<ಕುಮಾರವ್ಯಾಸಭಾರತ-ಸಟೀಕಾ
ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೩)
ಸಂಪಾದಿಸಿ
- ಚಂಡಮುನಿ ಮಂತ್ರಾಹ್ವಯದಿ ಬರೆ
- ಚಂಡಕರ ತತ್ತೇಜನಾಹವ
- ಚಂಡ ವಿಕ್ರಮನವನಿಯಲಿ ಜನಿಸಿದನು ಕಲಿಕರ್ಣ ||
- ಪದ್ಯ-ಸೂಚನೆ:ಪದವಿಭಾಗ-ಅರ್ಥ:ಚಂಡಮುನಿ= ದೂರ್ವಾಸಮುನಿಯ, ಮಂತ್ರ+ ಅಹ್ವಯದಿ ಬರೆ=ಮಂತ್ರದ ಆಹ್ವಾನದಿಂದ, ಚಂಡಕರ ತತ್ತೇಜನು(ಸೂರ್ಯನು)+ ಆಹವ= ಕರೆಯಲ್ಪಡಲು ಚಂಡ ವಿಕ್ರಮನು(ಶೂರನು )+ ಅವನಿಯಲಿ= ಭೂಮಿಯಲ್ಲಿ ಜನಿಸಿದನು ಕಲಿಕರ್ಣ= ಶೂರ ಕರ್ಣನು ಹುಟ್ಟಿದನು.
- ಪದ್ಯ-ಸೂಚನೆ:ಅರ್ಥ:ದೂರ್ವಾಸಮುನಿಯ (ಉಪದೇಶದ) ಮಂತ್ರದ ಆಹ್ವಾನದಿಂದ, (ಕುಂತಿಯು) ಸೂರ್ಯನನ್ನು ಆಹ್ವಾನಿಸಿದಾಗ (ಅವನಿಂದ ಕುಂತಿಯಲ್ಲಿ) ಉಗ್ರಶೂರನಾದ ಶೂರ ಕರ್ಣನು ಭೂಮಿಯಲ್ಲಿ ಹುಟ್ಟಿದನು.
ಧೃತರಾಷ್ಟ್ರ - ಪಾಂಡು - ವಿದುರರ ಜನನ
ಸಂಪಾದಿಸಿ
- ಅರಸ ಕೇಳೈ ಕೆಲವು ಕಾಲಾಂ
- ತರಕೆ ನಿಮ್ಮ ವಿಚಿತ್ರವೀರ್ಯನು
- ನೆರೆದನಮರಸ್ತ್ರೀಯರಲಿ ಬಳಿಕೀ ನದೀಸುತನ ||
- ಕರೆದು ನುಡಿದಳು ಮಗನೆ ರಾಜ್ಯವ
- ಧರಿಸು ನೀನಿನ್ನುತ್ತರದ ಹಿಮ
- ಕರಕುಲವ ಬೆಳಗೆಂದು ಯೋಜನಗಂಧಿ ಬೆಸಸಿದಳು || ೧ ||
- ಪದ್ಯ-೧:ಪದವಿಭಾಗ-ಅರ್ಥ:ಅರಸ ಕೇಳೈ ಕೆಲವು ಕಾಲಾಂತರಕೆ=ಅರಸನೇ ಕೇಳು, ಕೆಲವು ಕಾಲ ಕಳೆದ ನಂತರ, ನಿಮ್ಮ ವಿಚಿತ್ರವೀರ್ಯನು ನೆರೆದನು ಅಮರಸ್ತ್ರೀಯರಲಿ= ನಿಮ್ಮ ಕುಲದ (ಜನಮೇಜಯನ ವಂಶದ) ವಿಚಿತ್ರವೀರ್ಯನು ಸೇರಿದನು ಸ್ವರ್ದದಸ್ತ್ರೀಯರ ಜೊತೆ ಸೇರಿದನು; ಸ್ವರ್ಗಸ್ಥನಾದನು , ಬಳಿಕ+ ಈ ನದೀಸುತನ= ಭೀಷ್ಮನನ್ನು, ಕರೆದು ನುಡಿದಳು= ಯೋಜನಗಂಧಿ ಹೇಳಿದಳು, ಮಗನೆ ರಾಜ್ಯ ಧರಿಸು= ರಾಜ್ಯಭಾರವನ್ನು ವಹಿಸಿಕೊ, ನೀನು ಇನ್ನು ಉತ್ತರದ= ಮುಂದಿನ, ಹಿಮಕರಕುಲವ ಬೆಳಗು ಎಂದು+ = ರಾಜನಾಗಿ ವಿವಾಹ ಮಾಡಿಕೊಂಡು ಮುಂದಿನ ಚಂದ್ರವಂಶವನ್ನು ಬೆಳೆಸು, ಯೋಜನಗಂಧಿ ಬೆಸಸಿದಳು= ಎಂದಳು.
- ಪದ್ಯ-೧:ಅರ್ಥ:ಅರಸನೇ ಕೇಳು, ಕೆಲವು ಕಾಲ ಕಳೆದ ನಂತರ, ನಿಮ್ಮ ಕುಲದ (ಜನಮೇಜಯನ ವಂಶದ) ವಿಚಿತ್ರವೀರ್ಯನು ಸ್ವರ್ಗಸ್ಥನಾದನು. ಬಳಿಕ ಯೋಜನಗಂಧಿಯು ಭೀಷ್ಮನನ್ನು ಕರೆದು ಮಗನೆ ರಾಜ್ಯಭಾರವನ್ನು ವಹಿಸಿಕೊ, ನೀನು ಇನ್ನು ರಾಜನಾಗಿ ವಿವಾಹ ಮಾಡಿಕೊಂಡು ಮುಂದಿನ ಚಂದ್ರವಂಶವನ್ನು ಬೆಳೆಸು, ಎಂದಳು.
- ತಾಯೆ ನಿಮ್ಮೋಪಾದಿ ರಾಜ್ಯ
- ಸ್ತ್ರೀಯಳೆಂದಾ ನುಡಿಯೊಳಗೆ ಗಾಂ
- ಗೇಯ ಮುಳುಗನು ಭೀಷ್ಮವಚನಕೆ ಬೇರೆ ಮೊಳೆಯುಂಟೆ ||
- ಕಾಯಕಲ್ಪ ಸುಖಕ್ಕೆ ಘನ ನಿ
- ಶ್ರೇಯಸವ ಕೆಡಿಸುವೆನೆ ಯೆಲವದ
- ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲೆಂದ || ೨ ||
- ಪದ್ಯ-೨:ಪದವಿಭಾಗ-ಅರ್ಥ:ತಾಯೆ ನಿಮ್ಮ+ ಉಪಾದಿ= ಸಮಾನವಾದುದು, ರಾಜ್ಯಸ್ತ್ರೀಯಳು+ ಎಂದು ಆ ನುಡಿಯೊಳಗೆ= ಮಾತಿಗೆ, ಆಜ್ಞೆಗೆ, ಗಾಂಗೇಯ ಮುಳುಗನು= ಈ ಗಂಗಾ ಪುತ್ರನು ಮರುಳಾಗುವುದಿಲ್ಲ. ಭೀಷ್ಮವಚನಕೆ=(ಮಹಾಪ್ರತಿಜ್ಞೆಗೆ - ಭೀಷ್ಮನ ಹೆಸರು ದೇವವ್ರತ, ಆ ಪ್ರತಿಜ್ಞೆಗಾಗಿ ಅವನಿಗೆ ಭೀಷ್ಮ ಎಂಬ ಅನ್ವರ್ಥ ಹೆಸರು ಬಂದಿದೆ ) ಬೇರೆ ಮೊಳೆಯುಂಟೆ= ಮಹಾಪ್ರತಿಜ್ಞೆಯ ಗಿಡಕ್ಕೆ ಬೇರೆ ಕೊಂಬೆ, ಕವಲು ಚಿಗುರವುದು ಇದೆಯೇ? ವಚನ ತಪ್ಪುವುದಿಲ್ಲ. ಕಾಯಕಲ್ಪ ಸುಖಕ್ಕೆ ಘನ ನಿಶ್ರೇಯಸವ ಕೆಡಿಸುವೆನೆ= ದೇಹದ ಅಲ್ಪ ಸುಖಕ್ಕಾಗಿ ನಿಶ್ರೇಯಸವಾದ ಮೋಕ್ಷವನ್ನು ಕಳೆದುಕೊಳ್ಳಲಾರೆನು. ಯೆಲವದ (ಎಲವ= ಬೂರುಗದ ಮರ.) ಕಾಯಿಗೋಸುಗ= ಬೂರುಗದ ಕಾಯಿಗಾಗಿ ಕಲ್ಪವೃಕ್ಷವ ಕಡಿವನಲ್ಲೆಂದ= ಕಲ್ಪವೃಕ್ಷವನ್ನು ಕಡಿಯಲಾರೆನು ಎಂದನು ಭೀಷ್ಮ
- ಪದ್ಯ-೨:ಅರ್ಥ:ತಾಯಿಯೇ, ರಾಜ್ಯಸ್ತ್ರೀ ಎಂಬುದು ನಿಮ್ಮ ಸಮಾನವಾದುದು, ಎಂದು ಆ ತಾಯಿಯ ಆಜ್ಞೆಗೆ ಉತ್ತರಿಸಿ, ಈ ಗಂಗಾ ಪುತ್ರನು ರಾಜ್ಯದ ಆಸೆಗೆ ಮರುಳಾಗುವುದಿಲ್ಲ. ಮಹಾಪ್ರತಿಜ್ಞೆಯ ಗಿಡಕ್ಕೆ ಬೇರೆ ಕೊಂಬೆ, ಕವಲು ಚಿಗುರವುದು ಇದೆಯೇ? ವಚನ ತಪ್ಪುವುದಿಲ್ಲ. ದೇಹದ ಅಲ್ಪ ಸುಖಕ್ಕಾಗಿ ನಿಶ್ರೇಯಸವಾದ ಮೋಕ್ಷವನ್ನು ಕಳೆದುಕೊಳ್ಳಲಾರೆನು. ಬೂರುಗದ ಕಾಯಿಗಾಗಿ ಕಲ್ಪವೃಕ್ಷವನ್ನು ಕಡಿಯಲಾರೆನು ಎಂದನು, ಭೀಷ್ಮ.
- ಮರುಗಿ ಯೋಜನಗಂಧಿ ಚಿಂತೆಯ
- ಸೆರೆಗೆ ಸಿಲುಕಿದಳೊಂದು ರಾತ್ರಿಯೊ
- ಳರಿದು ನೆನೆದಳು ಪೂರ್ವಸೂಚಿತ ಪುತ್ರಭಾಷಿತವ ||
- ಮುರಿದ ಭರತಾನ್ವಯದ ಬೆಸುಗೆಯ
- ತೆರನು ತೋರಿತೆ ಪುಣ್ಯವೆನುತೆ
- ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು || ೩ ||
- ಪದ್ಯ-೩:ಪದವಿಭಾಗ-ಅರ್ಥ:ಮರುಗಿ (ದುಃಖದಿಂದ) ಯೋಜನಗಂಧಿ ಚಿಂತೆಯ ಸೆರೆಗೆ = ಯೋಜನಗಂಧಿಯು ಚಿಂತೆಯಲ್ಲಿ ಮುಳುಗಿದಳು. ಸಿಲುಕಿದಳು(ಮುಳುಗಿದಳು)+ ಅಂದು ರಾತ್ರಿಯೊಳು+ ಅರಿದು= ನೆನಪಿಗೆ ಬಂದು, ನೆನೆದಳು= ಆ ದಿನ ರಾತ್ರಿ ತನ್ನ ಮಗ ವೇದವ್ಯಾಸಮುನಿ ನೆನೆದಾಗ ಬರುವೆನೆಂದು ಕೊಟ್ಟ ಮಾತು ನೆನಪಿಗೆ ಬಂತು. ಅವರನ್ನು ನೆನೆದಳು. ಪೂರ್ವಸೂಚಿತ= ಹಿಂದೆ ಹೇಳಿದ, ಪುತ್ರಭಾಷಿತವ= ಮಗನು ವಚನಕೊಟ್ಟ ಮಾತು, ಮುರಿದ ಭರತಾನ್ವಯದ ಬೆಸುಗೆಯ ತೆರನು ತೋರಿತೆ= (ಮರಿದ ವಂಶವನ್ನು ಬೆಸುಗೆ ಹಾಕಿ ಉಳಿಸುವ ಉಪಾಯ) ನಿಂತುಹೋಗುವಂತಿದ್ದ ಚಂದ್ರವಂಶವನ್ನು ಬೆಳೆಸುವ ಮಾರ್ಗವು ತಿಳಿಯಿತು. ಇದು ತನ್ನ ಪುಣ್ಯವು+ ಎನುತ+, ಎಚ್ಚರಿತು= ಯೋಚಿಸಿ, ನುಡಿದಳು ಮಗನೆ ವೇದವ್ಯಾಸ ಬಹುದೆಂದು= ಮಗನೇ ವೇದವ್ಯಾಸ ನೀನು ಬರಬೇಕು ಎಂದು ಹೇಳಿದಳು.
