ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ನವಮಾಶ್ವಾಸಂ

ಸಂಪಾದಿಸಿ
  • (XVII.IV.XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
ಅವಧಿ ಮುಗಿಸಿದ ಪಾಂಡವರಿಗೆ ಅರ್ಧರಾಜ್ಯ ಕೊಡಿಸಲು ಕೃಷ್ಣ ಸಂಧಾನ - ವಿಫಲವಾಗಿ - ಯುದ್ಧನಿರ್ಣಯ
ಕಂ|| ಶ್ರೀಗೆ ನೆಗೞ್ತೆಗೆ ವೀರ
ಶ್ರೀಗಾಗರಮಪ್ಪೆನೆಂಬ ಕಳ ಕಳ ವಿಜಯೋ|
ದ್ಯೋಗದೊಳೆ ನೆಗೞ್ವೆನೆಂಬು
ದ್ಯೋಗಿಗೆ ಮಲೆವನ್ಯನೃಪತಿಮಂಡಳಮೊಳವೇ|| ೧ ||
ಪದ್ಯ-೦೧:ಪದವಿಭಾಗ-ಅರ್ಥ:ಶ್ರೀಗೆ ನೆಗೞ್ತೆ ಗೆ ವೀರಶ್ರೀಗೆ ಆಗರಮಪ್ಪೆನೆಂಬ (ಸಿರಿಸಂಪತ್ತಿಗೆ, ಕೀರ್ತಿಗೆ, ಜಯಲಕ್ಷ್ಮಿಗೆ ಆಶ್ರಯವಾಗುತ್ತೇನೆಂಬ) ಕಳ ಕಳ ವಿಜಯೋದ್ಯೋಗದೊಳೆ (ಸಡಗರದ ವಿಜಯಪ್ರದ ಕಾರ್ಯದಲ್ಲಿ) ನೆಗೞ್ವೆನೆಂಬ ಉದ್ಯೋಗಿಗೆ (ತೊಡಗಿರುವೆನೆಂಬ ಕಾರ್ಯಶೀಲನಿಗೆ) ಮಲೆವ ಅನ್ಯನೃಪತಿಮಂಡಳಮೊಳವೇ (ಎದುರುಬೀಳುವ ಶತ್ರುರಾಜಸಮೂಹವುಂಟೇ)
ಪದ್ಯ-೦೧:ಅರ್ಥ: ಸಿರಿಸಂಪತ್ತಿಗೆ, ಕೀರ್ತಿಗೆ, ಜಯಲಕ್ಷ್ಮಿಗೆ ಆಶ್ರಯವಾಗುತ್ತೇನೆಂಬ, ಸಡಗರದ ವಿಜಯಪ್ರದ ಕಾರ್ಯದಲ್ಲಿ ತೊಡಗಿರುವೆನೆಂಬ ಕಾರ್ಯಶೀಲನಿಗೆ ಎದುರುಬೀಳುವ ಶತ್ರುರಾಜಸಮೂಹವುಂಟೇ
ಎಂದು ಜಗಜ್ಜನಮಳವನ
ಗುಂದಲೆಯಾಗಡರೆ ಬಿಡದೆ ಪೋಗೞುತ್ತಿರೆ ಕುಂ|
ದೇಂದು ಯಶಂ ರಥಂದಿಂದಿೞಿ
ತಂದೆಱಗಿದನಗ್ರಜನ್ಮ ಪದ ಸರಸಿಜದೊಳ್|| ೨
ಪದ್ಯ-೦೨:ಪದವಿಭಾಗ-ಅರ್ಥ:ಎಂದು ಜಗಜ್ಜನಂ ಅಳವಂ ಅಗುಂದಲೆಯಾಗಿ ಅಡರೆ (ಎಂದು ಲೋಕದ ಜನಗಳು, ಅವನ ಶಕ್ತಿಯನ್ನು, ಅತಿಶಯವಾಗಿ ಹೆಚ್ಚಲು) ಬಿಡದೆ ಪೋಗೞುತ್ತಿರೆ (ಒಂದೇ ಸಮನಾಗಿ ಹೊಗಳುತ್ತಿರಲು) ಕುಂದೇಂದು ಯಶಂ (ಕುಂದಪುಷ್ಪ ಮತ್ತು ಚಂದ್ರನಂತೆ ಇರುವ ಯಶಸ್ಸುಳ್ಳ ಅರ್ಜುನನು) ರಥಂದಿಂದ ಇೞಿತಂದು ಎಱಗಿದನು (ಇಳಿತಂದು ಎರಗಿದನು) ಅಗ್ರಜನ್ಮಪದ ಸರಸಿಜದೊಳ್ (ರಥದಿಂದಿಳಿದು ಬಂದು, ಮೊದಲು ಜನಿಸಿದವನ ಪದತಲ - ಅಣ್ಣನ ಪಾದಕಮಲಕ್ಕೆ ನಮಸ್ಕಾರ ಮಾಡಿದನು)
ಪದ್ಯ-೦೨:ಅರ್ಥ: ಎಂದು ಲೋಕದ ಜನಗಳು, ಅವನ ಶಕ್ತಿಯನ್ನು, ಅತಿಶಯವಾಗಿ ಹೆಚ್ಚಲು ಹಾಗೆ ಒಂದೇ ಸಮನಾಗಿ ಹೊಗಳುತ್ತಿರಲು ಕುಂದಪುಷ್ಪದಂತೆಯೂ ಚಂದ್ರನಂತೆಯೂ ಇರುವ ಯಶಸ್ಸುಳ್ಳ ಅರ್ಜುನನು, ರಥದಿಂದಿಳಿದು ಬಂದು ಅಣ್ಣನ ಪಾದಕಮಲಕ್ಕೆ ನಮಸ್ಕಾರ ಮಾಡಿದನು.
ಅಱಮಗನ ಪವನತನಯನ
ನೆರೆದಾಶೀರ್ವಚನಶತಮನಾಂತನುನಯದಿಂ|
ದೆಱಗಿದಮಳರುಮನೞ್ಕಱಿ
ನೊಱಲ್ದು ತೆಗೆದಪ್ಪಿ ಪರಸೆ ನಲ್ವರಕೆಗಳಿಂ|| ೩ ||
ಪದ್ಯ-೦೩:ಪದವಿಭಾಗ-ಅರ್ಥ:ಅಱಮಗನ(ಅರ-ಧರ್ಮ ದರ್ಮನ ಮಗ) ಪವನತನಯನ (ಭೀಮ) ನೆರೆದ ಆಶೀರ್ವಚನ ಶತಮನು ಆಂತು(ಪೂರ್ಣ ನೂರು ಆಶೀರ್ವಾದಗಳನ್ನೂ ಪಡೆದು) ಅನುನಯದಿಂ(ಪ್ರೀತಿಯಿಂದ ನಮಿಸಿದ ) ಎಱಗಿದ ಅಮಳರುಮನು ಅೞ್ಕಱಿಂ ಒಱಲ್ದು (ನಮಿಸಿದ ಅವಳಿ ನಕುಲಸಹದೇವರನ್ನು ಪ್ರೀತಿಯಿಂದ ಒಲಿದು) ತೆಗೆದಪ್ಪಿ ಪರಸೆ ನಲ್ವರಕೆಗಳಿಂ (ಅಪ್ಪಿಕೊಂಡು ಒಳ್ಳೆಯ ಹರಕೆಗಳಿಂದ ಹರಸಿದನು. )
ಪದ್ಯ-೦೩:ಅರ್ಥ:ಧರ್ಮಜನ ಮತ್ತು ಭೀಮನ ಪೂರ್ಣ ನೂರು ಆಶೀರ್ವಾದಗಳನ್ನು ಪಡೆದು, ನಮಿಸಿದ ಅವಳಿ ನಕುಲಸಹದೇವರನ್ನು ಪ್ರೀತಿಯಿಂದ ಒಲಿದು ಅಪ್ಪಿಕೊಂಡು ಒಳ್ಳೆಯ ಹರಕೆಗಳಿಂದ ಹರಸಿದನು.
ಚಲ ಚಲದಿನುಱದೆ ಪಗೆವರ
ತಲೆಗಳನರಿದಂದು ಬಂದು ಪಾಂಡುತನೂಜರ್|
ತಲೆದೋಱಿರೆ ರಾಗಮಗುಂ
ದಲೆಯುಂ ಪೊಂಪುೞಿಯಮಾಯ್ತು ಮತ್ಸ್ಯಂಗಾಗಳ್|| ೪ ||
ಪದ್ಯ-೦೪:ಪದವಿಭಾಗ-ಅರ್ಥ:ಚಲ ಚಲದಿನುಱದೆ ಪಗೆವರತಲೆಗಳನರಿದಂದು ಬಂದು ಪಾಂಡುತನೂಜರ್|ತಲೆದೋಱಿರೆ ರಾಗಮಗುಂದಲೆಯುಂ ಪೊಂಪುೞಿಯಮಾಯ್ತು ಮತ್ಸ್ಯಂಗಾಗಳ್|
ಪದ್ಯ-೦೪:ಅರ್ಥ: ೪. ಪಾಂಡವರು ಉದಾಸೀನರಾಗಿರದೆ ಹಟದಿಂದ ಶತ್ರುಗಳ ತಲೆಗಳನ್ನು ಕತ್ತರಿಸಿ ಅಂದು ಕಾಣಿಸಿಕೊಳ್ಳಲು ವಿರಾಟರಾಜನಿಗೆ ಅತ್ಯತಿಶಯವಾದ ಸಂತೋಷವುಂಟಾಯಿತು.
ಮ|| ಗುಡಿಯಂ ಕಟ್ಟಿಸಿ ಪೊಯ್ಸಿ ಬದ್ದವಣಮಂ ಪ್ರಾಣಕ್ಕಮರ್ಥಕ್ಕಮಿ
ನ್ನೆಡರೇನೇತರೊಳೊಪ್ಪುದೆಂದು ಕುರುಡಂ ಕಣ್ಬೆತ್ತವೋಲ್ ರಾಗದಿಂ|
ದೊಡೆಯಂತಾಂ ಬಗೆದುಳ್ಳ ಸಾರ ಧನಮಂ ಮುಂದಿಟ್ಟತಿ ಪ್ರೀತಿಯಂ
ಪಡೆದಂ ಮತ್ಸ್ಯಮಹೇಶನಂದು ಮನದೊಳ್ ತತ್ಪಾಂಡುಪುತ್ರರ್ಕಳಾ|| ೫ ||
ಪದ್ಯ-೦೫:ಪದವಿಭಾಗ-ಅರ್ಥ:ಗುಡಿಯಂ ಕಟ್ಟಿಸಿ ಪೊಯ್ಸಿ ಬದ್ದವಣಮಂ (ಬಾವುಟಗಳನ್ನು ಕಟ್ಟಿಸಿ, ಮಂಗಳವಾದ್ಯಗಳನ್ನು ನುಡಿಸಿ,) ಪ್ರಾಣಕ್ಕಂ ಅರ್ಥಕ್ಕಂ ಇನ್ನು ಎಡರೇನು ಏತರೊಳ್ ಅಪ್ಪುದು ಎಂದು (ನನ್ನ ಪ್ರಾಣಕ್ಕೂ ಐಶ್ವರ್ಯಕ್ಕೂ ಇನ್ನು ಯಾವುದರಿಂದಲೂ ವಿಘ್ನವುಂಟಾಗುವುದಿಲ್ಲ ಎಂದು ಭಾವಿಸಿ) ಕುರುಡಂ ಕಣ್ಬೆತ್ತವೋಲ್ (ಕುರುಡನು ಕಣ್ಣನ್ನು ಪಡೆದ ಹಾಗೆ) ರಾಗದಿಂದೆ ಒಡೆಯಂ ತಾಂ (ಕುರುಡನು ಕಣ್ಣನ್ನು ಪಡೆದ ಹಾಗೆ ವಿರಾಟನು) ಬಗೆದುಳ್ಳ ಸಾರ ಧನಮಂ ಮುಂದಿಟ್ಟು (ತನ್ನಲ್ಲಿದ್ದ ಉತ್ತಮವಾದ ಐಶ್ವರ್ಯವನ್ನೆಲ್ಲ ಪಾಂಡವರ ಮುಂದಿಟ್ಟು) ಅತಿ ಪ್ರೀತಿಯಂ ಪಡೆದಂ ಮತ್ಸ್ಯಮಹೇಶನು ಅಂದು ಮನದೊಳ್ (ವಿರಾಟನು ) ತತ್ ಪಾಂಡುಪುತ್ರರ್ಕಳಾ ( ಆ ಪಾಂಡುಪತ್ರರ ಮನಸ್ಸಿನಲ್ಲಿ ಅತ್ಯಂತ ಸಂತೋಷವನ್ನುಂಟುಮಾಡಿದನು.)|
ಪದ್ಯ-೦೫:ಅರ್ಥ: ಬಾವುಟಗಳನ್ನು ಕಟ್ಟಿಸಿ, ಮಂಗಳವಾದ್ಯಗಳನ್ನು ನುಡಿಸಿ, ನನ್ನ ಪ್ರಾಣಕ್ಕೂ ಐಶ್ವರ್ಯಕ್ಕೂ ಇನ್ನು ಯಾವುದರಿಂದಲೂ ವಿಘ್ನವುಂಟಾಗುವುದಿಲ್ಲ ಎಂದು ಭಾವಿಸಿ ಕುರುಡನು ಕಣ್ಣನ್ನು ಪಡೆದ ಹಾಗೆ ವಿರಾಟನು ಸಂತೋಷಿಸಿದನು. ತನ್ನಲ್ಲಿದ್ದ ಸಾರವತ್ತಾದ ಐಶ್ವರ್ಯವನ್ನೆಲ್ಲ ಪಾಂಡವರ ಮುಂದಿಟ್ಟು ಆ ಪಾಂಡುಪತ್ರರ ಮನಸ್ಸಿನಲ್ಲಿ ಅತ್ಯಂತ ಸಂತೋಷವನ್ನುಂಟುಮಾಡಿದನು.
ಉ|| ಕೇಳಿರೆ ಕಂಕಭಟ್ಟನೆ ಯುಷ್ಠಿರನಾ ವಲಲಂ ವೃಕೋದರಂ
ಬಾಳೆಯರಂ ದಲಾಡಿಪ ಬೃಹಂದಳೆ ಫಲ್ಗುಣನಂಕದಶ್ವ ಗೋ|
ಪಾಳಕರೆಂಬರಾ ನಕುಳನುಂ ಸಹದೇವನುಮಾದರೇಂ ಮಹೀ
ಪಾಳರೊಳಾದ ಕಾರ್ಯಗತಿಗಳ್ ಬಗೆಯಲ್ಕೆ ಬಹು ಪ್ರಕಾರಮೋ|| ೬ ||
ಪದ್ಯ-೦೬:ಪದವಿಭಾಗ-ಅರ್ಥ:ಕೇಳಿರೆ ಕಂಕಭಟ್ಟನೆ ಯುಷ್ಠಿರನು ಆ ವಲಲಂ ವೃಕೋದರಂ (ಕಂಕಭಟ್ಟನೇ ಧರ್ಮರಾಜನು. ವಲಲನು ಭೀಮಸೇನ,) ಬಾಳೆಯರಂ ದಲ್ ಆಡಿಪ ಬೃಹಂದಳೆ ಫಲ್ಗುಣನು (ಬಾಲಕಿಯರನ್ನು ಆಡಿಸುವ ಬೃಹಂದಳೆಯು ನಿಜಕ್ಕೂ ಅರ್ಜುನ.) ಅಂಕದ ಅಶ್ವ ಗೋಪಾಳಕರೆಂಬರು ಆ ನಕುಳನುಂ ಸಹದೇವನುಂ ಆದರು(ಕುದುರೆ ಮತ್ತು ಗೋವುಗಳ ಪಾಲಕರಾದವರು ಪ್ರಸಿದ್ಧರಾದ ನಕುಲ ಮತ್ತು ಸಹದೇವರುಗಳಾಗಿದ್ದಾರೆ.) ಏಂ-> ಮಹೀಪಾಳರೊಳು ಆದ ಕಾರ್ಯಗತಿಗಳ್ ಬಗೆಯಲ್ಕೆ(ಈ ರಾಜರುಗಳ ಜೀವನದಲ್ಲಿ ಆದ ಘಟನೆಗಳ ಪರಿಣಾಮವನ್ನು ಯೋಚನೆ ಮಾಡಿದರೆ,) ಬಹು ಪ್ರಕಾರಮೋ (ಏನು ಬಹಳ ವಿಚಿತ್ರಪ್ರಕಾರದ ಘಟನೆಗಳೊ!)
ಪದ್ಯ-೦೬:ಅರ್ಥ:(ಜನರ ಮಾತುಗಳು)ಕೇಳಿ- ಕೇಳಿರಯ್ಯಾ, ಕಂಕಭಟ್ಟನೇ ಧರ್ಮರಾಜನು. ವಲಲನು ಭೀಮಸೇನ, ಬಾಲಕಿಯರನ್ನು ಆಡಿಸುವ ಬೃಹಂದಳೆಯು ನಿಜಕ್ಕೂ ಅರ್ಜುನ. ಕುದುರೆ ಮತ್ತು ಗೋವುಗಳ ಪಾಲಕರಾದವರು ಪ್ರಸಿದ್ಧರಾದ ನಕುಲ ಮತ್ತು ಸಹದೇವರುಗಳಾಗಿದ್ದಾರೆ. ಈ ರಾಜರುಗಳಲ್ಲಿ ಆದ ಕಾರ್ಯಗಳ ಪರಿಣಾಮವನ್ನು ಯೋಚನೆ ಮಾಡುವುದಾದರೆ ಏನು ಬಹಳ ವಿಚಿತ್ರಪ್ರಕಾರದ ಘಟನೆಗಳೊ!?
ವ|| ಎಂಬ ಪುರಜನಾಳಾಪಂಗಳ್ ನೆಗೞೆ ವಿರಾಟನ ಮಹಾದೇವಿ ಸುದೇಷ್ಣೆ ಕೃಷ್ಣೆಗಾಗಳೆಱಗಿ ಪೊಡೆವಡೆ ಧರ್ಮತನೂಜಂಗೆ ವಿರಾಟನವನತಮಣಿಮಕುಟನಿಂತೆಂದು ಬಿನ್ನಪಂಗೆಯ್ದಂ-
ವಚನ:ಪದವಿಭಾಗ-ಅರ್ಥ:ಎಂಬ ಪುರಜನಾಳಾಪಂಗಳ್ ನೆಗೞೆ (ಹೆಚ್ಚಾಗಿರಲು)ವಿರಾಟನ ಮಹಾದೇವಿ ಸುದೇಷ್ಣೆ ಕೃಷ್ಣೆಗೆ ಆಗಳ್ ಎಱಗಿ ಪೊಡೆವಡೆ (ದ್ರೌಪದಿಗೆ ಆಗ ಬಗ್ಗಿ ನಮಸ್ಕಾರ ಮಾಡಿದಳು), ಧರ್ಮತನೂಜಂಗೆ ವಿರಾಟನು ಅವನತಮಣಿಮಕುಟನು ಇಂತೆಂದು ಬಿನ್ನಪಂಗೆಯ್ದಂ (ಧರ್ಮಜನಿಗೆ ವಿರಾಟನು ಬಗ್ಗಿದ ಕಿರೀಟವುಳ್ಳವನಾಗಿ ಎಂದರೆ ನಮಸ್ಕರಿಸಿ ಹೀಗೆಂದು ವಿಜ್ಞಾಪನೆ ಮಾಡಿದನು-)-
ವಚನ:ಅರ್ಥ:ಎಂಬ ಪುರಜನರ ಮಾತುಗಳು ಎಲ್ಲೆಡೆ ಕೇಳಲು, ವಿರಾಟನ ಮಹಾರಾಣಿ ಸುದೇಷ್ಣೆಯು ದ್ರೌಪದಿಗೆ ಬಗ್ಗಿ ನಮಸ್ಕಾರ ಮಾಡಿದಳು.ಧರ್ಮಜನಿಗೆ ವಿರಾಟನು ಬಗ್ಗಿದ ಕಿರೀಟವುಳ್ಳವನಾಗಿ ಎಂದರೆ ನಮಸ್ಕರಿಸಿ ಹೀಗೆಂದು ವಿಜ್ಞಾಪನೆ ಮಾಡಿದನು.
ಚಂ|| ಇರದುೞಿದಾವ ಮಂಡಲದೊಳಂ ನೃಪ ನೀಂ ದಯೆಯಿಂದಮಿಲ್ಲಿ ಬಂ
ದಿರೆ ದೊರೆವೆತ್ತುದನ್ನ ಮೆರೆವಾಳ್ವೆಸನೆನ್ನ ತನೂಜೆಗಂಕದು|
ತ್ತರೆಗೆ ವಿವಾಹಮಂಗಳಮನಿನ್ನಭಿಮನ್ಯುಗೆ ಮಾೞ್ಪುದುತ್ತರೋ
ತ್ತರಮೆನೆ ಮಾಡು ನಿನ್ನ ದಯೆಯಿಂ ಮೆರೆವೆಂ ಯಮರಾಜನಂದನಾ|| ೭ ||
ಪದ್ಯ-೭:ಪದವಿಭಾಗ-ಅರ್ಥ:ಇರದೆ ಉೞಿದಾವ ಮಂಡಲದೊಳಂ ನೃಪ ನೀಂ ದಯೆಯಿಂದಂ ಇಲ್ಲಿ ಬಂದಿರೆ ದೊರೆವೆತ್ತುದು (ನೀವು ಬೇರೆ ದೇಶದಲ್ಲಿ ತಂಗದೆ ಕೃಪೆಯಿಂದ ಇಲ್ಲಿಗೆ ಬಂದು ಇರುವುದು ಒಳ್ಳೆಯದಾಯಿತು) ಎನ್ನ ಮೆರೆವ ಆಳ್ವೆಸನಂ (ನನ್ನ ಉತ್ತಮ ಸೇವೆಗೆ); ಎನ್ನ ತನೂಜೆಗೆ ಅಂಕದ ಉತ್ತರೆಗೆ ವಿವಾಹಮಂಗಳಮನು (ಉತ್ತಮಕನ್ಯೆ ನನ್ನ ಮಗಳು ಉತ್ತರೆಗೆ ಮದುವೆಯ ಮಂಗಳಕಾರ್ಯವನ್ನು) ಇನ್ನು ಅಭಿಮನ್ಯುಗೆ ಮಾೞ್ಪುದು ಉತ್ತರೋತ್ತರಮೆನೆ ಮಾಡು(ಅಭಿಮನ್ಯುವಿನೊಡನೆ ಉತ್ತರೋತ್ತರಾಭಿವೃದ್ಧಿಯಾಗುವ ಹಾಗೆ ಮಾಡುವುದು) ನಿನ್ನ ದಯೆಯಿಂ ಮೆರೆವೆಂ ಯಮರಾಜನಂದನಾ (ಧರ್ಮರಾಜನೇ ನಿನ್ನ ದಯೆಯಿಂದ ನಾನು ಪ್ರಸಿದ್ಧಿಪಡೆಯುತ್ತೇನೆ.)
ಪದ್ಯ-೭:ಅರ್ಥ: ಧರ್ಮರಾಜನೇ ನೀವು ಬೇರೆ ದೇಶದಲ್ಲಿ ತಂಗದೆ ಕೃಪೆಯಿಂದ ಇಲ್ಲಿಗೆ ಬಂದು ಇರುವುದು ಒಳ್ಳೆಯದಾಯಿತು. ಉತ್ತಮಕನ್ಯೆ ನನ್ನ ಮಗಳು ಉತ್ತರೆಗೆ ನಿನ್ನ ಮಗನಾದ ಅಭಿಮನ್ಯುವಿನೊಡನೆ ಉತ್ತರೋತ್ತರಾಭಿವೃದ್ಧಿಯಾಗುವ ಹಾಗೆ ಮದುವೆಯ ಮಂಗಳಕಾರ್ಯವನ್ನು ಮಾಡುವುದು. ನಿನ್ನ ದಯೆಯಿಂದ ನಾನು ಪ್ರಸಿದ್ಧಿಪಡೆಯುತ್ತೇನೆ.
ವ|| ಎಂಬುದುಮಂತೆಗೆಯ್ವೆಂ ನಿಮ್ಮೆಮ್ಮ ನಣ್ಪುಗಳೀಗಳಾದುವಲ್ಲ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದವ್ಯವಚ್ಛಿನ್ನಮಾಗಿ ಬಂದುವು ನಿನ್ನ ದೊರೆಯ ನಂಟನುಮನೆಲ್ಲಿ ಪಡೆವೆನೆಂದು ವಿರಾಟನಂ ಸಂತಸಂಬಡೆ ನುಡಿದು ಚಾಣೂರಾರಿಯಂ ಸುಭದ್ರೆಯುಮನಭಿಮನ್ಯುವುಮನೊಡ ಗೊಂಡು ಬರ್ಪುದೆಂದು ಬೞಿಯನಟ್ಟಿ ಬರವಱಿದು ಪಾಂಡವರಯ್ವರುಂ ವಿರಾಟ ಸಮೇತಮಿದಿರ್ವೋಗಿ ಕಂಡಾಗಳ್-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಂತೆಗೆಯ್ವೆಂ (ಎನ್ನಲು ಹಾಗೆಯೇ ಮಾಡುತ್ತೇನೆ.) ನಿಮ್ಮ ಎಮ್ಮ ನಣ್ಪುಗಳು ಈಗಳಾದುವಲ್ಲ ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದು ಅವ್ಯವಚ್ಛಿನ್ನಮಾಗಿ ಬಂದಿರುವುವು (ನಿಮ್ಮ ನಮ್ಮ ಸ್ನೇಹ ಸಂಬಂಧಗಳು ಈಗ ಆದುವಲ್ಲ. ಹಿರಣ್ಯಗರ್ಭಬ್ರಹ್ಮನಿಂದ ಹಿಡಿದು ಎಡಬಿಡದೆ ಏಕಪ್ರಕಾರವಾಗಿ ಬಂದವು.) ನಿನ್ನ ದೊರೆಯ ನಂಟನುಮನು ಎಲ್ಲಿ ಪಡೆವೆನು ಎಂದು (ನಿನಗೆ ಸಮಾನವಾದ ಬಂಧುವನ್ನು ನಾನೆಲ್ಲಿ ಪಡೆಯಲು ಸಾಧ್ಯ? ಎಂದು) ವಿರಾಟನಂ ಸಂತಸಂಬಡೆ ನುಡಿದು (ಎಂದು ವಿರಾಟನಿಗೆ ಸಂತೋಷವಾಗುವಂತೆ ಮಾತನಾಡಿ) ಚಾಣೂರಾರಿಯಂ ಸುಭದ್ರೆಯುಮನು ಅಭಿಮನ್ಯುವುಮನೊಡಗೊಂಡು ಬರ್ಪುದೆಂದು(ಶ್ರೀಕೃಷ್ಣನಿಗೆ ಸುಭದ್ರೆಯನ್ನೂ ಅಭಿಮನ್ಯುವನ್ನೂ ಜೊತೆಯಲ್ಲಿ ಕರೆದುಕೊಂಡು ಬರಬೇಕು ಎಂದು) ಬೞಿಯನಟ್ಟಿ (ದೂತರನ್ನು ಕಳಿಸಿ)ಬರವಱಿದು (ಸಮಾಚಾರವನ್ನು ದೂತರ ಮೂಲಕ ಕಳುಹಿಸಿದರು), ಪಾಂಡವರು ಅಯ್ವರುಂ ವಿರಾಟ ಸಮೇತಂ ಎದಿರ್ ಹೋಗಿ ಕಂಡಾಗಳ್ (ಅವರ ಬರುವಿಕೆಯನ್ನು ತಿಳಿದು ಪಾಂಡವರೈದುಮಂದಿಯೂ ವಿರಾಟನೊಡಗೊಂಡು ಎದುರಾಗಿ ಹೋಗಿ ಕಂಡರು.)ಆಗ-
ವಚನ:ಅರ್ಥ:ಎನ್ನಲು ಹಾಗೆಯೇ ಮಾಡುತ್ತೇನೆ. ನಿಮ್ಮ ನಮ್ಮ ಸ್ನೇಹ ಸಂಬಂಧಗಳು ಈಗ ಆದುವಲ್ಲ. ಹಿರಣ್ಯಗರ್ಭಬ್ರಹ್ಮನಿಂದ ಹಿಡಿದು ಎಡಬಿಡದೆ ಏಕಪ್ರಕಾರವಾಗಿ ಬಂದಿರುವುವು. ನಿನಗೆ ಸಮಾನವಾದ ಬಂಧುವನ್ನು ನಾನೆಲ್ಲಿ ಪಡೆಯಲು ಸಾಧ್ಯ? ಎಂದು ವಿರಾಟನಿಗೆ ಸಂತೋಷವಾಗುವಂತೆ ಮಾತನಾಡಿ ಶ್ರೀಕೃಷ್ಣನಿಗೆ ಸುಭದ್ರೆಯನ್ನೂ ಅಭಿಮನ್ಯುವನ್ನೂ ಜೊತೆಯಲ್ಲಿ ಕರೆದುಕೊಂಡು ಬರಬೇಕು ಎಂದು ಸಮಾಚಾರವನ್ನು ದೂತರ ಮೂಲಕ ಕಳುಹಿಸಿದರು. ಅವರ ಬರುವಿಕೆಯನ್ನು ತಿಳಿದು ಪಾಂಡವರೈದುಮಂದಿಯೂ ವಿರಾಟನೊಡಗೊಂಡು ಎದುರಾಗಿ ಹೋಗಿ ಕಂಡರು.
ಚಂ|| ಮುರರಿಪು ಧರ್ಮನಂದನ ಪದಾಬ್ಜಯುಗಕ್ಕೆ ಮರುತ್ಸುತಾದಿಗಳ್
ಹರಿ ಚರಣಾಂಬುಜಕ್ಕೆಱಗೆಯುತ್ಸವದಿಂದಭಿಮನ್ಯು ತಮ್ಮುತೈ|
ವರ ಲಲಿತಾಂಘ್ರಿ ಪದ್ಮನಿವಹಕ್ಕೆಱಗುತ್ತಿರೆ ತನ್ಮುಖಾಬ್ಜದೊಳ್
ಪರಕೆಗಳುಣ್ಮಿ ಪೊಣ್ಮಿದುವು ಪಂಕಜದಿಂ ಮಕರಂದದಂತೆವೋಲ್|| ೮ ||
ಪದ್ಯ-೮:ಪದವಿಭಾಗ-ಅರ್ಥ:ಮುರರಿಪು ಧರ್ಮನಂದನ ಪದಾಬ್ಜಯುಗಕ್ಕೆ (ಕೃಷ್ಣನು ಧರ್ಮರಾಜನ ಪಾದಯುಗಳಗಳಿಗೂ) ಮರುತ್ಸುತಾದಿಗಳ್ ಹರಿ ಚರಣಾಂಬುಜಕ್ಕೆ (ಭೀಮಸೇನಾದಿಗಳು ಕೃಷ್ಣನ ಪಾದಕಮಲಕ್ಕೂ) ಎಱಗೆ (ನಮಸ್ಕಾರಮಾಡಲು,) ಉತ್ಸವದಿಂದ ಅಭಿಮನ್ಯು ತಮ್ಮುತೈವರ (ತಾವು -ಅಯ್ವರ) ಲಲಿತಾಂಘ್ರಿ ಪದ್ಮನಿವಹಕ್ಕೆ ಎಱಗುತ್ತಿರೆ (ಸಂತೋಷದಿಂದ ಅಭಿಮನ್ಯುವು ಆ ಅಯ್ದುಜನರ ಮನೋಹರವಾದ ಪಾದಕಮಲಗಳಿಗೆ ನಮಸ್ಕಾರಮಾಡಲು) ತನ್ ಮುಖಾಬ್ಜದೊಳ್ ಪರಕೆಗಳು (ಮುಖಕಮಲದಲ್ಲಿ ಕಮಲದಿಂದ ಹರಕೆಗಳು) ಉಣ್ಮಿ ಪೊಣ್ಮಿದುವು (ಉಕ್ಕಿ ಚಿಮ್ಮಿದುವು.) ಪಂಕಜದಿಂ ಮಕರಂದದಂತೆವೋಲ್(ಕಮಲದಿಂದ ಮಕರಂದದಂತೆ) (ಅವರ ಮುಖಕಮಲದಲ್ಲಿ ಕಮಲದಿಂದ ಮಕರಂದವು ಉಕ್ಕಿ ಹರಿಯುವಂತೆ ಹರಕೆಗಳು ಉಕ್ಕಿ ಹೊರಹೊಮ್ಮಿದುವು.)
ಪದ್ಯ-೮:ಅರ್ಥ: ಕೃಷ್ಣನು ಧರ್ಮರಾಜನ ಪಾದಯುಗಳಗಳಿಗೂ ಭೀಮಸೇನಾದಿಗಳು ಕೃಷ್ಣನ ಪಾದಕಮಲಕ್ಕೂ ನಮಸ್ಕಾರಮಾಡಿದರು. ಸಂತೋಷದಿಂದ ಅಭಿಮನ್ಯುವು ಆ ಅಯ್ದುಜನರ ಮನೋಹರವಾದ ಪಾದಕಮಲಗಳಿಗೆ ನಮಸ್ಕಾರಮಾಡಿದನು. ಅವರ ಮುಖಕಮಲದಲ್ಲಿ ಕಮಲದಿಂದ ಮಕರಂದವು ಉಕ್ಕಿ ಹರಿಯುವಂತೆ ಹರಕೆಗಳು ಉಕ್ಕಿ ಹೊರಹೊಮ್ಮಿದುವು.
ವ|| ಅಂತು ಮಂದರಧರನುಂ ತಾಮುಮೊಂದೊರ್ವರನಗಲ್ದಿಂ ಬೞಿಯಮಾದ ಸುಖದುಃಖಗಳನನ್ಯೋನ್ಯನಿವೇದನಂಗೆಯ್ದಾನಂದದಿಂ ಪೊೞಲಂ ಪೊಕ್ಕು ಮಜ್ಜನ ಭೋಜನಾದಿಗಳಿಂದಮಪಗತಪರಿಶ್ರಮನಂ ಮಾಡಿ ಮುರಾಂತಕನನಂತಕನಂದನನಭಿಮನ್ಯು ವಿವಾಹಕಾರ್ಯ ಪರ್ಯಾಲೋಚನೆಯೊಳೊಡಂಬಡಿಸಿ ಶುಭಲಗ್ನೋದಯದೊಳ್-
ವಚನ:ಪದವಿಭಾಗ-ಅರ್ಥ:ಅಂತು ಮಂದರಧರನುಂ (ಶ್ರೀಕೃಷ್ಣನೂ) ತಾಮುಂ ಒಂದೊರ್ವರಂ ಅಗಲ್ದಿಂ (ತಾವು ಒಬ್ಬರನ್ನೊಬ್ಬರು ಅಗಲಿದ ) ಬೞಿಯಂ ಆದ ಸುಖದುಃಖಗಳನು ಅನ್ಯೋನ್ಯ ನಿವೇದನಂಗೆಯ್ದು ಆನಂದದಿಂ ಪೊೞಲಂ ಪೊಕ್ಕು (ಪುರವನ್ನು ಪ್ರವೇಶಮಾಡಿದರು.) ಮಜ್ಜನ ಭೋಜನಾದಿಗಳಿಂದಂ ಅಪಗತಪರಿಶ್ರಮನಂ ಮಾಡಿ (ಸ್ನಾನ ಊಟಾದಿಗಳ ನಂತರ ಪ್ರಯಾಣ ಆಯಾಸ ಪರಿಹರಿಸಿಕೊಂಡು) ಮುರಾಂತಕನನು ಅಂತಕನಂದನನು ಅಭಿಮನ್ಯು ವಿವಾಹಕಾರ್ಯ ಪರ್ಯಾಲೋಚನೆಯೊಳು ಒಡಂಬಡಿಸಿ (ಧರ್ಮರಾಜನು ಕೃಷ್ಣನೊಡನೆ ಅಭಿಮನ್ಯುವಿನ ಮದುವೆಯ ವಿಚಾರವಾಗಿ ಆಲೋಚನೆ ಮಾಡಿ ಅವನನ್ನು ಒಪ್ಪಿಸಿದನು) ಶುಭಲಗ್ನೋದಯದೊಳ್-(ಶುಭ ಮುಹೂರ್ತದ ಉದಯದಲ್ಲಿ )
ವಚನ:ಅರ್ಥ:ಹಾಗೆ ಶ್ರೀಕೃಷ್ಣನೂ ತಾವು ಒಬ್ಬರನ್ನೊಬ್ಬರು ಅಗಲಿದ ಬಳಿಕ ಆದ ಸುಖದುಖಗಳನ್ನು ಪರಸ್ಪರ ತಿಳಿಯಪಡಿಸಿ ಸಂತೋಷದಿಂದ ಪುರವನ್ನು ಪ್ರವೇಶಮಾಡಿದರು. ಧರ್ಮರಾಜನು ಕೃಷ್ಣನೊಡನೆ ಅಭಿಮನ್ಯುವಿನ ಮದುವೆಯ ವಿಚಾರವಾಗಿ ಆಲೋಚನೆ ಮಾಡಿ ಅವನನ್ನು ಒಪ್ಪಿಸಿದನು. ಶುಭ ಮುಹೂರ್ತದ ಉದಯದಲ್ಲಿ
ಉ|| ವಾರಿಧಿಘೋಷದಂತೆಸೆವ ಮಂಗಳತೂರ್ಯರವಂಗಳಿಂ ಬಿಯಂ
ಮೇರುವ ಪೊನ್ನಣಂ ನೆರೆಯದೆಂಬಿನಮಿಟ್ಟಳಮಾಗೆ ವಾರನಾ|
ರೀ ರಮಣೀಯ ನೃತ್ತಮಮರುತ್ತಿರೆ ಸಂದ ವಿರಾಟನೆಂದು ಕೆ
ಯ್ಯೀರೆರೆದೀಯೆ ಗೆಯ್ದರಭಿಮನ್ಯುಗಮುತ್ತರೆಗಂ ವಿವಾಹಮಂ|| ೯
ಪದ್ಯ-೯:ಪದವಿಭಾಗ-ಅರ್ಥ:ವಾರಿಧಿಘೋಷದಂತೆ ಎಸೆವ (ಕಡಲ ಮೊರೆಯಂತೆ ಘೋಷಿಸುತ್ತಿರಲು) ಮಂಗಳತೂರ್ಯರವಂಗಳಿಂ (ಮಂಗಳವಾದ್ಯಗಳಿಂದ) ಬಿಯಂ ಮೇರುವ ಪೊನ್ನಣಂ ನೆರೆಯದು(ದಾನಮಾಡಿದ ಸುವರ್ಣಕ್ಕೆ (ದಕ್ಷಿಣೆ) ಮೇರುಪರ್ವತವೂ ಸಮಾನವಾಗಲಾರದು ) ಎಂಬಿನಂ ಇಟ್ಟಳಮಾಗೆ (ಎನ್ನುವಷ್ಟು ಅತಿಶಯವಾಗಿರಲು ) ವಾರನಾರೀ ರಮಣೀಯ ನೃತ್ತಮಮರುತ್ತಿರೆ (ವೇಶ್ಯಸ್ತ್ರೀಯರ ಮನೋಹರವಾದ ನೃತ್ಯವು ರಮಣೀಯವಾಗಿರಲು ) ಸಂದ ವಿರಾಟನೆಂದು ಕಯ್ಯೀರೆರೆದು ಈಯೆ (ಪ್ರಸಿದ್ಧನಾದ ವಿರಾಟಮಹಾರಾಜನು ಕೈನೀರೆರೆದು / ಧಾರಾಜಲವನ್ನೆರೆದು ಕನ್ಯಾದಾನಮಾಡಲು) ಗೆಯ್ದರು ಅಭಿಮನ್ಯುಗಂ ಉತ್ತರೆಗಂ ವಿವಾಹಮಂ (ಉತ್ತರೆಗೂ ಅಭಿಮನ್ಯುವಿಗೂ ಮದುವೆಯನ್ನು ಮಾಡಿದರು.)
ಪದ್ಯ-೯:ಅರ್ಥ: ಮಂಗಳವಾದ್ಯವು ಕಡಲ ಮೊರೆಯಂತೆ ಮೊಳಗುತ್ತಿರಲು ದಾನಮಾಡಿದ ಸುವರ್ಣಕ್ಕೆ (ದಕ್ಷಿಣೆ) ಮೇರುಪರ್ವತವೂ ಸಮಾನವಾಗಲಾರದು ಎನ್ನುವಷ್ಟು ಅತಿಶಯವಾಗಿರಲು, ವೇಶ್ಯಸ್ತ್ರೀಯರ ಮನೋಹರವಾದ ನೃತ್ಯವು ರಮಣೀಯವಾಗಿರಲು ಪ್ರಸಿದ್ಧನಾದ ವಿರಾಟಮಹಾರಾಜನು ಕೈನೀರೆರೆದು / ಧಾರಾಜಲವನ್ನೆರೆದು ಕನ್ಯಾದಾನಮಾಡಲು ಉತ್ತರೆಗೂ ಅಭಿಮನ್ಯುವಿಗೂ ಮದುವೆಯನ್ನು ಮಾಡಿದರು..
ವ|| ಅಂತಾ ವೀರನಂ ವೀರಶ್ರೀಯೊಳ್ ನೆರಪುವಂತುತ್ತರೆಯೊಳ್ ನೆರಪಿ ಕಂಸಧ್ವಂಸಿಯಂ ದ್ವಾರಾವತಿಗೆ ಕಳಿಪಿ-
ವಚನ:ಪದವಿಭಾಗ-ಅರ್ಥ:ಅಂತಾ ವೀರನಂ ವೀರಶ್ರೀಯೊಳ್ ನೆರಪುವಂತೆ ಉತ್ತರೆಯೊಳ್ ನೆರಪಿ (ಕೂಡಿಸುವಂತೆ ಅಭಿಮನ್ಯುವನ್ನು ಉತ್ತರೆಯಲ್ಲಿ ಕೂಡಿಸಿ) ಕಂಸಧ್ವಂಸಿಯಂ ದ್ವಾರಾವತಿಗೆ ಕಳಿಪಿ ( ಶ್ರೀಕೃಷ್ಣನನ್ನು ದ್ವಾರಕಾಪಟ್ಟಣಕ್ಕೆ ಕಳುಹಿಸಿದನು)-
ವಚನ:ಅರ್ಥ:ಆ ವೀರನನ್ನು ವೀರಲಕ್ಷ್ಮಿಯನ್ನು ಕೂಡಿಸುವಂತೆ ಅಭಿಮನ್ಯುವನ್ನು ಉತ್ತರೆಯಲ್ಲಿ ಕೂಡಿಸಿ ಶ್ರೀಕೃಷ್ಣನನ್ನು ದ್ವಾರಕಾಪಟ್ಟಣಕ್ಕೆ ಕಳುಹಿಸಿದನು.
ಮ|| ಮಲೆಪರ್ ಮಂಡಳಿಕರ್ ಕಱುಂಬರದಟರ್ ವೀರರ್ಕಳುಂ ತಮ್ಮ ಬಾ
ೞ್ದಲೆಯಂ ಬೇಡಿದ ವಸ್ತುವಾಹನಮುಮಂ ಮುಂದಿಟ್ಟು ಮೂವಿಟ್ಟಿಯೊ|
ಕ್ಕಲವೋಲಿಂ ಬೆಸಕೆಯ್ಯೆ ಸಂತಮಿರುತುಂ ಕುಂತೀಸುತರ್ ತಮ್ಮ ತೋ
ಳ್ವಲಮಂ ನಚ್ಚರೆ ದಾಯಿಗರ್ ಧರೆಯನಾಳ್ದಂದೞ್ದರೆಂಬೇವದಿಂ|| ೧೦||
ಪದ್ಯ-೦೦:ಪದವಿಭಾಗ-ಅರ್ಥ:ಮಲೆಪರ್ ಮಂಡಳಿಕರ್ ಕಱುಂಬರ್ ಅದಟರ್ (ಎದುರುಬೀಳಬಲ್ಲ ಸಾಮಂತರೂ, ಅಸೂಯಾಪರ ರಾಜರೂ, ಪರಾಕ್ರಮಶಾಲಿಗಳೂ) ವೀರರ್ಕಳುಂ ತಮ್ಮ ಬಾೞ್ದಲೆಯಂ ಬೇಡಿದ ವಸ್ತುವಾಹನಮುಮಂ ಮುಂದಿಟ್ಟು (ತಮ್ಮ ಜೀವವನ್ನೂ, ಕೇಳಿದ ಎಲ್ಲ ವಸ್ತು ಸಮೂಹಗಳನ್ನೂ ಪಾಂಡವರ ಮುಂದಿಟ್ಟು) ಮೂವಿಟ್ಟಿಯ ಒಕ್ಕಲವೋಲಿಂ ಬೆಸಕೆಯ್ಯೆ ಸಂತಮಿರುತುಂ ಕುಂತೀಸುತರ್ (ಮೂರು ಬಗೆಯಾದ ಬಿಟ್ಟಿಸೇವೆಯನ್ನು ಮಾಡುವ ಜನರಂತೆ ಆಜ್ಞಾಧಾರಿಗಳಾಗಿದ್ದು, ಕ್ಷೇಮವಾಗಿದ್ದರೂ,) ತಮ್ಮ ತೋಳ್ವಲಮಂ ನಚ್ಚರೆ (ತಮ್ಮ ಬಾಹುಬಲವನ್ನೇ ನೆಚ್ಚದಂತಿದ್ದರು) ದಾಯಿಗರ್ ಧರೆಯನಾಳ್ದಂದು ಅೞ್ದರ್ ಎಂಬ ಏವದಿಂ (ತಮ್ಮ ದಾಯಿಗರಾದ ಕೌರವರು ತಮ್ಮ ರಾಜ್ಯವನ್ನು ಅಪಹರಿಸಿ ಅಳ್ದರು-ಮುಳುಗಿಸಿದರು ಎಂಬ ದುಃಖದಿಂದಿದ್ದರು)
ಪದ್ಯ-೦೦:ಅರ್ಥ:ಎದುರುಬೀಳಬಲ್ಲ ಸಾಮಂತರೂ, ಅಸೂಯಾಪರ ರಾಜರೂ, ಪರಾಕ್ರಮಶಾಲಿಗಳೂ, ವೀರರೂ, ತಮ್ಮ ಜೀವವನ್ನೂ, ಕೇಳಿದ ಎಲ್ಲ ವಸ್ತು ಸಮೂಹಗಳನ್ನೂ ಪಾಂಡವರ ಮುಂದಿಟ್ಟು ಮೂರು ಬಗೆಯಾದ ಬಿಟ್ಟಿಸೇವೆಯನ್ನು ಮಾಡುವ ಜನರಂತೆ ಆಜ್ಞಾಧಾರಿಗಳಾಗಿದ್ದರೂ, ತಮ್ಮ ಬಾಹುಬಲವನ್ನೇ ನೆಚ್ಚದಂತಿದ್ದರು, ತಮ್ಮ ದಾಯಿಗರಾದ ಕೌರವರು ತಮ್ಮ ದಾಯಿಗರಾದ ಕೌರವರು ತಮ್ಮ ರಾಜ್ಯವನ್ನು ಅಪಹರಿಸಿ ಅಳ್ದರು-ಮುಳುಗಿಸಿದರು ಎಂಬ ದುಃಖದಿಂದಿದ್ದರು
ವ|| ಅಂತು ತಮ್ಮ ಪೂಣ್ದ ವರ್ಷಾವಧಿ ನೆರೆದೊಡಮರಾತಿಗಳ್ಗಂತ್ಯಕಾಲಂ ನೆಯದುದರ್ಕುಮ್ಮಳಿಸಿ ನಮಗೆ ಕೆಮ್ಮಗಿರಲಾಗದು ದುರ್ಯೋಧನನಪ್ಪೊಡೆ ಶ್ವೇತ ಕೃಷ್ಣಾಕಾರಕಂ ಕೃಷ್ಣನಂ ತನಗೆ ಮಾಡದನ್ನೆಗಂ ಮುನ್ನಮೆ ಪನ್ನಗಶಯನನಂ ನಮಗೆ ಮಾಡುವುದುತ್ತಮಪಕ್ಷಮೆಂಬೀ ಪ್ರಧಾನ ಕಾರ್ಯಮಂ ತಮ್ಮೊಳಾಳೋಚಿಸಿ ವಿಕ್ರಮಾರ್ಜುನನಂ ನೀನೆ ಪೋಗಲ್ವೇೞ್ಕುಮಂಬುದು ಮಪ್ರತಿರಥಂ ರಥಮನೇಱಿ ಮನಪವನವೇಗದಿಂ ದ್ವಾರಾವತಿಯನೆಯ್ದಿ ರಾಜಮಂದಿರಮಂ ಪೊಕ್ಕು ದುಗ್ಧಾಬ್ಧಿಧವಳ ಶಯ್ಯಾತಳದೊಳ್ ಮರೆದೊಱಗಿದ ಮಧುಮಥನನನೆತ್ತಲಣ್ಮದೆ ಕಾಲ ದೆಸೆಯೊಳುಸಿರದೆ ಕುಳ್ಳಿರೆ ದುರ್ಯೋಧನನುಮಾಗಳೆ ಬಂದು ಬಲಿಬಂಧನನ ತಲೆದೆಸೆಯೊಳ್ ಕುಳ್ಳಿರೆ ಕಿಱಿದಾನುಂ ಬೇಗದಿಂ-
ವಚನ:ಪದವಿಭಾಗ-ಅರ್ಥ:ಅಂತು ತಮ್ಮ ಪೂಣ್ದ ವರ್ಷಾವಧಿ ನೆರೆದೊಡಂ (ಹಾಗೆ ತಾವು ಪ್ರತಿಜ್ಞೆ ಮಾಡಿದ್ದ ಗಡುವು ತೀರಿದರೂ) ಆರಾತಿಗಳ್ಗೆ ಅಂತ್ಯಕಾಲಂ ನೆರೆಯದುದರ್ಕೆ ಉಮ್ಮಳಿಸಿ (ಶತ್ರುಗಳಿಗೆ ಅಂತ್ಯಕಾಲವು ತುಂಬದೇ ಇದ್ದುದಕ್ಕಾಗಿ ದುಖಪಟ್ಟು) ನಮಗೆ ಕೆಮ್ಮಗಿರಲಾಗದು ದುರ್ಯೋಧನನು ಅಪ್ಪೊಡೆ ಶ್ವೇತ ಕೃಷ್ಣಾಕಾರಕಂ (‘ನಾವು ಸುಮ್ಮನಿರಲಾಗದು, ದುರ್ಯೋಧನನಾದರೆ ಬಿಳಿಯದನ್ನು ಕಪ್ಪನ್ನಾಗಿ ಮಾಡುವ ಮೋಸಗಾರ), ಕೃಷ್ಣನಂ ತನಗೆ ಮಾಡದ ಅನ್ನೆಗಂ ಮುನ್ನಮೆ ಪನ್ನಗಶಯನನಂ ನಮಗೆ ಮಾಡುವುದು ಉತ್ತಮಪಕ್ಷಂ ಎಂಬ(ಅವನು ಕೃಷ್ಣನನ್ನು ತನ್ನವನನ್ನಾಗಿ ಮಾಡಿಕೊಳ್ಳುವುದಕ್ಕೆ ಮೊದಲೇ ಶ್ರೀಕೃಷ್ಣನನ್ನು ನಮಗೆ ಸಹಾಯಕನನ್ನಾಗಿ ಮಾಡಿಕೊಳ್ಳುವುದು ಉತ್ತಮಪಕ್ಷ ಎಂಬ) ಈ ಪ್ರಧಾನ ಕಾರ್ಯಮಂ ತಮ್ಮೊಳು ಆಳೋಚಿಸಿ (ಈ ಪ್ರಧಾನ ಕಾರ್ಯವನ್ನು ತಮ್ಮಲ್ಲಿ ಆಲೋಚಿಸಿ,) ವಿಕ್ರಮಾರ್ಜುನನಂ ನೀನೆ ಪೋಗಲ್ವೇೞ್ಕುಂ ಎಂಬುದುಂ (ಆ ಕಾರ್ಯಕ್ಕೆ ವಿಕ್ರಮಾರ್ಜುನನನ್ನು ‘ನೀನೇ ಹೋಗಬೇಕು’ ಎಂದರು) ಅಪ್ರತಿರಥಂ ರಥಮನೇಱಿ ಮನ-ಪವನ-ವೇಗದಿಂ ದ್ವಾರಾವತಿಯನೆಯ್ದಿ ರಾಜಮಂದಿರಮಂ ಪೊಕ್ಕು (ಅಪ್ರತಿರಥನಾದ ಅವನು ರಥವನ್ನು ಹತ್ತಿ ಮನಸ್ಸು,ವಾಯುವೇಗದಿಂದ ದ್ವಾರಾವತೀ ಪಟ್ಟಣವನ್ನು ಸೇರಿ, ಅರಮನೆಯನ್ನು ಪ್ರವೇಶಿಸಿದನು); ದುಗ್ಧಾಬ್ಧಿಧವಳ ಶಯ್ಯಾತಳದೊಳ್ ಮರೆದ ಒಱಗಿದ (ನಿದ್ರಿಸುತ್ತಿದ್ದ) ಮಧುಮಥನನನು ಎತ್ತಲು ಅಣ್ಮದೆ (ಕ್ಷೀರಸಮುದ್ರದಷ್ಟು ಬೆಳ್ಳಗಿರುವ ಹಾಸಿಗೆಯ ಮೇಲೆ ನಿದ್ರಿಸುತ್ತಿದ್ದ ಕೃಷ್ಣನನ್ನು ನೋಡಿ, ಅವನನ್ನು ಎಬ್ಬಿಸಲು ಇಷ್ಟಪಡದೆ) ಕಾಲ ದೆಸೆಯೊಳು ಉಸಿರದೆ ಕುಳ್ಳಿರೆ (ಅವನ ಕಾಲಿನ ಕಡೆಯಲ್ಲಿ ಮಾತನಾಡದೆ ಕುಳಿತಿರಲು.) ದುರ್ಯೋಧನನುಂ ಆಗಳೆ ಬಂದು ಬಲಿಬಂಧನನ ತಲೆದೆಸೆಯೊಳ್ ಕುಳ್ಳಿರೆ (ದುರ್ಯೋಧನನೂ ಆಗಲೇ ಬಂದು ಶ್ರೀಕೃಷ್ಣನ ತಲೆದೆಸೆಯಲ್ಲಿ ಕುಳಿತನು), ಕಿಱಿದಾನುಂ ಬೇಗದಿಂ (ಸ್ವಲ್ಪಕಾಲದ ನಂತರ)-
ವಚನ:ಅರ್ಥ:ಹಾಗೆ ತಾವು ಪ್ರತಿಜ್ಞೆ ಮಾಡಿದ್ದ ಗಡುವು ತೀರಿದರೂ ಶತ್ರುಗಳಿಗೆ ಅಂತ್ಯಕಾಲವು ತುಂಬದೇ ಇದ್ದುದಕ್ಕಾಗಿ ದುಖಪಟ್ಟು ‘ನಾವು ಸುಮ್ಮನಿರಲಾಗದು, ದುರ್ಯೋಧನನಾದರೆ ಬಿಳಿಯದನ್ನು ಕಪ್ಪನ್ನಾಗಿ ಮಾಡುವ ಮೋಸಗಾರ. ಅವನು ಕೃಷ್ಣನನ್ನು ತನ್ನವನನ್ನಾಗಿ ಮಾಡಿಕೊಳ್ಳುವುದಕ್ಕೆ ಮೊದಲೇ ಶ್ರೀಕೃಷ್ಣನನ್ನು ನಮಗೆ ಸಹಾಯಕನನ್ನಾಗಿ ಮಾಡಿಕೊಳ್ಳುವುದು ಉತ್ತಮಪಕ್ಷ ಎಂಬ ಈ ಪ್ರಧಾನ ಕಾರ್ಯವನ್ನು ತಮ್ಮಲ್ಲಿ ಆಲೋಚಿಸಿ, ಆ ಕಾರ್ಯಕ್ಕೆ ವಿಕ್ರಮಾರ್ಜುನನನ್ನು ‘ನೀನೇ ಹೋಗಬೇಕು’ ಎಂದರು. ಅಪ್ರತಿರಥನಾದ ಅವನು ರಥವನ್ನು ಹತ್ತಿ ಮನಪವನವೇಗ (ಮನಸ್ಸಷ್ಟೂ ಗಾಳಿಯಷ್ಟೂ ವೇಗ)ದಿಂದ ದ್ವಾರಾ ವತೀಪಟ್ಟಣವನ್ನು ಸೇರಿ ಅರಮನೆಯನ್ನು ಪ್ರವೇಶಿಸಿದನು. ಕ್ಷೀರಸಮುದ್ರದಷ್ಟು ಬೆಳ್ಳಗಿರುವ ಹಾಸಿಗೆಯ ಮೇಲೆ ನಿದ್ರಿಸುತ್ತಿದ್ದ ಕೃಷ್ಣನನ್ನು ನೋಡಿ, ಅವನನ್ನು ಎಬ್ಬಿಸಲು ಇಷ್ಟಪಡದೆ ಕಾಲ ದೆಸೆಯಲ್ಲಿ ಮಾತನಾಡದೆ ಕುಳಿತಿರಲು. ದುರ್ಯೋಧನನೂ ಆಗಲೇ ಬಂದು ಶ್ರೀಕೃಷ್ಣನ ತಲೆದೆಸೆಯಲ್ಲಿ ಕುಳಿತನು. ಸ್ವಲ್ಪಕಾಲದ ನಂತರ-
ಕಂ|| ಪವಡಿಸಿದನಂತನೊಸೆದು
ಪ್ಪವಡಿಸಿ ತನ್ನೆರಡುಮಡಿಯನೊತ್ತುತ್ತಿರ್ದಾ|
ಹವ ವಿಜಯಿಯಪ್ಪ ವಿಜಯನ
ನೆ ವಲಂ ಮುಂ ಕಂಡು ಬೞಕೆ ನೃಪನಂ ಕಂಡಂ|| ೧೧ ||
ಪದ್ಯ-೦೦:ಪದವಿಭಾಗ-ಅರ್ಥ:ಪವಡಿಸಿದ ಅನಂತನು ಒಸೆದು ಉಪ್ಪವಡಿಸಿ ತನ್ನೆರಡುಂ ಅಡಿಯನೊತ್ತುತ್ತಿರ್ದ(ಮಲಗಿದ್ದ ಶ್ರೀಕೃಷ್ಣನು ಸಂತೋಷದಿಂದ ಎದ್ದು ತನ್ನ ಎರಡು ಪಾದಗಳನ್ನು ಒತ್ತುತ್ತಿದ್ದ) ಆಹವ ವಿಜಯಿಯಪ್ಪ ವಿಜಯನನೆ ವಲಂ ಮುಂ ಕಂಡು(ಯುದ್ಧದಲ್ಲಿ ಜಯಶಾಲಿಯಾಗುವ ಅರ್ಜುನನ್ನೇ ಮೊದಲು ನೋಡಿ) ಬೞಕೆ ನೃಪನಂ ಕಂಡಂ(ಬಳಿಕ ದುರ್ಯೋಧನನನ್ನು ನೋಡಿದನು. )
ಪದ್ಯ-೦೦:ಅರ್ಥ:ಮಲಗಿದ್ದ ಅನಂತನಾದ ಶ್ರೀಕೃಷ್ಣನು ಸಂತೋಷದಿಂದ ಎದ್ದು ತನ್ನ ಎರಡು ಪಾದಗಳನ್ನು ಒತ್ತುತ್ತಿದ್ದ, ಯುದ್ಧದಲ್ಲಿ ಜಯಶಾಲಿಯಾಗುವ ಅರ್ಜುನನ್ನೇ ಮೊದಲು ನೋಡಿ ಬಳಿಕ ದುರ್ಯೋಧನನನ್ನು ನೋಡಿದನು.
ವ|| ಕಂಡು ತನಗೆ ಪೊಡೆವಟ್ಟಿರ್ವರುಮಂ ಪರಸಿ ನೀವಿರ್ವರುಂ ಬಂದಂದಮುಮಂ ಮನೆವಾೞ್ತೆಯಂ ಪೇೞಮೆಂದೊಡೆಮ್ಮೆಮ್ಮಂ ಕೆಯ್ಕೊಂಡು ಗೆಲಿಸಲ್ವೇೞ್ಕುಮೆಂದು ಬಂದೆವೆನೆ-
ವಚನ:ಪದವಿಭಾಗ-ಅರ್ಥ:ಕಂಡು ತನಗೆ ಪೊಡೆವಟ್ಟಿ ಇರ್ವರುಮಂ ಪರಸಿ (ನೋಡಿ ತನಗೆ ನಮಸ್ಕರಿಸಿದ ಇಬ್ಬರನ್ನೂ ಆಶೀರ್ವದಿಸಿ) ನೀವು ಇರ್ವರುಂ ಬಂದ ಅಂದಮುಮಂ ಮನೆವಾೞ್ತೆಯಂ ಪೇೞಿಮೆಂದೊಡೆ (ನೀವಿಬ್ಬರೂ ಬಂದ ಕಾರಣವನ್ನೂ, ಗೃಹಸಮಾಚಾರವನ್ನೂ ಹೇಳಿ ಎಂದನು) ಎಮ್ಮಂ ಎಮ್ಮಂ ಕೆಯ್ಕೊಂಡು ಗೆಲಿಸಲ್ವೇೞ್ಕುಂ ಎಂದು ಬಂದೆವು ಎನೆ (ನಮ್ಮನ್ನು ನಮ್ಮನ್ನು ಅಂಗೀಕಾರ ಮಾಡಿ ಗೆಲ್ಲಿಸಬೇಕೆಂದು’ ಕೇಳಿಕೊಳ್ಳಲು ಬಂದೆವು ಎನ್ನಲು)-
ವಚನ:ಅರ್ಥ: ಹೀಗೆ ನೋಡಿದವನು; ನೋಡಿ ತನಗೆ ನಮಸ್ಕರಿಸಿದ ಇಬ್ಬರನ್ನೂ ಆಶೀರ್ವದಿಸಿ, ನೀವಿಬ್ಬರೂ ಬಂದ ಕಾರಣವನ್ನೂ, ಗೃಹಸಮಾಚಾರವನ್ನೂ ಹೇಳಿ ಎಂದನು. ಆಗ, ‘ನಮ್ಮನ್ನು ನಮ್ಮನ್ನು ಅಂಗೀಕಾರ ಮಾಡಿ ಗೆಲ್ಲಿಸಬೇಕೆಂದು’ ಕೇಳಿಕೊಳ್ಳಲು ಬಂದೆವು ಎಂದರು;- ಎನ್ನಲು
  • ಟಿಪ್ಪಣಿ:೧. ಕೃಷ್ನ ಮತ್ತ ಜಾಂಬವತಿಯ ಮಗ ಸಾಂಬನಿಗೆ ದುರ್ಯೋಧನನ ಮಗಳು ಲಷ್ಮಣೆಯನ್ನು ಕೊಟ್ಟುವಿವಾಹವಾಗಿದೆ. ಅವರು ಪರಸ್ಪರ ಬೀಗರು.
  • ಟಿಪ್ಪಣಿ:೨. ಕೃಷ್ಣನ ಸೋದರತ್ತೆ, ಎಂದರೆ ಅವನ ತಂದೆ ವಸುದೇವನ ಅಕ್ಕ ಕುಂತಿಯ ಮಗ ಅರ್ಜುನ, ಅಲ್ಲದೆ ಕೃಷ್ಣನ ತಂಗಿ ಸುಭದ್ರೆಯ ಗಂಡ ಅರ್ಜುನ. ಹೀಗೆ ಇಬ್ಬರೂ ಹತ್ತಿರದ ಬಂಧುಗಳು ಕೃಷ್ಣನಿಗೆ.
ಕಂ|| ಮನ್ನಣೆಗನಗಿರ್ವರುಮೋ
ರನ್ನರೆ ವಿಜಯನನೆ ಮುನ್ನೆ ಕಂಡುದಱಿಂದಾ|
ನೆನ್ನಂ ಕೊಟ್ಟೆಂ ನಿನಗಂ
ಪನ್ನಗಕೇತನ ಚತುರ್ವಲಂಗಳನಿತ್ತೆಂ|| ೧೨ ||
ಪದ್ಯ-೧೨:ಪದವಿಭಾಗ-ಅರ್ಥ:ಮನ್ನಣೆಗೆ ಎನಗೆ ಇರ್ವರುಂ ಓರನ್ನರೆ (ನನ್ನ ಮನ್ನಣೆಗೆ ನೀವಿಬ್ಬರೂ ಸಮಾನರೆ; ಆದರೂ) ವಿಜಯನನೆ ಮುನ್ನೆ ಕಂಡುದಱಿಂದ ಆನು ಎನ್ನಂ ಕೊಟ್ಟೆಂ (ಅರ್ಜುನನನ್ನು ಮೊದಲು ಕಂಡದ್ದರಿಂದ ನಾನು ನನ್ನನ್ನು ಅವನಿಗೆ ಕೊಟ್ಟಿದ್ದೇನೆ) ನಿನಗಂ, ಪನ್ನಗಕೇತನ (ಸರ್ಪಧ್ವಜ) ಚತುರ್ವಲಂಗಳನು ಇತ್ತೆಂ(ದುರ್ಯೋಧನ! ನಿನಗೆ ನನ್ನ ಚತುರ್ಬಲಗಳನ್ನೂ ಕೊಟ್ಟಿದ್ದೇನೆ.)
ಪದ್ಯ-೧೨:ಅರ್ಥ:ನನ್ನ ಮನ್ನಣೆಗೆ ನೀವಿಬ್ಬರೂ ಸಮಾನರೇ; ಆದರೂ ಅರ್ಜುನನನ್ನು ಮೊದಲು ಕಂಡದ್ದರಿಂದ ನಾನು ನನ್ನನ್ನು ಅವನಿಗೆ ಕೊಟ್ಟಿದ್ದೇನೆ. ದುರ್ಯೋಧನ! ನಿನಗೆ ನನ್ನ ಚತುರ್ಬಲಗಳನ್ನೂ ಕೊಟ್ಟಿದ್ದೇನೆ, ಎಂದನು ಕೃಷ್ಣ.
ವ|| ಎಂದು ತನ್ನೊಳ್ ಸಮಾನಬಲನಪ್ಪ ತನ್ನ ತಮ್ಮಂ ಕೃತವರ್ಮನುಮಂ ತನ್ನೊಡನಾಡಿಗಳಪ್ಪ ತೊಂಬತ್ತಾಱು ಸಾಸಿರ ಗೋಪಕುಮಾರರೊಡನೆ ಕೂಡಿ ಕಳಿಪಿ ವಿಕ್ರಮಾರ್ಜುನನುಂ ತಾನುಂ ವಿರಾಟಪುರಕ್ಕೆ ವಂದು ಮಜ್ಜನ ಭೋಜನಾದಿಗಳೊಳ್ ವಿಗತ ಪರಿಶ್ರಮರಾಗಿ ಮಱುದೆವಸಮಱುವರುಮಾಱುಂಗುಣಂಗಳೆ ಮೂರ್ತಿಮಂತಂಗಳಾದಂತೆ ಮಂತ್ರಶಾಲೆಯಂ ಪೊಕ್ಕಿರ್ದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ತನ್ನೊಳ್ ಸಮಾನ ಬಲನಪ್ಪ ತನ್ನ ತಮ್ಮಂ ಕೃತವರ್ಮನುಮಂ(ತನಗೆ ಸಮಾನವಾದ ಶಕಿಯುಳ್ಳ ತನ್ನ ತಮ್ಮನಾದ ಕೃತವರ್ಮನನ್ನು) ತನ್ನ ಒಡನಾಡಿಗಳಪ್ಪ ತೊಂಬತ್ತಾಱು ಸಾಸಿರ ಗೋಪಕುಮಾರರೊಡನೆ ಕೂಡಿ ಕಳಿಪಿ (ತನ್ನ ಜೊತೆಗಾರರಾದ ತೊಂಬತ್ತಾರುಸಾವಿರ ಗೋಪಕುಮಾರರೊಡನೆ ಸೇರಿಸಿ ಕಳುಹಿಸಿದನು.) ವಿಕ್ರಮಾರ್ಜುನನುಂ ತಾನುಂ ವಿರಾಟಪುರಕ್ಕೆ ವಂದು, ಮಜ್ಜನ ಭೋಜನಾದಿಗಳೊಳ್ ವಿಗತ ಪರಿಶ್ರಮರಾಗಿ (ಅರ್ಜುನನೂ ತಾನೂ ವಿರಾಟನಗರಕ್ಕೆ ಬಂದು ಸ್ನಾನಭೋಜನಾದಿಗಳಿಂದ ಶ್ರಮ ಪರಿಹಾರ ಮಾಡಿಕೊಂಡು,) ಮಱುದೆವಸಂ ಅಱುವರುಂ ಆಱುಂಗುಣಂಗಳೆ ಮೂರ್ತಿಮಂತಂಗಳಾದಂತೆ (ಮಾರನೆಯ ದಿನ ಆರುಮಂದಿಯೂ ರಾಜ್ಯಶಾಸ್ತ್ರದ ಆರುಗುಣಗಳೇ ಪ್ರತ್ಯಕ್ಷವಾಗಿ ಮೂರ್ತಿತಾಳಿದ ಹಾಗೆ) ಮಂತ್ರಶಾಲೆಯಂ ಪೊಕ್ಕಿರ್ದಾಗಳ್ (ಆಲೋಚನಾಮಂದಿರವನ್ನು ಪ್ರವೇಶಮಾಡಿದರು; ಆಗ)-
ವಚನ:ಅರ್ಥ: ಹೀಗೆ ಹೇಳಿ ತನಗೆ ಸಮಾನವಾದ ಶಕಿಯುಳ್ಳ ತನ್ನ ತಮ್ಮನಾದ ಕೃತವರ್ಮನನ್ನೂ, ತನ್ನ ಜೊತೆಗಾರರಾದ ತೊಂಬತ್ತಾರುಸಾವಿರ ಗೋಪಕುಮಾರರೊಡನೆ ಸೇರಿಸಿ ಕಳುಹಿಸಿದನು. ಅರ್ಜುನನೂ ತಾನೂ ವಿರಾಟನಗರಕ್ಕೆ ಬಂದು ಸ್ನಾನಭೋಜನಾದಿಗಳಿಂದ ಶ್ರಮ ಪರಿಹಾರ ಮಾಡಿಕೊಂಡರು. ಮಾರನೆಯ ದಿನ ಆರುಮಂದಿಯೂ ರಾಜ್ಯಶಾಸ್ತ್ರದ ಆರುಗುಣಗಳೇ ಪ್ರತ್ಯಕ್ಷವಾಗಿ ಮೂರ್ತಿತಾಳಿದ ಹಾಗೆ ಆಲೋಚನಾಮಂದಿರವನ್ನು ಪ್ರವೇಶಮಾಡಿದರು. ಆಗ-
ಕಂ|| ಪ್ರಿಯ ವಿಷಯಕಾಂಕ್ಷೆಯಿಂದಿಂ
ದ್ರಿಯಂಗಳೆಂತೆಯ್ದೆ ಮನಮನಾಶ್ರಯಿಸುಗುಮಂ|
ತಯ ನಯ ಪರರಯ್ವರುಮಾ
ಶ್ರಯಿಸಿರ್ದರ್ ವಿಷಯಕಾಂಕ್ಷೆಯಿಂ ಮುರರಿಪುವಂ|| ೧೩ ||
ಪದ್ಯ-೧೩:ಪದವಿಭಾಗ-ಅರ್ಥ:ಪ್ರಿಯ ವಿಷಯ ಆಕಾಂಕ್ಷೆಯಿಂದೆ ಇಂದ್ರಿಯಂಗಳ್ (ಕಿವಿ, ಕಣ್ಣು ಮೊದಲಾದ ಪಂಚೇಂದ್ರಿಯಗಳು ತಮ್ಮ ಪ್ರಿಯಳಾದ ವಸ್ತುಗಳ ಅಪೇಕ್ಷೆಯಿಂದ) ಎಂತು ಎಯ್ದೆ ಮನಮನು ಆಶ್ರಯಿಸುಗುಂ ಅಂತು (ಮನಸ್ಸನ್ನು ಸೇರಿ ಹೇಗೆ ಆಶ್ರಯಿಸುತ್ತವೆಯೋ ಹಾಗೆ) ಅಯನಯಪರರ್ (ಉತ್ತಮ ವಿಧಿ ನಿಯಮಗಳಲ್ಲಿ ಆಸಕ್ತರಾದ) ಅಯ್ವರುಮ್ ಆಶ್ರಯಿಸಿರ್ದರ್ ವಿಷಯಕಾಂಕ್ಷೆಯಿಂ ಮುರರಿಪುವಂ (ಅಯ್ದುಜನ ಪಾಂಡವರೂ ತಮ್ಮ ಇಷ್ಟಾರ್ಥಸಿದ್ಧಿಗಾಗಿ ಶ್ರೀಕೃಷ್ಣನನ್ನು ಆಶ್ರಯಿಸಿದ್ದರು).
ಪದ್ಯ-೧೩:ಅರ್ಥ:೧೩. ಕಿವಿ, ಕಣ್ಣು ಮೊದಲಾದ ಪಂಚೇಂದ್ರಿಯಗಳು ತಮ್ಮ ಪ್ರಿಯಳಾದ ವಸ್ತುಗಳ ಅಪೇಕ್ಷೆಯಿಂದ ಮನಸ್ಸನ್ನು ಸೇರಿ, ಹೇಗೆ ಆಶ್ರಯಿಸುತ್ತವೆಯೋ ಹಾಗೆ ಉತ್ತಮ ವಿಧಿ ನಿಯಮಗಳಲ್ಲಿ ಆಸಕ್ತರಾದ ಅಯ್ದುಜನ ಪಾಂಡವರೂ ತಮ್ಮ ಇಷ್ಟಾರ್ಥಸಿದ್ಧಿಗಾಗಿ ಶ್ರೀಕೃಷ್ಣನನ್ನು ಆಶ್ರಯಿಸಿದ್ದರು.
ಲೋಕಕ್ಕಿದರ್ಥಶಾಸ್ತ್ರದ
ಟೀಕೆನಿಸಿದ ತನ್ನ ನುಡಿ ಮನಂಗೊಳಿಸೆ ದಳ|
ತ್ಯೋಕನದ ಜಠರನಂ ನಿ
ರ್ವ್ಯಾಕುಳಮಿಂತೆಂದು ಧರ್ಮತನಯಂ ನುಡಿದಂ|| ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ಲೋಕಕ್ಕಿದರ್ಥಶಾಸ್ತ್ರದಟೀಕೆನಿಸಿದ ತನ್ನ ನುಡಿ ಮನಂಗೊಳಿಸೆ ದಳತ್ಯೋಕನದ ಜಠರನಂ ನಿರ್ವ್ಯಾಕುಳಮಿಂತೆಂದು ಧರ್ಮತನಯಂ ನುಡಿದಂ
ಪದ್ಯ-೧೪:ಅರ್ಥ: ೧೪. ಧರ್ಮರಾಜನು ರಾಜನೀತಿಶಾಸ್ತ್ರದ ವ್ಯಾಖ್ಯಾನದಂತಿದ್ದ ತನ್ನ ಮಾತು ಆಕರ್ಷಕವಾಗಿರಲು ಅರಳಿದ ತಾವರೆಯನ್ನು ನಾಭಿಯಲ್ಲುಳ್ಳ (ಕಮಲನಾಭನಾದ) ಶ್ರೀಕೃಷ್ಣನಿಗೆ ಅನಾಯಾಸವಾಗಿ ಈ ರೀತಿ ಹೇಳಿದನು.
ಎಳೆ ರಸೆಯೊಳೞ್ದುದಂ ಭುಜ
ಬಳದಿಂ ಮುನ್ನೆತ್ತಿದಂತೆ ವಿಷಯಾಂಬುಯೊಳ್|
ಮುೞುಗಿರ್ದೆಮ್ಮಯ್ವರುಮಂ
ಬಳಿಹರ ಪಿಡಿದೆತ್ತಲೆಂದು ಬಂದೈ ಬರವಂ|| ೧೫ ||
ಪದ್ಯ-೦೦:ಪದವಿಭಾಗ-ಅರ್ಥ: ಎಳೆ (ಭೂಮಿ) ರಸೆಯೊಳ್ ಅೞ್ದುದಂ- ಮುಳುಗಿದ್ದ (ಮೊದಲು ಪಾತಾಳದಲ್ಲಿ ಮುಳುಗಿದ್ದ ಭೂಮಿಯನ್ನು) ಭುಜಬಳದಿಂ ಮುನ್ನ ಎತ್ತಿದಂತೆ (ಬಾಹುಬಲದಿಂದ ಹಿಂದೆ ಎತ್ತಿದ ಹಾಗೆ) ವಿಷಯಾಂಬುಯೊಳ್ ಮುೞುಗಿರ್ದ ಎಮ್ಮಯ್ವರುಮಂ (ಇಂದ್ರಿಯಭೋಗವೆಂಬ ಸಮುದ್ರದಲ್ಲಿ ಮುಳುಗಿದ್ದ ನಮ್ಮ ಐದು ಜನರನ್ನೂ) ಬಳಿಹರ (ಬಲಿಹರ-ಬಲಿಯನ್ನು ತಡೆದವನು) ಪಿಡಿದು ಎತ್ತಲೆಂದು ಬಂದೈ ಬರವಂ(ಹಿಡಿದು ಎತ್ತಿ ಉದ್ಧಾರಮಾಡಬೇಕೆಂದೇ ಬಂದಿದ್ದೀಯೆ)
ಪದ್ಯ-೦೦:ಅರ್ಥ: ಕೃಷ್ಣನೇ ನೀನು ಮೊದಲು ಪಾತಾಳದಲ್ಲಿ ಮುಳುಗಿದ್ದ ಭೂಮಿಯನ್ನು ನಿನ್ನ ಬಾಹುಬಲದಿಂದ ಹಿಂದೆ ಎತ್ತಿದ ಹಾಗೆ ಇಂದ್ರಿಯಭೋಗವೆಂಬ ಸಮುದ್ರದಲ್ಲಿ ಮುಳುಗಿದ್ದ ನಮ್ಮ ಐದು ಜನರನ್ನೂ ಹಿಡಿದು ಎತ್ತಿ ಉದ್ಧಾರಮಾಡಬೇಕೆಂದೇ ಬಂದಿದ್ದೀಯೆ, ಎಂದನು ಧರ್ಮಜ.
ಬಸಿರೊಳ್ ಜಗತೀತ್ರಯಮುಮ
ನೊಸೆದಿಟ್ಟೋರಂತೆ ಕಾದ ಪೆಂಪಿನ ನಿಮ್ಮೀ|
ಬಸಿಱಂ ಪೊಕ್ಕೆಮ್ಮಯ್ವರ
ನಸುರಕುಳಾಂತಕ ಕಡಂಗಿ ಕಾವುದು ಪಿರಿದೇ|| ೧೬ ||
ಪದ್ಯ-೧೬:ಪದವಿಭಾಗ-ಅರ್ಥ:ಬಸಿರೊಳ್ ಜಗತೀತ್ರಯಮುಮನು ಒಸೆದು ಇಟ್ಟು ( ಮೂರು ಲೋಕಗಳನ್ನೂ ಸಂತಸದಿಂದ ಹೊಟ್ಟೆಯಲ್ಲಿಟ್ಟು) ಓರಂತೆ ಕಾದ ಪೆಂಪಿನ ನಿಮ್ಮ ಈ ಬಸಿಱಂ ( ಕ್ರಮದಿಂದ ರಕ್ಷಿಸಿದ ಮಹಿಮೆಯುಳ್ಳ ನಿಮ್ಮ ಅಂತರಂಗದಲ್ಲಿರುವ ಈ ಭೂಲೋಕವನ್ನು) ಪೊಕ್ಕು ಎಮ್ಮಯ್ವರನು ಅಸುರಕುಳಾಂತಕ ಕಡಂಗಿ ಕಾವುದು ಪಿರಿದೇ (ಹೊಕ್ಕು ನಾವು ಐದುಜನರನ್ನು ಉತ್ಸಾಹದಿಂದ ರಕ್ಷಿಸುವುದು ನಿಮಗೆ ದೊಡ್ಡದೇ? )
ಪದ್ಯ-೧೬:ಅರ್ಥ:ಕೃಷ್ಣಾ, ಮೂರು ಲೋಕಗಳನ್ನೂ ಸಂತಸದಿಂದ ಹೊಟ್ಟೆಯಲ್ಲಿಟ್ಟು ಕ್ರಮದಿಂದ ರಕ್ಷಿಸಿದ ಮಹಿಮೆಯುಳ್ಳ ನಿಮ್ಮ ಅಂತರಂಗದಲ್ಲಿರುವ ಈ ಭೂಲೋಕವನ್ನು ಹೊಕ್ಕು ನಾವು ಐದುಜನರನ್ನು ಉತ್ಸಾಹದಿಂದ ರಕ್ಷಿಸುವುದು ನಿಮಗೆ ದೊಡ್ಡದೇ?
ಮಲ್ಲಿಕಾಮಾಲೆ|| ಎನ್ನ ನನ್ನಿಯ ಪೆಂಪು ನಿನ್ನ ಮಹತ್ವದಿಂದಮೆ ಸಂದುದೆಂ
ತೆನ್ನ ಪನ್ನಗಕೇತನಂಗೆ ಧರಾವಿಭಾಗಮನಿತ್ತು ಸಂ|
ಪನ್ನ ಯೋಗ ನಿಯೋಗದಿಂದಮರಣ್ಯದೊಳ್ ನೆಲಸಿರ್ದುಣಲ್
ಬನ್ನಮಿಲ್ಲದೆ ಬಾೞ್ವುದೇಂ ಪುೞುವಾನಸಂಗೆನಗಕ್ಕುಮೇ|| ೧೭ ||
ಪದ್ಯ-೧೭:ಪದವಿಭಾಗ-ಅರ್ಥ:ಎನ್ನ ನನ್ನಿಯ ಪೆಂಪು ನಿನ್ನ ಮಹತ್ವದಿಂದಮೆ ಸಂದುದು (ನನ್ನ ಸತ್ಯದ ಹಿರಿಮೆ ನಿನ್ನ ಮಹಿಮೆಯಿಂದಲೇ ಸಾಧ್ಯವಾಯಿತು) ಎಂತು ಎನ್ನ (ಅದು ಹೇಗೆನ್ನುವೆಯೊ-) ಪನ್ನಗಕೇತನಂಗೆ (ಸರ್ಪಧ್ವಜ ದುರ್ಯೋಧನನಿಗೆ) ಧರಾವಿಭಾಗಮನು ಇತ್ತು ಸಂಪನ್ನ ಯೋಗ ನಿಯೋಗದಿಂದಮ್ (ಭೂಮಿಯ ಭಾಗವನ್ನು ಕೊಟ್ಟು ಪರಿಪೂರ್ಣವಾದ ಯೋಗಮಾರ್ಗದಲ್ಲಿ ) ಅರಣ್ಯದೊಳ್ ನೆಲಸಿರ್ದು ಉಣಲ್ ಬನ್ನಮಿಲ್ಲದೆ (ಕಾಡಿನಲ್ಲಿ ನೆಲಸಿ ನಿರ್ವಿಘ್ನವಾಗಿ ಕೊರತೆಇಲ್ಲದೆ (ನಾಚದೆ) ಊಟಮಾಡುತ್ತ) ಬಾೞ್ವುದೇಂ ಪುೞುವಾನಸಂಗೆ ಎನಗೆ ಅಕ್ಕುಮೇ (ಬದುಕುವುದು ಸಾಮಾನ್ಯ ಹುಲುಮನುಷ್ಯನಾದ ನನಗೆ ಸಾಧ್ಯವಾಗುತ್ತದೆಯೇ.)
ಪದ್ಯ-೧೭:ಅರ್ಥ: ನ್ನ ಸತ್ಯದ ಹಿರಿಮೆ ನಿನ್ನ ಮಹಿಮೆಯಿಂದಲೇ ಸಾಧ್ಯವಾಯಿತು. ಅದು ಹೇಗೆನ್ನುವೆಯೊ- ದುರ್ಯೋಧನನಿಗೆ ಭೂಮಿಯ ಭಾಗವನ್ನು ಕೊಟ್ಟು ಪರಿಪೂರ್ಣವಾದ ಯೋಗಮಾರ್ಗದಲ್ಲಿ ಕಾಡಿನಲ್ಲಿ ನೆಲಸಿ ನಿರ್ವಿಘ್ನವಾಗಿ ಕೊರತೆಇಲ್ಲದೆಊಟಮಾಡುತ್ತ ಬದುಕುವುದು ಸಾಮಾನ್ಯ ಹುಲುಮನುಷ್ಯನಾದ ನನಗೆ ಸಾಧ್ಯವಾಗುತ್ತದೆಯೇ?
ವ|| ಅದಲ್ಲದೆಯುಮೀ ಸೂೞೊಂದುಮೊಡಂಬಡಿಲ್ಲದೆ ಗೋಗ್ರಹಣಮನೆ ನೆವಂ ಮಾಡಿ ಸುಯೋಧನನೆಂಬ ಪಾಪಕರ್ಮನ ಮಾಡಿದನುವರಂ ನಿಮ್ಮನುಬಲದೊಳಮರಿಕೇಸರಿಯ ಭುಜಬಲದೊಳಮೆಮಗಿಂಬುವಂದುದು-
