ಪಂಪಭಾರತ ಮತ್ತು ವ್ಯಾಸಭಾರತ:ವಸ್ತು ವಿನ್ಯಾಸ
ಸಂಪಾದಿಸಿ- ಕಥಾಮೂಲ:
- ಪಂಪ ಕನ್ನಡದ ಆದಿಮಹಾಕವಿ. ಅವನ ಲೌಕಿಕ ಕೃತಿ ‘ವಿಕ್ರಮಾರ್ಜುನ ವಿಜಯ’ (ಪಂಪಭಾರತ). ತನ್ನ ಈ ಕಾವ್ಯಕ್ಕೆ ಆಕರ ಯಾವುದೆಂಬುದನ್ನು ಕವಿಯೆ ಸೂಚಿಸಿದ್ದಾನೆ: ‘‘ವ್ಯಾಸಮುನೀಂದ್ರರುಂದ್ರ ವಚನಾಮೃತ ವಾರ್ಧಿಯನೀಸುವೆನ್ .’’ ಆದ್ದರಿಂದ ಸಂಸ್ಕೃತ ವ್ಯಾಸಭಾರತವೇ ಪಂಪನಿಗೆ ಮೂಲವೆಂಬುದರಲ್ಲಿ ಸಂಶಯವಿಲ್ಲ.
- ಸಂಸ್ಕೃತದಲ್ಲಿದ್ದ ಭಾರತ ಸಂಬಂಧವಾದ ಕಾವ್ಯ, ನಾಟಕಗಳು ಮತ್ತು ಜೈನ ಭಾರತಕಥೆ ಕೂಡ ಅವನ ಮನಸ್ಸಿನಲ್ಲಿದ್ದಿರಬೇಕು;[1] ಅಷ್ಟೆ ಅಲ್ಲ, ಅವನ ಕಾಲದ ಜನತೆಯಲ್ಲಿ ಪ್ರಚಲಿತವಾಗಿದ್ದ ಕತೆಗಳೂ ಅವನ ಕೃತಿಯ ಮೇಲೆ ಪ್ರಭಾವ ಬೀರಿದ್ದಿರಬಹುದು. ವ್ಯಾಸಭಾರತದ ಕಥೆಯಲ್ಲಿ ಪಂಪ ಮಾಡಿಕೊಂಡಿರುವ ಮಾರ್ಪಾಟುಗಳೆಲ್ಲ ಅವನವೇ ಆಗಿರದೆ, ವ್ಯಾಸೇತರವಾದ ಈ ನಾನಾ ಮೂಲಗಳಿಂದ ಬಂದವಾಗಿರುವುದು ಸಾಧ್ಯ; ಈ ಮೂಲಗಳಲ್ಲಿ ಕೆಲವು ನಮ್ಮವರೆಗೆ ಉಳಿದು ಬಂದಿರಲಿಕ್ಕಿಲ್ಲ.
- ತನ್ನ ಕಾಲದಲ್ಲಿ ಪ್ರಚುರವಾಗಿದ್ದ ಸಂಸ್ಕೃತ ಮಹಾಭಾರತದ ದಾಕ್ಷಿಣಾತ್ಯ ಪಾಠಸಂಪ್ರದಾಯವನ್ನು ಪಂಪ ಕಣ್ಣ ಮುಂದಿಟ್ಟುಕೊಂಡಿದ್ದನೆಂಬುದರಲ್ಲಿ ಅನುಮಾನವಿಲ್ಲ. ಆ ಪಾಠದ ಸ್ವರೂಪ ಹೇಗಿತ್ತೆಂಬುದನ್ನು ನಾವಿಂದು ಖಚಿತವಾಗಿ ಹೇಳುವುದು ಅಶಕ್ಯವಾದರೂ, ಇಷ್ಟಂತೂ ನಿಜ : ಪಂಪನಿಗೆ ಉಪಲಬ್ಧವಾಗಿದ್ದ ಮಹಾಭಾರತ ಪಾಠ ಈಗಿರುವಷ್ಟು ವಿಸ್ತಾರವಾಗಿರಲಿಲ್ಲ; ಅದರ ಎಷ್ಟೋ ಭಾಗಗಳು ಆಮೇಲೆ ಸೇರಿಕೊಂಡವು. ಆದ್ದರಿಂದ ವ್ಯಾಸಭಾರತದಲ್ಲಿರುವ ಎಷ್ಟೋ ಅಂಶಗಳು ಪಂಪಭಾರತದಲ್ಲಿಲ್ಲ ಎನ್ನುವಾಗ, ನಾವು ಮಹಾಭಾರತದ ಬೆಳವಣಿಗೆಯ ಪ್ರಶ್ನೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು[2]
- ವ್ಯಾಸಕೃತವೆನ್ನಲಾದ ಸಂಸ್ಕೃತ ಮಹಾಭಾರತವೊಂದು ವಿಶ್ವಕೋಶ ಸದೃಶವಾದ ಕೃತಿ; ಬೃಹತ್ತು, ಮಹತ್ತು ಎರಡರಲ್ಲೂ ಅಪ್ರತಿಮವಾದದ್ದು. ಅದರದು ಸಂಕೀರ್ಣ ಸ್ವರೂಪ: ಅದು ಕಾವ್ಯ, ಪುರಾಣ, ಇತಿಹಾಸ, ಧರ್ಮಗ್ರಂಥ ಇತ್ಯಾದಿ ಎಲ್ಲವೂ ಅಹುದು. ಒಟ್ಟಿನಲ್ಲಿ ಅದೊಂದು ಗೊಂಡಾರಣ್ಯ. ಅದನ್ನೊಂದು ಉದ್ಯಾನವನ್ನಾಗಿ ಪರಿವರ್ತಿಸಬೇಕೆಂಬುದು ಪಂಪಕವಿಯ ಸಂಕಲ್ಪ; ಅದರ ಫಲವೇ ‘ವಿಕ್ರಮಾರ್ಜುನವಿಜಯ’. (‘‘Pampa converts the jungle of tha Mahabharata into a park’’ ಎಂಬುದು ಡಿ.ಎಲ್ .ನರಸಿಂಹಾಚಾರ್ ಅವರ ಉಕ್ತಿ.)
ಉದ್ದೇಶ
ಸಂಪಾದಿಸಿ- ತನ್ನ ಉದ್ದೇಶವನ್ನು ಪಂಪ ಸ್ವತಃ ಹೇಳಿಕೊಂಡಿದ್ದಾನೆ:
- ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮುಂ ಸಮಸ್ತ ಭಾ
- ರತಮನಪೂರ್ವಮಾಗೆ ಸಲೆ ಪೇೞ್ದ ಕವೀಶ್ವರರಿಲ್ಲ ವರ್ಣಕಂ
- ಕತೆಯೊಳೊಡಂಬಡಂಪಡೆಯೆ ಪೇಡೆ ಪಂಪನೆ ಪೇೞ್ಗುಮೆಂದು ಪಂ
- ಡಿತರೆ ತಗುಳ್ದು ಬಿಚ್ಚೞಿಸೆ ಪೇಳಲೊಡರ್ಚಿದೆನೀ ಪ್ರಬಂಧಮಂ (೧.೧೧)
- ‘ಸಮಸ್ತ’ ಎಂಬ ಮಾತಿಗೆ ಎರಡರ್ಥಗಳುಂಟು : ಸಂಪೂರ್ಣ, ಮತ್ತು ಸಂಗ್ರಹಿಸಿದ್ದು; ಎರಡರ್ಥಗಳೂ ಇಲ್ಲಿ ಸಂಗತ. (‘ಸಮಾಸ’ ಎಂದರೆ ಸಂಗ್ರಹ, ‘ವ್ಯಾಸ’ ಎಂದರೆ ವಿಸ್ತಾರ). ಮಹಾಭಾರತದ ಕತೆ ದೊಡ್ಡದು, ಅದನ್ನು ಸಂಗ್ರಹಿಸಿ ಹೇಳಬೇಕು, ಹಾಗೆ ಮಾಡುವಾಗ ಕತೆಯ ಶರೀರ ಕೆಡಬಾರದು, ಯಾವ ಅವಯವವೂ ಲೋಪಗೊಳ್ಳಬಾರದು, ಅರ್ಥಾತ್, ಕತೆ ಸಂಗ್ರಹವಾಗಿಯೂ ಸಂಪೂರ್ಣವಾಗಿರಬೇಕು – ಇದು ಪಂಪನ ಆಶಯ. ಇಂತಹ ‘ಸಮಸ್ತ’ ಭಾರತ ಪಂಪನಿಗಿಂತ ಹಿಂದೆ ಕನ್ನಡದಲ್ಲಿ ಬಹುಶಃ ಇರಲಿಲ್ಲ. (ಸಂಸ್ಕೃತದಲ್ಲೂ ವಿರಳ). ಮೊದಲಬಾರಿಗೆ ಪಂಪ ಅದನ್ನು ಕೊಟ್ಟ. ಕತೆ ಮುಕ್ಕಾಗದಂತೆ ಮೂಲವನ್ನು ಸಂಕ್ಷೇಪಿಸಿ ನಿರೂಪಿಸಿದ್ದು ಪಂಪನ ಭಾರತದ ‘ಅಪೂರ್ವತೆ’ (ಅಥವಾ ಮೊದಲನೆಯ ಅಪೂರ್ವತೆ) ಎಂದು ಭಾವಿಸಬಹುದು.
- ಮೂಲಭಾರತವನ್ನು ಕಿರಿದುಗೊಳಿಸುವಲ್ಲಿ ಪಂಪನ ದೃಷ್ಟಿ, ಧೋರಣೆಗಳೇನು? ಇಲ್ಲಿಯೂ ಅವನ ಒಂದೆರಡು ಸೂಚನೆಗಳನ್ನು ಗಮನಿಸಬೇಕು. ಹಿಂದೆ ಉದ್ಧರಿಸಿದ ಪದ್ಯದಲ್ಲಿ ಬಂದಿರುವ ‘‘ವರ್ಣಕಂ ಕತೆಯೊಳೊಡಂಬಡಂ ಪಡೆಯೆ’’ ಎಂಬ ಹೇಳಿಕೆಯ ಜೊತೆಗೆ, ‘‘ಬೆಳಗುವೆನಿಲ್ಲಿ ಲೌಕಿಕಮನ್ ’’ (೧೪.೬೦) ಎಂಬ ಉಕ್ತಿಯನ್ನೂ ನಾವು ಪರಿಭಾವಿಸುವುದು ಉಪಯುಕ್ತ. ಹೀಗೆ ಮಾಡಿದಾಗ ನಮಗೆ ಹೊಳೆಯುವ ಮುಖ್ಯ ಸಂಗತಿಯೆಂದರೆ, ಪಂಪನ ದೃಷ್ಟಿ ಲೌಕಿಕ ಮತ್ತು ಕಲಾನಿಷ್ಠ ಎಂಬುದು. ಇದು, ಪಂಪ ಭಾರತವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಕೀಲಿಕೈಯನ್ನೊದಗಿಸುತ್ತದೆ.
- ವ್ಯಾಸಮಹಾಭಾರತವೊಂದು ಕಾವ್ಯವೇನೋ ಹೌದು. ಆದರೆ ಕಾವ್ಯೇತರವಾದ ವಿಷಯಗಳೂ ಅದರಲ್ಲಿ ಸಮೃದ್ಧವಾಗಿ ತುಂಬಿಕೊಂಡು, ಅದರ ಕಾವ್ಯತ್ವವನ್ನು ಹಿಂದಕ್ಕೆ ಸರಿಸಿವೆ; ಜನಮನದಲ್ಲಿ ಅದು ಕೇವಲ ‘ಪಂಚಮವೇದ’ವಾಗಿ ಪುರಸ್ಕಾರಗೊಳ್ಳುವಂತೆ ಮಾಡಿವೆ. ಅದರಲ್ಲಿ ಇಡಿಕಿರಿದಿರುವ ಧಾರ್ಮಿಕ, ತಾತ್ತ್ವಿಕ, ನೈತಿಕ ಸಾಮಗ್ರಿಯನ್ನು-ಕಾವ್ಯಕ್ಕೆ ಅನವಶ್ಯಕ, ಹೊರಗು ಎನಿಸುವಂಥದನ್ನು-ಕೈಬಿಟ್ಟು, ಮುಖ್ಯವಾಗಿ ಅದನ್ನೊಂದು ಮಾನವೀಯ ಸ್ವಾರಸ್ಯವುಳ್ಳ ಕಾವ್ಯವನ್ನಾಗಿ ಮಾಡಬೇಕೆಂಬುದು ಪಂಪನ ವಿವಕ್ಷೆ. ಅತಿಮಾನುಷ ಎನಿಸುವ ಸಂಗತಿಗಳೂ ಅವನಿಗೆ ಬಹುಪಾಲು ವರ್ಜನೀಯ. ಅವನ ದೃಷ್ಟಿ ಪುರಾಣಿಕನದಲ್ಲ, ಕವಿಯದು. ಸಂಸ್ಕೃತ ಮಹಾಕಾವ್ಯಗಳ ಮಾರ್ಗದಲ್ಲಿ, ಅಷ್ಟಾದಶ ವರ್ಣನೆಗಳನ್ನಳವಡಿಸಿ ಕೃತಿ ರಚನೆ ಮಾಡುವುದೂ ಪಂಪನ ಯೋಜನೆ.
