ಆದಿಪರ್ವ – ಹದಿನೇಳನೆಯ ಸಂಧಿ
ಸಂಪಾದಿಸಿಸೂ. ಧಾಳಿಯಲಿ ಬಂದರಿಬಲದ ಹೆ
ಜ್ಜಾಳುತನವನು ಮುರಿದು ಸಂಧಿಯ
ಮೇಲೆ ಧರ್ಮಜ ಬಂದು ಹೊಕ್ಕನು ಹಸ್ತಿನಾಪುರವ
ಕೇಳು ಜನಮೇಜಯ ನೃಪತಿ ಪಾಂ
ಚಾಲಸುತೆಯ ವಿವಾಹ ವಾರ್ತೆಯ
ಕೇಳಿದರಲೈ ಕೌರವರು ಮರುಗಿದರು ಮರುಕೊಳಿಸಿ
ಆಳ ನೆರಹಿದನಖಿಳ ದಳ ದೆ
ಖ್ಖಾಳವನು ನೋಡಿದರು ಭೂಮೀ
ಪಾಲ ಸಂಕುಲ ಸಹಿತ ಬಂದರು ದ್ರುಪದ ಪುರಿಗಾಗಿ ೧
ಏನ ಹೇಳುವೆ ನಿನ್ನವರ ಜಯ
ಮಾನವನು ಮತ್ತೊಂದು ಪೈಕದ
ಮಾನಭಂಗಸ್ಥಿತಿಯನೆಲೆ ಜನಮೇಜಯಕ್ಷಿತಿಪ
ಭಾನುವಿನ ಮಂಜಿನ ಶಿಲೋಚ್ಚಯ
ಸಾನುವಿನ ವಜ್ರದ ತರಕ್ಷುವ
ಧೇನುವಿನ ಹೋರಟೆಯ ಹವಣದು ಭೂಪ ಕೇಳೆಂದ ೨
ಮುರಿದುದಾ ಹೆಬ್ಬಲ ವಿಘಾತಿಯ
ಲೊರಗಿದರು ಪಟುಭಟರು ಗಜ ಹಯ
ದೊರತೆ ಬತ್ತಿತು ಭೀಮ ಪಾರ್ಥರ ಶರ ನಿದಾಘದಲಿ
ಉರುಕುಗೊಂಡರು ನಿಚ್ಚಟರು ಕೈ
ಮರೆದುದಾಚೆಯ ದೊರೆಗಳಿವದಿರು
ನೆರೆ ವಿಭಾಡಿಸೆ ತೆಗೆದು ಹಾಯ್ದರು ಹಸ್ತಿನಾಪುರಕೆ ೩
ಬಳಿಕ ಪಾಂಚಾಲಕನ ಭೀತಿಯ
ಮೊಳಕೆಯುರಿದುದು ಹರಿದುದುತ್ಸವ
ಜಲಧಿ ವಳಯದ ಭೂತಳಾಗ್ರದ ಭೂತಳೇಂದ್ರರಲಿ
ಹೊಳೆ ಹೊಳೆವ ರವಿ ರಶ್ಮಿಗಳ್ಪ್ರ
ಎಲಿಸುವಂತಿರೆ ಪಾಂಡುನಂದನ
ರಳವಿನುಬ್ಬಟೆ ಬಿಸಿಲು ನೆರೆ ಪಸರಿಸಿತು ದೆಸೆದೆಸೆಗೆ ೪
ಬಂದನಲ್ಲಿಗೆ ಸಕಲ ಯಾದವ
ವೃಂದ ಸಹಿತ ಮುರಾರಿ ಕುಂತೀ
ನಂದನರು ಬರಲಿದಿರುಗಾಣಿಸಿಕೊಂಡನುಚಿತದಲಿ
ತಂದ ಬಹುವಿಧ ವಸ್ತು ಕಾರವ
ನಂದು ಕೊಟ್ಟನು ಗಜ ರಥಾಶ್ವವ
ನಿಂದುವದನೆಯರಿಗೆ ವಿಚಿತ್ರಾಂಬರ ವಿಭೂಷಣವ ೫
ಮಗನೆ ಧರ್ಮಜ ಕೇಳು ಭೀಮಾ
