ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೭)

<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೭ ನೆಯ ಸಂಧಿ

ಸಂಪಾದಿಸಿ
ಸೂಚನೆ~
ರಾಯ ಭಾರತ ವೀರರಾಯನು
ರಾಯ ವನದಾವಾನಳನು ಕಲಿ
ವಾಯುತನುಜನ ಹಳಚಿ ಮಡಿದನು ಕೌರವರ ರಾಯ ||ಸೂ.||

ಪದವಿಭಾಗ-ಅರ್ಥ:ರಾಯ ಭಾರತ ವೀರರಾಯನು ರಾಯ ವನದಾವಾನಳನು(ವನಕ್ಕೆ ದಾವಾನಲ= ಕಾಡುಕಿಚ್ಚು) ಕಲಿವಾಯುತನುಜನ(ವಾಯುತನುಜ= ಭೀಮನ ಮಗ) ಹಳಚಿ (ಹಳಚು= ಒಡ್ಡು,ಎದುರಿಸು,)ಮಡಿದನು ಕೌರವರ ರಾಯ
ಅರ್ಥ: ಕುರುರಾಯನೂ ಭಾರತಕಥೆಯ ವೀರರಾಯನೂ ಆದ ಕೌರವನು, ಕುರುಕುಲರಾಯರ ವನಕ್ಕೆ ಕಾಡುಕಿಚ್ಚಿನಂತಿರುವ ಶೂರನಾದ ವಾಯುತನುಜ ಭೀಮನನ್ನು ಎದುರಿಸಿ ಕೌರವರ ರಾಯನು ಮಡಿದನು- ಮರಣಹೊಂದಿದನು.[][]

