ಕುಮಾರವ್ಯಾಸ ಭಾರತ/ಸಟೀಕಾ (೯.ಶಲ್ಯಪರ್ವ::ಸಂಧಿ-೧)

<ಕುಮಾರವ್ಯಾಸಭಾರತ-ಸಟೀಕಾ

ಶಲ್ಯಪರ್ವ: ೧ ನೆಯ ಸಂಧಿ

ಸಂಪಾದಿಸಿ
ರಾಯಕೇಳೈ ಕದನದಲಿ ರಾ
ಧೇಯನವಸಾನದಲಿ ಕೌರವ
ರಾಯ ದಳಪತಿಯಾಗಿ ಹೊಕ್ಕನು ಶಲ್ಯನಾಹವವ ||ಸೂ||

ಪದವಿಭಾಗ-ಅರ್ಥ: ರಾಯ ಕೇಳೈ ಕದನದಲಿ(ಯುದ್ಧ) ರಾಧೇಯನ+ ಅವಸಾನದಲಿ(ಸಾವಿನ ನಂತರ) ಕೌರವರಾಯ ದಳಪತಿಯಾಗಿ ಹೊಕ್ಕನು ಶಲ್ಯನು+ ಆಹವವ (ಯುದ್ಧ).
ಅರ್ಥ:ಸಂಜಯನು ಧೃತರಾಷ್ಟ್ರನಿಗೆ, 'ರಾಯನೇ ಕೇಳು, ಯುದ್ಧದಲ್ಲಿ ರಾಧೇಯನಾದ ಕರ್ಣನು ಅವಸಾನ ಹೊಂದಲು ಕೌರವರಾಯನ ದಳಪತಿಯಾಗಿ ಶಲ್ಯನು ಯುದ್ಧಕ್ಕಾಗಿ ರಣರಂಗವನ್ನು ಹೊಕ್ಕನು.[][] []

ಸಂಜಯನ ವರದಿ, ಧೃತರಾಷ್ಟ್ರನ ಶೋಕ

ಸಂಪಾದಿಸಿ
ಹೇಳರೇ ಭೀಷ್ಮಾದಿ ಹಿರಿಯರು
ಮೇಲುದಾಯವ ಬಲ್ಲವರು ಹೆ
ಚ್ಚಾಳುತನದಲಿ ಹಿಗ್ಗಿಕಂಡಿರೆ ಜಯದ ಜಾರುಗಳ |
ಮೇಲಣಾಹವದೊಳಗೆ ದೇಹವ
ಬೀಳುಕೊಂಡನು ಶಲ್ಯನಲ್ಲಿಂ
ಮೇಲೆ ದೊರೆಗೇನಾದುದೆಂಬುದನರಿಯೆ ನಾನೆಂದ || ೧ ||
ಪದವಿಭಾಗ-ಅರ್ಥ:ಹೇಳರೇ ಭೀಷ್ಮ+ ಆದಿ(ಮೊದಲಾದ) ಹಿರಿಯರು ಮೇಲುದಾಯವ(ಮುಂದಿನ ಪರಿಣಾಮವನ್ನು ಬಲ್ಲವರು) ಬಲ್ಲವರು ಹೆಚ್ಚಾಳುತನದಲಿ (ಶೌರ್ಯದಲ್ಲಿ) ಹಿಗ್ಗಿ ಕಂಡಿರೆ ಜಯದ ಜಾರುಗಳ(ಸೋಲು) ಮೇಲಣ+ ಆಹವದೊಳಗೆ (ಮಹಾಯುದ್ಧ) ದೇಹವ ಬೀಳುಕೊಂಡನು, ಶಲ್ಯನು+ ಅಲ್ಲಿಂ ಮೇಲೆ (ನಂತರ) ದೊರೆಗೆ+ ಏನಾದುದು+ ಎಂಬುದನು+ ಅರಿಯೆ ನಾನೆಂದ.
ಅರ್ಥ:'ಧೃತರಾಷ್ಟ್ರನಿಗೆ, ' ಭೀಷ್ಮನೇ ಮೊದಲಾದ ಹಿರಿಯರು ಮುಂದಿನ ಪರಿಣಾಮವನ್ನು ಬಲ್ಲವರು, ಶೌರ್ಯದಲ್ಲಿ ಹಿಗ್ಗಿ- ಅಹಂಕಾರಪಟ್ಟು ಜಯದ ಅವಕಾಶಗಳು ಜಾರಿ, ಸೋಲುತ್ತಿರುವುದನ್ನು ಕಂಡಿರಲ್ಲವೇ? ಅದನ್ನು ನೋಡಿ ದುರ್ಯೋಧನನಿಗೆ ಬುದ್ಧಿ ಹೇಳಲಿಲ್ಲವೇ? ನಂತರದ ಮಹಾಯುದ್ಧದಲ್ಲಿ ಕರ್ಣನು ದೇಹವನ್ನು ಬಿಟ್ಟನು. ನಂತರ ಕೌರವ ದೊರೆಗೆ ಶಲ್ಯನು ಸೇನಾಧಿಪತಿಯಾಗಿ ಅವನೂ ಹೋದನು. ಅಲ್ಲಿಂದ ಮೇಲೆ ಏನಾಯಿತು ಎಂಬುದನ್ನು ನಾನು ಅರಿಯೆನು ಎಂದು ಸಂಜಯನು ಹೇಳಿದ.
ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ |
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ || ೨ ||
ಪದವಿಭಾಗ-ಅರ್ಥ:ಮರುಳೆ ಸಂಜಯ ಗಾಳಿಯಲಿ ಕುಲಗಿರಿಯ ಬೈಸಿಕೆ (ಅಚಲತೆ, ದೃಢತೆ) ಬಿಚ್ಚಿದಡೆ ಹುಲುಮೊರಡಿಗಳ (ಗುಡ್ಡ,ಮಡ್ಡಿ) ಬಿಗುಹು+ ಏನು; ಬೀತುದು(ಮುಗಿಯಿತು) ಕರ್ಣನ+ ಉಡ್ಡವಣೆ(ಪರಾಕ್ರಮ); ಕುರುಪತಿಯ ಪಾಡೇನು ಮಾದ್ರೇಶ್ವರನ ಮತ್ಸರವೇನು, ಸಾಕು+ ಅಂತಿರಲಿ ಸವರಿತೆ ಕೌರವ+ ಅನ್ವಯವ(ಕುಲ)+ ಎಂದನು+ ಅಂಧನೃಪ
ಅರ್ಥ:ಅದಕ್ಕೆ ಅಂಧನೃಪ ಧರತರಾಷ್ಟ್ರನು,'ಮರುಳೆ ಸಂಜಯ, ಗಾಳಿಯ ಬೀಸಿದ ರಭಸಕ್ಕೆ ಹಿಮಾಲದಂತಹ ಕುಲಗಿರಿಯ ದೃಢತೆಯೇ ಅಲುಗಾಡಿದರೆ, (ಭೀಷ್ಮ ದ್ರೋಣರೇ ಸೋತಮೇಲೆ ಏನಿದೆ! ಕರ್ಣನು ಯಾವ ಮಹಾ ಲೆಕ್ಕ.) ಹುಲು-ಸಣ್ಣ ದಿಬ್ಬಗಳ ಬಿಗುಹು ಗಟ್ಟಿತನ ಕಳಚಿ ಬಿಚ್ಚಿ ಬಿದ್ದರೆ ಏನು ದೊಡ್ಡದು. ಕರ್ಣನ ಪರಾಕ್ರಮ ಮುಗಿಯಿತು. ಕುರುಪತಿ ಕೌರವನ ಪಾಡು ಏನಾಯಿತು? ಮಾದ್ರೇಶ್ವರನಾದ ಶಲ್ಯನ ಮತ್ಸರವೇನು- ಸಿಟ್ಟು ತಣಿಯಿತೇ? ಸಾಕು, ಅದು ಹಾಗಿರಲಿ, ಕೌರವ ಕುಲವನ್ನೇ ಈ ಯುದ್ಧ ಸವರಿತೆ?' ಎಂದನು.
ಬೇಯದೆನ್ನೆದೆ ಶೋಕವಹ್ನಿಯ
ಬಾಯಲಕಟಾ ಕರ್ಣ ಕೌರವ
ರಾಯನಳಿವಿನಲುಳಿವ ಪುತ್ರದ್ರೋಹಿಯಾರಿನ್ನು |
ಸಾಯಿಸುವ ಸಾವಂಜಿತೆನಗೆ ಚಿ
ರಾಯು ತೊಡರಿಕ್ಕಿದೆನು ಮಾರ್ಕಂ
ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ || ೩ ||
ಪದವಿಭಾಗ-ಅರ್ಥ: ಬೇಯದೆ+ ಎನ್ನೆದೆ ಶೋಕವಹ್ನಿಯ+ ಬಾಯಲಿ+ ಅಕಟಾ, ಕರ್ಣ ಕೌರವರಾಯನ+ ಅಳಿವಿನಲಿ (ಸಾವಿನಲ್ಲಿ)+ ಉಳಿವ ಪುತ್ರದ್ರೋಹಿಯಾರಿನ್ನು? ಸಾಯಿಸುವ ಸಾವಂಜಿತೆ+ ಎನಗೆ ಚಿರಾಯು ತೊಡರಿಕ್ಕಿದೆನು ಮಾರ್ಕಂಡೇಯ ಮುನಿಗೆ+ ಎಂದರಸ ಧೊಪ್ಪನೆ ಕೆಡೆದನು+ ಅವನಿಯಲಿ(ನೆಲದಲ್ಲಿ)
ಅರ್ಥ:ಧೃತರಾಷ್ಟ್ರನು ಹೇಳಿದನು,' ನನ್ನ ಎದೆ ಶೋಕದಬೆಂಕಿಯ ಬಾಯಿಯಲ್ಲಿ ಬೇಯದೆ- ಬೆಂದು ಹೋಗಬಾರದೇ? ಅಕಟಾ! ಕರ್ಣ ಮತ್ತು ಕೌರವರಾಯ ಇವರ ಅಳಿವಿನಲ್ಲಿ ಬದುಕಿ ಉಳಿಯುವ ಪುತ್ರದ್ರೋಹಿ ಇನ್ನು ಯಾರಿದ್ದಾರೆ? ತನ್ನನ್ನು ಸಾಯಿಸುವ ಸಾವು - ಮೃತ್ಯವೇ ತನಗೆ ಅಂಜಿತೇ? ಮಾರ್ಕಂಡೇಯ ಮುನಿಗೆ ಕೊಟ್ಟಂತೆ (ಶಿವನು)ತನಗೆ ಚಿರಾಯು- ದೀರ್ಘಾಯುಷ್ಯವನ್ನು ಕೊಟ್ಟು ತೊಡರಿಕ್ಕಿದೆನು- ಕಷ್ಟಕೊಟ್ಟನು,' ಎಂದು ಹೇಳಿ ಅರಸನು ನೆಲದಮೇಲೆ ಧೊಪ್ಪನೆ ಬಿದ್ದನು.
ಹದುಳಿಸೈ ರಾಜೇಂದ್ರ ನೀ ಬಿ
ತ್ತಿದ ವಿಷದ್ರುಮ ಫಲಿತವಾಯಿತು
ಬೆದರಲೇಕಿನ್ನನುಭವಿಸು ಸಾಕುಳಿದ ಮಾತೇನು |
ಕದನದಲಿ ಸುತನಿಧಿಯ ಹೋಗಾ
ಡಿದೆ ನಿಜಾನ್ವಯ ಕಲ್ಪತರುವನು
ಮದಕರಿಗೆಮಾರಿದೆಯೆನುತ ನೆಗಹಿದನು ಭೂಪತಿಯ || ೪ ||
ಪದವಿಭಾಗ-ಅರ್ಥ: ಹದುಳಿಸೈ ರಾಜೇಂದ್ರ, ನೀ ಬಿತ್ತಿದ ವಿಷದ್ರುಮ (ವಿಷದಮರ) ಫಲಿತವಾಯಿತು, ಬೆದರಲು+ ಏಕೆ+ ಇನ್ನು+ ಅನುಭವಿಸು; ಸಾಕು+ ಉಳಿದ ಮಾತೇನು ಕದನದಲಿ ಸುತನಿಧಿಯ ಹೋಗಾಡಿದೆ(ಕಳೆಯುವ ಹಾಗೆ ಆಡಿದೆ) ನಿಜಾನ್ವಯ (ತನ್ನ ಕುಲವನ್ನು) ಕಲ್ಪತರುವನು ಮದಕರಿಗೆ ಮಾರಿದೆಯೆನುತ ನೆಗಹಿದನು ಭೂಪತಿಯ.
ಅರ್ಥ:ಆಗ ಸಂಜಯನು ಧೃತರಾಷ್ಟ್ರನಿಗೆ ಸಂತೈಸುತ್ತಾ,,'ರಾಜೇಂದ್ರನೇ ಸಮಾಧಾನ ಮಾಡಿಕೊ, ಇದು ನೀನು ಬಿತ್ತಿದ ವಿಷವೃಕ್ಷ ಈಗ ಫಲಬಿಟ್ಟಿದೆ. ಅದಕ್ಕೆ ಈಗ ಹೆದರುವುದು ಏಕೇ? ಇನ್ನು ಉಳಿದ ದಾರಿ ಅನುಭವಿಸುವುದು, ಅನುಭವಿಸು. ಸಾಕು ಉಳಿದ ಮಾತೇನಿದೆ? ಯುದ್ಧದಲ್ಲಿ ಮಗನೆಂಬ ನಿಧಿಯನ್ನು ಫಣವಿಟ್ಟು ಕಳೆಯುವ ಹಾಗೆ ಆಡಿದೆ. ನಿನ್ನ ಕುಲದ ಕಲ್ಪವೃಕ್ಷವನ್ನು ಮದ್ದಾನೆಗೆ ಮಾರಿದೆ,' ಎನ್ನುತ್ತಾ ಮಂತ್ರಿ ಸಂಜಯನು ರಾಜನನ್ನು ಎತ್ತಿದನು.
ಮಲಗಿಸಿದನೊರವೇಳ್ವ ನಯನ
ಸ್ಥಳವ ನೇವರಿಸಿದನು ಶೋಕಾ
ನಲನ ತಾಪಕೆ ತಂಪನೆರೆದನು ನೀತಿಮಯರಸದ |
ಅಳಲಶ್ರವಮಾಡಿದೆ ನದೀಸುತ
ನಳಿವಿನಲಿ ಗುರು ಕರ್ಣ ಶಲ್ಯರ
ಕಳವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ || ೫ ||
ಪದವಿಭಾಗ-ಅರ್ಥ: ಮಲಗಿಸಿದನು+ ಒರವೇಳ್ವ ನಯನ (ಕಣ್ಣು) ಸ್ಥಳವ ನೇವರಿಸಿದನು, ಶೋಕ+ ಅನಲನ(ಬೆಂಕಿ) ತಾಪಕೆ ತಂಪನು+ ಎರೆದನು(ಸುರಿಸಿದನು) ನೀತಿಮಯ ರಸದ ಅಳಲ ಶ್ರವಮಾಡಿದೆ(ಶ್ರವ= ಶ್ರವಣ, ಕೇಳು) ನದೀಸುತನ+ ಅಳಿವಿನಲಿ, ಗುರು ಕರ್ಣ ಶಲ್ಯರ+ ಕಳವಿನಲಿ ಕಟ್ಟ+ ಅಳಲ ಬಹಳ+ ಅಭ್ಯಾಸಿ ನೀನೆಂದ
ಅರ್ಥ:ಸಂಜಯನು ಅರಸನನ್ನು ಎತ್ತಿ ಮಲಗಿಸಿದನು. ನೀರಿನ ಒರತೆ ಏಳುವ ಕಣ್ಣಿನ ರೆಪ್ಪೆಗಳನ್ನು ನೇವರಿಸಿದನು. ಶೋಕವೆಂಬ ಬೆಂಕಿಯ ತಾಪಕ್ಕರ ತಂಪನ್ನು ಎರೆದನು. ನದೀಸುತನಾದ ಭೀಷ್ಮನು ಶರಮಂಚದಲ್ಲಿ ಬಿದ್ದ ಸಮಯದಲ್ಲಿ ನೀತಿಮಯ ರಸದಿಂದ ದುಃಖವನ್ನು ತಡೆದುಕೊಂಡೆ. ಗುರು ಕರ್ಣ ಶಲ್ಯರನ್ನು ಕಳದುಕೊಂಡ (ಸಾವಿನ) ನೋವಿನಲ್ಲಿ ದು‍ಃಖವನ್ನು ಕಟ್ಟಿದ ಬಹಳ ಅಭ್ಯಾಸವು ನಿಮಗಿದೆ, ಈಗಲೂ ಹಾಗೆ ದುಃಖವನ್ನು ತಡೆದುಕೊಳ್ಳಿ'ಎಂದ.
ಅಹುದು ಸಂಜಯ ಶೋಕಶಿಖಿ ನೆರೆ
ದಹಿಸಿತೆನ್ನನು ಬೆಂದ ವಸ್ತುಗೆ
ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ |
ಮಿಹಿರಸುತ ಪರಿಯಂತ ಕಥೆ ನಿ
ರ್ವಹಿಸಿ ಬಂದುದು ಶಲ್ಯಕೌರವ
ರೆಹಗೆ ನೆಗಳಿದರದನು ವಿಸ್ತರವಾಗಿ ಹೇಳೆಂದ || ೬ ||
ಪದವಿಭಾಗ-ಅರ್ಥ: ಅಹುದು ಸಂಜಯ ಶೋಕಶಿಖಿ(ಶೀಖಿ= ಬೆಂಕಿ) ನೆರೆ ದಹಿಸಿತು(ಸುಟ್ಟಿತು- ಬೇಯಿಸಿತು)+ ಎನ್ನನು, ಬೆಂದ ವಸ್ತುಗೆ ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ, ಮಿಹಿರಸುತ (ಸೂರ್ಯ ಸುತ) ಪರಿಯಂತ ಕಥೆ ನಿರ್ವಹಿಸಿ ಬಂದುದು ಶಲ್ಯ ಕೌರವರೆ ಹಗೆ ನೆಗಳಿದರೆ+ ಅದನು ವಿಸ್ತರವಾಗಿ ಹೇಳೆಂದ.
ಅರ್ಥ:ಧೃತರಾಷ್ಟ್ರನು, ಸಂಜಯ, ನೀನು ಹೇಳಿದುದು ನಿಜ. ಶೋಕದ ಬೆಂಕಿ ನನ್ನನ್ನು ಬಹಳ ದಹಿಸಿತು. 'ಬೆಂದ ವಸ್ತುವಿಗೆ ಮತ್ತೆ ದಹನವುಂಟೇ- ಸುಡುವುದು ಉಂಟೇ?' ಎಂಬ ನಾಣ್ಣುಡಿ ನಮ್ಮಲ್ಲಿ ನಿಜವಾಯಿತಲ್ಲವೇ?, ಕರ್ಣನ ಸಾವಿನ ಪರ್ಯಂತ ಕಥೆಯನ್ನು ಹೇಳಿ ನಿರ್ವಹಿಸಿದೆ. ಈಗ ಶಲ್ಯ ಮತ್ತು ಕೌರವರೇ ಹಗೆಯನ್ನು ಎದುರಿಸುವ ಸ್ಥಿತಿ ಬಂದಿತು. ಅವರು ಹಗೆಯನ್ನು ಎದುರಿಸಲು ಸಮರ್ಥರಾದರೇ, ಅದನ್ನು ವಿಸ್ತಾರವಾಗಿ ಹೇಳು,' ಎಂದ.