- ಪಂಪ ಜೈನಮತೀಯನಾದುದು ಅವನ ಈ ಲೌಕಿಕ ದೃಷ್ಟಿಗೆ ಕಾರಣವೆಂಬುದು ಸಾಮಾನ್ಯ ತಿಳುವಳಿಕೆ. ಆದರೆ ಈ ದೃಷ್ಟಿಯನ್ನು ಪಂಪ ಕವಿಯಾಗಿ ಕಲಾವಿದನಾಗಿ ತಳೆದಿದ್ದಾನೆಯೇ ಹೊರತು ಜೈನಧರ್ಮೀಯನಾಗಿ ಅಲ್ಲ ಎಂದು ಹೇಳಬೇಕಾಗುತ್ತದೆ. ಅವನ ವ್ಯಕ್ತಿತ್ವದಲ್ಲಿ ವೈದಿಕ ಸಂಸ್ಕಾರವಿದೆಯೆಂಬ ಮೂಲಭೂತವಾದ ಅಂಶವನ್ನು ಮರೆಯಬಾರದು. ಅವನ ದೃಷ್ಟಿ ಸಂಪೂರ್ಣ ಜೈನಮತಾವಿಷ್ಟವಾಗಿದ್ದ ಪಕ್ಷದಲ್ಲಿ ಅವನೊಂದು ಜೈನ ಮಹಾಭಾರತವನ್ನು ಬರೆಯುತ್ತಿದ್ದ; ವೈದಿಕ ಭಾರತವನ್ನಲ್ಲ. ಈಗಿರುವಂತೆ ಪಂಪಭಾರತ ವೈದಿಕ ಭಾರತವೇ.[3]
- ವ್ಯಾಸಭಾರತ ‘ನಾರಾಯಣಕಥೆ’ ಎನಿಸುವಷ್ಟರಮಟ್ಟಿಗೆ ಅಲ್ಲಿ ಕೃಷ್ಣನಿಗೆ ಪ್ರಾಧಾನ್ಯ. ಪಂಪ ಅಷ್ಟು ಪ್ರಾಶಸ್ತ್ಯವನ್ನು ಕೃಷ್ಣನಿಗೆ ತನ್ನ ಕಾವ್ಯದಲ್ಲಿ ಕೊಟ್ಟಿಲ್ಲ, ನಿಜ. ಆದರೆ ಅವನಿಗೆ ಕೃಷ್ಣನ ಬಗ್ಗೆ, (ಶಿವನ ಬಗ್ಗೆ ಕೂಡ) ಗೌರವವಿದೆ ಎಂಬುದನ್ನು ಲಕ್ಷಿಸಬೇಕು. ಅವನ ಪಾಲಿಗೆ ಭಾರತ ‘ಪಂಚಮವೇದ’ವಲ್ಲವಷ್ಟೆ. ಆದ್ದರಿಂದ ಕೃಷ್ಣ ಪಂಪನಲ್ಲಿ ಸೂತ್ರಧಾರಿಯಾಗಿ ಮೆರೆಯದೆ ಒಬ್ಬ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಾನೆ. ಪಂಪನ ಲೌಕಿಕ ದೃಷ್ಟಿಯಿಂದ ಅವನ ಕಲೆಗೆ ಲಾಭವಾಯಿತಾದರೂ, ಮೂಲಮಹಾಭಾರತದ ದರ್ಶನಕ್ಕೆ ಅವನ ಕಾವ್ಯ ಎರವಾಯಿತೆಂಬ ಮುಖ್ಯ ಸಂಗತಿಯನ್ನು ನಾವು ನೆನಪಿಡಬೇಕು. (ಕುಮಾರವ್ಯಾಸ ಆ ದರ್ಶನವನ್ನುಳಿಸಿಕೊಂಡ).
ಅರ್ಜುನನ ಕಥೆ
ಸಂಪಾದಿಸಿ- ಮಹಾಭಾರತವನ್ನು ಪಂಪ ‘ವಿಕ್ರಮಾರ್ಜುನ ವಿಜಯ’ವನ್ನಾಗಿ ಮಾರ್ಪಡಿಸಿದ್ದಾನೆ; ಎಂದರೆ ಇದು ಅರ್ಜುನನ ಕಥೆ; ಅರ್ಜುನನೇ ಇಲ್ಲಿ ನಾಯಕ.[4]ಪ್ರತಿಯೊಂದು ಆಶ್ವಾಸದ ಆದ್ಯಂತಗಳಲ್ಲೂ ಅರ್ಜುನನ ಸ್ತವನ ಬರುತ್ತದೆ. ಅರ್ಜುನನಿಗೆ ಪ್ರಾಶಸ್ತ್ಯವಿತ್ತಿರುವುದಲ್ಲದೆ ಅವನನ್ನೂ ತನ್ನ ಆಶ್ರಯದಾತನಾದ ಅರಿಕೇಸರಿಯನ್ನೂ ಸಮೀಕರಿಸಿದ್ದಾನೆ ಪಂಪ. ಅವನೆ ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ: ‘‘ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆನಗೞಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್ ’’(೧.೧೪). ವೈಯಕ್ತಿಕ ಜೀವನ, ಸಾಧನೆಗಳಲ್ಲಿ ಅರ್ಜುನನಿಗೂ ಅರಿಕೇಸರಿಗೂ ಕೆಲವು ಸಾಮ್ಯಗಳಿದ್ದುವೆಂದು ತೋರುತ್ತದೆ; ‘‘….ಸಂದರ್ಜುನ ನೊಳ್ ಪೋಲ್ವೀ ಕಥಾ ಭಿತ್ತಿಯನನುನಯದಿಂ ಪೇೞಲೆಂದೆತ್ತಿಕೊಂಡೆಂ’’ (೧.೫೧) ಎಂಬ ಹೇಳಿಕೆ ಗಮನಾರ್ಹ. ಒಟ್ಟಿನಲ್ಲಿ, ಮಹಾಭಾರತ ಕಥೆಯೊಡನೆ ತನ್ನ ಯುಗವನ್ನು ಬೆಸೆದಿದ್ದಾನೆ ಪಂಪ.[5] ಈ ಬೆಸುಗೆ ಬಹಳ ಕಡೆ ಸಹಜವಾಗಿ ಸೂಚ್ಯವಾಗಿ ಬಂದಿದ್ದರೆ, ಕೆಲವೆಡೆ ವಾಚ್ಯವಾಗಿ ಅನೌಚಿತ್ಯಕ್ಕೆ ಎಡೆಗೊಡುವಂತೆ ಬಂದಿದೆ.
- ಅರ್ಜುನನನ್ನು ನಾಯಕನನ್ನಾಗಿ ಮಾಡಿಕೊಂಡು ಅವನಿಗೆ ಅರಿಕೇಸರಿಯೊಡನೆ ಅಭೇದ ಕಲ್ಪಿಸಿದ್ದರಿಂದ, ದ್ರೌಪದಿಯನ್ನು ಅರ್ಜುನನೊಬ್ಬನಿಗೇ ಮಡದಿಯನ್ನಾಗಿಸುವ ಪರಿಸ್ಥಿತಿ ಪಂಪನಿಗೊದಗಿದೆ.[6] ಇದರಿಂದ ಅವನು ಇಕ್ಕಟ್ಟಿಗೂ ಸಿಕ್ಕುತ್ತಾನೆ; ಏಕೆಂದರೆ, ಕೀಚಕ ಪ್ರಸಂಗದಲ್ಲಿ ದ್ರೌಪದಿಯನ್ನು ಪಾರುಮಾಡುವವನು ಮತ್ತು ದ್ರೌಪದೀಪರಿಭವಕ್ಕಾಗಿ ದುಶ್ಶಾಸನ, ದುರ್ಯೋಧನರ ಮೇಲೆ ಸೇಡು ತೀರಿಸಿಕೊಳ್ಳುವವನು ಭೀಮ. ಅರ್ಜುನನಿಗೆ ಪಂಪ ಪ್ರಾಧಾನ್ಯ ಕೊಟ್ಟುದರಿಂದ ಸುಭದ್ರೆಗೂ ಪ್ರಧಾನ್ಯ ಕೊಡುವುದು ಅನಿವಾರ್ಯವಾಯಿತು : ಕಡೆಯಲ್ಲಿ ಅರ್ಜುನನೊಡನೆ ಪಟ್ಟಕ್ಕೇರುವವಳು ದ್ರೌಪದಿಯಲ್ಲ, ಸುಭದ್ರೆ. ಪಂಪ ತನ್ನ ರಾಜಭಕ್ತಿಗೆ ಹೀಗೆಲ್ಲ ಬೆಲೆ ತೆರಬೇಕಾಗುತ್ತದೆ. ಅರ್ಜುನನ ಎದುರಾಳಿಯಾದ ಕರ್ಣನಿಗೂ ಮಹತ್ವ ಕೊಟ್ಟು, ಭಾರತವನ್ನು ‘ಕರ್ಣರಸಾಯನ’ ಎಂದು ಘೋಷಿಸಿದ್ದೂ ಪಂಪನ ವೈಶಿಷ್ಟ್ಯಗಳಲ್ಲೊಂದು.[7]
ಮಹಾಭಾರತದ ಪ್ರಮುಖ ಘಟನೆಗಳನ್ನು ಹೊಂದಿದೆ
ಸಂಪಾದಿಸಿ- ಮುಖ್ಯ ಕಥೆ ಹಾಗೂ ಪ್ರಮುಖ ಪಾತ್ರಗಳ ಮೇಲೆ ಪಂಪನಿಗೆ ಯಾವಾಗಲೂ ಕಣ್ಣು; ಯಾವೊಂದು ಮುಖ್ಯ ಘಟನೆಯನ್ನೂ ಅವನು ಬಿಟ್ಟಿಲ್ಲ. ಮುಖ್ಯ ಕಥಾಪ್ರವಾಹಕ್ಕೆ ಪೂರಕ, ಪೋಷಕವಾದುದನ್ನು ಅವನು ನಾಲ್ಕಾರು @ ಮಾತುಗಳಲ್ಲಿ ಉಳಿಸಿಕೊಳ್ಳುತ್ತಾನೆ; ಅನಗತ್ಯ, ಅಸಂಗತ ಎನಿಸಿದ್ದನ್ನು ಲೋಪಿಸುತ್ತಾನೆ. ಯಾವ ಯಾವುದಕ್ಕೆ ಎಷ್ಟೆಷ್ಟು ಸ್ಥಾನ ಕೊಡಬೇಕು ಎಂಬುದನ್ನು ಅವನು ಬಲ್ಲ. ಅವನ ಪ್ರಮಾಣ ಪ್ರಜ್ಞೆ ಒಟ್ಟಿನ ಮೇಲೆ ಮೆಚ್ಚಬೇಕಾದುದು. ಕವಿಯೆ ಒಂದೆಡೆ ಕೊಟ್ಟಿರುವ ‘ವಿಷಯಾನುಕ್ರಮಣಿಕೆ’ಯನ್ನು ನೋಡಿದರೆ, ಅವನ ಕತೆಯ ಸಮಗ್ರತೆ ಮನವರಿಕೆಯಾಗುತ್ತದೆ : ‘‘ಆದಿ ವಂಶಾವತಾರ ಸಂಭವಂ ರಂಗಪ್ರವೇಶಂ ಜತುಗೃಹದಾಹಂ ಹಿಡಿಂಬ ವಧೆ ಬಕಾಸುರವಧೆ ದ್ರೌಪದೀ ಸ್ವಯಂವರಂ ವೈವಾಹಂ ಯುಧಿಷ್ಠಿರ ಪಟ್ಟಬಂಧನಂ ಇಂದ್ರಪ್ರಸ್ಥ ಪ್ರವೇಶಂ ಅರ್ಜುನ ದಿಗ್ವಿಜಯಂ ದ್ವಾರಾವತೀ ಪ್ರವೇಶಂ ಸುಭದ್ರಾಹರಣಂ ಸುಭದ್ರಾವಿವಾಹಂ ಖಾಂಡವವನ ದಹನಂ ಮಯ ದರ್ಶನಂ ನಾರದಾಗಮನಂ ಜರಾಸಂಧವಧೆ ರಾಜಸೂಯಂ ಶಿಶುಪಾಲವಧೆ ದ್ಯೂತ ವ್ಯತಿಕರಂ ವನಪ್ರವೇಶಂ ಕಿಮ್ಮೀರವಧೆ ಕಾಮ್ಯಕವನ ದರ್ಶನಂ ದ್ವೈತವನ ಪ್ರವೇಶಂ ಸೈಂಧವ ಬಂಧನಂ ಚಿತ್ರಾಂಗದ ಯುದ್ಧಂ ಕಿರಾತದೂತಾಗಮನಂ ದ್ರೌಪದೀ ವಾಕ್ಯಂ ಪಾರಾಶರವೀಕ್ಷಣಂ ಇಂದ್ರಕೀಲಾಭಿಗಮನಂ ಈಶ್ವರಾರ್ಜುನ ಯುದ್ಧಂ ದಿವ್ಯಾಸ್ತ್ರಲಾಭಂ ಇಂದ್ರಲೋಕಾಲೋಕನಂ ನಿವಾತಕವಚಾಸುರವಧೆ ಕಾಳಕೇಯ ಪೌಳೋಮ ವಧೆ ಸೌಗಂಧಿಕ ಕಮಲಾಹರಣಂ ಜಟಾಸುರ ವಧೆ ಮಾಯಾ ಮತ್ತ ಹಸ್ತಿ ವ್ಯಾಜಂ ವಿರಾಟಪುರಪ್ರವೇಶಂ ಕೀಚಕವಧೆ ದಕ್ಷಿಣೋತ್ತರ ಗೋಗ್ರಹಣಂ ಅಭಿಮನ್ಯುವಿವಾಹಂ ಮಂತ್ರಾಲೋಚನಂ ದೂತಕಾರ್ಯಂ ಕುರುಕ್ಷೇತ್ರ ಪ್ರಯಾಣಂ ಭೀಷ್ಮ ಕರ್ಣ ವಿವಾದಂ ಯುದ್ಧೋದ್ಯೋಗಂ ಶ್ವೇತವಧೆ ಭೀಷ್ಮಶರಶಯನಂ ದ್ರೋಣಾಭಿಷೇಕಂ ಅಭಿಮನ್ಯುವಧೆ ಸೈಂಧವವಧೆ ಘಟೋತ್ಕಚವಧೆ ದ್ರೋಣಚಾಪಮೋಕ್ಷಂ ದ್ರೋಣವಧೆ ಅಶ್ವತ್ಥಾಮ ಕರ್ಣವಿವಾದಂ ಕರ್ಣಾಭಿಷೇಕಂ ಸಂಸಪ್ತಕವಧೆ ದುಶ್ಶಾಸನವಧೆ ವೇಣೀಸಂಹನನಂ ಕರ್ಣಾರ್ಜುನಯುದ್ಧಂ ಕರ್ಣ ಸೂರ್ಯ ಲೋಕ ಪ್ರಾಪ್ತಿ ಶಲ್ಯಾಭಿಷೇಕಂ ಶಲ್ಯನಿಪಾತನಂ ಭೀಮ ದುರ್ಯೋಧನ ಗದಾಯುದ್ಧಂ ದುರ್ಯೋಧನವಧೆ ಪಂಚಪಾಂಡವಹರಣಂ ಸ್ತ್ರೀ ಪರ್ವ ಅರ್ಜುನಾಭಿಷೇಕಂ’’ (೧೪.೫೨ನೆಯ ಪದ್ಯದನಂತರ). ಇಷ್ಟಲ್ಲದೆ ‘ಪೆಱವುಮುಪಾ ಖ್ಯಾನ ಕಥೆಗಳೊಳವೊಂದುಂ ಕುಂದಲೀಯದೆ ಪೇೞ್ದೆಂ’’ ಎನ್ನುತ್ತಾನೆ ಪಂಪ.
