ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)

<ಕುಮಾರವ್ಯಾಸ ಭಾರತ/ಸಟೀಕಾ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೪)

ಸಂಪಾದಿಸಿ
ವಿಗ್ರಹಕೆ ಸಮತಳಿಸಿ ಕುರುಕುಲ
ದಗ್ರಣಿಯ ಮುಂಕೊಂಡು ದಕ್ಷಿಣ
ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ ||
ಪದವಿಭಾಗ-ಅರ್ಥ:ವಿಗ್ರಹಕೆ ಸಮತಳಿಸಿ ಕುರುಕುಲದ+ ಅಗ್ರಣಿಯ ಮುಂಕೊಂಡು ದಕ್ಷಿಣ ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ.
ವಿಗ್ರಹಕೆ ಸಮತಳಿಸಿ= ಯುದ್ಧಕ್ಕೆ ಸಿದ್ಧತೆಮಾಡಿಕೊಂಡು- ಅಣಿಗೊಳಿಸಿಕೊಂಡು, ಕುರುಕುಲದ+ ಅಗ್ರಣಿಯ ಮುಂಕೊಂಡು= ಕುರುವಂಶದ ಅಗ್ರಣಿ- ಮುಖ್ಯನಾದ ಕೌರವನ ಸೈನ್ಯದ ಸೈನ್ಯದ ಮುಖ್ಯನನ್ನು (ಸುಶರ್ಮಕನನ್ನು) ಎದುರಿಸಿ, ದಕ್ಷಿಣ ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ.
ಅರ್ಥ:ಭೀಮನು ಯುದ್ಧಕ್ಕೆ ಅಣಿಗೊಳಿಸಿಕೊಂಡು ಹೋಗಿ ಕುರುವಂಶದ ಮುಖ್ಯನಾದ ಕೌರವನ ಕಡೆಯ ರಾಜ ಶೂರ ಸುಶರ್ಮಕನನ್ನುನ್ನು ಎದುರಿಸಿ, ದಕ್ಷಿಣ ಗೋಗ್ರಹಣದಲ್ಲಿ ಅವನನ್ನು ಸೆರೆಹಿಡಿದನು.[][]
~~ಓಂ~~

