ಅರ್ಥ: ಜನಮೇಜಯ ರಾಜನೇ ಕೇಳು, ಪ್ರಸಿದ್ಧವಾದ ಅವರ ಅಜ್ಞಾತವಾಸವನ್ನು ಪಾಂಡವರು ಮುಗಿಸಿದರು. ಬಹಳ ಹರ್ಷದಿಂದ ಅವರು ಆ ರಾತ್ರಿಯನ್ನು ಕಳೆದರು. ಮುಂದಿನ ಅವರ ಅವರ ಅಭ್ಯುದಯವನ್ನು ಕೈಗೂಡಿಸಿ ಕೊಡುವಂತೆ ಪೂರ್ವಬೆಟ್ಟದ ಮೇಲೆ ಸೂರ್ಯು ಉದಯದ ಸೂರ್ಯಮಂಡಲದ ಕೆಂಪು ಕಾನಿಸಿತು.
ಅರ್ಥ: ಸೂರ್ಯನ ರಥದ ಏಳು ಕುದುರೆಗಳ ಖುರಪುಟದ ಕೆಂದೂಳಿಯಂತೆ, ಕುಂತೀ ಕುಮಾರರ ಏಳಿಗೆಯ ತುಂಬಿದ ಪ್ರೀತಿಯ ರಸದಂತೆ, ಸೂರ್ಯನ ರಥದ ಸೇನೆ ಕೆಂಪು ಅರಣೋದಯವನ್ನು ಉಬ್ಬರಿಸಿ ಎಲ್ಲಾಕಡೆ ಆವರಿಸಿತೋ ಎನ್ನುವಂತೆ ಸೂರ್ಯ ಉದಯವಾಯಿತು. ಅದನ್ನು ಏನು ಹೇಳಲಿ, ಮಹೇಂದ್ರನ ಪೂರ್ವಕ್ಕಿನ ಶ್ರೇಷ್ಠ ಬಾಲಕಿಯ ಬೈತಲೆಯ ಕುಂಕುಮ ಜಾಲವೋ ಹೇಳು ಎನ್ನುವಂತೆ, ಸೂರ್ಯನ ಅರುಣೋದಯದ ರಥದ ಕೆಂಪು ರಂಜಿಸಿತು.
ಅರ್ಥ: ಸೂರ್ಯನು ಉದಯವಾಗಿ ಕಮಲದ ಪರಿಮಳಕ್ಕೆ ತುಂಬಿಯು ಬರವಂತೆ ಮಾಡಿದನು. ಚಂದ್ರಕಾಂತ ಶಿಲೆಗೆ ಹೊಳೆಯುವ ಬೆರಗನ್ನು ಕೊಟ್ಟನು. ಜಕ್ಕವಕ್ಕಿಗಳು ಬೆಲಗನ್ನು ನೋಡಿ ಬೇರೆಯಾಗಿ ಹಾರಿದ್ದರಿಂದ ಅವುಗಳ ಸೆರೆಯನ್ನು ಬಿಡಿಸಿದನು. ಅವನ ಎಳೆಬಿಸಿಲ ಕೆರಳಿ- ಸಿಟ್ಟನಿಂದ ನೈದಿಲ ಸೌಂದರ್ಯದ ಸಿರಿಯನ್ನು ತರಿಸಿದನು, ಉಂಟು ಮಾಡಿದನು- (ನೈದಿಲೆ ಮುಚ್ಚಿಕೊಂಡು ಬಾಗಿದ ಅಂದ), ಕತ್ತಲೆಯೆಂಬ ಶತ್ರುರಾಜನ ರಾಜ್ಯವನು ಇಲ್ಲದಂತೆ ಮಾಡಿದನು. ಹೀಗೆ ರವಿಯು (ಪೂರ್ವದ)ಮೂಡಣಾದ್ರಿಯಲ್ಲಿ ತನ್ನ ಓಲಗವನ್ನು ಕೊಟ್ಟನು.
ಹರ ಹರ ಶ್ರೀಕಾಂತನೆನುತೈ
ವರು ಕುಮಾರಕರುಪ್ಪವಡಿಸಿದ
ರರಿ ವಿದಾರರು ಮಾಡಿದರು ಮಾಂಗಲ್ಯ ಮಜ್ಜನವ |
ವರ ವಿಭೂಷಣ ಗಂಧ ಮಾಲ್ಯಾಂ
ಬರದಿ ಪರಿವೃತರಾದರವನೀ
ಸುರರಿಗಿತ್ತರು ಧೇನು ಮಣಿ ಕನಕಾದಿ ವಸ್ತುಗಳ || ೦೪ ||
ಪದವಿಭಾಗ-ಅರ್ಥ: ಹರ ಹರ ಶ್ರೀಕಾಂತನು(ಶ್ರೀಹರಿ)+ ಎನುತ+ ಐವರು ಕುಮಾರಕರು ಉಪ್ಪವಡಿಸಿದರು(ಎದ್ದರು)+ ಅರಿವಿದಾರರು(ಅರಿವುಳ್ಳವರು) ಮಾಡಿದರು ಮಾಂಗಲ್ಯ ಮಜ್ಜನವ ಅವರ ವಿಭೂಷಣ ಗಂಧ ಮಾಲ್ಯಾಂಬರದಿ ಪರಿವೃತರಾದರು (ಧರಿಸಿದರು); ಅವನೀ ಸುರರಿಗೆ (ಭೂ ಸುರರು- ಬ್ರಾಹ್ಮಣರಿಗೆ)+ ಇತ್ತರು(ಕೊಟ್ಟರು), ಧೇನು ಮಣಿ ಕನಕ+ ಆದಿ ವಸ್ತುಗಳ.
ಅರ್ಥ: ಧರ್ಮಜ ಮೊದಲಾಗಿ ಐವರು ಪಾಂಡುಕುಮಾರರು ಹರ ಹರಮಹಾದೇವ, ಶ್ರೀಹರಿ, ಶ್ರೀಹರಿ ಎನ್ನತ್ತಾ ಸೂರ್ಯೋದಯಕ್ಕೆ ಸರಿಯಾಗಿ ಎದ್ದರು. ವಿವೇಕಿಗಳಾದ ಪಾಂಡವರು ಮಂಗಲ ಸ್ನಾನವನ್ನು ಮಾಡಿದರು. ಅವರು ಉತ್ತಮವಾದ ವಿಭೂಷಣ ಗಂಧ ಮಾಲೆ, ಅಂಬರ- ಬಟ್ಟೆಗಳನ್ನು ಧರಿಸಿದರು. ಬ್ರಾಹ್ಮಣರಿಗೆ ಧೇನು- ಗೋವು, ಮಣಿ ಕನಕ ಮೊದಲಾದ ವಸ್ತುಗಳನ್ನು ಕೊಟ್ಟರು.
ತಮದ ಗಂಟಲನೊಡೆದ ಹರುಷ
ದ್ಯುಮಣಿ ಮಂಡಲದಂತೆ ಜೀವ
ಭ್ರಮೆಯ ಕವಚವ ಕಳೆದು ಹೊಳೆ ಹೊಳೆವಾತ್ಮನಂದದಲಿ |
ವಿಮಲ ಬಹಳ ಕ್ಷತ್ರ ರಶ್ಮಿಗ
ಳಮರಿ ದೆಸೆಗಳ ಬೆಳಗೆ ರಾಜೋ
ತ್ತಮ ಯುಧಿಷ್ಠಿರ ದೇವನೆಸೆದನು ರಾಜ ತೇಜದಲಿ || ೦೫ ||
ಪದವಿಭಾಗ-ಅರ್ಥ: ತಮದ ಗಂಟಲನು+ ಒಡೆದ ಹರುಷದ್ಯುಮಣಿ ಮಂಡಲದಂತೆ, ಜೀವ ಭ್ರಮೆಯ ಕವಚವ ಕಳೆದು ಹೊಳೆ ಹೊಳೆವ+ ಆತ್ಮನಂದದಲಿ ವಿಮಲ ಬಹಳ ಕ್ಷತ್ರ ರಶ್ಮಿಗಳು+ ಅಮರಿ (ಸೇರಿಕೊಂಡು) ದೆಸೆಗಳ(ದಿಕ್ಕುಗಳ) ಬೆಳಗೆ ರಾಜೋತ್ತಮ ಯುಧಿಷ್ಠಿರ ದೇವನು+ ಎಸೆದನು (ಶೋಭಿಸಿದನು) ರಾಜ ತೇಜದಲಿ.
ಅರ್ಥ: ತಮಸ್ಸಿನ ಗಂಟಲನು ಒಡೆದು ಹೊಮ್ಮಿದ ಹರುಷದ್ಯುಮಣಿಯಾದ ಆನಂದದ ಮಂಡಲದಂತೆ, ಮತ್ತು ಜೀವಭ್ರಮೆಯ ಮಾಯೆಯ ಕವಚವ ಕಳೆದುಕೊಂಡು ಜ್ಞಾನದಿಂದ ಹೊಳೆ ಹೊಳೆಯುವ ಆತ್ಮನಂತೆ, ಶ್ರೇಷ್ಠ ಉನ್ನತ ಕ್ಷತ್ರರಶ್ಮಿಗಳಾದ ತೇಜಸ್ಸು ಸೇರಿಕೊಂಡು, ಅದರಿಂದ ದಿಕ್ಕುಗಳು ಬೆಳಗಲು, ರಾಜೋತ್ತಮನಾದ ಯುಧಿಷ್ಠಿರ ದೇವನು ಆಗ ರಾಜ ತೇಜಸ್ಸಿನಿಂದ ಶೋಭಿಸಿದನು.
ಅರ್ಥ: ಪರಮ ಸತ್ಯವ್ರತನೂ ಮಹಾಕ್ರತುವೂ ಉತ್ತಮರೀತಿಯಲ್ಲಿ ಅವಭೃತ ಸ್ನಾನವನ್ನು ಮಾಡಿ, ಭೀಮಾದಿಗಳ ಸಹಿತ ವಿರಾಟನ ಅರಮನೆಗೆ ಅರಸ ಯುಧಿಷ್ಠಿರನು ಬಂದನು. ಅವನು ಮಣಿಖಚಿತವಾದ ಕೇಸರಿಯ ಪೀಠವನ್ನು ಏರಿ ಕುಳಿತನು. ಅವನ ಪಾದಗಳ ಬಳಿ ಸೇವೆಯಲ್ಲಿ ಒಡಹುಟ್ಟಿದ ಭೀಮಾದಿಗಳು ಅವನನ್ನು ಪುರಸ್ಕರಿಸುತ್ತಾ ಶೋಭಿಸಿದರು.
ಅರ್ಥ: ವಿರಾಟರಾಜನ ಸಿಂಹಾಸನವನ್ನು ಏರುವ ಸ-ಗರ್ವವುಳ್ಳವರು ಯಾರು? ಕಂಚುಕಿಗಳು- ಸೇವಕಿಯರು ಬೆಳಗ್ಗೆ ಮುಂಚೆ ಇವರನ್ನು ನೋಡಿದರು; ನೋಡಿದಾಗ ಹಾವುಕಚ್ಚಿದಂತೆ ಹೆದರಿ, ಹಾ! ಎನ್ನುತ್ತಾ, ಬಂದು ಅವರ ಕ್ಷಾತ್ರ ತೇಜಸ್ಸನ್ನು ಎದುರಿಸಲು ಅಂಜಿದರು. ಅವರು ವಿರಾಟ ರಾಜನ ಬಳಿಗೆ ಬಂದು ಅವರನ್ನು ಎಬ್ಬಿಸಿ ಆ ವಿಚಾರವನ್ನು ಮತ್ಸ್ಯಭೂಪತಿಗೆ ಬಿನ್ನವಿಸಿದರು.
ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾ
ರಾಯಣನೊ ನರರಲ್ಲ ದೇವರು ಬಂದು ನೋಡುವುದು ||
ಕಾಯಲಸದಳವೆಮಗೆನಲು ನಿ
ರ್ದಾಯದಲಿ ನೆಲೆಗೊಂಡ ನಿರ್ಜರ
ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ || ೦೮ ||
ಪದವಿಭಾಗ-ಅರ್ಥ: ಜೀಯ ಸಿಂಹಾಸನಕೆ ದಿವಿಜರ ರಾಯನೋ ಶಂಕರನೊ ಮೇಣ್ ನಾರಾಯಣನೊ ನರರಲ್ಲ; ದೇವರು ಬಂದು ನೋಡುವುದು ಕಾಯಲು+ ಅಸದಳವು+ ಎಮಗೆ+ ಎನಲು ನಿರ್ದಾಯದಲಿ ನೆಲೆಗೊಂಡ ನಿರ್ಜರರಾಯನು+ ಆರೆಂದು+ ಎನುತಲಿ+ ಆಗ ವಿರಾಟ ಚಿಂತಿಸಿದ
ಅರ್ಥ:ಕಂಚುಕಿಯರು ಬೆಳಗಿನ ಸಮಯದಲ್ಲಿ ವಿರಾಟನ ಬಳಿಗೆ ಬಂದು, ಜೀಯ ಸಿಂಹಾಸನವನ್ನು ದೇವತೆಗಳ ರಾಜ ಇಂದ್ರನೋ, ಶಂಕರನೊ ಅಥವಾ ನಾರಾಯಣನೊ ಬಂದು ಆಕ್ರಮಿಸಿದ್ದಾರೆ. ಅವರು ನರರಲ್ಲ; ತಾವು- ದೇವರು ಬಂದು ನೋಡುವುದು. ನಮಗೆ ಸಭೆಯ ಭವನವನ್ನು ಕಾಯಲು ಅಸಾಧ್ಯವಾಗಿದೆ, ಎನ್ನಲು, ಆಗ ತನ್ನ ಸಿಂಹಾಸದಲ್ಲಿ ನೆಲೆಗೊಂಡ ದೇವ-ನಿರ್ಜರರಾಯನು ಯಾರಿರಬಹುದೆಂದು ವಿರಾಟರಾಜನು ಯೋಚಿಸಿದ.
ಅರ್ಥ: ವಿರಾಟನು, ಪುರೋಹಿತನನ್ನೂ ಉತ್ತರನನ್ನೂ, ಎಲ್ಲಾ ಮಹಾಪ್ರಧಾನ ಮಂತ್ರಿಗಳನ್ನೂ, ಕರೆಸಿಕೊಂಡು ಅರಮನೆಯಿಂದ ಹೊರಹೊರಟು ಓಲಗಶಾಲೆಗೆ ಬಂದಾಗ ಚಂದ್ರ ಬಿಂಬದಕಿರಣಗಳೇ ಕರಗಿ ಸೂಸಿ ಚಿಲ್ಲಿದ ಲಹರಿಗಳಂತೆ, ವಿವಿಧ ಆಭರಣ ಮುಕ್ತಾವಳಿಗಳ- ಮುತ್ತಿನ ಹಾರಗಳ ಪ್ರಭೆಯನ್ನು ದೂರದಿಂದಲೇ ರಾಜನು ಕಂಡನು.
ಹರನ ನಾಲಕು ಮುಖದ ಮಧ್ಯ
ಸ್ಫುರಿತದೀಶಾನನದೊಲಿರೆ ಸೋ
ದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ |
ಅರಸಿಯನು ವಾಮದಲಿ ವಿವಿಧಾ
ಭರಣ ಮಣಿ ರಶ್ಮಿಗಳ ಹೊದರಿನ
ಹೊರಳಿಯಲಿ ಕಣ್ಣಾಲಿ ಕೋರೈಸಿದವು ನಿಮಿಷದಲಿ || ೧೦ ||
ಪದವಿಭಾಗ-ಅರ್ಥ: ಹರನ ನಾಲಕು ಮುಖದ ಮಧ್ಯ ಸ್ಫುರಿತದ+ ಈಶಾನನದೊಲು+ ಇರೆ ಸೋದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ ಅರಸಿಯನು ವಾಮದಲಿ ವಿವಿಧ+ ಆಭರಣ ಮಣಿ ರಶ್ಮಿಗಳ ಹೊದರಿನ ಹೊರಳಿಯಲಿ ಕಣ್ಣಾಲಿ ಕೋರೈಸಿದವು ನಿಮಿಷದಲಿ.
ಅರ್ಥ: ಸದ್ಯೋಜಾತ, ಅಘೋರ, ತತ್ಪುರುಷ, ವಾಮದೇವ,ಈಶಾನ. ಎಂಬ ಶಿವನ/ ಹರನ ನಾಲ್ಕು ಮುಖಗಳ ಮಧ್ಯ ಉದಯಿಸಿದ ಈಶಾನನಂತೆ ನಾಲ್ಕು ಸೋದರರ ಮಧ್ಯದಲ್ಲಿ ಎಡದಲ್ಲಿ ಅರಸಿ ದ್ರೌಪದಿ ಸಹಿತ ಯುಧಿಷ್ಠಿರನನ್ನು ವಿರಾಟನು ಕಂಡನು. ಅವರು ವಿವಿಧ ಆಭರಣ ಮಣಿ ರಶ್ಮಿಗಳನ್ನು ಧರಿಸಿ, ಅದರಿಂದ ಅಲಂಕೃತರಾದ ಪಾಂಡವರನ್ನು ವಿರಾಟನು ನೋಡಿ ಅವನ ಕಣ್ಣಾಲಿಗಳು ಆ ಕ್ಷಣ ಕೋರೈಸಿದವು.
ಮೇಳವೇ ಫಡ ಮನದ ಮತ್ಸರ
ಕಾಲಿಡಲು ತೆರಹಿಲ್ಲ ಮನುಜರ
ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು |
ಆಲಿಗಳು ಮೇಲಿಕ್ಕಲಮ್ಮವು
ಶೂಲಪಾಣಿಯ ಪರಮ ತೇಜದ
ಚೂಳಿಯೋ ಶಿವ ಶಿವ ಎನ್ನುತ್ತ ವಿರಾಟ ಬೆರಗಾದ || ೧೧ ||
ಪದವಿಭಾಗ-ಅರ್ಥ: ಮೇಳವೇ ಫಡ ಮನದ ಮತ್ಸರ ಕಾಲಿಡಲು ತೆರಹಿಲ್ಲ ಮನುಜರ ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು, ಆಲಿಗಳು ಮೇಲಿಕ್ಕಲು+ ಅಮ್ಮವು ಶೂಲಪಾಣಿಯ ಪರಮ ತೇಜದ ಚೂಳಿಯೋ ಶಿವ ಶಿವ ಎನ್ನುತ್ತ ವಿರಾಟ ಬೆರಗಾದ
ಮೇಳ: ತಂಡ, ಗುಂಪು.
ಅರ್ಥ:ವಿರಾಟನು ಅವರನ್ನು ನೋಡಿ ಇದಾವ ಮೇಳ, ಫಡ! ತನ್ನ ಸಿಂಹಾಸನದಲ್ಲಿ ಕುಳಿತರೂ, ತನ್ ಮನದಲ್ಲಿ ಮತ್ಸರವು ಹುಟ್ಟಲಿಲ್ಲ! ಇವರು ಮನುಜರನ್ನು ಹೋಲುವ ನಾಟಕದ ದೇವತೆಗಳಂತಿರುವ ಮಂಡಲೇಶ್ವರರೇ!, ಕಣ್ಣಿನ ಆಲಿಗಳು/ ದೃಷ್ಠಿ ಅವರಿಂದ ತೆಗೆಯಲು ಇಷ್ಟಪಡುವುದಿಲ್ಲ! ಮಹಾದೇವನ ಪರಮ ತೇಜಸ್ಸಿನ ಶಿಖರದಂತಿದ್ದಾರೆ! ಶಿವ ಶಿವ ಎನ್ನುತ್ತಾ ವಿರಾಟನು ಬೆರಗಾದನು.
ಅರ್ಥ:ಇವರು 'ವಲಲ ಕಂಕ ಬೃಹನ್ನಳೆಯ ಮೈಲಕ್ಷಣವನ್ನು ಹೋಲುವರು' ಎಣದು ಕೆಲವರು, ಮತ್ತೆ ಕೆಲವರು 'ಇವರು ಯಾವ ಬಗೆಯ ಮಾನವರು' 'ತೆಗೆ- ಅಲ್ಲ; ಇವರು ದೇವಲೋಕದ ಒಡೆಯರು; ನಿಜವನ್ನು ತಿಳಿಯಲು ಆಗದು ತಮಗೆ' ಎಂದು ಕೆಲವರು ಚಿಂತೆಗೊಳಗಾಗಿರಲು, ಆ ಜನರನ್ನು ಪಕ್ಕಕ್ಕೆ ಸರಿಸಿ ಉತ್ತರ ನಗುತ್ತಾ ತಂದೆಗೆ ಕೈಮುಗಿದು ಹೇಳಿದ.-
ತಾತ ಬಿನ್ನಹ ನಿನ್ನೆ ವೈರಿ
ವ್ರಾತವನು ಗೆಲಿದಾತನೀ ತೋ
ರ್ಪಾತನೀತನ ಮುಂದೆ ಮೆರೆವವ ಕೀಚಕಾಂತಕನು |
ಈತ ನಕುಲನು ವಾಮದಲಿ ನಿಂ
ದಾತ ಸಹದೇವಾಂಕನನಿಬರಿ
ಗೀತ ಹಿರಿಯನು ಧರ್ಮನಂದನನೆಂದು ತೋರಿಸಿದ ||೧೩ ||
ಪದವಿಭಾಗ-ಅರ್ಥ: ತಾತ ಬಿನ್ನಹ (ಅರಿಕೆಮಾಡು) ನಿನ್ನೆ ವೈರಿವ್ರಾತವನು ಗೆಲಿದಾತನು+ ಈ ತೋರ್ಪಾತನು,+ ಈತನ ಮುಂದೆ ಮೆರೆವವ ಕೀಚಕಾಂತಕನು, ಈತ ನಕುಲನು, ವಾಮದಲಿ ನಿಂದಾತ ಸಹದೇವಾಂಕನು (ಸಹದೇವ+ ಅಂಕನು- ಹೆಸರಿನವನು; ಅಂಕಿತ -ಹೆಸರು)+ ಇನಿಬರಿಗೆ+ ಈತ ಹಿರಿಯನು ಧರ್ಮನಂದನನು+ ಎಂದು ತೋರಿಸಿದ.
ಅರ್ಥ: ಉತ್ತರನು ಹೇಳಿದ, 'ತಂದೆಯೇ ನಾನು ನಿಮ್ಮಲ್ಲಿ ಸತ್ಯವನ್ನು ಅರಿಕೆಮಾಡುವೆನು, ಕೇಳಿ, ನಿನ್ನೆ ವೈರಿಗಳ ಸಮೂಹವನ್ನು ಗೆದ್ದಾತನು ಈ ತೋರುವ (ಆರ್ಜುನ), ಈತನ ಮುಂದೆ ಶೋಭಿಸುವವ ಭೀಮ- ಕೀಚಕಾಂತಕನು, ಈತ ನಕುಲನು, ಎಡದಲ್ಲಿ ನಿಂತಿರುವವನು ಸಹದೇವನೆಂಬುವವನು; ಇವರೆಲ್ಲರಿಗೆ ಈತ ಹಿರಿಯನು ಧರ್ಮನಂದನನು,' ಎಂದು ತೋರಿಸಿದನು.