ಕರ್ಣನ ಅವಸಾನ ನೋಡಿ ಕೌರವನ ಮೂರ್ಛೆ

ಸಂಪಾದಿಸಿ
ತೆಗೆದುದಾಚೆಯಲವರ ಬಲ ಜಗ
ದಗಲದುಬ್ಬಿನ ಬೊಬ್ಬೆಯಲಿ ಮೊರೆ
ಮುಗಿಲಮದದಂದದಲಿ ಮೊಳಗುವ ವಾದ್ಯರಭಸದಲಿ |
ಬಿಗಿದಮೋನದ ಬೀತ ಹರುಷದ
ಹೊಗೆಯ ಮೋರೆಯ ಹೊತ್ತುವೆದೆಗಳ
ದುಗುಡದೊಗ್ಗಿನ ನಮ್ಮ ಮೋಹರ ತೆಗೆದುದೀಚೆಯಲಿ || ೭ ||
ಪದವಿಭಾಗ-ಅರ್ಥ: ತೆಗೆದುದು+ ಆಚೆಯಲಿ+ ಅವರ ಬಲ (ಸೇನೆ) ಜಗದ+ ಅಗಲದ+ ಉಬ್ಬಿನ ಬೊಬ್ಬೆಯಲಿ ಮೊರೆ ಮುಗಿಲ- ಮದದ (ಸೊಕ್ಕಿನಂತೆ)+ ಅಂದದಲಿ(ರೀತಿಯಲ್ಲಿ) ಮೊಳಗುವ ವಾದ್ಯರಭಸದಲಿ ಬಿಗಿದ ಮೋನದ (ಒಂದು ವಾದ್ಯ) ಬೀತ (ತುಂಬಿದ) ಹರುಷದ ಹೊಗೆಯ ಮೋರೆಯ ಹೊತ್ತುವ+ ಎದೆಗಳ ದುಗುಡದ ()ಚಿಂತೆಯ+ ಒಗ್ಗಿನ ನಮ್ಮ ಮೋಹರ (ಸೇನೆ) ತೆಗೆದುದು+ ಈಚೆಯಲಿ
ಅರ್ಥ:ಆಚೆಯಲಿ ಪಾಂಡವರ ಸೇನೆ ಜಗದ ಅಗಲಕ್ಕೆ ಗೆಲುವಿನಿಂದ ಉಬ್ಬಿ, ಮುಗಿಲು ಸೊಕ್ಕಿನಿಂದ ಗುಡುಗುವ ರೀತಿಯಲ್ಲಿ, ಮೊಳಗುವ ವಾದ್ಯರಭಸದಿಂದ ಬೊಬ್ಬೆಯಿಡುತ್ತಾ ಸದ್ದಿನಿಂದ ಮೊರೆಯುವ ಬಿಗಿದ ವಾದ್ಯದೊಂದಿಗೆ, ಹರುಷ ತುಂಬಿದ ಹೊಗೆಯ ಮೋರೆಯನ್ನು ಮುಖವನ್ನು ಹೊತ್ತ ಎದೆಗಳೊಂದಿಗೆ (ಸೇನೆ) ಕಾಣುತ್ತಿತ್ತು. ಈಚೆಯಲ್ಲಿ ನಮ್ಮ ಸೇನೆಯ ಸಮೂಹ ಚಿಂತೆಯ ಮುಖ ಹೊತ್ತು ನಿಂತಿತ್ತು.
ಸಿಡಿದು ಕರ್ಣನ ತಲೆ ಧರಿತ್ರಿಗೆ
ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ
ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ |
ಹಡಪಿಗರು ಚಾಮರದ ಚಾಹಿಯ
ರೊಡನೆ ನೆಲಕುರುಳಿದರು ಸಾರಥಿ
ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ || ೮ ||
ಪದವಿಭಾಗ-ಅರ್ಥ: ಸಿಡಿದು ಕರ್ಣನ ತಲೆ ಧರಿತ್ರಿಗೆ(ಭೂಮಿಗೆ) ಕೆಡೆಯೆ(ಬೀಳಲು) ಧೊಪ್ಪನೆ, ಮೂರ್ಛೆಯಲಿ ನೃಪಕೆಡೆದು(ಬಿದ್ದು) ಕಣ್ಮುಚ್ಚಿದನು ಶೋಕಜ್ವರದ ಢಗೆ (ಬಿಸಿ, ಕಾವು) ಜಡಿಯೆ (ಬಡಿಯಲು, ಹೊಡೆಯಲು), ಹಡಪಿಗರು (ನೀರು, ಚಾಮರದ ಕೆಲಸದ ಆಳುಗಳು) ಚಾಮರದ ಚಾಹಿಯರು+ ಒಡನೆ ನೆಲಕೆ+ ಉರುಳಿದರು, ಸಾರಥಿ ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ.
ಅರ್ಥ:ಸಂಜಯನು ಹೇಳಿದ,'ಅರ್ಜುನನ ಬಾಣದಿಂದ ಕರ್ಣನ ತಲೆ ಕತ್ತರಿಸಿ ಸಿಡಿದು ಭೂಮಿಗೆ ಬೀಳಲು, ಶೋಕದ ಜ್ವರದ ಬಿಸಿಯು ಮನಸ್ಸಿಗೆ ಬಡಿಯಲು, ನೃಪ ಕೌರವನು ಮೂರ್ಛೆ ಹೊಂದಿ ರಥದಲ್ಲಿ ಧೊಪ್ಪನೆ ಬಿದ್ದು ಕಣ್ಮುಚ್ಚಿದನು. ನೀರು ಕೊಡುವ ಕೆಲಸದ ಹಡಪಿಗರು, ಚಾಮರ ಬೀಸುವ ಚಾಹಿಯರು ಸಹ ಹೆದರಿ ಒಡನೆಯೆ ನೆಲಕ್ಕೆ ಉರುಳಿದರು. ಇದನ್ನು ನೋಡಿದ ಕೌರವನ ಸಾರಥಿಯು ರಥದ ಕುದುರೆಗಳ ಕಡಿವಾಣದ ಕುಡಿನೇಣನ್ನು ಎಳೆದುಕೊಂಡು ರಥವನ್ನು ರಣರಂಗದಿಂದ ಹಿಂತಿರುಗಿಸಿದನು.
ಬಂದು ಕರ್ಣನ ಹಾನಿ ಕೌರವ
ವೃಂದವನು ವೇಢೈಸಿತೇ ಹಾ
ಯೆಂದು ಕೃಪಗುರುಸುತರು ರಥವನು ಬಿಟ್ಟು ಸೂಠಿಯಲಿ |
ತಂದು ಬಾಚಿಸಿದರಸನಿರವೆಂ
ತೆಂದುಸುರನಾರೈದು ವಿಧಿಯನು
ನಿಂದಿಸಿದರವಧಾನ ಜೀಯವಧಾನ ಜೀಯೆನುತ || ೯ ||
ಪದವಿಭಾಗ-ಅರ್ಥ: ಬಂದು ಕರ್ಣನ ಹಾನಿ ಕೌರವ ವೃಂದವನು ವೇಢೈಸಿತೇ (ಆಕ್ರಮಿಸಿತೇ, ಆವರಿಸಿತೇ), ಹಾಯೆಂದು ಕೃಪ, ಗುರುಸುತರು ರಥವನು ಬಿಟ್ಟು ಸೂಠಿಯಲಿ ತಂದು ಬಾಚಿಸಿದ(ಬಾಚು - ಬೇರ್ಪಡಿಸು, ಪ್ರತ್ಯೇಕಿಸು)+ ಅರಸನ+ ಇರವು(ಪರಿಸ್ಥಿತಿ)+ ಎಂತೆಂದು ಉಸುರನು+ ಆರೈದು ವಿಧಿಯನು ನಿಂದಿಸಿದರು+ ಅವಧಾನ ಜೀಯ,+ ಅವಧಾನ ಜೀಯ+ ಎನುತ.
ಅರ್ಥ:ಕೃಪ, ಅಶ್ವತ್ಥಾಮರು ಬಂದು, ಕರ್ಣನ ಸಾವಿನ ನೋವು ಕೌರವನ ಸೇನಾ ಸಮೂಹವನ್ನೇ ಆವರಿಸಿತೇ?, ಹಾ! ಎಂದು ಅವರು ರಥವನ್ನು ತಂದು ಸೂಠಿಯಲ್ಲಿ- ವಿಶ್ರಾತಿಯಲ್ಲಿ ಬಿಟ್ಟು, ಸೇನೆಯಿಂದ ಬೇರ್ಪಟ್ಟು ಬಂದ ಅರಸನ ಪರಿಸ್ಥಿತಿ ಹೇಗಿದೆ ಎಂದು ನೋಡಿ, ಮೂರ್ಛೆ ಹೋದ ಅರಸನ ಉಸಿರನ್ನು ಕೊಟ್ಟು ಆರೈಕೆಮಾಡಿ, ಎಚ್ಚರಾಗು ಜೀಯ, ಅವಧಾನ ಒಡೆಯ ಎಂದು ಹೇಳುತ್ತಾ ವಿಧಿಯನ್ನು ನಿಂದಿಸಿದರು.
ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು |
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಳದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ || ೧೦ ||
ಪದವಿಭಾಗ-ಅರ್ಥ: ತಳಿತಳಿದು ಪನ್ನೀರನು+ ಅಕ್ಷಿಗೆ(ಕಣ್ಣಿಗೆ) ಚಳೆಯವನು(ಸಿಂಪಡಿಸುವುದು), ಹಿಡಿದೆತ್ತಿ ಗುರುಸುತ ಮಲಗಿಸಿದಡೆ ಏನಯ್ಯ ಕರ್ಣ ಎನುತ್ತ ಕಂದೆರೆದು ಘಳಿಲನೆದ್ದನು(ಚುರುಕಾಗಿ), ಕರ್ಣ ತೆಗೆಸೈದಳವನು+ ಇರುಳು(ರಾತ್ರಿ)+ ಆಯ್ತೆಂದು ಶೋಕದ ಕಳವಳದಲಿ(ದುಃಖದಲ್ಲಿ)+ ಅರೆಮುಚ್ಚು+ಗ + ಕಣ್ಣಲಿ ಮತ್ತೆ ಮೈಮರೆದ.
ಅರ್ಥ:ಅಶ್ವತ್ಥಾಮನು ಎಚ್ಚರ ತಪ್ಪಿದ ಕೌರವನ ಕಣ್ಣಿಗೆ ಪುನಃ ಪುನಃ ಪನ್ನೀರನ್ನು ತಳಿತಳಿದು ಸಿಂಪಡಿಸಿದನು. ಅವನನ್ನು ಗುರುಸುತನು ಹಿಡಿದು ಎತ್ತಿ ಮಲಗಿಸಿದಾಗ, ಕೌರವನು ಅರೆ-ಎಚ್ಚರದಲ್ಲಿ, 'ಏನಯ್ಯ ಕರ್ಣ ಎನ್ನುತ್ತಾ ಕಣ್ಣುಬಿಟ್ಟು ಧಡಕ್ಕನೆ ಎದ್ದನು; ಎದ್ದು, 'ಕರ್ಣ ತೆಗೆಸೈಯ್ಯಾ ಸೇನೆಯನ್ನು, ಕತ್ತಲಾಯಿತು,' ಎಂದು ಹೇಳಿದವನು ಶೋಕದ ಕಳವಳದಲ್ಲಿ ಅರೆಮುಚ್ಚಿದ ಕಣ್ಣಲ್ಲಿ ಮತ್ತೆ ಮೈಮರೆತು- ಎಚ್ಚರ ತಪ್ಪಿ ಮಲಗಿದನು.
ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟಲಾ ನಿ
ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಂದರು ಜರೆದು ಕುರುಪತಿಯ ೧೧
ಪದವಿಭಾಗ-ಅರ್ಥ:ರಾಯ ಹದುಳಿಸು (ಸಮಾಧಾನ ಗೊಳ್ಳು, ನೆಮ್ಮದಿ ಹೊಂದು, ಚೇತರಿಸಿಕೊಳ್ಳು) ಹದುಳಿಸು+ ಅಕಟಾ, ದಾಯಿಗರಿಗೆ (ದಾಯಾದಿದಳಿಗೆ, ಪಾಂಡವರಿಗೆ)+ ಎಡೆಗೊಟ್ಟಲಾ, ನಿರ್ದಾಯದಲಿ(ಪರಿಪೂರ್ಣ) ನೆಲ(ರಾಜ್ಯ) ಹೋಯ್ತು, ಭೀಮನ ಭಾಷೆ ಸಂದುದಲಾ(ನೆರವೇರತು), ವಾಯುಜನ(ಭೀಮನನ್ನು) ಜಠರದಲಿ ತೆಗೆಯಾ, ಜೀಯ, ನಿನ್ನ+ ಅನುಜರನು(ತಮ್ಮಂದಿರನ್ನು) ಪಾರ್ಥನ ಬಾಯ+ ಅಲುಗಿ(ಬಿಡಿಸಿ) ಸೂತಜನನು(ಕರ್ಣನನ್ನು)+ ಎಂದರು ಜರೆದು(ತೆಗಳಿ) ಕುರುಪತಿಯ
ಅರ್ಥ:ಕೃಪ, ಅಶ್ವತ್ಥಾಮರು ಎಚ್ಚರತಪ್ಪಿದ ಕೌರವರಾಯನನ್ನು ಕುರಿತು,'ಸಮಾಧಾನಗೊಳ್ಳು, ಚೇತರಿಸಿಕೊ, ಅಕಟಾ, ಜೀವಬಿಟ್ಟು, ನಿನ್ನ ದಾಯಾದಿದಳಾದ ಪಾಂಡವರಿಗೆ ಬಿಟ್ಟುಕೊಟ್ಟೆಯಲಾ, ಪೂರ್ಣವಾಗಿ ರಾಜ್ಯವು ಹೋಯ್ತಲ್ಲಾ, ಸಾಯಿಸುವೆನೆಂಬ ಭೀಮನ ಭಾಷೆ ನೆರವೇರತೇ! ಕೌರವಾ, ಭೀಮನ ಜಠರವನ್ನು ಸೀಳಿ ನಿನ್ನ ತಮ್ಮಂದಿರನ್ನು ತೆಗೆಯೊ! ಪಾರ್ಥನ ಬಾಯನ್ನು ಅಲುಗಾಡಿಸಿ ಬಿಡಿಸಿ, ಜೀಯ ಅವನ ಬಾಯಿಯಿಂದ ಕರ್ಣನನ್ನು ತೆಗೆಯಾ, ಎಂದರು ಕುರುಪತಿ ಕೌರವನನ್ನು ಜೀವ ಬಿಡಬೇಡ ಎಂದು ಜರೆದರು.