ಕೌರವನಿಗೆ ಕೀಚಕನ ವಧೆಯ ಸುದ್ದಿ

ಸಂಪಾದಿಸಿ
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ದೂತರವನಿಯ
ಮೇಲೆ ತೊಳಲುತಲರಸಿ ಕಾಣದೆ ಪಾಂಡುನಂದನರ |
ಹೋಲುವಿಕೆಯಿಂಬಿಡಿಯಲಾರದೆ
ಕಾಲ ಸವೆಯಲು ನಾಲ್ಕು ದಿಕ್ಕಿನ
ಮೂಲೆಯವರೈತಂದು ಬಿನ್ನವಿಸಿದರು ಕುರುಪತಿಗೆ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಕೌರವ ದೂತರು+ ಅವನಿಯ ಮೇಲೆ ತೊಳಲುತಲು+ ಅರಸಿ ಕಾಣದೆ ಪಾಂಡುನಂದನರ ಹೋಲುವಿಕೆಯ+ ಇಂಬಿಡಿಯಲಾರದೆ ಕಾಲ ಸವೆಯಲು ನಾಲ್ಕು ದಿಕ್ಕಿನ ಮೂಲೆಯವರು+ ಐತಂದು ಬಿನ್ನವಿಸಿದರು ಕುರುಪತಿಗೆ.
ಕೇಳು ಜನಮೇಜಯ ಧರಿತ್ರೀಪಾಲ ಕೌರವ ದೂತರು+ ಅವನಿಯ- ಭೂಮಿಯ, ಮೇಲೆ ತೊಳಲುತಲು- ಅಲೆಯುತ್ತಾ+ ಅರಸಿ- (ಪಾಂಡವರನ್ನು) ಹುಡುಕಿ, ಕಾಣದೆ ಪಾಂಡುನಂದನರ ಹೋಲುವಿಕೆಯ- ಅವರನ್ನು ಹೋಲುವ+ ಇಂಬಿಡಿಯಲಾರದೆ- ಇಂಬು+ ಹಿಡಿಯಲಾರದೆ-ಅಲ್ಪಸೋಚನೆಯನ್ನೂ ಕಂಡುಹಿಡಿಯಲಾಗದೆ, ಕಾಲ ಸವೆಯಲು- ೧೩ ವರ್ಷ ಕಳೆಯುವ ಸಮಯಬರಲು, ನಾಲ್ಕು ದಿಕ್ಕಿನ ಮೂಲೆಯವರು - (ನಾಲ್ಕುದಿಕ್ಕಿನ ಮೂಲೆ ಮೂಲೆಗೂ ಹೋದವರು)+ ಐತಂದು- ಬಂದು, ಬಿನ್ನವಿಸಿದರು- ಹೇಳಿದರು ಕುರುಪತಿಗೆ.
ಅರ್ಥ: ಜನಮೇಜಯ ರಾಜನೇ ಕೇಳು, ಕೌರವನ ದೂತರು ಭೂಮಿ ಮೇಲೆ ಅಲೆಯುತ್ತಾ ಪಾಂಡವರನ್ನು ಹುಡುಕಿ- ಕಾಣದೆ ಅಥವಾ ಅವರನ್ನು ಹೋಲುವ ಅಲ್ಪಸೋಚನೆಯನ್ನೂ ಕಂಡುಹಿಡಿಯಲಾಗದೆ, ಅವಧಿಯ ಕಾಲ ೧೩ ವರ್ಷ ಕಳೆಯುವ ಸಮಯ ಬರಲು, ನಾಲ್ಕುದಿಕ್ಕಿನ ಮೂಲೆ ಮೂಲೆಗೂ ಹೋದವರು ಬಂದು, ಕುರುಪತಿಗೆ ಹೀಗೆ ಹೇಳಿದರು.
ವಿತಳದೊಳು ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ |
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು || ೨ ||
ಪದವಿಭಾಗ-ಅರ್ಥ: ವಿತಳದೊಳು ಹೊಕ್ಕಿರಲಿಯು+ ಅಮರಾವತಿಯೊಳಗೆ ಮೇಣಿರಲಿ ನಮ್ಮ+ ಈಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ ಮತಿಯ ಹಬ್ಬುಗೆಯಿಂದ ನಾನಾಗತಿಯೊಳಗೆ ಹೊಕ್ಕು+ ಅರಸಿದೆವು ಕುರುಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು.
ವಿತಳದೊಳು ಹೊಕ್ಕಿರಲಿಯು+ ಅಮರಾವತಿಯೊಳಗೆ ಮೇಣಿರಲಿ ನಮ್ಮ+ ಈಕ್ಷಿತಿಯೊಳಗೆ ಸುಳುಹಿಲ್ಲ= ರಾಜನೇ, ಪಾಂಡವರು, ವಿತಳದೊಳು ಹೊಕ್ಕಿರಲೂಬಹುದು,+ ಮತ್ತೆ ಸ್ವರ್ಗದ ಅಮರಾವತಿಗೆ ಹೋಗಿರಲೂಬಹುದು (ಮರಣ ಹೊಂದಿರಬಹುದು).// ನಮ್ಮ+ ಈಕ್ಷಿತಿಯೊಳಗೆ- ಈ ಭೂಮಿಯಲ್ಲಿ ಎಲ್ಲಿಯೂ ಅವರ ಸುಳುಹಿಲ್ಲ,// ನೃಪ ಕುಂತೀಕುಮಾರಕರ ಮತಿಯ ಹಬ್ಬುಗೆಯಿಂದ ನಾನಾಗತಿಯೊಳಗೆ ಹೊಕ್ಕು+ ಅರಸಿದೆವು= ನೃಪ ಕುಂತೀಕುಮಾರಕರ- ರಾಜಕುಮಾರರಾದ ಕುಂತೀಮಕ್ಕಳನ್ನು, ಮತಿಯ ಹಬ್ಬುಗೆಯಿಂದ - ನಮ್ಮ ಬುದ್ಧಿಶಕ್ತಿಯ ಅನುಗುಣವಾಗಿ, ನಾನಾಗತಿಯೊಳಗೆ ಹೊಕ್ಕು+ ಅರಸಿದೆವು- ನಾನಾ ಬಗೆಯಲ್ಲಿ ಒಳಹೊಕ್ಕು ಹುಡುಕಿದೆವು.// ಕುರುಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು= ಕುರುರಾಜನೇ ಕೇಳು, ನಿನ್ನ ವೈರಿಗಳು ನಿರ್ನಾಮರಾದರು ಎಲ್ಲಿಯೂ ಇಲ್ಲ' ಎಂದರು ದೂತರು.
ಅರ್ಥ: ರಾಜನೇ, ಪಾಂಡವರು, ಪಾತಳದಲ್ಲಿ ಹೊಕ್ಕಿರಲೂಬಹುದು, ಮತ್ತೆ ಸ್ವರ್ಗಕ್ಕೆ ಹೋಗಿರಲೂಬಹುದು (ಮರಣ ಹೊಂದಿರಬಹುದು). ಈ ಭೂಮಿಯಲ್ಲಿ ಎಲ್ಲಿಯೂ ಅವರ ಸುಳಿವಿಲ್ಲ. ರಾಜಕುಮಾರರಾದ ಕುಂತೀಮಕ್ಕಳನ್ನು, ನಮ್ಮ ಬುದ್ಧಿಶಕ್ತಿಯ ಅನುಗುಣವಾಗಿ ನಾನಾ ಬಗೆಯಲ್ಲಿ ಒಳಹೊಕ್ಕು ಹುಡುಕಿದೆವು. ಕುರುರಾಜನೇ ಕೇಳು, ನಿನ್ನ ವೈರಿಗಳು ನಿರ್ನಾಮರಾದರು- ಹೇಳಹೆಸರಿಲ್ಲದಂತಾದರು, ಎಲ್ಲಿಯೂ ಇಲ್ಲ' ಎಂದರು ದೂತರು.
ಎನಲು ನಸುನಗುತರಸ ಮನದಲಿ
ತನಗೆ ಹಗೆಯಿಲ್ಲೆಂದು ದೂತರ
ಮನವೊಲಿದು ಮನ್ನಿಸಿದ ನಾಲುಕು ಕಡೆಯ ವಾರ್ತೆಗಳ |
ತನತನಗೆ ಮಂತ್ರಿಗಳು ಬೆಸಗೊಳ
ಲನಿತು ದೂತರೊಳಬ್ಬ ಕೀಚಕ
ಹನನವನು ವಿಸ್ತರಿಸಿದನು ಕುರುರಾಯನಿದಿರಿನಲಿ || ೩ ||
ಪದವಿಭಾಗ-ಅರ್ಥ: ಎನಲು ನಸುನಗುತ+ ಅರಸ ಮನದಲಿ ತನಗೆ ಹಗೆಯಿಲ್ಲೆಂದು ದೂತರ ಮನವೊಲಿದು ಮನ್ನಿಸಿದ, ನಾಲುಕು ಕಡೆಯ ವಾರ್ತೆಗಳ ತನತನಗೆ ಮಂತ್ರಿಗಳು ಬೆಸಗೊಳಲು+ ಅನಿತು ದೂತರೊಳು+ ಒಬ್ಬ ಕೀಚಕ ಹನನವನು ವಿಸ್ತರಿಸಿದನು ಕುರುರಾಯನ+ ಇದಿರಿನಲಿ.
(ದೂತರು ಹಾಗೆ ಹೇಳಲು)-ಎನಲು ನಸುನಗುತ+ ಅರಸ ಮನದಲಿ ತನಗೆ ಹಗೆಯಿಲ್ಲೆಂದು- ಶತ್ರುಗಳ ಕಾಟ ಇಲ್ಲ ಎಂದು, ದೂತರ ಮನವೊಲಿದು ಮನ್ನಿಸಿದ- ದೂತರನ್ನು ಮನಮೆಚ್ಚುವಂತೆ ಸಂಭಾವನೆ ಉಡುಗೊರೆ ಕೊಟ್ಟು ಮನ್ನಣೆ ಮಾಡಿದ./,ನಾಲುಕು ಕಡೆಯ ವಾರ್ತೆಗಳ ತನತನಗೆ ಮಂತ್ರಿಗಳು ಬೆಸಗೊಳಲು+ ಅನಿತು ದೂತರೊಳು+ ಒಬ್ಬ ಕೀಚಕ ಹನನವನು ವಿಸ್ತರಿಸಿದನು ಕುರುರಾಯನ+ ಇದಿರಿನಲಿ= ನಾಲ್ಕು ಕಡೆಯ ವಾರ್ತೆಗಳನ್ನು ಮಂತ್ರಿಗಳು ತಮತಮಗೆ ಹೇಳಲು ತಿಳಿಸಿದಾಗ, ಬೆಸಗೊಳಲು- ಅವರು ಹೇಳಲು+ ಅನಿತು ದೂತರೊಳು+ (ಆದೂತರಲ್ಲಿ ಒಬ್ಬನು)ಒಬ್ಬ ಕೀಚಕ ಹನನವನು- ವಧೆಯನ್ನು, ವಿಸ್ತರಿಸಿದನು- ವಿಸ್ತಾರವಾಗಿ ಹೇಳಿದನು. ಕುರುರಾಯನ+ ಇದಿರಿನಲಿ- ಕೌರವನ ಎದುರಲ್ಲಿ.
ಅರ್ಥ: ದೂತರು ಹಾಗೆ ಹೇಳಲು ನಸುನಗುತ್ತಾ ಅರಸನು ಮನಸ್ಸಿಲ್ಲಿ ತನಗೆ ಶತ್ರುಗಳ ಕಾಟ ಇಲ್ಲ ಎಂದು ಭಾವಿಸಿ ದೂತರನ್ನು ಮನಮೆಚ್ಚುವಂತೆ ಸಂಭಾವನೆ ಉಡುಗೊರೆ ಕೊಟ್ಟು ಮನ್ನಣೆ ಮಾಡಿದ. ನಾಲ್ಕೂ ಕಡೆಯ ವಾರ್ತೆಗಳನ್ನು ಮಂತ್ರಿಗಳು ತಮತಮಗೆ ಹೇಳಲು ತಿಳಿಸಿದಾಗ, ಅವರು ಹೇಳಲು, ಆದೂತರಲ್ಲಿ ಒಬ್ಬನು ಒಬ್ಬ ಕೀಚಕ ವಧೆಯನ್ನು, ಕೌರವನ ಎದುರಲ್ಲಿ ವಿಸ್ತಾರವಾಗಿ ಹೇಳಿದನು.
ಒಂದು ವಾರ್ತೆಯಲಾ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ |
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ || ೪ ||
ಪದವಿಭಾಗ-ಅರ್ಥ: ಒಂದು ವಾರ್ತೆಯಲಾ ತ್ರಿಗರ್ತ+ ಆನಂದಕರವು+ ಇದು ಜೀಯ ಕೀಚಕ ವೃಂದವನು ಗಂಧರ್ವರು+ ಇರುಳು+ ಐತಂದು ಖಾತಿಯಲಿ ಕೊಂದು ಹೋದರು ರಾವಣನ ವಿಧಿಯಿಂದು ಕೀಚಕಗಾಯಿತು+ ಎನೆ ಕೇಳ್ದೊಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ.
ಒಂದು ವಾರ್ತೆಯಲಾ ತ್ರಿಗರ್ತ+ ಆನಂದಕರವು+ ಇದು= ಒಂದು ವಾರ್ತೆಇದೆ. ಇದು ಕೌರವನ ಸಾಮಂತ ಮಿತ್ರ ತ್ರಿಗರ್ತದ ರಾಜರಿಗೆ ಆನಂದಕರವು.// ಜೀಯ ಕೀಚಕ ವೃಂದವನು ಗಂಧರ್ವರು+ ಇರುಳು+ ಐತಂದು ಖಾತಿಯಲಿ ಕೊಂದು ಹೋದರು ರಾವಣನ ವಿಧಿಯಿಂದು ಕೀಚಕಗಾಯಿತು+ ಎನೆ= ಜೀಯ ಕೀಚಕ ಸಮೂಹವನ್ನು ಗಂಧರ್ವರು ಇರುಳು- ರಾತ್ರಿಯ ಸಮಯದಲ್ಲಿ, ಐತಂದು- ಬಂದು ಖಾತಿಯಲಿ ಕೊಂದು ಹೋದರು- ಸಿಟ್ಟಿನಿಂದ ಕೊಂದು ಹೋದರು, ರಾವಣನ ವಿಧಿ+ಯ + ಇಂದು ಕೀಚಕಗಾಯಿತು+ ಎನೆ= ರಾವಣನು ಹೆಣ್ನನ್ನು ಮೋಹಿಸಿ ಸತ್ತಂತೆ ಕೀಚಕನು ರಾಣಿವಾಸದ ಹೆಣ್ನನ್ನು ಮೋಹಿಸಿ ಸಾವಿಗೀಡಾದನು ಎನ್ನಲು,// ಕೇಳ್ದ+ ಒಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ= ಕೇಳಿದಾಗ ಒಂದು ನಿಮಿಷ ಮಹೀಶ ಕೌರವನು ಮೋನವ- ಮೌನವನ್ನು, ಹಿಡಿದು-ವಹಿಸಿ, ಬೆರಗಾದ - ಆಶ್ಚರ್ಯಪಟ್ಟ.
ಅರ್ಥ: ಒಂದು ವಾರ್ತೆಇದೆ. ಇದು ಕೌರವನ ಸಾಮಂತ ಮಿತ್ರ ತ್ರಿಗರ್ತದ ರಾಜರಿಗೆ ಆನಂದಕರವು. ಜೀಯ ತ್ರಿಗರ್ತರ ಶತ್ರು ಕೀಚಕ ಸಮೂಹವನ್ನು ಗಂಧರ್ವರು ರಾತ್ರಿಯ ಸಮಯದಲ್ಲಿ ಬಂದು ಸಿಟ್ಟಿನಿಂದ ಕೊಂದು ಹೋದರು, ರಾವಣನು ಹೆಣ್ನನ್ನು ಮೋಹಿಸಿ ಸತ್ತಂತೆ, ಕೀಚಕನು ರಾಣಿವಾಸದ ಹೆಣ್ನನ್ನು ಮೋಹಿಸಿ ಸಾವಿಗೀಡಾದನು ಎನ್ನಲು, ಕೇಳಿದಾಗ ಒಂದು ನಿಮಿಷ ಮಹೀಶ ಕೌರವನು ಮೌನವನ್ನು ವಹಿಸಿ ಬೆರಗಾದ.
ಹೇಳು ಹೇಳಿನ್ನೊಮ್ಮೆ ಮತ್ಸ್ಯನ
ತೋಳು ಮುರಿದುದೆ ಸುಭಟರೊಳು ಕ
ಟ್ಟಾಳು ಕೀಚಕ ಮಡಿದನೇ ಗಂಧರ್ವರಿರಿದವರೇ |
ಮೇಲಣವರಿಗೆ ಮರ್ತ್ಯರಿಗೆ ಕೈ
ಕಾಲು ಮೆಟ್ಟಿನ ತೋಟಿಯೇತಕೆ
ಹೋಲದೋ ಹುಸಿ ಹೋಗೆನುತ ಮುಖದಿರುಹಿದನು ಭೂಪ || ೫ ||
ಪದವಿಭಾಗ-ಅರ್ಥ: ಹೇಳು ಹೇಳು+ ಇನ್ನೊಮ್ಮೆ ಮತ್ಸ್ಯನತೋಳು ಮುರಿದುದೆ, ಸುಭಟರೊಳು ಕಟ್ಟಾಳು ಕೀಚಕ ಮಡಿದನೇ, ಗಂಧರ್ವರು+ ಇರಿದವರೇ ಮೇಲಣವರಿಗೆ ಮರ್ತ್ಯರಿಗೆ ಕೈಕಾಲು ಮೆಟ್ಟಿನ ತೋಟಿಯೇತಕೆ, ಹೋಲದೋ ಹುಸಿ ಹೋಗೆನುತ ಮುಖ+ ದಿ+ ತಿರುಹಿದನು ಭೂಪ
ಹೇಳು ಹೇಳು+ ಇನ್ನೊಮ್ಮೆ ಮತ್ಸ್ಯನತೋಳು ಮುರಿದುದೆ= ಹೇಳು ಹೇಳು! ಇನ್ನೊಮ್ಮೆ ಹೇಳು, ಮತ್ಸ್ಯನತೋಳು ಮುರಿದುದೆ- ಮರಿಯಿತೇ?- ಮತ್ಸ್ಯ ವಿರಾಟನ ತೋಳಿನಮತಿದ್ದ ಕೀಚಕ ಸತ್ತನೇ?, ಸುಭಟರೊಳು ಕಟ್ಟಾಳು ಕೀಚಕ ಮಡಿದನೇ, ಗಂಧರ್ವರು+ ಇರಿದವರೇ- ಕೊಂದರೇ? ಮೇಲಣವರಿಗೆ- ದೇವತೆಗಳಿಗೆ, ಮರ್ತ್ಯರಿಗೆ- ಮಾನವರಿಗೆ, ಕೈಕಾಲು ಮೆಟ್ಟಿನ ತೋಟಿಯೇತಕೆ= ಭೂಮಿಯಲ್ಲಿ ಓಡಾಡುವವರ ತಂಟೆ ಏಕೆ?, ಹೋಲದೋ ಹುಸಿ ಹೋಗೆನುತ ಮುಖ+ ದಿ+ ತಿರುಹಿದನು ಭೂಪ= ಕೀಚಕನ ಕಥೆಯು ಸತ್ಯಕ್ಕೆ ಹೋಲದು, ಇದು ಹುಸಿಕಥೆ ಹೋಗಯ್ಯಾ ಎಂದು ಮುಖವನ್ನು ಅಡ್ಡ ತಿರುಗಿಸಿ ಮಂತ್ರಿಗಳನ್ನು ನೋಡಿದನು.
ಅರ್ಥ:ಹೇಳು ಹೇಳು! ಇನ್ನೊಮ್ಮೆ ಹೇಳು, ಮತ್ಸ್ಯನತೋಳು ಮರಿಯಿತೇ?- ಮತ್ಸ್ಯ ವಿರಾಟನ ತೋಳಿನಮತಿದ್ದ ಕೀಚಕ ಸತ್ತನೇ?, ಅವನು ಸುಭಟರೊಳು ಕಟ್ಟಾಳು, ಆ ಕೀಚಕ ಮಡಿದನೇ? ಗಂಧರ್ವರು ಕೊಂದರೇ? ಮೇಲಣವರಿಗೆ- ದೇವತೆಗಳಿಗೆ, ಭೂಮಿಯಲ್ಲಿ ಓಡಾಡುವವರ ತಂಟೆ ಏಕೆ?, ಕೀಚಕನ ಕಥೆಯು ಸತ್ಯಕ್ಕೆ ಹೋಲದು, ಇದು ಹುಸಿಕಥೆ ಹೋಗಯ್ಯಾ ಎಂದು ಮುಖವನ್ನು ಅಡ್ಡ ತಿರುಗಿಸಿ ಮಂತ್ರಿಗಳನ್ನು ನೋಡಿದನು.
ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದಲ್ಲಿ ಸತಿಯಿರಲು |
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹವ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ || ೬ ||
ಪದವಿಭಾಗ-ಅರ್ಥ: ಅಹುದು ಜೀಯ+ ಅವಧರಿಸು ದಿವಿಜರ ಮಹಿಳೆಯು+ ಓಲೈಸಿದಳು ಮತ್ಸ್ಯನ ಮಹಿಳೆಯನು ಬಳಿಕ+ ಆಕೆಯ+ ಓಲಗದಲ್ಲಿ ಸತಿಯಿರಲು ಕುಹಕಿ ಕಂಡು+ ಅಳುಪಿದರೆ ನಾಟ್ಯದ ಗೃಹವ ಸೂಚನೆಗೊಟ್ಟು ನಿಮಿಷಕೆ ರಹವ (ನಿಗ್ರಹಿಸು.) ಮಾಡಿದರು+ ಅವರು ಸವರಿದರಖಿಳ ಕೀಚಕರ.
ಅಹುದು ಜೀಯ+ ಅವಧರಿಸು- ಅದು ನಿಜ ಜೀಯ, ಕೇಳು,/ ದಿವಿಜರ ಮಹಿಳೆಯು+ ಓಲೈಸಿದಳು ಮತ್ಸ್ಯನ ಮಹಿಳೆಯನು= ದೇವತೆಗಳ ಹೆಣ್ಣು ಬಂದು ವಿರಾಟನ ರಾಣಿಯನ್ನು ಸೇವೆಮಾಡಿದಳು.// ಬಳಿಕ+ ಆಕೆಯ+ ಓಲಗದಲ್ಲಿ- ಸಬೆಯಲ್ಲಿ ಸತಿಯಿರಲು- ಇದ್ದಾಗ, ಕುಹಕಿ ಕಂಡು+ ಅಳುಪಿದರೆ- ಕುಹಕಿ ಕೀಚಕ ಕಂಡು ಅವಳಿಗೆ ಮನಸೋತನು,/ ನಾಟ್ಯದ ಗೃಹವ ಸೂಚನೆಗೊಟ್ಟು ನಿಮಿಷಕೆ ರಹವ (ನಿಗ್ರಹಿಸು.) ಮಾಡಿದರು+ ಅವರು ಸವರಿದರು+ ಅಖಿಳ ಕೀಚಕರ= ಅವಳು ನಾಟ್ಯದ ಗೃಹವ ಸೂಚನೆಯನ್ನು ಕೊಟ್ಟು ಕರೆಸಿ, ನಿಮಿಷದಲ್ಲಿ ಅವನನ್ನು ರಹವ ಮಾಡಿದರು+ - ನಿಗ್ರಹಿಸಿ, ಅವರು ಸವರಿದರು+ ಎಲ್ಲಾ ಕೀಚಕ ಸೊದರರನ್ನೂ ಸವರಿದರು- ಕೊಂದರು.
ಅರ್ಥ:ದೂತ ಹೇಳಿದ, ಅದು ನಿಜ ಜೀಯ, ಕೇಳು, ದೇವತೆಗಳ ಹೆಣ್ಣು ಬಂದು ವಿರಾಟನ ರಾಣಿಯನ್ನು ಸೇವೆಮಾಡಿದಳು. ಬಳಿಕ ಆಕೆಯ ಅಂತಃಪುರದ ಸಬೆಯಲ್ಲಿ ಸತಿ ಇದ್ದಾಗ ಕುಹಕಿ ಕೀಚಕ ಕಂಡು ಅವಳಿಗೆ ಮನಸೋತನು, ಅವಳು ನಾಟ್ಯಗೃಹವ ಸೂಚನೆಯನ್ನು ಕೊಟ್ಟು ಕರೆಸಿ, ಅಲ್ಲಿ ಗಂಧರ್ವರು ಬಂದು ನಿಮಿಷದಲ್ಲಿ ಅವನನ್ನು ನಿಗ್ರಹಿಸಿ, ಎಲ್ಲಾ ಕೀಚಕ ಸೊದರರನ್ನೂ ಕೊಂದರು.
ಅವನಿಪತಿ ಮೂಗಿನಲಿ ಕರ ಪ
ಲ್ಲವವನಿಟ್ಟನು ತಲೆಯ ತೂಗಿದ
ನವಳು ದುರುಪದಿ ಖಳರ ಕೊಂದವ ಭೀಮ ಗಂಧರ್ವ |
ದಿವಿಜ ಸತಿಯೆತ್ತಲು ವಿರಾಟನ
ಭವನದೋಲಗವೆತ್ತಲದು ಪಾಂ
ಡವರ ಕೃತ್ರಿಮ ತಂತ್ರ ಮರೆಯಿರಿಗಾರರವರೆಂದ || ೭ ||
ಪದವಿಭಾಗ-ಅರ್ಥ: ಅವನಿಪತಿ ಮೂಗಿನಲಿ ಕರ ಪಲ್ಲವವನು+ ಇಟ್ಟನು, ತಲೆಯ ತೂಗಿದನು+, ಅವಳು ದುರುಪದಿ ಖಳರ ಕೊಂದವ ಭೀಮ ಗಂಧರ್ವ ದಿವಿಜ ಸತಿಯೆತ್ತಲು ವಿರಾಟನ ಭವನದೋಲಗವು+ ಎತ್ತಲು+ ಅದು ಪಾಂಡವರ ಕೃತ್ರಿಮ ತಂತ್ರ ಮರೆಯಿರಿಗಾರರು+ ಅವರೆಂದ.
ಅವನಿಪತಿ ಮೂಗಿನಲಿ ಕರ ಪಲ್ಲವವನು+ ಇಟ್ಟನು= ಕೌರವನು ಮೂಗಿನ ಮೇಲೆ ಕರಪಲ್ಲವವನು ಕೈಹಸ್ತವನ್ನು+ ಇಟ್ಟನು, ಯೋಚಿಸಿ/ ತಲೆಯ ತೂಗಿದ- ತಲೆಯನ್ನು ತೂಗಿದನು+,// ಅವಳು ದುರುಪದಿ- ದ್ರೌಪದಿ, ಖಳರ- ಕೀಚಕರನ್ನು ಕೊಂದವ ಭೀಮ-ಗಂಧರ್ವ, ದಿವಿಜ ಸತಿಯೆತ್ತಲು- ದೇವತೆಗಳ ಸತಿ- ಹೆಣ್ನು ಎತ್ತ? ವಿರಾಟನ ಭವನದೋಲಗವು+ ಎತ್ತಲು- ವಿರಾಟರಾಜನ ಮನೆಯ- ರಾಣಿಯ ಸಭೆ ಎತ್ತ? ಸಂಬಂಧವಿಲ್ಲದ ವಿಚಾರ,+ ಅದು ಪಾಂಡವರ ಕೃತ್ರಿಮ ತಂತ್ರ, ಮರೆಯ- ವೇಷಮರೆಸಿಕೊಂಡ, - ತಲೆಮರೆಸಿಕೊಂಡ+ ಇರಿಗಾರರು+ ಅವರೆಂದ-ಅದು ಅವರು ಮರೆಯ-ಅಡಗಿಕೊಂಡ ಇರಿಗಾರರು- ಇರಿಯುವವರು- ಕೊಲ್ಲುವವರು (ಕೀಚಕರನ್ನು ಕೊಂದವರು) ಎಂದ.
ಅರ್ಥ: ಕೌರವನು ಮೂಗಿನ ಮೇಲೆ ಕೈಹಸ್ತವನ್ನು ಇಟ್ಟು ಯೋಚಿಸಿ ತಲೆಯನ್ನು ತೂಗಿದನು. ಅವಳು ದ್ರೌಪದಿ, ಖಳರಾದ ಕೀಚಕರನ್ನು ಕೊಂದವ ಭೀಮ-ಗಂಧರ್ವನು, ದೇವತೆಗಳ ಸತಿ- ಹೆಣ್ಣು ಎತ್ತ? ವಿರಾಟರಾಜನ ಮನೆಯ- ರಾಣಿಯ ಸಭೆ ಎತ್ತ? ಸಂಬಂಧವಿಲ್ಲದ ವಿಚಾರ, ಅದು ಪಾಂಡವರ ಕೃತ್ರಿಮ ತಂತ್ರ; ಅವರು ವೇಷಮರೆಸಿಕೊಂಡ ಅಡಗಿಕೊಂಡ ಇರಿಗಾರರು- ಕೊಲ್ಲುವವರು ಎಂದ.
ಪರಿಮಳವ ಕದ್ದೋಡವನಿಲನ
ಹರಿವ ಹೆಜ್ಜೆಯ ಹತ್ತುವರೆ ಮಧು
ಕರನೆ ಬಲ್ಲುದು ಜೀಯ ಬಲ್ಲಿರಿ ನಿಮ್ಮವರ ಪರಿಯ
ಹರದ ಮಾತಿನ ಹದನು ಬಳಿಕಾ
ಚರರಿಗಿದು ಗೋಚರಿಸುವುದೆಯೆಂ
ದರಸನನು ಕೊಂಡಾಡಿದರು ಮಂತ್ರಿಗಳು ತವತವಗೆ ೮
ಪದವಿಭಾಗ-ಅರ್ಥ: ಪರಿಮಳವ ಕದ್ದೋಡವ+ ಅನಿಲನ ಹರಿವ ಹೆಜ್ಜೆಯ ಹತ್ತುವರೆ ಮಧುಕರನೆ ಬಲ್ಲುದು, ಜೀಯ ಬಲ್ಲಿರಿ ನಿಮ್ಮವರ ಪರಿಯ+ ಹರದ ಮಾತಿನ ಹದನು ಬಳಿಕ+ ಆ ಚರರಿಗೆ+ ಇದು ಗೋಚರಿಸುವುದೆಯೆಂದು+ ಅರಸನನು ಕೊಂಡಾಡಿದರು ಮಂತ್ರಿಗಳು ತವತವಗೆ.
ಪರಿಮಳವ ಕದ್ದೋಡವ+ ಅನಿಲನ(ಗಾಳಿಯ) ಹರಿವ ಹೆಜ್ಜೆಯ ಹತ್ತುವರೆ ಮಧುಕರನೆ ಬಲ್ಲುದು= ಹೂವಿನ ಪರಿಮಳವನ್ನು ತೆಗೆದುಕೊಂಡು ಬೀಸುವ ಗಾಳಿಯ ಹೆಜ್ಜೆಯನ್ನು ಜೇನುಹುಳು ಮಾತ್ರಾ ತಿಳಿಯಬಲ್ಲದು, ಜೀಯ ಬಲ್ಲಿರಿ ನಿಮ್ಮವರ ಪರಿಯ+ ಹರದ ಮಾತಿನ ಹದನು ಬಳಿಕ+ ಆ ಚರರಿಗೆ+ ಇದು ಗೋಚರಿಸುವುದೆಯೆಂದು+ ಅರಸನನು ಕೊಂಡಾಡಿದರು ಮಂತ್ರಿಗಳು ತವತವಗೆ= ಜೀಯ ಬಲ್ಲಿರಿ ನಿಮ್ಮವರ ಪರಿಯ+ ಹರದ ಮಾತಿನ ಹದನು - ನಿಮ್ಮ ರಾಜವಂಶದವರ ರೀತಿಯನ್ನು ನೀವು ಮಾತ್ರಾ ತೀಲಿಯಬಲ್ಲಿರಿ, ಅದರ ಶತ್ರುಗಳ ರಹಸ್ಯದ ಮಾತಿನ ಹದನವನು- ರೀತಿಯನ್ನು,// ಬಳಿಕ+ ಆ ಚರರಿಗೆ+ ಇದು ಗೋಚರಿಸುವುದೆಯೆಂದು+ ಅರಸನನು ಕೊಂಡಾಡಿದರು ಮಂತ್ರಿಗಳು ತವತವಗೆ= ಬಳಿಕ+ ಆ ಚರರಿಗೆ+ ಇದು ಗೋಚರಿಸುವುದೆಯೆಂದು+- ರಾಜನು ಹೀಗೆಂದ ಬಳಿಕ ಮಂತ್ರಿಗಳು ತಮ್ಮತಮ್ಮಲ್ಲಿ ಆ ದುತರಿಗೆ ಇದು ಗೋಚರಿಸುವುದು ಸಾಧ್ಯವೇ? ಎಂದು ಮಾನಾಡಿಕೊಂಡು, ಅರಸನನು ಕೊಂಡಾಡಿದರು- ಹೊಗಳಿದರು.
ಅರ್ಥ: ಹೂವಿನ ಪರಿಮಳವನ್ನು ತೆಗೆದುಕೊಂಡು ಬೀಸುವ ಗಾಳಿಯ ಹೆಜ್ಜೆಯನ್ನು ಜೇನುಹುಳು ಮಾತ್ರಾ ತಿಳಿಯಬಲ್ಲದು, ಜೀಯ ನಿಮ್ಮವರ ರೀತಿಯನ್ನು ಬಲ್ಲಿರಿ; ಅವರ ಮೋಸದ ಮಾತಿನ ಕ್ರಮವನ್ನು ಮತ್ತು ನಿಮ್ಮ ರಾಜವಂಶದವರ ರೀತಿಯನ್ನು ನೀವು ಮಾತ್ರಾ ತೀಲಿಯಬಲ್ಲಿರಿ, ಶತ್ರುಗಳ ರಹಸ್ಯದ ಮಾತಿನ ರೀತಿಯನ್ನು ನೀವೇ ಬಲ್ಲಿರಿ. ಅಂದಬಳಿಕ ಆ ದೂತರಿಗೆ ಇದು ಗೋಚರಿಸುವುದೆ? ಎಂದು ರಾಜನು ಹಾಗೆ ಹೇಳಿದ ಬಳಿಕ ಮಂತ್ರಿಗಳು ತಮ್ಮತಮ್ಮಲ್ಲಿ ಆ ದೂತರಿಗೆ ಇದು ಗೋಚರಿಸುವುದು ಸಾಧ್ಯವೇ? ಎಂದು ಮಾನಾಡಿಕೊಂಡು, ಅರಸನನ್ನು ಹೊಗಳಿದರು.
ಪ್ರೌಢಿಯಲ್ಲಿದು ಕೇಳಿ ಬಲ್ಲೆವು
ರೂಢಿಯಲಿ ಸಮಬಲರು ಭೀಮ ಸ
ಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬುವರು |
ಗೂಢರನು ಗರುವಾಯಿಗೆಡಿಸಿಯೆ
ಗಾಢಿಕೆಯ ನೆರೆ ಮೆರೆಯಬೇಕೆನೆ
ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕೆಂದ || ೯ ||
ಪದವಿಭಾಗ-ಅರ್ಥ: ಪ್ರೌಢಿಯಲ್ಲಿದು ಕೇಳಿ ಬಲ್ಲೆವು ರೂಢಿಯಲಿ ಸಮಬಲರು ಭೀಮ ಸಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬುವರು ಗೂಢರನು ಗರುವಾಯಿಗೆಡಿಸಿಯೆ ಗಾಢಿಕೆಯ ನೆರೆ ಮೆರೆಯಬೇಕು+ ಎನೆ ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕು+ ಎಂದ.
ಪ್ರೌಢಿಯಲ್ಲ+ ಇದು= ಕೌರವನು ತಾನು ಹೇಳಿದ ಮಾತು ಬಹಳ ಜಾಣತನದ್ದೇನೂ ಅಲ್ಲ, (ಎಂದ.) ಕೇಳಿ ಬಲ್ಲೆವು ರೂಢಿಯಲಿ ಸಮಬಲರು ಭೀಮ ಸಗಾಢದಲಿ ಬಲಭದ್ರ ಕೀಚಕ ಶಲ್ಯರು+ ಎಂಬುವರು= ಕಾರಣ, ತಾವು ಬೇರೆಯವರಿಂದ ಕೇಳಿ ತಿಳಿದಿದ್ದೇವೆ ರೂಢಿಯಲ್ಲಿರುವುದನ್ನು ಹೇಳಿದ್ದೇನೆ, ಸಮಬಲರು ಭೀಮನು, ಸಗಾಢದಲಿ- ದೇಹಬಲದಲ್ಲಿ, ಬಲಭದ್ರ- ಬಲರಾಮ, ಕೀಚಕ ಶಲ್ಯರು+ ಎಂಬುವರು.// ಗೂಢರನು - ರಹಸ್ಯದಲ್ಲಿ ಇರುವವರನ್ನು, ಗರುವಾಯಿ+ ಗ+ ಕೆಡಿಸಿಯೆ- ಗರುವಾಯಿ- ದೊಡ್ಡತನ; ಆವರ ಬಲಶಾಲಿತನವನ್ನು ಹೊರಗೆಹಾಕಿಯೇ, ಗಾಢಿಕೆಯ ನೆರೆ ಮೆರೆಯಬೇಕು+ - ನಮ್ಮ ಜಾಣತನದ ಗಾಢಿಕೆಯನ್ನು ಶಕ್ತಿಯನ್ನು ತೋರಿಸಬೇಕು, ಎನೆ- ಎನ್ನಲು,/ ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕು+ ಎಂದ= ರೂಢಿಯು ರಾಜನೀತಿಯು ಅವರ ಗುಟ್ಟನ್ನ ಹೊರಹಾಕಲು, ಸಮತಳಿಸಿತ್ತು- ಸರಿಸಮಕ್ರಮವು ತೋರಿತು-, ಸೇನೆಯ ನೆರಹಬೇಕು+ ಎಂದ - ಸೇನೆಯನ್ನು ಸೇರಿಸಿ ದಾಳಿಗೆ ಸಿದ್ಧಪಡಿಸಬೇಕು ಎಂದ.
