ಪಂಪಭಾರತ -ಪದವಿಭಾಗ ಮತ್ತು ಅರ್ಥ::ದ್ವಿತೀಯಾಶ್ವಾಸಂ
ಸಂಪಾದಿಸಿ
- (XIIX-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
- ಕಂ|| ಶ್ರೀಗಗಲುರಮಂ ಕೀರ್ತಿ
- ಶ್ರೀಗೆ ದಿಗಂತಮುಮನಹಿತರಂ ಗೆಲ್ವ ಜಯ|
- ಶ್ರೀಗೆ ಭುಜಶಿಖರಮಂ ನೆಲೆ
- ಯಾಗಿಸಿ ನೀಂ ನೆಲಸು ನೇಸಱುಳ್ಳಿನಮರಿಗಾ|| ೧||
- ಪದ್ಯ-೧:ಪದವಿಭಾಗ-ಅರ್ಥ:ಶ್ರೀಗೆ ಅಗಲುರಮಂ (ಲಕ್ಷ್ಮಿಗೆ, ಅಗಲ ಉರ-ಎದೆಯನ್ನೂ) ಕೀರ್ತಿಶ್ರೀಗೆ ದಿಗಂತಮುಮನು (ದಿಕ್ಕುಗಳನ್ನೂ,) ಅಹಿತರಂ (ಶತ್ರುಗಳನ್ನು) ಗೆಲ್ವ ಜಯಶ್ರೀಗೆ ಭುಜಶಿಖರಮಂ (ಭುಜದ ಮೇಲುಭಾಗವನ್ನೂ,) ನೆಲೆಯಾಗಿಸಿ ನೀಂ ನೆಲಸು ನೇಸಱುಳ್ಳಿನಂ (ನೇಸರ ಉಳ್ಳವನು-ಸೂರ್ಯ) ನೆಲಸು- (ಇರು) ಅರಿಗಾ(ಅರಿಕೇಸರಿಯೇ- ಅರ್ಜುನನೇ)-
- ಪದ್ಯ-೧:ಅರ್ಥ:ನಿನ್ನ ಅಗಲವಾದ ಎದೆಯನ್ನು ಲಕ್ಷ್ಮಿಗೂ, ದಿಕ್ಕುಗಳನ್ನು ಕೀರ್ತಿಲಕ್ಷ್ಮಿಗೂ ಭುಜಶಿಖರವನ್ನು ಶತ್ರುಗಳನ್ನು ಗೆಲ್ಲುವ ವಿಜಯಲಕ್ಷ್ಮಿಗೂ ನಿವಾಸಸ್ಥಾನವನ್ನಾಗಿಸಿ ಸೂರ್ಯನಿರುವವರೆಗೂ ಅರಿಕೇಸರಿಯೇ ಸ್ಥಿರವಾಗಿ ಇರು.
- ಎಂಬ ಪರಕೆಗಳ ರವದೊಳ್
- ತುಂಬೆ ನಭೋವಿವರಮಮರ ಮುನಿಜನಮಮರೇಂ|
- ದ್ರಂ ಬೆರಸು ತಳರ್ದುದಾದುದ
- ಳುಂಬಂ ಮನದೊಸಗೆ ಕುಂತಿಗಂ ತತ್ಪತಿಗಂ|| ೨||
- ಪದ್ಯ-೨:ಪದವಿಭಾಗ-ಅರ್ಥ:ಎಂಬ ಪರಕೆಗಳ (ಆಶೀರ್ವಾದಗಳ) ರವದೊಳ್ (ಶಬ್ದದಲ್ಲಿ) ತುಂಬೆ ನಭೋವಿವರಂ (ವಿಸ್ತಾರ ಆಕಾಶವನ್ನು ತುಂಬಲು) ಅಮರ ಮುನಿಜನಂ ಅಮರೇಂದ್ರಂ ಬೆರಸು ತಳರ್ದುದು ಆದುದು ಅಳುಂಬಂ (ಬಹಳ) ಮನದ ಒಸಗೆ(ಸಂತಸ) ಕುಂತಿಗಂ ತತ್ಪತಿಗಂ(ತತ್ ಪತಿ- ಅವಳ ಪತಿ ಪಾಂಡುವಿಗೆ)
- ಪದ್ಯ-೨:ಅರ್ಥ:ದೇವತೆಗಳ ಹರಕೆಯ ಶಬ್ದವು ವಿಸ್ತಾರ ಆಕಾಶನ್ನೆಲ್ಲ ತುಂಬಲು ದೇವತೆಗಳೂ ಋಷಿಗಳೂ ದೇವೇಂದ್ರನೊಡನೆ ಹೊರಟುಹೋದರು. ಕುಂತಿಗೂ ಅವಳ ಪತಿಯಾದ ಪಾಂಡುರಾಜನಿಗೂ ಮನಸ್ಸಿಗೆ ಬಹಳ ಸಂತೋಷವಾಯಿತು.
- ವ|| ಅಂತು ಗುಣಾರ್ಣವನ ಪುಟ್ಟಿದೊಸಗೆಯೊಳೊಸಗೆ ಮರುಳ್ಗೊಂಡು ಕುಂತಿಯುಂ ಪಾಂಡುರಾಜನುಮಿರೆ ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕ್ತೆಯಾಗಿ ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡಾಕೆಯ ಬಿನ್ನನಾದ ಮೊಗದಂದಮಂ ಕಂಡು ಕುಂತಿ ಕರುಣಿಸಿ ಪುತ್ರೋತ್ಪತ್ತಿ ನಿಮಿತ್ತಂಗಳಪ್ಪ ಮಂತ್ರಾಕ್ಷರಂಗಳನುಪದೇಶಂಗೆಯ್ದೊಡಾಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ-
- ವಚನ:ಪದವಿಭಾಗ-ಅರ್ಥ:ಅಂತು ಗುಣಾರ್ಣವನ ಪುಟ್ಟಿದ ಒಸಗೆಯೊಳು ಒಸಗೆ ಮರುಳ್ಗೊಂಡು (ಉತ್ಸವದಿಂದ ಹಿಗ್ಗಿ) ಕುಂತಿಯುಂ ಪಾಂಡುರಾಜನುಮಿರೆ ಮಾದ್ರಿ ತನಗೆ ಮಕ್ಕಳಯ ಇಲ್ಲದುದರ್ಕೆ ವಿರಕ್ತೆಯಾಗಿ (ಬೇಸರವಾಗಿ) ಪೊಸೆದು ಬಿಸುಟ ರಕ್ತ ಅಶೋಕಪಲ್ಲವದಂತೆ (ಹೊಸೆದು ಬಿಸಾಡಿದ ಅಶೋಕದ ಚಿಗುರಿನಂತೆ) ಕರಂ (ಬಹಳ) ಕೊರಗಿ ಚಿಂತಿಸುತಿರ್ದೊಡೆ ಆಕೆಯ ಬಿನ್ನನಾದ (ಮೌನ? ಖಿನ್ನ) ಮೊಗದಂದಮಂ ಕಂಡು ಕುಂತಿ ಕರುಣಿಸಿ ಪುತ್ರೋತ್ಪತ್ತಿ ನಿಮಿತ್ತಂಗಳಪ್ಪ (ಮಕ್ಕಳು ಆಗುವ ವಿಧಿಗಳನ್ನು) ಮಂತ್ರಾಕ್ಷರಂಗಳನು ಉಪದೇಶಂಗೆಯ್ದೊಡೆ ಆಕೆಯುಂ ತದುಕ್ತ (ತದ್ ಉಕ್ತ -ಹಾಗೆ ಹೇಳಿದ)ಕ್ರಿಯೆಯೊಳಂ ನಿಯಮ ನಿಯಮಿತೆಯಾಗಿ-
- ವಚನ:ಅರ್ಥ:ಹಾಗೆ ಅರ್ಜುನನ ಜನ್ಮೋತ್ಸವದ ಸಂತೋಷದ ಸಂಭ್ರಮದಲ್ಲಿ ಕುಂತಿಯೂ ಪಾಂಡುರಾಜನೂ ಇರಲು, ಮಾದ್ರಿಯು ತನಗೆ ಮಕ್ಕಳಿಲ್ಲದುದಕ್ಕೆ ಖಿನ್ನಳಾಗಿ ಹೊಸೆದು ಬಿಸಾಡಿದ ಅಶೋಕದ ಚಿಗುರಿನಂತೆ ವಿಶೇಷವಾಗಿ ದುಃಖಪಟ್ಟು ಚಿಂತಿಸುತ್ತಿರಲು, ಆಕೆಯ ಬಾಡಿದ ಮುಖವನ್ನು ಕಂಡು, ಕುಂತಿಯು ಕರುಣದಿಂದ ಪುತ್ರೋತ್ಪತ್ತಿ ಕಾರಣಗಳಾದ ಮಂತ್ರಗಳನ್ನು ಉಪದೇಶಮಾಡಲು, ಅವಳು ಆ ಮಂತ್ರಕ್ಕೆ ವಿಸಿದ ರೀತಿಯಲ್ಲಿ ನಿಯಮದಿಂದ (ಇದ್ದಳು)-
- ಕಂ|| ಆಹ್ವಾನಂಗೆಯ್ದಶ್ವಿನಿ
- ದೇವರನವರಿತ್ತ ವರದೊಳವರಂಶಮೆ ಸಂ|
- ಭಾವಿಸೆ ಗರ್ಭದೊಳಮಳರ
- ನಾ ವನಜದಳಾಕ್ಷಿ ಪಡೆದು ಸಂತತಿವೆತ್ತಳ್|| ೩ ||
- ಪದ್ಯ-೩:ಪದವಿಭಾಗ-ಅರ್ಥ:ಆಹ್ವಾನಂ ಗೆಯ್ದ ಅಶ್ವಿನಿದೇವರನು (ಅಶ್ವಿನಿದೇವತೆಗಳನ್ನು ಆಹ್ವಾನ ಮಾಡಿ) ಅವರಿತ್ತ ವರದೊಳು ಅವರ ಅಂಶಮೆ ಸಂಭಾವಿಸೆ ಗರ್ಭದೊಳು ಅಮಳರನು (ಅವಳಿ ಮಕ್ಕಳನ್ನು) ವನಜದಳಾಕ್ಷಿ ಪಡೆದು ಸಂತತಿವೆತ್ತಳ್ (ಸಂತಾನ ಪಡೆದಳು)
- ಪದ್ಯ-೩:ಅರ್ಥ:ಕಮಲಮುಖಿಯಾದ ಮಾದ್ರಿಯು ಅಶ್ವಿನೀದೇವತೆಯರನ್ನು ಆಹ್ವಾನಿಸಿ- ಬರಿಸಿಕೊಂಡು, ಅವರು ಕೊಟ್ಟ ವರಗಳಿಂದ ಅವರ ಅಂಶವೇ ಗರ್ಭದಲ್ಲಿ ಉಂಟಾಗಲು ಅವಳಿ ಮಕ್ಕಳನ್ನು ಪಡೆದು ಸಂತಾನವನ್ನು ಪಡೆದಳು.
- ವ|| ಆಗಳಾ ಪಾಂಡುರಾಜನಾ ಕೂಸುಗಳ್ಗೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ ನಕುಲ ಸಹದೇವರೆಂದವರ್ಗಮಳ್ವೆಸರನಿಟ್ಟು ಪುತ್ರ ಸಂಪೂರ್ಣ ಮನೋರಥನಾಗಿರ್ಪಿನಮಯ್ವರ್ ಕೂಸುಗಳುಮೇೞ್ಗೆವಾಡಿವದ ಚಂದ್ರನಂತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯಾಂಕುರಂಗಳುಂ ವಂದಜನಕ್ಕೆ ಕಲ್ಪವೃಕ್ಷಾಂಕುರಂಗಳುಮರಾತಿಜನಕ್ಕೆ ಕಾಳಕೂಟಾಂಕುರಂಗಳುಮಂ ಪೋಲ್ತು ಪಂಚಾಂಗ ಮಂತ್ರಂ ಸ್ವರೂಪದೊಳ್ ಮೂರ್ತಿಮಂತಂಗಳಾದಂತೆ ಸೊಗಯಿಸಿ ಬಳೆಯೆ-
- ವಚನ:ಪದವಿಭಾಗ-ಅರ್ಥ:ಆಗಳು ಆ ಪಾಂಡುರಾಜನು ಆ ಕೂಸುಗಳ್ಗೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ ನಕುಲ ಸಹದೇವರೆಂದು ಅವರ್ಗಂ ಅಳ್ವೆಸರನು ಇಟ್ಟು ಪುತ್ರ ಸಂಪೂರ್ಣ ಮನೋರಥನು ಆಗಿರ್ಪಿನಂ, ಅಯ್ವರ್ ಕೂಸುಗಳುಂ ಏೞ್ಗೆ ವಾಡಿವದ ಚಂದ್ರನಂತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ (ಮೊಳಕೆ) ಬಂಧುಜನಕ್ಕೆ ಪುಣ್ಯಾಂಕುರಂಗಳುಂ ವಂದಜನಕ್ಕೆ ಕಲ್ಪವೃಕ್ಷಾಂಕುರಂಗಳುಮರಾತಿಜನಕ್ಕೆ ಕಾಳಕೂಟಾಂಕುರಂಗಳುಮಂ ಪೋಲ್ತು ಪಂಚಾಂಗ ಮಂತ್ರಂ ಸ್ವರೂಪದೊಳ್ ಮೂರ್ತಿಮಂತ್ರಂಗಳು ಆದಂತೆ ಸೊಗಯಿಸಿ ಬಳೆಯೆ
- ವಚನ:ಅರ್ಥ:ಆಗ ಆ ಪಾಂಡುರಾಜನು ಆ ಶಿಶುಗಳಿಗೆ ಋಷಿಗಳಿಂದ ಜಾತಕರ್ಮಗಳನ್ನು ಮಾಡಿಸಿ ನಕುಲ ಮತ್ತು ಸಹದೇವ ಎಂಬ ಜೋಡಿ ಹೆಸರುಗಳನ್ನಿಟ್ಟು ಮಕ್ಕಳನ್ನು ಪಡೆದ ಪೂರ್ಣತೃಪ್ತಿ ಹೊಂದಿರಲು, ಆ ಅಯ್ದು ಮಕ್ಕಳೂ ಶುಕ್ಲಪಕ್ಷದ ವೃದ್ಧಿಚಂದ್ರನಂತೆ ಸೊಗಯಿಸಿ ಬಳೆಯುತ್ತಿದ್ದರು; ಅವರು ಭರತವಂಶಕ್ಕೆ ವಿಸ್ತಾರವಾದ ಯಶಸ್ಸಿನಮೊಳಕೆಗಳೂ, ಬಂಧುಜನಗಳಿಗೆ ಪುಣ್ಯದ ಮೊಳಕೆಗಳೂ ಆಶ್ರಿತ ಜನರಿಗೆ ಕಲ್ಪವೃಕ್ಷದ ಮೊಳಕೆಯಂತೆಯೂ, ಶತ್ರುಜನಕ್ಕೆ ಕಾಳಕೂಟವಿಷದ ಮೊಳಕೆಗಳೂ ಆಗಿ ಪಂಚಾಂಗ ಮಂತ್ರಗಳಾದ ಸ್ತುತಿ, ನೈವೇದ್ಯ, ಅಭಿಷೇಕ, ತರ್ಪಣ, ಸಮಾರಾಧನ ಎಂಬ ವೇದಕ್ಕೆ ಸಂಬಂಸಿದ ಮಂತ್ರಗಳು ಉಪದೇಶವಾಗಲು ಸಂತೋಷವಾಗಿ ಬೆಳೆದರು.
- ಕಂ|| ತೊಡರ್ದಮರ್ದ ಬಾಳವಣ್ಣದ
- ತುಡುಗೆ ಪಳಂಚಲೆವ ಪಂಚ ಜಡೆ ನೊಸಲೊಳೊಡಂ|
- ಬಡುವರಳೆಲೆಯಿವಱಿಂ ಚೆ
- ಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ|| ೪
- ಪದ್ಯ-೪:ಪದವಿಭಾಗ-ಅರ್ಥ:ತೊಡರ್ದ ಮರ್ದ (ಚೆನ್ನಾಗಿ ಸೇರಿದ)ಬಾಳವಣ್ಣದ (ಕತ್ತಿ ಬಣ್ಣದ) ತುಡುಗೆ (ತೊಡಿಗೆ- ಉಡುಪು) ಪಳಂಚಲೆವ (ಬಡಿದು ತೊನೆದಾಡುವ)ಪಂಚ ಜಡೆ (ತಾಗುತ್ತಿರುವ ಐದುಜಡೆ) ನೊಸಲೊಳ ಒಡಂಬಡುವ ಅರಳೆಲೆ ಯಿವಱಿಂ (ಅರಳಿ ಎಲೆಪದಕ) ಚೆಲ್ವಿಡಿದು ಇರ್ದುದು ಬಾಳಕೇಳಿ (ಬಾಲಕ್ರೀಡೆ) ಧರ್ಮಾತ್ಮಜನಾ
- ಪದ್ಯ-೪:ಅರ್ಥ:. ಮೈಯಿಗೆ ಚೆನ್ನಾಗಿ ಹೊಂದಿಕೊಂಡ ಕತ್ತಿಯ ಬಣ್ಣದ (ನೀಲಿಬಣ್ಣದ) ಉಡುಪಿನಿಂದಲೂ ಬೆನ್ನಿಗೆ ತಾಗುತ್ತಿರುವ ಅಯ್ದು ಜಡೆಗಳಿಂದಲೂ ಒಪ್ಪಿ ಹಣೆಯಮೇಲೆ ತೋರುವ ಅರಳಿ ಎಲೆಯ ಆಕಾರದ ಪದಕಗಳಿಂದಲೂ ಧರ್ಮರಾಯನ ಬಾಲಕ್ರೀಡೆಯು ಸುಂದರವಾಗಿದ್ದಿತು
- ವ|| ಅಂತಾತಂ ಬಳೆಯೆವಳೆಯೆ- (ಅಂತು- ಹೀಗೆ ಆತಂ ಬೆಳೆಯೆ) -
- ಅರ್ಥ:ಹೀಗೆ ಆತನು ಬೆಳೆಯಲು,
- ಕಂ|| ನಡೆವ ತಳರ್ನಡೆಯೊಳ್ ಪುಡಿ
- ವುಡಿಯಾದುವು ಶಿಲೆಗಳೊಡೆದು ಕರಿಗಳ್ ಭೀಮಂ|
- ಪಿಡಿದಡರ್ದೊಡೆ ಬಾಯ್ವಿಟ್ಟೆ
- ಲ್ವಡಗಾದುವು ಮುದ್ದದಂತು ಸೊಗಯಿಸವೇಡಾ|| ೫||
- ಪದ್ಯ-೫:ಪದವಿಭಾಗ-ಅರ್ಥ:ನಡೆವ ತಳರ್ ನಡೆಯೊಳ್ ಪುಡಿವುಡಿಯಾದುವು ಶಿಲೆಗಳು ಒಡೆದು, ಕರಿಗಳ್ ಭೀಮಂ ಪಿಡಿದು ಅಡರ್ದೊಡೆ (ಹಿಡಿದು ಹತ್ತಿದರೆ) ಬಾಯ್ವಿಟ್ಟು ಎಲ್ವಡಗಾದುವು (ಎಲುಬು ಮಾಂಸವಾದವು) ಮುದ್ದು ಅದು ಎಂತು ಸೊಗಯಿಸವೇಡಾ(ಆ ಮುದ್ದು ಹುಡುಗನ ಆಟ ಎಷ್ಟು ಸೊಗಸಾಗಬೇಡ)
- ಪದ್ಯ-೫:ಅರ್ಥ:ಬಾಲಕ ಭೀಮನ ನಡೆಯುವ ತಪ್ಪು ಹೆಜ್ಜೆಗಳಿಂದಲೇ ಕಲ್ಲುಗಳು ಒಡೆದು ಪುಡಿಯಾದುವು. ಆನೆಗಳನ್ನು ಹಿಡಿದು ಅವನು ಹತ್ತಲು ಅವು ಬಾಯಿಬಿಟ್ಟು (ಕೂಗಿಕೊಂಡು) ಎಲುಬುಮಾಂಸಗಳಾದುವು. ಆ ಮುದ್ದು ಹುಡುಗನ ಆಟ ಎಷ್ಟು ಸೊಗಸಾಗಬೇಡ!
- ಮುನಿವನ ಮನೆ ಬಿಸುಟುವು ಮುಂ
- ಮುನಿಯರ ಸೋಂಕಿಲೊಳೆ ಬಳೆದ ಸಿಂಗಂಗಳ್ ಮು|
- ದ್ದಿನೊಳಡರ್ವ ಪಿಡಿವ ಗುರ್ದುವ
- ಮನೆಗೆೞೆವನಿತರ್ಕಮಲಸಿ ಮರುದಾತ್ಮಜನಾ|| ೬||
- ಪದ್ಯ-೬:ಪದವಿಭಾಗ-ಅರ್ಥ:ಮುನಿವನಮನೆ (ಮನಿಯ ವನವನ್ನೇ) ಬಿಸುಟುವು (ಬಿಟ್ಟವು) ಮುಂ (ಮೊದಲು)ಮುನಿಯರ ಸೋಂಕಿಲೊಳೆ ಬಳೆದ ಸಿಂಗಂಗಳ್, ಮುದ್ದಿನೊಳು ಅಡರ್ವ ಪಿಡಿವ ಗುರ್ದುವ ಮನೆಗೆ ಎೞೆವ (ಮನೆಗೆ ಎಳೆದು ತರುವ) ಅನಿತರ್ಕಂ (ಎಲ್ಲದಕ್ಕೂ)ಅಲಸಿ (ಬೇಸರಿಸಿ) ಮರುದಾತ್ಮಜನಾ(ಭೀಮನಾ)
- ಪದ್ಯ-೬:ಅರ್ಥ:ಭೀಮನು ಹುಟ್ಟುವುದಕ್ಕೆ ಮೊದಲು, ಋಷಿಗಳ ಮಡಲಿನಲ್ಲಿ ಬಳೆದ ಸಿಂಹಗಳು, ಈಗ ಭೀಮನು ಆಟಕ್ಕಾಗಿ ಅವುಗಳನ್ನು ಹತ್ತುವ, ಹಿಡಿಯುವ, ಗುದ್ದುವ, ಮನೆಯೊಳಕ್ಕೆ ಎಳೆದುಕೊಂಡುಹೋಗುವ ಹಿಂಸೆಗಳಷ್ಟಕ್ಕೂ ಬೇಸರಗೊಂಡು, ಆ ಋಷಿಗಳ ವನವನ್ನೇ ಬಿಟ್ಟುಹೋದವು.
- ವ|| ಅಂತಾತಂ ಬಳೆಯೆ- (ಅಂತು- ಹೀಗೆ ಆತಂ ಬೆಳೆಯೆ- ಬೆಳೆಯಲು- )
- ಕಂ|| ಬೇಡದುದಂ ಬೇಡುವ ಪುಡಿ
- ಯಾಡುವ ತೊದಳೊದವೆ ನುಡಿವ ನಗಿಸುವ ಬಾಲ|
- ಕ್ರೀಡೆ ಮುರಾರಿಯ ಬಾಲ
- ಕ್ರೀಡೆಯನನುಕರಿಪುದಾದುದರಿಕೇಸರಿಯಾ|| ೭||
- ಪದ್ಯ-೭:ಪದವಿಭಾಗ-ಅರ್ಥ:ಬೇಡದುದಂ ಬೇಡುವ (ಕೊಡೆಂದು ಬೇಡದ್ದನ್ನೇ ಕೇಳುವ) ಪುಡಿಯಾಡುವ (ದೂಳಾಡಿವ) ತೊದಳೊದವೆ ನುಡಿವ(ತೊದಲಿ ಮಾನಾಡುವ) ನಗಿಸುವ, ಬಾಲ ಕ್ರೀಡೆ ಮುರಾರಿಯ ಬಾಲಕ್ರೀಡೆಯನು ಅನುಕರಿಪುದು ಆದುದು ಅರಿಕೇಸರಿಯಾ(ಅರ್ಜುನನ)
- ಪದ್ಯ-೭:ಅರ್ಥ:ಬೇಡದುದನ್ನು ಬೇಡುವ, ಧೂಳಿನಲ್ಲಿ ಆಟವಾಡುವ, ತೊದಲು ಮಾತುಗಳನ್ನು ಆಡುವ, ನಗಿಸುವ, ಅರಿಕೇಸರಿಯ/ಅರ್ಜುನನ ಬಾಲಕ್ರೀಡೆಯು ಶ್ರೀಕೃಷ್ಣನ ಬಾಲಕ್ರೀಡೆಗಳನ್ನು ಹೋಲುತ್ತಿತ್ತು.
- ಪರೆದಡರ್ದ ಧೂಳಿ ಕಿಱುನಗೆ
- ವೆರಸಿದ ತೊದಳೊದವೆ ನುಡಿವ ನುಡಿ ನಗೆಮೊಗದೊಳ್|
- ಪರಕಲಿಸಿದ ಕಾಡಿಗೆವೆರ
- ಸರಿಕೇಸರಿ ತಾಯ ಮನಮನಿೞ್ಕುಳಿಗೊಂಡಂ|| ೮ ||
- ಪದ್ಯ-೮:ಪದವಿಭಾಗ-ಅರ್ಥ:ಪರೆದು ಅಡರ್ದ ಧೂಳಿ (ಹರೆದು ಧೂಳು ಅಂಟಿದಾಗ) ಕಿಱುನಗೆವೆರಸಿದ, ತೊದಳೊದವೆ ನುಡಿವ (ತೊದಲು ಒದವೆ, ಬರಲು) ನುಡಿ ನಗೆಮೊಗದೊಳ್' ಪರಕಲಿಸಿದ (ಹರಡಿದ) ಕಾಡಿಗೆ ವೆರಸೆ ಅರಿಕೇಸರಿ/ಅರ್ಜುನನು ತಾಯ ಮನಮನು ಇೞ್ಕುಳಿಗೊಂಡಂ(ಎಳೆದುಕೊಂಡನು)
- ಪದ್ಯ-೮:ಅರ್ಥ:ಅರ್ಜುನನು, ಕೆದರಿ ಮೆಯ್ಗೆ ಅಂಟಿದ ಧೂಳು, ಹುಸಿನಗೆಯಿಂದ ಕೂಡಿದ ತೊದಲುಮಾತು, ನಗುಮುಖದಲ್ಲಿ ಹರಡಿದ/ಕದಡಿದ ಕಾಡಿಗೆಯೊಡನೆ (ಅರಿಕೇಸರಿ) ತಾಯಿಯಾದ ;ಕುಂತಿಯ ಮನಸ್ಸನ್ನು ಆಕರ್ಷಿಸಿದನು.
- ಒಗೆತರ್ಪ ಪಲ್ಗಳಾ ನಗೆ
- ಮೊಗದ ಸರಸ್ವತಿಯನಾಗಳರ್ಚಿಸಿದ ಪೊದ|
- ಳ್ದಗಲದ ಚೆಲ್ವಿನ ಮೊಲ್ಲೆಯ
ಮುಗುಳ್ಗಳನಿಳಿಸಿರೆ ಗುಣಾರ್ಣವಂ ಸೊಗಯಿಸಿದಂ|| ೯||
- ಪದ್ಯ-೯:ಪದವಿಭಾಗ-ಅರ್ಥ:ಒಗೆತರ್ಪ ಪಲ್ಗಳು ಆ ನಗೆಮೊಗದ ಸರಸ್ವತಿಯನು ಆಗಳು ಆರ್ಚಿಸಿದ ಪೊದಳ್ದಗಲದ ಚೆಲ್ವಿನ ಮೊಲ್ಲೆಯಮುಗುಳ್ಗಳನಿಳಿಸಿರೆ ಗುಣಾರ್ಣವಂ ಸೊಗಯಿಸಿದಂ
- ಪದ್ಯ-೯:ಅರ್ಥ:. ಹೊಸದಾಗಿ ಹುಟ್ಟುತ್ತಿರುವ ಹಲ್ಲುಗಳು, ಆ ನಗುಮುಖದ ವಾಗ್ದೇವಿಯನ್ನು ಪೂಜಿಸಿದ ಹರಡಿದ ಸುಂದರವಾದ ಮೊಗ್ಗಿನ ರಾಶಿಯನ್ನು ತಿರಸ್ಕರಿಸುವಂತಿರಲು ಗುಣಾರ್ಣವನು/ಅರ್ಜುನನು ಸೊಗಸಾಗಿ ಕಂಡನು.
- ಕರಿಕಳಭಂಗಳ ಶಿಶು ಕೇ
- ಸರಿಗಳ ಬೞಿಯಂ ತಗುಳ್ದು ಬಡವುಗಳನವಂ|
- ತಿರಿಪಿ ಪಿಡಿಯುತ್ತುಮರಿಗಂ
- ಪರಿದಾಡುವ ಸಮವಯಸ್ಕರೊಳ್ ಸೊಗಯಿಸಿದಂ|| ೧೦
- ಪದ್ಯ-೦೦:ಪದವಿಭಾಗ-ಅರ್ಥ:ಕರಿ ಕಳಭಂಗಳ (ಆನೆ ಮರಿಗಳ) ಶಿಶು ಕೇಸರಿಗಳ ಬೞಿಯಂ ತಗುಳ್ದು(ಸಿಂಹದ ಮರಿಗಳ ಬಳಿಗೆ ಹೋಗಿ) ಬಡವುಗಳನವಂ ತಿರಿಪಿ ಪಿಡಿಯುತ್ತುಂ (ಬಡಪ್ರಾಣಿಗಳನ್ನು ತಿರುಗಿಸಿ ಹಿಡಿಯುವ) ಅರಿಗಂ ಪರಿದಾಡುವ ಸಮವಯಸ್ಕರೊಳ್ ಸೊಗಯಿಸಿದಂ(ಅರಿಕೇಸರಿ/ಅರ್ಜುನ ಅಲ್ಲಿ ಓಡಾಡುವ ಜೊತೆಗಾರರೊಡನೆ ಸೊಗಸಾಗಿ ಕಂಡನು.)
- ಪದ್ಯ-೦೦:ಅರ್ಥ:ಆನೆಯ ಮರಿಗಳ ಸಿಂಹದ ಮರಿಗಳ ಬಳಿಗೆ ಹೋಗಿ ಆ ಬಡಪ್ರಾಣಿಗಳನ್ನು ಹಿಂತಿರುಗಿಸಿ ಹಿಡಿಯುವ ಅರಿಕೇಸರಿ/ಅರ್ಜುನ ಅಲ್ಲಿ ಓಡಾಡುವ ಜೊತೆಗಾರರೊಡನೆ ಸೊಗಸಾಗಿ ಕಂಡನು.
- ದೆಯ್ವಬಲಂ ಸೊಗಸಿಕೆ ಮುಂ
- ಗೆಯ್ವ ಬಲಂ ಬಾಳಕಾಲದೊಳ್ ತೊಡರ್ದ ಪೊಡ|
- ರ್ದಯ್ವರ ಬಾಲಕ್ರಿಯೆಯುಂ
- ಮುಯ್ವಂ ನೋಡಿಸಿತು ತಾಯುಮಂ ತಂದೆಯುಮಂ|| ೧೧
- ಪದ್ಯ-೦೦:ಪದವಿಭಾಗ-ಅರ್ಥ:ದೆಯ್ವಬಲಂ ಸೊಗಸಿಕೆ ಮುಂಗೆಯ್ವ ಬಲಂ ಬಾಳಕಾಲದೊಳ್ (ದೈವಬಲವೂ, ಸೊಗಸಿಕೆಯೂ, ಮುಂದಿನ ಕಾಲದಲ್ಲಿ) ತೊಡರ್ದ ಪೊಡರ್ದ ಐಯ್ವರ ಬಾಲಕ್ರಿಯೆಯುಂ ಮುಯ್ವಂ ನೋಡಿಸಿತು ತಾಯುಮಂ ತಂದೆಯುಮಂ( ಅವರಿಗೆ ಒದಗುವ ಸಾಮರ್ಥ್ಯವೂ ಬಾಲ್ಯದಲ್ಲಿಯೇ ಕಾಣಿಸಿ ಪ್ರಕಾಶಿತವಾದ ಬಾಲಕ್ರೀಡೆಯು ತೋರಿಸಿತು; ಇದು ಹೆಮ್ಮಗೆ ತಾಯಿ ತಂದೆಯರು ತಮ್ಮ ಭುಜವನ್ನು ತಾವೇ ನೋಡಿಕೊಳ್ಳುವ ಹಾಗೆ ಮಾಡಿತು)
- ಪದ್ಯ-೦೦:ಅರ್ಥ:ಪಾಂಡು ಕುಮಾರರ ದೈವಬಲವೂ, ಸೊಗಸಿಕೆಯೂ, ಮುಂದಿನ ಕಾಲದಲ್ಲಿ ಅವರಿಗೆ ಉಂಟಾಗಬಹುದಾದ ಸಾಮರ್ಥ್ಯವೂ ಬಾಲ್ಯದಲ್ಲಿಯೇ ಕಾಣಿಸಿ ಪ್ರಕಾಶಿತವಾದ ಬಾಲಕ್ರೀಡೆಯು ತಾಯಿಯನ್ನೂ ತಂದೆಯನ್ನೂ ತಮ್ಮ ಭುಜವನ್ನು ತಾವೇ ನೋಡಿಕೊಳ್ಳುವ ಹಾಗೆ ಮಾಡಿತು.(ರೂಢಿಯಲ್ಲಿ, ಹೆಮ್ಮಗೆ ತಮ್ಮ ಭುಜವನ್ನು ತಾವೇ ತಟ್ಟಿಕೊಳುವರು ಅಥವಾ ನೋಡಿಕೊಳ್ಳುವರು)).
- ವ|| ಅಂತಾ ಕೂಸುಗಳ್ ನಿಜ ಜನನೀಜನಕರ ಮನಮನಿೞ್ಕುಳಿಗೊಳಿಸಿಯುಮರಾತಿ ಜನಂಗಳ ಮನಮನಸುಂಗೊಳಿಸಿಯುಂ ಬಳೆಯೆ ಬಳೆಯೆ- -
- ವಚನ:ಪದವಿಭಾಗ-ಅರ್ಥ: ಅಂತಾ ಕೂಸುಗಳ್ ನಿಜ (ತಮ್ಮ) ಜನನೀ ಜನಕರ ಮನಮನು ಇೞ್ಕುಳಿಗೊಳಿಸಿಯುಂ (ಆಕರ್ಷಿಸಿ) ಆರಾತಿ (ಶತ್ರು) ಜನಂಗಳ ಮನ ಮನಸುಂಗೊಳು ಅಸಿಯುಂ ಬಳೆಯೆ ಬಳೆಯೆ-
- ವಚನ:ಅರ್ಥ:|| ಹಾಗೆ ಆ ಮಕ್ಕಳು ತಮ್ಮ ತಾಯಿತಂದೆಯರ ಮನಸ್ಸನ್ನು ಆಕರ್ಷಿಸಿಸುವಂತೆಯೂ ಶತ್ರುಜನರ ಮನಸ್ಸಿನಲ್ಲಿ ಪ್ರಾಣಾಪಹರಣ ಭಯ ಹುಟ್ಟಿಸುವಂತೆಯೂ ಬಳೆದರು.
- ಚಂ|| ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂ
- ಬೆಲರುಮಿದಂ ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ|
- ಗಿಲೆ ನನೆದೋಱಿ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು
- ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್|| ೧೨ ||
- ಪದ್ಯ-೧೨:ಪದವಿಭಾಗ-ಅರ್ಥ:ಅಲರ್ದದಿರ್ಮುತ್ತೆ ಪೂತ (ಅರಳಿದ) ಪೊಸಮಲ್ಲಿಗೆ ಕಂಪನು ಅವುಂಕುತಿರ್ಪ(ಅವುಕು ಒತ್ತಿತೆಗೆಯುವ) ತೆಂಬೆಲರುಂಮ (ತಂಗಾಳಿ) ಇದಂ ಗೆಲಲ್ ಬಗೆವ (ಇಷ್ಟಪಡುವ) ತುಂಬಿ ಗಳ ಧ್ವನಿಯಿಂ(ಕಂಠಧ್ವನಿ) ಕುಕಿಲ್ವ (ಹಾಡುವ) ಕೋಗಿಲೆ ನನೆದೋಱಿ (ನನೆ ತೋರಿ- ಕಾಣಿಸುವ) ನುಣ್ಪು ಎಸೆವ ಮಾಮರನು (ನಯವಾಗಿ ಶೋಭಿಸುವ ಮಾವಿನಮರ) ಒರ್ಮೊದಲಲ್ಲದೆ (ಒರ್ ಮೊದಲು ಅಲ್ಲದೆ -ಪದೇಪದೇ) ಉಣ್ಮುವ ಉಯ್ಯಲ(ಚಿಮ್ಮುವ ಉಯ್ಯಾಲೆ) ಪೊಸಗಾವರಂ (ಹೊಸನಾದವು) ಪುಗಿಲೊಳ್(ವಸಂತ ಹೊಗಲು-ಆರಂಭವಾಗಲು) ಏನೆಸೆದತ್ತೊ (ಏನು ಸೊಗಸಾಗಿತ್ತೋ!)ಬಸಂತಮಾಸದೊಳ್
- ಪದ್ಯ-೧೨:ಅರ್ಥ:ಅರಳಿದ ಅದಿರ್ಮುತ್ತೆಯ ಹೂವು, ಹೊಸ ಮಲ್ಲಿಗೆಯ ಹೂವಿನ ಸುವಾಸನೆಯನ್ನು ಒತ್ತಿ ಹೊರಡಿಸುತ್ತಿರುವ ತಂಗಾಳಿ, ಇದನ್ನು ಗೆಲ್ಲಲು ಯೋಚಿಸುತ್ತಿರುವ ದುಂಬಿ, ಕೊರಳ ಶಬ್ದದಿಂದ ಹಾಡುವ ಕೋಗಿಲೆ, ಹೂವಿನಿಂದ ಕೂಡಿ ನಯವಾಗಿರುವ ಮಾವಿನ ಮರ, ಒಂದೇ ಸಲವಲ್ಲದೆ ಪದೇಪದೇ ತೂಗುವ ಉಯ್ಯಾಲೆ, ಹೊಸನಾದ, ಇವು ವಸಂತಋತುವಿನ ಆರಂಭದಲ್ಲಿ ಏನು ಸೊಗಸಾಗಿತ್ತೋ!
- ವ|| ಅಗಳಾ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ವಳ ಬಳೆದ ಮಿಳಿರ್ವಶೋಕೆಯ ತಳಿರ್ಗಳುಮಾತನ ಬರವಿಂಗೆ ತೋರಣಂಗಟ್ಟಿದಂತೆ ಬಂದ ಮಾಮರಂಗಳನಡರ್ದು ತೊಡರ್ದೆಳಗೊಂಬುಗಳ್ವಿಡಿದು ಮರದಿಂ ಮರಕ್ಕೆ ದಾಂಗುಡಿವಿಡುವ ಮಾಧವೀಲತೆಗಳು ಮಾತನ ಬರವಿಂಗೆ ನೆರೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ ನನೆಯ ಬಿರಿಮುಗುಳ್ಗಳ ತುಱುಗಲೊಳೆಱಗಿ ತುಱುಗಿದ ಕಲ್ಪಲತೆಗಳು ಮಾತನ ಬರವಿಂಗೆ ಬದ್ದವಣಂ ಬಾಜಿಪಂತೆ ಭೋರ್ಗರೆದು ಮೊರೆವ ತುಂಬಿಗಳುಮಾತನ ಬರವಿಂಗೆ ರಂಗವಲಿಯಿಕ್ಕಿದಂತೆ ಪುಳಿನಸ್ಥಳಂಗಳೊಳುದಿರ್ದ ಕೞಿವೂಗಳುಮಾತನ ಬರವಿಂಗೆ ವನವನಿತೆ ಮೆಚ್ಚಿ ನೆರೆಯೆ ಕೆಯ್ಗೆಯ್ದಂತೆ ನಿಱಿನಿಱಿಗೊಂಡು ಸೊಗಯಿಸುವ ನಿಱಿಗನ ನಿಱಿದಳಿರ ಗೊಂಚಲ್ಗಳುಮಾತನ ಮೇಲ್ವಾಯೆ ರಾಗಿಸಿ ರೋಮಾಂಕುರಮೊಗೆದಂತೊಗೆದ ಕಳಿಕಾಂಕುರಂಗಳುಮಾತನಂಗಸಂಗದೊಳ್ ಕಾಮರಸಮುಗುವಂತುಗುವ ಸೊನೆಯ ಸೋನೆಗಳುಮನೊಳಕೊಂಡು ತದಾಶ್ರಮದ ನಂದನವನಂಗಳ್ ಜನಂಗಳನನಂಗಂಗೆ ತೋೞ್ತುವೆ ಸಂಗೆಯ್ಸಿದುವು-
- ವಚನ:ಪದವಿಭಾಗ-ಅರ್ಥ:ವ|| ಅಂಗಳ್ ಆ ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ ಬಳ್ವಳ ಬಳೆದ (ಕೋಮಲವಾಗಿ ಬೆಳೆದ) ಮಿಳಿರ್ವ (ಅಲುಗಾಡುವ)ಅಶೋಕೆಯ ತಳಿರ್ಗಳುಂ (ಚಿಗುರಕುಡಿಗಳೂ), ಆತನ ಬರವಿಂಗೆ ತೋರಣಂ(ಗ) ಕಟ್ಟಿದಂತೆ ಬಂದ ಮಾಮರಂಗಳನು ಅಡರ್ದು ತೊಡರ್ದು (ಹತ್ತಿ ಅಪ್ಪಿಕೋಡು) ಎಳಗೊಂಬುಗಳ್ ವಿಡಿದು (ಎಳೆಯ ರೆಂಬೆಗಳನ್ನು ಹಿಡಿದು) ಮರದಿಂ ಮರಕ್ಕೆ ದಾಂಗುಡಿವಿಡುವ (ಹಾರುವ), ಮಾಧವೀ ಲತೆಗಳುಂ ಆತನ ಬರವಿಂಗೆ (ವಸಂತನ ಬರವಿಗಾಗಿ) ನೆರೆಯೆ (ಪೂರ್ಣ) ಸೊಗಯಿಸೆ ಕೆಯ್ಗೆಯ್ದ (ಅಲಂಕರಿಸಿಕೊಂಡ) ನಲ್ಲಳಂತೆ (ಪ್ರೇಯಸಿಯಂತೆ) ನನೆಯ (ಮೊಗ್ಗಿನ) ಬಿರಿಮುಗುಳ್ಗಳ ತುಱುಗಲು ಒಳೆಱಗಿ ತುಱುಗಿದ ಕಲ್ಪಲತೆಗಳುಂ ಆತನ ಬರವಿಂಗೆ ಬದ್ದವಣಂ ಬಾಜಿಪಂತೆ (ವಾದ್ಯವನ್ನು ಬಾರಿಸುವಂತೆ) ಭೋರ್ಗರೆದು ಮೊರೆವ ತುಂಬಿಗಳುಂ ಆತನ ಬರವಿಂಗೆ ರಂಗವಲಿಯಿಕ್ಕಿದಂತೆ ಪುಳಿನ(ಮರಳು) ಸ್ಥಳಂಗಳೊಳು ಉದಿರ್ದ ಕೞಿವೂಗಳುಂ (ಕಳಿತ/ಅರಳಿದ ಹೂವುಗಳು) ಆತನ ಬರವಿಂಗೆ "ವನವನಿತೆ" ಮೆಚ್ಚಿ ನೆಯೆ ಕೆಯ್ಗೆಯ್ದಂತೆ (ಕೈಗಯ್ದಂತೆ?-ಶೃಂಗಾರಗೊಂಡಂತೆ) ನಿಱಿನಿಱಿಗೊಂಡು (ನಿರಿಗೆ ನಿರಿಗೆಯಾಗಿ) ಸೊಗಯಿಸುವ ನಿಱಿಗನ (ಸಿಹಿಮಾವಿನ) ನಿಱಿದಳಿರ (ನರಿಗೆಯಚಿಗುರ) ಗೊಂಚಲ್ಗಳುಂ, ಆತನ ಮೇಲ್ವಾಯೆ (ನುಗ್ಗಲು) ರಾಗಿಸಿ ರೋಮಾಂಕುರಂ ಒಗೆದಂತ ಒಗೆದ (ತೋರುವ) ಕಳಿಕ ಅಂಕುರಂಗಳುಂ (ಚಿಗುರು ಕುಡಿಗಳು) ಆತನ (ವಸಂತನ) ಅಂಗಸಂಗದೊಳ್ ಕಾಮರಸಂ ಉಗುವಂತೆ ಉಗುವ ಸೊನೆಯ ಸೋನೆಗಳುನು (ಮರದ ಸೊನೆಯ ರಸಗಳು ಉಕ್ಕಿಬರುವುದು ವಸಂತನ ವನವನಿತೆಯ ಅಂಗಸಂಗದಿಂದ ಬಂದ ಕಾಮರಸ ಎಂದು ಭಾವ) ಒಳಕೊಂಡು ತದಾಶ್ರಮದ ನಂದನವನಂಗಳ್ ಜನಂಗಳನು ಅನಂಗಂಗೆ (ಮನ್ಮಥನಿಗೆ) ತೋೞ್ತುವೆ ಸಂಗೆಯ್ಸಿದುವು (ತೊಳ್ತು-ತೊತ್ತಿನ ಕೆಲಸ ಮಾಡಿದವು)-
- ವಚನ:ಅರ್ಥ:ಆ ಸಮಯದಲ್ಲಿ ಆ ವಸಂತರಾಜನ ಬರವಿಗಾಗಿ ಬಾವುಟಗಳನ್ನು ಕಟ್ಟಿದಹಾಗೆ ಕೋಮಲವಾಗಿ ಬೆಳೆದು ಅಲುಗಾಡುವ ಅಶೋಕವೃಕ್ಷಗಳ ಚಿಗುರು ಕುಡಿಗಳೂ, ಆತನ ಬರವಿಗಾಗಿ ತೋರಣ ಕಟ್ಟಿದಂತೆ ಹಣ್ಣು ಕಾಯಿಗಳನ್ನು ಬಿಟ್ಟಿರುವ ಮಾವಿನ ಮರಗಳನ್ನು ಏರಿ ಅಡ್ಡಲಾಗಿ ಎಳೆಕೊಂಬೆಗಳನ್ನು ಹಿಡಿದು ಮರದಿಂದ ಮರಕ್ಕೆ ಕುಡಿಯನ್ನು ಚಾಚುವ ಮೊಲ್ಲೆಯ ಬಳ್ಳಿಗಳೂ, ವಸಂತನ ಬರುವಿಕೆಗೆ ಸಂಪೂರ್ಣ ಸುಂದರವಾಗಿ ಕಾಣುವುದಕ್ಕಾಗಿ ಅಲಂಕಾರವನ್ನು ಮಾಡಿಕೊಳ್ಳುವ ಪ್ರೇಯಸಿಯಂತೆ ಹೂವಿನ ದಪ್ಪ ಮೊಗ್ಗಿನ ಗುಂಪುಗಳಿಂದ ಕೂಡಿ ದಟ್ಟವಾಗಿರುವ ಕಲ್ಪಲತೆಗಳೂ ಆತನ ಬರವಿಗೆ ಮಂಗಳವಾದ್ಯವನ್ನು ಬಾರಿಸುವಂತೆ ದೊಡ್ಡ ಶಬ್ದಮಾಡುವ ದುಂಬಿಗಳೂ, ಆತನ ಬರವಿಗೆ ರಂಗೋಲೆಯನ್ನಿಕ್ಕಿದಂತೆ ಮರಳಿನ ಪ್ರದೇಶದಲ್ಲಿ ಉದುರಿದ್ದ ಕಳಿತಹೂವುಗಳೂ, ಆತನ ಬರುವಿಕೆಗೆ ವನಲಕ್ಷ್ಮಿಯು ಸಂತೋಷಪಟ್ಟು ಸಂಪೂರ್ಣವಾಗಿ ಅಲಂಕಾರ ಮಾಡಿದಂತೆ ನಿರಿಗೆನಿರಿಗೆಯಾಗಿ ಸೊಗಯಿಸುವ ಸಿಹಿಮಾವಿನ ಸಾಲಾಗಿರುವ ಗೊಂಚಲುಗಳೂ, ಆತನ ಮೇಲೆ ಪ್ರೀತಿಸಿ ನುಗ್ಗಲು ರೋಮಾಂಚನಗೊಂಡಂತೆ ಹುಟ್ಟಿರುವ ಚಿಗುರು ಮತ್ತು ಕಿರುಗೊಂಬೆಗಳ ಮೊಳಕೆಗಳೂ ಆತನ ಶರೀರಸ್ಪರ್ಶದಿಂದ ಕಾಮರಸವು ಜಿನುಗುವಂತೆ ಸ್ರವಿಸುವ ಮರದ ಹಾಲಿನ ಸೋನೆಗಳೂ ಇವುಗಳಿಂದ ಆ ಆಶ್ರಮದ ನಂದನವನಗಳು ಜನಗಳು ಮನ್ಮಥನಿಗೆ ಸೇವೆಗೆಯ್ಯುವ ಹಾಗೆ ಮಾಡಿದುವು.
- ಚಂ|| ಬಿರಯಿಯ ಮಿೞ್ತುವೆಂ ಮಿದಿದೊಡಲ್ಲದಣಂ ಮುಳಿಸಾಱದೆಂದು ಪ
- ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ|
- ಱರನಿರದೂಱಿ ಸಾಱಿ ಜಡಿವಂತೆಸೆಗುಂ ಸಹಕಾರ ಕೋಮಳಾಂ
- ಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್|| ೧೩||
- ಪದ್ಯ-೧೩:ಪದವಿಭಾಗ-ಅರ್ಥ: (ವಸಂತನು) ಬಿರಯಿಯ ಮಿೞ್ತುವೆಂ (ಅಗಲಿದ ವಿರಹಿಗಳ ಮೃತ್ಯುವು), ಮಿದಿದೊಡಲ್ಲದೆ ಅಣಂ (ಮಿದಿ-ಚಚ್ಚು;ಚಚ್ಚಿದ ಹೊರತು ) ಮುಳಿಸು ಆಱದೆಂದು (ಸಿಟ್ಟು ತಣಿಯದೆಂದು) ಪಲ್ ಮೊರೆದಪನು ಇಲ್ಲಿ ಮನ್ಮಥನು(ಮನ್ಮಥನು ಇಲ್ಲಿ ಹಲ್ಲು ಕಡಿಯುವನು;) ಇದಂ ಪುಗಲಿಂ ಗಡಿಮೆಂದು(ಈ ವನವನ್ನು- ಹೊಗಲು ಬೇಡಿ/ಕೂಡದು) ಬೇಟಕಾಱರನು ಇರದೆ ಊಱಿ ಸಾಱಿ(ಸುಮ್ಮನಿರದೆ ಕೂಗಿಹೇಲಿ) ಜಡಿವಂತೆ ಎಸೆಗುಂ (ಗದುವಂತೆ -ಕಾಣುವನು) ಸಹಕಾರ ಕೋಮಳ ಅಂಕುರ (ಮಾವಿನ ಎಳೆಯ ಚಿಗುರು ತಿಂದು) ಪರಿತುಷ್ಟ ಪುಷ್ಟ ಪರಪುಷ್ಟ(ಕೋಗಿಲೆ) ಗಳಧ್ವನಿ(ಕೊಬ್ಬಿ ತೃಪ್ತಿಪಟ್ಟ ಕೋಗಿಲೆಯ ಕಂಠದ ದನಿ) ನಂದನಂಗಳೊಳ್ (ವನಗಳಲ್ಲಿ)(ಎಸೆಗಂ- ಶೋಭಿಸುವುದು)
- ಪದ್ಯ-೧೩:ಅರ್ಥ:ವಸಂತನು ಹೇಳಿದಂತಿದೆ: ನಾನು ವಿರಹಿಗಳ ಮೃತ್ಯುವಾಗಿದ್ದೇನೆ. ಅವರನ್ನು ಚಚ್ಚಿದಲ್ಲದೆ ನನ್ನ ಕೋಪವು ಸ್ವಲ್ಪವೂ ಆರುವುದಿಲ್ಲ ಎಂದು ಇಲ್ಲಿ ಮನ್ಮಥನು ಹಲ್ಗಡಿದು ಕೂಗುತ್ತಿದ್ದಾನೆ. ಇಲ್ಲಿಗೆ ವಿರಹಿಗಳು ಪ್ರವೇಶಿಸಲು ಕೂಡದು, ಎಂದು ಒಂದೇ ಸಮನಾಗಿ ಬಲಾತ್ಕಾರದಿಂದ ಕೂಗಿ ಹೇಳಿ ಹೆದರಿಸುವಂತೆ ಮಾವಿನ ಮೃದುವಾದ ಚಿಗುರುಗಳನ್ನು ತೃಪ್ತಿಯಾಗುವಷ್ಟು ತಿಂದು ಕೊಬ್ಬಿರುವ ಕೋಗಿಲೆಗಳ ಕಂಠದ ದನಿ ಆ ತೋಟಗಳಲ್ಲಿ ಶೋಭಿಸುತ್ತಿದೆ.
- ಚಂ|| ಕವಿವ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿ
- ಲ್ಗವಿಲನುಮಾಗಿ ಬಂದ ಮಲಯಾನಿಲನೂದೆ ತೆರಳ್ವ ಚೂತ ಪ|
- ಲ್ಲವದ ತೆರಳ್ಕೆ ತದ್ವನ ವಿಳಾಸಿನಿಯುಟ್ಟ ದುಕೂಲದೊಂದು ಪ
- ಲ್ಲವದ ತೆರಳ್ಕೆಯಂತೆಸೆಯೆ ಕಣ್ಗೆಸೆದಿರ್ದುವು ನಂದನಾಳಿಗಳ್|| ೧೪||
- ಪದ್ಯ-೧೪:ಪದವಿಭಾಗ-ಅರ್ಥ:ಕವಿವ ಮದಾಳಿಯಿಂ (ಮುತ್ತುವ ದುಂಬಿಗಳಿಂದ) ಮಸುಳನಾಗಿ ಪಯೋಜ ರಜಂಗಳೊಳ್ (ತಾವರೆಯ ಪರಾಗದಲ್ಲಿ) ಕವಿಲ್ (ಗ)ಕವಿಲನುಮಾಗಿ (ಕೆಂಪು ಬಣ್ಣದ) ಬಂದ ಮಲಯಾನಿಲನು(ಮಂದಮಾರುತನು) ಊದೆ (ಬೀಸಲು) ತೆರಳ್ವ ಚೂತ ಪಲ್ಲವದ ತೆರಳ್ಕೆ (ಅಲುಗಾಡುವ ಮಾವಿನ ಚಿಗುರು) ತದ್ ವನ ವಿಳಾಸಿನಿಯುಟ್ಟ (ವನವನಿತೆಯು ಉಟ್ಟ) ದುಕೂಲದ ಒಂದು ಪಲ್ಲವದ ತೆರಳ್ಕೆಯಂತೆ ಎಸೆಯೆ (ಒಂದು ಸೀರೆಯ ಸೆರಗಿನ ಅಲುಗಾಟದಂತೆ ಶೋಭಿಸಲು) ಕಣ್ಗೆಸೆದಿರ್ದುವು ನಂದನಾಳಿಗಳ್(ಉದ್ಯಾನಗಳ ಸಾಲು ಕಣ್ಣಿಗೆ ಶೋಭಿಸಿತು)
- ಪದ್ಯ-೧೪:ಅರ್ಥ:ಮುತ್ತುವ ದುಂಬಿಗಳಿಂದ,ತಾವರೆಯ ಪರಾಗದಲ್ಲಿ, ಕೆಂಪು ಬಣ್ಣದ ಬಂದ ಮಂದಮಾರುತನು ಬೀಸಲು, ಅಲುಗಾಡುವ ಮಾವಿನ ಚಿಗುರು, ಆ ವನವನಿತೆಯು ಉಟ್ಟ ಒಂದು ಸೀರೆಯ ಸೆರಗಿನ ಅಲುಗಾಟದಂತೆ ಶೋಭಿಸಲು ಉದ್ಯಾನಗಳ ಸಾಲು ಕಣ್ಣಿಗೆ ಶೋಭಿಸಿತು.
- ಉ|| ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
- ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ|
- ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
- ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ|| ೧೫||
- ಪದ್ಯ-೧೫:ಪದವಿಭಾಗ-ಅರ್ಥ:ಪೋಗದೆ ಪಾಡುತಿರ್ಪ ಅಳಿಯೆ ಬೃಂಹಿತಂ ಆಗಿರೆ (ಹೋಗದೆ ಹಾಡುತ್ತಿದ್ದ ದುಂಬಿಗಳೆ ಆನೆಯ ಘೀಂಕಾರವು,) ಚಂದ್ರಕಾಂತಿ ಕಾಯ್ಪಾಗಿರೆ ಬೀಸುವೊಂದು ಅಲರೆ ಬೀಸುವುದು ಆಗಿರೆ (ಚಂದ್ರನ ಬೆಳುದಿಂಗಳೇ ಕೋಪವಾಗಿರಲು, ಬೀಸುವ ಗಾಳಿಯೇ ಬೀಸಣಿಗೆ,) ಕಾಯ್ಗಳಿಂದಂ ಇಂಬಾಗಿರೆ (ಕಾಯಿಗಳಿಂದ ಸೊಗಸಾಗಿ) ಸೋರ್ವ ಸೋನೆ ಮದಮಾಗಿರೆ (ಸುರಿಯುವ ನೀರು ಮದವಾಗಿರಲು) ಮಾವಿನ ಬಂದ ಕೋಡೆ ಕೋಡಾಗಿರೆ ( ಮಾವಿನ ಮರದಲ್ಲಿ ಹುಟ್ಟಿಬಂದ ಕೊಂಬೆಗಳೇ ಅದರ ಕೊಂಬು) ಕೋಡುಗೊಂಡು ಪರಿದತ್ತು (ಕೊಂಬು/ದಂತ ಪಡೆದು ತಿವಿಯಿತು) ವಸಂತಗಜಂ ವಿಯೋಗಿಯಂ|
- ಪದ್ಯ-೧೫:ಅರ್ಥ:ಆ ವನವನ್ನು ಬಿಟ್ಟು ಹೋಗದೆ ಅಲ್ಲಿಯೇ ಹಾರಾಡುತ್ತಿರುವ ದುಂಬಿಯೇ ಆನೆಯ ಘೀಂಕಾರವು, ಬೆಳದಿಂಗಳೇ ಅದರ ಕೋಪ, ಬೀಸುವ ಗಾಳಿಯೇ ಬೀಸಣಿಗೆಯಾಗಿರಲು, ಕಾಯಿಗಳಿಂದ ಸೊಗಸಾಗಿ ಸೋರುತ್ತಿರುವ ನೀರೇ ಮದೋದಕ, ಮಾವಿನ ಮರದಲ್ಲಿ ಹುಟ್ಟಿಬಂದ ಕೊಂಬೆಗಳೇ ಅದರ ಕೊಂಬಾಗಿರಲು, ವಸಂತಕಾಲವೆಂಬ ಆನೆಯು ವಿರಹಿಯನ್ನು ತನ್ನ ದಂತದಿಂದ ತಿವಿದು ಹರಿಯಿತು, (ಓಡಿತು?).
- ವ|| ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ ಕ್ರೀಡಾನುಶೀಲೆಯು ಮಪ್ಪುದಱಿಂ ವನಕ್ರೀಡಾನಿಮಿತ್ತದಿಂ ಪೋಗಿ-
- ವಚನ:ಪದವಿಭಾಗ-ಅರ್ಥ:ಅಂತು ಬಂದ ಬಸಂತದೊಳ್ ಮಾದ್ರಿ ತಾಂ ಗರ್ವವ್ಯಾಲೆಯುಂ (ಮಾದ್ರಿ ತಾನು ಗರ್ವದಿಂದ ಮದವೇರಿ) ಕ್ರೀಡಾನುಶೀಲೆಯು ಮಪ್ಪುದಱಿಂ (ಕ್ರೀಡಾಸಕ್ತೆಯಾಗಿ) ವನಕ್ರೀಡಾನಿಮಿತ್ತದಿಂ ಪೋಗಿ (ಆಗಿದ್ದುದರಿಂದ ಕಾಡಿನಲ್ಲಿ ಆಟವಾಡುವುದಕ್ಕಾಗಿ ಹೋಗಿ )
- ವಚನ:ಅರ್ಥ:ಹಾಗೆ ಬಂದ ವಸಂತದಲ್ಲಿ ಮಾದ್ರಿ ತಾನು ಗರ್ವದಿಂದ ಮದವೇರಿ, ಕ್ರೀಡಾಸಕ್ತೆಯಾಗಿ ವನಕ್ರೀಡೆಯ ಕಾರಣ ಕಾಡಿನಲ್ಲಿ ಹೋಗಿ-
- ಚಂ|| ವನಕುಸುಮಂಗಳಂ ಬಗೆಗೆವಂದುವನೞ್ತಿಯೊಳಾಯ್ದು ಕೊಯ್ದು ಮೆ
- ಲ್ಲನೆ ವಕುಳಾಳವಾಳ ತಳದೊಳ್ ಸುರಿದಂಬುಜಸೂತ್ರದಿಂದೆ ಮ|
- ತ್ತನಿತರೊಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇ
- ೞ್ಪನಿತನೆ ಮಾಡಿ ತೊಟ್ಟು ಕರಮೊಪ್ಪಿದಳಾಕೆ ಬಸಂತ ಕಾಂತೆವೋಲ್|| ೧೬||
- ಪದ್ಯ-೦೦:ಪದವಿಭಾಗ-ಅರ್ಥ:ವನಕುಸುಮಂಗಳಂ ಬಗೆಗೆವಂದುವಂ (ಮನಸ್ಸಿಗೆ ಬಂದುದನ್ನು)ಅೞ್ತಿಯೊಳು ಆಯ್ದು ಕೊಯ್ದು (ಪ್ರೀತಿಯಿಂದ ಆರಿಸಿ ಕೊಯಿದು) ಮೆಲ್ಲನೆ ವಕುಳಾಳವಾಳ ತಳದೊಳ್ (ಬಕುಳ ಮರದ ಪಾತಿಯ ತಾಣದಲ್ಲಿ ) ಸುರಿದು, ಅಂಬುಜಸೂತ್ರದಿಂದೆ ಮತ್ತೆ ಅನಿತರೊಳಂ ಮುಗುಳ್ ಸರಿಗೆ ತೋಳ್ವಳೆ ಕಂಕಣವು ಆರಮ್ ಎಂದು(ತಾವರೆದಂಟಿನ ದಾರದಿಂದ ಮತ್ತೆ ಅಷ್ಟೂ ಹೂವುಗಳಲ್ಲೂ ಮೊಗ್ಗಿನ ಸರಿಗೆ, ತೋಳು ಬಳೆ, ಬಳೆ ಹಾರ ಎಂದು) ಬೇೞ್ಪನಿತನೆ ಮಾಡಿ (ಬಾಕಾದಷ್ಟು ಮಾಡಿಕೊಂಡು) ತೊಟ್ಟು ಕರಂ(ಬಹಳ) ಒಪ್ಪಿದಳು(ಶೋಭಿಸಿದಳು) ಆಕೆ ಬಸಂತ ಕಾಂತೆವೋಲ್|
- ಪದ್ಯ-೦೦:ಅರ್ಥ:ತನ್ನ ಮನಸ್ಸಿಗೆ ಬಂದಂತಹ ಕಾಡಿನ ಹೂವುಗಳನ್ನು ಪ್ರೀತಿಯಿಂದ ಆರಿಸಿ ಕೊಯ್ದು ಮೆಲ್ಲನೆ ಬಕುಳವೃಕ್ಷದ ಪಾತಿಯ ತಾಣದಲ್ಲಿ ಸುರಿದು, ತಾವರೆಯ ದಂಟಿನ ದಾರದಿಂದ ಮತ್ತಿತರ ಹೂಗಳಿಂದ ಮೊಗ್ಗಿನ ಸರಿಗೆ, ತೋಳಬಳೆ, ಕೈಬಳೆ, ಹಾರ ಎಂದು ಬೇಕಾಗುವಷ್ಟು ಮಾಡಿಕೊಂಡು ಧರಿಸಿ ಮಾದ್ರಿಯು ವಸಂತ ಲಕ್ಷ್ಮಿಯಂತೆ ಬಹಳ ಶೋಭಿಸಿದಳು.