ಏನು ಗುರುಸುತ ಮಡಿದನೇ ತ
ನ್ನಾನೆ ಬವರದಲಕಟ ಕುಂತೀ
ಸೂನುವೇಕೈ ತಪ್ಪು ಮಾಡಿದನೇ ಮಹಾದೇವ |
ಭಾನುಸನ್ನಿಭ ಸರಿದನೇ ತ
ಪ್ಪೇನು ಪಾರ್ಥನ ಬಸುರಲೆನ್ನ ನಿ
ಧಾನವಿದ್ದುದು ತೆಗೆವೆನೈಸಲೆಯೆಂದು ಕಂದೆರೆದ || ೧೨ ||
ಪದವಿಭಾಗ-ಅರ್ಥ:ಏನು ಗುರುಸುತ(ಅಶ್ವತ್ಥಾಮ) ಮಡಿದನೇ ತನ್ನ+ ಆನೆ ಬವರದಲಿ(ಯುದ್ಧ)+ ಅಕಟ, ಕುಂತೀಸೂನುವು (ಅರ್ಜುನ)+ ಏಕೈ ತಪ್ಪು ಮಾಡಿದನೇ ಮಹಾದೇವ, ಭಾನುಸನ್ನಿಭ (ಕರ್ಣ) ಸರಿದನೇ ತಪ್ಪೇನು, ಪಾರ್ಥನ ಬಸುರಲಿ+ ಎನ್ನ ನಿಧಾನವಿದ್ದುದು(ತನಗೆ ಲಭ್ಯವಾಗಬೇಕಾಗಿರುವ ನಿಕ್ಷೇಪ) ತೆಗೆವೆನು ಐಸಲೆ (ಹಾಗೇ ಸರಿ)+ ಯೆ+ ಎಂದು ಕಂದೆರೆದ.
ಅರ್ಥ:ಕೌರವನು,'ಏನು ಅಶ್ವತ್ಥಾಮ, ತನ್ನ 'ಪ್ರೀತಿಯ ಆನೆ' ಕರ್ಣ ಯುದ್ಧದಲ್ಲಿ ಮಡಿದನೇ? ಅಕಟ! ಏಕಯ್ಯಾ, ಅರ್ಜುನನು ತಪ್ಪು ಮಾಡಿದನೇ, ಯುದ್ಧನಿಯಮ ಮೀರಿದನೇ? ಮಹಾದೇವ! ಕರ್ಣನು ಈ ಲೋಕದಿಂದ ಸರಿದನೇ? ತಪ್ಪೇನು? ಪಾರ್ಥನ ಹೊಟ್ಟೆಯಲ್ಲಿ ನನ್ನ ಗುರಿ ಇದ್ದು, ಅಲ್ಲಿ ಕರ್ಣನನ್ನು ತೆಗೆಯುವೆನು ಐಸಲೆ!' ಎಂದು ಹೇಳುತ್ತಾ ಕಣ್ಣು ಬಿಟ್ಟನು.
ತಾಪವಡಗಿತು ಮನದ ಕಡುಹಿನ
ಕೋಪ ತಳಿತುದು ಭೀಮ ಪಾರ್ಥರ
ರೂಪು ಮುಖದಲಿ ಕರ್ಣ ದುಶ್ಯಾಸನರ ಕಲ್ಪಿಸಿದ |
ಭೂಪ ಕೇಳೈ ಪಾಳಯಕೆ ಕುರು
ಭೂಪ ಬಂದನು ನಾಳೆ ಕರ್ಣೋ
ತ್ಥಾಪನವಲಾ ಎನುತ ಹೂಕ್ಕನು ಭದ್ರಮಂಟಪವ || ೧೩ ||
ಪದವಿಭಾಗ-ಅರ್ಥ:ತಾಪವು+ ಅಡಗಿತು ಮನದ ಕಡುಹಿನ (ಕ್ರೂರ, ನಿಷ್ಕರುಣೆ) ಕೋಪ ತಳಿತುದು, ಭೀಮ ಪಾರ್ಥರ ರೂಪು ಮುಖದಲಿ, ಕರ್ಣ ದುಶ್ಯಾಸನರ ಕಲ್ಪಿಸಿದ; ಭೂಪ ಕೇಳೈ ಪಾಳಯಕೆ ಕುರುಭೂಪ ಬಂದನು, ನಾಳೆ ಕರ್ಣ+ ಉತ್ಥಾಪನವಲಾ(ಉತ್ಥಾಪ= ಎತ್ತುವ ಯಂತ್ರ) ಎನುತ ಹೂಕ್ಕನು ಭದ್ರಮಂಟಪವ.
ಅರ್ಥ:ಕೌರವನು ಸಂತಾಪವನ್ನು ಅಡಗಿಸಿಕೊಂಡನು. ಅವನ ಮನದಲ್ಲಿ ಕೄರವಾದ ಕೋಪ ಚಿಗುರಿತು. ಭೀಮ ಪಾರ್ಥರ ರೂಪಿನ ಮುಖದಲ್ಲಿ, ಕರ್ಣ ದುಶ್ಯಾಸನರನ್ನು ಕಲ್ಪಿಸಿಕೊಂಡನು; ಧೃತರಾಷ್ಟ್ರ ಭೂಪನೇ ಕೇಳು, ಆ ಕುರುಭೂಪನು ಪಾಳಯಕ್ಕೆ ಬಂದನು. ನಾಳೆ (ದುಶ್ಶಾಸನನ್ನೂ) ಕರ್ಣನನ್ನೂ ಉತ್ಥಾಪನೆ ಮಾಡಬೇಕಲ್ಲವೇ; (ದುಶ್ಶಾಸನನ್ನೂ ಕರ್ಣನನ್ನೂ, ಭೀಮ ಅರ್ಜುನ ಇವರ ಹೊಟ್ಟೆಬಗೆದು ಅಲ್ಲಿಂದ ತೆಗೆಯಬೇಕಲ್ಲವೇ?) ಎನ್ನುತ್ತಾ ತನ್ನ ಭದ್ರಮಂಟಪವನ್ನು ಹೂಕ್ಕನು.
ಶಕುನಿ ಕೃಪ ಗುರುಸೂನು ಕೃತವ
ರ್ಮಕ ಸುಕೇತು ಸುಶರ್ಮ ಸಮಸ
ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ ||
ಸಕಲ ಸುಭಟರು ಸಹಿತ ದಳನಾ
ಯಕರು ಬಂದರು ಕರ್ಣಹಾನಿ
ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ || ೧೪ ||
ಪದವಿಭಾಗ-ಅರ್ಥ: ಶಕುನಿ, ಕೃಪ, ಗುರುಸೂನು(ಅಶ್ವತ್ಥಾಮ) ಕೃತವರ್ಮಕ, ಸುಕೇತು, ಸುಶರ್ಮ, ಸಮಸಪ್ತಕರು, ಮಾದ್ರೇಶ್ವರ(ಶಲ್ಯ), ಸುಬಾಹು, ಸುನಂದ, ಚಿತ್ರರಥ, ಸಕಲ ಸುಭಟರು ಸಹಿತ ದಳನಾಯಕರು ಬಂದರು, ಕರ್ಣಹಾನಿ ಪ್ರಕಟ ಕಳಿತ ಶಿರ+ ಅವಕುಂಠನ (ಮುಸುಕು) ವೈಮನಸ್ಯದಲಿ.
ಅರ್ಥ: ಕರ್ಣನ ಸಾವು ಎದ್ದುತೋರುವಂತೆ ಅವಕುಂಠನವನ್ನು ಹಾಕಿಕೊಂಡು ಬಗ್ಗಿದ ತಲೆಯ ವಿಮನಸ್ಕರಾಗಿ ದಿಕ್ಕು ತೋರದೆ, ಶಕುನಿ, ಕೃಪ, ಗುರುಸೂನು- ಅಶ್ವತ್ಥಾಮ, ಕೃತವರ್ಮಕ, ಸುಕೇತು, ಸುಶರ್ಮ, ಸಮಸಪ್ತಕರು, ಮಾದ್ರೇಶ್ವರ- ಶಲ್ಯ, ಸುಬಾಹು, ಸುನಂದ, ಚಿತ್ರರಥ, ಸಕಲ ವೀರರ ಸಹಿತ ಕೌರವನ ದಳನಾಯಕರು ಕೌರವನ ಬಳಿಗೆ ಬಂದರು.
ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ ||
ಸುಮುಖತಾವಿಚ್ಚೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ || ೧೫ ||
ಪದವಿಭಾಗ-ಅರ್ಥ: ಹಿಮದ ಹೊಯ್ಲಲಿ(ಹೊಡೆತ) ಸೀದು(ಬಾಡಿ) ಸಿಕ್ಕಿದ ಕಮಲವನದ+ ಅಂದದಲಿ(ರೀತಿಯಲ್ಲಿ) ಹತ (ಕೊನೆಗೊಂಡ)+ ವಿಕ್ರಮದ ಕೀರ್ತಿಯ ಬಹಳ ಭಾರಕೆ ಬಳುಕಿದ+ ಆನನದ(ಬಗ್ಗಿದ ತಲೆಯ) ಸುಮುಖತ+ ಅವಿಚ್ಚೇದ ಕಲುಷ ಸ್ತಿಮಿತರ+ ಇರವನು (ಸುಮುಖತ- ಗೆಲುವಿನ ಮುಖದ; ಕಲುಷ= ಸೊಲಿನ ದೋಷದಿಂದ;ಅವಿಚ್ಚೇದ ಸ್ತಿಮಿತರು= ಮನಸ್ಸನ್ನು ಕೆಡಿಸಿಕೊಳ್ಳದ ಸ್ಥಿಮಿತ ಬುದ್ಧಿಯುಳ್ಳವರು+, ಇರವನು(ಇರುವ ಸ್ಥಿತಿಯನ್ನು) ಕಂಡು ನಾಳಿನ ಸಮರಕೆ+ ಏನು+ ಉದ್ಯೋಗವು+ ಎಂದನು ಕೃಪನ ಗುರುಸುತನ.
ಅರ್ಥ:ಕೌರವನು ಮೂರ್ಛೆಯಿಮದ ಚೇತರಿಸಿಕೊಂಡು, 'ಹಿಮದ ಹೊಡೆತಕ್ಕೆ ಸಿಕ್ಕಿದ ಸೀದು ಬಾಡಿದ ಕಮಲವನದ ರೀತಿಯಲ್ಲಿ ಪರಾಕ್ರಮದ ಕೀರ್ತಿಯು ಕೊನೆಗೊಂಡ, ಬಹಳ ಭಾರಕ್ಕೆ ತಗ್ಗಿಸಿದ ಮುಖದೊದಿಗೆ ಇದ್ದ ಕೌರವನನ್ನು ಕಂಡರು; ಸೊಲಿನ ದೋಷದಿಂದ ಮನಸ್ಸನ್ನು ಕೆಡಿಸಿಕೊಳ್ಳದ ಸ್ಥಿಮಿತ ಬುದ್ಧಿಯುಳ್ಳವರು ಪ್ರಸನ್ನತೆಯ ಮುಖದಲ್ಲಿ ಇದ್ದ ಕೃಪ ಮತ್ತು ಗುರುಸುತ ಅಶ್ವತ್ಥಾಮರ ಇರುವನ್ನು ಕಂಡು ಕೌರವನು ನಾಳಿನ ಸಮರಕ್ಕೆ ಏನು ಉದ್ಯೋಗವು - ಸಿದ್ಧತೆ', ಎಂದನು.
ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ |
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ || ೧೬ ||
ಪದವಿಭಾಗ-ಅರ್ಥ: ಅರಸ ಕರ್ಣ+ಚ್ಛೇದವೇ(ಕರ್ಣನನ್ನು ಸೀಳಿದ್ದೇ) ಜಯಸಿರಿಯ ನಾಸಾಚ್ಛೇದವು (ನಾಸ= ಮೂಗು)+ ಇನ್ನು+ ಅರವರಿಸದಿರು (ಕೆಟ್ಟ ಸಾಹಸಮಾಡದಿರು) ಹೊಯ್ದಾಡಿ(ಹೋರಾಡಿ) ಹೊಗಳಿಸು ಬಾಹುವಿಕ್ರಮವ ಗುರು(ದ್ರೋಣ) ನದೀಸುತರು (ಭೀಷ್ಮ)+ ಅಳಿದ(ತೀರಿಕೊಂಡ) ಬಳಿಕ+ ಈ ಧರೆಗೆ(ಭೂಮಿ, ರಾಜ್ಯ) ನಿನಗೆ+ ಅಸ್ವಾಮ್ಯ (ಅ+ ಸ್ವಾಮ್ಯ= ಸ್ವಂತದ್ದಲ್ಲ; ನಿನ್ನದಲ್ಲ) ಕರ್ಣನ ಮರಣದಲಿ ನೀನು+ ಅರ್ಧ+ದೇಹನು ಭೂಪ ಕೇಳೆಂದ.
ಅರ್ಥ:ಮುಂದಿನ ಯುದ್ಧಸಿದ್ಧತೆ ಬಗೆಗೆ ಕೌರವನು ಕೇಳಿದಾಗ ಅವರು, ಅರಸನೇ, ಕರ್ಣನನ್ನು ಅರ್ಜುನನು ಸೀಳಿದ್ದೇ, ನಿನ್ನ ಜಯಲಕ್ಷ್ಮಿಯ ಮೂಗು ಕತ್ತರಿಸಿದ ಹಾಗಾಗಿದೆ. ಇನ್ನು ಕೆಟ್ಟ ಸಾಹಸ ಮಾಡಬೇಡ; ನೆಪಕ್ಕೆ ಹೋರಾಡಿ ನಿನ್ನ ಬಾಹುವಿಕ್ರಮವ ಹೊಗಳಿಸು(?). 'ದ್ರೋಣ, ಭೀಷ್ಮರು ತೀರಿಕೊಂಡ ಬಳಿಕ,ಮತ್ತು ಕರ್ಣನ ಮರಣದ ನಂತರ ಈ ರಾಜ್ಯವು ನಿನಗೆ ಸೇರಿದ್ದಲ್ಲ. ರಾಜನೇ, ಕೇಳು ಕರ್ಣನಿಲ್ಲದ ನೀನು ಅರ್ಧ ದೇಹನು', ಎಂದ.