ಭೀಮ ದುರ್ಯೋಧನರ ಯುದ್ಧ

ಸಂಪಾದಿಸಿ
ಕೇಳು ಧೃತರಾಷ್ಟ್ರಾವನಿಪ ಕೈ
ಮೇಳವಿಸಿದರು ವಿಷಮ ಸಮರಕ
ರಾಳರೋಷಶ್ವಾಸಧೂಮಳಮುಖಭಯಂಕರರು |
ಚಾಳನದ ಚೌಪಟರು ಶಸ್ತ್ರಾ
ಸ್ಫಾಳನದ ವಜ್ರಾಭಿಘಾತಾ
ಭೀಳನಿಷ್ಠುರರೊದಗಿದರು ಕೌರವ ವೃಕೋದರರು || ೧ ||
ಪದವಿಭಾಗ-ಅರ್ಥ: ಕೇಳು ಧೃತರಾಷ್ಟ್ರ+ ಅವನಿಪ ಕೈಮೇಳವಿಸಿದರು(ಕ್ರಿ.) ವಿಷಮ ಸಮರ ಕರಾಳ ರೋಷ+ ಅಶ್ವಾಸ ಧೂಮಳಮುಖ ಭಯಂಕರರು ಚಾಳನದ ಚೌಪಟರು ಶಸ್ತ್ರ+ ಅಸ್ಫಾಳನದ ವಜ್ರಾಭಿಘಾತ+ ಅಭೀಳ ನಿಷ್ಠುರರು+ ಒದಗಿದರು ಕೌರವ ವೃಕೋದರರು.
  • ಕೇಳು ಧೃತರಾಷ್ಟ್ರ+ ಅವನಿಪ, ಕೈಮೇಳವಿಸಿದರು ->(ಯುದ್ಧಕ್ಕೆ ತೊಡಗಿದರು.) ವಿಷಮ(ಅಸಾಧಾರಣವಾದ, ಅಸಮಾನರಾದ) ಸಮರ ಕರಾಳ (ಘೋರ,), ರೋಷ+ ಅಶ್ವಾಸ ಧೂಮಳಮುಖ(ದುಗುಡತುಂಬಿದ, ಸಿಟ್ಟಿನ ಮುಖದ) ಭಯಂಕರರು ಚಾಳನದ(ಚಾಲನ, ಚಲನ) ಚೌಪಟರು ಶಸ್ತ್ರಾಸ್ಫಾಳನದ(ಶಸ್ತ್ರ+ ಆಸ್ಪಾಳನ= ಬಡಿಯುವುದು ) ವಜ್ರಾಭಿಘಾತ+ ಅಭೀಳ ನಿಷ್ಠುರರು+ ಒದಗಿದರು(ಒದಗಿ = ಸೇರಿ) ಕೌರವ ವೃಕೋದರರು.
ಅರ್ಥ:ಸಂಜಯ ಹೇಳಿದ, ಧೃತರಾಷ್ಟ್ರ ಅವನಿಪನೇ ಕೇಳು, 'ಅಸಾಧಾರಣವಾದ ಸಮರದಲ್ಲಿ ಗೋರವಾದ ರೋಷದಿಂದ ಉಸುರುಬಿಡುತ್ತಿರುವ ಉಗ್ರಮುಖದ ಭಯಂಕರರು ಮತ್ತು ಚಲನೆಯ ತಂತ್ರದಲ್ಲಿ ಚೌಪಟರು/ಜಾಣರು, ಆಯುಧ ಪ್ರಯೋಗದಲ್ಲಿ ವಜ್ರಾಭಿಘಾತಗಳ ಹೊಡೆತದಲ್ಲಿ, ಅಭೀಷ್ಟಸಿದ್ಧಿಯಲ್ಲಿ, ನಿಷ್ಠರಾದವರು ರಣರಂಗದಲ್ಲಿ ಕೌರವ ವೃಕೋದರರು ಸೇರಿ ಯುದ್ಧಕ್ಕೆ ತೊಡಗಿದರು.
ಹಳಚಿದರು ಸುಳಿ ಘಾಳಿಯಂತಿರೆ
ಸುಳಿದು ಖಗಪತಿಯಂತೆ ಹೊಯ್ಲಲಿ
ಬಳಸಿ ಬಿಗಿದೆರಗಿದರು ಬಿಡೆಯದ ಮತ್ತಗಜದಂತೆ ||
ಅಳುವಿದರು ಶಿಖಿಯಂತೆ ಚೂರಿಸಿ
ನಿಲುಕಿದರು ಫಣಿಯಂತೆ ಪಯಮೈ
ಲುಳಿಯಲೊಲೆದರು ಪಾದರಸದಂದದಲಿ ಪಟುಭಟರು || ೨ ||
ಪದವಿಭಾಗ-ಅರ್ಥ: ಹಳಚಿದರು ಸುಳಿ ಘಾಳಿಯಂತಿರೆ ಸುಳಿದು ಖಗಪತಿಯಂತೆ ಹೊಯ್ಲಲಿ ಬಳಸಿ ಬಿಗಿದು+ ಎರಗಿದರು ಬಿಡೆಯದ ಮತ್ತಗಜದಂತೆ ಅಳುವಿದರು ಶಿಖಿಯಂತೆ ಚೂರಿಸಿ ನಿಲುಕಿದರು ಫಣಿಯಂತೆ ಪಯ ಮೈ ಲುಳಿಯಲಿ+ ಒಲೆದರು ಪಾದರಸದ+ ಅಂದದಲಿ ಪಟುಭಟರು.
  • ಹಳಚಿದರು(ಹಳಚಿಕೆ= ಮೆರುಗು,ಹೊಳಪು,ಹೊಗರು) ಸುಳಿ ಘಾಳಿಯಂತಿರೆ(ಸುಳಿಗಾಳಿ= ಸುಂಟರಗಾಳಿ) ಸುಳಿದು ಖಗಪತಿಯಂತೆ(ಖಗಪತಿ= ಖಗಪ,ಪಕ್ಷಿಗಳ ಒಡೆಯ,ಗರುಡ) ಹೊಯ್ಲಲಿ(ಹೊಯ್ಲು, ಕೂಗು, ಹೊಡೆತ, ಗುದಿಗೆ ಗುದಿಗೆ ಹೊಯ್ಲು; ಕಬ್ಬಿಣದ ಕಟ್ಟು ಹಾಕಿದ ಗುದಿಗೆ, ಗದೆ) ಬಳಸಿ ಬಿಗಿದು+ ಎರಗಿದರು ಬಿಡೆಯದ(ಬಿಡೆಯ= ಬಿಡುವುದು , ಮುಂದೆನಡೆಸುವುದು - ಬಿಡಿ= ಒಂಟಿ,ಪ್ರತ್ಯೇಕವಾದ,(ಸಿರಿಗನ್ನಡ ಅರ್ಥಕೋಶ)) ಮತ್ತಗಜದಂತೆ ಅಳುವಿದರು(ಅಲವು= ಶಕ್ತಿ) ಶಿಖಿಯಂತೆ ಚೂರಿಸಿ (ಚೂರಿಸು= ನಾಶಮಾಡು;ಪೀಡಿಸು;ತಿವಿ;ಚಾಚು; ನೀಡು) ನಿಲುಕಿದರು ಫಣಿಯಂತೆ (ಸರ್ಪದಂತೆ) ಪಯ(=1. ಹೆಜ್ಜೆ. 2. ಕಾಲು)ಮೈ ಲುಳಿಯಲಿ (ಲುಳಿ= 1. ರಭಸ. 2. ಕಾಂತಿ. 3. ಚುರುಕು.)+ ಒಲೆದರು ಪಾದರಸದ+ ಅಂದದಲಿ ಪಟುಭಟರು
ಅರ್ಥ:ಪಟುಭಟರಾದ ಭೀಮ ದುರ್ಯೋಧನರು, ಮೆರುಗಿನಿಂದ, ಸುಂಟರಗಾಳಿಯಂತೆ ಸುಳಿದು ಗರುಡನ ಹೊದೆತದಂತೆ ಬಳಸಿ ಬಿಗಿದು ಒಬ್ಬರ ಮೇಲೆ ಒಬ್ಬರು ಎರಗಿದರು/ಆಕ್ರಮಿಸಿದರು. ಬಿಡುವುದು ಮುಂದೆನಡೆಸುವುದು ಮತ್ತಗಜದಂತೆ ಶಕ್ತಿ ತೋರಿದರು. ಅಗ್ನಿಯಂತೆ ಪೀಡಿಸಿದರು. ಸರ್ಪದಂತೆ ನಿರೀಕ್ಷಿಸಿದರು. ಪಾದರಸದಂತೆ ರಭಸದಲ್ಲಿ ನುಗ್ಗಿ ಹೆಜ್ಜೆಯಿಟ್ಟು ಎಚ್ಚರಿಕೆಯಿಂದ ಒಲೆದರು.
ಎರಗಿದರು ಸಿಡಿಲಂತೆ ಮಿಂಚಿನ
ಮಿರುಗಿನಂತಿರೆ ಹೊಳೆದು ಹಜ್ಜೆಯ
ಹೆರದೆಗೆದು ಹಾಯಿದರು ತಗರಂದದಲಿ ತವಕದಲಿ |
ಇರುಕಿದರು ಗ್ರಹದಂತೆ ಮಿಗೆ ಮು
ಕ್ಕುರುಕಿದರು ಮುಗಿಲಂತೆ ರೋಷಕೆ
ನೆರೆಯದಿಬ್ಬರ ಮನವೆನಲು ಹೊಯ್ದಾಡಿದರು ಭಟರು || ೩ ||
ಪದವಿಭಾಗ-ಅರ್ಥ:ಎರಗಿದರು ಸಿಡಿಲಂತೆ ಮಿಂಚಿನ ಮಿರುಗಿನಂತಿರೆ ಹೊಳೆದು ಹಜ್ಜೆಯ ಹೆರದೆಗೆದು (ಹೆರದೆಗೆ ಹಿಂದೆಸರಿ, ಹಿಮ್ಮೆಟ್ಟು) ಹಾಯಿದರು ತಗರಂದದಲಿ (ಟಗರು) ತವಕದಲಿ ಇರುಕಿದರು ( ಅದುಮು,ಅಮುಕು, ಒತ್ತು) ಗ್ರಹದಂತೆ ಮಿಗೆ (ಗ್ರಹ ಉಚ್ಛಸ್ಥಾನ ಹೊಂದಿದಾಗ ಪ್ರಬಲ, - ಪ್ರಬಲರಾಗಿ) ಮುಕ್ಕಿ+ ಉರುಕಿದರು (ಉರುಕು= ಬೀಳುವುದು) ಮುಗಿಲಂತೆ ರೋಷಕೆ ನೆರೆಯದು (ನೆರೆ= ನಿಯಂತ್ರಣ) + ಇಬ್ಬರ ಮನವು+ ಎನಲು ಹೊಯ್ದಾಡಿದರು ಭಟರು
ಅರ್ಥ: ಭೀಮ ದುರ್ಯೋಧನರು, ಒಬ್ಬರ ಮೇಲೆ ಒಬ್ಬರು ಸಿಡಿಲಂತೆ ಎರಗಿದರು- ಮೇಲೆ ಬಿದ್ದರು. ಮಿಂಚಿನ ಮಿರುಗಿನಹಾಗೆ ಪ್ರಕಾಶದಿಂದ ಇರಲು ಹೊಳೆದು, ಹಜ್ಜೆಯನ್ನು ಹಿಂದಕ್ಕಿಟ್ಟು ಮತ್ತೆ ಟಗರಿನಂತೆ ನುಗ್ಗಿ ಹಾಯ್ದರು. ಅವರು ತವಕದಿಂದ ಒಬ್ಬರನ್ನೊಬ್ಬರು ಅಮುಕಿದರು. ಗ್ರಹದಂತೆ ಪ್ರಬಲರಾಗಿ ಮೇಲೆ ಬಿದ್ದರು. ಸಿಡಿಲುಗುಡುಗಿನ ಆರ್ಭಟದ ಮುಗಿಲಂತೆ ಇಬ್ಬರ ಮನಸ್ಸೂ ರೋಷಕ್ಕೆ ಮಿತಿಯಿಲ್ಲ ಎನ್ನುವಂತೆ ಇಬ್ಬರೂ ಭಟರು ಹೊದೆದಾಡಿದರು.
ಗದೆಗದೆಯ ಹೊಯ್ಲುಗಳ ಖಣಿಖಟಿ
ಲೊದಗಿತಿಬ್ಬರ ಬೊಬ್ಬೆ ಭುವನವ
ಬೆದರಿಸಿತು ಪದಥಟ್ಟಣೆಯ ಘಟ್ಟಣೆಯ ಘಾತಿಯಲಿ |
ಅದಿರಿತಿಳೆ ಮಝ ಭಾಪು ಭಟರೆಂ
ದೊದರಿತಾ ಪರಿವಾರದಬ್ಬರ
ತ್ರಿದಶನಿಕರದ ಸಾಧುರವವಂಜಿಸಿತು ಮೂಜಗವ || ೪ ||
ಪದವಿಭಾಗ-ಅರ್ಥ: ಗದೆಗದೆಯ ಹೊಯ್ಲುಗಳ ಖಣಿಖಟಿಲು+ ಒದಗಿತು (ಉಂಟಾಯಿತು)+ ಇಬ್ಬರ ಬೊಬ್ಬೆ ಭುವನವ ಬೆದರಿಸಿತು ಪದ+ ಥಟ್ಟಣೆಯ ಘಟ್ಟಣೆಯ ಘಾತಿಯಲಿ(ಹೊಡೆತದ ಪಟ್ಟಿನಿಂದ) ಅದಿರಿತು+ ಇಳೆ(ಭೂಮಿ) ಮಝ ಭಾಪು ಭಟರೆಂದು+ ಒದರಿತು ಆ ಪರಿವಾರದ+ ಅಬ್ಬರ (ಗಲಾಟೆ- ಆರ್ಭಟ) ತ್ರಿದಶ (ಮೂವತ್ತು) ನಿಕರದ(ಸಮೂಹ) ಸಾಧುರವವ+ ಅಂಜಿಸಿತು ಮೂಜಗವ
ಅರ್ಥ:ಭೀಮ ದುರ್ಯೋಧನರ ಗದೆಗದೆಯ ಹೊಡೆತಗಳ ಖಣಿಖಟಿಲು ಸದ್ದು ಅಲ್ಲಿ ಉಂಟಾಯಿತು. ಮತ್ತು ಇಬ್ಬರ ಬೊಬ್ಬೆ ಭುವನವನು/ ಭೂಮಿಯನ್ನು ಬೆದರಿಸಿತು. ಅವರ ಪಾದಗಳ ನೆಲ್ಲಕೆ ಬಡಿದ ಘಟ್ಟಣೆಯ/ಹೊಡೆತದ ಪಟ್ಟಿನಿಂದ ಭೂಮಿ ನುಗಿತು. ನೋಡುತ್ತಿದ್ದ ಆ ಪರಿವಾರದವರು "ಮಝ ಭಾಪು ಭಟರೇ!" ಎಂದು ಕೂಗಿತು. ಅವರ ಅಬ್ಬರ ಮೂವತ್ತು ಸಾಧುಗಳ ಮಂತ್ರಘೋಷಕ್ಕೂ ಮಿಗಿಲಾಗಿ ಎಲ್ಲರನ್ನೂ, ಮೂರು ಜಗತ್ತನ್ನೂ ಅಂಜಿಸಿತು.
ಬೆರಳ ತೂಗಿದನಡಿಗಡಿಗೆ ಹಲ
ಧರನುದಗ್ರಗದಾ ವಿಧಾನಕೆ
ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು |
ವರ ಗದಾಯುಧ ವಿವಿಧ ಸತ್ವಕೆ
ಪರಮಜೀವವಿದೆಂದನರ್ಜುನ
ನರರೆ ಮಝರೇ ರಾವು ಜಾಗೆಂದುದು ಭಟವ್ರಾತ || ೫ ||
ಪದವಿಭಾಗ-ಅರ್ಥ: ಬೆರಳ ತೂಗಿದನು+ ಅಡಿಗಡಿಗೆ(ಮತ್ತೆ ಮತ್ತೆ) ಹಲಧರನು(ನೇಗಿಲ ಧರ -ಹಿಡಿದವನು);+ ಉದಗ್ರ(ಶ್ರೇಷ್ಠವಾದ) ಗದಾ ವಿಧಾನಕೆ, ಶಿರವನು+ ಒಲೆದನು ಶೌರಿ, ಮಿಗೆ ಮೆಚ್ಚಿದನು ಯಮಸೂನು, ವರ ಗದಾಯುಧ ವಿವಿಧ ಸತ್ವಕೆ, ಪರಮಜೀವವು(ಶ್ರೇಷ್ಠ ವ್ಯಕ್ತಿಗಳು, ಪುರುಷರು?) ಇದು+ ಎಂದನು+ ಅರ್ಜುನನು+ ಅರರೆ ಮಝರೇ ರಾವು ಜಾಗ್ ಎಂದುದು ಭಟವ್ರಾತ (ಭಟರ ಸಮೂಹ).
ಅರ್ಥ:ಭೀಮ ದುರ್ಯೋದನರ ಹೋರಾಟವನ್ನು ನೋಡುತ್ತಿದ್ದ ಹಲಧರ ಬಲರಾಮನು ಮೆಚ್ಚಿ ಅಡಿಗಡಿಗೆ ಬೆರಳ ತೂಗಿದನು. ಕೃಷ್ಣನು ಶ್ರೇಷ್ಠವಾದ ಗದಾ ವಿಧಾನಕ್ಕೆ ತಲೆದೂಗಿದನು. ಯಮಸೂನು ಯುಧಿಷ್ಠಿರನು ಗದಾಯುಧ ವಿವಿಧ ಸತ್ವಕ್ಕೆ ಬಹಳ ಮೆಚ್ಚಿದನು. ಅರ್ಜುನನು, 'ಶ್ರೇಷ್ಠ ಪುರುಷರು ಇವರು' ಎಂದನು. ನೋಡುತ್ತಿದ್ದ ಭಟರ ಸಮೂಹ 'ಅರರೆ ಮಝರೇ ರಾವು ಜಾಗ್' ಎಂದಿತು.
ತಿವಿದನವನಿಪನನಿಲತನುಜನ
ಕವಚ ಬಿರಿದುದು ಕಯ್ಯೊಡನೆ ರಣ
ದವಕಿ ಕೈದೋರಿದನು ಕೌರವನೃಪನ ವಕ್ಷದಲಿ |
ಸವಗ ಸೀಳಿತು ಮರಳಿ ಹೊಯ್ದನು
ಪವನಜನ ಸೀಸಕದ ವರಮಣಿ
ನಿವಹ ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ || ೬ ||
ಪದವಿಭಾಗ-ಅರ್ಥ: ತಿವಿದನು+ ಅವನಿಪನು+ ಅನಿಲತನುಜನ, ಕವಚ ಬಿರಿದುದು, ಕಯ್ಯೊಡನೆ ರಣದ+ ಅವಕಿ ಕೈದೋರಿದನು, ಕೌರವನೃಪನ ವಕ್ಷದಲಿ(ವಕ್ಷ- ಎದೆ) ಸವಗ ( ಕವಚ)ಸೀಳಿತು ಮರಳಿ ಹೊಯ್ದನು ಪವನಜನ ಸೀಸಕದ(ಕವಚ) ವರಮಣಿ ನಿವಹ (ಸಮೂಹ) ಸಿಡಿದವು ಸಿಡಿಲು ಮೆಟ್ಟಿದ ಮೇರುಗಿರಿಯಂತೆ.
ಅರ್ಥ: ಅವನಿಪ ಕೌರವನು ಅನಿಲತನುಜನಾದ ಭೀಮನನ್ನು ತಿವಿದನು. ಅವನ ಕವಚ ಬಿರಿಯಿತು. ಆಗ ಅವನು ಕಯ್ಯೊಡನೆ ಯುದ್ಧದಲ್ಲಿ ಅವಕಿ/ ಒತ್ತಿ ಪರಾಕ್ರಮವನ್ನು ತೋರಿದನು, ಆಗ ಕೌರವನೃಪನ ವಕ್ಷ/ ಎದೆಯ ಕವಚ ಸೀಳಿತು. ಆಗ ಕೌರವನು ಪುನಃ ತಿರುಗಿ ಭೀಮನಿಗೆ ಹೊಡೆದನು. ಆಗ ಪವನಜನ ಸೀಸಕದ ವರಮಣಿಗಳ ರಾಶಿ ಸಿಡಿಲು ಬಡಿದ ಮೇರುಗಿರಿಯ ಹಾಗೆ ಸಿಡಿದವು.
ಅಡಿಗಡಿಗೆ ಕರ್ಪುರದ ಕವಳವ
ನಡಸಿದರು ತಾಳಿಗೆಗೆ ಬಳಿಕಡಿ
ಗಡಿಗೆ ಹೆರಸಾರಿದರು ಸಮರಶ್ರಮನಿವಾರಣಕೆ
ಕಡುಹು ತಳಿತುದು ಪೂತು ಫಲವಾ
ಯ್ತಡಿಗಡಿಗೆ ಮಚ್ಚರದ ಮಸಕದ
ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ ೭
ಪದವಿಭಾಗ-ಅರ್ಥ: ಅಡಿಗಡಿಗೆ(ಪದೇ ಪದೇ) ಕರ್ಪುರದ ಕವಳವ ನಡಸಿದರು, ತಾಳಿಗೆಗೆ(ತಾಲು ಅಂಗುಳು,ಬಾಯಿಯ ಅಟ್ಟ ಪ್ರದೇಶ ) ಬಳಿಕ+ ಅಡಿಗಡಿಗೆ ಹೆರಸಾರಿದರು ಸಮರಶ್ರಮ ನಿವಾರಣಕೆ, ಕಡುಹು (ಗುಳಿಗೆ) ತಳಿತುದು(ತಳಿ, ತಿಳಿ, ) ಪೂತು ಫಲವಾಯ್ತು+ ಅಡಿಗಡಿಗೆ ಮಚ್ಚರದ ಮಸಕದ(ಕೋಪೋದ್ರೇಕ,ರೋಷ) ತಡಿಕೆವಲೆ (ಹತೋಟಿ, ದಾತಿ ಹೋಗದಂತೆ ತಡಿಕೆ ಬಲೆ, ಬೇಲಿ-ಮನಸ್ಸಿನ ಹತೋಟಿಯ ಬೇಲಿ - ಮುರಿಯಿತು) ನುಗ್ಗಾಯ್ತು ಮನ ಕುರುಪತಿಯ ಪವನಜನ
ಅರ್ಥ: ಭೀಮ ದುರ್ಯೋಧನರು ಪದೇ ಪದೇ ಬಾಯಿಗೆ ಕರ್ಪುರದ ಕವಳವನ್ನು ಮೆದ್ದರು. ಬಳಿಕ ಅಡಿಗಡಿಗೆ ಯುದ್ಧದ ಶ್ರಮ ನಿವಾರಣೆಗಾಗಿ ರಣದಿಂದ ಹೊರಕ್ಕೆ ಹೋದರು. ಮತ್ತೆ ಮತ್ತೆ ಗುಳಿಗೆಗಳನ್ನು ಪಡೆದರು, ಪೂತು ಫಲಗಳನ್ನು ತಿಂದರು. ಅಡಿಗಡಿಗೆ ಮತ್ಸರದ ಕೋಪೋದ್ರೇಕ,ರೋಷದಲ್ಲಿ ರಣರಂಗದಲ್ಲಿ ಕುರುಪತಿಯ ಮತ್ತು ಪವನಜನ ಮನಸ್ಸಿನ ಹತೋಟಿ ಹೋಯಿತು.
ಶ್ವಾಸದಲಿ ಕಿಡಿಸಹಿತ ಕರ್ಬೊಗೆ
ಸೂಸಿದವು ಕಣ್ಣಾಲಿಗಳು ಕ
ಟ್ಟಾಸುರದಿ ಕೆಂಪೇರಿದವು ಬಿಗುಹೇರಿ ಹುಬ್ಬುಗಳು |
ರೋಷ ಮಿಗಲೌಡೊತ್ತಿ ಬಹಳಾ
ಭ್ಯಾಸಿಗಳು ಡಾವರಿಸಿದರು ಡೊ
ಳ್ಳಾಸವೋ ರಿಪುಸೇನೆ ಕಾಣದು ಚಿತ್ರಪಯಗತಿಯ || ೮ ||
ಪದವಿಭಾಗ-ಅರ್ಥ: ಶ್ವಾಸದಲಿ ಕಿಡಿಸಹಿತ ಕರ್ಬೊಗೆ ಸೂಸಿದವು(ಹೊರಹೊಮ್ಮಿದವು) ಕಣ್ಣಾಲಿಗಳು ಕಟ್ಟಾ+ ಆಸುರದಿ ಕೆಂಪೇರಿದವು ಬಿಗುಹೇರಿ ಹುಬ್ಬುಗಳು ರೋಷ ಮಿಗಲು+ ಔಡೊತ್ತಿ ಬಹಳ+ ಅಭ್ಯಾಸಿಗಳು ಡಾವರಿಸಿದರು(ಡಾವರಿಸು= ಆರ್ಭಟಿಸು, ಉತ್ಕಟವಾಗಿ ಆಸೆಪಡು) ಡೊಳ್ಳಾಸವೋ (ಡೊಳ್ಳಾಸ= ಅವ್ಯವಹಾರ, ಎಪ್ಪೆ, ಕಪಟ,) ರಿಪುಸೇನೆ ಕಾಣದು ಚಿತ್ರಪಯಗತಿಯ.