- ವ|| ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ-
- ವಚನ:ಪದವಿಭಾಗ-ಅರ್ಥ:ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ-
- ವಚನ:ಅರ್ಥ:ಹಾಗೆ ಧರಿಸಿದ ಪುಷ್ಪಗಳ ಆಭರಣಗಳು ಮನ್ಮಥನು ಪ್ರಯೋಗಿಸಿದ ಪುಷ್ಪಬಾಣಕ್ಕೆ ಸಮಾನವಾಗಿರಲು;
- ಚಂ|| ಮಿಳಿರ್ವ ಕುರುಳ್ಗಳೊಳ್ ತೊಡರ್ದು ದೇಸಿಯನಾವಗಮೀವ ಚೆನ್ನ ಪೂ
- ಗಳನವನೊಯ್ಯನೋಸರಿಸುತುಂ ವದನಾಬ್ಜದ ಕಂಪನಾಳ್ದುಣಲ್|
- ಬಳಸುವ ತುಂಬಿಯಂ ಪಿಡಿದ ನೆಯ್ದಿಲೊಳೊಯ್ಯನೆ ಸೋವುತುಂ ಬೆಡಂ
- ಗೊಳಕೊಳೆ ಸೊರ್ಕಿದಂಗಜ ಮತಂಗಜದಂತಿರೆ ಬರ್ಪ ಮಾದ್ರಿಯಂ|| ೧೭||
- ಪದ್ಯ-೧೭:ಪದವಿಭಾಗ-ಅರ್ಥ:ಮಿಳಿರ್ವ(ಅಲುಗುವ) ಕುರುಳ್ಗಳೊಳ್ ತೊಡರ್ದು (ಅಲುಗಾಡುತ್ತಿರುವ ಮುಂಗುರುಳಿನಲ್ಲಿ ಸಿಕ್ಕಿಕೊಂಡು) ದೇಸಿಯಂ (ಚೆಲುವನ್ನು)ಆವಗಂ(ಪೂರ್ಣ) ಈವ (ಕೊಡುವ) ಚೆನ್ನ ಪೂಗಳನವಂ (ಚಂದ ಹೂವುಗಳನ್ನು) ಒನೊಯ್ಯನೆ ಓಸರಿಸುತುಂ (ಮೆಲ್ಲ ಮಲ್ಲನೆ ಪಕ್ಕಕ್ಕೆ ಸರಿಸುತ್ತಾ) ವದನಾಬ್ಜದ ಕಂಪನು ಆಳ್ದು ಉಣಲ್ (ಮುಖಕಮಲದ ಪರಿಮಳವನ್ನು ಪಡೆದು ಉಣ್ಣುವುಕ್ಕಾಗಿ) ಬಳಸುವ (ಮುತ್ತುವ) ತುಂಬಿಯಂ (ದುಂಬಿಗಳನ್ನು) ಪಿಡಿದ ನೆಯ್ದಿಲೊಳು ಒಯ್ಯನೆ ಸೋವುತುಂ (ಕೈಯ್ಯಲ್ಲಿ ಹಿಡಿದಿದ್ದ ಕಮಲದಿಂದ ಮೆಲ್ಲನೆ ಓಡಿಸುತ್ತಾ) ಬೆಡಂಗು ಒಳಕೊಳೆ (ಬೆಡಂಗಿನಿಂದ ಕೂಡಿ) ಸೊರ್ಕಿದ ಅಂಗಜ (ಮನ್ಮಥ) ಮತಂಗಜದಂತಿರೆ ಬರ್ಪ (ಬೆಡಂಗಿನಿಂದ ಕೂಡಿ ಸೊಕ್ಕಿದ ಮನ್ಮಥನ ಮದ್ದಾನೆಯಂತೆ ಬರುತ್ತಿದ್ದ) ಮಾದ್ರಿಯಂ|| ೧೭
- ಪದ್ಯ-೧೭:ಅರ್ಥ:. ಅಲುಗುವ ಮುಂಗುರುಳುಗಳಲ್ಲಿ ಸಿಕ್ಕಿಕೊಂಡು ವಿಶೇಷ ಸೌಂದರ್ಯವನ್ನುಂಟುಮಾಡುತ್ತಿರುವ ಸೊಗಸಾದ ಹೂವುಗಳನ್ನು ಮೆಲ್ಲ ಮಲ್ಲನೆ ಪಕ್ಕಕ್ಕೆ ಸರಿಸುತ್ತಾ, ಮುಖಕಮಲದ ಪರಿಮಳವನ್ನು ಪಡೆದು ಉಣ್ಣುವುಕ್ಕಾಗಿ ಮುತ್ತಿಕೊಳ್ಳುತ್ತಿರುವ ದುಂಬಿಯನ್ನು ಕೈಯ್ಯಲ್ಲಿ ಹಿಡಿದಿದ್ದ ಕಮಲದಿಂದ ಮೆಲ್ಲನೆ ಓಡಿಸುತ್ತಾ ಬೆಡಂಗಿನಿಂದ ಕೂಡಿ, ಸೊಕ್ಕಿದ ಮನ್ಮಥನ ಮದ್ದಾನೆಯಂತೆ ಬರುತ್ತಿದ್ದ ಮಾದ್ರಿಯನ್ನು,-
- ವ|| ತಾಪಸಾಶ್ರಮದಿಂ ಪೊಱಮಟ್ಟಂತೆ ಬನಮಂ ತೊೞಲ್ವ ಪಾಂಡುರಾಜಂ ಕಂಡು-
- ವಚನ:ಪದವಿಭಾಗ-ಅರ್ಥ:ತಾಪಸ ಆಶ್ರಮದಿಂ ಪೊಱಮಟ್ಟಂತೆ ಬನಮಂ ತೊೞಲ್ವ ಪಾಂಡುರಾಜಂ ಕಂಡು
- ವಚನ:ಅರ್ಥ:ತಾಪಸ್ವಿಗಳ ಆಶ್ರಮದಿಂದ ಹೊರಗೆಹೊರಟವನು ಕಾಡಿನಲ್ಲಿ ಅಡ್ಡಾಡುತ್ತಿದ್ದ ಪಾಂಡುರಾಜನು ಮಾದ್ರಿಯನ್ನು ನೋಡಿ-
- ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ
- ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ|
- ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ
- ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್|| ೧೮||
- ಪದ್ಯ-೧೮:ಪದವಿಭಾಗ-ಅರ್ಥ: ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲ್ ಎರ್ದೆಯೊಳ್ ತಡಂ ಆಡೆ (ಮಾದ್ರಿ, ಧರಿಸಿದ ಹೂವಿನ ಅಲಂಕಾರವು ಅವನ ಮೃದುವಾದ ಹೃದಯದಲ್ಲಿ ಮೆಲ್ಲಗೆ ಆಡುತ್ತಿರಲು) ಗಾಡಿ (ಆಂದವು) ದಿಟ್ಟಿಗಳೊಳ್ ಅನಂಗ ರಾಗರಸಂ ಉಣ್ಮುವಿನಂ (ಅವಳ ಸೌಂದರ್ಯವು ಅವನ ಕಣ್ಣುಗಳಲ್ಲಿ ಕಾಮರಸ ಉಕ್ಕುತ್ತಿರಲು) ನಡೆ ನೋಡಿ ನೋಡಿ ತೊಟ್ಟಗೆ ಕೊಳೆ (ಕಣ್ಣಿಟ್ಟು ನೋಡಿನೋಡಿ ಬೇಗನೆ ಹಿಡಿಯಲು) ಮೇಲೆ ಪಾಯ್ದು -ಅವಳನು ಅಪ್ಪಿದನು-> ಆ ವಿಭು (ಆ ರಾಜನು) ತನ್ನ ಶಾಪಮಂ ಬಗೆಯದೆ. (ತನ್ನ ಶಾಪವನ್ನು ಲೆಕ್ಕಿಸದೆ) ಮಿೞ್ತುದೇವತೆಯನು (ಮೃತ್ಯುದೇವತೆಯನ್ನು) ಅೞ್ಕಱಳುರ್ಕೆಯಿನು (ಅತಿಶಯ ಪ್ರೀತಿಯಿಂದ) ಆಪ್ಪುವಂತೆ ವೋಲ್ (ಅವಳನು ಅಪ್ಪಿದನು)
- ಪದ್ಯ-೧೮:ಅರ್ಥ:ಮಾದ್ರಿ ಧರಿಸಿದ ಹೂವಿನ ಅಲಂಕಾರವು ತನ್ನ ಮೃದುವಾದ ಹೃದಯದಲ್ಲಿ ಮೆಲ್ಲಗೆ ಆಡುತ್ತಿರಲು, ಅವಳ ಸೌಂದರ್ಯವು ಅವನ ಕಣ್ಣುಗಳಲ್ಲಿ ಕಾಮರಸ ಉಕ್ಕುತ್ತಿರಲು, ಕಣ್ಣಿಟ್ಟು ನೋಡಿನೋಡಿ ಬೇಗನೆ ಹಿಡಿಯಲು, ಮೇಲೆ ನುಗ್ಗಿ ಅವಳನ್ನು ರಾಜನಾದ ಪಾಂಡುವು ತನಗಿದ್ದ ಶಾಪವನ್ನು ಲೆಕ್ಕಿಸದೆ, ಅತಿಶಯ ಪ್ರೀತಿಯಿಂದ ಮೃತ್ಯುದೇವತೆಯನ್ನಪ್ಪುವಂತೆ ಅವಳನ್ನು (ಮಾದ್ರಿಯನ್ನು) ಅಪ್ಪಿದನು.
- ವ|| ಅಂತಪ್ಪುವುದುಂ ವಿಷಮ ವಿಷವಲ್ಲಿಯನಪ್ಪಿದಂತೆ ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ-
- ವಚನ:ಪದವಿಭಾಗ-ಅರ್ಥ:ಅಂತು ಅಪ್ಪುವುದುಂ ವಿಷಮ (ಕೇಡಿನ) ವಿಷವಲ್ಲಿಯನು (ವಿಷದ ಬಳ್ಳಿಯನ್ನು) ಅಪ್ಪಿದಂತೆ ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ(ಹಾಗೆ ಅಪ್ಪಿದ ಪ್ರಿಯಳ ಕೋಮಲವಾದ ತಾವರೆ ದಂಟಿನಂತೆ ಲಲಿತವಾದ ತೋಳುಗಳೆಂಬ ಹಗ್ಗಗಳೇ) ಯಮಪಾಶಂಗಳಾಗೆ-
- ವಚನ:ಅರ್ಥ:ಹಾಗೆ ವಿಷದ ಬಳ್ಳಿಯನ್ನು ಆಲಿಂಗನ ಮಾಡುವಂತೆ ಅವಳನ್ನು ಅಪ್ಪಿಕೊಳ್ಳಲು ಆ ಪ್ರಿಯಳು ಹಾಗೆ ಅಪ್ಪಿದ ಪ್ರಿಯಳ ಕೋಮಲವಾದ ತಾವರೆ ದಂಟಿನಂತೆ ಲಲಿತವಾದ ತೋಳುಗಳೆಂಬ ಹಗ್ಗಗಳೇ ಯಮಪಾಶವಾಗಲು-
- ಚಂ|| ಬಿಗಿದಮರ್ದಿರ್ದ ತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೊ
- ಯ್ಯಗೆ ನಗೆಗಣ್ಗಳಾಲಿ ಮಗುೞ್ದಂತಿರೆ ಮುಚ್ಚಿರೆ ಸುಯ್ಯಡಂಗೆ ಮೆ|
- ಲ್ಲಗೆ ಮಱಸೊಂದಿದಂದದೊಳೆ ಜೋಲ್ದ ನಿಜೇಶನನಾ ಲತಾಂಗಿ ತೊ
- ಟ್ಟಗೆ ಕೊಳೆ ನೋಡಿ ಕೆಟ್ಟೆನಿನಿಯಂ ಮಱಸೊಂದಿದನೋ ಬೞಲ್ದನೋ|| ೧೯ ||
- ಪದ್ಯ-೧೯:ಪದವಿಭಾಗ-ಅರ್ಥ:ಬಿಗಿದು ಅಮರ್ದಿರ್ದ ತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಂ ಒಯ್ಯಗೊಯ್ಯಗೆ (ಬಿಗಿಯಾಗಿ ಅಪ್ಪಿಕೊಂಡಿದ್ದ ತೋಳು ಸಡಿಲವಾಗಲು ಮುಖವು ಜೋತುಬೀಳಲು, ಮಲ್ಲಮೆಲ್ಲಗೆ ಮುಖದಲ್ಲಿದ್ದ) ನಗೆಗಣ್ಗಳಾಲಿ ಮಗುೞ್ದಂತಿರೆ ಮುಚ್ಚಿರೆ ಸುಯ್ಯಡಂಗೆ (ನಗೆಯ ಕಣ್ಣುಗಳ ಪಾಪೆಗಳು ಕಾಂತಿಹೀನವಾಗಿ ಮುಚ್ಚಿರಲು ಉಸಿರಾಟವು ನಿಂತುಹೋಗಲು) ಮೆಲ್ಲಗೆ ಮಱಸೊಂದಿದ ಅಂದದದೊಳೆ (ನಿಧಾನವಾಗಿ ಪ್ರಜ್ಞೆತಪ್ಪಿದವನಂತೆ) ಜೋಲ್ದ ನಿಜೇಶನನು ಆ ಲತಾಂಗಿ ತೊಟ್ಟಗೆ ಕೊಳೆ ನೋಡಿ (ಜೋತುಬಿದ್ದ ತನ್ನ ಪತಿಯನ್ನು ಆ ಮಾದ್ರಿಯು ದಿಟ್ಟಿಸಿನೋಡಿ), ಕೆಟ್ಟೆನು ಇನಿಯಂ ಮಱಸೊಂದಿದನೋ(ಪತಿಯು ಮೂರ್ಛೆ ಹೋದನೋ) ಬೞಲ್ದನೋ (ಬಳಲಿದ್ದಾನೋ) ಎಂದು ಮಾದ್ರಿ ಗಾಬರಿಯಾದಳು.
- ಪದ್ಯ-೧೯:ಅರ್ಥ:ಬಿಗಿಯಾಗಿ ಅಪ್ಪಿಕೊಂಡಿದ್ದ ತೋಳು ಸಡಿಲವಾಗಲು ಮುಖವು ಜೋತುಬೀಳಲು ಮಲ್ಲಮೆಲ್ಲಗೆ ಮುಖದಲ್ಲಿದ್ದ ನಗೆಯ ಕಣ್ಣುಗಳ ಪಾಪೆಗಳು ಕಾಂತಿಹೀನವಾಗಿ ಮುಚ್ಚಿರಲು, ಉಸಿರಾಟವು ನಿಂತುಹೋಗಲು, ನಿಧಾನವಾಗಿ ಪ್ರಜ್ಞೆತಪ್ಪಿದವನಂತೆ ಜೋತುಬಿದ್ದ ತನ್ನ ಪತಿಯನ್ನು ಆ ಮಾದ್ರಿಯು ದಿಟ್ಟಿಸಿನೋಡಿ, ಕೆಟ್ಟೆನು; ಪತಿಯು ಮೂರ್ಛೆ ಹೋದನೋ ಇಲ್ಲವೇ ಬಳಲಿದ್ದಾನೋ ಎಂದು ಮಾದ್ರಿ ಗಾಬರಿಯಾದಳು.
- ವ|| ಎಂದು ಪಱಿಪಟ್ಟ ಸುಯ್ಯುಮಂ ಕೋಡುವ ಮೆಯ್ಯುಮಂ ಕಂಡು ಪರಲೋಕ ಪ್ರಾಪ್ತನಾದುದನಱಿತು-
ಎಂದು ಪಱಿಪಟ್ಟ (ಹರಿದ -ತುಂಡಾದ) ಸುಯ್ಯುಮಂ (ನಿಂತ ಉಸಿರು)(ಉಸಿರನ್ನು) ಕೋಡುವ (ತಣ್ಣನೆ) ಮೆಯ್ಯುಮಂ (ತಣ್ಣಗಾದ ದೇಹವನ್ನೂ) ಕಂಡು ಪರಲೋಕ ಪ್ರಾಪ್ತನಾದುದನು ಅಱಿತು (ಮರಣಹೊಂದಿದನು ಎಂದು ತಿಳಿದು)-
- ವಚನ:ಪದವಿಭಾಗ-ಅರ್ಥ:
- ವಚನ:ಅರ್ಥ:ಎಂದು ನಿಂತುಹೋದ ಉಸಿರನ್ನೂ ತಣ್ಣಗಾದ ದೇಹವನ್ನೂ ನೋಡಿ ಪತಿ ಮರಣಹೊಂದಿದನು ಎಂದು ತಿಳಿದಳು.
::ಕುಮಾರವ್ಯಾಸ ಭಾರತದಲ್ಲಿ;
ಪಾಂಡು ಮೈಮರೆದು ಮಲಗಿದ:
ಆ ಸುಖದ ಝೋಂಪಿನಲಿ ಮೈಮರೆ
ದೋಸರಿಸಿದುದು ವದನ ಕಂಗಳು
ಪೈಸರಿಸಿದವು ತೆಕ್ಕೆ ಸಡಲಿತು ದೇಹ ಬಾರಿಸಿತು
ಸೂಸಿದುದು ನಿಟ್ಟುಸುರು ರಾಣೀ
ವಾಸದುರದಲಿ ಕದಪನಿಟ್ಟು ಮ
ಹೀಶನೊರಗಿದ ಹದನ ಕಂಡಳು ಕಾಂತೆ ಭೀತಿಯಲಿ||೧೬||(೫)
ಮಾದ್ರಿಯ ಶೋಕ:
ಅಕಟ ಪಾಂಡು ಮಹೀಶ ವಿಷಕ
ನ್ನಿಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನ್ನೇ ತಾನರಿಯನೇ ಹದನ
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತಾನಾಡೆಂದೊರಲಿದಳು ಮಾದ್ರಿ||೧೭||(೫)
ಮಾದ್ರಿ ತಾನೇ ಸಹಗಮನಕ್ಕೆ:
ಮರುಳೆಲೌ ನೀವಕ್ಕ ನಿಮ್ಮೈ
ವರು ಕುಮಾರರು ನಿಮ್ಮ ಕೈಯೆಡೆ
ಧರಣಿಪತಿ ನಿಡು ನಿದ್ರೆಗೈದನು ನನ್ನ ತೋಳಿನಲಿ
ಸುರವಧುಗಳೊಡನಿರಲಿ ನಿನ್ನಯ
ಹರಿಬವೆನ್ನದು ನೋಡು ತನ್ನಯ
ಪರಿಯನೀತನ ನಿನಗೆ ಕೊಡೆನೆಂದಂಘ್ರಿಗೆರಗಿದಳು||೨೩|| (೫)
|
- ಕಂ|| ತಾಪಸನ ಶಾಪಮೆಂಬುದು
- ಪಾಪದ ರೂಪಱಿತುಮಱಿಯದಂತೇಕೆ ಮನಂ|
- ಗಾಪೞಿದು ಬಂದು ಮುಟ್ಟಿದೆ
- ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ|| ೨೦||
- ಪದ್ಯ-೨೦:ಪದವಿಭಾಗ-ಅರ್ಥ:ತಾಪಸನ ಶಾಪಮೆಂಬುದು ಪಾಪದ ರೂಪ ಅಱಿತುಂ ಅಱಿಯದಂತೆ ಏಕೆ ಮನಂಗಾಪೞಿದು (ಮನದ ಕಾಪು- ಕಾವಲು, ಅರಿದು-ಕತ್ತರಿಸಿ) ಬಂದು ಮುಟ್ಟಿದೆಯ ಓಪನೆ (ಪ್ರಿಯನೇ ಸ್ನೇಹನೇ?; ಪ್ರೀತಿಯಿಂದ ಒಪ್ಪಿದವನು ಓಪ?) ನೀನು ಎನ್ನ ಪಾಪಕರ್ಮಿಯ ಮೆಯ್ಯಂ.
- ಪದ್ಯ-೨೦:ಅರ್ಥ:ಪ್ರಿಯನೇ (ಪಾಂಡುವೇ) ಋಷಿಯ ಶಾಪವು ಪಾಪದ ರೂಪವು; ತಿಳಿದೂ ತಿಳಿಯದಂತೆ ನಿನ್ನ ಮನಸ್ಸಿನ ಸಂಯಮವನ್ನು ಕಡಿದುಕೊಂಡು ಬಂದು ಪಾಪಿಷ್ಠಳಾದ ನನ್ನ ಶರೀರವನ್ನು ಏಕೆ ಮುಟ್ಟಿದೆ?
- ನೀನ್ನಿನ್ನ ಸಾವನದನೆನ
- ಸುನ್ನೆನೆಯದೆ ನೆರೆವೆನೆಂಬ ಬಗೆಯೊಳ್ ಬಂದೈ|
- ನಿನ್ನೊಡನೆ ವಂದು ದಿವದೊಳ್
- ನಿನ್ನ ಮನೋರಥಮನರಸ ನೆಱಪದೆ ಮಾಣೆಂ|| ೨೧ ||
- ಪದ್ಯ-೨೧:ಪದವಿಭಾಗ-ಅರ್ಥ:ನೀಂ ನಿನ್ನ ಸಾವನು ಅದನು ಎನಸುಂ ನೆನೆಯದೆ ನೆರೆವೆನು (ಸೇರುವೆನು) ಎಂಬ ಬಗೆಯೊಳ್ ಬಂದೈ ನಿನ್ನೊಡನೆ ವಂದು(ಬಂದು) ದಿವದೊಳು(ಸ್ವರ್ಗದಲ್ಲಿ) ನಿನ್ನ ಮನೋರಥಮನು (ಆಸೆಯನ್ನು) ಅರಸ! ನೆಱಪದೆ (ನೆರವೇರಿಸುವೆ), ಮಾಣೆಂ(ಬಿಡೆನು)
- ಪದ್ಯ-೨೧:ಅರ್ಥ:೨೧. ನೀನು ನಿನ್ನ ಸಾವನ್ನು ಸ್ವಲ್ಪವೂ ಯೋಚಿಸದೆ ನಿನ್ನೊಡನೆ ಕೂಡುತ್ತೇನೆ ಎಂಬ ಮನಸ್ಸಿನಿಂದ ಬಂದಿದ್ದೀಯೇ! ನಾನೂ ನಿನ್ನೊಡನೆ ಬಂದು ಸ್ವರ್ಗದಲ್ಲಿ) ನಿನ್ನ ಆಸೆಯನ್ನು ಅರಸನೇ! ನೆರವೇರಿಸುವೆನು, ಹಾಗೆ ಮಾಡದೆ ಬಿಡೆನು. ಎಂದಳು ಮಾದ್ರಿ.
- ಉನ್ನತ ಧವಳಚ್ಛತ್ರ
- ಚ್ಛನ್ನ ವಿಯತ್ತಳನನಿಂದುಕುಳತಿಳಕನನಿಂ|
- ತನ್ನೆಯದಿಂದೀ ಪೞುವಿನೊ
- ಳೆನ್ನರಸನನಿಂತು ಬಿದಿಯೆ ತಂದಿಕ್ಕುವುದೇ|| ೨೨
- ಪದ್ಯ-೨೨:ಪದವಿಭಾಗ-ಅರ್ಥ:ಉನ್ನತ ಧವಳಚ್ಛತ್ರಚ್ಛನ್ನ ವಿಯತ್ತಳನನು (ಧವಳ ಛತ್ರ ಅಚ್ಛನ್ನ -ಬಿಳಿ ಛತ್ರ ಅಚ್ಛನ್ನ ವಿಯತ್ತಳ) ಇಂದುಕುಳತಿಳಕನನು (ಚಂದ್ರವಂಶಶ್ರೇಷ್ಠನು) ಇಂತು ಅನ್ನೆಯದಿಂದು (ಆನ್ಯಾಯವಾಗಿ) ಈ ಪೞುವಿನೊಳು (ಕಾಡಿನಲ್ಲಿ) ಎನ್ನ ಅರಸನನು ಇಂತು ಬಿದಿಯೆ (ವಿಧಿಯೆ)ತಂದು ಇಕ್ಕುವುದೇ(ಎಸೆಯುವುದೇ?)
- ಪದ್ಯ-೨೨:ಅರ್ಥ:ಅಯ್ಯೋ ವಿಧಿಯೇ, ಎತ್ತರವಾದ (ರಾಜಚಿನ್ಹೆ) ತನ್ನ ಶ್ವೇತ ಛತ್ರದಿಂದ ಆಕಾಶವನ್ನೆಲ್ಲ ಮುಚ್ಚಿದವನೂ ಚಂದ್ರವಂಶಶ್ರೇಷ್ಠನಾದವನೂ ಆದ ಪತಿಯನ್ನು ಹೀಗೆ ಅನ್ಯಾಯವಾಗಿ ಕಾಡಿನಲ್ಲಿ ತಂದು ಎಸೆಯುವುದೇ?
- ವ|| ಎಂದು ವನದೇವತೆಗಳ್ಗೆಲ್ಲಂ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳ್ದು ಭೋಂಕನೆರ್ದೆರೆದು-
- ವಚನ:ಪದವಿಭಾಗ-ಅರ್ಥ:ಎಂದು ವನದೇವತೆಗಳ್ಗೆ ಎಲ್ಲಂ ಕರುಣಮಾಗೆ ಪಳಯಿಸುವ (ಪ್ರಲಾಪಿಸುವ) ಮಾದ್ರಿಯ ಸರಮಂ (ಸ್ವರ- ಸದ್ದನ್ನು) ಕುಂತಿ ಕೇಳ್ದು ಭೋಂಕನೆ ಎರ್ದೆರೆದು-(ಎದೆಬಿರಿದು)
- ವಚನ:ಅರ್ಥ:ಎಂದು ಎಲ್ಲಾ ವನದೇವತೆಗಳಿಗೆ ಮರುಕ ಹುಟ್ಟುವ ಹಾಗೆ ಅಳುತ್ತಿದ್ದ ಮಾದ್ರಿಯ ಆ ಸದ್ದನ್ನು ಕುಂತಿ ಕೇಳಿ ಥಟ್ಟನೆ ಎದೆಬಿರಿದು
- ಕಂ|| ಆ ದೆಸೆಯೊಳ್ ಭೂಭುಜನೋ
- ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ|
- ತಾ ದೆಸೆಯೊಳ್ ಭೂಪತಿಗೇ
- ನಾದುದೊ ಪೇೞ್ ಬಿದಿಯೆ ಕೆಟ್ಟೆನೞಿದೆನೆನುತ್ತುಂ|| ೨೩||
- ಪದ್ಯ-೨೩:ಪದವಿಭಾಗ-ಅರ್ಥ:ಆ ದೆಸೆಯೊಳ್ ಭೂಭುಜನೋ (ರಾಜನೋ) ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ (ಹಾರಿ ಬರುವ ಶೋಕದ ರವ-ಸದ್ದು) ತಾ -(ಆ) ದೆಸೆಯೊಳ್ ಭೂಪತಿಗೇನಾದುದೊ (ರಾಜನಿಗೇನಾಯಿತೋ) ಪೇೞ್ ಬಿದಿಯೆ (ಹೇಳು ವಿಧಿಯೇ) ಕೆಟ್ಟೆಂ ಅೞಿದೆಂ ಎನುತ್ತುಂ (ಹೇಳು ಕೆಟ್ಟೆ, ಅಳಿದೆ- ಸತ್ತೆ, ಎನ್ನುತ್ತಾ, (ಎಂದು ಚೀರಿದಳು)
- ಪದ್ಯ-೨೩:ಅರ್ಥ:ಯಾವ ದಿಕ್ಕಿನಲ್ಲಿ ರಾಜನು ಹೋದನು ಆ ದಿಕ್ಕಿನಿಂದಲೇ ಮಾದ್ರಿಯ ಕುರಣಾಮಯವಾದ ಧ್ವನಿಯೂ (ಕೇಳಿಬರುತ್ತಿದೆ), ಹೇಳು ವಿಧಿಯೇ ನನ್ನ ರಾಜನಿಗೆ ಏನಾಗಿದೆಯೋ ;ಹೇಳು ಸತ್ತೆ, ಕೆಟ್ಟೆ, ಎಂದು ಚೀರಿದಳು.
- ಬೞಿಯನೆ ಮಕ್ಕಳ್ ಭೋರ್ಗರೆ
- ದೞುತುಂ ಪೆಱ ಪೆಱಗನಂತೆ ಪರಿತರೆ ಮುಡಿ ಬಿ|
- ಟ್ಟ(ಟೆ)ೞಲೆ ನಡುನಡುಗೆ ಕಣ್ಣೀರ್
- ಗೞಗೞನೊರ್ಮೊದಲೆ ಸುರಿಯೆ ಪರಿತಂದಾಗಳ್|| ೨೪||
- ಪದ್ಯ-೦೦:ಪದವಿಭಾಗ-ಅರ್ಥ:ಬೞಿಯನೆ (ಹಿಂದೆಯೇ) ಮಕ್ಕಳ್ ಭೋರ್ಗರೆದು ಅೞುತುಂ (ಮಕ್ಕಳು ಭೋರ್ಗರೆದು ಅಳುತ್ತಾ) ಪೆಱ ಪೆಱಗನಂತೆ ಪರಿತರೆ (ಜೊತೆಜೊತೆಗೇ ಬೆನ್ನುಹಿಂದೆ ಓಡಿಬರಲು,) ಮುಡಿ ಬಿಟ್ಟ ಅೞಲೆ (ತುರುಬು ಬಿಚ್ಚಿ ಜೋಲಾಡುತ್ತಿರಲು) ನಡು (ಸೊಂಟ) ನಡುಗೆ ಕಣ್ಣೀರ್ ಗೞಗೞನೆ ಒರ್ಮೊದಲೆ (ಒಟ್ಟಿಗೆ)ಸುರಿಯೆ ಪರಿತಂದಾಗಳ್ (ಓಡಿಬಂದಾಗ)
- ಪದ್ಯ-೦೦:ಅರ್ಥ:ಮಕ್ಕಳು ಭೋರ್ಗರೆದು ಅಳುತ್ತಾ ಬೆನ್ನಹಿಂದೆಯೇ ಬರುತ್ತಿರಲು, ತಲೆಯ ತುರುಬು ಬಿಚ್ಚಿ ಕೆಳಗೆ ಜೋಲಾಡುತ್ತಿರಲು, ಸೊಂಟವು ನಡುಗುತ್ತಿರಲು, ಕಣ್ಣೀರು ಗಳಗಳನೆ ಧಾರಾಕಾರವಾಗಿ ಸುರಿಯುತ್ತಿರಲು ಕುಂತಿಯು ಓಡಿಬಂದಳು.
- ವ|| ಅಂತು ತನ್ನ ನಲ್ಲನ ಕಳೇವರಮಂ ತೞ್ಕೈಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುರಿಯುತ್ತುಮಿರ್ದ ಮಾದ್ರಿಯಂ ಕಂಡು ಕುಂತಿ ನೆಲದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಪಳಯಿಸಿ-
- ವಚನ:ಪದವಿಭಾಗ-ಅರ್ಥ:ಅಂತು ತನ್ನ ನಲ್ಲನ ಕಳೇವರಮಂ ತೞ್ಕೈಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ (ನಿಷ್ಕರ್ಷೆ ಮಾಡಿ) ಪಲ್ಲಂ (ಹಲ್ಲನ್ನು) ಸುರಿಯುತ್ತುಂ ಇರ್ದ ಮಾದ್ರಿಯಂ ಕಂಡು ಕುಂತಿ ನೆಲದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಪಳಯಿಸಿ-
- ವಚನ:ಅರ್ಥ:ತನ್ನ ಪ್ರಿಯನ ದೇಹವನ್ನು ತಬ್ಬಿಕೊಂಡು ತನ್ನ ಸಾವನ್ನು ನಿಷ್ಕರ್ಷೆ ಮಾಡಿಕೊಂಡು ಹಲ್ಲನ್ನು ಬಿಟ್ಟುಕಿರಿಯುತ್ತ ಇದ್ದ (?) ಮಾದ್ರಿಯನ್ನು ಕಂಡು ಕುಂತಿಯು ನೆಲದಲ್ಲಿ ಬಿದ್ದು ಹೊರಳಾಡಿ ಬಹಳವಾಗಿ ಅತ್ತಳು.
- ಕಂ|| ಅಡವಿಯೊಳೆನ್ನುಮನೆನ್ನೀ
- ನಡಪಿದ ಶಿಶುಗಳುಮನಿಸಿರಿಸಿ ನೀಂ ಪೇೞದೆ ಪೋ|
- ದೊಡಮೇನೋ ನಿನ್ನ ಬೞಿಯನೆ
- ನಡೆತರ್ಪೆಂ ನಿನ್ನರಸ ಬಿಸುಟೆಂತಿರ್ಪೆಂ|| ೨೫||
- ಪದ್ಯ-೨೫:ಪದವಿಭಾಗ-ಅರ್ಥ:ಅಡವಿಯೊಳ್ ಎನ್ನುಮಂ ಎನ್ನ ಈ ನಡಪಿದ (ನನ್ನನ್ನೂ ಈ ಸಾಕಿದ) ಶಿಶುಗಳುಮನು ಇರಿಸಿರಿಸಿ (ಕಾಡಿನಲ್ಲಿ ಬಿಟ್ಟು) ನೀಂ ಪೇೞದೆ ಪೋದೊಡಮ್ (ಹೋದರೆ )ಏನೋ ನಿನ್ನ ಬೞಯನೆ ನಡೆತರ್ಪೆಂ (ನಿನ್ನ ಜೊತೆಗೇ ಬರುವೆನು) ನಿನ್ನ ಅರಸ ಬಿಸುಟು (ಬಿಟ್ಟು)ಎಂತು ಇರ್ಪೆಂ (ಹೇಗೆ ಇರಲಿ! ಇರಲಾರೆ)
- ಪದ್ಯ-೨೫:ಅರ್ಥ:ಈ ಕಾಡಿನಲ್ಲಿ ನನ್ನನ್ನೂ ಸಾಕಿದ ಈ ಮಕ್ಕಳನ್ನೂ ಬಿಟ್ಟು ನೀನು ಹೋದರೆ ತಾನೆ ಏನು? ನಾನು ನಿನ್ನ ಹಿಂದೆಯೇ ಬರುತ್ತೇನೆ. ರಾಜನೇ ನಿನ್ನನ್ನು ಬಿಟ್ಟು ನಾನು ಹೇಗಿರಬಲ್ಲೆ?
- ವ|| ಎಂದು ನೀನೀ ಕೂಸುಗಳಂ ಕೈಕೊಂಡು ನಡಪು ನಲ್ಲನನೆನಗೊಪ್ಪಿಸಾನಾತನಾದುದನಪ್ಪೆನೆನೆ ಮಾದ್ರಿಯಿಂತೆಂದಳ್-
- ವಚನ:ಪದವಿಭಾಗ-ಅರ್ಥ:ಎಂದು ನೀನೀ ಕೂಸುಗಳಂ ಕೈಕೊಂಡು (ಮಾದ್ರಿಗೆ,ನೀನು ಈ ಮಕ್ಕಳನ್ನು ಸ್ವೀಕರಿಸಿ ) ನಡಪು (ಸಾಕು) ನಲ್ಲನನು ನನಗೊಪ್ಪಿಸು ಆನು ಆತನು ಆದುದನು ಅಪ್ಪೆನು ಎನೆ ಮಾದ್ರಿ ಇಂತು ಎಂದಳ್ (ಹೀಗೆ ಹೇಳಿದಳು)-
- ವಚನ:ಅರ್ಥ:ಎಂದು ಮಾದ್ರಿಯನ್ನು ಕುರಿತು ನೀನು ಈ ಮಕ್ಕಳಳನ್ನು ಸ್ವೀಕರಿಸಿ ಸಲಹು; ಪ್ರಿಯನನ್ನು ನನಗೊಪ್ಪಿಸು, ಅವನಾದುದನ್ನು (ಸಾವನ್ನು )ನಾನು ಆಗುತ್ತೇನೆ, ಎನ್ನಲು ಮಾದ್ರಿ ಹೀಗೆಂದಳು-
- ಕಂ|| ಎನಗಿಂದಿನೊಂದು ಸೂೞುಮ
- ನಿನಿಯಂ ದಯೆಗೆಯ್ದನೆನ್ನ ಸೂೞಂ ನಿನಗಾ|
- ನೆನಿತಾದೊಡಮೀವೆನೆ ಮ
- ತ್ತನಯರ್ ಕೆಯ್ಯೆಡೆ ಪಲುಂಬದಿರ್ ಪೆಱಪೆಱವಂ|| ೨೬||
- ಪದ್ಯ-೨೬:ಪದವಿಭಾಗ-ಅರ್ಥ:ಎನಗೆ ಇಂದಿನ ಒಂದು ಸೂೞುಮಂ (ಒಂದು ಸರದಿಯನ್ನು) ಇನಿಯಂ ದಯೆಗೆಯ್ದನು (ಗಂಡನು ಕೊಟ್ಟನು) ಎನ್ನ ಸೂೞಂ (ಸರದಿಯನ್ನು) ನಿನಗೆ ಆನು ಎನಿತಾದೊಡಂ ಈವೆನೆ (ಏನೇ ಆದೂ ಕೊಡುವೆನೇ? ಇಲ್ಲ.) ಮತ್ ತನಯರ್ (ನನ್ನ ಮಕ್ಕಳು) ಕೆಯ್ಯೆಡೆ (ಕೈಯಲ್ಲಿ ಇಟ್ಟಿದ್ದೇನೆ) ಪಲುಂಬದಿರ್ ಪೆಱಪೆಱವಂ (ನಿನ್ನವರು ನನ್ನವರು ಬೇರ ಬೇರೆ ಎಂದು ಹಂಬಲಸದಿರು) ಎಂದು- ಮಾದ್ರಿ ಹೇಳಿದಳು
- ಪದ್ಯ-೨೬:ಅರ್ಥ:ನನಗೆ ಇಂದಿನ ಒಂದು ಸರದಿಯನ್ನು ಜೊತೆಬರಲು ಗಂಡನು ಕೊಟ್ಟನು, ನನ್ನ ಸರದಿಯನ್ನು ನಿನಗೆ ನಾನು ಏನೇ ಆದೂ ಕೊಡುವೆನೇ? ಇಲ್ಲ. ನನ್ನ ಮಕ್ಕಳನ್ನು ನಿನ್ನ ಕೈಯಲ್ಲಿ ಇಟ್ಟಿದ್ದೇನೆ. ನಿನ್ನವರು ನನ್ನವರು ಬೇರ ಬೇರೆ ಎಂದು ಹಂಬಲಿಸದಿರು, ಎಂದು- ಮಾದ್ರಿ ಹೇಳಿದಳು
- ವ|| ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನಣ್ಮಂ ಪೊಗೞೆ ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ (?) ಕಿರ್ಚಿಂಗೆ ಕುಲದೊಳಂ ಚಲದೊಳಮಾವ ಕಂದುಂ ಕುಂದುಮಿಲ್ಲದೆ ತನ್ನೊರೆಗಂ ದೊರೆಗಮಾರುಮಿಲ್ಲೆನಿಸಿದಾಗಳ್ ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರಾ ಕಾಂತೆಯನಿಂತೆಂದು ಸಂತೈಸಿದರ್-
- ವಚನ:ಪದವಿಭಾಗ-ಅರ್ಥ:(ಎಂದು) ತಪೋವನದ ಮುನಿಜನಮುಂ ವನದೇವತಾ ಜನಮುಂ ತನ್ನ ಅಣ್ಮಂ ಪೊಗೞೆ (ಅವಳ ಸಾಹಸ ನಿರ್ಧಾರವನ್ನು ಹೊಗಳಲು) ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ (ಉತ್ತರಕ್ರಿಯೆಯ, ದಾಹ-ಬಯಕೆಯಂತೆ) ಕಿರ್ಚಿಂಗೆ (ಕಿಚ್ಚಿಗೆ- ಬೆಂಕಿಗೆ) ಕುಲದೊಳಂ ಚಲದೊಳಮ್ ಆವ ಕಂದುಂ ಕುಂದುಂ ಇಲ್ಲದೆ ತನ್ನ ಒರೆಗಂ (ತನ್ನ ದೊರೆಗಂ- ಪತಿಗೆ ಸೇರಿದಳು), ದೊರೆಗಂ ಆರುಂ ಇಲ್ಲೆನಿಸಿದಾಗಳ್ (ತನ್ನ ಪೋಷಣೆಗೆ ಯಾರೂ ಇಲ್ಲ ಎಂದು)ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರಾ ಕಾಂತೆಯನು ಇಂತೆಂದು ಸಂತೈಸಿದರ್-
- ವಚನ:ಅರ್ಥ:ತಪೋವನದ ಋಷಿಗಳೂ ವನದೇವತಾಸಮೂಹವೂ ಮಾದ್ರಿಯ ಸಾಹಸವನ್ನು ಹೊಗಳುತ್ತಿರಲು ಮಾದ್ರಿಯು ತನ್ನನ್ನು ಉತ್ತರಕ್ರಿಯೆಯಲ್ಲಿ ಅವಳ ಬಯಕೆಯಂತೆ ಬೆಂಕಿಗೆ ಅರ್ಪಿಸಿಕೊಂಡು (ಸಹಗಮನ ಮಾಡಿ) ಕುಲದಲ್ಲಿಯೂ ಛಲದಲ್ಲಿಯೂ ಸ್ವಲ್ಪವೂ ದೋಷವೂ ನ್ಯೂನತೆಯೂ ಇಲ್ಲದೆ ತನಗೆ ಸಮಾನರಾದವರಾರೂ ಇಲ್ಲ ಎನ್ನಿಸಿ ಪತಿಯೊಡನೆ ಹೋದಳು. ಇತ್ತ ತನ್ನ ಪೋಷಣೆಗೆ ಯಾರೂ ಇಲ್ಲ ಎಂದು ಕುಂತಿಯು ದುಖದಿಂದ ಕೂಡಿದವಳಾಗಿರಲು ತಪೋವನದಲ್ಲಿದ್ದ ವೃದ್ಧ ತಾಪಸರು ಅವಳನ್ನು ಹೀಗೆಂದು ಸಂತೈಸಿದರು.
- ಚಂ|| ಕೞಿದವರ್ಗೞ್ವುದೞ್ತೊಡವರೇೞ್ವೊಡಮಂತವರಿಂ ಬೞಿಕ್ಕೆ ತಾ
- ಮುೞಿವೊಡಮೇೞರಂತವರಣಂ ತಮಗಂ ಬರ್ದುಕಿಲ್ಲ ಧರ್ಮಮಂ|
- ಗೞಿಯಿಸಿಕೊಳ್ವುದೊಂದೆ ಚದುರಿಂತುಟು ಸಂಸೃತಿ ಧರ್ಮಮೇಕೆ ಬಾ
- ಯೞಿವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ|| ೨೭
- ಪದ್ಯ-೨೭:ಪದವಿಭಾಗ-ಅರ್ಥ: ಕೞಿದವರ್ಗೆ ಅೞ್ವುದು (ಸತ್ತವರಿಗೆ ಅಳುವುದು) ಅೞ್ತೊಡೆ ಅವರೇೞ್ವೊಡಂ(ಅತ್ತರೆ ಅವರು ಎದ್ದು ಬರುವುದಾದರೆ) ಅಂತವರಿಂ (ಅದರಿಂದ) ಬೞಿಕ್ಕೆ (ಬಳಿಕ್ಕೆ-ಬಳಿಕ) ತಾಮ್ ಉೞಿವೊಡೆ (ತಾನು ಉಳಿಯುವುದಾದರೆ ಅಳುವುದು-) ಏೞರ್ ಅಂತು ಅವರು(ಅವರು ಹೇಗೂ ಏಳುವುದಿಲ್ಲ); ಅಣಂ (ವಿಶೇಷವಾಗಿ)ತಮಗಂ ಬರ್ದುಕಿಲ್ಲ (ಅಳುತ್ತಾ ಕೂತರೆ ಅದರಿಂದ ತಮಗೂ ಬದುಕು-ಬಾಳುವೆ ಇಲ್ಲ) ಧರ್ಮಮಂ ಗೞಿಯಿಸಿಕೊಳ್ವುದು ಒಂದೆ ಚದುರ(ಧರ್ಮವನ್ನು ಗಳಿಸಿಕೊಳ್ಳುವುದು ಒಂದೆ ಜಾಣತನ); ಇಂತುಟು ಸಂಸೃತಿ ಧರ್ಮಂ ಏಕೆ ಬಾಯೞಿವುದು ಇದು ಏಕೆ (ಬಾಯಿ ಬಡಿದುಕೊಳ್ಳುವುದೇಕೆ) ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ.
- ಪದ್ಯ-೨೭:ಅರ್ಥ:ಸತ್ತವರು ಏಳುವುದಾದರೆ ಅವರಿಗಾಗಿ ಅಳಬೇಕು. ಇಲ್ಲ ಅವರಾದ ಮೇಲೆ ಉಳಿದ ನಾವು ಉಳಿಯುವ ಪಕ್ಷದಲ್ಲಿಯೂ (ನಾವು ಅಳಬೇಕು). ಹಾಗೆ ಸತ್ತ ಅವರು ಏಳುವುದಿಲ್ಲ. ವಿಶೇಷವಾಗಿ ಅಳುತ್ತಾ ಕೂತರೆ ಅದರಿಂದ ತಮಗೂ ಬದುಕು-ಬಾಳುವೆ ಇಲ್ಲ ; ಧರ್ಮವನ್ನು ಗಳಿಸಿಕೊಳ್ಳುವುದು ಒಂದೆ ಜಾಣತನ. ಇಂತಿದೆ/ ಹೀಗಿದೆ ಸಂಸಾರಧರ್ಮ. ಹೀಗಿರುವಾಗ ಗೋಳಿಡುವುದೇಕೆ? ಚಿಂತಿಸುವುದೇಕೆ? ಹಲುಬುವುದೇಕೆ? ಏಕೆ ವ್ಯಥೆಪಡುವುದು? ಹೀಗೆ ತಾಪಸರು ಕುಂತಿಗೆ ಹೇಳಿದರು.
- ವ|| ಅಂತುಮಲ್ಲದೆ-
- ವಚನ:ಪದವಿಭಾಗ-ಅರ್ಥ:- ಅಂತುಂ ಅಲ್ಲದೆ
- ವಚನ:ಅರ್ಥ:ಅಷ್ಟೇ ಅಲ್ಲದೆ-
- ಕಂ|| ಬಿಡದೞಲ್ವ ಬಂಧುಜನದೊ
- ೞ್ಕುಡಿಯದ ಕಣ್ಣೀರ ಪೂರಮಾ ಪ್ರೇತಮನೋ|
- ಗಡಿಸದೆ ಸುಡುವುದು ಗಡಮಿ
- ನ್ನುಡುಗುವುದೀ ಶೋಕಮಂ ಸರೋಜದಳಾಕ್ಷೀ|| ೨೮||
- ಪದ್ಯ-೨೮:ಪದವಿಭಾಗ-ಅರ್ಥ:ಕಂ|| ಬಿಡದೞಲ್ವ (ಬಿಡದೆ ಅಳ್ವ-ಅಳುವ)ಬಂಧುಜನದ ಒೞ್ಕುಡಿಯದ(ಒಳುಕಡಿಯದ- ನಿಲ್ಲದ) ಕಣ್ಣೀರ ಪೂರಮಾ (ಕಣ್ಣೀರ ಪ್ರವಾಹವು) ಪ್ರೇತಮನೋ ಗಡಿಸದೆ ಸುಡುವುದು ಗಡ (ಸತ್ತವರ ಪ್ರೇತವನ್ನು ಬೇಸರಿಸದೆ ಸುಡುವುದು (ದುಃಖಕ್ಕೆ ಈಡು ಮಾಡುವುದು) ಅಲ್ಲವೇ! ಇನ್ನು ಉಡುಗುವುದು ಈ ಶೋಕಮಂ ಸರೋಜದಳಾಕ್ಷೀ (ಕಮಲಮುಖಿ ಕುಂತೀ ಇನ್ನು ಸಹಿಸಿಕೊಳ್ಳಬೇಕು ಈ ಶೋಕವನ್ನು.)|
- ಪದ್ಯ-೨೯:ಅರ್ಥ: ಬಿಡದೆ ಅಳುವ ನಿಲ್ಲದ ಬಂಧುಜನದ ಕಣ್ಣೀರ ಪ್ರವಾಹವು ಸತ್ತವರ ಪ್ರೇತವನ್ನು ಬೇಸರಿಸದೆ ಸುಡುವುದು - ದುಃಖಕ್ಕೆ ಈಡುಮಾಡುವುದು, ಅಲ್ಲವೇ! ಕಮಲಮುಖಿ ಕುಂತೀ ಇನ್ನು ಈ ಶೋಕವನ್ನು ಸಹಿಸಿಕೊಳ್ಳಬೇಕು, ಎಂದರು ತಾಪಸಿಗಳು.
- ವ|| ನೀನಿಂತು ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನಱಿಯದಜ್ಞಾನಿಗಳಂತೆ ವಿಪ್ರಳಾ ಪಂಗೆಯ್ದೆಯಪ್ಪೊಡೀ ಕೂಸುಗಳ್ ಮನಮಿಕ್ಕಿಯುಮೆರ್ದೆಯಿಕ್ಕಿಯುಂ ಕಿಡುವರೆಂದನೇಕೋಪಶಾಂತವಚನಂಗಳಿಂದಂ ಆಕೆಯುಬ್ಬೆಗಮನಾ ನುಡಿದುಮಲ್ಲಿಯ ಮುನಿಜನ ಮೆಲ್ಲಮಾ ಕೂಸುಗಳುಮಂ ಕುಂತಿಯುಮಂ ಮುಂದಿಟ್ಟೊಡಗೊಂಡು ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಮಂಬಾಲೆಗಂ ಪಾಂಡುರಾಜನ ವೃತ್ತಾಂತಮನಱಪಿದೊಡಾಗಳ್-
- ವಚನ:ಪದವಿಭಾಗ-ಅರ್ಥ:ನೀನು ಇಂತು ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನು ಅಱಿಯದ ಅಜ್ಞಾನಿಗಳಂತೆ ವಿಪ್ರಳಾಪಂಗೆಯ್ದೆಯು ಅಪ್ಪೊಡೆ(ನೀನು ಹೀಗೆ ದುಃಖಿತಳಾಗಿ ಸಂಸಾರದ ನೀತಿಯನ್ನು ತಿಳಿಯದ ಅಜ್ಞಾನಿಗಳಂತೆ ಗೋಳಿಟ್ಟರೆ,) ಈ ಕೂಸುಗಳ್ ಮನಂ ಇಕ್ಕಿಯುಂ ಎರ್ದೆಯಿಕ್ಕಿಯುಂ ಕಿಡುವರ್ (ಈ ಮಕ್ಕಳು ಮನಸ್ಸು ಕುಗ್ಗಿಯೂ, ಧೈರ್ಯವು ಕಡಿಮೆಯಾಗಿಯೂ ಕೆಟ್ಟುಹೋಗುವರು ಎಂದು,) ಎಂದು, ಅನೇಕ ಉಪಶಾಂತ ವಚನಂಗಳಿಂದಂ ಆಕೆಯ ಉಬ್ಬೆಗಮನು ಆನುಡಿದುಂ (ಆಕೆಯ ಉದ್ವೇಗವನ್ನು ಕಡಿಮೆಮಾಡಿ) ಅಲ್ಲಿಯ ಮುನಿಜನಂ ಎಲ್ಲಂ ಆ ಕೂಸುಗಳುಮಂ ಕುಂತಿಯುಮಂ ಮುಂದಿಟ್ಟೊಡಗೊಂಡು ನಾಗಪುರಕ್ಕೆ ವಂದು (ಅಲ್ಲಿಯ ಋಷಿಸಮೂಹವೆಲ್ಲ ಆ ಮಕ್ಕಳನ್ನೂ ಕುಂತಿಯನ್ನೂ ಮುಂದಿಟ್ಟುಕೊಂಡು ತಮ್ಮಜೊತೆ ಕರೆದುಕೊಂಡು ಹಸ್ತಿನಾಪಟ್ಟಣಕ್ಕೆ ಬಂದು,) ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಂ ಅಂಬಾಲೆಗಂ ಪಾಂಡುರಾಜನ ವೃತ್ತಾಂತಮನು ಅಱಪಿದೊಡೆ (ಹೇಳಿದಾಗ) ಆಗಳ್-(ಭೀಷ್ಮ, ಧೃತರಾಷ್ಟ್ರ, ವಿದುರರಿಗೂ ಅಂಬಾಲೆಗೂ ಪಾಂಡುರಾಜನ ವೃತ್ತಾಂತವನ್ನು ತಿಳಿಸಿದರು. ಆಗ )
- ವಚನ:ಅರ್ಥ:ನೀನು ಹೀಗೆ ದುಃಖಿತಳಾಗಿ ಸಂಸಾರದ ನೀತಿಯನ್ನು ತಿಳಿಯದ ಅಜ್ಞಾನಿಗಳಂತೆ ಗೋಳಿಟ್ಟರೆ, ಈ ಮಕ್ಕಳು ಮನಸ್ಸು ಕುಗ್ಗಿಯೂ, ಧೈರ್ಯವು ಕಡಿಮೆಯಾಗಿಯೂ ಕೆಟ್ಟುಹೋಗುವರು ಎಂದು, ಆಕೆಯ ಉದ್ವೇಗವನ್ನು ಕಡಿಮೆಮಾಡಿ, ಅಲ್ಲಿಯ ಋಷಿಸಮೂಹವೆಲ್ಲವೂ ಆ ಮಕ್ಕಳನ್ನೂ ಕುಂತಿಯನ್ನೂ ಮುಂದಿಟ್ಟುಕೊಂಡು ತಮ್ಮಜೊತೆ ಕರೆದುಕೊಂಡು ಹಸ್ತಿನಾಪಟ್ಟಣಕ್ಕೆ ಬಂದು,ಭೀಷ್ಮ, ಧೃತರಾಷ್ಟ್ರ, ವಿದುರರಿಗೂ ಅಂಬಾಲೆಗೂ ಪಾಂಡುರಾಜನ ವೃತ್ತಾಂತವನ್ನು ತಿಳಿಸಿದರು. ಆಗ -
- ಕಂ|| ತುಱುಗಿದ ಹಿಮಬಿಂದುಗಳಿಂ
- ದೆಱಗಿದ ನವ ವನಜವನದವೋಲ್ ಶೋಕದಿನಂ|
- ದೊರೆವ ನಯನೋದಬಿಂದುವಿ
- ನೆಱಗಿದುದೊರ್ಮೊದಲೆ ಬಂಧುಮುಖ ವನಜವನಂ|| ೨೯||
- ಪದ್ಯ-೨೯:ಪದವಿಭಾಗ-ಅರ್ಥ:ತುಱುಗಿದ ಹಿಮಬಿಂದುಗಳಿಂದ ಎಱಗಿದ (ದಟ್ಟವಾಗಿ ಬಿದ್ದ ಮಂಜಿನಹನಿಗಳಿಂದ ಬಗ್ಗಿರುವ) ನವ ವನಜವನದವೋಲ್ (ಹೊಸತಾವರೆಯ ತೋಟದಂತೆ ) ಶೋಕದಿಂ ಅಂದು ಒರೆವ ನಯನ ಓದಬಿಂದುವಿಂ ಎಱಗಿದುದು (ಅಂದು ದುಖದಿಂದ ಸ್ರವಿಸುತ್ತಿರುವ ಕಣ್ಣಿನ ಹನಿಗಳಿಂದ ಒಟ್ಟಿಗೇ ಬಗ್ಗಿದುವು) ಒರ್ಮೊದಲೆ (ಒಟ್ಟಿಗೇ) ಬಂಧುಮುಖ ವನಜವನಂ(ಬಂಧುಜನಗಳ ಮುಖವೆಂಬ ಕಮಲದ ವನವು.)
- ಪದ್ಯ-೨೯:ಅರ್ಥ:ದಟ್ಟವಾಗಿ ಬೀಳುವ ಮಂಜಿನಹನಿಗಳಿಂದ ಆವರಿಸಿ ಬಗ್ಗಿರುವ ಹೊಸತಾವರೆಯ ತೋಟದಂತೆ ಬಂಧುಜನಗಳ ಮುಖವೆಂಬ ಕಮಲದ ವನವು ಅಂದು ದುಖದಿಂದ ಸ್ರವಿಸುತ್ತಿರುವ ಕಣ್ಣಿನ ಹನಿಗಳಿಂದ ಕೂಡಿ ಅವರ ಮುಖಗಳು ಒಟ್ಟಿಗೇ ಕೆಳಗೆ ಬಗ್ಗಿದುವು.
- ವ|| ಆಗಳ್ ಪುತ್ರ ಸ್ನೇಹದಿಂದತಿ ಪ್ರಳಾಪಂಗೆಯ್ವಂಬಾಲೆಯುಮಂ ಬಂಧುಜನ ನಿರೀಕ್ಷಣದಿಂ ಶೋಕಂ ಮಱುಕಣಿಸೆ ಬಾಯೞಿದು ಪಳಯಿಸುವ ಕುಂತಿಯುಮಂ ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ ಸತ್ಯವತೀದೇವಿಯುಮಂ ಸಂತೈಸಿ ಪಾಂಡುರಾಜಂಗೆ
- ವಚನ:ಪದವಿಭಾಗ-ಅರ್ಥ:ಆಗಳ್ ಪುತ್ರ ಸ್ನೇಹದಿಂದ ಅತಿ ಪ್ರಳಾಪಂಗೆಯ್ವ ಅಂಬಾಲೆಯುಮಂ ಬಂಧುಜನ ನಿರೀಕ್ಷಣದಿಂ ಶೋಕಂ ಮಱುಕಣಿಸೆ (ಮರುಕಣಿಸೆ - ಮರುಕಳಿಸೆ) ಬಾಯೞಿದು (ಬಾಯಿಸೋತು) ಪಳಯಿಸುವ (ಅಳುವ) ಕುಂತಿಯುಮಂ ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ ಸತ್ಯವತೀದೇವಿಯುಮಂ ಸಂತೈಸಿ ಪಾಂಡುರಾಜಂಗೆ
- ವಚನ:ಅರ್ಥ:ಆಗ ಮಗನ ಮೇಲಿನ ಪ್ರೀತಿಯಿಂದ ಗೋಳಿಡುತ್ತಿದ್ದ ಪಾಂಡುವಿನ ತಾಯಿ ಅಂಬಾಲೆಯನ್ನೂ ಬಂಧುಜನರನ್ನೂ ನೋಡುವುದರಿಂದ ಪುನ ಕಾಣಿಸಿಕೊಂಡ ದುಖದಿಂದ ಬಾಯಿ ಬಿಟ್ಟು ಅಳುವ ಕುಂತಿಯನ್ನು, ಭೀಷ್ಮ ಧೃತರಾಷ್ಟ್ರ ವಿದುರರು, ಸತ್ಯವತೀದೇವಿಯು, ಸಂತೈಸಿದರು. ಪಾಂಡುರಾಜನಿಗೆ - (ಉತ್ತರಕ್ರಿಯೆ- ಇತ್ಯಾಿ-)
- ವ||ಜಳದಾನಾದಿಕ್ರಿಯೆಗಳಂ ನಿರ್ವರ್ತಿಸಿ ತದನಂತರದೊಳದುವೆ ನಿರ್ವೇಗಮಾಗೆ (ವಿರಕ್ತಿಹೊಂದಲು) ವ್ಯಾಸವಚನದೊಳ್ ಸತ್ಯವತಿಯುಮಂಬಿಕೆಯುಮಂಬಾಲೆಯುಂ ಸಂಸಾರವಿಶೀರ್ಣೆಯರಾಗಿ ಮುನಿವನಮನಾಶ್ರಯಿಸಿದರಿತ್ತ ಗಾಂಗೇಯನಯ್ವರ್ ಕೂಸುಗಳುಮಂ ತನ್ನ ತೊಡೆಯೆ ತೊಟ್ಟಲಾಗಿ ನಡುಪುತ್ತುಮಿರೆ ದುರ್ಯೋಧನ ಪ್ರಭೃತಿಗಳ್ ನೂರ್ವರುಂ ಧರ್ಮಪುತ್ರಾದಿಗಳಯ್ವರುಂ ಸಹಪಾಂಸುಕ್ರೀಡಿತರಾಗಿ-
- ವಚನ:ಪದವಿಭಾಗ-ಅರ್ಥ:ಜಳದಾನಾದಿಕ್ರಿಯೆಗಳಂ ನಿರ್ವರ್ತಿಸಿ (ಜಲ- ತರ್ಪಣ, ದಾನ, ಆದಿ ಕ್ರಿಯೆ,- ಉತ್ತರಕ್ರಿಯಾದಿಗಳನ್ನು ಮಾಡಿ ) ತದನಂತರದೊಳು ಅದುವೆ ನಿರ್ವೇಗಮಾಗೆ (ವಿರಕ್ತಿಹೊಂದಲು) ವ್ಯಾಸವಚನದೊಳ್ (ವ್ಯಾಸರ ಸಲಹೆಯಂತೆ) ಸತ್ಯವತಿಯುಂ ಅಂಬಿಕೆಯುಂ ಅಂಬಾಲೆಯುಂ ಸಂಸಾರ ವಿಶೀರ್ಣೆಯರಾಗಿ (ವಿಶೀರ್ಣೆ-ಭಂಗಿಸು; ಸಂಸಾರದಲ್ಲಿ ವೈರಾಗ್ಯಹೊಂದಿ) ಮುನಿವನಮನು ಆಶ್ರಯಿಸಿದರು(ತಪೋವನವನ್ನು ಆಶ್ರಯಿಸಿದರು) ಇತ್ತ ಗಾಂಗೇಯನು ಅಯ್ವರ್ ಕೂಸುಗಳುಮಂ (ಐದು ಬಾಲಕರನ್ನು )ತನ್ನ ತೊಡೆಯೆ ತೊಟ್ಟಲಾಗಿ ನಡುಪುತ್ತುಮಿರೆ (ಸ್ವಂತ ಮಕ್ಕಳಂತೆ ಸಾಕಿಸಲಹುತ್ತಿರಲು) ದುರ್ಯೋಧನ ಪ್ರಭೃತಿಗಳ್ ನೂರ್ವರುಂ (ದುರ್ಯೋಧನಾದಿ ನೂರು ರಾಜ ಕುಮಾರರು) ಧರ್ಮಪುತ್ರಾದಿಗಳು ಅಯ್ವರುಂ ಸಹಪಾಂಸುಕ್ರೀಡಿತರಾಗಿ (ಒಟ್ಟಿಗೆ ಧೂಳಾಟವನ್ನಾಡುತ್ತಿದ್ದರು.)-
- ವಚನ:ಅರ್ಥ:ಅಳುತ್ತಿದ್ದ ಕುಂತಿ,ಸತ್ಯವತಿದೇವಿಯನ್ನೂ ಸಮಾಧಾನಮಾಡಿ, ಪಾಂಡುರಾಜನಿಗೆ ತರ್ಪಣಾದಿ ಕ್ರಿಯೆಗಳನ್ನು ಮಾಡಿ ಮುಗಿಸಿ, ಆಮೇಲೆ ಆ ದುಖವೇ ವಿರಕ್ತಿಗೆ ಕಾರಣವಾಗಲು ಸಂಸಾರದಲ್ಲಿ ವೈರಾಗ್ಯಹೊಂದಿ ವ್ಯಾಸರ ಉಪದೇಶದಂತೆ ಸತ್ಯವತಿಯೂ ಅಂಬೆ ಅಂಬಾಲೆಯರೂ ಸಂಸಾರ ತ್ಯಾಗಮಾಡಿ ತಪೋವನವಕ್ಕೆ ಹೋದರು. ದುರ್ಯೋಧನಾದಿ ನೂರು ರಾಜ ಕುಮಾರರು ಧರ್ಮರಾಜನೇ ಮೊದಲಾದ ಅಯ್ದು ಬಾಲಕರು ಒಟ್ಟಿಗೆ ಧೂಳಾಟವನ್ನಾಡುತ್ತಿದ್ದರು.
- ಕಂ|| ಒಡನಾಡಿಯುಮೊಡನೋದಿಯು
- ಮೊಡವಳೆದುಂ ಗುಳ್ಳೆಗೊಟ್ಟಿ ಬಟ್ಟುಳಿಸೆಂಡುಂ|
- ಪೊಡೆಸೆಂಡೆಂಬಿವನಾಡು
- ತ್ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್|| ೩೦||
- ಪದ್ಯ-೩೦:ಪದವಿಭಾಗ-ಅರ್ಥ:ಒಡನೆ ಆಡಿಯುಂ ಒಡನೆ ಓದಿಯುಂ ಒಡವಳೆದುಂ (ಜೊತೆಯಲ್ಲಿ) ಗುಳ್ಳೆಗೊಟ್ಟಿ (ಗುಳ್ಳೆಗೋಷ್ಟಿ) ಬಟ್ಟು ಉಳಿಸೆಂಡುಂ (ಬಚ್ಚಿಟ್ಟ ಚೆಂಡಿನ ಆಟ)|ಪೊಡೆಸೆಂಡು (ಹೊಡೆಯುವ ಚೆಂಡಿನಾಟ) ಎಂಬ ಇವನು ಆಡುತ್ತ ಒಡವಳೆದರ್ (ಒಟ್ಟಿಗೆ ಬೆಳೆದರು) ತಮ್ಮೊಳೆ ಎಳಸೆ ತಂತಂಗೆ ಎಡೆಗಳ್
- ಪದ್ಯ-೩೦:ಅರ್ಥ:ಒಡನೆ ಆಡಿಯೂ ಒಡನೆ ಓದಿಯೂ ಜೊತೆಯಲ್ಲಿ ಬೆಳೆದು, ಗೊಳ್ಳೆಗೋಷ್ಟಿ, ಬಿಲ್ಲೆಯಾಟ, ಬಚ್ಚಿಟ್ಟ ಚೆಂಡಿನ ಆಟ, ಹೊಡೆಯುವ ಚೆಂಡಿನಾಟ, ಎಂಬ ಈ ಆಟಗಳನ್ನಾಡುತ್ತ ತಮ್ಮ ತಮ್ಮಲ್ಲಿ ಪ್ರತ್ಯೇಕ ಸ್ನೇಹವನ್ನು ಬೆಳೆಸುತ್ತ ಜೊತೆಯಲ್ಲಿಯೇ ಬೆಳೆದರು.
- ವ|| ಅಂತಾ ಕೂಸುಗಳ್ ಕೂಸಾಟವಾಡುತ್ತಿರ್ದೊಂದು ದಿವಸಂ ಮರಗೆರಸಿಯಾಡಲೆಂದು ಮುಂದೆ ತಮ್ಮ ಪಗೆ ಪರ್ವುವಂತೆ ಪನ್ನಿರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು ಭೀಮನಂ ಮರೆಮಾಡಿ ಕೋಲನೀಡಾಡಿ ಪಲವು ಸೂೞು ಕಾಡಿ-
- ವಚನ:ಪದವಿಭಾಗ-ಅರ್ಥ:ಅಂತು ಆ ಕೂಸುಗಳ್ ಕೂಸಾಟವಾಡುತ್ತಿರ್ದ ಒಂದು ದಿವಸಂ ಮರಗೆರಸಿಯಾಡಲೆಂದು (ಮರಗೆರಸಿ ಎಂಬ ಆಟವನ್ನು ಆಡಬೇಕೆಂದು) ಮುಂದೆ ತಮ್ಮ ಪಗೆ (ಶತ್ರುತ್ವ - ಆಟದಲ್ಲಿ ಎದುರಾಳಿ) ಪರ್ವುವಂತೆ ಪನ್ನಿರ್ಮತ್ತರ್ (ಹನ್ನೆರಡು ಮತ್ತರ್ -ಅಳತೆ ಪ್ರದೇಶಕ್ಕೆ) ಪರ್ವಿದ (ಹಬ್ಬಿದ) ಆಲದ ಮರದ ಮೊದಲ್ಗೆ ವಂದು (ಆಲದ ಮರದ ಬುಡಕ್ಕೆ ಬಂದು) ಭೀಮನಂ ಮರೆಮಾಡಿ ಕೋಲನು ಈಡಾಡಿ (ಎಸೆದು) ಪಲವು ಸೂೞು ಕಾಡಿ-
- ವಚನ:ಅರ್ಥ:ಆ ಮಕ್ಕಳು ಮಕ್ಕಳಾಟವನ್ನಾಡುತ್ತಿದ್ದ ಒಂದು ದಿನ ಮರಗೆರಸಿಯೆಂಬ ಆಟವನ್ನು ಆಡಲೆಂದು ಬಂದು ಎದುರಾಳಿಗೆ ಸಿಗದಂತೆ ಕೋಲನ್ನೆಸೆದು, ಹನ್ನೆರಡು ಮತ್ತರಷ್ಟು ಅಗಲವಾಗಿ ಬೆಳೆದ ಆಲದಮರದ (ಕೆಳಭಾಗಕ್ಕೆ) ಬಂದ ಭೀಮನನ್ನು ಕಾಣದ ಹಾಗೆ ಇರಿಸಿ ಅನೇಕ ಸಲ ಕಾಡಿದನು. (ಕೋಲನ್ನು ಎಸೆದವನನ್ನು ಹುಡುಕುವ ಆಟ ಇರಬಹುದು- ಭೀಮ ಎಸೆದ ಕೋಲು ಬಹು ದೂರ ಹೋಗುವುದರಿಂದ ಅದನ್ನು ತರುವುದರೊಳಗೆ ಬೀಮ ಕಾಣದಂತೆ ಅಡಗಿರುತ್ತಿದ್ದ, ಅವನನ್ನು ಕಂಡರೆ ಕೋಲು ಎಸೆಯುವ ಸರದಿ ಎದುರಾಳಿಗೆ ಬರುವುದು, ಆದರೆ ಆ ಅವಕಾಶ ಸಿಗದಂತೆ ಕಾಡಿದ.)
