ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೪)

<ಕುಮಾರವ್ಯಾಸ ಭಾರತ

<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೪ ನೆಯ ಸಂಧಿ

ಸಂಪಾದಿಸಿ
ಸೂಚನೆ~
ರಾಯಧರ್ಮಜ ಯಮಳ ಫಲುಗುಣ
ವಾಯುಸುತರರಸಿದರು ಕೌರವ
ರಾಯನನು ಕಳನೊಳಗೆ ಕಾಣದೆ ಮುತ್ತಿದರು ಕೊಳನ ||ಸೂ||

ಪದವಿಭಾಗ-ಅರ್ಥ: ರಾಯಧರ್ಮಜ ಯಮಳ ಫಲುಗುಣ ವಾಯುಸುತರರಸಿದರು ಕೌರವ ರಾಯನನು ಕಳನೊಳಗೆ (ರಣರಂಗದಲ್ಲಿ) ಕಾಣದೆ ಮುತ್ತಿದರು ಕೊಳನ.
ಅರ್ಥ: ರಾಜ ಧರ್ಮಜನೂ, ಯಮಳ-ನಕುಲ ಸಹದೇವರೂ, ಫಲ್ಗುಣನೂ ವಾಯುಸುತ ಭೀಮನೂ ಕೌರವರಾಯನನ್ನು ಹುಡುಕಿದರು; ರಣರಂಗದಲ್ಲಿ ಅವನನ್ನು ಕಾಣದೆ ಸರೋವರವನ್ನು ಮುತ್ತಿದರು.[][]

ಮಂತ್ರಿ ಸಂಜಯನು ನೆಡೆದ ಸಂಗತಿಯನ್ನು ತನ್ನವರಿಗೆ ತಿಳಿಸಿದನು

ಸಂಪಾದಿಸಿ
ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ |
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಸಂಜಯ ಬರುತ ಕುರಭೂಪಾಲನ+ ಅರಕೆಯ(ಅರಸುವಿಕೆಯ, ಅರಕೆ= ತುಂಬಿರುವಿಕೆ. ) ಭೀಮನವರು+ ಇವರಲ್ಲಲೇ ಎನುತ ಮೇಲೆ ಹತ್ತಿರ ಬರಬರಲು ಸಮಪಾಳಿಯಲಿ ರಥ ಮೂರರಲಿ ಕೃಪಕೋಲ ಗುರುವಿನ ಮಗನಲಾ ಎನುತ+ ಅಲ್ಲಿಗೆ + ಐತಂದ
ಅರ್ಥ:ಮುನಿ ವೈಶಂಪಾಯನನು ಹೇಳಿದ, ಕೇಳು ಜನಮೇಜಯ ರಾಜನೇ, ಸಂಜಯನು ಬರುತ್ತಾ ದೂರದಲ್ಲಿ ರಥಿಕರನ್ನು ನೋಡಿ, ಕುರಭೂಪಾಲನನ್ನು ಅರಸುತ್ತಿರುವ ಭೀಮನ ಪರಿವಾದವರು ಇವರು ಆಗಿಲಾರರು ಅಲ್ಲವೇ, ಎನುತ್ತಾ ಮುಂದೆ ಹತ್ತಿರ ಬರಬರಲು ನೋಡಿ, ಸಮಪಾಳಿಯಲಿ ಒಬ್ಬರೊಬ್ಬರನ್ನು ಅನುಸರಿಸಿ ಮೂರು ರಥಗಳಲ್ಲಿರುವ ಕೃಪ, ಕೋಲಗುರು ದ್ರೋಣನ ಮಗ ಅಶ್ವತ್ಥಾಮನಲಾ ಎನ್ನುತ್ತಾ ಅವರ ಬಳಿಗೆ ಬಂದ.
ಇಳಿದು ರಥವನು ಸಂಜಯನ ಬರ
ಸೆಳೆದು ತಕ್ಕೈಸಿದರು ಹಗೆಯಲಿ
ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರಭೂಪತಿಯ |
ಕಲಹಗತಿಯೇನಾಯ್ತು ಶಕುನಿಯ
ದಳದೊಳಿದ್ದನು ಕೌರವೇಶ್ವರ
ನುಳಿದನೇ ಹದನಾವುದೆಂದರು ಭಟರು ಸಂಜಯನ || ೨ ||
ಪದವಿಭಾಗ-ಅರ್ಥ: ಇಳಿದು ರಥವನು ಸಂಜಯನ ಬರಸೆಳೆದು ತಕ್ಕೈಸಿದರು, ಹಗೆಯಲಿ ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರ ಭೂಪತಿಯ, ಕಲಹಗತಿಯೇನಾಯ್ತು (ಯುದ್ಧದ ಮುಂದಿನ ನೆಡೆ), ಶಕುನಿಯ ದಳದೊಳಿದ್ದನು ಕೌರವೇಶ್ವರ ನುಳಿದನೇ, ಹದನಾವುದು+ ಎಂದರು ಭಟರು ಸಂಜಯನ.
ಅರ್ಥ: ಅವರು ಮೂವರೂ ರಥವನ್ನು ಇಳಿದು ಸಂಜಯನನ್ನು ಬರಸೆಳೆದು ಅಪ್ಪಿಕೊಂಡು ಗೌರವಿಸಿದರು. ಸಂಜಯಾ ನೀನು ಶತ್ರುಗಳ ಕೈಯಲ್ಲ ಸಿಕ್ಕಿ ಧೃತರಾಷ್ಟ್ರ ರಾಜನ ಭಾಗ್ಯದಿಂದ ಬದುಕಿ ಬಂದೆಯಲ್ಲಾ,ಯುದ್ಧದಗತಿ ಏನಾಯಿತು? ಶಕುನಿಯ ಸೈನ್ಯದಲ್ಲಿ ಕೌರವೇಶ್ವರನು ಇದ್ದನು. ಅವನು ಉಳಿದಿರುವನೇ? ವಿಚಾರ ಏನು? ಎಂದು ಮೂವರು ಯೋದರು ಸಂಜಯನನ್ನು ಕೇಳಿದರು.
ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರ ತ್ರಿಗರ್ತರನು ಸೌಬಲ ಸುಶರ‍್ಮಕರ |
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ || ೩ ||
ಪದವಿಭಾಗ-ಅರ್ಥ: ಅರಿದುದಿಲ್ಲಾ ಕೌರವೇಂದ್ರನನು+ ಅರಸಿ ಶಕುನಿಯ ದಳವ ಮುತ್ತಿದರು+ ಅರಿದರು+ ಅವರ ತ್ರಿಗರ್ತರನು ಸೌಬಲ ಸುಶರ್ಮಮಕರ, ಮುರಿದ (ಕೊಂದ) ಬವರವ(ಯುದ್ಧ) ಬಲಿದು(ತೀವ್ರವಾಗಿ) ಗಜ ನೂರರಲಿ ಹೊಕ್ಕನು ರಾಯನು ಅಹಿತರ(ಶತ್ರುಗಳ) ಜರಿದು ಝಾಡಿಸಿ ಬೀದಿ+ವ+ ಅರಿದನು ರಾಯದಳದೊಳಗೆ.
ಅರ್ಥ: ಕೌರವನು ಇರುವುದೆಲ್ಲಿ ಎಂದು ಪಾಂಡವರು ತಿಳಿದಿರಲಿಲ್ಲ. ಅವರು ಕೌರವೇಂದ್ರನನ್ನು ಹುಡುಕಿ ಶಕುನಿಯ ಸೇನೆಯನ್ನು ಮುತ್ತಿದರು. ಅಲ್ಲಿ ಅವರು ಕೌರವನು ಇರುವುದನ್ನು ತಿಳಿದರು. ಶಕುನಿಯ ಸೇನೆಯವರ ತ್ರಿಗರ್ತರನ್ನೂ, ಸೌಬಲ/ಶಕುನಿಯನ್ನೂ, ಸುಶರ್ಮಮಕರನ್ನೂ ಕೊಂದಾಗ, ಯುದ್ಧವನ್ನು ತೀವ್ರಗೊಳಿಸಿ ನೂರು ಆನೆಗಳೊಡನೆ ಕೌರವರಾಯನು ಶತ್ರುಗಳನ್ನು ಬೈದು ಆರ್ಭಟಿಸಿ ಹೊಡೆದು ಹೊಕ್ಕನು; ಧರ್ಮರಾಯನ ದಳದೊಳಗೆ ದೊಡ್ಡ ಬೀದಿಯಾಗುವಂತೆ ಸಂಹಅರ ಮಾಡಿದನು.
ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ |
ತಲೆಗೆ ಬಂದುದು ತನಗೆಯಾಕ್ಷಣ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ || ೪ ||
ಪದವಿಭಾಗ-ಅರ್ಥ: ಬಳಿಕ ಭೀಮನ ಗದೆಯಲಿ+ ಇಭ (ಆನೆ) ಶತವು+ ಅಳಿದರೆ (ಸತ್ತರೆ)+ ಒಬ್ಬನೆ ತಿರುಗಿ ಹಾಯ್ದನು ಕೊಳುಗುಳದ ಕೋಳ್+ (ಗ)+ ಕುದಿಯ ಕೋಲಾಹಲದ ಕೆಸರಿನಲಿ ತಲೆಗೆ ಬಂದುದು ತನಗೆ,+ ಯ+ ಆಕ್ಷಣ ಸುಳಿದರು+ ಎಮ್ಮ+ ಆರಾಧ್ಯ ವರ ಮುನಿತಿಲಕ ವೇದವ್ಯಾಸ ದೇವರು, ಕೃಪೆಯ ಭಾರದಲಿ
ಅರ್ಥ: ಬಳಿಕ ಭೀಮನು ಗದೆಯಿಂ ನೂರು ಆನೆಗಳನ್ನೂ ಕೊಂದನು; ಆಗ ಕೌರವನು ಒಬ್ಬನೆ ರಣರಂಗದಿಂದ ಹಿಂತಿರುಗಿ ಓಡಿದನು. ನಂತರ ಸಮಜಯನು ಕೊಳುಗುಳದ/ರಣರಂಗದಲ್ಲಿ ಕೋಳ್/ಹೋರಾಟದಿಂದ ಕುದಿಯುತ್ತಿದ್ದ ಕೋಲಾಹಲದ/ಅಸ್ತವ್ಯಸ್ತವಾದ ಕೆಸರಿನಲ್ಲಿ ಕೌರವನನ್ನು ಹುಡುಕುತ್ತಿದ್ದ ತನಗೆ ತಲೆಗೆ/ಸಾವು ಹತ್ತಿರ ಬಂದಿತು. ಸಾತ್ಯಕಿಯು ಕೊಲ್ಲಲು ಕತ್ತಿಎತ್ತಿದ್ದನು. ಆ ಕ್ಷಣ ನಮ್ಮ ಆರಾಧ್ಯ ವರ/ಶ್ರೇಷ್ಠ ಮುನಿತಿಲಕರಾದ ವೇದವ್ಯಾಸ ದೇವರು ಅಲ್ಲಿ ಸುಳಿದರು/ಕಾಣಿಸಿಕೊಂಡರು, ಅವರ ಕೃಪೆಯ ಭಾರದಿಂದ ತಾನು ಬದುಕಿಬಂದುದಾಗಿ ಹೇಳಿದನು.
ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ |
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ || ೫ ||
ಪದವಿಭಾಗ-ಅರ್ಥ: ಸೆಳೆದುಕೊಂಡನು ಮೃತ್ಯುವಿನ ಹೆಡತಲೆಯನು+ ಒದೆದು ಕೃಪಾಳು ತನ್ನನು ತಲೆಬಳಿಚಿ (ಕಾಪಾಡಿ) ಕಳುಹಿದರೆ ಬಂದೆನು ರಾಯನ+ ಅರಕೆಯಲಿ ಬಳಲಿ ಬೀಳುತ್ತೇಳುತೊಬ್ಬನೆ ತಲೆಮುಸುಕಿನಲಿ ನಡೆಯೆ ಕಂಡೆನು ನೆಲನೊಡೆಯನ+ ಅಹುದು+ ಅಲ್ಲೆನುತ ಸುಳಿದೆನು ಸಮೀಪದಲಿ.
ಅರ್ಥ: ಕೃಪಾಳು ವೇದವ್ಯಾಸ ಮುನಿ ಮೃತ್ಯುವಿನ ಹೆಡತಲೆಯಂತಿದ್ದ ಖಡ್ಗವನ್ನು ಸಾತ್ಯಕಿಯಿಂದ ಸೆಳೆದುಕೊಂಡನು; ಹೀಗೆ ಮೃತ್ಯುವನ್ನು ಒದೆದು ತನ್ನನುಕಾಪಾಡಿ ಕಳುಹಿಸಲಾಗಿ ಬಂದೆನು ಕೌರವ ರಾಯನನ್ನು ಅರಸುತ್ತಾ ಬಳಲಿ ಬೀಳುತ್ತಾ ಏಳುತ್ತಾ ಬರುವಾಗ, ಒಬ್ಬನೆ ತಲೆಮರೆಸಿಕೊಂಡು ನಡೆಯುತ್ತಿರುವ ನೆಲನ-ಒಡೆಯ ಅರಸನನ್ನು ಕಂಡೆನು. ಅವನೇ ಅಹುದೋ ಅಲ್ಲವೋ ಎನ್ನುತ್ತಾ ಅವನ ಸಮೀಪಕ್ಕೆ ಹೋದೆನು.
ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು |
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ || ೬ ||
ಪದವಿಭಾಗ-ಅರ್ಥ: ಕಂಡೆನು+ ಅರಸನನು+ ಇಬ್ಬರವ (ದಿಕ್ಕಿಲ್ಲದುದ) ಬಳಿಕ+ ಅಂಡಲೆದುದ (ಗೊತ್ತುಗುರಿಯಿಲ್ಲದೆ ಅಲೆದುದನ್ನು)+ ಅತಿಶೋಕ ಶಿಖಿ (ನನ್ನ ಅತಿಯಾದ ಶೋಕದ ಬೆಂಕಿ ಅವನನ್ನು ಬಾಧಿಸಲಿಲ್ಲ.) ಕೈಗೊಂಡುದಿಲ್ಲ (ಬಾಧಿಸಲಿಲ್ಲ)+ ಅರೆಘಳಿಗೆ ಬಳಿಕ+ ಎಚ್ಚತ್ತು ಕಂದೆರೆದು (ವಿಚಾರಮಾಡಿ) ಖಂಡಿಸಿದನು+ ಎನ್ನ+ ಉಬ್ಬೆಯನು(ಉದ್ವೇಗ, ದುಃಖ,ಸಂತಾಪ,ಕ್ಷೋಭೆ) ಹುರಿಗೊಂಡುದು (ಹುರಿಗೊಳ್ಳು= ಉತ್ಸಾಹಗೊಳ್ಳು, ಸಮನ್ವಯವಾಗು, ಹುರುಪನ್ನು ಪಡೆ)+ ಆತನ ಸತ್ವವು+ ಆತನ ದಂಡಿಯಲಿ(ಸಮನ್ವಯವಾಗು ೨ ಉತ್ಸಾಹಗೊಳ್ಳು, ಹುರುಪನ್ನು ಪಡೆ ೩ ಬಲವಾಗು, ಶಕ್ತಿಗೂಡು) ಬಹರು+ ಆರು ಸುರ (ದೇವತೆ), ನರ ನಾಗಲೋಕದಲಿ.
ಅರ್ಥ:ಸಂಜಯನು, 'ನಾನು ಕೊನೆಗೂ ದಿಕ್ಕಿಲ್ಲದ ಅರಸ ಕೌರವನನ್ನು ಕಂಡೆನು; ಬಳಿಕ ಅವನು ಗೊತ್ತುಗುರಿಯಿಲ್ಲದೆ ಅಲೆದುದನ್ನು ಕಂಡು, ನಾನು ವ್ಯಕ್ತ ಪಡಿಸಿದ ಅತಿಯಾದ ಶೋಕದ ಬೆಂಕಿ, ಅವನನ್ನು ಬಾಧಿಸಲಿಲ್ಲ. ಅರೆಘಳಿಗೆ ಚಿಂತಿಸಿ ಬಳಿಕ ಎಚ್ಚತ್ತು ವಿಚಾರಮಾಡಿ ನನ್ನನ್ನು (ನನ್ನ ಸಲಹಯನ್ನು) ಖಂಡಿಸಿದನು. ನನ್ನ ಉದ್ವೇಗ ದುಃಖವನ್ನು ಖಂಡಿಸಿದನು. ಆತನ ಸತ್ವವು ಹುರುಪನ್ನು ಪಡೆಯಿತು; ಆತನ ಹುರುಪಿನ, ಶಕ್ತಿಯ ಸಮನಾಗಿ ಸುರ ನರ ನಾಗಲೋಕದಲ್ಲಿ ಯಾರು ಬರುವರು!. ಅವನ ಸಮಾನರಿಲ್ಲ,' ಎಂದನು.
ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ |
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ || ೭ ||
ಪದವಿಭಾಗ-ಅರ್ಥ: ಬಂದನು+ ಎನ್ನನು ಸಂತವಿಡುತಲಿ(ಸಮಾಧಾನಪಡಿಸು)+ ಅದೊಂದು ಸರಸಿಯ ತಡಿಯಲಿ+ ಅಳವಡೆ ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ, ತಂದೆಗೆ+ ಅರುಹೆಂದು+ ಎನಗೆ ಹೇಳಿದು ಹಿಂದೆ ಮುಂದೆ+ ಎಡಬಲನನು+ ಆರೈದು+ ಅಂದವಳಿಯದೆ ನೀರ ಹೊಕ್ಕನು ಕಾಣೆನು+ ಅವನಿಪನ.
ಅರ್ಥ: ಸಂಜಯನು ಹೇಳಿದನು,' ತನ್ನನ್ನು ಸಂತೈಸಿ ಅಲ್ಲಿ ಒಂದು ಸರೋವರದ ದಡದಲ್ಲಿ ಬಂದು ನಿಂತು ಗದೆಯನ್ನು ತೋಳಿನ ಮೂಲದಲ್ಲಿ ಜೋಡಿಸಿಕೊಂಡನು; ಅವನು ಹಿಂದೆ ಮುಂದೆ, ಎಡಬಲದಲ್ಲಿ ಪರಿಶೀಲಿಸಿ ನನಗೆ ಹೇಳಿದನು; ನನ್ನನ್ನು ಕುರಿತು, 'ನನ್ನ ತಂದೆಗೆ ಹೇಳು, ಕೌರವನು ಯಾವ ತೊಂದರಯಿಲ್ಲದೆ ಸರೋವರ ನೀರನ್ನು ಹೊಕ್ಕನು,ಎಂದು; ಆ ನಂತರ ರಾಜನನ್ನು ಕಾಣೆನು, ಎಂದನು ಸಂಜಯ.
ಅವರು ಕಂಬನಿದುಂಬಿದರು ಕೌ
ರವ ಮಹಾವಂಶಾಭಿಚಾರ
ವ್ಯವಸಿತಕೆ ಫಲವಾಯ್ತಲಾ ಯಮನಂದನಾದಿಗಳ |
ಶಿವಶಿವಾ ಪವಡಿಸಿತೆ ಚತುರ
ರ್ಣವ ವಿಪರಿಪರಿಧಾನ ಪೃಥ್ವೀ
ಧವನ ಬಾಳಿಕೆ ನೀರೊಳೆಂದಳಲಿದನು ಗುರುಸೂನು || ೮ ||
ಪದವಿಭಾಗ-ಅರ್ಥ: ಅವರು ಕಂಬನಿದುಂಬಿದರು, ಕೌರವ ಮಹಾವಂಶ+ ಅಭಿಚಾರ(ಮಾಟ- ಮಂತ್ರ, ಕೀಳು ಮಾರ್ಗ) ವ್ಯವಸಿತಕೆ(ಕೀಳುತನದ ವ್ಯವಸ್ಥೆಯ) ಫಲವಾಯ್ತಲಾ ಯಮನಂದನ+ ಆದಿಗಳ ಶಿವಶಿವಾ ಪವಡಿಸುತೆ ಚತುರರ್ಣವ ವಿಪರಿಪರಿಧಾನ (ನೋಟ.ವಿಪರಿ-ಕೆಟ್ಟ ಪರಿಸ್ಥತಿ) ಪೃಥ್ವೀ+ ಧವನ(ಭೂ+ ಪತಿ) ಬಾಳಿಕೆ ನೀರೊಳು+ ಎಂದು+ ಅಳಲಿದನು ಗುರುಸೂನು
ಅರ್ಥ: ಅವರು ದುಃಖದಿಂದ ಕಂಬನಿದುಂಬಿದರು. ಕೌರವ ಮಹಾವಂಶ ಶತ್ರುಗಳಿಂದ ಅಡಗುವ ಕೀಳುತನದ ಪಿರಿಸ್ಥಿತಿಯ ಫಲವನ್ನು ಪಡೆಯುವಂತೆ ಆಯಿತಲ್ಲಾ; ಶಿವಶಿವಾ ಧರ್ಮಜನೇ ಮೊದಲಾದವರ ಚತುರ್ವರ್ಣದ ಧರ್ಮ ಮಲಗಿತೆ? ಕುರುಭೂಪತಿಯ ಬಾಳ್ವೆ ನೀರಲ್ಲಿ ಅಡಗುವಂತಾಯಿತೇ, ಎಂದು ಗುರುಸೂನು ಅಶ್ವತ್ಥಾಮನು ಅಳಲಿದನು/ದು‍ಖಿಸಿದನು. ದುರ್ಯೋಧನನ ಹೀನಸ್ಥಿತಿಗೆ ಅಶ್ವತ್ಥಾಮನು ಧರ್ಮಜನನ್ನು ಹೊಣೆಮಾಡಿದನು.
ಅಳಲದಿರಿ ಗಜಪುರಿಗೆ ಸತಿಯರ
ಕಳುಹುವೆನು ನೀವವನಿಪಾಲನ
ತಿಳುಹಲಾಪಡೆ ಸಂಧಿಗೊಡಬಡಿಸುವದು ಕುರುಪತಿಯ |
ಕೊಳನ ತಡಿಯಲಿ ಕಾಣದಂತಿರೆ
ಬಳಸಿ ನೀವೆಂದವರನತ್ತಲು
ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ || ೯ ||
ಪದವಿಭಾಗ-ಅರ್ಥ: ಅಳಲದಿರಿ ಗಜಪುರಿಗೆ ಸತಿಯರ ಕಳುಹುವೆನು, ನೀವು+ ಅವನಿಪಾಲನ ತಿಳುಹಲು+ ಆಪಡೆ(ಸಾಧ್ಯವಾದರೆ) ಸಂಧಿಗೆ+ ಒಡಬಡಿಸುವದು, ಕುರುಪತಿಯ ಕೊಳನ ತಡಿಯಲಿ ಕಾಣದಂತಿರೆ ಬಳಸಿ ನೀವೆಂದು+ ಅವರನು+ ಅತ್ತಲು ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ.
ಅರ್ಥ: ಸಂಜಯನು ಕೃಪಾದಿಗಳಿಗೆ, ದುಃಖಿಸಬೇಡಿ, ದುಃಖಿಸಿ ಪ್ರಯೋಜನವಿಲ್ಲ. ನಾನು ಹಸ್ತನಾವತಿಗೆ ರಾಣಿ ಪರಿವಾರವನ್ನು ಕಳುಹಿಸುವೆನು. ನೀವು ಕೌರವರಾಯನಿಗೆ ತಿಳುವಳಕೆ ಹೇಳಿ ಸಾಧ್ಯವಾದರೆ ಸಂಧಿಗೆ ಒಪ್ಪಿಸುವದು; ಕುರುಪತಿಯನ್ನು ಯಾರೂ ಕಾಣದಂತೆ ಕೊಳದ ತಳದಲ್ಲಿ ಬಳಸಿ ನಿಂತು ನೀವು ಸಂಧಿಗೆ ಒಪ್ಪಿಸಿ,' ಎಂದು ಅವರನ್ನು ಅತ್ತ ಕಳುಹಿಸಿ, ಸಂಜಯನು ಬಂದು ಕೌರವನೃಪನ ಪಾಳೆಯವನ್ನು ಹೊಕ್ಕನು.
ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ |
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ || ೧೦ ||
ಪದವಿಭಾಗ-ಅರ್ಥ:ಅರಮನೆಗೆ ಬಂದಖಿಳ ಸಚಿವರ ಕರಸಿದನು ಸರಹಸ್ಯವನು ವಿಸ್ತರಿಸಿದನು ಸರ್ವ+ ಅಪಹಾರವ(ಸೇನೆಯ ನಾಶವ) ನೃಪಪಲಾಯನವ ಅರಸಿಯು+ ಅರಿದಳು ಭಾನುಮತಿ ಮಿಕ್ಕ+ ಅರಸಿಯರಿಗೆ+ ಅರುಹಿಸಿದಳು+ ಅಂತಃಪುರದೊಳು+ ಅಲ್ಲಿಂದ+ ಅಲ್ಲಿ ಹರೆದುದು ಕೂಡೆ ರಣಭೀತಿ.
  • (ಹರೆದುದು= -ಹರಿ- ತುಂಡಾಗು, ಮುಕ್ತಾವಾಯಿತು.(ಹರಿ- ಹರೆ: (ಕ್ರಿ)ಮುಕ್ತಾಯ, ಹರ ಹರೆದುದು - ಹರಡಿತು, ಯುದ್ಧದಲ್ಲಿ ಸೋಲಿನ ಭೀತಿ ಹರಡಿತು.)
ಅರ್ಥ:ಸಂಜಯನು (ಪಾಳೆಯದ) ಅರಮನೆಗೆ ಬಂದು ಎಲ್ಲಾ ಸಚಿವರನ್ನೂ ಕರಸಿದನು. ಸತ್ಯವಾದ ರಹಸ್ಯವನ್ನು ವಿಸ್ತರಿಸಿ ಹೇಳಿದನು. ಸರ್ವ ಸೇನೆಯ ನಾಶವನ್ನೂ ನೃಪನ ಪಲಾಯನವನ್ನೂ ತಿಳಿಸಿದನು. ಅರಸಿ ಭಾನುಮತಿ ವಿಷಯವನ್ನು ಅರಿತಳು. ಅವಳು ಉಳಿದ ಅರಸಿಯರಿಗೆ ಅಂತಃಪುರದಲ್ಲಿ ಅದನ್ನು ಹೇಳಿದಳು. ಅಲ್ಲಿಂದ ಅಲ್ಲಿಗೆ (ಎಲ್ಲಾಕಡೆ) ಕೂಡಲೆ ರಣಭೀತಿ ಹರೆದುದು/ ಹರಿಯಿತು/ ಹೋಯಿತು (ಹರಡಿದುದು- ಹರಡಿತು?).

