ಆದಿಪರ್ವ: ೦೫. ಐದನೆಯ ಸಂಧಿ

ಕುಮಾರವ್ಯಾಸ ಭಾರತ ~ ॐ ~

ಆದಿಪರ್ವ ಐದನೆಯ ಸಂಧಿ

ಸಂಪಾದಿಸಿ


ಸೂಚನೆ: ವರಮುನಿಯ ಶಾಪದಲಿ ಸರಿದನು
ಸುರರ ನಗರಿಗೆ ಪಾಂಡು ಹಸ್ತಿನ
ಪುರಕೆ ತಂದರು ಪರಮಮುನಿಗಳು ಪಾಂಡುನಂದನರ||
 
ಕೇಳು ಜನಮೇಜಯ ಧರಿತ್ರೀ
ಪಾಲ ಶತಶೃಂಗಾದ್ರಿಯಲಿ ಭೂ
ಪಾಲನಿರ್ದನು ತನ್ನ ವೀರಕುಮಾರಕರು ಸಹಿತ
ವ್ಯಾಳ ವನಗಜ ಸಿಂಹ ವೃಕ ಶಾ
ರ್ದೂಲ ಭಯವನು ಪರಿಹರಿಸಿ ಮುನಿ
ಪಾಳಿಗ್ರಾಶ್ರಯವೆನಿಸಿದನು ಪಾವನ ತಪೋವನವ ||(೧)

 ಆ ಸಮಸ್ತ ಮುನೀಂದ್ರರೊಡನ
ಭ್ಯಾಸವಾ ದಿವ್ಯಾಶ್ರಮದ ಸಹ
ವಾಸವಾ ತಪವಾ ಕುಮಾರ ಪರಾಕ್ರಮಾಲೋಕ
ಆ ಸಮಂಜಸ ಸತಿಯರಿಬ್ಬರು
ಪಾಸನೆಗಳಾ ವಿಭವಕಿಭಪುರಿ
ಯಾ ಸಮಸ್ತೈಶ್ವರ್ಯವದು ತೃಣವಾಯ್ತು ಭೂಪತಿಗೆ ||(೨)

ಸುತ ವಿನೋದದ ಸಿರಿಗೆ ಅಮರಾ
ವತಿಯಸಿರಿ ತೊತ್ತೆಂದು ವಿಮಲ
ವ್ರತ ತಪೋಲಕ್ಷ್ಮಿಗೆ ವಿಲಾಸಿನಿ ಮುಕ್ತಿವಧುವೆಂದು
ಯತಿ ಪದಾಂಬುಜ ನಿತ್ಯಸೆವಾ
ಸತಿಗೆ ದಾಸಿ ಜಗತ್ರಯಾದಿ
ಸ್ಥಿತಿ ಪದವಿಯೆಂದುಬ್ಬಿದನು ಕಲಿಪಾಂಡು ವಿಪಿನದಲಿ || (೩)

Iವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವುರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ || (೪)

ತೆಗೆದು ದಗ್ಗದ ತಂಪು ನಡಿ ಸರ
ಸಿಗಳ ತಡಿಯಲಿ ಹೆಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ
ಸೊಗಸಿದವು ನೆಳಲುಗಳು ದೊರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೊಡೆ ಜನನಿಕರ ||(೫)

ಯೋಗಿಗೆತ್ತಿದ ಖಡುಗ ಧಾರೆ ವಿ
ಯೋಗಿತೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರದೆ ಶೂಲ ಗರ್ವಿತ
ಗೊಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ || (೬)

 ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ || (೭)

ಫಲಿತ ಚೂತದ ಬಿಣ್ಣುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಲಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳ ಲತೆಯ ನುಣ್ಣುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ || (೮)

I ಪಸರಿಸಿತು ಮಧು ಮಾಸ ತಾವರೆ
ಯೆಸಳ ದೋಣಿಯ ಮೇಲೆ ಹಾಯ್ದವು
ಕುಸುಮ ರಸದುಬ್ಬರದ ತೊರೆಯನು ಕೊಡೆ ತುಂಬಿಗಳು
ಒಸರ್ವ ಮಕರಂದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು || (೯)

