ಕುಮಾರವ್ಯಾಸ ಭಾರತ/ಸಟೀಕಾ (೯.ಶಲ್ಯಪರ್ವ::ಸಂಧಿ-೨)

<ಕುಮಾರವ್ಯಾಸಭಾರತ-ಸಟೀಕಾ

ಶಲ್ಯಪರ್ವ: ೨ ನೆಯ ಸಂಧಿ

ಸಂಪಾದಿಸಿ
ಗಂಡುಗಲಿ ಕದನ ಪ್ರಚಂಡನ
ಖಂಡ ಭುಜಬಲ ಧರ್ಮಸುತ ಮುಂ
ಕೊಂಡು ರಣದಲಿ ಕಾದಿ ಗೆಲಿದನು ಮಾದ್ರ ಭೂಪತಿಯ ||ಸೂ||

ಪದವಿಭಾಗ-ಅರ್ಥ: ಗಂಡುಗಲಿ ಕದನ ಪ್ರಚಂಡನು+ ಅಖಂಡ ಭುಜಬಲ ಧರ್ಮಸುತ ಮುಂಕೊಂಡು(ಮುಂದೆನಿಂತು) ರಣದಲಿ(ರಣರಂಗದಲ್ಲಿ) ಕಾದಿ(ಯುದ್ಧಮಾಡಿ) ಗೆಲಿದನು ಮಾದ್ರ ಭೂಪತಿಯ.
ಅರ್ಥ:ಗಂಡುಗಲಿಯೂ, ಕದನದಲ್ಲಿ ಪ್ರಚಂಡನೂ, ಅಖಂಡ ಭುಜಬಲನೂ ಆದ ಧರ್ಮಜನು ತಾನೇ ಸೇನಾಧಪತ್ಯವಹಿಸಿ ಮುಂದೆನಿಂತು ರಣರಂಗದಲ್ಲಿ ಯುದ್ಧಮಾಡಿ ಮಾದ್ರ ಭೂಪತಿಯಾದ ಶಲ್ಯನನ್ನು ಗೆದ್ದನು .[][] []

ಹದಿನೆಂಟನೇ ದಿನದ ಯುದ್ಧಕ್ಕೆ ಸಿದ್ಧತೆ

ಸಂಪಾದಿಸಿ
ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ |
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ || ೧ ||
ಪದವಿಭಾಗ-ಅರ್ಥ:ಒಳಗೆ ಢಗೆ(ಸಂಕಟ) ನಗೆ ಹೊರಗೆ, ಕಳವಳವು+ ಒಳಗೆ, ಹೊರಗೆ ನವಾಯಿ(ನವಾಬತನ) ಡಿಳ್ಳಸವು(ದಿಗಿಲು)+ ಒಳಗೆ ಹೊರಗೆ ಸಘಾಡ+ ಮದ ಬಲುಬೇಗೆಯೊಳಗೆ+ ಒಳಗೆ, ಬಲುಹು ಹೊರಗೆ, ಪರಾಭವದ ಕಂದು+ ಒಳಗೆ ಕಡುಹಿನ ಕಲಿತನದ ಹಳಹಳಿಕೆ, ಹೊರಗೆ ಮಹೀಶ ಹದನಿದು ನಿನ್ನ ನಂದನನ.
ಅರ್ಥ:ಸಂಜಯ ಅಂಧರಾಜನಿಗೆ (ಹೇಳಿದ),'ನಿನ್ನ ಮಗ ಕೌರವನಿಗೆ ಒಳಗೆ ಸಂಕಟ, ನಗೆ ಹೊರಗೆ, ಮನಸ್ಸಿನ ಒಳಗೆ ಕಳವಳವು, ಹೊರಗೆ ರಾಜತನ, ದಿಗಿಲು ಮನಸ್ಸಿನ ಒಳಗೆ, ತೋರಿಕೆಗೆ ಹೊರಗೆ ತುಂಬಿದ ಮದ, ಮನದಲ್ಲಿ ಬಲುಬೇಗೆ, ಹೊರಗೆ ತೋರಿಕೆಗೆ ಬಲುಹು, ಪರಾಭವದ ಅಳುಕು ಒಳಗೆತುಂಬಿದ್ದರೂ, ಹೊರಗೆ ಕಠಿಣ ಕಲಿತನದ ಮಾತುಗಳು,' ಹೀಗಿತ್ತು ನಿನ್ನ ಮಗನ ಸ್ಥಿತಿ ಎಂದನು.
ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರಸಿದನೆನ್ನ ಬಿಂಬದಲಿ |
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ || ೨ ||
ಪದವಿಭಾಗ-ಅರ್ಥ: ನೆಗ್ಗಿದನು(ಪೆಟ್ಟಾಗಿ ಸೋತನು) ಗಾಂಗೇಯನು+ ಅಮರರೊಳು,+ ಒಗ್ಗಿದನು ಕಲಿದ್ರೋಣನು,(ಕಲಿ- ಶೂರ)+ ಎನ್ನವನು+ ಅಗ್ಗಳಿಕೆ(ಶ್ರೇಷ್ಠತೆ) ಗೂಣೆಯವ ಬೆರಸಿದನು+ ಎನ್ನ ಬಿಂಬದಲಿ, ಉಗ್ಗಡದ(ಅತಿಶಯದ) ರಣವಿದಕೆ ಶಲ್ಯನ ನಗ್ಗಿಸುವನು(ಹೊಡೆಸಿ ನಗ್ಗುಮಾಡುವನು)+ ಈ ಕೌರವೇಶ್ವರನ+ ಅಗ್ಗ(ಉತ್ತಮ, ಶ್ರೇಷ್ಠ) ನೋಡುವೆನು+ ಎಂಬವೊಲು ರವಿಯು+ ಅಡರ್ದನು+ ಅಂಬರವ (ಅಡರು= ಮೇಲಕ್ಕೆ ಹತ್ತು, ಆಕ್ರಮಿಸು).
ಅರ್ಥ: ಅಜೇಯನಾದ ಗಾಂಗೇಯನೂ ಯುದ್ಧದಲ್ಲಿ ನೆಗ್ಗಿಹೋದನು. ಕಲಿದ್ರೋಣನ ಸಹ ದೇವಲೋಕದ ಅಮರಜೊತೆ ಸೇರಿದನು. ನನ್ನವನಾದ ಶ್ರೇಷ್ಠ ಗೆಳೆಯನಾದವ ಕರ್ಣನು ನನ್ನ ಜೀವಬಿಂಬದಲ್ಲಿ ಬೆರತುಹೋದನು. ಅತಿಶಯವಾದ ಈ ಯುದ್ಧದ ರಣರಂಗಕ್ಕೆ ಶಲ್ಯನನ್ನು ಈ ಕೌರವೇಶ್ವರನು ಹೊಡೆಸಿ ನಗ್ಗುಮಾಡುವನು- ಕೊಲ್ಲುವನು. ಈ ಆಕರ್ಷಕ ಯುದ್ಧವನ್ನು ನೋಡುವೆನು, ಎಂಬಂತೆ ರವಿಯು ಯುದ್ಧದ ಹದಿನೆಂಟನೆಯ ದಿನದ ಬೆಳಗಿನಲ್ಲಿ ಆಕಾಶವನ್ನು ಏರಿದನು. (ಮರುದಿನ ಬೆಳಗಾಯಿತು, ಶಲ್ಯನು ಯುದ್ಧಕ್ಕೆ ಇಳಿಯುವನು)
ಸೂಳವಿಸಿದುವು ಸನ್ನೆಯಲಿ ನಿ
ಸ್ಸಾಳ ದಳಪತಿ ಕುರುಬಲದ ದೆ
ಖ್ಖಾಳವನು ನೋಡಿದನು ತೂಗಾಡಿದನು ಮಣಿರಶಿರವ |
ಆಳು ನೆರೆದಿರೆ ನಾಲ್ಕುದಿಕ್ಕಿನ
ಮೂಲೆ ನೆರೆಯದು ಮುನ್ನವೀಗಳು
ಪಾಳೆಯದ ಕಡೆವೀಡಿಗೈದದು ಶಿವಶಿವಾಯೆಂದ || ೩ ||
ಪದವಿಭಾಗ-ಅರ್ಥ: ಸೂಳವಿಸಿದುವು(ಸರದಿಯ ಪ್ರಕಾರಹೋದವು, ಆರ್ಭಟ, ಬೊಬ್ಬೆ) ಸನ್ನೆಯಲಿ ನಿಸ್ಸಾಳ(ಒಂದು ಬಗೆಯ ಚರ್ಮವಾದ್ಯ), ದಳಪತಿ(ಶಲ್ಯ, ಕೌರವ?) ಕುರುಬಲದ ದೆಖ್ಖಾಳವನು(ಅತಿಶಯ, ದೊಡ್ಡ ಗದ್ದಲ) ನೋಡಿದನು ತೂಗಾಡಿದನು ಮಣಿರಶಿರವ, ಆಳು(ಸೇನೆ) ನೆರೆದಿರೆ ನಾಲ್ಕುದಿಕ್ಕಿನ ಮೂಲೆ ನೆರೆಯದು ಮುನ್ನವು+ ಈಗಳು ಪಾಳೆಯದ ಕಡೆ ವೀಡಿಗೆ(ಬೀಡು, ಸೇನೆಯ ನೆಲೆ)+ ಐದದು(ಬಂದುದು) ಶಿವಶಿವಾಯೆಂದ.
ಅರ್ಥ:ಕೈಯೆತ್ತಿ ಸನ್ನೆಯನ್ನು ಮಾಡುತ್ತಿದ್ದಂತೆ ನಿಸ್ಸಾಳವೆಂಬ ಭೇರಿಯ ಆರ್ಭಟ, ಬೊಬ್ಬೆ ಮಾಡುತ್ತಾ ಕೌರವನ ಸೈನ್ಯವು ಸರದಿಯ ಪ್ರಕಾರ ಹೋದವು. ದಳಪತಿ (ಶಲ್ಯನು?) ಕೌರವನು ಕುರುಸೇನೆಯ ಅತಿಶಯವಾದ ದೊಡ್ಡ ಗದ್ದಲವನ್ನು ನೋಡಿದನು. ಅವನು ತನ್ನು ರತ್ನದ ಕಿರೀಟದ ತಲೆಯನ್ನು ತೂಗಾಡಿದನು. ಹೀಗೆ ಸೇನೆ ನೆರೆದಿರಲು ಅವನು ತನ್ನ ಸೇನೆಗೆ ನಾಲ್ಕುದಿಕ್ಕಿನ ಮೂಲೆಗಳೂ ಈ ಮುನ್ನ ಸಾಕಾಗದು, ಹಾಗೆ ದೊಡ್ಡದಾಗಿತ್ತು. ಈಗಳು ಸೇನೆ ಚಿಕ್ಕದಾಗಿ ಪಾಳೆಯದ ಕಡೆಯ- ಕೊನೆಯ ಬೀಡಿಗೆ ತುಂಬುವಷ್ಟು ಮಾತ್ರಾ ಬಂದಿದೆಯಲ್ಲಾ, ಎಂದು ಚಿಂತಿಸಿ, ಶಿವಶಿವಾಯೆಂದನು.
ಗಜಕೆ ಗುಳವನು ಬೀಸಿ ವಾಜಿ
ವ್ರಜವ ಹಲ್ಲಣಿಸಿದರು ಗಾಲಿಯ
ಗಜರು ಘೀಳಿಡೆ ನೊಗನ ಹೆಗಲಲಿ ಕುಣಿದವಶ್ವಚಯ |
ಭುಜದ ಹೊಯ್ಲಿನ ಹರಿಗೆಗಳ ಗಜ
ಬಜದ ಬಿಲುಜೇವಡೆಯ ರವದ
ಕ್ಕಜದ ಕಾಲಾಳೊದಗಿತವನೀಪತಿಯ ಸನ್ನೆಯಲಿ || ೪ ||
ಪದವಿಭಾಗ-ಅರ್ಥ: ಆನೆಗಳಿಗೆ ಮಾವುತನು ಕೂರುವ ಗುಳವನ್ನು(ವೇದಿಕೆ ) ಬೀಸಿ, ವಾಜಿವ್ರಜವ(ಕುದುರೆಗಳ ಸಮೂಹ) ಹಲ್ಲಣಿಸಿದರು, ಗಾಲಿಯಗಜರು(ಸದ್ದು) ಘೀಳಿಡೆ ನೊಗನ ಹೆಗಲಲಿ ಕುಣಿದವು+ ಅಶ್ವಚಯ, ಭುಜದ ಹೊಯ್ಲಿನ ಹರಿಗೆಗಳ(ಗುರಾಣಿ ಸದ್ದು) ಗಜಬಜದ ಬಿಲುಜೇವಡೆಯ(ಬಿಲ್ಲಿನ ಠೇಂಕಾರದ ಸದ್ದು) ರವದ+ ಅಕ್ಕಜದ ( ಪ್ರೀತಿ, ಆಶ್ಚರ್ಯ) ಕಾಲಾಳು+ ಒದಗಿತು+ ಅವನೀಪತಿಯ ಸನ್ನೆಯಲಿ -(ಒದಗಿತು- ಬಂದಿತು).
ಅರ್ಥ: ಆನೆಗಳಿಗೆ ಮಾವುತನು ಕೂರುವ ವೇದಿಕೆಯ ಗುಳವನ್ನು ಬೀಸಿ ತೊಡಿಸಿ ಕಟ್ಟಿದನು. ಕುದುರೆಗಳ ಸಮೂಹಕ್ಕೆ ಹಲ್ಲೆಗಳನ್ನು ಹಾಕಿದರು, ರಥಗಳು ಹೊರಡಲು ಗಾಲಿಗಳು ಸದ್ದುಮಾಡಿದವು; ಆನೆಗಳು ಘೀಳಿಡುತ್ತಿರಲು, ಕುದುರೆಗಳ ಹೆಗಲಲ್ಲಿ ನೊಗಗಳು ಕುಣಿದವು. ಭುಜದಲ್ಲಿ ಹಲಗೆಯ ಗುರಾಣಿಗಳನ್ನು ತೊಟ್ಟ ಸದ್ದಿನ ಗಜಬಜದ ದೊಡನೆ ಬಿಲ್ಲುಗಳ ಠೇಂಕಾರದ ಸದ್ದುಗಳೊಡನೆ, ಪ್ರೀತಿಯ ಕಾಲಾಳು ಸೇನೆ ಅವನೀಪತಿ ಕೌರವನು ಸನ್ನೆಮಾಡುತ್ತಿದ್ದಂತೆ ಸಿದ್ಧವಾಯಿತು .
ಮೊರೆವ ಕಹಳಾರವದ ಡಿಂಡಿಮ
ಮುರಜ ಗೋಮುಖ ಪಟಹ ಜರ್ಝರ
ಕರಡೆ ಪಣವ ಮೃದಂಗ ಡಮರುಗ ಢಕ್ಕೆಡವುಡೆಗಳ |
ಬಿರಿಯೆ ನೆಲನಳ್ಳಿರಿವ ವಾದ್ಯದ
ಹರುಷತರ ನಿರ್ಘೋಷದಬ್ಬರ
ಜರಿಹಿತಡಕಿಲು ಜಗದ ಜೋಡಿಯನರಸ ಕೇಳೆಂದ || ೫ ||
ಪದವಿಭಾಗ-ಅರ್ಥ: ಮೊರೆವ ಕಹಳಾರವದ (ಕಹಳೆಯ ಸದ್ದು) ಡಿಂಡಿಮ, ಮುರಜ, ಗೋಮುಖ, ಪಟಹ, ಜರ್ಝರ, ಕರಡೆ, ಪಣವ, ಮೃದಂಗ, ಡಮರುಗ, ಢಕ್ಕೆ, ಡವುಡೆಗಳ(ತಮಟೆ) ಬಿರಿಯೆ ನೆಲನು+ ಅಳ್ಳಿರಿವ ವಾದ್ಯದ ಹರುಷತರ ನಿರ್ಘೋಷದ+ ಅಬ್ಬರ ಜರಿಹಿತು+ ಅಡಕಿಲು(ದಿಕ್ಕು, ದೆಸೆ, ಕಡೆ ) ಜಗದ ಜೋಡಿಯನು (ಜೋಡಿಯಾಗಿ ಹೊಸ ಜಗತ್ತೇ ಬಂದಿತು ಎನ್ನವಂತೆ)+ ಅರಸ ಕೇಳೆಂದ.
ಅರ್ಥ:ಅರಸನೇ ಕೇಳು, ನಿನ್ನ ಮಗ ಕೌರವನು ಸನ್ನೆ ಮಾಡಲು, ಮೊರೆಯುವ ಕಹಳೆಗಳ ಸದ್ದು, ಡಿಂಡಿಮ, ಮುರಜ, ಗೋಮುಖ, ಪಟಹ, ಜರ್ಝರ, ಕರಡೆ, ಪಣವ, ಮೃದಂಗ, ಡಮರುಗ, ಢಕ್ಕೆ, ತಮಟೆಗಳು ನೆಲವು ಬಿರಿಯುವಂತೆ ಅಳ್ಳಿರಿವ- ಅಬ್ಬರಿಸುವ ವಾದ್ಯಗಳು ಹರ್ಷತರವಾದ ದೊಡ್ಡ ಅಬ್ಬರದೊಡನೆ ದಿಕ್ಕುಗಳು ತುಂಬಿ ಜಗತ್ತಿನ ಜೋಡಿಯೆನ್ನುವಂತೆ ಚಲಿಸಿತು,' ಕೇಳು ಎಂದ ಸಂಜಯ.
ಮುರಿದ ಬಲುಗುದುರೆಗಳ ಬಾದಣ
ಗೊರೆದ ಮಯ್ಯಾನೆಗಳ ಹತ್ತಿಗೆ
ಹರಿದ ಗಾಲಿಯ ರಥವ ಚಿನಕಡಿವಡೆದ ಕಾಲಾಳ ||
ಅರುಹಿದರು ಭೂಪತಿಗೆ ಸೇನೆಯ
ಲರಸಿ ತೆಗೆದಾಯತ ಚತುರ್ಬಲ
ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ || ೬ ||
ಪದವಿಭಾಗ-ಅರ್ಥ: ಮುರಿದ ಬಲುಗುದುರೆಗಳ ಬಾದಣ+ಗ+ ಕೊರೆದ(ಗವಾಕ್ಷಿ, ತೂತು) ಮಯ್ಯ+ ಆನೆಗಳ ಹತ್ತಿಗೆ ಹರಿದ ಗಾಲಿಯ ರಥವ ಚಿನಕಡಿವಡೆದ(ಚಿನಕಡಿ = ಸುಟ್ಟಗಾಯ) ಕಾಲಾಳ ಅರುಹಿದರು(ತಿಳಿಸಿದರು) ಭೂಪತಿಗೆ ಸೇನೆಯಿ+ ಅರಸಿ ತೆಗೆದ+ ಆಯತ(ಆಯಕಟ್ಟಿನ ಸಿದ್ಧ) ಚತುರ್ಬಲ ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ(ಹೂವು) ತಿರುಳಂತೆ.
  • (ಕುಮಾರವ್ಯಾಸನ ದೇಸಿ(ಗ್ರಾಮ್ಯ) ಕನ್ನಡ ಪದಗಳ ಸಂಪತ್ತಿಗೆ ಸರಿಸಾಟಿ ಇಲ್ಲ.)
ಅರ್ಥ: ಕೌರವನ ಅಳಿದುಳಿದ ಸೇನೆಯಲ್ಲಿ ಕಾಲು ಮುರಿದ ದೊಡ್ಡ ಕುದುರೆಗಳಿದ್ದವು, ತೂತುಬಿದ್ದು ಗಾಯವಾದ ಮಯ್ಯಿನ ಆನೆಗಳಿದ್ದವು, ಹತ್ತಿಗೆ-ಪಟ್ಟಿ ಹರಿದ ಗಾಲಿಯ ರಥಗಳಿದ್ದವು, ಆಯುಧಗಳಿಂದ ಕಡಿದು ಒಡೆದ- ಬಾಯಿಬಿಟ್ಟ ಗಾಯಗಳ ಕಾಲಾಳುಗಳಿಂದ ತುಂಬಿತ್ತು, ಈ ಬಗೆಯ ಸೇನೆಯಲ್ಲಿ ತಕ್ಕವರನ್ನು ಆರಿಸಿ ತೆಗೆದ ಸಿದ್ಧಸೇನೆಯನ್ನು ತಂದು ನಿಲ್ಲಿಸಿ ನಾಯಕರು, ಚತುರ್ಬಲ ಸೇನೆಯು ಸಿದ್ಧವಾಗಿ ಹೊರಗೆ ನಿಂತಿದೆ ಎಂದು ಭೂಪತಿ ಕೌರವನಿಗೆ ತಿಳಿಸಿದರು. ಅದು ಹೊಗೆಯಿಂದ ತೆಗೆದ ಪರಿಮಳವಿಲ್ಲದ ಕೇಸರಿಯ ಹೂವಿನ ತಿರುಳಿನಂತೆ ನಿಸ್ಸತ್ವವಾಗಿತ್ತು.
ಹತ್ತು ಸಾವಿರದೇಳುನೂರರು
ವತ್ತು ಗಜ ಹೊನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ |
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ || ೭ ||
ಪದವಿಭಾಗ-ಅರ್ಥ: ಹತ್ತು ಸಾವಿರದ ಏಳುನೂರ ಅರುವತ್ತು ಗಜ, ಹೊನ್ನೊಂದು ಸಾವಿರ ಹತ್ತಿದವು ರಥವು,+ ಎರಡು ಲಕ್ಕವನು+ ಎಣಿಸಿದರು ಹಯವ, ಪತ್ತಿ(ಆಪತ್ತಿಗೆ, ಲೆಕ್ಕಕ್ಕೆ ಹತ್ತಿದ್ದು) ಮೂರೇ ಕೋಟಿಯದು ಕೈವರ್ತಿಸಿತು(ಒದಗಿತು) ದಳಪತಿಗೆ ಸಾಗರ ಬತ್ತಲು ಎಡೆಯಲಿ (ಅದರ ಬಳಿ) ನಿಂದ ನೀರವೊಲಾಯ್ತು ಕುರುಸೇನೆ.
ಅರ್ಥ:ಅಳಿದುಳಿದ ಕುರುಸೇನೆಯಲ್ಲಿ ಹತ್ತು ಸಾವಿರದ ಏಳುನೂರ ಅರುವತ್ತು ಗಜ- ಆನೆ; ಹೊನ್ನೊಂದು ಸಾವಿರ ರಥಗಳು ಲೆಕ್ಕಕ್ಕೆ ಹತ್ತಿದವು(ಸಿಕ್ಕಿದವು); ಎರಡು ಲಕ್ಷ ಕುದುರೆಗಳನ್ನು ಎಣಿಸಿದರು; ಮೂರೇ ಕೋಟಿ ಕಾಲಾಳುಸೇನೆ ದಳಪತಿಯ ಕೈಗೆ ವದಗಿತು. ಇದನ್ನು ನೋಡಿದಾಗ ಕುರುಸೇನೆಯು, ಸಮುದ್ರವೇ ಬತ್ತಿಹೋದಾಗ ಎಡೆಯಲ್ಲಿ- ಅದರ ಬಳಿಯ ಹೊಂಡದಲ್ಲಿ ನಿಂತ ನೀರಿನಂತಾಯ್ತು.
ವೈರಿಬಲದೊಳಗಾರು ಸಾವಿರ
ತೇರು ಗಜಘಟೆ ಮೂರು ಸಾವಿರ
ವಾರುವಂಗಳನೆಣಿಸಿ ತೆಗೆದರು ಹತ್ತು ಸಾವಿರವ |
ವೀರಭಟರಾಯ್ತೊಂದು ಕೋಟಿ ಮ
ಹೀರಮಣ ಕೇಳುಭಯಬಲ ವಿ
ಸ್ತಾರ ಹದಿನೆಂಟೆನಿಸಿದಕ್ಷೋಹಿಣಿಯ ಶೇಷವಿದು || ೮ ||
ಪದವಿಭಾಗ-ಅರ್ಥ: ವೈರಿಬಲದೊಳಗೆ+ ಆರು ಸಾವಿರ ತೇರು ಗಜಘಟೆ(ಆನೆಗಳು) ಮೂರು ಸಾವಿರ ವಾರುವಂಗಳನು (ರಾಸು)+ ಎಣಿಸಿ ತೆಗೆದರು ಹತ್ತು ಸಾವಿರವ ವೀರಭಟರು+ ಆಯ್ತು+ ಒಂದು ಕೋಟಿ ಮಹೀರಮಣ ಕೇಳು+ ಉಭಯ ಬಲ ವಿಸ್ತಾರ ಹದಿನೆಂಟೆನಿಸಿದ+ ಅಕ್ಷೋಹಿಣಿಯ ಶೇಷವಿದು.