ಪಂಪಭಾರತದ ಆಶ್ವಾಸ ಯೋಜನೆ ಸಂಸ್ಕೃತಭಾರತದ ಪರ್ವಯೋಜನೆಗೆ ಸಂಪೂರ್ಣ ಸಂವಾದಿಯಾಗಿಲ್ಲವಾದರೂ, ಕಥೆಯ ಆನುಪೂರ್ವಿ ಮೂಲಾನುಸಾರಿಯಾಗಿಯೆ ಇದೆ. ಅದನ್ನು ಹೀಗೆ ತೋರಿಸಲಾಗಿದೆ.[8]
ಆದಿಪರ್ವ | ಆಶ್ವಾಸ | ೧ ರಿಂದ ೫ |
ಸಭಾಪರ್ವ | ,, | ೬, ೭ರಲ್ಲಿ (ಪದ್ಯ ೧-೨೧) |
ಅರಣ್ಯಪರ್ವ | ,, | ೭ (ಉಳಿದುದು), ೮ರಲ್ಲಿ (೧-೪೮) |
ವಿರಾಟಪರ್ವ | ,, | ೮ (ಉಳಿದುದು), ೯ರಲ್ಲಿ (೧-೧೦) |
ಉದ್ಯೋಗಪರ್ವ | ,, | ೯ (ಉಳಿದುದು) |
ಭೀಷ್ಮಪರ್ವ | ,, | ೧೦, ೧೧ರಲ್ಲಿ (೧-೫೧) |
ದ್ರೋಣಪರ್ವ | ,, | ೧೧ (ಉಳಿದುದು), ೧೨ರಲ್ಲಿ (೧-೩೩) |
ಕರ್ಣಪರ್ವ | ,, | ೧೨ (ಉಳಿದುದು), ೧೩ರಲ್ಲಿ (೧-೨೮) |
ಶಲ್ಯ, ಗದಾಪರ್ವ | ,, | ೧೩ (೨೯-೪೮) ೧೩ (೪೯-೯೪) |
ಸೌಪ್ತಿಕಪರ್ವ | ,, | ೧೩ (ಉಳಿದುದು) |
ಸ್ತ್ರೀಪರ್ವ | ,, | ೧೪ (೧-೧೦) |
ಪಂಪನದು ನೇರ ನಿರೂಪಣೆ- ಕವಿಯಮಾರ್ಗ
ಸಂಪಾದಿಸಿ- ಪಂಪ ವಿಶೇಷವಾಗಿ ಮೂಲವನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಾನಾದರೂ, ಕೆಲವೆಡೆ ವಿಸ್ತರಿಸುವ ಪ್ರವೃತ್ತಿಯನ್ನೂ ತೋರುತ್ತಾನೆ[9]; ಬಹಳ ಕಡೆ ಬದಲಿಸುವುದೂ ಉಂಟು. ಮೂಲದಲ್ಲಿಲ್ಲದ ಸಂಗತಿಗಳನ್ನು, ಕಥಾಂಶಗಳನ್ನು ವಿರಳವಾಗಿ ತರುವುದೂ ಉಂಟು. ಅಂತೂ ಪಂಪಭಾರತದಲ್ಲಿ ಲೋಪ, ಆಗಮ, ಆದೇಶ ಪ್ರಕ್ರಿಯೆಗಳು ಅಸಂಖ್ಯವಾಗಿ ನಡೆದಿವೆ.
- ಮೂಲಭಾರತದಲ್ಲಿ, ವೈಶಂಪಾಯನ ಜನಮೇಜಯನಿಗೆ ಹೇಳಿದಂತೆ ಕತೆ ಉಕ್ತವಾಗಿದೆ. ಪಂಪ ಭಾರತದಲ್ಲಿ ವೈಶಂಪಾಯನನ ಅಥವಾ ಉಗ್ರಶ್ರವನ ಮಧ್ಯಸ್ಥಿಕೆಯಿಲ್ಲ; ಪಂಪ ನೇರವಾಗಿ ಕತೆ ಹೇಳಿಕೊಂಡು ಹೋಗುತ್ತಾನೆ. ಮೂಲದ್ದು ಪುರಾಣದ ಧಾಟಿ; ಪಂಪನದು ಕವಿಯ ರೀತಿ.
- ಮೂಲದಲ್ಲಿರುವುದನ್ನು ಪಂಪ ಹೇಗೆ ಕೈ ಬಿಡುತ್ತಾನೆಂಬುದಕ್ಕೆ ಕೆಲವು ಮುಖ್ಯ ನಿದರ್ಶನಗಳನ್ನೀಗ ಸೂಚಿಸಬಹುದು. ವ್ಯಾಸಭಾರತದಲ್ಲಿ ಕಾವ್ಯೇತರ ವಿಷಯಗಳು ವಿಪುಲವಾಗಿಯಷ್ಟೆ; ಅದರಲ್ಲೂ ಮುನಿಗಳು ತುಂಬಿರುವ ಅರಣ್ಯ ಪರ್ವದಲ್ಲಿ ಇವುಗಳ ಪಾಲು ಅಧಿಕ. ಮುಖ್ಯ ಕಥೆಗೆ ಬಾಧಕವಾದ ಇಂಥ ಸಾಮಗ್ರಿಯನ್ನೆಲ್ಲ ಪಂಪ ನಿರ್ದಾಕ್ಷಿಣ್ಯವಾಗಿ ಕೊಚ್ಚಿ ಹಾಕಿದ್ದಾನೆ. ‘‘ಧರ್ಮ ದರ್ಶನ ಮತ ಸಂಪ್ರದಾಯ ನೀತಿ ಅಖ್ಯಾನ ಉಪಾಖ್ಯಾನಗಳು ಪಂಪನಿಗೆ ಅಪ್ರಕೃತ.’’ ಹೀಗಾಗಿ, ನೂರು ಅಧ್ಯಾಯಗಳಿಂದ ಕೂಡಿದ ಆದಿಪರ್ವದ ಪೀಠಿಕಾ ಭಾಗವನ್ನು ಅವನು ಹಾರಿಸಿಬಿಟ್ಟಿದ್ದಾನೆ; ವಿದುರನೀತಿ, ಕಣಿಕನೀತಿ, ಸನತ್ಸುಜಾತನೀತಿ, ಯಯಾತಿಯ ಉಪಾಖ್ಯಾನ, ಶಕುಂತಲೋಪಾಖ್ಯಾನ, ಸಾವಿತ್ರಿಯ ಉಪಾಖ್ಯಾನ, ರಾಮೋಪಾಖ್ಯಾನ, ನಳೋಪಾಖ್ಯಾನ,
- ಹನುಮಂತನ ವಿರಾಡ್ರೂಪದರ್ಶನ ಇತ್ಯಾದಿಗಳೂ ಪಂಪಭಾರತದಲ್ಲಿ ಸ್ಥಾನ ಪಡೆದಿಲ್ಲ. ಏಕಲವ್ಯನ ಪ್ರಕರಣವೂ ಲೋಪಗೊಂಡಿದೆ. ಅರ್ಜುನನ ವ್ಯಕ್ತಿತ್ವಕ್ಕೆ ಕುಂದು ತರುವುದಾದ್ದರಿಂದ.
- ಅಕ್ಷಯ ವಸ್ತ್ರದ ಪ್ರಸಂಗವನ್ನೂ ಪಂಪ ಬಿಟ್ಟಿದ್ದಾನೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಇಲ್ಲಿ ಸ್ವಲ್ಪ ತೊಡಕುಂಟು. ದ್ರೌಪದಿಯ ವಸ್ತ್ರ ಕೃಷ್ಣಕೃಪೆಯಿಂದ ಅಕ್ಷಯವಾದ ಸಂಗತಿ ಪಂಪನ ಕಾಲಕ್ಕೆ ಮೂಲಭಾರತದಲ್ಲಿರಲಿಲ್ಲ. ಅದು ಆ ಮೇಲಿನ ಪ್ರಕ್ಷೇಪ ಎಂದು ವಿದ್ವಾಂಸರ ನಿರ್ಣಯ. (ಕುಮಾರವ್ಯಾಸನ ಕಾಲಕ್ಕೆ ಅದು ಮಹಾಭಾರತಾಂತರ್ಗತವಾಗಿತ್ತು.)[10] ಮೂಲಪಾಠದ ಪ್ರಕಾರ, ದುಶ್ಶಾಸನ ದ್ರೌಪದಿಯ ವಸ್ತ್ರವನ್ನು ಸೆಳೆಯತೊಡಗಿದಾಗ ಒಂದಾದ ಮೇಲೊಂದರಂತೆ ವಸ್ತ್ರಗಳು ಕಾಣಿಸಿಕೊಳ್ಳುತ್ತವೆ. (ಅದಕ್ಕೂ ಕೃಷ್ಣನಿಗೂ ಸಂಬಂಧವಿಲ್ಲ). ಪಂಪಭಾರತದಲ್ಲಿ, ದುಶ್ಯಾಸನ ದ್ರೌಪದಿಯ ಸೀರೆಗೆ ಕೈ ಹಾಕುತ್ತಾನಷ್ಟೆ; ಸೆಳೆಯುವುದಿಲ್ಲ. ಇದರಿಂದ ಪಂಪ ಎರಡು ಪ್ರಯೋಜನಗಳನ್ನು ಸಾಧಿಸಬಯಸಿದ್ದಾನೆ : ಅಪಮಾನದಿಂದ ದ್ರೌಪದಿಯನ್ನು ಪಾರುಮಾಡುವುದು (ಅರಿಕೇಸರಿಯ ದೃಷ್ಟಿಯಿಂದ ಇದು ಅತ್ಯಗತ್ಯ) ಮತ್ತು ವಸ್ತ್ರಗಳು ಒಂದಾದ ಮೇಲೊಂದರಂತೆ ಕಾಣಿಸಿಕೊಳ್ಳುವ ಅದ್ಭುತವನ್ನು ನಿವಾರಿಸುವುದು. ಆದರೆ ದ್ರೌಪದಿಯನ್ನು ಪಾರುಮಾಡಿದ ಪಂಪ ಸ್ವತಃ ತೊಡಕಿಗೆ ಗುರಿಯಾಗಿದ್ದಾನೆ. (ವಸ್ತ್ರದ ಮಾತನ್ನೇ ಅವನು ಎತ್ತದಿರಬಹುದಿತ್ತು.)
- ಪಂಪ ಕೆಲವೊಮ್ಮೆ ವಿಷಯಗಳನ್ನು ಸ್ಥಳಾಂತರಿಸುವುದುಂಟು. ಉದಾಹರಣೆಗೆ ಅಂಬೋಪಾಖ್ಯಾನ. ಇದು ಮೂಲದಲ್ಲಿ ಉದ್ಯೋಗಪರ್ವದ ಅಂತ್ಯದಲ್ಲಿ ಬರುತ್ತದೆ. ಅದನ್ನು ಪಂಪ ಆದಿಪರ್ವಕ್ಕೆ-ಭೀಷ್ಮ ಪ್ರತಿಜ್ಞೆಯ ಸಂದರ್ಭಕ್ಕೆ- ವರ್ಗಾಯಿಸಿದ್ದಾನೆ. ಮೂಲದಲ್ಲಿ, ದ್ರುಪದನ ಗರ್ವಭಂಗ ಪ್ರಸಂಗ ಕೌರವ ಪಾಂಡವರ ಯುದ್ಧ ವಿದ್ಯಾ ಪ್ರದರ್ಶನವಾದ ಬಳಿಕ ಬರುತ್ತದೆ; ಅದನ್ನು ಪಂಪ ವಿದ್ಯಾ ಪ್ರದರ್ಶನಕ್ಕೆ ಮೊದಲೆ ಅಳವಡಿಸಿದ್ದಾನೆ. ವನಪರ್ವದಲ್ಲಿ ಸೈಂಧವ ದುರ್ಯೋಧನರ ಪರಾಭವ ಪ್ರಸಂಗಗಳನ್ನು ಆರಂಭದಲ್ಲೆ ತಂದಿದ್ದಾನೆ.
ಸಂಕ್ಷೇಪನೆಯ ಕ್ರಮ
ಸಂಪಾದಿಸಿ- ಈಗ, ಪಂಪ ಹೇಗೆ ಸಂಕ್ಷೇಪಿಸುತ್ತಾನೆಂಬುದಕ್ಕೆ ಕೆಲವು ಮುಖ್ಯ ನಿದರ್ಶನಗಳು. ಮೂಲಭಾರತದಲ್ಲಿ ಭೀಷ್ಮ ಜನನ ವೃತ್ತಾಂತ ಆರು ಅಧ್ಯಾಯಗಳಲ್ಲಿ, ಅಂಬೆಯ ವೃತ್ತಾಂತ ೨೪ ಅಧ್ಯಾಯಗಳಲ್ಲಿ ಹರಡಿಕೊಂಡಿವೆ; ಪಂಪ ಅವನ್ನು ಚುಟುಕು ಮಾಡಿದ್ದಾನೆ. ಮೂಲದಲ್ಲಿ ಸುದೀರ್ಘವಾಗಿರುವ ಪಾಂಡವರ ವಂಶಾನುಕ್ರಮ ನಿರೂಪಣೆಗೆ ಪಂಪ ವಿನಿಯೋಗಿಸಿರುವುದು. ಆರು ಕಂದ ಮತ್ತು ಒಂದು ತುಣುಕು ವಚನವನ್ನು ಮಾತ್ರ. ಕೃಷ್ಣನ ವಿಶ್ವರೂಪದರ್ಶನ, ಗೀತೋಪದೇಶ ಪ್ರಕರಣಗಳೂ ಪಂಪನಲ್ಲಿ ಸಂಕ್ಷೇಪಗೊಂಡಿವೆ. ಹದಿನೆಂಟು ಅಧ್ಯಾಯಗಳಷ್ಟಿರುವ ಭಗವದ್ಗೀತೆಯನ್ನು ಪಂಪ ಒಂದು ಗದ್ಯಖಂಡ ಮತ್ತು ಒಂದು ವೃತ್ತದ ಮಿತಿಯಲ್ಲಿ ನಿರ್ವಹಿಸಿರುವುದನ್ನು ಸಂಗ್ರಹ ಎಂದು ಕರೆಯುವುದು ಔಪಚಾರಿಕ; ವರ್ಜಿಸಿದ್ದಾನೆ ಎನ್ನುವುದೇ ಒಂದರ್ಥದಲ್ಲಿ ಸರಿಯಾಗಬಹುದು.
- ಮೂಲದಲ್ಲಿ ರಾಜಸೂಯಯಾಗ ಸಂದರ್ಭದಲ್ಲಿ ಪಾಂಡವರು ಮಾಡಿದ ದಿಗ್ವಿಜಯದ ವರ್ಣನೆ ಹತ್ತು ಅಧ್ಯಾಯಗಳಷ್ಟು ನಿಡಿದಾಗಿದೆ. ಆದರೆ ಪಂಪ ಅರ್ಜುನನ ದಿಗ್ವಿಜಯವನ್ನು ಮಾತ್ರ ಸ್ವಲ್ಪ ಹಿಗ್ಗಿಸಿ, ಉಳಿದವರ ಸಾಧನೆಯನ್ನು ಒಂದೊಂದು ವಾಕ್ಯದಲ್ಲಿ ಅಡಗಿಸಿ ಬಿಟ್ಟಿದ್ದಾನೆ. ವ್ಯಾಸರಲ್ಲಿ ದೀರ್ಘವಾಗಿರುವ ಜರಾಸಂಧ ಪ್ರಸಂಗ ಪಂಪ ಭಾರತದಲ್ಲಿ ಕೇವಲ ಹತ್ತು ಸಾಲುಗಳ ಗದ್ಯದಲ್ಲಿ ಮುಗಿಯುತ್ತದೆ.