ಸಂಜಯನು ಪಾಳೆಯವನ್ನು ತೆಗೆಸಿ ಹಸ್ತಿನಾವತಿಗೆ ಕಳಿಸಿದನು

ಸಂಪಾದಿಸಿ
ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ |
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ಧರದ ದಂಡಿಗೆ ಬಂದವರಮನೆಗೆ || ೧೧ ||
ಪದವಿಭಾಗ-ಅರ್ಥ: ಕೂಡೆ, ಗಜಬಜವಾಯ್ತು ಪಾಳೆಯವು+ ಓಡಿತಲ್ಲಿಯದು+ ಅಲ್ಲಿ ಜನವು+ ಅಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ ಹೂಡಿದವು ಬಂಡಿಗಳು ಹರಿದು (ಚಲಿಸಿ)+ ಎಡೆಯಾಡಿದವು ಕೊಲ್ಲಾರಿಗಳು (ಸಿಂಗರಿಸಿದ ಕಮಾನು ಬಂಡಿಗಳು) ರಥಗೂಡಿದವು ಬದ್ಧರದ ದಂಡಿಗೆ ಬಂದು+ ಅರಮನೆಗೆ
ಅರ್ಥ:ಸಂಜಯನು ಪಾಳೆಯವನ್ನು ತೆಗೆದು ಹಸ್ತನಾವತಿಗೆ ಎಲ್ಲರೂ ಹೋಗಲಿ ಎಂದ ಕೂಡಲೆ, ಹೊರಡುವ ಗಡಿಬಿಡಿಯ ಗದ್ದಲ- ಗಜಿಬಿಜಿ ಉಂಟಾಯಿತು. ಪಾಳೆಯವನ್ನು ಎತ್ತಿದರು ಓಡಿತು ಅಲ್ಲಿಯದು, ಮೊದಲು ಎಲ್ಲಿತ್ತೊ ಅಲ್ಲಿಗೆ ಹೊರಟವು. ಜನ ಸಮೂಹವು ಅಲ್ಲಿ ಇಲ್ಲಿ ನೆಡೆದಾಡಿದರು; ಕ್ರಯವಿಕ್ರಯದ ಅಂಗಡಿ ಗೂಡುಗಳು ವಾಣಿಜ್ಯ ಬೀದಿಯಲ್ಲಿ ಬಂಡಿಗಳನ್ನು ಹೂಡಿದವು. ಗಾಡಿಗಳು ಹರಿದು, ಹಿಂದೆ ಮುಂದೆ ಎಡೆಯಾಡಿದವು. ಸಿಂಗರಿಸಿದ ಕಮಾನು ಬಂಡಿಗಳು, ರಥಗಳು ಕೂಡಿ ಹೊರಟವು. ಬದ್ಧರದ/ವಾದ್ಯಗಳೊಂದಿಗೆ ದಂಡಿಗೆ/ಪಲ್ಲಕ್ಕಿಗಳು ಹಸ್ತಿನಾವತಿಯ ಅರಮನೆಗೆ ಬಂದವು.
ಭಾನುಮತಿ ಹೊರವಂಟಳರಸನ
ಮಾನಿನಿಯರು ಸಹಸ್ರಸಂಕ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ |
ಭಾನುದತ್ತನ ಸೈಂಧವನ ರವಿ
ಸೂನುವಿನ ದುಶ್ಶಾಸನನ ಜಲ
ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ || ೧೨ ||
ಪದವಿಭಾಗ-ಅರ್ಥ: ಭಾನುಮತಿ ಹೊರವಂಟಳು+ ಅರಸನ ಮಾನಿನಿಯರು ಸಹಸ್ರಸಂಕ್ಯೆಯೊಳು+ ಆನನೇಂದು (ಆನನ+ ಇಂದು) ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ ಭಾನುದತ್ತನ ಸೈಂಧವನ ರವಿಸೂನುವಿನ ದುಶ್ಶಾಸನನ ಜಲಜ+ ಆನನೆಯರು(ಕಮಲ+ ಮುಖಿಯರು)+ ಒಗ್ಗಿನಲಿ ರಥವೇರಿದರು ದುಗುಡದಲಿ.
ಅರ್ಥ:ರಾಜಬಿಡಾರದಿಂದ ಕೌರವನ ಪತ್ನಿ ಭಾನುಮತಿ ಹೊರಹೊರಟಳು, ಇತರ ಅರಸನ ಪತ್ನಿಯರು ಸಹಸ್ರಸಂಕ್ಯೆಯಲ್ಲಿ ಅವರ ಚಂದ್ರಮುಖಗಳ ಪ್ರಭೆ ಶೋಬಿಸಲು, ಬಿಸಿಲ ಬೇಗೆಗಳಲ್ಲಿ ಹೊರಟರು; ಭಾನುದತ್ತನ, ಸೈಂಧವನ, ರವಿಸೂನು/ಕರ್ಣನ ಮಗ ವೃಷಸೇನ- ವೃಷಕೇತುವಿನ, ದುಶ್ಶಾಸನನ, ಇವರ ಕಮಲಮುಖಿಯರಾದ ಪತ್ನಿಯರು ಒಗ್ಗಿನಲ್ಲಿ/ ಒಟ್ಟೊಟ್ಟಿಗೆ ಮನಸ್ಸಿನ ಗಂಡರನ್ನು ಕಳೆದುಕೊಂಡ ದುಗುಡದಿಂದ ರಥವನ್ನು ಹತ್ತಿದರು.
ಸರಕ ಹಿಡಿದವು ಬಂಡಿ ಶತಸಾ
ವಿರ ನೃಪಾಲಯದಿಂದ ವಿವಿಧಾ
ಭರಣಭರಿತದ ಭೂರಿ ಪೆಟ್ಟಿಗೆ ಘಾಡಿಸಿತು ರಥವ |
ವರದುಕೂಲದ ಪಟ್ಟಕರ್ಮದ
ಥರದದಿಂದೊತ್ತಿದವು ಚಾಮೀ
ಕರಮಯದ ಬಹುವಿಧದ ಭಾಂಡದ ಬಂಡಿ ನೂಕಿದವು || ೧೩ ||
ಪದವಿಭಾಗ-ಅರ್ಥ: ಸರಕ ಹಿಡಿದವು ಬಂಡಿ ಶತಸಾವಿರ ನೃಪಾಲಯದಿಂದ ವಿವಿಧಾಭರಣ ಭರಿತದ(ತುಂಬಿದ) ಭೂರಿ ಪೆಟ್ಟಿಗೆ ಘಾಡಿಸಿತು ರಥವ ವರ ದುಕೂಲದ ಪಟ್ಟಕರ್ಮದ ಥರದ ದಿಂದ+ ಒತ್ತಿದವು ಚಾಮೀಕರ (ಚಿನ್ನ) ಮಯದ ಬಹುವಿಧದ ಭಾಂಡದ ಬಂಡಿ ನೂಕಿದವು
ಅರ್ಥ: ಬಂಡಿಯಲ್ಲಿ ಸರಕನ್ನು ತುಮಬಿದರ; ನೃಪಾಲಯದಿಂದ/ರಾಜಮಂದಿರದಿಂದ ತಂದ ಶತಸಾವಿರ ವಿವಿಧಾಭರಣಗಳನ್ನು ತುಂಬಿದ ದೊಡ್ಡ ಪೆಟ್ಟಿಗೆ ರಥವನ್ನು ತುಂಬಿತು; ವರ ದುಕೂಲದೊಳ್ಳೆಯ ಬಟ್ಟೆಯ ಪಟ್ಟಕರ್ಮದ ರೀತಿಯಲ್ಲಿ ಮುಂದೆ ನಡೆದವು. ಚಿನ್ನ ಮಯದ ಬಹುವಿಧದ ಭಾಂಡದ ಬಂಡಿಗಳು ಹೋದವು
ಬಳಿಯ ಚೌರಿಯ ಹೊರೆಯ ಚಿತ್ರಾ
ವಳಿ ವಿಧಾನದ ಹಾಸುಗಳ ಹೊಂ
ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ |
ಹೊಲೆವ ಪಟ್ಟೆಯಲೋಡಿಗೆಯ ಹೊಂ
ಗೆಲಸದೊಳುಝಗೆಗಳ ಸುವರ್ಣಾ
ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ || ೧೪ ||
ಪದವಿಭಾಗ-ಅರ್ಥ: ಬಳಿಯ ಚೌರಿಯ ಹೊರೆಯ ಚಿತ್ರಾವಳಿ ವಿಧಾನದ ಹಾಸುಗಳ ಹೊಂಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ ಹೊಲೆವ ಪಟ್ಟೆಯ ಲೋಡಿಗೆಯ ಹೊಂಗೆಲಸದೊಳು ಝಗೆಗಳ ಸುವರ್ಣಾವಳಿಯ ದಿಂಡುಗಳು+ ಒಟ್ಟಿದವು ಬಂಡಿಗಳ ಜವ ಜಡಿಯೆ
ಅರ್ಥ: ಬೀಸುವ ಚೌರಿಯ ಹೊರೆಗಳು, ಚಿತ್ರಾವಳಿ ವಿಧಾನದ ಹಾಸುಗಳು, ಹೊಂಬಳಿಯ/ಹೊನ್ನಿನ ಬಣ್ನದ ತೆರೆ ತೆರನ/ಬಗೆ ಬಗೆಯ ಸೀರೆಗಳು, ಛತ್ರಗಳು/ಛತ್ರಿಗಳು, ವ್ಯಜನ /ಗಾಳಿಯನ್ನು ಬೀಸುವ ಸಾಧನ- ಬೀಸಣಿಗೆಗಳು, ಸೀಗುರಿಯ/ಚಾಮರಗಳು, ಹೊಲೆಯುವ ಪಟ್ಟೆಯ/ಪಟ್ಟೆಗಳು; ಲೋಡಿಗೆಯ/ ಒರಗುವ ದಿಂಬುಗಳು, ಹೊನ್ನಿನ ಕೈಕೆಲಸದಲ್ಲಿಮಾಡಿದ ಝಗಝಗಿಸುವ ಸುವರ್ಣಾವಳಿಯ ದಿಂಡುಗಳು, ಬಂಡಿಗಳಲ್ಲಿ ಜವ/ಅವಸರದಲ್ಲಿ ಜಡಿಯೆ/ಒಟ್ಟಿದವು ತುಂಬಿಸಲ್ಪಟ್ಟವು.
ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ |
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ || ೧೫ ||
ಪದವಿಭಾಗ-ಅರ್ಥ: ಕರವತಿಗೆ ಹೊಂಗಳಸ ಹೊಂಗೊಪ್ಪರಿಗೆ ದೀಪಸ್ತಂಭ ಹೇಮದ ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ ಮರಕತದ ಮಧುಪಾತ್ರೆ ನೀಲದ ಕರಗ ವೈಡೂರಿಯದ ಪಡಿಗವ ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ.
  • ಕರವತಿಗೆ:1. ಜಲಪಾತ್ರೆ. 2. ನೀರಿನ ಬುದ್ದಲಿ. 3. ಕೈ ಗರಗಸ.; ಕರಗ:1. ನೀರು ತುಂಬುವ ಕಲಶ,- ಕೊಡ.
  • ಪಡಿಗ:(ಪಾತ್ರೆ- ಪಡಿಗ;) ಉಪ್ಪು, ಮೆಣಸು ಮೊದಲಾದ ಅಡುಗೆಯ ಪರಿಕರ.
ಅರ್ಥ: ಜಲಪಾತ್ರೆ, ಕೊಡ, ಹೊಂಗಳಸ, ಹೊಂಗೊಪ್ಪರಿಗೆ, ದೀಪಸ್ತಂಭ, ಹೇಮದ/ಚಿನ್ನದ ಸರಪಣಿಯ ಮಣಿಮಯದ ಜಂತ್ರದ/ಚರ್ಮವಾದ್ಯಗಳು ಜೀವಪುತ್ರಿಗಳ/ಗೊಂಬೆಗಳು, ಮರಕತದಹಸಿರುಕಲ್ಲಿನಲ್ಲಿ ಮಾಡಿದ ಮಧುಪಾತ್ರೆಗಳು, ನೀಲದ ಕರಗ; ವೈಡೂರ್ಯದ ಪಡಿಗಗಳು/ ಅಲಂಕಾರದ ಉಪಕರಣಗಳು, ಇವುಗಳನ್ನೆಲ್ಲಾ ಚಾರರು/ ಸೇವಕರು ಭಾರಸಂಖ್ಯೆಯಲ್ಲಿ ತಂದು ಬಂಡಿಗೆ ಒಟ್ಟಿದರು -ಜೋಡಿಸಿದರು. ರಾಜಪಾಳಯ ಅಥವಾ ಬಿಡಾರವೆಂದರೆ ಅದು ಈ ಎಲ್ಲಾ ವಸ್ತುಗಳ ರಾಶಿರಾಶಿ.
ಮೆರೆವ ಗಜ ಹಯಶಾಲೆಯಲಿ ಮೈ
ಮುರಿಕ ವೃದ್ಧ ವ್ಯಾಧಿತಾವಳಿ
ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ |
ಉರುವ ಭಂಡಾರದ ಮಹಾರ್ಘದ
ನೆರವಣಿಗೆ ಗಾಢಿಸಿತು ಬೀದಿಯ
ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ || ೧೬ ||
ಪದವಿಭಾಗ-ಅರ್ಥ: ಮೆರೆವ ಗಜ ಹಯಶಾಲೆಯಲಿ, ಮೈಮುರಿಕ ವೃದ್ಧ ವ್ಯಾಧಿತ+ ಆವಳಿ ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ ಉರುವ ಭಂಡಾರದ ಮಹಾರ್ಘದನೆರವಣಿಗೆ/ಪೂಜಾದ್ರವ್ಯ ನೆರವಿನ ವಸ್ತುಗಳು; ಗಾಢಿಸಿತು ಬೀದಿಯತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ
ಅರ್ಥ: ಶೋಭಿಸುವ ಗಜ/ಆನೆಗಳು ಹಯಶಾಲೆಯಲ್ಲಿರುವ ಮೈಮುರಿಕ ವೃದ್ಧ ವ್ಯಾಧಿತವಾದ ಆವಳಿ ಮರಿಗುದುರೆ, ಮರಿಯಾನೆ, ಇವು ಲಕ್ಷ ಸಂಖ್ಯೆಯಲ್ಲಿ ತೆಗೆದವು/ಹೊರಟವು;(ಪ್ರಾಯದವೆಲ್ಲಾ ಯುದ್ಧದಲ್ಲಿ ಸತ್ತುಹೋಗಿದ್ದಾವೆ.) ಭಂಡಾರದಲ್ಲಿರುವ ಮಹಾರ್ಘದನೆರವಣಿಗೆ/ಪೂಜಾದ್ರವ್ಯ ಉರುವ/ ಸೌದೆ, ಉರುವಲು ನೆರವಿನ ವಸ್ತುಗಳು; ಗಾಢಿಸಿತುತುಂಬಿಹೋಯಿತು. ಸರಕನ್ನು ಹೊತ್ತ ಬಹಳ ಬಂಡಿಗಳಿಂದ ಬೀದಿಯಲ್ಲಿ ತೆರಹು ಇಲ್ಲದಂತೆ ಕೆತ್ತವು/ತುಂಬಿದವು.
ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ |
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ || ೧೭ ||
ಪದವಿಭಾಗ-ಅರ್ಥ: ರಾಯನ+ ಅರಮನೆ ಮಂಡವಿಗೆ ಗುಡಿಲಾಯ ಚವುಕಿಗೆ ನಿಖಿಳ ಭವನ ನಿಕಾಯವನು ತೆಗೆದು+ ಒಟ್ಟಿದರು ಬಂಡಿಗಳ ಹಂತಿಯಲಿ(ಒಂದರಮೇಲೆ ಒಂದರಂತೆ) ರಾಯನ+ ಅನುಜರ, ದ್ರೋಣ, ಕೃಪ, ರಾಧೇಯ, ಸೈಂಧವ, ಶಕುನಿ, ರಾಜಪಸಾಯಿತರ ಗುಡಿ ಗೂಢಚಂಪಯವ ಏರಿದವು ರಥವ.
ಅರ್ಥ:ಕೌರವರಾಯನ ಹೊಸದಾಗಿ ಕಟ್ಟಿದ ಅರಮನೆಯ ಮಂಡವಿಗೆ/ಕಂಬ ಗುಡಿಲಾಯಕ್ಕೆ ಚವುಕಿಗೆ/ಒಳಜಗುಲಿಗೆ ಉಪಯೋಗಿಸಿದ ಎಲ್ಲಾ ಭವನ ನಿಕಾಯವನು/ಕಟ್ಟಡದ ವಸ್ತುಗಳನ್ನು ತೆಗೆದು ಬಂಡಿಗಳಲ್ಲಿ ಹಂತಿಯಲಿ/ ಒಂದರಮೇಲೆ ಒಂದರಂತೆ ಒಟ್ಟಿದರು/ಜೋಡಿಸಿದರು. ಕೌರವರಾಯನ ತೊಂಭತ್ತೊಂಬತ್ತು ಅನುಜರ/ಸೋದರರ ಬಿಡಾರದ ಮನೆಗಳನ್ನು ಕಿತ್ತು ಬಂಡಿಯಲ್ಲಿ ಜೋಡಿಸಿದರು, ಮತ್ತೆ ದ್ರೋಣ, ಕೃಪ, ರಾಧೇಯ, ಸೈಂಧವ, ಶಕುನಿ, ರಾಜರಿವಾರದವರ ಗುಡಿ/ಬಿಡಾರ/ಗುಡಾರ(ಟೆಂಟ್), ಗೂಢ/ರಹಸ್ಯ ಚಂಪಯವ= ಚಂಪೆಗಳು(ಉಪಯೋಗಕ್ಕೆ ಬಾರದ ಬೆಲೆಇಲ್ಲದ ವಸ್ತುಗಳು) ರಥವನ್ನು ಏರಿದವು. (ತಾತ್ಪರ್ಯ- ರಣರಂಗದಲ್ಲಿ ಬಿಡಾರಹಾಕಲು ಹಿಂದೆ ತಂದ, ಮತ್ತು ನಂತರ ಉಳಿದ ಬೇಕಾದ ಬೇಡದ ಎಲ್ಲಾ ವಸ್ತುಗಳನ್ನೂ ಹಸ್ತಿನಾವತಿಗೆ ಸಾಗಿಸಲು ಗಾಡಿಗೆ ತುಂಬಿದರು. ಅದು ಬೇಕು - ಇದು ಬೇಡ ಎಂದು ಹೇಳಲು ಯಜಮಾನರು ಯಾರೂ ಇಲ್ಲ- ಯುದ್ಧದಲ್ಲಿ ಸತ್ತು ಹೋಗಿದ್ದಾರೆ.ಹೆಂಗಳೆಯರಿಗೆ ಅಲಂಕಾರಕ್ಕೆ ಆಗ ಬೇಕಿದ್ದ ಹೇರಳ ವಸ್ತುಗಳು ಈಗ ಬೇಡವಾಗಿದ್ದವು- ಎಲ್ಲರೂ ವಿಧವೆಯರಾಗಿದ್ದಾರೆ- ಕೃಪನ ಹೆಂಡತಿಯನ್ನು ಬಿಟ್ಟು - ಮುಂದಿನ ಪದ್ಯದಲ್ಲಿ ವಿವರ.)
ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ ೧೮
ಪದವಿಭಾಗ-ಅರ್ಥ: ಪಾಳೆಯಕೆ ಗಜಪುರದ ವಂಕಕೆ (ವಂಕ= ಎಡ) ಕೀಲಿಸಿತು ದಂಡಿಗೆಯ ಸಂದಣಿ ಮೇಲುಸರಕಿನ ಬಂಡಿ ತಲೆವೊರೆ+ ಯ+ಎತ್ತು ಕಂಬಿಗಳ ಹೇಳಲೇನು ಸಮುದ್ರ ವಿಭವವನು+ ಏಳಿಸುವ ಪಾಳೆಯದ ಸಿರಿ ಶೂನ್ಯಾಲಯಕೆ (ಶೂನ್ಯ+ ಆಲಯ= ಜನರಿಲ್ಲದ ಮನೆ) ಜೋಡಿಸಿತಲೈ ಜನಮೇಜಯ ಕ್ಷಿತಿಪ.
  • ಕಂಬಿ+ ಕೊರಳ ಹಿಂಭಾಗದ ಮೇಲೆ ಅಡ್ಡಡ್ಡಲಾಗಿ ಇಟ್ಟುಕೊಂಡು ಹೊರುವ ಕಂಬಿ (ಕೋಲು).
ಅರ್ಥ: ಹಸ್ತಿನಾವತಿಯ ಎಡದಲ್ಲಿರುವ ಪಾಳೆಯಕ್ಕೆ ದಂಡಿಗೆಯ ಹೊರೆಯ ಸಮೂಹ ಕೀಲಿಸಿ ನಿಂತಿತು. ತುಂಬಿ ಮೇಲುಸರಕಿನ ಬಂಡಿ, ತಲೆಹೊರೆಗಳು, ಭುಜದಮೇಲಿನ ಎತ್ತು ಕಂಬಿಗಳ ಹೊರೆಗಳು; ಜನಮೇಜಯ ರಾಜನೇ, ಏನು ಹೇಳಲಿ! ಈ ಸಾಗಣೆಯು ಸಮುದ್ರ ವೈಭವವನ್ನು ಮೀರಿಸುವ ಪಾಳೆಯದ ಸಿರಿ- ಸಂಪತ್ತು, ಶೂನ್ಯಾಲಯಕೆ ಜೋಡಿಸಿತಲ್ಲಾ! ಬಹಳಷ್ಟು ಗಂಡಸರಿಲ್ಲದ ಅರಮನೆ - ನಗರಕ್ಕೆ ಬಂದು ಸೇರಿತಲ್ಲಾ!
ತುಂಬಿತಿದು ಗಜಪುರವನಲ್ಲಿಯ
ಕಂಬನಿಯ ಕಾಲುವೆಯನದನೇ
ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ |
ಲಂಬಿಸಿತು ಭಯತಿಮಿರ ಶೋಕಾ
ಡಂಬರದ ಡಾವರ ವಿವೇಕವ
ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರಪರಿಜನದ || ೧೯ ||
ಪದವಿಭಾಗ-ಅರ್ಥ: ತುಂಬಿತು+ ಇದು ಗಜಪುರವನು(ಹಸ್ತಿನಾವತಿ)+ ಅಲ್ಲಿಯ ಕಂಬನಿಯ ಕಾಲುವೆಯನು+ ಅದನು+ ಏನು+ ಎಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ; ಲಂಬಿಸಿತು ಭಯತಿಮಿರ; ಶೋಕಾಡಂಬರದ ಡಾವರ ವಿವೇಕವ ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರ-ಪರಿಜನದ.
ಅರ್ಥ: ಬಿಡಾರ ಕಿತ್ತು ತಂದ ಗಾಡಿ, ಜನರ ಈ ದೊಡ್ಡ ಮೆರವಣಿಗೆ ಗಜಪುರವನ್ನು ತುಂಬಿತು. ಅಲ್ಲಿಯ ಕಂಬನಿಯ/ ಕಣ್ಣೀರಿನ ಕಾಲುವೆಯನ್ನು ಅದನ್ನು ಏನನ್ನು ಹೇಳಲಿ! ಕೇರಿಕೇರಿಗಳಲ್ಲಿ ಮಾತಿನ ಗಜಬಜಿ- ಗಡಿಬಿಡಿ ತುಂಬಿತು; ಎಲ್ಲರಲ್ಲೂ ಮುಂದೇನು ಎಂಬ ಭಯದ ಕತ್ತಲೆ ಮನೆಮಾಡಿತು; ಧೃತರಾಷ್ಟ್ರ, ವಿದುರರ, ಪೌರ-ಪರಿಜನರ ಶೋಕದ ಆಡಂಬರದ/ಪ್ರದರ್ಶನದ ತೀವ್ರತೆ ವಿವೇಕವನ್ನು ಚುಂಬಿಸಿತು/ ಆವರಿಸಿತು. ಯಾರಿಗೂ ದಿಕ್ಕು ತೋರದಾಯಿತು.
ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ |
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ || ೨೦ ||
ಪದವಿಭಾಗ-ಅರ್ಥ: ಬಂದು ಸಂಜಯನು+ ಅಂಧನೃಪತಿಯ ಮಂದಿರವ ಹೊಕ್ಕು+ ಅಖಿಳ ನಾರೀ ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ ಬಂದರು (ಬಂದವರು)+ ಅರು+ ಎನೆ, ಸಂಜಯನು ಜೀಯ, ಎಂದಡೆ+ ಉತ್ಸಾಹದಲಿ ಬಂದೈ ತಂದೆ ಸಂಜಯ! ಬಾಯೆನುತ ತಡವಿದನು ಬೋಳೈಸಿ.
ಅರ್ಥ: ಸಂಜಯನು ಬಂದು ಅಂಧನೃಪತಿ ಧೃತರಾಷ್ಟ್ರನ ಅರಮನೆಯನ್ನು ಹೊಕ್ಕು ಎಲ್ಲಾ ನಾರಿಯರ ಸಮೂಹವನ್ನು ದಂಡಿಗೆಗಳಲ್ಲಿ ಅವರವರ ಮನೆಮನೆಗೆ ಕಳುಹಿಸಿದನು. ಆ ಗದ್ದಲವನ್ನು ಕೇಳಿ, ಕಣ್ನು ಕಾಣದ ಅರಸನು ಬಂದವರು ಯಾರು ಎನ್ನಲು, ಸಂಜಯನು ಜೀಯ, ಎಂದು ತನ್ನ ಪರಿಚಯ ಹೇಳಲು, ಹೇಳುತ್ತಿದ್ದಂತೆ ಉತ್ಸಾಹದಿಂದ ಬಂದಯಾ ತಂದೆ ಸಂಜಯ! ಬಾ! ಎನ್ನುತ್ತಾ ಹತ್ತಿರ ಕರೆದು ಬೋಳೈಸಿ/ಸಂತೈಸಿ ಅವನ ಮೈತಡವಿದನು.
ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ |
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ || ೨೧ ||
ಪದವಿಭಾಗ-ಅರ್ಥ: ಹೋಗಿ ತಳುವಿದೆ (ತಂಗು) ಕೌರವೇಂದ್ರನ ನೀಗಿದಳೆ (ಬಿಟ್ಟು ಹೋದಳೇ?) ಜಯಲಕ್ಷ್ಮಿ ಪಾಂಡವರ+ ಆಗುಹೋಗು+ ಏನಾಯ್ತು ಶಕುನಿಯ ಹಯದ ಮೋಹರವ ತಾಗಿ(ಎದುರಿಸಿ) ಮುರಿದನೆ ಭೀಮನು+ ಈ ಮೇಲ್+ ಪೋಗಿನ+ ಆಹವವೇನು(ಯುದ್ಧದವಿಚಾರವೇನು) ರಾಯನ ತಾಗುಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ.
ಅರ್ಥ:ಧೃತರಾಷ್ಟ್ರನು ಸಂಜಯನನ್ನು ಕುರಿತು,'ಜಯಲಕ್ಷ್ಮಿಯು ಕೌರವೇಂದ್ರನನ್ನು ಹೋಗಿ ಸೇರಿದಳೆ? ಅಥವಾ ಅವನನ್ನು ಬಿಟ್ಟು ಹೋದಳೇ? ಪಾಂಡವರ ಆಗುಹೋಗು ಏನಾಯಿತು. ಶಕುನಿಯ ಕುದುರೆಯ ಸೇನೆಯನ್ನು ಎದುರಿಸಿ ಅದನ್ನು ಭೀಮನು ನಾಶಮಾಡಿದನೆ? ಈ ಮೇಲೆ ನೆಡೆದ ಆಗಿಹೋದ ಯುದ್ಧದವಿಚಾರವೇನು? ಕೌರವರಾಯನ ಜೊತೆ ತಾಗಿದ / ಆಕ್ರಮಿಸಿದ/ ಎದುರಿಸಿದ ಅವನ (ಆನೆಯ) ಸೈನ್ಯ ಏನಾಯ್ತು ಸಂಜಯನೇ ತಿಳಿಸಿ ಹೇಳು,' ಎಂದ.