ಅರ್ಥ:ಸಂಜಯನು ಧೃತರಾಷ್ಟ್ರ ಮಹೀರಮಣ ಕೇಳು,'ವೈರಿಬಲವಾದ ಪಾಂಡವರ ಸೈನ್ಯದಲ್ಲಿ ಆರು ಸಾವಿರ ರಥ, ಆನೆಗಳು ಮೂರು ಸಾವಿರ, ಹತ್ತು ಸಾವಿರ ಕುದುರೆಗಳನ್ನು ಎಣಿಸಿದರು; ವೀರಭಟರು ಒಟ್ಟು ಒಂದು ಕೋಟಿ ಇದ್ದರು. ವಿಸ್ತಾರವಾದ ಹದಿನೆಂಟು ಅಕ್ಷೋಹಿಣಿಯ ಉಭಯ ಸೇನೆಯಲ್ಲಿ ಉಳಿದ ಸೇನೆಯ ಶೇಷವು ಇದು, ಎಂದ.
ಶಕುನಿ ಮೋಹರಿಸಿದನು ಸಮಸ
ಪ್ತಕರು ಬೇರೊಡ್ಡಿದರು ಕೃತವ
ರ್ಮಕ ಕೃಪಾಶ್ವತ್ಥಾಮರೊದಗಿದರೊಂದು ಬಾಹೆಯಲಿ |
ಸಕಲ ಬಲ ಮಾದ್ರೇಶ್ವರನ ಹೇ
ಳಿಕೆಯಲೊಯ್ಯಾರಿಸಿತು ಕುರುಬಲ
ನಿಕರ ತಳಿತುದು ತರವಿಡಿದು ಕಳನೊಂದು ಮೂಲೆಯಲಿ || ೯ ||
ಪದವಿಭಾಗ-ಅರ್ಥ: ಶಕುನಿ ಮೋಹರಿಸಿದನು ಸಮಸಪ್ತಕರು ಬೇರೆ+ ಒಡ್ಡಿದರು ಕೃತವರ್ಮಕ ಕೃಪ+ ಅಶ್ವತ್ಥಾಮರು+ ಒದಗಿದರು+ ಒಂದು ಬಾಹೆಯಲಿ, ಸಕಲ ಬಲ ಮಾದ್ರೇಶ್ವರನ ಹೇಳಿಕೆಯಲಿ ಒಯ್ಯಾರಿಸಿತು(ಚಂದವಾಗಿ ನೆಡೆಯಿತು) ಕುರುಬಲ ನಿಕರ (ಸಮೂಹ) ತಳಿತುದು(ಶೋಭಿಸಿತು) ತರವ+ ಇಡಿದು,ಹಿಡಿದು(ವ್ಯತ್ಯಾಸ, ಭೇದ) ಕಳನ (ರಣರಂಗದ)+ ಒಂದು ಮೂಲೆಯಲಿ.
ಅರ್ಥ: ಕೌರವನ ಕಡೆಯಿಂದ ಶಕುನಿಯು ವೈರಿಗಳನ್ನು ಆಕ್ರಮಿಸಿದನು. ಸಮಸಪ್ತಕರೂ ಸಹ ಬೇರೆಕಡೆ ಒಟ್ಟಾಗಿ ನುಗ್ಗಿದರು. ಕೃತವರ್ಮಕ, ಕೃಪ, ಅಶ್ವತ್ಥಾಮರು, ಒದಗಿದರು+ ಒಂದು ಬಾಹೆಯಲಿ, ಸಕಲ ಬಲ ಮಾದ್ರೇಶ್ವರನ ಹೇಳಿಕೆಯಲಿ ಚಂದವಾಗಿ ನೆಡೆಯಿತು. ಕುರುಸೇನೆಯ ಒಂದು ಸಮೂಹ ರಣರಂಗದ ಒಂದು ಮೂಲೆಯನ್ನು ಹಿಡಿದು ಬೇರೆಯಾಗಿ ನಿಂತು ಶೋಭಿಸಿತು.
ಇದಿರಲೌಕಿತು ಗಾಳಿ ಪಟ್ಟದ
ಮದಗಜಾವಳಿ ಮುಗ್ಗಿದುವು ಧ್ವಜ
ವದಿರಿದವು ಹೊಡೆಗೆಡೆದು ಹೊಳೆದುದು ತೇರು ದಳಪತಿಯ
ಬಿದಿರಿದವು ತಡಿಸಹಿತ ಥಟ್ಟಿನ
ಕುದುರೆ ಮೈಗಳಲಾಯುಧದ ಕಿಡಿ
ಯುದುರಿದವು ಕುರುಬಲದಲದ್ಭುತವಾಯ್ತು ನಿಮಿಷದಲಿ ೧೦
ಪದವಿಭಾಗ-ಅರ್ಥ: ಇದಿರಲಿ+ ಔಕಿತು ಗಾಳಿ ಪಟ್ಟದ ಮದಗಜ+ ಆವಳಿ(ಸಮೂಹ) ಮುಗ್ಗಿದುವು ಧ್ವಜವು+ ಅದಿರಿದವು ಹೊಡೆಗೆಡೆದು ಹೊಳೆದುದು ತೇರು ದಳಪತಿಯ ಬಿದಿರಿದವು ತಡಿಸಹಿತ ಥಟ್ಟಿನ(ಸೇನೆಯ) ಕುದುರೆ, ಮೈಗಳಲಿ+ ಆಯುಧದ ಕಿಡಿಯು+ ಉದುರಿದವು ಕುರುಬಲದಲಿ+ ಅದ್ಭುತವಾಯ್ತು ನಿಮಿಷದಲಿ.
ಅರ್ಥ:ಕುರು ಸೇನೆಯು ಯುದ್ಧದ ಆರಂಭದಲ್ಲಿ ಪಟ್ಟದ ಮದಗಜಗಳ ಸಮೂಹ ಒತ್ತಾಗಿ ನುಗ್ಗಿದುವು; ಆ ರಭಸಕ್ಕೆ ಎದುರಲ್ಲಿದ್ದ ಗಾಳಿಯು ಇಕ್ಕಟ್ಟಿನಿಂದ ಒತ್ತಿದಂತಾಯಿತು. ರಥದ ಓಟಕ್ಕೆ ಧ್ವಜಗಳು ಅಲುಗುತ್ತಾ ಹಾರಿದವು. ರಥಗಳು ಹೊಡೆಗೆಡೆದು/ ಕಣ್ಣಿಗೆ ರಾಚುವಂತೆ ಹೊಳೆದವು. ಸೇನೆಯ ಕುದುರೆಗಳು ತದಳಪತಿಯು ಕೂರುವ ಹಾಸಿನ ತಡಿಸಹಿ ನೆಗೆದು ಹೇಷಾರವ ಮಾಡಿದವು; ಯೋಧರ ಮೈಗಳಲ್ಲಿ ಆಯುಧಗಳು ಒಂದಕ್ಕೊಂದು ತಾಗಿ ಕಿಡಿಗಳು ಉದುರಿದವು. ಹೀಗೆ ಕುರುಸೇನೆಯಲ್ಲಿ ಒಂದು ನಿಮಿಷದಲ್ಲಿ ಯುಧ್ಧದ ಆರಂಭವು ಅದ್ಭುತವಾಯ್ತು.
ಬಂದುದಾ ಮೋಹರ ಬಲೌಘದ
ಮುಂದೆ ಪಾಠಕರವರ ಕಾಹಿಗೆ
ಹಿಂದೆ ಬಿಲ್ಲಾಳವರ ಸುಯ್ದಾನದಲಿ ಸಬಳಿಗರು |
ಹಿಂದೆ ತುರಗ ಸಮೂಹವಲ್ಲಿಂ
ಹಿಂದೆ ಗಜಘಟೆ ಗಜದ ಬಳಿಯಲಿ
ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ || ೧೧ ||
ಪದವಿಭಾಗ-ಅರ್ಥ:ಬಂದುದು ಆ ಮೋಹರ ಬಲ+ ಓಘದ(ನೆರೆ, ರಭಸ, ಸಮೂಹ,) ಮುಂದೆ ಪಾಠಕರು+ ಅವರ ಕಾಹಿಗೆ ಹಿಂದೆ ಬಿಲ್ಲಾಳು+ ಅವರ ಸುಯ್ದಾನದಲಿ(ಸುಯಿದಾನ ಸುಯಿಧಾನ,ಕಾಪು,ಕಾವಲು,ರಕ್ಷಣೆ) ಸಬಳಿಗರು(ಸಬಳ= ಭರ್ಜಿ,ಭಲ್ಲೆಯ), ಹಿಂದೆ ತುರಗ ಸಮೂಹು+ ಅಲ್ಲಿಂ ಹಿಂದೆ ಗಜಘಟೆ ಗಜದ ಬಳಿಯಲಿ ಸಂದಣಿಸಿದುದು ರಾಯದಳ ಮಣಿರಥ ನಿಕಾಯದಲಿ(ಸಮೂಹ).
ಅರ್ಥ: ಕೌರವನ ದೊಡ್ಡ ಸೈನ್ಯ ರಭಸದಿಂದ ಬಂದಿತು; ಅದರ ಮುಂದೆ ಪಾಠಕರಿದ್ದರು; ಅವರ ಕಾವಲಿಗೆ ಹಿಂದೆ ಬಿಲ್ಲಾಳುಗಳು ಬಂದರು. ಅವರ ರಕ್ಷಣೆಯಲ್ಲಿ ಸಬಳಿಗರಾದ ಭರ್ಜಿ,ಭಲ್ಲೆಯ ಹಿಡಿದವರಿದ್ದರು. ಅವರ ಹಿಂದೆ ಕುದುರೆ ಸೇನೆಯ ಸಮೂಹು; ಅದಕ್ಕೂ ಹಿಂದೆ ಗಜಘಟೆ- ಆನೆಗಳ ಪಡೆ; ಗಜ ಸೇನೆಯ ಬಳಿಯಲ್ಲಿ ಮಣಿರಥ ಸಮೂಹದಲ್ಲಿ ಕೌರವರಾಯನ ದಳ ಸಂದಣಿಸಿತ್ತು.
ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯೂತ್ತಮೌಜಸ ಸೃಂಜಯಾದಿಗಳು |
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ || ೧೨ ||
ಪದವಿಭಾಗ-ಅರ್ಥ: ಅರಸನ+ ಎಡವಂಕದಲಿ(ಎಡಭಾಗಲ್ಲಿ) ಸಾತ್ಯಕಿ, ನರ(ಅರ್ಜುನ), ನಕುಲ, ಸಹದೇವ, ಸೋಮಕ, ವರ ಯುಧಾಮನ್ಯು,+ ಉತ್ತಮೌಜಸ ಸೃಂಜಯಾದಿಗಳು ನೆರೆದುದು, ಆ ಬಲವಂಕದಲಿ ತನುಜರು ವೃಕೋದರ ದ್ರುಪದಸುತ(ದೃಷ್ಟದ್ಯುಮ್ನ) ದುರ್ಧರ, ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ.
ಅರ್ಥ:ಅರಸ ಧರ್ಮಜನ ಸೇನೆಯ ಎಡವಂಕದಲ್ಲಿ ಸಾತ್ಯಕಿ, ಅರ್ಜುನ, ನಕುಲ, ಸಹದೇವ, ಸೋಮಕ, ಶ್ರೇಷ್ಠ ಯುಧಾಮನ್ಯು, ಉತ್ತಮೌಜಸ, ಸೃಂಜಯಾದಿಗಳು ಸೇರಿದ್ದರು. ಆ ಸೇನೆಯ ಬಲ ಭಾಗದಲ್ಲಿ ಪಾಂಡವರ ಐದು ಮಕ್ಕಳು, ವೃಕೋದರ, ದ್ರುಪದಸುತರಾದ ದೃಷ್ಟದ್ಯುಮ್ನ ದುರ್ಧರ, ಶಿಖಂಡಿ ಈ ಪ್ರಮುಖ ಘನಪಾಂಚಾಲ ಪರಿವಾರ ಸೇರಿತ್ತು.

ಯುದ್ಧದ ಆರಂಭ

ಸಂಪಾದಿಸಿ
ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನಿಂದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ |
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ || ೧೩ ||
ಪದವಿಭಾಗ-ಅರ್ಥ:ಆಯತಿಕೆಯಲಿ(ಅತಿಶಯ,ಆಧಿಕ್ಯ,ತೀವ್ರತೆ ಶ್ರದ್ಧೆ,ಆಸಕ್ತಿ) ಬಂದು ಪಾಂಡವರಾಯದಳ ಮೋಹರಿಸಿ(ಮೋಹರ= ಸೈನ್ಯ, ಗುಂಪು, ಸಮೂಹ) ನಿಂದುದು ರಾಯರು+ ಇಬ್ಬರ ಬೀಸುಗೈಗಳ ಸನ್ನೆ ಸಮವಾಗೆ ತಾಯಿಮಳಲನು ತರುಬಿದ+ ಅಬುಧಿಯ(ಸಮುದ್ರ) ದಾಯಿಗರು(ಸಮಾನರು, ದಾಯಾದಿಗಳು) ತಾವು+ ಇವರು+ ಎನಲು ಬಿಡೆನೋಯ(ಬಿಡತೆ ಇಲ್ಲದಂತೆ) ಬೆರಸಿದುದು(ಒಬ್ಬರಮೇಲೊಬ್ಬರು ನುಗ್ಗಿ)+ ಉಭಯ ಬಲ ಬಲುಖತಿಯ(ಪರಾಕ್ರಮದಿಂದ, ಸಿಟ್ಟಿನಿಂದ) ಬಿಂಕದಲಿ(ಅಭಿಮಾನದಿಂದ).
ಅರ್ಥ:ಯುದ್ಧದ ತೀವ್ರ ಉತ್ಸಾಹದಿಂದ ಪಾಂಡವರಾಯನ ಸೈನ್ಯ ಒಗ್ಗಟ್ಟಾಗಿ ಬಂದು ನಿಂತಿತು. ಧರ್ಮಜ ಮತ್ತು ಕೈರವ ಈ ಇಬ್ಬರು ರಾಯರು ಕೈಗಳನ್ನು ಬೀಸಿ ಸನ್ನೆಮಾಡಿದ ಕೂಡಲೆ ಸಮ ಸಮವಾಗಿ ಯುದ್ಧ ಆರಂಭವಾಯಿತು. ಭೂಮಿತಾಯಿಯ ಮಳಲನ್ನು ತರುಬಿದ- ಆಕ್ರಮಿಸುವ ಸಮುದ್ರದ ಸಮಾನರು ತಾವು ಮತ್ತು ಇವರು ಎನ್ನುವಂತೆ ಒಬ್ಬರಿಗೊಬ್ಬರಿಗೆ ಬಿಡತೆ ಇಲ್ಲದಂತೆ ಉಭಯ ಬಲದ ಯೋಧರು ಒಬ್ಬರಮೇಲೊಬ್ಬರು ನುಗ್ಗಿ ಬಲುಖತಿಯಿಂದ ಬಿಂಕದಿಂದ ಹೋರಾಡಿದರು.
ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಹೊ
ಯ್ದಾಣೆಗಳ ಬಿರುಗಿಡಿಯ ಹಿರಿಯಬ್ಬಣದ ಹೊಯ್ಲುಗಳ |
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು || ೧೪ ||
ಪದವಿಭಾಗ-ಅರ್ಥ: ಕೇಣವಿಲ್ಲದೆ ಭಟರ ಹಾಣಾಹಾಣಿ ಮಸಗಿತು(ತೊಡಗಿತು); ಖಣಿಖಟಿಲ ಹೊಯ್ದು+ ಆಣೆಗಳ ಬಿರುಗು((ಆರ್ಭಟ))+ ಇಡಿಯ ಹಿರಿಯ(ದೊಡ್ಡ)+ ಅಬ್ಬಣದ (ಆರ್ಭಟ,) ಹೊಯ್ಲುಗಳ(ಕೂಗಾಟ) ಹೂಣಿಕೆಯ (ಶಪಥ, ಪ್ರತಿಜ್ಞೆ, ಹವಣಿಕೆ, ಏರ್ಪಾಡು) ಸಬಳಿಗರೊಳು(ಈಟಿಯ ಸೈನಿಕರಲ್ಲಿ)+ ಇಮ್ಮೈಗಾಣಿಕೆಯ ಬಲುಸೂತರು+ ಅಥಿಕರ ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು.
  • ಕೇಣ+(ದೇ) ಹೊಟ್ಟೆಕಿಚ್ಚು, ಮತ್ಸರ, ಕೋಪ, ದಾಕ್ಷಿಣ್ಯ, ಸಂಕೋಚ, ಹೆದರಿಕೆ,
ಅರ್ಥ: ಹೆದರಿಕೆ, ದಾಕ್ಷಿಣ್ಯವಿಲ್ಲದೆ ಭಟರ ಮಧ್ಯೆ ಹಾಣಾಹಾಣಿ ಯುದ್ಧ ತೊಡಗಿತು; ಖಣಿಖಟಿಲ ಎಂಬ ಸದ್ದಿನೊಡನೆ ಹೊಯ್ದುಆಡಿದರು. ಕೊಲ್ಲವೆನು, ಕಡೆಇಯುವೆನು ಎಂದು ಆಣೆಗಳನ್ನಿಟ್ಟರು. ಈಟಿಯ ಸೈನಿಕರಲ್ಲಿ ಕೂಗಾಟ ಕಿವಿಗೆ ಇಡಿಯುಲು-ಬಡಿಲು, ದೊಡ್ಡ ಆರ್ಭಟ, ಕೂಗಾಟ, ಶಪಥ, ಪ್ರತಿಜ್ಞೆಗಳು ನೆಡೆದವು. ಹಾಗೆಯೇ ಎರಡೂ ಕಡೆಯ ಕಾಣಿಕೆಯ ಬಹಳ ಸೂತರು ರಥಿಕರು ಜಾಣತಿಯ ಬಿಲ್ಲವರು ಇವರೆಲ್ಲರ ಧಾಳಾಧೂಳಿ ಬಹಳ ಹೆಚ್ಚಾಯಿತು.
ರಾವುತರು ಸೆಲ್ಲಿಸಿದರಗ್ಗದ
ಮಾವುತರನಾನೆಗಳ ತುಡುಕಿ ಹ
ಯಾವಳಿಯ ಬೀಸಿದರು ರಥಿಕರು ಹಾಯ್ಸಿದರು ರಥವ |
ಆ ವರೂಥವನೇಳನೆಂಟ ಗ
ಜಾವಳಿಗಳಿಟ್ಟವು ಗಜಸ್ಕಂ
ಧಾವಲಂಬವ ಸೆಕ್ಕಿದರು ಸುರಗಿಯಲಿ ಸಮರಥರು || ೧೫ ||
ಪದವಿಭಾಗ-ಅರ್ಥ: ರಾವುತರು ಸೆಲ್ಲಿಸಿದರು(ಸೆಲ್ಲಿಸು- ಎದುರಿಸು?)+ ಅಗ್ಗದ(ಶ್ರೇಷ್ಠ) ಮಾವುತರನು+ ಆನೆಗಳ ತುಡುಕಿ (ಎದುರಿಸಿ, ಆಕ್ರಮಿಸಿ), ಹಯ+ ಆವಳಿಯ ಬೀಸಿದರು(ಬೀಸು= ಹಿಂಸೆ, ಕಾಟ) ರಥಿಕರು ಹಾಯ್ಸಿದರು ರಥವ ಆ ವರೂಥವನು+ ಏಳನು+ ಎಂಟ ಗಜಾವಳಿಗಳು+ ಇಟ್ಟವು(ಬಡಿದವು) ಗಜಸ್ಕಂಧ(ಆನೆಯ ಹೆಗಲು,ಭುಜಾಗ್ರ)+ ಅವಲಂಬವ ಸೆಕ್ಕಿದರು ಸುರಗಿಯಲಿ(ಸುರಗಿ - ಕತ್ತಿ) ಸಮರಥರು.
ಅರ್ಥ: ಕುದುರೆ ಪಡೆಯ ರಾವುತರು ಆನೆಗಳ ಮೇಲಿದ್ದ ಬಲಿಷ್ಠ ಮಾವುತರನ್ನು ಆಕ್ರಮಿಸಿ ಹೋರಾಡಿದರು. ಕುದುರೆಗಳ ಸೇನೆಯ ಸಮುಹವನ್ನು ರಥಿಕರು ಹೊಡೆದು ರಥವನ್ನು ಅವರ ಮೇಲೆ ಹಾಯಿಸಿ ನೋಯಿಸಿದರು. ಆ ವರೂಥಗಳನ್ನು ಏಳು ಎಂಟನ್ನು ಆನೆಗಳು ಬಡಿದವು. ಆ ಆನೆಯ ಬೆನ್ನಮೇಲೆ ಅವಲಂಬಸಿ ಕುಳಿತ ಮಾವುತರನ್ನು ಸಮರಥರು ಕತ್ತಿಯಿಂದ ಇರಿದರು.
ಒರಲೆ ಗಜ ದಾಡೆಗಳ ಕೈಗಳ
ಹರಿಯಹೊಯ್ದರು ಪಾರಕರು ಮು
ಕ್ಕುರಿಕಿದರೆ ಸಬಳಿಗರು ಕೋದೆತ್ತಿದರು ಕರಿಘಟೆಯ |
ತರುಬಿದರೆ ಕಡಿನಾಲ್ಕ ತೋರಿಸಿ
ಮೆರೆದರುರೆ ರಾವುತರು ರಾವ್ತರ
ತರುಬಿದರು ತನಿಚೂಣಿ ಮಸಗಿತು ತಾರುಥಟ್ಟಿನಲಿ || ೧೬ ||
ಪದವಿಭಾಗ-ಅರ್ಥ: ಒರಲೆ(ದಪ್ಪಕಾಲಿನ ಆನೆ) ಗಜ ದಾಡೆಗಳ ಕೈಗಳ (ಆನೆಯ ಕೈ = ಸೊಂಡಿಲು)ಹರಿಯ ಹೊಯ್ದರು ಪಾರಕರು ಮುಕ್ಕು+ ಇರಿಕಿದರೆ(ಇರುಕಿ -ಒಟ್ಟಾಗಿ) ಸಬಳಿಗರು ಕೋದು(ಸಿಕ್ಕಿಸಿಕೊಂಡು)+ ಎತ್ತಿದರು ಕರಿಘಟೆಯ ತರುಬಿದರೆ ಕಡಿನಾಲ್ಕ ತೋರಿಸಿ ಮೆರೆದರು+ ಉರೆ(ಮತ್ತೆ) ರಾವುತರು ರಾವ್ತರ+ ತರುಬಿದರು(ಮುತ್ತಿದರು), ತನಿಚೂಣಿ(ವೀರ, ಬಲಿಷ್ಠ ಮುಂದಿನ ಸೇನೆ) ಮಸಗಿತು ತಾರುಥಟ್ಟುನಲಿ(ತಾರು= ಅಸ್ತವ್ಯಸ್ತತೆ, ತಾರುಮಾರು, ಚೆಲ್ಲಾಪಿಲ್ಲಿ, ಥಟ್ಟು= ಸೈನ್ಯ).
ಅರ್ಥ:ದಪ್ಪಕಾಲಿನ ಆನೆಗಳ ದಾಡೆಗಳನ್ನು ಸೊಂಡಿಲುಗಳನ್ನು ಹರಿಯುವಂತೆ ಹೊಡೆದರು. ಹೊಗಳುವ ಪಾರಕರು ಮುತ್ತಿ ಒಟ್ಟಿಗೆ ನುಗ್ಗಿದರೆ, ಈಟಿ ಯೋಧರು ಈಟಿಯನ್ನು ಚುಚ್ಚಿ ಕೋದು ಕರಿಘಟೆಯನ್ನೇ ಎತ್ತಿದರು. ಆಕ್ರಮಿಸಿದರೆ ನಾಲ್ಕು ಜನರನ್ನು ಕಡಿದು ತೋರಿಸಿ ಮೆರೆದರು. ಮತ್ತೆ ರಾವುತರು ರಾವುತರನ್ನು ಆಕ್ರಮಿಸಿ ಮುತ್ತಿದರು. ಮುಂದಿನ ಬಲಿಷ್ಠ ಸೇನೆ ಶತ್ರುವನ್ನು ಮತ್ತಿತು. ಹೀಗೆ ಅಸ್ತವ್ಯಸ್ತತೆಯಲ್ಲಿ ಸೈನ್ಯವು ಶತ್ರುಗಳನ್ನು ಮುತ್ತಿತು.