ಅರ್ಥ: ಕೌರವನು ತಾನು ಹೇಳಿದ ಮಾತು ಬಹಳ ಜಾಣತನದ್ದೇನೂ ಅಲ್ಲ, ಕಾರಣ, ತಾವು ಬೇರೆಯವರಿಂದ ಕೇಳಿ ತಿಳಿದಿದ್ದೇವೆ ರೂಢಿಯಲ್ಲಿರುವುದನ್ನು ಹೇಳಿದ್ದೇನೆ, ದೇಹಬಲದಲ್ಲಿ ಭೀಮ, ಬಲರಾಮ, ಕೀಚಕ, ಶಲ್ಯರು ಎಂಬುವವರು ಸಮಬಲರು. ರಹಸ್ಯದಲ್ಲಿ ಇರುವವರನ್ನು, ಆವರ ಬಲಶಾಲಿತನವನ್ನು ಹೊರಗೆಹಾಕಿಯೇ ನಮ್ಮ ಜಾಣತನದ ಶಕ್ತಿಯನ್ನು ತೋರಿಸಬೇಕು ಎನ್ನಲು, ಅವರ ಗುಟ್ಟನ್ನ ಹೊರಹಾಕಲು ರೂಢಿಯು ರಾಜನೀತಿಯು ಸರಿಸಮಕ್ರಮವಾಗಿ, ಸೇನೆಯನ್ನು ಸೇರಿಸಿ ದಾಳಿಗೆ ಸಿದ್ಧಪಡಿಸಬೇಕು ಎಂದ.
ಕರೆಸಿದನು ಗಾಂಗೇಯ ಗರುಡಿಯ
ಗುರುವನಶ್ವತ್ಥಾಮ ಸಂಜಯ
ವರ ಕೃಪಾಚಾರಿಯನ ಸೈಂಧವ ಸೂರ್ಯನಂದನನ |
ಬರಿಸಿದನು ತೆಂಕಣದ ದಿಗುತಟ
ದರಸುಗಳ ದೆಸೆಯಿಂದ ಬೇಹಿನ
ಚರರು ಬಂದರು ಕೇಳಿರೈ ಹೊಸ ವಾರ್ತೆಯನುಯೆಂದ || ೧೦ ||
ಪದವಿಭಾಗ-ಅರ್ಥ: ಕರೆಸಿದನು ಗಾಂಗೇಯ ಗರುಡಿಯ ಗುರುವನು+ ಅಶ್ವತ್ಥಾಮ ಸಂಜಯವರ ಕೃಪಾಚಾರಿಯನ ಸೈಂಧವ ಸೂರ್ಯನಂದನನ, ಬರಿಸಿದನು ತೆಂಕಣದ ದಿಗುತಟದ+ ಅರಸುಗಳ ದೆಸೆಯಿಂದ ಬೇಹಿನ+ ಚರರು ಬಂದರು ಕೇಳಿರೈ ಹೊಸ ವಾರ್ತೆಯನು+ ಯ+ ಎಂದ.
(ದುರ್ಯೋಧನನು) ಕರೆಸಿದನು ಗಾಂಗೇಯ- ಭೀಷ್ಮನನ್ನು, ಗರುಡಿಯ ಗುರುವನು- ದ್ರೋಣರನ್ನು,+ ಅಶ್ವತ್ಥಾಮ, ಸಂಜಯ,ವರ ಕೃಪಾಚಾರಿಯನ- ಕೃಪಾಚಾರ್ಯ, ಸೈಂಧವ, ಸೂರ್ಯನಂದನನ- ಕರ್ಣ, ಬರಿಸಿದನು ತೆಂಕಣದ- ದಕ್ಷಿಣ-, ದಿಗುತಟದ- ದಿಕ್ಕಿನ+ ಅರಸುಗಳ ದೆಸೆಯಿಂದ ಬೇಹಿನ+ ಚರರು ಬಂದರು ಕೇಳಿರೈ ಹೊಸ ವಾರ್ತೆಯನು+ ಯ+ ಎಂದ
ಅರ್ಥ: ದುರ್ಯೋಧನನು ಭೀಷ್ಮನನ್ನು, ಗರುಡಿಯ ಗುರು ದ್ರೋಣರನ್ನು, ಅಶ್ವತ್ಥಾಮ ಸಂಜಯರನ್ನೂ, ಶ್ರೇಷ್ಠ ಕೃಪಾಚಾರ್ಯರನ್ನೂ, ಸೈಂಧವ, ಮತ್ತು ಕರ್ಣನನ್ನೂ, ಸಭೆಗೆ ಬರಮಾಡಿಕೊಂಡನು. ಅವರಿಗೆ ದಕ್ಷಿಣ ದಿಕ್ಕಿನ ಅರಸುಗಳ ಕಡೆಯಿಂದ ಬೇಹುಗಾರ ಚರರು ಬಂದರು, ಅವರು ಹೇಳಿದ ಹೊಸ ವಾರ್ತೆಯನ್ನು ಕೇಳಿರಯ್ಯಾ, ಎಂದ.
ಭೀಮ ಕೀಚಕ ಶಲ್ಯನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ |
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು || ೧೧ ||
ಪದವಿಭಾಗ-ಅರ್ಥ: ಭೀಮ ಕೀಚಕ ಶಲ್ಯನ+ ಈ ಬಲರಾಮನು+ ಎಂಬೀ+ ಈ ನಾಲುವರು ಸಂಗ್ರಾಮದೊಳು ಸರಿ, ಖಚರರು+ ಎಂಬುದು ಬಯಲಿನ+ ಅಪವಾದ ಭೀಮನಾಗಲು ಬೇಕು ಕೀಚಕ ಕಾಮುಕನ ದುರುಪದಿಗೆ ಅಳುಪಿದ ತಾಮಸನ ಹಿಡಿದು+ ಒರೆಸಿದವನು+ ಎಂದನು ಸುಯೋಧನನು
ಭೀಮ ಕೀಚಕ ಶಲ್ಯನ+ ಈ ಬಲರಾಮನು+ ಎಂಬೀ+ ಈ ನಾಲುವರು ಸಂಗ್ರಾಮದೊಳು ಸರಿ,= ಭೀಮ, ಕೀಚಕ, ಶಲ್ಯನು,+ ಈ ಬಲರಾಮನು, ಎಂಬ ಈ ನಾಲ್ವರು ಮಲ್ಲಯುದ್ಧದಲ್ಲಿ ಸರಿಸಮರು.// ಖಚರರು+ ಎಂಬುದು ಬಯಲಿನ (ಸುಳ್ಳಿನ)+ ಅಪವಾದ= ಗಂಧರ್ವರು ಕೀಚಕನನ್ನು ಕೊಂದರು ಎಂಬುದು ಸುಳ್ಳಿನ ಅಪವಾದ- ತೋರಿಕೆ ಮಾತು. // ಭೀಮನಾಗಲು ಬೇಕು ಕೀಚಕ ಕಾಮುಕನ ದುರುಪದಿಗೆ ಅಳುಪಿದ ತಾಮಸನ ಹಿಡಿದು+ ಒರೆಸಿದವನು+= ಭೀಮನಾಗಲು ಬೇಕು ಕೀಚಕ ಕಾಮುಕನನ್ನು ದ್ರೌಪದಿಗೆ ಅಳುಪಿದ- ಮನಸೋತ ತಾಮಸನ- ದುಷ್ಟನ ಹಿಡಿದು+ ಒರೆಸಿದವನು- ಕೊಂದವನು ಎಂದನು ಸುಯೋಧನನು.
ಅರ್ಥ: ಭಮ, ಕೀಚಕ, ಶಲ್ಯನು,+ ಈ ನಮ್ಮ ಬಲರಾಮನು, ಎಂಬ ಈ ನಾಲ್ವರು ಮಲ್ಲಯುದ್ಧದಲ್ಲಿ ಸರಿಸಮರು. ಗಂಧರ್ವರು ಕೀಚಕನನ್ನು ಕೊಂದರು ಎಂಬುದು ಸುಳ್ಳಿನ ತೋರಿಕೆ ಮಾತು. ದ್ರೌಪದಿಗೆ ಮನಸೋತ ದುಷ್ಟ ಕೀಚಕ ಕಾಮುಕನನ್ನು ಹಿಡಿದು ಕೊಂದವನು ಭೀಮನಾಗಿರಬೇಕು, ಎಂದನು ಸುಯೋಧನನು.
ಮಾತು ಹೋಲುವೆಯಹುದು ನುಡಿದುದು
ನೀತಿ ಧರ್ಮಜನಿದ್ದ ದೇಶ
ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು |
ಬೀತ ಬನವಲ್ಲಿಲ್ಲ ಹುಸಿ ಕೊಲೆ
ಪಾತಕಾದಿಗಳಿಲ್ಲ ಸೊಂಪಿನ
ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ || ೧೨ ||
ಪದವಿಭಾಗ-ಅರ್ಥ: ಮಾತು ಹೋಲುವೆಯು+ ಅಹುದು ನುಡಿದುದು ನೀತಿ, ಧರ್ಮಜನಿದ್ದ ದೇಶ ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು ಬೀತ ಬನವು+ ಅಲ್ಲಿಲ್ಲ ಹುಸಿ ಕೊಲೆ ಪಾತಕಾದಿಗಳಿಲ್ಲ ಸೊಂಪಿನ ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ.
ಮಾತು ಹೋಲುವೆಯು+ ಅಹುದು ನುಡಿದುದು ನೀತಿ= ಕೌರವನು ಆಡಿದ ಮಾತು ಸರಿ- ಕೀಚಕ ಸತ್ತ ಸನ್ನಿವೇಶ ಭೀಮನ ಕಾರ್ಯವನ್ನೇ ಹೋಲುತ್ತದೆ.// ಧರ್ಮಜನಿದ್ದ ದೇಶ ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು ಬೀತ ಬನವು+ ಅಲ್ಲಿಲ್ಲ ಹುಸಿ ಕೊಲೆ ಪಾತಕಾದಿಗಳಿಲ್ಲ ಸೊಂಪಿನ ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ= ಭೀಷ್ಮನು ಹೇಳಿದ, ಅದಲ್ಲದೆ ಕೌರವನ ಹೋಲಿಕೆಗೆ ಮತ್ಸ್ಯದೇಶದ ಸುಭಿಕ್ಷತೆಯೂ ಪೂರಕವಾಗಿದೆ, ಧರ್ಮಜನಿದ್ದ ದೇಶವ್ರಾತದಲ್ಲಿ ಬರವಿಲ್ಲ, ಬೆಳೆದ ಬೆಳಸುಗಳು ಪ್ರಕೃತಿ ವಿಕೋಪದಿಂದ ಹಾಳಾಗದು, ಬೀತ ಬನವು- ಕಾಡಿನ ಭೀತಿ, ಅಲ್ಲಿಲ್ಲ,- ಹುಸಿ- ಸುಳ್ಳು ಕೊಲೆ ಪಾತಕಾದಿಗಳಿಲ್ಲ, ಸೊಂಪಿನ- (ಅಲ್ಲಿ) ಸುಖದ ನೂತನದ ಸಿರಿಯೆಂದು- ಸಂಪತ್ತು ತುಂಬಿದೆ, ಎಂದು ನುಡಿದನು (ರಾಯ ಗಾಂಗೇಯ).
ಅರ್ಥ: ಕೌರವನು ಆಡಿದ ಮಾತು ಸರಿ- ಕೀಚಕ ಸತ್ತ ಸನ್ನಿವೇಶ ಭೀಮನ ಕಾರ್ಯವನ್ನೇ ಹೋಲುತ್ತದೆ. ಭೀಷ್ಮನು ಹೇಳಿದ, ಅದಲ್ಲದೆ ಕೌರವನ ಹೋಲಿಕೆಗೆ ಮತ್ಸ್ಯದೇಶದ ಸುಭಿಕ್ಷತೆಯೂ ಪೂರಕವಾಗಿದೆ, ಧರ್ಮಜನಿದ್ದ ದೇಶವ್ರಾತದಲ್ಲಿ ಬರವಿಲ್ಲ, ಬೆಳೆದ ಬೆಳಸುಗಳು ಪ್ರಕೃತಿ ವಿಕೋಪದಿಂದ ಹಾಳಾಗದು, ಕಾಡಿನ ಭೀತಿ, ಅಲ್ಲಿಲ್ಲ,- ಹುಸಿ- ಸುಳ್ಳು ಕೊಲೆ ಪಾತಕಾದಿಗಳಿಲ್ಲ, ಅಲ್ಲಿ ಸುಖದ ನೂತನವಾದ ಸಂಪತ್ತು ತುಂಬಿದೆ, ಎಂದು ನುಡಿದನು.
ಎಲ್ಲಿ ಲಕ್ಷ್ಮಿಯ ಬೀಡು ಧರಣಿಯೊ
ಳೆಲ್ಲಿ ಸೊಂಪಿನ ನಾಡು ನಗರದೊ
ಳೆಲ್ಲಿ ವಿಭವದ ಕಡಲು ಶೈತ್ಯದ ಸಾರ ಸೌರಂಭ |
ಎಲ್ಲಿ ನೆಲೆಸಿಹುದಲ್ಲಿ ಪಾಂಡವ
ರಿಲ್ಲದಿರರಿನ್ನವರ ನೆಲೆಗಾ
ಬಲ್ಲಿ ಸಂಶಯವಿಲ್ಲವೆಂದನು ಭೀಷ್ಮ ನಸುನಗುತ || ೧೩ ||
ಪದವಿಭಾಗ-ಅರ್ಥ: ಎಲ್ಲಿ ಲಕ್ಷ್ಮಿಯ ಬೀಡು ಧರಣಿಯೊಳು+ ಎಲ್ಲಿ ಸೊಂಪಿನ ನಾಡು ನಗರದೊಳು+ ಎಲ್ಲಿ ವಿಭವದ ಕಡಲು ಶೈತ್ಯದ ಸಾರ ಸೌರಂಭ ಎಲ್ಲಿ ನೆಲೆಸಿಹುದೊ+ ಅಲ್ಲಿ ಪಾಂಡವರಿಲ್ಲದೆ+ ಇರರು+ ಇನ್ನವರ ನೆಲೆಗಾಬು+ ಅಲ್ಲಿ ಸಂಶಯವಿಲ್ಲವು+ ಎಂದನು ಭೀಷ್ಮ ನಸುನಗುತ.
ಎಲ್ಲಿ ಲಕ್ಷ್ಮಿಯ- ಸಂಪತ್ತಿನ ಬೀಡು-ನೆಲೆ, ಧರಣಿಯೊಳು- ಭೂಮಿಯಮೇಲೆ+ ಎಲ್ಲಿ ಸೊಂಪಿನ- ಸುಖದ ನಾಡು ನಗರದೊಳು+ ಎಲ್ಲಿ ವಿಭವದ ಕಡಲುವೈಭವದ ಸಮುದ್ರ, ಶೈತ್ಯದ- ತಂಪಿನ ಸಾರ ಸೌರಂಭ-ಪರಿಮಳ, ಎಲ್ಲಿ ನೆಲೆಸಿಹುದೊ+ ಅಲ್ಲಿ ಪಾಂಡವರಿಲ್ಲದೆ+ ಇರರು+ ಇನ್ನು+ ಅವರ ನೆಲೆಗಾಬು+ ಅಲ್ಲಿ, ಸಂಶಯವಿಲ್ಲವು+ ಎಂದನು ಭೀಷ್ಮ ನಸುನಗುತ.
ಅರ್ಥ: ಭೀಷ್ಮ ನಸುನಗುತ್ತಾ, ಎಲ್ಲಿ ಸಂಪತ್ತಿನ, ನೆಲೆ ಇರುವುದೋ, ಭೂಮಿಯ ಮೇಲೆ ಸುಖದ ನಾಡು ಇರುವುದೋ, ನಗರದಲ್ಲಿ ಎಲ್ಲಿ ವೈಭವದ ಸಮುದ್ರ ಇರುವುದೋ,, ಎಲ್ಲಿ ತಂಪಿನ ಸಾರ ಸೌರಂಭ ಇರುವುದೋ, ಇವೆಲ್ಲಾ ಎಲ್ಲಿ ನೆಲೆಸಿರುವುದೊ ಅಲ್ಲಿ ಪಾಂಡವರು ಇಲ್ಲದೆ ಇದ್ದರೆ ಇರಲಾರದು; ಅವರ ನೆಲೆಯತಾಣ ಅಲ್ಲಿಯೇ, ಇನ್ನು ಸಂಶಯವಿಲ್ಲ, ಎಂದನು
ಅತ್ತ ಹಿಮಗಿರಿ ಮೇಲೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ ||
ಹೊತ್ತಿ ಹೊಗೆದವು ಮಧ್ಯ ದೇಶದ
ಲುತ್ತಮದ ಸಿರಿ ಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ || ೧೪ ||
ಪದವಿಭಾಗ-ಅರ್ಥ: ಅತ್ತ ಹಿಮಗಿರಿ, ಮೇಲೆ ಭಾವಿಸಲು+ ಇತ್ತ ಮೂರು ಸಮುದ್ರ ಗಡಿಯಿಂದ+ ಇತ್ತ ನಾನಾ ದೇಶವೆಂಬ+ ಇವು ಬರದ ಬೇಗೆಯಲಿ ಹೊತ್ತಿ ಹೊಗೆದವು, ಮಧ್ಯ ದೇಶದಲಿ+ ಉತ್ತಮದ ಸಿರಿ ಫಲದ ಬೆಳಸುಗಳು+ ಒತ್ತೆಯಿದು ಪಾಂಡವರ ಚಾವಡಿಯೆಂದನು+ ಆ ದ್ರೋಣ.
ಅತ್ತ ಉತ್ತರದಲ್ಲಿ ಹಿಮಗಿರಿ ಮೇಲೆ ಭಾವಿಸಲು- ವಿಚಾರ ಮಾಡಿದರೆ,+,= ವಿಚಾರ ಮಾಡಿದರೆ ಅತ್ತ ಉತ್ತರದಿಕ್ಕಿನಲ್ಲಿ ಮೇಲೆ ಎತ್ತರದಲ್ಲಿರುವ ಹಿಮಾಲಯದ ವರೆಗಿನ ಪ್ರದೇಶ;// ಇತ್ತ ಮೂರು ಸಮುದ್ರ ಗಡಿಯಿಂದ+ ಇತ್ತ ನಾನಾ ದೇಶವೆಂಬ+ ಇವು(ಈ)= ದಕ್ಷಿಣದ ದಿಕ್ಕಿನಲ್ಲಿ ಮೂರುಕಡೆ ಸುತ್ತವರಿದ ಸಮುದ್ರವಿರುವ ಎಲ್ಲಾ ಈ ದೇಶಗಳಲ್ಲಿ,// ಬರದ ಬೇಗೆಯಲಿ ಹೊತ್ತಿ ಹೊಗೆದವು= ಬರಗಾಲ ಬಂದು ಮಳೆಯಿಲ್ಲದೆ ಬೆಂಕಿಹೊತ್ತಿ ಹೊಗೆದಂತೆ ಸೆಖೆಯ ಬೇಗೆಯಲ್ಲಿ ಇರುವುವು. ಮಧ್ಯ ದೇಶದಲಿ+ ಉತ್ತಮದ ಸಿರಿ ಫಲದ ಬೆಳಸುಗಳು+ = ಈ ಬರನಾಡುಗಳ ಮಧ್ಯೆ ಇರುವ ಮತ್ಸ್ಯದೇಶದಲ್ಲಿ+ ಉತ್ತಮವಾದ ಸಿರಿ-ಸಂಪತ್ತಿನ ಫಲದ ಬೆಳಸುಗಳು ಕಾಣುವುದು. ಒತ್ತೆಯಿದು- ಆಧಾರವು ಇದು- ಪಾಂಡವರ ಚಾವಡಿಯೆಂದನು- ವಸತಿ ಎಂದನು+ ಆ ದ್ರೋಣ.
ಅರ್ಥ: ವಿಚಾರ ಮಾಡಿದರೆ ಅತ್ತ ಉತ್ತರದಿಕ್ಕಿನಲ್ಲಿ ಮೇಲೆ ಎತ್ತರದಲ್ಲಿರುವ ಹಿಮಾಲಯದ ವರೆಗಿನ ಪ್ರದೇಶ; ಇತ್ತ ದಕ್ಷಿಣದ ದಿಕ್ಕಿನಲ್ಲಿ ಮೂರುಕಡೆ ಸುತ್ತವರಿದ ಸಮುದ್ರವಿರುವ ಎಲ್ಲಾ ಈ ದೇಶಗಳಲ್ಲಿ ಬರಗಾಲ ಬಂದು ಮಳೆಯಿಲ್ಲದೆ ಬೆಂಕಿಹೊತ್ತಿ ಹೊಗೆದಂತೆ ಸೆಖೆಯ ಬೇಗೆಯಲ್ಲಿ ಇರುವುವು. ಆದರೆ ಈ ಬರದ ನಾಡುಗಳ ಮಧ್ಯೆ ಇರುವ ಮತ್ಸ್ಯದೇಶದಲ್ಲಿ ಉತ್ತಮವಾದ ಸಿರಿ-ಸಂಪತ್ತಿನ ಫಲದ ಬೆಳಸುಗಳು ಕಾಣುವುದು. ಇದು ಆಧಾರವು- ಅಲ್ಲಿಯೇ ಪಾಂಡವರ ವಸತಿ, ಎಂದನು ಆ ದ್ರೋಣ.
ಅವಧಿ ತುಂಬದ ಮುನ್ನಲೀ ಪಾಂ
ಡವರ ಕಾಣಿಸಿಕೊಂಬ ಮತ್ತಂ
ತವರು ಸತ್ಯಕೆ ನಡೆಯಬೇಹುದು ಮುನ್ನಿನಂದದಲಿ
ಅವರ ನೆಲೆಗಾಣಿಸುವ ಮಂತ್ರದ
ಹವಣನರುಪುವೆನೆಂದು ರವಿಸುತ
ನವನಿಪಗೆ ನಸುನಗುತ ನುಡಿದನು ರಾಜಕಾರಿಯವ ೧೫
ಪದವಿಭಾಗ-ಅರ್ಥ: ಅವಧಿ ತುಂಬದ ಮುನ್ನಲು+ ಈ ಪಾಂಡವರ ಕಾಣಿಸಿಕೊಂಬ ಮತ್ತೆ+ ಅಂತು+ ಅವರು ಸತ್ಯಕೆ ನಡೆಯಬೇಹುದು ಮುನ್ನಿನ+ ಅಂದದಲಿ ಅವರ ನೆಲೆಗಾಣಿಸುವ ಮಂತ್ರದ ಹವಣನು+ ಅರುಪುವೆನು+ ಎಂದು ರವಿಸುತನು+ ಅವನಿಪಗೆ ನಸುನಗುತ ನುಡಿದನು ರಾಜಕಾರಿಯವ
(ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸದ)- ಅವಧಿ ತುಂಬದ ಮುನ್ನಲು+ ಈ ಪಾಂಡವರ ಕಾಣಿಸಿಕೊಂಬ= ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸದ- ಅವಧಿಯು ತುಂಬದ ಮುನ್ನಲು- ಮುನ್ನವೇ + ಈ ಪಾಂಡವರ ಕಾಣಿಸಿಕೊಂಬ- ಕಾಣಿಸಿಕೊಳ್ಳುವ ಹಾಗೆ ಮಾಡುವ ಉಪಾಯ ಯಾವುದು, ಮತ್ತು ನಡೆಯಬೇಹುದು ಮುನ್ನಿನ+ ಅಂದದಲಿ ಅವರ ನೆಲೆಗಾಣಿಸುವ- ಈ ಪಾಂಡವರು ಕಾಣಿಸಿಕೊಳ್ಳುಂತೆ ಮಾಡಿ ಮತ್ತು ಮತ್ತೆ - ಪುನಃ + ಅಂತು- ಅದೇರೀತಿ, ಹಿಂದಿನ ಹಾಗೆಯೇ, ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸಕ್ಕೆ ಕಳಿಸುವ ಉಪಾಯ ಯಾವುದು? ಎಂದಾಗ ಕರ್ಣನು- + ಅವರು ಸತ್ಯಕೆ ಮಂತ್ರದ ಹವಣನು೯ಉಪಾಯನ್ನು+ ಅರುಪುವೆನು(ಹೇಳುವೆನು)+ ಎಂದು ರವಿಸುತನು(ಕರ್ಣ)+ ಅವನಿಪಗೆ ನಸುನಗುತ ನುಡಿದನು ರಾಜಕಾರಿಯವ, ;
ಅರ್ಥ:ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸದ - ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸದ- ಅವಧಿಯು ತುಂಬದ ಮುನ್ನವೇ ಈ ಪಾಂಡವರನ್ನು ಕಾಣಿಸಿಕೊಳ್ಳುವ ಹಾಗೆ ಮಾಡುವ ಉಪಾಯ ಯಾವುದು, ಈ ಪಾಂಡವರು ಕಾಣಿಸಿಕೊಳ್ಳುಂತೆ ಮಾಡಿ ಪುನಃ ಅದೇರೀತಿ, ಹಿಂದಿನ ಹಾಗೆಯೇ, ಹನ್ನೆರಡು ವರ್ಷ ವನವಾಸ ಮತ್ತು ಒಂದು ವರುಷದ ಅಜ್ಞಾತವಾಸಕ್ಕೆ ಕಳಿಸುವ ಉಪಾಯ ಯಾವುದು? ಎಂದಾಗ ಕರ್ಣನು, ಅವರನ್ನು ಮತ್ತೆ ಕಾಡಿಗೆ ಕಳಿಸುವ ಮಂತ್ರದ- ರಾಜತಂತ್ರದ ಉಪಾಯನ್ನು ಹೇಳುವೆನು ಎಂದು ಕರ್ಣನು ಕೌರವ ರಾಜನಿಗೆ ನಸುನಗುತ್ತಾ ರಾಜತಾರ್ಯವನ್ನು ಹೇಳಿದನು.
ರಾಜಮಂದಿರದೊಳಗೆ ನೀತಿಗ
ಳೋಜೆಯಿಲ್ಲದ ಸಚಿವರಿಂ ನಿ
ರ್ವ್ಯಾಜದಲಿ ಕೇಡಹುದು ತಪ್ಪದು ಲೋಕವಾರ್ತೆಯಿದು |
ಗಾಜು ಕೇವಣಿಸಿದರೆ ರಜತದ
ರಾಜಭೂಷಣವಹುದೆ ಕರ್ಣನ
ಬೀಜಮಂತ್ರಗಳಿಂದ ಕೇಡಹುದೆಂದನಾ ಭೀಷ್ಮ || ೧೬ ||
ಪದವಿಭಾಗ-ಅರ್ಥ: ರಾಜಮಂದಿರದೊಳಗೆ ನೀತಿಗಳ+ ಓಜೆಯಿಲ್ಲದ ಸಚಿವರಿಂ ನಿರ್ವ್ಯಾಜದಲಿ ಕೇಡಹುದು ತಪ್ಪದು ಲೋಕವಾರ್ತೆಯಿದು, ಗಾಜು ಕೇವಣಿಸಿದರೆ ರಜತದ ರಾಜಭೂಷಣವು+ ಅಹುದೆ ಕರ್ಣನ ಬೀಜಮಂತ್ರಗಳಿಂದ ಕೇಡಹುದು+ ಎಂದನು+ ಆ ಭೀಷ್ಮ.
ರಾಜಮಂದಿರದೊಳಗೆ ನೀತಿಗಳ+ ಓಜೆಯಿಲ್ಲದ ಸಚಿವರಿಂ= ರಾಜಮಂದಿರದಲ್ಲಿ ರಾಜ ನೀತಿಗಳ ಓಜೆಯಿಲ್ಲದ- ಪಾಂಡಿತ್ಯವಿಲ್ಲದ, ಸಚಿವರಿಂ= ಮಂತ್ರಿಗಳಿಂದ, ನಿರ್ವ್ಯಾಜದಲಿ= ನಿಷ್ಕಪಟತೆಗೆ ಸತ್ಯಕ್ಕೆ, ಕೇಡಹುದು ತಪ್ಪದು ಲೋಕವಾರ್ತೆಯಿದು= ಕೇಡೂ ಅನ್ಯಾಯವೂ ಆಗುವುದು, ಇದು ಲೋಕದ ನಿಯಮ; ಗಾಜು ಕೇವಣಿಸಿದರೆ ರಜತದ ರಾಜಭೂಷಣವು+ ಅಹುದೆ= ಗಾಜಿನ ಮಣಿಯನ್ನು ಜೋಡಿಸಿದಾಭರಣ ರಾಜನಿಗೆ ಭೂಷಣವೇ ಯೋಗ್ಯವೇ? ಕರ್ಣನ ಬೀಜಮಂತ್ರಗಳಿಂದ= ಕೆಟ್ಟ ಮಂತ್ರಾಲೋಚನೆಯಿಂದ, ಸಲಹೆಯಿಂದ, ಕೇಡಹುದು- ಮುಂದೆ ಕೇಡಾಗುವುದು,+ ಎಂದನು ಆ ಭೀಷ್ಮ.
ಅರ್ಥ:ರಾಜಮಂದಿರದಲ್ಲಿ ರಾಜನೀತಿಗಳ ಪಾಂಡಿತ್ಯವಿಲ್ಲದ ಮಂತ್ರಿಗಳಿಂದ ನಿಷ್ಕಪಟತೆಗೆ ಸತ್ಯಕ್ಕೆ, ಕೇಡೂ ಅನ್ಯಾಯವೂ ಆಗುವುದು, ಇದು ಲೋಕದ ನಿಯಮ; ಗಾಜಿನ ಮಣಿಯನ್ನು ಜೋಡಿಸಿದ ಆಭರಣ ರಾಜನಿಗೆ ಭೂಷಣವೇ ಯೋಗ್ಯವೇ? ಯೋಗ್ಯವಾಗುವುದಿಲ್ಲ. ಕರ್ಣನ ಕೆಟ್ಟ ಮಂತ್ರಾಲೋಚನೆಯಿಂದ ಮತ್ತು ಸಲಹೆಯಿಂದ, ಮುಂದೆ ಕೇಡುಕಾಗುವುದು ಎಂದನು ಆ ಭೀಷ್ಮ.
ಅವರು ಸತ್ಯಕೆ ನಡೆವರಲ್ಲದೆ
ಬವರಕಂಜುವರಲ್ಲ ಪಾಂಡವ
ರವಧಿ ಬೀಳ್ಕೊಳಬಂದುದೈ ನೀ ಸಮಯದೊಳು ಕರೆಸಿ ||
ಅವರ ಧರಣಿಯನವರಿಗಿತ್ತರೆ
ನಿವಗನಿಷ್ಟತೆಯಿಲ್ಲ ಕೇಳೆಲೆ
ಅವನಿಪತಿಯೆಂದೆನುತ ನುಡಿದನು ಮತ್ತೆ ಗಾಂಗೇಯ || ೧೭ ||
ಪದವಿಭಾಗ-ಅರ್ಥ: ಅವರು ಸತ್ಯಕೆ ನಡೆವರು+ ಅಲ್ಲದೆ ಬವರಕೆ+ ಅಂಜುವರಲ್ಲ ಪಾಂಡವರ+ ಅವಧಿ ಬೀಳ್ಕೊಳ+ ಬಂದುದೈ ನೀ ಸಮಯದೊಳು ಕರೆಸಿ ಅವರ ಧರಣಿಯನು+ ಅವರಿಗೆ+ ಇತ್ತರೆ ನಿವಗೆ+ ಅನಿಷ್ಟತೆಯಿಲ್ಲ ಕೇಳೆಲೆ ಅವನಿಪತಿ+ ಯೆಂದು+ ಎನುತ ನುಡಿದನು ಮತ್ತೆ ಗಾಂಗೇಯ.
ಅವರು ಸತ್ಯಕೆ ನಡೆವರು+ ಅಲ್ಲದೆ ಬವರಕೆ+ ಅಂಜುವರಲ್ಲ= ಪಾಂಡವರು ಸತ್ಯಕ್ಕೆ ಅನುಸರಿಸಿ ನಡೆಯುವವರು. ಅಂದಮಾತ್ರಕ್ಕೆ ಅದು ಅಲ್ಲದೆ ವಿರೋಧಿಸಿದರೆ, ಬವರಕೆ- ಯುದ್ಧಕ್ಕೆ+ ಅಂಜುವರಲ್ಲ ಹೆದರುವುದಿಲ್ಲ.;// ಪಾಂಡವರ+ ಅವಧಿ ಬೀಳ್ಕೊಳ (ಹೋಗುವ)+ ಬಂದುದೈ= ಪಾಂಡವರ ವನವಾಸದ ಮತ್ತು ಅಜ್ಞಾತದ ಅವದಿ ಮುಗಿಯುತ್ತಾ- ಮುಗಿದುಹೋಗುವ ಸಮಯ ಬಂದಿದೆ.// ನೀ ಸಮಯದೊಳು ಕರೆಸಿ ಅವರ ಧರಣಿಯನು+ ಅವರಿಗೆ+ ಇತ್ತರೆ ನಿವಗೆ+ ಅನಿಷ್ಟತೆಯಿಲ್ಲ ಕೇಳೆಲೆ ಅವನಿಪತಿ+ ಯೆಂದು= ನೀನು ಸಮಯದೊಳು= ಅವಧಿಮುಗಿದ ಸಮಯದಲ್ಲಿ ಅವರನ್ನು ಕರೆಸಿ ಅವರ ಧರಣಿಯನು- ರಾಜ್ಯವನ್ನು+ ಅವರಿಗೆ+ ಇತ್ತರೆ- ಕೊಟ್ಟರೆ, ನಿವಗೆ+ ಅನಿಷ್ಟತೆಯಿಲ್ಲ- ಮುಂದೆ ಕಡುಕಾಗುವುದಿಲ್ಲ. ಕೇಳು+ ಎಲೆ ಅವನಿಪತಿ+ ಯೆಂದು+ = ಎಲೈ ರಾಜನೇ ಕೇಳು ಎಂದು// ಎನುತ ನುಡಿದನು ಮತ್ತೆ ಗಾಂಗೇಯ= ಕರ್ಣನ ನಂತರ ಮತ್ತೆ ಭೀಷ್ಮನು ಹೇಳಿದನು.
ಅರ್ಥ:ಪಾಂಡವರು ಸತ್ಯಕ್ಕೆ ಅನುಸರಿಸಿ ನಡೆಯುವವರು. ಅಂದಮಾತ್ರಕ್ಕೆ ಅದು ಅಲ್ಲದೆ ವಿರೋಧಿಸಿದರೆ, ಯುದ್ಧಕ್ಕೆ ಹೆದರುವುದಿಲ್ಲ. ಪಾಂಡವರ ವನವಾಸದ ಮತ್ತು ಅಜ್ಞಾತ ವಾಸದ ಅವದಿ ಮುಗಿದುಹೋಗುವ ಸಮಯ ಬಂದಿದೆ. ಅವಧಿ ಮುಗಿದ ಸಮಯದಲ್ಲಿ ಅವರನ್ನು ಕರೆಸಿ ಅವರ ರಾಜ್ಯವನ್ನು ಅವರಿಗೆ ಕೊಟ್ಟರೆ, ನಿಮಗೆ ಮುಂದೆ ಕಡುಕಾಗುವುದಿಲ್ಲ. ಎಲೈ ರಾಜನೇ ಕೇಳು ಎಂದು ಕರ್ಣನ ನಂತರ ಭೀಷ್ಮನು ಮತ್ತೆ ಹೇಳಿದನು.
ನನ್ನಿ ನಿಮ್ಮಯ ನುಡಿಯ ಕೈಕೊಂ
ಡೆನ್ನ ಭೂಮಿಯನೀಯೆನಯ್ಯನ
ಬನ್ನಣೆಯ ಮಾತಿನ್ನು ಕೊಳ್ಳದು ಸಾಕು ಸಂಧಿಯನು |
ಮನ್ನಿಸುತ ಮರುಳಾದೆನೀ ನಿ
ಷ್ಪನ್ನತೆಯ ಬೀಳ್ಕೊಂಡ ಪಾಂಡವ
ಗುನ್ನಿಗಳ ಗರುವಾಯ ಮಾಡುವಿರೆಂದು ಖಳ ನುಡಿದ | ೧೮ ||
ಪದವಿಭಾಗ-ಅರ್ಥ: ನನ್ನಿ ನಿಮ್ಮಯ ನುಡಿಯ ಕೈಕೊಂಡು+ ಎನ್ನ ಭೂಮಿಯನು+ ಈಯೆನು,+ ಅಯ್ಯನ ಬನ್ನಣೆಯ ಮಾತಿನ್ನು ಕೊಳ್ಳದು, ಸಾಕು ಸಂಧಿಯನು ಮನ್ನಿಸುತ ಮರುಳಾದೆನು+ ಈ ನಿಷ್ಪನ್ನತೆಯ ಬೀಳ್ಕೊಂಡ ಪಾಂಡವ+ ಗು+ ಕುನ್ನಿಗಳ ಗರುವಾಯ ಮಾಡುವಿರಿ+ ಎಂದು ಖಳ ನುಡಿದ
ನಿಷ್ಪನ್ನ : 1. ಪ್ರಕಾರ. 2. ಕಾರ್ಯವಿಧಾನ. 3. ಬದಲಾವಣೆ. 4. ಶಾಸ್ತ್ರೋಕ್ತವಾದ ಕರ್ಮಾ ಚರಣೆ,- ವಿಧಿ.
(ಗರುವಾಯ :1. ದೊಡ್ಡತನ. 2. ಬೆಡಗು.)
ನನ್ನಿ= ಸತ್ಯವಾದ,ಸತ್ಯವೆಂದು ಭಾವಿಸಿ, ನಿಮ್ಮಯ ನುಡಿಯ ಕೈಕೊಂಡು+= ನಿಮ್ಮ ಮಾತನ್ನು ಅನುಸರಿಸಿ,// ಎನ್ನ ಭೂಮಿಯನು+ ಈಯೆನು,+= ನನ್ನ ರಾಜ್ಯವನ್ನ ಕೊಡೆನು- ಕೊಡುವುದಿಲ್ಲ.// ಅಯ್ಯನ ಬನ್ನಣೆಯ ಮಾತಿನ್ನು ಕೊಳ್ಳದು= ಅಯ್ಯನ- ತಂದೆಯ, ಬನ್ನಣೆಯ- ಮನ್ನಣೆಯ-ಮಾತು+ ಇನ್ನು ಕೊಳ್ಳದು- ನಡೆಯದು, ಬಿನ್ನಾಣದ - ಪ್ರೀತಿಯ ಬುದ್ಧಿಯಮಾತು ಇನ್ನು ನನ್ನ ಹತ್ತಿರ ನೆಡೆಯುವುದಿಲ್ಲ, ಸಾಕು ಸಂಧಿಯನು ಮನ್ನಿಸುತ ಮರುಳಾದೆನು+= ಹಿಂದೆ ಸಂಧಿಗೆ ಒಪ್ಪಿ ಇಂದ್ರಪ್ರಸ್ಥವನ್ನು ಕೊಟ್ಟು ಮರುಳಾದೆನು- ದಡ್ಡನಾದೆನು. ಈ ನಿಷ್ಪನ್ನತೆಯ ಬೀಳ್ಕೊಂಡ(ದೇಶ ಬಿಟ್ಟುಹೋದ) ಪಾಂಡವ+ ಗು+ ಕುನ್ನಿಗಳ ಗರುವಾಯ ಮಾಡುವಿರಿ+ ಎಂದು ಖಳ ನುಡಿದ= ಈ ಬಗೆಯ ಕಾರ್ಯವಿಧಾನ ಅನುಸರಿಸಿ, ದೇಶ ಬಿಟ್ಟುಹೋದ ನಾಯಿಗಳಂತಹ ಪಾಂಡವರನ್ನು ದೊಡ್ಡವರನ್ನಾಗಿ ಮಾಡುವಿರಿ, ಎಂದು ದುಷ್ಟ ಕೌರವ ಅಜ್ಜ ಭೀಷ್ಮನಿಗೆ ಗದರಿಸಿದ.
ಅರ್ಥ: ಸತ್ಯವೆಂದು, ನಿಮ್ಮ ಮಾತನ್ನು ಅನುಸರಿಸಿ ನನ್ನ ರಾಜ್ಯವನ್ನು ಕೊಡುವುದಿಲ್ಲ. ತಂದೆಯ ಪ್ರೀತಿಯ ಬುದ್ಧಿಯಮಾತು ಇನ್ನು ನನ್ನ ಹತ್ತಿರ ನೆಡೆಯುವುದಿಲ್ಲ, ಸಾಕು, ಹಿಂದೆ ಸಂಧಿಗೆ ಒಪ್ಪಿ ಇಂದ್ರಪ್ರಸ್ಥವನ್ನು ಕೊಟ್ಟು ದಡ್ಡನಾದೆನು. ಈ ಬಗೆಯ ಕಾರ್ಯವಿಧಾನ ಅನುಸರಿಸಿ, ದೇಶ ಬಿಟ್ಟುಹೋದ ನಾಯಿಗಳಂತಹ ಪಾಂಡವರನ್ನು ದೊಡ್ಡವರನ್ನಾಗಿ ಮಾಡುವಿರಿ, ಎಂದು ದುಷ್ಟ ಕೌರವ ಅಜ್ಜ ಭೀಷ್ಮನಿಗೆ ಹೇಳಿದ. (ಗದರಿಸಿದ.)