ಧೃತರಾಷ್ಟ್ರನಿಗೆ ಸಂಜಯನ ವರದಿ

ಸಂಪಾದಿಸಿ
ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ ೨೨
ಪದವಿಭಾಗ-ಅರ್ಥ: ಶಕುನಿ ಬಿದ್ದನು ಜೀಯ ಸಹದೇವಕನ ಕೈಯಲಿ+ ಉಳೂಕ ಮಡಿದನು ನಕುಲನ+ ಅಂಬಿನಲಿ ಆ ತ್ರಿಗರ್ತ ಸುಶರ್ಮಕಾದಿಗಳು ಸಕಲ ಗಜಹಯಸೇನೆ ಸಮಸಪ್ತಕರು ಪಾರ್ಥನ ಶರದಲಿ+ ಅಮರೀ ನಿಕರವನು ಸೇರಿದರು, ಹೇಳುವುದೇನು ರಣರಸವ.ಶಕುನಿಯ ಮ
ಅರ್ಥ:ಸಂಜಯನು ರಾಜನೇ, 'ಜೀಯ ಶಕುನಿಯು ಸಹದೇವಕನ ಕೈಯಲ್ಲಿ ಪೆಟ್ಟುತಿಂದು ಬಿದ್ದನು; ಅವನ ಮಗ ಉಲೂಕನು ನಕುಲನ ಅಂಬಿನಿಂದ ಮಡಿದನು. ಸಂಸಪ್ತಕರಾದ ಆ ತ್ರಿಗರ್ತ ಸುಶರ್ಮಕ ಮೊದಲಾದವರು ಸಕಲ ಆನೆ, ಕುದುರೆಯ ಸೇನೆ ಸಹಿತ ಪಾರ್ಥನ ಬಾಣಗಳಿಂದ ವೀರಸ್ವರ್ಗದ ಸಮೂಹವನ್ನು ಸೇರಿದರು. ಹೀಗೆ ಇಡೀ ಸೇನೆ ನಾಶವಾಯಿತು. ಇನ್ನು ರಣರಸ ಸಮಾಚಾರವನ್ನು ಹೇಳುವುದು ಏನಿದೆ, ಹೆಚ್ಚುಸುದ್ದಿ ಉಳಿದಿಲ್ಲ' ಎಂದ.
ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ |
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ || ೨೩ ||
ಪದವಿಭಾಗ-ಅರ್ಥ: ಬಳಿಕ ನೂರು+ ಆನೆಯಲಿ ನಿನ್ನವನು+ ಅಳವಿಗೊಟ್ಟನು(ಅಳವು -ಶಕ್ತಿ -ಕೊಟ್ಟನು- ತೋರಿದನು) ಭೀಮಸೇನನು+ ಅಚಲಗತಿಯ(ಗಟ್ಟಿಯಾದ) ಚಾತುರ ಚಪೇಟ ಪದಪ್ರಹಾರದಲಿ ಕಳನೊಳಗೆ(ರಣರಂಗದಲ್ಲಿ) ಕೋಡೂರಿ ಮಗ್ಗುಲ ನೆಲಕೆ ಕೀಲಿಸಲು+ ಆನೆಯಿಂದ+ ಇಳೆಗೆ (ಭೂಮಿಗೆ)+ ಇಳಿದು ಹಾಯ್ದನು ಭಯದಿಂ+ನ+ ಏಕಾಂಗದಲಿ ಕುರುರಾಯ.
ಅರ್ಥ:ಬಳಿಕ ನೂರು ಆನೆಯ ಸೇನೆಯನ್ನು ನಿನ್ನವ ಕೌರವನುಸಾಹಸದಿಂದ ಯುದ್ಧವನ್ನು ಕೊಟ್ಟನು. ಆದರೆ ಭೀಮಸೇನನು ಭದ್ರವಾದ ಸಂಚಾರ ಗತಿಯಲ್ಲಿ ಚತುರ-ಚಪೇಟ ಪಾದಗಳನೆಡೆಯಲ್ಲಿ ಗದೆಯಿಂದ ಪ್ರಹಾರಮಾಡಿ ರಣರಂಗದಲ್ಲಿ ಆನೆಗಳು ನೆಲಕ್ಕೆ ಮುಖವನ್ನು ಕೋಡು/ದಂತವನ್ನು ಊರಿ, ಮಗ್ಗುಲನ್ನು ಚಾಚಿ ನೆಲಕ್ಕೆ ಕೀಲಿಸಿ ಬಿದ್ದು ಸತ್ತವು. ಆಗ ಕುರುರಾಯನು ಆನೆಯಿಂದ ಭೂಮಿಗೆ ಇಳಿದು ಭಯಪಟ್ಟು ಏಕಾಂಗಿಯಾಗಿ ಓಡಿಹೋದನು.
ಕುರುಪತಿಯನರಸುತ್ತ ತಾನೈ
ತರಲು ಸಾತ್ಯಕಿ ಕಂಡು ಸೂಠಿಯ
ಲುರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ
ಕರೆದು ಧೃಷ್ಟದ್ಯುಮ್ನ ತನ್ನಯ
ಶಿರವನರಿಯನೆ ಬಳಿಕ ಸಾತ್ಯಕಿ
ಕರದ ಖಡುಗವನುಗಿದು ಹೂಡಿದನೆನ್ನ ಗಂಟಲಲಿ ೨೪
ಪದವಿಭಾಗ-ಅರ್ಥ: ಕುರುಪತಿಯನು+ ಅರಸುತ್ತ ತಾನು+ ಐತರಲು ಸಾತ್ಯಕಿ ಕಂಡು ಸೂಠಿಯಲಿ+ ಉರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ ಕರೆದು, ಧೃಷ್ಟದ್ಯುಮ್ನ ತನ್ನಯ ಶಿರವನು ಅರಿಯನೆ ಬಳಿಕ ಸಾತ್ಯಕಿ ಕರದ ಖಡುಗವನು+ ಉಗಿದು ಹೂಡಿದನು+ ಎನ್ನ ಗಂಟಲಲಿ
ಅರ್ಥ:ಸಂಜಯ ಹೇಳಿದ, 'ಕುರುಪತಿ ಕೌರವನನ್ನು ಹುಡುಕುತ್ತ ತಾನು ಐರುತ್ತಿರಲು, ಸಾತ್ಯಕಿಯು ತನನನ್ಉ ಕಂಡು ರಭಸದಿಂದ ಮುಂದೆ ನುಗ್ಗಿ ವೇಗವಾಗಿ ಬಂದು ತನ್ನನ್ನು ಹಿಡಿದನು. ತನಗೆ ಹೊಡೆದು ಅಕ್ಕಪಕ್ಕದವರನ್ನು ಕರೆದನು. ಧೃಷ್ಟದ್ಯುಮ್ನನು ತನ್ನ ಶಿರವನ್ನು ಅರಿದುಹಾಕಲು ಹೇಳಿದ ಬಳಿಕ ಸಾತ್ಯಕಿಯು ಕೈಲ್ಲಿದ್ದ ಖಡ್ಗವನ್ನು ಉಗಿದು ತನ್ನ ಗಂಟಲಲಿ ಹೂಡಿದನು.
ಜಲಧಿಯಲಿ ಫಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ |
ಸಿಲುಕಿದಡೆ ಬಿಡಿಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ || ೨೫ ||
ಪದವಿಭಾಗ-ಅರ್ಥ: ಜಲಧಿಯಲಿ ಫಣಿವದನದಲಿ ರಿಪುಬಲದ ಮುಖದಲಿ ಸಿಡಿಲ ಹೊಯ್ಲಲಿ ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ ಸಿಲುಕಿದಡೆ ಬಿಡಿಸುವವಲೇ ಪ್ರತಿಫಲಿತ ಪೂರ್ವಾದತ್ತ ಪುಣ್ಯಾವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ
ಅರ್ಥ: .ಸಮುದ್ರದಲ್ಲಿ, ಸರ್ಪದಬಾಯಲ್ಲಿ, ಶತ್ರುಗಳಸೇನೆ ಎದುರಲ್ಲಿ, ಸಿಡಿಲ ಬಡಿತದಲ್ಲಿ, ಕಾಡಿನಲ್ಲಿ, ಗಿರಿಶಿಖರದಲ್ಲಿ, ಕಾಳ್ಗಿಚ್ಚಿನ ಮಧ್ಯದಲ್ಲಿ ಸಿಲುಕಿದರೆ ಪೂರ್ವದಲ್ಲಿ ಗಳಿಸಿದ ಪುಣ್ಯದ ಪ್ರತಿಫಲಿತದಿಂದ ಬದುಕುವರು ಎನ್ನುವ ಮಾತು ತನ್ನಲ್ಲಿ ನಿಜವಾಯಿತು,' ಭೂಪನೇ ಕೇಳು ಎಂದ ಸಂಜಯ.
ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ |
ಸಾವು ತಪ್ಪಿತು ಬಾದಾರಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ || ೨೬ ||
ಪದವಿಭಾಗ-ಅರ್ಥ: ಆವ ವಹಿಲದೊಳು+ ಆದುದು ಆವಿರ್ಭಾವವೆಂದು(ಪ್ರತ್ಯಕ್ಷ ಆದುದು)+ ಆನರಿಯೆನು+ ಆಗಳೆ ದೇವಮುನಿ+ ಯ+ ಅಡ್ಡೈಸಿ ಹಿಡಿದನು ಕೊರಳ+ ಅಡಾಯುಧವ, ಸಾವು ತಪ್ಪಿತು; ಬಾದಾರಯಣನು+ ಓವಿ ಕೃಪೆಯಲಿ ಮೈದಡವಿ ಸಂಭಾವಿಸುತ ಕುರುಪತಿಯನು+ ಅರಸೆಂದು+ ಎನಗೆ ನೇಮಿಸಿದ.
ಅರ್ಥ: ಯಾವ ವೇಗದಿಂದ ಪ್ರತ್ಯಕ್ಷವಾಯಿತು ಎಂಬುದನ್ನು ನಾನು ಅರಿಯೆನು/ತಿಳಿಯೆನು. ಆಗಲೆ ದೇವಮುನಿಯು ಅಡ್ಡಬಂದು ಕೊರಳಿಗಿಟ್ಟ ಅಡಾಯುಧವನ್ನು ಹಿಡಿದನು. ನನಗೆ ಸಾವು ತಪ್ಪಿತು; ಬಾದಾರಯಣನು ಓವಿ/ಪ್ರೀತಿ ಮತ್ತ ಕೃಪೆಯನ್ನು ತೋರಿ ಮೈದಡವಿ ಸಮಾಧಾನಪಡಿಸುತ್ತಾ ಕುರುಪತಿಯನ್ನು ಹುಡುಕು ಎಂದು ನನಗೆ ಆಜ್ಞಾಪಿಸಿದ.
ಬೀಳುಕೊಂಡೆನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ |
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರು ಭೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ || ೨೭ ||
ಪದವಿಭಾಗ-ಅರ್ಥ: ಬೀಳುಕೊಂಡೆನು ಮುನಿಯನು+ ಅವನೀ ಪಾಲಕನನು+ ಅರಸಿದೆನು ಕಳನೊಳು(ರಣರಂಗದಲ್ಲಿ) ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ ಬೀಳುತ+ ಏಳುತ ನಿಲುತ ಬಳಲಿದು ಕಾಲುನಡೆಯಲಿ ಸುಳಿವ ಕುರು ಭೂಪಾಲಕನ ಕಂಡು+ ಒಡನೆ ಬಂದೆನು ಕೊಳನ ತಡಿಗಾಗಿ.
ಅರ್ಥ:ಸಂಜಯನು ಮುಂದುವರಿದು,'ಮುನಿಯನ್ನು ಬೀಳ್ಕೊಟ್ಟೆನು; ಕೌರವರಾಜನನ್ನು ಹುಡುಕಿದೆನು. ರಣರಂಗದಲ್ಲಿ ಸಾಲಾಗಿಬಿದ್ದ ಹೆಣದ ರಾಶಿಯಲ್ಲಿ ಕಬಂಧ/ಮುಂಡಗಳ ರಕ್ತಸುರಿದ ದಾರಿಯಲ್ಲಿ ಬೀಳುತ್ತಾ ಏಳುತ್ತಾ ನಿಲ್ಲುತ್ತಾ ಬಳಲಿದ, ಕಾಲುನಡಿಗೆಯಲ್ಲಿ ಸುಳಿದ ಕುರುರಾಜನನ್ನು ಕಂಡು, ಅವನೊಡನೆ ಸರೋವರದ ದಡಕ್ಕೆ ಬಂದೆನು,' ಎಂದನು.
ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ |
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ || ೨೮ ||
ಪದವಿಭಾಗ-ಅರ್ಥ: ಇಳಿದು ಸರಸಿಯ ಮಧ್ಯದಲಿ ನೃಪತಿಲಕ ನಿಂದನು ಪಾಳೆಯವ ನೀ ಕಳುಹು ಗಜಪುರಿಗೆ+ ಎನಲು ಬಂದೆನು ಪಥದ ಮಧ್ಯದಲಿ ಸುಳಿವ ಕಂಡೆನು ಕೃಪನನು+ ಆ ಗುರುಗಳ ಮಗನ ಕೃತವರ್ಮಕನನು+ ಅಂದು+ ಉಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ.
ಅರ್ಥ:ಸಂಜಯನು,'ನೃಪತಿಲಕ ಕೌರವನು ಸರೋವರದಲ್ಲಿ ಇಳಿದು ಅದರ ಮಧ್ಯದಲಿ ನಿಂತನು. ಅವನು ನನಗೆ ಯುದ್ಧದ ಪಾಳೆಯವನ್ನು ನೀನು ತೆಗಸಿ ಹಸ್ತಿನಾವತಿಗೆ ಕಳುಹಿಸು ಂದು ಆಜ್ಞಾಪಿಸಲು ನಾನು ಅದೇ ರೀತಿ ಮಾಡಿ ಗಜಪುರಕ್ಕೆ ಬಂದೆನು, ಪಥದ/ದಾರಿಯ ಮಧ್ಯದಲ್ಲಿ ಸುಳಿವ ಕಂಡೆನು ಕೃಪನನ್ನೂ, ಆ ಗುರುಗಳ ಮಗ ಅಶ್ವತ್ಥಾಮನನ್ನೂ, ಕೃತವರ್ಮಕನನ್ನೂ, ಅಂದು ಯುದ್ಧದಲ್ಲಿ ಈ ಉಳಿದ ಮೂವರನ್ಉ ಕಂಡು ಅವರನ್ನು ಕುರುಪತಿ ಕೌರವನು ಇದ್ದಕಡೆ ರಕ್ಷಣೆಗಾಗಿ ಕಳುಹಿದೆನು,' ಎಂದನು.
ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ವರ್ತಿಸಿತಿಲ್ಲಿ ಪರಿಯಂತ |
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸೂನು ಮೇಲಣ ಹದನ ಹೇಳೆಂದ || ೨೯ ||
ಪದವಿಭಾಗ-ಅರ್ಥ: ತಂದೆನು+ ಇಲ್ಲಿಗೆ ಸಕಲ ನಾರೀವೃಂದವನು ಕುರುಪತಿಯ ನೇಮದಲಿ+ ಇಂದಿನ+ ಈ ವೃತ್ತಾಂತ ವರ್ತಿಸಿತು+ ಇಲ್ಲಿ ಪರಿಯಂತ ಮುಂದೆ ಹೇಳುವುದೇನು? ನೀ ಬೆಸಸೆಂದಡೆ+ ಅವನೀಪತಿಯ ಹೊರೆಗೆ+ ಐತಂದನೇ ಗುರುಸೂನು ಮೇಲಣ ಹದನ ಹೇಳೆಂದ.
ಅರ್ಥ: ಸಂಜಯನು ಮುಂದುವರಿದು,'ಕುರುಪತಿ ಕೌರವನ ನೇಮದಂತೆ ಅರಮನೆಯ ಸಕಲ ನಾರಿಯರ ಸಮೂಹವನ್ನೂ ಇಲ್ಲಿಗೆ ಕರೆತಂದೆನು. ಈ ವೃತ್ತಾಂತವು/ಸಮಾಚಾರವು ಇಲ್ಲಿ ಪರಿಯಂತ ವರ್ತಿಸಿತು/ ನೆಡೆಯಿತು. ಮುಂದೆ ಹೇಳುವುದೇನು? ರಾಜನೇ ನೀನು ಹೇಳಬೆಕು ಎಂದಾಗ ಅವನಿಪತಿ ಕೌರವನ ಬಳಿಗೆ ಗುರುಸೂನು ಅಶ್ವತ್ಥಾಮ ಹೋದನೇ? ಆಮೇಲಿನ ವಿಚಾರ ಹೇಳು, ಎಂದ ದೃತರಾಷ್ಟ್ರ.

