸೊಮ್ಮು= ಸಂಪತ್ತು= ನಮ್ಮ ಮಾನ ಅವಮಾನಗಳು ನಿಮ್ಮಿಂದವಲ್ಲದೆ ನಮಗೆ ಬೇರೆ ನಮ್ಮ ಸೊಮ್ಮು= ಸಂಪತ್ತು ತರುವವರು ಇಲ್ಲ. ಸಂಬಂಧದಲಿ ಹಿತವರ ಕಾಣೆ= ನಮ್ಮ ಸಂಬಂಧಿಗಳಲ್ಲಿ ನಮ್ಮ ಹಿತ ಬಯಸುವವರನ್ನು ಬೇರೆ ಯಾರನ್ನೂ ಕಾಣೆನು. ನಾನಿನ್ನು ಸಂಮತದೆ= ನಿಮ್ಮ ಒಪ್ಪಿಗೆಯಿಂದ ಪಾಂಡವರಿಗೆ+ ಅಗ್ನಿಯಲಿ+ ಒಮ್ಮೆ ಹರಿವನು ನೆನೆವೆನು= ಪಾಂಡವರಿಗೆ ಅಗ್ನಿಯಿಂದ ಒಂದೇ ಸಾರಿಗೆ ನಾಶಮಾಡವುದನ್ನು ಯೋಚಿಸುವೆನು. ಒದವಿದಡೆ+ ಎಮ್ಮ ಸುಕೃತೋದಯದ (ಸುಕೃತ - ಒಳ್ಳೆಕೆಲಸದ ಉದಯ) ಫಲವೆಂದನು= ಆ ಕಾರ್ಯ ನೆರವೇರಿದರೆ ಅದು ನಮ್ಮ ಪಣ್ಯಕಾರ್ಯದ ಫಲವು ಎಂದನು ಸುಯೋಧನನು.
- ಅರ್ಥ: ನಮ್ಮ ಮಾನ ಅವಮಾನಗಳು ನಿಮ್ಮಿಂದವಲ್ಲದೆ ನಮಗೆ ಬೇರೆ ನಮ್ಮ ಸೊಮ್ಮು= ಸಂಪತ್ತು ತರುವವರು ಇಲ್ಲ. ನಮ್ಮ ಸಂಬಂಧಿಗಳಲ್ಲಿ ನಮ್ಮ ಹಿತ ಬಯಸುವವರನ್ನು ಬೇರೆ ಯಾರನ್ನೂ ಕಾಣೆನು. ನಾನಿನ್ನು ನಿಮ್ಮ ಒಪ್ಪಿಗೆಯಿಂದ ಪಾಂಡವರನ್ನು ಅಗ್ನಿಯಿಂದ ಒಂದೇ ಸಾರಿಗೆ ನಾಶಮಾಡವುದನ್ನು ಯೋಚಿಸುವೆನು. ಆ ಕಾರ್ಯ ನೆರವೇರಿದರೆ ಅದು ನಮ್ಮ ಪಣ್ಯಕಾರ್ಯದ ಫಲವು ಎಂದನು ಸುಯೋಧನನು.
ಪಾಂಡವರನ್ನು ಹಸ್ತಿನಾಪುರದಿಂದ ಕಳಿಸಲು ದುರ್ಯೋಧನನು ಧೃತರಾಷ್ಟ್ರನನ್ನು ಒಪ್ಪಿಸುವುದು
ಸಂಪಾದಿಸಿ
- ಎನೆ ಕಳಿಂಗಾದಿಗಳು ತಂತ
- ಮ್ಮನುಮತವ ಹೇಳಿದರು ಕೌರವ
- ಜನಪನವರಿಗೆ ಕೇಡ ನಿಶ್ಚೈಸಿದನು ಮನದೊಳಗೆ |
- ಜನಕನಲ್ಲಿಗೆ ನಡುವಿರುಳು ಬಂ
- ದನು ನಯದೊಳೀ ಮಾತ ತೆಗೆದೆಂ
- ದನು ವೃಕೋದರ ನೂಳಿಗವನರ್ಜುನನ ಸಾಹಸವ || (೫೬)
- ಪದವಿಭಾಗ-ಅರ್ಥ: ಎನೆ ಕಳಿಂಗಾದಿಗಳು ತಂತಮ್ಮ+ ಅನುಮತವ ಹೇಳಿದರು= ದುರ್ಯೋಧನನು ಹೀಗೆ ಹೇಳಿದಾಗ ಶಕುನಿ ಮತ್ತು ಇತರರು ತಮ್ಮ ಒಪ್ಪಿಗೆ ಸೂಚಿಸಿದರು. ಕೌರವಜನಪನು+ ಅವರಿಗೆ ಕೇಡ ನಿಶ್ಚೈಸಿದನು ಮನದೊಳಗೆ= ದುರ್ಯೋಧನನು ಪಾಂಡವರನ್ನು ಅಗ್ನಿಯಿಂದ ನಾಶ ಮಾಡಲು ನಿಶ್ಚಯಿಸಿದನು. ಜನಕನಲ್ಲಿಗೆ ನಡುವಿರುಳು ಬಂದನು= ಅರ್ಧರಾತ್ರಿಯಲ್ಲಿಯೇ ತಂದೆಯ ಬಳಿಗೆ ಬಂದನು. ನಯದೊಳೀ ಮಾತ ತೆಗೆದು+ ಎಂದನು->, ವೃಕೋದರನ (ಲ್ಲಿ)+ ಊಳಿಗವನು (ತಾನು ಸೇವೆ ಮಾಡಬೇಕಾದುದನ್ನು - ಅವನ ಯಜಮಾನಿಕೆಯ ಕಾಟವನ್ನು)+ ಅರ್ಜುನನ ಸಾಹಸವ= ನಯವಾಗಿ ತಂದೆಯ ಹತ್ತಿರ ಮಾತನ್ನು ಆರಂಭಿಸಿ, ಭೀಮನ ಯಜಮಾನಿಕೆಯ ಕಾಟವನ್ನೂ, ತಾನು ಅವನ ಸೇವೆ ಮಾಡಬೇಕಾದುದನ್ನೂ, ಅರ್ಜುನನ ಎದುರಿಸಲಾಗದ ಶೌರ್ಯವನ್ನೂ ಹೇಳಿದನು.
- ಅರ್ಥ: ದುರ್ಯೋಧನನು ಹೀಗೆ ಹೇಳಿದಾಗ ಶಕುನಿ ಮತ್ತು ಇತರರು ತಮ್ಮ ಒಪ್ಪಿಗೆ ಸೂಚಿಸಿದರು. ದುರ್ಯೋಧನನು ಪಾಂಡವರನ್ನು ಅಗ್ನಿಯಿಂದ ನಾಶ ಮಾಡಲು ನಿಶ್ಚಯಿಸಿದನು. ಅರ್ಧರಾತ್ರಿಯಲ್ಲಿಯೇ ತಂದೆ ಧೃತರಾಷ್ಟ್ರನ ಬಳಿಗೆ ಬಂದನು. ನಯವಾಗಿ ತಂದೆಯ ಹತ್ತಿರ ಮಾತನ್ನು ಆರಂಭಿಸಿ, ಭೀಮನ ಯಜಮಾನಿಕೆಯ ಕಾಟವನ್ನೂ, ತಾನು ಅವನ ಸೇವೆ ಮಾಡಬೇಕಾದುದನ್ನೂ, ಅರ್ಜುನನ ಎದುರಿಸಲಾಗದ ಶೌರ್ಯವನ್ನೂ ಹೇಳಿದನು.
- ಅರಿಗಳುದ್ಭವವಿನ್ನು ಗಂಟಲ
- ನರಿವುದೆಮ್ಮನು ನೂರು ಮಕ್ಕಳ
- ನರಸ ಬರಿದೇ ಹಡೆದು ಕೆಡಿಸಿದೆ ತಾಯ ಜವ್ವನವ |
- ಇರಲಿ ಭೀಮಾರ್ಜುನರು ಹಸ್ತಿನ
- ಪುರದೊಳಮ್ಮಿನಿಬರನು ದೇಶಾಂ
- ತರೆಕೆ ನೇಮಿಸು ಜೀಯ ನೂಕದು ಭೀಮನೊಡನೆಂದ || (೫೭)
- ಪದವಿಭಾಗ-ಅರ್ಥ:ಅರಿಗಳ+ ಉದ್ಭವವು (ಉದ್ಭವ= ಏಳಿಗೆ, ಅಭಿವೃದ್ಧಿ,- ಏಳಿಗೆಯಾಗಲಿ)+ ಇನ್ನು ಗಂಟಲನು+ ಅರಿವುದು+ ಎಮ್ಮನು= ನನಗೆ ಶತ್ರುಗಳಾದ ಪಾಂಡವರು ಏಳಿಗೆಯಾಗಲಿ; ನಮ್ಮ ಗಂಟಲನ್ನು- ಗಂಟಲ ಶೊಷಣೆಯನ್ನು ಗೋಳನ್ನು ಅರಿವುದು= ತಿಳಿಯಿರಿ; ನೂರು ಮಕ್ಕಳನು+ ಅರಸ ಬರಿದೇ ಹಡೆದು ಕೆಡಿಸಿದೆ ತಾಯ ಜವ್ವನವ= ತಂದೆಯೇ ನಾವಿದ್ದು ಏನು ಪ್ರಯೋಜನ ನೀನು ನಮ್ಮನ್ನು ಹಡೆದು ನಮ್ಮ ತಾಯಿಯ ಯವ್ವನ ಹಾಳಾಯಿತು. (ಪ್ರಸೂನಾಂತಿ ಯವ್ವನಂ - ಗಾದೆ) ಇರಲಿ, ಆದದ್ದಾಯಿತು, ಭೀಮಾರ್ಜುನರು ಹಸ್ತಿನಪುರದೊಳು ಅಮ್ಮು (ಅಮ್ಮ- ಅಮ್ಮು -ಪ್ರೀತಿಮಾಡು ವಾಡಿಕೆ ಪದ; =ಸಾಮರ್ಥ್ಯ; ಸಾಧ್ಯ- ಮಾಡಲಮ್ಮೆವು)+ ಇನಿಬರನು ದೇಶಾಂತರೆಕೆ ನೇಮಿಸು ಜೀಯ= ಭೀಮಾರ್ಜುನರು ಹಸ್ತಿನಾಪುರದಲ್ಲಿ ಇರಲು ಸಮರ್ಥರು, ಅವರನ್ನೇ ಇಟ್ಟುಕೋ ಅವರೇ ಆಳಲಿ, ನೂಕದು ಭೀಮನೊಡನೆ+ ಎಂದ= ಭೀಮನ ಜೊತೆ ಬದುಕು ನೂಕಲು ಸಾದ್ಯವಿಲ್ಲ ಎಂದ.
- ಅರ್ಥ: ನನಗೆ ಶತ್ರುಗಳಾದ ಪಾಂಡವರು- ಏಳಿಗೆಯಾಗಲಿ; ನಮ್ಮ ಗಂಟಲನ್ನು- ಗಂಟಲ ಶೊಷಣೆಯನ್ನು ಗೋಳನ್ನು ತಿಳಿಯಿರಿ; ತಂದೆಯೇ ನಾವಿದ್ದು ಏನು ಪ್ರಯೋಜನ ನೀನು ನಮ್ಮನ್ನು ಹಡೆದು ನಮ್ಮ ತಾಯಿಯ ಯವ್ವನ ಹಾಳಾಯಿತು, ಅಷ್ಟೇ! ಇರಲಿ, ಆದದ್ದಾಯಿತು, ಭೀಮಾರ್ಜುನರು ಹಸ್ತಿನಾಪುರದಲ್ಲಿ ಇರಲು ಸಮರ್ಥರು, ಅವರನ್ನೇ ಇಟ್ಟುಕೋ ಅವರೇ ಆಳಲಿ, ಭೀಮನ ಜೊತೆ ಬದುಕು ನೂಕಲು ಸಾದ್ಯವಿಲ್ಲ ಎಂದ.
- ಅಕಟ ಮಗನೇ ಧರ್ಮಸುತ ಬಾ
- ಧಕನೆ ಭೀಮಾರ್ಜುನರ ಮತಿ ಕಂ
- ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ ||
- ಸಕಲ ರಾಜ್ಯಕೆ ಪಾಂಡುವೇ ಪಾ
- ಲಕನು ತನ್ನೊಳು ತಪ್ಪಿದನೆ ಬಿಡು
- ವಿಕಳ ಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ || (೫೮) ||
- ಪದವಿಭಾಗ-ಅರ್ಥ: ಅಕಟ ಮಗನೇ ಧರ್ಮಸುತ ಬಾಧಕನೆ= ಅಕಟ ಮಗನೇ ಧರ್ಮರಾಯ ಬಾಧಕನಾಗುವನೇ?; ಭೀಮಾರ್ಜುನರ ಮತಿ= ಬುದ್ಧಿ, ಕಂಟಕದೊಳು+ ಎರಗದು= ಹೋಗದು, ಮೀರಿ ನಡೆಯರು- ಅಣ್ನನ ಮಾತನ್ನು- ಮೀರಿ ನಡೆಯರು ಧರ್ಮನಂದನನ= ಭೀಮಾರ್ಜುನರ ಬುದ್ಧಿಯು ಕಡುಕಿನ ಕಡೆ ಹೋಗುವುದಿಲ್ಲ; ಮೇಲಾಗಿ ಅವರು ಅಣ್ನ ಧರ್ಮರಾಜನ ಮಾತನ್ನು ಮೀರಿ ನಡೆಯುವುದಿಲ್ಲ. ಸಕಲ ರಾಜ್ಯಕೆ ಪಾಂಡುವೇ ಪಾಲಕನು= ಈ ಸಕಲ ರಾಜ್ಯಕ್ಕು ಪಾಂಡುವೇ ಅಭಿಷಕ್ತ ರಾಜನಾಗಿದ್ದನು; ಆದರೂ ತನ್ನೊಳು ತಪ್ಪಿದನೆ= ಆದರೂ ನನಗೆ ಗೌರವ ಕೊಟ್ಟಿದ್ದನು, ಎಂದೂ ನನಗೆ ತಪ್ಪಿ ನೆಡೆಯಲಿಲ್ಲ. ಬಿಡುವಿಕಳ ಮತಿಗಳ ಮಾತನು+ ಎಂದನು ಮಗಗೆ ಧೃತರಾಷ್ಟ್ರ= ದುರ್ಬುದ್ಧಿಗಲ ಮಾತನ್ನು ಕೇಳಬೇಡ, ಅದನ್ನು ಬಿಡು ಎಂದನು ಮಗನಿಗೆ ಧೃತರಾಷ್ಟ್ರ.
- ಅರ್ಥ: ಅಕಟ ಮಗನೇ ಧರ್ಮರಾಯ ಬಾಧಕನಾಗುವನೇ?; ಭೀಮಾರ್ಜುನರ ಬುದ್ಧಿಯು ಕಡುಕಿನ ಕಡೆ ಹೋಗುವುದಿಲ್ಲ; ಮೇಲಾಗಿ ಅವರು ತಮ್ಮ ಅಣ್ನ ಧರ್ಮರಾಜನ ಮಾತನ್ನು ಮೀರಿ ನಡೆಯುವುದಿಲ್ಲ. ಈ ಸಕಲ ರಾಜ್ಯಕ್ಕೂ ಪಾಂಡುವೇ ಅಭಿಷಕ್ತ ರಾಜನಾಗಿದ್ದನು; ಆದರೂ ನನಗೆ ಗೌರವ ಕೊಟ್ಟಿದ್ದನು, ಎಂದೂ ನನಗೆ ತಪ್ಪಿ ನೆಡೆಯಲಿಲ್ಲ. ದುರ್ಬುದ್ಧಿಗಲ ಮಾತನ್ನು ಕೇಳಬೇಡ, ಅದನ್ನು ಬಿಡು ಎಂದನು ಮಗನಿಗೆ ಧೃತರಾಷ್ಟ್ರ.
- ಬೊಪ್ಪ ಬಿನ್ನಹವವರ ಜನಕನು
- ತಪ್ಪಿ ನಡೆಯನು ನಿಮಗೆ ನೀವಿ
- ನ್ನೊಪ್ಪಿಸುವುದಾ ಪಾಂಡುಸುತರಿಗೆ ರಾಜ್ಯ ವೈಭವವ |
- ಅಪ್ಪುದಿಳೆ ಧರ್ಮಜನ ತರುವಾ
- ಯಪ್ಪುದಾ ವಿಧಿಯಲ್ಲಿ ಸಂತತಿ
- ತಪ್ಪದವರಿಗೆ ಸಲಲಿ ನೆಲವಿದು ಹೊಲ್ಲೆಹೇನೆಂದ || (೫೯)
- ಪದವಿಭಾಗ-ಅರ್ಥ: ಬೊಪ್ಪ ಬಿನ್ನಹವು+ ಅವರ ಜನಕನು ತಪ್ಪಿ ನಡೆಯನು ನಿಮಗೆ= ದುರ್ಯೋಧನನು,'ತಂದೆಯೇ ಪಾಂಡವರ ತಂದೆಯು ನಿಮಗೆ ತಪ್ಪಿ ನೆಡೆಯಲಿಲ್ಲ; ನೀವು+ ಇನ್ನು+ ಒಪ್ಪಿಸುವುದು+ ಆ ಪಾಂಡುಸುತರಿಗೆ ರಾಜ್ಯ ವೈಭವವ= ಆದ್ದರಿಂದ ನೀವು ರಾಜ್ಯವನ್ನು ಪಾಂಡುವಿನ ಮಕ್ಕಳಿಗೇ ಕೊಟ್ಟುಬಿಡಿ. ಅಪ್ಪುದು(ಆಗುವುದು) + ಇಳೆ (ಭೂಮಿ ರಾಜ್ಯ) ಧರ್ಮಜನ ತರುವಾಯ+ ಅಪ್ಪುದು+ ಆ ವಿಧಿಯಲ್ಲಿ= ಕ್ರಮದಲ್ಲಿ,= ಧರ್ಮಜನ ತರುವಾಯ ಈ ರಾಜ್ಯವು ಅವನ ಮಕ್ಕಳಿಗೆ ಹೋಗುವುದು ತಪ್ಪುವುದಿಲ್ಲ. ಸಂತತಿ ತಪ್ಪದು (ಅವರ ಸಂತತಿಗೆ ರಾಜ್ಯ ತಪ್ಪದು)+ ಅವರಿಗೆ ಸಲಲಿ (ಸೇರಲಿ)= ನಂತ್ರ ಧರ್ಮರಾಯನ ತರುವಾಯ ಅವರ ಮಕ್ಕಳಿಂದ ಅವರ ಸಂತತಿಗೆ ಈ ರಾಜ್ಯ ಹೋಗುವುದು,-> ನೆಲವು+ ಇದು(ಈ ರಾಜ್ಯ); ಹೊಲ್ಲೆಹ+ ಏನು+ ಎಂದ= ಕೇಡೇನು- ತಪ್ಪೇನು ಎಂದ ದುರ್ಯೋಧನ.
- ಅರ್ಥ:ದುರ್ಯೋಧನನು,'ಅಪ್ಪಾ, ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ ಪಾಂಡವರ ತಂದೆಯು ನಿಮಗೆ ತಪ್ಪಿ ನೆಡೆಯಲಿಲ್ಲ; ಆದ್ದರಿಂದ ನೀವು ರಾಜ್ಯವನ್ನು ಪಾಂಡುವಿನ ಮಕ್ಕಳಿಗೇ ಕೊಟ್ಟುಬಿಡಿ. ಧರ್ಮಜನ ತರುವಾಯ ಕ್ರಮಾನುಸಾರ ಈ ರಾಜ್ಯವು ಅವನ ಮಕ್ಕಳಿಗೆ ಹೋಗುವುದು ತಪ್ಪುವುದಿಲ್ಲ. ನಂತರ ಧರ್ಮರಾಯನ ತರುವಾಯ ಈ ಕ್ರಮಾನುಸಾರ ಅವರ ಮಕ್ಕಳಿಂದ ಅವರ ಸಂತತಿಗೆ ಈ ರಾಜ್ಯ ಹೋಗುವುದು. ಇದರಲ್ಲಿ ಕೇಡೇನು- ತಪ್ಪೇನು ಎಂದ ದುರ್ಯೋಧನ.