- ಕಂ|| ಪರಿದನಿಬರುಮೊಡನಡರ್ದಿರೆ
- ಮರನಂ ಮುಟ್ಟಲ್ಕೆ ಪಡೆಯದನಿಬರ್ಗಂ ಕಿಂ|
- ಕಿರಿವೋಗಿ ಭೀಮಸೇನಂ
- ಮರನಂ ಪಿಡಿದಲ್ಗೆ ಪಣ್ವೊಲನಿಬರುಮುದಿರ್ದರ್|| ೩೧||
- ಪದ್ಯ-೩೧:ಪದವಿಭಾಗ-ಅರ್ಥ:ಪರಿದು ಅನಿಬರುಂ (ಓಡಿದ ಎಲ್ಲರೂ) ಒಡನೆ ಅಡರ್ದಿರೆ ಮರನಂ (ಕೂಡಲೆ ಮರ ಹತ್ತಿರಲು) ಮುಟ್ಟಲ್ಕೆ ಪಡೆಯದ ಅನಿಬರ್ಗಂ(ಅವರನ್ನು ಮುಟ್ಟಲಾಗದೆ) ಕಿಂಕಿರಿವೋಗಿ (ಕೋಪಿಸಿಕೊಂಡು) ಭೀಮಸೇನಂ ಮರನಂ ಪಿಡಿದು ಅಲ್ಗೆ (ಭೀಮಸೇನನು ಮರವನ್ನು ಹಿಡಿದು ಅಲುಗಿಸಲು) ಪಣ್ವೊಲ್ ಅ ನಿಬರುಂ ಉದಿರ್ದರ್ (ಹಣ್ನಿನಂತೆ ಅವರೆಲ್ಲರೂ ಉದುರಿಬಿದ್ದರು)|
- ಪದ್ಯ-೩೧:ಅರ್ಥ:. ಓಡಿದ ಎಲ್ಲರೂ ಒಟ್ಟಿಗೆ ಮರವನ್ನು ಹತ್ತಿರಲು, ಅವರನ್ನು ಮುಟ್ಟಲಾಗದೆ ಭೀಮನು ರೇಗಿ ಕೋಪಿಸಿಕೊಂಡು ಮರವನ್ನು ಹಿಡಿದು ಅಳ್ಳಾಡಿಸಲು ಹಣ್ಣಿನ ಹಾಗೆ ಅಷ್ಟು ಜನವೂ ಕೆಳಗೆ ಉದುರಿಬಿದ್ದರು).
- ವ|| ಅಂತು ಬಿೞ್ದು ಸುಲಿದ ಮೊೞಕಾಲ್ಗಳುಂ ಕೞಲ್ದ ಪಲ್ಗಳುಮೆಲ್ವಡಗಾದ ಮೈಯ್ಗಳು ಮುಡಿದ ಕೆಯ್ಗಳುಮಾಗಿ ಬೆರಸೞುತ್ತುಂ ಬಂದು ಗಾಂಗೇಯ ಧೃತರಾಷ್ಟ್ರರ್ಗೆ ಕಾರಣಂಬೇೞ್ದೊಡವರಿಂದಿತ್ತ ಭೀಮನೊಡನಾಡದಿರಿಮೆಂದು ಮುದುಗಣ್ಗಳ್ ಬಾರಿಸೆ ತಮ್ಮ ನೊಂದು ಸಿಗ್ಗಿಂಗನಿಬರುಮೊಂದಾಗಿ ಪೋಗಿ ಪೊಱವೊೞಲ ಮರದ ಕೆಳಗೆ ಮಱಸೊಂದಿದ ಭೀಮನನಡಸಿ ಪಿಡಿದು ನೂರ್ವರುಂ ಗಂಟಲಂ ಮೆಟ್ಟಿ-
- ವಚನ:ಪದವಿಭಾಗ-ಅರ್ಥ:ಅಂತು ಬಿೞ್ದು ಸುಲಿದ ಮೊೞಕಾಲ್ಗಳುಂ (ಹಾಗೆ ಬಿದ್ದು ಗಾಯವಾದ ಮೊಣಕಾಲುಗಳಿಂದಲೂ) ಕೞಲ್ದ ಪಲ್ಗಳುಂ (ಕಳಚಿದ ಹಲ್ಲುಗಳಿಂದಲೂ) ಎಲ್ವಡಗಾದ ಮೈಯ್ಗಳು (ಎಲುಬು ಒಡೆದ ಮೈಯಿಂದಲೂ) ಮುಡಿದ ಕೆಯ್ಗಳುಮ್ ಆಗಿ ಬೆರಸೞುತ್ತುಂ ಬಂದು ಗಾಂಗೇಯ ಧೃತರಾಷ್ಟ್ರರ್ಗೆ ಕಾರಣಂ ಬೇೞ್ದೊಡೆ (ಮುರಿದ ಕಯ್ಯಿಂದಲೂ ಕೂಡಿ ಅಳುತ್ತಾ ಬಂದು ಭೀಷ್ಮ ಧೃತರಾಷ್ಟ್ರರಿಗೆ ಹಾಗಾಗುವುದಕ್ಕೆ ಕಾರಣವನ್ನು ಹೇಳಿದಾಗ) ಅವರಿಂದ ಇತ್ತ ಭೀಮನೊಡನೆ ಆಡದಿರಿಂ ಎಂದು ಮುದುಗಣ್ಗಳ್ ಬಾರಿಸೆ (ಅವರು ಅಂದಿನಿಂದ ಮುಂದೆ ಭೀಮನೊಡನೆ ಆಡಬೇಡಿ ಎಂದು ವೃದ್ಧರು (ಮುದಿಕಣ್ಣುಗಳು) ಎಚ್ಚರಿಸಲು,) ತಮ್ಮ ನೊಂದು ಸಿಗ್ಗಿಂಗೆ ಅನಿಬರುಂ ಒಂದಾಗಿ ಪೋಗಿ ಪೊಱವೊೞಲ(ತಾವು ನೊಂದ ನಾಚಿಕೆಗಾಗಿ ಅಷ್ಟು ಜನವೂ ಒಟ್ಟುಗೂಡಿಹೋಗಿ ಪಟ್ಟಣದ ಹೊರಭಾಗದಲ್ಲಿ) ಮರದ ಕೆಳಗೆ ಮಱಸೊಂದಿದ ಭೀಮನನು ಅಡಸಿ ಪಿಡಿದು ನೂರ್ವರುಂ ಗಂಟಲಂ ಮೆಟ್ಟಿ (ಮರದ ಕೆಳಗೆ ಮೈಮರೆತು ನಿದ್ದೆಮಾಡುತ್ತಿದ್ದ ಭೀಮನ ಮೇಲೆ ಬಿದ್ದು ಹಿಡಿದು ನೂರುಜನರೂ ಅವನ ಗಂಟಲನ್ನು ತುಳಿದು)-
- ವಚನ:ಅರ್ಥ:ಹಾಗೆ ಬಿದ್ದು ಗಾಯವಾದ ಮೊಣಕಾಲುಗಳಿಂದಲೂ, ಕಳಚಿದ ಹಲ್ಲುಗಳಿಂದಲೂ, ಎಲುಬು ಒಡೆದ ಮೈಯಿಂದಲೂ, ಮುರಿದ ಕಯ್ಯಿಂದಲೂ ಕೂಡಿ ಅಳುತ್ತಾ ಬಂದು ಭೀಷ್ಮ ಧೃತರಾಷ್ಟ್ರರಿಗೆ ಹಾಗಾಗುವುದಕ್ಕೆ ಕಾರಣವನ್ನು ಹೇಳಿದಾಗ, ಅವರು ಅಂದಿನಿಂದ ಮುಂದೆ ಭೀಮನೊಡನೆ ಆಡಬೇಡಿ ಎಂದು ವೃದ್ಧರು (ಮುದಿಕಣ್ಣುಗಳು) ಎಚ್ಚರಿಸಲು, ತಾವು ನೊಂದ ನಾಚಿಕೆಗಾಗಿ ಅಷ್ಟು ಜನವೂ ಒಟ್ಟುಗೂಡಿಹೋಗಿ ಪಟ್ಟಣದ ಹೊರಭಾಗದಲ್ಲಿ ಮರದ ಕೆಳಗೆ ಮೈಮರೆತು ನಿದ್ದೆಮಾಡುತ್ತಿದ್ದ ಭೀಮನ ಮೇಲೆ ಬಿದ್ದು ಹಿಡಿದು ನೂರುಜನರೂ ಅವನ ಗಂಟಲನ್ನು ತುಳಿದು-
- ಕಂ|| ಪಾವುಗಳಂ ಕೊಳಿಸಿ ಮಹಾ
- ಗ್ರಾವಮನುಱದಡಸಿ ಕಟ್ಟಿ ಕೊರಲೊಳ್ ಗಂಗಾ|
- ದೇವಿಯ ಮಡುವಿನೊಳೞ್ದದ
- ರಾವರಿಸದೆ ತಮ್ಮ ಕುಲಮನಡಿಗೞ್ದುವವೋಲ್|| ೩೨||
- ಪದ್ಯ-೩೨:ಪದವಿಭಾಗ-ಅರ್ಥ:ಪಾವುಗಳಂ ಕೊಳಿಸಿ (ಹಾವುಗಳಿಂದ ಕಚ್ಚಿಸಿ) ಮಹಾಗ್ರಾವಮನು ಱದಡಸಿ ಕಟ್ಟಿ ಕೊರಲೊಳ್ (ಕುತ್ತಿಗೆಗೆ ದೊಡ್ಡ ಕಲ್ಲು ಕಟ್ಟಿ) ಗಂಗಾದೇವಿಯ ಮಡುವಿನೊಳು ಅೞ್ದಿದು ಆರೂ ಆವರಿಸದೆ (ಯಾರೂ ಅಳೆದು/ವಿಚಾರಮಾಡಿ ನೋಡದೆ ಗಂಗಾನದಿಯ ಮಡುವಿನಲ್ಲಿ) ತಮ್ಮ ಕುಲಮನು ಅಡಿಗೆ ಅೞ್ದುವವೋಲ್ (ತಮ್ಮ ವಂಶವನ್ನು ಕೆಳಗೆ ಅದ್ದುವಂತೆ ಅಳ್ದಿದರ್ ಮುಳುಗಿಸಿದರು- 'ಅಧ್ಯಾಹಾರ' )
- ಪದ್ಯ-೩೨:ಅರ್ಥ:. ಹಾವುಗಳಿಂದ ಕಚ್ಚಿಸಿ ದೊಡ್ಡಕಲ್ಲನ್ನು ಕುತ್ತಿಗೆಗೆ ಕಟ್ಟಿ, ಯಾರೂ ಅಳೆದು/ವಿಚಾರಮಾಡಿ ನೋಡದೆ ಗಂಗಾನದಿಯ ಮಡುವಿನಲ್ಲಿ ತಮ್ಮ ವಂಶವನ್ನು ಕೆಳಗೆ ಅದ್ದುವಂತೆ ಅಳ್ದಿದರ್- ಮುಳುಗಿಸಿದರು- ('ಅಧ್ಯಾಹಾರ')
- ವ|| ಅಂತೞ್ದುವುದುಂ ಗಂಗಾದೇವಿಯ ವರಪ್ರಸಾದದೊಳ್ ವಿಷಮ ವಿಷಧರಂಗಳ್ ಪರಿಯೆ ಕೊರಲೊಳ್ ತೊಡರ್ದ ಶಿಲೆಯಂ ಪಱಿದೀಡಾಡಿ ಗಂಗೆಯ ನೀರಂ ತೋಳೊಳ್ ತುಳುಂಕಿ ಮಗುೞ್ದು ಬಂದಂಗೆ ವಿಷದ ಲಡ್ಡುಗೆಯನಿಕ್ಕಿಯುಮೆನಿತಾನುಮುಪ ದ್ರವಂಗಳೊಳ್ ತೊಡರಿಕ್ಕಿಯುಂ ಗೆಲಲಾಱದೆ ಮನಮಿಕ್ಕಿಯುಮೆರ್ದೆಯಿಕ್ಕಿಯುಮಿರ್ದರಂತಯ್ವರ್ ಕೂಸುಗಳ್ಗಂ ಗಾಂಗೇಯಂ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಸುಖಮಿರ್ಪನ್ನೆಗಮಿತ್ತ ಗಂಗಾದ್ವಾರದೊಳ್ ಮಾಯಾಪುರಮೆಂಬ ಋಷ್ಯಾಶ್ರಮದೊಳ್ ಗೌತಮನೆಂಬಂ ಬ್ರಹ್ಮಋಷಿ ತಪಂ ಗೆಯ್ಯುತಿರ್ಪಿನಮಾ ಋಷಿಗೆ ಬಿಲ್ಲುಮಂಬುಂವೆರಸೊರ್ವ ಮಗಂ ಪುಟ್ಟಿದನಾತಂಗೆ ಶರದ್ವತನೆಂದು ಪೆಸರನಿಟ್ಟು ನಡಪೆ ಬಳೆದು ತಪಂಗೆಯ್ವಾತನಲ್ಲಿಗೆ ಜಲಕ್ರೀಡಾ ನಿಮಿತ್ತದಿಂದಿಂದ್ರನಚ್ಚರಸೆ ಜಲಚರೆಯೆಂಬವಳ್ ಬಂದೊಡಾಕೆಯಂ ಕಂಡು ಕಾಮಾಸಕ್ತಚಿತ್ತನಾಗಿ ಕೂಡಿ-
- ವಚನ:ಪದವಿಭಾಗ-ಅರ್ಥ:ಅಂತು ತೞ್ದುವುದುಂ(ಹಾಗೆ ತಳ್ಳಿದರೂ) ಗಂಗಾದೇವಿಯ ವರಪ್ರಸಾದದೊಳ್ ವಿಷಮ ವಿಷಧರಂಗಳ್ ಪರಿಯೆ (ಗಂಗಾದೇವಿಯ ವರಪ್ರಸಾದದಿಂದ ವಿಷಸರ್ಪಗಳು ಹರಿದು ಹೋಗಲು) ಕೊರಲೊಳ್ ತೊಡರ್ದ ಶಿಲೆಯಂ ಪಱಿದೀಡಾಡಿ (ಕೊರಳಿನಲ್ಲಿ ಕಟ್ಟಿದ್ದ ಕಲ್ಲನ್ನು ಕಿತ್ತು ಎಸೆದು) ಗಂಗೆಯ ನೀರಂ ತೋಳೊಳ್ ತುಳುಂಕಿ {ಗಂಗೆಯ ನೀರನ್ನು ತೋಲಿನಿಂದ ಕಲಕಲು} ಮಗುೞ್ದು ಬಂದಂಗೆ ವಿಷದ ಲಡ್ಡುಗೆಯನು ಇಕ್ಕಿಯುಂ ಮೆನಿತಾನುಂ ಉಪದ್ರವಂಗಳೊಳ್ ತೊಡರಿಕ್ಕಿಯುಂ (ತಿನ್ನಿಸಿಯೂ ಇನ್ನೂ ಅನೇಕ ವಿಧವಾದ ಕಷ್ಟಗಳಲ್ಲಿ ತೊಡಗಿಸಿ ಸಿಕ್ಕಿಸಿಯೂ) ಗೆಲಲಾಱದೆ ಮನಮಂ ಇಕ್ಕಿಯಂ ಎರ್ದೆಯಿಕ್ಕಿಯುಂ ಇರ್ದರ್ (ಗೆಲ್ಲಲಾರದೆ ಮನಸ್ಸು ಕುಸಿದು ಧೈರ್ಯಕುಗ್ಗಿ ಇಧ್ದರು.) ಅಂತು ಅಯ್ವರ್ ಕೂಸುಗಳ್ಗಂ ಗಾಂಗೇಯಂ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಸುಖಂ ಇರ್ಪ ಅನ್ನೆಗಂ ಇತ್ತ (ಈ ಕಡೆ ಭೀಷ್ಮನು ಅಯ್ದು ಜನ ಮಕ್ಕಳಿಗೂ ಚೌಲೋಪನಯನಾದಿ ಕರ್ಮಗಳನ್ನು ಮಾಡಿ ಸುಖನಾಗಿರಲು, ಇತ್ತ.) ಗಂಗಾದ್ವಾರದೊಳ್ ಮಾಯಾಪುರಮೆಂಬ ಋಷ್ಯಾಶ್ರಮದೊಳ್ ಗೌತಮನೆಂಬಂ ಬ್ರಹ್ಮಋಷಿ ತಪಂ ಗೆಯ್ಯುತಿರ್ಪಿನಂ (ಇತ್ತ -ಈ ಕಡೆ ಗಂಗಾದ್ವಾರದಲ್ಲಿ ಮಾಯಾಪುರವೆಂಬ ಋಷ್ಯಾಶ್ರಮದಲ್ಲಿ ಗೌತಮನೆಂಬ ಬ್ರಹ್ಮಋಷಿಯು ತಪಸ್ಸನ್ನು ಮಾಡುತ್ತಿರಲು), ಆ ಋಷಿಗೆ ಬಿಲ್ಲುಮಂಬುಂವೆರಸೊರ್ವ ಮಗಂ ಪುಟ್ಟಿದನಾತಂಗೆ ಶರದ್ವತನೆಂದು ಪೆಸರನಿಟ್ಟು (ಆ ಋಷಿಗೆ ಬಿಲ್ಲುಬಾಣಗಳಿಂದ ಕೂಡಿದ ಒಬ್ಬ ಮಗನು ಹುಟ್ಟಿದನು. ಅವನಿಗೆ ಶರದ್ವತನೆಂದು ಹೆಸರನ್ನಿಟ್ಟು ಸಲಹಿದನು.) ನಡಪು ಬಳೆದು ತಪಂಗೆಯ್ವಾತನಲ್ಲಿಗೆ ಜಲಕ್ರೀಡಾ ನಿಮಿತ್ತದಿಂದ ಇಂದ್ರನ ಅಚ್ಚರಸೆ ಜಲಚರೆಯೆಂಬವಳ್ ಬಂದೊಡೆ ಆಕೆಯಂ ಕಂಡು ಕಾಮಾಸಕ್ತಚಿತ್ತನಾಗಿ ಕೂಡಿ ( ಅವನನ್ನು ಸಲಹಲು ಬೆಳೆದ ಆ ಋಷಿಯ ಬಳಿಗೆ ಜಲಕ್ರೀಡೆಗಾಗಿ ಇಂದ್ರನ ಅಪ್ಸರಸ್ತ್ರೀಯಾದ ಜಲಚರೆಯೆಂಬುವಳು ಬರಲು ಆವನು ಆಕೆಯನ್ನು ನೋಡಿ ಕಾಮಾಸಕ್ತನಾಗಿ ಅವಳೊಡನೆ ಕೂಡಿ)-
- ವಚನ:ಅರ್ಥ:ಹಾಗೆ ಮುಳುಗಿಸಿದಾಗಲೂ ಗಂಗಾದೇವಿಯ ವರಪ್ರಸಾದದಿಂದ ವಿಷಯುಕ್ತವಾದ ಹಾವುಗಳು ಹರಿದುಹೋದವು. ಕೊರಳಿನಲ್ಲಿ ಕಟ್ಟಿದ್ದ ಕಲ್ಲನ್ನು ಕಿತ್ತು ಎಸೆದು, ಗಂಗೆಯ ನೀರನ್ನು ತೋಳಿನಿಂದ ಕಲಕಿ ತಳ್ಳಿ, ಪುನ ಹಿಂತಿರುಗಿದವನಿಗೆ ವಿಷದ ಲಾಡುಗಳನ್ನು ತಿನ್ನಿಸಿ, ಇನ್ನೂ ಅನೇಕ ವಿಧವಾದ ಕಷ್ಟಗಳಲ್ಲಿ ಸಿಕ್ಕಿಸಿಯೂ ಗೆಲ್ಲಲಾರದೆ ಮನ ಕುಂದಿ ಧೈರ್ಯಕುಗ್ಗಿದವವಾಗಿಯೂ ಇಧ್ದರು. ಈ ಕಡೆ ಭೀಷ್ಮನು ಐಯ್ದು ಜನ ಮಕ್ಕಳಿಗೂ ಚೌಲೋಪನಯನಾದಿ ಕರ್ಮಗಳನ್ನು ಮಾಡಿ ಸುಖನಾಗಿದ್ದನು. ಇತ್ತ ಗಂಗಾದ್ವಾರದಲ್ಲಿ ಮಾಯಾಪುರವೆಂಬ ಋಷ್ಯಾಶ್ರಮದಲ್ಲಿ ಗೌತಮನೆಂಬ ಬ್ರಹ್ಮಋಷಿಯು ತಪಸ್ಸು ಮಾಡುತ್ತಿರಲು ಆ ಋಷಿಗೆ ಬಿಲ್ಲುಬಾಣಗಳಿಂದ ಕೂಡಿದ ಒಬ್ಬ ಮಗನು ಹುಟ್ಟಿದನು. ಅವನಿಗೆ ಶರದ್ವತನೆಂದು ಹೆಸರನ್ನಿಟ್ಟು ಸಲಹಿದನು. ಅವನನ್ನು ಸಲಹಲು, ಬೆಳೆದ ಆ ಋಷಿಯ ಬಳಿಗೆ ಜಲಕ್ರೀಡೆಗಾಗಿ ಇಂದ್ರನ ಅಪ್ಸರಸ್ತ್ರೀಯಾದ ಜಲಚರೆಯೆಂಬುವಳು ಬರಲು ಅವನು ಆಕೆಯನ್ನು ನೋಡಿ ಕಾಮಾಸಕ್ತನಾಗಿ ಅವಳೊಡನೆ ಕೂಡಿ-
- ಕಂ|| ಒಗೆದ ಶರಸ್ತಂಬದೊಳಿ
- ರ್ಬಗಿಯಾಗಿ ಮನೋಜ ರಾಗರಸಮುಗುತರೆ ತೊ|
- ಟ್ಟಗೆ ಬಿಸುಟು ಬಿಲ್ಲನಂಬುಮ
- ನಗಲ್ದನಾಶ್ರಮದಿನುದಿತ ಲಜ್ಜಾವಶದಿಂ|| ೩೩||
- ಪದ್ಯ-೩೩:ಪದವಿಭಾಗ-ಅರ್ಥ:ಒಗೆದ ಶರಸ್ತಂಬದೊಳ್ (ಅಲ್ಲಿ ಹುಟ್ಟಿದ ಜೊಂಡುಹುಲ್ಲಿನಲ್ಲಿ ಚೆಲ್ಲಿದ) ಇರ್ಬಗಿಯಾಗಿ ಮನೋಜ ರಾಗರಸಮ್ ಉಗುತರೆ(ತಟ್ಟನೆ ರೇತಸ್ಸು ಎರಡು ಭಾಗವಾಗಿ ಸುರಿಯಲು) ತೊಟ್ಟಗೆ ಬಿಸುಟು ಬಿಲ್ಲನಂಬುಮನು ಅಗಲ್ದನು ಆಶ್ರಮದಿಂ ಉದಿತ ಲಜ್ಜಾವಶದಿಂ(ಆ ಶರದ್ವತನು ತನಗೊದಗಿದ ನಾಚಿಕೆಯಿಂದ ಬಿಲ್ಲುಬಾಣಗಳನ್ನು ಕೂಡಲೆ ಬಿಸಾಡಿ ಋಷ್ಯಾಶ್ರಮವನ್ನು ಬಿಟ್ಟು ಹೋದನು)
- ಪದ್ಯ-೩೩:ಅರ್ಥ:ಆ ಜೊಂಡುಹುಲ್ಲಿನಲ್ಲಿ ಚೆಲ್ಲಿದ ರೇತಸ್ಸು ಎರಡು ಭಾಗವಾಗಿ ಸುರಿಯಲು ಆ ಶರದ್ವತನು ತನಗೊದಗಿದ ನಾಚಿಕೆಯಿಂದ ಬಿಲ್ಲುಬಾಣಗಳನ್ನು ಕೂಡಲೆ ಬಿಸಾಡಿ ಋಷ್ಯಾಶ್ರಮವನ್ನು ಬಿಟ್ಟು ಹೋದನು.
- ವ|| ಅನ್ನೆಗಮಾ ತಪೋವನಕ್ಕೆ ಬೇಂಟೆಯಾಡಲ್ಬಂದ ಶಂತನುವಿನೊಡನೆಯವರಾ ಶರಸ್ತಂಬದೊಳ್ ಪರಿಕಲಿಸಿರ್ದ ಮುನೀಂದ್ರನಿಂದ್ರಿಯ ದೊಳೊಗೆದ ಪೆಣ್ಗೂಸುಮಂ ಗಂಡುಗೂಸುಮನವಱ ಕೆಲದೊಳಿರ್ದ ದಿವ್ಯ ಶರಾಸನ ಶರಂಗಳುಮಂ ಕಂಡು ಕೊಂಡುಪೋಗಿ ಶಂತನುಗೆ ತೋಱದೊಡಾತನುಮಾ ಶಿಶುದ್ವಯಮಂ ನಿಜ ಗಜಪುರಕ್ಕುಯ್ದು ಕೃಪೆಯಿಂ ನಡಪಿದನಪ್ಪುದಱಿಂ ಕೃಪನುಂ ಕೃಪೆಯುಮೆಂದು ಪೆಸರನಿಟ್ಟು ನಡಪುತ್ತಿರ್ಪನ್ನೆಗಮವರಯ್ಯಂ ಶರದ್ವತನಲ್ಲಿಗೆ ಬಂದು ಕಿಱಿಯಾತಂಗೆ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಧನುರ್ವಿದ್ಯೋಪದೇಶಂಗೆಯ್ಯೆ ಸರ್ವವಿದ್ಯಾವಿಶಾರದನಾದನಾ ಕೃಪಾಚಾರ್ಯರ ಪಕ್ಕದೊಳ್ ಕೂಸುಗಳಂ ವಿದ್ಯಾಭ್ಯಾಸಂಗೆಯ್ಸೆ-
- ವಚನ:ಪದವಿಭಾಗ-ಅರ್ಥ:ಅನ್ನೆಗಂ (ಅಷ್ಟರಲ್ಲಿ) ಆ ತಪೋವನಕ್ಕೆ ಬೇಂಟೆಯಾಡಲ್ ಬಂದ ಶಂತನುವಿನೊಡನೆಯವರು ಆ ಶರಸ್ತಂಬದೊಳ್ ಪರಿಕಲಿಸಿರ್ದ(ಚೆದುರಿದ್ದ) ಮುನೀಂದ್ರನ ಇಂದ್ರಿಯದೊಳು ಒಗೆದ ಪೆಣ್ಗೂಸುಮನು ಗಂಡುಗೂಸುಂ(ಹುಟ್ಟಿದ ಹೆಣ್ಣು ಕೂಸನ್ನೂ ಗಂಡುಕೂಸನ್ನೂ ) ಅವಱ ಕೆಲದೊಳಿರ್ದ (ಹತ್ತಿರದಲ್ಲಿದ್ದ) ದಿವ್ಯ ಶರಾಸನ ಶರಂಗಳುಮಂ ಕಂಡು ಕೊಂಡುಪೋಗಿ ಶಂತನುಗೆ ತೋಱದೊಡೆ (ಅವುಗಳ ಪಕ್ಕದಲ್ಲಿ ಬಿಲ್ಲುಬಾಣಗಳನ್ನೂ ನೋಡಿ ಅವುಗಳನ್ನು ತೆಗೆದುಕೊಂಡು ಹೋಗಿ ಶಂತುನುವಿಗೆ ತೋರಿಸಿದಾಗ, ಅವನು ಆ ಎರಡು ಮಕ್ಕಳನ್ನೂ ತನ್ನ ಹಸ್ತಿನಾಪುರಕ್ಕೆ (ಕರೆದು) ಕೊಂಡುಹೋಗಿ )ಆತನುಂ ಆ ಶಿಶುದ್ವಯಮಂ ನಿಜ ಗಜಪುರಕ್ಕುಯ್ದು ಕೃಪೆಯಿಂ ನಡಪಿದನಪ್ಪುದಱಿಂ ಕೃಪನುಂ ಕೃಪೆಯುಮೆಂದು ಪೆಸರನಿಟ್ಟು(ಅವನು ಆ ಎರಡು ಮಕ್ಕಳನ್ನೂ ತನ್ನ ಹಸ್ತಿನಾಪುರಕ್ಕೆ (ಕರೆದು) ಕೊಂಡುಹೋಗಿ ಕೃಪೆಯಿಂದ ಕೃಪೆ ಮತ್ತು ಕೃಪ ಎಂದು ಹೆಸರಿಟ್ಟು,) ನಡಪುತ್ತಿರ್ಪ ಅನ್ನೆಗಮ್ ಅವರಯ್ಯಂ ಶರದ್ವತನು ಅಲ್ಲಿಗೆ ಬಂದು ಕಿಱಿಯಾತಂಗೆ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಧನುರ್ವಿದ್ಯಾ ಉಪದೇಶಂಗೆಯ್ಯೆ (ಅವರ ತಂದೆಯಾದ ಶರದ್ವತನು ಅಲ್ಲಿಗೆ ಬಂದು ಚಿಕ್ಕವನಿಗೆ ಚೌಳೋಪನಯನವೇ ಮೊದಲಾದ ಕರ್ಮಗಳನ್ನೂ ಮಾಡಿ ಬಿಲ್ಲಿನ ವಿದ್ಯೆಯನ್ನೂ ಹೇಳಿಕೊಡಲು) ಸರ್ವವಿದ್ಯಾವಿಶಾರದನು ಆದನು (ಅವನು ಸರ್ವವಿದ್ಯಾವಿಶಾರದನಾದನು.) ಆ ಕೃಪಾಚಾರ್ಯರ ಪಕ್ಕದೊಳ್ ಕೂಸುಗಳಂ ವಿದ್ಯಾಭ್ಯಾಸಂ ಗೆಯ್ಸೆ(ಭೀಷ್ಮನು ಆ ಕೃಪಾಚಾರ್ಯರ ಹತ್ತಿರ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು; ಮಾಡಸಿದನು)-
- ವಚನ:ಅರ್ಥ:ಅಷ್ಟರಲ್ಲಿ ಆ ತಪೋವನಕ್ಕೆ ಬೇಟೆಯಾಡ ಬಂದಿದ್ದ ಶಂತನುವಿನೊಡನಿದ್ದವರು ಆ ಜೊಂಡುಹುಲ್ಲಿನಲ್ಲಿ ಚೆಲ್ಲಿದ್ದ ಋಷಿಶ್ರೇಷ್ಠನ ವೀರ್ಯದಿಂದ (ರೇತಸ್ಸಿನಿಂದ) ಹುಟ್ಟಿದ ಹೆಣ್ಣು ಕೂಸನ್ನೂ ಗಂಡುಕೂಸನ್ನೂ ಅವುಗಳ ಪಕ್ಕದಲ್ಲಿ ಬಿಲ್ಲುಬಾಣಗಳನ್ನೂ ನೋಡಿ ಅವುಗಳನ್ನು ತೆಗೆದುಕೊಂಡು ಹೋಗಿ ಶಂತುನುವಿಗೆ ತೋರಿಸಿದರು. ಅವನು ಆ ಎರಡು ಮಕ್ಕಳನ್ನೂ ತನ್ನ ಹಸ್ತಿನಾಪುರಕ್ಕೆ (ಕರೆದು) ಕೊಂಡುಹೋಗಿ ಕೃಪೆಯಿಂದ ಕೃಪೆ ಮತ್ತು ಕೃಪ ಎಂದು ಹೆಸರಿಟ್ಟು ಸಾಕಿದನು. ಅವರ ತಂದೆಯಾದ ಶರದ್ವತನು ಅಲ್ಲಿಗೆ ಬಂದು ಚಿಕ್ಕವನಿಗೆ ಚೌಳೋಪನಯನವೇ ಮೊದಲಾದ ಕರ್ಮಗಳನ್ನೂ ಮಾಡಿ ಬಿಲ್ಲಿನ ವಿದ್ಯೆಯನ್ನೂ ಹೇಳಿಕೊಡಲು ಅವನು ಸರ್ವವಿದ್ಯಾವಿಶಾರದನಾದನು. ಭೀಷ್ಮನು ಆ ಕೃಪಾಚಾರ್ಯರ ಹತ್ತಿರ ಮಕ್ಕಳ ವಿದ್ಯಾಭ್ಯಾಸ ಮಾಡಿಸಲು; ಮಾಡಸಿದನು)-
- ಚಂ|| ಬರೆಯದೆ ಬಂದ ಸುದ್ದಗೆಯೆ ಸೂತ್ರಮನೊಂದೆ ಮುಹೂರ್ತಮಾತ್ರದಿಂ
- ಬರಿಸಿದುದುಂತು ಸೂತ್ರಿಸಿದ ಸೂತ್ರದ ವೃತ್ತಿ ನಿಜಾತ್ಮವೃತ್ತಿವೋಲ್|
- ಪರಿಣಮಿಸಿತ್ತು ಮತ್ತುೞಿದ ವಿದ್ಯೆಗಳೋಜರೆ ಚಟ್ಟರೆಂಬಿನಂ
- ನೆರೆದುವು ತನ್ನೊಳಾರ್ ಗಳ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್|| ೩೪||
- ಪದ್ಯ-೩೪:ಪದವಿಭಾಗ-ಅರ್ಥ:(ಅರ್ಜುನನು)ಬರೆಯದೆ ಬಂದ ಸುದ್ದಗೆಯೆ (ಶುದ್ಧಾಕ್ಷರಗಳ) ಸೂತ್ರಮನು ಒಂದೆ ಮುಹೂರ್ತಮಾತ್ರದಿಂ ಬರಿಸಿದುದು (ಶುದ್ಧವರ್ಣಮಾಲೆಯ ಸೂತ್ರವನ್ನೂ ಬರೆಯದೆಯೇ ಕ್ಷಣಮಾತ್ರದಲ್ಲಿ ಅಕ್ಷರಗಳನ್ನೂ ಕಲಿತನು.) ಅಂತು ಸೂತ್ರಿಸಿದ ಸೂತ್ರದ ವೃತ್ತಿ ನಿಜಾತ್ಮವೃತ್ತಿವೋಲ್ ಪರಿಣಮಿಸಿತ್ತು ( ಹಾಗೆಯೇ ಸೂತ್ರರೂಪದಲ್ಲಿ ಹೇಳಿದವುಗಳು ಅರ್ಥವಿವರಣೆಯಿಲ್ಲದೆಯೇ ತನ್ನ ಸಹಜ ಸ್ವಭಾವದಿಂದಲೇ ಅವನಿಗೆ ಅವನ ವಶವಾದುವು.) ಮತ್ತು ಉೞಿದ ವಿದ್ಯೆಗಳು (ಉಳಿದ ಅನೇಕ ವಿದ್ಯೆಗಳು) ಓಜರೆ ಚಟ್ಟರೆಂಬಿನಂ ನೆರೆದುವು ತನ್ನೊಳ್ (ಗುರುಗಳೇ ಶಿಷ್ಯರೆಂಬಂತೆ ಅವನಲ್ಲಿ ಸೇರಿದವು) ಆರ್ ಗಳ (ಯಾರು ನಿಜವಾಗಿಯೂ) ಗುಣಾರ್ಣವನ ಅಂತು ಕುಶಾಗ್ರಬುದ್ಧಿಗಳ್( ಅರ್ಜುನನಂತ/ ಗುಣಾರ್ಣವ ಅರಿಕೇಸರಿಯಂತೆ ಸೂಕ್ಷ್ಮ ಬುದ್ಧಿಯವರು? ಯಾರೂ ಇಲ್ಲ!)
- ಪದ್ಯ-೩೪:ಅರ್ಥ:ಗುಣಾರ್ಣವನ ಹಾಗೆ ಅರ್ಜುನನಂತೆ/ (ಗುಣಾರ್ಣವ ಅರಿಕೇಸರಿಯಂತೆ) ಕುಶಾಗ್ರಬುದ್ಧಿಗಳಾಗಿರುವವರು ಯಾರಿದ್ದಾರೆ? ಏಕೆಂದರೆ ಶುದ್ಧವರ್ಣಮಾಲೆಯ ಸೂತ್ರವನ್ನೂ ಅಭ್ಯಾಸ ಮಾಡದೆಯೇ ಕ್ಷಣಮಾತ್ರದಲ್ಲಿ ಅಕ್ಷರಗಳನ್ನೂ ಕಲಿತನು. ಹಾಗೆಯೇ ಸೂತ್ರರೂಪದಲ್ಲಿ ಹೇಳಿದವುಗಳು ಅರ್ಥವಿವರಣೆಯಿಲ್ಲದೆಯೇ ತನ್ನ ಸಹಜ ಸ್ವಭಾವದಿಂದಲೇ ಅವನಿಗೆ ಅನವಾದುವು. ಉಳಿದ ಅನೇಕ ವಿದ್ಯೆಗಳು ಉಪಾಧ್ಯಾಯರೇ ಶಿಷ್ಯರಾದಂತೆ ಅವನಲ್ಲಿ ಸೇರಿಕೊಂಡವು. ಯಾರು ನಿಜವಾಗಿಯೂ ಅರ್ಜುನನಂತ/ ಗುಣಾರ್ಣವ ಅರಿಕೇಸರಿಯಂತೆ ಸೂಕ್ಷ್ಮ ಬುದ್ಧಿಯವರು? ಯಾರೂ ಇಲ್ಲ!)
- ವ|| ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪಲಂಕಾರದೊಳಂ ವ್ಯಾಸ ವಾಲ್ಮೀಕಿ ಕಶ್ಯಪಪ್ರಭೃತಿ ವಿರಚಿತಂಗಳಪ್ಪ ಮಹಾಕಾವ್ಯಂಗಳೊಳಂ ನಾಂದೀಪ್ರರೋಚನಾಪ್ರಸ್ತಾವನೇತಿವೃತ್ತ ಸಂ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೊಳಮಾಱಂಗ ದೊಳಮಯ್ದು ತೆಱದ ಮಂತ್ರಂಗಳೊಳಮಾಱುಂ ದರ್ಶನದೊಳಂ ಪ್ರತ್ಯಕ್ಷಾನುಮಾನ ಪ್ರಮಾಣಂಗಳೊಳಂ ಭರತಪ್ರಣೀತ ನೃತ್ಯಶಾಸ್ತ್ರದೊಳಂ ನಾರದಾದಿ ಪ್ರಣೀತ ಗಾಂಧರ್ವವಿದ್ಯಾವಿಶೇಷಂಗಳೊಳಂ ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಯಪ ಸುಪತಿ ಶ್ರೀಹರ್ಷಾದಿ ಪುರಾಣಪುರುಷವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾ ಪೂರ್ವಯಂತ್ರ ಪ್ರಯೋಗ ವಿಷಾಪಹರಣ ಸರಭೇದ ರತಿತಂತ್ರೇಂದ್ರಜಾಲ ವಿವಿಧ ವಿದ್ಯೆಗಳೊಳಮನೇಕಾಕ್ಷರ ಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳತಿಮತಿ ಪ್ರವೀಣನುಮಾರೂಢಸರ್ವಜ್ಞ ಮಹೇಂದ್ರ ಜಾಣ(?)ನುಮಾಗಿ-
- ವಚನ:ಪದವಿಭಾಗ-ಅರ್ಥ: ಅಂತು ಪಂಚಾಂಗ ವ್ಯಾಕರಣದ (ಹೀಗೆ ಐದು ಅಂಗಗಳ ವ್ಯಾಕರಣದ) ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪ ಅಲಂಕಾರದೊಳಂ (ಮತ್ತು ವೃತ್ತಿಭೇದದಿಂದ ಕೂಡಿದ - ವೃತ್ತಗಳಿಂದ ಕೂಡಿದ ಛಂದಸ್ಸಿನ ಶಾಸ್ತ್ರಗಳಲ್ಲಿಯೂ ಶಬ್ದಾಲಂಕಾರದಿಂದ ಕೂಡಿದ ಅಲಂಕಾರ ಶಾಸ್ತ್ರದಲ್ಲಿಯೂ) ವ್ಯಾಸ ವಾಲ್ಮೀಕಿ ಕಶ್ಯಪಪ್ರಭೃತಿ ವಿರಚಿತಂಗಳಪ್ಪ ಮಹಾಕಾವ್ಯಂಗಳೊಳಂ ನಾಂದೀಪ್ರರೋಚನಾಪ್ರಸ್ತಾವನೇತಿವೃತ್ತ ಸಂ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗಳೊಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೊಳಮಾಱಂಗ ದೊಳಮಯ್ದು ತೆಱದ ಮಂತ್ರಂಗಳೊಳಮಾಱುಂ ದರ್ಶನದೊಳಂ ಪ್ರತ್ಯಕ್ಷಾನುಮಾನ ಪ್ರಮಾಣಂಗಳೊಳಂ ಭರತಪ್ರಣೀತ ನೃತ್ಯಶಾಸ್ತ್ರದೊಳಂ ನಾರದಾದಿ ಪ್ರಣೀತ ಗಾಂಧರ್ವವಿದ್ಯಾವಿಶೇಷಂಗಳೊಳಂ ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಯಪ ಸುಪತಿ ಶ್ರೀಹರ್ಷಾದಿ ಪುರಾಣಪುರುಷ ವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾ ಪೂರ್ವಯಂತ್ರ ಪ್ರಯೋಗ ವಿಷಾಪಹರಣ ಸರಭೇದ ರತಿತಂತ್ರೇಂದ್ರಜಾಲ ವಿವಿಧ ವಿದ್ಯೆಗಳೊಳುಂ ಅನೇಕಾಕ್ಷರ ಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳು ಅತಿಮತಿ ಪ್ರವೀಣನುಂ ಆರೂಢಸರ್ವಜ್ಞ ಮಹೇಂದ್ರ ಜಾಣ(?)ನುಮಾಗಿ-
- ವಚನ:ಅರ್ಥ:ಹೀಗೆ ಐದು ಅಂಗಗಳ ವ್ಯಾಕರಣದ ಮತ್ತು ವೃತ್ತಿಭೇದದಿಂದ ಕೂಡಿದ - ವೃತ್ತಗಳಿಂದ ಕೂಡಿದ ಛಂದಶ್ಶಾಸ್ತ್ರಗಳಲ್ಲಿಯೂ ಶಬ್ದಾಲಂಕಾರದಿಂದ ಕೂಡಿದ ಅಲಂಕಾರಶಾಸ್ತ್ರದಲ್ಲಿಯೂ ವ್ಯಾಸ ವಾಲ್ಮೀಕಿ ಕಶ್ಯಪ ಮೊದಲಾದವರಿಂದ ರಚಿತವಾದ ಮಹಾಕಾವ್ಯಗಳಲ್ಲಿಯೂ ನಾಂದಿ, ಪ್ರರೋಚನ, ಪ್ರಸ್ಥಾವನ, ಇತಿವೃತ್ತ, ಸಂಪ್ರವೇಶ, ನಿಷ್ಕಂಭ, ಕಪೋತಿಕಾ, ವ್ಯಾಳಿಕಾ ಮೊದಲಾದ ಲಕ್ಷಣಗಳಿಂದ ಕೂಡಿದ ನಾಟಕಶಾಸ್ತ್ರದಲ್ಲಿಯೂ ಹದಿನೆಂಟು ಧರ್ಮಶಾಸ್ತ್ರಗಳಲ್ಲಿಯೂ ನಾಲ್ಕು ವೇದಗಳಲ್ಲಿಯೂ ಆರು ಅಂಗಗಳಲ್ಲಿಯೂ ಅಯ್ದು ರೀತಿಯ ಮಂತ್ರಗಳಲ್ಲಿಯೂ ಆರು ದರ್ಶನಗಳಲ್ಲಿಯೂ ಭರತಪ್ರಣೀತವಾದ ನಾಟ್ಯ ಶಾಸ್ತ್ರದಲ್ಲಿಯೂ ನಾರದನೇ ಮೊದಲಾದವರಿಂದ ರಚಿತವಾದ ಸಂಗೀತ ವಿದ್ಯಾವಿಶೇಷಗಳಲ್ಲಿಯೂ ಹಸ್ತಿಶಾಸ್ತ್ರಜ್ಞರಾಜ ರಾಜಪುತ್ರ ಗೌತಮ, ವಾದ್ವಾಕಿ, ಪಾಳಕಾಪ್ಯ, ಸುಗತಿ, ಶ್ರೀಹರ್ಷನೇ ಮೊದಲಾದ ಪ್ರಾಚೀನರಿಂದ ವಿರಚಿತವಾದ ಹಸ್ತಿಶಾಸ್ತ್ರದಲ್ಲಿಯೂ ಚಿತ್ರಕರ್ಮ, ಪತ್ರಚ್ಛೇದ, ಗ್ರಹಗಣಿತ, ರತ್ನಪರೀಕ್ಷೆಗಳಲ್ಲಿಯೂ ದಾರುಕರ್ಮ, ವಾಸ್ತು – ವಿದ್ಯೆಗಳಿಂದ ಕೂಡಿದ ಯಂತ್ರೋಪಯೋಗದಲ್ಲಿಯೂ ವಿಷಾಪಹರಣ, ಸ್ವರಭೇದ, ರತಿತಂತ್ರ, ಇಂದ್ರಜಾಲ ಮೊದಲಾದ ಬಗೆಬಗೆಯ ವಿದ್ಯೆಗಳಲ್ಲಿಯೂ ಅನೇಕಾಕ್ಷರ ಸ್ವರೂಪದಲ್ಲಿಯೂ ಚಾಪ, ಚಕ್ರ, ಪರಸು, ಕೃಪಾಣ, ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಗರ, ಗದೆಯೇ ಮೊದಲಾದ ವಿಧವಿಧವಾದ ಆಯುಧಗಳ ಪ್ರಯೋಗದಲ್ಲಿಯೂ ಅತಿಪ್ರವೀಣನೂ ಸರ್ವಜ್ಞತ್ವವುಳ್ಳವನೂ ಇಂದ್ರನಂತೆ ಜಾಣನೂ ಆದನು.
- ಕಂ|| ಉಳ್ಳೋದುಗಳೊಳಗನಿತಱಿ
- ವುಳ್ಳರ್ಗಂ ತಿಳಿಪಲರಿಯದೆನಿಪೆಡೆಗಳುಮಂ|
- ತೆಳ್ಳಗಿರೆ ತಿಳಿಪುಗುಂ ಬೆಸ
- ಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮಂ|| ೩೫
- ಪದ್ಯ-೩೫:ಪದವಿಭಾಗ-ಅರ್ಥ:ಕಂ|| ಉಳ್ಳ ಓದುಗಳೊಳಗೆ ಎನಿತು ಅಱಿವು ಉಳ್ಳರ್ಗಂ (ಎಷ್ಟು ಜ್ಞಾನವಿದ್ದವರಗೂ) ತಿಳಿಪಲು ಅರಿಯದು ಎನಿಪ ಎಡೆಗಳುಮಂ (ಸ್ಥಳಗಳನ್ನು) ತೆಳ್ಳಗಿರೆ ತಿಳಿಪುಗುಂ (ಅರಿಯುವಂತೆ ತಿಳಿಸಿಕೊಡುತ್ತಾನೆ -ಅರಿಕೇಸರಿ/ ಅರ್ಜುನ); ಬೆಸಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮಂ(ಅರ್ಜುನನ ಲೆಕ್ಕಪೊಕ್ಕಗಳನ್ನು ಕೇಳಯ್ಯಾ!)(ಓದುಗಳು - ವಿದ್ಯೆಗಳು)
- ಪದ್ಯ-೩೫:ಅರ್ಥ:ಇರುವ ವಿದ್ಯೆಗಳಲ್ಲೆಲ್ಲ ಪೂರ್ಣಪಾಂಡಿತ್ಯಪಡೆದವರಿಗೂ ತಿಳಿಸುವುದಕ್ಕೆ ಅಸಾಧ್ಯವಾದ ಸ್ಥಳಗಳಲ್ಲಿಯೂ ಅರ್ಜುನನು (ಅರಿಕೇಸರಿಯು) ಸರಳವಾಗಿ ಅರ್ಥವಾಗುವಂತೆ ತಿಳಿಸುತ್ತಾನೆ. ಅರ್ಜುನನ ಲೆಕ್ಕಪೊಕ್ಕಗಳನ್ನು ವಿಚಾರಮಾಡಿ ನೋಡಯ್ಯಾ
- ವ|| ಎಂದು ಲೋಕಮೆಲ್ಲಂ ಪೊಗೞೆ ನೆಗೞ್ದ ಪೊಗೞ್ತೆಗಂ ನೆಗೞ್ತೆಗಂ ತಾನೆ ಗುಱಿಯಾಗಿ-
- ವಚನ:ಪದವಿಭಾಗ-ಅರ್ಥ:ಎಂದು ಲೋಕಂ ಎಲ್ಲಂ ಪೊಗೞೆ (ಹೊಗಳೆ), ನೆಗೞ್ದ ಪೊಗೞ್ತೆಗಂ ನೆಗೞ್ತೆಗಂ ತಾನೆ ಗುಱಿಯಾಗಿ-
- ವಚನ:ಅರ್ಥ:ಎಂದು ಲೋಕವೆಲ್ಲ ಹೊಗಳುವ ಹಾಗೆ ಪ್ರಸಿದ್ಧಿಪಡೆದ ಹೊಗಳಿಕೆಗೂ ಪ್ರಸಿದ್ಧಿಗೂ ತಾನೆ ಗುರಿಯಾದನು.
- ಕಂ|| ಮಾನಸದೊಳ್ ಹಂಸೆಯವೋಲ್
- ಮಾನಸ ವಾಗ್ವನಿತೆ ತನ್ನ ಮಾನಸದೊಳಿವಂ|
- ಮಾನಸನೆಂದಗಲದೆ ನಿಲೆ
- ಮಾನಸನಾದಂ ಸರಸ್ವತೀ ಕಳಹಂಸಂ|| ೩೬
- ಪದ್ಯ-೩೬:ಪದವಿಭಾಗ-ಅರ್ಥ: ಮಾನಸದೊಳ್ (ಸರೋವರದಲ್ಲಿ) ಹಂಸೆಯವೋಲ್ (ಹಂಸದಂತೆ) ಮಾನಸ ವಾಗ್ವನಿತೆ (ಮನಸ್ಸಿನಲ್ಲಿ ಹುಟ್ಟಿದ ವಾಗ್ದೇವಿಯು) ತನ್ನ ಮಾನಸದೊಳು ಇವಂ (ತನ್ನ ಮನಸ್ಸಿನಲ್ಲಿ ಇವನು) ಮಾನಸನೆಂದು ಅಗಲದೆ (ಮನುಷ್ಯನೆಂದು ಬಿಟ್ಟು ಹೋಗದೆ) ನಿಲೆ (ಅಲ್ಲೇ ಗಟ್ಟಿಯಾಗಿ ನಿಲ್ಲಲು) ಮಾನಸನಾದಂ ಸರಸ್ವತೀ ಕಳಹಂಸಂ(ಸರಸ್ವತಿಯ ವಾಹನವಾದ ಹಂಸದ ಹಾಗೆ ಅರ್ಜುನನು ಮನುಷ್ಯನಾಗಿದ್ದಾನೆ.)
- ಪದ್ಯ-೩೬:ಅರ್ಥ:ಇವನ ಮನಸ್ಸಿನಲ್ಲಿ ಹುಟ್ಟಿದ ವಾಗ್ದೇವತೆಯು ಇವನು ಮನುಷ್ಯನೆಂದು ಬಿಟ್ಟು ಹೋಗದೆ ಮಾನಸ ಸರೋವರದಲ್ಲಿರುವ ಹಂಸಪಕ್ಷಿಯ ಹಾಗೆ ಅಲ್ಲೇ ಗಟ್ಟಿಯಾಗಿ ನಿಲ್ಲಲು ಸರಸ್ವತಿಯ ವಾಹನವಾದ ಹಂಸದ ಹಾಗಿರುವ ಅರ್ಜುನನು ಮನುಷ್ಯನಾಗಿದ್ದಾನೆ.
- ವ|| ಅಂತಯ್ಯರುಂ ಸಮಸ್ತ ಶಸ್ತ್ರ ಶಾಸ್ತ್ರ ಪ್ರಯೋಗ ಪ್ರವೀಣರಾಗೆ ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮೃತಿಗಳೊಳಂ ಪ್ರವೀಣನಾದಂ ಭೀಮಸೇನಂ ವ್ಯಾಕರಣದೊಳಾರಿಂದ ಮಗ್ಗಳಂ ಕುಶಲನಾದಂ ನಕುಲಂ ಕುಂತಶಸ್ತ್ರದೊಳತಿ ಪ್ರವೀಣನುಮಾಗಿ ಅಶ್ವವಿದ್ಯೆಯೊಳಾರಿಂದಂ ಪಿರಿಯನಾದಂ ಸಹದೇವಂ ಜ್ಯೋತಿರ್ಜ್ಞಾನದೊಳತಿ ಪರಿಣತನಾದಂ
- ವಚನ:ಪದವಿಭಾಗ-ಅರ್ಥ:ಅಂತು ಅಯ್ಯರುಂ ಸಮಸ್ತ ಶಸ್ತ್ರ ಶಾಸ್ತ್ರ ಪ್ರಯೋಗ ಪ್ರವೀಣರಾಗೆ ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮೃತಿಗಳೊಳಂ ಪ್ರವೀಣನಾದಂ, ಭೀಮಸೇನಂ ವ್ಯಾಕರಣದೊಳು ಆರಿಂದಂ ಅಗ್ಗಳಂ ಕುಶಲನಾದಂ, ನಕುಲಂ ಕುಂತಶಸ್ತ್ರದೊಳು ಅತಿ ಪ್ರವೀಣನುಮಾಗಿ ಅಶ್ವವಿದ್ಯೆಯೊಳು ಆರಿಂದಂ ಪಿರಿಯನಾದಂ ಸಹದೇವಂ ಜ್ಯೋತಿರ್ಜ್ಞಾನದೊಳು ಅತಿ ಪರಿಣತನಾದಂ
- ವಚನ:ಅರ್ಥ:ವ|| ಹಾಗೆ ಅಯ್ದು ಜನರೂ ಸಮಸ್ತಶಸ್ತ್ರಶಾಸ್ತ್ರಪ್ರಯೋಗಗಳಲ್ಲಿಯೂ ನಿಪುಣರಾದರು. ಧರ್ಮರಾಜನು ಧರ್ಮಶಾಸ್ತ್ರಗಳಲ್ಲಿಯೂ ಶ್ರುತಿಸ್ಮೃತಿಗಳಲ್ಲಿಯೂ ಪ್ರವೀಣನಾದನು. ಭೀಮಸೇನನು ವ್ಯಾಕರಣದಲ್ಲಿ ಎಲ್ಲರಿಗಿಂತಲೂ ಮೇಲಾದ ಬುದ್ಧಿವಂತನಾದನು. ನಕುಲನು ಕುಂತಶ್ಶಾಸ್ತ್ರದಲ್ಲಿ (ಒಂದು ಬಗೆಯ ಆಯುಧ, ಈಟಿ, ಭರ್ಜಿ) ಪ್ರವೀಣನಾಗಿ ಅಶ್ವವಿದ್ಯೆಯಲ್ಲಿ ಎಲ್ಲರಿಗಿಂತಲೂ ಹಿರಿಯನಾದನು. ಸಹದೇವನು ಜ್ಯೋತಿರ್ಜ್ಞಾನದಲ್ಲಿ / ಭವಿಷ್ಯಜ್ನಾನದಲ್ಲಿ ಅತಿ ಪರಿಣತನಾದನು.
- ಚಂ|| ಬಳೆದುವು ತೋಳ್ಗಳೆಕ್ಕೆಯಿನಮಳ್ ಬಳೆವಂತಿರೆ ಮುಯ್ವುಗಳ್ ಕುಳಾ
- ಚಳ ಶಿಖರಂಗಳಂ ಮಸುಳೆವಂದುವು ಪರ್ವಿದ ವಕ್ಷವೀ ಕ್ಷಮಾ|
- ತಳ ಕುಳಲಕ್ಷ್ಮಿಗಾಯ್ತು ಕುಳಮಂದಿರಮೆಂದು ಮಹೀತಳಂ ಮನಂ
- ಗೊಳೆ ನೆರೆದತ್ತುದಾತ್ತ ನವಯೌವನಮೊರ್ಮೆಯೆ ಧರ್ಮಪುತ್ರನಾ|| ೩೭||
- ಪದ್ಯ-೩೭:ಪದವಿಭಾಗ-ಅರ್ಥ:ಬಳೆದುವು ತೋಳ್ಗಳ್ ಎಕ್ಕೆಯಿಂ(ಒಟ್ಟಿಗೆ) ಅಮಳ್ (ಅವಳಿ) ಬಳೆವಂತಿರೆ (ಧರ್ಮಜನ ತೋಳುಗಳು ಅವಳಿಮಕ್ಕಳಂತೆ ಬೆಳದವು/ ಯೌವನ ಪ್ರಾಪ್ತವಾಯಿತು.) ಮುಯ್ವುಗಳ್ (ಹೆಗಲುಗಳು) ಕುಳಾಚಳ ಶಿಖರಂಗಳಂ ಮಸುಳೆವಂದುವು (ಕುಲಾಚಲ ಪರ್ವತವನ್ನು ಕುಂದುವಂತೆ ಮಾಡಿದವು) ಪರ್ವಿದವಕ್ಷವು (ಹರವಾದ/ಅಗಲ/ವಿಶಾಲ ಎದೆ) ಈ ಕ್ಷಮಾತಳ ಕುಳಲಕ್ಷ್ಮಿಗೆ ಆಯ್ತು ಕುಳಮಂದಿರಮ್ (ಅದು ಈ ಭೂ ಲಕ್ಷ್ಮಿಗೆ ಪರಂರೆಯ ಮನೆಯ ಆಸ್ತಿಯಾಯಿತು ) ಎಂದು ಮಹೀತಳಂ ಮನಂಗೊಳೆ (ಈ ಭೂಮಂಡಲವು ಭಾವಿಸಲು) ನೆರೆದತ್ತು ಉದಾತ್ತ ನವಯೌವನಂ ಒರ್ಮೆಯೆ ಧರ್ಮಪುತ್ರನಾ(ಹೀಗೆ ಜನರು ಭಾವಿಸಲು ಧರ್ಮಜನ ಯೌವನ ಪ್ರಾಪ್ತವಾಯಿತು.)
- ಪದ್ಯ-೩೭:ಅರ್ಥ:. ಧರ್ಮ ರಾಜನ ಎರಡು ತೋಳುಗಳೂ ಅವಳಿಗಳೂ ಬೆಳೆದಂತೆ ಜೊತೆಯಲ್ಲಿಯೇ ಬೆಳೆದುವು. ಹೆಗಲುಗಳು ಕುಲಪರ್ವತಗಳ ಶಿಖರಗಳನ್ನು ಕುಂದುವಂತೆ ಮಾಡಿದುವು; (ಕಾಂತಿಹೀನವನ್ನಾಗಿ ಮಾಡಿದುವು). ವಿಸ್ತಾರವಾದ ಅವನ ಎದೆಯು ಅಸಮಾನಳಾದ ಈ ಭೂದೇವಿಗೆ ವಂಶಪಾರಂಪರ್ಯವಾಗಿ ಬಂದ ರಾಜ್ಯಕ್ಕೆ ನಿವಾಸವಾಯಿತು ಎಂದು ಲೋಕದ ಜನ ಭಾವಿಸುವ ಹಾಗೆ/ ಸಂತೋಷಿಸುವ ಹಾಗೆ ಧರ್ಮರಾಜನ ಉದಾತ್ತವಾದ ಹೊಸಯೌವನವು ಒಟ್ಟಿಗೆ ಯೌವನವು ಪ್ರಾಪ್ತವಾಯಿತು.
- ವ|| ಅಂತು ಸೊಗಯಿಸುವ ರೂಪಿನೊಳ್ ಪೊನ್ನ ಬಣ್ಣದಂತಪ್ಪ ತನ್ನ ಮೆಯ್ಯ ಬಣ್ಣ ಮಳವಲ್ಲದೊಪ್ಪೆ-
- ವಚನ:ಪದವಿಭಾಗ-ಅರ್ಥ:ಅಂತು ಸೊಗಯಿಸುವ ರೂಪಿನೊಳ್ ಪೊನ್ನ ಬಣ್ಣದಂತೆ ಅಪ್ಪ ತನ್ನ ಮೆಯ್ಯ ಬಣ್ಣ ಅಳವಲ್ಲದೆ (ಅಳತೆಯಿಲ್ಲದೆ?)ಒಪ್ಪೆ
- ವಚನ:ಅರ್ಥ:ಹಾಗೆ ಸೊಗಯಿಸುವ ರೂಪದಲ್ಲಿ, ಚಿನ್ನದ ಬಣ್ಣದ ಹಾಗಿರುವ ತನ್ನ ಶರೀರದ ಬಣ್ಣವು ಅತಿಶಯವಾಗಿ ಪ್ರಕಾಶಿಸಿತು.
- ಚಂ|| ಕುಳಗಿರಿಯಂ ಸರೋಜನಿಲಯಂ ಮನುಜಾಕೃತಿಯಾಗೆ ಮಾಡಿದಂ
- ತೊಳವೆನಿಪಂತುಟಪ್ಪ ಪೊಸ ಬಣ್ಣದೊಳೊಂದಿದ ಪಾರಿಜಾತಮ|
- ಗ್ಗಳಮೆಸೆದೊಪ್ಪುವಂತೆ ತಳಿರಿಂ ಮುಗುಳಿಂ ನವಯೌವನಂ ಮನಂ
- ಗೊಳೆ ಕರಮೊಪ್ಪಿದಂ ದಶ ಸಹಸ್ರ ಮದೇಭ ಬಳಂ ವೃಕೋದರಂ|| ೩೮
- ಪದ್ಯ-೩೮:ಪದವಿಭಾಗ-ಅರ್ಥ:ಕುಳಗಿರಿಯಂ ಸರೋಜನಿಲಯಂ ಮನುಜಾಕೃತಿಯಾಗೆ ಮಾಡಿದಂತೆ ಒಳನ್ ಎನಿಪ ಅಂತುಟಪ್ಪ-ಹಾಗೆ (ಕಮಲ-ಸರೋಜ ನಿಲಯನಾದ ಬ್ರಹ್ಮನು ಕುಪರ್ವತವನ್ನು ಮನಷ್ಯನ ಆಕೃತಿಯ ಹಾಗೆ ಮಾಡಿದ್ದಾನೆ) ಪೊಸ ಬಣ್ಣದೊಳು ಒಂದಿದ ಪಾರಿಜಾತಂ ಅಗ್ಗಳಂ (ವಿಶೇಷವಾಗಿ) ಎಸೆದು ಒಪ್ಪುವಂತೆ ತಳಿರಿಂ ಮುಗುಳಿಂ (ಹೊಸ ಬಣ್ಣದ ಪಾರಿಜಾತವು ಚಿಗುರಿನಿಂದ ಮತ್ತು ಮೊಗ್ಗುಗಳಿಂದ ಕೂಡಿ ಪ್ರಕಾಶಮಾನವಾಗಿ ಒಪ್ಪುವಂತೆ) ನವಯೌವನಂ ಮನಂಗೊಳೆ (ಆಕರ್ಶಕ) ಕರಂ (ಬಹಳ)ಒಪ್ಪಿದಂ ದಶ ಸಹಸ್ರ ಮದೇಭ (ಆನೆ) ಬಳಂ (ಬಲ) ವೃಕೋದರಂ(ಅವನ ಹೊಸಪ್ರಾಯವು ಆಕರ್ಷಕವಾಗಿದ್ದು ಹತ್ತುಸಾವಿರ ಮದ್ದಾನೆಗಳ ಬಲವುಳ್ಳವನಾಗಿ ವಿಶೇಷವಾಗಿ ಶೋಭಿಸಿದನು)
- ಪದ್ಯ-೬೮:ಅರ್ಥ:ಭೀಮಸೇನನ ಯೌವನ: ಬ್ರಹ್ಮನು ಕುಲಪರ್ವತವನ್ನು ಮನುಷ್ಯನ ರೂಪದಲ್ಲಿ ಮಾಡಿದ್ದಾನೆ ಎನಿಸಿಕೊಂಡು ಭೀಮನು ಅದೇ ಹೊಸ ಬಣ್ಣದ ಪಾರಿಜಾತವು ಚಿಗುರಿನಿಂದಲೂ ಮೊಗ್ಗುಗಳಿಂದಲೂ ಕೂಡಿ ಪ್ರಕಾಶಮಾನವಾಗಿ ಒಪ್ಪುವಂತೆ ಅವನ ಹೊಸಪ್ರಾಯವು ಆಕರ್ಷಕವಾಗಿದ್ದು ಹತ್ತುಸಾವಿರ ಮದ್ದಾನೆಗಳ ಬಲವುಳ್ಳವನಾಗಿ ವಿಶೇಷವಾಗಿ ಶೋಭಿಸಿದನು)
- ವ|| ಅಂತೊಪ್ಪುವ ಗಂಡಗಾಡಿಯೊಳಿಂದ್ರನೀಲದಂತಪ್ಪ ಬಣ್ಣಂ ಕಣ್ಗೆವರೆ-
- ವಚನ:ಪದವಿಭಾಗ-ಅರ್ಥ:ಅಂತು ಒಪ್ಪುವ ಗಂಡಗಾಡಿಯೊಳ್ (ವೀರ ಸೌಂದರ್ಯದಲ್ಲಿ) ಇಂದ್ರನೀಲದಂತಪ್ಪ(ಇಂದ್ರನೀಲಮಣಿಯಂತೆ) ಬಣ್ಣಂ ಕಣ್ಗೆವರೆ(ಕಣ್ಣಿಗೆ ಸೊಗಸಾಗಿರಲು)-
- ವಚನ:ಅರ್ಥ:ಹಾಗೆ ಒಪ್ಪುವ ವೀರಸೌಂದರ್ಯದಲ್ಲಿ ಇಂದ್ರನೀಲಮಣಿಯ ಹಾಗಿರುವ ಬಣ್ಣವು ಸೊಗಸಾಗಿರಲು.
- ಚಂ|| ಶರದದ ಚಂದ್ರನಂ ವಿಮಲ ಚಂದ್ರಿಕೆ ಬಾಳದಿನೇಶನಂ ತಮೋ
- ಹರಕಿರಣಂ ಕಿಶೋರ ಹರಿಯಂ ನವಕೇಸರ ರಾಜಿ ಮಿಕ್ಕ ದಿ|
- ಕ್ಕರಿಯನನೂನ ದಾನ ಪರಿಶೋಭೆ ಮನಂಗೊಳೆ ಪೊರ್ದುವಂತೆ ಸುಂ
- ದರ ನವಯೌವನಂ ನೆರೆಯೆ ಪೊರ್ದೆ ಗುಣಾರ್ಣವನೊಪ್ಪಿ ತೋಱಿದಂ|| ೩೯||
- ಪದ್ಯ-೩೯:ಪದವಿಭಾಗ-ಅರ್ಥ:ಶರದದ ಚಂದ್ರನಂ (ಶರತ್ಕಾಲದ ಚಂದ್ರನನ್ನು) ವಿಮಲ ಚಂದ್ರಿಕೆ (ನಿರ್ಮಲ ಬೆಳದಿಂಗಳ) ಬಾಳದಿನೇಶನಂ (ಬಾಲ ಸೂರ್ಯನನ್ನು) ತಮೋಹರಕಿರಣಂ (ಕತ್ತಲೆಯನ್ನು ಹೋಗಲಾಡಿಸುವ ಕಿರಣನು) ಕಿಶೋರ ಹರಿಯಂ (ಸಿಂಹದಮರಿಯು) ನವಕೇಸರ ರಾಜಿ (ಹೊಸದಾಗಿ ಹುಟ್ಟಿದ ಅದರ ಕತ್ತಿನ ಕೂದಲರಾಶಿಯೂ) ಮಿಕ್ಕ ದಿಕ್ಕರಿಯಂ ಅನೂನ ದಾನ ಪರಿಶೋಭೆ ಮನಂಗೊಳೆ (ಮೀರಿದ ದಿಗ್ಗಜಗಳನ್ನೂ ಕಡಿಮೆಯಿಲ್ಲದ ಮದೋದಕದ ಕಾಂತಿಯೂ) ಪೊರ್ದುವಂತೆ ಸುಂದರ ನವಯೌವನಂ ನೆರೆಯೆ ಪೊರ್ದೆ ಗುಣಾರ್ಣವನೊಪ್ಪಿ ತೋಱಿದಂ(ಆಕರ್ಷಿಸುವ ರೀತಿಯಲ್ಲಿ ಸೇರಿಕೊಳ್ಳುವಂತೆ ಸುಂದರವಾದ ಹೊಸಯೌವನವು ಪೂರ್ಣವಾಗಿ ಸೇರಲು ಗುಣಾರ್ಣವನು/ಅರ್ಜುನನು ಸೊಗಸಾಗಿ ಕಂಡನು)
- ಪದ್ಯ-೩೯:ಅರ್ಥ:ಅರ್ಜುನನ ಯೌವನೋದಯದ ವರ್ಣನೆ:ನಿರ್ಮಲವಾದ ಬೆಳದಿಂಗಳ ಶರತ್ಕಾಲದ ಚಂದ್ರನನ್ನೂ, ಬಾಲಸೂರ್ಯನನ್ನೂ, ಕತ್ತಲೆಯನ್ನು ಹೋಗಲಾಡಿಸುವ ಕಿರಣಗಳನ್ನೂ, ಸಿಂಹದಮರಿಯನ್ನು, ಹೊಸದಾಗಿ ಹುಟ್ಟಿದ ಅದರ ಕತ್ತಿನ ಕೂದಲರಾಶಿಯೂ, ಮೀರಿದ/ಬಲಶಾಲಿ ದಿಗ್ಗಜಗಳನ್ನೂ, ಕಡಿಮೆಯಿಲ್ಲದ ಮದೋದಕದ ಕಾಂತಿಯೂ, ಆಕರ್ಷಿಸುವ ರೀತಿಯಲ್ಲಿ ಸೇರಿಕೊಳ್ಳುವಂತೆ ಸುಂದರವಾದ ಹೊಸಯೌವನವು ಪೂರ್ಣವಾಗಿ ಸೇರಲು ಗುಣಾರ್ಣವನು/ಅರ್ಜುನನು ಸೊಗಸಾಗಿ ಕಂಡನು.