ವಚನ:ಪದವಿಭಾಗ-ಅರ್ಥ:ಅದಲ್ಲದೆಯುಂ ಈ ಸೂೞು ಒಂದುಮ್ ಒಡಂಬಡಿಲ್ಲದೆ (ಅದಲ್ಲದೆ ಈ ಸಲವೂ ಒಂದೂ ಎಡಟ್ಟಿಲ್ಲದೆ ಇಲ್ಲದೆ) ಗೋಗ್ರಹಣಮನೆ ನೆವಂ ಮಾಡಿ ಸುಯೋಧನನೆಂಬ ಪಾಪಕರ್ಮನ ಮಾಡಿದ (ಗೋಗ್ರಹಣವನ್ನು ನೆಪಮಾಡಿಕೊಂಡು ದುರ್ಯೋಧನನೆಂಬ ಪಾಪಿಯು ಏರ್ಪಡಿಸಿದ) ಅನುವರಂ (ಯುದ್ಧವು) ನಿಮ್ಮ ಅನುಬಲದೊಳಂ ಅರಿಕೇಸರಿಯ ಭುಜಬಲದೊಳಮೆ (ಬಾಹುಬಲದಲ್ಲಿ ಸೇರಿ) ಎಮಗೆ ಇಂಬುವಂದುದು
ವಚನ:ಅರ್ಥ: ಅದಲ್ಲದೆ ಈ ಸಲವೂ ಒಂದೂ ಎಡಟ್ಟಿಲ್ಲದೆ ಇಲ್ಲದೆ ಗೋಗ್ರಹಣವನ್ನು ನೆಪಮಾಡಿಕೊಂಡು ದುರ್ಯೋಧನನೆಂಬ ಪಾಪಿಯು ಏರ್ಪಡಿಸಿದ ಯುದ್ಧವು ನಿಮ್ಮ ಅನುಗ್ರಹ ಅರಿಕೇಸರಿಯಾದ ಅರ್ಜುನನ ಬಾಹುಬಲದಲ್ಲಿ ಸೇರಿ ನಮಗೆ ಅನುಕೂಲವಾಯಿತು.
ಉ|| ಕಾದದೆ ಪನ್ನಗಧ್ವಜನಿಳಾತಳಮಂ ಕುಡನಾನುಮಿರ್ಪುದುಂ
ಸೋದರರೆಂದು ನಾಣ್ಚಿ ಸೆಡೆದಿರ್ದಪೆನಿರ್ದೊಡವಸ್ತುಭೂತನೆಂ|
ದಾದಮೆ ಭೂತಳಂ ಪೞಿಯೆ ತೇಜಮೆ ಕೆಟ್ಟಪುದಿಂತಿದರ್ಕೆ ಪ
ದ್ಮೋದರ ನೀನೆ ಪೇೞು ಬಗೆದು ಕಜ್ಜಮನೀಗಳೆ ದಿವ್ಯಚಿತ್ತದಿಂ|| ೧೮ ||
ಪದ್ಯ-೧೮:ಪದವಿಭಾಗ-ಅರ್ಥ:ಕಾದದೆ ಪನ್ನಗಧ್ವಜನು ಇಳಾತಳಮಂ ಕುಡನು (ದುರ್ಯೋಧನನು ಯುದ್ಧಮಾಡದೆ ರಾಜ್ಯವನ್ನು ಕೊಡುವುದಿಲ್ಲ; ) ಆನುಂ ಇರ್ಪುದುಂ ಸೋದರರೆಂದು ನಾಣ್ಚಿ ಸೆಡೆದಿರ್ದಪೆನ್ ಇರ್ದೊಡೆ (ನಾನೂ ಒಡಹುಟ್ಟಿದವರೆಂದು ನಾಚಿಕೆಯಿಂದ ಸಂಕೋಚದಿಂದಿದ್ದೇನೆ. ಹಾಗಿದ್ದರೆ) ಅವಸ್ತುಭೂತನೆಂದು ಆದಮೆ,(ಇವನು ಆಸ್ತಿತ್ವ, ಇಲ್ಲದವನು, ಲೆಕ್ಕಕ್ಕಿಲ್ಲದವನು, ಎಂದು) ಭೂತಳಂ ಪೞಿಯೆ ತೇಜಮೆ ಕೆಟ್ಟಪುದು (ಲೋಕವು ನಿಂದಿಸಿದರೆ ನನ್ನ ಕೀರ್ತಿಯೂ ಮಾಸಿಹೋಗುತ್ತದೆ) ಇಂತಿದರ್ಕೆ ಪದ್ಮೋದರ (ಕಮಲನಾಭ) ನೀನೆ ಪೇೞು ಬಗೆದು ಕಜ್ಜಮನೀಗಳೆ ದಿವ್ಯಚಿತ್ತದಿಂ (ಎಲೈ ಕಮಲನಾಭನೇ ಹೀಗಿರುವಾಗ ಇದಕ್ಕೆ ಮಾಡಬೇಕಾದ ಕಾರ್ಯವನ್ನು ನೀನು ನಿನ್ನ ದಿವ್ಯಚಿತ್ತದಲ್ಲಿ ಯೋಚಿಸಿ ಹೇಳು.)
ಪದ್ಯ-೧೮:ಅರ್ಥ: ಸರ್ಪಧ್ವಜ ದುರ್ಯೋಧನನು ಯುದ್ಧಮಾಡದೆ ರಾಜ್ಯವನ್ನು ಕೊಡುವುದಿಲ್ಲ; ನಾನೂ ಒಡಹುಟ್ಟಿದವರೆಂದು ನಾಚಿಕೆಯಿಂದ ಸಂಕೋಚದಿಂದಿದ್ದೇನೆ. ಹಾಗಿದ್ದರೆ ಲೋಕದ ಜನರೆಲ್ಲ ಇವನು ಆಸ್ತಿತ್ವ ಇಲ್ಲದವನು- ಲೆಕ್ಕಕ್ಕಿಲ್ಲದವನು, ಎಂದು ಲೋಕವು ನಿಂದಿಸಿದರೆ ನನ್ನ ಕೀರ್ತಿಯೂ ಮಾಸಿಹೋಗುತ್ತದೆ. ಎಲೈ ಕಮಲನಾಭನೇ ಹೀಗಿರುವಾಗ ಇದಕ್ಕೆ ಮಾಡಬೇಕಾದ ಕಾರ್ಯವನ್ನು ನೀನು ನಿನ್ನ ದಿವ್ಯಚಿತ್ತದಲ್ಲಿ ಯೋಚಿಸಿ ಹೇಳು, ಎಂದನು ಧರ್ಮಜ
ವ|| ಎಂಬುದುಮಂಬುಜೋದರಂ ನಯದ ವಿನಯದ ಮಾತು ನೀನೆಂದಂತು ತೊಱೆಗೆ ನೀರಡಕರಲುಮಾದಿತ್ಯಂಗೆ ಸೊಡರಿಡಲುಮಿಂದ್ರಂಗೆ ದೇವಲೋಕಮಂ ಬಣ್ಣಿಸುವಂತೆಯುಂ ನಿನಗೇನೆಂದು ಕಜ್ಜಂಬೇೞ್ವುದಾದೊಡಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಂಬುಜೋದರಂ (ಎನ್ನಲು ಶ್ರೀಕೃಷ್ಣನು) ನಯದ ವಿನಯದ ಮಾತು ನೀನು ಎಂದ ಅಂತು (ನೀತಿ ಮತ್ತು ವಿನಯನಡತೆಯ ದೃಷ್ಟಿಯಿಂದ ನೋಡಿದರೆ ನೀನು ಹೇಳಿದ ಹಾಗೆಯೆ ಸರಿ.) ತೊಱೆಗೆ ನೀರಡಕರಲುಂ ಆದಿತ್ಯಂಗೆ ಸೊಡರಿಡಲುಂ ಇಂದ್ರಂಗೆ ದೇವಲೋಕಮಂ ಬಣ್ಣಿಸುವಂತೆಯುಂ(ನದಿಗೆ ನೀರು ತುಂಬುವ ಹಾಗೆ, ಸೂರ್ಯನಿಗೆ ದೀಪವನ್ನು ಹಚ್ಚುವ ಹಾಗೆ, ಇಂದ್ರನಿಗೆ ಸ್ವರ್ಗಲೋಕವನ್ನು ಬಣ್ಣಿಸುವ ಹಾಗೆ ಆಗುತ್ತದೆ->). ನಿನಗೆ ಏನೆಂದು ಕಜ್ಜಂ ಬೇೞ್ವುದು ಆದೊಡಂ (ನಿನಗೆ ಕಾರ್ಯರೀತಿಯನ್ನು ಹೇಗೆಂದು ತಿಳಿಸುವುದು? ಆದರೂ-)
ವಚನ:ಅರ್ಥ: ಎನ್ನಲು ಶ್ರೀಕೃಷ್ಣನು (ಧರ್ಮರಾಜನನ್ನು ಕುರಿತು) ‘ಧರ್ಮರಾಜ ನೀತಿ ಮತ್ತು ವಿನಯನಡತೆಯ ದೃಷ್ಟಿಯಿಂದ ನೋಡಿದರೆ ನೀನು ಹೇಳಿದ ಹಾಗೆಯೆ ಸರಿ. ನದಿಗೆ ನೀರು ತುಂಬುವ ಹಾಗೆ, ಸೂರ್ಯನಿಗೆ ದೀಪವನ್ನು ಹಚ್ಚುವ ಹಾಗೆ, ಇಂದ್ರನಿಗೆ ಸ್ವರ್ಗಲೋಕವನ್ನು ಬಣ್ಣಿಸುವ ಹಾಗೆ ಆಗುತ್ತದೆ. ನಿನಗೆ ಕಾರ್ಯರೀತಿಯನ್ನು ಹೇಗೆಂದು ತಿಳಿಸುವುದು? ಆದರೂ
ಮ|| ಬೆಸಮಾರ್ ಕೊಂಡವೊಲಕ್ಕುಮೊಂದೆ ನಯಮಂ ಕೇಳ್ ನಿನ್ನ ಮುಂದೀಗಳಾ
ನುಸಿರ್ದಪ್ಪೆಂ ಸಲೆ ಮೆಲ್ಪು ಬಲ್ಪನೞಿಗುಂ ಕೈವಾರಮುಂ ಕೂಡೆ ಕೂ|
ರಿಸುಗುಂ ನಿಕ್ಕುವಮಪ್ಪ ಕಾರಣದಿನಿಂತೀ ಸಾಮಮಂ ಮುಂ ಪ್ರಯೋ
ಗಿಸಿದೇಕೆಟ್ಟಪುದಂದು ದಂಡಮನೆ ಮುಂ ಮುಂತಿಕ್ಕುವಂ ಮಂತ್ರಿಯೇ|| ೧೯ ||
ಪದ್ಯ-೧೯:ಪದವಿಭಾಗ-ಅರ್ಥ:ಬೆಸಂ (ಕೆಲಸವು) ಆರ್ (ಯಾರಾದರೂ, ನಾವು)ಕೊಂಡವೊಲ್ ಅಕ್ಕುಂ ಒಂದೆ ನಯಮಂ ಕೇಳ್ (ಆರಂಭಿಸಿದ ಕಾರ್ಯವು ನಾವು ಉದ್ದೇಶಿಸಿದ ಹಾಗೆಯೇ ಆಗುವುದಿಲ್ಲ. ಕೇಳು) ನಿನ್ನ ಮುಂದೆ ಈಗಳ್ ಆನು ಉಸಿರ್ದಪ್ಪೆಂ (ನಿನ್ನ ಮುಮದೆ ಈಗ ಒಂದು ಮಾತನ್ನು ನಾನು ಹೇಳುತ್ತೇನೆ.) ಸಲೆ ಮೆಲ್ಪು ಬಲ್ಪನು ಅೞಿಗುಂ (ವಿಶೇಷ ಶಾಂತ ಮೃದುಸ್ವಭಾವ ಗಡುಸಿನ ಬಲಿಷ್ಠರನ್ನೂ ಇರಿದು ಸೋಲಿಸುತ್ತದೆ). ಕೈವಾರಮುಂ ಕೂಡೆ ಕೂರಿಸುಗುಂ (ಹೊಗಳಿಕೆಯೂ ಕೂಡಲೆ ಒಲಿಯುವಂತೆ ಮಾಡುತ್ತದೆ.) ನಿಕ್ಕುವಮಪ್ಪ ಕಾರಣದಿನಿಂತೀ (ನಿಜ ಮತ್ತು ನ್ಯಾಯವಾಗಿರುವ ಕಾರಣದಿಂದ) ಸಾಮಮಂ ಮುಂ ಪ್ರಯೋಗಿದೆ ಏಕೆಟ್ಟಪುದು ಎಂದು( ಸಾಮೋಪಾಯವನ್ನು ಮೊದಲು ಉಪಯೋಗಿಸದರಲ್ಲಿ ಏನು ಕೆಡುಕು ಎಂದು ಚಿಂತಿಸದೆ,) ದಂಡಮನೆ ಮುಂ ಮುಂತಿಕ್ಕುವಂ ಮಂತ್ರಿಯೇ (ಮೊದಲು ದಂಡೋಪಾಯವನ್ನು ಸೂಚಿಸುವವನು ಮಂತ್ರಿಯಾಗಬಲ್ಲನೇ?)
ಪದ್ಯ-೧೯:ಅರ್ಥ: ಆರಂಭಿಸಿದ ಕಾರ್ಯವು ನಾವು ಉದ್ದೇಶಿಸಿದ ಹಾಗೆಯೇ ಆಗುವುದಿಲ್ಲ. ನಿನ್ನ ಮುಮದೆ ಈಗ ಒಂದು ಮಾತನ್ನು ನಾನು ಹೇಳುತ್ತೇನೆ. ವಿಶೇಷ ಶಾಂತ ಮೃದುಸ್ವಭಾವ ಗಡುಸಿನ ಬಲಿಷ್ಠರನ್ನೂ ಇರಿದು ಸೋಲಿಸುತ್ತದೆ. ಹೊಗಳಿಕೆಯು ತಕ್ಷಣವೇ ಪ್ರೀತಿಯನ್ನುಂಟುಮಾಡುತ್ತದೆ. ನಿಜ ಮತ್ತು ನ್ಯಾಯವಾಗಿರುವ ಕಾರಣದಿಂದ, ಸಾಮೋಪಾಯವನ್ನು ಮೊದಲು ಉಪಯೋಗಿಸುವುದಲ್ಲಿ ಏನು ಕೆಡುವುದು? ಎಂದು ಚಿಂತಿಸದೆ, ಎಂದು ಮೊದಲು ದಂಡೋಪಾಯವನ್ನು ಸೂಚಿಸುವವನು ಮಂತ್ರಿಯಾಗಬಲ್ಲನೇ? ಎಂನು ಕೃಷ್ಣ.
ಬಲಿಯಂ ವಾಮನರೂಪದಿಂದಮೆ ವಲಂ ಮುಂ ಬೇಡಿದೆಂ ಭೂರಿ ಭೂ
ತಲಮಂ ಕುಂದೆನಗಾಯ್ತೆ ಕೊಂಡೆನಿಳೆಯಂ ಕಟ್ಟಿಟ್ಟೆನಿನ್ನುಂ ರಸಾ|
ತಲದೊಳ್ ದೈತ್ಯನನಂತೆ ನೀನುಮಿಳೆಯಂ ಮುಂ ಬೇಡಿಯಟ್ಟಟ್ಟೆ ಮಾ
ರ್ಮಲೆದಾತಂ ಕುಡದಿರ್ದೊಡಂದಿಱಿಯ ನೀಂ ಲೋಕಂ ಗುಣಂಗೊಳ್ವಿನಂ|| ೨೦ ||
ಪದ್ಯ-೨೦:ಪದವಿಭಾಗ-ಅರ್ಥ:ಬಲಿಯಂ ವಾಮನರೂಪದಿಂದಮೆ ವಲಂ ಮುಂ ಬೇಡಿದೆಂ ಭೂರಿ ಭೂತಲಮಂ (ಹಿಂದಿನ ಕಾಲದಲ್ಲಿ ವಾಮನನ ಆಕಾರದಲ್ಲಿ ಬಲಿಚಕ್ರವರ್ತಿಯಿಂದ ಈ ವಿಸ್ತಾರವಾದ ಭೂಮಿಯನ್ನು ಬೇಡಿ ತೆಗೆದುಕೊಂಡೆನು.) ಕುಂದೆನಗಾಯ್ತೆ ಕೊಂಡೆನಿಳೆಯಂ ಕಟ್ಟಿಟ್ಟೆನಿನ್ನುಂ ರಸಾತಲದೊಳ್ ದೈತ್ಯನನು ( ಆ ರಾಕ್ಷಸನನ್ನು ಇನ್ನೂ ಪಾತಾಳದಲ್ಲಿಯೇ ಕಟ್ಟಿಟ್ಟಿದ್ದೇನೆ.) ಅಂತೆ ನೀನುಂ ಇಳೆಯಂ ಮುಂ ಬೇಡಿಯು ಅಟ್ಟಟ್ಟೆ (ಹಾಗೆಯೇ ನೀನು ರಾಜ್ಯಕ್ಕಾಗಿ ಮೊದಲು ಬೇಡಿ ದೂತನನ್ನು ಕಳುಹಿಸಿಕೊಡು; ಹಾಗೆ ಕಳಿಸಿದಾಗ) ಮಾರ್ಮಲೆದಾತಂ ಕುಡದಿರ್ದೊಡೆ ಅಂದು ಇಱಿಯ ನೀಂ (ಆತನು ಪ್ರತಿಭಟಿಸಿ ಕೊಡದಿದ್ದರೆ ಅಂದು- ಅಗ ನೀನು ಇರಿಯಯ್ಯಾ) ಲೋಕಂ ಗುಣಂಗೊಳ್ವಿನಂ (ಆಗ ಲೋಕವೆಲ್ಲ ನಿನ್ನಗುಣವನ್ನು ಹೊಗಳುವಂತೆ)
ಪದ್ಯ-೨೦:ಅರ್ಥ: ಹಿಂದಿನ ಕಾಲದಲ್ಲಿ ವಾಮನನ ಆಕಾರದಲ್ಲಿ ಬಲಿಚಕ್ರವರ್ತಿಯಿಂದ ಈ ವಿಸ್ತಾರವಾದ ಭೂಮಿಯನ್ನು ಬೇಡಿ ತೆಗೆದುಕೊಂಡೆನು. ಅದರಿಂದ ನನಗೆ ಕುಂದು ಉಂಟಾಯಿತೇ? ಆ ರಾಕ್ಷಸನನ್ನು ಇನ್ನೂ ಪಾತಾಳದಲ್ಲಿಯೇ ಕಟ್ಟಿಟ್ಟಿದ್ದೇನೆ. ಹಾಗೆಯೇ ನೀನು ರಾಜ್ಯಕ್ಕಾಗಿ ಮೊದಲು ಬೇಡಿ ದೂತನನ್ನು ಕಳುಹಿಸಿಕೊಡು;ಹಾಗೆ ಕಳಿಸಿದಾಗ ಆತನು ಪ್ರತಿಭಟಿಸಿ ಕೊಡದಿದ್ದರೆ ಆಗ ಲೋಕವೆಲ್ಲ ನಿನ್ನಗುಣವನ್ನು ಹೊಗಳುವಂತೆ ಯುದ್ಧಮಾಡಯ್ಯಾ.
ವ|| ಎಂದು ನುಡಿದ ಮಂದರಧರನ ನುಡಿಗೆ ಕಿನಿಸಿ ಕಿಂಕಿಱಿವೋಗಿ ಭೀಮಸೇನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನುಡಿದ ಮಂದರಧರನ ನುಡಿಗೆ ಕಿನಿಸಿ ಕಿಂಕಿಱಿವೋಗಿ (ಕೆರಳಿ ಅಸಹನೆಹೊಂದಿ) ಭೀಮಸೇನನು ಇಂತೆಂದಂ-
ವಚನ:ಅರ್ಥ: ವ|| ಎಂಬುದಾಗಿ ಹೇಳಿದ ಕೃಷ್ಣನ ಮಾತಿಗೆ ಕೆರಳಿ ಅಸಹನೆಹೊಂದಿ ಭೀಮಸೇನನು ಹೀಗೆಂದನು-
ಕಂ|| ನಿಜ ಮತಮನೆನಗೆ ಮೀಱ
ಲ್ಕಜಾತ ದೊರೆಯಲ್ಲವಲ್ಲದಿರ್ದೊಡಮೆನ್ನಿಂ|
ದ ಜನಿಸಿ ನುಡಿಯಿಸಿದುವಹಿ
ಧ್ವಜನೋವದೆ ಮುನ್ನೆ ನೆಗೞ್ದ ದುಶ್ಚರಿತಂಗಳ್|| ೨೧||
ಪದ್ಯ-೨೧:ಪದವಿಭಾಗ-ಅರ್ಥ:ನಿಜ ಮತಮಂ ಎನಗೆ ಮೀಱಲ್ಕೆ ಅಜಾತ ದೊರೆಯಲ್ಲವು (ಅಜಾತ ಕೃಷ್ಣ, ನಿನ್ನ ಮಾತನ್ನು ಮೀರುವುದು ನನಗೆ ಯೋಗ್ಯವಲ್ಲ) ಅಲ್ಲದಿರ್ದೊಡಂ ಎನ್ನಿಂದ ಜನಿಸಿ ನುಡಿಯಿಸಿದುವು ಅಹಿಧ್ವಜನು ಓವದೆ ಮುನ್ನೆ ನೆಗೞ್ದ ದುಶ್ಚರಿತಂಗಳ್ (ಅದಲ್ಲದಿದ್ದರೂ ದುರ್ಯೋಧನನು ರಕ್ಷಿಸದೆ ಮಾಡಿದ ಕೆಟ್ಟಕೆಲಸಗಳು ನನ್ನಿಂದ ಒರಟಾಗಿ ಮಾತನಾಡಿಸುತ್ತಿವೆ.)
ಪದ್ಯ-೨೧:ಅರ್ಥ:೨೧. ಅಜಾತ ಕೃಷ್ಣ, ನಿನ್ನ ಮಾತನ್ನು ಮೀರುವುದು ನನಗೆ ಯೋಗ್ಯವಲ್ಲ. ಅದಲ್ಲದಿದ್ದರೂ ದುರ್ಯೋಧನನು ರಕ್ಷಿಸದೆ ಮಾಡಿದ ಕೆಟ್ಟಕೆಲಸಗಳು ನನ್ನಿಂದ ಒರಟಾಗಿ ಮಾತನಾಡಿಸುತ್ತಿವೆ.
ಶಾ|| ಆ ಲಾಕ್ಷಾಗೃಹ ದಾಹಮೊಂದೆ ವಿಷಸಂಯುಕ್ತಾನ್ನಮಂತೊಂದೆ ಪಾಂ
ಚಾಲೀ ನಿಗ್ರಹಮೊಂದೆ ಟಕ್ಕುವಗೆಯಿಂ ಗೆಲ್ದಿರ್ದ ಜೂದೊಂದೆ ಶಾ|
ರ್ದೂಲಾಭೀಲ ವನಂಗಳೊಳ್ ತಿರಿಪಿದೀಯುರ್ಕೊಂದೆ ಲೆಕ್ಕಂಗೊಳಲ್
ಕಾಲಂ ಸಾಲವೆ ಕಂಡುಮುಂಡುಮೆಮಗಿನ್ನಾತಂಗಳೊಳ್ ಪಾೞಿಯೇ|| ೨೨ ||
ಪದ್ಯ-೨೨:ಪದವಿಭಾಗ-ಅರ್ಥ:ಆ ಲಾಕ್ಷಾಗೃಹ ದಾಹಮೊಂದೆ (ಆ ಅರಗಿನ ಮನೆಯಲ್ಲಿ ಸುಟ್ಟುದೊಂದೇ), ವಿಷಸಂಯುಕ್ತ ಅನ್ನಮಂತು ಒಂದೆ (ವಿಷಮಿಶ್ರವಾದ ಆಹಾರವನ್ನು ತಿನ್ನಿಸಿದುದೊಂದೇ,) ಪಾಂಚಾಲೀ ನಿಗ್ರಹಮೊಂದೆ (ದ್ರೌಪದಿಗೆ ಅವಮಾನಪಡಿಸಿದುದೊಂದೇ), ಟಕ್ಕುವಗೆಯಿಂ (ಠಕ್ಕು ಬಗೆಯಿಂದ) ಗೆಲ್ದಿರ್ದ ಜೂದೊಂದೆ (ಮೋಸದ ರೀತಿಯಿಂದ ಗೆದ್ದ ಜೂಜು ಒಂದೇಯೇ?,) ಶಾರ್ದೂಲ ಆಭೀಲ ವನಂಗಳೊಳ್ ತಿರಿಪಿದ ಈ ಯುರ್ಕು ಒಂದೆ (ಹುಲಿಗಳಿಂದ ತುಂಬಿದ ಭಯಂಕರವಾದ ಕಾಡಿನಲ್ಲಿ ಅಲೆಯುವ ಹಾಗೆ ಮಾಡಿದ ಆ ಅಹಂಕಾರದ ಸೊಕ್ಕು ಒಂದೇಯೇ?) ಲೆಕ್ಕಂಗೊಳಲ್ ಕಾಲಂ ಸಾಲವೆ (ಈ ಅನ್ಯಾಯಗಳನ್ನು ಲೆಕ್ಕ ಮಾಡುವುದಕ್ಕೆ ಕಾಲಾವೇ ಸಾಕಾಗುವುದಿಲ್ಲ!) ಕಂಡುಂ ಉಂಡುಂ ಎಮಗೆ ಇನ್ನೂ ಆತಂಗಳೊಳ್ ಪಾೞಿಯೇ (ನೋಡಿಯೂ, ಅನುಭವಿಸಿಯೂ, ಇನ್ನೂ ಅವರಲ್ಲಿ ನಮಗೆ ಧರ್ಮಪಾಲನೆಯೆ?)
ಪದ್ಯ-೨೨:ಅರ್ಥ: ದುರ್ಯೋಧನನು ನಮ್ಮನ್ನು, ಆ ಅರಗಿನ ಮನೆಯಲ್ಲಿ ಸುಟ್ಟಿರುವುದು ಒಂದೇ? ಇಷ್ಟೇ ಅಲ್ಲ ಇನ್ನೂ ಅನೇಕ ದ್ರೋಹ ಚಿಂತನೆಗಳಿವೆ ಇದೆ, ವಿಷಮಿಶ್ರವಾದ ಆಹಾರವನ್ನು ತಿನ್ನಿಸಿದುದು ಒಂದೇ, ದ್ರೌಪದಿಗೆ ಅವಮಾನಪಡಿಸಿದುದೊಂದೇ, ಮೋಸದ ರೀತಿಯಿಂದ ಗೆದ್ದ ಜೂಜು ಒಂದೇಯೇ?, ಹುಲಿಗಳಿಂದ ತುಂಬಿದ ಭಯಂಕರವಾದ ಕಾಡಿನಲ್ಲಿ ಅಲೆಯುವ ಹಾಗೆ ಮಾಡಿದ ಆ ಅಹಂಕಾರದ ಸೊಕ್ಕು ಒಂದೇಯೇ? ಈ ಅನ್ಯಾಯಗಳನ್ನು ಲೆಕ್ಕ ಮಾಡುವುದಕ್ಕೆ ಕಾಲಾವೇ ಸಾಕಾಗುವುದಿಲ್ಲ! ನೋಡಿಯೂ, ಅನುಭವಿಸಿಯೂ, ಇನ್ನೂ ಅವರಲ್ಲಿ ನಮಗೆ ಧರ್ಮಪಾಲನೆಯೆ?
ಕಂ|| ಜಟಮಟಿಸಿಕೊಂಡು ನಿಮ್ಮೀ
ಘಟಿಯಿಸುವೀ ಸಂಧಿ ಕೌರವರ್ಕಳೊಳೆನ್ನಿಂ|
ಘಟಿತ ಜರಾಸಂಧೋರ
ಸ್ತಟ ಸಂಧಿವೊಲೊಂದೆ ಪೊೞ್ತಳ್ ವಿಘಟಿಸದೇ|| ೨೩ ||
ಪದ್ಯ-೨೩:ಪದವಿಭಾಗ-ಅರ್ಥ:ಜಟಮಟಿಸಿಕೊಂಡು (ಸಡಗರದಿಂದ) ನಿಮ್ಮ ಈ ಘಟಿಯಿಸುವ ಈ ಸಂಧಿ ಕೌರವರ್ಕಳೊಳ್ (ಈಗ ನೀವು ಕೌರವರಲ್ಲಿ ಮಾಡಬೇಕೆಂದಿರುವ ಸಂಧಿಕಾರ್ಯವು) ಎನ್ನಿಂ (ನನ್ನಿಂದ), ಘಟಿತ ಜರಾಸಂಧ ಓರಸ್ತಟ ಸಂಧಿವೊಲ್ (ಜರಾಸಂಧನ ಸೇರಿರುವ ಎದೆಯ ಜೋಡಣೆಯ ಹಾಗೆ) ಒಂದೆ ಪೊೞ್ತಳ್ ವಿಘಟಿಸದೇ(ಒಂದೇ ಹಗಲಲ್ಲಿ ಮುರಿದುಹೋಗದೆ ಇರುತ್ತದೆಯೇ? )
ಪದ್ಯ-೨೩:ಅರ್ಥ:ಸಡಗರದಿಂದ ಈಗ ನೀವು ಕೌರವರಲ್ಲಿ ಮಾಡಬೇಕೆಂದಿರುವ ಸಂಧಿಕಾರ್ಯವು ಜರಾಸಂಧನ ಸೇರಿರುವ ಎದೆಯ ಜೋಡಣೆಯ ಹಾಗೆ ನನ್ನಿಂದ ಒಂದೇ ಹಗಲಲ್ಲಿ ಮುರಿದುಹೋಗದೆ ಇರುತ್ತದೆಯೇ?
ಉ|| ತೋಡುವೆನೊರ್ವನೊಳ್ಗರುಳನುರ್ವಿಗೆ ನೆತ್ತರನೆಯ್ದೆ ಪೀರ್ದುವಿ
ರ್ದಾಡುವೆನೊರ್ವನೂರುಗಳನೆನ್ನ ಗದಾಶನಿಘಾತದಿಂದೆ ನು|
ರ್ಗಾಡುವೆನೆಂದು ಲೋಕಮಱಿಯುತ್ತಿರೆ ಪೂಣ್ದೆನಗಂತೆ ಸಂತಸಂ
ಮಾಡದೆ ಸಂಧಿ ಮಾಡಿ ಕುರುಪುತ್ರರೊಳೆನ್ನನೆ ಜೋಡುಮಾೞ್ಪಿರೇ|| ೨೪ ||
ಪದ್ಯ-೨೪:ಪದವಿಭಾಗ-ಅರ್ಥ:ತೋಡುವೆನು ಒರ್ವನ ಉಳ್ಗರುಳನು ಉರ್ವಿಗೆ (ಒಬ್ಬನ ಹೊಟ್ಟೆಯೊಳಗಿನ ಕರುಳನ್ನು ನೆಲಕ್ಕೆ ಬಗಿದುಹಾಕುತ್ತೇನೆ) ನೆತ್ತರನು ಎಯ್ದೆಪೀರ್ದು ವಿರ್ದಾಡುವೆನು (ರಕ್ತವನ್ನು ಚೆನ್ನಾಗಿ ಹೀರಿ ಔತಣಮಾಡುತ್ತೇನೆ) ಒರ್ವನ ಊರುಗಳನು ಎನ್ನ ಗದಾ ಅಶನಿಘಾತದಿಂದೆ ನುರ್ಗಾಡುವೆನು ಎಂದು (ಒಬ್ಬನ/ ದುರ್ಯೋಧನನ ತೊಡೆಗಳನ್ನು ನನ್ನ ಗದೆಯೆಂಬ ವಜ್ರಾಯುಧದಿಂದ ಅಥವಾ ಗದೆ ಎಂಬ ಸಿಡಿಲಿನ ಹೊಡೆತದಿಂದ ನುಚ್ಚುನೂರಾಗಿ ಮಾಡುತ್ತೇನೆ) ಲೋಕಮಱಿಯುತ್ತಿರೆ ಪೂಣ್ದ ಎನಗೆ (ಎಂದು ಪ್ರಪಂಚವೆಲ್ಲ ತಿಳಿದ ಹಾಗೆ ಪ್ರತಿಜ್ಷೆಮಾಡಿದ ನನಗೆ) ಅಂತೆ ಸಂತಸಂ ಮಾಡದೆ ಸಂಧಿ ಮಾಡಿ (ಸಂತೋಷವನ್ನುಂಟು ಮಾಡದೆ ಕೌರವರೊಡನೆ ಸಂಧಿಮಾಡಿ) ಕುರುಪುತ್ರರೊಳ್ ಎನ್ನನೆ ಜೋಡುಮಾೞ್ಪಿರೇ (ಕೌರವರೊಡನೆ ನನ್ನನ್ನು ಅವರಿಗೆ ಜೊತೆಮಾಡುತ್ತೀರಾ?)
ಪದ್ಯ-೨೪:ಅರ್ಥ:ಆ ಒಬ್ಬ ದುಶ್ಶಾಸನನ ಹೊಟ್ಟೆಯೊಳಗಿನ ಕರುಳನ್ನು ನೆಲಕ್ಕೆ ಬಗಿದುಹಾಕುತ್ತೇನೆ. ರಕ್ತವನ್ನು ಚೆನ್ನಾಗಿ ಹೀರಿ ಔತಣಮಾಡುತ್ತೇನೆ. ಒಬ್ಬನ (ದುರ್ಯೋಧನನ) ತೊಡೆಗಳನ್ನು ನನ್ನ ಗದೆಯೆಂಬ ವಜ್ರಾಯುಧದ ಅಥವಾ ಗದೆ ಎಂಬ ಸಿಡಿಲಿನ ಹೊಡೆತದಿಂದ ನುಚ್ಚುನೂರಾಗಿ ಮಾಡುತ್ತೇನೆ, ಎಂದು ಪ್ರಪಂಚವೆಲ್ಲ ತಿಳಿದ ಹಾಗೆ ಪ್ರತಿಜ್ಷೆಮಾಡಿದ ನನಗೆ ಸಂತೋಷವನ್ನುಂಟು ಮಾಡದೆ ಸಂಧಿಮಾಡಿ ಕೌರವರೊಡನೆ ನನ್ನನ್ನು ಅವರಿಗೆ ಜೊತೆಮಾಡುತ್ತೀರಾ?
ವ|| ಎಂದು ಮಸಗಿದ ಮದಾಂಧಗಂಧಸಿಂಧುರದಂತೆ ದೆಸೆಗೆ ಮಸಗಿದ ವಾಯುಪುತ್ರನಂ ಧರ್ಮಪುತ್ರಂ ಸಂತೈಸಿ-
ವಚನ:ಪದವಿಭಾಗ-ಅರ್ಥ:ಎಂದು ಮಸಗಿದ (ಸೊಕ್ಕೇರಿದ) ಮದಾಂಧಗಂಧ ಸಿಂಧುರದಂತೆ (ಸೊಕ್ಕೇರಿದ ಮದದಿಂದ ಕುರುಡಾದ ಮದ್ದಾನೆಯಂತೆ) ದೆಸೆಗೆ ಮಸಗಿದ ವಾಯುಪುತ್ರನಂ (ದಿಕ್ಕುದಿಕ್ಕಿಗೂ ತಿರುಗಿ ವಿಜೃಂಭಿಸಿದ ಭೀಮಸೇನನನ್ನು) ಧರ್ಮಪುತ್ರಂ ಸಂತೈಸಿ-
ವಚನ:ಅರ್ಥ:ಎಂದು ಸೊಕ್ಕೇರಿದ ಮದದಿಂದ ಕುರುಡಾದ ಮದ್ದಾನೆಯಂತೆ ದಿಕ್ಕುದಿಕ್ಕಿಗೂ ತಿರುಗಿ ವಿಜೃಂಭಿಸಿದ ಭೀಮಸೇನನನ್ನು ಧರ್ಮರಾಯನು ಸಮಾಧಾನಪಡಿಸಿ-
ಮ|| ಬಕ ಕಿಮ್ಮೀರ ಜಟಾಸುರೋದ್ಧತ ಜರಾಸಂಧರ್ಕಳಂ ಸಂದ ಕೀ
ಚಕರಂ ನೂರ್ವರುಮಂ ಪಡಲ್ವಡಿಸಿದೀ ತ್ವಚ್ಚಂಡದೋರ್ದಂಡಮು|
ಗ್ರ ಕುರುಕ್ಷ್ಮಾಪ ಮಹೀರುಹಪ್ರಕರಮಂ ಮತ್ತೇಭವಿಕ್ರೀಡಿತ
ಕ್ಕೆ ಕರಂ ಪೋಲ್ವೆಗೆ ವಂದು ಭೀಮ ರಣದೊಳ್ ನುರ್ಗಾಡದೇಂ ಪೋಕುಮೇ|| ೨೫ ||
ಪದ್ಯ-೨೫:ಪದವಿಭಾಗ-ಅರ್ಥ:ಬಕ ಕಿಮ್ಮೀರ ಜಟಾಸುರೋದ್ಧತ ಜರಾಸಂಧರ್ಕಳಂ, ಸಂದ ಕೀಚಕರಂ ನೂರ್ವರುಮಂ (ಪ್ರಸಿದ್ಧರಾದ ನೂರು ಕೀಚಕರನ್ನೂ), ಪಡಲ್ವಡಿಸಿದ ಈ ತ್ವಚ್ಚಂಡದೋರ್ದಂಡಂ (ಕೆಳಗೆ ಕೆಡವಿದ ನಿನ್ನ ಭಯಂಕರವಾದ ತೋಳುಗಳು,) ಉಗ್ರ ಕುರುಕ್ಷ್ಮಾಪ ಮಹೀರುಹ ಪ್ರಕರಮಂ (ಉಗ್ರ ಕೌರವ ರಾಜರೆಂಬ ಮರಗಳ ಸಮೂಹವು) ಮತ್ತೇಭವಿಕ್ರೀಡಿತಕ್ಕೆ ಕರಂ ಪೋಲ್ವೆಗೆ ವಂದು(ಮದ್ದಾನೆಯಾಟಕ್ಕೆ ಸಮ ಸಮನಾಗಿ ನಿಂತು) ಭೀಮ ರಣದೊಳ್ ನುರ್ಗಾಡದೇಂ ಪೋಕುಮೇ (ಭೀಮನೇ ಯುದ್ಧದಲ್ಲಿ ನುಚ್ಚು ಮಾಡದೇ ಬಿಡುತ್ತದೆಯೆ? )
ಪದ್ಯ-೨೫:ಅರ್ಥ:ಬಕ, ಕಿಮ್ಮೀರ, ಜಟಾಸುರ, ಗರ್ವಿಷ್ಠರಾದ ಜರಾಸಂಧಾದಿಗಳನ್ನೂ ಪ್ರಸಿದ್ಧರಾದ ನೂರು ಕೀಚಕರನ್ನೂ ಕೆಳಗೆ ಕೆಡವಿದ ನಿನ್ನ ಭಯಂಕರವಾದ ತೋಳುಗಳು, ಉಗ್ರ ಕೌರವರಾಜರೆಂಬ ಮರಗಳ ಸಮೂಹವು ಮದ್ದಾನೆಯಾಟಕ್ಕೆ ಸಮನಾಗಿ ಭೀಮನೇ ಯುದ್ಧದಲ್ಲಿ ನುಚ್ಚು ಮಾಡದೇ ಬಿಡುತ್ತದೆಯೆ?
ವ|| ಎಂದು ನಾರಾಯಣನುಂ ಧರ್ಮಪುತ್ರನುಂ ವೃಕೋದರನ ಮನಮನಾರೆ ನುಡಿದು ಮತ್ತಂ ನಾರಾಯಣಂಗೆ ಯುಧಿಷ್ಠಿರಂ ನಿಷ್ಠಿತ ಕಾರ್ಯಮನನುಷ್ಕಿಸಲೆಂದಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ನಾರಾಯಣನುಂ ಧರ್ಮಪುತ್ರನುಂ ವೃಕೋದರನ ಮನಮನು ಆರೆ ನುಡಿದು (ಭೀಮನ ಮನಸ್ಸಿಗೆ ಸಮಾಧಾನವಾಗುವಂತೆ ಹೇಳಿ-) ಮತ್ತಂ ನಾರಾಯಣಂಗೆ ಯುಧಿಷ್ಠಿರಂ ನಿಷ್ಠಿತ ಕಾರ್ಯಮನು ಅನುಷ್ಕಿಸಲೆಂದು (ಕಾರ್ಯವನ್ನು ಮಾಡಬೇಕೆಂದು) ಇಂತೆಂದಂ-
ವಚನ:ಅರ್ಥ:ವ|| ಎಂದು ಕೃಷ್ಣನೂ ಧರ್ಮರಾಯನೂ ಭೀಮನ ಮನಸ್ಸಿಗೆ ಸಮಾಧಾನವಾಗುವಂತೆ ಹೇಳಿ- ಪುನ ಧರ್ಮರಾಯನು ಕೃಷ್ಣನಿಗೆ ನಿರ್ಧರಿಸಿದ ಕಾರ್ಯವನ್ನು ಮಾಡಬೇಕೆಂದು ಹೀಗೆಂದು ತಿಳಿಸಿದನು.
ಮ|| ಅವನೀನಾಥನ ಗೆಯ್ದ ಪೊಲ್ಲಮೆಗಮೆನ್ನೊಳ್ಪಿಂಗಮಿಂ ಸಕ್ಕಿಯಾ
ಗವನೀವಂತುಟನೀಯದಂತುಟನದಂ ಬಲ್ಲಂತು ಕಾಲ್ಗುತ್ತಿನೋ|
ಡವನೀ ಭಾಗದೊಳೆನ್ನ ಭಾಗಮನದಂ ತಾನೀಯದಿರ್ದಾಗಳೆ
ನ್ನವನೀ ರಕ್ಷಣ ದಕ್ಷ ದಕ್ಷಿಣ ಭುಜಸ್ತಂಭಂ ಕೊಲಲ್ ಸಾಲದೇ|| ೨೬ ||
ಪದ್ಯ-೨೬:ಪದವಿಭಾಗ-ಅರ್ಥ:ಅವನೀನಾಥನ ಗೆಯ್ದ ಪೊಲ್ಲಂ ಎಮಗಂ ಎನ್ನೊಳ್ಪಿಂಗಂ (ಇಂ) ಸಕ್ಕಿಯಾಗು (ರಾಜನಾದ ದುರ್ಯೋಧನನು ಮಾಡಿದ ಕಡುಕಿಗೂ, ನನ್ನ ಒಳ್ಳೆಯ ಸ್ವಭಾವಕ್ಕೂ ನೀನು ಸಾಕ್ಷಿಯಾಗು,) ಅವನು ಈವಂತುಟಂ ಈಯದಂತುಟನು (ಅವನು ಭೂಮಿಯನ್ನು ಕೊಡುವುದನ್ನೂ ಕೊಡದಿರುವುದನ್ನೂ) ಅದಂ ಬಲ್ಲಂತು ಕಾಲ್ಗುತ್ತಿ (ಕಾಲಲ್ಲಿ ಕುಕ್ಕಿ) ನೋಡು, (ನೀನು ತಿಳಿದಂತೆ ವಿಚಾರಮಾಡಿ ನೋಡು.) ಅವನೀ ಭಾಗದೊಳು ಎನ್ನ ಭಾಗಮನು ಅದಂ ತಾನು ಈಯದಿರ್ದಾಗಳು (ನ್ಯಾಯಯುತವಾಗಿ ನನಗೆ ಬರಬೇಕಾದುದನ್ನು ಅವನು ಕೊಡದಿದ್ದಾಗ) ಎನ್ನ ಅವನೀ ರಕ್ಷಣ ದಕ್ಷ ದಕ್ಷಿಣ ಭುಜಸ್ತಂಭಂ ಕೊಲಲ್ ಸಾಲದೇ(ಭೂರಕ್ಷಣೆಗೆ ನನ್ನಸಮರ್ಥವಾದ ಕುಂಭದಂತಿರುವ ಬಲತೋಳು ಅವನನ್ನು ಕೊಲ್ಲಲು ಸಾಲದೇ?)
ಪದ್ಯ-೨೬:ಅರ್ಥ:ರಾಜನಾದ ದುರ್ಯೋಧನನು ಮಾಡಿದ ಕೆಡುಕಿಗೂ ನನ್ನ ಒಳ್ಳೆಯ ಸ್ವಭಾವಕ್ಕೂ ನೀನು ಸಾಕ್ಷಿಯಾಗಿರುವೆ. ಅವನು ಭೂಮಿಯನ್ನು ಕೊಡುವುದನ್ನೂ ಕೊಡದಿರುವುದನ್ನೂ ನೀನು ತಿಳಿದಂತೆ ವಿಚಾರಮಾಡಿ ನೋಡು. ನ್ಯಾಯಯುತವಾಗಿ ನನಗೆ ಬರಬೇಕಾದುದನ್ನು ಅವನು ಕೊಡದಿದ್ದಾಗ ಭೂರಕ್ಷಣೆಗೆ ನನ್ನಸಮರ್ಥವಾದ ಕುಂಭದಂತಿರುವ ಬಲತೋಳು ಅವನನ್ನು ಕೊಲ್ಲಲು ಸಾಲದೇ ಹೋಗುತ್ತದೆಯೇ?
ವ|| ಎಂದು ಧರ್ಮರಾಜಂ ರಾಜರಾಜನಲ್ಲಿಗೆ ನಿರ್ವ್ಯಾಜದಿಂ ದಿತಿಜಕುಳ ವಿಜಯಿಯಪ್ಪಜಿತನನೆ ದೂತಕಾರ್ಯಕ್ಕಟ್ಟಿದೊಡಸುರ ವಿಜಯಿಯುಂ ಕತಿಪಯ ಪ್ರಯಾಣಂಗಳಿಂ ಮದಗಜೇಂದ್ರಪುರಮನೆಯ್ದಿ-
ವಚನ:ಪದವಿಭಾಗ-ಅರ್ಥ:ಎಂದು ಧರ್ಮರಾಜಂ ರಾಜರಾಜನಲ್ಲಿಗೆ ನಿರ್ವ್ಯಾಜದಿಂ (ಕೌರವಚಕ್ರವರ್ತಿಯ ಹತ್ತಿರಕ್ಕೆ ನಿಷ್ಕಪಟಿಯಾಗಿ) ದಿತಿಜಕುಳ ವಿಜಯಿಯಪ್ಪ ಅಜಿತನನೆ (ರಾಕ್ಷಸರನ್ನು ಗೆಲ್ಲಬಲ್ಲ ಸೋಲಿಲ್ಲದ ಕೃಷ್ಣನನ್ನೇ) ದೂತಕಾರ್ಯಕ್ಕೆ ಅಟ್ಟಿದೊಡೆ (ದೂತಕಾರ್ಯಕ್ಕಾಗಿ ಸಂಧಿಯನ್ನು ಏರ್ಪಡಿಸುವ ರಾಯಭಾರಿಯಾಗಿ ಕಳುಹಿಸಿದಾಗ) ಅಸುರ ವಿಜಯಿಯುಂ ಕತಿಪಯ ಪ್ರಯಾಣಂಗಳಿಂ ಮದಗಜೇಂದ್ರ ಪುರಮನು ಎಯ್ದಿ (ಕೃಷ್ಣನು ಕೆಲವು ದಿವಸದ ಪ್ರಯಾಣದಿಂದ ಹಸ್ತಿನಾಪಟ್ಟಣವನ್ನು ಸೇರಿ)-
ವಚನ:ಅರ್ಥ:ಎಂದು ಧರ್ಮರಾಯನು ಕೌರವಚಕ್ರವರ್ತಿಯ ಹತ್ತಿರಕ್ಕೆ ನಿಷ್ಕಪಟಿಯಾಗಿ- ರಾಕ್ಷಸರಬ್ಬು ಗೆದ್ದವನಾದ ಸೋಲಿಲ್ಲದ ಕೃಷ್ಣನನ್ನು ದೂತಕಾರ್ಯಕ್ಕಾಗಿ ಸಂಧಿಯನ್ನು ಏರ್ಪಡಿಸುವ ರಾಯಭಾರಿಯಾಗಿ ಕಳುಹಿಸಿದಾಗ, ಅಸರರನ್ನು ಗೆದ್ದ ಕೃಷ್ಣನು ಕೆಲವು ದಿವಸದ ಪ್ರಯಾಣದಿಂದ ಹಸ್ತಿನಾಪಟ್ಟಣವನ್ನು ಸೇರಿದನು. ಹಾಗೆ ಹೋಗಿ-
ಚಂ|| ಮದಗಜ ಬೃಂಹಿತಧ್ವನಿ ತುರಂಗಮ ಹೇಷಿತಘೋಷದೊಳ್ ಪೊದ
ೞ್ದೊದವೆ ಗಭೀರ ಧೀರ ಮುರಜಧ್ವನಿ ಯೌವನ ಮತ್ತಕಾಮಿನೀ|
ಮೃದು ಪದ ನೂಪುರ ಕ್ವಣಿತದೊಳ್ ಪೆಣೆದೊಂದಿರೆ ಚಕ್ರಿಗುಂಟುಮಾ
ಡಿದುದು ಪೊೞಲ್ ಸುರಾದ್ರಿಮಥಿತಾಂಬುಧಿಜಾತನಿನಾದ ಶಂಕೆಯಂ|| ೨೭ ||
ಪದ್ಯ-೨೭:ಪದವಿಭಾಗ-ಅರ್ಥ:ಮದಗಜ ಬೃಂಹಿತಧ್ವನಿ (ಮದ್ದಾನೆಗಳ ಘೀಂಕಾರಶಬ್ದವು) ತುರಂಗಮ ಹೇಷಿತಘೋಷದೊಳ್ (ಕುದುರೆಗಳ ಹೇಷಾರವದಜೊತೆ) ಪೊದೞ್ದು ಒದವೆ (ಸೇರಿಕೊಂಡು ಕೇಳುತ್ತಿರಲು) ಗಭೀರ ಧೀರ ಮುರಜಧ್ವನಿ (ಮದ್ದಲೆಗಳ ಗಂಭೀರನಾದ ನಾದವು,) ಯೌವನ ಮತ್ತಕಾಮಿನೀ ಮೃದು ಪದ ನೂಪುರ ಕ್ವಣಿತದೊಳ್ (ಯೌವನದ ಮದಿಸಿದ ಸ್ತ್ರೀಯರ ಕಾಲಂದಿಗೆಗಳ ಶಬ್ದ ಇವುಗಳಿಂದ) ಪೆಣೆದೊಂದಿರೆ (ಹೆಣೆದು ಹೊಂದಿರಲು, ಕೂಡಿರಲು) ಚಕ್ರಿಗೆ ( ಕೃಷ್ಣನಿಗೆ) ಉಂಟುಮಾಡಿದುದು ಪೊೞಲ್ ಸುರಾದ್ರಿಮಥಿತ (ಮಂದರ ಪರ್ವತದಿಂದ ಕಡೆಯಲ್ಪಟ್ಟ) ಅಂಬುಧಿಜಾತ ನಿನಾದ ಶಂಕೆಯಂ (ಕ್ಷೀರಸಮುದ್ರದದಿಂದ ಉಂಟಾದ ಸದ್ದೋ ಎಂಬ ಶಂಕೆಯನ್ನು ಆ ನಗರವು ಕೃಷ್ಣನಿಗೆ ಉಂಟುಮಾಡಿತು. )
ಪದ್ಯ-೨೭:ಅರ್ಥ:ಆ ಹಸ್ತಿನಾಪುರವು, ಕುದುರೆಗಳ ಹೇಷಾರವಜೊತೆ ಮದ್ದಾನೆಗಳ ಘೀಂಕಾರಶಬ್ದವು ಸೇರಿಕೊಂಡು ಕೇಳುತ್ತಿರಲು ಮದ್ದಲೆಗಳ ಗಂಭೀರನಾದ ನಾದ, ಯೌವನದ ಮದಿಸಿದ ಸ್ತ್ರೀಯರ ಕಾಲಂದಿಗೆಗಳ ಶಬ್ದ ಇವುಗಳಿಂದ ಕೂಡಿರಲು ಮಂದರ ಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದದಿಂದ ಉಂಟಾದ ಸದ್ದೋ ಎಂಬ ಶಂಕೆಯನ್ನು ಕೃಷ್ಣನಿಗೆ ಉಂಟುಮಾಡಿತು.
ವ|| ಅಂತು ನಾಗಪುರಮನಿೞಿಸುವ ನಾಗಪುರಮನಾ ನಾಗಶಯನಂ ಪೊಕ್ಕು ವಿದುರಂ ಪಾಂಡವ ಪಕ್ಷಪಾತಿಯಪ್ಪುದಱಿಂದಾತನ ಮನೆಗೆ ವರೆ ತನಗಿದಿರ್ವಂದ ಕೊಂತಿಗಸುರಾಂತಕನೆಱಗಿ ತನಗೆಱಗಿದ ವಿದುರನಂ ಪರಸಿ ರಥದಿಂದಮಿೞಿದು ಮಣಿಮಯ ಪೀಠದೊಳ್ ಕುಳ್ಳಿರ್ದು ಪಾಂಡುತನೂಜರ ಕುಶಲವಾರ್ತೆಯನಱಿಪೆ ತದನಂತರಂ ವಿದುರನಜನನೇಗೆಯ್ವ ತೆಱನುಮನಱಿಯದೆ-
ವಚನ:ಪದವಿಭಾಗ-ಅರ್ಥ:ಅಂತು ನಾಗಪುರಮನ ಇೞಿಸುವ (ಆದಿ ಶೇಷನ ಭೋಗವತೀಪಟ್ಟಣವನ್ನು ಕೀಳುಮಾಡುವ ಎಂದರೆ ಮೀರಿಸುವ) ನಾಗಪುರಮನು (ಹಸ್ತಿನಾಪಟ್ಟಣವನ್ನು) ಆ ನಾಗಶಯನಂ ಪೊಕ್ಕು (ನಾಗ-ಶೇಷಶಯನನಾದ ಶ್ರೀಕೃಷ್ಣನು ಪ್ರವೇಶಿಸಿ,) ವಿದುರಂ ಪಾಂಡವ ಪಕ್ಷಪಾತಿಯಪ್ಪುದಱಿಂದ ಆತನ ಮನೆಗೆ ವರೆ (ವಿದುರನು ಪಾಂಡವಪಕ್ಷಪಾತಿಯಾದುದರಿಂದ ಆತನ ಮನೆಗೆ ಬರೆ- ಬರಲು) ತನಗೆ ಇದಿರ್ವಂದ ಕೊಂತಿಗೆ ಅಸುರಾಂತಕನು ಎಱಗಿ (ತನಗೆ ಎದುರಾಗಿ ಬಂದ ಕುಂತಿದೇವಿಗೆ ಕೃಷ್ಣನು ಎರಗಿ- ನಮಸ್ಕಾರ ಮಾಡಿ,) ತನಗೆ ಎಱಗಿದ ವಿದುರನಂ ಪರಸಿ (ತನಗೆ ನಮಸ್ಕಾರ ಮಾಡಿದ ವಿದುರನನ್ನು ಹರಸಿದನು) ರಥದಿಂದಂ ಇೞಿದು ಮಣಿಮಯ ಪೀಠದೊಳ್ ಕುಳ್ಳಿರ್ದು (ರಥದಿಂದ ಇಳಿದು ರತ್ನಖಚಿತವಾದ ಪೀಠದಲ್ಲಿ ಕುಳಿತುಕೊಂಡು) ಪಾಂಡುತನೂಜರ ಕುಶಲವಾರ್ತೆಯು ಅಱಿಪೆ (ಪಾಂಡವರ ಕ್ಷೇಮಸಮಾಚಾರವನ್ನು ತನ್ನ ಸೋದರತ್ತೆ ಕುಂತಿಗೆ ತಿಳಿಸಿದನು. ಅರಿಪೆ- ತಿಳಿಸಲು,) ತದನಂತರಂ ವಿದುರನು ಅಜನನು (ಕೃಷ್ಣನನ್ನು) ಏಗೆಯ್ವ ತೆಱನುಮನು ಅಱಿಯದೆ -ಏನು ಗಯ್ಯಬೇಕೆಂಬ ತೆರವನ್ನು ಅರಿಯದೆ, ( ಕೃಷ್ಣನನ್ನು ಹೇಗೆ ಸತ್ಕಾರಮಾಡಬೇಕೆಂದು ವಿದುರನಿಗೆ ಅರಿಯದಾಯಿತು/ ತಿಳಿಯದಾಯಿತು)-
ವಚನ:ಅರ್ಥ:ಆದಿ ಶೇಷನ ಭೋಗವತೀಪಟ್ಟಣವನ್ನು ಮೀರಿಸುವ ಹಸ್ತಿನಾಪಟ್ಟಣವನ್ನು ಶ್ರೀಕೃಷ್ಣನು ಪ್ರವೇಶಿಸಿದನು. ವಿದುರನು ಪಾಂಡವಪಕ್ಷಪಾತಿಯಾದುದರಿಂದ ಆತನ ಮನೆಗೆ ಬಂದನು. ಆಗ ತನಗೆ ಎದುರಾಗಿ ಬಂದ ಕುಂತಿದೇವಿಗೆ ಕೃಷ್ಣನು ನಮಸ್ಕಾರ ಮಾಡಿ, ತನಗೆ ನಮಸ್ಕಾರ ಮಾಡಿದ ವಿದುರನನ್ನು ಹರಸಿದನು. ರಥದಿಂದ ಇಳಿದು ರತ್ನಖಚಿತವಾದ ಪೀಠದಲ್ಲಿ ಕುಳಿತುಕೊಂಡು ಪಾಂಡವರ ಕ್ಷೇಮಸಮಾಚಾರವನ್ನು ತನ್ನ ಸೋದರತ್ತೆ ಕುಂತಿಗೆ ತಿಳಿಸಿದನು. ಕೃಷ್ಣನಿಗೆ ಹೇಗೆ ಸತ್ಕಾರಮಾಡಬೇಕೆಂದು ವಿದುರನಿಗೆ ತಿಳಿಯದಾಯಿತು.
  • ಟಿಪ್ಪಣಿ:ದುರ್ಯೋದನನು ತನಗೆ ಬೀಗನಾದರೂ, ಕೃಷ್ನನು ವಿದುರನ ಮನೆಗೆ ಮೊದಲು ಬೇಟಿಕೊಡಲು ಮುಖ್ಯ ಕಾರಣ, ಅಲ್ಲಿ ಪಾಂಡವರ ತಾಯಿ ಕುಂತಿ ೧೩ ವರ್ಷದಿಂದ ಕಾಡಿನಲ್ಲಿದ್ದ ತನ್ನ ಮಕ್ಕಳಾದ ಪಾಂಡವರು ಹೇಗಿದ್ದಾರೋ ಎಂಬ ಚಿಂತೆಯಲ್ಲಿದ್ದಳು, ಮೊದಲು ಅವಳಿಗೆ ಪಾಂಡವರ ಕ್ಷೇಮ ಸಮಾಚರ ತಿಳಿಸಿ ಅವಳನ್ನು ಸಂತೈಸುವದು ಮೊದಲ ಕರ್ತವ್ಯವಾಗಿತ್ತು, ಅದರ ಜೊತೆ ವಿದುರನು ಪಾಂಡವರ ಹಿತೈಷಿಯೂ ಆಗಿದ್ದ.
ಕಂ|| ತೀವಿದ ಮಜ್ಜನದಿಂ ಸ
ದ್ಭಾವದಿನೊಸೆದೆತ್ತಿದೊಂದು ಬೋನದೊಳಂ ನಾ|
ನಾ ವಿಧದ ಪದೆಪಿನೊಳ್ ಹರಿ
ಗಾವಗಮಾಱಿದುದು ಪಥಪರಿಶ್ರಮಮೆಲ್ಲಂ|| ೨೮ ||
ಪದ್ಯ-೨೮:ಪದವಿಭಾಗ-ಅರ್ಥ:ತೀವಿದ ಮಜ್ಜನದಿಂ (ತುಂಬಿದ, ಚೆನ್ನಾಗಿಮಾಡಿದ ಸ್ನಾನದಿಂದಲೂ) ಸದ್ಭಾವದಿಂ ಒಸೆದು ಎತ್ತಿದ ಒಂದು ಬೋನದೊಳಂ (ಪ್ರೀತಿಯಿಂದ ಬಡಿಸಿದ ಊಟದಿಂದಲೂ) ನಾನಾ ವಿಧದ ಪದೆಪಿನೊಳ್ (ನಾನಾರೀತಿಯಾದ ಇಷ್ಟದ ಸತ್ಕಾರಗಳಿಂದಲೂ) ಹರಿಗೆ ಆವಗಮ್ ಆಱಿದುದು ಪಥಪರಿಶ್ರಮ ಂ ಎಲ್ಲಂ (ಕೃಷ್ಣನಿಗೆ ಮಾರ್ಗಾಯಾಸವೆಲ್ಲ ಪೂರ್ಣವಾಗಿ ಆರಿತು, ಶಮನವಾಯಿತು. )
ಪದ್ಯ-೨೮:ಅರ್ಥ:ಅವನು ಸಿದ್ಧಪಡಿಸಿದ ಚೆನ್ನಾಗಿಮಾಡಿದ ಸ್ನಾನದಿಂದಲೂ, ಪ್ರೀತಿಯಿಂದ ಬಡಿಸಿದ ಊಟದಿಂದಲೂ, ನಾನಾರೀತಿಯಾದ ಇಷ್ಟದ ಸತ್ಕಾರಗಳಿಂದಲೂ ಕೃಷ್ಣನಿಗೆ ಮಾರ್ಗಾಯಾಸವೆಲ್ಲ ಪೂರ್ಣವಾಗಿ ಶಮನವಾಯಿತು.
ವ|| ಅಂತು ವಿದುರನಜನನುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ಬಂದ ಬರವನಾಗಳೆ ಸುಯೋಧನಂಗಱಿಪುವುದುಂ ರಾಜರಾಜನುಱದೆ ಕಿಱುನಗೆ ನಕ್ಕು ನಾಳಿನೋಲಗದೊಳ್ ತಂದು ಕಾಣಿಸೆಂಬುದುಂ ಮಱುದಿವಸಂ ನೇಸಱು ಮೂಡಿದಾಗಳಾದಿತ್ಯನಂತನೇಕಮಣಿಮಯೂಖ ವಿಜೃಂಭಮಾಣಾಖಂಡಳ ವಿಳಂಬಿತಾಭೀಳ ಕೋದಂಡವಿಳಾಸ ವಿಭ್ರಮ ಸಿಂಹಾಸನಾಸೀನನುಂ ಪ್ರಮದಾಹಸ್ತವಿನ್ಯಸ್ತ ವಾಮಕ್ರಮಕಮಳನು ಮನವರತ ಸ್ಪುರಿತ ತಾರಕಾಕಾರ ಮುಕ್ತಾಭರಣ ಕಿರಣ ನಿಕರ ವಿಳಸಿತ ವಿಶಾಲೋರಸ್ಥಳನುಮನಂತ ಸಾಮಂತ ಮಕುಟ ಮಾಣಿಕ್ಯ ಮಯೂಖ ಮಂಜರೀಜಾಳ ಪಲ್ಲವಿತಾಸ್ಥಾನಮಂಟಪನುಮಾಗಿ ಸಭಾಮಂಟಪದೊಳೊಡ್ಡೋಲಗಂಗೊಟ್ಟೆಡೆ ವಱಿಯದೆ ಅವರವರ ಪಡೆದ ಪ್ರತಿಪತ್ತಿಗಳನಱಿದಿಇಕ್ಕಿದ ಲೋಹಾಸನಂಗಳೊಳಂ ಮಣಿಖಚಿತ ಕನಕ ಪೀಠಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಂ ಭೀಷ್ಮ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಶಲ್ಯ ಶಕುನಿ ಬಾಹ್ಲೀಕ ಸೋಮದತ್ತ ಭಗದತ್ತ ಭೂರಿಶ್ರವ ಪ್ರಭೃತಿಗಳನಿರಿಸಿ ಮತ್ತಮನೇಕ ದೇಶಾಶ್ವರರೆಲ್ಲರುಮನೆಡೆಯಱಿದು ಕುಳ್ಳಿರಿಸಿ ಪೆಂಡವಾಸದೊಳ್ವೆಂಡಿರನೆರಡೋಳಿಯೊಳಮಿರಿಸಿ ನೂರ್ವರ್ ತಮ್ಮಂದಿರುಮಂ ಪಿಂತಿರಿಸಿ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಮಂ ಮುಂತಿರಿಸಿ ಯುವರಾಜನಪ್ಪಣುಗ ದುಶ್ಶಾಸನನುಮನಂಗರಾಜನಪ್ಪಣುಗಾಳ್ ಕರ್ಣನು ಮನೆರಡುಂ ಕೆಲದೊಳಂ ತೊಡೆ ಸೋಂಕೆ ಕುಳ್ಳಿರಿಸಿ-
ವಚನ:ಪದವಿಭಾಗ-ಅರ್ಥ: ಅಂತು ವಿದುರನು ಅಜನನು (ಹುಟ್ಟು ಇಲ್ಲದವನು) ಉಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ (ವಿದುರನು ಕೃಷ್ಣನನ್ನು ಯೋಗ್ಯವಾದ ಸನ್ಮಾನಗಳಿಂದ ಸಂತೋಷಪಡಿಸಿ) ಬಂದ ಬರವನಾಗಳೆ ಸುಯೋಧನಂಗೆ ಅಱಿಪುವುದುಂ ರಾಜರಾಜನು ಉಱದೆ (ಇರದೆ) ಕಿಱುನಗೆ ನಕ್ಕು (ಅವನ ಬರುವಿಕೆಯನ್ನು ದುರ್ಯೋಧನನಿಗೆ ತಿಳಿಸಿದನು. ಚಕ್ರವರ್ತಿಯು ಸುಮ್ಮನಿರದೆ ಹುಸಿನಗೆ ನಕ್ಕು,), ನಾಳಿನ ಓಲಗದೊಳ್ ತಂದು ಕಾಣಿಸೆಂಬುದುಂ (ನಾಳೆಯ ಸಭೆಯಲ್ಲಿ ತಂದು ಭೇಟಿಮಾಡಿಸು ಎನ್ನಲು,) ಮಱುದಿವಸಂ ನೇಸಱು ಮೂಡಿದಾಗಳ್ (ಮಾರನೆಯ ದಿನ ಸೂರ್ಯೋದಯವಾದಾಗ ಸೂರ್ಯನಂತೆ,) ಆದಿತ್ಯನಂತೆ ಅನೇಕಮಣಿಮಯೂಖ ವಿಜೃಂಭಮಾಣ ಅಖಂಡಳ (ಸೂರ್ಯನಂತೆ ಅನೇಕ ರತ್ನಕಿರಣಗಳಿಂದ ಮೆರೆಯುತ್ತಿರುವ ಇಂದ್ರನಂತೆ) ವಿಳಂಬಿತ ಆಭೀಳ (ಉದ್ದವೂ ಭಯಂಕರವೂ ಆದ) ಕೋದಂಡವಿಳಾಸ ವಿಭ್ರಮ (ಬಿಲ್ಲಿನ ವಿಲಾವೈಭವದಿಂದ ಕೂಡಿದ) ಸಿಂಹಾಸನ ಆಸೀನನುಂ (ಸಿಂಹಾಸನದಲ್ಲಿ ಕುಳಿತ,) ಪ್ರಮದ(ಸ್ತ್ರೀಯರ) ಹಸ್ತವಿನ್ಯಸ್ತ (ಕೈಯಿಟ್ಟಿರುವ) ವಾಮಕ್ರಮಕಮಳನು (ಕಮಲದಂತ ಎಡಪಾದವನ್ನು ಸದಾ ಕೈಯಿಂದ ಒತ್ತುತ್ತಿದ್ದರು) ಅನವರತ ಸ್ಪುರಿತ ತಾರಕಾಕಾರ ಮುಕ್ತಾಭರಣ ಕಿರಣ ನಿಕರ ವಿಳಸಿತ (ಸದಾ ಹೊಳೆಯುತ್ತಿರುವ ನಕ್ಷತ್ರದ ಆಕಾರದ ಮುತ್ತಿನ ಆಭರಣಗಳ ಕಿರಣಸಮೂಹದಿಂದ ಶೋಭಿಸುವ) ವಿಶಾಲ ಓರಸ್ಥಳನುಮನು (ವಿಶಾಲ ಎದೆಯ) ಅಂತ ಸಾಮಂತ ಮಕುಟ ಮಾಣಿಕ್ಯ ಮಯೂಖ ಮಂಜರೀಜಾಳ ಪಲ್ಲವಿತ ಆಸ್ಥಾನ ಮಂಟಪನುಮಾಗಿ (ಅನಂತ ಸಾಮಂತ ರಾಜರ ಕಿರೀಟದ ಮಾಣಿಕ್ಯರತ್ನಕಾಂತಿಸಮೂಹದಿಂದ ಸಭಾಮಂಟಪವು ವಿರಾಜಮಾನವಾಗಿದ್ದಿತು.) ಸಭಾಮಂಟಪದೊಳು ಒಡ್ಡೋಲಗಂಗೊಟ್ಟೆಡೆ (ಆ ಸಭಾಮಂಟಪದಲ್ಲಿ ದುರ್ಯೋಧನನು ಒಡ್ಡೋಲಗ ಕೊಟ್ಟಾಗ) ವಱಿಯದೆ (ಅವಕಾಶವೇ ಇಲ್ಲದೆ ) ಅವರವರ ಪಡೆದ ಪ್ರತಿಪತ್ತಿಗಳನು ಅಱಿದು ಇಕ್ಕಿದ ಲೋಹಾಸನಂಗಳೊಳಂ ಮಣಿಖಚಿತ ಕನಕ ಪೀಠಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಂ (ಆ ಸಭಾಮಂಟಪದ ಮಧ್ಯೆ ಅವಕಾಶವೇ ಇಲ್ಲದೆ ಒತ್ತಾಗಿ ಅವರ ಮರ್ಯಾದೆಗೆ ಅನುಗುಣವಾಗಿ ಸಿದ್ಧಪಡಿಸಿದ್ದ ಲೋಹಪೀಠಗಳಲ್ಲಿಯೂ ರತ್ನಖಚಿತವಾದ ಸುವರ್ಣಾಸನಗಳಲ್ಲಿ) ಭೀಷ್ಮ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಶಲ್ಯ ಶಕುನಿ ಬಾಹ್ಲೀಕ ಸೋಮದತ್ತ ಭಗದತ್ತ ಭೂರಿಶ್ರವ ಪ್ರಭೃತಿಗಳನು ಇರಿಸಿ, (ಕೂರಿಸಿ,) ಮತ್ತಂ ಅನೇಕ ದೇಶಾಶ್ವರರೆಲ್ಲರುಮನು ಎಡೆಯಱಿದು ಕುಳ್ಳಿರಿಸಿ (ಇತರ ಅನೇಕದೇಶಾಶರೆಲ್ಲ ಅವರವರ ಸ್ಥಾನಕ್ಕೆ ಅನುಗುಣವಾಗಿ ಕೂರಿಸಿದ್ದರು.) ಪೆಂಡವಾಸದ ಒಳ್ವೆಂಡಿರನು ಎರಡು ಓಳಿಯೊಳಂ ಇರಿಸಿ (ರಾಣಿವಾಸದ ಉತ್ತಮಸ್ತ್ರೀಯರು ಎರಡುಪಕ್ಕದಲ್ಲಿಯೂ ಇದ್ದರು; ಇರಿಸಿ,) ನೂರ್ವರ್ ತಮ್ಮಂದಿರುಮಂ ಪಿಂತಿರಿಸಿ (ನೂರುಜನ ತಮ್ಮಂದಿರೂ ಹಿಂದುಗಡೆ ಇರಿಸಿ,) ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಮಂ ಮುಂತಿರಿಸಿ (ಲಕ್ಷಣನೇ ಮೊದಲಾದ ನೂರು ಜನ ಮಕ್ಕಳು ಮುಂಭಾಗವನ್ನು ಅಲಂಕರಿಸಿದ್ದರು.) ಯುವರಾಜನಪ್ಪ ಅಣುಗ ದುಶ್ಶಾಸನನುಮಂ ಅಂಗರಾಜನಪ್ಪ ಅಣುಗಾಳ್ ಕರ್ಣನು ಮನೆರಡುಂ ಕೆಲದೊಳಂ ತೊಡೆ ಸೋಂಕೆ ಕುಳ್ಳಿರಿಸಿ (ಪ್ರೀತಿಯ ತಮ್ಮ ಯುವರಾಜ ದುಶ್ಶಾಸನನೂ, ಆಪ್ತನಾದ ಕರ್ಣನೂ, ಎರಡು ಪಕ್ಕಗಳಲ್ಲಿಯೂ ತೊಡೆಸೋಂಕುವ ಹಾಗೆ ಹತ್ತಿರದಲ್ಲಿ ಕುಳಿತಿದ್ದರು)-
ವಚನ:ಅರ್ಥ:ವ|| ವಿದುರನು ಕೃಷ್ಣನನ್ನು ಯೋಗ್ಯವಾದ ಸನ್ಮಾನಗಳಿಂದ ಸಂತೋಷಪಡಿಸಿ, ಅವನ ಬರುವಿಕೆಯನ್ನು ದುರ್ಯೋಧನನಿಗೆ ತಿಳಿಸಿದನು. ಚಕ್ರವರ್ತಿಯು ಸುಮ್ಮನಿರದೆ ಹುಸಿನಗೆ ನಕ್ಕು, ನಾಳೆಯ ಸಭೆಯಲ್ಲಿ ತಂದು ಭೇಟಿಮಾಡಿಸು ಎಂದನು. ಮಾರನೆಯ ದಿನ ಸೂರ್ಯೋದಯವಾದಾಗ, ಸೂರ್ಯನಂತೆ ಅನೇಕ ರತ್ನಕಿರಣಗಳಿಂದ ಮೆರೆಯುತ್ತಿರುವ ಇಂದ್ರನಂತೆ ಉದ್ದವೂ ಭಯಂಕರವೂ ಆದ ಬಿಲ್ಲಿನ ವೈಭವಯುಕ್ತವಾದ ವಿಳಾಸದಿಂದ ಕೂಡಿದ ಸಿಂಹಾಸನದಲ್ಲಿ ಕುಳಿತನು. ಸ್ತ್ರೀಯರು ತಮ್ಮ ಕಯ್ಯಿಂದ ಅವನ ಎಡಗಾಲನ್ನು ಒತ್ತುತ್ತಿದ್ದರು. ಅವನ ವಿಸ್ತಾರವಾದ ಎದೆಯನ್ನು ಅಲಂಕರಿಸಿದ ಸದಾ ಹೊಳೆಯುತ್ತಿರುವ ನಕ್ಷತ್ರದ ಆಕಾರದ ಮುತ್ತಿನ ಆಭರಣಗಳ ಕಿರಣಸಮೂಹದಿಂದ ಶೋಭಿಸುತ್ತಿತ್ತು. ಅನಂತ ಸಾಮಂತ ರಾಜರ ಕಿರೀಟದ ಮಾಣಿಕ್ಯರತ್ನಕಾಂತಿಸಮೂಹದಿಂದ ಸಭಾಮಂಟಪವು ವಿರಾಜಮಾನವಾಗಿದ್ದಿತು. ಆ ಸಭಾಮಂಟಪದಲ್ಲಿ ದುರ್ಯೋಧನನು ಒಡ್ಡೋಲಗದಲ್ಲಿದ್ದನು. ಆ ಸಭಾಮಂಟಪದ ಮಧ್ಯೆ ಅವಕಾಶವೇ ಇಲ್ಲದೆ ಒತ್ತಾಗಿ ಅವರ ಮರ್ಯಾದಾನುಗುಣವಾಗಿ ಸಿದ್ಧಪಡಿಸಿದ್ದ ಲೋಹಪೀಠಗಳಲ್ಲಿಯೂ ರತ್ನಖಚಿತವಾದ ಸುವರ್ಣಾಸನಗಳಲ್ಲಿ ಸೇರಿಸಿರುವ ಮೆತ್ತೆಗಳಲ್ಲಿಯೂ ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ, ಶಲ್ಯ, ಶಕುನಿ, ಬಾಹ್ಲೀಕ, ಸೋಮದತ್ತ, ಭಗದತ್ತ, ಭೂರಿಶ್ರವರೇ ಮೊದಲಾದವರು ಕುಳಿತಿದ್ದರು (ಕೂರಿಸಿ). ಇತರ ಅನೇಕದೇಶಾಶರೆಲ್ಲ ತಅವರವರ ಸ್ಥಾನಕ್ಕೆ ಅನುಗುಣವಾಗಿ ಕೂರಿಸಿದ್ದರು. ರಾಣಿವಾಸದ ಉತ್ತಮಸ್ತ್ರೀಯರು ಎರಡುಪಕ್ಕದಲ್ಲಿಯೂ ಇದ್ದರು. ನೂರುಜನ ತಮ್ಮಂದಿರೂ ಹಿಂದುಗಡೆ ಇದ್ದರು. ಲಕ್ಷಣನೇ ಮೊದಲಾದ ನೂರು ಜನ ಮಕ್ಕಳು ಮುಂಭಾಗವನ್ನಲಂಕರಿಸಿದ್ದರು. ಪ್ರೀತಿಯ ತಮ್ಮ ಯುವರಾಜ ದುಶ್ಶಾಸನನೂ, ಆಪ್ತನಾದ ಕರ್ಣನೂ, ಎರಡು ಪಕ್ಕಗಳಲ್ಲಿಯೂ ತೊಡೆಸೋಂಕುವ ಹಾಗೆ ಹತ್ತಿರದಲ್ಲಿ ಕುಳಿತಿದ್ದರು.
ಮ|| ನನೆಯಂಬಂ ಮಸೆದನ್ನರಪ್ಪ ಪಲರೊಳ್ವೆಂಡಿರ್ ಮನಂಗೊಂಡೊಱ
ಲ್ವಿನಮೆತ್ತಂ ಕೊಳೆ ಪಾಡೆ ಜೇನ ಮೞೆ ಕೊಂಡಂತಪ್ಪ ಗೇಯಂ ಮನ|
ಕ್ಕೆ ನೆಲಕ್ಕಿಟ್ಟಳಮಾಗೆ ಸಂದ ರಥಿಕರ್ ಕಣ್ಗೊಳ್ವಿನಂ ತತ್ಸುಯೋ
ಧನನೊಡ್ಡೋಲಗಮಿಂದ್ರನೋಲಗಮುಮಂ ಕೀೞ್ಮಾಡಿ ಕಣ್ಗೊಪ್ಪುಗುಂ|| ೨೯ ||
ಪದ್ಯ-೨೯:ಪದವಿಭಾಗ-ಅರ್ಥ: ನನೆಯಂಬಂ (ಮನ್ಮಥನು) ಮಸೆದನ್ನರಪ್ಪ ಪಲರೊಳ್ವೆಂಡಿರ್ (ಮಸೆದ ಪುಷ್ಪಬಾಣದ ಹಾಗಿರುವ ಅನೇಕ ಒಳ್ಳೆಯ ಸ್ತ್ರೀಯರು) ಮನಂಗೊಂಡು ಒಱಲ್ವಿನಂ (ಆಕರ್ಷಕವಾಗಿ ಪ್ರೀತಿಯಿಂದ ಹಾಡುತ್ತಿರಲು,) ಎತ್ತಂ ಕೊಳೆ (ಎತ್ತಲೂ ಹರಡಿರಲು,) ಪಾಡೆ ಜೇನ ಮೞೆ ಕೊಂಡಂತಪ್ಪ ಗೇಯಂ (ಮತ್ತೊಂದುಕಡೆ ಜೇನಮಳೆಯನ್ನು ಸುರಿಸಿದಂತಿರುವ ಸಂಗೀತವು ಎಲ್ಲೆಡೆಯೂ ವ್ಯಾಪಿಸಿದ್ದಿತು.) ಮನಕ್ಕೆ ನೆಲಕ್ಕೆ ಇಟ್ಟಳಮಾಗೆ (ಮನಸ್ಸಿಗೂ ಆಸ್ಥಾನಮಂಟಪಕ್ಕೂ ರಮಣೀಯವಾಗಿರುವಂತೆ)ಸಂದ ರಥಿಕರ್ ಕಣ್ಗೊಳ್ವಿನಂ () ತತ್ಸುಯೋಧನನ ಒ ಡ್ಡೋಲಗಂ ಇಂದ್ರನ ಓಲಗಮುಮಂ ಕೀೞ್ಮಾಡಿ ಕಣ್ಗೊಪ್ಪುಗುಂ( ಆ ದುರ್ಯೋಧನನ ಆಸ್ಥಾನಮಂಟಪವು ಇಂದ್ರನ ಸಭೆಯನ್ನು ಕೀಳುಮಾಡಿ/ ಮೀರಿಸಿ ಕಣ್ಣಿಗೆ ಶೋಭಿಸುತಿತ್ತು. )
ಪದ್ಯ-೨೯:ಅರ್ಥ:ಮನ್ಮಥನು ಮಸೆದ ಪುಷ್ಪಬಾಣಗಳ ಹಾಗಿರುವ ಅನೇಕ ಒಳ್ಳೆಯ ಸ್ತ್ರೀಯರು ಆಕರ್ಷಕವಾಗಿ ಪ್ರೀತಿಯಿಂದ ಹಾಡುತ್ತಿದ್ದರು. ಜೇನಮಳೆಯನ್ನು ಸುರಿಸಿದಂತಿರುವ ಸಂಗೀತವು ಎಲ್ಲೆಡೆಯಲ್ಲಿಯೂ ವ್ಯಾಪಿಸಿದ್ದಿತು. ಮನಸ್ಸಿಗೂ ಆಸ್ಥಾನಮಂಟಪಕ್ಕೂ ರಮಣೀಯವಾಗಿರುವಂತೆ ಪ್ರಸಿದ್ಧವಾಗಿರುವ ರಥಿಕರು ಚಿತ್ತಾಕರ್ಷಕವಾಗಿರಲು ಆ ದುರ್ಯೋಧನನ ಆಸ್ಥಾನಮಂಟಪವು ಇಂದ್ರನ ಸಭೆಯನ್ನು ಮೀರಿಸಿ ಕಣ್ಣಿಗೆ ಶೋಭಿಸುತಿತ್ತು. .
ವ|| ಅಂತು ಪಿರಿದೋಲಗಂಗೊಟ್ಟಿರ್ಪನ್ನೆಗಂ ಮುನ್ನಮೆ ಮೂಱನೆಯ ಬಾಗಿಲೊಳ್ ಬಂದಿರ್ದನಂತನ ಬರವಂ ಪಡಿಯಱಂ ಬಿನ್ನಪಂಗೆಯ್ಯೆ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿ-
ವಚನ:ಪದವಿಭಾಗ-ಅರ್ಥ:ಅಂತು ಪಿರಿದು ಓಲಗಂಗೊಟ್ಟು ಇರ್ಪ ಅನ್ನೆಗಂ (ಅಂತಹ ಒಡ್ಡೋಲಗದಲ್ಲಿ ಇರವ ಸಮಯದಲ್ಲಿ) ಮುನ್ನಮೆ ಮೂಱನೆಯ ಬಾಗಿಲೊಳ್ ಬಂದಿರ್ದ (ಮೊದಲೇ ಮೂರನೆಯ ಬಾಗಿಲಿನಲ್ಲಿ ಬಂದಿದ್ದ) ಅನಂತನ ಬರವಂ ಪಡಿಯಱಂ ಬಿನ್ನಪಂಗೆಯ್ಯೆ (ಕೃಷ್ಣನ ಆಗಮನವನ್ನು ಪ್ರತೀಹಾರಿಯು ಬಂದು ತಿಳಿಸಲು) ಕುರುರಾಜಂ ಸಿಂಧುತನೂಜನ (ನದಿಯ ಮಗನ) ಮೊಗಮಂ ನೋಡಿ (ದುರ್ಯೋಧನನು ಭೀಷ್ಮನ ಮುಖವನ್ನು ನೋಡಿ) -