ರಮಣಿಯೈವರಿಗೀಕೆ ಕೆಲದಲಿ
ಕಮಲಮುಖಿಯನು ನೋಡು ತಾವಿವ
ರಮಳ ಗುಣ ಗಂಭೀರ ರಾಯರು ಪಾಂಡು ನಂದನರು |
ನಮಗೆ ಭಾರಿಯ ಭಾಗ್ಯಲಕ್ಷ್ಮಿಯ
ಮಮತೆಯಾಯ್ತಿನ್ನೇನು ನೃಪಪದ
ಕಮಲದಲಿ ಬೀಳುವೆವು ನಡೆ ನಡೆ ಧನ್ಯರಹೆವೆಂದ || ೧೪ ||
ಪದವಿಭಾಗ-ಅರ್ಥ: ರಮಣಿಯು (ಪತ್ನಿಯು)+ ಐವರಿಗೆ+ ಈಕೆ ಕೆಲದಲಿ ಕಮಲಮುಖಿಯನು ನೋಡು, ತಾವು+ ಇವರು+ ಅಮಳ(ಅಮಲ- ಪರಿಶುದ್ಧ) ಗುಣ ಗಂಭೀರ ರಾಯರು ಪಾಂಡು ನಂದನರು; ನಮಗೆ ಭಾರಿಯ ಭಾಗ್ಯಲಕ್ಷ್ಮಿಯ ಮಮತೆಯಾಯ್ತು+ ಇನ್ನೇನು ನೃಪ+ಪದಕಮಲದಲಿ ಬೀಳುವೆವು ನಡೆ ನಡೆ ಧನ್ಯರು+ ಅಹೆವು+ ಎಂದ
ಅರ್ಥ: ಉತ್ತರನು ದ್ರೌಪದಿಯನ್ನು ತೋರಿಸಿ,'ಪಕ್ಕದಲ್ಲಿರುವ ಕಮಲಮುಖಿಯನ್ನು ನೋಡು, ಈಕೆ ಈ ಐವರಿಗೆ ಪತ್ನಿಯು; ಇವರು (ತಾವು) ಪರಿಶುದ್ಧ ಗುಣದ ಗಂಭೀರ ರಾಜಕುಮಾರರು- ಪಾಂಡುವಿನ ಮಕ್ಕಳು. ನಮಗೆ ದೊಡ್ಡ ಭಾಗ್ಯಲಕ್ಷ್ಮಿಯ ಪ್ರೀತಿಯು ದೊರಕಿತು. ಇನ್ನೇನು ನಾವು ಧರ್ಮರಾಜನ ಪಾದಕಮಲಕ್ಕೆ ನಮಿಸೋಣ, ನಡೆ ನಡೆ ನಮಸ್ಕರಿಸಿ ನಾವುಧನ್ಯರಾಗುವೆವು,' ಎಂದ.
ಅರ್ಥ:ಆಗ ಒಬ್ನೊರನ್ನೇ ತೋರಿಸುತ್ತಾ ವಿರಾಟನು ಅಚ್ಚರಿಯಿಂದ ಹೇಳಿದ, ಹಾಗಿದ್ದರೆ ಈತನೇ ಧರ್ಮಜನು! ದಿಟ, ಈತನು ಪವನಜ ಭೀಮನು ನಿಶ್ಚಯವು, ಈತನೇ ಫಲ್ಗುಣನು. ಇವರು ಮಾದ್ರೀ ಮಕ್ಕಳೇ ಸರಿ!, ಈ ವನಿತೆಯು ದ್ರುಪದನ ಮಗಳೇ ಅಲ್ಲವೇ! ಅಚ್ಚರಿಯಲ್ಲವೇ! ಈ ಭೂಮಿಯ ಮಾನವರಲ್ಲಿ ಪ್ರಸಿದ್ಧರು. ಎಲ್ಲಿಂದೆಲ್ಲಿ- ಇಲ್ಲಿ ಬಂದು ಇದ್ದಕ್ಕಿಂದ್ದಂತೆ ಒಡಮೂಡಿದರು, ಪ್ರತ್ಯಕ್ಷರಾದರು! ಎನ್ನುತ್ತಾ ವಿರಾಟ ಬೆರಗಾದನು.
ವರುಷವೊಂದಜ್ಞಾತ ವಾಸವ
ನಿರದೆ ನೂಕಿದರಿಲ್ಲಿ ಬಳಕೆಯ
ಹೊರೆಯ ಹೆಸರವು ಬೇರೆ ನಡವಳಿಯಂಗವದು ಬೇರೆ |
ಮರುಳನಂತಿರೆ ಜಗಕೆ ತೋರನೆ
ಪರಮ ತತ್ವಜ್ಞಾನಿ ನಮ್ಮೀ
ಯರಸುತನ ಫಲವಾಯ್ತು ನಡೆಯೆಂದನು ಕುಮಾರಕನು || ೧೬ ||
ಪದವಿಭಾಗ-ಅರ್ಥ: ವರುಷ+ ಒಂದು+ ಅಜ್ಞಾತ ವಾಸವನು+ಇರದೆ ನೂಕಿದರು+ ಇಲ್ಲಿ ಬಳಕೆಯ ಹೊರೆಯ ಹೆಸರವು ಬೇರೆ ನಡವಳಿಯ ಅಂಗವದು ಬೇರೆ ಮರುಳನಂತಿರೆ ಜಗಕೆ ತೋರನೆ ಪರಮ ತತ್ವಜ್ಞಾನಿ ನಮ್ಮ+ ಈ+ ಅರಸುತನ ಫಲವಾಯ್ತು ನಡೆಯೆಂದನು ಕುಮಾರಕನು.
ಅರ್ಥ:ಆಗ ಉತ್ತರ ಕುಮಾರನು,'ಒಂದು ವರುಷ ಅಜ್ಞಾತ ವಾಸವನ್ನು ಸತತವಾಗಿ ಇಲ್ಲಿ ಕಳೆದರು. ಬಳಸಿದ ಮತ್ತು ಹೊತ್ತ ಹೆಸರವು ಬೇರೆ; ಅದಕ್ಕೆ ಉದ್ಯೋಗಕ್ಕೆ ತಕ್ಕಂತೆ ನಡವಳಿಯ ಕ್ರಮ ಬೇರೆ ಬೇರೆ; ಮರುಳನಂತಿದ್ದರೂ ಜಗಕ್ಕೆ ತಿಳಿಯದೆ, ಈ ಪರಮ ತತ್ವಜ್ಞಾನಿ ನಮ್ಮ ಸೇವೆಯಲ್ಲಿ ಇದ್ದನು. ಹೀಗೆ ಈ ನಮ್ಮ ಅರಸುತನ ಪುಣ್ಯಫಲ ಕೊಡುವಂತಾಯಿತು. ನಡೆ ಅವರನ್ನು ಸ್ವಾಗತಿಸಿ ನಮಸ್ಕರಿಸೋಣ,' ಎಂದನು (ಕುಮಾರನು).
ಅರ್ಥ:ವಿರಾಟನು ಧರ್ಮರಾಯನನ್ನು ಆದರದಿಂದ ಸ್ದಾಗತಿಸಿ ದರ್ಶನ ಮಾಡಲು, ಮಣಿ ರತ್ನ ಚಿನ್ನದ ವಸ್ತುಗಳನ್ನು ತರಿಸಿ ಸಂತೋಷದಿಂದ ಮುಳುಗಿ ತನ್ನ ಪರಿಕರಗಳ ಸಹಿತ ನೆಲಕ್ಕೆ ಬಾಗಿ ನಮಿಸಿದನು. ತರಿಸಿದ ಕಾಣಿಕೆಗಳನ್ನು ಅವನಿಗೆ ಒಪ್ಪಿಸಿದನು. 'ರಾಜನೇ ಕಾಪಾಡು, ಭುವನೇಶ್ವರ ಪರಿತ್ರಾಯಸ್ವ, ಕರುಣಿಸು ಕರುಣಿಸು,' ಎಂದು ಮತ್ಸ್ಯರಾಜನು ಅವರ ಪಾದಗಳನ್ನು ಹಿಡಿದನು.
ಬಗೆದೆನಪರಾಧವನು ಕರುಣಾ
ಳುಗಳ ಬಲ್ಲಹ ನೀನು ನಿನ್ನಂ
ಘ್ರಿಗಳಿಗೀ ತಲೆ ಬಂಟ ನೀನಿದ ಕಾಯಬೇಕೆನುತ |
ಮಿಗೆ ಭಕುತಿ ಭಾವದಲಿ ನಿಜ ಮಂ
ತ್ರಿಗಳು ಮಕ್ಕಳು ಸಹಿತ ಮನ ನಂ
ಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರಿದಿರಿನಲಿ ೧೮
ಪದವಿಭಾಗ-ಅರ್ಥ:ಬಗೆದೆನು+ ಅಪರಾಧವನು ಕರುಣಾಳುಗಳ ಬಲ್ಲಹ (ಬಲ್ಲಹ- ಒಡೆಯ) ನೀನು, ನಿನ್ನ ಆಂಘ್ರಿಗಳಿಗೆ+ ಈ ತಲೆ ಬಂಟ (ಸೇವಕ), ನೀನು+ ಇದ ಕಾಯಬೇಕು+ ಎನುತ ಮಿಗೆ(ಬಹಳ) ಭಕುತಿ ಭಾವದಲಿ ನಿಜ (ತನ್ನ) ಮಂತ್ರಿಗಳು ಮಕ್ಕಳು ಸಹಿತ ಮನ ನಂಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರ+ ಇದಿರಿನಲಿ.
ಅರ್ಥ:ಧರ್ಮಜನ ಹಣೆಯ ಗಾಯ ಎದ್ದು ಕಾಣುತ್ತಿರಲು, ವಿರಾಟರಾಜನಿಗೆ ತಾನು ಧರ್ಮಜನ ತಲೆಗೆ ಹೊಡೆದುದನ್ನೂ ಅವನ ಶಾಂತವಾಗಿ ಸಹಿಸಿದುದನ್ನೂ, ನೆನೆದನು. ಅದಕ್ಕ ಅವನು ಧರ್ಮರಾಯನನ್ನು ಕುರಿತು, 'ನಾನು ನಿಮಗೆ ಅಪರಾಧವನ್ನು ಬಗೆದೆನು; ನೀನು ಕರುಣಾಳುಗಳ ಒಡೆಯ; ನಿನ್ನ ಪಾದಗಳಿಗೆ ಈ ತಲೆ ಬಂಟ,' ನೀನು ಈ ತಲೆಯನ್ನು ಕಾಯಬೇಕು,' ಎನ್ನುತ್ತಾ ಬಹಳ ಭಕ್ತಿಭಾವದಿಧ ತನ್ನ ಮಂತ್ರಿಗಳು ಮಕ್ಕಳು ಸಹಿತ ಪಾಂಡವರಿಗೆ ಮನಸ್ಸಿಗೆ ಒಪ್ಪುವಂತೆ ಮತ್ಸ್ಯರಾಜನು ನಂಬುಗೆಯನ್ನು ತೋರಿಸಿ ಪಾಂಡುರಾಜಕುಮಾರರ ಇದಿರಿನಲಿ ಶೋಭಿಸಿದನು.
ಆ ಸುದೇಷ್ಣೆ ಕುಮಾರಿಯೊಡನೆ ವಿ
ಳಾಸಿನೀಜನ ಸಹಿತ ರಾಣೀ
ವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು |
ಆ ಸಕಲ ಪರಿವಾರ ಪುರಜನ
ದೇಶಜನ ಕಾಣಿಕೆಯನಿತ್ತು ಮ
ಹೀಶನಿಗೆ ಮೈಯಿಕ್ಕಿ ಕಂಡುದು ಬಹಳ ಹರುಷದಲಿ || ೧೯ ||
ಪದವಿಭಾಗ-ಅರ್ಥ: ಆ ಸುದೇಷ್ಣೆ ಕುಮಾರಿಯೊಡನೆ ವಿಳಾಸಿನೀಜನ ಸಹಿತ ರಾಣೀ ವಾಸದ,+ ಅಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು (ನಮಿಸಿ) ಆ ಸಕಲ ಪರಿವಾರ ಪುರಜನ ದೇಶಜನ ಕಾಣಿಕೆಯನ+ ಇತ್ತು ಮಹೀಶನಿಗೆ ಮೈಯಿಕ್ಕಿ(ನೆಲಕ್ಕೆಬಿದ್ದು ನಮಿಸಿ- ಸಾಷ್ಟಂಗ ನಮಸ್ಕಾರ) ಕಂಡುದು ಬಹಳ ಹರುಷದಲಿ.
ಅರ್ಥ: ವಿರಾಟನ ಪತ್ನಿ, ಆ ಸುದೇಷ್ಣೆ ಕುಮಾರಿ ಉತ್ತರೆಯೊಡನೆ ರಾಣೀ ವಾಸದ ವಿಳಾಸಿನೀ(ಸೇವಕಿಯರ) ಜನರ ಸಹಿತ ಅಲ್ಲಿಗೆ ಬಂದು, ಕಾಣಿಕೆ ಕೊಟ್ಟು ನಮಿಸಿದರು. ಆ ಸಕಲ ಪರಿವಾರ ಪುರಜನ ದೇಶಜನರು ಕಾಣಿಕೆಯನ್ನು ಕೊಟ್ಟು ಧರ್ಮಜನಿಗೆ ಮೈಯಿಕ್ಕಿ ನಮಸ್ಕರಿಸಿ, ಪಾಂಡವರನ್ನು ಬಹಳ ಹರ್ಷದಿಂದ ಕಂಡರು.
ಅರ್ಥ: ಧರ್ಮಜನು ಮುಗುಳು ನಗೆಯನ್ನು ಸೂಸುತ್ತಾ ಭೀಮ ಮತ್ತು ಪಾರ್ಥರ ಮುಖವನ್ನು ನೋಡಿದನು. ಅವನ ಸೂಚನೆಯನ್ನು ತಿಳಿದು ಅವರು ವಿರಾಟನ ತಪ್ಪನ್ನು ಮನ್ನಿಸಲು ಒಪ್ಪಿ, ತಮ್ಮಂದಿರು ಮಹಿಪತಿ ಧರ್ಮಜನಿಗೆ ಕೈಮುಗಿದು ತಲೆಬಗ್ಗಿಸಿದರು. ನಂತರ ಧರ್ಮಜನು ಬಂದ ಕಾಣಿಕೆಗಳನ್ನು ತೆಗೆಸಿ ಭಂಡಾರಕ್ಕೆ ಕಳಿಸಿದರು. ಆ ಮಂತ್ರಿಗಳನ್ನು, ಆ ಪರಿವಾರವನ್ನು ಕಣ್ಣುಗಳ ಕರುಣ ರಸದ ನೋಟದಲ್ಲಿ ಅವರೆಲ್ಲರನ್ನೂ ಕಾಪಾಡಿ ಮನ್ನಿಸಿದನು.
ಶಿರವನೆತ್ತಿ ವಿರಾಟ ಭೂಪನ
ಕರೆದು ಹತ್ತಿರ ಪೀಠದಲಿ ಕು
ಳ್ಳಿರಿಸಲೊಡೆ ಮುರಿಚಿದನು ಕೆಲದಲಿ ಗದ್ದುಗೆಯ ಸರಿದು |
ಪರಮ ಸುಕೃತವಲಾ ಧರಾಧೀ
ಶ್ವರನ ದರುಶನವಾಯ್ತು ಧನ್ಯರು
ಧರೆಯೊಳೆಮಗಿನ್ನಾರು ಸರಿಯೆಂದನು ವಿರಾಟ ನೃಪ || ೨೧ ||
ಪದವಿಭಾಗ-ಅರ್ಥ: ಶಿರವನು+ ಎತ್ತಿ ವಿರಾಟ ಭೂಪನ ಕರೆದು ಹತ್ತಿರ ಪೀಠದಲಿ ಕುಳ್ಳಿರಿಸಲು+ ಒಡೆ ಮುರಿಚಿದನು ಕೆಲದಲಿ ಗದ್ದುಗೆಯ ಸರಿದು, ಪರಮ ಸುಕೃತವಲಾ ಧರಾಧೀಶ್ವರನ ದರುಶನವಾಯ್ತು ಧನ್ಯರು ಧರೆಯೊಳು+ ಎಮಗಿನ್ನು+ ಆರು ಸರಿಯೆಂದನು ವಿರಾಟ ನೃಪ.
ಅರ್ಥ: ಧರ್ಮಜನು ನೆಲಬಗ್ಗಿ ನಮಿಸಿದ ವಿರಾಟಭೂಪ ತಲೆಯನ್ನು ಎತ್ತಿ, ಕರೆದು ಅವನನ್ನು ತನ್ನ ಹತ್ತಿರ ಪೀಠದಲ್ಲಿ ಕುಳ್ಳಿರಿಸಿಕೊಳ್ಳಲು ಅವನು ಸಂಕೋಚದಿಂದ ಮೈಮುರುಟಿಸಿಕೊಂಡನು ಮತ್ತು ಪೀಠದಲ್ಲಿ ಪಕ್ಕಕ್ಕೆ ಸರಿದು ಕುಳಿತನು. ಅವನು ಇದು ಪರಮ ಸುಕೃತವಲ್ಲವೇ, ಧರಾಧೀಶ್ವರನ (ಚಕ್ರವರ್ತಿಯ) ದರ್ಶನವಾಯ್ತು, ವಿರಾಟ ನೃಪನು ನಾವು ಅವನ ಪಕ್ಕ ಕುಳಿತು ಈ ಭೂಮಿಯಲ್ಲಿ ಧನ್ಯರು. ನಮಗಿನ್ನು ಯಾರು ತಾನೆ ಸರಿಸಮಾನರು ಎಂದನು .
ದೇಶ ನಿಮ್ಮದು ನಗರ ಹೆಚ್ಚಿದ
ಕೋಶ ನಿಮ್ಮದು ನನ್ನ ಜೀವ ವಿ
ಳಾಸ ನಿಮ್ಮದು ಸಲಹಬೇಹುದು ಬಿನ್ನಹದ ಹದನ |
ಈ ಸಮಂಜಸ ದಿವಸದಲಿ ಸಿಂ
ಹಾಸನದಲಭಿಷೇಕವನು ಭೂ
ಮೀಶ ವಿಸ್ತರಿಸುವೆನು ಚಿತ್ತೈಸೆಂದನಾ ಭೂಪ || ೨೨ ||
ಪದವಿಭಾಗ-ಅರ್ಥ: ದೇಶ ನಿಮ್ಮದು, ನಗರ ಹೆಚ್ಚಿದ ಕೋಶ ನಿಮ್ಮದು, ನನ್ನ ಜೀವ ವಿಳಾಸ ನಿಮ್ಮದು, ಸಲಹಬೇಹುದು ಬಿನ್ನಹದ ಹದನ, ಈ ಸಮಂಜಸ ದಿವಸದಲಿ ಸಿಂಹಾಸನದಲಿ+ ಅಭಿಷೇಕವನು ಭೂಮೀಶ ವಿಸ್ತರಿಸುವೆನು ಚಿತ್ತೈಸು+ ಎಂದನಾ ಭೂಪ
ಅರ್ಥ: ಧರ್ಮರಾಯನಿಗೆ ವಿನಯದಿಂದ ' ಈ ದೇಶ ನಿಮ್ಮದು, ನಗರದಲ್ಲಿ ಹೆಚ್ಚಿದ ಕೋಶ- ಧನ ನಿಮ್ಮದು, ನನ್ನ ಜೀವವೂ ವಿಳಾಸ- ಇರುವಿಕೆಯೂ ನಿಮ್ಮದು, ನನ್ನನ್ನು ರಕ್ಷಿಸಿ ಸಲಹಬೇಕು,'ಎಂದನು. ಮತ್ತೆ ವಿರಾಟನು ವಿನಯದಿಂದ, ರಾಜ್ಯವನ್ನು ಕಳೆದುಕೊಂಡ ಧರ್ಮಜನಿಗೆ, 'ಒಂದು ವಿಚಾರವನ್ನು ವಿಜ್ಞಾಪನೆ ಮಾಡುತ್ತೇನೆ, ಈ ಸಮಂಜಸವಾದ/ ಯೋಗ್ಯವಾದ ದಿವಸದಲ್ಲಿ ನಿಮಗೆ ಸಿಂಹಾಸನದಲಿ ಭೂಮೀಶನಾಗಿ ಅಭಿಷೇಕವನ್ನು ಮಾಡುವೆನು, ಕೇಳು, ಅನುಮತಿಸು' ಎಂದನು ಆ ರಾಜನು.
ಎನಲು ನಗುತೆಂದನು ಮಹೀಪತಿ
ವಿನಯ ಮಧುರ ರಸಾಭಿಷೇಕವ
ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಕವದು |
ಜನವಿದೆಮ್ಮದು ನೀನು ನಮ್ಮಾ
ತನು ಧರಿತ್ರಿಯಿದೆಮ್ಮದೆಂಬೀ
ನೆನಹು ತಾನುಪಚಾರ ನಮಗೇಕೆಂದನಾ ಭೂಪ || ೨೩ ||
ಪದವಿಭಾಗ-ಅರ್ಥ: ಎನಲು ನಗುತ+ ಎಂದನು ಮಹೀಪತಿ ವಿನಯ ಮಧುರ ರಸಾಭಿಷೇಕವ ನೆನಗೆ ಮಾಡಿದೆ ಸಾಕು ಪುನರುಕ್ತ+ ಅಭಿಷೇಕವು+ ಅದು-ಆ ಜನವು+ ಇದು+ ಎಮ್ಮದು ನೀನು ನಮ್ಮಾತನು ಧರಿತ್ರಿಯಿದು+ ಎಮ್ಮದೆಂಬ+ ಈ ನೆನಹು ತಾನು+ ಉಪಚಾರ ನಮಗೇಕೆ+ ಎಂದನು+ ಆ ಭೂಪ.