ದಿಗಳೆ ಹರಿಯೆಮ್ಮಣ್ಣ ದೇವನ
ಮಗನು ಸೋದರ ಮಾವನೀತನು ನಿಮಗೆ ವಸುದೇವ
ವಿಗಡರೀ ಯಾದವ ನೃಪರು ಬಂ
ಧುಗಳು ನಿಮಗೆಂದೈವರನು ಕೈ
ನೆಗಹಿ ಕಮಲೋದರನ ಕೈಯಲಿ ಕೊಟ್ಟಳಾ ಕುಂತಿ ೬
ವನದೊಳಪಗತನಾದನಿವರ
ಯ್ಯನು ಕುಮಾರರ ಬಾಲ್ಯ ಕಾಲದೊ
ಳೆನಗೆ ರಕ್ಷಾಭಾರ ಬಿದ್ದುದು ಪತಿ ಪರೋಕ್ಷದಲಿ
ಇನಿಬರನು ಗಜಪುರಿಗೆ ಕೊಂಡೊ
ಯ್ದೆನು ಸುಯೋಧನನಿಂದ ವೈರವು
ಜನಿತವಾಯಿತು ಬಳಿಕ ಲಾಕ್ಷಾಭವನ ದಹನದಲಿ ೭
ಉರಿಯೊಳುಳಿದೆವು ನಿಮ್ಮ ಚರಣ
ಸ್ಮರಣ ಬಲದಲಿ ಬಹಳ ವಿಪಿನಾಂ
ತರದೊಳಗೆ ತೊಳಲಿದೆವು ಹೊರೆದೆವು ಸಾಯದೊಡಲುಗಳ
ಬರಬರಲು ತತ್ಸರ್ವ ದುಃಖೋ
ತ್ತರ ನಿವಾರಣ ದ್ರುಪದಕನ್ಯಾ
ವರಣ ನಿನ್ನೀಯಂಘ್ರಿ ದರುಶನವೆಂದಳಾ ಕುಂತಿ ೮
ದೇವಿ ಚಿತ್ತವಿಸೋಪಚಾರಕ
ಭಾವವೇ ಧರ್ಮಜನು ಭೀಮನು
ಭಾವನವರು ಧನಂಜಯಾದಿಗಳೆಮಗೆ ಮೈದುನರು
ಈವುಪಾದಿ ಸ್ಥಳದೊಳಂತ
ರ್ಜೀವನ ಪ್ರಾಣಾದಿ ವಾಯುಗ
ಳಾವು ನಿಮ್ಮೈವರಿಗೆ ಕಾರಣವೆಂದನಸುರಾರಿ ೯
ದ್ರುಪದ ಗುಡಿಗಟ್ಟಿದನು ಕುಂತಿಯ
ವಿಪುಳ ಹರುಷವನೇನನೆಂಬೆನು
ದ್ರುಪದ ಯದು ಪರಿವಾರವುಲಿದುದು ಜಲಧಿ ಘೋಷದಲಿ
ಅಪದೆಸೆಯ ಮುಗಿಲೊಡೆದು ಹೊಳೆಹೊಳೆ
ದುಪರಿಚರ ರವಿಯಂತೆ ತತ್‌ಕ್ಷಣ
ವಿಪುಳ ತೇಜಃಪುಂಜರೆಸೆದರು ಪಾಂಡುನಂದನರು ೧೦
ಇದಿರೊಳವನಿಪ ಭೀಮನೆಡವಂ
ಕದಲಿ ಮಾದ್ರೀಸುತರು ಬಲವಂ
ಕದಲಿ ದೇವಕಿ ಕುಂತಿ ವಸುದೇವಾದಿ ಯದುನಿಕರ
ಮುದದಿಯೈವರ ರಮಣಿ ಬಲವಂ
ಕದಲಿ ಕರುಣಾಳುವಿನ ವಾಮಾಂ
ಕದಲಿ ಫಲುಗುಣನೊಪ್ಪೆ ಮೆರೆದನು ದಾನವಧ್ವಂಸಿ ೧೧
ಆವುದೋ ಧರ್ಮಜನ ಭೀಮನ
ಭಾವಶುದ್ಧಿ ಧನಂಜಯನ ಸುಕೃ
