ಗದಾಪರ್ವ: ೧೨. ಹನ್ನೆರಡನೆಯ ಸಂಧಿ

<ಕುಮಾರವ್ಯಾಸ ಭಾರತ

ಗದಾಪರ್ವ-ಹನ್ನೆರಡನೆಯ ಸಂಧಿ

ಸಂಪಾದಿಸಿ

ಸೂ. ರಣವ ಶೋಧಿಸಲೆಂದು ಕಳನೊಳು
ಹೆಣನ ತುಳಿತುಳಿದರಸೆ ಕುರುಧಾ
ರುಣಿಯ ಪತಿಯನು ಕಂಡು ನೆರೆ ಮರುಗಿದಳು ಗಾಂಧಾರಿ

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು ೧

ನಿನ್ನ ಲೀಲೆಯ ಬೆಳೆಸಿರಿಯ ಸಂ
ಪನ್ನ ಮಾಯಾರಚನೆಯಿದು ನಿ
ರ್ಭಿನ್ನಭಾರತನಿಚಿತ ಬಹಳಾಕ್ಷೋಹಿಣೀ ದಳವ
ತನ್ನೊಡನೆ ಹಗೆಬೆಳೆದ ಶೌರ‍್ಯವಿ
ಪನ್ನರನು ತೋರೈ ಜನಾರ್ದನ
ಮನ್ನಿಸೆಂದಳು ನಯನಜಲವನು ಮಿಡಿದು ಗಾಂಧಾರಿ ೨

ತಾಯೆ ಬಾ ಗಾಂಧಾರಿ ಮನದಲಿ
ನೋಯದಿರು ಪೌರಾಣಜನ್ನದ
ದಾಯಭಾಗದ ಭೋಗ ಭಂಗಿಸಲಳುಕಲೇಕಿನ್ನು
ಸಾಯಲಾಗದೆ ಸುಭಟರಸುಗಳು
ಬೀಯವೇ ಬ್ರಹ್ಮಾದಿಗಳಿಗಿದು
ದಾಯವೀ ಸಂಸಾರವೆಂದನು ನಗುತ ಮುರವೈರಿ ೩

ಎಂದು ಕೈಗೊಟ್ಟಬಲೆಯನು ಹರಿ
ತಂದನಾ ಸಂಗ್ರಾಮಭೂಮಿಗೆ
ಹಿಂದೆ ಬರಲಷ್ಟಾದಶಾಕ್ಷೋಹಿಣಿಯ ನಾರಿಯರು
ಮುಂದೆ ಹೆಣದಿನಿಹಿಗಳು ಖಗಮೃಗ
ವೃಂದ ಚೆಲ್ಲಿತು ಭೂತ ಪೂತನಿ
ವೃಂದ ಕೆದರಿತು ಹೊಕ್ಕರಿವರದ್ಭುತರಣಾಂಗಣವ ೪

ಸೂಸಿತಬಲಾವೃಂದ ಕೆದರಿದ
ಕೇಶಪಾಶದ ತೆಳುವಸುರ ನಿ
ಟ್ಟಾಸುರದ ಹೊಯ್ಲುಗಳ ಲೋಚನವಾರಿಧಾರೆಗಳ
ಆಸುರಾಕ್ರಂದನದ ಶೋಕಾ
ವೇಶ ಬಹಳದ ಬಾಲೆಯರು ಪ್ರಾ
ಣೇಶ ಮೈದೋರೆನುತ ಹೊಕ್ಕರಸಿದರು ಕಳನೊಳಗೆ ೫

ಹರಿದರಗಲಕೆ ನಾರಿಯರು ಕುರು
ಧರಣಿಯಲಿ ತಂತಮ್ಮ ಪತಿಗಳ
ಕರಿಗಳಲಿ ತುರಗದಲಿ ರಥದಲಿ ಕಂಡರಲ್ಲಲ್ಲಿ
ಶಿರವ ಮುಂಡಾಡಿದರು ಹೆಣನಲಿ
ಹೊರಳಿದರು ವಿವಿಧ ಪ್ರಳಾಪದ
ಪರಿಠವವನೆಂತರಿದರೋ ವರ್ಣಿಸುವಡರಿದೆಂದ ೬