- ಪಂಪ ಮಾಡಿಕೊಂಡಿರುವ ಒಂದು ಬದಲಾವಣೆ ವಿಶೇಷ ಗಮನಾರ್ಹವಾಗಿದೆ. ಕಿರಾತಾರ್ಜುನೀಯ ಪ್ರಕರಣದಲ್ಲಿ, ಶಿವನಿಂದ ಅರ್ಜುನ ಪರಾಭವಗೊಂಡನೆಂಬುದು ವ್ಯಾಸರ ನಿರೂಪಣೆ. ಆದರೆ ಪಂಪ ಸ್ವಾಮಿಭಕ್ತಿಯ ಭರದಲ್ಲಿ ಎಚ್ಚರ ತಪ್ಪಿ, ನರನಿಂದ ಹರ ಪರಾಜಿತನಾದಂತೆ ಚಿತ್ರಿಸುತ್ತಾನೆ; ಶಿವನ ಗಂಟಲನ್ನು ಮೆಟ್ಟಿ ಪಾಶುಪತಾಸ್ತ್ರವನ್ನು ಪಡೆದನೆಂದು ಹೇಳುತ್ತಾನೆ. ಇದು ಎಂಥ ಅನುಚಿತವಾದ ಮಾರ್ಪಾಡು ಎಂಬುದನ್ನು ಬೇರೆ ವಿವರಿಸಬೇಕಿಲ್ಲ.[11]
- ಮೂಲದಲ್ಲಿಲ್ಲದ, ಕವಿಸಹಜವಾದ ಮತ್ತು ಸಂಪ್ರದಾಯಬದ್ಧವಾದ ವರ್ಣನೆಗಳು ಪಂಪ ಭಾರತದುದ್ದಕ್ಕೂ ಕಂಡುಬರುತ್ತವೆ. ಅರ್ಜುನ ಸುಭದ್ರೆಯರ ವಿವಾಹಕ್ಕೆ ಮುನ್ನ ದೀರ್ಘವಾಗಿ ಬರುವ ಸೂಳೆಗೇರಿಯ ವರ್ಣನೆಯನ್ನಿಲ್ಲಿ ಹೆಸರಿಸಬಹುದು.
- ಇನ್ನು, ವ್ಯಾಸಭಾರತದೊಡನೆ ಹೋಲಿಸಿದಾಗ ಪಂಪಭಾರತದಲ್ಲಿ ಉದ್ದಕ್ಕೂ ಗೋಚರಿಸುವ ವ್ಯತ್ಯಾಸಗಳಲ್ಲಿ ಹಲವನ್ನಲ್ಲಿ ಪಟ್ಟಿಮಾಡಬಹುದು. ಇವುಗಳಲ್ಲಿ ಕೆಲವು ಗಮನಾರ್ಹ, ಕೆಲವು ಗೌಣ.
ಆದಿಪರ್ವ
ಸಂಪಾದಿಸಿ- ಮೂಲಭಾರತದಲ್ಲಿ, ಸತ್ಯವತಿಯನ್ನು ಕಾಮಿಸಿದ ಶಂತನು ತಾನಾಗಿಯೆ ಅವಳ ತಂದೆಯ ಬಳಿಗೆ ಹೋಗುತ್ತಾನೆ; ಪಂಪಭಾರತದಲ್ಲಾದರೆ ತನ್ನ ಹೆಗ್ಗಡೆಗಳನ್ನು ಕಳುಹಿಸುತ್ತಾನೆ. ವ್ಯಾಸರಲ್ಲಿ, ಅಂಬೆ ಮೊದಲು ಭೀಷ್ಮನನ್ನೆ ಒಲಿಯುತ್ತಾಳೆ; ಪಂಪನಲ್ಲಿ, ಅವಳಿಗೆ ಮೊದಲು ಸಾಲ್ವನಲ್ಲಿ ಒಲವಿರುತ್ತದೆ. ವ್ಯಾಸರ ಪ್ರಕಾರ ಅಂಬೆ ಮುಂದೆ ದ್ರುಪದನಿಗೆ ಮಗಳಾಗಿ ಹುಟ್ಟಿ ಪುರುಷವೇಷದಲ್ಲಿದ್ದು, ಶಿಖಂಡಿಯೆಂಬ ಹೆಸರಿನಿಂದ ಬೆಳೆಯುತ್ತಾಳೆ; ಪಂಪನ ಪ್ರಕಾರ, ಅವಳು ದ್ರುಪದನಿಗೆ ಮಗನಾಗಿ ಹುಟ್ಟಿ, ಕಾರಣಾಂತರದಿಂದ ಶಿಖಂಡಿ ಯಾಗಿರುತ್ತಾಳೆ.
- ಮಹಾಭಾರತದಲ್ಲಿ, ಅಂಬಿಕೆ ಅಂಬಾಲಿಕೆಯರು ಸಂತಾನ ಪಡೆಯುವ ಮುನ್ನ ‘‘ಒಂದು ವರ್ಷ ನಾನು ಹೇಳಿದಂತೆ ವ್ರತ ಆಚರಿಸಲಿ’’ ಎಂದು ಸತ್ಯವತಿಗೆ ಹೇಳುತ್ತಾರೆ ವ್ಯಾಸರು. ಆದರೆ ಸತ್ಯವತಿ ಕೇಳುವುದಿಲ್ಲ. ಇದನ್ನು ಪಂಪ ಬಿಟ್ಟಿದ್ದಾನೆ. ವ್ಯಾಸಭಾರತದಲ್ಲಿ ಅಂಬಿಕೆ, ಅಂಬಾಲಿಕೆಯರಿಗೆ ವ್ಯಾಸರೊಡನಾದ ದೈಹಿಕ ಮಿಲನದಿಂದ ಪುತ್ರ ಜನನವಾಗುತ್ತದೆ. ಪಂಪನಾದರೊ ವ್ಯಾಸರ ದಿವ್ಯದೃಷ್ಟಿಯಿಂದಲೆ ಅಂಬಿಕೆ, ಅಂಬಾಲಿಕೆಯರು ಗರ್ಭ ಧರಿಸಿದರೆಂದು ಹೇಳುತ್ತಾನೆ. ಕರ್ಣಜನನ ವೃತ್ತಾಂತದಲ್ಲೂ ಪಂಪ ಮೂಲದಲ್ಲಿರುವ ಕುಂತಿ-ಸೂರ್ಯರ ದೈಹಿಕ ಸಮಾಗಮವನ್ನು ತಪ್ಪಿಸಿದ್ದಾನೆ. (ಇಲ್ಲೆಲ್ಲ ಪಂಪನ ‘ಲೌಕಿಕ’ ದೃಷ್ಟಿ ಏತಕ್ಕೆ ಕೆಲಸ ಮಾಡಲಿಲ್ಲವೋ? ವ್ಯಾಸರಿಂದ ಭಿನ್ನವಾಗುವ ಉದ್ದೇಶವಿರಬಹುದು.)
- ವ್ಯಾಸರಲ್ಲಿ ಪಾಂಡುವೆ ಸಂತಾನಕ್ಕಾಗಿ ಹಂಬಲಿಸಿದರೆ, ಕುಂತಿ ಹಂಬಲಿಸುವಂತೆ ಮಾಡಿದ್ದಾನೆ ಪಂಪ. ಐದನೆಯ ಮಂತ್ರದಿಂದಲೂ ಸಂತಾನ ಪಡೆಯುವಂತೆ ಪಾಂಡು ಹೇಳುವುದು, ಕುಂತಿ ನಿರಾಕರಿಸುವುದು ವ್ಯಾಸರಲ್ಲಿದೆ; ಪಂಪನಲ್ಲಿಲ್ಲ. ಕುಂತಿಯ ವಿಷಯದಲ್ಲಿ ಮಾದ್ರಿ ಅಸೂಯಾಗ್ರಸ್ತಳಾದಂತೆ ವ್ಯಾಸರ ನಿರೂಪಣೆ. ಪಂಪನ ಮಾದ್ರಿ ಹಾಗಲ್ಲ. ಪಾಂಡವರ ಜನನ ಕಾಲದಲ್ಲಿ ಅಶರೀರವಾಣಿಯಾಗುತ್ತದೆ. ವ್ಯಾಸಭಾರತದ ಪ್ರಕಾರ; ಪಂಪ ಅದನ್ನು ಬಿಟ್ಟಿದ್ದಾನೆ. ವ್ಯಾಸರಲ್ಲಿ, ಪಾಂಡು ಮಾದ್ರಿಯನ್ನು ಕಂಡು ವಿಕಾರವಶನಾಗಿ ಬಲಾತ್ಕಾರದಿಂದ ಅವಳನ್ನು ಕೂಡುತ್ತಾನೆ; ಪಂಪನಲ್ಲಿ, ಮಾದ್ರಿಯೆ ಪಾಂಡುವನ್ನು ಪ್ರಲೋಭನಗೊಳಿಸುವ ಪರಿಯಿದೆ.
- ವ್ಯಾಸಭಾರತದಲ್ಲಿ, ಕೌರವಪಾಂಡವರು ಆಟವಾಡುವಾಗ ಬಾವಿಗೆ ಬಿದ್ದ ಚಿಣ್ಣಿಯನ್ನು ದರ್ಭೆಗಳಿಂದ ಹೊರತೆಗೆಯುವವನು ದ್ರೋಣ; ಪಂಪಭಾರತದಲ್ಲಿ ಉಂಗುರವನ್ನು ಶರಗಳಿಂದ ಹೊರತೆಗೆಯುವವನು ಅಶ್ವತ್ಥಾಮ. ಕೌರವ ಪಾಂಡವರು ದ್ರುಪದನನ್ನು ಸೋಲಿಸಿದಂತೆ ವ್ಯಾಸರು ಹೇಳಿದರೆ, ಅರ್ಜುನ ಸೋಲಿಸಿದಂತೆ ಪಂಪನ ಮಾರ್ಪಾಟು. ದ್ರುಪದನನ್ನು ದ್ರೋಣ ಕಾಲಿನಿಂದೊದೆಯುವುದು ಪಂಪನಲ್ಲಿ ಮಾತ್ರ ಇರುವ ಸಂಗತಿ.
- ಮಹಾಭಾರತದ ಪ್ರಕಾರ, ಎಲ್ಲ ಪಾಂಡವರಿಗೂ ಅನುಕ್ರಮವಾಗಿ ದ್ರೌಪದಿಯೊಡನೆ ಪಾಣಿಗ್ರಹಣವಾಗುತ್ತದೆ. (‘ಸಮನಾಗಿ ಹಂಚಿಕೊಳ್ಳಿ’ ಎಂಬ ಕುಂತಿಯ ಮಾತು ಅದಕ್ಕೆ ಕಾರಣ). ಪಂಪ ಭಾರತದಲ್ಲಿ ಅರ್ಜುನನೊಬ್ಬನೆ ದ್ರೌಪದಿಯ ಕೈ ಹಿಡಿಯುತ್ತಾನೆ. ಆದ್ದರಿಂದ ಅರ್ಜುನನ ಹನ್ನೆರಡು ವರ್ಷಗಳ ತೀರ್ಥಯಾತ್ರೆಯ ಹಿನ್ನೆಲೆ ಪಂಪನಲ್ಲಿ ವ್ಯತ್ಯಸ್ತವಾಗಿದೆ. ಮೂಲದಲ್ಲಿ, ಯುಧಿಷ್ಠಿರ ಮತ್ತು ದ್ರೌಪದಿ ಏಕಾಂತದಲ್ಲಿರುವುದನ್ನು ಕಂಡು ಅರ್ಜುನ ಪ್ರಾಯಶ್ಚಿತ್ತವಾಗಿ ತೀರ್ಥಯಾತ್ರೆ ಕೈಗೊಳ್ಳುತ್ತಾನೆ. ಪಂಪನ ಪ್ರಕಾರ ಅರ್ಜುನ ಹೊರಟದ್ದು ‘ದಿಗಂಗನಾ ಮುಖಾವಲೋಕನ’ ಮತ್ತು ದಿಗ್ವಿಜಯಕ್ಕಾಗಿ.
- ಅರ್ಜುನ ಸಂನ್ಯಾಸಿ ವೇಷದಲ್ಲಿದ್ದು ಸುಭದ್ರೆಯನ್ನು ಹಾರಿಸಿಕೊಂಡುಹೋದಂತೆ ವ್ಯಾಸರ ನಿರೂಪಣೆ; ಪಂಪನ ಪ್ರಕಾರ ಅರ್ಜುನ-ಸುಭದ್ರೆಯರು ಪರಸ್ಪರ ಅನುರಕ್ತರಾಗುತ್ತಾರೆ. ಅರ್ಜುನ ಅವಳನ್ನು ಕದ್ದೊಯ್ಯುತ್ತಾನೆ. ‘‘ತಂದಂ ಗಡ ವಿಕ್ರಮಾನರ್ಜುನನೆ ಪಾರ್ವರ ಪಿಳ್ಳೆಯ ಪೋದ ಜೀವಮಂ’’ ಎಂದು ಪಂಪನಲ್ಲಿದೆ. ಈ ಪೂರ್ವಕಥೆ ಯಾವುದೋ ತಿಳಿಯದು; ವ್ಯಾಸರಲ್ಲಿಲ್ಲ. (ರಾಮಾಯಣದ ಉತ್ತರಕಾಂಡದ ಶಂಬೂಕನ ಕತೆಯನ್ನಿದು ನೆನಪಿಸುತ್ತದೆ).
- ವ್ಯಾಸಭಾರತದ ಕೃಷ್ಣ ರಾಜಸೂಯಯಾಗ ಮಾಡುವಂತೆ ಪಾಂಡವರನ್ನು ಪ್ರೋತ್ಸಾಹಿಸಿದರೆ, ಪಂಪನ ಕೃಷ್ಣ ತಣ್ಣೀರೆರಚಲು ಪ್ರಯತ್ನಿಸುತ್ತಾನೆ. ದಿಗ್ವಿಜಯ ಸಂದರ್ಭದಲ್ಲಿ, ನಕುಲ ವಿಭೀಷಣನಿಂದ ಸುಲಭವಾಗಿ ಕಪ್ಪವನ್ನು ಪಡೆದನೆಂದು ವ್ಯಾಸರು ಹೇಳಿದರೆ, ಅರ್ಜುನ ವಿಭೀಷಣನನ್ನು ಮರ್ದಿಸಿ ಕಪ್ಪಗೊಂಡನೆಂದು ಪಂಪನ ಹೇಳಿಕೆ. ವ್ಯಾಸರ ಪ್ರಕಾರ ಶಿಶುಪಾಲನನ್ನು ಕೃಷ್ಣ ಚಕ್ರದಿಂದ ಕೊಂದರೆ, ಪಂಪನ ಪ್ರಕಾರ ಅರ್ಘ್ಯದ ತಳಿಗೆಯಿಂದ ಕೊಲ್ಲುತ್ತಾನೆ. ಮೂಲದಲ್ಲಿ ಶಿಶುಪಾಲನಿಂದ ಒಂದು ತೇಜಸ್ಸು ಹೊರಟು ಕೃಷ್ಣನಲ್ಲಿ ಲೀನವಾದುದನ್ನು ಪಂಪ ಲೋಪಿಸಿದ್ದಾನೆ.
