<ಕುಮಾರವ್ಯಾಸಭಾರತ-ಸಟೀಕಾ
- ರಣವ ಶೋಧಿಸಲೆಂದು ಕಳನೊಳು
- ಹೆಣನ ತುಳಿತುಳಿದರಸೆ ಕುರುಧಾ
- ರುಣಿಯ ಪತಿಯನು ಕಂಡು ನೆರೆ ಮರುಗಿದಳು ಗಾಂಧಾರಿ||ಸೂಚನೆ||
- ಪದವಿಭಾಗ-ಅರ್ಥ:ರಣವ(ರಣರಂಗ, ಹೆಣ) ಶೋಧಿಸಲೆಂದು ಕಳನೊಳು(ರಣರಂಗದಲ್ಲಿ) ಹೆಣನ ತುಳಿತುಳಿದು+ ಅರಸೆ(ಹುಡುಕಲು) ಕುರುಧಾರುಣಿಯ ಪತಿಯನು ಕಂಡು ನೆರೆ ಮರುಗಿದಳು ಗಾಂಧಾರಿ
- ಅರ್ಥ:ಮಡಿದ ತಮ್ಮವರ ಕಳೇಬರವನ್ನು ಹುಡುಕಲು ರಣರಂಗದಲ್ಲಿ ಹೆಣಗಳನ್ನು ತುಳಿತುಳಿಯುತ್ತಾ ಹುಡುಕಲು ಕುರುಧಾರುಣಿಯ ಪತಿಯಾದ ಕೌರವನನ್ನು ಕಂಡು ಗಾಂಧಾರಿ ಬಹಳ ಮರುಗಿದಳು. [೧][೨] [೩]
- ॐ
ಕುರುಕ್ಷೇತ್ರ ರಣರಂಗದಲ್ಲಿ ಸ್ತ್ರೀ ಸಮೂಹ
ಸಂಪಾದಿಸಿ
- ಕೇಳು ಜನಮೇಜಯ ಧರಿತ್ರೀ
- ಪಾಲ ಕೃಷ್ಣನ ಕರೆದು ನಯದಲಿ
- ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ |
- ಏಳು ತಂದೆ ಮುಕುಂದ ಕದನ
- ವ್ಯಾಳವಿಷನಿರ್ದಗ್ಧಧರಣೀ
- ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು || ೧ ||
- ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಕೃಷ್ಣನ ಕರೆದು ನಯದಲಿ ಲೋಲಲೋಚನೆ ನುಡಿದಳು+ ಅಂತಸ್ತಾಪ(ಒಳಗೆ ತುಂಬಿದ ಸಂಕಟ; ತಾಪ = ಬಿಸಿ) ಶಿಖಿ (ಶಿಖಿ= ಬೆಂಕಿ) ಜಡಿಯೆ(ಗಟ್ಟಿಯಾಗಿರಲು,ಬಡಿದಿರಲು) ಏಳು ತಂದೆ ಮುಕುಂದ ಕದನ ವ್ಯಾಳವಿಷ (ಯುದ್ಧವೆಂಬ ಸರ್ಪದ ವಿಷ) ನಿರ್ದಗ್ಧ (ಧಗ್ಧ= ಸುಟ್ಟ, ಸುಡದಿರುವ, ಉತ್ತರಕ್ರಿಯೆ ಮಾಡದಿರುವ) ಧರಣೀ ಪಾಲವರ್ಗವ ತೋರಿಸು+ ಎಂದಳು ತರಳೆ ಕೈಮುಗಿದು.
- ಟಿಪ್ಪಣಿ:-ಗಾಂಧಾರಿ ಮತ್ತು ಕೃಷ್ಣ ಹತ್ತಿರದ ಬಂಧುಗಳು. ಕುರುಕ್ಷೇತ್ರ ಯುದ್ಧಕ್ಕೆ ಮುಂಚೆಯೇ, ಶ್ರೀಕೃಷ್ಣನ ಮಗ ಸಾಂಬನು ಗಾಂಧಾರಿಯ ಮಗ ದುರ್ಯೋಧನನ ಮಗಳು ಲಕ್ಷ್ಮಣಾಳನ್ನು ಮದುವೆಯಾಗಿದ್ದನು.ದುರ್ಯೋಧನನು ಈ ವಿವಾಹಕ್ಕೆ ವಿರೋಧಿಯಾಗಿದ್ದನು. ಹೀಗೆ ಹತ್ತಿರದ ಬಂಧುಗಳಾಗಿದ್ದರೂ ಪರಸ್ಪರ ವಿಶ್ವಾಸ, ಸೌಹಾರ್ದತೆ ಇರಲಿಲ್ಲ. (ಭಾಗವತ)
- ಅರ್ಥ: ವೈಶಂಪಾನು ಮುನಿಯು ಹೇಳಿದ,'ಕೇಳು ಜನಮೇಜಯ ಧರಿತ್ರೀಪಾಲನೇ, ಕೃಷ್ಣನನ್ನು ಕರೆದು ವಿನಯದಿಂದ ಕೈಮುಗಿದು ಲೋಲಲೋಚನೆಯಾದ ದಾಂಧಾರಿಯು ಹೇಳಿದಳು,- ಮನಸ್ಸಿನಲ್ಲಿ ಅಂತಸ್ತಾಪದ ಬೆಂಕಿ ಜಡಿದು ತುಂಬಿದೆ. ಏಳು ತಂದೆ ಮುಕುಂದ, ಯುದ್ಧವೆಂಬ ಸರ್ಪದ ವಿಷದಿಂದ ಸತ್ತು ಇನ್ನೂ ದಹಿಸದೇ ಬಿದ್ದ ರಾಜವರ್ಗವನ್ನು ತೋರಿಸು. ಎಂದಳು.
- ನಿನ್ನ ಲೀಲೆಯ ಬೆಳೆಸಿರಿಯ ಸಂ
- ಪನ್ನ ಮಾಯಾರಚನೆಯಿದು ನಿ
- ರ್ಭಿನ್ನಭಾರತನಿಚಿತ ಬಹಳಾಕ್ಷೋಹಿಣೀ ದಳವ |
- ತನ್ನೊಡನೆ ಹಗೆಬೆಳೆದ ಶೌರ್ಯವಿ
- ಪನ್ನರನು ತೋರೈ ಜನಾರ್ದನ
- ಮನ್ನಿಸೆಂದಳು ನಯನಜಲವನು ಮಿಡಿದು ಗಾಂಧಾರಿ || ೨ ||
- ಪದವಿಭಾಗ-ಅರ್ಥ:ನಿನ್ನ ಲೀಲೆಯ ಬೆಳೆಸಿರಿಯ ಸಂಪನ್ನ(ನೆಡೆದ, ಫಲ) ಮಾಯಾರಚನೆಯು+ ಅದು ನಿರ್ಭಿನ್ನ ಭಾರತ ನಿಚಿತ (ಕೂಡಿದ, ತುಂಬಿದುದು, ವ್ಯಾಪ್ತವಾದುದು, ಗುಂಪು, ಸಂದಣಿ) ಬಹಳ+ ಅಕ್ಷೋಹಿಣೀ ದಳವ ತನ್ನೊಡನೆ ಹಗೆಬೆಳೆದ ಶೌರ್ಯ ವಿಪನ್ನರನು(ದುರ್ಗತಿಯಲ್ಲಿರುವವರನು, ಕಷ್ಟಕ್ಕೆ ಗುರಿಯಾದ) ತೋರೈ ಜನಾರ್ದನ ಮನ್ನಿಸು+ ಎಂದಳು ನಯನ-ಜಲವನು(ಕಣ್ಣೀರು) ಮಿಡಿದು (ಸುರಿಸಿ) ಗಾಂಧಾರಿ.
- ಅರ್ಥ:ಗಾಂಧಾರಿಯು ಕಣ್ನಿನಲ್ಲಿ ನೀರು ತುಂಬಿಕೊಂಡು ಕೃಷ್ನನಿಗೆ, 'ನಿನ್ನ ಲೀಲೆಯ ಮಯಾರಚನೆಯ ಫಲವಾಗಿ ಸಂಪನ್ನವಾದ ಮಾಯಾರಚನೆಯ ಯುದ್ಧ, ಅದು ವಿಸ್ತಾರವಾದ ಭಾರತದ ಬಹಳದೊಡ್ಡ ಹದಿನೆಂಟು ಅಕ್ಷೋಹಿಣೀ ದಳ; ಮಡಿದ ಆ ದಳವನ್ನೂ, ನಿನ್ನೊಡನೆ ವೈರತ್ವ ಬೆಳೆಸಿಕೊಂಡು ಶೌರ್ಯತೋರಿ ದುರ್ಗತಿಹೊಂದಿದವರನ್ನೂ, ನನಗೆ ತೋರಿಸು ಎಂದು ಹೇಳಿ, ಈ ಮಹಾ ಸಂಹಾರಕ್ಕೆಲ್ಲಾ ನೀನೇ ಕಾರಣ ಎಂದು ಸುತ್ತು ಬಳಸಿ ಹೇಳಿದ್ದಕ್ಕಾಗಿ, ಜನಾರ್ದನನೇ ಮನ್ನಿಸು,' ಎಂದಳು.
- ತಾಯೆ ಬಾ ಗಾಂಧಾರಿ ಮನದಲಿ
- ನೋಯದಿರು ಪೌರಾಣಜನ್ಮದ
- ದಾಯಭಾಗದ ಭೋಗ ಭಂಗಿಸಲಳುಕಲೇಕಿನ್ನು
- ಸಾಯಲಾಗದೆ ಸುಭಟರಸುಗಳು
- ಬೀಯವೇ ಬ್ರಹ್ಮಾದಿಗಳಿಗಿದು
- ದಾಯವೀ ಸಂಸಾರವೆಂದನು ನಗುತ ಮುರವೈರಿ ೩
- ಪದವಿಭಾಗ-ಅರ್ಥ: ತಾಯೆ ಬಾ ಗಾಂಧಾರಿ ಮನದಲಿ ನೋಯದಿರು ಪೌರಾಣಜನ್ಮದ ದಾಯಭಾಗದ ಭೋಗ ಭಂಗಿಸಲು+ ಅಳುಕಲೇಕೆ+ ಇನ್ನು ಸಾಯಲಾಗದೆ ಸುಭಟರಸುಗಳು ಬೀಯವೇ(ವ್ಯಯ, ನಷ್ಟ, ಖರ್ಚು) ಬ್ರಹ್ಮಾದಿಗಳಿಗಿದು ದಾಯವೀ(ಕರ್ಮ, ಕೆಲಸ, ಆಡಳಿತ) ಸಂಸಾರವೆಂದನು ನಗುತ ಮುರವೈರಿ
- ಅರ್ಥ: ಕೃಷ್ಣನು ನಗುತ್ತಾ,'ತಾಯೆ ಬಾ ಗಾಂಧಾರಿ, ಮನಸ್ಸಿನಲ್ಲಿ ನೋಯಬೇಡ. ಪೂರ್ವ ಜನ್ಮದ ಕರ್ಮಭಾಗದ ಭೋಗವನ್ನು- ಫಲವನ್ನು ಅನುಭವಿಸಿ ನಾಶಪಡಿಸಸಲು ಅಳುಕುವುದು ಏಕೆ? ಇನ್ನು ಸಾಯಲಾಗದೆ ಸುಭಟರಸುಗಳು ಸುಮ್ಮನೆ ವ್ಯರ್ಥವಾಗುವರೇ? ಬ್ರಹ್ಮಾದಿಗಳಿಗೆ ಸೃಷ್ಠಿ ಸಂಹಾರ ಇದು ಕರ್ತವ್ಯ. ಇದೇ ಸಂಸಾರ, ಜಗತ್ತು,' ಎಂದನು .