ವಚನ:ಅರ್ಥ:ದುರ್ಯೋಧನನು ಅಂತಹ ದೊಡ್ಡ ಒಡ್ಡೋಲಗದಲ್ಲಿ ಇರವ ಸಮಯದಲ್ಲಿ, ಮೊದಲೇ ಮೂರನೆಯ ಬಾಗಿಲಿನಲ್ಲಿ ಬಂದಿದ್ದ ಕೃಷ್ಣನ ಆಗಮನವನ್ನು ಪ್ರತೀಹಾರಿಯು ಬಂದು ತಿಳಿಸಲು, ದುರ್ಯೋಧನನು ಭೀಷ್ಮನ ಮುಖವನ್ನು ನೋಡಿ -
ಕಂ|| ಲೋಕ ಗುರು ಶಂಖ ಚಕ್ರ ಗ
ದಾಕರನತಿಶಯ ಚತುರ್ಭುಜಂ ಜನಜನಿತ|
ವ್ಯಾಕುಳದೆ ಬಂದನೆಂದೊಡೆ
ಲೋಕದೊಳಿನ್ನೆನ್ನ ದೊರೆಗೆ ಪಿರಿಯರುಮೊಳರೇ|| ೩೦ ||
ಪದ್ಯ-೩೦:ಪದವಿಭಾಗ-ಅರ್ಥ:ಲೋಕ ಗುರು ಶಂಖ ಚಕ್ರ ಗದಾಕರನು ಅತಿಶಯ ಚತುರ್ಭುಜಂ (ಅತಿಶಯವಾದ ನಾಲ್ಕುತೋಳುಗಳುಳ್ಳವನೂ ಆದ ಕೃಷ್ಣನೇ) ಜನಜನಿತ ವ್ಯಾಕುಳದೆ ಬಂದನೆಂದೊಡೆ (ಜನರಲ್ಲಿ ಪ್ರಸಿದ್ಧನಾದ ಕೃಷ್ಣನೇ ಚಿಂತೆಯಿಂದ/ ಹಂಬಲದಿಂದ ಬೇಡಲು ನನ್ನ ಬಳಿಗೆ ಬಂದಿದ್ದಾನೆ ಎನ್ನುವಾಗ,) ಲೋಕದೊಳು ಇನ್ನೆನ್ನ ದೊರೆಗೆ (ಸಮಾನಕ್ಕೆ) ಪಿರಿಯರು ಮೊಳರೇ (ಲೋಕದಲ್ಲಿ ನನ್ನ ಸಮಾನಕ್ಕೂ ದೊಡ್ಡವರು ಇದ್ದಾರೆಯೇ ಎಂದನು,)
ಪದ್ಯ-೩೦:ಅರ್ಥ:ಲೋಕಗುರುವೂ ಶಂಖಚಕ್ರಗದಾಪಾಣಿಯೂ ಅತಿಶಯವಾದ ನಾಲ್ಕುತೋಳುಗಳುಳ್ಳವನೂ ಆದ, ಜನರಲ್ಲಿ ಪ್ರಸಿದ್ಧನಾದ ಕೃಷ್ಣನೇ ಹಂಬಲದಿಂದ ಬೇಡಲು ನನ್ನ ಬಳಿಗೆ ಬಂದಿದ್ದಾನೆ ಎನ್ನುವಾಗ ಲೋಕದಲ್ಲಿ ನನ್ನ ಸಮಾನಕ್ಕೂ ದೊಡ್ಡವರು ಇದ್ದಾರೆಯೇ ಎಂದನು. (ಕೃಷ್ನನು ನನ್ನ ಬಳಿ ದುಃಖದಿಂದ ಬೇಡಲು ಬಂದಿರುವಾಗ, ಲೋಕದಲ್ಲಿ ನನಗಿಂತ ದೊಡ್ಡವರು ಇದ್ದಾರೆಯೇ!)
ವ|| ಎಂದು ತನ್ನ ಬೆಸನನೆ ಪಾರ್ದು ಲಲಾಟ ತಟ ಘಟಿತ ಮುಕುಳಿತ ಕರಕಮಳನಾಗಿರ್ದ ಮಹಾಪ್ರತಿಹಾರನ ಮೊಗಮಂ ನೋಡಿ-
ವಚನ:ಪದವಿಭಾಗ-ಅರ್ಥ:ಎಂದು ತನ್ನ ಬೆಸನನೆ ಪಾರ್ದು (ಹಾರೈಸಿ?) (ತನ್ನ ಅಪ್ಪಣೆಯನ್ನೇ ನಿರೀಕ್ಷಿಸುತ್ತ) ಲಲಾಟ ತಟ (ಹಣೆಯ ಹತ್ತಿರ )ಘಟಿತ ಮುಕುಳಿತ (ಮುಗಿದ ಸ್ಥಿತಿಯ ) ಕರಕಮಳನಾಗಿರ್ದ (ಕಮಲದ ಮೊಗ್ಗಾಗಿ ಮಾಡಿದ್ದ ಕೈಯನ್ನು) ಮಹಾಪ್ರತಿಹಾರನ ಮೊಗಮಂ (ಮುಖವನ್ನು) ನೋಡಿ-
ವಚನ:ಅರ್ಥ:ತನ್ನ ಅಪ್ಪಣೆಯನ್ನೇ ನಿರೀಕ್ಷಿಸುತ್ತ ಕೈಮುಗಿದು (ಕಮಲದ ಮೊಗ್ಗಾಗಿ ಮಾಡಿದ್ದ ಕೈಯನ್ನು ಹಣೆಯ ಸಮೀಪದಲ್ಲಿ ಸೇರಿಸಿದ್ದ) ನಿಂತಿದ್ದ ಮಹಾದ್ವಾರಪಾಲಕನ ಮುಖವನ್ನು ನೋಡಿ-
ಮ|| ಬರವೇೞೆಂಬುದುಮಂಜನಾಚಲದವೋಲ್ ಕಣ್ಗೊಪ್ಪಿ ಬರ್ಪಂಬುಜೋ
ದರನಂ ಮೆಲ್ಲನೆ ನೋಡಿ ಮೆಯ್ಯಲಸಿದಂತೆಂತಾನುಮೆೞ್ದಿರ್ದು ಕೇ|
ಸರಿ ಪೀಠಾಗ್ರದಿನಪ್ಪಿಕೊಂಡು ಪೊಡೆವಟ್ಟುಚ್ಚಾಸನಾಸೀನನಾ
ಗಿರವೇೞ್ದರ್ಘ್ಯಮನಿತ್ತನಂತರಮೆ ತಾಂ ಕುಳ್ಳಿರ್ದ ದುರ್ಯೋಧನಂ|| ೩೧ ||
ಪದ್ಯ-೩೧:ಪದವಿಭಾಗ-ಅರ್ಥ:ಬರವೇೞ್ ಎಂಬುದುಮಂ ಅಂಜನಾಚಲದವೋಲ್ ಕಣ್ಗೊಪ್ಪಿ (‘ಬರಹೇಳು’ ಎಂದಾಗ, ಅಂಜನ ಪರ್ವತದಂತೆ ಕಣ್ಣಿಗೆ ಮನೋಹರವಾಗಿರುವ) ಬರ್ಪ ಅಂಬುಜೋದರನಂ(ಹೊಕ್ಕಳಲ್ಲಿ ಕಮಲ ಇರುವವನು) ಮೆಲ್ಲನೆ ನೋಡಿ (ಪ್ರವೇಶಿಸುತ್ತಿರುವ ಕೃಷ್ಣನನ್ನು ಮೆಲ್ಲನೆ ನೋಡಿ) ಮೆಯ್ಯ ಅಲಸಿದಂತೆ ಎಂತಾನುಮೆ ಎೞ್ದಿರ್ದು ಕೇಸರಿಪೀಠಾಗ್ರದಿಂ (ದೇಹಾಲಸ್ಯವಾದಂತೆ ಏಳಲಾರದೆ ಹೇಗೋ ಸಿಂಹಾಸನದಿಂದ ಎದ್ದು) ಅಪ್ಪಿಕೊಂಡು ಪೊಡೆವಟ್ಟು ಉಚ್ಚಾಸನಾಸೀನನು ಆಗಿರವೇೞ್ದು (ಅಪ್ಪಿಕೊಂಡು ನಮಸ್ಕಾರಮಾಡಿ ಎತ್ತರವಾದ ಆಸನದಲ್ಲಿ ಕುಳಿತುಕೊಳ್ಳಬೇಕೆಂದು ಹೇಳಿ,) ಅರ್ಘ್ಯಮನು ಇತ್ತ ಅನಂತರಮೆ (ಅರ್ಘ್ಯವನ್ನು ಕೊಟ್ಟಾದ ಮೇಲೆ ) ತಾಂ ಕುಳ್ಳಿರ್ದ ದುರ್ಯೋಧನಂ (ದುರ್ಯೋಧನನು ತಾನೂ ಕುಳಿತುಕೊಂಡನು.)
ಪದ್ಯ-೩೧:ಅರ್ಥ:೩೧. ‘ಬರಹೇಳು’ ಎಂದಾಗ, ಅಂಜನ ಪರ್ವತದಂತೆ ಕಣ್ಣಿಗೆ ಮನೋಹರವಾಗಿರುವ ಪ್ರವೇಶಿಸುತ್ತಿರುವ ಕೃಷ್ಣನನ್ನು ಮೆಲ್ಲನೆ ನೋಡಿ ದೇಹಾಲಸ್ಯವಾದಂತೆ ಏಳಲಾರದೆ ಹೇಗೋ ಸಿಂಹಾಸನದಿಂದ ಎದ್ದು, ಅಪ್ಪಿಕೊಂಡು ನಮಸ್ಕಾರಮಾಡಿ ಎತ್ತರವಾದ ಆಸನದಲ್ಲಿ ಕುಳಿತುಕೊಳ್ಳಬೇಕೆಂದು ಹೇಳಿ, ಅರ್ಘ್ಯವನ್ನು ಕೊಟ್ಟಾದ ಮೇಲೆ, ದುರ್ಯೋಧನನು ತಾನೂ ಕುಳಿತುಕೊಂಡನು.
ವ|| ಅಂತು ಮಧುಕೈಟಭಾರಾತಿಯ ಮೊಗಮಂ ನೋಡಿ-
ವಚನ:ಪದವಿಭಾಗ-ಅರ್ಥ:ಅಂತು ಮಧುಕೈಟಭ ಆರಾತಿಯ (ಮಧುಕೈಟಭರೆಂಬವರ ಶತ್ರುವಾದ ಕೃಷ್ಣನ) ಮೊಗಮಂ ನೋಡಿ-
ವಚನ:ಅರ್ಥ: ಕೃಷ್ಣನ ಮುಖವನ್ನು ನೋಡಿ ಹೇಳಿದನು.
ಕಂ|| ಸಂಸಾರದೊಳಿನ್ನೆನ್ನವೊ
ಲೇಂ ಸೈಪಂ ಪಡೆದರೊಳರೆ ನೀಂ ಬರೆ ಪೆಱತೇಂ|
ಕಂಸಾರೀ ಯುಷ್ಮತ್ಪದ
ಪಾಂಸುಗಳಿಂದಾಂ ಪವಿತ್ರಗಾತ್ರನೆನಾದೆಂ|| ೩೨ ||
ಪದ್ಯ-೩೨:ಪದವಿಭಾಗ-ಅರ್ಥ:ಸಂಸಾರದೊಳು ಇನ್ನು ಎನ್ನವೊಲು ಏಂ ಸೈಪಂ ಪಡೆದರೊಳರೆ ( ಜಗತ್ತಿನಲ್ಲಿ ಇನ್ನು ಬೇರೆಯವರು ನನ್ನಂತೆ ಪುಣ್ಯಪಡೆದವರು ಯಾರಾದರೂ ಇದ್ದಾರೆಯೇ?) ನೀಂ ಬರೆ ಪೆಱತೇಂ ಕಂಸಾರೀ ಯುಷ್ಮತ್ ಪದ ಪಾಂಸುಗಳಿಂದ (ಮತ್ತೇನು ಹೇಳಲಿ? ನೀನು ಬರಲಾಗಿ ನಿನ್ನ ಪಾದಧೂಳಿಯಿಂದ) ಆಂ ಪವಿತ್ರಗಾತ್ರನೆನಾದೆಂ (ನಾನು ಪರಿಶುದ್ಧವಾದ ಶರೀರವುಳ್ಳವನಾದೆನು.)
ಪದ್ಯ-೩೨:ಅರ್ಥ: ೩೨. ‘ಕೃಷ್ಣ, (ನೀನು ಬರಲಾಗಿ) ಜಗತ್ತಿನಲ್ಲಿ ಇನ್ನು ಬೇರೆಯವರು ನನ್ನಂತೆ ಪುಣ್ಯಪಡೆದವರು ಯಾರಾದರೂ ಇದ್ದಾರೆಯೇ? ಮತ್ತೇನು ಹೇಳಲಿ ಕೃಷ್ಣಾ ನೀನು ಬರಲು ನಿನ್ನ ಪಾದಧೂಳಿಯಿಂದ ನಾನು ಪರಿಶುದ್ಧವಾದ ಶರೀರವುಳ್ಳವನಾದೆನು.
ಬಂದ ಬರವಾವುದಿದು ಬಿಸ
ವಂದಂ ಬೆಸನಾವುದಾವ ಬೆಸನಂ ಬೆಸಸಲ್|
ಬಂದಿರ್ ಬರವಿನೊಳೀಗಳ
ಗುಂದಲೆಯಾಯ್ತೆನಗಮೀಗಳೆಂಬುದುಮಾಗಳ್|| ೩೩ ||
ಪದ್ಯ-೩೩:ಪದವಿಭಾಗ-ಅರ್ಥ:ಬಂದ ಬರವು ಆವುದು (ಬಂದ ಕಾರಣ ಯಾವುದು? -ಕಾರಣವೇನು?) ಇದು ಬಿಸವಂದಂ (ಇದು - ನಿಮ್ಮ ಆಗಮನ ಆಶ್ಚರ್ಯವಾದುದು.) ಬೆಸನಾವುದು ಆವ ಬೆಸನಂ ಬೆಸಸಲ್ ಬಂದಿರ್ (ಯಾವ ಕಾರ್ಯವನ್ನು ಅಪ್ಪಣೆ ಮಾಡಲು ಬಂದಿದ್ದೀರಿ?) ಬರವಿನೊಳು ಈಗಳು ಅಗುಂದಲೆಯಾಯ್ತು ಎನಗಂ ಈಗಳೆ (ಈಗ ನಿಮ್ಮ ಬರುವಿಕೆಯಿಂದ ನನಗೆ ಗೌರವವುಂಟಾಗಿದೆ ) ಎಂಬುದುಂ ಆಗಳ್ ( ಎಂದು ಪ್ರಶ್ನೆ ಮಾಡಿದಾಗ-)
ಪದ್ಯ-೩೩:ಅರ್ಥ: ತಾವು ಬಂದ ಕಾರಣ ಯಾವುದು? ನಿಮ್ಮ ಆಗಮನ ಆಶ್ಚರ್ಯಕರವಾದುದು; ಯಾವ ಕಾರ್ಯವನ್ನು ಅಪ್ಪಣೆ ಮಾಡಲು ಬಂದಿದ್ದೀರಿ? ಈಗ ನಿಮ್ಮ ಬರುವಿಕೆಯಿಂದ ನನಗೆ ಗೌರವವುಂಟಾಗಿದೆ, ಎಂದು ಪ್ರಶ್ನೆ ಮಾಡಿದಾಗ-
ಕಂ||ಅಂದಾ ಸಭೆಯೊಳ್ ಕರ ವಿನ್ಯಾ
ಸಂಗಗಳ್ ನುಡಿಯುಂ ಅಡಕುವಂತಿರೆ |
ದಂತಪ್ರಭೆಗಳ್ ಪಾಸುಂ ಪೊ
ಕ್ಕುಂ ಪರೆದು ಸಭಾಸದನಂ ತೊಳಗಿ ಬೆಳಗೆ ನುಡಿದಂ ||೩೪||
ಪದ್ಯ-೩೪:ಪದವಿಭಾಗ-ಅರ್ಥ:ಅಂದು ಆ ಸಭೆಯೊಳ್ ಕರ ವಿನ್ಯಾಸಂಗಗಳ್ (ಹಸ್ತಾಭಿನಯಪೂರ್ವಕ ಮಾತುಗಳನ್ನು) ನುಡಿಯುಂ ಅಡಕುವಂತಿರೆ (ಮಾತುಗಳು ಅರ್ಥಪೂರ್ಣವಾಗಿರುವಂತೆ) ದಂತಪ್ರಭೆಗಳ್ ಪಾಸುಂ ಪೊಕ್ಕುಂ ಪರೆದು ಸಭಾಸದನಂ ತೊಳಗಿ ಬೆಳಗೆ ನುಡಿದಂ
ಪದ್ಯ-೩೪:ಅರ್ಥ:ಆ ಸಭೆಯಲ್ಲಿ ಕೃಷ್ಣನು ತನ್ನ ಹಸ್ತಾಭಿನಯಪೂರ್ವಕ ಮಾತುಗಳು ಅರ್ಥಪೂರ್ಣವಾಗಿರುವಂತೆ, ಹಲ್ಲುಗಳಕಾಂತಿಯು ಹಾಸುಹೊಕ್ಕಾಗಿ ಹರಡಿ ಸಭಾಭವನವು ಬಹಳ ಶೋಭಿಸುವಂತೆ ಮಾತನಾಡಿದನು.
ಕಂ||ಅಯ ನಯ ಪರಾಕ್ರಮೋಪಾ
ಶ್ರಯಂಗಳಂ ಶ್ರೀಗಡರ್ಪುಮಾಡಿದ ನಿನ್ನಿಂ|
ದ್ರಿಯ ಜಯಮೆ ಕೂಡೆ ಲೋಕ
ತ್ರಯದಿಂ ಪೊಗೞಿಸಿದುದಿಂತು ಪಿರಿಯರುಮೊಳರೇ|| ೩೫ ||
ಪದ್ಯ-೩೫:ಪದವಿಭಾಗ-ಅರ್ಥ:ಅಯ ನಯ ಪರಾಕ್ರಮ ಉಪಾಶ್ರಯಂಗಳಂ (ರಾಜನು ಹೊಂದಬೇಕಾದ ಅವಲಂಬನಗಳನ್ನು) ಶ್ರೀಗೆ ಅಡರ್ಪುಮಾಡಿದ (ಯಶೋಲಕ್ಷ್ಮಿಗೆ ಆಶ್ರಯವಾಗಿರುವ) ನಿನ್ನ ಇಂದ್ರಿಯ ಜಯಮೆ (ಯಶೋಲಕ್ಷ್ಮಿಗೆ ಆಶ್ರಯವಾಗಿರುವ ಇಂದ್ರಿಯ ಜಯವು/ ಅತಿಯಾಸೆಪಡದ ಗುಣವು) ಕೂಡೆ (ನಿನ್ನಲ್ಲಿ ಸೇರಲು) ಲೋಕತ್ರಯದಿಂ ಪೊಗೞಿಸಿದುದು ಇಂತು ಪಿರಿಯರುಮೊಳರೇ(ಆಗ ನಿನ್ನಂತಹ ದೊಡ್ಡಗುಣದವರು ಯಾರಿದ್ದಾರೆ?)
ಪದ್ಯ-೩೫:ಅರ್ಥ:ನಯ ನೀತಿ ಪರಾಕ್ರಮ ರಾಜನು ಹೊಂದಬೇಕಾದ ಅವಲಂಬನಗಳನ್ನು ಯಶೋಲಕ್ಷ್ಮಿಗೆ ಆಶ್ರಯವಾಗಿರುವ ಇಂದ್ರಿಯ ಜಯವು/ ಅತಿಯಾಸೆಪಡದೆಯಿರುವ ಗುಣವು ನಿನ್ನಲ್ಲಿ ಸೇರಲು ಮೂರು ಲೋಕಗಳಿಂದಲೂ ಹೊಗಳಿಕೆ ಸಿಗುವುದು, ಆಗ ನಿನ್ನಂತಹ ದೊಡ್ಡಗುಣದವರು ಯಾರಿದ್ದಾರೆ?
ಕಂ|| ಉನ್ನತನೆ ಆಗಿಯುಂ ನುಡಿ
ನನ್ನಿಯನಳವಣ್ಮನಱಿವು ವಿನಯಮನಾದಂ|
ಮನ್ನಣೆ ಗುರುಜನಮಂ ನೆರೆ
ಮನ್ನಿಸಿದುದು ಪಿರಿಯ ಸಿರಿಯೊಳೇಂ ಸುಜನತೆಯೋ|| ೩೬ ||
ಪದ್ಯ-೩೬:ಪದವಿಭಾಗ-ಅರ್ಥ:ಉನ್ನತನೆ ಆಗಿಯುಂ (ಉನ್ನತ ವ್ಯಕ್ತಿಯಾಗಿದ್ದರೂ,) ನುಡಿ ನನ್ನಿಯನು (ನಿನ್ನ ಮಾತಿನಲ್ಲಿ ಸತ್ಯಸಂಧತೆಯೂ,) ಅಳವು ಅಣ್ಮಂ ಅಱಿವು ವಿನಯಮನು (ಶಕ್ತಿ, ಪರಾಕ್ರಮ, ತಿಳುವಳಿಕೆ, ವಿನಯವು,) ಆದಂ ಮನ್ನಣೆ ಗುರುಜನಮಂ (ಹಿರಿಯರಲ್ಲಿ ವಿಶೇಷ ಗೌರವ) ನೆರೆ ಮನ್ನಿಸಿದುದು (ನಿನ್ನಲ್ಲಿ ಚೆನ್ನಾಗಿ ಶೋಭಿಸುತ್ತಿವೆ.) ಪಿರಿಯ ಸಿರಿಯೊಳೇಂ ಸುಜನತೆಯೋ (ಈ ದೊಡ್ಡ ಸಂಪತ್ತಿದ್ದರೂ ನಿನ್ನಲ್ಲಿ ಎಷ್ಟೊಂದು ಸೌಜನ್ಯವೋ! )
ಪದ್ಯ-೩೬:ಅರ್ಥ: ಉನ್ನತ ವ್ಯಕ್ತಿಯಾಗಿದ್ದರೂ, ನಿನ್ನ ಮಾತಿನಲ್ಲಿ ಸತ್ಯಸಂಧತೆಯೂ, ಶಕ್ತಿ, ಪರಾಕ್ರಮ, ತಿಳುವಳಿಕೆ, ವಿನಯವು, ಹಿರಿಯರಲ್ಲಿ ಗೌರವ ನಿನ್ನಲ್ಲಿ ಚೆನ್ನಾಗಿ ಶೋಭಿಸುತ್ತಿವೆ. ಈ ದೊಡ್ಡ ಸಂಪತ್ತಿದ್ದರೂ ನಿನ್ನಲ್ಲಿ ಎಷ್ಟೊಂದು ಸೌಜನ್ಯವೋ!
ಕಂ||ಕುವಳಯಬಾಂಧವನೆಸೆವನೆ
ಕುವಳಯಮಂ ಬೆಳಸಿ ಕುವಳಯಂ ಪೊಱಗೆನೆ ಪಾಂ|
ಡವರೆ ಪೊಱಗಾಗೆ ನಿನಗೀ
ಕುವಳಯಪತಿಯೆಂಬ ಪೆಂಪೊಡಂಬಡೆ ನೃಪತೀ|| ೩೭ ||
ಪದ್ಯ-೩೭:ಪದವಿಭಾಗ-ಅರ್ಥ:ಕುವಳಯಬಾಂಧವಂ (ಕನ್ನೈದಿಲೆಯ ಬಾಂಧವ-ಚಂದ್ರನು) ಎಸೆವನೆ ಕುವಳಯಮಂ (ಕನ್ನೆದಿಲೆಯನ್ನು ಮಾತ್ರ ಬಳಗಿ ಕಾಪಾಡವೆನು ಎನ್ನುವಂತಿರುವನೆ?) ಬೆಳಸಿ(-ಬೆಳಗಿಸಿ) ಕುವಳಯಂ ಪೊಱಗು ಎನೆ (ಕುವಲಯ- ಚಂದ್ರನು ಭೂಮಿಯನ್ನೆಲ್ಲ ಬೆಳಗಿಸುವನು ಎನ್ನುವಾಗ) ಪಾಂಡವರೆ ಪೊಱಗಾಗೆ (ಹಾಗೆಯೇ ಪಾಂಡವರು ಹೊರಗಿದ್ದರೆ) ನಿನಗೆ ಈ ಕುವಳಯಪತಿಯೆಂಬ ಪೆಂಪು ಒಡಂಬಡೆ ನೃಪತೀ (ಹಾಗೆಯೇ ಪಾಂಡವರು(ರಾಜತ್ವದಿಂದ) ಹೊರಗಿದ್ದರೆ ರಾಜನೇ ನಿನಗೆ ರಾಜನೆಂಬ ಹಿರಿಮೆ ಒಪ್ಪುತ್ತದೆಯೇ?)
ಪದ್ಯ-೩೭:ಅರ್ಥ: ಕನ್ನೆದಿಲೆಯನ್ನು ಮಾತ್ರ ಬೆಳಸಿ ಕಾಪಾಡವೆನು ಎನ್ನುವಂತಿರುವನೆ? ಚಂದ್ರನು ಭೂಮಿಯನ್ನೆಲ್ಲ ಬೆಳಗಿಸುವನು ಎನ್ನುವಾಗ, ಹಾಗೆಯೇ ಪಾಂಡವರು(ರಾಜತ್ವದಿಂದ) ಹೊರಗಿದ್ದರೆ ರಾಜನೇ ನಿನಗೆ ರಾಜನೆಂಬ ಹಿರಿಮೆ ಒಪ್ಪುತ್ತದೆಯೇ?
ಕಂ||ಮನಕತದಿಂದೊರ್ವರ
ನಿನಿಸನಗಲ್ದಿರ್ದಿರಿನಿಸೆ ನಿಮಗಂ ತಮಗಂ|
ಮುನಿಸುಂಟೆ ಕಾಯ್ದ ಬೆನ್ನೀರ್
ಮನೆ ಸುಡದೆಂಬೊಂದು ನುಡಿಯವೋಲ್ ಕುರುರಾಜಾ|| ೩೮ ||
ಪದ್ಯ-೩೮:ಪದವಿಭಾಗ-ಅರ್ಥ:ಮನಕತದಿಂದೆ (ಮನಕ್ಷತದಿಂದ- ಏನೋ ಮನಸ್ತಾಪದಿಂದ) ಒರ್ವರನು ಇನಿಸಂ ಅಗಲ್ದು ಇರ್ದಿರಿ, ಇನಿಸೆ ನಿಮಗಂ ತಮಗಂ ಮುನಿಸುಂಟೆ (ನಿಮಗೂ ಅವರಿಗೂ ಪರಸ್ಪರ ಕೋಪವುಂಟೆ?) ಕಾಯ್ದ ಬೆನ್ನೀರ್ ಮನೆ ಸುಡದೆಂಬೊಂದು ನುಡಿಯವೋಲ್ ಕುರುರಾಜಾ (ಕಾದ ಬಿಸಿನೀರು ಮನೆಯನ್ನು ಸುಡುವುದೆ ಎಂಬ ಗಾದೆಯ ಮಾತಿನಂತೆ, ದುರ್ಯೋಧನಾ. )
ಪದ್ಯ-೩೮:ಅರ್ಥ:ಇದುವರೆಗೆ ಏನೋ ಮನಸ್ತಾಪದಿಂದ ಒಬ್ಬರನ್ನೊಬ್ಬರು ಅಗಲಿದ್ದಿರಿ; ಇಷ್ಟೇ, ನಿಮಗೂ ಅವರಿಗೂ ಪರಸ್ಪರ ಕೋಪವುಂಟೆ? ದುರ್ಯೋಧನ, ಕಾದ ಬಿಸಿನೀರು ಮನೆಯನ್ನು ಸುಡುವುದೆ? ಇಲ್ಲ (ಎಂಬ ಗಾದೆಯ ಮಾತಿನಂತೆ) ದುರ್ಯೋಧನಾ.
ಕಂ||ಪೊಂಗುವ ಮಲೆಪರ ಮಲೆಗಳ
ಡಂಗಂ ಕಣ್ಮಲೆವ ಮಂಡಲಂಗಳ್ ಪ್ರತ್ಯಂ|
ತಂಗಳೆನಲೊಳವೆ ಪಾಂಡವ
ರಂ ಗೆಡೆಗೊಳೆ ನಿನಗೆ ಕುರುಕುಳಾಂಬರಭಾನೂ|| ೩೯ ||
ಪದ್ಯ-೩೯:ಪದವಿಭಾಗ-ಅರ್ಥ:ಪೊಂಗುವ (ಸೊಕ್ಕಿನಿಂದ ವಿರೋಧಿಸುವ) ಮಲೆಪರ ಮಲೆಗಳ (ಪರ್ವತರಾಜರ) (ಬೆಟ್ಟಗಳಲ್ಲಿರುವ) ಡಂಗಂ (ಸುಂಕದ ಕಟ್ಟೆಗಳ) ಕಣ್ಮಲೆವ ಮಂಡಲಂಗಳ್ (ವಿರೋಧಿಸುವ ದೇಶಗಳೂ) ಪ್ರತ್ಯಂತಂಗಳ್ ಎನಲ್ ಒಳವೆ, (ಪ್ರತಿಭಟಿಸುವ ಗಡಿಪ್ರದೇಶಗಳೂ ಎನ್ನುವುವು ಇರುತ್ತವೆಯೇ?) ಪಾಂಡವರಂ ಗೆಡೆಗೊಳೆ ( ಗೆಳೆಗೊಡೆ, ಎಡೆಗೊಳೆ) ನಿನಗೆ, ಕುರುಕುಳಾಂಬರಭಾನೂ (ಕೌರವವಂಶವೆಂಬ ಆಕಾಶಕ್ಕೆ ಸೂರ್ಯನಂತಿರುವ ಎಲೈ ದುರ್ಯೋಧನನೇ ಪಾಂಡವರನ್ನು ಸೇರಿಸಿಕೊಂಡರೆ, ನಿನಗೆ- ವಿರೋಧಿಗಳು ಎರುತ್ತಾರೆಯೇ? ಇಲ್ಲ)
ಪದ್ಯ-೩೯:ಅರ್ಥ:ಕೌರವವಂಶವೆಂಬ ಆಕಾಶಕ್ಕೆ ಸೂರ್ಯನಂತಿರುವ ಎಲೈ ದುರ್ಯೋಧನನೇ ಪಾಂಡವರನ್ನು ಸೇರಿಸಿಕೊಂಡರೆ, ನಿನಗೆ ಪ್ರತಿಭಟಿಸುವ ಪರ್ವತರಾಜರ ಬೆಟ್ಟಗಳಲ್ಲಿರುವ ಸುಂಕದ ಕಟ್ಟೆಗಳೂ ವಿರೋಧಿಸುವ ದೇಶಗಳೂ ಪ್ರತಿಭಟಿಸುವ ಗಡಿಪ್ರದೇಶಗಳೂ ಎನ್ನುವುವು ಇರುತ್ತವೆಯೇ? ಇಲ್ಲ.
ಕಂ||ಪಟ್ಟದ ಮೊದಲಿಗರಾಜಿಗೆ
ಜಟ್ಟಿಗರವರೆಂದುಮಾಳ್ವ ಮುನ್ನಿನ ನೆಲನಂ|
ಕೊಟ್ಟು ಬೞಿಯಟ್ಟು ನಿನಗೊಡ
ವುಟ್ಟಿದರಾ ದೊರೆಯರಾಗೆ ತೀರದುದುಂಟೇ|| ೪೦ ||
ಪದ್ಯ-೪೦:ಪದವಿಭಾಗ-ಅರ್ಥ:ಪಟ್ಟದ ಮೊದಲಿಗರ್, ಆಜಿಗೆ(ಯುದ್ಧಕ್ಕೆ) ಜಟ್ಟಿಗರ್ (ಅವರು ರಾಜ್ಯಪಟ್ಟಕ್ಕೆ ಮೊದಲು ಅರ್ಹರಾದವರು, ಯುದ್ಧದಲ್ಲಿ ಶೂರರಾದವರು.) ಅವರು ಎಂದುಂ (ಅವರು ಯಾವಾಗಲೂ) ಆಳ್ವ ಮುನ್ನಿನ ನೆಲನಂ ಕೊಟ್ಟು (ಮೊದಲಿಂದ ಆಳುತ್ತಿದ್ದ ರಾಜ್ಯವನ್ನು ಅವರಿಗೆ ಕೊಟ್ಟು) ಬೞಿಯಟ್ಟು (ದೂತರ ಮೂಲಕ ಆ ಸಮಾಚಾರವನ್ನು ಹೇಳಿಕಳುಹಿಸು.) ನಿನಗೊಡವುಟ್ಟಿದರು (ನಿನ್ನ ಒಡಹುಟ್ಟಿದ ಸಹೋದರರು) ಆ ದೊರೆಯರು (ಅಸಮಾನರು) ಆಗೆ ತೀರದುದು ಉಂಟೇ (ಅಂತಹ ಸಮರ್ಥರಾಗಿರಲು ನಿನಗಸಾಧ್ಯವಾದುದೂ ಉಂಟೇ?)
ಪದ್ಯ-೪೦:ಅರ್ಥ:ಅದೂ ಹೇಗೂ ಇರಲಿ, ಅವರು ರಾಜ್ಯಪಟ್ಟಕ್ಕೆ ಮೊದಲು ಅರ್ಹರಾದವರು, ಯುದ್ಧದಲ್ಲಿ ಶೂರರಾದವರು. ಅವರು ಯಾವಾಗಲೂ ಮೊದಲಿಂದ ಆಳುತ್ತಿದ್ದ ರಾಜ್ಯವನ್ನು ಅವರಿಗೆ ಕೊಟ್ಟು ಆ ದೂತರ ಮೂಲಕ ಆ ಸಮಾಚಾರವನ್ನು ಹೇಳಿಕಳುಹಿಸು. ನಿನ್ನ ಒಡಹುಟ್ಟಿದ ಸಹೋದರರು ಅಂತಹ ಸಮರ್ಥರಾಗಿರಲು ನಿನಗೆ ಅಸಾಧ್ಯವಾದುದೂ ಉಂಟೇ? ಇಲ್ಲ.
ಕಂ||ಮುನ್ನಿನ ನೆಲನಂ ಕುಡುಗೆಮ
ಗೆನ್ನರ್ ದಾಯಿಗರೆಮೆನ್ನರಂತಲ್ತಿಂತ|
ಲ್ತೆನ್ನರ್ ಕರುಣಿಸಿ ದಯೆಯಿಂ
ದಿನ್ನಿತ್ತುದೆ ಸಾಲ್ಗುಮೆಂಬರೆಂಬುದನೆಂಬರ್|| ೪೧
ಪದ್ಯ-೪೧:ಪದವಿಭಾಗ-ಅರ್ಥ:ಮುನ್ನಿನ ನೆಲನಂ ಕುಡುಗೆ ಎಮಗೆ ಎನ್ನರ್ (ಅವರು ನಮಗೆ ಮೊದಲಿನ ಭೂಮಿಯನ್ನೆಲ್ಲಾ ಕೊಡು ಎನ್ನುವುದಿಲ್ಲ) ದಾಯಿಗರೆಂ ಎನ್ನರ್ (ನಾವು ದಾಯಾದಿಗಳು (ಸಮಭಾಗಿಗಳು) ಎನ್ನುವುದಿಲ್ಲ.) ಅಂತಲ್ತು ಇಂತಲ್ತು ಎನ್ನರ್ (ಹೀಗಲ್ಲ ಹಾಗಲ್ಲ ಎನ್ನುವುದಿಲ್ಲ) ಕರುಣಿಸಿ ದಯೆಯಿಂದ ಇನ್ನು ಇತ್ತುದೆ ಸಾಲ್ಗುಂ ಎಂಬರ್ (ನೀನು ದಯೆಯಿಂದ ಕೊಟ್ಟುದು ಸಾಕು ಎನ್ನುತ್ತಾರೆ.) ಎಂಬುದನೆ ಎಂಬರ್ (ನೀನು ಹೇಳಿದ್ದನ್ನೇ ಆಯಿತು ಎನ್ನುವರು.)
ಪದ್ಯ-೪೧:ಅರ್ಥ:ಅವರು ನಮಗೆ ಮೊದಲಿನ ಭೂಮಿಯನ್ನೆಲ್ಲಾ ಕೊಡು ಎನ್ನುವುದಿಲ್ಲ. ನಾವು ದಾಯಾದಿಗಳು (ಸಮಭಾಗಿಗಳು) ಎನ್ನುವುದಿಲ್ಲ. ಹೀಗಲ್ಲ ಹಾಗಲ್ಲ ಎನ್ನುವುದಿಲ್ಲ. ನೀನು ಹೇಳಿದ್ದನ್ನೇ ಆಯಿತು ಎನ್ನುವರು.
ಚಂ|| ಕರಿ ಕಳಭ ಪ್ರಚಂಡ ಮೃಗರಾಜ ಕಿಶೋರ ಕಠೋರ ಘೋರ ಹೂಂ
ಕರಣ ಭಯಂಕರಾಟವಿಯೊಳಿನ್ನೆವರಂ ನೆಲಸಿರ್ದ ಸೇದೆ ನೀಂ|
ಕರುಣಿಸಿದಾಗಳಲ್ಲದವರ್ಗಾಱದು ಕೆಮ್ಮಗೆ ನಾಡ ಚಲ್ಲವ
ತ್ತರ ನುಡಿಗೊಳ್ಳದಿರ್ ನಿನಗೆ ಪಾಂಡವರಪ್ಪುದನಾರುಮಪ್ಪರೇ|| ೪೨ ||
ಪದ್ಯ-೪೨:ಪದವಿಭಾಗ-ಅರ್ಥ:ಕರಿ ಕಳಭ ಪ್ರಚಂಡ ಮೃಗರಾಜ ಕಿಶೋರ (ಸಿಂಹದ ಮರಿಗಳ) ಕಠೋರ ಘೋರ ಹೂಂಕರಣ ಭಯಂಕರ ಅಟವಿಯೊಳ್ (ಆನೆ, ಭಯಂಕರ ಸಿಂಹದ ಮರಿಗಳ ಕರ್ಕಶವೂ ಭಯಂಕರವೂ ಆದ ಹೂಂಕರಣ ಶಬ್ದದಿಂದ ಕೂಡಿದ ಘೋರವಾದ ಕಾಡಿನಲ್ಲಿ) ಇನ್ನೆವರಂ ನೆಲಸಿರ್ದ ಸೇದೆ (ಇದುವರೆಗೂ ಅವರು ವಾಸಮಾಡಿದ ಆಯಾಸವು) ನೀಂ ಕರುಣಿಸಿದಾಗಳಲ್ಲದೆ ಅವರ್ಗೆ ಆಱದು (ನೀನು ದಯೆತೋರಿಸಿದಲ್ಲದೆ ಶಮನವಾಗುವುದಿಲ್ಲ) ಕೆಮ್ಮಗೆ ನಾಡ (ಸುಳ್ಳರಾದ) ಚಲ್ಲವತ್ತರ ನುಡಿಗೊಳ್ಳದಿರ್ (ಸುಮ್ಮನೆ ಸುಳ್ಳರಾದ ನಂಬಿಸಿಹೊಟ್ಟೆಹೊರೆಯುವವವರ ಮಾತುಗಳನ್ನು ಕೇಳಬೇಡ.) ನಿನಗೆ ಪಾಂಡವರಪ್ಪುದಂ ಆರುಂ ಅಪ್ಪರೇ (ನಿನಗೆ ಪಾಂಡವರಾಗುವಂತೆ ಇತರರಾಗುತ್ತಾರೆಯೆ? )
ಪದ್ಯ-೪೨:ಅರ್ಥ: ಆನೆ, ಭಯಂಕರ ಸಿಂಹದ ಮರಿಗಳ ಕರ್ಕಶವೂ ಭಯಂಕರವೂ ಆದ ಹೂಂಕರಣ ಶಬ್ದದಿಂದ ಕೂಡಿದ ಘೋರವಾದ ಕಾಡಿನಲ್ಲಿ ಇದುವರೆಗೂ ಅವರು ವಾಸಮಾಡಿದ ಆಯಾಸವು ನೀನು ದಯೆತೋರಿಸಿದಲ್ಲದೆ ಶಮನವಾಗುವುದಿಲ್ಲ. ಸುಮ್ಮನೆ ನಂಬಿಸಿಹೊಟ್ಟೆಹೊರೆಯುವವವರ ಮಾತುಗಳನ್ನು ಕೇಳಬೇಡ. ಆಪತ್ಕಾಲದಲ್ಲಿ ನಿನಗೆ ಪಾಂಡವರಾಗುವಂತೆ ಇತರರಾಗುತ್ತಾರೆಯೆ?
ಉ|| ಒಂದುಮೊಡಂಬಡುಂ ಪೊರೆಯುಮಿಲ್ಲವರ್ಗೆಂಬುದನೆಯ್ದ ನಂಬಿ ನಾ
ಡಂ ದಯೆಗೆಯ್ದು ನೀಂ ಕುಡುವಿನಂ ಪೆಱತೇ ಪಡೆಮಾತೊ ಪಳ್ಳಿರ|
ಲ್ಕೆಂದವರ್ಗೀವುದೊಳ್ಪು ನಿಲೆ ಕಂಚಿ ನೆಗೞ್ತೆಯ ವಾರಣಾಸಿ ಕಾ
ಕಂದಿ ಕುರುಸ್ಥಳಂ ವರ ವೃಕಸ್ಥಳಮೆಂಬಿವನಯ್ದು ಬಾಡಮಂ|| ೪೩ ||
ಪದ್ಯ-೪೩:ಪದವಿಭಾಗ-ಅರ್ಥ:ಒಂದುಂ ಒಡಂಬಡುಂ ಪೊರೆಯುಂ ಇಲ್ಲ ಅವರ್ಗೆ(ಯಾವ ಒಂದು ವ್ಯವಸ್ಥೆಯೂ ರಕ್ಷಣೆಯೂ ಇಲ್ಲ ಅವರಿಗೆ)- ಎಂಬುದನು ಎಯ್ದ ನಂಬಿ ನಾಡಂ ದಯೆಗೆಯ್ದು ನೀಂ ಕುಡುವಿನಂ(ಅವರ ರಾಜ್ಯವನ್ನು ಅವರಿಗೆ ಕೊಡಲು ಇಷ್ಟವಿಲ್ಲದಿದ್ದರೆ --ಎಂದು ಚೆನ್ನಾಗಿ ತೀಳಿದು ಬೇರೆ ಮಾತಿಲ್ಲದೆ ಗ್ರಾಮಗಳನ್ನು ದಯೆಮಾಡಿ ಕೊಡುವುದಾದರೆ) ಪೆಱತೇ ಪಡೆಮಾತೊ (ಬೇರೇನು ಬಿದ್ದುಹೋಗುವ ಬೀದಿ ಮಾತೋ?) ಪಳ್ಳಿರಲ್ಕೆಂದು (ಹಾಸಿಮಲಗುವ ಮಟ್ಟಿಗೆ) ಅವರ್ಗೆ ಈವುದು ಒಳ್ಪು ನಿಲೆ (ನಿನ್ನ ಒಳ್ಳೆಯತನ ಶಾಸ್ವತವಾಗಿ ನಿಲ್ಲಲು) ಕಂಚಿ ನೆಗೞ್ತೆಯ ವಾರಣಾಸಿ ಕಾಕಂದಿ ಕುರುಸ್ಥಳಂ ವರ ವೃಕಸ್ಥಳಮೆಂಬಿವನಯ್ದು ಬಾಡಮಂ
ಪದ್ಯ-೪೩:ಅರ್ಥ:ಅವರ ರಾಜ್ಯವನ್ನು ಅವರಿಗೆ ಕೊಡಲು ಇಷ್ಟವಿಲ್ಲದಿದ್ದರೆ, ಪಾಂಡವರಿಗೆ ಯಾವ ಒಂದು ವ್ಯವಸ್ಥೆಯೂ ರಕ್ಷಣೆಯೂ ಅವರಿಗೆ ಇಲ್ಲ, ಬೇರೇನು ಬಿದ್ದುಹೋಗುವ ಬೀದಿ ಮಾತೋ? ಅಲ್ಲ ಎಂದು ಚೆನ್ನಾಗಿ ತೀಳಿದು ಬೇರೆ ಮಾತಿಲ್ಲದೆ ಗ್ರಾಮಗಳನ್ನು ದಯೆಮಾಡಿ ಕೊಡುವುದಾದರೆ, ಕಂಚಿ, ಶ್ರೇಷ್ಠವಾದ ವಾರಣಾಸಿ, ಕಾಕಂದಿ, ಕುರುಸ್ಥಳ, ಉತ್ತಮವಾದ ವೃಕಸ್ಥಳ ಎಂಬ ಅಯ್ದ ಹಳ್ಳಿಗಳನ್ನು ಅವರಿಗೆ ಮಲಗುವುದಕ್ಕೆ ಮಟ್ಟಿಗೆ ಮತ್ತು ನಿನ್ನ ಒಳ್ಳೆಯತನ ಶಾಸ್ವತವಾಗಿ ನಿಲ್ಲಲು ಕೊಟ್ಟರೆ ಸಾಕು, ಎಂದನು ಕೃಷ್ಣ.
ವ|| ಎಂಬುದು ಸುಯೋಧನಂ ಕ್ರೋಧಾನಲೋದ್ದೀಪಿತ ಹೃದಯನಾಗಿ ಶೌರ್ಯಮದಾಡಂಬರದೊಳಂಬರಂಬರಂ ಸಿಡಿಲ್ದು-
ವಚನ:ಪದವಿಭಾಗ-ಅರ್ಥ:ಎಂಬುದು ಸುಯೋಧನಂ ಕ್ರೋಧ ಅನಲ ಉದ್ದೀಪಿತ ಹೃದಯನಾಗಿ (ಕ್ರೋಧಾಗ್ನಿಯಿಂದ ಉರಿಯುತ್ತಿರುವ ಹೃದಯವುಳ್ಳವನಾಗಿ) ಶೌರ್ಯಮದಾಡಂಬರದೊಳಂಬರಂಬರಂ - ಶೌರ್ಯ ಮದ ಆಡಂಬರದೊಳ್ ಅಂಬರಂಬರಂ ಸಿಡಿಲ್ದು (ಆಕಾಶ- ಅಂಬರ ಸಿಡಿಯುವಂತೆ,)-
ವಚನ:ಅರ್ಥ:ವ|| ಎನ್ನಲು ದುರ್ಯೋಧನನು ಕ್ರೋಧಾಗ್ನಿಯಿಂದ ಉರಿಯುತ್ತಿರುವ ಹೃದಯವುಳ್ಳವನಾಗಿ ಶೌರ್ಯದ ಮದದ ಪ್ರದರ್ಶನದಲ್ಲಿ ಆಕಾಶ- ಅಂಬರ ಸಿಡಿಯುವಂತೆ,- ಕೃಷ್ಣನನ್ನು ಕುರಿತು ಹೇಳಿದನು.
ಚಂ|| ತೊಲಗದೆ ಗೋವುಗಾದ ಕಿಱಿಯಂದಿನ ಗೋವಿಕೆ ನಿನ್ನ ಚಿತ್ತದೊಳ್
ನೆಲಸಿದುದಕ್ಕುಮಗ್ಗಳದ ವೈಷ್ಣವ ಮೋಹಮೆ ನಿನ್ನ ಮೆಯ್ಯೊಳ|
ಗ್ಗಲಿಸಿದುದಕ್ಕುಮಾ ಜಡಧಿ ಸಂಗತಿಯಿಂ ಜಡಬುದ್ಧಿ ಬುದ್ಧಿಯಂ
ತೊಲಗಿಸಿತಕ್ಕುಮಲ್ಲದೊಡೆ ನೀನಿನಿತಂ ನುಡಿವೈ ಪಳಾಳಮಂ|| ೪೪ ||
ಪದ್ಯ-೦೦:ಪದವಿಭಾಗ-ಅರ್ಥ:ತೊಲಗದೆ (ಹೋಗದೆ) ಗೋವುಗಾದ ಕಿಱಿಯಂದಿನ (ಚಿಕ್ಕಂದಿನ, ಬಾಲ್ಯದ) ಗೋವಿಕೆ (ದನಕಾಯುವ ಮನೋಭಾವ) ನಿನ್ನ ಚಿತ್ತದೊಳ್ ನೆಲಸಿದುದು ಅಕ್ಕುಂ (ನಿನ್ನಲ್ಲಿ ಬಾಲ್ಯದಲ್ಲಿ ದನಕಾಯುತ್ತಿದ್ದ ಮನೋಭಾವ ಹೋಗದೆ ಇನ್ನೂ ನೆಲೆಸಿರುವಂತಿದೆ.) ಅಗ್ಗಳದ ವೈಷ್ಣವ ಮೋಹಮೆ (ಅತಿಶಯ/ ಹೆಚ್ಚಿನ ವಿಷ್ಣುಭಕ್ತರಾದ ಪಾಂಡವರಮೇಲಿನ ಮೋಹವು) ನಿನ್ನ ಮೆಯ್ಯೊಳು ಅಗ್ಗಲಿಸಿದುದು (ಅತಿಶಯವಾಗಿ) ಅಕ್ಕುಂ ಆ ಜಡಧಿ ಸಂಗತಿಯಿಂ (ಸಂಗ, ಸಹವಾಸ) (ನಿನ್ನ ಮೈಯಲ್ಲಿ ಆ ಜಡಸಮುದ್ರದ ಸಹವಾಸದಿಂದ ಅತಿಶಯವಾಗಿ ಇರಬೇಕು.) ಜಡಬುದ್ಧಿ ಬುದ್ಧಿಯಂ (ವಿವೇಕವನ್ನು) ತೊಲಗಿಸಿತಕ್ಕುಂ (ಆ ಜಡಬುದ್ಧಿಯು ವಿವೇಕವನ್ನು ತೊಲಗಿಸಿರಬೇಕು); ಅಲ್ಲದೊಡೆ ನೀನು ಇನಿತಂ ನುಡಿವೈ ಪಳಾಳಮಂ (ಜೊಳ್ಳು ಮಾತುಗಳನ್ನು) (ಇಲ್ಲದಿದ್ದರೆ ನೀನು ಇಷ್ಟೊಂದು ಜೊಳ್ಳು ಮಾತುಗಳನ್ನು ಹೇಳುತ್ತೀಯಾ?)
ಪದ್ಯ-೦೦:ಅರ್ಥ:“ನಿನ್ನಲ್ಲಿ ಬಾಲ್ಯದಲ್ಲಿ ದನಕಾಯುವ ಮನೋಭಾವ ಹೋಗದೆ ಇನ್ನೂ ನೆಲೆಸಿರುವಂತಿದೆ. ಹೆಚ್ಚಿನ ವಿಷ್ಣುಭಕ್ತರಾದ ಪಾಂಡವರಮೇಲಿನ ಮೋಹವು ನಿನ್ನ ಮೈಯಲ್ಲಿ ಆ ಜಡಸಮುದ್ರದ ಸಹವಾಸದಿಂದ ಅತಿಶಯವಾಗಿ ಇರಬೇಕು. ಆ ಜಡಬುದ್ಧಿಯು ವಿವೇಕವನ್ನು ತೊಲಗಿಸಿರಬೇಕು. ಇಲ್ಲದಿದ್ದರೆ ನೀನು ಇಷ್ಟೊಂದು ಜೊಳ್ಳು ಮಾತುಗಳನ್ನು ಹೇಳುತ್ತೀಯಾ?)
ಕಂ|| ಪಱಪಟ್ಟ ಪಗೆವರಂ ನೆರೆ
ಪಱಪಡಲಣವೀಯದವರನವರ್ಗಳ ಬಾೞೊಳ್|
ನಿಱಿಸಲ್ ಬಗೆದೈ ಕರಮೆನ
ಗುಱದಿರ್ಕುಮೆ ನಿನ್ನ ಪೇೞ್ದ ಧರ್ಮಶ್ರವಣಂ|| ೪೫ ||
ಪದ್ಯ-೦೦:ಪದವಿಭಾಗ-ಅರ್ಥ:ಪಱಪಟ್ಟ ಪಗೆವರಂ (ಕತ್ತರಿಸಿಹೋಗಿರುವ) ಸಂಬಂಧವುಳ್ಳ ಶತ್ರುಗಳನ್ನು) ನೆರೆ ಪಱಪಡಲ್ ಅಣವೀಯದೆ (ಸಂಬಂಧವುಳ್ಳ ಶತ್ರುಗಳನ್ನು ಸಂಪೂರ್ಣವಾಗಿ ನಾಶಮಾಡುವುದಕ್ಕೆ ಅವಕಾಶಕೊಡದೆ) ಅವರಂ ಅವರ್ಗಳ ಬಾೞೊಳ್ (ಸಂಪತ್ತಿನಲ್ಲಿ) ನಿಱಿಸಲ್ ಬಗೆದೈ (ಅವರ- ಪಾಂಡವರ ಮೊದಲ ಉನ್ನತಸ್ಥಿತಿಯಲ್ಲಿ ಪುನ ಸ್ಥಾಪಿಸಲು ಬಯಸಿದ್ದೀಯಾ.) ಕರಂ ಎನಗೆ ಉಱದೆ (ಹೊಂದದೆ) ಇರ್ಕುಮೆ ನಿನ್ನ ಪೇೞ್ದ (ನೀನು ಹೇಳಿದ) ಧರ್ಮಶ್ರವಣಂ (ನೀನು ಹೇಳಿದ ಧರ್ಮಶ್ರವಣವು ನನಗೆ ಹಿಡಿಸುವಂತೆ ಇರುವುದೇ? ಇಲ್ಲ.)
ಪದ್ಯ-೦೦:ಅರ್ಥ:ಹರಿದುಹೋದ (ಕತ್ತರಿಸಿಹೋಗಿರುವ) ಸಂಬಂಧವುಳ್ಳ ಶತ್ರುಗಳನ್ನು ಸಂಪೂರ್ಣವಾಗಿ ನಾಶಮಾಡುವುದಕ್ಕೆ ಅವಕಾಶಕೊಡದೆ ಅವರ- ಪಾಂಡವರ ಮೊದಲ ಉನ್ನತಸ್ಥಿತಿಯಲ್ಲಿ ಪುನ ಸ್ಥಾಪಿಸಲು ಬಯಸಿದ್ದೀಯಾ?. ನೀನು ಹೇಳಿದ ಧರ್ಮಶ್ರವಣವು ನನಗೆ ಹಿಡಿಸುವಂತೆಇರುವುದೇ? ಇಲ್ಲ.
ಉ|| ಭಾಗಮನಾಸೆವಟ್ಟಳಿಪಿ ಬೇೞ್ಪುದು ನಿನ್ನಯ ಕಲ್ತ ವಿದ್ದೆ ನೀ
ನಾಗಳುಮಣ್ಣ ಬೇಡಿದಪೆ ಸಜ್ಜನದಂತೆನಗೆಕ್ಕಬಾಗೆ ನೋ|
ಡೀಗಳಿಳಾಲತಾಂಗಿ ಪುದವಲ್ಲಳದೆಂತೆನೆ ಮುನ್ನ ನೂಲ ತೋ
ಡಾಗದೆ ಕೆಟ್ಟು ಪೋದವರನಿಂ ಮಗುೞ್ದುಂ ನಿಱಪಂತು ಬೆಳ್ಳನೇ|| ೪೬ ||
ಪದ್ಯ-೪೬:ಪದವಿಭಾಗ-ಅರ್ಥ:ಭಾಗಮನು ಆಸೆವಟ್ಟು ಅಳಿಪಿ ಬೇೞ್ಪುದು ನಿನ್ನಯ ಕಲ್ತ ವಿದ್ದೆ (ಭೂಭಾಗವನ್ನು ಆಶೆಪಟ್ಟು ಕೊಡೆಂದು ಕೇಳಿಕೊಳ್ಳುವುದು ನೀನು ಮೊದಲಿಂದ ಕಲಿತ ವಿದ್ಯೆ.) ನೀನು ಆಗಳುಂ ಅಣ್ಣ ಬೇಡಿದಪೆ (ಅಣ್ಣಾ, ನೀನು ಯಾವಾಗಲೂ ಬೇಡುವ ಸ್ವಭಾವವುಳ್ಳವನು); ಸಜ್ಜನದಂತೆ (ಕುಲಸ್ತ್ರೀಯಂತೆ) ಎನಗೆ ಎಕ್ಕಬಾಗೆ (ಒಂದೇ ಭಾಗವಳ್ಳವಳು) ನೋಡು ಈಗಳ್ ಇಳಾಲತಾಂಗಿ (ಇಳೆ ಭೂಮಿ- ರಾಜ್ಯಲಕ್ಷ್ಮಿ) ಪುದವಲ್ಲಳು (ಮತ್ತೊಬ್ಬನ ಜೊತೆ ಹೊಂದಿಕೊಂಡಿರುವವಳಲ್ಲ) ಅದೆಂತೆನೆ ಮುನ್ನ ನೂಲ ತೋಡಾಗದೆ (ಅದು ಹೇಗೆಂದರೆ ಮೊದಲು ತುಂಡಾದ ನೂಲು ಮತ್ತೆ ಸೇರುವುದೇ?) ಕೆಟ್ಟು ಪೋದವರನಿಂ (ಹಾಳಾದವರನ್ನು )ಮಗುೞ್ದುಂ ನಿಱಪಂತು ಬೆಳ್ಳನೇ (ಮತ್ತೆ ತಿರುಗಿ ನಿಲ್ಲಿಸಲು ನಾನು ದಡ್ಡನೇ?) ಅಲ್ಲ.
ಪದ್ಯ-೪೬:ಅರ್ಥ:ಭೂಭಾಗವನ್ನು ಆಶೆಪಟ್ಟು ಕೊಡೆಂದು ಕೇಳಿಕೊಳ್ಳುವುದು ನೀನು ಮೊದಲಿಂದ ಕಲಿತ ವಿದ್ಯೆ. ಅಣ್ಣಾ, ನೀನು ಯಾವಾಗಲೂ ಬೇಡುವ ಸ್ವಭಾವವುಳ್ಳವನು. ಕುಲಸ್ತ್ರೀಯಂತೆ ರಾಜ್ಯಲಕ್ಷ್ಮಿಯು ನನಗೆ ಒಂದೇ ಭಾಗವಳ್ಳವಳು. ಮತ್ತೊಬ್ಬನ ಜೊತೆ ಹೊಂದಿಕೊಂಡಿರುವವಳಲ್ಲ, ಅದು ಹೇಗೆಂದರೆ ಮೊದಲು ತುಂಡಾದ ನೂಲು ಮತ್ತೆ ಸೇರುವುದೇ? ಹಾಳಾದವರನ್ನು ಮತ್ತೆ ತಿರುಗಿ ನಿಲ್ಲಿಸಲು ನಾನು ದಡ್ಡನೇ? ಅಲ್ಲ.
ಮ|| ವಿಜಿಗೀಷುತ್ವದೊಳೊಂದಿ ಗೋವುಳಿಗನಪ್ಪಂ ಮತ್ಸ್ಯನಾಳಾಗಿ ವಾ
ರಿಜನಾಭಂ ಹರಿಯೆಂಬ ದೊಡ್ಡಿವೆಸರಂ ಪೊತ್ತಿರ್ದ ನೀಂ ಮಂತ್ರಿಯಾ|
ಗೆ ಜಯೋದ್ಯೋಗಮನೆತ್ತಿಕೊಂಡು ರಣದೊಳ್ ಭೂಭಾಗಮಂ ನೆಟ್ಟನೊ
ಟ್ಟಜೆಯಿಂದಂಜಿಸಿಕೊಳ್ಳದಿರ್ಪಿರೆ ಸಮಂತಾ ಗಂಡರೀ ಗಂಡರಂ|| ೪೭ ||
ಪದ್ಯ-೪೭:ಪದವಿಭಾಗ-ಅರ್ಥ: ವಿಜಿಗೀಷುತ್ವದೊಳ್ ಒಂದಿ (ಜಯದ ಅಪೇಕ್ಷೆಯನ್ನು ಹೊಂದಿ) ಗೋವುಳಿಗನಪ್ಪಂ (ದನಗಾಹಿಯಾದ ನೀನು) ಮತ್ಸ್ಯನು ಆಳಾಗಿ (ಮೀನು ಆಗಿದ್ದವನು ಮನುಷ್ಯನಾಗಿ) ವಾರಿಜನಾಭಂ ಹರಿಯೆಂಬ ದೊಡ್ಡಿವೆಸರಂ ಪೊತ್ತಿರ್ದ ನೀಂ (ಕಮಲನಾಭ, ಹರಿ, ಎನ್ನುವ ದೊಡ್ಡ ಹೆಸರನ್ನು ಹೊತ್ತಿರುವ ನೀನು) ಮಂತ್ರಿಯಾಗೆ (ಮಂತ್ರಿಯಾಗಿರುವಾಗ) ಜಯೋದ್ಯೋಗಮನೆತ್ತಿಕೊಂಡು ರಣದೊಳ್ (ಯುದ್ಧದಲ್ಲಿ ಯುದ್ಧದಲ್ಲಿ ಗೆಲ್ಲುವ ಕಾರ್ಯದಲ್ಲಿ ತೊಡಗಿ) ಭೂಭಾಗಮಂ ನೆಟ್ಟನೆ ಒಟ್ಟಜೆಯಿಂದ ಅಂಜಿಸಿ ಕೊಳ್ಳದೆ ಇರ್ಪಿರೆ ಸಮಂತು- ಪೂರ್ಣವಾಗಿ (ದೊಡ್ಡ ಪರಾಕ್ರಮದಿಂದ ಹೆದರಿಸಿ ಯುದ್ಧದಲ್ಲಿ ನೇರವಾಗಿ ಭೂಮಿಯ ಭಾಗವನ್ನು ಪೂರ್ಣವಾಗಿ ಪಡೆಯದೇ ಇರುತ್ತಾರೆಯೇ?) ಆ ಗಂಡರ್ ಈ ಗಂಡರಂ ( ಆ ಶೂರರು ಈ ಕೌರವ ಶೂರರನ್ನು)
ಪದ್ಯ-೪೭:ಅರ್ಥ: 'ದನಗಾಹಿಯಾದ ನೀನು ಜಯಾಕಾಂಕ್ಷೆಯಿಂದ ಕೂಡಿ, ಮೀನು ಆಗಿದ್ದವನು ಈಗ ಮನುಷ್ಯನಾಗಿ, ಕಮಲನಾಭ, ಹರಿ, ಎನ್ನುವ ದೊಡ್ಡ ಹೆಸರನ್ನು ಹೊತ್ತಿರುವ ನೀನು ಮಂತ್ರಿಯಾಗಿರುವಾಗ, ಆ ಶೂರರಾದ ಪಾಂಡವರು ಯುದ್ಧದಲ್ಲಿ ಗೆಲ್ಲುವ ಕಾರ್ಯದಲ್ಲಿ ತೊಡಗಿ ಶೂರರಾದ ನಮ್ಮನ್ನು ದೊಡ್ಡ ಪರಾಕ್ರಮದಿಂದ ಹೆದರಿಸಿ ಯುದ್ಧದಲ್ಲಿ ನೇರವಾಗಿ ಭೂಮಿಯ ಭಾಗವನ್ನು ಪೂರ್ಣವಾಗಿ ಪಡೆಯದೇ ಇರುತ್ತಾರೆಯೇ!' ಎಂದು ವ್ಯಂಗ್ಯವಾಗಿ ಹಾಸ್ಯಮಾಡಿ ದುರ್ಯೋದನನು ಹೇಳಿದನು.
ಟಿಪ್ಪಣಿ-:(ಅಂದರೆ ಅವನಿಗೆ ಆ ಅವತಾರದ ಪುರಾಣ ಕಥೆಗಳಲ್ಲಿ ನಂಬುಗೆ ಇರಲಿಲ್ಲ ಎಂದು ತೋರುವುದು, ಶಿಶುಪಾಲನೂ ಹಾಗೆಯೇ ಹೇಳಿದ್ದ.)
ಚಂ|| ಪುಸಿಯೆನೆ ಸಾಮಮಂ ನುಡಿದು ಭೇದಮನುಂಟೊಡತಾಗೆ ಮಾಡಿ ಛೀ
ದ್ರಿಸಲೊಳಪೊಕ್ಕು ಮಿಕ್ಕು ನೆಗೞ್ದುಗ್ರವಿರೋಗಳೆತ್ತಮೆಯ್ದೆ ಬಂ|
ಚಿಸಿ ಪೊಱಗಣ್ಗೆ ಸಯ್ದರೆನೆ ತಾವೊಳಗಂ ತವೆ ತೋಡಿ ತಿಂದು ರ
ಕ್ಕಸಿಯರ ಕಂಡ ಕುಂಬಳದ ಮಾೞ್ಕೆವೊಲಾಗಿರೆ ಮಾಡದಿರ್ಪಿರೇ|| ೪೮ ||
ಪದ್ಯ-೪೮:ಪದವಿಭಾಗ-ಅರ್ಥ:ಪುಸಿಯೆನೆ ಸಾಮಮಂ ನುಡಿದು (ಸುಳ್ಳೇ ಸಾಮೋಪಾಯವನ್ನು ಹೇಳಿ) ಭೇದಮನು ಉಂಟೊಡತಾಗೆ ಮಾಡಿ (ನಮ್ಮಲ್ಲಿ ಭೇದ ಉಂಟಾಗುವಹಾಗೆ ಮಾಡಿ) ಛೀದ್ರಿಸಲು ಒಳಪೊಕ್ಕು (ಒಳಹೊಕ್ಕು ಒಡಕುಂಟುಮಢಲು) ಮಿಕ್ಕು ನೆಗೞ್ದು ಉಗ್ರವಿರೋಧಿಗಳ್ ಎತ್ತಮ್ (ಎಲ್ಲಾಕಡೆಯೂ)ಎಯ್ದೆ (ಚೆನ್ನಾಗಿ) ಬಂಚಿಸಿ (ಉಗ್ರ ವಿರೋಧಿಗಳಾದ ನೀವು ಎಲ್ಲ ರೀತಿಯಿಂದಲೂ ವಂಚನೆಮಾಡಿ ) ಪೊಱಗಣ್ಗೆ ಸಯ್ದರೆನೆ (ಹೊರನೋಟಕ್ಕೆ ಮಾತ್ರ ನ್ಯಾಯವಾಗಿ ಇರುವವರಂತೆ ತೋರಿ) ತಾವು ಒಳಗಂ ತವೆ ತೋಡಿ ತಿಂದು (ತಾವು- ಪಾಂಡವರು ಹೊರನೋಟಕ್ಕೆ ಮಾತ್ರ ನ್ಯಾಯವಾಗಿ ಇರುವವರಂತೆ ತೋರಿ ಒಳಗೆಯೆ ಕೆಡುಕುಬುದ್ಧಿಯನ್ನು ಹೊಂದಿದವರಂತೆ) ರಕ್ಕಸಿಯರ ಕಂಡ ಕುಂಬಳದ ಮಾೞ್ಕೆವೊಲ್ ಆಗಿರೆ ಮಾಡದಿರ್ಪಿರೇ ('ರಾಕ್ಷಸಿಯರು ನೋಡಿದ ಕುಂಬಳಕಾಯಿಯಂತೆ' ಮೋಸ ಮಾಡದೆ ಇರುತ್ತೀರಾ!)
ಪದ್ಯ-೪೮:ಅರ್ಥ:(ಇಲ್ಲಿ ಬಂದು) ಸುಳ್ಳೇ ಸಾಮೋಪಾಯವನ್ನು ಹೇಳಿ, ನಮ್ಮಲ್ಲಿ ಭೇದ ಉಂಟಾಗುವಹಾಗೆ ಮಾಡಿ, ಒಳಹೊಕ್ಕು ಒಡಕುಂಟುಮಢಲು , ಉಗ್ರ ವಿರೋಗಳಾದ ನೀವು ಎಲ್ಲ ರೀತಿಯಿಂದಲೂ ವಂಚನೆಮಾಡಿ, ಹೊರನೋಟಕ್ಕೆ ಮಾತ್ರ ನ್ಯಾಯವಾಗಿ ಇರುವವರಂತೆ ತೋರಿ ಒಳಗೆಯೆ ಕೆಡುಕುಬುದ್ಧಿಯನ್ನು ಹೊಂದಿದವರಂತೆ, 'ರಾಕ್ಷಸಿಯರು ನೋಡಿದ ಕುಂಬಳಕಾಯಿಯಂತೆ' ಮೋಸ ಮಾಡದಿರುತ್ತೀರಾ! (ಕುಂಬಳಕಾಯಿ ಮೇಲೆಮೇಲೆ ನೋಡಲು ಚೆನ್ನಾಗಿದ್ದು ಒಳಗೆ ಕೊಳೆತಿರುವುದು- ಇದಕ್ಕೆ ರಾಕ್ಷಸಿಯರ/ ಕೆಟ್ಟ ಕಣ್ಣು ಬಿದ್ಗಿದೆ ಎಂಬ ನಂಬುಗೆ ಇತ್ತು)
ಟಿಪ್ಪಣಿ -:(ಕೌರವ ಹೇಳುವುದು- ಇಲ್ಲಿ ಕೃಷ್ನನು ಸಾಮದಿಂದ ರಾಜ್ಯ ಕೇಳಲು ಬಂದಿರುವುದು ಕಪಟಕ್ಕಾಗಿ, ಅದರಿಂದ ಕೌರವನ ಕಡೆ ಇರುವವರು ಪಾಂಡವರಿಗಾಗಿ ಅವರ ಪಾಲಿನ ರಾಜ್ಯವನ್ನೂ ಕೊಡಲಿಲ್ಲ, ಐದು ಹಳ್ಳಿಗಳನ್ನು ಕೇಳಿದರೂ ಕೊಡಲಿಲ್ಲ, ಎಂದು ಕೌರವನ ಬಗ್ಗೆ ಅಸಮಾಧನ ಮೂಡಿಸಿ ಅವನ ಕಡೆಯವರಲ್ಲಿ ಒಡಕು ಮೂಡಿಸಲು ಕೃಷ್ಣ ಸಾಮೋಪಾಯದ ನೆವ ಮಾಡಿಕೊಂಡು, ಅರ್ದ ರಾಜ್ಯ ಅಥವಾ ಐದು ಹಳ್ಳಿ ಕೇಳಲು ಬಂದಿರುವನು, ಕೌರವರ ಬೆಂಬಲಿಗರಲ್ಲಿ ಒಡಕುಂಡು ಮಾಡಿ, ಭೇದೋಪಾಯ ಸಾಧಿಸಲು ಬಂದಿರುವನು ಎಂದು ಭಾವ.)
ವ|| ನಾಮೆಲ್ಲಮೊಂದೆ ಗರುಡಿಯೊಳೋದಿದ ಮಾನಸರೆವೆಮ್ಮಂ ನಿಮ್ಮಡಿ ಕೆಮ್ಮನೆ ಬೞಲಿಸಲ್ವೇಡ ಬಂದು ಬಟ್ಟೆಯಿನೆ ಬಿಜಯಂಗೆಯ್ಯಿಮೆನೆ ಮುರಾಂತಕನಂತಕನಂತೆ ಮಾಮಸಕಂ ಮಸಗಿ ದುರ್ಯೋಧನನಿಂತೆಂದಂ-
ವಚನ:ಪದವಿಭಾಗ-ಅರ್ಥ:ನಾಮೆಲ್ಲಂ ಒಂದೆ ಗರುಡಿಯೊಳು ಓದಿದ ಮಾನಸರೆವು (ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಷ್ಯರು ಅಹೆವು-) ಎಮ್ಮಂ ನಿಮ್ಮಡಿ ಕೆಮ್ಮನೆ ಬೞಲಿಸಲ್ವೇಡ (ನಿಮ್ಮ ಪಾದವು (ವ್ಯಂಗ್ಯ, ನೀವು) ನಮ್ಮನ್ನು ಸುಮ್ಮನೆ ಆಯಾಸಪಡಿಸಬೇಡಿ) ಬಂದು ಬಟ್ಟೆಯಿನೆ ಬಿಜಯಂಗೆಯ್ಯಿಂ ಎನೆ (ಬಂದ ದಾರಿಯಲ್ಲಿ ಬಿಜಯಮಾಡಿಸಿ ಎಂದನು. ಎನ್ನಲು-) ಮುರಾಂತಕನು (ಮುರನಿಗೆ ಯಮನಾದವನು) ಅಂತಕನಂತೆ (ಯಮನಂತೆ) ಮಾಮಸಕಂ ಮಸಗಿ ದುರ್ಯೋಧನನಿಂತೆಂದಂ(ಉಗ್ರವಾಗಿ ಕೋಪಿಸಿಕೊಂಡು ದುರ್ಯೋಧನನಿಗೆ ಹೀಗೆಂದನು.)-
ವಚನ:ಅರ್ಥ:ದುರ್ಯೋಧನನು, ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಷ್ಯರು. ನಿಮ್ಮ ಪಾದವು (ವ್ಯಂಗ್ಯ, ನೀವು) ನಮ್ಮನ್ನು ಸುಮ್ಮನೆ ಆಯಾಸಪಡಿಸಬೇಡಿ; ಬಂದ ದಾರಿಯಲ್ಲಿ ಬಿಜಯಮಾಡಿಸಿ ಎಂದನು. ಹಾಗೆ ಹೇಳಲು ಕೃಷ್ಣನು ಯಮನಂತೆ ಉಗ್ರವಾಗಿ ಕೋಪಿಸಿಕೊಂಡು ದುರ್ಯೋಧನನಿಗೆ ಹೀಗೆಂದನು.
ಉ|| ಸೀತೆಯ ದೂಸಱಿಂದೞಿದ ರಾವಣನಂತಿರೆ ನೀನುಮೀಗಳೀ
ಸೀತೆಯ ದೂಸಱಿಂದೞಿಯಲಾಟಿಸಿದೈ ನಿನಗಂತು ಸೀತೆಯೇ|
ಸೀತೆ ಕಡಂಗಿ ಕಾಯ್ದು ಕಡೆಗಣ್ಚಿದಳಪ್ಪೊಡೆ ಧಾತ್ರನಿಂ ತೊದ
ಳ್ವಾತಿನೊಳೇನೊ ಪಾಂಡವರ ಕೆಯ್ಯೊಳೆ ನಿನ್ನ ನಿಸೇಕಮಾಗದೇ|| ೪೯ ||
ಪದ್ಯ-೪೯:ಪದವಿಭಾಗ-ಅರ್ಥ:ಸೀತೆಯ ದೂಸಱಿಂದ ಅೞಿದ ರಾವಣನಂತಿರೆ (ಸೀತಾದೇವಿಯ ಕಾರಣದಿಂದ ಅಳಿದ-ನಾಶವಾದ ರಾವಣನ ಹಾಗೆ) ನೀನುಂ ಈಗಳ್ ಈ ಸೀತೆಯ (ಈ ಭೂಮಿಯ) ದೂಸಱಿಂದ ಅೞಿಯಲು ಆಟಿಸಿದೈ (ಈಗ ನೀನೂ ಈ ಭೂಮಿಯ) ಆಸೆಯಿಂದ ನಾಶವಾಗಲು ಆಶೀಸುತ್ತಿದ್ದೀಯೆ) ನಿನಗೆ ಅಂತು ಸೀತೆಯೇ ಸೀತೆ ಕಡಂಗಿ (ನಿನಗೆ ಈ ಭೂಮಿಯೇ ಆ ಸೀತೆಯಾಗಿ ತಿರುಗಿಬಿದ್ದು) ಕಾಯ್ದು ಕಡೆಗಣ್ಚಿದಳಪ್ಪೊಡೆ (ಕೋಪಿಸಿ ಕಡೆಗಣಿಸಿದ್ದಾರೆ) ಧಾತ್ರನಿಂ (ವಿಧಿಯಾದ ಬ್ರಹ್ಮನ ಸಹಾಯದಿಂದ,ವಿಧಿಯ ನಿಯಮದಮತೆ) ತೊದಳ್ವಾತಿನೊಳೇನೊ (ತೊದಲು ಮಾತಿನಿಂದೇನೋ- ಅಸ್ಪಷ್ಟಮಾತಿನಿಂದೇನೋ, ಸ್ಪಷ್ಟನುಡಿ ಕೇಳು-) ಪಾಂಡವರ ಕೆಯ್ಯೊಳೆ ನಿನ್ನ ನಿಸೇಕಮಾಗದೇ (ವಿಧಿಯ ನಿಯಮದಂತೆ, ಪಾಂಡವರ ಕಯ್ಯಿಂದಲೇ ನಿನಗೆ ನಿಷೇಕ (ತಕ್ಕ ಶಾಸ್ತಿ, ಪ್ರಸ್ತ, ಹಬ್ಬ) ಆಗದಿರುತ್ತದೆಯೇ! ಆಗಿಯೇ ಆಗುವುದು.)
ಪದ್ಯ-೪೯:ಅರ್ಥ:ಸೀತಾದೇವಿಯ ಕಾರಣದಿಂದ ನಾಶವಾದ ರಾವಣನ ಹಾಗೆ ಈಗ ನೀನೂ ಈ ಭೂಮಿಯ ಆಸೆಯಿಂದ ನಾಶವಾಗಲು ಆಶೀಸುತ್ತಿದ್ದೀಯೆ; ನಿನಗೆ ಈ ಭೂಮಿಯೇ ಆ ಸೀತೆಯಾಗಿ ತಿರುಗಿಬಿದ್ದು ಕೋಪಿಸಿ ಕಡೆಗಣಿಸಿದ್ದಾರೆ, ಅಸ್ಪಷ್ಟಮಾತಿನಿಂದೇನೋ, ಸ್ಪಷ್ಟನುಡಿ ಕೇಳು- ವಿಧಿಯ ನಿಯಮಂತೆ ಪಾಂಡವರ ಕಯ್ಯಿಂದಲೇ ನಿನಗೆ ತಕ್ಕಶಾಸ್ತಿ, ಆಗದಿರುತ್ತದೆಯೇ?
ಆರ್ಕಡುಕೆಯ್ದು ಪಾಂಡವರೊಳಾಂತಿಱಿಯಲ್ ನೆರೆವನ್ನರಿಂತಿದೇ
ತರ್ಕೆ ಬಿಗುರ್ತಪೈ ನೆಲನೊಪ್ಪಿಸಿ ತಪ್ಪದೆ ಬಾೞ್ವೆನೆನ್ನದೀ|
ಯುರ್ಕಿನೊಳೆಂತು ನಿಂದು ಸೆಣಸಲ್ ಬಗೆ ಬಂದುದು ನಿನ್ನ ಮೆಯ್ಯ ನೆ
ತ್ತರ್ಕುದಿದುರ್ಕಿ ಸಾವ ಬಗೆಯಿಂ ಸೆಣಸಲ್ ಬಗೆ ಬಂದುದಾಗದೇ|| ೫೦ ||
ಪದ್ಯ-೫೦:ಪದವಿಭಾಗ-ಅರ್ಥ:ಆರ್ ಕೆಡುಕೆಯ್ದು ಪಾಂಡವರೊಳು ಆಂತು ಇಱಿಯಲ್ ನೆರೆವನ್ನರು (ಪಾಂಡವರೊಡನೆ ಯಾರು ಸೆಟೆದುನಿಂತು ಯುದ್ಧಮಾಡಲು ಯಾರು ಸಮರ್ಥರು?) ಇಂತು ಇದು ಏತರ್ಕೆ ಬಿಗುರ್ತುಪೈ (ಹೀಗೇಕೆ ಬೆದರಿಸುತ್ತೀಯಾ?) ನೆಲನ ಒಪ್ಪಿಸಿ ತಪ್ಪದೆ ಬಾೞ್ವೆಂ ಎನ್ನದೆ (ಅವರಿಗೆ ಸಲ್ಲಬೇಕಾದ ಭೂಮಿಯನ್ನು ಒಪ್ಪಿಸಿ ನ್ಯಾಯವಾಗಿ ಬದುಕುತ್ತೇನೆ ಎನ್ನದೆ) ಯು/ಉರ್ಕಿನೊಳು ಎಂತು ನಿಂದು ಸೆಣಸಲ್ ಬಗೆ ಬಂದುದು (ಹೀಗೆ ಅಹಂಕಾರದಿಂದ ಪ್ರತಿಭಟಿಸಿ ಸೆಣಸಲು ಹೇಗೆ ನಿನಗೆ ಮನಸ್ಸು ಬಂದಿತು?) ನಿನ್ನ ಮೆಯ್ಯ ನೆತ್ತರ್ ಕುದಿದು ಉರ್ಕಿ ಸಾವ ಬಗೆಯಿಂ (ನಿನ್ನ ದೇಹದ ರಕ್ತ ಕುದಿದು ಉಕ್ಕಿ ಸಾಯುವ ಬಯಕೆಯಿಂದಲೇ) ಸೆಣಸಲ್ ಬಗೆ ಬಂದುದಾಗದೇ (ಯುದ್ಧಮಾಡಲು ನಿನಗೆ ಮನಸ್ಸು ಬಂದಿರಬೇಕಲ್ಲವೇ?)
ಪದ್ಯ-೫೦:ಅರ್ಥ:ಪಾಂಡವರೊಡನೆ ಯಾರು ಸೆಟೆದುನಿಂತು ಯುದ್ಧಮಾಡಲು ಯಾರು ಸಮರ್ಥರು? ಹೀಗೇಕೆ ಹೆದರಿಸುತ್ತೀಯಾ? ಅವರಿಗೆ ಸಲ್ಲಬೇಕಾದ ಭೂಮಿಯನ್ನು ಒಪ್ಪಿಸಿ ನ್ಯಾಯವಾಗಿ ಬದುಕುತ್ತೇನೆ ಎನ್ನದೆ ಹೀಗೆ ಅಹಂಕಾರದಿಂದ ಪ್ರತಿಭಟಿಸಿ ಸೆಣಸಲು ಹೇಗೆ ನಿನಗೆ ಮನಸ್ಸು ಬಂದಿತು? ನಿನ್ನ ದೇಹದ ರಕ್ತ ಕುದಿದು ಉಕ್ಕಿ ಸಾಯುವ ಇಚ್ಛೆಯಿಂದಲೇ ಯುದ್ಧಮಾಡಲು ನಿನಗೆ ಮನಸ್ಸು ಬಂದಿರಬೇಕಲ್ಲವೇ?
ಕಂ|| ಮುಳಿಯಿಸಿ ಬರ್ದುಂಕಲಾದನು
ಮೊಳನೆ ಯುಷ್ಠಿರನನಮಳರಳವೆಂಬುದು ಭೂ|
ವಳಯ ಪ್ರಸಿದ್ಧಮರಿನೃಪ
ಬಳಂಗಳವರಿಱಿಯೆ ಪೆಳರೆವೆಂಬರುಮೊಳರೇ|| ೫೧ ||
ಪದ್ಯ-೫೧:ಪದವಿಭಾಗ-ಅರ್ಥ:ಮುಳಿಯಿಸಿ (ಕೋಪ ಬರುವ ಹಾಗೆ ಮಾಡಿ) ಬರ್ದುಂಕಲು ಆದನುಂ ಒಳನೆ ಯುಷ್ಠಿರನನು, (ಯುಧಿಷ್ಠಿರನಿಗೆ ಕೋಪ ಬರುವ ಹಾಗೆ ಮಾಡಿ ಬದುಕಬಲ್ಲವನೂ ಇದ್ದಾನೆಯೇ?) ಅಮಳರ ಅಳವೆಂಬುದು ಭೂವಳಯ ಪ್ರಸಿದ್ಧಂ (ಯಮಳರಾದ ನಕುಲ ಸಹದೇವರ ಪರಾಕ್ರಮವೆಂಬುದು ಲೋಕಪ್ರಸಿದ್ಧವಾದುದು) ಅರಿನೃಪ ಬಳಂಗಳು ಅವರು ಇಱಿಯೆ ಪೆಳರೆವು(ಹೆದರೆವು) ಎಂಬರುಂ ಒಳರೇ (ಶತ್ರುಗಳ ಬಳಗದಲ್ಲಿ, ಅವರು- ಯಮಳರು ಯುದ್ಧಮಾಡಲು, ಹೆದರೆವು ಎನ್ನುವವರು ಇದ್ದಾರೆಯೇ? ಇಲ್ಲ.)
ಪದ್ಯ-೫೧:ಅರ್ಥ:ಯುಧಿಷ್ಠಿರನಿಗೆ ಕೋಪ ಬರುವ ಹಾಗೆ ಮಾಡಿ ಬದುಕಬಲ್ಲವನೂ ಇದ್ದಾನೆಯೇ? ಯಮಳರಾದ ನಕುಲ ಸಹದೇವರ ಪರಾಕ್ರಮವೆಂಬುದು ಲೋಕಪ್ರಸಿದ್ಧವಾದುದು. ಶತ್ರುಗಳ ಬಳಗದಲ್ಲಿ, ಅವರು- ಯಮಳರು ಯುದ್ಧಮಾಡಲು, ಹೆದರೆವು ಎನ್ನುವವರು ಇದ್ದಾರೆಯೇ? ಇಲ್ಲ.
ಚಂ|| ಗಜೆಗೊಳೆ ಭೀಮಸೇನನಿದಿರಾಂತು ಬರ್ದುಂಕುವ ವೈರಿ ಭೂಭುಜ
ಧ್ವಜಿನಿಗಳಿಲ್ಲದಲ್ಲದೆಯುಮೀ ಯುವರಾಜನ ನೆತ್ತರಂ ಕುರು|
ಧ್ವಜಿನಿಯೆ ನೋಡೆ ಪೀರ್ದು ಭವದೂರುಯುಗಂಗಳನಾಜಿರಂಗದೊಳ್
ಗಿಜಿಗಿಜಿ ಮಾಡಲೆಂದವನ ಪೂಣ್ದುದು ನಿಕ್ಕುವಮಾಗದಿರ್ಕುಮೇ|| ೫೨||