- ಪದ್ಯ-೩:ಅರ್ಥ:ದುಃಖದಿಂದ ಯೋಜನಗಂಧಿಯು ಚಿಂತೆಯಲ್ಲಿ ಮುಳುಗಿದಳು. ಆ ದಿನ ರಾತ್ರಿ ತನ್ನ ಮಗ ವೇದವ್ಯಾಸಮುನಿಯು ತಾನು ನೆನೆದಾಗ ಬರುವೆನೆಂದು ಕೊಟ್ಟ ಮಾತು ನೆನಪಿಗೆ ಬಂತು. (ಅವರನ್ನು ನೆನೆದಳು). ಹಿಂದೆ ಹೇಳಿದ, ಮಗನು ವಚನಕೊಟ್ಟ ಮಾತು, (ಮರಿದ ವಂಶವನ್ನು ಬೆಸುಗೆ ಹಾಕಿ ಉಳಿಸುವ ಉಪಾಯ) ನಿಂತುಹೋಗುವಂತಿದ್ದ ಚಂದ್ರವಂಶವನ್ನು ಬೆಳೆಸುವ ಮಾರ್ಗವು ತಿಳಿಯಿತು. ಇದು ತನ್ನ ಪುಣ್ಯವು ಎಂದು ಯೋಚಿಸಿ, 'ಮಗನೇ ವೇದವ್ಯಾಸ ನೀನು ಬರಬೇಕು ಎಂದು ಹೇಳಿದಳು'.
- ಕೆಂಜೆಡೆಯ ಕೃಷ್ಣಾಜಿನದ ಮೊನೆ
- ಮುಂಜೆರಗಿನುಡಿಗೆಯ ಬಲಾಹಕ
- ಪುಂಜಕಾಂತಿಯ ಪಿಂಗತರಮುಖ ಕೇಶದುನ್ನತಿಯ ||
- ಕಂಜನಾಭನ ಮೂರ್ತಿ ಶೋಭಾ
- ರಂಜಿತನು ಜನದುರಿತ ದಶಮದ
- ಭಂಜಕನು ತಾಯ್ಗೆರಗಿ ನುಡಿದನು ವ್ಯಾಸಮುನಿರಾಯ || ೪||
- ಪದ್ಯ-೪:ಪದವಿಭಾಗ-ಅರ್ಥ:ಕೆಂಜೆಡೆಯ= ಕೆಂಪು ಜಟೆಯ, ಕೃಷ್ಣಾಜಿನದ= ಕೃಷ್ಣಾಜಿನವನ್ನು ಕಂಕುಳಲ್ಲಿ ಧರಿಸಿದ್ದ, ಮೊನೆ ಮುಂಜೆರಗಿನ (ಮುಂದಿನ ಸೆರಗು; ಹೊದೆದಿರುವ ಬಟ್ಟೆಯ ಸರೆಗಿನ ತುದಿಯು)+ ಉಡಿಗೆಯ, ಬಲಾಹಕಪುಂಜ= ದಟ್ಟಮೋಡ, ಮೇಘಶ್ಯಾಮ ಕಾಂತಿಯ, ಪಿಂಗತರಮುಖ= ಪಿಂಗಬಣ್ನದ ಮುಖದ, ಕಂದುಬಣ್ಣದ ಮುಖ, ಕೇಶದ+ ಉನ್ನತಿಯ= ತಲೆಯಮೇಲೆ ಎತ್ತಿಸುತ್ತಿ ಕಟ್ಟಿದ ಜಟೆ, ಕಂಜನಾಭನ ಮೂರ್ತಿ= ಕಮಲನಾಭ-ಹೊಕ್ಕಳಲ್ಲಿ ಕಮಲವಿರುವ ವಿಷ್ಣುವಿನ ಅವತಾರದವ ಶೋಭಾರಂಜಿತನು= ಶೋಭೆಯಿಂದ- ಕಾಂತಿಯಿಂದ ಆನಂದ ಕೊಡುವವನು, ಜನದುರಿತ ದಶಮದಭಂಜಕನು= ದುಷ್ಟರ ಸೊಕ್ಕನ್ನು ಮರಿಯುವವನು, ತಾಯ್ಗೆ+ ಎರಗಿ= ತಾಯಿಗೆ ನಮಸ್ಕರಿಸಿ ನುಡಿದನು ವ್ಯಾಸಮುನಿರಾಯ.
- ಪದ್ಯ-೪:ಅರ್ಥ:ಕೆಂಜೆಡೆಯ, ಕೃಷ್ಣಾಜಿನವನ್ನು ಕಂಕುಳಲ್ಲಿ ಧರಿಸಿದ್ದ, ಹೊದೆದಿರುವ ಬಟ್ಟೆಯ ಸರೆಗಿನ ಉಡಿಗೆಯ, ಮೇಘಶ್ಯಾಮ ಕಾಂತಿಯ, ಕಂದುಬಣ್ಣದ ಮುಖದ, ತಲೆಯಮೇಲೆ ಎತ್ತಿಸುತ್ತಿ ಕಟ್ಟಿದ ಜಟೆಯುಳ್ಳ, ವಿಷ್ಣುವಿನ ಅವತಾರದ, ತನ್ನ ಶೋಭೆಯಿಂದ ಆನಂದ ಕೊಡುವ, ದುಷ್ಟರ ಸೊಕ್ಕನ್ನು ಮರಿಯುವವನು ಆದ ವ್ಯಾಸಮುನಿರಾಯನು ತಾಯಿಗೆ ನಮಸ್ಕರಿಸಿ ನುಡಿದನು.
- ನೆನೆದಿರೇನೌತಾಯೆ ಕೃತ್ಯವ
- ನೆನಗೆ ಬೆಸಸೆನೆ ಮಗನೆ ಭಾರತ
- ವಿನುತಕುಲ ಜಲರಾಶಿಯೆಡೆವರಿತುದು ವಿಚಿತ್ರನಲಿ ||
- ತನುಜ ನೀನೇ ಬಲ್ಲೆಯೆನೆ ಕೇಳ್
- ಜನನಿ ನಿಮ್ಮಡಿಯಾಜ್ಞೆಯಲಿ ಸಂ
- ಜನಿಪುವೆನು ವೈಚಿತ್ರವೀರ್ಯ ಕ್ಷೇತ್ರದಲಿ ಸುತರ || ೫ ||
- ಪದ್ಯ-೫:ಪದವಿಭಾಗ-ಅರ್ಥ:(ವ್ಯಾಸನು ಕೇಳಿದನು)ನೆನೆದಿರಿ+ ಏನೌ (ಏನುಕಾರಣ- ಏಕೆ) ತಾಯೆ ಕೃತ್ಯವನು (ಕಾರ್ಯ, ಕೆಲಸ)+ ಎನಗೆ ಬೆಸಸು(ಹೇಳು) ಎನೆ= ತಾಯಿಯೇ ನನ್ನನ್ನು ಏಕೆ ನೆನೆದಿರಿ? ನಾನು ಏನು ಮಾಡಬೇಕು ಹೇಳಿರಿ. ಮಗನೆ ಭಾರತ ವಿನುತಕುಲ= ಬಾರತ ಶ್ರೇಷ್ಠವಂಶವು, ಜಲರಾಶಿ ಯೆಡೆವರಿತುದು=ಬತ್ತಿತು, ನಿಂತು ಹೋಯಿತು, ವಿಚಿತ್ರನಲಿ= ವಿಚಿತ್ರವೀರ್ಯನ ಸಾವಿನಿಂದ, ತನುಜ= ಮಗನೇ ನೀನೇ ಬಲ್ಲೆಯೆನೆ= ಇದಕ್ಕೆ ಪರಿಹಾರವನ್ನು ನೀನೇ ಬಲ್ಲೆ, ಅದನ್ನು ಪರಿಹರಿಸು ಎಂದಳು. ಕೇಳ್+ ಜನನಿ= ತಾಯಿ ಕೇಳು, ನಿಮ್ಮಡಿಯ+ ಆಜ್ಞೆಯಲಿ= ನಿಮ್ಮ ಪಾದದ ಆಜ್ಜ್ಞೆಯಂತೆ ಸಂಜನಿಪುವೆನು= ಮಕ್ಕಳು ಜನಿಸುವಂತೆ ಮಾಡುವನು. ವೈಚಿತ್ರವೀರ್ಯ ಕ್ಷೇತ್ರದಲಿ= ವಿಚಿತ್ರವೀರ್ಯನ ಕ್ಷೇತ್ರವಾದ ಅವನ ಪತ್ನಿಯರಲ್ಲಿ, ಸುತರ= ಗಂಡುಮಕ್ಕಳನ್ನು, ಎಂದನು
- ಪದ್ಯ-೫:ಅರ್ಥ:ವ್ಯಾಸನು ಕೇಳಿದನು, 'ತಾಯಿಯೇ ನನ್ನನ್ನು ಏಕೆ ನೆನೆದಿರಿ? ನಾನು ಏನು ಮಾಡಬೇಕು ಹೇಳಿರಿ ಎಂದಾಗ, ಅವಳು ಮಗನೆ, ಬಾರತ ಶ್ರೇಷ್ಠವಂಶದ ಜಲರಾಶಿಯು ವಿಚಿತ್ರವೀರ್ಯನ ಸಾವಿನಿಂದ ನಿಂತು ಹೋಯಿತು, ಮಗನೇ ಇದಕ್ಕೆ ಪರಿಹಾರವನ್ನು ನೀನೇ ಬಲ್ಲೆ, ಅದನ್ನು ಪರಿಹರಿಸಬೇಕು ಎಂದಳು.'ತಾಯಿ ಕೇಳು ನಿಮ್ಮ ಪಾದದ ಆಜ್ಜ್ಞೆಯಂತೆ ವಿಚಿತ್ರವೀರ್ಯನ ಕ್ಷೇತ್ರವಾದ ಅವನ ಪತ್ನಿಯರಲ್ಲಿ ಮಕ್ಕಳು (ಗಂಡುಮಕ್ಕಳು) ಜನಿಸುವಂತೆ ಮಾಡುವೆನು,' ಎಂದನು.
- ಎಂದು ಬಳಿಕೇಕಾಂತ ಭವನದೊ
- ಳಂದು ಮುನಿಯಿರಲಂಬಿಕೆಯನರ
- ವಿಂದಮುಖಿಯಟ್ಟಿದಳು ಸೊಸೆಯನು ಮುನಿಯ ಪೂರೆಗಾಗಿ ||
- ಬಂದು ಮುನಿಪನ ದಿವ್ಯರೂಪವ
- ನಿಂದುಮುಖಿ ಕಂಡಕ್ಷಿಗಳ ಭಯ
- ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳೆಂದ || ೬ ||
- ಪದ್ಯ-೬:ಪದವಿಭಾಗ-ಅರ್ಥ:ಮನಿಯು ಎಂದು= ಹಾಗೆ ಹೇಳಿ, ಅರಮನೆಯ ಏಕಾಂತಭವನಕ್ಕೆ ಹೋದನು. ಬಳಿಕ+ ಏಕಾಂತ ಭವನದೊಳು(= ಮನೆ ಕೊಠಡಿ)+ ಅಂದು ಮುನಿಯಿರಲು+ ಅಂಬಿಕೆಯನು+ ಅರವಿಂದಮುಖಿಯು+ ಅಟ್ಟಿದಳು= ಕಳಿಸಿದಳು ಸೊಸೆಯನು ಮುನಿಯ ಪೂರೆಗಾಗಿ= ಮನಿಯ ಹತ್ತಿರ, ಬಂದು ಮುನಿಪನ ದಿವ್ಯರೂಪವನು+ ಇಂದುಮುಖಿ ಕಂಡು ಅಕ್ಷಿಗಳ= ಕಣ್ಣುಗಳನ್ನು ಭಯದಿಂದ ಮುಚ್ಚಿದಳು+ ಆಕೆ ತಿರುಗಿದಳು (= ಹಿಂತಿರುಗಿದಳು)+ ಅರಸ ಕೇಳೆಂದ
- ಪದ್ಯ-೬:ಅರ್ಥ:ವ್ಯಾಸಮನಿಯು ಹಾಗೆ ಹೇಳಿ, ಅರಮನೆಯ ಏಕಾಂತಭವನಕ್ಕೆ ಹೋದನು. ಬಳಿಕ ಏಕಾಂತ ಭವನದಲ್ಲಿ ಅಂದು ವ್ಯಶಮುನಿ ಇದ್ದಾಗ,ಅಂಬಿಕೆಯನ್ನು ಯೋಜನಗಂಧಿಯು ಸೊಸೆಯನ್ನು ಮುನಿಯ ಹತ್ತಿರ, ಅಲ್ಲಗೆ ಕಳಿಸಿದಳು. ಅವಳು ಮನಿಯ ಹತ್ತಿರ, ಬಂದು ಮುನೀಶ್ವರನ ದಿವ್ಯರೂಪವನ್ನು ಅಂಬಿಕೆ ನೋಡಿ ಭಯದಿಂದ ಕಣ್ಣುಗಳನ್ನು ಮುಚ್ಚಿದಳು. ಮುನಿಯಿಂದ ಗರ್ಭಾದಾನದ ನಂತರ ಆಕೆ ಹಿಂತಿರುಗಿದಳು, ಅರಸನೇ ಕೇಳು ಎಂದ ವೈಶಂಪಾಯನ.