- ಎಂದು ಕೈಗೊಟ್ಟಬಲೆಯನು ಹರಿ
- ತಂದನಾ ಸಂಗ್ರಾಮಭೂಮಿಗೆ
- ಹಿಂದೆ ಬರಲಷ್ಟಾದಶಾಕ್ಷೋಹಿಣಿಯ ನಾರಿಯರು ||
- ಮುಂದೆ ಹೆಣದಿನಿಹಿಗಳು ಖಗಮೃಗ
- ವೃಂದ ಚೆಲ್ಲಿತು ಭೂತ ಪೂತನಿ
- ವೃಂದ ಕೆದರಿತು ಹೊಕ್ಕರಿವರದ್ಭುತರಣಾಂಗಣವ || ೪ ||
- ಪದವಿಭಾಗ-ಅರ್ಥ: ಎಂದು ಕೈಗೊಟ್ಟು+ ಅಬಲೆಯನು ಹರಿತಂದನು(ಕರೆತಂದನು)+ ಆ ಸಂಗ್ರಾಮಭೂಮಿಗೆ ಹಿಂದೆ ಬರಲು+ ಅಷ್ಟಾದಶ+ ಅಕ್ಷೋಹಿಣಿಯ ನಾರಿಯರು ಮುಂದೆ ಹೆಣದಿ+ ನಿಹಿಗಳು(ಸಂ)ನಿಹಿ- ಇಟ್ಟ, ಇರಿಸಿದ) ಖಗಮೃಗವೃಂದ ಚೆಲ್ಲಿತು ಭೂತ ಪೂತನಿವೃಂದ(ರಾಕ್ಷಸ ಸಮೂಹ) ಕೆದರಿತು ಹೊಕ್ಕರು+ ಇವರು+ ಅದ್ಭುತ ರಣಾಂಗಣವ.
- ಅರ್ಥ:ಕೃಷ್ಣನು,'ಇದು- ಹುಟ್ಟು ಸಾವು ಜಗತ್ತಿನ ನಿಯಮ ಎಂದು ಹೇಳಿ, ಅವಳಿಗೆ ಕೈಯನ್ನು ಕೊಟ್ಟು ಅಬಲೆ ಗಾಂಧಾರಿಯನ್ನು ಆ ರಣಭೂಮಿಗೆ ಕರೆತಂದನು. ಅವರ ಹಿಂದೆ ಅಷ್ಟಾದಶ ಅಕ್ಷೋಹಿಣಿಯ ನಾರಿಯರು ಬರುತ್ತಿದ್ದರು. ಮುಂದೆ ಹೆಣದಿಂದ ತುಂಬಿದ ಬೂಮಿ, ಖಗಮೃಗವೃಂದ- ಪಕ್ಷಿ ಮೃಗಗಳ ಸಮೂಹ ಮತ್ತೆ ಭೂತ ನರಭಕ್ಷಕ ರಾಕ್ಷಸ ಸಮೂಹ ಚೆಲ್ಲಿತು-ಹರಡಿಕೊಂಡಿತ್ತು. ಇವರನ್ನು ಹೋಡಿ ಅವು ಕೆದರಿ ಓಡಿದವು. ಹೀಗೆ ಇವರು ಅದ್ಭುತ ರಣಾಂಗಣವನ್ನು ಹೊಕ್ಕರು.
- ಸೂಸಿತಬಲಾವೃಂದ ಕೆದರಿದ
- ಕೇಶಪಾಶದ ತೆಳುವಸುರ ನಿ
- ಟ್ಟಾಸುರದ ಹೊಯ್ಲುಗಳ ಲೋಚನವಾರಿಧಾರೆಗಳ |
- ಆಸುರಾಕ್ರಂದನದ ಶೋಕಾ
- ವೇಶ ಬಹಳದ ಬಾಲೆಯರು ಪ್ರಾ
- ಣೇಶ ಮೈದೋರೆನುತ ಹೊಕ್ಕರಸಿದರು ಕಳನೊಳಗೆ || ೫ ||
- ಪದವಿಭಾಗ-ಅರ್ಥ: ಸೂಸಿತು (ತುಂಬಿತು?)+ ಅಬಲಾವೃಂದ ಕೆದರಿದ ಕೇಶಪಾಶದ ತೆಳು+ವ/ಬ+ ಅಸುರ(ತೆಳು ಬಸಿರು- ಹೊಟ್ಟೆ ಬಡವಾದ ನಡು.) ನಿಟ್ಟಾಸುರದ ಹೊಯ್ಲುಗಳ ಲೋಚನ+ ವಾರಿಧಾರೆಗಳ(ಕಣ್ಣೀರಿನ ದಾರೆ) ಆಸುರ (ದೊಡ್ಡ, ಕರ್ಕಶ)+ ಆಕ್ರಂದನದ ಶೋಕಾವೇಶ ಬಹಳದ ಬಾಲೆಯರು ಪ್ರಾಣೇಶ ಮೈದೋರು+ ಎನುತ ಹೊಕ್ಕು+ ಅರಸಿದರು ಕಳನೊಳಗೆ.
- ಅರ್ಥ:ಗಂಡರನ್ನು ಕಳೆದುಕೊಂಡ ಅಬಲೆಯರ ಸಮೂಹ ರಣರಂಗದಲ್ಲಿ ತುಂಬಿತು; ಅವರು ಕೆದರಿದ ತಲೆಕುದಲು, ಬೆನ್ನಿಗೆ ಹತ್ತಿದ ಹೊಟ್ಟೆ, ನಿಟ್ಟಾಸಿರಿನ ಗಾಲಿಹ ಸದ್ದುಗಳಿಂದಕೂಇ, ಕಣ್ಣೀರಿನ ದಾರೆ ಸುರಿಸುತ್ತಾ, ಕರ್ಕಶ ಆಕ್ರಂದನ- ರೋದನ ಮಾಡುತ್ತಾ, ಶೋಕದ ಆವೇಶದಿಂದ ತುಂಬಿದ ಬಹಳವಿದ್ದ ಬಾಲೆಯರು ತಮ್ಮ ಪತಿಯನ್ನ ಕುರಿತು, ಪ್ರಾಣೇಶ ಮೈದೋರು, ಎಚ್ಚರಾಗು- ಕಾಣಿಸಿಕೋ, ಎನ್ನುತ್ತಾ ರಣರಂಗವನ್ನು ಹೊಕ್ಕು ಗಂಡರನ್ನು ಹುಡುಕಿದರು.
- ಹರಿದರಗಲಕೆ ನಾರಿಯರು ಕುರು
- ಧರಣಿಯಲಿ ತಂತಮ್ಮ ಪತಿಗಳ
- ಕರಿಗಳಲಿ ತುರಗದಲಿ ರಥದಲಿ ಕಂಡರಲ್ಲಲ್ಲಿ |
- ಶಿರವ ಮುಂಡಾಡಿದರು ಹೆಣನಲಿ
- ಹೊರಳಿದರು ವಿವಿಧ ಪ್ರಳಾಪದ
- ಪರಿಠವವನೆಂತರಿದರೋ ವರ್ಣಿಸುವಡರಿದೆಂದ || ೬ ||
- ಪದವಿಭಾಗ-ಅರ್ಥ: ಹರಿದರು+ ಅಗಲಕೆ ನಾರಿಯರು ಕುರುಧರಣಿಯಲಿ, ತಂತಮ್ಮ ಪತಿಗಳ ಕರಿಗಳಲಿ ತುರಗದಲಿ ರಥದಲಿ ಕಂಡರು+ ಅಲ್ಲಲ್ಲಿ ಶಿರವ ಮುಂಡಾಡಿದರು, ಹೆಣನಲಿ ಹೊರಳಿದರು, ವಿವಿಧ ಪ್ರಳಾಪದ ಪರಿಠವವನು (ಪರುಠವ ಪರಿಸ್ಥಾಪನ= ವಿಸ್ತಾರ,ಹರಹು ಹೆಚ್ಚಳ,ಆಧಿಕ್ಯ,)+ ಎಂತು+ ಅರಿದರೋ ವರ್ಣಿಸುವಡೆ+ ಅರಿದೆಂದ.
- ಅರ್ಥ:ವೈಶಂಪಾಯನನು ಕುರು-ರಣಭೂಮಿಯ ಅಗಲಕ್ಕೂ ಆ ಮಹಿಳೆಯರು ನೆಡೆದಾಡಿದರು. ಅವರು ತಮ್ಮ ತಮ್ಮ ಪತಿಗಳನ್ನು ಅಲ್ಲಲ್ಲಿ ಬಿದ್ದ ಆನೆಗಳ, ಕುದುರೆಗಳ ರಥಗಳ ಗುರುತುಗಳಿಂದ ಕಂಡು ಕೊಂಡರು. ಅವರ ತಮ್ಮ ಪತಿಗಳ ಶಿರವನ್ನು ಮುಂಡಾಡಿದರು- ಪ್ರಿತಿಯಿಂದ ಸವರಿದರು. ಅವರ ಹೆಣದಮೇಲೆ ಬಿದ್ದು ಹೊರಳಿದರು. ವಿವಿಧವಾಗಿ ಮಾಡುತ್ತಿದ್ದ ಪ್ರಲಾಪಗಳ ಪರಿಯನ್ನು, ಆಧಿಕ್ಯವನ್ನು ಹೇಗೆ ತಿಳಿದು ಗೋಳಾಡಿದರೋ ಅದನ್ನು ವರ್ಣಿಸುವುದಾದರೆ ನನಗೆ ತಿಳಿಯದು, ಎಂದ.