ಪದ್ಯ-೫೨:ಪದವಿಭಾಗ-ಅರ್ಥ:ಗಜೆಗೊಳೆ ಭೀಮಸೇನನು ಇದಿರಾಂತು (ಭೀಮಸೇನನು ಗದೆಯನ್ನು ಹಿಡಿಯಲು ಎದರಿಸಿ) ಬರ್ದುಂಕುವ ವೈರಿ ಭೂಭುಜಧ್ವಜಿನಿಗಳ್ (ಬದುಕಿರಬಲ್ಲ ವೈರಿ ಸೈನ್ಯವಿಲ್ಲ) ಇಲ್ಲದೆ ಅಲ್ಲದೆಯುಂ (ಇಷ್ಟು ಅಲ್ಲದೆ) ಈ ಯುವರಾಜನ ನೆತ್ತರಂ ಕುರುಧ್ವಜಿನಿಯೆ ನೋಡೆ ಪೀರ್ದು (ಈ ಯುವರಾಜನಾದ ದುಶ್ಶಾಸನನ ರಕ್ತವನ್ನು ಕೌರವಸೈನ್ಯವು ನೋಡುತ್ತಿರುವ ಹಾಗೆಯೇ ಹೀರಿ) ಭವತ್ ಊರುಯುಗಂಗಳನು ಆಜಿರಂಗದೊಳ್ ಗಜಿಗಿಜಿ ಮಾಡಲೆಂದು (ನಿನ್ನ ಎರಡು ತೊಡೆಗಳನ್ನೂ ಯುದ್ಧಭೂಮಿಯಲ್ಲಿ ಜಜ್ಜಿ ಅಜಗಿಜಿ ಮಾಡುತ್ತೇನೆಂದು) ಅವನ ಪೂಣ್ದುದು ನಿಕ್ಕುವಮಾಗದೆ ಇರ್ಕುಮೇ ( ಅವನು ಪ್ರತಿಜ್ಞೆ ಮಾಡಿದುದು ನಿಜವಾಗದೇ ಹೋಗುತ್ತದೆಯೇ?)
ಪದ್ಯ-೫೨:ಅರ್ಥ:ಭೀಮಸೇನನು ಗದೆಯನ್ನು ಹಿಡಿಯಲು ಎದರಿಸಿ ಬದುಕುವ ವೈರಿ ಸೈನ್ಯವಿಲ್ಲ? ಇಷ್ಟು ಅಲ್ಲದೆ ಈ ಯುವರಾಜನಾದ ದುಶ್ಶಾಸನನ ರಕ್ತವನ್ನು ಕೌರವಸೈನ್ಯವು ನೋಡುತ್ತಿರುವ ಹಾಗೆಯೇ ಹೀರಿ, ನಿನ್ನ ಎರಡು ತೊಡೆಗಳನ್ನೂ ಯುದ್ಧಭೂಮಿಯಲ್ಲಿ ಜಜ್ಜಿ ಅಜಗಿಜಿ ಮಾಡುತ್ತೇನೆಂದು ಅವನು ಪ್ರತಿಜ್ಞೆ ಮಾಡಿದುದು ನಿಜವಾಗದೇ ಹೋಗುತ್ತದೆಯೇ?
ವ|| ಅದಲ್ಲದೆಯುಂ ರಾಜಸೂಯ ವ್ಯತಿಕರದೊಳ್ ದಿಗ್ವಿಜಯಂ ಗೆಯ್ದು ಲಂಕೆಯ ವಿಭೀಷಣನನೊಂದೆ ದಿವ್ಯಾಸ್ತ್ರದೊಳೆಚ್ಚು ಕಪ್ಪಂಗೊಂಡ ವಿಕ್ರಮಾರ್ಜುನನ ವಿಕ್ರಮಮುಮಂ ಕಾಪಿನ ದೇವರೊಂದು ಪೊೞ್ತುಮಗಲದ ನೂಱು ಯೋಜನದಳಮಿ ಖಾಂಡವವನಮನನಲಂ ಗೂಡಿದರಾತಿಕಾಳಾನಳನಳವುವಂ ಜವನನವಯವದೊಳ್ ಗೆಲ್ದು ಪಾರ್ವರ ಪಿಳ್ಳೆಯ ಪೋದ ಪ್ರಾಣಮಂ ತಂದ ಸಾಹಸಾಭರಣನ ಸಾಹಸಮುಮನಿಂದ್ರಕೀಲ ನಗೇಂದ್ರದೊಳಿಂದ್ರನ ಬೆಸದೊಳ್ ತಪೋವಿಘಾತಂ ಮಾಡಲೆಂದು ಬಂದ ಪುರಂದರನ ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕ ಮಳ್ಕದ ಶೌಚಾಂಜನೇಯನ ಶೌಚಮುಮಂ ದಾನವಾಪನಪ್ಪ ಮೂಕದಾನವ ಸೂಕರನನೊಂದೆ ಸೂೞಂಬಿನೊಳೆಚ್ಚು ಕೊಂದ ಪರಾಕ್ರಮಧವಳನ ಪರಾಕ್ರಮಮುಮಂ ತ್ರಿಣೇತ್ರನೊಳ್ ಕಾದಿ ಪಾಶುಪತಾಸ್ತ್ರಮಂ ಪಡೆದ ಕದನತ್ರಿಣೇತ್ರನ ಗಂಡಗರ್ವಮುಮನಿಂದ್ರಲೋಕಕ್ಕೆ ಪೋಗಿ ದೇವೇಂದ್ರನ ಪಗೆವರಪ್ಪ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರುಂ ಪಡಲ್ವಡಿಸಿದ ಪಡೆಮೆಚ್ಚೆ ಗಂಡನ ಗಂಡುಮಂ ದೇವೇಂದ್ರನೊಳರ್ಧಾಸನಮೇಱಿದ ಗುಣಾರ್ಣವನ ಮಹಿಮೆಯುಮಂ ಚಳುಕ್ಯಕುಳತಿಳಕನಪ್ಪ ವಿಜಯಾದಿತ್ಯಂಗೆ ಗೋವಿಂದರಾಜಂ ಮುಳಿಯೆ ತಳರದೆ ಪೆಱಗಿಕ್ಕಿ ಕಾದ ಶರಣಾಗತ ಜಳನಿಯ ಪೆಂಪುಮಂ ಗೊಜ್ಜಿಗನೆಂಬ ಸಕಲ ಚಕ್ರವರ್ತಿ ಬೆಸಸೆ ದಂಡುವಂದ ಮಹಾಸಾಮಂತರಂ ಮರಲಿಱದು ಗೆಲ್ದ ಸಾಮಂತ ಚೂಡಾಮಣಿಯ ಬೀರಮುಮನತಿವರ್ತಿಯಾಗಿ ಮಾರ್ಮಲೆವ ಚಕ್ರವರ್ತಿಯಂ ಕಿಡಿಸಿ ತನ್ನ ನಂಬಿ ಬಂದ ಬದ್ದೆಗ ದೇವಂಗೆ ಸಕಳ ಸಾಮ್ರಾಜ್ಯಮನೋರಂತು ಮಾಡಿ ನಿಱಿಸಿದರಿಕೇಸರಿಯ ತೋಳ್ವಲಮುಮಂ ಸಮದಗಜಘಟಾಟೋಪಂಬೆರಸು ನೆಲನದಿರೆವಂದು ತಾಗಿದ ಕಕ್ಕಲನ ತಮ್ಮನಪ್ಪ ಬಪ್ಪುವನಂಕಕಾಱನನೊಂದೆ ಮದಾಂಧಗಂಧಸಿಂಧುರದೊಳೋಡಿಸಿದ ವೈರಿಗಜಘಟಾ ವಿಘಟನನದಟುಮಂ ಪರಚಕ್ರಂಗಳನಂಜಿಸಿದ ಪರಸೈನ್ಯ ಭೈರವನ ಮೇಗಿಲ್ಲದ ಬಲ್ಲಾಳ್ತನಮುಮಂ ಕಂಡುಂ ಕೇಳ್ದುಂ ನಿನಗೆ ಸೆಣಸಲೆಂತು ಬಗೆ ಬಂದಪುದು-
ವಚನ:ಪದವಿಭಾಗ-ಅರ್ಥ:ಅದಲ್ಲದೆಯುಂ ರಾಜಸೂಯ ವ್ಯತಿಕರದೊಳ್ ದಿಗ್ವಿಜಯಂ ಗೆಯ್ದು (ರಾಜಸೂಯದ ಸಂದರ್ಭದಲ್ಲಿ ದಿಗ್ವಿಜಯವನ್ನು ಮಾಡಿ) ಲಂಕೆಯ ವಿಭೀಷಣನನು ಒಂದೆ ದಿವ್ಯಾಸ್ತ್ರದೊಳು ಎಚ್ಚು (ಹೊಡೆದು) ಕಪ್ಪಂಗೊಂಡ (ಕಪ್ಪ ಪಡೆದ) ವಿಕ್ರಮಾರ್ಜುನನ ವಿಕ್ರಮಮುಮಂ (ಸಾಹಸವನ್ನು), ಕಾಪಿನ ದೇವರು ಒಂದು ಪೊೞ್ತುಂ (ಕಾವಲಿಗೋಸ್ಕರ ಇದ್ದ ದೇವತೆಗಳು ಒಂದು ಹೊತ್ತೂ ಅಗಲದಿದ್ದ ನೂರು ಯೋಜನ) ಅಗಲದ ನೂಱು ಯೋಜನದ ಅಳಮಿ (ಅಳತೆಯ) ಖಾಂಡವವನಮನು ಅನಲಂಗೆ (ಅಗ್ನಿಯು) ಊಡಿದ ಆರಾತಿಕಾಳಾನಳನ (ಅರ್ಜುನನ) ಅಳವುವಂ (ಸಾಮರ್ಥ್ಯವನ್ನು) ಜವನನ ಅವಯವದೊಳ್ ಗೆಲ್ದು (ಯಮನನ್ನು ಶ್ರಮವಿಲ್ಲದೆ ಗೆದ್ದು) ಪಾರ್ವರ ಪಿಳ್ಳೆಯ ಪೋದ ಪ್ರಾಣಮಂ ತಂದ (ಬ್ರಾಹ್ಮಣನ ಮಗನ ಹೋಗಿದ್ದ ಪ್ರಾಣವನ್ನು ತಂದ) ಸಾಹಸಾಭರಣನ ಸಾಹಸಮುಂ (ಸಾಹಾಸಭರಣ ಅರ್ಜುನನ ಸಾಹಸವನ್ನೂ,) (ಟಿಪ್ಪಣಿ: ಈ ಕಥೆಯನ್ನು ಎಲ್ಲಿಂದ ಪಂಪ ಎಲ್ಲಿಂದ ತೆಗೆದುಕೊಂಡನೆಂಬುದು ತಿಳಿದಿಲ್ಲ) ಇಂದ್ರಕೀಲ ನಗೇಂದ್ರದೊಳು ಇಂದ್ರನ ಬೆಸದೊಳ್ (ಆಜ್ಞೆಯ) ತಪೋ ವಿಘಾತಂ (ವಿಘ್ನ) ಮಾಡಲೆಂದು ಬಂದ ಪುರಂದರನ ಗಣಿಕೆಯರ ಕಡೆಗಣ್ಣ ನೋಟಕ್ಕಂ ಕಾಟಕ್ಕಂ ಅಳ್ಕದ ಶೌಚಾಂಜನೇಯನ ಶೌಚಮುಮಂ (ಶುಚಿತ್ವವನ್ನೂ) ದಾನವ ಆಪನಪ್ಪ ಮೂಕದಾನವ ಸೂಕರನನು ಒಂದೆ ಸೂೞಂಬಿನೊಳ್ ಎಚ್ಚು (ಹಂದಿಯನ್ನು ಒಂದೇ ಬಾಣದಲ್ಲಿ ಹೊಡೆದು ಕೊಂದ) ಕೊಂದ ಪರಾಕ್ರಮಧವಳನ ಪರಾಕ್ರಮಮುಮಂ, ತ್ರಿಣೇತ್ರನೊಳ್ ಕಾದಿ ಪಾಶುಪತಾಸ್ತ್ರಮಂ ಪಡೆದ (ಈಶ್ವರನಲ್ಲಿ ಕಾದಿ ಪಾಶುಪತಾಸ್ತ್ರವನ್ನು ಪಡೆದ) ಕದನತ್ರಿಣೇತ್ರನ ಗಂಡಗರ್ವಮುಮಂ ಇಂದ್ರಲೋಕಕ್ಕೆ ಪೋಗಿ ದೇವೇಂದ್ರನ ಪಗೆವರಪ್ಪ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರುಂ ಪಡಲ್ವಡಿಸಿದ (ಕೆಳಗೆ ಬೀಲುವ ಹಾಗೆ ಮಾಡಿದ) ಪಡೆಮೆಚ್ಚೆ ಗಂಡನ ಗಂಡುಮಂ (ಪೌರುಷವನ್ನೂ) ದೇವೇಂದ್ರನೊಳು ಅರ್ಧಾಸನಮಂ ಏಱಿದ (ಏರಿದ) ಗುಣಾರ್ಣವನ ಮಹಿಮೆಯುಮಂ, (ಇದು ರಾಜ ವೀರಕೇಸರಿಯ ಸಾಹಸ: ಚಳುಕ್ಯಕುಳ ತಿಳಕನಪ್ಪ ವಿಜಯಾದಿತ್ಯಂಗೆ ಗೋವಿಂದರಾಜಂ ಮುಳಿಯೆ (ಪ್ರತಿಭಟಿಸಲು) ತಳರದೆ ಪೆಱಗಿಕ್ಕಿ ಕಾದ ಶರಣಾಗತ ಜಳನಿಯ ಪೆಂಪುಮಂ ಗೊಜ್ಜಿಗನೆಂಬ ಸಕಲ ಚಕ್ರವರ್ತಿ ಬೆಸಸೆ ದಂಡುವಂದ ಮಹಾಸಾಮಂತರಂ ಮರಲಿಱದು ಗೆಲ್ದ ಸಾಮಂತ ಚೂಡಾಮಣಿಯ ಬೀರಮುಮನತಿವರ್ತಿಯಾಗಿ ಮಾರ್ಮಲೆವ ಚಕ್ರವರ್ತಿಯಂ ಕಿಡಿಸಿ ತನ್ನ ನಂಬಿ ಬಂದ ಬದ್ದೆಗ ದೇವಂಗೆ ಸಕಳ ಸಾಮ್ರಾಜ್ಯಮನೋರಂತು ಮಾಡಿ ನಿಱಿಸಿದ ಅರಿಕೇಸರಿಯ ತೋಳ್ವಲಮುಮಂ ಸಮದಗಜ ಘಟಾಟೋಪಂ ಬೆರಸು ನೆಲನು ಅದಿರೆವಂದು ತಾಗಿದ ಕಕ್ಕಲನ ತಮ್ಮನಪ್ಪ ಬಪ್ಪುವನಂಕಕಾಱನನೊಂದೆ ಮದಾಂಧಗಂಧಸಿಂಧುರದೊಳೋಡಿಸಿದ ವೈರಿಗಜಘಟಾ (ಶತ್ರುಗಳ ಆನೆಯ ಸಮೂಹವನ್ನು ಒಡೆದುಹಾಕುವ ಶಕ್ತಿಯನ್ನುಳ್ಳ)) ವಿಘಟನನದಟುಮಂ ಪರಚಕ್ರಂಗಳನಂಜಿಸಿದ ಪರಸೈನ್ಯ ಭೈರವನ ಮೇಗಿಲ್ಲದ ಬಲ್ಲಾಳ್ತನಮುಮಂ ಕಂಡುಂ ಕೇಳ್ದುಂ ನಿನಗೆ ಸೆಣಸಲೆಂತು ಬಗೆ ಬಂದಪುದು-
ವಚನ:ಅರ್ಥ:ಅದಲ್ಲದೆ ರಾಜಸೂಯದ ಸಂದರ್ಭದಲ್ಲಿ ದಿಗ್ವಿಜಯವನ್ನು ಮಾಡಿ ಲಂಕಾಪಟ್ಟಣದ ವಿಭೀಷಣನನ್ನು ಒಂದೇ ದಿವ್ಯಾಸ್ತ್ರದಿಂದ ಹೊಡೆದು ಕಪ್ಪವನ್ನು ತೆಗೆದುಕೊಂಡ ವಿಕ್ರಮಾರ್ಜುನನ ಪರಾಕ್ರಮವನ್ನು, ಕಾವಲಿಗೋಸ್ಕರ ಇದ್ದ ದೇವತೆಗಳು ಒಂದು ಹೊತ್ತೂ ಅಗಲದಿದ್ದ ನೂರು ಯೋಜನ ವಿಸ್ತಾರದ ಖಾಂಡವವನವನ್ನು ಅಗ್ನಿಗೆ ಸಮರ್ಪಿಸಿದ ಅರಾತಿಕಾಳಾನಳನ ಶಕ್ತಿಯನ್ನೂ, ಯಮನನ್ನು ಶ್ರಮವಿಲ್ಲದೆ ಗೆದ್ದು ಬ್ರಾಹ್ಮಣನ ಮಗನ ಹೋಗಿದ್ದ ಪ್ರಾಣವನ್ನು ತಂದ ಸಾಹಾಸಭರಣ ಅರ್ಜುನನ ಸಾಹಸವನ್ನೂ, ಇಂದ್ರಕೀಲಪರ್ವತದಲ್ಲಿ ಇಂದ್ರನ ಆಜ್ಞೆಯ ಪ್ರಕಾರ ತಪಸ್ಸಿಗೆ ವಿಘ್ನಮಾಡಬೇಕೆಂದು ಬಂದ ಇಂದ್ರನ ವೇಶ್ಯೆಯರ ಕಟಾಕ್ಷದೃಷ್ಟಿಗೂ ಅವರ ಹಿಂಸೆಗೂ ಹೆದರದ ಶೌಚಾಂಜನೇಯನ ಶುಚಿತ್ವವನ್ನೂ, ರಾಕ್ಷಾಸಾಪತಿಯಾದ ಮೂಕರಾಕ್ಷಸನೆಂಬ ಹಂದಿಯನ್ನು ಒಂದೇ ಬಾಣದಲ್ಲಿ ಹೊಡೆದು ಕೊಂದ ಪರಾಕ್ರಮಧವಳನ ಪರಾಕ್ರಮವನ್ನೂ ಈಶ್ವರನಲ್ಲಿ ಕಾದಿ ಪಾಶುಪತಾಸ್ತ್ರವನ್ನು ಪಡೆದ ಕದನತ್ರಿಣೇತ್ರನ ಪೌರುಷಾಹಂಕಾರವನ್ನೂ ಇಂದ್ರಲೋಕಕ್ಕೆ ಹೋಗಿ ದೇವೇಂದ್ರನ ಶತ್ರುಗಳಾಗಿದ್ದ ನಿವಾಚಕವಚ, ಕಾಳಕೇಯ, ಪೌಳೋಮ, ತಳತಾಳುಕರೆಂಬ ರಾಕ್ಷಸರನ್ನು ಕೆಳಗೆ ಬೀಲುವ ಹಾಗೆ ಮಾಡಿದ ಪಡೆಮೆಚ್ಚೆಗಂಡನ ಪೌರುಷವನ್ನೂ, ದೇವೇಂದ್ರನಲ್ಲಿ ಅರ್ಧಾಸನವನ್ನು ಪಡೆದು ಗಣಾರ್ಣವನ ಮಹಿಮೆಯನ್ನೂ, [ಇದು ಪಂಪನ ರಾಜ ವೀರಕೇಸರಿಯ ಸಾಹಸ: ಚಾಳುಕ್ಯಕುಲತಿಲಕನಾದ ವಿಜಯಾದಿತ್ಯನಿಗೆ ಗೋವಿಂದರಾಜನು ಪ್ರತಿಭಟಿಸಲು ಅವನನ್ನು ಸಾವಕಾಶಮಾಡದೆ ಹಿಂದಕ್ಕೆ ನೂಕಿ ರಕ್ಷಿಸಿದ ಶರಣಾಗತ ಸಮುದ್ರನ ಮಹಿಮೆಯನ್ನೂ ಗೊಜ್ಜಿಗನೆಂಬ ಸಕಲಚಕ್ರವರ್ತಿಯು ಆಜ್ಞೆಮಾಡಲು ದಂಡೆತ್ತಿಬಂದ ಮಹಾಸಾಮಂತರನ್ನೆಲ್ಲ ಹಿಮ್ಮೆಟ್ಟುವಂತೆ ಹೊಡೆದು ಗೆದ್ದ ಸಾಮಂತ ಚೂಡಾಮಣಿಯ ವೀರ್ಯವನ್ನೂ, ಎಲ್ಲೆ ಮೀರಿ ಪ್ರತಿಭಟಿಸುವ ಚಕ್ರವರ್ತಿಯನ್ನು ಹಾಳುಮಾಡಿ ತನ್ನನ್ನೇ ನಂಬಿ ಬಂದ ಬದ್ದೆಗದೇವನಿಗೆ ಸಕಲಸಾಮ್ರಾಜ್ಯವನ್ನು ಏಕಪ್ರಕಾರವಾಗಿ ಮಾಡಿ ಸ್ಥಾಪಿಸಿದ ಅರಿಕೇಸರಿಯ ತೋಳ ಬಲವನ್ನು ಮದ್ದಾನೆಗಳ ಗುಂಪಿನ ಆರ್ಭಟದಿಂದ ಕೂಡಿ ಭೂಮಿಯು ನಡುಗುವಂತೆ ಬಂದು ತಾಗಿದ ಕಕ್ಕಲನ ತಮ್ಮನಾದ ಬಪ್ಪುವನೆಂಬ ಜಟ್ಟಿಯನ್ನು ಒಂದೇ ಮದ್ದಾನೆಯಿಂದ ಓಡಿಸಿದ ವೈರಿಗಜ ಘಟಾವಿಘಟನ ಪಟುವಾದ (ಶತ್ರುಗಳ ಆನೆಯ ಸಮೂಹವನ್ನು ಒಡೆದುಹಾಕುವ ಶಕ್ತಿಯನ್ನುಳ್ಳ] ಅರ್ಜುನನ ಪರಾಕ್ರಮವನ್ನೂ, ಶತ್ರುಸೈನ್ಯವನ್ನು ಹೆದರಿಸಿದ ಪರಸೈನ್ಯಭೈರವನ ಅತಿಶಯವಾದ ಪೌರುಷವನ್ನೂ ಕಂಡೂ ಕೇಳಿಯೂ ನಿನಗೆ ಹೋರಾಡಲು ಹೇಗೆ ಮನಸ್ಸು ಬರುತ್ತದೆ.
ಉ|| ನೆಟ್ಟನೆ ಬೂತುಗೊಳ್ವ ತೆಱದಿಂ ದಶಕಂಧರನಾಡಿ ಪಾಡಿ ನಾ
ಣ್ಗೆಟ್ಟಿರೆ ಕೊಂಡನಲ್ಲದೆ ಬರಂಗಳನೀಶ್ವರನಲ್ಲಿ ಪೇೞಿಮಾ|
ವೊಟ್ಟಜೆಯಿಂದೆ ಕೊಂಡನೆನುತುಂ ವಿಜಯಂ ನೆಲಕಿಕ್ಕಿ ಗಂಟಲಂ
ಮೆಟ್ಟದೆ ಕೊಂಡನೇ ಹರನ ಪಾಶುಪತಾಸ್ತ್ರಮನಿಂದ್ರಕೀಲದೊಳ್|| ೫೩ ||
ಪದ್ಯ-೫೩:ಪದವಿಭಾಗ-ಅರ್ಥ:ನೆಟ್ಟನೆ ಬೂತುಗೊಳ್ವ (ಕೊಳ್ವ) ತೆಱದಿಂ (ನೇರವಾಗಿ ಬಡಪ್ರಾಣಿ ತೆಗೆದುಕೊಳ್ಲುವ ಹಾಗೆ) ದಶಕಂಧರನು ಆಡಿ ಪಾಡಿ (ರಾವನನು ಹಾಡಿ ಕುಣಿದು)ನಾಣ್ಗೆಟ್ಟಿರೆ (ನಾಣ್ ಕೆಟ್ಟಿರೆ- ನಾಚಿಗೆ ಕೆಟ್ಟಂತೆ) ಕೊಂಡನಲ್ಲದೆ ಬರಂಗಳಂ ಈಶ್ವರನಲ್ಲಿ (ಈಶ್ವರನಿಂದ ವರಗಳನ್ನು ಪಡೆದು ಅಲ್ಲದೆ) ಪೇೞಿಂ ಆ ವೊಟ್ಟಜೆಯಿಂದೆ (ಪರಾಕ್ರಮ) ಕೊಂಡನೆ (ತನ್ನ ಪರಾಕ್ರಮದಿಂದ ತೆಗೆದುಕೊಂಡನೆ.) ಎನುತುಂ ವಿಜಯಂ (ಅರ್ಜುನನಾದರೋ) ನೆಲಕೆ ಇಕ್ಕಿ ಗಂಟಲಂ ಮೆಟ್ಟದೆ ಕೊಂಡನೇ (ಅರ್ಜುನನಾದರೋ ಶಿವನನ್ನು ನೆಲಕ್ಕೆ ತಳ್ಳಿ ಗಂಟಲನ್ನು ಮೆಟ್ಟದೆ ತೆಗೆದುಕೊಂಡನೆ?) ಹರನ ಪಾಶುಪತಾಸ್ತ್ರಮಂ ಇಂದ್ರಕೀಲದೊಳ್ (ಈಶ್ವರನ ಪಾಶುಪತಾಸ್ತ್ರವನ್ನು ಇಂದ್ರಕೀಲಪರ್ವತದಲ್ಲಿ ಗಂಟಲನ್ನು ಮೆಟ್ಟಿ ತೆಗೆದುಕೊಂಡನು.)
ಪದ್ಯ-೫೩:ಅರ್ಥ:ದುರ್ಯೋಧನನ್ನು ಕುರಿತು ಮತ್ತೂಹೇಳಿದ ಕೃಷ್ಣ: ರಾವಣನು ಸಾಮಾನ್ಯವಾದ ಬಡಪ್ರಾಣಿಯಂತೆ ಹಾಡಿ ಪಾಡಿ ಬೇಡಿ ನಾಚಿಕೆಯಾಗುವ ರೀತಿಯಲ್ಲಿ ಈಶ್ವರನಿಂದ ವರಗಳನ್ನು ಪಡೆದನಲ್ಲದೆ ತನ್ನ ಪರಾಕ್ರಮದಿಂದ ತೆಗೆದುಕೊಂಡನೆ. ಹೇಳು. ಅರ್ಜುನನಾದರೋ ಶಿವನನ್ನು ನೆಲಕ್ಕೆ ತಳ್ಳಿ ಗಂಟಲನ್ನು ಮೆಟ್ಟದೆ ಈಶ್ವರನ ಪಾಶುಪತಾಸ್ತ್ರವನ್ನು ಪಡೆದನೇ? ಇಂದ್ರಕೀಲಪರ್ವತದಲ್ಲಿ ಗಂಟಲನ್ನು ಮೆಟ್ಟಿ ತೆಗೆದುಕೊಂಡನು. (ಅರ್ಜುನನು ರಾವಣನಿಗಿಂತ ಪರಾಕ್ರಮಿ ಎಂದರ್ಥ)
ಪೊಂಗಿ ಕಡಂಗಿ ಬೀರದೊಳ್ ಬೀಗುವ ನಿನ್ನಣುಗಾಳೆ ನೋಡೆ ನಿ
ನ್ನಂಗನೆಯರ್ ತೊವಲ್ಗೊಳೆ ಭಯಂಗೊಳೆ ಕೋಡಗಗಟ್ಟುಗಟ್ಟಿ ಚಿ|
ತ್ರಾಂಗದನುಯ್ಯೆ ನಿನ್ನನೆಡೆಮಾಡದಸುಂಗೊಳೆ ಕಾದಿ ತಂದ ವೀ
ರಂಗರಿಗಂಗೆ ನೀಂ ಮಲೆದು ನಿಲ್ವುದು ಪಾೞಿವಲಂ ಸುಯೋಧನಾ|| ೫೪ ||
ಪದ್ಯ-೫೪:ಪದವಿಭಾಗ-ಅರ್ಥ:ಪೊಂಗಿ ಕಡಂಗಿ ಬೀರದೊಳ್ ಬೀಗುವ ನಿನ್ನಣುಗಾಳೆ ನೋಡೆ (ಸೊಕ್ಕಿನಿಂದ ಉತ್ಸಾಹಿಸಿ ಶೌರ್ಯದಿಂದ ಅಹಂಕಾರಪಡುವ ನಿನ್ನ ಪ್ರೀತಿಪಾತ್ರರಾದ ಯೋಧರೇ ನೋಡುತ್ತಿರಲು) ನಿನ್ನ ಅಂಗನೆಯರ್ ತೊವಲ್ಗೊಳೆ (ತೊವಲ್ ಕೊಳೆ ಭಯದಿಂದ ಹೆದರಿದಾಗ ರಕ್ಷಣೆಗಾಗಿ ಚಿಗುರು ಕೊಂಬೆ ಹಿಡಿಯುವುದು) ಭಯಂಗೊಳೆ (ನಿನ್ನ ಸ್ತ್ರೀಯರು ತಮ್ಮ ಚಿಗುರನ್ನು ಹಿಡಿದುಕೊಂಡು ಹೆದರಿರಲು,) ಕೋಡಗಗಟ್ಟುಗಟ್ಟಿ ಚಿತ್ರಾಂಗದನು ಉಯ್ಯೆ (ನಿನ್ನನ್ನು ಕೋತಿಯನ್ನು ಕಟ್ಟುವಂತೆ ಕಟ್ಟಿ ಚಿತ್ರಾಂಗಧನು ತೆಗೆದುಕೊಂಡು ಹೋಗುತ್ತಿರಲು) ನಿನ್ನನು ಎಡೆಮಾಡದೆ ಅಸುಂಗೊಳೆ ಕಾದಿ (ತಡೆಮಾಡದೆ ಪ್ರಾಣವನ್ನೇ ಸೆಳೆಯುವಂತೆ ಯುದ್ಧಮಾಡಿ) ತಂದ ವೀರಂಗೆ ಅರಿಗಂಗೆ ನೀಂ ಮಲೆದು ನಿಲ್ವುದು ಪಾೞಿ ವಲಂ ಸುಯೋಧನಾ|()
ಪದ್ಯ-೫೪:ಅರ್ಥ:ಸೊಕ್ಕಿನಿಂದ ಉತ್ಸಾಹಿಸಿ ಶೌರ್ಯದಿಂದ ಅಹಂಕಾರಪಡುವ ನಿನ್ನ ಪ್ರೀತಿಪಾತ್ರರಾದ ಯೋಧರೇ ನೋಡುತ್ತಿರಲು ನಿನ್ನ ಸ್ತ್ರೀಯರು ತಮ್ಮ ಚಿಗುರನ್ನು ಹಿಡಿದುಕೊಂಡು ಹೆದರಿರಲು ಚಿತ್ರಾಂಗದನೆಂಬ ಗಂಧರ್ವನು ನಿನ್ನನ್ನು ಕೋತಿಯನ್ನು ಕಟ್ಟುವಂತೆ ಕಟ್ಟಿ ತೆಗೆದುಕೊಂಡು ಹೋಗುತ್ತಿರಲು ತಡೆಮಾಡದೆ ಪ್ರಾಣವನ್ನೇ ಸೆಳೆಯುವಂತೆ ಯುದ್ಧಮಾಡಿ ತಂದ ವೀರನಾದ ಅರ್ಜುನನಿಗೆ ಮಲೆತು ನೀನು ಎದುರಿಸಿ ನಿಲ್ಲುವುದು ಕ್ರಮವಾದ ಸರತಿಯ ನೆಡಯೇ ವಲಂ! ಅಬ್ಬಾ! ದುರ್ಯೋಧನಾ? ಪಾಂಡವರಿಗೆ ಅವಕಾಶದ ಸರತಿ/ ಪಾಳಿ ಬಂದಾಗ ದುರ್ಯೋಧನನ್ನು ರಕ್ಷಿಸಿದರು, ಈಗ ದುರ್ಯೋಧನನ ಸರತಿ, ಈಗ ಕೆಡುಕು, ಅನ್ಯಾಯ ಮಾಡುವುದೇ?
ಮ||ಸ್ರ|| ಗುರುವಿಲ್ಲಾ ಕರ್ಣನಿಲ್ಲಾ ಗುರುವಿನ ಮಗನಿಲ್ಲಾ ಕೃಪಾಚಾರ್ಯನಿಲ್ಲಾ
ಕುರುರಾಜಾ ನಿನ್ನ ತಮ್ಮಂದಿರೊಳಿನಿಬರೊಳಾರಿಲ್ಲ ಗಾಂಗೇಯನಿಲ್ಲಾ|
ಮರುಳೇ ಗಾಂಡೀವಿಯಾರೆಂದೆಣಿಕೆಗಳೆವೆ ಗಂಧರ್ವರುಯ್ವಂದು ನಿನ್ನಂ
ಕರುವಿಟ್ಟಂತಿರ್ದುದಿಲ್ಲಾ ನೆರೆದ ಕುರುಬಲಂ ತಂದವಂ ಪಾರ್ಥನಲ್ಲಾ|| ೫೫ ||
ಪದ್ಯ-೫೫:ಪದವಿಭಾಗ-ಅರ್ಥ:ಗುರುವಿಲ್ಲಾ ಕರ್ಣನಿಲ್ಲಾ ಗುರುವಿನ ಮಗನಿಲ್ಲಾ ಕೃಪಾಚಾರ್ಯನಿಲ್ಲಾ ಕುರುರಾಜಾ ನಿನ್ನ ತಮ್ಮಂದಿರೊಳು ಇನಿಬರೊಳಾರಿಲ್ಲ ಗಾಂಗೇಯನು ಇಲ್ಲಾ (ನಿನ್ನ ಆಪತ್ಕಾಲದಲ್ಲಿ ಇವರಾರೂ ಇಲ್ಲ,) ಮರುಳೇ ಗಾಂಡೀವಿ ಯಾರೆಂದು, ಎಣಿಕೆಗೆ ಅಳೆವೆ (ಬುಧ್ಧಿಗೇಡಿಯೇ,ಅರ್ಜುನನು ಯಾರೆಂದು ತಿಳಿದೆ! ಅವನ ಶಕ್ತಿಯನ್ನು ಊಹಿಸಲು ಸಾದ್ಯವೇ?) ಗಂಧರ್ವರು ಉಯ್ವಂದು ನಿನ್ನಂ ಕರುವಿಟ್ಟಂತೆ ಇರ್ದುದಿಲ್ಲಾ ನೆರೆದ ಕುರುಬಲಂ (ನಿನ್ನನ್ನು ಗಂಧರ್ವರು ಹೊತ್ತುಕೊಂಡು ಹಾದಾಗ ಕುರುಸೈನ್ಯವು ಮರಗಟ್ಟಿದಂತೆ ಸ್ತಬ್ಧವಾಗಿತ್ತಲ್ಲವೆ?) ತಂದವಂ ಪಾರ್ಥನಲ್ಲಾ (ನಿನ್ನನ್ನು ಬಿಡಿಸಿ ತಂದವನು ಅರ್ಜುನನಲ್ಲವೇ?)
ಪದ್ಯ-೫೫:ಅರ್ಥ:ನಿನ್ನನ್ನು ಗಂಧರ್ವರು ಸೆಳೆದುಕೊಂಡು ಹೋದಾಗ, ದ್ರೋಣಾಚಾರ್ಯರಿಲ್ಲ, ಕರ್ಣನಿಲ್ಲ, ಅಶ್ವತ್ಥಾಮನಿಲ್ಲ, ಕೃಪಾಚಾರ್ಯನೂ ಇಲ್ಲ, ನಿನ್ನ ಇಷ್ಟು ಜನ ತಮ್ಮಂದಿರಲ್ಲಿ ಯಾರೂ ಇಲ್ಲ, ಭೀಷ್ಮನೂ ಇಲ್ಲ. ಯಾರೂ ಸಮಯಕ್ಕಾಗಲಿಲ್ಲ. ಬುಧ್ಧಿಗೇಡಿಯೇ,ಅರ್ಜುನನು ಯಾರೆಂದು ತಿಳಿದೆ! ಅವನ ಶಕ್ತಿಯನ್ನು ಊಹಿಸಲು ಸಾದ್ಯವೇ? ನಿನ್ನನ್ನು ಗಂಧರ್ವರು ಹೊತ್ತುಕೊಂಡು ಹಾದಾಗ ಕುರುಸೈನ್ಯವು ಮರಗಟ್ಟಿದಂತೆ ಸ್ತಬ್ಧವಾಗಿತ್ತಲ್ಲವೆ? ನಿನ್ನನ್ನು ಬಿಡಿಸಿ ತಂದವನು ಅರ್ಜುನನಲ್ಲವೇ?
ಮ|| ಬವರಂಗೆಯ್ವಮಮೋಘಮೆಂಬ ಬಗೆಯಿಂ ನೀಮೆಲ್ಲಮಾದಂ ರಣೋ
ತ್ಸವದಿಂ ನಿನ್ನೆಯೆ ಪೋದ ಗೋಗ್ರಹಣದಂದೇನಾದಿರಂತಾ ಪರಾ|
ಭವಮಂ ಚಿಃ ಮದಿರ್ದಿರಪ್ಪೊಡಮದೇನೇವೋದುದಿನ್ನುಂ ಗುಣಾ
ರ್ಣವನಿಂ ನಾಳೆಯೆಂ ಕೇಳದಿರ್ಪಿರೆ ಮಹಾ ಗಾಂಡೀವ ನಿರ್ಘೋಷಮಂ|| ೫೬ ||
ಪದ್ಯ-೫೬:ಪದವಿಭಾಗ-ಅರ್ಥ:ಬವರಂ ಗೆಯ್ವಮ್ ಅಮೋಘಮೆಂಬ ಬಗೆಯಿಂ (ಅಮೋಘವಾದ ರೀತಿಯಲ್ಲಿ ಯುದ್ಧಮಾಡಬೇಕು ಎಂಬ ಮನಸ್ಸಿನಿಂದ) ನೀಮೆಲ್ಲಮು ಆದಂ ರಣೋತ್ಸವದಿಂ (ನೀವೆಲ್ಲರೂ ರಣೋತ್ಸಾಹದಿಂದ ಹೊಗಿ ) ನಿನ್ನೆಯೆ ಪೋದ ಗೋಗ್ರಹಣದಂದ ಏನಾದಿರಿ (ನಿನ್ನೆ ನಡೆದ ದನಗಳನ್ನು ಹಿಡಿಯುವ ಸಂದರ್ಭದಲ್ಲಿ ಏನಾದಿರಿ?) ಅಂತಾ ಪರಾಭವಮಂ ಚಿಃ ಮದಿರ್ದಿರಪ್ಪೊಡೆ (ಆಗುಂಟಾದ ಸೋಲನ್ನು ಚಿ ಮರೆತಿರುವಿರಾದರೆ ) ಅದೇನ್ ಏವೋದುದು (ಅದೇನು, ಏನಾದುದು?) ಇನ್ನುಂ ಗುಣಾರ್ಣವನಿಂ ನಾಳೆಯೆಂ ಕೇಳದಿರ್ಪಿರೆ ಮಹಾ ಗಾಂಡೀವ ನಿರ್ಘೋಷಮಂ (ಅರ್ಜುನನಿಂದ ನಾಳೆಯೇ ಮಹಾಗಾಂಡೀವದ ಠಂಕಾರ ಶಬ್ದವನ್ನು ಕೇಳದೆ ಇರುವಿರಾ)
ಪದ್ಯ-೫೬:ಅರ್ಥ:ಅಮೋಘವಾದ ರೀತಿಯಲ್ಲಿ ಯುದ್ಧಮಾಡಬೇಕು ಎಂಬ ಮನಸ್ಸಿನಿಂದ ನೀವೆಲ್ಲರೂ ರಣೋತ್ಸಾಹದಿಂದ ಹೊಗಿ ನಿನ್ನೆ ನಡೆದ ದನಗಳನ್ನು ಹಿಡಿಯುವ ಸಂದರ್ಭದಲ್ಲಿ ಏನಾದಿರಿ? ಆಗುಂಟಾದ ಸೋಲನ್ನು ಚಿ ಮರೆತಿರುವಿರಾದರೆ ಏನಂತೆ? ಇನ್ನೂ ಗುಣಾರ್ಣವನಾದ ಅರ್ಜುನನಿಂದ ನಾಳೆಯೇ ಮಹಾಗಾಂಡೀವದ ಠಂಕಾರ ಶಬ್ದವನ್ನು ಕೇಳದೆ ಇರುವಿರಾ? ಕೇಳಿಯೇ ಕೇಳುವಿರಿ.
ಚಂ|| ಸುರಿವ ಸರಲ್ ನರಲ್ವ ಭಟರೆತ್ತಮುರುಳ್ವ ದೞಂ ಪೊರಳ್ವ ಸಿಂ
ಧುರ ಘಟೆ ಬರ್ಪ ನೆತ್ತರ ಕಡಲ್ ಕುಣಿವಟ್ಟೆಗಳಾಜಿಯೊಳ್ ಭಯಂ|
ಕರತರಮಪ್ಪಿನಂ ಪಗೆವರೊಕ್ಕಲೊಳೋವೆನಲೊರ್ವರಿಲ್ಲದಂ
ತಿರೆ ತವೆ ಕೊಲ್ಗುಮಂತುಮರಿಕೇಸರಿಗಾಂತು ಬರ್ದುಂಕಲಕ್ಕುಮೇ|| ೫೭ ||
ಪದ್ಯ-೫೭:ಪದವಿಭಾಗ-ಅರ್ಥ:ಸುರಿವ ಸರಲ್ (ಬಾಣ) ನರಲ್ವ ಭಟರ ಎತ್ತಮ್ ಉರುಳ್ವ ದೞಂ (ಸೈನ್ಯ) ಪೊರಳ್ವ ಸಿಂಧುರ ಘಟೆ (ಹೊರಳುವ ಆನೆಗಳ ಸಮೂಹ) ಬರ್ಪ ನೆತ್ತರ ಕಡಲ್ (ಹರಿದು ಬರುತ್ತಿರುವ ರಕ್ತಸಮುದ್ರ,) ಕುಣಿವ ಅಟ್ಟೆಗಳು (ಕುಣಿಯುವ ತಲೆಯಿಲ್ಲದ ಮುಂಡಗಳು,) ಆಜಿಯೊಳ್ ಭಯಂಕರ ತರಂ ಅಪ್ಪಿನಂ (ಮುಂದಿನ ಯುದ್ಧದಲ್ಲಿ ಭಯಂಕರವಾಗುವ ಹಾಗೆ) ಪಗೆವರು ಒಕ್ಕಲೊಳ್ ಓವೆನಲ್ ಒರ್ವರು ಇಲ್ಲದಂತಿರೆ (ಶತ್ರುಶಿಬಿರದಲ್ಲಿ ಓ ಎನ್ನುವುದಕ್ಕೆ ಒಬ್ಬರೂ ಇಲ್ಲದಂತೆ) ತವೆ ಕೊಲ್ಗುಂ (ಸಂಪೂರ್ಣವಾಗಿ ಕೊಲ್ಲುತ್ತಾನೆ.) ಅಂತುಂ ಅರಿಕೇಸರಿಗೆ ಆಂತು ಬರ್ದುಂಕಲ್ ಅಕ್ಕುಮೇ (ಹಾಗೆ ಅರಿಕೇಸರಿಗೆ/ ಅರ್ಜುನನಿಗೆ ಎದರಿಸಿ ಬದುಕಲು ಸಾಧ್ಯವೇ?)
ಪದ್ಯ-೫೭:ಅರ್ಥ:ಕೃಷ್ಣನು ಹೇಳಿದ:ಮುಂದಿನ ಯುದ್ಧದ ವರ್ಣನೆ: ಸುರಿಯುವ ಬಾಣಗಳು, ನರಳುತ್ತಿರುವ ಯೋಧರು, ಉರುಳುತ್ತಿರುವ ಸೈನ್ಯ, ಹೊರಳುವ ಆನೆಗಳ ಸಮೂಹ, ಹರಿದು ಬರುತ್ತಿರುವ ರಕ್ತಸಮುದ್ರ, ಕುಣಿಯುವ ತಲೆಯಿಲ್ಲದ ಮುಂಡಗಳು, ಮುಂದಿನ ಯುದ್ಧದಲ್ಲಿ ಭಯಂಕರವಾಗುವ ಹಾಗೆ ಶತ್ರುಶಿಬಿರದಲ್ಲಿ ಓ ಎನ್ನುವುದಕ್ಕೆ ಒಬ್ಬರೂ ಇಲ್ಲದಂತೆ ಸಂಪೂರ್ಣವಾಗಿ ಕೊಲ್ಲುತ್ತಾನೆ. ಹಾಗೆ ಅರಿಕೇಸರಿಗೆ/ ಅರ್ಜುನನಿಗೆ ಎದರಿಸಿ ಬದುಕಲು ಸಾಧ್ಯವೇ?
ವ|| ಎಂದು ಕಾಳನೀಳಮೇಘದಂತು ಮಸಗಿ ಗರ್ಜಿಸುವಸುರಕುಳವಿಷಯಕೇತುಗೆ ಫಣಿಕೇತು ಮುಳಿದು ತಳಮಳಿಸಿ ಕಣ್ಗಾಣದೆ
ವಚನ:ಪದವಿಭಾಗ-ಅರ್ಥ:ಎಂದು ಕಾಳನೀಳಮೇಘದ ಅಂತು (ಪ್ರಳಯಕಾಲದ ಕಪ್ಪುಮೋಡದ ಹಾಗೆ) ಮಸಗಿ ಗರ್ಜಿಸುವ ಅಸುರಕುಳವಿಷಯಕೇತುಗೆ (ರೇಗಿ ಗರ್ಜನೆ ಮಾಡುವ ಕೃಷ್ಣನಿಗೆ) ಫಣಿಕೇತು ಮುಳಿದು ತಳಮಳಿಸಿ ಕಣ್ಗಾಣದೆ (ದುರ್ಯೋಧನನು ಕೋಪಿಸಿಕೊಂಡು ಕುದಿದು ದಿಕ್ಕುತೋರದೆ)-
ವಚನ:ಅರ್ಥ:ಎಂದು ಪ್ರಳಯಕಾಲದ ಕಪ್ಪುಮೋಡದ ಹಾಗೆ ರೇಗಿ ಗರ್ಜನೆ ಮಾಡುವ ಕೃಷ್ಣನಿಗೆ ದುರ್ಯೋಧನನು ಕೋಪಿಸಿಕೊಂಡು ಕುದಿದು ದಿಕ್ಕುತೋರದೆ-
ಕಂ|| ಎೞ್ಪೋಗು ದೂತನಪ್ಪನ
ಬೆೞ್ಪನ ನುಡಿಗೇಳ್ದು ಮುಳಿಯಲಾಗದು ನೀನುಂ|
ಮೇೞ್ಪಟ್ಟು ವಿದುರನೆಂಬೀ
ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ ನುಡಿದೈ|| ೫೮ ||
ಪದ್ಯ-೫೮:ಪದವಿಭಾಗ-ಅರ್ಥ:ಎೞ್ ಪೋಗು ದೂತನಪ್ಪನ ಬೆೞ್ಪನ ಬೆಳ್ಪಿನ ನುಡಿ ಕೇಳ್ದು ಮುಳಿಯಲಾಗದು (ಏಳು, ಹೋಗು; ದೂತನಾದವನ ಬೇಡುವ, ಬೆಳ್ಪಿನ - ಅಪ್ರಯೊಜಕ ಮಾತನ್ನು ಕೇಳಿ ಕೋಪಿಸಬಾರದು.) ನೀನು ಮೇೞ್ಪಟ್ಟು ವಿದುರನೆಂಬ ಈ ತೊೞ್ಪುಟ್ಟಿಯ ಮನೆಯ ಕೂೞೆ (ನೀನು ಮೇಲೆಬಿದ್ದು ಯೋಚಿಸದೆ ಹೋಗಿ ತಿಂದ, ವಿದುರನೆಂಬ ದಾಸೀಪುತ್ರನ ಮನೆಯ ಕೂಳಿನ ಕೊಬ್ಬು) ನುಡಿಯಿಸೆ ನುಡಿದೈ (ಮಾತನಾಡಿಸಲು ನೀನು ಹೇಗೆ ಮಾತನಾಡಿದ್ದೀಯೆ.)
ಪದ್ಯ-೫೮:ಅರ್ಥ:“ಏಳು, ಹೋಗು; ದೂತನಾದವನ ಅಪ್ರಯೊಜಕ ಮಾತನ್ನು ಕೇಳಿ ಕೋಪಿಸಬಾರದು. ನೀನು ಮೇಲೆಬಿದ್ದು ಯೋಚಿಸದೆ ಹೋಗಿ, ವಿದುರನೆಂಬ ದಾಸೀಪುತ್ರನ ಮನೆಯ ಕೂಳಿನ ಕೊಬ್ಬು ಮಾತನಾಡಿಸಲು ನೀನು ಹೇಗೆ ಮಾತನಾಡಿದ್ದೀಯೆ. (ನಿನ್ನ ಮಾತು ನೀಚ ಆಹಾರದ ಪ್ರಭಾವ, ಎಂದು ಭಾವ)
ವ|| ಎನೆ ವಿದುರನತಿಕುಪಿತಮನನಾಗಿ-
ವಚನ:ಪದವಿಭಾಗ-ಅರ್ಥ:ಎನೆ ವಿದುರನು ಅತಿಕುಪಿತ ಮನನಾಗಿ-
ವಚನ:ಅರ್ಥ:ಎನ್ನಲು ವಿದುರನು ಬಹಳ ಕೋಪ ಮಾನಸನಾಗಿ- ಹೀಗೆಂದನು,
ಕಂ|| ಕಡು ಮುಳಿದು ನಿನ್ನ ತೊಡೆಗಳ
ನುಡಿವೆಡೆಯೊಳ್ ಭೀಮಸೇನನಾನಾ ಪದದೊಳ್|
ಪಿಡಿಯಲ್ಕೆಂದಿರ್ದೆನಿದಂ
ಪಿಡಿಯೆಂ ಪೋಗೆಂದು ಸಭೆಯೊಳುಡಿದಂ ಬಿಲ್ಲಂ|| ೫೯ ||
ಪದ್ಯ-೦೦:ಪದವಿಭಾಗ-ಅರ್ಥ:ಕಡು ಮುಳಿದು ನಿನ್ನ ತೊಡೆಗಳನು ಉಡಿವ ಎಡೆಯೊಳ್ (ಮುಂದೆ ಭೀಮಸೇನನು ಅತಿಯಾಗಿ ಕೋಪಿಸಿಕೊಂಡು ನಿನ್ನ ತೊಡೆಯನ್ನು ಒಡೆಯುವ ಸಂದರ್ಭದಲ್ಲಿ) ಭೀಮಸೇನನು ಆನು ಆ ಪದದೊಳ್ ಪಿಡಿಯಲ್ಕೆಂದು ಇರ್ದೆನು (ಇದನ್ನು ಹಿಡಿದು ಪ್ರಯೋಗಿಸಬೇಕೆಂದಿದ್ದೆನು.) ಇದಂ ಪಿಡಿಯೆಂ (ಇದನ್ನು ಇನ್ನು ಹಿಡಿಯುವುದಿಲ್ಲ) ಪೋಗೆಂದು ಸಭೆಯೊಳು ಉಡಿದಂ ಬಿಲ್ಲಂ (ಹೋಗು ಎಂದು ಸಭೆಯಲ್ಲಿ ಎಲ್ಲರೆದುರಿಗೂ ಬಿಲ್ಲನ್ನು ಮುರಿದು ಹಾಕಿದನು)
ಪದ್ಯ-೦೦:ಅರ್ಥ:ಎಲವೊ ದುರ್ಯೋಧನ, ಮುಂದೆ ಭೀಮಸೇನನು ಅತಿಯಾಗಿ ಕೋಪಿಸಿಕೊಂಡು ನಿನ್ನ ತೊಡೆಯನ್ನು ಒಡೆಯುವ ಸಂದರ್ಭದಲ್ಲಿ ಇದನ್ನು ಪ್ರಯೋಗಿಸಬೇಕೆಂದಿದ್ದೆ. ಇದನ್ನು ಇನ್ನು ಹಿಡಿಯುವುದಿಲ್ಲ ಹೋಗು ಎಂದು ಸಭೆಯಲ್ಲಿ ಎಲ್ಲರೆದುರಿಗೂ ಬಿಲ್ಲನ್ನು ಮುರಿದು ಹಾಕಿದನು
ವ|| ಅಂತು ವಿದುರಂ ವಿಚ್ಛಿದುರಮನನಾಗಿ ಬಿಲ್ಲನುಡಿವುದುಂ ಸುಯೋಧನಂ ತನ್ನ ಬಲದ ತೋಳುಡಿದಂತಾಗಿ ಸಿಗ್ಗಾಗಿ ಬಾಳಂ ಕಿೞ್ತೊದಱ ಮನದೊಳಾದೇವದಿಂ ದೇವಕೀನಂದನನ ಮೇಲೆವಾಯ್ವುದುಂ ನಂಜಿನ ಮೇಲೆವಾಯ್ವ ನೊಳರಿನಂತುರುಳ್ತರೆ ಪಾಯ್ದು-
ವಚನ:ಪದವಿಭಾಗ-ಅರ್ಥ:ಅಂತು ವಿದುರಂ ವಿಚ್ಛಿದುರಮನನಾಗಿ (ವಿಚ್ಛಿದ್ರ ಮನ, ಭಗ್ನಮನಸ್ಕನಾಗಿ) ಬಿಲ್ಲನು ಉಡಿವುದುಂ ಸುಯೋಧನಂ ತನ್ನ ಬಲದ ತೋಳು ಉಡಿದಂತಾಗಿ ಸಿಗ್ಗಾಗಿ (ಬಿಲ್ಲನ್ನು ಮುರಿದುಹಾಕಲು ದುರ್ಯೋಧನನಿಗೆ ತನ್ನ ಬಲತೋಳೇ ಭಿನ್ನವಾದಂತೆ ಆಯಿತು. ಅವಮಾನಿತನಾಗಿ) ಬಾಳಂ ಕಿೞ್ತೊದಱ ಬಾಳಂ-ಕತ್ತಿಯನ್ನು, ಕಿಳ್ತು (ಒರೆಯಿಂದ ಸೆಳೆದು) ಮನದೊಳು ಆದ ಏವದಿಂ (ಮನಸ್ಸಿನಲ್ಲುಂಟಾದ ಕೋಪದಿಂದ) ದೇವಕೀನಂದನನ ಮೇಲೆವಾಯ್ವುದುಂ (ಕೃಷ್ಣನ ಮೇಲೆ ಹಾಯಲು) ನಂಜಿನ ಮೇಲೆವಾಯ್ವ ನೊಳರಿನಂತು ಉರುಳ್ತರೆ ಪಾಯ್ದು (ವಿಷದ ಮೇಲೆ ಹಾಯುವ ನೊಣದಂತೆ ಉರುಳಿ ಬೀಳುವ ಹಾಗೆ ನುಗ್ಗಲು)-
ವಚನ:ಅರ್ಥ:ಹಾಗೆ ವಿದುರನು ಒಡೆದ ಮನಸ್ಕನಾಗಿ ಬಿಲ್ಲನ್ನು ಮುರಿದುಹಾಕಲು ದುರ್ಯೋಧನನಿಗೆ ತನ್ನ ಬಲತೋಳೇ ಭಿನ್ನವಾದಂತೆ ಆಯಿತು. ಅವಮಾನಿತನಾಗಿ ಒರೆಯಿಂದ ಕತ್ತಿಯನ್ನು ಒರೆಯಿಂದ ಸೆಳೆದು, ಒದರಿ ಮನಸ್ಸಿನಲ್ಲುಂಟಾದ ಕೋಪದಿಂದ ಕೃಷ್ಣನ ಮೇಲೆ ಹಾಯಲು ಅದು ವಿಷದ ಮೇಲೆ ಹಾಯುವ ನೊಣದಂತೆ ಉರುಳಿ ಬೀಳುವ ಹಾಗೆ ನುಗ್ಗಲು-
ಉ|| ಮೂಱಡಿ ಮಾಡಿದಂದು ನೆಲನೆಲ್ಲಮನಾ ಬಲಿಗಾದ ರೂಪಮಂ
ತೋಱಿದನೀ ಜಗತ್ತ್ರಯಮನೊರ್ಮೆಯೆ ನುಂಗುವ ಕಾಲ ರೂಪಮಂ|
ತೋಱಿದನಂತೆ ರೌದ್ರತರ ರೂಪಮನೊರ್ಮೆಯೆ ವಿಶ್ವರೂಪಮಂ
ತೋಱಿದನಿರ್ದರಂ ನೆರೆಯೆ ಮೋಹಿಸಿ ವೈಷ್ಣವದಿಂ ಮುರಾಂತಕಂ|| ೬೦ ||
ಪದ್ಯ-೬೦:ಪದವಿಭಾಗ-ಅರ್ಥ: ಮೂಱಡಿ ಮಾಡಿದಂದು ನೆಲನೆಲ್ಲಮನು ಆ ಬಲಿಗೆ ಆದ ರೂಪಮಂ ತೋಱಿದನು (ಭೂಮಿಯನ್ನೆಲ್ಲ ಮೂರಡಿಯಾಗಿ ಅಳೆದಾಗ ಬಲಿಚಕ್ರವರ್ತಿಗೆ ತೋರಿದ ದೊಡ್ಡ ರೂವವನ್ನೇ ತೋರಿಸಿದನು.) ಈ ಜಗತ್ತ್ರಯಮನು ಒರ್ಮೆಯೆ ನುಂಗುವ ಕಾಲ ರೂಪಮಂ ತೋಱಿದನು (ಈ ಮೂರು ಲೋಕಗಳನ್ನೂ ಒಂದೇ ಸಲಕ್ಕೆ ನುಂಗುವ ಪ್ರಳಯಕಾಲದ ರೂಪವನ್ನು ತೋರಿಸಿದನು) ಅಂತೆ ರೌದ್ರತರ ರೂಪಮನು ಒರ್ಮೆಯೆ ವಿಶ್ವರೂಪಮಂ ತೋಱಿದನು (ಹಾಗೆಯೇ ಭಯಂಕರ ರೂಪವನ್ನು ಇದ್ದಕ್ಕಿದ್ದಹಾಹೆ ತೋರಿಸಿದನು.) ಇರ್ದರಂ ನೆರೆಯೆ ಮೋಹಿಸಿ ವೈಷ್ಣವದಿಂ ಮುರಾಂತಕಂ (ಅಲ್ಲಿದ್ದವರನ್ನು ಬಹಳ ಸಂಮೋಹಕ್ಕೆ ಒಳಪಡಿಸಿ ವೈಷ್ಣವ ಮಾಯೆಯಿಂದ ವಿಶ್ವರೂಪವನ್ನು ತೋರಿಸಿದನು.)
ಪದ್ಯ-೬೦:ಅರ್ಥ:ಶ್ರೀಕೃಷ್ಣನು ತನ್ನ ವಿಷ್ಣುಮಾಯೆಯಿಂದ ಸಭೆಯಲ್ಲಿದ್ದವರನ್ನೆಲ್ಲಾ ಪೂರ್ಣವಾಗಿ ಮೂರ್ಛೆಗೊಳಿಸಿ ಭೂಮಿಯನ್ನೆಲ್ಲ ಮೂರಡಿಯಾಗಿ ಅಳೆದಾಗ ಬಲಿಚಕ್ರವರ್ತಿಗೆ ತೋರಿದ ದೊಡ್ಡ ರೂವವನ್ನೇ ತೋರಿಸಿದನು. ಈ ಮೂರು ಲೋಕಗಳನ್ನೂ ಒಂದೇ ಸಲಕ್ಕೆ ನುಂಗುವ ಪ್ರಳಯಕಾಲದ ರೂಪವನ್ನು ತೋರಿಸಿದನು. ಹಾಗೆಯೇ ಭಯಂಕರ ರೂಪವನ್ನು ಇದ್ದಕ್ಕಿದ್ದ ಹಾಗೆ ತೋರಿಸಿದನು. ಅಲ್ಲಿದ್ದವರನ್ನು ಬಹಳ ಸಂಮೋಹಕ್ಕೆ ಒಳಪಡಿಸಿ ವೈಷ್ಣವ ಮಾಯೆಯಿಂದ ವಿಶ್ವರೂಪವನ್ನು ತೋರಿಸಿದನು.
ವ|| ಆಗಳ್ ಧೃತರಾಷ್ಟ್ರಂ ಬಂದು ಮುಕುಂದನನೇಕಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿದೊಡಾತಂಗೆ ವರದನಾಗಿ ದಿವ್ಯ ದೃಷ್ಟಿಯಂ ದಯೆಗೆಯ್ದು ಮುನ್ನಿನಂತೆ ಮನುಷ್ಯದೇಹಮಂ ಕೆಯ್ಕೊಂಡು ತ್ರೈಲೋಕ್ಯ ಗುರು ಗುರುತನೂಜನ ಕೆಯ್ಯಂ ಪಿಡಿದರಮನೆಯಂ ಪೊಱಮಟ್ಟು ಕಪಟ ಪ್ರಪಂಚದಿಂದಾತನುಮಂ ತನಗೆ ಮಾಡಿ ಬೀಡಿಂಗೆ ವಂದು ಕುಂತಿಗೇಕಾಂತದೊಳಿಂತೆಂದಂ-
ವಚನ:ಪದವಿಭಾಗ-ಅರ್ಥ:ಆಗಳ್ ಧೃತರಾಷ್ಟ್ರಂ ಬಂದು ಮುಕುಂದನ ಅನೇಕ ಸ್ತುತಿಶತಸಹಸ್ರಂಗಳಿಂ ಸ್ತುತಿಯಿಸಿದೊಡೆ (ಆಗ ಧೃತರಾಷ್ಟ್ರನು ಬಂದು ನೂರು ಸಾವಿರಾರು ಸ್ತೋತ್ರಗಳನ್ನು ಸ್ತುತಿಸಲು) ಆತಂಗೆ ವರದನಾಗಿ ದಿವ್ಯ ದೃಷ್ಟಿಯಂ ದಯೆಗೆಯ್ದು (ಆತನಿಗೆ ವರಪ್ರದನಾಗಿ ದಿವ್ಯದೃಷ್ಟಿಯನ್ನು ದಯಪಾಲಿಸಿ) ಮುನ್ನಿನಂತೆ ಮನುಷ್ಯದೇಹಮಂ ಕೆಯ್ಕೊಂಡು ತ್ರೈಲೋಕ್ಯ ಗುರು (ಮೂರುಲೋಕದ ಗುರುವಾದ ಕೃಷ್ಣನು) ಗುರುತನೂಜನ ಕೆಯ್ಯಂ ಪಿಡಿದು ಅರಮನೆಯಂ ಪೊಱಮಟ್ಟು (ಅಶ್ವತ್ಥಾಮನ ಕೈಹಿಡಿದು ಅರಮನೆಯಿಂದ ಹೊರಟು) ಕಪಟ ಪ್ರಪಂಚದಿಂದ ಆತನುಮಂ ತನಗೆ ಮಾಡಿ (ಅವನನ್ನು ಕಪಟದಿಂದ ತನ್ನವನನ್ನಾಗಿ ಮಾಡಿಕೊಂಡು) ಬೀಡಿಂಗೆ ವಂದು ಕುಂತಿಗೆ ಏಕಾಂತದೊಳು ಇಂತೆಂದಂ (ತನ್ನ ವಸತಿಗೆ ಬಂದು ಕುಂತೀದೇವಿಗೆ ರಹಸ್ಯವಾಗಿ ಹೀಗೆ ಹೇಳಿದನು- )-
ವಚನ:ಅರ್ಥ:ಆಗ ಧೃತರಾಷ್ಟ್ರನು ಬಂದು ನೂರು ಸಾವಿರಾರು ಸ್ತೋತ್ರಗಳನ್ನು ಸ್ತುತಿಸಲು ಆತನಿಗೆ ವರಪ್ರದನಾಗಿ ದಿವ್ಯದೃಷ್ಟಿಯನ್ನು ದಯಪಾಲಿಸಿ ಮೊದಲಿನ ಮನುಷ್ಯರೂಪವನ್ನು ತಾಳಿ ಮೂರುಲೋಕದ ಗುರುವಾದ ಕೃಷ್ಣನು ಅಶ್ವತ್ಥಾಮನ ಕೈಹಿಡಿದು ಅರಮನೆಯಿಂದ ಹೊರಟು ಅವನನ್ನು ಕಪಟದಿಂದ ತನ್ನವನನ್ನಾಗಿ ಮಾಡಿಕೊಂಡು ತನ್ನ ವಸತಿಗೆ ಬಂದು ಕುಂತೀದೇವಿಗೆ ರಹಸ್ಯವಾಗಿ ಹೀಗೆ ಹೇಳಿದನು-
ಚಂ|| ಗುರು ಕೃಪ ಶಲ್ಯ ಸಿಂಧುಸುತರಪ್ಪೊಡೆ ನಮ್ಮಯ ಪಕ್ಷಮೊಂದಿದಂ
ಗುರುಸುತನೀಗಳೆಮ್ಮೊಳಖಿಳಾಸ್ತ್ರ ವಿಶಾರದನಪ್ಪನುಂ ಗೆಲ|
ಲ್ಕರಿಯನುಮೊಂದಿ ಬಾರದನುಮಂಕದ ಕರ್ಣನೆ ಬೀರಮಾತನಿಂ
ದುರಿವರಿದತ್ತು ಚಾಗಮವನಿಂದೆಸೆದತ್ತು ಸಮಸ್ತ ಧಾತ್ರಿಯೊಳ್|| ೬೧ ||
ಪದ್ಯ-೦೦:ಪದವಿಭಾಗ-ಅರ್ಥ:ಗುರು ಕೃಪ ಶಲ್ಯ ಸಿಂಧುಸುತರು ಅಪ್ಪೊಡೆ ನಮ್ಮಯ ಪಕ್ಷಮೊಂದಿದಂ (ಭೀಷ್ಮರಾದರೆ ನಮ್ಮ ಪಕ್ಷದವರೇ ಆಗಿರುವರು) ಗುರುಸುತನು ಈಗಳೆ ಎಮ್ಮೊಳು (ಈಗ ಅಶ್ವತ್ಥಾಮನೂ ನಮ್ಮಲ್ಲಿ ಸೇರಿದನು) ಅಖಿಳಾಸ್ತ್ರ ವಿಶಾರದನಪ್ಪನುಂ ಗೆಲಲ್ಕೆ ಅರಿಯನುಂ ಒಂದಿ ಬಾರದನುಂ ಅಂಕದ ಕರ್ಣನೆ ಬೀರಂ (ಸಮಸ್ತ ಶಾಸ್ತ್ರದಲ್ಲಿ ವಿಶಾರದನೂ ಜಯಿಸುವುದಕ್ಕೆ ಅಸಾಧ್ಯನೂ ನಮ್ಮ ಜೊತೆಯಲ್ಲಿ ಸೇರುವುದಕ್ಕೆ ಒಪ್ಪದವನೂ ಆದವನು ಪ್ರಸಿದ್ಧನಾದ ಕರ್ಣನೊಬ್ಬನೇ ವೀರನು) ಆತನಿಂದ ಉರಿವರಿದತ್ತು (ಅವನ ಶೌರ್ಯಪ್ರತಾಪವು ಬೆಂಕಿಯಂತೆ ಪ್ರಸರಿಸಿದೆ.) ಚಾಗಂ ಅವನಿಂದ ಎಸೆದತ್ತು ಸಮಸ್ತ ಧಾತ್ರಿಯೊಳ್ (ಜಗತ್ತಿನಲ್ಲಿ ತ್ಯಾಗವೂ ಅವನಿಂದಲೇ ಪ್ರಕಾಶಮಾನವಾಗಿದೆ)
ಪದ್ಯ-೦೦:ಅರ್ಥ:ಗುರು, ಕೃಪ, ಶಲ್ಯ, ಭೀಷ್ಮರಾದರೆ ನಮ್ಮ ಪಕ್ಷದವರೇ ಆಗಿರುವರು. ಈಗ ಅಶ್ವತ್ಥಾಮನೂ ನಮ್ಮಲ್ಲಿ ಸೇರಿದನು. ಸಮಸ್ತ ಶಾಸ್ತ್ರದಲ್ಲಿ ವಿಶಾರದನೂ ಜಯಿಸುವುದಕ್ಕೆ ಅಸಾಧ್ಯನೂ ನಮ್ಮ ಜೊತೆಯಲ್ಲಿ ಸೇರುವುದಕ್ಕೆ ಒಪ್ಪದವನೂ ಆದವನು ಪ್ರಸಿದ್ಧನಾದ ಕರ್ಣನೊಬ್ಬನೇ ವೀರನು. ಸಮಸ್ತ ಪ್ರಪಂಚದಲ್ಲಿ ಅವನ ಶೌರ್ಯಪ್ರತಾಪವು ಬೆಂಕಿಯಂತೆ ಪ್ರಸರಿಸಿದೆ. ಜಗತ್ತಿನಲ್ಲಿ ತ್ಯಾಗವೂ ಅವನಿಂದಲೇ ಪ್ರಕಾಶಮಾನವಾಗಿದೆ.
ಉ|| ಎಂತೆನೆ ವಜ್ರಿ ವಜ್ರಕವಚಕ್ಕೆ ನಿಜೋಜ್ವಳಕುಂಡಳಕ್ಕೆ ಕೆ
ಯ್ಯಾಂತೊಡೆ ಪಾಂಡುಪುತ್ರರನೆ ಕಾದೆರೆವಂದುಗಿವಂ ದಲೆಂದಿನಂ|
ಮಂತಣದಿಂದೆ ಬಾರಿಸೆಯುಮೆಂದುದನೆನ್ನದೆ ಮೀಱಿ ಕೊಟ್ಟನೋ
ರಂತು ಜಸಕ್ಕೆ ನೋಂತು ಬಿಡೆ ನೇರ್ದೊಡಲೊಳ್ ತೊಡರ್ದಾ ತನುತ್ರಮಂ|| ೬೨ ||
ಪದ್ಯ-೬೨:ಪದವಿಭಾಗ-ಅರ್ಥ:ಎಂತೆನೆ ವಜ್ರಿ (ಇಂದ್ರನು) ವಜ್ರಕವಚಕ್ಕೆ ನಿಜ ಉಜ್ವಳ ಕುಂಡಳಕ್ಕೆ ಕೆಯ್ಯಂ ಆಂತೊಡೆ (ಕರ್ಣನ ವಜ್ರಕವಚವನ್ನೂ ಅವನ ಬಹುಪ್ರಕಾಶವಾದ ಕಿವಿಯಾಭರಣ ಗಳನ್ನೂ ಕೈನೀಡಿ ಯಾಚಿಸಿದಾಗ) ಪಾಂಡುಪುತ್ರರನೆ ಕಾದು ಎರೆವಂದು (“ಪಾಂಡುಪುತ್ರರನ್ನು ರಕ್ಷಿಸುವುದಕ್ಕಾಗಿ ಇಂದ್ರನು ಬಂದು ನಿನ್ನನ್ನು ಬೇಡಿದಾಗ) ಉಗಿವಂ ದಲ್ ಎಂದು ಇನಂ ಮಂತಣದಿಂದೆ ಬಾರಿಸೆಯುಂ (ಎಂದು ಸೂರ್ಯನು ಬಂದು ಬುದ್ಧಿ ಹೇಳಿ ತಡೆದರೂ) ಎಂದುದನು ಎನ್ನದೆ (ಅವನು ಹೇಳಿದುದನ್ನು, ಕೊಡಲಾರೆ ಎಂದು ಹೇಳದೆ) ಮೀಱಿ ಕೊಟ್ಟನು ಓರಂತು ಜಸಕ್ಕೆ ನೋಂತು (ಯಶಸ್ಸಿಗಾಗಿ ಆಶೆಪಟ್ಟು ಸೂರ್ಯನ ಮಾತನ್ನು ಮೀರಿ ಕೊಟ್ಟನು) ಬಿಡೆ ನೇರ್ದ ಒಡಲೊಳ್ ತೊಡರ್ದಾ ತನುತ್ರಮಂ (ತನ್ನ ಶರೀರದಲ್ಲಿ ಅಂಟಿಕೊಂಡಿದ್ದ ಆ ವಜ್ರಕವಚವನ್ನು ಸುಲಿದುಬರುವ ಹಾಗೆ ಕತ್ತರಿಸಿ ದಾನವಾಗಿ ಬಿಡದೆ ಕೊಟ್ಟನು.)
ಪದ್ಯ-೬೨:ಅರ್ಥ: ಅದು ಹೇಗೆ ಎಂದರೆ ಇಂದ್ರನು ಕರ್ಣನ ವಜ್ರಕವಚವನ್ನೂ ಅವನ ಬಹುಪ್ರಕಾಶವಾದ ಕಿವಿಯಾಭರಣ ಗಳನ್ನೂ ಕೈನೀಡಿ ಯಾಚಿಸಿದಾಗ “ಪಾಂಡುಪುತ್ರರನ್ನು ರಕ್ಷಿಸುವುದಕ್ಕಾಗಿ ಇಂದ್ರನು ಬಂದು ನಿನ್ನನ್ನು ಛಿದ್ರಿಸುತ್ತಿದ್ದಾನೆ, ಕೊಡಬೇಡ ಎಂದು ಸೂರ್ಯನು ಬಂದು ಬುದ್ಧಿ ಹೇಳಿ ತಡೆದರೂ ಅವನು ಹೇಳಿದುದನ್ನು, ಕೊಡಲಾರೆ ಎಂದು ಹೇಳದೆ ಯಶಸ್ಸಿಗಾಗಿ ಆಶೆಪಟ್ಟು ತನ್ನ ಶರೀರದಲ್ಲಿ ಅಂಟಿಕೊಂಡಿದ್ದ ಆ ವಜ್ರಕವಚವನ್ನು ಸುಲಿದುಬರುವ ಹಾಗೆ ಕತ್ತರಿಸಿ ದಾನವಾಗಿ ಬಿಡದೆ ಕೊಟ್ಟನು.
ಮ|| ಬರವಂ ಬೇಡಿದರ್ಗೀವ ದೇವನೆ ವಲಂ ನಾಣ್ಗೆಟ್ಟು ಬಂದೆನ್ನನಿಂ
ತೆರೆದಂ ಬರ್ದರೊಳಾನೆ ಬರ್ದನೆನುತುಂ ನೇರ್ವಲ್ಲಿ ಕೆನ್ನೆತ್ತರುಂ|
ಬಿರಿ ಕಂಡಂಗಳೆ ಬೀೞಲುಣ್ಮೆ ಮನದೊಂದಣ್ಮಿಟ್ಟಳಂ ಪೊಣ್ಮೆ ವೀ
ರರಸಕ್ಕಾಗರಮಾಯ್ತು ನೋಡೆ ಕವಚಂಗೊಂಡಂದಮಾ ಕರ್ಣನಾ|| ೬೩ ||
ಪದ್ಯ-೬೩:ಪದವಿಭಾಗ-ಅರ್ಥ:ಬರವಂ (ವರವಂ) ಬೇಡಿದರ್ಗೆ ಈವ ದೇವನೆ ವಲಂ ನಾಣ್ಗೆಟ್ಟು ಬಂದು ಎನ್ನನು ಇಂತು ಎರೆದಂ (ಕೇಳಿದವರಿಗೆ ವರವನ್ನು ಕೊಡುವ ಇಂದ್ರದೇವನೇ ನಾಚಿಕೆಗೆಟ್ಟು ಬಂದು ನನ್ನನ್ನು ಈ ರೀತಿ ಬೇಡಿದನು.) ಬರ್ದರೊಳು ಆನೆ ಬರ್ದನೆನುತುಂ (ಬಾಳಿದವರಲ್ಲೆಲ್ಲ ನಾನೆ ಬಾಳಿದವನು) ನೇರ್ವಲ್ಲಿ ಕೆನ್ನೆತ್ತರುಂ ಬಿರಿ ಕಂಡಂಗಳೆ ಬೀೞಲುಣ್ಮೆ (ಧಾರೆಯಾಗಿ ಸುರಿಯುತ್ತಿರಲು)(ಎಂದುಕೊಳ್ಳುತ್ತ ದೇಹದಿಂದ ಕವಚವನ್ನು ಕೆಂಪಾದ ರಕ್ತವೂ ಸೀಳಿದ ಮಾಂಸಖಂಡವೂ ಧಾರೆಯಾಗಿ ಸುರಿಯುತ್ತಿರಲು) ಮನದ ಒಂದು ಅಣ್ಮಿಟ್ಟಳಂ ಪೊಣ್ಮೆ (ಒಂದು ಮನೋದಾರ್ಢ್ಯವೂ ಬಹಳಯವಾಗಿ ಹೆಚ್ಚುತ್ತಿರಲು) ವೀರರಸಕ್ಕೆ ಆಗರಮಾಯ್ತು (ವೀರರಸಕ್ಕೆ ಆಗರವಾಗಿತ್ತು) ನೋಡೆ ಕವಚಂಗೊಂಡಂದಂ (ಕವಚವನ್ನು ಶರೀರದಿಂದ ಕಿತ್ತ ರೀತಿ ನೋಡುವವರಿಗೆ) ಆ ಕರ್ಣನಾ (ಆ ಕರ್ಣನ ರೀತಿ.)
ಪದ್ಯ-೬೩:ಅರ್ಥ:ಕೇಳಿದವರಿಗೆ ವರವನ್ನು ಕೊಡುವ ಇಂದ್ರದೇವನೇ ನಾಚಿಕೆಗೆಟ್ಟು ಬಂದು ನನ್ನನ್ನು ಈ ರೀತಿ ಬೇಡಿದನು. ಬಾಳಿದವರಲ್ಲೆಲ್ಲ ನಾನೆ ಬಾಳಿದವನು ಎಂದುಕೊಳ್ಳುತ್ತ ದೇಹದಿಂದ ಕವಚವನ್ನು ಕೆಂಪಾದ ರಕ್ತವೂ ಸೀಳಿದ ಮಾಂಸಖಂಡವೂ ಒಂದೇ ಸಮನಾಗಿ ಸುರಿಯುತ್ತಿರಲು ಮನೋದಾರ್ಢ್ಯವೂ ಬಹಳಯವಾಗಿ ಹೆಚ್ಚುತ್ತಿರಲು ಕರ್ಣನು ಕವಚವನ್ನು ಶರೀರದಿಂದ ಕಿತ್ತ ರೀತಿ ನೋಡುವವರಿಗೆ ವೀರರಸಕ್ಕೆ ಆಗರವಾಗಿತ್ತು.
ವ|| ಅಂತು ಸಹಜಕವಚ ರತ್ನಕುಂಡಲಂಗಳಂ ನೆತ್ತರ್ ಪನಪನ ಪನಿಯೆ ತಿದಿಯುಗಿವಂತುಗಿದು ಕೊಟ್ಟುದರ್ಕೆ ಮೆಚ್ಚಿ ದೇವೇಂದ್ರನಾತಂಗಮೋಘಶಕ್ತಿಯನಿತ್ತನಾತನಂ ನಾನುಮೆನ್ನ ಬಲ್ಲ ಮಾೞ್ಕೆಯಿಂ ಭೇದಿಸಿದಪ್ಪೆಂ ನೀಮುಂ ನಿಮ್ಮ ಚೊಚ್ಚಿಲ ಮಗನಪ್ಪ ಸೂರ್ಯಸೂನುವಂ ಸೂರ್ಯದಿನದಂದು ಕಂಡು ಕಾರ್ಯಸಿದ್ಧಿಯಂ ಮಾಡಿ ಬನ್ನಿಮೆಂದು ಕೊಂತಿಯಂ ಬೀೞ್ಕೊಂಡು ಪರಕೆಯಂ ಕೈಕೊಂಡು ರಥಾಂಗಧರಂ ರಥಮನೇಱಿ ಕರ್ಣನ ಮನೆಯ ಮುಂದನೆ ಬಂದು ಮೇಲೆ ಬಿೞ್ದೆಮ್ಮಂ ಕಿಱಿದಂತರಂ ಕಳಿಪಿ ಮಗುೞ್ವೆ ಬಾ ಪೋಪಮೆಂದು ತನ್ನೊಡನೆ ರಥಮನೇಱಿಸಿಕೊಂಡುಪೋಗಿ ಮುಂದೊಂದೆಡೆಯೊಳ್ ನಿಂದು-
ವಚನ:ಪದವಿಭಾಗ-ಅರ್ಥ:ಅಂತು ಸಹಜಕವಚ ರತ್ನಕುಂಡಲಂಗಳಂ ನೆತ್ತರ್ ಪನಪನ ಪನಿಯೆ (ಹನಿಹನಿಯಾಗಿ ಹನಿಯಲು) ತಿದಿಯುಗಿವಂತುಗಿದು ಕೊಟ್ಟುದರ್ಕೆ ಮೆಚ್ಚಿ (ಚರ್ಮವನ್ನು ಸುಲಿಯುವ ಹಾಗೆ ಸುಲಿದುಕೊಟ್ಟುದಕ್ಕೆ ಮೆಚ್ಚಿ) ದೇವೇಂದ್ರನು ಆತಂಗೆ ಅಮೋಘಶಕ್ತಿಯನು (ಶಕ್ತಾಯುಧವನ್ನು ಕೊಟ್ಟನು->) ಇತ್ತನು. ಆತನಂ ನಾನುಂ ಎನ್ನ ಬಲ್ಲ ಮಾೞ್ಕೆಯಿಂ ಭೇದಿಸಿದಪ್ಪೆಂ (ಆತನನ್ನು ನಾನೂ ನನಗೆ ತಿಳಿದ ಮಟ್ಟಿನ ರೀತಿಯಲ್ಲಿ ಬೇಧಿಸುತ್ತೇನೆ.) ನೀಮುಂ ನಿಮ್ಮ ಚೊಚ್ಚಿಲ ಮಗನಪ್ಪ ಸೂರ್ಯಸೂನುವಂ (ಸೂರ್ಯಪುತ್ರನಾದ ಕರ್ಣನನ್ನು) ಸೂರ್ಯದಿನದಂದು (ಭಾನುವಾರದ ದಿನ) ಕಂಡು ಕಾರ್ಯಸಿದ್ಧಿಯಂ ಮಾಡಿ ಬನ್ನಿಮೆಂದು ಕೊಂತಿಯಂ ಬೀೞ್ಕೊಂಡು(ಬೀಳ್ಕೊಂಡು- ಕಳಿಸಿ), ಪರಕೆಯಂ ಕೈಕೊಂಡು (ಅವಳ ಆಶೀರ್ವಾದವನ್ನು ಪಡೆದು) ರಥಾಂಗಧರಂ (ಚಕ್ರಪಾಣಿ, ಕೃಷ್ಣ) ರಥಮನೇಱಿ ಕರ್ಣನ ಮನೆಯ ಮುಂದನೆ ಬಂದು, ಮೇಲೆ ಬಿೞ್ದೆಮ್ಮಂ ಕಿಱಿದಂತರಂ ಕಳಿಪಿ ಮಗುೞ್ವೆ ಬಾ (ಕರ್ಣನ ಮನೆಯ ಮುಂದುಗಡೆಯೇ ಬಂದು ತಾನೇ ಮೇಲೆ ಬಿದ್ದು ‘ಕರ್ಣ! ನಮ್ಮನ್ನು ಸ್ವಲ್ಪ ದೂರ ಕಳುಹಿಸಿಕೊಟ್ಟು ಬರುವೆಯಂತೆ ಬಾ ಹೋಗೋಣ’) ಪೋಪಂ ( ಹೋಗೋಣ’) ಎಂದು ತನ್ನೊಡನೆ ರಥಮನು ಏಱಿಸಿಕೊಂಡು ಪೋಗಿ ಮುಂದೊಂದೆಡೆಯೊಳ್ ನಿಂದು (ಮುಂದೆ ಬಂದು ಒಂದು ಕಡೆಯಲ್ಲಿ ನಿಂತು) -
ವಚನ:ಅರ್ಥ: ಹಾಗೆ ಅವನಿಗೆ ಸಹಜವಾಗಿ ಇದ್ದ ಕವಚ ಮತ್ತು ರತ್ನಕುಂಡಲಗಳನ್ನು ರಕ್ತವು ಹನಿಹನಿಯಾಗಿ ಹನಿಯುತ್ತಿರಲು, ಚರ್ಮವನ್ನು ಸುಲಿಯುವ ಹಾಗೆ ಸುಲಿದುಕೊಟ್ಟುದಕ್ಕೆ ಮೆಚ್ಚಿ ದೇವೇಂದ್ರನಾತನಿಗೆ ಬೆಲೆಯಿಲ್ಲದ ಶಕ್ತಾಯುಧವನ್ನು ವರವಾಗಿ ಕೊಟ್ಟಿದ್ದಾನೆ. ಆತನನ್ನು ನಾನೂ ನನಗೆ ತಿಳಿದ ಮಟ್ಟಿನ ರೀತಿಯಲ್ಲಿ ಬೇಧಿಸುತ್ತೇನೆ. ನೀವೂ ನಿಮ್ಮ ಚೊಚ್ಚಲಮಗನಾದ ಸೂರ್ಯಪುತ್ರನಾದ ಕರ್ಣನನ್ನು ಭಾನುವಾರದ ದಿನ ನೋಡಿ ಕಾರ್ಯಸಿದ್ಧಿಯನ್ನು ಮಾಡಿಕೊಂಡು ಬನ್ನಿ ಎಂದು ಕುಂತಿಯನ್ನು ಕಳುಹಿಸಿಕೊಟ್ಟನು. ಅವಳ ಆಶೀರ್ವಾದವನ್ನು ಪಡೆದು ಕೃಷ್ಣನು ತೇರನ್ನು ಹತ್ತಿ ಕರ್ಣನ ಮನೆಯ ಮುಂದುಗಡೆಯೇ ಬಂದು ತಾನೇ ಮೇಲೆ ಬಿದ್ದು ‘ಕರ್ಣ! ನಮ್ಮನ್ನು ಸ್ವಲ್ಪ ದೂರ ಕಳುಹಿಸಿಕೊಟ್ಟು ಬರುವೆಯಂತೆ ಬಾ ಹೋಗೋಣ’ ಎಂದು ತನ್ನೊಡನೆ ರಥದಲ್ಲಿ ಹತ್ತಿಸಿಕೊಂಡು ಹೋಗಿ ಮುಂದೆ ಬಂದು ಒಂದು ಕಡೆಯಲ್ಲಿ ನಿಂತು ಹೇಳಿದನು.
ಕುಮಾರವ್ಯಾಸ ಭಾರದಲ್ಲಿ ಕರ್ಣಭೇದನ;
  • (ಪರ್ವ ಉದ್ಯೋಗ||ಸಂ-೧೦||)
ಕೃಷ್ಣನ ಮಾತು

ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡವೆನು ಪಾಂಡವ
ಜನಪ ಕೌರವಜನಪರೋಲೈಸುವರು ಗದ್ದುಗೆಯ||
ನಿನಗೆ ಕಿಂಕರರೆಡು ಸಂತತಿ
ಯೆನಿಸಲೊಲ್ಲದೆ ನೀನು ದುರಿಯೋ
ಧನನ ಬಾದಂಬುಲಕೆ ಕೈಯಾನುವರೆ ಹೇಳೆಂದ||೮||

ಎಡದ ಮೈಯಲಿಕೌರವೇಂದ್ರರ
ಗಡಣ ಬಲದಲಿ ಪಾಂಡುತನಯರ
ಗಡಣವಿದಿರಲಿ ಮಾದ್ರ ಮಾಗದ ಯಾದವಾದಿಗಳು ||
ನಡುವೆ ನೀನೋಲಗದೊಳೊಪ್ಪುವ
ಕಡು ವಿಲಾಸವ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ||೯||
--
ಆರುಸರಿಯೈ ಕರ್ಣ ನೆಡೆ ನೆಡೆ
ಧಾರಣೀಪತಿಯಾಗು ನೀನಿರೆ
ವೈರವಿತ್ತಂಡಕ್ಕೆ ಬಳಿಕಿಲ್ಲೆಂದನಸುರಾರಿ||೧೦ ||

ಕರ್ಣನ ಪ್ರತಿಕ್ರಿಯೆ

ಕೊರಳಸೆರೆ ಹಿಗ್ಗಿದುದು ದೃಗುಜಲ(ಕಣ್ಣೀರು)
ಉರವಣಿಸಿ ಕಡುನೊಂದನಕಟಾ
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ||
ಹರಿಯ ಹಗೆ ಹೊಗೆದೋರದುರಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ||೧೧||
(ಹೊಗೆದೋರದೆ ಉರಹದೆ)(ವಂಶವನು ಅರುಹಿ)

ಕಾದಿಕೊಲುವೊಡೆ ಪಾಂಡುಸುತರು ಸ
ಹೋದರರು ಕೊಲಲಿಲ್ಲ ಕೊಲ್ಲದೆ
ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ ||
ಭೇದದಲಿ ಹೊಕ್ಕಿರಿದನೋ ಮಧು
ಸೂದನನಕಟೆನುತ ಘನಚಿಂ
ತೋದಧಿಯಲದ್ದವೊಲ್ ಮೌನದೊಳಿದ್ದನಾ ಕರ್ಣ ||೧೨ ||

ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧರನೆಗೆ ಬೆಸಕೈವಲ್ಲ ಮನವಿಲ್ಲ||
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸವೆನೆಂಬೀ
ಭರದೊಳಿದ್ದೆನು ಕೌರವೇಂದ್ರನ ಕೊಂದೆನೀನೆಂದ||೧೪||

ಒಡನೆ ಹುಟ್ಟದರೆಂಬ ಕಥನವ
ನೆಡಗುಡದೆ ಬಣ್ಣಿಸಿದೆ ವಿಜಯನ
ಗಡುಬಾಣಕೆ ಬಲಿಯನಿಕ್ಕುವ ಹದನು ಮಾಣಿಸಿದೆ ||
ನುಡಿದು ಫಲವೇನಿನ್ನು ಕೇಳೆ
ನ್ನೊಡೆಯನಾದಂತೆಹೆನು ಬಾರೆನು
ಪೊಡವಿಯಲಿ ನೀ ಹರಹಿಕೊಳು ನಿನ್ನವರ ನಿಲಿಸೆಂದ|| ೧೫||
---
ಸಲಹಿದನು ಮನ್ನೆಣೆಯಲೆನಗ
ಗ್ಗಳಿಕೆಯಲ್ಲದೆ ಹೀನ ವೃತ್ತಿಯ
ಬಳಸಿ ನೆಡೆಸೆನು ಕೌರವೇಂದ್ರನನೆಂತು ಮರೆದಪೆನು||೧೭||

ಮಾರಿಗೌತಣವಾಯ್ತು ನಾಳಿನ
ಭಾರತವುಚತುರಂಗ ಬಲದಲಿ
ಕೌರವನ ರುಣ ಹಿಂಗೆ ರಣದಲಿ ಸುಭಟಕೋಟಿಯನು ||
ತೀರಿಸಿಯೆ ಪತಿಯವಸರಕ್ಕೆ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ || ೨೧ ||

ಕೃಷ್ಣ

(ಕುಂತಿಯ ಮಗನೆಂದು ಗೊತ್ತಿದ್ದೂ ಹೇಳದಿದ್ದರೆ ನನ್ನ
ಮನಸ್ಸಿಗೆ ನೋವು ಆಗುವುದು; ಅದಕ್ಕೇ ಹೇಳಿದೆ, ಎಂದ)
ಮನಕೆ ಖತಿಯಹುದರುಹದಿರ್ದೊಡೆ
ತನಗೆ ಗುಣವಲ್ಲೆಂಬ ಕಾರಣ
ವಿನಿತನೊಡ್ಡೈಸಿದೆನು ನೀ ಸುಖಿಯಾಗು ಹೋಗೆಂದ|| ೨೧ ||