ತಾವಲಂಬನ ಸಾರವೆಂತುಟೊ ಶಿವ ಮಹಾದೇವ
ಠಾವುಗಾಣವು ವೇದವುಪನಿಷ
ದಾವಳಿಗಳೋಲೈಸಿ ಕೃಷ್ಣ ಕೃ
ಪಾ ವಿಲಾಸವ ನೋಡಿಯೆಂದುದು ಸಕಲ ಸುರನಿಕರ ೧೨
ಅರಸ ಚಿತ್ತೈಸಂದಿನೋಲಗ
ಹರಿದುದಾ ಹರಿಸೇನೆ ಬಿಟ್ಟುದು
ಪುರದ ಬಹಿರುದ್ಯಾನ ವೀಧಿಗಳೊಳಗೆ ಹರಹಿನಲಿ
ಕುರುನೃಪಾಲನ ಗುಪ್ತಚಾರರು
ಅರಿದರೀ ವಾರ್ತೆಯನು ಪುರದಲಿ
ಹರಹಿದರು ನೆರೆ ಕೇಳಿದನು ಧೃತರಾಷ್ಟ್ರನೀ ಹದನ ೧೩
ಕರೆಸಿದನು ಗಾಂಗೇಯ ಗೌತಮ
ಗುರು ಸುಯೋಧನ ಶಲ್ಯ ಸೈಂಧವ
ಗುರುತನುಜ ರಾಧೇಯ ವಿದುರ ಕಳಿಂಗ ಸೌಬಲರ
ಚರಮುಖ ಪ್ರತಿಪನ್ನ ಬಂಧುರ
ತರ ವಚೋವಿನ್ಯಾಸ ಕರ್ಣ
ಜ್ವರವೊ ಕರ್ಣಾಮೃತವೊ ಕೇಳಿರೆಯೆಂದನಂಧನೃಪ ೧೪
ಕೇಳಿರೈ ಹೇಳುವೆನು ಯಾದವ
ರಾಳು ಬಂದುದು ಗಡ ಜನಾರ್ದನ
ಕೋಳುವೋದನು ಗಡ ಯುಧಿಷ್ಠಿರ ಭೀಮ ಪಾರ್ಥರಿಗೆ
ಗಾಳಿ ಬೆಂಬಲವಾಗಲುರಿಯ ಛ
ಡಾಳವನು ನಿರ್ಣೈಸಬಹುದೆ ವಿ
ಷಿಳಿಸಿತಲೈ ನಿಮ್ಮ ಗಾರುಡವೆಂದನಾ ನೃಪತಿ ೧೫
ಎನಲು ಘರ್ಜಿಸುತರಸ ಮುರರಿಪು
ಜಿನುಗಿದರೆ ಗಿರಿ ಜರಿವುದೇ ಯಮ
ತನುಜ ಭೀಮಾರ್ಜುನರು ಹಿಡಿದರೆ ಗಗನವಡಗುವುದೆ
ದನುಜರಿಪುವಿನೊಳೇನಹುದು ಬರ
ಲನಿಮಿಷರು ನೆರವಾಗಿ ರಣದಲಿ
ಎನಪ ನೋಡೆಂದರು ಜಯದ್ರಥ ಸೌಬಲಾದಿಗಳು ೧೬
ಕೊರತೆಯಲ್ಲೆದು ನಿನ್ನೆ ನಾವ್ಕಂ
ಡಿರಿದೆವಿವರತಿಬಲರು ಕೃಷ್ಣನ
ಬರಿ ಸಹಾಯದಲೇನು ಭೀಮಾರ್ಜುನರ ಬಲುಹೇನು
ನೆರವಣಿಗೆಯುಳ್ಳವರಲೈ ಹೊ
ಕ್ಕಿರಿದ ರಣ ಹಸಿಯಾರಿತೇ ನೀ
ವರಿಯಿರೇ ಭೂಪಾಲಯೆಂದನು ನಗುತ ಗಾಂಗೇಯ ೧೭
ಇವರ ಬಲುಹಂತಿರಲಿ ಸಾಕಿ
ನ್ನವರ ಕರೆಸು ವಿರೋಧ ಬಂಧ
