ಗದಾ ಪರ್ವ-ಹದಿಮೂರನೆಯ ಸಂಧಿ
ಸಂಪಾದಿಸಿಸೂ. ದೇವಸಂತತಿ ನಲಿಯೆ ಪಾಂಡವ
ಜಿವಿ ಹರಿಯೆಂಬೀ ಪ್ರತಿಜ್ಞಾಯ
ಭಾವ ಸಂದುದು ಧರ್ಮಜನ ಪಟ್ಟಾಭಿಷೇಕದಲಿ
ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ ೧
ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ್ಯ ರುಮಣ್ವ ಗೌತಮ ಯಾಜ್ಞವಲ್ಕ್ಯಮುನಿ
ಧ್ರುವ ವಿಭಾಂಡಕ ಗಾರ್ಗ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ ೨
ಜಲಧಿ ಮಧ್ಯದ ಕುರುವ ಘಟ್ಟಾ
ವಳಿಯ ಕೊಳ್ಳದ ಕುಹರ ಕುಂಜದ
ನೆಲೆಯ ಗಿರಿಸಾನುಗಳ ಶಿಖರದ ದುರ್ಗವೀಥಿಗಳ
ನೆಲನಶೇಷಪ್ರಜೆ ನಿಖಿಳ ಮಂ
ಡಳಿಕ ಮನ್ನೆಯ ವಂದಿಜನ ಸಂ
ಕುಲ ಮತಂಗಜಪುರಿಗೆ ಬಂದುದು ನೃಪನ ಕಾಣಿಕೆಗೆ ೩
ವ್ಯಾಸ ನಾರದ ಕೃಷ್ಣ ಮೊದಲಾ
ದೀ ಸಮಸ್ತ ಮುನೀಂದ್ರನಿಕರ ಮ
ಹೀಶನನು ಪಟ್ಟಾಭಿಷೇಕಕೆ ಮನವನೊಡಬಡಿಸಿ
ದೋಷರಹಿತ ಮುಹೂರ್ತ ಲಗ್ನ ದಿ
ನೇಶವಾರ ಶುಭಗ್ರಹೋದಯ (೪
ಲೇಸೆನಲು ನೋಡಿದರು ಮಿಗೆ ಗಾರ್ಗ್ಯಾದಿ ಜೋಯಿಸರು
ತರಿಸಿ ಮಂಗಳ ವಸ್ತುಗಳ ಸಂ
ವರಿಸಿ ಬಹುವಿಧವಾದ್ಯರವ ವಿ
ಸ್ತರದ ಪಂಚಮಹಾನಿನಾದದ ಸರ‍್ವಜನಮನದ
ಹರುಷಪೂರದ ವೇದಮಂತ್ರೋ
ಚ್ಚರಣಸಾರದ ನೃಪನ ಪಟ್ಟಾ
ಧ್ವರವೆಸೆಯಲುತ್ಸವವನೆಸಗಿದನಸುರರಿಪುವಂದು ೫
ಆದುದಾ ಪಟ್ಟಾಭಿಷೇಕದೊ
ಳಾ ದುರಾತ್ಮಕ ಬಾಷ್ಕಳನ ಪರಿ
ವಾದವನು ಮುನಿನಿಕರ ಕೇಳಿದು ಖತಿಯ ಭಾರದಲಿ
ಭೇದಿಸಿದರವನಸುರನೆಂದು ವಿ
ಷಾದ ವಹ್ನಿಯಲುರುಹಿದರು ಬಳಿ
ಕಾದರಿಸಿ ಧರ್ಮಜನ ಸಂತೈಸಿದನು ಮುರವೈರಿ ೬
ಅರಸ ಕೇಳೈ ಪಟ್ಟವದು ಹಿರಿ
ಯರಸನದು ಯುವರಾಜಪಟ್ಟವೆ
ಹರಿತನೂಜನೊಳಾಯ್ತು ಸೇನಾಪತಿ ಧನಂಜಯನು
ವರ ಕುಮಾರರು ಯಮಳರಲ್ಲಿಗೆ
ಹಿರಿಯಸಚಿವನು ವಿದುರನವನಿಪ
ಪರುಠವಿಸಿದ ಯುಯುತ್ಸುವನು ಸರ‍್ವಾಧಿಕಾರದಲಿ ೭