- ವ|| ಅಂತು ನವಯೌವನಂ ನೆರೆಯೆ ನಿಱಿನಿಱಿಗೊಂಡ ಗುಣಾರ್ಣವನ ತಲೆ ನವಿರ್ಗಳ್ ಲಾವಣ್ಯರಸಮನಿಡಿದಿಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನವಾದುವು ಮೂಱುಂ ಲೋಕದ ಮೂಱು ಪಟ್ಟಮನಾಳಲ್ಕೆ ತಕ್ಕ ಲಕ್ಷಣ ಸಂಪೂರ್ಣಮಪ್ಪ ಸಹಜಮನೋಜನ ಲಲಾಟಂ ಪಟ್ಟಂಗಟ್ಟಿದ ನೊಸಲ್ಗೆ ಲಕ್ಷಣಮನಱಸಲ್ವೇಡೆಂಬಂತಾದುದು ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ ಪರವನಿತೆಯರೆರ್ದೆಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ್ ಕಾಮದೇವನ ವಿಜಯ ವೈಜಯಂತಿಗಳಂತಾದುವು ನೀಳ್ಪಂ ಬೆಳ್ಪುಮಂ ತಾಳ್ದಿ ಪರವನಿತೆಯರ ದೆಸೆಗೆ ಕಿಸುಗಣ್ಣಿದಂತೆ ಕಿಸು ಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಗಳೆಂಬಲರಂಬುಗಳ್ ಗಣಿಕಾಜನಂಗಳೆರ್ದೆಯಂ ನಟ್ಟು ಕೆಂಕಮಾದಂತಾದುವು ರಿಪುಜನದ ಪೆರ್ಚಿಂಗಂ ಪರಾಂಗನಾಜನದ ಮೆಚ್ಚಿಂಗಂ ಮೂಗಿಱಿವಂತೆ
- ವಚನ:ಪದವಿಭಾಗ-ಅರ್ಥ:ಅಂತು ನವಯೌವನಂ ನೆರೆಯೆ (ತುಂಬಲು) ನಿಱಿನಿಱಿಗೊಂಡ ಗುಣಾರ್ಣವನ ತಲೆ ನವಿರ್ಗಳ್(ಹಾಗೆ ನವಯೌವನವು ಸಂಪೂರ್ಣವಾಗಲು ಗುಂಗುರುಗುಂಗುರಾದ ಗುಣಾರ್ಣವನ ತಲೆಯ ಕೂದಲು), ಲಾವಣ್ಯರಸಮನು ಇಡಿದಿಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನವು ಆದುವು (ಸೌಂದರ್ಯರಸವನ್ನು ಮಿದಿದುಮಿದಿದು ತುಂಬಿದ ಬ್ರಹ್ಮನ ಬೆರಳಚ್ಚುಗಳಂತಾದುವು) ಮೂಱುಂ ಲೋಕದ ಮೂಱು ಪಟ್ಟಮನು ಆಳಲ್ಕೆ (ಸ್ವರ್ಗ, ಮರ್ತ್ಯ ಪಾತಾಳ, ಈ ಮೂರುಲೋಕಗಳ ರಾಜ್ಯಭಾರವನ್ನು ಮಾಡುವುದಕ್ಕೂ) ತಕ್ಕ ಲಕ್ಷಣ ಸಂಪೂರ್ಣಮಪ್ಪ ಸಹಜಮನೋಜನ ಲಲಾಟಂ (ಯೋಗ್ಯ ಲಕ್ಷಣಗಳಿಂದ ಕೂಡಿದ ಸಹಜಮನೋಜನಾದ, ಸುಂದರನಾದ ಅರ್ಜುನನ ಹಣೆಯು) ಪಟ್ಟಂಗಟ್ಟಿದ ನೊಸಲ್ಗೆ ಲಕ್ಷಣಮನು ಅಱಸಲ್ವೇಡ ಎಂಬಂತಾದುದು (ಯಾವ ಲಕ್ಷಣವಿರಬೇಕೆಂದು ಹುಡುಕಬೇಡ ಎನ್ನುವಂತಾಯಿತು;) ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ ಪರವನಿತೆಯರ ಎರ್ದೆಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ್ ಕಾಮದೇವನ ವಿಜಯ ವೈಜಯಂತಿಗಳಂತಾದುವು (ಮನ್ಮಥನ ಕಬ್ಬಿನ ಬಿಲ್ಲಿನ ವಕ್ರತೆಯಂತೆ ಬಗ್ಗಿದ್ದರೂ ಅನ್ಯಸ್ತ್ರೀಯರ ಪ್ರೀತಿಗೆ ಬಗ್ಗದೆ ಸೊಗಯಿಸುವ ಹುಬ್ಬುಗಳು ವಿಜಯದ ಪತಾಕೆಗಳಂತೆ ಆದುವು;) ನೀಳ್ಪಂ ಬೆಳ್ಪುಮಂ ತಾಳ್ದಿ ಪರವನಿತೆಯರ ದೆಸೆಗೆ ಕಿಸುಗಣ್ಣಿದಂತೆ ಕಿಸು ಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಗಳೆಂಬ ಅಲರಂಬುಗಳ್(ಅಲರ್ ಪುಷ್ಪ, ಅಂಬು-ಬಾಣ) ; ದೀರ್ಘತ್ವವನ್ನೂ ಬಿಳಿಯ ಬಣ್ಣವನ್ನೂ ಹೊಂದಿ ಅನ್ಯಸ್ತ್ರೀಯರ ವಿಷಯದಲ್ಲಿ ಕೋಪಿಸಿಕೊಂಡಂತೆ ಕೆಂಪಾದ ರಕ್ತನಾಳಗಳಿಂದ ಕೂಡಿ ಸೊಗಯಿಸುವ ಶೌಚಾಂಜನೇಯನ ಕಣ್ಣುಗಳೆಂಬ ಪುಷ್ಪಬಾಣಗಳು ;) ಗಣಿಕಾಜನಂಗಳ ಎರ್ದೆಯಂ (ಎದೆಯಲ್ಲಿ) ನಟ್ಟು ಕೆಂಕಮಾದಂತಾದುವು (ಕೆಂಪಾದಂತೆ) ರಿಪುಜನದ ಪೆರ್ಚಿಂಗಂ ಪರಾಂಗನಾ ಜನದ ಮೆಚ್ಚಿಂಗಂ ಮೂಗಿಱಿವಂತೆ (ಮೂಗುಮುರಿಯುವಂತೆ ,) (ವೇಶ್ಯಾಸ್ತ್ರೀಯರ ಎದೆಯಲ್ಲಿ ನಾಟಿ ಕೆಂಪಾದಂತಾದುವು; ಶತ್ರುಜನಗಳ ಅಭಿವೃದ್ಧಿಗೂ ಪರಾಂಗನೆಯರ ಮೆಚ್ಚಿಕೆಗೂ ಜುಗುಪ್ಸೆ ಪಡುವ ಹಾಗೆ ಸೊಗಯಿಸುವ ಗಂದೇಭವಿದ್ಯಾಧರನ ಮೂಗು ತನ್ನ ಉಸಿರಿನ ವಾಸನೆಯಲ್ಲದೆ ಇತರರ ವಾಸನೆಗೆ ಆಸೆಪಡದಂತಾಯಿತು )
- ವಚನ:ಅರ್ಥ:ಹಾಗೆ ನವಯೌವನವು ಸಂಪೂರ್ಣವಾಗಲು ಗುಂಗುರುಗುಂಗುರಾದ ಗುಣಾರ್ಣವನ/ಅರ್ಜುನನ ತಲೆಯ ಕೂದಲು ಸೌಂದರ್ಯರಸವನ್ನು ಮಿದಿದುಮಿದಿದು ತುಂಬಿದ ಬ್ರಹ್ಮನ ಬೆರಳಚ್ಚುಗಳಂತಾದುವು. ಸ್ವರ್ಗ, ಮರ್ತ್ಯ ಪಾತಾಳ, ಈ ಮೂರುಲೋಕಗಳ ರಾಜ್ಯಭಾರವನ್ನು ಮಾಡುವುದಕ್ಕೂ, ಯೋಗ್ಯ ಲಕ್ಷಣಗಳಿಂದ ಕೂಡಿದ ಸಹಜಮನೋಜನಾದ, ಸುಂದರನಾದ ಅರ್ಜುನನ ಹಣೆಯು, ಯಾವ ಲಕ್ಷಣವಿರಬೇಕೆಂದು ಹುಡುಕಬೇಡ ಎನ್ನುವಂತಾಯಿತು; ಮನ್ಮಥನ ಕಬ್ಬಿನ ಬಿಲ್ಲಿನ ವಕ್ರತೆಯಂತೆ ಬಗ್ಗಿದ್ದರೂ ಅನ್ಯಸ್ತ್ರೀಯರ ಪ್ರೀತಿಗೆ ಬಗ್ಗದೆ ಸೊಗಯಿಸುವ ಹುಬ್ಬುಗಳು ವಿಜಯದ ಪತಾಕೆಗಳಂತೆ ಆದುವು; ದೀರ್ಘತ್ವವನ್ನೂ ಬಿಳಿಯ ಬಣ್ಣವನ್ನೂ ಹೊಂದಿ ಅನ್ಯಸ್ತ್ರೀಯರ ವಿಷಯದಲ್ಲಿ ಕೋಪಿಸಿಕೊಂಡಂತೆ ಕೆಂಪಾದ ರಕ್ತನಾಳಗಳಿಂದ ಕೂಡಿ ಸೊಗಯಿಸುವ ಶೌಚಾಂಜನೇಯನ ಕಣ್ಣುಗಳೆಂಬ ಪುಷ್ಪಬಾಣಗಳು ವೇಶ್ಯಾಸ್ತ್ರೀಯರ ಎದೆಯಲ್ಲಿ ನಾಟಿ ಕೆಂಪಾದಂತಾದುವು; ಶತ್ರುಜನಗಳ ಅಭಿವೃದ್ಧಿಗೂ ಪರಾಂಗನೆಯರ ಮೆಚ್ಚಿಕೆಗೂ ಜುಗುಪ್ಸೆ ಪಡುವ ಹಾಗೆ ಸೊಗಯಿಸುವ ಗಂದೇಭವಿದ್ಯಾಧರನ ಮೂಗು ತನ್ನ ಉಸಿರಿನ ವಾಸನೆಯಲ್ಲದೆ ಇತರರ ವಾಸನೆಗೆ ಆಸೆಪಡದಂತಾಯಿತು )
- ವ||ಪೊಸ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಕೊಂಡು ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತ ತುಂಗನ ವಿಸೆಗಳಾತನ (ಮೀಸೆಗಳು ಆತನ)ತೀವ್ರ ಪ್ರತಾಪಾನಳ(ಪ್ರತಾಪ ಅನಲ-ಬೆಂಕಿ) ಧೂಮಲೇಖೆ ಯಂತಾದುವು; ಪುಳಿಯೊಳಲೆದ (ಹುಳಿಯಿಂದ ತೊಳೆದ) ಪವಳದ ಬಟ್ಟಿನಂತೆ ಸೊಗಯಿಸುವ ಸಂಸಾರಸಾರೋದಯನ ಬಿಂಬಾಧರಮನಂಗರಾಗರಸದುರುಳಿಯಂತಾದುದು(ಬಿಂಬಾಧರಂ-ತುಟಿ, ಅನಂಗರಾಗರಸದ(ಮನ್ಮಥನ ಬಯಕೆಯ ರಸದ , ಉರಳಿ-ಉಂಡೆ- ಉರುಳಿಯಂತಾದುದು);೧; ರಸದಾಡಿಮದ (ದಾಳಿಂಬೆ) ಬಿತ್ತುಮಂ (ಬೀಜ)ಪೊಸ ಮುತ್ತುಮಂ ಮುಕ್ಕುಳಿಸಿದಂತಪ್ಪ (ತಿರಸ್ಕರಿಸಿದಂತೆ) ವಿಬುಧವನಜವನ ಕಳಹಂಸನ ದಂತಪಙ್ತಿಗಳ ಮೃತಕಿರಣನ ಕಾಂತಿಗಳನಿಳಿಸುವಂತಾದುವು(ಕಾಂತಿಗಳನು ಇಳಿಸುವಂತಾದುವು- ಕಡಿಮೆ ಎನ್ನವಂತೆ);೨; ಮಡಿದು (ಮಡಿಸಿ) ತಂದಿಟ್ಟ ಪೊಸನೆಯ್ದಿಲ ಕಾವನಾವಗಂ (ಕಾವನು ಆವಗಂ-ಕಮಲದ ದಂಟನ್ನು) ಗೆಲ್ದ ರತ್ನಕುಂಡಲಂಗಳ ಪೊಳಪನೊಳಕೊಂಡಂತೆ ನಸುನೇಲ್ವ (ಸ್ವಲ್ಪ ಜೋಲಾಡುವ)ಕರ್ಣಾಟೀ ಕರ್ಣಪೂರನ ಪಾಲೆಗಳುಂ (ಕಿವಿಯ ಓಲೆಗಳು) ಸರಸ್ವತಿಯಾಡುವ ಲೀಲಾಂದೋಳದಂತಾದುವು (ಸರಸ್ವತಿಯ ಉಯ್ಯಾಲೆ);೩; ಬಳ್ವಳ ಬೆಳೆದೆಳಗೌಂಗಿನಂತೆ ಲೋಕದ ಚೆಲ್ವೆಲ್ಲಮನೊಳಕೊಂಡು ರೇಖೆಗೊಂಡ ಲಾಟೀ ಲಲಾಮನ ಪರಿಣದ್ಧ ಕಂಧರಂ ಯುವರಾಜ ಕಂಠಿಕಾಭರಣಮಂ ಕಟ್ಟುವುದರ್ಕೆ ನೋಂತು ತನ್ನ ಚೆಲ್ವನಲ್ಲದೆ ಪೆಱರ ಚೆಲ್ವನಾಸೆವಡದಂತಾದುದು;೪; ಕುಲದ ಚಲದ ಮೈಮೆಯೊಳ್ ತನ್ನನೆ ನೋಡಿದ ಸಂತೋಷದೊಳುತ್ಸಾಹ ಮಾದಂತೆ ಸೊಗಯಿಸುವ ಸಮರೈಕಮೇರುವಿನ ಭುಜಶಿಖರಂಗಳ್ ಕುಲಶಿಖಿರಿ ಶಿಖರಂಗಳಂತಾದುವು;೫; ವ್ಯಾಳ ಗಜಂಗಳು ಮನಂಕದ ಬರ್ದೆಯರುಮನುಗಿಬಗಿಮಾಡಿದ ಸಂತೋಷದೊಳ್ ಬಳ್ವಳ ಬಳೆದ ವಿಕ್ರಾಂತತುಂಗನ ನಿಡುದೋಳ್ಗಳ್ ಗಣಿಕಾಜನಕ್ಕೆ ಕಾಮಪಾಶಂಗಳು ಮರಾತಿಜನಕ್ಕೆ ಯಮಪಾಶಂಗಳುಮಾದುವು;೬; ರಕ್ತಾಶೋಕಪಲ್ಲವದಂತೆ ತೊಳತೊಳಗುವಾಂ ಕುಚಕಲಶ ಪಲ್ಲವನ ಕರತಳಪಲ್ಲವಂಗಳ್ ಸಮದ ಗಜಕುಂಭಸ್ಥಳಾಸಾಳನ ಕರ್ಕಶಂಗಳಾದುವು;೭; ಪೊಡರ್ವ ಪಗೆವರನುಱದೆ(ಶತ್ರುಗಳನ್ನು ಉರದೆ-ಬೇಗ ಕೊಂಡ-ಸೆರೆಹಿಡಿದ) ಕೊಂಡ ಸಂತೋಷದೊಳಂ ಶ್ರೀಯನೊಳಕೊಂಡ ಸಂತೋಷದೊಳಂ ತೆಕ್ಕನೆ ತೀವಿದ ಕೇರಳೀ ಕೇಳಿ ಕಂದರ್ಪನಗಲುರಂ ಲಕ್ಷ್ಮಿಗೆ ಕುಲಭವನಮುಂ ನಿವಾಸಭವನಮುಮಾದುದು;೮; ಪೊಡರ್ವ ಮಂಡಳಿಕರ ಮನದಂತೆ ಕರಮಸಿದಾದ ಪರಾಕ್ರಮಧವಳನ ಮಧ್ಯಪ್ರದೇಶಂ ನಾರಾಯಣಂ ತನ್ನಾಳ್ದಂ ಮಾಡಿ ತಾನಾಳ್ಮಾಡಿಯುಂ ತಾನಳ್ಳಾಡೆಯುಂ ಬರ್ದೆಯರ ಮನವನಳ್ಳಾಡಿಸುವಂತಾದುದು;೯; ಗಂಭೀರಗುಣದೊಳಮಾವರ್ತನ ಸಿದ್ಧಿಯೊಳಂ ಜಳನಿಯನೆ ಪೋಲ್ವ ಶರಣಾಗತ ಜಳನಿಯ ನಿಮ್ನನಾಭಿ ಚೆಲ್ವಿಂಗೆ ತಾನೆ ನಾಭಿಯಾದುದು;೧೦; ಸಿಂಹಕಟಿತಟಮನಿಳಿಸುವ (ಸಿಂಹಕಟಿತಟಮನಿಳಿಸುವ) ರಿಪುಕುರಂಗ ಕಂಠೀರವನ ಕಟಿತಟಮೊಲು ನೋಡುವ ಗಾಡಿಕಾರ್ತಿಯರ ಕಣ್ಗೆ ಕಾಮನಡ್ಡಣದಂತೆದೊಡ್ಡಿತ್ತಾಗಿ ಮೀಱುವುದ್ವೃತ್ತ ವೃತ್ತತೆಯ ನೀೞ್ದುಕೊಂಡಂತುದ್ವೃತ್ತಂಗಳಾದುವು;೧೧; ಉದಾತ್ತನಾರಾಯಣನೂರುಯುಗ್ಮಂಗಳ್ (ಉದಾತ್ತನಾರಾಯಣನ ಊರು-ಎರಡು ತೊಡೆ ಯುಗ್ಮಂಗಳ್) ಮಾನಿನಿಯರ ಮನೋಗಜಂಗಳಂ ಕಟ್ಟಲ್ಕಾಲಾನ ಸ್ತಂಭಂಗಳಾದುವು.;೧೨;
- ವಚನ:ಅರ್ಥ:ಹೊಸಯೌವನದ ಮೊದಲ ಬಣ್ಣದಂತೆ ಕಪ್ಪಾಗಿ ಕಸ್ತೂರಿಯಿಂದ ಬರೆದಂತಿರುವ ವಿಕ್ರಾಂತತುಂಗನ ಮೀಸೆಗಳು ಅವನ ಭಯಂಕರವಾದ ಪ್ರಾತಾಪಾಗ್ನಿಯ ಹೊಗೆಯ ರೇಖೆಯಂತಾದುವು; ಹುಳಿಯಿಂದ ತೊಳೆದ ಹವಳದ ಬಟ್ಟಿನಂತೆ ಚಂದದ ಸಂಸಾರಸಾರೋದಯನ/ಅರ್ಜುನನ ಕೆಂಪು ತುಟಿಯು ಕಾಮರಸದ ಉಂಡೆಯಂತಾಯಿತು;೧; ದಾಳಿಂಬದ ಬೀಜಗಳನ್ನೂ ಹೊಸಮುತ್ತುಗಳನ್ನೂ ಉಗುಳುವಂತಿದ್ದ ವಿಬುಧ ವನಜವನು ಕಳಹಂಸನ ಹಲ್ಲಿನ ಸಾಲುಗಳು ಚಂದ್ರನ ಕಾಂತಿಯನ್ನು ತಿರಸ್ಕರಿಸುವಂತಾದುವು;೨; ಮಡಿಸಿ ತಂದಿರಿಸಿದ ಹೊಸನೆಯ್ದಿಲೆಯ ಕಾವನ್ನು ಯಾವಾಗಲೂ ಗೆದ್ದಿರುವ ರತ್ನದ ಹತ್ತು ಕಡುಕುಗಳ ಹೊಳಪನ್ನೊಳಕೊಂಡು ಹಾಗೆಯೇ ಸ್ವಲ್ಪ ಜೋಲಾಡುತ್ತಿರುವ ಕರ್ಣಾಟೀಕರ್ಣಪೂರನ ಕಿವಿಯ ಹಾಲೆಗಳು ಸರಸ್ವತಿಯು ತೂಗುತ್ತಿರುವ ಆಟದುಯ್ಯಾಲೆಯಂತಾದುವು;೩; ಬಳಬಳನೆ (ಚೆನ್ನಾಗಿ) ಬೆಳೆದ ಎಳೆ ಅಡಿಕೆಯಂತೆ ಲೋಕಸೌಂದರ್ಯವನ್ನೆಲ್ಲ ತನ್ನಲ್ಲಿ ಸೇರಿಸಿಕೊಂಡು ಗೆರೆಯನ್ನು ಹೊಂದಿದ ಲಾಟೀಲಲಾಮನ ತುಂಬು ಕೊರಳು ಯುವರಾಜಪಟ್ಟಾಭಿಷೇಕಕ್ಕೆ ಯೋಗ್ಯವಾದ ಒಡವೆಯನ್ನು ಧರಿಸುವುದಕ್ಕೆ ವ್ರತಮಾಡಿ ತನ್ನ ಸೌಂದರ್ಯವನ್ನೇ ಅಲ್ಲದೆ ಇತರ ಸೌಂದರ್ಯಕ್ಕೂ ಆಸೆಪಡುವಂತಾಯಿತು.;೪; ಕುಲ ಮತ್ತು ಛಲದ ಮಹಿಮೆಯಲ್ಲಿ ತನ್ನನ್ನೇ ನೋಡಿದ ಸಂತೋಷವು ಉತ್ಸಾಹವಾದ ಹಾಗೆ ಸೊಗಯಿಸುವ ಸಮರೈಕಮೇರುವಿನ ಭುಜದ ಮೇಲುಭಾಗಗಳು ಕುಲಪರ್ವತದ ಶಿಖರಗಳ ಹಾಗೆ ಆದುವು;೫; ದುಷ್ಟ ಆನೆಗಳನ್ನೂ ಸುಪ್ರಸಿದ್ಧರಾದ ಸುಮಂಗಲಿಯರನ್ನೂ (ಕುಲಸ್ತ್ರೀಯರನ್ನೂ) ಹೆದರಿಸಿದ ಸಂತೋಷದಲ್ಲಿ ಸುಪುಷ್ಟವಾಗಿ ಬೆಳೆದ ವಿಕ್ರಾಂತತುಂಗನ ದೀರ್ಘವಾದ ತೋಳುಗಳು ವೇಶ್ಯಾಸ್ತ್ರೀಯರಿಗೆ ಕಾಮಪಾಶವೂ ಶತ್ರುರಾಜರಿಗೆ ಯಮಪಾಶವೂ ಆದುವು;೬; ಕೆಂಪು ಮುಳ್ಳುಮುತ್ತುಗದ ಚಿಗುರಿನ ಹಾಗೆ ಪ್ರಕಾಶಮಾನವಾಗಿರುವ ಆಂಕುಚಕಲಶಪಲ್ಲವನ ಚಿಗುರಿನಂತಿರುವ ಅಂಗೈಗಳು ಮದ್ದಾನೆಗಳ ಕುಂಭಸ್ಥಳವನ್ನು ಅಪ್ಪಳಿಸುವುದರಿಂದ ಒರಟಾದುವು;೭; ಉದ್ಧತರಾದ ಶತ್ರುಗಳನ್ನು ಶೀಘ್ರವಾಗಿ ಸೋಲಿಸಿದ ಸಂತೋಷದಿಂದಲೂ ಐಶ್ವರ್ಯವನ್ನು ಪಡೆದ ಸಂತೋಷದಿಂದಲೂ ಇದ್ದಕ್ಕಿದ್ದ ಹಾಗೆ ತುಂಬಿಕೊಂಡ ಕೇರಳೀಕೇಳೀಕಂದರ್ಪನ ವಿಶಾಲವಾದ ಎದೆಯು ಲಕ್ಷ್ಮೀದೇವಿಗೆ ವಂಶಪಾರಂಪರ್ಯವಾಗಿ ಬಂದ ನೆಲೆಯೂ ನಿತ್ಯವಾಸಸ್ಥಳವೂ ಆಯಿತು;೮; ಉದ್ವ ತ್ತರಾದ (ಮೇಲೆ ಬೀಳುವ) ಸಾಮಂತರಾಜರ ಮನಸ್ಸಿನಂತೆ ಬಹಳ ಕೃಶವಾದ ಪರಾಕರ್ಮಧವಳನ ಸೊಂಟವು ಶ್ರೀಮನ್ನಾರಾಯಣನು ತಾನೇ ಯಜಮಾನನಾಗಿಯೂ ತನ್ನನ್ನೇ ಆಳಾಗಿಯೂ ಮಾಡಿಕೊಂಡೂ ತಾನೇ ನರ್ತನಮಾಡಿ ಕುಲಸ್ತ್ರೀಯರ ಮನಸ್ಸನ್ನು ವಿಚಲಿತವನ್ನಾಗಿ ಮಾಡುವಂತಾಯಿತು.;೯; ಗಂಭೀರಗುಣದಲ್ಲಿಯೂ ಸುಳಿಸುಳಿಯಾಗಿರುವ ಇತರ ಗುಣದಲ್ಲಿಯೂ ಸಮುದ್ರವನ್ನು ಹೋಲುವ ಶರಣಾಗತ ಜಲನಿಯ ಆಳವಾದ ಹೊಕ್ಕುಳು ಸೌಂದರ್ಯಕ್ಕೆ ತಾನೆ ಕೇಂದ್ರವಾಯಿತು;೧೦; ಸಿಂಹದ ಸೊಂಟದ ಭಾಗವನ್ನೂ ಹಿಯ್ಯಾಳಿಸುವ ರಿಪುಕುರಂಗಕಂಠೀರವನ ಸೊಂಟದ ಭಾಗವು ಪ್ರೀತಿಯಿಂದ ನೋಡುವ ಸುಂದರ ಸ್ತ್ರೀಯರ ಕಣ್ಣಿಗೆ ಕಾಮನ ಗುರಾಣಿಯಂತೆ ದೊಡ್ಡದಾಗಿ ಬೆಳೆದು ಅತಿಶಯವಾದ ದಪ್ಪವನ್ನು ತಾಳಿದಂತೆ ವಿಶೇಷ ಗುಂಡಾಗಿ ಬೆಳೆದುವು;೧೧; ಉದಾತ್ತ ನಾರಾಯಣನ ಎರಡು ತೊಡೆಗಳು ಸ್ತ್ರೀಯರ ಮನಸ್ಸೆಂಬ ಆನೆಗಳನ್ನೂ ಕಟ್ಟುವ ಕಂಬಗಳಾದುವು, ಹಾಗೆಯೇ ಅಪೂರ್ವವಾಗಿ ಪ್ರಕಾಶಿಸುವ ಕಿರುದೊಡೆಗಳು ಉಡುಹತ್ತಿದಂಥವು ;೧೨;–
- ವ|ಅಂತಪೂರ್ವಂಗಳಾಗಿ ತೊಳಗುವ ಕಿಱುದೊಡೆಗಳುಡುವಡರ್ದನ್ನಮಾರೂಢ ಸರ್ವಜ್ಞನ ದೊಡ್ಡ ಮಾರ್ಗಂಳೆಳವಾೞೆಯ ದಿಂಡಿನೊಳ್ ಸಾಣೆಗಟ್ಟಿದಂತಾದುವು;೧೩; ಗೂಢಗುಲಪಾರ್ಷ್ಣಿಗಳನೊಳಕೊಂಡ ಮನುಜಮಾಂಧಾತನ ಪೊಱ ಅಡಿಗಳ್ ವಿರೋಧಿ ಭೂಪಾಳರನಡಿಗೆಱಗಿಸಿದ ಸಂತೋಷದೊಳುನ್ನತಂ ಗಳಾದಂತೆ ಕೂರ್ಮೋನ್ನತಂಗಳಾದುವು;೧೪; ನೊಸಲಂ ಸುಟ್ಟಿ ತೋರ್ಪನ್ನವಪ್ಪುಂಗುಟಂಗಳೊಳ್ ಮಿಂಚಂ ಕೀಲಿಸಿದಂತೆ ತೊಳಗಿ ಪೊಳೆವ ಪ್ರಚಂಡ ಮಾರ್ತಾಂಡನ ಪಾದನಖಂಗಳ್ ಗಂಡರ ಪೆಂಡಿರಂಜಿದಳ್ಕಿದ ಮೊಗಮಂ ನೋಡಲ್ಕೆ ಕನ್ನಡಿಗಳನ್ನವಾದುವು;೧೫; ಪೊಸತಲರ್ದ ಕೆಂದಾವರೆಯ ಕೆಂಪುಮಂ ಮೆಲ್ಪುಮನಿೞ್ಕುಳಿಗೊಂಡು ತೊಳಗುವರಿಕೇಸರಿಯ ಪಾದತಳಂಗಳಡಿಗೆಱಗಿದರಿನರಪಾಲರ ಮಕುಟಮಾಣಿಕ್ಯ ಮರೀಚಿಜಾಲ ಬಾಳಾತಪಂಗಳನೆಲೆದು ಕೆಂಕಮಾದಂತಾದುವು;೧೬; ಪೊಸವೆಸಱಗೆಯ (ಹೊಸ ಹೆಸರು ಅಗೆಯ-ಮೊಳಕೆ) ಬಣ್ಣದಂತೆ ಸೊಗಯಿಸುವ ಸಾಮಂತಚೂಡಾಮಣಿಯ ಮೆಯ್ಯ ಬಣ್ಣಂ ವಿಧಾತ್ರನೆಂಬ ಚಿತ್ತಾರಿಯ ವರ್ಣಕ್ರಮಂಗೆಯ್ದ ಕದಳೀಗರ್ಭಶ್ಯಾಮಮೆಂಬ ಬಣ್ಣದಂತಾದುದು;೧೭;.
- ವಚನ:ಅರ್ಥ: ಆರೂಢಸರ್ವಜ್ಞನ ತೊಡೆಯ ಕಿಣ ಅಥವಾ ಜಡ್ಡುಗಳು (ಕುದುರೆ ಸವಾರಿ ಮಾಡುವಾಗ ಒತ್ತಿ ಆದ ಜಡ್ಡು) ಎಳೆಯ ಬಾಳೆಯ ದಿಂಡಿನಲ್ಲಿ ಸಾಣೆಯಕಲ್ಲನ್ನು ಕಟ್ಟಿದ ಹಾಗಾದುವು;೧೩; ಗೂಢವಾದ ಕಾಲಿನ ಹರಡನ್ನು ಹೊಂದಿರುವ ಮನುಜಮಾಂಧಾತನ ಅಡಿಯ ಹೊರಭಾಗಗಳು ಶತ್ರುರಾಜರನ್ನು ಕಾಲಿಗೆ ಬೀಳುವಂತೆ ಮಾಡಿದ ಸಂತೋಷದಲ್ಲಿ ಎತ್ತರವಾದಂತೆ ಹಾಗೆಯೇ ಆಮೆಯ ಚಿಪ್ಪಿನ ಮೇಲುಭಾಗದಂತೆ ಉಬ್ಬಿಕೊಂಡವು.;೧೪; ಮುಖವನ್ನು ಸುಟ್ಟಿ ತೋರಿಸುವಂತಿರುವ ಕಾಲಿನ ಬೆರಳುಗಳಲ್ಲಿ ಸ್ವಲ್ಪ ನೆಟ್ಟಿರುವ ಹಾಗೆ ಪ್ರಕಾಶಮಾನವಾಗಿರುವ ಪ್ರಚಂಡಮಾರ್ತಾಂಡನ ಕಾಲಿನ ಉಗುರುಗಳು ವೀರಪತ್ನಿಯರು ಹೆದರಿದ ತಮ್ಮ ಮುಖವನ್ನು ನೋಡುವುದಕ್ಕೆ (ಉಪಯೋಗಿಸುವ) ಕನ್ನಡಿಯಂತಾದುವು.;೧೫; ಹೊಸದಾಗಿ ಅರಳಿರುವ ಕೆಂಪುದಾವರೆಯಂತೆ ಕೆಂಪುಬಣ್ಣವನ್ನೂ ಬಿಳಿಯಬಣ್ಣವನ್ನೂ ತಿರಸ್ಕರಿಸುವ ಅರಿಕೇಸರಿಯ ಪಾದತಳಗಳು ಕಾಲಿಗೆ ಬಿದ್ದ ಶತ್ರುರಾಜರ ಕಿರೀಟದಲ್ಲಿರುವ ಮಾಣಿಕ್ಯ ಸಮೂಹದ ಕೆಂಬಿಸಿಲನ್ನು ಹಿಯ್ಯಾಳಿಸಿ ಕೆಂಪಾದಂತಾದುವು.;೧೬; ಹೆಸರುಕಾಳಿನ ಹೊಸಮೊಳಕೆಯ ಬಣ್ಣದಂತೆ ಸೊಗಯಿಸುವ ಸಾಮಂತಚೂಡಾಮಣಿಯ ಶರೀರದ ಬಣ್ಣವು ಬ್ರಹ್ಮನೆಂಬ ಬಣ್ಣಗಾರನು ಬಣ್ಣಗಳನ್ನು ಕಲಸಿಮಾಡಿದ ಬಾಳೆಯ ಹೂವಿನ ಮೋತೆಯಂತೆ ಕೆಂಪುಮಿಶ್ರವಾದ ಕಪ್ಪುಬಣ್ಣದಿಂದ ಕೂಡಿತು;೧೭;.
- ಚಂ|| ಮನದೊಳೊಱಲ್ದು ಜೋಲ್ದಳಿಪಿ ನೋಡಲೊಡಂ ಸೆರೆಗೆಯ್ದು ಕಣ್ಣುಮಂ
- ಮನಮುಮನಂಗಜನ್ಮನರಲಂಬುಗಳಿಂದೆ ಮರುಳ್ಚಿ ಬಂದ ಮಾ|
- ವಿನ ಬನದೊಳ್ ತೆರಳ್ಚಿ ಪೊಳೆವಿಂದುಮರೀಚಿಗಳಿಂದುರುಳ್ಚಿ ಪೂ
- ವಿನ ಪಸೆಯೊಳ್ ಪೊರಳ್ಚಿದನಳುರ್ಕೆಯ ಬರ್ದೆಯರಂ ಗುಣಾರ್ಣವಂ|| ೪೦||
- ಪದ್ಯ-೪೦:ಪದವಿಭಾಗ-ಅರ್ಥ:ಮನದೊಳು ಒಱಲ್ದು (ಪ್ರೀತಿಸಿ) ಜೋಲ್ದು ಅಳಿಪಿ(ನೇತುಬಿದ್ದು ಆಸೆಪಟ್ಟು), ನೋಡಲೊಡಂ(ನೋಡಿದ ಕೂಡಲೆ) ಸೆರೆಗೆಯ್ದು ಕಣ್ಣುಮಂ ಮನಮುಂ ಅಂಗಜನ್ಮಂ (ಮನ್ಮಥನು) ಅರಲಂಬುಗಳಿಂದೆ ಹೂಬಾಣಗಳಿಂದ) ಮರುಳ್ಚಿ (ಮರುಳುಮಾಡಿ) ಬಂದ ಮಾವಿನ ಬನದೊಳ್ ತೆರಳ್ಚಿ (ಸೇರುವಂತೆ ಮಾಡಿ) ಪೊಳೆವ ಇಂದು ಮರೀಚಿಗಳಿಂದ ಉರುಳ್ಚಿ (ಹೊಳೆವ ಚಂದ್ರನ ಕಿರಣಗಳಿಂದ ಉರುಳಿಸಿ) ಪೂವಿನ ಪಸೆಯೊಳ್ ಪೊರಳ್ಚಿದನು (ಹೂವಿನ ಹಾಸಿಗೆಯಲ್ಲಿ ಹೊರಳಿಸಿದನು - ವಿರಹದಿಂದ), ಅಳುರ್ಕೆಯ ಬರ್ದೆಯರಂ ಗುಣಾರ್ಣವಂ( ಧೀರರಾದ ಪ್ರಾಯದ ಹೆಂಗಸರನ್ನೂ ಕೂಡಾ ಗುಣಾರ್ಣವನಾದ ಅರ್ಜುನನು)|| ೪೦||
- ಪದ್ಯ-೦೦:ಅರ್ಥ:ಗುಣಾರ್ಣವ ಅರ್ಜುನನು ಧೀರರಾದ ಪ್ರಾಯದ ಹೆಂಗಸರನ್ನೂ ಕೂಡಾ ತನ್ನನ್ನು ಮನಸ್ಸಿನಲ್ಲಿ ಪ್ರೀತಿಸಿ ತನಗೆ ಸೋತು ಆಶೆಯಿಂದ ನೋಡಲು ಅವರ ಕಣ್ಣನ್ನೂ ಮನಸ್ಸನ್ನೂ ಮನ್ಮಥನ ಹೂಬಾಣದಿಂದ ಸೆರೆಹಿಡಿದು ಅವರಿಗೆ ಮೋಹವುಂಟಾಗುವ ಹಾಗೆ ಮಾಡಿ ಫಲಭರಿತವಾದ ಮಾವಿನ ತೋಟದಲ್ಲಿ ಸೇರಿಸಿ ಪ್ರಕಾಶಮಾನವಾದ ಚಂದ್ರನ ಕಿರಣಗಳಿಂದ ಉರುಳಿಸಿ ಹೂವಿನ ಹಾಸಿಗೆಯಲ್ಲಿ ಹೊರಳುವ ಹಾಗೆ ಮಾಡಿದನು. (ಅವನನ್ನು ನೋಡಿದ ಪ್ರಾಯದಸ್ತ್ರೀಯರೂ ವಿಧವಿಧವಾದ ಕಾಮಬಾಧೆಗೊಳಗಾಗುತ್ತಿದ್ದರು ಎಂದು ಭಾವ).
- ವ|| ಅಂತು ನಕುಲ ಸಹದೇವರ್ ಸಹಿತಮಯ್ವರುಂ ನವಯೌವನದ ಪರಮಸುಖಮನೆಯ್ದಿ ಸಂತೋಷದಿನಿರ್ದರಿತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ-
- ವಚನ:ಪದವಿಭಾಗ-ಅರ್ಥ: ಅಂತು ನಕುಲ ಸಹದೇವರ್ ಸಹಿತಂ ಅಯ್ವರುಂ ನವಯೌವನದ ಪರಮಸುಖಮನು ಎಯ್ದಿ ಸಂತೋಷದಿಂ ಇರ್ದರು; ಇತ್ತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿ-
- ವಚನ:ಅರ್ಥ:ಹೀಗೆ ನಕುಲ ಸಹದೇವರ ಸಹಿತ ಐಯ್ದು ಜನರೂ ಹೊಸಪ್ರಾಯದ ಉತ್ತಮಸುಖವನ್ನು ಹೊಂದಿ ಸಂತೋಷದಿಂದಿದ್ದರು. ಈ ಕಡೆ ಗಂಗಾದ್ವಾರದಲ್ಲಿ ಭರದ್ವಾಜನೆಂಬ ಬ್ರಹ್ಮ ಋಷಿಯು-
- ಕಂ|| ಸ್ನಾನಾರ್ಥಮೊಂದು ಕಳಶಮ
- ನಾ ನಿಯಮ ನಿಧಾನನೆೞಲೆ ಪಿಡಿದಮಳಿನ ಗಂ|
- ಗಾ ನದಿಗೆ ವಂದು ಸುರತ ನಿ
- ಧಾನಿಯನಮರೇಂದ್ರ ಗಣಿಕೆಯಂ ಮುನಿ ಕಂಡಂ|| ೪೧||
- ಪದ್ಯ-೪೧:ಪದವಿಭಾಗ-ಅರ್ಥ:ಸ್ನಾನಾರ್ಥಂ ಒಂದು ಕಳಶಮಂ ಆ ನಿಯಮ ನಿಧಾನನೆ ಎೞಲೆ ಪಿಡಿದು (ಹಿಡಿದು)ಅಮಳಿನ ಗಂಗಾ ನದಿಗೆ ವಂದು(ನಿರ್ಮಲವಾದ ಗಂಗಾನದಿಗೆ ಬಂದು) ಸುರತ ನಿಧಾನಿಯಂ ಅಮರೇಂದ್ರ ಗಣಿಕೆಯಂ ಮುನಿ ಕಂಡಂ(ರತಿಸುಖಕ್ಕೆ ತಕ್ಕವಳಾದ ಅಪ್ಸರೆಯೊಬ್ಬಳನ್ನು ನೋಡಿದನು)
- ಪದ್ಯ-೪೧:ಅರ್ಥ:ಸ್ನಾನಕ್ಕಾಗಿ ಒಂದು ಬಿಂದಿಗೆಯನ್ನು ಹಿಡಿದು, ನಿರ್ಮಲವಾದ ಗಂಗಾನದಿಗೆ ಬಂದು ರತಿಸುಖಕ್ಕೆ ತಕ್ಕವಳಾದ ಅಪ್ಸರೆಯೊಬ್ಬಳನ್ನು ನೋಡಿದನು)
- ವ|| ಅಂತು ಕಾಣ್ಬುದುಮಮೃತಾಬ್ಧಿಯೆಂಬಚ್ಚರಸೆಯ ಕನಕ ಕಾಂಚೀಕಳಾಪದೊಳ್ ತೊಡರ್ದ ದೇವಾಂಗ ವಸ್ತ್ರದುಳ್ಳುಡೆಯೊಳುಲಿವ ಸೂಸಕದ ನೂಲ ತೊಂಗಲ್ವೆರಸೆೞಲ್ವ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ-
- ವಚನ:ಪದವಿಭಾಗ-ಅರ್ಥ:ಅಂತು-ಹಾಗೆ ಕಾಣ್ಬುದುಂ (ಹಾಗೆ ಕಂಡಾಗ) ಅಮೃತಾಬ್ಧಿಯೆಂಬ ಅಪ್ಸರೆಯ, ಕನಕ ಕಾಂಚೀ ಕಳಾಪದೊಳ್(ಚಿನ್ನದ ಒಡ್ಯಾಣದ ಪಟ್ಟಿಯಲ್ಲಿ.) ತೊಡರ್ದ ದೇವಾಂಗ ವಸ್ತ್ರದ ಉಳ್ಳುಡೆಯೊಳು ಉಲಿವ (ಸಿಕ್ಕಿಕೊಂಡರೇಷ್ಮೆ ವಸ್ತ್ರದ ಒಳುಡುಪಿನಲ್ಲಿ ಸದ್ದು ಮಾಡುವ) ಸೂಸಕದ ನೂಲ (ಗೆಜ್ಜೆಯ ಕುಚ್ಚಿನ) ತೊಂಗಲ್ ವೆರಸು ಎೞಲ್ವ (ನೂಲಿನ ಗೊಂಚಲು ಸಮೇತ ಇಳಿಬಿದ್ದಿರುವ) ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸೆ (ಗರಿಯು ಮಳಗಾಲದ ನವಿಲಿನಂತೆ ಸುಂದರವಾಗಲು,)
- ವಚನ:ಅರ್ಥ:ಹಾಗೆ ಕಂಡಾಗ ಅಮೃತಾಬ್ಧಿಯೆಂಬ ಅಪ್ಸರಸ್ತ್ರೀಯ ಚಿನ್ನದ ನಡುಪಟ್ಟಿಯಲ್ಲಿ ಸಿಕ್ಕಿಕೊಂಡಿದ್ದ ರೇಷ್ಮೆಯ ವಸ್ತ್ರದ ಒಳ ಉಡುಪಿನಲ್ಲಿ ಶಬ್ದಮಾಡುವ ಗೆಜ್ಜೆಯ ಕುಚ್ಚಿನ ನೂಲಗೊಂಚಲ ಸಮೇತವಾಗಿ ಇಳಿಬಿದ್ದಿರುವ ಮುಂಭಾಗದ ಸೆರಗು ಮಳೆಗಾಲದ ನವಿಲಿನಂತೆ ಸುಂದರವಾಗಲು-
- ಕಂ|| ಆದೆಲರ ಸೋಂಕಿನೊಳ್ ತೆಱ
- ಪಾದೊಡೆ ಬೆಳ್ಪೆಸೆಯೆ ಮಸೆದ ಮದನನ ಬಾಳಂ|
- ತಾದುವು ಪೊಳೆವೊಳ್ದೊಡೆ ತೆಱ
- ಪಾದೆರ್ದೆಯಂ ನಟ್ಟುವಂದು ತನ್ಮುನಿಪತಿಯಾ|| ೪೨||
- ಪದ್ಯ-೪೨:ಪದವಿಭಾಗ-ಅರ್ಥ:ಆದ ಎಲರ ಸೋಂಕಿನೊಳ್ (ಆದ ಗಾಳಿಯ ತಾಗಿದ ರಭಸಕ್ಕೆ) ತೆಱಪಾದೊಡೆ ಬೆಳ್ಪೆಸೆಯೆ(ತೆರವಾದಾಗ- ಬಟ್ಟೆಯು ಸರಿದಾಗ, ಬೆಳ್ಪು ಎಸೆಯೆ- ತೊಡೆಯ ಬಿಳಿಪು ಎಸೆದು ಎದ್ದುಕಾಣಲು) ಮಸೆದ ಮದನನ ಬಾಳಂತೆ ಆದುವು ( ಅದು- ಮಸೆದು ಹರಿತವಾದ ಮನ್ಮಥನ ಕತ್ತಿಯಂತೆ ಆಯಿತು) ಪೊಳೆವ ಒಳ್ದೊಡೆ ತೆಱಪಾದ ಎರ್ದೆಯಂ ನಟ್ಟುವಂದು ತತ್ ಮುನಿಪತಿಯ ಆ (ಹೊಳೆದ ಅಪ್ಸರೆಯ ಒಳತೊಡೆ, ಮುನಿಯ ತೆರೆದ ಎದೆಯನ್ನು ಹೊಕ್ಕಿತು)
- ಪದ್ಯ-೪೨:ಅರ್ಥ:. ಗಾಳಿಯ ಸ್ಪರ್ಶದಿಂದ ಆದ ವಸ್ತ್ರದ ಸರಿಸುವಿಕೆಯು, ಅವಳ ಸುಂದರವಾದ ತೊಡೆಯು ತೊಡೆಯ ಬಿಳಿಪು ಎಸೆದು ಎದ್ದುಕಾಣಲು, ಅದು- ಮಸೆದು ಹರಿತವಾದ ಮನ್ಮಥನ ಕತ್ತಿಯಂತೆ ಆಯಿತು. ಅದು ಆ ಋಷಿಯ ತೆರೆದ ಎದೆಯನ್ನು ಹೊಕ್ಕಿತು.
- ವ|| ಅಂತು ಕಂತುಶರಪರವಶನಾಗಿ ಧೈರ್ಯಕ್ಷರಣೆಯುಮಿಂದ್ರಿಯ ಕ್ಷರಣೆಯುಮೊಡನೊಡನಾಗೆ-
- ವಚನ:ಪದವಿಭಾಗ-ಅರ್ಥ:ಅಂತು ಕಂತುಶರಪರವಶನಾಗಿ (ಹಾಗೆ ಮನ್ಮಥನ ಶರಕ್ಕೆ ಪಪರವಶನಾಗಿ) ಧೈರ್ಯಕ್ಷರಣೆಯುಂ ಇಂದ್ರಿಯ ಕ್ಷರಣೆಯುಂ ಒಡನೊಡನೆ ಆಗೆ,
- ವಚನ:ಅರ್ಥ:ಹಾಗೆ ಮನ್ಮಥನ ಬಾಣಗಳಿಗೆ ಪಪರವಶನಾಗಿ ಅವನ ಧೈರ್ಯವು ಇಳಿಯಿತು, ಅದರೊಟ್ಟಿಗೆ ರೇತಸ್ಸೂ ಸೋರಿಹೋಗಲು:-
- ಕಂ|| ಮಾಣದೆ ಸೋರ್ವಿಂದ್ರಿಯಮಂ
- ದ್ರೋಣದೊಳಾಂತಲ್ಲಿಯೊಗೆದ ಶಿಶುವಂ ಕಂಡೀ|
- ದ್ರೋಣದೊಳೆ ಪುಟ್ಟಿದೀತಂ
- ದ್ರೋಣನೇ ಪೋಗೆಂದು ಪೆಸರನಿಟ್ಟಂ ಮುನಿಪಂ|| ೪೩||
- ಪದ್ಯ-೪೩:ಪದವಿಭಾಗ-ಅರ್ಥ:ಮಾಣದೆ ಸೋರ್ವಿಂದ್ರಿಯಮಂ (ನಿಲ್ಲದೆ ಸೋರಿದ ಇಂದ್ರಿಯವನ್ನು) ದ್ರೋಣದೊಳು ಆಂತು ಅಲ್ಲಿ ಒಗೆದ ಶಿಶುವಂ ಕಂಡು (ಆ ಭರದ್ವಾಜ ಋಷಿಯು ಅದನ್ನು ಒಂದು ದೊನ್ನೆಯಲ್ಲಿ ಹಿಡಿದು, ಅದರಲ್ಲಿ ಹುಟ್ಟಿದ ಶಿಶುವನ್ನು ನೋಡಿ) ಈ ದ್ರೋಣದೊಳೆ ಪುಟ್ಟಿದ ಈತಂ ದ್ರೋಣನೇ ಪೋಗೆಂದು ಪೆಸರನಿಟ್ಟಂ ಮುನಿಪಂ (ದೊನ್ನೆಯಲ್ಲಿ ಹುಟ್ಟಿದ ಈತನು ದ್ರೋಣನೆಂಬ ಹೆಸರಿನವನೇ ಆಗಲಿ, ಹೋಗು ಎಂದು ಆ ಹೆಸರನ್ನೇ ಅವನಿಗೆ ಇಟ್ಟನು)|
- ಪದ್ಯ-೪೩:ಅರ್ಥ:ನಿಲ್ಲದೆ ಸೋರುವ ಇಂದ್ರಿಯವನ್ನು (ವೀರ್ಯವನ್ನು) ಆ ಭರದ್ವಾಜ ಋಷಿಯು ಒಂದು ದೊನ್ನೆಯಲ್ಲಿ ಹಿಡಿದು ಅದರಲ್ಲಿ ಹುಟ್ಟಿದ ಶಿಶುವನ್ನು ನೋಡಿ, ದೊನ್ನೆಯಲ್ಲಿ ಹುಟ್ಟಿದ ಮಗುವು ದ್ರೋಣನೆಂಬ ಹೆಸರಿನವನೇ ಸರಿ, ಹೋಗು ಎಂದು ಆ ಹೆಸರನ್ನೇ ಅವನಿಗೆ ಇಟ್ಟನು
- ವ|| ಅಂತು ಭರದ್ವಾಜನಾತ್ಮತನೂಜಂಗೆ ಪೆಸರನಿಟ್ಟು ತನ್ನ ಕೆಳೆಯಂ ಪಾಂಚಾಳ ದೇಶದರಸಂ ಪೃಷತನೆಂಬನಾತನ ಮಗಂ ದ್ರುಪದನುಮಂ ದ್ರೋಣನುಮನೊಡಗೂಡಿ ಯಜ್ಞಸೇನನೆಂಬ ಬ್ರಹ್ಮಋಷಿಯ ಪಕ್ಕದೊಳ್ ಬಿಲ್ವಿದ್ದಯಂ ಕಲಲ್ವೇೞ್ದೊಡೆ ದ್ರೋಣನುಂ ದ್ರುಪದನುಂ ಧನುರ್ಧರಾಗ್ರಗಣ್ಯರಾಗೆ ಭರದ್ವಾಜಂ ದ್ರೋಣಂಗೆ ಕೃಪನ ತಂಗೆಯಪ್ಪ ಶಾರದ್ವತೆಯಂ ತಂದು ಮದುವೆಯಂ ಮಾಡಿದೊಡಾತಂಗ ಮಾಕೆಗಂ ತ್ರಿಣೇತ್ರನಂಶದೊಳೊರ್ವ ಮಗಂ ಪುಟ್ಟಿ-
- ವಚನ:ಪದವಿಭಾಗ-ಅರ್ಥ:ಅಂತು ಭರದ್ವಾಜನ ಆತ್ಮತನೂಜಂಗೆ ಪೆಸರನಿಟ್ಟು (ಭಾರದ್ವಾಜನು ಹಾಗೆ ತನ್ನ ಮಗುವಿಗೆ ಹೆಸರಿನ್ನಿಟ್ಟು) ತನ್ನ ಕೆಳೆಯಂ ಪಾಂಚಾಳ ದೇಶದರಸಂ ಪೃಷತನೆಂಬನಾತನ ಮಗಂ ದ್ರುಪದನುಮಂ ದ್ರೋಣನುಮಂ ಒಡಗೂಡಿ (ತನ್ನ ಸ್ನೇಹಿತನೂ ಪಾಂಚಾಳದೇಶದ ರಾಜನೂ ಪೃಷತನ ಮಗನೂ ಆದ ದ್ರುಪದ ಮತ್ತು ದ್ರೋಣನನ್ನು ಒಟ್ಟುಗೂಡಿಸಿ) ಯಜ್ಞಸೇನನೆಂಬ ಬ್ರಹ್ಮಋಷಿಯ ಪಕ್ಕದೊಳ್ ಬಿಲ್ವಿದ್ದಯಂ(ಬಿಲ್ ವಿದ್ಯೆಯಂ ಕಲಲ್ ವೇಲ್ದೊಡೆ) ಲ್ವೇೞ್ದೊಡೆ (ಹತ್ತಿರ ಬಿಲ್ವಿದ್ಯೆಯನ್ನು ಕಲಿಯಲು ಹೇಳಲಾಗಿ) ದ್ರೋಣನುಂ ದ್ರುಪದನುಂ ಧನುರ್ಧರಾಗ್ರಗಣ್ಯರಾಗೆ ಭರದ್ವಾಜಂ ದ್ರೋಣಂಗೆ ಕೃಪನ ತಂಗೆಯಪ್ಪ ಶಾರದ್ವತೆಯಂ ತಂದು ಮದುವೆಯಂ ಮಾಡಿದೊಡೆ ಆತಂಗಂ ಆಕೆಗಂ ತ್ರಿಣೇತ್ರನ ಅಂಶದೊಳು ಓರ್ವ ಮಗಂ ಪುಟ್ಟಿ-
- ವಚನ:ಅರ್ಥ:ಭಾರದ್ವಾಜನು ಹಾಗೆ ತನ್ನ ಮಗುವಿಗೆ ಹೆಸರನ್ನಿಟ್ಟು ತನ್ನ ಸ್ನೇಹಿತನೂ ಪಾಂಚಾಳದೇಶದ ರಾಜನೂ ಪೃಷತನ ಮಗನೂ ಆದ ದ್ರುಪದ ಮತ್ತು ದ್ರೋಣನನ್ನು ಒಟ್ಟುಗೂಡಿಸಿ ಯಜ್ಞಸೇನನೆಂಬ ಬ್ರಹ್ಮಋಷಿಯ ಹತ್ತಿರ ಬಿಲ್ಲು ವಿದ್ಯೆಯನ್ನು ಕಲಿಯಲು ಹೇಳಲಾಗಿ, ದ್ರೋಣ ಮತ್ತು ದ್ರುಪದರು ಬಿಲ್ಲುವಿದ್ಯೆಯಲ್ಲಿ ಮೊತ್ತಮೊದಲಿಗರಾದರು. ಹೀಗಾಗಲು ಭಾರದ್ವಾಜನು ದ್ರೋಣನಿಗೆ ಕೃಪನ ತಂಗಿಯಾದ ಶಾರದ್ವತೆಯನ್ನು ತಂದು ಮದುವೆಮಾಡಿದನು. ಆಗ ಆತನಿಗೂ ಆಕೆಗೂ ಮುಕ್ಕಣ್ಣನಾದ ರುದ್ರನ ಅಂಶದಿಂದ ಒಬ್ಬ ಮಗನು ಹುಟ್ಟಿದನು. ಆಗ:-
- ಕಂ|| ದಿವಿಜಾಶ್ವತ್ಥಾಮದೊಳೀ
- ಭುವನಂಗಳ್ ನಡುಗೆ ಶಿಶು ಸರಂಗೆಯ್ದೊಡೆ ನ|
- ಕ್ಕವಯವದೆ ಕುಂಭಸಂಭವ
- ನಿವನಶ್ವತ್ಥಾಮನೆಂದು ಪೆಸರಿಡೆ ನೆಗೞ್ದಂ|| ೪೪||
- ಪದ್ಯ-೪೪:ಪದವಿಭಾಗ-ಅರ್ಥ:ದಿವಿಜ (ದೇವತೆಗಳ) ಅಶ್ವತ್ಥಾಮದೊಳು ಅಶ್ವ ಸ್ಥಾಮ-ಶಕ್ತಿ; ಉಚ್ಛೈಶ್ರವವೆಂಬ ಕುದುರೆಯಂತೆ ಕೂಗಿದಾಗ) ಈ ಭುವನಂಗಳ್ ನಡುಗೆ ಶಿಶು ಸರಂ ಗೆಯ್ದೊಡೆ ನಕ್ಕು ಅವಯವದೆ (ಆಯಾಸವಿಲ್ಲದೆ) ಕುಂಭಸಂಭವನು ಇವಂ ಅಶ್ವತ್ಥಾಮನೆಂದು ಪೆಸರಿಡೆ ನೆಗೞ್ದಂ(ಪ್ರಸಿದ್ಧನಾದನು)
- ಪದ್ಯ-೪೪:ಅರ್ಥ:ಹಾಗೆ ದ್ರೋಣನಿಗೆ ಆ ಮಗನು ಆ ಹುಟ್ಟಿದಾಗ ಕೂಗಿದ, ಅತ್ತಿರಯವ- ಧ್ವನಿಮಾಡಿದ ತಕ್ಷಣ ದೇವಲೋಕದ ಉಚ್ಛೈ ಶ್ರವವೆಂಬ ಕುದುರೆಯ ಕೆನೆತದಿಂದಾದಂತೆ ಲೋಕಗಳೆಲ್ಲ ನಡುಗಲು ಅದನ್ನು ನೋಡಿ ದ್ರೋಣನು ನಕ್ಕು, ನಿರಾಯಾಸವಾಗಿ ಇವನಿಗೆ ಅಶ್ವತ್ಥಾಮನೆಂದು ಹೆಸರಿಡಲು, ಅವನು ಹಾಗೆ ಪ್ರಸಿದ್ಧನಾದನು.
- ವ|| ಅಂತು ನೆಗೞ್ದು ತಮ್ಮಯ್ಯನ ಕೈಯೊಳ್ ಧನುರ್ವಿದ್ಯೋಪದೇಶದೊಳ್ ಧನುರ್ಧ ರಾಗ್ರಗಣ್ಯನುಮಾಗಿ ಸಂದಂ ದ್ರುಪದನುಂ ತನ್ನ ರಾಜ್ಯದೊಳ್ ನಿಂದಂ ದ್ರೋಣನುಂ ತನಗೆ ಬಡತನಮಡಸೆ ಅಶ್ವತ್ಥಾಮನನೊಡಗೊಂಡು ನಾಡು ನಾಡಂ ತೊೞಲ್ದು ಪರಶುರಾಮನಲ್ಲಿಗೆ ವಂದಂ-
- ವಚನ:ಪದವಿಭಾಗ-ಅರ್ಥ:ಅಂತು ನೆಗೞ್ದು ತಮ್ಮಯ್ಯನ (ತಂದೆಯ ಬಳಿ?)ಕೈಯೊಳ್ ಧನುರ್ವಿದ್ಯೆ ಉಪದೇಶದೊಳ್ ಧನುರ್ಧರ ಅಗ್ರಗಣ್ಯನುಮಾಗಿ ಸಂದಂ ದ್ರುಪದನುಂ ತನ್ನ ರಾಜ್ಯದೊಳ್ ನಿಂದಂ; ದ್ರೋಣನುಂ ತನಗೆ ಬಡತನಂ ಅಡಸೆ ಅಶ್ವತ್ಥಾಮನನು ಒಡಗೊಂಡು ನಾಡು ನಾಡಂ ತೊೞಲ್ದು (ಸುತ್ತಿ) ಪರಶುರಾಮನಲ್ಲಿಗೆ ವಂದಂ-
- ವಚನ:ಅರ್ಥ:ಹಾಗೆ ದ್ರೋಣ ಮತ್ತು ದ್ರುಪದರು ಬಿಲ್ಲುವಿದ್ಯೆಯಲ್ಲಿ ಮೊತ್ತಮೊದಲಿಗರಾಗಲು, ದ್ರುಪದನು ತನ್ನ ರಾಜ್ಯದಲ್ಲಿ ನಿಂತನು. ದ್ರೋಣನು ತನಗೆ ಬಡತನವು ಬರಲು ಅಶ್ವತ್ಥಾಮನನ್ನು ಕರೆದುಕೊಂಡು ದೇಶದೇಶಗಳನ್ನೆಲ್ಲ ಸುತ್ತಿ ಪರಶುರಾಮನ ಬಳಿಗೆ ಬಂದನು.
- ಚಂ|| ಕ್ಷಿತಿಯೊಳಗುಳ್ಳ ಭೂಭುಜರ ಬಿತ್ತು ಮೊದಲ್ಗಿಡೆ ಮುನ್ನಮೇಕವಿಂ
- ಶತಿ ಪರಿಸಂಖ್ಯೆಯಿಂ ತವಿಸಿ ಸರ್ವನಿವೇದಕಮೆಂಬ ಯಜ್ಞದೊಳ್|
- ಕ್ಷಿತಿ ಪೊಗೞ್ವನ್ನಮಿತ್ತು ಗುರುದಕ್ಷಿಣೆಯಾಗಿರೆ ಕಶ್ಯಪ ಪ್ರಜಾ
- ಪತಿಗೆ ಸಮುದ್ರಮುದ್ರಿತಧರಿತ್ರಿಯನೊಂದೞಿಯೂರನೀವವೋಲ್|| ೪೫ ||
- ಪದ್ಯ-೪೫:ಪದವಿಭಾಗ-ಅರ್ಥ:ಕ್ಷಿತಿಯೊಳಗೆ ಉಳ್ಳ (ಭೂಮಿಯಲ್ಲಿರುವ) ಭೂಭುಜರ ಬಿತ್ತು ಮೊದಲ್ ಕಿಡೆ (ರಾಜರ ಕ್ಷತ್ರಿಯರ ಬೀಜ ಮೊದಲ್- ಬೇರು ಸಹಿತ ನಾಶವಾಗುವಂತೆ) ಮುನ್ನಂ ಏಕವಿಂಶತಿ ಪರಿಸಂಖ್ಯೆಯಿಂ ತವಿಸಿ (ಮೊದಲು-ಹಿಂದೆ ಇಪ್ಪತ್ತೊಂದು ಸಾರಿ ಕ್ಷಯಿಸಿ/ ನಾಶಮಾಡಿ) ಸರ್ವನಿವೇದಕಮೆಂಬ ಯಜ್ಞದೊಳ್ (ಯಜ್ಞದಲ್ಲಿ) ಕ್ಷಿತಿ ಪೊಗೞ್ವನ್ನಂ ಇತ್ತು (ಭೂಮಿ ಹೊಗಳುವಂತೆ ಕೊಟ್ಟು) ಗುರುದಕ್ಷಿಣೆಯಾಗಿರೆ ಕಶ್ಯಪ ಪ್ರಜಾಪತಿಗೆ (ಕಶ್ಯಪ ಪ್ರಜಾಪತಿಗೆ ಗುರುದಕ್ಷಿಣೆಯಾಗಿ,) ಸಮುದ್ರ ಮುದ್ರಿತ ಧರಿತ್ರಿಯನು ಒಂದು ಅೞಿಯೂರನು ಈವವೋಲ್ (ಕಡಲಿನಿಂದ ಬಳಸಿದ ಭೂಮಿಯನ್ನು ಒಂದು ಕುಗ್ರಾಮವನ್ನು ಕೊಡುವಂತೆ ಕೊಟ್ಟನು.)
- ಪದ್ಯ-೪೫:ಅರ್ಥ:ಭೂಮಿಯಲ್ಲಿರುವ ರಾಜರು/ ಕ್ಷತ್ರಿಯರು ಬೇರುಸಹಿತ ನಾಶವಾಗುವಂತೆ ಹಿಂದೆ ಇಪ್ಪತ್ತೊಂದು ಸಲ ನಾಶಮಾಡಿ, ಲೋಕವೇ ಹೊಗಳುವಂತೆ ಸರ್ವನಿವೇದಕವೆಂಬ ಯಜ್ಞವನ್ನು ಮಾಡಿ ಅದರಲ್ಲಿ ಕಶ್ಯಪ ಪ್ರಜಾಪತಿಯೆಂಬ ಬ್ರಹ್ಮಋಷಿಗೆ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಅಖಂಡ ಭೂಮಂಡಲವನ್ನು ಒಂದು ಕುಗ್ರಾಮವನ್ನು ಕೊಡುವಂತೆ ಗುರುದಕ್ಷಿಣೆಯಾಗಿ ಪರಷುರಾಮನು ಕೊಟ್ಟನು.