ಅರ್ಥ: ವಿರಾಟನು ಹಾಗೆ ಹೇಳಲು ಧರ್ಮಜನು,'ನಗುತ್ತಾ ಎಂದನು ರಾಜನೇ ನಿನ್ನ ವಿನಯ ಮಧುರ ರಸದ ಅಭಿಷೇಕವನ್ನು ನೆನಗೆ ಮಾಡಿದೆ. ಸಾಕು, ಮತ್ತೆ ಪುನಃ ಆ ಅಭಿಷೇಕವು ಏಕೆ. ಈ ರಾಜ್ಯದ ಜನವು, ಇದು ಭೂಮಿ ನಮ್ಮದು, ನೀನು ನಮ್ಮಾತನು. ನೀನು ಈ ಧರಿತ್ರಿಯು/ ಭುಮಿಯು ಮಮ್ಮದು ಎಂಬ ಭಾವನೆ ಸಾಕು. ಈ ನೆನಪು ನಿನಗಿದ್ದರೆ ಉಪಚಾರ ತಾನೇ ನಮಗೇಕೆ, ಎಂದನು, ಆ ಧರ್ಮರಾಜ.
ನೊಂದವರು ಭೀಮಾರ್ಜುನರು ಹಗೆ
ಯಿಂದ ಹಳುವವ ಹೊಕ್ಕು ಮನಸಿನ
ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ |
ಕೊಂದು ಕಳದಲಿ ಮತ್ತೆ ಗಜ ಪುರಿ
ಗೆಂದು ಗಮಿಸುವೆವೆಂಬ ತವಕಿಗ
ರಿಂದು ತಾನೇ ಬಲ್ಲರೆಂದನು ಧರ್ಮನಂದನನು || ೨೪ ||
ಪದವಿಭಾಗ-ಅರ್ಥ:ನೊಂದವರು ಭೀಮಾರ್ಜುನರು ಹಗೆಯಿಂದ(ದ್ವೇಷ, ಸೇಡು ಹಳುವವ (ಕಾಡನ್ನು) ಹೊಕ್ಕು ಮನಸಿನ ಕಂದು ಕಸರಿಕೆ (ಬೇಸರ, ಸಿಟ್ಟು) ಹೋಗದು; ಆ ದುರ್ಯೋಧನಾದಿಗಳ ಕೊಂದು ಕಳದಲಿ (ಯುದ್ಧದಲ್ಲಿ) ಮತ್ತೆ ಗಜಪುರಿಗೆ+ ಎಂದು ಗಮಿಸುವೆವೆಂಬ (ಹೋಗುವೆವು) ತವಕಿಗರು (ಅವಸರದ ಮನಸ್ಸಿನವರು)+ ಇಂದು, ತಾನೇ ಬಲ್ಲರು, ಎಂದನು ಧರ್ಮನಂದನನು.
ಅರ್ಥ:ಆಗ ಧರ್ಮಜನು,'ನನ್ನಿಂದಾಗಿ ಭೀಮಾರ್ಜುನರು ನೊಂದಿರುವರು. ಆ ದ್ವೇಷ, ಸೇಡು ಕಾಡನ್ನು ಹೊಕ್ಕ ಮನಸ್ಸಿನ ಬೇಸರ ಕಸರಿಕೆ ಹೋಗದು; ಆ ದುರ್ಯೋಧನಾದಿಗಳ್ನು ಯುದ್ಧದಲ್ಲಿ ಕೊಂದು, ಮತ್ತೆ ಹಸ್ತಿನಾಪುರಕ್ಕೆ ಎಂದು ಹೋಗುವೆವೋ ಎಂಬ ಆತುರದಲ್ಲಿ ಇಂದು ಇದ್ದೇವೆ; ಇದನ್ನು ತಾನೇ ನೀವೂ ತಿಳಿದವರು, ಎಂದನು ಧರ್ಮನಂದನನು. ಹೀಗೆತನ್ನ ಮುಂದಿನ ಕಾರ್ಯಭಾರ ಯೋಜನೆಗೆ ಪೀಠಿಕೆ ಹಾಕಿದನು.
ಪದವಿಭಾಗ-ಅರ್ಥ: ಎಂದನು+ ಉತ್ತರನು (ಉತ್ತರಕೊಡುವವ ವಿರಾಟನು, ಅದಕ್ಕೆ ಉತ್ತರವಾಗಿ)+ ಅರಸನ+ ಅಂಘ್ರಿಯೊಳು+ ಅಂದು ಮಕುಟವ (ಕಿರೀಟ- ತಲೆ) ಚಾಚಿ ಬಿನ್ನಹವು+ ಇಂದು ನೇಮವ ಕೊಡಿ ಕುಮಾರಿಯನು+ ಈವೆನು (ಕೊಡುವೆನು) ಅರ್ಜುನಗೆ ಎಂದಡೆ+ ಏಳು+ ಏಳು+ ಎಂದು ನಸು ನಗೆಯಿಂದ ಪಾರ್ಥನ ನೋಡೆ ಕೈ ಮುಗಿದು+ ಎಂದನು+ ಆತನು ಮನದ ನಿಶ್ಚಯವನು ಯುಧಿಷ್ಠಿರಗೆ.
ಅರ್ಥ: ಆಗ ಉತ್ತರನು ಲೌಕಿಕ ದೃಷ್ಠಿಯನ್ನು ಹಿಡಿದು, ಅರ್ಜುನನೊಡನೆ ಒಂದು ವರ್ಷ (ಕೆಲವೊಮ್ಮೆ ಏಕಾಂತದಲ್ಲಿ) ನೃತ್ಯ ಕಲಿತ ಮಗಳಿಗೆ ಅಪವಾದ ಬರಬಾರದೆಂದು ಚಿಂತಿಸಿ, ವಿರಾಟನು ಧರ್ಮಜನ ಪಾದಗಳನ್ನು ಹಿಡಿದುಕೊಂಡು, ತನ್ನತಲೆಯನ್ನು ಅವನ ಪಾದದಮೇಲೆ ಇಟ್ಟು ಹೇಳಿದನು, ತನ್ನದು ಒಂದು ಬಿನ್ನಹ- ಕೋರಿಕೆ,ಈ ದಿನವೇ ಅಪ್ಪಣೆ ಕೊಡಿ, ತನ್ನ ಕುಮಾರಿ ಉತ್ತರೆಯನ್ನು ಅರ್ಜುನನಿಗೆ ಮದುವೆಮಾಡಿ ಕೊಡುವೆನು ಎಂದನು. ಆಗ ಧರ್ಮಜನು ಏಳು ಏಳು ಎಂದು ವಿರಾಟನಿಗೆ ಹೇಳಿ, ನಸು ನಗೆಯಿಂದ ಪಾರ್ಥನ ಮುಖವನ್ನು, ಅವನ ಅಭಿಪ್ರಾಯ ತಿಳಿಯಲು ನೋಡಿದನು. ಆಗ ಪಾರ್ಥನು ಧರ್ಮಜನಿಗೆ ಕೈ ಮುಗಿದು ತನ್ನ ಮನಸ್ಸಿನ ನಿಶ್ಚಯವನ್ನು ಯುಧಿಷ್ಠಿರನಿಗೆ ಹೇಳಿದನು.
ವರುಷವಿವಳಲಿ ನಾಟ್ಯ ವಿದ್ಯೆಯ
ಪರುಟವಿಸಿದೆನು ತಂದೆಯಂತೀ
ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ
ಗುರುತನದ ಗರುವಾಯಿಯೆತ್ತಲು
ಅರಸಿಯೆಂಬುದಿದಾವ ಮತವೀ
ವರ ಕುಮಾರಿಯನೀವಡಭಿಮನ್ಯುವಿಗೆ ಕೊಡಲೆಂದ ೨೬
ಪದವಿಭಾಗ-ಅರ್ಥ:ವರುಷವು+ ಇವಳಲಿ ನಾಟ್ಯ ವಿದ್ಯೆಯ ಪರುಟವಿಸಿದೆನು(ಒಡನಾಡಿ) ತಂದೆಯಂತೆ; ಈ ತರುಣಿ ಭಜಿಸಿದಳು ಆ ಪ್ರಕಾರ ರಹಸ್ಯ ದೇಶದಲಿ; ಗುರುತನದ ಗರುವಾಯಿ + ಯೆತ್ತಲು ಅರಸಿಯೆಂಬುದು+ ಇದಾವ ಮತವು+ ಈ ವರ ಕುಮಾರಿಯನು ಈವಡೆ ಭಿಮನ್ಯುವಿಗೆ ಕೊಡಲಿ+ ಎಂದ.
ಪರುಠವಿಸು= ಪುರಸ್ಕರಿಸು. ನೆರವೇರಿಸು. ಉಂಟುಮಾಡು, ಅಭ್ಯಾಸ ಮಾಡಿಸು.
ಟಿಪ್ಪಣಿ:(ಉತ್ತರಕುಮಾರ ಮತ್ತು ಅಭಿಮನ್ಯು ಇವರಿಗೆ ಹದಿನಾರು ವರುಷ ಪ್ರಾಯ- ಉತ್ತರೆಗೆ ೧೪- ೧೫ರ ಪ್ರಾಯ; ಅರ್ಜುನನಿಗೆ ಕುಮಾರವ್ಯಾಸನ ಲೆಕ್ಕದಲ್ಲಿ ಐವತ್ತೆಂಟು- ಐವತ್ತೊಂಭತ್ತು ವರ್ಷ ಪ್ರಾಯ; ಬೇರೆಕಡೆ ಅವನು ಭೀಮನಿಗೆ ೬೦ವರ್ಷ ಪ್ರಾಯ ಎಂದಿದ್ದಾನೆ)
ಅರ್ಥ: ಅರ್ಜುನನು ತಾನು ಒಂದು ವರುಷಕಾಲ ಇವಳಿಗೆ ನಾಟ್ಯ ವಿದ್ಯೆಯನ್ನು ತಂದೆಯಂತೆ ಒಡನಾಡಿ ಅಭ್ಯಾಸ ಮಾಡಿಸಿದ್ದಾಗಿ ಹೇಳಿದನು; 'ಈ ತರುಣಿ ಉತ್ತರೆಯು ಆ ಪ್ರಕಾರ ರಹಸ್ಯ ಪ್ರದೇಶದಲ್ಲಿ ಸಹ ಭಕ್ತಿಯಿಂದ ನನ್ನನ್ನು ಗೌರವಿಸಿದಳು; ಗುರುತನದ ಗೌರವನೆಡತೆ ಎಲ್ಲಿ? ಅವಳನ್ನೇ ಪತ್ನಿ - ಅರಸಿಯೆಂಬುದು ಇದಾವ ಮತವು, ಹೊಂದದ ವಿಚಾರವು,' ಎಂದನು ಪಾರ್ಥ. ಸಂಶಯ ನಿವಾರಣೆಗಾಗಿ, ಅವನು, 'ಈ ಶ್ರೇಷ್ಠ ಉತ್ತರ ಕುಮಾರಿಯನ್ನು ನಮಗೇ ಕೊಡಬೇಕೆಂದಿದ್ದರೆ ನನ್ನ ಮಗ ಅಭಿಮನ್ಯುವಿಗೆ ಕೊಡಲಿ,' ಎಂದನು.
ಅರ್ಥ: ಅದಕ್ಕೆ ವಿರಾಟನು,'ನಮಗೆ ನೀವೇನು, ನಿಮ್ಮ ಮಗನೇನು? ಉತ್ಸವದಿಂದ ವಿಝ್ರಂಭಣೆಯಿಂದ ಮಗಳ ವಿವಾಹವನ್ನು ಆಗುವಂತೆ ಮಾಡದೆ ಇರುವೆನೆ?,' ಎಂದನು ವಿರಾಟ. ಅದಕ್ಕೆ ಅವನಿಪತಿ ಧರ್ಮಜನು ವಿರಾಟನನ್ನು ಮನ್ನಿಸಿದನು, ಮತ್ತು ಮದುವೆಗೆ ನಗುತ್ತಾ ಒಪ್ಪಿ ವೀಳೆಯವನ್ನು ಸಹ ಕೊಟ್ಟನು. ಅದರೆ ಒಂದು ತನ್ನ ನಿಯಮವನ್ನು ಹೇಳಿದನು- ಇದಕ್ಕೆ ಕೃಷ್ಣನ ಒಪ್ಪಿಗೆ ಬೇಕು. ನಮಗೆ ಕೃಷ್ಣನು ಪರಮಸ್ವಾಮಿಯು, ನಮ್ಮ ಉತ್ಸವದ (ಸಂತೋಷದ) ನೆಲೆಯು. ನಮ್ಮೈವರ ಅರಸು ಯಾದವ ಶಿರೋಮಣಿ ಕೃಷ್ಣನು. ಅವನ ಅಭಿಮತವೇ ನಮ್ಮ ಮತವು,' ಎಂದನು.
ಅರ್ಥ: ಧರ್ಮಜನು,'ಭೂಮಿಯ ಒಡೆತನವು ನಮಗಾದರೆ, ಕೃಷ್ಣನು ನಮಗೆ ಕಟ್ಟಾ ಒಡೆಯನು. ಕೃಷ್ಣನು ಒಪ್ಪಿದರೆ ವಿವಾಹ ನಿರ್ವಿಘ್ನವಾಗಿ ನೆಡೆದಹಾಗೆಯೇ; ಚಿಂತೆ ಬೇಡ,' ಎನ್ನಲು, ವಿರಾಟನು,'ಕೃಷ್ನನು ಒಪ್ಪಲಿ ಬಿಡಲಿ, ಗುರುವಿನಂತೆ ನೀವು ಕೃಷ್ಣನನ್ನು ತೋರಿಸುವಿರಾದರೆ, ನಾನು(ತಾನು) ಕೃತಾರ್ಥನು,' ಎನ್ನುತ್ತಾ ಮತ್ಸ್ಯನೃಪನು ಹಿಗ್ಗಿದನು.
ಪರಿಪರಿಯ ಪಾವುಡವ ಕಟ್ಟಿಸಿ
ಹರುಷದಲಿ ಬಿನ್ನಹದ ವೋಲೆಯ
ಬರೆಸಿದನು ವೇಗಾಯ್ಲ ದೂತರನಟ್ಟಿದನು ಭೂಪ |
ಚರರು ಪಯಣದ ಮೇಲೆ ಪಯಣದ
ಭರದಿ ಬಂದರು ಕೃಷ್ಣರಾಯನ
ಪುರಕೆ ಪರಿತೋಷದಲಿ ಹೊಕ್ಕರು ರಾಜ ಮಂದಿರವ || ೨೯ ||
ಪದವಿಭಾಗ-ಅರ್ಥ:ಪರಿಪರಿಯ ಪಾವುಡವ ಕಟ್ಟಿಸಿ ಹರುಷದಲಿ ಬಿನ್ನಹದ ವೋಲೆಯ ಬರೆಸಿದನು ವೇಗಾಯ್ಲ ದೂತರನು+ ಅಟ್ಟಿದನು ಭೂಪ (ರಾಜ); ಚರರು ಪಯಣದ ಮೇಲೆ ಪಯಣದ ಭರದಿ ಬಂದರು ಕೃಷ್ಣರಾಯನ ಪುರಕೆ ಪರಿತೋಷದಲಿ ಹೊಕ್ಕರು ರಾಜ ಮಂದಿರವ.
ಪಾವುಡ= ಬಟ್ಟೆ- ಬಣ್ಣದ ಬಟ್ಟೆಗಳ ಬಾವುಟ
ಅರ್ಥ:ವಿರಾಟನು ಹರ್ಷದಿಂದ ನಾನಾ ಬಗೆಯ ಬಾವುಟಗಳನ್ನು ಕಟ್ಟಿಸಿ, ಧರ್ಮಜನ ಮೂಲಕ ಕೃಷ್ಣನಿಗೆ ವಿರಾಟನಗರಕ್ಕೆ ಬರುವಂತೆ ಬಿನ್ನಹ ಮಾಡಿದ ಓಲೆಯನ್ನು ಬರೆಸಿದನು. ರಾಜನು ಅದನ್ನು ಕೊಟ್ಟು ವೇಗದ ಕುದುರೆಸವಾರರಾದ ದೂತರನ್ನು ದ್ವಾರಕೆಗೆ ಅಟ್ಟಿದನು. ದೂತರು ಪಯಣದ ಮೇಲೆ ಪಯಣಮಾಡಿ ಬೇಗನೆ ಕೃಷ್ಣರಾಯನ ಪುರ ದ್ವಾರಕೆಗೆ ಬಂದರು. ಅವರು ಬಹಳ ಸಂತೋಷದಲ್ಲಿ ಕೃಷ್ಣನ ರಾಜ ಮಂದಿರವನ್ನು ಹೊಕ್ಕರು.
ಅರ್ಥ: ವಿರಾಟನ ಚಾರರು ತಮ್ಮ ಬರವನ್ನು ಕೃಷ್ನನಿಗೆ ತಮ್ಮ ಭೇಟಿಗೆ ಕೋರಿಕೆಯನ್ನು ಮಾಡಲು, ಕಾವಲಿನ ಪಡಿಹಾರರು ಕೃಷ್ಣನಿಗೆ ತಿಳಿಸಿದರು, ಆಗ ಕೃಷ್ನನ ಆಣತಿಯಂತೆ ವಿರಠನಗರದ ಚಾರರನನ್ನು ಸಭಾ ಭವನಕ್ಕೆ ಬಿಡಲು ಅವರು ಕೃಷ್ಣನ ಓಲಗವನ್ನು ಬಂದು ಹೊಕ್ಕರು. ಅವನ ದರ್ಶನವನ್ನು ಮಾಡಿ ಕೃಷ್ಣನ ಪಾದಕ್ಕೆಬಿದ್ದರು. ಕೃಷ್ಣದೇವನ ಬಳಿಯಲ್ಲಿ ವಿರಾಟ ಮತ್ತು ಧರ್ಮಜರಿಂದ ತಾವು ತಂದ ಬಿನ್ನವತ್ತಳೆಯನ್ನು ಕೊಟ್ಟರು.
ಅರ್ಥ:ಕೃಷ್ಣನು ಸಂತಸದಿಂದ ನಸುನಗುತ್ತಾ ಅವರನ್ನು ಚೆನ್ನಾಗಿ ಆದರಿಸಿದನು. ಅವನು ಪಾಂಡವರ ಕುಶಲವನ್ನೂ ದ್ರೌಪದಿಯ ಸುಕ್ಷೇಮವನ್ನೂ ಕೇಳಿದನು. ದೂತರು ಎಲ್ಲರೂ ಕುಶಲರು ಎಂದರು, ಆ ಚರರು.'ಒಡೆಯನೇ- ಜೀಯ, ಭಕ್ತರಚಿಂತೆಯ ಭಾರವು ನಿಮ್ಮಲ್ಲಿ ಇರುವಾಗ ಪಾಂಡುನಂದನರು ಕ್ಷೇಮವಾಗಿ ಜೀವಿಸುವುದು ಕಷ್ಟವೇ!' ಎಂದರು.
ಟಿಪ್ಪಣಿ: ಕುಂತಿಯು ಕೃಷ್ಣನ ತಂದೆ ವಸುದೇವನ ಅಕ್ಕ. ಕೃಷ್ಣನಿಗೆ ಸೋದರತ್ತೆ. ದ್ವಾರಾವತಿಯ ಪಕ್ಕದ ರಾಜ್ಯದ ರಾಜ ಕುಂತಿಭೋಜನ ಮನೆಯಲ್ಲಿ ದತ್ತಪುತ್ರಿಯಾಗಿ ಬೆಳೆದವಳು. ಸಂಧಿ ವಿಗ್ರಹಿಯು= ಇಬ್ಬರಲ್ಲಿ ಸಂಧಿಯನ್ನೂ ಮಾಡಬಲ್ಲವ - ಇಬ್ಬರಲ್ಲಿ ವಿರೋಧವನ್ನೂ ಬೆಳಸಬಲ್ಲವ,
ಅರ್ಥ:ಹೀಗೆ ಚಾರರು ಹೇಳಲು, ನಸುನಗೆಯಿಂದ ಕುಂತಿಯ ಮಕ್ಕಳು ಕಳುಹಿಸಿದ ಕಾಣಿಕೆ ಅಷ್ಟನ್ನೂ ತೆಗೆಸಿ ಪಕ್ಕದಲ್ಲಿ ತೆಗೆಸಿ ಇಡಿಸಿದನು. ಸಂಧಿ ವಿಗ್ರಹಿಯೂ, ಅದ ಪರಮಾತ್ಮನು ಧರ್ಮಜನು ಕಳಹಿಸಿದ ಪತ್ರವನ್ನು ನೋಡಲು ಅನುನಯದಿಂದ ಹಿಡಿದುಕೊಂಡು, ಅದರಲ್ಲಿರುವ ಮೊದಲ ಮಾತು- ಬಿನ್ನಹವು ಎನ್ನುವ, ನೇಮವ- ಗೌರವದ ನಿಯಮದ ವಾಕ್ಯಗಳನ್ನು ಸ್ವೀಕರಿಸಿ, ಸುತ್ತಲಿನವರ ಕಳಕಳ ಮಾತಿನ ಸದ್ದು ಅಡಗಲು,ಪತ್ರವನ್ನು ಕೃಷ್ಣನು ವಾಚಿಸಿದನು.
ಅರ್ಥ: (ಪತ್ರ) ಕ್ಷೇಮವು; ರಾಕ್ಷಸರೆಂಬ ಆನೆಯ ತಲೆಗೆ ಅಂಕುಶದಂತೆ ಇರುವವನೇ, ಜೀವನದ ಆಟದಲ್ಲಿ ತೊಡಗಿರುವವನೇ, ಯದುಕುಲ ಸಿಂಹನೇ, ಜನ್ಮಾಂತರದಲ್ಲಿ ಮಾಡಿದ ಪಾಪಗಳನ್ನು ನಾಶಮಾಡಬಲ್ಲವನೇ, ಕೈಯಲ್ಲಿ ಸುದರ್ಶನ ಚಕ್ರವನ್ನು ಧರಿಸಿದವನೇ, ಸೂರ್ಯನ ಉಗ್ರವಾದ ಕಿರಣಗಳನ್ನೂ ಶಾಂತಗೊಳಿಸಬಲ್ಲವನೇ, ಸರ್ವಾಂತರ್ಯಾಮಿಯೇ, ದಯಮಾಡಿ (ನಮ್ಮ) ಕುಂತಿಯ ಮಕ್ಕಳ ಕೋರಿಕೆಯನ್ನು ವಿನಂತಿಯನ್ನು ಕೇಳು,
ಟಿಪ್ಪಣಿ:(ಹತ್ತಿರ ಬಂದುಗಳು- 'ನಿನ್ನ ಸೊದರತ್ತೆಯ ಮಕ್ಕಳ ಕೋರಿಕೆಯನ್ನು' ಎಂದು ಭಾವ; ಕೃಷ್ಣನಿಗೆ ಪಾಂಡುವಿಗಿಂತ ಹತ್ತಿರ ಕುಂತಿ - ಅದಕ್ಕೆ- ಕುಂತಿಯ ಮಕ್ಕಳ ಬೇಡಿಕೆಯನ್ನು ಕೇಳು- ಕೇಳಿಸಿಕೊ, ಎಂದಿದೆ)
ಅರ್ಥ:(ಪತ್ರ)ದೇವ ಕೃಷ್ಣಾ, ನಿಮ್ಮಪಾದಗಳ ಕೃಪೆಯ ಸಂಜೀವನಿಯಿಂದ ನಮ್ಮ ಪ್ರಾಣಗಳು ನಮ್ಮ ದೇಹದಲ್ಲೇ ಉಳಿದು ಸಂತೋಷಪಟ್ಟವು. ನಮ್ಮ ಜೀವಗಳು ೧೨ ವರ್ಷದ ಕಾಡಿನ ವಸತಿಯನ್ನು ಒದೆದು ದಾಟಿದವು. ಈ ವರುಷದಲ್ಲಿ ಅಜ್ಞಾತವಾಸದ ಒಂದು ವರ್ಷವೂ ಕಳೆದುಹೋಯಿತು. ನೀವು ಇಲ್ಲಿಗೆ ಬಂದು ನಮ್ಮ ಕಣ್ಣುಗಳಿಗೆ ತಮ್ಮ ದರ್ಶನವೆಂಬ ಅಮೃತಪಾನ ಸಂಪತ್ತನ್ನು ಕೊಡುವುದು/ ಕೊಡಬೇಕು.