ಸಭಾಪರ್ವ
ಸಂಪಾದಿಸಿ- ವ್ಯಾಸಭಾರತದಲ್ಲಿ ಕೌರವರು ದ್ಯೂತಕ್ಕಾಗಿಯೆ ಯುಧಿಷ್ಠಿರನನ್ನು ಆಮಂತ್ರಿಸುತ್ತಾರೆ; ಪಂಪಭಾರತದಲ್ಲಿ ‘‘ಒಟ್ಟಿಗೆ ಕಾಲಕಳೆಯೋಣ’’ ಎಂದು ಮೊದಲು ಆಮಂತ್ರಿಸುತ್ತಾರೆ, ಆಮೇಲೆ ಜೂಜಿನ ಪ್ರಸಕ್ತಿ. ಜೂಜನ್ನು ತಡೆಯಲು ಭೀಷ್ಮ ಯತ್ನಿಸಿದಾಗ ಯುಧಿಷ್ಠರ ಧಿಕ್ಕರಿಸುವುದು, ಮೊದಮೊದಲು ದುರ್ಯೋಧನ ಬೇಕೆಂದೇ ಜೂಜಿನಲ್ಲಿ ಸೋಲುವುದು ಪಂಪನಲ್ಲಿವೆ, ವ್ಯಾಸರಲ್ಲಿಲ್ಲ. ಯುಧಿಷ್ಠಿರ ತಮ್ಮಂದಿರನ್ನೊಡ್ಡಿ ಸೋತ ಬಳಿಕ ದ್ರೌಪದಿಯನ್ನು ಒಡ್ಡಿದನೆಂದು ವ್ಯಾಸರ ನಿರೂಪಣೆ; ಪಂಪನಲ್ಲಿ ಅವನು ತಮ್ಮಂದಿರನ್ನೊಡ್ಡಿದ ವಿಷಯವಿಲ್ಲ, ದ್ರೌಪದಿಯನ್ನು ಮಾತ್ರ ಒಡ್ಡಿ ಸೋತನೆಂದಿದೆ. ಅಣ್ಣನ ಕೈಗಳನ್ನು ಸುಟ್ಟುಬಿಡುತ್ತೇನೆಂದು ಭೀಮ ಗರ್ಜಿಸಿದ್ದು ವ್ಯಾಸರಲ್ಲಿ ಮಾತ್ರ. ದುರ್ಯೋಧನ ದ್ರೌಪದಿಗೆ ತೊಡೆ ತೋರಿಸಿದ್ದನ್ನು ವ್ಯಾಸರು ನಿಸ್ಸಂಕೋಚವಾಗಿ ತಿಳಿಸಿದರೆ, ಪಂಪ ಅದನ್ನು ಬಿಟ್ಟಿದ್ದಾನೆ, ಬಹುಶಃ ಅಸಭ್ಯವೆಂದು. (ಅರಿಕೇಸರಿ ಬೇಸರಪಟ್ಟುಕೊಳ್ಳಬಾರದಲ್ಲ!)[12] ವ್ಯಾಸರಲ್ಲಿ ಕೌರವರಿಗೆ ಕರ್ಣನ ಪ್ರೋತ್ಸಾಹವುಂಟು, ಪಂಪನಲ್ಲಿಲ್ಲ. ಭೀಮ ಮಾಡುವ ವೇಣೀ ಸಂಹಾರ ಪ್ರತಿಜ್ಞೆ ಪಂಪಭಾರತದಲ್ಲಿ ಮಾತ್ರ ಕಂಡುಬರುವಂಥದು.(ಈ ಬಗ್ಗೆ ಮುಂದೆ ಹೇಳಲಾಗುತ್ತದೆ).
- ವ್ಯಾಸಭಾರತದಲ್ಲಿ ದ್ಯೂತವಾದಮೇಲೆ ಅನುದ್ಯೂತ ಬರುತ್ತದೆ. ಪಾಂಡವರ ವನವಾಸದ ಕರಾರು ಅನುದ್ಯೂತದ್ದು. ಪಂಪನಲ್ಲಿ ಅನುದ್ಯೂತವಿಲ್ಲ; ಮೊದಲ ದ್ಯೂತದಲ್ಲೆ ಕರಾರು ಸೇರಿದೆ. ಹೀಗಾಗಿ ಪುನರಾವರ್ತನೆಯನ್ನು ನಿವಾರಿಸಿದ್ದಾನೆ ಪಂಪ. ಜೂಜು ಎರಡು ಸಲ ಏತಕ್ಕೆ?
ವನಪರ್ವ
ಸಂಪಾದಿಸಿ- ಕೌರವನಿಗೆ ಮೈತ್ರೇಯ ಕೊಟ್ಟ ಶಾಪದ ವಿಷಯ ವ್ಯಾಸಭಾರತದಲ್ಲಿ ಮಾತ್ರ ಉಂಟು. ಕೃಷ್ಣ ಅರಣ್ಯಕ್ಕೆ ಬಂದು ಪಾಂಡವರನ್ನು ಸಮಾಧಾನಗೊಳಿಸುವುದು, ದ್ರೌಪದಿಯ ಶೋಕ, ಕೃಷ್ಣನ ಪ್ರತಿಜ್ಞೆ ಇವೂ ಅಷ್ಟೆ.
- ಪಂಪಭಾರತದ ಪ್ರಕಾರ, ತಪೋನಿರತನಾದ ಅರ್ಜುನ ಶಿವನೊಡನೆ ಹೋರಾಡುವುದಕ್ಕೆ ಮುನ್ನವೆ ಇಂದ್ರ ಅವನ ಮನಸ್ಸನ್ನು ಚಂಚಲಗೊಳಿಸಲು ಅಪ್ಸರೆಯರನ್ನು ಕಳುಹಿಸುತ್ತಾನೆ; ಅವರು ಸೋಲುತ್ತಾರೆ. ಅರ್ಜುನ ಪಾಶುಪತಾಸ್ತ್ರ ಪಡೆದ ಬಳಿಕ ರಂಭೆಯ ಪ್ರಲೋಭನೆ ಅವನಿಗುಂಟಾಗುತ್ತದೆ; ಅವಳು ಅವನನ್ನು ಗೆಲ್ಲಲಾರದೆ ಶಾಪ ಕೊಡುತ್ತಾಳೆ. ವ್ಯಾಸಭಾರತ ದಲ್ಲಾದರೆ, ರಂಭೆಯ ಬದಲು ಊರ್ವಶಿಯನ್ನು ಕಾಣುತ್ತೇವೆ.(ಮೊದಲು ಅಪ್ಸರೆಯರ ಪ್ರಸಕ್ತಿಯಿಲ್ಲ). ಅವಳನ್ನು ಇಂದ್ರನೆ ಅರ್ಜುನನಲ್ಲಿಗೆ ಕಳುಹಿಸುತ್ತಾನೆ. ಈ ಊರ್ವಶೀ ಪ್ರಕರಣ ಮೂಲಭಾರತದಲ್ಲಿ ಪ್ರಕ್ಷಿಪ್ತವೆನಿಸಿದೆ. ಆದರೆ ಅದು ಪಂಪನಿಗಿಂತ ಹಿಂದೆಯೇ ಮಹಾಭಾರತಕ್ಕೆ ಸೇರಿಹೋಗಿದ್ದಿರಬೇಕು. (ಕುಮಾರವ್ಯಾಸನಲ್ಲಿ ಅದು ಯಥಾವತ್ತಾಗಿ ಚಿತ್ರಿತವಾಗಿದೆ).
- ಭೀಮ ಆಜಗರದ ಹಿಡಿತಕ್ಕೆ ಸಿಕ್ಕಿದ್ದು ವ್ಯಾಸಭಾರತದಲ್ಲಿ ಮಾತ್ರ. ಕೌರವರು ಘೋಷಯಾತ್ರೆಯ ನೆಪದಿಂದ ಅರಣ್ಯಕ್ಕೆ ಹೋದರೆಂದು ವ್ಯಾಸರು ಹೇಳಿದರೆ, ಪಂಪ ಬೇಟೆಯ ನೆಪ ಹೇಳಿದ್ದಾನೆ. ಮೂಲದಲ್ಲಿ, ಕೌರವರಿಗೂ ಗಂಧರ್ವರಿಗೂ ತಿಕ್ಕಾಟ ನಡೆದು ತತ್ಪರಿಣಾಮವಾಗಿ ದುರ್ಯೋಧನ ಸೆರೆಸಿಕ್ಕುತ್ತಾನೆ; ಪಂಪನಲ್ಲಾದರೆ, ಚಿತ್ರರಥ ತಾನಾಗಿ ಬಂದು ದುರ್ಯೋಧನನನ್ನು ಕಟ್ಟಿ ಒಯ್ಯುತ್ತಾನೆ. ವ್ಯಾಸರ ಪ್ರಕಾರ, ಕೌರವರ ಕಡೆಯವರು ಯುಧಿಷ್ಠರನಿಗೆ ಮೊರೆಯಿಟ್ಟರೆ, ಪಂಪ ಭಾನುಮತಿಯಿಂದ ಮೊರೆಯಿಡಿಸಿದ್ದಾನೆ. ಭೀಮಾರ್ಜುನ ನಕುಲ ಸಹದೇವರು ದುರ್ಯೋಧನನನ್ನು ಬಿಡಿಸಿ ತಂದರೆಂದು ವ್ಯಾಸರ ಹೇಳಿಕೆ; ಪಂಪನಲ್ಲಿ ಆ ಕೆಲಸಕ್ಕೆ ಅರ್ಜುನನೊಬ್ಬನೇ ಸಾಕು. ದುರ್ಯೋಧನನ ನಿರ್ವೇದ ಮತ್ತು ಪ್ರಾಯೋಪವೇಶ ವ್ಯಾಸಭಾರತದಲ್ಲಷ್ಟೇ ಇರತಕ್ಕದ್ದು.
- ದುರ್ಯೋಧನ ಯಾಗ ಮಾಡಿದ್ದು ಮತ್ತು ಕನಕಸ್ವಾಮಿಯ ವೃತ್ತಾಂತ ಪಂಪನಲ್ಲಿ ಮಾತ್ರ ಇದೆ. ವ್ಯಾಸರಲ್ಲಿ ಮುನಿಗಳ ಅರಣಿಯನ್ನೊಯ್ದುದು ಜಿಂಕೆ; ಪಂಪನಲ್ಲಾದರೆ ಮದಗಜ. ಯುಧಿಷ್ಠಿರನ ಸಹೋದರರು ನೀರುಕುಡಿದು ಮಡಿಯುವಂತೆ ಯಮ ಯೋಜಿಸಿದ್ದು ಯುಧಿಷ್ಠಿರನ ಗುಣಪರೀಕ್ಷೆಗಾಗಿ, ವ್ಯಾಸಭಾರತದ ಪ್ರಕಾರ; ಪಂಪ ಭಾರತದಲ್ಲಿ, ಕೀರ್ತಿಗೆಯಿಂದ ಅವರನ್ನು ಪಾರುಮಾಡುವುದಕ್ಕಾಗಿ ಅವನು ಹೂಡಿದ ತಂತ್ರವದು. ‘ಮುಂದೆ ಯಾರೂ ನಮ್ಮನ್ನು ಗುರುತು ಹಿಡಿಯದಿರಲಿ’ ಎಂದು ಯಮನಿಂದ ಯುಧಿಷ್ಠಿರ ವರ ಕೇಳುವುದು ವ್ಯಾಸರಲ್ಲಿ ಮಾತ್ರ.
ವಿರಾಟಪರ್ವ
ಸಂಪಾದಿಸಿ- ವ್ಯಾಸಭಾರತದಲ್ಲಿ ಕೀಚಕ ಮೊದಲು ದ್ರೌಪದಿಯ ಪ್ರಣಯ ಭಿಕ್ಷೆ ಯಾಚಿಸಿ ತಿರಸ್ಕೃತನಾಗುತ್ತಾನೆ; ಆದ್ದರಿಂದ ತಮ್ಮನ ಮನೆಯಿಂದ ಮದ್ಯ ತರುವಂತೆ ಸುದೇಷ್ಣೆ ಹೇಳಿದಾಗ, ದ್ರೌಪದಿ ಸಂಶಯ ವ್ಯಕ್ತಪಡಿಸುತ್ತಾಳೆ. ಪಂಪ ಭಾರತದ ಆರಂಭದಲ್ಲಿ ಕೀಚಕ-ದ್ರೌಪದಿಯರ ಸಂವಾದ ಬರುವುದಿಲ್ಲ; ಸುದೇಷ್ಣೆ ಕೀಚಕನಲ್ಲಿಗೆ ಹೋಗೆಂದಾಗ ದ್ರೌಪದಿ ಶಂಕೆಯಿಲ್ಲದೆ ಹೋಗುತ್ತಾಳೆ. ದ್ರೌಪದಿ ಗೋಳಾಡಿದಾಗ ಕೀಚಕನನ್ನು ಕೊಲ್ಲಲು ಭೀಮ ಮೊದಲು ನಿರಾಕರಿಸುತ್ತಾನೆಂದು ವ್ಯಾಸರ ಹೇಳಿಕೆ; ಪಂಪನಲ್ಲಾದರೆ ಅವನು ಕೂಡಲೇ ಒಪ್ಪಿಕೊಳ್ಳುತ್ತಾನೆ.
- ಯುಧಿಷ್ಠಿರ, ವಿರಾಟರು ಪಗಡೆಯಾಡಿದ ಪ್ರಸಂಗ ಮೂಲಭಾರತದಲ್ಲಿ ಮಾತ್ರ ಉಂಟು. ಅಲ್ಲಿ, ಉತ್ತರೆಯನ್ನು ಮದುವೆಯಾಗುವಂತೆ ಮೊದಲು ಅರ್ಜುನನನ್ನು ಕೋರುತ್ತಾನೆ ವಿರಾಟ. ಪಂಪನಲ್ಲಿ ಹಾಗಿಲ್ಲ; ಅಭಿಮನ್ಯುವಿನೊಡನೆ ಸಂಬಂಧ ಬೆಳೆಸುವ ಆಕಾಂಕ್ಷೆ ಮೊದಲೇ ಇದೆ.