- ವ|| ಅಂತು ವಲ್ಕಲಾವೃತ ಕಟಿತಟನುಮಾಗಿರ್ದ ಜಟಾಕಲಾಪನುಮಾಗಿ ತಪೋವನಕ್ಕೆ ಪೋಪ ಭಾರ್ಗವಂ ದ್ರವ್ಯಾರ್ಥಿಯಾಗಿ ಬಂದ ಕುಂಭಸಂಭವನಂ ಕಂಡು ಕನಕ ಪಾತ್ರಕ್ಕುಪಾಯಮಿಲ್ಲಪ್ಪುದಱಿಂ ಮೃತ್ಪಾತ್ರದೊಳರ್ಘ್ಯಮೆತ್ತಿ ಪೂಜಿಸಿ-
- ವಚನ:ಪದವಿಭಾಗ-ಅರ್ಥ:ಅಂತು (ಹಾಗೆ) ವಲ್ಕಲ ಆವೃತ ಕಟಿತಟನುಂ ಆಗಿರ್ದ (ನಾರು ಮಡಿಯನ್ನು ಸುತ್ತಿದ ಸೊಂಟವುಳ್ಳ) ಜಟಾಕಲಾಪನುಂ ಆಗಿ ತಪೋವನಕ್ಕೆ ಪೋಪ ಭಾರ್ಗವಂ (ಅನೇಕ ಜಟೆಗಳನ್ನುಳ್ಳವನಾಗಿ ಪರಷುರಾಮನು (ಅಲ್ಲಿಗೆ ಹೋದ) ದ್ರವ್ಯಾರ್ಥಿಯಾಗಿ ಬಂದ ಕುಂಭಸಂಭವನಂ ಕಂಡು (ಆ ಪರಶುರಾಮನು ದ್ರವ್ಯವನ್ನು ಬೇಡುವುದಕ್ಕಾಗಿ ಬಂದ ದ್ರೋಣನನ್ನು ಕಂಡು) ಕನಕ ಪಾತ್ರಕ್ಕೆ ಉಪಾಯಂ ಇಲ್ಲಪ್ಪುದಱಿಂ ಮೃತ್ಪಾತ್ರದೊಳು ಅರ್ಘ್ಯಂ ಎತ್ತಿ ಪೂಜಿಸಿ (ಚಿನ್ನದ ಪಾತ್ರೆಗಳು ಇಲ್ಲದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಘ್ಯವನ್ನು ಕೊಟ್ಟು ಪೂಜಿಸಿ,)-
- ವಚನ:ಅರ್ಥ:ಹಾಗೆ ನಾರು ಮಡಿಯನ್ನು ಸುತ್ತಿದ ಸೊಂಟವುಳ್ಳ, ಅನೇಕ ಜಟೆಗಳನ್ನುಳ್ಳವನಾಗಿ ಆ ಪರಶುರಾಮನು ದ್ರವ್ಯವನ್ನು ಬೇಡುವುದಕ್ಕಾಗಿ ಬಂದ ದ್ರೋಣನನ್ನು ಚಿನ್ನದ ಪಾತ್ರೆಗಳು ಇಲ್ಲದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಘ್ಯವನ್ನು ಕೊಟ್ಟು ಪೂಜಿಸಿ, (ಪೂಜಿಸಿದನು).
- ಚಂ|| ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂ
- ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ
- ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ
- ಲ್ಲೊಡಮೆ ಸಮಂತು ಪೇೞಿವರೊಳಾವುದನೀವುದೊ ಕುಂಭಸಂಭವಾ|| ೪೬||
- ಪದ್ಯ-೦೦:ಪದವಿಭಾಗ-ಅರ್ಥ:ಒಡವೆಯನು ಅರ್ಥಿಗೆ ಇತ್ತೆಂ ಅವನೀತಳಮಂ ಗುರುಗಿತ್ತೆನು. ಈಗಳು ಒಂದು ಅಡಕೆಯುಂ ಇಲ್ಲ ಕೈಯೊಳು;(ನನ್ನ ವಸ್ತುಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು. ಭೂಮಂಡಲವನ್ನು ಗುರುವಿಗೆ ಕೊಟ್ಟೆನು. ಈಗ ನನ್ನಲ್ಲಿ ಒಂದು ಅಡಕೆಯೂ ಇಲ್ಲ.) ಎರೆದಂ (ಎರವಲಿಗೆ- ಕೇಳಲು ಬಂದವನು) ಶ್ರುತಪಾರಗನು ಎಂತು ಸಂತಸಂ ಬಡಿಸುವೆನು? ಇನ್ನು ಇದು ಒಂದು ಧನುವಿರ್ದುದು ದಿವ್ಯಶರಾಳಿಯಿರ್ದುದು; ಇಲ್ಲ ಒಡಮೆ (ಎರವಲು ಕೇಳುವವನಾದರೋ ವೇದಪಾರಂಗತನು; ಹೇಗೆ ಅವನನ್ನು ಸಂತೋಷಪಡಿಸಲಿ? ‘ ಈಗ ಇದೊಂದು ಬಿಲ್ಲೂ ಇದೊಂದು ದಿವ್ಯಾಸ್ತ್ರಗಳ ಸಮೂಹವೂ ಇದೆ. ಬೇರೆ ಆಸ್ತಿಯಿಲ್ಲ.) ಸಮಂತು ಪೇೞ ಆವರೊಳ್ (ಅವುಗಳಲ್ಲಿ) ಆವುದನು ಈವುದೊ ಕುಂಭಸಂಭವಾ (ಎಲೈ ದ್ರೋಣನೆ ಇವುಗಳಲ್ಲಿ ನಿನಗೆ ಯಾವುದನ್ನು ಕೊಡಲಿ? ಚೆನ್ನಾಗಿ ಯೋಚಿಸಿ ಹೇಳು)
- ಪದ್ಯ-೦೦:ಅರ್ಥ:. ನನ್ನ ವಸ್ತುಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು. ಭೂಮಂಡಲವನ್ನು ಗುರುವಿಗೆ ಕೊಟ್ಟೆನು. ಈಗ ನನ್ನಲ್ಲಿ ಒಂದು ಅಡಕೆಯೂ ಇಲ್ಲ. ಎರವಲು ಕೇಳುವವನಾದರೋ ವೇದಪಾರಂಗತನು; ಹೇಗೆ ಅವನನ್ನು ಸಂತೋಷಪಡಿಸಲಿ? ‘ಎಲೈ ದ್ರೋಣನೆ ಈಗ ಇದೊಂದು ಬಿಲ್ಲೂ ಇದೊಂದು ದಿವ್ಯಾಸ್ತ್ರಗಳ ಸಮೂಹವೂ ಇದೆ. ಬೇರೆ ಆಸ್ತಿಯಿಲ್ಲ. ಇವುಗಳಲ್ಲಿ ನಿನಗೆ ಯಾವುದನ್ನು ಕೊಡಲಿ? ಚೆನ್ನಾಗಿ ಯೋಚಿಸಿ ಹೇಳು, ಎಂದನು ಪರಷುರಾಮ.
- ವ|| ಎಂಬುದು ದ್ರೋಣನೆನಗೆ ವಿದ್ಯಾಧನಮೆ ಧನಮಪ್ಪುದಱಿಂ ದಿವ್ಯಾಸ್ತ್ರಂಗಳಂ ದಯೆಗೆಯ್ವುದೆನೆ ವಾರಣ ವಾಯವ್ಯಾಗ್ನೇಯ ಪೌರಂದರಾದಿ ಪ್ರಧಾನಾಸ್ತ್ರಂಗಳಂ ಕುಡೆ ಕೊಂಡು ಪರಶುರಾಮನಂ ಬೀೞ್ಕೊಂಡು ತನ್ನೊಡನಾಡಿಯಪ್ಪ ಕೆಳೆಯಂ ದ್ರುಪದಂ ಛತ್ರಾವತಿಯೊಳರಸು ಗೆಯ್ದಪನೆಂದು ಕೇಳ್ದಾ ಪೊೞಲ್ಗೆವಂದು ದ್ರುಪದನರಮನೆಯ ಬಾಗಿಲೊಳ್ ನಿಂದು ಪಡಿಯಱನಂ ಕರೆದು ನಿಮ್ಮೊಡನಾಡಿದ ಕೆಳೆಯಂ ದ್ರೋಣನೆಂಬ ಪಾರ್ವಂ ಬಂದನೆಂದು ನಿಮ್ಮರಸಂಗಱಿಯೆ ಪೇೞೆಂಬುದುಮಾತನಾ ಮಾೞ್ಕೆಯೊಳೆ ಬಂದಱಿಪುವುದುಂ ದ್ರುಪದಂ ರಾಜ್ಯಮದಿರಾ ಮದೋನ್ಮತ್ತನುಂ ಗರ್ವಗ್ರಹ ವ್ಯಗ್ರಚಿತ್ತನುಮಾಗಿ ಮೇಗಿಲ್ಲದೆ-
- ವಚನ:ಪದವಿಭಾಗ-ಅರ್ಥ:ಎಂಬುದು ದ್ರೋಣನು ಎನಗೆ ವಿದ್ಯಾಧನಮೆ ಧನಂ ಅಪ್ಪುದಱಿಂ ದಿವ್ಯಾಸ್ತ್ರಂಗಳಂ ದಯೆಗೆಯ್ವುದು (ಕೊಡುವುದು)ಎನೆ, ವಾರಣ ವಾಯವ್ಯ ಆಗ್ನೇಯ ಪೌರಂದರ ಆದಿ ಪ್ರಧಾನಾಸ್ತ್ರಂಗಳಂ ಕುಡೆ (ಐಂದ್ರಾದಿ ಅಸ್ತ್ರಗಳನ್ನು ಕೊಡಲು ) ಕೊಂಡು ಪರಶುರಾಮನಂ ಬೀೞ್ಕೊಂಡು ತನ್ನ ಒಡನಾಡಿಯಪ್ಪ ಕೆಳೆಯಂ (ಒಡನಾಡಿಯಾದ ಗೆಳೆಯ) ದ್ರುಪದಂ ಛತ್ರಾವತಿಯೊಳು ಅರಸು ಗೆಯ್ದಪನೆಂದು ಕೇಳ್ದು ಆ ಪೊೞಲ್ಗೆವಂದು (ಆ ನಗರಕ್ಕೆ ಬಂದು) ದ್ರುಪದನ ಅರಮನೆಯ ಬಾಗಿಲೊಳ್ ನಿಂದು ಪಡಿಯಱನಂ ಕರೆದು ನಿಮ್ಮೊಡನಾಡಿದ ಕೆಳೆಯಂ ದ್ರೋಣನೆಂಬ ಪಾರ್ವಂ ಬಂದನೆಂದು ನಿಮ್ಮ ಅರಸಂಗೆ ಅಱಿಯೆ ಪೇೞು (ತಿಳಿಯುವಂತೆ ಹೇಳು),ಎಂಬುದುಂ ಆತನು ಆ ಮಾೞ್ಕೆಯೊಳೆ ಬಂದು ಅಱಿಪುವುದುಂ (ಹೇಳಲು) ದ್ರುಪದಂ ರಾಜ್ಯಮದಿರಾ ಮದೋನ್ಮತ್ತನುಂ (ರಾಜ್ಯವೆಂಬ ಮದ್ಯದಿಂದ ಸೊಕ್ಕಿದವನೂ) ಗರ್ವಗ್ರಹ ವ್ಯಗ್ರಚಿತ್ತನುಂ ಆಗಿ ಮೇಗಿಲ್ಲದೆ(ಮೇಗು-ಉತ್ತಮ ನಡತೆ ಇಲ್ಲದೆ)
- ವಚನ:ಅರ್ಥ:ಎಂಬುದಾಗಿ ಹೇಳಲು ದ್ರೋಣನು, ತನಗೆ ವಿದ್ಯಾಧನವೇ ಧನವಾಗಿರುವುದರಿಂದ ಆ ದಿವ್ಯಾಸ್ತ್ರಗಳನ್ನು ಕೊಡಬೇಕು ಎನ್ನಲು, ವಾರುಣ, ವಾಯುವ್ಯ, ಆಗ್ನೇಯ, ಐಂದ್ರಾದಿ ಅಸ್ತ್ರಗಳನ್ನು ಕೊಡಲು ಅದನ್ನು ತೆಗೆದುಕೊಂಡು, ಪರಶುರಾಮನಿಂದ ಅಪ್ಪಣೆ ಪಡೆದು ತನ್ನ ಒಡನಾಡಿಯೂ ಗೆಳೆಯನೂ ಆದ ದ್ರುಪದನು ಛತ್ರಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾನೆಂದು ಕೇಳಿ ಆ ಪಟ್ಟಣಕ್ಕೆ ಬಂದು, ದ್ರುಪದನ ಅರಮನೆಯ ಬಾಗಿಲಲ್ಲಿ ನಿಂತು ಕಾವಲಿನವನನ್ನು ಕರೆದು, 'ನಿಮ್ಮ ಒಡನಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು', ಎಂದನು. ಅವನು ಆ ರೀತಿಯಲ್ಲಿಯೇ ಬಂದು ತಿಳಿಸಲಾಗಿ, ದ್ರುಪದನು ರಾಜ್ಯವೆಂಬ ಮದ್ಯದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ ಪೀಡಿತನಾದ ಮನಸ್ಸುಳ್ಳವನೂ ಆಗಿ ಉತ್ತಮ ನಡತೆಯಿಲ್ಲದೆ:-
- ಕಂ|| ಅಂತೆಂಬನಾರ್ಗೆ ಪಿರಿದುಂ
- ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ|
- ೞೆಂತೆನಗೆ ಕೆಳೆಯನೇ ನೂಂ
- ಕಂತಪ್ಪನನಱಿಯೆನೆಂದು ಸಭೆಯೊಳ್ ನುಡಿದಂ|| ೪೭ ||
- ಪದ್ಯ-೦೦:ಪದವಿಭಾಗ-ಅರ್ಥ:ಅಂತೆಂಬನು ಆರ್ಗೆ (ಅಂತು ಎಂಬನು,ಹಾಗೆ ಹೇಳುವವನು ಯಾವನು?) ಪಿರಿದುಂ ಭ್ರಾಂತು ದಲ್ ಏಂ(ಇದು ದೊಡ್ಡ ಭ್ರಮೆಯಲ್ಲವೇ?) ದ್ರೋಣನೆಂಬನ್ ಏಂ ಪಾರ್ವನೆ ಪೇೞು ಎಂತು ಎನಗೆ ಕೆಳೆಯನೇ (ದ್ರೋಣನೆಂಬುವವನು ಏನು ಬ್ರಾಹ್ಮಣನೇ? ಹೇಳು, ಏನು ನನಗೆ ಗೆಳೆಯನೇ!) ನೂಂಕು ಅಂತಪ್ಪನನು ಅಱಿಯೆನು ಎಂದು ಸಭೆಯೊಳ್ ನುಡಿದಂ( ನೂಕು! ಅಂತಹವನನ್ನು ನಾನು ತಿಳಿದಿಲ್ಲ ; ಅವನನ್ನು ಹೊರಕ್ಕೆ ನೂಕು!’ ಎಂದು ಸಭಾಮಧ್ಯದಲ್ಲಿ ದ್ರುಪದನು ಹೇಳಿದನು.)
- ಪದ್ಯ-೦೦:ಅರ್ಥ:. ಹಾಗೆ ಹೇಳುವವನು ಯಾವನು? ಇದು ದೊಡ್ಡ ಭ್ರಮೆಯಲ್ಲವೇ? ದ್ರೋಣನೆಂಬುವವನು ಏನು ಬ್ರಾಹ್ಮಣನೇ? ಹೇಳು, ಏನು ನನಗೆ ಗೆಳೆಯನೇ! ನೂಕು! ಅಂತಹವನನ್ನು ನಾನು ತಿಳಿದಿಲ್ಲ ; ಅವನನ್ನು ಹೊರಕ್ಕೆ ನೂಕು!’ ಎಂದು ಸಭಾಮಧ್ಯದಲ್ಲಿ ದ್ರುಪದನು ಹೇಳಿದನು.
- ವ|| ಅಂತು ನುಡಿದುದಂ ಪಡಿಯಱಂ ಬಂದಾ ಮಾೞ್ಕೆಯೊಳಱಿಪೆ ದ್ರೋಣನೊತ್ತಂಬದಿಂದೊಳಗಂ ಪೊಕ್ಕು ದ್ರುಪದನಂ ಕಂಡು-
- ವಚನ:ಪದವಿಭಾಗ-ಅರ್ಥ: ಅಂತು ನುಡಿದುದಂ ಪಡಿಯಱಂ (ಕಾವಲುಗಾರನು) ಬಂದು ಆ ಮಾೞ್ಕೆಯೊಳು ಅಱಿಪೆ (ಅದೇ ರೀತಿಯಲ್ಲಿ ಹೇಳಲು) ದ್ರೋಣನು ಒತ್ತಂಬದಿಂದ ಒಳಗಂ ಪೊಕ್ಕು(ಒತ್ತಾಯದಿಂದ ಒಳಗೆ ಹೊಕ್ಕು) ದ್ರುಪದನಂ ಕಂಡು-
- ವಚನ:ಅರ್ಥ:ವ|| ಆ ರೀತಿ ಹೇಳಿದುದನ್ನು ಕಾವಲಿನವನು ಬಂದು, ಅದೇ ಕ್ರಮದಲ್ಲಿ ತಿಳಿಸಲಾಗಿ ದ್ರೋಣನು ಒತ್ತಾಯದಿಂದ ಒಳಕ್ಕೆ ಪ್ರವೇಶಿಸಿ ದ್ರುಪದನನ್ನು ನೋಡಿ-
- ಚಂ|| ಅಱಿಯಿರೆ ನೀಮುಮಾಮುಮೊಡನೋದಿದೆವೆಂಬುದನಣ್ಣ ನಿನ್ನನಾ
- ನಱಿಯೆನದೆಲ್ಲಿ ಕಂಡೆಯೊ ಮಹೀಪತಿಗಂ ದ್ವಿಜವಂಶಜಂಗಮೇ|
- ತಱ ಕೆಳೆಯಿಂತು ನಾಣಿಲಿಗರಪ್ಪರೆ ಮಾನಸರೆಂಬ ಮಾತುಗಳ್
- ನೆಱಗೊಳೆ ಕುಂಭಸಂಭವನನಾ ದ್ರುಪದಂ ಕಡು ಸಿಗ್ಗು ಮಾಡಿದಂ|| ೪೮ ||
- ಪದ್ಯ-೦೦:ಪದವಿಭಾಗ-ಅರ್ಥ:ಅಱಯಿರೆ (ತಿಳಿಯಿರೇ?) ನೀಮುಂ ಆಮಾಮುಂ ಒಡನೋದಿದೆವು ಎಂಬುದನು ಅಣ್ಣ; ನಿನ್ನ ನಾನು ಅಱಯೆನು ಅದೆಲ್ಲಿ ಕಂಡೆಯೊ ಮಹೀಪತಿಗಂ ದ್ವಿಜವಂಶಜಂಗಂ ಏಂ ಏತಱ ಕೆಳೆಯಿಂತು (ರಾಜನಿಗೂ ದ್ವಿಜನಿಗೂ ಏತರ ಗೆಳೆತನ?); ನಾಣಿಲಿಗರು ಅಪ್ಪರೆ ಮಾನಸರು(ಮಾನವರು ನಾಚಿಕೆ ಇಲ್ಲದವರು ಆಗುವರೇ?) ಎಂಬ ಮಾತುಗಳ್ ನೆಱಗೊಳೆ ಕುಂಭಸಂಭವನನು ಆ ದ್ರುಪದಂ ಕಡು ಸಿಗ್ಗು ಮಾಡಿದಂ(ಈ ಮಾತುಗಳು ಮರ್ಮವನ್ನು ಭೇದಿಸಲು, ದ್ರೋಣನನ್ನು ಬಹಳ ಹೀಯ್ಯಾಳಿಸಿದನು)
- ಪದ್ಯ-೦೦:ಅರ್ಥ:ದ್ರೋಣನು, ‘ಅಣ್ಣಾ ನೀನೂ ನಾನೂ ಜೊತೆಯಲ್ಲಿ ಓದಿದೆವು ಎಂಬುದನ್ನು ತಿಳಿದಿಲ್ಲವೇ?’ ಎನ್ನಲು ದ್ರುಪದನು ನಿನ್ನನ್ನು ನಾನು ತಿಳಿದಿಲ್ಲ! ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ? ರಾಜನಿಗೂ ಬ್ರಾಹ್ಮಣನಿಗೂ ಯಾವ ಬಗೆಯ ಗೆಳೆತನ? ಮಾನವರು ನಾಚಿಕೆ ಇಲ್ಲದವರು ಆಗುವರೇ? ಎಂಬ ಈ ಮಾತುಗಳು ಅವನನ್ನು ಮರ್ಮವನ್ನು ಭೇದಿಸಲು, ದ್ರೋಣನನ್ನು ಬಹಳ ಹೀಯ್ಯಾಳಿಸಿದನು. ದ್ರೋಣನು ಬಹಳ ಅವಮಾನಿತನಾದನು.
- ವ|| ಅಂತು ಮಾಡಿದುದುಮಲ್ಲದೀ ನಾಣಿಲಿ ಪಾರ್ವನೆೞೆದು ಕಳೆಯಿಮೆಂಬುದುಂ ದ್ರೋಣ ನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಅಂತು ಮಾಡಿದುದುಂ ಅಲ್ಲದೆ ಈ ನಾಣಿಲಿ (ನಾಚಿಕೆ ಇಲ್ಲದ) ಪಾರ್ವನ ಎೞೆದು ಕಳೆಯಿಂ ಎಂಬುದುಂ ದ್ರೋಣ ನಿಂತೆಂದಂ
- ವಚನ:ಅರ್ಥ:ಹಾಗೆ ಮಾಡಿದುದೂ ಅಲ್ಲದೆ ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು ನೂಕು ಎನ್ನಲು ದ್ರೋಣನು ಹೀಗೆಂದನು-
- ಚಂಚಂ|| ನುಡಿ ತಡವಪ್ಪುದೊಂದು ಮೊಗದೊಳ್ ಮುಱುಕಂ ದೊರೆಕೊಳ್ವುದೊಂದು ನಾ
- ಣ್ಗೆಡೆಗುಡದಿರ್ಪುದೊಂದು ನುಡಿಗಳ್ ಮೊರೆಯಂ ಮರೆಯಿಪ್ಪುದೊಂದು ಕ|
- ಳ್ಗುಡಿದವರಂದಮಿಂತು ಸಿರಿ ಸಾರ್ತರೆ ಸಾರ್ವುದದರ್ಕೆ ಸಂದೆಯಂ
- ಬಡದೆ ಜಗಕ್ಕನೀಗಳಱಿದೆಂ ಸಿರಿ ಕಳ್ಳೊಡವುಟ್ಟಿತೆಂಬುದಂ|| ೪೯ ||
- ಪದ್ಯ-೦೦:ಪದವಿಭಾಗ-ಅರ್ಥ:ಚಂ|| ನುಡಿ ತಡವಪ್ಪುದು ಒಂದು (ಮಾತಿನಲ್ಲಿ ತೊದಲುವುದು ಒಂದು;) ಮೊಗದೊಳ್ ಮುಱುಕಂ ದೊರೆಕೊಳ್ವುದು ಒಂದು (ಮುಖದಲ್ಲಿ ವಕ್ರಚೇಷ್ಟೆಯಾಗುವುದು ಒಂದು;), ನಾಣ್ಗೆ ಗುಡದಿರ್ಪುದೊಂದು (ನಾಚಕೆಗೆ ಅವಕಾಶಕೊಡದಿರುವುದು ಒಂದು), ನುಡಿಗಳ್ ಮೊರೆಯಂ ಮರೆಯಿಪ್ಪುದೊಂದು, (ಮಾತಿನಲ್ಲಿ ಬಾಂಧವ್ಯವನ್ನು ಮರೆಯುವುದು ಒಂದು), ಕಳ ಕುಡಿದವರಂದಂ ಇಂತು (ಹೆಂಡಕುಡಿದವರ ರೀತಿ) ಸಿರಿ ಸಾರ್ತರೆ (ಸಂಪತ್ತು ಬಂದರೆ)ಸಾರ್ವುದು ಅದರ್ಕೆ(ಬರುತ್ತದೆ ಅದಕ್ಕೆ) ಸಂದೆಯಂಬಡದೆ (ಸಂದೇಹವಿಲ್ಲದೆ) ಜಗಕ್ಕನೆ/ಜಲಕ್ಕನೆ(ವಿವರವಾಗಿ) ಈಗಳ್ ಅಱಿದೆಂ ಸಿರಿ ಕಳ್ಳ ಒಡವುಟ್ಟಿತು ಎಂಬುದಂ (ಸಿರಿ ಲಕ್ಷ್ಮಿ ಯು ಮದ್ಯದೊಡನೆ ಹುಟ್ಟಿತು ಎಂಬುದನ್ನು ಈಗ ವಿವರವಾಗಿ ತಿಳಿದೆನು, ಎಂದನು ದ್ರೋಣ )
- ಪದ್ಯ-೦೦:ಅರ್ಥ:ಐಶ್ವರ್ಯ ಬಂದಾಗ ಮದ್ಯಪಾನ ಮಾಡಿದವರಂತೆ ಮಾತು ತೊದಲುವುದು; ಮುಖದಲ್ಲಿ ವಕ್ರಚೇಷ್ಟೆಯುಂಟಾಗುವುದು; ಮಾತುಗಳು ನಾಚಿಕೆಯಿಲ್ಲದಾಗುವುವು; ಮಾತಿನಲ್ಲಿ ಬಾಂಧವ್ಯವನ್ನು ಮರೆಯುವುದು - ಮರೆಯುವಂತೆ ಮಾಡುವುದು; ಆದುದರಿಂದ ಐಶ್ವರ್ಯವು ಕಳ್ಳಿನೊಡನೆ ಹುಟ್ಟಿತು ಎಂಬುದನ್ನು ಸಂದೇಹವಿಲ್ಲದೆ ಈಗ ವಿವರವಾಗಿ ತಿಳಿದೆನು’
- ವ|| ಎಂದು ಸೈರಿಸದೆ-
- ವಚನ:ಅರ್ಥ:ಎಂದು ಹೇಳಿ ಸಹಿಸಲಾರದೆ.
- ಚಂ|| ಖಳ ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ
- ದಳವೊಡನೋದಿದೊಂದು ಬೆರಗಿಂಗೆ ಕೊಲಲ್ಕೆನಗಾಗದೀ ಸಭಾ|
- ವಳಯದೊಳೆನ್ನನೇೞಿಸಿದ ನಿನ್ನನನಾಕುಳಮೆನ್ನ ಚಟ್ಟರಿಂ
- ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ|| ೫೦||
- ಪದ್ಯ-೦೦:ಪದವಿಭಾಗ-ಅರ್ಥ:ಖಳ ನೊಳವಿಂಗೆ ಕುಪ್ಪೆ ವರಂ ಎಂಬವೊಲು (ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದದ್ದು ಎನ್ನುವ ಗಾದೆಯಂತೆ) ಆಂಬರಂ ಉಂಟೆ ನಿನ್ನದು ಒಂದು ಅಳವು(ನಿನ್ನ ಸಾಮರ್ಥ್ಯ ನನ್ನವರೆಗೂ ಉಂಟೆ?) ಒಡನೋದಿದ ಒಂದು ಬೆರಗಿಂಗೆ ಕೊಲಲ್ಕೆ ಎನಗೆ ಆಗದು. (ಜೊತೆಯಲ್ಲಿ ಓದಿದೆನೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ) ಈ ಸಭಾವಳಯದೊಳ್ ಎನ್ನನು ಏೞಿಸಿದ ನಿನ್ನಂ (ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು) ಆನಾಕುಳಂ (ಅನಾಯಾಸವಾಗಿ) ಎನ್ನ ಚಟ್ಟರಿಂ (ಶಿಷ್ಯರಿಂದ) ತಳವೆಳಗಾಗೆ ಕಟ್ಟಿಸದೆ ಮಾಣ್ದೊಡೆ ಕೆಮ್ಮನೆ ಮೀಸೆವೊತ್ತೆನೇ! (ಅನಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ? )
- ಪದ್ಯ-೦೦:ಅರ್ಥ:ಎಂದು ಹೇಳಿ ಸಹಿಸಲಾರದೆ. ೫೦. ‘ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದದ್ದು ಎನ್ನುವ ಗಾದೆಯಂತೆ, ನಿನ್ನ ಸಾಮರ್ಥ್ಯ ನನ್ನವರೆಗೂ (ನನಗೆ ಸರಿಸಮಾನ) ಉಂಟೆ? ಜೊತೆಯಲ್ಲಿ ಓದಿದೆನೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ಅನಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ! ಎಂದು ದ್ರೋಣನು ಪ್ರತಿಜ್ಞೆಮಾಡಿ
- ವ|| ಎಂದಾರೂಢಪ್ರತಿಜ್ಞನಾಗಿ ನಾಗಪುರಕ್ಕೆ ವಂದು ತಮ್ಮ ಭಾವಂ ಕೃಪನ ಮನೆಯೊಳಪ ಗತಪರಿಶ್ರಮನಾಗಿರ್ದೊಂದು ದಿವಸಂ ಪಾಂಡವರುಂ ಕೌರವರುಂ ಪೊಱಪೊೞಲೊಳ್-
- ವಚನ:ಪದವಿಭಾಗ-ಅರ್ಥ:ಎಂದು ಆರೂಢಪ್ರತಿಜ್ಞನಾಗಿ ನಾಗಪುರಕ್ಕೆ ವಂದು ತಮ್ಮ ಭಾವಂ ಕೃಪನ ಮನೆಯೊಳು ಅಪಗತಪರಿಶ್ರಮನಾಗಿರ್ದು ಒಂದು ದಿವಸಂ ಪಾಂಡವರುಂ ಕೌರವರುಂ ಪೊಱಪೊೞಲೊಳ್-
- ವಚನ:ಅರ್ಥ:ಎಂದು ಪಣತೊಟ್ಟವನಾಗಿ ಹಸ್ತಿನಾಪುರಕ್ಕೆ ಬಂದು ತನ್ನ ಭಾವನಾದ ಕೃಪನ ಮನೆಯಲ್ಲಿ ಶ್ರಮಪರಿಹಾರಮಾಡಿಕೊಂಡು ಇದ್ದನು. ಒಂದು ದಿನ ಪಾಂಡವರೂ ಕೌರವರೂ ಪಟ್ಟಣದ ಹೊರಭಾಗದಲ್ಲಿ ಬಿಲ್ಲುಗಾರಿಕೆ ಅಭ್ಯಾಸಮಾಡುತ್ತಿದ್ದರು.
ಕೌರವ ಪಾಂಡವರಿಗೆ ದ್ರೋಣನು ಗುರುವಾದುದು
|
- ಕಂ|| ನೆರೆದಿಸುತಿರೆ ತೋಲ್ವುಲ್ಲೆಯ
- ನಿರದದು ಬಿೞ್ದೊಡೆ ಪುರಾಣ ಕೂಪದೊಳದನಿ|
- ನ್ನರಿದು ತೆಗೆವಂದಮೆಂದವ
- ರಿರೆ ಬಳಸಿಯುಮಲ್ಲಿ ಕಂಡು ನಕ್ಕಂ ದ್ರೋಣಂ|| ೫೧|| 51||
- ಪದ್ಯ-೦೦:ಪದವಿಭಾಗ-ಅರ್ಥ: ನೆರೆದು (ಕೌರವ ಪಾಂಡವರು ಸೇರಿ) ಇಸುತಿರೆ (ಬಾಣದಿಂದ ಹೊಡೆಯುತ್ತಿರಲು) ತೋಲ್ವ ಉಲ್ಲೆಯನು (ತೊಗಲಿನ ಹುಲ್ಲೆಯನ್ನು) ಇರದೆ ಅದು ಬಿೞ್ದೊಡೆ ಪುರಾಣ ಕೂಪದೊಳು (ಅದು ಹಳೆಯ ಬಾವಿಯಲ್ಲಿ ಬೀಳಲು;) ಅದನು ಇನ್ನು ಅರಿದು ತೆಗೆವಂದಮಂ ಎಂದು ಅವರು ಇರೆ (ಅದನ್ನು ಇನ್ನು ಮೇಲಕ್ಕೆ ತೆಗೆಯುವ ರೀತಿ ಅರಿದು ಅಸಾಧ್ಯವು,ಎಂದು ಅವರು ಇರಲಾಗಿ,) ಬಳಸಿಯುಂ ಅಲ್ಲಿ ಕಂಡು ನಕ್ಕಂ ದ್ರೋಣಂ(ಅಲ್ಲಿ ಸುತ್ತಾಡುತ್ತಿದ್ದ ದ್ರೋಣನು ಅದನ್ನು ಕಂಡು ನಕ್ಕನು).
- ಪದ್ಯ-೦೦:ಅರ್ಥ:ಕೌರವ ಪಾಂಡವರು ಸೇರಿ, ಚಕ್ಕಳದ ಜಿಂಕೆಯೊಂದನ್ನು ಬಾಣಗಳಿಂದ ಹೊಡೆಯುತ್ತಿರಲು ಅದು ಹಳೆಯ ಬಾವಿಯಲ್ಲಿ ಬೀಳಲು; ದನ್ನು ಇನ್ನು ಮೇಲಕ್ಕೆ ತೆಗೆಯುವ ರೀತಿ ಅರಿದು (ಅರಿಯದು) ಅಸಾಧ್ಯವು, ಎಂದು ಅವರು ಇರಲಾಗಿ, ಅಲ್ಲಿ ಸುತ್ತಾಡುತ್ತಿದ್ದ ದ್ರೋಣನು ಅದನ್ನು ಕಂಡು ನಕ್ಕನು.
- ಭರತಕುಳತಿಳಕರಿರ್ ವರ
- ಶರಾಸನ ವ್ಯಗ್ರಹಸ್ತರಿರ್ ಬಳಯುತರಿರ್|
- ನೆರೆದಿನಿಬರುವೀ ಲಕ್ಷ್ಯಮ
- ನಿರದಕ್ಕಟ ಸರದೆ ತೆಗೆಯಲಾರ್ತಿರುಮಿಲ್ಲಾ|| ೫೨|| 52||
- ಪದ್ಯ-೦೦:ಪದವಿಭಾಗ-ಅರ್ಥ:ಭರತಕುಳತಿಳಕರಿರ್, ವರಶರಾಸನ ವ್ಯಗ್ರಹಸ್ತರಿರ್, ಬಳಯುತರಿರ್, ನೆರೆದ ಇನಿಬರುಂ ಈ ಲಕ್ಷ್ಯಮನು ಇರದೆ (ನೀವಿಷ್ಟು ಜನರೂ ಒಟ್ಟಾಗಿ ಈ ಗುರಿಯನ್ನು) ಅಕ್ಕಟ ಸರದೆ ತೆಗೆಯಲು ಆರ್ತಿರುಂ ಇಲ್ಲಾ (ಬಾಣದಿಂದ ಮೇಲಕ್ಕೆ ತೆಗೆಯಲು ಸಮರ್ಥರಾಗಲಿಲ್ಲವೆ).
- ಪದ್ಯ-೦೦:ಅರ್ಥ:‘ಭರತವಂಶತಿಲಕರು ಆಗಿದ್ದೀರಿ; ಬಿಲ್ಲು ವಿದ್ಯೆಯಲ್ಲಿ ಪರಿಣತರಾಗಿದ್ದೀರಿ; ಬಲಿಷ್ಠರಾಗಿದ್ದೀರಿ; ನೀವಿಷ್ಟು ಜನರೂ ಒಟ್ಟಾಗಿ ಈ ಗುರಿಯನ್ನು (ಚಕ್ಕಳದ ಜಿಂಕೆಯನ್ನು) ಅಕ್ಕಟಾ! ಬಾಣದಿಂದ ಮೇಲಕ್ಕೆ ತೆಗೆಯಲು ಸಮರ್ಥರಾಗಲಿಲ್ಲವೆ ?
- ವ|| ಎಂದು ತನ್ನ ಮಗನಪ್ಪಶ್ವತ್ಥಾಮನಂ ಕರೆದೀ ಲಕ್ಷ್ಯಮಂ ತೆಗೆಯೆಂಬುದುಮಾತನಂತೆ ಗೆಯ್ವೆನೆಂದು ನೈಷ್ಠಿಕಮೆಂಬ ಮುಷ್ಟಿಯೊಳಂ ಪುಂಖಾನುಪುಂಖಮೆಂಬ ಶರಸಂಧಾನದೊಳವಯವದೊಳೆ ತೆಗೆದೊಡನಿಬರುಂ ಚೋದ್ಯಂಬಟ್ಟು ಗಾಂಗೇಯ ಧೃತರಾಷ್ಟ್ರರ್ಗಱಿಪಿದೊಡೆ ನದೀತನೂಜಂ ಭಾರದ್ವಾಜಂಗೆ ಬೞಿಯನಟ್ಟಿ ಬರಿಸಿ ಪೂರ್ವ ಸಂಭಾಷಣಾರ್ಘ್ಯಮೆತ್ತಿ ಮಧುಪರ್ಕ ವೇತ್ರಾಸನ ತಾಂಬೂಲದಾನಿಗಳಿಂ ಸಂತಸಂಬಡಿಸಿ ತದೀಯ ಕುಲ ವಿದ್ಯಾವೃತ್ತಿಗಳಂ ಬೆಸಗೊಂಡು-
- ವಚನ:ಪದವಿಭಾಗ-ಅರ್ಥ:ಎಂದು ತನ್ನ ಮಗನಪ್ಪ ಅಶ್ವತ್ಥಾಮನಂ ಕರೆದು ಈ ಲಕ್ಷ್ಯಮಂ ತೆಗೆಯೆಂಬುದುಂ (ತೆಗೆ ಎನ್ನಲು) ಆತನು ಅಂತೆ ಗೆಯ್ವೆನೆಂದು (ಹಾಗೆ ಮಾಡುವೆನೆಂದು) ನೈಷ್ಠಿಕಮೆಂಬ ಮುಷ್ಟಿಯೊಳಂ ಪುಂಖಾನುಪುಂಖಮೆಂಬ ಶರಸಂಧಾನದೊಳು ಅವಯವದೊಳೆ (ಶ್ರಮವಿಲ್ಲದೆ) ತೆಗೆದೊಡೆ, ಅನಿಬರುಂ ಚೋದ್ಯಂಬಟ್ಟು ಗಾಂಗೇಯ ಧೃತರಾಷ್ಟ್ರರ್ಗೆ ಅಱಿಪಿದೊಡೆ (ತಿಳಿಸಿದಾಗ) ನದೀತನೂಜಂ (ಭೀಷ್ಮನು) ಭಾರದ್ವಾಜಂಗೆ (ದ್ರೋಣನಿಗೆ) ಬೞಿಯನಟ್ಟಿ (ದೂತರನ್ನು ಅಟ್ಟಿ ಕಳಿಸಿ,) ಬರಿಸಿ ಪೂರ್ವ (ಕರೆಸಿಕೊಂಡು) ಸಂಭಾಷಣ ಅರ್ಘ್ಯಂ ಎತ್ತಿ ಮಧುಪರ್ಕ ವೇತ್ರಾಸನ ತಾಂಬೂಲದಾನಿಗಳಿಂ ಸಂತಸಂಬಡಿಸಿ (ಮಧುಪರ್ಕ, ವೇತ್ರಾಸನ, ತಾಂಬೂಲದಾನಾದಿಗಳಿಂದ ಸಂತೋಷಪಡಿಸಿ,) ತದೀಯ ಕುಲ ವಿದ್ಯಾವೃತ್ತಿಗಳಂ ಬೆಸಗೊಂಡು (ಆತನ ಕುಲ, ವಿದ್ಯೆ ಮತ್ತು ವೃತ್ತಿಗಳನ್ನು ಪ್ರಶ್ನೆಮಾಡಿ ತಿಳಿದುಕೊಂಡು)-
- ವಚನ:ಅರ್ಥ:ಎಂದು ತನ್ನ ಮಗನಾದ ಅಶ್ವತ್ಥಾಮನನ್ನು ಕರೆದು ಈ ಲಕ್ಷ್ಯವನ್ನು ತೆಗೆ ಎನ್ನಲು, ಅವನು ‘ಹಾಗೆ ಮಾಡುವೆನೆಂದು’ ಎಂದು ನೈಷ್ಠಿಕವೆನ್ನುವ ಮುಷ್ಟಿಯಿಂದ ಬಾಣದ ಒಂದು ಗರಿಯನ್ನನುಸರಿಸಿ ಮತ್ತೊಂದು ಬಾಣಬಿಡುವ ಪ್ರಯೋಗದಿಂದ ನಿರಾಯಾಸವಾಗಿ ತೆಗೆದಾಗ. ಅಷ್ಟುಮಂದಿಯೂ ಆಶ್ಚರ್ಯಪಟ್ಟು (ಆ ವಿಷಯವನ್ನು) ಭೀಷ್ಮ ಮತ್ತು ಧೃತರಾಷ್ಟ್ರರಿಗೆ (ತಿಳಿಸಿದಾಗ) ತಿಳಿಸಿದರು. ಭೀಷ್ಮನು ದ್ರೋಣಾಚಾರ್ಯರಿಗೆ ಹೇಳಿ ಕಳುಹಿಸಿ ಕರೆಸಿಕೊಂಡು, ಕುಶಲ ಸಂಭಾಷಣಾಪೂರ್ವಕ ಅರ್ಘ್ಯವನ್ನು ಕೊಟ್ಟು ಮಧುಪರ್ಕ, ವೇತ್ರಾಸನ, ತಾಂಬೂಲದಾನಾದಿಗಳಿಂದ ಸಂತೋಷಪಡಿಸಿ ಆತನ ಕುಲ, ವಿದ್ಯೆ ಮತ್ತು ವೃತ್ತಿಗಳನ್ನು ಪ್ರಶ್ನೆಮಾಡಿ ತಿಳಿದುಕೊಂಡು- (ತಿಳಿದುಕೊಂಡನು).
- ಮ|| ಮದಮಂ ಮುಕ್ಕುಳಿಸಿರ್ದಿಭಂಗಳನುದಗ್ರಾಶ್ವಂಗಳಂ ತಕ್ಕಿನ
- ಗ್ಗದ ಬಾಡಂಗಳನಾಯ್ದು ಕೊಟ್ಟು ತಣಿದೆಂ ಪೋ ಸಾಲ್ಗುಮೆಂಬನ್ನಮಂ|
- ದಿದಿರೊಳ್ ನೂಱಱುವರ್ ಕುಮಾರರುಮನಿಟ್ಟೀ ಕೂಸುಗಳ್ ಯೋಗ್ಯರ
- ಪ್ಪುದನಿನ್ನೊಲ್ವೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ|| ೫೩||
- ಪದ್ಯ-೫೩:ಪದವಿಭಾಗ-ಅರ್ಥ:ಮದಮಂ ಮುಕ್ಕುಳಿಸಿರ್ದ ಇಭಂಗಳನು(ಮದೋದಕವನ್ನು ಉಗುಳುತ್ತಿರುವ ಆನೆಗಳನ್ನು), ಉದಗ್ರ ಅಶ್ವಂಗಳಂ (ಉತ್ತಮ ಅಶ್ವಗಳನ್ನು) ತಕ್ಕಿನ ಅಗ್ಗದ ಬಾಡಂಗಳನು (ಯೋಗ್ಯವೂ ಶ್ರೇಷ್ಠವೂ ಆದ ಗ್ರಾಮಗಳನ್ನೂ), ಆಯ್ದು ಕೊಟ್ಟು ತಣಿದೆಂ ಪೋ ಸಾಲ್ಗುಂ ಎಂಬನ್ನಮಂ (ತಕ್ಕ-ಉತ್ತಮವೂ ಶ್ರೇಷ್ಠವೂ ಆದ ಗ್ರಾಮಗಳನ್ನೂ ‘ತೃಪ್ತನಾದೆ, ಸಾಕು, ಹೋಗು’ ಎನ್ನುವಷ್ಟು ಕೊಟ್ಟು,) ಅಂದು ಇದಿರೊಳ್ ನೂಱು ಅಱುವರ್ ಕುಮಾರರುಮನು ಇಟ್ಟು (ಅಂದು ಆ ನೂರಾರು ಮಕ್ಕಳನ್ನು ತೋರಿಸಿ, ಅವರಿಗೆ ಒಪ್ಪಿಸಿ) ಈ ಕೂಸುಗಳ್ ಯೋಗ್ಯರಪ್ಪುದನು ಇನ್ನು ಒಲ್ವೊಡೆ ಶಸ್ತ್ರವಿದ್ಯೆಗೆ ಓವಜಂ ನೀನಾಗು ಕುಂಭೋದ್ಭವಾ (‘ಈ ಮಕ್ಕಳು ಯೋಗ್ಯರಾಗಬೇಕು, ಎಂದು ಇಷ್ಟ ಪಡುವುದಾದರೆ ಎಲೈ ದ್ರೋಣನೇ ನೀನು ಇವರಿಗೆ ಶಸ್ತ್ರವಿದ್ಯೆಯ ಉಪಾಧ್ಯಾಯನಾಗು’)
- ಪದ್ಯ-೫೩:ಅರ್ಥ:ಭೀಷ್ಮನು ದ್ರೋಣನಿಗೆ, ಮದೋದಕವನ್ನು ಉಗುಳುತ್ತಿರುವ ಆನೆಗಳನ್ನೂ, ಉತ್ತಮವಾದ ಕುದುರೆಗಳನ್ನೂ, ಉತ್ತಮವೂ, ಶ್ರೇಷ್ಠವೂ ಆದ ಗ್ರಾಮಗಳನ್ನೂ ‘ತೃಪ್ತನಾದೆ, ಸಾಕು, ಹೋಗು’ ಎನ್ನುವಷ್ಟು ಕೊಟ್ಟು, ಅಂದು ಆ ನೂರಾರು ಮಕ್ಕಳನ್ನು ತೋರಿಸಿ, ಅವರಿಗೆ ಒಪ್ಪಿಸಿ ‘ಈ ಮಕ್ಕಳು ಯೋಗ್ಯರಾಗಬೇಕು ಎಂದು ಇಷ್ಟ ಪಡುವುದಾದರೆ ಎಲೈ ದ್ರೋಣನೇ ನೀನು ಇವರಿಗೆ ಶಸ್ತ್ರವಿದ್ಯೆಯ ಉಪಾಧ್ಯಾಯನಾಗು’
- ವ|| ಎಂಬುದುಮಂತೆಗೆಯ್ವೆನೆಂದು ಕಲಶಜನನಿಬರ ಮೊಗಮಂ ನೋಡಿ-
- ವಚನ:ಪದವಿಭಾಗ-ಅರ್ಥ:ಎಂಬುದುಮ್ ಅಂತೆ ಗೆಯ್ವೆನೆಂದು ಕಲಶಜನು (ದ್ರೋಣ)ಅನಿಬರ ಮೊಗಮಂ ನೋಡಿ (ದ್ರೋಣನು ಹಾಗೆಯೇ ಮಾಡುತ್ತೇನೆಂದು ಅವರೆಲ್ಲರ-- )-
- ವಚನ:ಅರ್ಥ:ಭೀಷ್ಮನು ಹಾಗೆ ಹೇಳಲು, ದ್ರೋಣನು ಹಾಗೆಯೇ ಮಾಡುತ್ತೇನೆಂದು ಕೇಳಿ ಅವರೆಲ್ಲರ ಮುಖವನ್ನು ನೋಡಿ
- ಕಂ|| ಈ ನೆರೆದಿನಿಬರುಮೆಂದುದ
- ನೇನೀವರೆ ಪೇೞಿಮೆಂದೊಡನಿಬರುಮಿರ್ದರ್|
- ಮೌನವ್ರತದೆ ಗುಣಾರ್ಣವ
- ನಾನೀವೆಂ ನಿಮ್ಮ ಬಯಸಿ ಬೇೞ್ಪುದನೆಂದಂ|| ೫೪||
- ಪದ್ಯ-೫೪:ಪದವಿಭಾಗ-ಅರ್ಥ:ಈ ನೆರೆದ ಇನಿಬರುಂ ಎಂದುದನು ಏನು ಈವರೆ ಪೇೞಿಂ(ಇಲ್ಲಿ ಸೇರಿರುವ ಇಷ್ಟುಜನರೂ ನಾನು ಕೇಳಿದ್ದನ್ನು ಕೊಡಬಲ್ಲಿರಾ/ ಹೇಳಿ, ) ಎಂದೊಡೆ ಅನಿಬರುಂ ಇರ್ದರ್ ಮೌನವ್ರತದೆ (ಎನ್ನಲು ಎಲ್ಲರೂ ಮೌನವಾಗಿದ್ದರು. ) ಗುಣಾರ್ಣವನು ಆನ್ ಈವೆಂ ನಿಮ್ಮ ಬಯಸಿ ಬೇೞ್ಪುದನು ಎಂದಂ (ಅರ್ಜುನನು ‘ನೀವು ಬಯಸಿ ಕೇಳಿದುದನ್ನು ನಾನು ಕೊಡುತ್ತೇನೆ’ ಎಂದನು).
- ಪದ್ಯ-೫೫:ಅರ್ಥ: ದ್ರೋಣನು ಆ ಬಾಕರನ್ನು ಕುರಿತು,‘ಇಲ್ಲಿ ಸೇರಿರುವ ಇಷ್ಟುಜನರೂ ನಾನು ಕೇಳಿದ್ದನ್ನು ಕೊಡುವಿರಾ ಹೇಳಿ,’ ಎನ್ನಲು ಎಲ್ಲರೂ ಮೌನವಾಗಿದ್ದರು. ಗುಣಾರ್ಣವನು/ ಅರ್ಜುನನು ‘ನೀವು ಬಯಸಿ ಕೇಳಿದುದನ್ನು ನಾನು ಕೊಡುತ್ತೇನೆ’ ಎಂದನು.
- ವ|| ಎಂಬುದುಮಾ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ ತೊಡೆಯನೇಱಿಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆದಂ-
- ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಮಾತಿಂಗೆ ಮೆಚ್ಚಿ ಜಗದೇಕಮಲ್ಲನಂ (ಹಾಗೆನ್ನಲಾಗಿ ಆ ಮಾತಿಗೆ ಮೆಚ್ಚಿ ಜಗದೇಕಮಲ್ಲನಾದ ಅರ್ಜುನನನ್ನು ) ತೊಡೆಯನು ಏಱಿಸಿಕೊಂಡು ಕುಂಭಸಂಭವಂ ಗಾಂಗೇಯನನಿಂತೆದಂ
- ವಚನ:ಅರ್ಥ:ಹಾಗೆ ಹೇಳಿದಾಗ ಆ ಮಾತಿಗೆ ಮೆಚ್ಚಿ, ದ್ರೋಣನು, ಜಗದೇಕಮಲ್ಲನಾದ ಅರ್ಜುನನನ್ನು ತೊಡೆಯ ಮೇಲೆ ಕೂರಿರಿಸಿಕೊಂಡು ದ್ರೋಣನು ಬೀಷ್ಮನಿಗೆ ಹೀಗೆ ಹೇಳಿದನು
- ಕಂ|| ಇನಿಬರೊಳಗೀತನೊರ್ವನೆ
- ಧನುರಾಗಮದೆಡೆಗೆ ಕುಶಲನಕ್ಕುಮದರ್ಕೇಂ|
- ಕಿನಿಸದಿರಿಂ ಮುನ್ನಱಿಪಿದೆ
- ನೆನೆ ಭೀಷ್ಮನಲಂಪು ಮಿಗೆ ಮುಗುಳ್ನಗೆ ನಕ್ಕಂ|| ೫೫ ||
- ಪದ್ಯ-೦೦:ಪದವಿಭಾಗ-ಅರ್ಥ:ಇನಿಬರೊಳಗೆ ಈತನೊರ್ವನೆ ಧನುರಾಗಮದ ಎಡೆಗೆ(ಬಿಲ್ವಿದ್ಯೆಯಲ್ಲಿ) ಕುಶಲನಕ್ಕುಂ; ಅದರ್ಕೇಂ ಕಿನಿಸದಿರಿಂ (ಅದಕ್ಕೆಂದು ಕೋಪಿಸಬೇಡಿ) ಮುನ್ನ ಅಱಿಪಿದೆನು (ಮೊದಲೇ ತಿಳಿಸಿದೆನು) ಎನೆ ಭೀಷ್ಮು ಅಲಂಪು ಮಿಗೆ (ಸಂತಸವು ಹೆಚ್ಚಲು) ಮುಗುಳ್ನಗೆ ನಕ್ಕಂ.
- ಪದ್ಯ-೦೦:ಅರ್ಥ:‘ಇಷ್ಟು ಮಕ್ಕಳಲ್ಲಿ ಇವನೊಬ್ಬನೇ ಬಿಲ್ವಿದ್ಯೆಯಲ್ಲಿ ಪಾರಂಗತನಾಗುತ್ತಾನೆ. ಅದಕ್ಕೆ ಕೋಪಿಸಬೇಡಿ; ಮೊದಲೇ ತಿಳಿಸಿದೆನು’ ಎನ್ನಲು ಭೀಷ್ಮನು ಬಹಳ ಸಂತೋಷದಿಂದ ಮುಗುಳ್ನಗೆ ನಕ್ಕನು.
- ವ|| ಅಂತು ದ್ರೋಣಾಚಾರ್ಯನಾಚಾರ್ಯಪದವಿಯಂ ಕೈಕೊಂಡು ಪಾಂಡವ ಕೌರವರ್ಗೆ ಚತುರಂಗ ಧನುರ್ವೇದಮುಮಂ ದಿವ್ಯಾಸ್ತ್ರಂಗಳುಮಂ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳುಮಂ ಗಜ ರಥ ತುರಗ ಪದಾತಿ ಯುದ್ಧಂಗಳುಮನುಪದೇಶಂಗೆಯ್ಯುತ್ತುಮಿರೆಯಿರೆ-
- ವಚನ:ಪದವಿಭಾಗ-ಅರ್ಥ:ಅಂತು ದ್ರೋಣಾಚಾರ್ಯನು ಆಚಾರ್ಯಪದವಿಯಂ ಕೈಕೊಂಡು ಪಾಂಡವ ಕೌರವರ್ಗೆ ಚತುರಂಗ (ನಾಲ್ಕುಭಾಗ) ಧನುರ್ವೇದಮುಮಂ ದಿವ್ಯಾಸ್ತ್ರಂಗಳುಮಂ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧ ಆಯುಧಂಗಳುಮಂ ಗಜ ರಥ ತುರಗ ಪದಾತಿ ಯುದ್ಧಂಗಳುಮನು ಉಪದೇಶಂಗೆಯ್ಯುತ್ತುಂ ಇರೆಯಿರೆ-
- ವಚನ:ಅರ್ಥ:ಹಾಗೆ ದ್ರೋಣಾಚಾರ್ಯನು ಆಚಾರ್ಯಪದವಿಯನ್ನು ಸ್ವೀಕರಿಸಿ, ಪಾಂಡವ ಕೌರವರುಗಳಿಗೆ ನಾಲ್ಕು ಭಾಗವಾಗಿರುವ ಬಿಲ್ವಿದ್ಯೆಯನ್ನೂ, ದಿವ್ಯಾಸ್ತ್ರಗಳನ್ನೂ (ಪ್ರಯೋಗ ಉಪಸಂಹಾರಗಳನ್ನೂ) ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಗ, ಗದೆಯೇ ಮೊದಲಾದ ಬಗೆಬಗೆಯ ಆಯುಧ ಪ್ರಯೋಗಗಳನ್ನೂ, ಆನೆ, ತೇರು, ಕುದುರೆ ಮತ್ತು ಕಾಲಾಳುಗಳ ಯುದ್ಧದ ಕ್ರಮವನ್ನೂ ಹೇಳಿಕೊಡುತ್ತಾ ಇರಲು--
- ಕಂ|| ಯಾದವ ವಂಶಜರುಂ ನಾ
- ನಾ ದೇಶ ನರೇಂದ್ರರುಂ ಘಟೋದ್ಭವನ ಧನು|
- ರ್ವೇದಮನೆ ಕಲಲ್ ಬಂದಾ
- ಳಾದರ್ ವಿದ್ಯಾಪ್ರಭಾವಮಾ ದೊರೆತೆ ವಲಂ|| ೫೬||
- ಪದ್ಯ-೫೬:ಪದವಿಭಾಗ-ಅರ್ಥ:ಯಾದವ ವಂಶಜರುಂ ನಾನಾ ದೇಶ ನರೇಂದ್ರರುಂ (ರಾಜರು) ಘಟೋದ್ಭವನ (ದ್ರೋಣನ)ಧನು ರ್ವೇದಮನೆ ಕಲಲ್ (ಕಲಿಯಲು) ಬಂದು ಆಳಾದರ್ (ಸೇವಕರಾದರು) ವಿದ್ಯಾಪ್ರಭಾವಂ ಆ ದೊರೆತೆ ವಲಂ (ವಿದ್ಯೆಯ ಪ್ರಭಾವ ಆ ಯೋಗ್ಯತೆ ಇರುವುದೇ ಸರಿ! ವಲಂ!)
- ಪದ್ಯ-೫೬:ಅರ್ಥ:ಯಾದವ ವಂಶದವರೂ ನಾನಾ ದೇಶದ ರಾಜರೂ ದ್ರೋಣಾಚಾರ್ಯರ ಧನುರ್ವಿದ್ಯೆಯನ್ನು ಕಲಿಯಲು ಬಂದು ಆತನ ಶಿಷ್ಯರಾದರು. ವಿದ್ಯೆಯ ಪ್ರಭಾವ ಆ ಯೋಗ್ಯತೆ ಇರುವುದೇ ಸರಿ! ವಲಂ!(ಅಬ್ಭಾ!) (ಇಲ್ಲಿ ಅರ್ಥಾಂತರನ್ಯಾಸ ಅಲಂಕಾರವಿದೆ ಎಂದು ಶ್ರೀ ಡಿ.ಎಲ್.ಎನ್. ಹೇಳಿದ್ದಾರೆ - ಆದರೆ ತಿಳಿಯುವುದಿಲ್ಲ:- ತನಗೆ- ಪಂಪನಿಗೆ ಅವನ ವಿದ್ಯಾ ಪ್ರೌಢಿಮೆಗೆ ಅರಿಕೇಸರಿ ಕೊಟ್ಟಗೌರವವನ್ನು ಕುರಿತು ಇಲ್ಲಿ ವಿದ್ಯಾ ಮಹತ್ವದ ಉದ್ಗಾರವನ್ನು ಪಂಪ ಕೊಟ್ಟಿರಬಹುದು ಎಂಬ ಅಭಿಪ್ರಾಯ ಇರಬಹುದು.)
ದ್ರೋಣನ ಬಳಿಗೆ ಕರ್ಣನು ಬಂದುದು:
|
- ದ್ರೋಣಂ ಗಡಮಿಷುವಿದ್ಯೆಗೆ
- ಜಾಣಂ ಗಡಮೆಂದು ಕೇಳ್ದು ಕೌರವರ್ಗೆಲ್ಲಂ|
- ಪ್ರಾಣಂ ಬರ್ಪಾಕೃತಿಯೊಳೆ
- ಬಾಣಾಸನ ಬಾಣಪಾಣಿ ಕರ್ಣಂ ಬಂದಂ|| ೫೭||
- ಪದ್ಯ-೫೭:ಪದವಿಭಾಗ-ಅರ್ಥ:ದ್ರೋಣಂ ಗಡ! ಮಿಷುವಿದ್ಯೆಗೆ ಜಾಣಂ ಗಡಂ! (ದ್ರೋಣನಲ್ಲವೆ ! ಬಾಣವಿದ್ಯೆಯಲ್ಲಿ ಜಾಣನಲ್ಲವೆ! )ಎಂದು ಕೇಳ್ದು ಕೌರವರ್ಗೆ ಎಲ್ಲಂ ಪ್ರಾಣಂ ಬರ್ಪ ಆಕೃತಿಯೊಳೆ ಬಾಣಾಸನ ಬಾಣಪಾಣಿ (ಬಿಲ್ಲುಬಾಣಗಳನ್ನು ಹಿಡಿದವ) ಕರ್ಣಂ ಬಂದಂ||
- ಪದ್ಯ-೫೭:ಅರ್ಥ: ಅವನು ದ್ರೋಣನಲ್ಲವೆ! ಬಾಣವಿದ್ಯೆಯಲ್ಲಿ ಜಾಣನಲ್ಲವೆ! (ಗಡ -ಸಾಮಾನ್ಯನಲ್ಲ) ಎಂಬ ಪ್ರಶಂಸೆಯನ್ನು ಕೇಳಿ ಕೌರವರಿಗೆಲ್ಲ ಪ್ರಾಣ ಬರುವ ರೂಪದಲ್ಲಿ ಬಿಲ್ಲುಬಾಣಗಳನ್ನು ಹಿಡಿದ ಕರ್ಣನೂ ಅಲ್ಲಿಗೆ ಬಂದನು.
- ವ|| ಅಂತು ಬಂದು ವೈರಿಗಜಘಟಾವಿಘಟನನೊಳ್ ವಿಘಟಿಸಿ ಬಿಲ್ಗಲ್ತು-
- ವಚನ:ಪದವಿಭಾಗ-ಅರ್ಥ:ಅಂತು ಬಂದು ವೈರಿಗಜ ಘಟಾವಿಘಟನನೊಳ್ (ಆನೆಗಳಂತಿರುವ ಶತ್ರುಗಳ ಸಮೂಹವನ್ನು (ವಿಘಟನು -ಅರ್ಜುನ, ಅವನೊಡನೆ) ವಿಘಟಿಸಿ (ಸ್ಪರ್ಧಿಸಿ) ಬಿಲ್ಗಲ್ತು-
- ವಚನ:ಅರ್ಥ:ಹಾಗೆ ಬಂದು ಆನೆಗಳಂತಿರುವ ಶತ್ರುಗಳ ಸಮೂಹವನ್ನು ಭೇದಿಸಲು ಸಮರ್ಥನಾದ ಅರ್ಜುನನಲ್ಲಿ (ಅರಿಕೇಸರಿಯಲ್ಲಿ) ಸ್ಪರ್ಧಿಸಿ ಬಿಲ್ ವಿದ್ಯೆಯನ್ನು ಕಲಿತನು.
- ಕಂ|| ಕೆಳೆಯುಂ ಗುಱಿಯುಂ ಗೊಟ್ಟಿಯು
- ಮಳವಿಗೆ ಪಿರಿದಾಗೆ ತನಗೆ ದುರ್ಯೋಧನನೊಳ್|
- ಮುಳಿಸುಂ ನೋವುಂ ಕಲುಷಮು
- ಮಳುಂಬಮೆನೆ ತನಗರಾತಿಕಾಳಾನಳನೊಳ್|| ೫೮||
- ಪದ್ಯ-೫೮:ಪದವಿಭಾಗ-ಅರ್ಥ:ಕೆಳೆಯುಂ ಗುಱಿಯುಂ ಗೊಟ್ಟಿಯುಂ (ಸಹಯೋಗವೂ) ಆಳವಿಗೆ ಪಿರಿದಾಗೆ (ಅಳತೆ ಮೀರಿ ಹೆಚ್ಚಿತು) ತನಗೆ ದುರ್ಯೋಧನನೊಳ್; ಮುಳಿಸುಂ ನೋವುಂ ಕಲುಷಮುಂ (ಸಿಟ್ಟು, ವ್ಯಥೆ, ಮನಕೆಡುವುದು)ಆಳುಂಬಂ ಎನೆ (ಅಧಿಕವಾಗಿ ಎನ್ನುವಂತೆ) ತನಗೆ ಆರಾತಿ ಕಾಳಾನಳನೊಳ್ (ಶತ್ರು ಅರ್ಜುನನಲ್ಲಿ)
- ಪದ್ಯ-೫೮:ಅರ್ಥ:ಕ್ರಮೇಣ ಕರ್ಣನಿಗೆ ದುರ್ಯೋಧನನಲ್ಲಿ ಸ್ನೇಹವೂ ಗುರಿಯೂ ಎಂದರೆ ಮುಂದಿನ ಉದ್ದೇಶವೂ ಸಹಪಾಠಿತ್ವವೂ ಅಳತೆಗೆ ಮೀರಿದಂತೆ, ಕಾಲಾನಲನಾದ ಅರ್ಜುನನಲ್ಲಿ ಶತ್ರುತ್ವವು ಕೋಪವೂ ವ್ಯಥೆಯೂ ಅಸೂಯೆಯೂ ಅಧಿಕವಾಯಿತು.
- ವ|| ಅಂತು ಕರ್ಣಂ ಗುಣಾರ್ಣವನೊಳ್ ಸೆಣಸಿ ಪಗೆಯನಭ್ಯಾಸಂಗೆಯ್ವಂತೆ ವಿದ್ಯಾಭ್ಯಾಸಂಗೆಯ್ಯೆ-
- ವಚನ:ಪದವಿಭಾಗ-ಅರ್ಥ:ಅಂತು ಕರ್ಣಂ ಗುಣಾರ್ಣವನೊಳ್ ಸೆಣಸಿ ಪಗೆಯನು ಅಭ್ಯಾಸಂಗೆಯ್ವಂತೆ ವಿದ್ಯಾಭ್ಯಾಸಂಗೆಯ್ಯೆ-
- ವಚನ:ಅರ್ಥ:ಕರ್ಣನು ಗುಣಾರ್ಣವನಲ್ಲಿ /ಅರ್ಜುನನೊಡನೆ ಸ್ಪರ್ಧಿಸಿ ಹಗೆತನವನ್ನು ಅಭ್ಯಾಸ ಮಾಡುವಂತೆಯೇ ವಿದ್ಯೆಯನ್ನೂ ಅಭ್ಯಾಸಮಾಡಿದನು/ ಮಾಡಲು
- ಕಂ|| ಮನದೊಳೊಗೆದನ್ಯಜನ್ಮದ
- ಮುನಿಸದು ಕಣ್ಣಿಂ ತುಳುಂಕೆ ಸೈರಿಸದವನು|
- ರ್ವಿನಕ ಲಿತನಕ್ಕೆ ದುರ್ಯೋ
- ಧನನುಂ ಭೀಮನೊಳೆ ಸೆಣಸಿ ಗದೆಯಂ ಕಲ್ತಂ|| ೫೯||
- ಪದ್ಯ-೫೯:ಪದವಿಭಾಗ-ಅರ್ಥ:ಮನದೊಳೊಗೆದ (ಮನದೊಳು ಒಗೆದ-ಮನಸ್ಸಿನಲ್ಲಿ ಹುಟ್ಟಿದ) ಅನ್ಯಜನ್ಮದ ಮುನಿಸು ಅದು, ಕಣ್ಣಿಂ ತುಳುಂಕೆ ಸೈರಿಸದೆ ಅವನು ಉರ್ವಿನ (ಅಧಿಕವಾದ) ಕಲಿತನಕ್ಕೆ ದುರ್ಯೋಧನನುಂ ಭೀಮನೊಳೆ ಸೆಣಸಿ ಗದೆಯಂ ಕಲ್ತಂ
- ಪದ್ಯ-೫೯:ಅರ್ಥ: ಅದು ಮನಸ್ಸಿನಲ್ಲಿ ಹುಟ್ಟಿದ ಪೂರ್ವಜನ್ಮದ ಕೋಪವು, ಕಣ್ಣಿನಲ್ಲಿ ತುಳುಕುತ್ತಿರಲು, ಅವನ ಅಧಿಕ ಶೌರ್ಯಕ್ಕೆ ಸಹನೆಯಿಲ್ಲದೆ ದುರ್ಯೋಧನನೂ ಭೀಮನಲ್ಲಿ ಸ್ಪರ್ಧಿಸಿ ಗದೆಯ ಪ್ರಯೋಗವನ್ನು ಕಲಿತನು.