ದಾಟಿದೆವು ನುಡಿದವಧಿಯನು ವೈ
ರಾಟ ಪುರದಲಿ ತುರುವಿಡಿದು ಮೈ
ನೋಟಕೋಸುಗ ಬಂದು ನುಗ್ಗಾಯಿತ್ತು ಕುರುಸೇನೆ |
ತೋಟಿ ಜಯಿಸಿದೊಡೆಮ್ಮನರಿದು ವಿ
ರಾಟ ಮನ್ನಿಸಿ ತನ್ನ ಮಗಳ ಕಿ
ರೀಟಿ ತನಯಂಗೀವ ಭರವಿದೆ ದೇವರವಧರಿಸಿ || ೩೬ ||
ಪದವಿಭಾಗ-ಅರ್ಥ: ದಾಟಿದೆವು ನುಡಿದ+ ಅವಧಿಯನು, ವೈರಾಟ (=ವಿರಾಟನ) ಪುರದಲಿ ತುರುವಿಡಿದು(ಗೋವನ್ನು ಹಿಡಿದು) ಮೈನೋಟಕೋಸುಗ (ನಮ್ಮ -ಗುರುತುಹಿಡಿಯಲು) ಬಂದು ನುಗ್ಗಾಯಿತ್ತು ಕುರುಸೇನೆ, ತೋಟಿ (ಸೇನೆ) ಜಯಿಸಿದೊಡೆ+ ಎಮ್ಮನು+ ಅರಿದು ವಿರಾಟ ಮನ್ನಿಸಿ ತನ್ನ ಮಗಳ ಕಿರೀಟಿ (ಅರ್ಜುನ) ತನಯಂಗೆ+ ಈವ (ಕೊಡುವ) ಭರವಿದೆ (ಅವಸರ) ದೇವರು+ ಅವಧರಿಸಿ (ಈ ವಿಚಾರವನ್ನು ತಿಳಿಯಿರಿ, ಕೇಳಿಸಿಕೊಳ್ಳಿ).
ಅರ್ಥ:(ಪತ್ರ) ನಾವು (ಪಾಂಡವರು) ಕೌರವನಿಗೆ ಮಾತುಕೊಟ್ಟ ಅವಧಿಯನ್ನು ದಾಟಿದೆವು. ಕೌರವನು ವೈರಾಟ ನಗರದಲ್ಲಿ ಗೋವುಗಳನ್ನು ಹಿಡಿದು ನಮ್ಮ -ಗುರುತುಹಿಡಿಯಲು ಬಂದು ಅವನ ಕುರುಸೇನೆ ಸೋತಿತು. ಅವನ ಸೇನೆಯನ್ನು ಜಯಿಸಿದಾಗ ನಮ್ಮ ಪರಿಚಯವನ್ನು ಅರಿತುಕೊಂಡು ವಿರಾಟರಾಜನ ಗೌರವಿಸಿ, ಒಪ್ಪಿ ತನ್ನ ಮಗಳನ್ನು ಅರ್ಜುನನ ಮಗ ಅಭಿಮನ್ಯುವಿಗೆ ಕೊಡುವ ಅವಸರವಿದೆ. ತಾವು, ದೇವರು ಅವಧರಿಸಿ.
ಮದುವೆಯೆಂಬುದು ನೆವ ನಿಜ ಶ್ರೀ
ಪದವ ತೋರಿಸಬೇಕು ವನ ವಾ
ಸದ ಪರಿಕ್ಲೇಶಾನು ಸಂತಾಪವನು ಬೀಳ್ಕೊಡಿಸಿ |
ಕದಡು ಹೋಗಲು ಕಾಣಬೇಹುದು
ಹದುಳವಿಟ್ಟೆಮಗುಚಿತ ವಚನದ
ಹದವಳೆಯಲುತ್ಸಾಹಸಸಿಯನು ದೇವ ಸಲಹುವುದು || ೩೭ ||
ಪದವಿಭಾಗ-ಅರ್ಥ:ಮದುವೆಯೆಂಬುದು ನೆವ; ನಿಜ ಶ್ರೀಪದವ (ತಮ್ಮ ಪೂಜ್ಯ ಪಾದವನ್ನು ತೋರಿಸಬೇಕು, ತಮ್ಮನ್ನು ಭೇಟಿಯಾಗಬೇಕು)ತೋರಿಸಬೇಕು; ವನ ವಾಸದ ಪರಿಕ್ಲೇಶ+ ಅನು ಸಂತಾಪವನು (ಮನಸ್ಸಿನ ಅತಿ ನೋವನ್ನು ) ಬೀಳ್ಕೊಡಿಸಿ ಕದಡು (ಮನಸ್ಸಿನ ಸಂಕಟ) ಹೋಗಲು ಕಾಣಬೇಹುದು ಹದುಳವಿಟ್ಟು (ವಿಶ್ವಾಸ. ಶ್ರದ್ಧೆ. ಸಮಾಧಾನ. ಹಿತಕಾರಿ. ಸಂತೋಷಚಿತ್ತ.)+ ಎಮಗೆ+ ಉಚಿತ 'ವಚನದ ಹದವ'+ ಅಳೆಯಲು (ಯೋಗ್ಯವಾದ ರೀತಿಯಲ್ಲಿ ಮಾತನಾಡುವುದು, ರಾಜ್ಯವನ್ನು ಮರಳಿ ಪಡೆಯಲು- ಸೂಚನೆ)+ ಉತ್ಸಾಹ ಸಸಿಯನು ದೇವ ಸಲಹುವುದು. (ಉತ್ಸಾಹವೆಂಬ ಸಸಿ - ಗಿಡ, ಅದಕ್ಕೆ ನೀರು ಕೊಟ್ಟು ಕಾಪಾಡುವುದು) (ಹದ:ನಿಯಮ, ಯೋಗ್ಯವಾದ ರೀತಿ, 'ಅಡಗೆಯ 'ಹದ' ಸರಿಯಾಗಿದೆ', ಹದ ತಿಳಿದು ಮಾತನಾಡು, ಕ್ರಮ - ಗ್ರಾಮ್ಯ ಪದ)
ಅರ್ಥ:(ಪತ್ರ) ಅಭಿಮನ್ಯುವಿನ ಮದುವೆಯೆಂಬುದು ನೆಪಮಾತ್ರ. ನಿಜವಾದ ಉದ್ದೇಶ ತಮ್ಮ ಶ್ರೀಪಾದವನ್ನು ತೋರಿಸಬೇಕು; ನಮ್ಮ ವನವಾಸದ ಪರಿಕ್ಲೇಶ- ಕಷ್ಟಗಳನ್ನು ಮನಸ್ಸಿನ ನೋವನ್ನು ಪರಿಹರಿಸಿ, ಅದರ ಕದಡು ಹೋಗಲು ನೀವು ಬಂದು ನಮ್ಮನ್ನು ಕಾಣಬೇಕು. ವಿಶ್ವಾಸವಿಟ್ಟು ನಮಗೆ ಮುಂದೆ ಉಚಿತವಾದ ಮಾತನಾಡುವ ಕ್ರಮವನ್ನು ಕುರಿತು ಹಿತವಚನವನ್ನು ಕೊಡಬೇಕು. ಹೀಗೆ ನಮ್ಮ ಉತ್ಸಾಹದ ಸಸಿಯನ್ನು ದೇವ ನೀವು ಕಾಪಾಡಬೇಕು.
ಕರುಣಿ ಬಿಜಯಂಗೈದು ಭಕ್ತರ
ಹೊರೆಯ ಬೇಹುದು ಬೇಡಿಕೊಂಬೆನು
ಅರಸಲೇಕೆಳೆಗಂದಿ ತಾಯ್ತಾನರಸುವಂದದಲಿ |
ಚರಣಭಜಕ ಕುಟುಂಬನೆಂಬೀ
ಬಿರುದ ಪಾಲಿಸಿ ಬಿನ್ನಹವನವ
ಧರಿಸಿ ಕಾಣಿಸಿ ಕೊಡುವುದೆಮಗೆ ಮಹಾ ಪ್ರಸಾದವನು || ೩೮ ||
ಪದವಿಭಾಗ-ಅರ್ಥ:ಕರುಣಿ ಬಿಜಯಂಗೈದು ಭಕ್ತರಹೊರೆಯ ಬೇಹುದು, ಬೇಡಿಕೊಂಬೆನು ಅರಸಲೇಕೆ+ ಎಳೆಗಂದಿ (ಮೊದಲನೇ ಕರು ಹಾಕಿದ ಹಸು- ತಾಯಿಯಾಗಿ ಅದಕ್ಕೆ ಕರುವಿನ ಮೇಲೆ ಅತಿ ಮೋಹ, ತಾಯಿತನ ಅದಕ್ಕೆ ಹೊಸದು.) ತಾಯ್ ತಾನು+ ಅರಸುವಂದದಲಿ ಚರಣಭಜಕ ಕುಟುಂಬನು (ದೇವರ ಪಾದವನ್ನು ಭಜಿಸುವ ಭಕ್ತರ ಕುಟುಂಬನು,- ಕೃಷ್ಣ , ಶ್ರೀಹರಿ ಭಕ್ತರೇ ಅವನ ಕುಟುಂಬ,) + ಎಂಬ ಈ ಬಿರುದ ಪಾಲಿಸಿ ಬಿನ್ನಹವನು+ ಅವಧರಿಸಿ ಕಾಣಿಸಿ ಕೊಡುವುದು+ ಎಮಗೆ ಮಹಾ ಪ್ರಸಾದವನು.
ಅರ್ಥ:ಕರುಣಾಳುವೇ! ಆಗಮಿಸಿ ಭಕ್ತರನ್ನು ಕಾಪಾಡಬೇಕು. ನಾನು ಬೇಡಿಕೊಳ್ಳುತ್ತಿದ್ದೇನೆ. ಎಳೆಗಂದಿ ಹಸು ತಾಯಿಯಾಗಿ ಕರುವನ್ನು ಹುಡುಕುವುದು ಏಕೆ? ಕರುವೇ ಕೂಗಿಕೊಂಡು ತಾಯಿಯನ್ನು ತಾನು+ ಅರಸುವ ರೀತಿಯಲ್ಲಿ ನಾವು ಕೆರೆಯುವೆವು. ಭಕ್ತರ ಕುಟುಂಬನು ಎಂಬ ಈ ಬಿರುದನ್ನು ಪಾಲಿಸಿ ನೀವು ನಮ್ಮ ಕೋರಿಕೆಯನ್ನ (ಬಿನ್ನಹವನು) ಕೇಳಿಸಿಕೊಂಡು ನಮಗೆ ನಿಮ್ಮ ದರ್ಶನ ಕೊಡುವುದು. ಅದು ನಮಗೆ ಮಹಾ ಪ್ರಸಾದವು. ಎಂದು ಧರ್ಮರಾಜನುಓಲೆಯ ಮೂಲಕ ವಿಜ್ಞಾಪನೆ ಮಾಡಿದನು
ಅರ್ಥ:ಪಾಂಡವರು ಕ್ಷೇಮವಾಗಿರುವುದನ್ನೂ ತನ್ನನ್ನು ನೋಡಲು ಬಯಸುವುದನ್ನೂ ಕೇಳಿ ಕರುಣಾಳು ಕೃಷ್ಣನು ಹರ್ಷಿತನಾಗಿ ಬಹಳ ರೋಮಾಂಚನಗೊಂಡನು. ಭಕ್ತರ ಮೇಲಿನ ಒಲವಿನ/ ಪ್ರೀತಿಯ ಬಹಳ ಪರಮಸ್ನೇಹ ಅವನ ಮೈಯಲ್ಲಿ ಪಸರಿಸಿತು/ ಹಬ್ಬಿತು., ಕೇಳಿದೆವೆಲ್ಲಾ! ಹರ ಹರ! ಯುಧಿಷ್ಠಿರನ ಏಳಿಗೆಯನ್ನು. ಆ ಕೌರವೇಶ್ವರನ ಸೋಲಿನಿಂದ ಅವನು ಸೇವಕನಂತಾದುದನ್ನು ಎನ್ನುತ್ತಾ ಅಸುರರಿಪು/ ರಕ್ಕಸವೈರಿ ಕೃಷ್ಣನು ಅಕ್ಕಪಕ್ಕದಲ್ಲಿರುವವರನ್ನು ನೋಡಿದನು.
ಚಿಂತೆ ಬೀತುದು ಪಾಂಡು ಮಾವನ
ಸಂತತಿಗಳಜ್ಞಾತ ವಾಸವ
ನೆಂತು ಪಂಥದ ಮೇಲೆ ಕಳೆದರೊ ನಮ್ಮ ಪುಣ್ಯವಿದು |
ಕುಂತಿ ದೇವಿಯರುಮ್ಮಳಿಸೆ ನಾ
ವೆಂತು ಬದುಕುವೆವಕಟೆನುತ್ತ ನಿ
ರಂತರವು ಮರುಗುವನು ಬೊಪ್ಪನು ಶಿವ ಶಿವಾಯೆಂದ || ೪೦ ||
ಪದವಿಭಾಗ-ಅರ್ಥ:ಚಿಂತೆ ಬೀತುದು ಪಾಂಡು ಮಾವನು (ವಸುದೇವ) ಸಂತತಿಗಳು+ ಅಜ್ಞಾತ ವಾಸವನು+ ಎಂತು ಪಂಥದ ಮೇಲೆ ಕಳೆದರೊ, ನಮ್ಮ ಪುಣ್ಯವು ಇದು ಕುಂತಿ ದೇವಿಯವರು ಉಮ್ಮಳಿಸು (ದುಃಖದಿಂದ ಬಿಕ್ಕಳಿಸುತ್ತಿರಲು) ನಾವು+ ಎಂತು ಬದುಕುವೆವು+ ಅಕಟ+ ಎನುತ್ತ ನಿರಂತರವು ಮರುಗುವನು ಬೊಪ್ಪನು (ಕೃಷ್ಣನ ಬೊಪ್ಪ ವಸುದೇವನು), ಶಿವ ಶಿವಾಯೆಂದ.
ಅರ್ಥ: ಕೃಷ್ಣ ಹೇಳಿದ,' ಚಿಂತೆ ಕಳೆಯಿತು; ಚಿಂತೆ ಇಲ್ಲವಾಯಿತು. ಪಾಂಡವರ ಮಾವ ವಸುದೇವನು ಅವರ ಸಂತತಿಗಳಾದ ಪಾಂಡವರು ಅಜ್ಞಾತ ವಾಸವನ್ನು ಹೇಗೆ ಪಂಥದ ಮೇಲೆ - ಮಾತುಕೊಟ್ಟ ಹಾಗೆ ಕಳೆದರೊ ಎಂದು ಚಿಂತಿಸುತ್ತಿದ್ದನು! ಪಾಂಡವರು ಅಜ್ಞಾತವಾಸವನ್ನು ಕಳೆದು ಕ್ಷೇನವಾಗಿರುವುದು ತಿಳಿದು ನನ್ನ ತಂದೆಯ ಚಿಂತೆ ಕಳೆಯಿತು. ಇದು ನಮ್ಮ ಪುಣ್ಯ. ನನ್ನ ಅತ್ತೆ ನನ್ನ ತಂದೆಯ ತಂಗಿ 'ಕುಂತಿ ದೇವಿಯವರು ಮಕ್ಕಳನ್ನು ನೆನೆದು ದುಃಖದಿಂದ ಬಿಕ್ಕಳಿಸುತ್ತಿರುವಾಗ. ನಾವು ಹೇಗೆ ಬದುಕಬಲ್ಲವು? ಅಕಟ!' ಎನುತ್ತಾ ನನ್ನ ತಂದೆ ಸದಾ ಮರುಗುವನು. ಒಳಿತಾಯಿತು; ಶಿವ ಶಿವಾ!' ಎಂದ.
ಭವಣಿಗೆಯ ಬಂದಡವಿಯಲಿ ಪಾಂ
ಡವರು ನವೆದರು ರಾಜ್ಯವನು ಯಾ
ದವರು ನಾವನುಭವಿಸುತಿದ್ದೆವು ನವೆದರಿನ್ನಬರ |
ಅವರ ಸೊಗಸೇ ನಮ್ಮ ಸೊಗಸುಗ
ಳವರ ದುಗುಡವೆ ನಮ್ಮದದರಿಂ
ದವರ ವಿಮಳಾಭ್ಯುದಯ ನಮಗೆಂದಸುರರಿಪು ನುಡಿದ || ೪೧ ||
ಪದವಿಭಾಗ-ಅರ್ಥ: ಭವಣಿಗೆಯ (ಕಷ್ಟ, ಬವಣೆ- ಬವಣಿಗೆ- ಸುತ್ತಾಟ. ಕೋಟಲೆ.)ಬಂದು+ ಅಡವಿಯಲಿ ಪಾಂಡವರು ನವೆದರು (ನೊಂದರು), ರಾಜ್ಯವನು ಯಾದವರು ನಾವು+ ಅನುಭವಿಸುತಿದ್ದೆವು, ನವೆದರು (ಸತತ ಕಷ್ಟಕ್ಕೊಳಗಾದರು)+ ಇನ್ನಬರ (ಈ ನಂತರ - ಗ್ರಾಮ್ಯ ಪದ) ಅವರ ಸೊಗಸೇ ನಮ್ಮ ಸೊಗಸುಗಳು+ ಅವರ ದುಗುಡವೆ ನಮ್ಮದು+ ಅದರಿಂದ ವರ ವಿಮಳಾಭ್ಯುದಯ ನಮಗೆಂದು+ ಅಸುರರಿಪು ನುಡಿದ.
ಅರ್ಥ:ಪಾಂಡವರು ಕಷ್ಟ ಕೋಟಲೆಗೆ ಸಿಲುಕಿಕೊಡು ಅಡವಿಯಲ್ಲಿ ನವೆದರು. ಆಗ ನಾವು ಯಾದವರು ರಾಜ್ಯವನ್ನು ಅನುಭವಿಸುತಿದ್ದೆವು. ಈ ನಂತರ ಅವರ ಸೊಗಸೇ ಅಥವಾ ಸುಖವೇ ನಮ್ಮ ಸಂತೋಷ ಮತ್ತು ಸುಖ. ಅವರ ದುಃಖವೆ ನಮ್ಮದು ಕೂಡಾ. ಅದರಿಂದ ನಮಗೆ ಶ್ರೇಷ್ಠ ವಿಮಲವಾದ ಅಭ್ಯುದಯ ಎಂದು ಅಸುರರಿಪು ಕೃಷ್ಣನು ಹೇಳಿದನು.
ಕಾಲ ಕೈಗೂಡುವೊಡೆ ಲೇಸಿನ
ಮೇಲೆ ಲೇಸುಗಳೊದಗುವವು ಭೂ
ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು |
ಮೇಲೆ ತಂಗಿಯ ಮಗನ ಮದುವೆ ವಿ
ಶಾಲ ಸುಖವದು ನಿಖಿಳ ಯಾದವ
ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ || ೪೨ ||
ಪದವಿಭಾಗ-ಅರ್ಥ: ಕಾಲ ಕೈಗೂಡುವೊಡೆ ಲೇಸಿನಮೇಲೆ ಲೇಸುಗಳು+ ಒದಗುವವು, ಭೂಪಾಲ ಕುಂತಿಯ ಸುತರ (ಭೂಪಾಲ ಸುತರ- ರಾಜಕುಮಾರರ) ಬೆಳವಿಗೆ ಮೊದಲ ಮಂಗಳವು, ಮೇಲೆ ತಂಗಿಯ ಮಗನ ಮದುವೆ, ವಿಶಾಲ ಸುಖವದು, ನಿಖಿಳ ಯಾದವಜಾಲ ಪಯಣವ ಮಾಡಲೆಂದು+ ಅಸುರ+ ಅರಿ (ರಾಕ್ಷಸರ ಶತ್ರು) ನೇಮಿಸಿದ
ಅರ್ಥ:ಕೃಷ್ನನು ತನ್ನ ಬಳಿ ಇದ್ದವರಿಗೆ ಹೀಗೆ ಹೇಳಿದ,'ಕಾಲ ಕೈಗೂಡಿದರೆ/ ಸಕಾಲ ಬಂದರೆ, ಒಳಿತಿನ ಮೇಲೆ ಒಳಿತುಗಳು ಒದಗುವವು. ಕುಂತಿಯಮಕ್ಕಳಾದ ರಾಜಕುಮಾರರ ಏಳಿಗೆಯ ಸುದ್ದಿ ಮೊದಲ ಮಂಗಳವು. ಅದರ ಮೇಲೆ ನಮ್ಮ ತಂಗಿ ಸುಭದ್ರೆಯ ಮಗ ಅಭಿಮನ್ಯುವಿನ ಮದುವೆ ವಿಶೇಷ ಸುಖದ ಸುದ್ದಿ'. ಆದ್ದರಿಂದ ಎಲ್ಲಾ ಯಾದವ ಸಮೂಹವೂ ವಿರಾಟನಗರಕ್ಕೆ ಪಯಣವನ್ನು ಮಾಡಲಿ ಎಂದು ಅಸುರಾರಿ ಕೃಷ್ಣನು ಆಜ್ಞಾಪಿಸಿದ.