ಅರ್ಥ:ಭೀಮ ಮತ್ತು ದುರ್ಯೋದನರ ಶ್ವಾಸದಲ್ಲಿ ಸಿಟ್ಟಿನ ಆವೇಶದಿಂದ ಕಿಡಿಸಹಿತ ಕಪ್ಪು ಹೊಗೆ ಹೊರಹೊಮ್ಮಿದವು. ಕಣ್ಣಾಲಿಗಳು ಕಟ್ಟ ರಾಕ್ಷಸರಂತೆ ಕೆಂಪೇರಿದವು. ಹುಬ್ಬುಗಳು ಬಿಗಿದು ಮೇಲೇರಿ ರೋಷ ಹೆಚ್ಚಲು, ಅವರು ತಮ್ಮ ಔಡನ್ನು ಒತ್ತಿ ಬಹಳ ಶಸ್ತ್ರ ಅಭ್ಯಾಸಿಗಳು ಆರ್ಭಟಿಸುದರು, ಇವರದು ಕಪಟವೋ, ಧರ್ಮಜನ ಸೇನೆ ಇವರ ಚಿತ್ರ- ವಿಚಿತ್ರ ಪಾದಗಳ ಗತಿಯನ್ನು ಕಾಣದಂತಾಯಿತು.
ಹೊಕ್ಕು ಕುರುಪತಿ ಭೀಮಸೇನನ
ನಿಕ್ಕಿದನು ಕಂದದಲಿ ಗದೆಯನು
ಸೆಕ್ಕಿದನು ವಾಮಾಂಗದಲಿ ಪವಮಾನನಂದನನ
ಜಕ್ಕುಲಿಸಿದವೊಲಾಯ್ತು ಜರೆದು ನ
ಭಕ್ಕೆ ಪುಟನೆಗೆದನಿಲಜನ ಸೀ
ಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ ೯
ಪದವಿಭಾಗ-ಅರ್ಥ: ಹೊಕ್ಕು ಕುರುಪತಿ ಭೀಮಸೇನನನು+ ಇಕ್ಕಿದನು(ಇಕ್ಕು= ಹೊಡಿ) ಕಂದದಲಿ(ಕಂದ=ಗಡ್ಡೆ- ತಲೆ? ಕುತ್ತಿಗೆ), ಗದೆಯನು ಸೆಕ್ಕಿದನು ವಾಮಾಂಗದಲಿ(ವಾಮ ಅಂಗದಲ್ಲಿ; ವಾಮ= ಎಡ), ಪವಮಾನನಂದನನ ಜಕ್ಕುಲಿಸಿದವೊಲಾಯ್ತು(ಜಕ್ಕುಲಿಸು= ಕಚಗುಳಿ) ಜರೆದು(ನಿಂದಿಸಿ) ನಭಕ್ಕೆ(ನಭ= ಆಕಾಶ) ಪುಟನೆಗೆದು+ ಅನಿಲಜನ ಸೀಸಕ್ಕೆ ಹೊಯ್ದು+ ಆರಿದನು(ಆರ್ಭಟಿಸಿದನು) ಕೌರವನೃಪತಿ ಖಾತಿಯಲಿ(ಖಾತಿ= ಸಿಟ್ಟು)
ಅರ್ಥ:ಕುರುಪತಿಯು ಹೊಕ್ಕು ಭೀಮಸೇನನ ಕುತ್ತಿಗೆಗೆ ಹೊಡೆದನು. ಅವನು ಭೀಮನ ಎಡಕ್ಕೆ ಗದೆಯಿಂದ ಹೊಡೆದನು. ಪವಮಾನನಂದನಾದ ಭೀಮನನ್ನು ಕಚಗುಳಿಇಟ್ಟಹಾದಾಯಿತು. ಆಗ ಕೌರವನು ಭೀಮನನ್ನು ನಿಂದಿಸಿ ಆಕಾಶಕ್ಕೆ ಪುಟನೆಗೆದು, ಕೌರವನೃಪತಿ ಸಿಟ್ಟಿನಿಂದ ಭೀಮನ ಸೀಸಕದ ಕವಚಕ್ಕೆ ಹೊಡೆದು ಆರ್ಭಟಿಸಿದನು.
ಬಾಯೊಳೊಕ್ಕುದು ರುಧಿರ ಕಂಗಳ
ದಾಯ ತಪ್ಪಿತು ಡೆಂಢಣಿಸಿ ಕಲಿ
ವಾಯುಸುತನಪ್ಪಳಿಸಿ ಬಿದ್ದನು ಕಯ್ಯ ಗದೆ ಕಳಚಿ |
ಹಾಯೆನುತ ತನ್ನವರು ಭಯದಲಿ
ಬಾಯ ಬಿಡೆ ನಿಮಿಷಾರ್ಧದಲಿ ನಿ
ಪಾಯನೆದ್ದನು ನೋಡಿದನು ಚೇತರಿಸಿ ಕೆಲಬಲನ || ೧೦||
ಪದವಿಭಾಗ-ಅರ್ಥ: ಬಾಯೊಳು+ ಒಕ್ಕುದು(ಒಳ್ಕು,ಒೞ್ಕು,ಸುರಿತ,ಸುರಿವು) ರುಧಿರ(ರಕ್ತ) ಕಂಗಳ ದಾಯ ತಪ್ಪಿತು ಡೆಂಢಣಿಸಿ ಕಲಿವಾಯುಸುತನು+ ಅಪ್ಪಳಿಸಿ ಬಿದ್ದನು ಕಯ್ಯ ಗದೆ ಕಳಚಿ ಹಾಯೆನುತ ತನ್ನವರು ಭಯದಲಿ ಬಾಯ ಬಿಡೆ ನಿಮಿಷಾರ್ಧದಲಿ ನಿಪಾಯನೆದ್ದನು ನೋಡಿದನು ಚೇತರಿಸಿ ಕೆಲಬಲನ
ಅರ್ಥ: ಕೌರವನು ಭೀಮನಿಗೆ ಹೊಡೆಯಲು,ಅವನ ಬಾಯಿಯಿಮದ ರಕ್ತ ಉಕ್ಕಿತು. ಕಣ್ಣುಗಳ ದಾಯ/ಸುಸ್ಥಿತಿ ತಪ್ಪಿತು. ಡೆಂಢಣಿಸಿ/ ಒಲೆದಾಡಿ ಶೂರನಾದ ಭೀಮನು ನೆಲಕ್ಕೆ ಅಪ್ಪಳಿಸಿ ಬಿದ್ದನು. ಕಯ್ಯಲ್ಲಿದ್ದ ಗದೆ ಕಳಚಿ ಹಾ! ಯೆನುತ ತನ್ನವರು ಭಯದಿಂದ ಬಾಯಿ ಬಿಡುತ್ತಿರಲು ಅವನು ನಿಮಿಷಾರ್ಧದಲ್ಲಿ ಅಪಾಯ ದಾಟಿದ ನಿಪಾಯ ಭೀಮನು ಎದ್ದನು; ಅವನು ಚೇತರಿಸಿಕೊಂಡು ಅಕ್ಕಪಕ್ಕ ನೋಡಿದನು.
ಹೆದರು ಹಿಂಗಿತು ನೆಲಕೆ ಮಾರು
ದ್ದಿದನು ಕರವನು ಸೂಸಿ ಹಾರಿದ
ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ |
ಅದಿರೆ ನೆಲನವ್ವಳಿಸಿ ಮೇಲ್ವಾ
ಯಿದನು ಹೊಳಹಿನ ಹೊಯ್ಲ ಹೊದ (೧೧
ರೆದ್ದುದು ವಿಭಾಡಿಸಿ ಭೀಮ ಹೊಯ್ದನು ನೃಪನ ಮಸ್ತಕವ || ೧೧ ||
ಪದವಿಭಾಗ-ಅರ್ಥ:ಹೆದರು ಹಿಂಗಿತು ನೆಲಕೆ ಮಾರು+ ಉದ್ದಿದನು ಕರವನು ಸೂಸಿ ಹಾರಿದ ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ ಅದಿರೆ ನೆಲನವ್ವಳಿಸಿ ಮೇಲ್ವಾಯಿದನು ಹೊಳಹಿನ ಹೊಯ್ಲ ಹೊದರು+ ಎದ್ದುದು(ಅವಕಾಶ ನೋಡಿ ಹೊಡೆಯುವ ಅಗತ್ಯ ಬಂದಿತು.) ವಿಭಾಡಿಸಿ (ಆಕ್ರಮಿಸಿ) ಭೀಮ ಹೊಯ್ದನು ನೃಪನ ಮಸ್ತಕವ
ಅರ್ಥ:ಪಾಂಡವರ ಕಡೆಯವಿಗೆ ಭಯ ಇಂಗಿತು. ಭೀಮನು ನೆಲಕ್ಕೆ ಕೈಯನ್ನು ಮಾರುದ್ದ ಉದ್ದಿದನು. ಕೈಯನ್ನು ಬಾಯಿಯಿಂದ ಊದಿ ಧೂಳು ಹಾರಿಸಿ, ಹಾರಿ ಕೆಳಗೆ ಬಿದ್ದದ ಗದೆಯನ್ನು ತೆಗೆದುಕೊಂಡನು. ತನ್ನ ಸೆರಗಿನಲಿ ಶೋಣಿತವ/ ರಕ್ತವನ್ನು ಒರೆಸಿ ಸಂತೈಸಿಕೊಂಡನು/ಸಮಾಧಾನ ಮಾಡಿಕೊಂಡನು. ನೆಲವು ನಡುಗುವಂತೆ ನೆಲವನ್ನು ಕಾಲಿನಿಂದ ಅಪ್ಪಳಿಸಿ ಕೌರವನ ಮೇಲೆ ಆಕ್ರಮಣ ಮಾಡಿದನು. ಭೀಮನಿಗೆ ಅವಕಾಶ ನೋಡಿ ಹೊಡೆಯುವ ಅಗತ್ಯ ಬಂದಿತು. ಆಗ ಮೇಲೆಬಿದ್ದು ಭೀಮನು ಕೌರವ ನೃಪನ ತಲೆಗೆ ಹೊಡೆದನು.
ದೂಟಿ ಬಿದ್ದವು ಸೀಸಕವು ಶತ
ಕೋಟಿ ಘಾಯದ ಘಟನೆಯೊಳು ಶತ
ಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ |
ತಾಟಿತಸು ಕಂಠದಲುಸುರ ಪರಿ
ಪಾಟಿ ತಪ್ಪಿತು ಮೃತ್ಯುವಿನ ದರ
ಚೀಟಿ ಹಿಡಿದನೊ ಹೇಳೆನಲು ಮಲಗಿದನು ಮೈಮರೆದು || ೧೨ ||
ಪದವಿಭಾಗ-ಅರ್ಥ: ದೂಟಿ(ಹಾರಿ-ಸಿಡಿದು) ಬಿದ್ದವು ಸೀಸಕವು ಶತಕೋಟಿ ಘಾಯದ ಘಟನೆಯೊಳು ಶತಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ ತಾಟಿತಸು(ಪಟ್ಟುತಿಂದವನು) ಕಂಠದಲಿ+ ಉಸುರ ಪರಿಪಾಟಿ(ಕ್ರಮ) ತಪ್ಪಿತು ಮೃತ್ಯುವಿನ+ ಅದರಚೀಟಿ ಹಿಡಿದನೊ ಹೇಳೆನಲು(ಎಂಬಂತೆ) ಮಲಗಿದನು ಮೈಮರೆದು.
ಅರ್ಥ:ಭೀಮನು ಎದ್ದು ಹಾರಿ ಹೊಡೆಯಲು, ಕೌರವನ ಸೀಸಕದ ಕವಚ ಚೂರುಗಳು ಸಿಡಿದು ಬಿದ್ದವು. ಅವು ಶತಕೋಟಿ ಘಾಯದ ಘಟನೆಯಲ್ಲಿ, ಶತಕೋಟಿ ಘಾಯಕೆ ಸಿಡಿದ ಹಿಮಾಲದ ತುದಿಯಂತೆ ಸಿಡಿದು ಬಿದ್ದವು. ಪಟ್ಟುತಿಂದವನು ಕಂಠದಲ್ಲಿ ಉಸುರಾಡಲು ಕಷ್ಟವಾಗಿ ಕ್ರಮ ತಪ್ಪಿತು. ಅವನು ಮೃತ್ಯುವಿನ ಕೊಡುಗೆಯ ಚೀಟಿಯನ್ನು ಹಿಡಿದನೊ ಎಂಬಂತೆ ಮೈಮರೆತು ಮಲಗಿದನು.
ಹಾರಿತೊಂದೆಸೆಗಾಗಿ ಗದೆ ಮುರಿ
ದೇರಿದವು ಕಣ್ಣಾಲಿ ನೆತ್ತಿಯ
ಜೋರು ಮುಸುಕಿತು ಮುಖವನೊಂದು ವಿಘಳಿಗೆ ಮಾತ್ರದಲಿ |
ಜಾರಿತಂತಸ್ತಿಮಿತ ಭಯ ಹುರಿ
ಯೇರಿತಧಿಕಕ್ರೋಧ ಕರಣದ
ತಾರುಥಟ್ಟಡಗಿದುದಪಸರಿಸಿತಸು ನಿಜಾಂಗದಲಿ || ೧೩ ||
ಪದವಿಭಾಗ-ಅರ್ಥ: ಹಾರಿತು+ ಒಂ(ದ+) ದೆಸೆಗಾಗಿ ಗದೆ ಮುರಿದು,+ ಏರಿದವು ಕಣ್ಣಾಲಿ, ನೆತ್ತಿಯ ಜೋರು ಮುಸುಕಿತು(ಆವರಿಸಿತು) ಮುಖವನೊಂದು ವಿಘಳಿಗೆ ಮಾತ್ರದಲಿ, ಜಾರಿತು+ ಅಂತಸ್ತಿಮಿತ ಭಯ ಹುರಿಯೇರಿತು(ಹೆಚ್ಚಿತು),+ ಅಧಿಕಕ್ರೋಧ ಕರಣದ ತಾರುಥಟ್ಟು(ವಿವೇಚನೆ)+ ಅಡಗಿದುದು+ ಅಪಸರಿಸಿತು+ ಅಸು ನಿಜಾಂಗದಲಿ: ಅಪಸರಿಸಿತು+ ಅಸು(ಪ್ರಾಣ) ನಿಜ (ತನ್ನ)+ ಅಂಗದಲಿ.(ಅಪಸರಣ=ದಾರಿ ತಪ್ಪುವುದು ಹಿಂದೆ ಬೀಳುವುದು)
ಅರ್ಥ: ಇಬ್ಬರ ಯುದ್ಧದಲ್ಲಿ ಕೌರವನ ಗದೆ ಮುರಿದು ಒಂದು ದಿಕ್ಕಿಗೆ ಹಾರಿತು. ಪಟ್ಟಿನಿಂದ ಮುಖವಲ್ಲಿ ಒಂದು ವಿಘಳಿಗೆ ಮಾತ್ರ ಕಣ್ಣಾಲಿಗಳು ಮೇಲಕ್ಕೆ ಏರಿದವು. ನೆತ್ತಿಯ ಜೋರು(ಆಘಾತ) ಆವರಿಸಿತು. ಮನಸ್ಸಿನ ಅಂತಸ್ತಿಮಿತ ಜಾರಿತು. ಒಳಗೇ ಭಯ ಹುರಿಯೇರಿತು. ಜೊತೆಗೇ ಅಧಿಕವಾಗಿದ್ದ ಕ್ರೋಧ ಮತ್ತೂ ಹೆಚ್ಚಿತು. ಮನಸ್ಸಿನ ವಿವೇಚನೆ ಅಡಗಿತು. ಅವನ ದೇಹದಲ್ಲಿ ಪ್ರಾಣಶಕ್ತಿ ಕುಂದಿತು.
ನಿಮಿಷದಲಿ ಕಂದೆರೆದನಂತಃ
ಶ್ರಮದ ಝಳವಡಗಿತು ವಿಪಕ್ಷ
ಭ್ರಮಣಚೇತೋಭಾವ ಭವನದ ಮುಖವಿಕಾಸದಲಿ |
ತಮದ ತನಿಮಸದಲಿ ಭುಜವಿ
ಕ್ರಮ ಛಡಾಳಿಸಲೆದ್ದು ಭೂಪೋ
ತ್ತಮನು ಕೊಂಡನು ಗದೆಯನನುವಾಗೆಂದನನಿಲಜನ || ೧೪ ||
ಪದವಿಭಾಗ-ಅರ್ಥ:ನಿಮಿಷದಲಿ ಕಂದೆರೆದನು+ ಅಂತಃ ಶ್ರಮದ ಝಳವು+ ಅಡಗಿತು(ಹೊಯಿತು.) ವಿಪಕ್ಷ ಭ್ರಮಣ(ಶತ್ರುವನ್ನು ಸುತ್ತುಗಟ್ಟುವ) ಚೇತೋಭಾವ ಭವನದ(ಹುಮ್ಮಸ್ಸು ಮನೆಮಾಡಲು) ಮುಖ ವಿಕಾಸದಲಿ (ಗೆಲುವಿನ ಮುಖದಿಂದ) ತಮದ(ತಮೋಗುಣ- ಸಿಟ್ಟು) ತನಿ-ಮಸದಲಿ(ತನಿ = ಮಾಗಿದ ಹೆಚ್ಚಿದ,ಮಸೆ= ಮೊನಚುಮಾಡು ಕೆರಳಿಸು,ಚುರುಕುಗೊಳಿಸು,) ಭುಜವಿಕ್ರಮ ಛಡಾಳಿಸಲು(ಹೊಡೆಯಲು)+ ಎದ್ದು ಭೂಪೋತ್ತಮನು ಕೊಂಡನು ಗದೆಯನು+ ಅನುವಾಗು (ಸಿದ್ಧನಾಗು) ಎಂದನು+ ಅನಿಲಜನ
ಅರ್ಥ:ಕೌರವನು ಒಂದು ನಿಮಿಷದಲ್ಲಿ ಕಣ್ಣು ತೆರೆದನು. ಮನಸ್ಸಿನ ಅಂತಃ ಶ್ರಮದ ಝಳವು - ಕಾವು ಅಡಗಿತು. ಶತ್ರುವನ್ನು ಸುತ್ತುಗಟ್ಟುವ ಹುಮ್ಮಸ್ಸು ಮನಸ್ಸಿನಲ್ಲಿ ಮನೆಮಾಡಲು ಗೆಲುವಿನ ಮುಖದಿಂದ, ಹೆಚ್ಚು ಚುರುಕುಗೊಂಡು ಸಿಟ್ಟಿನಲ್ಲಿ, ಭುಜವಿಕ್ರಮನಾದ ಭೂಪೋತ್ತಮ ಕೌರವನು ಹೊಡೆಯಲು ಎದ್ದು ಗದೆಯನ್ನು ತೆಗೆದುಕೊಂಡು ಭೀಮನಿಗೆ ಅನುವಾಗು ಎಂದನು.
ಈಗಳನುವಾದೆನೆ ಧರಿತ್ರಿಯ
ಭಾಗವನು ಬೇಡಿದಡೆ ನೀ ಮುರಿ
ದಾಗಳನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ |
ತಾಗಿ ನೋಡಿನ್ನೊಮ್ಮೆನುತ ಮೈ
ಲಾಗಿನಲಿ ಹೊಳೆಹೊಳೆದು ಕೈದುವ
ತೂಗಿ ತುಡುಕಿದನರಸನನು ಬೊಬ್ಬಿರಿದು ಕಲಿ ಭೀಮ || ೧೫ ||
ಪದವಿಭಾಗ-ಅರ್ಥ: ಈಗಳು+ ಅನುವಾದೆನೆ?, ಧರಿತ್ರಿಯ(ರಾಜ್ಯದ) ಭಾಗವನು ಬೇಡಿದಡೆ(ಕೇಳಿದರೆ) ನೀ ಮುರಿದು,+ ಆಗಳೆ+ ಅನುವಾದುದು ಕಣಾ, ಗದೆ ನಿನ್ನ ಕಿರುದೊಡೆಗೆ (ಕಿರು ತೊಡೆಗೆ) ತಾಗಿ ನೋಡು, ಇನ್ನೊಮ್ಮೆ+ ಎನುತ ಮೈ- ಲಾಗಿನಲಿ(ನೆಗೆತ ಲಾಗಹಾಕಿ) ಹೊಳೆಹೊಳೆದು ಕೈದುವ(ಗದೆಯನ್ನು) ತೂಗಿ ತುಡುಕಿದನು(ಆಕ್ರಮಿಸಿದನು)+ ಅರಸನನು ಬೊಬ್ಬಿರಿದು ಕಲಿ ಭೀಮ.
ಅರ್ಥ:ಕೌರವನು ಯುದ್ಧಕ್ಕೆ ಸಿದ್ಧನಾಗು ಎನ್ನಲು, ಭೀಮನು, ತಾನು ಈಗ ಅನುವಾದೆನೆ? ಈಗ ಸಿದ್ಧವಾಗಬೇಕೇ? , ರಾಜ್ಯದ ಭಾಗವನ್ನು ನಾವು ಕೇಳಿದರೆ, ನೀನು ಸಂಧಿಯನ್ನು ಮುರಿದುಬಿಟ್ಟೆ, ಆಗಲೇ ನಾನು ಯುದ್ಧಕ್ಕೆ ಅನುವಾದುದು ಕಣಾ! ನನ್ನ ಗದೆ ನಿನ್ನ ಕಿರುದೊಡೆಗೆ ತಾಗಿದಾಗ ನೋಡು ಇನ್ನೊಮ್ಮೆ, ಎನ್ನುತ್ತಾ ಮೈ- ಲಾಗಹಾಕಿ ಹೊಳೆ ಹೊಳೆಯುತ್ತಿರುವ ಗದೆಯನ್ನು ತೂಗಿ ಕೌರವ ಅರಸನನ್ನು ಕಲಿ ಭೀಮನುಬೊಬ್ಬಿರಿದು ಆಕ್ರಮಿಸಿದನು.
ಉಬ್ಬಬೇಡೆಲೆ ಭೀಮ ಗದೆಯೋ
ಬೊಬ್ಬೆಯೋ ಬಲುಗೈದು ನಿನ್ನಯ
ಗರ್ಭಗಿರಿಗಿದೆ ಸಿಡಿಲೆನುತ ಹೊಯ್ದನು ವೃಕೋದರನ |
ತುಬ್ಬಿದನು ಗದೆಯಿಂದ ಘಾಡಿಸಿ
ಹಬ್ಬಿದನು ಕೆಲಬಲಕೆ ಖತಿಯಲಿ
ಕೊಬ್ಬಿದರೆವೊಯ್ಲುಗಳ ದನಿ ಕಿವಿಗೆಡಿಸೆ ಮೂಜಗವ || ೧೬ ||
ಪದವಿಭಾಗ-ಅರ್ಥ: ಉಬ್ಬಬೇಡ(ಉಬ್ಬು= ಅತಿ ಆನಂದಪಡು)+ ಎಲೆ ಭೀಮ ಗದೆಯೋ ಬೊಬ್ಬೆಯೋ ಬಲು+ ಗೈ+ ಕೈದು(ದೊಡ್ಡ ಗದೆ) ನಿನ್ನಯ ಗರ್ಭಗಿರಿಗೆ (ದೊಡ್ಡ ಹೊಟ್ಟೆ)+ ಇದೆ ಸಿಡಿಲು+ ಎನುತ ಹೊಯ್ದನು ವೃಕೋದರನ ತುಬ್ಬುದನು ಗದೆಯಿಂದ ಘಾಡಿಸಿ (ಘಾಡಿಸು, ವ್ಯಾಪಿಸು, ಘಾಡ= ದಟ್ಟ) ಹಬ್ಬಿದನು ಕೆಲಬಲಕೆ ಖತಿಯಲಿ(ಸಿಟ್ಟಿನಿಂದ) ಕೊಬ್ಬಿದ+ ಅರೆವೊಯ್ಲುಗಳ ದನಿ ಕಿವಿಗೆಡಿಸೆ ಮೂಜಗವ.
ಅರ್ಥ:ಎಲೆ ಭೀಮ, ನನಗೆ ಹೊಡೆದುದಕ್ಕೆ ಉಬ್ಬಬೇಡ. ನಿನ್ನದು ಗದೆಯೋ ಅಥವಾ ಬರಿ ದೊಡ್ಡ ಗದೆಯಂಥ ಬೊಬ್ಬೆಯೋ/ ಆರ್ಭಟವೋ? ನಿನ್ನಯ ದೊಡ್ಡ ಹೊಟ್ಟೆಗೆ ಇದೆ ಸಿಡಿಲು ಎನ್ನುತ್ತಾ ಕೌರವನು ಅತ್ತಿತ್ತ ಚಲಿಸಿ, ಸಿಟ್ಟಿನಿಂದ ಹೊಡೆದನು. ಕೊಬ್ಬಿದ ಅರೆಹೊಯಿಲುಗಳ ದನಿ ಕಿವಿಯನ್ನು ಕಡಿಸುವಂತೆ ಮೂರು ಜಗವನ್ನೂ ನಡುಗಿಸುವಂತೆ ವೃಕೋದರನನ್ನು- ತೋಳನಹೊಟ್ಟೆಯ ಭೀಮನನ್ನು ಗದೆಯಿಂದ ಬಲವಾಗಿ ಹೊಡೆದನು.
ಧರಣಿಪತಿ ಕೇಳ್ ಭೀಮಸೇನನ
ಧುರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ |
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ || ೧೭ ||
ಪದವಿಭಾಗ-ಅರ್ಥ: ಧರಣಿಪತಿ ಕೇಳ್, ಭೀಮಸೇನನ ಧುರಧುರದ ಹೊಯ್ಲುಗಳ ಗದೆಯಲಿ ಹೊರಳಿ+ ಗಿ+ ಕಿಡಿ ಝೊಂಪಿಸಿದುವು+ ಉರು(ಮತ್ತೂ ಹೆಚ್ಚಾಗಿ) ಖದ್ಯೋತ ಮಂಡಲವ ಅರಸನು+ ಎರಗಿದಡೆ+ ಅನಿಲಸುತ ಪೈಸರಿಸಿ(ಪಕ್ಕಕೆಸರಿದು) ಕಳಚಿದನು(ತಪ್ಪಿಸಿಕೊಂಡನು)+ ಆ ಕ್ಷಣದೊಳು+ ಅಬ್ಬರಿಸಿ ಹೊಯ್ದನು ಭೀಮ ಕೌರವ ನೃಪನ ಕಂಧರವ.
ಅರ್ಥ:ರಾಜನೇ ಕೇಳು, ಭೀಮಸೇನನ ಯುದ್ಧದ ಮೇಲೆ ಯುದ್ಧದ ಹೊಡೆತಗಳಿಂದ ಗದೆಯು ಹೊರಳಿ ಕಿಡಿಗಳು ಹೊರಟವು. ಮತ್ತೂ ಹೆಚ್ಚಾಗಿ ಆಕಾಶ ಮಂಡಲವನ್ನು ಆವರಿಸಿದವು. ಅರಸ ಕೌರವನು ಮೇಲೆಬಿದ್ದಾಗ ಅನಿಲಸುತ ಭೀಮನು ಪಕ್ಕಕೆಸರಿದು ತಪ್ಪಿಸಿಕೊಂಡನು. ಆ ಸಮಯದಲ್ಲಿ ಭೀಮನು ಅಬ್ಬರಿಸಿ ಕೌರವ ನೃಪನ ಕಂಧರವನ್ನು - ಕುತ್ತಿಗೆಯನ್ನು ಗುರಿಮಾಡಿ ಹೊಡೆದನು.
ನೋಡಿದನು ದಂಡೆಯಲಿ ಲಾಗಿಸಿ
ಹೂಡಿದನು ನೃಪ ಭೀಮನಲಿ ಪಯ
ಪಾಡಿನಲಿ ಪಲ್ಲಟಿಸಿದನು ಪಡಿತಳಕೆ ಕುರುರಾಯ |
ಘಾಡಿಸಿದನುಪ್ಪರದ ಘಾಯಕೆ
ಕೂಡೆ ತಗ್ಗಿದನನಿಲಸುತ ಖಯ
ಖೋಡಿಯಿಲ್ಲದೆ ಭಟರು ಹೊಯ್ದಾಡಿದರು ಖಾತಿಯಲಿ || ೧೮ ||
ಪದವಿಭಾಗ-ಅರ್ಥ: ನೋಡಿದನು ದಂಡೆಯಲಿ ಲಾಗಿಸಿ (ಕೈದಂಡೆಯನ್ನು ಊರಿ ಲಾಗಹಾಕಿ) ಹೂಡಿದನು ನೃಪ ಭೀಮನಲಿ ಪಯಪಾಡಿನಲಿ(ಹೆಜ್ಜೆಯನ್ನು ಗತ್ತಿನಲ್ಲಿಡುವಾಗ) ಪಲ್ಲಟಿಸಿದನು ಪಡಿತಳಕೆ (ಪಡಿತಳಕೆ/ನೆಲಕ್ಕೆ, ಜಾರಿ ಕೆಳಗೆ ಬಿದ್ದನು) ಕುರುರಾಯ ಘಾಡಿಸಿದನು (ಘಾಡಿಸು= ವ್ಯಾಪಿಸು)+ ಉಪ್ಪರದ (ಮೇಲಿನ) ಘಾಯಕೆ ಕೂಡೆ ತಗ್ಗಿದನು+ ಅನಿಲಸುತ ಖಯ ಖೋಡಿಯಿಲ್ಲದೆ(ಇಷ್ಠಾನಿಷ್ಟಗಳನ್ನು ನೋಡದೆ) ಭಟರು ಹೊಯ್ದಾಡಿದರು ಖಾತಿಯಲಿ(ಸಿಟ್ಟಿನಿಂದ)
ಅರ್ಥ: ಭೀಮನನ್ನು ನೋಡಿದ ಕೌರವನು ಕೈದಂಡೆಯನ್ನು ಊರಿ ಲಾಗಹಾಕಿ ಭೀಮನನ್ನು ಹೊಡೆಯಲು ಉಪಾಯ ಹೂಡಿದನು. ಹೆಜ್ಜೆಯನ್ನು ಗತ್ತಿನಲ್ಲಿಡುವಾಗ ಪಡಿತಳಕೆ/ನೆಲಕ್ಕೆ ಜಾರಿ ಕೆಳಗೆ ಬಿದ್ದನು ಕುರುರಾಯನು ನಲಕ್ಕೆ ಮಲಗಿದನು. ಮೈಮೇಲಿನ ಘಾಯಕೆ ಕೂಡೆ ತಗ್ಗಿ ಮತ್ತಗಾದನು. ವೀರ ಭಟರಾದ ಭೀಮ ಮತ್ತು ಕೌರವರು ಇಷ್ಠಾನಿಷ್ಟಗಳನ್ನು ನೋಡದೆ ಸಿಟ್ಟಿನಿಂದ ಹೊಯ್ದಾಡಿದರು/ ಹೊಡೆದಾಡಿದರು.
ತೊಲಗಿ ನಿಂದರು ಮತ್ತೆ ಭಾರಿಯ
ಬಳಲಿಕೆಯ ಬೇಳುವೆಯ ಚಿತ್ತ
ಸ್ಖಲಿತರಂಗೀಕರಿಸಿದರು ಕರ್ಪುರದ ವೀಳೆಯವ
ಘಳಿಲನೆದ್ದರು ನಿಮಿಷಮಾತ್ರಕೆ
ಮಲೆತು ನಿಂದರು ಘಾಯಘಾತಿಯ
ಸುಳಿವನವಧಾನಿಸುತ ತೂಗಿದರಾಯುಧದ್ವಯವ ೧೯
ಪದವಿಭಾಗ-ಅರ್ಥ: ತೊಲಗಿ (ದೂರ ಸರಿದು) ನಿಂದರು ಮತ್ತೆ ಭಾರಿಯ ಬಳಲಿಕೆಯ ಬೇಳುವೆಯ(ಕಷ್ಟ - ನೋವು) ಚಿತ್ತಸ್ಖಲಿತರು (ಮನಸ್ಸಿನ ಚಂಚಲದವರು)+ ಅಂಗೀಕರಿಸಿದರು ಕರ್ಪುರದ ವೀಳೆಯವ, ಘಳಿಲನೆದ್ದರು (ಸರಕ್ಕನೆ ಎದ್ದರು) ನಿಮಿಷಮಾತ್ರಕೆ ಮಲೆತು (ವಿರೋಧಿಸಿ, ಹೋರಾಡಲು) ನಿಂದರು ಘಾಯಘಾತಿಯ ಸುಳಿವನು+ ಅವಧಾನಿಸುತ(ಘಾಯಗಳನ್ನೂ ಪೆಟ್ಟುಗಳನ್ನೂ ಹೊಡೆಯಲು (ಸುಳಿವನು) ಗಮನಿಸುತ್ತಾ ) ತೂಗಿದರು+ ಆಯುಧ ದ್ವಯವ (ತಮ್ಮ ತಮ್ಮ ಎರಡು ಗದೆಗಳನ್ನು)
ಅರ್ಥ:ಭೀಮ ಕೌರವರು ಹೋರಾಡಿ, ಭಾರಿ ಬಳಲಿಕೆಯ ಕಷ್ಟವನ್ನು ಪರಿಹರಿಸಿಕೊಳ್ಳಲು ದೂರಹೋಗಿ ನಿಂತರು. ಮತ್ತೆ ಮನಸ್ಸಿನ ಬೇಸರ ಹೊಂದಿದವರು ಕರ್ಪುರದ ವೀಳೆಯಗಳನ್ನು ತಿಂದರು. ಅವರು ಸರಕ್ಕನೆ ಎದ್ದರು; ನಿಮಿಷ ಮಾತ್ರದಲ್ಲಿ ವಿರೋಧಿಸಿ ಹೋರಾಟಕ್ಕೆ ನಿಂತರು ಘಾಯಗಳನ್ನೂ ಪೆಟ್ಟುಗಳನ್ನೂ ಗಮನಿಸುತ್ತಾ ಮುಂದಿನ ಹೊಡೆತದ ಸುಳಿವನ್ನು ಯೋಚಿಸುತ್ತಾ ತಮ್ಮ ತಮ್ಮ ಎರಡು ಗದೆಗಳನ್ನು ತೂಗಿದರು.
ಲಾಗಿಸುತ ಲಳಿಯೆದ್ದು ಭೀಮನ
ತಾಗಿಸಿದನವನೀಶನಾತನ
ಭಾಗಧೇಯವನೇನನೆಂಬೆನು ಹೊಯ್ಲು ಹೊರಗಾಯ್ತು |
ಬೇಗುದಿಯಲುಬ್ಬೆದ್ದು ನೃಪತಿ ವಿ
ಭಾಗಿಸಿದನನಿಲಜನ ತನುವನು
ಬೇಗದಲಿ ಕಳಚಿದನು ಪವನಜ ಪಯದ ಬವರಿಯಲಿ || ೨೦ ||
ಪದವಿಭಾಗ-ಅರ್ಥ: ಲಾಗಿಸುತ ಲಳಿಯೆದ್ದು(ವೇಗದಲ್ಲಿ ಎದ್ದು) ಭೀಮನ ತಾಗಿಸಿದನು+ ಅವನೀಶನು (ಕೌರವನು);+ ಆತನ ಭಾಗಧೇಯವನು(ಭಾಗ್ಯ,ಅದೃಷ್ಟ)+ ಏನನೆಂಬೆನು ಹೊಯ್ಲು ಹೊರಗಾಯ್ತು ಬೇಗುದಿಯಲಿ+ ಉಬ್ಬೆದ್ದು ನೃಪತಿ ವಿಭಾಗಿಸಿದನು (ಆಕ್ರಮಿಸಿದನು.)+ ಅನಿಲಜನ ತನುವನು(ದೇಹವನ್ನು) ಬೇಗದಲಿ ಕಳಚಿದನು ಪವನಜ(ಭೀಮ) ಪಯದ(ಪಾದ ಚಲನೆಯ ಯುದ್ಧತಂತ್ರ) ಬವರಿಯಲಿ.
ಅರ್ಥ:ಕೌರವನು ಲಾಗಹಾಕಿ ಹಾರಯತ್ತಾ ವೇಗದಿಂದ ಎದ್ದು ಭೀಮನನ್ನು ಹೊಡೆದನು. ಆತನ ಅದೃಷ್ಟವನ್ನು ಏನನೆಂಬೆನು; ರನದ ಹೊರಗಿನ ಜನ ಭೀಮ ಬಿದ್ದನು ಎಂಬ ಬೇಗುದಿ-ಸಂಕಟದಿಂದ ಹೊಯಿಲಿಟ್ಟರು. ನೃಪತಿ ಕೌರವನು ಉಬ್ಬೆದ್ದು- ಉತ್ಸಾಹದಿಂದ ಭೀಮನನ್ನು ಆಕ್ರಮಿಸಿದನು. ಭೀಮನು ಪಾದ ಚಲನೆಯ ಯುದ್ಧತಂತ್ರದಿಂದ ಬೇಗ ತಪ್ಪಿಸಿಕೊಮಡನು.
ತಪ್ಪಿಸಿದನೇ ಘಾಯವನು ಫಡ
ತಪ್ಪಿಸಿನ್ನಾದಡೆಯೆನುತ ಕಡು
ದರ್ಪದಲಿ ಹೊಯ್ದನು ಸಮೀರಾತ್ಮಜನನವನೀಶ
ತಪ್ಪಿತದು ಗದೆ ತನುವ ರಕುತದ
ದರ್ಪಣದ ರಹಿಯಾಯ್ತು ಗದೆ ಮಾ
ರಪ್ಪಿತರಸನನೆನಲು ಹೊಯ್ದನು ಭಾಳದಲಿ ಭೀಮ ೨೧
ಪದವಿಭಾಗ-ಅರ್ಥ:ತಪ್ಪಿಸಿದನೇ ಘಾಯವನು ಫಡ! ತಪ್ಪಿಸಿನ್ನು+ ಆದಡೆ+ ಯೆನುತ ಕಡು (ಬಹಳ) ದರ್ಪದಲಿ ಹೊಯ್ದನು ಸಮೀರಾತ್ಮಜನನು (ಭೀಮನನ್ನು)+ ಅವನೀಶ ತಪ್ಪಿತದು ಗದೆ ತನುವ ರಕುತದ ದರ್ಪಣದ ರಹಿಯಾಯ್ತು(ರಹಿ- ಇರು; ಕನ್ನಡಿಯಲ್ಲಿ ಇದ್ದುದಾಯ್ತು- ವಾಸ್ತವ ಅಲ್ಲ.) ಗದೆ ಮಾರ್ (ಹೊಡೆತ)+ ಅಪ್ಪಿತು+ ಅರಸನನು+ ಎನಲು ಹೊಯ್ದನು ಭಾಳದಲಿ(ಭಾಳ= ಹಣೆ) ಭೀಮ.
ಅರ್ಥ:ಕೌರವನು, 'ಭೀಮನು ತಪ್ಪಿಸಿದನೇ ಘಾಯವನು ಫಡ! ತಪ್ಪಿಸಿಕೋ ಇನ್ನು ಸಾಧ್ಯವಾದರೆ ಎನ್ನುತ್ತಾ ಬಹಳ ದರ್ಪದಿಂದ ಕೌರವನು ಭೀಮನನ್ನು ಹೊಡೆದನು. ಪುನಃ ಗದೆಯು ತಪ್ಪಿತು; ಅದು- ಗದೆಯು ಭೀಮನ ದೇಹದ ರಕ್ತವು ಕನ್ನಡಿಯಲ್ಲಿ ಕಂಡಂತಾಯ್ತು,ರಕ್ತ ರಹಿತವಾಯಿತು. ಗದೆಯು ಹೊಡೆತ ಕೊಟ್ಟಿತು ಎನ್ನವಂತೆ ಅರಸಕೌರವನನ್ನು ಭೀಮನು ಅವನ ಹಣೆಗೆ ಹೊಡೆದನು.
ವಟ್ಟಿ ,ಮುರಿದುದು ಸೀಸಕದ ಗದೆ
ನಟ್ಟುದರಸನ ನೊಸಲ ರುಧಿರದ
ಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ ||
ಕೊಟ್ಟ ಘಾಯಕೆ ಬಳಲಿ ಮರವೆಗೆ
ಬಿಟ್ಟು ಮನವನು ನಿಮಿಷದಲಿ ಜಗ
ಜಟ್ಟಿ ಕೌರವರಾಯ ಕೊಂಡನು ನಿಜಗದಾಯುಧವ || ೨೨ ||
ಪದವಿಭಾಗ-ಅರ್ಥ: ವಟ್ಟಿ ಮುರಿದುದು ಸೀಸಕದ ಗದೆ+ ನಟ್ಟುದು+ ಅರಸನ ನೊಸಲ ರುಧಿರದ (ರಕ್ತದ) ಕಟ್ಟೆಯೊಡೆದ+ ಅಂದದಲಿ ಕವಿದುದು ನೃಪನ ತನು ನನೆಯೆ, ಕೊಟ್ಟ ಘಾಯಕೆ ಬಳಲಿ ಮರವೆಗೆ ಬಿಟ್ಟು ಮನವನು, ನಿಮಿಷದಲಿ ಜಗಜಟ್ಟಿ ಕೌರವರಾಯ ಕೊಂಡನು ನಿಜಗದಾಯುಧವ
ಅರ್ಥ:ಕೌರವನ ಹಣೆಯ ಸೀಸಕದ ವಟ್ಟಿ ಮುರಿಯಿತು. ಗದೆಯು ಅರಸ ಕೌರವನ ಹಣೆಗೆ ತಾಗಿತು. ಅವನ ಹಣೆಯಿಂದ ರಕ್ತದ ಕಟ್ಟೆಯೊಡೆದಂತೆ ಕವಿದುದು ಕೌರವನೃಪನ ದೇಹ ನನೆಯಿತು. ಭೀಮನು ಕೊಟ್ಟ ಘಾಯಕ್ಕೆ ಕೌರವನು ಬಳಲಿ ಮನಸ್ಸನ್ನು ಮರವೆಗೆ ಬಿಟ್ಟನು- ಎಚ್ಚರತಪ್ಪಿದಂತಾಯಿತು. ಆದರೆ ನಿಮಿಷದಲ್ಲಿ ಸಾವರಿಸಿಕೊಂಡು ಜಗಜಟ್ಟಿ ಕೌರವರಾಯನು ತನ್ನ ಗದಾಯುಧವನ್ನು ಕೈಗೆ ತೆಗೆದುಕೊಂಡನು.
ಘಾಯಗತಿ ಲೇಸಾಯ್ತು ಪೂತುರೆ
ವಾಯುಸುತ ದಿಟ ಸೈರಿಸೆನ್ನಯ
ಘಾಯವನು ಘೋರಪ್ರಹಾರಸಹಿಷ್ಣು ಗಡ ನೀನು |
ಕಾಯಲಾಪಡೆ ಫಲುಗುಣನನಬು
ಜಾಯತಾಕ್ಷನ ಕರೆಯೆನುತ ಕುರು
ರಾಯನೆರಗಿದನನಿಲಜನ ಕರ್ಣಪ್ರದೇಶದಲಿ || ೨೩ ||
ಪದವಿಭಾಗ-ಅರ್ಥ: ಘಾಯಗತಿ(ಗುರಿ) ಲೇಸಾಯ್ತು ಪೂತುರೆ (ಭೇಷ್) ವಾಯುಸುತ ದಿಟ ಸೈರಿಸು+ ಎನ್ನಯ ಘಾಯವನು ಘೋರಪ್ರಹಾರ ಸಹಿಷ್ಣು ಗಡ ನೀನು; ಕಾಯಲು+ ಆಪಡೆ ಫಲುಗುಣನನು+ ಅಬುಜಾಯತಾಕ್ಷನ ಕರೆ+ ಯೆನುತ ಕುರುರಾಯನು+ ಎರಗಿದನು+ ಅನಿಲಜನ ಕರ್ಣಪ್ರದೇಶದಲಿ.
ಅರ್ಥ: ಘಾಯಮಾಡುವ ಹಾಗೆ ಗದೆಯಗತಿ ಚೆನ್ನಾಗಿ ಆಯಿತು; ವೀನು ವಾಯುಸುತನೇ ನಿಜ/ ದಿಟ ಪೂತುರೆ! ಈಗ ನನ್ನ ಹೊಡೆತದ ಘಾಯವನ್ನು ಸಹಿಸಿಕೊ! ನೀನು ಘೋರವಾದ ಹೊಡೆತವನ್ನೂ ಸಹಿಸಿಕೊಳ್ಳಬಲ್ಲವನು; ಗಡ! ನಿನ್ನನ್ನು ಕಾಪಾಡಲು ಆಗುವುದಾದರೆ, ಫಲ್ಗುಣನನ್ನೂ ಅಬುಜಾಯತಾಕ್ಷ ಕೃಷ್ಣನನ್ನೂ ಕರೆ, ಎನ್ನತ್ತಾ ಕುರುರಾಯನು ಅನಿಲಜ ಭೀಮನ ಕಿವಿಯಹತ್ತಿರ ಪ್ರದೇಶದಲ್ಲಿ ಕೆನ್ನೆಗೆ ಹೊಡೆದನು.
ಎಡದ ದಂಡೆಯೊಳೊತ್ತಿ ಹೊಯ್ಗುಳ
ಕಡುಹ ತಪ್ಪಿಸಿ ಕೌರವೇಂದ್ರನ
ಮುಡುಹ ಹೊಯ್ದನು ಭೀಮ ಮಝ ಭಾಪೆನೆ ಸುರಸ್ತೋಮ |
ತಡೆದನಾ ಘಾಯವನು ಗದೆಯಲಿ
ನಡುವನಪ್ಪಳಿಸಿದನು ಭೀಮನ
ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ || ೨೪ ||
ಪದವಿಭಾಗ-ಅರ್ಥ:ಎಡದ ದಂಡೆಯೊಳೊತ್ತಿ ಹೊಯ್ಗುಳ ಕಡುಹ(ನೆಡೆ -ಆಯಕಟ್ಟಿನ ಸ್ಥಳ-ದಾರಿ) ತಪ್ಪಿಸಿ ಕೌರವೇಂದ್ರನ ಮುಡುಹು (ಹೆಗಲು) ಹೊಯ್ದನು ಭೀಮ ಮಝ ಭಾಪು+ ಎನೆ ಸುರಸ್ತೋಮ; ತಡೆದನು+ ಆ ಘಾಯವನು ಗದೆಯಲಿ ನಡುವನು (ಸೊಂಟವನ್ನು)+ ಅಪ್ಪಳಿಸಿದನು, ಭೀಮನ ಮಿಡುಕು ನಿಂದುದು, ನಗುವ ಪಾಂಡವ ಬಲದ ತಲೆ ಮಣಿಯೆ (ತಗ್ಗಲು).
ಅರ್ಥ: ಕೌರವನು ಕೆನ್ನೆಗೆ ಹೊಡೆದ ಎಡದ ಕೈ ದಂಡೆಯಿಂದ ಗದೆಯನ್ನು ಒತ್ತಿ ಹೊಡೆತಗಳ ಕಡುಹ/ನೆಡೆ- ದಾರಿಯನ್ನು- ತಪ್ಪಿಸಿ ಕೌರವೇಂದ್ರನ ಹೆಗಲನ್ನು ಗುರಿಮಾಡಿ ಭೀಮನು ದೇವತೆಗಳು ಮಝ ಭಾಪು! ಎನ್ನುವಂತೆ ಹೊಡೆದನು. ಕೌರವನು ಆ ಹೊಡೆತವನ್ನು ತನ್ನ ಗದೆಯಿಂದ ತಡೆದನು. ಅವನು ಭೀಮನ ಸೊಂಟವನ್ನು ಅಪ್ಪಳಿಸಿದನು. ಆಗ ಭೀಮನ ಮಿಡುಕು/ಶೌರ್ಯ ನಿಂತಿತು ಮತ್ತು ನಗುವ ಪಾಂಡವರ ಸೇನೆಯ- ಬೆಂಬಲಗರ ತಲೆ ತಗ್ಗಿತು.
ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ ||
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು || ೨೫ ||
ಪದವಿಭಾಗ-ಅರ್ಥ: ಒಲೆದು ಬಿದ್ದನು ಭೀಮ ಕುಲಗಿರಿ ಮಲಗುವ+ ಅಂದದಲಿ+ ಏರ+ ಬಾಯಿಂದ+ ಇಳಿವ ಶೋಣಿತಧಾರೆ (ರಕ್ತದ ಧಾರೆ), ಮಗ್ಗುಲ ಮುಸುಕಿತು+ ಅವನಿಯಲಿ, ಎಲೆ ಮಹಾದೇವಾ ವೃಕೋದರನು(ಭೀಮನು)+ ಅಳಿದನೇ (ಮರಣಹೊಂದಿದನೇ) ಹಾ ಭೀಮ ಹಾ+ ಯೆ+ ಎಂದು+ ಅಳಲಿದುದು (ಶೋಕಿಸಿತು) ಪರಿವಾರ ಸಾತ್ಯಕಿ ಸೃಂಜಯಾದಿಗಳು.
ಅರ್ಥ:ಕೌರವನ ಹೊಡೆತಕ್ಕೆ ಭೀಮನು ಕುಲಗಿರಿ- ವಿಂದ್ಯಪಟ್ವತ ಮಲಗುವ ರೀತಿಯಲ್ಲಿ ಒಲೆದಾಡಿ ನೆಲಕ್ಕೆ ಬಿದ್ದನು. ಮೇಲು ಮುಖವಾಗಿದ್ದ ಬಾಯಿಯಿಂದ ಇಳಿವ ರಕ್ತದ ಧಾರೆ ಮಗ್ಗುಲಲ್ಲಿ ಭೂಮಿಯಮೇಲೆಬಿದ್ದು ನೆಲವನ್ನು ಮುಚ್ಚಿತು. ಎಲೆ ಮಹಾದೇವಾ! ವೃಕೋದರನು ಮರಣಹೊಂದಿದನೇ? ಹಾ ಭೀಮ! ಹಾ! ಎಂದು ಪರಿವಾರವೂ ಸಾತ್ಯಕಿ ಸೃಂಜಯಾದಿಗಳೂ ಶೋಕಿಸಿದರು.
ಮೈಮರೆದನರೆಗಳಿಗೆ ಮಾತ್ರಕೆ
ವೈಮನಸ್ಯದ ಜಾಡ್ಯರೇಖೆಯ
ಸುಯ್ ಮಹಾದ್ಭುತವಾಯ್ತು ಪರಿಣತ ಪಾರವಶ್ಯದಲಿ |
ಹಾ ಮಹಾದೇವೆನುತ ಹಗೆವನ
ಕೈಮೆಯನು ಬಣ್ಣಿಸುತಲೆದ್ದನ
ಲೈ ಮರುತ್ಸುತ ಸೂಸಿ ಹಾರಿದ ಗದೆಯ ತಡವರಿಸಿ || ೨೬ ||