- ಬಳಿಕಲಂಬಾಲಿಕೆಯನಲ್ಲಿಗೆ
- ಕಳುಹಲಾಕೆಗೆ ಭಯದಿ ಮುಖದಲಿ
- ಬಿಳುಪು ಮಸಗಿತು ಮುನಿಯ ರೌದ್ರಾಕಾರದರ್ಶನದಿ ||
- ಲಲನೆ ಮರಳಿದಳೊಬ್ಬ ಸತಿಯನು
- ಕಳುಹಲಾ ವಧು ಚಪಲದೃಷ್ಟಿಯೊ
- ಳಳುಕದೀಕ್ಷಿಸಲಾಯ್ತು ಗರ್ಭಾದಾನವನಿಬರಿಗೆ || ೭ ||
- ಪದ್ಯ-೭:ಪದವಿಭಾಗ-ಅರ್ಥ: ಬಳಿಕಲು (ನಂತರ)+ ಅಂಬಾಲಿಕೆಯನು ಅಲ್ಲಿಗೆ ಕಳುಹಲು+ ಆಕೆಗೆ ಭಯದಿ ಮುಖದಲಿ ಬಿಳುಪು ಮಸಗಿತು= ಭಯದಿಂದ ಮುಖ ಬಿಳುಚಿಕೊಂಡಿತು, ಮುನಿಯ ರೌದ್ರಾಕಾರ ದರ್ಶನದಿ. ಲಲನೆ ಮರಳಿದಳು= ಅಂಬಾಲಿಕೆಯೂ ಗರ್ಭಾದಾನ ಪಡೆದು ಹಿಂತಿರುಗಿದಳು. ಒಬ್ಬ ಸತಿಯನು= ನಂತರ ಮತ್ತೊಬ್ಬ ಸತಿ ದಾಸಿಯನ್ನು ಮುನಿಯ ಬಳಿ ಕಳುಹಲು, ಆ ವಧು= ಹೆಣ್ಣು ಚಪಲದೃಷ್ಟಿಯೊಳು ಪ್ರೀತಿಯ ನೋಟದಿಂದ, ಅಳುಕದೆ= ಅಂಜದೆ, ಈಕ್ಷಿಸಲು= ಮುನಿಯನ್ನು ನೋಡಿದಳು. ಆಯ್ತು= ಆಯಿತು ಗರ್ಭಾದಾನವು+ ಅನಿಬರಿಗೆ= ಅವರೆಲ್ಲರಿಗೆ,
- ಪದ್ಯ-೭:ಅರ್ಥ:ನಂತರ ಯೋಜನಗಂಧಿಯು ಅಂಬಾಲಿಕೆಯನ್ನು ಅಲ್ಲಿಗೆ ಕಳುಹಿಸಲು, ಆಕೆಯು ಮುನಿಯ ರೌದ್ರಾಕಾರ ರೂಪವನ್ನು ನೋಡಿ ಭಯಪಟ್ಟು ಅವಳ ಮುಖವು ಬಿಳುಚಿಕೊಂಡಿತು. ಲಲನೆ ಅಂಬಾಲಿಕೆಯೂ ಗರ್ಭಾದಾನ ಪಡೆದು ಹಿಂತಿರುಗಿದಳು. ನಂತರ ಮತ್ತೊಬ್ಬ ಸತಿ ದಾಸಿಯನ್ನು ಸತ್ಯವತಿ ಮುನಿಯ ಬಳಿಗೆ ಕಳುಹಿಸಲು, ಆ ಹೆಣ್ಣು ಪ್ರೀತಿಯ ನೋಟದಿಂದ, ಅಳುಕದೆ ಮುನಿಯನ್ನು ನೋಡಿ ಸೇವೆ ಮಾಡಿದಳು. ಹೀಗೆ ಗರ್ಭಾದಾನವು ಅವರೆಲ್ಲರಿಗೂ ಆಯಿತು.
- ಬಂದು ಮುನಿಪತಿ ತಾಯ್ಗೆ ಕೈಮುಗಿ
- ದೆಂದನಂಬಿಕೆಯಲ್ಲಿ ಜನಿಸುವ
- ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ ||
- ಬಂದ ಬಳಿಕಿನ ಚಪಲೆಗತಿಬಲ
- ನೆಂದು ಹೇಳಿದು ತನಗೆ ನೇಮವೆ
- ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು || ೮ ||
- ಪದ್ಯ-೮:ಪದವಿಭಾಗ-ಅರ್ಥ: ಬಂದು ಮುನಿಪತಿ ತಾಯ್ಗೆ= ತಾಯಿಗೆ, ಕೈಮುಗಿದು+ ಎಂದನು+ ಅಂಬಿಕೆಯಲ್ಲಿ ಜನಿಸುವ ನಂದನನು ಜಾತ್ಯಂಧನು,+ ಅಂಬಾಲಿಕೆಗೆ ಪಾಂಡುಮಯ, ಬಂದ ಬಳಿಕಿನ ಚಪಲೆಗೆ ಅತಿಬಲನು+ ಎಂದು ಹೇಳಿದು= ಹೇಳಿ, ತನಗೆ ನೇಮವೆಯೆಂದು= ತನಗೆ ಹಿಂತಿರುಗಲು ಅಪ್ಪಣೆಯೇ ಎಂದು ಅನುಮತಿ ಪಡೆದು, ತನ್ನ+ ಆಶ್ರಮಕೆ ಸರಿದನು= ಹೋದನು ಬಾದರಾಯಣನು= ವ್ಯಾಸಮುನಿಯು.
- ಪದ್ಯ-೮:ಅರ್ಥ: ಬಂದು ಮುನಿಪತಿ ವ್ಯಾಸನು ತಾಯಿಗೆ ಕೈಮುಗಿದು ಹೇಳಿದನು,'ಅಂಬಿಕೆಯಲ್ಲಿ ಜನಿಸುವ ಮಗನು ಜಾತ್ಯಂಧನು (ಹುಟ್ಟು ಕುರುಡನು), ಅಂಬಾಲಿಕೆಗೆ ಜನಿಸುವ ಮಗನು ಪಾಂಡುಮಯ (ಪಾಂಡುರೋಗಿ), ಬಳಿಕ ಬಂದ ಯುವತಿಗೆ ಅತಿಬಲನು ಜನಿಸುವನು,' ಎಂದು ಹೇಳಿದವನು, ತನಗೆ ಹಿಂತಿರುಗಲು ಅಪ್ಪಣೆಯೇ ಎಂದು ಅನುಮತಿ ಪಡೆದು, ವ್ಯಾಸಮುನಿಯು ತನ್ನ ಆಶ್ರಮಕ್ಕೆ ಹೋದನು.
- ತುಂಬಿದುದು ನವಮಾಸ ಜನಿಸಿದ
- ನಂಬಿಕೆಯ ಬಸುರಿನಲಿ ಸೂನು ಗ
- ತಾಂಬಕನು ಮಗನಾದನಂಬಾಲಿಕೆಗೆ ಪಾಂಡುಮಯ ||
- ಚುಂಬಿಸಿತು ಪರಿತೋಷ ನವ ಪುಳ
- ಕಾಂಬುಗಳು ಜನಜನಿತವದನೇ
- ನೆಂಬೆನುತ್ಸವವನು ಕುಮಾರೋದ್ಭವದ ವಿಭವದಲಿ || ೯ ||
- ಪದ್ಯ-೯:ಪದವಿಭಾಗ-ಅರ್ಥ:ತುಂಬಿದುದು ನವಮಾಸ (ವ್ಯಾಸರಿಂದ ಗರ್ಬಾದಾನ ಪಡೆದ ವನಿತೆಯರಿಗೆ ಒಂಬತ್ತು ತಿಂಗಳು ತುಂಬಿತು.) ಜನಿಸಿದನು+ ಅಂಬಿಕೆಯ ಬಸುರಿನಲಿ ಸೂನು=ಮಗ, ಗತಾಂಬಕನು= (ಗತ= ಇಲ್ಲದ+ ಅಂಬಕ= ಕಣ್ಣು) ಕಣ್ಣು ಕಾಣದವ=ಕುರುಡನು; ಮಗನಾದನು+ ಅಂಬಾಲಿಕೆಗೆ ಪಾಂಡುಮಯ ಚುಂಬಿಸಿತು (ಅಂಟಿತು)= ಅಂಬಾಲಿಕೆಗೆ ಬಿಳಿ ಚರ್ಮ, ಪರಿತೋಷ ನವ ಪುಳಕಾಂಬುಗಳು= ಸಂತೊಷ ಹೊಸಬಗೆಯ ಉತ್ಸಾಹ, ಜನಜನಿತವು= ಜನರಲ್ಲಿ ಕಂಡವು, ಅದನು+ ಏನೆಂಬೆನು ಉತ್ಸವವನು= ಸಂತೋಷದ ಉತ್ಸವವನ್ನು ವಿವರಿಸಲು ಸಾಧ್ಯವಿಲ್ಲ, ಕುಮಾರ+ ಉದ್ಭವದ ವಿಭವದಲಿ= ಮಕ್ಕಳು ಜನಿಸಿದ ವೈಭವದ ಉತ್ಸಾಹದಲ್ಲಿ.
- ಪದ್ಯ-೧:ಅರ್ಥ:ವ್ಯಾಸರಿಂದ ಗರ್ಬಾದಾನ ಪಡೆದ ವನಿತೆಯರಿಗೆ ಒಂಬತ್ತು ತಿಂಗಳು ತುಂಬಿತು. ಅಂಬಿಕೆಯಲ್ಲಿ ಕಣ್ಣು ಕಾಣದ ಕುರುಡನು ಜನಿಸಿದನು; ಅಂಬಾಲಿಕೆಗೆ ಬಿಳಿ ಚರ್ಮದ ಪಾಂಡುಮಯ ಮಗನಾದನು, ಎಲ್ಲಕಡೆ ಸಂತೊಷ ಹೊಸಬಗೆಯ ಉತ್ಸಾಹ ಜನರಲ್ಲಿ ಕಂಡವು; ಮಕ್ಕಳು ಜನಿಸಿದ ವೈಭವದ ಉತ್ಸಾಹದ ಸಂತೋಷದ ಉತ್ಸವವನ್ನು ವಿವರಿಸಲು ಸಾಧ್ಯವಿಲ್ಲ.
- ಜಾತಕರ್ಮಾದಿಯನು ಪಾರ್ಥಿವ
- ಜಾತಿ ವಿಧಿವಿಹಿತದಲಿ ಗಂಗಾ
- ಜಾತ ಮಾಡಿಸಿ ತುಷ್ಟಿಪಡಿಸಿದ ನಿಖಿಳ ಯಾಚಕರ ||
- ಈತನೇ ಧೃತರಾಷ್ಟ್ರನೆರಡನೆ
- ಯಾತ ಪಾಂಡು ವಿಲಾಸಿನೀ ಸಂ
- ಭೂತನೀತನು ವಿದುರನೆಂದಾಯ್ತುವರಿಗಭಿಧಾನ || ೧೦ ||
- ಪದ್ಯ-೧೦:ಪದವಿಭಾಗ-ಅರ್ಥ: ಜಾತಕರ್ಮ ಆದಿಯನು= ಮೊದಲಾದವನ್ನು, ಪಾರ್ಥಿವಜಾತಿ ವಿಧಿವಿಹಿತದಲಿ= ಕ್ಷತ್ರಿಯಜಾತಿಯ ವಿಧಿಯಕ್ರಮದಲ್ಲಿ, ಗಂಗಾಜಾತ= ಭೀಷ್ಮನು ಮಾಡಿಸಿ ತುಷ್ಟಿಪಡಿಸಿದ= ತೃಪ್ತಿಪಡಿಸಿದನು ನಿಖಿಳ= ಎಲ್ಲಾ, ಯಾಚಕರ= ಅಪೇಕ್ಷೆಪಟ್ಟವರಿಗೆ ಕೇಳಿದುದನ್ನು ಕೊಟ್ಟು ತೃಪ್ತಿಪಡಿಸಿದನು; ಈತನೇ ಧೃತರಾಷ್ಟ್ರನು= ಇವನು ಮದಲನೆಯವನು ಧೃತರಾಷ್ಟ್ರನು, ಎರಡನೆಯಾತ ಪಾಂಡು, ವಿಲಾಸಿನೀ= ದಾಸಿಉ ಸಂಭೂತನು ಈತನು ವಿದುರನೆಉ+ ಎಂದಾಯ್ತು+ ಅವರಿಗೆ+ ಅಭಿಧಾನ= ಹೆಸರು.