- ನಡೆದಳಾ ಗಾಂಧಾರಿ ಶೋಕದ
- ಕಡಲೊಳೇಳುತ ಮುಳುಗುತಂಘ್ರಿಯ
- ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ |
- ಅಡಗಿನಲಿ ಕಾಲೂರಿ ಸಿಲುಕಿದ
- ಡೊಡನೆ ಹರಿ ನೆಗಹುವನು ನರವಿನ
- ತೊಡಕ ಬಿಡಿಸುತ ಹೊಕ್ಕಳಂಗನೆ ಹೆಣನ ಮಧ್ಯದಲಿ || ೭ ||
- ಪದವಿಭಾಗ-ಅರ್ಥ:ನಡೆದಳು+ ಆ ಗಾಂಧಾರಿ ಶೋಕದ ಕಡಲೊಳು+ ಏಳುತ ಮುಳುಗುತ+ ಅಂಘ್ರಿಯ(ಪಾದ) ಕೊಡಹುತ+ ಅರುಣಾಂಬುಗಳ(ಕೆಂಪು ನೀರು, ರಕ್ತ) ಹೊನಲಿನ ಜಾನು+ ಉದಘ್ನಗಳ ಅಡಗಿನಲಿ (ಅಡಗು= ಮಾಂಸ) ಕಾಲೂರಿ ಸಿಲುಕಿದಡೆ+ ಒಡನೆ ಹರಿ ನೆಗಹುವನು, ನರವಿನ ತೊಡಕ ಬಿಡಿಸುತ ಹೊಕ್ಕಳು+ ಅಂಗನೆ ಹೆಣನ ಮಧ್ಯದಲಿ.
- ಅರ್ಥ:ಆರೋಧಿಸುತ್ತಿರುವ ಮಹಿಳೆಯರ ಮುಂದೆ ಆ ಗಾಂಧಾರಿಯು ಶೋಕದ ಸಮುದ್ರದಲ್ಲಿ ಏಳುತ್ತಾ ಮುಳುಗುತ್ತಾ ನಡೆದಳು. ಅವಳು ಕಾಲನ್ನು ಕೊಡಹುತ್ತಾ, ರಕ್ತದ ಹೊಳೆಯಲ್ಲಿ, ಕಡಿದು ಬಿದ್ದ ತೋಳು ತೊಡೆಗಳ ಮಾಂಸಗಳಲ್ಲಿ ಕಾಲೂರಿ ನೆಡೆದಳು. ಕಾಲುಅದರಲ್ಲಿ ಸಿಲುಕಿಕೊಂಡಾಗ ಕೂಡಲೆ ಕೃಷ್ಣನು ಅವಳ ಕಾಲನ್ನು ನರ ಮಾಂಸದ ತೊಡಕನ್ನು ಬಿಡಿಸುತ್ತ ಎತ್ತುವನು. ಹೀಗೆ ಅಂಗನೆ ಗಾಂಧಾರಿ ಹೆಣಗಳ ಮದ್ಯದಲ್ಲಿ ಹೊಕ್ಕಳು.
- ಇತ್ತ ನೋಡೈ ದೇವಕೀಸುತ
- ಮತ್ತಗಜ ಕಂಧರದೊಳಾ ಭಗ
- ದತ್ತನನು ಕಂಡಾತನರಸಿಯರೈದೆ ಮೊಗವೆತ್ತಿ |
- ಸುತ್ತ ಬರುತೈದಾರೆ ದಂತಿಯ
- ಹತ್ತಲರಿಯದೆ ನೂರುಮಡಿ ಶೋ
- ಕೋತ್ತರದಲದೆ ಶಿವ ಎನುತ ಮರುಗಿದಳು ಗಾಂಧಾರಿ || ೮ ||
- ಪದವಿಭಾಗ-ಅರ್ಥ:ಇತ್ತ ನೋಡೈ ದೇವಕೀಸುತ, ಮತ್ತಗಜ ಕಂಧರದೊಳು+ ಆ ಭಗದತ್ತನನು ಕಂಡು+ ಆತನ+ ಅರಸಿಯರು+ ಐದೆ (ಬರಲು) ಮೊಗವೆತ್ತಿ ಸುತ್ತ ಬರುತೈದಾರೆ ದಂತಿಯ ಹತ್ತಲು+ ಅರಿಯದೆ ನೂರುಮಡಿ ಶೋಕ+ ಉತ್ತರದಲಿ+ ಅದೆ ಶಿವ ಎನುತ ಮರುಗಿದಳು ಗಾಂಧಾರಿ.
- ಅರ್ಥ:ಗಾಂಧಾರಿಯು,'ದೇವಕಿಯ ಮಗ ಕೃಷ್ಣನೇ,'ಈ ಕಡೆ ನೋಡಯ್ಯಾ, ಮದ್ದಾನೆಯ ಕುತ್ತಿಗೆಯಲ್ಲಿ ಸತ್ತುಬಿದ್ದಿರುವ ಆ ಭಗದತ್ತನನ್ನ್ನು ಕಂಡು ಆತನ ಪತ್ನಿಯರು ಮುಖವನ್ನು ಎತ್ತಿ ಸುತ್ತ ನೋಡುತ್ತಾ ಬರುತ್ತಿದ್ದಾರೆ. ಆನಯ ಮೇಲಿದ್ದ ಪತಿ ಭಗದತ್ತನನ್ನು ತಲುಪಲು ಆನೆಯನ್ನು ಹತ್ತಲು ತಿಳಿಯದೆ, ನೂರುಮಡಿ ಶೋಕಪಡುತ್ತಿದ್ದಾರೆ. ಉತ್ತರ ದಿಕ್ಕಿನಲ್ಲಿ ಅವರನ್ನು ನೋಡು, ಅದೆ, ಶಿವ! ಎನ್ನುತ್ತಾ ಗಾಂಧಾರಿ ಶೋಕಿಸಿದಳು.
- ದೇವ ನೋಡಾ ಶೋಕವಹ್ನಿಯ
- ಡಾವರವ ಕಾಂಭೋಜನರಸಿಯ
- ರಾವ ನೋಂಪಿಯ ನೋಂತರೋ ಶಿವ ಶಿವ ಮಹಾದೇವ |
- ಆವನಾತನು ನಿಮ್ಮವರುಗಳ
- ಮಾವನೇ ಪಾಂಚಾಲ ಸತಿಯರು
- ಜೀವದಲಿ ಜಾರಿದರು ರಮಣರ ಮೇಲೆ ತನಿಹೊರಳಿ || ೯ ||
- ಪದವಿಭಾಗ-ಅರ್ಥ: ದೇವ ನೋಡು+ ಆ ಶೋಕವಹ್ನಿಯ ಡಾವರವ (ತೀವ್ರತೆ, ರಭಸ) ಕಾಂಭೋಜನ+ ಅರಸಿಯರ+ ಆವ ನೋಂಪಿಯ (ವೃತ) ನೋಂತರೋ, ಶಿವ ಶಿವ ಮಹಾದೇವ ಆವನು+ ಆತನು ನಿಮ್ಮವರುಗಳ ಮಾವನೇ, ಪಾಂಚಾಲ ಸತಿಯರು ಜೀವದಲಿ ಜಾರಿದರು ರಮಣರ ಮೇಲೆ ತನಿಹೊರಳಿ (ಮೈ ಹೊರಳಿ).
- ಅರ್ಥ:ಗಾಂಧಾರಿಯುಕೃಷ್ಣನಿಗೆ,'ದೇವ ನೋಡು, ಆ ಶೋಕದ ಬೆಂಕಿಯ ತೀವ್ರತೆ ಮತ್ತು ರಭಸವನ್ನು ನೋಡು. ಕಾಂಭೋಜನ ರಾಣಿಯರನನು ನೋಡು, ಅವರು ಯಾವ ವ್ರತವನ್ನು ನೋಂತರೋ ಮಾಡಿದರೋ, ಹರಕೆ ಹೊತ್ತರೋ!, ಶಿವ ಶಿವ ಮಹಾದೇವ! ಆ ಕಡೆ ನೋಡು, ಆವನು, ಬಿದ್ದಿರುವ ಆತನು ದ್ರುಪದನೇ? ನಿಮ್ಮ ಪಾಂಡವರವರುಗಳ ಮಾವನೇ? ಆ ಪಾಂಚಾಲ ರಾಜ ರಾಜಕುಮಾರರ ಸತಿಯಂದಿರು ತಮ್ಮ ರಮಣರ ಹೆಣದ ಮೇಲೆ ಜೀವದವನ್ನು ಬಿಡುವಂತೆ ಅದರ ಮೇಲೆ ಹೊರಳಿ ಜಾರಿ ಬಿದ್ದರು.
- ಅದೆ ವಿರಾಟನ ಸತಿಯರಚೆಯ
- ಲದೆ ಘಟೋತ್ಕಚನಂಗನೆಯರಾ
- ಸುದತಿಯರ ಶೋಕವ ನಿರೀಕ್ಷಿಸು ಪಂಚಕೇಕೆಯರ |
- ಒದರಿ ಪಾಂಡ್ಯನ ಹೆಂಡಿರಾಚೆಯ
- ಲದೆ ಸುಸೋಮಕ ಸೃಂಜಯಾದ್ಯರ
- ವಧುಗಳೊರಲುತ್ತದೆ ಮುರಾಂತಕ ನಿಮ್ಮ ಸೇನೆಯಲಿ || ೧೦ ||
- ಪದವಿಭಾಗ-ಅರ್ಥ: ಅದೆ ವಿರಾಟನ ಸತಿಯರಚೆಯಲಿ(ರಚೆ- ಹೊರಗೆ ಸುರಿ, ಎರೆ, ಹೊರಸೂಸು, ವ್ಯಕ್ತಗೊಳಿಸು)+ ಅದೆ ಘಟೋತ್ಕಚನ+ ಅಂಗನೆಯರ+ ಆ + ಸುದತಿಯರ ಶೋಕವ ನಿರೀಕ್ಷಿಸು, ಪಂಚಕೇಕೆಯರ ಒದರಿ ಪಾಂಡ್ಯನ ಹೆಂಡಿರ+ ಆಚೆಯಲಿ+ ಅದೆ ಸುಸೋಮಕ ಸೃಂಜಯಾದ್ಯರ ವಧುಗಳ+ ಒರಲುತ್ತದೆ ಮುರಾಂತಕ ನಿಮ್ಮ ಸೇನೆಯಲಿ.