ಪದವಿಭಾಗ-ಅರ್ಥ:ಮೈಮರೆದನು (ಎಚ್ಚರ ತಪ್ಪಿದನು)+ ಅರೆಗಳಿಗೆ ಮಾತ್ರಕೆ ವೈಮನಸ್ಯದ(ದ್ವೇಷದ) ಜಾಡ್ಯರೇಖೆಯ (ದ್ವೇಷ - ಮಾಯೆಯು ಉಂಟುಮಾಡುವ ಮಾನಸಿಕ ರೋಗದ ಪೊರೆ) ಸುಯ್ (ಉಸಿರು) ಮಹಾದ್ಭುತವಾಯ್ತು ಪರಿಣತ ಪಾರವಶ್ಯದಲಿ(ಪರವಶತೆಯಲ್ಲಿ) ಹಾ ಮಹಾದೇವ+ ಎನುತ ಹಗೆವನ ಕೈಮೆಯನು(ಚಾಕಚಕ್ಯತೆಯನ್ನು, ಕೈಚಳಕವನ್ನು) ಬಣ್ಣಿಸುತಲಿ+ ಎದ್ದನಲೈ ಮರುತ್ಸುತ (ಮುತ್ - ವಾಯು, ಸುತ- ಮಗ) ಸೂಸಿ(ಜಾರಿದ) ಹಾರಿದ ಗದೆಯ ತಡವರಿಸಿ.
ಅರ್ಥ:ಕೌರವಬ ಹೊಡೆತದಿಂದ ನೆಲಕ್ಕೆ ಬಿದ್ದ ಭೀಮನು ಅರೆಗಳಿಗೆ ಮಾತ್ರಾ ಮೈಮರೆತನು. ಶತ್ರು ದ್ವೇಷದ ಜಾಡ್ಯರೇಖೆಯ ಬಿಸಿ ಉಸಿರು ಪರಿಣತ ಪರವಶತೆಯಲ್ಲಿ ಮಹಾದ್ಭುತವಾಯ್ತು. ಹಾ ಮಹಾದೇವ! ಎನ್ನುತ್ತಾ ಮರುತ್ಸುತ ಭೀಮನು ಹಗೆಯಾದವನ/ ಶತ್ರುವಿನ ಕೈಚಳಕವನ್ನು ಬಣ್ಣಿಸುತ್ತಾ, ಕೈಯಿಂದ ಜಾರಿ ಹಾರಿದ ಗದೆಯನ್ನು ತಡವರಿಸಿ ತೆಗೆದುಕೊಳ್ಳುತ್ತಾ ಎದ್ದನಲ್ಲಾ!
ಕಾದುಕೊಳು ಕೌರವ ಗದಾಸಂ
ಭೇದದಭ್ಯಾಸಿಗಳಿಗಿದೆ ದು
ರ್ಭೇದ ನೋಡಾ ಹೊಯ್ಲಿಗಿದು ಮರೆವೊಗು ಮಹೇಶ್ವರನ |
ಹೋದೆ ಹೋಗಿನ್ನೆನುತ ಜಡಿದು ವಿ
ಷಾದಭರದಲಿ ಮುಂದುಗಾಣದೆ
ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ || ೨೭ ||
ಪದವಿಭಾಗ-ಅರ್ಥ: ಕಾದುಕೊಳು ಕೌರವ ಗದಾಸಂಭೇದದ+ ಅಭ್ಯಾಸಿಗಳಿಗೆ+ ಇದೆ ದುರ್ಭೇದ (ತಪ್ಪಿಸಿಕೊಳ್ಳಲು ಅಸಾಧ್ಯ) ನೋಡಾ ಹೊಯ್ಲಿಗಿದು ಮರೆವೊಗು ಮಹೇಶ್ವರನ ಹೋದೆ (ಸತ್ತುಹೊದೆ - ಹೋಗು) ಹೋಗಿನ್ನು+ ಎನುತ ಜಡಿದು (ಬಲವಾಗಿ) ವಿಷಾದ ಭರದಲಿ(ರಭಸದಿಂದ) ಮುಂದುಗಾಣದೆ(ನೋವಿನಿಂದ ದಿಕ್ಕು ತೋರದೆ) ಕೈದಣಿಯಲು+ ಅಪ್ಪಳಿಸಿದನು ಕಲಿಭೀಮ ಕುರುಪತಿಯ.
ಅರ್ಥ:ಭೀನುನು ಎದ್ದವನೇ,'ನಿನ್ನನ್ನು ನೀನು ಸಾದ್ಯವಿದ್ದರೆ ಕಾದುಕೋ ಕೌರವಾ! ಗದಾಸಂಭೇದದ ಅಭ್ಯಾಸಿಗಳಿಗೆ ತಪ್ಪಿಸಿಕೊಳ್ಳಲು ಇದು ಈ ಹೊಡೆತ ಅಸಾಧ್ಯವಾಗಿದೆ ನೋಡಾ! ಮಹೇಶ್ವರನನ್ನು ಮರೆಹೊಗು, ಹೋದೆ ಹೋಗಿನ್ನು ಎನ್ನುತ್ತಾ, ವಿಷಾದವು ಮನಸ್ಸಿನಲ್ಲಿ ತುಂಬಿರಲು ರಭಸದಿಂದ ಮುಂದುಗಾಣದೆ ಕೈದಣಿಯುವಷ್ಟು ಬಲವಾಗಿ ಕಲಿಭೀಮನು ಕುರುಪತಿಯನ್ನು ಅಪ್ಪಳಿಸಿದನು.
ಹಾರಿತೊಂದೆಸೆಗಾಗಿ ಗದೆ ಮೈ
ಹೇರಿತುರು ಘಾಯವನು ಮೊಳಕಾ
ಲೂರಿ ಬಿದ್ದನು ವದನದಲಿ ವೆಂಠಣಿಸೆ ರಣಧೂಳಿ |
ಕಾರಿದನು ರಕುತವನು ಕೌರವ
ನೇರು ಬಲುಹೋ ಹೋದನೆನುತವೆ
ಚೀರಿತಾ ಪರಿವಾರ ಸುಮ್ಮಾನದ ಸಘಾಡದಲಿ || ೨೮ ||
ಪದವಿಭಾಗ-ಅರ್ಥ: ಹಾರಿತು+ ಒಂದೆಸೆಗಾಗಿ ಗದೆ, ಮೈಹೇರಿತು+ ಉರು (ಬಹಳ) ಘಾಯವನು ಮೊಳಕಾಲೂರಿ ಬಿದ್ದನು ವದನದಲಿ (ವದನ= ಮುಖ) ವೆಂಠಣಿಸೆ (ಮುತ್ತಿಗೆ ಹಾಕು, ಸುತ್ತುವರಿ ಆವರಿಸು)ರಣಧೂಳಿ ಕಾರಿದನು ರಕುತವನು ಕೌರವನು+ ಏರು ಬಲು ಹೋ(ಬಲವಾದ ಏರು- ಹೊಡೆತ) ಹೋದನು+ ಎನುತವೆ ಚೀರಿತು ಆ ಪರಿವಾರ ಸುಮ್ಮಾನದ ಸಘಾಡದಲಿ(ಸಘಾಡ= ವೇಗ, ರಭಸ, ದೊಡ್ಡದಾಗಿ).
ಅರ್ಥ:ಭೀಮನ ಹೊಡೆತಕ್ಕೆ ಕೌರವನ ಗದೆ ಯಾವುದೋ ದಿಕ್ಕಿಗೆ ಹಾರಿತು. ಬಹಳ ಘಾಯವನು ಹೊಂದಿ ಮೈಭಾರವಾಯಿತು, ಅವನು ಮೊಳಕಾಲೂರಿ ಬಿದ್ದನು. ಮುಖದಲ್ಲಿ ರಣರಂಗದ ಧೂಳು ಮೆತ್ತಿಕೊಂಡಿತು. ಕೌರವನು ರಕ್ತವನು ಕಾರಿದನು. ಇದು ಬಲವಾದ ಹೊಡೆತ ಕೌರವ "ಮೇಲೆ ಸ್ವರ್ಗಕ್ಕೆ ಹೋದನು" ಎನ್ನತ್ತಾ ಆ ಪರಿವಾರ ಸಂತೋಷದ ಉನ್ಮಾದದಲ್ಲಿ ದೊಡ್ಡದಾಗಿ ಚೀರಿತು.
ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ || ೨೯ ||
ಪದವಿಭಾಗ-ಅರ್ಥ: ಭಾಪು ಮಝರೇ ಭೀಮ ಕೌರವಭೂಪವಿಲಯಕೃತಾಂತ (ಕೌರವಭೂಪನ ನಾಶಮಾಡುವ ಯಮ); ಕುರುಕುಲ ದೀಪಚಂಡ ಸಮೀರ(ಕುರುಕುಲ ದೀಪಕ್ಕೆ() ಚಂಡಮಾರುತ); ಕುರುನೃಪ ತಿಮಿರ ಮಾರ್ತಾಂಡ(ಕುರುನೃಪನೆಂಬ ಕತ್ತಲೆಗೆ ಸೂರ್ಯನು) ಕೋಪನಪ್ರತಿಪಕ್ಷಕುಲನಿರ್ವಾಪಣೈಕಸಮರ್ಥ (ಕೋಪದಿಂದ ವೈರಿಪ್ರತಿ ಪಕ್ಷಕ್ಕೆಕುವನ್ನು ಒಬ್ಬನೇ ಎದುರಿಸುವ ಸಮರ್ಥ) ಎನುತ+ ಅಭಿರೂಪನನು ಹೊಗಳಿದರು ವಂದಿಗಳು (ಹೊಗಳುಭಟರು)+ ಅಬುಧಿ ಘೋಷದಲಿ(ಸಮುದ್ರ ಘೋಷದಲ್ಲಿ) ಭೀಮನನ್ನು ಹೊಗಳಿದರು)
ಅರ್ಥ: ಹೊಗಳುಭಟರು ಭೀಮನನ್ನು,'ಭಾಪು ಮಝರೇ ಭೀಮ! 'ಕೌರವಭೂಪವಿಲಯಕೃತಾಂತ' 'ಕುರುಕುಲ ದೀಪಚಂಡಸಮೀರ'" ಕುರುನೃಪತಿಮಿರಮಾರ್ತಾಂಡ"; "ಕೋಪನಪ್ರತಿಪಕ್ಷಕುಲನಿರ್ವಾಪಣೈಕಸಮರ್ಥ" ಎಂದು ಹೊಗಳುಭಟರು ಅಭಿರೂಪ ಭೀಮನನ್ನು ಸಮುದ್ರ ಘೋಷದಲ್ಲಿ ಹೊಗಳಿದರು.
ಜಾಳಿಸಿದ ವೇದನೆಯ ಝೊಮ್ಮಿನ
ಜಾಳಿಗೆಯ ಜವ ಹರಿದುದೆಚ್ಚರ
ಮೇಲುಮರವೆಯ ಮುಸುಕು ಜಾರಿತು ಹಾರಿತತಿಭೀತಿ |
ಬೇಳುವೆಯ ಕರಣೇಂದ್ರಿಯದ ವೈ
ಹಾಳಿ ನಿಂದುದು ಬಿಗಿದ ಬಳಲಿಕೆ
ಯೂಳಿಗದ ಮೊನೆ ಮುರಿಯೆ ಸಂತೈಸಿದನು ಕುರುರಾಯ || ೩೦ ||
ಪದವಿಭಾಗ-ಅರ್ಥ: ಜಾಳಿಸುದ ವೇದನೆಯ ಝೊಮ್ಮಿನ ಜಾಳಿಗೆಯ (ಜಾಳುಜಾಳಾಗಿರುವ ) ಜವ (ಆವೇಗ) ಹರಿದುದು+ ಎಚ್ಚರ ಮೇಲು+ ಮರವೆಯ ಮುಸುಕು ಜಾರಿತು ಹಾರಿತು+ ಅತಿಭೀತಿ ಬೇಳುವೆಯ ಕರಣೇಂದ್ರಿಯದ(ಮನಸ್ಸು) ವೈಹಾಳಿ (ಕುದುರೆ ಸವಾರಿ, ಸಂಚಾರ)ನಿಂದುದು ಬಿಗಿದ ಬಳಲಿಕೆಯ+ ಊಳಿಗದ ಮೊನೆ (ತೀವ್ರತೆ) ಮುರಿಯೆ (ಹೋಗಲು) ಸಂತೈಸಿದನು ಕುರುರಾಯ
  • ಜಾಳಿಸು= ಚಾಲಿಸು ಚಲಿಸು,ನಡೆ ಹರಿ,ಪ್ರವಹಿಸು ಅಲುಗು,ಕಂಪಿಸು, ಬೀಸು,ಜಳಪಿಸು
ಅರ್ಥ:ಭೀಮನ ಏಟಿನಿಂದ ಮೈಮರೆತ ಕೌರವನಿಗೆ ದೇಹದಲ್ಲಿ ಹರಿಯುತ್ತಿರವ ಝೊಂ- ಎಂಬ ವೇದನೆಯ ಅಲ್ಪ ಸ್ವಲ್ಪವಿದ್ದ ಝೊಂಪಿನ ಆವೇಗ ಹರಿಯಿತು. ಮೇಲುಮೇಲಕ್ಕೆ ಉಂಟಾದ ಎಚ್ಚರದಿಂದ ಮರವೆಯ ಮುಸುಕು ಹಾರಿ ಹೋಯಿತು. ಚೆನ್ನಾಗಿ ಎಚ್ಚರಾಗಿ ಅತಿಯಾದ ಭೀತಿಯ ಸಂಕಟ ಮನಸ್ಸಿನ ಹೊಯಿದಾಟ ನಿಂತಿತು. ಮನಸ್ಸು ದೇಹವನ್ನು ಆವರಿಸಿ ಬಿಗಿದ ಬಳಲಿಕೆಯ ಸೋಲಿನ ಕೀಳರಿಮೆಯ ತೀವ್ರತೆ ಹೋಗಲು, ಕೌರವನು ಸುಧಾರಿಸಿ ಸಮಾಧಾನಮಾಡಿಕೊಂಡನು.
ಒರೆವ ರಕುತವ ಧೂಳಿನಿಂದವೆ
ಹೊರಗ ತೊಡೆತೊಡೆದೌಕಿ ಕೋಪದ
ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ |
ಮುರುಕಿಸುವ ರಿಪುಭಟನನೋರೆಯೊ
ಳೆರಗಿ ನೋಡುತ ಸಾರಸತ್ವದ
ನೆರವಣಿಗೆ ಕೈಗೂಡಲೆದ್ದನು ಗದೆಯ ಕೈನೀಡಿ || ೩೧ ||
ಪದವಿಭಾಗ-ಅರ್ಥ:ಒರೆವ ರಕುತವ ಧೂಳಿನಿಂದವೆ ಹೊರಗ ತೊಡೆತೊಡೆದು+ ಔಕಿ ಕೋಪದ ಹೊರಿಗೆ ಝಳಪಿಸೆ ಕಂಗಳಲಿ ಹುಬ್ಬಿನಲಿ ಸುಯ್ಲಿನಲಿ ಮುರುಕಿಸುವ (ವಕ್ರಮಾಡು,ಕೊಂಕಿಸು,ಸೊಟ್ಟಮಾಡು) ರಿಪುಭಟನ ನೋರೆಯೊಳು+ ಎರಗಿ ನೋಡುತ ಸಾರಸತ್ವದ ನೆರವಣಿಗೆ(ನೆರವಣಿಗೆ= ಈಡೇರಿಕೆ, ಕೈಗೂಡಿಕೆ, ನೆರವೇರಿಕೆ, ಪೂರಯಿಕೆ) ಕೈಗೂಡಲು+ ಎದ್ದನು ಗದೆಯ ಕೈನೀಡಿ.
ಅರ್ಥ: ಕೌರವನು ಭಿಮನ ಹೊಡೆತದಿಂದ ಆದ ಗಾಯದಿಂದ ಒಸರುವ ರಕ್ತವನ್ನು ಧೂಳಿನಿಂದಲೆ ಗಾಯದ ಹೊರಗೆ ತೊಡೆದು ತೊಡೆದು ಒತ್ತಿದನು. ಅವನಿಗೆ ಕೋಪದ ಕಾಯಕವು ಕಣ್ಣುಗಳಲ್ಲಿ ಝಳಪಿಸಿತು. ಹುಬ್ಬಿನಲ್ಲಿ ಬಿಸಿ ಉಸಿರಲ್ಲಿ ಓರೆನೋಟದಿಂದ ನೋಡುವ ಶತ್ರುಭಟ ಭೀಮನನ್ನು ಓರೆಯಾಗಿ ಆಕ್ರಮಣದ ಭಂಗಿಯಲ್ಲಿ ನೋಡುತ್ತಾ, ಸಾರಸತ್ವದ ವಿಜಯದ ಸಾಧನೆಯನ್ನು ಕೈಗೂಡಿಸಿಕೊಳ್ಳಲು ಕೈನೀಡಿ ಬಿದ್ದ ಗದೆಯನ್ನು ಹಿಡಿದು ಎದ್ದನು.
ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ |
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ || ೩೨ ||
ಪದವಿಭಾಗ-ಅರ್ಥ:'ಹಾನಿ+ ಯೆ+ ಎಮಗೆ+ ಆಯ್ತೆಂದು ಕಡುಸುಮ್ಮಾನ+ ವು+ ಉಕ್ಕಿತೆ? ನಿಮಿಷದಲಿ ದುಮ್ಮಾನ (ದುಃಖ,ದುಗುಡ,ಅಳಲು) ಶರಧಿಯೊಳು+ ಅದ್ದುವೆನು ತಿದ್ದುವೆನು ನಿನ್ನವರ ಈ ನಗೆಯನು+ ಈ ಬಗೆಯನು ಈ ವಿಜಯ+ ಅನುರಾಗವ ನಿಲಿಸುವೆನು ಯಮಸೂನು(ಧರ್ಮಜ) ಸೈರಿಸೆನುತ್ತ ಜರೆದನು ವಾಮಹಸ್ತದಲಿ(ಎಡದ ಕೈಯನ್ನು ಚಾಚಿ).
ಅರ್ಥ:ಭೀಮನ ಪೆಟ್ಟಿನಿಂದ ಸಾವರಿಸಿಕೊಂಡ ಕೌರವನು,'ನನಗೆ ಹಾನಿಯಾಯಿತು ಎಂದು ನಿಮಗೆ ಬಹಳ ಸಂತಸ ನಿಮಿಷದಲ್ಲಿ ಉಕ್ಕಿತೆ? ಮತ್ತೊಂದು ನಿಮಿಷದಲ್ಲಿ ನಿಮ್ಮನ್ನು ದುಃಖಸಾಗರದಲ್ಲಿ ಅದ್ದುವೆನು. ನಿನ್ನವರ ಈ ನಗೆಯನ್ನು ತಿದ್ದುವೆನು-ಬದಲಾಯಿಸುವೆನು. ಈ ನಿಮ್ಮ ನೆಡತೆಯನ್ನು, ಈ ವಿಜಯದ ಅನುರಾಗವನ್ನು ನಿಲ್ಲಿಸುವೆನು. ಧರ್ಮಜನೇ ಸೈರಿಸು, ಸ್ವಲ್ಪ ತಡೆದುಕೊ, ಎನುತ್ತಾ ಎಡದ ಕೈಯನ್ನು ಚಾಚಿ ನಿಂದಿಸಿದನು.
ಎಲವೊ ಭೀಮ ವಿಘಾತಿಗಳ ಕೈ
ದೊಳಸಿನಲಿ ತೆರಹಾಯ್ತು ನೀನಿ
ಟ್ಟಳಿಸುವಡೆ ನಿನಗಾದುದಾಕಸ್ಮಿಕವದಭ್ಯುದಯ |
ಛಲವ ಬಿಡಿಸುವಡೇಳು ನೀ ಮನ
ವಳಕುವಡೆ ನಿನ್ನವರ ಕರೆ ಹೊ
ಯ್ಲೊಳಗಿದೊಂದೇ ಹೊಯ್ಲೆನುತ ಹೊಕ್ಕನು ಮಹೀಪಾಲ || ೩೩ ||
ಪದವಿಭಾಗ-ಅರ್ಥ: ಎಲವೊ ಭೀಮ ವಿಘಾತಿಗಳ (ನಾಶ, ಧ್ವಂಸ, ಹೊಡೆತ ಬಿಟ್ಟು ಬಿಡುವುದು) ಕೈ+ ದೊ+ ತೊಳಸಿನಲಿ (ತಪ್ಪಿನಿಂದ) ತೆರಹಾಯ್ತು ನೀನು+ ಇಟ್ಟಳಿಸುವಡೆ ನಿನಗೆ+ ಆದುದು+ ಆಕಸ್ಮಿಕವು+ ಅದಭ್ಯುದಯ, ಛಲವ ಬಿಡಿಸುವಡೆ+ ಏಳು, ನೀ ಮನವ+ ಅಳಕುವಡೆ ನಿನ್ನವರ ಕರೆ, ಹೊಯ್ಲೊಳಗೆ+ ಇದೊಂದೇ ಹೊಯ್ಲು+ ಎನುತ ಹೊಕ್ಕನು ಮಹೀಪಾಲ.
ಅರ್ಥ:ಕೌರವನು ಭೀಮನ್ನು ಕುರಿತು,'ಎಲವೊ ಭೀಮ ಹೊಡೆತವನ್ನು ಕೈತಪ್ಪಿನಿಂದ ಬಿಡುವುದರಿಂದ ಈ ತೆರನೆ ಆಯಿತು.ನನಗೆ ಪಟ್ಟು ಬಿತ್ತು. ನೀನು ಇಟ್ಟಳಿಸುವಡೆ ನಿನಗೆ+ ಆದುದು+ ಆಕಸ್ಮಿಕವು+ ಅದಭ್ಯುದಯ, ಛಲವ ಬಿಡಿಸುವಡೆ+ ಏಳು, ನೀ ಮನವ+ ಅಳಕುವಡೆ ನಿನ್ನವರ ಕರೆ, ಹೊಯ್ಲೊಳಗೆ+ ಇದೊಂದೇ ಹೊಯ್ಲು+ ಎನುತ ಹೊಕ್ಕನು ಮಹೀಪಾಲ.
ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹೊಯ್ದವನೊಮೇಣ್ ಮುಖದಲೋ ನೀನಾರು ಜಾತಿಯಲಿ |
ಕಯ್ದು ನಿನಗಿದೆ ಲಕ್ಷ್ಯಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ || ೩೪ ||
ಪದವಿಭಾಗ-ಅರ್ಥ: ಹೊಯ್ದು ತೋರಾ ಬಂಜೆ ನುಡಿಯಲಿ ಬಯ್ದಡೆ+ ಅಧಿಕನೆ (ಸಮರ್ಥನೇ? ) ಬಾಹುವಿಂ ಹೊರಹೊಯ್ದವನೊ ಮೇಣ್ ಮುಖದಲೋ(ಮುಖ (ಸಂ) ಮುಖ = ಬಾಯಿ) ನೀನು+ ಆರು (ಯಾರು) ಜಾತಿಯಲಿ ಕಯ್ದು ನಿನಗಿದೆ ಲಕ್ಷ್ಯಪಣ ನಮಗೆ+ ಎಯ್ದುವಡೆ ಗುಪ್ತಪ್ರತಾಪವನು(ತೋರಿಸುವುಇದಾದರೆ) ಐಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ
ಅರ್ಥ:ಕೌರವನ ಮಾತಿಗೆ ಭೀಮನು,'ಕೌರವಾ ನೀನು ಬಂಜೆಯಂಥ ಪ್ರಯೋಜನವಿಲ್ಲದ ಮಾತನಾಡಿ ಬೈದರೆ ಸಮರ್ಥನೇ? ಹೊಡೆದು ತೋರಿಸಯ್ಯಾ ನಿನ್ನ ಸಾಮರ್ಥ್ಯವನ್ನು' ಎಂದನು. ಮತ್ತೆ, 'ನೀನು ಬಾಹುವಿನಿಂದ ಹೊರಾಟದಲ್ಲಿ ಹೊಡೆಯುವವನೋ ಅಥವಾ ಬಾಯಿಯಿಂದಲೋ? ಜಾತಿ ಧರ್ಮದಲ್ಲಿ ನೀನು ಯಾರು? ನಿನ್ನ ಹತ್ತಿರ ಆಯುಧವಿದೆ, ಲಕ್ಷ್ಯಪಣವಿದೆ. ನಮಗೆ ನಿನ್ನ ಗುಪ್ತಪ್ರತಾಪವನನ್ನು ತೋರಿಸುವುದಾದರೆ, ಬಂದು ಪ್ರಕಟಿಸು,' ಎನುತ್ತ ಭೀಮನು ಕುರುಪತಿಯನ್ನು ತಿವಿದನು.