- ಪದ್ಯ-೧೦:ಅರ್ಥ: ಕ್ಷತ್ರಿಯಜಾತಿಯ ವಿಧಿಯಕ್ರಮದಲ್ಲಿ ಜಾತಕರ್ಮ ಮೊದಲಾದ ಸಂಸ್ಕಾರವನ್ನು, ಭೀಷ್ಮನು ಮಾಡಿಸಿ ಅಪೇಕ್ಷೆಪಟ್ಟ ಎಲ್ಲರಿಗೆ ಕೇಳಿದುದನ್ನು ಕೊಟ್ಟು, ದಾನಮಾಡಿ ತೃಪ್ತಿಪಡಿಸಿದನು. ಇವನು ಮದಲನೆಯವನು ಧೃತರಾಷ್ಟ್ರನು, ಎರಡನೆಯವನು ಪಾಂಡು, ಮೂರನೆಯವ ವಿಲಾಸಿನಿಯಾದ ದಾಸಿಯ ಮಗನಿಗೆ ವಿದುರನು ಎಂದು ಹೆಸರಿಟ್ಟು ಅವರಿಗೆ ನಾಮಕರಣವಾಯಿತು.
- ಬೆಳೆವುತಿರ್ದರು ಹರಿಣಪಕ್ಷದ
- ನಳಿನರಿಪುವಿನವೊಲ್ ಕುಮಾರರು
- ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ ||
- ಕಲಿತ ವಿದ್ಯರ ಮಾಡಿ ತಾಯು
- ಮ್ಮಳಿಸದಂತಿರೆ ಸೋಮವಂಶದ
- ಬೆಳವಿಗೆಯನೇ ಮಾಡಿಕೊಂಡಾಡಿದನು ಕಲಿಭೀಷ್ಮ || ೧೧ ||
- ಪದ್ಯ-೧:ಪದವಿಭಾಗ-ಅರ್ಥ: ಬೆಳೆವುತಿರ್ದರು ಹರಿಣಪಕ್ಷದ= ಶುಕ್ಲಪಕ್ಷದ, ನಳಿನರಿಪು= ಕಮಲದ, ಶತ್ರು= ಚಂದ್ರ, ನಳಿನರಿಪುವಿನವೊಲ್= ಶುಕ್ಲಪಕ್ಷದ ಚಂದ್ರನಂತೆ ಕುಮಾರರು ಕುಲವಿಹಿತ = ಕ್ಷತ್ರಿಯರಿಗೆ ಉಚಿತವಾದ, ಚೌಲ+ ಉಪನಯನವನು+ ಇಬ್ಬರಿಗೆ (ಧ್ರತರಾಷ್ಟ್ರ ಮತ್ತು ಪಾಡುವಿಗೆ) ರಚಿಸಿ ಕಲಿತ ವಿದ್ಯರ= ವಿದ್ಯಾವಂತರನ್ನಾಗಿ ಮಾಡಿ, ತಾಯಿ+ ಉಮ್ಮಳಿಸು=ದುಃಖಿಸು ಉಮ್ಮಳಿಸದಂತೆ= ದುಃಖಿಸದಂತೆ ಇರೆ= ಇರುವಹಾಗೆ, ಸೋಮವಂಶದ ಬೆಳವಿಗೆಯನೇ ಮಾಡಿ= ಚಂದ್ರವಂಶದ ಪರಮಪರೆಯನ್ನು ಬೆಳಸುವಂತೆ ಮಾಡಿ, ಅದಕ್ಕೆ ಕಾರಣರಾದ, ಕೊಂಡಾಡಿದನು= ಮಕ್ಕಳನ್ನು ಹೊಗಳಿದನು, ಕಲಿಭೀಷ್ಮ
- ಪದ್ಯ-೧:ಅರ್ಥ: ಶುಕ್ಲಪಕ್ಷದ ಚಂದ್ರನಂತೆ ಕುಮಾರರು ಬೆಳೆಯುತ್ತದ್ದರು. ಅವರಿಗೆ ಕ್ಷತ್ರಿಯರಿಗೆ ಉಚಿತವಾದ, ಚೌಲ ಉಪನಯನವನ್ನು ಆ ಇಬ್ಬರಿಗೆ (ಧ್ರತರಾಷ್ಟ್ರ ಮತ್ತು ಪಾಡುವಿಗೆ) ಮಾಡಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ತಾಯಿ ದುಃಖಿಸದಂತೆ ಇರುವಹಾಗೆ, ಚಂದ್ರವಂಶದ ಪರಮಪರೆಯನ್ನು ಬೆಳಸುವಂತೆ ಮಾಡಿ, ಅದಕ್ಕೆ ಕಾರಣರಾದ ಮಕ್ಕಳನ್ನು ಕಲಿಭೀಷ್ಮ ಹೊಗಳಿದನು.
- ಧಾರುಣೀಪತಿ ಚಿತ್ತವಿಸು ಗಾಂ
- ಧಾರದೇಶದ ಸುಬಲರಾಜ ಕು
- ಮಾರಿ ಕುಲವಧುವಾದಳಾ ಧೃತರಾಷ್ಟ್ರ ಭೂಪತಿಗೆ ||
- ನಾರಿಯರೊಳುತ್ತಮೆಯಲಾ ಗಾಂ
- ಧಾರಿಯೆನಿಸಿ ಪತಿವ್ರತಾ ವಿ
- ಸ್ತಾರಗುಣದಲಿ ಮೆರೆದಳಬಲೆ ಸಮಸ್ತಜನ ಹೊಗಳೆ || ೧೨ ||
- ಪದ್ಯ-೧:ಪದವಿಭಾಗ-ಅರ್ಥ:ಧಾರುಣೀಪತಿ ಚಿತ್ತವಿಸು= ರಾಜನೇ ಕೇಳು, ಗಾಂಧಾರದೇಶದ ಸುಬಲರಾಜ ಕುಮಾರಿ ಕುಲವಧುವು+ ಆದಳು+ ಆ ಧೃತರಾಷ್ಟ್ರ ಭೂಪತಿಗೆ =ಪತ್ನಿಯಾದಳು, ನಾರಿಯರೊಳು+ ಉತ್ತಮೆಯಲಾ ಗಾಂಧಾರಿಯೆನಿಸಿ ಪತಿವ್ರತಾ ವಿಸ್ತಾರಗುಣದಲಿ ಮೆರೆದಳು+ ಅಬಲೆ= ವನಿತೆ, ಸಮಸ್ತ ಜನ ಹೊಗಳೆ.
- ಪದ್ಯ-೧:ಅರ್ಥ: ರಾಜನೇ ಕೇಳು, ಗಾಂಧಾರದೇಶದ ಸುಬಲರಾಜನ ಮಗಳು ಆ ಧೃತರಾಷ್ಟ್ರ ರಾಜನಿಗೆ ಪತ್ನಿಯಾದಳು. ಆದಳು, ಗಾಂಧಾರಿ ನಾರಿಯರಲ್ಲಿ ಉತ್ತಮಳು ಎನಿಸಿ ಪತಿವ್ರತಾ ವಿಶೇಷ ಗುಣದಲ್ಲಿ ಸಮಸ್ತ ಜನರೂ ಹೊಗಳುವಂತೆ ಪ್ರಸಿದ್ಧಳಾದಳು.
- ಇತ್ತ ಕುಂತೀಭೋಜನನೆಂಬ ನೃ
- ಪೋತ್ತಮನ ಭವನದಲಿ ಮುರಹರ
- ನತ್ತೆ ಬೆಳೆವುತ್ತಿರ್ದಳಾ ವಸುದೇವನೃಪನನುಜೆ ||
- ಹೆತ್ತವರಿಗೋಲೈಸುವರಿಗೆ ಮ
- ಹೋತ್ತಮರಿಗುಳಿದಖಿಳ ಲೋಕದ
- ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ || ೧೩ ||
- ಪದ್ಯ-೧೩:ಪದವಿಭಾಗ-ಅರ್ಥ: ಇತ್ತ= ಈ ಕಡೆ, ಕುಂತೀಭೋಜನನೆಂಬ ನೃಪ+ ಉತ್ತಮನ ಭವನದಲಿ= ಅರಮನೆಯಲ್ಲಿ ಮುರಹರನ+ ಅತ್ತೆ= ಕೃಷ್ಣನ ಅತ್ತೆ, ಕುಂತಿಯು, ಬೆಳೆವುತ್ತಿರ್ದಳು+ ಆ ವಸುದೇವ ನೃಪನ ಅನುಜೆ=ವಸುದೇವನ ತಂಗಿ, ಹೆತ್ತವರಿಗೆ+ ಓಲೈಸುವರಿಗೆ, ಮಹೋತ್ತಮರಿಗೆ+ ಉಳಿದ+ ಅಖಿಳ ಲೋಕದ ಚಿತ್ತಕೆ+ ಅಹುದು+ ಎನೆ ನಡೆವ ಗುಣದಲಿ ಮೆರೆದಳಾ ಕುಂತಿ = ಹೆತ್ತವರಿಗೂ, ಸಾಕುತಂದೆತಾಯಿಯರಿಗೂ(ಕುಂತಿಭೋಜ ದಂಪತಿಗಳಿಗೂ), ಉತ್ತಮರಿಗೂ, ಉಳಿದೆಲ್ಲಾ ಜನರಿಗೂ, ಮೆಚ್ಚುವಂತೆ ಒಳ್ಳೆಯ ಗುಣವತಿಯಾಗಿ ಪ್ರಸಿದ್ಧಳಾದಳು.
- ಪದ್ಯ-೧೩:ಅರ್ಥ:ಈ ಕಡೆ ಕುಂತಳದೇಶದಲ್ಲಿ ಕುಂತೀಭೋಜನನೆಂಬ ಶ್ರೇಷ್ಠ ರಾಜನ ಅರಮನೆಯಲ್ಲಿ ಕೃಷ್ಣನ ಅತ್ತೆಯಾದ ಕುಂತಿಯು, ಆ ವಸುದೇವನ ತಂಗಿ, ಹೆತ್ತವರಿಗೂ, ಸಾಕುತಂದೆತಾಯಿಯರಿಗೂ (ಕುಂತಿಭೋಜ ದಂಪತಿಗಳಿಗೂ), ಉತ್ತಮರಿಗೂ, ಉಳಿದೆಲ್ಲಾ ಜನರಿಗೂ, ಮೆಚ್ಚುವಂತೆ ಒಳ್ಳೆಯ ಗುಣವತಿಯಾಗಿ ಪ್ರಸಿದ್ಧಳಾದಳು.
- ಒಂದು ದಿನ ದೂರ್ವಾಸಮುನಿ ನೃಪ
- ಮಂದಿರಕೆ ಬರಲಾ ಮಹೀಪತಿ
- ಬಂದ ಬರವಿನಲವರ ಮರೆದನು ರಾಜಕಾರ್ಯದಲಿ ||
- ಇಂದು ಕುಂತೀಭೋಜನೊಡೆತನ
- ಬೆಂದುಹೋಗಲಿಯೆಂಬ ಶಾಪವ
- ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ || ೧೪ ||
- ಪದ್ಯ-೧೪:ಪದವಿಭಾಗ-ಅರ್ಥ:ಒಂದು ದಿನ ದೂರ್ವಾಸಮುನಿ ನೃಪ ಮಂದಿರಕೆ= ಕುಂತಿಭೋಜನ ಅರಮನೆಗೆ ಬರಲು+ ಆ ಮಹೀಪತಿ= ರಾಜನು, ಬಂದ ಬರವಿನಲಿ ಅವರ ಮರೆದನು= ರಾಜನು ಅವರ ಸೇವೆಯನ್ನು ಮರತನು, ರಾಜಕಾರ್ಯದಲಿ, ಇಂದು ಕುಂತೀಭೋಜನ+ ಒಡೆತನ= ರಾಜತ್ವ ಬೆಂದುಹೋಗಲಿಯೆಂಬ= ನಾಶವಾಗಲಿ ಎಂಬ, ಶಾಪವನು+ ಇಂದುಮುಖಿ ನಿಲಿಸಿದಳು= ತಡೆದಳು ಹೊರಳಿದಳು ಅವರ ಚರಣದಲಿ= ಅವರ ಪಾದಕ್ಕೆ ಬಿದ್ದು ಪ್ರಾರ್ಥಿಸಿ,
- ಪದ್ಯ-೧೪:ಅರ್ಥ:ಒಂದು ದಿನ ದೂರ್ವಾಸಮುನಿ ಕುಂತಿಭೋಜನ ಅರಮನೆಗೆ ಬರಲು ಆ ರಾಜನು, ಬಂದ ಬರವಿನಲಿ ಅವರ ಮರೆದನು= ರಾಜನು ಅವರು ಬಂದ ಬರವನ್ನು ರಾಜಕಾರ್ಯದಲ್ಲಿ ಮುಳುಗಿ,ಗಮನಿಸದೆ ಅವರ ಸೇವೆಯನ್ನು ಮಾಡಲು ಮರೆತನು. ಆಗ "ಈಗಲೇ ಕುಂತೀಭೋಜನ ರಾಜತ್ವ ನಾಶವಾಗಲಿ" ಎಂಬ, ಶಾಪವನ್ನು ಮನಿಕೊಡವ ವೇಳೆ ಕುಂತಿಯು ಅವರ ಪಾದಕ್ಕೆ ಬಿದ್ದು ಪ್ರಾರ್ಥಿಸಿ ಅದನ್ನು ತಡೆದಳು.
