ಆದಿಪರ್ವ: ೧೨. ಹನ್ನೆರಡನೆಯ ಸಂಧಿ

<ಕುಮಾರವ್ಯಾಸ ಭಾರತ

ಆದಿಪರ್ವ – ಹನ್ನೆರಡನೆಯ ಸಂಧಿ ಸಂಪಾದಿಸಿ

ಸೂ.ಧರಣಿಪತಿ ನಿಜಸುತೆಯ ರೂಪೋ
ತ್ಕರದ ಸೌಭಾಗ್ಯದ ನಿರಂತರ
ಪರಮ ಶೋಭಾ ರಚನೆಯಲಿ ರಚಿಸಿದರು ಪಟ್ಟಣವ ||

ಭೂಮಿಪತಿ ಕೇಳ್ ನಿಮ್ಮ ಪಿತನ ಪಿ
ತಾಮಹರು ಧೌಮ್ಯಾಶ್ರಮಕೆ ಬಂ
ದಾಮುನೀಂದ್ರನ ಕೂಡಿಕೊಂಡರು ಖಚರ ವಚನದಲಿ
ರಾಮಣೀಯಕವಹ ಸುಶಕುನ
ಸ್ತೋಮವನು ವಿವರಿಸುತ ಹೊಕ್ಕರು
ಭೂಮಿಲಂಬದ ನೃಪರ ನೆರವಿಯ ದ್ರುಪದ ಪಟ್ಟಣವ ೧

ಭರದಿನೈತಂದಖಿಳ ಭೂಮೀ
ಶ್ವರರ ಚತುರಂಗ ಪದಹತ
ಧರಣಿ ನಿರ್ಗತ ರೇಣು ಪಟಲ ಪರಾಗ ಸಂಗದಲಿ
ಅರುಣಮಯವಾಯ್ತಖಿಳ ಜಗದಲಿ
ಸರಸಿಜಾಕ್ಷಿಯ ನೆನೆದು ಸಚರಾ
ಚರದ ಮುಖದಲಿ ರಾಗರಸವುಬ್ಬರಿಸಿದಂದದಲಿ ೨

ತರಣಿಗುಂಟೇ ಸಮಯವನಿಲಗೆ
ತೆರಹುಗೊಡುವವರಾರು ಗಗನೇ
ಚರರ ಗಮನಸ್ತಂಭವೆತ್ತಣ ಮಾತು ಖಗಕುಲಕೆ
ನೆರೆದ ಪಲ್ಲವ ಸತ್ತಿಗೆಯ ಝ
ಲ್ಲರಿಯ ಸಿಂಧದ ಸೆಳೆಯ ಘನ ಸೀ
ಗುರಿಯ ಸಬಳದ ಸಾಲ ಚಮರಂಗಳ ವಿಡಾಯಿಯಲಿ ೩

ಚತುರ ಉದಧೀ ವಲಯದವನೀ
ಪತಿಗಳೇ ಕಾಮಿಸಿ ವಿರೋಧ
ಸ್ಥಿತಿಯ ನೋಡದೆ ನೂಕಿ ನಡೆದರು ದ್ರುಪದ ಪುರಿಗಾಗಿ
ಅತಿಬಲರು ಬಹು ರಾಜಬಲ ಪ
ದ್ಧತಿಗಳನು ನೋಡುತ್ತ ಬಂದರು
ಕೃತಕ ವಿಪ್ರೋತ್ತಮರು ಭಿಕ್ಷಾವಿಹಿತ ವೃತ್ತಿಯಲಿ ೪

ತಿರುಗಿತಿದು ಪಾಂಚಾಲ ನಗರಿಯ
ಹೊರ ವಳಯದಲಿ ಜಲಧಿ ಮಧ್ಯದ
ಕುರುವವೋ ಪಟ್ಟಣವೊ ಮೇಣಿದು ದೈವಗತಿಗಳಲಿ
ಉರುಬಿದೊಡೆ ಪಾಂಚಾಲಭೂಪತಿ
ತರುಬಲಾಪನೆ ಮಾವತನವಿದು
ಬರಿದೆ ಹೋಗದೆನುತ್ತ ಬಂದನು ಧರ್ಮಸುತ ನಗುತ ೫