ಭೀಮಸೇನನ ಮೂರ್ಛೆ

ಸಂಪಾದಿಸಿ
ಅವನಿಪತಿ ಕೇಳ್ ಭೀಮಸೇನನ
ತಿವಿಗುಳನು ತಪ್ಪಿಸಿ ಸುಯೋಧನ
ಕವಿದು ನಾಭಿಗೆ ತೋರಿ ಜಂಘೆಗೆ ಹೂಡಿ ಝಳಪದಲಿ |
ಲವಣಿಯಲಿ ಲಳಿಯೆದ್ದು ಹೊಯ್ದನು
ಪವನಜನ ಭುಜಶಿರವ ಸೀಸಕ
ಕವಚವಜಿಗಿಜಿಯಾಗೆ ಬೀಳೆನುತರಸ ಬೊಬ್ಬಿರಿದ || ೩೫ ||
ಪದವಿಭಾಗ-ಅರ್ಥ: ಅವನಿಪತಿ ಕೇಳ್ ಭೀಮಸೇನನ ತಿವಿಗುಳನು ತಪ್ಪಿಸಿ ಸುಯೋಧನ ಕವಿದು(ಆಕ್ರಮಿಸಿ) ನಾಭಿಗೆ(ಹೊಕ್ಕಳಿಗೆ) ತೋರಿ ಜಂಘೆಗೆ ಹೂಡಿ ಝಳಪದಲಿ ಲವಣಿಯಲಿ(ವೇಗದಿಂದ) ಲಳಿಯೆದ್ದು(ಚುರುಕಾಗಿ) ಹೊಯ್ದನು ಪವನಜನ (ಭೀಮನ) ಭುಜಶಿರವ ಸೀಸಕಕವಚವ ಜಿಗಿಜಿಯಾಗೆ ಬೀಳು+ ಎನುತ+ ಅರಸ ಬೊಬ್ಬಿರಿದ (ಆರ್ಭಟಿಸಿದನು)
ಅರ್ಥ:ರಾಜನೇ ಕೇಳು,'ಭೀಮಸೇನನ ತಿವಿತಗಳನ್ನು ತಪ್ಪಿಸಿಕೊಂಡು ಸುಯೋಧನು ಭೀಮನನನು ಆಕ್ರಮಿಸಿ, ನಾಭಿಗೆ ಗದೆಯನ್ನು ತೋರಿಸಿ ಗುರಿಯಿಟ್ಟು ನಂತರ ಜಂಘೆಗೆ- ಮೊಣಕಾಲಿಗೆ ಗುರಿ ಹೂಡಿದಂತೆ ಮಾಡಿ ಗದೆಯನ್ನು ಝಳಪಿಸಿ/ಅಲುಗಿಸಿ ವೇಗದಿಂದ ಚುರುಕಾಗಿ ಭೀಮನ ಭುಜವನ್ನೂ ಶಿರವನ್ನು ಹೊಡೆದನು. ಆಗ ಪವನಜ ಭೀಮನ ಸೀಸಕಕವಚವು ಜಿಗಿಜಿಗಿಯಾಗಿಹೋಯಿತು, ಅರಸ ಕೌರವನು "ಬೀಳು" ಎನ್ನುತ್ತಾ ಬೊಬ್ಬಿರಿದನು.
ಮತ್ತೆ ಹೊಯ್ದನು ಭೀಮಸೇನನ
ನೆತ್ತಿಯನು ನಿಪ್ಪಸರದಲಿ ಕಳೆ
ಹತ್ತಿ ಝೋಂಪಿಸಿ ತಿರುಗಿ ಬಿದ್ದನು ಬಿಗಿದ ಮೂರ್ಛೆಯಲಿ |
ಕೆತ್ತ ಕಂಗಳ ಸುಯ್ಲ ಲಹರಿಯ
ಸುತ್ತಲೊಗುವರುಣಾಂಬುಗಳ ಕೆಲ
ದತ್ತ ಸಿಡಿದಿಹ ಗದೆಯ ಭಟನೊರಗಿದನು ಮರವೆಯಲಿ || ೩೬ ||
ಪದವಿಭಾಗ-ಅರ್ಥ:ಮತ್ತೆ ಹೊಯ್ದನು ಭೀಮಸೇನನ ನೆತ್ತಿಯನು ನಿಪ್ಪಸರದಲಿ (ನಿಷ್ಠುರತೆಯಿಂದ) ಕಳೆಹತ್ತಿ ((ದೇ) ೧ ಒಣಗು ೨ ಕಳೆಗುಂದು) ಝೋಂಪಿಸಿ ತಿರುಗಿ ಬಿದ್ದನು ಬಿಗಿದ (ಗಟ್ಟಿಯಾಗಿ ಆವರಿಸಿದ) ಮೂರ್ಛೆಯಲಿ; ಕೆತ್ತ (ಚಲನೆ ಇಲ್ಲದೆ) ಕಂಗಳ ಸುಯ್ಲ ಲಹರಿಯ( ಮತ್ತು ಕೆತ್ತ ಸುಯ್ಲ ಲಹರಿ= ನಿಂತ ಉಸಿರಿನ ಲಕ್ಷಣ) ಸುತ್ತಲು+ ಒಗುವ+ ಅರುಣಾಂಬುಗಳ (ರಕ್ತ) ಕೆಲದತ್ತ (ಅಕ್ಕಪಕ್ಕ) ಸಿಡಿದಿಹ ಗದೆಯ ಭಟನು+ ಒರಗಿದನು ಮರವೆಯಲಿ
ಅರ್ಥ: ಕೌರವನು ಮತ್ತೆ ಭೀಮಸೇನನ ನೆತ್ತಿಯನ್ನು ಗುರಿಮಾಡಿ ನಿಷ್ಠುರತೆಯಿಂದ ಹೊಡೆದನು. ಭೀಮನಿಗೆ ಕಳೆ- ತಾಪಹೆಚ್ಚಿ ಸಮತೋಲ ಹೋಗಿ - ಝೋಂಪಿಸಿ ಭೀಮನು ಗಟ್ಟಿ ಆವರಿಸಿದ ಮೂರ್ಛೆಯಿಂದ ತಲೆ ತಿರುಗಿ ಬಿದ್ದನು. ಚಲನೆ ಇಲ್ಲದೆ ಕೆತ್ತಿದಂತೆ ಬಿಟ್ಟ ಕಣ್ಣುಗಳು, ನಿಂತ ಉಸಿರಿನ ಲಕ್ಷಣ,ಅವನ ಸುತ್ತಲೂ ಉಕ್ಕುವ ರಕ್ತ, ಪಕ್ಕಕ್ಕೆ ಸಿಡಿದು ಬಿದ್ದ ಗದೆ, ಹೀಗಿಉವ ವೀರನು- ಭೀಮನು ಮರವೆಯಲಿ ಒರಗಿದನು. ಮೂರ್ಛೆಹೋಗಿ ಬಿದ್ದನು.
ಮಡಿದವನ ಹೊಯ್ಯೆನು ಧನಂಜಯ
ತೊಡು ಮಹಾಸ್ತ್ರವನವನಿಪತಿ ಬಿಲು
ದುಡುಕು ಯಮಳರು ಕೈದುಗೊಳಿ ಸಾತ್ಯಕಿ ಶರಾಸನವ |
ಹಿಡಿ ಶಿಖಂಡಿ ದ್ರುಪದಸುತರವ
ಗಡಿಸಿರೈ ನಿಮ್ಮವನ ಹರಿಬಕೆ
ಮಿಡುಕುವಡೆ ಬಹುದೆನುತ ತೂಗಿದನವನಿಪತಿ ಗದೆಯ || ೩೭ ||
ಪದವಿಭಾಗ-ಅರ್ಥ: ಮಡಿದವನ (ಸತ್ತವನ) ಹೊಯ್ಯೆನು ಧನಂಜಯ ತೊಡು ಮಹಾಸ್ತ್ರವನು+ ಅವನಿಪತಿ ಬಿಲುದುಡುಕು ಯಮಳರು (ನಕುಲ ಸಹದೇವರು)ಕೈದುಗೊಳಿ (ಕೈದು+ ಕೊಳಿ) ಸಾತ್ಯಕಿ ಶರಾಸನವ (ಬಿಲ್ಲು), ಹಿಡಿ ಶಿಖಂಡಿ ದ್ರುಪದಸುತರು+ ಅವಗಡಿಸಿರೈ ನಿಮ್ಮವನ ಹರಿಬಕೆ(ಹರಿಬ= ಕಷ್ಟ, ಕಷ್ಟಕ್ಕೆ ಸಹಾಯ) ಮಿಡುಕುವಡೆ(ಮಿಡುಕು -ಶೌರ್ಯ, ಶೌರ್ಯ ತೋರಿಸುವುದಾದರೆ, ಅನುಕಂಪ ತೋರಿಸುವುದಾದರೆ) ಬಹುದು+ ಎನುತ ತೂಗಿದನು+ ಅವನಿಪತಿ ಗದೆಯ
ಅರ್ಥ:ಕೌರವನು ಭಿಮನು ಸತ್ತನೆಂದು ಭಾವಿಸಿ, ಪಾಂಡವರ ಕಡೆಯವರನ್ನು ಕುರಿತು,'ಮಡಿದವನನ್ನು ಹೊಡೆಯುವುದಿಲ್ಲ. ಧನಂಜಯನೇ ಈಗ ನೀನು ಯುದ್ಧಕ್ಕೆ ಇಳಿ, ಮಹಾಸ್ತ್ರವನ್ನು ತೊಡು; ಅವನಿಪತಿ ಧರ್ಮಜನೇ ಬಿಲ್ಲಿಗೆ ಕೈಹಾಕು; ನಕುಲ ಸಹದೇವರೇ ನಿಮ್ಮ ಆಯುಧವನ್ನು ತೆಗೆದುಕೊಳ್ಳಿ; ಸಾತ್ಯಕಿ ಬಿಲ್ಲನ್ನು ಹಿಡಿ; ಶಿಖಂಡಿಯೇ ದ್ರುಪದನ ಮಕ್ಕಳೇ ಅಕ್ರಮಣಮಾಡಿರಯ್ಯಾ- ಎದುರಿಸುತ್ತೇನೆ. ನಿಮ್ಮವನ ಕಷ್ಟಕ್ಕೆ ಅನುಕಂಪ ತೋರಿಸುವುದಾದರೆ ಆಗಬಹುದು,' ಎನ್ನುತ್ತಾ ಅವನಿಪತಿ ಕೌರವನು ಗದೆಯನ್ನು ತೂಗಿದನು.
ಮೇಲೆ ಕಳವಳವಾಯ್ತು ದಿಕ್ಕಿನ
ಮೂಲೆ ಬಿರಿಯೆ ಪಿಶಾಚರಾಕ್ಷಸ
ಜಾಲ ವಿದ್ಯಾಧರ ಮಹೋರಗ ಯಕ್ಷ ಕಿನ್ನರರು
ಆಳು ನೀನಹೆ ನಳ ನಹುಷ ಭೂ
ಪಾಲಕುಲದಲಭಂಗನಾದೆ ಕ
ರಾಳಭುಜಬಲ ನೀನೆನುತ ಕೊಂಡಾಡಿತಮರಗಣ ೩೮
ಪದವಿಭಾಗ-ಅರ್ಥ: ಮೇಲೆ ಕಳವಳವಾಯ್ತು ದಿಕ್ಕಿನ ಮೂಲೆ ಬಿರಿಯೆ ಪಿಶಾಚರಾಕ್ಷಸಜಾಲ ವಿದ್ಯಾಧರ ಮಹೋರಗ ಯಕ್ಷ ಕಿನ್ನರರು ಆಳು(ಯೋಧ ವೀರ) ನೀನು+ ಅಹೆ (ಆಗಿರುವೆ) ನಳ ನಹುಷ ಭೂಪಾಲಕುಲ+ ದಲಭಂಗನಾದೆ(ದಲ= ದಳ ಭಂಗ= ನಾಶ)(ಅವರ ದಾಖಲೆಯನ್ನು ಮುರಿದವ- ಭಂಗಿಸಿದವ)) ಕರಾಳಭುಜಬಲ ನೀನೆನುತ ಕೊಂಡಾಡಿತು+ ಅಮರಗಣ(ದೇವತೆಗಳ ಸಮೂಹ)
ಅರ್ಥ:ಆಕಾಶದ ಮೇಲೆ ಸ್ವರ್ಗದಲ್ಲಿ ಸಹ ಕಳವಳವಾಯಿತು. ದಿಕ್ಕಿನ ಮೂಲೆ ಬಿರಿಯಲು- ಒಡೆಯಲು, ಪಿಶಾಚ ರಾಕ್ಷಸ ಸಮೂಹ, ವಿದ್ಯಾಧರ ಮಹಾ ಉರಗರು, ಯಕ್ಷರು, ಕಿನ್ನರರು ಕೌರವನಿಗೆ,'ನೀನು ಶೂರನಾದ ಯೋಧನೇ ಆಗಿರುವೆ; ನಳ ನಹುಷ ಭೂಪಾಲವಂಶದ ಸಮೂಹವನ್ನೇ ಮೀರಿದವನಾದೆ ಭಯಂಕರ ಭುಜಬಲನು ನೀನು,' ಎನ್ನುತ್ತಾ ಅಮರಗಣ ಕೊಂಡಾಡಿತು.

ಪಾಂಡವರ ಚಿಂತೆ

ಸಂಪಾದಿಸಿ
ಅರಸ ಕೇಳಾಶ್ಚರಿಯವನು ನಿ
ಮ್ಮರಸನಾಹವ ಸಫಲ ಸುರಕುಲ
ವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ |
ಅರಿನೃಪರು ತಲೆಗುತ್ತಿದರು ಮುರ
ಹರ ಯುಧಿಷ್ಠಿರ ಪಾರ್ಥ ಯಮಳರು
ಬೆರಳ ಮೂಗಿನಲಿದ್ದು ಸುಯ್ದರು ಬಯ್ದು ದುಷ್ಕೃತವ || ೩೯ ||
ಪದವಿಭಾಗ-ಅರ್ಥ:ಅರಸ ಕೇಳು+ ಆಶ್ಚರಿಯವನು, ನಿಮ್ಮ+ ಅರಸನು+ ಆಹವ(ಯುದ್ಧ) ಸಫಲ ಸುರಕುಲವು(ದೇವತೆಗಳು)+ ಅರಳ (ಹೂವಿನ) ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ(ತಲೆ); ಅರಿನೃಪರು (ಪಾಂಡವರು) ತಲೆಗುತ್ತಿದರು, ಮುರಹರ(ಕೃಷ್ಣ) ಯುಧಿಷ್ಠಿರ ಪಾರ್ಥ ಯಮಳರು ಬೆರಳ ಮೂಗಿನಲಿದ್ದು ಸುಯ್ದರು, ಬಯ್ದು ದುಷ್ಕೃತವ.
ಅರ್ಥ:ಸಂಜಯ ಹೇಳಿದ, ಅರಸೇ ಕೇಳು ಆಶ್ಚರ್ಯವನ್ನು,ನಿಮ್ಮ ಮಗ ಅರಸ ಕೌರವನು ಯುದ್ಧದಲ್ಲಿ ಸಫಲನಾದುದಕ್ಕೆ ದೇವತೆಗಳು ಹೂವಿನ ಮಳೆಯನ್ನು ಕುರುಪತಿ ಕೌರವನ ಸಿರಿಮುಡಿಗೆ ಸುರಿಸಿದರು ಕಣಾ!; ಅವನ ಶತ್ರು ನೃಪರು ತಲೆತಗ್ಗಿಸಿದರು. ಕೃಷ್ಣ, ಯುಧಿಷ್ಠಿರ, ಪಾರ್ಥ, ನಕುಲ ಸಹದೇವರು, ಆಶ್ಚರ್ಯದಿಂದ ಬೆರಳನ್ನು ಮೂಗಿನಲ್ಲಿ ಇಟ್ಟುಕೊಂಡು ದುಷ್ಕೃತವನ್ನು ಬಯ್ದು ನಿಟ್ಟುಸಿರು ಬಿಟ್ಟರು.
ಮಿಡಿದನರ್ಜುನ ಧನುವ ಯಮಳರು
ತುಡುಕಿದರು ಕಯ್ದುಗಳ ಸಾತ್ಯಕಿ
ಮಿಡುಕಿದನು ಮರುಗಿದರು ಪಂಚದ್ರೌಪದೀಸುತರು ||
ಒಡೆಯನಳಿವಿನಲೆಲ್ಲಿಯದು ನೃಪ
ನುಡಿದ ನುಡಿಯೆನುತನಿಲತನುಜನ
ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ ೪೦
ಪದವಿಭಾಗ-ಅರ್ಥ:ಮಿಡಿದನರ್ಜುನ ಧನುವ ಯಮಳರು ತುಡುಕಿದರು(ಕೈಹಾಕು, ತೆಗೆದುಕೊಂಡರು) ಕಯ್ದುಗಳ, ಸಾತ್ಯಕಿ ಮಿಡುಕಿದನು, ಮರುಗಿದರು ಪಂಚದ್ರೌಪದೀಸುತರು, ಒಡೆಯನ+ ಅಳಿವಿನಲೆಇ+ ಎಲ್ಲಿಯದು ನೃಪ ನುಡಿದ ನುಡಿ+ ಯೆ+ ಎನುತ+ ಅನಿಲತನುಜನ ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ.
ಅರ್ಥ:ಅರ್ಜುನನು ಯುದ್ಧಕ್ಕೆ ಸಿದ್ಧನಾಗಿ ಬಿಲ್ಲನ್ನು ಠೇಂಕರಿದನು.ನಕುಲ ಸಹದೇವರು ಆಯುಧಗಳನ್ನು ತುಡುಕಿದರು. ಸಾತ್ಯಕಿಯು ಚಿಂತೆಯಿಂದ ಮಿಡುಕಿದನು. ದ್ರೌಪದಿಯ ಐದು ಮಕ್ಕಳು ಮರುಗಿದರು. ಅನಿಲತನುಜ ಭೀಮನ ಪಡೆ- ಸೇನೆ ಒಡೆಯನ ಸಾವಿನಲ್ಲಿ ಮುಗಿಯಿತು. ಇನ್ನು ಎಲ್ಲಿಯದು ನೃಪ ಭೀಮನು ನುಡಿದ ನುಡಿ - ಕೌರವನ ತೊಡೆಯನ್ನು ಮುರಿವೆನಂದ ಪ್ರತಿಜ್ಞೆ ಎನ್ನುತ್ತಾ, ಗಜ ಅಶ್ವಗಳನ್ನು ಕೌರವನ ಮೇಲೆ ಯುದ್ಧಕ್ಕಾಗಿ ಬಿಗಿಯುತ್ತಾ ಯೋಧರಸಮೂಹ ಗಜಬಜಿಸಿ ಗದ್ದಲಮಾಡಿತು.
ದುಗುಡದಲಿ ಹರಿ ರೌಹಿಣೇಯನ
ಮೊಗವ ನೋಡಿದಡಾತನಿದು ಕಾ
ಳೆಗವಲೇ ಕೃತಸಮಯರಾದಿರಿ ಪೂರ್ವಕಾಲದಲಿ |
ಹಗೆಯ ಬಿಡಿ ಕುರುಪತಿಯ ಸಂಧಿಗೆ
ಸೊಗಸಿ ನಿಲಲಿ ಯುಧಿಷ್ಠಿರನ ಮಾ
ತುಗಳ ಕೆಡಿಸದಿರೆಂದನಾ ಕೃಷ್ಣಂಗೆ ಬಲರಾಮ || ೪೧ ||
ಪದವಿಭಾಗ-ಅರ್ಥ: ದುಗುಡದಲಿ ಹರಿ ರೌಹಿಣೇಯನ(ಬಲರಾಮ) ಮೊಗವ ನೋಡಿದಡೆ(ನೋಡಿದಾಗ) ಆತನು+ ಇದು ಕಾಳೆಗವಲೇ ಕೃತಸಮಯರಾದಿರಿ(ಕರ್ತವ್ಯಮಾಡಿದವರು); ಪೂರ್ವಕಾಲದಲಿ ಹಗೆಯ ಬಿಡಿ, ಕುರುಪತಿಯ ಸಂಧಿಗೆ ಸೊಗಸಿ ನಿಲಲಿ, ಯುಧಿಷ್ಠಿರನ ಮಾತುಗಳ ಕೆಡಿಸದಿರು+ ಎಂದನಾ ಕೃಷ್ಣಂಗೆ ಬಲರಾಮ.
ಅರ್ಥ: ಚಿಂತೆಯಿಂದ ಕೃಷ್ಣನು ಬಲರಾಮನ ಮುಖವನ್ನು ನೋಡಿದನು. ಆಗ ಆತನು,'ಇದು ಕಾಳಗವಲ್ಲವೇ? ದಃಖ ಏಕೆ? ಈ ಸಮಯದಲ್ಲಿ ಮಾಡಬೇಕಾದುದನ್ನು ಮಾಡಿದಿರಿ. ಹಿಂದಿನ ಕಾಲದಲ್ಲಿದ್ದ ಶತ್ರುತ್ವವನ್ನು ಬಿಡಿ. ಕುರುಪತಿ ಕೌರವನೊಡನೆ ಸಂಧಿಗೆ ಸಂತೋಷದಿಂದ ಪಾಂಡವರು ನಿಲ್ಲಲಿ. ಯುಧಿಷ್ಠಿರನು ಮೊದಲು ಆಡಿದ ಮಾತುಗಳನ್ನು ಕೆಡಿಸದಿರು. ಅದಕ್ಕೆ ತಪ್ಪಬೇಡಿ. ಎಂದನು ಆ ಕೃಷ್ಣನಿಗೆ ಬಲರಾಮ.
ಅರಸ ಕೇಳೈ ಬಿದ್ದ ಭೀಮನ
ಹೊರೆಗೆ ಬಂದರ್ಜುನನು ಮೋರೆಗೆ
ಬೆರಳನೊಡ್ಡಿ ಸಮೀರನಂದನನುಸುರನಾರೈದು |
ಮರಳಿದನು ಮುರಹರನನೆಕ್ಕಟಿ
ಗರೆದು ಸಪ್ರಾಣನು ಗದಾನಿ
ರ್ಭರಪರಿಶ್ರಮ ಭೀಮ ಬಳಲಿದನೆಂದನಾ ಪಾರ್ಥ || ೪೨ ||
ಪದವಿಭಾಗ-ಅರ್ಥ: ಅರಸ ಕೇಳೈ ಬಿದ್ದ ಭೀಮನ ಹೊರೆಗೆ(ಬಳಿಗೆ, ಸಹಾಯಕ್ಕೆ) ಬಂದ+ ಅರ್ಜುನನು ಮೋರೆಗೆ ಬೆರಳನೊಡ್ಡಿ ಸಮೀರನಂದನನ (ಭೀಮನ)+ ಉಸುರನು+ ಆರೈದು (ಉಪಚಿಸಿ, ಗಮನಿಸಿ?) ಮರಳಿದನು; ಮುರಹರನನು+ ಎಕ್ಕಟಿ+ ಗ+ ಕರೆದು ಸಪ್ರಾಣನು ಗದಾನಿರ್ಭರಪರಿಶ್ರಮ ಭೀಮ ಬಳಲಿದನೆಂದನು+ ಆ ಪಾರ್ಥ
ಅರ್ಥ: ಅರಸನೇ ಕೇಳು,'ಬಿದ್ದ ಭೀಮನ ಬಳಿಗೆ ಬಂದ ಅರ್ಜುನನು ಅವನ ಮುಖಕ್ಕೆ ಬೆರಳನ್ನು ಒಡ್ಡಿ ಭೀಮನ ಉಸುರನ್ನು ಗಮನಿಸಿ ಮರಳಿದನು; ಅವನು ಮುರಹರ ಕೃಷ್ಣನನ್ನು ಪ್ರತ್ಯೇಕ ರಹಸ್ಯವಾಗಿ ಕರೆದು ಸಪ್ರಾಣನು- ಭೀಮನು ಗದೆಯ ಅತಿಶಯವಾದ ಪೆಟ್ಟಿನ ಪರಿಶ್ರಮದಿಂದ ಬಳಲಿದನು,' ಎಂದನು+ ಆ ಪಾರ್ಥ.

ರನ್ನನ ಗದಾಯುದ್ಧದ ಭಾಗ

ಸಂಪಾದಿಸಿ
ಭೀಮ ಸುಯೋಧನರ ಯುದ್ಧ
ಭೀಮನು ತನಗೆ ಮಾಡಿದ ಮಹಾಪರಾಧಗಳನ್ನು ಎಣಿಸಿ ಆತನಿಗೆ ಒಂದೊಂದು ಅಪರಾಧಕ್ಕೆ ಒಂದೊಂದು ಪೆಟ್ಟಿನಂತೆ ಮೂರು ಪೆಟ್ಟುಗಳನ್ನು ಹಾಕುತ್ತಾನೆ ದುರ್ಯೋಧನ.
ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಮತ್ಸಹೋ
ದರರಂ ಕೋಪದೆ ತಿಂದುದರ್ಕೆರಡುಗೊಳ್ ದುಶ್ಯಾಸನೋರುಸ್ಸ್ಥಳ
ಕ್ಷರದಸ್ರಾಂಬುವನಾರ್ದು ಪೀರ್ದ ಮುಳಿಸಿಂಗಂ ಮೂಱುಗೊಳ್ಳೆಂದು ಮ
ಚ್ಚರದಿಂದೋವದೆ ಪೊಯ್ದನೆತ್ತಿಗದೆಯಂ ದುರ್ಯೋಧನಂ ಭೀಮನಂ॥೧೮॥

ಪದವಿಭಾಗ ಅರ್ಥ:-ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೆ= ಕಳಿಂಗರಾಜನ ಗಜಘಟೆಗಳನ್ನು ಕೊಂದು ಕಳಿಂಗರಾಜನನ್ನು ವಧಿಸಿದ ಅಹಂಕಾರಕ್ಕೆ ((ಕರಿಯಂ= ಆನೆಯನ್ನು, ನೊಣೆ = ನುಂಗು, ಸಂಹರಿಸು. ) ಒಂದುಗೊಳ್= ಒಂದು ಕೊಳ್= ಇದೋ ಒಂದು ಏಟು ಕೊಳ್= ತೆಗೆದುಕೊ., ಮತ್+ ಸಹೋದರರಂ ಕೋಪದೆ ತಿಂದುದರ್ಕೆ (ತಿಂದು- ಕೊಂದು)+ ಎರಡುಗೊಳ್- ಕೊಳ್= ನನ್ನ ತಮ್ಮಂದಿರನ್ನು ಕೋಪದಿಂದ ಕೊಂದುದಕ್ಕೆ ಇದೋ ಎರಡನೇ ಪೆಟ್ಟು, ದುಶ್ಯಾಸನನ ಉರಸ್ಥಳ (ಉರ= ಎದೆ) ಕ್ಷರತ್(ಬಗೆದು) ಅಸ್ರಾಂಬುವಂ(ಅಸ್ರ+ ಅಂಬುವಂ= ರಕ್ತ ಜಲ) ಆರ್ದು ಪೀರ್ದ(ಆರ್ಭಟಿಸಿ ಕುಡಿದ) ಮುಳಿಸಿಂಗಂ(ಮುಳಿಸು = ಕೋಪ) ಮೂಱುಗೊಳ್(ಮೂರನೇ ಏಟು ಕೊಳ್ ಪಡೆ,)= ದುಶ್ಯಾಸನನ ಎದೆಯಿಂದ ಚಿಮ್ಮುತ್ತಿರುವ ರಕ್ತವನ್ನು ಆರ್ಭಟಿಸಿ ಹೀರಿದ ಕೋಪಕ್ಕಾಗಿ ಇದೋ ಮೂರನೆ ಏಟು! ಎಂದು=ಎಂಬುದಾಗಿ ಹೇಳುತ್ತಾ, ಮಚ್ಚರದಿಂ= ಮತ್ಸರದಿಂದ, ಓವದೆ= ನಿರ್ದಾಕ್ಷಿಣ್ಯವಾಗಿ, ದುರ್ಯೋಧನಂ ಗದೆಯಂ ಎತ್ತಿ ಭೀಮನಂ ಪೊಯ್ದಂ= ದುರ್ಯೋಧನನು ಗದೆಯನ್ನು ಎತ್ತಿ ಭೀಮನನ್ನು ಬಲವಾಗಿ ಹೊಡೆದನು.
ತಾತ್ಪರ್ಯ :- ಕಳಿಂಗರಾಜನ ಆನೆಗಳ ಹಿಂಡನ್ನೆಲ್ಲ ಸಂಹರಿಸಿ ಕಳಿಂಗರಾಜನನ್ನು ಕೊಂದ ಅಪರಾಧಕ್ಕೆ ಇದೋ ಒಂದು ಏಟು! ನನ್ನ ತಮ್ಮಂದಿರನೆಲ್ಲ ತಿಂದುದಕ್ಕೆ ಇದೋ ಎರಡನೆಯ ಏಟು! ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನ ಎದೆಯಿಂದ ಪುಟಿಯುತ್ತಿರುವ ಕೆನ್ನೆತ್ತರನ್ನು ಆರ್ಭಟಿಸುತ್ತಾ ಹೀರಿದ ಕೋಪಕ್ಕೆ ಇದೋ ಮೂರನೇ ಏಟು! ಹೀಗೆನ್ನುತ್ತಾ ದುರ್ಯೋಧನನು ಕೋಪೋದ್ರೇಕದಿಂದ ಗದೆಯನ್ನೆತ್ತಿ ಭೀಮನನ್ನು ಹೊಡೆದನು.