ವಿರಾಟ ರಾಜ್ಯದ ಗೋಗ್ರಹಣಕ್ಕೆ ನಿರ್ಧಾರ

ಸಂಪಾದಿಸಿ
ಅರಿ ವಿರಾಟನ ಪುರಕೆ ಹಾಯಿದು
ತುರು ಸೆರೆಯ ತೆಗೆಸುವೆವು ಪಾಂಡವ
ರಿರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು |
ಅರವರಿಸದಂಗೈಸುವರು ನಾ
ವರಿದು ಕೊಂಬೆವು ಬಳಿಕ ವನದಲಿ
ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ || ೧೯ ||
ಪದವಿಭಾಗ-ಅರ್ಥ: ಅರಿ ವಿರಾಟನ ಪುರಕೆ ಹಾಯಿದು ತುರು ಸೆರೆಯ ತೆಗೆಸುವೆವು, ಪಾಂಡವರು+ ಇರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು, ಅರವರಿಸದೆ+ ಅಂಗೈಸುವರು ನಾವು+ ಅರಿದುಕೊಂಬೆವು, ಬಳಿಕ ವನದಲಿ ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ.
ಅರಿ ವಿರಾಟನ ಪುರಕೆ ಹಾಯಿದು ತುರು ಸೆರೆಯ ತೆಗೆಸುವೆವು= ಅರಿ- ಶತ್ರು ವಿರಾಟನ ಪುರಕ್ಕೆ ಹಾಯಿದು- ಧಾಳಿಇಟ್ಟು, ತುರು-ಗೋವುಗಳನ್ನು ಸೆರೆಯ ತೆಗೆಸುವೆವು- ಹಿಡಿಯುವೆವು.// ಪಾಂಡವರು+ ಇರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು= ಪಾಂಡವರು ಇರಲು- ಅಲ್ಲಿ ಇದ್ದರೆ, ಧರ್ಮದ ಮೇರೆ ಮರ್ಯಾದೆಗಳ ಬಲ್ಲ ಅವರು,// ಅರವರಿಸದೆ- (ತಡಮಾಡದೆ)+ ಅಂಗೈಸುವರು- ಮೇಲೆಬೀಳುವರು ಯುದ್ಧಕ್ಕೆ ಬರುವರು, ನಾವು+ ಅರಿದುಕೊಂಬೆವು= ಆಗ ನಾವು ಇವರು ಪಾಂಡವರೆಂದು ತಿಳಿದುಕೊಳ್ಳುವೆವು- ಗುರುತು ಹಿಡಿಯುವೆವು,// ಬಳಿಕ ವನದಲಿ ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ= ಬಳಿಕ ಅವರಿಗೆ ಹಿಂದಿನ ಫಣದ ನಿಯಮದಂತೆ ವನದಲ್ಲಿ ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ- ಹಿಂದಿನಮಾತಿನ ಕಟ್ಟಳೆಯ ದೀಕ್ಷೆಯನ್ನು ಕೊಡುತ್ತೇವೆ.
ಅಂಗೈಸು= 1. ಒಪ್ಪು 2. ಸ್ವೀಕರಿಸು. 3. ಸಾರು. 4. ಮೇಲೆಬೀಳು.
ವೀಳೆಯವ ಕೊಡುವೆನು- ಯಾವುದಾದರೂ ಮುಖ್ಯ ಕಾರ್ಯವನ್ನು ಮಾಡಲು ವಹಿಸಿಕೊಡುವಾಗ (ಗುತ್ತಿಗೆ- ಮನೆಕಟ್ಟುವುದು ಇತ್ಯಾದಿ) ಈ ಕಾರ್ಯವನ್ನು ನೀನು ಮಾಡು ಎಂದು ವೀಳಯದ ಎಲೆಯಮೇಲೆ ಅಡಿಕೆ (+ ನಾಣ್ಯವನ್ನು - ಅಗತ್ಯವಿದ್ದರೆ) ಇಟ್ಟು ಕೊಡುವರು. ಅದನ್ನು ತೆಗೆದುಕೊಂಡವರು ಆ ಕೆಲಸವನ್ನು ಮಾಡುವ ಹೊಣೆ ಹೊತ್ತಂತೆ ದೀಕ್ಷಾಬದ್ಧರಾದಂತೆ - ಹೀಗೆ ಪಾಂಡವರು ಕಾಡಿಗೆ ಪುನಃ ಹೊಗಲು ವೀಳಯವನ್ನು ಕೊದವೆನು ಎಂದನು ಕೌರವ.
ಅರ್ಥ: ಶತ್ರು ವಿರಾಟನ ನಗರಕ್ಕೆ ಧಾಳಿಇಟ್ಟು, ಗೋವುಗಳನ್ನು ಸೆರೆಯ ಹಿಡಿಯುವೆವು. ಪಾಂಡವರು ಅಲ್ಲಿ ಇದ್ದರೆ, ಧರ್ಮದ ಮೇರೆ ಮರ್ಯಾದೆಗಳ ಬಲ್ಲ ಅವರು, ತಡಮಾಡದೆ ಯುದ್ಧಕ್ಕೆ ಬರುವರು, ಆಗ ನಾವು ಇವರು ಪಾಂಡವರೆಂದು ತಿಳಿದು- ಗುರುತು ಹಿಡಿಯುವೆವು. ಬಳಿಕ ಅವರಿಗೆ ಹಿಂದಿನ ಫಣದ ನಿಯಮದಂತೆ ವನದಲ್ಲಿ ಹದಿಮೂರ ವರುಷಕ್ಕೆ ಮತ್ತೆ ಹಿಂದಿನಮಾತಿನ ಕಟ್ಟಳೆಯ ವೀಳೆಯವ-ದೀಕ್ಷೆಯನ್ನು ಕೊಡುತ್ತೇವೆ.
ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯವನರಿವುಪಾಯಕೆ ಬೇರೆ ಠಾವಿಲ್ಲ |
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲ್ಲಿಯೂ ಹಿರಿದಿಲ್ಲ ನಿಶ್ಚಯವೆಂದನಾ ಕರ್ಣ || ೨೦ ||
ಪದವಿಭಾಗ-ಅರ್ಥ: ಒಳ್ಳಿತಿದು ನಿರ್ದೋಷ ನಿರ್ಣಯವು+ ಎಲ್ಲರ+ ಅಭಿಮತವಹುದು ರಿಪುಗಳ ಖುಲ್ಲವಿದ್ಯವನು+ ಅರಿವ+ ಉಪಾಯಕೆ ಬೇರೆ ಠಾವಿಲ್ಲ; ಅಲ್ಲಿ ಪಾಂಡವರು+ ಇಹರು ಸಂಶಯವಿಲ್ಲ ದೇಶದ ಸೊಂಪು ಸಿರಿ ಮತ್ತೆಲ್ಲಿಯೂ ಹಿರಿದಿಲ್ಲ ನಿಶ್ಚಯವು+ ಎಂದನು+ ಆ ಕರ್ಣ.
ಒಳ್ಳಿತಿದು ನಿರ್ದೋಷ ನಿರ್ಣಯವು+ ಎಲ್ಲರ+ ಅಭಿಮತವಹುದು= ಒಳ್ಳಿತಿದು- ಒಳ್ಳೆಯದು, ಈ ನಿರ್ಣಯವು ನಿರ್ದೋಷವಾಗಿದೆ. ನಿರ್ಣಯವು+ ಎಲ್ಲರ+ ಅಭಿಮತವಹುದು= ಈ ತೀರ್ಮಾನಕ್ಕೆ ಎಲ್ಲರ ಒಪ್ಪಿಗೆ ಇದೆ. ರಿಪುಗಳ ಖುಲ್ಲುವಿದ್ಯವನು+ ಅರಿವ+ ಉಪಾಯಕೆ ಬೇರೆ ಠಾವಿಲ್ಲ= ಶತ್ರುಗಳ ಖುಲ್ಲ + ವಿದ್ಯವನು- ಅಲ್ಪತನದ ವಿದ್ಯವನ್ನು, ತಿಳಿಯುವ ಉಪಾಯಕೆ ಬೇರೆ ಠಾವಿಲ್ಲ(ಠಾವು-ಸ್ಥಳ-ಎಡೆ- ವಸತಿ, ಇಲ್ಲ.)= ತಿಳಿಯುವ ಉಪಾಯಕೆ ಬೇರೆ ದಾರಿ ಇಲ್ಲ.; ಅಲ್ಲಿ ಪಾಂಡವರು+ ಇಹರು- ಇರುವರು, ಸಂಶಯವಿಲ್ಲ; ದೇಶದ ಸೊಂಪು ಸಿರಿ ಮತ್ತೆಲ್ಲಿಯೂ ಹಿರಿದಿಲ್ಲ; ನಿಶ್ಚಯವು+ ಎಂದನು+ ಆ ಕರ್ಣ= ಕರ್ಣನೂ ಸಹ ಮತ್ಸ್ಯ ದೇಶದಲ್ಲಿ ಸುಭಿಕ್ಷವಿದೆ. ಅಲ್ಲಿ ಪಾಂಡವರು+ ಇಹರು ಸಂಶಯವಿಲ್ಲ ದೇಶದ ಸೊಂಪು ಸಿರಿ ಮತ್ತೆಲ್ಲಿಯೂ ಹಿರಿದಿಲ್ಲ ನಿಶ್ಚಯವೆಂದನು+ ಆ ಕರ್ಣ
ಅರ್ಥ: 'ಆಗ ಆ ಕರ್ಣನು, ಒಳ್ಳೆಯದು, ಈ ನಿರ್ಣಯವು ನಿರ್ದೋಷವಾಗಿದೆ. ಈ ತೀರ್ಮಾನಕ್ಕೆ ಎಲ್ಲರ ಒಪ್ಪಿಗೆ ಇದೆ. ಶತ್ರುಗಳ ಕಹುಕತನದ ವಿದ್ಯವನ್ನು, ತಿಳಿಯುವ ಉಪಾಯಕ್ಕೆ ಬೇರೆ ದಾರಿ ಇಲ್ಲ.; ಅಲ್ಲಿ ಪಾಂಡವರು ಇರುವುದರಲ್ಲಿ ಸಂಶಯವಿಲ್ಲ; ದೇಶದ ಸೊಂಪು ಸಿರಿ ಮತ್ತೆಲ್ಲಿಯೂ ಹಿರಿದಿಲ್ಲ ನಿಶ್ಚಯವು ಎಂದನು.
ಗುರುವಿನಭಿಮತವಹಡೆ ಕೃಪ ಮೊಗ
ದಿರುಹದಿದ್ದೊಡೆ ಭೀಷ್ಮ ಮನದಲಿ
ಮುರಿಯದಿರ್ದೊಡೆ ಗುರುಕುಮಾರನ ಮತಕೆ ಸೇರುವೊಡೆ |
ವರ ಶಕುನಿಯಹುದೆಂದೊಡಾ ಸೋ
ದರರು ತಪ್ಪಲ್ಲೆಂದರಾದೊಡೆ
ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು || ೨೧ ||
ಪದವಿಭಾಗ-ಅರ್ಥ: ಗುರುವಿನ+ ಅಭಿಮತವು+ ಅಹಡೆ, ಕೃಪ ಮೊಗದಿರುಹದೆ+ ಇದ್ದೊಡೆ, ಭೀಷ್ಮ ಮನದಲಿ ಮುರಿಯದೆ+ ಇರ್ದೊಡೆ, ಗುರುಕುಮಾರನ ಮತಕೆ ಸೇರುವೊಡೆ, ವರ ಶಕುನಿಯು+ ಅಹುದು+ ಎಂದೊಡೆ+ ಆ ಸೋದರರು ತಪ್ಪಲ್ಲ+ ಎಂದರಾದೊಡೆ, ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು.
ಗುರುವಿನ+ ಅಭಿಮತವು+ ಅಹಡೆ= ದ್ರೋಣ ಗುರುವಿನ ಅಭಿಮತವು- ಒಪ್ಪಿಗೆ ಅಹಡೆ-ಇದ್ದರೆ,/ ಕೃಪ ಮೊಗದಿರುಹದೆ+ ಇದ್ದೊಡೆ= ಕೃಪನು ಮೊಗದಿರುಹದೆ- ಮುಖತಿರುಗಿಸದೆ+ ಇದ್ದರೆ,/ ಭೀಷ್ಮ ಮನದಲಿ ಮುರಿಯದೆ+ ಇರ್ದೊಡೆ= ಭೀಷ್ಮನು ಮನದಲಿ-ಒಪ್ಪದೆ ಈ ಯೊಜನೆಯನ್ನು ಮುರಿಯದೆ+ ಇರ್ದೊಡೆ- ಇದ್ದರೆ,/ ಗುರುಕುಮಾರನ ಮತಕೆ ಸೇರುವೊಡೆ= ಗುರುಕುಮಾರನ- ಅಶ್ವತ್ಥಾಮನ ಮತಕೆ- ಮನಸ್ಸಿಗೆ ಸೇರುವೊಡೆ- ಒಪ್ಪಿಗೆಯಾದರೆ,/ ವರ ಶಕುನಿಯು+ ಅಹುದು+ ಎಂದೊಡೆ+= ವರ- ಪೂಜ್ಯ ಶಕುನಿಯು ಅಹುದು- ಆಗಲಿ, ಎಂದೊಡೆ- ಎಂದರೆ,/ ಆ ಸೋದರರು ತಪ್ಪಲ್ಲ+ ಎಂದರಾದೊಡೆ= ಆ ಸೋದರರು- ಆ ಪಾಂಡವರು, ವಚನಕ್ಕೆ ತಪ್ಪಲ್ಲ+ ಎಂದರಾದೊಡೆ- ತಪ್ಪುವವರಲ್ಲ ಎಂದಾದರೆ, ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು- ಅರಸ ಕೌರವನು, ನೆಗಳ್ದುದೆ- ಮಾಡಿದ ಯೋನೆಯು, ಮಂತ್ರವೆಂದು- ಉತ್ತಮ ರಾಜ ತಂತ್ರವೆಂದು, ಸುಶರ್ಮ ಹೊಗಳಿದನು.
ಅರ್ಥ: ದ್ರೋಣ ಗುರುವಿನ ಒಪ್ಪಿಗೆ ಇದ್ದರೆ, ಕೃಪನು ಒಪ್ಪದೆ ಮುಖತಿರುಗಿಸದೆ ಇದ್ದರೆ, ಭೀಷ್ಮನು ಮನದಲಿ-ಒಪ್ಪದೆ ಈ ಯೊಜನೆಯನ್ನು ಮುರಿಯದೆ ಇದ್ದರೆ, ಅಶ್ವತ್ಥಾಮನ ಮನಸ್ಸಿಗೆ ಒಪ್ಪಿಗೆಯಾದರೆ, ಪೂಜ್ಯ ಶಕುನಿಯು ಆಗಲಿ ಎಂದರೆ, ಮತ್ತೆ ಆ ಪಾಂಡವರು ವಚನಕ್ಕೆ ತಪ್ಪುವವರಲ್ಲ ಎಂದಾದರೆ, ಅರಸ ಕೌರವನು, ಮಾಡಿದ ಯೋಜನೆಯು ಉತ್ತಮ ರಾಜ ತಂತ್ರವೆಂದು,
ಸುಶರ್ಮ ಹೊಗಳಿದನು.
ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು |
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ || ೨೨ ||
ಪದವಿಭಾಗ-ಅರ್ಥ: ಸುಶರ್ಮ ಹೊಗಳಿದನು ಮತವು+ ಅಹುದು ತಪ್ಪಲ್ಲ ಪಾಂಡವಗತಿಯನು+ ಅರಿವೊಡೆ ಮಾರ್ಗವಿದು ಸಮ್ಮತವು ನಿರ್ಮಳ ನೀತಿಕಾರರ ಮನಕೆ ಮತವು+ ಅಹುದು ಅತಿ ಗಳಿತವಾಯ್ತು+ ಅವಧಿ ದಿವಸ ಸ್ಥಿತಿಯೊಳು+ ಐದಾರಾಗೆ, ಬಳಿಕ+ ಈ ಕ್ಷಿತಿಗೆ ಪಾಂಡವರು+ ಉತ್ತರಾಯಿಗಳು+ ಎಂದನು ಆ ಭೀಷ್ಮ.
ಸುಶರ್ಮ ಹೊಗಳಿದನು ಮತವು+ ಅಹುದು ತಪ್ಪಲ್ಲ= ಸುಶರ್ಮನು ಹೊಗಳಿದನು- ಹೇಳಿದುದು, ಮತವು+ ಅಹುದು ತಪ್ಪಲ್ಲ- ಒಪ್ಪಿಗೆ, ತಪ್ಪಲ್ಲ. ಪಾಂಡವಗತಿಯನು+ ಅರಿವೊಡೆ ಮಾರ್ಗವಿದು ಸಮ್ಮತವು= ಪಾಂಡವದ ಗತಿ- ನೆಡೆ- ಇರುವನ್ನು ತೀಳಿಯಲು ಇದು ಸರಿಯಾದ ಮಾರ್ಗ; ನಿರ್ಮಳ ನೀತಿಕಾರರ ಮನಕೆ ಮತವು+ ಅಹುದು= ನಿರ್ಮಲ ನೀತಿಕಾರರ ಮನಕೆ- ಮನಸ್ಸಿಗೂ ಮತವು- ಅಹುದು - ಒಪ್ಪಿಗೆ ಆಗುವುದು, ಅತಿ ಗಳಿತವಾಯ್ತು+ ಅವಧಿ ದಿವಸ ಸ್ಥಿತಿಯೊಳು+ ಐದಾರಾಗೆ,= ೧೨ವರ್ಷ ೧ ವರ್ಷದ ಒಟ್ಟು ೧೩ ವರ್ಷದ ಅವಧಿಯು ಅತಿ ಗಳಿತವಾಯ್ತು- ಹತ್ತಿರ ಬಂತು. ದಿವಸ ಸ್ಥಿತಿಯೊಳು+ ಐದಾರಾಗೆ= ಇನ್ನು ಐದಾರು ದಿನವಿದೆ ಎಂದನು. ಬಳಿಕ+ ಈ ಕ್ಷಿತಿಗೆ ಭೂಮಿಗೆ, ಪಾಂಡವರು+ ಉತ್ತರಾಯಿಗಳು- ಉತ್ತರಾಧಿಕಾರಿಗಳಾಗುತ್ತಾರೆ+ ಎಂದನು ಆ ಭೀಷ್ಮ.
ಅರ್ಥ:ಸುಶರ್ಮನು ಹೇಳಿದುದು ಅಹುದು ತಪ್ಪಲ್ಲ- ಒಪ್ಪಿಗೆ. ಪಾಂಡವರ ನೆಡೆ- ಇರುವನ್ನು ತೀಳಿಯಲು ಇದು ಸರಿಯಾದ ಮಾರ್ಗ;ನಿರ್ಮಲ ನೀತಿಕಾರರ ಮನಕೆ- ಮನಸ್ಸಿಗೂ ಮತವು- ಒಪ್ಪಿಗೆ ಆಗುವುದು. ೧೨ವರ್ಷ ವನವಾಸ ಮತ್ತು ೧ ವರ್ಷದ ಅಜ್ಞಾತವಾಸ ಒಟ್ಟು ೧೩ ವರ್ಷದ ಅವಧಿಯು ಮುಗಿಯುವದಿ ಹತ್ತಿರ ಬಂತು. ದಿವಸ ಇನ್ನು ಐದಾರು ದಿನವಿದೆ ಎಂದನು. ಆನಂತರ ಈ ಭೂಮಿಗೆ ಪಾಂಡವರು ಉತ್ತರಾಧಿಕಾರಿಗಳಾಗುತ್ತಾರೆ, ಎಂದನು ಆ ಭೀಷ್ಮ.
ಪರಿಗಣಿಸಿ ನೋಡಿದೊಡೆ ಮಾಡಿದ
ವರುಷ ತತಿಯೊಳು ಹೆಚ್ಚು ಕುಂದುಂ
ಟುರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ |
ಅರಿಯಲೇ ಬೇಕಾವ ಪರಿಯಿಂ
ದರಿದೆವಾದೊಡೆಯುತ್ತರೋತ್ತರ
ಧರಣಿ ಕುರುಪತಿಗೆಂದರಾ ದ್ರೋಣಾದಿ ನಾಯಕರು || ೨೩ ||
ಪದವಿಭಾಗ-ಅರ್ಥ:ಪರಿಗಣಿಸಿ ನೋಡಿದೊಡೆ ಮಾಡಿದ ವರುಷ ತತಿಯೊಳು ಹೆಚ್ಚು ಕುಂದುಂಟು+ ಉರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ ಅರಿಯಲೇ ಬೇಕಾವ ಪರಿಯಿಂದ+ ಅರಿದೆವಾದೊಡೆಯು+ ಉತ್ತರೋತ್ತರ ಧರಣಿ ಕುರುಪತಿಗೆ+ ಏಂದರು+ ಆ ದ್ರೋಣಾದಿ ನಾಯಕರು.
ಪರಿಗಣಿಸಿ ನೋಡಿದೊಡೆ ಮಾಡಿದ ವರುಷ ತತಿಯೊಳು ಹೆಚ್ಚು ಕುಂದುಂಟು+= ಪರಿಗಣಿಸಿ ನೋಡಿದೊಡೆ- ಸೂಕ್ಷ್ಮವಾಗಿ ನೋಡಿದರೆ, ಮಾಡಿದ ವರುಷ ತತಿಯೊಳು(ಸಮೂಹ) ವನವಾಸ ಮತ್ತು ಅಜ್ಞಾತವಾಸ ಮಾಡಿದ ಒಟ್ಟು ದಿನಗಳ ಲೆಕ್ಕದಲ್ಲಿ, ಹೆಚ್ಚು ಕುಂದುಂಟು- ಬಹಳ ದೋಷಗಳಿವೆ.// ಉರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ= ಬೇಗಬೇಗ ಮಾಡಬೇಕು, ನೆಗಳಿದ ರಾಜಕಾರಿಯವ-ಮಾಡಬೇಕಾದ ರಾಜಕಾರ್ಯವನ್ನು,/ ಅರಿಯಲೇ ಬೇಕಾವ ಪರಿಯಿಂದ+ ಅರಿದೆವಾದೊಡೆಯು+ ಉತ್ತರೋತ್ತರ ಧರಣಿ ಕುರುಪತಿಗೆ+ ಏಂದರು+= ಪಾಂಡವರನ್ನು ಅರಿಯಲೇ ಬೇಕಾವ ಪರಿಯಿಂದ-ಗುರುತಿಸುವ ಕ್ರಮದಿಂದ,+ /ಅರಿದೆವಾದೊಡೆಯು- ಗುರುತಿಸಿದ್ದೇ ಆದರೆ,/ ಉತ್ತರೋತ್ತರ ಧರಣಿ ಕುರುಪತಿಗೆ+ ಏಂದರು- ಉತ್ತರೋತ್ತರವಾಗಿ ಪರಂಪರೆಯಾಗಿ, ಧರಣಿ ಕುರುಪತಿಗೆ+ ಏಂದರು- ರಾಜ್ಯವು ಕೌರವನಿಗೆ ಸೇರುವುದು ಎಂದರು, ಆ ದ್ರೋಣಾದಿ ನಾಯಕರು.
ಅರ್ಥ:ಆ ದ್ರೋಣಾದಿ ನಾಯಕರು, ಸೂಕ್ಷ್ಮವಾಗಿ ನೋಡಿದರೆ, ವನವಾಸ ಮತ್ತು ಅಜ್ಞಾತವಾಸ ಮಾಡಿದ ಒಟ್ಟು ದಿನಗಳ ಲೆಕ್ಕದಲ್ಲಿ, ಬಹಳ ದೋಷಗಳಿವೆ. ಮಾಡಬೇಕಾದ ರಾಜಕಾರ್ಯವನ್ನು ಬೇಗಬೇಗ ಮಾಡಬೇಕು. ಪಾಂಡವರನ್ನು ಅಗುರುತಿಸುವ ಕ್ರಮದಿಂದ ಗುರುತಿಸಿದ್ದೇ ಆದರೆ ಉತ್ತರೋತ್ತರವಾಗಿ- ಪರಂಪರೆಯಾಗಿ, ರಾಜ್ಯವು ಕೌರವನಿಗೆ ಸೇರುವುದು, ಎಂದರು.
ಬೀಡು ನಡೆಯಲಿ ಮುಂದೆ ಮತ್ಸ್ಯನ
ನಾಡಿನೊಳು ಕಟಕಾಳಿ ದೂತರು
ಕೂಡೆ ಸಾರಲಿ ಕರೆಯಲಕ್ಷೋಹಿಣಿಯ ನಾಯಕರ |
ಜೋಡಿಸಲಿ ಗುಡಿ ದಡ್ಡಿ ಚಂಪೆಯ
ಗೂಡಿ ಕೊಟ್ಟಿಗೆ ಬಂಡಿ ನಡೆಯಲಿ
ನಾಡ ಬಿಟ್ಟಿಗಳೆಂದು ಕೌರವರಾಯ ನೇಮಿಸಿದ || ೨೪ ||
ಪದವಿಭಾಗ-ಅರ್ಥ: ಬೀಡು ನಡೆಯಲಿ ಮುಂದೆ ಮತ್ಸ್ಯನನಾಡಿನೊಳು ಕಟಕ+ ಆಳಿ ದೂತರುಕೂಡೆ ಸಾರಲಿ ಕರೆಯಲಿ+ ಅಕ್ಷೋಹಿಣಿಯ ನಾಯಕರ ಜೋಡಿಸಲಿ ಗುಡಿ ದಡ್ಡಿ ಚಂಪೆಯಗೂಡಿ ಕೊಟ್ಟಿಗೆ ಬಂಡಿ ನಡೆಯಲಿ ನಾಡ ಬಿಟ್ಟಿಗಳು+ ಎಂದು ಕೌರವರಾಯ ನೇಮಿಸಿದ.
ಬೀಡು(ರಕ್ಷಣಾಸೈನ್ಯ) ನಡೆಯಲಿ ಮುಂದೆ ಮತ್ಸ್ಯನನಾಡಿನೊಳು= ತನ್ನ ರಕ್ಷಣಾ ಸೈನ್ಯವು ಮತ್ಸ್ಯದೇಶದೊಳಗೆ ಹೋಗಲಿ;// ಕಟಕ+ ಆಳಿ- ಸೈನ್ಯಸಮೂಹ, ದೂತರುಕೂಡೆ ಸಾರಲಿ= ಸೈನ್ಯಸಮೂಹವು ದೂತರೊಡನೆ ಹೋಗಲಿ.// ಕರೆಯಲಿ+ ಅಕ್ಷೋಹಿಣಿಯ ನಾಯಕರ ಜೋಡಿಸಲಿ= ಅಕ್ಷೋಹಿಣಿಯ ಸೇನಾ ನಾಯಕರನ್ನು ಸಯನ್ಯವಿಭಾಗಕ್ಕೆ ಜೋಡಿಸಲಿ.// ಗುಡಿ ದಡ್ಡಿ ಚಂಪೆಯಗೂಡಿ ಕೊಟ್ಟಿಗೆ ಬಂಡಿ ನಡೆಯಲಿ= ಸೈನ್ಯವು ಬಿಡಾರಹೂಡಲು ಬೇಕಾದ ಗುಡಿ-(ಡೇರೆ?) ದಡ್ಡಿ ಚಂಪೆಗಳನ್ನು ಕೂಡಿಸಿಕೊಂಡು ಕೊಟ್ಟಿಗೆವ್ಯವಸ್ಥೆ, ಬಂಡಿಗಳು, ಜೊತೆಗೆ ರಾಜ್ಯದ ಬಿಟ್ಟಿ ಆಳುಗಳು ಮತ್ಸ್ಯದೇಶಕ್ಕೆ ನಡೆಯಲಿ. ಎಂದು ಕೌರವರಾಯನು ನೇಮಿಸಿದ- ಆಜ್ಞಾಪಿಸಿದ.
ಅರ್ಥ: ತನ್ನ ರಾಜ್ಯದ ರಕ್ಷಣಾ ಸೈನ್ಯವು ಮತ್ಸ್ಯದೇಶದೊಳಗೆ ಹೋಗಲಿ; ಸೈನ್ಯಸಮೂಹವು ದೂತರೊಡನೆ ಹೋಗಲಿ. ಅಕ್ಷೋಹಿಣಿಯ ಸೇನಾ ನಾಯಕರನ್ನು ಸೈನ್ಯ ವಿಭಾಗಕ್ಕೆ ಜೋಡಿಸಲಿ. ಸೈನ್ಯವು ಬಿಡಾರಹೂಡಲು ಬೇಕಾದ ಗುಡಿ-(ಡೇರೆ?) ದಡ್ಡಿ ಚಂಪೆಗಳನ್ನು ಕೂಡಿಸಿಕೊಂಡು ಕೊಟ್ಟಿಗೆವ್ಯವಸ್ಥೆ, ಬಂಡಿಗಳು, ಜೊತೆಗೆ ರಾಜ್ಯದ ಬಿಟ್ಟಿ ಆಳುಗಳು ಮತ್ಸ್ಯದೇಶಕ್ಕೆ ನಡೆಯಲಿ, ಎಂದು ಕೌರವನು ಆಜ್ಞಾಪಿಸಿದ.
ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ |
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವೊಂಟರೊಗ್ಗಿನಲಿ || ೨೫ ||
ಪದವಿಭಾಗ-ಅರ್ಥ:ಹರಿದುದು+ ಓಲಗ, ಮರುದಿವಸ ಗುಡಿಹೊರಗೆ ಹೊಯ್ದವು ಸನ್ಮುಹೂರ್ತದೊಳು+ ಅರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ ಸುರನದೀಸುತ ಕರ್ಣ ಕೃಪ ಗುರು ಗುರುಸುತ+ ಆದಿ ಮಹಾಪ್ರಧಾನರು ಕರಿತುರಗ ರಥಪತ್ತಿಯಲಿ ಹೊರವೊಂಟರು+ ಒಗ್ಗಿನಲಿ.
ಹರಿದುದು+ ಓಲಗ,= ಶಬೆಯು ಮುಕ್ತಾಯವಾಯಿತು.// ಮರುದಿವಸ ಗುಡಿಹೊರಗೆ ಹೊಯ್ದವು ಸನ್ಮುಹೂರ್ತದೊಳು+ ಅರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ= ಮರುದಿನ ಸೈನ್ಯವು ಸನ್- ಒಳ್ಳೆಯ ಮುಹೂರ್ತದಲ್ಲಿ ಹೊರಟು ಭೇರಿಕಹಳೆಗಳ ಸದ್ದುಮಾಡಿದವು.// ಅರಸ ಕೌರವನೂ ಸನ್ನದ್ಧನಾಗಿ ಸುಶರ್ಮಾದಿಗಳ ಸಮೂಹದೊಡನೆ ಹೊರಹೊಂಟನು.// ಸುರನದೀಸುತ ಕರ್ಣ ಕೃಪ ಗುರು ಗುರುಸುತಾದಿ ಮಹಾಪ್ರಧಾನರು ಕರಿತುರಗ ರಥಪತ್ತಿಯಲಿ (ಪತ್ತಿ=ಸೇರಿಕೊಂಡಿರುವಿಕೆ) ಹೊರವೊಂಟರು+ ಒಗ್ಗಿನಲಿ(ಒಟ್ಟಾಗಿ)= ಅವನೊಡನೆ ಸುರನದೀಸುತ- ಭೀಷ್ಮ, ಕರ್ಣ ಕೃಪ ಗುರು ಗುರುಸುತ- ಅಶ್ವತ್ಥಾಮ, ಮಹಾಪ್ರಧಾನರು, ಆನೆ, ಕುದುರೆ, ರಥಗಳು ಸೇರಿಕೊಂಡು ಒಟ್ಟಾಗಿ ಹೊರಹೊರಟರು.
ಅರ್ಥ:ಕೌರವನ ಸಭೆಯು ಮುಕ್ತಾಯವಾಯಿತು. ಮರುದಿನ ಸೈನ್ಯವು ಒಳ್ಳೆಯ ಮುಹೂರ್ತದಲ್ಲಿ ಹೊರಟು ಭೇರಿಕಹಳೆಗಳ ಸದ್ದುಮಾಡಿದವು.ಅರಸ ಕೌರವನೂ ಸನ್ನದ್ಧನಾಗಿ ಸುಶರ್ಮಾದಿಗಳ ಸಮೂಹದೊಡನೆ ಹೊರಹೊಂಟನು. ಅವನೊಡನೆ ಸುರನದೀಸುತ- ಭೀಷ್ಮ, ಕರ್ಣ ಕೃಪ ಗುರು ಗುರುಸುತ- ಅಶ್ವತ್ಥಾಮ, ಮಹಾಪ್ರಧಾನರು, ಆನೆ, ಕುದುರೆ, ರಥಗಳು ಸೇರಿಕೊಂಡು ಒಟ್ಟಾಗಿ ಹೊರಹೊರಟರು.
ಮೋಹರವ ಮೇಳೈಸಿದನು ನಿ
ರ್ವಾಹವನು ನಿಶ್ಚೈಸಿದನು ಮ
ತ್ತೂಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ ||
ಸಾಹಸರನಟ್ಟಿದನು ವೈರಿಗ
ಳಾಹವಕೆ ನೆಲನಗಲದಲಿ ಬಲ
ಮೋಹಿಸಿತು ನೆರಸಿದನು ಬಹಳಾಕ್ಷೋಹಿಣೀ ಬಲವ || ೨೬ ||
ಪದವಿಭಾಗ-ಅರ್ಥ: ಮೋಹರವ ಮೇಳೈಸಿದನು ನಿರ್ವಾಹವನು ನಿಶ್ಚೈಸಿದನು ಮತ್ತೆ+ ಊಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ ಸಾಹಸರನು+ ಅಟ್ಟಿದನು ವೈರಿಗಳ+ ಆಹವಕೆ ನೆಲನ+ ಅಗಲದಲಿ ಬಲ ಮೋಹಿಸಿತು ನೆರಸಿದನು ಬಹಳ+ ಅಕ್ಷೋಹಿಣೀ ಬಲವ.
ಮೋಹರವ-ಸೈನ್ಯವನ್ನು, ಮೇಳೈಸಿದನು-ಸೇರಿಸಿದನು, ನಿರ್ವಾಹವನು ನಿಶ್ಚೈಸಿದನು- ನಾಯಕ- ಉಪನಾಯಕರನ್ನು ನಿಶ್ಚೈಸಯ ಮಾಡಿದನು. ಮತ್ತೆ+ ಊಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ ಸಾಹಸರನು+ ಅಟ್ಟಿದನು= ಮತ್ತೆ ಊಹಿಸಿ ಯೋಜನೆ ಮಾಡುವ ಊಹೆಕಾರರನ್ನೂ, ವೈರಿಗಳ ಮನಸ್ಸನ್ನು ಸೋದಿಸಿ ಅರಿತುಕೊಂಡು ತುರುಗೊಂಬ- ಗೋವುಗಳನ್ನು ಹಿಡಿದುತರುವ ಸಾಹಸಿಗಳನ್ನು ಅವರ ಜೊತೆ ಕಳಿಸಿದನು-ಅಟ್ಟಿದನು. ವೈರಿಗಳ+ ಆಹವಕೆ- ಯುದ್ಧಕ್ಕೆ, ನೆಲನ+ ಅಗಲದಲಿಭೂಮಿಯಗಲಕ್ಕೂ, ಬಲ- ಸೈನ್ಯವು, ಮೋಹಿಸಿತು- ತಂಬಿಕೊಂಡಿತು. ನೆರಸಿದನು ಬಹಳ+ ಅಕ್ಷೋಹಿಣೀ ಬಲವ= ಅನೇಕ ಅಕ್ಷೋಹಿಣೀ ಸೈನ್ಯವನ್ನು ಒಟ್ಟುಗೂಡಿಸಿದನು.
ಅರ್ಥ: ಕೌರವನು ಗೋಗ್ರಹಣಕ್ಕಾಗಿ ಸೈನ್ಯವನ್ನು ಸೇರಿಸಿದನು, ನಾಯಕ- ಉಪನಾಯಕರನ್ನು ನಿಶ್ಚಯ ಮಾಡಿದನು. ಮತ್ತೆ ಊಹಿಸಿ ಯೋಜನೆ ಮಾಡುವ ಊಹೆಕಾರರನ್ನೂ, ವೈರಿಗಳ ಮನಸ್ಸನ್ನು ಶೋಧಿಸಿ ಅರಿತುಕೊಂಡು ಗೋವುಗಳನ್ನು ಹಿಡಿದುತರುವ ಸಾಹಸಿಗಳನ್ನು ಅವರ ಜೊತೆ ಕಳಿಸಿದನು-ವೈರಿಗಳೊಡನೆ ಯುದ್ಧಕ್ಕೆ ಭೂಮಿಯಗಲಕ್ಕೂ ಸೈನ್ಯವು ತುಂಬಿಕೊಂಡಿತು. ಅನೇಕ ಅಕ್ಷೋಹಿಣೀ ಸೈನ್ಯವನ್ನು ಒಟ್ಟುಗೂಡಿಸಿದನು.