ಪದವಿಭಾಗ-ಅರ್ಥ: ಚರರಿಗೆ+ ಉಡುಗೊರೆ ಗಂಧ ನಿಖಿಲಾ ಭರಣ ಕತ್ತುರಿ ಕರ್ಪುರವನು+ ಇತ್ತು+ ಅರಿದಿಶಾಪಟ ಬೀಳುಗೊಟ್ಟನು, ರಾಯಸವ ಬರೆಸಿ ಮರಳಿ ದೂತರು ಬಂದು ಮತ್ಸ್ಯನಪುರವ ಹೊಕ್ಕರು; ಕೃಷ್ಣರಾಯನ ಕರುಣದ+ ಅಳತೆಯ ಬಿನ್ನವಿಸಿದರು ಪಾಂಡು ತನಯರಿಗೆ.
ಅರ್ಥ:ಕೃಷ್ಣನು ಚರರಿಗೆ ಉಡುಗೊರೆಗಳನ್ನೂ ಗಂಧ, ಅನೇಕ ಭರಣಗಳು, ಕಸ್ತೂರಿ, ಕರ್ಪುರ ಇವುಗಳನ್ನು ಕೊಟ್ಟು ಮತ್ತು ಧರ್ಮಜನಿಗೆ ರಾಯಸವನ್ನು ಬರೆಯಿಸಿ ಕೊಟ್ಟು ಅವರನ್ನು ಬೀಳುಗೊಟ್ಟನು/ ಕಳುಹಿಸಿಕೊಟ್ಟನು. ನಂತರ ಆ ದೂತರು ಮರಳಿ ಬಂದು ಮತ್ಸ್ಯನಪುರವನ್ನು ಸೇರಿದರು. ಅವರು ಕೃಷ್ಣರಾಯನ ವಿಶೇಷ ಕರುಣದ ಉಪಚಾರ ಮತ್ತು ಕೊಡಿಗೆಯನ್ನು ಪಾಂಡವರಿಗೆ ಬಿನ್ನವಿಸಿದರು/ವಿನಯದಿಂದ ಹೇಳಿದರು.
ಬಳಿಕ ಸುಮುಹೂರ್ತದಲಿ ಮತ್ಸ್ಯನ
ಹೊಳಲ ಹೊರವಂಟುತ್ತರ ದಿಶಾ
ವಳಯದಲಿ ರಚಿಸಿದರುಪಪ್ಲವ್ಯಾಖ್ಯ ಪುರವರವ
ನೆಲನಗಲದಲಿ ಕಟ್ಟಿ ಕೇರಿಯ
ನಳವಡಿಸಿದರು ನಿಖಿಳ ನೃಪರಿಗೆ
ಬಳಿಯನಟ್ಟಿದನುತ್ತರೋತ್ತರವಾದುದಿವರುದಯ ೪೪
ಪದವಿಭಾಗ-ಅರ್ಥ: ಬಳಿಕ ಸುಮುಹೂರ್ತದಲಿ ಮತ್ಸ್ಯನ ಹೊಳಲ ಹೊರವಂಟು+ ಉತ್ತರ ದಿಶಾ ವಳಯದಲಿ ರಚಿಸಿದರು+ ಉಪಪ್ಲವ್ಯ+ ಆಖ್ಯ(ಹೆಸರಿನ) ಪುರವರವ(ವರ - ಉತ್ತಮ ನಗರ) ನೆಲನ+ ಅಗಲದಲಿ (ಭೂಮಿಯ ಅಗಲದಷ್ಟು - ವಿಶಾಲವಾಗಿ) ಕಟ್ಟಿ ಕೇರಿಯನು+ ಅಳವಡಿಸಿದರು ನಿಖಿಳ ನೃಪರಿಗೆ ಬಳಿಯನು+ ಅಟ್ಟಿದನು+ ಉತ್ತರೋತ್ತರವಾದುದು (ಮುಂದುವರಿಯಿತು)+ ಇವರ+ ಉದಯ
ಅರ್ಥ:ಆ ಬಳಿಕ ಪಾಂಡವರು ಸುಮುಹೂರ್ತದಲ್ಲಿ ಮತ್ಸ್ಯನ ನಗರದಿಂದ ಹೊರಹೊರಟು, ಅದರ ಉತ್ತರ ದಿಕ್ಕಿನ ಪ್ರದೇಶದಲ್ಲಿ ರಚಿಸಿದರು+ ಉಪಪ್ಲವ್ಯವೆಂಬ ಉತ್ತಮ ನಗರವನ್ನು ವಿಶಾಲವಾಗಿ ಕಟ್ಟಿ ಕೇರಿಯನ್ನು ಅಳವಡಿಸಿದರು. ನಂತರ ಎಲ್ಲಾ ನೃಪರಿಗೆ ಬಳಿಯನ್ನು- ಉಡುಗೊರೆ ಮತ್ತು ಆಹ್ವಾನವನ್ನು ಕೊಟ್ಟು+ ದೂತರನ್ನು ಅಟ್ಟಿದನು/ ಕಳಿಸಿದನು. ಹೀಗೆ ಪಾಂಡವರ ಉದಯ - ಅಭಿವೃದ್ಧಿ ಉತ್ತರೋತ್ತರವಾಯಿತು.
ಜೋಳಿ ಹರಿದವು ನಿಖಿಳ ರಾಯರಿ
ಗೋಲೆಯುಡುಗೊರೆಯಿಕ್ಕಿದವು ಪಾಂ
ಚಾಲಪತಿ ಹೊರವಂಟ ಮೂರಕ್ಷೋಣಿ ಬಲ ಸಹಿತ ||
ನೀಲನು ಯುಧಾಮನ್ಯು ಸಮರ ಕ
ರಾಳ ಧೃಷ್ಟದ್ಯುಮ್ನ ಕೀರ್ತಿ ವಿ
ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ || ೪೫ ||
ಪದವಿಭಾಗ-ಅರ್ಥ: ಜೋಳಿ(= ಬಟ್ಟೆಯಿಂದಮಾಡಿದತೊಟ್ಟಿಲು;ಡೇರೆಗಳು, ಚೀಲ- ಕಂತೆ;) ಹರಿದವು (ಸಾಗಿಸಿದರು, ಹೋದವು), ನಿಖಿಳ ರಾಯರಿಗೆ+ ಓಲೆಯು+ ಉಡುಗೊರೆ+ ಯಿ+ ಇಕ್ಕಿದವು ಪಾಂಚಾಲಪತಿ ಹೊರವಂಟ, ಮೂರಕ್ಷೋಣಿ ಬಲ ಸಹಿತ, ನೀಲನು, ಯುಧಾಮನ್ಯು, ಸಮರ ಕರಾಳ ಧೃಷ್ಟದ್ಯುಮ್ನ, ಕೀರ್ತಿ ವಿಶಾಲ ಧೀರ ಶಿಖಂಡಿ, ಸಹಿತ ಆ ದ್ರುಪದನು+ ಐತಂದ.
ಅರ್ಥ:ಬಟ್ಟೆಯಿಂದಮಾಡಿದ ಡೇರೆಗಳು, ಕಂತೆ ವಸ್ತುಗಳು ಸಾಗಿಸಲ್ಪಟ್ಟವು. ಎಲ್ಲಅ ರಾಜರಿಗೆ ಓಲೆಯನ್ನು, ಉಡುಗೊರೆಯನ್ನು ಕೊಡಲ್ಪಟ್ಟವು. ಮೊದಲು ಪಾಂಚಾಲಪತಿ ದ್ರೌಪದಿಯ ತಂದೆ ತನ್ನ ನಗರದಿಂದ ಮೂರಕ್ಷೋಣಿ ಸೈನ್ಯ ಸಹಿತ ಹೊರಹೊರಟ. ಅವನು ನೀಲನು, ಯುಧಾಮನ್ಯು, ಸಮರ ಕರಾಳ ಧೃಷ್ಟದ್ಯುಮ್ನ, ಕೀರ್ತಿ ವಿಶಾಲ ಧೀರ ಶಿಖಂಡಿ, ಮಕ್ಕಳು ಸಹಿತ ಆ ದ್ರುಪದನು ಬಂದ.
ಇದಿರುಗೊಂಡರು ಹರುಷದಲಿ ದುರು
ಪದಿಯ ಬಾಂಧವ ಪೈಕವನು ಮಿಗೆ
ಮುದದಿ ಕಾಣಿಸಿಕೊಂಡರಖಿಳ ಮಹಾ ಮಹೀಶ್ವರರ |
ಒದಗಿತಖಿಳಕ್ಷೋಹಿಣಿ ಬಲ ಸಂ
ಪದವನುನ್ನತ ವಸ್ತುಗಳ ಸೊಂ
ಪೊದವಿದವು ಕೈಗೈದು ಮದುವೆಯ ಮಂಗಳಾಭ್ಯುದಯ || ೪೬ ||
ಪದವಿಭಾಗ-ಅರ್ಥ: ಇದಿರುಗೊಂಡರು ಹರುಷದಲಿ ದುರುಪದಿಯ ಬಾಂಧವ ಪೈಕವನು(ಪೈಕಿಯವರನ್ನು), ಮಿಗೆ ಮುದದಿ (ಸಂತೋಷದಿಂದ ) ಕಾಣಿಸಿಕೊಂಡರು+ ಅಖಿಳ ಮಹಾ ಮಹೀಶ್ವರರ, ಒದಗಿತು+ ಅಖಿಳ+ ಅಕ್ಷೋಹಿಣಿ ಬಲ ಸಂಪದವನು+ ಉನ್ನತ ವಸ್ತುಗಳ ಸೊಂಪಿ+ ಒದವಿದವು ಕೈಗೈದು (ಕೈಗೂಡಿ) ಮದುವೆಯ ಮಂಗಳ+ ಅಭ್ಯುದಯ.
ಅರ್ಥ:ಪಾಂಡವರು ದ್ರುಪದನನ್ನೂ ಅವನ ಪರಿವಾರವನ್ನೂ ದ್ರೌಪದಿಯ ಬಾಂಧವ ಪೈಕಿಯವರನ್ನು- ಬಾಂಧವರಿಗೆ ಸಂಬಂಧಿಸಿದ ಸಮೂಹವನ್ನು ಇದಿರುಗೊಂಡು ಹರುಷದಿಂದ ಸ್ವಾಗತಿಸಿದರು. ಮತ್ತೆ ನಂತರ ಬಂದ ಅಖಿಲ ಮಹಾ ಮಹೀಶ್ವರರನ್ನು ಸಂತೋಷದಿಂದ ಎದುರುಕೊಂಡರು. ಅಲ್ಲಿ ಅಖಿಲ ಅಕ್ಷೋಹಿಣಿ ಸೇನೆಯ ಸಂಪತ್ತು ಸೇರಿತು. ಉನ್ನತ ವಸ್ತುಗಳು ಸೊಂಪಾಗಿ- ಬೇಕಾದಷ್ಟು ಒದಗಿದವು. ಹೀಗೆ ಮದುವೆಯ ಮಂಗಳ ಅಭ್ಯುದಯವು ಹೀಗೆ ಕೈಗೂಡಿ ಬಂದಿತು.
ದೇವನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾ ವಿಳಾಸದಳೊಪ್ಪವಿಟ್ಟರು ತಮ್ಮ ನಗರಿಗಳ |
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿ ಕೇರಿಗಳು || ೪೭ ||
ಪದವಿಭಾಗ-ಅರ್ಥ:ದೇವನು+ ಈ ಬಹನೆಂದು ಬಂದರು ದಾವಣಿಯ ಹವಣರಿದು, ಬಳಿಕ ಮಹಾ ವಿಳಾಸದಳು+ ಒಪ್ಪವಿಟ್ಟರು ತಮ್ಮ ನಗರಿಗಳ,- ಹೂವಲಿಯ ವೀಧಿಗಳ ನವ ರತ್ನಾವಳಿಯ ಸೂಸಕದ ಭದ್ರದ ಲೋವೆಗಳ ಲಂಬಳದಲಿ+ ಎಸೆದವು ಕೇರಿ ಕೇರಿಗಳು.
ದೇವನು (ಕೃಷ್ನನು)+ ಈ ಬಹನೆಂದು ಬಂದರು ದಾವಣಿಯ (ದವಣ= ಬದ್ದಣ,ಮೆರವಣಿಗೆ? ಮದವಣಿಗ- ದೇವ ಕೃಷ್ಣ - ದಾವಣಿ= ದನ ಕಟ್ಟುವ ಹಗ್ಗ?) ಹವಣ(ಕಟ್ಟಳೆ, ಸಮಯ)+ ಅರಿದು (ತೀಳಿದು), ಬಳಿಕ ಮಹಾ ವಿಳಾಸದಳು (ವಿಜೃಂಬಣೆ)+ ಒಪ್ಪವಿಟ್ಟರು ತಮ್ಮ ನಗರಿಗಳ ಹೂವಲಿಯ ವೀಧಿಗಳ (ಬೀದಿ) ನವ ರತ್ನಾವಳಿಯ ಸೂಸಕದ ಭದ್ರದ ಲೋವೆಗಳ ಲಂಬಳದಲಿ (ಲಂಬ- ಲಂಬವಾಗಿ- ಅಂಕುಡೊಂಕಿಲ್ಲದೆ)+ ಎಸೆದವು ಕೇರಿ ಕೇರಿಗಳು.
ಅರ್ಥ: ಕೃಷ್ಣ- ದೇವನು ಈಗ ಇಲ್ಲಿ ಬರುವನೆಂದು ನಗರದ ಜನ ದೇವನ ಮೆರವಣಿಗೆಯ ಸಮಯವನ್ನು ತಿಳಿದರು; ಬಳಿಕ ಮಹಾ ಉತ್ಸಾಹದಿಂದ (ವಿಜೃಂಭಣೆಯಿಂದ) ಅವರು ಬಂದು, ತಮ್ಮ ನಗರ ಕೇರಿಗಳನ್ನು ಒಪ್ಪವಾಗಿಟ್ಟರು. ಬೀದಿಗಳನ್ನು ಹೂವುಗಳ ಮಾಲೆಗಳಿಂದ, ನವ ರತ್ನಾವಳಿಯ ತೂಗು ಸೂಸಕದ ಗುಚ್ಛಗಳಿಂದ, ಭದ್ರದಾದ ಲೋವೆಯ ಬಾಗಿಲಗಳ ಕದಗಳಿಂದ ಕೂಡಿದ ಅಲಂಕೃತ ಮನೆಗಳಳ್ಳ ಕೇರಿ ಕೇರಿಗಳು ಲಂಬ- ಲಂಬವಾಗಿ ಅಂಕುಡೊಂಕಿಲ್ಲದೆ ಶೋಭಿಸಿದವು.
ಅರ್ಥ:ಕೃಷ್ಣು ಬರಮಾಡಿಕೊಳ್ಳಲು ನಾನಾ ಬಗೆಯ ಅಲಂಕಾರ ಮಾಡಿಕೊಂಡರು, ಕೇರಿಗಳನ್ನು ಅಲಂಕರಿಸಿದರು; ಸುಂದರವಾದ ಕತ್ತೂರಿಯ ಸಾದನ್ನು ಹಣೆಯಲ್ಲಿ ಇಟ್ಟುಮಕೊಂಡರು. ಮನೆ ಎದುರು ಸಾರಣೆಮಾಡಿ(ಸಗಣಿಯಿಂದ ಸಅರಿಸಿ ಶುದ್ಧಗೊಳಿಸಿ) ಕುಂಕುಮದ ರಸಗಳ ಕಾರಣೆಯ ರಂಗೋಲಿ ಹಾಕಿದರು; ನವಚಿತ್ರಪತ್ರದ ಬಹಳ ಚಿತ್ರಗಳ ಭಿತ್ತಿಗಳನ್ನು (ಚಿತ್ರಗಳ ಸ್ಥಂಬಗಳು ಕಟ್‍ಔಟ್) ಓರಣವಾಗಿರುದ ಬೀದಿಗಳಲ್ಲಿ ಹಾಕಿದರು. ಮನೆಯ ಗವಾಕ್ಷಿಗಳನ್ನು ತೋರಣದಿಂದ ಅಲಂಕರಿಸಿದರು. ಹೊರಜಗುಲಿಗಳನ್ನು ಪನ್ನೀರಿನ ಚಿಮುಸುವಿಕೆಯಿಂದ(ಚಳೆಯದ) ಸುವಾಸನೆಗೊಲಿಸಿದರು. ಈ ಬಗೆಯ ರಚನೆಯಲ್ಲಿ ಅಲ್ಲಿಯ ಮನೆ ಮನೆಗಳು ಸಿಂಗರಿಸಲ್ಪಟ್ಟವು
ಕಟ್ಟಿದವು ಗುಡಿ ಮನೆಗಳಲಿ ಮೇ
ಲ್ಕಟ್ಟು ಬಿಗಿದವು ಪುರದ ನಾರಿಯ
ರುಟ್ಟು ತೊಟ್ಟರು ಕಳಶ ಕನ್ನಡಿ ಸಹಿತ ದೇಶಿಯಲಿ |
ಇಟ್ಟಣಿಸಿ ಗಜ ವಾಜಿ ರಥ ಸಾ
ಲಿಟ್ಟು ತೋರುವ ದನುಜರಾಯ ಘ
ರಟ್ಟನನು ನಡೆದಿದಿರುಗೊಂಡರು ಪಾಂಡು ನಂದನರು || ೪೯ ||
ಪದವಿಭಾಗ-ಅರ್ಥ: ಕಟ್ಟಿದವು ಗುಡಿ (ಬಾವುಟ) ಮನೆಗಳಲಿ, ಮೇಲ್ಕಟ್ಟು ಬಿಗಿದವು ಪುರದ ನಾರಿಯರು+ ಉಟ್ಟು ತೊಟ್ಟರು ಕಳಶ (ಮಾವಿನ ಸೊಪ್ಪಿನ ಕುಡಿಯಿಂದ ಅಲಂಕರಿಸಿದ ನೀರು ತುಂಬಿದ ಚೊಂಬು ಯಾ ಕೊಡ) ಕನ್ನಡಿ ಸಹಿತ ದೇಶಿಯಲಿ ಇಟ್ಟಣಿಸಿ ಗಜ ವಾಜಿ ರಥ ಸಾಲಿಟ್ಟು ತೋರುವ ದನುಜರಾಯ ಘರಟ್ಟನನು (ಘರಟ್ಟ- ಬೀಸುವಕಲ್ಲು, ಘರಟ್ಟನ= ಬೀಸುವ ಕಲ್ಲಿನಲ್ಲಿಪುಡಿಮಾಡು - ರಾಕ್ಷಸರಾಜನನ್ನು ಪುಡಿಮಾಡಿದವನು- ಕೃಷ್ಣ) ಕೃಷ್ಣನನ್ನು ನಡೆದು+ ಇದಿರುಗೊಂಡರು ಪಾಂಡು ನಂದನರು
ಅರ್ಥ: ಮನೆ ಮನೆಗಳಲ್ಲಿ ತೋರಣ ಬಾವುಟಗಳು ಕಟ್ಟಿದವು. ಉಪಪ್ಲಾವ್ಯ ಮತ್ತು ಮತ್ಸ್ಯಪುರದ ವನಿತೆಯರು ಎದೆಗೆ ಮೇಲ್ಕಟ್ಟು ಬಿಗಿದುಕೊಂಡು ಹೊಸ ಬಣ್ಣದ ಸೀರಯನ್ನು ಉಟ್ಟರು; ಅವರು ಕಳಶ ಕನ್ನಡಿ ಸಹಿತ ದೇಶಿಬೀದಿಯಲ್ಲಿ ಬಹಳಮಂದಿ ಒಟ್ಟಿಗೆ ಒತ್ತೊತ್ತಾಗಿ ಇಟ್ಟಣಿಸಿ ಹೊರಟರು. ಗಜ, ವಾಜಿ ರಥ ಸಾಲಿಟ್ಟು ನಡೆದು ಪಾಂಡು ನಂದನರು ತೋರುವ ಶೋಭಿಸುವ- ಎದ್ದುಕಾಣುವ ರಾಕ್ಷಸರಾಜನನ್ನು ಪುಡಿಮಾಡಿದ ಕೃಷ್ಣನನ್ನು ಎದುರುಗೊಂಡರು.
ಟಿಪ್ಪಣಿ:ಬಂದಿರುವವರ ಕಾಲಿಗೆ ನೀರು ಹಾಕಿ, ಕನ್ನಡಿ ತೋರಿಸಿ, ಆರತಿಯೊಂದಿಗೆ ಹೂವು ಕೊಟ್ಟು, ತಲೆಯ ಮೇಲೆ ಅರಳು, ಮಲ್ಲಿಗೆ ಹೂವು ಹಾಕಿ ಬರಮಾಡಿಕೊಳ್ಳುವರು- ಅದು 'ಎದುರುಗೊಳ್ಳುವುದು' ಎನ್ನುವ ಸ್ವಾಗತಿಸುವ ಕ್ರಿಯೆ. ನಾರಿಯರು ಎದೆಗೆ ಮೇಲ್ಕಟ್ಟು ಬಿಗಿದುಕೊಂಡು ಹೊಸ ಬಣ್ಣದ ಸೀರಯನ್ನು ಉಟ್ಟು, ಹೂ ಮುಡಿದು ಸಿಂಗರಿಸಿಕೊಂಡು ಕಳಶ ಕನ್ನಡಿ ಸಹಿತ ಎದುರುಗೊಳ್ಳುವ ಪದ್ದತಿ ದಕ್ಷಿಣ ಭಾರತದಲ್ಲಿ ಇದೆ; (ಈಗಲೂ ವಿವಾಹ ಮತ್ತು ವಿಶೇಷ ಅಥಿತಿಗಳನ್ನು- ಬೀಗರನ್ನು ಎದುರುಗೊಳ್ಳುವಾಗ, ಮಠಾಧಿಪತಿಗಳನ್ನು ಬರಮಾಡಿಕೊಳ್ಳುವಾಗ ಹೀಗೆ ಎದುರುಗೊಂಡು ಸ್ವಾಗತಿಸುವರು) ಕುಮಾರವ್ಯಾಸನಿಗೆ ಗ್ರಾಮ್ಯದ ಕನ್ನಡ ಪದಗಳು ಪದ್ದತಿಗಳು ಅದಕ್ಕೆ ಪ್ರಯೋಗಿಸುವ ಪದಗಳಿಗೆ ಬರವಿಲ್ಲ- ಲೀಲಾಜಾಲವಗಿ ಉಪಯೋಗಿಸುತ್ತಾನೆ. ಆ ಕೆಲವು ಪದಗಳಿಗೆ ಸಮಾನಾರ್ಥಕ ಪದವೇ ಸಿಗುವುದಿಲ್ಲ. ಈಗ ಕೆಲವು ಮೂಲೆಯ ಹಳ್ಳಿಗಳಲ್ಲಿ ಬಳಕೆಯಲ್ಲಿದ್ದರೂ ನಾಗರೀಕತೆ ಬೆಳೆದ ಕಡೆ ಆ ಪದಗಳು ರೂಢಿಯಿಂದ ಮಾಯವಾಗಿವೆ.)