ಭೀಮನ ದುರ್ನಯಕ್ಕೆ ದುರ್ಯೋಧನನು ಮೂರು ಏಟುಗಳನ್ನು ಬಿಗಿದರೆ ಪ್ರತಿಯಾಗಿ ದುರ್ಯೋಧನನ ಅಪರಾಧಗಳಿಗೆ ಐದು ಏಟುಗಳನ್ನು ಬಾರಿಸುತ್ತಾನೆ ಭೀಮ!
ಇದು ಲಾಕ್ಷಾಗೇಹದಾಹಕ್ಕಿದು ವಿಷಮವಿಷಾನ್ನಕ್ಕಿದಾ ನಾಡ ಜೂದಿಂ
ಗಿದು ಪಾಂಚಾಲೀಪ್ರಪಂಚಕ್ಕಿದು ಕೃತಕಸಭಾಲೋಕನಭ್ರಾಂತಿಗೆಂದೋ
ವದೆ ಪೊಯ್ದಂ ತೋಳ್ಗಳನಗಲ್ದುರಮಂ ಕೆನ್ನೆಯಂ ನೆತ್ತಿಯಂ ಕೋ
ಪದೊಳಯ್ದಂ ದುರ್ನಯಕ್ಕಯ್ದೆಡೆಯನುರು ಗದಾದಂಡದಿಂ ಭೀಮಸೇನಂ॥೧೯॥

ಪದವಿಭಾಗ ಅರ್ಥ:-ಇದು= ಈ ಏಟು, ಲಾಕ್ಷಾಗೇಹದಾಹಕ್ಕೆ= ಅರಗಿನ ಮನೆಯನ್ನು ಸುಟ್ಟಿದ್ದಕ್ಕೆ, ಇದು = ಈ ಏಟು, ವಿಷಮ ವಿಷಾನ್ನಕ್ಕೆ= ಕ್ರೂರ ವಿಷಮಿಶ್ರಿತ ಆಹಾರವನ್ನು ತಿನ್ನಿಸಿದ್ದಕೆ, ಇದು=ಈ ಏಟು, ನಾಡಜೂದಿಂಗೆ= ಕಪಟ ದ್ಯೂತಕ್ಕೆ, ( ನಾಡ= ನಾೞ- ಮೋಸದ ನಾೞವಾಸೆಗೆ= ಮೋಸದ ದಾಳ , ಪಂಪ ಭಾರತ ೬-೬೮ ವಚನ ನೋಡಿ ) ಇದು= ಈ ಏಟು, ಪಾಂಚಾಲೀಪ್ರಪಂಚಕ್ಕೆ= ದ್ರೌಪದಿಯ ವಿಷಯಕ್ಕೆ, ( ದ್ರೌಪದಿಯನ್ನು ಅಪಮಾನಗೊಳಿಸಿದ್ದಕ್ಕೆ ) ಇದು=ಈ ಏಟು, ಕೃತಕಸಭಾ ಆಲೋಕನ ಭ್ರಾಂತಿಗೆ= ಕೃತಕ ಸಭೆಗೆ ಪಾಂಡವರನ್ನು ಆಮಂತ್ರಿಸಿದ ಹುಚ್ಚಾಟಕ್ಕೆ, ಎಂದು =ಎಂಬುದಾಗಿ ಹೇಳುತ್ತಾ, ಓವದೆ= ನಿಷ್ಕರುಣೆಯಿಂದ, ಕಾಲ್ಗಳಂ= ಕಾಲುಗಳನ್ನು, ತೋಳ್ಗಳಂ=ಭುಜಗಳನ್ನು, ಅಗಲ್ದುರಮಂ= ಅಗಲ್ದ ಉರಮಂ= ವಿಶಾಲವಾದ ಎದೆಯನ್ನೂ, ಕೆನ್ನೆಯಂ= ಕಪೋಲವನ್ನೂ, ನೆತ್ತಿಯಂ=ನೆತ್ತಿಯನ್ನೂ, ಕೋಪದೊಳ್=ಕೋಪದಿಂದ, ಅಯ್ದು ದುರನಯಕ್ಕೆ= ಐದು ಅಪರಾಧಗಳಿಗೆ, ಅಯ್ದೆಡೆಯಂ= ಐದು ಭಾಗಗಳನ್ನು, ಉರು ಗದಾದಂಡದಿಂ= ಭಯಂಕರವಾದ ಗದಾದಂಡದಿಂದ, ಭೀಮಸೇನಂ=ಭೀಮನು, ಪೊಯ್ದಂ= ಹೊಡೆದನು.
ತಾತ್ಪರ್ಯ :- ಇದೋ ಈ ಏಟು ಅರಗಿನ ಮನೆಗೆ ಬೆಂಕಿ ಹಚ್ಚಿದ್ದಕ್ಕೆ! ಇದೋ ಈ ಏಟು ವಿಷಾನ್ನವನ್ನು ಇಕ್ಕಿದ್ದಕ್ಕೆ! ಇದೋ ಈ ಏಟು ಮೋಸದ ಜೂಜಾಟಕ್ಕೆ! ಇದೋ ಈ ಏಟು ದ್ರೌಪದಿಯನ್ನು ಪರಾಭವಗೊಳಿಸಿದ್ದಕ್ಕೆ! ಇದೋ ಈ ಏಟು ಮೋಸದಿಂದ ನಮ್ಮನ್ನು ಸಭೆಗೆ ಬರಮಾಡಿದ್ದಕ್ಕೆ! ಹೀಗೆ ಹೇಳುತ್ತಾ ಭೀಮನು ಕುಪಿತನಾಗಿ ನಿರ್ದಾಕ್ಷಿಣ್ಯದಿಂದ ದುರ್ಯೋಧನನ ಕಾಲುಗಳನ್ನೂ, ತೋಳುಗಳನ್ನೂ, ಅಗಲವಾದ ಎದೆಯನ್ನೂ, ಕೆನ್ನೆಯನ್ನೂ ಮತ್ತು ನೆತ್ತಿಯನ್ನೂತನ್ನ ಭೀಕರವಾದ ಗದೆಯಿಂದ ಅಪ್ಪಳಿಸಿದನು. ದುರ್ಯೋಧನನ ಐದು ಅನ್ಯಾಯಗಳಿಗೆ ಕ್ರಮವಾಗಿ ಐದು ಏಟುಗಳನ್ನು
ಬಾರಿಸಿದನು.

ಭೀಮನ ಚೇತರಿಕೆ

ಸಂಪಾದಿಸಿ
ದೇವ ಬೆಸಸಿನ್ನನಿಲಸೂನು ಸ
ಜೀವನಸಹಿತನಿಬರ್ಹಣ ಪ್ರ
ಸ್ತಾವವನು ಕರುಣಿಸುವುದಾತನ ಧರ್ಮವಿಕೃತಿಗಳ |
ನೀವು ಕಂಡಿರೆ ನಾಭಿ ಜಂಘೆಗೆ
ಡಾವರಿಸಿದನು ಹಲವು ಬಾರಿ ಜ
ಯಾವಲಂಬನವೆಂತು ಕೃಪೆಮಾಡೆಂದನಾ ಪಾರ್ಥ || ೪೩ ||
ಪದವಿಭಾಗ-ಅರ್ಥ: ದೇವ ಬೆಸಸಿ (ಹೇಳಿ)+ ಇನ್ನು+ ಅನಿಲಸೂನು(ಭೀಮ) ಸಜೀವನ ಸಹಿತ ನಿಬರ್ಹಣ(ಬರ್ಹಿ - ಬರ್ಹಣ, ವಿಬರ್ಹಣ? -ಬರ್ಹಿ= ನಾಮಪದ (ಸಂ) ೧ ಬೆಂಕಿ, ಅಗ್ನಿ) ಪ್ರಸ್ತಾವವನು ಕರುಣಿಸುವುದು+ ಆತನ ಧರ್ಮವಿಕೃತಿಗಳ ನೀವು ಕಂಡಿರೆ, ನಾಭಿ ಜಂಘೆಗೆ ಡಾವರಿಸಿದನು (ಡಾವರಿಸು= ಚುಚ್ಚು,ತಿವಿ ) ಹಲವು ಬಾರಿ, ಜಯ+ ಅವಲಂಬನವು+ ಎಂತು(ಹೇಗೆ) ಕೃಪೆಮಾಡು- ಹೇಳು+ ಎಂದನು+ ಆ ಪಾರ್ಥ
ಅರ್ಥ: ದೇವ- ಕೃಷ್ಣಾ, ಹೇಳಿ ಇನ್ನು ಭೀಮನು ಸಜೀವ ಸಹಿತ ಯುದ್ಧವನ್ನು ನಿಭಾಹಿಸುವ ಪ್ರಸ್ತಾವವನ್ನು ಕರುಣಿಸಿ ಹೇಳುವುದು. ಆತನ ದೇಹಧರ್ಮದ ವಿಕೃತಿಗಳನ್ನು- ಕೆಡುಕನ್ನು ನೀವು ಗಮನಿಸಿದಿರಾ?, ಕೌರವನು ನಾಭಿ ಮತ್ತು ಜಂಘೆಗೆ ಹಲವು ಬಾರಿ ತಿವಿದನು. ಯುದ್ಧದಲ್ಲಿ ಈಗ ಜಯದ ಪಡೆಯುವ ಬಗೆ ಹೇಗೆ? ಕೃಪೆಮಾಡು ಎಂದನು ಆ ಪಾರ್ಥ.
ನೀವು ಮೊದಲಲಿ ಬೆಸಸಿದಿರಿ ಮಾ
ಯಾವಿಗಳ ಮಾಯೆಯಲಿ ಗೆಲುವುದು
ದೈವಿಕೃತಿಯಿದು ರಾಜಮಂತ್ರದ ಸಾರತರವೆಂದು |
ಈ ವಿರೋಧಿಯ ಧರ್ಮಗತಿ ಸಂ
ಭಾವವನು ಕರ್ತವ್ಯಭಾವವ
ನೀವು ಬಲ್ಲಿರಿಯೆಂದನರ್ಜುನದೇವ ವಿನಯದಲಿ || ೪೪ ||
ಪದವಿಭಾಗ-ಅರ್ಥ:ನೀವು ಮೊದಲಲಿ ಬೆಸಸಿದಿರಿ ಮಾಯಾವಿಗಳ ಮಾಯೆಯಲಿ ಗೆಲುವುದು ದೈವಿಕೃತಿ+ ಯಿ+ ಇದು ರಾಜಮಂತ್ರದ ಸಾರತರವೆಂದು; ಈ ವಿರೋಧಿಯ ಧರ್ಮಗತಿ ಸಂಭಾವವನು(ಮುಂದೆ ಆಗಬೇಕಾದ ನೆಡೆ) ಕರ್ತವ್ಯಭಾವವ ನೀವು ಬಲ್ಲಿರಿ+ ಯೆಂ+ ಏಂದನು+ ಅರ್ಜುನದೇವ ವಿನಯದಲಿ.
ಅರ್ಥ:ಅರ್ಜುನ ಹೇಳಿದ,'ಕೃಷ್ಣಾ, ನೀವು ಈ ಯುದ್ಧಕ್ಕೆ ಮೊದಲು ಹೇಳಿದಿರಿ- 'ಮಾಯಾವಿಗಳನ್ನು ಮಾಯೆಯಿಂದಲೇ ಗೆಲ್ಲಬೇಕು ಎಂದು, ಇದು ದೈವೀ ಕೃತಿ- ನಿಯಮ, ರಾಜನೀತಿಯ ಸಾರತರವು, ಎಂದು; ಈ ವಿರೋಧಿಯಾದ ಕೌರವನ ಧರ್ಮಗತಿಯಂತೆ ಮುಂದೆ ಆಗಬೇಕಾದ ಕರ್ತವ್ಯದ ವಿಚಾರವನ್ನು ನೀವು ಬಲ್ಲಿರಿ, ಏಂದು ವಿನಯದಿಂದ ಹೇಳಿದನು.
ಧಾತುಗೆಟ್ಟನು ಭೀಮ ಮುಸುಕಿತು
ಭೀತಿ ನಮ್ಮೆಲ್ಲರನು ದೈವ
ವ್ರಾತವಾತನ ಕೊಂಡು ಕೊನರಿತು ಹೊಯ್ದು ಹೂಮಳೆಯ |
ಪಾತಕಕೆ ಪಡವಾಗದಮಳ
ಖ್ಯಾತಿ ನೋಯದೆ ವಿಜಯಸಿರಿ ರಾ
ಗಾತಿಶಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ || ೪೫ ||
ಪದವಿಭಾಗ-ಅರ್ಥ: ಧಾತುಗೆಟ್ಟನು(ಧಾತು= ಎಚ್ಚರ,ಪ್ರಜ್ಞೆ) ಭೀಮ ಮುಸುಕಿತು ಭೀತಿ ನಮ್ಮೆಲ್ಲರನು ದೈವವ್ರಾತವು+ ಆತನ ಕೊಂಡು ಕೊನರಿತು ಹೊಯ್ದು ಹೂಮಳೆಯ ಪಾತಕಕೆ ಪಡವಾಗದೆ (ಪಡವು= ಆಶ್ರಯ,ನೆಲೆ)+ ಅಮಳ ಖ್ಯಾತಿ ನೋಯದೆ ವಿಜಯಸಿರಿ ರಾಗಾತಿಶಯದಲಿ (ರಾಗ= ಅನುರಾಗ, ಪ್ರೀತಿ) ನಮ್ಮ ರಮಿಸುವ ದೆಸೆಯ ಬೆಸಸೆಂದ.
ಅರ್ಥ:ಅರ್ಜುನನು,'ಭೀಮನು ಪ್ರಜ್ಞೆತಪ್ಪಿದ್ದಾನೆ. ನಮ್ಮೆಲ್ಲರಿಗೂ ಮರಣಿಸಿದನೋ ಎಂಬ ಭೀತಿ ಆವರಿಸಿದೆ. ದೇವತೆಗಳ ಸಮೂಹವು ಆತನನ್ನು ಕೊಂಡಾಡಿ ಅವನ ಮೇಲೆ ಹೂಮಳೆಯನ್ನು ಹೊಯಿದು ಕೂಗಿತು. ಅವನ ಪಾತಕಕ್ಕೆ- ಪಾಪಕೆಲಸಕ್ಕೆ ನೆಲೆಯಾಗದೆ ಅಮಲ ಖ್ಯಾತಿ, ಪಾಪಿಯು ಗೆದ್ದಾಗ ವಿಜಯಲಕ್ಷ್ಮಿ ನೋಯಳೇ? ನಮ್ಮ ಮೇಲಿನ ವಿಶೇಷ ಪ್ರೀತಿಯಿರುವ ನೀವು ನಮಗೆ ಸಂತೋಷವಾಗುವ ಮಾರ್ಗವನ್ನು ಹೇಳಿ,' ಎಂದ.
ಅನಿಲಸುತ ಸಪ್ರಾಣಿಸಲಿ ರಿಪು
ಜನಪನೂರುವಿಭಂಗವೇ ಮು
ನ್ನಿನ ಪ್ರತಿಜ್ಞಾಯಲಾ ಸಭಾಮಧ್ಯದಲಿ ಕುರುಪತಿಯ |
ನೆನಸಿಕೊಡಿ ಸಾಕಿನ್ನು ಬೇರೊಂ
ದನುನಯವು ತಾನೇನು ವಿಜಯಾಂ
ಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ || ೪೬ ||
ಪದವಿಭಾಗ-ಅರ್ಥ: ಅನಿಲಸುತ ಸಪ್ರಾಣಿಸಲಿ(ಸ+ ಪ್ರಾಣನು ಆಗಲಿ), ರಿಪು+ ಜನಪನ+ ಊರುವಿಭಂಗವೇ (ಊರು= ತೊಡೆ ತಡೆ ಮರಿಯುವುದು) ಮುನ್ನಿನ ಪ್ರತಿಜ್ಞಾಯಲಾ ಸಭಾಮಧ್ಯದಲಿ, ಕುರುಪತಿಯ ನೆನಸಿಕೊಡಿ ಸಾಕಿನ್ನು ಬೇರೊಂದು+ ಅನುನಯವು ತಾನೇನು ವಿಜಯ+ ಅಂಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳು+ ಎಂದ.
ಅರ್ಥ:ಅರ್ಜುನನು ಕೃಷ್ಣನನ್ನು ಪ್ರಾರ್ಥಿಸಿದ,'ಅನಿಲಸುತನಾದ ಭೀಮನು ಪ್ರಾಣವುಳ್ಳವನಾಗಲಿ, ಶತ್ರುವಾದ ಕೌರವನ ಊರುಭಂಗವೇ ಮೊದಲು ಸಭಾಮಧ್ಯದಲ್ಲಿ ಕೌರವನನ್ನು ಕುರಿತು ಭೀಮನುಮಾಡಿದ ಪ್ರತಿಜ್ಞೆಯಲ್ಲವೇ? ಅದನ್ನು ನೆನಸಿಕೊಡಿ ಸಾಕು ಇನ್ನು ಬೇರೆ ಇನ್ನೊಂದು ಅನುನಯದ ಕೊಡಿಗೆ ತಾನೇ ಏಕೆ ಬೇಕು. ನಿಮ್ಮ ಆಶಿರ್ವಾದದಿಂದ ವಿಜಯಲಕ್ಷ್ಮಿಗೆ ದ್ರುಪದಕುಮಾರಿ ದ್ರೌಪದಿಯು ತಪ್ಪದೆ ಸವತಿಯಾಗುವಳು', ಎಂದ.(ಭೀಮನು ಗಲ್ಲಬೇಕು. ಆಗ ಯುದ್ಧದಲ್ಲಿ ವಿಜಯ ಲಕ್ಷ್ಮಿಯು ಭೀಮನನ್ನು ವರಿಸಿದರೆ ಭೀಮನ ಮೊದಲ ಪತ್ನಿ ದ್ರೌಪದಿಯು ವಿಜಯಲಕ್ಷ್ಮಿಗೆ ಸವತಿಯಾಗುತ್ತಾಳೆ)
ಅರಸ ಕೇಳಾಕ್ಷಣದೊಳನಿಲ
ಸ್ಮರಣೆಯನು ಹರಿ ಮಾಡಿದನು ಸಂ
ಚರಿಸಿದನು ತ್ತನುಜನಂಗೋಪಾಂಗವೀಥಿಯಲಿ |
ತರತರದ ನಾಡಿಗಳೊಳಗೆ ವಿ
ಸ್ತರಿಸಿ ಮೂಲಾಧಾರದಲಿ ಚೇ
ತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ || ೪೭ ||
ಪದವಿಭಾಗ-ಅರ್ಥ:ಅರಸ ಕೇಳು+ ಆಕ್ಷಣದೊಳು+ ಅನಿಲ-ಸ್ಮರಣೆಯನು ಹರಿ ಮಾಡಿದನು; ಸಂಚರಿಸಿದನು+ ಉತ್ತನುಜನ (ತನ್ನ ತನುಜನ- ಮಗನ)+ ಅಂಗೋಪಾಂಗ ವೀಥಿಯಲಿ(ಬೀದಿ, ದಾರಿ ನಾಳ) ತರತರದ ನಾಡಿಗಳೊಳಗೆ ವಿಸ್ತರಿಸಿ ಮೂಲಾಧಾರದಲಿ ಚೇತರಿಸಿ ಸರ್ವಾಂಗದಲಿ ಜೀವಸಮೀರ (ಪ್ರಾಣವಾಯು) ಪಸರಿಸಿದ (ಆವರಿಸಿದನು).
ಅರ್ಥ:ಅರಸನೇ ಕೇಳು,'ಆಕ್ಷಣದಲ್ಲಿ ಕೃಷ್ಣನು ವಾಯುದೇವನ ಸ್ಮರಣೆಯನ್ನು ಮಾಡಿದನು; ವಾಯುವು ಮಗನ ಅಂಗೋಪಾಂಗಗಳಲ್ಲಿ ಸಂಚರಿಸಿದನು. ಭೀಮನ ದೇಹದ ನಾಳಗಲಲ್ಲಿ ತರತರದ ನಾಡಿಗಳೊಳಗೆ ವಿಸ್ತರಿಸಿ, ಮತ್ತೆ ಮೂಲಾಧಾರ ಚಕ್ರದಲ್ಲಿ ಚೇತರಿಸಿ ಸರ್ವಾಂಗದಲ್ಲಿಯೂ ಪ್ರಾಣವಾಯುವು ಪಸರಿಸಿದನು.
ತ್ರಾಣವಿಮ್ಮಡಿಯಾಯ್ತು ತಿರುಗಿದ
ಗೋಣು ಮರಳಿತು ರೋಷವಹ್ನಿಗೆ
ಸಾಣೆವಿಡಿದವೊಲಾಯ್ತು ಕಣ್ಣುಗುಳಿದುವು ಕೇಸುರಿಯ |
ಠಾಣವೆಡಹಿದ ಗದೆಯ ರಣಬಿ
ನ್ನಾಣ ಮಸುಳಿದ ಮಾನಮರ್ದನ
ದೂಣೆಯದ ಸವ್ಯಥೆಯ ಭಟ ಸಂತೈಸಿದನು ತನುವ || ೪೮ ||
ಪದವಿಭಾಗ-ಅರ್ಥ: ತ್ರಾಣವು+ ಇಮ್ಮಡಿಯಾಯ್ತು ತಿರುಗಿದ ಗೋಣು(ಕೊರಳು) ಮರಳಿತು ರೋಷವಹ್ನಿಗೆ (ವಹ್ನಿ= ಬೆಂಕಿ)ಸಾಣೆವಿಡಿದವೊಲಾಯ್ತು ಕಣ್ಣು+ ಉಗುಳಿದುವು ಕೇಸುರಿಯ(ಕೆಂಪು), ಠಾಣವ+ ಎಡಹಿದ (ಠಾಣ= ಸ್ಥಾನ; ಸ್ಥಾನವನ್ನು ಬಿಟ್ಟು ದೂರ ಬಿದ್ದ ) ಗದೆಯ ರಣಬಿನ್ನಾಣ ಮಸುಳುದ(ಕಾಂತಿಹೀನವಾಗು,ಮಂಕಾಗು,ಮಸುಳು) ಮಾನಮರ್ದನ ದೂಣೆಯದ (ದೂಣೆಯದ = ದೂಷಣೆಯ+ ಅದ ಪ್ರಾಸಕ್ಕಾಗಿ ಷ ಅಕ್ಷರ ಬಿಟ್ಟಿದೆ; ಅಥವಾ ವಿದೀರ್ಣ- ದೀರ್ಣ= ದೊಣೆ?: ಮಾನವನ್ನು ಕೆಡಿಸಿದ, ಘಾಸಿಗೊಂಡುದು) ಸವ್ಯಥೆಯ ಭಟ ಸಂತೈಸಿದನು ತನುವ ದೂರ್ಣ
ಅರ್ಥ:ಕೃಷ್ನನು ವಾಯುವನ್ನು ಸ್ಮರಿಸಿದಕೂಡಲೆ ಭೀಮನಲ್ಲಿ ತ್ರಾಣವು/ಶಕ್ತಿ ಇಮ್ಮಡಿಯಾಯ್ತು. ತಿರುಗಿ ಬಿದ್ದ ಕೊರಳು ಮರಳಿ ಗಟ್ಟಿಯಾಯಿತು. ರೋಷದ ಬೆಂಕಿಗೆ ಸಾಣೆವಹಿಡಿದಹಾಗಾಯಿತು. ಭೀಮನ ಕಣ್ಣುಗಳು ಕೆಂಪು ಕೆಂಡವನ್ನು ಉಗುಳಿದುವು. ಸ್ವಸ್ಥಾನವನ್ನು ಬಿಟ್ಟು ದೂರ ಬಿದ್ದ ಗದೆಯನ್ನೂ ರಣರಂಗದ ಬೆಡಗನ್ನು ಕಳೆದ, ಕಾಂತಿಹೀನಕರವಾದ ಮಾನವ ಕೆಡಿಸಿದ ದೂಷಣೆಯಿಂದ ಘಾಸಿಗೊಂಡು ಸ-ವ್ಯಥೆಯನ್ನೂ ಬಳಲಿದ ದೇಹವನ್ನೂ ವೀರ ಭೀಮನು ಸಂತೈಸಿಕೊಂಡನು.