ಪುರದೊಳಗೆ ಹೇರಾಳ ಹಬ್ಬದ
ಹರಹಿನಲಿ ಬೀಡಾರ ಭಿಕ್ಷಾ
ಚರಿತರಿಗೆ ದೊರಕುವುದೆ ಗುಡಿ ಗೂಡಾರ ಸಂತತಿಗೆ
ಅರಸುಗಳು ನಾವಲ್ಲ ಭವನಾಂ
ತರವದೇಕೆಮಗೆಂದು ಘಟಬಂ
ಧುರದ ಶಾಲೆಯ ಹೊಕ್ಕರಿವರು ಕುಲಾಲ ಭವನದಲಿ ೬

ಕೂಡೆ ಹೊಸ ಭಾಂಡದಲಿ ಭಿಕ್ಷವ
ಬೇಡಿ ತೊಳಲಿದರಿವರು ರಾಯರ
ಬೀಡು ಬಿಡುತಿರ್ದುದು ಬಹಳ ನಿಸ್ಸಾಳ ರಭಸದಲಿ
ಬೀಡಿವರಿಗಿದು ನೆಲನಿವರಿಗಿದು
ಮಾಡಿದರಮನೆಯಿವರಿಗಿದು ಕರು
ಮಾಡವಿವರಿಗಿದೆಂದು ಪರುಠವಿಸಿದನು ಪಾಂಚಾಲ ೭

ಕೇರಿ ಕೇರಿಯ ಬೀದಿಗಳ ಪ
ನ್ನೀರ ಚಳೆಯದ ಕಳಸ ಕನ್ನಡಿ
ತೋರಣದ ಸೂಸಕದ ಮುತ್ತಿನ ಮಕರ ತೋರಣದ
ಓರಣದ ಹೊಂಗೆಲಸದಖಿಳಾ
ಗಾರ ಪಂಕ್ತಿಯ ಸೋಮವೀಧಿಯ
ಸೂರವೀಧಿಯ ರಚನೆಯಲಿ ರಚಿಸಿದರು ಪಟ್ಟಣವ ೮

ತೀವಿದವು ಹೊಂಗೆಲಸ ಗತಿಯಲಿ
ಲೋವೆಗಳು ಚೈತನ್ಯಮಯ ಚಿ
ತ್ರಾವಳಿಯ ಬೆಸುಗೆಗಳಲೆಸೆದವು ಭವನಭಿತ್ತಿಗಳು
ಹೂವಿನರಳಿನ ಹರಹಿನಲಿ ರ
ತ್ನಾವಳಿಗಳೊಪ್ಪಿದವಗರು ಧೂ ೯

ಮಾವಳಿಯ ಗುಂಪಿನಲಿ ಮಘಮಘಿಸಿದವು ಮೇಘಚಯ
ಕಾರಣೆಯ ಕುಂಕುಮದ ಸಾದಿನ
ಸಾರಣೆಯ ನೆಲೆಕಟ್ಟುಗಳ ಕ
ರ್ಪೂರಧೂಳಿಯ ಹೊಳಹುಗಳ ಪನ್ನೀರ ಪಕ್ಕಲೆಯ
ಚಾರು ಚಳೆಯದ ಕೆಸರಿಡುವ ಕ
ಸ್ತೂರಿಗಳ ಪೂರಾಯ ಪರಿಮಳ ೧೦

ಭಾರದಲಿ ಬಿರುಗಾಳಿ ಕುಸಿದುದು ಹೇಳಲೇನೆಂದ
ಮೇಲುಕಟ್ಟಿನ ದಿವ್ಯಚಿತ್ರದು
ಕೂಲನಿಚಯದ ಲಾಮಚದ ಬ
ಲ್ಲಾಳ ದಡ್ಡಿಗಳೆಡೆಗೆಡೆಗೆ ರಂಜಿಸುವ ಪಟ್ಟೆಗಳ
ಮೇಲುವೊದಕೆಯ ಕರ್ಪುರದ ಹೊಂ
ಬಾಳೆಗಳ ಮಲಯಜದ ಕಂಬದ ೧೧