- ಜನಪ ಸುಖದಲಿ ನಿಮ್ಮ ತಮ್ಮನ
- ತನುಜರೊಡನೆಯು ರಾಜ್ಯ ಮಾಡುವು
- ದನುನಯವಲಾ ಬೀಳುಕೊಡುವುದು ನಮ್ಮ ನೂರ್ವರನು ||
- ಜನಪರುಂಟೋಲೈಸಿ ಕೊಂಬರೆ
- ತನಗಿರದೆ ಖಂಡೆಯದ ಸಿರಿ ಕರೆ
- ಜನನಿಯನು ಬೀಳ್ಕೊಂಬೆವಿನ್ನೇನೆಂದು ನಿಂದಿರ್ದ || (೬೦) ||
- ಪದವಿಭಾಗ-ಅರ್ಥ: ಜನಪ ಸುಖದಲಿ ನಿಮ್ಮ ತಮ್ಮನ ತನುಜರೊಡನೆಯು ರಾಜ್ಯ ಮಾಡುವುದು+ ಅನುನಯವಲಾ= ದೊರೆಯೇ! ನಿಮ್ಮ ತಮ್ಮನ ಮಕ್ಕಳೊಡನೆ ರಾಜ್ಯವನ್ನು ಆಳುವುದರಲ್ಲಿ ನಿಮಗೆ ಪ್ರೀತಿಯಲ್ಲವೇ! ಬೀಳುಕೊಡುವುದು ನಮ್ಮ ನೂರ್ವರನು= ನಾವು ನೂರು ಮಕ್ಕಳೂ ರಾಜ್ಯ ಬಿಟ್ಟು ಹೋಗುತ್ತೇವೆ; ನಮ್ಮನ್ನು ಬೀಳ್ಕೊಡಿ; ಜನಪರುಂಟು (ರಾಜರು ಇದ್ದಾರೆ)+ ಓಲೈಸಿ ಕೊಂಬರೆ= ನನಗೆ ಓಲೇಸುವ, ಸಹಕಾರ ಕೊಡುವ ರಾಜರು ಇದ್ದಾರೆ; ತನಗೆ+ ಇರದೆ ಖಂಡೆಯದ(ಖಡ್ಗದ) ಸಿರಿ= ನನಗೆ ಖಡ್ಗದ ಸಂಪತ್ತು ಇದೆ. ಕರೆ ಜನನಿಯನು ಬೀಳ್ಕೊಂಬೆವು+ ಇನ್ನೇನೆಂದು ನಿಂದಿರ್ದ= ತಾಯಿಯನ್ನು ಕರೆ, ನಿಮಗೆ ನಮಿಸಿ ನಾವು ಬೀಳ್ಕೊಂಡು ಹೊರಟು ಹೋಗುತ್ತೇವೆ, ಎಂದು ಹೇಳಿ ನಿಂತುಕೊಂಡನು ದುರ್ಯೋಧನ.
- ಅರ್ಥ: ದೊರೆಯೇ! ನಿಮ್ಮ ತಮ್ಮನ ಮಕ್ಕಳೊಡನೆ ರಾಜ್ಯವನ್ನು ಆಳುವುದರಲ್ಲಿ ನಿಮಗೆ ಪ್ರೀತಿಯಲ್ಲವೇ! ನಾವು ನೂರು ಮಕ್ಕಳೂ ರಾಜ್ಯ ಬಿಟ್ಟು ಹೋಗುತ್ತೇವೆ; ನಮ್ಮನ್ನು ಬೀಳ್ಕೊಡಿ; ನನಗೆ ಓಲೇಸುವ, ಸಹಕಾರ ಕೊಡುವ ರಾಜರು ಇದ್ದಾರೆ; ನನಗೆ ಖಡ್ಗದ ಸಂಪತ್ತು ಇದೆ. ತಾಯಿಯನ್ನು ಕರೆಯಿರಿ, ನಿಮಗೆ ನಮಿಸಿ ನಾವು ಬೀಳ್ಕೊಂಡು ಹೊರಟು ಹೋಗುತ್ತೇವೆ, ಎಂದು ಹೇಳಿ ನಿಂತುಕೊಂಡನು ದುರ್ಯೋಧನ.
- ಎಲೆಮಗನೆ ಎನ್ನಾಣೆ ಬಾ ಕುರು
- ಕುಲತಿಲಕ ನೀಹೋಗಲೆನ್ನೊಡ
- ಲುಳಿವುದೇ ಮರಿಯಾನೆ ಬಾರೈ ಕಂದ ಬಾಯೆಂದು |
- ಸೆಳೆದು ಬಿಗಿಯಪ್ಪಿದನುಕಂಬನಿ
- ದುಳುಕಿದನು ಹೇಳಿನ್ನು ಮೇಲಣ
- ಬಳಕೆಯನು ರಿಪುರಾಜ ಕಾರ್ಯಕೆ ಬುದ್ಧಿಯೇನೆಂದ || ೬೧ ||
- ಪದವಿಭಾಗ-ಅರ್ಥ: ಎಲೆಮಗನೆ ಎನ್ನಾಣೆ ಬಾ ಕುರುಕುಲತಿಲಕ ನೀ ಹೋಗಲು+ ಎನ್ನೊಡಲು+ ಉಳಿವುದೇ, ಮರಿಯಾನೆ ಬಾರೈ ಕಂದ ಬಾಯೆಂದು, ಸೆಳೆದು ಬಿಗಿಯಪ್ಪಿದನು ಕಂಬನಿದುಳುಕಿದನು ಹೇಳಿನ್ನು ಮೇಲಣ ಬಳಕೆಯನು= ಬಳಸುವ ಉಪಾಯವನ್ನು, ರಿಪುರಾಜ ಕಾರ್ಯಕೆ= ಶತ್ರುರಾಜರ ನಿವಾರಣೆಯ ಕಾರ್ಯಕ್ಕೆ, ಬುದ್ಧಿಯೇನೆಂದ= ನೀನು ಮಾಡಿದ ಬುದ್ಧಿವಂತಿಕೆಯ ಉಪಾಯವು ಏನು ಎಂದ.
- ಎಲೆಮಗನೆ ಎನ್ನಾಣೆ, ಹೊಗಬೇಡ! ಬಾ ಕುರುಕುಲತಿಲಕ ನೀ ಹೋಗಲು+ ಎನ್ನೊಡಲು+ ಉಳಿವುದೇ= ನೀನು ನನ್ನನು ಬಿಟ್ಟು ಹೋದರೆ ನನ್ನ ಈ ದೇಹ ಉಳಿಯುವುದೇ? ನಾನು ಬದುಕಿರುವುದಿಲ್ಲ, ಮರಿಯಾನೆ (ಮರಿಯಾನೆಯಂತಿರುವ ಮುದ್ದು ಮಗನೇ), ಬಾರೈ ಕಂದ ಬಾಯೆಂದು, ಸೆಳೆದು ಬಿಗಿಯಪ್ಪಿದನು= ಮಗನನ್ನು ಎಳೆದುಕೊಂಡು ಬಿಗಿಯಾಗಿ ಅಪ್ಪಿಕೊಂಡು ಸಮಾಧಾನ ಪಡಿಸಿದನು. ಕಂಬನಿದುಳುಕಿದನು= ದುರ್ಯೋಧನನು ಬಿಟ್ಟು ಹೋಗುವೆನೆಂದುಕ್ಕೆ ದೃತರಾಷ್ಟ್ರನ ಕಣ್ಣಲ್ಲಿ ನೀರು ತುಂಬಿತು, ಹೇಳಿನ್ನು ಮೇಲಣ ಬಳಕೆಯನು= ಹೇಳು ಇನ್ನ ಮುಂದೆ ಬಳಸುವ ಉಪಾಯವನ್ನು, ರಿಪುರಾಜ ಕಾರ್ಯಕೆ= ಶತ್ರುರಾಜರ ನಿವಾರಣೆಯ ಕಾರ್ಯಕ್ಕೆ, ಬುದ್ಧಿಯೇನೆಂದ= ನೀನು ಮಾಡಿದ ಬುದ್ಧಿವಂತಿಕೆಯ ಉಪಾಯವು ಏನು ಎಂದ.
- ಅರ್ಥ: ಎಲೆಮಗನೆ ಎನ್ನಾಣೆ, ಹೊಗಬೇಡ! ಬಾ ಕುರುಕುಲತಿಲಕ ನೀನು ನನ್ನನು ಬಿಟ್ಟು ಹೋದರೆ ನಾನು ಬದುಕಿರುವುದಿಲ್ಲ. ಮರಿಯಾನೆಯಂತಿರುವ ಮುದ್ದು ಮಗನೇ, ಬಾರೈಯ್ಯಾ ಹತ್ತಿರ ಬಾ ಕಂದ ಬಾಯೆಂದು, ಮಗನನ್ನು ಎಳೆದುಕೊಂಡು ಬಿಗಿಯಾಗಿ ಅಪ್ಪಿಕೊಂಡು ಸಮಾಧಾನ ಪಡಿಸಿದನು. ದುರ್ಯೋಧನನು ಬಿಟ್ಟು ಹೋಗುವೆನೆಂದುಕ್ಕೆ ದೃತರಾಷ್ಟ್ರನ ಕಣ್ಣಲ್ಲಿ ನೀರು ತುಂಬಿತು, ಶತ್ರುರಾಜರ ನಿವಾರಣೆಯ ಕಾರ್ಯಕ್ಕೆ, ಇನ್ನ ಮುಂದೆ ಬಳಸುವ ಉಪಾಯವನ್ನು ಹೇಳು ಎಂದನು. ನೀನು ಮಾಡಿದ ಬುದ್ಧಿವಂತಿಕೆಯ ಉಪಾಯವು ಏನು ಎಂದ.
- ನೀರ ವಿಷವಿಕ್ಕಿದೆವುಕಿಚ್ಚಿನ
- ಭಾರವಣೆಯೇನಹುದೊ ಪುಣ್ಯವ
- ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು ||
- ಓರಣಿಸಿತೈವೈರಿಗಳ ವಿ
- ಸ್ತಾರ ಮೆರೆಯಲಿ ಜೀಯ ಜೂಜಿನ
- ಬಾರುಗುತ್ತಿದು ನಿಮ್ಮ ಚಿತ್ತಕೆ ಬಹಡೆ ಮಾಡುವೆವು ||೬೨||
- ಪದವಿಭಾಗ-ಅರ್ಥ: ನೀರ ವಿಷವಿಕ್ಕಿದೆವು= ಅಪ್ಪಾ ಭೀಮನನ್ನು ಕಟ್ಟಿ ನೀರಿನಲ್ಲಿ ಹಾಕಿದೆವು, ಊಟದಲ್ಲಿ ವಿಷ ಹಾಕಿದೆವು, ಪ್ರಯೋಜನವಾಗಲಿಲ್ಲ. ಕಿಚ್ಚಿನ ಭಾರವಣೆ- ಯೇನಹುದೊ= (ಭಾರವಣೆ= ದೊಡ್ಡದು ಹೆಚ್ಚಿನದು) ಈಗ ಅವರನ್ನು ಬೆಂಕಿಯಲ್ಲಿ ಸುಡುವ ಯೋಜನೆ ಹಾಕಿದ್ದೇನೆ; ಆ ಯೋಜನೆ ಏನಾಗುವುದೊ; ಪುಣ್ಯವಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು= ನಮ್ಮ ಪುಣ್ಯವನ್ನೇ ಹೋರಾಡಲು ಬಿಡುತ್ತೇನೆ; ಪುಣ್ಯದ ಫಲ ಒದಗಿದರೆ ನಮ್ಮ ಶತ್ರುಗಳು ನಾಶವಾಗಿ ಹೋಗಲಿ. ಓರಣಿಸಿತೈ= ಓರಣವಾಗಿ ಯೋಜಿಸಿದ್ದು ವಿಫಲವಾದರೆ, ವೈರಿಗಳ ವಿಸ್ತಾರ ಮೆರೆಯಲಿ= ವೈರಿಗಳೇ ಹೆಚ್ಚಿನದಾಗಿ ಮೆರೆಯಲಿ. ಜೀಯ ಜೂಜಿನ ಬಾರುಗುತ್ತಿದು ನಿಮ್ಮ ಚಿತ್ತಕೆ=ಮನಸ್ಸಿಗೆ, ಬಹಡೆ= ಬಂದರೆ, ಒಪ್ಪಿದರೆ, ಮಾಡುವೆವು= ಜೀಯ ಇದು ಬಾರುಕೋಲಿನ ಹೊಡೆತದ ಜೂಜು (ಒಮ್ಮೊಮ್ಮೆ ತಪ್ಪಿದರೆ ಬಾರುಕೋಲಿನ ತುದಿಯ ಬಾರು ಬಳುಕಿ ಸುರುಳಿಯಾಗಿ ಬೀಸಿದವನಿಗೇ ಹೊಡೆಯುವುದು); ನಿಮ್ಮ ಮನಸ್ಸಿಗೆ ಬಂದರೆ ಮಾಡುತ್ತೇವೆ ಎಂದನು ದುರ್ಯೋಧನ.
- ಅರ್ಥ: ಅಪ್ಪಾ ಭೀಮನನ್ನು ಕಟ್ಟಿ ನೀರಿನಲ್ಲಿ ಹಾಕಿದೆವು, ಊಟದಲ್ಲಿ ವಿಷ ಹಾಕಿದೆವು, ಪ್ರಯೋಜನವಾಗಲಿಲ್ಲ. ಈಗ ಅವರನ್ನು ಬೆಂಕಿಯಲ್ಲಿ ಸುಡುವ ಯೋಜನೆ ಹಾಕಿದ್ದೇನೆ; ಆ ಯೋಜನೆ ಏನಾಗುವುದೊ; ನಮ್ಮ ಪುಣ್ಯವನ್ನೇ ಹೋರಾಡಲು ಬಿಡುತ್ತೇನೆ; ಪುಣ್ಯದ ಫಲ ಒದಗಿದರೆ ನಮ್ಮ ಶತ್ರುಗಳು ನಾಶವಾಗಿ ಹೋಗಲಿ. ಓರಣವಾಗಿ ಯೋಜಿಸಿದ್ದು ವಿಫಲವಾದರೆ, ವೈರಿಗಳೇ ಹೆಚ್ಚಿನದಾಗಿ ವಿಸ್ತಾರವಾಗಿ ಮೆರೆಯಲಿ. ಜೀಯ ಇದು ಬಾರುಕೋಲಿನ ಹೊಡೆತದ ಜೂಜು. ನಿಮ್ಮ ಮನಸ್ಸಿಗೆ ಬಂದರೆ ಮಾಡುತ್ತೇವೆ ಎಂದನು ದುರ್ಯೋಧನ.
- ಆವ ತೆರದಲಿ ವೈರಿಭಟಕುಲ
- ದಾವಿಗೆಯನಿಡಿಸುವಿರಿ ನಿಮ್ಮೊಳ
- ಗಾವು ಹೊರಗೇ ಮಗನೆ ಸೊಗಸೆನೆ ನಿಮ್ಮವೈಭವಕೆ ||
- ಸಾವರಾವಂದದಲಿ ಮಿಗೆ ಸಂ
- ಭಾವಿಸುವುದಾ ತೆರನ ನೀ ಹೇ
- ಳಾವು ಸೊಗಸುವೆವೆಂದುನುಡಿದನು ಮಗಗೆ ಧೃತರಾಷ್ಟ್ರ ||೬೩ ||
- ಪದವಿಭಾಗ-ಅರ್ಥ: ಆವ ತೆರದಲಿ ವೈರಿಭಟಕುಲದ+ ಆವಿಗೆಯನು(ಸುಡಲು ಕಮ್ಮಾರರು ಉಪಯೋಗಿಸುವ ಕುಲಮೆಯ ಗೂಡು)+ ಇಡಿಸುವಿರಿ= ಯಾವ ರೀತಿಯಲ್ಲಿ ಶತ್ರುಗಳ ಕುಲವನ್ನು ಸುಡಲು ಕುಲಮೆಯ ಗೂಡನ್ನು ಎರ್ಪಡಿಸುವಿರಿ, ಹೇಳು. ನಿಮ್ಮೊಳಗೆ+ ಆವು=ನಾವು, ಹೊರಗೇ ಮಗನೆ= ಮಗನೇ ನಾವು ಹೊರಗಿನವರೇ ನಿಮ್ಮಳಗೇ ಸೇರಿದವನು ನಾನು. ಸೊಗಸೆನೆ (ಸಂತೋಷಪಡದಿರುವೆನೇ) ನಿಮ್ಮ ವೈಭವಕೆ= ನಿಮ್ಮ ವೈಭವವನ್ನು ನೋಡಿ ಸಂತೋಷಪಡದಿರುವೆನೇ? ; ಸಾವರು+ ಆವಂದದಲಿ=ಅವರು ಯಾವರೀತಿಯಲ್ಲಿ ಸಾಯುವರು?; ಮಿಗೆ ಸಂಭಾವಿಸುವುದು+ ಆ ತೆರನ ನೀ ಹೇಳು+ ಆವು (ನಾವು- ನಾನು) ಸೊಗಸುವೆವು+ ಎಂದು= ಮತ್ತೆ ಅದು ಹೇಗೆ ಸಂಭವಿಸುವುದು ಅದರ ಬಗೆಯನ್ನು ನೀನು ಹೇಳು, ನಾವು ಸಂತೋಷಪಡುವೆವು, ಎಂದು, ನುಡಿದನು ಮಗಗೆ ಧೃತರಾಷ್ಟ್ರ.
- ಅರ್ಥ: ಯಾವ ರೀತಿಯಲ್ಲಿ ಶತ್ರುಗಳ ಕುಲವನ್ನು ಸುಡಲು ಕುಲಮೆಯ ಗೂಡನ್ನು ಎರ್ಪಡಿಸುವಿರಿ, ಹೇಳು. ಮಗನೇ ನಾವು ಹೊರಗಿನವರೇ ನಿಮ್ಮಳಗೇ ಸೇರಿದವರು ನಾವು (ನಾನು). ನಿಮ್ಮ ವೈಭವವನ್ನು ನೋಡಿ ಸಂತೋಷಪಡದಿರುವೆನೇ? ಅವರು ಯಾವರೀತಿಯಲ್ಲಿ ಸಾಯುವರು? ಮತ್ತೆ ಅದು ಹೇಗೆ ಸಂಭವಿಸುವುದು ಅದರ ಬಗೆಯನ್ನು ನೀನು ಹೇಳು, ನಾವು ಸಂತೋಷಪಡುವೆವು, ಎಂದು ನುಡಿದನು ಮಗನಿಗೆ ಧೃತರಾಷ್ಟ್ರ.
- ಕರೆಸಿ ಪಾಂಡು ಕುಮಾರಕರ ನೀ
- ಧರೆಯ ಹಸುಗೆಯ ಮಾಡಿಕೊಡು ಕರಿ
- ತುರುಗ ಭಂಡಾರವನು ಸಹ ದಾಯಾದ ವಿಷಯದಲಿ ||
- ಇರವನವರಿಗೆ ವಾರಣಾವತಿ
- ಪುರದೊಳಗೆ ಪರುಠವಿಸಿ ಕೊಡು ತಾ
- ನುರುಹಿ ಸುಡುವೆನು ಬಳಿಕಲಾಕ್ಷಾಭವನ ರಚನೆಯಲಿ ||೬೪ ||
- ಪದವಿಭಾಗ-ಅರ್ಥ: ಕರೆಸಿ ಪಾಂಡು ಕುಮಾರಕರ ನೀಧರೆಯ ಹಸುಗೆಯ ಮಾಡಿಕೊಡು= ಪಾಂಡು ಕುಮಾರರನ್ನು ಕರೆಸಿ ನೀನು ರಾಜ್ಯವನ್ನು ಹಸುಗೆ- ಹಿಸೆ- ವಿಬಾಗ ಮಾಡಿಕೊಡು. ಕರಿ ತುರುಗ ಭಂಡಾರವನು= ಆನೆ ಕುದುರೆ (ಸೈನ್ಯ) ಮತ್ತು ಧನವನ್ನು ಸಹಿತ, ಸಹ ದಾಯಾದ ವಿಷಯದಲಿ= ಸಹದಾಯಾದಿಗಳಾದ ನಿಯಮದಂತೆ; ಇರವನವರಿಗೆ ವಾರಣಾವತಿ ಪುರದೊಳಗೆ ಪರುಠವಿಸಿ ಕೊಡು= ಅವರಿಗೆ ವಾರಣಾವತಿ ಪುರವನ್ನು ವಾಸಸ್ಥಳವಾಗಿ ಮಾಡಿಕೊಡು. ತಾನು+ ಉರುಹಿ ಸುಡುವೆನು ಬಳಿಕ ಲಾಕ್ಷಾಭವನ ರಚನೆಯಲಿ= ಬಳಿಕ ನಾನು ರಚಿಸಿ- ಕಟ್ಟಿಸಿದ ಲಾಕ್ಷಾಭನದಲ್ಲಿ-ಅರಗಿನ ಮನೆಯಲ್ಲಿ ವಾಸವಿದ್ದಾದಾಗ ಅವರನ್ನು ಅದರಲ್ಲಿ ಉರಿಸಿ ಸುಟ್ಟುಹಾಕುತ್ತೇನೆ ಎಂದನು ದುರ್ಯೋಧನ.