ದುರ್ಯೋಧನನ ಊರುಭಂಗ

ಸಂಪಾದಿಸಿ
ಕೊಡಹಿದನು ತನುಧೂಳಿಯನು ಧಾ
ರಿಡುವ ರುಧಿರವ ಸೆರಗಿನಲಿ ಸಲೆ
ತೊಡೆತೊಡೆದು ಕರ್ಪುರದ ಕವಳವನಣಲೊಳಳವಡಿಸಿ |
ತೊಡೆಯ ಹೊಯ್ದಾರುವ ಮುರಾರಿಯ
ನೆಡೆಯುಡುಗದೀಕ್ಷಿಸುತ ದೂರಕೆ
ಸಿಡಿದ ಗದೆಯನು ತುಡುಕಿ ನೃಪತಿಯ ತೊಡೆಗೆ ಲಾಗಿಸಿದ || ೪೯ ||
ಪದವಿಭಾಗ-ಅರ್ಥ:ಕೊಡಹಿದನು ತನುಧೂಳಿಯನು (ತನು= ದೇಹಕ್ಕೆ ಅಂಟಿದ ಧೂಳನ್ನು)ಧಾರಿಡುವ ರುಧಿರವ (ರಕ್ತವ) ಸೆರಗಿನಲಿ ಸಲೆತೊಡೆತೊಡೆದು ಕರ್ಪುರದ ಕವಳವನು+ ಅಣಲೊಳು+ ಅಳವಡಿಸಿ ತೊಡೆಯ ಹೊಯ್ದಾರುವ ಮುರಾರಿಯ ನೆಡೆಯ+ ಉಡುಗದೆ+ ಈಕ್ಷಿಸುತ ದೂರಕೆ ಸಿಡಿದ ಗದೆಯನು ತುಡುಕಿ ನೃಪತಿಯ ತೊಡೆಗೆ ಲಾಗಿಸಿದ (ತಾಗಿಸಿದ, ಗದೆಯನ್ನು ತೊಡೆಗೆ ಜೋಡಿಸಿದ , ಹೊಡೆದ).
ಅರ್ಥ:ಚೇತರಿಸಿಕೊಂಡ ಭೀಮನು ದೇಹಕ್ಕೆ ಅಂಟಿದ ಧೂಳನ್ನು ಕೊಡವಿದನು. ಧಾರೆಯಾಗಿ ಹರಿಯುವ ರಕ್ತವನ್ನು ಸೆರಗಿನಿಂದ ಚೆನ್ನಾಗಿ ತೊಡೆದು ಒರಿಸಕೊಂಡನು. ಕರ್ಪೂರದ ವೀಳಯದ ಕವಳವನ್ನು ದವಡೆಯಲ್ಲಿ ಅಳವಡಿಸಿಕೊಂಡು ತೊಡೆಯನ್ನು ಬಡಿದು ಅಲುಗಾಡಿಸುತ್ತಿರುವ ಕೃಷ್ಣನ ನೆಡವಳಿಕೆಯನ್ನು ದಿಟ್ಟಿಸಿ ನೋಡುತ್ತಾ ದೂರಕ್ಕೆ ಸಿಡಿದ ಗದೆಯನ್ನು ಎಳೆದು ತೆಗೆದುಕೊಂಡು ಕೌರವನ ತೊಡೆಗೆ ಗುರಿಯಿಟ್ಟು ಹೊಡದನು.
ಭಾಷೆಗಳುಪರು ಪಾಂಡುಸುತರೆಂ
ಬಾಸೆಯಲಿ ನಿನ್ನಾತ ಮೈಮರೆ
ದೋಸರಿಸದಿದಿರಾದನೂರುದ್ವಯವ ವಂಚಿಸದೆ |
ಶ್ವಾಸ ಮರಳಿತೆ ನಿನಗೆ ಯೋಗಾ
ಭ್ಯಾಸಿಯಹೆಯೋ ಭೀಮ ಸೈರಣೆ
ಲೇಸು ಮೆಚ್ಚಿದೆನೆನುತ ನೃಪನೆರಗಿದನು ಪವನಜನ || ೫೦ ||
ಪದವಿಭಾಗ-ಅರ್ಥ: ಭಾಷೆಗೆ+ ಅಳುಪರು ಪಾಂಡುಸುತರು+ ಎಂಬಾಸೆಯಲಿ ನಿನ್ನಾತ ಮೈಮರೆದು+ ಓಸರಿಸದೆ+ ಇದಿರಾದನು+ ಊರುದ್ವಯವ ವಂಚಿಸದೆ ಶ್ವಾಸ ಮರಳಿತೆ ನಿನಗೆ ಯೋಗಾಭ್ಯಾಸಿಯು+ ಅಹೆಯೋ (ಆಗಿರುವೆಯೋ) ಭೀಮ ಸೈರಣೆ ಲೇಸು ಮೆಚ್ಚಿದೆನು+ ಎನುತ ನೃಪನು+ ಎರಗಿದನು (ಆಕ್ರಮಿಸಿದನು) ಪವನಜನ.
ಅರ್ಥ:ಪಾಂಡುಸುತರು ಭಾಷೆಗೆ ತಪ್ಪುವವರಲ್ಲ ಎಂಬ ಆಸೆಯಿಂದ ನಿನ್ನಾತ ಕೌರವ ಮೈಮರೆತು ಹಿಂಜರಿಯದೆ ಭೀಮನಿಗೆ ಊರುದ್ವಯವ/ಎರಡು ತೊಡೆಗಳ ರಕ್ಷಣೆಗೆ ಗಮನಕೊಡದೆ ಇದಿರಾದನು. ಅವನು ಭೀಮನಿಗೆ, 'ಶ್ವಾಸ ಮರಳಿ ಬಂತೆ ನಿನಗೆ ಯೋಗಾಭ್ಯಾಸಿಯು ಆಗಿರುವೆಯೋ ಭೀಮ, ಸಮಾಧಾನ ಒಳಿತು, ಮೆಚ್ಚಿದೆನು ಎನ್ನುತ್ತಾ ಕೌರವನು ಭೀಮನ ಮೇಲೆ ಎರಗಿದನು.
ಹೊಯ್ದು ಲಳಿಯಲಿ ಕರಣಗತಿಯಲಿ
ಹಾಯ್ದು ನಭಕುಪ್ಪರಿಸಿ ಮರಳಿದು
ಹೊಯ್ದ ಹಿಂಗುವ ನೃಪನ ತೊಡೆಗಳನಿಟ್ಟನಾ ಭೀಮ |
ಹಾಯ್ದು ಗದೆ ಹೆದ್ದೊಡೆಗಳನು ಮುರಿ
ದಯ್ದಿತವನಿಯನರುಣಜಲದಲಿ
ತೊಯ್ದು ಧೊಪ್ಪನೆ ಕೆಡೆದನಿಳೆಯಲಿ ಕೌರವರ ರಾಯ || ೫೧ ||
ಪದವಿಭಾಗ-ಅರ್ಥ: ಹೊಯ್ದು(ಹೊಡೆದು) ಲಳಿಯಲಿ(ಸುತ್ತಿ, ತಿರುಗಿ) ಕರಣಗತಿಯಲಿ ಹಾಯ್ದು (ಮುಂದೆಬಂದು) ನಭಕೆ+ ಉಪ್ಪರಿಸಿ (ಆಕಾಶಕ್ಕೆ ಹಾರಿ) ಮರಳಿದು ಹೊಯ್ದ ಹಿಂಗುವ (ಹಿಂದಕ್ಕೆ ಹೋಗುವ) ನೃಪನ ತೊಡೆಗಳನು+ ಇಟ್ಟನು+ ಆ ಭೀಮ; ಹಾಯ್ದು ಗದೆ ಹೆದ್ದೊಡೆಗಳನು(ದೊಡ್ಡ ತೊಡೆಗಳನ್ನು) ಮುರಿದು+ ಅಯ್ದಿತು(ಬಂದಿತು)+ ಅವನಿಯನು(ಅವನಿ= ಭೂಮಿ)+ ಅರುಣಜಲದಲಿ(ರಕ್ತ) ತೊಯ್ದು ಧೊಪ್ಪನೆ ಕೆಡೆದನು+ ಇಳೆಯಲಿ ಕೌರವರ ರಾಯ.
ಅರ್ಥ:ಕೌರವನು ಭೀಮನಿಗೆ ಹೊಡೆದು, ತಿರುಗಿ ಕರಣಗತಿಯಲಿ ಮುಂದೆಬಂದು ಆಕಾಶಕ್ಕೆ ಹಾರಿ ಮರಳಿ/ಪುನಃ ಹೊಡೆದು ಹಿಂದಕ್ಕೆ ಹೋಗುವ ನೃಪ ಕೌರವನ ತೊಡೆಗಳನ್ನು ಆ ಭೀಮನು ಗುರಿಇಟ್ಟನು. ನುಗ್ಗಿ ಮೇಲೆಬಿದ್ದ ಅವನ ಗದೆಯು ಕೌರವನ ಹೆದ್ದೊಡೆಗಳನ್ನು ಮುರಿದುಹಾಕಿತು. ಅದು ಭೂಮಿಯನ್ನು ರಕ್ತದಿಂದ ನೆನೆಸಿತು. ಕೌರವರರಾಯನು ನೆಲದ ಮೇಲೆ ಧೊಪ್ಪನೆ ಬಿದ್ದನು.
ಹಾರ ಹರಿದುದು ಕರ್ಣಪೂರದ
ಚಾರು ಮಾಕ್ತಿಕನಿಕರ ಸಿಡಿದವು
ಧಾರಿಡುವ ರಕುತಾಂಬು ಮಡುಗಟ್ಟಿದುದು ಮಗ್ಗುಲಲಿ |
ವೀರ ಭೀಮಾ ಮಝ ಎನುತ ಬಲ
ವಾರಿದುದು ನಿಸ್ಸಾಳ ಸೂಳಿನ
ವೀರಪಣಹದ ಲಗ್ಗೆ ಮಸಗಿತು ಪರರ ಥಟ್ಟಿನಲಿ || ೫೨ ||
ಪದವಿಭಾಗ-ಅರ್ಥ: ಹಾರ ಹರಿದುದು ಕರ್ಣಪೂರದ(ಕಿವಿಯ) ಚಾರು (ಅಂದದ) ಮಾಕ್ತಿಕನಿಕರ ಸಿಡಿದವು ಧಾರಿಡುವ ರಕುತಾಂಬು ಮಡುಗಟ್ಟಿದುದು, ಮಗ್ಗುಲಲಿ ವೀರ ಭೀಮಾ ಮಝ ಎನುತ ಬಲವು+ ಆರಿದುದು ನಿಸ್ಸಾಳ(ಚರ್ಮವಾದ್ಯ- ಡೋಲು?) ಸೂಳಿನ ವೀರಪಣಹದ ಲಗ್ಗೆ ಮಸಗಿತು ಪರರ ಥಟ್ಟಿನಲಿ.
ಅರ್ಥ:ಸಂಜಯ ಹೇಳಿದ, ರಾಜನೇ ಕೇಳು, ಬಿದ್ದ ಕೌರವನ ಹಾರ ಹರಿಯಿತು. ಅವನ ಕಿವಿಯ ಅಂದದ ಕರ್ಣಾಭರಣದ ಮುತ್ತಿನರಾಶಿ ಸಿಡಿದವು. ಧಾರಾಕಾರವಾಗಿ ಹರಿದ ರಕ್ತ ಅವನ ಮಗ್ಗುಲಲ್ಲಿ ಮಡುಗಟ್ಟಿ ನಿಂತಿತು. 'ವೀರ ಭೀಮಾ ಮಝ' ಎನ್ನುತ್ತಾ ಅವನ ಸೇನೆಯು ಆರ್ಭಟಿಸಿತು. ಶತ್ರರಾಜರಾದ ಪಾಂಡವರ ಸೈನ್ಯದಲ್ಲಿ ನಿಸ್ಸಾಳವಾದ್ಯಗಳ ಸದ್ದು ವೀರ ರಣಬೇರಿಗಳ ಲಗ್ಗೆ ಆವರಿಸಿತು.
ಬಿದ್ದ ನೈ ನಿನ್ನಾತನಿನ್ನೇ
ನೆದ್ದ ರೈ ದಾಯಿಗರು ಜೂಜನು
ಗೆದ್ದುದಕೆ ಫಲ ಬಂದುದೇ ಸಂಧಾನದಲಿ ಛಲವ |
ಹೊದ್ದಿ ತಕೆ ಹುಲಿಸಾಯ್ತೆ ಬಲುವಗೆ
ಬಿದ್ದನೆಂದುಳುಹಿದನೆ ಪವನಜ
ನುದ್ದು ರುಟುತನಕೇನನೆಂಬೆನು ಭೂಪ ಕೇಳೆಂದ || ೫೩ ||
ಪದವಿಭಾಗ-ಅರ್ಥ:ಬಿದ್ದ ನೈ ನಿನ್ನ+ ಆತನು+ ಇನ್ನೇನು+ ಎದ್ದರೈ ದಾಯಿಗರು (ದಾಯಾದಿಗರಾದ ಪಾಂಡವರು ಎದ್ದು- ಅಭಿವೃದ್ಧಿಹೊಂದಿದರು.) ಜೂಜನು ಗೆದ್ದುದಕೆ ಫಲ ಬಂದುದೇ ಸಂಧಾನದಲಿ ಛಲವ ಹೊದ್ದಿತಕೆ(ಹೊದ್ದು- ಪರವಾಗಿರು; ಆಶ್ರಯಿಸಿದ್ದಕ್ಕೆ) ಹುಲಿಸು (ಹೆಚ್ಚಿನದು, ಹೆಚ್ಚಳ.)+ ಆಯ್ತೆ ಬಲುವಗೆ(ಬಲವಾದ ಹಗೆ-ಶತ್ರು ಸೋತು) ಬಿದ್ದನೆಂದು+ ಅಳುಹಿದನೆ(ಮರುಕಪಟ್ಟನೆ) ಪವನಜನ+ ಉದ್ದುರುಟುತನಕೆ+ ಏನನೆಂಬೆನು + ಎಂದ
ಅರ್ಥ:ಸಮಜಯನು ಭೂಪನೇ ಕೇಳು,'ನಿನ್ನಾತನು- ನಿನ್ನ ಮಗನು ಬಿದ್ದನೈಯ್ಯಾ! ಇನ್ನೇನು ನಿನ್ನ ದಾಯಾದಿಗರಾದ ಪಾಂಡವರು ಎದ್ದರಯ್ಯಾ. ಹಿಂದೆ ಪಾಂಡವರೊಡನೆ ಜೂಜನ್ನು ಆಡಿ ಗೆದ್ದುದಕ್ಕೆ ಫಲ ಬಂದಿತು. ಸಂಧಾನದಲ್ಲಿ ಛಲವನ್ನು ಆಶ್ರಯಿಸಿದ್ದಕ್ಕೆ ಒಳ್ಳೆಯದಾಯಿತೆ? ಬಲವಾದ ಹಗೆ-ಶತ್ರು ಸೋತುಬಿದ್ದನೆಂದು ಭೀಮನು ಮರುಕಪಟ್ಟನೆ? ಪವನಜನಾದ ಭೀಮನ ಉದ್ದಟ ಮತ್ತು ಒರಟುತನಕ್ಕೆ ಏನನ್ನು ಹೇಳಲಿ?' ಎಂದ.
ಏಕೆ ಸಂಜಯ ಕೌರವೇಂದ್ರನ
ಸಾಕಿತಕೆ ಫಲವಾಯ್ತು ನೀ ಬರಿ
ದೇಕೆ ಚುಚ್ಚುವೆ ಕಾಸಿ ಬಾದಣಗೊರೆದ ಘಾಯದಲಿ ||
ನೂಕಿದರೆ ಬಲಭದ್ರನನು ಮೇ
ಲೇಕೆ ಪವನಜ ಮುನಿದನವರ
ವ್ಯಾಕುಳರಲೇ ವೀರನಾರಾಯಣನ ಕರುಣದಲಿ || ೫೪ ||
ಪದವಿಭಾಗ-ಅರ್ಥ: ಏಕೆ ಸಂಜಯ ಕೌರವೇಂದ್ರನ ಸಾಕಿತಕೆ ಫಲವಾಯ್ತು; ನೀ ಬರಿದೇಕೆ ಚುಚ್ಚುವೆ; ಕಾಸಿ ಬಾದಣಗೊರೆದ(ಬಾದಣಗೊರೆ= ತೂತಾಗುವಂತೆ ಕೊರೆ. ರಂಧ್ರವಾಗು.) ಘಾಯದಲಿ; ನೂಕಿದರೆ ಬಲಭದ್ರನನು; ಮೇಲ+ ಏಕೆ ಪವನಜ(ಭೀಮನು) ಮುನಿದನು+; ಅವರ ವ್ಯಾಕುಳರಲೇ ವೀರನಾರಾಯಣನ ಕರುಣದಲಿ.
ಅರ್ಥ:ರಾಜ ಧೃತರಾಷ್ಟ್ರನು ಕೇಳಿದ, ಸಂಜಯ ಏಕೆ ನನ್ನನ್ನು ದೂರುವೆ? ಕೌರವೇಂದ್ರನನ್ನು ಸಾಕಿದ್ದಕ್ಕೆ ಈ ಫಲವಾಯಿತು; ನೀನು ಬರಿದೆ ಏಕೆ ನನ್ನನ್ನು ಚುಚ್ಚುವೆ; ಸರಳನ್ನು ಕಾಸಿ ತೂತಾಗುವಂತೆ ಘಾಯದಲ್ಲಿ ಕೊರೆದಹಾಗಿದೆ ನಿನ್ನಮಾತು.ಬಲರಾಮನನ್ನು ನಿರ್ಲಕ್ಷಮಾಡಿದರೆ? ಅವನ ಮೇಲೆ ಏಕೆ ಭೀಮನು ಮುನಿದನು? ವೀರನಾರಾಯಣನಾದ ಕೃಷ್ಣನ ಕರುಣದಲ್ಲಿ ಇರುವ ಅವರು ಎಂದಾದರೂ ವ್ಯಾಕುಲರಲೇ- ದುಃಖಿತರಾದುವರೇ? ಇಲ್ಲ.
♠♠♠

ಸಂಧಿಗಳು

ಸಂಪಾದಿಸಿ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.