ಅರ್ಥ:ಕೃಷ್ಣನು ದೂರದಲ್ಲಿ ಬರುತ್ತಿರುವ ಹೊಳಹು ಸ್ವಲ್ಪ ದೂರದಲ್ಲಿ ಗರುಡನ ಗುರುತಿನ ರಥದ ಬಾವುಟದಿಂದ ಕಂಡಿತು. ಆಗ ಪಲ್ಲಕ್ಕಿಗಳಿಂದ ಇಳಿದು ದ್ರುಪದ, ವಿರಾಟ, ಪಾಂಡವರು, ನೆಲಕ್ಕೆ ಮೈಯಿಕ್ಕಿ ನಮಿಸಿದರು. ಬಳಿಕ ಉಳಿದ ರಾಜರು ಕಾಲು ನಡಿಗೆಯಲ್ಲಿ ಸಂತಸದಿಂದ ಬರುತ್ತಿರಲು, ಆನೆಯಿಂದ ಭೂಮಿಗೆ ಇಳಿದು ಅಸುರರ ಶತ್ರು ಕೃಷ್ನನು ಕರುಣೆಯಿಂದ ಆಗಮಿಸಿದನು.
ಅರ್ಥ:ರಾಜರಿಗೂ ಇತರರಿಗೂ ದೇವೋತ್ತಮ ಕೃಷ್ಣನು ತನ್ನ ದರ್ಶನಕ್ಕೆ ಸಮಯವನು ಕೊಟ್ಟನು;ವೇದಗಳ ರಾಶಿಯಲ್ಲಿ ಹುಡುಕಿದರೂ ಅತ್ತಲು ಇತ್ತಲು ಸರಿದುಹೋಗಿ ಮುನಿಗಳ ಮನಸ್ಸಿಗೆ ಮೈಗೊಡದ/ ಕಾಣಿಸದ ಕೃಷ್ನನು 'ತಾನು ಹೆತ್ತಂತಿರುವ ಪ್ರೀತಿಯ ಮಕ್ಕಳು ತನ್ನ ದರ್ಶನಕ್ಕೆನಿಲ್ಲಲಿ; ತನ್ನ ಭಕ್ತರನು ಇತ್ತ ಕರೆ' ಎಂದು ಹೇಳಿ, 'ನೆನೆಯುವವರಿಗೆ ತನ್ನನು ತೆತ್ತು- ಕೊಟ್ಟು ಬದುಕುವೆನು,' ಎಂಬ ಮುಗ್ಧರ ಒಡೆಯ ಭಕ್ತರ ಬಳಿಗೆ ನಡೆದುಬಂದ.
ಬಲದ ಪದಘಟ್ಟಣೆಯ ರಜದಿಂ
ಬೆಳುಪಡಗಿದಂಬರದ ಮಾರ್ಗದ
ಝಳದ ಕಿರುಬೆಮರುಗಳ ಲಲಿತ ಕಪೋಲ ಮಂಡಲವ |
ಕೆಲದ ಪಾಯವಧಾರುಗಳ ಕಳ
ಕಳದ ಕರುಣಾರಸವ ಸೂಸುವ
ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ || ೫೩ ||
ಪದವಿಭಾಗ-ಅರ್ಥ: ಬಲದ ಪದಘಟ್ಟಣೆಯ (ಬಲದ ಪಾದವನ್ನು ಮುಂದಿಟ್ಟು - ಊರಿ) ರಜದಿಂ ಬೆಳುಪು+ ಅಡಗಿದ+ ಅಂಬರದ ಮಾರ್ಗದ ಝಳದ ಕಿರುಬೆಮರುಗಳ ಲಲಿತ ಕಪೋಲ ಮಂಡಲವ ಕೆಲದ ಪಾಯ+ ಅವಧಾರುಗಳ (ರಾಜರು ದೊಡ್ಡವರು ಬರುವಾಗ ಕಾವಲಿನವರು ಜನರಿಗೆ ಎಚ್ಚರ ಹೇಳಲು,'ಅವಧಾರು. ಎಂದು ಕೂಗುವರು.) ಕಳಕಳದ ಕರುಣಾರಸವ ಸೂಸುವ ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದು+ ಆ ಸೇನೆ. (ಕಂಡರು- ಕಂಡಿತು- ಕಂಡುದು)
ಅರ್ಥ: ಕೃಷ್ಣನು ಬಲದ ಪಾದವನ್ನು ಘಟ್ಟಿಸಿ ಮುಂದಿಟ್ಟು - ಊರಿ, ಅವನ ಆಭರಣದ ಬೆಳ್ಳಿಯಿಂದ ಸುತ್ತಿನ ಬೆಳುಪು ಅಡಗುವಂತಿರುವ ಧೋತ್ರದ, ದೂರದಿಂದ ಬರುವಾಗ ಮಾರ್ಗದಲ್ಲಿ ಬಿಸಿಲಿನ ಝಳದಿಂದ ಕಿರುಬೆವರು ಸೂಸುವ, ಲಲಿತವಾದ ಕೋಮಲ ಕಪೋಲಮಂಡಲವನ್ನು ಹೊಂದಿದ ಕೃಷ್ಣನು ಬರುವಾಗ ಅಕ್ಕಪಕ್ಕದ ಕಾವಲಿನ ಭಟರ 'ಅವಧಾರು'ಗಳ ಕಳಕಳದ ಸದ್ದಿನ ನಡುವೆ, ಕರುಣಾರಸವನ್ನು ಸೂಸುವ ಮೆಲುನಗೆಯ ಸಿರಿಮೊಗದ ಕೃಷ್ಣನನ್ನು ಆ ಸೇನೆ ಮತ್ತು ಜನರು ಕಂಡರು.
ಅರ್ಥ:ಸೈನಿಕರು ಆಯುಧ ಬಿಟ್ಟು ಕೈಗಳನ್ನು ಬಾಗಿದ ಹಣೆಗೆ ಇಟ್ಟು ನಮಿಸಿದರು. ಆನೆಗಳು ಮುರುಹಿ/ ಮೈಯನ್ನು ಮುರುಟಿ ತಲೆವಾಗಿ ಸೊಂಡಿಲನ್ನು ಎತ್ತಿ ಬಾವಟದಂತೆ ಮಾಡಿ ಗುಡಿಗಟ್ಟಿದವು. ಕುದುರೆಗಳು ಹೇಷಾರವದಿಂದ ಕೂಗಿ, ದೇಹವನ್ನು ತೂಗಿ ಪುಳಕಗೊಂಡವು. ಉಳಿದವರ ಜೊತೆ ಸೇನೆಯು ಮನಸ್ಸಿನಲ್ಲಿ ಹಿಗ್ಗಿ ಪೂರಾ ಮೈಮರೆದು ಹರ್ಷದ ಸಾಗರದಲ್ಲಿ ಓಲಾಡುತ್ತಿತ್ತು.
ಅಂಗನೆಯರರವಿಂದನಾಭನ
ಮಂಗಳ ಶ್ರೀಮೂರ್ತಿ ಸುಧೆಯನು
ಕಂಗಳಲಿ ಕುಡಿಕುಡಿದು ಪಡೆಯರು ಮತ್ತೆ ದಣಿವುಗಳ |
ಅಂಗಜನ ಪೆತ್ತಯ್ಯ ನೀ ರೂ
ಹಿಂಗೆ ಬಡವನೆಯೆನುತ ಮುರಹರ
ನಂಗ ಶೋಭೆಯ ಬಂದಿಯಲಿ ಸಿಲುಕಿತ್ತು ಸತಿನಿವಹ || ೫೫ ||
ಪದವಿಭಾಗ-ಅರ್ಥ: ಅಂಗನೆಯರು+ ಅರವಿಂದನಾಭನ ಮಂಗಳ ಶ್ರೀಮೂರ್ತಿ ಸುಧೆಯನು ಕಂಗಳಲಿ ಕುಡಿಕುಡಿದು ಪಡೆಯರು ಮತ್ತೆ ದಣಿವುಗಳ ಅಂಗಜನ ಪೆತ್ತಯ್ಯ ನೀ ರೂಹಿಂಗೆ (ರೂಪಕ್ಕೆ) ಬಡವನೆಯೆನುತ ಮುರಹರನ+ ಅಂಗ (ದೇಹ) ಶೋಭೆಯ ಬಂದಿಯಲಿ ಸಿಲುಕಿತ್ತು ಸತಿನಿವಹ.
ಅರ್ಥ:ಹೆಂಗಸರು ಅರವಿಂದನಾಭ ಕೃಷ್ಣನ ಮಂಗಳ ಶ್ರೀಮೂರ್ತಿ ಸುಧೆಯನು- ಹಾಲನ್ನು ಕಣ್ಣುಗಳಲಿ ಎಷ್ಟು ಕುಡಿದು ಕುಡಿದರೂ ದಣಿಯಲಿಲ್ಲ; ಮತ್ತೆ ಅವರು ಸುಂದರಾಂಗ ಮನ್ಮಥನ ಪೆತ್ತಯ್ಯ - ಹೆತ್ತವನಲ್ಲವೇ! ನೀನು ರೂಪಕ್ಕೆ ಬಡವನೆಯೆನ್ನುತ್ತಾ ಮುರಹರ ಕೃಷ್ಣನನ್ನು ನೋಡುತ್ತಾ ಅವನ ದೇಹದ ಶೋಭೆಯಲ್ಲಿ ಬಂದಿಯಾಗಿ ವನಿತೆಯರ ಸಮೂಹ ಸಿಲುಕಿದ್ದರು.
ಎರಡು ಸೇರೆಯ ತುಂಬಿ ರತ್ನವ
ಸುರಿದು ಮೈಯಿಕ್ಕಿದನು ಭೂಪತಿ
ಚರಣದಲಿ ಚತುರಾಸ್ಯಜನಕನ ವಿಮಳಭಕ್ತಿಯಲಿ |
ನರ ವೃಕೋದರ ನಕುಲ ಸಹದೇ
ವರು ವಿರಾಟ ದ್ರುಪದ ಮೊದಲಾ
ಗಿರೆ ಸಮಸ್ತ ನೃಪಾಲಕರು ಮೈಯಿಕ್ಕಿತೊಗ್ಗಿನಲಿ || ೫೬ ||
ಪದವಿಭಾಗ-ಅರ್ಥ: ಎರಡು ಸೇರೆಯ (ಸೆರೆ ಯಾ ಸೇರು - ಒಂದು ಲೀಟರಿಗಿಂತ ಸ್ವಲ್ಪ ದೊಡ್ಡ ಅಳತೆಯ ಪಾತ್ರೆ; ಸೆರೆ= ಒಂದು ಅಂಗೈಬೋಗುಣಿ ಮಾಡಿದರೆ ಹಿಡಿಯುವಷ್ಟು; ಎರಡೂಕೈಯಿನ ಸೆರೆ- ಎರಡೂ ಅಂಗೈಒಟ್ಟು ಸೇರಿ ಬಟ್ಟಲು ಮಾಡಿದರೆ ಒಂದು ಬೊಗಸೆ (ಬಕ್ಷ- ಗ್ರಾಮ್ಯ)- ದಾನ, ಕಾಣಿಕೆ ಕೊಡುವಾಗ ಎರಡೂ ಕೈನಿಂದ ಬೊಗಸೆಮಾಡಿ ಕೊಡುವುದು ಹಿಂದಿನ ರೂಢಿ) ತುಂಬಿ ರತ್ನವ ಸುರಿದು ಮೈಯಿಕ್ಕಿದನು (ಅಡ್ಡಬಿದ್ದನು) ಭೂಪತಿ (ಧರ್ಮಜ) ಚರಣದಲಿ (ಪಾದಗಳಿಗೆ) ಚತುರಾಸ್ಯಜನಕನ (ನಾಲ್ಕು ತಲೆಯುಳ್ಳ ಬ್ರಹ್ಮನ ಜನಕ- ತಂದೆಯ) ವಿಮಳಭಕ್ತಿಯಲಿ ನರ ವೃಕೋದರ ನಕುಲ ಸಹದೇವರು ವಿರಾಟ ದ್ರುಪದ ಮೊದಲಾಗಿರೆ ಸಮಸ್ತ ನೃಪಾಲಕರು ಮೈಯಿಕ್ಕಿತು+ ಒಗ್ಗಿನಲಿ (ಒಟ್ಟಾಗಿ).
ಅರ್ಥ:ಎರಡು ಸರೆಯಷ್ಟು - ಒಂದು ಬಕ್ಷ ತುಂಬಿದ ರತ್ನವನ್ನು ಕೃಷ್ನನ ಪಾದಗಳ ಮೇಲೆ ಕಾಣಿಕೆಯಾಗಿ ಸುರಿ, ಧರ್ಮರಾಯನು ಕೃಷ್ನನಿಗೆ ಅಡ್ಡಬಿದ್ದು ಪಾದಗಳಿಗೆ ನಮಿಸಿದನು. ಬ್ರಹ್ಮನ ಜನಕನನ್ನು ಶುದ್ಧವಾದ ಭಕ್ತಿಯಿಂದ ಅರ್ಜುನ, ವೃಕೋದರ/ ಭೀಮ, ನಕುಲ ಸಹದೇವರು, ವಿರಾಟ, ದ್ರುಪದ ಮೊದಲಾಗಿ ಸಮಸ್ತ ರಾಜರು ಒಟ್ಟಾಗಿ ಸಾಷ್ಟಾಂಗ ಪ್ರಣಾಮ ಮಾಡಿದರು.
ಅರ್ಥ:ಯುಧಿಷ್ಠಿರನು ಬಾಗಿ ಮಂಡಿಯೂರಿ ನಮಿಸಲು ತೊಡಗಿದಾಗ, ಕೃಷ್ಣನು ಅವನನ್ನು ಪೂರಾ ಬಾಗಲು ಬಿಡದೆಅವನ ತಲೆಯನ್ನು ಎತ್ತಿ ಅವನನ್ನು ಎಳೆದುಕೊಂಡು ಯುಧಿಷ್ಠಿರನನ್ನು ಬಹಳ ಪ್ರೇಮದಿಂದ ಅಪ್ಪಿಕೊಂಡನು. ನಂತರ ಭೀಮಾರ್ಜುನರನ್ನೂ ನಕುಲಸಹದೇವರನ್ನೂ ಹರ್ಷದಿಂದ ತೆಗೆದಪ್ಪಿ, ಆ ನಂತರ ಬಂದಿದ್ದ ರಾಜರನ್ನು ಗೌರವಿಸಿ ಮನ್ನಿಸಿದನು. ಮಹಿಳೆಯರ ಗುಂಪಿನಲ್ಲದ್ದ ಅರಸಿ ದ್ರೌಪದಿಯು ಬಂದು ಮುರಹರನನ್ನು ಕಂಡುನಮಿಸಿದಳು.
ಟಿಪ್ಪಣಿ: ಧರ್ಮರಾಯ ಕೃಷ್ನನಿಗಿಂತ ಹಿರಿಯ - ಹಾಗಅಗಿ ಅವನನ್ನು ಕೃಷ್ಣನು ತನ್ನ ಪಾದಮುಟ್ಟಲು ಬಿಡದೆ ಎತ್ತಿದನು.
ಕಾಣಿಕೆಯ ಕೈಕೊಂಡು ರಾಯನ
ರಾಣಿಯನು ಮನ್ನಿಸಿದ ತನ್ನಯ
ರಾಣಿವಾಸದ ಹೊರಗೆ ನೇಮವ ಕೊಟ್ಟು ಕಳುಹಿದನು |
ರಾಣಿ ರುಕುಮಿಣಿಯಾದಿಯಾದ
ಕ್ಷೋಣಿಧರನರಸಿಯರನನಿಬರ
ಕಾಣಿಕೆಯ ಕೊಟ್ಟೆರಗಿ ದುರುಪದಿ ಕಂಡಳೊಲವಿನಲಿ || ೫೮ ||
ಪದವಿಭಾಗ-ಅರ್ಥ:ಕಾಣಿಕೆಯ ಕೈಕೊಂಡು ರಾಯನ ರಾಣಿಯನು ಮನ್ನಿಸಿದ ತನ್ನಯ ರಾಣಿವಾಸದ ಹೊರಗೆ ನೇಮವ ಕೊಟ್ಟು ಕಳುಹಿದನು ರಾಣಿ ರುಕುಮಿಣಿಯಾದಿಯಾದ+ ಅಕ್ಷೋಣಿಧರನ(ಆ? ಕ್ಷೋಣಿ- ಭೂಮಿಯನ್ನು ಧರ- ಧರಿಸಿದವ, ಎತ್ತಿದವನು ವಿಷ್ಣು?)+ ಅರಸಿಯರನು+ ಅನಿಬರ ಕಾಣಿಕೆಯ ಕೊಟ್ಟೆಉ+ ಎರಗಿ(ನಮಿಸಿ) ದುರುಪದಿ ಕಂಡಳು+ ಒಲವಿನಲಿ
ಅರ್ಥ:ಕೃಷ್ನನು ಧರ್ಮಜನು ಕೊಟ್ಟ ಕಾಣಿಕೆಯನ್ನು ಪಡೆದು, ಧರ್ಮರಾಯನ ರಾಣಿ ದ್ರೌಪದಿಯನ್ನು ಗೌರವಿಸಿದನು. ತನ್ನ ರಾಣಿಯರ ಕ್ಷೇಮದ ಹೊಣೆಯ ನೇಮವನ್ನು ಅವಳಿಗೆ ಕೊಟ್ಟು ಅವರನ್ನು ಕಳುಹಿದನು. ರಾಣಿ ರುಕ್ಮಿಣಿ ಮೊದಲಾಗಿ ಕೃಷ್ನನ ಎಂಟು ಅರಸಿಯರನ್ನೂ, ಅವರಿಗೆ ಕಾಣಿಕೆಯ ಕೊಟ್ಟು ನಮಿಸಿ, ದ್ರೌಪದಿಯು ಪ್ರೀತಿಯಿಂದ ಉಪಚರಿಸಿದಳು.
ಅರ್ಥ:ವಸುದೇವನು ಪ್ರೀತಿಯಿಂದ ಕೈದಣಿಯುವಷ್ಟು ಅಳಿಯ ಧರ್ಮಜನ ಮೈದಡವಿ ಸಂತೈಸಿದನು; ಅವನು, 'ಮಗನೆ ವನದೊಳಗೆ ನಿಮ್ಮನ್ನು ವಿಧಿಯು ಒಯ್ದು ಬಂಧಿಸಿತಲಾ! ನೀವು ನವೆದಿದ್ದು ಸಾಕು, ಇನ್ನು ದೈವವನ್ನು ಬೈದು ಮಾಡುವುದೇನು? ಪ್ರಯೋಜನವಿಲ್ಲ. ದ್ರೌಪದಿಯ ಮುತ್ತೈದೆತನ ಗಟ್ಟಿ ಇದ್ದದ್ದರಿಂದ ಕಷ್ಟವನ್ನು ಕಳೆದು ನಮ್ಮ ಪುಣ್ಯದಿಂದ ಈ ಸಮಾಜದ ಲೋಕಕ್ಕೆ- (ಕಾಡನ್ನು ಬಿಟ್ಟು ಊರಿಗೆ) ಬಂದಿರಿ' ಎಂದನು.
ಅರಸಿಯೈದೆತನಕ್ಕೆ ನಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆ ನಮಗೆ |
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯವೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯಲಿ ಮನ್ನಿಸಿದ || ೬೧ ||
ಪದವಿಭಾಗ-ಅರ್ಥ:ಅರಸಿಯ+ ಐದೆತನಕ್ಕೆ ನಮ್ಮ+ ಐವರ ನಿಜಾಯುಷ್ಯಕ್ಕೆ ರಾಜ್ಯದಸಿರಿಯ ಸೊಂಪಿಗೆ (ಸುಖಕ್ಕೆ), ನಿಮ್ಮ ಮಗನು ಈ ಕೃಷ್ಣ ಹೊಣೆ, ನಮಗೆ+ ಸುರರು ಸರಿಯಿಲ್ಲ+ ಎಮಗೆ ಮಿಕ್ಕಿನ ನರರು ಗಣ್ಯವೆ, ಮಾವ ಕೇಳೆಂದು+ ಅರಸ ವಸುದೇವನನು ಮಧುರೋಕ್ತಿಯಲಿ ಮನ್ನಿಸಿದ.
ಅರ್ಥ:ನಮ್ಮ ಅರಸಿ ದ್ರೌಪದಿಯ ಮುತ್ತೈದೆತನಕ್ಕೆ ನಮ್ಮ ಪಾಂಡವರಾದ ನಮ್ಮ ಐವರ ಪೂರ್ಣ ಆಯುಷ್ಯಕ್ಕೆ ಮತ್ತು ನಮ್ಮ ರಾಜ್ಯದಸಂಪತ್ತಿನ ಸುಖಕ್ಕೆ, ನಿಮ್ಮ ಮಗ- ಈ ಕೃಷ್ಣನೇ ಹೊಣೆ- ಮಾವ! ಕೇಳು ಅದಲ್ಲದ ನಮಗೆ ದೇವತೆಗಳು ಸರಿಸಮಾನರಲ್ಲ, ಇನ್ನು ಮಿಕ್ಕ ಮಾನವರು ನಮಗೆ ಲೆಕ್ಕವೆ?' ಎಂದು ಹೇಳಿ ಅರಸ ಧರ್ಮಜನು ವಸುದೇವನನ್ನು ಮಧುರವಾದ ಮಾತುಗಳಿಂದ ಗೌರಚವಿಸಿದ.
ತಂದೆ ಬೇಡೆಮಗವ್ವೆ ಬೇಡೆಮ
ಗಿಂದುಮುಖಿಯರನೊಲ್ಲೆವಾವ್ ಮನ
ಸಂದು ಮೆಚ್ಚಿಹೆವೆಮ್ಮ ಭಕ್ತರಿಗೆಂಬನನವರತ |
ನೊಂದೆನೆಂಬನು ತನ್ನವರು ಮನ
ನೊಂದರಾದೊಡೆ ತನ್ನವರ ಸುಖ
ವಿಂದು ತನ್ನದದೆಂಬುದೇ ಸಿರಿಕೃಷ್ಣ ಮತವೆಂದ || ೬೨ ||
ಪದವಿಭಾಗ-ಅರ್ಥ: ತಂದೆ ಬೇಡ+ ಎಮಗೆ+ ಅವ್ವೆ (ತಾಯಿ ಅವ್ವೆ- ಅವ್ವ- ಪ್ರೀತಿಗೆ- ಅವ್ವೆ) ಬೇಡ+ ಎಮಗೆ(ತನಗೆ- ಎನಗೆ- ನನಗೆ ಬಹುವಚನ-> ನಮಗೆ- ಎಮಗೆ) + ಇಂದುಮುಖಿಯರನು+ ಒಲ್ಲೆವು+ ಆವ್ (ಕೃಷ್ಣನ ಮಾತು "ನಾವು') ಮನಸಂದು(ಸಂದು- ಕೊಟ್ಟು) ಮೆಚ್ಚಿಹೆವು (ನಾನು- ನಾವು ಮೆಚ್ಚಿದ್ದೇವೆ) ಎಮ್ಮ ಭಕ್ತರಿಗೆ+ ಎಂಬನು,+ ಅನವರತ (ಸದಾ) ನೊಂದೆನು+ ಎಂಬನು, ತನ್ನವರು ಮನ ನೊಂದರಾದೊಡೆ, ತನ್ನವರ ಸುಖವು+ ಇಂದು ತನ್ನದು+ ಅದೆಂಬುದೇ ಸಿರಿಕೃಷ್ಣ ಮತವೆಂದ.