- ಅರ್ಥ: ತಂದೆಯೇ, ಪಾಂಡು ಕುಮಾರರನ್ನು ಕರೆಸಿ ನೀನು ರಾಜ್ಯವನ್ನು, ಆನೆ ಕುದುರೆ (ಸೈನ್ಯ) ಮತ್ತು ಧನವನ್ನು ಸಹ, ಸಹದಾಯಾದಿಗಳಾದ ನಿಯಮದಂತೆ ವಿಬಾಗ ಮಾಡಿಕೊಡು. ಅವರಿಗೆ ವಾರಣಾವತಿ ಪುರವನ್ನು ವಾಸಸ್ಥಳವಾಗಿ ಮಾಡಿಕೊಡು. ಬಳಿಕ ನಾನು ಕಟ್ಟಿಸಿದ ಅರಗಿನ ಮನೆಯಲ್ಲಿ ಅವರು ವಾಸವಿದ್ದಾದಾಗ ಅವರನ್ನು ಅದರಲ್ಲಿ ಉರಿಸಿ ಸುಟ್ಟುಹಾಕುತ್ತೇನೆ ಎಂದನು ದುರ್ಯೋಧನ.
- ಅಹುದು ಮಗನೇ ಮಂತ್ರವಿದು ಮತ
- ವಹುದು ನಮಗೀ ಭೀಷ್ಮ ವಿದುರರು
- ಕುಹಕಿಗಳು ಕೃತಭಿನ್ನವಾದರೆ ಭಾರವದು ಮೇಲೆ ||
- ಗಹನ ಗತಿಯಲಿ ಗೂಢತರ ಸ
- ನ್ನಿಹಿತ ಕರ್ಮ ಕಲಾಪದಲಿ ರಿಪು
- ದಹನ ಸಿದ್ಧಿಯ ನೆನೆವುದೆಂದನುಮಗಗೆ ಧೃತರಾಷ್ಟ್ರ ||೬೫||
- ಪದವಿಭಾಗ-ಅರ್ಥ: ಅಹುದು= ನೀನು ಯೋಚಿಸಿದ್ದು ಸರಿ. ಮಗನೇ ಮಂತ್ರವು+ ಇದು ಮತವು+ ಅಹುದು= ಮಗನೇ ಇದು ಸರಿಯಾದ ತಂತ್ರವು; ನನ್ನ ಒಪ್ಪಿಗೆ ಇದೆ. ನಮಗೆ+ ಈ ಭೀಷ್ಮ ವಿದುರರು ಕುಹಕಿಗಳು= ನಮಗೆ ಈ ಭೀಷ್ಮ ವಿದುರರು ಕುಹಕಿಗಳು= ಕೆಡುಕಿಗಳು; ಕೃತಭಿನ್ನವಾದರೆ= ಕಾರ್ಯ ಕೆಟ್ಟರೆ, ಭಾರವದು= ನಮಗೆ ಪರಿಸ್ಥಿತಿ ಸಹಿಸಲಾರದ ಭಾರವಾಗುವುದು ಮೇಲೆ ಗಹನ= ತೀವ್ರವಾದ, ಸಹಿಸಲಾಗದ, ಗತಿಯಲಿ= ರೀತಿಯಲ್ಲಿ; ಗೂಢತರ= ರಹಸ್ಯವಾದ ಸನ್ನಿಹಿತ ಕರ್ಮ= ಈಗ ಮಾಡಬೇಕಾದ, ಕಲಾಪದಲಿ= ಕೆಲಸದಲ್ಲಿ= ಈಗ ಮಾಡಬೇಕಾದ ರಹಸ್ಯ ಕೆಲಸದಲ್ಲಿ ರಿಪು ದಹನ ಸಿದ್ಧಿಯ ನೆನೆವುದು+ ಎಂದನು= ಶತ್ರುಗಳನ್ನು ಸುಡುವ ಕಾರ್ಯವನ್ನು ತಪ್ಪದೆ ಸಾಧಿಸುವ ಬಗೆಯನ್ನು ನೆನೆ- ಯೋಚಿಸು ಎಂದನು, ಮಗಗೆ ಧೃತರಾಷ್ಟ್ರ= ಮಗನಿಗೆ ಧೃತರಾಷ್ಟ್ರ.
- ಅರ್ಥ: ನೀನು ಯೋಚಿಸಿದ್ದು ಸರಿಯಾಗಿಯೇ ಇದೆ. ಮಗನೇ ಇದು ಸರಿಯಾದ ತಂತ್ರವು; ನನ್ನ ಒಪ್ಪಿಗೆ ಇದೆ. ನಮಗೆ ಈ ಭೀಷ್ಮ ವಿದುರರು ಕೆಡುಕಿಗಳು. ಕಾರ್ಯ ಕೆಟ್ಟರೆ, ನಮಗೆ ತೀವ್ರವಾದ ಸಹಿಸಲಾಗದ ರೀತಿಯ ಪರಿಸ್ಥಿತಿ ಬರುವುದು; ಈಗ ಮಾಡಬೇಕಾದ ರಹಸ್ಯ ಕೆಲಸದಲ್ಲಿ ಶತ್ರುಗಳನ್ನು ಸುಡುವ ಕಾರ್ಯವನ್ನು ತಪ್ಪದೆ ಸಾಧಿಸುವ ಬಗೆಯನ್ನು ಯೋಚಿಸು ಎಂದನು, ಮಗನಿಗೆ ಧೃತರಾಷ್ಟ್ರ.
- ಜನಕನನು ಬೀಳ್ಕೊಂಡುಕೌರವ
- ಜನಪ ತನ್ನರಮನೆಯ ಸಚಿವರೊ
- ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ ||
- ನೆನೆದ ರೌರವ ರಾಜಕಾರ್ಯದ
- ಘನವನರುಹಿ ಸಮಗ್ರ ಧನ ಸಾ
- ದನವ ಜೋಡಿಸಿಕೊಟ್ಟು ಕಳುಹಿದನವನ ಗುಪ್ತದಲಿ ||೬೬ ||
- ಪದವಿಭಾಗ-ಅರ್ಥ: ಜನಕನನು ಬೀಳ್ಕೊಂಡು ಕೌರವ ಜನಪ= ಕೌರವರಾಜನು ತಂದೆಯ ಅನುಮತಿ ಪಡೆದು ಅಲ್ಲಿಂದ ಹೊರಟು, ತನ್ನ+ ಅರಮನೆಯ ಸಚಿವರೊಳು+ ಅನುಪಮಿತ ವಿಶ್ವಾಸ ಸೂಚಕನನು= ತನ್ನಅರಸೊತ್ತಿಗೆಯ ಬಹಳ ನಂಬುಗೆಯ ಸಲಹೆಗಾರ, ಪುರೋಚನನ ನೆನೆದ= ಯೋಚಿಸಿದ ರೌರವ ರಾಜಕಾರ್ಯದ ಘನವನು+ ಅರುಹಿ= ಪುರೋಚನನೆಂಬುವನಿಗೆ ತಾನು ಯೋಚಿಸಿದ ಕ್ರೂರವಾದ ರಾಜಕಾರ್ಯದ ಪ್ರಾಮುಖ್ಯತೆಯನ್ನು ಹೇಳಿ, ಸಮಗ್ರ ಧನ ಸಾದನವ ಜೋಡಿಸಿಕೊಟ್ಟು ಕಳುಹಿದನು ಅವನ ಗುಪ್ತದಲಿ= ರಹಸ್ಯವಾಗಿ.
- ಅರ್ಥ:ರಾಜ ಕೌರವನು ತಂದೆಯ ಅನುಮತಿ ಪಡೆದು ಅಲ್ಲಿಂದ ಹೊರಟು, ತನ್ನ ಅರಸೊತ್ತಿಗೆಯಲ್ಲಿ ಬಹಳ ನಂಬುಗೆಯ ಸಲಹೆಗಾರನಾದ ಪುರೋಚನನೆಂಬುವವನಿಗೆ ತಾನು ಯೋಚಿಸಿದ ಕ್ರೂರವಾದ ರಾಜಕಾರ್ಯದ ಪ್ರಾಮುಖ್ಯತೆಯನ್ನು ಹೇಳಿ, ಅಗತ್ಯವಾದ ಸಮಗ್ರ ಧನ ಸಾದನಗಳನ್ನು ಜೋಡಿಸಿಕೊಟ್ಟು ರಹಸ್ಯವಾಗಿ ಅವನನ್ನು ವಾರಣಾವತಕ್ಕೆ ಕಳುಹಿದನು.
- ಆ ಪುರೋಚನನೆಂಬುವನು ಬಲು
- ಪಾಪಕರ್ಮನು ಕುರುಪತಿಗೆ ಬಳಿ
- ಕಾ ಪುರಾಂತರದಿಂದ ಬಂದನು ವಾರಣಾವತಿಗೆ ||
- ಆ ಪುರದ ಜನರರಿಯದಂತಿರೆ
- ಕಾಪುರುಷನಳವಡಿಸಿದನು ನಸು
- ದೀಪ ತಾಗಿದೊಡೆಏಕರೂಪಹ ರಾಜಭವನವನು ||೬೭ ||
- ಪದವಿಭಾಗ-ಅರ್ಥ: ಆ ಪುರೋಚನನೆಂಬುವನು ಬಲುಪಾಪಕರ್ಮನು ಕುರುಪತಿಗೆ= ಕುರುಪತಿಯಾದ ದುರ್ಯೋಧನನಿಗೆ ಆ ಪುರೋಚನನೆಂಬುವನು ಹೆಚ್ಚಿನ ಪಾಪಕರ್ಮಗಳನ್ನು ಮಾಡುವುದಕ್ಕೆ ಸಹಾಯಕನಾಗಿದ್ದನು. ಬಳಿಕ+ ಆ ಪುರ+ ಅಂತರದಿಂದ ಬಂದನು ವಾರಣಾವತಿಗೆ= ಬಳಿಕ ಆ ಹಸ್ತಿನಾವತಿಯ ಹೊರವಲಯದಿಂದ ರಹಸ್ಯವಾಗಿ, ಬಂದನು ವಾರಣಾವತಿಗೆ ಆ ಪುರದ ಜನರರಿಯದಂತಿರೆ= ವಾರಣಾವತಿಯ ಜನರಿಗೂ ತಿಳಿಯದಂತೆ ಅಲ್ಲಿಬಂದು ನೆಲಸಿದನು. ಕಾಪುರುಷನು+ ಅಳವಡಿಸಿದನು ನಸು= ಸ್ವಲ್ಪ, ದೀಪ ತಾಗಿದೊಡೆ ಏಕರೂಪ+ ಅಹ ರಾಜಭವನವನು= ಅವನು ಅಲ್ಲಿ ದೀಪವು ಸ್ವಲ್ಪ ತಾಗಿದರೂ ಒಂದೇ ರೂಪವಾಗುವ - ಎಲ್ಲಾ ಬೂದಿಯಾಗುವ ವಸ್ತುಗಳನ್ನು ಅಳವಡಿಸಿ ಅರಮನೆಯನ್ನು ಕಟ್ಟಿದನು.
- ಅರ್ಥ: ಕುರುಪತಿಯಾದ ದುರ್ಯೋಧನನಿಗೆ ಹೆಚ್ಚಿನ ಪಾಪಕರ್ಮಗಳನ್ನು ಮಾಡುವುದಕ್ಕೆ ಆ ಪುರೋಚನನೆಂಬುವನು ಸಹಾಯಕನಾಗಿದ್ದನು. ಕೌರವನು ಹೇಳಿದ ಬಳಿಕ ಆ ಹಸ್ತಿನಾವತಿಯ ಹೊರವಲಯದಿಂದ ರಹಸ್ಯವಾಗಿ ವಾರಣಾವತಿಗೆ ಬಂದನು. ವಾರಣಾವತಿಯ ಜನರಿಗೂ ತಿಳಿಯದಂತೆ ಅಲ್ಲಿ ಬಂದು ನೆಲಸಿದನು. ಅವನು ಅಲ್ಲಿ ದೀಪವು ಸ್ವಲ್ಪ ತಾಗಿದರೂ ಬೆಂಕಿಹತ್ತಿ ಸುಟ್ಟು ಎಲ್ಲಾ ಬೂದಿಯಾಗುವ ವಸ್ತುಗಳನ್ನು ಅಳವಡಿಸಿ ಅರಮನೆಯನ್ನು ಕಟ್ಟಿದನು.
- ನಿಗಮ ಪರಿಸ್ಥಿತ ವಾಸ್ತು ರಚನಾ
- ದಿನಗಳನಾಯವ್ಯದ ತಾರಾ
- ದಿಗಳ ರಾಶಿಗ್ರಹ ಬಲದ ವಿಪರೀತ ಯೋಗದಲಿ ||
- ಹಗಲು ತೀರಲು ತಳಿತ ಕೈ ದೀ
- ವಿಗೆಯ ಹಂತಿಯ ಬೆಡಗಿನಲಿ ಕೇ
- ಡಿಗನು ಕೃತ್ರಿಮ ರಚನೆಯಲಿ ಮಾಡಿಸಿದನರಮನೆಯ || ೬೮ ||
- ಪದವಿಭಾಗ-ಅರ್ಥ: ನಿಗಮ ಪರಿಸ್ಥಿತ ವಾಸ್ತು ರಚನಾ ದಿನಗಳನು+ ಆಯವ್ಯದ ತಾರಾದಿಗಳ ರಾಶಿಗ್ರಹ ಬಲದ ವಿಪರೀತ ಯೋಗದಲಿ= ವೈದಿಕಸಮ್ಮತ ವಾಸ್ತು ಶಾಸ್ತ್ರದಲ್ಲಿ, ದಿನ, ಆಯ, ವ್ಯಯ,ನಕ್ಷತ್ರ ರಾಶಿ, ಗ್ರಹ, ಇವುಗಳ ವಿಪರೀತ ಬಲದಲ್ಲಿ - ಕೆಡುಕಿನ ಯೋಗಬಲದಲ್ಲಿ, ಹಗಲು ತೀರಲು ತಳಿತ ಕೈ ದೀವಿಗೆಯ ಹಂತಿಯ (ಸಾಲು )ಬೆಡಗಿನಲಿ= ಹಗಲು ಮುಗಿದ ನಂತರ ರಾತ್ರಿಯಲ್ಲಿ, ಸಾಲು ಸಾಲು ಕೈದೀವಿಗೆಯ ಬೆಳಕಿನ ಬೆಡಗಿನಲ್ಲಿ, ಕೇಡಿಗನು ಕೃತ್ರಿಮ ರಚನೆಯಲಿ= ಯೋಜನೆ ಮಾಡಿಸಿದನು+ ಅರಮನೆಯ= ಕಡುಕಿನ ಬುದ್ದಿಯ ಪುರೋಚನನು ಕೃತ್ರಿಮ ಯೋಜನೆಯಂತೆ ಅರಮನೆಯನ್ನು ನಿರ್ಮಿಸಿದನು.
- ಅರ್ಥ: ವೈದಿಕಸಮ್ಮತ ವಾಸ್ತು ಶಾಸ್ತ್ರದಲ್ಲಿರುವಂತೆ, ದಿನ, ಆಯ, ವ್ಯಯ,ನಕ್ಷತ್ರ ರಾಶಿ, ಗ್ರಹ, ಇವುಗಳ ಕೆಡುಕಿನ ಯೋಗಬಲದಲ್ಲಿ, ಹಗಲು ಮುಗಿದ ನಂತರ ರಾತ್ರಿಯಲ್ಲಿ, ಸಾಲು ಸಾಲು ಕೈದೀವಿಗೆಯ ಬೆಳಕಿನ ಬೆಡಗಿನಲ್ಲಿ, ಕಡುಕಿನ ಬುದ್ದಿಯ ಪುರೋಚನನು ಕೃತ್ರಿಮ ಯೋಜನೆಯಂತೆ ಅರಮನೆಯನ್ನು ನಿರ್ಮಿಸಿದನು.
- ಅರಗಿನಲಿ ಭಿತ್ತಿಗಳ ನವ ಸ
- ಜ್ಜರಸ ಗುಡ ಮಿಶ್ರದಲಿ ನೆಲೆಯು
- ಪ್ಪರಿಗೆಗಳನವರಲಿ ಕವಾಟ ಸ್ತಂಭ ವೇಧಿಗಳ |\
- ವಿರಚಿಸಿದ ನವ ಸೌಧಭದ್ರಾ
- ಸ್ತರಣನಂದ್ಯಾವರ್ತದಲಿಪರಿ
- ಪರಿಯ ಬಿನ್ನಾಣದೊಳರಗಿನ ಮನೆಯ ಮಾಡಿಸಿದ || ೬೯ ||
- ಪದವಿಭಾಗ-ಅರ್ಥ: ಅರಗಿನಲಿ ಭಿತ್ತಿಗಳ= ಗೋಡೆಗಳ ನವ ಸಜ್ಜರಸ= ರಾಳ, ಗುಡ ಮಿಶ್ರದಲಿ= ನೆಲೆಯುಪ್ಪರಿಗೆಗಳನು+ ಅವರಲಿ ಕವಾಟ ಸ್ತಂಭವೇಧಿಗಳ= ಕಂಬದ ಸಾಲು, ವಿರಚಿಸಿದ= ಪುರೋಚನನು ಟರಗಿನಲ್ಲಿ ಗೋಡೆಗಳನ್ನೂ, ಹೊಸರಾಳ ಮತ್ತು ಬೆಲ್ಲದಿಂದ ಅದರಮೇಲೆ ಉಪ್ಪರಿಗೆಗಳನ್ನೂ, ಅದರಲ್ಲಿ ಬಾಗಿಲುಗಳನ್ನೂ ಕಂಬದ ಸಾಲುಗಳನ್ನೂ ರಚಿಸಿದನು. ನವ ಸೌದಭದ್ರಾಸ್ತರಣ ನಂದ್ಯಾವರ್ತದಲಿ= ಹೊಸ ಬಧ್ರಾಸನಗಳನ್ನು ನಂದ್ಯಾವರ್ತಕ್ರಮದಲ್ಲಿ ಕಟ್ಟದವನ್ನು ಮಾಡಿಸಿದ, ಪರಿಪರಿಯ ಬಿನ್ನಾಣದೊಳರಗಿನ ಮನೆಯ ಮಾಡಿಸಿದ= ನಾನಾರೀತಿಯ ಸೊಬಗಿನಿಂದ ಕೂಡಿದ ಅರಗಿನ ಅರಮನೆಯನ್ನು ಮಾಡಿಸಿದ.
- ನಂದ್ಯಾವರ್ತ= ಪಶ್ಚಿಮದ ಬಾಗಿಲಿಲ್ಲದ (ಹಿಂಬಾಗಿಲಿಲ್ಲದ) ಒಂದು ಬಗೆಯ ವರ್ತುಲಾಕಾರದ ವಿಶಿಷ್ಟಾಕೃತಿಯ ಕಟ್ಟಡ.