- ವ|| ಅಂತು ಭಾರದ್ವಾಜನಾಗಾಮಿಕ ಸಂಗ್ರಾಮರಂಗಕ್ಕೆ ಪಾತ್ರಂಗಳಂ ಸಮೆಯಿಸುವ ಸೂತ್ರಧಾರನಂತೆ ಶಸ್ತ್ರವಿದ್ಯಾಭ್ಯಾಸಂಗೆಯ್ಸುತ್ತಿರೆ ದೇಶಾಧೀಶ್ವರರಪ್ಪ ಪಲಂಬರ್ ರಾಜಕುಮಾರರ ನಡುವೆ ತಾರಾಗಣಂಗಳ ಸಕಳ ಕಳಾಧರನಂತೆ ಶಸ್ತ್ರಕಳಾಧರನಾಗಿ ತನ್ನುಮಂ ಗೆಲೆವಂದ ಸಾಮಂತ ಚೂಡಾಮಣಿಯ ಶರಪರಿಣತಿಯನಾರಯಲೆಂದು-
- ವಚನ:ಪದವಿಭಾಗ-ಅರ್ಥ:ಅಂತು ಭಾರದ್ವಾಜನು ಆಗಾಮಿಕ ಸಂಗ್ರಾಮರಂಗಕ್ಕೆ (ದ್ರೋಣನು ಮುಂದೆ ಬರುವ ಯುದ್ಧಕ್ಕೆ) ಪಾತ್ರಂಗಳಂ ಸಮೆಯಿಸುವ (ನಟರನ್ನು ಮಾಡುವ) ಸೂತ್ರಧಾರನಂತೆ ಶಸ್ತ್ರವಿದ್ಯಾಭ್ಯಾಸಂ ಗೆಯ್ಸುತ್ತಿರೆ,(ಮಾಡಿಸುತ್ತಿರಲು) ದೇಶಾಧೀಶ್ವರರಪ್ಪ ಪಲಂಬರ್ (ದೇಶದ ಒಡೆಯರಾಗುವ ಹಲವರು)ರಾಜಕುಮಾರರ ನಡುವೆ ತಾರಾಗಣಂಗಳ ಸಕಳ ಕಳಾಧರನಂತೆ (ನಕ್ಷತ್ರಸಮೂಹದ ಮಧ್ಯದ ಪೂರ್ಣಚಂದ್ರನ ಹಾಗೆ) ಶಸ್ತ್ರಕಳಾಧರನಾಗಿ (ಶಸ್ತ್ರಕಲೆಯನ್ನು ಧರಿಸಿ) ತನ್ನುಮಂ ಗೆಲೆವಂದ (ದ್ರೋಣನನ್ನೂ-ತನ್ನನ್ನೂ ಗೆದ್ದಿರುವ) ಸಾಮಂತ ಚೂಡಾಮಣಿಯ ಶರಪರಿಣತಿಯನು ಆರಯಲ್(ಪರೀಕ್ಷಿಸಲು) ಎಂದು-
- ವಚನ:ಅರ್ಥ:ಹಾಗೆ ದ್ರೋಣಾಚಾರ್ಯನು ಮುಂದೆ ಬರುವ ಯುದ್ಧರಂಗಕ್ಕೆ ನಟರನ್ನು ಸಿದ್ಧಪಡಿಸುವ ಸೂತ್ರಧಾರನ ಹಾಗೆ ಶಸ್ತ್ರವಿದ್ಯಾಭ್ಯಾಸವನ್ನು ಮಾಡಿಸುತ್ತಿರಲು, ಅನೇಕ ದೇಶದ ಒಡೆಯರಾಗುವ ಹಲವರು ರಾಜಕುಮಾರರ ಮಧ್ಯದಲ್ಲಿ ನಕ್ಷತ್ರಸಮೂಹದ ಮಧ್ಯದ ಪೂರ್ಣಚಂದ್ರನ ಹಾಗೆ ಶಸ್ತ್ರಕಲೆಯನ್ನು ಧರಿಸಿ ತನ್ನನ್ನೂ ಗೆದ್ದಿರುವ ಸಾಮಂತಚೂಡಾಮಣಿಯಾದ ಅರ್ಜುನನ (ಅರಿಕೇಸರಿಯ) ಬಾಣಪ್ರಯೋಗದ ಪಾಂಡಿತ್ಯವನ್ನು ಪರೀಕ್ಷಿಸಬೇಕೆಂದು-
- ಕಂ|| ಛಾಯಾಲಕ್ಷ್ಯಮನೊಡ್ಡಿಯು
- ಮಾಯದ ನೀರೊಳಗೆ ತನ್ನನಡಸಿದ ನೆಗೞಂ|
- ಬಾಯೞಿವಿನಮಿಸಿಸಿಯುಮರೆ
- ಹೋಯಜ ಬಾಪ್ಪೆಂದು ಹರಿಗನಂ ಗುರು ಪೊಗೞ್ದಂ|| ೬೦||
- ಪದ್ಯ-೬೦:ಪದವಿಭಾಗ-ಅರ್ಥ:ಛಾಯಾಲಕ್ಷ್ಯಮನು ಒಡ್ಡಿಯುಂ ಆಯದ ನೀರೊಳಗೆ ತನ್ನನು ಅಡಸಿದ ನೆಗೞಂ(ಹಿಡಿದುಕೊಂಡ ಮೊಸಳೆಯನ್ನು) ಬಾಯೞಿವಿನಂ (ಬಾಯಿ ನಾಶವಾಗಲು ) ಇಸಿಸಿಯುಂ (ಬಾಣಪ್ರಯೋಗ ಮಾಡಿಸಿ) ಅರೆ! ಹೋಯ್! ಅಜ! ಬಾಪ್ಪು ಎಂದು ಹರಿಗನಂ (ಅರಿಕೇಸರಿ/ಅರ್ಜುನನ್ನು) ಗುರು ಪೊಗೞ್ದಂ(ಹೊಗಳಿದನು)
- ಪದ್ಯ-೬೦:ಅರ್ಥ:ಪ್ರತಿಬಿಂಬದ ಗುರಿಯನ್ನು ಒಡ್ಡಿ, ಆಳವಾದ ನೀರಿನಲ್ಲಿ ತನ್ನನ್ನು ಹಿಡಿದಿದ್ದ ಮೊಸಳೆಯನ್ನು ಅದು ಅರಚಿಕೊಂಡು ಸಾಯುವ ಹಾಗೆ ಬಾಣ ಪ್ರಯೋಗಮಾಡಿಸಿ ನೋಡಿ, ‘ಅರೆ, ಹೋ, ಅಜ, ಭಾಪು, ಎಂಬ ಮೆಚ್ಚಿಕೆಯ ಮಾತುಗಳಿಂದ ಗುರುವು ಅರ್ಜುನನನ್ನು ಹೊಗಳಿದನು.
- ವ|| ಅಂತು ಪೊಗೞ್ದು ತನ್ನ ಪಗೆವನಪ್ಪ ದ್ರುಪದನನೀತನಮೋಘಂ ಗೆಲಲ್ ನೆರೆಗು ಮೆಂದು ನಿಶ್ಚೈಸಿ-
- ವಚನ:ಪದವಿಭಾಗ-ಅರ್ಥ:ಅಂತು ಪೊಗೞ್ದು (ಹಾಗೆ ಹೊಗಳಿ)ತನ್ನ ಪಗೆವನಪ್ಪ ದ್ರುಪದನನು ಈತನ ಅಮೋಘಂ ಗೆಲಲ್ ನೆರೆಗು ಮೆಂದು ನಿಶ್ಚೈಸಿ-
- ವಚನ:ಅರ್ಥ:ಹಾಗೆ ಹೊಗಳಿ, ತನ್ನ ಶತ್ರುವಾದ ದ್ರುಪದನನ್ನು ಈತನು ಅಮೋಘವಾಗಿ ಗೆಲ್ಲಲ್ಲು ಸಮರ್ಥನೆಂದು ನಿಶ್ಚೈಸಿ, (ಅವನನ್ನು ಕುರಿತು);
- ಚಂ|| ಅಣುಗಿನೊಳೆನ್ನ ಚಟ್ಟರೊಳಗೀತನೆ ಜೆಟ್ಟಿಗನೆಂದು ವಿದ್ಯೆಯಂ
- ಗುಣಕಱುಗೊಂಡು ಕೊಟ್ಟೆನಗೆ ಸಂತಸಮಪ್ಪಿನವೀವ ನಿನ್ನ ದ|
- ಕ್ಷಿಣೆಯದು ಬೇಗಮಾ ದ್ರುಪದನಂ ಗಡ ಕೋಡಗಗಟ್ಟುಗಟ್ಟಿ ತಂ
- ದಣಿಯರಮೊಪ್ಪಿಸಿಂತಿದನೆ ಬೇಡಿದೆನಾಂ ಪರಸೈನ್ಯಭೈರವಾ||೬೧||
- ಪದ್ಯ-೦೦:ಪದವಿಭಾಗ-ಅರ್ಥ:ಅಣುಗಿನೊಳು (ಅಣುಗು-ಪ್ರೀತಿ; ಅಣುಗ-ಮಗು; ಪ್ರೀತಿಯಬಾಲಕರಲ್ಲಿ/ ಶಿಷ್ಯರಲ್ಲಿ) ಎನ್ನ ಚಟ್ಟರೊಳಗೆ (ಶಿಷ್ಯರಲ್ಲಿ) ಈತನೆ ಜೆಟ್ಟಿಗನೆಂದು ವಿದ್ಯೆಯಂ ಗುಣಕಱುಗೊಂಡು (ಪ್ರೀತಿಸಿ) ಕೊಟ್ಟ ಎನಗೆ ಸಂತಸಮ್ ಅಪ್ಪಿನಂ ಈವ (ಸಂತೋಷ ಆಗುವಂತೆ ಕೊಡುವ) ನಿನ್ನ ದಕ್ಷಿಣೆಯು ಅದು ಬೇಗಂ ಆ ದ್ರುಪದನಂ ಗಡ! ಕೋಡಗಗಟ್ಟುಗಟ್ಟಿ (ಕೋಡುಗ ಕಟ್ಟು ಕಟ್ಟಿ- ಕಪಿಯನ್ನು ಕಟ್ಟಿದಂತೆ ಕಟ್ಟಿ) ತಂದು ಅಣಿಯರಂ(ಅತಿಶಯವಾಗಿ) ಒಪ್ಪಿಸು; ಇಂತು ಇದನೆ ಬೇಡಿದೆನು ಆಂ (ನಾನು) ಪರಸೈನ್ಯಭೈರವಾ (ವೈರಿಸೈನ್ಯಕ್ಕೆ ಭೈರವನೇ)
- ಪದ್ಯ-೦೦:ಅರ್ಥ:. ‘ಅರ್ಜುನಾ, ಪ್ರೀತಿಯ ನನ್ನ ಶಿಷ್ಯರಲ್ಲಿ ಇವನೇ ಪರಾಕ್ರಮಶಾಲಿ ಎಂದು ವಿದ್ಯೆಯನ್ನು ಪ್ರೀತಿಯಿಂದ ದಾನಮಾಡಿದ ನನಗೆ ಸಂತೋಷವಾಗುವ ಹಾಗೆ ನೀನು ಕೊಡುವ ಗುರುದಕ್ಷಿಣೆಯಾಗಿ ಬೇಗ ಆ ದ್ರುಪದನನ್ನು ಕಪಿಯನ್ನು ಕಟ್ಟಿದಂತೆ ಕಟ್ಟಿ ತಂದು ಅತಿಶಯವಾದ ರೀತಿಯಲ್ಲಿ ಒಪ್ಪಿಸು. ಎಲೈ ವೈರಿ ಸೈನ್ಯಕ್ಕೆ ಭೈರವನೇ ಇದನ್ನೇ ನಾನು ನಿನ್ನಿಂದ ಬೇಡಿದುದು, ಎಂದನು ದ್ರೋಣ.
- ವ|| ಎಂಬುದುವಮೀ ಬೆಸನದಾವುದು ಗಹನಮೆಂದು ಪೂಣ್ದು ಪೋಗಿ-
- ವಚನ:ಪದವಿಭಾಗ-ಅರ್ಥ:ಎಂಬುದುಂ ಈ ಬೆಸನದು(ಆಜ್ಞೆಯು) ಆವುದು ಗಹನಂ ಎಂದು ಪೂಣ್ದು (ಪ್ರತಿಜ್ಞೆಮಾಡಿ) ಪೋಗಿ-
- ವಚನ:ಅರ್ಥ:ದ್ರೋಣನು ಹಾಗೆ ಹೇಳಲು, ಈ ಆಜ್ಞೆಯು ಏನು ಮಹಾದೊಡ್ಡದು! ಎಂದು ಪ್ರತಿಜ್ಞೆಮಾಡಿ ಹೋಗಿ-
- ಮ|| ಒಡವಂದಂಕದ ಕೌರವರ್ ದ್ರುಪದನಂಬೇಱಿಂಗೆ ಮೆಯ್ಯೊಡ್ಡದೊ
- ಡ್ಡೊಡೆತೋಡುತ್ತಿರೆ ಸೂಸೆ ಬೀೞ್ವ ತಲೆಗಳ್ ಸೂೞ್ಪಟ್ಟನಾಗಳ್ ಜವಂ|
- ಪಿಡಿದೀಡಾಡುವ ಮಾೞ್ಕೆಯಂತೆ ಪಲರಂ ಕೊಂದಿಕ್ಕಿ ಮೆಯ್ಯುಟ್ಟೆವಂ|
- ದೆಡೆಯೊಳ್ ಮಾಣದುರುಳ್ಚಿ ಕಟ್ಟಿ ರಿಪುವಂ ಮುಂದಿಕ್ಕಿದಂ ದ್ರೋಣನಾ|| ೬೨||
- ಪದ್ಯ-೦೦:ಪದವಿಭಾಗ-ಅರ್ಥ:ಒಡವಂದ (ಜೊತೆಗೆಬಂದ) ಅಂಕದ (ಪ್ರಸಿದ್ಧ) ಕೌರವರ್ ದ್ರುಪದನ ಅಂಬೇಱಿಂಗೆ (ಬಾಣದ ಏಟಿಗೆ) ಮೆಯ್ಯೊಡ್ಡದೆ (ಎದುರಿಸದೆ) ಒಡ್ಡೊಡೆತು (ಒಡ್ಡು ಒಡೆದು- ಸೈನ್ಯವು ಚದುರಿ) ಓಡುತ್ತಿರೆ, ಸೂಸೆ ಬೀೞ್ವ ತಲೆಗಳ್ (ಬೀಳುವ ತಲೆಗಳು ಚೆಲ್ಲಾಡುತ್ತಿರಲು) ಸೂೞ್ಪಟ್ಟಂ (ಅರ್ಜುನನು -ಸೂಳ್ ಪಟ್ಟಂ-ಸರದಿ ಪಡೆದು) ಆಗಳ್ ಜವಂ (ಯಮನು) ಪಿಡಿದು ಈಡಾಡುವ ಮಾೞ್ಕೆಯಂತೆ (ಹಿಡಿದು ಬಿಸಾಡುವ ರೀತಿಯಲ್ಲಿ) ಪಲರಂ ಕೊಂದಿಕ್ಕಿ (ಹಲವರನ್ನು ಕೊಂದು ಹಾಕಿ) ಮೆಯ್ಯುಟ್ಟೆವಂದು ಎಡೆಯೊಳ್ (ಮೈ ಮಟ್ಟುವಷ್ಟು ಹತ್ತಿರ ಬಂದು ) ಮಾಣದೆ ಉರುಳ್ಚಿ ಕಟ್ಟಿ ರಿಪುವಂ (ಬಿಡದೆ ಶತ್ರುವನ್ನು ಉರುಳಿಸಿ ಕಟ್ಟಿ) ಮುಂದೆ ಇಕ್ಕಿದಂ ದ್ರೋಣನಾ (ದ್ರೋಣನ ಮುಂದೆ ತಂದು ಹಾಕಿದನು.)
- ಪದ್ಯ-೦೦:ಅರ್ಥ:ಅರ್ಜುನನ ಜೊತೆಯಲ್ಲಿ ಬಂದ ಪ್ರಸಿದ್ಧರಾದ ಕೌರವರು ದ್ರುಪದನ ಬಾಣದ ಪೆಟ್ಟಿಗೆ ಎದುರಿಸಲಾರದೆ ಚದುರಿ ಓಡುತ್ತಿರಲು, ಬೀಳುವ ತಲೆಗಳು ಚೆಲ್ಲಾಡುತ್ತಿರಲು, ಅರ್ಜುನನು ತನ್ನ ಸರದಿಯನ್ನು ಪಡೆದು, ಯಮನು ಹಿಡಿದು ಬಿಸಾಡುವ ರೀತಿಯಲ್ಲಿ ಹಲವರನ್ನು ಸಾಯಿಸಿ, ದ್ರುಪದನ ಮೈಮುಟ್ಟುವಷ್ಟು ಹತ್ತಿರಕ್ಕೆ ಬಂದು ಉರುಳಿಸಿ, ಶತ್ರುವನ್ನು ಕಟ್ಟಿತಂದು ದ್ರೋಣನ ಮುಂದೆ ತಂದು ಹಾಕಿದನು.
- ವ|| ಆಗಳಾ ಕುಂಭಸಂಭವಂ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ ಕದಂಪಂ ಕರ್ಚಿ ದ್ರುಪದನಂ ತನ್ನ ಮಂಚದ ಕಾಲೊಳ್ ಕಟ್ಟವೇೞ್ದು ತಲೆಯ ಮೇಲೆ ಕಾಲನವಷ್ಟಂಭದಿಂ ನೀಡಿ-
- ವಚನ:ಪದವಿಭಾಗ-ಅರ್ಥ:ಆಗಳು ಆ ಕುಂಭಸಂಭವಂ (ದ್ರೋಣನು) ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ ಕದಂಪಂ ಕರ್ಚಿ (ಕೆನ್ನೆಯನ್ನು ಕಚ್ಚಿ- ಮುತ್ತಿಟ್ಟು) ದ್ರುಪದನಂ ತನ್ನ ಮಂಚದ ಕಾಲೊಳ್ ಕಟ್ಟವೇೞ್ದು ತಲೆಯ ಮೇಲೆ ಕಾಲನು ಅವಷ್ಟಂಭದಿಂ (ಗರ್ವದಿಂದ) ನೀಡಿ-
- ವಚನ:ಅರ್ಥ:ಆಗ ದ್ರೋಣನು ಪರಾಕ್ರಮದಲ್ಲಿ ಗೂಳಿಯಂತಿರುವ ಅರ್ಜುನನ ಶೌರ್ಯಕ್ಕೆ ಸಂತೋಷಪಟ್ಟು, ಅವನ ಕೆನ್ನೆಗೆ ಮುತ್ತಿಟ್ಟು, ದ್ರುಪದನನ್ನು ತನ್ನ ಮಂಚದ ಕಾಲಿಗೆ ಕಟ್ಟ ಹೇಳಿ ಅವನ ತಲೆಯ ಮೇಲೆ ತನ್ನ ಕಾಲನ್ನು ಗರ್ವದಿಂದ ನೀಡಿ-
- ಕಂ|| ಸಿರಿಮೆಯ್ಯೊಳಗಂದಱಿವಿರೆ
- ನೆರವಿಯೊಳಾರಱಿವರೊರ್ಮೆ ಕಂಡರನಱಿಯ|
- ಲ್ಕರಿದೆಮ್ಮಂ ಬಡ ಪಾರ್ವರ
- ನರಸರೆ ನೀವೀಗಳಱಿವಿರಱಿಯಿರೊ ಪೇೞಂ|| ೬೩ ||
- ಪದ್ಯ-೦೦:ಪದವಿಭಾಗ-ಅರ್ಥ:ಸಿರಿಮೆಯ್ಯೊಳಗೆ ಅಂದು ಅಱಿವಿರೆ (ಸಿರಿವಂತಿಕೆಯಲ್ಲಿ ಅಂದು ಗುರುತಿಸುವಿರೆ?) ನೆರವಿಯೊಳ್ (ನೆರವಿ-ಗುಂಪು) ಆರ್ ಅಱಿವರ್ ಒರ್ಮೆ ಕಂಡರನು, ಅಱಿಯಲ್ಕೆ ಅರಿದು(ಒಂದು ಸಲ ಗುಂಪಿನಲ್ಲಿ ಕಂಡವರನ್ನು ಗುರುತಿಸಲಾರರು), ಎಮ್ಮಂ (ನಮ್ಮನ್ನು) ಬಡ ಪಾರ್ವರನು ಅರಸರೆ ನೀವು ಈಗಳು ಅಱಿವಿರ್ ಅಱಿಯಿರೊ ಪೇೞಂ(ಈಗಲಾದರೂ ರಾಜರೇ ಗುರುತಿಸುವಿರಾ? ಗುರುತಿಸಲಾರಿರೋ? ಹೇಳಿ,).
- ಪದ್ಯ-೦೦:ಅರ್ಥ:‘ಸಿರಿವಂತಿಕೆಯಲ್ಲಿ ಅಂದು ನೀವು ನಮ್ಮನ್ನು ತಿಳಿಯುತ್ತೀರಾ -ಗುರುತಿಸುವಿರೇ? ಒಂದು ಸಲ ಗುಂಪಿನಲ್ಲಿ ಕಂಡವರನ್ನು ಗುರುತಿಸಲಾರರು. ಬಡಬ್ರಾಹ್ಮಣರಾದ ನಮ್ಮನ್ನು ಈಗಲಾದರೂ ರಾಜರೇ ಗುರುತಿಸುವಿರಾ? ಗುರುತಿಸಲಾರಿರೋ? ಹೇಳಿ, ಎಂದನು ದ್ರೋಣ.
- ವ|| ಎಂದು ಸಾಯೆ ಸರಸಂ ನುಡಿದು ಮತ್ತಂಮಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎಂದು ಸಾಯೆ ಸರಸಂ ನುಡಿದು ಮತ್ತೆ ಇಂತು ಎಂದಂ
- ವಚನ:ಅರ್ಥ:ಎಂದು ಸಾಯುವಷ್ಟು ಪರಿಹಾಸ್ಯ ಮಾಡಿ ಪುನ ಹೀಗೆಂದನು-
- ಕಂ|| ಆದಿ ಕ್ಷತ್ರಿಯರೇ ನೀ
- ಮಾದಿತ್ಯನನಿಳಿಪ ತೇಜರಿರ್ ಪಾರ್ವನ ಕಾಲ್|
- ಮೋದೆ ನಡುತಲೆಯಲಿರ್ಪುದು
- ಮಾದುದು ನಿಮಗೆಂದು ನುಡಿದು ಕಾಯ್ಪಿನೊಳೊದೆದಂ|| ೬೪
- ಪದ್ಯ-೦೦:ಪದವಿಭಾಗ-ಅರ್ಥ:ಆದಿ ಕ್ಷತ್ರಿಯರೇ ನೀಂ ಆದಿತ್ಯನನು ಇಳಿಪ ತೇಜರಿರ್ ಪಾರ್ವನ ಕಾಲ್ ಮೋದೆ ನಡುತಲೆಯಲಿ ಇರ್ಪುದುಂ ಆದುದು ನಿಮಗೆ ಎಂದು ನುಡಿದು ಕಾಯ್ಪಿನೊಳು (ಸಿಟ್ಟಿನಿಂದ) ಒದೆದಂ (ಒದ್ದನು)
- ಪದ್ಯ-೦೦:ಅರ್ಥ:‘ನೀವು ಆದಿಕ್ಷತ್ರಿಯರಲ್ಲವೇ? ಸೂರ್ಯನನ್ನೂ ತಿರಸ್ಕರಿಸುವ ತೇಜಸ್ಸುಳ್ಳವರಾಗಿದ್ದೀರಿ? ಹಾರುವನು ಇಟ್ಟ ಕಾಲು ನಡುನೆತ್ತಿಯಲ್ಲಿ ಇರುವದಾಯಿತಲ್ಲಾ! ಎಂದು ಹೇಳಿ ಕೋಪದಿಂದ ಒದ್ದನು-
- ವ|| ಒದೆದು ನಿನ್ನನಿನಿತು ಪರಿಭವಂಬಡಿಸಿದುದು ಸಾಲ್ಗುಂ ನಿನ್ನಂ ಕೊಲಲಾಗದು ಕೊಂದೊಡೆ ಮೇಲಪ್ಪ ಪಗೆಗಂಜಿ ಕೊಂದಂತಾಗಿರ್ಕುಮೆಂದು ಕಟ್ಟಿದ ಕಟ್ಟುಗಳೆಲ್ಲಮಂ ತಾನೆ ಬಿಟ್ಟು ಕಳೆದು ಪೋಗೆಂಬುದುಂ ದ್ರುಪದಂ ಪರಿಭವಾನಳನಳವಲ್ಲದಳುರೆ
- ವಚನ:ಪದವಿಭಾಗ-ಅರ್ಥ:ಒದೆದು ನಿನ್ನನು ಇನಿತು (ಇಷ್ಟು) ಪರಿಭವಂಬಡಿಸಿದುದು (ಅವಮಾನಪಡಿಸಿದುದು) ಸಾಲ್ಗುಂ; ನಿನ್ನಂ ಕೊಲಲಾಗದು; ಕೊಂದೊಡೆ ಮೇಲಪ್ಪ ಪಗೆಗಂಜಿ ಕೊಂದಂತೆ ಆಗಿರ್ಕುಮ್ ಎಂದು ಕಟ್ಟಿದ ಕಟ್ಟುಗಳೆಲ್ಲಮಂ ತಾನೆ ಬಿಟ್ಟು ಕಳೆದು, ಪೋಗು ಎಂಬುದುಂ (ಎನ್ನಲು) ದ್ರುಪದಂ ಪರಿಭವ ಆನಳನು (ಅಗ್ನಿಯು) ಅಳವಲ್ಲದಳು ಉರೆ (ಸುಡಲು)-
- ವಚನ:ಅರ್ಥ:ಒದ್ದು ‘ನಿನ್ನನ್ನು ಇಷ್ಟು ಅವಮಾನ ಪಡಿಸಿರುವುದು ಸಾಕು. ನಿನ್ನನ್ನು ಕೊಲ್ಲಬಾರದು. ಕೊಂದರೆ ಹೆದರಿ ತನಗಿಂತ ಮೇಲಾದ ಶತ್ರುವನ್ನು ಕೊಂದಂತೆ ಆಗುತ್ತದೆ’ ಎಂದು ಕಟ್ಟಿದ ಕಟ್ಟುಗಳೆಲ್ಲವನ್ನೂ ತಾನೇ ಬಿಚ್ಚಿ ಅವನನ್ನು ಬಿಟ್ಟು, ಹೋಗು ಎನ್ನಲು, ದ್ರುಪದನನ್ನು ಅವಮಾನವೆಂಬ ಅಗ್ನಿಯು ವಿಶೇಷವಾಗಿ ಸುಡಲು-
- +ವ||ನಿನ್ನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರೆನೆಂದು ಮಹಾ ಪ್ರತಿಜ್ಞಾರೂಢನಾಗಿ ಪೋದನಿತ್ತ ಭಾರದ್ವಾಜಂ ಪಾಂಡವ ಕೌರವರ್ಕಳ ಮೆಯ್ಯೊಳೆ ವಿದ್ದೆಯಂ ನೆರೆಯೆ ಸಂಕ್ರಮಿಸಿದ ತನ್ನ ವಿದ್ಯಾಮಹಿಮೆಯಂ ಮೆರೆಯಲ್ಕೆ ಬಾಹ್ಲೀಕ ಭೂರಿಶ್ರವಸ್ಸೋಮದತ್ತ ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಿಂತೆಂದಂ-
- ವಚನ:ಪದವಿಭಾಗ-ಅರ್ಥ:(ದ್ರುಪದನು), ನಿನ್ನಂ ಕೊಲ್ವನ್ನನ ಒರ್ವ ಮಗನುಮಂ, ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳ ಒರ್ವ ಮಗಳುಮಂ ಪಡೆದಲ್ಲದೆ ಇರೆನೆಂದು ಮಹಾ ಪ್ರತಿಜ್ಞಾರೂಢನಾಗಿ ಪೋದನು, ಇತ್ತ ಭಾರದ್ವಾಜಂ (ದ್ರೋಣನು) ಪಾಂಡವ ಕೌರವರ್ಕಳ ಮೆಯ್ಯೊಳೆ ವಿದ್ಯೆಯಂ ನೆರೆಯೆ ಸಂಕ್ರಮಿಸಿದ (ಅಳವಡಿಸಿದ) ತನ್ನ ವಿದ್ಯಾಮಹಿಮೆಯಂ ಮೆರೆಯಲ್ಕೆ ಬಾಹ್ಲೀಕ ಭೂರಿಶ್ರವಸ್ಸೋಮದತ್ತ ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗೆ ಇಂತೆಂದಂ-
- ವಚನ:ಅರ್ಥ:‘ದ್ರುಪದನು, ದ್ರೋಣನ್ನು ಕುರಿತು, 'ನಿನ್ನನ್ನೂ ಕೊಲ್ಲುವಂತಹ ಮಗನನ್ನೂ, ವಿಕ್ರಮಾರ್ಜುನನಿಗೆ/ಅರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದೆ ಇರುವುದಿಲ್ಲ’ ಎಂದು ದೂಡ್ಡ ಪ್ರತಿಜ್ಞೆಯನ್ನೂ ಮಾಡಿಹೋದನು. ಈ ಕಡೆ ಭಾರದ್ವಾಜನು ಪಾಂಡವ ಕೌರವರುಗಳ ದೇಹದಲ್ಲಿ ವಿದ್ಯೆಯನ್ನು ಸಂಪೂರ್ಣವಾಗಿ ಅಳವಡಿಸಿದ ತನ್ನ ವಿದ್ಯಾ ಮಹಿಮೆಯನ್ನು ಪ್ರಕಾಶಪಡಿಸುವುದಕ್ಕಾಗಿ ಬಾಹ್ಲೀಕ, ಭೂರಿಶ್ರವ, ಸೋಮದತ್ತ, ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಹೀಗೆಂದು ಹೇಳಿದನು.
ಪಾಂಡವ ಕೌರವರ ಶಸ್ತ್ರವಿದ್ಯಾ ಪ್ರದರ್ಶನ:
|
- ಕಂ|| ನೆರೆಯೆ ಧನುರ್ವಿದ್ಯೆಯ ಕ
- ಣ್ದೆರೆವಿನೆಗಂ ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್|
- ಮೆರೆದಪ್ಪೆನೆನ್ನ ವಿದ್ದೆಯ
- ನಱಿದೊಯ್ಕನೆ ನೆರೆದು ನೋೞ್ಪುದನಿಬರುವಿಗಳ್|| ೬೫||
- ಪದ್ಯ-೬೫:ಪದವಿಭಾಗ-ಅರ್ಥ:ನೆರೆಯೆ (ಸಂಪೂರ್ಣವಾಗಿ) ಧನುರ್ವಿದ್ಯೆಯ ಕಣ್ದೆರೆವಿನೆಗಂ (ಪೂರ್ಣವಾಗಿ ಬಿಲ್ಲುವಿದ್ಯೆಯು ಕಣ್ಣುತೆರೆಯಲು-ಬರಲು) ಕಲ್ತ ನಿಮ್ಮ ಮಕ್ಕಳ ಮೆಯ್ಯೊಳ್ ಮೆರೆದಪ್ಪೆನು(ಪ್ರಕಟಪಡಿಸುತ್ತೇನೆ) ಎನ್ನ ವಿದ್ಯೆಯನು ಅಱಿದು ಒಯ್ಕನೆ (ನೇರವಾಗಿ) ನೆರೆದು (ಒಟ್ಟಾಗಿ) ನೋೞ್ಪುದು ಅನಿಬರುವಿಗಳ್ (ಎಲ್ಲರೂ)
- ಪದ್ಯ-೬೫:ಅರ್ಥ:.ದ್ರೋಣನು, ‘ಬಿಲ್ವಿದ್ಯೆಯೇ ಆವಿರ್ಭಾವವಾಗುವ ಹಾಗೆ ಸಂಪೂರ್ಣವಾಗಿ ಕಲಿತುಕೊಂಡಿರುವ ನಿಮ್ಮ ಮಕ್ಕಳ ದೇಹದಲ್ಲಿ ನನ್ನ ವಿದ್ಯಯನ್ನು ಪ್ರಕಟಪಡಿಸುತ್ತೇನೆ. ಈಗ ಎಲ್ಲರೂ ಒಟ್ಟಾಗಿ ಸೇರಿ ಪ್ರತ್ಯಕ್ಷವಾಗಿ ತಿಳಿದು ನೋಡಬೇಕು.
- ವ|| ಎಂದೊಡಂತೆಗೆಯ್ವಮೆಂದನಿಬರುಮೊಡಂಬಟ್ಟು ಪೊಱವೊೞಲೊಳುತ್ತರ ದಿಶಾಭಾಗದೊಳ್ ಸಮಚತುರಸ್ರಮಾಗೆ ನೆಲನನಳೆದು ಕಲ್ಲಂ ಪುಲ್ಲುಮಂ ಸೋದಿಸಿ ಶುಭದಿನ ಶುಭಮೂಹೂರ್ತದೊಳ್-
- ವಚನ:ಪದವಿಭಾಗ-ಅರ್ಥ:ಎಂದೊಡೆ ಅಂತೆಗೆಯ್ವಂ ಎಂದು ಅನಿಬರುಂ ಒಡಂಬಟ್ಟು ಪೊಱವೊೞಲೊಳು (ಪಟ್ಟಣದ ಹೊರಗಿನ) ಉತ್ತರ ದಿಶಾಭಾಗದೊಳ್ ಸಮಚತುರಸ್ರಮಾಗೆ (ಚಚ್ಚೌಕವಾದ) ನೆಲನನು ಅಳೆದು ಕಲ್ಲಂ ಪುಲ್ಲುಮಂ ಸೋದಿಸಿ (ಕಲ್ಲು ಹುಲ್ಲನ್ನು ತೆಗೆದು ) ಶುಭದಿನ ಶುಭಮೂಹೂರ್ತದೊಳ್-
- ವಚನ:ಅರ್ಥ:(ದ್ರೋಣನು,) ಎಂದು ಹೇಳಲಾಗಿ ಹಾಗೆಯೇ ಮಾಡೋಣವೆಂದು ಎಲ್ಲರೂ ಒಪ್ಪಿ ಪಟ್ಟಣದ ಹೊರಗಿನ ಉತ್ತರದಿಗ್ಭಾಗದಲ್ಲಿ ಚಚ್ಚೌಕವಾದ ಭೂಮಿಯನ್ನು ಅಳೆದು ಕಲ್ಲು ಹುಲ್ಲನ್ನು ಹುಡುಕಿ ತೆಗೆದು ಶುಭದಿನ ಶುಭಮೂಹೂರ್ತದಲ್ಲಿ
- ಕಂ|| ಗಟ್ಟಿಸಿ ಸಿಂಧುರದೊಳ್ ನೆಲ
- ಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್|
- ಕಟ್ಟಿಸಿ ಪೞಯಿಗೆಗಳನಳ
- ವಟ್ಟಿರೆ ಬಿಯಮಲ್ಲಿ ಮೊೞಗೆ ಪಲವುಂ ಪರಿಗಳ್|| ೬೬||
- ಪದ್ಯ-೬೬:ಪದವಿಭಾಗ-ಅರ್ಥ:ಗಟ್ಟಿಸಿ (ಗಟ್ಟಿಮಾಡಿ)ಸಿಂಧುರದೊಳ್ (ಕಾವಿಯಿಂದ) ನೆಲಗಟ್ಟಿಸಿ (ಪೆಟ್ಟಿಸಿ) ಚೆಂಬೊನ್ನ (ಕೆಂಪು ಹೊನ್ನಿನ) ನೆಲೆಯ ಚೌಪಳಿಗೆಗಳೊಳ್ (ತೊಟ್ಟಿಗಳಲ್ಲಿ) ಕಟ್ಟಿಸಿ ಪೞಯಿಗೆಗಳನು (ಬಾವುಟಗಳನ್ನು) ಅಳವಟ್ಟಿರೆ (ಕಟ್ಟಿರಲು) ಬಿಯಂ (ಮುಚ್ಚಳವಿರುವ ಡಬ್ಬಿಯಂತಹ ಒಂದು ಸಾಧನ, ಧ್ವನಿಮಾಡಲು) ಅಲ್ಲಿ ಮೊೞಗೆ ಪಲವುಂ ಪರಿಗಳ್(ವಾದ್ಯ)
- ಪದ್ಯ-೬೬:ಅರ್ಥ:ನೆಲವನ್ನು ಚಂದ್ರಕಾವಿಯಿಂದ ಪೆಟ್ಟಿಸಿ ಕೆಂಪು ಹೊನ್ನಿನಿಂದ ಮಾಡಿದ ಮನೆಗಳ ತೊಟ್ಟಿಗಳಲ್ಲಿ ಬಾವುಟಗಳನ್ನು ಕಟ್ಟಿಸಿ ಸೂಕ್ತ ಬಿಯಂ ಮೊದಲಾದ ಹಲವು ವಾದ್ಯಗಳು ಮೊಳಗುತ್ತಿರಲು,-
- ವ|| ಅಂತು ಸಮೆದ ವ್ಯಾಯಾಮ ರಂಗಕ್ಕೆ ಗಾಂಗೇಯ ಧೃತರಾಷ್ಟ್ರ ವಿದುರ ಸೋಮದತ್ತ ಬಾಹ್ಲೀಕ ಭೂರಿಶ್ರವಾದಿ ಕುಲವೃದ್ಧರುಂ ಕುಂತಿ ಗಾಂಧಾರಿಗಳುಂ ವೆರಸು ಬಂದು ಕುಳ್ಳಿರೆ-
- ವಚನ:ಪದವಿಭಾಗ-ಅರ್ಥ:ಅಂತು ಸಮೆದ (ಮಾಡಿದ) ವ್ಯಾಯಾಮ ರಂಗಕ್ಕೆ ಗಾಂಗೇಯ ಧೃತರಾಷ್ಟ್ರ ವಿದುರ ಸೋಮದತ್ತ ಬಾಹ್ಲೀಕ ಭೂರಿಶ್ರವಾದಿ ಕುಲವೃದ್ಧರುಂ ಕುಂತಿ ಗಾಂಧಾರಿಗಳುಂ ವೆರಸು ಬಂದು ಕುಳ್ಳಿರೆ-
- ವಚನ:ಅರ್ಥ:ಹಾಗೆ ಮಾಡಿದ ವ್ಯಾಯಾಮರಂಗಕ್ಕೆ ಭೀಷ್ಮ, ಧೃತರಾಷ್ಟ್ರ, ವಿದುರ, ಸೋಮದತ್ತ, ಬಾಹ್ಲೀಕ, ಭೂರಿಶ್ರವರೇ ಮೊದಲಾದ ಕುಲವೃದ್ಧರು, ಕುಂತಿ ಗಾಂಧಾರಿಯರೊಡನೆ ಬಂದು ಕುಳಿತರು
- ಕಂ|| ಅರಸಿಯರನಣುಗರಂ ಬೇ
- ೞ್ಪರುಮಂ ಮೊನೆಗಾಱರಂ ಪ್ರಗೀತರನಿಂಬಾ|
- ಗಿರೆ ಚೌಪಳಿಗೆಗಳೊಳ್ ಕುಳ್ಳಿರಿಸಿ
- ದರೊಡನೆಸೆಯೆ ನೆರೆದ ಪುರಜನ ಸಹಿತಂ|| ೬೭||
- ಪದ್ಯ-೬೭:ಪದವಿಭಾಗ-ಅರ್ಥ:ಅರಸಿಯರು ಅನಣುಗರಂ ಬೇೞ್ಪರುಮಂ ಮೊನೆಗಾಱರಂ ಪ್ರಗೀತರನು (ರಾಣಿಯರು, ಮಕ್ಕಳು, ಬೇಕಾದವರನ್ನು, ಯೋಧರನ್ನೂ, ಗಣ್ಯರನ್ನೂ) ಇಂಬಾಗಿರೆ (ವಿಸ್ತಾರವಾಗಿ) ಚೌಪಳಿಗೆಗಳೊಳ್ (ಹಜಾರದಮೇಲು ಮಾಳಿಗೆಗಳಲ್ಲಿ) ಕುಳ್ಳಿರಿಸಿದರು, ಒಡನೆ ಎಸೆಯೆ (ಶೋಭಿಸುವಂತೆ) ನೆರೆದ ಪುರಜನ ಸಹಿತಂ|
- ಪದ್ಯ-೬೭:ಅರ್ಥ:. ರಾಣಿಯರು, ಮಕ್ಕಳು , ಬೇಕಾದವರು ಯೋಧರು ಮತ್ತು ಗಣ್ಯರನ್ನೂ ಪಟ್ಟಣಿಗರೊಡನೆ ಶೋಭಿಸುವ ಹಾಗೆ ಒಟ್ಟಿಗೆ ಹಜಾರದ ಮಾಳಿಗೆಗಳಲ್ಲಿ ಆಕರ್ಷಕವಾಗಿರುವ ರೀತಿಯಲ್ಲಿ ಕುಳ್ಳಿರಿಸಿದರು.
- ವ|| ಆಗಳ್ ಕುಂಭಸಂಭವಂ-
- ವಚನ:ಪದವಿಭಾಗ-ಅರ್ಥ:ಆಗಳ್ ಕುಂಭಸಂಭವಂ(ದ್ರೋಣನು)
- ವಚನ:ಅರ್ಥ:ಆಗ ದ್ರೋಣನು;
- ಕಂ|| ಪೊಸ ಮುತ್ತಿನ ತುಡಿಗೆ ಪೊದ
- ಳ್ದೆಸೆಯೆ ದುಕೂಲಾಂಬರಂ ನಿಜಾಂಗದೊಳಂ ಸಂ|
- ದೆಸೆದಿರೆ ಬೆಳ್ಮುಗಿಲಿಂದಂ
- ಮುಸುಕಿದ ನೀಲಾದ್ರಿ ಬರ್ಪ ತೆಱದೊಳ್ ಬಂದಂ- ||೬೮||
- ಪದ್ಯ-೬೮:ಪದವಿಭಾಗ-ಅರ್ಥ:ಪೊಸ ಮುತ್ತಿನ ತುಡಿಗೆ (ಹೊಸ ಮುತ್ತಿನ ತೊಡಿಗೆಗಳು) ಪೊದಳ್ದು ಎಸೆಯೆ (ಎಲ್ಲಡೆಯೂ ಶೋಭಿಸುವಂತೆ) ದುಕೂಲಾಂಬರಂ ನಿಜಾಂಗದೊಳಂ ಸಂದು ಎಸೆದಿರೆ (ರೇಷ್ಮೆಯ ವಸ್ತ್ರವು ತನ್ನ ಶರೀರವನ್ನು ಸೇರಿ ಸುಂದರವಾಗಿರಲು) ಬೆಳ್ಮುಗಿಲಿಂದಂ ಮುಸುಕಿದ ನೀಲಾದ್ರಿ ಬರ್ಪ ತೆಱದೊಳ್ (ಬಿಳಿಯ ಮೋಡದಿಂದ ಆವರಿಸಿದ ನೀಲಪರ್ವತವು ಬರುವ ಹಾಗೆ)ಬಂದಂ|
- ಪದ್ಯ-೬೮:ಅರ್ಥ:ಅಲ್ಲಗೆ ದ್ರೋಣನು, ಹೊಸಮುತ್ತಿನ ಆಭರಣಗಳು ಎಲ್ಲಡೆಯೂ ಶೋಭಿಸುವಂತೆ, ರೇಷ್ಮೆಯ ವಸ್ತ್ರವು ತನ್ನ ಶರೀರವನ್ನು ಸೇರಿ ಸುಂದರವಾಗಿರಲು ಬಿಳಿಯ ಮೋಡದಿಂದ ಆವರಿಸಿದ ನೀಲಪರ್ವತವು ಬರುವ ಹಾಗೆಬಂದನು.
- ವ|| ಅಂತು ಬಂದು ರಂಗಭೂಮಿಯ ನಡುವೆ ನಿಂದು-
- ವಚನ:ಪದವಿಭಾಗ-ಅರ್ಥ:ಅಂತು ಬಂದು ರಂಗಭೂಮಿಯ ನಡುವೆ ನಿಂದು-
- ವಚನ:ಅರ್ಥ:ಹಾಗೆ ಬಂದು ರಂಗಸ್ಥಳದ ಮಧ್ಯದಲ್ಲಿ ನಿಂತುಕೊಂಡು;
- ಕಂ|| ನೆಗೞ್ದಿರೆ ಪುಣ್ಯಾಹ ಸ್ವರ
- ಮೊಗೆದಿರೆ ಪಟು ಪಟಹ ಕಾಹಳಾ ರವವಾಗಳ್|
- ಪುಗವೇೞ್ದಂ ವಿವಿಧಾಸ್ತ್ರ
- ಪ್ರಗಲ್ಭರಂ ತನ್ನ ಚಟ್ಟರಂ ಕಳಶಭವಂ|| ೬೯||
- ಪದ್ಯ-೬೯:ಪದವಿಭಾಗ-ಅರ್ಥ:ನೆಗೞ್ದಿರೆ (ಉಂಟಾಗಿರಲು) ಪುಣ್ಯಾಹಸ್ವರಂ ಒಗೆದಿರೆ (ಪುಣ್ಯಾಹವಾಚನ ಮಂತ್ರನಾದವು ಉಂಟಾಗಲು) ಪಟು ಪಟಹ ಕಾಹಳಾ ರವವಾಗಳ್ (ವಾದ್ಯಧ್ವನಿಗಳು ಮೊಳಗುತ್ತಿರಲು), ಪುಗವೇೞ್ದಂ (ಪ್ರವೇಶಿಸಲು ಹೇಳಿದನು); ವಿವಿಧ ಅಸ್ತ್ರ ಪ್ರಗಲ್ಭರಂ (ಪರಿಣತರನ್ನು)ತನ್ನ ಚಟ್ಟರಂ ಕಳಶಭವಂ (ದ್ರೋಣ)(ವಿವಿಧ ಶಸ್ತ್ರಾಸ್ತ್ರಗಳಲ್ಲಿ ಪರಿಣತರಾದ ತನ್ನ ಶಿಷ್ಯರನ್ನು ದ್ರೋಣನು)
- ಪದ್ಯ-೬೯:ಅರ್ಥ:ಪುಣ್ಯಾಹವಾಚನ ಮಂತ್ರನಾದವು ಉಂಟಾಗಲು; ತಮಟೆ ಕೊಂಬು ಮೊದಲಾದ ವಾದ್ಯಧ್ವನಿಗಳು ಮೊಳಗುತ್ತಿರಲು ವಿವಿಧ ಶಸ್ತ್ರಾಸ್ತ್ರಗಳಲ್ಲಿ ಪರಿಣತರಾದ ತನ್ನ ಶಿಷ್ಯರನ್ನು ದ್ರೋಣನು ಪ್ರವೇಶಮಾಡಲು ಹೇಳಿದನು.
- ಕಂ||ಅಂತು ಪುಗವೇೞ್ವುದುಂ ದಿ
- ಗ್ದಂತಿಗಳುಂ ಕುಲನಗಂಗಳುಂ ಗಡಣಂಗೊಂ|
- ಡೆಂತು ಕವಿತರ್ಕುಮಂತೆ ನೆ
- ಲಂ ತಳರ್ರಿನೆಗಂ ಪ್ರಚಂಡ ಕೋದಂಡಧರರ್||೭೦||
- ಪದ್ಯ-೭೦:ಪದವಿಭಾಗ-ಅರ್ಥ:ಅಂತು ಪುಗವೇೞ್ವುದುಂ (ಹಾಗೆ ಪ್ರವೇಶಮಾಡಲು ಹೇಳಿದಾಗ), ದಿಗ್ದಂತಿಗಳುಂ ಕುಲನಗಂಗಳುಂ (ದಿಗ್ಗಜಗಳೂ ಕುಲಪರ್ವತಗಳೂ) ಗಡಣಂಗೊಂಡು ಎಂತು ಕವಿತರ್ಕುಮ್ ಅಂತೆ (ಗುಂಪುಕೂಡಿ ಮುತ್ತುವ ಹಾಗೆ) ನೆಲಂ ತಳರ್ರಿನೆಗಂ ಪ್ರಚಂಡ ಕೋದಂಡಧರರ್(ಭೂಮಿ ನಡುಗುವ ಹಾಗೆ)
- ಪದ್ಯ-೭೦:ಅರ್ಥ:ಹಾಗೆ ಪ್ರವೇಶಮಾಡಲು ಹೇಳಿದಾಗ ದಿಗ್ಗಜಗಳೂ ಕುಲಪರ್ವತಗಳೂ ಗುಂಪುಕೂಡಿ ಮುತ್ತುವ ಹಾಗೆ, ಮತ್ತು ಭೂಮಿ ನಡುಗುವ ಹಾಗೆ ಶೂರರಾದ ಬಿಲ್ಗಾರರು (ರಂಗಭೂಮಿಯನ್ನು ಪ್ರವೇಶಿಸಿದರು.)
- ವ|| ಅಂತು ಧರ್ಮಪುತ್ರನಂ ಮುಂತಿಟ್ಟು ಭೀಮಾರ್ಜುನ ನಕುಲ ಸಹದೇವರುಂ ದುರ್ಯೋಧನನಂ ಮುಂತಿಟ್ಟು ಯುಯುತ್ಸು ದುಶ್ಯಾಸನ ದುಸ್ಸಹ ದುಸ್ಸಳ ಜರಾಸಂಧ ಸತ್ಯ ಸಂಧ ನಿಸ್ಸಹ ರಾಜಸಂಧ ವಿಂದ ಅನುವಿಂದ ದುರ್ಮತಿ ಸುಬಾಹು ದುಸ್ಪರ್ಶನ ದುರ್ಮರ್ಷಣ ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಸುನಾಭ ಚಿತ್ರ ಉಪಚಿತ್ರ ನಂದ ಉಪನಂದ ಸುಚಿತ್ರಾಂಗದ ಚಿತ್ರಕುಂಡಲ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹು ಪ್ರತಿಮ ಸುಪ್ರತಿಮ ಸಪ್ರಮಾಥಿ ದುರ್ಧರ್ಷಣ ದುಷ್ಟರಾಜಯ ಮಿತ್ರ ಉಪಮಿತ್ರ ಚೌಳೋಪ ದ್ವಂದ್ವಹಸ್ತ ಪ್ರತೀಪ ಸುಪ್ರತೀಪ ಪ್ರಹಸ್ತ ಪ್ರತಾಪ ಪ್ರಮದ ಸದ್ಬಾಹುಗಳ್ ಮೊದಲಾಗಿ ನೂರ್ವರುಂ ಬಂದು-
- ವಚನ:ಪದವಿಭಾಗ-ಅರ್ಥ: ಅಂತು ಧರ್ಮಪುತ್ರನಂ ಮುಂತಿಟ್ಟು ಭೀಮಾರ್ಜುನ ನಕುಲ ಸಹದೇವರುಂ- - -
- ವಚನ:ಅರ್ಥ:ಧರ್ಮರಾಯನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲಸಹದೇವರೂ ದುರ್ಯೋಧನನನ್ನು ಮುಂದಿಟ್ಟುಕೊಂಡು ಯುಯುತ್ಸು, ದುಶ್ಯಾಸನ, ದುಸ್ಸಳ, ಜರಾಸಂಧ, ಸತ್ಯಸಂಧ, ನಿಸ್ಸಹ, ರಾಜಸಂಧ, ವಿಂದ, ಅನುವಿಂದ, ದುರ್ಮತಿ, ಸುಬಾಹು, ದುಸ್ಪರ್ಶನ, ದುರ್ಮರ್ಷಣ, ದುರ್ಮುಖ, ದುಷ್ಕರ್ಣ, ವಿಕರ್ಣ, ವಿವಿಂಶತಿ, ಸುಲೋಚನ, ಸುನಾಭ, ಚಿತ್ರ, ಉಪಚಿತ್ರ, ನಂದ, ಉಪನಂದ, ಸುಚಿತ್ರಾಂಗದ, ಚಿತ್ರಕುಂಡಲ, ಸುಹಸ್ತ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹು, ಪ್ರತಿಮೆ, ಸುಪ್ರತಿಮ, ಸಪ್ರಮಾಥಿ, ದುರ್ಧರ್ಷಣ, ದುಷ್ಟರಾಜಯ, ಮಿತ್ರ, ಉಪಮಿತ್ರ, ಚೌಳೋಪ, ದ್ವಂದ್ವಹಸ್ತ, ಪ್ರತೀಪ, ಪಹಸ್ತ, ಪ್ರತಾಪ, ಪ್ರಮದ, ಸದ್ಬಾಹುಗಳೇ ಮೊದಲಾದ ನೂರು ಕೌರವರೂ ಬಂದು-
- ಕಂ|| ಗದೆಯೊಳ್ ಬಿಲ್ಲೊಳ್ ಗಜದೊಳ್
- ಕುದುರೆಯೊಳಂ ರಥದೊಳಸ್ತ್ರಕೌಶಲದೆ ಬೆಡಂ|
- ಗೊದವಿರೆ ತೋಱಿದರವರೊ ರ್ಮೊದಲೆ
- ಜನಂ ಪೊಗೞೆ ನೆಗೞೆ ಜಳನಿಧಿ ನಿನದಂ|| ೭೧||
- ಪದ್ಯ-೭೧:ಪದವಿಭಾಗ-ಅರ್ಥ:ಗದೆಯೊಳ್ ಬಿಲ್ಲೊಳ್ ಗಜದೊಳ್ ಕುದುರೆಯೊಳಂ ರಥದೊಳ್ ಅಸ್ತ್ರಕೌಶಲದೆ ಬೆಡಂಗೊದವಿರೆ(ಬೆಡಂಗು ಒದವಿರೆ;ಬೆಡಗು /ಸೊಗಸು ಉಂಟಾಗಲು) ತೋಱಿದರು ಅವರು ಒರ್ಮೊದಲೆ (ಕೌಶಲ್ಯವನ್ನು- ಒಟ್ಟಿಗೆ ತೋರಿಸಿದರು) ಜನಂ ಪೊಗೞೆ (ಹೊಗಳೆ) ನೆಗೞೆ (ಉಂಟಾಗಲು) ಜಳನಿಧಿ ನಿನದಂ(ಸಮುದ್ರ ಘೋಷದಂತೆ)
- ಪದ್ಯ-೭೧:ಅರ್ಥ:. ಜನರೆಲ್ಲರೂ ಸಮುದ್ರ ಘೋಷದಂತೆ ಗಟ್ಟಿಯಾಗಿ ಒಟ್ಟಿಗೆ ಹೊಗಳುವ ಹಾಗೆ ಗದೆಯಲ್ಲಿ, ಬಿಲ್ಲಿನಲ್ಲಿ, ಆನೆಯಲ್ಲಿ, ಕುದುರೆಯಲ್ಲಿ, ರಥದಲ್ಲಿ, ಅಸ್ತ್ರಕೌಶಲದಲ್ಲಿ, ಸೊಗಸು ತೋರುವಂತೆ ಜಾಣ್ಮೆಯನ್ನು ಪ್ರದರ್ಶಿಸಿದರು.
- ವ|| ಅಂತವರಿಂ ಬೞಿಯಂ-
- ವಚನ:ಪದವಿಭಾಗ-ಅರ್ಥ:ಅಂತು ಅವರಿಂ ಬೞಿಯಂ-
- ವಚನ:ಅರ್ಥ:ಹಾಗೆ ಅವರಾದ ಬಳಿಕ-
- ಕಂ|| ಆದ ಮುಳಿಸಿಂದಮಾಗಳ್
- ಮೋದುವ ಬಗೆ ಬಳೆಯೆ ಪಿಡಿದ ಗದೆಗಳಿನಿಳಿಪಂ|
- ತಾದುದು ಸುಯೋಧನೋಗ್ರ ವೃ
- ಕೋದರರೊರ್ಮೊದಲೆ ಶಿಖರಮುಳ್ಳೆರಡಗಮಂ|| ೭೨||
- ಪದ್ಯ-೭೨:ಪದವಿಭಾಗ-ಅರ್ಥ:ಆದ ಮುಳಿಸಿಂದಂ (ಉಂಟಾದ ಸಿಟ್ಟಿನಿಂದ) ಆಗಳ್ (ಆಗ) ಮೋದುವ ಬಗೆ ಬಳೆಯೆ (ಹೊಡೆಯುವ ಮನಸ್ಸು ಉಂಟಾಗಲು) ಪಿಡಿದ ಗದೆಗಳನು ಇಳಿಪಂತಾದುದು ಸುಯೋಧನ ಉಗ್ರ ವೃಕೋದರರ್ ಒರ್ಮೊದಲೆ (ಕೂಡಲೆ) ಶಿಖರಮುಳ್ಳೆರಡಗಮಂ (ಶಿಖರಂ ಉಳ್ಳ ಎರಡು ಅಗಮಂ- -ಆ ಗದೆಗಳನ್ನು ಹಿಡಿದ ಅವರು, ಶಿಖರವುಳ್ಳ ಬೆಟ್ಟಗಳಂತೆ; ಅಗ-ಬೆಟ್ಟ)||
- ಪದ್ಯ-೭೨:ಅರ್ಥ:ಕೋಪವೂ ಹೊಡೆಯಬೇಕೆಂಬ ಅಭಿಲಾಷೆಯೂ (ಅವರಲ್ಲಿ) ಬೆಳೆಯಲು ದುರ್ಯೋಧನನೂ ಭೀಮನೂ ಏಕಕಾಲದಲ್ಲಿ ಎತ್ತಿ ಹಿಡಿದ ಗದೆಗಳು ಶಿಖರದಿಂದ ಕೂಡಿದ ಎರಡು ಬೆಟ್ಟಗಳನ್ನು ಅಲ್ಲಿ ಒಟ್ಟಿಗೆ ಇಳಿಸಿದಂತೆ ಇತ್ತು.
- ವ|| ಅಂತಿರ್ವರುಮೊರ್ವರೊರ್ವರೊಳ್ ಸೆಣಸಿ ಬಹಪ್ರಯೋಗ ಗದಾ ಕೌಶಲಮಂ ತೋಱಲೆಂದು-
- ವಚನ:ಪದವಿಭಾಗ-ಅರ್ಥ:ಅಂತು ಇರ್ವರುಂ ಒರ್ವರ್ ಒರ್ವರೊಳ್ ಸೆಣಸಿ ಬಹಪ್ರಯೋಗ (ಬಹ-ತಮಗೆ ಬರುವ, ತಿಳಿದ; Xಬಹು-ಅನೇಕ?) ಗದಾ ಕೌಶಲಮಂ ತೋಱಲೆಂದು-
- ವಚನ:ಅರ್ಥ:ಅವರಿಬ್ಬರೂ ಪರಸ್ಪರ ಹೋರಾಡಿ ಅನೇಕ ಪ್ರಯೋಗಗಳಿಂದ ತಮಗೆ ಬರುವ ಗದಾ ಕೌಶಲವನ್ನು ತೋರಿಸಲೆಂದು ಹೋರಾಡುತ್ತಿದ್ದರು ಆಗ-.
- ಕಂ|| ಗೆಡೆವೆಚ್ಚಿರ್ವರ್ ಮನಗೊಂ| ಡೊಡನೊಡನೋರಂತು ತಗುಳ್ದು ಝೇಂಕರಿಸಿದೊಡೆ| ಲ್ವಡಗಾಗೆ ಮೋದಲೆಂದಿ| ರ್ದೆಡೆಯೊಳ್ ಗುರು ತನ್ನ ಮಗನನೆಡೆವುಗವೇೞ್ದಂ|| ೭೩||
- ಪದ್ಯ-೭೩:ಪದವಿಭಾಗ-ಅರ್ಥ:ಗೆಡೆವೆಚ್ಚಿ ಇರ್ವರ್ (ಇಬ್ಬರು ಹೆಚ್ಚಿನ ಜೋಡಿ), ಮನಗೊಂಡು (ಜನರನ್ನು ಆಕರ್ಶಿಸುವಂತೆ) ಒಡನೊಡನೆ ಓರಂತು ತಗುಳ್ದು(ಜೊತೆಜೊಯಲ್ಲಿಯೇ ಬೆನ್ನಟ್ಟಿಕೊಂಡು) ಝೇಂಕರಿಸಿದೊಡೆ (ಆರ್ಭಟಮಾಡಿದರೆ) ಎಲ್ವಡಗಾಗೆ (ಎಲುಬು ಅಡಗು-ಮಾಂಸ ಆಗುವಂತೆ) ಮೋದಲೆಂದಿರ್ದ ಎಡೆಯೊಳ್ (ಮೋದು-ಹೊಡೆ, ಎಂದು ಇರ್ದ ಎಡೆ-ಸಮಯ; ಜಜ್ಜಿಹೋಗುವ ಹಾಗೆ ಹೊಡೆಯಬೇಕೆಂದಿದ್ದ ಸಮಯದಲ್ಲಿ) ಗುರು ತನ್ನ ಮಗನನು ಎಡೆವುಗವೇೞ್ದಂ (ಎಡೆ-ಮಧ್ಯ, ಉಗು-ಹೋಗಲು ಹೇಳ್ದಂ-ಹೇಳ್ದನು; ತನ್ನ ಮಗನಾದ ಅಶ್ವತ್ಥಾಮನನ್ನು ಮಧ್ಯೆ ಪ್ರವೇಶಮಾಡಲು ಹೇಳಿದನು.)
- ಪದ್ಯ-೭೩:ಅರ್ಥ:ಇಬ್ಬರೂ ದೃಢಚಿತ್ತರಾಗಿ ಜೊತೆಜೊಯಲ್ಲಿಯೇ ಬೆನ್ನಟ್ಟಿಕೊಂಡು ಆರ್ಟಿಭಸಿ ಅವರ ಶರೀರವು -ಎಲಬು ಮಾಂಸವಾಗಿ, ಜಜ್ಜಿಹೋಗುವ ಹಾಗೆ ಹೊಡೆಯಬೇಕೆಂದಿದ್ದ ಸಮಯದಲ್ಲಿ ಗುರು ದ್ರೋಣನು ಅವರಿಬ್ಬರನ್ನು ತಡೆಯುವುದಕ್ಕಾಗಿ ತನ್ನ ಮಗ ಅಶ್ವತ್ಥಾಮನನ್ನು ಮಧ್ಯೆ ಪ್ರವೇಶಮಾಡಲು ಹೇಳಿದನು.
- ವ|| ಅಂತು ಮೇರೆದಪ್ಪಲ್ ಬಗೆದ ಮಹಾಸಮುದ್ರಂಗಳೆರಡಱ ನಡುವೆ ಕುಲಗಿರಿಯಿರ್ಪಂತಿರ್ದಶ್ವತ್ಥಾಮನಂ ಕಂಡಿರ್ವರುಮೆರಡುಂ ದೆಸೆಗೆ ತೊಲಗಿ ನಿಂದಾಗಳ್-
- ವಚನ:ಪದವಿಭಾಗ-ಅರ್ಥ:ಅಂತು ಮೇರೆದಪ್ಪಲ್ ಬಗೆದ (ಎಲ್ಲೆಯನ್ನು ಮೀರಲು ಯೋಚಿಸಿದ)ಮಹಾಸಮುದ್ರಂಗಳ ಎರಡಱ(ರ) ನಡುವೆ ಕುಲಗಿರಿಯಿರ್ಪಂತೆ ಇರ್ದ ಅಶ್ವತ್ಥಾಮನಂ ಕಂಡು ಇರ್ವರುಂ ಎರಡುಂ ದೆಸೆಗೆ (ದಿಕ್ಕಿಗೆ) ತೊಲಗಿ ನಿಂದು, ಆಗಳ್
- ವಚನ:ಅರ್ಥ:|| ಹಾಗೆ ಎಲ್ಲೆಯನ್ನು ಮೀರಲು ಯೋಚಿಸಿದ ಎರಡು ಮಹಾಸಮುದ್ರಗಳ ಮಧ್ಯೆ ಕುಲಪರ್ವತದಂತೆ ನಿಂತಿದ್ದ ಅಶ್ವತ್ಥಾಮನನ್ನು ನೋಡಿ ಇಬ್ಬರೂ ಎರಡು ದಿಕ್ಕಿಗೆ ಸರಿದು ನಿಂತರು; ಆಗ
- ಕಂದಪದ್ಯ|| ಆ ದೂರ್ವಾಂಕುರ ವರ್ಣದೊ|
- ಳಾದಮೊಡಂಬಟ್ಟ ಕನಕ ಕವಚಂ ರಾಜ|
- ತ್ಕೋದಂಡಮಮರ್ದ ದೊಣೆ ಕ|
- ಣ್ಗಾದಮೆ ಬರೆ ಬಂದು ಮುಂದೆ ನಿಂದಂ ಹರಿಗಂ|| ೭೪||
- ಪದ್ಯ-೭೪:ಪದವಿಭಾಗ-ಅರ್ಥ:ಆ ದೂರ್ವಾಂಕುರ (ಗರಿಕೆಹುಲ್ಲು, ಅಂಕುರ-ಕುಡಿ) ವರ್ಣದೊಳು (ಬಣ್ಣದಲ್ಲಿ)ಆದಂ ಒಡಂಬಟ್ಟ (ಒಪ್ಪಿದ) ಕನಕ ಕವಚಂ ರಾಜತ್ ಕೋದಂಡಂ(ಪ್ರಕಾಶಮಾನವಾದ ಬಿಲ್ಲು) ಅಮರ್ದ ದೊಣೆ (ಬೆನ್ನಿಗೆ ಅಮರಿದ- ಸೇರಿಕೊಂಡ ದೊಣೆ- ಬತ್ತಳಿಕೆ) ಕಣ್ಗಾದಮೆ ಬರೆ (ಕಣ್ಗೆ ಆದಮೆಬರೆ; ಕಣ್ಣಿಗೆ ಸೊಗಸಾಗಲು) ಬಂದು ಮುಂದೆ ನಿಂದಂ ಹರಿಗಂ(ಹರಿಗನು/ಅರಿಕೇಸರಿ/ ಅರ್ಜುನನು ಮುಂದೆ ಬಂದು ನಿಂತನು.)
- ಪದ್ಯ-೭೪:ಅರ್ಥ:ಎಳೆಯ ಗರಿಕೆಯಹುಲ್ಲಿನ ಬಣ್ಣದಿಂದ ವಿಶೇಷವಾಗಿ ಒಪ್ಪಿ ಕಾಣುವ ಚಿನ್ನದ ಕವಚ, ಪ್ರಕಾಶಮಾನವಾದ ಬಿಲ್ಲು, ಬೆನ್ನಿಗೆ ಕಟ್ಟಿದ್ದ ಬತ್ತಳಿಕೆ ಇವು ಕಣ್ಣುಗಳಿಗೆ ಮನೋಹರವಾಗಿರಲು ಅರ್ಜುನನು ಮುಂದುಗಡೆ ಬಂದು ನಿಂತನು.
