ಶರೀಫರ ಜನಪ್ರಿಯ ಹಾಡು-ಕೋಡಗನ ಕೋಳಿ ನುಂಗಿತ್ತಾ-
ಸಂಪಾದಿಸಿ- ಶರೀಫರ ಒಂದು ಒಗಟಿನ ಪದ,ಒಡಪಿನ ಅಥವಾ ಬೆಡಗಿನ ಹಾಡು:
- ‘ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ; ಕೋಡಗ ಎಂದರೆ ಮಂಗ-ಮರ್ಕಟ;ಚಂಚಲ ಮನಸ್ಸು. ಕೋಳಿ ಬೆಳಗಿನ ಸೂಚನೆ.ಕೋಳಿ ಕೂಗಿದರೆ ಸೂರ್ಯೋದಯ; ಬೆಳಗಾಗುವುದು ಎಂದರೆ ಜ್ಞಾನೋದಯ. ಅದು ಆದಾಗ ಚಂಚಲ ಮನಸ್ಸು ಅದರಲ್ಲಿ ಕರಗಿಹೋಗುವುದು- ಇದು ಕೋಳಿ ಕೋಡಗನನ್ನು ನುಂಗುವುದು. ವೇದಾಂತದಲ್ಲಿ ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸುವರು; ಇಲ್ಲಿ ಆ ಪ್ರತಿಮೆ ಉಪಯೋಗಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
- ಮುಂದಿನ ಪದ್ಯಗಳೆಲ್ಲಾ ಹೀಗೆ ಚಂಚಲತೆಯನ್ನು ಅಚಲ-ಅವ್ಯಯ ಪರಬ್ರಹ್ಮ ತತ್ವವು ಅರಿವಾದಾಗ ಚಂಚಲತೆನಿಲ್ಲುವುದೆಂದು ಅನೇಕ ರೂಪಕದೊಡನೆ ಹಾಡಿದ್ದಾರೆ. ಕೊನೆಯ ಸಾಲು ಗುರು ಗೋವಿಂದರ ಕರುಣೆ ಶರೀಫರ ಅತ್ಮವನ್ನು - ನಾನೆಂಬ ಭಾವವನ್ನು ನುಂಗಿ -ಇಲ್ಲದಂತೆ ಮಾಡಿ ಜ್ಞಾನವನ್ನು ದೊರಕಿಸಿತು- ಎಂಬುದು ತಾತ್ಪರ್ಯ.
(ಪಾಠಬೇಧವನ್ನು ಆವರಣದಲ್ಲಿ ತೋರಿಸಿದೆ)
ಕೋಡಗನ ಕೋಳಿ ನುಂಗಿತ್ತಾ|
ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ||ಪಲ್ಲ||
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ||೧||
ಕೋಡಗನ ಕೋಳಿ ನುಂಗಿತ್ತಾ||
ಒಳ್ಳು ಒನಕಿಯ ನುಂಗಿ
ಕಲ್ಲು ಗೂಟವ ನುಂಗಿ (ಬೀಸುವ)
ಮೆಲ್ಲಲು ಬಂದ ಮುದುಕಿಯ ನೆಲ್ಲು ನುಂಗಿತ್ತಾ ||೨||(ಕುಟ್ಟಲಿಕೆ ಬಂದ ಮುದುಕಿಯ ನೊಣವು)
ಕೋಡಗನ ಕೋಳಿ ನುಂಗಿತ್ತಾ||
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನ ಮಣಿಯು ನುಂಗಿತ್ತಾ||೩||
ಕೋಡಗನ ಕೋಳಿ ನುಂಗಿತ್ತಾ||
ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ್ತಾ||೪||
ಕೋಡಗನ ಕೋಳಿ ನುಂಗಿತ್ತಾ||
ಗುಡ್ಡ ಗಂವ್ಹರ ನುಂಗಿ (ಗವಿಯನು)
ಗಂವ್ಹರ ಇರಿವೆಯ ನುಂಗಿ
ಗುರುಗೋವಿಂದನ ಪಾದ ನನ್ನನೆ ನುಂಗಿತ್ತಾ||೫||
(ಗೋವಿಂದಗುರುವಿನ ಪಾದ ನನ್ನನೆ ನುಂಗಿತ್ತಾ||೫||)
ಕೋಡಗನ ಕೋಳಿ ನುಂಗಿತ್ತಾ||[೧]
ನೋಡಿ
ಸಂಪಾದಿಸಿ- ಶರೀಫ ಸಾಹಿತ್ಯ
- ವಿಕಿ : ಶಿಶುನಾಳ ಶರೀಫರು
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ- ಶಿಶುನಾಳ ಶರೀಫರ ಪದಗಳು -ಅನಾಮಿಕ
- ↑ ಶಿಶುನಾಳ ಶರೀಫರ ಪದಗಳು -ಅನಾಮಿಕ
- ↑ ಕವನ ಸಂಗ್ರಹ. > ಸಂತ ಶಿಶುನಾಳ ಶರೀಫ. > ಶಿಶುನಾಳ ಶರೀಫರ ಗೀತೆಗಳು.