- ಅರ್ಥ:ಗಾಂಧಾರಿಯು ಕೃಷ್ಣನಿಗೆ ಪಾಂಡವ ಸೇನೆಯಲ್ಲಿ ಆದ ಸಾವುಗಳನ್ನು ತೋರಿಸುತ್ತಾಳೆ;'ಕೃಷ್ಣಾ ನೋಡು, ಅದೆ ವಿರಾಟನ ಪತ್ನಿಯರು ದುಃಖವನ್ನು ಹೊರಸೂಸುತ್ತಿರುವರು; ಅದೆ ಘಟೋತ್ಕಚನ ಹೆಂಡಿರು, ಆ ಸುದತಿಯರ ಶೋಕವನ್ನು ನಿರೀಕ್ಷಿಸು; ಪಂಚಕೇಕೆಯರ ಮತ್ತು ಪಾಂಡ್ಯನ ಹೆಂಡಿರು ಒದರುವುನ್ನು ಕೇಳು; ಆಚೆಯಲಿ ಅದೆ, ಸುಸೋಮಕ ಸೃಂಜಯ ಮೊದಲಾದವರ ವಧುಗಳ ದುಃಖದಿಂದ ಒರಲುತ್ತಿರುವುದನ್ನು ಕಾಣು. ಮುರಾಂತಕ ಕೃಷ್ಣ ಇದು ನಿಮ್ಮ ಸೇನೆಯಲ್ಲಿ ಆದ ಸಾವುಗಳು- ಮತ್ತು ಗೋಳು,' ಎಂದಳು.
- ಸುಖಿ ಕಣಾ ಭೂರಿಶ್ರವನವರ
- ಸಖಿಯರದೆ ಪಾಡಳಿದು ನಿಮ್ಮಯ
- ಸಖನ ಗೆಲಿಸಿದಿರಿವನ ಮುರಿದಿರಿ ರಾಧೆಯಾತ್ಮಜನ |
- ನಿಖಿಳ ಯಾಚಕಜನ ಸಹಿತ ತ
- ತ್ಸಖಿಯರಳುತದೆ ಕರ್ಣ ಮರಣದೊ
- ಳಖಿಳಜಗ ನೀನೊಬ್ಬ ತಪ್ಪಿಸಿ ಮರುಗಿತಿಂದಿನಲಿ || ೧೧ ||
- ಪದವಿಭಾಗ-ಅರ್ಥ:ಸುಖಿ ಕಣಾ ಭೂರಿಶ್ರವನು+ ಅವರ ಸಖಿಯರು+ ಅದೆ ಪಾಡು+ ಅಳಿದು(ಕೊಂದು) ನಿಮ್ಮಯ ಸಖನ ಗೆಲಿಸಿದಿರಿ+ ಇವನ ಮುರಿದಿರಿ, ರಾಧೆಯ+ ಅತ್ಮಜನ ನಿಖಿಳ ಯಾಚಕ ಜನ ಸಹಿತ ತತ್ಸಖಿಯರು+ ಅಳುತ+ ಅದೆ ಕರ್ಣ ಮರಣದೊಳು+ ಅಖಿಳ ಜಗ ನೀನೊಬ್ಬ ತಪ್ಪಿಸಿ ಮರುಗಿತು+ ಇಂದಿನಲಿ.
- ಅರ್ಥ:ಗಾಂಧಾರಿಯು, 'ಕೃಷ್ಣಾ, ಅರ್ಜುನನ ಒಂದೇ ಬಾಣದಿಂದ ಮಡಿದ ಭೂರಿಶ್ರವನು ಸುಖಿ ಕಣಾ, ಆದರೆ ಅದೆ ನೋಡು, ಅವರ ಸಖಿಯರ ಪಾಡು ನೋಡು; ಆ ಭೂರಿಶ್ರವನನ್ನು ಕೊಂದು ನಿಮ್ಮಯ ಸಖ ಸಾತ್ಯಕಿಯನ್ನು ಗೆಲಿಸಿದಿರಿ. ಇವನನ್ನು ಮುರಿದಿರಿ. ರಾಧೆಯ ಅತ್ಮಜನ, ಮಗನ, ಎಲ್ಲಾ ಯಾಚಕ- ದಾನಬೇಡುವ ಜನ ಸಹಿತ ತತ್- ಆ ಸಖಿಯರು ಕರ್ಣನ ಮರಣಕ್ಕಾಗಿ ಅಳುತ್ತಾ, ಅದೆ ನೋಡು, ಇಂದಿನ ದಿನದಲ್ಲಿ ಸತ್ತವರಿಗಾಗಗಿ ಅಖಿಲ ಜಗತ್ತೂ ಮರುಗಿತು,- ನೀನೊಬ್ಬ ತಪ್ಪಿಸಿ- ನಿನ್ನೊಬ್ಬನನ್ನು ಬಿಟ್ಟು. ನಿನಗೆ ಮಾತ್ರಾ ದುಃಖವಿಲ್ಲ,' ಎಂದಳು.
- ಭಾನುದತ್ತನ ಮೇಲೆ ಹೊರಳುವ
- ಮಾನಿನಿಯರ ನಿರೀಕ್ಷಿಸೈ ಮ
- ತ್ಸೂನುಗಳ ನೋಡಿತ್ತಲಿದೆ ದುಶ್ಶಾಸನಾದಿಗಳ |
- ಏನನೆಂಬೆನು ತನ್ನ ಸೊಸೆಯರ
- ಹಾನಿಯನು ಮಾದ್ರೇಶನರಸಿಯ
- ರೇನಧರ್ಮವ ನೆನೆದರೆಂದಳಲಿದಳು ಗಾಂಧಾರಿ || ೧೨ ||
- ಪದವಿಭಾಗ-ಅರ್ಥ: ಭಾನುದತ್ತನ ಮೇಲೆ ಹೊರಳುವ ಮಾನಿನಿಯರ ನಿರೀಕ್ಷಿಸೈ(ನೋಡು), ಮತ್ (ನನ್ನ)+ಸೂನುಗಳ ನೋಡು+ ಇತ್ತಲಿದೆ ದುಶ್ಶಾಸನಾದಿಗಳ, ಏನನೆಂಬೆನು ತನ್ನ ಸೊಸೆಯರ ಹಾನಿಯನು ಮಾದ್ರೇಶನ+ ಅರಸಿಯರು+ ಏನು+ ಅಧರ್ಮವ ನೆನೆದರೆಂದು+ ಅಳಲಿದಳು ಗಾಂಧಾರಿ
- ಟಿಪ್ಪಣಿ:-(ಭಾನುದತ್ತ- ಶಕುನಿಯ ಸಹೋದರ, ಯುದ್ಧದಲ್ಲಿ ಭೀಮನಿಂದ ಕೊಲ್ಲಲ್ಪಟ್ಟನು.)
- ಅರ್ಥ:ಗಾಂಧಾರಿಯು,' ಕೃಷ್ನನೇ ನೋಡು ನನ್ನ ತಮ್ಮ ಭಾನುದತ್ತನ ಮೇಲೆ ಹೊರಳುವ ಹೆಂಗಳೆಯರನ್ನು;, ಸತ್ತಿರುವ ನನ್ನ ಮಕ್ಕಳ ಕೆಡೆಗೆ ನೋಡು. ದುಶ್ಶಾಸನ ಮೊದಲಾದವರ ಇತ್ತ ಕಡೆಗಿದೆ; ಏನನ್ನು ಹೇಳಲಿ ತನ್ನ ಸೊಸೆಯರ ಹಾನಿಯನ್ನು, ಎಲ್ಲರೂ ವಿಧವೆಯರಾದರು. ಮಾದ್ರೇಶ ಶಲ್ಯನ ಅರಸಿಯರು ಏನು ಅಧರ್ಮವನ್ನು ನೆನೆದರೆಂದು ಅವರಿಗೆ ಈ ಕಷ್ಟ ಬಂದಿದೆ, ಎಂದು ಗಾಂಧಾರಿ ಅಳಲಿದಳು- ಅತ್ತಳು.
- ತಂದೆ ನೋಡೈ ಕೃಷ್ಣ ತನ್ನಯ
- ನಂದನರು ನೂರ್ವರಿಗೆ ಕಿರಿಯಳ
- ನಿಂದುಮುಖಿ ದುಶ್ಶಳೆಯನಾ ಸೈಂಧವನ ವಲ್ಲಭೆಯ|
- ಅಂದು ವಿವಿಧವ್ಯೂಹದಲಿ ಗುರು
- ನಿಂದಡೆಯು ಹುಸಿರಾತ್ರಿಯಲಿ ನೀ
- ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ || 13 ||
- ಪದವಿಭಾಗ-ಅರ್ಥ: ತಂದೆ ನೋಡೈ ಕೃಷ್ಣ ತನ್ನಯ ನಂದನರು ನೂರ್ವರಿಗೆ ಕಿರಿಯಳನು+ ಇಂದುಮುಖಿ ದುಶ್ಶಳೆಯನೊ+ ಆ ಸೈಂಧವನ ವಲ್ಲಭೆಯ(ಪತ್ನಿ) ಅಂದು ವಿವಿಧವ್ಯೂಹದಲಿ ಗುರುನಿಂದಡೆಯು ಹುಸಿರಾತ್ರಿಯಲಿ (ಸುಳ್ಳು ರಾತ್ರಿಯನ್ನು ಸೃಷ್ಟಿಸಿ) ನೀ-ಕೊಂದಲೈ ತನ್ನ+ ಅಳಿಯನನು ವರ ಸಿಂಧುಭೂಪತಿಯ.
- ಅರ್ಥ:ಕೃಷ್ಣನೊಡನೆ ಗಾಂಧಾರಿಯು ಮುಂದೆ ನೆಡೆದಂತೆ ತನ್ನ ಮಕ್ಕಳು ಅಳಿಯನ ಕಳೇಬರವನ್ನು ನೋಡುತ್ತಾಳೆ.ಕೃಷ್ಣಾ, ತಂದೆ, ನೋಡಯ್ಯಾ, ಎಂದು ತನ್ನ ಮಕ್ಕಳ ದೇಹಗಳನ್ನು ತೋರಿಸುತ್ತಾಳೆ; ನೂರು ಮಕ್ಕಳು ಬಿದ್ದಿದ್ದಾರೆ, ಆ ನೂರು ಮಕ್ಕಳಿಗೆ ಕಿರಿಯವಳಾದ ಇಂದುಮುಖಿ ದುಶ್ಶಳೆಯನ್ನು ನೋಡು, ಅಳುತ್ತಾ ಇರುವ ಆ ಸೈಂಧವನ ಪತ್ನಿಯನ್ನು ನೋಡು! ಅಂದು ನೀನು ವಿವಿಧವಾದ ಪದ್ಮವ್ಯೂಹದಲ್ಲಿ ಗುರು ದ್ರೋಣರು ನಿಂತು ತಡೆದರೂ, ಚಕ್ರವನ್ನು ಸುರ್ಯನಿಗೆ ಅಡ್ಡವಿಟ್ಟು ಹುಸಿ-ರಾತ್ರಿಯಲ್ಲಿ ನೀನು ಅವನನ್ನು ಕೊಂದೆಯಲ್ಲಾ!(ಅರ್ಜುನನಿಂದ ಕೊಲ್ಲಿಸಿದೆಯಲ್ಲಾ- ಅದು ಕೃಷ್ಣನೇ ಕೊಂದಂತೆ) ತನ್ನ ಅಳಿಯನನ್ನು, ಶ್ರೇಷ್ಠ ಸಿಂಧುಭೂಪತಿಯನ್ನು ಕೊಂದೆಯಲ್ಲವೇ?.ಎಂದಳು ಗಾಂಧಾರಿ.