ಸಾಲುಗಳಲೊಪ್ಪಿದುದು ಚಪ್ಪರವೆರಡು ಯೋಜನದ
ಬಿಗಿದವೆಡೆ ಮಂಟಪದ ಬಿಂಗಾ
ರಿಗಳ ಬಿಡೆಯದ ಚಮರ ಹೊಂಗೆ
ಜ್ಜೆಗಳ ಮುಕುರದ ಘಂಟೆಗಳ ಬಂಧುರದ ಬಾಸಿಗದ
ಸುಗಮ ಬಂಧದ ಬಣ್ಣಸರದೋ
ಳಿಗಳ ಕಂಬದ ವಜ್ರಮಯ ಧಾ ೧೨

ರೆಗಳಲೆಸೆದುದು ಭದ್ರಮಂಟಪವಮಲ ಮಣಿಮಯದ
ಕೀಲಿಸಿದ ಪಟ್ಟೆಗಳ ದಿವ್ಯ ದು
ಕೂಲದಲಿ ಹೊಂಬರಹದೆಲೆಗಳ
ಚೂಳಿಕೆಯ ಕನ್ನಡಿಯ ತೋರಣವೆರಡು ಪಕ್ಕದಲಿ
ಮೇಲು ಮುತ್ತಿನ ಸೂಸಕದ ನೇ
ಪಾಳ ಚಮರಿಯ ದಾಳಿಗಳ ಸಂ

ಮೇಳದಲಿ ಸಮ ತಳಿಸಿದರು ವೈವಾಹ ಮಂಟಪವ ೧೩
ಹೊಳೆವ ಭಿತ್ತಿಯ ಸಾಲಭಂಜಿಕೆ
ಗಳಲಿ ಮೌಕ್ತಿಕ ವಜ್ರಮಣಿ ಮಂ
ಗಳ ಮಹಾರಶ್ಮಿಯಲಿ ರಚನೆಯ ಚಿತ್ರಪತ್ರದಲಿ
ಇಳೆಗಿಳಿದ ಪುಷ್ಪಕವೊ ನೂತನ
ನಳಿನಮಿತ್ರನ ರಥವೊ ಮೇಣಿದು
ಜಲಧಿಶಯನನ ಸೆಜ್ಜೆಯೋ ನಾವರಿಯೆವಿದನೆಂದಾ ೧೪
ಝಳವ ಝೋಂಪಿಸಿ ಬೀಸಿದವು ತಂ
ಬೆಲರ ಬೀಸಣಿಗೆಗಳು ಪರಿಮಳ
ಕಲಿತ ಮಕರಂದದ ತುಷಾರದ ತುಹಿನ ರೇಣುಗಳ
ಸುಳಿವ ಸುತ್ತಣ ಸಾಲಭಂಜಿಕೆ
ಗಳಲಿ ಸೂತ್ರಿಸಿ ರಚಿಸಿದರು ಮಂ
ಗಳದ ರಿಂಗಣ ಝಾಡಿಸಿತು ವೈವಾಹ ಮಂಟಪವ ೧೫

ವರಜವಾಜಿಯ ಶೃಂಗಗಳ ಕ
ರ್ಪುರದ ತವಲಾಯಿಗಳ ಸಾದಿನ
ಭರಣಿಗಳ ಮೃಗನಾಭಿಗಳನಡಕಿದರು ಬಂಡಿಯಲಿ
ಸುರಿ ಸುರಿದು ಹಂತಿಗಳ ಹೊಂಗೊ
ಪ್ಪರಿಗೆಗಳ ತುಂಬಿದರು ಗಂಧದ
ಹಿರಿಯ ರಂಜಣಿಗೆಗಳ ಹಿಡಿದರು ಸುತ್ತು ವಳಯದಲಿ ೧೬

ಬಳಿಕ ಸೊದೆಗಳ ಬಾವಿಗಳ ಪ
ಕ್ಕಲೆಯ ಪನ್ನೀರುಗಳು ಹಿಡಿದವು
ಹೊಳೆವ ಕೈರಾಟಣದ ಕಾಂಚನಮಯದ ದೋಣಿಗಳ
ತುಳುಕಿ ಬಿಗಿದರು ಕೊಪ್ಪರಿಗೆಗಳ
ವಳಯದಲಿ ನವ ಯಂತ್ರಮಯ ಪು
ತ್ಥಳಿಗಳೇ ನೀಡುವವು ಬೇಡಿದರಿಗೆ ಸುವಸ್ತುಗಳ ೧೭