ಜಗವ ಹೊರೆದುದು ಬಹಳ ಪರಿಮಳ
ದೊಗುಮಿಗೆಯ ತಂಗಾಳಿ ವನ ವೀ
ಧಗಳ ವಳಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು
ಹೊಗುವ ಕಾಮನ ದಳದ ಚೂಣಿಯ
ಸೊಗಸು ಹೊಯ್ದರೆ ಕೈದುviಕ್ಕಿತು
ವಿಗಡ ಮುನಿಜನವೇನನೆಂಬೆನು ನೃಪತಿ ಕೇಳೆಂದ || (೧೦)

ಆ ವಸಂತದೊಳೆಮ್ಮೆ ಮಾದ್ರೀ
ದೇವಿ ವನದೊಳಗಾಡುತಿರ್ದಳು
ಹೂವಿನಲಿ ಸರ್ವಾಂಗ ಶೃಂಗಾರದ ವಿಲಾಸದಲಿ
ಅವಳಿವಳೊರ್ವಶಿಯೋ ರಂಭೆಯೊ
ದೇವವಧುಗಳ ಸುಳಿವೂ ತಾನೆನ
ಲಾವ ಚೆಲುವಿಕೆ ಶಿವಶಿವಾಯೆಂದರಸ ಬೆರಗಾದ || (೧೧)

ತಾಗಿದವು ಶರನಿಕರ ಕಾಮನ
ಲಾಗು ವೇಗವದೆಂತುಟೋ ತೆಗೆ
ಹೂಗಣೆಗಳೈದಲ್ಲ ರೋಮಗಳೆಂಟು ಕೋಟಿಯಲಿ
ತೂಗಿ ನೆಟ್ಟವು ಕಣೆಗಳೆಂಬವೊ
ಲಾ ಗರುವನಳುಕಿದನು ಪ್ರಜ್ಞಾ
ಸಾಗರಂಗಳು ಮಧ್ಯಕಟಿ ಜಾನ್ವಂಘ್ರಿ ಮಿತವಾಯ್ತು || (೧೨)

ಮರೆದು ಹಿಂದೆಲ್ಲವನು ಕುಂತಿಯ
ನರಿಯಲೀಯದೆ ಮೆಲ್ಲಮೆಲ್ಲನೆ
ತರುಗಿದೆಳಲತೆ ವನದೊಳಾಡುವ ವಧುವ ಸಾರಿದನು
ಸೆರಗ ಹಿಡಿದರೆ ಬೇಡ ಬೇಡೆಂ
ದೆರಗಿದಳು ಚರಣದಲಿ ತರುಣಿಯ
ತುರುಬ ಹಿಡಿದೆತ್ತಿದನು ಹೆಣಗಿದರೊಡನೆ ಝೋಂಪಿಸಿದ || (೧೩)

ಕೊಂದೆಲಾ ಕಡುಪಾಪಿ ಮರೆದಾ
ಹಿಂದೆ ಮಾಡಿದ ಕೃತ್ಯವನು ಮುನಿ
ಯೆಂದ ನುಡಿ ಹೊಳ್ಳಹುದೆ ಸುಡು ದುರ್ವಿಷಯಕೆಳಸಿದಲಾ
ಬೆಂದುದೇ ನಿನ್ನರಿವು ಧೈರ್ಯವ
ನಿಂದು ನೀಗಿದೆಯಕಟ ನಿನ್ನಯ
ನಂದನರಿಗಾರುಂಟೆನುತ ಹೆಣಗಿದಳು ಲತಾಂಗಿ || (೧೪)

 ಕೊಂಬುದೇ ಬಯಲರಿತಗಿರಿತದ
ಡೊಂಬಿನಾಗಮ ನೀತಿಗೀತಿಯ
ಶಂಬರಾರಿಯ ಸಬಳವಲ್ಲಾ ಬೇಗೆ ಮೂಡಿದುದು
ಬೆಂಬಿಡದೆ ಮರಳಿದೊಡೆ ಮರುಮೊನೆ
ಗೊಂಬುದೆಂಬವೊಲವನಿಪತಿಯೊ
ತ್ತಂಬರದಿ ಹಿಡಿದಬಲೆಯನು ಕೂಡಿದನು ಕಳವಳಿಸಿ I (೧೫)