- ವ|| ಆಗಳ್ ಕುಂಭಸಂಭವನುಲಿವ ಜನದ ಕಳಕಳ ರವಮುಮಂ ಮೊೞಗುವ ಪಗಳುಮಂ ಬಾರಿಸಿ-
- ವಚನ:ಪದವಿಭಾಗ-ಅರ್ಥ: ಆಗಳ್ ಕುಂಭಸಂಭವನು (ದ್ರೋಣನು) ಉಲಿವ (ಮಾತಾಡುವ) ಜನದ ಕಳಕಳ ರವಮುಮಂ(ಸದ್ದನ್ನು) ಮೊೞಗುವ ಪಗಳುಮಂ(ವಾದ್ಯವನ್ನು) ಬಾರಿಸಿ (ನಿಲ್ಲಿಸಿ?)-
- ವಚನ:ಅರ್ಥ:ಆಗ ದ್ರೋಣನು ಮಾತಾಡುತ್ತಿದ್ದ ಜನಗಳ ಕಳಕಳ ಧ್ವನಿಯನ್ನೂ ಮೊಳಗುತ್ತಿದ್ದ ವಾದ್ಯಗಳನ್ನೂ ನಿಲ್ಲಿಸಿ,-
- ಕಂ|| ಈತಂ ಗುಣಾರ್ಣವಂ ವಿ
- ಖ್ಯಾತ ಯಶಂ ವೈರಿಗಜಘಟಾವಿಘಂಟನನಿಂ||
- ತೀತನ ಸಾಹಸಮುಪಮಾ
- ತೀತಮಿದಂ ನೋಡಿಮೆಂದು ನೆರವಿಗೆ ನುಡಿದಂ|| ೭೫||
- ಪದ್ಯ-೭೫:ಪದವಿಭಾಗ-ಅರ್ಥ:ದ್ರೋಣ ಹೇಳಿದ್ದು: ಈತಂ ಗುಣಾರ್ಣವಂ(ಅರ್ಜುನ) ವಿಖ್ಯಾತ ಯಶಂ ವೈರಿಗಜಘಟಾವಿಘಂಟನನು,ಇಂತು ಈತನ ಸಾಹಸಂ ಉಪಮಾತೀತಂ (ಹೋಲಿಕೆಗೆ ಮೀರಿದುದು)ಇದಂ ನೋಡಿಮೆಂದು ನೆರವಿಗೆ ನುಡಿದಂ(ನೆರೆದವರಿಗೆ- ಸೇರಿದವರಿಗೆ ಹೇಳಿದನು.)
- ಪದ್ಯ-೭೫:ಅರ್ಥ:ವಿಖ್ಯಾತ ಯಶಸ್ಸು ಉಳ್ಳವನು, ವೈರಿಗಜ ಘಟಾವಿಘಟನು, (ವೈರಿಗಳೆಂಬ ಆನೆಗಳನ್ನು ಸೀಳುವ ಪರಾಕ್ರಮಿಯು) ಆದ ಗುಣಾರ್ಣವನು/ಅರ್ಜುನನು ಇವನು. ಈತನ ಸಾಹಸ ಹೋಲಿಕೆಗೆ ಮೀರಿದುದು ಇದನ್ನು ನೋಡಿ ಎಂದು ಅಲ್ಲಿ ಸೇರಿದವರಿಗೆ ಹೇಳಿದನು.
- ವ|| ಆ ಪ್ರಸ್ತಾವದೊಳ್-
- ವಚನ:ಪದವಿಭಾಗ-ಅರ್ಥ:ಆ ಪ್ರಸ್ತಾವದೊಳ್- (ಪ್ರಸ್ತಾವ- ಸಂದರ್ಭ)
- ವಚನ:ಅರ್ಥ:ಆ ಸಂದರ್ಭದಲ್ಲಿ
- ಚಂ|| ಒಡೆಗುಮಜಾಂಡಮಿನ್ನಿನಿಸು ಜೇವೊಡೆದಾಗಳೆ ಬೊಮ್ಮನುಂ ಮನಂ
- ಗಿಡುಗುಮದೇವುದೆಂದು ಮಿಡಿದೊಯ್ಯನೆ ಜೇವೊಡೆದಾಗಳಂಬನಂ|
- ಬೊಡನೊಡನೀಂಬುವೆಂಬನಿತು ಸಂದೆಯಮಪ್ಪಿನಮಸ್ತ್ರ ಜಾಲದಿಂ
- ತಡೆಯದೆ ಪಂಜರಂಬಡೆದನಂದು ವಿಯತ್ತಳದೊಳ್ ಗುಣಾರ್ಣವಂ|| ೭೬||
- ಪದ್ಯ-೭೬:ಪದವಿಭಾಗ-ಅರ್ಥ:ಒಡೆಗುಂ ಅಜಾಂಡಂ(ಬ್ರಹ್ಮಾಂಡ) ಇನ್ನು ಇನಿಸು ಜೇವೊಡೆದಾಗಳೆ (ಬಿಲ್ಲಿನ ಸ್ವಲ್ಪ ಠೇಂಕಾರ ಮಾಡಿದರೆ), ಬೊಮ್ಮನುಂ ಮನಂ ಗಿಡುಗುಂ (ಆ ಶಬ್ದಕ್ಕೆ ಬ್ರಹ್ಮನಿಗೂ ಮನಸ್ಸು ಕೆಡುವುದು) ಅದು ಏವುದೆಂದು (ಅಷ್ಪನ್ನೇಕೆ ಮಾಡುವುದು ಎಂದು) ಮಿಡಿದು ಒಯ್ಯನೆ ಜೇವೊಡೆದಾಗಳೆ ಅಂಬನಂ (ಅವನು ಬಹುಮೆಲ್ಲಗೆ ಟಿಂಕಾರಮಾಡಿದಾಗ ಒಂದು ಬಾಣವನ್ನು ಬಿಟ್ಟರೆ) ಒಡನೊಡನೆ ಈಂಬುವೆಂಬ ಅನಿತು (ಒಂದು ಬಾಣವು ಮತ್ತೊಂದು ಬಾಣವನ್ನೂ ಹೆರುತ್ತಿದೆಯೋ) ಸಂದೆಯಂ ಅಪ್ಪಿನಂ(ಎಂಬ ಸಂದೇಹವನ್ನುಂಟುಮಾಡುತ್ತಾ ) ಅಸ್ತ್ರ ಜಾಲದಿಂ ತಡೆಯದೆ ಪಂಜರಂ ಬಡೆದನು (ಪಂಜರವನ್ನು ಕಟ್ಟಿದನು) ಅಂದು ವಿಯತ್ತಳದೊಳ್ ( ಆಕಾಶಪ್ರದೇಶದಲ್ಲಿ) ಗುಣಾರ್ಣವಂ (ಅರ್ಜುನನು)|
- ಪದ್ಯ-೭೬:ಅರ್ಥ:ಅರ್ಜುನನು ಸ್ವಲ್ಪ ಮಾತ್ರಾ ಬಿಲ್ಲಿನ ನಾಣನ್ನು ಸ್ವಲ್ಪ ಠೇಂಕಾರ ಮಾಡಿದರೆ ಬ್ರಹ್ಮಾಂಡವು ಒಡೆದುಹೋಗುತ್ತದೆ; ಬ್ರಹ್ಮನು ಉತ್ಸಾಹಶೂನ್ಯನಾಗುತ್ತಾನೆ. ಅಷ್ಪನ್ನೇಕೆ ಮಾಡುವುದು ಎಂದು ಅವನು ಬಹುಮೆಲ್ಲಗೆ ಟಿಂಕಾರಮಾಡಿದಾಗ ಒಂದು ಬಾಣವು ಮತ್ತೊಂದು ಬಾಣವನ್ನೂ ಹೆರುತ್ತಿದೆಯೋ ಎಂಬ ಸಂದೇಹವನ್ನುಂಟುಮಾಡುತ್ತ ಗುಣಾರ್ಣವನು ಆಕಾಶಪ್ರದೇಶದಲ್ಲಿ ಆ ದಿನ ಅಸ್ತ್ರಗಳ ಸಮೂಹದಿಂದ ಸ್ವಲ್ಪವೂ ತಡಮಾಡದೆ ಒಂದು (ಬಾಣದ) ಪಂಜರವನ್ನು ಕಟ್ಟಿದನು.
- ವ|| ಮತ್ತಮೈಂದ್ರ ವಾರುಣ ವಾಯವ್ಯಾಗ್ನೇಯ ಪಾರ್ವತಾದಿ ಬಾಣಂಗಳಂ ತುಡೆ-
- ವಚನ:ಪದವಿಭಾಗ-ಅರ್ಥ:ಮತ್ತಂ ಐಂದ್ರ ವಾರುಣ ವಾಯವ್ಯ ಆಗ್ನೇಯ ಪಾರ್ವತ ಆದಿ ಬಾಣಂಗಳಂ ತುಡೆ- (ತೊಡಲು)
- ವಚನ:ಅರ್ಥ:ಮತ್ತು ಐಂದ್ರ, ವಾರುಣ, ವಾಯವ್ಯ, ಆಗ್ನೇಯ, ಪಾರ್ವತವೇ ಮೊದಲಾದ ಅಸ್ತ್ರಗಳನ್ನು ಪ್ರಯೋಗಿಸಲು-
- ಚಂ|| ಕವಿದುವು ಕಾಳ ನೀಳ ಜಳದಾವಳಿ ವಾರಿಗಳ್ ಧರಿತ್ರಿಯಂ
- ಕವಿದುವು ಗಾಳಿಗಳ್ ಪ್ರಳಯಕಾಲಮನಾಗಿಸಲೆಂದೆ ಲೋಕಮಂ|
- ಕವಿದುವು ಮೊಕ್ಕಳಂ ಕವಿದುವುಗ್ರ ಲಯಾಗ್ನಿಗಳಂತೆ ಬೆಟ್ಟುಗಳ್
- ಕವಿದುವಿವೆಂಬನಿತ್ತು ಭಯಮಾಯ್ತು ಗುಣಾರ್ಣವನಸ್ತ್ರಕೌಶಲಂ|| ೭೭||
- ಪದ್ಯ-೭೭:ಪದವಿಭಾಗ-ಅರ್ಥ:ಕವಿದುವು (ಆವರಿಸಿಕೊಂಡವು) ಕಾಳ ನೀಳ ಜಳದಾವಳಿ (ಪ್ರಳಯಕಾಲದ ಕಪ್ಪುಮೋಡಗಳು) ವಾರಿಗಳ್ ಧರಿತ್ರಿಯಂ ಕವಿದುವು (ಸಮುದ್ರಗಳು ಭೂಮಿಯನ್ನು ಮುಚ್ಚಿದುವು) ಗಾಳಿಗಳ್ ಪ್ರಳಯಕಾಲಮನು ಆಗಿಸಲೆಂದೆ ಲೋಕಮಂ ಕವಿದುವು (ಪ್ರಳಯಕಾಲವನ್ನು ಉಂಟುಮಾಡಬೇಕೆಂದೇ ಬಿರುಗಾಳಿಗಳು ಭೂಮಿಯನ್ನು ಆವರಿಸಿಕೊಂಡವು) ಮೊಕ್ಕಳಂ (ವಿಶೀಷವಾಗಿ) ಕವಿದುವು ಉಗ್ರ ಲಯಾಗ್ನಿಗಳಂತೆ, ಬೆಟ್ಟುಗಳ್ ಕವಿದುವು ಇವೆಂಬನಿತ್ತು (ಬೆಟ್ಟಗಳು ಕವಿದುಕೊಂಡವು ಎನ್ನುವಷ್ಟು ಮಟ್ಟಿಗೆ) ಭಯಮಾಯ್ತು ಗುಣಾರ್ಣವನ ಅಸ್ತ್ರಕೌಶಲಂ(ಅರ್ಜುನನ ಅಸ್ತ್ರವಿದ್ಯಾ ಕೌಶಲವು).
- ಪದ್ಯ-೭೭:ಅರ್ಥ:ಪ್ರಳಯಕಾಲದ ಕಪ್ಪುಮೋಡಗಳು ಆವರಿಸಿಕೊಂಡವು. ಸಮುದ್ರಗಳು ಭೂಮಿಯನ್ನು ಮುಚ್ಚಿದವು. ಪ್ರಳಯಕಾಲವನ್ನು ಉಂಟುಮಮಾಡಬೇಕೆಂದು ಬಿರುಗಾಳಿಗಳು ಭೂಮಿಯನ್ನು ಆವರಿಸಿಕೊಂಡವು. ಪ್ರಳಯಕಾಲದ ಬೆಂಕಿಗಳು ವಿಶೇಷವಾಗಿ ಮುಚ್ಚಿಕೊಂಡವು. ಹಾಗೆಯೇ ಬೆಟ್ಟಗಳು ಕವಿದುಕೊಂಡವು ಎನ್ನುವಷ್ಟು ಮಟ್ಟಿಗೆ ಅರ್ಜುನನ ಅಸ್ತ್ರವಿದ್ಯಾ ಕೌಶಲವು ಭಯಂಕರವಾಯಿತು.
- ವ|| ಆಗಳಾ ಪರಾಕ್ರಮಧವಳನ ಶರಪರಿಣತಿಯಂ ಕಂಡು ದುಯೋಧನನ ಮೊಗಂ ತಲೆನವಿರ ಗಂಟಿಂ ಕಿಱದಾಗೆ ದ್ರ್ಹೋಣ ಭೀಷ್ಮ ಕೃಪ ವಿದುರ ಪ್ರಭೃತಿಗಳ ಮೊಗಮರಲ್ದ ತಾವರೆಯಿಂ ಪಿರಿದಾಗೆ-
- ವಚನ:ಪದವಿಭಾಗ-ಅರ್ಥ:ಆಗಳು ಆ ಪರಾಕ್ರಮಧವಳನ ಶರಪರಿಣತಿಯಂ (ಪರಾಕ್ರಮಧವಳನಾದ ಅರ್ಜುನನ ಬಿಲ್ವಿದ್ಯೆಯ ಪಾಂಡಿತ್ಯವನ್ನು) ಕಂಡು ದುಯೋಧನನ ಮೊಗಂ ತಲೆನವಿರ ಗಂಟಿಂ ಕಿಱದಾಗೆ (ತಲೆಯಕೂದಲಿನ ಗಂಟಿಗಿಂತ ಚಿಕ್ಕದಾಗಲು)ದ್ರ್ಹೋಣ ಭೀಷ್ಮ ಕೃಪ ವಿದುರ ಪ್ರಭೃತಿಗಳ ಮೊಗಮರಲ್ದ ತಾವರೆಯಿಂ ಪಿರಿದಾಗೆ-
- ವಚನ:ಅರ್ಥ:ಆಗ ಆ ಪರಾಕ್ರಮಧವಳನಾದ ಅರ್ಜುನನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನೋಡಿ ದುರ್ಯೋಧನನ ಮುಖವು ತಲೆಯಕೂದಲಿನ ಗಂಟಿಗಿಂತ ಚಿಕ್ಕದಾಗಲು, ದ್ರೋಣ, ಭೀಷ್ಮ, ಕೃಪ, ವಿದುರರೇ ಮೊದಲಾದವರ ಮುಖಗಳು ಅರಳಿದ ತಾವರೆಗಿಂತ ಹಿರಿದಾದುವು.
- ಕಂ|| ತೊಳಗುವ ತೇಜಂ ತೊಳತೊಳ |
- ತೊಳಗುವ ದಿವ್ಯಾಸ್ತ್ರಮಮರ್ದ ಕೋದಂಡಮಸುಂ|
- ಗೊಳಿಸೆ ಮನಂಗೊಳಿಸೆ ಭಯಂ|
- ಗೊಳಿಸೆ ಸಭಾಸದರನುಱದೆ ಕರ್ಣಂ ಬಂದಂ|| ೭೮||
- ಪದ್ಯ-೭೮:ಪದವಿಭಾಗ-ಅರ್ಥ: ತೊಳಗುವ ತೇಜಂ (ಪ್ರಕಾಶಮಾನವಾದ ತೇಜಸ್ಸೂ )ತೊಳತೊಳ |ತೊಳಗುವ (ಪ್ರಕಾಶಿಸುವ) ದಿವ್ಯಾಸ್ತ್ರಂ ಅಮರ್ದ (ಕೂಡಿದ) ಕೋದಂಡಂ ಅಸುಂಗೊಳಿಸೆ (ಉತ್ಸಾಹಗೊಳಿಸಲು) ಮನಂಗೊಳಿಸೆ (ಆಕರ್ಷಿಸಿಸಲು) ಭಯಂಗೊಳಿಸೆ ಸಭಾಸದರನು ಉಱದೆ (ಭರದಿಂದ?) ಕರ್ಣಂ ಬಂದಂ|
- ಪದ್ಯ-೭೮:ಅರ್ಥ:ಆ ಸಮಯದಲ್ಲಿ ಪ್ರಕಾಶಮಾನವಾದ ತೇಜಸ್ಸು, ಅತ್ಯಂತ ಜಾಜ್ವಲ್ಯಮಾನವಾದ ದಿವ್ಯಾಸ್ತ್ರದಿಂದ ಕೂಡಿದ ಬಿಲ್ಲೂ ಸಭೆಯ ಜನರನ್ನು ಉತ್ಸಾಹಗೊಳಿಸಲು, ಆಕರ್ಷಿಸಿಸಲು ಭಯವನ್ನುಂಟುಮಾಡುತ್ತಿರಲು ಕರ್ಣನು ವೇಗವಾಗಿ ಬಂದನು
- ವ|| ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಧಿಯಿಂ ದಿವ್ಯಾಸ್ತ್ರಂಗಳನುರ್ಚಿ ಕೊಂಡು-
- ವಚನ:ಪದವಿಭಾಗ-ಅರ್ಥ:ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಧಿಯಿಂ (ಬತ್ತಳಿಕೆಯಿಂದ)ದಿವ್ಯಾಸ್ತ್ರಂಗಳನು ಉರ್ಚಿ (ಉಗಿದು ತೆಗೆದುಕೊಂಡು) ಕೊಂಡು-
- ವಚನ:ಅರ್ಥ:ದ್ರೋಣಾ ಚಾರ್ಯರಿಗೆ ನಮಸ್ಕಾರಮಾಡಿ ಬತ್ತಳಿಕೆಯಿಂದ ದಿವ್ಯಾಸ್ತ್ರಗಳನ್ನು ತೆಗೆದುಕೊಂಡು;-
- ಕಂ|| ಅರಿಗನ ಬಿಲ್ಬಲ್ಮೆಯೊಳಂ
- ದೆರಡಿಲ್ಲದೆ ಬಗೆದ ಮುಳಿಸುಮೇವಮುಮೆರ್ದೆಯೊಳ್||
- ಬರೆದಿರೆ ತೋಱಿದನಾಯತ|
- ಕರ ಪರಿಘಂ ಕರ್ಣನಾತ್ಮ ಶರಪರಿಣತಿಯಂ|| ೭೯ ||
- ಪದ್ಯ-೭೯:ಪದವಿಭಾಗ-ಅರ್ಥ:ಅರಿಗನ (ಅರ್ಜುನನ) ಬಿಲ್ಬಲ್ಮೆಯೊಳಂ ದೆರಡಿಲ್ಲದೆ ಬಗೆದ (ಬಿಲ್ಲು ವಿದ್ಯೆಗಿಂತ ತನ್ನ ಬಿಲ್ಲಿನ ಪಾಂಡಿತ್ಯವು ಸ್ವಲ್ಪವೂ ಬೇರೆಯಿಲ್ಲವೆಂದು ಭಾವಿಸಿದ) ಮುಳಿಸುಂ ಏವಮಂ (ಸಿಟ್ಟೂ ಅಸಮಾಧಾನವೂ ) ಎರ್ದೆಯೊಳ್ ಬರೆದಿರೆ (ಎದೆಯಲ್ಲಿ ತುಂಬಿರಲು) ತೋಱಿದಂ (ತೋರಿಸಿದನು) ಆಯತಕರ ಪರಿಘಂ (ಪರಿಘದ ಆಯುಧದಂತೆ) ಕರ್ಣನು ಆತ್ಮ ಶರಪರಿಣತಿಯಂ (ತನ್ನಬಾಣವಿದ್ಯಾಪ್ರೌಢಿಮೆಯನ್ನು)
- ಪದ್ಯ-೭೯:ಅರ್ಥ:. ಅರ್ಜುನನ ಬಿಲ್ಲು ವಿದ್ಯೆಗಿಂತ ತನ್ನ ಬಿಲ್ಲಿನ ಪಾಂಡಿತ್ಯವು ಸ್ವಲ್ಪವೂ ಬೇರೆಯಿಲ್ಲವೆಂದು ಭಾವಿಸಿದ ಸಿಟ್ಟೂ ಅಸಮಾಧಾನವೂ ಎದೆಯಲ್ಲಿ ತುಂರಲು ಪರಿಘಾಯುಧದಂತೆ ದೀರ್ಘವಾದ ಬಾಹುಗಳನ್ನುಳ್ಳ ಕರ್ಣನು ತನ್ನ ಬಾಣವಿದ್ಯಾಪ್ರೌಢಿಮೆಯನ್ನು ಪ್ರದರ್ಶಿಸಿದನು.
- ವ|| ಅಂತು ತೋಱಿಯುಮೆರ್ದೆಯ ಮುಳಿಸು ನಾಲಗೆಗೆ ವರೆ ಸೈರಿಸಲಾಱದೆ ವಿದ್ವಿಷ್ಟ ವಿದ್ರಾವಣನನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಅಂತು ತೋಱಿಯುಂ (ಹಾಗೆ ಪರಿಣತಿ ತೋರಿಸಿ) ಎರ್ದೆಯ ಮುಳಿಸು (ತೋರಿದ ಹೃದಯದ ಕೋಪವು)ನಾಲಗೆಗೆ ವರೆ (ಬರಲು) ಸೈರಿಸಲಾಱದೆ ವಿದ್ವಿಷ್ಟ ವಿದ್ರಾವಣನನು (ಶತ್ರುಗಳನ್ನು ಓಡಿಸುವವನನ್ನು ಕುರಿತು) ಇಂತು ಎಂದಂ-
- ವಚನ:ಅರ್ಥ:ಹಾಗೆ ತೋರಿದ ಹೃದಯದ ಕೋಪವು ನಾಲಗೆಗೆ ಬರಲು ಸಹಿಸಲಾರದೆ ಶತ್ರುಗಳನ್ನು ಓಡಿಸುವವನಾದ ಅರ್ಜುನನನ್ನು ಕುರಿತು ಹೀಗೆಂದನು-
- ಕಂ|| ಸಂಗತದಿನೀಗಳಿಂತೀ
- ರಂಗಮೆ ರಣರಂಗಮಾಗೆ ಕಾದುವಮಳವಂ|
- ಪೊಂಗದಿರಿದಿರ್ಚದೇಂ ಗಳ
- ರಂಗಂಬೊಕ್ಕಾಡುವಂತೆ ಪೆಂಡಿರೆ ಗಂಡರ್|| ೮೦||
- ಪದ್ಯ-೮೦:ಪದವಿಭಾಗ-ಅರ್ಥ:(ಅರ್ಜುನನನ್ನು ಕುರಿತು ಹೀಗೆಂದನು) ಸಂಗತದಿಂ (ಎಲ್ಲರೂ ಒಟ್ಟಿಗೆ ಸೇರಿರುವುದರಿಂದ) ಈಗಳು ಇಂತು ಈ ರಂಗಮೆ ರಣರಂಗಂ ಆಗೆ ಕಾದುವಂ (ಯುದ್ಧಮಾಡೋಣ) ಅಳವಂ(ಪ್ರತಾಪವನ್ನು) ಪೊಂಗದಿರ್ (ಹೊಂದಬೇಡ)ಇದಿರ್ಚು (ಎದುರಿಸು) ಅದೇಂಗಳ (ಅದೇನು? ಕೇವಲ ಪ್ರದರ್ಶನ) ರಂಗಂ ಬೊಕ್ಕು ಆಡುವಂತೆ ಪೆಂಡಿರೆ (ನಾಟ್ಯರಂಗವನ್ನು ಹೊಕ್ಕು ಕುಣಿಯಲು ಹೆಂಗಸರೇ?) ಗಂಡರ್ (ಗಂಡಸರು,- ಯುದ್ಧಮಾಡಬೇಕು)
- ಪದ್ಯ-೮೦:ಅರ್ಥ:ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿರುವುದರಿಂದ ಈ ವ್ಯಾಯಾಮರಂಗವೇ ರಣರಂಗವಾಗಿರಲು ಯುದ್ಧಮಾಡೋಣ. ಪ್ರತಾಪದಿಂದ ಅಹಂಕಾರಪಡದೇ ಇದಿರಿಸು. ಅದೇನು? ಕೇವಲ ಪ್ರದರ್ಶನ; ನಾಟ್ಯರಂಗವನ್ನು ಹೊಕ್ಕು ಕುಣಿಯಲು ಹೆಂಗಸರೇ? ಶೂರರುಗಂಡಸರು,- ಯುದ್ಧಮಾಡಬೇಕು.
- ವ|| ಎಂಬುದುಮತಿರಥಮಥನನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎಂಬುದುಂ ಅತಿರಥಮಥನನು ಎಂತೆಂದಂ-
- ವಚನ:ಅರ್ಥ:ಎನ್ನಲು ಅದಕ್ಕೆ ಅತಿರಥರನ್ನು ಸೋಲಿಸುವ ಅರ್ಜುನನು ಹೀಗೆಂದನು.
- ಕಂ|| ಈ ನೆರೆದ ಗುರುಜನಂಗಳ
- ಮಾನಿನಿಯರ ಮುಂದೆ ಕರ್ಣ ಪೊಲ್ಲದು ನುಡಿದೈ|
- ನೀನೆನ್ನೀ ನಿಡುದೋಳ್ಗಳ
- ತೀನಂ ಮೞ್ಗಿಸುವೆಯಪ್ಪೊಡಾನೊಲ್ಲದನೇ|| ೮೧ ||
- ಪದ್ಯ-೮೧:ಪದವಿಭಾಗ-ಅರ್ಥ:ಎಲೈ ಕರ್ಣನೇ, ಈ ನೆರೆದ ಗುರುಜನಂಗಳಂ ಮಾನಿನಿಯರ (ಗರುಹಿರಿಯರ ಸ್ತ್ರೀಯರ) ಮುಂದೆ ಕರ್ಣ ಪೊಲ್ಲದು (ಕೆಟ್ಟದ್ದು) ನುಡಿದೈ| ನೀನು ಎನ್ನ ಈ ನಿಡುದೋಳ್ಗಳ ತೀನಂ (ನೀನು ನನ್ನ ದೀರ್ಘವಾದ ತೋಳುಗಳ ತೀಟೆಯನ್ನು) ಮೞ್ಗಿಸುವೆಯಪ್ಪೊಡೆ (ಹೋಗಲಾಡಿಸುವೆಎಯಾದರೆ) ಆನು ಒಲ್ಲದನೇ (ನಾನು ಬೇಡವೆನ್ನುತ್ತೇನೆಯೇ)
- ಪದ್ಯ-೮೧:ಅರ್ಥ: ಅರ್ಜುನನು, 'ಕರ್ಣ ನೀನು ಇಲ್ಲಿ ಸೇರಿರುವ ಗರುಹಿರಿಯರ ರಾಣಿವಾಸದ ಸ್ತ್ರೀಯರ ಮುಂದೆ ಕೆಟ್ಟ ಮಾತನ್ನಾಡಿದ್ದೀಯೆ. ನೀನು ನನ್ನ ದೀರ್ಘವಾದ ತೋಳುಗಳ ತೀಟೆಯನ್ನು ಹೋಗಲಾಡಿಸುವುದಾದರೆ ನಾನು ಬೇಡವೆನ್ನುತ್ತೇನೆಯೇ?,' ಎಂದನು
- ವ|| ಎಂಬುದುಂ ದ್ರೋಣನುಂ ಕೃಪನುಮೆಡೆಗೆ ವಂದು ಕರ್ಣನನಿಂತೆಂದರ್-
- ವಚನ:ಪದವಿಭಾಗ-ಅರ್ಥ:ಎಂಬುದುಂ (ಹೇಳಲಾಗಿ) ದ್ರೋಣನುಂ ಕೃಪನುಂ ಎಡೆಗೆ ವಂದು (ಬಂದು) ಕರ್ಣನನು ಇಂತೆಂದರ್-
- ವಚನ:ಅರ್ಥ:ಅರ್ಜುನನು ಹೀಗೆ ಎನ್ನಲು, ದ್ರೋಣನು ಮತ್ತ ಕೃಪನು, ಕರ್ಣನ ಮಧ್ಯೆ ಪ್ರವೇಶಿಸಿ ಕರ್ಣನಿಗೆ ಹೀಗೆ ಹೇಳಿದರು.
- ಕಂ|| ಏವದ ಮುಳಿಸಿನ ಕಾರಣ
- ಮಾವುದೊ ನೀಂ ನಿನ್ನ ತಾಯ ತಂದೆಯ ದೆಸೆಯಂ|
- ಭಾವಿಸದೆ ಕರ್ಣ ನುಡಿವಂ
- ತಾವುದು ಸಮಕಟ್ಟು ನಿನಗಮರೀಕೇಸರಿಗಂ|| ೮೨||
- ಪದ್ಯ-೮೨:ಪದವಿಭಾಗ-ಅರ್ಥ:ಏವದ ಮುಳಿಸಿನ ಕಾರಣಂ ಆವುದೊ, ನೀಂ ನಿನ್ನ ತಾಯ ತಂದೆಯ ದೆಸೆಯಂ (ಸ್ಥಿತಿಯನ್ನು ಅಂತಸ್ತನ್ನು, -ದಿಕ್ಕು?) ಭಾವಿಸದೆ (ಯೋಚಿಸದೆ) ಕರ್ಣ ನುಡಿವಂತೆ (ಹೇಳಿದಂತೆ ಆಗಿದೆ.) ಆವುದು ಸಮಕಟ್ಟು (ಸಮಾನತೆ) ನಿನಗಂ ಅರೀಕೇಸರಿಗಂ/ ಅರ್ಜುನನಿಗೂ
- ಪದ್ಯ-೮೨:ಅರ್ಥ:.ದ್ರೋಣ ಕೃಪರು ಕರ್ಣನಿಗೆ ಹೇಳಿದರು:(ನಿನ್ನ) ಅಸಮಾಧಾನ ಕೋಪಕ್ಕೆ ಕಾರಣವೇನು? ನಿನ್ನ ತಾಯಿ ತಂದೆಯ ಸ್ಥಿತಿಯನ್ನು ಅಂತಸ್ತನ್ನು,ಯೋಚಿಸದೆ ಕರ್ಣ ಹೇಳಿದಂತೆ ಆಗಿದೆ. ಅರಿಕೇಸರಿಗೂ/ಅರ್ಜುನನಿಗೂ ನಿನಗೂ ಯಾವ ಸಮಾನತೆಯಿದೆ? (ಸಮಾನರಲ್ಲಿ ಸೆಣಸಬೇಕು ; ಕರ್ಣ ಸೂತನ ಮಗ, ಆದ್ದರಿಂದ ದ್ವಂದ್ವ ಯುದ್ಧ ಸರಿಯಲ್ಲ)
- ವ|| ಎಂಬುದುಮಾ ಮಾತಿಂಗೆ ಮಱುವಾತುಗುಡಲಱಿಯದೆ ಪಂದೆಯಂ ಪಾವಡರ್ದಂತುಮ್ಮನೆ ಬೆಮರುತ್ತುವಿರ್ದ ಕರ್ಣನಂ ದುರ್ಯೋಧನಂ ಕಂಡು ದ್ರೋಣನುಮಂ ಕೃಪನುಮನಿಂತೆಂದಂ-
- ವಚನ:ಪದವಿಭಾಗ-ಅರ್ಥ:ಎಂಬುದುಂ ಆ ಮಾತಿಂಗೆ ಮಱುವಾತುಗುಡಲು ಅಱಯದೆ (ಮರುಮಾತಾಡಲು ತಿಳಿಯದೆ) ಪಂದೆಯಂ ಪಾವು ಅಡರ್ದಂತು (ಹೇಡಿಯನ್ನು ಹಾವು ಹತ್ತಿದ ಹಾಗೆ) ಉಮ್ಮನೆ ಬೆಮರುತ್ತುಂ ಇರ್ದ ಕರ್ಣನಂ ದುರ್ಯೋಧನಂ ಕಂಡು ದ್ರೋಣನುಮಂ ಕೃಪನುಮಂ ಇಂತೆಂದಂ-
- ವಚನ:ಅರ್ಥ:ಎನ್ನಲು ಆ ಮಾತಿಗೆ ಮರುಮಾತಾಡಲು ತಿಳಿಯದೆ, ಹೇಡಿಯನ್ನು ಹಾವು ಹತ್ತಿದ ಹಾಗೆ ಸುಮ್ಮನೆ ಬೆವರಿ ನಿಂತಿದ್ದ ಕರ್ಣನನ್ನು ದುರ್ಯೋಧನನು ನೋಡಿ ದ್ರೋಣನನ್ನೂ ಕೃಪನನ್ನೂ ಕುರಿತು ಹೀಗೆಂದನು-
- ಕಂ|| ಕುಲಮೆಂಬುದುಂಟೆ ಬೀರಮೆ|
- ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ ನೀ|
- ಮೊಲಿದೆಲ್ಲಿ ಪುಟ್ಟ ಬಳೆದಿರೊ|
- ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ|| ೮೩||
- ಪದ್ಯ-೮೩:ಪದವಿಭಾಗ-ಅರ್ಥ: ಕುಲಮೆಂಬುದುಂಟೆ, ಬೀರಮೆ ಕುಲಮಲ್ಲದೆ (ಶೌರ್ಯವೇ ಕುಲವಲ್ಲದೆ) ಕುಲಮನು ಇಂತು ಪಿಕ್ಕದಿರಿಂ (ಕರ್ಣನ ಕುಲವನ್ನೂ ಬಿಡಿಸಿ ಹಿಕ್ಕಬೇಡಿ,- ನೋಡಬೇಡಿ); ನೀಂ ಒಲಿದು ಎಲ್ಲಿ ಪುಟ್ಟ ಬಳೆದಿರೊ ಕುಲಂ ಇರ್ದುದೆ (ನೀವು ಪ್ರೀತಿಯಿಂದ ಹುಟ್ಟಿ ಬೆಳದಿರೋ ಅಲ್ಲಿ ಕುಲವಿದ್ದಿತೇ?) ಕೊಡದೊಳಂ ಶರಸ್ತಂಬದೊಳಂ- (ನೀವು ಹುಟ್ಟಿದ -ಕಲಶದಲ್ಲಿ, ಜೊಂಡು ಹುಲ್ಲಿನಲ್ಲಿ).
- ಪದ್ಯ-೮೩:ಅರ್ಥ:ಶೌರ್ಯವೇ ಕುಲವಲ್ಲದೆ ಬೇರೆ ಕುಲವೆಂಬುದು ಉಂಟೇ? ಕರ್ಣನ ಕುಲವನ್ನೂ ಬಿಡಿಸಿ ಹಿಕ್ಕಬೇಡಿ,- ನೋಡಬೇಡಿ; ನೀವು ಪ್ರೀತಿಸಿ ಎಲ್ಲಿ ಹುಟ್ಟಿ ಬೆಳೆದಿರಿ? ಕಲಶದಲ್ಲಿಯೂ ಜೊಂಡಿನ ರಾಶಿಯಲ್ಲಿಯೂ ಕುಲವಿದ್ದಿತೆ?
ಕರ್ಣ ಅಂಗರಾಜ್ಯದ ಅಧಿಪತಿಯಾದುದು:
|
- ವ|| ಎಂದು ನುಡಿದು ಕರ್ಣನನೀಗಳೆ ಕುಲಜನಂ ಮಾಡಿ ತೋರ್ಪೆನೆಂದು ಕೆಯ್ಯಂ ಪಿಡಿದೊಡಗೊಂಡು ಪೋಗಿ ಕನಕಪೀಠದ ಮೇಲೆ ಕುಳ್ಳಿರಿಸಿ ಕನಕಕಳಶದಲ್ ತೀವಿದಗಣ್ಯಪುಣ್ಯ ತೀರ್ಥೋದಕಂಗಳಂ ಚತುರ್ವೇದಪಾರಗರಿಂದಭಿಷೇಕಂಗೆಯ್ಸಿ-
- ವಚನ:ಪದವಿಭಾಗ-ಅರ್ಥ:ಎಂದು ನುಡಿದು ಕರ್ಣನನು ಈಗಳೆ ಕುಲಜನಂ ಮಾಡಿ ತೋರ್ಪೆನೆಂದು(ಕರ್ಣನನ್ನೂ ಈಗಲೇ ಕುಲಜನನ್ನಾಗಿ ಮಾಡಿ ತೋರಿಸುತ್ತೇನೆ ಎಂದು) ಕೆಯ್ಯಂ ಪಿಡಿದು ಒಡಗೊಂಡು ಪೋಗಿ (ಕಯ್ಯನ್ನು ಹಿಡಿದು ಜೊತೆಗೆ ಹೋಗಿ), ಕನಕಪೀಠದ (ಚಿನ್ನದ ಪೀಠ) ಮೇಲೆ ಕುಳ್ಳಿರಿಸಿ ಕನಕಕಳಶದಲ್ ತೀವಿದ ಅಗಣ್ಯಪುಣ್ಯ ತೀರ್ಥೋದಕಂಗಳಂ ಚತುರ್ವೇದಪಾರಗರಿಂದ ಅಭಿಷೇಕಂ ಗೆಯ್ಸಿ (ಮಾಡಿಸಿ)-
- ವಚನ:ಅರ್ಥ:ಎಂದು ಹೇಳಿ, ಕರ್ಣನನ್ನೂ ಈಗಲೇ ಕುಲಜನನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಕರ್ಣನ ಕಯ್ಯನ್ನು ಹಿಡಿದುಕೊಂಡು ಹೋಗಿ ಚಿನ್ನದ ಪೀಠದ ಮೇಲೆ ಕುಳ್ಳಿರಿಸಿ ಚಿನ್ನದ ಕಳಶದಲ್ಲಿ ತುಂಬಿದ್ದ ಅಸಂಖ್ಯ ಪುಣ್ಯತೀರ್ಥೋದಕಗಳಿಂದ ನಾಲ್ಕು ವೇದಗಳಲ್ಲಿ ಪ್ರವೀಣರಾದ ಪಂಡಿತರಿಂದ ಅಭಿಷೇಕಮಾಡಿಸಿದನು (ಮಾಡಿಸಿ).
- ಕಂ|| ಮಂಗಳವರೆಗಳ್ ಶುಭ ವಚ
- ನಂಗಳ್ ಚಮರೀರುಹಂಗಳಾ ಶ್ವೇತಚ್ಛ|
- ತ್ರಂಗಳಮರ್ದೆಸಯೆ ಕರ್ಣಂ
- ಗಂಗಮಹೀತಳ ವಿಭೂತಿಯಂ ನೆರೆಯಿತ್ತಂ|| ೮೪||
- ಪದ್ಯ-೮೪:ಪದವಿಭಾಗ-ಅರ್ಥ:ಮಂಗಳವಗಳ್ ಶುಭ ವಚನಂಗಳ್ ಚಮರೀರುಹಂಗಳು ಆ ಶ್ವೇತಚ್ಛತ್ರಂಗಳುಂ ಅಮರ್ದು ಎಸಯೆ (ಸೇರಿ ಶೋಭಿಸುತ್ತಿರಲು) ಕರ್ಣಂಗೆ ಅಂಗಮಹೀತಳ (ಅಂಗ ರಾಜ್ಯದ) ವಿಭೂತಿಯಂ ನೆರೆಯಿತ್ತಂ
- ಪದ್ಯ-೮೪:ಅರ್ಥ:ಮಂಗಳವಾದ್ಯಗಳು ಮತ್ತು ಒಳ್ಳೆಯ ಸ್ವಸ್ತಿವಾಚನಗಳು ಚಾಮರಗಳು ಬಿಳಿಯ ಕೊಡೆಗಳು ಒಟ್ಟಿಗೆ ಸೇರಿ ಶೋಭಿಸುತ್ತಿರಲು ಕರ್ಣನಿಗೆ ಅಂಗರಾಜ್ಯದ ವೈಭವವನ್ನು ಸಂಪೂರ್ಣವಾಗಿ ಕೊಟ್ಟನು.
- ವ|| ಅಂತಿತ್ತು ನಿತ್ಯದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನಿತ್ತು ನೀನೆನಗೊಂದನೀಯಲ್ವೇೞ್ಪುದೆಂದು-
- ವಚನ:ಪದವಿಭಾಗ-ಅರ್ಥ:ಅಂತು ಇತ್ತು (ಹಾಗೆ ಕೊಟ್ಟು) ನಿತ್ಯದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನಿತ್ತು ನೀನು ಎನಗೊಂದನು ಈಯಲ್ವೇೞ್ದುದೆಂದು ( ಈಯಲ್ ಏೞ್ದುದು ಎಂದು)-
- ವಚನ:ಅರ್ಥ:ಹಾಗೆ ಕೊಟ್ಟು ಪ್ರತಿನಿತ್ಯದ ದಾನಕ್ಕಾಗಿ ದೇವ-ಅಳತೆಯಲ್ಲಿ ಹದಿನೆಂಟುಕೋಟಿ ಸುವರ್ಣನಾಣ್ಯಗಳನ್ನೂ ಕೊಟ್ಟು, ನೀನು ನನಗೊಂದನ್ನು ಅನುಗ್ರಹಿಸಬೇಕು ಎಂದನು. ಅದೇನೆಂದರೆ:
- ಕಂ|| ಪೊಡಮಡುವರ್ ಜೀಯೆಂಬರ್
- ಕುಡು ದಯೆಗೆಯ್ಯೇಂ ಪ್ರಸಾದಮೆಂಬಿವು ಪೆಱರೊಳ್|
- ನಡೆಗೆಮ್ಮ ನಿನ್ನಯೆಡೆಯೊಳ್
- ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ|| ೮೫ ||
- ಪದ್ಯ-೮೫:ಪದವಿಭಾಗ-ಅರ್ಥ:ಪೊಡಮಡುವರ್, ಜೀಯೆಂಬರ್, ಕುಡು, ದಯೆಗೆಯ್ಯೇಂ, ಪ್ರಸಾದಂ, ಎಂಬಿವು ಪೆಱರೊಳ್(ಇವು ಇತರರಲ್ಲಿ) ನಡೆಗೆಮ್ಮ ನಿನ್ನ -ಯೆಡೆಯೊಳ್ ನಡೆಯಲ್ವೇಡ, ಎನಗೆ ಕೆಳೆಯನೈ ರಾಧೇಯಾ
- ಪದ್ಯ-೮೫:ಅರ್ಥ:ಎಲೈ ರಾಧೇಯನೇ ಇತರರು ನನಗೆ ನಮಸ್ಕಾರ ಮಾಡುತ್ತಾರೆ; ಸ್ವಾಮಿ ಎನ್ನುತ್ತಾರೆ; ಕೊಡಿ, ದಯಪಾಲಿಸಿ, ಏನು ಪ್ರಸಾದ ಎನ್ನುತ್ತಾರೆ. ಇವೆಲ್ಲ ಇತರರಲ್ಲಿ ನಡೆಯಲಿ; ನಿನ್ನ ನನ್ನ ವ್ಯವಹಾರದಲ್ಲಿ ಬೇಡ, ನೀನು ನನಗೆ ಗೆಳೆಯನಯ್ಯಾ ರಾಧೇಯಾ, ಎಂದನು ದುರ್ಯೋಧನ.
- ವ|| ಎಂದು ಬೇಡಿಕೊಂಡು ಕರ್ಣನಂ ಮುಂದಿಟ್ಟೊಡಗೊಂಡು ಪೋಗಿ ಧೃತರಾಷ್ಟ್ರಂಗಂ ಗಾಂಧಾರಿಗಂ ಪೊಡಮಡಿಸಿದಾಗಳ್-
- ವಚನ:ಪದವಿಭಾಗ-ಅರ್ಥ:ಎಂದು ಬೇಡಿಕೊಂಡು ಕರ್ಣನಂ ಮುಂದೆ ಇಟ್ಟು ಒಡಗೊಂಡು ಪೋಗಿ (ಜೊತೆಗೂಡಿ ಒಟ್ಟಿಗೆ ಹೋಗಿ)ಧೃತರಾಷ್ಟ್ರಂಗಂ ಗಾಂಧಾರಿಗಂ ಪೊಡಮಡಿಸಿದಾಗಳ್ (ನಮಸ್ಕಾರಮಾಡಿಸಿದಾಗ)-
- ವಚನ:ಅರ್ಥ:ಎಂದು ಬೇಡಿಕೊಂಡು ಕರ್ಣನನ್ನು ಮುಂದಿರಿಸಿಕೊಂಡು ಹೋಗಿ ಧೃತರಾಷ್ಟ್ರನಿಗೂ ಗಾಂಧಾರಿಗೂ ನಮಸ್ಕಾರ ಮಾಡಿಸಿದನು- (ನಮಸ್ಕಾರಮಾಡಿಸಿದಾಗ).
- ಉ|| ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗುಂತೆ ಮು
- ಯ್ವಾಂತಿರದಿರ್ ಗುಣಾರ್ಣವನಿನಸ್ತಮಯಕ್ತಿದು ಸಾಲ್ಗುವೀಗಳೆಂ|
- ಬಂತೆವೊಲಂದು ಮುಂದಱಿದು ತನ್ನ ಮಗಂಗೆ ಸಮಂತು ಬುದ್ಧಿವೇ
- ೞ್ವಂತೆವೊಲತ್ತಲಸ್ತಗಿರಿಯಂ ಮರೆಗೊಂಡುದು ಸೂರ್ಯಮಂಡಲಂ|| ೮೬ ||
- ಪದ್ಯ-೮೬:ಪದವಿಭಾಗ-ಅರ್ಥ:ಇಂತು ಸುಯೋಧನಂ ನಿನಗೆ ಮಾಡಿದ ರಾಜ್ಯವಿಭೂತಿಗುಂತೆ ಮುಯ್ವಾಂತಿರದಿರ್ (ರಾಜ್ಯವೈಭವಕ್ಕೆ ಉಬ್ಬಿಹೋಗಬೇಡ) ಗುಣಾರ್ಣವನಿಂ ಅಸ್ತಮಯಕ್ಕೆ ಇದು ಸಾಲ್ಗುಂ ಈಗಳು ಎಂಬಂತೆವೊಲ್ ಅಂದು ಮುಂದಱಿದು (ಭವಿಷ್ಯವನ್ನು ತಿಳಿದು) ತನ್ನ ಮಗಂಗೆ ಸಮಂತು ಬುದ್ಧಿವೇೞ್ವಂತೆವೊಲ್ (ಬುದ್ಧಿಹೇಳುವಂತೆ) ಅತ್ತಲ್ ಅಸ್ತಗಿರಿಯಂ (ಆ ಕಡೆ ಪಶ್ಚಿಮದ ಅಸ್ತಗಿರಿಯನ್ನು) ಮರೆಗೊಂಡುದು ಸೂರ್ಯಮಂಡಲಂ(ಸೂರ್ಯನು ಮುಳುಗಿದನು)
- ಪದ್ಯ-೮೬:ಅರ್ಥ: ‘ಹೀಗೆ ದುರ್ಯೋಧನನು ಮಾಡಿದ ರಾಜ್ಯವೈಭವಕ್ಕೆ ಉಬ್ಬಿಹೋಗಬೇಡ. ಗುಣಾರ್ಣವನಿಂದ/ಅರ್ಜುನನಿಂದ ನೀನು ಸಾಯುವುದಕ್ಕೆ ಈಗ ಇಷ್ಟೇ ಸಾಕು’ ಎಂದು ಸೂರ್ಯನು ಮುಂದೆ ಆಗುವುದನ್ನು ಇಂದೇ ಪೂರ್ಣವಾಗಿ ಬುದ್ಧಿ ಹೇಳುವ ಹಾಗೆ ಅಸ್ತನಾದನು (ಸೂರ್ಯಮಂಡಲವು ಅಸ್ತಪರ್ವತದ ಹಿಂದೆ ಮರೆಗೊಂಡಿತು).
- ವ|| ಆಗಳ್ ದುರ್ಯೋಧನನಂ ಮುಂದಿಟ್ಟೊಡಗೊಂಡು ಧೃತರಾಷ್ಟ್ರ ಕರ್ಣ ಶಲ್ಯ ಶಕುನಿ ಸೈಂಧವ ಪ್ರಭೃತಿಗಳ್ ನೆಲಂ ಮೂರಿವಿಟ್ಟಂತೆ ಸಭಾಕ್ಷೋಭಮಾಗೆ ತಳರ್ದು ನಾನಾವಿಧ ವಾಹನಂಗಳನು ಏಱೆ ನಿಜನಿವಾಸಂಗಳ್ಗೆ ಪೋದರಿತ್ತ ಧರ್ಮಪುತ್ರನಂ ಮುಂದಿಟ್ಟು ಭೀಮಾರ್ಜುನ ನಕುಲ ಸಹದೇವರುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಭೃತಿಗಳ್ ನಾನಾವಿಧ ವಾಹನಂಗಳನೇಱಿ ಬರೆ ಪುರಜನಂಗಳೆಲ್ಲಮೋರೋರ್ವರನೆ ಪಿಡಿಯಚ್ಚುವಿಡಿದು ನುಡಿಯೆ ಕೆಲರನಾಗತಮನಱಿವ ಬುದ್ಧಿಯೊಡೆಯರಿಂತೆಂಬರ್
- ವಚನ:ಪದವಿಭಾಗ-ಅರ್ಥ:ಆಗಳ್ ದುರ್ಯೋಧನನಂ ಮುಂದಿಟ್ಟೊಡಗೊಂಡು ಧೃತರಾಷ್ಟ್ರ ಕರ್ಣ ಶಲ್ಯ ಶಕುನಿ ಸೈಂಧವ ಪ್ರಭೃತಿಗಳ್ (ರಾಜರು) ನೆಲಂ ಮೂರಿವಿಟ್ಟಂತೆ (ನೆಲವು ಬಾಯಿಬಿಟ್ಟಂತೆ) ಸಭಾಕ್ಷೋಭಮಾಗೆ ತಳರ್ದು (ಹೊರಟು)ನಾನಾವಿಧ ವಾಹನಂಗಳನು ಏಱಿ (ಏರಿ) ನಿಜನಿವಾಸಂಗಳ್ಗೆ ಪೋದರು (ತಮ್ಮ ಮನೆಗಳಿಗೆಹೋದರು). ಇತ್ತ ಧರ್ಮಪುತ್ರನಂ ಮುಂದಿಟ್ಟು ಭೀಮಾರ್ಜುನ ನಕುಲ ಸಹದೇವರುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಭೃತಿಗಳ್ ನಾನಾವಿಧ ವಾಹನಂಗಳನು ಏಱಿ ಬರೆ, (ಬರಲು) ಪುರಜನಂಗಳೆಲ್ಲಂ ಓರೋರ್ವರನೆ (ಒಬ್ಬಬ್ಬರನ್ನೇ) ಪಿಡಿಯಚ್ಚುವಿಡಿದು (ಅವರ ಲಾಂಚನ ಹಿಡಿದು ಮಾತನಾಡಲು) ನುಡಿಯೆ ಕೆಲರು ಅನಾಗತಮನು ಅಱಿವ (ಮುಂದೆ ಆಗುವುದನ್ನು ತಿಳಿಯುವ) ಬುದ್ಧಿಯೊಡೆಯರ್ ಅರಿತೆಂಬರ್(ಬುದ್ಧಿಯುಳ್ಳವರು ಕೆಲವರು ಹೀಗೆಂದರು)
- ವಚನ:ಅರ್ಥ: ಆಗ ದುರ್ಯೋಧನನನ್ನು ಮುಂದಿಟ್ಟುಕೊಂಡು ದೃತರಾಷ್ಟ್ರ, ಕರ್ಣ, ಶಲ್ಯ, ಶಕುನಿ, ಸೈಂಧವ, ಮೊದಲಾದವರು ನೆಲ ಬಾಯಿಬಿಡುವಹಾಗೆ ಸಭಾಮಂಟಪವು ಕಲಕಿಹೋಗುವಂತೆ ಹೊರಹೊರಟು ನಾನಾವಿಧವಾದ ವಾಹನಗಳನ್ನು ಹತ್ತಿಕೊಂಡು ತಮ್ಮ ಮನೆಗಳಿಗೆ ಹೋದರು. ಈ ಕಡೆ ಧರ್ಮರಾಜನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲ ಸಹದೇವರೂ ಭೀಷ್ಮ, ದ್ರೋಣ, ಕೃಪ, ವಿದುರರೇ ಮೊದಲಾದವರೂ ಬಗೆಬಗೆಯ ವಾಹನಗಳನ್ನು ಹತ್ತಿ ಬರುತ್ತಿರಲು ಪಟ್ಟಣದವರೆಲ್ಲ ಒಬ್ಬೊಬ್ಬರನ್ನೂ ಅವರ ಲಾಂಚನ ಹಿಡಿದು ಮಾತನಾಡಲು (ಪ್ರತ್ಯೇಕವಾದ ಸಂಕೇತಗಳಿಂದ ಗುರುತಿಸಿ ಮಾತನಾಡುತ್ತಿರಲು) ಅವರಲ್ಲಿ ಭವಿಷ್ಯಜ್ಞಾನ ಬುದ್ಧಿಯುಳ್ಳವರು ಕೆಲವರು ಹೀಗೆಂದರು-
- ಚಂ|| ಅವರಿವರನ್ನರಿನ್ನರೆನವೇಡರಿಕೇಸರಿಗಾಂಪನಿಲ್ಲ ಮೀ
- ಱುವ ತಲೆದೋರ್ಪ ಗಂಡರಣಮಿಲ್ಲೆಡೆಯೊಳ್ ಗೆಡೆವಚ್ಚುಗೊಂಡು ಪಾಂ|
- ಡವರನಕಾರಣಂ ಕೆಣಕಿದೀ ಪೊಸ ಪೊೞ್ತರೊಳಾದ ಕಿರ್ಚು ಕೌ
- ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ|| ೮೭
- ಪದ್ಯ-೮೭:ಪದವಿಭಾಗ-ಅರ್ಥ:ಅವರು ಇವರು ಅನ್ನರು ಇನ್ನರು ಎನವೇಡ (ಅವರು ಇವರು ಅಂತಹವರು ಇಂತಹವರು ಎನ್ನಬೇಡ.) ಅರಿಕೇಸರಿಗೆ ಆಂಪನಿಲ್ಲ (ಅರಿಕೇಸರಿಯನ್ನು/ಅರ್ಜುನನ್ನು ಎದುರಿಸುವವರು ಯಾರೂ ಇಲ್ಲ.) ಮೀಱುವ (ಆಜ್ಞೆಯನ್ನು ಮೀರಿ) ತಲೆದೋರ್ಪ (ಎದುರಿಸುವ) ಗಂಡರು ಅಣಂ (ಯಾರೂ) ಇಲ್ಲ. ಎಡೆಯೊಳ್ (ನಡುವೆ) ಗೆಡೆವಚ್ಚುಗೊಂಡು (ಜೋಡಿ ಮುರಿದುಹೋಗಿ) ಪಾಂಡವರನು ಅಕಾರಣಂ ಕೆಣಕಿದ ಈ ಪೊಸ ಪೊೞ್ತರೊಳ್ ಆದ ಕಿರ್ಚು (ಕೆಣಕಿದ ಈ ಹೊಸ ಹೊತ್ತಿನಲ್ಲಿ ಉಂಟಾದ ಬೆಂಕಿಯು) ಕೌರವರಿಗೆ ಇರ್ದು(ಇದು) ನಾಡೆಯುಂ (ವಿಶೇಷವಾಗಿ)ತಿಣುಕನು ಆಗಿಸದೆ ಏಂಗಳ (ಕಷ್ಟವನ್ನು ಆಗಿಸದೆ ಎಂದಾದರೂ?) ಸಯ್ತು ಪೋಕುಮೇ (ಸುಮ್ಮನೇ ಹೋಗುವುದೇ)
- ಪದ್ಯ-೮೭:ಅರ್ಥ:ಅವರು ಇವರು ಅಂತಹವರು ಇಂತಹವರು ಎನ್ನಬೇಡ. ಅರಿಕೇಸರಿಯನ್ನು ಎದುರಿಸುವವರು ಯಾರೂ ಇಲ್ಲ. ಅರ್ಜುನನ ಆಜ್ಞೆಯನ್ನು ಮೀರಿ ಅವನನ್ನು ಪ್ರತಿಭಟಿಸುವ ವೀರರು ಯಾರೂ ಇಲ್ಲ. ಇಬ್ಬರಿಗೂ ಸಮಾನವಾಗಿದ್ದ ಒಡನಾಟ ಮುರಿದುಹೋಗಿ, ಪಾಂಡವರನ್ನು ಕಾರಣವಿಲ್ಲದೆ ಕೆಣಕಿದ ಈ ಹೊಸ ಹೊತ್ತಿನಲ್ಲಿ ಉಂಟಾದ ಬೆಂಕಿಯು (ಮನಸ್ತಾಪವು) ಕೌರವರಿಗೆ ವಿಶೇಷವಾದ ಕಷ್ಟವನ್ನು ಉಂಟುಮಾಡದೇ ಸುಮ್ಮನೇ ಹೋಗುವುದೇ?
- ವ|| ಎಂದೊರ್ವರೊರ್ವರೊಂದೊಂದನೆ ನುಡಿಯತ್ತುಂ ಪೋಗೆ ಬೆಳಗುವ ಕೈದೀವಿಗೆಗಳ್ ಕೞ್ತಲೆಯಂ ತಲೆದೋಱಲೀಯದೆ ಪ್ರಚಂಡ ಮಾರ್ತಾಂಡನ ತೇಜೋಂಕುರಂಗಳ್ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರಾಗಳ್-
- ವಚನ:ಪದವಿಭಾಗ-ಅರ್ಥ:ಎಂದು ಓರ್ವರು ಓರ್ವರೂ ಒಂದೊಂದನೆ ನುಡಿಯತ್ತುಂ ಪೋಗೆ (ಹೋಗುತ್ತಿರಲು) ಬೆಳಗುವ ಕೈದೀವಿಗೆಗಳ್ ಕೞ್ತಲೆಯಂ ತಲೆದೋಱಲು ಈಯದೆ(ಅವಕಾಶ ಕೊಡದೆ ) ಪ್ರಚಂಡ ಮಾರ್ತಾಂಡನ (ಸೂರ್ಯನ) ತೇಜೋಂಕುರಂಗಳ್ (ತೇಜ ಅಂಕುರಂಗಲ್-ಕಿರಣಗಳು) ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರು. ಆಗಳ್ (ಪಾಂಡವರು ತಮ್ಮ ನಿವಾಸಕ್ಕೆ ಹೋದರು.)
- ವಚನ:ಅರ್ಥ:ಎಂದು ಒಬ್ಬೊಬ್ಬರು ಒಂದೊಂದನ್ನು ಹೇಳುತ್ತ ಹೋಗುತ್ತಿರಲು, ಪ್ರಕಾಶಮಾನವಾಗಿದ್ದ ಕೈದೀವಿಗೆಗಳು ಕತ್ತಲೆಯ ಹರಡುವುದಕ್ಕೆ ಅವಕಾಶ ಕೊಡದೆ ಪ್ರಕಾಶಮಾನವಾದ ಸೂರ್ಯಕಿರಣಗಳ ಮೊಕಳೆಯಂತೆ ಬೆಳಗುತ್ತಿರಲು ಪಾಂಡವರು ತಮ್ಮ ನಿವಾಸಕ್ಕೆ ಹೋದರು. ಆಗ-
- ಕಂ|| ಎಸೆವ ನಿಜವಂಶಮಂ ಪೆ
- ರ್ಚಿಸುವ ಗುಣಾರ್ಣವನೊಳುಂತೆ ಸೆಣಸಲ್ಕೆಂದಿ|
- ರ್ಪ ಸುಯೋಧನಂಗೆ ಮುಳಿಸಿಂ
- ಕಿಸುಗಣ್ಣಿದ ತೆಱದಿನಮೃತಕರನುದಯಿಸಿದಂ|| ೮೮||
- ಪದ್ಯ-೮೮:ಪದವಿಭಾಗ-ಅರ್ಥ:ಎಸೆವ ನಿಜವಂಶಮಂ (ಪ್ರಕಾಶಿಸುವ ತನ್ನ ವಂಶವನ್ನು) ಪೆರ್ಚಿಸುವ (ಹೆಚ್ಚಿಸುವ) ಗುಣಾರ್ಣವನೊಳು ಉಂತೆ ಸೆಣಸಲ್ಕೆಂದಿರ್ಪ (ಸುಮ್ಮನೆ ಹೋರಾಡಬೇಕೆಂದಿರುವ) ಸುಯೋಧನಂಗೆ ಮುಳಿಸಿಂ ಕಿಸುಗಣ್ಣಿದ ತೆಱದಿಂ (ಕೋಪದಿಂದ ತನ್ನ ಕಣ್ಣನ್ನು ಕೆರಳಿಸಿದ ರೀತಿಯಲ್ಲಿ ) ಅಮೃತಕರನು (ಚಂದ್ರನು) ಉದಯಿಸಿದಂ (ಚಂದ್ರನು ಕೆಂಪಗೆ ಉದಯಿಸಿದನು/ ಕೆಂಪಗೆ ಮೂಡಿದನು)
- ಪದ್ಯ-೮೮:ಅರ್ಥ:ಪ್ರಕಾಶಿಸುವ ತನ್ನ ವಂಶವನ್ನು ಅಭಿವೃದ್ಧಿಗೊಳಿಸುವ ಗುಣಾರ್ಣವ ಅರ್ಜುನನಲ್ಲಿ ಸುಮ್ಮನೆ ಹೋರಾಡಬೇಕೆಂದಿರುವ ದುರ್ಯೋಧನನಿಗೆ ಕೋಪದಿಂದ ತನ್ನ ಕಣ್ಣನ್ನು ಕೆರಳಿಸಿದ ರೀತಿಯಲ್ಲಿ ಚಂದ್ರನು ಕೆಂಪಗೆ ಉದಯಿಸಿದನು.
ಪಾಂಡವರ ನಾಶಕ್ಕೆ ಕೌರವರ ಯೋಜನೆ:
|
- ವ|| ಆಗಳ್ ದುರ್ಯೋಧನಂ ಭೀಮಸೇನನ ಬಲ್ಲಾಳ್ತನದಳವುಮಂವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮಂ ಕಂಡು ತನ್ನೆರ್ದೆಯುಂಪೊಳ್ಳುಮರನಂ ಕಿರ್ಚಳುರ್ವಂತೊಳಗೊಳಗುಳುರೆ ಸೈರಿಸಲಾಱದೆ ಕರ್ಣನಂಕರೆದಾಳೋಚಿಸಿ ತಮ್ಮಯ್ಯನಲ್ಲಿಗೆ ಪೋಗಿ ಪೊಡಮಟ್ಟು ಕಟ್ಟೇಕಾಂತದೊಳಿಂತೆಂದಂ-
- ವಚನ:ಪದವಿಭಾಗ-ಅರ್ಥ:ಆಗಳ್ ದುರ್ಯೋಧನಂ ಭೀಮಸೇನನ ಬಲ್ಲಾಳ್ತನದ ಅಳವುಮಂ (ಬಲಿಷ್ಠ ದೇಹದ ಶಕ್ತಿಯ ಪ್ರಮಾಣವನ್ನು) ವಿಕ್ರಮಾರ್ಜುನನ ದಿವ್ಯಾಸ್ತ್ರ ಕೌಶಳಮುಮಂ (ಕೌಶಲ್ಯವನ್ನೂ) ಕಂಡು ತನ್ನೆರ್ದೆಯುಂ (ತನ್ನ ಎರ್ದೆಂ -ಎದೆಯನ್ನು) ಪೊಳ್ಳುಮರನಂ (ಪೊಳ್ಳು-ಲಡ್ಡು ಮರವನ್ನು) ಕಿರ್ಚಳುರ್ವಂತೆ (ಕಿರ್ಚು-ಬೆಂಕಿ, ಅಳುರ್ವಂತೆ- ಸುಡುವಂತೆ ) ಒಳಗೊಳಗೆ ಅಳುರೆ (ವ್ಯಾಪಿಸಲು), ಸೈರಿಸಲಾಱದೆ ಕರ್ಣನಂ ಕರೆದು ಆಳೋಚಿಸಿ ತಮ್ಮ ಅಯ್ಯನಲ್ಲಿಗೆ ಪೋಗಿ (ತಮ್ಮ ತಂದೆಯ ಬಳಿ ಹೋಗಿ) ಪೊಡಮಟ್ಟು ಕಟ್ಟೇಕಾಂತದೊಳು (ನಮಿಸಿ, ಬಹಳ ಏಕಾಂತದಲ್ಲಿ )ಇಂತೆಂದಂ-
- ವಚನ:ಅರ್ಥ:|| ಆಗ ದುರ್ಯೋಧನನು ಭೀಮಸೇನನ ಬಲಿಷ್ಠ ದೇಹದ ಶಕ್ತಿಯ ಪ್ರಮಾಣವನ್ನು, ಅರ್ಜುನನ ದಿವ್ಯಾಸ್ತ್ರಕೌಶಲವನ್ನೂ, ನೋಡಿ ಅವನ ಹೃದಯವು ಪೊಳ್ಳುಮರವನ್ನು ಬೆಂಕಿಯು ಸುಡುವಂತೆ ಒಳಗೊಳಗೆ ವ್ಯಾಪಿಸಿರಲು, ಸಹಿಸಲಾರದೆ ಕರ್ಣನನ್ನು ಕರೆದು (ಅವನೊಡನೆ) ಆಲೋಚನೆಮಾಡಿ ತನ್ನ ತಂದೆಯಾದ ಧೃತರಾಷ್ಟ್ರನ ಸಮೀಪಕ್ಕೆ ಹೋಗಿ ನಮಸ್ಕಾರಮಾಡಿ ಬಹಳ ರಹಸ್ಯವಾಗಿ ಏಕಾಂತದಲ್ಲಿ ಹೀಗೆ ಹೇಳಿದನು-
- ಮ|| ಪಿರಿಯರ್ ನೀಮಿರೆ ಪಾಂಡುರಾಜನೆ ವಲಂ ಮುಂ ಪಟ್ಟಮಂ ಕಟ್ಟೆ ಭೂ
- ಭರಮಂ ತಾಳ್ದಿದನೀಗಳಾತನ ಸುತರ್ ತಾಮಾಗಳೇ ಯೋಗ್ಯರಾ|
- ಗರೆ ಪಟ್ಟಕ್ಕೆ ತಗುಳ್ದು ಪಾಲನೆರೆವಿರ್ ಪಾವಿಂಗೆ ದಾಯಾದ್ಯರಂ
- ಪಿರಿಯರ್ಮಾಡಿದಿರೆಮ್ಮ ಸಾವುಮುೞಿವುಂ ದೈವೇಚ್ಛೆಯಾಯ್ತಾಗದೇ|| ೮೯||
- ಪದ್ಯ-೮೯:ಪದವಿಭಾಗ-ಅರ್ಥ:ಪಿರಿಯರ್ ನೀಮಿರೆ ( ಹಿರಿಯರಾದ ನೀವಿದ್ದರೂ) ಪಾಂಡುರಾಜನೆ ವಲಂ ಮುಂಪಟ್ಟಮಂ ಕಟ್ಟೆ (ಮೊದಲು ಪಟ್ಟವನ್ನು ಕಟ್ಟಲು) ಭೂಭರಮಂ ತಾಳ್ದಿದನು,(ರಾಜ್ಯಭಾರವನ್ನು ವಹಿಸಿದನು, ವಲಂ -ಅಲ್ಲವೇ?.) ಈಗಳು ಆತನ ಸುತರ್ ತಾಮಾಗಳೇ ಯೋಗ್ಯರಾಗರೆ ಪಟ್ಟಕ್ಕೆ(ಈಗ ಅವನ ಮಕ್ಕಳು ತಾವಾಗಲೇ ಪಟ್ಟಕ್ಕೆ ಯೋಗ್ಯರಾಗರೇ? ಆಗುವರು!) ತಗುಳ್ದು ಪಾಲನೆವಿರ್ ಪಾವಿಂಗೆ (ಹಿಂದೆ ಹೋಗಿ, ಹಾವಿಗೆ ಹಾಲು ಎರೆವಿರಿ) ದಾಯಾದ್ಯರಂ ಪಿರಿಯರ್ಮಾಡಿದಿರಿ (ದೊಡ್ಡವರನ್ನಾಗಿ ಮಾಡಿದಿರಿ); ಎಮ್ಮ ಸಾವುಂ ಉೞವುಂ ದೈವೇಚ್ಛೆಯಾಯ್ತಾಗದೇ
- ಪದ್ಯ-೮೯:ಅರ್ಥ:.ಭೀಷ್ಮನು, 'ಹಿರಿಯರಾದ ನೀವಿದ್ದರೂ ಪಾಂಡುರಾಜನಿಗೆ ಮೊದಲು ಪಟ್ಟವನ್ನು ಕಟ್ಟಲು ಆತನು ರಾಜ್ಯಭಾರವನ್ನು ವಹಿಸಿದನು ಅಲ್ಲವೇ?. ಈಗ ಅವರ ಮಕ್ಕಳು ತಾವಾಗಲೇ ಪಟ್ಟಕ್ಕೆ ಯೋಗ್ಯರಾಗುತ್ತಿಲ್ಲವೆ? (ನೀವು) ಬೆನ್ನಟ್ಟಿಕೊಂಡು ಹೋಗಿ ಹಾವಿಗೆ ಹಾಲನ್ನು ಎರೆಯುತ್ತಿದ್ದೀರಿ. ದಾಯಾದಿಗಳನ್ನು ದೊಡ್ಡವರನ್ನಾಗಿ ಮಾಡಿದಿರಿ. ನಮ್ಮ ಸಾವು ಬುದುಕುಗಳು ಈಗ ಅದೃಷ್ಟದಂತೆ/ ದೈವೇಚ್ಛೆಯಂತೆ ಆಗದೇ ಇರುತ್ತದೆಯೇ’? ಬರುವುದಿಲ್ಲ ಎಂದೇ ಅರ್ಥ.(ಅಂದರೆ ರಾಜ್ಯವು ನಮಗೆ ಬಂದೇ ಬರುವುದೆಂಬ ನಂಬುಗೆಯಿಲ್ಲ.)