- ತರುಣಿಯೊಡಗೊಂಡೊಯ್ದು ಕನ್ಯಾ
- ಪರಮ ಭವನದಲಾ ಮುನಿಯನುಪ
- ಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ ||
- ಹರ ಮಹಾದೇವೀ ಮಗುವಿನಾ
- ದರಣೆಗೀ ವಿನಯೋಪಚಾರಕೆ
- ಹಿರಿದು ಮೆಚ್ಚಿದೆನೆಂದು ತಲೆದೂಗಿದನು ದೂರ್ವಾಸ || ೧೫ ||
- ಪದ್ಯ-೧೫:ಪದವಿಭಾಗ-ಅರ್ಥ:ತರುಣಿಯು= ಕುಂತಿಯು, ಒಡಗೊಂಡು= ಮುನಿಯನ್ನು ಒಡಗೊಂಡು - ಒಯ್ದು= ಜೊತೆಯಲ್ಲಿ ಕರೆದುಕೊಂಡು ಹೋಗಿ, ಕನ್ಯಾ ಪರಮ ಭವನದಲಿ+ ಆ ಮುನಿಯನು+ ಉಪಚರಿಸಿದಳು, ವಿವಿಧಾನ್ನ ಪಾನ ರಸಾಯನಂಗಳಲಿ ಹರ ಮಹಾದೇವ (ಶಿವನ ಅವತಾರವಾದ ದೂರ್ವಾಸನು)+ ಈ ಮಗುವಿನ+ ಆದರಣೆಗೆ ಈ ವಿನಯೋಪಚಾರಕೆ ಹಿರಿದು ಮೆಚ್ಚಿದೆನು+ ಎಂದು ತಲೆದೂಗಿದನು ದೂರ್ವಾಸ
- ಪದ್ಯ-೧೫:ಅರ್ಥ:ಕುಂತಿಯು ಮುನಿಯನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ, ತನ್ನ ಕನ್ಯಾವಸತಿಗೃಹದ ಉತ್ತಮ ಅರಮನೆಯಲ್ಲಿ ಆ ಮುನಿಯನ್ನು ಉಪಚರಿಸಿದಳು. ಅವದಿಗೆ ವಿವಿಧ ಅನ್ನ, ಪಾನ(ಕುಡಿಯಲು ಪಾನೀಯ) ರಸಾಯನಂಗಳಿಂದ ಉಪಚರಿಸಿದಳು. ಶಿವನ ಅವತಾರವಾದ ದೂರ್ವಾಸನು ಈ ಮಗುವಿನ, ಬಾಲೆ ಕುಂತಿಯ ಆದರಣೆಗೆ ಮತ್ತು ಈ ವಿನಯದ ಉಪಚಾರಕ್ಕೆ, "ಬಹಳ ಮೆಚ್ಚಿದೆನು," ಎಂದು ದೂರ್ವಾಸು ತಲೆದೂಗಿದನು.
- ಮಗಳೆ ಬಾ ಕೊಳ್ ಐದು ಮಂತ್ರಾ
- ಳಿಗುಳನಿವು ಸಿದ್ದಪ್ರಯೋಗವು
- ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು ||
- ಮಗನು ಜನಿಸುವನೆಂದು ಮುನಿ ಕುಂ
- ತಿಗೆ ರಹಸ್ಯದೊಳರುಹಿ ಮುನಿ ಮೌ
- ಳಿಗಳ ಮಣಿ ಪರಿತೋಷದಲಿ ಸರಿದನು ನಿಜಾಶ್ರಮಕೆ || ೧೬ ||
- ಪದ್ಯ-೧:ಪದವಿಭಾಗ-ಅರ್ಥ:ಮಗಳೆ ಬಾ ಕೊಳ್= ತೆಗೆದುಕೊ, ಐದು ಮಂತ್ರಾಳಿಗುಳನಿವು= ಮಂತ್ರ+ ಆಳಿಗಳು(ಸಮೂಹ))+ ಇವು, ಸಿದ್ದಪ್ರಯೋಗವು ಸೊಗಸು=ಮಂತ್ರ ಪ್ರಯೋಗವು ಸಿದ್ಧವಾದವು, ಸೊಗಸು= ಉತ್ತಮವು, ದಿವಿಜರೊಳಾರ= ದಿವಿಜರೊಳು+ ಆರ= ದೇವತೆಗಳಲ್ಲಿ ಯಾರನ್ನೇ, ಮೇಲುಂಟು= ಅವರ= ಯಾರ ಮೇಲೆ ಇಷ್ಟವೋ ಅವರನ್ನು, ನೆನೆ ಸಾಕು= ನೀನು ನಾಮಾತ್ರ ಹೇಳಿ ನೆನೆದರೆ ಸಾಕು, ಮಗನು ಜನಿಸುವನು+ ಎಂದು, ಮುನಿ ಕುಂತಿಗೆ ರಹಸ್ಯದೊಳು ಅರುಹಿ= ರಹಸ್ಯವಾಗಿ ಹೇಳಿ, ಮುನಿಮೌಳಿಗಳ ಮಣಿ+ ಮನಿಗಳಲ್ಲಿ ಶ್ರೇಷ್ಠನಾದವ ಶಿವಸ್ವರೂಪನು, ಪರಿತೋಷದಲಿ ಸರಿದನು ನಿಜ+ ಆಶ್ರಮಕೆ= ಸಂತೋಷದಿಂದ ತನ್ನ ಆಶ್ರಮಕ್ಕೆ ಹೋದನು.
- ಪದ್ಯ-೧:ಅರ್ಥ:ದೂರ್ವಾಸ ಮುನಿಯು ಕುಂತಿಯನ್ನು ಕರೆದು, ಮಗಳೆ ಬಾ ತೆಗೆದುಕೊ, ಈ ಐದು ಮಂತ್ರಗಳು ಪ್ರಯೋಗ ಸಿದ್ಧವಾದವು, ಉತ್ತಮವು, ದೇವತೆಗಳಲ್ಲಿ ಯಾರನ್ನೇ ಆಗಲಿ, ಯಾರ ಮೇಲೆ ನಿನಗೆ ಇಷ್ಟವೋ ಅವರನ್ನು, ನೀನು ಹೆಸರು ಹೇಳಿ ನೆನೆದರೆ ಸಾಕು, ಮಗನು ಜನಿಸುವನು ಎಂದು, ಮುನಿ ಕುಂತಿಗೆ ರಹಸ್ಯವಾಗಿ ಮಂತ್ರಗಳನ್ನು ಉಪದೇಶಿಸಿ, ಮನಿಗಳಲ್ಲಿ ಶ್ರೇಷ್ಠನಾದವನು ಶಿವಸ್ವರೂಪನು, ಸಂತೋಷದಿಂದ ತನ್ನ ಆಶ್ರಮಕ್ಕೆ ಹೋದನು.
- ಮಗುವುತನದಲಿ ಬೊಂಬೆಯಾಟಕೆ
- ಮಗುವನೇ ತಹೆನೆಂದು ಬಂದಳು
- ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ ||
- ವಿಗಡಮುನಿಪನ ಮಂತ್ರವನು ನಾ
- ಲಗೆಗೆ ತಂದಳು ರಾಗರಸದಲಿ
- ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ || ೧೭ ||
- ಪದ್ಯ-೧:ಪದವಿಭಾಗ-ಅರ್ಥ:ಮಗುವುತನದಲಿ ಬೊಂಬೆಯಾಟಕೆಮಗುವನೇ ತಹೆನೆಂದು ಬಂದಳು ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವವಿಗಡಮುನಿಪನ ಮಂತ್ರವನು ನಾಲಗೆಗೆ ತಂದಳು ರಾಗರಸದಲಿಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ
- ಪದ್ಯ-೧:ಅರ್ಥ:
- ಅರಸ ಕೇಳ್ ಮುನಿಯಿತ್ತ ಮಂತ್ರಾ
- ಕ್ಷರದ ಕರಹಕೆ ತಳುವಿದರೆ ದಿನ
- ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ ||
- ಧರೆಗೆ ಬಂದನು ಸೂರ್ಯನಾತನ
- ಕಿರಣ ಲಹರಿಯ ಹೊಯ್ಲಿನಲಿ ಸರ
- ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ ||೧೮ ||
- ಪದ್ಯ-೧:ಪದವಿಭಾಗ-ಅರ್ಥ:ಅರಸ ಕೇಳ್ ಮುನಿಯಿತ್ತ ಮಂತ್ರಾಕ್ಷರದ ಕರಹಕೆ ತಳುವಿದರೆ ದಿನಕರನ ತೇಜವ ಕೊಂಬನೇ ದೂರ್ವಾಸ ವಿಗಡನಲಧರೆಗೆ ಬಂದನು ಸೂರ್ಯನಾತನಕಿರಣ ಲಹರಿಯ ಹೊಯ್ಲಿನಲಿ ಸರಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ
- ಪದ್ಯ-೧:ಅರ್ಥ:
ಸೂರ್ಯನು ಕುಂತಿಗೆ ಮಗನನ್ನು ಕರುಣಿಸಿದನು
ಸಂಪಾದಿಸಿ
- ಎನ್ನಬಾರದಲೇ ಋಷಿಪ್ರತಿ
- ಪನ್ನ ಮಂತ್ರವಮೋಘವದರಿಂ
- ದೆನ್ನ ತೂಕದ ಮಗನಹನು ನೀನಂಜಬೇಡೆನುತ ||
- ಕನ್ನಿಕೆಯ ಮುಟ್ಟಿದನು ಮುನ್ನಿನ
- ಕನ್ನೆತನ ಕೆಡದಿರಲಿಯೆನುತವೆ
- ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ || ೧೯ ||
- ಪದ್ಯ-೧೯:ಪದವಿಭಾಗ-ಅರ್ಥ:ಎನ್ನಬಾರದು+ ಎಲೇ= ಹೆಚ್ಚು ಹೇಳಬಾರದು ಎಲೇ ಕುಂತೀ, ಋಷಿಪ್ರತಿಪನ್ನ ಮಂತ್ರವು+ ಅಮೋಘವು+ ಅದರಿಂದೆ= ಋಷಿಯು ಕೊಟ್ಟಮಂತ್ರವು ಅಮೋಘವಾದುದು, ಶ್ರೇಷ್ಠವಾದುದು, ಅದರಿಂದ, ಎನ್ನ ತೂಕದ ಮಗನು ಅಹನು= ನನ್ನ ಸರಿಸಮಾನನಾದ ಮಗನು ನಿನಗೆ= ಅಹನು - ಆಗುವನು, ಹುಟ್ಟುವನು, ನೀನು+ ಅಂಜಬೇಡ+ ಎನುತ ಕನ್ನಿಕೆಯ= ಕನ್ಯೆ ಕುಂತಿಯನ್ನು ಮುಟ್ಟಿದನು; ನೀನು ಹೆದರಬೇಡ ಎಂದು ಹೇಳಿ, ಮುನ್ನಿನ ಕನ್ನೆತನ= ನಿನ್ನ ಮೊದಲಿನ ಕನ್ಯತ್ವವು, ಕೆಡದಿರಲಿ ಯೆನುತವೆ= ಹೇಳಿ, ತನ್ನ ರಥವು+ ಇದ್ದ+ ಎಡೆಗೆ ರವಿ ತಿರುಗಿದನು ವಹಿಲದಲಿ.