ಆ ಸುಖದ ಝೋಂಪಿನಲಿ ಮೈಮರೆ
ದೋಸರಿಸಿದುದು ವದನ ಕಂಗಳು
ಪೈಸರಿಸಿದವು ತೆಕ್ಕೆ ಸಡಲಿತು ದೇಹ ಬಾರಿಸಿತು
ಸೂಸಿದುದು ನಿಟ್ಟುಸುರು ರಾಣೀ
ವಾಸದುರದಲಿ ಕದಪನಿಟ್ಟು ಮ
ಹೀಶನೊರಗಿದ ಹದನ ಕಂಡಳು ಕಾಂತೆ ಭೀತಿಯಲಿ || (೧೬)





ಅಕಟ ಪಾಂಡು ಮಹೀಶ ವಿಷಕ
ನ್ನಿಕೆಯನೆನ್ನನು ಮುಟ್ಟಿದೈ ಬೇ
ಡಕಟ ಕೆಡಿಸದಿರೆನ್ನೆನ್ನೇ ತಾನರಿಯನೇ ಹದನ
ಪ್ರಕಟ ಕುರುಕುಲ ತಿಲಕರೀ ಬಾ
ಲಕರನಾರಿಗೆ ಕೊಟ್ಟೆ ತನ್ನೊಡ
ನಕಟ ಮುನಿದೈ ಮಾತಾನಾಡೆಂದೊರಲಿದಳು ಮಾದ್ರಿ|| (೧೭)

ಎನಿದೆತ್ತಣ ರಭಸ ಮಾದ್ರೀ
ಮಾನಿನಿಯೋ ಹಾ ರಾಯನಾವೆಡೆ
ಹಾನಿ ಹಿರಿದುಂಟರಿವೆನಂಗಸ್ಫುರಿತ ಶಕುನದಲಿ
ಏನು ಮಾರಿಯೋ ಶಿವಶಿವಾಯೆನು
ತಾ ನಿತಂಬಿನಿ ಗಾಢ ಗತಿಯಲಿ
ಕಾನನದೊಳೈತಂದಳಕ್ಕೆಯ ಸರದ ಬಳಿವಿಡಿದು || (೧೮)

ಕಂಡಳವರಿಬ್ಬರನು ಧೊಪ್ಪನೆ
ದಿಂಡುಗೆಡೆದಳು ಮೂರ್ಛೆಯಲಿ ಮರೆ
ಗೊಂಡುದೆಚ್ಚರು ಮಾದ್ರಿ ಮಿಗೆ ಹಲುಬಿದಳು ಗೋಳಿಡುತ
ಚಂಡಿಕೆಗಳಲ್ಲಾಡೆ ಹರಿದರು
ಪಾಂಡುನಂದನರೈವರೀತನ
ಕಂಡು ಹಾಯೆಂದೊರಲಿ ಹೊರಳಿದರವನಿಪನ ಮೇಲೆ || (೧೯)

ಬೊಪ್ಪ ದೇಶಿಗರಾದೆವೈ ವಿಧಿ
ತಪ್ಪಿಸಿತಲಾ ನಮ್ಮ ಭಾಗ್ಯವ
ನೊಪ್ಪಿಸಿದೆ ನೀನಾರಿಗೆಮ್ಮನು ಪೂರ್ವಕಾಲದಲಿ
ಮುಪ್ಪಿನಲಿ ನಿನಗೀಯವಸ್ಥೆ ಯಿ
ದೊಪ್ಪದೇ ಹೇರಡವಿಯಲಿ ಮಲ
ಗಿಪ್ಪುದೇಕೆಂದೊರಲಿ ಮರುಗಿದರಾ ಕುಮಾರಕರು || (೨೦)