ಅರಸ ಕೇಳೈ ಹೊಕ್ಕ ಚೂಣಿಯ
ನೆರಡು ಬಲದಲಿ ಕಾಣೆನಗ್ಗದ
ದೊರೆಗಳನುವಾಯ್ತಾಚೆಯಲಿ ಧರ್ಮಜನ ನೇಮದಲಿ |
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಸುಶರ್ಮ ಸುಬಾಹು ಶಕುನಿಗ
ಳುರವಣಿಸಿತೀಚೆಯಲಿ ಶಲ್ಯನ ಬೆರಳ ಸನ್ನೆಯಲಿ || ೧೭ ||
ಪದವಿಭಾಗ-ಅರ್ಥ: ಅರಸ ಕೇಳೈ ಹೊಕ್ಕ ಚೂಣಿಯನು (ಮುಂದಿನ ಸೇನೆ)+ ಎರಡು ಬಲದಲಿ ಕಾಣೆನು+ ಅಗ್ಗದ ದೊರೆಗಳ+ ಅನುವಾಯ್ತು+ ಆಚೆಯಲಿ ಧರ್ಮಜನ ನೇಮದಲಿ ಗುರುಜ ಕೃಪ ಕೃತವರ್ಮ ಯವನೇಶ್ವರ ಸುಶರ್ಮ ಸುಬಾಹು ಶಕುನಿಗಳು+ ಉರವಣಿಸಿತು+ ಈಚೆಯಲಿ ಶಲ್ಯನ ಬೆರಳ ಸನ್ನೆಯಲಿ.
ಅರ್ಥ: ಅರಸನೇ ಕೇಳು,'ಮುಂದೆ ಹೊಕ್ಕ ಸೇನೆಯ ಎರಡು ಸೈನ್ಯದಲ್ಲಿ ಉತ್ತಮ ದೊರೆಗಳ ಕಾಣೆನು. ಆಚೆ ಧರ್ಮಜನ ಆಜ್ಞೆಯಲ್ಲಿ ಸೇನೆ ಅನುವಾಯ್ತು. ಈಚೆಯಲ್ಲಿ ಶಲ್ಯನ ಬೆರಳ ಸನ್ನೆಯಂತೆ ಗುರುಜ- ಅಶ್ವತ್ಥಾಮ, ಕೃಪ, ಕೃತವರ್ಮ, ಯವನೇಶ್ವರ, ಸುಶರ್ಮ, ಸುಬಾಹು, ಶಕುನಿಗಳು ಶೌರ್ಯ ತೋರಿದರು.
ನಿಲಿಸಿದರು ನಿನ್ನವರು ಬಲದ
ಗ್ಗಳೆಯರನು ಬಿರುದಾವಳಿಯ ಮೂ
ದಲಿಸಿದರು ವಿಮಲಾನ್ವಯಾಗತ ವಿಕ್ರಮೋನ್ನತರ |
ಬಲನೆಡನ ಮಡಿವೆರಳ ಮುಡಿಮುಂ
ದಲೆಯ ಲಘುವಾಗದಿರಿ ಶಸ್ತ್ರಾ
ವಳಿಯ ಬಾಯ್ದುತ್ತುಗಳ ಸೆಳೆಯದಿರೆಂದರುಬ್ಬಿನಲಿ || ೧೮ ||
ಪದವಿಭಾಗ-ಅರ್ಥ:ನಿಲಿಸಿದರು ನಿನ್ನವರು ಬಲದ+ ಅಗ್ಗಳೆಯರನು ಬಿರುದಾವಳಿಯ ಮೂದಲಿಸಿದರು ವಿಮಲ+ ಅನ್ವಯ+ ಆಗತ(ಬಂದ) ವಿಕ್ರಮೋನ್ನತರ ಬಲ ನೆಡನ ಮಡಿವೆರಳ ಮುಡಿಮುಂದಲೆಯ ಲಘುವಾಗದಿರಿ ಶಸ್ತ್ರ+ ಆವಳಿಯ(ಸಮೂಹ) ಬಾಯ್+ ದು+ ತುತ್ತುಗಳ ಸೆಳೆಯದಿರಿ+ ಎಂದರು+ ಉಬ್ಬಿನಲಿ
ಅರ್ಥ: ಸಂಜಯನು ಹೇಳದ, ರಾಜನೇ, 'ನಿನ್ನವರು ಸೇನೆಯ ಉತ್ತಮರನ್ನು ಎದುರು ನಿಲ್ಲಿಸಿದರು. ಅವರ ಬಿರುದಾವಳಿಯನ್ನು ಹೇಳಿ, ಅದಕ್ಕೆ ಚ್ಯುತಿ ತರಬೇಡಿ ಎಂದು ಮೂದಲಿಸಿದರು, ಪರಿಶುದ್ಧ ವಂಶದಲ್ಲಿ ಬಂದ ವಿಕ್ರಮರ ಮತ್ತು ಉನ್ನತ ವೀರರಾದ ನೀವು, ಬಲ ಮತ್ತು ಎಡದಲ್ಲಿ ಯುದ್ಧಮಾಡಿ ಸಾಯುವವರ ಹಗುರವಾದ ಮುಂದಲೆಯ ಮುಡಿ- ಕೂದಲಿನಂತೆ ಲಘುವಾಗದಿರಿ, ಶತ್ರುಗಳ ನಾನಾ ಬಗೆಯ ಶಸ್ತ್ರಗಳ ಬಾಯಿಯ ತುತ್ತುಗಳನ್ನು ಸೆಳೆಯದಿರಿ,' ಎಂದು ಗರ್ವದಿಂದ ಹೇಳಿದರು.(ಶಸ್ತ್ರಗಳ ಬಾಯಲ್ಲಿ ಸಿಕ್ಕಿ ಅದರ ತುತ್ನನ್ನು ತೆಗೆಯವೆನೆಂದು ಹೋಗಬೇಇ? - ಎಚ್ಚರಿಕೆಯಿಂದ ಯುದ್ಧಮಅಡಿ ಎಂಉ ಭಾವವಿರಬಹುದು- ಅರ್ಥದಲ್ಲಿ ಸ್ವಲ್ಪ ತೊಡಕಿದೆ.)
ದೊರೆಯೊಳೊಬ್ಬನ ಹಾನಿ ಭಟರೆ
ಲ್ಲರಿಗೆ ದೊರೆ ದೊರೆ ತತ್ತರುಳಿದರು
ನೆರವು ಬಹುದೋರಂದವೊಮ್ಮುಖವೊಂದು ಸಂಕೇತ |
ಉರವಣಿಸದಿರಿ ಕಂಡ ಮುಖದಲಿ
ಕರಿ ತುರಗ ರಥ ಪತ್ತಿ ರಣಕು
ಬ್ಬರಿಸದಿರಿ ಕೃತಸಮಯವೆಂದರು ಸಾರಿ ಸುಭಟರಿಗೆ || ೧೯ ||
ಪದವಿಭಾಗ-ಅರ್ಥ: ದೊರೆಯೊಳು(ರಾಜ, ದೊರೆ, ಸ್ಪರ್ಧೆ, ಕಾಳಗ )+ ಒಬ್ಬನ ಹಾನಿ ಭಟರೆಲ್ಲರಿಗೆ ದೊರೆ(ಸಮಾನ, ಎಣೆ, ಸರಿಯಾದುದು,), ದೊರೆ ತತ್ತರು+ ಉಳಿದರು ನೆರವು ಬಹುದೋರಂದ+ ವೊ+ ಒಮ್ಮುಖವು+ ಒಂದು ಸಂಕೇತ ಉರವಣಿಸದಿರಿ ಕಂಡ ಮುಖದಲಿ(ಕಂಡ ತಕ್ಷಣ), ಕರಿ ತುರಗ ರಥ ಪತ್ತಿ( ಆಪತ್ತಿನಲ್ಲಿರುವವನು) ರಣಕೆ ಉಬ್ಬರಿಸದಿರಿ ಕೃತಸಮಯವು+ ಎಂದರು ಸಾರಿ ಸುಭಟರಿಗೆ
ಅರ್ಥ:ದೊರೆಗಳಲ್ಲಿ ಒಬ್ಬನ ಹಾನಿ ಅವನ ಸೇನೆಯ ಭಟರೆಲ್ಲರಿಗೆ ಸಮಾನ. ದೊರೆ ತತ್ತರಿಸಿದರೆ - ಆಯಾಸಗೊಂಡರೆ, ಉಳಿದವರು ನೆರವು ಕೊಡುವುದು; ಓ- ರ- ಅಂದವು - 'ಒಮ್ಮುಖವು ಒಂದು ಯುದ್ಧಸೂಚನೆಯ ಸಂಕೇತ; ಕರಿ/ ಆನೆ, ತುರಗ, ರಥ, ಪತ್ತಿ ಇರುವ ರಣರಂಗಕ್ಕೆ ಕಂಡಮಾತ್ರದಲ್ಲಿ ಮೇಲೆ ಬೀಳದಿರಿ. ಇದು ಕೃತಸಮಯವು- ಅವಸರಿಸಿ ನುಗ್ಗಬೇಡಿ, ಕಾರ್ಯ ಸಾಧಿಬೇಕಾದ ಸಮಯ;' ಎಂದು ಸುಭಟರಿಗೆ ಸಾರಿ ಸಾರಿ ಹೇಳಿದರು.
ನೂಕಿದರು ನಿನ್ನವರು ಹಿನ್ನೆಲೆ
ಯಾಕೆವಾಳರ ಜೋಕೆಯಲಿ ರಣ
ವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ ||
ವ್ಯಾಕುಲರ ಬಯ್‌ಬಯ್ದು ಚಪಲಾ
ನೀಕ ಬಂಡಿಸಿ ಚಂಡಪಾತ ನಿ
ರಾಕರಿಷ್ಣುಗಳೊಕ್ಕಲಿಕ್ಕಿತು ದಳದ ಮಧ್ಯದಲಿ || ೨೦ ||
ಪದವಿಭಾಗ-ಅರ್ಥ: ನೂಕಿದರು ನಿನ್ನವರು ಹಿನ್ನೆಲೆಯ+ ಆಕೆವಾಳರ(ವೀರ, ಪರಾಕ್ರಮಿ) ಜೋಕೆಯಲಿ ರಣವು(ಯುದ್ಧ)+ ಒಕರಿಸಿತು(ವಾಂತಿಮಾಡಿತು? ಚೆಲ್ಲಿತು)+ ಅರುಣಾಂಬುವನು(ರಕ್ತವನ್ನು) ಗಜಹಯದ ಮೈಗಳಲಿ ವ್ಯಾಕುಲರ ಬಯ್‌ಬಯ್ದು ಚಪಲಾನೀಕ ಬಂಡಿಸಿ ಚಂಡಪಾತ(ಚಂಡ= ಪ್ರಚಂಡತೆ ಕೋಪಿಷ್ಠ, ಪಾತ= ಇಲ್ಲದವರು) ನಿರಾಕರಿಷ್ಣುಗಳ+ ಒಕ್ಕಲಿಕ್ಕಿತು ದಳದ ಮಧ್ಯದಲಿ.
ಅರ್ಥ: ರಾಜನೇ, ನಿನ್ನವರಾದ ಕೌರವ, ಶಲ್ಯ ಮೊದಲಾದರು ಮುಂದೆ ನುಗ್ಗಿದರು. ಹಿನ್ನೆಲೆಯ ವೀರರ ಜೋಕೆಯ ಕಾವಲಿನಲ್ಲಿ ಯುದ್ಧವು ತೀವ್ರವಾಗಿ ನೆಡೆದು, ಆನೆ ಕುದುರೆಗಳ ಮೈಗಳಲ್ಲಿ ರಕ್ತವನ್ನು ರಕ್ತವನ್ನು ಸುರಿಸಿತು. ಯುದ್ಧದ ಬಗ್ಗೆ ಹೆದರಿ ಚಿಂತಿತರಾಗಿದ್ದವರನ್ನು ಬಯ್ದು ಬಯ್ದು ಚಪಲರ ಗುಂಪು ಅವರನ್ನು ಖಂಡಿಸಿ ದಳದ ಮಧ್ಯದಲಿ ಚಂಡಪಾತರನ್ನೂ ನಿರಾಕರಿಸುವವರನ್ನೂ ಒಕ್ಕಲಿಕ್ಕಿತು- ನಿಂದಿಸಿತು
ಕವಿದುದೊಂದೇ ಸೂಠಿಯಲಿ ರಿಪು
ನಿವಹ ನಿಬ್ಬರದಬ್ಬರದ ಶರ
ಲವಣೆಗಳ ಲಾವಣಿಗೆಗಳ ಲಂಬನದ ಲಂಘನದ |
ಪವನಜನ ಪಡಿಬಲದಲೌಕಿದ
ನವನಿಪತಿ ಸಹದೇವ ನಕುಲರ
ಸವಡಿರಥ ಸಮ್ಮುಖಕೆ ಬಿಟ್ಟವು ಮಾದ್ರ ಭೂಪತಿಯ || ೨೧ ||
ಪದವಿಭಾಗ-ಅರ್ಥ: ಕವಿದುದು(ಮುತ್ತಿತು)+ ಒಂದೇ ಸೂಠಿಯಲಿ(ಚುರುಕಾಗಿ) ರಿಪುನಿವಹ (ಶತ್ರು ಸಮೂಹ) ನಿಬ್ಬರದ(ವೇಗ, ಹುರುಪು)+ ಅಬ್ಬರದ ಶರಲವಣೆಗಳ (ಶರ= ಬಾಣ, ಲವಣೆ= ಅತಿಶಯಿಸು, ಅಧಿಕವಾಗು) ಲಾವಣಿಗೆಗಳ( ಆಕ್ರಮಣ, ದಾಳಿ) ಲಂಬನದ(ಸಹಾಯ) ಲಂಘನದ (ಹಾರುವುದು) ಪವನಜನ(ಭೀಮನ) ಪಡಿಬಲದಲಿ+ ಔಕಿದನು (ನುಗ್ಗಿದನು)+ ಅವನಿಪತಿ ಸಹದೇವ ನಕುಲರ ಸವಡಿ (ಜೊತೆ, ಜೋಡಿ) ರಥ ಸಮ್ಮುಖಕೆ ಬಿಟ್ಟವು ಮಾದ್ರ ಭೂಪತಿಯ.
ಅರ್ಥ:ರಾಜನೇ,' ಶತ್ರುಸೇನೆಯಾದ ದರ್ಮಜನ ಸೇನೆ ಚುರುಕಾಗಿ ಒಂದೇ ಸಾರಿಗೆ ಹುರುಪಿನಿಂದ ಅಬ್ಬರದಿಂದ ಅತಿಶಯಿಸಿ ಬಾಣಗಳಿಂದ ಆಕ್ರಮಣ, ದಾಳಿಗಳಿಂದ, ಜೊತೆಯವರ ಸಹಾಯದಿಂದ, ಹಾರುವ ಕ್ರಿಯೆಯಿಂದ, ಭೀಮನ ಪಡಿಸೈನ್ಯದೊಡನೆ ಅವನಿಪತಿ ಧರ್ಮಜನ ಆಧಿಪತ್ಯದಲ್ಲಿ ಸಹದೇವ, ನಕುಲರ, ಜೊತೆ ಮಾದ್ರ ಭೂಪತಿ ಶಲ್ಯನ ಸಮ್ಮುಖಕ್ಕೆ ರಥವನ್ನು ವೇಗವಾಗಿ ಬಿಟ್ಟನು,' ಎಂದನು ಸಂಜಯ.
ಆರಿವರು ಸಹದೇವ ನಕುಲರೆ
ಭಾರಿಯಾಳುಗಳಹಿರಲೇ ಬಿಲು
ಗಾರರಲ್ಲಾ ಕಳಶಸಿಂಧನ ಕೋಲ ಮಕ್ಕಳಲೇ |
ಸೈರಿಸಿದರೊಪ್ಪುವುದಲೇ ಜು
ಜ್ಜಾರತನಕಾಭರಣವಹುದೆನು
ತಾರುಭಟೆಯಲಿ ಶಲ್ಯಹಳಚಿದನರ್ಜುನಾನುಜರ || ೨೨ ||
ಪದವಿಭಾಗ-ಅರ್ಥ: ಆರಿವರು ಸಹದೇವ ನಕುಲರೆ ಭಾರಿಯಾಳುಗಳು+ ಅಹಿರಲೇ(ಇರುವರಲ್ಲವೇ), ಬಿಲುಗಾರರಲ್ಲಾ (ಬಿಲ್ಲುವಿದ್ಯಲ್ಲಿ ಪರಿಣತರು), ಕಳಶಸಿಂಧನ(ದ್ರೋಣನ) ಕೋಲ ಮಕ್ಕಳಲೇ(ಧನುರ್ವಿದ್ಯಾ ಶಿಷ್ಯರು) ಸೈರಿಸಿದರೆ+ ಒಪ್ಪುವುದಲೇ ಜುಜ್ಜಾರತನಕೆ (ವ್ಯಭಿಚಾರತನಕ್ಕೆ)+ ಆಭರಣವಹುದು+ ಎನುತ+ ಆರುಭಟೆಯಲಿ(ಆರ್ಭಟದಿಂದ) ಶಲ್ಯ ಹಳಚಿದನು(ತಾಗು, ಆಕ್ರಮಿಸು)+ ಅರ್ಜುನ (ನ)+ ಅನುಜರ.
ಅರ್ಥ:ಶಲ್ಯನು ಸೋದರಳಿಂದಿರನ್ನು ನೋಡಿ,'ಯಾರು ಇವರು ಸಹದೇವ ನಕುಲರೆ? ಭಾರಿ ಶೂರರು ಇರುವರಲ್ಲವೇ! ಒಳ್ಳೆಯ ಬಿಲುಗಾರರಲ್ಲವೇ?, ದ್ರೋಣನ ಧನುರ್ವಿದ್ಯಾ ಶಿಷ್ಯರಲ್ಲವೇ? ಇವರ ರೂಪದ ಅಂದವನ್ನು ಮೆಚ್ಚುವುದಾದರೆ ಯುವತಿಯರು ಇವರನ್ನು ಮೋಹಿಸಿ ಜಾರತನಕ್ಕೆ ಒಪ್ಪುವರಲ್ಲವೇ? ಅವರಿಗೆ ಇವರು ಮೆಚ್ಚಿನ ಆಭರಣವೇ ಅಹುದು ಎನ್ನುತ್ತಾ, ಆರ್ಭಟದಿಂದ ಅರ್ಜುನನ ಸೋದರರನ್ನು ಆಕ್ರಮಿಸಿದನು.
ಪಡಿತಳಿಸಿ ಸಹದೇವ ನಕುಲರ
ನಡೆಗಲಸಿತರ್ಜುನನ ರಥ ನರ
ನೊಡನೆ ಹೊಕ್ಕನು ಭೀಮನುರು ಪಾಂಚಾಲಬಲ ಸಹಿತ |
ಜಡಿವ ನಿಸ್ಸಾಳದಲಿ ಜಗ ಕಿವಿ
ಗೆಡೆ ಯುಧಿಷ್ಠಿರರಾಯನೌಕಿದ
ನೆಡಬಲನ ಕೊಂಡರು ಯುಯುತ್ಸು ಶಿಖಂಡಿ ಸೃಂಜಯರು || ೨೩ ||
ಪದವಿಭಾಗ-ಅರ್ಥ: ಪಡಿತಳಿಸಿ(ಆಕ್ರಮಿಸಿ,ಒಟ್ಟಾಗಿ) ಸಹದೇವ ನಕುಲರನು+ ಎಡೆಗಲಸಿತು (ತೂರಿಸು, ತುರುಕು, ನುಗ್ಗಿಸು)+ ಅರ್ಜುನನ ರಥ, ನರನು+ ಒಡನೆ ಹೊಕ್ಕನು ಭೀಮನು+ ಉರು(ಹೆಚ್ಚಿನ) ಪಾಂಚಾಲ ಬಲ ಸಹಿತ, ಜಡಿವ (ಬಡಿಯುವ) ನಿಸ್ಸಾಳದಲಿ ಜಗ ಕಿವಿಗೆಡೆ(ಕಿವಿ+ ಕೆಡೆ) ಯುಧಿಷ್ಠಿರರಾಯನು+ ಔಕಿದನು (ಒತ್ತಿ ಮುಂದೆ ಹೋದನು)+ ಎಡಬಲನ ಕೊಂಡರು ಯುಯುತ್ಸು ಶಿಖಂಡಿ ಸೃಂಜಯರು
ಅರ್ಥ:ಶಲ್ಯನು ನಕುಲ ಸಹದೇವರನ್ನು ಆಕ್ರಮಣ ಮಾಡಿದಾಗ, ಅರ್ಜುನನು ಒಡನೆ ನಡುವೆ ಹೊಕ್ಕನು, ಸಹದೇವ ನಕುಲರನ್ನು ತಪ್ಪಿಸಿ ಅರ್ಜುನನ ರಥ ಆಕ್ರಮಿಸಿ, ನುಗ್ಗಿತು; ಭೀಮನು ಮತ್ತು ಹೆಚ್ಚಿನ ಪಾಂಚಾಲ ಸೇನೆ ಸಹಿತ, ಜಡಿಯುತ್ತಿರುವ ನಿಸ್ಸಾಳದ- ಭೇರಿಯು ಕಹಳೆಗಳ ಜಗದ ಕಿವಿಗೆಡುವಂತೆ ಸದ್ದು ಮಾಡುತ್ತಿರಲು, ಯುಧಿಷ್ಠಿರರಾಯನು ಒತ್ತಿ ಮುಂದೆ ಹೋದನು. ಅವನ ಎಡಬಲದಲ್ಲಿ ರಕ್ಷೆಯನ್ನು ಯುಯುತ್ಸು ಶಿಖಂಡಿ ಸೃಂಜಯರು ಕೈಕೊಂಡರು.
ಏರಿತೊಬ್ಬನ ಮೇಲೆ ರಿಪುರಥ
ವಾರು ಸಾವಿರ ಮತ್ತಗಜಘಟೆ
ಮೂರು ಸಾವಿರ ಹತ್ತು ಸಾವಿರ ತುರುಗದಳ ಸಹಿತ |
ತೂರುವಂಬಿನ ತುಂಡಿಸುವ ಬಿ
ಟ್ಟೇರುಗಳ ಚೂರಿಸುವ ಸಬಳದ
ಗೀರುಗಳ ಕಾಲಾಳು ಕವಿದುದು ಶಲ್ಯನಳವಿಯಲಿ || ೨೪ ||
ಪದವಿಭಾಗ-ಅರ್ಥ: ಏರಿತು+ ಒಬ್ಬನ ಮೇಲೆ ರಿಪುರಥವು ಆರು ಸಾವಿರ, ಮತ್ತಗಜಘಟೆ ಮೂರು ಸಾವಿರ, ಹತ್ತು ಸಾವಿರ ತುರುಗದಳ ಸಹಿತ ತೂರುವ+ ಅಂಬಿನ ತುಂಡಿಸುವ ಬಿಟ್ಟ+ ಏರುಗಳ ಚೂರಿಸುವ ಸಬಳದ ಗೀರುಗಳ ಕಾಲಾಳು ಕವಿದುದು ಶಲ್ಯನ+ ಅಳವಿಯಲಿ(ಸಾಮರ್ಥ್ಯಕ್ಕೆ).