- ಪದ್ಯ-೧೯:ಅರ್ಥ:ಎಲೇ ಕುಂತೀ, ಹೆಚ್ಚು ಹೇಳಬಾರದು. ಋಷಿಯು ಕೊಟ್ಟ ಮಂತ್ರವು ಅಮೋಘವಾದುದು, ಶ್ರೇಷ್ಠವಾದುದು, ಅದರಿಂದ ನನ್ನ ಸರಿಸಮಾನನಾದ ಮಗನು ನಿನಗೆ ಹುಟ್ಟುವನು ಎಂದು ಕನ್ಯೆ ಕುಂತಿಯನ್ನು ಮುಟ್ಟಿದನು. ನೀನು ಹೆದರಬೇಡ ಎಂದು ಹೇಳಿ, ನಿನ್ನ ಮೊದಲಿನ ಕನ್ಯತ್ವವು ಕೆಡದಿರಲಿ ಎಂದು ಹರಸಿ, ಸೂರ್ಯನು ತನ್ನ ರಥವು ಇದ್ದ ಕಡೆಗೆ ವೇಗವಾಗಿ ಹಿಂತಿರುಗಿದನು. (ಪುರಷ ಸಂಪರ್ಕದಿಂದ ಮತ್ತು ಹೆರಿಗೆಯಿಂದ ಕನ್ಯಾಪರೆಯು ಹೋಗಿ ಕನ್ಯತ್ವವು ಹೋಗುವುದು. ಪ್ರಸೂನಾಂತಿ ಯೌವನಂ)
- ಅರಸ ಕೇಳ್ ಆಶ್ಚರ್ಯವನು ತಾ
- ವರೆಯ ಮಿತ್ರನ ಕರಗಿ ಕರುವಿನೊ
- ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ ||
- ಕುರುಳುದಲೆ ನಿಟ್ಟೆಸಳುಗಂಗಳ
- ಚರಣ ಕರಪಲ್ಲವದ ಕೆಂಪಿನ
- ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ || ೨೦ ||
- ಪದ್ಯ-೨೦:ಪದವಿಭಾಗ-ಅರ್ಥ:ಅರಸ ಕೇಳ್ ಆಶ್ಚರ್ಯವನು ತಾವರೆಯ ಮಿತ್ರನ= ಸೂರ್ಯನ, ಕರಗಿ ಕರುವಿನೊಳು (ಮಗುವಿನಲ್ಲಿ)+ ಎರೆದರು ಎಂದೆನೆ= ಸೂರ್ಯನನ್ನು ಕರಗಿಸಿ ಮಗುವಿನಲ್ಲಿ ಅಚ್ಚು ಹಾಕಿದರೋ ಎನ್ನುವಂತೆ, ಥಳಥಳಿಸಿ ತೊಳಗುವ= ಪ್ರಕಾಶಿಸುವ, ತನುಚ್ಛವಿಯ= ದೇಹದ ಕುರುಳುದಲೆ- ಕುರುಳು+ತಲೆ= ಗುಂಗುರು ಕೂದಲಿನ, ನಿಟ್ಟ ಎಸಳುಗಂಗಳ= ನಿಟ್ಟಿಸಿ ನೋಡುತ್ತಿರುವ ವಿಶಾಲವಾದ ಕಣ್ನುಗಳನ್ನುಳ್ಳ, ಚರಣ ಕರಪಲ್ಲವದ= ಚಿಗುರು ಎಲೆಯಂತೆ ಕೆಂಪಾದ ಕೈ ಕಾಲುಗಳುಳ್ಳ, ಕೆಂಪಿನ= ಕೆಂಪು ಕೆಂಪಾದ, ವರಕುಮಾರನ= ತನ್ನಿಂದ ಜನಿಸಿದ ಉತ್ತಮ ಶಿಶುವನ್ನು, ಕಂಡು ಬೆರಗಿನೊಳು ಇರ್ದಳು ಆ ಕುಂತಿ= ನೋಡಿ ಆಸ್ಚರ್ಯಚಕಿತಳಾದಳು ಕುಂತಿ.
- ಟಿಪ್ಪಣಿ:(ದೇವತೆಗಳಿಗೂ ರಾಕ್ಷಸರಿಗೂ ಮಗು ಬೆಳೆಯಲು ಕಾಲಮಿತಿ ಇಲ್ಲ) ಚಂದದ ಮಗು ಹೇಗಿರುತ್ತದೆ ಎನ್ನುವುದಕ್ಕೆ ಕುಮಾರವ್ಯಾಸನ ಬಣ್ಣನೆ;
- ಪದ್ಯ-೨೦:ಅರ್ಥ:ಅರಸ ಕೇಳು, ಈ ಆಶ್ಚರ್ಯವನ್ನು, ಸೂರ್ಯನನ್ನು ಕರಗಿಸಿ ಮಗುವಿನ ರೂಪದಲ್ಲಿ ಅಚ್ಚು ಹಾಕಿದರೋ ಎನ್ನುವಂತೆ, ಥಳಥಳಿಸಿ ಪ್ರಕಾಶಿಸುವ ದೇಹವುಳ್ಳ ಗುಂಗುರು ಕೂದಲಿನ, ನಿಟ್ಟಿಸಿ ನೋಡುತ್ತಿರುವ ವಿಶಾಲವಾದ ಕಣ್ನುಗಳನ್ನುಳ್ಳ, ಚಿಗುರು ಎಲೆಯಂತೆ ಕೆಂಪಾದ ಕೈ ಕಾಲುಗಳುಳ್ಳ, ಕೆಂಪು ಕೆಂಪಾದ, ತನ್ನಿಂದ ಜನಿಸಿದ ಉತ್ತಮ ಶಿಶುವನ್ನು ಕಂಡು ಆ ಕುಂತಿಯು ಆಶ್ಚರ್ಯಚಕಿತಳಾದಳು.
- ಅಳುವ ಶಿಶುವನು ತೆಗೆದು ತೆಕ್ಕೆಯ
- ಪುಳಕ ಜಲದಲಿ ನಾದಿ ಹರುಷದ
- ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ ||
- ಕುಲದ ಸಿರಿ ತಪ್ಪುವುದಲಾ ಸಾ
- ಕಿಳುಹ ಬೇಕೆಂದೆನುತ ಗಂಗಾ
- ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ || ೨೧ ||
- ಪದ್ಯ-೧:ಪದವಿಭಾಗ-ಅರ್ಥ:ಅಳುವ ಶಿಶುವನು ತೆಗೆದು= ಎತ್ತಿ, ತೆಕ್ಕೆಯ ಪುಳಕ ಜಲದಲಿ ನಾದಿ=ಅಪ್ಪಿಕೊಂಡು ಆನಂದದ ಪುಳುಕ- ರೋಮಾಚನದ ನೀರಿನಲ್ಲಿಯೇ ಅದನ್ನು ಸವರಿ ತೊಳೆದಳು, ಹರುಷದ ಬಳಿಯ= ನಂತರ ಲಜ್ಜೆಯ ಭಯದ= ಒಂದೆಡೆ ಸುಂದರ ಮಗವನ್ನು ಜನಿಸಿದ ಸಂತೋಷ, ನಂತರ ಹೆರಿಗೆಯ ನಾಚಿಕೆ, ಆನಂತರ ಮದುವೆಯಾಗದೆ ಕಂದನಿಗೆ ತಾಯಿಯಾದ ಅಪವಾದದ ಭಯ, ಹೋರಟೆಗೆ (ವಿವಾದಕ್ಕೆ)+ ಅಳುಕಿ= ಹೆದರಿ, ಹಳುವಾಗಿ= ಹಳುವು= ಕಾಡು, ಹಳುವಾಗಿ= ಕಾಡಿನಲ್ಲಿದ್ದಂತೆ, ದಿಕ್ಕುಕಾಣದೆ, ಕುಲದ ಸಿರಿ ತಪ್ಪುವುದಲಾ= ತಮ್ಮ ವಂಶದ ಹಿರಿಮೆ ಕಡುವುದಲ್ಲಾ ಎಂದು, ಸಾಕಿಳುಹ ಬೇಕೆಂದೆನುತ- ಸಾಕು+ ಇಳುಹಬೇಕು (ಕೈಯಿಂದ ಇಳಿಸಬೇಕು, ಬಿಡಬೇಕು; + ಎಂದು+ ಎನುತ= ಮಗುವನ್ನು ಎತ್ತಿ ನೋಡಿದ್ದು ಸಾಕು ಎಂದು ಹೇಳುತ್ತಾ/ , ಇನ್ನು ಇದನ್ನು ಬಿಡಬೇಕು ಎಂದು ಯೋಚಿಸುತ್ತಾ ಗಂಗಾಜಲದೊಳಗೆ ಹಾಯ್ಕಿದಳು= ಗಂಗಾನದಿಯಲ್ಲಿ ಹಾಕಿದಳು, ಜನದ+ ಅಪವಾದ ಭೀತಿಯಲಿ= ಮದುವೆಯಾಗದೆ ಕಂದನಿಗೆ ತಾಯಿಯಾದ ಜನರಿಂದ ಅಪವಾದದ=ನಿಂದನೆಯ ಭಯ= ಭಯದಿಂದ.
- ಪದ್ಯ-೧:ಅರ್ಥ:ಅಳುವ ಶಿಶುವನ್ನು ಎತ್ತಿ, ಅಪ್ಪಿಕೊಂಡು ಆನಂದದ ರೋಮಾಚನದ ನೀರಿನಲ್ಲಿಯೇ ಅದನ್ನು ಸವರಿ ತೊಳೆದಳು, ಒಂದೆಡೆ ಸುಂದರ ಮಗವನ್ನು ಜನಿಸಿದ ಸಂತೋಷ, ನಂತರ ಹೆರಿಗೆಯ ನಾಚಿಕೆ, ಆನಂತರ ಮದುವೆಯಾಗದೆ ಕಂದನಿಗೆ ತಾಯಿಯಾದ ಅಪವಾದದ ಭಯ, ವಿವಾದಕ್ಕೆ ಹೆದರಿ, ದಿಕ್ಕುಕಾಣದೆ ಕಾಡಿನಲ್ಲಿದ್ದಂತೆ, ತಮ್ಮ ವಂಶದ ಹಿರಿಮೆ ಕಡುವುದಲ್ಲಾ ಎಂದು ಮಗುವನ್ನು ಎತ್ತಿ ನೋಡಿದ್ದು ಸಾಕು ಎಂದು ಹೇಳುತ್ತಾ, ಇನ್ನು ಇದನ್ನು ಬಿಡಬೇಕು ಎಂದು ಯೋಚಿಸುತ್ತಾ, ಮದುವೆಯಾಗದೆ ಕಂದನಿಗೆ ತಾಯಿಯಾದ ಭಯದಿಂದ ಮಗುವನ್ನು ಗಂಗಾನದಿಯಲ್ಲಿ ಹಾಕಿದಳು.
- ತಾಯೆ ಬಲ್ಲಂದದಲಿ ಕಂದನ
- ಕಾಯಿ ಮೇಣ್ ಕೊಲ್ಲೆನುತ ಕಮಲ ದ
- ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ ||
- ರಾಯ ಕೇಳೈ ಸಕಲ ಲೋಕದ
- ತಾಯಲಾ ಜಾಹ್ನವಿ ತರಂಗದಿ
- ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ || ೨೨ ||
- ಪದ್ಯ೨೨:ಪದವಿಭಾಗ-ಅರ್ಥ:ತಾಯೆ= ಗಂಗಾ ಮಾತೆಯೇ, ಬಲ್ಲಂದದಲಿ ಕಂದನಕಾಯಿ= ನಿನಗೆ ತೊರಿದ ರೀತಿಯಲ್ಲಿ ಮಗುವನ್ನು ಕಾಪಾಡು, ಮೇಣ್ ಕೊಲ್ಲೆನುತ= ಇಲ್ಲವೇ ಸಾಯಿಸು, ಕಮಲ ದಳಾಯತಾಕ್ಷಿ= ಕಮಲದಳದಂತೆ ವಿಶಾಲ ಕಣ್ಣುಳ್ಳವರು, ಕುಮಾರಕನ ಹಾಯ್ಕಿದಳು ಮಡುವಿನಲಿ= ವಿಶಾಲ ಕಣ್ಣಿನ ಕುಂತಿ ಹೀಗೆ ಹೇಳಿ ಮಗುವನ್ನು ನೀರಿನ ಮಡುವಿನಲ್ಲಿ ಹಾಕಿದಳು. ರಾಯ ಕೇಳೈ ಸಕಲ ಲೋಕದ ತಾಯಲಾ ಜಾಹ್ನವಿ= ರಾಜನೇ ಕೇಳು ಗಂಗೆಯು ಮೂರು ಲೋಕದ ತಾಯಿಯಲ್ಲವೇ! ತರಂಗದಿ ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ(ದಡಕ್ಕೆ), = ಮಗುವಿಗೆ ನೋಯಿಸದೆ, ಮುಳುಗಲು ಅವಕಾಶಕೊಡದೆ ಗಂಗೆಯು ದಡಕ್ಕೆ ತಂದು ಹಾಕಿದಳು.