ಉ|| ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ
ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್|
ಸೋದರರೆಯ್ದೆ ಮಯ್ದುನನೆನಾಂ ಪೆಱತೇಂ ಪಡೆಮಾತೊ ನಿನ್ನದೀ
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಪೆಱರ್ ನರೇಂದ್ರರೇ|| ೬೪ ||
ಪದ್ಯ-೬೪:ಪದವಿಭಾಗ-ಅರ್ಥ:ಭೇದಿಸಲೆಂದೆ (ನಿನ್ನ ಮನಸ್ಸನ್ನು ಒಡೆಯಲು ದಲ್ ಓಹೊ!->) ನುಡಿದರು ಎನ್ನದಿರು ಒಯ್ಯನೆ ಕೇಳ ಕರ್ಣ (ಸಮಾಧಾನದಿಂದ ಕೇಳಯ್ಯಾ ಕರ್ಣಾ) ನಿನ್ನ ಆದಿಯೊಳ್ ಅಬ್ಬೆ ಕೊಂತಿ (ಕುಂತಿಯು ನಿನ್ನ ತಾಯಿ ಹಿಂದೆ) ನಿನಗೆ ಅಮ್ಮಂ ಅಹರ್ಪತಿ (ನಿನಗೆ ತಂದೆ ಸೂರ್ಯನು) ಪಾಂಡುನಂದನರ್ ಸೋದರರು (ಪಾಂಡವರು ನಿನ್ನ ಸಹೋದರರು) ಎಯ್ದೆ ಮಯ್ದುನನೆ ನಾಂ (ನಿಜಕ್ಕೂ ನಾನು ನಿನಗೆ ಮೈದುನ.) ಪೆಱತೇಂ ಪಡೆಮಾತೊ (ಹೆಚ್ಚು ಹೇಳುವುದೇನು? ಬೇರೆ ಬೀಳುಮಾತುಗಳು) ನಿನ್ನದು ಈ ಮೇದಿನಿ (ಈ ಭೂಮಿಯೆಲ್ಲವೂ ನಿನ್ನದೇ) ಪಟ್ಟಮುಂ ನಿನತೆ ನೀನು ಇರೆ ಮತ್ತೆ ಪೆಱರ್ ನರೇಂದ್ರರೇ(ಪಟ್ಟವೂ ನಿನ್ನದೇ. ನೀನಿರುವಲ್ಲಿ ಮತ್ತೆ ಇತರರು ರಾಜರಾಗಬಲ್ಲರೇ? )
ಪದ್ಯ-೬೪:ಅರ್ಥ:ಕರ್ಣ ಕೇಳು, ನಿನ್ನ ಮನಸ್ಸನ್ನು ಒಡೆಯಲು (ನಿನ್ನನ್ನು ಭೇದಿಸಲು )ಹೀಗೆ ಹೇಳಿದೆನೆಂದು ನುಡಿಯದಿರು ಸಮಾಧಾನದಿಂದ ಕೇಳಯ್ಯಾ ಕರ್ಣಾ. ಕುಂತಿಯು ನಿನ್ನ ತಾಯಿ ಹಿಂದೆ, ಸೂರ್ಯನು ನಿನ್ನ ತಂದೆ, ಪಾಂಡವರು ನಿನ್ನ ಸಹೋದರರು, ನಿಜಕ್ಕೂ ನಾನು ನಿನಗೆ ಮೈದುನ. ಹೆಚ್ಚು ಹೇಳುವುದೇನು? ಬೀಳುಮಾತುಗಳು! ಈ ಭೂಮಿಯೆಲ್ಲವೂ ನಿನ್ನದೇ. ಪಟ್ಟವೂ ನಿನ್ನದೇ. ನೀನಿರುವಲ್ಲಿ ಮತ್ತೆ ಇತರರು ರಾಜರಾಗಬಲ್ಲರೇ?
ಕಂ|| ಗಂಗೆಗೆ ಕೆಯ್ಯೆಡೆಯೆಂದು
ತ್ತುಂಗಸ್ತನಿ ಕೊಟ್ಟು ಪೋಗೆ ಸೂತಂ ಕಂಡಾ|
ತ್ಮಾಂಗನೆಗೆ ರಾಧೆಗಿತ್ತು ಮ
ನಂಗೊಳೆ ರಾಧೇಯನೆನಿಸಿ ಸೂತಜನಾದೈ|| ೬೫ ||
ಪದ್ಯ-೬೫:ಪದವಿಭಾಗ-ಅರ್ಥ:ಗಂಗೆಗೆ ಕೆಯ್ಯೆಡೆಯೆಂದು ಉತ್ತುಂಗಸ್ತನಿ (ಉಬ್ಬಿದೆದೆಯ ಯುವತಿಯಾದ ಅಡವಾಗಿ ಗಂಗೆಗೆ) ಕೊಟ್ಟು ಪೋಗೆ ಸೂತಂ ಕಂಡು (ಕೊಟ್ಟು ಹೋಗಲು ಅದನ್ನು ನೋಡಿದ ಸೂತನು) ಆತ್ಮ ಅಂಗನೆಗೆ ರಾಧೆಗಿತ್ತು ಮನಂಗೊಳೆ (ತನ್ನ ಹೆಂಡತಿಯಾದ ರಾಧೆಗೆ ಕೊಟ್ಟು ಸಂತಸಪಡಲು) ರಾಧೇಯನು ಎನಿಸಿ ಸೂತಜನಾದೈ(ನೀನು ರಾಧೇಯನೆನು ಎಸಿಕೊಂಡು ಸೂತಪುತ್ರನಾಗಿದ್ದೀಯೆ)
ಪದ್ಯ-೬೫:ಅರ್ಥ:ನಿನ್ನನ್ನು ಉಬ್ಬಿದೆದೆಯ ಯುವತಿಯಾದ ನಿನ್ನ ತಾಯಿ ಕುಂತಿಯು ಗಂಗೆಗೆ ಅಡವಾಗಿ (ರಕ್ಷಿಸಲು) ಕೊಟ್ಟು ಹೋಗಲು ಅದನ್ನು ನೋಡಿದ ಸೂತನು ತನ್ನ ಹೆಂಡತಿಯಾದ ರಾಧೆಗೆ ಕೊಟ್ಟು ಸಂತಸಪಡಲು,ದರಿಂದ ನೀನು ರಾಧೇಯನೆನು ಎಸಿಕೊಂಡು ಸೂತಪುತ್ರನಾಗಿದ್ದೀಯೆ. ಎಂದನು ಕೃಷ್ಣ.
ನಿನ್ನುತ್ಪತ್ತಿಯನಿಂತೆಂ
ದೆನ್ನರುಮಣಮಯರಱಿವೆನಾಂ ಸಹದೇವಂ|
ಪನ್ನಗಕೇತು ದಿನೇಶಂ
ನಿನ್ನಂಬಿಕೆ ಕುಂತಿಯಿಂತಿವರ್ ನೆರೆ ಬಲ್ಲರ್|| ೬೬||
ಪದ್ಯ-೬೬:ಪದವಿಭಾಗ-ಅರ್ಥ:ನಿನ್ನ ಉತ್ಪತ್ತಿಯನು ಇಂತೆಂದು ಎನ್ನರುಂ ಅಣಂ ಅರಿಯರ್ (ನಿನ್ನ ಹುಟ್ಟಿನ ರೀತಿ ಹೀಗೆಂದು ಯಾರಿಗೂ ಸ್ವಲ್ಪವೂ ತಿಳಿಯದು) ಅಱಿವೆ ನಾಂ,(ನಾನು ತಿಳಿದಿದ್ದೇನೆ) ಸಹದೇವಂ, ಪನ್ನಗಕೇತು (ದುರ್ಯೋಧನ), ದಿನೇಶಂ (ಸೂರ್ಯ), ನಿನ್ನ ಅಂಬಿಕೆ ಕುಂತಿಯು ಇಂತಿವರ್ ನೆರೆ ಬಲ್ಲರ್ (ನಿನ್ನ ತಾಯಿಯಾದ ಕುಂತಿ ಇವರು ಪೂರ್ಣವಾಗಿ ಬಲ್ಲೆವು.)
ಪದ್ಯ-೬೬:ಅರ್ಥ:ಕೃಷ್ಣನು ಕರ್ಣನಿಗೆ ಹೇಳಿದ: ನಿನ್ನ ಹುಟ್ಟಿನ ರೀತಿ ಹೀಗೆಂದು ಯಾರಿಗೂ ಸ್ವಲ್ಪವೂ ತಿಳಿಯದು. ನಾನು ತಿಳಿದಿದ್ದೇನೆ, ಮತ್ತೆ ಸಹದೇವ, ದುರ್ಯೋಧನ, ಸೂರ್ಯ, ನಿನ್ನ ತಾಯಿಯಾದ ಕುಂತಿ ಇವರು ಪೂರ್ಣವಾಗಿ ಬಲ್ಲೆವು.
ವ|| ದುರ್ಯೋಧನಂ ನಿನ್ನನೇತಳ್ ನಂಬಿವನೆಂದೊಡೆ ನೀನುಂ ತಾನುಮೊರ್ಮೆ ಗಂಗಾನದೀತೀರದೊಳ್ ಬೇಂಟೆಯಾಡುವಲ್ಲಿ ತತ್ಸಮೀಪದ ತಾಪಸಾಶ್ರಮದೊಳ್ ಸತ್ಯಂತಪರೆಂಬ ದಿವ್ಯಜ್ಞಾನಿಗಳಂ ಕಂಡು ಪೊಡೆವಟ್ಟಿರ್ವರುಮಂ ಪರಸಿ ನಿನಗೆ ಮುನ್ನಮೇಱಲ್ ತರಿಸಿದೊಡೆ ಸುಯೋಧನನೇವಯಿಸಿ ನಿನ್ನಂ ಪೋಗಲ್ವೇೞ್ದು-
ವಚನ:ಪದವಿಭಾಗ-ಅರ್ಥ:ದುರ್ಯೋಧನಂ ನಿನ್ನನು ಏತರೊಳ್ ನಂಬಿದವನೆಂದೊಡೆ (ದುರ್ಯೋಧನನು ನಿನ್ನನ್ನು ಯಾವ ಕಾರಣದಿಂದ ನಂಬಿದವನೆಂದರೆ) ನೀನುಂ ತಾನುಂ ಒರ್ಮೆ ಗಂಗಾನದೀತೀರದೊಳ್ ಬೇಂಟೆಯಾಡುವಲ್ಲಿ ತತ್ ಸಮೀಪದ ತಾಪಸಾಶ್ರಮದೊಳ್ (ತಪಸ್ವಿಗಳ ಆಶ್ರಮದಲ್ಲಿ) ಸತ್ಯಂತಪರೆಂಬ ದಿವ್ಯಜ್ಞಾನಿಗಳಂ ಕಂಡು ಪೊಡೆವಟ್ಟು ಇರ್ವರುಮಂ ಪರಸಿ (ನಮಸ್ಕಾರಮಾಡಿದಿರಿ. ನಿಮ್ಮಿಬ್ಬರನ್ನೂ ಹರಸಿ ) ನಿನಗೆ ಮುನ್ನಮೇ ಏಱಲ್ ತರಿಸಿದೊಡೆ (ನಿನಗೆ ಮೊದಲು ಏರಲು, ಕುಳಿತುಕೊಳ್ಳಲು ಆಸನವನ್ನು ತರಿಸಿಕೊಟ್ಟರು.) ಸುಯೋಧನನು ಏವಯಿಸಿ ನಿನ್ನಂ ಪೋಗಲ್ವೇೞ್ದು-(ದುರ್ಯೋಧನನು ಲಜ್ಜಿತನಾಗಿ ನಿನ್ನನ್ನು ಹೊರಗೆ ಹೋಗಹೇಳಿ)
ವಚನ:ಅರ್ಥ:ವ|| ದುರ್ಯೋಧನನು ನಿನ್ನನ್ನು ಯಾವ ಕಾರಣದಿಂದ ನಂಬಿದವನೆಂದರೆ ನೀನೂ ಆತನೂ ಒಂದು ಸಲ ಗಂಗಾತೀರದಲ್ಲಿ ಬೇಟೆಯಾಡುತ್ತಿರುವಾಗ ಸಮೀಪದಲ್ಲಿದ್ದ ತಪಸ್ವಿಗಳ ಆಶ್ರಮದಲ್ಲಿ ಸತ್ಯಂತಪರೆಂಬ ದಿವ್ಯಜ್ಞಾನಿಗಳನ್ನು ಕಂಡು ನಮಸ್ಕಾರಮಾಡಿದಿರಿ. ನಿಮ್ಮಿಬ್ಬರನ್ನೂ ಹರಸಿ ಅವರು ನಿನಗೆ ಮೊದಲು ಆಸನವನ್ನು ತರಿಸಿಕೊಟ್ಟರು. ದುರ್ಯೋಧನನು ಲಜ್ಜಿತನಾಗಿ ನಿನ್ನನ್ನು ಹೊರಗೆ ಹೋಗಹೇಳಿ
ಉ|| ಆನಿರೆ ನೀಮಿದೇಕೆ ದಯೆಗೆಯ್ದಿರೊ ಮೀಂಗುಲಿಗಂಗೆ ಪೇೞಿಮೆಂ
ದಾ ನರನಾಥನಂ ತಿಳಿಪೆ ತನ್ಮುನಿ ಭೂಭುಜನೆಯ್ದೆ ನಂಬಿ ಕಾ|
ನೀನ ಸಮಂತು ಪಾಟಿಸುವೆನೊಯ್ಯನೆ ಮುಳ್ಳೊಳೆ ಮುಳ್ಳನೆಂದು ತಾ
ನೀ ನಯದಿಂದೆ ಪೆರ್ಚಿ ಪೊರೆದೞ್ಕಳೊಳಂದೊಡನುಂಡನಲ್ಲನೇ|| ೬೭ ||
ಪದ್ಯ-೬೭:ಪದವಿಭಾಗ-ಅರ್ಥ:ಆನಿರೆ ನೀಮಿದೇಕೆ ದಯೆಗೆಯ್ದಿರೊ ಮೀಂಗುಲಿಗಂಗೆ (ಮೀಂಗುಲಿಗನಿಗೆ ಮೀನನ್ನು ಕೊಲ್ಲುವ ಸ್ವಭಾವವುಳ್ಳವನು-ಬೆಸ್ತ) (ನಾನಿರುವಾಗ ತಾವಿದೇಕೆ ಆ ) ಪೇೞಿಂ ಎಂದು ಆ ನರನಾಥನಂ ತಿಳಿಪೆ (ಆ ಋಷಿಯನ್ನು ರಾಜನು ಹೇಳಿ ಎಂದಾಗ) ತನ್ ಮುನಿ ಭೂಭುಜನು ಎಯ್ದೆ ನಂಬಿ (ಎಂದಾಗ ಅವರು ದೊರೆಗಯನ್ನು ನಂಬಿ) ಕಾನೀನ (ಅವನು ಕುಂತಿಗೆ ಮದುವೆಗೆ ಮೊದಲೇ ಜನಿಸಿದವನು; ಕಾನೀನ ಎಂದನು) ಸಮಂತು ಪಾಟಿಸುವೆನು ಒಯ್ಯನೆ(ಚೆನ್ನಾಗಿ ಮೆಲ್ಲಗೆ ಕೀಳುವೆನು, ತೆಗೆಯುವೆನು) ಮುಳ್ಳೊಳೆ ಮುಳ್ಳನೆಂದು (ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಉಪಾಯವನ್ನು ಮಾಡುವೆನೆಂದು) ತಾನು ಈ ನಯದಿಂದೆ ಪೆರ್ಚಿ(ಈ ಉದ್ದೇಶದಿಂದ ಬಹಳ) ಪೊರೆದು ಅೞ್ಕಳೊಳ್ ಅಂದು ಒಡನುಂಡನಲ್ಲನೇ (ಪ್ರೀತಿಯಿಂದ ನಿನ್ನೊಡನೆ ಉಂಡನಲ್ಲವೇ?”) ಬೇರೆ ಉದ್ದೇಶವಿಲ್ಲ.
ಪದ್ಯ-೬೭:ಅರ್ಥ: ೬೭. ‘ನಾನಿರುವಾಗ ತಾವಿದೇಕೆ ಆ ಬೆಸ್ತರವನಿಗೆ ದಯೆಗೆಯ್ದಿರಿ’ ಎಂದು ಆ ಋಷಿಯನ್ನು ಹೇಳಿ ಎಂದಾಗ ಅವರು ದೊರೆಗಯನ್ನು ನಂಬಿ ಎಲ್ಲವನ್ನೂ ತಿಳಿಸಿದರು. ದೊರೆಯು ನಂಬಿ ಕರ್ಣ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಉಪಾಯವನ್ನು ಮಾಡುವೆನೆಂದು ನಿನ್ನನ್ನು ಈ ಉದ್ದೇಶದಿಂದ ಬಹಳ ಪೋಷಿಸುತ್ತ ಪ್ರೀತಿಯಿಂದ ನಿನ್ನೊಡನೆ ಉಂಡನಲ್ಲವೇ?” ಬೇರೆ ಉದ್ದೇಶವಿಲ್ಲ.
ಚಂ|| ಎನೆಯೆನೆ ಬಾಷ್ಪವಾರಿ ಪುಳಕಂಬೆರಸೊರ್ಮೆಯೆ ಪೊಣ್ಮೆ ಮುನ್ನೆ ನೀ
ವೆನಗಿದನೇಕೆ ಪೇೞ್ದಿರೊ ನೆಗೞ್ತೆ ಪೊಗೞ್ತೆಯನಾಂಪಿನಂ ಸುಯೋ|
ಧನನೆನಗೊಳ್ಳಿಕೆಯ್ದ ಕೃತಮಂ ಪೆಱಗಿಕ್ಕಿ ನೆಗೞ್ತೆ ಮಾಸೆ ನ
ಣ್ಪಿನ ನೆವದಿಂದೆ ಪಾಂಡವರನಾನೊಳವೊಕ್ಕೊಡೆ ನೀಮೆ ಪೇಸಿರೇ|| ೬೮ ||
ಪದ್ಯ-೬೮:ಪದವಿಭಾಗ-ಅರ್ಥ:ಎನೆಯೆನೆ (ಎನೆ- ಹೀಗೆ ಹೇಳಲು) ಬಾಷ್ಪವಾರಿ ಪುಳಕಂಬೆರಸು ಒರ್ಮೆಯೆ ಪೊಣ್ಮೆ (ರೋಮಾಂಚನದೊಡನೆ ಕಣ್ಣೀರು ಸುರಿಯಲು,) ಮುನ್ನೆ ನೀವು ಎನಗೆ ಇದನೇಕೆ ಪೇೞ್ದಿರೊ (ಯುದ್ಧದ ಆರಂಭಕ್ಕೆ--'ಮೊದಲೇ ನೀವು ನನಗೆ ಏಕೆ ತಿಳಿಸಿದರೋ?) ನೆಗೞ್ತೆ ಪೊಗೞ್ತೆಯನು ಆಂಪಿನಂ ಸುಯೋಧನನು ಎನಗೆ ಒಳ್ಳಿ ಕೆಯ್ದ ಕೃತಮಂ (ನನ್ನ ಕಾರ್ಯ ಪ್ರಸಿದ್ಧಿಗೂ ಹೊಗಳಿಕೆಗೂ ಹೊಂದುತ್ತರಲು ದುರ್ಯೋಧನನು ನನಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು) ಪೆಱಗಿಕ್ಕಿ (ದುರ್ಯೋಧನನು ನನಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ಹೊರಗಿಕ್ಕಿ- ಲೆಕ್ಕಿಸದೆ,) ನೆಗೞ್ತೆ ಮಾಸೆ (ನನ್ನ ಕೀರ್ತಿ ಕುಂದುವ ಹಾಗೆ) ನಣ್ಪಿನ ನೆವದಿಂದೆ ಪಾಂಡವರನೆ ಆನು ಒಳವೊಕ್ಕೊಡೆ (ನೆಂಟಿನ ನೆಪದಿಂದ ಪಾಂಡವರಲ್ಲಿ ಸೇರಿಕೊಂಡರೆ) ನೀಮೆ ಪೇಸಿರೇ (ನೀವೂ ಹೇಸುವುದಿಲ್ಲವೇ?)
ಪದ್ಯ-೬೮:ಅರ್ಥ: ಕೃಷ್ಣನು ಹೀಗೆ ಹೇಳಲು, ಕರ್ಣನಿಗೆ ರೋಮಾಂಚನದೊಡನೆ ಕಣ್ಣೀರು ಸುರಿಯಲು, ಅವನು ಕೃಷ್ಣನನ್ನು ಕುರಿತು 'ಮೊದಲೇ ನೀವು ನನಗೆ ಏಕೆ ತಿಳಿಸಿದರೋ? ನನ್ನ ಕಾರ್ಯ ಪ್ರಸಿದ್ಧಿಗೂ ಹೊಗಳಿಕೆಗೂ ಹೊಂದುತ್ತರಲು, ದುರ್ಯೋಧನನು ನನಗೆ ಮಾಡಿದ ಒಳ್ಳೆಯ ಕಾರ್ಯಗಳನ್ನು ಹೊರಗಿಕ್ಕಿ- ಲೆಕ್ಕಿಸದೆ, ನನ್ನ ಕೀರ್ತಿ ಕುಂದುವ ಹಾಗೆ ನೆಂಟಿನ ನೆಪದಿಂದ ಪಾಂಡವರಲ್ಲಿ ಸೇರಿಕೊಂಡರೆ ನೀವೂ ಹೇಸುವುದಿಲ್ಲವೇ?
ಉ|| ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ
ಡುತ್ತಿರೆ ಲಂಬಣಂ ಪಱಿಯೆ ಮುತ್ತಿನ ಕೇಡನೆ ನೋಡಿ ನೋಡಿ ಬ|
ಳ್ಕುತ್ತಿರೆಯೇವಮಿಲ್ಲದಿವನಾಯ್ವುದೊ ತಪ್ಪದೆ ಪೇೞಿಮೆಂಬ ಭೂ
ಪೊತ್ತಮನಂ ಬಿಸುಟ್ಟಿರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ|| ೬೯ ||
ಪದ್ಯ-೬೯:ಪದವಿಭಾಗ-ಅರ್ಥ:ನೆತ್ತಮನಾಡಿ ಭಾನುಮತಿ ಸೋಲ್ತೊಡೆ (ಕರ್ಣನೊಡನೆ-- ದುರ್ಯೋಧನನ ರಾಣಿಯಾದ ಭಾನುಮತಿಯು ಪಗಡೆಯಾಡಿ ಭಾನುಮತಿ ಸೋತಾಗ) ಸೋಲಮನು ಈವುದೆಂದು ಕಾಡುತ್ತಿರೆ (ಪಣವನ್ನು ಕೊಟ್ಟು ಹೋಗು ಎಂದು ಕಾಡುತ್ತಿರಲು) ಲಂಬಣಂ ಪಱಿಯೆ (ಮುತ್ತಿನಹಾರವು ಹರಿಯಲು,) ಮುತ್ತಿನ ಕೇಡನೆ ನೋಡಿ ನೋಡಿ ಬಳ್ಕುತ್ತಿರೆ (ಮುತ್ತಿನ ಕೇಡನ್ನೇ ನೋಡುತ್ತ ನಡುಗುತ್ತಿರಲು) ಏವಮಿಲ್ಲದೆ ಇವನು ಆಯ್ವುದೊ (ಸಂಕೋಚವಿಲ್ಲದೆ ಪ್ರೇಕ್ಷನಾದ ಇವನು ದುರ್ಯೋಧನನು ಮುತ್ತುಗಳನ್ನು ಆಯುವುದೇ- ಹೆಕ್ಕುವದೇ!) ತಪ್ಪದೆ ಪೇೞಿಂ ಎಂಬ ಭೂಪೊತ್ತಮನಂ (ತಪ್ಪದೇ ಹೇಳು’ ಬಿಡದೆ ಕೊಡಲು ಹೇಳು, ಎಂದು ಹೇಳುವ ರಾಜಶ್ರೇಷ್ಠನಾದ ದುರ್ಯೋಧನನ್ನು) ಬಿಸುಟ್ಟು ಇರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ (ಬಿಟ್ಟು ನಿಮ್ಮಲ್ಲಿ ಸೇರಿಕೊಂಡರೆ, ನಾನು ಯಾರಿಗೂ ಬೇಡದವನಾಗುತ್ತೇನಲ್ಲವೇ? ಎಂದನು.)
ಪದ್ಯ-೬೯:ಅರ್ಥ: ಕರ್ಣನೊಡನೆ- ದುರ್ಯೋಧನನ ರಾಣಿಯಾದ ಭಾನುಮತಿಯು ಪಗಡೆಯಾಡಿ ಭಾನುಮತಿ ಸೋತಾಗ, (ಪಗಡೆ ಹಾಸಿನ/ಹಲಗೆಮಣೆಯ ಪಕ್ಕದಲ್ಲಿ ಫಣವಾಗಿಟ್ಟಿದ್ದ ತನ್ನ ಮುತ್ತಿನ ಹಾರವನ್ನು ಭಾನುಮತಿ ಕೊಡಲು ಇಷ್ಟಪಡದೆ ತೆಗೆದುಕೊಂಡು ಹೊರಟಾಗ, ಪಣವನ್ನು ಕೊಟ್ಟು ಹೋಗು ಎಂದು, ಅದನ್ನು ತೆಗೆದುಕೊಳ್ಳಲು ಕರ್ಣನೂ ಕೈಹಾಕಿ ಮುತ್ತಿನ ಸರವನ್ನು ಎಳೆದಾಗ) ಕೈಯಲ್ಲಿ ಹಿಡಿದ ಮುತ್ತಿನಹಾರವು ಹರಿಯಿತು, (ತಾನು, ಕರ್ಣನು) ಮುತ್ತಿನ ಹಾರ ಹರಿದು ಮುತ್ತು ಚೆಲ್ಲಿದ್ದನ್ನೇ ನೋಡುತ್ತ ನಡುಗುತ್ತಿರಲು ಇವನು- ದುರ್ಯೋಧನನು ಸಂಕೋಚವಿಲ್ಲದೆ ಮುತ್ತುಗಳನ್ನು ಹೆಕ್ಕುವದೇ?! ತನ್ನ ಪರವಹಿಸಿ, ತಪ್ಪದೇ (ಹಾರವನ್ನು ಕೊಡಲು) ಹೇಳು’ ಎಂದು ಹೇಳುವ ರಾಜಶ್ರೇಷ್ಠನಾದ ದುರ್ಯೋಧನನ್ನು ಬಿಟ್ಟು ನಿಮ್ಮಲ್ಲಿ ಸೇರಿಕೊಂಡರೆ, ನಾನು ಯಾರಿಗೂ ಬೇಡದವನಾಗುತ್ತೇನಲ್ಲವೇ? ಎಂದನು. (ಅಷ್ಟೊಂದು ನಂಬುಗೆ ಇಟ್ಟ ಅವನನ್ನು ಬಿಸುಟರೆ ತಿರಸ್ಕಾರ ಯೋಗ್ಯನಾಗುವೆನು, ಎಂದನು.)
ವ|| ಎಂಬುದುಂ ಕರ್ಣಂ ತನಗೆಂತುಮೊಡಂಬಡದುದಂ ನಿರ್ಣಯಮಾಗಱಿದು ಮಗುೞಲ್ವೇೞ್ದು ನಾರಾಯಣಂ ಪೋದನಿತ್ತಲಂಗ ರಾಜನುಮಾತ್ಮಾಲಯಕ್ಕೆ ವಂದು ಚಿಂತಾಕ್ರಾಂತನಾಗಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಕರ್ಣಂ ತನಗೆ ಅಂತುಂ ಒಡಂಬಡದುದಂ ನಿರ್ಣಯಮಾಗ ಅಱಿದು (ಅರಿತು)- (ಅವನು ಹೇಗೂ ತನ್ನ ಮಾತಿಗೆ ಒಪ್ಪುವುದಿಲ್ಲವೆಂಬುದು ಗಟ್ಟಿ ತಿಳಿಯಲು) ಮಗುೞಲ್ವೇೞ್ದು (ಹಿಂತಿರುಗಲು ಹೇಳಿ) ನಾರಾಯಣಂ ಪೋದನು ಇತ್ತಲು ಅಂಗ ರಾಜನುಂ ಆತ್ಮಾಲಯಕ್ಕೆ ವಂದು (ಬಂದು) ಚಿಂತಾಕ್ರಾಂತನಾಗಿ-
ವಚನ:ಅರ್ಥ:ಕರ್ಣನು ಹಾಗೆ ಹೇಳಲು, ಅವನು ಹೇಗೂ ತನ್ನ ಮಾತಿಗೆ ಒಪ್ಪುವುದಿಲ್ಲವೆಂಬುದು ಗಟ್ಟಿ ತಿಳಿಯಲು, ಕೃಷ್ಣನು ಅವನಿಗೆ ಹಿಂತಿರುಗಲು ಹೇಳಿ ತಾನೂ ಹೋದನು. ಈ ಕಡೆ ಅಂಗ ರಾಜ ಕರ್ಣನು ತನ್ನ ಮನೆಗೆ ಬಂದು ಚಿಂತೆಯಿಂದ ಕೂಡಿ-
ಚಂ|| ಕುರುಪತಿಗಿಲ್ಲ ದೈವಬಲಮಾಜಿಗೆ ಮೇಲ್ಮಲೆಗೆಯ್ವರಾಗಳುಂ
ಗುರು ಗುರುಪುತ್ರ ಸಿಂಧುಸುತರಾಳ್ದನುಮೆನ್ನನೆ ನಚ್ಚಿ ಪೆರ್ಚಿ ಮುಂ|
ಪೊರೆದನಿದಿರ್ಚಿ ಕಾದುವರುಮೆನ್ನಯ ಸೋದರರೆಂತು ನೋಡಿ ಕೊ
ಕ್ಕರಿಸದೆ ಕೊಲ್ವೆನೆನ್ನೊಡಲನಾಂ ತವಿಪೆಂ ರಣರಂಗಭೂಮಿಯೊಳ್|| ೭೦ ||
ಪದ್ಯ-೭೦:ಪದವಿಭಾಗ-ಅರ್ಥ:ಕುರುಪತಿಗಿಲ್ಲ ದೈವಬಲಂ; ಆಜಿಗೆ ಮೇಲ್ಮಲೆ ಗೆಯ್ವರ್ ಆಗಳುಂ ಗುರು ಗುರುಪುತ್ರ ಸಿಂಧುಸುತರು (ದ್ರೋಣ ಅಶ್ವತ್ಥಾಮ ಭೀಷ್ಮರು ತೋರಿಕೆಯ ಯುದ್ಧವನ್ನು ಮಾಡುವವರು) ಆಳ್ದನುಂ ಎನ್ನನೆ ನಚ್ಚಿ ಪೆರ್ಚಿ (ದುರ್ಯೋಧನನು ನನ್ನನ್ನೇ ನಂಬಿ ಉಬ್ಬಿ) ಮುಂ- ಪೊರೆದನು (ಮೊದಲಿಂದಲೂ ಸಲಹಿದ್ದಾನೆ.); ಇದಿರ್ಚಿ ಕಾದುವರುಂ ಎನ್ನಯ ಸೋದರರು (ಎದುರಿಸಿ ಯುದ್ಧಮಾಡುವವರು ನನ್ನ ಸಹೋದರರು) ಎಂತು ನೋಡಿ ಕೊಕ್ಕರಿಸದೆ ಕೊಲ್ವೆನು (ತಿಳಿದು ತಿಳಿದು ಹೇಸದೆ ಅವರನ್ನು ಹೇಗೆ ಕೊಲ್ಲಲಿ.) ಎನ್ನ ಉಡಲನು ಆಂ ತವಿಪೆಂ ರಣರಂಗಭೂಮಿಯೊಳ್ ()
ಪದ್ಯ-೭೦:ಅರ್ಥ: ದುರ್ಯೋಧನನಿಗೆ ದೈವಬಲವಿಲ್ಲ, ದ್ರೋಣ ಅಶ್ವತ್ಥಾಮ ಭೀಷ್ಮರು ತೋರಿಕೆಯ ಯುದ್ಧವನ್ನು ಮಾಡುವವರು, ನನ್ನ ಯಜಮಾನನಾದ ದುರ್ಯೋಧನನು ನನ್ನನ್ನೇ ನಂಬಿ ಉಬ್ಬಿ ಮೊದಲಿಂದಲೂ ಸಲಹಿದ್ದಾನೆ. ಎದುರಿಸಿ ಯುದ್ಧಮಾಡುವವರು ನನ್ನ ಸಹೋದರರು. ತಿಳಿದು ತಿಳಿದು ಹೇಸದೆ ಅವರನ್ನು ಹೇಗೆ ಕೊಲ್ಲಲಿ. ರಣರಂಗಭೂಮಿಯಲ್ಲಿ ನನ್ನ ಶರೀರವನ್ನೇ ನಾಶಮಾಡುತ್ತೇನೆ. ಎಂದು ಕರ್ಣನು ನಿಶ್ಚಯಿಸಿದನು.
ಮ|| ಅಱಿದೆಂ ಸೋದರರೆಂದು ಪಾಂಡವರನಿನ್ನೆಂತೆನ್ನರಂ ಕೊಲ್ವೆನ
ೞ್ಕಳೊಳೆನ್ನಂ ಪೊರೆದೆಯ್ದೆ ನಂಬಿದ ನೃಪಂಗೆಂತಾಜಿಯೊಳ್ ತಪ್ಪುವೆಂ|
ತಱಿಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡೆ ಲೆಕ್ಕಕ್ಕೆ ತ
ಳ್ತಿಱಿದೆನ್ನಾಳ್ದನಿವಾನೆ ಮುಂಚೆ ನಿಱಿಪೆಂ ಕೆಯ್ಕೊಂಡು ಕಟ್ಟಾಯಮಂ|| ೭೧ ||
ಪದ್ಯ-೭೧:ಪದವಿಭಾಗ-ಅರ್ಥ:ಅಱಿದೆಂ ಸೋದರರೆಂದು ಪಾಂಡವರನು (ಸೋದರರೆಂದು ತಿಳಿದೆನು) ಇನ್ನೆಂತು ಎನ್ನರಂ ಕೊಲ್ವೆನು (ಇನ್ನು ನನ್ನವರನ್ನು ಹೇಗೆ ಕೊಲ್ಲಲಿ?) ಅೞ್ಕಳೊಳ್ ಎನ್ನಂ ಪೊರೆದು ಎಯ್ದೆ ನಂಬಿದ ನೃಪಂಗೆ (ಪ್ರೀತಿಯಿಂದ ನನ್ನನ್ನು ಸಲಹಿ ಪೂರ್ಣವಾಗಿ ನಂಬಿದ ರಾಜನಿಗೆ) ಎಂತು ಆಜಿಯೊಳ್ ತಪ್ಪುವೆಂ (ಹೇಗೆ ಯುದ್ಧದಲ್ಲಿ ತಪ್ಪಿ ನಡೆಯಲಿ) ತಱಿಸಂದು ಉದ್ಧತ ವೈರಿ ಭೂಪ ಬಲದ ಒಡ್ಡು ಅಳ್ಳಾಡೆ (ನಿಶ್ಚಯವಾಗಿ ಉದ್ಧತರಾದ ಶತ್ರುಸೈನ್ಯಸಮೂಹವು ನಾಶವಾಗುವ ಹಾಗೆ) ಲೆಕ್ಕಕ್ಕೆ ತಳ್ತು ಇಱಿದು (ಲೆಕ್ಕಕ್ಕೆ ಮಾತ್ರ ಎದುರಿಸಿ ಹೋರಾಡಿ ) ಎನ್ನಾಳ್ದನಿಂ ಆನೆ ಮುಂಚೆ ನಿಱಿಪೆಂ (ನನ್ನ ಒಡೆಯನಿಗಿಂತ ಮೊದಲು ನಾನೇ ದೇವರ ಸೇರುವೆನು)(ನಿಳಿಪೆಂ - ನಿಳಿ=ಪೆರುಮಾಳು, ದೊಡ್ಡವ ದೇವರು ಜಿ.ವೆಂ.ಸು. ದೇವರಪಾದ ಸೇರು) (ನನ್ನ ಒಡೆಯನಿಗಿಂತ ನಾನೇ ಮೊದಲು ಸಾಯುವೆನು.) ಕೆಯ್ಕೊಂಡು ಕಟ್ಟಾಯಮಂ (ಪರಾಕ್ರಮವನ್ನು ತೋರಿಸಿ)
ಪದ್ಯ-೭೧:ಅರ್ಥ:ಪಾಂಡವರನ್ನು ಸೋದರರೆಂದು ತಿಳಿದೆನು. ಇನ್ನು ನನ್ನವರನ್ನು ಹೇಗೆ ಕೊಲ್ಲಲಿ? ಪ್ರೀತಿಯಿಂದ ನನ್ನನ್ನು ಸಲಹಿ ಪೂರ್ಣವಾಗಿ ನಂಬಿದ ರಾಜನಿಗೆ ಹೇಗೆ ಯುದ್ಧದಲ್ಲಿ ತಪ್ಪಿ ನಡೆಯಲಿ. ಎರಡೂ ಸಾಧ್ಯವಿಲ್ಲ. ನಿಶ್ಚಯವಾಗಿ ಉದ್ಧತರಾದ ಶತ್ರುಸೈನ್ಯಸಮೂಹವು ನಾಶವಾಗುವ ಹಾಗೆ ಲೆಕ್ಕಕ್ಕೆ ಮಾತ್ರ ಎದುರಿಸಿ ಹೋರಾಡಿ ನನ್ನ ಒಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ತೋರಿಸಿ ಸಾಯುವೆನು.
ವ|| ಎಂದು ಮುಂತಪ್ಪ ಕಜ್ಜಮಂ ತನ್ನೊಳೆ ಬಗೆದವಾರ್ಯ ವೀರ್ಯಂ ಸೂರ್ಯದಿನದಂದು ಮಂದಾಕಿನಿಯಂ ಮೀಯಲೆಂದು ಬಂದು ದುರ್ಯೋಧನನಟ್ಟಿದ ದೇವಸವಳದ ಪದಿನೆಂಟು ಕೋಟಿ ಪೊನ್ನುಮನೊಟ್ಟಿ ಬೆಟ್ಟಾಗ ಪುಂಜಿಸಿ-
ವಚನ:ಪದವಿಭಾಗ-ಅರ್ಥ:ಎಂದು ಮುಂತಪ್ಪ ಕಜ್ಜಮಂ ತನ್ನೊಳೆ ಬಗೆದ ಅವಾರ್ಯ ವೀರ್ಯಂ (ಎದುರಿಸಲಾಗದ ವೀರನು, ಕರ್ಣನು) ಸೂರ್ಯದಿನದಂದು ಮಂದಾಕಿನಿಯಂ ಮೀಯಲೆಂದು (ಆದಿತ್ಯವಾರದ ದಿನ ಗಂಗೆಯಲ್ಲಿ ಸ್ನಾನಮಾಡಬೇಕೆಂದು) ಬಂದು ದುರ್ಯೋಧನನು ಅಟ್ಟಿದ ದೇವಸವಳದ ಪದಿನೆಂಟು ಕೋಟಿ ಪೊನ್ನುಮನು ಒಟ್ಟಿ ಬೆಟ್ಟಾಗ ಪುಂಜಿಸಿ (ಹದಿನೆಂಟು ಕೋಟಿ ಚಿನ್ನವನ್ನು ಒಟ್ಟಾಗಿ ಬೆಟ್ಟದಂತೆ ರಾಶಿಮಾಡಿದನು.)-
ವಚನ:ಅರ್ಥ:ಎಂದು ಮುಂದೆ ಆಗಬೇಕಾದ ಕಾರ್ಯವನ್ನು ತನ್ನಲ್ಲಿ ಯೋಚಿಸಿದ, ಅವಾರ್ಯವೀರ್ಯನಾದ ಕರ್ಣನು ಒಂದು ಆದಿತ್ಯವಾರದ ದಿನ ಗಂಗೆಯಲ್ಲಿ ಸ್ನಾನಮಾಡಬೇಕೆಂದು ಬಂದು ದುರ್ಯೋಧನನು ಕಳುಹಿಸಿದ ದೇವಮಾನದ ಹದಿನೆಂಟು ಕೋಟಿ ಚಿನ್ನವನ್ನು ಒಟ್ಟಾಗಿ ಬೆಟ್ಟದಂತೆ ರಾಶಿಮಾಡಿ ಪೂಜಿಸಿ,

ಕಂ|| ಸೋರ್ವ ವಸುಧಾರೆಯಂ ಕೆ ಯ್ಸಾರ್ವ ನಿಧಾನಮುಮನಿೞಿಸಿ ತನ್ನೀವಳವಿಂ| ಪಾರ್ವಂಗಮಳಿಪಿ ಬೇಡಿದ ಪಾರ್ವಂಗಂ ಪಿರಿದನಿತ್ತನಂಗಮಹೀಶಂ|| ೭೨ ||

ಪದ್ಯ-೭೨:ಪದವಿಭಾಗ-ಅರ್ಥ:ಸೋರ್ವ ವಸುಧಾರೆಯಂ ( ಧಾರಾಕಾರವಾಗಿ ಸುರಿಯುವ) ಕೆಯ್ಸಾರ್ವ ನಿಧಾನಮುನು ಇೞಿಸಿ (ಕೈಯಲ್ಲಿಬಂದ ನಿಧೀಯನ್ನ ಎಷ್ಟೆಂದು ನೋಡದೆ ಕಡೆಗಣಿಸಿ) ತನ್ನ ಈವ ಅಳವಿಂ (ತಾನು ಕೊಡುವ ಶಕ್ತಿಯಿಂದ) ಪಾರ್ವಂಗಮ್ ಅಳಿಪಿ ಬೇಡಿದ ಪಾರ್ವಂಗಂ(ಆಸೆಪಡುವವನಿಗೂ ಆಶೆಪಟ್ಟು ಬೇಡಿದ ಬ್ರಾಹ್ಮಣರಿಗೂ) ಪಿರಿದನು ಇತ್ತನು ಅಂಗಮಹೀಶಂ(ಕರ್ಣನು ದೊಡ್ಡನಿಧಿಯನ್ನು ದಾನಮಾಡಿದನು)
ಪದ್ಯ-೭೨:ಅರ್ಥ: ತಾನು ಮಾಡುವ ದಾನವು ಧಾರಾಕಾರವಾಗಿ ಸುರಿಯುವ ಸುವರ್ಣವೃಷ್ಟಿಯನ್ನೂ ಕೈಯಲ್ಲಿಬಂದ ನಿಧೀಯನ್ನ ಎಷ್ಟೆಂದು ನೋಡದೆ ಕಡೆಗಣಿಸಿ ಆಸೆಪಡುವವನಿಗೂ ಆಶೆಪಟ್ಟು ಬೇಡಿದ ಬ್ರಾಹ್ಮಣರಿಗೂ ಕರ್ಣನು ದೊಡ್ಡನಿಧಿಯನ್ನು ದಾನಮಾಡಿದನು
ವ|| ಅಂತು ಚಾಗಂಗೆಯ್ದು ಜಗನ್ಮಂಗಳ ಗಂಗಾವಾರಿಯೊಳನಿವಾರಿತ ಪರಾಕ್ರಮನಘಮರ್ಷಣಪೂರ್ವಕಂ ಮಿಂದು ಕನಕಪಾತ್ರದೊಳ್ ತೆಕ್ಕನೆ ತೀವಿದ ಕನಕ ಕಮಳಂಗಳಿಂದಾದಿತ್ಯತೇಜನಾದಿತ್ಯಂಗರ್ಘ್ಯಮೆತ್ತಿ ಸೂರ್ಯಜಂ ಸೂರ್ಯಮಂತ್ರಂಗಳನೋದಿ ನೀರಂ ಸೂಸಿ ತ್ರಿಪದಕ್ಷಿಣಂಗೆಯ್ವಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಚಾಗಂ ಗೆಯ್ದು (ಹಾಗೆ ತ್ಯಾಗ ಮಾಡಿ) ಜಗನ್ಮಂಗಳ ಗಂಗಾವಾರಿಯೊಳು ಅನಿವಾರಿತ ಪರಾಕ್ರಮನು ಅಘಮರ್ಷಣಪೂರ್ವಕಂ ಮಿಂದು(ಗಂಗಾನದಿಯಲ್ಲಿ ತಡೆಯಿಲ್ಲದ ಪರಾಕ್ರಮವುಳ್ಳ ಕರ್ಣನು ಪಾಪ ಪರಿಹಾರಕ ಮಂತ್ರೋಚ್ಚಾರಣಪೂರ್ವಕವಾಗಿ ಸ್ನಾನಮಾಡಿ) ಕನಕಪಾತ್ರದೊಳ್ ತೆಕ್ಕನೆ ತೀವಿದ (ಚಿನ್ನದ ಪಾತ್ರೆಯಲ್ಲಿ ಪೂರ್ಣವಾಗಿ ತುಂಬಿದ) ಕನಕ ಕಮಳಂಗಳಿಂದ ಅದಿತ್ಯತೇಜನು ಆದಿತ್ಯಂಗೆ ಅರ್ಘ್ಯಮೆತ್ತಿ (ಆದಿತ್ಯತೇಜನಾದ ಕರ್ಣನು ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು ) ಸೂರ್ಯಜಂ ಸೂರ್ಯಮಂತ್ರಂಗಳನ ಓದಿ ನೀರಂ ಸೂಸಿ(ಸೂರ್ಯಮಂತ್ರವನ್ನು ಜಪಿಸಿ ನೀರು ಚಿಮುಕಿಸಿ, ) ತ್ರಿಪದಕ್ಷಿಣಂ ಗೆಯ್ವಾಗಳ್ (ಮೂರುಪ್ರದಕ್ಷಿಣೆ ಮಾಡುವಾಗ- )-
ವಚನ:ಅರ್ಥ: ಹಾಗೆ ತ್ಯಾಗ ಮಾಡಿ ಲೋಕಮಂಗಳ ಸ್ವರೂಪೆಯಾದ ಗಂಗಾನದಿಯಲ್ಲಿ ತಡೆಯಿಲ್ಲದ ಪರಾಕ್ರಮವುಳ್ಳ ಕರ್ಣನು ಪಾಪಪರಿಹಾರಕ ಮಂತ್ರೋಚ್ಚಾರಣಪೂರ್ವಕವಾಗಿ ಸ್ನಾನಮಾಡಿ ಚಿನ್ನದ ಪಾತ್ರೆಯಲ್ಲಿ ಪೂರ್ಣವಾಗಿ ತುಂಬಿದ ಚಿನ್ನದ ಕಮಲಗಳಿಂದ ಆದಿತ್ಯತೇಜನಾದ ಕರ್ಣನು ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು ಸೂರ್ಯಮಂತ್ರವನ್ನು ಜಪಿಸಿ ನೀರು ಚಿಮುಕಿಸಿ, ಮೂರುಪ್ರದಕ್ಷಿಣೆ ಮಾಡುವಾಗ-
ಕಂ|| ಸಂಗತ ತರಂಗಯುತೆಯಂ
ಮಂಗಳಲಕ್ಷಣೆಯನಂದು ಭೋಂಕನೆ ಕಂಡಂ|
ಗಂಗಾಂಗನೆಯಂ ಕಾಣ್ಬವೊ
ಲಂಗನೃಪಂ ಮುಂದೆ ನಿಂದ ಕೊಂತಿಯನಾಗಳ್|| ೭೩ ||
ಪದ್ಯ-೭೩:ಪದವಿಭಾಗ-ಅರ್ಥ:ಸಂಗತ ತರಂಗಯುತೆಯಂ (ಆಗ ಅಲೆಗಳಿಂದ ಕೂಡಿದವಳೂ) ಮಂಗಳಲಕ್ಷಣೆಯನು ಅಂದು ಭೋಂಕನೆ ಕಂಡಂ (ಮಂಗಳಲಕ್ಷಣವುಳ್ಳವಳು ಆದ ಕುಂತಿದೇವಿಯನ್ನು ಕರ್ಣನು ಥಟಕ್ಕನೆ ಕಂಡನು) ಗಂಗಾಂಗನೆಯಂ ಕಾಣ್ಬವೊಲ್ (ಗಂಗಾದೇವಿಯನ್ನು ಕಾಣುವ ಹಾಗೆ) ಅಂಗನೃಪಂ ()ಕರ್ನನು ಮುಂದೆ ನಿಂದ ಕೊಂತಿಯನು ಆಗಳ್ (<- ಮೊದಲ ಪದ) (ಮುಂದೆ ನಿಂತಿದ್ದ ಕುಂತಿದೇವಿಯನ್ನು ಕರ್ಣನು ಥಟಕ್ಕನೆ ಕಂಡನು)
ಪದ್ಯ-೭೩:ಅರ್ಥ:ಆಗ ಅಲೆಗಳಿಂದ ಕೂಡಿದವಳೂ ಮಂಗಳಲಕ್ಷಣವುಳ್ಳವಳು ಆದ ಗಂಗಾದೇವಿಯನ್ನು ಕಾಣುವ ಹಾಗೆ, ಮುಂದೆ ನಿಂತಿದ್ದ ಕುಂತಿದೇವಿಯನ್ನು ಕರ್ಣನು ಥಟಕ್ಕನೆ ಕಂಡನು.
ವ|| ಅಂತು ಕಂಡು ಮನದೊಳಾದೆಱಕದಿಂ ಸಾಷ್ಟಾಂಗಮೆಱಗಿ ಪೊಡೆವಟ್ಟ ನಿಜನಂದನನ ನೞ್ಕಱೀಂದಪ್ಪಿಕೊಂಡು ಪರಮಾಶೀರ್ವಚನಂಗಳಿಂ ಪರಸಿ-
ವಚನ:ಪದವಿಭಾಗ-ಅರ್ಥ:ಅಂತು ಕಂಡು ಮನದೊಳು ಆದ ಎಱಕದಿಂ (ಪ್ರೀತಿಯಿಂದ) ಸಾಷ್ಟಾಂಗಮೆಱಗಿ ಪೊಡೆವಟ್ಟ (ಸಾಷ್ಟಾಂಗನಮಸ್ಕಾರ ಮಾಡಿದ) ನಿಜ ನಂದನನು ಅೞ್ಕಱಿಂದ ಅಪ್ಪಿಕೊಂಡು (ತನ್ನ ಮಗನನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು) ಪರಮ ಆಶೀರ್ವಚನಂಗಳಿಂ ಪರಸಿ (ಒಳ್ಳೆಯ ಹರಕೆಗಳಿಂದ ಹರಸಿ)-
ವಚನ:ಅರ್ಥ:ಮನಸ್ಸಿನಲ್ಲುಂಟಾದ ಪ್ರೀತಿಯಿಂದ ಸಾಷ್ಟಾಂಗನಮಸ್ಕಾರ ಮಾಡಿದನು. ಕುಂತಿಯು ತನ್ನ ಮಗನನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು ಒಳ್ಳೆಯ ಹರಕೆಗಳಿಂದ ಹರಸಿ-.
ಕಂ|| ತೊರೆದ ಕುಚಯುಗಳವಂದಂ
ಬಿರಿವಿಡೆ ಮೊಲೆವಾಲನೞ್ಕಱಿಂದಂ ಮೆಯ್ಯಂ|
ಕುರಿಸೆ ಸುರಿವಶ್ರುಜಲಮು
ಬ್ದರಿಸಿ ಪೊನಲ್ ಪೊನಲಟ್ಟೆ ಜನನುತೆಗಾಗಳ್|| ೭೪ ||
ಪದ್ಯ-೭೪:ಪದವಿಭಾಗ-ಅರ್ಥ:ತೊರೆದ (ಸೊರೆತ, ಹಾಲುಉಕ್ಕುವ) ಕುಚಯುಗಳಂ ಅಂದು ಅಂಬಿರಿವಿಡೆ (ಎರಡು ಮೊಲೆಗಳೂ ಧಾರಾಕಾರವಾಗಿ ಸುರಿಸಲು) ಮೊಲೆವಾಲನು (ಎದೆಯ ಹಾಲನ್ನು) ಅೞ್ಕಱಿಂದಂ ಮೆಯ್ಯ್ ಅಂಕುರಿಸೆ (ಪ್ರೀತಿಯಿಂದ ಶರೀರದಲ್ಲಿ ರೋಮಾಂಚನವುಂಟಾಗಲು) ಸುರಿವ ಅಶ್ರುಜಲಮು ಉಬ್ದರಿಸಿ ಪೊನಲ್ ಪೊನಲ್ ಅಟ್ಟೆ (ಹರಿಯುತ್ತಿರುವ ಕಣ್ಣೀರು ಅತ್ಯಧಿಕ ಪ್ರವಾಹವಾಗಿ ಗಂಗೆಯ ಪ್ರವಾಹವನ್ನು ಹೆಚ್ಚಿಸಿ) ಜನನುತೆಗೆ ಆಗಳ್ (ಆಗ ಜನರಿಂದ ಸ್ತುತಿಸಲ್ಪಡುವ ಗಂಗಾನದಿಗೆ- ಪ್ರವಾಹವನ್ನು ಹೆಚ್ಚಿಸಿತು)
ಪದ್ಯ-೭೪:ಅರ್ಥ: ಸೊರೆತ ಎರಡು ಮೊಲೆಗಳೂ ಆಗ ಎದೆಯ ಹಾಲನ್ನು ಧಾರಾಕಾರವಾಗಿ ಸುರಿಸಲು, ಪ್ರೀತಿಯಿಂದ ಶರೀರದಲ್ಲಿ ರೋಮಾಂಚನವುಂಟಾಯಿತು. ಸಂತೋಷದಿಂದ ಹರಿಯುತ್ತಿರುವ ಕಣ್ಣೀರು ಅತ್ಯಧಿಕ ಪ್ರವಾಹವಾಗಿ ಜನರಿಂದ ಸ್ತುತಿಸಲ್ಪಡುವ ಗಂಗೆಯ ಪ್ರವಾಹವನ್ನು ಹೆಚ್ಚಿಸಿತು.
ಆಗಳೆ ಮಗನಂ ಪೆತ್ತವೊ
ಲಾಗಿ ಲತಾಲಲಿತೆ ನೊಸಲ ಕಣ್ಬೆತ್ತವೊಲಂ|
ತಾಗಡೆ ರಾಗಕ್ಕಾಗರ
ಮಾಗೆ ದಿನಾಧಿಪತನೂಜನೊಸೆದಿರ್ಪಿನೆಗಂ|| ೭೫ ||
ಪದ್ಯ-೭೫:ಪದವಿಭಾಗ-ಅರ್ಥ:ಆಗಳೆ ಮಗನಂ ಪೆತ್ತವೊಲಾಗಿ (ಆಗತಾನೆ ಮಗನನ್ನು ಹೆತ್ತಂತಾಯಿತು) ಲತಾಲಲಿತೆ ನೊಸಲ ಕಣ್ಬೆತ್ತವೊಲಂತು ಆಗಡೆ (ಬಳ್ಳಿಯಂತೆ ಕೋಮಲೆಗೆ ಹಣೆಗಣ್ಣನ್ನು ಪಡೆದಷ್ಟು ಸಂತೋಷವಾಯಿತು ಆಗ) ರಾಗಕ್ಕೆ ಆಗರಮಾಗೆ ದಿನಾಧಿಪತನೂಜನು ಒಸೆದಿರ್ಪಿನೆಗಂ (ಸೂರ್ಯಪುತ್ರನಾದ ಕರ್ಣನು ಸಂತಸಪಡುತ್ತಿರಲು. )
ಪದ್ಯ-೭೫:ಅರ್ಥ:ಆಗತಾನೆ ಮಗನನ್ನು ಹೆತ್ತಂತಾಯಿತು. ಸೂರ್ಯಪುತ್ರನಾದ ಕರ್ಣನು ಸಂತಸಪಡುತ್ತಿರಲು, ಬಳ್ಳಿಯಂತಿರಯವ ಕೋಮಲೆಗೆ ಹಣೆಗಣ್ಣನ್ನು ಪಡೆದಷ್ಟು ಆಗ ಸಂತೋಷವಾಯಿತು.
ವ|| ಗಂಗಾದೇವಿಯುಂ ದಿವ್ಯಮೂರ್ತಿಯಂ ಕೆಯ್ಕೊಂಡು ಬಂದು-
ವಚನ:ಪದವಿಭಾಗ-ಅರ್ಥ:ಗಂಗಾದೇವಿಯುಂ ದಿವ್ಯಮೂರ್ತಿಯಂ ಕೆಯ್ಕೊಂಡು (ಗಂಗಾದೇವಿಯು ದಿವ್ಯಾಕಾರವನ್ನು ತಾಳಿ) ಬಂದು-
ವಚನ:ಅರ್ಥ:ಆ ವೇಳೆಗೆ ಸರಿಯಾಗಿ ಗಂಗಾದೇವಿಯು ದಿವ್ಯಾಕಾರವನ್ನು ತಾಳಿ ಬಂದು
ಕಂ|| ಒಪ್ಪಿಸಿದೆಂ ಕೆಯ್ಯೆಡೆಯೆಂ
ದಪ್ಪೈಸಿದ ನಿನ್ನ ಮಗನನೀಗಳೆ ನಿನಗೆಂ|
ದಪ್ಪೈಸಿದ ಗಂಗೆ ಪೋಪುದು
ಮೊಪ್ಪುವ ನಿಜಬಿಂಬದೊಳಗಣಿಂದಂ ದಿನಪಂ|| ೭೬ ||
ಪದ್ಯ-೭೬:ಪದವಿಭಾಗ-ಅರ್ಥ:ಒಪ್ಪಿಸಿದೆಂ ಕೆಯ್ಯೆಡೆಯೆಂದು ಅಪ್ಪೈಸಿದ ನಿನ್ನ ಮಗನನು ಈಗಳೆ ನಿನಗೆಂದು (‘ನನಗೆ ಕೈಗಡವಾಗಿ ಒಪ್ಪಿಸಿದ್ದ ನಿನ್ನ ಮಗನನ್ನು ನಿನಗೆ ಈಗ ಒಪ್ಪಿಸಿದ್ದೇನೆ’ ಎಂದು ಹೇಳಿ) ಅಪ್ಪೈಸಿದ ಗಂಗೆ ಪೋಪುದುಂ (ಹೇಳಿ ಗಂಗೆಯು ಹೋಗಲು) ಒಪ್ಪುವ ನಿಜಬಿಂಬದೊಳಗಣಿಂದಂ ದಿನಪಂ (ಸೂರ್ಯನು ತನ್ನ ಪ್ರಕಾಶಮಾನವಾದ ಬಿಂಬದಿಂದ - ಬಂದನು)
ಪದ್ಯ-೭೬:ಅರ್ಥ: ೭೬. ಕುಂತಿಯನ್ನು ಕುರಿತು ‘ನನಗೆ ಕೈಗಡವಾಗಿ ಒಪ್ಪಿಸಿದ್ದ ನಿನ್ನ ಮಗನನ್ನು ನಿನಗೆ ಈಗ ಒಪ್ಪಿಸಿದ್ದೇನೆ’ ಎಂದು ಹೇಳಿ ಗಂಗೆಯು ಹೋಗಲು. ಸೂರ್ಯನು ತನ್ನ ಪ್ರಕಾಶಮಾನವಾದ ಬಿಂಬದಿಂದ - ಬಂದನು
ಪೊಱಮಟ್ಟು ಬರಲ್ ತನ್ನಡಿ
ಗೆಱಗಿದ ನಿಜಸುತನನೞ್ಕಱಂ ಪರಸಿ ಮನಂ|
ಮಱುಗಿ ರವಿ ನುಡಿದನೆನ್ನುಮ
ನುಱದೆ ಮರುಳ್ಮಗನೆ ಹರಿಗೆ ಕವಚಮನಿತ್ತೈ|| ೭೭ ||
ಪದ್ಯ-೦೦:ಪದವಿಭಾಗ-ಅರ್ಥ:ಪೊಱಮಟ್ಟು ಬರಲ್ (ಸೂರ್ಯನು ಹೊರಟು ಬರಲು) ತನ್ನ ಅಡಿಗೆ ಎಱಗಿದ ನಿಜಸುತನನು(ತನ್ನ ಪಾದಕ್ಕೆ ನಮಸ್ಕರಿಸಿದ ಮಗನನ್ನು) ಅೞ್ಕಱಂ ಪರಸಿ (ಪ್ರೀತಿಯಿಂದ ಹರಸಿ) ಮನಂ ಮಱುಗಿ ರವಿ ನುಡಿದನು (ಮನಸ್ಸಿನಲ್ಲಿ ದುಃಖಪಟ್ಟು ರವಿ ಹೇಳಿದನು) ಎನ್ನುಮನು ಅಱದೆ ಮರುಳ್ ಮಗನೆ ಹರಿಗೆ ಕವಚಮನಿತ್ತೈ (‘ಹಿಂದೆ ನನ್ನನ್ನೂ ಲಕ್ಷ್ಯಮಾಡದೆ ಮಗನೇ ಇಂದ್ರನಿಗೆ ಕವಚವನ್ನು ಕೊಟ್ಟೆ.)
ಪದ್ಯ-೦೦:ಅರ್ಥ:ಸೂರ್ಯನು ಹೊರಟು ಬರಲು ತನ್ನ ಪಾದಕ್ಕೆ ನಮಸ್ಕರಿಸಿದ ಮಗನನ್ನು ಪ್ರೀತಿಯಿಂದ ಹರಸಿ ಮನಸ್ಸಿನಲ್ಲಿ ದುಃಖಪಟ್ಟು ರವಿ ಹೇಳಿದನು, ‘ಹಿಂದೆ ನನ್ನನ್ನೂ ಲಕ್ಷ್ಯಮಾಡದೆ ಮಗನೇ ಇಂದ್ರನಿಗೆ ಕವಚವನ್ನು ಕೊಟ್ಟೆ.
ನುಡಿಯೆನಿದಂ ನಿನ್ನಂಬಿಕೆ
ಪಡೆಮಾತೇಂ ಕೊಂತಿ ಹರಿಯ ಮತದಿಂ ಕಾಯ|
ಲ್ಕೊಡರಿಸಿ ಬಂದಳ್ ಸುತರಂ
ಕುಡದಿರ್ ಪುರಿಗಣೆಯನೆನಿತು ಲಲ್ಲೆ ಸಿದೊಡಂ|| ೭೮ ||
ಪದ್ಯ-೭೮:ಪದವಿಭಾಗ-ಅರ್ಥ:ನುಡಿಯೆನು ಇದಂ (ಇದನ್ನು ಈಗ ಹೇಳುತ್ತಿಲ್ಲ) ನಿನ್ನ ಅಂಬಿಕೆ ಪಡೆಮಾತೇಂ (ಬೇರೆಮಾತು ಏಕೆ, ಬೇಡ) ಕೊಂತಿ ಹರಿಯ ಮತದಿಂ ಕಾಯಲ್ಕೆ ಒಡರಿಸಿ ಬಂದಳ್ ಸುತರಂ (ಈಗ ನಿನ್ನ ತಾಯಿ ಕುಂತೀದೇವಿಯು ಕೃಷ್ಣನ ಸೂಚನೆಯ ಪ್ರಕಾರ ತನ್ನ ಮಕ್ಕಳ ರಕ್ಷಣೆಗೆ ತೊಡಗಿ ಬಂದಿದ್ದಾಳೆ.) ಕುಡದಿರ್ ಪುರಿಗಣೆಯನು ಎನಿತು ಲಲ್ಲೆಸಿದೊಡಂ (ಎಷ್ಟು ಲಲ್ಲೆಯ (ಪ್ರೀತಿಯ) ಮಾತುಗಳನ್ನಾಡಿದರೂ ದಿವ್ಯಾಸ್ತ್ರಗಳನ್ನು ಕೊಡಬೇಡ)
ಪದ್ಯ-೭೮:ಅರ್ಥ: ಇದನ್ನು ಈಗ ಹೇಳುತ್ತಿಲ್ಲ ; ಇಂದಿನ ಮಾತು ಬೇರೆ. ಈಗ ನಿನ್ನ ತಾಯಿ ಕುಂತೀದೇವಿಯು ಕೃಷ್ಣನ ಸೂಚನೆಯ ಪ್ರಕಾರ ತನ್ನ ಮಕ್ಕಳ ರಕ್ಷಣೆಗೆ ತೊಡಗಿ ಬಂದಿದ್ದಾಳೆ. ಎಷ್ಟು ಪ್ರೀತಿಯ ಮಾತುಗಳನ್ನಾಡಿದರೂ ದಿವ್ಯಾಸ್ತ್ರಗಳನ್ನು ಕೊಡಬೇಡ.
ಎಂದರವಿಂದಪ್ರಿಯಸಖ
ನಂದಂಬರತಳಮನಡರ್ವುದುಂ ಕೆಯ್ಮುಗಿದಿಂ|
ತೆಂದಂ ಕುಂತಿಯನಬ್ಬೇಂ
ವಂದಿರ್ಪುದದೆನಗೆ ಸಯ್ಪು ಬರ್ಪಂತೀಗಳ್|| ೭೯ ||
ಪದ್ಯ-೭೯:ಪದವಿಭಾಗ-ಅರ್ಥ:ಎಂದು ಅರವಿಂದಪ್ರಿಯಸಖನು ಅಂದು ಅಂಬರತಳಮನು ಅಡರ್ವುದುಂ (ಎಂದು ಹೇಳಿ ಸೂರ್ಯನು ಆಕಾಶಕ್ಕೆ ಏರಿದಾಗ,) ಕೆಯ್ಮುಗಿದು ಇಂತೆಂದಂ ಕುಂತಿಯನು ಅಬ್ಬೇ ಏಂವಂದಿರ್ಪುದು (ಅಮ್ಮಾ ನೀವು ಬಂದಿರುವ ಕಾರಣವಾವುದು?) ಅದ ಎನಗೆ ಸಯ್ಪು ಬರ್ಪಂತೆ ಈಗಳ್ (ನನಗೆ ಪುಣ್ಯಬಂದ ಹಾಗೆ ಅಮ್ಮಾ ನೀವು ಬಂದಿರುವ ಕಾರಣವಾವುದು?)
ಪದ್ಯ-೭೯:ಅರ್ಥ:ಎಂದು ಹೇಳಿ ಸೂರ್ಯನು ಆಕಾಶಕ್ಕೆ ಏರಿದಾಗ, ಕರ್ಣನು ಕುಂತಿಗೆ ಕೈಮುಗಿದು ಹೀಗೆಂದನು: ನನಗೆ ಪುಣ್ಯಬಂದ ಹಾಗೆ ಅಮ್ಮಾ ನೀವು ಬಂದಿರುವ ಕಾರಣವಾವುದು? ಎಂದು ಕರ್ಣ ಕೇಳಿದನು.
ಚಲಮುಂ ಚಾಗಮುಮಳವುಂ
ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೊಳ್|
ನೆಲಸಿದುವು ನಿಮ್ಮ ಕರುಣಾ
ಬಲದಿಂ ನೀವೆನ್ನನಿಂದು ಮಗನೆಂದುದಱಿಂ|| ೮೦ ||
ಪದ್ಯ-೮೦:ಪದವಿಭಾಗ-ಅರ್ಥ:ಚಲಮುಂ ಚಾಗಮುಂ ಅಳವುಂ ಕಲಿತನಮುಂ ಕುಲಮುಂ (ಛಲವೂ ತ್ಯಾಗವೂ ಮೇಲ್ಮೆಯೂ ಪರಾಕ್ರಮವೂ ಕುಲವೂ)ಈಗಳ್ ಎನ್ನಯ ಮೆಯ್ಯೊಳ್ ನೆಲಸಿದುವು (ನನ್ನ ಶರೀರದಲ್ಲಿ ನೆಲಸಿದುವು) ನಿಮ್ಮ ಕರುಣಾಬಲದಿಂ, (ತಮ್ಮ ಕರುಣೆಯ ಬಲದಿಂದ) ನೀವು ಎನ್ನನು ಇಂದು ಮಗನೆಂದುದಱಿಂ (<-ನೀವು ಈಗ ನನ್ನನ್ನು ಮಗನೆಂದು ಹೇಳಿದುದರಿಂದ )
ಪದ್ಯ-೮೦:ಅರ್ಥ: ನನಗೆ ಛಲವೂ ತ್ಯಾಗವೂ ಮೇಲ್ಮೆಯೂ ಪರಾಕ್ರಮವೂ ಕುಲವೂ ನೀವು ಈಗ ನನ್ನನ್ನು ಮಗನೆಂದು ಹೇಳಿದುದರಿಂದ ತಮ್ಮ ಕರುಣೆಯ ಬಲದಿಂದ ನನ್ನ ಶರೀರದಲ್ಲಿ ನೆಲಸಿದುವು.
ಪಡೆದರ್ ತಾಯುಂ ತಂದೆಯು
ಮೊಡಲಂ ಪ್ರಾಣಮುಮನವರವವು ಕೆಯ್ಯೆಡೆಯಂ|
ಕುಡುವುದರಿದಾಯ್ತೆ ನೀಮೆನ
ಗೆಡೆ ಮಡಗದೆ ಬೆಸಪ ತೊೞ್ತುವೆಸನಂ ಬೆಸಸಿಂ|| ೮೧ ||
ಪದ್ಯ-೮೧:ಪದವಿಭಾಗ-ಅರ್ಥ:ಪಡೆದರ್ ತಾಯುಂ ತಂದೆಯುಂ ಒಡಲಂ ಪ್ರಾಣಮುಮನು (ತಾಯಿಯೂ ತಂದೆಯೂ ಮಗನ ದೇಹವನ್ನೂ ಪ್ರಾಣವನ್ನೂ ಪಡೆದವರು- ಹಡೆದವರು,) ಅವರವು ಅವು (ಅವರಿಗೇ ಸೇರಿದುವು) ಕೆಯ್ಯೆಡೆಯಂ ಕುಡುವುದು ಅರಿದಾಯ್ತೆ (ಕೊಟ್ಟಿರುವ ಅವನ್ನು ಅವರಿಗೇ ಹಿಂದಿರುಗಿ ಕೊಡುವುದು ಅಸಾಧ್ಯವೇ?) ನೀಂ ಎನಗೆ ಎಡೆ ಮಡಗದೆ (ನೀವು ನನಗೆ ಏನೂ ಮರೆಮಾಚದೆ) ಬೆಸಪ ತೊೞ್ತುವೆಸನಂ (ಹೇಳಬೇಕಾದ ಸೇವಾಕಾರ್ಯವನ್ನು) ಬೆಸಸಿಂ (ತಿಳಿಸಿ )
ಪದ್ಯ-೮೧:ಅರ್ಥ:ತಾಯಿಯೂ ತಂದೆಯೂ ಮಗನ ದೇಹವನ್ನೂ ಪ್ರಾಣವನ್ನೂ ಪಡೆದವರು, ಆದುದರಿಂದ ಅದು ಅವರಿಗೇ ಸೇರಿದುವು. ಅವರು ಕೊಟ್ಟಿರುವ ಅವನ್ನು ಅವರಿಗೇ ಹಿಂದಿರುಗಿ ಕೊಡುವುದು ಅಸಾಧ್ಯವೇ? ನೀವು ನನಗೆ ಏನೂ ಮರೆಮಾಚದೆ ಹೇಳಬೇಕಾದ ಸೇವಾಕಾರ್ಯವನ್ನು ಮರೆಮಾಚದೆ ತಿಳಿಸಿ
ಎಂಬುದುಮಂಬಿಕೆ ಮಗನೆ ಮ
ನಂಬೆಳಱದೆ ನೀನುಮಿತ್ತೆಯಾನುಂ ಪೆತ್ತೆಂ|
ನಂಬಿದ ನಿನ್ನನುಜರ್ ನಿ
ನ್ನಂ ಬೆಸಕೆಯೆ ನೀನೆ ನೆಲನನಾಳ್ವುದು ಕಂದಾ|| ೮೨ ||
ಪದ್ಯ-೮೨:ಪದವಿಭಾಗ-ಅರ್ಥ:ಎಂಬುದುಂ ಅಂಬಿಕೆ ಮಗನೆ ಮನಂ ಬೆಳಱದೆ (ತಾಯಿಯು ‘ಮಗನೆ ಮನಸ್ಸಿನಲ್ಲಿ ಹೆದರದೆ) ನೀನುಂ ಇತ್ತೆ, ಆನುಂ ಪೆತ್ತೆಂ (ನೀನೂ ಕೊಟ್ಟೆ ನಾನೂ ಪಡೆದೆ) ನಂಬಿದ ನಿನ್ನ ಅನುಜರ್ ನಿನ್ನಂ ಬೆಸಕೆಯೆ(ನಂಬಿರುವ ನಿನ್ನ ತಮ್ಮಂದಿರು ನಿನಗೆ ಸೇವೆ ಮಾಡುವ ಹಾಗೆ) ನೀನೆ ನೆಲನನು ಆಳ್ವುದು ಕಂದಾ (ನೀನೇ ರಾಜ್ಯವನ್ನು ಆಳಬೇಕು ಕಂದಾ.)
ಪದ್ಯ-೮೨:ಅರ್ಥ: ಎಂದಾಗ ತಾಯಿಯು, ಮಗನೆ ಮನಸ್ಸಿನಲ್ಲಿ ಹೆದರದೆ ನೀನೂ ಕೊಟ್ಟೆ ನಾನೂ ಪಡೆದೆ. ನಿನ್ನನ್ನೇ ನಂಬಿರುವ ನಿನ್ನ ತಮ್ಮಂದಿರು ನಿನಗೆ ಸೇವೆ ಮಾಡುವ ಹಾಗೆ (ನಿನ್ನ ಆಜ್ಞಾಧಾರಕರಾಗಿರುವ ಹಾಗೆ) ನೀನೇ ರಾಜ್ಯವನ್ನು ಆಳಬೇಕು ಕಂದಾ, ಎಂದಳು.
ಕಂ|| ನಿನಗಪ್ಪರಸಂ ದುರ್ಯೋ
ಧನನೊಲವಂ ಮುಂದುಗೆಯ್ದು ಬೆಸಕೆಯ್ವರೆ ನಿ|
ನ್ನನುಜರೆರೞ್ದೆಸೆಗಂ ಕಿಸು
ಱಿನಿಸಾಗದು ಮಗನೆ ನೀನೊಡಂಬಡವೇೞ್ಕುಂ|| ೮೩ ||
ಪದ್ಯ-೮೩:ಪದವಿಭಾಗ-ಅರ್ಥ: ನಿನಗಪ್ಪ ಅರಸಂ (ನಿನಗೆ ಆಗುವ ರಾಜತನಕ್ಕೆ) ದುರ್ಯೋಧನನ ಒಲವಂ ಮುಂದುಗೆಯ್ದು ಬೆಸಕೆಯ್ವರೆ ನಿನ್ನ ಅನುಜರ್(ದುರ್ಯೋಧನನ ಪ್ರೀತಿಯನ್ನು ಮುಂದಿಟ್ಟುಕೊಂಡು ನಿನ್ನ ಸೋದರರು ಸೇವೆ ಮಾಡುವರು) ಎರೞ್ ದೆಸೆಗಂ ಕಿಸುಱು ಇನಿಸಾಗದು (ಎರಡು ಪಕ್ಷಕ್ಕೂ ಸ್ವಲ್ಪವೂ ) ಮಗನೆ ನೀನು ಒಡಂಬಡವೇೞ್ಕುಂ (ಮಗನೇ ನೀನು ಒಪ್ಪಬೇಕು’)
ಪದ್ಯ-೮೩:ಅರ್ಥ:ನಿನಗೆ ಆಗುವ ರಾಜತನಕ್ಕೆ ದುರ್ಯೋಧನನ ಪ್ರೀತಿಯನ್ನು ಮುಂದಿಟ್ಟುಕೊಂಡು ಸೇವೆ ಮಾಡುವರು, ಇದರಿಂದ ಎರಡುಪಕ್ಷಕ್ಕೂ ಸ್ವಲ್ಪವೂ ದ್ವೇಷವುಂಟಾಗುವುದಿಲ್ಲ.