ಯುದ್ಧ ಮುಂದುವರಿಸಲು ದುರ್ಯೋಧನನ ನಿರ್ಧಾರ

ಸಂಪಾದಿಸಿ
ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ನಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ |
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಂದನು ನಿನ್ನ ಮಗ ನಗುತ || ೧೭ ||
ಪದವಿಭಾಗ-ಅರ್ಥ: ಆ ವೃಕೋದರ ನರರೊಳು+ ಅಂತರ್ಭಾವ ದುಶ್ಯಾಸನಗೆ ತನ್ನಯ ಜೀವಸಖಗೆ,+ ಆ ಭೀಮ ಪಾರ್ಥರ ಮರಣಸಿದ್ಧಿಯಲಿ; ಕೈವಿಡಿಯಲೇ(ಕೈಗೆ ಸಿಗುವಂತೆ) ಕರ್ಣನು+ ಇಹನೆಂದು (ಇರುವನೆಂದು)+ ಆವು ನಿಶ್ಚಯಿಸಿದೆವು; ಕರ್ಣನ ಸಾವ ನಾಳಿನೊಳು+ ಅರಿವೆನು (ಕತ್ತರಿಸುವೆನು)+ ಎಂದನು ನಿನ್ನ ಮಗ ನಗುತ.
ಅರ್ಥ:ಅದಕ್ಕೆ ಕೌರವನು,'ಆ ಭೀಮ, ಆ ಅರ್ಜುನ ಇವರಲ್ಲಿ ತಮ್ಮ ದುಶ್ಶಾಸನನಿಗೆ ಮತ್ತು ಜೀವಸಖನಾದ ಕರ್ಣನಿಗೆ ಅಂತರ್ಭಾವ ಇದೆ. ಭೀಮಾರ್ಜುನರ ಜೀವದಲ್ಲಿ ತನ್ನ ತಮ್ಮ ಮತ್ತು ಸಖನನ್ನು ಕಾಣುತ್ತಿದ್ದೇನೆ. ಆ ಭೀಮ ಪಾರ್ಥರ ಮರಣಸಿದ್ಧಿಯಲಿ ಕರ್ಣ ದುಶ್ಶಾಸನರ ಉಳಿವು. ಆ ಭೀಮ ಪಾರ್ಥರ ಒಳಗೆ ಕೈಹಿಡಿಯ ಸಮಿಪದಲ್ಲೇ ದುಶ್ಶಾಸನ ಕರ್ಣರು ಇರುವನೆಂದು ನಾವು ನಿಶ್ಚಯಿಸಿದ್ದೇವೆ; ಕರ್ಣನ ಸಾವನ್ನು ನಾಳಿನ ದಿನ ಅವರಿಂದ ಕತ್ತರಿಸಿ ತೆಗೆಯುವೆನು,' ಎಂದು ನಿನ್ನ ಮಗನು ನಗುತ್ತಾ ಹೇಳಿದನು.(ರನ್ನ: ಛಲದೊಳ್ ದುರ್ಯೋಧನಂ/ ಸುಯೋಧನಂ)
ನಾವು ಹೊಯ್ದಾಡುವೆವು ಭುಜಸ
ತ್ವಾವಲಂಬವ ತೋರುವೆವು ಕ
ರ್ಣಾವಸಾನವ ಕಂಡು ಬಳಿಕುಗುಳುವೆವು ತಂಬುಲವ |
ನೀವು ಸೇನಾಪತ್ಯವನು ಸಂ
ಭಾವಿಸಿರೆ ಸಾಕಿನ್ನು ಮಿಗಿಲಾ
ದೈವಕೃತ ಪೌರುಷವ ನಾಳಿನೊಳರಿಯಬಹುದೆಂದು || ೧೮ ||
ಪದವಿಭಾಗ-ಅರ್ಥ:ನಾವು ಹೊಯ್ದಾಡುವೆವು, ಭುಜ+ಸತ್ವ+ ಅವಲಂಬವ( ಆಧಾರ, ಹೊಂದಿದ ಸಾಮರ್ಥ್ಯ) ತೋರುವೆವು ಕರ್ಣ+ ಅವಸಾನವ ಕಂಡು, ಬಳಿಕ+ ಉಗುಳುವೆವು ತಂಬುಲವ ನೀವು ಸೇನಾಪತ್ಯವನು ಸಂಭಾವಿಸಿರೆ ಸಾಕಿನ್ನು ಮಿಗಿಲು+ ಆ+ ದೈವಕೃತ ಪೌರುಷವ ನಾಳಿನೊಳು+ ಅರಿಯಬಹುದೆಂದು.
  • ಟಿಪ್ಪಣಿ: ಉನ್ನತ ಸ್ಥಾನದಲ್ಲಿರುವವರು ತಮಗೆ ಬಹುವಚನದಲ್ಲಿ 'ನಾವು' ಎಂದು ಹೇಳಿಕೊಳ್ಳುವರು. 'ನಾನು' ಎನ್ನುವುದು ಅಪರೂಪ - ತಮಗಿಂತ ಮೇಲಿನವರಿಗೆ ಹೇಳುವಾಗ ಮಾತ್ರಾ.
ಅರ್ಥ:ಕೌರವನು ಕೃಪ, ಅಶ್ವತ್ಥಾಮರಿಗೆ,'ನಾವು ಹೊರಾಡುವೆವು, ಕರ್ಣನ ಅವಸಾನವನ್ನು ಕಂಡು, ಅದಕ್ಕಾಗಿ ನಮ್ಮ ಭುಜದ ಸತ್ವದ ಸಾಮರ್ಥ್ಯವನ್ನು ತೋರುವೆವು. ಬಳಿಕ ತಂಬುಲವನ್ನು ಅಗಿದು ನೆಮ್ಮದಿಯಿಂದ ಉಗುಳುವೆವು. ಈಗ ನೀವು ಸೇನಾಪತ್ಯವನು ಸಂಭಾವಿಸಿರಿ- ವಹಿಸಿಕೊಂಡು ನೆಡೆಸಿ. ಇನ್ನು ಮಾತು ಸಾಕು, ಇದಕ್ಕೂ ಮಿಗಿಲಾದುದು ಆ ದೈವಕೃತ. ನಮ್ಮ ಪೌರುಷವನ್ನು ನಾಳಿನ ಕಾಳಗದಲ್ಲಿ ಅರಿಯಬಹುದು,' ಎಂದನು.
ಧರಣಿಪತಿ ಚಿತ್ತೈಸು ಸೇನಾ
ಧುರವನೀವುದು ಮದ್ರಭೂಪತಿ
ಗೆರವಲಾ ಜಯಲಕ್ಶ್ಮಿ ಬಳಿಕಾ ಪಾಂಡುತನಯರಿಗೆ |
ಸುರನದೀಜ ದ್ರೋಣ ರಾಧೇ
ಯರಿಗೆ ಸರಿಮಿಗಿಲಿಂದು ಮಾದ್ರೇ
ಶ್ವರನುಳಿಯೆ ದೊರೆಯಾರು ದಿಟ್ಟರು ನಮ್ಮಥಟ್ಟಿನಲಿ || ೧೯ ||
ಪದವಿಭಾಗ-ಅರ್ಥ:ಧರಣಿಪತಿ ಚಿತ್ತೈಸು ಸೇನಾಧುರವನು+ ಈವುದು(ಕೊಡುವುದು), ಮದ್ರಭೂಪತಿಗೆ+ ಎರವಲು+ ಆ ಜಯಲಕ್ಶ್ಮಿ ಬಳಿಕ+ ಆ ಪಾಂಡುತನಯರಿಗೆ ಸುರನದೀಜ(ಭೀಷ್ಮ) ದ್ರೋಣ ರಾಧೇಯರಿಗೆ(ಕರ್ಣ) ಸರಿಮಿಗಿಲು+ ಇಂದು ಮಾದ್ರೇಶ್ವರನು+ ಉಳಿಯೆ ದೊರೆಯಾರು(ಸಮಾನರು ಯಾರು) ದಿಟ್ಟರು ನಮ್ಮ ಥಟ್ಟಿನಲಿ(ಸೈನ್ಯದಲ್ಲಿ).
ಅರ್ಥ:ಕೌರವನ ಮಾತಿಗೆ ಕೃಪ ಅಶ್ವತ್ಥಾಮರು, ಧರಣಿಪತಿ ಕೌರವನೇ ದಯಮಾಡಿ ಕೇಳು, ಸೇನಾಧಿಪತ್ಯವನ್ನು ಮದ್ರಭೂಪತಿ ಶಲ್ಯನಿಗೆ ಕೊಡುವುದು. ಆ ಜಯಲಕ್ಶ್ಮಿಯು ಅವನಿಗೆ ಎರವಲು- ಅಧೀನ. ಅಷ್ಟೇ ಅಲ್ಲ ಅವನು ಆ ಪಾಂಡವರಗೂ ಭೀಷ್ಮ, ದ್ರೋಣ, ಕರ್ಣರಿಗೆ ಸರಿಮಿಗಿಲು ಪರಾಕ್ರಮಿ. ಯುದ್ಧದಲ್ಲಿ ಇಂದು ಮಾದ್ರೇಶ್ವರನು ಉಳಿದಿರುವಾಗ ನಮ್ಮ ಸೈನ್ಯದಲ್ಲಿ ಅವನಿಗೆ ಸಮಾನರು, ದಿಟ್ಟರು ಯಾರಿದ್ದಾರೆ,'ಎಂದರು.
ನೀವು ಕಟಕಾಚಾರ್ಯಪುತ್ರರು
ನೀವಿರಲು ಕೃಪನಿರಲು ದಳವಾಯ್
ನಾವಹೆವೆ ನೀವಿಂದು ತೇಜೊದ್ವಯದಲಧಿಕರಲೆ ||
ನಾವು ತರುವಾಯವರೆನಲು ಜಯ
ಜೀವಿಗಳು ನೀವನ್ಯಗುಣಸಂ
ಭಾವಕರಲಾ ಎಂದನಶ್ವತ್ಥಾಮ ಶಲ್ಯಂಗೆ || ೨೦ ||