ಕೇಳಿ ಹರಿತಂದುದು ಮುನಿವ್ರಜ
ವೇಳಿಗೆಯ ಕಡು ಶೋಕರಸದ ಛ
ಡಾಳವನು ನಿಲಿಸಿದರು ಸಂತೈಸಿಯೆ ಕುಮಾರಕರ
ಅಳಸಿದಳಾ ಕುಂತಿ ಮೂರ್ಛಾ
ವ್ಯಾಳವಿಷ ಪರಿಹರಿಸಿ ಧರಣೀ
ಪಾಲಕನ ನೋಡಿದಳು ಬಿಸುಟೈ ತನ್ನ ನಿಂದೆನುತ ||(೨೧)

ಅರಸ ತನಗರುಹದೆ ಸುರ ಸ್ತ್ರೀ
ಯರಿಗೆ ಹರಿದೈ ನಿನ್ನ ವಧುಗಳ
ತುರಬ ಕೊಯ್ದುವೆನವರ ತೊತ್ತಿರ ಮಾಡುವೆನು ತನಗೆ
ಅರಸಿ ನೀನೀ ಮಕ್ಕಳನು ಸಂ
ವರಿಸಿ ಕೊಂಡುಹುದೆಂದು ಮಾದ್ರಿಯ
ಕರವ ಹಿಡಿದರೆ ಕುಂತಿಗೆಂದಳು ಮಾದ್ರಿಯ
ಕರವ ಹಿಡಿದರೆ ಕುಂತಿಗೆಂದಳು ಕಾಂತೆ ವಿನಯದಲಿ ||( ೨೨)

 ಮರುಳೆಲೌ ನೀವಕ್ಕ ನಿಮ್ಮೈ
ವರು ಕುಮಾರರು ನಿಮ್ಮ ಕೈಯೆಡೆ
ಧರಣಿಪತಿ ನಿಡು ನಿದ್ರೆಗೈದನು ನನ್ನ ತೋಳಿನಲಿ
ಸುರವಧುಗಳೊಡನಿರಲಿ ನಿನ್ನಯ
ಹರಿಬವೆನ್ನದು ನೋಡು ತನ್ನಯ
ಪರಿಯನೀತನ ನಿನಗೆ ಕೊಡೆನೆಂದಂಘ್ರಿಗೆರಗಿದಳು ||(೨೩)

ಮುನಿಗಳೀಕೆಯ ತಿಳುಹಿ ಮಾದ್ರಿಗೆ
ಜನಪತಿಯ ಸಹಗಮನದಲಿ ಮತ
ವೆನಿಸಿ ಶವಸಂಸ್ಕಾರವನು ವೈದಿಕ ವಿಧಾನದಲಿ
ಮುನಿಗಳೇ ಮಾಡಿದರು ಮಾದ್ರೀ
ವನಿತೆ ತನ್ನ ಕುಮಾರರಿಬ್ಬರ
ತನುಜ ನೀ ಸಲಹೆಂದು ಕೊಟ್ಟಳು ಧರ್ಮಜನ ಕರೆದು || (೨೪)

ಪತಿಯ ಸಹಗಮನದಲಿ ಮಾದ್ರೀ
ಸತಿ ಶರೀರವ ಬಿಟ್ಟಳೈವರು
ಸುತರು ಸಹತೀ ಕುಂತಿ ಮಿಂದು ಪರೇತಕೃತ್ಯವನು
ಶ್ರುತಿ ವಿಧಾನದೊಳಖಿಳ ಮುನಿ ಸಂ
ತತಿಗಳನು ಮುಂದಿಟ್ಟು ಮಾಡಿಸಿ
ಸುತರ ಪಾಲಿಸುತಿರ್ದಳಾ ಶತಶೃಂಗ ಶೈಲದಲಿ ||(೨೫)
I ಅರಸನಪಗತನಾದನಾ ನೃಪ
ನರಸಿ ಬಾಲಕಿ ಮಕ್ಕಳೈವರು
ಭರತ ಕುಲಜರು ನಾವು ತಪಸಿಗಳಿರ್ಪುದಾರಣ್ಯ
ಅರಿಗಳಾ ರಾಕ್ಷಸರು ನಾವಿ
ನ್ನಿರಿಸುವುದು ಮತವಲ್ಲ ಹಸ್ತಿನ
ಪುರುದೊಳೊಪ್ಪಿಸಿಬಹುದು ಮತವೆಂದುದು ಮುನಿಸ್ತೋಮ || (೨೬)