ಮಗನೇ, ನೀನು ಒಪ್ಪಬೇಕು, ಎಂದಳು

ವ|| ಎಂಬುದುಮದೆಲ್ಲಮಂ ಕೇಳ್ದು ಕರ್ಣಂ ಮುಗುಳ್ನಗೆ ನಕ್ಕು-
ವಚನ:ಪದವಿಭಾಗ-ಅರ್ಥ:ಎಂಬುದುಂ ಅದೆಲ್ಲಮಂ ಕೇಳ್ದು ಕರ್ಣಂ ಮುಗುಳ್ನಗೆ ನಕ್ಕು-
ವಚನ:ಅರ್ಥ:ಅದನ್ನೆಲ್ಲವನ್ನೂ ಕರ್ಣನು ಕೇಳಿ ಹುಸಿನಗೆ ನಕ್ಕನು.
ಮ|| ಭಯಮಂ ಲೋಭಮುಮೆಂಬ ತಮ್ಮುತೆರಡುಂ ಪಾಪಕ್ಕೆ ಪಕ್ಕಾಗೆ ಪಾ
ೞಿಯನೊಕ್ಕಾಳ್ದನ ಗೆಯ್ದ ಸತ್ಕೃತಮುಮಂ ಪಿಂತಿಕ್ಕಿ ಜೋಳಕ್ಕೆ ತ|
ಪ್ಪಿಯುಮಿಂ ಬಾೞ್ವುದೆ ಪೂಣ್ದು ನಿಲ್ಲದಿಕೆಯಿಂ ಬಾೞ್ವಂತು ವಿಖ್ಯಾತ ಕೀ
ರ್ತಿಯವೋಲೀಯೊಡಲಬ್ಬೆ ಪೇೞಿಮೆನಗೇಂ ಕಲ್ಪಾಂತರಸ್ಥಾಯಿಯೇ|| ೮೪ ||
ಪದ್ಯ-೮೪:ಪದವಿಭಾಗ-ಅರ್ಥ:ಭಯಮಂ ಲೋಭಮುಮೆಂಬ ತಮ್ಮುತ ಎರಡುಂ ಪಾಪಕ್ಕೆ ಪಕ್ಕಾಗೆ (ಯವೂ ಅತಿಯಾಸೆಯು ಎಂಬ ಇವೆರಡೂ ಪಾಪಕ್ಕೆ ಭಾಗಿಯಾಗಿರಲು) ಪಾೞಿಯನೋಕ್ಕು ಆಳ್ದನ ಗೆಯ್ದ ಸತ್ಕೃತಮುಮಂ (ಧರ್ಮಕ್ರಮವನ್ನು ಬಿಟ್ಟು ಸ್ವಾಮಿಯು ಮಾಡಿರುವ ಸತ್ಕಾರ್ಯಗಳನ್ನೆಲ್ಲ) ಪಿಂತಿಕ್ಕಿ (ಹಿಂದಕ್ಕೆ ಹಾಕಿ ,ಮರೆತು) ಜೋಳಕ್ಕೆ ತಪ್ಪಿಯುಮಿಂ ಬಾೞ್ವುದೆ (ಅನ್ನದ ಋಣಕ್ಕೆ ತಪ್ಪಿನೆಡೆದು ಬಾಳುವುದೇ?) ಪೂಣ್ದು ನಿಲ್ಲದಿಕೆಯಿಂ ಬಾೞ್ವಂತು (ಶಾಶ್ವತವಾಗಿ ನಿಲ್ಲದಿರುವ ಸ್ಥಿತಿಯನ್ನು ಪೊಣ್ದು- ಹೊತ್ತಿರುವ ಈ ಒಡಲು ಶರೀರ) ವಿಖ್ಯಾತ ಕೀರ್ತಿಯವೋಲ್ (ಪ್ರಖ್ಯಾತಕೀರ್ತಿಯು ಬಾಳುವ ಹಾಗೆ) ಈ ಒಡಲು ಅಬ್ಬೆ ಪೇೞಿಂ ಎನಗೇಂ ಕಲ್ಪಾಂತರಸ್ಥಾಯಿಯೇ ( ಈ ದೇಹ ಆನೆಕ ಯುಗಗಳಕಾಲ ನಿಲ್ಲುವಂತಹುದೇ? ಹೇಳಿ ತಾಯಿ. )
ಪದ್ಯ-೮೪:ಅರ್ಥ: ಭಯವೂ ಅತಿಯಾಸೆಯು ಎಂಬ ಇವೆರಡೂ ಪಾಪಕ್ಕೆ ಭಾಗಿಯಾಗಿರಲು ಧರ್ಮಕ್ರಮವನ್ನು ಬಿಟ್ಟು ಸ್ವಾಮಿಯು ಮಾಡಿರುವ ಸತ್ಕಾರ್ಯಗಳನ್ನೆಲ್ಲ ಮರೆತು, ಅನ್ನದ ಋಣಕ್ಕೆ ತಪ್ಪಿನೆಡೆದು ಬಾಳುವುದೇ? ಶಾಶ್ವತವಾಗಿ ನಿಲ್ಲದಿರುವ ಸ್ಥಿತಿಯನ್ನು ಹೊತ್ತಿರುವ ಈ ಶರೀರವು, ಪ್ರಖ್ಯಾತಕೀರ್ತಿಯು ಬಾಳುವ ಹಾಗೆ, ಆನೆಕ ಯುಗಗಳಕಾಲ ನಿಲ್ಲುವಂತಹುದೇ? ಹೇಳಿ ತಾಯಿ.
ಕಂ|| ಮೀಂಗುಲಿಗನೆನಾಗಿಯುಮಣ
ಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾ|
ದಂಗೆನಗೆ ಬಿಸುಡಲಕ್ಕುಮೆ
ನೀಂ ಗಳ ಪಂಬಲನೆ ಬಿಸುಡಿಮಿನ್ನೆನ್ನೆಡೆಯೊಳ್|| ೮೫ ||
ಪದ್ಯ-೮೫:ಪದವಿಭಾಗ-ಅರ್ಥ:ಮೀಂಗುಲಿಗನೆನ್ ಆಗಿಯುಂ ಅಣಂ ಆಂ ಗುಣಮನೆ ಬಿಸುಟೆನಿಲ್ಲ (ಮೀನನ್ನು ಕೊಲ್ಲುವ ಬೆಸ್ತನಾಗಿದ್ದರೂ ಸ್ವಲ್ಪವೂ ನಾನು ಸದ್ಗುಣವನ್ನು ಬಿಟ್ಟಿಲ್ಲ.) ನಿಮಗಂ ಮಗನಾದಂಗೆ ಎನಗೆ ಬಿಸುಡಲಕ್ಕುಮೆ (ನಿಮ್ಮಂತವರಿಗೆ ಮಗನಾದ ನನಗೆ ಆ ಗುಣ ಬಿಡಲಾಗುವಿದೇ?) ನೀಂ ಗಳ ಪಂಬಲನೆ (ಗಲ- ಹೆಚ್ಚಿನ ಹಂಬಲವನ್ನೇ) ಬಿಸುಡಿಂ ಇನ್ನು ಎನ್ನೆಡೆಯೊಳ್ (ಇನ್ನು ನೀವು ನನ್ನ ವಿಚಾರದಲ್ಲಿ ಹೆಚ್ಚಿನ ಹಂಬಲವನ್ನೇ ಬಿಟ್ಟುಬಿಡಿ.)
ಪದ್ಯ-೮೫:ಅರ್ಥ:ಮೀನನ್ನು ಕೊಲ್ಲುವ ಬೆಸ್ತನಾಗಿದ್ದರೂ ಸ್ವಲ್ಪವೂ ನಾನು ಸದ್ಗುಣವನ್ನು ಬಿಟ್ಟಿಲ್ಲ. ನಿಮ್ಮಂತವರಿಗೆ ಮಗನಾದ ನನಗೆ ಆ ಗುಣ ಆ ಗುಣ ಬಿಡಲಾಗುವಿದೇ? ಇನ್ನು ನೀವುಗಳು ನನ್ನ ವಿಚಾರದಲ್ಲಿ ಹೆಚ್ಚಿನ ಹಂಬಲವನ್ನೇ ಬಿಟ್ಟುಬಿಡಿ.
ವ|| ಎಂಬುದುಂ ಕೊಂತಿ ಭೋಂಕನೆರ್ದೆದೆದು-
ವಚನ:ಪದವಿಭಾಗ-ಅರ್ಥ:ಎಂಬುದುಂ ಕೊಂತಿ ಭೋಂಕನೆ ಎರ್ದೆರೆದೆದು(ಇದ್ದಕ್ಕಿದ್ದ ಹಾಗೆ ಎದೆಬಿರಿದು)-
ವಚನ:ಅರ್ಥ:ಎನ್ನಲು ಕುಂತಿ ಇದ್ದಕ್ಕಿದ್ದ ಹಾಗೆ ಎದೆಬಿರಿದು-
ಮ|| ಅಱಿದೆಂ ನೆಟ್ಟನೆ ಬೆಟ್ಟನಿಂತು ನುಡಿವೈ ನೀಂ ಕಂದ ಪೋಗಿಂದೆ ಕೆ
ಟ್ಟೞಿದತ್ತಾಗದೆ ಸೋಮವಂಶಮೆನಗಿಂ ಬಾೞುಸೆಯೆಲ್ಲಿತ್ತೊ ಬಿ|
ಟ್ಟುೞಿದೆಂ ಮತ್ತಿನ ಮಕ್ಕಳಾಸೆಯುಮನಾನೆಂದಳ್ಗೆ ಶೋಕಾಗ್ನಿ ಪೊಂ
ಪುೞಿವೋಗುತ್ತಿರೆ ಕರ್ಣನೆಂದನಿನಿತೇಂ ಪೇೞಬ್ಬೆ ಚಿಂತಾಂತರಂ|| ೮೬||
ಪದ್ಯ-೮೬:ಪದವಿಭಾಗ-ಅರ್ಥ:ಅಱಿದೆಂ (ಅಳಿದೆಂ- ಅಯ್ಯೊ! ಹಾಳಾದೆನು) ನೆಟ್ಟನೆ ಬೆಟ್ಟನಿಂತು ನುಡಿವೈ ನೀಂ ಕಂದ (ಮಗನೇ, ನೀನು ನೇರವಾಗಿ ಇಷ್ಟು ಬಿರುಸಾಗಿ ಮಾತನಾಡುವೆ) ಪೋಗು ಇಂದೆ ಕೆಟ್ಟು ಅೞಿದತ್ತಾಗದೆ ಸೋಮವಂಶಂ (ಹೋಗು, ಚಂದ್ರವಂಶವು ಇಂದೇ ಕೆಟ್ಟು ನಾಶವಾದಂತಾಗಲಿಲ್ಲವೇ.) ಎನಗಿಂ ಬಾೞುಸೆಯೆಲ್ಲಿತ್ತೊ (ನನಗೆ ಇನ್ನು ಬದುಕುವ ಆಸೆಯೆಲ್ಲಿಯೋ!) ಬಿಟ್ಟುೞಿದೆಂ ಮತ್ತಿನ (ಉಳಿದ) ಮಕ್ಕಳಾಸೆಯುಮಂ ಆನೆಂದು ಎಂದಳ್ಗೆ (ಉಳಿದ ಮಕ್ಕಳ ಆಸೆಯನ್ನು ಬಿಟ್ಟು ಬಿಟ್ಟೆನು ನಾನು ಎಂದವಳಿಗೆ) ಶೋಕಾಗ್ನಿ ಪೊಂಪುೞಿವೋಗುತ್ತಿರೆ (ದುಃಖಾಗ್ನಿಯು ಹೆಚ್ಚಾಗುತ್ತಿರಲು) ಕರ್ಣನೆಂದನು ಇನಿತೇಂ ಪೇೞು ಅಬ್ಬೆ ಚಿಂತಾಂತರಂ (ಕರ್ಣ ಹೇಳಿದ, ತಾಯಿ ಇಷ್ಟೊಂದು ಚಿಂತೆಯೇಕೆ? ಬೇರೆ ಏನು?,)
ಪದ್ಯ-೮೬:ಅರ್ಥ:ಅಯ್ಯೋ ನಾನು ಹಾಳಾದೆ ಕಂದ, ನೀನು ನೇರವಾಗಿ ಇಷ್ಟು ಬಿರುಸಾಗಿ ಮಾತನಾಡುವೆ. ಚಂದ್ರವಂಶವು ಇಂದೇ ಕೆಟ್ಟು ನಾಶವಾಗಲಿಲ್ಲವೇ. ನನಗೆ ಇನ್ನು ಬದುಕುವ ಆಸೆಯೆಲ್ಲಿಯೋ! ಉಳಿದ ಮಕ್ಕಳ ಆಸೆಯನ್ನು ಬಿಟ್ಟು ಬಿಟ್ಟೆನು ಎಂದು ಹೇಳಿದ ಕುಂತೀದೇವಿಗೆ ಕರ್ಣನು ದುಃಖಾಗ್ನಿಯು ಹೆಚ್ಚಾಗುತ್ತಿರಲು, ಕರ್ಣ ಹೇಳಿದ, ತಾಯಿ ಇಷ್ಟೊಂದು ಚಿಂತೆಯೇಕೆ? ಬೇರೆ ಏನು?,
ಕಂ|| ಪಿಡಿಯೆಂ ಪುರಿಗಣೆಯಂ ನರ
ನೆಡೆಗೊಂಡೊಡಮುೞಿದ ನಿನ್ನ ಮಕ್ಕಳನಿನ್ನೇ|
ರ್ದೊಡಮೞಿಯೆಂ ಪೆರ್ಜಸಮನೆ
ಪಿಡಿದೆನ್ನನೆ ರಣದೊಳೞಿವೆನಿರದಡಿಯೆತ್ತಿಂ|| ೮೭
ಪದ್ಯ-೮೭:ಪದವಿಭಾಗ-ಅರ್ಥ:ಪಿಡಿಯೆಂ ಪುರಿಗಣೆಯಂ (ದಿವ್ಯಾಸ್ತ್ರವನ್ನು ಹಿಡಿಯುವುದಿಲ್ಲ) ನರನು ಎಡೆಗೊಂಡೊಡಂ (ಅರ್ಜುನನು ಎದುರುಬಿದ್ದರೂ) ಉೞಿದ ನಿನ್ನ ಮಕ್ಕಳನು ಇನ್ನು ಏರ್ದೊಡಂ ಅೞಿಯೆಂ (ಉಳಿದ ನಿನ್ನ ಮಕ್ಕಳು ಎನ್ನು ನನ್ನ ಮೇಲೆ ಏರಿ ಯುದ್ಧಕ್ಕೆ ಬಂದರೂ ಕೊಲ್ಲೆನು.) ಪೆರ್ಜಸಮನೆ ಪಿಡಿದು (ಹೆಚ್ಚಿನ ಕೀರ್ತಿಯನ್ನೇ ಹಿಡಿದು) ಎನ್ನನೆ ರಣದೊಳು ಅೞಿವೆನು (ಯುದ್ಧದಲ್ಲಿ ನನ್ನನ್ನೇ ನಾಶಮಾಡಿಕೊಳ್ಳುವೆನು.) ಇರದೆ ಅಡಿಯೆತ್ತಿಂ (ಇನ್ನು ಇಲ್ಲಿ ಇರದೆ ಅಡಿಎತ್ತಿ- ಪಾದ ತೆಗೆಯಿರಿ, ಪಾದಬೆಳಸಿ, ಹೊರಡಿರಿ)
ಪದ್ಯ-೮೭:ಅರ್ಥ: ಅರ್ಜುನನು ಪ್ರತಿಭಟಿಸಿದರೂ ದಿವ್ಯಾಸ್ತ್ರವನ್ನು ಹಿಡಿಯುವುದಿಲ್ಲ. ಉಳಿದ ನಿನ್ನ ಮಕ್ಕಳು ನನ್ನ ಮೇಲೆ ಏರಿ ಯುದ್ಧಕ್ಕೆ ಬಂದರೂ ಕೊಲ್ಲೆನು. ಹೆಚ್ಚಿನ ಕೀರ್ತಿಯನ್ನೇ ಹಿಡಿದು ಯುದ್ಧದಲ್ಲಿ ನನ್ನನ್ನೇ ನಾಶಮಾಡಿಕೊಳ್ಳುವೆನು. ಇನ್ನು ಇಲ್ಲಿ ಇರದೆ ಹೊರಡಿರಿ.
ವ|| ಎಂದು ಕೊಂತಿಯಂ ವಿಸರ್ಜಿಸಿ ಚಲದ ಚಾಗದ ಕುಲದ ನನ್ನಿಯನಾವರ್ಜಿಸಿ ರಾಧೇಯನೊಳ್ಪಿಂಗಾಧೇಯಮಾಗಿರ್ದನಿತ್ತ ಪುರುಷೋತ್ತಮನುಂ ಕತಿಪಯ ಪ್ರಯಾಣಂಗಳಿಂ ವಿರಾಟಪುರ ನಿಕಟವರ್ತಿಯಪ್ಪ ದಿವಿಜಾಪಗಾತಟದುಪವನದೊಳರಿನೃಪವನಕ್ಕುಪ ದ್ರವಕಾರಿಯಾಗಿ ನೆಲಂ ಮೂರಿವಿಟ್ಟಂತೆ ಬಿಟ್ಟಿರ್ದಜಾತಶತ್ರುವನವನತೋತ್ತಮಾಂಗನಾಗಿ ಕಂಡು-
ವಚನ:ಪದವಿಭಾಗ-ಅರ್ಥ:ಎಂದು ಕೊಂತಿಯಂ ವಿಸರ್ಜಿಸಿ (ಎಂದು ಕುಂತಿಯನ್ನು ಕಳುಹಿಸಿ.) ಚಲದ ಚಾಗದ ಕುಲದ ನನ್ನಿಯನು ಆವರ್ಜಿಸಿ (ಛಲ, ತ್ಯಾಗ, ಕುಲ ಮತ್ತು ಸತ್ಯವನ್ನು ಬರಮಾಡಿಕೊಂಡು) ರಾಧೇಯನು ಒಳ್ಪಿಂಗೆ ಆಧೇಯಂ ಆಗಿರ್ದನು (ಕರ್ಣನು ಒಳ್ಳೆಯತನಕ್ಕೆ- ಸದ್ಗುಣಕ್ಕೆ ಆಶ್ರಯವಾಗಿದ್ದನು.); ಇತ್ತ ಪುರುಷೋತ್ತಮನುಂ ಕತಿಪಯ ಪ್ರಯಾಣಂಗಳಿಂ (ಈ ಕಡೆ ಕೃಷ್ಣನು ಕೆಲವು ದಿನ ಪ್ರಯಾಣಮಾಡಿ) ವಿರಾಟಪುರ ನಿಕಟವರ್ತಿಯಪ್ಪ (ವಿರಾಟನಗರದ ಸಮೀಪದಲ್ಲಿದ್ದ) ದಿವಿಜಾಪಗಾ (ಗಂಗೆ) ತಟದ ಉಪವನದೊಳು (ಗಂಗಾನದಿಯ ದಡದ ಉಪವನದಲ್ಲಿ) ಅರಿನೃಪವನಕ್ಕೆ ಉಪದ್ರವಕಾರಿಯಾಗಿ (ಶತ್ರುರಾಜರೆಂಬ ಕಾಡಿಗೆ ಹಿಂಸಾಕಾರಿಯಾಗಿ) ನೆಲಂ ಮೂರಿವಿಟ್ಟಂತೆ (ಜಗತ್ತಿನ ಜನವೆಲ್ಲ ಗುಂಪುಗೂಡಿದಂತೆ) ಬಿಟ್ಟಿರ್ದ ಅಜಾತಶತ್ರುವನು (ಬೀಡುಬಿಟ್ಟಿದ್ದ ಧರ್ಮರಾಜನನ್ನು) ಅವನತೋತ್ತಮಾಂಗನಾಗಿ ಕಂಡು - ಅವನತ, ಬಗ್ಗಿದ, ಉತ್ತಮಾಂಗ-ತಲೆ ಪೂರ್ವಕ (ನಮಸ್ಕಾರ ಪೂರ್ವಕ ಕಂಡು)-
ವಚನ:ಅರ್ಥ:ಎಂದು ಕುಂತಿಯನ್ನು ಕಳುಹಿಸಿ. ಛಲ, ತ್ಯಾಗ, ಕುಲ ಮತ್ತು ಸತ್ಯವನ್ನು ಬರಮಾಡಿಕೊಂಡು ಕರ್ಣನು ಸದ್ಗುಣಕ್ಕೆ ಆಶ್ರಯವಾಗಿದ್ದನು. ಈ ಕಡೆ ಕೃಷ್ಣನು ಕೆಲವು ದಿನ ಪ್ರಯಾಣಮಾಡಿ ವಿರಾಟನಗರದ ಸಮೀಪದಲ್ಲಿದ್ದ ಗಂಗಾನದಿಯ ದಡದ ಉಪವನದಲ್ಲಿ ಶತ್ರುರಾಜರೆಂಬ ಕಾಡಿಗೆ ಹಿಂಸಾಕಾರಿಯಾಗಿ ಜಗತ್ತಿನ ಜನವೆಲ್ಲ ಗುಂಪುಕೂಡಿದಂತೆ ಬೀಡುಬಿಟ್ಟಿದ್ದ ಧರ್ಮರಾಜನನ್ನು ನಮಸ್ಕಾರಪೂರ್ವಕ ಕಂಡು-
ಮ|| ಹಿಮಕೃದ್ವಂಶಜರಪ್ಪ ಪಾಂಡುಸುತರಂ ಕೆಯ್ಕೊಂಡು ನಿನ್ನಯ್ದು ಬಾ
ಡಮನಿತ್ತು ನಡಪೆಂದು ಸಾಮಮೆನೆ ಮುಂ ಮುಂತಿಟ್ಟೊಡಾತಂ ಪರಾ|
ಕ್ರಮಮಂ ತೋಱಿ ಸಿಡಿಲ್ದು ಪಾಯ್ವುದುಮಸುಂಗೊಳ್ವನ್ನೆಗಂ ವಿಶ್ವರೂ
ಪಮನಾಂ ತೋಱಿದೆನಿಂ ಕಡಂಗಿ ರಣದೊಳ್ ನೀಂ ತೋಱು ನಿನ್ನಾರ್ಪುಮಂ|| ೮೮ ||
ಪದ್ಯ-೮೮:ಪದವಿಭಾಗ-ಅರ್ಥ:ಹಿಮಕೃದ್ವಂಶಜರಪ್ಪ (ಚಂದ್ರವಂಶದವರಾದ) ಪಾಂಡುಸುತರಂ ಕೆಯ್ಕೊಂಡು ನಿನ್ನ ಐಯ್ದು ಬಾಡಮನು ಇತ್ತು (ನಿನ್ನ ಅಯ್ದು ಹಳ್ಳಿಗಳನ್ನು ಕೊಟ್ಟು) ನಡಪೆಂದು ಸಾಮಮೆನೆ ಮುಂ ಮುಂತಿಟ್ಟೊಡೆ (ಧರ್ಮವನ್ನು ನಡಸು ಎಂದು ಮೊದಲು ಸಾಮೋಪಾಯವನ್ನೇ ಮುಂದಿಟ್ಟರೆ) ಆತಂ ಪರಾಕ್ರಮಮಂ ತೋಱ ಸಿಡಿಲ್ದು (ಅವನು ತನ್ನ ಪರಾಕ್ರಮವನ್ನೇ ಪ್ರದರ್ಶಿಸಿ ಸಿಡಿದು) ಪಾಯ್ವುದುಂ ಅಸುಂಗೊಳ್ವನ್ನೆಗಂ (ಅಸುಂ- ಪ್ರಾಣವನ್ನು ಕೊಳ್ವ ಅನ್ನೆಗಂ-) ವಿಶ್ವರೂಪಮನಾಂ ತೋಱಿದೆನ್ (ಮೇಲೆ ಹಾಯ್ದ.ನನ್ನ ಪ್ರಾಣವನ್ನು ಸೆಳೆದುಕೊಳ್ಳುವವದರೊಳಗೆ ನಾನು ವಿಶ್ವರೂಪವನ್ನು ತೋರಿದೆ.) ಇಂ ಕಡಂಗಿ ರಣದೊಳ್ ನೀಂ ತೋಱು ನಿನ್ನ ಆರ್ಪುಮಂ (ಇನ್ನು ನೀನು ಉತ್ಸಾಹದಿಂದ ಯುದ್ಧದಲ್ಲಿ ನಿನ್ನ ಶಕ್ತಿಯನ್ನು ತೋರಿಸು.)
ಪದ್ಯ-೮೮:ಅರ್ಥ:ಚಂದ್ರವಂಶದವರಾದ ಪಾಂಡವರನ್ನು ಸ್ವೀಕರಿಸಿ ನಿನ್ನ ಅಯ್ದು ಹಳ್ಳಿಗಳನ್ನು ಕೊಟ್ಟು ಧರ್ಮವನ್ನು ನಡಸು ಎಂದು ಮೊದಲು ಸಾಮೋಪಾಯವನ್ನೇ ಮುಂದಿಟ್ಟರೆ, ಅವನು ತನ್ನ ಪರಾಕ್ರಮವನ್ನೇ ಪ್ರದರ್ಶಿಸಿ ಸಿಡಿದು ಮೇಲೆ ಹಾಯ್ದ. ನನ್ನ ಪ್ರಾಣಾಪಹರಣ ಮಾಡವುದರೊಳೊಗೆ ನಾನು ವಿಶ್ವರೂಪವನ್ನು ತೋರಿದೆನು. ಇನ್ನು ನೀನು ಉತ್ಸಾಹದಿಂದ ಯುದ್ಧದಲ್ಲಿ ನಿನ್ನ ಶಕ್ತಿಯನ್ನು ತೋರಿಸು. ಎಂದು ಧರ್ಮರಾಯನಿಗೆ ಕೃಷ್ಣ ಸಂಧಿ ಮರಿದ ವಿಚಾರ ಹೇಳಿದನು.
ವ|| ಎಂಬನ್ನೆಗಂ ದುರ್ಯೋಧನನಟ್ಟಿದ ದೂತಂ ಸಂಜಯನೆಂಬಂ ಬಂದು ಸಕಲ ಸಾಮಂತ ಮಣಿಮಕುಟ ಮರೀಚಿ ಮಸೃಣಿತ ಚರಣಾರವಿಂದನಪ್ಪ ಧರ್ಮನಂದನನಂ ಕಂಡು-
ವಚನ:ಪದವಿಭಾಗ-ಅರ್ಥ:ಎಂಬ ಅನ್ನೆಗಂ (ಎನ್ನುವಷ್ಟರಲ್ಲಿ) ದುರ್ಯೋಧನನು ಅಟ್ಟಿದ ದೂತಂ ಸಂಜಯನೆಂಬಂ ಬಂದು(ದುರ್ಯೋಧನನು ಕಳುಹಿಸಿದ ಸಂಜಯನೆಂಬ ದೂತನು ಬಂದು) ಸಕಲ ಸಾಮಂತ ಮಣಿಮಕುಟ ಮರೀಚಿ ಮಸೃಣಿತ (ಎಲ್ಲಾ ಸಾಮಂತರ ರತ್ನಕಿರೀಟದ ಕಾಂತಿಯಿಂದ ನುಣುಪಾಗಿ ಪ್ರಕಾಶವಾದ) ಚರಣಾರವಿಂದನಪ್ಪ (ಪಾದಕಮಲಗಳನ್ನುಳ್ಳ) ಧರ್ಮನಂದನನಂ ಕಂಡು-
ವಚನ:ಅರ್ಥ:ಎನ್ನುವಷ್ಟರಲ್ಲಿ ದುರ್ಯೋಧನನು ಕಳುಹಿಸಿದ ಸಂಜಯನೆಂಬ ದೂತನು ಬಂದು ಎಲ್ಲಾ ಸಾಮಂತರ ರತ್ನಕಿರೀಟದ ಕಾಂತಿಯಿಂದ ಪ್ರಕಾಶವಾದ ಪಾದಕಮಲಗಳನ್ನುಳ್ಳ ಧರ್ಮರಾಜನನ್ನು ನೋಡಿ-
ಉ|| ಅಟ್ಟಿದ ನಿಮ್ಮ ಪೆರ್ಗಡೆ ಬರ್ದುಂಕಿದನೆಂಬುದನಿಂದ್ರಜಾಲಮಂ
ತೊಟ್ಟನೆ ತೋಱಿ ಬಂದು ಬರ್ದುಕಾಡಿದನಿನ್ನಳಿಪಿಂದವಟ್ಟುವ|
ಟ್ಟಟ್ಟಿಗಳಂ ಬಿಸುೞ್ಪುದೆಮಗಂ ತಮಗಂ ಮುಳಿಸಿಂದಮೀಗಳ
ಟ್ಟಟ್ಟಿಗಳಪ್ಪುವೆಂದಿದನೆ ದಲ್ ನುಡಿದಟ್ಟಿದನೆಮ್ಮ ಭೂಭುಜಂ|| ೮೯ ||
ಪದ್ಯ-೦೦:ಪದವಿಭಾಗ-ಅರ್ಥ:ಅಟ್ಟಿದ ನಿಮ್ಮ ಪೆರ್ಗಡೆ ಬರ್ದುಂಕಿದನೆಂಬುದನು ಇಂದ್ರಜಾಲಮಂ ತೊಟ್ಟನೆ ತೋಱಿ ಬಂದು (ನೀವು ಕಳುಹಿಸಿದ ಹೆಗ್ಗಡೆಯು ಇಂದ್ರಜಾಲವನ್ನು ತಟಕ್ಕನೆ ತೋರಿಸಿ) ಬರ್ದುಕಾಡಿದನು (ಬದುಕಿ ಉಳಿದನು). ಇನ್ನ್ ಅಳಿಪಿಂದಂ ಅಟ್ಟುವಟ್ಟಟ್ಟಿಗಳಂ ಬಿಸುೞ್ಪುದು (ಇನ್ನು ದೂತರನ್ನು ಕಳುಹಿಸುವುದನ್ನು ಬಿಡಿ, ನಿಲ್ಲಿಸಿರಿ.) ಎಮಗಂ ತಮಗಂ ಮುಳಿಸಿಂದಂ ಈಗಳು ಅಟ್ಟಟ್ಟಿಗಳ್ ಅಪ್ಪುವೆಂದು (ಇನ್ನು ಮೇಲೆ ನಮಗೂ ನಿಮಗೂ ಕೋಪದಿಂದ ಅಟ್ಟಟ್ಟಿಯಾಡುವ ಯುದ್ಧಕಾರ್ಯವು ಪ್ರಾಪ್ತವಾಗುವುದು) ಅದನೆ ದಲ್ ನುಡಿದಟ್ಟಿದನು ಎಮ್ಮ ಭೂಭುಜಂ (ಎಂಬ ಈ ಸಂದೇಶವನ್ನು ಹೇಳಿ ನಮ್ಮ ರಾಜನು ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ್ದಾನೆ) ಎಂದನು ಸಂಜಯ.
ಪದ್ಯ-೦೦:ಅರ್ಥ:ನೀವು ಕಳುಹಿಸಿದ ರಾಯಭಾರಿಯು/ ಹೆಗ್ಗಡೆಯು ಇಂದ್ರಜಾಲವನ್ನು ತೋರಿ ಬದುಕಿ ಬಂದಿದ್ದಾನೆ. ಇನ್ನು ದೂತರನ್ನು ಕಳುಹಿಸುವುದನ್ನು ನಿಲ್ಲಿಸಿರಿ. ಇನ್ನು ಮೇಲೆ ಕೋಪದಿಂದ ನಮಗೂ ನಿಮಗೂ ಕೋಪದಿಂದ ಅಟ್ಟಟ್ಟಿಯಾಡುವ ಯುದ್ಧಕಾರ್ಯವು ಪ್ರಾಪ್ತವಾಗುವುದು ಎಂಬ ಈ ಸಂದೇಶವನ್ನು ಹೇಳಿ ನಮ್ಮ ರಾಜನು ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ್ದಾನೆ, ಎಂದನು ಸಂಜಯ.
ಮ|| ಬಳ ಸಂಪನ್ನರನಾಸೆಗೆಯ್ಗೆ ಚತುರಂಗಾನೀಕಮಂ ಕೂಡಿ ಕೊ
ಳ್ಗುಳಮಂ ಗಂಡುಮನಪ್ಪುಕೆಯ್ಗೆ ಮನಮಂ ಬಲ್ಲಿತ್ತು ಮಾೞ್ಕೆಂದುಮಾ|
ನೆಳೆಯಂ ಕಾದಿದೊಡಲ್ಲದೀಯೆನಱಿದಿರ್ಕೆಂದಾ ಕುರುಕ್ಷೇತ್ರಮಂ
ಕಳವೇೞ್ದಟ್ಟಿದನಣ್ಮಿ ಸಾಯಿಮುೞಿಯಿಂ ನಿಮ್ಮೊಂದು ಬಾೞುಸೆಯಂ|| ೯೦ ||
ಪದ್ಯ-೯೦:ಪದವಿಭಾಗ-ಅರ್ಥ:ಬಳ (ಬಲ- ಸೈನ್ಯ) ಸಂಪನ್ನರನ್ ಆಸೆಗೆಯ್ಗೆ (ಸೈನ್ಯ ಉಳ್ಳವರನ್ನು ಸೇರಿಸಿಕೊಳ್ಳುವ ತಾರ್ಯವಾಗಲಿ) ಚತುರಂಗ ಆನೀಕಮಂ ಕೂಡಿ ಕೊಳ್ಗುಳಮಂ (ಚತುರಂಗ ಸೈನ್ಯವನ್ನು ಕೂಡಿಸಿ ರಣರಂಗವನ್ನು - ಸೇರಿ) ಗಂಡುಮನು ಅಪ್ಪುಕೆಯ್ಗೆ (ಪರಾಕ್ರಮವನ್ನು ಅಂಗೀಕರಿಸಲಿ), ಮನಮಂ ಬಲ್ಲಿತ್ತು ಮಾೞ್ಕೆ (ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲಿ;) ಎಂದುಂ ಆನ್ ಎಳೆಯಂ (ಇಳೆ- ಭೂಮಿಯನ್ನು) ಕಾದಿದೊಡಲ್ಲದೆ ಈಯೆನು ಅಱಿದಿರ್ಕೆ (ನಾನು ಎಂದೂ ಯುದ್ಧಮಾಡಿದಲ್ಲದೆ ಭೂಮಿಯನ್ನು ಕೊಡುವುದಿಲ್ಲ ತಿಳಿದಿರಲಿ) ಎಂದು ಕುರುಕ್ಷೇತ್ರಮಂ ಕಳಂ ವೇೞ್ದು (ಹೇಳಿ) ಅಟ್ಟಿದಂ (ಎಂದು ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ಗೊತ್ತು ಮಾಡಿ ಕಳುಹಿಸಿದ್ದಾನೆ.) ಅಣ್ಮಿ ಸಾಯಿಂ (ಹೋರಾಡಿ ಸಾಯಿರಿ,) ಉೞಿಯಿಂ(ಬಿಡಿ) ನಿಮ್ಮೊಂದು ಬಾೞುಸೆಯಂ(ಬಾಳುವ ಆಸೆಯನ್ನು ಬಿಡಿರಿ)
ಪದ್ಯ-೯೦:ಅರ್ಥ:ಸೈನ್ಯ ಉಳ್ಳವರನ್ನು ಸೇರಿಸಿಕೊಳ್ಳುವ ತಾರ್ಯವಾಗಲಿ; ಚತುರಂಗ ಸೈನ್ಯವನ್ನು ಕೂಡಿಸಿ ರಣರಂಗವನ್ನು ಸೇರಿ ಪರಾಕ್ರಮವನ್ನು ಅಂಗೀಕರಿಸಲಿ; ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲಿ; ನಾನು ಎಂದೂ ಯುದ್ಧಮಾಡಿದಲ್ಲದೆ ಭೂಮಿಯನ್ನು ಕೊಡುವುದಿಲ್ಲ ತಿಳಿದಿರಲಿ ಎಂದು ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ಗೊತ್ತು ಮಾಡಿ ಕಳುಹಿಸಿದ್ದಾನೆ. ಹೋರಾಡಿ ಸಾಯಿರಿ, ಬಾಳುವ ಆಸೆಯನ್ನು ಬಿಡಿರಿ.
ವ|| ಎಂಬುದುಂ ವೃಕೋದರಂ ಮುಳಿದಾಸ್ಪೋಟಿಸಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ವೃಕೋದರಂ ಮುಳಿದು ಆಸ್ಪೋಟಿಸಿ-
ವಚನ:ಅರ್ಥ:ಎನ್ನಲು ಭೀಮಸೇನನು ಕೋಪಿಸಿಕೊಂಡು ಆರ್ಭಟಿಸಿ ನುಡಿದನು.
ಚಂ|| ವಿಸಸನರಂಗಮಪ್ಪುದೆನಗಂ ತನಗಂ ದೊರೆ ಕಾಯ್ಪುಮೇವಮುಂ
ಪಸರಿಸಿ ಪರ್ವಿ ತನ್ನೊಳಮದೆನ್ನೊಳಮಿರ್ದುದು ಭೀಮನೆಂದೊಡಾ|
ಪೆಸರನೆ ಕೇಳ್ದು ಸೈರಿಸದ ನಿನ್ನರಸಂ ಕಲಿಯಾಗಿ ನಾಳೆ ಸೈ
ರಿಸುಗುಮೆ ವೈರಿಭೂಪ ರುರಾರ್ದ್ರ ಮದೀಯ ಗದಾಭಿಘಾತಮಂ|| ೯೧ ||
ಪದ್ಯ-೯೧:ಪದವಿಭಾಗ-ಅರ್ಥ:ವಿಸಸನರಂಗಂ ಅಪ್ಪುದು ಎನಗಂ ತನಗಂ (ರಣರಂಗವು ನನಗೂ ದುರ್ಯೋಧನನಿಗೂ ದೊರೆಅಪ್ಪುದು- ಆಗುವುದು) -<ದೊರೆ ಅಪ್ಪುದು; ಕಾಯ್ಪುಂ ಏವಮುಂ (ಕೋಪ ಮಾತ್ಸರ್ಯಗಳು) ಪಸರಿಸಿ ಪರ್ವಿ (ಪ್ರಸರಿಸಿ ಹಬ್ಬಿ) ತನ್ನೊಳಂ ಅದು ಎನ್ನೊಳಂ ಇರ್ದುದು (ಕೋಪ ಮಾತ್ಸರ್ಯಗಳು ಪ್ರಸರಿಸಿ ಹಬ್ಬಿ ನನ್ನಲ್ಲಿಯೂ ಅವನಲ್ಲಿಯೂ ಇವೆ) ಭೀಮನೆಂದೊಡೆ ಆ ಪೆಸರನೆ ಕೇಳ್ದು ಸೈರಿಸದ ನಿನ್ನ ಅರಸಂ (ಭೀಮನೆಂಬ ಹೆಸರನ್ನೇ ಕೇಳಿ ಸಹಿಸದ ನಿಮ್ಮ ರಾಜನು) ಕಲಿಯಾಗಿ ನಾಳೆ ಸೈರಿಸುಗುಮೆ (ಶೂರನಾಗಿ ನಾಳೆಯ ಯುದ್ಧದಲ್ಲಿ ಸೈರಿಸುತ್ತಾನೆಯೇ?- ತಡೆದುಕೊಳ್ಳುತ್ತಾನೆಯೇ?) ವೈರಿಭೂಪ ರುರಾರ್ದ್ರ ಮದೀಯ ಗದಾಭಿಘಾತಮಂ (ಶತ್ರುರಾಜರ ರಕ್ತದಿಂದ ಒದ್ದೆಯಾದ ನನ್ನ ಗದೆಯ ಪೆಟ್ಟನ್ನು)
ಪದ್ಯ-೯೧:ಅರ್ಥ:ಯುದ್ಧರಂಗವು ನನಗೂ ದುರ್ಯೋಧನನಿಗೂ ಆಗುವುದು. ಕೋಪ ಮಾತ್ಸರ್ಯಗಳು ಪ್ರಸರಿಸಿ ಹಬ್ಬಿ ನನ್ನಲ್ಲಿಯೂ ಅವನಲ್ಲಿಯೂ ಇವೆ. ಭೀಮನೆಂಬ ಹೆಸರನ್ನೇ ಕೇಳಿ ಸಹಿಸದ ನಿಮ್ಮ ರಾಜನು ಶೂರನಾಗಿ ನಾಳೆಯ ಯುದ್ಧದಲ್ಲಿ ಶತ್ರುರಾಜರ ರಕ್ತದಿಂದ ಒದ್ದೆಯಾದ ನನ್ನ ಗದೆಯ ಪೆಟ್ಟನ್ನು ತಡೆದುಕೊಳ್ಳುತ್ತಾನೆಯೇ?
ವ|| ಎಂಬುದುಂ ಪರಾಕ್ರಮಧವಳನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಪರಾಕ್ರಮಧವಳನು (ಅರ್ಜುನನು) ಇಂತೆಂದಂ-
ವಚನ:ಅರ್ಥ:ವ|| ಎನ್ನಲು ಅರ್ಜುನನು ಹೀಗೆಂದನು
ಮ|| ಕಱುಪುಂ ಕಾಯ್ದುಮನುಂಟುಮಾಡಿ ನೆಲನಂ ದುರ್ಯೋಧನಂ ತಾಗಿ ತ
ಳ್ತಿಱಿದಂದಲ್ಲದೆ ಕೂಡನಾಜಿ ಭರಮುಂ ಸಾರ್ಚಿತ್ತದೇನೆಂದು ಮು|
ನ್ನಱುದಿಂಗಳ್ ಜಱುಚುತ್ತುಮಿರ್ಪುದೆ ರಣಕ್ಕಾರೆನ್ನರೆಂದೀಗಳೆಂ
ತಱುಯಲ್ ಬರ್ಕುಮೆ ಬರ್ಕೆ ಬಂದೊಡಱಿಯಲ್ಕಕ್ಕುಂ ಕುರುಕ್ಷೇತ್ರದೊಳ್|| ೯೨ ||
ಪದ್ಯ-೯೨:ಪದವಿಭಾಗ-ಅರ್ಥ:ಕಱುಪುಂ ಕಾಯ್ದುಮನು ಉಂಟುಮಾಡಿ (ಕೋಪವನ್ನೂ ತಾಪವನ್ನೂ ಉಂಟುಮಾಡಿ )ನೆಲನಂ ದುರ್ಯೋಧನಂ ತಾಗಿ ತಳ್ತಿಱಿದಂದು ಅಲ್ಲದೆ ಕೂಡನು ಆಜಿ (ಪ್ರತಿಭಟಿಸಿ ಯುದ್ಧಮಾಡಿದಲ್ಲದೆ ದುರ್ಯೋಧನನು ರಾಜ್ಯವನ್ನು ಕೊಡುವುದಿಲ್ಲ) ಆಜಿ ಭರಮುಂ ಸಾರ್ಚಿತ್ತು ಅದೇನೆಂದು ಮುನ್ನಱುದಿಂಗಳ್ (ಯುದ್ಧಭಾರವೂ ಸಮೀಪಿಸಿದೆ. ರಣದಲ್ಲಿ ಅದು ಏನು ಯಾರು ಎಂಥವರು ಎಂಬುದನ್ನು ಈಗ ತಿಳಿಯುವುದು ಸಾಧ್ಯವೇ?) ಅಱುಚುತ್ತುಂ ಇರ್ಪುದೆ (ಅರಚುತ್ತ ಇರುವುದೇ? ) ರಣಕ್ಕೆ ಆರು ಎನ್ನರ್ ಎಂದೀಗಳೆ ಎಂತು ಅಱುಯಲ್ ಬರ್ಕುಮೆ (ರಣದಲ್ಲಿ ಅದು ಏನು ಯಾರು ಎಂಥವರು ಎಂಬುದನ್ನು ಈಗ ತಿಳಿಯುವುದು ಸಾಧ್ಯವೇ?) ಬರ್ಕೆ ಬಂದೊಡೆ ಅಱಿಯಲ್ಕೆ ಅಕ್ಕುಂ ಕುರುಕ್ಷೇತ್ರದೊಳ್ (ಕುರುಕ್ಷೇತ್ರಕ್ಕೆ ಬರಲಿ, ಬಂದರೆ ತಿಳಿಯುತ್ತದೆ)
ಪದ್ಯ-೯೨:ಅರ್ಥ: ಕೋಪವನ್ನೂ ತಾಪವನ್ನೂ ಉಂಟುಮಾಡಿ ಪ್ರತಿಭಟಿಸಿ ಯುದ್ಧಮಾಡಿದಲ್ಲದೆ ದುರ್ಯೋಧನನು ರಾಜ್ಯವನ್ನು ಕೊಡುವುದಿಲ್ಲ. ಯುದ್ಧಭಾರವೂ ಸಮೀಪಿಸಿದೆ. ಅದೇನಾಗುತ್ತದೆಂದು ಅರಚುತ್ತ ಇರುವುದೇ? ರಣದಲ್ಲಿ ಅದು ಏನು ಯಾರು ಎಂಥವರು ಎಂಬುದನ್ನು ಈಗ ತಿಳಿಯುವುದು ಸಾಧ್ಯವೇ? ಕುರುಕ್ಷೇತ್ರಕ್ಕೆ ಬರಲಿ, ಬಂದರೆ ತಿಳಿಯುತ್ತದೆ
ವ|| ಎಂಬುದುಂ ಯಮನಂದನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಯಮನಂದನನು ಇಂತೆಂದಂ-
ವಚನ:ಅರ್ಥ:ಎನ್ನಲು ಧರ್ಮರಾಜನು ಹೀಗೆಂದನು
ಮ||ಸ್ರ|| ಎಳೆಯಂ ದುರ್ಯೋಧನಂ ತಳ್ತಿಱಿಯದೆ ಕುಡೆನೆಂದಟ್ಟಿ ಕಾದಲ್ಕಮೀಗಳ್
ಕಳನಂ ಪೇೞ್ದಂ ಕುರುಕ್ಷೇತ್ರಮನೆನೆ ತಡವಿನ್ನಾವುದುಗ್ರಾಜಿಯೊಳ್ ದೋ|
ರ್ವಳದಿಂದಂ ತನ್ನ ಮೆಚ್ಚಂ ಸಲಿಸಿಯೆ ನೆಲನಂ ಕೊಳ್ವೆನಿಂ ತಳ್ವೆನೆಮ್ಮೊಳ್
ಕಳನಂ ಬೇಡೆಯ್ದೆ ಕೇಳ್ದೆಂ ಬಗೆಯನಱಿಯಲಾಯ್ತೇೞಿಮಂತೆಂದೆ ಪೇೞಿಂ|| ೯೩ ||
ಪದ್ಯ-೯೩:ಪದವಿಭಾಗ-ಅರ್ಥ:ಎಳೆಯಂ ದುರ್ಯೋಧನಂ ತಳ್ತು ಇಱಿಯದೆ ಕುಡೆನೆ ಎಂದು (ದುರ್ಯೋಧನನನ್ನು ಎದುರಿಸಿ ಯುದ್ಧಮಾಡಿದ ಹೊರತು ಭೂಮಿಯನ್ನು ಕೊಡುವುದಿಲ್ಲ ಎಂದು) ಅಟ್ಟಿ ಕಾದಲ್ಕಂ ಈಗಳ್ ಕಳನಂ ಪೇೞ್ದಂ ಕುರುಕ್ಷೇತ್ರಮನು (ದೂತನ ಮೂಲಕ ಹೇಳಿ ಕಳುಹಿಸಿ ಈಗ ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ನಿಶ್ಚಯಿಸಿದ್ದೇನೆ) ಎನೆ ತಡವಿನ್ನಾವುದು (ಎಂದ ಮೇಲೆ ಇನ್ನು ತಡವೇತಕ್ಕೆ?) ಉಗ್ರಾ ಆಜಿಯೊಳ್ (ಘೋರ ಯುದ್ಧದಲ್ಲಿ) ದೋರ್ವಳದಿಂದಂ ತನ್ನ ಮೆಚ್ಚಂ ಸಲಿಸಿಯೆ (ದೋರ್ವಳದಿಂದಂ - ತೋಳ್ಬಲದಿಂದ, - ನನ್ನ ಬಾಹುಬಲದಿಂದಲೇ ಅವನ ಆಶೆಯನ್ನು ಪೂರೈಸಿ) ನೆಲನಂ ಕೊಳ್ವೆನ್ ಇಂ ತಳ್ವೆನ್ (ಇನ್ನು ತಡ ಮಾಡುವುದಿಲ್ಲ.) ಎಮ್ಮೊಳ್ ಕಳನಂ ಬೇಡಿ ಎಯ್ದೆ ಕೇಳ್ದೆಂ (ನಮ್ಮಲ್ಲಿ ಯುದ್ಧಮಾಡುವುದನ್ನು ಬಯಸಿ ಚೆನ್ನಾಗಿ/ಸ್ಪಷ್ಟವಾಗಿ ಕೇಳಿದ್ದಾನೆ.) ಬಗೆಯನು ಅಱಿಯಲಾಯ್ತು (ಅವನ ಅಭಿಪ್ರಾಯವನ್ನು ಚೆನ್ನಾಗಿ ತಿಳಿಯಲಾಯ್ತು) ಏೞಿಂ ಅಂತೆಂದೆ ಪೇೞಿಂ (ಹಾಗೆಯೇ ಹೇಳಿ ಎಂದು ಸಂಜಯನನ್ನು ಕಳುಹಿಸಿದನು.)
ಪದ್ಯ-೯೩:ಅರ್ಥ:ದುರ್ಯೋಧನನನ್ನು ಎದುರಿಸಿ ಯುದ್ಧಮಾಡಿದ ಹೊರತು ಭೂಮಿಯನ್ನು ಕೊಡುವುದಿಲ್ಲ ಎಂದು ದೂತನ ಮೂಲಕ ಹೇಳಿ ಕಳುಹಿಸಿ ಈಗ ಕುರುಕ್ಷೇತ್ರವನ್ನು ಯುದ್ಧರಂಗವನ್ನಾಗಿ ನಿಶ್ಚಯಿಸಿದ್ದೇನೆ ಎಂದ ಮೇಲೆ ಇನ್ನು ತಡವೇತಕ್ಕೆ? ಘೋರ ಯುದ್ಧದಲ್ಲಿ ನನ್ನ ಬಾಹುಬಲದಿಂದಲೇ ಅವನ ಆಶೆಯನ್ನು ಪೂರೈಸಿ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ. ಇನ್ನು ತಡ ಮಾಡುವುದಿಲ್ಲ. ನಮ್ಮಲ್ಲಿ ಯುದ್ಧಮಾಡುವುದನ್ನು ಬಯಸಿ ಚೆನ್ನಾಗಿ/ಸ್ಪಷ್ಟವಾಗಿ ಕೇಳಿದ್ದಾನೆ. ಅವನ ಅಭಿಪ್ರಾಯವನ್ನು ಚೆನ್ನಾಗಿ ತಿಳಿಯಲಾಯ್ತು; ಇನ್ನು ಏಳಿ; ದುರ್ಯೋಧನನಿಗೆ ಹಾಗೆಯೇ ಹೇಳಿ ಎಂದು ಸಂಜಯನನ್ನು ಕಳುಹಿಸಿದನು.
ವ|| ಎಂದಜಾತಶತ್ರು ಶತ್ರುಪಕ್ಷಕ್ಷಯಂ ಮಾಡುವುದ್ಯೋಗಮನೆತ್ತಿಕೊಂಡು ಪ್ರಯಾಣ ಭೇರಿಯಂ ಪೊಯ್ಸಿದಾಗಳ್-
ವಚನ:ಪದವಿಭಾಗ-ಅರ್ಥ:ಎಂದು ಅಜಾತಶತ್ರು (ಧರ್ಮಜನು) ಶತ್ರುಪಕ್ಷ ಕ್ಷಯಂ (ಶತ್ರುಗಳ ಕಡೆಯವರನ್ನು ನಾಶಮಾಡುವ) ಮಾಡುವ ಉದ್ಯೋಗಮನು ಎತ್ತಿಕೊಂಡು (ಅಂಗೀಕರಿಸಿ) ಪ್ರಯಾಣ ಭೇರಿಯಂ ಪೊಯ್ಸಿದಾಗಳ್-
ವಚನ:ಅರ್ಥ:ಧರ್ಮಜನು ಶತ್ರುಗಳ ಕಡೆಯವರನ್ನು ನಾಶಮಾಡುವ ಕಾರ್ಯವನ್ನು ಅಂಗೀಕರಿಸಿ ಪ್ರಯಾಣಭೇರಿಯನ್ನು ಹೊಡೆಯಿಸಿದನು-
ಮ|| ದೆಸೆಯಂ ಪೊತ್ತ ಮದೇಭರಾಜಿ ದೆಸೆಗೆಟ್ಟೋಡಲ್ತಗುಳ್ದತ್ತು ಸ
ಪ್ತ ಸಮುದ್ರಂ ಕರೆಗಣ್ಮಿ ತನ್ನವಧಿಯಂ ದಾಂಟಿತ್ತಜಾಂಡಂ ಸಿಡಿ|
ಲ್ದು ಸಿಡಿಲ್ಪೊಯ್ದೊಡೆದೊಂದು ತತ್ತಿಯವೊಲಾಯ್ತೆಂಬೊಂದು ಸಂದೇಹಮಂ
ಪೊಸತಂ ಭೂಭುವನಕ್ಕೆ ಮಾಡಿದುದು ತತ್ಸನ್ನಾಹಭೇರೀರವಂ|| ೯೪ ||
ಪದ್ಯ-೯೪:ಪದವಿಭಾಗ-ಅರ್ಥ:ದೆಸೆಯಂ ಪೊತ್ತ ಮದೇಭರಾಜಿ (ದಿಗ್ಗಜಗಳ ಸಾಲು) ದೆಸೆಗೆಟ್ಟು ಓಡಲ್ ತಗುಳ್ದತ್ತು (ಪ್ರಾರಂಭಿಸಿದವು,)ಸಪ್ತ ಸಮುದ್ರಂ ಕರೆಗಣ್ಮಿ (ಮೇರೆಮೀರಿ) ತನ್ನವಧಿಯಂ ದಾಂಟಿತ್ತು (ಎಲ್ಲೆಯನ್ನು ದಾಟಿತ್ತು,) ಅಜಾಂಡಂ ಸಿಡಿಲ್ದು ಸಿಡಿಲ್ ಪೊಯ್ದು (ಹೊಡೆದು) ಒಡೆದ ಒಂದು ತತ್ತಿಯವೊಲ್ ಆಯ್ತೆಂಬ ಒಂದು ಸಂದೇಹಮಂ ಪೊಸತಂ ಭೂಭುವನಕ್ಕೆ ಮಾಡಿದುದು ತತ್ ಸನ್ನಾಹ ಭೇರೀರವಂ (ಆ ಸೈನ್ಯಸಿದ್ಧತೆಯ ಭೇರಿಯು ಶಬ್ದವು)
ಪದ್ಯ-೯೫:ಅರ್ಥ:ಭೂಭಾಗದ ದಿಕ್ಕುಗಳನ್ನು ಹೊತ್ತಿರುವ ಎಂಟು ದಿಕ್ಕಿನ ಆನೆಗಳು ಮದದಿಂದ ಕೂಡಿದ ದಿಗ್ಗಜಗಳ ಸಾಲು ದಿಕ್ಕೆಟ್ಟು ಓಡಲು ಪ್ರಾರಂಭಿಸಿದವೋ, ಏಳು ಸಮುದ್ರಗಳೂ ಮೇರೆಮೀರಿ ತಮ್ಮ ಎಲ್ಲೆಯನ್ನು ದಾಟಿದುವೋ, ಬ್ರಹ್ಮಾಂಡವು ಸಿಡಿದು ಹೋಗಿ ಸಿಡಿಲು ಹೊಡೆದು ಒಡೆದು ಚೂರಾದ ಒಂದು ಮೊಟ್ಟೆಯಂತಾಯಿತೋ ಎಂಬ ಒಂದು ಸಂದೇಹವನ್ನು ಆ ಸೈನ್ಯಸಿದ್ಧತೆಯ ಭೇರಿಯು ಶಬ್ದವು ಭೂಲೋಕಕ್ಕೆಲ್ಲ ಉಂಟುಮಾಡಿತು.
ಮ||ಕರಿಗಳ್ ಭೃಂಗಕುಳಾಕುಳೀಕೃತ ಕಟೋಪೇತಂಗಳೊಂಬತ್ತು ಸಾ
ಸಿರಮಂತೊಂದು ಗಜಕ್ಕೆ ನೂಱು ರಥಮಂತಾ ಸ್ಯಂದನಕ್ಕೊಂದರೊಳ್|
ತುರಗಂ ನೂಱನಿತುಂ ತುರಂಗದಳಮೊಂದೊಂದರ್ಕೆ ನೂಱಾಳ್ ತಗು
ಳ್ದಿರೆ ಬಲ್ಲರ್ ನಡೆ ನೋಡಿ ಕೂಡೆ ಪಡೆದತ್ತಕ್ಷೋಹಿಣೀಸಂಖ್ಯೆಯಂ|| ೯೫ ||
ಪದ್ಯ-೯೫:ಪದವಿಭಾಗ-ಅರ್ಥ:ಕರಿಗಳ್ (ಆನೆಗಳು) ಭೃಂಗಕುಳ ಆಕುಳೀಕೃತ (ದುಂಬಿಗಳ ಸಮೂಹದಿಂದ ಹಿಂಸಿಸಲ್ಪಟ್ಟ) ಕಟೋಪೇತಂಗಳ (ಕಪೋಲಗಳನ್ನುಳ್ಳ) ಒಂಬತ್ತು ಸಾಸಿರಂ, ಅಂತೊಂದು ಗಜಕ್ಕೆ ನೂಱು ರಥಮ್ (ಅಂತಹ ಒಂದು ಆನೆಗೆ ನೂರು ತೇರುಗಳು;) ಆಂತು ಆ ಸ್ಯಂದನಕ್ಕ (ರಥಕ್ಕೆ) ಅದರೊಳ್ ತುರಗಂ ನೂಱು (ಆ ತೇರು ಒಂದೊಂದಕ್ಕೆ ನೂರು ಕುದುರೆಗಳು,) ಅನಿತುಂ ತುರಂಗದಳಂ ಒಂದೊಂದರ್ಕೆ ನೂಱು ಆಳ್ ತಗುಳ್ದಿರೆ (ಒಂದೊಂದಕ್ಕೆ ನೂರು ಆಳು) ಬಲ್ಲರ್ ನಡೆ ನೋಡಿ ಕೂಡೆ (ಒಟ್ಟು ) ಪಡೆದತ್ತು ಅಕ್ಷೋಹಿಣೀ ಸಂಖ್ಯೆಯಂ (ಒಂದು ಅಕ್ಷೋಹಿಣೀ ಎಂದೆನಿಸಿತು)
ಪದ್ಯ-೯೫:ಅರ್ಥ:ದುಂಬಿಗಳ ಸಮೂಹದಿಂದ ಹಿಂಸಿಸಲ್ಪಟ್ಟ ಕಪೋಲಗಳನ್ನುಳ್ಳ ಒಂಬತ್ತು ಸಾವಿರ ಆನೆಗಳು, ಅಂತಹ ಒಂದು ಆನೆಗೆ ನೂರು ತೇರುಗಳು; ಆ ತೇರು ಒಂದೊಂದಕ್ಕೆ ನೂರು ಕುದುರೆಗಳು, ಅಷ್ಟು ಕುದುರೆಯ ಸೈನ್ಯದ ಒಂದೊಂದಕ್ಕೆ ನೂರು ಆಳು ಸೇರಿಕೊಂಡಿರಲು, ಅದು ತಿಳಿದವರ ಗಣನೆಯ ಪ್ರಕಾರ ಒಟ್ಟು ಒಂದು ಅಕ್ಷೋಹಿಣೀ ಎಂದೆನಿಸಿತು (ಆನೆ ೯೦೦೦;+ ರಥ ೯೦೦೦X ನೂರು; + ಕುದುರೆ೯೦೦೦X ನೂರು X ನೂರು; + ಪದಾತಿ ೯೦೦೦X ನೂರು X ನೋರು X ನೂರು : ಇದು ಪಂಪನ ಲೆಕ್ಕ, ಬೇರೆ ರೀತಿಯೂ ಇದೆ.)
ವ|| ಅಂತು ಮಾಡಿದ ಪರಿಸಂಖ್ಯೆಯೊಳೊಂದು ಅಕ್ಷೋಹಿಣೀ ಬಲಂಬರೆಸು ತಲೆಬೞಿವೞೆಯೆಂದು ಅಭಿಮನ್ಯುಗೆ ಕೂಸಂ ಕೊಟ್ಟ ಜಟ್ಟಿಗಂ ವಿರಾಟಂ ಶ್ವೇತನುತ್ತರಂ ಶಂಖನೆಂಬ ಮೂವರ್ ಮಕ್ಕಳುಂ ಶತಾನೀಕ ಶತದ್ಯುಮ್ನ ಶತಚಂದ್ರಂ ಮೊದಲಾಗಿ ಪನ್ನೊರ್ವರ್ ತಮ್ಮಂದಿರುಂಬೆರಸು ನೆಲನದಿರೆ ಮುಂಗೋಳೊಳ್ ನಡೆಯೆ ದ್ರೌಪದಿಯ ಕೊಟ್ಟ ನಣ್ಪುಮಂ ದ್ರೋಣನೊಳಾದ ಪರಿಭವಮುಮಂ ನೆನೆದೊಂದಕ್ಷೋಹಿಣೀ ಬಲಂಬೆರಸು ದ್ರುಪದಂ ಧೃಷ್ಚದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯೂತ್ತಮೌಜ ಪುರುಕುತ್ಸು ವಿಚಿತ್ರಾದಿಗಳಪ್ಪ ತನ್ನ ಮಕ್ಕಳ್ವೆರಸು ನೆಲಂ ಮೂರಿವಿಟ್ಟಂತೆ ಬಲವಕ್ಕದೊಳ್ ನಡೆಯೆ ಸುಭದ್ರೆಯ ಕೊಟ್ಟ ನಣ್ಪಿಂಗನುಬಲಮಾಗಿ ಪುಂಡರೀಕಾಕ್ಷನ ತಮ್ಮಂ ಸಾತ್ಯಕಿ ವೃಷ್ಣಿ ಕಾಂಭೋಜಕುಳತಿಳಕರಪ್ಪ ಯಾದವರ ಕುಲದೊಡನೆಯಕ್ಷೋಹಿಣೀಪತಿ ನಾಯಕಂ ಭೂಪತಿಯೆಡವಕ್ಕದೊಳ್ ನಡೆಯೆ ಕೇಕಯ ವಿಷಯಾಶ್ವರರಪ್ಪ ಕೈಕಯರಯ್ವರುಮೊಂದಕ್ಷೋಹಿಣೀ ಬಲದೊಡನೆ ಸಿಡಿಲನುರುಳಿ ಮಾಡಿದಂತು ಪಿಂಗೋಳೊಳ್ ನಡೆಯೆ ಪಾಂಡ್ಯಂ ಶ್ರೀಜಯಸೋಮಕರೊಡನೊಂದಕ್ಷೋಹಿಣೀ ಬಲಂಬೆರಸು ಸುತ್ತಿಱಿದು ಬಳಸಿ ಬರೆ ಧರಣೀಂದ್ರನ ತಂಗೆಯಪ್ಪ ಕನಕಲತೆಗಂ ವಿಕ್ರಮಾರ್ಜುನಂಗಂ ಪುಟ್ಟಿದ ಮಗನಿಳಾವಂತನನಂತ ನಾಗರಾಜ ಬಲಂಬೆರಸು ನಾಗಲೋಕಮೆ ಕಿೞ್ತೆೞ್ದುಬರ್ಪಂತೆ ಬರೆ ಹಿಡಿಂಬೆಗಂ ಭೀಮಂಗಂ ಪುಟ್ಟಿದ ಮಗಂ ಘಟೋತ್ಕಚನಱುವತ್ತೆಂಟು ಕೋಟಿ ರಾಕ್ಷಸ ಬಲಂಬರೆಸು ಬರೆ ಸಾಮಂತ ಚೂಡಾಮಣಿಯ ಕೃತೋಪಕಾರಮಂ ನೆನದಂಗದರ್ಪಣನೆಂಬ ಗಂಧರ್ವಂ ನಾಲ್ಕು ಕೋಟಿ ಗಂಧರ್ವಬಲಮುಮಱುವತ್ತು ಸಾಸಿರ ಗಿಳಿಯ ಬಣ್ಣದ ಕುದುರೆಗಳುಂ ಬೆರಸು ಗಂಧರ್ವಲೋಕಮೆ ಕಿೞ್ತೆೞ್ದು ಬರ್ಪಂತೆ ಬರೆ ಮಹಾ ಪ್ರಚಂಡರುಂ ಪ್ರತಾಪಿಗಳುಮಪ್ಪ ಪಂಚಪಾಂಡವರುಮಂಕದ ಅಭೀಮನ್ಯುವುಂ ಕೆಲ ಕೆಲದೊಳೋಲಗಿಸುತ್ತುಂ ಬರೆ ಕೊಂತಿಯ ಮಾವನಪ್ಪ ಕೊಂತಿಭೋಜನುಂ ಸೋಮಕಂ ಬೆರಸೊಂದಕ್ಷೋಹಿಣೀ ಬಲಂಬೆರಸು ಬರೆ ಮತ್ತಂ ಪ್ರಭದ್ರೈಬಲಮುಮಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟಕ ರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕಾಂಧ್ರ ದ್ರವಿಳ ಗಜಮುಖಾಶ್ವ ಮುಖೋಷ್ಟ್ರಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣಾಶ್ವಕರ್ಣ ತುರುಷ್ಕ ಪ್ರವರ ನಾನಾದ್ವೀಪ ದೇಶಾಶ್ವರರುಂ ಪಗೆಗಂ ಪಾೞಿಗಂ ಪರಿಭವಕ್ಕಂ ಪೞವೆಗಂ ಪಾಗುಡಕ್ಕಂ ಪಳಬದ್ದಕ್ಕಂ ವೈವಾಹಿಕ ಸಂಬಂಧಕ್ಕಂ ಮೈತ್ರಕ್ಕಂ ಮೇರೆಗಂ ಅಟ್ಟಟ್ಟಿಗಂ ಸ್ವಾಮಿ ಭೃತ್ಯ ಸಂಬಂಧಕ್ಕಂ ದೋರ್ವಲಕ್ಕಂ ಮೈಮೆಗಂ ಮೋಕ್ಷಕ್ಕಂ ಮಹಾಸಮುದ್ರದೊಳ್ ಮಹಾನದಿಗಳ್ ಕೂಡುವಂತೇೞಕ್ಷೋಹಿಣೀ ಬಲಂ ಕೂಡಿ ನಡೆಯೆ ತನ್ನ ನಾಲ್ವರ್ ತಮ್ಮಂದಿರೊಡನೆ ಮಂಗಳವಸದನಂಗೊಂಡು ಮಂಗಳ ಪ್ರಧಾನೋಚಿತ ವಿಜಯಗಜಮನೇಱ ವಿದ್ಯೋತಮಾಗಿ ದಕ್ಷಿಣಾವರ್ತಮಪ್ಪ ಹೋಮಾಗ್ನಿಯಂ ಬಲಂಗೊಂಡು ಬಲದ ಕೋಡ ಮೇಲೆ ಕೆಯ್ಯಂ ಪೇಱಿ ಮುಖವಿಕ್ಷೇಪಣಂಗೆಯ್ದು ಘನಾಘನನಿನಾದದಿಂ ಬೃಂಹಿತಂಗೆಯ್ವ ವಿಜಯಗಜಮಂ ನೆಲನಂ ಪೊಕ್ಕಡಂಗಿದ ಪಗೆವರನಗುೞ್ದು ಕೊಲ್ವುದನುದಾಹರಿಸುವಂತೆ ದಕ್ಷಿಣ ಚರಣದೊಳ್ ನೆಲನಂ ಪರಡಿ ಗಂಭೀರನಿನಾದದಿಂ ಹೇಷಿತಂಗೆಯ್ವ ವಿಜಯಹಯಮುಂ ವಿಜಯನ ವಿಜಯಮನೆ ಸೂಚಿಸೆ-