ಅರ್ಥ:ಶಲ್ಯನ ಸಾಮರ್ಥ್ಯವನ್ನು ಎದುರಿಸಲು, ಆ ಒಬ್ಬನ ಮೇಲೆ ಶತ್ರುಗಳ ರಥವು ಆರು ಸಾವಿರ, ಮದಿಸಿದ ಆನೆಗಳ ಸೇನೆ ಮೂರು ಸಾವಿರ, ಹತ್ತು ಸಾವಿರ ಕುದುರೆಗಳ ಸೈನ್ಯ ಸಹಿತ ಏರಿಹೋಯಿತು. ಆ ಯುದ್ಧದಲ್ಲಿ ತೂರುವ ಅಂಬಿಗಳು, ಅದನ್ನು ತುಂಡಿಸುವ ಶೂರರು, ಏರಿದ ಕುದುರೆಗಳನ್ನು ಬಿಟ್ಟ, ಈಟಿಗಳಿಂದ ಚುಚ್ಚುವ ಸಬಳದ/ಈಟಿಗಳ ಗೀರುಗಳು ಉಳ್ಳ ಕಾಲಾಳುಗಳು ಮುತ್ತಿದರು.
ದಳಪತಿಯ ಮುಕ್ಕುರುಕಿದರು ಪಡಿ
ಬಲವ ಬರಹೇಳೆನುತ ಚಾಚಿದ
ಹಿಳುಕುಗೆನ್ನೆಯ ಹೊಗರುಮೋರೆಯ ಬಿಗಿದ ಹುಬ್ಬುಗಳ
ಕಳಶಜನ ಸುತನೌಕಿದನು ಕೃಪ
ನಳವಿಗೊಟ್ಟನು ಸುಬಲಸುತನಿ
ಟ್ಟಳಿಸಿದನು ಕರ್ಣಾತ್ಮಜರು ಕೈಕೊಂಡರೊಗ್ಗಿನಲಿ ೨೫
ಪದವಿಭಾಗ-ಅರ್ಥ: ದಳಪತಿಯ ಮುಕ್ಕುರುಕಿದರು(ಮುತ್ತಿದರು, ಅಡಸು,ಮೇಲೆ ಬೀಳು,ಎರಗು) ಪಡಿಬಲವ (ಬೆಂಬಲಪಡೆ) ಬರಹೇಳು+ ಎನುತ ಚಾಚಿದ ಹಿಳುಕುಗೆನ್ನೆಯ ಹೊಗರುಮೋರೆಯ(ಹೊಗರು- ಪ್ರಕಾಶಿಸು, ಹೊಳೆ ೨ ಸಿಡಿಮಿಡಿಗುಟ್ಟು, ಕಿಡಿಕಾರು) ಬಿಗಿದ ಹುಬ್ಬುಗಳ ಕಳಶಜನ ಸುತನು(ದ್ರೋಣನ ಮಗ= ಅಶ್ವತ್ಥಾಮ)+ ಔಕಿದನು(ಒತ್ತಿದನು ಮುಂದೆ ನುಗ್ಗಿದನು) ಕೃಪನು+ ಅಳವಿಗೊಟ್ಟನು(ಅಳವು- ಬಲ/ಶಕ್ತಿ) ಸುಬಲಸುತನು(ಶಕುನಿ) + ಇಟ್ಟಳಿಸಿದನು(ಗುಂಪಾಗು) ಕರ್ಣಾತ್ಮಜರು(ಕರ್ಣನ ಮಕ್ಕಳು) ಕೈಕೊಂಡರು+ ಒಗ್ಗಿನಲಿ(ಒಟ್ಟಾಗಿ)
ಅರ್ಥ: ದಳಪತಿ ಶಲ್ಯನನ್ನು ಸುತ್ತುವರಿದು ಬೆಂಬಲಪಡೆಯನ್ನು ಬರಹೇಳು ಎನ್ನುತ್ತಾ ಚಾಚಿದ ಚೂಪುಕೆನ್ನೆಯ ಸಿಡುಕು ಮುಖದ ಬಿಗಿದ ಹುಬ್ಬುಗಳ ಅಶ್ವತ್ಥಾಮನು ಮುಂದೆ ನುಗ್ಗಿದನು, ಕೃಪನು ಅವನಿಗೆ ಬೆಂಬಲ ಕೊಟ್ಟನು; ಶಕುನಿಯೂ ಅವರೊಡನೆ ಒಟ್ಟಾದನು; ಕರ್ಣನ ಮಕ್ಕಳು ಒಟ್ಟಾಗಿ ಧಾಳಿಯನ್ನು ಕೈಕೊಂಡರು.
ನೆತ್ತಿಯಗತೆಗಳಂಕುಶದ ಬೆರ
ಳೊತ್ತುಗಿವಿಗಳ ಕರದ ಪರಿಘದ
ಮತ್ತಗಜಘಟೆಗಳನು ನೂಕಿದರೆಂಟು ಸಾವಿರವ |
ಸುತ್ತು ಝಲ್ಲಿಯ ಝಲ್ಲರಿಯ ಬಲು
ಹತ್ತುಗೆಯ ಬಿರುಬುಗಳ ತೇರಿನ
ಹತ್ತುಸಾವಿರ ಹೊದರುದೆಗೆದವು ಶಲ್ಯನೆಡಬಲಕೆ || ೨೬ ||
ಪದವಿಭಾಗ-ಅರ್ಥ: ನೆತ್ತಿಯ(ಆಯುಧದ ಮೇಲು ತುದಿಯ)+ ಅಗತೆಗಳ(ಸೀಳುಗಳ) + ಅಂಕುಶದ ಬೆರಳೊತ್ತು+ ಗಿ+ ಕಿವಿಗಳ ಕರದ(ಕೈಯಲ್ಲಿ ಹಿಡಿದ) ಪರಿಘದ ಮತ್ತಗಜಘಟೆಗಳನು ನೂಕಿದರು(ಮುಂದೆಬಂದರು)+ ಎಂಟು ಸಾವಿರವ ಸುತ್ತು ಝಲ್ಲಿಯ ಝಲ್ಲರಿಯ ಬಲು ಹತ್ತುಗೆಯ(ಮುತ್ತುವಿಕೆ) ಬಿರುಬುಗಳ(ಗಟ್ಟಿಯಾದ) ತೇರಿನ ಹತ್ತುಸಾವಿರ ಹೊದರು(ಮೆದೆ- ಒಟ್ಟಾಗು,- ಗುಂಪು) +ದೆ+ ತೆಗೆದವು ಶಲ್ಯನ+ ಎಡಬಲಕೆ
ಅರ್ಥ: ಆಯುಧದ ಮೇಲು ತುದಿಯಲ್ಲಿ ಸೀಳುಗಳ್ಳ ಅಂಕುಶಗಳನ್ನು ಹಿಡಿದ, ಬೆರಳಲ್ಲಿ ಒತ್ತಿಹಿಡಿಯುಲು ಅನುಕೂಲವಾದ ಹಿಡಿಕೆಯ ಕಿವಿಗಳನ್ನು ಹೋದಿದ ಪರಿಘಗಳನ್ನು ಕೈಯಲ್ಲಿ ಹಿಡಿದ ಸೈನಿಕರು, ಮತ್ತಗಜಗಳ ಸೇನೆ, ಎಂಟು ಸಾವಿರವ ಸುತ್ತು ಝಲ್ಲಿಯ ಝಲ್ಲರಿಯನ್ನು ಹಿಡಿದವರು ಮುಂದೆಬಂದರು ಬಲು ಹತ್ತುಸಾವಿರ ಮುತ್ತಿಗೆಹಾಕುವ ಗಟ್ಟಿಯಾದ ರಥಗಳು ಶಲ್ಯನ ಎಡಬಲಕೆ ಒಟ್ಟಾಗಿ ನಿಂತವು.
ಮೂರು ಕೋಟಿ ಪದಾತಿಯಲಿ ದೊರೆ
ಯೇರಿದನಲೈ ನಿನ್ನ ಮಗನು
ಬ್ಬೇರಿರಾವ್ತರು ಹೊಕ್ಕರೆರಡೇ ಲಕ್ಕ ತೇಜಿಯಲಿ |
ಕೀರಿದರು ಮಾರೊಡ್ಡನಿವರವ
ರೇರಿ ಹೊಯ್ದರು ನಿನ್ನವರನೊಗು
ವೇರ ಬಾಯ್ಗಳ ರುಧಿರಜಲವದ್ದುದು ಚತುರ್ಬಲವ || ೨೭ ||
ಪದವಿಭಾಗ-ಅರ್ಥ: ಮೂರು ಕೋಟಿ ಪದಾತಿಯಲಿ ದೊರೆಯು(ರಾಜ, ಸಮಾನ, ದೊರೆತ- ಲಭಿಸಿದ)+ ಏರಿದನಲೈ ನಿನ್ನ ಮಗನು+ ಉಬ್ಬೇರಿ(ಉತ್ಸಾಹದಿಂಧ) ರಾವ್ತರು ಹೊಕ್ಕರೆ+ ಎರಡೇ ಲಕ್ಕ ತೇಜಿಯಲಿ ಕೀರಿದರು(ಉದ್ರೇಕದಿಂದ ಕೂಗಾಡು) ಮಾರೊಡ್ಡನು (ಎದುರಿಸಿದವರನ್ನು)+ ಇವರ+ ಅವರು+ ಏರಿ(ಮೇಲೆಬಿದ್ದು) ಹೊಯ್ದರು ನಿನ್ನವರನು+ ಒಗುವ+ ಎರ ಬಾಯ್ಗಳ ರುಧಿರಜಲವು(ರಕ್ತ)+ ಅದ್ದುದು ಚತುರ್ಬಲವ.
ಅರ್ಥ:ಸಂಜಯನು, 'ರಾಜನೇ,ನಿನ್ನ ಮಗ ಕೌರವದೊರೆಯು ಉತ್ಸಾಹದಿಂಧ ಮೂರು ಕೋಟಿ ಪದಾತಿಯಜೊತೆ ಕೂಡಿಕೊಂಡು ಪಾಂಡವರ ಮೇಲೆ ಏರಿಹೋದನು. ಎರಡೇ ಲಕ್ಷ ಕುದುರೆಯ ರಾವುತರು ಸತ್ರು ಸೇನೆಯನ್ನು ಹೊಕ್ಕವರೆ ಉದ್ರೇಕದಿಂದ ಕೂಗಾಡಿದರು. ಎದುರಿಸಿದ ಇವರನ್ನು- ನಿನ್ನವರನು ಅವರು ಮೇಲೆಬಿದ್ದು ಹೊಯ್ದರು- ಹೊಡೆದರು. ಹೊಡೆತದ ಗಾಯದ ಏರು-ದೊಡ್ಡ ಬಾಯಿಗಳಿಂದ ಹೊರಟ ರಕ್ತವು ಚತುರ್ಬಲವನ್ನೂ ಅದ್ದಿತು- ನೆನೆಸಿತು,' ಎಂದ
ತಪ್ಪಿಸಿದ ಮೈಮೈಗಳಲಿ ಹರಿ
ತಪ್ಪ ರಕ್ತವ ಸುರಿದು ಕೆಂಧೂ
ಳುಪ್ಪರಿಸಿದುದು ಚಟುಳ ಚಾತುರ್ಬಲದ ಪದಹತಿಗೆ |
ಅಪ್ಪಿದುದು ಕೆಂಧೂಳಿನೊಡ್ಡಿನ
ದರ್ಪಣದ ತನಿರಕ್ತವೆರಡರ
ದರ್ಪವಡಗದು ನಿಮಿಷದಲಿ ನರನಾಥ ಕೇಳೆಂದ ೨೮
ಪದವಿಭಾಗ-ಅರ್ಥ: ತಪ್ಪಿಸಿದ ಮೈ- ಮೈಗಳಲಿ ಹರಿತಪ್ಪ ರಕ್ತವ ಸುರಿದು ಕೆಂಧೂಳು+ ಉಪ್ಪರಿಸಿದುದು(ಎತ್ತರ, ಉನ್ನತಿ), ಚಟುಳ(ಚುರುಕಿನ, ವೇಗದ,ತ್ವರಿತದ) ಚಾತುರ್ಬಲದ ಪದಹತಿಗೆ(ಹತಿ- ಹೊಡೆತ) ಅಪ್ಪಿದುದು() ಕೆಂಧೂಳಿನ+ ಒಡ್ಡಿನ(ರಾಶಿ, ಕಟ್ಟೆ) ದರ್ಪಣದ(ಕನ್ನಡಿಯಂತೆ) ತನಿರಕ್ತವು+ ಎರಡರ ದರ್ಪವು+ ಅಡಗದು ನಿಮಿಷದಲಿ ನರನಾಥ ಕೇಳೆಂದ.
ಅರ್ಥ:ಸಂಜಯನು,' ಯುದ್ಧದಲ್ಲಿ ಹೊಡೆತದಿಂದ ತಪ್ಪಿಸಿದರೂ ಕೂಡಾ ಬಿದ್ದ ಏಟಿನಿಂದ ಮೈ- ಮೈಗಳಲ್ಲಿ ಹರಿದುಬರುವ ರಕ್ತವು ಸುರಿದು ನೆಲದ ಕೆಂಧೂಳು ಎತ್ತರದ ಮುದ್ದೆಯಾಯಿತು, ಅಲ್ಲಿದ್ದ ತನಿರಕ್ತವು ವೇಗದ ಚಾತುರ್ಬಲದ ಪಾದಗಳ ಹೊಡೆತಕ್ಕೆ ಕೆಂಧೂಳಿನ ಒಡ್ಡಿನ//ಕಟ್ಟೆಯು- ನಿಂತ ರಕ್ತದಿಂದ ಕನ್ನಡಿಯಂತೆ ಆಯಿತು. ಕೆಂಪು ಕನ್ನಡಿಯಂತಾಯಿತು. ಆದರೂ ಎರಡು ಸೈನ್ಯದ ದರ್ಪವು ಒಂದು ನಿಮಿಷದಲ್ಲಿಯೂ ಅಡಗಲಿಲ್ಲ,' ನರನಾಥನೇ ಕೇಳು, ಎಂದ.
ತೆಗೆದರರ್ಜುನನನು ಸುಶರ್ಮನ
ವಿಗಡ ರಥಿಕರು ಭೀಮಸೇನನ
ನುಗಿದನಿತ್ತಲು ನಿನ್ನ ಮಗನಾ ಸಾತ್ಯಕಿಯ ರಥವ |
ಹೊಗರುಗಣೆಯಲಿ ಮುಸುಕಿದನು ಹೂ
ಣಿಗನಲೇ ಗುರುಸೂನು ನಕುಲನ
ತೆಗೆಸಿದನು ತೂರಂಬಿನಲಿ ತೆರಳದೆ ಕೃಪಾಚಾರ್ಯ || ೨೯ ||
ಪದವಿಭಾಗ-ಅರ್ಥ: ತೆಗೆದರು+ ಅರ್ಜುನನನು ಸುಶರ್ಮನ ವಿಗಡ ರಥಿಕರು ಭೀಮಸೇನನು+ ಅನುಗಿದನು(ಅನುಸರಿಸು)+ ಇತ್ತಲು ನಿನ್ನ ಮಗನು+ ಆ ಸಾತ್ಯಕಿಯ ರಥವ ಹೊಗರುಗಣೆಯಲಿ(ಹೊಳೆಯುವ ಕಣೆ- ಬಾಣ) ಮುಸುಕಿದನು ಹೂಣಿಗನಲೇ(ಬಿಲ್ಲಗಾರನಲ್ಲವೇ) ಗುರುಸೂನು, ನಕುಲನ ತೆಗೆಸಿದನು ತೂರಂಬಿನಲಿ ತೆರಳದೆ(ಹೋಗದೆ- ಹೋಗಲು ಬಿಡದೆ) ಕೃಪಾಚಾರ್ಯ.
ಅರ್ಥ: ಅರ್ಜುನನನ್ನು ಸುಶರ್ಮನ ವಿಗಡ- ಶೂರ ರಥಿಕರು ಎದುರಿಸಿದರು. ನಿನ್ನ ಮಗ ಕೌರವನು ಭೀಮಸೇನನ್ನು ಎದುರಿಸಿದನು. ಇತ್ತ ಆ ಗುರುಸೂನು ಅಶ್ವತ್ಥಾಮನು ಸಾತ್ಯಕಿಯ ರಥವನ್ನು ಹೊಳೆಯುವ ಬಾಣಗಳಿಂದ ಮುಚ್ಚಿದನು; ಅವನು ಒಳ್ಳೆಯ ಬಿಲ್ಲಗಾರನಲ್ಲವೇ! ನಕುಲನನ್ನು ಬೇರೆಕಡೆ ಹೋಗಲು ಬಿಡದೆ ಕೃಪಾಚಾರ್ಯನು ತೂರುತ್ತಿರುವ ಅಂಬುಗಳಿಂದ ತೆಗೆಸಿದನು- ತಡೆದನು.?.
ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ |
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು || ೩೦ ||
ಪದವಿಭಾಗ-ಅರ್ಥ: ಹಳಚಿದನು(ಹಳತು ಮಾಡು, ಪೂರ್ಣಮಾಡು, ಮೆರುಗು;ಗ್ರಾಮ್ಯ: ಕಸವನ್ನು ಹಳಚಿಗೆ ತೆಗೆ ಎನ್ನು ಮಾತು ರೂಢಿಯಲ್ಲದೆ.(ಇಲ್ಲದಂತೆ ತೆಗೆ) ದಳಪತಿಯನು+ ಅವನಿಪ+ತಿಲಕನು+ ಎಚ್ಚನು(ಹೊಡೆದನು) ನೂರು ಶರದಲಿ, ಕಳಚಿ ಕಯ್ಯೊಡನೆ+ ಎಚ್ಚು ಬೇಗಡೆ (ಹೊಳಪು )+ಗ+ ಕಳೆದನು+ ಅವನಿಪನ ಅಳುಕಲು(ದುಃಖಿಸು, ಕುಗ್ಗಿಸು, ಸೋಲಿಸು)+ ಅರಿವುದೆ(ಸೋಲಿಸಲು ತಿಳಿಯುವುದೇ) ಸಿಡಿಲ ಹೊಯ್ಲಲಿ(ಬಡಿದಲ್ಲಿ) ಕುಲಕುಧರವು (ಕುಧರ= ಪರ್ವತ, ಕುಲಗಿರಿ)+ ಈ ಧರ್ಮಸುತನ+ ಅಗ್ಗಳಿಕೆಗೆ+ ಉಪ್ಪಾರತಿಗಳಾದುವು ಶಲ್ಯನ+ ಅಂಬುಗಳು
ಅರ್ಥ: ಅವನಿಪರ ತಿಲಕನಾದ ಧರ್ಮಜನು ದಳಪತಿ ಶಲ್ಯನ ಶಕ್ತಿಯನ್ನು ಕುಗ್ಗಿಸಿದನು. ಅವನು ನೂರು ಬಾಣಗಳಿಂದ ಹೊಡೆದನು. ಕಯ್ಯಿಂದ ಬಾಣಗಳನ್ನು ಕಳಚಿಸಿ ಹೊಡೆದಾಗ ಶಲ್ಯನನ್ನು ಕಾಂತಿಹೀನನ್ನಾಗಿ ಮಾಡಿದನು. ಅವನಿಪ ಧರ್ಮಜನನ್ನು ಸೋಲಿಸಲು ಸಾಧ್ಯವೇ? ಸಿಡಿಲು ಬಡಿದರೆ ಕುಲಗಿರಿಯು ಹೆದರುವುದೇ? ಧರ್ಮಸುತನ ಅಗ್ಗಳಿಕೆಗೆ- ಶ್ರೇಷ್ಠತೆಗೆ ಶಲ್ಯನ ಬಾಣಗಳು ಉಪ್ಪಾರತಿಗಳಾದುವು. (ಗೌರವದಿಂದ ಮುತ್ತಿನ ಆರತಿ ಎತ್ತಿದಂತಾಯಿತು)

ಶಲ್ಯನ ಪರಾಕ್ರಮ

ಸಂಪಾದಿಸಿ
ಅರಸ ಕೇಳೈ ಮುಳಿದ ಮಾದ್ರೇ
ಶ್ವರನ ಖತಿಯೋ ಕುಪಿತ ಯಮನು
ಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ |
ಉರಿದನಗ್ಗದ ರೋಷದಲಿ ಹೊಗೆ
ಹೊರಳಿಗಟ್ಟಿತು ಸುಯ್ಲಿನಲಿ ಸಂ
ವರಿಸಿಕೊಳು ಕೌಂತೇಯ ಎನುತೆಚ್ಚನು ಮಹೀಪತಿಯ || ೩೧ ||
ಪದವಿಭಾಗ-ಅರ್ಥ: ಅರಸ ಕೇಳೈ ಮುಳಿದ ಮಾದ್ರೇಶ್ವರನ ಖತಿಯೋ, ಕುಪಿತ ಯಮನ+ ಉಬ್ಬರದ ಕೋಪವೊ, ಕಾಲರುದ್ರನ ಹಣೆಯ ಹೆಗ್ಗಿಡಿಯೊ(ಹಿರಿದು ಕಿಡಿ- ದೊಡ್ಡ ಕಿಡಿಯೋ), ಉರಿದನು+ ಅಗ್ಗದ(ಉನ್ನತ, ಹೆಚ್ಚಿನ) ರೋಷದಲಿ ಹೊಗೆ ಹೊರಳಿಗಟ್ಟಿತು(ಬೆಂಕಿಯಿಂದ ಏಳುವ ಹೋಗೆ ಹೊರಳಿ ಹೊರಲಿ ಮೇಲೇಳುವಂತೆ ಇರುವುದು) ಸುಯ್ಲಿನಲಿ(ಸುಯಿಲು= ಉಸಿರು) ಸಂವರಿಸಿಕೊಳು ಕೌಂತೇಯ ಎನುತ+ ಎಚ್ಚನು ಮಹೀಪತಿಯ
ಅರ್ಥ: ಅರಸ ಧೃತರಾಷ್ಟ್ರನೇ ಕೇಳು,'ಮಾದ್ರೇಶ ಶಲ್ಯನಿಗೆ ತನ್ನ ಬಾಣಗಳು ವಿಫಲವಾಗಲು ಬಹಳ ಸಿಟ್ಟು ಬಂದಿತು. ಅದು ಹೇಗಿತ್ತೆಂದರೆ: ಇದು ಈ ರೋಷ ಮುಳಿದ ಮಾದ್ರೇಶ್ವರ ಶಲ್ಯನ ಕೋಪವೋ ಅಥವಾ, ಕೋಪಗೊಂಡ ಯಮನ ಉಬ್ಬರದ- ಹೆಚ್ಚನ ಕೋಪವೊ, ಕಾಲರುದ್ರನ ಹಣೆಯ ದೊಡ್ಡ ಕಿಡಿಯೋ, ಎನ್ನುವಂತೆ ಶಲ್ಯನು ಸಿಟ್ಟಿನಲ್ಲಿ ಉರಿದು ಅವನಲ್ಲಿ ಹೆಚ್ಚಿನ ರೋಷದ ಬೆಂಕಿಯ ಹೊಗೆ ಅವನು ಬಿಡುವ ಉಸಿರಿನಲ್ಲಿ ಹೊರಳಿಗಟ್ಟಿತು. ಆಗ ಶಲ್ಯನು ಧರ್ಮಜನಿಗೆ ಸಂವರಿಸಿಕೊಳು- 'ತಡೆದುಕೋ ಕೌಂತೇಯ ಎನ್ನುತ್ತಾ,ಮಹೀಪತಿ' ಎಂದು ಧರ್ಮಜನನ್ನು ಹೊಡೆದನು.