ಅರ್ಥ:ಯುಧಿಷ್ಠಿರನು ಕೃಷ್ಣನೇ ನಮ್ಮಜೀವ ಜೀವನಕ್ಕೆ ಹೊಣೆ ಎಮದುದಕ್ಕೆ ವಸುದೇವನು, 'ನನ್ನ ಮಗನಿಗೆ ತಂದೆ ಬೇಡ, ತನಗೆ ಅವನ ಅವ್ವ ಬೇಡ, ತನಗೆ ಅಂದದ ಪತ್ನಿಯರು- ಇಂದುಮುಖಿಯರನ್ನೂ ಒಲ್ಲೆವು ಎನ್ನತ್ತಾನೆ. ಕೃಷ್ಣನು 'ನಾವು ಮನಸ್ಸನ್ನು ಪೂರ್ತಿಯಾಗಿ ನಮ್ಮ ಭಕ್ತರಿಗೆ ಕೊಟ್ಟು, ಅವರನ್ನು ಮೆಚ್ಚಿದ್ದೇವೆ' ಎನ್ನುವನು. ಸದಾಕಾಲ, ತನ್ನವರು ಮನ ನೊಂದರಾದರೆ, ಅವರಿಗಾಗಿ ನೊಂದೆನು ಎಂಬನು;, ತನ್ನವರ ಸುಖವೇ ಇಂದು ತನ್ನದು, ಎನ್ನವುದೇ ಶ್ರೀ ಕೃಷ್ಣನ ಮತವು,' ಎಂದ ವಸುದೇವ.
ಅರಸಿಯರ ಬಗೆಗೊಳ್ಳ ಮಕ್ಕಳ
ಸರಕು ಮಾಡನು ದೇಶ ಕೋಶದ
ಸಿರಿಯ ಗಣಿಸನು ಖಡ್ಡಿಗೊಳ್ಳನು ಗಾಢಗರ್ವಿತರ |
ಹರಿ ಪರಾಯಣರೆಂದೊಡವರಿಗೆ
ಹರಹಿಕೊಂಬನು ಮಗನ ಶೀಲವು
ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ || ೬೩ ||
ಪದವಿಭಾಗ-ಅರ್ಥ:ಅರಸಿಯರ ಬಗೆಗೊಳ್ಳ, ಮಕ್ಕಳ ಸರಕು(ಸಲಿಗೆ?) ಮಾಡನು, ದೇಶ ಕೋಶದ ಸಿರಿಯ ಗಣಿಸನು, ಖಡ್ಡಿಗೊಳ್ಳನು(ಖಡ್ಡಿ= ಸಹಾಯ ಮಾಡದ,) ಗಾಢಗರ್ವಿತರ, ಹರಿ ಪರಾಯಣರೆಂದೊಡೆ+ ಅವರಿಗೆ ಹರಹಿಕೊಂಬನು, ಮಗನ ಶೀಲವು ನರರ ಪರಿಯಲ್ಲ+ ಎಂದನು+ ಆ ವಸುದೇವನು+ ಅಳಿಯಂಗೆ.
ಅರ್ಥ:ವಸುದೇವನು ತನ್ನ ಸೋದರಳಿಯನಿಗೆ ಮತ್ತೂ ಹೇಳಿದನು; 'ಮಗನು ತನ್ನ ಪತ್ನಿಯರಿಗೂ ಮನಸ್ಸು ಕೊಡುವುದಿಲ್ಲ,, ಮಕ್ಕಳನ್ನೂ ಮುದ್ದು ಮಾಡುವುದಿಲ್ಲ. ದೇಶ ಕೋಶದ ಸಿರಿಯನ್ನೂ ಲೆಕ್ಕಿಸುವುದಿಲ್ಲ. ಬಹಳಗರ್ವಿತರ ಸಹಾಯಕ್ಕೆ ಹೋಗುವುದಿಲ್ಲ., ಹರಿ ಪರಾಯಣರೆಂದರೆ ಅವರಿಗೆ ಸಹಾಯಕ್ಕೆ ನಿಲ್ಲುವನು. ತನ್ನ ಮಗನ ಸ್ವಭಾವವು ಸಾಮಾನ್ಯ ಮಾನವರ ಪರಿಯಲ್ಲ,' ಎಂದನು.
ಲೋಗರೇ ನೀವೆಮಗೆ ನಿವಗರ
ಗಾಗಿ ಕರಗುವನದು ನಿಲಲಿ ತನ
ಗಾಗದವರಿಗೆ ತನ್ನ ತೆರುವನು ಕೊಲುವ ಹಗೆಗೊಲಿವ
ಲೋಗರೆನ್ನವರೆಂದು ಲೋಗರಿ
ಗಾಗಿ ಬದುಕುವೆನೆಂಬ ಬಲುಗೈ
ಚಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ ೬೪
ಪದವಿಭಾಗ-ಅರ್ಥ:ಲೋಗರೇ ನೀವು+ ಎಮಗೆ, ನಿವಗೆ (ನಿಮಗೆ)+ ಅರಗು+ ಆಗಿ ಕರಗುವನು+ ಅದು ನಿಲಲಿ ತನಗೆ+ ಆಗದವರಿಗೆ ತನ್ನ ತೆರುವನು, ಕೊಲುವ ಹಗೆಗೆ+ ಒಲಿವ ಲೋಗರು+ ಎನ್ನವರೆಂದು ಲೋಗರಿಗಾಗಿ ಬದುಕುವೆನೆಂಬ ಬಲುಗೈ ಚಾಗಿ (ತ್ಯಾಗಿ) ಕೃಷ್ಣನನು+ ಏನ ಹೇಳುವೆನೆಂದನು+ ಅರಸಂಗೆ
ಅರ್ಥ:ವಸುದೇವನು, 'ನೀವು ನಮಗೆ ಉಳಿದ ಸಾಮನ್ಯ ಜನರ ಹಾಗೆಯೇ? ಹತ್ತಿರದ ಬಂಧುಗಳು!,ನಿಮಗೆ ಕೃಷ್ನನು ಅರಗಿನಂತೆ ಆಗಿ ಕರಗುವನು. ಅದು ಹೋಗಲಿ ಅವನು ತನಗೆ ಆಗದವರಿಗೇ ತನ್ನನ್ನು ತೆರುವನು- ಸಹಾಯಕ್ಕೆ ಹೋಗುವನು. ಕೊಲ್ಲುವ ಶತ್ರುವಿಗೆ ಒಲಿಯುವನು! ಕೇಳಿದರೆ 'ಲೋಗರು- ಜನರು ತನ್ನವರು' ಎಂದು ಲೋಗರಿಗಾಗಿ ಬದುಕುವೆನು, ಎಂಬ ಬಲುಗೈ ನೀಡುವ ತ್ಯಾಗಿ ಅವನು. ಕೃಷ್ಣನನ್ನು ಕುರಿತು ನಾನು ಏನನ್ನು ಹೇಳುವೆನು! ಎಂದನು, ಅರಸ ಧರ್ಮಜನಿಗೆ.
ಅರ್ಥ:ವಸುದೇವನ ದೂರಿಧಂತಿರುವ ಹೊಗಳಿಕೆಯ ಮಾತಿಗೆ ಕೃಷ್ಣನು, ತಂದೆಯೇ ನಮ್ಮನ್ನು ದೂರದೆ ಇರುವವರು ತಾವಲ್ಲ. ಸಾಕು ಇನ್ನು, ಎಂದು ಹೇಳಿ, ನಂತರ ಕೃಷ್ನನು ಧರ್ಮಜನನ್ನು ಪಕ್ಕದಲ್ಲಿ ಬಾ ಎಂದು ಕರೆದು ಅವನ ಬೆನ್ನು ತಟ್ಟಿ, ಕೌರವರು ಹಸುಗಳನ್ನು ಕದ್ದಾಗ ಅದನ್ನು ತಪ್ಪಿಸಿದುದು ಹೇಗೆ ಏನು? ಪಾರ್ಥನು ಅದನ್ನು ತಂದ ಅನುವು- ಉಪಾಯ ಎಂತು- ಹೇಗೆ ಎಂದು ಕೇಳಿದನು.
ಅರ್ಥ:ಧರ್ಮರಾಯನು,ಕೃಷ್ಣನಿಗೆ,'ಕೀಲುಬೊಂಬೆಗೆ- ಎಲ್ಲಿಯ ದರ್ಪ, ಮನುಷ್ಯನನ ಸಾಹಸವು ಬೇರೇನು, ಯಂತ್ರದ ನೋಟ, ಯಂತ್ರವನ್ನು ಬಿಟ್ಟು ಜೀವಿಸಲು ಅದಕ್ಕೆ ತಿಳಿಯುವುದೇ ಬೇರೆ ದೇಹಿ? ಇಲ್ಲ. (ಬೇರೆ ದೇಹ ವಿದ್ದರೂ ಅದು ಸೂತ್ರಧಾರನ ಬೆರಳಿನ ಸನ್ನೆಯಂತೆ ಗೊಂಬೆ ಚಲಿಸುವುದು,- ಹಾಗೆ ನಾವು) , ಮೂಲತಹ ದೇಹಿಯೇ (ಜೀವನೇ) ನೀನು; ನಾವೆಲ್ಲ ನಿನ್ನಯ ದೇಹವು, ಇದರೊಳಗೆ ನಮಗೆ ಗರ್ವದ ಕಾಯುವ ಕಾವಲತನದ ಸಂರಕ್ಷಣ ಶಕ್ತಿ, ಯಜಮಾನಿಹೆ ಎಲ್ಲಿಯದು? (ಇಲ್ಲ, ಎಂದು ಭಾವ) ಎಂದು (ಧರ್ಮಜನು) ವಿನಯವಾಗಿ ಹೇಳಿದನು. (ತಾತ್ಪರ್ಯ: ಕೃಷ್ಣನು ಸೂತ್ರಧಾರ ತಾವೆಲ್ಲಾ (ಜನರು) ಸುತ್ರದಬೊಂಬೆಗಳು ಎಂದು ಭಾವ)
ಪದವಿಭಾಗ-ಅರ್ಥ:ನಗುತ ಹರಿ ನಿಂದಿರಲು, ಕೈ ದಂಡಿಗೆಯವರು ಹೊದ್ದಿದರು (ಹೊದ್ದು - ಹತ್ತಿರ ಪಕ್ಕದ ಸ್ಥಳ, ಕ್ರಿ. ಹತ್ತಿರ ಬಂದರು) ರೂವಾರಿಗೆಗೆ, ಬಿಜಯಂಗೈದನು,+ ಉಘೆಯೆಂದುದು (ಪಾ: ಬಿಜಯಂಗೈದನುಘೇಯೆಂದುದು) ಸುರಸ್ತೋಮ ಬಿಗಿದ ದಡ್ಡಿಯ ಬದ್ದರದ ಬೀಯಗದ ರಾಣೀವಾಸದ+ ಅಂದಣ ತೆಗೆದು ನಡೆದುದು ಮುಂದೆ ಸಂತೋಷದಲಿ ಯದುಸೇನೆ
ಅರ್ಥ:ಧರ್ಮರಾಯಬ ಸ್ವಾಗತವನ್ನು ಪಡೆದು, ಕೃಷ್ಣನು ನಗುತ್ತಾ ನಿಂತಿರುವಾಗ, ಕೈ ದಂಡಿಗೆಯವರು ಕರದೊಯ್ಯಲು ರೂವಾರಿ ಕೃಷ್ಣನ ಹತ್ತಿರ ಬಂದರು. ಕೃಷ್ನನು ತನ್ನವಸತಗೆ ಹೊರಟನು. ಆಗ ಉಘೇ, ದೇವತೆಗಳು ಎಂದು ಜಯಕಾರ ಹಾಕಿದರು. ಬಿಗಿದ ದಡ್ಡಿಯ/ ಗುಂಪಿನ ವಾದ್ಯಘೋಷದ ನಡುವೆ ರಾಣೀವಾಸದವರು ಪಲ್ಲಕ್ಕಿಯಲ್ಲಿ ಹೋದರು ಕೂಡಲೆ ಹಿಂದೆ ನಿಂತಿದ್ದ ಯದುಸೇನೆಯು ಸಂತೋಷದಿಂದ ಮುಂದೆ ನಡೆಯಿತು.
ಅರ್ಥ: ಕೃfಣನು ಉಪಪ್ಲಾವ್ಯನಗರವನ್ನು ಹೊಕ್ಕನು. ಅವನ ಎರಡೂ ಪಕ್ಕದಲ್ಲಿ ಪಾಂಡವರು ಬರುತ್ತಿದ್ದರು. ಆಗ ನಗರಜನ ಮೈಯ್ಯನ್ನು ಭೂಮಿಯಮೇಲೆ ಉದ್ದಕ್ಕೆ ಚಾಚಿ ನಮಸ್ಕರಿಸಿದರು. ಅದರಿಂದ ಬೀದಿಯ ಧೂಳು ಎದ್ದು ಕವಿಯಿತು. ಹಾಗೆ ಮುಂದೆ ಒಟ್ಟಾಗಿ ನಗರ ಪ್ರವೇಶ ಮಾಡಿದಾಗ, ತಪಸ್ವಿಗಳು ನಾನಾ ರೀತಿಯಿಂದ ಹೊಗಳುವ ಸ್ತುತಿಗಳಿಗೆ ಸಿಗದ ದೇವ ಕೃಷ್ಣನು ಪಾಂಡವರಿಗೆ ಸಿಕ್ಕಿದನು, ಶಿವ ಶಿವ ಎನ್ನುತ್ತಿದ್ದರು ಪಂಡಿತರ ಸಮೂಹ.
ಅರ್ಥ:ಕೃಷ್ನನನ್ನು ನೋಡಲು ನೂಕುನುಗ್ಗಲಿನಲ್ಲಿ ಮೇಲೆ ಬೀಳುವ ಜನರನ್ನು ಕಾವಲಿನ ಕೈಗೋಲಿನವರು ಹೊಡೆಯುತ್ತಿರಲು,ಲಕ್ಷ್ಮೀಲೋಲ ಶ್ರೀಕೃಷ್ನನು ಅವರನ್ನು ಬೈದು ತಡೆದು, ಎಲ್ಲರಿಗೂ ಕಾಣಿಸಿಕೊಳುತ್ತಾ (ದರ್ಶನ ನೀಡುತ್ತಾ), ಮತ್ತು ಮೇಲು ನೆಲೆಯುಪ್ಪರಿಗೆಗಳಲ್ಲಿದ್ದ ಪುರಜನರನ್ನೂ, ಚಂದದ ಬಾಲೆಯರ ಕಡೆಕಣ್ಣೋಟದಿಂದ ದೃಷ್ಠಿಯಿಂದಲೇ ದೋಷಗಳನ್ನು ನಿವಾಳಿಸಿ ತೆಗೆಯುವುದನ್ನು ಸ್ವೀಕರಿಸುತ್ತಾ, ಕೃಷ್ನನು ರಾಜಮಂದಿರವನ್ನು ಹೊಕ್ಕನು.
ಪದವಿಭಾಗ-ಅರ್ಥ:ಹಿಡಿದರು+ ಆರತಿಗಳನು ಬಣ್ಣದ ಸೊಡರು ಸುಳಿದವು ಮುಂದೆ ನೆಲನು+ ಉಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ ಹಿಡಿದ ಕೈದೀವಿಗೆಗಳನು ಕೈದುಡುಕಿ ತಿವಿದು+ ಆಡುತ್ತ ಕಾಂತಿಯ ಕಡಲ (ತುಂಬಿದ) ಮಣಿಮಯ ಪೀಠದಲಿ ಮಂಡಿಸಿದನು+ ಅಸುರಾರಿ
ಅರ್ಥ:ವನಿತೆಯರು ಕೃಷ್ನನಿಗೆ ಆರತಿಗಳನ್ನು ಎತ್ತಿದರು. ಬಣ್ಣದ ಸೊಡರು/ ದೀಪಗಳನ್ನು ಅವನಿಗೆ ಸುಳಿದರು. ಮುಂದೆ ನೆಲ ನಡುಗುವ ನೆಡಿಗೆಯ ಭೀಮಾರ್ಜುನರ ಜೊತೆಯಲ್ಲಿ ಸಂಭಾಷಿಸುತ್ತಾ ಹರ್ಷದಿಂದ ಸೇವಕರು ಹಿಡಿದ ಕೈದೀವಿಗೆಗಳನ್ನು ಕೈಯಿಂದ ಸರಸಿ ಕಾಂತಿಯಿಂದ ತುಂಬಿದ ಮಣಿಮಯ ಪೀಠದಲ್ಲಿ ಅಸುರಾರಿ ಕೃಷ್ಣನು ಕುಳಿತನು.
ಅರ್ಥ: ಕೃಷ್ನನು ಬಂದಿದ್ದ ಎಲ್ಲಾ ರಾಜರನ್ನೂ ಬೀಳ್ಕೊಟ್ಟನು. ನಂತರ ಕುಂತಿಯ ಕುಮಾರರಾದ ಪಾಂಡವರ ಪರಿಮಿತವಾದ ಸಭೆಯಲ್ಲಿ ಕೃಷ್ಣನು, ನಸು ನಗುತ್ತಾ, ಕುರು ಭೂಪಾಲ ಕೌರವನುನು ಸೋತು ದಣಿದು ಹೋದನು. ಅವನು ಉಚಿತವಾವ ರೀತಿಯಲ್ಲಿ ರಾಜ್ಯವನ್ನು ನಿಮ್ಮಿಂದ ಆಳಿಸುವ ಯೋಚನೆ ಇದೆಯೇ? ಆ ವಿಷಯದಲ್ಲಿ ನಿಮ್ಮ ಮಾತು- ಅಭಿಪ್ರಾಯ ಏನು ಎಂದು ಕೇಳಿದ.
ಅರ್ಥ:ಅರ್ಜುನನು ಗೋವುಗಳನ್ನು ರಕ್ಷಣೆ ಮಾಡಿದ ನಂತರ ಗೋವುಗಳು ಇತ್ತ ಮತ್ಸ್ಯ ನಗರಕ್ಕೆ ಮರಳಿದವು. ಶತ್ರುಗಳು ಅತ್ತ ಹಸ್ತನಾಪುರಕ್ಕೆ ಹೋದರು. ನಂತರ ಮತ್ಸ್ಯನು/ ವಿರಾಟನು ನಮ್ಮ ಐವರನ್ನೂ ನಾವು ಪಾಂಡವರು ಎಂದು ಅರಿತುಕೊಂಡು, ನಮ್ಮನ್ನು ವಿನಯದಿಂದ ಕೊಂಡಾಡಿದನು. ಉತ್ತಮನಾದ ಸುಭದ್ರೆಯ ಮಗ ಅಭಿಮನ್ಯವಿಗೆ ಉತ್ತರೆಯನ್ನು ಕೊಡುವ ಅಪೇಕ್ಷೆಯಲ್ಲಿ ಇವರು/ ವಿರಾಟನು ಇರಲು, ನಾವು ನಿಮ್ಮನ್ನು ಕರೆಯಲು ಚಾರರನ್ನು ದ್ವಾರಕೆಗೆ ಅಟ್ಟಿದೆವು/ ಕಳಿಸಿದೆವು, ಎಂದು ಧರ್ಮರಾಯನು ಕೃಷ್ಣನಿಗೆ ಬಿನ್ನವಿಸಿದನು.
ಹಿಡಿದರಾರತಿಗಳನು ಬಣ್ಣದ
ಸೊಡರು ಸುಳಿದವು ಮುಂದೆ ನೆಲನು
ಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ |
ಹಿಡಿದ ಕೈದೀವಿಗೆಗಳನು ಕೈ
ದುಡುಕಿ ತಿವಿದಾಡುತ್ತ ಕಾಂತಿಯ
ಕಡಲ ಮಣಿಮಯ ಪೀಠದಲಿ ಮಂಡಿಸಿದನಸುರಾರಿ || ೭೧ ||
ಪದವಿಭಾಗ-ಅರ್ಥ:ಹಿಡಿದರು+ ಆರತಿಗಳನು ಬಣ್ಣದ ಸೊಡರು ಸುಳಿದವು ಮುಂದೆ ನೆಲನು+ ಉಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ ಹಿಡಿದ ಕೈದೀವಿಗೆಗಳನು ಕೈದುಡುಕಿ ತಿವಿದು+ ಆಡುತ್ತ ಕಾಂತಿಯ ಕಡಲ (ತುಂಬಿದ) ಮಣಿಮಯ ಪೀಠದಲಿ ಮಂಡಿಸಿದನು+ ಅಸುರಾರಿ
ಅರ್ಥ:ವನಿತೆಯರು ಕೃಷ್ನನಿಗೆ ಆರತಿಗಳನ್ನು ಎತ್ತಿದರು. ಬಣ್ಣದ ಸೊಡರು/ ದೀಪಗಳನ್ನು ಅವನಿಗೆ ಸುಳಿದರು. ಮುಂದೆ ನೆಲ ನಡುಗುವ ನೆಡಿಗೆಯ ಭೀಮಾರ್ಜುನರ ಜೊತೆಯಲ್ಲಿ ಸಂಭಾಷಿಸುತ್ತಾ ಹರ್ಷದಿಂದ ಸೇವಕರು ಹಿಡಿದ ಕೈದೀವಿಗೆಗಳನ್ನು ಕೈಯಿಂದ ಸರಸಿ ಕಾಂತಿಯಿಂದ ತುಂಬಿದ ಮಣಿಮಯ ಪೀಠದಲ್ಲಿ ಅಸುರಾರಿ ಕೃಷ್ಣನು ಕುಳಿತನು.