ಕೌರವನಿಗೆ ಹೊರಬರಲು ಕೃಪ ಮತ್ತು ಇತರರ ಒತ್ತಾಯ

ಸಂಪಾದಿಸಿ
ಅರಸ ಕೇಳ್ ಕೃಪ ಗುರುಜ ಕೃತವ
ರ್ಮರು ರಥಾಶ್ವಂಗಳನು ದೂರದ
ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ |
ತರುಲತೆಗಳಿರುಬಿನಲಿ ಕಂಜಾ
ಕರದ ತಡಿಯಲಿ ನಿಂದು ಮೆಲ್ಲನೆ
ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ || ೩೦ ||
ಪದವಿಭಾಗ-ಅರ್ಥ: ಅರಸ ಕೇಳ್ ಕೃಪ ಗುರುಜ ಕೃತವರ್ಮರು ರಥಾಶ್ವಂಗಳನು ದೂರದಲಿ+ ಇರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ ತರುಲತೆಗಳ+ ಇರುಬಿನಲಿ ಕಂಜ+ ಆಕರದ(ಕಮಲಪುಷ್ಪ ಹೊಂದಿದ) ತಡಿಯಲಿ ನಿಂದು ಮೆಲ್ಲನೆ ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ.
ಅರ್ಥ: ಅರಸನೇ ಕೇಳು,'ಕೃಪ ಗುರುಜ- ಅಶ್ವತ್ಥಾಮ, ಕೃತವರ್ಮ, ಇವರು ತಮ್ಮ ರಥ ಅಶ್ವಗಳನ್ನು ದೂರದಲ್ಲಿ ಇರಿಸಿ, ಗುರುತು ಸಿಗದಂತೆ ತಲೆಮುಸುಕು ಹಾಕಿಕೊಂಡು ಕೊಳದ ತಡಿಗಾಗಿ/ದಡದ ಬಳಿಗೆ ಬಂದರು. ಅವರು ಗಿಡಬಳ್ಳಿಗಳ ಇರುಬಿನಲಿ/ಸಂದಿಯಲ್ಲಿ ಕಮಲಪುಷ್ಪ ಹೊಂದಿದ ಸರೋವರದ ದಡದಲ್ಲಿ ನಿಂತು, ಮೆಲ್ಲನೆ ಕೌರವನನ್ನು ಕರೆದು ಅವನಿಗೆ ಕೇಳಿಸುವಂತೆ ತಂತಮ್ಮ ಹೆಸರುಗಳನ್ನು ಹೇಳಿದರು.
ಬದುಕಿ ಬಂದಿರೆ ಭೀಮ ನಿಮ್ಮನು
ಗದೆಯ ಸವಿಗಾಣಿಸನಲಾ ಸಾ
ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ |
ಕದನದಲಿ ಸೌಬಲ ಸುಶರ್ಮರ
ಹೊದರ ಹರೆಗಡಿವಲ್ಲಿ ನೀವ್ ಮಾ
ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ || ೩೧ ||
ಪದವಿಭಾಗ-ಅರ್ಥ: ಬದುಕಿ ಬಂದಿರೆ ಭೀಮ ನಿಮ್ಮನು ಗದೆಯ ಸವಿಗಾಣಿಸನಲಾ ಸಾಕಿದನ ಸಮಯಕೆ ಸುಳಿದಿರೈ ಸಾಹಿತ್ಯ ರೇಖೆಯಲಿ, ಕದನದಲಿ ಸೌಬಲ ಸುಶರ್ಮರ ಹೊದರ (ಪೊದೆ, ಗಿಡಗಳಸಮೂಹ, ವನ) ಹರೆಗಡಿವಲ್ಲಿ (ಹೆರೆ ಕಡಿದಾಗ) ನೀವ್ ಮಾಡಿದ ಪರಾಕ್ರಮವು+ ಆವುದು+ ಎಂದನು ನೃಪತಿ ಖಾತಿಯಲಿ (ಸಿಟ್ಟಿನಿಂದ).
ಅರ್ಥ:ಕೌರವನೃಪತಿಯು, ಕೃಪ ಅಶ್ವತ್ಥಾಮ, ಕೃತವರ್ಮ ಇವರಿಗ ನೀರಿನ ಒಳಗಿನಿಂದಲೇ ಸಿಟ್ಟಿನಿಂದ ಉತ್ತರಿಸಿದನು. ವ್ಯಂಗ್ಯವಾಗಿ ಅವರನ್ನು ಹಾಸ್ಯ ಮಾಡುತ್ತಾ, ಬದುಕಿ ಬಂದಿರಾ! ಭೀಮನು ನಿಮಗೆ ತನ್ನ ಗದೆಯ ರುಚಿಯನ್ನು ಕಾಣಿಸಲಿಲ್ಲವೇ! ಸಾಕಿದವನ ಸಮಯಕ್ಕೆ ಸುಳಿದಿರಲ್ಲಾ/ ಬಂದಿರಲ್ಲಾ! (ಬರಲಿಲಿಲ್ಲ- ಎಂದು ಭಾವ);ಸಾಹಿತ್ಯ ರೇಖೆಯಲ್ಲಿ/ ಕೇವಲ ಬಾಯಿಮಾತಿನಲ್ಲಿ ಸಹಾಯ ಮಾಡಿದಿರಿ!, ಯುದ್ಧದಲ್ಲಿ ಸೌಬಲ/ಶಕುನಿ, ಸುಶರ್ಮರ ಹೊದರನ್ನು/ಸೇನೆಯ ವನದ ಹೆರೆಗಳನ್ನು ಸವರಿದಾಗ ನೀವು ಮಾಡಿದ ಪರಾಕ್ರಮವು ಯಾವುದು? ಎಂದನು.
ಜೀಯ ಖತಿಯೇಕೆಮ್ಮೊಡನೆ ಚ
ಕ್ರಾಯುಧನ ಚಾತುರ‍್ಯದಲಿ ರಣ
ದಾಯತಪ್ಪಿತು ಭಟರು ಬೀತುದು ಹೇಳಲೇನದನು |
ಕಾಯಿದರೊ ಕಾದಿದರೊ ಗುರು ಗಾಂ
ಗೇಯ ಸೈಂಧವ ಮಾದ್ರಪತಿ ರಾ
ಧೇಯರನುಗತವಾಗದಿಹುದಪರಾಧ ನಮಗೆಂದ || ೩೨ ||
ಪದವಿಭಾಗ-ಅರ್ಥ: ಜೀಯ ಖತಿಯೇಕೆ+ ಎಮ್ಮೊಡನೆ, ಚಕ್ರಾಯುಧನ ಚಾತುರ್ಯಯದಲಿ ರಣದಾಯ ತಪ್ಪಿತು, ಭಟರು ಬೀತುದು(ಇಲ್ಲವಾದರು) ಹೇಳಲಿ+ ಏನು+ ಅದನು ಕಾಯಿದರೊ ಕಾದಿದರೊ ಗುರು ಗಾಂಗೇಯ ಸೈಂಧವ ಮಾದ್ರಪತಿ ರಾಧೇಯರ+ ಅನುಗತವಾಗದೆ+ ಇಹುದು+ ಅಪರಾಧ ನಮಗೆಂದ.
  • (ಅನುಗತ= ಕ್ರಮಾನುಗತ, ಸಾವು, ಗೌಣವಾಗಿ,ಅಮುಖ್ಯವಾಗಿ)
ಅರ್ಥ:ಕೃಪಾದಿಗಳು ಕೌರವನನ್ನು ಕುರಿತು 'ಜೀಯ ದೊರೆಯೇ, ನಮ್ಮೊಡನೆ ಸಿಟ್ಟುಮಾಡುವುದೇಕೆ? ಚಕ್ರಾಯುಧ ಕೃಷ್ನನ ಚತುರತನದಿಂದ ರಣದ ಆಯ/ಯುದ್ಧದ ಹಿಡಿತ ತಪ್ಪಿತು. ವೀರರು ಸಹ ಮಡಿದರು. ಅದನ್ನು ಏನೆಂದು ಹೇಳಲಿ? ಕಾಯಿದರೊ ಕಾದಿದರೊ ಗುರು ಗಾಂಗೇಯ-ಭೀಷ್ಮ, ವೀರ ಸೈಂಧವ, ಮಾದ್ರಪತಿ ಅಜೇಯನಾದ ಶಲ್ಯ, ರಾಧೇಯ- ಕರ್ಣ ಇವರಿಗೆ ಗೆಲ್ಲಲು ಸಾಧ್ಯವಾಗದೇ, ಅವರು ಲೆಕ್ಕಕ್ಕೆ ಇಲ್ಲದಂತೆ ಯುದ್ಧದಲ್ಲಿ ಮಡಿದು ಹೋದರು. ಹೀಗಿರುವಾಗ ನಮಗೇ ಶತ್ರುಗಳನ್ನು ಗೆಲ್ಲಲಿಲ್ಲ ಎಂಬ ಅಪರಾಧ ಏಕೆ, ಎಂದ.
ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರ ಸಂತತಿಯ |
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ || ೩೩ ||
ಪದವಿಭಾಗ-ಅರ್ಥ: ಅರಸ ಹೊರವಡು ಭೀಮಪಾರ್ಥರ ಕರುಳ ಬೀಯವ(ಮೂಲ- ಬೀಜ?) ಭೂತನಿಕರಕೆ ಬರಿಸುವೆವು ನೀ ನೋಡಲು+ ಒಡ್ಡುವೆವು+ ಅಸ್ತ್ರ ಸಂತತಿಯ ಗರುವರು+ ಇಹರೇ ನೀರೊಳು+ ಆ ಹಿಮಕರ ಮಹಾನ್ವಯ(ಚಂದ್ರವಂಶದ) ಕೀರ್ತಿ ಜಲದೊಳು ಕರಗದೆ+ ಇಹುದೇ ಕಷ್ಟವೃತ್ತಿಯದು(ಕಷ್ಟದಕೆಲಸ.)+ ಎಂದರು+ ಅವನಿಪನ
ಅರ್ಥ:ಕೃಪಾದಿಗಳು,'ಅರಸನೇ ಹೊರಹೊರಡು, ಭೀಮ ಮತ್ತು ಪಾರ್ಥರ ಕರುಳಿನ ಮೂಲವನ್ನು ಭೂತಸಮೂಹಕ್ಕೆ ಹಾಕುವೆವವು. ನೀನು ನೋಡುತ್ತಿರುವಂತೆ ಪಾಂಡವರ ಮೇಲೆ ಅಸ್ತ್ರ ಸಂತತಿಯನ್ನು ಹಾಕುವೆವು/ತುಂಬುವೆವು. ಗೌರವವುಳ್ಳವರು ನೀರಲ್ಲಿ ಇರುವರೇ? ಅವನಿಪ ಕೌರವನ ಆ ಚಂದ್ರವಂಶದ ಕೀರ್ತಿ ಜಲದಲ್ಲಿ ಕರಗದೆ ಇರುವುದೇ? ನೀರಿನಲ್ಲಿ ಅಡಗಿರುವುದು ಬಹಳ ಕಷ್ಟವೃತ್ತಿಯದು' ಎಂದರು.
ಏಳು ಕುರುಪತಿ ಪಾಂಡುತನಯ
ವ್ಯಾಳಸೇನೆಗೆ ಸಿಂಹವಿದೆ ನಿ
ನ್ನಾಳ ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ ||
ಜಾಳಿಸಿದ ಜಯಕಾಮಿನಿಯ ಜಂ
ಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು ಮೈದೋರೆಂದರವನಿಪನ || ೩೪ ||
ಪದವಿಭಾಗ-ಅರ್ಥ: ಏಳು ಕುರುಪತಿ ಪಾಂಡುತನಯ ವ್ಯಾಳಸೇನೆಗೆ(ಆನೆಯ ಸೇನೆಗೆ) ಸಿಂಹವಿದೆ ನಿನ್ನ+ ಆಳ(ಆಳನ್ನು- ಸೇವಕರನ್ನು) ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ(ವೀರರಲ್ಲಿ) ಜಾಳಿಸಿದ ಜಯಕಾಮಿನಿಯ ಜಂಘಾಳತನವನು (ಜಂಗ= ಕಾಲು; ಓಡುವಬುದ್ಧಿಯನ್ನು) ನಿಲಿಸಿ ನಿನ್ನಯ ತೋಳಿನಲಿ ತೋರುವೆವು ಮೈದೋರೆಂದರು+ ಅವನಿಪನ(ಅವನಿಪನ ಕುರಿತು, ರಾಜನಿಗೆ)
ಅರ್ಥ: ಅವರು ಮತ್ತೂ, 'ಏಳು ಕುರುಪತಿ ಕೌರವನೇ, ಪಾಂಡುತನಯರೆಂಬ ಆನೆಯಸೇನೆಗೆ ನಮ್ಮಲ್ಲಿ ಸಿಂಹವಿದೆ. ನಿನ್ನಸೇವಕರನ್ನು ನಮ್ಮೊಡನೆ ಬಿಡು; ನೀನು ಕೇವಲ ನೋಡುತ್ತಿರು. ಕರ್ಣನೇ ಮೊದಲಾದವರ ಯುದ್ಧದಲ್ಲಿ ಜಾಳಿಸಿ ಜಾರಿ ಹೋದ 'ಜಯಲಕ್ಷ್ಮಿ'ಯ ಚಂಚಲ ಬುದ್ಧಿಯನ್ನು ನಿಲ್ಲಿಸಿ, ಅವಳನ್ನು ನಿನ್ನ ತೋಳಿನಲ್ಲಿ ತಂದು ತೋರಿಸುವೆವು. ರಾಜನನ್ನು ಕುರಿತು, 'ಕಾಣಿಸಿಕೋ, ಎಂದರು.
ಒಪ್ಪದಿದು ಭೀಷ್ಮಾದಿಯವ್ವನ
ದರ್ಪದಲಿ ಜಾರಿದ ಜಯಾಂಗನೆ
ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ |
ತಪ್ಪಿದುದನೀ ಸಲಿಲವಾಸದೊ
ಳೊಪ್ಪವಿಡುವೆನು ನಾಳೆ ನೀವ್ ತೊಲ
ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ || ೩೫ ||
ಪದವಿಭಾಗ-ಅರ್ಥ: ಒಪ್ಪದಿದು ಭೀಷ್ಮಾದಿ ಯವ್ವನ ದರ್ಪದಲಿ ಜಾರಿದ ಜಯಾಂಗನೆ ಮುಪ್ಪಿನಲಿ ನಮಗೊಲಿವುದು+ ಅರಿದು (ಆರಿಯದು, ಅಸಾಧ್ಯ)+ ಏಕಾಕಿಯಾದೆವಲೆ ತಪ್ಪಿದುದನು+ ಈ ಸಲಿಲವಾಸದೊಳು+ ಒಪ್ಪವಿಡುವೆನು ನಾಳೆ ನೀವ್ ತೊಲಗಿಪ್ಪುದು+ ಇಂದಿನೊಳು+ ಎಂದನು+ ಅವನಿಪನು+ ಆ ಕೃಪಾದಿಗಳ.
ಅರ್ಥ: ಆ ಕೃಪಾದಿಗಳನ್ನು ಕುರಿತು ಅವನಿಪ ಕೌರವನು,'ನೀವು ಹೇಳಿದ್ದನ್ನು ಒಪ್ಪದು/ ಒಪ್ಪಲಾರೆ. ಭೀಷ್ಮಾದಿಗಳ (ವೃದ್ಧರಾದರೂ ಹನ್ನೊಂದು ಅಕ್ಷೋಹಿಣಿ ಸೇನಯ) ಯವ್ವನ/ಪರಾಕ್ರಮದ ದರ್ಪದಲ್ಲಿ ಕೈತಪ್ಪಿ ಜಾರಿದ ಜಯಲಕ್ಷ್ಮಿ ಈಗ ಸೈನ್ಯವಿಲ್ಲದ ಸೋತ ಮುಪ್ಪಿನಂತಿರುವ ನಿಮ್ಮಿಂದ ನಮಗೆ ಒಲಿವುದು ಅಸಾಧ್ಯ. ಏಕಾಕಿಯಾದೆವಲ್ಲವೇ! ಇದುವರೆಗೆ ತಪ್ಪಿದುದನ್ನು ನಾಳೆಗೆ ಈ ನೀರಿನವಾಸದಲ್ಲಿ ಒಪ್ಪವಿಡುವೆನು/ಪುಟಗೊಳಿಸುವೆನು/ ಶಕ್ತಿಯುತಗೊಳಿಸುವೆನು. ಇಂದಿನ ದಿವಸ ನೀವು ತೊಲಗಿಪ್ಪುದು/ಹೊರಟುಹೋಗಿ,' ಎಂದನು.
ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ |
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ || ೩೬ ||
ಪದವಿಭಾಗ-ಅರ್ಥ: ಇವೆ ಮಹಾಮಂತ್ರಾಸ್ತ್ರಸಂತತಿ+ ಯಿ+ ಇವೆ ಮಹಾಧನು ರಾಜ್ಯಸತ್ಕೃತಿ+ ಸವನ(ಕೃಪೆ, ದಯೆ, ವಿಶ್ವಾಸವನ್ನು ನೀಡುವುದು) ಸಾಪೇಕ್ಷಂಗಳು (ಪರಸ್ಪರ ಅವಲಂಬಿಸಿರುವುದು, ಪೂರಕವಾದುದು)+ ಇವೆ ತ್ರೈರಥಿಕರು+ ಒಬ್ಬರಲಿ (ತ್ರೈ- ಮೂರು);ಅವನಿಪತಿ ನೀ ಸೇಸೆದಳಿ(ಸೇಸೆ ತಳಿ: ವೀರರ ಹಣೆಗೆ ಹಚ್ಚುವ ಅಕ್ಷತೆ,ಮಂತ್ರಾಕ್ಷತೆ; ಆಶೀರ್ವಾದ) ಮಿಕ್ಕವರು ಸೇನೆ ವಿರೋಧಿವರ್ಗಕೆ ದಿವವೊ(ದೇವಲೋಕ, ಸ್ವರ್ಗ (ಸಾವು),) ಧರೆಯೋ (ರಾಜ್ಯ) ನೋಡಲಹುದು+ ಏಳೆಂದನು+ ಆ ದ್ರೌಣಿ
ಅರ್ಥ:ಅಶ್ವತ್ಥಾಮನು ಪುನಃ,'ನಮ್ಮಲ್ಲಿ (ಒಬ್ಬರಲ್ಲಿ- ತನ್ನಲ್ಲಿ) ಮಹಾಮಂತ್ರಾಸ್ತ್ರಗಳ ಸಂತತಿಯೇ ಇವೆ; ಮಹಾಧನುಸ್ಸುಗಳು ಇವೆ; ರಾಜ್ಯಸತ್ಕೃತಿಯ ಸವನ(ಕೃಪೆ,) ಇದೆ. ಮೂರು ರಥಿಕರಲ್ಲಿ- ಒಬ್ಬೊಬ್ಬರಲ್ಲಿ ಹೊಂದಾಣಿಕೆಗಳು ಇವೆ; ಅವನಿಪತಿ ಕೌರವನೇ ನೀನು ಸೇಸೆದಳಿ/ಸೇನಾಧಿಪತಿ ಮಾಡಿ (ತನಗೆ) ಮಂತ್ರಾಕ್ಷತೆ ಕೊಡು; ಮಿಕ್ಕವರು ಇರುವ ಸೇನೆ ಇದೆ. ವಿರೋಧಿವರ್ಗವಾದ ಪಾಂಡವರಿಗೆ ಸ್ವರ್ಗವೋ, ಧರೆಯೋ/ರಾಜ್ಯವೋ ನೋಡಲು ಸಾಧ್ಯವಾಗಬಹುದು; ಏಳು' ಎಂದನು.
ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯ್ತೇಸ ಪತಿಕರಿಸಿದೆನು ಕರ್ಣನನಂದು ನೀನರಿಯೆ |
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ || ೩೭ ||
ಪದವಿಭಾಗ-ಅರ್ಥ: ಸೇಸೆದಳಿದೆನು ಭೀಷ್ಮಗೆ+ ಅಗ್ಗದಭಾಷೆ ನಿಮ್ಮಯ್ಯನಲಿ ಗತವಾಯ್ತು+ ಏಸ(ಎಷ್ಟೊಂದು) ಪತಿಕರಿಸಿದೆನು(ಅನುಗ್ರಹಿಸು) ಕರ್ಣನನು+ ಅಂದು ನೀನು+ ಅರಿಯೆ, ಓಸರಿಸಿದನೆ (ಹಿಂಜರಿದನೆ?) ಮಾದ್ರಪತಿ ಬಳಿಕ+ ಈಸು/ಇಷ್ಟು ಬಂದುದು ದೈವದ+ ಒಲಹಿನ(ಒಲವು- ಪ್ರೀತಿ) ಪೈಸರಕೆ(ನಷ್ಟಕ್ಕೆ) ನೀವೇನ ಮಾಡುವಿರೆಂದನು+ ಆ ಭೂಪ.
ಅರ್ಥ: ಅದಕ್ಕೆ ಕೌರವನು, ಭೀಷ್ಮನಿಗೆ ಸೇನಾಧಿಪತಿಮಾಡಿ ಸೇಸೆದಳಿದೆನು/ ಮಂತ್ರಾಕ್ಷತೆ ಕೊಟ್ಟೆನು; ಮಂತ್ರಾಕ್ಷತೆ ಕೊಟ್ಟ ಶ್ರೇಷ್ಟವಾದ ಭಾಷೆಕೊಟ್ಟ ನಿಮ್ಮ ಅಯ್ಯ ದ್ರೋಣನಲ್ಲಿ ಫಲವಿಲ್ಲದೆ ಗತವಾಯಿತು/ಹೋಯಿತು. ಎಷ್ಟೊಂದು ದಯೆತೋರಿ ಅನುಗ್ರಹಿಸಿದೆನು ಕರ್ಣನನ್ನು, ಅಂದು ನೀನು ಅರಿಯದೆ ಕರ್ಣನನ್ನು ಅವಮಾನಿಸಿದೆ- ಅವನೂ ಮಡಿದನು. ಬಲಶಾಲಿ ಮಾದ್ರಪತಿ ಶಲ್ಯನು ಹಿಂಜರಿದನೇ- ಇಲ್ಲ. ಬಳಿಕ ಇಷ್ಟು ಕೇಡು ದೈವದ ಒಲವಿನ ನಷ್ಟದಿಂದ; ದೈವದ ಒಲವಿನ ನಷ್ಟಕ್ಕೆ- ಇಷ್ಟು ಕೇಡು ಬಂದಿರುವುದು,ಅದಕ್ಕೆ ನೀವೇನ ಮಾಡುವಿರಿ,' ಎಂದನು. (ದೈವಬಲವೇ ನಷ್ಟವಾಗಿರುವಾಗ ನೀವೇನ ಮಾಡುವಿರಿ,' ಎಂದನು.)
ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ |
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ‍್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ || ೩೮ ||
ಪದವಿಭಾಗ-ಅರ್ಥ: ರಣದೊಳು+ ಆ ಗಾಂಗೇಯಗೆ+ ಇಮ್ಮಡಿ ಗುಣವ ತೋರುವೆನು,+ ಅಪ್ಪನವರಿಂದ+ ಎಣಿಸಿಕೊಳು ಮೂವಡಿಯನು,+ ಅಗ್ಗದ ಸೂತನಂದನನ ರಣಕೆ ನಾಲ್ವಡಿ, ಮಾದ್ರರಾಜನ ಹೊಣಕೆಗೆ+ ಐದು ಸುಶರ್ಮಮ ಶಕುನಿಗಳ+ ಎಣಿಸುವಡೆ ಪಾಡಲ್ಲ ನೋಡು+ ಏಳೆಂದನು+ ಆ ದ್ರೌಣಿ.
ಅರ್ಥ: ಆ ದ್ರೌಣಿ- ದ್ರೋಣನ ಮಗ ಅಶ್ವತ್ಥಾಮನು ಮುಂದುವರಿದು,'ತಾನು ರಣರಂಗದಲ್ಲಿ ಆ ಗಾಂಗೇಯ ಭೀಷ್ಮನಿಗಿಂತ ಇಮ್ಮಡಿ ಪರಾಕ್ರಮದ ಗುಣವನನ್ನು ತೋರುವೆನು; ತನ್ನ ಅಪ್ಪ ದ್ರೋಣನವರಿಂದ ಮೂರರಷ್ಟು ಎಣಿಸಿಕೊ, ಶ್ರೇಷ್ಟವೀರ ಸೂತನಂದನ ಕರ್ಣನಿಗಿಂತ ಯುದ್ಧದಲಲ್ಲಿ ನಾಲ್ಕುಪಟ್ಟು ಶೌರ್ವನ್ನು ತೋರುವೆನು, ಮಾದ್ರರಾಜ ಶಲ್ಯನ ಶೌರ್ಯಕ್ಕೆ ಐದು ಪಟ್ಟು ಹೆಚ್ಚು ಹೋರಾಡುವೆನು, ಸುಶರ್ಮಮ ಶಕುನಿಗಳ ಬಗೆಗೆ ಎಷ್ಟೋಪಟ್ಟು ಹೆಚ್ಚು ಪರಾಕ್ರಮ ನನ್ನದು- ಎಣಿಸುವುದಾದರೆ ಅದು ಪಾಡಲ್ಲ/ಉಚಿತವಲ್ಲ- ನೋಡು, ಸರೋವರದಿಂದ ಮೇಲೆ ಏಳು,' ಎಂದನು.
ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ |
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರೆತೆಯಿಲ್ಲೆಂದ || ೩೯ ||
ಪದವಿಭಾಗ-ಅರ್ಥ: ಖರೆಯರೈ ನೀವು+ ಉಭಯ ರಾಯರ ಗುರುಗಳು+ ಅದು ಕುಂದಿಲ್ಲ, ಕೃಪನೇ ಹಿರಿಯನು+ ಆಚಾರಿಯನು ಯಾದವರೊಳಗೆ ಕೃತವರ್ಮ ಗರುವರೈ(ಗೌರವಯುತನೈಯ್ಯಾ), ನೀವಿಲ್ಲಿ ರಣಬಾಹಿರರೆ (ಯುದ್ಧಮಾಡಲಾರದವರೇ?), ಸಾಕಂತಿರಲಿ, ಸುಕೃತದೊಳು+ ಅರಗೆಲಸಿಗಳು (ಅರೆ+ ಗ+ ಕೆಲಸಿಗರು) ನಾವೆ, ನಿಮ್ಮಲಿ ಕೊರೆತೆಯಿಲ್ಲ+ ಎಂದ
ಅರ್ಥ:ಕೌರವನು ಅಶ್ವತ್ಥಾಮನ ಮಾತಿಗೆ,'ಖರೆಯವರು/ ಸತ್ಯವಂತರು ನೀವು. ಪಾಂಡವ-ಕೌರವ ಈ ಉಭಯ ರಾಯರ ಗುರುಗಳು. ಅದರಲ್ಲಿ ಎನೂ ಕುಂದಿಲ್ಲ. ಕೃಪನೇ ಹಿರಿಯ ಆಚಾರ್ಯನು. (ದ್ರೋಣನಿಗಿಂತ ಮೊದಲಿದ್ದು ಕಲಿಸಿದವನು) ಯಾದವರೊಳಗೆ ಕೃತವರ್ಮ ದೊಡ್ಡವನು, ನೀವು ಇಲ್ಲಿ ಯುದ್ಧಮಾಡಲಾರದವರೇ?, ಸಾಕು, ಅದು ಹಾಗಿರಲಿ. ಸುಕೃತದಲ್ಲಿ/ ಹಿಂದಿನ ಪುಣ್ಯಫಲದಲ್ಲಿ ಕೊರತೆಯುಳ್ಳವರು ನಾವೆ; ನಿಮ್ಮಲಿ ಕೊರೆತೆಯಿಲ್ಲ,'ಎಂದು ದುಃಖ ಮತ್ತು ವ್ಯಂಗ್ಯದಿಂದ ಹೇಳಿದನು.
ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹನಿಸ್ತನಾಪುರಿಗೆ |
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರ ವಿದೆಂದನಶ್ವತ್ಥಾಮನವನಿಪನ || ೪೦ ||
ಪದವಿಭಾಗ-ಅರ್ಥ: ಅರಸ ಕೇಳೈ ಸುಕೃತವನು ವಿಸ್ತರಿಸುವೆನು ಪೂರಾಯವೆನೆ (ಪುರಾಯ= ಅಧಿಕವಾದದ್ದು) ಕಾಹುರದ(ಕ್ರೋಧ. ಉದ್ವೇಗದ.) ನುಡಿ ಬೇಡ+ ಎಳು ನಡೆವುದು ಹನಿಸ್ತನಾಪುರಿಗೆ ಅರಿಗಳು(ಅರಿ- ಶತ್ರು)+ ಐತಂದು+ ಔಕಿದಡೆ (ಆಕ್ರಮಿಸಿದರೆ) ಗಜಪುರದ ದುರ್ಗವ ಬಲಿದು ನಿಲುವುದು ಉರಮ(ಉರವಣೆ- ಉರಮ- ಆಟೋಪ) ಮಂತ್ರವಿದು (ರಾಜಕಾರ್ಯ)+ ಎಂದನು+ ಅಶ್ವತ್ಥಾಮನು+ ಅವನಿಪನ.
ಅರ್ಥ:ಅಶ್ವತ್ಥಾಮನು ಆದರೂ ಬಿಡದೆ ಅವನಿಪ ಕೌರವನನ್ನು ಕುರಿತು,'ಅರಸನೇ ಕೇಳಯ್ಯಾ, ಸುಕೃತವಾದ ವಿಚಾರವನ್ನು ವಿಸ್ತರಿಸಿ ಹೇಳುವೆನು; ಈಗ ಉತ್ತಮವಾದುದೆಂದರೆ, ಕ್ರೋಧದ ಉದ್ವೇಗದ ನುಡಿ ಬೇಡ; ಎಳು ಹನಿಸ್ತನಾಪುರಿಗೆ ನೀನು ಹೊಗಬೇಕು. ಶತ್ರುಗಳು ಬಂದು ಆಕ್ರಮಿಸಿದರೆ ಹಸ್ತಿನಾಪುರದ ದುರ್ಗವನ್ನು ಬಲಪಡಿಸಿ, ಯುದ್ಧಕ್ಕೆ ನಿಲ್ಲುವುದು. ಇದು ಶೌರ್ಯದ ಕ್ರಮ- ರಾಜಕಾರ್ಯ,' ಎಂದನು.
ಸಲಿಲ ಮಧ್ಯದೊಳಿಂದಿನಿರುಳನು
ಕಳೆದೆನಾದಡೆ ಪಾಂಡುಪುತ್ರರ
ಗೆಲುವೆನುದಯದೊಳಿದುವೆ ನಿಶ್ಚಯವೆನ್ನ ಚಿತ್ತದಲಿ |
ಅಳುಕಿ ಕದನದೊಳೋಡಿ ನಗರಿಯ
ಲಲನೆಯರ ಮರೆಗೊಂಬೆನೇ ನೀವ್
ತೊಲಗಿ ಭೀಮನ ಬೇಹು ಬಹುದಿರಬೇಡ ನೀವೆಂದ || ೪೧ ||
ಪದವಿಭಾಗ-ಅರ್ಥ: ಸಲಿಲ ಮಧ್ಯದೊಳು+ ಇಂದಿನ+ ಇರುಳನು ಕಳೆದೆನಾದಡೆ ಪಾಂಡುಪುತ್ರರ ಗೆಲುವೆನು+ ಉದಯದೊಳು+ ಇದುವೆ ನಿಶ್ಚಯವು (ನಿರ್ಧಾರ)+ ಎನ್ನ ಚಿತ್ತದಲಿ(ಮನಸ್ಸಿನ), ಅಳುಕಿ(ಹೆದರಿ) ಕದನದೊಳು+ ಓಡಿ ನಗರಿಯ ಲಲನೆಯರ ಮರೆಗೊಂಬೆನೇ, ನೀವ್+ ತೊಲಗಿ, ಭೀಮನ ಬೇಹು ಬಹುದು+ ಇರಬೇಡ ನೀವೆಂದ.
ಅರ್ಥ:ಅದಕ್ಕೆ ದುರ್ಯೋಧನನು,'ಈ ನೀರನ ಮಧ್ಯದಲ್ಲಿ ಇಂದಿನ ರಾತ್ರಿಯನ್ನು ಕಳೆದೆನಾದರೆ, ವಿಶ್ರಾಂತಿ ಪಡೆದು ಸಶಕ್ತನಾಗಿ ಪಾಂಡುಪುತ್ರರನ್ನು ಸೂರ್ಯು ಉದಯದ ನಂತರ ಗೆಲ್ಲುವೆನು. ಇದುವೇ ನನ್ನ ಮನದ ನಿರ್ಧಾರ. ಕದನಕ್ಕೆ ಹೆದರಿ ಓಡಿಹೋಗಿ ಹಸ್ತಿನಾಪುರದ ರಾಣೀವಾಸದ ಲಲನೆಯರ ಮರೆಯಲ್ಲಿ ಅಡಗುವೆನೇ? ಎಂದಿಗೂ ಇಲ್ಲ. ಈಗ ನೀವು ಇಲ್ಲಿಂದ ತೊಲಗಿಹೋಗಿ. ಭೀಮನ ಬೇಹುಗಾರರು ಬರಬಹುದು. ನೀವು ಇಲ್ಲಿ ಇರಬೇಡಿ,' ಎಂದ.