ಪದವಿಭಾಗ-ಅರ್ಥ:ನೀವು ಕಟಕಾಚಾರ್ಯ (ಕಟಕ= ಸೇನೆ, ಆಚಾರ್ಯ) ಪುತ್ರರು ನೀವಿರಲು ಕೃಪನು+ ಇರಲು ದಳವಾಯ+ ಆವು(ನಾವು)+ ಅಹೆವೆ(ಅಗುವೆವೆ), ನೀವು+ ಇಂದು ತೇಜ+ ದ್ವಯದಲಿ+ ಅಧಿಕರಲೆ, ನಾವು ತರುವಾಯವರು+ ಎನಲು, ಜಯಜೀವಿಗಳು ನೀವು+ ಅನ್ಯಗುಣಸಂಭಾವಕರಲಾ ಎಂದನು+ ಅಶ್ವತ್ಥಾಮ ಶಲ್ಯಂಗೆ.
ಅರ್ಥ:ಆಗ ಶಲ್ಯನು ಅಶ್ವತ್ಥಾಮನಿಗೆ, 'ನೀವು ಸೇನಾಶಸ್ತ್ರಾಸ್ತ್ರ ಗುರುಗಳ ಪುತ್ರರು ನೀವಿರುವಾಗ, ಹಿರಿಯನಾದ ಕೃಪನು ಇರುವಾಗ ನಾವು ದಳವಾಯಿ ಅಗುವೆವೆ? ನೀವು ಇಂದು ತೇಜಸ್ಸಿನ ನಮ್ಮಿಬ್ಬರಲ್ಲಿ ನೀವು ಅಧಿಕರಲ್ಲವೇ? ನಾವು ನಿಮ್ಮ ತರುವಾಯದವರು,' ಎನಲು, ಅಶ್ವತ್ಥಾಮನು,'ಜಯಯಿಸಬಲ್ಲ ಶೂರರು ನೀವು ಹೆಚ್ಚಿನಗುಣದ ಸಂಭಾವಿಕರಲ್ಲವೇ, ಎಂದನು ಅಶ್ವತ್ಥಾಮ ಶಲ್ಯಂಗೆ.
ಉಚಿತವಿತರೇತರಗುಣಸ್ತುತಿ
ರಚನೆ ಗುಣಯುಕ್ತರಿಗೆ ವಿಜಯೋ
ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ |
ಅಚಲ ಮೂರರ ಪೈಸರದ ಬಲ
ನಿಚಯ ನಮ್ಮದು ವೀರ ಸುಭಟ
ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ || ೨೧ ||
ಪದವಿಭಾಗ-ಅರ್ಥ: ಉಚಿತವು+ ಇತರ+ ಈತರ ಗುಣಸ್ತುತಿ ರಚನೆ(ಕ್ರಮ) ಗುಣಯುಕ್ತರಿಗೆ, ವಿಜಯ+ ಉಪಚಿತ (ಉಪಚ= ಉಪಾಯ,ಸಾಧನೆ, ಉಪಚಾರ) ರಣನಾಟಕಕೆ ಜವನಿಕೆಯಾಯ್ತಲೇ(ತೆರೆ) ರಜನಿ(ಕತ್ತಲೆಯು), ಅಚಲ ಮೂರರ ಪೈಸರದ(ಕುಸ್ತಿಯ ಒಂದು ವರಸೆ, ಕುಗ್ಗುವುದು, ಕುಸಿಯುವುದು, ಜಾರುವುದು, ಜಾರುವಿಕೆ) ಬಲ( ಮೂರು ಜನರ ಸೇನೆ, ಶಕ್ತಿ) ನಿಚಯ ನಮ್ಮದು ವೀರ ಸುಭಟ ಪ್ರಚಯ(ಗುಂಪು, ಸಮೂಹ, ಅಭ್ಯುದಯ, ಏಳಿಗೆ) ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ.
ಅರ್ಥ:ಕೃಪನು ಕುರುಪತಿ ಕೌರವನಿಗೆ,'ಈ ಬಗೆಯ ಇತರರ ಗುಣಸ್ತುತಿಯ ಕ್ರಮವು ಗುಣವಂತರಿಗೆ ಉಚಿತವು; ವಿಜಯ ಸಾಧನೆಯ ರಣನಾಟಕಕ್ಕೆ ರಾತ್ರಿಯಾಗಿ ಕತ್ತಲೆಯು ಆವರಿಸಿ ತೆರೆಬಿದ್ದಿತು. ನಿಮ್ಮ ಬೆಂಬಲಕ್ಕೆ ಈ ಮೂರು ಜನರ ಬಲವು ಅಚಲವಾಗಿದೆ. ನಿಂತು ಹೋರಾಡುವ ನಿಶ್ಚಯ ನಮ್ಮದು. ವೀರ ಸುಭಟರ ಈ ಗುಂಪಿನಲ್ಲಿ ಮುಖ್ಯರನ್ನು ಸೇನಾಧಿಪತಿಯಾಗಿ ನೀವೇ ಮಾಡಿ',ಎಂದನು.
ಸುರನದೀಜ ದ್ರೋಣ ಕೃಪರೀ
ಕುರುಬಲಕೆ ಕಟ್ಟೊಡೆಯರವರಿ
ಬ್ಬರ ಪರೋಕ್ಷದಲಾರವಿಲ್ಲಿಯ ಹಾನಿವೃದ್ಧಿಗಳು |
ಗುರುಸುತನೊ ಶಲ್ಯನೊ ಚಮೊಮು
ಖ್ಯರನು ನೀವೇ ಬೆಸಸಿಯೆಂದನು
ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ || ೨೨ ||
ಪದವಿಭಾಗ-ಅರ್ಥ:ಸುರನದೀಜ(ಭೀಷ್ಮ) ದ್ರೋಣ ಕೃಪರೀ ಕುರುಬಲಕೆ (ಕುರು ಸೇನೆ) ಕಟ್ಟೊಡೆಯರು+ ಅವರಿಬ್ಬರ ಪರೋಕ್ಷದಲಿ (ಇಲ್ಲದಿರುವಾಗ)+ ಆರವು(ಯಾರದ್ದು)+ ಇಲ್ಲಿಯ ಹಾನಿವೃದ್ಧಿಗಳು; ಗುರುಸುತನೊ ಶಲ್ಯನೊ ಚಮೊ+ ಮುಖ್ಯರನು ನೀವೇ ಬೆಸಸಿಯೆಂದನು ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ.
ಅರ್ಥ: ಕೇಳೈ ಅದಕ್ಕೆ ಕೌರವನು ಕೃಪಾಚಾರ್ಯರಿಗೆ,'ಭೀಷ್ಮ, ದ್ರೋಣ, ಕೃಪರು, ಈ ಕುರುಬಲಕ್ಕೆ ಗಟ್ಟಿಯಾದ ಒಡೆಯರು- ರಕ್ಷಕರು. ಮೊದಲಿನ ಅವರಿಬ್ಬರು ಇಲ್ಲ. ಅವರ ಇಲ್ಲದಿರುವಾಗ ಯಾರದ್ದು ಇಲ್ಲಿಯ ಹಾನಿವೃದ್ಧಿಗಳ ಹೊಣೆ? ಗುರುಸುತನಾದ ಅಶ್ವತ್ಥಾಮನೊ, ಶಲ್ಯನೊ, ಸೇನಾ ಮುಖ್ಯರನ್ನು ನೀವೇ ಹೇಳಿ,' ಎಂದು ಹೇಳಿದನು.
ಆದಡಾ ಭೀಷ್ಮಾದಿ ಸುಭಟರು
ಕಾದಿ ನೆಗ್ಗಿದ ಕಳನ ಹೊಗುವಡೆ
ಕೈದುಕಾರರ ಕಾಣೆನೀ ಮಾದ್ರೇಶ ಹೊರಗಾಗಿ |
ಈ ದುರಂತದ ಸಮರಜಯ ನಿನ
ಗಾದಡೊಳ್ಳಿತು ಶಲ್ಯನಲಿ ಸಂ
ಪಾದಿಸಿರೆ ಸೇನಾಧಿಪತ್ಯವನರಸ ಕೇಳೆಂದ || ೨೩ ||
ಪದವಿಭಾಗ-ಅರ್ಥ:ಆದಡೆ+ ಆ ಭೀಷ್ಮಾದಿ ಸುಭಟರು ಕಾದಿ(ಯುದ್ಧಮಾಡಿ) ನೆಗ್ಗಿದ ಕಳನ ಹೊಗುವಡೆ, ಕೈದುಕಾರರ (ಕೈದು= ಆಯುಧ, ಶಸ್ತ್ರ) ಕಾಣೆನು+ ಈ ಮಾದ್ರೇಶ ಹೊರಗಾಗಿ(ಬಿಟ್ಟು) ಈ ದುರಂತದ ಸಮರಜಯ ನಿನಗಾದಡೆ+ ಒಳ್ಳಿತು ಶಲ್ಯನಲಿ ಸಂಪಾದಿಸಿರೆ, ಸೇನಾಧಿಪತ್ಯವನು+ ಅರಸ ಕೇಳೆಂದ
ಅರ್ಥ:ಕೌರವನ ಮಾತಿಗೆ ಕೃಪನು, 'ಹಾಗಿದ್ದರೆ, ಆ ಭೀಷ್ಮಾದಿ ಸುಭಟರು ಯುದ್ಧಮಾಡಿ ನೆಗ್ಗಿಹೋದ, ಈ ರಣರಂಗವನ್ನು ಹೊಗುವುದಾದರೆ, ಕೈದುಕಾರರು- ಶಸ್ತ್ರಪರಿಣತರು ಯಾರೆಂಬುದನ್ನು ಈ ಮಾದ್ರೇಶನನ್ನು ಬಿಟ್ಟು ಬೇರೆಯವರನ್ನು ಕಾಣೆನು. ಈ ದುರಂತದ ಸಮರದಲ್ಲಿ ಜಯವು ನಿನಗಾದರ ಬಹಳ ಒಳ್ಳೆಯದು. ಆಜಯವನ್ನು ಈ ಶಲ್ಯನ ಸೇನಾಧಿಪತ್ಯದಲ್ಲಿ ಸಂಪಾದಿಸಿರೆ- ಪಡೆಯಿರಿ,' ಎಂದನು ಅರಸನೇ ಕೇಳು ಎಂದ ಸಂಜಯ.