ವ್ಯವಹೃತಿಗೆ ಫಲವಿಲ್ಲ ಮೂಲಚ್ಛೇದ ಕರ್ಮವಿದು
ಅವರು ಮುನ್ನತಿಬಲರು ಕೃಷ್ಣನ
ಹವಣ ನೀನೇ ಬಲ್ಲೆಯಿನ್ನೀ
ಸವಡಿ ಮಾರಿಯ ಸೋಕು ಲೇಸಲ್ಲೆಂದನಾ ಭೀಷ್ಮ ೧೮
ಕರೆಸು ವಿದುರನ ಕಳುಹಿ ವಾರಣ
ಪುರದ ರಾಜ್ಯ ವಿಭಾಗವನು ವಿ
ಸ್ತರಿಸಿ ಕೊಡು ಭಂಡಾರವನು ದಾಯಾದ ಮಾರ್ಗದಲಿ
ನರ ಯಿಧಿಷ್ಠಿರ ಭೀಮರನು ನೀ
ಬರಿಸು ನಿಮ್ಮವಗುಣವ ನೋಡದೆ
ಬೆರಸಿ ಕೊಡುವೆವು ಕೂಡಿ ಬದುಕುವುದೆಂದನಾ ಭೀಷ್ಮ ೧೯
ಕರೆಸಿ ಕೊಡಿರೈ ನಿಮ್ಮ ಚಿತ್ತಕೆ
ಬರಿಸಿ ನಡಸುವೆನೆನ್ನ ಮಕ್ಕಳ
ದುರುಳತನದಿಂದಾದ ಹಿಂದಣ ಮಕ್ಕಳಾಟಿಕೆಯ
ಮರೆದು ಕಳೆಯಲಿ ಪಾಂಡುನಂದನ
ರೆರವಿಗರೆ ಬಾ ವಿದುರ ಭೀಷ್ಮನ
ಪರಮ ಮತವೇ ನನ್ನ ಮತ ಹೋಗೆಂದ ಧೃತರಾಷ್ಟ್ರ ೨೦
ಕಳುಹಿದರು ವಿದುರನನು ಬುದ್ಧಿಯ
ಗಲಿಸಿ ಭೀಷ್ಮಾದಿಗಳು ಪಯಣದ
ಲಲಿತ ಸನ್ನಾಹದೊಳು ಪರುಠವಿಸಿದನು ಪಾವುಡವ
ಬಳಿಕ ಸುಮುಹೂರ್ತದಲಿ ವಿಪ್ರಾ
ವಳಿಗಳಾಶೀರ್ವಾದದಲಿ ಮಂ
ಗಳತೆ ಮಿಗಿಲೊಲವಿಂದ ಹಸ್ತಿನಪುರವ ಹೊರವಂಟ ೨೧
ಕೇಳು ಭೂಪತಿ ಹಲವು ಪಯಣದ
ಮೇಲೆ ಪಯಣದಲೈದಿದನು ಪಾಂ
ಚಾಲಪುರವನು ಬಂದನರಮನೆಗಧಿಕ ಹರ್ಷದಲಿ
ಕೇಳಿದರು ಕೌಂತೇಯರೀತನ
ಲಾಲಿಸಿದರಿದಿರೈದಿ ತನು ಪುಳ
ಕಾಳಿಯಲಿ ಮೈ ಮುಳುಗೆ ತೆಗೆದಪ್ಪಿದರು ತಮತಮಗೆ ೨೨
ಕ್ಷೇಮವನು ಕುಶಲವನು ಬಂಧು
ಸ್ತೋಮದಲಿ ಕೇಳಿದರು ತಮ್ಮ
ಕ್ಷೇಮ ಕುಶಲವ ಹೇಳಿದರು ಪೂರ್ವಾಪರಸ್ಥಿತಿಯ
ಭೂಮಿಪತಿ ಚಿತ್ತೈಸು ಬಳಿಕಿನ
ರಾಮಣೀಯಕ ಯಾದವೇಂದ್ರ ಶಿ
ರೋಮಣಿಯ ಸಂಮ್ಮೇಳವನು ಹೇಳಿದನು ವಿದುರಂಗೆ ೨೩
ತಂದ ಪಾವುಡವನಿತುವನು ಯಮ