ಉದ್ಯೋಗಪರ್ವ
ಸಂಪಾದಿಸಿಮೂಲಭಾರತದಲ್ಲಿ, ಕೌರವರೊಡನೆ ಸಂಧಾನಕ್ಕಾಗಿ ವಿರಾಟ, ದ್ರುಪದರು ತಮ್ಮ ತಮ್ಮ ಪುರೋಹಿತರನ್ನು ಮೊದಲು ಕಳುಹಿಸುತ್ತಾರೆ ಮತ್ತು ಧೃತರಾಷ್ಟ್ರ ವಿದುರನನ್ನು ಶಾಂತಿ ಸಂದೇಶದೊಡನೆ ಕಳುಹುತ್ತಾನೆ. ಪಂಪನಲ್ಲಿ ಇದೆಲ್ಲ ಬಿಟ್ಟುಹೋಗಿದೆ. ವ್ಯಾಸರಲ್ಲಿರುವ ಧೃತರಾಷ್ಟ್ರನ ಸಭೆ ಪಂಪನಲ್ಲಿ ದುರ್ಯೋಧನ ಸಭೆಯಾಗಿ ಬದಲಾಗಿದೆ. ವ್ಯಾಸರ ದುರ್ಯೋಧನ ಕೃಷ್ಣನನ್ನು ಗೌರವದಿಂದ ಸ್ವಾಗತಿಸಿದರೆ, ಪಂಪನ ದುರ್ಯೋಧನ, ಅರೆಮನಸ್ಸಿನಿಂದ ಸ್ವಾಗತಿಸುತ್ತಾನೆ. ವಿದುರ ಕೌರವನ ಮೇಲಿನ ಕೋಪದಿಂದ ತನ್ನ ಬಿಲ್ಲನ್ನು ಮುರಿದುಹಾಕುವುದು ಪಂಪಭಾರತದಲ್ಲಿ ಮಾತ್ರ. ವ್ಯಾಸಭಾರತದಲ್ಲಿ, ಕೃಷ್ಣನನ್ನು ಕಟ್ಟಿಹಾಕುವ ಯತ್ನ ನಡೆದಾಗ ಅವನ ವಿಶ್ವರೂಪದರ್ಶನವಾಗುತ್ತದೆ; ಪಂಪನಲ್ಲಿ, ದುರ್ಯೋಧನ ಕತ್ತಿ ಹಿರಿದು ಕೃಷ್ಣನ ಮೇಲೆ ಬೀಳಲೆಳಸಿದಾಗ ಆ ಅದ್ಭುತವಾಗುತ್ತದೆ. ಅಶ್ವತ್ಥಾಮನನ್ನು ಕೃಷ್ಣ ತನ್ನ ಪಕ್ಷಕ್ಕೆಳೆದುಕೊಂಡದ್ದು ಪಂಪಭಾರತದಲ್ಲಿ ಮಾತ್ರ ಇದೆ.
- ಕೃಷ್ಣ ಕರ್ಣನಿಗೆ ಹೇಳುವ ಸತ್ಯಂತಪ ಪ್ರಕರಣ ಪಂಪನದೇ. ವ್ಯಾಸಭಾರತದಲ್ಲಿ ಸೂರ್ಯ ಕರ್ಣನನ್ನು ಹಿಂದೆಯೇ ಎಚ್ಚರಿಸಿದ್ದ, ಇಂದ್ರನಿಗೆ ಕವಚಕುಂಡಲಗಳನ್ನು ಕೊಡಬೇಡವೆಂದು; ಪಂಪಭಾರತದಲ್ಲಿ ಅವನೀಗ ಕರ್ಣನನ್ನು ಕುಂತಿಯ ವಿಷಯದಲ್ಲಿ ಎಚ್ಚರಿಸುತ್ತಾನೆ. *‘‘ಪಾರ್ಥನೊಬ್ಬನನ್ನು ಕೊಲ್ಲುತ್ತೇನೆ’’ ಎಂಬುದು ವ್ಯಾಸರ ಕರ್ಣನ ಆಶ್ವಾಸನೆ, ಕುಂತಿಗೆ; ಪಂಪನ ಕರ್ಣನಾದರೊ ‘‘ರಣದಲ್ಲಿ ನಾನೆ ಅಳಿಯುತ್ತೇನೆ, ಯಾರನ್ನೂ ನೋಯಿಸುವುದಿಲ್ಲ’’ ಎಂದು ನಿಶ್ಚಯಿಸುತ್ತಾನೆ.
- ಭೀಷ್ಮಪಟ್ಟಾಭೀಷೇಕ ಸಂದರ್ಭದಲ್ಲಿ ಭೀಷ್ಮನಿಂದ ಕರ್ಣನಿಂದೆ ಮಾಡಿಸಿದ್ದಾರೆ ವ್ಯಾಸರು; ಪಂಪಭಾರತದಲ್ಲಿ ಕರ್ಣನೆ ಭೀಷ್ಮರನ್ನು ತೆಗಳುತ್ತಾನೆ. ತನ್ಮೂಲಕ ಭೀಷ್ಮನ ಉದಾತ್ತತೆಯನ್ನು ಪ್ರಕಟಿಸಿದ್ದಾನೆ, ಪಂಪ.
ಭೀಷ್ಮಪರ್ವ
ಸಂಪಾದಿಸಿ- ಶ್ವೇತನ ಬಿಲ್ಲಿನಲ್ಲಿದ್ದ ಶಿವನಿಗೆ ಭೀಷ್ಮ ವಂದಿಸುವುದು ಪಂಪನಲ್ಲಿ ಮಾತ್ರ ಕಾಣುತ್ತದೆ. ಭೀಷ್ಮನ ಮೇಲೆ ಚಕ್ರ ಪ್ರಯೋಗಿಸಲು ಕೃಷ್ಣ ಯತ್ನಿಸಿದಾಗ ಅರ್ಜುನ ತಡೆದಂತೆ ವ್ಯಾಸರ ನಿರೂಪಣೆ; ಪಂಪನ ಪ್ರಕಾರ, ಭೀಷ್ಮನ ಮೇಲೆ ಕೃಷ್ಣ ಚಕ್ರ ಪ್ರಯೋಗ ಮಾಡುತ್ತಾನೆ. ಅದಕ್ಕೆ ಪ್ರತಿಯಾಗಿ ಭೀಷ್ಮ ವೈಷ್ಣವಾಸ್ತ್ರ ಹೂಡುತ್ತಾನೆ. ಎರಡೂ ಆಕಾಶದಲ್ಲಿ ಸೆಣಸುತ್ತವೆ. ವೈಷ್ಣವಬಾಣವನ್ನು ಗೆಲ್ಲುವ ಆಯುಧವಿಲ್ಲವೆಂದು ಕೃಷ್ಣ ಯುಧಿಷ್ಠರನಿಗೆ ವಿವರಿಸುತ್ತಾನೆ. ಅರ್ಜುನ ಭೀಷ್ಮನಿಗೆ ಬಾಣಗಳ ಊರೆ ಕೊಟ್ಟಿದ್ದು, ನೆಲಕ್ಕೆ ಬಾಣ ಬಿಟ್ಟು ನೀರುಕ್ಕಿಸಿದ್ದು ವ್ಯಾಸರಲ್ಲಿ ಮಾತ್ರ ಬರುತ್ತದೆ. ಕರ್ಣನ ತೇಜೋವಧೆ ಮಾಡುವುದಾಗಿ ಶಲ್ಯ ಕೊಟ್ಟ ಭರವಸೆಯೂ ಅಷ್ಟೆ.
ದ್ರೋಣಪರ್ವ
ಸಂಪಾದಿಸಿ- ಮೂಲಭಾರತದಲ್ಲಿ, ಮುಂದೆ ಯಾರನ್ನು ಸೇನಾಪತಿ ಮಾಡಬೇಕೆಂಬ ಕೌರವನ ಪ್ರಶ್ನೆಗೆ ದ್ರೋಣನನ್ನು ಎಂಬುದು ಕರ್ಣನ ಸಲಹೆ. ಪಂಪಭಾರತದಲ್ಲಿ, ಭೀಷ್ಮರನಂತರ ಕರ್ಣ ಸೇನಾಪತಿಯಾಗಬೇಕೆಂಬುದು ದುರ್ಯೋಧನನ ಅಭಿಮತ; ಆದರೆ ದ್ರೋಣನನ್ನು ಹೆಸರಿಸುತ್ತಾನೆ ಕರ್ಣ. ಅರ್ಜುನ ಎದುರಾಗದಿದ್ದರೆ ಯುಧಿಷ್ಠಿರನನ್ನು ಸೆರೆಹಿಡಿಯುವುದಾಗಿ ದ್ರೋಣ ಪ್ರತಿಜ್ಞೆ ಮಾಡುವುದು ವ್ಯಾಸಭಾರತದಲ್ಲಿ ಮಾತ್ರ. ಅರ್ಜುನನನ್ನು ದೂರ ಕರೆದೊಯ್ಯಬೇಕೆಂಬುದು, ವ್ಯಾಸರ ಪ್ರಕಾರ, ದ್ರೋಣರ ಸಲಹೆ; ಪಂಪನಲ್ಲಿ ಅದು ದುರ್ಯೋಧನನದೇ. ವ್ಯಾಸರ ಪದ್ಮವ್ಯೂಹ ಪಂಪನಲ್ಲಿ ಚಕ್ರವ್ಯೂಹವಾಗಿದೆ. ಮೂಲದಲ್ಲಿ ಅಭಿಮನ್ಯು ‘‘ನನಗೆ ಒಳಹೊಗುವುದು ಗೊತ್ತು, ಹೊರಬರಲರಿಯೆ’’ ಎಂದು ಹೇಳಿದರೆ, ಪಂಪನಲ್ಲಿ ‘‘ಭೇದಿಸಬಲ್ಲೆ’’ ಎಂದಷ್ಟೆ ನುಡಿಯುತ್ತಾನೆ.
- ಅಭಿಮನ್ಯು ವಧೆಯಾದ ಬಳಿಕ ಯುಧಿಷ್ಠಿರನನ್ನು ವ್ಯಾಸರು ಸಂತೈಸಿದರೆಂದು ಪಂಪ ಹೇಳುವುದು ಮೂಲದಲ್ಲಿಲ್ಲ. ಮೂಲಭಾರತದಲ್ಲಿ ಅರ್ಜುನನಿಗೆ ಅನಿಮಿತ್ತ ವ್ಯಾಕುಲವಾಗುತ್ತದೆ; ಉತ್ಪಾತಗಳು ತೋರುತ್ತವೆ. ಪಂಪಭಾರತದಲ್ಲಿ ಕೃಷ್ಣ ಅಭಿಮನ್ಯುವಿನ ಸಾವನ್ನು ದಿವ್ಯಜ್ಞಾನದಿಂದರಿತು, ‘ಕಪಟಪ್ರಪಂಚ’ವನ್ನಾಚರಿಸುತ್ತಾನೆ. ಅರ್ಜುನ ಸೈಂಧವ ವಧೆಯ ಪ್ರತಿಜ್ಞೆಗೈದಾಗ, ದುಶ್ಯಲೆ ಅಣ್ಣನಲ್ಲಿಗೆ ಬಂದು ಗೋಳಾಡಿದ್ದು, ಅವನು ಅವಳಿಗೆ ಸಮಾಧಾನ ಹೇಳಿದ್ದು ಪಂಪನಲ್ಲಿ ಮಾತ್ರ ಉಂಟು. ಯುಧಿಷ್ಠಿರ ಇರುಳು ದ್ರೋಣನನ್ನು ಕಂಡು ‘‘ನೀವು ಇಷ್ಟು ಕಠಿನರಾಗಬಹುದೆ?’’ ಎಂದು ಕೇಳಿದ್ದು, ‘ಜಯವಾಗಲಿ’ ಎಂದು ಅವನು ಆಶೀರ್ವದಿಸಿದ್ದು ವ್ಯಾಸರಲ್ಲಿಲ್ಲ. ಕೃಷ್ಣ ಸೂರ್ಯನ ಬೆಳಕು ಹೋಗಿ ಮಬ್ಬು ಕವಿಯುವಂತೆ ಮಾಡುತ್ತಾನೆ, ಮೂಲದಲ್ಲಿ; ಪಂಪನಲ್ಲಿ, ಅರ್ಜುನನ ಬಾಣದ ಮಳೆಗೆ ಕತ್ತಲಾಗಿ ಸೂರ್ಯ ಮುಳುಗಿದಂತೆ ತೋರುತ್ತದೆ. ಇಂಥ ಕಡೆ ಕೃಷ್ಣಮಹಿಮೆಗಿಂತ ಅರ್ಜುನನ ಶೌರ್ಯಕ್ಕೆ ಕವಿ ಹೆಚ್ಚು ಒತ್ತುಕೊಟ್ಟಿರುವುದು ಸ್ಪಷ್ಟ. ಆದರೆ ಕೃಷ್ಣ ಮಲಗಿದ್ದ ಅರ್ಜುನನನ್ನು ಶಿವನೆಡೆಗೆ ಕರೆದೊಯ್ದು ಪಾಶುಪತದ ಮುಷ್ಟಿಯನ್ನು ಕೊಡಿಸಿದಂತೆ ಪಂಪ ಹೇಳುವಲ್ಲಿ(ಇದು ವ್ಯಾಸರಲ್ಲಿಲ್ಲ) ಅವನ ‘ಲೌಕಿಕ ದೃಷ್ಟಿ’ ಹಿಂದೆ ಬಿದ್ದಂತೆ ತೋರು ವುದಿಲ್ಲವೆ?[13]
- ವ್ಯಾಸಭಾರತದಲ್ಲಿ ‘‘ಅಶ್ವತ್ಥಾಮಾ ಹತಃ ಕುಂಜರಃ’’ ಎಂದು ಯುಧಿಷ್ಠಿರನಿಂದ ಹೇಳಿಸುತ್ತಾನೆ, ಕೃಷ್ಣ (‘ಕುಂಜರಃ’ ಎಂಬುದನ್ನು ಮೆಲ್ಲಗೆ). ಪಂಪನಲ್ಲಿ, ಯುಧಿಷ್ಠಿರ ಮೊದಲು ‘‘ಹತೋsಶ್ವತ್ಥಾಮಾ’’ ಎಂದಷ್ಟೆ ಹೇಳುತ್ತಾನೆ; ಆಮೇಲೆ ‘‘ಸತ್ತುದು ಆನೆ’’ ಎಂದು ಧರ್ಮಜ ಹೇಳಿದರೂ ದ್ರೋಣ ನಂಬುವುದಿಲ್ಲ. ವ್ಯಾಸರಲ್ಲಿ, ಅಶ್ವತ್ಥಾಮನ ನಾರಾಯಣಾಸ್ತ್ರಕ್ಕೆ ಎಲ್ಲರೂ ಮಣಿದು ತಪ್ಪಿಸಿಕೊಳ್ಳುತ್ತಾರೆ; ಪಂಪನ ಪ್ರಕಾರ, ಕೃಷ್ಣ ವೈಷ್ಣವಾಸ್ತ್ರದಿಂದ ನಾರಾಯಣಾಸ್ತ್ರವನ್ನು ತಪ್ಪಿಸುತ್ತಾನೆ.
ಕರ್ಣಪರ್ವ
ಸಂಪಾದಿಸಿ- ಕರ್ಣ ಮುಂದಿನ ಸೇನಾಪತಿಯಾಗಲಿ ಎಂದು ಅಶ್ವತ್ಥಾಮ ಸಲಹೆ ಕೊಡುತ್ತಾನೆ. ಮೂಲಭಾರತದಲ್ಲಿ. ಪಂಪನಲ್ಲಾದರೆ, ಅಶ್ವತ್ಥಾಮ ಸ್ವಪ್ರತಾಪದ ಮಾತುಗಳನ್ನಾಡುತ್ತಾನೆ. ಅವನಿಗೂ ಕರ್ಣನಿಗೂ ಘರ್ಷಣೆಯಾಗುತ್ತದೆ. ಕರ್ಣ ಸಾಯುವವರೆಗೂ ಬಿಲ್ಲು ಹಿಡಿಯು ವುದಿಲ್ಲವೆಂದು ಅಶ್ವತ್ಥಾಮ ಪ್ರತಿಜ್ಞೆಮಾಡಿ, ಆಮೇಲೆ ಪಶ್ಚಾತ್ತಾಪ ಪಡುತ್ತಾನೆ. ತನ್ನನ್ನು ಮೂದಲಿಸಿದ ಯುಧಿಷ್ಠಿರನ ಮೇಲೆ ಅರ್ಜುನ ಖಡ್ಗವನ್ನೆತ್ತಿಕೊಂಡು ಹೋಗುವುದು ವ್ಯಾಸರಲ್ಲಿ ಮಾತ್ರ.