ದಕ್ಷಿಣ ಗೋಗ್ರಹಣ

ಸಂಪಾದಿಸಿ
ಕರಿಗಳಿಗೆ ಗುಳ ಬೀಸಿದವು ವರ
ತುರಗ ಹಲ್ಲಣಿಸಿದವು ತೇಜಿಯ
ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು |
ಅರಸನಿದಿರಲಿ ಮೋಹಿದುದು ಸೀ
ಗುರಿಯ ಸಬಳದ ಸಾಲಿನೊಳಗಂ
ಬರನ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ || ೨೭ ||
ಪದವಿಭಾಗ-ಅರ್ಥ: ಕರಿಗಳಿಗೆ ಗುಳ ಬೀಸಿದವು ವರತುರಗ ಹಲ್ಲಣಿಸಿದವು ತೇಜಿಯ ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು ಅರಸನ+ ಇದಿರಲಿ ಮೋಹಿದುದು ಸೀಗುರಿಯ ಸಬಳದ ಸಾಲಿನೊಳಗೆ+ ಅಂಬರನ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ.
ಕರಿಗಳಿಗೆ ಗುಳ(ಗುಳ- ಜೊಲ್ಲು, ಆನೆಯ ಹಣೆ) ಬೀಸಿದವು;= ಆನೆಗಳಿಗೆ ಹಣೆಕಟ್ಟುಗಳನ್ನು ಬೀಸಿಹಾಕಿದರು,/ ವರತುರಗ ಹಲ್ಲಣಿಸಿದವು= ಕುದುರೆಗಳು ಹೇಷಾರವ ಮಾಡಿದವು,// ತೇಜಿಯ ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು ಅರಸನ+ ಇದಿರಲಿ ಮೋಹಿದುದು= ಕುದುರೆಗಳನ್ನು ತರಿಸಿ ರಥದಲ್ಲಿ ಹೂಡಿ ಕೈದುವ- ಆಯುಧವನ್ನು ಸೆಳೆದು ಕಾಲಾಳುಗಳು ಅರಸನ ಎದುರಿನಲ್ಲಿ ಮೋಹಿದುದು- ಒಟ್ಟಾಗಿ ಸೇರಿತು//ಸೀಗುರಿಯ- ಬಾವುಟಗಳ ಮತ್ತು ಸಬಳದ- ಈಟಿಗಳ ಸಾಲಿನೊಳಗೆ+ ಅಂಬರನ- ಆಕಾಶವನ್ನು ಮುಸುಕಿತು- ಮುಚ್ಚಿತು, ಧರಣಿ ತಗ್ಗಿತು- ಭೂಮಿ ಸೈನ್ಯದ ಭಾರಕ್ಕೆ ತಗ್ಗಿತು, ನೆರೆದುದಾ ಸೇನೆ- ಹೀಗೆ ಸೇನೆಯು ಧಾಳಿಗೆ ಸಿದ್ದವಾಗಿ ನೆರೆಯಿತು.
ಅರ್ಥ: ಆನೆಗಳಿಗೆ ಹಣೆಕಟ್ಟುಗಳನ್ನು ಬೀಸಿಹಾಕಿದರು,ಕುದುರೆಗಳು ಹೇಷಾರವ ಮಾಡಿದವು; ಕುದುರೆಗಳನ್ನು ತರಿಸಿ ರಥದಲ್ಲಿ ಹೂಡಿ ಕೈದುವ- ಆಯುಧವನ್ನು ಸೆಳೆದು ಕಾಲಾಳುಗಳು ಅರಸನ ಎದುರಿನಲ್ಲಿ ಒಟ್ಟಾಗಿ ಸೇರಿತು. ಬಾವುಟಗಳ ಮತ್ತು ಈಟಿಗಳ ಸಾಲಿನಿಂದ ಆಕಾಶವು ಮುಚ್ಚಿತು; ಭೂಮಿ ಸೈನ್ಯದ ಭಾರಕ್ಕೆ ತಗ್ಗಿತು, ಹೀಗೆ ಸೇನೆಯು ಧಾಳಿಗೆ ಸಿದ್ದವಾಗಿ ನೆರೆಯಿತು.
ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನ ರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು |
ಸಾರಿದರು ಭಟ್ಟರು ಮಹಾ ನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ || ೨೮ ||
ಪದವಿಭಾಗ-ಅರ್ಥ: ಆರತಿಗಳು+ ಎತ್ತಿದವು ತಳಿದು+ ಉಪ್ಪಾರತಿಯ ಸೂಸಿದರು ಘನ ರಥದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು ಸಾರಿದರು ಭಟ್ಟರು ಮಹಾ ನಾಗಾರಿಗಳು ಬಿರುದಾವಳಿಯ ಕೈವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ. (ಸೂಳ್=ಸೂಳುನುಡಿ. ಜೋರುಧ್ವನಿ.)
ಸೈನ್ಯ ಹೊಡುವ ಮೊದಲು ಆರತಿಗಳ+ ಎತ್ತಿದವು ತಳಿದು+ ಉಪ್ಪಾರತಿಯ ಸೂಸಿದರು ಘನ ರಥದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು= ತೋರಣ ಕಟ್ಟಿದ ರಥದ ಮಧ್ಯದಲ್ಲಿ ಕೌರವನು ಕುಳಿತಿದ್ದಾಗ ಆರತಿಗಳನ್ನು ಎತ್ತಿದರು, ಉಪ್ಪಾರತಿಯನ್ನು ಮುಖದೆದುರು ಸುತ್ತಿ ಸುಳಿದರು- ಸೂಸಿದರು;// ಸಾರಿದರು ಭಟ್ಟರು ಬಂದು ಆಶೀರ್ವದಿಸಿ ಸಾರಿದರು- ಹೋದರು; ಮಹಾ ನಾಗಾರಿಗಳು ಬಿರುದಾವಳಿಯ ಕೈವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ= ಮಹಾ ನಾಗಾರಿಗಳನ್ನು ಬಾರಿಸಿದರು; ಕೈರವನ ಬಿರುದಾವಳಿಗಳನ್ನು ಹೊಗಳಿದರು. ಕೈವಾರಿಸುವ- ಹೊಗಳುವ, ಜಯರವದೊಡನೆ- ಜಯಜಯ ಎಂಬ ಸದ್ದಿನೊಡನೆ, ನಗಾರಿ, ಕಹಳೆಗಳ ನಿಸ್ಸಾಳ- ಸದ್ದು ಸೂಳೈಸೆದೊಡ್ಡದಾಗಿ ಮೊಳಗಲು. (ಸೂಳ್=ಸೂಳುನುಡಿ. ಜೋರುಧ್ವನಿ). (ಸೂಳ್=ಸೂಳುನುಡಿ. ಜೋರುಧ್ವನಿ.)
ಅರ್ಥ: ಸೈನ್ಯ ಹೊಡುವ ಮೊದಲು ತೋರಣ ಕಟ್ಟಿದ ರಥದ ಮಧ್ಯದಲ್ಲಿ ಕೌರವನು ಕುಳಿತಿದ್ದಾಗ ಆರತಿಗಳನ್ನು ಎತ್ತಿದರು, ಉಪ್ಪಾರತಿಯನ್ನು ಅವನ ಮುಖದೆದುರು ಸುತ್ತಿ ಸುಳಿದರು- ಸೂಸಿದರು; ಭಟ್ಟರು ಬಂದು ಆಶೀರ್ವದಿಸಿಹೋದರು; ಮಹಾ ನಾಗಾರಿಗಳನ್ನು ಬಾರಿಸಿದರು; ಹೊಗಳುವ ಜಯಜಯ ಎಂಬ ಸದ್ದಿನೊಡನೆ, ನಗಾರಿ, ಕಹಳೆಗಳ ನಿಸ್ಸಾಳ- ಸದ್ದು ಸೂಳೈಸೆ ದೊಡ್ಡದಾಗಿ ಮೊಳಗಲು, ಕೌರವನ ಬಿರುದಾವಳಿಗಳನ್ನು ಹೊಗಳಿದರು.
ಹೊಗೆದುದಂಬರವವನಿ ನಡುಗಿತು
ಗಗನಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದವರುಣಾಂಬುಗಳ ಧಾರೆಗಳು |
ದಿಗುವಳಯದಲಿ ಧೂಮಕೇತುಗ
ಳೊಗೆದುವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ || ೨೯ ||
ಪದವಿಭಾಗ-ಅರ್ಥ: ಹೊಗೆದುದು+ ಅಂಬರವು+ ಅವನಿ ನಡುಗಿತು ಗಗನಮಣಿ ಪರಿವೇಷದಲಿ ತಾರೆಗಳು ಹೊಳೆದವು ಸುರಿದವು+ ಅರುಣಾಂಬುಗಳ ಧಾರೆಗಳು ದಿಗುವಳಯದಲಿ ಧೂಮಕೇತುಗಳು+ ಒಗೆದುವು+ ಎನಲು+ ಉತ್ಪಾತ ಕೋಟಿಯ ಬಗೆಯದ+ ಅವನಿಪ ಪುರವ ಹೊರವಂಟನು ಸಗಾಢದಲಿ.
ಹೊಗೆದುದು+ ಅಂಬರವು+ ಅವನಿ ನಡುಗಿತು ಗಗನಮಣಿ ಪರಿವೇಷದಲಿ ತಾರೆಗಳು ಹೊಳೆದವು= ಹೊಗೆದುದು+ ಅಂಬರವು- ಆಕಾಶವು ಹೊಗೆಯಿಂದ ತುಂಬಿತು, ಅವನಿ ನಡುಗಿತು ಗಗನಮಣಿ ಪರಿವೇಷದಲಿ ತಾರೆಗಳು ಹೊಳೆದವು- ಭೂಮಿ ನಡುಗಿತು, ಆಕಾಶದ ಮಣಿಗಳಂತೆ (ಪರಿವೇಷದಲಿ)ಹಗಲಿನಲ್ಲೇ ತಾರೆಗಳು ಹೊಳೆದವು.// ಸುರಿದವು+ ಅರುಣಾಂಬುಗಳ(ಕೆಂಪು ನೀರಿನ ಹನಿ) ಧಾರೆಗಳು ದಿಗುವಳಯದಲಿ ಧೂಮಕೇತುಗಳೊಗೆದುವು+= ಆಕಾಶದಿಂದ ಕೆಂಪು ಮಳೆ ಸುರಿದವು, ದಿಗಂತದಲ್ಲಿ ಧೂಮಕೇತುಗಳು ಕಂಡವು.// + ಎನಲು+ ಉತ್ಪಾತ ಕೋಟಿಯ ಬಗೆಯದ+ ಅವನಿಪ ಪುರವ ಹೊರವಂಟನು ಸಗಾಢದಲಿ(ಸಂಭ್ರಮದಿಂದ)= ಹೀಗಿರುವಾಗ ಕೋಟಿ ಅಪಶಕುನಗಳನ್ನು ಬಗೆಯದೆ- ಲೆಕ್ಕಿಸದೆ, ರಾಜನು ಹಸ್ತಿನಾಪುರದಿಂದ ಸಂಭ್ರಮದಿಂದ ಹೊರಹೊರಟನು.
ಅರ್ಥ:ಆಕಾಶವು ಹೊಗೆಯಿಂದ ತುಂಬಿತು, ಅವನಿ ನಡುಗಿತು ಗಗನಮಣಿ ಪರಿವೇಷದಲಿ ತಾರೆಗಳು ಹೊಳೆದವು- ಭೂಮಿ ನಡುಗಿತು, ಆಕಾಶದ ಮಣಿಗಳಂತೆ ಹಗಲಿನಲ್ಲೇ ತಾರೆಗಳು ಹೊಳೆದವು. ಆಕಾಶದಿಂದ ಕೆಂಪು ಮಳೆ ಸುರಿದವು, ದಿಗಂತದಲ್ಲಿ ಧೂಮಕೇತುಗಳು ಕಂಡವು. ಹೀಗಿರುವಾಗ ಕೋಟಿ ಅಪಶಕುನಗಳನ್ನು ಲೆಕ್ಕಿಸದೆ, ರಾಜಕೌರವನು ಹಸ್ತಿನಾಪುರದಿಂದ ಸಂಭ್ರಮದಿಂದ ಹೊರಹೊರಟನು.
ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ |
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ || ೩೦ ||
ಪದವಿಭಾಗ-ಅರ್ಥ: ಪಳಹರದ ಪಲ್ಲವದ ಪಸರದ ಪಳಿಯ ಪಟ್ಟಿಯ ತೋಮರದ ಹೊಳೆ ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ ಬಿಳುಗೊಡೆಯ ಝಲ್ಲರಿಯ ಜೋಡಿಗಳೊಳಗೆ ಗಗನವು ತೀವಿತು+ ಎನೆ ಹೆಕ್ಕಳಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ.
ಪಳಹರದ ಪಲ್ಲವದ- ಬಾವುಟದ ಅರಳಿಕೊಂಡು ಹಾರುವಿಕೆ, ಪಸರದ ಪಳಿಯ ಪಟ್ಟಿಯ- ಕಾಲು ಬಳೆಗಳ ಹರಡಿದ-ಪಸರಿಸಿದ ಸದ್ದಿನ- ತೋಮರದ- ಈಟಿಯ, ಹೊಳೆ ಹೊಳೆವ- ಹೊಳೆಯುವ, ಚಮರದ ಸೀಗುರಿಯ- ಚಾಮರ ಮತ್ತು ಬಾವುಟದ, ಡೊಂಕಣಿಯ- ಬಾಗಿದ ಕತ್ತಿಯ, ತಿಂಥಿಣಿಯ- ಸಮೂಹದ, ಬಿಳುಗೊಡೆಯ- ಬಿಳಿಬಟ್ಟೆಯ ಕೊಡೆಗಳು, ಝಲ್ಲರಿಯ- ಬಲೆಯಂತಹ ಸಿಂಗಾರವ ವಸ್ತ್ರದೊಡನೆ; ಜೋಡಿಗಳೊಳಗೆ- ಗಗನವು ತೀವಿತು+ ಎನೆ- ಆಕಾಸವೇ ತುಂಬಿತು ಎನ್ನುವಂತೆ, ಹೆಕ್ಕಳಸಿ= ಹಿಗ್ಗಿ. ಗರ್ವದಿಂದ. ಠೀವಿಯಿಂದ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ.
ತೋಮರ= ಈಟಿಯಂತಹ ಒಂದು ಬಗೆಯ ಆಯುಧ; ಪಟ್ಟಿ- ಆನೆಯ ಕಾಲಿನ ಸರಪಳಿ. 3. ಕಾಲಂದುಗೆ.
ಅರ್ಥ: :ಕೌರವನ ಸೈನ್ಯವು, ಬಾವುಟವನ್ನು ಅರಳಿಸಿಕೊಂಡು ಹಾರಿಸುತ್ತಾ, ಕಾಲು ಬಳೆಗಳ ಸದ್ದನ್ನು ಪಸರಿಸುತ್ತಾ, ತೋಮರವೆಂಬ ಈಟಿಯನ್ನು ಝಳುಪಿಸಿ ಹೊಳೆ ಹೊಳೆಯಿಸುತ್ತಾ, ಚಾಮರವನ್ನು ಬೀಸುತ್ತಾ ಮತ್ತು ಬಾವುಟಗಳನ್ನು ಹಾರಿಸುತ್ತಾ, ಈಟಿ, ಡೊಂಕಣಿಯೆಂಬ ಬಾಗಿದ ಕತ್ತಿಗಳನ್ನು ಹಿಡಿದ ಸೈನ್ಯದ ಸಮೂಹದೊಡನೆ, ಬಿಳಿಬಟ್ಟೆಯ ಕೊಡೆಗಳು, ಝಲ್ಲರಿಯೆಂಬ ಬಲೆಯಂತಹ ಸಿಂಗಾರವ ವಸ್ತ್ರದ ಬಾವುಟದೊಡನೆ; ಜೋಡಿ ಜೋಡಿಗಳಾಗಿ, ಹೋಗುವಾಗ ಆಕಾಶವೇ ತುಂಬಿತು ಎನ್ನುವಂತೆ, ಹಿಗ್ಗಿ ಗರ್ವದಿಂದ ಠೀವಿಯಿಂದ ಪಯಣದ ಮೇಲೆ ಪಯಣಮಾಡತ್ತಾ ಸೇನೆ ಮತ್ಸ್ಯ ದೇಶದ ಕಡೆ ನಡೆಯಿತು.
ರಾಯದಳ ನಡೆಗೊಂಡುದೊಗ್ಗಿನ
ನಾಯಕರು ಮನ್ನೆಯರು ರಾಜ ಪ
ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ |
ತಾಯಿಮಳಲುಬ್ಬಳಿಸೆ ಜಲನಿಧಿ
ಬಾಯಬಿಡೆ ಗರ್ಜಿಸುವ ನಿಸ್ಸಾ
ಳಾಯತದ ಸೂಳೊದಗೆ ಪಯಣದ ಮೇಲೆ ಪಯಣದಲಿ || ೩೧ ||
ಪದವಿಭಾಗ-ಅರ್ಥ: ರಾಯದಳ ನಡೆಗೊಂಡುದು+ ಒಗ್ಗಿನ ನಾಯಕರು ಮನ್ನೆಯರು ರಾಜ ಪಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ ತಾಯಿಮಳಲು+ ಉಬ್ಬಳಿಸೆ ಜಲನಿಧಿ ಬಾಯಬಿಡೆ ಗರ್ಜಿಸುವ ನಿಸ್ಸಾಳಾಯತದ ಸೂಳು+ ಒದಗೆ ಪಯಣದ ಮೇಲೆ ಪಯಣದಲಿ.
(ರಾಯದಳ ನಡೆಗೊಂಡುದು+- ಕೌರವರಾಯನ ಸೇನೆ ನೆಡಯಿತು.) ಒಗ್ಗಿನ- ಸೈನ್ಯದ ತಕುಡಿಯ ನಾಯಕರು, ಮನ್ನೆಯರು- ಮಾಂಡಲಿಕರು, ರಾಜ ಪಸಾಯಿತರು- ರಾಣಿಯ ಸೇವಕರು. ಸಂವರಣೆ ಸೌರಂಭದಲಿ ಸಂದಣಿಸೆ- ಸಿದ್ಧತೆಮಾದಿಕೊಂಡು ಸಂಭ್ರಮದಿಂದ ಗುಂಪಾಗಿ ಬರಲು, ತಾಯಿಮಳಲು+ ಉಬ್ಬಳಿಸೆ= ಭೂಮಿತಾಯಿ ಭಾರವನ್ನು ಹೊತ್ತು ಉಸ್ಸಪ್ಪಾ ಎಂದು ಉಬ್ಬಳಿಸಲು, ಜಲನಿಧಿ ಬಾಯಬಿಡೆ- ಸಮುದ್ರವು ಹೆದರಿ ಬಾಯಿಬಿಡಲು, ಗರ್ಜಿಸುವ ನಿಸ್ಸಾಳಾಯತದ ಸೂಳು+ ಒದಗೆ- ಆರ್ಭಟಿಸುವ ರಣವಾದ್ಯಗಳ ಸೂಳು- ಸದ್ದುಮಾಡುತ್ತಿರಲು, ಪಯಣದ ಮೇಲೆ ಪಯಣದಲಿ= ಪಯಣದ ಮೇಲೆ ಪಯಣಮಾಡತ್ತಾ ಕೌರವರಾಯನ ಸೇನೆ ಮತ್ಸ್ಯ ದೇಶದ ಕಡೆ ನಡೆಯಿತು
ಅರ್ಥ: ಸೈನ್ಯದ ತಕುಡಿಯ ನಾಯಕರು,ಮಾಂಡಲಿಕರು, ರಾಣಿಯರು ಮತ್ತು ರಾಣಿಯ ಸೇವಕರು, ಸಿದ್ಧತೆಮಾದಿಕೊಂಡು ಸಂಭ್ರಮದಿಂದ ಗುಂಪಾಗಿ ಬರಲು, ಭೂಮಿತಾಯಿ ಭಾರವನ್ನು ಹೊತ್ತು ಉಸ್ಸಪ್ಪಾ ಎಂದು ಉಬ್ಬಳಿಸಲು, ಸಮುದ್ರವು ಹೆದರಿ ಬಾಯಿಬಿಡಲು, ಆರ್ಭಟಿಸುವ ರಣವಾದ್ಯಗಳ ಸದ್ದುಮಾಡುತ್ತಿರಲು, ಪಯಣದ ಮೇಲೆ ಪಯಣಮಾಡತ್ತಾ ಕೌರವರಾಯನ ಸೇನೆ ಮತ್ಸ್ಯ ದೇಶದ ಕಡೆ ನಡೆಯಿತು.
ಸೆಳೆವ ಸಿಂಧದ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳರಿಯೆ |
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ || ೩೨ ||
ಪದವಿಭಾಗ-ಅರ್ಥ: ಸೆಳೆವ ಸಿಂಧದ ಕವಿವ ಹೀಲಿಯವಳಯ ತೋಮರ ಚಮರ ಡೊಂಕಣಿಗಳ ವಿಡಾಯಿಯಲಿ+ ಅಮಮ ಕೆತ್ತುದು ಗಗನವು+ ಅಳ್ಳರಿಯೆ ಸುಳಿಯಲು+ ಅನಿಲಂಗೆ+ ಇಲ್ಲ ಪಥ ಕೈಹೊಳಕಬಾರದು ರವಿಗೆ ನೆಲನು+ ಈ ದಳವನ+ ಆನುವಡೆ+ ಅರಿದೆನಲು ಜೋಡಿಸಿತು ಕುರುಸೇನೆ.
ಸೆಳೆವ ಸಿಂಧದ= ಮನಸ್ಸನ್ನು ಸೆಳೆಯುವ ಸಿಂಧೂರ- ಸಿಂಧೂರ/ ಕವಿವ ಹೀಲಿಯ-ನವಿಲುಗರಿಯ+ ವಳಯ ತೋಮರ- ತೋಳಿಗೆ ತೊಡುವ ಆಭರಣಧರಿಸಿದ ಚಮರ- ಬೀಸುವ ಗೊಡೆಯ ಚಾಮರ, ಹಿಡಿದ ಡೊಂಕಣಿಯ ಆಯುದಗಳ ವಿಡಾಯಿಯಲಿ- ವಿಝ್ರಂಬನೆಯಲ್ಲಿ,+ ಅಮಮ ಕೆತ್ತುದು ಗಗನವು-- ಆಕಾಶವೇ ಮುಚ್ಚಿತು, + ಅಳ್ಳರಿಯೆ ಸುಳಿಯಲು- ಆರ್ಭಟದ ಉಸಿರಾಟದ ಗಾಳಿಸುಳಿದಾಗ + ಅನಿಲಂಗೆ- ಗಾಳಿಗೆ+ ಇಲ್ಲ ಪಥ- ಸಂಚರಿಸಲು ದಾರಿಯಿಲ್ಲವಾಯಿತು, ಕೈಹೊಳಕಬಾರದು ರವಿಗೆ ನೆಲನ- ಸೂರ್ಯನಿಗೆ ನೆಲ ಮಟ್ಟಲು ಆಗದಂತಾಯಿತು,+ ಈ ದಳವನ+ ಆನುವಡೆ - ಈ ಸೈನ್ಯವನ್ನು ಎದುರಿಸಲು+ ಅರಿದೆನಲು ಜೋಡಿಸಿತು- ಅಸಾದ್ಯವೆನ್ನವಂತೆ ಸೇರಿತ್ತು, ಕುರುಸೇನೆ- ಕೌರವನ ಸೈನ್ಯವು .
ಅರ್ಥ: ಯೋಧರು ಧರಿಸಿದ ಮನಸ್ಸನ್ನು ಸೆಳೆಯುವ ಸಿಂಧೂರ, ನವಿಲುಗರಿಯನ್ನು ಹಾಕಿದ ತೋಮರವೆಂಬ ತೋಳಿಗೆ ತೊಡುವ ಆಭರಣವನ್ನು ಧರಿಸಿದ ಭಟರು, ಬೀಸುವ ಗೊಂಡೆಯ ಚಾಮರ, ಕೈಯಲ್ಲಿ ಹಿಡಿದ ಡೊಂಕಣಿಯ ಆಯುದಗಳ ವಿಜೃಂಬಣೆಯಲ್ಲಿ ಅಮಮ ಆಕಾಶವೇ ಮುಚ್ಚಿತು,ಆರ್ಭಟದ ಉಸಿರಾಟದಲ್ಲಿ ಗಾಳಿಗೆಸಂಚರಿಸಲು ದಾರಿಯಿಲ್ಲವಾಯಿತು, ಸೂರ್ಯನಿಗೆ ನೆಲ ಮಟ್ಟಲು ಆಗದಂತಾಯಿತು, ಈ ಸೈನ್ಯವನ್ನು ಎದುರಿಸಲು ಅಸಾದ್ಯವೆನ್ನವಂತೆ ಕುರುಸೇನೆ- ಕೌರವನ ಸೈನ್ಯವು ಸೇರಿತ್ತು.
ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾ ದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆವರೆಗಳಲಿ |
ಕಡಲು ಮೊಗೆದದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ || ೩೩ ||
ಪದವಿಭಾಗ-ಅರ್ಥ: ಪೊಡವಿ ಜಡಿದುದು ಫಣಿಯ ಹೆಡೆಗಳು ಮಡಿದವು+ ಆಶಾ ದಂತಿಗಳು ತಲೆಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆ ವರೆಗಳಲಿ ಕಡಲು ಮೊಗೆದದು ರತುನವನು ನೆಲನು+ ಒಡೆಯಲು+ ಅಗ್ಗದ ಸೇನೆ ವಹಿಲದಿ(ಬೇಗ.) ನಡೆದು ಬರಲು+ ಆ ಧೂಳಿ ಮುಸುಕಿತು ರವಿಯ ಮಂಡಲವ.
ಪೊಡವಿ ಜಡಿದುದು ಫಣಿಯ ಹೆಡೆಗಳು ಮಡಿದವು+ ಆಶಾ ದಂತಿಗಳು ತಲೆಗೊಡಹಿದವು= ಪೊಡವಿ ಜಡಿದುದು(ಜಡಿ- ಹೊಡೆ)- ಭೂಮಿಯು ಅಪ್ಪಳಿಸಲ್ಪಟ್ಟಿತು, ಫಣಿಯ - ಭೂಮಿಯನ್ನು ಹೊತ್ತ ಆದಿಶೇಷನ ಹೆಡಗಳು ಭಾರಕ್ಕೆ ಮಡಿಚಿಕೊಂಡವು- ಮಡಿಕೆಯಾಯಿತು.// + ಆಶಾ ದಂತಿಗಳು ತಲೆಗೊಡಹಿದವು= ದಿಗ್ಗಜಗಳು ಭಾರಕ್ಕೆ ತಲೆ ಕೊಡವಿದವು.// ಬಲದೊಳಗೆ ಮೊಳಗುವ ಲಗ್ಗೆ ಮೊಳಗುವ ಲಗ್ಗೆವರೆಗಳಲಿ ಕಡಲು ಮೊಗೆದದು ರತುನವನು= ಸೈನ್ಯದಲ್ಲಿ ಮೊಳಗುವ ಲಗ್ಗೆಯ- ಧಾಳಿಯ, ಕತ್ತಿಯ ವರೆಗಳ ಸದ್ದಿಗೆ ಸಮುದ್ರವು ಉಕ್ಕಿ ರತ್ನಗಳನ್ನು- ರತುನವನ್ನು ಮೊಗೆದು ಹೊರಚೆಲ್ಲಿತು, ,//ನೆಲನು+ ಒಡೆಯಲು+ ಅಗ್ಗದ ಸೇನೆ ವಹಿಲದಿ(ಬೇಗ.) ನಡೆದು ಬರಲು+ ಆ ಧೂಳಿ ಮುಸುಕಿತು ರವಿಯ ಮಂಡಲವ= ನೆಲವೇ ಒಡೆಯುವಂತೆ ದೊಡ್ಡ ಸೇನೆ ಬೇಗ ಬೇಗ ನಡೆದು ಬರುತ್ತಿರಲು, ಆ ಧೂಳು ಸೂರ್ಯಮಂಡಲವನ್ನೇ ಮುಚ್ಚಿತು.
ಅರ್ಥ: ಸೈನಿಕರ ಹೆಜ್ಜೆಯ ಭಾರಕ್ಕೆ ಭೂಮಿಯು ಅಪ್ಪಳಿಸಲ್ಪಟ್ಟಿತು, ಅದರಿಂದ ಭೂಮಿಯನ್ನು ಹೊತ್ತ ಆದಿಶೇಷನ ಹೆಡಗಳು ಭಾರಕ್ಕೆ ಮಡಿಕೆಯಾಯಿತು. ದಿಗ್ಗಜಗಳು ಭಾರಕ್ಕೆ ತಲೆ ಕೊಡವಿದವು.ಸೈನ್ಯದಲ್ಲಿ ಮೊಳಗುವ ಲಗ್ಗೆಯ- ಧಾಳಿಯ, ಕತ್ತಿಯ ವರೆಗಳ ಸದ್ದಿಗೆ ಸಮುದ್ರವು ಉಕ್ಕಿ ರತ್ನಗಳನ್ನು ಮೊಗೆದು ಹೊರಚೆಲ್ಲಿತು. ,ನೆಲವೇ ಒಡೆಯುವಂತೆ ದೊಡ್ಡ ಸೇನೆ ಬೇಗ ಬೇಗ ನಡೆದು ಬರುತ್ತಿರಲು, ಆ ಧೂಳು ಸೂರ್ಯಮಂಡಲವನ್ನೇ ಮುಚ್ಚಿತು.
ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ |
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳಿಯೀ ಕಳ
ಕಳಿಕೆಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ || ೩೪ ||
ಪದವಿಭಾಗ-ಅರ್ಥ: ಪ್ರಳಯಪಟು ಜಲರಾಶಿ ಜರಿದುದೊ, ತಳಿತ ಸಂದಣಿಗಿಲ್ಲ ಕಡೆಯ+ ಈ ದಳಕೆ ಮಾರ್ಮಲೆತು+ ಆರು ನಿಲುವವರು+ ಇಂದ್ರ ಯಮರೊಳಗೆ ಹುಲು ನೃಪರಿಗೆ+ ಈ ಯೊ+ ಒಡ್ಡು ಗಡ ಈ ಬಲುಹು ಹೊದರಿನ ಹೊರಳಿಯ+ ಈ ಕಳಕಳಿಕೆಯು+ ಏಕೆನೆ ನೂಕಿದುದು ಕುರುಸೇನೆ ದಟ್ಟೈಸಿ.
ಪ್ರಳಯಪಟು ಜಲರಾಶಿ ಜರಿದುದೊ= ಪ್ರಳಯಮಾಡುವ ಶೂರ ಜಲರಾಶಿಯೇ ಮೇಲಿನಿಂದ ಜರಿದು- ಕಳಚಿ ಬಿತ್ತೋ!,// ತಳಿತ- ಚಿಗುರಿನಿಂತ ಸಂದಣಿಗೆ+ ಇಲ್ಲ ಕಡೆಯ+ ಈ ದಳಕೆ ಮಾರ್ಮಲೆತು+ ಆರು ನಿಲುವವರು+ ಇಂದ್ರ ಯಮರೊಳಗೆ= ಚಿಗುರಿನಿಂತ- ಉತ್ಸಾಹ ಭರಿತದ ಸಂದಣಿಗೆ+ ಇಲ್ಲ- ಸಮೂಹಕ್ಕೆ - ಇಲ್ಲ, ಕಡೆಯ+ = ಕೊನೆ ಎಂಬುದು ಇಲ್ಲ. ಈ ದಳಕೆ ಮಾರ್ಮಲೆತು+ ಆರು ನಿಲುವವರು+ ಇಂದ್ರ ಯಮರೊಳಗೆ= ಈ ಸೈನ್ಯಕ್ಕೆ ಯಮ ಇಂದ್ರರಲ್ಲಿ ಯಾರು ಎದುರಿಸಿ ನಿಲ್ಲಲು ಸಾದ್ಯ- ಸಾಧ್ಯವಿಲ್ಲ. ಹುಲು ನೃಪರಿಗೆ+ ಈ ಯೊ+ ಒಡ್ಡು ಗಡ= ಇನ್ನು ಹುಲು ನೃಪರಿಗೆ ಅಲ್ಪರಾದ ರಾಜರಿಗೆ ಈ ಸೇನೆಯ ಒಡ್ಡು- ಸಮೂಹ ಹೆದರುವುದೇ? ಗಡ;// ಈ ಒಡ್ಡು ಗಡ ಈ ಬಲುಹು= ಈ ಶಕ್ತಿ, ಹೊದರಿನ- ಹೊರಳಿಯ- ಗುಚ್ಛದ ಗುಂಪು ಗುಂಪಾಗಿರುವ,- + ಈ ಕಳಕಳಿಕೆಯು- ಆರ್ಭಟದ ಈ ಎಲ್ಲವೂ ಓಂದೇ ಎಂಬಂತೆ ಹೊರಳಿ ಒಂದೇ ಎಂಬಂತೆ ದಟ್ಟೈಸಿ- ಒಂದುಗೋಡಿ, ನೂಕಿದುದು ಕುರು ಸೇನೆ ದಟ್ಟೈಸಿ- ಕೂಡಿಕೊಂಡು ಕೌರವನ ಸೇನೆ ಒಗ್ಗೂಡಿ ಮುಂದೆ ಹೋಯಿತು.
ಅರ್ಥ:ಕೌರವನ ಸೈನ್ಯ ಪ್ರಳಯಮಾಡುವ ಶೂರ ಜಲರಾಶಿಯೇ ಮೇಲಿನಿಂದ ಜರಿದು- ಕಳಚಿ ಬಿತ್ತೋ ಎನ್ನುಂತಿತ್ತು! ಈ ಉತ್ಸಾಹ ಭರಿತ ಸೈನ್ಯ ಸಮೂಹಕ್ಕೆ ಕೊನೆ ಎಂಬುದು ಇಲ್ಲ. ಈ ಸೈನ್ಯಕ್ಕೆ ಯಮ ಇಂದ್ರರಲ್ಲಿ ಯಾರು ಎದುರಿಸಿ ನಿಲ್ಲಲು ಸಾದ್ಯ- ಸಾಧ್ಯವಿಲ್ಲ. ಹೀಗಿರುವಾಗ ಇನ್ನು ಹುಲು ನೃಪರಿಗೆ - ಅಲ್ಪರಾದ ರಾಜರಿಗೆ ಈ ಸೇನೆಯ ಸಮೂಹ ಹೆದರುವುದೇ? ಗಡ; ಈ ಒಡ್ಡು ಗಡ ಈ ಶಕ್ತಿ, ಗುಚ್ಛ- ಗುಂಪು ಗುಂಪಾಗಿರುವ,ಆರ್ಭಟದ ಸೇನೆ ಎಲ್ಲವೂ ಓಂದೇ ಎಂಬಂತೆ ದಟ್ಟೈಸಿ - ಒತ್ತೊತ್ತಾಗಿ, ಒಗ್ಗೂಡಿ ಮುಂದೆ ಹೋಯಿತು.
ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತನನು ಕಳುಹಿ ||
ಹುರಿಯೊಡೆದು ಹದಿನಾರು ಸಾವಿರ
ವರ ಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ದಾಳಿಯಿಟ್ಟನು ತೆಂಕ ದೆಸೆಗಾಗಿ || ೩೫ ||
ಪದವಿಭಾಗ-ಅರ್ಥ: ಎರಡು ಮೋಹರವಾಗಿ ತೆಂಕಲು ಹರಿದು ತುರುಗಳ ತಡೆಯಿ ನಾವು+ ಉತ್ತರದಲಿ+ ಆನುವೆವು+ ಎನುತ ನೃಪತಿ ತ್ರಿಗರ್ತನನು ಕಳುಹಿ ಹುರಿಯೊಡೆದು ಹದಿನಾರು ಸಾವಿರ ವರ ಮಹಾರಥರ+ ಒಗ್ಗಿನಲಿ ದುರ್ಧರ ಸುಶರ್ಮನು ದಾಳಿಯಿಟ್ಟನು ತೆಂಕ ದೆಸೆಗಾಗಿ.
ಎರಡು ಮೋಹರವಾಗಿ= ಕೌರವನ ಸೈನ್ಯ ಎರಡು ಸೈನ್ಯವಾಗಿ ಭಾಗವಾಯಿತು.// ತೆಂಕಲು ಹರಿದು ತುರುಗಳ ತಡೆಯಿ= ತೆಂಕಲು-ದಕ್ಷಿಣ ದಿಕ್ಕಿಗೆ, ಹರಿದು ತುರುಗಳ ತಡೆಯಿ- ಚಲಿಸಿ ಗೋವುಗಳನ್ನು ಆಕ್ರಮಿಸಿ ಎಂದನು ಕೌರವ;//ನಾವು+ ಉತ್ತರದಲಿ+ ಆನುವೆವು+ ಎನುತ ನೃಪತಿ ತ್ರಿಗರ್ತನನು ಕಳುಹಿ= ನಾವು ()ಕೌರವ) ಉತ್ತರದಿಕ್ಕಿನಲ್ಲಿ ಆನುವೆವು- ಎದುರಿಸುವೆವು,ಎಂದು ಕೌರವನು ತ್ರಿಗರ್ತನನ್ನು ದಕ್ಷಿಣದಿಕ್ಕಿಗೆ ಕಳುಹಿಸಿದನು.// ಹುರಿಯೊಡೆದು ಹದಿನಾರು ಸಾವಿರ ವರ ಮಹಾರಥರ+ ಒಗ್ಗಿನಲಿ ದುರ್ಧರ ಸುಶರ್ಮನು ದಾಳಿಯಿಟ್ಟನು ತೆಂಕ ದೆಸೆಗಾಗಿ= ಆಗ ಹುರಿಯೊಡೆದು- ಹುರಿದುಂಬಿ- ಉತ್ಸಾಹಗೊಂಡು, ಹದಿನಾರು ಸಾವಿರ ಶ್ರೇಷ್ಠ ಮಹಾರಥರ ಒಗ್ಗಿನಲಿ- ಸಮೂಹದಲ್ಲಿ ದುರ್ಧರ (ದುರ್-ಕಷ್ಟ ಕೆಟ್ಟವ, ಧರ- ಧರಿಸು ಎದುರಿಸು)- ಎದುರಿಸಲು ಕಷ್ಟಸಾದ್ಯನಾದ ಸುಶರ್ಮನು ದಾಳಿಯಿಟ್ಟನು ತೆಂಕ- ದಕ್ಷಿಣ ದೆಸೆಗಾಗಿ- ದಿಕ್ಕಿನ ಕಡೆ.
ಅರ್ಥ:ಕೌರವನ ಸೈನ್ಯ ಎರಡು ಸೈನ್ಯವಾಗಿ ಭಾಗವಾಯಿತು. (ತ್ರಿಗರ್ತನಿಗೆ) ದಕ್ಷಿಣ ದಿಕ್ಕಿಗೆ ಚಲಿಸಿ ಗೋವುಗಳನ್ನು ಆಕ್ರಮಿಸಿ ಎಂದನು ಕೌರವ; ನಾವು (ಕೌರವ) ಉತ್ತರದಿಕ್ಕಿನಲ್ಲಿ ಎದುರಿಸುವೆವು, ಎಂದು ಕೌರವನು ತ್ರಿಗರ್ತನನ್ನು ದಕ್ಷಿಣದಿಕ್ಕಿಗೆ ಕಳುಹಿಸಿದನು. ಆಗ ಹುರಿದುಂಬಿದ ಹದಿನಾರು ಸಾವಿರ ಶ್ರೇಷ್ಠ ಮಹಾರಥರ ಸಮೂಹದಲ್ಲಿ ಎದುರಿಸಲು ಕಷ್ಟಸಾದ್ಯನಾದ ಸುಶರ್ಮನು ದಕ್ಷಿಣ ದಿಕ್ಕಿನ ಕಡೆ ದಾಳಿಯಿಟ್ಟನು.
ಅಸಿತ ಪಕ್ಷಾಷ್ಟಮಿಯ ದಿನ ಸಂ
ಧಿಸಿದರಾಳೆದ್ದುದು ವಿರಾಟನ
ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ |
ಹೊಸ ಮುಖಕೆ ಸೀವರಿಸಿದವು ದೆಸೆ
ದೆಸೆಗೆ ಹಿಂಡುಗಳೊಡೆದು ಹಾಯ್ದವು
ಮಸಗಿತಂಬಾ ರವದ ಕಳವಳವಾಯ್ತು ನಿಮಿಷದಲಿ || ೩೬ ||
ಪದವಿಭಾಗ-ಅರ್ಥ: ಅಸಿತಪಕ್ಷ+ ಅಷ್ಟಮಿಯ ದಿನ ಸಂಧಿಸಿದರು+ ಆಳೆದ್ದುದು ವಿರಾಟನಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ ಹೊಸ ಮುಖಕೆ ಸೀವರಿಸಿದವು ದೆಸೆದೆಸೆಗೆ ಹಿಂಡುಗಳು+ ಒಡೆದು ಹಾಯ್ದವು ಮಸಗಿತು+ ಅಂಬಾ ರವದ ಕಳವಳವಾಯ್ತು ನಿಮಿಷದಲಿ.
ಅಸಿತಪಕ್ಷ- ಕೃಷ್ಣಪಕ್ಷ+ ಅಷ್ಟಮಿಯ ದಿನ ಸಂಧಿಸಿದರು- ಎದುರಿಸಿದರು- ಧಾಳಿ ಇಟ್ಟರು+ ಆಳು - ಸೈನ್ಯ- ಎದ್ದುದು, ವಿರಾಟನ ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ ಹೊಸ ಮುಖಕೆ ಸೀವರಿಸಿದವು- ಹೆದರಿದವು ದೆಸೆದೆಸೆಗೆ ಹಿಂಡುಗಳು+ ಒಡೆದು ಹಾಯ್ದವು ಮಸಗಿತು -ಆವರಿಸಿತು ತುಂಬಿತು+ ಅಂಬಾ ರವದ- ಸದ್ದಿನ ಕಳವಳವಾಯ್ತು- ಸಂಕಟ ದುಃಖ, ನಿಮಿಷದಲಿ.
ಅರ್ಥ:ತ್ರಿಗರ್ತನು ಸೇನೆಯೊಡನೆ ಕೃಷ್ಣಪಕ್ಷ ಅಷ್ಟಮಿಯ ದಿನ ವಿರಾಟನ ಗೂವುಗಳ ಮೇಲೆ ಧಾಳಿ ಇಟ್ಟನು. ಆ ಸೈನ್ಯದ ಯೋಧರು ಎದ್ದು ಧಾಳಿ ಇಟ್ಟು ವಿರಾಟನ ಪಶು ಸಮೂಹವನ್ನು ಮುತ್ತಿದರು. ಅವರು ಗೋಪಾಲಕರನ್ನು ಕೆಡವಿ ಪಶುಗಳನ್ನು ಹಿಡಿದರು. ಗೋವುಗಳು ಹೊಸ ಮುಖಗಳನ್ನು ನೋಡಿ ಹೆದರಿದವು. ಅವಗಳ ಹಿಂಡುಗಳು ಒಡೆದು ದಿಕ್ಕು ದಿಕ್ಕಿಗೆ ಹಾಯ್ದು ಓಡಿದವು. ಎಲ್ಲೆಡೆ ಅಂಬಾ ಎಂಬ ಸದ್ದಿನ, ಹಸುಗಳ ಕಳವಳದ ಕೂಗು ನಿಮಿಷದಲ್ಲಿ ಆವರಿಸಿತು.
ಆಳು ಸುತ್ತಲು ಕಟ್ಟಿ ತುರುಗಳ
ಕೋಳ ಹಿಡಿದರು ಬೊಬ್ಬಿರಿದು ಗೋ
ಪಾಲರಾಂತರೆ ಕಾದಿದರು ಕಡಿಖಂಡಮಯವಾಗೆ |
ಮೇಲೆ ಮೇಲೈತಪ್ಪ ಹೆಬ್ಬಲ
ದಾಳು ಕುದುರೆಯ ಕಂಡು ನೂಕದು
ಕಾಳಗವು ತಮಗೆನುತ ತಿರುಗಿತು ಗೋವರುಳಿದವರು || ೩೭ ||
ಪದವಿಭಾಗ-ಅರ್ಥ: ಆಳು ಸುತ್ತಲು ಕಟ್ಟಿ ತುರುಗಳ ಕೋಳ ಹಿಡಿದರು ಬೊಬ್ಬಿರಿದು ಗೋಪಾಲರರು+ ಆಂತರೆ ಕಾದಿದರು ಕಡಿಖಂಡಮಯವಾಗೆ ಮೇಲೆ ಮೇಲೆ+ ಐತಪ್ಪ ಹೆಬ್ಬಲದ+ ಆಳು ಕುದುರೆಯ ಕಂಡು ನೂಕದು ಕಾಳಗವು ತಮಗೆನುತ ತಿರುಗಿತು ಗೋವರು+ ಉಳಿದವರು.
ಆಳು ಸುತ್ತಲು ಕಟ್ಟಿ ತುರುಗಳ ಕೋಳ ಹಿಡಿದರು= ಸುಶರ್ಮಕನ ಸೇನೆಯ ಯೋಧರು ಓಡುತ್ತಿದ್ದ ಹಸುಗಳನ್ನು ಸುತ್ತುವರಿದು (ಹಗ್ಗಹಾಕಿ) ಹಗ್ಗದಲ್ಲಿ ಉರುಲು ಹಾಕಿ ಹಸುಗಳನ್ನು ಹಿಡಿದರು.// ಬೊಬ್ಬಿರಿದು ಗೋಪಾಲರರು+ ಆಂತರೆ ಕಾದಿದರು= ಬೊಬ್ಬಿರಿದು- ಆರ್ಭಟಮಾಡಿ ಗೋಪಾಲರರು+ ಆಂತರೆ- ಎದುರಿಸಿದರೆ, ಸೈನಿಕರು, ಕಾದಿದರು- ಯುದ್ಧಕ್ಕ ತೊಡಗಿದರು. ಕಡಿಖಂಡಮಯವಾಗೆ= ಗೋಪಾಲಕರನ್ನು ಕಡಿದು ಖಂಡ ಮಾಂಸಗಳನ್ನು ಚೆಲ್ಲುವಹಾಗೆ- ಚೆಲ್ಲಿದರು. ಮೇಲೆ ಮೇಲೆ+ ಐತಪ್ಪ- ಬರುತ್ತಿರುವ, ಹೆಬ್ಬಲದ - ದೊಡ್ಡ ಸೈನ್ಯದ+ ಆಳು- ಸೈನಿಕರು, ಕುದುರೆಯ ಕಂಡು= ಮೇಲಿಂದ ಮೇಲೆ ಬರುತ್ತಿರುವ ದೊಡ್ಡ ಸೈನ್ಯದ ಸೈನಿಕರನ್ನೂ, ಕುದುರೆ ಸವಾರರನ್ನೂ ಕಂಡು,// ನೂಕದು- ಸಾಗದು, ಸಾಧ್ಯವಿಲ್ಲ, ಕಾಳಗವು- ಯುದ್ಧವು ತಮಗೆ+ ಎನುತ ತಿರುಗಿತು ಗೋವರು+ ಉಳಿದವರು= ತಮಗೆ+ ಇವರುಡನೆ ಯುದ್ಧವನ್ನು ಮಾಡುವುದು ಸಾಧ್ಯವಿಲ್ಲ, ಎನ್ನುತ್ತಾ ಉಳಿದ ಗೋವಳರು ಹಿಂತಿರುಗಿ ಓಡಿದರು.
ಅರ್ಥ: ಸುಶರ್ಮಕನ ಸೇನೆಯ ಯೋಧರು ಓಡುತ್ತಿದ್ದ ಹಸುಗಳನ್ನು ಸುತ್ತುವರಿದು (ಹಗ್ಗಹಾಕಿ) ಹಗ್ಗದಲ್ಲಿ ಉರುಲು ಹಾಕಿ ಹಸುಗಳನ್ನು ಹಿಡಿದರು. ಆರ್ಭಟಮಾಡಿ ಗೋಪಾಲರರು ಎದುರಿಸಿದರೆ, ಸೈನಿಕರು ಯುದ್ಧಕ್ಕ ತೊಡಗಿದರು. ಗೋಪಾಲಕರನ್ನು ಕಡಿದು ಖಂಡ ಮಾಂಸಗಳನ್ನು ಚೆಲ್ಲಿದರು. ಮೇಲಿಂದ ಮೇಲೆ ಬರುತ್ತಿರುವ ದೊಡ್ಡ ಸೈನ್ಯದ ಸೈನಿಕರನ್ನೂ, ಕುದುರೆ ಸವಾರರನ್ನೂ ಕಂಡು, ತಮಗೆ ಇವರೊಡನೆ ಯುದ್ಧವನ್ನು ಮಾಡುವುದು ಸಾಧ್ಯವಿಲ್ಲ, ಎನ್ನುತ್ತಾ ಉಳಿದ ಗೋವಳರು ಹಿಂತಿರುಗಿ ಓಡಿದರು.
ಮಿಸುಪ ಕಂಬಳಿ ಕೊಂಬು ಕಲ್ಲಿಯ
ಬಿಸುಟು ಗಾಯದಿ ಗೋವಳರು ಹೊ
ತ್ತಸುವ ಕೊರಳಲಿ ಹಿಡಿದು ನಾಲಗೆಯೊಣಗಿ ಢಗೆ ಹೊಯ್ದು ||
ವಿಷಮ ರಣಭೀತಿಯಲಿ ಕಂದಿದ
ಮುಸುಡ ತೊದಲಿನ ನುಡಿಯ ಮರಣದ
ದೆಸೆಯ ಕೈಸನ್ನೆಗಳ ಕಾತರರೈದಿದರು ಪುರವ || ೩೮ ||
ಪದವಿಭಾಗ-ಅರ್ಥ: ಮಿಸುಪ ಕಂಬಳಿ ಕೊಂಬು ಕಲ್ಲಿಯ ಬಿಸುಟು ಗಾಯದಿ ಗೋವಳರು ಹೊತ್ತು+ ಅಸುವ ಕೊರಳಲಿ ಹಿಡಿದು ನಾಲಗೆಯು+ ಒಣಗಿ ಢಗೆ ಹೊಯ್ದು ವಿಷಮ ರಣಭೀತಿಯಲಿ ಕಂದಿದ ಮುಸುಡ ತೊದಲಿನ ನುಡಿಯ, ಮರಣದ ದೆಸೆಯ ಕೈಸನ್ನೆಗಳ ಕಾತರರು+ ಐದಿದರು ಪುರವ.
ಮಿಸುಪ(ಮಿಸುಪ - ಶೋಭಿಸುವ) ಕಂಬಳಿ ಕೊಂಬು ಕಲ್ಲಿಯ ಬಿಸುಟು= ದನಗಾಹಿಗಳು ತಮ್ಮ ಗಾಯದಿ- ಗಾಯಹೊಂದಿ, ಗೋವಳರು ಹೊತ್ತು+ ಅಸುವ- ಜೀವ, ಕೊರಳಲಿ ಹಿಡಿದು= ಜೀವವನ್ನು ಕೊರಳಲ್ಲಿ ಹೊತ್ತುಕೊಂಡು- ಹಿಡಿದುಕೊಂಡು, ನಾಲಗೆಯು+ ಒಣಗಿ ಢಗೆ ಹೊಯ್ದು- ಏದುಬ್ಬಸಪಡುತ್ತಾ, ವಿಷಮ ರಣಭೀತಿಯಲಿ= ಕ್ರೂರವಾದ ಯುದ್ಧದ ಭೀತಿಯಿಂದ, ಕಂದಿದ ಮುಸುಡ= ಕಳೆಗುಂದಿದ ಮುಖವನ್ನು ಹೊತ್ತು, ತೊದಲಿನ ನುಡಿಯ,= ಶ್ತ್ರು ಸೈನಿಕರ ಭಯದಿಂದ ತೊದಲು ಮಾತು ಆಡುತ್ತಾ, ಮರಣದ ದೆಸೆಯ ಕೈಸನ್ನೆಗಳ ಕಾತರರು+ ಐದಿದರು- ಬಂದರು, ಪುರವ= ಸಾವಿನ ಸೂಚನೆ ನೀಡುವ- ಮೇಲೆ ಕೈತೋರುವ ಕೈಸನ್ನೆ ಮಾಡುತ್ತಾ ವಿರಾಟನಗರಕ್ಕೆ ಬಂದರು.
ಅರ್ಥ: ಶೋಭಿಸುವ ಕಂಬಳಿ ಊದುವ ಕೊಂಬು ಕಲ್ಲಿಯ/ ಬುಟ್ಟಿಯಗಳನ್ನು ಬಿಸುಟು ದನಗಾಹಿಗಳು ಗಾಯಹೊಂದಿ, ಜೀವವನ್ನು ಕೊರಳಲ್ಲಿ (ಕೈಯಲ್ಲಿಹಿಡಿದು)- ಹಿಡಿದುಕೊಂಡು,ಏದುಬ್ಬಸಪಡುತ್ತಾ, ಕ್ರೂರವಾದ ಯುದ್ಧದ ಭೀತಿಯಿಂದ, ಕಳೆಗುಂದಿದ ಮುಖವನ್ನು ಹೊತ್ತು, ಶತ್ರು ಸೈನಿಕರ ಭಯದಿಂದ ತೊದಲು ಮಾತು ಆಡುತ್ತಾ,ಸಾವಿನ ಸೂಚನೆ ನೀಡುವ- ಮೇಲೆ ಕೈತೋರುವ ಕೈಸನ್ನೆ ಮಾಡುತ್ತಾ ವಿರಾಟನಗರಕ್ಕೆ ಬಂದರು.
ಬಸಿವ ನೆತ್ತರ ಗೋವರರಸಂ
ಗುಸುರಲಾರದೆ ಧೊಪ್ಪನಡೆಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ ||
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶುಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ || ೩೯ ||
ಪದವಿಭಾಗ-ಅರ್ಥ: ಬಸಿವ ನೆತ್ತರ ಗೋವರರ ಸಂಗ+ ಉಸುರಲಾರದೆ ಧೊಪ್ಪನೆ+ ಅಡೆಗೆಡೆದ+ ಅಸುವ ಕಳೆದರು ಕೆಲರು ಗೋವರರ- ಸಂಗ+ ಉಸುರಲಾರದೆ ಧೊಪ್ಪನೆ+ ಅಡೆಗೆಡೆದ+ ಅಸುವ ಕಳೆದರು .// ಕೆಲಬರು ತಮ್ಮ ಸಂತೈಸಿ ಅಸಮ ಬಲವದು ಜೀಯ ಗೋವರ ಕುಸುರಿದು+ ಅರಿದ+ ಅರುವತ್ತು ಸಾವಿರ ಪಶುಸಮೂಹವ ಹಿಡಿದರು+ ಎಂದರು ಮತ್ಸ್ಯಭೂಪತಿಗೆ.
ಬಸಿವ ನೆತ್ತರ ಗೋವರರ ಸಂಗ+ ಉಸುರಲಾರದೆ ಧೊಪ್ಪನೆ+ ಅಡೆಗೆಡೆದ+ ಅಸುವ ಕಳೆದರು ಕೆಲರು= ಅವರಲ್ಲಿ ಕೆಲವರು ಬಸಿಯುತ್ತಿರುವ ರಕ್ತದೊಡನೆ ಬಂದು, ಗೋವರರ- ದನಗಾಹಿಗಳ, ಸಂಗತಿಯನ್ನು+ ಉಸುರಲಾರದೆ- ಹೇಳಲಾರದೆ ಧೊಪ್ಪನೆ+ ಅಡೆಗೆಡೆದ+ ಅಸುವ ಕಳೆದರು= ಕೆಳಗೆ ಬಿದ್ದು ಪ್ರಾಣಬಿಟ್ಟರು.// ಕೆಲಬರು ತಮ್ಮ ಸಂತೈಸಿ ಅಸಮ ಬಲವದು ಜೀಯ ಗೋವರ ಕುಸುರಿದು+ ಅರಿದ+ ಅರುವತ್ತು ಸಾವಿರ ಪಶುಸಮೂಹವ ಹಿಡಿದರು+ ಎಂದರು ಮತ್ಸ್ಯಭೂಪತಿಗೆ= ಉಳಿದ ಕೆಲವರು ತಮ್ಮನ್ನು ಸಂತೈಸಿಕೊಂಡು ರಾಜನನ್ನು ಕುರಿತು, 'ಅಸಮ ಬಲವದು ಜೀಯ= ನಮಗೆ ಎದುರಿಸಲಾರದ ದೊಡ್ಡ ಸೈನ್ಯವು ಅಲ್ಲಿ ಬಂದಿದೆ.// ಗೋವರ ಕುಸುರಿದು+ ಅರಿದ+ ಅರುವತ್ತು ಸಾವಿರ ಪಶುಸಮೂಹವ ಹಿಡಿದರು+ ಎಂದರು ಮತ್ಸ್ಯಭೂಪತಿಗೆ= ಗೋವಳರನ್ನು ಹೊಡೆದು ಕತ್ತಿಯಿಂದ ಕತ್ತರಿಸಿದರು; ಅವರು ಅರುವತ್ತು ಸಾವಿರ ಪಶುಸಮೂಹವನ್ನು ಹಿಡಿದರು,' ಎಂದರು ವಿರಾಟರಾಜನಿಗೆ.
ಅರ್ಥ: ಅವರಲ್ಲಿ ಕೆಲವರು ಬಸಿಯುತ್ತಿರುವ ರಕ್ತದೊಡನೆ ಬಂದು, ದನಗಾಹಿಗಳ, ಸಂಗತಿಯನ್ನು ಹೇಳಲಾರದೆ ಕೆಳಗೆ ಬಿದ್ದು ಪ್ರಾಣಬಿಟ್ಟರು. ಉಳಿದ ಕೆಲವರು ತಮ್ಮನ್ನು ಸಂತೈಸಿಕೊಂಡು ರಾಜನನ್ನು ಕುರಿತು,'ದೊರೆಯೇ, ನಮಗೆ ಎದುರಿಸಲಾರದ ದೊಡ್ಡ ಸೈನ್ಯವು ಅಲ್ಲಿ ಬಂದಿದೆ. ಗೋವಳರನ್ನು ಹೊಡೆದು ಕತ್ತಿಯಿಂದ ಕತ್ತರಿಸಿದರು; ಅವರು ಅರುವತ್ತು ಸಾವಿರ ಪಶುಸಮೂಹವನ್ನು ಹಿಡಿದರು,' ಎಂದರು ವಿರಾಟರಾಜನಿಗೆ.
ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ |
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ || ೪೦ ||
ಪದವಿಭಾಗ-ಅರ್ಥ: ಕೇಳಿ ಬಿಸುಸುಯ್ದನು ವಿರಾಟ ನೃಪಾಲನು+ ಇಂದಿನಲಿ+ ಅಳಿದನೇ ಕಟ್ಟಾಳು ಕೀಚಕನು + ಎನುತ ನೋಡಿದನು+ ಅಂದು ಕೆಲಬಲನ ಆಳು ಗಜಬಜಿಸಿತ್ತು ಹಾಯಿಕು ವೀಳೆಯವನು+ ಇಂದು+ ಎನಗೆ ತನಗೆಂದು+ ಓಲಗದೊಳು+ ಉಬ್ಬರಣೆ ಮಸಗಿತು ಕದಡಿತು+ ಆಸ್ಥಾನ.
ಗೋವುಗಳ ಮೇಲಿನ ಆಕ್ರಮಣವನ್ನು- ಕೇಳಿ ಬಿಸುಸುಯ್ದನು- ನಿಟ್ಟುಸಿರುಬಿಟ್ಟನು, ವಿರಾಟ ನೃಪಾಲನು+ ಇಂದಿನಲಿ- ಈ ಸಮಯದಲ್ಲಿ+ ಅಳಿದನೇ- ಸತ್ತು ಹೋದನೇ, ಕಟ್ಟಾಳು- ವೀರ, ಕೀಚಕನು + ಎನುತ ನೋಡಿದನು+ ಅಂದು ಕೆಲಬಲನ- ಅಕ್ಕ ಪಕ್ಕ,ಆಚೆ ಈಚೆ, ಆಳು- ಯೋದರು, ಗಜಬಜಿಸಿತ್ತು- ತಮ್ಮತಮ್ಮಲ್ಲಿ ಮಾತನಾಡಿಕೊಂಡು, ಹಾಯಿಕು- ಹಾಕು - ಕೊಡು, ವೀಳೆಯವನು- ಯುದ್ಧಕ್ಕೆ ಆಜ್ನೆಯನ್ನು,+ ಇಂದು+ ಎನಗೆ ತನಗೆ + ಎಂದು+ ಓಲಗದೊಳು- ಸಭೆಯಲ್ಲಿ+ ಉಬ್ಬರಣೆ ಮಸಗಿತು ಕದಡಿತು+ ಆಸ್ಥಾನ= ಉತ್ಸಾಹ ತುಂಬಿತು ಆಸ್ಥಾನದಲ್ಲಿ.
ಅರ್ಥ: ಗೋವುಗಳ ಮೇಲಿನ ಆಕ್ರಮಣವನ್ನು- ಕೇಳಿ ವಿರಾಟರಾಜನು ನಿಟ್ಟುಸಿರು ಬಿಟ್ಟನು, ವೀರ ಕೀಚಕನು ಈ ಸಮಯದಲ್ಲಿ ಇಲ್ಲದೆ ಹೋದನಲ್ಲಾ,ಸತ್ತು ಹೋದನೇ, ಕಟ್ಟಾಳು ಕೀಚಕನು ಎನ್ನುತ್ತಾ, ಅಂದು ಯುದ್ಧಕ್ಕೆ ಹೋಗುವವರು ಇದ್ದಾರೆಯೇ ಎಂದು ಅಕ್ಕ ಪಕ್ಕ. ಅಲ್ಲದ್ದ ಯೋದರು ಸಭೆಯಲ್ಲ ಗಲಾಟೆ ಆಗುವಂತೆ ತಮ್ಮತಮ್ಮಲ್ಲಿ ಮಾತನಾಡಿಕೊಂಡು, ಹಾಕು, ಕೊಡು ವೀಳ್ಯವನು- ಯುದ್ಧಕ್ಕೆ ಆಜ್ನೆಯನ್ನು, ಇಂದು ತನಗೆ ತನಗೆ ಎಂದು ಸಭೆಯಲ್ಲಿ- ಆಸ್ಥಾನದಲ್ಲಿ ಉತ್ಸಾಹ ತುಂಬಿತು.