ಮುಂದಣಂಬಿನ ಮೊನೆಯನೊದೆದವು
ಹಿಂದಣಂಬುಗಳವರ ಮೊನೆಗಳ
ಹಿಂದಣಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ ||
ಹಿಂದಣವು ಹಿಂದಿಕ್ಕಿದವು ಮಿಗೆ
ಹಿಂದಣಂಬುಗಳೆಂಜಲಿಸಿ ಬಳಿ
ಸಂದವುಳಿದಂಬುಗಳೆನಲು ಕವಿದೆಚ್ಚನವನಿಪನ || ೩೨ ||
ಪದವಿಭಾಗ-ಅರ್ಥ:ಮುಂದಣ+ ಅಂಬಿನ ಮೊನೆಯನು+ ಒದೆದವು ಹಿಂದಣಂಬುಗಳು+ ಅವರ ಮೊನೆಗಳ ಹಿಂದಣ+ ಅಂಬಿನ ಹಿಳುಕು ಹೊಕ್ಕವು ಮುಂಚಿದಂಬುಗಳ, ಹಿಂದಣವು ಹಿಂದಿಕ್ಕಿದವು ಮಿಗೆ/ ಮತ್ತೆ ಹಿಂದಣಂಬುಗಳ+ ಎಂಜಲಿಸಿ (ನೆಕ್ಕಿ) ಬಳಿಸಂದವು+ ಉಳಿದಂಬುಗಳು+ ಎನಲು ಕವಿದು+ಎಚ್ಚನು+ ಅವನಿಪನ
ಅರ್ಥ:ಶಲ್ಯನು ಬಾಣಗಳ ಮೇಲೆ ಬಾಣಗಳನ್ನು ಬಿಟ್ಟಾಗ, ಮುಂದಿದ್ದ ಅಂಬಿನ ಮೊನೆಯನ್ನು ಹಿಂದಿನ ಅಂಬುಗಳು ಅವರ ಮೊನೆಗಳಿಂದ ಒದೆದವು.(ಒಂದಕ್ಕೊಂದು ತಾಗಿಕೊಂಡು ಹೋದವು.). ಹಿಂದಿನ ಅಂಬಿನ ಹಿಳುಕು/ ಮೊನೆ ಮುಂಚೆಹೊಡೆದ ಅಂಬುಗಳ ಹಿಂದೆ ಹೊಕ್ಕವು. ಕೆಲವು ನಂತರ ಬಿಟ್ಟ ಹಿಂದಿನ ಬಾಣಗಳು ಮೊದಲು ಹೊಡೆದವುಗಳನ್ನು ಹಿಂದಿಕ್ಕಿದವು. ಮತ್ತೆ ಹಿಂದಿನ ಅಂಬುಗಳನ್ನು ಉಳಿದಂಬುಗಳು ತಾಗಿಕೊಂಡು ಧರ್ಮರಾಜನ ಬಳಿಬಂದವು ಎನ್ನುವಂತೆ ಶಲ್ಯನು ಅವನಿಪನಾದ ಧರ್ಮಜನನ್ನು ಆಕ್ರಮಿಸಿ ಹೊಡೆದನು.
ತೋಡಿ ನೆಟ್ಟವು ಸೀಸಕವನೊಡೆ
ದೋಡಿದವು ಕವಚದಲಿ ಕುದುರೆಯ
ಜೋಡು ಹಕ್ಕರಿಕೆಯಲಿ ತಳಿತವು ಹಿಳುಕು ಹರಹಿನಲಿ |
ಕೂಡೆ ರಥದಲಿ ಸಿಂಧದಲಿ ಮೈ
ಗೂಡಿ ಗಾಲಿಗಳಲಿ ವರೂಥದ
ಲೀಡಿರಿದವಂಬುಗಳು ಕಲಿಮಾದ್ರೇಶನೆಸುಗೆಯಲಿ || ೩೩ ||
ಪದವಿಭಾಗ-ಅರ್ಥ: ತೋಡಿ ನೆಟ್ಟವು ಸೀಸಕವನು+ ಒಡೆದು+ ಓಡಿದವು ಕವಚದಲಿ ಕುದುರೆಯ ಜೋಡು ಹಕ್ಕರಿಕೆಯಲಿ(ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ) ತಳಿತವು ಹಿಳುಕು ಹರಹಿನಲಿ ಕೂಡೆ ರಥದಲಿ ಸಿಂಧದಲಿ(ಸಿಂಧು ದೇಶದ ಕುದುರೆ) ಮೈಗೂಡಿ ಗಾಲಿಗಳಲಿ ವರೂಥದಲಿ+ ಈಡಿರಿದವು+ ಅಂಬುಗಳು ಕಲಿ ಮಾದ್ರೇಶನ+ ಎಸುಗೆಯಲಿ (ಹೊಡೆತದಲ್ಲಿ.)
ಅರ್ಥ:ಶೂರ ಮಾದ್ರೇಶ ಶಲ್ಯನ ಹೊಡೆತದಲ್ಲಿ ಸೀಸಕದ ಕವಚವನ್ನು ತೋಡಿಕೊಂಡು ಬಾಣಗಳು ನೆಟ್ಟವು. ಅವನ ಬಾಣಗಳು ಒಡೆದು ಕುದುರೆಯ ಜೋಡು ಹೊದಿಕೆಯ ಕವಚದಲ್ಲಿ ಹಕ್ಕರಿಕೆಯಲ್ಲಿ ಓಡಿದವು. ರಥದಲ್ಲಿ ಸಿಂಧು ದೇಶದ ಕುದುರೆಯಲ್ಲಿ ಅವನ ಬಾಣದ ತುದಿಯ ಹಿಳುಕು ಹರಹಿನಲಿ ತಳಿತವು- ನಾಟಿಕೊಂದು ಎಲ್ಲೆಡೆ ಮೈಗೂಡಿ- ಮೈತುಂಬ ತೋರಿದವು. ಅವು ಗಾಲಿಗಳಲ್ಲಿ, ರಥದಲ್ಲಿ ಅಂಬುಗಳು ಈಡಿರಿದವು- ಒತ್ತಾಗಿ ಇರಿದವು.
ದೊರೆಗೆ ಬಲುಹೋ ಸಮರ ಶಲ್ಯನ
ಶರವಳೆಗೆ ಹಿಡಿ ಕೊಡಯನೆನಲ
ಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ |
ಸರಳ ಹೊದೆಗಳ ತುಂಬಿ ರಥ ಸಾ
ವಿರದಲಾ ಪಾಂಚಾಲಬಲವು
ಪ್ಪರಗುಡಿಯ ಸಿಂಧದ ಸಘಾಡದಲೈದಿತರಿಭಟನ || ೩೪ ||
ಪದವಿಭಾಗ-ಅರ್ಥ: ದೊರೆಗೆ ಬಲುಹೋ, ಸಮರ ಶಲ್ಯನ ಶರವಳೆಗೆ(ಶರದ ಮಳೆಗೆ) ಹಿಡಿ ಕೊಡಯನೆನಲು+ ಅಬ್ಬರದೊಳಗೆ ಗಬ್ಬರಿಸೆ ನೆಲ ಗಾಲಿಗಳ ಘಲ್ಲಣೆಗೆ ಸರಳ ಹೊದೆಗಳ (ಬಾಣಗಳ ಹೊರೆಯನ್ನು) ತುಂಬಿ ರಥ ಸಾವಿರದಲಿ+ ಆ ಪಾಂಚಾಲಬಲವು+ ಉಪ್ಪರಗುಡಿಯ(ಎತ್ತರದಲ್ಲಿ ಹಾರುವ ಬಾವುಟ) ಸಿಂಧದ(ಶ್ರೀಮಂತಿಕೆಯಲ್ಲಿ) ಸಘಾಡದಲಿ+ ಐದಿತು+ ಅರಿಭಟನ(ಶತ್ರುಗಳ ಭಟರ)
ಅರ್ಥ: ಧರ್ಮಜ ದೊರೆಗೆ ಬಲುಹೋ ಸಮರ,- ಯುದ್ಧಕ್ಕೆ ಬೆಂಬಲಿಸಿ!, 'ಶಲ್ಯನ ಶರದ-ಬಾಣದ ಮಳೆಗೆ ಹಿಡಿ ಕೊಡಯನು' ಎನ್ನಲು; ಈ ಅಬ್ಬರದಲ್ಲಿ ನೆಲವು ಗಾಲಿಗಳ ಘಲ್ಲಣೆಯ ಸದ್ದಿಗೆ ಗಬ್ಬರಿಸಲು- ಆರ್ಭಟಿಸಲು, ಬಾಣಗಳ ಹೊರೆಯನ್ನು ತುಂಬಿ ರಥ ಸಾವಿರದ ಲೆಕ್ಕದಲ್ಲಿ, ಶತ್ರುಗಳ ಭಟರಾದ ಆ ಪಾಂಚಾಲರ ಸೇನೆಯು, ಉಪ್ಪರಗುಡಿಯ ಬಾವುಟದ ವೈಭವದಲ್ಲಿ ಶೋಭೆಯಿಂದ ಬಂದಿತು, ಎಂದನು ಸಂಜಯನು.(ಧೃತರಾಷ್ಟ್ರನಿಗೆ ಪಾಂಚಾಲ ಸೇನೆಯನ್ನು ಶತ್ರುಗಳ ಸೇನೆ ಎಂದನು)
ಪೂತುರೇ ಪಾಂಚಾಲ ಬಲ ಬಂ
ದಾತುಕೊಂಡುದೆ ಧರ್ಮಪುತ್ರನ
ಘಾತಿಯನು ಘಟ್ಟಿಸಿದರೇ ತುಷ್ಟಿಸಿದನೇ ನೃಪತಿ |
ಈತಗಳ ಕೊಳ್ಳೆನುತ ಶರಸಂ
ಘಾತವನು ಕವಿಸಿದನು ಮಾದ್ರೀ
ಜಾತರಡಹಾಯಿದರು ಶಲ್ಯನ ರಥದ ಸಮ್ಮುಖಕೆ || ೩೫ ||
ಪದವಿಭಾಗ-ಅರ್ಥ: ಪೂತುರೇ ಪಾಂಚಾಲ ಬಲ ಬಂದು+ ಆತುಕೊಂಡುದೆ(ಆತುಕೊ- ಬೆಂಬಲಿಸು) ಧರ್ಮಪುತ್ರನ ಘಾತಿಯನು(<ಸಂ. ಸಂಘಾತಿನ್- ಜೊತೆಗಾರ; ಘಾತಿಸು -ಹೊಡೆ, ಕೊಲ್ಲು) ಘಟ್ಟಿಸಿದರೇ ತುಷ್ಟಿಸಿದನೇ(ತುಷ್ಟಿ- ಹೆಚ್ಚು) ನೃಪತಿ ಈತಗಳ ಕೊಳ್ಳು+ ಎನುತ ಶರಸಂಘಾತವನು ಕವಿಸಿದನು(ಮುಸುಕಿದನು,ಮುಚ್ಚಿದನು ಮಾದ್ರೀಜಾತರು+ ಅಡಹಾಯಿದರು ಶಲ್ಯನ ರಥದ ಸಮ್ಮುಖಕೆ.
ಅರ್ಥ: ಶಲ್ಯನು,'ಪೂತುರೇ, ಭಲೇ, ಪಾಂಚಾಲರ ಸೇನೆ ಬಂದು ಧರ್ಮಜನಿಗೆ ಬೆಂಬಲಿಸಿತೇ; ಧರ್ಮಪುತ್ರನ ಸಹಾಯಕ ಜೊತೆಗಾರರನ್ನು ಘಟ್ಟಿಮಾಡಿದರೇ ,ಹೆಚ್ಚಿಸಿದರೇ? ನೃಪತಿ ಧರ್ಮಜ, ಇವುಗಳನ್ನು ತೆಗೆದುಕೊ, ಎನ್ನುತ್ತಾ, ಬಾಣಗಳ ಸಮೂಹವನ್ನು ಬಿಟ್ಟು ಧರ್ಮಜನನ್ನು ಅದರಿಂದ ಮುಚ್ಚಿದನು. ಆಗ ಮಾದ್ರೀಮಕ್ಕಳಾದನಕುಲ ಸಹದೇವರು ಶಲ್ಯನ ರಥದ ಎದುರುಬಂದು ಅಡ್ಡನಿಂತರು.
ಮಕ್ಕಳಿರ ನಿಮಗೇಕೆ ರಣವಿದು
ಮಕ್ಕಳಾಟಿಕೆಯಾಯ್ತಲಾ ಹಿಂ
ದಿಕ್ಕಿದಿರಲಾ ದೊರೆಯ ಧೂಳಿಯ ಬೆನ್ನ ತಡೆದಿರಲಾ |
ಎಕ್ಕಸರದಲಿ ನಿಮ್ಮರಾಯನ
ನಿಕ್ಕಿ ಭೀಮಾರ್ಜುನರಿಗೌತಣ
ವಿಕ್ಕುವೆನು ಬರಹೇಳೆನುತ ತೂಳಿದನು ಮಾದ್ರೇಶ || ೩೬ ||
ಪದವಿಭಾಗ-ಅರ್ಥ: ಮಕ್ಕಳಿರ ನಿಮಗೇಕೆ ರಣವು+ ಇದು ಮಕ್ಕಳಾಟಿಕೆಯಾಯ್ತಲಾ, ಹಿಂದಿಕ್ಕಿದಿರಲಾ ದೊರೆಯ, ಧೂಳಿಯ (ಕಾಲುಧೂಳಿಯ ದೋಷ) ಬೆನ್ನ ತಡೆದಿರಲಾ, ಎಕ್ಕಸರದಲಿ(ಒಂದೇ ಬಾಣದಲ್ಲಿ ) ನಿಮ್ಮರಾಯನನು+ ಇಕ್ಕಿ(ಹೊಡೆದು) ಭೀಮಾರ್ಜುನರಿಗೆ+ ಔತಣವ+ ಇಕ್ಕುವೆನು ಬರಹೇಳು+ ಎನುತ ತೂಳಿದನು(ನುಗ್ಗಿದನು) ಮಾದ್ರೇಶ.
ಅರ್ಥ: ಶಲ್ಯನು ತನ್ನ ತಂಗಿಯ ಮಕ್ಕಳಿಗೆ, 'ಮಕ್ಕಳಿರಾ, ನಿಮಗೇಕೆ ನನ್ನೊಡನೆ ಈ ಯುದ್ಧವು? ನಿಮ್ಮದು ಮಕ್ಕಳಾಟಿಕೆಯಾಯ್ತಲಾ! ದೊರೆ ಧರ್ಮಜನನ್ನು ಹಿಂದಕ್ಕೆ ತಳ್ಳಿ ನೀವು ಮುಂದೆ ಬರಬಹುದೇ? ನಿಮ್ಮ ದೊರೆಗೆ ಬಂದಿದ್ದ ಕೆಡುಕಿನ ಬೆನ್ನಟ್ಟಿ ತಡೆದಿರಲ್ಲವೇ?, ಒಂದೇ ಬಾಣದಲ್ಲಿ ನಿಮ್ಮ ಅಣ್ಣ ರಾಯನನ್ನು ಹೊಡೆದು, ಭೀಮಾರ್ಜುನರಿಗೆ ಯುದ್ಧದ ಔತಣವನ್ನು ಹಾಕುವೆನು. ಅವನನ್ನು ಬರಹೇಳು, ಎನ್ನುತ್ತಾ ಮಾದ್ರೇಶನು ಮುಂದೆ ನುಗ್ಗಿದನು.
ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ |
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ || ೩೭ ||
ಪದವಿಭಾಗ-ಅರ್ಥ: ದಳಪತಿಯ ದುವ್ವಾಳಿ(ತೀವ್ರಗತಿ, ದಾಳಿ, ಮುತ್ತಿಗೆ) ಪಾಂಡವಬಲವ ಕೆದರಿತು ಕಲ್ಪಮೇಘದ ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ ಅಳುಕದಿರಿ ಬದ್ದರದ (ಮಂಗಳಕರವಾದುದುವಾದ್ಯದ) ಬಂಡಿಯ ನಿಲಿಸಿ ಹರಿಗೆಯ(ಹರಿಗೆ, ಗುರಾಣಿ, ಬೇಟೆ, ಶಿಕಾರಿ) ಪಾಠಕರು ಕೈಕೊಳಲಿ ಮುಂದಣ ನೆಲನನು+ ಎನುತ+ ಉಬ್ಬರಿಸಿತು (ಉಬ್ಬರ- ಉಬ್ಬು, ಹೆಚ್ಚಾಗು, ಉತ್ಸಾಹಹೊಂದು.)+ ಅರಿಸೇನೆ.
ಅರ್ಥ: ಕೌರವನ ದಳಪತಿಯಾದ ಮಾದ್ರೇಶ್ವರ ಶಲ್ಯನ ದಾಳಿ ಪಾಂಡವರ ಸೇನೆಯನ್ನು ಚದುರಿಸಿತು. ಅವನ ಬಾಣಗಳ ಸುರಿಮಳೆ ಪ್ರಳಯಕಾಲದ ಕಲ್ಪಮೇಘದ ಹೊಲಿಗೆ ಹರಿದು ಅತಿವೃಷ್ಠಿಯಾದಂತೆ ಆಯಿತು. ಆಗ ಪಾಂಚಾಲರ ಸೇನೆಯ ನಾಯಕರು, ಹೆದರಬೇಡಿ ವಾದ್ಯದ ಸದ್ದಿನ ಬಂಡಿಯನ್ನು ನಿಲ್ಲಿಸಿ. ಗುರಾಣಿಯನ್ನು ಹಿಡಿಯಿರಿ. ಸ್ತುತಿ ಪಾಠಕರು ಕೈಕೊಳಲಿ ಮುಂದಿನ ಸಾಲಿನಲ್ಲಿ ನಿಲ್ಲಲಿ, ಎನ್ನುತ್ತಾ ಅರಿಸೇನೆ - ಧರ್ಮಜನ ಸೇನೆ ಉಬ್ಬರಿಸಿತು- ಪರಾಕ್ರಮಿಸಿತು.
ಅರಸ ಕೇಳೈ ಬಳಿಕ ಶಲ್ಯನ
ಶರಹತಿಗೆ ಬಿಚ್ಚಿದವು ಹೂಡಿದ
ಹರಿಗೆಯಿಬ್ಬಗಿಯಾದವಾ ಬದ್ಧರದ ಬಂಡಿಗಳು |
ಸರಳುಗಳ ಬಳಿಸರಳು ಬೆಂಬಳಿ
ಸರಳ ಹಿಂದಣ ಸರಳುಗಳ ಪಡಿ
ಸರಳ ಸಾರದ ಸೋನೆ ಸದೆದುದು ವೈರಿವಾಹಿನಿಯ || ೩೮ ||
ಪದವಿಭಾಗ-ಅರ್ಥ: ಅರಸ ಕೇಳೈ, ಬಳಿಕ ಶಲ್ಯನ ಶರಹತಿಗೆ(ಬಾಣದ ಹೊಡೆತಕ್ಕೆ) ಬಿಚ್ಚಿದವು ಹೂಡಿದ ಹರಿಗೆಯು+ ಇಬ್ಬಗಿಯಾದವು+ ಆ ಬದ್ಧರದ (ಉತ್ತಮ) ಬಂಡಿಗಳು ಸರಳುಗಳ (ಬಾಣದ) ಬಳಿಸರಳು ಬೆಂಬಳಿ ಸರಳ ಹಿಂದಣ ಸರಳುಗಳ ಪಡಿಸರಳ ಸಾರದ ಸೋನೆ(ಮಳೆ) ಸದೆದುದು ವೈರಿವಾಹಿನಿಯ.
ಅರ್ಥ: ಅರಸನೇ ಕೇಳು, 'ಬಳಿಕ ಶಲ್ಯನ ಬಾಣದ ಹೊಡೆತಕ್ಕೆ ಬಿಚ್ಚಿದವು ಗುರಾನುಯ ಹೂಡಿದಹಲಗೆಗಳು ಆ ಉತ್ತಮ ಬಂಡಿಗಳು ಒಡೆದು ಎರಡಾದವು. ಬಾಣಗಳ, ಹಿಂದೆಯೇ ಬಳಿಸರಳು, ಸರಳ ಹಿಂದಣ ಬಾಣಗಳ, ಅದರ ಜೊತೆ ಪಡಿಸರಳ-ಬಾಣದ ಸಾರದ ಮಳೆ ವೈರಿವಾಹಿನಿಯನ್ನುಹೊಡೆದು ಹಾಕಿತು, ಎಂದನು ಸಂಜಯ.
ಘಾಯವಡೆದನು ದ್ರುಪದಸುತ ಪೂ
ರಾಯದೇರಿನಲೋಡಿದರು ಮಾ
ದ್ರೇಯರುಬ್ಬಟೆ ಮುರಿದು ಬೆಬ್ಬಳೆವೋದನವನೀಶ |
ರಾಯದಳ ದೆಸೆಗೆಟ್ಟುದೊಗ್ಗಿನ
ನಾಯಕರು ನುಗ್ಗಾಯ್ತು ಯಾದವ
ರಾಯ ಕಂಡನು ರಥವನಡಹಾಯ್ಸಿದನು ಫಲುಗುಣನ || ೩೯ ||
ಪದವಿಭಾಗ-ಅರ್ಥ: ಘಾಯವಡೆದನು ದ್ರುಪದಸುತ, ಪೂರಾಯದೇರಿನಲಿ(ಪೂರಾಯ= ಪರಿಪೂರ್ಣ+ ಏರಿನಿಂದ)+ ಓಡಿದರು ಮಾದ್ರೇಯರ ಉಬ್ಬಟೆ (ಸೇನೆಯ ಪರಾಕ್ರಮ ಆರ್ಬಟಕ್ಕೆ) ಮುರಿದು (ಬಳಲಿ) ಬೆಬ್ಬಳೆವೋದನು(ಬೆಚ್ಚಿದನು,ಹದರಿಹೋದನು)+ ಅವನೀಶ ರಾಯದಳ ದೆಸೆಗೆಟ್ಟುದು, ಒಗ್ಗಿನ(ಶೂರ) ನಾಯಕರು ನುಗ್ಗಾಯ್ತು ಯಾದವರಾಯ ಕಂಡನು ರಥವನು+ ಅಡಹಾಯ್ಸಿದನು ಫಲುಗುಣನ.
ಅರ್ಥ:ಶಲ್ಯನ ಬಾಣಗಳಿಂದ ದ್ರುಪದಸುತ ದೃಷ್ಟದ್ಯಮ್ನು ಘಾಯಗೊಂಡನು. ಎಲ್ಲರೂ, ಪೂರಾ ಸೇನೆಯೂ- ಎಲ್ಲಾ ಭಟರೂ ವೇಗದಿಂದ ಓಡಿದರು. ಮಾದ್ರೇಯರ ಸೇನೆಯ ಪರಾಕ್ರಮಕ್ಕೆ ಬಳಲಿ ಅವನೀಶ ಧರ್ಮಜನು ಬೆಚ್ಚಿದನು- ಬೆದರಿದನು. ಹೀಗೆ ಧರ್ಮರಾಯನ ಸೇನೆ ದಿಕ್ಕುಗೆಟ್ಟಿತು. ವೀರ ನಾಯಕರು ನುಗ್ಗಾದರು- ಬಳಲಿದರು. ಇದನ್ನು ಯಾದವರಾಯ ಕೃಷ್ಣನು ಕಂಡನು. ಆಗ ಅವನು ಫಲ್ಗುಣನ ರಥವನ್ನ್ನು ಶಲ್ಯನಿಗೆ ಅಡ್ಡ ಹಾಯಿಸಿ, ಅವನೆದುರು ನಿಂತನು.
ಎಲೆಲೆ ಹನುಮನ ಹಳವಿಗೆಯ ರಥ
ಹೊಳೆಯುತದೆ ದಳಪತಿಗೆ ಕಾಳೆಗ
ಬಲುಹು ಬರ ಹೇಳುವುದು ಗೌತಮ ಗುರುಸುತಾದಿಗಳ |
ಬಲವ ಕರೆ ಸಮಸಪ್ತಕರನಿ
ಟ್ಟಳಿಸಿ ನೂಕಲಿ ಕರ್ಣಸುತನೆಂ
ದುಲಿದು ಹೊಕ್ಕನು ನಿನ್ನ ಮಗನೈನೂರು ರಥಸಹಿತ || ೪೦ ||
ಪದವಿಭಾಗ-ಅರ್ಥ: ಎಲೆಲೆ ಹನುಮನ ಹಳವಿಗೆಯ (ಧ್ವಜ) ರಥಹೊಳೆಯುತದೆ ದಳಪತಿಗೆ ಕಾಳೆಗ ಬಲುಹು(ಬಹಳ ಕಷ್ಟದ್ದು) ಬರ ಹೇಳುವುದು ಗೌತಮ(ಕೃಪ) ಗುರುಸುತಾದಿಗಳ ಬಲವ ಕರೆ ಸಮಸಪ್ತಕರನು+ ಇಟ್ಟಳಿಸಿ (ಒಗ್ಗೂಡಿಕೊಂಡು) ನೂಕಲಿ ಕರ್ಣಸುತನೆಂದು+ ಉಲಿದು(ಹೇಳಿ) ಹೊಕ್ಕನು (ಪ್ರವೇಶಿಸಿದನು) ನಿನ್ನ ಮಗನೈನೂರು ರಥಸಹಿತ
ಅರ್ಥ:ಆಗ ಕೌರವನು, 'ಎಲೆಲೆ! ಹನುಮನ ಧ್ವಜದ ರಥವು ಶಲ್ಯನ ಎದುರು ಹೊಳೆಯುತ್ತಿದೆ; ನಮ್ಮ ದಳಪತಿ ಶಲ್ಯನಿಗೆ ಕಾಳೆಗ ಬಲವಾಯಿತು. ಆದ್ದರಿಂದ ಕೃಪ, ಗುರುಸುತ ಅಶ್ವತ್ಥಾಮ ಮೊದಲಾದವರನ್ನು ಶಲ್ಯನ ಬೆಂಬಲಕ್ಕೆ ಅವರ ಬಲ- ಸೇನೆ ಬರಲು ಹೇಳುವುದು; ಕರೆ ಸಮಸಪ್ತಕರನು ಒಗ್ಗೂಡಿಕೊಂಡು ಮುಂದುವರಿಯಲಿ ಕರ್ಣಸುತನು,' ಎಂದು ಹೇಳಿ, ನಿನ್ನ ಮಗನು ಐನೂರು ರಥಸಹಿತ ಯುದ್ಧಕ್ಕೆ ಪ್ರವೇಶಿಸಿದನು.