ನಂದನಂಗೊಪ್ಪಿಸಿದ ದ್ರುಪದ ಮು
ಕುಂದ ಧೃಷ್ಠದ್ಯುಮ್ನ ಕಂದರ್ಪಾನಿರುದ್ಧರಿಗೆ
ತಂದ ವಸ್ತುವನಿತ್ತವನು ಸಾ
ನಂದದಲಿ ನೀಡಿದನು ನಗುತರ
ವಿದಂನಾಭನ ಪದಕೆ ಮೈಯಿಕ್ಕಿದನು ಭಕ್ತಿಯಲಿ ೨೪
ತೆಗೆದು ತಕ್ಕೈಸಿದನು ಭೀಷ್ಮಾ
ದಿಗಳ ಕುಶಲವ ಕೇಳಿದನು ನಸು
ನಗುತ ಮೈದಡವಿದನು ವಿದುರನನಾ ಕೃಪಾಜಲಧಿ
ವಿಗಡನಾ ಧೃತರಾಷ್ಟ್ರ ನೀ ಬಂ
ಧುಗಳ ನೆನೆವನೆ ಪಾಂಡುಸುತರಿಗೆ
ಸೊಗಸುವನೆ ನೀ ಬಂದೆ ಲೇಸಾಯ್ತೆಂದನಸುರಾರಿ ೨೫
ಕಳುಹಿದನು ಬೀಡಾರಕಾತನ
ಬಳಿಯ ಪರಿವಾರವನು ಮನ್ನಿಸಿ
ಬಳಿಕ ಮರುದಿನ ಮೇಳವಿಸಿದರು ಮಂತ್ರಶಾಲೆಯಲಿ
ತಿಳಿಹಿದನು ಧೃತರಾಷ್ಟ್ರ ಭೀಷ್ಮರ
ಲಲಿತ ಮತವನು ಬಂಧುವರ್ಗ
ಸ್ಖಲಿತವನು ಸೈರಿಸುವುದೆಂದನು ವಿನಯದಲಿ ವಿದುರ ೨೬
ಕರೆಸಿದನು ಧೃತರಾಷ್ಟ್ರನಾತನ
ಚರಣವನು ಕಾಂಬುದು ನದೀಸುತ
ಗುರು ಕೃಪರು ನಿಮಗೊಳ್ಳಿದರು ನೀವಖಿಳ ರಾಜ್ಯದಲಿ
ಸರಿಯಕೊಂಬುದು ಸೇರುವಡೆ ಗಜ
ಪುರದೊಳಿಹುದಲ್ಲದೊಡೆ ನಿಮ್ಮಯ
ಪುರದಲಿರಿ ನೀವಾತ್ಮ ನಿರ್ಮಿತ ರಾಜಧಾನಿಯಲಿ ೨೭
ಮುರಹರನನಹುದೆನಿಸಿ ಭೂಮೀ
ಶ್ವರನ ಮೆಚ್ಚಿಸಿ ಭೀಮನನು ಮನ
ಬರಿಸಿ ಪಾರ್ಥನನೊಲಿಸಿ ಮಾದ್ರೀಸುತರನೊಡಬಡಿಸಿ
ಅರಸಿಗಭಿಮತವೆನಿಸಿ ಪಾಂಚಾ
ಲರಿಗೆ ಕಾರ್ಯವಿದೆನಿಸಿ ಕುಂತಿಗೆ
ಪರಮ ಹರುಷವ ರಚಿಸಿ ನುಡಿದನು ಸಂಧಿಯನು ವಿದುರ೨೮
ಕದಡು ತಿಳಿದುದು ಕಾರ್ಯಗತಿಗಾ
ಸ್ಪದವ ಕೊಟ್ಟರು ಬಳಿಕ ಸುಮುಹೂ
ರ್ತದಲಿ ಪಯಣವ ಮಾಡಿದರು ಪಾಂಚಾಲ ದಳ ಸಹಿತ
ಯದುಶಿರೋಮಣಿವೆರಸಿ ಬಹು ಪಯ
ಣದಲಿ ಬಂದರು ಮೇಲೆ ಕೌರವ
ರಿದಿರುಗೊಂಡರು ಕೂಡೆ ಹೊಕ್ಕರು ಹಸ್ತಿನಾಪುರವ ೨೯