ಮತ್ಸ್ಯರಾಜ್ಯದ- ದಕ್ಷಿಣದ ಯುದ್ಧ

ಸಂಪಾದಿಸಿ
ಕೇಳಿ ಸಿಡಿಲೇಳಿಗೆಯಲೆದ್ದು ನೃ
ಪಾಲಕರು ಗಜಬಜಿಸಿ ರಭಸದೊ
ಳೋಲಗವ ಹೊರವಂಟು ನಡೆದರು ಭಾಷೆಗಳ ಕೊಡುತ |
ಆಳು ಕೈದುವ ಕೊಂಡು ಕರಿಘಟೆ
ಮೇಳವಿಸಿ ಹಲ್ಲಣಿಸಿ ತೇಜಿಗ
ಳೋಲಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ || ೪೧ ||
ಪದವಿಭಾಗ-ಅರ್ಥ: ಕೇಳಿ ಸಿಡಿಲ+ ಏಳಿಗೆಯಲಿ+ ಎದ್ದು ನೃಪಾಲಕರು ಗಜಬಜಿಸಿ ರಭಸದೊಳು+ ಓಲಗವ ಹೊರವಂಟು ನಡೆದರು ಭಾಷೆಗಳ ಕೊಡುತ ಆಳು ಕೈದುವ ಕೊಂಡು ಕರಿಘಟೆ ಮೇಳವಿಸಿ ಹಲ್ಲಣಿಸಿ ತೇಜಿಗಳ+ ಓಲಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ.
ಕೇಳಿ ಸಿಡಿಲ+ ಏಳಿಗೆಯಲಿ+ ಎದ್ದು= ರೋಷದಿಂದ ಸಿಡಿಲ ವೇಗದಲ್ಲಿ ಎದ್ದು.// ನೃಪಾಲಕರು ಗಜಬಜಿಸಿ ರಭಸದೊಳು+ ಓಲಗವ ಹೊರವಂಟು ನಡೆದರು= ನೃಪಾಲಕರು= ಸಾಮಂತರಾಜರು ಗಜಬಜಿಸಿ- ಗಡಿಬಿಡಿಯಿಂದ ರಭಸದೊಳು- ಕೂಡಲೆ+ ಓಲಗವ- ಸಭೆಯಿಂದ, ಹೊರವಂಟು ನಡೆದರು.// ಭಾಷೆಗಳ ಕೊಡುತ- ಶತ್ರುಗಳ ವಿರುದ್ಧ ಪ್ರತಿಜ್ಞೆ ಮಾಡುತ್ತಾ, ಆಳು ಕೈದುವ ಕೊಂಡು= ಪದಾತಿಗಳು ಆಯುಧಗಳನ್ನು ಹಿಡಿದು ಒಟ್ಟಾಗಿ, ಕರಿಘಟೆ ಮೇಳವಿಸಿ- ಆನೆಗಳನ್ನು ಕೂಡಿಸಿ, ಹಲ್ಲಣಿಸಿ(1. ಜೀನುಹಾಕು. 2. ಧರಿಸು. 3. ಸಜ್ಜಾಗು.) ತೇಜಿಗಳ+ ಓಲಿಯಲಿ ರಥ ಹೂಡಿ= ಕುದುರೆಗಳನ್ನು ಸಿದ್ಧಪಡಿಸಿಕೊಂಡು, ಕವಿದುದು ಮತ್ಸ್ಯ ಪರಿವಾರ= ವಿರಾಟ/ ಮತ್ಸ್ಯದೇಶದ ಸೈನ್ಯ ದಕ್ಷಿಣದಲ್ಲಿ ತ್ರಿಗರ್ತ ಸೈನ್ಯವನ್ನ ಎದುರಿಸಿತು.
ಅರ್ಥ: ತಮ್ಮ ಗೋವುಗಲನ್ನು ಶತ್ರುಗಳು ಹಿಡಿದುದನ್ನು ಕೇಳಿ ರೋಷದಿಂದ ಸಿಡಿಲ ವೇಗದಲ್ಲಿ ಎದ್ದು. ಸಭೆಯಲ್ಲಿದ್ದ ಸಾಮಂತರಾಜರು ಗಡಿಬಿಡಿಯಿಂದ ಕೂಡಲೆ ಓಲಗವ ಸಭೆಯಿಂದ ಹೊರಹೊರಟು ನಡೆದರು. ಶತ್ರುಗಳ ವಿರುದ್ಧ ಪ್ರತಿಜ್ಞೆ ಮಾಡುತ್ತಾ,ಪದಾತಿಗಳು ಆಯುಧಗಳನ್ನು ಹಿಡಿದು ಒಟ್ಟಾಗಿ, ಆನೆಗಳನ್ನು ಕೂಡಿಸಿಕೊಂಡು, ಕುದುರೆಗಳನ್ನು ಸಿದ್ಧಪಡಿಸಿಕೊಂಡು, ಮತ್ಸ್ಯದೇಶದ ಸೈನ್ಯ ದಕ್ಷಿಣದಲ್ಲಿ ತ್ರಿಗರ್ತ ಸೈನ್ಯವನ್ನು ಎದುರಿಸಿತು.
ಇವರು ತಮ್ಮೊಳಗೆಂದರದು ನ
ಮ್ಮವರ ಬಲ ತುರುಗೊಂಡವರು ಕೌ
ರವರು ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು |
ಅವಧಿ ತೀರದ ಮುನ್ನ ಕಾಣಿಸಿ
ನಮಗೆ ಬಳಿಕಾರಣ್ಯವಾಸವ
ನಿವರು ಕರುಣಿಸ ಬಂದರೆಂದನು ಧರ್ಮನಂದನನು || ೪೨ ||
ಪದವಿಭಾಗ-ಅರ್ಥ: ಇವರು ತಮ್ಮೊಳಗೆಂದರು+ ಅದು ನಮ್ಮವರ ಬಲ ತುರುಗೊಂಡವರು ಕೌರವರು, ನಮ್ಮ ಪರೀಕ್ಷೆಗೋಸುಗ ಬಂದ ಹದನ+ ಅಹುದು ಅವಧಿ ತೀರದ ಮುನ್ನ ಕಾಣಿಸಿ ನಮಗೆ ಬಳಿಕ ಅರಣ್ಯವಾಸವನು+ ಇವರು ಕರುಣಿಸ ಬಂದರು+ ಎಂದನು ಧರ್ಮನಂದನನು
ಇವರು- ಪಾಂಡವರು, ತಮ್ಮೊಳಗೆ+ ಎಂದರು (ಮಾತನಾಡಿಕೊಂಡರು)+ ಅದು (ಆ ಸೇನೆ)ನಮ್ಮವರ (ನಮ್ಮ ಕೌರವರ ಕಡೆಯದು) ಬಲ- ಸೇನೆ, ತುರುಗೊಂಡವರು= (ಗೋವುಗಳನ್ನು ಹಿಡಿದವರು), ಕೌರವರು, ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು= ವಿಚಾರ, ಯೊಜನೆಯೇ ಸರಿ, ಅವಧಿ ತೀರದ ಮುನ್ನ- ಮೊದಲು, ಕಾಣಿಸಿ- ಕಂಡುಹಿಡಿದು, ನಮಗೆ ಬಳಿಕ ಅರಣ್ಯವಾಸವನು+ ಇವರು ಕರುಣಿಸ-(ಮಾಡುವಂತೆ ಮಾಡಲು) ಬಂದರು+ ಎಂದನು ಧರ್ಮನಂದನನು.
ಅರ್ಥ: ಪಾಂಡವರು ತಮ್ಮೊಳಗೆ ಮಾತನಾಡಿಕೊಂಡರು; ಆ ಸೇನೆ ನಮ್ಮ ಕೌರವರ ಕಡೆಯದು; ಗೋವುಗಳನ್ನು ಹಿಡಿದವರು ಕೌರವರು, ನಮ್ಮ ಪರೀಕ್ಷೆಗೋಸುಗ ಬಂದ ಯೊಜನೆಯೇ ಸರಿ. ಅವಧಿ ತೀರದ ಮೊದಲು ಕಂಡುಹಿಡಿದು, ನಮಗೆ ಬಳಿಕ ಅರಣ್ಯವಾಸವನ್ನು ಇವರು ಕೊಡಲು ಬಂದವರು, ಎಂದನು ಧರ್ಮನಂದನನು ಹೇಳಿದನು.
ಅವಧಿ ತೀರಲಿ ಮೇಣು ಮಾಣಲಿ
ಎನಗೆ ತುರು ಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ |
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರ ಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು || ೪೩ ||
ಪದವಿಭಾಗ-ಅರ್ಥ: ಅವಧಿ ತೀರಲಿ ಮೇಣು ಮಾಣಲಿ ಎನಗೆ ತುರು ಹುಯ್ಯಲನು ಕೇಳಿದು ಕಿವಿಯಲಿ+ ಉದಕವ ಕೊಂಡಡೆ ಆ ಪಾತಕವನು ಎಣಿಸುವೊಡೆ ಎವಗೆ ನೂಕದು ಸಾಕು+ ಅದಂತಿರಲಿ+ ಅವರ ಬೆಂಬಳಿವಿಡಿದು ವರ ಗೋನಿವಹವನು ಮರಳಿಚುವೆನು+ ಎಂದನು ಧರ್ಮನಂದನನು.
ಆರಣ್ಯ- ಅಜ್ಞಾತ ವಾಸಗಳ- ಅವಧಿ ತೀರಲಿ ಮೇಣು- ಅಥವಾ, ಮಾಣಲಿ-(ಮಾಣ್- ಬೇಡ) ತೀರದಿರಲಿ ಬಿಡಲಿ, ಎನಗೆ ತುರು ಹುಯ್ಯಲನು ಕೇಳಿದು ಕಿವಿಯಲಿ+ + ನನಗೆ ದನಗಳು ಒರಲುವುದನ್ನು ಕೇಳಿದಾಗ, ಉದಕವ ಕೊಂಡಡೆ= ನೀರನ್ನು ಕುಡಿದರೂ, ಆ ಪಾತಕವನು ಎಣಿಸುವೊಡೆ ಎವಗೆ ನೂಕದು= ಆ ಪಾಪವನ್ನು ನೆನೆದರೆ ನನ್ನಿಂದ ಸಹಿಸಲಾಗದು;// ಸಾಕು+ ಅದಂತಿರಲಿ+ ಅವರ ಬೆಂಬಳಿವಿಡಿದು= ಸಾಕು ಅದು ಹಾಗಿರಲಿ, ಅದರ ಗೋವುಗಳ ಬನ್ನಟ್ಟಿ ಹೋಗಿ, ವರ ಗೋನಿವಹವನು ಮರಳಿಚುವೆನು- ಗೋವುಗಳ ಸಮೂಹವನ್ನು ಹಿಂತಿರುಗಿ ತರುವೆನು+ ಎಂದನು ಧರ್ಮನಂದನನು.
ಅರ್ಥ:ಆರಣ್ಯ- ಅಜ್ಞಾತ ವಾಸಗಳ- ಅವಧಿ ತೀರಲಿ ಅವಧಿ ತೀರಲಿ ಅಥವಾ ಬಿಡಲಿ, ನನಗೆ ದನಗಳು ಒರಲುವುದನ್ನು ಕಿವಿಯಿಂದ ಕೇಳಿದಾಗ, ನೀರನ್ನು ಕುಡಿದರೂ ಆ ಪಾಪವನ್ನು ನೆನೆದರೆ ನೀರು ಇಳಿಯದು; ನನ್ನಿಂದ ಸಹಿಸಲಾಗದು. ಸಾಕು ಅದು ಹಾಗಿರಲಿ, ಆ ಗೋವುಗಳ ಬನ್ನಟ್ಟಿ ಹೋಗಿ, ಶ್ರೇಷ್ಠ ಗೋವುಗಳ ಸಮೂಹವನ್ನು ಹಿಂತಿರುಗಿ ತರುವೆನು, ಎಂದನು ಧರ್ಮನಂದನನು.
ಎಂದು ತಮ್ಮಂದಿರು ಸಹಿತ ಯಮ
ನಂದನನು ಕಲಹಾವಲೋಕಾ
ನಂದ ಪರಿಕರಲುಳಿತ ಕೋಮಲಕಾಯನನುವಾಗಿ |
ಬಂದು ಮತ್ಸ್ಯನ ನೇಮದಲಿ ನಡೆ
ತಂದು ರಥವೇರಿದನು ಪಾರ್ಥನ
ಹಿಂದಕಿರಿಸಿ ವಿರಾಟನೊಡನವನೀಶ ಹೊರವಂಟ || ೪೪ ||
ಪದವಿಭಾಗ-ಅರ್ಥ: ಎಂದು ತಮ್ಮಂದಿರು ಸಹಿತ ಯಮನಂದನನು ಕಲಹ+ ಅವಲೋಕಾನಂದ ಪರಿಕರಲುಳಿತ ಕೋಮಲಕಾಯನು+ ಅನುವಾಗಿ ಬಂದು ಮತ್ಸ್ಯನ ನೇಮದಲಿ ನಡೆತಂದು ರಥವೇರಿದನು ಪಾರ್ಥನ ಹಿಂದಕೆ+ ಇರಿಸಿ ವಿರಾಟನೊಡನೆ+ ಅವನೀಶ(ಧರ್ಮಜ) ಹೊರವಂಟ.
ಎಂದು- ಹೀಗೆ ಹೇಳಿ ತಮ್ಮಂದಿರು ಸಹಿತ ಯಮನಂದನನು ಕಲಹ+ ಅವಲೋಕಾನಂದ ಪರಿಕರಲುಳಿತ(ತಿರುಗಿರುವ, ಚಂಚಲ, ಅಲ್ಲಾಡುತ್ತಿರುವ ) ಕೋಮಲಕಾಯನು+ (ಯುದ್ಧಕ್ಕೆ)ಅನುವಾಗಿ ಬಂದು ಮತ್ಸ್ಯನ ನೇಮದಲಿ(ವಿರಾಟನ ಅನುಮತಿ ಪಡೆದು) ನಡೆತಂದು ರಥವೇರಿದನು ಪಾರ್ಥನ ಹಿಂದಕಿರಿಸಿ ವಿರಾಟನೊಡನೆ+ ಅವನೀಶ (ಧರ್ಮಜ) ಹೊರವಂಟ.
ಅರ್ಥ: ಧರ್ಮಜನು, ಗೋವುಗಳು ಸಂಕಟದಿಂದ ಒರಲುವಾಗ ತನಗೆ ಗಂಟಲಲ್ಲಿ ನೀರಿಳಿಯುವುದಿಲ್ಲವೆಂದು ಹೇಳಿ ತಮ್ಮಂದಿರ ಸಹಿತ ಅನನು ಯುದ್ಧ ನೋಡುವ ಆನಂದದ ನೆವದಿಂದ, ಝಳುಪಿಸುವ ಆಯುಧ ಸಹಿತ ಕೋಮಲದೇಹದವನು ಯುದ್ಧಕ್ಕೆ ಅನುವಾಗಿ ಬಂದು, ವಿರಾಟನ ಅನುಮತಿ ಪಡೆದು ಬಂದು ರಥವೇರಿದನು ಪಾರ್ಥನನ್ನು ಬೆಂಗಾವಲಿಗೆ ಹಿಂದಕ್ಕಿರಿಸಿ ವಿರಾಟನೊಡನೆ (ಧರ್ಮಜನು) ಹೊರಟನು.
ವರ ವಿರಾಟ ಸಹೋದರರು ಸಾ
ವಿರದ ಸಂಖ್ಯೆಯ ರಾಜಪುತ್ರರು
ಕೊರಳ ಪದಕವ ಕಾಲ ತೊಡರಿನ ಮಣಿಯ ಮೌಳಿಗಳ |
ಪರಿಮಳದ ಕತ್ತುರಿಯ ತಿಲಕದ
ಹೊರೆದ ಗಂಧದ ತೋರ ಮುಡುಹಿನ
ಕರದ ಖಂಡೆಯರದಟರೈದಿದರಾನೆ ಕುದುರೆಯಲಿ || ೪೫ ||
ಪದವಿಭಾಗ-ಅರ್ಥ: ವರ ವಿರಾಟ ಸಹೋದರರು ಸಾವಿರದ ಸಂಖ್ಯೆಯ ರಾಜಪುತ್ರರು ಕೊರಳ ಪದಕವ ಕಾಲ ತೊಡರಿನ ಮಣಿಯ ಮೌಳಿಗಳ ಪರಿಮಳದ ಕತ್ತುರಿಯ ತಿಲಕದ ಹೊರೆದ ಗಂಧದ ತೋರ ಮುಡುಹಿನ ಕರದ ಖಂಡೆಯರು+ ಅದಟರು+ ಐದಿದರು+ ಆನೆ ಕುದುರೆಯಲಿ.
ವರ- ಶ್ರೇಷ್ಠರಾದ ವಿರಾಟ ಸಹೋದರರು ಸಾವಿರದ ಸಂಖ್ಯೆಯ ರಾಜಪುತ್ರರು ಕೊರಳ ಪದಕವ ಕಾಲ ತೊಡರಿನ- ಅಂದಿಗೆ ಮಣಿಯ ಮೌಳಿಗಳ-ಕಿರೀಟಗಳ, ಪರಿಮಳದ ಕತ್ತುರಿಯ ತಿಲಕದ ಹೊರೆದ- ಹಚ್ಚದ, ಗಂಧದ ತೋರ ಮುಡುಹಿನ= ದಪ್ಪ ಹೆಗಲು, ಕರದ- ಕೈಯಿನ ಖಂಡೆಯರು- ಖಡ್ಗದವರು+ ಅದಟರು+ ಐದಿದರು= ಹೋದರು- ಬಂದರು,+ ಆನೆ ಕುದುರೆಯಲಿ.
ಅರ್ಥ:ಶ್ರೇಷ್ಠರಾದ ವಿರಾಟನ ಸಹೋದರರು ಮತ್ತು ಸಾವಿರದ ಸಂಖ್ಯೆಯ ರಾಜಪುತ್ರರು ಕೊರಳಲ್ಲಿ ಪದಕವನ್ನೂ ಕಾಲಲ್ಲಿ ಅಂದಿಗೆಯನ್ನೂ ಮಣಿಯ ಕಿರೀಟಗಳನ್ನೂ ಧರಿಸಿ, ಪರಿಮಳದ ಕಸ್ತೂರಿಯ ತಿಲಕನ್ನು ಇಟ್ಟುಕೊಂಡು, ಗಂಧವನ್ನು ಹಚ್ಚಿಕೊಂಡು, ಬಲಿಷ್ಠ ಭುಜ- ತೋಳಿನವರಾದ ಶೂರರು ಕೈಯಲ್ಲಿ ಖಡ್ಗವನ್ನು ಹಿಡಿದು, ಆನೆ ಕುದುರೆಗಳ ಮೇಲೆ ಯುದ್ಧಕ್ಕೆ ಹೋದರು.
ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ |
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದದು ಪರಬಲವ || ೪೬ ||
ಪದವಿಭಾಗ-ಅರ್ಥ:ತೂಳುವರೆಗಳ ಲಗ್ಗೆಯಲಿ ಕೆಂಧೂಳು ಮಸಗಿ ವಿರಾಟ ಭೂಪತಿಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ ಕಾಳಗವ ಕೊಟ್ಟರು ಛಡಾಳಿಸಿ ಸೂಳವಿಸಿ ನಿಸ್ಸಾಳ ದಿಕ್ಕಿನ ಮೂಲೆ ಬಿರಿಯೆ ವಿರಾಟಬಲ ಹಳಚಿದದು ಪರಬಲವ.
ತೂಳುವರೆಗಳ= ಕತ್ತಿಹೊಂದಿದ/ ತುಂಬಿದ ವರೆಗಳೊಡನೆ ಲಗ್ಗೆಯಲಿ- ಧಾಳಿಇಟ್ಟು, ಕೆಂಧೂಳು ಮಸಗಿ= ಆವರಿಸಲು, ವಿರಾಟ ಭೂಪತಿಯ+ ಆಳು- ಯೋಧರು, ಕವಿತರೆ= ಕವಿ- ಮತ್ತಿದರೆ, ಕಂಡು ಸೈರಿಸಿ ತುರುವ ಹಿಂದಿಕ್ಕಿ ಕಾಳಗವ ಕೊಟ್ಟರು= ಅದನ್ನು ಕಂಡು, ಕೌರವನ ಸೈನಿಕರು ಗೋವುಗಳನ್ನ ಹಿದಿಟ್ಟುಕೊಂಡು ಯುದ್ಧಮಅಡಿದರು. ಛಡಾಳಿಸಿ- ಉರವಣಿಸಿ- ಶೌರ್ಯದಿಂದ, ಸೂಳವಿಸಿ- ಆರ್ಭಟಿಸಿ, ನಿಸ್ಸಾಳ- ಭೇರಿ= ಭೇರಿಯ ಸದ್ದು, ದಿಕ್ಕಿನ ಮೂಲೆ ಬಿರಿಯೆ ವಿರಾಟಬಲ- ಸೈನ್ಯ, ಹಳಚುದದು- ಆಕ್ರಮಿಸಿತು ಪರಬಲವ- ಶತ್ರು ಸೈನ್ಯವನ್ನು.
ಅರ್ಥ: ಕತ್ತಿಹೊಂದಿದ ವರೆಗಳೊಡನೆ ಧಾಳಿಇಟ್ಟು, ಕೆಂಧೂಳು ಆವರಿಸಲು ವಿರಾಟಭೂಪತಿಯ ಯೋಧರು ಮತ್ತಿದರೆ, ಅದನ್ನು ಕಂಡು ಸೈರಿಸಿ ಸಿದ್ಧಗೊಂಡು ಕೌರವನ ಸೈನಿಕರು ಗೋವುಗಳನ್ನ ಹಿದಿಟ್ಟುಕೊಂಡು ಯುದ್ಧಮಾಡಿದರು. ಶೌರ್ಯದಿಂದ ಆರ್ಭಟಿಸಿ ಭೇರಿಯ ಸದ್ದಿನೊಂದಿಗೆ ದಕ್ಷಿಣ ದಿಕ್ಕಿನ ಮೂಲೆ ಬಿರಿಯಿತೇನೋ ಎನ್ನವಂತೆ ವಿರಾಟನ ಸೈನ್ಯ ಶತ್ರುಸೈನ್ಯವನ್ನು ಆಕ್ರಮಿಸಿತು.
ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟ ಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕದು ಕೂಡೆ ಕುರುಸೇನೆ ೪೭
ಪದವಿಭಾಗ-ಅರ್ಥ: ಫಡ ವಿರಾಟನ ಚುಕ್ಕಿಗಳಿರ+ ಅವಗಡಿಸದಿರಿ ಸಾಯದಿರಿ ಬಿರುದರ ಹೆಡತಲೆಯ ಹಾವಾದ ಕೀಚಕನಳಿದನು+ ಇನ್ನೇನು ಮಿಡುಕಿ ಕಟಕವ ಹೊಕ್ಕು ನರಿ ಹಲುಬಿಡುವವೊಲು ವೈರಾಟ ಕೆಟ್ಟನು ಕಡೆಗೆ+ ಎನುತ ಕೈವೊಯ್ದು ನಕ್ಕದು ಕೂಡೆ ಕುರುಸೇನೆ
ಫಡ! ವಿರಾಟನ ಚುಕ್ಕಿಗಳಿರ+ ಅವಗಡಿಸದಿರಿ= ಚುಕ್ಕಿಗಳಂತೆ ಅಲ್ಪರೇ ಅವಗಡಿಸದಿರಿ= ನುಗ್ಗಬೇಡಿ, ಸಾಯದಿರಿ= ಸಾಯಬೇಡಿ, ಬಿರುದರ ಹೆಡತಲೆಯ ಹಾವಾದ ಕೀಚಕನಳಿದನು+ ಇನ್ನೇನು= ಬಿರುದು ಪಡೆದು ಹೋರಾಡುವ ಹೆಡತಲೆಯ ಹಾವಿನಂತಿದ್ದ ಕೀಚಕನು ಸತ್ತು ಹೋದನು, ಇನ್ನು ನಿಮ್ಮಲ್ಲಿ ಏನು ಶಕ್ತಿ ಇದೆ? // ಮಿಡುಕಿ ಕಟಕವ ಹೊಕ್ಕು ನರಿ ಹಲುಬಿಡುವವೊಲು ವೈರಾಟ ಕೆಟ್ಟನು ಕಡೆಗೆ+ ಎನುತ ಕೈವೊಯ್ದು ನಕ್ಕದು ಕೂಡೆ ಕುರುಸೇನೆ= ಮಿಡುಕಿ- ಶೌರ್ಯದಿಂದ, ಕಟಕವ- ಸೈನ್ಯವ, ಹೊಕ್ಕು ನರಿ ಹಲುಬಿಡುವವೊಲು- ಬಲೆಗೆ ಸಿಕ್ಕ ನರಿಯಂತೆ, ವೈರಾಟ - ವಿರಾಟ ರಾಜನು ಕೆಟ್ಟನು ಕಡೆಗೆ- ಕೊನೆಗೆ,+ ಎನುತ ಕೈವೊಯ್ದು- ಚಪ್ಪಾಳೆತಟ್ಟಿ, ನಕ್ಕದು ಕೂಡೆ ಕುರುಸೇನೆ.
ಅರ್ಥ:ಫಡ! ಎಂದು ಆರ್ಭಟಿಸಿ, ವಿರಾಟನ ಚುಕ್ಕಿಗಳಂತೆ ಇರುವ ದುರ್ಬಲ ಸೈನಿಕರೇ ನುಗ್ಗಬೇಡಿ, ಒಳಹೊಕ್ಕು ಸಾಯಬೇಡಿ. ಬಿರುದು ಪಡೆದು ಹೋರಾಡುವ ಹೆಡತಲೆಯ ಹಾವಿನಂತಿದ್ದ ಕೀಚಕನು ಸತ್ತು ಹೋದನು, ಇನ್ನು ನಿಮ್ಮಲ್ಲಿ ಏನು ಶಕ್ತಿ ಇದೆ? ಶೌರ್ಯದಿಂದ ಸೈನ್ಯವನ್ನು ಹೊಕ್ಕು ಬಲೆಗೆ ಸಿಕ್ಕ ನರಿಯಂತೆ, ಕೊನೆಯಲ್ಲಿ ವಿರಾಟ ರಾಜನು ಕೆಟ್ಟನು. ಎನ್ನುತ್ತಾ ಚಪ್ಪಾಳೆತಟ್ಟಿ ಕುರುಸೇನೆಯೋಧರು ನಕ್ಕರು.
ಕುದುರೆ ಹೊಕ್ಕವು ದಂತಿ ಘಟೆ ತೂ
ಳಿದವು ರಥವಾಜಿಗಳು ಸೇನೆಯ
ಹೊದರ ಹೊಯ್ದವು ಕೂಡೆ ಕಾಲಾಳಿರಿದು ಕಾದಿದರು |
ಕದಡಿತಾ ದಳ ಮೈಯೊಳೊಕ್ಕವು
ಬಿದಿರಿದೆಲುಗಳು ಮುರಿದು ನೆತ್ತಿಯ
ಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ || ೪೮ ||
ಪದವಿಭಾಗ-ಅರ್ಥ: ಕುದುರೆ ಹೊಕ್ಕವು ದಂತಿ ಘಟೆ ತೂಳಿದವು ರಥವಾಜಿಗಳು ಸೇನೆಯ ಹೊದರ ಹೊಯ್ದವು= ಕೂಡೆ ಕಾಲಾಳಿರಿದು ಕಾದಿದರು ಕದಡಿತಾ ದಳ ಮೈಯೊಳೊಕ್ಕವು ಬಿದಿರಿದೆಲುಗಳು ಮುರಿದು ನೆತ್ತಿಯಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ
ಕುದುರೆ ಹೊಕ್ಕವು ದಂತಿಘಟೆ- ಆನೆ ತೂಳಿದವು ರಥವಾಜಿಗಳು(ವಾಜಿ- ಕುದುರೆ) ಸೇನೆಯ ಹೊದರ=ಪೊದೆಯ, ಗುಂಪನ್ನು ಹೊಯ್ದವು= ಹೊಡವು, ಕೂಡೆ- ಜೊತೆಗೆ, ಮತ್ತೆ, ಕಾಲಾಳು+ಇರಿದು ಕಾದಿದರು ಕದಡಿತು ಆ ದಳ= ಆ ಸೈನ್ಯವು ದಿಕ್ಕಾಪಾಲಾಯಿತು.// ಮೈಯೊಳೊಕ್ಕವು= ಮೈಯಲ್ಲಿ ಹೊಕ್ಕಿತು, ಬಿದಿರ+ ಇದೆಲುಗಳು- ಮುಳ್ಲುಗಳು, ಮುರಿದು- ಒಡೆದು, ನೆತ್ತಿಯ ಮಿದುಳು ಸುರಿದುದು ನೆತ್ತರು+ ಉಬ್ಬರಿಸಿದುದು ನೆರೆ ಮಸಗಿ= ಹೆಚ್ಚಾಗಿ,