ಬೇಟೆಗಾರರು ನೀರೊಳಗಿನ ಕೌರವನ ಮಾತು ಕೇಳಿದರು

ಸಂಪಾದಿಸಿ
ಅರಸ ಕೇಳೈ ದೈವಯೋಗವ
ಪರಿಹರಿಸಲಾರಳವು ಪವನಜ
ನರಮನೆಯ ಮೃಗವೇಂಟೆಕಾರರು ಮಾಂಸಭಾರದಲಿ |
ಬರುತ ನೀರಡಿಸಿದರು ಕಂಡರು
ಸರಸಿಯನು ನೀರ್ಗುಡಿಯಲೈತಂ
ದಿರಿಸಿದರು ತೀರದಲಿ ಬಹಳಾಮಿಷದ ಕಂಬಿಗಳ || ೪೨ ||
ಪದವಿಭಾಗ-ಅರ್ಥ: ಅರಸ ಕೇಳೈ ದೈವಯೋಗವ ಪರಿಹರಿಸಲು+ ಆರ+ ಅಳವು(ಶಕ್ತಿ,ಸಾದ್ಯತೆ) ಪವನಜನ(ಭೀಮನ)+ ಅರಮನೆಯ ಮೃಗವೇಂಟೆಕಾರರು ಮಾಂಸಭಾರದಲಿ ಬರುತ ನೀರಡಿಸಿದರು(ಬಾಯಾರಿದರು) ಕಂಡರು ಸರಸಿಯನು ನೀರ್ಗುಡಿಯಲು+ ಐತಂದಿರಿಸಿದರು ತೀರದಲಿ ಬಹಳ+ ಆಮಿಷದ ಕಂಬಿಗಳ.(ಕೊರಳ ಹಿಂಭಾಗದ ಮೇಲೆ ಅಡ್ಡಡ್ಡಲಾಗಿ ಇಟ್ಟುಕೊಂಡು ಹೊರುವ ಕಂಬಿ.)
ಅರ್ಥ:ಜನಮೇಜಯ ಅರಸನೇ ಕೇಳಯ್ಯಾ! ದೈವಯೋಗವನನು ಪರಿಹರಿಸಲು ಯಾರಿಗೆ ಸಾದ್ಯ. ಭೀಮನ ಅರಮನೆಯ ಮೃಗಬೇಟೆಕಾರರು ಮಾಂಸಹೊತ್ತು ಬರುತ್ತಾ ಅದರ ಭಾರದಲ್ಲಿ ಬಾಯಾರಿದರು. ಆಗ ಅಲ್ಲಿ ಸರೋವರವನ್ನು ಕಂಡರು. ಅದರ ನೀರನ್ನು ಕುಡಿಯಲು ಬಂದವರು, ಬಹಳ ಅಗತ್ಯವಾಗಿ ಬೇಕಾದ ಮಾಂಸವನ್ನು ಹೊತ್ತಿದ್ದ ಕಂಬಿಗಳನ್ನು ತೀರದಲ್ಲಿ ಇಟ್ಟರು.
ಚರಣ ವಚನವ ತೊಳೆದು ನಿರ್ಮಳ
ತರವರಾಂಬುವನೀಂಟಿದರು ಕೃಪ
ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ |
ಅರಿದರಿವರಾಲಿಸಿದರೇನಿದು
ಕುರುಪತಿಯ ತತ್ಸುಭಟವಾದೋ
ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು || ೪೩ ||
ಪದವಿಭಾಗ-ಅರ್ಥ: ಚರಣ ವಚನವ (ಬಾಯಿ) ತೊಳೆದು ನಿರ್ಮಳ ತರವರಾಂಬುವನು+ ಈಂಟಿದರು (ಈಂಟು= ಕುಡಿಯುವುದು), ಕೃಪ ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ ಅರಿದರು+ ಇವರಾಲಿಸಿದರು+ ಏನಿದು ಕುರುಪತಿಯ ತತ್+ ಸುಭಟ ವಾದ+ ಉತ್ತರವಲಾ ಲೇಸಾಯ್ತು+ ಎನುತ ಕೇಳಿದರು ಮರೆವಿಡಿದು.
ಅರ್ಥ: ಬಂದ ಬೇಟೆಗಾರರು, ಕೈ ಕಾಲು ಮುಖಗಳನ್ನು ತೊಳೆದುಕೊಂಡು, ನಿರ್ಮಲವಾದ ನೀರನ್ನು ಕುಡಿದರು. ಅಲ್ಲಿ ಅವರು ಕೃಪ ಗುರುಸುತ ಅಶ್ವತ್ಥಾಮರ ಮಾತುಗಳನ್ನೂ, ನಡುನೀರಿನಿಂದ ಬರುವ ರಾಜನಧ್ವನಿಯನ್ನೂ ಅರಿತು, ಇವರಾಲಿಸಿದರು. ಈ ಧ್ವನಿ ಏನು,(ಏನಿದು) ಕುರುಪತಿ ಕೌರವನ ಮತ್ತು ಅವನ ಸುಭಟ-ವೀರರ ವಾದ- ಮತ್ತು ಉತ್ತರವಲಾ! ಒಳ್ಳೆಯದಾಯಿತು, ಎನ್ನುತ್ತಾ, ಮರೆಯಲ್ಲಿ ನಿಂತು ಕೇಳಿದರು.
ಆಯಿತಿದು ನೃಪರಾಜಕಾರ್ಯದ
ದಾಯಕಿದು ಧುರಪಥವಲಾ ಕುರು
ರಾಯಗುಪ್ತನಿವಾಸವರ್ಥಪ್ರದವಲಾ ನಮಗೆ |
ಕಾಯಿದಿರು ಕಂಡೌ ಸರೋಜದ
ತಾಯಿ ಸರಸಿಯೆನುತ್ತ ಹೋದರು
ವಾಯುತನುಜನ ಬೇಂಟೆಕಾರರು ನಗುತ ಪಾಳೆಯಕೆ || ೪೪ ||
ಪದವಿಭಾಗ-ಅರ್ಥ: ಆಯಿತು+ ಇದು ನೃಪರಾಜ ಕಾರ್ಯದ ದಾಯಕೆ(ಲಾಭಕ್ಕೆ, ವರಮಾನ, ಪ್ರಯೋಜನ)+ ಇದು ಧುರಪಥವಲಾ(ಯುದ್ಧ ನೆಡಯುವ ಸಮಯ, ಯುದ್ಧದ ಮಾರ್ಗವಲ್ಲವೇ!), ಕುರುರಾಯ ಗುಪ್ತನಿವಾಸವು+ ಅರ್ಥಪ್ರದವಲಾ (ಲಾಭದಾಯಕವು) ನಮಗೆ ಕಾಯಿದಿರು, ಕಂಡೌ ಸರೋಜದ(ಕಮಲದ) ತಾಯಿ ಸರಸಿಯೆನು+ ಎನುತ್ತ ಹೋದರು ವಾಯುತನುಜನ ಬೇಂಟೆಕಾರರು ನಗುತ ಪಾಳೆಯಕೆ.
ಅರ್ಥ:ಬೇಟೆಗಾರರು ಯೋಚಿಸಿದರು,' ಇದು ನೃಪ ಧರ್ಮರಾಯನ ರಾಜಕಾರ್ಯದ ಪ್ರಯೋಜನಕ್ಕೆ ಆಯಿತು; ಇದು ಯುದ್ಧದ ಸಮಯವಲ್ಲವೇ!, ಕುರುರಾಯನ ಗುಪ್ತನಿವಾಸದ ರಹಸ್ಯವು ನಮಗೆ ಲಾಭದಾಯಕವಲಾ! ಸರೋಜದ ತಾಯಿ ಸರಸರೋವವನ್ನು ಕುರಿತು, 'ನಮಗಾಗಿ ಕಾಪಾಡಿಕೊಂಡಿರು ಕಂಡೆಯಾ -ಗಂಗೆಯೇ,' ಎಂದು ನಗುತ್ತಾ ವಾಯುತನುಜನಾದ ಭೀಮನ ಕಡೆಯ ಬೇಟೆಕಾರರು ತಮ್ಮ ಪಾಳೆಯಕ್ಕೆ ಹೋದರು .