ಬಂದು ಕಾಣಿಕೆಗೊಟ್ಟು ಗಂಗಾ
ನಂದನ ಧೃತರಾಷ್ಟ್ರನನು ಸಾ
ನಂದದಲಿ ಗಾಂಧಾರಿಯನು ಗುರು ಗೌತಮಾದಿಗಳ
ವಂದಿಸಿದರಿವರೈವರವರಾ
ನಂದಜಲಪರಿಲುಳಿತ ನಯನಾ
ಸ್ಪಂದ ಪರಿತೋಷದಲಿ ತೆಗೆದಪ್ಪಿದರು ಪಾಂಡವರ ೩೦
ಕರೆಸಿ ತನ್ನ ಕುಮಾರಕರ ನೂ
ರ್ವರನು ಕಾಣಿಸಿದನು ಪರಸ್ಪರ
ಪರಮ ಸಂಪ್ರೀತಿಗಳ ನಿಬಿಡಾಲಿಂಗನೋತ್ಸವದ
ದರುಶನೋಚಿತ ಮಾನ್ಯಮಾನ
ಸ್ಫುರಣದಲಿ ವಿಸ್ತರಿಸಿ ಸೈಂಧವ
ಗುರುತನುಜ ರಾಧೇಯ ಸೌಬಲರಪ್ಪಿದರು ನೃಪನ ೩೧
ಯಾದವರು ಪಾಂಚಾಲರಲಿ ಸಂ
ಪಾದಿಸಿದುದನ್ಯೋನ್ಯ ಘನಸಂ
ವಾದ ಸುಖ ಸಂಪ್ರೀತಿ ಮೆರೆಯಲ್ಕಿಷ್ಟ ಸತ್ಕಾರ
ಆದುದುತ್ಸವ ಜನಜನಿತ ಹರು
ಷೋದಧಿಯ ಹೊನಲಿನಲಿ ಹಿಂದಣ
ಭೇದ ಕರ್ದಮವಡಗಿ ಹೋಯ್ತವನೀಶ ಕೇಳೆಂದ ೩೨
ವೀತ ಭಯರನ್ಯೋನ್ಯ ಪರಮ
ಪ್ರೀತಿಗಳ ಬೆಳವಿಗೆಯಲಿದ್ದರು
ಭೂತಳಾಧಿಪರೈದು ಸಂವತ್ಸರಗಳೊಂದಾಗಿ
ಖ್ಯಾತವಿದು ಪಾಂಚಾಲಪುರದೊಳ
ತೀತವಾಯಿತ್ತೊಂದು ವರುಷವ
ಭೀತ ಧರ್ಮಸುತಂಗೆ ಮುವ್ವತ್ತಾರು ಸಮವಾಯ್ತು ೩೩
ನೋಡಿ
ಸಂಪಾದಿಸಿಆದಿಪರ್ವ ಸಂಧಿಗಳು>: | ೧ | ೨ | ೩ | ೪ | ೫ | ೬ | ೭ | ೮ | ೯ | ೧೦ |
> | ೧೧ | ೧೨ | ೧೩ | ೧೪ | ೧೫ | ೧೬ | ೧೭ | ೧೮ | ೧೯ | ೨೦ |
ಪರ್ವಗಳು
ಸಂಪಾದಿಸಿಕುಮಾರವ್ಯಾಸ ಭಾರತ | ಆದಿಪರ್ವ | ಸಭಾಪರ್ವ | ಅರಣ್ಯಪರ್ವ | ವಿರಾಟಪರ್ವ | ಉದ್ಯೋಗಪರ್ವ | ಭೀಷ್ಮಪರ್ವ | ದ್ರೋಣಪರ್ವ | ಕರ್ಣಪರ್ವ | ಶಲ್ಯಪರ್ವ | ಗದಾಪರ್ವ |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