ಎಂದು ಕುಂತೀದೇವಿ ಸಹಿತಾ
ನಂದನರನೈವರನು ಮುನಿಗಳು
ತಂದರಿಭಪುರಿಗಾಗಿ ಭೀಷ್ಮಾದಿಗಳಿಗೀ ಹದನ
ಮುಂದೆ ಸೂಚಿಸಲುತ್ಸವದಿದಿ
ರ್ವಂದರನಿಬರು ಶುಭಮುಹೂರ್ತದೊ
ಳಂದು ನಗರಿಯ ಹೊಗಿಸಿದನು ಪರಿತೋಷದಲಿ ಭೀಷ್ಮ || (೨೭)

ಇವರ ಜನನ ಕ್ರಮವನಾ ಪಾಂ
ಡುವಿನ ವಿಕ್ರಮವನು ತಪೋಧನ
ನಿವಹ ಕೊಂಡಾಡಿದುದು ಬಳಿಕಿನ ಮರಣಸಂಗತಿಯ
ಅವನಿಪನ ಸಂಸ್ಕಾರ ಮಾದ್ರೀ
ಯುವತಿ ಸಹಗಮನೋರ್ಧ್ವ ದೇಹಿಕ
ವಿವಿಧ ಕೃತ್ಯವನೀ ಪ್ರಪಂಚವನರಿಗರುಹಿದರು || (೨೮)

ಮುನಿಗಳಾಕ್ಷಣ ಮರಳಿದರು ತ
ಜ್ಜನಪ ವೃತ್ತಾಂತವನು ವಿವರಿಸೆ
ಜನಜನಿತ ಬಳಿಕುಬ್ಬಿ ಹರಿದುದು ಶೋಕರಸ ಜಲಧಿ
ಜನಪ ಧೃತರಾಷ್ಟ್ರದಿ ಬಾಂಧವ
ಜನ ಪುನಃ ಸಂಸ್ಕಾರದಲಿ ಭೂ
ಪನನು ದಹಿಸಿದರೂರ್ಧ್ವ ದೇಹಿಕವಾಯ್ತು ಮಗುಳಲ್ಲಿ || (೨೯)

ಅರಸ ಕೇಳೈ ಭೀಷ್ಮ ಧೃತರಾ
ಷ್ಟ್ರರನು ಬೋಧಿಸಿ ಬಹಳ ಶೋಕ
ಜ್ವರಕೆ ಬಿಡುಗಡೆ ಮಾಡಿದನು ಪಾರಾಶರಿವ್ರತಿಪ
ಕರೆದು ಯೋಜನಗಂಧಿಯನು ನೀ
ವಿರಲು ಬೇಡೌ ತಾಯೆ ನಿಮ್ಮೀ
ಭರತವಂಶದೊಳೊಗೆದ ಕಿಚ್ಚುರುಹುವುದು ನೃಪಕುಲವ || (೩೦)***

ಹೇಳ ಬಾರದು ಮುಂದಣದು ದು
ಷ್ಕಾಲವಿಂದಿಗೆ ನಾಳೆ ನಾಳೆಗೆ
ನಾಳೆ ಬೆಟ್ಟಿತು ವರ್ಣಧರ್ಮಾಶ್ರಮದ ನೆಲೆಹೋಯ್ತು
ಕಾಲ ವಿಷಮವು ಕೌರವ ಕ್ಷಿತಿ
ಪಾಲ ಪಾಂಡು ಕುಮಾರರಲಿ ಕೈ
ಮೇಳವಿಸುವುದು ತಾಯೆ ಬಿಜಯಂಗೈಯಿ ನೀವೆಂದ || (೩೧)

ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ ||(೩೨)

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು

ಸಂಪಾದಿಸಿ
ಪರ್ವಗಳು: ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