- ಟಿಪ್ಪಣಿ:-(ದ್ರೋಣನ ರಕ್ಷಣೆಯಲ್ಲಿ ಅಡಗಿದ್ದ ಸೈಂಧವನು, ಸೂರ್ಯ ಮುಳುಗಿದನು, ಇನ್ನು ಭಯವಿಲ್ಲ, ಯುದ್ಧ ನಿಂತಿತು ಎಂದು ಭಾವಿಸಿದ; ಅರ್ಜುನನು ತನ್ನ ಪ್ರತಿಜ್ಞೆಯಂತೆ ಸೈಂಧವನನ್ನು ಸಂಜೆಯೊಳಗೆ ಕೊಲ್ಲಲು ವಿಫಲನಾಗಿ, ಅಗ್ನಿಪ್ರವೇಶ ಮಾಡುವುದನ್ನು ನೋಡಲು ಬಂದ. ಆಗ ಪುನಃ ಸೂರ್ಯ ಪಶ್ಚಿಮದಲ್ಲಿ ಕಾಣಿಸಿದ; ಕೃಷ್ನನ ಆಣತಿಯಂತೆ ಅರ್ಜುನನು ಬಾಣ ಹೂಡಿ ಸೈಂದವನ ತಲೆಯನ್ನು ಕತ್ತರಿಸಿದ. ಇದನ್ನು ಗಾಂಧಾರಿ ಕೃಷ್ಣನಿಗೆ ನೆನಪಿಸುತ್ತಾಳೆ. "ಕೃಷ್ಣಾ, ನೀನು ನನ್ನ ಅಳಿಯನನ್ನು ಕೊಂದೆ," ಎನ್ನುತ್ತಾಳೆ; ತಂದೆ ನೋಡೈ, ಎಂದು ಪ್ರೀತಿಯಿಂದ ಕರೆಯುತ್ತಾಳೆ. ಆದರೆ ಅವಳು ಕೃಷ್ಣನಿಗೆ 'ರಣರಂಗವನ್ನು ತೋರಿಸು ಬಾ' ಎಂದು ಕೋರಿಕೊಂಡಾಗಲೇ, ಅವಳು ತನ್ನ ಮನಸ್ಸಿನಲ್ಲಿ, ತನ್ನವರನ್ನು ಕೊಲ್ಲಿಸಿದ ಇವನಿಗೆ ಮಂಗಳಾರತಿ ಮಾಡಬೇಕು ಎಂದು ಯೋಚಿಸಿರಬಹುದು.)
- ಕ್ಷೇಮಧೂರ್ತಿಯನಾ ಕಳಿಂಗನ
- ಸೋಮದತ್ತನ ಚಿತ್ರಸೇನನ
- ಭೀಮವೈರಿಯಲಂಬುಸನ ಕಿಮ್ಮಿರನಂದನನ |
- ಭೌಮಸುತನ ಸುಶರ್ಮಕನ ಸು
- ತ್ರಾಮರಿಪುಗಳ ಭೂರಿಬಲದ ಸ
- ನಾಮರರಸಿಯರದೆ ನಿಜೇಶನ ಮೇಲೆ ತನಿಹೊರಳಿ || ೧೪ ||
- ಪದವಿಭಾಗ-ಅರ್ಥ:ಕ್ಷೇಮಧೂರ್ತಿಯನು+ ಆ ಕಳಿಂಗನ, ಸೋಮದತ್ತನ, ಚಿತ್ರಸೇನನ, ಭೀಮವೈರಿಯು+ ಅಲಂಬುಸನ, ಕಿಮ್ಮಿರನಂದನನ, ಭೌಮಸುತನ(ಭೂಮಿಯ ಮಗ, ನರಕಾಸುರನ ಭೌಮ ರಾಜ್ಯದನು.), ಸುಶರ್ಮಕನ, ಸುತ್ರಾಮರಿಪುಗಳ, ಭೂರಿಬಲದ ಸನಾಮರ (ಪ್ರಸಿದ್ಧರು)+ ಅರಸಿಯರ+ ಅದೆ ನಿಜ+ ಈಶನ(ತಮ್ಮ ಪತಿಯ) ಮೇಲೆ ತನಿಹೊರಳಿ(ತನು= ದೇಹ, ತನಿ- ಸ್ತ್ರೀಲಿಮಗವೇ?).
- ಅರ್ಥ:ಗಾಂಧಾರಿಯು ತಮ್ಮ ಸೇನೆಯ ವೀರರ ಕಳೇಬರವನ್ನು ಕೃಷ್ನನಿಗೆ ತೋರಿಸುತ್ತಾ,'ಕೃಷ್ಣಾ ನೋಡು,ಸತ್ತು ಬಿದ್ದಿರುವ- ಕ್ಷೇಮಧೂರ್ತಿಯನ್ನು, ಆ ಕಳಿಂಗನನ್ನು, ಸೋಮದತ್ತನನ್ನು ಚಿತ್ರಸೇನನನ್ನು, ಭೀಮವೈರಿಯಾದ ರಾಕ್ಷಸ ಅಲಂಬುಸನ್ನು, ಕಿಮ್ಮಿರನ ಮಗನನ್ನು, ಭೌಮಸುತ ಭಗದತ್ತನನ್ನು, ಸುಶರ್ಮಕನನ್ನು,, ಸುತ್ರಾಮ ಶತ್ರುಗಳ, ಮಹಾ ಸೈನ್ಯದ ಪ್ರಸಿದ್ಧರ ಪತ್ನಿಯರನ್ನು ಅದೆ ನೋಡು; ಅವರು ತಮ್ಮ ಪತಿಗಳ ಕಳೇಬರಗಳ ಮೇಲೆ ತಾವೇ ಬಿದ್ದು ಹೊರಳಿ ಅಳುವುದನ್ನು ನೋಡು,' ಎಂದಳು.
ಗಾಂಧಾರಿ ತನ್ನ ಮಗ ದುರ್ಯೋಧನನ ಬಳಿಯಲ್ಲಿ
ಸಂಪಾದಿಸಿ
- ಎನುತ ಬರೆಬರೆ ಮುಂದೆ ಕಂಡಳು
- ತನುಜನನು ಭೀಮನ ಗದಾ ಘ
- ಟ್ಟನದ ಘಾಯದ ಮೆಯ್ಯ ಖಂಡಿಸಿದೂರುಮಂಡಲದ |
- ನನೆದ ಹುಡಿಮಗ್ಗುಲಿನ ರಕುತದ
- ಹೊನಲ ಹೊಲಸಿದ ಘೂಕಕಾಕ
- ಧ್ವನಿ ಭಯಂಕರ ಸನ್ನಿಧಾನದ ಕೌರವೇಶ್ವರನ || ೧೫ ||
- ಪದವಿಭಾಗ-ಅರ್ಥ: ಎನುತ ಬರೆಬರೆ ಮುಂದೆ ಕಂಡಳು ತನುಜನನು(ಮಗ), ಭೀಮನ ಗದಾ ಘಟ್ಟನದ ಘಾಯದ ಮೆಯ್ಯ, ಖಂಡಿಸಿದ+ ಊರುಮಂಡಲದ ನನೆದ ಹುಡಿಮಗ್ಗುಲಿನ ರಕುತದ ಹೊನಲ, ಹೊಲಸಿದ ಘೂಕಕಾಕ ಧ್ವನಿ ಭಯಂಕರ ಸನ್ನಿಧಾನದ ಕೌರವೇಶ್ವರನ.
- ಅರ್ಥ:ಹೀಗೆ ಹೇಳುತ್ತಾ ಕೃಷ್ಣನ ಜೊತೆಯಲ್ಲಿ ಬರುಬರುತ್ತಿರುವಾಗ ಗಾಂಧಾರಿಯು ಮುಂದೆ ತನ್ನ ಮಗನನ್ನು ಕಂಡಳು. ಅವನು ಭೀಮನ ಗದಾ ಹೊಡೆತದ ಘಾಯದ ಮೆಯ್ಯಲ್ಲಿ, ಮುರಿದ ತೊಡೆಪ್ರದೇಶದ ಮತ್ತು ಮಣ್ಣಿನ ಹುಡಿಮಗ್ಗುಲಿನಲ್ಲಿ ರಕ್ತದ ಹೊಳೆಯಲ್ಲಿ ನೆನೆದ, ಹೊಲಸಿನ ಪ್ರದೇಶದಲ್ಲಿ ಘೂಕಕಾಕ ಕೂಗಿನ ಧ್ವನಿಯ ಭಯಂಕರ ಸನ್ನಿವೇಶದಲ್ಲಿ ಬಿದ್ದಿದ್ದ ತನ್ನ ಮಗ ಕೌರವೇಶ್ವರನನ್ನು ನೋಡಿದಳು.