ಶಲ್ಯನಿಗೆ ಸೇನಾಧಿಪತಿ ಪಟ್ಟ

ಸಂಪಾದಿಸಿ
ತರಸಿ ಮಂಗಳವಸ್ತುಗಳನಾ
ದರಿಸಿ ಭದ್ರಾಸನದಲೀತನ
ನಿರಿಸಿ ನೃಪ ವಿಸ್ತರಿಸಿದನು ಮೂರ್ಧಾಭಿಷೇಚನವ |
ಮೊರೆವ ವಾದ್ಯದ ಸಿಡಿಲ ಧರಣೀ
ಸುರರ ಮಂತ್ರಾಕ್ಷತೆಯ ಮಳೆಗಳೊ
ಳಿರುಳನುಗಿದವು ಮುಕುಟಮಣಿರಾಜಿಗಳ ಮಿಂಚುಗಳು || ೨೪ ||
ಪದವಿಭಾಗ-ಅರ್ಥ: ತರಸಿ ಮಂಗಳವಸ್ತುಗಳನು+ ಆದರಿಸಿ ಭದ್ರಾಸನದಲಿ+ ಈತನನು+ ಇರಿಸಿ ನೃಪ ವಿಸ್ತರಿಸಿದನು ಮೂರ್ಧಾಭಿಷೇಚನವ ಮೊರೆವ ವಾದ್ಯದ ಸಿಡಿಲ ಧರಣೀಸುರರ(ಬ್ರಾಹ್ಮಣರು) ಮಂತ್ರಾಕ್ಷತೆಯ ಮಳೆಗಳೊಳು+ ಇರುಳನು(ರಾತ್ರಿಯನ್ನು)+ ಉಗಿದವು ಮುಕುಟಮಣಿ ರಾಜಿಗಳ(ರಾಶಿ) ಮಿಂಚುಗಳು.
ಅರ್ಥ:ಕೃಪನ ಸಲಹೆಯಂತೆ ಕೌರವನು ಮಂಗಳವಸ್ತುಗಳನ್ನು ತರಸಿ ಶಲ್ಯನನ್ನು ಆದರಿಸಿ ಭದ್ರಾಸನದಲ್ಲಿ ಆತನನ್ನು ಕೂರಿಸಿ, ನೃಪ ಕೌರವನು ಶಲ್ನನನ್ನು ಸೇನಾಧಿಪತಿಯಾಗಿ ಮೂರ್ಧಾಭಿಷೇಚನವನ್ನು ಅಲ್ಲಿದ್ದ ಬ್ರಾಹ್ಮಣರು ಮಂತ್ರಾಕ್ಷತೆಯ ಮಳೆಗಳನ್ನು ಸುರಿಯುತ್ತಿರಲು ವಿಸ್ತಾರವಾಗಿ ಮಾಡಿದನು. ಆಗ ವಾದ್ಯಗಳು ಸಿಡಿಲಿನಮತೆ ಮೊರೆದವು. ಆ ರಾತ್ರಿಯ ಕತ್ತಲೆಯನ್ನು ಅವನ ಮುಕುಟಮಣಿ ರಾಶಿಗಳ ಮಿಂಚುಗಳು ಇಲ್ಲವಾಗಿಸಿದವು.
ಆದುದುತ್ಸವ ಕರ್ಣಮರಣದ
ಖೇದವುಕ್ಕಿತು ಹಗೆಗೆ ಕಾಲ್ದೊಳೆ
ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ |
ಬೀದಿವರಿದುದು ಬಿಂಕ ನನೆಕೊನೆ
ವೋದುದಾಶಾಬೀಜ ಲಜ್ಜೆಯ
ಹೋದ ಮೊಗಿಗೆ ಕದಪ ಹೊಯ್ದನು ನಿನ್ನ ಮಗನೆಂದ || ೨೫ ||
ಪದವಿಭಾಗ-ಅರ್ಥ:ಆದುದು+ ಉತ್ಸವ ಕರ್ಣಮರಣದ ಖೇದವು+ ಉಕ್ಕಿತು ಹಗೆಗೆ(ಶತ್ರುವಿಗೆ) ಕಾಲ್ದೊಳೆಯಾದ(ಕಂಟಕ) ವೀರರಸ+ ಅಬ್ಧಿ(ಸಮುದ್ರ) ನೆಲೆದಪ್ಪಿತ್ತು(ಮೇರೆ ಮೀರಿತು) ನಿಮಿಷದಲಿ, ಬೀದಿವರಿದುದು ಬಿಂಕ ನನೆಕೊನೆವೋದುದು(ಚಿಗುರೊಡೆಯಿತು)+ ಆಶಾಬೀಜ, ಲಜ್ಜೆಯ ಹೋದ ಮೊಗಿಗೆ ಕದಪ(ಕೆನೆ) ಹೊಯ್ದನು(ಕೊಯಿದನು) ನಿನ್ನ ಮಗನೆಂದ.
ಅರ್ಥ:ಸಂಜಯನು,'ಶಲ್ಯನ ಸೇನಾಧಿಪತಿಪಟ್ಟದೊಂದಿಗೆ ಕರ್ಣಮರಣದ ಖೇದವು ಉತ್ಸವವಾಗಿ ಮುಗಿಯಿತು. ಸೇನೆಯಲ್ಲಿ ಶತ್ರುವಿಗೆ ಕಂಟಕವಾದ ವೀರರಸದ ಸಮುದ್ರ ಉಕ್ಕಿತು. ಅದು ನಿಮಿಷದಲ್ಲಿ ಮೇರೆ ಮೀರಿತು. ಬೀದಿಬೀದಿಗಳಲ್ಲಿ ಹೆಮ್ಮ ಮೂಡಿತು. ಕರ್ಣನ ಸೋಲಿನ ಅವಮಾನಕ್ಕೆ ಶಲ್ಯನು ಸೇನಾಧಿಪತ್ಯ ವಹಿಸಿದ ಬಿಂಕದಿಂದ- ಹೆಮ್ಮೆಯಿಂದ ಜಯದ ಆಶಾಬೀಜ ಪುನಃ ಚಿಗುರೊಡೆಯಿತು. ಆದರೆ 'ಹೋದ ಮೂಗಿನ ಲಜ್ಜೆ ತೆಗೆಯಲು, ಕದಪ ಕೊಯ್ದನು ನಿನ್ನ ಮಗನು,' ಎಂದ. (ಶಿಕ್ಷೆಯ ಕಾರಣ ಮೂಗು ಕೊಯ್ದಿದ್ದನು ಮುಚ್ಚಲು, ಕೆನ್ನೆ ಕೊಯ್ದು ಮೂಗಿಗೆ ಅಂಟಿಸಿದಂತೆ. ಮೂಗೂ ಹೋಯಿತು ಜೊತೆಗೆ ಕೆನ್ನೆಯೂ ಹೋಯಿತು.'ಕರ್ಣ ಸತ್ತ ನೋವನ್ನು ತೆಗೆಯಲು, ಶಲ್ಯನನ್ನು ಸಾವಿಗೆ ನೂಕಿದ ನಿನ್ನ ಮಗ' ಎಂದು ಭಾವ)(ನೀತಿಗೆಟ್ಟ ಅಪರಾದಕ್ಕೆ ಶಿಕ್ಷೆಯಾಗಿ ಹಿಂದೆ ಮೂಗು ಕೊಯ್ಯತ್ತಿದ್ದರು - ಇಲ್ಲಿ ಹೇಗೆ ಅನ್ವಯ?.)
ಕಾಣಿಕೆಯನಿತ್ತಖಿಳ ಸುಭಟ
ಶ್ರೇಣಿ ಕಂಡದು ನುಡಿಯ ಹಾಣಾ
ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ |
ಪ್ರಾಣಚುಳಕೋದಕದ ಚೇಷ್ಟೆಯ
ಹೂಣಿಗರು ವಿಜಯಾಂಗನೋಪ
ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ || ೨೬ ||
ಪದವಿಭಾಗ-ಅರ್ಥ: ಕಾಣಿಕೆಯನು+ಇತ್ತು+ ಅಖಿಳ ಸುಭಟಶ್ರೇಣಿ ಕಂಡದು ನುಡಿಯ(ಮಾತಿನ ಘೋಷಣೆಗಳ) ಹಾಣಾಹಾಣಿಗಳ ಭಾಷೆಗಳ(ಪ್ರತಿಜ್ಞೆಗಳ ಹಕ್ಕಲು(ಶ್ರೇಷ್ಠ, ಬಯಲು?) ವೀರರುಕ್ಕುಗಳ(ರುಕ್ಕು - ಮಂತ್ರ, ವಾಕ್ಯ) ಪ್ರಾಣಚುಳಕ(ಬೊಗಸೆ)+ ಉದಕದ(ನೀರು) ಚೇಷ್ಟೆಯ ಹೂಣಿಗರು(ಬಿಲ್ಲುಗಾರರು) ವಿಜಯಾಂಗನ+ ಉಪಕ್ಷೀಣಮಾನಸರು(ದುರ್ಬಲ ಮನಸ್ಸಿನವರು)+ ಒಪ್ಪಿದರು(ಇದ್ದರು, ಕಂಡುಬಂದರು) ಕುರುಪತಿಯ ಪರಿವಾರ
ಅರ್ಥ: ಶಲ್ಯನು ಎಲ್ಲರಿಗೂ ಕಾಣಿಕೆಯನ್ನು ಕೊಟ್ಟನು. ಎಲ್ಲಾ ಸುಭಟಶ್ರೇಣಿಯ ಯೋಧರೂ ವೀರ ಘೋಷಣೆಗಳನ್ನು ಮಾಡುವುದು ಕಂಡುಬಂದಿತು. ಈ ಬಗೆಯ ನುಡಿಗಳ ಹಾಣಾಹಾಣಿಗಳ- ಮೇಲಾಟಗಳ ಭಾಷೆಗಳ ದೊಡ್ಡ ದೊಡ್ಡ ವೀರವಾಕ್ಯಗಳ ಕೈಬೊಗಸೆ ನೀರಿನಮೇಲೆ ಆಣೆ ಇಡುವ ಚೇಷ್ಟೆಯ ಬಿಲ್ಲುಗಾರರು ವಿಜಯಾಂಗನೆಯನ್ನು ಬಯಸುವ ದುರ್ಬಲ ಮನಸ್ಸಿನವರು ಕುರುಪತಿ ಕೌರವನ ಪರಿವಾರದಲ್ಲಿ ಕಂಡುಬಂದರು.
ಪತಿಕರಿಸಿದೈ ವೀರಸುಭಟ
ಪ್ರತತಿ ಮಧ್ಯದಲೆಮ್ಮನಹಿತ
ಚ್ಯುತಿಗೆ ಸಾಧನವೆಂದು ನಿಜಸೇನಾಧಿಪತ್ಯದಲಿ |
ಕೃತಕವಿಲ್ಲದೆ ಕಾದುವೆನು ಯಮ
ಸುತರೊಡನೆ ಜಯಸಿರಿಗೆ ನೀನೇ
ಪತಿಯೆನಿಸಿ ತೋರಿಸುವೆನೆಂದನು ಶಲ್ಯ ಕುರುಪತಿಗೆ || ೨೭ ||
ಪದವಿಭಾಗ-ಅರ್ಥ: ಪತಿಕರಿಸಿದೈ( ಅನುಗ್ರಹಿಸಿದೆ,) ವೀರಸುಭಟ ಪ್ರತತಿ (ಸಮೂಹ) ಮಧ್ಯದಲಿ+ ಎಮ್ಮನು+ ಅಹಿತಚ್ಯುತಿಗೆ(ಅಹಿತ-ಹಿತವಲ್ಲದ್ದನ್ನು ತೆಗೆಯಲು; ಹಿತಸಾದನಿಗೆ,) ಸಾಧನವೆಂದು ನಿಜ (ತನ್ನ) ಸೇನಾಧಿಪತ್ಯದಲಿ ಕೃತಕವಿಲ್ಲದೆ(ಮೋಸವಿಲ್ಲದೆ) ಕಾದುವೆನು ಯಮಸುತರೊಡನೆ(ಧರ್ಮಜ ಸೋದರರೊಡನೆ,ಪಾಂಡವರೊಡನೆ) ಜಯಸಿರಿಗೆ ನೀನೇ ಪತಿಯೆನಿಸಿ ತೋರಿಸುವೆನು+ ಎಂದನು ಶಲ್ಯ ಕುರುಪತಿಗೆ.
ಅರ್ಥ:ಶಲ್ಯನು, ನಕುಲ ಸಹದೇವರ ತಾಯಿ ಮಾದ್ರಿಯ ಅಣ್ಣ, ಅವರ ಸೋದರಮಾವ, ದುರ್ಯೋಧನನ ಮೋಸದ ತಂತ್ರದಿಂದ ವಚನಬದ್ಧನಾಗಿ ಕೌರವನ ಕಡೆ ಸೇರಿದ್ದ. ಈಗ ಕೌರವನು ಪಾಂಡವರ ಮೇಲಿನ ಜಯಕ್ಕೆ ಶಲ್ಯನನ್ನೇ ಸೇನಾಧಿಪತಿಯಾಗಿ ನೇಮಿಸಿದ. ಅದಕ್ಕಾಗಿ ಶಲ್ಯನು ದುರ್ಯೋಧನನ್ನು ಕುರಿತು,' ಕೌರವಾ, ನೀನು ವೀರ ಸುಭಟರ ಸಮೂಹದ ಮಧ್ಯದಲ್ಲಿ ಉಳಿದವರನ್ನು ಬಿಟ್ಟು ಅನುಗ್ರಹಿಸಿ ನನ್ನನ್ನು ಸೇನಾಧಿಪತಿಯಾಗಿ ಮಾಡಿದೆ. ನಾನು ನಿನ್ನ ಹಿತಸಾದನಿಗೆ ಸಾಧನವೆಂದು ನಂಬಿರುವೆ. ನನ್ನ ಸೇನಾಧಿಪತ್ಯದಲ್ಲಿ (ಶತ್ರುಗಳು ನನ್ನ ಅಳಿಯಂದರು ಎಂದು ಬಾವಿಸದೆ) ಮೋಸವಿಲ್ಲದೆ ಪಾಂಡವರೊಡನೆ ಯುದ್ಧಮಾಡುವೆನು. ನೀನೇ ಜಯಲಕ್ಷ್ಮಿಗೆ ಪತಿಯೆನಿಸಿ ತೋರಿಸುವೆನು. ನಿನಗೆ ಜಯವನ್ನು ಗಳಿಸಿಕೊಡುವೆನು,'ಎಂದನು.
ಉಬ್ಬಿದನಲೈ ಮಧುರವಚನದ
ಹಬ್ಬದಲಿ ನಿನ್ನಾತನಿತ್ತಲು
ತುಬ್ಬಿನವದಿರು ತಂದು ಬಿಸುಟರು ನಿಮ್ಮ ಪಾಳೆಯದ |
ಸರ್ಬ ವೃತ್ತಾಂತವನು ಗಾಢದ
ಗರ್ಭ ಮುರಿದುದು ಕೃಷ್ಣರಾಯನ
ನೆಬ್ಬಿಸಿದನಿರುಳವನಿಪತಿ ಬಿನ್ನೈಸಿದನು ಹದನ || ೨೮ ||
ಪದವಿಭಾಗ-ಅರ್ಥ:ಉಬ್ಬಿದನಲೈ(ಸಂತಸಪಟ್ಟನು) ಮಧುರ ವಚನದ ಹಬ್ಬದಲಿ ನಿನ್ನಾತನು,+ ಇತ್ತಲು ತುಬ್ಬಿನವದಿರು(ಗುಪ್ತಚಾರರು) ತಂದು ಬಿಸುಟರು ನಿಮ್ಮ ಪಾಳೆಯದ ಸರ್ಬ(ಸರ್ವ, ಎಲ್ಲಾ) ವೃತ್ತಾಂತವನು ಗಾಢದಗರ್ಭ ಮುರಿದುದು ಕೃಷ್ಣರಾಯನನು+ ಎಬ್ಬಿಸಿದನು+ ಇರುಳು+ ಅವನಿಪತಿ ಬಿನ್ನೈಸಿದನು ಹದನ.
ಅರ್ಥ:ಶಲ್ಯನ ಮಧುರ ವಚನದ ಹಬ್ಬದಲ್ಲಿ, ಎಂದರೆ ಅವನ ಹಿತವಾದ ಮಾತುಗಳನ್ನು ಕೇಳಿ ನಿನ್ನಾತ ಕೌರವನು ಉಬ್ಬಿಹೊದನು. ಇತ್ತ ಪಾಂಡವರ ಪಾಳಯದಲ್ಲಿ ಗುಪ್ತಚಾರರು ಆ ನಿಮ್ಮ ಪಾಳೆಯದ ವೃತ್ತಾಂತವನು ತಂದು ಎಲ್ಲೆಡೆ ಹರಡಿದರು. ಗಾಢವಾದದ ರಾತ್ರಿಯ ಕತ್ತಲೆ ಗರ್ಭ ಮುರಿದು ಧರ್ಮಜನು ಕೌರವನಿಗೆ ತನ್ನ ಮಾವನೇ ಸೇನಾಧಿಪತಿಯಾದುದನ್ನ ಕೇಳಿ ಗಾಬರಿಯಾದನು. ಅವನು ಆ ರಾತ್ರಿಯೇ ಮಲಗಿದ್ದ ಕೃಷ್ಣರಾಯನನ್ನು ಎಬ್ಬಿಸಿ ಈ ವಿಚಾರವನ್ನು ಬಿನ್ನೈಸಿದನು.