- ಪದ್ಯ೨೨:ಅರ್ಥ:ಗಂಗಾ ಮಾತೆಯೇ, ನಿನಗೆ ತೊರಿದ ರೀತಿಯಲ್ಲಿ ಮಗುವನ್ನು ಕಾಪಾಡು, ಇಲ್ಲವೇ ಸಾಯಿಸು, ವಿಶಾಲ ಕಣ್ಣಿನ ಕುಂತಿ ಹೀಗೆ ಹೇಳಿ ಮಗುವನ್ನು ನೀರಿನ ಮಡುವಿನಲ್ಲಿ ಹಾಕಿದಳು. ರಾಜನೇ ಕೇಳು ಗಂಗೆಯು ಮೂರು ಲೋಕದ ತಾಯಿಯಲ್ಲವೇ! ಮಗುವಿಗೆ ನೋಯಿಸದೆ, ಮುಳುಗಲು ಅವಕಾಶಕೊಡದೆ ಗಂಗೆಯು ದಡಕ್ಕೆ ತಂದು ಹಾಕಿದಳು.
- ಕೆದರಿ ಕಾಲಲಿ ಮಳಲ ರಾಶಿಯ
- ನೊದೆದು ಕೈಗಳ ಕೊಡಹಿ ಭೋಯೆಂ
- ದೊದದುರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ ||
- ಇದನು ಕಂಡನು ಸೂತನೊಬ್ಬನು
- ಮುದದ ಮದದಲಿ ತನ್ನ ಮರೆದು
- ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ || ೨೩ ||
- ಪದ್ಯ-೨೩:ಪದವಿಭಾಗ-ಅರ್ಥ:ಕೆದರಿ ಕಾಲಲಿ ಮಳಲ ರಾಶಿಯನು+ ಒದೆದು ಕೈಗಳ ಕೊಡಹಿ= ಆ ಕುಂತಿಯ ಮಗನು ಮಳಲ ರಾಶಿಯನ್ನು ಕೆದರುವಂತೆ ಕಾಲಲ್ಲಿ ಒದೆಯುತ್ತಾ ಕೈಗಳನ್ನು ಕೊಡವುತ್ತಾ, ಭೋ ಯೆಂದು ಒದೊದರುತಿರ್ದನು= ಭೋ ಎಂದು ದೊಡ್ಡದಾಗಿ ಅಳುತ್ತಿದ್ದನು. ಶಿಶುಗಳರಸನು ರವಿಯನೀಕ್ಷಿಸುತ= ಶಿಶುಗಳಿಗೆ ದೊರೆಯಂತಿದ್ದ ಆ ಮಗುವು ಸೂರ್ಯನನ್ನು ನೋಡುತ್ತಾ ಅಳುತ್ತಿದ್ದನು; ಇದನು ಕಂಡನು ಸೂತನೊಬ್ಬನು= ಇದನ್ನು ಒಬ್ಬ ಸೂತನು (ರಥನೆಡೆಸುವವನು, ಅಂಬಿಗ)ಕಂಡನು, ಮುದದ ಮದದಲಿ= ಸಂತೋಷದ ಉತ್ಕರ್ಷೆಯಲ್ಲಿ, ತನ್ನ ಮರೆದು ಉಬ್ಬಿದನು= ತನ್ನನ್ನೇ ಮರೆತು ಉಬ್ಬಿಹೋದ, ಇದು ಎತ್ತಣ ನಿಧಿಯೊ ಶಿವಶಿವಯೆಂದು ನಡೆತಂದ= ಇದು ಎಂಥಹ ಅಪೂರ್ವ ನಿಧಿ! ಶೀವಶಿವಾ ಎಂದು ದೈವವನ್ನು ನೆನೆದು ಮಗುವಿನ ಬಳಿ ಬಂದ.
- ಪದ್ಯ-೨೩:ಅರ್ಥ:ಆ ಕುಂತಿಯ ಮಗನು ಮಳಲ ರಾಶಿಯನ್ನು ಕೆದರುವಂತೆ ಕಾಲಲ್ಲಿ ಒದೆಯುತ್ತಾ ಕೈಗಳನ್ನು ಕೊಡವುತ್ತಾ, ಭೋ ಎಂದು ದೊಡ್ಡದಾಗಿ ಅಳುತ್ತಿದ್ದನು. ಶಿಶುಗಳಿಗೆ ದೊರೆಯಂತಿದ್ದ ಆ ಮಗುವು ಸೂರ್ಯನನ್ನು ನೋಡುತ್ತಾ ಅಳುತ್ತಿದ್ದನು; ಇದನ್ನು ಒಬ್ಬ ಸೂತನು ಅಂಬಿಗ ಕಂಡನು. ಅವನು ಸಂತೋಷದ ಉತ್ಕರ್ಷೆಯಲ್ಲಿ ತನ್ನನ್ನೇ ಮರೆತು ಉಬ್ಬಿಹೋದ. ಇದು ಎಂಥಹ ಅಪೂರ್ವ ನಿಧಿ! ಶೀವಶಿವಾ ಎಂದು ದೈವವನ್ನು ನೆನೆಯುತ್ತಾ ಮಗುವಿನ ಬಳಿಗೆ ಬಂದ.
- ತರಣಿಬಿಂಬದ ಮರಿಯೊ ಕೌಸ್ತುಭ
- ವರಮಣಿಯ ಖಂಡದ ಕಣಿಯೊ ಮ
- ರ್ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು ||
- ಇರಿಸಿ ಹೋದವಳಾವಳೋ ಶಿಶು
- ವರನ ತಾಯ್ ನಿರ್ಮೋಹೆಯೈ ಹರ
- ಹರ ಮಹಾದೇವೆನುತ ತೆಗೆದಪ್ಪಿದನು ಬಾಲಕನ || ೨೪ ||
- ಪದ್ಯ-೧:ಪದವಿಭಾಗ-ಅರ್ಥ:ತರಣಿಬಿಂಬದ ಮರಿಯೊ= ಇದು ಸೂರ್ಯನ ಕಿರಣಗಳ ಮರಿಯೋ!, ಕೌಸ್ತುಭವರಮಣಿಯ ಖಂಡದ ಕಣಿಯೊ= ವಿಷ್ನುವಿನ ಕೊರಳಲ್ಲಿರುವ ಕೌಸ್ತುಭರತ್ನದ ತುಂಡು ಇದ್ದ ಹಾಗಿದೆ. ಮರ್ತ್ಯರಿಗೆ+ ಮಗನು+ ಇವನಲ್ಲ= ಇವನು ಮನುಷ್ಯರಿಗೆ ಜನಿಸಿದ ಮಗನಲ್ಲ ಎಂದು ಕೊಂಡ. ಮಾಯಾ ಬಾಲಕನೊ= ಇವನು ಮಾಯಾ ಬಾಲನಿರಬಹದೇ ಎಂದು ಯೋಚಿಸಿದ. ಮೇಣು ಇರಿಸಿ ಹೋದವಳು+ ಆವಳೋ ಶಿಶುವರನ(ವರ-ಶ್ರೇಷ್ಠ)= ಮತ್ತೆ ಯಾವಳಾದರೂ ತಾಯಿ ಮಗುವನ್ನು ಹೆತ್ತು ಇಲ್ಲಿ ಇಟ್ಟು ಹೋಗಿರಬಹುದೇ? ಎಂದೂ ಯೊಚಿಸಿದ. ತಾಯ್ ನಿರ್ಮೋಹೆಯೈ= ತಾಯಿಯು ಪ್ರೇಮವಿಲ್ಲದವಳಾಗಿರಬೇಕು ಎಂದ. ಹರಹರ ಮಹಾದೇವ+ ಎನುತ ತೆಗೆದಪ್ಪಿದನು ಬಾಲಕನ= ಶಿವಾ ಮಹಾದೇವ ಎಂದು ಉದ್ಗರಿಸಿ ಬಾಲಕನನ್ನು ಎತ್ತಿ ಅಪ್ಪಿಕೊಂಡನು.
- ಟಿಪ್ಪಣಿ: ಮರಳಿನಲ್ಲಿ ಮಲುಗಿ ಅಳುತ್ತಿದ್ದ ಶಿಶು, - ಸೂತನ ಅಚ್ಚರಿ, ಅವನು ಎತ್ತಿ ಅಪ್ಪಿದ ಚಿತ್ರವನ್ನೇ ಬರೆದಿದ್ದಾನೆ (ಶಬ್ದಗಳಲ್ಲಿ} ಕವಿ.
- ಪದ್ಯ-೧:ಅರ್ಥ:ಇದು ಸೂರ್ಯನ ಕಿರಣಗಳ ಮರಿಯೋ!, ಇದು ವಿಷ್ಣುವಿನ ಕೊರಳಲ್ಲಿರುವ ಕೌಸ್ತುಭರತ್ನದ ತುಂಡು ಇದ್ದ ಹಾಗಿದೆ. ಇವನು ಮನುಷ್ಯರಿಗೆ ಜನಿಸಿದ ಮಗನಲ್ಲ ಎಂದು ಕೊಂಡ. ಇವನು ಮಾಯಾ ಬಾಲನಿರಬಹದೇ ಎಂದು ಯೋಚಿಸಿದ. ಮತ್ತೆ ಯಾವಳಾದರೂ ತಾಯಿ ಮಗುವನ್ನು ಹೆತ್ತು ಇಲ್ಲಿ ಇಟ್ಟು ಹೋಗಿರಬಹುದೇ? ಎಂದೂ ಯೊಚಿಸಿದ. ಆ ತಾಯಿಯು ಪ್ರೇಮವಿಲ್ಲದವಳಾಗಿರಬೇಕು ಎಂದ. ಶಿವಾ ಮಹಾದೇವ ಎಂದು ಉದ್ಗರಿಸಿ ಬಾಲಕನನ್ನು ಎತ್ತಿ ಅಪ್ಪಿಕೊಂಡನು.
ಸೂತನ ಮನೆಯಲ್ಲಿ ಕರ್ಣ ಬೆಳೆಯುತ್ತಿದ್ದನು
ಸಂಪಾದಿಸಿ
- ತೃಣವಲಾ ತ್ರೈಲೋಕ್ಯ ರಾಜ್ಯವ
- ಗಣಿಸುವೆನೆ ತಾನಿನ್ನು ತನ್ನಲಿ
- ಋಣವಿಶೇಷವಿದೇನೊ (ಪಾ-; ಋಣವಿಶೇಷವಿದೇನೋ) ಮೇಣ್ ಈ ಬಾಲಕಂಗೆನುತ||
- ಕ್ಷಣದೊಳೊದಗುವ ಬಾಷ್ಪ ಲುಳಿತೇ
- ಕ್ಷಣನು ಬಂದನು ಮನೆಗೆ ಪರುಷದ
- ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ || ೨೫ ||
- ಪದ್ಯ-೧:ಪದವಿಭಾಗ-ಅರ್ಥ:ತೃಣವಲಾ= ಹುಲ್ಲುಕಡ್ಡಿಯು, ತ್ರೈಲೋಕ್ಯ ರಾಜ್ಯವ ಗಣಿಸುವೆನೆ= ಮೂರುಲೋಕದ ರಾಜ್ಯ ಪದವಿಯ (ತನಗೆ;) ತಾನು+ ಇನ್ನು= ತಾನು ಈ ಮಗು ಸಿಕ್ಕಿದ ಮೇಲೆ; ತನ್ನಲಿ ಋಣವಿಶೇಷವಿದೇನೊ=ಈ ಮಗುವಿಗೂ, ತನಗೂ ಯಾವುದೋ ಜನ್ಮದ ಋಣಾನುಬಂಧ ವಿರಬಹುದು, ಮೇಣ್ = ಮತ್ತೂ ಈ ಬಾಲಕಂಗೆ+ ಎನುತ= ಈಬಾಕನಿಗೂ ನನಗೂ ಎನ್ನತ್ತಾ; ಕ್ಷಣದೊಳೊದಗುವ= ಆನಂದದಿಂದ ಉಕ್ಕಿ ಬರುತ್ತಿರುವ, ಬಾಷ್ಪ= ಕಣ್ಣೀರನಿಂದ, ಲುಳಿತ(ತಿರುಗಿದ- ಚಂಚಲ)+ ಈಕ್ಷಣನು= ಮಂಜಾದ ಕಣ್ನಿನ ಸೂತನು; ಬಂದನು ಮನೆಗೆ, ಪರುಷದಕಣಿಯ ತಂದೆನು ರಮಣಿ= ಪ್ರಿಯೇ,ಪರುಷಮಣಿಯ ಗಣಿಯನ್ನೇ ತಂದಿದ್ದೇನೆ, ಕೊಳ್ಳೆಂದಿತ್ತನರ್ಭಕನ- ಕೊಳ್ಳು(ತೆಗೆದುಕೊ)+ ಎಂದು+ ಇತ್ತನು()ಕೊಟ್ಟನು+ ಅರ್ಬಕನ= ಮಗುವನ್ನು-.