ಉಲಿದು ಕೌರವ ಸರ್ವದಳ ಮುಂ
ಕೊಳಿಸಿ ನೂಕಿತು ಶಲ್ಯನನು ಪಡಿ
ತಳಿಸಿ ಹೊಕ್ಕುದು ಕರ್ಣಸುತ ಕೃಪ ಗುರುಸುತಾದಿಗಳು |
ಪ್ರಳಯದಿನದಲಿ ಪಂಟಿಸುವ ಸಿಡಿ
ಲಿಳಿದುದೆನೆ ಬಹುವಿಧದ ವಾದ್ಯದ
ಮೊಳಗುಗಳ ತುದಿ ತುಡುಕಿತಾ ಬ್ರಹ್ಮಾಂಡಮಂಡಲವ || ೪೧ ||
ಪದವಿಭಾಗ-ಅರ್ಥ: ಉಲಿದು(ಕೂಗಿ, ಹೇಳಿ) ಕೌರವ ಸರ್ವದಳ ಮುಂಕೊಳಿಸಿ ನೂಕಿತು ಶಲ್ಯನನು ಪಡಿತಳಿಸಿ(ಇಡಿಕಿರಿಸಿ,ಒಟ್ಟಾಗಿರುವುದು) ಹೊಕ್ಕುದು(ನುಗ್ಗಿದರು) ಕರ್ಣಸುತ ಕೃಪ ಗುರುಸುತಾದಿಗಳು ಪ್ರಳಯದಿನದಲಿ ಪಂಟಿಸುವ(ಆಕ್ರಮಿಸು,) ಸಿಡಿಲು+ ಇಳಿದುದು+ ಎನೆ ಬಹುವಿಧದ ವಾದ್ಯದ ಮೊಳಗುಗಳ ತುದಿ ತುಡುಕಿತು(ತಾಗು ೩ ಬೇಗನೆ ಹಿಡಿ, ಥಟ್ಟನೆ ಹಿಡಿ ೪ ಆಕ್ರಮಣ ಮಾಡು, ಎರಗು)+ ಆ ಬ್ರಹ್ಮಾಂಡಮಂಡಲವ.
ಅರ್ಥ:ಶಲ್ಯನ ಸೇನಾಧಿಪತ್ಯದಲ್ಲಿ ಆರ್ಭಟಿಸಿ ಕೌರವನ ಸರ್ವದಳವೂ ಮುಂದೆ ಮುಂದೆ ನುಗ್ಗಿತು. ಶಲ್ಯನನ್ನು ಸುತ್ತುವರಿದು ಒಟ್ಟಾಗಿ ಕರ್ಣಸುತ-ವೃಷಕೇತು, ಕೃಪ, ಗುರುಸುತಅಶ್ವತ್ಥಾಮ ಮೊದಲಾದವರು ಪಾಂಡವಸೆನೆಯಕದೆ ನುಗ್ಗಿದರು. ಅದು ಪ್ರಳಯದಿನದಲ್ಲಿ ಹೊಡೆಯುವ ಸಿಡಿಲು ಭುಮಿಗೆ ಇಳಿಯಿತು ಎನ್ನುವಂತೆ ಬಹುವಿಧದ ವಾದ್ಯಗಳ ಮೊಳಗುವಕೆಗಳಿಂದ ಕೂಡಿತ್ತು; ಆ ಸದ್ದು ಆ ಬ್ರಹ್ಮಾಂಡಮಂಡಲದ ತುದಿಯನ್ನು ತುಡುಕಿತು-ಆಕ್ರಮಿಸಿತು.
ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ |
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ || ೪೨ ||
ಪದವಿಭಾಗ-ಅರ್ಥ: ಧರಣಿಪತಿ ಕೇಳ್ ಭೀಮಸೇನನ ಕರಿಘಟೆಗಳು+ ಇಟ್ಟಣಿಸಿದವು(ಸಂದಣಿಸು ಎದುರಿಸು, ಕಾದು), ಮೋಹರಸಿದವು(ಮೋಹರ- ಸೇನೆ) ಸಾತ್ಯಕಿಯ ರಥವು+ ಆ ದ್ರೌಪದೀಸುತರ+ ಬಿರುದ ಭಟರು+ ಔಕಿದರು( ಒತ್ತು- ಮತ್ತಿದರು) ರಾಯನ ಧುರದ(ಯುದ್ಧದ) ಧೀವಸಿಗಳು ನಿಹಾರದಲಿ+ ಉರವಣಿಸಿದರು ಶಲ್ಯನ+ ಅಂಬಿನ ಮಳೆಯ ಮನ್ನಿಸದೆ.
ಅರ್ಥ:ಧರಣಿಪತಿ ಧೃತರಾಷ್ಟ್ರನೇ ಕೇಳು,'ಭೀಮಸೇನನ ಆನೆಯ ಪಡೆ ಒಟ್ಟಾಗಿ ಬಂದವು, ಸಾತ್ಯಕಿಯ ರಥವೂ ಆ ದ್ರೌಪದೀಸುತರೂ ತಮ್ಮ ಬಿರುದ/ ಶೂರ ಭಟರ ಸೇನೆಯೊಡನೆ ಬಂದು ಮುತ್ತಿದರು. ಧರ್ಮರಾಯನ ಧುರದ ಧೀರರು ಶಲ್ಯನ ಅಂಬುಗಳ ಮಳೆಯನ್ನು ಲೆಕ್ಕಿಸದೆ ರಣರಂಗದಲ್ಲಿ ಉರವಣಿಸಿದರು- ಪರಾಕ್ರಮ ತೋರಿದರು.
ತರಹರಿಸಿದುದು ಪಾರುದಳ ತಲೆ
ವರಿಗೆಯಲಿ ಮೊಗದಡ್ಡವರಿಗೆಯ
ಲರರೆ ರಾವುತೆನುತ್ತ ನೂಕಿತು ಬಿಟ್ಟ ಸೂಠಿಯಲಿ |
ತುರಗದಳ ಮೊಗರಂಬದಲಿ ಮೊಗ
ವರಿಗೆಗಳಲಾರೋಹಕರು ಚ
ಪ್ಪರಿಸಿ ಚಾಚಿದರಾನೆಗಳನಾ ಶಲ್ಯನಿದಿರಿನಲಿ || ೪೩ ||
ಪದವಿಭಾಗ-ಅರ್ಥ: ತರಹರಿಸುದುದು(ಕಳವಳಿಸು, ತಡಬಡಿಸು,) ಪಾರುದಳ (ಮೂಲಸೇನೆ) ತಲೆವರಿಗೆಯಲಿ ಮೊಗದ+ ಅಡ್ಡವರಿಗೆಯಲಿ(ಎದುರುಗುರಾಣಿ)+ ಅರರೆ ರಾವುತ+ ಎನುತ್ತ ನೂಕಿತು(ನುಗ್ಗಿತು) ಬಿಟ್ಟ ಸೂಠಿಯಲಿ(ವೇಗವಾಗಿ), ತುರಗದಳ ಮೊಗರಂಬದಲಿ ಮೊಗವರಿಗೆಗಳಲಿ+ ಆರೋಹಕರು ಚಪ್ಪರಿಸಿ ಚಾಚಿದರು+ ಆನೆಗಳನು+ ಆ ಶಲ್ಯನ+ ಇದಿರಿನಲಿ.
ಅರ್ಥ: ಶಲ್ಯನ ಮೂಲಸೇನೆ ಪಾಂಚಾಲ ಸೇನೆಯ ಮತ್ತು ಅರ್ಜುನನ ಧಾಳಿಗಳಿಂದ ಕಳವಳಗೊಂಡು ತಡಬಡಿಸಿತು. ಗುರಾಣಿಯಂತಿರುವ ತಲೆಯ ಅಡ್ಡಹಲಗೆ ಮುಖದ ಎದುರುಗುರಾಣಿಯಲ್ಲಿ ರಕ್ಷಣೆ ಪಡೆದರು. ಅರರೆ ರಾವುತ, ಎನುತ್ತಾ ವೇಗವಾಗಿ ಬಿಟ್ಟ ತುರಗದಳವು ನುಗ್ಗಿತು. (ಮೊಗರಂಬದಲ್ಲಿ ಮೊಗವರಿಗೆಗಳಲ್ಲಿ) ಮುಖರಕ್ಷಕಗಳನ್ನು ಪಡೆದು ಆರೋಹಕರು ಚಪ್ಪರಿಸಿ-(ತಟ್ಟಿ) ಕುದುರೆಗಳನ್ನು ಮುಂದೆ ಚಾಚಿದರು ಆನೆಗಳನ್ನು ಆ ಶಲ್ಯನ ಎದಿರಿನಲ್ಲಿ ನುಗ್ಗಿಸಿದರು.
ಚುರಿಸುವ ಮೊಗಸೂನಿಗೆಯ ಕೊ
ಲ್ಲಾರಿಗಳ ಶರಬಂಡಿಗಳ ಹೊಂ
ದೇರು ಕವಿದುವು ಕೋಲಕೋಲಾಹಲದ ತೋಹಿನಲಿ |
ವೀರರುಬ್ಬಿನ ಬೊಬ್ಬೆಗಳ ಜು
ಜ್ಜಾರರೇರಿತು ಸರಳ ಧಾರಾ
ಸಾರದಲಿ ದಕ್ಕಡರು ಬಿಲ್ಲವರಾಂತರರಿ ಭಟನ || ೪೪ ||
ಪದವಿಭಾಗ-ಅರ್ಥ: ಚುರಿಸುವ(ಕೆರೆಯುವ?) ಮೊಗಸೂನಿಗೆಯ(<ಸಂ. ಶೂಲಿಕಾ; ಒಂದು ಬಗೆಯ ಆಯುಧ,) ಕೊಲ್ಲಾರಿಗಳ (ಸಿಂಗರಿಸಿದ ಕಮಾನು ಬಂಡಿ) ಶರಬಂಡಿಗಳ(ಶರ- ಬಾಣ) ಹೊಂದೇರು(ಚಿನ್ನದ ತೇರು) ಕವಿದುವು ಕೋಲಕೋಲಾಹಲದ ತೋಹುನಲಿ(ಮರಗಳ ಗುಂಪು, ಸಮೂಹ, ತೋಪು) ವೀರರು+ ಉಬ್ಬಿನ(ಉತ್ಸಾಹದ) ಬೊಬ್ಬೆಗಳ, ಜುಜ್ಜಾರರ (ಶೂರರ)+ ಏರಿತು ಸರಳ(ಬಾಣ) ಧಾರಾಸಾರದಲಿ ದಕ್ಕಡರು(ದಕ್ಷರು? ಸಮರ್ಥ, ಬಲಶಾಲಿ, ಧೈರ್ಯ) ಬಿಲ್ಲವರು+ ಆಂತರು(ಎದುರಿಸಿದರು)+ ಅರಿ ಭಟನ.
ಅರ್ಥ: ಕೆರೆಯುವ ಮೊಗಸೂನಿಗೆಯೆಂಬ ಶೂಲಿಕಾ ಆಯುಧಗಳ, ಮತ್ತೆ ಸಿಂಗರಿಸಿದ ಕಮಾನು ಬಂಡಿಗಳ, ಬಾಣಗಳನ್ನು ತುಂಬಿದ ಬಂಡಿಗಳ, ಚಿನ್ನದ ರಥಗಳ ಸೇನೆಗಳು (ಕವಿದುವು)-ಶಲ್ಯನನ್ನು ಮುತ್ತಿದವು. ಕೌರವರ ಕಡೆಯ ಸೇನೆಯವರು ಕೋಲ- ಬಿಲ್ಲು ಭರ್ಚಿಯ ಕೋಲಾಹಲದ ಗುಂಪುಗಳಲ್ಲಿ, ವೀರರು ಉತ್ಸಾಹದಿಮದ ಬೊಬ್ಬೆಗಳನ್ನು ಹಾಕುತ್ತಾ, ಶೂರರ ಬಾಣಗಳ ಧಾರಾಸಾರದಲಿ- ಸರಿಮಳೆಯಲ್ಲಿ ಬಲಶಾಲಿಗಳು ಬಿಲ್ಲುಗಾರರು ಅರಿ ಭಟರನ್ನು ಎದುರಿಸಿ (ಏರಿತು?) ಬಾಣಗಳನ್ನು ಪ್ರಯೊಗಿಸಿದರು.
ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದನಾಟಕದ |
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ || ೪೫ ||
ಪದವಿಭಾಗ-ಅರ್ಥ: ಕಡಿದು ಬಿಸುಟನು ತಲೆ+ ವ+ ಅರಿಗೆಗಳಲಿ+ ಅಡಸಿದ (ಆಕ್ರಮಿಸಿದ)+ ಆ ಪಯದಳವನು(ಮೂಲ ಸೇನೆ)+ ಒಗ್ಗಿನ ತುಡುಕು(ಆಕ್ರಮಿಸಿದ)+ ಗು+ ಕುದುರೆಯ ಖುರವ ತರಿದನು(ಗೊರಸುಗಳನ್ನೇ ಕತ್ತರಿಸಿದನು) ನಗದ(ಬೆಟ್ಟ, ಆನೆ) ನಾಟಕದ ಗಡಣದ(ಸಮೂಹ)+ ಆನೆಯ ಥಟ್ಟನು(ಸೇನೆ)+ ಉಪ್ಪರಗುಡಿಯ (ಎತ್ತರ ಬಾವುಟದ), ರಥವಾಜಿಗಳ(ಕುದುರೆಗಳ), ರುಧಿರದ(ರಕ್ತದ) ಕಡಲೊಳು+ ಅದ್ದಿದನು+ ಉದ್ದಿದನು(ಸವರಿದನು, ಕೊಂದನು) ಮಾರ್ಬಲದ ಗರ್ವಿತರ.
ಅರ್ಥ:ತನ್ನನ್ನು ಪಾಂಡವರ ಸೇನೆ ಮುತ್ತಲು,ಶಲ್ಯನು ಸೈನಿಕರ ತಲೆಗಳನ್ನು ಕಡಿದು ಬಿಸುಟನು. ಅರಿಗೆಗಳೆಂಬ ಹಲಗೆಯಗುರಾನಿಗಲನ್ನು ಹಿಡಿದು ಆಕ್ರಮಿಸಿದ ಆ ಪಾಯದಳವನ್ನು, ಮತ್ತು ಒಟ್ಟಾಗಿ ಬಂದು ಆಕ್ರಮಿಸಿದ ಕುದುರೆಗಳ ಖುರವ/ ಗೊರಸುಗಳನ್ನೇ ಕತ್ತರಿಸಿದನು. ನಾಟಕದ ಬೆಟ್ಟಗಳ ಸಮೂಹದಂತಿರುವ ಆನೆಯ ಸೇನೆಯನ್ನು ಎತ್ತರ ಬಾವುಟದ ರಥದ ಕುದುರೆಗಳನ್ನು ರಕ್ತದ ಕಡಲಲ್ಲಿ ಅದ್ದಿದನು, ಮುಳುಗಿಸಿದನು; ಆ ಸೇನೆಯ ತಾವು ಶುರರೆಂಬ ಗರ್ವಿತರನ್ನು ಕೊಂದನು.
ಮುರಿದುದೈ ಚತುರಂಗಬಲ ನಿ
ನ್ನಿರಿತವಾವೆಡೆ ಧರ್ಮಸುತ ಕೈ
ಮರೆದಲಾ ಕಲಿಭೀಮಪಾರ್ಥರ ಬಿಂಕ ಬೀತುದಲಾ |
ಮೆರೆಯಿ ಮದವನು ಮಾವತನವದು
ಹೊರಗಿರಲಿ ಸಹದೇವ ನಕುಲರ
ನರಿಯಬಹುದಿನ್ನೆನುತ ಹೊಕ್ಕನು ಶಲ್ಯ ಪರಬಲವ || ೪೬ ||
ಪದವಿಭಾಗ-ಅರ್ಥ: ಮುರಿದುದೈ ಚತುರಂಗಬಲ ನಿನ್ನ+ ಇರಿತವು+ ಆವೆಡೆ ಧರ್ಮಸುತ ಕೈಮರೆದಲಾ ಕಲಿಭೀಮ ಪಾರ್ಥರ ಬಿಂಕ ಬೀತುದಲಾ ಮೆರೆಯಿ ಮದವನು ಮಾವತನವದು ಹೊರಗಿರಲಿ ಸಹದೇವ ನಕುಲರನು+ ಅರಿಯಬಹುದಿನ್ನು+ ಎನುತ ಹೊಕ್ಕನು ಶಲ್ಯ ಪರಬಲವ.
ಅರ್ಥ: ಪಾಂಡವರ ಚತುರಂಗಬಲ/ ಸೇನೆ ಬಳಲಿತು, ಹಿಮ್ಮೆಟ್ಟಿತು. 'ಧರ್ಮಸುತ ನಿನ್ನ ಹೊಡೆತ ಎಲ್ಲಿಯದು;ಯಾವ ಲೆಕ್ಕ? ಕೈಸೋತೆಯಲ್ಲಾ! ಕಲಿಭೀಮ ಮತ್ತು ಪಾರ್ಥರ ಹೆಮ್ಮೆ ಬೀತುಹೋಯಿತಲ್ಲಾ, ಹಳತಾಯಿತಲ್ಲಾ! ನೀವು ನಿಮ್ಮ ಮದವನ್ನು ಮೆರೆಯಿರಿ. ನನ್ನನ್ನು ಮಾವ ಎಂಬ ಪ್ರೀತಿ ಸಂಬಂಧದ ಮಾವತನವು ಅದು ಹೊರಗಿರಲಿ. ಇಲ್ಲಿ ರಣರಂಗದಲ್ಲಿ ಬೇಡ. ಸಹದೇವ ನಕುಲರನ್ನು- ಅವರ ಸಾಹಸವನ್ನು ಇನ್ನು ಅರಿಯಬಹುದು ಎಂದು ಹೇಳುತ್ತಾ ಶಲ್ಯನು ಅವರನ್ನು ಹುಡುಕುತ್ತಾ ಪರಬಲವನ್ನು ಹೊಕ್ಕನು.
ಸುರನದೀಸುತನೆಸುಗೆ ದ್ರೋಣನ
ಶರಚಮತ್ಕೃತಿ ಕರ್ಣನಂಬಿನ
ಹರಹು ಹೇರಿತು ದಳಪತಿಯ ಶರಸೋನೆ ಸಾರವಲಾ |
ದೊರೆಯ ಸುಯ್ದಾನದಲಿ ಸಾತ್ಯಕಿ
ಯಿರಲಿ ಧೃಷ್ಟದ್ಯುಮ್ನ ಭೀಮಾ
ದ್ಯರ ನಿರೀಕ್ಷಿಸ ಹೇಳೆನುತ ತಾಗಿದನು ಕಲಿಪಾರ್ಥ || ೪೭ ||
ಪದವಿಭಾಗ-ಅರ್ಥ: ಸುರನದೀಸುತನ(ಭೀಷ್ಮ)+ ಎಸುಗೆ, ದ್ರೋಣನ ಶರಚಮತ್ಕೃತಿ, ಕರ್ಣನಂಬಿನ ಹರಹು ಹೇರಿತು ದಳಪತಿಯ ಶರಸೋನೆ (ಶರಸೋನೆ- ಬಾಣಗಳ ಮಳೆ) ಸಾರವಲಾ(ಸಾರವು - ಮೂಲತತ್ವ) ದೊರೆಯ ಸುಯ್ದಾನದಲಿ ಸಾತ್ಯಕಿಯಿರಲಿ, ಧೃಷ್ಟದ್ಯುಮ್ನ ಭೀಮ+ ಆದ್ಯರ ನಿರೀಕ್ಷಿಸಹೇಳೆನುತ ತಾಗಿದನು ಕಲಿಪಾರ್ಥ.
ಅರ್ಥ:ದಳಪತಿ ಶಲ್ಯನ ಬಾಣಪ್ರಯೋಗದಲ್ಲಿ, ಗಂಗೆಯಮಗ ಭೀಷ್ಮನ ಬಾಣ ಹೊಡೆಯುವ ಕ್ರಮ, ದ್ರೋಣನ ಬಾಣಬಿಡುವ ಚಮತ್ಕಾರ,, ಕರ್ಣನ ಬಾಣವಿದ್ಯೆಯ ವಿಸ್ತಾರ ತುಂಬಿತ್ತು. ಃಇಗೆ ಶಲ್ಯನು ಬಾಣಗಳ ಮಳೆಯ ಸಾರವಾಗಿತ್ತಲ್ಲವೇ! ಹಾಗಿರುವಾಗ ಪಾರ್ಥನು ದೊರೆ ಧರ್ಮಜನ ರಕ್ಷಣೆಯಕಾರ್ಯದಲ್ಲಿ ಸಾತ್ಯಕಿಯಿರಲಿ ಎಂದು ನೇಮಿಸಿದನು., ಧೃಷ್ಟದ್ಯುಮ್ನ ಮತ್ತು ಭೀಮ ಮೊದಲಾದ ಮುಖ್ಯರನ್ನು ಯುದ್ಧದ ಸ್ಥಿತಿಯನ್ನು ನಿರೀಕ್ಷಿಸಿ ಅಗತ್ಯ ಸಹಾಯ ಮಾಡಿ ತನಗೆ ಹೇಳಬೇಕು, ಎನ್ನುತ್ತಾ ಕಲಿಪಾರ್ಥನು ಶಲ್ಯನನ್ನು ಎದುರಿಸಿದನು.
ಅರಸ ಕೇಳೈ ಶಲ್ಯ ಪಾರ್ಥರ
ಶರ ವಿಧಾನವನವರ ಬಾಣೋ
ತ್ಕರವನವರಂಬುಗಳ ಬಹಳಾಡಂಬರಧ್ವನಿಯ
ನಿರುಪಮಾಸ್ತ್ರಪ್ರೌಢಿಯನು ದು
ರ್ಧರ ಶಿಳೀಮುಖ ಸರ್ಗಬಂಧ
ಸ್ಫುರಣವನು ಹಿಂದೀಸು ದಿನ ಕಾಣೆನು ರಣಾಗ್ರದಲಿ ೪೮
ಪದವಿಭಾಗ-ಅರ್ಥ: ಅರಸ ಕೇಳೈ ಶಲ್ಯ ಪಾರ್ಥರ ಶರ ವಿಧಾನವನು+ ಅವರ ಬಾಣೋತ್ಕರವನು+ ಅವರ+ ಅಂಬುಗಳ ಬಹಳ+ ಆಡಂಬರ ಧ್ವನಿಯ ನಿರುಪಮಾಸ್ತ್ರ ಪ್ರೌಢಿಯನು ದುರ್ಧರ(ಎದುರಿಸಲಾಗದ,) ಶಿಳೀಮುಖ(ದುಂಬಿಯ ಧಾಳಿಯಹಾಗಿರುವ ಬಾಣಗಳು) ಸರ್ಗಬಂಧ ಸ್ಫುರಣವನು ಹಿಂದೆ+ ಈಸು ದಿನ ಕಾಣೆನು ರಣಾಗ್ರದಲಿ.