ಯುಧಿಷ್ಠಿರನ ಕಳವಳ - ಕೃಷ್ಣನ ಸಲಹೆ

ಸಂಪಾದಿಸಿ
ದೇವ ಚಿತ್ತೈಸಿದಿರೆ ಬೊಪ್ಪನ
ಭಾವನನು ಸೇನಾಧಿಪತ್ಯದ
ಲೋವಿದರಲೇ ಶಲ್ಯ ಮಾಡಿದ ಭಾಷೆಯವರೊಡನೆ |
ಆವನಂಘೈಸುವನೊ ಪಾರ್ಥನೊ
ಪಾವಮಾನಿಯೊ ನಕುಲನೋ ಸಹ
ದೇವನೋ ತಾನೋ ನಿದಾನಿಸಲರಿಯೆ ನಾನೆಂದ || ೨೯ ||
ಪದವಿಭಾಗ-ಅರ್ಥ: ದೇವ ಚಿತ್ತೈಸಿದಿರೆ, ಬೊಪ್ಪನಭಾವನನು ಸೇನಾಧಿಪತ್ಯದಲಿ+ ಓವಿದರಲೇ(ಆರಯ್ಯುದು, ಗೌರವಿಸಿ), ಶಲ್ಯ ಮಾಡಿದ ಭಾಷೆಯ+ ಅವರೊಡನೆ ಆವನು+ ಅಂಘೈಸುವನೊ ಪಾರ್ಥನೊ ಪಾವಮಾನಿಯೊ(ಪವಮಾನನ ಮಗ ಪಾವಮಾನಿ- ಭೀಮ) ನಕುಲನೋ ಸಹದೇವನೋ ತಾನೋ ನಿದಾನಿಸಲು(ನಿರ್ಣಯಿಸಲು)+ ಅರಿಯೆ(ತಿಳಿಯೆನು) ನಾನು, ಎಂದ.
ಅರ್ಥ:ಕೃಷ್ಣಾ, ದೇವಾ, ಕೇಳಿದಿರಾ, ನಮ್ಮ ತಂದೆಯ ಭಾವನನ್ನು, ನಮ್ಮ ಮಾವ ಶಲ್ಯನನ್ನು ಸೇನಾಧಿಪತ್ಯದಲ್ಲಿ ಕೂರಿಸಿ ಗೌರವಿಸಿದ್ದಾರಲ್ಲಾ, ಮಾವ ಶಲ್ಯನು ಕೌರವನಿಗೆ ಜಯವನ್ನು ತರುವೆನೆಂದು ಮಾಡಿದ ಭಾಷೆಯನ್ನು ಕೇಳಿದಿರಾ? ಅವರೊಡನೆ ಯಾರು ಹೋರಾಡಬೇಕೊ? ಪಾರ್ಥನೊ, ಭೀಮನೋ, ಅಥವಾ ನಕುಲನೋ, ಸಹದೇವನೋ, ತಾನೋ, ನಾನು ನಿರ್ಣಯಿಸಲು ತಿಳಿಯೆನು', ಎಂದ.
ಕಲಹವೆನ್ನದು ದಳಪತಿಗೆ ತಾ
ನಿಲುವೆನೆಂದನು ಭೀಮನೆನ್ನನು
ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ |
ಸಲುಗೆಯೆನಗೆಂದನು ನಕುಲನೆ
ನ್ನೊಲವಿನರ್ತಿಯಿದೆನ್ನ ಕಳುಹಿದ
ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ || ೩೦ ||
ಪದವಿಭಾಗ-ಅರ್ಥ: ಕಲಹವು+ ಎನ್ನದು ದಳಪತಿಗೆ ತಾ ನಿಲುವೆನೆಂದನು ಭೀಮನು; ಎನ್ನನು ಕಳುಹಿ ನೋಡೆಂದನು ಧನಂಜಯನು,+ ಎಮ್ಮ ಮಾವನಲಿ ಸಲುಗೆ+ ಯೆನಗೆ+ ಎಂದನು ನಕುಲನು+ ಎನ್ನೊಲವಿನ+ ಅರ್ತಿಯಿದೆ+ ಎನ್ನ ಕಳುಹಿದಡೆ+ ಉಳುಹಿದವರು(ಉಳುಹು- ಕಾಪಾಡು)+ ಎಂದು+ ಎರಗಿದನು ಸಹದೇವನು+ ಆ ಹರಿಗೆ.
ಅರ್ಥ:ಧರ್ಮಜನ ಜೊತೆ ಬಂದಿದ್ದ ಅವನ ತಮ್ಮಂದಿರಲ್ಲಿ, ಭೀಮನು ಈ ಯುದ್ಧ ನನ್ನದು, ಶಲ್ಯ ದಳಪತಿಗೆ ತಾನು ಎದುರು ನಿಲ್ಲುವೆನು, ಎಂದನು; ಧನಂಜಯನು ನನ್ನನ್ನು ಅವನನ್ನು ಎದುರಿಸಲು ಕಳುಹಿಸಿ ನೋಡು ಎಂದನು; ನಮ್ಮ ಮಾವನಲ್ಲಿ ನನಗೆ ಸಲುಗೆ ಇದೆ, ನನಗೆ+ ಎಂದನು ನಕುಲನು. ಸಹದೇವನು ನನ್ನ ಒಲವಿನ ಮಾವ, ಪ್ರೀತಿಯಿದೆ ಅವನಿಗೆ, ನನ್ನನ್ನು ಯುದ್ಧಕ್ಕೆ ಕಳುಹಿದರೆ ನನ್ನನ್ನು ಗೌರವಿಸಿ ಕಾಪಾಡಿದಂತಾಗುವುದು ಎಂದು ಆ ಹರಿಗೆ ನಮಸ್ಕರಿಸಿದನು.
ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ನಕುಲನ
ಹೊರಿಗೆಯೊದಗದು ಸೈರಿಸದು ಸಹದೇವನಾಟೊಪ |
ಇರಿವಡಾ ಮಾದ್ರೇಶನನು ನೆರೆ
ಮುರಿವಡೆಯು ನಿನಗಹುದು ನಿನ್ನನು
ತರುಬಿದವರೇ ಕಷ್ಟರೆಂದನು ನಗುತ ಮುರವೈರಿ || ೩೧ ||
ಪದವಿಭಾಗ-ಅರ್ಥ: ಹರಿಯದು+ ಅರ್ಜುನನಿಂದ, ಭೀಮನ ನೆರವಣಿಗೆ(ಸಂದಣಿ; ಶಕ್ತಿ,ಬಲ,ತ್ರಾಣ; ಕೌಶಲ,ಚಾತುರ್ಯ; ನೆರೆ- ಹೆಚ್ಚು, ನೆರವಣೆ= ಹೆಚ್ಚುಗಾರಿಕೆ ಸಾಹಸ?) ನೋಯಿಸದು, ನಕುಲನ ಹೊರಿಗೆಯು(ಭಾರ, ಹೊರೆ ೨ ಹೊಣೆಗಾರಿಕೆ)+ ಒದಗದು ಸೈರಿಸದು ಸಹದೇವನ+ ಆಟೊಪ ಇರಿವಡೆ+ ಆ ಮಾದ್ರೇಶನನು ನೆರೆ ಮುರಿವಡೆಯು ನಿನಗೆ+ ಅಹುದು(ಸಾಧ್ಯ) ನಿನ್ನನು ತರುಬಿದವರೇ (ಎದುರಿಸಿದರೆ) ಕಷ್ಟರು+ ಎಂದನು ನಗುತ ಮುರವೈರಿ.
ಅರ್ಥ:ಅವರ ಮಾತಿಗೆ ಕೃಷ್ಣನು ನಗುತ್ತಾ, ಧರ್ಮಜನನ್ನು ಕುರಿತು,'ಶಲ್ಯನನ್ನು ಎದುರಿಸಲು ಅರ್ಜುನನಿಂದಲೂ ಹರಿಯದು- ಸಾಧ್ಯವಿಲ್ಲ; ಭೀಮನ ಬಲ ಅವನನ್ನು ನೋಯಿಸದು; ನಕುಲನ ಭಾರದ ಶಕ್ತಿಯೂ ಅವನಲ್ಲಿ ಬರುವುದಲ್ಲ. ಸಹದೇವನ ಆಟೊಪದ ಪರಾಕ್ರಮ ಸಾಕಾಗುವುದಿಲ್ಲ. ಶಲ್ಯನನ್ನು ಇರಿಯುವುದಾದರೆ, ಆ ಮಾದ್ರೇಶನನ್ನು ಪೂರ್ಣ ಮುರಿಯುವುದಾದರೆ, ಧರ್ಮಜಾ ಅದು ನಿನಗೆ ಸಾಧ್ಯ. ನಿನ್ನನ್ನು ಎದುರಸಿದವರೇ ಕಷ್ಟಕ್ಕೆ ಸಿಗುವರು,' ಎಂದನು.
ಲೇಸನಾಡಿದೆ ಕೃಷ್ಣ ಶಲ್ಯಂ
ಗೀಸು ಬಲುಹುಂಟಾದಡನುಜರು
ಘಾಸಿಯಾದರು ಹಿಂದೆ ಭೀಷ್ಮಾದಿಗಳ ಬವರದಲಿ |
ಈ ಸಮರಜಯವೆನಗೆ ನಾಳಿನೊ
ಳೈಸಲೇ ನಳ ನಹುಷ ಭರತ ಮ
ಹೀಶ ವಂಶೋತ್ಪನ್ನ ತಾನೆಂದನು ಮಹೀಪಾಲ || ೩೨ ||
ಪದವಿಭಾಗ-ಅರ್ಥ: ಲೇಸನಾಡಿದೆ ಕೃಷ್ಣ ಶಲ್ಯಂಗೆ+ ಈಸು ಬಲುಹುಂಟಾದಡೆ ( ಇಷ್ಟೊಂದು ಬಲುಹು- ಸತ್ವ ಇದೆ ಎಂದಾದರೆ)+ ಅನುಜರು ಘಾಸಿಯಾದರು (ನೋವು ಅನುಭವಿಸಿದರು.) ಹಿಂದೆ ಭೀಷ್ಮಾದಿಗಳ ಬವರದಲಿ, ಈ ಸಮರಜಯವು+ ಎನಗೆ ನಾಳಿನೊಳು+ ಐಸಲೇ (ಹಾಗಲ್ಲವೇ) ನಳ ನಹುಷ ಭರತ ಮಹೀಶ ವಂಶ+ ಉತ್ಪನ್ನ ತಾನು+ ಎಂದನು ಮಹೀಪಾಲ.