- ವ್ಯಾಸಭಾರತದಲ್ಲಿ ಭೀಮ ದುಶ್ಶಾಸನನ ರುಧಿರಪಾನ ಮಾಡುತ್ತಾನೆ. ಪಂಪನಲ್ಲಿ ಅಷ್ಟು ಮಾತ್ರವಲ್ಲದೆ, ಆ ರಕ್ತದಿಂದ ದ್ರೌಪದಿಯ ಕೇಶವನ್ನು ಬಾಚಿ ಮುಡಿಗಟ್ಟಿದ್ದು ಮತ್ತು ಕರುಳಮಾಲೆಯನ್ನು ಮುಡಿಸಿದ್ದು ಹೆಚ್ಚುವರಿಯಾಗಿ ಬರುತ್ತವೆ.
- ಮೂಲಭಾರತದಲ್ಲಿ, ಕರ್ಣ ಅರ್ಜುನನ ಮೇಲೆ ಸರ್ಪಾಸ್ತ್ರ ಬಿಟ್ಟಾಗ ಅದು ಗುರಿ ತಪ್ಪುತ್ತದೆ; ಅವನು ಎರಡನೆಯ ಸಲ ಅದನ್ನು ಪ್ರಯೋಗಿಸಬಯಸುವುದಿಲ್ಲ. ಪಂಪಭಾರತದಲ್ಲಿ, ಅರ್ಜುನನನ್ನು ಕೊಲ್ಲುವ ಉದ್ದೇಶವೇ ಕರ್ಣನಿಗಿಲ್ಲ. ಸರ್ಪಾಸ್ತ್ರ ಎರಡನೆಯ ಸಲ ತನ್ನನ್ನು ತೊಡೆಂದು ಕೇಳಿದಾಗ, ನೀನು ಯಾರೆಂದು ಅದನ್ನು ವಿಚಾರಿಸುತ್ತಾನೆ. ತನ್ನ ಪೂರ್ವವೃತ್ತಾಂತವನ್ನದು ತಿಳಿಸುತ್ತದೆ. ಆಗ ‘‘ನೀನೆಂದು ತಿಳಿದಿದ್ದರೆ ನಿನ್ನನ್ನು ತೊಡುತ್ತಲೇ ಇರಲಿಲ್ಲ’’ ಎನ್ನುತ್ತಾನೆ ಕರ್ಣ.
- ನೆಲದಲ್ಲಿ ಹೂತುಕೊಂಡ ರಥದ ಗಾಲಿಯನ್ನು ಕರ್ಣ ಮೇಲೆತ್ತುತ್ತಿರುವಾಗಲೆ ಅವನನ್ನು ಕೊಲ್ಲುತ್ತಾನೆ ಅರ್ಜುನ, ಮೂಲಭಾರತದಲ್ಲಿ. ಪಂಪಭಾರತದಲ್ಲಿ, ಕರ್ಣನನ್ನು ಆ ಅವಸ್ಥೆಯಲ್ಲಿ ಹೊಡೆಯುವಂತೆ ಕೃಷ್ಣ ಹೇಳಿದಾಗ, ಅರ್ಜುನ ಹೇಸುತ್ತಾನೆ; ‘‘ಇವನ ಮೇಲೆ ನನಗೇಕೊ ಪ್ರೀತಿ ಹುಟ್ಟುತ್ತಿದೆ’’ ಎನ್ನುತ್ತಾನೆ. ಕರ್ಣ ರಥದ ಮೇಲೇರಿ ಬಂದನಂತರ, ಮತ್ತೆ ಸಮರ ನಡೆಯುತ್ತದೆ.
ಶಲ್ಯಪರ್ವ
ಸಂಪಾದಿಸಿ- ಯುಧಿಷ್ಠಿರನ ಶಕ್ತ್ಯಾಯುಧದಿಂದ ಶಲ್ಯನ ಸಾವು ಸಂಭವಿಸುತ್ತದೆ, ವ್ಯಾಸಭಾರತದಲ್ಲಿ. ಪಂಪನ ಪ್ರಕಾರ, ಯುಧಿಷ್ಠಿರನನ್ನು ರೇಗಿಸಿ ಸಾವು ಪಡೆಯಲು ಅವನೆದೆಗೆ ಒದೆಯುತ್ತಾನೆ ಶಲ್ಯ; ಯುಧಿಷ್ಠಿರ ಹಣೆಗಣ್ಣಿನಿಂದ ನೋಡಿದಾಗ, ಸುಟ್ಟು ಬೂದಿಯಾಗುತ್ತಾನೆ.(ಇದರ ಸೂಚನೆ ಮೂಲದಲ್ಲೆ ಇರುವಂತಿದೆ).
- ಮೂಲಭಾರತದಲ್ಲಿ ದುರ್ಯೋಧನ ಆಯಾಸದಿಂದ ವೈಶಂಪಾಯನ ಸರೋವರದಲ್ಲಿ ಅಡಗುತ್ತಾನೆ; ಪಾಂಡವರು ಬಂದಾಗ ಹೇಡಿಯಂತೆ ವರ್ತಿಸುತ್ತಾನೆ. ಪಂಪನ ಪ್ರಕಾರ, ಅವನು ಅಭಿಮಾನ ಧನ; ಭೀಷ್ಮರಿಂದ ಜಲಮಂತ್ರೋಪದೇಶ ಕೈಕೊಂಡು, ಸರೋವರದಲ್ಲಿ ಮುಳುಗಿರುತ್ತಾನೆ. ಕಡೆಯ ಗಳಿಗೆಯಲ್ಲಿ ಕೃಷ್ಣ ಸಂಧಿಗಾಗಿ ಯತ್ನಿಸುವುದನ್ನು ಪಂಪ ಮಾತ್ರ ಹೇಳುತ್ತಾನೆ.
- ಭೀಮ ಮೂರ್ಛಿತನಾಗಿ ಸ್ತಬ್ಧನಾದಾಗ, ಹೊಡೆಯುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿ ದ್ದಾನೆಂದು ತಿಳಿಯುತ್ತಾನೆ ದುರ್ಯೋಧನ, ವ್ಯಾಸಭಾರತದಲ್ಲಿ. ಭೀಮ ಮೂರ್ಛೆಹೋದಾಗ ದುರ್ಯೋಧನ ‘‘ಬಿದ್ದಿರುವವನನ್ನು ಕೊಲ್ಲುವುದಿಲ್ಲ’’ ಎಂದುಕೊಂಡು ಹೊಡೆಯಲಿಲ್ಲ ವೆಂಬುದು ಪಂಪನ ಹೇಳಿಕೆ. ವ್ಯಾಸರಲ್ಲಿ ಅರ್ಜುನ ತೊಡೆ ತಟ್ಟಿದರೆ, ಪಂಪನಲ್ಲಿ ಆ ಕೆಲಸ ಕೃಷ್ಣನದು.
- ಬಲರಾಮ ನೇಗಿಲೆತ್ತಿ ಭೀಮನನ್ನು ಹೊಡೆಯಹೋದುದನ್ನು ವ್ಯಾಸರು ಮಾತ್ರ ಹೇಳುತ್ತಾರೆ. ಅಶ್ವತ್ಥಾಮ ಮತ್ತು ಲಕ್ಷ್ಮಿಯ ಪ್ರಕರಣ ಪಂಪನಲ್ಲಿ ಮಾತ್ರ ಇದೆ. ಪಾಂಡವರ ಹೊರತು ಉಳಿದವರನ್ನೆಲ್ಲ ಕೊಂದುದಾಗಿ ಅಶ್ವತ್ಥಾಮ ಹೇಳಿದಾಗ ವ್ಯಾಸರ ದುರ್ಯೋಧನ ಸಂತಸ ಪಡುತ್ತಾನೆ. ಆದರೆ ಪಂಪನ ಕೌರವ ಉಪಪಾಂಡವರ ತಲೆಗಳನ್ನು ನೋಡಿ ‘‘ಇವು ಪಾಂಡವರ ತಲೆಗಳಲ್ಲ’’ ಎಂದು ವಿಷಾದಿಸಿ, ಬಾಲವಧದೋಷಕ್ಕೆ ಅಶ್ವತ್ಥಾಮನನ್ನು ಗುರಿಮಾಡುತ್ತಾನೆ.
- ಧೃತರಾಷ್ಟ್ರ ಭೀಮನನ್ನು ಅಪ್ಪಿಕೊಂಡದ್ದು, ಅಶ್ವತ್ಥಾಮನ ನಾರಾಯಣಾಸ್ತ್ರ ಪ್ರಯೋಗ ಇತ್ಯಾದಿಗಳು ವ್ಯಾಸಭಾರತದಲ್ಲಿ ಮಾತ್ರ ಇದ್ದು, ಪಂಪನಲ್ಲಿ ತ್ಯಕ್ತವಾಗಿವೆ.
- ಮೂಲಭಾರತದಲ್ಲಿ ಯುಧಿಷ್ಠಿರನಿಗೆ ಪಟ್ಟಾಭಿಷೇಕವಾದರೆ ಪಂಪಭಾರತದಲ್ಲಿ ಅರ್ಜುನ, ಸುಭದ್ರೆಯರಿಗೆ ಆ ಯೋಗ.
ಮೂಲದ ಕೆಲವು ಹೆಸರುಗಳೂ ಪಂಪಭಾರತದಲ್ಲಿ ಭಿನ್ನವಾಗಿರುವುದನ್ನು ಲಕ್ಷಿಸ ಬಹುದು.
ಕಥಾ ಸಂವಿಧಾನದ
ಸಂಪಾದಿಸಿ- ಕಥಾ ಸಂವಿಧಾನದಲ್ಲಿ ಪಂಪ ತನ್ನತನವನ್ನು ಹೇಗೆ ಅಭಿವ್ಯಕ್ತಿಸಿದ್ದಾನೆಂಬುದನ್ನು ಇದುವರೆಗೆ ಸ್ಥೂಲವಾಗಿ ಸಮೀಕ್ಷಿಸಿದ್ದಾಯಿತು. ಅವನ ಲೋಪ, ಆಗಮ, ಆದೇಶಗಳಿಂದ ಪಾತ್ರಚಿತ್ರಣದ ಮೇಲೆ ಏನು ಪರಿಣಾಮವಾಗಿದೆ, ಕಾವ್ಯಗುಣ ಹೇಗೆ ಹೆಚ್ಚು ಕಡಿಮೆಯಾಗಿದೆ ಎಂಬುದೆಲ್ಲ ಇಲ್ಲಿ ಅಷ್ಟಾಗಿ ಪ್ರಕೃತವಲ್ಲ.
- ಒಟ್ಟಿನಲ್ಲಿ ಪಂಪ ಮಹಾಭಾರತವನ್ನು ಭಾರತವನ್ನಾಗಿ ಪರಿವರ್ತಿಸಿದ್ದಾನೆ ಎನ್ನಬಹುದು. ಮೂಲವನ್ನು ಸಂಗ್ರಹಿಸುವಾಗ ಅಲ್ಲಿನ ಸಂಕೀರ್ಣತೆ, ಸೌಂದರ್ಯ, ಸ್ವಾರಸ್ಯಗಳು ಎಷ್ಟೋ ವೇಳೆ ನಷ್ಟವಾಗುವ ಸಂಭವವಿದೆಯೆಂಬುದನ್ನು ಮರೆಯಬಾರದು. ಆದರೆ ಪಂಪನ ಕೃತಿ ವ್ಯಾಸಭಾರತದ ಸಂಗ್ರಹಾನುವಾದವಲ್ಲ, ಒಂದು ಸ್ವೋಪಜ್ಞ ಮಹಾಕಾವ್ಯ ಎಂಬುದೂ ಅಷ್ಟೇ ಸತ್ಯ. ತೌಲನಿಕ ವಿಮರ್ಶೆ ಉಪಯುಕ್ತ. ಆದರೆ ಪ್ರಾಯಃ ಅನಿವಾರ್ಯ ವಲ್ಲ.