- ಇತ್ತ ನೋಡೈ ಕೃಷ್ಣ ತನ್ನಯ
- ಮತ್ತದಂತಿಯನಿಂದುಕುಲ ರಾ
- ಜೊತ್ತ ಮನನೇಕಾದಶಾಕ್ಷೋಹಿಣಿಯ ವಲ್ಲಭನ |
- ಹತ್ತೆ ಹಿಡಿದೋಲಗಿಸುವರು ವರ
- ಮತ್ತಕಾಶಿನಿಯರುಗಳೀಗಳು
- ಸುತ್ತಮುತ್ತಿತು ಘೂಕ ವಾಯಸ ಜಂಬುಕವ್ರಾತ || ೧೬ ||
- ಪದವಿಭಾಗ-ಅರ್ಥ:ಇತ್ತ ನೋಡೈ ಕೃಷ್ಣ ತನ್ನಯ ಮತ್ತದಂತಿಯನು+ ಇಂದುಕುಲ(ಚಂದ್ರವಂಶ) ರಾಜೊತ್ತಮನನು+ ಏಕಾದಶ+ ಅಕ್ಷೋಹಿಣಿಯ ವಲ್ಲಭನ ಹತ್ತೆ ಹಿಡಿದು(ಹತ್ತಿರ ನಿಂತು ಉತ್ತಮ ಸೇವಕಿಯರು ಚಾಮರ ಹಿಡಿದು)+ ಓಲಗಿಸುವರು ವರ+ ಮತ್ತಕಾಶಿನಿಯರುಗಳು(ಚಾಮರ ಸೇವೆ ಮಾಡುವ ಸೇವಕಿಯರು?),+ ಈಗಳು ಸುತ್ತ ಮುತ್ತಿತು ಘೂಕ(ಗೂಬೆ) ವಾಯಸ(ಕಾಗೆ) ಜಂಬುಕ+ ವ್ರಾತ(ನರಿಗಳ ಹಿಂಡು)
- ಅರ್ಥ: ಗಾಂಧಾರಿಯು,'ಈ ಕಡೆ ನೋಡೋ ಕೃಷ್ಣಾ! ತನ್ನ ಮಗ- ಮದ್ದಾನೆಯನ್ನು, ಚಂದ್ರವಂಶದ ರಾಜೊತ್ತಮನನ್ನು ಎಂದಳು. ಹನ್ನೊಂದು ಅಕ್ಷೋಹಿಣಿ ಸೇನಯ ಗಂಡನನ್ನು ನೋಡು, ಹಿಂದೆ ಹತ್ತಿರ ನಿಂತು ಉತ್ತಮ ಸೇವಕಿಯರು ಚಾಮರ ಹಿಡಿದು ಓಲಗಿಸುತ್ತಿದ್ದರು. ಈಗಲಾದರೋ, ಸುತ್ತ ಗೂಬೆ, ಕಾಗೆ, ನರಿಗಳ ಹಿಂಡು ಅವನನ್ನು ಮುತ್ತಿದೆ,' ಎಂದಳು.
- ಎನುತ ಬಿದ್ದಳು ಮೂರ್ಛೆಯಲಿ ಮಾ
- ನಿನಿಯನೆತ್ತಿದನಸುರರಿಪು ನೃಪ
- ವನಿತೆಯರು ಭಾನುಮತಿ ಮೊದಲಾದಖಿಳ ರಾಣಿಯರು |
- ಜನಪತಿಯ ಮುಕ್ಕುರುಕಿದರು ತ
- ಜ್ಜನಿತ ಶೋಕಾದ್ಭುತದ ಹಾ ಹಾ
- ಧ್ವನಿಯ ಥಟ್ಟನೆ ಘಟ್ಟಿಸಿತು ಬ್ರಹ್ಮಾಂಡಮಂಡಲವ || ೧೭ ||
- ಪದವಿಭಾಗ-ಅರ್ಥ: ಎನುತ ಬಿದ್ದಳು ಮೂರ್ಛೆಯಲಿ ಮಾನಿನಿಯನು+ ಎತ್ತಿದನು+ ಅಸುರರಿಪು(ಕೃಷ್ಣ) ನೃಪ ವನಿತೆಯರು ಭಾನುಮತಿ ಮೊದಲಾದ+ ಅಖಿಳ ರಾಣಿಯರು ಜನಪತಿಯ ಮುಕ್ಕುರುಕಿದರು(ಬಿಡವಿಲ್ಲದಂತೆ ಇಕ್ಕಟ್ಟಾಗಿ ಮುತ್ತಿದರು), ತತ್+ ಜನಿತ ಶೋಕದ+ ಅದ್ಭುತದ ಹಾ ಹಾ ಧ್ವನಿಯ ಥಟ್ಟನೆ ಘಟ್ಟಿಸಿತು- ತುಂಬಿತು, ಬ್ರಹ್ಮಾಂಡಮಂಡಲವ(ಆಕಾಶ).
- ಅರ್ಥ:ಗಾಂಧಾರಿಯು ತನ್ನ ಮಗನನ್ನು ಗೂಬೆ, ಕಾಗೆ, ನರಿಗಳ ಹಿಂಡು ಮುತ್ತಿದೆ ಎಂದು ಹೇಳುತ್ತಾ, ಮೂರ್ಛೆಹೋಗಿ ಬಿದ್ದಳು. ಮಾನಿನಿ ಗಾಂಧಾರಿಯನ್ನು ಕೃಷ್ಣನು ಎತ್ತಿ ಉಪಚರಿಸಿದನು. ನೃಪ ದುರ್ಯೋಧನನ್ನು ಅವನ ವನಿತೆಯರು ರಾಣಿ ಭಾನುಮತಿ ಮೊದಲಾದ ಎಲ್ಲಾ ರಾಣಿಯರು ಜನಪತಿ ಸುಯೋಧನನ ಕಳೇಬರವನ್ನು ಬಿಡವಿಲ್ಲದಂತೆ ಇಕ್ಕಟ್ಟಾಗಿ ಮುತ್ತಿದರು. ಅವರಿಂದ ಹುಟ್ಟಿದ ಶೋಕದ ಅದ್ಭುತವಾದ ಹಾ- ಹಾಕಾರ ಧ್ವನಿಯು ಥಟ್ಟನೆ ಆಕಾಶವನ್ನು ಘಟ್ಟಿಸಿತು- ತುಂಬಿತು.
- ಜನಪ ಕೇಳೀಚೆಯಲಿ ಕುಂತೀ
- ವನಿತೆ ಕರ್ಣನ ಮೇಲೆ ಹೊರಳಿದ
- ಳಿನತನುಜ ಹಾ ಕರ್ಣ ಹಾ ಹಾ ಕರ್ಣ ಹಾಯೆನುತ |
- ನಿನಗೆ ಧರ್ಮಸುತಾದಿ ಭೂಮಿಪ
- ರನುಜರೈ ಮಾಯಾವಿ ಮಧುಸೂ
- ದನನೆ ಮರಯಿಸಿ ಕೊಂದನಕಟೆಂದೊರಲಿದಳು ಕುಂತಿ || ೧೮ ||
- ಪದವಿಭಾಗ-ಅರ್ಥ: ಜನಪ ಕೇಳು+ ಈಚೆಯಲಿ ಕುಂತೀವನಿತೆ ಕರ್ಣನ ಮೇಲೆ ಹೊರಳಿದಳು+ ಇನತನುಜ(ಸೂರ್ಯನ ಮಗ) ಹಾ ಕರ್ಣ ಹಾ ಹಾ ಕರ್ಣ ಹಾಯೆನುತ ನಿನಗೆ ಧರ್ಮಸುತ+ ಆದಿ ಭೂಮಿಪರು+ ಅನುಜರೈ ಮಾಯಾವಿ ಮಧುಸೂದನನೆ ಮರಯಿಸಿ ಕೊಂದನು+ ಅಕಟೆಂದು+ ಒರಲಿದಳು ಕುಂತಿ
- ಅರ್ಥ: ಜನಮೇಜಯ ಜನಪನೇ ಕೇಳು, ಈಚೆ ಕಡೆಯಲ್ಲಿ ಕುಂತೀದೇವಿಯು ಕರ್ಣನ ಕಳೇಬರದಮೇಲೆ ಮೇಲೆ ಬಿದ್ದು ಹೊರಳಿದಳು. ಸೂರ್ಯನ ಮಗನೇ, ಹಾ ಕರ್ಣ! ಹಾ ಹಾ ಕರ್ಣ! ಹಾಯೆನ್ನುತ್ತಾ ನಿನಗೆ ಧರ್ಮಸುತ ಮೊದಲಾದ ರಾಜಕುಮಾರರುನಿನಗೆ ತಮ್ಮಂದಿರಯ್ಯಾ, ನನಗೆ ಏಕೋ ಮರವೆಯಾಯಿತು. ಮಾಯಾವಿ ಮಧುಸೂದನನೇ ನನಗೆ ಮರವೆಯನ್ನು ಮಾಡಿ ನಿನ್ನನ್ನು ಕೊಂದನು. ಅಕಟ!,' ಎಂದು ಕುಂತಿದೇವಿಯು ಗೋಳಾಡಿದಳು.
- ಟಿಪ್ಪಣಿ:-ಕುಂತಿಯು ಯುದ್ಧ ಆರಂಭಕ್ಕೆ ಮೊದಲು ಕೃಷ್ನನ ಸಲಹೆಯಂತೆ ಕರ್ಣನನ್ನು ಕಂಡು ಪಾಂಡವರನ್ನು ಕೊಲ್ಲಬಾರದೆಂದು ವಚನ ಬೇಡುತ್ತಾಳೆ. ಅವನು "ಅರ್ಜುನನ್ನು ಬಿಟ್ಟು" ಎಂದು ಹೇಳಿ ಮಾತುಕೊಟ್ಟು ಒಪ್ಪುತ್ತಾನೆ. ಕುಂತಿಯು ಪಾಂಡವರಿಗೆ ತೊಂದರೆಯಾಗ ಬಾರದೆಂದೂ, ತನ್ನ ಚಿಕ್ಕಂದಿನ ತಪ್ಪು ಮುಚ್ಚಲೆಂದೂ ಕರ್ಣನ ವಿಷಯದಲ್ಲಿ ಮೌನ ವಹಿಸಿರುತ್ತಾಳೆ(ವ್ಯಾಸರು). ಆದರೆ ಈಗ ಇಲ್ಲಿ ಕುಂತಿ, 'ಮಾಯಾವಿ ಕೃಷ್ನನ ಕೆಲಸ' ಎನ್ನವಳು. ಮೂಲ ವ್ಯಾಸರ ಕತೆಯನ್ನು ಬದಲಿಸಿ ಬರೆದ ಕವಿ ಕುಮಾರವ್ಯಾಸನು ತನ್ನ ಕೃಷ್ಣ ಭಕ್ತಿಯ ಭರದಲ್ಲಿ ಎಲ್ಲಾ ಕಡುಕಿಗೂ ಒಳ್ಳೆಯದಕ್ಕೂ ಕೃಷ್ಣನನ್ನು ಹೊಣೆಗಾರನಾಗಿ ಮಾಡಿಬಿಟ್ಟಿದ್ದಾನೆ.(ಕೆಡುಕಿಗೆಲ್ಲಾ ಶನೀಶ್ವರನೇ ಹೊಣೆ- ಎಂದಂತೆ)
- ಅರಿದನಂತಕಸೂನು ಮುರಹರ
- ನಿರಿದನೇ ನಾವಿನ್ನು ಕರ್ಣಗೆ
- ಕಿರಿಯರೈ ಲೇಸಾಯ್ತು ಗುರುಜನ ಬಂಧುಜನಹನನ |
- ಉರುವ ಶಶಿವಂಶದ ಮಹಾನೃಪ
- ರೆರಗಿದರೆ ಪಾತಕಕೆ ಮುನ್ನೆ
- ಚ್ಚರಿಸದಕಟಾ ತಾಯಿ ಕೆಡಿಸಿದಳೆಂದು ಬಿಸುಸುಯ್ದ || ೧೯ ||
- ಪದವಿಭಾಗ-ಅರ್ಥ:ಅರಿದನು+ ಅಂತಕಸೂನು(ಧರ್ಮಜ) ಮುರಹರನು(ಕೃಷ್ಣ)+ ಇರಿದನೇ (ಮೋಸಮಾಡಿದನೇ - ಬೆನ್ನಿಗೆ ಕತ್ತಿಯಿಂದ ಇರಿದನೇ) ನಾವಿನ್ನು ಕರ್ಣಗೆ ಕಿರಿಯರೈ ಲೇಸಾಯ್ತು ಗುರುಜನ ಬಂಧುಜನ ಹನನ ಉರುವ(ದೊಡ್ಡ) ಶಶಿವಂಶದ ಮಹಾನೃಪರು+ ಎರಗಿದರೆ(ನಮಿಸಿದರೆ, ಒಪ್ಪಿದರೆ) ಪಾತಕಕೆ ಮುನ್ನ+ ಎಚ್ಚರಿಸದೆ+ ಅಕಟಾ ತಾಯಿ ಕೆಡಿಸಿದಳು+ ಏಂದು ಬಿಸುಸುಯ್ದ.