ನಡೆದಳಾ ಗಾಂಧಾರಿ ಶೋಕದ
ಕಡಲೊಳೇಳುತ ಮುಳುಗುತಂಘ್ರಿಯ
ಕೊಡಹುತರುನಾಂಬುಗಳ ಹೊನಲಿನ ಜಾನುದಘ್ನಗಳ
ಅಡಗಿನಲಿ ಕಾಲೂರಿ ಸಿಲುಕಿದ
ಡೊಡನೆ ಹರಿ ನೆಗಹುವನು ನರವಿನ
ತೊಡಕ ಬಿಡಿಸುತ ಹೊಕ್ಕಲಂಗನೆ ಹೆಣನ ಮಧ್ಯದಲಿ ೭

ಇತ್ತ ನೋಡೈ ದೇವಕೀಸುತ
ಮತ್ತಗಜ ಕಂಧರದೊಳಾ ಭಗ
ದತ್ತನನು ಕಂಡಾತನರಸಿಯರೈದೆ ಮೊಗವೆತ್ತಿ
ಸುತ್ತ ಬರುತೈದಾರೆ ದಂತಿಯ
ಹತ್ತಲರಿಯದೆ ನೂರುಮಡಿ ಶೋ
ಕೋತ್ತರದಲದೆ ಶಿವ ಎನುತ ಮರುಗಿದಳು ಗಾಂಧಾರಿ ೮

ದೇವ ನೋಡಾ ಶೋಕವಹ್ನಿಯ
ಡಾವರವ ಕಾಂಭೋಜನರಸಿಯ
ರಾವ ನೋಂಪಿಯ ನೋಂತರೋ ಶಿವ ಶಿವ ಮಹಾದೇವ
ಆವನಾತನು ನಿಮ್ಮವರುಗಳ
ಮಾವನೇ ಪಾಂಚಾಲ ಸತಿಯರು
ಜೀವದಲಿ ಜಾರಿದರು ರಮಣರ ಮೇಲೆ ತನಿಹೊರಳಿ ೯

ಅದೆ ವಿರಾಟನ ಸತಿಯರಚೆಯ
ಲದೆ ಘಟೋತ್ಕಚನಂಗನೆಯರಾ
ಸುದತಿಯರ ಶೋಕವ ನಿರೀಕ್ಷಿಸು ಪಂಚಕೇಕೆಯರ
ಒದರಿ ಪಾಂಡ್ಯನ ಹೆಂಡಿರಾಚೆಯ
ಲದೆ ಸುಸೋಮಕ ಸೃಂಜಯಾದ್ಯರ
ವಧುಗಳೊರಲುತ್ತದೆ ಮುರಾಂತಕ ನಿಮ್ಮ ಸೇನೆಯಲಿ ೧೦

ಸುಖಿ ಕಣಾ ಭೂರಿಶ್ರವನವರ
ಸಖಿಯರದೆ ಪಾಡಳಿದು ನಿಮ್ಮಯ
ಸಖನ ಗೆಲಿಸಿದಿರಿವನ ಮುರಿದಿರಿ ರಾಧೆಯಾತ್ಮಜನ
ನಿಖಿಳ ಯಾಚಕಜನ ಸಹಿತ ತ
ತ್ಸಖಿಯರಳುತದೆ ಕರ್ಣ ಮರಣದೊ
ಳಖಿಳಜಗ ನೀನೊಬ್ಬ ತಪ್ಪಿಸಿ ಮರುಗಿತಿಂದಿನಲಿ ೧೧

ಭಾನುದತ್ತನ ಮೇಲೆ ಹೊರಳುವ
ಮಾನಿನಿಯರ ನಿರೀಕ್ಷಿಸೈ ಮ
ತ್ಸೂನುಗಳ ನೋಡಿತ್ತಲಿದೆ ದುಶ್ಶಾಸನಾದಿಗಳ
ಏನನೆಂಬೆನು ತನ್ನ ಸೊಸೆಯರ
ಹಾನಿಯನು ಮಾದ್ರೇಶನರಸಿಯ
ರೇನಧರ್ಮವ ನೆನೆದರೆಂದಳಲಿದಳು ಗಾಂಧಾರಿ ೧೨

ತಂದೆ ನೋಡೈ ಕೃಷ್ಣ ತನ್ನಯ
ನಂದನರು ನೂರ್ವರಿಗೆ ಕಿರಿಯಳ
ನಿಂದುಮುಖಿ ದುಶ್ಶಳೆಯನಾ ಸೈಂಧವನ ವಲ್ಲಭೆಯ
ಅಂದು ವಿವಿಧವ್ಯೂಹದಲಿ ಗುರು
ನಿಂದಡೆಯು ಹುಸಿರಾತ್ರಿಯಲಿ ನೀ
ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ 13