- ಪದ್ಯ-೧:ಅರ್ಥ: ಈ ಮಗು ಸಿಕ್ಕಿದ ಮೇಲೆ, ಈ ಮಗುವಿನ ಮುಂದೆ,ಮೂರುಲೋಕದ ರಾಜ್ಯ ಪದವಿಯ ತನಗೆ ಹುಲ್ಲುಕಡ್ಡಿಯು, ಮತ್ತೂ ಈ ಮಗುವಿಗೂ ತನಗೂ ಯಾವುದೋ ಜನ್ಮದ ಋಣಾನುಬಂಧ ವಿರಬಹುದು, ಎನ್ನತ್ತಾ; ಆನಂದದಿಂದ ಉಕ್ಕಿ ಬರುತ್ತಿರುವ, ಆನಂದದ ಕಣ್ಣೀರನಿಂದ, ಮಂಜಾದ ಕಣ್ನಿನ ಸೂತನು ಮನೆಗೆ ಬಂದನು. ಪ್ರಿಯೇ,ಪರುಷಮಣಿಯ ಗಣಿಯನ್ನೇ ತಂದಿದ್ದೇನೆ, ತೆಗೆದುಕೊ ಎಂದು ಮಗುವನ್ನು ಪತ್ನಿಗೆ ಕೊಟ್ಟನು.
- ಆದರಿಸಿದನು ರಾಧೆಯಲಿ ಮಗ
- ನಾದನೆಂದುತ್ಸವವ ಮಾಡಿ ಮ
- ಹೀ ದಿವಿಜರನು ದಾನ ಮಾನಂಗಳಲಿ ಸತ್ಕರಿಸಿ ||
- ಆ ದಿನಂ ಮೊದಲಾಗಿ ಉಧ್ಬವ
- ವಾದುದವನೈಶ್ವರ್ಯ ಉನ್ನತ
- ವಾದನಾ ರವಿನಂದನನು ರಾಧೇಯ ನಾಮದಲಿ || ೨೬ ||
- ಪದ್ಯ-೧:ಪದವಿಭಾಗ-ಅರ್ಥ:ಆದರಿಸಿದನು= ಸತ್ಕರಿಸಿ ಆದರಿಸಿದನು, ರಾಧೆಯಲಿ ಮಗನಾದನೆಂದು ಉತ್ಸವವ ಮಾಡಿ= ಸಮಾರಂಭ ಮಾಡಿ, ಮಹೀ ದಿವಿಜರನು= ಬ್ರಾಹ್ಮಣರನ್ನು, ದಾನ ಮಾನಂಗಳಲಿ ಸತ್ಕರಿಸಿ= ದಾನ ಮತ್ತು ಮರ್ಯಾದೆ ಸಲ್ಲಿಸಿ, ಆ ದಿನಂ ಮೊದಲಾಗಿ= ಆದನದ ನಂತರ, ಉಧ್ಬವವಾದುದು+ ಅವನ+ ಐಶ್ವರ್ಯ = ಆಮಗು ಬಂದ ದಿನದ ನಂತರ ಅವನ ಐಶ್ವರ್ಯ ಬೆಳೆಯಿತು. ಉನ್ನತವಾದನು+ ಆ ರವಿನಂದನನು ರಾಧೇಯ ನಾಮದಲಿ= ಆ ಸೂರ್ಯಪುತ್ರನು ರಾಧೇಯ ಎಂಬ ಹೆಸರಿನಲ್ಲಿ ಪ್ರಸಿದ್ಧನಾದನು.
- ಪದ್ಯ-೧:ಅರ್ಥ: ಸೂತನು ರಾಧೆಯಲಿ ಮಗನಾದನೆಂದು ಸಮಾರಂಭ ಮಾಡಿ, ದಾನ ಮತ್ತು ಮರ್ಯಾದೆ ಸಲ್ಲಿಸಿ ಬ್ರಾಹ್ಮಣರನ್ನು ಸತ್ಕರಿಸಿ ಆದರಿಸಿದನು, ಆ ಮಗು ಬಂದ ದಿನದ ನಂತರ ಅವನ ಐಶ್ವರ್ಯ ಬೆಳೆಯಿತು. ಆ ಸೂರ್ಯಪುತ್ರನು ರಾಧೇಯ ಎಂಬ ಹೆಸರಿನಲ್ಲಿ ಪ್ರಸಿದ್ಧನಾದನು.
- ಹೊಳೆ ಹೊಳೆದು ಹೊಡೆಮರಳಿ ನಡು ಹೊ
- ಸ್ತಿಲಲಿ ಮಂಡಿಸಿ ಬೀದಿ ಬೀದಿಗ
- ಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ ||
- ಲಲಿತರತ್ನದ ಬಾಲದೊಡಿಗೆಯ
- ಕಳಚಿ ಹಾಯ್ಕುವ ಹೆಸರು ಜಗದಲಿ
- ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ || ೨೭ ||
- ಪದ್ಯ-೧:ಪದವಿಭಾಗ-ಅರ್ಥ:ಹೊಳೆ ಹೊಳೆದು = ತೇಜಸ್ಸಿನಿಂದ ಹೊಳೆಯತ್ತಿದ್ದ ಆ ಮಗು, ಹೊಡೆಮರಳಿ ತೆವಳಿಕೊಂಡು, ನಡು ಹೊಸ್ತಿಲಲಿ= ಹೊಸಿಲ ಮೇಲೆ ಕುಳಿತು, ಮಂಡಿಸಿ= ಕುಳಿತು, ಬೀದಿ ಬೀದಿಗಳೊಳಗೆ ಸುಳಿವರ= ದಾರಿಯಲ್ಲಿ ಹೋಗುವವರನ್ನು ಸನ್ನೆಯಲಿ= ಸನ್ನೆಮಾಡಿ, ಕರೆಕರೆದು= ಪದೇಪದೇ ಕರದು, ನಸುನಗುತ ಲಲಿತರತ್ನದ= ಅವರನ್ನು ನೋಡಿ ನಸುನಗುತ್ತಾ, ಬಾಲದೊಡಿಗೆಯ(ಬಾಲದ/ ಬಾಲ್ಯದ+ ಉಡುಗೆಯ) ಕಳಚಿ ಹಾಯ್ಕುವ= ತಾನು ಧರಿಸಿದ್ದ ಚಂದದ ತನ್ನ ರತ್ನದ ಉಡುಗೆಯನ್ನು 'ತೆಗೆದುಕೊಳ್ಳಲಿ ಎಂದು' ಕಳಚಿ ಹಾಕುತ್ತಿದ್ದ, ಹೀಗೆ ಅವನ (ದಾನದ) ಗುಣ, ಹೆಸರು, ಜಗದಲಿ ಬೆಳೆವುತಿರ್ದುದು= ದೇಶದಲ್ಲಿ ಕಿವಿಯಿಂದ ಕಿವಿಗೆ ಹರಡಿ ಬೆಳೆಯಿತು, ಹಬ್ಬಿದುದು= (ಕರ್ಣಾಕರ್ಣಿಕೆಯಾಗಿ) ಎಲ್ಲಡೆ - ಹಬ್ಬಿತು, ಜನಜನದ ಕರ್ಣದಲಿ= ಎಲ್ಲ ಜನರ ಕಿವಿಯಲ್ಲಿ. (ಹಾಗಾಗಿ ಅವನಿಗೆ ಕರ್ಣ ಎಂಬ ಹೆಸರೂ ಬಂದಿತು).
- ಪದ್ಯ-೧:ಅರ್ಥ: ತೇಜಸ್ಸಿನಿಂದ ಹೊಳೆಯತ್ತಿದ್ದ ಆ ಮಗು, ತೆವಳಿಕೊಂಡು, ನಡು ಹೊಸಿಲ ಮೇಲೆ ಕುಳಿತು, ದಾರಿಯಲ್ಲಿ ಹೋಗುವವರನ್ನು ಸನ್ನೆಮಾಡಿ,ಪದೇ ಪದೇ ಕರದು, ಅವರನ್ನು ನೋಡಿ ನಸುನಗುತ್ತಾ, ತಾನು ಧರಿಸಿದ್ದ ಚಂದದ ತನ್ನ ರತ್ನದ ಉಡುಗೆಯನ್ನು 'ತೆಗೆದುಕೊಳ್ಳಲಿ ಎಂದು' ಕಳಚಿ ಹಾಕುತ್ತಿದ್ದ, ಹೀಗೆ ಅವನ (ದಾನದ) ಗುಣ, ಹೆಸರು, ದೇಶದಲ್ಲಿ ಕಿವಿಯಿಂದ ಕಿವಿಗೆ ಹರಡಿ ಬೆಳೆಯಿತು, ಎಲ್ಲ ಜನರ ಕಿವಿಯಲ್ಲಿ (ಕರ್ಣಾಕರ್ಣಿಕೆಯಾಗಿ) ಎಲ್ಲಡೆ ಹಬ್ಬಿತು. . (ಹಾಗಾಗಿ ಅವನಿಗೆ ಕರ್ಣ ಎಂಬ ಹೆಸರೂ ಬಂದಿತು).
- ಅರಸ ಕೇಳೈ ಕರ್ಣ ಪಾರಂ
- ಪರೆಯೊಳೀತನ ಹೆಸರು ಜಗದಲಿ
- ಹರಿದುದಲ್ಲಿಂ ಬಳಿಕಲೀತನ ನಾಮಕರಣದಲಿ ||
- ಸುರನರೋರಗ ನಿಕರವೇ ವಿ
- ಸ್ತರಿಸಿದುದು ಕರ್ಣಾಭಿಧಾನವ
- ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ || ೨೮ ||
ಪದ್ಯ-೧:ಪದವಿಭಾಗ-ಅರ್ಥ:ಅರಸ ಕೇಳೈ = ಅರಸನೇ ಕೇಳು,ಕರ್ಣ ಪಾರಂಪರೆಯೊಳು= ಕರ್ಣ ಎಂಬ ಪರಂಪರೆಯ ಪ್ರಸಿದ್ಧಿ, ಈತನ ಹೆಸರು ಜಗದಲಿ ಹರಿದುದು= ದೇಶಗಳಲ್ಲಿ ಹರಡಿತು. ಅಲ್ಲಿಂ ಬಳಿಕಲ್= ಆ ನಂತರ, ಈತನ ನಾಮಕರಣದಲಿ ಅಲ್ಲಿಂದ ನಂತರ, ಸುರನರೋರಗ= ದೇವತೆಗಳು, ಮನುಷ್ಯರು, ನಾಗರುಗಳಲ್ಲಿ, ನಿಕರವೇ= ಸಮೂಹದಲ್ಲಿ, ವಿಸ್ತರಿಸಿದುದು= ಪ್ರಸಿದ್ಧವಾಯಿತು. ಕರ್ಣ+ ಅಭಿಧಾನವ (ಕರ್ಣ ಎಂಬ ಹೆಸರು)+ ಗುರು ಪರಾಕ್ರಮಿ ಬೆಳೆವುತಿರ್ದನು= ಮಹಾ ಪರಾಕ್ರಮಿಯು, ಸೂತ ಭವನದಲಿ= ಹೀಗೆ ಕರ್ಣ ಎಂಬ ಹೆಸರಲ್ಲಿ ಬೆಳೆಯುತ್ತಿದ್ದನು.
ಪದ್ಯ-೧:ಅರ್ಥ:ಜನಮೇಜಯ ಅರಸನೇ ಕೇಳು, ಕರ್ಣ ಎಂಬ ಪರಂಪರೆಯ ಪ್ರಸಿದ್ಧಿ, ದೇಶಗಳಲ್ಲಿ ಹರಡಿತು. ಆ ನಂತರ, ದೇವತೆಗಳು, ಮನುಷ್ಯರು, ನಾಗರುಗಳ ಸಮೂಹದಲ್ಲಿ, ಕರ್ಣ ಎಂಬ ಹೆಸರು ಪ್ರಸಿದ್ಧವಾಯಿತು. ಮಹಾ ಪರಾಕ್ರಮಿಯು ಸೂತನ ಮನೆಯಲ್ಲಿ ಹೀಗೆ ಕರ್ಣ ಎಂಬ ಹೆಸರಲ್ಲಿ ಬೆಳೆಯುತ್ತಿದ್ದನು.[೧] [೨] [೩] [೪]
♦
♦♣♣♣♣♣♣♣♣♣♣♣♣♣♣♣♣♣♣♣♦
ॐ
- *ಕುಮಾರವ್ಯಾಸ ಭಾರತ
- * ಕುಮಾರವ್ಯಾಸಭಾರತ-ಸಟೀಕಾ
- * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
- * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
- * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
- *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
- *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
- *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)
|