ಅರ್ಥ:ಮಹೀಪಾಲ ಧರ್ಮಜನು ಕೃಷ್ಣನಿಗೆ,'ಒಳಿತಾದ ಮಾತನ್ನಾಡಿದೆ ಕೃಷ್ಣಾ; ಶಲ್ಯನಿಗೆ ಇಷ್ಟೊಂದು ಬಲುಹು- ಸತ್ವ ಇದೆ ಎಂದಾದರೆ ನನ್ನ ತಮ್ಮಂದಿರು ಹಿಂದೆ ಭೀಷ್ಮಾದಿಗಳ ಜೊತೆ ಮಾಡಿದ ಯುದ್ಧದಲ್ಲಿ ನೋವು ಅನುಭವಿಸಿದರು. ಆದ್ದರಿಂದ ಈ ನಾಳಿನ ಸಮರದ ಜಯವು ನನಗೇ ಮೀಸಲು. ತಾನು ನಳ, ನಹುಷ, ಭರತ ಮಹೀಶರ ವಂಶದಲ್ಲಿ ಹುಟ್ಟಿದವನಲ್ಲವೇ! ಎಂದನು. .
ತಾಯಿ ಹೆರಳೇ ಮಗನ ನಿನ್ನನು
ನಾಯಕನೆ ಲೋಕೈಕವೀರರ
ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ |
ರಾಯ ನೀ ಕ್ಷತ್ರಿಯನು ಸೇಸೆಯ
ತಾಯೆನುತ ತೂಪಿರಿದು ಕಮಲದ
ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ || ೩೩ ||
ಪದವಿಭಾಗ-ಅರ್ಥ: ತಾಯಿ ಹೆರಳೇ ಮಗನ ನಿನ್ನನು ನಾಯಕನೆ ಲೋಕೈಕವೀರರ ತಾಯಲಾ; ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ (ಶಕ್ತಿಯಿಂದ); ರಾಯ ನೀ ಕ್ಷತ್ರಿಯನು; ಸೇಸೆಯ (ಮುತ್ತಿನ ಆರತಿ ಮಂಗಳಾಕ್ಷತೆ) ತಾಯೆನುತ ತೂಪಿರಿದು, ಕಮಲದಳಾಯತಾಂಬಕನು(ಕಮಲದಳ+ ಆಯತ+ ಅಂಬಕನು= ಕಮಲದಳದಂತೆ ವಿಶಾಲವಾದ ಕಣ್ಣ ಉಳ್ಳವನು)+ ಅಪ್ಪಿಕೊಂಡನು ಧರ್ಮನಂದನನ.
ಅರ್ಥ:ತಾಯಿ ಕುಂತಿ ನಿನ್ನನು ಮಗನಾಗಿ ಹೆತ್ತಿಲ್ಲವೇ? ನಾಯಕ ಧರ್ಮಜನೇ ನಿನ್ನ ತಾಯಿಯು ಲೋಕೈಕವೀರರ ತಾಯಲಾ! ನಿಮ್ಮ ಅವ್ವೆಯ ಮೊಲೆಹಾಲು ಕುಡಿದ ಬಲುಹಿನಲ್ಲಿ - ಸಾಮರ್ಥ್ಯದಿಂದ ಗೆಲ್ಲು. ರಾಯನೇ, ನೀನು ಕ್ಷತ್ರಿಯನು, ಶತ್ರುವು ಮಾವನೆಂದು ಹಿಮ್ಮಟ್ಟಬೇಡ ಎಂದು ಹೇಳಿ; ಮುತ್ತಿನ ಆರತಿ ಮತ್ತು ಮಂಗಳಾಕ್ಷತೆಗಳನ್ನು ತನ್ನಿರಿ, ಎಂದು ತರಿಸಿ, ಅದನ್ನು ತಾನೇ ಅವನಿಗೆ ನಿವಾಳಿಸಿ, ದೃಷ್ಠಿ- ದೋಷ ತೆಗೆದು, ಕೆಟ್ಟದ್ದು ಇದ್ದರೆ ಹೋಗಲಿ ಎಂದು ತೂಪಿರಿದು- ಉಗುಳಿ, 'ರಕ್ಷೆ'ಕಟ್ಟಿ ಅವನಿಗೆ ಸೇನಾಧಿಪತ್ಯದ ಪಟ್ಟ ಮಾಡಿದನು, ನಂತರ ಕಮಲದಳಾಯತಾಂಬಕನಾದ ಕೃಷ್ಣನು ಪ್ರೀತಿಯಿಂದ ಧೈರ್ಯಕೊಡುತ್ತಾ ಧರ್ಮಜನನ್ನು ಅಪ್ಪಿಕೊಂಡನು.
ಸಂದವೈ ಹದಿನೇಳು ರಾತ್ರಿಗ
ಳಿಂದಿನಿರುಳಾ ಸೇನೆ ನಿರ್ಭಯ
ದಿಂದ ನಿದ್ರಾವ್ಯಸನನಿರ್ಭರ ಪೂರ್ಣ ಹರುಷದಲಿ |
ಸಂದುದೀ ನಿನ್ನವರು ರಾಧಾ
ನಂದನವ್ಯಪಗಮನನಷ್ಟಾ
ನಂದವಿಹ್ವಲಕರಣರಿದ್ದರು ಭೂಪ ಕೇಳೆಂದ || ೩೪ ||
ಪದವಿಭಾಗ-ಅರ್ಥ: ಸಂದವೈ ಹದಿನೇಳು ರಾತ್ರಿಗಳು+ ಇಂದಿನ+ ಇರುಳು+ ಆ ಸೇನೆ ನಿರ್ಭಯದಿಂದ ನಿದ್ರಾವ್ಯಸನನಿರ್ಭರ ಪೂರ್ಣ ಹರುಷದಲಿ ಸಂದುದು+ ಈ ನಿನ್ನವರು ರಾಧಾನಂದನ+ ವ್ಯಪಗಮನ+ ನಷ್ಟಾನಂದ+ವಿಹ್ವಲಕರಣರು(ವ್ಯಾಕುಲ ಮನಸ್ಸಿನವರು)+ ಇದ್ದರು ಭೂಪ ಕೇಳೆಂದ.
ಅರ್ಥ:ಧೃತರಾಷ್ಟ್ರನೇ ಕೇಳು,'ಇಂದಿಗೆ ಹದಿನೇಳು ರಾತ್ರಿಗಳು ಸಂದವು- ಕಳೆದವು. ಇಂದಿನ ರಾತ್ರಿಯಲ್ಲಿ ಆ ಪಾಂಡವರ ಸೇನೆ ನಿರ್ಭಯದಿಂದ ನಿದ್ರೆಯಭರದಲ್ಲಿ, ಪೂರ್ಣ ಹರ್ಷದಿಂದ ಕಳೆದರು. ಹೀಗೆ ರಾತ್ರಿ ಸಂದಿತು. ಈ ನಿನ್ನವರು ರಾಧಾನಂದನನಾದ ಕರ್ಣನ ನಿರ್ಗಮನದಿಂದಾದ ನಷ್ಟದ ಭಾವನೆಯಿಂದ ವ್ಯಾಕುಲ ಮನಸ್ಸಿನವರಾಗಿದ್ದರು,' ಎಂದ.
ಆ ಶಿಖಂಡಿಯ ತೋರಿ ಸರಳಿನ
ಹಾಸಿಕೆಯಲೊಬ್ಬನನು ಮಾತಿನ
ವಾಸಿಯಿಂದೊಬ್ಬನನು ಮುನ್ನಿನ ಕುಲವನೆಚ್ಚರಿಸಿ |
ಘಾಸಿ ಮಾಡಿದನೊಬ್ಬನನು ಧರ
ಣೀಶ ಚೇಷ್ಟೆಯಲೊಬ್ಬನನು ಕೃಪೆ
ಯೇಸು ಘನವೋ ವೀರನಾರಾಯಣಗೆ ಭಕ್ತರಲಿ ||೩೫ ||
ಪದವಿಭಾಗ-ಅರ್ಥ: ಆ ಶಿಖಂಡಿಯ ತೋರಿ ಸರಳಿನ ಹಾಸಿಕೆಯಲಿ+ ಒಬ್ಬನನು ಮಾತಿನ ವಾಸಿಯಿಂದ+ ಒಬ್ಬನನು ಮುನ್ನಿನ ಕುಲವನೆಚ್ಚರಿಸಿ ಘಾಸಿ ಮಾಡಿದನು+ ಒಬ್ಬನನು ಧರಣೀಶ ಚೇಷ್ಟೆಯಲಿ+ ಒಬ್ಬನನು ಕೃಪೆಯೇಸು ಘನವೋ ವೀರನಾರಾಯಣಗೆ ಭಕ್ತರಲಿ
ಅರ್ಥ:ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ನನು, ಆ ಶಿಖಂಡಿಯ ತೋರಿ ಸರಳಮಂಚದ ಮೇಲೆ ಒಬ್ಬನನ್ನು(ಭೀಷ್ಮನನ್ನು)ಮಲಗಿಸಿದನು. ಮಾತಿನಲ್ಲಿ ತಮ್ಮ ಶಿಷ್ಯನೆಂದು ತೊರಿಸಿ ಒಬ್ಬನನ್ನು(ದ್ರೋಣನನ್ನು)ನಿವಾರಿಸಿದನು. ಕುಂತಿಯ ಪುತ್ರನೆಂದು ಹಿಂದಿನ ಕುಲವನ್ನು ಎಚ್ಚರಿಸಿ ಹೇಳಿ ಪಾಂಡವರನ್ನು ಕೊಲ್ಲದಂತೆ ವಚನ ಪಡೆದು (ಕರ್ಣನನ್ನು)ಘಾಸಿ ಮಾಡಿದನು. ಕೊನೆಯಲ್ಲಿ ಒಬ್ಬನನು ಧರಣೀಶ ಯಧಿಷ್ಠಿರನ ಚೇಷ್ಟೆಯಲ್ಲಿ/ಕೈಚಳಕದಿಂದ (ಶಲ್ಯನನ್ನು) ದೂರಮಾಡುವನು. ವೀರನಾರಾಯಣನಿಗೆ ಭಕ್ತರಲ್ಲಿ ಅವನು ಇಟ್ಟಿರುವ ಕೃಪೆಯು ಎಷ್ಟು ಘನವೋ/ ಗಟ್ಟಿಯೋ ತಿಳಿಯಲಾರದು.
♠♠♠

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.