ಕ್ಷೇಮಧೂರ್ತಿಯನಾ ಕಳಿಂಗನ
ಸೋಮದತ್ತನ ಚಿತ್ರಸೇನನ
ಭೀಮವೈರಿಯಲಂಬುಸನ ಕಿಮ್ಮಿರನಂದನನ
ಭೌಮಸುತನ ಸುಶರ್ಮಕನ ಸು
ತ್ರಾಮರಿಪುಗಳ ಭೂರಿಬಲದ ಸ
ನಾಮರರಸಿಯರದೆ ನಿಜೇಶನ ಮೇಲೆ ತನಿಹೊರಳಿ ೧೪

ಎನುತ ಬರೆಬರೆ ಮುಂದೆ ಕಂಡಳು
ತನುಜನನು ಭೀಮನ ಗದಾ ಘ
ಟ್ಟನದ ಘಾಯದ ಮೆಯ್ಯ ಖಂಡಿಸಿದೂರುಮಂಡಲದ
ನನೆದ ಹುಡಿಮಗ್ಗುಲಿನ ರಕುತದ
ಹೊನಲ ಹೊಲಸಿದ ಘೂಕಕಾಕ
ಧ್ವನಿ ಭಯಂಕರ ಸನ್ನಿಧಾನದ ಕೌರವೇಶ್ವರನ ೧೫

ಇತ್ತ ನೋಡೈ ಕೃಷ್ಣ ತನ್ನಯ
ಮತ್ತದಂತಿಯನಿಂದುಕುಲ ರಾ
ಜೊತ್ತ ಮನನೇಕಾದಶಾಕ್ಷೋಹಿಣಿಯ ವಲ್ಲಭನ
ಹತ್ತೆ ಹಿಡಿದೋಲಗಿಸುವರು ವರ
ಮತ್ತಕಾಶಿನಿಯರುಗಳೀಗಳು
ಸುತ್ತಮುತ್ತಿತು ಘೂಕ ವಾಯಸ ಜಂಬುಕವ್ರಾತ ೧೬

ಎನುತ ಬಿದ್ದಳು ಮೂರ್ಛೆಯಲಿ ಮಾ
ನಿನಿಯನೆತ್ತಿದನಸುರರಿಪು ನೃಪ
ವನಿತೆಯರು ಭಾನುಮತಿ ಮೊದಲಾದಖಿಳ ರಾಣಿಯರು
ಜನಪತಿಯ ಮುಕ್ಕುರುಕಿದರು ತ
ಜ್ಜನಿತ ಶೋಕಾದ್ಭುತದ ಹಾ ಹಾ
ಧ್ವನಿಯ ಥಟ್ಟನೆ ಘಟ್ಟಿಸಿತು ಬ್ರಹ್ಮಾಂಡಮಂಡಲವ ೧೭

ಜನಪ ಕೇಳೀಚೆಯಲಿ ಕುಂತೀ
ವನಿತೆ ಕರ್ಣನ ಮೇಲೆ ಹೊರಳಿದ
ಳಿನತನುಜ ಹಾ ಕರ್ಣ ಹಾ ಹಾ ಕರ್ಣ ಹಾಯೆನುತ
ನಿನಗೆ ಧರ್ಮಸುತಾದಿ ಭೂಮಿಪ
ರನುಜರೈ ಮಾಯಾವಿ ಮಧುಸೂ
ದನನೆ ಮರಯಿಸಿ ಕೊಂದನಕಟೆಂದೊರಲಿದಳು ಕುಂತಿ ೧೮

ಅರಿದನಂತಕಸೂನು ಮುರಹರ
ನಿರಿದನೇ ನಾವಿನ್ನು ಕರ್ಣಗೆ
ಕಿರಿಯರೈ ಲೇಸಾಯ್ತು ಗುರುಜನ ಬಂಧುಜನಹನನ
ಉರುವ ಶಶಿವಂಶದ ಮಹಾನೃಪ
ರೆರಗಿದರೆ ಪಾತಕಕೆ ಮುನ್ನೆ
ಚ್ಚರಿಸಿದಕಟಾ ತಾಯಿ ಕೆಡಿಸಿದಳೆಂದು ಬಿಸುಸುಯ್ದ ೧೯