ಕೌರವನನ್ನು ಕಾಣದೆ ಪಾಂಡವರ ಚಿಂತೆ

ಸಂಪಾದಿಸಿ
ಅರಸ ಕೇಳ್ ಸಮಸಪ್ತಕರ ಸಂ
ಹರಿಸಿ ಶಕುನಿಯ ಮುರಿದು ಕಳನಲಿ
ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ |
ಹರಿಸಿದರು ದೂತರನು ಕೌರವ
ಧರಣಿಪನ ಪಾಳೆಯಕೆ ಹಸ್ತಿನ
ಪುರಿಗೆ ಕೂಡೆ ದಿಗಂತದಲಿ ಚರರರಸಿದರು ನೃಪನ || ೪೫ ||
ಪದವಿಭಾಗ-ಅರ್ಥ: ಅರಸ ಕೇಳ್ ಸಮಸಪ್ತಕರ ಸಂಹರಿಸಿ ಶಕುನಿಯ ಮುರಿದು ಕಳನಲಿ ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ ಹರಿಸಿದರು ದೂತರನು ಕೌರವ ಧರಣಿಪನ ಪಾಳೆಯಕೆ ಹಸ್ತಿನಪುರಿಗೆ ಕೂಡೆ(ಅದರಕೂಡೆ- ಅದರ ಜೊತೆಗೆ) ದಿಗಂತದಲಿ ಚರರರಸಿದರು ನೃಪನ.(ದಿಗಂತ= ದಿಕ್+ ಅಂತ, ಅಂತ್ಯ)
ಅರ್ಥ: ಜನಮೇಜಯ ಅರಸ ಕೇಳು,'ಸಂಜಯನು ಧೃತರಾಷ್ಟ್ರನಿಗೆ ಮುಂದಿನವಿಚಾರ ಹೇಳಿದ; 'ಪಾಂಡವರು ಸಂಸಪ್ತಕರನ್ನು ಸಂಹರಿಸಿ, ಶಕುನಿಯನ್ನು ಕೊಂದು, ರಣರಂಗದಲ್ಲಿ ಕೌರವದೊರೆಯನ್ನು ಕಾಣದೆ, ಭೀಮಸೇನ ಮತ್ತು ಅರ್ಜುನರು ಚಿಂತೆಯಿಂದ ಅವನನ್ನು ಹುಡುಕಲು ದೂತರನ್ನು ಹರಿಬಿಟ್ಟರು. ಅವರು ಕೌರವರಾಯನ ಪಾಳೆಯಕ್ಕೆ ಹಸ್ತಿನಾಪುರಕ್ಕೆ ಹೋಗಿ ಕಾಣದೆ, ಅದರ ಜೊತೆಗೆ ಎಲ್ಲಾ ದಿಕ್ಕುಗಳ ಅಂಚಿನವರೆಗೂ ದೂತರು ಕೌರವನೃಪನನ್ನು ಹುಡುಕಿದರು. ಸಿಗಲಿಲ್ಲ.
ಹರಿದು ದೂತರು ನೃಪನ ಕಾಣದೆ
ಮರಳಿದರು ಯಮಸೂನು ದುಗುಡದ
ಭರದ ಭಾರಣೆಯಲಿ ಹೊಕ್ಕನು ತನ್ನ ಪಾಳೆಯವ |
ಕುರುನೃಪತಿ ತಪ್ಪಿದನು ಭೀಷ್ಮಾ
ದ್ಯರ ವಿಜಯ ವೃಥೆಯಾಯ್ತು ಹಸ್ತಿನ
ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ || ೪೬ ||
ಪದವಿಭಾಗ-ಅರ್ಥ: ಹರಿದು(ಚಲಿಸಿ- ಹೋಗಿ) ದೂತರು ನೃಪನ ಕಾಣದೆ ಮರಳಿದರು, ಯಮಸೂನು(ಧರ್ಮಜ) ದುಗುಡದ ಭರದ (ಚಿಂತೆಯ ವೇಗ - ಅತಿ, ಬರಬರನೆ ನೆಡೆದನು) ಭಾರಣೆಯಲಿ (ಹೊರೆ, ಬಾರ) ಹೊಕ್ಕನು ತನ್ನ ಪಾಳೆಯವ, ಕುರುನೃಪತಿ ತಪ್ಪಿದನು, ಭೀಷ್ಮಾದ್ಯರ ವಿಜಯ ವೃಥೆಯಾಯ್ತು,(ವೃಥೆ- ವೃಥಾ, ಪ್ರಯೋಜನವಿಲ್ಲದ್ದು ವ್ಯರ್ಥ) ಹಸ್ತಿನಪುರದ ಸಿರಿ ಜಾರಿದಳು ತನಗೆಂದು+ ಅರಸ ಬಿಸುಸುಯ್ದ.
ಅರ್ಥ:ದೂತರು ಎಲ್ಲಾ ಕಡೆ ಹೋಗಿ ನೃಪ ಕೌರವನನ್ನು ಕಾಣದೆ ಹಿಂತಿರುಗಿಬಂದರು. ಧರ್ಮರಾಯನು ಚಿಂತೆಯ ಆವೇಗದ ಭಾರದಿಂದ ತನ್ನ ಪಾಳೆಯಕ್ಕೆ ಹೋದನು. ಕುರುನೃಪತಿ ಕೌರವನು ತಪ್ಪಿಸಿಕೊಂಡನು, ಭೀಷ್ಮನೇಮೊದಲಾದವರನ್ನು ಸೋಲಿಸಿ ಪಡೆದ ವಿಜಯ ಪ್ರಯೋಜನವಿಲ್ಲದೆ ಹೋಯಿತು. ಹಸ್ತಿನಾಪುರದ ಸಂಪತ್ತು, ರಾಜಲಕ್ಷ್ಮಿ ತನಗೆ ಜಾರಿ ಕೈತಪ್ಪಿದಳು ಎಂದು ಅರಸ ಧರ್ಮಜನು ಬಿಸುಸುಯ್ದನು/ ನಿಟ್ಟಸಿರುಬಿಟ್ಟನು.
ಹೆಣನ ಬಗಿದರಸಿದರು ಕರಿಗಳ
ಹಣಿದದಲಿ ನೋಡಿದರು ರಥಸಂ
ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ |
ಹಣುಗಿದರು ಭಗದತ್ತನಾನೆಯ
ನಣೆದುನೋಡಿದರರುಣವಾರಿಯ
ಕೆಣಕಿ ಕೂಡರಸಿದರು ಚಾರರು ಕಳನ ಚೌಕದಲಿ || ೪೭ ||
ಪದವಿಭಾಗ-ಅರ್ಥ: ಹೆಣನ ಬಗಿದು+ ಅರಸಿದರು(ಹುಡುಕಿದರು), ಕರಿಗಳ(ಆನೆ) ಹಣಿದದಲಿ(ಹಣಿ = ಹೊಡೆ ಸಾಯು ಸುರಿ; ಹಣಿದನು ಹೊಡೆದನು ಸಾಯಿಸಿದನು; ಹನನ) ನೋಡಿದರು, ರಥಸಂದಣಿಗಳ+ ಒಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ ಹಣುಗಿದರು, ಭಗದತ್ತನ+ ಆನೆಯ ನಣೆದು(ಕ್ರಿ. ಒಡೆದು, ಪುಡಿಮಾಡಿ) ನೋಡಿದರು+ ಅರುಣವಾರಿಯ(ರಕ್ತದ ಮಡು) ಕೆಣಕಿ ಕೂಡ+ ಅರಸಿದರು- ಚಾರರು ಕಳನಚೌಕದಲಿ(ರಣರಂಗದಲ್ಲಿ).
  • (ಹಣಿ (ಕ್ರಿ)= ಹೊಡೆ ಸಾಯು ಸುರಿ- ಕೊ.ಶಿ.ಕಾರಂತ ಅರ್ಥಕೋಶ; ಹಣಿದನು= ಹೊಡೆದನು ಸಾಯಿಸಿದನು; ಹನನ; ಹಣಿದದಲಿ= ಹೆಣದ ರಾಶಿಯಲ್ಲಿ) (ಕು.ವ್ಯಾ.ಭಾರತ-೧೦-೪-೪೭)
ಅರ್ಥ:ಪಾಂಡವರ ಚಾರರು, ಹೆಣವನ್ನು ಬಗೆದು ಅಲ್ಲಿ ಕೌರವನನ್ನು ಅರಸಿದರು. ಆನೆಗಳ ಹೆಣದರಾಶಿಯಲ್ಲಿ ನೋಡಿದರು, ರಥ ಸಂದಣಿಗಳ/ಸಮೂಹಗಳ ಒಟ್ಟಿದ ರಾಶಿಯಲ್ಲಿ ಕೆದರಿ ನೋಡಿದರು. ಭೀಷ್ಮನ ಸರಳ ಮಂಚದಲಿ ಹಣುಕಿ ಅಲ್ಲಿ ಅಡಗಿರುವನೇ ಎಂದು ನೋಡಿದರು. ಭಗದತ್ತನ ಸತ್ತ ದೊಡ್ಡ ಆನೆಯನ್ನು ಒಡೆದು ನೋಡಿದರು. ರಣರಂಗದಲ್ಲಿ ರಕ್ತದ ಮಡುವನ್ನು ಕದಕಿ ಕೂಡ ಹುಡುಕಿದರು. ಕೌರವ ಸಿಗಲಿಲ್ಲ.
ಹರಿಹರಿದು ಕೂಡರಸಿ ದೂತರು
ಮರಳಿ ಬಂದರು ದುಗುಡಭರದಲಿ
ಬೆರಳ ಮೂಗಿನಲಿದ್ದುದವನಿಪಸಹಿತ ಪರಿವಾರ |
ಇರುಳು ಬೇಗೆಯ ಚಕ್ರವಾಕಕೆ
ತರಣಿ ತಲೆದೋರಿದವೊಲಟವೀ
ಚರರಿಗರಸಗೆ ಭಾವಭಾವ ವ್ಯಕ್ತವಾಯ್ತೆಂದ || ೪೮ ||
ಪದವಿಭಾಗ-ಅರ್ಥ: ಹರಿಹರಿದು ಕೂಡರಸಿ ದೂತರು ಮರಳಿ ಬಂದರು ದುಗುಡಭರದಲಿ ಬೆರಳ ಮೂಗಿನಲಿದ್ದುದು+ ಅವನಿಪ ಸಹಿತ ಪರಿವಾರ, ಇರುಳು(ರಾತ್ರಿ) ಬೇಗೆಯ(ಸಂಕಟ) ಚಕ್ರವಾಕಕೆ ತರಣಿ (ಸೂರ್ಯ) ತಲೆದೋರಿದವೊಲು+ ಅಟವೀ ಚರರಿಗೆ (ಬೇಡರು)+ ಅರಸಗೆ ಭಾವಭಾವ ವ್ಯಕ್ತವಾಯ್ತು+ ಎಂದ
ಅರ್ಥ:ಪಾಂಡವರ ದೂತರು ಎಲ್ಲಾಕಡೆ ಹೋಗಿ ಹೋಗಿ ಒಟುಗೂಡಿ ಅರಸಿ, ಕೌರವನನ್ನು ಕಾಣದೆ, ಆ ದೂತರು ಮರಳಿ ಹಿಂತಿರುಗಿ ಬಂದರು. ಅವರಿಗೆ ಚಿಂತೆಯ ಭರದಲ್ಲಿ, ಮತ್ತು ಅಚ್ಚರಿಯಿಂದ ಅವನಿಪ ಧರ್ಮಜನ ಸಹಿತ ಪರಿವಾರದ ಎಲ್ಲರೂ ಮೂಗಿನಮೇಲೆ ಬೆರಳನ್ನು ಇಟ್ಟುಕೊಂಡರು. ರಾತ್ರಿಯನ್ನು ಕಳೆಯುವ ಸಂಕಟದಲ್ಲಿದ್ದ ಚಕ್ರವಾಕ ಪಕ್ಷಿಗೆ, ಸೂರ್ಯನು ಉದಯಿಸಿದಂತೆ, ಬೇಡರಿಗೂ ಅರಸ ಧರ್ಮಜನಿಗೂ ಪರಸ್ಪರ ಭಾವಭಾವ ವ್ಯಕ್ತವಾಯಿತು,'ಎಂದು ಜನಮೇಜಯನಿಗೆ ವೈಶಂಪಾಯನ ಮುನಿ ಹೇಳಿದ. (ಚಕ್ರವಾಕಕ್ಕೆ ಸೂರ್ಯ ಉದಯದಿಂದ ದುಗುಡ ಹೋದಂತೆ ಧರ್ಮಜನಿಗೆ ವಿಷಯ ತಿಳಿದು ನೆಮ್ಮದಿಯಾಯಿತು; ಬೇಡರಿಗೆ ಅರನಿಗೆ ಯಾವಾಗ ವಿಷಯ ತಿಳಿಸುವೆವೋ ಎಂದಿದ್ದವರಿಗೆ ಕೌರವನ ವಿಷಯ ಹೇಳಿ ನೆಮ್ಮದಿಯಾಯಿತು- ಬಹುಮಾನ ಸಿಕ್ಕಿತು)
ತಂದ ಮಾಂಸದ ಕಂಬಿಗಳನು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ |
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆಯ ಶಬರಪತಿ ನುಡಿಸಿದನು ಪವನಜನ || ೪೯ ||
ಪದವಿಭಾಗ-ಅರ್ಥ: ತಂದ ಮಾಂಸದ ಕಂಬಿಗಳನು ಪುಳಿಂದರು+ ಒಪ್ಪಿಸಿ, ಭೀಮಸೇನನ ಮಂದಿರವ ಸಾರಿದರು, ಕಂಡರು ಜನದ ಕಳವಳವ, ಇಂದಿನ ಈ ಸಂಗ್ರಾಮ ಜಯದಲಿ ಬಂದ ಜಾಡ್ಯವಿದು+ ಏನು ಬಿನ್ನಹವೆಂದು ಸಲುಗೆಯ ಶಬರಪತಿ ನುಡಿಸಿದನು ಪವನಜನ.
ಅರ್ಥ:ಬೇಡರು ತಂದ ಮಾಂಸವನ್ನು ಹೇರಿದ ಅಡ್ಡ ಕೋಲಿನ ಕಂಬಿಗಳನ್ಮು ಅರಮನೆಯ ಬಾಣಸಿಗೆ ಒಪ್ಪಿಸಿದರು. ನಂತರ ಭೀಮಸೇನನ ಅರಮನೆಗೆ ಹೋದರು. ಅಲ್ಲಿದ್ದ ಜನರ ಮುಖದಲ್ಲಿದ್ದ ಕಳವಳವನ್ನು ಕಂಡರು. ಆಗ ಸಲುಗೆಯಿಂದ ಶಬರಪತಿ - ಬೇಡರ ಒಡೆಯನು, ನಾನು ತಿಳಿದಂತೆ ಇಂದಿನ ಈ ಸಂಗ್ರಾಮದಲ್ಲಿ ಜಯ ಪಡೆದಿದ್ದೀರಿ. ಆದರೆ ನೀವೆಲ್ಲಾ ಚಿಂತೆಯಿಂದ ಕೂಡಿದುದು ಎದ್ದು ಕಾಣುವುದು. ಈಗ ನಿಮಗೆ ಬಂದ ತೊಂದರೆ ಏನು? ಹೇಳಿ ಎಂದು ಬಿನ್ನಹಮಾಡಿ/ ವಿನಯದಿಂದ ಕೇಳಿ, ಪವನಜ ಭೀಮನನ್ನು ಮಾನಾಡಿಸಿದನು.
ರಣಮುಖದೊಳೇಕಾದಶಾಕ್ಷೋ
ಹಿಣಿಯ ಗೆಲಿದುದು ವಿಫಲವಾದುದು
ಜುಣುಗಿದರಿನೃಪನಾವ ಜವನಿಕೆ ಮರೆಯೊಳಡಗಿದನೊ |
ತೃಣವನದೊಳಿರುಬಿನಲಿ ಮೆಳೆಸಂ
ದಣಿಗಳಲಿ ಮರಗಾಡಿನಲಿ ಮೃಗ
ಗಣದ ನೆಲೆಯಲಿ ಕಾಣಿರಲೆ ನೀವೆಂದನಾ ಭೀಮ || ೫೦ ||
ಪದವಿಭಾಗ-ಅರ್ಥ: ರಣಮುಖದೊಳು+ ಏಕಾದಶ+ ಅಕ್ಷೋಹಿಣಿಯ ಗೆಲಿದುದು ವಿಫಲವಾದುದು; ಜುಣುಗಿದ+ ಅರಿನೃಪನು+ ಆವ ಜವನಿಕೆ (ನಾಟಕದ)ಪರದೆ,ತೆರೆ) ಮರೆಯೊಳು+ ಅಡಗಿದನೊ ತೃಣವನದೊಳು+ ಇರುಬಿನಲಿ ಮೆಳೆಸಂದಣಿಗಳಲಿ ಮರಗಾಡಿನಲಿ ಮೃಗಗಣದ ನೆಲೆಯಲಿ ಕಾಣಿರಲೆ ನೀವೆಂದನು ಆ ಭೀಮ.
ಅರ್ಥ:ಆಗ ಭೀಮನು ಬೇಡರಾಜನನ್ನು ಕುರಿತು,'ನಾಯಕನೇ, ನಾವು ರಣರಂಗದಲ್ಲಿ ಹನ್ನೊಂದು ಅಕ್ಷೋಹಿಣಿಯ ಸೇನೆಯನ್ನು ಗೆದ್ದಿದ್ದು ವಿಫಲವಾಯಿತು, ಅರಸ ಕೌರವನು ತಪ್ಪಿಸಿಕೊಂಡಿದ್ದಾನೆ. ಹೀಗೆ ಜಾರಿಕೊಂಡ ನಮ್ಮ ಶತ್ರು ಕೌರವ ನೃಪನು, ಯಾವ ಮರೆಯಲ್ಲಿ ಅಡಗಿದನೊ ತಿಳಿಯದು. ನೀವು ಯಾರಾದರೂ ಅವನನ್ನು ಹುಲ್ಲಿನಬೇಣದಲ್ಲಿ, ಸಂದುಗಳಲ್ಲಿ, ಮೆಳೆಗಳ ಪೊದೆಗಳಲ್ಲಿ, ಮರಗಳಕಾಡಿನಲ್ಲಿ, ಮೃಗಗಳ ಗುಂಪಿನ ನೆಲೆಯಲ್ಲಿ/ತಾಣದಲ್ಲಿ ಕಾಣಲಿಲ್ಲವೇ? ಎಂದು ಕೇಳಿದನು.

ಭೀಮನಿಗೆ ಬೇಡರಿಂದ ಕೌರವನ ಸುಳಿವು

ಸಂಪಾದಿಸಿ
ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ |
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳೆಂದ || ೫೧ ||
ಪದವಿಭಾಗ-ಅರ್ಥ: ಆದರೆ+ ಎಕ್ಕಟಿ (ಏಕಾಂತವಾಗಿ,ರಹಸ್ಯವಾಗಿ) ಬಿನ್ನಹವ ನೀವು+ ಆದರಿಪುದು+ ಎನೆ ತುಷ್ಟನಾಗಿ ವೃಕೋದರನು (ಭೀಮನು) ಕರಸಿದನು ಪರಿಮಿತಕೆ (ಏಕಾಂತಕ್ಕೆ)+ ಆ ಪುಳಿಂದಕರ, ಆದುದೇ ನೆಲೆ(ಸ್ಥಳ ಆಶ್ರಯ, ವಾಸ) ಕುರುಪತಿಗೆ ದುರ್ಭೇದವು (ಬೇಧಿಸಲು ಆಗದ ನೆಲೆ)+ ಇದು ಮೆಚ್ಚುಂಟು ನಿಮಗೆ+ ಎನಲು+ ಆ ದುರಾತ್ಮಕರು+ ಅರುಹಿದರು ಧೃತರಾಷ್ಟ್ರ ಕೇಳೆಂದ.
ಅರ್ಥ:ಆಗ ಬೇಡರ ನಾಯಕನು,'ನಮಗೆ ತಿಳಿದ ವಿಷಯ ಹೇಳಬಹುದು, ಆದರೆ ಅದನ್ನು ಏಕಾಂತವಾಗಿ,ರಹಸ್ಯವಾಗಿ ನಮ್ಮ ಬಿನ್ನಹವನ್ನು ಕೇಳಬೇಕು ಮತ್ತು ನೀವು ಅದಕ್ಕೆ ಸೂಕ್ತವಾಗಿ ಬಹುಮಾನ ಕೊಟ್ಟು ಆದರಿಸಬೇಕು,' ಎನ್ನಲು, ವೃಕೋದರನು ಸಂತೋಷಪಟ್ಟು ಆ ಪುಳಿಂದಕರನ್ನು ಏಕಾಂತದ ರಹಸ್ಯಮಂದಿರಕ್ಕೆ ಕರಸಿದನು. ಕುರುಪತಿ ಕೌರವನು ಅಡಗಿರುವ ಸ್ಥಳವು ಕಂಡುಹಿಡಿಯಲು ಆಗದಂತೆ ಇರುವುದೇ? ಇದು- ಈ ವಿಷಯ ಹೇಳಿದರೆ ನಿಮಗೆ ಮೆಚ್ಚಿನ ಕೊಡಿಗೆ ಇದೆ ಎನ್ನಲು, ಆ ದುರಾತ್ಮಕ ಬೇಡರು ತಳಿ ಹಸ್ಯವನ್ನು ಭಿಮನಿಗೆ ಹೇಳಿದರು,' ಧೃತರಾಷ್ಟ್ರನೇ ಕೇಳು ಎಂದ ಸಂಜಯ.
ಜೀಯ ಕುರುಪತಿ ಗುಪ್ತದಲಿ ದ್ವೈ
ಪಾಯನನ ಸರಸಿಯಲಿ ಸಮರವಿ
ಧಾಯಕದ ವಾರ್ತೆಯನು ತನ್ನವರೊಡನೆ ತೀರದಲಿ |
ಬಾಯಿಗೇಳಿಸುತಿರ್ದ ನಾವ್ ತ
ತ್ತೋಯಪಾನಕೆ ತಿರುಗಿ ಕಂಡೆವು
ರಾಯನಂಘ್ರಿಗಳಾಣೆಯೆಂದರು ಶಬರರನಿಲಜಗೆ || ೫೨ ||
ಪದವಿಭಾಗ-ಅರ್ಥ: ಜೀಯ ಕುರುಪತಿ ಗುಪ್ತದಲಿ ದ್ವೈಪಾಯನನ ಸರಸಿಯಲಿ ಸಮರ(ಯುದ್ಧ) ವಿಧಾಯಕದ (ನಿರ್ಧರಿಸುವ) ವಾರ್ತೆಯನು ತನ್ನವರೊಡನೆ, ತೀರದಲಿ ಬಾಯಿ+ ಗ+ ಕೇಳಿಸುತಿರ್ದ, ನಾವ್ ತತ್+ ತೋಯ+ ಪಾನಕೆ ತಿರುಗಿ ಕಂಡೆವು ರಾಯನ+ ಆಂಘ್ರಿಗಳ(ಅಂಘ್ರಿ- ಪಾದ)+ ಆಣೆಯೆಂದರು ಶಬರರು+ ಅನಿಲಜಗೆ.
ಅರ್ಥ: ಬೇಡರು ಭೀಮನಿಗೆ ಹೇಳಿದರು,'ಜೀಯ ಕುರುಪತಿಯು ಗುಪ್ತವಾಗಿ/ರಹಸ್ಯವಾಗಿ ದ್ವೈಪಾಯನನ ಸರೋವರದಲ್ಲಿ ಯುದ್ಧವನ್ನು ನೆಡೆಸುವ ವಿಚಾರವನ್ನು ಸರಸ್ಸಿನಲ್ಲಿದ್ದುಕೊಂಡು ತನ್ನವರೊಡನೆ ಕೇಳಿಸುವಂತೆ ಬಾಯಿಬಿಟ್ಟು ಹೇಳುತಿರ್ದನು/ಹೇಳುತ್ತಿದ್ದನು. ನಾವು ಆಗ ನೀರುಕುಡಿಯಲು ಹೋಗಿ ತಿರುಗಾಡಿದಾಗ ಅಲ್ಲಿ ರಾಜನ ಪಾದಗಳ ಗುರುತನ್ನು ಕಂಡೆವು.' ಮತ್ತು 'ಇದು ಸತ್ಯ - ನಮ್ಮ ಆಣೆ,' ಎಂದರು.
ಇತ್ತನವದಿರಿಗಂಗಚಿತ್ತವ
ನುತ್ತಮಾಂಬರ ವೀರ ನೂಪುರರ
ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ |
ಹೊತ್ತ ಹರುಷದ ಹೊಳೆವ ಕಂಗಳ
ತೆತ್ತಿಸಿದ ಪುಳಕದ ಸಘಾಡಿಕೆ
ವೆತ್ತ ಸುಮ್ಮಾನದಲಿ ಬಂದನು ರಾಯನರಮನೆಗೆ || ೫೩ ||
ಪದವಿಭಾಗ-ಅರ್ಥ: ಇತ್ತನು (ಕೊಟ್ಟನು)+ ಅವದಿರಿಗೆ (ಬೇಟೆಗಾರರಿಗೆ)+ ಅಂಗಚಿತ್ತವನು (ದೇಹ ಮನಸ್ಸು ಒಪ್ಪುವಂತೆ)+ ಉತ್ತಮಾಂಬರ ವೀರ ನೂಪುರರ ಮುತ್ತಿನ+ ಏಕಾವಳಿಯ ಕರ್ಣಾಭರಣ ಮುದ್ರಿಕೆಯ ಹೊತ್ತ ಹರುಷದ ಹೊಳೆವ ಕಂಗಳ ತೆತ್ತಿಸಿದ (ಹೊಂದಿದ ಕೂಡಿದ) ಪುಳಕದ ಸಘಾಡಿಕೆವೆತ್ತ (ಅವಸರದ ರಭಸದ) ಸುಮ್ಮಾನದಲಿ ಬಂದನು ರಾಯನರಮನೆಗೆ.
ಅರ್ಥ:ಭೀಮನು ಬೇಟೆಗಾರರಿಗೆ ಅವರ ದೇಹಕ್ಕೆ ಮನಸ್ಸಿಗೆ ಒಪ್ಪುವಂತೆ ಉತ್ತಮ ಅಂಬರ/ಬಟ್ಟೆ ವೀರರು ತೊಡುವ ನೂಪುರಗಳನ್ನು, ಮುತ್ತಿನ ಏಕಾವಳಿಗಳನ್ನು ಕರ್ಣಾಭರಣಗಳನ್ನು, ಮುದ್ರಿಕೆಯನ್ನು ಕೊಟ್ಟನು. ಇವುಗಳನ್ನು ಕೊಟ್ಟು, ಭೀಮನು ಮನಸ್ಸಿನಲ್ಲಿ ಹೊತ್ತ ಹರುಷದಿಂದ ಹೊಳೆವ ಕಂಗಳಲ್ಲಿ ಕೋಡಿದ ಪುಳಕದಲ್ಲಿ ಅವಸರವಾಗಿ ಸಂತಸದಿಂದ ಧರ್ಮರಾಯನ ಅರಮನೆಗೆ ಬಂದನು.
ಗುಡಿಯ ಕಟ್ಟಿಸು ಜೀಯ ಚರರಿಗೆ
ಕೊಡು ಪಸಾಯವನರಿನೃಪನ ತಲೆ
ವಿಡಿದರಾ ದ್ವೈಪಾಯನ ಸರೋವರದ ಮಧ್ಯದಲಿ |
ಅಡಗಿದನು ತಡಿವಿಡಿದು ನಿಂದವ
ರೊಡನೆ ಮಾತಾಡಿದನು ಗಡ ನಿ
ಮ್ಮಡಿಯೆ ಬಲ್ಲಿರಿ ರಾಜಕಾರ್ಯವನೆಂದನಾ ಭೀಮ || ೫೪ ||
ಪದವಿಭಾಗ-ಅರ್ಥ: ಗುಡಿಯ (ಬಾವುಟ) ಕಟ್ಟಿಸು ಜೀಯ ಚರರಿಗೆ ಕೊಡು ಪಸಾಯವನು+ ಅರಿನೃಪನ ತಲೆವಿಡಿದರು+ ಆ ದ್ವೈಪಾಯನ ಸರೋವರದ ಮಧ್ಯದಲಿ ಅಡಗಿದನು ತಡಿವಿಡಿದು ನಿಂದವರೊಡನೆ ಮಾತಾಡಿದನು ಗಡ ನಿಮ್ಮಡಿಯೆ ಬಲ್ಲಿರಿ ರಾಜಕಾರ್ಯವನು+ ಎಂದನಾ ಭೀಮ.
ಅರ್ಥ:ಭೀಮನು ಜೀಯಾ,ಅನ್ನ ಧರ್ಮಜನೇ, ವಿಜಯದ ಬಾವುಟವನ್ನು ಕಟ್ಟಿಸು; ದೂತರಿಗೆ ಉಡುಗೊರೆಯನ್ನು ಕೊಡು. ಶತ್ರುನೃಪ ಕೌರವನ ತಲೆ ಎಲ್ಲಿದೆ ಎಂದು ನನ್ನ ಬೇಡಪಡೆಯವರು ಕಂಡುಹಿಡಿದರು. ಕೌರವನು ಆ ದ್ವೈಪಾಯನ ಸರೋವರದ ಮಧ್ಯದಲ್ಲಿ ಅಡಗಿರುವನು. ತಡಿಯಲ್ಲಿ/ದಡಹಿಡಿದು ನಿಂತ ತನ್ನವರೊಡನೆ ಮಾತಾಡಿದನು ಗಡ! ಆ ಭೀಮನು ನಿಮ್ಮಪಾದವೇ/ ನೀವೇ ಬಲ್ಲಿರಿ ಮುಂದಿನ ರಾಜಕಾರ್ಯವನ್ನು ಎಂದನು.
ಕರೆ ಮುಕುಂದನನರ್ಜುನನ ಸಂ
ವರಣೆ ಬರಲಿ ಶಿಖಂಡಿ ಪಾಂಚಾ
ಲರಿಗೆ ನೇಮಿಸು ಕರಸು ಧೃಷ್ಟದ್ಯುಮ್ನ ಸೃಂಜಯರ |
ಕರಿ ತುರಗ ರಥವಿಶ್ರಮವನಿಂ
ದಿರುಳಿನಲಿ ನೂಕುವುದು ಹೊರವಡಿ
ಹೊರವಡೆನೆ ನಿಸ್ಸಾಳ ಸೂಳವಿಸಿದವು ಲಗ್ಗೆಯಲಿ || ೫೫ ||
ಪದವಿಭಾಗ-ಅರ್ಥ: ಕರೆ ಮುಕುಂದನನ+ ಅರ್ಜುನನ ಸಂವರಣೆ ಬರಲಿ, ಶಿಖಂಡಿ ಪಾಂಚಾಲರಿಗೆ ನೇಮಿಸು, ಕರಸು ಧೃಷ್ಟದ್ಯುಮ್ನ ಸೃಂಜಯರ ಕರಿ, ತುರಗ ರಥ ವಿಶ್ರಮವನು+ ಇಂದಿರುಳಿನಲಿ ನೂಕುವುದು, ಹೊರವಡಿ- ಹೊರವಡೆನೆ ನಿಸ್ಸಾಳ ಸೂಳುವಿಸಿದವು (ಸೂಳು- ಗದ್ದಲ,ಸಪ್ಪಳ,ಅಬ್ಬರ) ಲಗ್ಗೆಯಲಿ.
ಅರ್ಥ:ಆಗ ಧರ್ಮಜನು ಭೀಮನಿಗೆ ನೀಮಿಸಿದನು,'ಕೃಷ್ಣನನ್ನು ಕರೆ, ಅರ್ಜುನನು ಯುದ್ಧ ಸಿದ್ಧತೆಗಳೊಡನೆ ಬರಲಿ. ಶಿಖಂಡಿ ಪಾಂಚಾಲರಿಗೆ ಬರಲಿ ಆಜ್ಞಾಪಿಸು. ಸೇನಾಧಿಪತಿ ಧೃಷ್ಟದ್ಯುಮ್ನನ್ನೂ ಸೃಂಜಯನ್ನೂ ಕರೆ, ಕುದುರೆ ರಥಗಳ ವಿಶ್ರಾಂತಿ ಇಂದಿನ ಇರುಳಿನಲ್ಲಿ ಬಿಡುವುದು. ಹೀಗೆ ಹೇಳಿದ ಕೂಡಲೇ ಭೀಮನ ಆಜ್ಞೆಯಂತೆ ಅರಮನೆಯ ಹೊರಗಡೆ, ಸೇನೆ ಹೊರಹೊರಡು ಎನ್ನಲು, ಲಗ್ಗೆಹೊರಟು ಬೇರಿ ಮೊದಲಾದ ನಿಸ್ಸಾಳ ವಾದ್ಯಗಳು ಆರ್ಭಟಿಸಿದವು .