ವರ ಮುನೀಂದ್ರರ ನಿಖಿಳ ದೇಶಾಂ
ತರದ ಭೂಸುರವರ್ಗವನು ಸ
ತ್ಕರಿಸಿದನು ಗೋ ಭೂಮಿ ವಸನ ಹಿರಣ್ಯದಾನದಲಿ
ಪರಿಜನವ ಪುರಜನವ ರತ್ನಾ
ಕರ ಪರೀತ ಮಹೀಜನವನಾ
ದರಿಸಿದನು ವೈಭವವಿಹಿತ ಸನ್ಮಾನ ದಾನದಲಿ ೮
ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಶಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಶಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ ೯
ಮನ್ನಣೆಯಲಿ ಯುಯುತ್ಸು ಹೊಕ್ಕನು
ತನ್ನ ಮನೆಯನು ಭೀಷ್ಮ ಗುರುಕೃಪ
ರುನ್ನತಾಲಯವಾಯ್ತು ನೃಪನ ಪಸಾಯ್ತಸಂತತಿಗೆ
ಮುನ್ನಿನವರೇ ಮಂತ್ರಿ ಸಚಿವರು
ಮುನ್ನದಾವಂಗಾವ ಪರುಠವ
ಭಿನ್ನವಿಲ್ಲದೆ ಪೌರಜನವೆಸೆದುರ್ದುದಿಭಪುರಿಯ ೧೦
ಅರಸು ಧರ್ಮಜನಾದ ನಮಗಿ
ನ್ನುರವಣಿಪ ಮನ ಬೇಡ ಬೇಡು
ತ್ತರಿಸುವಿಹಪರವೆರಡ ಪಡೆದವು ನಿಖಿಳ ಜಗ ಹೊಗಳೆ
ಪರಿಮಿತದ ಜನ ತಮ್ಮ ಸುಬಲವ
ನಿರದೆ ಮಾಡುವೆನೆಂದು ಮುನಿಜನ
ಧರಣಿಸುರರೊಳಗಾದ ಪುರಜನರೊಲಿದು ಹರಸಿದರು ೧೧
ಬಳಿಕ ಭೀಷ್ಮನ ಬಾಣಶಯನ
ಸ್ಥಳಕೆ ಧರ್ಮಜ ಬಂದು ಧರ್ಮಂ
ಗಳನು ಕೇಳಿದು ರಾಜಧರ್ಮ ಸಮಸ್ತಧರ್ಮವನು
ತಿಳಿದನಗ್ಗದ ದಾನಧರ‍್ಮಾ
ವಳಿಯನಾತನ ರಾಜ್ಯಪಾಲನ
ನಳ ನಹುಷ ಭರತಾದಿ ಭೂಪರ ಗತಿಗೆ ಗುರುವಾಯ್ತು ೧೨
ಕದನದಲಿ ಕಯ್ಯಾರೆ ದೈತ್ಯರ
ಸದೆದು ಭೂಭಾರವನು ಪರಹ
ಸ್ತದಲಿ ಕಟ್ಟಿಸಿ ಕೊಟ್ಟಭಾಷೆಯನುತ್ತರಾಯೆನಿಸಿ
ನದಿಯ ನಂದನನನು ಪರಾನಂ
ದದಲಿಸೇರಿಸಿ ಪರಮ ಪರಿತೋ
ಷದಲಿ ಪಯಣವ ಮಾಡಿದನು ಮುರವೈರಿ ನಿಜಪುರಿಗೆ ೧೩
ಯಮಸುತನ ತಕ್ಕೈಸಿ ಭೀಮನ
ಮಮತೆಯನು ಭುಲ್ಲೈಸಿ ಪಾರ್ಥನ
ನಮಿತ ಮಕುಟವ ನೆಗಹಿ ಪುಳಕಾಶ್ರುಗಳ ಪೂರದಲಿ
ಯಮಳರನು ಬೋಳೈಸಿ ರಾಯನ
ರಮಣಿಯನು ಸಂತೈಸಿ ವಿದುರ
ಪ್ರಮುಖರನು ಬೀಳ್ಕೊಟ್ಟು ಬಿಜಯಂಗೈದನಸುರಾರಿ ೧೪