ಅರ್ಥ: ಸಂಜಯನು, ಧೃತರಾಷ್ಟ್ರ ರಾಜನೇ ಕೇಳು, ಶಲ್ಯ ಮತ್ತು ಪಾರ್ಥರ ಬಾಣಬಿಡುವ ವಿಧಾನವನ್ನು, ಅವರ ಬಾಣದ ಹೆಚ್ಚಳ ವಿದ್ಯೆಯನ್ನು, ಅವರ ಅಂಬುಗಳ ಬಹಳ ಆಡಂಬರ- ಅದ್ಬುತ ಧ್ವನಿಯನ್ನು, ನಿರುಪಮವಾದ - ಸರಿಸಾಟಿಯಿಲ್ಲದ ಅಸ್ತ್ರ ಪ್ರೌಢಿಮೆಯನ್ನು, ದುರ್ಧರ, ಶಿಳೀಮುಖ, ಸರ್ಗಬಂಧ, ಈ ಬಗೆಯ ಯೋಗ್ಯತೆಯನ್ನು ಹಿಂದೆ ಇಷ್ಟು ದಿನ ರಣರಂಗದಲ್ಲಿ ಕಾಣೆನು- ಕಂಡಿಲ್ಲ ಎಂದನು.
ಎಸುವನರ್ಜುನನರ್ಜುನಾಸ್ತ್ರವ
ಕುಸುರಿದರಿವನು ಶಲ್ಯ ಶಲ್ಯನ
ವಿಶಿಖವನು ಮುರಿವನು ಧನಂಜಯನಾ ಧನಂಜಯನ |
ಮಸಕವನು ಮಾದ್ರೇಶನುರೆ ಝೊಂ
ಪಿಸುವನಾ ಮಾದ್ರೇಶನಂಬಿನ
ಹಸರವನು ಹರೆಗಡಿವನರ್ಜುನನಗಣಿತಾಸ್ತ್ರದಲಿ || ೪೯ ||
ಪದವಿಭಾಗ-ಅರ್ಥ: ಎಸುವ(ಬಾಣ ಬಿಡುವ)+ ಅನರ್ಜುನನ+ ಅರ್ಜುನಾಸ್ತ್ರವ ಕುಸುರಿದು(ನಾಜೂಕಾದ ಕೆಲಸ)+ ಅರಿವನು ಶಲ್ಯ, ಶಲ್ಯನ ವಿಶಿಖವನು ಮುರಿವನು ಧನಂಜಯನು+ ಆ ಧನಂಜಯನ+ ಮಸಕವನು ಮಾದ್ರೇಶನು+ ಉರೆ ಝೊಂಪಿಸುವನು+ ಆ ಮಾದ್ರೇಶನಂಬಿನ+ ಹಸರವನು ಹರೆಗಡಿವನು+ ಅರ್ಜುನನು+ ಅಗಣಿತಾಸ್ತ್ರದಲಿ.
ಅರ್ಥ:ಅರ್ಜುನನು ಬಿದುವ ಬಾಣ, ಅರ್ಜುನಾಸ್ತ್ರವನ್ನು ಶಲ್ಯನು ಜಾಣತನದಿಂದ ಕತ್ತರಿಸುವನು. ಶಲ್ಯನ ಬಾಣವನ್ನು ಧನಂಜಯನು ಮುರಿಯುವನು. ಆ ಧನಂಜಯನ ಚಮತ್ಕಾರದ ಹೊಡೆತದಿಂದ ಮಾದ್ರೇಶ ಶಲ್ಯನು ಬಹಳ ಝೊಂಪಿಸುವನು- ಬಳಲುವನು. ಆ ಮಾದ್ರೇಶನ ಅಂಬಿನ ವಿಸ್ತಾರವನ್ನು ಅರ್ಜುನನು ಅಗಣಿತ ಅಸ್ತ್ರದಿಂದ ಹರಿದು ಕಡಿಯುವನು., ಎಂದು ಸಂಜಯನು ಅವರಿಬ್ಬರ ಯುದ್ಧವನ್ನು ಬಣ್ಣಿಸಿದನು.
ಕಂಡನೀ ಶಲ್ಯಾರ್ಜುನರ ಕೋ
ದಂಡಸಾರಶ್ರುತಿರಹಸ್ಯದ
ದಂಡಿಯನು ಕುರುರಾಯ ಕೈವೀಸಿದನು ತನ್ನವರ |
ಗಂಡುಗಲಿಗಳೊ ವೀರಸಿರಿಯುಳಿ
ಮಿಂಡರೋ ತನಿನಗೆಯ ಬಿರುದಿನ
ಭಂಡರೋ ನೀವಾರೆನುತ ಮೂದಲಿಸಿದನು ಭಟರ || ೫೦ ||
ಪದವಿಭಾಗ-ಅರ್ಥ: ಕಂಡನು+ ಈ ಶಲ್ಯ+ ಅರ್ಜುನರ ಕೋದಂಡ(ಬಿಲ್ಲು)+ ಸಾರಶ್ರುತಿ+ ರಹಸ್ಯದ ದಂಡಿಯನು(ಯುದ್ಧವನ್ನು) ಕುರುರಾಯ, ಕೈವೀಸಿದನು(ಯುದ್ಧಕ್ಕೆ ತನ್ನ ಸೈನಿಕರಿಗೆ ಸನ್ನೆಮಾಡಿ ಕೈಬೀಸಿದನು) ತನ್ನವರ ಗಂಡುಗಲಿಗಳೊ, ವೀರಸಿರಿಯ+ ಉಳಿಮಿಂಡರೋ, ತನಿನಗೆಯ ಬಿರುದಿನ-ಭಂಡರೋ, ನೀವಾರು+ ಎನುತ ಮೂದಲಿಸಿದನು ಭಟರ.
ಅರ್ಥ:ಕುರುರಾಯ ಕೌರವನು ಈ ಶಲ್ಯ ಮತ್ತು ಅರ್ಜುನರ ಬಿಲ್ಲವಿದ್ಯೆಯ ಸಾರಶ್ರುತಿ ರಹಸ್ಯದ ಯುದ್ಧದ ಚಮತ್ಕಾರವನ್ನು ಕಂಡನು, ಅವನು ಯುದ್ಧಕ್ಕೆ ಉತ್ತೇಜಿಸಿ ತನ್ನ ಸೈನಿಕರಿಗೆ ಸನ್ನೆಮಾಡಿ ಕೈಬೀಸಿದನು; ತನ್ನ ಭಟರನ್ನು ನೀವು 'ಗಂಡುಗಲಿಗಳೊ, ವೀರಸಿರಿಯ ಉಳಿಮಿಂಡರೋ- ವೀರಸಿರಿಯನ್ನು ಕಳೆದುಕೊಂಢ ಹೇಡಿಗಳೋ, ತನಿನಗೆಯ ಬಿರುದಿನ-ಭಂಡರೋ, ನೆಗೆಗೆ ಈಡಾಗುವ ಕೇವಲ ಬಿರುದುಹೊತ್ತವರೋ, ನೀವಾರು? ಎಂದು ಮೂದಲಿಸಿದನು.
ದಳವ ಕರೆ ದಳಪತಿಗೆ ಕಾಳೆಗ
ಬಲುಹು ಪಾರ್ಥನ ಕೂಡೆ ಗುರುಸುತ
ನಳವಿಗೊಡಲಿ ಸುಶರ್ಮ ತಾಗಲಿ ಭೋಜ ಗೌತಮರು |
ನಿಲಲಿ ಸುಭಟರು ಜೋಡಿಯಲಿ ಪರ
ಬಲಕೆ ಜಾರುವ ಜಯಸಿರಿಯ ಮುಂ
ದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು ಕುರುರಾಯ || ೫೧ ||
ಪದವಿಭಾಗ-ಅರ್ಥ:ದಳವ ಕರೆ ದಳಪತಿಗೆ ಕಾಳೆಗ ಬಲುಹು, ಪಾರ್ಥನ ಕೂಡೆ ಗುರುಸುತನು+ ಅಳವಿಗೊಡಲಿ (ಆಳವು- ಶಕ್ತಿ ಸಾಮರ್ಥ್ಯ), ಸುಶರ್ಮತಾಗಲಿ, ಭೋಜ ಗೌತಮರು ನಿಲಲಿ ಸುಭಟರು ಜೋಡಿಯಲಿ, ಪರಬಲಕೆ(ಶತ್ರುಸೇನೆ) ಜಾರುವ ಜಯಸಿರಿಯ ಮುಂದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು(ಹೆಕ್ಕಳಿಸು= ಅಧಿಕವಾಗು, ಹೆಚ್ಚಾಗು, ಹಿಗ್ಗು, ಸಂತೋಷಗೊಳ್ಳು, ಗರ್ವಿಸು, ಅಹಂಕಾರಪಡು) ಕುರುರಾಯ.
ಅರ್ಥ:ಕೌರವನು ಶಲ್ಯನ ಪೌರುಷವನ್ನು ನೋಡಿ ಹಿಗ್ಗಿನಿಂದ, 'ಉಳಿದ ದಳವನ್ನು ಕರೆಯಿರಿ, ದಳಪತಿಶಲ್ಯನ ಕಾಳೆಗಕ್ಕೆ ಬಲುಹುಕೊಡಿ;, ಪಾರ್ಥನ ಕೂಡೆ ಗುರುಸುತ ಅಶ್ವತ್ಥಾಮನು ತನ್ನ ಶಕ್ತಿ ತೋರಲಿ. ಸುಶರ್ಮನು ಯುದ್ಧಕ್ಕೆ ತೊಡಗಲಿ; ಭೋಜ/ಕೃತವರ್ಮ, ಗೌತಮ- ಕೃಪರು ಯುದ್ಧಕ್ಕೆ ನಿಲ್ಲಲಿ; ಸುಭಟರು ಜೋತೆಗೂಡಲಿ; ಶತ್ರುಸೇನೆಗೆ ಜಾರಿಹೋಗುವ ಜಯಸಿರಿಯ- ಜಯಲಕ್ಷ್ಮಿಯ ಮುಂದಲೆಯನ್ನು ಹಿಡಿ! ಹಿಡಿ!' ಎನ್ನುತ್ತಾ ಗರ್ವಿಸಿದನು.
ನೂಕಿದರು ಶಲ್ಯಂಗೆ ಪಡಿಬಲ
ದಾಕೆವಾಳರು ಗುರುಸುತಾದ್ಯರು
ತೋಕಿದರು ಶರಜಾಳವರ್ಜುನನಂಬಿನಂಬುಧಿಯ |
ಬೀಕಲಿನ ಭಟರುಬ್ಬಿದರೆ ಸು
ವ್ಯಾಕುಲರು ತುಬ್ಬಿದರೆ ತಪ್ಪೇ
ನೀ ಕಳಂಬವ ಕಾಯ್ದು ಕೊಳ್ಳೆನುತೆಚ್ಚನಾ ಪಾರ್ಥ || ೫೨ ||
ಪದವಿಭಾಗ-ಅರ್ಥ: ನೂಕಿದರು ಶಲ್ಯಂಗೆ ಪಡಿಬಲದ+ ಆಕೆವಾಳರು(ವೀರ, ಪರಾಕ್ರಮಿ) ಗುರುಸುತ+ ಆದ್ಯರು ತೋಕಿದರು((ಬಾಣ ಮೊ.ವನ್ನು ಎಸೆ, ಪ್ರಯೋಗಿಸು ೨ ಸುರಿಸು) ಶರಜಾಳವು+ ಅರ್ಜುನನ+ ಅಂಬಿನ+ ಅಂಬುಧಿಯ ಬೀಕಲಿನ(ಬೀಕಲು= ವ್ಯರ್ಥವಾದ, ಅಪ್ರಯೋಜಕವಾದ) ಭಟರು+ ಉಬ್ಬಿದರೆ ಸುವ್ಯಾಕುಲರು ತುಬ್ಬಿದರೆ( ಪತ್ತೆ ಮಾಡು, ಶೋಧಿಸು ೨ ಪ್ರಕಟಿಸು, ತಿಳಿಸು, ಕಾಣು) ತಪ್ಪೇನು+ ಈ ಕಳಂಬವ((<ಸಂ. ಕಲಂಬ) ಬಾಣ, ಅಂಬು) ಕಾಯ್ದು ಕೊಳ್ಳೆನುತ+ ಎಚ್ಚನು(ಹೊಡೆದನು)+ ಆ ಪಾರ್ಥ
ಅರ್ಥ:ಶಲ್ಯನಿಗೆ ಬೆಂಬಲದ ಸೇನೆಯನ್ನು ಕಳಿಸಿದರು. ಪರಾಕ್ರಮಿಗಳಾದ ಗುರುಸುತ- ಆಶ್ವತ್ಥಾಮ ಮೊದಲಾದವರು ಬಾಣಗಳನ್ನು ಪ್ರಯೋಗಿಸಿದರು. ಬಾಣಗಳ- ಶರಜಾಲವು ಅರ್ಜುನನ ಅಂಬಿನ ಸಮುದ್ರವನ್ನು ವ್ಯರ್ಥಮಾಡಿ ಬತ್ತಿಸಿತು., ಅದರಿಂದ ಕೌರವನ ಭಟರು ಉಬ್ಬಿದರೆ ಮತ್ತು ಶತ್ರುಗಳು ಸುವ್ಯಾಕುಲರಾದರೆ, ದುಃಖಿಸಿದರೆ ತಪ್ಪೇನು?ಆಗ ಈ ಬಾಣಗಳಿಂದ ನಿಮ್ಮನ್ನು ಕಾಯ್ದುಕೊಳ್ಳಿ ಎನ್ನುತ್ತಾ ಆ ಪಾರ್ಥನು ಪುನಃ ಭಾನಗಲನ್ನು ಬಿಟ್ಟನು.
ಮುರಿಯೆಸುತ ಮಾದ್ರೇಶ್ವರನ ಹೊ
ಕ್ಕುರುಬಿದನು ಗುರುಸುತನ ಸೂತನ
ನಿರಿದು ಸಮಸಪ್ತಕರ ಸೋಲಿಸಿ ಕೃಪನನಡಹಾಯ್ಸಿ |
ತರುಬಿದನು ಕುರುಪತಿಯನರ್ಜುನ
ನೊರಲಿಸಿದನೀ ಸೈನ್ಯ ಸುಭಟರ
ನೆರವಣಿಗೆ ನಿಪ್ಪಸರದಲಿ ಮುಸುಕಿತು ಧನಂಜಯನ || ೫೩ ||
ಪದವಿಭಾಗ-ಅರ್ಥ: ಮುರಿ+ ಯೆ+ ಎಸುತ(ಹೊಡೆತ) ಮಾದ್ರೇಶ್ವರನ ಹೊಕ್ಕು+ ಉರುಬಿದನು(ಅತಿಶಯವಾದ ವೇಗ; ಮೇಲೆ ಬೀಳು), ಗುರುಸುತನ ಸೂತನನು+ ಇರಿದು ಸಮಸಪ್ತಕರ ಸೋಲಿಸಿ, ಕೃಪನನು+ ಅಡಹಾಯ್ಸಿ ತರುಬಿದನು ಕುರುಪತಿಯನು+ ಅರ್ಜುನನು+ ಒರಲಿಸಿದನು+ ಈ ಸೈನ್ಯ ಸುಭಟರ ನೆರವಣಿಗೆ ನಿಪ್ಪಸರದಲಿ(ಅತಿಶಯ, ಹೆಚ್ಚಳ, ವೇಗ, ಶೀಘ್ರತೆ, ರಭಸ) ಮುಸುಕಿತು ಧನಂಜಯನ.
ಅರ್ಥ:ಆರ್ಜುನನು ಶಲ್ಯನ ಸೇನೆಯನ್ನು ಹೊಕ್ಕು ಈ ಹೊಡೆತವನ್ನು ಮುರಿ ಎಂದು, ಮಾದ್ರೇಶ್ವರ ಶಲ್ಯನನ್ನು ಹೊಕ್ಕು ಆಕ್ರಮಿಸಿದನು. ಗುರುಸುತ ಅಶ್ವತ್ಥಾಮನ ಸಾರಥಿಯನ್ನು ಇರಿದು- ನೋಯಿಸಿ, ಸಮಸಪ್ತಕರನ್ನು ಸೋಲಿಸಿ, ಕೃಪನನ್ನು ಅಡ್ಡಹಾಕಿತರುಬಿ ಹೊಡೆದನು. ಹಾಗೆಯೇ ಕುರುಪತಿ ಕೌರವನನ್ನು ಅರ್ಜುನನು ನೋಯಿಸಿ ಒರಲಿಸಿದನು/ ನರಳುವಂತೆ ಮಾಡಿದನು. ಆಗ ಕೌರವನ ಈ ಸೈನ್ಯ ಸುಭಟರ ನೆರವಿನಿಂದ ರಭಸದಿಂದ ಧನಂಜಯನನ್ನು ಮುತ್ತಿತು.

ಧರ್ಮಜನ ಮೇಲೆ ಶಲ್ಯನ ಆಕ್ರಮಣ

ಸಂಪಾದಿಸಿ
ಅರಸ ಕೇಳಿತ್ತಲು ಯುಧಿಷ್ಠಿರ
ನರಪತಿಯನರಸಿದನು ಮಾದ್ರೇ
ಶ್ವರನು ರಾವುಠಿಯೆಸುಗೆಯಲಿ ಮುಸುಕಿದನು ಧರ್ಮಜನ |
ಧರೆಗೆ ಕಾಮಿಸಿದೈ ಸುಯೋಧನ
ನರಸಿಯಲ್ಲಾ ಧಾತ್ರಿ ನಿಮ್ಮೆ
ಲ್ಲರಿಗೆ ಹುದುನೆಲನಲ್ಲವೆಂದೆನುತೆಚ್ಚನಾ ಶಲ್ಯ || ೫೪ ||
ಪದವಿಭಾಗ-ಅರ್ಥ: ಅರಸ ಕೇಳು+ ಇತ್ತಲು ಯುಧಿಷ್ಠಿರ ನರಪತಿಯನು+ ಅರಸಿದನು ಮಾದ್ರೇಶ್ವರನು, ರಾವುಠಿ (ರಾವು- ಭಯಂಕರ) ಯೆಸುಗೆಯಲಿ(ಹೊಡೆತದಲ್ಲಿ) ಮುಸುಕಿದನು ಧರ್ಮಜನ, ಧರೆಗೆ ಕಾಮಿಸಿದೈ(ಭೂಮಿಗೆ ಆಸೆಪಟ್ಟೆಯಾ) ಸುಯೋಧನನ+ ಅರಸಿಯಲ್ಲಾ ಧಾತ್ರಿ(ಭೂಮಿ) ನಿಮ್ಮೆಲ್ಲರಿಗೆ ಹುದುನೆಲನು(ಹುದು= ಪಾಲುಗಾರಿಕೆ)+ ಅಲ್ಲವೆಂದು+ ಎನುತೆ+ ಎಚ್ಚನು(ಹೊಡೆದನು) ಆ ಶಲ್ಯ.
ಅರ್ಥ: ಅರಸ ಧೃತರಾಷ್ಟ್ರನೇ ಕೇಳು, ಈ ಕಡೆ ಮಾದ್ರೇಶ್ವರ ಶಲ್ಯನು ಯುಧಿಷ್ಠಿರ ನರಪತಿಯನ್ನು ಕುಡುಕಿದನು. ಅವನು ಧರ್ಮಜನನ್ನು ಭಯಂಕರ ಬಾಣಗಳ ಹೊಡೆತಗಳಿಂದ ಅವನನ್ನು ಮುಸುಕಿದನು/ ಮುಚ್ಚಿದನು. ಅವನು ಧರ್ಮಜನಿಗೆ ಭೂಮಿಗೆ ಆಸೆಪಟ್ಟೆಯಾ? ಧರಣಿಪತಿಯಾದ ಸುಯೋಧನನ ಅರಸಿಯಲ್ಲವೇ ಭೂಮಿ? ನಿಮ್ಮೆಲ್ಲರಿಗೆ ನೆಲದ ಪಾಲುದಾರಿಕೆ ಸರಿಅಲ್ಲವೆಂದು ಹೇಳುತ್ತಾ ಆ ಶಲ್ಯನು ಧರ್ಮಜನನ್ನು ಹೊಡೆದನು.
ಮಾವ ಮಾಯಾಡಂಬರದ ದು
ರ್ಭಾವವೇತಕೆ ಕೌರವನೊಳೆಮ
ಗೀ ವಸುಧೆ ಹುದುವಲ್ಲ ನೆಲನೇಕಾಧಿಪತ್ಯವಲೆ |
ನೀವು ಕೌರವ ಸರ್ವದಳದ ದು
ರಾವಹರಲೇ ಬಾಣಸೃಷ್ಟಿ ಕೃ
ತಾವಧಾನವ ತೋರೆನುತ ನೃಪನೆಚ್ಚು ಬೊಬ್ಬಿರಿದ || ೫೫ ||
ಪದವಿಭಾಗ-ಅರ್ಥ: ಮಾವ ಮಾಯಾ+ ಆಡಂಬರದ ದುರ್ಭಾವವು + ಏತಕೆ ಕೌರವನೊಳು+ ಎಮಗೆ+ ಈ ವಸುಧೆ ಹುದುವಲ್ಲ, ನೆಲನ+ ಏಕಾಧಿಪತ್ಯವಲೆ, ನೀವು ಕೌರವ ಸರ್ವದಳದ ದುರಾ+ ಆವಹರಲೇ(ಅನ್ಯಾಯದ ಕೇಡಿನ ಯುದ್ಧ) ಬಾಣಸೃಷ್ಟಿ ಕೃತ+ ಅವಧಾನವ ತೋರು+ ಎನುತ ನೃಪನು+ ಎಚ್ಚು ಬೊಬ್ಬಿರಿದ.
ಅರ್ಥ:ಅದಕ್ಕೆ ಧರ್ಮಜನು ಮಾವನೇ ನಿಮ್ಮ ಮಾಯಾ/ ಸುಳ್ಳಿನ ಆಡಂಬರದ ಈ ಕೆಟ್ಟ ಭಾವನೆ ಏತಕ್ಕೆ? ಕೌರವನಲ್ಲಿ ನಮಗೆ ಈ ವಸುಧೆ/ಭೂಮಿಯ ಬೇಕಾದುದು ಭಾಗವಲ್ಲ; ಈ ನೆಲದ ಏಕಾಧಿಪತ್ಯವಲೆ! ಪೂರ್ಣ ರಾಜ್ಯವೇ ಬೇಕು. ನೀವು ಕೌರವ ಸರ್ವದಳದ ಅನ್ಯಾಯದ ಕೇಡಿನ ಯುದ್ಧಮಾಡುವಿರಲ್ಲವೇ? ಈಗ ಬಾಣಸೃಷ್ಟಿಯ ಕಾರ್ಯದ ಎಚ್ಚರಿಕೆಯ ಶೂರತನವನ್ನು ತೋರು ಎನ್ನುತ್ತಾ ಧರ್ಮಜನೃಪನು ಶಲ್ಯನನ್ನು ಬಾಣಗಳಿಂದ ಹೊಡೆದು ಬೊಬ್ಬಿರಿದನು/ ಆರ್ಭಟಿಸಿದನು.
ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ |
ಹೊರಗು ಗಡ ಕುರುರಾಯನೀಗಳೊ
ಮರುದಿವಸವೊ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ || ೫೬ ||
ಪದವಿಭಾಗ-ಅರ್ಥ: ಬರಿಯ ಬೊಬ್ಬಾಟವೊ (ಆರ್ಭಟವೋ) ಶರಾವಳಿಯ+ ಇರಿಗೆಲಸವು+ ಏನುಂಟೊ ಧರಣಿಯಲಿ+ ಎರಕ(ಪ್ರೀತಿ, ಅನುರಾಗ) ನಿಮ್ಮೈವರಿಗೆ ಗಡ, ದ್ರೌಪದಿಗೆ ಸಮವಾಗಿ ಹೊರಗು ಗಡ, ಕುರುರಾಯನು+ ಈಗಳೊ ಮರುದಿವಸವೊ ಸಿರಿಮುಡಿಗೆ ನೀರ+ ಎರೆವ ಪಟ್ಟವದೆಉ+ ಎಂದು ನಿಮಗೆನುತ+ ಎಚ್ಚನು+ ಆ ಶಲ್ಯ.