- ಪಂಪ ಮಾಡಿಕೊಂಡಿರುವ ಪ್ರತಿಯೊಂದು ಮಾರ್ಪಾಟೂ ಉಚಿತವಾದದ್ದು ಎಂಬ ವಾದ ಒಂದು ಅತಿರೇಕವಾದರೆ, ಪ್ರತ್ಯಂಶದಲ್ಲೂ ವ್ಯಾಸರೇ ಮೇಲು ಎಂಬ ವಾದ ಇನ್ನೊಂದು ಅತಿರೇಕವಾಗಬಹುದು.[14] ವ್ಯಾಸಪ್ರತಿಭೆ – ಅದು ಸಮಷ್ಟಿ ಪ್ರತಿಭೆ- ಪಂಪನ ಅಥವಾ ಕುಮಾರವ್ಯಾಸನ ಪ್ರತಿಭೆಗಿಂತ ದೊಡ್ಡದು, ವ್ಯಾಪಕವಾದುದು ಎಂಬುದು ಒಟ್ಟಿನ ಮೇಲೆ ಅಲ್ಲಗಳೆಯಲಾಗದ ದಿಟ. ಆ ಮಹರ್ಷಿಕವಿಯೊಡನೆ ಯಾರು ತಾನೆ ಸ್ಪರ್ಧಿಸಬಲ್ಲರು? ಆದರೂ ಪಂಪ, ಕುಮಾರವ್ಯಾಸರ ಕಾವ್ಯಗಳು ತಮ್ಮ ತಮ್ಮ ಬಗೆಯಲ್ಲಿ ವಿಶಿಷ್ಟವಾಗಿವೆ. ಈಗ ಒಂದೆರಡು ಹೇಳಿಕೆಗಳನ್ನು ಗಮನಿಸಬಹುದು
- ‘‘ಬಹಳ ವಿಸ್ತಾರವಾದ ಸಂಸ್ಕೃತ ಮಹಾಭಾರತದ ಕಥೆಯನ್ನು ಇಷ್ಟು ಅಂದವಾಗಿ ಸಂಗ್ರಹಿಸಿ, ಮುಖ್ಯವಾದ ವಿಷಯವೊಂದನ್ನೂ ಬಿಡದೆ, ಮೂಲ ಕಾವ್ಯದ ಪುನರುಕ್ತಿಗಳಿಗೂ, ಕಥೆಗೆ ಅವಶ್ಯಕವಿಲ್ಲದ ಉಪಾಖ್ಯಾನಗಳಿಗೂ ಎಡೆಗೊಡದೆ, ಕಥಾಸರಣಿಯು ನಿರರ್ಗಳವಾಗಿ ಹರಿಯುವಂತೆ ರಚಿಸುವ ಕೌಶಲವು ಪಂಪನಿಗಲ್ಲದೆ ಬೇರೊಬ್ಬ ಕವಿಗೆ ಸಲ್ಲದು.’’[15]
- ‘‘ಪಂಪ ಭಾರತದ ಕಟ್ಟಣದಲ್ಲಿ ಒಂದು ಅಪೂರ್ವತೆಯಿದೆ, ಉಜ್ವಲತೆಯಿದೆ. ಅಪರಂಪಾರವಾದ ಮೂಲ ಮಹಾಭಾರತವನ್ನು ಸಂಗ್ರಹಗೊಳಿಸುವಲ್ಲಿ ಪಂಪನು ಕೇಂದ್ರ ಕಥಾನಕದ ಮೇಲಿನ ದೃಷ್ಟಿ, ಪ್ರಮುಖ ಪಾತ್ರಗಳ ಮೇಲಿನ ಗಮನವನ್ನು ಸತತವಾಗಿ ಇಟ್ಟುಕೊಂಡು ಇತರ ವಿಷಯಗಳನ್ನು ತರುವಷ್ಟು ತರತರದ ಪ್ರಮಾಣದಲ್ಲಿ ತಂದಿರುತ್ತಾನೆ. ಅವನ ಕೇಂದ್ರೀಕರಣದ ಕಲೆ, ಪ್ರಮಾಣದ ಜ್ಞಾನ, ಉಜ್ವಲೀಕರಣದ ಶಕ್ತಿ ಇವುಗಳಿಂದ ಒಂದು ‘ವಸ್ತುವಿದ್ಯೆ’ ಮೈದೋರಿದೆ. ಕನ್ನಡವಷ್ಟೇ ಏಕೆ, ಸಂಸ್ಕೃತ ವಾಙ್ಮಯದಲ್ಲಿಯೂ ಭಾರತದ ಈ ಬಗೆಯ ರೂಪಾಂತರವು ಅಪರೂಪವಾದುದು.’’[16]
- ‘‘ವಿಕ್ರಮಾರ್ಜುನ ವಿಜಯವು ಕನ್ನಡದ ಕನ್ನಡಿಯಲ್ಲಿ ಚಿಕ್ಕದಾಗಿ ಬಿದ್ದ ವ್ಯಾಸಭಾರತದ ನೆರಳಲ್ಲ; ಅಲ್ಲಿಯ ಚಿನ್ನವನ್ನು ಶೋಧಿಸಿ ತಂದು ಹೊಸದಾಗಿ ಎರಕ ಹೊಯ್ದು ಒಪ್ಪವಿಟ್ಟು ನಿಲ್ಲಿಸಿದ ನೂತನ ಪುತ್ತಳಿ ಅದು.’’[17]
- ಪಂಪ ‘ವ್ಯಾಸಮುನೀಂದ್ರರುಂದ್ರ ವಚನಾಮೃತವಾರ್ಧಿಯನ್ನು’ ತಾನೆ ಹೇಳಿಕೊಂಡಿರು ವಂತೆ, ಈಸಿದ್ದಾನೆ-ಬಹುತೇಕ ಯಶಸ್ವಿಯಾಗಿ. ಅವನ ಸೋಲಿನ ಎಡೆಗಳೂ ಉಂಟು, ನಿಜ. ಆದರೆ ಇದಕ್ಕೆ ಸಮಾಧಾನವಾಗಿ ಅವನ ವಿನಯವಾಣಿ ಇದ್ದೇ ಇದೆಯಲ್ಲ: ‘‘ಕವಿ ವ್ಯಾಸನೆನ್ ಎಂಬ ಗರ್ವಂ ಎನಗಿಲ್ಲ!’’
ಟಿಪ್ಪಣಿ
ಸಂಪಾದಿಸಿ- [1] ‘‘ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ’’ ಎಂದು ಪಂಪ ಹೇಳಿಕೊಳ್ಳುವುದರಿಂದ, ಅವನಿಗಿಂತ ಹಿಂದೆ ಕನ್ನಡದಲ್ಲಿ ‘ಕವಿವ್ಯಾಸ’ ಎಂಬವನೊಬ್ಬ ಭಾರತವನ್ನು ಬರೆದಿದ್ದನೆಂಬ ಅಭಿಪ್ರಾಯವೊಂದುಂಟು. ಇದಕ್ಕೆ ಆಧಾರಗಳು ಸಾಲವು.
- [2] ಮೂಲಮಹಾಭಾರತ ೧೮ ಪರ್ವಗಳ ಕೃತಿಯಷ್ಟೆ. ಆದರೆ ಪಂಪ, ಕುಮಾರವ್ಯಾಸರಲ್ಲಿ ೧೦ ಪರ್ವಗಳ ಕತೆಯಷ್ಟೆ ಕಂಡುಬರುತ್ತದೆ. ಇದಕ್ಕೇನು ಕಾರಣ? ಮೂಲದಲ್ಲಿದ್ದವು ೧೦ ಪರ್ವಗಳು ಮಾತ್ರ, ಉಳಿದ ಪರ್ವಗಳು ಆಮೇಲೆ ಸೇರಿದುವು ಎಂಬುದೊಂದು ವಾದ. ಸಂಸ್ಕೃತ ಭಾರತದ ಆದಿಪರ್ವದ ಬಹುಭಾಗ ನಿಸ್ಸಂದೇಹವಾಗಿ ಈಚಿನದು. ಇನ್ನೊಂದು ಒಳ್ಳೆಯ ಉದಾಹರಣೆ : ಪಂಪನಲ್ಲಿ ದೂರ್ವಾಸಾತಿಥ್ಯ ಪ್ರಕರಣವಿಲ್ಲ. ವಾಸ್ತವವಾಗಿ ಇದು ವ್ಯಾಸಭಾರತದಲ್ಲಿ ಪ್ರಕ್ಷಿಪ್ತ; ಪಂಪನ ತರುವಾಯ ತೂರಿಕೊಂಡದ್ದು. ಅಷ್ಟೇ ಅಲ್ಲ. ಇದು ಪ್ರಾಯಃ ಕುಮಾರವ್ಯಾಸ ಭಾರತಕ್ಕಿಂತ ಈಚಿನದು. (ಪಂಪ, ಕುಮಾರವ್ಯಾಸರಿಗೆ ಆಕರವಾಗಿದ್ದ ಸಂಸ್ಕೃತ ಭಾರತದ ಪಾಠ ಹೆಚ್ಚು ಕಡಿಮೆ ಒಂದೇ ಆಗಿದ್ದಿರಬೇಕು.)
- [3] ಭಟ್ಟಾರಕ, ಆಸನಕಂಪ, ರೂಪಪರಾವರ್ತನ, ವೈಮಾನಿಕ ದೇವರು, ಅಷ್ಟಶೋಭೆ-ಇಂತಹ ಮಾತುಗಳಲ್ಲಷ್ಟೆ ಜೈನಧರ್ಮದ ವಾಸನೆಯನ್ನು ಶಂಕಿಸಬಹುದು. ಚಿತ್ರಾಂಗದ ದುರ್ಯೋಧನನ ಪೂರ್ವಭವದ ಹಗೆ ಎನ್ನುವಲ್ಲಿ, ಕುಂತಿ ಅರ್ಜುನನನ್ನು ಗರ್ಭದಲ್ಲಿ ಧರಿಸುವುದಕ್ಕೆ ಮುನ್ನ ಕಂಡ ಸ್ವಪ್ನಗಳ ವರ್ಣನೆಯಲ್ಲಿ, ದುರ್ಯೋಧನ ಒಂದು ಘಟ್ಟದಲ್ಲಿ ಸಂಸಾರದ ಅಸಾರತೆಯನ್ನರಿತನೆನ್ನುವಲ್ಲಿ ಕೂಡ ಆ ವಾಸನೆಯಿರಬಹುದು.
- [4] ವಾಸ್ತವವಾಗಿ, ವ್ಯಾಸಭಾರತದಲ್ಲೇ ಅರ್ಜುನನ ಪ್ರಾಶಸ್ತ್ಯದ ಸೂಚನೆಯಿದೆ.
- [5] ಈ ಅರ್ಥದಲ್ಲೂ ‘ಸಮಸ್ತ’ ಎಂಬ ಮಾತು ಪ್ರಯುಕ್ತವಾಗಿದೆಯೆಂಬ ಅಭಿಪ್ರಾಯ ವುಂಟು. (‘‘ಸಮಾಸ’’ ಎಂದರೆ ಕೂಡಿಸುವುದು ಎಂದೂ ಆಗುತ್ತದೆ).
- [6] ಜೈನಭಾರತದಲ್ಲೂ ದ್ರೌಪದಿ ಅರ್ಜುನನೊಬ್ಬನಿಗೆ ಮಾತ್ರ ಪತ್ನಿ. ತನ್ನ ಕಾಲದ ಲೌಕಿಕ ನಡವಳಿಕೆಗೆ ಹೊಂದುವಂತೆ ಪಂಪ ಈ ಬದಲಾವಣೆಯನ್ನು ಮಾಡಿರಲೂಬಹುದು.
- [7] ದುರ್ಯೋಧನನ ಪಾತ್ರಕ್ಕೂ ಪಂಪ ಮೂಲದಲ್ಲಿಲ್ಲದ ಆಯಾಮವನ್ನೊದಗಿಸಿದ್ದಾನೆ.
- [8] ಬೆಳ್ಳಾವೆ ವೆಂಕಟನಾರಾಯಣಪ್ಪ (ಸಂ), ಪಂಪಭಾರತದ ಉಪೋದ್ಘಾತ, ಪು.XIVII
- [9] ಅರ್ಜುನನ ಶೌರ್ಯ ಸಾಹಸಗಳ ಪ್ರಸಕ್ತಿ ಬಂದ ಕಡೆ ಹೀಗಾಗುತ್ತದೆ; ಅರ್ಜುನನನ್ನು ಮೇಲೆತ್ತುವ ಯಾವ ಅವಕಾಶವನ್ನೂ ಪಂಪ ಕಳೆದುಕೊಳ್ಳುವುದಿಲ್ಲ. ಅರ್ಜುನ ಜನನ ವೃತ್ತಾಂತ, ಅರ್ಜುನ-ಸುಭದ್ರೆಯರ ಪ್ರಣಯ ವಿರಹಗಳ ಚಿತ್ರಣ ಮೂಲಕ್ಕಿಂತ ವಿಸ್ತೃತವಾಗಿ ಬಂದಿವೆ. ಖಾಂಡವ ವನದಹನದ ಪ್ರಸಂಗವೂ ಅಷ್ಟೆ.
- [10] ಇಡೀ ವಸ್ತ್ರಾಪಹರಣ ಪ್ರಕರಣವೆ ಪ್ರಕ್ಷಿಪ್ತವೆಂದು ಕೆಲವರು ವಿದ್ವಾಂಸರ ಅಭಿಪ್ರಾಯವಾದರೆ, ಅಕ್ಷಯವಸ್ತ್ರ ಸಂಗತಿಯಷ್ಟೆ ಪ್ರಕ್ಷಿಪ್ತವೆಂದು ಕೆಲವರ ಮತ.
- [11] ಪಂಪಪೂರ್ವ ಶೈವ ಶಿಲ್ಪಗಳಲ್ಲಿ ಶಿವನೇ ಸೋತಂತೆ ತೋರಿಸಿರುವುದನ್ನು ಪಂಪ ಅನುಸರಿಸಿರಬಹುದು ಎಂದು ಒಂದು ವಾದವುಂಟು. ಏನು ಮಾಡಿದರೂ ಪಂಪನನ್ನು ಪ್ರಮಾದ ಮುಕ್ತನನ್ನಾಗಿಸುವುದು ಸಾಧ್ಯವಾಗಲಾರದು.
- [12] ಹಾಗಾದರೆ ದುರ್ಯೋಧನನ ತೊಡೆ ಮುರಿಯುವುದಕ್ಕಾಗಿ ಭೀಮ ಏತಕ್ಕೆ ಪ್ರತಿಜ್ಞೆ ಮಾಡಬೇಕಿತ್ತು? ಪಂಪ ಯೋಚಿಸಲಿಲ್ಲ.
- [13] ಮೂಲಭಾರತದ ಲೋಕೋತ್ತರ ಸ್ವರೂಪವನ್ನು ತಗ್ಗಿಸುವುದಷ್ಟೆ ಪಂಪನ ಉದ್ದೇಶ ವೆನಿಸುತ್ತದೆ. ಅದನ್ನು ಪೂರ್ತಿ ತೆಗೆದುಹಾಕುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ.(ಉಪಾಖ್ಯಾನಾದಿಗಳನ್ನು ಬಿಟ್ಟರೂ, ಮುಖ್ಯ ಕಥೆಯಲ್ಲೆ ಅಪ್ರಾಕೃತ ಅಂಶಗಳು ದಟ್ಟವಾಗಿವೆ). ‘‘ಬೆಳಗುವೆನಿಲ್ಲಿ ಲೌಕಿಕಮನ್ ’’ ಎಂಬ ಪ್ರತಿಜ್ಞೆ ಅಥವಾ ನಿರೀಕ್ಷೆ ಸಂಪೂರ್ಣವಾಗಿ ಈಡೇರಿಲ್ಲ. ಇದು ಆಕ್ಷೇಪಣೀಯವಲ್ಲ, ಅಪೇಕ್ಷಣೀಯವೆ ಆಗುತ್ತದೆ.
- [14] ಮೊದಲನೆಯ ಪಕ್ಷವನ್ನು ನ. ಸುಬ್ರಹ್ಮಣ್ಯಂ ಅವರ ‘ಮಹಾಭಾರತದ ಸಮೀಕ್ಷೆ’ ಪ್ರತಿನಿಧಿಸಿದರೆ, ಎರಡನೆಯದನ್ನು ಸುಜನಾ ಅವರ ‘ಪಂಪಭಾರತದ ವಸ್ತುವಿನ್ಯಾಸ’ ಎಂಬ ಲೇಖನ (‘ಪಂಪ : ಒಂದು ಅಧ್ಯಯನ’, ಸಂ.ಜಿ.ಎಸ್ .ಶಿವರುದ್ರಪ್ಪ) ಪ್ರತಿನಿಧಿಸುತ್ತದೆ. ಎರಡನ್ನೂ ವಿದ್ಯಾರ್ಥಿಗಳು ಅಗತ್ಯವಾಗಿ ನೋಡಬೇಕು.
- [15] ಬೆಳ್ಳಾವೆ ವೆಂಕಟನಾರಾಯಣಪ್ಪ, ಪೂರ್ವೋಕ್ತ, ಪು.XIVII
- [16] ರಂ. ಶ್ರೀ. ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’ (೧೯೫೩), ಪು.೯೬
- [17] ತೀ. ನಂ. ಶ್ರೀಕಂಠಯ್ಯ, ‘ಪಂಪ’, ಪು.೩೬-೩೭
- (ಕಣಜ ಕೃಪೆ)[೧][೨][೩]
ಪಂಪಭಾರತ
ಸಂಪಾದಿಸಿಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> | ಪಂಪ:ಕವಿ-ಕೃತಿ ಪರಿಚಯ | 1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | ಅನುಬಂಧ 16 | ಪಂಪ - ಒಂದು ಚಿಂತನೆ | ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ |
ನೋಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