- ಅರ್ಥ: ಪುರೋಚನನು,ಅರಗಿನಲ್ಲಿ ಗೋಡೆಗಳನ್ನೂ, ಹೊಸರಾಳ ಮತ್ತು ಬೆಲ್ಲಸೆರಸಿದ ವಸ್ತುಗಳಿಂದ ಅದರಮೇಲೆ ಉಪ್ಪರಿಗೆಗಳನ್ನೂ, ಅದರಲ್ಲಿ ಬಾಗಿಲುಗಳನ್ನೂ ಕಂಬದ ಸಾಲುಗಳನ್ನೂ ರಚಿಸಿದನು. ಹೊಸ ಬಧ್ರಾಸನಗಳನ್ನೂ ಮಾಡಿಸಿದ, ನಂದ್ಯಾವರ್ತಕ್ರಮದಲ್ಲಿ ಕಟ್ಟದವನ್ನು ಮಾಡಿಸಿದ, ನಾನಾರೀತಿಯ ಸೊಬಗಿನಿಂದ ಕೂಡಿದ ಅರಗಿನ ಅರಮನೆಯನ್ನು ಮಾಡಿಸಿದ.
- ಹಿರಿಯ ಭವನದ ಸುತ್ತುವಳಯದ
- ಮುರುಹಿನಲಿ ಮನೆಮನರಗಳಾ ಮಂ
- ದಿರ ನಿಕಾಯಕೆ ಬಾಗಿಲೊಂದಾ ದ್ವಾರದೇಶದಲಿ ||
- ಇರವು ತನ್ನದು ಬಾಗಿಲಿಕ್ಕಿದು
- ಹೊರಗೆ ಮುದ್ರಸಿಕಿಚ್ಚ ಹಚ್ಚುವ
- ಪರುಠವಣೆಯಲಿ ಖಳ ಪುರೋಚನನಂದು ನಿರ್ಮಿಸಿದ ||೭೦ ||
- ಪದವಿಭಾಗ-ಅರ್ಥ: ಹಿರಿಯ ಭವನದ ಸುತ್ತುವಳಯದ ಮುರುಹಿನಲಿ= ದೊಡ್ಡ ಅರಮನೆಯ ಸುತ್ತಲಿನ ಪ್ರದೇಶದಲ್ಲಿ ಅರ್ಧವರ್ತುಲಾಕಾರವಾಗಿ, ಮನೆಮನರಗಳು+ ಆ ಮಂದಿರ ನಿಕಾಯಕೆ ಬಾಗಿಲೊಂದು+ ಆ= ಸಾಲುಸಾಲಾಗಿ ಅನೇಕ ಮನೆಗಳನ್ನು ಕಟ್ಟಿಸಿದನು. ದ್ವಾರದೇಶದಲಿ ಇರವು ತನ್ನದು= ಆ ಕೋಟೆಯಂತಹ ಕಟ್ಟಡಗಳ ದ್ವಾರ ಪ್ರದೇಶದಲ್ಲಿ ತಾನು ವಾಸಿಸುವ ವ್ಯವಸ್ಥೆಮಾಡಿಕೊಂಡ. ಬಾಗಿಲಿಕ್ಕಿದು ಹೊರಗೆ ಮುದ್ರಸಿ= ಮುಖ್ಯಬಾಗಿಲನ್ನು ಹಾಕಿ ಮುದ್ರೆ-ಬೀಗ ಹಾಕಿ, ಕಿಚ್ಚ ಹಚ್ಚುವ= ಬೆಂಕಿಹಚ್ಚುವ, ಪರುಠವಣೆಯಲಿ= ಸಿದ್ಧತೆ, ಸಡಗರದಲ್ಲಿ ಖಳ ಪುರೋಚನನು+ ಅಂದು ನಿರ್ಮಿಸಿದ= ದುಷ್ಟ ಪುರೋಚನನು ಆ ಸಮಯದಲ್ಲಿ ನಿರ್ಮಿಸಿದ್ದನು.
- ಅರ್ಥ: ದೊಡ್ಡ ಅರಮನೆಯ ಸುತ್ತಲಿನ ಪ್ರದೇಶದಲ್ಲಿ ಅರ್ಧವರ್ತುಲಾಕಾರವಾಗಿ, ಸಾಲುಸಾಲಾಗಿ ಅನೇಕ ಮನೆಗಳನ್ನು ಕಟ್ಟಿಸಿದನು. ಆ ಕೋಟೆಯಂತಹ ಕಟ್ಟಡಗಳ ದ್ವಾರ ಪ್ರದೇಶದಲ್ಲಿ ತಾನು ವಾಸಿಸುವ ವ್ಯವಸ್ಥೆಮಾಡಿಕೊಂಡು ದುಷ್ಟ ಪುರೋಚನನು ಅಂದು ಅಲ್ಲಿ ನಿರ್ಮಿಸಿದ್ದನು. ಒಂದು ದಿನ ಮುಖ್ಯಬಾಗಿಲನ್ನು ಹಾಕಿ ಮುದ್ರೆ-ಬೀಗ ಹಾಕಿ, ಬೆಂಕಿಹಚ್ಚಿ ಹೊರಟು ಹೋಗುವಸಿದ್ಧತೆ, ಸಡಗರದಲ್ಲಿ ಇದ್ದನು. (ದುಷ್ಟ ಪುರೋಚನು ಒಂದು ದಿನ ಬೆಂಕಿಹಚ್ಚಿ ಮುಖ್ಯಬಾಗಿಲನ್ನು ಹಾಕಿ ಹೊರಗಿನಿಂದ ಬೀಗಮುದ್ರೆ ಹಾಕಿ ಹೊರಟು ಹೋಗುವ ಸಿದ್ಧತೆ, ಸಡಗರದಲ್ಲಿದ್ದನು)
ಧೃತರಾಷ್ಟ್ರನು, ಪಾಂಡವರುನ್ನು ವಾರಣಾವತಕ್ಕೆ ಹೋಗಿರಲು ಒಪ್ಪಿಸಿದನು
ಸಂಪಾದಿಸಿ
- ಧರಣಿಪತಿ ಕೇಳಿತ್ತ ಹಸ್ತಿನ
- ಪುರದೊಳಗೆ ಕುಂತೀ ಕುಮಾರರ
- ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ ||
- ಬೆರಗು ಬಿನ್ನಾಣದಲಿ ಮಕ್ಕಳ
- ಮರುಳು ಮಾಡಿದನೇನ ಹೇಳುವೆ
- ನುರಿವ ಮನೆಯ ಬೀಡಾರದಲಿ ಬಿಡಿಸಲ್ಕೆ ಮನ ದಂದ ||೭೧ ||
- ಪದವಿಭಾಗ-ಅರ್ಥ: ಧರಣಿಪತಿ ಕೇಳು+ ಇತ್ತ ಹಸ್ತಿನ ಪುರದೊಳಗೆ ಕುಂತೀ ಕುಮಾರರ ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ ಬೆರಗು ಬಿನ್ನಾಣದಲಿ (ಕೇಳಲುಸೊಗಸಾದರೀತಿಯಲ್ಲಿ) ಮಕ್ಕಳ ಮರುಳು ಮಾಡಿದನು+ ಏನ ಹೇಳುವೆನು+ ಉರಿವ ಮನೆಯ ಬೀಡಾರದಲಿ ಬಿಡಿಸಲ್ಕೆ ಮನದ+ ಅಂದ- ಅಂದವನ್ನು= ರೀತಿಯನ್ನು
- ಅರ್ಥ: ರಾಜನೇ ಕೇಳು, ಇತ್ತ ಹಸ್ತಿನಾಪುರದಲ್ಲಿ ಕುಂತೀ ಕುಮಾರರನ್ನು ಕರೆಸಿ ಕಟ್ಟೇಕಾಂತದಲ್ಲಿ ಧೃತರಾಷ್ಟ್ರ ಭೂಪಾಲನು ಬಣ್ಣ ಬಣ್ಣದ ಬಿನ್ನಾಣದಲಿ ಎಂದರೆ ಕೇಳಲು ಸೊಗಸಾದ ರೀತಿಯಲ್ಲಿ ಮಕ್ಕಳ ಮರುಳು ಮಾಡಿದನು. ಬಿಂಕಿಯಲ್ಲಿ ಉರಿಯುವ ಮನೆಯ ಬೀಡಾರದಲಿ ಅವರನ್ನು ನೆಲೆಸಲು ಮನಸ್ಸು ಮಾಡಿದ ರೀತಿಯನ್ನು ಏನನ್ನು ಹೇಳಲಿ.
- ದುರುಳರೀ ಕೌರವರು ನೀವತಿ
- ಗುರುವರವದಿರು ಪಾಪಕರ್ಮರು
- ಪರಮಪುಣ್ಯರುನೀವು ತನ್ನವದಿರು ಕುಮಂತ್ರಿಗಳು ||
- ಎರಳೆ ತೋಳನ ಸಾಧು ಸುಣ್ಣದ
- ನೆರವಿಗದು ವಾವಗೆಯುಸೇರುವೆ
- ಯರಸ ನಿನ್ನೊಡನೆನ್ನ ಕುನ್ನಿಗಳೆನುತ ಬಿಸು ಸುಯ್ದ || ೭೨ ||
- ಪದವಿಭಾಗ-ಅರ್ಥ:ದುರುಳರು+ ಈ ಕೌರವರು ನೀವು+ ಅತಿ ಗುರುವರವದಿರು= ನನ್ನ ಮಕ್ಕಳಾದ ಈ ಕೌರವರು ಬಹಳ ದುರುಳರು, ಪಾಪಕರ್ಮರು= ಮತ್ತು ಪಾಪಕಾರ್ಯ ಮಾಡುವವರು; ಪರಮಪುಣ್ಯರು ನೀವು= ನೀವಾದರೋ ಬಹಳ ಪುಣ್ಯಪುರುಷರು; ತನ್ನವದಿರು ಕುಮಂತ್ರಿಗಳು= ತನ್ನ ಮಕ್ಕಳು ಕೆಟ್ಟ ಯೋಚನೆಮಾಡುವ ಕುಮಂತ್ರಿಗಳು; ಎರಳೆ ತೋಳನ ಸಾಧು (ಹಣಗೆ ಹಚ್ಚುವ ತಣ್ಣನರಯ ಚಂದನ) ಸುಣ್ಣದ ನೆರವಿಗೆ+ ಅದುವಾವಗೆಯು= ಅದು ಯಾವರೀತಿಯಲ್ಲಿ, ಸೇರುವೆಯು+ ಅರಸ ನಿನ್ನೊಡನೆ+ ಎನ್ನ ಕುನ್ನಿಗಳು+ ಎನುತ ಬಿಸು ಸುಯ್ದ= ನೀವು ಸಾಧುವಾದ ಜಿಂಕೆಗಳಂತೆ, ನಿಮ್ಮ ಜೊತೆ ತೋಳನಂತಿರುವ ನನ್ನ ಮಕ್ಕಳು ಅದು ಯಾವರೀತಿಯಲ್ಲಿ, ಸೇರುವೆಯಾಗುವುದು. ಹೊಂದಿಕೊಳ್ಲುವುದು? ಕಷ್ಟ! ಹಣಗೆ ಹಚ್ಚುವ ತಂಪು ಚಂದನಕ್ಕೂ ಸುಣ್ನಕ್ಕೂ ಹೊಂದುವುದೇ? ಇಲ್ಲ! ನಿಮ್ಮ ಜೊತೆ ನನ್ನ ಕೊನ್ನಿಗಳಂತಹ ಮಕ್ಕಳು ಸೇರುವೆಯಾಗರು; ಏನು ಮಅಡುವುದು ಎಂದು ನಿಟ್ಟುಸಿರು ಬಿಟ್ಟ, ಧೃತರಾಷ್ಟ್ರ.
- (ಸಾಧು= ಕೆಂಪು ಚಂದನದ ತಿಲಕ- ಗಂಡಸರು ಹಣೆಗೆ ಸಾಧುವನ್ನು ಇಟ್ಟುಕೊಳ್ಳುವುದು ಎಂದು ಈಗಲೂ ಮಲೆನಾಡಿನ ಕೆಲವು ಗ್ರಾಮಗಳಲ್ಲಿ ರೂಡಿಯಲ್ಲಿದೆ.)
- ಅರ್ಥ: ಧೃತರಾಷ್ಟ್ರನು, ಧರ್ಮರಾಯನಿಗೆ ಹೇಳಿದ, ನನ್ನ ಮಕ್ಕಳಾದ ಈ ಕೌರವರು ಬಹಳ ದುರುಳರು, ಮತ್ತು ಪಾಪಕಾರ್ಯ ಮಾಡುವವರು; ನೀವಾದರೋ ಬಹಳ ಪುಣ್ಯಪುರುಷರು; ತನ್ನ ಮಕ್ಕಳು ಕೆಟ್ಟ ಯೋಚನೆಮಾಡುವ ಕುಮಂತ್ರಿಗಳು; ನೀವು ಸಾಧುವಾದ ಜಿಂಕೆಗಳಂತೆ, ನಿಮ್ಮ ಜೊತೆ ತೋಳನಂತಿರುವ ನನ್ನ ಮಕ್ಕಳು ಅದು ಯಾವರೀತಿಯಲ್ಲಿ ಸೇರುವೆಯಾಗುವುದು. ಹೇಗೆ ಹೊಂದಿಕೊಳ್ಲುವುದು? ಅಗದು, ಕಷ್ಟ! ಹಣೆಗೆ ಹಚ್ಚುವ ತಂಪು ಚಂದನಕ್ಕೂ ಸುಣ್ನಕ್ಕೂ ಹೊಂದುವುದೇ? ಇಲ್ಲ! ನಿಮ್ಮ ಜೊತೆ ನನ್ನ ಕೊನ್ನಿಗಳಂತಹ ಮಕ್ಕಳು ಸೆರುವೆಯಾಗರು; ಏನು ಮಅಡುವುದು ಎಂದು ನಿಟ್ಟುಸಿರು ಬಿಟ್ಟ.
- ತಂದೆಯಿಲ್ಲದ ನಿಮಗೆ ಹಿತರಾ
- ರೆಂದು ಮರುಗುವೆನೆನ್ನ ಮಕ್ಕಳು
- ಕೊಂದು ಹಿಂಡು ಕೂಳನುಂಬರೆ ಹೇಸುವವರಲ್ಲ ||
- ಇಂದು ನಿಮಗವರಿಂದಲುಪಹತಿ
- ಬಂದುದಾದರೆ ತನ್ನ ತಲೆಯಲಿ
- ನಿಂದು ಹೊರುವುದಕೀರ್ತಿಕಿಲ್ಬಿಷ ಮಗನೆ ಕೇಳೆಂದ || ೭೩ ||
- ಪದವಿಭಾಗ-ಅರ್ಥ: ತಂದೆಯಿಲ್ಲದ ನಿಮಗೆ ಹಿತರು+ ಆರೆಂದು= ಯಾರೆಂದು, ಮರುಗುವೆನು+ ಎನ್ನ ಮಕ್ಕಳು ಕೊಂದು ಹಿಂಡು ಕೂಳನು (ಶ್ರಾದ್ಧದ ಊಟ ಬಲಿಕೊಟ್ಟ ಅನ್ನ)+ ಉಂಬರೆ= ನಿಮ್ಮನ್ನು ಕೊಂದು ಶ್ರಾದ್ಧದ ಊಟ ಮಾಡುವಂತವರು, ಇಂದು ನಿಮಗವರಿಂದಲು+ ಉಪಹತಿ= ತೊಂದರೆ, ಬಂದುದಾದರೆ ತನ್ನ ತಲೆಯಲಿ= ನನ್ನ ಮೇಲೆ, ನಿಂದು ಹೊರುವುದು + ಅಕೀರ್ತಿಕಿಲ್ಬಿಷ= ಅಪಕೀರ್ತಿಯ ಪಾಪವನ್ನು ಸದಾಕಾಲ ಹೊರಬೇಕಾಗುವುದು, ಮಗನೆ ಕೇಳೆಂದ= ಕೇಳಪ್ಪಾ ಎಂದ.
- ಅರ್ಥ: ತಂದೆಯಿಲ್ಲದ ನಿಮಗೆ ಹಿತವಾದವರು ಯಾರಿಲ್ಲವಲ್ಲಾ ಎಂದು ಮರುಗುವೆನು. ನನ್ನ ಮಕ್ಕಳು ನಿಮ್ಮನ್ನು ಕೊಂದು ಶ್ರಾದ್ಧದ ಊಟ ಮಾಡುವಂತವರು, ಈಗ ನಿಮಗೆ ಅವರಿಂದ ತೊಂದರೆ, ಬಂದರೆ ನನ್ನ ತಲೆಯ ಮೇಲೆ ಅಪಕೀರ್ತಿಯ ಪಾಪದ ಹೊರೆಯನ್ನು ಸದಾಕಾಲ ಹೊರಬೇಕಾಗುವುದು ಎಂಬ ಚಿಂತೆ ನನಗೆ, ಮಗನೆ ಕೇಳಪ್ಪಾ ಎಂದ.
- ತಾತ ಕೆಡುವಿರಿ ನೀವು ತನಗ
- ಖ್ಯಾತಿ ಕೌರವರೆಂಬುವರು ದು
- ರ್ನೀತಿಕಾರರರು ಭೀಷ್ಮ ವಿದುರರು ಭೀತರವದಿರಿಗೆ ||
- ನೀತಿ ಸಮ್ಮತವಾಗಿ ಚಿತ್ತದೊ
- ಳಾತ ಮತವನು ಹೇಳಿ ನಮ್ಮೊಳು
- ಬೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ || ೭೪ ||
- ಪದವಿಭಾಗ-ಅರ್ಥ: ತಾತ ಕೆಡುವಿರಿ ನೀವು ತನಗೆ+ ಅಖ್ಯಾತಿ ಕೌರವರೆಂಬುವರು ದುರ್ನೀತಿಕಾರರರು= ಧೃತರಾಷ್ಷ್ರನು ಮಂದುವರಿದು ಬಹಳ ಬಹಳ ಪ್ರೀತಿಯಿಂದ ಎಂಬಂತೆ, ಅಪ್ಪಾ ಯುಧಿಷ್ಠಿರಾ, ಕೌರವರಾದರೋ ದುರ್ನೀತಿ ಮಾಡುವವರು, ನೀವು ಕೆಡುಕಿಗೆ ಸಿಗುವಿರಿ, ಅದರ ಅಪಖ್ಯಾತಿ ನನಗೆ ಬರುವುದು; ಭೀಷ್ಮ ವಿದುರರು ಭೀತರವದಿರಿಗೆ= ಅವರಿಗೆ ಭೀಷ್ಮ ವಿದುರರೇ ಹೆದರುತ್ತಾರೆ. ನೀತಿ ಸಮ್ಮತವಾಗಿ ಚಿತ್ತದೊಳಾತ ಮತವನು ಹೇಳಿ= ಹೀಗಿರುವಾಗ ಇದಕ್ಕೆ ಪರಿಹಾರವಾಗಿ ನೀತಿ ಸಮ್ಮತವಾಗಿರುವ ನಿಮ್ಮ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ತಿಳಿಸಿ. ನಮ್ಮೊಳು ಬೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ= ನಮ್ಮಲ್ಲಿ ಹೇಳಲು ಹೆದರುವುದು ಬೇಡ ಎಂದು ಪ್ರೀತಿಯಿಂದ (ಎಂಬಂತೆ) ಹತ್ತಿರ ಕರೆದು ಧರ್ಮರಾಯನ ಕೈಯನ್ನು ಹಿಡಿದುಕೊಂಡನು.
- ಅರ್ಥ: ಧೃತರಾಷ್ಷ್ರನು ಮಂದುವರಿದು ಬಹಳ ಬಹಳ ಪ್ರೀತಿಯಿಂದ ಎಂಬಂತೆ, ಅಪ್ಪಾ ಯುಧಿಷ್ಠಿರಾ, ಕೌರವರಾದರೋ ದುರ್ನೀತಿ ಮಾಡುವವರು, ನೀವು ಕೆಡುಕಿಗೆ ಸಿಗುವಿರಿ, ಅದರ ಅಪಖ್ಯಾತಿ ನನಗೆ ಬರುವುದು; ಅವರಿಗೆ ಭೀಷ್ಮ ವಿದುರರೇ ಹೆದರುತ್ತಾರೆ. ಹೀಗಿರುವಾಗ ಇದಕ್ಕೆ ಪರಿಹಾರವಾಗಿ ನೀತಿ ಸಮ್ಮತವಾಗಿರುವ ನಿಮ್ಮ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ತಿಳಿಸಿ. ನಮ್ಮಲಲಿ ಹೇಳಲು ಹೆದರುವುದು ಬೇಡ ಎಂದು ಪ್ರೀತಿಯಿಂದ (ಎಂಬಂತೆ) ಹತ್ತಿರ ಕರೆದು ಧರ್ಮರಾಯನ ಕೈಯನ್ನು ಹಿಡಿದುಕೊಂಡನು.