ದೇವ ದುಂದುಭಿರವದ ಗಗನದ
ಹೂವಳೆಯ ಪೂರದ ಸಮಸ್ತ ಜ
ನಾವಳಿಯ ಜಯಜೀಯ ನಿರ್ಘೋಷದ ಗಡಾವಣೆಯ
ದೇವಕಿಯ ವಸುದೇವ ರುಕುಮಿಣಿ
ದೇವಿಯಾದಿಯ ಹರುಷದಾವಿ
ರ್ಭಾವ ಮಿಗೆ ನಿಜಪುರವ ಹೊಕ್ಕನು ವೀರನಾರಯಣ ೧೫
ಭವದುರಿತಹರವಕಟ ಹರಿನಾ
ಮವನು ನೆನೆವರು ಕಾಲಚಕ್ರದ
ಜವನ ಬೇಗೆಯ ಜುಣುಗಿ ಜಾರುವರಖಿಳ ಮಾನವರು
ಕವಿ ಕುಮಾರವ್ಯಾಸಸೂಕ್ತದ
ಸವೆಯದಮೃತವನೊಲಿದೊಲಿದು ಸು
ಶ್ರವಣದಲಿ ಕುಡಿಕುಡಿದು ಪದವಿಯ ಪಡೆವುದೀ ಲೋಕ ೧೬
ಶ್ರೀಮದಮರಾಧೀಶ ನುತಗುಣ
ತಾಮರಸಪದ ವಿಪುಳನಿರ್ಮಳ
ನಾಮನನುಪಮ ನಿಖಿಳಯತಿಪತಿದಿವಿಜವಂದಿತನು
ರಾಮನೂರ್ಜಿತನಾಮ ಸುಧೆಯಾ
ರಾಮನಾಹವಭೀಮ ರಘುಕುಲ
ರಾಮ ಪಾಲಿಸುವೊಲಿದು ಗದುಗಿನ ವೀರನಾರಯಣ ೧೭
ಅರಸ ವೈಶಂಪಾಯನಿಗೆ ನಿಜ
ಕರವ ಮುಗಿದು ಸುವರ್ಣವಸ್ತ್ರಾ
ಭರಣ ಗೋವ್ರಜ ಭೂಮಿ ಕನ್ಯಾದಾನ ಮಣಿಗಣದಿ
ಹಿರಿದು ಪರಿಯಲಿ ಮನದಣಿವವೋ
ಲುರುತರದ ದ್ರವ್ಯಾದಿಗಳ ಭೂ
ಸುರರಿಗಿತ್ತನು ರಾಯ ಜನಮೇಜಯಮಹೀಪಾಲ ೧೮
ಸರ್ಪಯಾಗದೊಳಾದ ಕರ‍್ಮದ
ದರ್ಪವನು ಕೆಡೆಯೊದೆದು ಬೆಳಗಿದ
ನುಪ್ಪರದ ರವಿತೇಜದಲಿ ಸುರನರರು ಬೆರಗಾಗೆ
ತಪ್ಪದೀ ಭಾರತವ ಕೇಳ್ದಂ
ಗಪ್ಪುದಮರಸ್ತ್ರೀ ಕದಂಬದೊ
ಳೊಪ್ಪುವಿಂದ್ರನ ಪದವಿಯೆಂದನು ಸೂತ ಕೈಮುಗಿದು ೧೯
ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೨೦
ನೋಡಿ
ಸಂಪಾದಿಸಿಗದಾಪರ್ವ ಸಂಧಿಗಳು
ಸಂಪಾದಿಸಿ೧ | ೨ | ೩ | ೪ | ೫ | ೬ | ೭ | ೮ | ೯ | ೧೦ | ೧೧ | ೧೨ | ೧೩ |
ಪರ್ವಗಳು
ಸಂಪಾದಿಸಿಕುಮಾರವ್ಯಾಸ ಭಾರತ | ಆದಿಪರ್ವ | ಸಭಾಪರ್ವ | ಅರಣ್ಯಪರ್ವ | ವಿರಾಟಪರ್ವ | ಉದ್ಯೋಗಪರ್ವ | ಭೀಷ್ಮಪರ್ವ | ದ್ರೋಣಪರ್ವ | ಕರ್ಣಪರ್ವ | ಶಲ್ಯಪರ್ವ | ಗದಾಪರ್ವ |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