- ಅರ್ಥ:ತಾಯಿ ಕುಂತಿ ಹೇಳಿದುದನ್ನು ಧರ್ಮಜನು ಕೇಳಿ ಸತ್ಯವನ್ನು ತಿಳಿದನು. ಕೃಷ್ಣನು ನಮಗೆ ಮೋಸಮಾಡಿದನೇ! ನಾವು ಇನ್ನು ಕರ್ಣನಿಗೆ ತಮ್ಮಂದಿರಯ್ಯಾ!ಲೇಸಾಯ್ತು, ಗುರುಜನ, ಬಂಧುಜನ, ಇವರ ವಧೆಯ ದೋಷ ಬಂದಿತು. ಈ ಪಾತಕಕ್ಕೆ ಮೊದಲೆ ಎಚ್ಚರಿಸದೆ ಶ್ರೇಷ್ಠ ಶಶಿವಂಶದ ದೇವಲೋಕದಲ್ಲಿರುವ ಮಹಾನೃಪರು ಒಪ್ಪಿದರೆ? ನಮ್ಮಿಂದ ಆದ ಪಾಪಕ್ಕೆ, ಅಕಟಾ ತಾಯಿ ಕೆಡಿಸಿದಳು, ಏಂದು ಧರ್ಮಜನು ಬಿಸುಸುಯ್ದನು- ನಿಟ್ಟುಸಿರುಬಿಟ್ಟನು.
- ಹೋಗಲಿನ್ನಾ ಕ್ಷತ್ರಧರ್ಮ
- ತ್ಯಾಗ ದುರ್ವ್ಯಸನ ಪ್ರಪಂಚವ
- ನೀಗಿ ಕಳೆಯೆಂದಸುರರಿಪುವೈತಂದು ಮನ್ನಿಸಿದ |
- ಮೇಗಿವರ ಸಂಸ್ಕಾರಕಾರ್ಯನಿ
- ಯೋಗವಿವೆ ಭಾರಂಕ ನಿನಗೆ ಸ
- ರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ ೨೦
- ಪದವಿಭಾಗ-ಅರ್ಥ:ಹೋಗಲಿ(ಬೇಡ)+ ಇನ್ನು+ ಆ ಕ್ಷತ್ರಧರ್ಮತ್ಯಾಗ ದುರ್ವ್ಯಸನ ಪ್ರಪಂಚವ ನೀಗಿ ಕಳೆಯೆಂದ+ ಅಸುರರಿಪುವು+ ಐತಂದು(ಬಂದು) ಮನ್ನಿಸಿದ(ಸಮಾಧಾನಪಡಿಸಿ) ಮೇಗೆ(ನಂತರ)+ ಇವರ ಸಂಸ್ಕಾರಕಾರ್ಯ ನಿಯೋಗವು+ ಇವೆ ಭಾರಂಕ ನಿನಗೆ ಸರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ.
- ಅರ್ಥ:ಕುಂತಿಯು ಕರ್ಣನು ತನ್ನ ಹಿರಿಯ ಮಗ ಎಂದು ಅಳಲಿದಾಗ, ಧರ್ಮಜನು ತನಗೆ ಇನ್ನು ಆ ಕ್ಷತ್ರಧರ್ಮತ್ಯಾಗವೇ ಸರಿ (ಸಂನ್ಯಾಸ ಸ್ವೀಕಾರವೇ ಸರಿ), ಆ ದುರ್ವ್ಯಸನ ಹೋಗಲಿ ಬೇಡ ಎಂದನು; ಆಗ ಅಸುರರಿಪು ಕೃಷ್ಣನು ಬಂದು ಅವನನ್ನು ಸಮಾಧಾನಪಡಿಸಿದ ನಂತರ, ಇವರ ಸಂಸ್ಕಾರಕಾರ್ಯ ಪ್ರಪಂಚವ ನಿಯೋಗವು ಈಗ ಭಾರಂಕ- ನಿನ್ನ ಧರ್ಮ. ಅದನ್ನು ಸರಾಗದಲಿ ನೀಗಿ- ನೆರವೇರಿಸಿ ಪಾಪವನ್ನು ಕಳೆದುಕೊ ಎಂದ. ಹೀಗೆ ಶೌರಿಯು ಧರ್ಮಜಭೂಪತಿಗೆ ಸಂತೈಸಿ ಹೇಳಿದನು.
ಯುದ್ಧದಲ್ಲಿ ಮಡಿದ ರಾಜರಿಗೆ ಅಂತ್ಯಕ್ರಿಯೆ
ಸಂಪಾದಿಸಿ
- ವ್ಯಾಸ ನಾರದ ವಿದುರ ಸಾತ್ಯಕಿ
- ಕೇಶವನು ದಾರುಕ ಯುಯುತ್ಸು ಮ
- ಹೀಶ ಮೊದಲಾದನಿಬರರಸರ ಸಾರಥಿವ್ರಾತ |
- ಆ ಸಚಿವರಾ ಹಸ್ತಿನಾಪುರ
- ದಾ ಸಮಸ್ತ ಪ್ರಕೃತಿಜನ ಸಂ
- ತೈಸಿದರು ಸಂಸ್ಕಾರವಿಧಿಯನು ಹತಮಹೀಶರಿಗೆ || ೨೧ ||
- ಪದವಿಭಾಗ-ಅರ್ಥ: ವ್ಯಾಸ, ನಾರದ, ವಿದುರ, ಸಾತ್ಯಕಿ, ಕೇಶವನು, ದಾರುಕ, ಯುಯುತ್ಸು, ಮಹೀಶ ಮೊದಲಾದ+ ಅನಿಬರ+ ಅರಸರ ಸಾರಥಿವ್ರಾತ, ಆ ಸಚಿವರು+ ಆ ಹಸ್ತಿನಾಪುರದ+ ಆ ಸಮಸ್ತ ಪ್ರಕೃತಿಜನ, ಸಂತೈಸಿದರು ಸಂಸ್ಕಾರ ವಿಧಿಯನು ಹತ(ಸತ್ತ)+ ಮಹೀಶರಿಗೆ.(ಸಂತೈಸು= ಉಪಚರಿಸು, ಆದರಿಸು ೩ ವಿವರಿಸು ೪ ನಿವಾರಿಸು ೫ ಅಲುಗಿಸು, ಕದಲಿಸು ೬ ತೃಪ್ತಿಪಡಿಸು)
- ಅರ್ಥ:ಕೃಷ್ಣನ ಸಲಹೆಯಂತೆ ವ್ಯಾಸ, ನಾರದ, ವಿದುರ, ಸಾತ್ಯಕಿ, ಕೇಶವನು (ಕೃಷ್ಣನೂ ಸೇರಿಕೊಂಡು), ದಾರುಕ(ಕೃಷ್ಣನಸಾರಥಿ), ಯುಯುತ್ಸು, ಮಹೀಶ-ಧರ್ಮಜ ಮೊದಲಾದ ಎಲ್ಲರ ಅರಸರ ಸಾರಥಿಗಳ ಸಮೂಹ, ಆ ರಾಜರ ಸಚಿವರು ಆ ಹಸ್ತಿನಾಪುರದ, ಆ ಸಮಸ್ತ ಪ್ರಕೃತಿಜನರೂ ಸೇರಿಕೊಂಡು ಮರಣಹೊಂದಿದ ರಾಜರಿಗೆ- ಸಮಸ್ತರಿಗೆ ಸಂಸ್ಕಾರ ವಿಧಿಯನ್ನು ನೆರವೇರಿಸಿದರು.
- ಕುರುಪತಿಯ ರವಿಸುತನ ಮಾದ್ರೇ
- ಶ್ವರನ ದುಶ್ಶಾಸನ ವಿಕರ್ಣಾ
- ದ್ಯರ ಜಯದ್ರಥ ಬಾಹ್ಲಿಕರ ಭಗದತ್ತ ಲಕ್ಷಣರ
- ಗುರುವರನ ಪಾಂಚಾಲ ಮತ್ಸ್ಯೇ
- ಶ್ವರರ ಕುಂತೀಭೋಜನೃಪಮು
- ಖ್ಯರನು ವಿಧಿಪೂರ್ವಕದಿ ದಹಿಸಿದರಾಹಿತಾಗ್ನಿಯಲಿ || ೨೨ ||
- ಪದವಿಭಾಗ-ಅರ್ಥ:ಕುರುಪತಿಯ ರವಿಸುತ (ಕರ್ಣ)ನ ಮಾದ್ರೇಶ್ವರನ, ದುಶ್ಶಾಸನ, ವಿಕರ್ಣ+ ಆದ್ಯರ ಜಯದ್ರಥ, ಬಾಹ್ಲಿಕರ, ಭಗದತ್ತ, ಲಕ್ಷಣರ, ಗುರುವರನ, ಪಾಂಚಾಲ, ಮತ್ಸ್ಯೇಶ್ವರರ, ಕುಂತೀಭೋಜ ನೃಪಮುಖ್ಯರನು ವಿಧಿಪೂರ್ವಕದಿ ದಹಿಸಿದರು+ ಅಹಿತಾಗ್ನಿಯಲಿ.