- ವ|| ಅದಲ್ಲದೆಯುಂ-
- ವಚನ:ಪದವಿಭಾಗ-ಅರ್ಥ:ಅದು ಅಲ್ಲದೆಯುಂ-
- ವಚನ:ಅರ್ಥ:ಹಾಗೂ ಅಲ್ಲದೆ-
- ಚಂ|| ಮಲೆ ತಲೆದೋಱದೆಂದುದನೆ ಕೊಟ್ಟುದಡಂಗಮಡಂಗಿ ಬಂದೊಡೊ|
- ಕ್ಕಲಿಗವೆಸರ್ಗೆ ಪೂಣ್ದುದು ಕುಱುಂಬು ಕಱುಂಬದೆ ಮಿಕ್ಕ ಶತ್ರು ಮಂ|
- ಡಳಿಕರೆ ಮಿತ್ರ ಮಂಡಳಿಕರಾದರನಾಕುಳಮಿಂದು ನಾಳೆ ಮಾ|
- ರ್ಮಲೆದರನಿಕ್ಕಿ ನಮ್ಮನೆೞೆದಿಕ್ಕುಗುಮೀ ನೆಲೆಯಿಂ ಗುಣಾರ್ಣವಂ|| ೯೦ ||
- ಪದ್ಯ-೯೦:ಪದವಿಭಾಗ-ಅರ್ಥ: ಮಲೆ (ಗಡಿಯಬೆಟ್ಟವಾಸಿಗಳು) ತಲೆದೋಱದೆ (ಯುದ್ಧದಲ್ಲಿ ಕಾಣಿಸದೆ) ಎಂದುದನೆ (ಕೇಳಿದ್ದನ್ನು) ಕೊಟ್ಟುದು ಡಂಗಂ ಅಡಂಗಿ ಬಂದೊಡೆ ಒಕ್ಕಲಿಗವೆಸರ್ಗೆ ಪೂಣ್ದುದು(ಪ್ರತಿಜ್ಞೆಮಾಡಿದವು) ಕುಱುಂಬು ಕಱುಂಬದೆ (ಕುಱುಂಬು -ಸಣ್ಣ ಪಾಳೆಯಪಟ್ಟುಗಳು) (ಕೇಳಿದ್ದನ್ನು ಕೊಟ್ಟು ಅವರಿಗೆ ಅಡಿಯಾಳಾಗುವಂತೆ ಪ್ರತಿಜ್ಞೆಮಾಡಿತು.) ಮಿಕ್ಕ ಶತ್ರು ಮಂಡಳಿಕರೆ ಮಿತ್ರ ಮಂಡಳಿಕರು ಆದರು ಅನಾಕುಳಂ ಇಂದು (ಸಣ್ಣ ಪಾಳೆಯಗಳೆಲ್ಲ ಅವರ ಆಜ್ಞಾನುವರ್ತಿಯಾಗಿರಲು ನಿಷ್ಕರ್ಷೆಮಾಡಿಕೊಂಡುವು. ಪ್ರತಿಭಟಿಸದೆ ಶತ್ರುಮಂಡಲವೆಲ್ಲ ಮಿತ್ರಮಂಡಳಿಕರಾದರು.) ನಾಳೆ ಮಾರ್ಮಲೆದರನು ಇಕ್ಕಿ (ಇಂದೋ ನಾಳೆಯೋ ಗುಣಾರ್ಣವನು ಪ್ರತಿಭಟಿಸಿದವರನ್ನೆಲ್ಲ ಧ್ವಂಸಮಾಡಿ) ನಮ್ಮಂ ಎೞೆ ದಿಕ್ಕುಗುಂ ಈ ನೆಲೆಯಿಂ ಗುಣಾರ್ಣವಂ (ಈ ನೆಲೆಯಿಂದ ಎಳೆದು ಬಿಸಾಡತ್ತಾನೆ’)
- ಪದ್ಯ-೯೦:ಅರ್ಥ: (‘ಶತ್ರುರಾಜರೆಲ್ಲರೂ’) ಪ್ರತಿಭಟನೆಯೇ ಇಲ್ಲದೆ ಮನಸ್ಸಿನಲ್ಲಿ ಶತ್ರುತ್ವವನ್ನೂ ಅಡಗಿಸಿಕೊಂಡು ಅವರು ಕೇಳಿದ್ದನ್ನು ಕೊಟ್ಟು ಅವರಿಗೆ ಅಡಿಯಾಳಾಗುವಂತೆ ಪ್ರತಿಜ್ಞೆಮಾಡಿದರು. ಸಣ್ಣ ಪಾಳೆಯಗಳೆಲ್ಲ ಅವರ ಆಜ್ಞಾನುವರ್ತಿಯಾಗಿರಲು ನಿಶ್ಚಯಮಾಡಿಕೊಂಡುವು. ಪ್ರತಿಭಟಿಸದೆ ಶತ್ರುಮಂಡಲವೆಲ್ಲ ಮಿತ್ರಮಾಂಡಳಿಕರಾದರು. ಇಂದೋ ನಾಳೆಯೋ ಗುಣಾರ್ಣವನು/ಅರ್ಜುನನು ಪ್ರತಿಭಟಿಸಿದವರನ್ನೆಲ್ಲ ನಾಶಮಾಡಿ ನಮ್ಮನ್ನೂ ಈ ನೆಲೆಯಿಂದ ಎಳೆದು ಬಿಸಾಡತ್ತಾನೆ’
- ವ|| ಅಂತು ವಿಕ್ರಮಾರ್ಜುನಂ ಬಿಲ್ಗೊಳಲುಂ ಭೀಮಸೇನಂ ಗದೆಗೊಳಲುಮಾಂಪುದರಿದು ಪಾಂಶುವಧದೆ ಕೆಯ್ಗೆ ಮಾಡುವುದುತ್ತಮಪಕ್ಷಮಂತುಮಲ್ಲದೆಯುಂ-
- ವಚನ:ಪದವಿಭಾಗ-ಅರ್ಥ:ಅಂತು ವಿಕ್ರಮಾರ್ಜುನಂ ಬಿಲ್ಗ್ ಕೊಳಲುಂ ಭೀಮಸೇನಂ ಗದೆ ಕೊಳಲುಂ ಆಂಪುದು ಅರಿದು (ಎದರಿಸಲು ಆಗದು) ಉಪಾಂಶು ವಧದೆ(ರಹಸ್ಯವಾದ ವಧೆಯಿಂದ) ಕೆಯ್ಗೆ ಮಾಡುವುದು(ವಶಪಡಿಸಿಕೊಳಳುವುದು) ಉತ್ತಮಪಕ್ಷಂ (ಉತ್ತಮವಾದ ಮಾರ್ಗ) ಅಂತುಂ ಅಲ್ಲದೆಯುಂ-
- ವಚನ:ಅರ್ಥ:ಹಾಗೆ ವಿಕ್ರಮಾರ್ಜುನನು/ ಅರ್ಜುನನು, ಬಿಲ್ಲನ್ನು ಹಿಡಿದರೂ ಭೀಮಸೇನನು ಗದೆಯನ್ನು ಹಿಡಿದರೂ ಎದುರಿಸಲು ಅಸಾಧ್ಯ. ರಹಸ್ಯವಾಗಿ ಮೋಸದ ಕೊಲೆಯಿಂದ ವಶಪಡಿಸಿಕೊಳ್ಳುವುದು ಉತ್ತಮವಾದ ಮಾರ್ಗ ಹಾಗೂ ಅಲ್ಲದೆ-
- ಶ್ಲೋ|| ಸ್ವಾಮ್ಯಾರ್ಥಂ ಸ್ವಾಮ್ಯ ವಿಕ್ರಾಂತಂ ಮರ್ಮಜ್ಞಂ ವ್ಯವಸಾಯಿನಂ
- ಅರ್ಧರಾಜ್ಯಹರಂ ಭೃತ್ಯಂ ಯೋನ ಹನ್ಯಾತ್ಸ ಹನ್ಯತೇ|| ಎಂಬುದರ್ಥಶಾಸ್ತ್ರ ಸದ್ಭಾವಂ-
- ಶ್ಲೋಕದ ಅರ್ಥ:‘ಭಾಗಕ್ಕೆ ಆಶೆಪಡುತ್ತಿರುವವನೂ ಸ್ವಾಮ್ಯವನ್ನು ಪಡೆಯಲು ಶಕ್ತಿಯುಳ್ಳವನೂ ರಹಸ್ಯವನ್ನು ತಿಳಿದವನೂ ಕಾರ್ಯಶೀಲನಾದವನೂ ಅರ್ಧರಾಜ್ಯವನ್ನು ಅಪಹರಿಸುವವನೂ ಆದ ಆಳನ್ನು ಯಾವನು ಕೊಲ್ಲುವುದಿಲ್ಲವೋ ಅವನು ತಾನೇ ಹತನಾಗುತ್ತಾನೆ. ಎನ್ನುವುದು ಅರ್ಥಶಾಸ್ತ್ರದ ಸಾರವತ್ತಾದ ಭಾಗ.
- ಉ|| ಮೇಣ್ಕುಲಮಿಲ್ಲೆಯೋ ನಮಗೆ ದಾಯಿಗರಲ್ಲರೊ ಶಸ್ತ್ರವಿದ್ಯೆಯೊಳ್/
- ಪೂಣ್ಕೆಗಳಿಲ್ಲೆಯೋ ಧರೆಗೆ ಮುನ್ನವರಯ್ಯನೆ ಮುಖ್ಯನಲ್ಲನೋ|
- ಜಾಣ್ಕಿಱದಾಗವೇಡ ಮನದಲ್ ನಿಮಗಯ್ಯ ವಿಧಾತೃಯೋಗದಿಂ/
- ಕಣ್ಕುರುಡಾದೊಡೇನೊ ಕುರುಡಾಗಲೆವೇಳ್ಪುದೆ ನಿಮ್ಮ ಬುದ್ಧಿಯುಂ|| ೯೧ ||91|| (ಕುರುಡಾಗಲೆವೇಳ್ಕುಮೆ)
- ಪದ್ಯ-೯೧:ಪದವಿಭಾಗ-ಅರ್ಥ:ಮೇಣ್ ಕುಲಮಿಲ್ಲೆಯೋ? ನಮಗೆ ದಾಯಿಗರಲ್ಲರೊ?(ದಾಯಾದಿಗಳಲ್ಲವೊ) ಶಸ್ತ್ರವಿದ್ಯೆಯೊಳ್ ಪೂಣ್ಕೆಗಳಿಲ್ಲೆಯೋ?(ಹೊಣೆ, ನೆಗಳಿಕೆ, ಶಪಥ) ಧರೆಗೆ ಮುನ್ನವರಯ್ಯನೆ (ಮುನ್ನ ಅವರ ಅಯ್ಯನೇ ತಂದೆಯೇ ರಾಜನಲ್ಲವೇ?) ಮುಖ್ಯನಲ್ಲನೋ? ಜಾಣ್ಕಿಱದಾಗವೇಡ ಮನದಲ್ (ಜಾಣ್ -ಬುದ್ಧಿಯು, ಕಿರಿದಾಗವೇಡ- ಮನದಲ್ಲಿ ಕಡಿಮೆಯಾಗಬಾರದು) ನಿಮಗೆ ಅಯ್ಯ ವಿಧಾತೃಯೋಗದಿಂ ಕಣ್ ಕುರುಡಾದೊಡೆ ಏನೊ(ತಂದೆಯೇ ದೈವಯೋಗದಿಂದ ಕಣ್ಣು ಕುರುಡಾದರೆ) ಕುರುಡಾಗಲು ಎವೇಳ್ಪುದೆ ನಿಮ್ಮ ಬುದ್ಧಿಯುಂ(ನಿಮ್ಮ ಬುದ್ಧಿಯೂ ಕುರುಡಾಗಬೇಕೆ?)
- ಪದ್ಯ-೯೧:ಅರ್ಥ:||‘ಅಲ್ಲದೆ ನಮಗೂ ಅವರಿಗೂ ಸಮಾನ ಕುಲವಿಲ್ಲವೇ? ರಾಜ್ಯಕ್ಕೆ ನಾವು ಭಾಗಿಗಳಲ್ಲವೆ? ನಾವು ಅವರಷ್ಟೇ ಶಸ್ತ್ರವಿದ್ಯೆಯಲ್ಲಿ (ಹೊಣೆಯುಳ್ಳವರು) ಪರಿಣತರಲ್ಲವೆ; ಈಗಾಗಲೇ ಅವರ ತಂದೆ ರಾಜ್ಯಭಾರಮಾಡಿಯಾಗಲಿಲ್ಲವೆ? ನಿಮ್ಮ ಮನಸ್ಸಿನಲ್ಲಿ ಜಾಣ್ಮೆ ಕಿರಿದಾಗಬೇಕಾಗಬಾರದು. ತಂದೆಯೇ ದೈವಯೋಗದಿಂದ ಕಣ್ಣು ಕುರುಡಾದರೆ ನಿಮ್ಮ ಬುದ್ಧಿಯೂ ಕುರುಡಾಗಬೇಕೆ?’
- ವ||ಎಂದು ತನ್ನ ಮನದೊಳೊಡಂಬಡೆ ನುಡಿದ ಮಗನ ಮಾತಂ ಧೃತರಾಷ್ಟ್ರಂ ಮನದೆಗೊಂಡು-
- ವಚನ:ಪದವಿಭಾಗ-ಅರ್ಥ:ಎಂದು ತನ್ನ ಮನದೊಳು ಒಡಂಬಡೆ (ಮನಸ್ಸಿಗೆ ಒಪ್ಪಲು) ನುಡಿದ ಮಗನ ಮಾತಂ ಧೃತರಾಷ್ಟ್ರಂ ಮನದೆಗೊಂಡು (ಮನದಟ್ಟಾಗಿ,ಮನಸಾರೆ ಒಪ್ಪಿ)
- ವಚನ:ಅರ್ಥ:ಎಂದು ತನ್ನ ಮನಸ್ಸಿಗೊಪ್ಪಿದ ಮಾತನ್ನಾಡಿದ ಮಗನ ಮಾತನ್ನು ಧೃತರಾಷ್ಟ್ರನು ಮನಸಾರೆ ಒಪ್ಪಿದನು.
- ಉ|| ಏನೆರ್ದೆಗೊಂಡ ಕಜ್ಜಮನೆ ಪೇೞ್ದೆಯೊ ಚಿಂತಿಸುತಿರ್ಪೆನಾನುಮೇ
- ನಾನುಮುಪಾಯಮಂ ಬಗೆವರಂತವರ್ಗಳ್ ನಿನಗೆಂದೆ ಕಂದ ಪೇೞ್|
- ನೀನಿರೆ ಪಟ್ಟಮುಂ ನೆಲನುಮಪ್ಪುದನೊಲ್ವೆನೆ ವೈರಿಗಳ್ಗೆ ನೀ
- ನೇನುಮದರ್ಕೆ ಚಿಂತಿಸದಿರಿಲ್ಲಿರಲೀವನೆ ಪಾಂಡುಪುತ್ರರಂ|| ೯೨ ||
- ಪದ್ಯ-೯೨:ಪದವಿಭಾಗ-ಅರ್ಥ:ಏನು ಎರ್ದೆಗೊಂಡ ಕಜ್ಜಮನೆ ಪೇೞ್ದೆಯೊ (ಹೃದಯದಲ್ಲಿದ್ದ ಕಾರ್ಯ ಏನಿತ್ತೋ ಅದೇ ಕಾರ್ಯವನ್ನು ಹೇಳಿದಯೊ) ಚಿಂತಿಸುತಿರ್ಪೆನು ಆನುಂ ಏನಾನುಂ ಅಪಾಯಮಂ ಬಗೆವರೊ ಎಂತು ಅವರ್ಗಳ್ ನಿನಗೆಂದೆ ಕಂದ (ಮಗನೇ ನಿನಗೆ ಅವರು ಏನಾದರೂ ಕೇಡನ್ನು ಯೋಚಿಸುತ್ತಿದ್ದಾರೆಯೆ) ಪೇೞ್ (ಹೇಳು) ನೀನು ಇರೆ(ನೀನು ಇರಲು) ಪಟ್ಟಮುಂ ನೆಲನುಂ ಅಪ್ಪುದಂ ಒಲ್ವೆನೆ(ಒಪ್ಪುವೆನೇ) ವೈರಿಗಳ್ಗೆ (ಪಟ್ಟವೂ ರಾಜ್ಯವೂ ಶತ್ರುಗಳಿಗೆ ಆಗುವುದನ್ನು ನಾನು ಒಪ್ಪುತ್ತೇನೆಯೇ?) ನೀನು ಏನು ಅದರ್ಕೆ ಚಿಂತಿಸದಿರು ಇಲ್ಲಿ ಇರಲು ಈವನೆ (ಅವಕಾಶಕೊಡುತ್ತೇನೆಯೇ?) ಪಾಂಡುಪುತ್ರರಂ|| ೯೨ ||
- ಪದ್ಯ-೬೨:ಅರ್ಥ:. ನನ್ನ ಹೃದಯದಲ್ಲಿ ಏನಿತ್ತೋ ಅದೇ ಕಾರ್ಯವನ್ನು ಹೇಳಿದಯೊ; ಅವರು ನಿನಗೇನಾದರೂ ಕೇಡನ್ನು ಯೋಚಿಸುತ್ತಿದ್ದಾರೆಯೆ ಎಂಬುದಾಗಿಯೇ ನಾನೂ ಚಿಂತಿಸುತ್ತಿದ್ದೇನೆ. ಮಗು, ನೀನಿರುವಾಗ ಪಟ್ಟವೂ ರಾಜ್ಯವೂ ಶತ್ರುಗಳಿಗೆ ಆಗುವುದನ್ನು ನಾನು ಒಪ್ಪುತ್ತೇನೆಯೇ? ಅದಕ್ಕೆ ನೀನು ಚಿಂತಿಸಬೇಡ; ಪಾಂಡುಪುತ್ರರು ಇಲ್ಲಿರಲು ನಾನು ಅವಕಾಶಕೊಡುತ್ತೇನೆಯೇ?
- ವ|| ಎಂದು ದುರ್ಯೋಧನನಂ ಬೀಡಿಂಗೆ ಪೋಗಲ್ವೇೞ್ದು ಪಾಂಡವರಯ್ವರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನೇಱಿಸಿಕೊಂಡು ದುರ್ಯೋಧನನಪ್ಪೊಡೆ ಪೊಲ್ಲ ಮಾನಸನಾತನುಂ ನೀಮುಮೊಂದೆಡೆಯೊಳಿರೆ ಕಿಸುಱುಂ ಕಲಹಮುಮೆಂದುಂ ಕುಂದದದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತಮೆಂಬುದು ಪೊೞಲ್ ಕುರುಜಾಂಗಣ ವಿಷಯಕ್ಕೆ ತಿಳವಮಪ್ಪಂತಿರ್ದುದಲ್ಲಿಗೆ ಪೋಗಿ ಸುಖಮಿರಿಮೆಂದೊಡಂತೆಗೆಯ್ವೆಮೆಂದು ಬೀೞ್ಕೊಂಡು ಬೀಡಿಂಗೆವಂದು ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಂ ಕುಂತಿಗಂ ತದ್ವೃತ್ತಾಂತಮನಱಿಪಿದರನ್ನೆಗಮಿತ್ತ ದುರ್ಯೋಧನನವರ ಪೋಗನಱಿದು ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮುಂ ಚರ್ಚಿಸಿ ವಾರಣಾವತಮನೊಂದೇ ದಿವಸದೊಳೆಯ್ದು ವಂತಾಗೆ ರಥಮಂ ಸಮಕಟ್ಟಿ ನಾಲ್ಕುಲಕ್ಕ ಬಲಮಂ ನೆರಂಬೇೞ್ದು ಕಳಿಪಿದನಾಗಳ್-
- ವಚನ:ಪದವಿಭಾಗ-ಅರ್ಥ:ಎಂದು ದುರ್ಯೋಧನನಂ ಬೀಡಿಂಗೆ (ನಿವಾಸಕ್ಕೆ) ಪೋಗಲ್ವೇೞ್ದು, ಪಾಂಡವರು ಅಯ್ವರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನು ಏಱಸಿಕೊಂಡು (ಕುಳ್ಳಿರಿಸಿಕೊಂಡು) ದುರ್ಯೋಧನನಪ್ಪೊಡೆ ಪೊಲ್ಲ ಮಾನಸನು (ಕೆಟ್ಟ ಮನಸ್ಸಿನವನು) ಆತನುಂ ನೀಮುಂ ಒಂದು ಎಡೆಯೊಳು ಇರೆ ಕಿಸುಱುಂ ಕಲಹಮುಂ (ಅಸಹನೆಯೂ ಜಗಳವೂ) ಅಂದುಂ ಕುಂದದು ಅದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತಮೆಂಬುದು ಪೊೞಲ್ (ಪಟ್ಟಣ), ಕುರುಜಾಂಗಣ ವಿಷಯಕ್ಕೆ ತಿಳವಂ ಅಪ್ಪಂತೆ ಇರ್ದುದು (ಕುರುಜಾಂಗಣ ರಾಜ್ಯಕ್ಕೆ ತಿಲಕದಂತೆ ಇರುವುದು) ಅಲ್ಲಿಗೆ ಪೋಗಿ ಸುಖಂ ಇರಿಂ ಎಂದೊಡೆ ಅಂತೆ ಗೆಯ್ವೆಮೆಂದು (ಹಾಗೆಯೇ ಮಾಡುವೆವೆಂದು) ಬೀೞ್ಕೊಂಡು ಬೀಡಿಂಗೆ ವಂದು(ಬಂದು); ಗಾಂಗೇಯ ದ್ರೋಣ ಕೃಪ ವಿದುರರ್ಕಳ್ಗಂ ಕುಂತಿಗಂ ತದ್ವೃತ್ತಾಂತಮನು ಅಱಪಿದರು (ವಿದುರಾದಿಗಳಿಗೆ ಆ ವೃತ್ತಾಂತವನ್ನು ತಿಳಿಸಿದರು.) ಅನ್ನೆಗಂ ಇತ್ತ ದುರ್ಯೋಧನನು ಅವರ ಪೋಗನಱಿದು(ಅವರು ಹೋಗುವುದನ್ನು ತಿಳಿದು) ಪುರೋಚನನೆಂಬ ತನ್ನ ಮನದನ್ನನಪ್ಪ ಪೆರ್ಗಡೆಯೊಳ್ ಲಾಕ್ಷಾಗೃಹೋಪಾಯಮುಂ (ತನ್ನ ಆಪ್ತನಾದ ಹೆಗ್ಗಡೆಯಲ್ಲಿ ಅರಗಿನ ಮನೆಯ ಉಪಾಯವನ್ನು) ಚರ್ಚಿಸಿ ವಾರಣಾವತಮನು ಒಂದೇ ದಿವಸದೊಳ್ ಅಯ್ದುವಂತಾಗೆ (ವಾರಣಾವತವನ್ನು ಒಂದೇ ದಿವಸದಲ್ಲಿ ಹೋಗಿ ಸೇರುವ ಹಾಗೆ) ರಥಮಂ ಸಮಕಟ್ಟಿ ನಾಲ್ಕುಲಕ್ಕ ಬಲಮಂ (ನಾಲ್ಕು ಲಕ್ಷಸೈನ್ಯವನ್ನು) ನೆರಂಬೇೞ್ದು ಕಳಿಪಿದನು ಆಗಳ್(ಸಹಾಯಕ್ಕಾಗಿ ನಿಯಮಿಸಿ ಕಳುಹಿಸಿದನು. ಆಗಳ್) -
- ವಚನ:ಅರ್ಥ:ಹೀಗೆ ಹೇಳಿ ಧೃತರಾಷ್ಟ್ರನು ದುರ್ಯೋಧನನ್ನು ಅವನ ನಿವಾಸಕ್ಕೆ ಕಳುಹಿಸಿ, ಪಾಂಡವರು ಐದು ಜನರನ್ನೂ ಕರೆಸಿ ತೊಡೆಯಮೇಲೆ ಕುಳ್ಳಿರಿಸಿಕೊಂಡು ‘ದುರ್ಯೋಧನನಾದರೆ ಕೆಟ್ಟ ಮನಸ್ಸುಳ್ಳವನು. ಅವನೂ ನೀವೂ ಒಂದೇ ಸ್ಥಳದಲ್ಲಿದ್ದರೆ ಕೋಪವೂ ಜಗಳವೂ ಎಂದೂ ತಪ್ಪುವುದಿಲ್ಲ. ಆದ ಕಾರಣ ಗಂಗಾನದಿಯ ದಕ್ಷಿಣದಲ್ಲಿ ಕುರುಜಾಂಗಣದೇಶಕ್ಕೆ ತಿಲಕದಂತಿರುವ ವಾರಣಾವತವೆಂಬ ಪಟ್ಟಣವಿದೆ; ಕುರುಜಾಂಗಣ ರಾಜ್ಯಕ್ಕೆ ತಿಲಕದಂತೆ ಇರುವುದು. ಅಲ್ಲಿಗೆ ಹೋಗಿ ಸುಖವಾಗಿರಿ ಎನ್ನಲು (ಪಾಂಡವರು) ಹಾಗೆಯೇ ಮಾಡುವೆವು ಎಂದು ಅವರ ಅಪ್ಪಣೆಯನ್ನು ಪಡೆದು ಮನೆಗೆ ಬಂದು ಭೀಷ್ಮ ದ್ರೋಣ ಕೃಪ ವಿದುರರುಗಳಿಗೂ ಕುಂತಿಗೂ ಆ ವಿಷಯವನ್ನು ತಿಳಿಸಿದರು. ಅಷ್ಟರಲ್ಲಿ ಇತ್ತಕಡೆ ದುರ್ಯೋಧನನು ಅವರು ಹೋಗುವುದನ್ನು ತಿಳಿದು ಪುರೋಚನನೆಂಬ ತನ್ನ ಆಪ್ತನಾದ ಹೆಗ್ಗಡೆಯಲ್ಲಿ ಅರಗಿನ ಮನೆಯ ಉಪಾಯವನ್ನು ವಿಚಾರ ಚರ್ಚೆಮಾಡಿ ವಾರಣಾವತವನ್ನು ಒಂದೇ ದಿವಸದಲ್ಲಿ ಹೋಗಿ ಸೇರುವ ಹಾಗೆ ರಥವನ್ನು ಸಿದ್ಧಪಡಿಸಿ ನಾಲ್ಕು ಲಕ್ಷ ಸೈನ್ಯವನ್ನೂ ಅವನ ಸಹಾಯಕ್ಕಾಗಿ ನಿಯಮಿಸಿ ಕಳುಹಿಸಿದನು; ಆಗ
- ಕಂ|| ಉದಿತೋದಿತನೈ ನೀಂ ನಿನ|
- ಗುದಯದ ಮೇಲುದಯಮೆಂದು ನೆಗೞ್ದರಿಗಂಗ|
- ಭ್ಯುದಯಮನಱಿಪುವ ತೆಱದಿಂ
- ದುದಯಾಚಳಚುಂಬಿಬಿಂಬನಿನನುದಯಿಸಿದಂ|| ೯೩||
- ಪದ್ಯ-೯೩:ಪದವಿಭಾಗ-ಅರ್ಥ:ಉದಿತೋದಿತನೈ ನೀಂ, ನಿನಗೆ ಉದಯದ ಮೇಲೆ ಉದಯಮೆಂದು ನೆಗೞ್ದ ಅರಿಗಂಗೆ ಅಭ್ಯುದಯಮನು ಅಱಿಪುವ ತೆಱದಿಂದೆ(ಪ್ರಸಿದ್ಧನಾದ ಅರಿಕೇಸರಿಗೆ ಅವನ ಅಭಿವೃದ್ಧಿಯನ್ನು ಸೂಚಿಸುವ ರೀತಿಯಿಂದ) ಉದಯಾಚಳ ಚುಂಬಿಬಿಂಬನು ಇನನು (ಸೂರ್ಯನು) ಉದಯಿಸಿದಂ
- ಪದ್ಯ-೯೩:ಅರ್ಥ:‘ನೀನು ಪ್ರಸಿದ್ಧನಾವನು, ನಿನಗೆ ವೃದ್ಧಿಯ ಮೇಲೆ ವೃದ್ಧಿಯಾಗುತ್ತದೆ’ ಎಂದು ಪ್ರಸಿದ್ಧನಾದ ಅರಿಕೇಸರಿಗೆ ಅವನ ಅಭಿವೃದ್ಧಿಯನ್ನು ಸೂಚಿಸುವ ರೀತಿಯಿಂದ ಉದಯಪರ್ವತಕ್ಕೆ ತಾಗಿಕೊಂಡು ಸೂರ್ಯನು ಉದಯಿಸಿದನು.
- ವ|| ಆ ಪ್ರಸ್ತಾವದೊಳ್ ಮಂಗಳಪಾಠಕರ ಮಂಗಳವೃತ್ತೋಚ್ಚಾರಣೆಗಳಿಂದಂ ಪಾಂಡವರಯ್ವರುಮುನ್ಮೀಲಿತನಯನರಾಗಿ ನಿತ್ಯನಿಯಮಂಗಳಂ ನಿರ್ವರ್ತಿಸಿ ಮಂಗಳವಸದನಂಗೊಂಡು ಮಹಾಬ್ರಾಹ್ಮಣರ್ ಪರಸುವ ಪರಕೆಗಳುಮನಿಕ್ಕುವ ಸೇಸೇಗಳು ಮನಾಂತುಕೊಳುತ್ತುಂ ಪಲವುಂ ತೆಱದ ಪ್ರಯಾಣ ಪಟಹಂಗಳೆಸೆಯೆ ಶುಭ ಲಕ್ಷಣ ಲಕ್ಷಿತಂಗಳಪ್ಪಾಜಾನೇಯ ಕಾಂಭೋಜ ವಾಜಿರಾಜಿಗಳೊಳ್ ಪೂಡಿದ ದಿವ್ಯರಥಂಗಳನೇಱಿ ದಿವ್ಯಬಾಣಾಸನ ಬಾಣಪಾಣಿಗಳಾಗಿ ನಿಜಪರಿಜನಂ ಬೆರಸು ಗಾಂಗೇಯ ದ್ರೋಣ ಕೃಪ ವಿದುರರ್ ಕಳಿಪುತ್ತುಂ ಬರೆ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೞಲ್ದು ಸೈರಿಸಲಾಱದೆ-
- ವಚನ:ಪದವಿಭಾಗ-ಅರ್ಥ:ಆ ಪ್ರಸ್ತಾವದೊಳ್ ಮಂಗಳಪಾಠಕರ ಮಂಗಳವೃತ್ತ ಉಚ್ಚಾರಣೆಗಳಿಂದಂ ಪಾಂಡವರು ಅಯ್ವರುಂ ಉನ್ಮೀಲಿತ ನಯನರಾಗಿ(ಅರಳಿದ ಕಣ್ಣುಗಳನ್ನುಳ್ಳವರಾಗಿ) ನಿತ್ಯನಿಯಮಂಗಳಂ ನಿರ್ವರ್ತಿಸಿ (ಮುಗಿಸಿ) ಮಂಗಳವಸದನಂಗೊಂಡು(ಮಂಗಳಕರವಾದ ಅಲಂಕಾರವನ್ನು ಮಾಡಿಕೊಂಡು) ಮಹಾಬ್ರಾಹ್ಮಣರ್ ಪರಸುವ ಪರಕೆಗಳುಮನು ಇಕ್ಕುವ ಸೇಸೇಗಳುಮನು ಆಂತುಕೊಳುತ್ತುಂ (ಸ್ವೀಕರಿಸುತ್ತಾ) ಪಲವುಂ ತೆಱದ ಪ್ರಯಾಣ ಪಟಹಂಗಳು ಎಸೆಯೆ (ಪ್ರಯಾಣಭೇರಿಗಳು ಶೊಭಿಸಲು) ಶುಭ ಲಕ್ಷಣ ಲಕ್ಷಿತಂಗಳ ಅಪ್ಪಾಜಾನೇಯ ಕಾಂಭೋಜ ವಾಜಿರಾಜಿಗಳೊಳ್ (ಕುದುರೆಗಳಲ್ಲಿ) ಪೂಡಿದ ದಿವ್ಯರಥಂಗಳನು ಏಱಿ ದಿವ್ಯಬಾಣಾಸನ ಬಾಣಪಾಣಿಗಳಾಗಿ (ದೇವದತ್ತವಾದ ಬಿಲ್ಲುಬಾಣಗಳನ್ನು ಕಯ್ಯಲ್ಲಿ ಹಿಡಿದವರಾಗಿ) ನಿಜಪರಿಜನಂ ಬೆರಸು (ಪರಿವಾರದೊಂದಿಗೆ) ಗಾಂಗೇಯ ದ್ರೋಣ ಕೃಪ ವಿದುರರ್ ಕಳಿಪುತ್ತುಂ ಬರೆ (ಕಳಿಸಲು ಬರಲು) ಪುರಜನಂಗಳೆಲ್ಲಂ ನೆರೆದು ಅವರ ಪೋಗಿಂಗೆ ಅೞಲ್ದು (ದುಃಖಿಸಿ) ಸೈರಿಸಲಾಱದೆ (ಪಟ್ಟಣಿಗರೆಲ್ಲರೂ ಸೇರಿ ಅವರು ಹೊರಟುಹೋಗುವಿಕೆಗಾಗಿ ದುಖಪಟ್ಟು ಸಹಿಸಲಾರದೆ)-
- ವಚನ:ಅರ್ಥ:ಆ ಸಂದರ್ಭದಲ್ಲಿ ಹೊಗಳುಭಟರ ಮಂಗಳಪದ್ಯ ಪಠನಗಳಿಂದ ಪಾಂಡವರು ಐದು ಜನರೂ ಅರಳಿದ ಕಣ್ಣುಗಳನ್ನುಳ್ಳವರಾಗಿ ಪ್ರತಿದಿನವೂ ಮಾಡಬೇಕಾದ ನಿತ್ಯಕರ್ಮಗಳನ್ನು ಮುಗಿಸಿ ಮಂಗಳಕರವಾದ ಅಲಂಕಾರವನ್ನು ಮಾಡಿಕೊಂಡು ವೃದ್ಧಬ್ರಾಹ್ಮಣರುಗಳು ಆಶೀರ್ವದಿಸುವ ಹರಕೆಗಳನ್ನೂ ಚೆಲ್ಲುತ್ತಿರುವ ಮಂತ್ರಾಕ್ಷತೆಗಳನ್ನೂ ತಲೆಯಲ್ಲಿ ಸ್ವೀಕರಿಸುತ್ತಾ ನಾನಾರೀತಿಯ ಪ್ರಯಾಣಭೇರಿಗಳು ಪ್ರಕಾಶಿಸುತ್ತಿರಲು ಶುಭಲಕ್ಷಣಗಳಿಂದ ಗುರುತಿಸಲ್ಪಟ್ಟ ಒಳ್ಳೆಯ ತಳಿಯಿಂದ ಕೂಡಿದ ಕಾಂಭೋಜದೇಶದ ಉತ್ತಮ ಕುದುರೆಗಳ ಸಮೂಹದಿಂದ ಸಿದ್ಧಪಡಿಸಿದ ದಿವ್ಯರಥಗಳನ್ನು ಹತ್ತಿ ದೇವದತ್ತವಾದ ಬಿಲ್ಲುಬಾಣಗಳನ್ನು ಕಯ್ಯಲ್ಲಿ ಹಿಡಿದವರಾಗಿ ತಮ್ಮ ಪರಿವಾರದೊಂದಿಗೆ ಸೇರಿಕೊಂಡು ಹಸ್ತಿನಾಪುರದಿಂದ ಹೊರಟರು. ಭೀಷ್ಮ ದ್ರೋಣ ಕೃಪ ವಿದುರರು ದಾರಿ ಕಳುಹಿಸಲು ಬಂದರು. ಪಟ್ಟಣಿಗರೆಲ್ಲರೂ ಸೇರಿ ಅವರು ಹೊರಟುಹೋಗುವಿಕೆಗಾಗಿ ದುಃಖಪಟ್ಟು ಸಹಿಸಲಾರದೆ ಶೋಕಿಸಿದರು.
- ಚಂ|| ಮನದೊಳಲಂಪು ಪೊಣ್ಮೆ ನುಡಿದುಂ ನಡೆ ನೋಡಿಯುಮಾಟಪಾಟಮಂ
- ಬಿನದಮುಮಾರುಮಂ ಮರೆಯಿಸುತ್ತಿರೆ ಬೀದಿಗಳೊಳ್ ವಿಳಾಸದೊ|
- ಡ್ಡೆನಿಸಿ ತೊೞಲ್ವ ಪಾಂಡವರ ಪೋಗಿನೊಳುಂತೆ ಬೆಡಂಗುಗೆಟ್ಟು ಹ
- ಸ್ತಿನಪುರಮಿಂದು ರಕ್ಕಸನ ತಿಂದ ಪೊೞಲ್ಗೆಣೆಯಾಗದಿರ್ಕುಮೇ|| ೯೪||
- ಪದ್ಯ-೯೪:ಪದವಿಭಾಗ-ಅರ್ಥ:ಮನದೊಳು ಅಲಂಪು ಪೊಣ್ಮೆ ನುಡಿದುಂ ನಡೆ ನೋಡಿಯುಂ ಆಟಪಾಟಮಂ ಬಿನದಮುಂ ಆರುಮಂ ಮರೆಯಿಸುತ್ತಿರೆ (ಯಾರನ್ನಾದರೂ ಮೈಮರೆಯುವಂತೆ ಮಾಡುತ್ತಿರಲು) ಬೀದಿಗಳೊಳ್ ವಿಳಾಸದ ಒಡ್ಡೆನಿಸಿ ತೊೞಲ್ವ (ಬೀದಿಗಳಲ್ಲಿ ಸೌಂದರ್ಯದ ಸಮೂಹವೆಂದೆನಿಸಿಕೊಂಡು ತಿರುಗಾಡುತ್ತಿದ್ದ) ಪಾಂಡವರ ಪೋಗಿನೊಳು ಉಂತೆ ಬೆಡಂಗುಗೆಟ್ಟು (ಪಾಂಡವರು ಊರನ್ನು ಬಿಟ್ಟು ಹೋಗುವುದರಿಂದ ಹಸ್ತಿನಾಪಟ್ಟಣವು ಬೆಡಗು ಕಳೆದುಕೊಂಡು) ಹಸ್ತಿನಪುರಮಿಂದು ರಕ್ಕಸನ ತಿಂದ (ರಾಕ್ಷಸರು ತಿಂದು ಬಿಟ್ಟ) ಪೊೞಲ್ಗೆ ಎಣೆಯಾಗದೆ ಇರ್ಕುಮೇ (ಪಟ್ಟಣಕ್ಕೆ ಸಮಾನವಾಗದೇ ಇರುವುದೇ!)||
- ಪದ್ಯ-೯೪:ಅರ್ಥ:ಮನಸ್ಸಿನಲ್ಲಿ ಸಂತೋಷವುಕ್ಕುವಂತೆ ಮಾತನಾಡಿಯೂ ದೀರ್ಘದೃಷ್ಟಿಯಿಂದ ನೋಡಿಯೂ ತಮ್ಮ ಆಟಪಾಟವಿನೋದಗಳಿಂದ ಯಾರನ್ನಾದರೂ ಮೈಮರೆಯುವಂತೆ ಮಾಡಿಯೂ ಬೀದಿಗಳಲ್ಲಿ ಸೌಂದರ್ಯದ ಸಮೂಹವೆಂದೆನಿಸಿಕೊಂಡು ತಿರುಗಾಡುತ್ತಿದ್ದ ಪಾಂಡವರು ಊರನ್ನು ಬಿಟ್ಟು ಹೋಗುವುದರಿಂದ ಹಸ್ತಿನಾಪಟ್ಟಣವು ಬೆಡಗು ಕಳೆದುಕೊಂಡು ರಾಕ್ಷಸರು ತಿಂದು ಬಿಟ್ಟ ಪಟ್ಟಣಕ್ಕೆ ಸಮಾನವಾಗದೇ ಇರುವುದೇ!
- ವ|| ಎಂದು ಕಣ್ಣನೀರಂ ನೆಗಪೆ-
- ವಚನ:ಪದವಿಭಾಗ-ಅರ್ಥ:ಎಂದು ಕಣ್ಣನೀರಂ ನೆಗಪೆ (ಉಕ್ಕಿಸುತ್ತಿರಲು)-
- ವಚನ:ಅರ್ಥ:ಎಂದು ಕಣ್ಣೀರನ್ನು ಸುರಿಸುತ್ತಿರಲು-
- ಚಂ|| ಪರಸುವ ಪೌರವೃದ್ಧರ ಕುಲಾಂಗನೆಯರ್ಕಳ ಸಾಧು ವಾದದೊಳ್
- ಬೆರಸಿ ಸಮಂತು ಸೂಸುವ ಜಲಾರ್ದ್ರಲಸದ್ಧವಳಾಕ್ಷತಂಗಳೊಳ್|
- ಬೆರಸಿದ ತಣ್ಪನೆತ್ತಿ ಕವಿದೆತ್ತಿದ ಬಾಸಿಗದೊಂದು ಕಂಪಿನೊಳ್
- ಪೊರೆದು ಮದಾಳಿಗಳ್ವೆರಸು ಬಂದುದದೊಂದನುಕೂಲ ಮಾರುತಂ|| ೯೫ ||
- ಪದ್ಯ-೯೫:ಪದವಿಭಾಗ-ಅರ್ಥ:ಪರಸುವ ಪೌರವೃದ್ಧರ(ಹರಸುವ ಊರಹಿರಿಯರ) ಕುಲಾಂಗನೆಯರ್ಕಳ (ಕುಲಸ್ತ್ರೀಯರ) ಸಾಧು ವಾದದೊಳ್ ಬೆರಸಿ ಸಮಂತು (ಓಳಿತಾಗಲಿ ಎಂಬ ಸಾದು ಆಶೀರ್ವಾದ ಸೇರಿಕೊಂಡು, ಸಮಂತು- ಚೆನ್ನಾಗಿ) ಸೂಸುವ (ಎರಚುವ) ಜಲಾರ್ದ್ರ (ತೋಯಿಸಿದ) ಲಸತ್ ಧವಳಾಕ್ಷತಂಗಳೊಳ್ (ಶೋಬಿಸುವ ಬಿಳಿಯ ಅಕ್ಷತೆಗಳಲ್ಲಿ) ಬೆರಸಿದ ತಣ್ಪನೆತ್ತಿ (ಕೂಡಿದ ತಂಪನ್ನು ಎತ್ತಿಕೊಂಡು) ಕವಿದು ಎತ್ತಿದ ಬಾಸಿಗದ ಒಂದು ಕಂಪಿನೊಳು ಪೊರೆದು (ದಟ್ಟವಾಗಿ ಎತ್ತಿದ ಬಾಸಿಗದ/ ಹೂವಿನ ಹಾರಗಳ ) ಮದ ಆಳಿಗಳ್ ಬೆರಸು (ಸೊಕ್ಕಿದ ದುಂಬಿಗಳ ಸಮೇತ) ಬಂದುದು ಒಂದು ಅನುಕೂಲ ಮಾರುತಂ (ಒಂದು ಅನುಕೂಲವಾಗಿ ಬೀಸುವ ಗಾಳಿ ಬಂತು)
- ಪದ್ಯ-೯೫:ಅರ್ಥ:ತಾತ್ಪರ್ಯ:ಆಶೀರ್ವಾದವನ್ನು ಮಾಡುತ್ತಿರುವ ಊರಹಿರಿಯರ ಮತ್ತು ಕುಲಸ್ತ್ರೀಯರ ಸ್ವಸ್ತಿವಾಚನಗಳಿಂದಲೂ ವಿಶೇಷವಾಗಿ ಚೆಲ್ಲುತ್ತಿರುವ ಮನೋಹರವೂ ಧವಳವರ್ಣಯುಕ್ತವೂ ಆದ ಆರ್ದ್ರಾಕ್ಷತೆಗಳಿಂದಲೂ ತಂಪಿನಿಂದಲೂ ಕಂಪಿನಿಂದಲೂ ಎತ್ತಿ ಕಟ್ಟಿದ ಬಾಸಿಂಗದ ಸುಗಂಧದಿಂದಲೂ ಮದಿಸಿದ ದುಂಬಿಗಳಿಂದಲೂ ಕೂಡಿದ ಹಿತವಾದ ಗಾಳಿಯೊಂದು ಹೊರಡುತ್ತಿರುವ ಪಾಂಡವರಿಗೆ ಶುಭಸೂಚಕವಾಗಿ ಬೀಸಿತು.
- ವ|| ಅಂತು ಪೊೞಲಂ ಪೊಱಮಡೆ ಬೞಿಯನೆ ತಗುಳ್ದು ಬರ್ಪ ತಮ್ಮೊಡನಾಡಿಗಳಪ್ಪ ಮೇಳದ ಸಬ್ಬವದ ನಗೆಯ ತೆಗೞಿನವರನೆಮ್ಮ ಬೞಿಯಟ್ಟಿದಂದು ಬನ್ನಿಮೆಂದು ಪ್ರಿಯಂ ನುಡಿದಿರಿಸಿ ಕಿಱಿದಂತರಂ ಬಂದೊಂದು ತಾವರೆಗೆಯ ಮೊದಲೊಳ್ ನಿಂದು ಭೀಷ್ಮ ದ್ರೋಣ ಕೃಪ ವಿದುರರ್ಕಳನೆಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಮೆನೆ-
- ವಚನ:ಪದವಿಭಾಗ-ಅರ್ಥ:ಅಂತು ಪೊೞಲಂ ಪೊಱಮಡೆ (ಹಾಗೆ ಪಟ್ಟಣವನ್ನು ಬಿಟ್ಟು ಹೊರಡಲು) ಬೞಿಯನೆ ತಗುಳ್ದು ಬರ್ಪ(ಹಿಂದೆಯೇ ಅನುಸರಿಸಿ ಬರುವ) ತಮ್ಮೊಡನಾಡಿಗಳಪ್ಪ ಮೇಳದ ಸಬ್ಬವದ (ವಿನೋದದ-) ನಗೆಯ (ಹಾಸ್ಯಗಾರರ) ತೆಗೞಿನವರನು (ಬೈಯುವವರನ್ನು) ಎಮ್ಮ ಬೞಿಯಟ್ಟಿದಂದು ಬನ್ನಿಮೆಂದು (ನಾವು ಹೇಳಿಕಳುಹಿಸಿದಾಗ ಬನ್ನಿ) ಪ್ರಿಯಂ ನುಡಿದು ಇರಿಸಿ ಕಿಱಿದಂತರಂ ಬಂದು (ಮಾತನ್ನಾಡಿ ನಿಲ್ಲಿಸಿ ಕೊಂಚ ದೂರ ಬಂದು) ಒಂದು ತಾವರೆಗೆಯ ಮೊದಲೊಳ್ ನಿಂದು (ತಾವರೆಯ ಕೆರೆಯ ಅಂಚಿನಲ್ಲಿ ನಿಂತು) ಭೀಷ್ಮ ದ್ರೋಣ ಕೃಪ ವಿದುರರ್ಕಳಂ ಎಮಗೆ ತಕ್ಕ ಬುದ್ಧಿಯಂ ಪೇೞ್ದು ಮಗುೞಂ ಎನೆ (ನಮಗೆ ಬುದ್ಧಿವಾದಗಳನ್ನು ತಿಳಿಸಿ ಹಿಂದಿರುಗಿ ಎನ್ನಲು- )-
- ವಚನ:ಅರ್ಥ:ಹಾಗೆ ಪಟ್ಟಣವನ್ನು ಬಿಟ್ಟು ಹೊರಡಲು ತಮ್ಮನ್ನು ಹಿಂದೆಯೇ ಅನುಸರಿಸಿ ಬರುವ ಸಹಪಾಠಿಗಳನ್ನೂ ನಕಲಿಯವರನ್ನೂ ಹಾಸ್ಯಗಾರರನ್ನೂ ಬೈಯುವವರನ್ನೂ ಪಾಂಡವರು ‘ನಾವು ಹೇಳಿಕಳುಹಿಸಿದಾಗ ಬನ್ನಿ’ ಎಂದು ಒಳ್ಳೆಯ ಮಾತನ್ನಾಡಿ ನಿಲ್ಲಿಸಿ ಕೊಂಚ ದೂರ ಬಂದು ಒಂದು ತಾವರೆಯ ಕೆರೆಯ ಅಂಚಿನಲ್ಲಿ ನಿಂತು ಭೀಷ್ಮ, ದ್ರೋಣ ಕೃಪ ವಿದುರರುಗಳನ್ನು ‘ನಮಗೆ ಬುದ್ಧಿವಾದಗಳನ್ನು ತಿಳಿಸಿ ಹಿಂದಿರುಗಿ' ಎನ್ನಲು-
- ಕಂ|| ನಡಪಿಯುಮೋದಿಸಿಯುಂ ಬಿ
- ಲ್ವಿಡಿಯಿಸಿಯುಂ ಕೆಚ್ಚುವಿರ್ದ ಕೂರ್ಮೇಗಳೆರ್ದೆಯಂ|
- ನಡೆ ಪಾಂಡುಸುತರಗಲ್ಕೆಗೆ
- ನಿಡುಸುಯ್ದರ್ ದ್ರೋಣ ಭೀಷ್ಮ ಕೃಪ ವಿದುರರ್ಕಳ್|| ೯೬
- ಪದ್ಯ-೯೬:ಪದವಿಭಾಗ-ಅರ್ಥ:ನಡಪಿಯುಂ (ಸಲಹಿ) ಓದಿಸಿಯುಂ ಬಿಲ್ವಿಡಿಯಿಸಿಯುಂ (ಬಿಲ್ಲು ಹಿಡಿಸಿ- ವಿದ್ಯೆಕಲಿಸಿ) ಕೆಚ್ಚುವಿರ್ದ (ನಿಕಟವಾಗಿ ಅಂಟಿಕೊಂಡು ಗಾಢವಾಗಿದ್ದ) ಕೂರ್ಮೇಗಳು (ಪ್ರೇಮವು) ಎರ್ದೆಯಂ ನಡೆ ಪಾಂಡುಸುತರ ಅಗಲ್ಕೆಗೆ ನಿಡುಸುಯ್ದರ್ ದ್ರೋಣ ಭೀಷ್ಮ ಕೃಪ ವಿದುರರ್ಕಳ್.
- ಪದ್ಯ-೯೬:ಅರ್ಥ:ಪಾಂಡವರನ್ನು, ಬಾಲ್ಯದಿಂದ ಸಲಹಿಯೂ ವಿದ್ಯಾಭ್ಯಾಸ ಮಾಡಿಸಿಯೂ ಬಿಲ್ವಿದ್ಯೆಯನ್ನು ಕಲಿಸಿಯೂ ನಿಕಟವಾಗಿ ಅಂಟಿಕೊಂಡು ಗಾಢವಾಗಿದ್ದ ಪ್ರೇಮವು ಮನಸ್ಸನ್ನು ನಾಟಿರಲು ಬೀಷ್ಮ ದ್ರೋಣ ಕೃಪ ವಿದುರರು ಅವರ ಅಗಲಿಕೆಗಾಗಿ ನಿಟ್ಟುಸಿರನ್ನು ಸೆಳೆದರು
- ವ|| ಆಗಳ್ ವಿದುರಂ ಕೆಲನಱಿಯದಂತುಮವರಱಿವಂತುಂ ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ ನಂಜಿನ ಕಿರ್ಚಿನ ದೆಸೆಗೆ ಕರಂ ಪ್ರಯತ್ನಪರರಾಗಿಮೆಂದೊಡಂತೆ ಗೆಯ್ವೆಮೆಂದವರನಿರಲ್ವೇೞ್ದು ಪಯಣಂಬೋಗಿ-
- ವಚನ:ಪದವಿಭಾಗ-ಅರ್ಥ:ಆಗಳ್ ವಿದುರಂ ಕೆಲನು ಅಱಯದಂತುಂ (ಪಕ್ಕದವರಿಗೆ ತಿಳಿಯದಂತೆ) ಅವರು ಅಱಿವಂತುಂ (ಅವರಿಗರ್ಥವಾಗುವಂತೆಯೂ) ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ ನಂಜಿನ (ದಾರಿಯಲ್ಲಿ ವಿಷದ) ಕಿರ್ಚಿನ ದೆಸೆಗೆ (ಬೆಂಕಿಯ ಅಪಾಯದ) ಕರಂ (ಹೆಚ್ಚು ಎಚ್ಚರವಾಗಿರಲು) ಪ್ರಯತ್ನಪರರಾಗಿಂ ಎಂದೊಡೆ ಅಂತೆ ಗೆಯ್ವೆಮೆಂದು (ಹಾಗೆ ಮಾಡುವೆವೆಂದು) ಅವರನು ಇರಲ್ವೇೞ್ದು (ಇರಲು-ನಿಲ್ಲಲು ಹೇಳಿ) ಪಯಣಂಬೋಗಿ-
- ವಚನ:ಅರ್ಥ:ಆಗ ವಿದುರನು ಪಕ್ಕದವರಿಗೆ ತಿಳಿಯದಂತೆಯೂ ಅವರಿಗರ್ಥವಾಗುವಂತೆಯೂ ಸರಳವಾದ ರೀತಿಯಲ್ಲಿಯೇ ‘ದಾರಿಯಲ್ಲಿ ಪ್ರಾಪ್ತವಾಗಬಹುದಾದ ವಿಷ, ಅಗ್ನಿ ಮೊದಲಾದುವುಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ’ ಎಂದು ಹೇಳಲು ಅವರು ಹಾಗೆಯೇ ಮಾಡುತ್ತೇವೆಂದು ಹೇಳಿ ಅವರನ್ನು ಅಲ್ಲಿಯೇ ನಿಲ್ಲಲು ಹೇಳಿ ಮುಂದೆ ಪ್ರಯಾಣಮಾಡಿದರು.
- ಕಂ|| ಪೊಳಪಿನ ಕಿರಣದ ಗಾಳಿಯ
- ಪೊಳಪನೆ ಸೈರಿಸದ ಕುಸುಮದಳ ಸುಕುಮಾರರ್|
- ತಳರ್ದು ನೆಲೆಯಿಂದಮಾಗಳ್
- ಕೊಳದಿಂ ಪೊಱಮಟ್ಟ ಹಂಸೆಗಳ್ಗೆಣೆಯಾದರ್|| ೯೭ ||
- ಪದ್ಯ-೯೭:ಪದವಿಭಾಗ-ಅರ್ಥ:ಪೊಳಪಿನ ಕಿರಣದ ಗಾಳಿಯ ಪೊಳಪನೆ ಸೈರಿಸದ (ಕಿರಣದ ಹೊಳಪನ್ನೂ ಗಾಳಿಯ ಸುಳಿವನ್ನೂ ಸೈರಿಸದ,) ಕುಸುಮದಳ ಸುಕುಮಾರರ್ (ಕೋಮಲ) ತಳರ್ದು ನೆಲೆಯಿಂದಮಾಗಳ್ (ತಮ್ಮ ವಾಸಸ್ಥಳದಿಂದ ಹೊರಟು) ಕೊಳದಿಂ ಪೊಱಮಟ್ಟ ಹಂಸೆಗಳ್ಗೆ ಎಣೆಯಾದರ್ (ಸಮಾನರಾದರು)||
- ಪದ್ಯ-೯೭:ಅರ್ಥ:ಪಾಂಡು ಕುಮಾರರು ಸೂರ್ಯನಕಿರಣದ ಹೊಳಪನ್ನೂ ಗಾಳಿಯ ಸುಳಿವನ್ನೂ ಸೈರಿಸದೆ, ಹೂವಿನ ದಳದಂತೆ ಕೋಮಲವಾಗಿದ್ದ ಆ ಸುಕುಮಾರರು ತಮ್ಮ ವಾಸಸ್ಥಳದಿಂದ ಹೊರಟು ಸರೋವರವನ್ನು ಬಿಟ್ಟು ಹೊರಟ ಹಂಸಗಳಿಗೆ ಸಮಾನರಾದರು.
- ವ|| ಆಗಿ ತಾವಾ ದಿಗಭೇಶ್ವರರಪ್ಪುದಱಿಂ ತಳರ್ದೆಡೆಯೆಡೆಯ ಮರಂಗಳ ತೊರೆಗಳ ಬಾಡಂಗಳ ಪೆಸರ್ಗಳಂ ಬೆಸಗೊಳುತ್ತುಂ ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನಜನ್ನವಿರಂಗಳುಮನವರ ಪರಕೆಯುಮಂ ಕೆಯ್ಕೊಳುತ್ತುಮವರ್ಗೆ ಬಾಧೆಯಾಗದಂತು ಕಾಪಂನಿಯಮಿಸುತ್ತುಂ ಕಾಲೂರ್ಗಳ ಗಂಡರ ಪೆಂಡಿರ ನಡೆಯುಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಂಗೆ ನಗುತ್ತುಮಲ್ಲಿಗಲ್ಲಿಗೊಡೆದ ಕೆರೆಗಂ ಅೞಿದಾಯತನಕ್ಕಂ ಧನಮನಿತ್ತು ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ ಬೀಡುದಾಣಂಗಳೊಳಿಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು-
- ವಚನ:ಪದವಿಭಾಗ-ಅರ್ಥ:ಆಗಿ ತಾವಾ ದಿಗಭೇಶ್ವರರಪ್ಪುದಱಿಂ (ಬಹಳ ಶ್ರೀಮಂತರಾದುದರಿಂದ) ತಳರ್ದೆಡೆಯೆಡೆಯ (ಹೋದ ಪ್ರದೇಶದಲ್ಲಿ) ಮರಂಗಳ ತೊರೆಗಳ ಬಾಡಂಗಳ (ಗ್ರಾಮಗಳ) ಪೆಸರ್ಗಳಂ ಬೆಸಗೊಳುತ್ತುಂ (ಹೆಸರನ್ನು ಕೇಳುತ್ತಾ) ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನಜನ್ನವಿರಂಗಳುಮನು (ಚಿನ್ನದ ಯಜ್ಞೋಪವೀತಗಳನ್ನೂ) ಅವರ ಪರಕೆಯುಮಂ ಕೆಯ್ಕೊಳುತ್ತುಮ್ ಅವರ್ಗೆ ಬಾಧೆಯಾಗದಂತು ಕಾಪಂ (ಕಾವಲನ್ನು) ನಿಯಮಿಸುತ್ತುಂ ಕಾಲೂರ್ಗಳ ಗಂಡರ ಪೆಂಡಿರ ನಡೆಯುಡೆಯ ನುಡಿಯ ಮುಡಿಯ ಗಾಂಪಿಂಗೆ ಮುಗುಳ್ನಂಗೆ ನಗುತ್ತುಂ ಅಲ್ಲಿಗಲ್ಲಿಗೆ ಒಡೆದ ಕೆರೆಗಂ ಅೞಿದ ಆಯತನಕ್ಕಂ (ಪಾಳಾಗಿದ್ದ ದೇವಾಲಯಗಳಿಗೂ) ಧನಮನಿತ್ತು ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ ಬೀಡುದಾಣಂಗಳೊಳು ಇಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು-
- ವಚನ:ಅರ್ಥ:||ತಾವು ಬಹಳ ಶ್ರೀಮಂತರಾದುದರಿಂದ ಅಲ್ಲಿಂದ ಹೊರಟು ಹೋದ ಪ್ರದೇಶದಲ್ಲಿ ಪಕ್ಕಪಕ್ಕದಲ್ಲಿಯೇ ಸಿಕ್ಕಿದ ಮರಗಳ ನದಿಗಳ ಹಳ್ಳಿಗಳ ಹೆಸರುಗಳನ್ನು ವಿಚಾರಮಾಡುತ್ತಲೂ ಶ್ರೇಷ್ಠವಾದ ಅಗ್ರಹಾರದ ಮಹಾಜನಗಳು ಕೊಟ್ಟಂತಹ ಚಿನ್ನದ ಯಜ್ಞೋಪವೀತಗಳನ್ನೂ ಆಶೀರ್ವಾದಗಳನ್ನೂ ಸ್ವೀಕರಿಸುತ್ತಲೂ ಅವರಿಗೆ ಯಾವ ತೊಂದರೆಯೂ ಆಗದಂತೆ ಕಾವಲನ್ನು ಏರ್ಪಡಿಸುತ್ತಲೂ ಸಣ್ಣ ಹಳ್ಳಿಗಳ ಗಂಡಸರ ಹೆಂಗಸರ ಆಚಾರ, ಉಡುಪು ಮಾತು ಮತ್ತು ತುರುಬುಗಳ ಹಳ್ಳಿತನಕ್ಕೆ ಹುಸಿನಗುತ್ತಲೂ ಅಲ್ಲಲ್ಲಿ ಒಡೆದುಹೋಗಿದ್ದ ಕೆರೆಗೂ ಪಾಳಾಗಿದ್ದ ದೇವಾಲಯಗಳಿಗೂ ಹಣವನ್ನೂ ಕೊಟ್ಟು ಮೊದಲಿದ್ದ ಸ್ಥಿತಿಗೆ ತರುತ್ತಲೂ ತಾನು ಇಳಿದುಕೊಳ್ಳುವುದಕ್ಕೆ ಹಾಕಿದ್ದ ಬಳ್ಳಿಯ ಚಪ್ಪರಗಳಲ್ಲಿಯೂ ಹೂವಿನ ಗೊಂಚಲುಗಳಲ್ಲಿಯೂ ವಿಶ್ರಮಿಸಿಕೊಳ್ಳುತ್ತಲೂ ಬಂದು
- ಚಂ|| ಎಡಱಱಿದೀವ ಕಲ್ಪತರುವೆಂದು ವನೀಪಕಕೋಟಿ ಸಂತಸಂ
- ಬಡೆ ಪೊಡೆವೊಂದಕಾಳವಿಳಯಾಶನಿಯೆಂದು ವಿರೋಧಿಗಳ್ ಮನಂ|
- ಗಿಡೆ ಬಿಯಮುಂ ಪರಾಕ್ರಮಮುಮೊಪ್ಪಿರೆ ತನ್ನೊಡವುಟ್ಟಿದರ್ ಸಮಂ
- ತೊಡವರೆ ವಾರಣಾವತಮನೆಯ್ದಿದನಮ್ಮನ ಗಂಧವಾರಣಂ|| ೯೮||
- ಪದ್ಯ-೯೮:ಪದವಿಭಾಗ-ಅರ್ಥ:ಎಡಱ ಅಱಿದು ಈವ (ಎಡರ-ಬಡತನ ನೋಡಿ ಕೊಡುವ,)ಕಲ್ಪತರುವೆಂದು ವನೀಪಕಕೋಟಿ (ಕೋಟಿ ಯಾಚಕರು) ಸಂತಸಂಬಡೆ (ಸಂತಸಪಡಲು); ಪೊಡೆವ ಒಂದು ಅಕಾಳವಿಳಯ ಅಶನಿಯೆಂದು (ಅಕಾಲದಲ್ಲಿ ಪ್ರಾಪ್ತವಾಗುವ ಪ್ರಳಯಕಾಲದ ಸಿಡಿಲೆಂದು ) ವಿರೋಧಿಗಳ್ ಮನಂಗಿಡೆ (ಮನಸ್ಸು ಕೆಡಲು) ಬಿಯಮುಂ (ವ್ಯಯವೂ??) ಪರಾಕ್ರಮಮುಂ ಒಪ್ಪಿರೆ ತನ್ನ ಒಡವುಟ್ಟಿದರ್ ಸಮಂತು (ಚೆನ್ನಾಗಿ) ಒಡವರೆ (ತನ್ನ ಒಡನೆ ಬರಲು ) ವಾರಣಾವತಮನು ಎಯ್ದಿದನು ಅಮ್ಮನ ಗಂಧವಾರಣಂ||
- ಪದ್ಯ-೯೮:ಅರ್ಥ:೯೮. ಬಡತನದ ಸ್ವರೂಪವನ್ನು ತಿಳಿದು ದಾನಮಾಡುವ ಕಲ್ಪವೃಕ್ಷವಿದೆಂದು ಯಾಚಕಸಮೂಹವು ಸಂತೋಷಪಡುವಂತಿರುವ ದಾನಗುಣವೂ ಇದೊಂದು ಅಕಾಲದಲ್ಲಿ ಪ್ರಾಪ್ತವಾಗುವ ಪ್ರಳಯಕಾಲದ ಸಿಡಿಲೆಂದು ಶತ್ರುಗಳ ಮನಸ್ಸನ್ನು ಕೆಡಿಸುವ ಪರಾಕ್ರಮವೂ ತನ್ನಲ್ಲಿ ಪ್ರಕಾಶಿಸುತ್ತಿರಲು ತನ್ನ ಸಹೋದರರು ಜೊತೆಯಲ್ಲಿಯೇ ಕೂಡಿ ಬರುತ್ತಿರಲು ಅಮ್ಮನ ಗಂಧವಾರಣನಾದ (ಮತ್ತಗಜ) ಅರ್ಜುನನು (ಅರಿಕೇಸರಿಯು) ವಾರಣಾವತವನ್ನು ಬಂದು ಸೇರಿದನು.
♦
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ದ್ವಿತೀಯಾಶ್ವಾಸಂ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಎರಡನೆಯ ಆಶ್ವಾಸವು||
♦♣♣♣♣♣♣♣♣♣♣♣♣♣♣♣♣♣♣♣♦
ॐ