ಪಾಂಡವರ ಸೇನೆ ಸರೋವರವನ್ನು ಮುತ್ತಿತು

ಸಂಪಾದಿಸಿ
ಅವರ ಸುಮ್ಮಾನವನು ಸೇನಾ
ನಿವಹ ರಭಸದ ಭೂರಿಭೇರಿಯ
ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ |
ಇವರು ಕೇಳಿದರಕಟಕಟ ಕೌ
ರವನ ಗುಪ್ತ ಪ್ರಕಟವಾದುದೆ
ಶಿವಶಿವಾ ಹರಿಸರ್ವಂಗತನಹುದೆಂದನಾ ದ್ರೌಣಿ || ೫೬ ||
ಪದವಿಭಾಗ-ಅರ್ಥ: ಅವರ ಸುಮ್ಮಾನವನು(ಸಂತೋಷ, ಅಹಂಕಾರ. 4. ಸಮೃದ್ಧಿ.) ಸೇನಾನಿವಹ (ಸಮೂಹ) ರಭಸದ ಭೂರಿಭೇರಿಯ ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ ಇವರು ಕೆಳಿದರು+ ಅಕಟಕಟ ಕೌರವನ ಗುಪ್ತ ಪ್ರಕಟವಾದುದೆ, ಶಿವಶಿವಾ ಹರಿ ಸಸರ್ವಂಗತನು+ ಅಹುದೆಂದನು ಆ ದ್ರೌಣಿ.
ಅರ್ಥ: ಧರ್ಮರಾಯನ ಕಡೆಯ ಸೇನಾ ಸಮೂಹದ ಸಂತೋಷ ಉತ್ಸಾಹದ ರಭಸದ ದೊಡ್ಡ ಭೇರಿಯ, ವಿವಿಧ ವಾದ್ಯಧ್ವನಿಯ, ರಥ,ಗಜ, ಕುದುರೆಗಳ ಗರ್ಜನೆಯನ್ನು ಕೃಪ, ಕೃತವರ್ಮ,ಅಶ್ವತ್ಥಾಮ ಸಂಜಯ, ಇವರು ಕೇಳಿದರು; ಅವರು ಅಕಟಕಟಾ! ಕೌರವನ ಗುಪ್ತವಾಗಿರುವ ಸ್ಥಳ ಪ್ರಕಟವಾಯಿತೆ? ಶಿವಶಿವಾ! ಹರಿ/ ಕೃಷ್ಣನು ಸರ್ವಂಗತನು/ ಎಲ್ಲಾಕಡೆ ಇರುವನು ಎನ್ನುವುದು ಅಹುದು/ ನಿಜ, ಎಂದನು ಆ ಅಶ್ವತ್ಥಾಮ.
ಏಳು ಕುರುಪತಿ ಪಾಂಡುನಂದನ
ರಾಳು ಬರುತಿದೆ ನಾವು ನಾಲ್ವರು
ಕಾಳೆಗದೊಳಂಘೈಸುವೆವು ಬಿಡುಬಿಡು ಸರೋವರವ |
ಹೇಳು ಮನವೇನೆನಲು ನೀವಿ
ನ್ನೇಳಿ ದೂರದಲಿರಿ ವಿರೋಧಿಗ
ಳಾಳು ಮಾಡುವುದೇನು ಸಲಿಲದೊಳೆಂದನಾ ಭೂಪ || ೫೭ ||
ಪದವಿಭಾಗ-ಅರ್ಥ: ಏಳು ಕುರುಪತಿ ಪಾಂಡುನಂದನರ+ ಆಳು(ಸೇನೆ) ಬರುತಿದೆ, ನಾವು ನಾಲ್ವರು ಕಾಳೆಗದೊಳು+ ಅಂಘೈಸುವೆವು(ಎದುರಿಸುವೆವು) ಬಿಡುಬಿಡು ಸರೋವರವ, ಹೇಳು ಮನವ+ ಏನು+ ಎನಲು; ನೀವು+ ಇನ್ನು+ ಏಳಿ ದೂರದಲಿ+ ಇರಿ ವಿರೋಧಿಗಳ+ ಆಳು ಮಾಡುವುದೇನು ಸಲಿಲದೊಳು+ ಎಂದನು+ ಆ ಭೂಪ
ಅರ್ಥ:ಆಗ ಕೃಪಾದಿಗಳು ಸರೋವರಕ್ಕೆ ಓಡಿಬಂದು,'ಕುರುಪತಿಯೇ ಏಳು! ಪಾಂಡುವರ ಸೇನೆ ಬರುತ್ತಿದೆ. ನಾವು ನಾಲ್ವರು ಕಾಳೆಗದಲ್ಲಿ ನಿನ್ನೊಡನೆ ನಿಂತು ಎದುರಿಸುವೆವು. ಬಿಡುಬಿಡು ಸರೋವರವನ್ನು! ರಾಜಾ, ನಿನ್ನ ಮನಸ್ಸಿನಲ್ಲಿ ಏನಿದೆ ಹೇಳು. ಎನ್ನಲು,ಕೌರವನು ನೀವು ಹೇಳಿದ್ದು ಆಯಿತು, ನಾನು ಹೊರಗೆ ಬುವುದಿಲ್ಲ. ಇನ್ನು ನೀವು ಇಲ್ಲಿಂದ ಏಳಿ- ಹೋಗಿ; ದೂರದಲ್ಲಿ ಇರಿ. ವಿರೋಧಿಗಳ ಸೇನೆ ಇಲ್ಲಗೆ ಬಂದು ಸರೋವರದಲ್ಲಿ ಮಾಡುವುದೇನು?' ಎಂದನು ಆ ಕೌರವ ಭೂಪ.
ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹೆನೇ ತನ್ನನರಿಯಿರಲಾ |
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ || ೫೮ ||
ಪದವಿಭಾಗ-ಅರ್ಥ: ಅನಿಮಿಷರು(ದೇವತೆಗಳು- ಕಣ್ಣುಮಿಟುಕಿಸದವರು) ಗಂಧರ್ವ ಯಕ್ಷರು ಮುನಿದು ಮಾಡುವುದೇನು, ಮಾಯದ(ಮೋಸಮಾಡುವ) ಮನುಜರಿಗೆ ತಾ ಸಾಧ್ಯವಹೆನೇ, ತನ್ನನು+ ಅರಿಯಿರಲಾ ವಿನುತ ಸಲಿಲಸ್ತಂಭವಿದ್ಯೆಯೊಳು (ಶ್ರೇಷ್ಠವಾದ ಜಲಸ್ತಂಭ ವಿದ್ಯೆಯಲ್ಲಿ)+ ಎನಗೆ+ ಇರವು ಪಾತಾಳದಲಿ, ಯಮತನುಜನ+ ಏಗುವ ರೂಹು+ ದ+ ತೋರದೆ ಹೋಗಿ ನೀವು+ ಎಂದ.
ಅರ್ಥ: ಕೌರವನು ಅಶ್ವತ್ಥಾಮ ಮತ್ತು ಇತರರನ್ನು ಕುರಿತು, ,ದೇವತೆಗಳು, ಗಂಧರ್ವರು, ಯಕ್ಷರು, ಕೋಪಗೊಂಡರೂ ನನಗೆ ಏನು ಮಾಡುವರು? ಏನೂ ಮಾಡಲಾರರು. ಅಲ್ಪರಾದ ಮೋಸಮಾಡುವ ಮನುಷ್ಯರಿಗೆ ತಾನು ಸಾಧ್ಯವಾಗುವೆನೇ? ನೀರಿನಲ್ಲಿ ಇರುವುದರಿಂದ ತನ್ನನ್ನು ಎದುರಿಸಲು ಸಾಧ್ಯವಿಲ್ಲ. ತನ್ನನು,- ತನ್ನ ಶಕ್ತಿಯನ್ನು ಅರಿಯಿರಲಾ! ಅದನ್ನು ಅರ್ಥಮಾಡಿಕೊಳ್ಳಿ. ಶ್ರೇಷ್ಠವಾದ ಜಲಸ್ತಂಭ ವಿದ್ಯೆಯಲ್ಲಿ ತನಗೆ ಸ್ಥಾನವು ಪಾತಾಳದಲ್ಲಿ. ತಾನು ಇರುವುದು ಅಷ್ಟು ಆಳವಾದ ನೀರನಲ್ಲಿ. ಅಲ್ಲಿಗೆ ಯಾರೂ ಬರಲಾರರು. ಧರ್ಮಜನು ನನ್ನನ್ನು ಸಂಬಾಳಿಸುವುದಕ್ಕೆ, ನನ್ನ ಮತ್ತು ನಿಮ್ಮ ಗರುತು ತೋರದಂತೆ ಇಲ್ಲಿಂದ ನೀವು ಹೊರಟುಹೋಗಿ ಎಂದ.
ಉರವಣಿಸಿತರಿಸೇನೆ ಮುತ್ತಿತು
ಸರಸಿಯನು ವೇಢೆಯಲಿ ಗಿಡುಮೆಳೆ
ತರುಲತೆಯಲೊಳಕೊಂಡು ನಿಂದುದು ಚತುರಚತುರಂಗ |
ನರರ ಗರ್ಜನೆ ವಾದ್ಯರವ ಕರಿ
ತುರಗ ರಥ ನಿರ್ಘೋಷ ಪರ್ವತ
ಬಿರಿಯೆ ಮೊಳಗಿತು ಸಿಲುಕಿದನು ಸಿಲುಕಿದನು ಹಗೆಯೆನುತ || ೫೯ ||
ಪದವಿಭಾಗ-ಅರ್ಥ: ಉರವಣಿಸಿತು+ ಅರಿಸೇನೆ ಮುತ್ತಿತು ಸರಸಿಯನು ವೇಢೆಯಲಿ(1. ಬೇಲಿ. 2. ಪೇಟ. ಸುತ್ತುವರಿದು), ಗಿಡು ಮೆಳೆ ತರುಲತೆಯಲಿ(ಮರ ಬಳ್ಳಿ)+ ಒಳಕೊಂಡು ನಿಂದುದು ಚತುರ ಚತುರಂಗ; ನರರ ಗರ್ಜನೆ, ವಾದ್ಯರವ,(ರವ= ಸದ್ದು) ಕರಿ ತುರಗ ರಥ ನಿರ್ಘೋಷ(ದೊಡ್ಡ ಸದ್ದು), ಪರ್ವತ ಬಿರಿಯೆ ಮೊಳಗಿತು, ಸಿಲುಕಿದನು ಸಿಲುಕಿದನು ಹಗೆಯೆನುತ(ಸಿಲುಕಿದನು= ಸಿಕ್ಕಿದನು; ಹಗೆ= ಶತ್ರು).
ಅರ್ಥ: ಕೌರವನ ಶತ್ರುವಾದ ಪಾಂಡವರ ಸೇನೆ ಪರಾಕ್ರಮದಿಂದ ನುಗ್ಗಿ ಸರೋವರವನ್ನು ಬೇಲಿಯಂತೆ ಸುತ್ತುಹಾಕಿ ಮುತ್ತಿತು. ಚತುರ ಚತುರಂಗ ಸೇನೆಯು ಗಿಡ, ಮೆಳೆ- ಪೊದೆ ಮರಬಳ್ಳಿಗಳನ್ನು ಒಳಕೊಂಡು ನಿಂತಿತು. ಜನರ ಗರ್ಜನೆ, ವಾದ್ಯದ ದೊಡ್ಡ ಸದ್ದು, ಆನೆ ಕುದುರೆ ರಥಗಳ ಚಲನೆಯ ಆರ್ಬಟದ ಸದ್ದು ಪರ್ವತವೇ ಬಿರಿಯುವಂತೆ ಮೊಳಗಿತು. ವಾದ್ಯಘೋಷಗಳು- 'ಸಿಲುಕಿದನು ಸಿಲುಕಿದನು ಹಗೆ.' ಎನ್ನುತ್ತಾ(ಎನ್ನುವಂತೆ) ಮೊಳಗಿದವು.
ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ |
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ || ೬೦ ||
ಪದವಿಭಾಗ-ಅರ್ಥ: ಇವರು ತಿರುಗಿದರಿನ್ನು ದೈವ ವ್ಯವಸಿತವೆ (ನಿಯಮವೆ) ಫಲಿಸುವುದಲಾ ಕೌರವನ ಸಿರಿ ಪಣ್ಯಾಂಗನಾ ವಿಭ್ರಮವ ವರಿಸಿತಲಾ (ವರಿಸಿದಳು,; ಲಕ್ಷ್ಮಿ ಚಂಚಲಳು- ಇವರನ್ನು ಬಿಟ್ಟು ಅವರ ಬಳಿ ಹೋದಳು) ಅವರಿಗೆ+ ಇದನು+ ಆರು+ ಆರುಹಿದರೊ, ಪಾಂಡವರಿಗೆ+ ಆವುದು ಕೊರತೆ ಪುಣ್ಯಪ್ರವರ ಗದುಗಿನ ವೀರನಾರಾಯಣನ ಕರುಣದಲಿ
  • (ವಿಭ್ರಮ= 1. ಅಲೆದಾಟ.- (ಚಂಚಲತೆ) 2. ಭ್ರಮೆ. 3. ವಿನೋದ. 4. ಅಂದ. 5. ಬೆಡಗು. 6. ವಿಜೃಂಭಣೆ. /ಸ್ಮೃತಿವಿಭ್ರಮ (ನಾ) ನೆನಪಿನ ಶಕ್ತಿ ಇಲ್ಲವಾಗುವುದು.)
  • (ಪುಣ್ಯ- ಪ್ರವರ= 1. ವೃದ್ಧಿಪಡಿಸುವ. 2. ಬೆಳೆಯುವ ವಂಶದ ಮೂಲ ಪುರುಷ)
ಅರ್ಥ: ಇವರು - ಈ ಪಾಂಡವರು ಕಾಡುಮೇಡು ತಿರುಗಿದರು. ಇನ್ನು ದೈವ ನಿಯಮವೆ ಫಲಿಸುವುದಲ್ಲವೇ! ಕೌರವನ ಸಿರಿ ಸಂಪತ್ತಿನ ರಾಜಲಕ್ಷ್ಮಿಯು ಚಂಚಲತೆಯನ್ನು ವರಿಸಿತಲಾ! ಬಿಟ್ಟುಹೋದಳಲ್ಲಾ. ಕೌರವರಿಗೆ ಇದನ್ನು ಯಾರು ತಿಳಿಸಿದರೊ? ಯಾರೂ ತಿಳಿಸಲಿಲ್ಲ. ಪುಣ್ಯಪ್ರವರ ಗದುಗಿನ ವೀರನಾರಾಯಣನ ಕರುಣದಲ್ಲಿರುವ ಪಾಂಡವರಿಗೆ ಯಾವುದು ಕೊರತೆ. ಯಾವ ಕೊರತೆಯೂ ಇಲ್ಲ.
♠♠♠

ಸಂಧಿಗಳು

ಸಂಪಾದಿಸಿ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.