- ಅರ್ಥ:ಅಮತ್ಯ ಸಂಸಗಕಾರ ವಿಧಿಯಂತೆ, ಕುರುಪತಿ ಕೌರವನನ್ನೂ, ರವಿಸುತ ಕರ್ಣನನ್ನೂ, ಮಾದ್ರೇಶ್ವರ ಶಲ್ಯನನ್ನೂ, ದುಶ್ಶಾಸನನ್ನೂ, ವಿಕರ್ಣ ಮೊದಲಾದ ಕೌರವನ ತಮ್ಮಂದಿರನ್ನೂ, ಜಯದ್ರಥ, ಬಾಹ್ಲಿಕರ, ಭಗದತ್ತ, ಲಕ್ಷಣರನ್ನೂ, ಗುರುವರ ದ್ರೋಣರನ್ನೂ, ಪಾಂಚಾಲ ದ್ರುಪದ ಮೊದಲಾದ ರಾಜ, ರಾಜಕುಮಾರರನ್ನೂ, ಮತ್ಸ್ಯೇಶ್ವರರಾದ ವಿರಾಟದೇಶದ ರಾಜರನ್ನೂ, ಕುಂತೀಭೋಜರು, ಇತರನೃಪಮುಖ್ಯರನ್ನೂ ವಿಧಿಪೂರ್ವಕವಾಗಿ ಅಹಿತಾಗ್ನಿಯಲ್ಲಿ ದಹಿಸಿದರು(ಸುಟ್ಟರು).
- ಕಳನ ಚೌಕದ ಸುತ್ತಲೊಟ್ಟಿಸಿ
- ತಳಿಗಳನು ಬಹಳಾಗ್ನಿಯನು ಕೈ
- ಕೊಳಿಸಿದರು ದಹಿಸಿದರು ಬಹಳಾಕ್ಷೋಹಿಣೀಭಟರ
- ಬಳಿಕ ಹಸ್ತಿನಪುರದ ಸೀಮಾ
- ಸ್ಥಳಕೆ ಬಂದರು ನಿಖಿಳ ಕಾಂತಾ
- ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ ೨೩
- ಪದವಿಭಾಗ-ಅರ್ಥ:ಕಳನ(ರಣರಂಗದ) ಚೌಕದ ಸುತ್ತಲು+ ಒಟ್ಟಿಸಿ ತಳಿಗಳನು(ಹೆಣ ಸುಡುವ ಸೌದೆಯ ರಾಶಿ, ಈಡು) ಬಹಳ+ ಅಗ್ನಿಯನು ಕೈಕೊಳಿಸಿದರು, ದಹಿಸಿದರು ಬಹಳ+ ಅಕ್ಷೋಹಿಣೀ ಭಟರ, ಬಳಿಕ ಹಸ್ತಿನಪುರದ ಸೀಮಾಸ್ಥಳಕೆ ಬಂದರು, ನಿಖಿಳ(ಎಲ್ಲಾ) ಕಾಂತಾವಳಿ ಸಹಿತ ಗಂಗ+ ಅವಗಹನವ(ಗಮನವ) ಮಾಡಿದನು ನೃಪತಿ(ಯುಧಿಷ್ಠಿರ)
- ಅರ್ಥ:ಕುರುಕ್ಷೇತ್ರಕ್ಕೆ ಬಂದವರು, ರಣರಂಗದ ಚೌಕದ ಸುತ್ತಲು ಸೌದೆಯ ರಾಶಿಯನ್ನು ಒಟ್ಟಿಸಿ ತಳಿಗಳನ್ನು ರಚಿಸಿದರು. ನಂತರ ವಿಧಿಯಂತೆ ಬಂದವರಿಂದ ಬಹಳವಾಗಿ ಅಗ್ನಿಯನ್ನು ಕೈಕೊಳಿಸಿದರು- ಬೆಂಕಿಕೊಡಿಸಿದರು. ಹೀಗೆ ಮೃತರಾದ ಬಹಳ ಅಕ್ಷೋಹಿಣೀ ಭಟರ ದೇಹವನ್ನು ದಹಿಸಿದರು. ಬಳಿಕ ಅವರು ಹಸ್ತಿನಾಪುರದ ಹೊರವಲಯದ ಸ್ಥಳಕ್ಕೆ ಬಂದರು. ಎಲ್ಲಾ ವನಿತೆಯರ ಸಹಿತ ಗಂಗಾಸ್ನಾನ- ಮಾಡಿದರು. ಯುಧಿಷ್ಠಿರನೂ ಗಂಗಾ ಸ್ನಾನವನ್ನು ಮಾಡಿದನು.
- ಆ ನದಿಯ ತೀರದಲಿ ತಿಂಗಳು
- ಮಾನನಿಧಿ ತತ್ಪ್ರೇತರಿಗೆ ಜಲ
- ದಾನ ವಿಧಿವಿಹಿತಪ್ರಪಂಚಿತ ಸಕಲ ಸಂಸ್ಕೃತಿಯ |
- ಭೂನುತನು ಮಾಡಿದನು ಬಂದುದು
- ಜಾನಪದಜನವೈದೆ ಕುಂತೀ
- ಸೂನುವನು ದರುಶನವ ಮಾಡಿತು ಕಾಣಿಕೆಯ ನೀಡಿ || ೨೪ ||
- ಪದವಿಭಾಗ-ಅರ್ಥ:ಆ ನದಿಯ ತೀರದಲಿ ತಿಂಗಳು ಮಾನನಿಧಿ ತತ್+ ಪ್ರೇತರಿಗೆ(ಆ ಮೃತರಿಗೆ, ಸತ್ತವರಿಗೆ) ಜಲದಾನ ವಿಧಿ+ವಿಹಿತ ಪ್ರಪಂಚಿತ ಸಕಲ ಸಂಸ್ಕೃತಿಯ ಭೂನುತನು(ನುತ- ಹೊಗಳು; ಭೂಮಿಯ ಜನರು ಹೊಗಳಿದ ಧರ್ಮಜನು) ಮಾಡಿದನು ಬಂದುದು ಜಾನಪದ ಜನವು+ ಐದೆ(ಬರಲು, ಬಂದವರು) ಕುಂತೀಸೂನುವನು ದರುಶನವ ಮಾಡಿತು ಕಾಣಿಕೆಯ ನೀಡಿ.
- ಅರ್ಥ:ಆ ನಂತರ ಮಾನನಿಧಿ ದರ್ಮಜ ಮೊದಲಾದವರು, ಆ ನದಿಯ ತೀರದಲ್ಲಿ ತಿಂಗಳು ಆ ಮೃತರಿಗೆ ಜಲದಾನ ಮೊದಲಾದ ವಿಧಿ ವಿಹಿತವಾದ ಪ್ರಾಪಂಚಿಕ ಸಕಲ ಸಂಸ್ಕಾರವನ್ನು ಎಲ್ಲರಿಂದ ಹೊಗಳಲ್ಪಟ್ಟ ಧರ್ಮಜನು ಮಾಡಿದನು. ನಂತರ ಊರು ಊರುಗಳಲ್ಲಿದ್ದ ಜಾನಪದ ಜನರು ಬಂದರು. ಹಾಗೆ ಬಂದವರು ಕುಂತೀಸೂನು ಧರ್ಮಜನನ್ನು ಕಾಣಿಕೆಗಳನ್ನು ನೀಡಿ ದರ್ಶನ ಮಾಡಿದರು.
ಹಸ್ತಿನಾಪುರದ ಅರಮನೆಗೆ ಧರ್ಮಜನ ಪ್ರವೇಶ
ಸಂಪಾದಿಸಿ
- ತಿಳುಹಿ ರಾಯನ ಹೃದಯ ಸಂಚಿತ
- ಕಲುಷವನು ಖಂಡಿಸಿ ಗತಾಕ್ಷನ
- ಬಲಿದ ಚಿತ್ತವ್ಯಥೆಯನಾರಿಸಿ ನೃಪವಧೂಜನದ |
- ಅಳಲನಾರಿಸಿ ಗಜಪುರದ ನೃಪ
- ನಿಳಯವನು ಹೊಗಿಸಿದನು ಯದುಕುಲ
- ತಿಲಕ ಗದುಗಿನ ವೀರನಾರಾಯಣನು ಪಾಂಡವರ || ೨೫ ||
ಪದವಿಭಾಗ-ಅರ್ಥ: ತಿಳುಹಿ ರಾಯನ ಹೃದಯ ಸಂಚಿತ ಕಲುಷವನು ಖಂಡಿಸಿ, ಗತಾಕ್ಷನ(ಗತ+ ಅಕ್ಷಿಯವನು ಕಣ್ಣಿಲ್ಲದವನ) ಬಲಿದ ಚಿತ್ತವ್ಯಥೆಯನು+ ಆರಿಸಿ ನೃಪವಧೂ+ ಜನದ ಅಳಲನು+ ಆರಿಸಿ ಗಜಪುರದ ನೃಪ ನಿಳಯವನು ಹೊಗಿಸಿದನು, ಯದುಕುಲ ತಿಲಕ ಗದುಗಿನ ವೀರನಾರಾಯಣನು ಪಾಂಡವರ.
ಅರ್ಥ: ಧರ್ಮರಾಯನ ಹೃದಯದಲ್ಲಿ ಸಂಚಿತವಾಗಿದ್ದ 'ತನ್ನ ಬಂಧುಗಳನ್ನು ಕೊಂದೆನು. ಎಂಬ ಮನಸ್ಸಿನಲ್ಲಿ ತುಂಬಿದ ಕಲ್ಮಷವನು/ ದೋಷವನ್ನು ಖಂಡಿಸಿ,ಅವನಿಗೆ ತಿಳುವಳಿಕೆ ಹೇಳಿ, ಧೃತರಾಷ್ಟ್ರನ ಮನಸ್ಸಿನ ಒಳಹೊಕ್ಕ ಚಿತ್ತವ್ಯಥೆಯನ್ನು- ಮನಸ್ಸಿನ ಆಳವಾದ ದುಃಖವನ್ನು ಆರಿಸಿ, ನಂತರ ರಾಜರ ಪತ್ನೀ ಜನರ ಸಂಕಟವನ್ನು ಆರಿಸಿ, ಪಾಂಡವರನ್ನೂ, ಉಳಿದ ಎಲ್ಲರನ್ನೂ ಹಸ್ತಿನಾಪುರದ ರಾಜನಿಲಯವಾದ ಅರಮನೆಯನ್ನು ಕೃಷ್ನನು ಪ್ರವೇಶ ಮಾಡಿಸಿದನು. ಅವನೇ ಯದುಕುಲ ತಿಲಕ ಗದುಗಿನ ವೀರನಾರಾಯಣನು.
♠♠♠
ॐ
|