ರಥ ಕುದುರೆಗಳು,

ಅರ್ಥ:ವಿರಾಟ ಸೈನ್ಯವು ಕುರು ಸೇನೆಯನ್ನು ಎದುರಿಸಿದಾಗ, ಕುದುರೆಗಳು ಸೈನ್ಯದ ಒಳ ಹೊಕ್ಕವು, ಆನೆಗಳು ನುಗ್ಗಿದವು, ರಥ ಮತ್ತು ಸೇನೆಯು ಗುಂಪನ್ನು ಬಡಿದವು, ಜೊತೆಗೆ, ಮತ್ತೆ, ಕಾಲಾಳುಗಳು ಕತ್ತಿಯಿಂದ ಇರಿದು ಹೋರಾಡಿದರು. ಕಲಾಳುಗಳ ಸೈನ್ಯ ಕತ್ತಿಯಿಂದ ಇರಿದು ಯುದ್ಧಮಾಡಿದಾಗ, ಸೈನ್ಯದಲ್ಲಿ ಆದ ಗಡಿಬಿಡಿಯಲ್ಲಿ, ಆ ಸೈನ್ಯವು ದಿಕ್ಕಾಪಾಲಾಯಿತು. ಮೈಯಲ್ಲಿ ಬಿದಿರ ಮುಳ್ಳುಗಳು ಹೊಕ್ಕವು. ನೆತ್ತಿಯ ಮಿದುಳು ಒಡೆದು ರಕ್ತ ಸುರಿಯಿತು. ಬಹಳ ರಕ್ತ ಹಾರಿ ಚಿಮ್ಮಿತು.
ದಿಂಡುಗೆಡೆದವು ದಂತಿಘಟೆ ಶತ
ಖಂಡವಾದವು ತುರಗದಳ ಮುಂ
ಕೊಂಡಿರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ |
ತುಂಡಿಸಿತು ರಥವಾಜಿ ಮಿದುಳಿನ
ಜೊಂಡಿನಲಿ ರಣಭೂಮಿ ರಕುತದ
ಗುಂಡಿಗೆಗಳೊಗ್ಗಾಯ್ತು ಶಾಕಿನಿ ಡಾಕಿನೀ ಜನಕೆ || ೪೯ ||
ಪದವಿಭಾಗ-ಅರ್ಥ: ದಿಂಡುಗೆಡೆದವು ದಂತಿಘಟೆ ಶತಖಂಡವಾದವು. ತುರಗದಳ ಮುಂಕೊಂಡು+ ಇರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ ತುಂಡಿಸಿತು ರಥವಾಜಿ ಮಿದುಳಿನ ಜೊಂಡಿನಲಿ ರಣಭೂಮಿ ರಕುತದ ಗುಂಡಿಗೆಗಳ+ ಒಗ್ಗಾಯ್ತು ಶಾಕಿನಿ ಡಾಕಿನೀ ಜನಕೆ.
ದಿಂಡುಗೆಡೆದವು ದಂತಿಘಟೆ ಶತಖಂಡವಾದವು= ಆನೆಗಳೂ ಶಕ್ತಿಗುಂದಿದವು, ನೂರಾರು ಚೂರಾದವು. ತುರಗದಳ ಮುಂಕೊಂಡು+ ಇರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ= = ಕುದುರೆ ದಳ ಮುನ್ನಗ್ಗಿ ಇರಿದಾಗ ಮುಂದಿದ್ದ ಸೈನ್ಯದ ಕಾಲಾಳುಗಳು ಸತ್ತು ಬಿದ್ದರು. ತುಂಡಿಸಿತು ರಥವಾಜಿ= ಕುದುರೆ ರಥಗಳು ತುಂಡಾದವು; ಮಿದುಳಿನ ಜೊಂಡಿನಲಿ ರಣಭೂಮಿ ರಕುತದ ಗುಂಡಿಗೆಗಳ+ ಒಗ್ಗಾಯ್ತು ಶಾಕಿನಿ ಡಾಕಿನೀ ಜನಕೆ= ಶಾಕಿನಿ ಡಾಕಿನೀ ಪಿಶಾಚಿಗಳಿಗೆ ಕುಡಿಯಲು ತಿನ್ನಲು, ಮಿದುಳಿನ ಮುದ್ದೆಯಲ್ಲಿ, ರಣಭೂಮಿಯು ರಕ್ತದ ಗುಂಡಿಗೆಗಳ ಸಮೂಹವೇ ಆಯಿತು.
ಅರ್ಥ: ಆನೆಗಳೂ ಶಕ್ತಿಗುಂದಿದವು, ನೂರಾರು ಚೂರಾದವು. ಕುದುರೆ ದಳ ಮುನ್ನಗ್ಗಿ ಇರಿದಾಗ ಮುಂದಿದ್ದ ಸೈನ್ಯದ ಕಾಲಾಳುಗಳು ಸತ್ತು ಬಿದ್ದರು. ಕುದುರೆ ರಥಗಳು ತುಂಡಾದವು; ಶಾಕಿನಿ ಡಾಕಿನೀ ಪಿಶಾಚಿಗಳಿಗೆ ಕುಡಿಯಲು ತಿನ್ನಲು, ಮಿದುಳಿನ ಮುದ್ದೆಯಲ್ಲಿ, ಆ ರಣಭೂಮಿಯು ರಕ್ತದ ಗುಂಡಿಗೆಗಳ ಸಮೂಹವೇ ಆಯಿತು.
ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ |
ಮೇಲು ದಳ ಕವಿದುದು ಮಹಾರಥ
ರೇಳು ಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು || ೫೦ ||
ಪದವಿಭಾಗ-ಅರ್ಥ: ಚೂಳಿಕೆಯ ಬಲ ಮುರಿದು ದೊರೆಗಳ ಮೇಲೆ ಬಿದ್ದುದು ಬವರ ಬಳಿಕ+ ಎಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ ಮೇಲು ದಳ ಕವಿದುದು ಮಹಾರಥರು+ ಏಳು ಸಾವಿರ ಮತ್ಸ್ಯಭೂಪನ ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು.
ಚೂಳಿಕೆಯ= ಮುಂದಿನ ಸಾಲು;ಮುಂದಳ, ಬಲ ಮುರಿದು ದೊರೆಗಳ ಮೇಲೆ ಬಿದ್ದುದು ಬವರ (ಯುದ್ಧ)= ಮುಂದಿರುವ ಸೈನ್ಯ ಸೊಲಲು ವಿರಾಟನ ಕಡೆಯ ರಾಜರ ಮೇಲೆ ಯುದ್ಧದ ಭಾರವು ಬಿದ್ದಿತು.// ಬಳಿಕ+ ಎಚ್ಚಾಳುತನದಲಿ- ಶೌರ್ಯದಿಂದ, ಹೊಕ್ಕು ದುವ್ವಾಳಿಸುವ= ಬಳಿಕ ಶೌರ್ಯದಿಂದ ಹೊಕ್ಕು ವೇಗವಾದ ದಾಳಿಯಿಂದ,// ನಿಜರಥದ ಮೇಲು ದಳ ಕವಿದುದು ಮಹಾರಥರು+ ಏಳು ಸಾವಿರ ಮತ್ಸ್ಯಭೂಪನ ಕಾಳಗಕೆ ತೆಗೆದರು= ನಿಜ= ತನ್ನ,ರಥದ, ವಿರಾಟನ ರಥದ ಮೇಲು ದಳ ಕವಿದುದು- ಏಳು ಸಾವಿರ ಮತ್ಸ್ಯರಾಜನ ಕಾದಿಟ್ಟ ಸೈನ್ಯವು ಕಾಳಗಕ್ಕೆ ಇಳಿಯಿತು. ತ್ರಿಗರ್ತರ ಸೇನೆ ಮುರಿವಡೆದು= ಆಗ ತ್ರಿಗರ್ತರ ಸೇನೆಯು ಸೋತಿತು.
ಅರ್ಥ: ಮುಂದಿರುವ ವಿರಾಟನ ಸೈನ್ಯ ಸೊಲಲು ವಿರಾಟನ ಕಡೆಯ ರಾಜರ ಮೇಲೆ ಯುದ್ಧದ ಭಾರವು ಬಿದ್ದಿತು. ಬಳಿಕ ಅವರು ಶೌರ್ಯದಿಂದ ಹೊಕ್ಕು ವೇಗವಾದ ದಾಳಿಯಿಂದ, ಏಳು ಸಾವಿರ ಮತ್ಸ್ಯರಾಜ ವಿರಾಟನ ಕಾದಿಟ್ಟ ಸೈನ್ಯವು ಕಾಳಗಕ್ಕೆ ಇಳಿಯಿತು. ಆಗ ತ್ರಿಗರ್ತರ ಸೇನೆಯು ಸೋತಿತು.
ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರ ಸುಶರ್ಮನಂಬಿನ
ಮಳೆಯ ಕರೆವುತ ರಿಪು ವಿರಾಟನ ರಥವ ತುರುಬಿದನು |
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ || ೫೧ ||
ಪದವಿಭಾಗ-ಅರ್ಥ: ಬಲ ಮುರಿದು ಬರುತಿರಲು ಖಾತಿಯ ತಳೆದು ವೀರ ಸುಶರ್ಮನು+ ಅಂಬಿನ ಮಳೆಯ ಕರೆವುತ ರಿಪು ವಿರಾಟನ ರಥವ ತುರುಬಿದನು, ಎಲವೊ ಫಡ ಫಡ ಮತ್ಸ್ಯ ಹುಲುಮಂಡಳಿಕ ನಿನಗೇಕೆ+ ಆಳುತನವೆಂದು+ ಉಲಿದು ಕೈಕೊಂಡು+ ಎಚ್ಚು ಕಾದಿದನು+ ಆ ವಿರಾಟನಲಿ.
ಬಲ ಮುರಿದು ಬರುತಿರಲು ಖಾತಿಯ ತಳೆದು ವೀರ ಸುಶರ್ಮನು+ ಅಂಬಿನ ಮಳೆಯ ಕರೆವುತ= ಸೈನ್ಯವು ಸೋತು ಬರತ್ತಿರಲು ಸಿಟ್ಟುಗೊಂಡು ವೀರ ಸುಶರ್ಮನು ಬಾಣದ ಮಳೆಯನ್ನು ಕರೆಯುತ್ತಾ,// ರಿಪು ವಿರಾಟನ ರಥವ ತುರುಬಿದನು= ಶತ್ರು ವಿರಾಟ ರಾಜನ ರಥವನ್ನು ಅಡ್ಡಗಟ್ಟಿದನು.// ಎಲವೊ ಫಡ ಫಡ ಮತ್ಸ್ಯ ಹುಲುಮಂಡಳಿಕ ನಿನಗೇಕೆ+ ಆಳುತನವೆಂದು+ ಉಲಿದು= ಎಲವೊ ಫಡ ಫಡ! ಹುಲ್ಲು ಕಡ್ಡಿಯ ಸಮಾನನಾದ ಮಾಂಡಳಿಕ ಮತ್ಸ್ಯರಾಜನೇ, ನಿನಗೇಕೆ ಆಳುತನವೆಂದು- ಶೂರತನ ಎಂದು+ ಉಲಿದು- ಹೇಳಿ,// ಕೈಕೊಂಡು+ ಎಚ್ಚು ಕಾದಿದನು+ ಆ ವಿರಾಟನಲಿ= ಅವನೊಡನೆ ಯುದ್ಧವನ್ನು ಕೈಕೊಂಡು, ಎಚ್ಚು- ಹೊಡದು ಕಾದಿದನು- ಹೋರಾಡಿದನು, + ಆ ವಿರಾಟನಲಿ- ವಿರಾಟನೊಡನೆ.
ಅರ್ಥ: ತನ್ನ ಸೈನ್ಯವು ಸೋತು ಬರತ್ತಿರಲು ಸಿಟ್ಟುಗೊಂಡು ವೀರ ಸುಶರ್ಮನು ಬಾಣದ ಮಳೆಯನ್ನು ಕರೆಯುತ್ತಾ, ಶತ್ರು ವಿರಾಟ ರಾಜನ ರಥವನ್ನು ಅಡ್ಡಗಟ್ಟಿದನು. ಎಲವೊ ಫಡ ಫಡ! ಎಂದು ಆರ್ಭಟಿಸಿ, ಹುಲ್ಲು ಕಡ್ಡಿಯ ಸಮಾನನಾದ ಮಾಂಡಳಿಕ ಮತ್ಸ್ಯರಾಜನೇ, ನಿನಗೇಕೆ ಶೂರತನ. ಎಂದು ಹೇಳಿ, ಅವನೊಡನೆ ಯುದ್ಧವನ್ನು ಕೈಕೊಂಡು ಹೊಡದು, ಆ ವಿರಾಟನೊಡನೆ ಹೋರಾಡಿದನು.
ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ |
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ || ೫೨ ||
ಪದವಿಭಾಗ-ಅರ್ಥ: ಸರಳು ತೀರಲು ಕಿತ್ತು ಸುರಗಿಯ ತಿರುಹಿ ಹೊಯ್ದಾಡಿದರು; ಮುರಿದೊಡೆ ಪರಿಘದಲಿ ಕಾದಿದರು; ಹೊಕ್ಕರು ಹಲಗೆ ಖಡ್ಗದಲಿ; ಬೆರಸಿ ತಿವಿದಾಡಿದರು; ಮತ್ಸ್ಯನ ಭರವ ಹೊಗಳುತ ಕಲಿ ಸುಶರ್ಮಕನು+ ಉರವಣಿಸಿದನು ಗಾಯವಡೆದು ವಿರಾಟನನು ಹಿಡಿದ.
ವಿರಾಟ ಮತ್ತು ಸುಶರ್ಮಕರು - ಸರಳು ತೀರಲು- ಬತ್ತಳಿಕೆಯಲ್ಲಿ ಬಾಣವು ಮುಗಿದು ಹೋಗಲು,// ಕಿತ್ತು ಸುರಗಿಯ ತಿರುಹಿ ಹೊಯ್ದಾಡಿದರು= ಒರೆಯಿಂದ ಕತ್ತಿಯನ್ನು ಕಿತ್ತು ತೆಗೆದು, ಕತ್ತಿಯನ್ನು ತಿರುಗಿಸುತ್ತಾ ಹೊಯ್ದಾಡಿದರು- ಹೊಡೆದಾಡಿದರರು;// ಮುರಿದೊಡೆ ಪರಿಘದಲಿ ಕಾದಿದರು= ಕತ್ತಿಯು ಮರಿದಾಗ ಪರಿಘದಿಂದ ಹೋರಾಡಿದರು; // ಹೊಕ್ಕರು ಹಲಗೆ ಖಡ್ಗದಲಿ; ಬೆರಸಿ ತಿವಿದಾಡಿದರು= ಇಬ್ಬರೂ ನುಗ್ಗಿನುಗ್ಗಿ -ಹೊಕ್ಕು, ಹಲಗೆ- ಗುರಾಣಿ ಮತ್ತು ಖಡ್ಗದಿಂದ ಹೋರಾಡಿದರು;// ಬೆರಸಿ ತಿವಿದಾಡಿದರು ಮತ್ಸ್ಯನ ಭರವ ಹೊಗಳುತ ಕಲಿ ಸುಶರ್ಮಕನು+ ಉರವಣಿಸಿದನು ಗಾಯವಡೆದು ವಿರಾಟನನು ಹಿಡಿದ= ಹತ್ತಿರದಿಂದ ಒಬ್ಬರನ್ನೊಬ್ಬರು ಬೆರತುಕೊಂಡು ತಿವಿದಾಡಿದರು; ಮತ್ಸ್ಯನ ಭರವ ಹೊಗಳುತ ಕಲಿ ಸುಶರ್ಮಕನು+ ಉರವಣಿಸಿದನು ಗಾಯವಡೆದು ವಿರಾಟನನು ಹಿಡಿದ= ಮತ್ಸ್ಯರಾಜ ವಿರಾಟನ ವೇಗವನ್ನು ಕಂಡು ಸುಶರ್ಮಕನು ಅವನನ್ನು ಹೊಗಳುತ್ತಾ ಕಲಿ- ಶೂರ ಸುಶರ್ಮಕನು+ ಉರವಣಿಸಿದನು- ಪರಾಕ್ರಮವನ್ನು ತೋರಿಸಿದನು; ಕೊನೆಗೆ ಗಾಯವಡೆದು- ವಿರಾಟನಿಗೆ ಗಾಯಮಾಡಿ ವಿರಾಟನನು ಹಿಡಿದನು.
ಅರ್ಥ:ವಿರಾಟ ಮತ್ತು ಸುಶರ್ಮಕರು ಬತ್ತಳಿಕೆಯಲ್ಲಿ ಬಾಣವು ಮುಗಿದು ಹೋಗಲು, ಒರೆಯಿಂದ ಕತ್ತಿಯನ್ನು ಸೆಳೆದುಕೊಂಡು, ಅದನ್ಉನ್ನು ತಿರುಗಿಸುತ್ತಾ ಹೊಡೆದಾಡಿದರರು; ಕತ್ತಿಯು ಮರಿದಾಗ ಪರಿಘದಿಂದ ಹೋರಾಡಿದರು; ಇಬ್ಬರೂ ನುಗ್ಗಿ- ನುಗ್ಗಿ -ಹೊಕ್ಕು, ಗುರಾಣಿ ಮತ್ತು ಖಡ್ಗದಿಂದ ಹೋರಾಡಿದರು; ಹತ್ತಿರದಿಂದ ಒಬ್ಬರನ್ನೊಬ್ಬರು ಬೆರತುಕೊಂಡು ತಿವಿದಾಡಿದರು; ಮತ್ಸ್ಯರಾಜ ವಿರಾಟನ ವೇಗವನ್ನು ಕಂಡು ಸುಶರ್ಮಕನು ಅವನನ್ನು ಹೊಗಳುತ್ತಾ ಕಲಿ- ಶೂರ ಸುಶರ್ಮಕನು+ ಪರಾಕ್ರಮವನ್ನು ತೋರಿಸಿದನು; ಕೊನೆಗೆ ವಿರಾಟನಿಗೆ ಗಾಯಮಾಡಿ ವಿರಾಟನನ್ನು ಸೆರೆ ಹಿಡಿದನು.
ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಲೀಸುವನೇ ವಿರಾಟನೆನುತ್ತ ಬಲ ಬೆದರೆ |
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು || ೫೩ ||
ಪದವಿಭಾಗ-ಅರ್ಥ: ಸಿಕ್ಕಿದನು ದೊರೆಯ+ ಅಪ್ಪುಗೊಟ್ಟರು ಚುಕ್ಕಿಗಳು ಕೀಚಕನ ನೆಳಲಿರೆ ಸಿಕ್ಕಲೀಸುವನೇ ವಿರಾಟನ+ ಎನುತ್ತ ಬಲ ಬೆದರೆ ಉಕ್ಕಿದಾತನ ಹೆಗಲು ಬೇವುದು ಮಕ್ಕಳ+ ಆಟಿಕೆಯಾಯ್ತು ತಾ ಕೈಯಿಕ್ಕಲು+ ಏಕೆಂದು+ ಒದರಿದರು ಮತ್ಸ್ಯನ ಸಹೋದರರು.
ಸಿಕ್ಕಿದನು ದೊರೆಯ+ ಅಪ್ಪುಗೊಟ್ಟರು ಚುಕ್ಕಿಗಳು= ವಿರಾಟನು ಸೆರೆ-ಸಿಕ್ಕಿದನು, ದೊರೆಯ+ ಅಪ್ಪುಗೊಟ್ಟರು ಚುಕ್ಕಿಗಳು= ತಮ್ಮ ದೊರೆಯನ್ನು ಅಪ್ಪುಗೊಟ್ಟರು- ಒಪ್ಪಿಸಬಿಟ್ಟರು,- ಚುಕ್ಕಿಗಳು= ಅಲ್ಪರು, ಉರ್ಬಲರು,// ಕೀಚಕನ ನೆಳಲಿರೆ ಸಿಕ್ಕಲು+ ಈಸುವನೇ ವಿರಾಟನ+ = ಕೀಚಕನ ನೆಳಲಿರೆ- ಆಶ್ರಯವಿದ್ದಿದ್ದರೆ ಸಿಕ್ಕಲು+ ಈಸುವನೇ ವಿರಾಟನ+= ವಿರಾಟನ್ನು ಸೆರೆಸಿಕ್ಕಲು ಬಿಡುತ್ತಿದ್ದನೇ? - ಬಿಡುತ್ತಿರಲಿಲ್ಲ.// ಎನುತ್ತ ಬಲ ಬೆದರೆ= ಸೈನ್ಯವು ಹೆದರಲು, ಉಕ್ಕಿದಾತನ ಹೆಗಲು ಬೇವುದು ಮಕ್ಕಳ+ ಆಟಿಕೆಯಾಯ್ತು ತಾ ಕೈಯಿಕ್ಕಲು+ ಏಕೆಂದು+ ಒದರಿದರು ಮತ್ಸ್ಯನ ಸಹೋದರರು= ಉಕ್ಕಿದಾತನ= ಉತ್ಸಾಹದಿಂದ ಮನ್ನುಗಿದವನ, ಹೆಗಲು ಬೇವುದು- ಭುಜವೇ ಸುಡುವುದು- ನೋಯುವುದು, ಮಕ್ಕಳ+ ಆಟಿಕೆಯಾಯ್ತು ತಾ ಕೈಯಿಕ್ಕಲು+ ಏಕೆಂದು+= ಶತ್ರುಗಳಿಗೆ ಇದು ಮಕ್ಕಳಾಟಿಕೆಯಂತೆ ಸುಲಭವಾಯಿತು ಎಂದು,// ಒದರಿದರು ಮತ್ಸ್ಯನ ಸಹೋದರರು= ವಿರಾಟನ ಸಹೋದರರು ಗೋಳಿಟ್ಟರು.
ಅರ್ಥ:'ವಿರಾಟನು ಸುಶರ್ಮಕನಿಗೆ ಸೆರೆಸಿಕ್ಕಿದನು, ಈ ಅಲ್ಪರು, ದುರ್ಬಲರು ತಮ್ಮ ದೊರೆಯನ್ನು ಒಪ್ಪಿಸಬಿಟ್ಟರು . ಕೀಚಕನ ಆಶ್ರಯವಿದ್ದಿದ್ದರೆ ವಿರಾಟನನ್ನು ಸೆರೆಸಿಕ್ಕಲು ಬಿಡುತ್ತಿದ್ದನೇ? - ಬಿಡುತ್ತಿರಲಿಲ್ಲ,' ಎನ್ನುತ್ತ ಸೈನ್ಯವು ಹೆದರಲು, ಈಗ ಉತ್ಸಾಹದಿಂದ ಮನ್ನುಗಿದವನ, ಭುಜವೇ ನೋಯುವುದು (ಮತ್ತೇನೂ ಪ್ರಯೋಜನವಿಲ್ಲ), ಶತ್ರುಗಳಿಗೆ ವಿರಾಟನನನ್ನು ಸೆರೆಹಿಡಿಯುವುದು ಮಕ್ಕಳಾಟಿಕೆಯಂತೆ ಸುಲಭವಾಯಿತು ಎಂದು, ವಿರಾಟನ ಸಹೋದರರು ಗೋಳಿಟ್ಟರು.
ಬಲವನಾಯಕವಾಯ್ತು ಮತ್ಸ್ಯನ
ಕುಲಕೆ ಬಂದುದು ಕೇಡು ಸುಮ್ಮನೆ
ನಿಲುವದನುಚಿತ ಭೀಮ ಬಿಡಿಸು ವಿರಾಟ ಭೂಪತಿಯ |
ಗೆಲವು ಪರಬಲಕಾಯಿತೆನೆ ರಿಪು
ಕುಲ ದವಾನಳನಣ್ಣನಾಜ್ಞೆಯ
ತಲೆಯೊಳಾಂತನು ಮುಂದಣಾಲದ ಮರನ ನೋಡಿದನು || ೫೪ ||
ಪದವಿಭಾಗ-ಅರ್ಥ: ಬಲವು+ ಅನಾಯಕವಾಯ್ತು ಮತ್ಸ್ಯನ ಕುಲಕೆ ಬಂದುದು ಕೇಡು ಸುಮ್ಮನೆ ನಿಲುವದು+ ಅನುಚಿತ ಭೀಮ ಬಿಡಿಸು ವಿರಾಟ ಭೂಪತಿಯ ಗೆಲವು ಪರಬಲಕೆ+ ಆಯಿತು+ ಎನೆ ರಿಪುಕುಲ ದವಾನಳನು+ ಅಣ್ಣನ+ ಆಜ್ಞೆಯ ತಲೆಯೊಳು+ ಆಂತನು ಮುಂದಣ+ ಆಲದ ಮರನ ನೋಡಿದನು.
ಧರ್ಮರಾಜನು, ಬಲವು+ ಅನಾಯಕವಾಯ್ತು= ವಿರಾಟ ಸೈನ್ಯವು ನಾಯಕರಿಲ್ಲದಂತೆ ಆಯಿತು./ ಮತ್ಸ್ಯನ ಕುಲಕೆ ಬಂದುದು ಕೇಡು= ಮತ್ಸ್ಯರಾಜನ ವಂಶಕ್ಕೆ ಕೇಡು ಬಂದಿತು./ ಸುಮ್ಮನೆ ನಿಲುವದು+ ಅನುಚಿತ= ನಾವು ಸುಮ್ಮನಿರುವುದು ಸರಿಯಲ್ಲ./ ಭೀಮ ಬಿಡಿಸು ವಿರಾಟ ಭೂಪತಿಯ ಗೆಲವು ಪರಬಲಕೆ (ಶತ್ರುಸೈನ್ಯಕ್ಕೆ )+ ಆಯಿತು+ ಎನೆ= ಶತ್ರುಸೈನ್ಯಕ್ಕೆ ಗೆಲುವಾಯಿತು; ಭೀಮನೇ ವಿರಾಟರಾಜನನ್ನು ಬಿಡಿಸು ಎನ್ನಲು,/ ರಿಪುಕುಲ ದವಾನಳನು (ಶತ್ರು ಸೈನ್ನಕ್ಕೆ ಕಾಡುಗಿಚ್ಚಿನಂತಿರುವವನು )+ ಅಣ್ಣನ+ ಆಜ್ಞೆಯ ತಲೆಯೊಳು+ ಆಂತನು(ಧರಿಸಿದನು, ಹೊಂದಿದನು) ಮುಂದಣ+ ಆಲದ ಮರನ( ಎದುರಿನಲ್ಲಿದ್ದ ಆಲದ ಮರವನ್ನು) ನೋಡಿದನು.
ಅರ್ಥ: ಧರ್ಮರಾಜನು, ವಿರಾಟ ಸೈನ್ಯವು ನಾಯಕರಿಲ್ಲದಂತೆ ಆಯಿತು. ಮತ್ಸ್ಯರಾಜನ ವಂಶಕ್ಕೆ ಕೇಡು ಬಂದಿತು. ನಾವು ಸುಮ್ಮನಿರುವುದು ಸರಿಯಲ್ಲ. ಶತ್ರುಸೈನ್ಯಕ್ಕೆ ಗೆಲುವಾಯಿತು; ಭೀಮನೇ ವಿರಾಟರಾಜನನ್ನು ಬಿಡಿಸು ಎನ್ನಲು, ಶತ್ರು ಸೈನ್ನಕ್ಕೆ ಕಾಡುಗಿಚ್ಚಿನಂತಿರುವವ ಭೀಮನು ಅಣ್ಣನ ಆಜ್ಞೆಯನ್ನು ತಲೆಯಮೇಲೆ ಹೊತ್ತನು; ಅದಕ್ಕಾಗಿ ಶತ್ರುಗಳನ್ನು ಬಡಿಯಲು ಎದುರಿನಲ್ಲಿದ್ದ ಆಲದ ಮರವನ್ನು ನೋಡಿದನು.
ಹೆಮ್ಮರವನಿದ ಕಿತ್ತು ವೈರಿ ಸು
ಶರ್ಮಕನನೊರೆಸುವೆನು ಬವರದೊ
ಳೊಮ್ಮೆಯರಿ ಮೋಹರವನರೆವನು ಜೀಯ ಚಿತ್ತೈಸು |
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು || ೫೫ ||
ಪದವಿಭಾಗ-ಅರ್ಥ: ಹೆಮ್ಮರವನು+ ಇದ ಕಿತ್ತು ವೈರಿ ಸುಶರ್ಮಕನನ+ ಒರೆಸುವೆನು ಬವರದೊಳು+ ಒಮ್ಮೆಯೆ+ ಅರಿ ಮೋಹರವನು+ ಅರೆವನು ಜೀಯ ಚಿತ್ತೈಸು ತಮ್ಮ ಸೈರಿಸು ಮರನ ಮುರಿಯದಿರು+ ಎಮ್ಮ ಮಾತನು ಕೇಳು, ಹೊಲ್ಲೆಹವು+ ಎಮ್ಮ ತಾಗದೆ ಮಾಣದು+ ಎಂದನು ಧರ್ಮನಂದನನು.
ಹೆಮ್ಮರವನು+ ಇದ ಕಿತ್ತು ವೈರಿ ಸುಶರ್ಮಕನನ+ ಒರೆಸುವೆನು ಬವರದೊಳು+ ಒಮ್ಮೆಯೆ+ ಅರಿ ಮೋಹರವನು+ ಅರೆವನು ಜೀಯ= ಹೆಮ್ಮರವನು+ ಇದ ಕಿತ್ತು- ಈದೊಡ್ಡ ಮರವನ್ನು ಕಿತ್ತು ಒಂದೇಸಾರಿಗೆ, ವೈರಿ ಸುಶರ್ಮಕನನ+ ಒರೆಸುವೆನು- ಸಾಯಿಸುವೆನು, ಬವರದೊಳು (ಯುದ್ಧದಲ್ಲಿ)+ ಒಮ್ಮೆಯೆ ಒಂದೇಸಲಕ್ಕೆ(+ ಅರಿ ಮೋಹರವನು- ಶತ್ರು ಸೈನ್ಯವನ್ನು,+ ಅರೆವನು-ನುಚ್ಚುನೂರು ಮಾಡುವೆನು, ಜೀಯ=ದೊರೆಯೇ,// ಚಿತ್ತೈಸು ತಮ್ಮ ಸೈರಿಸು ಮರನ ಮುರಿಯದಿರು+ ಎಮ್ಮ ಮಾತನು ಕೇಳು, ಹೊಲ್ಲೆಹವು+ ಎಮ್ಮ ತಾಗದೆ ಮಾಣದು= ಚಿತ್ತೈಸು= ಕೇಳು, ತಮ್ಮ, ಸೈರಿಸು= ಸಮಾಧಾನ ಮಾಡಿಕೊ, ಮರನ- ಮರವನ್ನು, ಮುರಿಯದಿರು+ ಎಮ್ಮ- ನಮ್ಮ-ನನ್ನ ಮಾತನು ಕೇಳು,/ ಹೊಲ್ಲೆಹವು ಮುಂದೆ ಕೇಡು+ ಎಮ್ಮ ತಾಗದೆ ಮಾಣದು- ನಮಗೆ ಬರದೇ ಇರದು, +ಎಂದನು ಧರ್ಮನಂದನನು.
ಅರ್ಥ: ದೊರೆಯೇ, ಈ ದೊಡ್ಡ ಮರವನ್ನು ಕಿತ್ತು ಬಡಿದು ಯುದ್ಧದಲ್ಲಿ ವೈರಿ ಸುಶರ್ಮಕನನ್ನು ಒಂದೇಸಾರಿಗೆ ಸಾಯಿಸುವೆನು, ಶತ್ರು ಸೈನ್ಯವನ್ನು ನುಚ್ಚುನೂರು ಮಾಡುವೆನು, ಎಂದನು ಭೀಮ. ಆಗ ಕೇಳು, ತಮ್ಮಾ, ಸಮಾಧಾನ ಮಾಡಿಕೊ, ಮರವನ್ನು ಮುರಿಯಬೇಡ ನನ್ನ ಮಾತನ್ನು ಕೇಳು, ಅದರಿಂದ ನಮ್ಮ ಗುರುತು ಕೌರವರಿಗೆ ತಿಳಿದು, ಮುಂದೆ ನಮಗೆ ಕೇಡು ಬರದೇ ಇರದು, ಎಂದನು ಧರ್ಮರಾಯ.
ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು |
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು || ೫೬ ||
ಪದವಿಭಾಗ-ಅರ್ಥ: ಮರನ ಮುರಿದೊಡೆ ನಮ್ಮನು+ ಅರಿವನು ಕುರುಕುಲಾಗ್ರಣಿಯು+ ಈ ಯ+ ಅಮಾನುಷ ಪರಮಸಾಹಸ ಭೀಮಸೇನಂಗಲ್ಲದೆ+ ಇಲ್ಲೆಂದು ಅರಿಕೆಯಹುದು+ ಎನೆ ಭೀಮನೆಂದನು ಕುರುಕುಲಾಗ್ರಣಿ ಸಹಿತಿದೆಲ್ಲವನು+ ಒರೆಸಿ ಕಳೆದೊಡೆ ಬಳಿಕ ನಮಗಾರು+ ಉಂಟು ಮುನಿವವರು.
ಮರನ ಮುರಿದೊಡೆ ನಮ್ಮನು+ ಅರಿವನು- ಹದಿಮೂರು ವರ್ಷದ ಅವಧಿಗೆ ಮುನ್ನವೇ ತಿಳಿದುಬಿಡುವನು, ಕುರುಕುಲಾಗ್ರಣಿಯು- ಕೌರವನು./+ ಈ ಯ+ ಅಮಾನುಷ ಪರಮಸಾಹಸ ಭೀಮಸೇನಂಗೆ+ ಅಲ್ಲದೆ+ ಇಲ್ಲೆಂದು- ಬೇರೆಯವರಿಗೆ ಸಾಧ್ಯವಿಲ್ಲವೆಂದು, ಅರಿಕೆಯಹುದು- ಅರಿಯಬಹುದು+, ಎನೆ ಭೀಮನು+ ಎಂದನು ಕುರುಕುಲಾಗ್ರಣಿ ಸಹಿತಿದೆಲ್ಲವನು+ ಒರೆಸಿ ಕಳೆದೊಡೆ ಬಳಿಕ ನಮಗಾರು+ ಉಂಟು ಮುನಿವವರು= ಎನೆ ಭೀಮನು ಎಂದನು ಕುರುಕುಲಾಗ್ರಣಿ-ಕೌರವನ ಸಹಿತ+ ಇದೆಲ್ಲವನು- ಈ ಎಲ್ಲಾ ಸೈನ್ಯವನ್ನು+ ಒರೆಸಿ ಕಳೆದೊಡೆ- ಸಾಯಿಸಿ ಇಲ್ಲದಂತೆ ಮಾಡಿದರೆ, ಬಳಿಕ ನಮಗೆ+ ಆರು- ಯಾರು+ ಉಂಟು ಮುನಿವವರು- ವಿರೋಧಿಸುವವರು.
ಅರ್ಥ:ಮರವನ್ನು ಮುರಿದರೆ ನಮ್ಮನ್ನು ಹದಿಮೂರು ವರ್ಷದ ಅವಧಿಗೆ ಮೊದಲೇ ಕೌರವನು ತಿಳಿದುಬಿಡುವನು; ಏಕೆಂದರೆ ಈ ಅಮಾನುಷ ಪರಮಸಾಹಸ ಭೀಮಸೇನನಿಗೆ ಅಲ್ಲದೆ ಬೇರೆಯವರಿಗೆಸಾಧ್ಯವಿಲ್ಲವೆಂದು ಅರಿಯಬಹುದು, ಎನ್ನಲು, ಭೀಮನು ಎಂದನು ಕೌರವನ ಸಹಿತ ಈ ಎಲ್ಲಾ ಸೈನ್ಯವನ್ನು ಇವರಲ್ಲರನ್ನೂ ಸಾಯಿಸಿ ಇಲ್ಲದಂತೆ ಮಾಡಿದರೆ ಬಳಿಕ ನಮಗೆ ಯಾರು ವಿರೋಧಿಸುವವರು ಇದ್ದಾರೆ?
ಉಗ್ರ ಕರ್ಮವ ನೆನೆಯಬೇಡ
ವ್ಯಗ್ರದಲಿ ಸಾಧಿಸಿದೆವವಧಿ ಸ
ಮಗ್ರವನು ಸಾಕಿನ್ನು ಬಿಡಿಸು ವಿರಾಟ ಭೂಪತಿಯ |
ವಿಗ್ರಹವ ಜಯಿಸೆನಲು ಕುರುಕುಲ
ದಗ್ರಿಯನು ಬೀಳ್ಕೊಂಡು ವಿಲಯ ಮ
ಹೋಗ್ರ ಸನ್ನಿಭನರೆದನಿಭ ಹಯ ರಥ ಪದಾತಿಗಳ || ೫೭ ||
ಪದವಿಭಾಗ-ಅರ್ಥ: ಉಗ್ರ ಕರ್ಮವ ನೆನೆಯಬೇಡ ವ್ಯಗ್ರದಲಿ ಸಾಧಿಸಿದೆವು+ ಅವಧಿ ಸಮಗ್ರವನು; ಸಾಕಿನ್ನು ಬಿಡಿಸು ವಿರಾಟ ಭೂಪತಿಯ ವಿಗ್ರಹವ ಜಯಿಸೆನಲು ಕುರುಕುಲದ+ ಅಗ್ರಿಯನು ಬೀಳ್ಕೊಂಡು ವಿಲಯ ಮಹೋಗ್ರ ಸನ್ನಿಭನು+ ಅರೆದನು+ ಇಭ ಹಯ ರಥ ಪದಾತಿಗಳ.
ಉಗ್ರ ಕರ್ಮವ ನೆನೆಯಬೇಡ ವ್ಯಗ್ರದಲಿ- ಉಗ್ರ ಸಾಹಸದ ಕೆಲಸವನ್ನು ಸಿಟ್ಟಿನ ಭರದಲ್ಲಿ ಮಾಡಬೇಡ. ಸಾಧಿಸಿದೆವವಧಿ ಸಮಗ್ರವನು ಸಾಕಿನ್ನು= ನಾವು ಹದಿಮೂರು ವರ್ಷವನ್ನೂ ಒಂದು ದಿನ ಮಾತ್ರಾ ಬಾಕಿ ಉಳಿದು ಸಮಗ್ರ ಅವಧಿಯನ್ನು ಸಾಧಿಸಿ ಮುಗಿಸಿದ್ದೇವೆ.// ಸಾಕಿನ್ನು ಬಿಡಿಸು ವಿರಾಟ ಭೂಪತಿಯ ವಿಗ್ರಹವ ಜಯಿಸೆನಲು= ಮಾತು ಸಾಕು, ಇನ್ನು ವಿರಾಟ ಭೂಪತಿಯನ್ನು ಬಿಡಿಸು. ಯುದ್ಧವನ್ನು ಜಯಿಸು ಎನ್ನಲು,// ಕುರುಕುಲದ+ ಅಗ್ರಿಯನು ಬೀಳ್ಕೊಂಡು ವಿಲಯ -ಪ್ಳಯ, ಮಹೋಗ್ರ ಸನ್ನಿಭನು+ ಅರೆದನು+ ಇಭ ಹಯ ರಥ ಪದಾತಿಗಳ ಸರಳ ಸಾರದಲಿ+ ಎಂಟು ಸಾವಿರ= ಕುರುಕುಲದ ಅಗ್ರಿಯನು- ಹಿರಿಯನನ್ನು ಬೀಳ್ಕೊಂಡು, ವಿಲಯ ಮಹೋಗ್ರ ಸನ್ನಿಭನು- ಮಹಾ ಉಗ್ರ ರುದ್ರನಿಗೆ ಸಮಾನವಾದ ಭೀಮನು,+ ಅರೆದನು- ಸಾಯಿಸಿದನು+/ ಇಭ- ಆನೆ, ಹಯ- ಕುದುರೆ, ರಥ ಪದಾತಿಗಳ ಸರಳ ಸಾರದಲಿ- ಒಟ್ಟಿನಲ್ಲಿ + ಎಂಟು ಸಾವಿರ
ಅರ್ಥ:ಉಗ್ರ ಕರ್ಮವ ನೆನೆಯಬೇಡ ವ್ಯಗ್ರದಲಿ- ಉಗ್ರ ಸಾಹಸದ ಕೆಲಸವನ್ನು ಸಿಟ್ಟಿನ ಭರದಲ್ಲಿ ಮಾಡಬೇಡ. ವನು- ನಾವು ಹದಿಮೂರು ವರ್ಷವನ್ನೂ ಒಂದು ದಿನ ಮಾತ್ರಾ ಬಾಕಿ ಉಳಿದು ಸಮಗ್ರ ಅವಧಿಯನ್ನು ಸಾಧಿಸಿ ಮುಗಿಸಿದ್ದೇವೆ. ಮಾತು ಸಾಕು, ಇನ್ನು ವಿರಾಟ ಭೂಪತಿಯನ್ನು ಬಿಡಿಸು. ಯುದ್ಧವನ್ನು ಜಯಿಸು ಎನ್ನಲು, ಕುರುಕುಲದಹಿರಿಯ ಧರ್ಮಜನನ್ನು ಬೀಳ್ಕೊಂಡು ಮಹಾ ಉಗ್ರ ರುದ್ರನಿಗೆ ಸಮಾನವಾದ ಭೀಮನು,ಒಟ್ಟಿನಲ್ಲಿ ಎಂಟು ಸಾವಿರ ಆನೆ ಕುದುರೆ ರಥ ಪದಾತಿಗಳನ್ನು ಸಾಯಿಸಿದನು.
ಸರಳ ಸಾರದಲೆಂಟು ಸಾವಿರ
ತುರಗವನು ಸೀಳಿದನು ಕೊಂದನು
ಕರಿಘಟೆಯನೈನೂರ ಮುರಿದನು ತೇರು ಸಾವಿರವ |
ಅರಿ ಪದಾತಿಯನೊಂದು ಲಕ್ಕವ
ನೊರೆಸಿದನು ಬೆಂಬತ್ತಿ ಬಿಡು ಬಿಡು
ದೊರೆ ವಿರಾಟನನೆನುತ ಹಿಡಿದನು ಕಲಿ ಸುಶರ್ಮಕನ || ೫೮ ||
ಪದವಿಭಾಗ-ಅರ್ಥ: ಸರಳ ಸಾರದಲಿ+ ಎಂಟು ಸಾವಿರ ತುರಗವನು ಸೀಳಿದನು, ಕೊಂದನು ಕರಿಘಟೆಯನು+ ಐನೂರ ಮುರಿದನು ತೇರು ಸಾವಿರವ, ಅರಿ ಪದಾತಿಯನು+ ಒಂದು ಲಕ್ಕವನು+ ಒರೆಸಿದನು ಬೆಂಬತ್ತಿ ಬಿಡು ಬಿಡು ದೊರೆ ವಿರಾಟನನು+ ಎನುತ ಹಿಡಿದನು ಕಲಿ ಸುಶರ್ಮಕನ.
ಸರಳ ಸಾರದಲಿ (ಒಟ್ಟು ಲೆಕ್ಕದಲ್ಲಿ)+ ಎಂಟು ಸಾವಿರ ತುರಗವನು(ಕುದುರೆಯನ್ನು) ಸೀಳಿದನು, ಕೊಂದನು ಕರಿಘಟೆಯನು (ಆನೆಗಳನ್ನು)+ ಐನೂರ ಮುರಿದನು ತೇರು(ರಥ) ಸಾವಿರವ, ಅರಿ ಪದಾತಿಯನು (ಶತ್ರು ಕಲಾಳುಗಳನ್ನು)+ ಒಂದು ಲಕ್ಕವನು(ಲಕ್ಷ)+ ಒರೆಸಿದನು(ಕೊಂದನು) ಬೆಂಬತ್ತಿ ಬಿಡು ಬಿಡು ದೊರೆ ವಿರಾಟನನು+ ಎನುತ ಹಿಡಿದನು ಕಲಿ ಸುಶರ್ಮಕನ.
ಅರ್ಥ:ಭೀಮನು ಸರಳ ಲೆಕ್ಕದಲ್ಲಿ ಒಟ್ಟು ಎಂಟು ಸಾವಿರ ಕುದುರೆಯನ್ನು ಸೀಳಿದನು, ಐನೂರ ಆನೆಗಳನ್ನು ಕೊಂದನು, ಸಾವಿರ ರಥಗಳನ್ನು ಮುರಿದನು, ಒಂದು ಲಕ್ಷ ಶತ್ರು ಕಲಾಳುಗಳನ್ನು ಕೊಂದನು. ಭೀಮನು ಸುಶರ್ಮಕನನ್ನು ಬೆನ್ನಹತ್ತಿ. ಬಿಡು ಬಿಡು ದೊರೆ ವಿರಾಟನನ್ನು, ಎನ್ನುತ್ತಾ ವೀರ ಸುಶರ್ಮಕನನ್ನು ಹಿಡಿದನು.
ವಲಲ ಮೆಚ್ಚಿದೆನೈ ಮಹಾ ದೇ
ವಲಘು ಸಾಹಸಿ ತನ್ನ ಬಿಡಿಸಿದೆ
ಸಿಲುಕಿದನು ಹಗೆಯೆನುತ ಬೋಳೈಸಿದ ವಿರಾಟ ನೃಪ |
ಬಳಿಕ ಯಮನಂದನನು ಬಿಡಿಸಿದ
ಕಲಿ ಸುಶರ್ಮನನಿರುಳಗಾಳಗ
ದೊಳಗೆ ತುರು ಮರಳಿದವು ಗೆಲಿದರು ಪಾಂಡು ನಂದನರು || ೫೯ ||
ಪದವಿಭಾಗ-ಅರ್ಥ: ವಲಲ ಮೆಚ್ಚಿದೆನೈ ಮಹಾ ದೇವ+ ಅಲಘು ಸಾಹಸಿ ತನ್ನ ಬಿಡಿಸಿದೆ, ಸಿಲುಕಿದನು ಹಗೆಯೆನುತ ಬೋಳೈಸಿದ ವಿರಾಟ ನೃಪ,