ಅರ್ಥ: ಕೃಷ್ನನು ಬಂದಿದ್ದ ಎಲ್ಲಾ ರಾಜರನ್ನೂ ಬೀಳ್ಕೊಟ್ಟನು. ನಂತರ ಕುಂತಿಯ ಕುಮಾರರಾದ ಪಾಂಡವರ ಪರಿಮಿತವಾದ ಸಭೆಯಲ್ಲಿ ಕೃಷ್ಣನು, ನಸು ನಗುತ್ತಾ, ಕುರು ಭೂಪಾಲ ಕೌರವನುನು ಸೋತು ದಣಿದು ಹೋದನು. ಅವನು ಉಚಿತವಾವ ರೀತಿಯಲ್ಲಿ ರಾಜ್ಯವನ್ನು ನಿಮ್ಮಿಂದ ಆಳಿಸುವ ಯೋಚನೆ ಇದೆಯೇ? ಆ ವಿಷಯದಲ್ಲಿ ನಿಮ್ಮ ಮಾತು- ಅಭಿಪ್ರಾಯ ಏನು ಎಂದು ಕೇಳಿದ.
ಅರ್ಥ:ಅರ್ಜುನನು ಗೋವುಗಳನ್ನು ರಕ್ಷಣೆ ಮಾಡಿದ ನಂತರ ಗೋವುಗಳು ಇತ್ತ ಮತ್ಸ್ಯ ನಗರಕ್ಕೆ ಮರಳಿದವು. ಶತ್ರುಗಳು ಅತ್ತ ಹಸ್ತನಾಪುರಕ್ಕೆ ಹೋದರು. ನಂತರ ಮತ್ಸ್ಯನು/ ವಿರಾಟನು ನಮ್ಮ ಐವರನ್ನೂ ನಾವು ಪಾಂಡವರು ಎಂದು ಅರಿತುಕೊಂಡು, ನಮ್ಮನ್ನು ವಿನಯದಿಂದ ಕೊಂಡಾಡಿದನು. ಉತ್ತಮನಾದ ಸುಭದ್ರೆಯ ಮಗ ಅಭಿಮನ್ಯವಿಗೆ ಉತ್ತರೆಯನ್ನು ಕೊಡುವ ಅಪೇಕ್ಷೆಯಲ್ಲಿ ಇವರು/ ವಿರಾಟನು ಇರಲು, ನಾವು ನಿಮ್ಮನ್ನು ಕರೆಯಲು ಚಾರರನ್ನು ದ್ವಾರಕೆಗೆ ಅಟ್ಟಿದೆವು/ ಕಳಿಸಿದೆವು, ಎಂದು ಧರ್ಮರಾಯನು ಕೃಷ್ಣನಿಗೆ ಬಿನ್ನವಿಸಿದನು.
ಕೊಳುಗೊಡೆಗೆ ಸೇರುವರೆ ಮದುವೆಯ
ನೊಲಿದು ದೇವರು ಮಾಡುವುದು ಮೇ
ಲಿಳೆಯ ಕಾರ್ಯವ ಬುದ್ಧಿಗಲಿಸುವದೆಮ್ಮನುದ್ಧರಿಸಿ |
ಬಳಿಕ ಬಿಜಯಂಗೈವುದಿದು ಹದ
ನೆಲೆ ದಯಾಂಬುಧಿ ಕೇಳೆನಲು ನೃಪ
ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ || ೭೪ ||
ಪದವಿಭಾಗ-ಅರ್ಥ: ಕೊಳು+ಗೊ- ಕೊಡೆಗೆ ಸೇರುವರೆ (ಮನಸ್ಸಿಗೆ ಸೇರಿದರೆ ಇಷ್ಟವಾದರೆ) ಮದುವೆಯನು+ ಒಲಿದು ದೇವರು ಮಾಡುವುದು ಮೇಲೆ,+ ಇಳೆಯ ಕಾರ್ಯವ (ಭೂಮಿಯ ಪಡೆಯುವ ಕಾರ್ಯದ) ವಿಚಾರ ಬುದ್ಧಿಗಲಿಸುವದು+ ಎಮ್ಮನು+ ಉದ್ಧರಿಸಿ ಬಳಿಕ ಬಿಜಯಂಗೈವುದು+ ಇದು ಹದನ (ಇದು ಮುಖ್ಯ ವಿಚಾರ)+ ಎಲೆ ದಯಾಂಬುಧಿ ಕೇಳು+ ಎನಲು ನೃಪತಿಲಕನ+ ಉಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ.
ಅರ್ಥ:ಧರ್ಮಜನು, 'ಈ ವಿವಾಹವು, ಕೊಳ್ಳುವುದು ಕೊಡುವುದು ದೇವ ಕೃಷ್ಣ! ನಿಮಗೆ ಇಷ್ಟಪಟ್ಟು ಒಪ್ಪಿಗೆಯಾದರೆ, ನಂತರದ ವಿವಾಹಕಾರ್ಯವನ್ನು ನೀವು ನೆಡೆಸಿಕೊಡಬೇಕು (ವಿವಾಹಕ್ಕೆ ನಿಮ್ಮ ಒಪ್ಪಿಗೆ ಬೇಕು- ಎಂದರ್ಥ). ಆ ನಂತರ ನಮಗೆ ಸಲ್ಲಬೇಕಾದ ಭೂಮಿ/ ರಾಜ್ಯದ ವಿಚಾರದಲ್ಲಿ ಮುಂದಿನ ಕಾರ್ಯದ ಬಗೆಗೆ ತಿಳುವಳಿಕೆ ನೀಡಬೇಕು. ನಮ್ಮನ್ನು ಉದ್ದರಿಸಿ ನೀವು ದ್ವಾರಕೆಗೆ ದಯಮಾಡಿಸವುದು (ಪಯಣಿಸುವುದು). ಎಲೆ ದಯಾಂಬುಧಿ, ಕೇಳು, ಇದು ಮುಖ್ಯ ವಿಚಾರ, ಎನ್ನಲು, ಧರ್ಮಜನ ಉಚಿತವಾದ ಕೋರಿಕೆಗೆ ಕೃಷ್ಣನು ಮನಃಪೂರ್ವಕ ಒಲಿದು ಹರಿಯು ಹೀಗೆ ಹೇಳಿದ.
ಕೊಳುಗೊಡೆಗೆ ತಪ್ಪೇನು ವಸುವಿನ
ಕುಲ ವಿರಾಟನು ಇಂದು ವಂಶಾ
ವಳಿಯವರು ನೀವಾಭಿಜಾತ್ಯದೊಳಿಲ್ಲ ಹಳಿವುಗಳು |
ಒಳನುಡಿಗಳಲಿ ದೈವ ಶಕುನಾ
ವಳಿಗಳಾದೊಡೆ ಹರುಷದಲಿ ಮಂ
ಗಳ ಮುಹೂರ್ತವ ಮಾಡಿಯೆಂದನು ಕೃಷ್ಣ ನಸುನಗುತ || ೭೫ ||
ಪದವಿಭಾಗ-ಅರ್ಥ: ಕೊಳುಗೊಡೆಗೆ ತಪ್ಪೇನು? ವಸುವಿನ ಕುಲ ವಿರಾಟನು ಇಂದು (ಚಂದ್ರ) ವಂಶಾವಳಿಯವರು, ನೀವು+ ಅಭಿಜಾತ್ಯದೊಳು+ ಇಲ್ಲ ಹಳಿವುಗಳು ಒಳನುಡಿಗಳಲಿ ದೈವ ಶಕುನಾವಳಿಗಳು+ ಆದೊಡೆ, ಹರುಷದಲಿ ಮಂಗಳ ಮುಹೂರ್ತವ ಮಾಡಿ+ ಯೆಂದನು ಕೃಷ್ಣ ನಸುನಗುತ.
ಅರ್ಥ:ನೀವೂ ವಿರಾಟನೂ ಪರಸ್ಪರ ಹೆಣ್ಣುಗಂಡು ಕೊಳುಗೊಡೆಗೆಯಲ್ಲಿ ತಪ್ಪೇನು ಇಲ್ಲ. ವಿರಾಟನು ವಸುವಿನ ಕುಲದವನು; ನೀವು ಚಂದ್ರ ವಂಶಾವಳಿಯವರು, ನೀವು ಅವರ ವಂಶದ ಗೋತ್ರದ ಅಭಿಜಾತ್ಯದಲ್ಲಿ ಇಲ್ಲ. ಬಿಡಬೇಕಾದ ಕೆಟ್ಟದಿನಗಳು, ಒಳತುದಿನದ ವಿಚಾರದ ನುಡಿಗಳನ್ನು ಪುರೋಹಿತರಿಂದ ತಿಳಿದು, ದೈವ ಶಕುನವೇ ಮೊದಲಾದವು ಶುಭಸೂಚಕವಾದರೆ, ಹರ್ಷದಿಂದ ಮಂಗಳ ಮುಹೂರ್ತವನ್ನು ಮಾಡಿ ವಿವಾಹ ನೆರವೇರಿಸಿ,' ಎಂದು ಕೃಷ್ಣನು ನಸುನಗುತ್ತಾ ಹೇಳಿದನು.
ಅರ್ಥ: ಘಳಿಗೆವಟ್ಟಲಲ್ಲಿ ನೀರನ್ನು ಭರಿತಮಾಡಿ/ ತುಂಬಿ ಅದರಿಂದ ಉತ್ತಮ ಮುಹೂರ್ತ ತಿಳಿದು, ಆ ಮುಹೂರ್ತದಲ್ಲಿ ವಿಸ್ತಾರವಾಗಿ ಪುಣ್ಯಾಹವನ್ನ ಮಾಡಿ, ಅಕ್ಷತೆಯನ್ನು ತಳಿದು ವಧೂ ವರರನ್ನು ವಿಮಲವಾದ/ ಪರಿಶುದ್ಧವಾದ ಮಂಟಪಕ್ಕೆ ಕರೆತಂದರು. ಪರಮ ಋಷಿಗಳು ನೆಡೆಸಿದ ವಿವಾಹ ಹೋಮದಲ್ಲಿ ಪೂಜ್ಯವಾದ ಹೋಮದ ಅಗ್ನಿಯನ್ನು ಪ್ರದಕ್ಷಿಣೆಮಾಡಿದರು. ಹೀಗೆ ಅಭಿಮನ್ಯುವು ಕುಮಾರಿ ಉತ್ತರೆಯನ್ನು ವರಿಸಲು ವೈದಿಕ ಕ್ರಮದಲ್ಲಿ ಉತ್ತರೆಯು ಪತ್ನಿಯಾಗಿ ವರ ಅಭಿಮನ್ಯುವಿನ ವಾಮದಲಿ/ ಎಡಭಾಗಕ್ಕೆ ಬಂದು ನಿಂತಳು.
ಅರ್ಥ:ವೈಭವವು ಮೊದಲಿನ ಐದರಷ್ಟಾಗಲು ಸದ್ವಿಜ/ಉತ್ತಮ ಬ್ರಾಹ್ಮಣರ ಸಭೆಯನ್ನು ವಿರಾಟರಾಜನು ಆರಾಧಿಸಿದನು (ಸಭಾಪೂಜೆ). ಬಂದಿದ್ದ ರಾಜರು ರತ್ನ ಭೂಷಣಗಳ ಬಳುವಳಿಯನ್ನೂ ಉಡುಗೊರೆಗಳನ್ನೂ ಕೊಟ್ಟರು. ಹರಿಯಂತೆ ವೀರನಾಗೆಂದು ವರನ ಕಡೆಯ ಮತ್ತು ವಧುವಿನ ಕಡೆಯ ಎರಡೂ ಮನೆಯರು, ಕೃಷ್ಣನ ಎಂಟು ಅರಸಿಯರು, ಅಭ್ಯಾಗತ ಜನರು ಶ್ರೇಷ್ಠ ತಿಲಕ ಅಭಿಮನ್ಯುವನ್ನು (ಉತ್ತರೆಯನ್ನೂ ಸೇರಿಸಿಕೊಂಡು ,ವಧೂವರರನ್ನು ಎಂದು ಭಾವ) ಹರುಷದಿಂದ ಹರಸಿದರು.
ಇದು ಶುಭೌಘದ ಗರುಡಿ ಬಹು ಸಂ
ಪದದ ನೆಲೆಮನೆ ಸೊಂಪಿನಾಗರ
ವಿದು ಪರಾನಂದ ಪ್ರವಾಹದ ಜನ್ಮಭೂಮಿಯಿದು ||
ಮುದದ ಕೇಳೀಸ್ಥಾನ ವಿಮಲಾ
ಭ್ಯುದಯದೋಲಗಶಾಲೆ ಲಕ್ಷ್ಮೀ
ಸದನವೆನೆ ರಂಜಿಸಿದುದಭಿಮನ್ಯುವಿನ ವೈವಾಹ || ೭೯ ||
ಪದವಿಭಾಗ-ಅರ್ಥ: ಇದು ಶುಭೌಘದ ಶುಭೌಘದ (ಶುಭ+ ಓಘ= ಶುಭೌಘ; ಓಘ, ಗುಂಪು, ಸಮೂಹ) ಗರುಡಿ ಬಹು ಸಂಪದದ ನೆಲೆಮನೆ ಸೊಂಪಿನಾಗರವು+ ಇದು ಪರಾನಂದ (ಇಹ- ಭೂಮಿ, ಪರ- ಸ್ವರ್ಗ ಪರ+ ಆನಂದ) ಪ್ರವಾಹದ ಜನ್ಮಭೂಮಿಯಿದು ಮುದದ ಕೇಳೀಸ್ಥಾನ (ಕೇಳಿ ಆಟ) ವಿಮಲಾ ಭ್ಯುದಯದ+ ಓಲಗಶಾಲೆ ಲಕ್ಷ್ಮೀಸದನವು+ ಎನೆ ರಂಜಿಸಿದುದು+ ಅಭಿಮನ್ಯುವಿನ ವೈವಾಹ.
ಅರ್ಥ: ಅಭಿಮನ್ಯುವಿನ ವಿವಾಹವು ಹೇಗಿತ್ತೆಂದರೆ: ಇದು ಶುಭದ ಸಮೂಹದ ಗರುಡಿ, ಬಹು ಸಂಪದದ ನೆಲೆಮನೆ, ಸೊಂಪಿನ/ ಸುಖದ ನೆಲೆ, ಇದು ಸ್ವರ್ಗದ ಆನಂದದ ಪ್ರವಾಹದ ಜನ್ಮಭೂಮಿಯು, ಇದು ಮುದದಿಂದ ಆಡುವ ಆಟದಸ್ಥಾನ, ಉತ್ತಮ/ ಪುಣ್ಯದ ಅಭ್ಯುದಯದ ಓಲಗಶಾಲೆ/ ಸಭೆ; ಲಕ್ಷ್ಮೀಯ ಮನೆ- ವೈಕುಂಠ ಎನ್ನುಂವಂತೆ ರಂಜಿಸಿತ್ತು.
ಅರ್ಥ: ಶ್ರೇಷ್ಠವಾದ ಚತುರ್ಥಿಯಲ್ಲಿ -(ನಾಗೋಲಿ ಶಾಸ್ತ್ರ) ದಂಪತಿಗಳು ಪುರದಲ್ಲಿ ರಾತ್ರಿ ಚಾಮರದಸೇವೆ ಚಾತುರಂಗಬಲದೊಡನೆ ಭೂಮೀಚಾರದಲ್ಲಿ/ ಮೆರವಣಿಗೆಯಲ್ಲಿ ಉತ್ಸಾಹದಿಂದ ಮೆರೆದರು. ಮರುದಿವಸ ಅವವಭೃತ ಸ್ನಾನಮಾಡಿ ವಿವಾಹ ಕಾರ್ಯಕ್ರಮವನ್ನು ವಿಸ್ತರಿಸಿದರು. ಅದರಲ್ಲಿ ಪನ್ನೀರುತುಂಬಿದ ಹೊಂಗೊಪ್ಪರಿಗೆಗಳಲ್ಲಿ ಕುಂಕುಮದ ಪಾತ್ರೆ/ ಕೊಡದೊಡನೆ (ಇದು ಅಪರಿಚಿತ ಪದ್ದತಿ- ಬೇರೆ ಅರ್ಥವೂ ಇರಬಹುದು) ಗೃಹಪ್ರವೇಶದ ಹೊಸಮನೆಗೆ ವಾಸಕ್ಕೆ ಹೋಗುವ ಶಾಸ್ತ್ರವನ್ನೂ ಮುಗಿಸಿದರು.
ಅರ್ಥ:ಕನಕ ಮಣಿಗಳ ಆಭರನ ತೊಟ್ಟು, ಜಾಜಿಯ ಸೀತಾಳಿ ಬಂದಲಿಕೆ ಹೂವು ಮುಡಿದು ಮನ್ಮಥನ ಬಾಣದಂತಿರುವ ಖಾತಿಯರು(ವೀರ ವನಿತೆಯರು) ಕೃಷ್ಣನ ಪತ್ನಿಯರು, ಪಾಂಡವರ ಪತ್ನಿಯರು,ಅವರೊಡನೆ ಮತ್ಸ್ಯನ ವನಿತೆಯರು, ಪಾಂಚಾಲಿನಿಯರು, ಬರಲು, ಖಾಡಾಖಾಡಿ ಹೊಯ್ ಹೊಯ್ದು ಓಕುಳಿಯನ್ನು ಆಡಿದರು. (ನಾಲ್ಕನೆಯ ದಿನ ಪನ್ನೀರಿರು, ಅರಿಶಿನ ಕುಂಕುಮದ ನೀರಿನಲ್ಲಿಓಕುಳಿ ಆಡುವ ಪದ್ದತಿ ಇತ್ತು ; ಕವಿಯ ಕಾಲದಲ್ಲಿ ಆರನೆಯ ದಿನ ಓಕುಳಿ ಆಡುವ ಪದ್ದತಿ ಇದ್ದಿರಬಹುದು.)
ಅರ್ಥ:ಗಂಧ ರಸ ಕತ್ತುರಿಯ ಪನ್ನೀರುಗಳ ಹೊಳೆಯಲ್ಲಿ ಭೂಮಿ ನೆನೆಯಿತು. ಒಡೆವೆಯೂ ಸೇರಿ ದಿಕ್ಕುಗಳು ಸುವಾಸನೆ ಹೊಂದಿತು. ಸಮುದ್ರ ಹೊಸ ತಂಪಾದ ಹನಿಗಳಲ್ಲಿ ಸೂರ್ಯನೂ ಪರಿಮಳಿಸಿದನು. ಗಾಳಿಯ ಸುರಭಿತನವು/ ಪರಿಮಳವು ಅಚ್ಚರಿಯಾಗಿ ಆಕಾಶವನ್ನು ಪಸರಿಸಿತು.ಇದರ ಪರಮ ಸೌರಭಕ್ಕೆ/ ಸುವಾಸನೆಗೆ ಸಕಲ ದೇವತೆಗಳೂ ಮೋಹಗೊಂಡರು.
ಪದವಿಭಾಗ-ಅರ್ಥ: ಬಳುವಳಿಯ ನಿಖಿಳ+ ಅವನೀ ಮಂಡಲವನು+ ಅನುಪಮ(ಹೋಲಿಸಲಾರದಷ್ಟು) ಕೋಶ ವರ್ಗದ ಲಲನೆಯರ ಗಜ ವಾಜಿ ರಥ ಪಾದಾತಿ ಗೋವ್ರಜವ ಅಳಿಯಗೆ+ ಇತ್ತು ವಿರಾಟ ನೃಪ ಯದುಕುಲವನು+ ಆ ಪಾಂಚಾಲ ಚೈದ್ಯಾವಳಿಯನು+ ಉತ್ತಮ ವಸ್ತು ವಾಹನದಿಂದ ಮನ್ನಿಸಿದ. ಅರ್ಥ: ಬಳುವಳಿಯಾಗಿ ದೊಡ್ಡ ಭೂಮಿಯ ಮಂಡಲವನ್ನು ಕೊಟ್ಟು, ಬಹಳ ಕೋಶ, ಉತ್ತಮ ದಶಿಯರನ್ನೂ, ಗಜ, ವಾಜಿ, ರಥ, ಪಾದಾತಿ, ಗೋವ್ರಜವವನ್ನು ಅಳಿಯನಿಗೆ ಕೊಟ್ಟು, ನಂತರ ವಿರಾಟ ನೃಪನು ಯದುಕುಲದವರನ್ನು, ಆ ಪಾಂಚಾಲ ಚೈದ್ಯಾವಳಿಯನ್ನೂ ಉತ್ತಮ ವಸ್ತು ವಾಹನಗಳನ್ನು ಕೊಟ್ಟು ಗೌರವಿಸಿದ.
ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣ ರಾಯನ
ಪಾದ ದರುಶನವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದುದನು ನೀ ಕರುಣಿಸೆಂದರು ವೀರನರಯಣನ || ೮೫ ||[೧][೨]
ಪದವಿಭಾಗ-ಅರ್ಥ: ಆದುದು+ ಅಭಿಮನ್ಯುವಿನ ಮದುವೆ ಮಹಾ ದಯಾಂಬುಧಿ ಕೃಷ್ಣ ರಾಯನಪಾದ ದರುಶನವಾಗಲು+ ಇಮ್ಮಡಿಸಿತ್ತು ನಮ್ಮ+ ಉದಯ ಮೇದಿನಿಯ ನಾವು+ ಒತ್ತೆಯಿಟ್ಟೆವು, ಕಾದುಕೊಂಡೆವು ಸತ್ಯವನು, ಮೇಲಾದುದನು ನೀ ಕರುಣಿಸು+ ಎಂದರು ವೀರ ನರಯಣನ ಅರ್ಥ: ಅಭಿಮನ್ಯುವಿನ ಮದುವೆ ಆಯಿತು. ಮಹಾ ದಯಾಂಬುಧಿಹಯಾದ - ಆ ಸಮಯದಲ್ಲಿ ಕರುಣಾಳುವಾದ ಕೃಷ್ಣರಾಯನ ಪಾದಗಳ ದರ್ಶನವಾಗಿದ್ದರಿಂದ ನಮ್ಮಉದಯದ ಸಂತೋಷ ಇಮ್ಮಡಿಸಿ ಹೆಚ್ಚಿನದಾಯಿತು. ಪಾಂಡವರು,'ಮೇದಿನಿಯನ್ನು ನಾವು ಜೂಜಿನಲ್ಲಿ ಒತ್ತೆಯಿಟ್ಟು ಕಳೆದುಕೊಂಡೆವು, ಆದರೆ ಮಾತಿಗೆ ತಪ್ಪದೆ ಸತ್ಯವನು ಕಾದುಕೊಂಡೆವು, ಇಷ್ಟರ ಮೇಲೆ ಆದುದನ್ನು / ಕಷ್ಟವನ್ನು ಪರಿಹರಿಸಿ ನೀನು ನಮ್ಮನ್ನು ಕಾಪಾಡಿ ಕರುಣಿಸಬೇಕು, ಎಂದು ವೀರನಾರಯಣನಾದ ಕೃಷ್ಣನನ್ನು ಪ್ರಾರ್ಥಿಸಿದರು.
↑ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
↑ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.