ಹೋಗಲಿನ್ನಾ ಕ್ಷತ್ರಧರ್ಮ
ತ್ಯಾಗ ದುರ್ವ್ಯಸನ ಪ್ರಪಂಚವ
ನೀಗಿ ಕಳೆಯೆಂದರಸುರರಿಪುವೈತಂದು ಮನ್ನಿಸಿದ
ಮೇಗಿವರ ಸಂಸ್ಕಾರಕಾರ‍್ಯನಿ
ಯೋಗವಿವೆ ಭಾರಂಕ ನಿನಗೆ ಸ
ರಾಗದಲಿ ಸಂತೈಸಿಯೆಂದನು ಭೂಪತಿಗೆ ಶೌರಿ ೨೦

ವ್ಯಾಸ ನಾರದ ವಿದುರ ಸಾತ್ಯಕಿ
ಕೇಶವನು ದಾರುಕ ಯುಯುತ್ಸು ಮ
ಹೀಶ ಮೊದಲಾದನಿಬರರಸರ ಸಾರಥಿವ್ರಾತ
ಆ ಸಚಿವರಾ ಹಸ್ತಿನಾಪುರ
ದಾ ಸಮಸ್ತ ಪ್ರಕೃತಿಜನ ಸಂ
ತೈಸಿದರು ಸಂಸ್ಕಾರವಿಧಿಯನು ಹತಮಹೀಶರಿಗೆ ೨೧

ಕುರುಪತಿಯ ರವಿಸುತನ ಮಾದ್ರೇ
ಶ್ವರನ ದುಶ್ಶಾಸನ ವಿಕರ್ಣಾ
ದ್ಯರ ಜಯದ್ರಥ ಬಾಹ್ಲಿಕರ ಭಗದತ್ತ ಲಕ್ಷಣರ
ಗುರುವರನ ಪಾಂಚಾಲ ಮತ್ಸ್ಯೇ
ಶ್ವರರ ಕುಂತೀಭೋಜನೃಪಮು
ಖ್ಯರನು ವಿಧಿಪೂರ್ವಕದಿ ದಹಿಸಿದರಾಹಿತಾಗ್ನಿಯಲಿ ೨೨

ಕಳನ ಚೌಕದ ಸುತ್ತಲೊಟ್ಟಿಸಿ
ತಳಿಗಳನು ಬಹಳಾಗ್ನಿಯನು ಕೈ
ಕೊಳಿಸಿದರು ದಹಿಸಿದರು ಬಹಳಾಕ್ಷೋಹಿಣೀಭಟರ
ಬಳಿಕ ಹಸ್ತಿನಪುರದ ಸೀಮಾ
ಸ್ಥಳಕೆ ಬಂದರು ನಿಖಿಳ ಕಾಂತಾ
ವಳಿಸಹಿತ ಗಂಗಾವಗಹನವ ಮಾಡಿದನು ನೃಪತಿ ೨೩

ಆ ನದಿಯ ತೀರದಲಿ ತಿಂಗಳು
ಮಾನನಿಧಿ ತತ್ಪ್ರೇತರಿಗೆ ಜಲ
ದಾನ ವಿಧಿವಿಹಿತಪ್ರಪಂಚಿತ ಸಕಲ ಸಂಸ್ಕೃತಿಯ
ಭೂನುತನು ಮಾಡಿದನು ಬಂದುದು
ಜಾನಪದಜನವೈದೆ ಕುಂತೀ
ಸೂನುವನು ದರುಶನವ ಮಾಡಿತು ಕಾಣಿಕೆಯ ನೀಡಿ ೨೪

ತಿಳುಹಿ ರಾಯನ ಹೃದಯ ಸಂಚಿತ
ಕಲುಷವನು ಖಂಡಿಸಿ ಗತಾಕ್ಷನ
ಬಲಿದ ಚಿತ್ತವ್ಯಥೆಯನಾರಿಸಿ ನೃಪವಧೂಜನದ
ಅಳಲನಾರಿಸಿ ಗಜಪುರದ ನೃಪ
ನಿಳಯವನು ಹೊಗಿಸಿದನು ಯದುಕುಲ
ತಿಲಕ ಗದುಗಿನ ವೀರನಾರಾಯಣನು ಪಾಂಡವರ ೨೫

ಗದಾಪರ್ವ ಸಂಧಿಗಳು

ಸಂಪಾದಿಸಿ
೧೦ ೧೧ ೧೨ ೧೩

ಪರ್ವಗಳು

ಸಂಪಾದಿಸಿ
ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