ಬಳಿಕ ಯಮನಂದನನು ಬಿಡಿಸಿದ ಕಲಿ ಸುಶರ್ಮನನು+ ಇರುಳ+ ಗಾ+ ಕಾಳಗದೊಳಗೆ ತುರು ಮರಳಿದವು ಗೆಲಿದರು ಪಾಂಡು ನಂದನರು.

ವಲಲ ಮೆಚ್ಚಿದೆನೈ ಮಹಾ ದೇವ+= ವಲಲ-(ಭೀಮ) ನಿನ್ನನ್ನು ಮೆಚ್ಚದೆನೋ! ದೇವರೇ- ಬದುಕಿದೆ. ಅಲಘು (ಅ+ಲಘು= ಸಮಾನ್ಯನಲ್ಲದ) ಸಾಹಸಿ (ನೀನು) ತನ್ನ ಬಿಡಿಸಿದೆ,/ ಸಿಲುಕಿದನು ಹಗೆ+ಯೆ ಎನುತ ಬೋಳೈಸಿದ ವಿರಾಟನೃಪ= ಶತ್ರುವು ಸಿಕ್ಕಿಬಿದ್ದ, ಎಂಉ ಹೇಳುತ್ತಾ ಭೀಮನನ್ನು ಕರೆದು ಮೈದಡವಿ ತಲೆಸವರಿ ಪ್ರೀತಿ ಮಾಡಿದನು., /ಬಳಿಕ ಯಮನಂದನನು ಬಿಡಿಸಿದ ಕಲಿ ಸುಶರ್ಮನನು (ಧರ್ಮರಾಯನು ಸುಶರ್ಮನನ್ನು ಬಿಡುಗಡೆ ಮಾಡಿಸಿದನು.)+ ಇರುಳ+ ಗಾ+ ಕಾಳಗದೊಳಗೆ ತುರು ಮರಳಿದವು ಗೆಲಿದರು ಪಾಂಡು ನಂದನರು (ರಾತ್ರಿಯೂ ಯುದ್ಧ ಮುಂದುವರಿದು ಅದರಲ್ಲಿ ಗೋವುಗಳನ್ನು ಮರಳಿ ವಿರಾಟ ನಗರಕ್ಕೆ ತಂದರು.) ಹೀಗೆ ಪಾಂಡವರು ದಕ್ಷಿಣ ಗೋಗ್ರಹಣ ಯುದ್ಧದಲ್ಲಿ ಗೆಲವು ಪಡೆದರು.
ಅರ್ಥ:ವಲಲ! ನಿನ್ನನ್ನು ಮೆಚ್ಚದೆನೋ! ದೇವರೇ- ಬದುಕಿದೆ. ನೀನು ಸಮಾನ್ಯನಲ್ಲದ ಮಹಾ ಸಾಹಸಿ, ತನ್ನನ್ನು ಬಿಡಿಸಿದೆ. ಅಷ್ಠೆ ಅಲ್ಲ ಶತ್ರುವು ಸಿಕ್ಕಿಬಿದ್ದ, ಎಂಉ ಹೇಳುತ್ತಾ ಭೀಮನನ್ನು ಕರೆದು ಮೈದಡವಿ ತಲೆಸವರಿ ಪ್ರೀತಿ ಮಾಡಿದನು. ಬಳಿಕ ಧರ್ಮರಾಯನು ವೀರ ಸುಶರ್ಮನನ್ನು ಬಿಡುಗಡೆ ಮಾಡಿಸಿದನು. ರಾತ್ರಿಯೂ ಯುದ್ಧ ಮುಂದುವರಿದು ಅದರಲ್ಲಿ ಗೋವುಗಳನ್ನು ಮರಳಿ ವಿರಾಟ ನಗರಕ್ಕೆ ತಂದರು. ಹೀಗೆ ಪಾಂಡವರು ದಕ್ಷಿಣ ಗೋಗ್ರಹಣ ಯುದ್ಧದಲ್ಲಿ ಗೆಲವು ಪಡೆದರು.
ನೀವೆಯರಸುಗಳಿನ್ನು ನಿಮ್ಮಯ
ಸೇವೆಯಲಿ ತಾನಿಹೆನು ನಾಲ್ವರಿ
ದಾವ ದೇಶದ ವೀರರೋ ಕಂಕಾದಿ ಭಟರೆನುತ ||
ಆ ವಿರಾಟನು ನುಡಿಯೆ ಸನ್ಮಾ
ನಾವಲಂಬಕೆ ತುಷ್ಟನಾದೆನು
ಭಾವಿಪೊಡೆ ಧರೆ ನಮ್ಮದೆಂದನು ಧರ್ಮನಂದನನು || ೬೦ ||
ಪದವಿಭಾಗ-ಅರ್ಥ: ನೀವೆ+ ಯ+ ಅರಸುಗಳು+ ಇನ್ನು ನಿಮ್ಮಯ ಸೇವೆಯಲಿ ತಾನಿಹೆನು ನಾಲ್ವರಿದು+ ಆವ ದೇಶದ ವೀರರೋ, ಕಂಕ+ ಆದಿ ಭಟರು+ ಎನುತ ಆ ವಿರಾಟನು ನುಡಿಯೆ ಸನ್ಮಾನ+ ಆವಲಂಬಕೆ ತುಷ್ಟನಾದೆನು, ಭಾವಿಪೊಡೆ ಧರೆ ನಮ್ಮದೆಉ+ ಎಂದನು ಧರ್ಮನಂದನನು.
ನೀವೆ+ ಯ+ ಅರಸುಗಳಿನ್ನು ನಿಮ್ಮಯ ಸೇವೆಯಲಿ ತಾನಿಹೆನು= ಇನ್ನು ನೀವೆ ಅರಸುಗಳು, ನಿಮ್ಮ ಸೇವೆಯನ್ನು ಮಾಡತ್ತಾ, ತಾನು ಇರುವೆನು ಎಂನು ವಿರಾಟ. / ನಾಲ್ವರು+ ಇದು+ ಆವ ದೇಶದ ವೀರರೋ, ಕಂಕ+ ಆದಿ ಭಟರು+ ಎನುತ ಆ ವಿರಾಟನು ನುಡಿಯೆ= ನೀವು ನಾಲ್ವರು ಯಾವ ದೇಶದ ವೀರರೋ, ಕಂಕನೇ ಮೊದಲಾದ ವೀರರು, ಎನ್ನತ್ತಾ, ಆ ವಿರಾಟನು ನುಡಿಯೆ- ಹೇಳಲು, ಸನ್ಮಾನ+ ಆವಲಂಬಕೆ ತುಷ್ಟನಾದೆನು= ನೀನು ಇಷ್ಟೊಂದು ಗೌರವದಿಂದ ಮಾತನಾಡಿದ್ದಕ್ಕೆ ತೃಪ್ತಿಯಾಯಿತು ಎಂದನು ಧರ್ಮಜ, ಮತ್ತೆ, ಭಾವಿಪೊಡೆ ಧರೆ ನಮ್ಮದೆ+ ಎಂದನು ಧರ್ಮನಂದನನು = ಭಾವಿಸಿ ನೋಡಿದರೆ ಭೂಮಿಯು ನಮ್ಮದೆ ಎಂದು ಹೇಳಿದನು, (ಪರುಷುರಾಮನು ಭೂಮಂಡಲವನ್ನು ಗೆದ್ದು ಬ್ರಾಹ್ಮಣರಿಗೆ ದಾನ ಮಾಡಿದ್ದನು. ಧರ್ಮಜನು ಬ್ರಾಹ್ಮಣ ವೇಷಧಾರಿಯಾಗಿದ್ದನು)
ಅರ್ಥ: ಇನ್ನು ನೀವೆ ಅರಸುಗಳು, ನಿಮ್ಮ ಸೇವೆಯನ್ನು ಮಾಡತ್ತಾ, ತಾನು ಇರುವೆನು ಎಂನು ವಿರಾಟ.ನೀವು ನಾಲ್ವರು ಯಾವ ದೇಶದ ವೀರರೋ, ಕಂಕನೇ ಮೊದಲಾದ ವೀರರು, ಎನ್ನತ್ತಾ, ಆ ವಿರಾಟನು ಹೇಳಲು, ನೀನು ಇಷ್ಟೊಂದು ಗೌರವದಿಂದ ಮಾತನಾಡಿದ್ದಕ್ಕೆ ತೃಪ್ತಿಯಾಯಿತು ಎಂದನು ಧರ್ಮಜ, ಮತ್ತೆ, ಭಾವಿಸಿ ನೋಡಿದರೆ ಭೂಮಿಯು ನಮ್ಮದೆ, ಎಂದು ಹೇಳಿದನು, (ಪರುಷುರಾಮನು ಭೂಮಂಡಲವನ್ನು ಗೆದ್ದು ಬ್ರಾಹ್ಮಣರಿಗೆ ದಾನ ಮಾಡಿದ್ದನು. ಧರ್ಮಜನು ಬ್ರಾಹ್ಮಣ ವೇಷಧಾರಿಯಾಗಿದ್ದನು. ಆ ಎಲ್ಲಾ ರಾಜ್ಯಗಳೂ ಹಸ್ತಿನಾವತಿಗೆ ಸಾಮಂತವಾಗಿದ್ದವು)
ಮಾನಭಂಗದ ಮೇಲೆ ಕೌರವ
ಸೇನೆ ಸರಿಯೆ ಸುಶರ್ಮ ಕಡು ದು
ಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ
ಭಾನು ಭುವನದ ಜನದ ನಿದ್ರಾ
ಮೌನ ಮುದ್ರೆಯನೊಡೆದನುತ್ತರ
ಧೇನು ವಿಗ್ರಹಣವನು ಮಾಡಿದನಂದು ಕುರುರಾಯ ||೬೧||[೧][೨]
ಪದವಿಭಾಗ-ಅರ್ಥ:ಮಾನಭಂಗದ ಮೇಲೆ ಕೌರವಸೇನೆ ಸರಿಯೆ ಸುಶರ್ಮ ಕಡು ದುಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ ಭಾನು ಭುವನದ ಜನದ ನಿದ್ರಾಮೌನ ಮುದ್ರೆಯನು+ ಒಡೆದನು+ ಉತ್ತರಧೇನು ವಿಗ್ರಹಣವನು ಮಾಡಿದನಂದು ಕುರುರಾಯ.
ಮಾನಭಂಗದ ಮೇಲೆ ಕೌರವಸೇನೆ ಸರಿಯೆ= ಸೋಲಿನಿಂದ ಮಾನಭಂಗವಾಗಿ ಆ ಸೋಲಿನ ಕಾರಣದ ಮೇಲೆ ಕೌರವರ ಸೇನೆಯು ಸರಿಯೆ- ಹಿಂದೆ ಸರಿಯಲು, ಮತ್ತು ಸುಶರ್ಮ ಕಡು ದುಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ= ಸುಶರ್ಮರಾಜನು ಕಡು=- ಬಹಳ, ದುಮ್ಮಾನದಿಂದಲೆ- ದುಃಖದಿಂದ, ಮುಸುಕಿನಲಿ= ಮುಸುಕು ಹಾಕಿಕೊಂಡು, ತಿರುಗಿದನು ಪಾಳಯಕೆ- ಪಾಳಯಕ್ಕೆ ಹಿಂತಿರುಗಿದನು. ಭಾನು ಭುವನದ ಜನದ ನಿದ್ರಾಮೌನ ಮುದ್ರೆಯನು+ ಒಡೆದನು+= ಸೂರ್ಯನು ಭೂಮಂಡಲದ ಜನರ ನಿದ್ದೆಯ ಶಾಂತತೆಯನ್ನು ಕೊನೆಗಾಣಿಸಿ ಪೂರ್ವದಲ್ಲಿ ಮರುದಿನ ಉದಯಿಸಿನು. ಆದಿನ ಕಳೆದು ಬೆಳಗಾಯಿತು./ ಉತ್ತರಧೇನು ವಿಗ್ರಹಣವನು ಮಾಡಿದನಂದು ಕುರುರಾಯ= ವಿರಾಟ ನಗರದ ಉತ್ತರದಲ್ಲಿ, ಉತ್ತರಧೇನು ವಿಗ್ರಹಣವನು- ಗೋವುಗಳನ್ನು ಅಪಹರಣ, ಮಾಡಿದನು+ ಅಂದು ಕುರುರಾಯ= ಅಂದು ಕೌರವನು ಅಪಹರಣ ಮಾಡಿದನು.
ಅರ್ಥ:ಸೋಲಿನಿಂದ ಮಾನಭಂಗವಾಗಿ ಆ ಸೋಲಿನ ಕಾರಣದ ಮೇಲೆ ಕೌರವರ ಸೇನೆಯು ಹಿಂದೆ ಸರಿಯಲು, ಮತ್ತು ಬಹಳ, ದುಃಖದಿಂದ, ಮುಸುಕು ಹಾಕಿಕೊಂಡು, ಪಾಳಯಕ್ಕೆ ಹಿಂತಿರುಗಿದನು. ಸೂರ್ಯನು ಭೂಮಂಡಲದ ಜನರ ನಿದ್ದೆಯ ಶಾಂತತೆಯನ್ನು ಕೊನೆಗಾಣಿಸಿ ಪೂರ್ವದಲ್ಲಿ ಮರುದಿನ ಉದಯಿಸಿನು. ಆ ದಿನ ಕಳೆದು ಬೆಳಗಾಯಿತು. ವಿರಾಟ ನಗರದ ಉತ್ತರದಲ್ಲಿ, ಗೋವುಗಳನ್ನು ಅಂದು ಕೌರವನು ಅಪಹರಣ ಮಾಡಿದನು.
♦♦♦
♦♣♣♣♣♣♣♣♣♣♣♣♣♣♣♣♣♣♣♣♦

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.