ವಚನ:ಪದವಿಭಾಗ-ಅರ್ಥ:ಅಂತು ಮಾಡಿದ ಪರಿಸಂಖ್ಯೆಯೊಳು ಒಂದಕ್ಷೋಹಿಣೀ ಬಲಂ ಬರೆಸು ತಲೆಬೞವೞೆಯೆಂದು (ತಲೆಯನ್ನೇ ಬಳುವಳಿಯನ್ನಾಗಿ ) ಅಭಿಮನ್ಯುಗೆ ಕೂಸಂ (ಮಗಳನ್ನು) ಕೊಟ್ಟ ಜಟ್ಟಿಗಂ (ವೀರ) ವಿರಾಟಂ ಶ್ವೇತನು ಉತ್ತರಂ ಶಂಖನೆಂಬ ಮೂವರ್ ಮಕ್ಕಳುಂ, ಶತಾನೀಕ ಶತದ್ಯುಮ್ನ ಶತಚಂದ್ರಂ ಮೊದಲಾಗಿ ಪನ್ನೊರ್ವರ್ ತಮ್ಮಂದಿರುಂಬೆರಸು (ಪತ್ತು+ಒಬ್ಬ, ಹನ್ನೊಂದು ತಮ್ಮಂದಿರೊಡಗೂಡಿ) ನೆಲನು ಅದಿರೆ ಮುಂಗೋಳೊಳ್ (ಮುಂದಿನಭಾಗದಲ್ಲಿ) ನಡೆಯೆ ದ್ರೌಪದಿಯ ಕೊಟ್ಟ ನಣ್ಪುಮಂ (ಬಾಂಧವ್ಯವನ್ನೂ) ದ್ರೋಣನೊಳಾದ ಪರಿಭವಮುಮಂ (ಸೋಲನ್ನೂ ಅವಮಾನವನ್ನೂ) ನೆನೆದು ಒಂದು ಅಕ್ಷೋಹಿಣೀ ಬಲಂಬೆರಸು (ಸೈನ್ಯಸಮೇತನಾಗಿ) ದ್ರುಪದಂ ಧೃಷ್ಚದ್ಯುಮ್ನ ಶಿಖಂಡಿ ಚೇಕಿತಾನ ಯುಧಾಮನ್ಯೂತ್ತಮೌಜ ಪುರುಕುತ್ಸು ವಿಚಿತ್ರಾದಿಗಳಪ್ಪ ತನ್ನ ಮಕ್ಕಳ್ವೆರಸು ನೆಲಂ ಮೂರಿವಿಟ್ಟಂತೆ ಬಲವಕ್ಕದೊಳ್ (ಭೂಮಿಯ ಜನವೆಲ್ಲ ಗುಂಪುಕೂಡಿದ ಹಾಗೆ ಬಲಪಾರ್ಶ್ವದಲ್ಲಿ) ನಡೆಯೆ ಸುಭದ್ರೆಯ ಕೊಟ್ಟ ನಣ್ಪಿಂಗ ಅನುಬಲಮಾಗಿ ಪುಂಡರೀಕಾಕ್ಷನ ತಮ್ಮಂ ಸಾತ್ಯಕಿ (ನಂಟುತನಕ್ಕೆ ಅನುಗುಣವಾಗಿ ಶ್ರೀಕೃಷ್ಣನ ತಮ್ಮನಾದ ಸಾತ್ಯಕಿಯು) ವೃಷ್ಣಿ ಕಾಂಭೋಜ ಕುಳತಿಳಕರಪ್ಪ ಯಾದವರ ಕುಲದೊಡನು ಅಕ್ಷೋಹಿಣೀಪತಿ ನಾಯಕಂ ಭೂಪತಿಯ ಎಡವಕ್ಕದೊಳ್ ನಡೆಯೆ (ಒಂದು ಅಕ್ಷೋಹಿಣೀ ಸೈನ್ಯದ ನಾಯಕನಾಗಿ ರಾಜನ ಎಡಭಾಗದಲ್ಲಿ ನಡೆದನು.) ಕೇಕಯ ವಿಷಯಾಶ್ವರರಪ್ಪ ಕೈಕಯರು ಅಯ್ವರುಂ ಒಂಮೊಂದಕ್ಷೋಹಿಣೀ ಬಲದೊಡನೆ ಸಿಡಿಲನು ಉರುಳಿ ಮಾಡಿದಂತು ಪಿಂಗೋಳೊಳ್ ನಡೆಯೆ (ಹಿಂಭಾಗದಲ್ಲಿ ನಡೆದರು.) ಪಾಂಡ್ಯಂ ಶ್ರೀಜಯಸೋಮಕರೊಡನೆ ಒಂದು ಅಕ್ಷೋಹಿಣೀ ಬಲಂಬೆರಸು ಸುತ್ತಿಱಿದು ಬಳಸಿ ಬರೆ ಧರಣೀಂದ್ರನ ತಂಗೆಯಪ್ಪ ಕನಕಲತೆಗಂ ವಿಕ್ರಮಾರ್ಜುನಂಗಂ ಪುಟ್ಟಿದ ಮಗನಿಳಾವಂತನನಂತ ನಾಗರಾಜ ಬಲಂಬೆರಸು ನಾಗಲೋಕಮೆ ಕಿೞ್ತೆೞ್ದುಬರ್ಪಂತೆ ಬರೆ ಹಿಡಿಂಬೆಗಂ ಭೀಮಂಗಂ ಪುಟ್ಟಿದ ಮಗಂ ಘಟೋತ್ಕಚನಱುವತ್ತೆಂಟು ಕೋಟಿ ರಾಕ್ಷಸ ಬಲಂಬರೆಸು ಬರೆ ಸಾಮಂತ ಚೂಡಾಮಣಿಯ ಕೃತೋಪಕಾರಮಂ ನೆನದು ಅಂಗದರ್ಪಣನೆಂಬ ಗಂಧರ್ವಂ ನಾಲ್ಕು ಕೋಟಿ ಗಂಧರ್ವಬಲಮುಂ ಅಱುವತ್ತು ಸಾಸಿರ ಗಿಳಿಯ ಬಣ್ಣದ ಕುದುರೆಗಳುಂ ಬೆರಸು ಗಂಧರ್ವಲೋಕಮೆ ಕಿೞ್ತೆೞ್ದು ಬರ್ಪಂತೆ ಬರೆ (ಕಿತ್ತು ಎದ್ದು ಬರುವ ಹಾಗೆ) ಮಹಾ ಪ್ರಚಂಡರುಂ ಪ್ರತಾಪಿಗಳುಮಪ್ಪ ಪಂಚಪಾಂಡವರುಮಂಕದ ಅಭೀಮನ್ಯುವುಂ ಕೆಲ ಕೆಲದೊಳೋಲಗಿಸುತ್ತುಂ ಬರೆ ಕೊಂತಿಯ ಮಾವನಪ್ಪ ಕೊಂತಿಭೋಜನುಂ ಸೋಮಕಂ ಬೆರಸೊಂದಕ್ಷೋಹಿಣೀ ಬಲಂಬೆರಸು ಬರೆ ಮತ್ತಂ ಪ್ರಭದ್ರೈಬಲಮುಮಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟಕ ರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕಾಂಧ್ರ ದ್ರವಿಳ ಗಜಮುಖಾಶ್ವ ಮುಖೋಷ್ಟ್ರಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣಾಶ್ವಕರ್ಣ ತುರುಷ್ಕ ಪ್ರವರ ನಾನಾದ್ವೀಪ ದೇಶಾಶ್ವರರುಂ ಪಗೆಗಂ ಪಾೞಿಗಂ ಪರಿಭವಕ್ಕಂ ಪೞವೆಗಂ (ಧರ್ಮಕ್ಕೂ ಸೋಲಿಗೂ ಹಳೆಯ ಸಂಬಂಧಕ್ಕೂ )ಪಾಗುಡಕ್ಕಂ ಪಳಬದ್ದಕ್ಕಂ ವೈವಾಹಿಕ ಸಂಬಂಧಕ್ಕಂ (ಕಪ್ಪಕಾಣಿಕೆಗೂ ಲಾಭ ಮತ್ತು ಪ್ರಯೋಜನಾದಿಗಳಿಗೂ ಮದುವೆಯ ನಂಟುತನಕ್ಕೂ ) ಮೈತ್ರಕ್ಕಂ ಮೇರೆಗಂ ಅಟ್ಟಟ್ಟಿಗಂ ಸ್ವಾಮಿ ಭೃತ್ಯ ಸಂಬಂಧಕ್ಕಂ (ಸ್ನೇಹಕ್ಕೂ ಗಡಿಯಲ್ಲಿದ್ದುದಕ್ಕೂ ದೌತ್ಯಕ್ಕೂ) ದೋರ್ವಲಕ್ಕಂ ಮೈಮೆಗಂ ಮೋಕ್ಷಕ್ಕಂ (ಆಳರಸರ ಸಂಬಂಧಕ್ಕೂ ತೋಳಬಲಕ್ಕೂ ಮಹಿಮೆಗೂ ಮೋಕ್ಷಕ್ಕೂ ಹೀಗೆ ನಾನಾ ಕಾರಣಕ್ಕಾಗಿ) ಮಹಾಸಮುದ್ರದೊಳ್ ಮಹಾನದಿಗಳ್ ಕೂಡುವಂತೆ ಏೞಕ್ಷೋಹಿಣೀ (ಏಳು ಅಕ್ಷೋಹಿಣಿ) ಬಲಂ ಕೂಡಿ ನಡೆಯೆ ತನ್ನ ನಾಲ್ವರ್ ತಮ್ಮಂದಿರೊಡನೆ ಮಂಗಳವಸದನಂ ಗೊಂಡು ಮಂಗಳ ಪ್ರಧಾನೋಚಿತ ವಿಜಯಗಜಮನೇಱಿ ವಿದ್ಯೋತಮಾಗಿ ದಕ್ಷಿಣಾವರ್ತಮಪ್ಪ ಹೋಮಾಗ್ನಿಯಂ ಬಲಂಗೊಂಡು ಬಲದ ಕೋಡ ಮೇಲೆ ಕೆಯ್ಯಂ ಪೇಱಿ ಮುಖವಿಕ್ಷೇಪಣಂಗೆಯ್ದು ಘನಾಘನನಿನಾದದಿಂ ಬೃಂಹಿತಂಗೆಯ್ವ ವಿಜಯಗಜಮಂ (ಮಂಗಳ ಆಭರಣಗಳಿಂದ ಅಲಂಕೃತನಾಗಿ ಮಂಗಳಪ್ರಧಾನವಾದ) ನೆಲನಂ ಪೊಕ್ಕಡಂಗಿದ ಪಗೆವರನು ಉಗುೞ್ದು ಕೊಲ್ವುದನು ಉದಾಹರಿಸುವಂತೆ (ಭೂಮಿಯನ್ನು ಪ್ರವೇಶಿಸಿ ಅಡಗಿಕೊಂಡಿರುವ ಶತ್ರುಗಳನ್ನು ಅಗೆದು ಕೊಲ್ವುದನ್ನು ಉದಾಹರಿಸುವಂತೆ) ದಕ್ಷಿಣ ಚರಣದೊಳ್ ನೆಲನಂ ಪರಡಿ ಗಂಭೀರನಿನಾದದಿಂ ಹೇಷಿತಂಗೆಯ್ವ ವಿಜಯಹಯಮುಂ ವಿಜಯನ ವಿಜಯಮನೆ ಸೂಚಿಸೆ(ಬಲಗಾಲಿನಿಂದ ನೆಲವನ್ನು ಕೆದರಿ ಗಂಭೀರ ಧ್ವನಿಯಿಂದ ಕೆನೆಯುವ ವಿಜಯಹಯವೂ ಅರ್ಜುನನ ವಿಜಯವನ್ನೇ ಸೂಚಿಸಿದುವು)-
ವಚನ:ಅರ್ಥ:ವ|| ಹೀಗೆ ಮಾಡಿದ ಲೆಕ್ಕದ (ಈ ಗಣನೆಗೆ ಅನುಗುಣವಾದ) ಒಂದು ಅಕ್ಷೋಹಿಣೀ ಸೈನ್ಯದಿಂದ ಕೂಡಿ ತನ್ನ ತಲೆಯನ್ನೇ ಬಳುವಳಿಯನ್ನಾಗಿ ಮಾಡಿ ಉತ್ತರನಿಗೆ ಮಗಳನ್ನು ಕೊಟ್ಟ ಶೂರನಾದ ವಿರಾಟನು, ಶ್ವೇತ, ಉತ್ತರ, ಶಂಖರೆಂಬ ಮೂರು ಮಕ್ಕಳನ್ನೂ ಶತಾನೀಕ, ಶತದ್ಯುಮ್ನ, ಶತಚಂದ್ರ ಮೊದಲಾದ ಹನ್ನೊಂದು ತಮ್ಮಂದಿರೊಡಗೂಡಿ ಭೂಮಿಯು ನಡುಗುವಂತೆ ಮುಂಭಾಗದಲ್ಲಿ ನಡೆದನು. ದ್ರೌಪದಿಯನ್ನು ಕೊಟ್ಟಿರುವ ಬಾಂಧವ್ಯವನ್ನೂ ದ್ರೋಣಾಚಾರ್ಯನಿಂದು ಉಂಟಾದ ಅವಮಾನವನ್ನೂ ನೆನೆಸಿಕೊಂಡು ಒಂದು ಅಕ್ಷೋಹಿಣೀ ಸೈನ್ಯಸಮೇತನಾಗಿ ದ್ರುಪದನು ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಯುಧಾಮನ್ಯೂತ್ತಮೌಜ, ಪುರುಕುತ್ಸು, ವಿಚಿತ್ರರೇ ಮೊದಲಾದ ತನ್ನ ಮಕ್ಕಳೊಡಗೂಡಿ ಭೂಮಿಯ ಜನವೆಲ್ಲ ಗುಂಪುಕೂಡಿದ ಹಾಗೆ ಬಲಪಾರ್ಶ್ವದಲ್ಲಿ ನಡೆದನು. ಸುಭದ್ರೆಯನ್ನು ಕೊಟ್ಟಿರುವ ನಂಟುತನಕ್ಕೆ ಅನುಗುಣವಾಗಿ ಶ್ರೀಕೃಷ್ಣನ ತಮ್ಮನಾದ ಸಾತ್ಯಕಿಯು ವೃಷ್ಣಿ ಕಾಂಭೋಜಕುಲತಿಲಕರಾದ ಯಾದವಕುಲದವರೊಡನೆ ಒಂದು ಅಕ್ಷೋಹಿಣೀ ಸೈನ್ಯದ ನಾಯಕನಾಗಿ ರಾಜನ ಎಡಭಾಗದಲ್ಲಿ ನಡೆದನು. ಕೇಕಯ ದೇಶಾಶರಾದ ಕೈಕಯರು ಐದು ಮಂದಿಯೂ ಒಂದು ಅಕ್ಷೋಹಿಣೀ ಬಲದೊಡನೆ ಸಿಡಿಲನ್ನು ಉಂಡೆ ಮಾಡಿದ ಹಾಗೆ ಹಿಂಭಾಗದಲ್ಲಿ ನಡೆದರು. ಪಾಂಡ್ಯನು ಶ್ರೀಜಯ ಸೋಮಕರೊಡನೆ ಒಂದಕ್ಷೋಹಿಣೀ ಸೈನ್ಯಸಮೇತನಾಗಿ ಸುತ್ತಲೂ ವ್ಯಾಪಿಸಿ ಬಂದನು. ರಾಜನ ತಂಗಿಯಾದ ಕನಕಲತೆಗೂ ವಿಕ್ರಮಾರ್ಜುನನಿಗೂ ಹುಟ್ಟಿದ ಮಗನಾದ ಇಳಾವಂತನು ಸಮಸ್ತ ನಾಗರಾಜಸೈನ್ಯದೊಡನೆ ಪಾತಾಳಲೋಕವೇ ಕಿತ್ತು ಎದ್ದುಬರುವಂತೆ ಬಂದನು. ಹಿಡೆಂಬೆಗೂ ಭೀಮನಿಗೂ ಹುಟ್ಟಿದ ಘಟೋತ್ಕಚನು ಅರವತ್ತೆಂಟು ಕೋಟಿ ರಾಕ್ಷಸ ಸೈನ್ಯದೊಡಗೂಡಿ ಬಂದನು. ಅರ್ಜುನನು ಮಾಡಿದ ಉಪಕಾರವನ್ನು ನೆನೆಸಿಕೊಂಡು ಅಂಗದರ್ಪಣನೆಂಬ ಗಂಧರ್ವನು ನಾಲ್ಕು ಕೋಟಿ ಗಂಧರ್ವಸೈನ್ಯವೂ ಅರವತ್ತು ಸಾವಿರ ಗಿಳಿಯ ಬಣ್ಣದ ಕುದುರೆಗಳೂ ಕೂಡಿ ಗಂಧರ್ವಲೋಕವೇ ಕಿತ್ತು ಎದ್ದು ಬರುವ ಹಾಗೆ ಬಂದನು. ಮಹಾಪ್ರಚಂಡರೂ ಪ್ರತಾಪಿಗಳೂ ಆದ ಶ್ರುತಸೋಮಕರೇ ಮೊದಲಾದ ಪಂಚ ಉಪಪಾಂಡವರೂ ಶೂರನಾದ ಅಭಿಮನ್ಯುವೂ ಪಕ್ಕಪಕ್ಕದಲ್ಲಿ ಸೇವೆ ಮಾಡುತ್ತಿದ್ದರು. ಕುಂತಿಯ ಮಾವನಾದ ಕುಂತಿಭೋಜನು ಸೋಮಕನೊಡಗೂಡಿ ಒಂದಕ್ಷೋಹಿಣೀ ಸೈನ್ಯದ ಜೊತೆಯಲ್ಲಿ ಬಂದು ಸೇರಿದನು. ಮತ್ತು ಪ್ರಭದ್ರೈಕ ಬಲವೂ ಅಂಗ ವಂಗ ಕಳಿಂಗ ಕೊಂಗ ಕೊಂಕಣ ಗೊಲ್ಲ ಕಾಂಭೋಜ ಮಗಧ ಸೌರಾಷ್ಟ್ರ ವರಾಟ ಲಾಟ ಕರ್ಣಾಟ ಕರಹಾಟ ಮಳಯ ಮಾಳವ ನೇಪಾಳ ಪಾರಿವ ಪಾರಿಯಾತ್ರ ಬರ್ಬರ ಕೋಸಳ ಕಾಶಿ ಕಾಶ್ಮೀರ ಕೌಶಿಕ ಆಂಧ್ರ ದ್ರವಿಡ ಗಜಮುಖ ಅಶ್ವಮುಖ ಉಷ್ಟ್ರಮುಖ ಖರಮುಖ ಮೇಷಮುಖ ಲಂಬಕರ್ಣ ಹಸ್ತಿಕರ್ಣ ಅಶ್ವಕರ್ಣ ತುರುಷ್ಕರೇ ಮುಖ್ಯರಾದ ನಾನಾದ್ವೀಪದ ಒಡೆಯರೂ ಧರ್ಮಕ್ಕೂ ಸೋಲಿಗೂ ಹಳೆಯ ಸಂಬಂಧಕ್ಕೂ ಕಪ್ಪಕಾಣಿಕೆಗೂ ಲಾಭ ಮತ್ತು ಪ್ರಯೋಜನಾದಿಗಳಿಗೂ ಮದುವೆಯ ನಂಟುತನಕ್ಕೂ ಸ್ನೇಹಕ್ಕೂ ಗಡಿಯಲ್ಲಿದ್ದುದಕ್ಕೂ ದೌತ್ಯಕ್ಕೂ ಆಳರಸರ ಸಂಬಂಧಕ್ಕೂ ತೋಳಬಲಕ್ಕೂ ಮಹಿಮೆಗೂ ಮೋಕ್ಷಕ್ಕೂ ಹೀಗೆ ನಾನಾ ಕಾರಣಕ್ಕಾಗಿ ಮಹಾಸಮುದ್ರಕ್ಕೆ ಮಹಾನದಿಗಳು ಬಂದು ಕೂಡುವಂತೆ ಏಳು ಅಕ್ಷೋಹಿಣೀ ಸೈನ್ಯಸಮೇತರಾಗಿ ಬಂದು ಸೇರಿದರು. ತನ್ನ ನಾಲ್ಕು ಜನ ತಮ್ಮಂದಿರೊಡನೆ ಮಂಗಳ ಆಭರಣಗಳಿಂದ ಅಲಂಕೃತನಾಗಿ ಮಂಗಳಪ್ರಧಾನವಾದ ವಿಜಯಗಜವನ್ನೇರಿ ಪ್ರಕಾಶಿಸುತ್ತ ಬಲಗಡೆಯ ಸುಳಿಯನ್ನುಳ್ಳ ಹೋಮಾಗ್ನಿಯನ್ನು ಪ್ರದಕ್ಷಿಣೆ ಮಾಡಿ ಬಲದ ಕೊಂಬಿನ ಮೇಲೆ ಸೊಂಡಿಲನ್ನಿಟ್ಟು ಮುಖವನ್ನು ಅತ್ತಿತ್ತ ಕೊಡವಿ ಗುಡುಗಿನ ಶಬ್ದದಿಂದ ಘೀಳಿಡುವ ವಿಜಯಗಜವೂ ಭೂಮಿಯನ್ನು ಪ್ರವೇಶಿಸಿ ಅಡಗಿಕೊಂಡಿರುವ ಶತ್ರುಗಳನ್ನು ಅಗೆದು ಕೊಲ್ವುದನ್ನು ಉದಾಹರಿಸುವಂತೆ ಬಲಗಾಲಿನಿಂದ ನೆಲವನ್ನು ಕೆದರಿ ಗಂಭೀರ ಧ್ವನಿಯಿಂದ ಕೆನೆಯುವ ವಿಜಯಹಯವೂ ಅರ್ಜುನನ ವಿಜಯವನ್ನೇ ಸೂಚಿಸಿದುವು.
ಮಂ|| ಎಸಗಿತ್ದಂದನುಕೂಲಮಂದಪವನಂ ಪೆಣ್ದುಂಬಿಗಳ್ ಮುತ್ತುತುಂ
ಮುಸುಱುತ್ತುಂ ಬರೆ ಬಂದುದಿಂದ್ರವನದಿಂ ಪೂದಂದಲಂಭೋಧಿ ಗ|
ರ್ಜಿಸುವಂತಾದುದು ದೇವದುಂದುಭಿ ಜಯಪ್ರಾರಂಭಮಂ ಸಾಱುವಂ
ತೆಸೆದತ್ತಚ್ಚರಿಯಪ್ಪಿನಂ ಜಯಜಯಧ್ವಾನಂ ದಿಗಂತಂಗಳೊಳ್|| ೯೬ ||
ಪದ್ಯ-೯೬:ಪದವಿಭಾಗ-ಅರ್ಥ:ಎಸಗಿತ್ತು ಅಂದು ಅನುಕೂಲ ಮಂದಪವನಂ (ಅಂದು ಗಾಳಿಯು ಮೆಲ್ಲಗೆ ಹಿತಕರವಾಗಿ ಬೀಸಿತು.) ಪೆಣ್ದುಂಬಿಗಳ್ ಮುತ್ತುತುಂ ಮುಸುಱುತ್ತುಂ ಬರೆ (ಹೆಣ್ಣುದುಂಬಿಗಳು ಮುತ್ತುತ್ತಲೂ ಕವಿಯುತ್ತಲೂ ಬರಲು) ಬಂದುದು ಇಂದ್ರವನದಿಂ ಪೂತ ಅಂದಂ ( ಇಂದ್ರವನದಿಂದ ಪುಷ್ಪವೃಷ್ಟಿಯಾಯಿತು.) ದಲ್ ಅಂಭೋಧಿ ಗರ್ಜಿಸುವಂತಾದುದು (ನಿಜಕ್ಕೂ ಅದು ಸಮುದ್ರವು ಘೋಷಿಸುವ ಹಾಗಾಯಿತು.) ದೇವದುಂದುಭಿ ಜಯಪ್ರಾರಂಭಮಂ ಸಾಱುವಂತೆ (ದೇವದುಂದುಭಿರವವು ಜಯೋದ್ಯೋಗವನ್ನು ಸಾರುವಂತೆ) ಎಸೆದತ್ತು ಅಚ್ಚರಿಯಪ್ಪಿನಂ ಜಯಜಯಧ್ವಾನಂ ದಿಗಂತಂಗಳೊಳ್ (ಜಯ ಜಯ ಧ್ವನಿಯು ಆಶ್ಚರ್ಯವಾಗುವಂತೆ ಶೋಬಿಸಿತು)
ಪದ್ಯ-೯೬:ಅರ್ಥ:ಅಂದು ಗಾಳಿಯು ಮೆಲ್ಲಗೆ ಹಿತಕರವಾಗಿ ಬೀಸಿತು. ಹೆಣ್ಣುದುಂಬಿಗಳು ಮುತ್ತುತ್ತಲೂ ಕವಿಯುತ್ತಲೂ ಬರಲು ಇಂದ್ರವನದಿಂದ ಪುಷ್ಪವೃಷ್ಟಿಯಾಯಿತು. ಅದು ಸಮುದ್ರವು ಘೋಷಿಸುವ ಹಾಗಾಯಿತು. ದಿಕ್ಕುಗಳ ಅಂಚಿನಲ್ಲಿ ಜಯ ಜಯ ಧ್ವನಿಯು ಆಶ್ಚರ್ಯವಾಗುವಂತೆ ದೇವದುಂದುಭಿರವವು ಜಯೋದ್ಯೋಗವನ್ನು ಸಾರುವಂತೆ ಶೋಬಿಸಿತು.
ವ|| ಆ ಪ್ರಸ್ತಾದೊಳ್-
ವಚನ:ಅರ್ಥ:ವ|| ಆ ಸಂದರ್ಭದಲ್ಲಿ-
ಶಾ|| ವಾತ್ಯಾ ದುರ್ಧರ ಗಂಧ ಸಿಂಧುರ ಕಟ ಸ್ರೋತಸ್ಸಮುದ್ಯನ್ಮದ
ವ್ರಾತೇಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕ ಶ್ರೇಯಸ|
ಕಿಂಚಾಕಸ್ಮಿಕ ಪಾಂಸು ಪಲ್ಲವ ಜಳಸ್ಯಂದೀ ಸದಾ ಸಿಂಧುರ
ಪ್ರಾಗೇಯಂ ಪ್ರಿಯಗಳ್ಳ ಭೂಪತಿ ಚಮೂಪ್ರಸ್ಥಾನಮಾಚಕ್ಷತೇ|| ೯೭||
ಪದ್ಯ-೯೭:ಪದವಿಭಾಗ-ಅರ್ಥ:ವಾತ್ಯಾ (ಬೀಸುವ ಗಾಳಿಯಿಂದ) ದುರ್ಧರ ಗಂಧಸಿಂಧುರ (ಧರಿಸಲಸಾಧ್ಯವಾದ ಮದ್ದಾನೆಗಳ ಕಪೋಲಪ್ರದೇಶದ) ಕಟ ಸ್ರೋತಃ (ಮದಧಾರೆಯನ್ನುಳ್ಳ) ಸಮುದ್ಯತ್ ಮದವ್ರಾತ ಇಂದಿಂದಿರ (ಚಿಮ್ಮುತ್ತಿರುವ ಮದೋದಕದ ಮುತ್ತುತ್ತಿರುವ ದುಂಬಿಗಳ) ಚಂಡ ತಾಂಡವ ಕಲ (ದುಂಬಿಗಳ ವೇಗವಾದ ಕುಣಿತದ ರಮಣೀಯ ನಾದದಿಂದ) ಸ್ವಾಭಾವಿಕ ಶ್ರೇಯಸ (ಸಹಜವಾದ ಶ್ರೇಯಸ್ಸನ್ನುಳ್ಳ) ಕಿಂಚ (ಮತ್ತು) ಆಕಸ್ಮಿಕ ಪಾಂಸು (ಅಕಸ್ಮಾತ್ತಾಗಿ ಎದ್ದ ಧೂಳನ್ನುಳ್ಳ) ಪಲ್ಲವ ಜಳಸ್ಯಂದೀ ಸದಾ ಸಿಂಧು(ರ) (ಆನೆಯ ಸೊಂಡಿಲಿನ ತುದಿಯ ನೀರಿನ ಪ್ರವಾಹದಿಂದ ಯಾವಾಗಲೂ ಹರಿಯುತ್ತಿರುವ ನದಿಯನ್ನುಳ್ಳುದೂ) ಅಪ್ರಾಗೇಯಂ(ಪ್ರಾಗ್ - ಹಿಂದಿನ, ಪೂರ್ವ,ಅಪೂರ್ವ ಏಯಂ? ಅಪೂರ್ವ ರೀತಿಯಲ್ಲಿ) ಪ್ರಿಯಗಳ್ಳ ಭೂಪತಿ (ಪ್ರಿಯಗಳ್ಳನೆಂಬ ಬಿರುದುಳ್ಳ ಅರಿಕೇಸರಿರಾಜನು/ ಅರ್ಜುನನು) ಚಮೂ ಪ್ರಸ್ಥಾನಂ (ಸೇನಾಪ್ರಯಾಣವನ್ನು) ಆಚಕ್ಷತೇ (ನಿರೀಕ್ಷಿಸುತ್ತಿದ್ದಾನೆ.)
ಪದ್ಯ-೯೭:ಅರ್ಥ:ಬೀಸುವ ಗಾಳಿಯಿಂದ ಧರಿಸಲಸಾಧ್ಯವಾದ ಮದ್ದಾನೆಗಳ ಕಪೋಲಪ್ರದೇಶದ ಮದಧಾರೆಯನ್ನುಳ್ಳುದೂ ಚಿಮ್ಮುತ್ತಿರುವ ಮದೋದಕದ ಮುತ್ತುತ್ತಿರುವ ದುಂಬಿಗಳ ವೇಗವಾದ ಕುಣಿತದ ರಮಣೀಯ ನಾದದಿಂದ ಸಹಜವಾದ ಶ್ರೇಯಸ್ಸನ್ನುಳ್ಳ ಮತ್ತು ಅಕಸ್ಮಾತ್ತಾಗಿ ಎದ್ದ ಧೂಳನ್ನುಳ್ಳ ಆನೆಯ ಸೊಂಡಿಲಿನ ತುದಿಯ ನೀರಿನ ಪ್ರವಾಹದಿಂದ ಯಾವಾಗಲೂ ಹರಿಯುತ್ತಿರುವ ನದಿಯನ್ನುಳ್ಳುದೂ ಆದ ಸೇನಾಪ್ರಯಾಣವನ್ನು ಪ್ರಿಯಗಳ್ಳನೆಂಬ ಬಿರುದುಳ್ಳ ಅರಿಕೇಸರಿರಾಜನು ಅಪೂರ್ವ ರೀತಿಯಲ್ಲಿ ನಿರೀಕ್ಷಿಸುತ್ತಿದ್ದಾನೆ.
ವ|| ಎಂಬ ಮಂಗಳಪಾಠಕರ ಮಂಗಳ ವೃತ್ತೋಚ್ಚಾರಣೆಗಳೆಸೆಯೆ ಧರ್ಮಪುತ್ರಂ ಕುರುಕ್ಷೇತ್ರಾಭಿಮುಖನಾದಾಗಳ್-
ವಚನ:ಪದವಿಭಾಗ-ಅರ್ಥ:ಎಂಬ, ಮಂಗಳಪಾಠಕರ ಮಂಗಳ ವೃತ್ತೋಚ್ಚಾರಣೆಗಳು ಎಸೆಯೆ (ಶೋಬಿಸಲು)ಧರ್ಮಪುತ್ರಂ ಕುರುಕ್ಷೇತ್ರ ಆಭಿಮುಖನಾದ ಆಗಳ್-
ವಚನ:ಅರ್ಥ:ಎಂಬ ಅರ್ಥದಿಂದ ಕೂಡಿದ ಹೊಗಳುಭಟ್ಟರ ಮಂಗಳಶ್ಲೋಕ ಪಠಣವು ಶೋಭಿಸಲು ಧರ್ಮರಾಜನು ಕುರುಕ್ಷೇತ್ರಕ್ಕೆ ಅಭಿಮುಖನಾದನು/ ಹೊರಟನು.
ಚಂ||ಧ್ವಜಮಯಮಂಬರಂ ಗಜಮಯಂ ಭುವನಂ ಪ್ರಳಯ ಪ್ರಚಂಡ ಭೂ
ಭುಜಮಯಮಷ್ಟದಿಗ್ವಳಯಮಶ್ವಮಯಂ ಜಗತೀತಳಂ ರಥ|
ವ್ರಜಮಯಮುಂ ಪದಾತಿಮಯಮುಂ ನೆರೆಯಾದುದು ಕಾಡು ಕೋಡುಮಾರ್
ತ್ರಿಜಗದೊಳಾಂಪರೀ ಬಲಮನಿನ್ನೆನಿಸಿತ್ತು ಚತುರ್ಬಲಾರ್ಣವಂ|| ೯೮ ||
ಪದ್ಯ-೯೮:ಪದವಿಭಾಗ-ಅರ್ಥ:ಧ್ವಜಮಯಂ ಅಂಬರಂ (ಆಕಾಶವು ಬಾವುಟಗಳಿಂದ ತುಂಬಿತು) ಗಜಮಯಂ ಭುವನಂ ( ಲೋಕವೆಲ್ಲ ಆನೆಗಳಿಂದ ತುಂಬಿತು) ಪ್ರಳಯ ಪ್ರಚಂಡ ಭೂಭುಜಮಯಂ ಅಷ್ಟದಿಗ್ವಳಯಂ (ಎಂಟು ದಿಕ್ಕುಗಳ ಸಮೂಹವು ಪ್ರಳಯಕಾಲದ ಭಯಂಕರರಾದ ರಾಜರಿಂದ ತುಂಬಿತು) ಅಶ್ವಮಯಂ ಜಗತೀತಳಂ (ಭೂಮಂಡಲವು ಕುದುರೆಯಿಂದ ತುಂಬಿತು.) ರಥ ವ್ರಜಮಯಮುಂ ಪದಾತಿಮಯಮುಂ ನೆರೆಯಾದುದು ಕಾಡು ಕೋಡುಂ (ಕಾಡು ಕೋಡುಗಳು ರಥಗಳ ಸಮೂಹದಿಂದಲೂ ಕಾಲಾಳುಗಳ ಸಮೂಹದಿಂದಲೂ ಸಂಪೂರ್ಣವಾಗಿ ತುಂಬಿತು)ಆರ್ತ್ರಿಜಗದೊಳು ಆಂಪರು ಈ ಬಲಮನು ಇನ್ನು ಎನಿಸಿತ್ತು (ಮೂರುಲೋಕಗಳಲ್ಲಿ ಯಾರು ಈ ಸೈನ್ಯವನ್ನು ಪ್ರತಿಭಟಿಸುತ್ತಾರೆ ಎನ್ನುವ ಹಾಗೆ ಎನ್ನಿಸಿತ್ತು) ಚತುರ್ಬಲ ಆರ್ಣವಂ (<-ಚತುರಂಗಸೇನಾ ಸಮುದ್ರವು)
ಪದ್ಯ-೯೮:ಅರ್ಥ: ಆಕಾಶವು ಬಾವುಟಗಳಿಂದ ತುಂಬಿತು ; ಲೋಕವೆಲ್ಲ ಆನೆಗಳಿಂದ ತುಂಬಿತು. ಎಂಟು ದಿಕ್ಕುಗಳ ಸಮೂಹವು ಪ್ರಳಯಕಾಲದ ಭಯಂಕರರಾದ ರಾಜರಿಂದ ತುಂಬಿತು. ಭೂಮಂಡಲವು ಕುದುರೆಯಿಂದ ತುಂಬಿತು. ಕಾಡು ಕೋಡುಗಳು ರಥಗಳ ಸಮೂಹದಿಂದಲೂ ಕಾಲಾಳುಗಳ ಸಮೂಹದಿಂದಲೂ ಸಂಪೂರ್ಣವಾಗಿ ತುಂಬಿತು. ಮೂರುಲೋಕಗಳಲ್ಲಿ ಯಾರು ಈ ಸೈನ್ಯವನ್ನು ಪ್ರತಿಭಟಿಸುತ್ತಾರೆ ಎನ್ನುವ ಹಾಗೆ ಚತುರಂಗಸೇನಾ ಸಮುದ್ರವು ಎನ್ನಿಸಿತು.
ಚಂ||ಎಣಿಕೆಗಳುಂಬಮುಂ ಪಿರಿದುಮಾದ ಪದಾತಿ ವರೂಥ ವಾಜಿ ವಾ
ರಣ ಬಲದಿಂದಮಿರ್ಮಡಿಸೆ ಧಾತ್ರಿಯ ಬಿಣ್ಪೆನಗೆಂದಿನಂದವ|
ಲ್ತಣಕಮಿದೆಂದು ಕಣ್ ತುಮುೞೆ ಪೆರ್ಬೆಡೆಯಿಂ ಮಣಿ ಸೂಸೆ ಬೇಸಱಿಂ
ತಿ;ಣುಕಿದನಾನಲುಮ್ಮಳಿಸಿ ಶೇಷನಶೇಷಮಹೀವಿಭಾಗಮಂ|| ೯೯ ||
ಪದ್ಯ-೯೯:ಪದವಿಭಾಗ-ಅರ್ಥ:ಎಣಿಕೆಗೆ ಅಳುಂಬಮುಂ ಪಿರಿದುಂ ಆದ (ಲೆಕ್ಕಕ್ಕೆ ಮೀರಿದುದೂ ದೊಡ್ಡದೂ ಆದ) ಪದಾತಿ ವರೂಥ ವಾಜಿ ವಾರಣ ಬಲದಿಂದಂ ಇರ್ಮಡಿಸೆ ಧಾತ್ರಿಯ ಬಿಣ್ಪು (ಚತುರಂಗಸೈನ್ಯದ ಭಾರದಿಂದ ಭೂಮಿಯ ಭಾರವು ಎರಡರಷ್ಟಾಗಲು) ಎನಗೆ ಎಂದಿನಂದವಲ್ತು ಅಣಕಂ ಇದೆಂದು (ಈ ಹಿಂಸೆ ನನಗೆ ಎಂದಿನ ರೀತಿಯದಲ್ಲ ಎಂದು) ಕಣ್ತುಮ್ ಉೞೆ (ಕಣ್ಣು ಹೊರಕ್ಕೆ ಬರಲು) ಪೆರ್ಬೆಡೆಯಿಂ ಮಣಿ ಸೂಸೆ (ದೊಡ್ಡ ಹೆಡೆಯಿಂದ ರತ್ನಗಳು ಚೆಲ್ಲುತ್ತಿರಲು) ಬೇಸಱಿಂ ತಿಣುಕಿದನು ಆನಲ್ ಉಮ್ಮಳಿಸಿ (ಬೇಸರದಿಂದ ಹೊರಲು ದುಃಖಪಟ್ಟು ತಿಣುಕಿದನು- ಕಷ್ಟಪಟ್ಟನು) ಶೇಷನು ಅಶೇಷ ಮಹೀವಿಭಾಗಮಂ (ಸಮಸ್ತ ಭೂಭಾಗವನ್ನು ಶೇಷನು -ಹೊರಲು ತಿಣುಕಿದನು.)
ಪದ್ಯ-೯೯:ಅರ್ಥ: ಲೆಕ್ಕಕ್ಕೆ ಮೀರಿದುದೂ ದೊಡ್ಡದೂ ಆದ ಚತುರಂಗಸೈನ್ಯದ ಭಾರದಿಂದ ಭೂಮಿಯ ಭಾರವು ಎರಡರಷ್ಟಾಗಲು ಈ ಹಿಂಸೆ ನನಗೆ ಎಂದಿನ ರೀತಿಯದಲ್ಲ ಎಂದು ಆದಿಶೇಷನ ಕಣ್ಣು ಹೊರಕ್ಕೆ ಬರಲು, ದೊಡ್ಡ ಹೆಡೆಯಿಂದ ರತ್ನಗಳು ಚೆಲ್ಲುತ್ತಿರಲು ಸಮಸ್ತ ಭೂಮಂಡಲದ ಭಾರವನ್ನು ಹೊರಲು ಬೇಸರದಿಂದ ಮತ್ತು ದುಃಖದಿಂದ ಕಷ್ಟಪಟ್ಟನು ತಿಣುಕಿದನು.
ಉ|| ಏಱಿದ ಪೊನ್ನ ಪಣ್ಣುಗೆಯ ಪೆರ್ವಿಡಿ ಕಟ್ಟದಿರಾಗೆ ಮುಂದೆ ಬಂ
ದೇಱಿದ ಚೆನ್ನಗನ್ನಡಿಯ ಚೇಟಿಕೆ ಬೀಸುವ ಕುಂಚಮೆಯ್ದೆ ಮೆ|
ಯ್ದೋಱುವ ಗಾಡಿ ಕಾಂಚನದ ದಂಡದ ಸೀಗುರಿ ನೋೞ್ಪೊಡಾರುಮಂ
ಮಾರೆ ಮನೋಜನೊಡ್ಡೆನಿಸಿದರ್ ನಡೆತಂದ ನರೇಂದ್ರಕಾಂತೆಯರ್|| ೧೦೦ ||
ಪದ್ಯ-೧೦೦:ಪದವಿಭಾಗ-ಅರ್ಥ:ಏಱಿದ ಪೊನ್ನ ಪಣ್ಣುಗೆಯ (ಹತ್ತಿದ ಚನ್ನದ ಅಲಂಕಾರದಿಂದ ಕೂಡಿದ ) ಪೆರ್ವಿಡಿ (ಪೆರ್ ಇಡಿ; ದೊಡ್ಡ ಹೆಣ್ಣಾನೆಯು) ಕಟ್ಟದಿರಾಗೆ ಮುಂದೆ ಬಂದು ಏಱಿದ (ತೀರ ಹತ್ತಿರ ಬರಲು ಮುಂದೆ ಬಂದು ಹತ್ತಿದ) ಚೆನ್ನಗನ್ನಡಿಯ ಚೇಟಿಕೆ ಬೀಸುವ ಕುಂಚಂ ಎಯ್ದೆ (ಚಂದದ ಕನ್ನಡಿಯನ್ನುಳ್ಳ ದಾಸಿಯು ಬೀಸುವ ನವಿಲುಗರಿಯ ಕುಂಚವು ಚೆನ್ನಾಗಿ ) ಮೆಯ್ದೋಱುವ ಗಾಡಿ (ಕಾಣಿಸುವ ಸೊಗಸು,) ಕಾಂಚನದ ದಂಡದ ಸೀಗುರಿ (ಚಿನ್ನದ ಕಾವನ್ನುಳ್ಳ ಸೀಗುರಿಗಳೂ/ ಕೊಡೆಗಳು) ನೋೞ್ಪೊಡೆ ಆರುಮಂ (ಕೂಡಿ ನೋಡಿದರೆ ಯಾರನ್ನಾದದೂ) ಮಾರೆ (ಮಾರು ಹೋಗುವಂತೆ) ಮನೋಜನ ಒಡ್ಡೆನಿಸಿದರ್ ನಡೆತಂದ ನರೇಂದ್ರಕಾಂತೆಯರ್(ಯಾರನ್ನಾದದೂ ಮಾರುಹೋಗುವಂತೆ ಆಕರ್ಷಕವಾಗಿರಲು ಮನ್ಮಥನ ಸೈನ್ಯವೆನ್ನಿಸಿ ಪ್ರಕಾಶಿಸಿದರು.)
ಪದ್ಯ-೧೦೦:ಅರ್ಥ:ತಾವು ಹತ್ತಿದ ಚನ್ನದ ಅಲಂಕಾರದಿಂದ ಕೂಡಿದ ದೊಡ್ಡ ಹೆಣ್ಣಾನೆಯು ತೀರ ಹತ್ತಿರ ಬರಲು ಮುಂದೆ ಬಂದು ಹತ್ತಿದ ರಾಜಪತ್ನಿಯರು ಆ ಸೈನ್ಯದೊಂದಿಗೆ ವೈಭವಯುಕ್ತವಾದ ಆನೆಯನ್ನೇರಿ ಬಂದರು. ಸೌಂದರ್ಯವತಿಯರಾದ ದಾಸಿಯರು ಸುವರ್ಣಾಲಂಕೃತವಾದ ಆನೆಗಳನ್ನೇರಿ ತಾವು ಧರಿಸಿರುವ ರತ್ನಗನ್ನಡಿಗಳೂ, ಚಿನ್ನದ ಕಾವನ್ನುಳ್ಳ ಸೀಗುರಿಗಳೂ ತಮ್ಮ ಶರೀರಕಾಂತಿಯಿಂದ ಕೂಡಿ ನೋಡಿದರೆ ಯಾರನ್ನಾದದೂ ಮಾರುಹೋಗುವಂತೆ ಆಕರ್ಷಕವಾಗಿರಲು ಮನ್ಮಥನ ಸೈನ್ಯವೆನ್ನಿಸಿ ಪ್ರಕಾಶಿಸಿದರು.
ಕಂ|| ಅಂತು ತಿರುವಿಂ ಬರ್ದುಂಕಿದ
ಕಂತುವ ನನೆಗಣೆಗಳಂತೆವೋಲ್ ನಡೆತಂದರ್|
ಸಂತಸದೆ ಪೊನ್ನ ಕಳಸದ
ದಂತದ ಸಿವಿಗೆಗಳನೇಱಿ ಭೋಗಿಯರರೆಬರ್|| ೧೦೧ ||
ಪದ್ಯ-೧೦೧:ಪದವಿಭಾಗ-ಅರ್ಥ:ಅಂತು ತಿರುವಿಂ (ಹಾಗೆ ಬಿಲ್ಲಿನ ಹಗ್ಗದಿಂದ) ಬರ್ದುಂಕಿದ ಕಂತುವ (ತಪ್ಪಿಸಿಕೊಂಡ ಮನ್ಮಥನ)ನನೆಗಣೆಗಳಂತೆವೋಲ್ (ಪುಷ್ಪಬಾಣದಂತೆ ) ನಡೆತಂದರ್ ಸಂತಸದೆ (ಸಂತೋಷದಿಂದ ಬಂದರು.->) ಪೊನ್ನ ಕಳಸದ ದಂತದ ಸಿವಿಗೆಗಳನು (ಚಿನ್ನದ ಕಲಶವನ್ನುಳ್ಳ ದಂತದ ಪಲ್ಲಕ್ಕಿಗಳನ್ನು) ಏಱಿ ಭೋಗಿಯರ್ ಅರೆಬರ್ (ಕೆಲವರು)(ಕೆಲವರು ವಿಲಾಸಿನಿಯರು ಹತ್ತಿ ಸಂತೋಷದಿಂದ ಬಂದರು.)
ಪದ್ಯ-೧೦೧:ಅರ್ಥ:ಹಾಗೆ ಬಿಲ್ಲಿನ ಹಗ್ಗದಿಂದ ತಪ್ಪಿಸಿಕೊಂಡ ಮನ್ಮಥನ ಪುಷ್ಪಬಾಣದಂತೆ ಕೆಲವರು ವಿಲಾಸಿನಿಯರು ಚಿನ್ನದ ಕಲಶವನ್ನುಳ್ಳ ದಂತದ ಪಲ್ಲಕ್ಕಿಗಳನ್ನು ಹತ್ತಿ ಸಂತೋಷದಿಂದ ಬಂದರು.
ಹರಿಣೀಪ್ಲುತಂ|| ನಡೆಯೆ ತುರಗಂ ಪೊನ್ನಾಯೋಗಂಗಳಿಂದಮರ್ದೞ್ತಿಯಿಂ
ಪಡೆಯೆ ನೆೞಲಂ ಚಂಚತ್ಪಿಂಛಾತಪತ್ರಮೆ ಕೂಡೆ ತ|
ಮ್ಮೊಡನೆ ಬರೆ ಬಂದೆತ್ತಂ ಪತ್ತೆಂಟು ದೇಸೆ ವಿಳಾಸದೊಳ್
ತೊಡರೆ ಚರಿತಂಬಂದರ್ ಕಣ್ಗೊಪ್ಪಿರಲ್ ವರ ಭೋಗಿಯರ್|| ೧೦೨ ||
ಪದ್ಯ-೧೦೨:ಪದವಿಭಾಗ-ಅರ್ಥ:ನಡೆಯೆ ತುರಗಂ ಪೊನ್ನಾಯೋಗಂಗಳಿಂದಂ ಅಮರ್ದು ಅೞ್ತಿಯಿಂ ಪಡೆಯೆ (ಕುದುರೆಗಳು ಚಿನ್ನದ ಅಲಂಕಾರಗಳಿಂದ ಕೂಡಿ ಸಂತೋಷದಿಂದ ನಡೆದು ಬರಲು,) ನೆೞಲಂ ಚಂಚತ್ ಪಿಂಛಾತ ಪತ್ರಮೆ (ಚಲಿಸುತ್ತಿರುವ ನವಿಲುಗರಿಯ ಕೊಡೆಯು ನೆರಳನ್ನುಂಟು ಮಾಡುತ್ತ) ಕೂಡೆ ತಮ್ಮೊಡನೆ ಬರೆ (ಜೊತೆಯಲ್ಲಿ ತಮ್ಮೊಡನೆ ಬರಲು,) ಬಂದು ಎತ್ತಂ ಪತ್ತೆಂಟು ದೇಸೆ (ಎಲ್ಲೆಲ್ಲಿಯೂ ಹತ್ತೆಂಟು ಚೆಲವುಗಳು) ವಿಳಾಸದೊಳ್ ತೊಡರೆ (ಶೋಭಾಯಮಾನವಾಗಿರಲು) ಚರಿತಂ ಬಂದರ್ (ಬೇಗನೆ ಬಂದರು.->) ಕಣ್ಗೊಪ್ಪಿರಲ್ ವರ ಭೋಗಿಯರ್ (ಶ್ರೇಷ್ಠರಾದ ಭೋಗಸ್ತ್ರೀಯರು ಕಣ್ಣಿಗೆ ಆಕರ್ಷಕವಾಗಿರುವ ರೀತಿಯಲ್ಲಿ)
ಪದ್ಯ-೧೦೨:ಅರ್ಥ:ಕುದುರೆಗಳು ಚಿನ್ನದ ಅಲಂಕಾರಗಳಿಂದ ಕೂಡಿ ಸಂತೋಷದಿಂದ ನಡೆದು ಬರಲು, ಚಲಿಸುತ್ತಿರುವ ನವಿಲುಗರಿಯ ಕೊಡೆಯು ನೆರಳನ್ನುಂಟು ಮಾಡುತ್ತ ಜೊತೆಯಲ್ಲಿ ತಮ್ಮೊಡನೆ ಬರಲು, ಎಲ್ಲೆಲ್ಲಿಯೂ ಹತ್ತೆಂಟು ಚೆಲವುಗಳು ಶೋಭಾಯಮಾನವಾಗಿರಲು ಶ್ರೇಷ್ಠರಾದ ಭೋಗಸ್ತ್ರೀಯರು ಕಣ್ಣಿಗೆ ಆಕರ್ಷಕವಾಗಿರುವ ರೀತಿಯಲ್ಲಿ ಬೇಗನೆ ಬಂದರು.
ಚಂ|| ಸಡಹುಡನಪ್ಪ ಕೞ್ತೆ ಕೊಡೆ ಸಂತಸದಿಂ ಪೆಱಗೇಱ ಬರ್ಪ ಕ
ನ್ನಡಿವಿಡಿದಾಕೆ ಚಿನ್ನದ ಸವಂಗಮಪೂರ್ವದ ಮೊಚ್ಚೆಯಂ ಪವ|
ಣ್ಬಡೆದ ಸುವರ್ಣ ಪಾರಿವದ ಕುಪ್ಪಸಮೊಪ್ಪೆ ಬೆಡಂಗನಾಳ್ದು ಕ
ಣ್ಗೆಡಱದೆ ಪೆಂಡವಾಸದ ವಿಳಾಸದ ಸೂಳೆಯರೊಪ್ಪಿ ತೋಱದರ್|| ೧೦೩ ||
ಪದ್ಯ-೦೧೦೩:ಪದವಿಭಾಗ-ಅರ್ಥ: ಸಡಹುಡನಪ್ಪ ಕೞ್ತೆ ಕೊಡೆ (ಚಡಪಡಿಸುತ್ತಿರುವ ಹೇಸರಗತ್ತೆಯ ಮೇಲೆ) ಸಂತಸದಿಂ ಪೆಱಗೆ ಏಱಿ ಬರ್ಪ (ಸಂತೋಷದಿಂದ ಹಿಂದೆ ಕುಳಿತು ಬರುವ) ಕನ್ನಡಿವಿಡಿದಾಕೆ ಚಿನ್ನದ ಸವಂಗಂ ಅಪೂರ್ವದ ಮೊಚ್ಚೆಯಂ (ಕನ್ನಡಿಯನ್ನು ಹಿಡಿದಿರುವ ದಾಸಿಯೂ ಚಿನ್ನದ ಸರಿಗೆಯ ಕವಚವೂ, ಅಪೂರ್ವವಾದ ಪಾದರಕ್ಷೆಯೂ ) ಪವಣ್ಬಡೆದ ಸುವರ್ಣ ಪಾರಿವದ ಕುಪ್ಪಸಮೊಪ್ಪೆ (ಪ್ರಯಾಣಕ್ಕನುಗುಣವಾದ ಹೊಂಬಣ್ಣದ ಪಾರಿವಾಳದ ಬಣ್ಣದ ಕುಪ್ಪಸವೂ ಸುಂದರವಾಗಿರಲು) ಬೆಡಂಗನಾಳ್ದು ಕಣ್ಗೆಡಱದೆ (ಕಣ್ಣಿಗೆ ಎಡರಾಗದೆ; ಸುಂದರವಾಗಿರಲು) ಪೆಂಡವಾಸದ ವಿಳಾಸದ ಸೂಳೆಯರೊಪ್ಪಿ ತೋಱದರ್ (ರಾಣಿವಾಸದ ವಿಳಾಸವನ್ನುಳ್ಳ ವೇಶ್ಯಾಸ್ತ್ರೀಯರು ಚೆಲುವಿನಿಂದ ಕೂಡಿ ಕಾಣಿಸಿಕೊಂಡರು.)
ಪದ್ಯ-೧೦೩:ಅರ್ಥ:ಚಡಪಡಿಸುತ್ತಿರುವ ಹೇಸರಗತ್ತೆಯ ಮೇಲೆ ಸಂತೋಷದಿಂದ ಹಿಂದೆ ಕುಳಿತು ಬರುವ ಕನ್ನಡಿಯನ್ನು ಹಿಡಿದಿರುವ ದಾಸಿಯೂ, ಚಿನ್ನದ ಸರಿಗೆಯ ಕವಚವೂ, ಅಪೂರ್ವವಾದ ಪಾದರಕ್ಷೆಯೂ, ಪ್ರಯಾಣಕ್ಕನುಗುಣವಾದ ಹೊಂಬಣ್ಣದ ಪಾರಿವಾಳದ ಬಣ್ಣದ ಕುಪ್ಪಸವೂ ಸುಂದರವಾಗಿರಲು ಬೆಡಗಿನಿಂದ ಕೂಡಿ ಕಣ್ಣಿಗೆ ಸಹ್ಯವಾದ ರೀತಿಯಲ್ಲಿ (ಹಿತವಾಗಿ) ರಾಣಿವಾಸದ ವಿಳಾಸವನ್ನುಳ್ಳ ವೇಶ್ಯಾಸ್ತ್ರೀಯರು ಚೆಲುವಿನಿಂದ ಕೂಡಿ ಕಾಣಿಸಿಕೊಂಡರು.
ಮ|| ನಡೆಯಲ್ಪಂದಿಱಿಯಲ್ಕೆ ತಕ್ಕ ತುರಂಗಂ ಭೋರೆಂದು ಬರ್ಪೊಂದೊಡಂ
ಬಡು ಬಂದೆತ್ತಿಸಿದೊಂದು ಸತ್ತಿಗೆ ಕರಂ ಮೆಯ್ವೆತ್ತು ಮುಯ್ವಾಗಮಾ|
ಗಡುಮಾರ್ಗಂ ಕುಡುತಿರ್ಪ ಕಪ್ಪುರದ ಬಂಬಲ್ದಂಬುಲಂ ರಾಗಮಂ
ಪಡೆಗೆಲ್ಲಂ ಪಡೆವನ್ನೆಗಂ ನಡೆದರಂದೆತ್ತಂ ಕೆಲರ್ ನಾಯಕರ್|| ೧೦೪ ||
ಪದ್ಯ-೧೦೪:ಪದವಿಭಾಗ-ಅರ್ಥ:ನಡೆಯಲ್ ಬಂದು ಇಱಿಯಲ್ಕೆ (ಯುದ್ಧಕ್ಕೆ) ತಕ್ಕ ತುರಂಗಂ ಭೋರೆಂದು ಬರ್ಪೊಂದು ಒಡಂಬಡು (ಯುದ್ಧಕ್ಕೆಂದು ಬಂದ ಯೋಗ್ಯವಾದ ಕುದುರೆಯು ಭೋರೆಂದು ರೀತಿಯಲ್ಲಿ ನಡೆಯಲು ಬರುವ ಒಂದು ಕ್ರಮವು,) ಬಂದು ಎತ್ತಿಸಿದ ಒಂದು ಸತ್ತಿಗೆ ಕರಂ ಮೆಯ್ವೆತ್ತು ಮುಯ್ವಾಗಂ (ತಮಗೆ ಒಪ್ಪುವ ರೀತಿಯಲ್ಲಿ ಹಿಡಿದು ಬರುತ್ತಿರುವ ಛತ್ರಿ, ಪೂರ್ಣವಾಗಿ ಪುಷ್ಟವಾಗಿ ಬೆಳೆದ ತಮ್ಮ ಭುಜಭಾಗವು, ) ಆಗಡುಂ ಆರ್ಗಂ ಕುಡುತಿರ್ಪ ಕಪ್ಪುರದ ಬಂಬಲ್ದಂಬುಲಂ ರಾಗಮಂ (ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಕೊಡುತ್ತಿರುವ ಕರ್ಪೂರ ರಾಶಿ ತಾಂಬೂಲದ ಸಂತೋಷನ್ನು ) ಪಡೆಗೆಲ್ಲಂ ಪಡೆವ ಅನ್ನೆಗಂ (ಸೈನ್ಯಕ್ಕೆಲ್ಲ ಸಂತೋಷವನ್ನು ಉಂಟುಮಾಡುವಂತೆ ಕೊಟ್ಟು) ನಡೆದರಂದು ಎತ್ತಂ ಕೆಲರ್ ನಾಯಕರ್ (ಕೆಲವು ನಾಯಕರು ಎತ್ತಲೋ-ಮನಬಂದ ಕಡೆ ನಡೆದರು.)
ಪದ್ಯ-೧೦೪:ಅರ್ಥ: ಯುದ್ಧಕ್ಕೆಂದು ಬಂದ ಯೋಗ್ಯವಾದ ಕುದುರೆಯು ಭೋರೆಂದು ರೀತಿಯಲ್ಲಿ ನಡೆಯಲು ಬರುವ ಒಂದು ಕ್ರಮವು, ತಮಗೆ ಒಪ್ಪುವ ರೀತಿಯಲ್ಲಿ ಹಿಡಿದು ಬರುತ್ತಿರುವ ಛತ್ರಿ, ಪೂರ್ಣವಾಗಿ ಪುಷ್ಟವಾಗಿ ಬೆಳೆದ ತಮ್ಮ ಭುಜಭಾಗವು, ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಕೊಡುತ್ತಿರುವ ಕರ್ಪೂರ ತಾಂಬೂಲ ರಾಶಿ ಇವು ಸೈನ್ಯಕ್ಕೆಲ್ಲ ಸಂತೋಷವನ್ನು ಉಂಟುಮಾಡುವಂತೆ ಕೊಟ್ಟು, ಕೆಲವು ನಾಯಕರು ಮನಬಂದ ಕಡೆ ನಡೆದರು.
ವ|| ಮತ್ತಂ ಸಸಂಭ್ರಮ ಪ್ರಚಳಿತ ಸಮದ ಗಜ ಘಟಾ ಘಂಟಾರವಂಗಳಿಂದಂ ತುರಂಗಮಹೇಷಿತಂಗಳಿಂದಂ ಮಹಾಸಾಮಂತರ ಪದಿರ ಪರೆಗಳಿಂದಮಗುರ್ವಾಗೆ ನಡೆವ ಬೀಡಿಂಗೆ ಬೀಡುವಿಡಲ್ ನೆಲನುಮೊಲೆಗಲ್ಗಳ್ಗೆ ಬೆಟ್ಟುಗಳುಂ ಗುಡಿಯ ಗೂಂಟಕ್ಕೆ ಬಲ್ಲಡವಿಂಗಳುಂ ದಂಡಿಗೆಗೆ ವೇಣುವನಂಗಳುಮಾನೆಗಂಬಕ್ಕೆ ಪೆರ್ಮರುಂಗಳುಮಾ ಪಡೆಗೆ ನೆರೆರೆಯವೆನಿಸಿ ಪಾಂಡವರೇೞಕ್ಷೋಹಿಣೀ ಬಲಂಬೆರಸೇೞುಂ ಸಮುದ್ರಂಗಳುಂ ಮೇರೆದಪ್ಪಿ ಬರ್ಪಂತಿರೆ ಬಂದು ಕಡಿತಮಿಕ್ಕಿದಂತಿರ್ದ ಸಮಚತುರಶ್ರಂ ನಾಲ್ವತ್ತೆಣ್ಗಾವುದು ಪರಿ ಪ್ರಮಾಣಮೆನಿಪ ಕುರುಕ್ಷೇತ್ರಮನೆಯ್ದೆವಂದದಱ ಪಶ್ಚಿಮ ದಿಶಾಭಾಗದೊಳ್ ಮುನ್ನೆ ಪರಶುರಾಮನೀ ಲೋಕದೊಳುಳ್ಳರಸುಮಕ್ಕಳೆಲ್ಲರುಮನಿರ್ಪತ್ತೊಂದುಸೂೞ್ವರಂ ಪೇೞೆ ಪೆಸರಿಲ್ಲದಂತೆ ಕೊಂದು ತಂದೆಯ ಪಗೆಗೆಂದಲ್ಲಿಯೆ ತಂದು ನಿಜನಿಶಿತ ಪರಶುಧಾರೆಗಳಿಂ ನೆತ್ತರ್ ಸೂಸಿ ಪಾಯೆ ಕಡಿದವರ ನೆತ್ತರ ಧಾರೆಯೊಳ್ ತೀವಿ ತನ್ನ ತಾಯಂ ನೀರಿೞಿಪಲುಂ ತಾನುಂ ಮಿಂದು ತನ್ನ ತಂದೆಗೆ ನೀರ್ಗುಡಲುಮೆಂದು ಮಾಡಿದ ಶಮಂತ ಪಂಚಕಂಗಳೆಂಬಯ್ದು ಪೆರ್ಮಡುಗಳ ಕೆಲದೊಳೆಡೆಯಱಿದು ಬೀಡಂ ಬಿಡಿಸಿ-
ವಚನ:ಪದವಿಭಾಗ-ಅರ್ಥ:ಮತ್ತಂ ಸಸಂಭ್ರಮ ಪ್ರಚಳಿತ ಸಮದ ಗಜ ಘಟಾ (ಸಂಭ್ರಮದಿಂದ ಕೂಡಿದ ಮದ್ದಾನೆಗಳ) ಘಂಟಾರವಂಗಳಿಂದಂ (ಮದ್ದಾನೆಗಳ ಗಂಟೆಗಳ ಶಬ್ದ) ತುರಂಗಮ ಹೇಷಿತಂಗಳಿಂದಂ (ಕುದುರೆಗಳ ಕೆನೆಯುವಿಕೆ) ಮಹಾಸಾಮಂತರ ಪದಿರ ಪರೆಗಳಿಂದಂ ಅಗುರ್ವಾಗೆ ( ಮಹಾಸಾಮಂತರ ಸಂಕೇತವಾದ್ಯ -ಇವು ಭಯಂಕರವಾಗಿರಲು ) ನಡೆವ ಬೀಡಿಂಗೆ (ನಡೆಯುತ್ತಿರುವ ಸೈನ್ಯಕ್ಕೆ) ಬೀಡುವಿಡಲ್ ನೆಲನುಂ ಒಲೆಗಲ್ಗಳ್ಗೆ (ಬೀಡು ಬಿಡಲು ಒರಳುಕಲ್ಲುಗಳಿಗೆ) ಬೆಟ್ಟುಗಳುಂ ಗುಡಿಯ ಗೂಂಟಕ್ಕೆ (ಗುಡಾರ ಕಟ್ಟಲು ಗೂಟಕ್ಕೆ) ಬಲ್ಲ ಅಡವಿಂಗಳುಂ ( ಹಿರಿಯ ಕಾಡುಗಳು) ದಂಡಿಗೆಗೆ ವೇಣುವನಂಗಳುಂ ಆನೆಗಂಬಕ್ಕೆ ಪೆರ್ಮರುಂಗಳುಂ ಆ ಪಡೆಗೆ ನೆರೆ ಅರೆಯವೆನಿಸಿ (ಸಾಲದಾಯಿತು, ) ಪಾಂಡವರ ಏೞಕ್ಷೋಹಿಣೀ ಬಲಂ ಬೆರಸು ಏೞುಂ ಸಮುದ್ರಂಗಳುಂ ಮೇರೆದಪ್ಪಿ ಬರ್ಪಂತಿರೆ (ಪಾಂಡವರ ಏಳಕ್ಷೋಹಿಣೀ ಸೈನ್ಯದಿಂದ ಕೂಡಿ ಏಳು ಸಮುದ್ರಗಳೂ ಎಲ್ಲೆ ಮೀರಿ ಬರುತ್ತಿರುವ ಹಾಗೆ ಇರಲು) ಬಂದು ಕಡಿತಂ ಇಕ್ಕಿದಂತೆ ಇರ್ದ ಸಮಚತುರಶ್ರಂ ನಾಲ್ವತ್ತೆಣ್ಗಾವುದು ಪರಿ ಪ್ರಮಾಣಮೆನಿಪ ಕುರುಕ್ಷೇತ್ರಮನು ಎಯ್ದೆವಂದು (ಬರೆದಂತಿದ್ದ ಚಚ್ಚೌಕವಾಗಿರುವ ನಲವತ್ತೆಂಟು ಗಾವುದ ಸುತ್ತಳತೆಯನ್ನುಳ್ಳ ಕುರುಕ್ಷೇತ್ರಕ್ಕೆ ಬಂದು ಸೇರಿ) ಅದಱ ಪಶ್ಚಿಮ ದಿಶಾಭಾಗದೊಳ್ (ಅದರ ಪಶ್ಚಿಮ ದಿಗ್ಭಾಗದಲ್ಲಿ ಶಮಂತಪಂಚಕಗಳು) ಮುನ್ನೆ ಪರಶುರಾಮನು ಈ ಲೋಕದೊಳುಳ್ಳ ಅರಸುಮಕ್ಕಳೆಲ್ಲರುಮನು ಇರ್ಪತ್ತೊಂದು ಸೂೞ್ವರಂ ಪೇೞೆ ಪೆಸರಿಲ್ಲದಂತೆ ಕೊಂದು (ಇವು ಪೂರ್ವಕಾಲದಲ್ಲಿ ಈ ಲೋಕದಲ್ಲಿರುವ ಅರಸುಮಕ್ಕಳನ್ನೆಲ್ಲ ಹೇಳಲು ಹೆಸರಿಲ್ಲದಂತೆ ಇಪ್ಪತ್ತೊಂದು ಸಲ ತಿರುಗಿ ಕೊಂದು) ತಂದೆಯ ಪಗೆಗೆಂದು ಅಲ್ಲಿಯೆ ತಂದು ನಿಜನಿಶಿತ ಪರಶುಧಾರೆಗಳಿಂ ನೆತ್ತರ್ ಸೂಸಿ (ತನ್ನ ತಂದೆಯ ಹಗೆತನಕ್ಕಾಗಿ ಅಲ್ಲಿಗೆ ತಂದು ತನ್ನ ಹರಿತವಾದ ಕೊಡಲಿಯ ಅಲಗಿನಿಂದ ರಕ್ತವು ಚೆಲ್ಲಿ) ಪಾಯೆ ಕಡಿದವರ ನೆತ್ತರ ಧಾರೆಯೊಳ್ ತೀವಿ ತನ್ನ ತಾಯಂ ನೀರಿೞಿಪಲುಂ ತಾನುಂ ಮಿಂದು (ಹರಿಯುವಂತೆ ಕತ್ತರಿಸಿ ಅವರ ರಕ್ತಧಾರೆಯಿಂದ ತುಂಬಿ ತನ್ನ ತಾಯಿಗೆ ಸ್ನಾನ ಮಾಡಿಸುವುದಕ್ಕೂ ತಾನು ಸ್ನಾನ ಮಾಡಿ) ತನ್ನ ತಂದೆಗೆ ನೀರ್ ಕುಡಲುಮೆಂದು ಮಾಡಿದ ಶಮಂತ ಪಂಚಕಂಗಳೆಂಬ(ತನ್ನ ತಂದೆಗೆ ತರ್ಪಣ ಕೊಡುವುದಕ್ಕೂ ಮಾಡಿದ ಅಯ್ದು ಶಮಂತಪಂಚಕಗಳೆಂಬ ದೊಡ್ಡ ಮಡುಗಳಾದುವು.) ಅಯ್ದು ಪೆರ್ಮಡುಗಳ ಕೆಲದೊಳು ಎಡೆಯಱಿದು (ಎಡೆ ಅರಿದು- ತಿಳಿದು) ಬೀಡಂ ಬಿಡಿಸಿ (ಅವುಗಳ ಸಮೀಪದಲ್ಲಿ ಸ್ಥಳವನ್ನು ತಿಳಿದು ಬೀಡನ್ನು ಬಿಟ್ಟಿತು)-
ವಚನ:ಅರ್ಥ:ಮತ್ತು ಸಂಭ್ರಮದಿಂದ ಕೂಡಿದ ಮದ್ದಾನೆಗಳ ಗಂಟೆಗಳ ಶಬ್ದ, ಕುದುರೆಗಳ ಕೆನೆಯುವಿಕೆ, ಮಹಾಸಾಮಂತರ ಸಂಕೇತವಾದ್ಯ -ಇವು ಭಯಂಕರವಾಗಿರಲು ನಡೆಯುತ್ತಿರುವ ಸೈನ್ಯಕ್ಕೆ ತಂಗುವುದಕ್ಕೆ ನೆಲವೇ ಸಾಲದಾಯಿತು. ಒಲೆಯ ಕಲ್ಲುಗಳಿಗೆ ಪರ್ವತಗಳು ಸಾಲದಾಯಿತು, ಬಾವುಟಗಳ ಗೂಟಕ್ಕೆ (ಗೂಡಾರದ ಗೂಟಕ್ಕೆ?) ಹಿರಿಯ ಕಾಡುಗಳು ಸಾಲದಾದುವು. ಪಲಕ್ಕಿಗಳಿಗೆ ಬಿದರ ಕಾಡುಗಳು ಸಾಲದಾದುವು. ಆನೆಯನ್ನು ಕಟ್ಟುವ ಕಂಬಗಳಿಗೆ ದೊಡ್ಡ ಮರಗಳು ಸಾಲದಾದುವು ಎನ್ನಿಸಿ ಪಾಂಡವರ ಏಳಕ್ಷೋಹಿಣೀ ಸೈನ್ಯದಿಂದ ಕೂಡಿ ಏಳು ಸಮುದ್ರಗಳೂ ಎಲ್ಲೆ ಮೀರಿ ಬರುತ್ತಿರುವ ಹಾಗೆ ಇರಲು, ಒಂದು ಕಡಿತದಲ್ಲಿ (ಬಟ್ಟೆಯನ್ನು ಮಡಿಸಿ ಮಾಡಿರುವ ಪುಸ್ತಕ) ಬರೆದಂತಿದ್ದ ಚಚ್ಚೌಕವಾಗಿರುವ ನಲವತ್ತೆಂಟು ಗಾವುದ ಸುತ್ತಳತೆಯನ್ನುಳ್ಳ ಕುರುಕ್ಷೇತ್ರಕ್ಕೆ ಬಂದು ಸೇರಿದರು. ಅದರ ಪಶ್ಚಿಮ ದಿಗ್ಭಾಗದಲ್ಲಿ ಶಮಂತಪಂಚಕಗಳು. ಇವು ಪೂರ್ವಕಾಲದಲ್ಲಿ ಈ ಲೋಕದಲ್ಲಿರುವ ಅರಸುಮಕ್ಕಳನ್ನೆಲ್ಲ ಹೇಳಲು ಹೆಸರಿಲ್ಲದಂತೆ ಇಪ್ಪತ್ತೊಂದು ಸಲ ತಿರುಗಿ ಕೊಂದು ತನ್ನ ತಂದೆಯ ಹಗೆತನಕ್ಕಾಗಿ ಅಲ್ಲಿಗೆ ತಂದು ತನ್ನ ಹರಿತವಾದ ಕೊಡಲಿಯ ಅಲಗಿನಿಂದ ರಕ್ತವು ಚೆಲ್ಲಿ ಹರಿಯುವಂತೆ ಕತ್ತರಿಸಿ ಅವರ ರಕ್ತಧಾರೆಯಿಂದ ತುಂಬಿ ತನ್ನ ತಾಯಿಗೆ ಸ್ನಾನ ಮಾಡಿಸುವುದಕ್ಕೂ ತಾನು ಸ್ನಾನ ಮಾಡಿ ತನ್ನ ತಂದೆಗೆ ತರ್ಪಣ ಕೊಡುವುದಕ್ಕೂ ಮಾಡಿದ ಅಯ್ತು ದೊಡ್ಡ ಮಡುಗಳಾದುವು. ಅವುಗಳ ಸಮೀಪದಲ್ಲಿ ಸ್ಥಳವನ್ನು ನಿಷ್ಕರ್ಷಿಸಿ ಬೀಡನ್ನು ಬಿಟ್ಟಿತು.
ಶಾ|| ವೀರಕ್ಷೇತ್ರಮಗುರ್ವಿಗಂಕದ ಕುರುಕ್ಷೇತ್ರಂ ಬಲಸ್ಥರ್ ಮಹಾ
ಕ್ರೂರಾರಾತಿಗಳೆನ್ನ ದೋರ್ವಲಗುರ್ವಿಂದಂ ತ್ರಿಲೋಕಕ್ಕೆ ಸಂ|
ಹಾರಂ ಮಾಡಿದ ಭೈರವ ಪ್ರಭುವಿನೊಂದಾಕಾರದಿಂ ವೈರಿ ಸಂ
ಹಾರಂ ಮಾಡದೆ ಮಾಣೆನೆಂದು ಹರಿಗಂ ಕೆಯ್ಕೊಂಡನುತ್ಸಾಹಮಂ|| ೧೦೫
ಪದ್ಯ-೧೦೫:ಪದವಿಭಾಗ-ಅರ್ಥ:ವೀರಕ್ಷೇತ್ರಂ ಅಗುರ್ವಿಗೆ (ಭಯಂಕರವಾದ) ಅಂಕದ ಕುರುಕ್ಷೇತ್ರಂ (ಭಯಂಕರವಾದ ಯುದ್ಧಭೂಮಿ ಕುರುಕ್ಷೇತ್ರವು ವೀರಕ್ಷೇತ್ರವೂ ಆಗಿದೆ.) ಬಲಸ್ಥರ್ ಮಹಾಕ್ರೂರ ಆರಾತಿಗಳು (ಮಹಾಕ್ರೂರರಾದ ನನ್ನ ಶತ್ರುಗಳು ಶಕ್ತಿವಂತರು,) ಎನ್ನ ದೋರ್ವಲ ಅಗುರ್ವಿಂದಂ () ತ್ರಿಲೋಕಕ್ಕೆ ಸಂಹಾರಂ ಮಾಡಿದ ಭೈರವ ಪ್ರಭುವಿನ ಒಂದಾಕಾರದಿಂ (ಹಿಂದೆ ಭಯಂಕರವಾಗಿ ಮೂರು ಲೋಕವನ್ನು ಸಂಹಾರಮಾಡಿದ ಭೈರವಸ್ವಾಮಿಯ ಆಕಾರವನ್ನು ತಾಳಿ) ವೈರಿ ಸಂಹಾರಂ ಮಾಡದೆ ಮಾಣೆನೆಉ ಎಂದು (ವೈರಿಸಂಹಾರ ಮಾಡದೆ ಬಿಡುವುದಿಲ್ಲ ಎಂದು) ಹರಿಗಂ ಕೆಯ್ಕೊಂಡನು ಉತ್ಸಾಹಮಂ (ಅರ್ಜುನನು ಉತ್ಸಾಹವನ್ನು ತಾಳಿದನು)
ಪದ್ಯ-೧೦೫:ಅರ್ಥ: ಭಯಂಕರವಾದ ಯುದ್ಧಭೂಮಿ ಕುರುಕ್ಷೇತ್ರವು ವೀರಕ್ಷೇತ್ರವೂ ಆಗಿದೆ. ಮಹಾಕ್ರೂರರಾದ ನನ್ನ ಶತ್ರುಗಳು ಶಕ್ತಿವಂತರು, ಬಲಿಷ್ಠರೆಂಬುದೂ ನಿಜ. ಆದರೂ (ಅವರನ್ನು) ನಾನು ನನ್ನ ತೋಳಿನ ಶಕ್ತಿಯಿಂದ, ಹಿಂದೆ ಭಯಂಕರವಾಗಿ, ಮೂರು ಲೋಕವನ್ನು ಸಂಹಾರಮಾಡಿದ ಭೈರವಸ್ವಾಮಿಯ ಆಕಾರವನ್ನು ತಾಳಿ ವೈರಿಸಂಹಾರ ಮಾಡದೆ ಬಿಡುವುದಿಲ್ಲ ಎಂದು ಅರ್ಜುನನು ಉತ್ಸಾಹವನ್ನು ತಾಳಿದನು.
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ನಮಮಾಶ್ವಾಸಂ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಒಂಬತ್ತನೆಯ ಆಶ್ವಾಸ||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ

ಸಂಪಾದಿಸಿ
ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