- ಬೇರೆ ಮತವೆಮಗೇನು ಬೊಪ್ಪನ
- ಚಾರಿ ನಿಮ್ಮದು ನೀವು ಬೊಪ್ಪನ
- ನೂರುಮಡಿಯೆಮಗೊಳ್ಳಿದರು ಬೇರಿನ್ನ ಹಿತರುಂಟೆ ||
- ಬೇರಿರಿಸಿ ಕೊಡಿಸಿರಿ ನಿಮಗೆಯು
- ತೋರಿದುದೆ ಮತ ನಿಮ್ಮ ನೇಮವ
- ಮೀರಬಲ್ಲನೆ ಯೆಂದುಧರ್ಮಜ ನುಡಿದನರಸಂಗೆ ||೭೫ ||
- ಪದವಿಭಾಗ-ಅರ್ಥ:ಧ್ರತರಾಷ್ಟ್ರನು ತನ್ನ ಯೋಜನೆಯನ್ನು ಧರ್ಮಜನ ಬಾಯಿಯಿಂದಲೇ ಹೇಳಿಸುವ ತಂತ್ರ ನೆರವೇರಿತು. ಧರ್ಮಜನು, ಬೇರೆ ಮತವೆಮಗೇನು ಬೊಪ್ಪನಚಾರಿ ನಿಮ್ಮದು= ನಮ್ಮದು ಬೇರೆ ಅಬಿಪ್ರಾಯವಿಲ್ಲ ನಿಮ್ಮದು ತಂದೆಯ ಸ್ಥಾನ. ನೀವು ಬೊಪ್ಪನ ನೂರುಮಡಿಯೆಮಗೊಳ್ಳಿದರು= ನೀವು ನನ್ನ ತಂದೆಗಿಂತ ನೂರುಮಡಿ ಒಳ್ಳೆಯವರು. ಬೇರಿನ್ನ ಹಿತರುಂಟೆ= ನಮಗೆ ಬೇರೆ ಹಿತೈಶಿಗಳಿದ್ದಾರೆಯೇ, ನೀವೇ ಹಿತವರು. ಬೇರಿರಿಸಿ ಕೊಡಿಸಿರಿ ನಿಮಗೆಯು ತೋರಿದುದೆ ಮತ= ನಮ್ಮನ್ನು ಬೇರೆ ಕಡೆ ಇರಿಸಿ ಅನುಕೂಲ ಮಾಡಿಕೊಡಿ. ನಿಮಗೆ ಹೇಗೆ ತೋರುವುದೋ ಹಾಗೆ ಮಾಡಿ. ನಿಮ್ಮ ನೇಮವ ಮೀರಬಲ್ಲನೆ= ನಿಮ್ಮ ಆಜ್ಞೆಯನ್ನು ನಾನು ಮೀರಲು ಸಾದ್ಯವೇ? ಎಂದಿಗೂ ಇಲ್ಲ, ಯೆಂದುಧರ್ಮಜ ನುಡಿದನರಸಂಗೆ= ಎಂದು ದರ್ಮಜನು ಅರಸನಿಗೆ ಹೇಳಿದನು.
- ಅರ್ಥ:ಧ್ರತರಾಷ್ಟ್ರನು ತನ್ನ ಯೋಜನೆಯನ್ನು ಧರ್ಮಜನ ಬಾಯಿಯಿಂದಲೇ ಹೇಳಿಸುವ ತಂತ್ರ ನೆರವೇರಿತು. ಧರ್ಮಜನು, ನಮ್ಮದು ಬೇರೆ ಅಬಿಪ್ರಾಯವಿಲ್ಲ; ನಿಮ್ಮದು ತಂದೆಯ ಸ್ಥಾನ. ನೀವು ನನ್ನ ತಂದೆಗಿಂತ ನೂರುಮಡಿ ಒಳ್ಳೆಯವರು. ನಮಗೆ ಬೇರೆ ಹಿತೈಶಿಗಳಿದ್ದಾರೆಯೇ, ನೀವೇ ಹಿತವರು. ನಮ್ಮನ್ನು ಬೇರೆ ಕಡೆ ಇರಿಸಿ ಅನುಕೂಲ ಮಾಡಿಕೊಡಿ. ನಿಮಗೆ ಹೇಗೆ ತೋರುವುದೋ ಹಾಗೆ ಮಾಡಿ. ನಿಮ್ಮ ಆಜ್ಞೆಯನ್ನು ನಾನು ಮಿರಲು ಸಾದ್ಯವೇ? ಎಂದಿಗೂ ಇಲ್ಲ, ಎಂದು ದರ್ಮಜನು ಅರಸನಿಗೆ ಹೇಳಿದನು.
- ಎರೆವ ವಂಕಿಯೊ ಕಳಿತ ಮೆಕ್ಕೆಯೊ
- ಹುರಿಯ ಬಲೆಯೋ ರಾಗ ಸನ್ನೆಯೊ
- ಸರಿಯ ಗೊರೆಯೋ ಠಕ್ಕಿನುಂಡೆಯೊಸವಿಯ ಚಿತ್ರಕವೊ ||
- ಅರಸನಂಕೆಯ ಮನದ ಬಯಕೆಯ
- ಹೊರೆಯ ಬಳಕೆಯನೀ ಸಮಂಜಸ
- ತರದ ಸಾತ್ವಿಕರೆತ್ತಬಲ್ಲರು ಭೂಪ ಕೇಳೆಂದ |} ೭೬||
- ಪದವಿಭಾಗ-ಅರ್ಥ:ಎರೆವ ವಂಕಿಯೊ= ಮೀನುಗಾನದ ತುದಿಯಲ್ಲರುವ ಎರೆಹುಳು ಚುಚ್ಚಿದ ಕೊಂಡಿಯೊ! ಕಳಿತ ಮೆಕ್ಕೆಯೊ= ಎಳಯ ವಿಷಪೂರ್ಣವಾದ ಆಕರ್ಷಕವಾದ ಎಳೆ ಮೆಕ್ಕೆಜೋಳವೊ! ಹುರಿಯ ಬಲೆಯೋ= ಮಿಗಹಿಇಯುವ ಹೊಸೆದ ಹುರಿಯ ಬಲೆಯೊ! ರಾಗ ಸನ್ನೆಯೊ= ಮರಗ ಪಕ್ಷಿಗಳನ್ನು ಹಿಡಿಯಲು ಪ್ರಾಣಿಗಳ ಸದ್ದು ಮಾಡುವ ಕೊಳಲೊ, ಸರಿಯ ಗೊರೆಯೋ= ಜೌಗು ನೆಲವೊ! ಠಕ್ಕಿನುಂಡೆಯೊ= ವಿಷಬೆರಸಿದ ಮೋಸದ ತಿನ್ನವ ಉಂಡೆಯೊ! ಸವಿಯ ಚಿತ್ರಕವೊ= ಸವಿಯಾದ ವಿಷದ ಚಿತ್ರಕವೆಂಬ ಹುಲ್ಲೊ! ಅರಸನ+ ಅಂಕೆಯ ಮನದ ಬಯಕೆಯ ಹೊರೆಯ ಬಳಕೆಯನು= ದೃತರಾಷ್ಟ್ರನ ಮನಸ್ಸಿನ ತಂತ್ರದ ಅಪೇಕ್ಷೆಯ ದೊಡ್ಡ ಯೋಜನೆಯನ್ನು, ಈ ಸಮಂಜಸ ತರದ ಸಾತ್ವಿಕರು+ ಎತ್ತಬಲ್ಲರು ಭೂಪ ಕೇಳೆಂದ= ಈ ಸಜ್ಜನ ಸ್ವಭಾವದರಾದ ಸಾತ್ವಿಕ ಪಾಂಡವರು ಹೇಗೆ ತಿಳಿಯಬಲ್ಲರು, ರಾಜನೆ ಕೇಳು ಎಂದ ಮುನಿ.
- ಅರ್ಥ: ಎರೆವ ವಂಕಿಯೊ= ಮೀನುಗಾನದ ತುದಿಯಲ್ಲರುವ ಎರೆಹುಳು ಚುಚ್ಚಿದ ಕೊಂಡಿಯೊ! ಕಳಿತ ಮೆಕ್ಕೆಯೊ= ಎಳಯ ವಿಷಪೂರ್ಣವಾದ ಆಕರ್ಷಕವಾದ ಎಳೆ ಮೆಕ್ಕೆಜೋಳವೊ! ಹುರಿಯ ಬಲೆಯೋ= ಮಿಗಹಿಇಯುವ ಹೊಸೆದ ಹುರಿಯ ಬಲೆಯೊ! ರಾಗ ಸನ್ನೆಯೊ= ಮರಗ ಪಕ್ಷಿಗಳನ್ನು ಹಿಡಿಯಲು ಪ್ರಾಣಿಗಳ ಸದ್ದು ಮಾಡುವ ಕೊಳಲೊ, ಸರಿಯ ಗೊರೆಯೋ= ಜೌಗು ನೆಲವೊ! ಠಕ್ಕಿನುಂಡೆಯೊ= ವಿಷಬೆರಸಿದ ಮೋಸದ ತಿನ್ನವ ಉಂಡೆಯೊ! ಸವಿಯ ಚಿತ್ರಕವೊ= ಸವಿಯಾದ ವಿಷದ ಚಿತ್ರಕವೆಂಬ ಹುಲ್ಲೊ! ಅರಸನ+ ಅಂಕೆಯ ಮನದ ಬಯಕೆಯ ಹೊರೆಯ ಬಳಕೆಯನು= ದೃತರಾಷ್ಟ್ರನ ಮನಸ್ಸಿನ ತಂತ್ರದ ಅಪೇಕ್ಷೆಯ ದೊಡ್ಡ ಯೋಜನೆಯನ್ನು, ಈ ಸಮಂಜಸ ತರದ ಸಾತ್ವಿಕರು+ ಎತ್ತಬಲ್ಲರು ಭೂಪ ಕೇಳೆಂದ= ಈ ಸಜ್ಜನ ಸ್ವಭಾವದರಾದ ಸಾತ್ವಿಕ ಪಾಂಡವರು ಹೇಗೆ ತಿಳಿಯಬಲ್ಲರು, ರಾಜನೆ ಕೇಳು ಎಂದ ಮುನಿ.
- ಕಂದ ಮನ ಮುನಿಸಿಲ್ಲಲೇ ನಾ
- ವೆಂದ ನುಡಿಗೊಡಂಬಡುವಿರಾದೊಡೆ
- ಮುಂದೆ ಪುರವಿದೆ ವಾರಣಾವತವಿಲ್ಲಿಗರವತ್ತು ||
- ಸಂದ ನಾಡು ಸಮಸ್ತ ವಸ್ತುಗ
- ಳಿಂದ ಪೂರಿತ ಹಸ್ತಿನಾಪುರ
- ದಿಂದ ಮಿಗಿಲುದು ರಾಜಧಾನಿಸ್ಥಾನ ನಿಮಗೆಂದ || ೭೭ ||
- ಪದವಿಭಾಗ-ಅರ್ಥ:ಕಂದ ಮನ ಮುನಿಸು+ ಇಲ್ಲಲೇ ನಾವು+ ಎಂದ ನುಡಿಗೆ+= ಮಗನೇ ನಾವು ಹೇಳಿದ ಮಾತಿಗೆ ನಿನಗೆ ಸಿಟ್ಟಿಲ್ಲವಲ್ಲವೇ? ನುಡಿಗೆ+ ಒಡಂಬಡುವಿರಾದೊಡೆ= ನಿಮಗೆ ಒಪ್ಪಿಗೆಯಾದರೆ, ಮುಂದೆ(ದೂರದಲ್ಲಿ) ಪುರವಿದೆ ವಾರಣಾವತವು+ ಇಲ್ಲಿಗೆ+ ಅರವತ್ತು= ಇಲ್ಲಿಗೆ ಅರವತ್ತು ಯೋಜನ ದೂರದಲ್ಲಿ ವಾರಣಾವತವು ಎಮಬ ಪುರವಿದೆ. ಸಂದ ನಾಡು ಸಮಸ್ತ ವಸ್ತುಗಳಿಂದ ಪೂರಿತ ಹಸ್ತಿನಾಪುರ ದಿಂದ ಮಿಗಿಲು+ ಅದು ರಾಜಧಾನಿಸ್ಥಾನ ನಿಮಗೆಂದ= ಉತ್ತಮ ಪ್ರಸಿದ್ಧ ನಗರ, ಅದು ಸಮಸ್ತ ವಸ್ತುಗಳಿಂದ ತುಂಬಿದೆ. ಅದು ಹಸ್ತಿನಾಪುರಕ್ಕಿಂತ ಮಿಗಿಲು- ಹೆಚ್ಚಿನದು. ರಾಜಧಾನಿಸ್ಥಾನ ನಿಮಗೆಂದ= ಅದು ವಾಸಕ್ಕೆ ನಿಮಗೆ ರಾಜಧಾನಿ. ಅಲ್ಲಿ ಹೋಗಿ ಇರಿ ಎಂದ.
- ಅರ್ಥ:ಮಗನೇ ನಾವು ಹೇಳಿದ ಮಾತಿಗೆ ನಿನಗೆ ಸಿಟ್ಟಿಲ್ಲವಲ್ಲವೇ? ಇಲ್ಲಿಗೆ ಅರವತ್ತು ಯೋಜನ ದೂರದಲ್ಲಿ ವಾರಣಾವತವು ಎಂಬ ಪುರವಿದೆ. ಅದು ಉತ್ತಮ ಪ್ರಸಿದ್ಧ ನಗರ, ಅದು ಸಮಸ್ತ ವಸ್ತುಗಳಿಂದ ತುಂಬಿದೆ. ಅದು ಹಸ್ತಿನಾಪುರಕ್ಕಿಂತ ಮಿಗಿಲು- ಹೆಚ್ಚಿನದು. ನಿಮಗೆ ಅದು ವಾಸಕ್ಕೆ ಮತ್ತು ರಾಜಧಾನಿ. ಅಲ್ಲಿ ಹೋಗಿ ಇರಿ ಎಂದ.
- ಹೈ ಹಸಾದ ಭವತ್ ಕೃಪಾ ಸ
- ನ್ನಾಹವೇ ಸಾಮ್ರಾಜ್ಯವಾವುದ
- ನೊಹಿಸಿದೊಡಾ ಸ್ಥಿತಿಯೊಳಗಡಗಿಹೆವೆಂದು ವಿನಯದಲಿ ||
- ಗಾಹುಗತಕವನರಿಯದಿವರು
- ತ್ಸಾಹದಲಿ ಕೈಕೊಂಡು ಭೀಷ್ಮಗೆ
- ಬೇಹ ವಿದುರ ದ್ರೋಣಮುಖ್ಯರಿಗರುಹಿದರು ಹದನ || ೭೮ ||
- ಪದವಿಭಾಗ-ಅರ್ಥ: ಹೈ ಹಸಾದ ಭವತ್ ಕೃಪಾ ಸನ್ನಾಹವೇ ಸಾಮ್ರಾಜ್ಯವು+ ಆವುದನು+ ಒ/ವಹಿಸಿದೊಡೆ ಆ ಸ್ಥಿತಿಯೊಳಗೆ+ ಅಡಗಿಹೆವು+ ಎಂದು ವಿನಯದಲಿ ಗಾಹುಗತಕವನು+ ಅರಿಯದೆ ಇವರು+ ಉತ್ಸಾಹದಲಿ ಕೈಕೊಂಡು ಭೀಷ್ಮಗೆ, ಬೇಹ ವಿದುರ ದ್ರೋಣಮುಖ್ಯರಿಗೆ+ ಅರುಹಿದರು= ಹೇಳಿದರು, ಹದನ= ವಿಚಾರವನ್ನು
- ಹೈ ಹಸಾದ ಭವತ್= ತಮ್ಮ, ಕೃಪಾ ಸನ್ನಾಹವೇ ಸಾಮ್ರಾಜ್ಯವು= ತಮ್ಮ ಮಾತಿಗೆ ಒಪ್ಪಿಗೆ, ಪ್ರಸಾದ, ತಮ್ಮ ಕೃಪೆಯ ಕೊಡಿಗೆಯೇ ನಮಗೆ ಸಾಮ್ರಾಜ್ಯ. ಆವುದನು+ ಒ/ವಹಿಸಿದೊಡೆ ಆ ಸ್ಥಿತಿಯೊಳಗೆ+ ಅಡಗಿಹೆವು= ನೀವು ಯಾವದನ್ನು ಕೊಟ್ಟರೂ, ನಾವು ಅದಕ್ಕೆ ತಕ್ಕಂತೆ ಇರುವೆವು, ಎಂದು ವಿನಯದಲಿ= ಎಂದು ವಿನಯದಿಂದ ಹೇಳಿದರು., ಗಾಹುಗತಕವನು= ಮೋಸವನ್ನು, ಅರಿಯದ+ ಇವರು+ ಉತ್ಸಾಹದಲಿ= ಉತ್ಸಾಹದಿಂದ, ಕೈಕೊಂಡು= ಒಪ್ಪಿ, ಭೀಷ್ಮಗೆ ಬೇಹ= ಮಹಾಪಂಡಿತ. 2 ಗುಪ್ತಚಾರ, ವಿದುರ ದ್ರೋಣಮುಖ್ಯರಿಗೆ+ ಅರುಹಿದರು= ಹೇಳಿದರು, ಹದನ= ವಿಚಾರವನ್ನು.
- ಅರ್ಥ: ಧರ್ಮಜನು ಧೃತರಾಷ್ಟ್ರನಿಗೆ, ತಮ್ಮ ಮಾತಿಗೆ ಒಪ್ಪಿಗೆ, ಪ್ರಸಾದ, ತಮ್ಮ ಕೃಪೆಯ ಕೊಡಿಗೆಯೇ ನಮಗೆ ಸಾಮ್ರಾಜ್ಯ. ನೀವು ಯಾವದನ್ನು ಕೊಟ್ಟರೂ, ನಾವು ಅದಕ್ಕೆ ತಕ್ಕಂತೆ ಇರುವೆವು, ಎಂದು ವಿನಯದಿಂದ ಹೇಳಿದನು. ಮೋಸವನ್ನು ಅರಿಯದ ಪಾಂಡವರು ಉತ್ಸಾಹದಿಂದ, ಒಪ್ಪಿ, ವಿಷಯವನ್ನು ಭೀಷ್ಮನಿಗೆ ಮಹಾಪಂಡಿತನೂ ಗುಪ್ತಚಾರಮುಖ್ಯನೂ ಮಂತ್ರಿಯೂ ಆದ ವಿದುರ ನಿಗೂ, ದ್ರೋಣ ಮೊಲಾದ ಮುಖ್ಯರಿಗೂ ವಿಚಾರವನ್ನು ಹೇಳಿದರು.