ಅರ್ಥ:ಶಲ್ಯನು ಧರ್ಮಜನನ್ನು ಕುರಿತು,'ನಿನ್ನದು ಬರಿಯ ಬೊಬ್ಬಾಟವೊ ಆಥವಾ ಬಾಣಗಳ ಸಮೂಹಗಳನ್ನು ಪ್ರಯೋಗಿಸಿ ಇರಿಯುವ ಕೆಲಸವೋ? ಭೂಮಿಯಲ್ಲಿ ನಿಮ್ಮೈವರಿಗೆ ಅನುರಾಗ, ಆಸೆ ಏನುಂಟೊ ಗಡ! ದ್ರೌಪದಿಗೆ ಸರಿಸಮವಾಗಿ ಭೂದೇವಿಯನ್ನು ಹೊರಗು(ಭೂಭಾರವನ್ನು ಹೊರುವುದು, ವರಿಸುವುದು) ಗಡ! ಅದರ ಆಸೆ ಬೇಡ, ಕುರುರಾಯನು ಈಗಳೊ ಮರುದಿವಸವೊ ಂಊದೇವಿಯ ಸಿರಿಮುಡಿಗೆ ಪಟ್ಟಾಭಿಷೇಕದಲ್ಲಿ ನೀರನ್ನು ಎರೆಯುವನು; ನಿಮಗೆ ಪಟ್ಟವು ಅದು ಎಂದು ಸಾಧ್ಯ ಎನ್ನುತ್ತಾ ಆ ಶಲ್ಯನು ಬಾಣದಿಂದ ಧರ್ಮಜನಿಗೆ ಹೊಡೆದನು.
ಕಡಿದು ಬಿಸುಟನು ಶಲ್ಯವಸ್ತ್ರವ
ನೆಡೆಗೊಡದೆ ಕೂರಂಬುಗಳನಳ
ವಡಿಸಿದನು ನೃಪವರನ ಶರಸಂತತಿಯ ಸಂತೈಸಿ |
ಒಡನೊಡನೆ ಕೈಮಾಡಿದನು ಕೈ
ಗಡಿಯನಂಬಿನ ಧಾರೆ ದಳ್ಳಿಸಿ
ಕಿಡಿಗೆದರಿದವು ನೃಪನ ರಥ ಸಾರಥಿ ಹಯಾಳಿಯಲಿ || ೫೭ ||
ಪದವಿಭಾಗ-ಅರ್ಥ: ಕಡಿದು ಬಿಸುಟನು ಶಲ್ಯವ+ ಅಸ್ತ್ರವನು+ ಎಡೆಗೊಡದೆ ಕೂರಂಬುಗಳನು(ಚೂಪಾದ ಬಾಣಗಳು)+ ಅಳವಡಿಸಿದನು ನೃಪವರನ ಶರಸಂತತಿಯ ಸಂತೈಸಿ(ನಿವಾರಿಸಿ), ಒಡನೊಡನೆ ಕೈಮಾಡಿದನು(ಬಾಣಬಿಟ್ಟನು) ಕೈಗಡಿಯನು(ಬಿಡುವುಕೊಡನು)+ ಅಂಬಿನ ಧಾರೆ ದಳ್ಳಿಸಿ(ದಳ್ಳಿಸು- ದಳ್ಳಿಸಿದ ಬೆಂಕಿ, ಹೆಚ್ಚಾಗು) ಕಿಡಿಗೆದರಿದವು ನೃಪನ ರಥ ಸಾರಥಿ ಹಯ+ ಆಳಿಯಲಿ(ಕುದುರೆಗಳಲ್ಲಿ).
ಅರ್ಥ: ಧರ್ಮಜನು ಶಲ್ಯನ ಅಸ್ತ್ರವನ್ನು ಕಡಿದು ಬಿಸುಟನು. ಬಿಡುವಿಲ್ಲದಂತೆ/ ಎಡೆಗೊಡದೆ ಯುಧಿಷ್ಠಿರ ನೃಪನ ಬಾಣಗಳ ಸಮೂಹವನ್ನು ನಿವಾರಿಸಿ, ಶಲ್ಯನು ಬಿಲ್ಲಿಗೆ ಕೂರಂಬುಗಳನ್ನು ಅಳವಡಿಸಿ ಬಿಟ್ಟನು. ಒಡನೊಡನೆ- ಮೇಲಿಂದ ಮೇಲೆ ಕೈಮಾಡಿದನು ಶಲ್ಯನು ಕೈಗಡಿಯದೆ, ಬಿಡುವುಕೊಡದೆ ಅಂಬಿನ ಧಾರೆಯನ್ನು ಬಿಟ್ಟಾಗ ಅವು ಧರ್ಮಜನೃಪನ ರಥ ಸಾರಥಿ ಕುದುರೆಗಳಲ್ಲಿ ತಾಗಿ ದಳ್ಳಿಸಿ ಕಿಡಿಗಳನ್ನು ಸುರಿಸಿದವು.
ಗೆಲಿದನೋ ಮಾದ್ರೇಶನವನಿಪ
ತಿಲಕನನು ಫಡ ಧರ್ಮಸುತನೀ
ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ |
ಅಳುಕಿದನು ನೃಪನೀ ಬಲಾಧಿಪ
ನುಲುಕನಂಜಿದನೆಂಬ ಲಗ್ಗೆಯ
ಲಳಿ ಮಸಗಿ ಮೈದೋರಿತಾಚೆಯ ಸೇನೆ ಸಂದಣಿಸಿ || ೫೮ ||
ಪದವಿಭಾಗ-ಅರ್ಥ: ಗೆಲಿದನೋ ಮಾದ್ರೇಶನು+ ಅವನಿಪ ತಿಲಕನನು ಫಡ! ಧರ್ಮಸುತನು+ ಈ ದಳಪತಿಯನು+ ಅದ್ದಿದನು ಪರಿಭವಮಯ(ಸೋಲಿನ) ಸಮುದ್ರದಲಿ, ಅಳುಕಿದನು ನೃಪನು+ ಈ ಬಲಾಧಿಪನು+ ಉಲುಕನು+ ಅಂಜಿದನೆಂಬ ಲಗ್ಗೆಯ ಲಳಿ (ಅಲ್ಲೋಲ ಕಲ್ಲೋಲ, ಕ್ಷೋಭೆ ೩ ಆಶ್ಚರ್ಯ, ಬೆರಗು) ಮಸಗಿ(ತುಂಬಿ) ಮೈದೋರಿತು(ಕಾಣಿಸಿತು)+ ಆಚೆಯ(ಧರ್ಮಜನ ಸೇನೆ) ಸೇನೆ ಸಂದಣಿಸಿ
ಅರ್ಥ: ಮಾದ್ರೇಶ ಶಲ್ಯನು ಗೆದ್ದನೋ, ಅವನಿಪ ತಿಲಕಧರ್ಮಜನನ್ನು ಫಡ! ಧರ್ಮಸುತನು ಈ ದಳಪತಿಯನು ಸೋಲಿನ ಸಮುದ್ರದಲ್ಲಿ ಅದ್ದಿದನೋ! 'ಧರ್ಮಜ ನೃಪನು ಬಳಲಿದನು, ಈ ಬಲಾಧಿಪನು' ಹಿಂದಕ್ಕೆ ಸರಿ; ಪಕ್ಕಕ್ಕೆ ಸರಿ;' ಅಂಜಿದನೆಂಬ ಲಗ್ಗೆಯ/ಗದ್ದಲದ ಅಲ್ಲೋಲ ಕಲ್ಲೋಲ, ಕ್ಷೋಭೆ ಧರ್ಮಜನ ಸೇನೆಯಲ್ಲಿ ಸಂದಣಿಸಿ ತುಂಬಿ ಮೈದೋರಿತು.
ನೆಲ ಬಿರಿಯಲಳ್ಳಿರಿವ ವಾದ್ಯದ
ಕಳಕಳದ ಕೊಲ್ಲಣಿಗೆಯಲಿ ಮುಂ
ಕೊಳಿಸಿದರು ಸಹದೇವ ಸಾತ್ಯಕಿ ನಕುಲ ಸೃಂಜಯರು |
ದಳದ ಪದಹತಿಧೂಳಿಯಲಿ ಕ
ತ್ತಲಿಸೆ ದೆಸೆ ಪಾಂಚಾಲಬಲವಿ
ಟ್ಟಳಿಸಿ ನೂಕಿತು ಧರ್ಮಪುತ್ರನ ರಣದ ಚೂಣಿಯಲಿ || ೫೯ ||
ಪದವಿಭಾಗ-ಅರ್ಥ: ನೆಲ ಬಿರಿಯಲು+ ಇಳ್ಳಿರಿವ(ದೊಡ್ಡಸದ್ದು ಮಾಡುವ) ವಾದ್ಯದ ಕಳಕಳದ ಕೊಲ್ಲಣಿಗೆಯಲಿ(ಹೊಡೆದಾಟ ) ಮುಂಕೊಳಿಸಿದರು ಸಹದೇವ ಸಾತ್ಯಕಿ ನಕುಲ ಸೃಂಜಯರು, ದಳದ ಪದಹತಿ(ನೆಡೆಯುವಾಗ ಪಾದಗಳ ಗಟ್ಟನೆ) ಧೂಳಿಯಲಿ ಕತ್ತಲಿಸೆ ದೆಸೆ(ದಿಕ್ಕು) ಪಾಂಚಾಲಬಲವು+ ಇಟ್ಟಳಿಸಿ (ಒಟ್ಟುಗೂಡಿಕೊಂಡು) ನೂಕಿತು(ಎದುರಿನಲ್ಲಿ ನುಗ್ಗಿದರು, ನಿಂತರು) ಧರ್ಮಪುತ್ರನ ರಣದ ಚೂಣಿಯಲಿ(ಮುಂದೆ).
ಅರ್ಥ:ಯುದ್ಧದಲ್ಲಿ ಶಲ್ಯನ ಕೈಮೇಲಾಗಲು, ನೆಲ ಬಿರಿಯುವಂತೆ ಅಬ್ಬರಿಸುವ ವಾದ್ಯದ ಕಳಕಳದ ಸದ್ದು ಮತ್ತು ಹೋರಾಟದಲ್ಲಿ ಸಹದೇವ ಸಾತ್ಯಕಿ ನಕುಲ ಸೃಂಜಯರು ಮುಂದಕ್ಕೆ ನುಗ್ಗಿದರು, ಸೇನೆಯಭಟರ ಪದಹತಿಯಿಂದ ಎದ್ದ ಧೂಳಿನಲ್ಲಿ ದಿಕ್ಕುಗಳು ಕತ್ತಲಿಸನಂತೆ ಭಾಸವಾಯಿತು. ಪಾಂಚಾಲರ ಸೈನ್ಯವು ಒಟ್ಟುಗೂಡಿಕೊಂಡು ಧರ್ಮಪುತ್ರನನ್ನು ಸರಿಸಿ ರಣರಂಗದದ ಎದುರಿನಲ್ಲಿ ನಿಂತರು.
ಸರ್ಬಲಗ್ಗೆಯಲರರೆ ಪಾಂಡವ
ಸರ್ಬದಳ ದಳಪತಿಯ ಝೊಂಪಿಸ
ಲೊಬ್ಬನೊದಗಿದಡೇನಹುದು ಕವಿ ನೂಕು ನೂಕೆನುತ |
ಬೊಬ್ಬಿಡಲು ಕುರುರಾಯ ನೀ ಬಲ
ದಬ್ಬರಣೆ ವಾರಿಜಭವಾಂಡವ
ಗಬ್ಬರಿಸೆ ಘಾಡಿಸಿತು ಶಲ್ಯನ ರಥದ ಬಳಸಿನಲಿ || ೬೦ ||
ಪದವಿಭಾಗ-ಅರ್ಥ: ಸರ್ಬಲಗ್ಗೆಯಲಿ+ ಅರರೆ ಪಾಂಡವ ಸರ್ಬದಳ(ಸರ್ವ- ಸರ್ಬ, ಎಲ್ಲಾದಳ) ದಳಪತಿಯ ಝೊಂಪಿಸಲು+ ಒಬ್ಬನೊದಗಿದಡೆ+ ಏನಹುದು ಕವಿ(ಮುತ್ತಿಗೆ ಹಾಕು,) ನೂಕು ನೂಕು+ ಎನುತ ಬೊಬ್ಬಿಡಲು, ಕುರುರಾಯನ+ ಈ ಬಲದ+ ಅಬ್ಬರಣೆ (ಆರ್ಭಟ) ವಾರಿಜಭವಾಂಡವ(ಜಗತ್ತನ್ನೇ) ಗಬ್ಬರಿಸೆ(ಕೆದಕು, ಮಣ್ಣನ್ನು ತೂರಾಡು) ಘಾಡಿಸಿತು(ಘಾಡಿಸು- ವ್ಯಾಪಿಸು, ತುಂಬಿತು) ಶಲ್ಯನ ರಥದ ಬಳಸಿನಲಿ.
ಅರ್ಥ:ಎಲ್ಲಾ ದಳಗಳೂ ಇಟ್ಟ ಲಗ್ಗೆಯಲ್ಲಿ,- ಧಾಳಿಯಲ್ಲಿ, ಅರರೆ ಪಾಂಡವರ ಸರ್ವಸೇನೆಯೂ ದಳಪತಿಯೂ ಬಳಲಿಸಿರುವಾಗ, ಒಬ್ಬನು ಬಂದು ಅವನ ಸಹಾಯ ಒದಗಿದರೆ ಏನಾಗುವುದು, ಎನೂ ಸಾಕಾಗದು. ಮುತ್ತಿಗೆ ಹಾಕು ನೂಕು ನೂಕು/ ನುಗ್ಗು ನುಗ್ಗು, ಎನ್ನುತ್ತಾ ಬೊಬ್ಬಿಡಲು- ಕೂಗುತ್ತಿರಲು, ಶಲ್ಯನ ರಥದ ಸುತ್ತುವರಿದಾಗ ಕುರುರಾಯ ಕೌರವನ ಸೇನೆಯ ಆರ್ಭಟ ಭೂಮಂಡಲವನ್ನೇ ಬಗೆದು ಮಣ್ಣನ್ನು ತೂರಾಡಿ ಎಲ್ಲಡೆ ವ್ಯಾಪಿಸಿತು. (ಈ ಗದ್ದಲದಲ್ಲಿ ಪಾಂಚಾಲ ಸೇನೆ ಧರ್ಮಜನ ರಕ್ಷಣೆಗೆ ಮುಂದೆ ನುಗ್ಗಿ ಧರ್ಮರಾಜನನ್ನು ಹಿಂದಕ್ಕೆ ತಳ್ಳಿತ್ತು.- ಮುಂದಿನ ಪದ್ಯಕ್ಕೆ ಪೀಠಿಕೆ- ಅಧ್ಯಾಹಾರ-)
ಸೆಳೆದು ಹೊಯ್ದಾಡಿದುದು ಚಾತು
ರ್ಬಲ ಛಡಾಳಿಸಿ ವಿವಿಧ ಶಸ್ತ್ರಾ
ವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ |
ಉಳಿದರಿಬ್ಬರು ದೊರೆಗಳೆನೆ ಮು
ಮ್ಮುಳಿತವಾದುದು ಸೇನೆ ನೃಪತಿಯ
ಹಳಚಿದನು ಮಾದ್ರೇಶನಾವೆಡೆ ಧರ್ಮಸುತನೆನುತ || ೬೧ ||
ಪದವಿಭಾಗ-ಅರ್ಥ:ಸೆಳೆದು ಹೊಯ್ದಾಡಿದುದು ಚಾತುರ್ಬಲ, ಛಡಾಳಿಸಿ(ಹೆಚ್ಚಾಗು, ಅಧಿಕವಾಗು, ಪ್ರಜ್ವಲಿಸು, ಥಳಥಳಿಸು, ರಭಸಗೊಳ್ಳು, ಉರವಣಿಸು, ವಿರೋಧಿಸು, ಪ್ರತಿಭಟಿಸು) ವಿವಿಧ ಶಸ್ತ್ರಾ+ ಆವಳಿಯ ಧಾರಾಸಾರದಲಿ(ಕತ್ತಿಯ ಅಲುಗಿನಿಂದ ಶತ್ರುಗಳನ್ನು ನಾಶಮಾಡುವ ವ್ರತ) ಹೊನಲೆದ್ದುದು(ಹೊನಲು= ಪ್ರವಾಹ)+ ಅರುಣಜಲ(ಕೆಂಪು ನೀರು- ರಕ್ತ) ಉಳಿದರು+ ಇಬ್ಬರು ದೊರೆಗಳು+ ಎನೆ ಮುಮ್ಮುಳಿತವಾದುದು (ಮುಮ್ಮುಳಿತವಾದುದು- ಭಯಾನಕವಾದುದು )ಸೇನೆ ನೃಪತಿಯ ಹಳಚಿದನು(ಹಳಚು-ಮೆರುಗು, ಹೊಳಪು) ಮಾದ್ರೇಶನು+ ಆವೆಡೆ ಧರ್ಮಸುತನು+ ಎನುತ
ಅರ್ಥ:ಕೌರವ ಪಾಂಡವ ಸೇನೆಗಳು ಕತ್ತಿಯನ್ನು ಸೆಳೆದು ಹೊಡೆದಾಡಿದರು. ಚತುರಂಗ ಸೇನೆಗಳು ಉರವಣಿಸಿ ಪರಾಕ್ರಮದಿಂದ ವಿವಿಧ ಶಸ್ತ್ರಗಳಸಮೂಹವನ್ನು ಬಳಸಿ ಶತ್ರುಗಳನ್ನು ನಾಶಮಾಡುವ ವ್ರತಹಿಡಿದಂತೆ ಹೋರಾಡಿದರು. ಅಲ್ಲಿ ರಕ್ತವು ಹೊಳೆಯಾಗಿ ಹರಿಯಿತು. ಇಬ್ಬರು ದೊರೆಗಳು ಉಳಿದಿದ್ದಾರೆ ಎನ್ನಲು ಕೌರವನ ಸೇನೆಯು ಭಯಾನಕವಾಗಿ ಹೋರಾಡಿತು. ಕೌರವ ನೃಪತಿಯು ಸಂತಸದಿಮದ ಮಿಂಚಿದನು. ಮಾದ್ರೇಶ ಶಲ್ಯನು ಧರ್ಮಸುತನು ಯಾವಕಡೆ ಅಡಗಿದನು ಎಂದು ರಣರಂಗದಲ್ಲಿ ಹುಡುಕಿದನು.
ಮತ್ತೆ ತರುಬಿದನವನಿಪನನಿದು
ಜೊತ್ತಿನಾಹವವಲ್ಲಲೇ ಮಿಗೆ
ಹೊತ್ತ ಹೊರಿಗೆಯ ನೆರವಣಿಗೆ ಸೇನಾಧಿಪತ್ಯವಲೆ |
ತೆತ್ತಿಸಿದನಂಬಿನಲಿ ಜೋಡಿನ
ಹತ್ತರಿಕೆಯಲಿ ಚಿಪ್ಪನೊಡೆದೊಳು
ನೆತ್ತರೋಕುಳಿಯಾಡಿದುವು ಮಾದ್ರೇಶನಂಬುಗಳು || ೬೨ ||
ಪದವಿಭಾಗ-ಅರ್ಥ: ಮತ್ತೆ ತರುಬಿದನು+ ಅವನಿಪನನು+ ಇದು ಜೊತ್ತಿನ(ಜೂಜಿನ)+ ಆಹವವಲ್ಲಲೇ(ಆಹವ- ಯುದ್ಧ) ಮಿಗೆಹೊತ್ತ ಹೊರಿಗೆಯ(ಹೊಣೆಗಾರಿಕೆ) ನೆರವಣಿಗೆ(ನೆರವು, ನೆರವಣಿಗೆ) ಸೇನಾಧಿಪತ್ಯವಲೆ ತೆತ್ತಿಸುದನು(ಜೋಡಿಸು, ಹೊಡೆದನು)+ ಅಂಬಿನಲಿ ಜೋಡಿನ ಹತ್ತರಿಕೆಯಲಿ(ಉದ್ದೇಶದಿಂದ? ) ಚಿಪ್ಪನೊಡೆದೊಳು ನೆತ್ತರ+ ಓಕುಳಿಯಾಡಿದುವು ಮಾದ್ರೇಶನ+ ಅಂಬುಗಳು
ಅರ್ಥ:ಶಲ್ಯನು ವಿಶಾಲವಾದ ಕುರುಕ್ಷೇತ್ರದಲ್ಲಿ ಅವನಿಪ ಧರ್ಮಜನನ್ನು ಹುಡುಕಿ ಮತ್ತೆ ತರುಬಿದನು - ಆಕ್ರಮಿಸಿದನು,ಅವನು ಧರ್ಮಜನಿಗೆ ಇದು ಪಗಡೆಯಾಟದ ಜೂಜಿನ ಯುದ್ಧಲ್ಲಲೇ! ಅದಕ್ಕೂ ಹೆಚ್ಚಾಗಿ ಹೊಣೆಹೊತ್ತ ಹೊಣೆಗಾರಿಕೆಯ ಹೋರಾಟದ ನೆರವು. ಅದಕ್ಕಾಗಿ ನಮ್ಮ ಸೇನಾಧಿಪತ್ಯವಲೆ, ಎಂದು ಹೇಳಿ ಬಾಣಗಳಿಂದ ಹೊಡೆದನು. ಜೋಡಿಸಿ ಹೊಡೆದ ಉದ್ದೇಶದಂತೆ ಶತ್ರು ಸೈನಿಕರು ತಲೆಯ ಚಿಪ್ಪನ್ನು ಒಡೆದು ಅದರೊಳು ಮಾದ್ರೇಶ ಶಲ್ಯನ ಅಂಬುಗಳು ನೆತ್ತರ ಓಕುಳಿಯಾಡಿದುವು,- ರಕ್ತದಲ್ಲಿ ಅದ್ದಿದವು.
ಏನ ಹೇಳುವೆನರಸ ಕುಂತೀ
ಸೂನುವೇ ಕಿರುಕುಳನೆ ಶಲ್ಯನ
ನೂನ ಶರಜಾಲದಲಿ ನೊಂದನು ಬಹಳ ಧೈರ್ಯದಲಿ |
ಭಾನುವಿನ ತಮದೊದವಿದನುಸಂ
ಧಾನದಂತಿರೆಯಹಿತಭಟನ ಸ
ಘಾನತೆಯನೆತ್ತಿದವು ಕುತ್ತಿದವಂಬು ದಳಪತಿಯ || ೬೩|| [][]
ಪದವಿಭಾಗ-ಅರ್ಥ: ಏನ ಹೇಳುವೆನು+ ಅರಸ ಕುಂತೀಸೂನುವೇ ಕಿರುಕುಳನೆ ಶಲ್ಯನ ನೂನ(ಮಾದಕತೆ, ನಶೆ, ನಿಯಮ) ಶರಜಾಲದಲಿ ನೊಂದನು ಬಹಳ ಧೈರ್ಯದಲಿ ಭಾನುವಿನ ತಮದ+ ಒದವು+ ಇದು+ ಅನುಸಂಧಾನದಂತಿರೆ+ಯ+ ಅಹಿತಭಟನ ಸಘಾನತೆಯನು+ ಎತ್ತಿದವು ಕುತ್ತಿದವು+ ಅಂಬು ದಳಪತಿಯ.
ಅರ್ಥ:ಸಂಜಯನು ಹೇಳಿದ, ರಾಜನೇ ಏನನ್ನು ಹೇಳಲಿ, ಅರಸ ಕುಂತೀಸೂನು ಧರ್ಮಜನು ಶಲ್ಯನ ತೀವ್ರವಾದ ಬಾಣಗಳ ಜಾಲದಲ್ಲಿ ಅವನು ಧೈರ್ಯದಿಂದ ಶಲ್ಯನನ್ನು ಎದುರಿಸಿ ಬಹಳ ನೊಂದನು. ಸೂರ್ಯನಿಗೆ ಕತ್ತಲೆ ಆವರಿಸಿದಂತಾಯಿತು. ಇದು ಉತ್ತಮ ಅನುಸಂಧಾನದಂತಿದ್ದು ಶತ್ರುಭಟ ಶಲ್ನನ ಶ್ರೇಷ್ಠತೆಯನ್ನು ಎತ್ತಿದವು. ದಳಪತಿ ಶಲ್ಯನ ಅಂಬುಗಳು ಶತ್ರುಗಳನ್ನು ಚುಚ್ಚಿದವು.
♠♠♠
♦♣♣♣♣♣♣♣♣♣♣♣♣♣♣♣♣♣♣♣♦

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಸಿರಿಗನ್ನಡ ಅರ್ಥಕೋಶ- ಕೊ.ಶಿ.ಕಾ.