- ಧಾರುಣೀಪತಿ ರತ್ನಮಯ ಭಂ
- ಡಾರ ಸಹಿತ ಗಜಾಶ್ವ ರಥ
- ಪರಿವಾರವನು ಮಾಡಿದನು ಹಸಿಗೆಯನೆರಡು ಭಾಗವನು ||
- ಕೌರವರಿಗೊಂದಿವರಿಗೊಂದೆನ
- ಲೋರಣದೊಳಡವಡಿಸಿ ಬಹು ವಿ
- ಸ್ತಾರದಲಿ ಭೀಷ್ಮಾದ್ಯರಹುದೆನಲಿವರ ಮನ್ನಿಸಿದ || ೭೯ ||
- ಪದವಿಭಾಗ-ಅರ್ಥ: ಧಾರುಣೀಪತಿ= ರಾಜ ಧೃತರಾಷ್ಟ್ರನು, ರತ್ನಮಯ ಭಂಡಾರ ಸಹಿತ ಗಜಾಶ್ವ ರಥ ಪರಿವಾರವನು ಮಾಡಿದನು ಹಸಿಗೆಯನು+ ಎರಡು ಭಾಗವನು= ರಾಜ ಧೃತರಾಷ್ಟ್ರನು, ರತ್ನಮಯ ಭಂಡಾರ ಸಹಿತ ಗಜ ಅಶ್ವ= ಆನೆ ಕುದುರೆ, ರಥ ಪರಿವಾರವನು, ಮಾಡಿದನು ಹಸಿಗೆಯನು+ ಎರಡು ಭಾಗವನು= ಸೇವಕರನ್ನೂ ಎರಡು ಭಾಗ ಮಾಡಿ, ಸಮವಾದ ಎರಡು ಹಿಸೆ ಮಾಡಿದನು. ಕೌರವರಿಗೊಂದು+ ಇವರಿಗೊಂದೆನಲು+ ಓರಣದೊಳು+ ಅಡವಡಿಸಿ ಬಹು ವಿಸ್ತಾರದಲಿ ಭೀಷ್ಮಾದ್ಯರು+ ಅಹುದೆನಲು+ ಇವರ ಮನ್ನಿಸಿದ= ಕೌರವರಿಗೊಂದು ಭಾಗ, ಇವರಿಗೊಂದೆನಲು+ =ಇವರು ಪಾಂಡವರಿಗೊಂದು ಭಾಗ ಹೀಗೆ, ಓರಣದೊಳು+ ಅಡವಡಿಸಿ ಬಹು ವಿಸ್ತಾರದಲಿ= ಒಪ್ಪವಾಗಿ ಸಾಲಾಗಿ ಜೋಡಿಸಿ ಇಡಿಸಿ, ವಿಸ್ತಾರವಾಗಿ ಒಂದನ್ನೂ ಬಿಡದೆ ಇಡಿಸಿ, ಭೀಷ್ಮಾದ್ಯರು+ ಅಹುದೆನಲು+ ಇವರ ಮನ್ನಿಸಿದ= ಭೀಷ್ಮ ಮೊದಲಾದ ಹಿರಿಯರು ಅಹುದು, ಸರಿಯಾಗಿದೆ ಎಂದು ಹೇಳುತ್ತಿರಲು, ಇವರ= ಪಾಂಡವರನ್ನು, ಮನ್ನಿಸಿದ= ಸರಿಯಾಗಿ ಗೌರವ ಪೂರ್ವಕ ಕೊಟ್ಟು ಮನ್ನಿಸಿದ.
- ಅರ್ಥ:ರಾಜ ಧೃತರಾಷ್ಟ್ರನು, ರತ್ನಮಯ ಭಂಡಾರ ಸಹಿತರತ್ನಮಯ ಭಂಡಾರ ಸಹಿತ ಆನೆ, ಕುದುರೆ, ರಥ, ಪರಿವಾರದ ಸೇವಕರು ಎಲ್ಲವನ್ನೂ,ಎರಡು ಭಾಗ ಮಾಡಿ, ಸಮವಾದ ಎರಡು ಹಿಸೆ ಮಾಡಿದನು. ಕೌರವರಿಗೊಂದು ಭಾಗ, ಇವರು ಪಾಂಡವರಿಗೊಂದು ಭಾಗ ಹೀಗೆ, ಒಪ್ಪವಾಗಿ ಸಾಲಾಗಿ ಜೋಡಿಸಿ ವಿಸ್ತಾರವಾಗಿ ಒಂದನ್ನೂ ಬಿಡದೆ ಇಡಿಸಿ, ಭೀಷ್ಮ ಮೊದಲಾದ ಹಿರಿಯರು ಅಹುದು, ಸರಿಯಾಗಿದೆ ಎಂದು ಹೇಳುತ್ತಿರಲು, ಪಾಂಡವರನ್ನು, ಸರಿಯಾಗಿ ಗೌರವ ಪೂರ್ವಕ ಭಾಗವನ್ನು ಕೊಟ್ಟು ಮನ್ನಿಸಿದ.
- ಇವರು ಶಭದಿನ ಶಭ ಮುಹೂರ್ತ
- ಪ್ರವರದಲಿ ಹೊರಹೊಂಟರಾ ಜನ
- ನಿಹವ ಮರುಗಿತರಣ್ಯವೇ ಗತಿಯರಸ ನಮಗೆಂದು ||
- ಅವರ ಕಳುಹುತ ಬಂದರಾ ಕೌ
- ರವರು ನಿಂದರು ಭೀಷ್ಮ ಕಲಶೋ
- ದ್ಭವರು ಸುತರಿಗೆ ಬುದ್ಧಿಹೇಳಿದು ಮರಳಿದರು ಪುರಕೆ ||೮೦ ||
- ಪದವಿಭಾಗ-ಅರ್ಥ: ಇವರು ಶಭದಿನ ಶಭ ಮುಹೂರ್ತ ಪ್ರವರದಲಿ ಹೊರಹೊಂಟರ+ ಆ= ಪಾಂಡವರು ಶಭದಿನ ಶಭ ಮುಹೂರ್ತ ಪ್ರವರದಲಿ= ಅವಶ್ಯ ವಿವರ ನೋಡಿ, ಹೊರಹೊಂಟರ+ ಆ ಜನನಿಹವ= ಆರಾಜ್ಯದ ಜನರ ಸಮೂಹ, ಮರುಗಿತು+ ಅರಣ್ಯವೇ ಗತಿಯು+ ಅರಸ ನಮಗೆಂದು= ತಮಗಿನ್ನು ಅರಣ್ಯವೇ ಗತಿ ಕಷ್ಟವನ್ನು ಕೇಳುವವರು ಇಲ್ಲ ಎಂದು ದುಃಕ ಪಟ್ಟಿತು ಅವರ ಕಳುಹುತ= ನಗರದಿಂಧ ಬೀಳ್ಕೊಡುತ್ತಾ, ಬಂದರು+ ಆ ಕೌರವರು ನಿಂದರು,= ಸ್ವಲ್ಪ ದೂರ ಬಂದು ಕೌರವರು ಅಲ್ಲಿಯೇ ನಿಂತರು, ಭೀಷ್ಮ ಕಲಶೋದ್ಭವರು= ದ್ರೋಣರು ಸುತರಿಗೆ ಬುದ್ಧಿಹೇಳಿದು ಮರಳಿದರು ಪುರಕೆ= ಭೀಷ್ಮ ಮತ್ತು ದ್ರೋಣರು ಹಿತವಚನ ಹೇಲಿ ಹಸ್ತಿನಾವತಿಗೆ ಹಿಂತಿರುಗಿಹೋದರು.
- ಅರ್ಥ: ಆ ಪಾಂಡವರು ಅವಶ್ಯ ಮುಹೂರ್ತದ ವಿವರ ನೋಡಿ, ಶಭದಿನ, ಶುಭ ಮುಹೂರ್ತ(ಸಮಯ) ನೋಡಿ ರಾಜಧಾನಿಯಿಂದ ಹೊರಹೊಂಟರು. ಆ ರಾಜ್ಯದ ಜನರ ಸಮೂಹ, ತಮಗಿನ್ನು ಅರಣ್ಯವೇ ಗತಿ, ಕಷ್ಟವನ್ನು ಕೇಳುವವರು ಇಲ್ಲ, ಎಂದು ನಗರದಿಂಧ ಅವರನ್ನು ಬೀಳ್ಕೊಡುತ್ತಾ ದುಃಖಪಟ್ಟಿತು. ಸ್ವಲ್ಪ ದೂರ ಬಂದು ಆಕೌರವರು ಅಲ್ಲಿಯೇ ನಿಂತರು. ಭೀಷ್ಮ ಮತ್ತು ದ್ರೋಣರು ಹಿತವಚನ ಹೇಲಿ ಹಸ್ತಿನಾವತಿಗೆ ಹಿಂತಿರುಗಿಹೋದರು.
- ವಿದುರನೊಡನೈತರುತ ಸಂಕೇ
- ತದಲಿ ಸೂಚಿಸಿ ಮರಳಿದನು ನೃಪ
- ಸುದತಿ ವರ ಗಾಂಧಾರಿ ಮೊದಲಾದಖಿಳರಾಣಿಯರು ||
- ಮುದದಮುರುವಿನಲಿವರತೆಗೆದ
- ಪ್ಪಿದರು ಭೂಪತಿ ಸಹಿತ ಕಡು ಶೋ
- ಕದಲಿ ಕಳುಹಿಸಿಕೊಂಡು ಬಂದರು ಹಸ್ತಿನಾಪುರಕೆ ||೮೧ ||
- ಪದವಿಭಾಗ-ಅರ್ಥ:ವಿದುರನೊಡನೆ+ ಐತರುತ ಸಂಕೇತದಲಿ ಸೂಚಿಸಿ ಮರಳಿದನು= ವಿದುರನೊಡನೆ ಧರ್ಮಜನು ಬರುತ್ತಿರುವಾಗ ವಿದುರನು ಸಂಕೇತದ ರಹಸ್ಯಭಾಷೆಯಲ್ಲಿ ಅಪಾಯಗಳ ಬಗೆಗೆ ಸೂಚಿಸಿ ಹಸ್ತಿನಾಪುರಕ್ಕೆ ಹಿಂತಿರುಗಿದನು. ನೃಪಸುದತಿ ವರ ಗಾಂಧಾರಿ ಮೊದಲಾದ+ ಅಖಿಳರಾಣಿಯರು ಮುದದ ಮುರುವಿನಲಿ+ ಇವರತೆಗೆದಪ್ಪಿದರು= ರಾಜನರಾಣಿ ಪೂಜ್ಯ ಗಾಂಧಾರಿ ಮೊದಲಾದ ಎಲ್ಲಾ ರಾಣಿಯರು ಸಂತೋಷದ ಮುರುವಿನಲಿ (ಮುರಿದಂತೆ -ಕುಗ್ಗಿ)+ ಇವರ ತೆಗೆದಪ್ಪಿದರು= ಇವರನ್ನು ಅಪ್ಪಿ ಬೀಳ್ಕೊಟ್ಟು, ಭೂಪತಿ= ರಾಜ ಧೃತರಾಷ್ಟ್ರನ ಸಹಿತ, ಸಹಿತ ಕಡು ಶೋಕದಲಿ ಕಳುಹಿಸಿಕೊಂಡು ಬಂದರು ಹಸ್ತಿನಾಪುರಕೆ.
- ಅರ್ಥ: ವಿದುರನೊಡನೆ ಧರ್ಮಜನು ಬರುತ್ತಿರುವಾಗ ವಿದುರನು ಸಂಕೇತದ ರಹಸ್ಯಭಾಷೆಯಲ್ಲಿ ಅಪಾಯಗಳ ಬಗೆಗೆ ಸೂಚಿಸಿ ಹಸ್ತಿನಾಪುರಕ್ಕೆ ಹಿಂತಿರುಗಿದನು. ರಾಜನರಾಣಿ ಪೂಜ್ಯ ಗಾಂಧಾರಿ ಮೊದಲಾದ ಎಲ್ಲಾ ರಾಣಿಯರು ಸಂತೋಷ ಕುಗ್ಗಿ ಇವರನ್ನು ಕರೆದು ಅಪ್ಪಿ ಬೀಳ್ಕೊಟ್ಟು, ರಾಜ ಧೃತರಾಷ್ಟ್ರನ ಸಹಿತ, ಬಹಳ ಶೋಕದಿಂದ ಪಾಂಡವರಿಂದ, ಇನ್ನು ಹಿಂತಿರುಗಿ ಎಂದು ಹೇಳಿಸಿಕೊಂಡು ಹಸ್ತಿನಾಪುರಕ್ಕೆ ಬಂದರು.
- ಅರಸ ಕೇಳೈ ಹಸ್ತಿನಾಪುರ
- ವರವ ಹೊರನೆಡೆವಾ ಮುಹೂರ್ತಕೆ
- ವರುಷವಿಪ್ಪತ್ತೊಂಭತ್ತಾದುದು ಧರ್ಮನಂದನಗೆ ||
- ವರಷ ಹದಿಮೂರರಲಿ ಹಸ್ತಿನ
- ಪುರದೊಳಿದ್ದರು ಹಿಂದೆ ಶೋಡಶ
- ವರುಷ ವನದೊಳಗಿಂತು ಲೆಕ್ಕವ ನೋಡಿಕೋಯೆಂದ || ೮೨ ||
- ಪದವಿಭಾಗ-ಅರ್ಥ: ಅರಸ ಕೇಳೈ ಹಸ್ತಿನಾಪುರ+ ವರವ(ಶ್ರೇಷ್ಠವಾದ) ಹೊರನೆಡೆವ+ ಆ ಮುಹೂರ್ತಕೆ ವರುಷವಿಪ್ಪತ್ತೊಂಭತ್ತು+ ಆದುದು ಧರ್ಮನಂದನಗೆ ವರಷ ಹದಿಮೂರರಲಿ ಹಸ್ತಿನಪುರದೊಳಿದ್ದರು, ಹಿಂದೆ ಶೋಡಶವರುಷ= ಹದಿನಾರು ವರುಷ, ವನದೊಳಗೆ+ ಇಂತು ಲೆಕ್ಕವ ನೋಡಿಕೋಯೆಂದ.
- ಅರ್ಥ: ಜನಮೇಜಯನೇ ಕೇಳಪ್ಪಾ, ಶ್ರೇಷ್ಠವಾದ ಹಸ್ತಿನಾಪುರವನ್ನು ಬಿಟ್ಟು ಹೊರನೆಡೆಯುವ ಆ ಮುಹೂರ್ತಕ್ಕೆ ಧರ್ಮನಂದನನಿಗೆ ಇಪ್ಪತ್ತೊಂಭತ್ತು ವರ್ಷ ಆಗಿತ್ತು, ಹಸ್ತಿನಾಪುರದಲ್ಲಿ ಹದಿಮೂರು ವರಷ ಇದ್ದರು, ಹಿಂದೆ ಹದಿನಾರು ವರುಷ ವನದಲ್ಲಿ ಕಳೆದರು. ಹೀಗೆ ಪಾಮಡವರ ವಯಸ್ಸಿನ ಲೆಕ್ಕವನ್ನು ನೋಡಿಕೋಯೆಂದ ಮುನಿ.
ವಾರಣಾವತದಲ್ಲಿ ಪಾಂಡವರು - ಅರಗಿನಮನೆಯ ಅವಗಡದಿಂದ ಪಾರು
ಸಂಪಾದಿಸಿ
- ಬಂದರೈವರು ಕುಂತಿ ಸಹಿತಾ
- ನಂದದಲಿ ವರ ವಾರಣಾವತ
- ಕಂದು ಪುರಜನ ಕೂಡಿ ಕನ್ನಡಿ ಕಳಸ ವಿಭವದಲಿ ||
- ಬಂದು ತಾವಿದಿರಾಗಿ ಕುಂತೀ
- ನಂದನರ ಹೊಗಿಸಿದರು ಪಟ್ಟಣ
- ವಂದು ಮೆರೆದುದು ಕೂಡೆ ಗುಡಿ ತೋರಣ ರಚನೆಯಲಿ || ೮೩ ||
- ಪದವಿಭಾಗ-ಅರ್ಥ: ಬಂದರು+ ಐವರು ಕುಂತಿ ಸಹಿತ+ ಆನಂದದಲಿ ವರ ವಾರಣಾವತಕೆ+ ಅಂದು ಪುರಜನ ಕೂಡಿ ಕನ್ನಡಿ ಕಳಸ ವಿಭವದಲಿ= ವೈಭವದಿಂದ ಬಂದು ತಾವು+ ಇದಿರಾಗಿ ಕುಂತೀ ನಂದನರ ಹೊಗಿಸಿದರು ಪಟ್ಟಣವ+ ಅಂದು ಮೆರೆದುದು ಕೂಡೆ ಗುಡಿ ತೋರಣ ರಚನೆಯಲಿ
- ಅರ್ಥ: ಐವರು ಪಾಂಡವರೂ ಕುಂತಿ ಸಹಿತ ಆನಂದದಿಂದ ಶ್ರೇಷ್ಠವಾದ ವಾರಣಾವತ ನಗರಕ್ಕೆ ಬಂದರು. ಆ ದಿನ ಪುರಜನರು ಕೂಡಿಕೊಂಡು 'ಕನ್ನಡಿ ಕಳಸ ವೈಭವದಿಂದ ಎದುರುಗೊಂಡು / ಸ್ವಾಗತಿಸಿ ಅವರೆಲ್ಲರೂ, ಕುಂತಿಯ ಮಕ್ಕಳಾದ ಪಾಂಡವರನ್ನು ಪಟ್ಟಣಕ್ಕೆ ಹೊಗಿಸಿದರು. ಆ ದಿನ ನಗರವು ಗುಡಿ/ ಬಾವುಟ ತೋರಣ ಮೊದಲಾದ ಅಲಂಕಾರದ ರಚನೆಯಿಂದ ಕೂಡಿ ಮೆರೆಯಿತು/ ಶೋಬಿಸಿತು.
- ಬೀಡು ಕಾಣಿಕೆಯಿತ್ತು ಕಂಡುದು
- ನಾಡೆ ಕಾಣಿಸಿದನು ಪುರೋಚನ
- ಕೂಡೆ ಸಂದನು ಹಾಸುಹೊಕ್ಕಗವರ ಮನವರಿದು ||
- ನೋಡಿದನು ಯಮನಂದನನು ಮನೆ
- ಮಾಡಿದಂದವನರಗಿನರಮನೆ
- ಗೂಡುರಿವ ಬೇಳುವೆಯ ನೆನೆದರೆ ಬೊಪ್ಪನವರೆಂದ || ೮೪ ||
- ಪದವಿಭಾಗ-ಅರ್ಥ: ಬೀಡು(ತಂಗಲು, ನೆಲೆಸಲು ಬಂದ ರಾಜಕುಮಾರರಿಗೆ) ಕಾಣಿಕೆಯಿತ್ತು ಕಂಡುದು= ಅಲ್ಲಿ ವಾಸಿಸುವ ಜನರು ಪಾಂಡವರಿಗೆ ಕಾಣಿಕೆಗಳನ್ನು ಕೊಟ್ಟರು. ನಾಡೆ= ಅಧಿಕವಾಗಿ, ಚೆನ್ನಾಗಿ. ಕಾಣಿಸಿದನು ಪುರೋಚನ= ಪುರೋಚನನು ಅರಮನೆಯನ್ನೂ ನಗರವನ್ನೆಲ್ಲಾ ಚೆನ್ನಾಗಿ ತೊರಿಸಿದನು. ಕೂಡೆ ಸಂದನು ಹಾಸುಹೊಕ್ಕಾಗವರ ಮನವರಿದು= ಅವರ ಮನಸ್ಸಿನಲ್ಲಿದ್ದನ್ನು ಯೋಚಿಸಿ ಅದರಂತೆ ನೆಡೆದು ಅವರೊಡನೆ ಹಾಸುಹೊಕ್ಕಾಗಿ ಸೇರಿಕೊಂಡನು. ನೋಡಿದನು ಯಮನಂದನನು ಮನೆ ಮಾಡಿದ+ ಅಂದವನು(ರೀತಿಯನ್ನು)+ ಧರ್ಮರಾಯನು ನೋಡಿದನು, ಅರಗಿನ+ ಅರಮನೆ ಗೂಡು+ ಉರಿವ ಬೇಳುವೆಯ (ಉರಿಯುವ ಬೆಂಕಿಯಲ್ಲಿ - ನಮ್ಮನ್ನು - ಬೇಯಿಸುವ) ನೆನೆದರೆ= ಉಪಾಯವನ್ನು ಮಾಡಿದರೆ? ಬೊಪ್ಪನವರು (ದೊಡ್ಡಪ್ಪನವರು)+ ಎಂದ.
- ಅರ್ಥ:ಅಲ್ಲಿ ವಾಸಿಸುವ ಜನರು ಪಾಂಡವರಿಗೆ ಕಾಣಿಕೆಗಳನ್ನು ಕೊಟ್ಟರು. ಪುರೋಚನನು ಅರಮನೆಯನ್ನೂ ನಗರವನ್ನೆಲ್ಲಾ ಚೆನ್ನಾಗಿ ತೊರಿಸಿದನು. ಅವರ ಮನಸ್ಸಿನಲ್ಲಿದ್ದನ್ನು ಯೋಚಿಸಿ ಅದರಂತೆ ನೆಡೆದು ಅವರೊಡನೆ ಹಾಸುಹೊಕ್ಕಾಗಿ ಸೇರಿಕೊಂಡನು. ಧರ್ಮರಾಯನು ಅರಮನೆಯನ್ನು ಮಾಡಿದ ರೀತಿಯನ್ನು ನೋಡಿ, ದೊಡ್ಡಪ್ಪನವರು ನಮ್ಮನ್ನು ಉರಿಯುವ ಬೆಂಕಿಯಲ್ಲಿ ಬೇಯಿಸುವ ಉಪಾಯವನ್ನು ಮಾಡಿದರೆ? ಎಂದ.
- ಸಮಿಧೆಗಳು ನಾವ್ ನಾಲ್ವರಯ್ಯನ
- ರಮಣಿಯಾಹುತಿ ಭೀಮನೇ ಪಶು
- ಕುಮತಿ ಕಟ್ಟಿಸಿದರಮನೆಯಗ್ನಿ ಕುಂಡವಿದು ||
- ಎಮಗೆ ಸಂಶಯವಿಲ್ಲ ರಾಜೋ
- ತ್ತಮನೊ ದುರ್ಯೋಧನನೊ ದೀಕ್ಷಾ
- ಕ್ರಮವ ಧರಿಸಿದವನಾವನೆಂದನು ನಗುತ ಯಮಸೂನು || ೮೫ ||
- ಪದವಿಭಾಗ-ಅರ್ಥ: ಸಮಿಧೆಗಳು (ಹೋಮಕುಂಡದಲ್ಲಿ ಉರಿಯಲು ಹಾಕುವ ಮರದ ಸಣ್ಣ ತುಂಡು ಅಥವಾ ಕಡ್ಡಿಗಳು) ನಾವ್ ನಾಲ್ವರು+ ಅಯ್ಯನ ರಮಣಿಯು= ಕುಂತಿಯು ಆಹುತಿ (ಯಜ್ಞಕುಂಡದಲ್ಲಿ ಹಾಕುವ ಅನ್ನ ತುಪ್ಪ), ಭೀಮನೇ ಪಶು (ಯಜ್ಞದಲ್ಲಿ ಬಲಿಯಾಗಿ ಕೊಡುವ ಮುಖ್ಯವಾದ ಪ್ರಾಣಿ), ಕುಮತಿ(ದುರ್ಬುದ್ಧಿಯುಳ್ಳವನು) ಕಟ್ಟಿಸಿದ+ ಅರಮನೆಯು+ ಅಗ್ನಿ ಕುಂಡವು+ ಇದು, ಎಮಗೆ ಸಂಶಯವಿಲ್ಲ ರಾಜೋತ್ತಮನೊ= ಇದರ ಯೋಜನೆ ಮಾಡಿದವನು ರಾಜ ಧೃತಟಾಷ್ಟ್ರನೊ, ಅಥವಾ ದುರ್ಯೋಧನನೊ ದೀಕ್ಷಾಕ್ರಮವ ಧರಿಸಿದವನು+ ಆವನು(ಯಜ್ಞದೀಕ್ಷೆಯನ್ನು ಹಿಡಿದವನು ಯಾವನು)+ ಎಂದನು ನಗುತ ಯಮಸೂನು= ಯುಧಿಷ್ಠರನು.
- ಅರ್ಥ:ಈ ಅರಮನೆ ಒಂದು ಯಜ್ಞಕುಂಡದಂತಿದೆ. ನಾವು ನಾಲ್ಕುಜನ, ನಾನು, ಅರ್ಜುನ, ನಕುಲ ಸಹದೇವರು ಈ ಯಜ್ಞದಲ್ಲಿ ಸಮಿಧೆಗಳು / ಸಮಿತ್ತುಗಳು. ಪಾಮಡುವಿನ ರಾಣಿ ಕುಂತಿಯು ಯಜ್ಞದ ಆಹುತಿ, ಭೀಮನೇ ಮುಖ್ಯ ಬಲಿಯಾದ ಪಶು. ಈ ಅರಮನೆಯು ಅಗ್ನಿ ಕುಂಡವು. ಯಾವ ದುರ್ಬುದ್ಧಿಯುಳ್ಳವನು ಈ ಅರಮನೆಯನ್ನು ಕಟ್ಟಿಸಿದನೊ. ಇದು ನಮ್ಮನ್ನು ಸುಡಲು ಮಾಡಿದ ತಮತ್ರವೆಂಬ ವಿಚಾರದಲ್ಲಿ ನಮಗೆ ಸಂಶಯವಿಲ್ಲ. ಇದರ ಯೋಜನೆ ಮಾಡಿದವನು ರಾಜ ಧೃತಟಾಷ್ಟ್ರನೊ, ಅಥವಾ ದುರ್ಯೋಧನನೊ!ಈ ಯಜ್ಞಕ್ಕೆ ದೀಕ್ಷೆಯನ್ನು ಧರಿಸಿದವನು - ಯಜ್ಞದೀಕ್ಷೆಯನ್ನು ಹಿಡಿದವನು ಯಾವನು? ಎಂದು ನಗುತ್ತಾ ಯುಧಿಷ್ಠರನು ಹೇಳಿದನು.
- ಜನಪ ಕೇಳೈ ವಿದುರನಟ್ಟಿದ
- ಖನಕ ಬಂದನುಯಿವರ ಸಜ್ಜೆಯ
- ಮನೆಯಲತಿ ಗುಪ್ತದಲಿ ನೆಲದೊಳು ಸವೆಸಿದನು ಪಥವ ||
- ಅನುದಿನದೊಳಾ ಬಾಹಿರನು ಕಿ
- ಚ್ಚಿನಲಿ ಚುಚ್ಚುವ ಸಂದುಗಟ್ಟನು
- ನೆನೆವುತಿರ್ದನು ಖಳ ಪುರೋಚನನೊಡೆಯನಾಜ್ಞೆಯಲಿ ||೮೬ ||
- ಪದವಿಭಾಗ-ಅರ್ಥ: ಜನಪ ಕೇಳೈ ವಿದುರನು+ ಅಟ್ಟಿದ= ಕಳಿಸಿದ, ಖನಕ= ಗಣಿಯಲ್ಲಿ ಕೆಲಸ ಮಾಡುವವನು, ಶಿಲ್ಪಿ, ಖನಕ ಹೆಸರಿನವನು, ಬಂದನು+ (ಯಿ) ಇವರ ಸಜ್ಜೆಯ ಮನೆಯಲಿ (. ಮಲಗುವ ಮನೆ)+ ಅತಿ ಗುಪ್ತದಲಿ= ರಹಸ್ಯವಾಗಿ, ನೆಲದೊಳು ಸವೆಸಿದನು= ನೆಲದಲ್ಲಿ ತೋಡಿದನು, ಪಥವ= ಸುರಂಗದ ದಾರಿಯನ್ನು, ಅನುದಿನದೊಳು(ದಿನದಿನವೂ)+ ಆ ಬಾಹಿರನು ಕಿಚ್ಚಿನಲಿ= ಬೆಂಕಿಯಲ್ಲಿ, ಚುಚ್ಚುವ ಸಂದುಗಟ್ಟನು= ಸೂಕ್ತ ಸಮಯ ನೆನೆವುತಿರ್ದನು ಖಳ= ದುಷ್ಟ, ಪುರೋಚನನು+ ಒಡೆಯನ+ ಆಜ್ಞೆಯಲಿ.
- ಅರ್ಥ:ರಾಜನೇ ಕೇಳು, ವಿದುರನು ಕಳಿಸಿದ ಗಣಿಯಲ್ಲಿ ಕೆಲಸ ಮಾಡುವ ಶಿಲ್ಪಿ ಖನಕನು ವಾರಣಾವತಿಯ ಅರಮನೆಗೆ ಬಂದನು. ಅವನು ಇವರ ಮಲಗುವ ಮನೆಯಲ್ಲಿ, ಅತಿ ರಹಸ್ಯವಾಗಿ, ನೆಲದಲ್ಲಿ ಸುರಂಗದ ದಾರಿಯನ್ನು ತೋಡಿದನು. ಅನುದಿನದಲ್ಲಿಯೂ ಆ ದುಷ್ಟ ಪುರೋಚನನುನು ಬೆಂಕಿಯನ್ನು ಹಚ್ಚುವ ಸಂದುಗಟ್ಟನ್ನು ಒಡೆಯ ದುರ್ಯೋಧನನ ಆಜ್ಞೆಯಂತೆ ನೆನಪುಮಾಡಿಕೊಳ್ಳುತ್ತಿದ್ದನು.
- ಒಂದು ದಿನ ಹಬ್ಬದಲಿ ಭೂಸುರ
- ವೃಂದವುಂಡುದು ಪಂಚ ಪುತ್ರಿಕೆ
- ಯೆಂದು ಬೇಡತಿಯೊಬ್ಬಳಿದ್ದಳು ಸುತರು ಸಹಿತಲ್ಲಿ ||
- ಅಂದಿನಿರುಳು ಪುರೋಚನನು ತಾ
- ನೊಂದ ನೆನೆದರೆ ದೈವಗತಿ ಬೇ
- ರೊಂದ ನೆನೆದುದು ಕೇಳು ಜನಮೇಜಯ ಮಹೀಪಾಲ || ೮೭ ||
- ಪದವಿಭಾಗ-ಅರ್ಥ: ಒಂದು ದಿನ ಹಬ್ಬದಲಿ ಭೂಸುರವೃಂದವುಂಡುದು= ಈ ಅರಗಿನ ಮನೆಯಲ್ಲಿ, ಒಂದು ದಿನ ಹಬ್ಬದಲ್ಲಿ ಬ್ರಾಹ್ಮಣರು ಊಟ ಮಾಡಿದರು; ಪಂಚ ಪುತ್ರಿಕೆಯೆಂದು ಬೇಡತಿಯೊಬ್ಬಳಿದ್ದಳು ಸುತರು ಸಹಿತಲ್ಲಿ ಅಂದಿನಿರುಳು= ಅದೇ ದಿನ ಐದು ಮಕ್ಕಳ ತಾಯಿಯಾಗಿದ್ದ ಬೇಡತಿಯೊಬ್ಬಳು ಅಲ್ಲಿ ಬಂದು ಮಕ್ಕಳು ಸಹಿತ ಉಳಿದಿದ್ದಳು. ಪುರೋಚನನು ತಾನೊಂದ ನೆನೆದರೆ ದೈವಗತಿ ಬೇರೊಂದ ನೆನೆದುದು= ಪುರೋಚನನು ತಾನೊಂದ ಬಗೆ ಯೋಜಿಸಿದರೆ, ದೈವಗತಿ ಬೇರೊಂದ ರೀತಿ ಯೋಚಿಸುವುದು, ಕೇಳು ಜನಮೇಜಯ ಮಹೀಪಾಲ= ಕೇಳು ಜನಮೇಜಯ ರಾಜನೇ ಕೇಳು ಎಂದನು ಮುನಿ.
- ಅರ್ಥ:ಈ ಅರಗಿನ ಮನೆಯಲ್ಲಿ, ಒಂದು ದಿನ ಹಬ್ಬದಲ್ಲಿ ಬ್ರಾಹ್ಮಣರು ಊಟ ಮಾಡಿದರು; ಅದೇ ದಿನ ಐದು ಮಕ್ಕಳ ತಾಯಿಯಾಗಿದ್ದ ಬೇಡತಿಯೊಬ್ಬಳು ಅಲ್ಲಿ ಬಂದು ಮಕ್ಕಳು ಸಹಿತ ಉಳಿದಿದ್ದಳು. ಪುರೋಚನನು ತಾನೊಂದ ಬಗೆ ಯೋಜಿಸಿದರೆ, ದೈವಗತಿ ಬೇರೊಂದ ರೀತಿ ಯೋಚಿಸುವುದು,ಕೇಳು ಜನಮೇಜಯ ರಾಜನೇ ಕೇಳು ಎಂದನು ಮುನಿ.
- ಅವನು ನಿದ್ರೆಯೊಳರಿಯದಿರಲುಆ
- ಭವನ ಮುಖದಲಿ ಕಿಚ್ಚನೊಟ್ಟಿಸಿ
- ಪವನಸುತ ಸಹಿತಿವರು ಹಾಯ್ದರು ಬಿಲದ ಮಾರ್ಗದಲಿ ||
- ಅವರು ಬೆಂದರು ಮುನ್ನ ಬಳಿಕಾ
- ಭವನ ಪಂಕ್ತಿಗಳುರಿದು ಕರಗಿದ
- ವವನಿಯಲಿ ಹೊನಲಾಯ್ತು ಪುರಜನವೈದೆ ಬೆರಗಾಗೆ || ೮೮ ||
- ಪದವಿಭಾಗ-ಅರ್ಥ: ಅವನು ನಿದ್ರೆಯೊಳು+ ಅರಿಯದಿರಲು= ಪುರೋಚನನು ನಿದ್ರೆಯಲ್ಲಿದ್ದು ಅವನು ಅರಿಯದಂತೆ, ಆ ಭವನ ಮುಖದಲಿ ಕಿಚ್ಚನು+ ಒಟ್ಟಿಸಿ= ಆ ಅರಗಿನ ಅರಮನೆಯ ಮುಖ್ಯದ್ವಾರದಲ್ಲಿ ಬೆಂಕಿ ಹಚ್ಚಿ, ಪವನಸುತ=ಭೀಮ, ಸಹಿತ+ ಇವರು(ಪಾಂಡವರು) ಹಾಯ್ದರು ಬಿಲದ ಮಾರ್ಗದಲಿ= ಭೀಮನ ಸಹಿತ ಪಾಂಡವರು ಸುರಂಗದ ದಾರಿಯಲ್ಲಿ ಹೋದರು. ಅವರು ಬೆಂದರು ಮುನ್ನ= ಒಳಗಿದ್ದ ಪುರೋಚನ ಬೇಡರ ಕುಟುಂಬ ಮೊದಲು ಬೆಂದು ಸತ್ತು ಹೋದರು. ಬಳಿಕ+ ಆ ಭವನ ಪಂಕ್ತಿಗಳು+ ಉರಿದು ಕರಗಿದವು+ ಅವನಿಯಲಿ= ಭೂಮಿಯಲ್ಲಿ, ಹೊನಲಾಯ್ತು= ಬಳಿಕ ಆಅರಮನೆ ಮತ್ತು ಸಾಲು ಸಾಲು ಮನೆಗಳು ಸುಟ್ಟು, ಅರಗು ರಾಳ ಕರಗಿ ಹೊಳೆಯಾಗಿ ಹರಿಯಿತು. ಪುರಜನವು+ ಐದೆ ಬೆರಗಾಗೆ= ನಗರದ ಜನರು ಬಂದು ನೋಡಿ ಬೆರಗಾದರು.
- ಅರ್ಥ:ಪುರೋಚನನು ನಿದ್ರೆಯಲ್ಲಿದ್ದಾಗ ಅವನು ಅರಿಯದಂತೆ, ಆ ಅರಗಿನ ಅರಮನೆಯ ಮುಖ್ಯದ್ವಾರದಲ್ಲಿ ಬೆಂಕಿಯನ್ನು ಹಚ್ಚಿ, ಭೀಮನ ಸಹಿತ ಪಾಂಡವರು ಸುರಂಗದ ದಾರಿಯಲ್ಲಿ ತಪ್ಪಸಿಕೊಂಡು ಹೋದರು.ಒಳಗಿದ್ದ ಪುರೋಚನ ಮತ್ತು ಬೇಡರ ಕುಟುಂಬ ಮೊದಲು ಬೆಂದು ಸತ್ತು ಹೋದರು. ಬಳಿಕ ಆಅರಮನೆ ಮತ್ತು ಸಾಲು ಸಾಲು ಮನೆಗಳು ಸುಟ್ಟು, ಅರಗು ರಾಳ ಕರಗಿ ಹೊಳೆಯಾಗಿ ಹರಿಯಿತು. ಪುರಜನವು+ ಐದೆ ಬೆರಗಾಗೆ= ನಗರದ ಜನರು ಬಂದು ನೋಡಿ ಬೆರಗಾದರು.
- ಅಕಟ ಪಾಂಡವರಳಿದರೇ ಕೌ
- ಳಿಕದಿ ಕೌರವರಿರಿದರೇ ಮತಿ
- ವಿಕಳರವದಿರು ಬೆಂದು ಹೋದರು ಧರ್ಮದಲಿ ನೆಡೆದು ||
- ಪ್ರಕಟ ಪಾಪರಿಗಹುದು ಸಾಮ್ರಾ
- ಜ್ಯಕವು ಧರ್ಮಾತ್ಮರಿಗೆಯೀ ಪರಿ
- ವಿಕಟತೆಯ ಸುರ ರಾಜ್ಯವೆಂದುದು ಪೌರಜನ ಮರುಗಿ || ೮೯ ||
- ಪದವಿಭಾಗ-ಅರ್ಥ: ಅಕಟ ಪಾಂಡವರು+ ಅಳಿದರೇ= ಸತ್ತುಹೋದರೇ, ಕೌಳಿಕದಿ=ಮೋಸದಿಂದ, ಕೌರವರು+ ಇರಿದರೇ(ಕತ್ತಿಯಿಂದ ಚುಚ್ಚಿ ಕೊಂದರೇ)= ಕೌರವರು ಅವರನ್ನು ಮೋಸದಿಂದ ಕೊಂದರೇ, ಮತಿವಿಕಳರು (ಬುದ್ಧಿ ಇಲ್ಲದವರು)+ ಅವದಿರು ಬೆಂದು ಹೋದರು ಧರ್ಮದಲಿ ನೆಡೆದು= ಬುದ್ಧಿಇಲ್ಲದ ಅವರು ಧರ್ಮದಿಂದ ನೆಡೆದು ಬೆಂಕಿಯಲ್ಲಿ ಬೆಂದು ಸತ್ತರು; ಪ್ರಕಟ ಪಾಪರಿಗೆ(ಕಾಣುವಂತೆ ಪಾಪ ಕೆಲಸ ಮಾಡುವವರಿಗೆ) + ಅಹುದು= ಆಗುವುದು - ಸೇರುವುದು, ಸಾಮ್ರಾಜ್ಯಕವು ಧರ್ಮಾತ್ಮರಿಗೆಯೆ+ ಈ ಪರಿ ವಿಕಟತೆಯು(ಘೋರವಾದ)+ ಸುರ ರಾಜ್ಯವು+ ಎಂದುದು ಪೌರಜನ ಮರುಗಿ= ಪಾಪದ ಕೆಲಸ ಮಾಡುವವರಿಗೆ ಸಾಮ್ರಾಜ್ಯಕವು ಸೇರುವುದು; ಧರ್ಮಾತ್ಮರಿಗೆ ಈ ರೀತಿಯ ಸ್ವರ್ಗಲೋಕವು - ಎಂಥಹ ಘೋರ ಎಂದು ಪೌರಜನ ಮರುಗಿದರು.
- ಅರ್ಥ: ಅಕಟ ಪಾಂಡವರುಸತ್ತುಹೋದರೇ, ಕೌರವರು ಅವರನ್ನು ಮೋಸದಿಂದ ಕೊಂದರೇ, ಬುದ್ಧಿಇಲ್ಲದ ಅವರು ಧರ್ಮದಿಂದ ನೆಡೆದು ಬೆಂಕಿಯಲ್ಲಿ ಬೆಂದು ಸತ್ತರು; ಪಾಪದ ಕೆಲಸ ಮಾಡುವವರಿಗೆ ಸಾಮ್ರಾಜ್ಯಕವು ಸೇರುವುದು; ಧರ್ಮಾತ್ಮರಿಗೆ ಈ ರೀತಿಯ ಸ್ವರ್ಗಲೋಕವು - ಎಂಥಹ ಘೋರ ಎಂದು ಹೇಳಿ ಪೌರಜನ ಮರುಗಿದರು.
- ಮುನ್ನ ಬೆಂದನಲಾ ಪುರೋಚನ
- ಕುನ್ನಿಯದು ಲೇಸಾಯ್ತು ಹದನಾ
- ಪನ್ನರಾದರೆ ಅವ್ಯೆಯರು ಸಹಿತಕಟ ಪಾಂಡವರು ||
- ಇನ್ನು ಸುಡು ಸುಡು ಧರ್ಮ ಸಂಪ್ರತಿ
- ಪನ್ನ ಗಣದಾಚಾರಗಳ ಸಂ
- ಪನ್ನತೆಯನೆಂದೊರಲಿ ಮರುಗಿತು ನಿಖಿಲ ಪರಿವಾರ || ೯೦ ||
- ಪದವಿಭಾಗ-ಅರ್ಥ: ಮುನ್ನ= ಮೊದಲೇ ಬೆಂದನಲಾ= ಸುಟ್ಟುಹೋದನಲ್ಲಾ ಪುರೋಚನ ಕುನ್ನಿಯು+ ಅದು ಲೇಸಾಯ್ತು(ಒಳ್ಳೆಯದಾಯಿತು); ಹದನು(ಮುಖ್ಯವಾಗಿ)+ ಆಪನ್ನರು ಆದರೆ= ಆಪತ್ತಿಗೆ ಗುರಿಯಾದವರು ಆದರೇ?. ಅವ್ಯೆಯರು(ತಾಯಿಯ) ಸಹಿತ+ ಅಕಟ ಪಾಂಡವರು, ಇನ್ನು ಸುಡು ಸುಡು ಧರ್ಮಸಂಪ್ರತಿಪನ್ನ= ಸಂಪ್ರದಾಯವ ಗುಣವನ್ನು ಗಣದ+ ಆಚಾರಗಳ ಸಂಪನ್ನತೆಯನೆಂದೊರಲಿ ಸಂಪನ್ನತೆಯನು+ ಎಂದು+ ಒರಲಿ ಮರುಗಿತು ನಿಖಿಲ ಪರಿವಾರ= ಇನ್ನು ಸುಡಬೇಕು ಸಂಪ್ರದಾಯವ ಗುಣವನ್ನು, ಅದನ್ನು ಅನುಸರಿಸುವ ಸಂಪನ್ನತನವನ್ನು ಎಂದುಎಲ್ಲಾ ಜನ ಪರಿವಾರದವರು ಅತ್ತು ದುಃಖಿಸಿದರು.
- ಅರ್ಥ:ಮೊದಲೇ ಸುಟ್ಟುಹೋದನಲ್ಲಾ ಪುರೋಚನ ಕುನ್ನಿಯು ಅದು ಒಳ್ಳೆಯದಾಯಿತು; ಆದರೆ ಮುಖ್ಯವಾಗಿ ಸಂಪನ್ನರು ತಾಯಿಯ ಸಹಿತ ಅಕಟ ಪಾಂಡವರು ಆಪತ್ತಿಗೆ ಗುರಿಯಾದರೇ?. ಇನ್ನು ಸತ್ಸಂಪ್ರದಾಯವ ಗುಣವನ್ನು ಸುಡಬೇಕು, ಗುಣಾಚಾರ ಸಂಪ್ರದಾಯವನ್ನು ಅನುಸರಿಸುವ ಸಂಪನ್ನತನವನ್ನು ಸುಡಬೇಕು ಎಂದು ಅಲ್ಲಿಯ ಎಲ್ಲಾ ಜನರೂ ಪರಿವಾರದವರೂ ಅತ್ತು ದುಃಖಿಸಿದರು.
- ಒಗೆದುದೀ ಬೇಳಂಬ ಹಸ್ತಿನ
- ನಗರಿಯಲಿ ತತ್ಪೌರಜನ ಮನ
- ವುಗಿದು ಬಿದ್ದುದು ಶೋಕಮಯ ಸಾಗರದ ಮಧ್ಯದಲಿ ||
- ಹೊಗೆದುದಾನನ ವಿದುರಭೀಷ್ಮಾ
- ದಿಗಳಿಗಾಧೃತರಾಷ್ಟದರ ಸುತರಿಗೆ
- ದುಗುಡ ದಡ್ಡಿಯ ಹರಷಸಿರಿ ಹೊಕ್ಕಳು ಮುಖಾಂಬುಜವ || ೯೧ ||
- ಪದವಿಭಾಗ-ಅರ್ಥ: ಒಗೆದುದು+ ಈ ಬೇಳಂಬ ಹಸ್ತಿನನಗರಿಯಲಿ= ಹಸ್ತಿನಾಪುರದಲ್ಲಿ ಹರಡಿತು- ಪಾಂಡವರು ಬೆಂಕಿಯಲ್ಲಿ ಬೆಂದ ಈ ಸುದ್ದಿ; ತತ್ಪೌರಜನ ಮನವುಗಿದು ಬಿದ್ದುದು ಶೋಕಮಯ ಸಾಗರದ ಮಧ್ಯದಲಿ= ತತ್ ಪೌರಜನ- ಅಲ್ಲಿಯ ಪುರಜನರು ಮನವುಗಿದು= ಮನಸ್ಸು ಉಗಿದು= ಕಿತ್ತು, ಮನನೊಂದು ಶೋಕಮಯ ಸಮುದ್ರದ ನಡುವೆ ಬಿದ್ದಿತು- ಮುಳುಗಿದರು. = ಅಲ್ಲಿಯ ಪುರಜನರು ಮನನೊಂದು ಶೋಕಸಾಗರದಲ್ಲಿ ಮುಳುಗಿದರು; ಹೊಗೆದುದು+ ಆನನ ವಿದುರ ಭೀಷ್ಮಾದಿಗಳಿಗೆ+= ವಿದುರ ಮತ್ತು ಭೀಷ್ಮ ಮೊದಲಾದವರಿಗೆ ಆನನ= ಮುಖವು, ಹೊಗೆದುದು- ದುಃಖದಿಂದ ಕಪ್ಪಾಯಿತು; ಆ ಧೃತರಾಷ್ಟ್ರ ಸುತರಿಗೆ= ಧೃತರಾಷ್ಟ್ರನ ಮಕ್ಕಳಿಗೆ ದುಗುಡದ+ ಅಡ್ಡಿಯ= ಅಡ್ಡಲಾಗಿ ಇರಿಸಿದ ವಸ್ತು, ಹರಷಸಿರಿ ಹೊಕ್ಕಳು ಮುಖಾಂಬುಜವ= ಧೃತರಾಷ್ಟ್ರನ ಮಕ್ಕಳಿಗೆ ದುಃಖದ ಮುಖವಾಡ ಹೊತ್ತಿದ್ದರೂ, ಹರ್ಷದ ಸಿರಿದೇವಿ ಲಕ್ಷ್ಮಿ ಅವರಮುಖಕಮಲದಲ್ಲಿ ಸೇರಿಕೊಂಡಳು.
- ಅರ್ಥ: ಪಾಂಡವರು ಬೆಂಕಿಯಲ್ಲಿ ಬೆಂದ ಈ ಸುದ್ದಿ ಹಸ್ತಿನಾಪುರದಲ್ಲಿ ಹರಡಿತು; ಅಲ್ಲಿಯ ಪುರಜನರು ಮನನೊಂದು ಶೋಕಸಾಗರದಲ್ಲಿ ಮುಳುಗಿದರು; ವಿದುರ ಮತ್ತು ಭೀಷ್ಮ ಮೊದಲಾದವರಿಗೆ ಮುಖವು ದುಃಖದಿಂದ ಕಪ್ಪಾಯಿತು. ಆ ಧೃತರಾಷ್ಟ್ರನ ಮಕ್ಕಳಿಗೆ ದುಃಖದ ಮುಖವಾಡ ಹೊತ್ತಿದ್ದರೂ, ಹರ್ಷದ ಸಿರಿದೇವಿಯಾ ಲಕ್ಷ್ಮಿ ಅವರ ಮುಖಕಮಲದಲ್ಲಿ ನೆಲಸಿದಳು. ಪಾಂಡವರು ಅರಗಿನ ಮನೆಯಲ್ಲಿ ಬೆಂದ ಸುದ್ದಿಯಿಂದ ಧೃತರಾಷ್ಟ್ರನ ಮಕ್ಕಳಿಗೆ ಬಹಳ ಹರ್ಷವಾಗಿ ಮುಖವು ಅರಳಿತು.
- ಬಂದುದಾ ಸುರನದಿಗೆ ಕೌರವ
- ವೃಂದ ಪರಿಜನವೈದೆ ಶೋಕಿಸಿ
- ಮಿಂದು ಗಂಗಾತೀರದಲಿ ಬಳಿಕೂರ್ಧ್ವದೇಹಿಕವ ||
- ಸಂದ ವಿಧಿಯಲಿ ಮಾಡಿ ಪರಮಾ
- ನಂದ ಮಿಗಲವರಿರ್ದರಿತ್ತಲು
- ಇಂದು ಕುಲಸಂಭವರ ವಿಧಿಯನು ಮತ್ತೆ ಕೇಳೆಂದ ||೯೨ ||
- ಪದವಿಭಾಗ-ಅರ್ಥ: ಬಂದುದು+ ಆ ಸುರನದಿಗೆ=ಗಂಗೆಗೆ, ಕೌರವ ವೃಂದ=ಕೌರವರ ಗುಂಪು ಆ ಗಂಗಾನದಿಗೆ ಬಂದಿತು; ಪರಿಜನವೈದೆ= ಅವರ ಪರಿವಾರದವರೂ ಬಂದರು. ಶೋಕಿಸಿ ಮಿಂದು ಗಂಗಾತೀರದಲಿ ಬಳಿಕ+ ಊರ್ಧ್ವದೇಹಿಕವ= ಅಪರ ಕರ್ಮದ ಕ್ರಿಯೆ ಸಂದ ವಿಧಿಯಲಿ ಮಾಡಿ= ಪಾಂಡವರ ಸಾವಿಗೆ ದುಃಖಿಸಿ ಅಲ್ಲಿ ಸ್ನಾನ ಮಾಡಿ, ಬಳಿಕ ಗಂಗಾತೀರದಲ್ಲಿಯೇ ಊರ್ಧ್ವದೈಹಿಕ - ಅಪರ ಕರ್ಮವನ್ನು ಶಾಸ್ತ್ರ ವಿಧಿಯಲ್ಲಿ ಮಾಡಿದರು. ಪರಮಾನಂದ ಮಿಗಲು+ ಅವರಿರ್ದರು+ ಇತ್ತಲು ಇಂದು ಕುಲಸಂಭವರ ವಿಧಿಯನು ಮತ್ತೆ ಕೇಳೆಂದ= ಕೌರವರಿಗೆ ಪರಮಾನಂದಕ್ಕೈ ಹೆಚ್ಚು ಆನಂದಪಟ್ಟು ಹಸತ್ಇನಾವತಿಯಲ್ಲಿ ಅವರಿದ್ದರು. ಇತ್ತ ಚಂದ್ರವಂಶದ ಪಾಂದವಕುಮಾರರ ವಿಧಿಯ ಮುಂದಿನದನ್ನು ಕೇಳು ಎಂದ ಮುನಿ.
- ಅರ್ಥ:ಕೌರವರ ಗುಂಪು ಆ ಗಂಗಾನದಿಗೆ ಬಂದಿತು; ಅವರ ಪರಿವಾರದವರೂ ಬಂದರು. ಅವರೆಲ್ಲರೂ ಪಾಂಡವರ ಸಾವಿಗೆ ದುಃಖಿಸಿ ಅಲ್ಲಿ ಸ್ನಾನ ಮಾಡಿ, ಬಳಿಕ ಗಂಗಾತೀರದಲ್ಲಿಯೇ ಊರ್ಧ್ವದೈಹಿಕ - ಅಪರ ಕರ್ಮವನ್ನು ಶಾಸ್ತ್ರ ವಿಧಿಯಲ್ಲಿ ಮಾಡಿದರು. ಕೌರವರು ಪರಮಾನಂದಕ್ಕೂ ಹೆಚ್ಚು ಆನಂದದಿಂದ ಹಸ್ತಿನಾವತಿಯಲ್ಲಿ ಅವರಿದ್ದರು. ಇತ್ತ ಚಂದ್ರವಂಶದ ಪಾಂಡವಕುಮಾರರ ವಿಧಿಯ ಘಟನೆಯ ಮುಂದಿನದನ್ನು ಕೇಳು ಎಂದ ಮುನಿ.
- ಬಿಲಮುಖದೊಳುತ್ತರಿಸಿ ಬಲಗ
- ತ್ತಲೆಯೊಳಡವಿಯ ಮಾರ್ಗದಲಿ ಕಲು
- ಮುಳುಗಳೊಳು ಕಾಪಥಕೆ ಕೋಮಲ ಚರಣ ಕೊಡುತ ||
- ತೋಳಲಿದರು ಬೆಳಗಾಗೆ ಹಳ್ಳಿಯ
- ಬಳಿಯ ಹೊದ್ದದೆ ಹಾಯ್ದು ಹೊಕ್ಕರು
- ಹಳುವವನು ಬೆಳಗಡೆಗೆ ನಡೆದರು ಹಲವು ಯೋಜನವ || ೯೩ ||
- ಪದವಿಭಾಗ-ಅರ್ಥ:ಬಿಲಮುಖದೊಳು+ ಉತ್ತರಿಸಿ= ಮುಂದುವರಿದು ಹೊರಬಂದು, ಬಲಗತ್ತಲೆಯೊಳು+ ಅಡವಿಯ ಮಾರ್ಗದಲಿ ಕಲುಮುಳುಗಳೊಳು ಕಾಪಥಕೆ= ಕೆಟ್ಟ ಕಾಡುದಾರಿಯಲ್ಲಿ, ಕೋಮಲ ಚರಣ ಕೊಡುತ= ಮೃದುವಾದ ಪಾದಗಳನ್ನು ಊರುತ್ತಾ, ತೋಳಲಿದರು= ಅಲೆದರು. ಬೆಳಗಾಗೆ ಹಳ್ಳಿಯ ಬಳಿಯ ಹೊದ್ದದೆ= ಹೊಗದೆ, ಹಾಯ್ದು= ಅದನ್ನು ದಾಟಿ, ಹೊಕ್ಕರು ಹಳುವವನು= ಕಾಡನ್ನು ಹೊಕ್ಕರು, ಬೆಳಗು+ ಅಡೆಗೆ ನಡೆದರು ಹಲವು ಯೋಜನವ= ಬೆಳಗಾಗಿ ಮತ್ತೆ ರಾತ್ರಿಯಾಗವಾಗ ಅನೇಕ ಯೋಜನಗಳ ದೂರ ನೆಡೆದರು.
- ಅರ್ಥ: ಪಾಂಡವರು ಸುರಂಗ ಮಾರ್ಗದಲ್ಲಿ ಮುಂದುವರಿದು ಹೊರಬಂದು, ಕೆಟ್ಟ ಕಾಡುದಾರಿಯಲ್ಲಿ ಮೃದುವಾದ ಪಾದಗಳನ್ನು ಊರುತ್ತಾ ಅಲೆದರು. ಬೆಳಗಾದಾಗ ಹತ್ತಿರದ ಹಳ್ಳಿಗೆ ಹೊಗದೆ, ಅದನ್ನು ದಾಟಿ, ಕಾಡನ್ನು ಹೊಕ್ಕರು, ಬೆಳಗಾಗಿ ಮತ್ತೆ ರಾತ್ರಿಯಾಗವಾಗ ಅನೇಕ ಯೋಜನಗಳ ದೂರ ನೆಡೆದರು.
- ದಾಟಿದರು ಗಂಗೆಯನು ರಾಯನ
- ಮಾಟದಲಿ ಹಲುಮುರಿದುದೇ ನ
- ಮ್ಮಾಟಕಿದು ಹಿರಿದಲ್ಲಲಾಯೆನುತೈವರಡಿಗಡಿಗೆ ||
- ಕೋಟಲೆಯ ಕೊಲ್ಲಣಿಗೆಯಲಿ ಮೈ
- ನೋಟಕಲಸದೆ ಬಿಸಿಲಲವರು ಮ
- ಹಾಟವಿಯ ಮಧ್ಯವನು ಹೊಕ್ಕರು ನೃಪತಿ ಕೇಳೆಂದ || ೯೪ ||
- ಪದವಿಭಾಗ-ಅರ್ಥ: ದಾಟಿದರು ಗಂಗೆಯನು= ಅವರು ಮುಂದೆ ಗಂಗೆಯನ್ನು ದಾಟಿದರು. ರಾಯನ ಮಾಟದಲಿ ಹಲುಮುರಿದುದೇ= ಧೃತರಾಷ್ಟ್ರನ ಕುಟಿಲ ತಂತ್ರದಲ್ಲಿ ನಮ್ಮ ಹಲ್ಲು ಮುರಿಯಿತೇ - ಇಲ್ಲವಲ್ಲಾ! ನಮ್ಮಾಟಕಿದು ಹಿರಿದಲ್ಲಲಾ= ಕೌರವರನ್ನು ಎದುರಿಸುವ ನಮ್ಮ ಆಟಕ್ಕೆ ಇದೇನು ದೊಡ್ಡದಲ್ಲವಲ್ಲವೇ? ಎಂದು ಹೇಳುತ್ತಾ, +ಯೆನುತ+/ ಐವರು+ ಅಡಿಗಡಿಗೆ ಕೋಟಲೆಯ ಕೊಲ್ಲಣಿಗೆಯಲಿ ಮೈ ನೋಟಕೆ+ ಅಲಸದೆ ಬಿಸಿಲಲಿ+ ಅವರು ಮಹಾಟವಿಯ ಮಧ್ಯವನು ಹೊಕ್ಕರು ನೃಪತಿ ಕೇಳೆಂದ= ಐವರು ಪಾಂದವರೂ ತಾಯಿಸಹಿತ ಹೆಜ್ಜೆಹೆಜ್ಜೆಗೂ ಕೋಟಲೆಯ ಕೊಲ್ಲಣಿಗೆಯಲಿ= ಗೆಯ್ಮೆಯಲ್ಲಿ, ಪರಿಶ್ರಮದಲ್ಲಿ, ಮೈ ನೋಟಕೆ+ ಅಲಸದೆ= ಬೇಸರಿಸದೆ, ಬಿಸಿಲಲಿ+ ಅವರು ಮಹಾಟವಿಯ= ದೊಡ್ಡಕಾಡಿನ ಮಧ್ಯವನು ಹೊಕ್ಕರು ನೃಪತಿ ಕೇಳೆಂದ.
- ಅರ್ಥ: ಅವರು ಮುಂದೆ ಗಂಗಾನದಿಯನ್ನು ದಾಟಿದರು. ಧೃತರಾಷ್ಟ್ರನ ಕುಟಿಲ ತಂತ್ರದಲ್ಲಿ ನಮ್ಮ ಹಲ್ಲು ಮುರಿಯಿತೇ - ಇಲ್ಲವಲ್ಲಾ! ಕೌರವರನ್ನು ಎದುರಿಸುವ ನಮ್ಮ ಆಟಕ್ಕೆ ಇದೇನು ದೊಡ್ಡದಲ್ಲವಲ್ಲವೇ? ಎಂದು ಹೇಳುತ್ತಾ, ಐವರು ಪಾಂದವರೂ ತಾಯಿಸಹಿತ ಹೆಜ್ಜೆಹೆಜ್ಜೆಗೂ ಕೋಟಲೆಯ, ಅನೇಕ ಕಷ್ಟಗಳ ಪರಿಶ್ರಮದಲ್ಲಿ ಬೇಸರಿಸದೆ ಅವರು ದೊಡ್ಡಕಾಡಿನ ಮಧ್ಯವನು ಹೊಕ್ಕರು; ಜನಮೇಜಯ ನೃಪತಿಯೇ ಕೇಳು ಎಂದ ವೈಶಂಪಾಯನ ಮುನಿ.[೭]
♦
♦♣♣♣♣♣♣♣♣♣♣♣♣♣♣♣♣♣♣♣♦
ॐ
- *ಕುಮಾರವ್ಯಾಸ ಭಾರತ
- * ಕುಮಾರವ್ಯಾಸಭಾರತ-ಸಟೀಕಾ
- * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
- * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
- * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
|