ಏಕ ವಿಧದ ನವಾಯಿಯೇ ಮೂ
ಲೋಕದತಿಶಯ ವಸ್ತು ರಚನಾ
ಸೌಕುಮಾರಿಯ ಸೇವೆಗಿದು ಸಾಕಾರವಾದುದಲ
ಏಕಮಯಮತ ವಿಶ್ವಕರ್ಮ
ವ್ಯಾಕರಣ ಲಕ್ಷಣದ ಲಕ್ಷ್ಯಾ
ನೀಕವಿದರೊಂದೊರೆಗೆ ಬಹುದೇ ಭದ್ರಮಂಟಪದ ೧೮

ವಿವಿಧ ವೀಣಾ ವಾದ್ಯ ಕೋಮಲ
ರವದ ಮಧುರ ಮೃದಂಗ ತತಿಗಳ
ರವಣೆಗಳ ನಟ್ಟವಿಗರುಗ್ಗಡಣೆಯ ಗಡಾವಣೆಯ
ನವ ವಿಧದ ವೈತಾಳಿಕರ ವರ
ಯುವತಿಯರ ಭಾರಣೆಯ ಭೂಷಣ
ರವದ ಮೇಳವು ಮುತ್ತಿ ಮುಸುಕಿತು ಚಾರು ಚಪ್ಪರವ ೧೯

ಸಾಗಳದ ಸನ್ಮೋಹನದ ಮಳೆ
ಗಾಲವೋ ಗೀತವೊ ರಸಾಳಿಯ
ಕಾಲುವೆಯೊ ನವಕಾವ್ಯಬಂಧದ ಸಾರಸಂಗತಿಯೊ
ಆಲಿಗಳಿಗಾಯುಷ್ಯ ಫಲ ಜೀ
ವಾಳವೋ ನರ್ತನವೊ ಸೊಗಸಿನ
ಮೇಳವಣಿಗಳ ಪಾಟಿಯಾದುದು ಜನದ ಕಣ್ಮನಕೆ ೨೦

ತೀವಿದರು ಹೊರ ವಳಯದಲಿ ನಾ
ನಾ ವಿಧದ ನಾಟಕದ ನರ್ತನ
ಭಾವಕ ದ್ರಾವಕ ಸುಗಾಯಕ ಮಲ್ಲ ಚಿತ್ರಕರು
ಕೋವಿದರು ಕರುಷಕರು ಪಣ್ಯಾ
ಜೀವಿ ವಾಮನ ಮೂಕಬಧಿರಾಂ
ಧಾವಳಿಗಳೊಪ್ಪಿದರು ಸಕಲ ದಿಶಾ ಸಮಾಗತರು ೨೧

ಕವಿಗಮಕಿವಾದಿಗಳು ವಾಗ್ಮಿ
ಪ್ರವರ ಯಾಜ್ಞಿಕ ಮಾಂತ್ರಿಕರು ವೈ
ಷ್ಣವ ಮಹೇಶ್ವರ ಜೈನ ಭೈರವ ಬುದ್ಧ ಲಿಂಗಿಗಳು
ವಿವಿಧ ವರ್ಣಾಶ್ರಮ ಸುಧರ್ಮ
ವ್ಯವಹರಣ ನಿಷ್ಠರು ವಿವಾಹೋ
ತ್ಸವ ವಿಲೋಕನ ಕೌತುಕಿಗಳೊದಗಿದರಸಂಖ್ಯಾತ ೨೨

ಗಣಿತವಂತರ ನೆರವಿ ಸುಬ್ರಾ
ಹ್ಮಣರು ಸುಶ್ರೋತ್ರಿಯರು ವೈದಿಕ
ಗುಣದ ವಾಚಾಲಕರು ವಿಮಲಬ್ರಹ್ಮಋಷಿ ಸಮರು
ಪ್ರಣಿತ ಋಷಿಗಳು ಮುನಿವರರು ಸಂ
ದಣಿಸಿತಖಿಳ ದಿಗಂತರದ ಧಾ
ರುಣಿಯ ದೇವವ್ರಾತ ನೆರೆದುದು ದ್ರುಪದ ನಗರಿಯಲಿ ೨೩

ಅರಸ ಕೇಳೈ ಮೇಲೆ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ
ಗರುಡ ಕಿನ್ನರ ಸಿದ್ಧ ವಸು ಗಂಧರ್ವ ಭೂತಗಣ
ವರ ಮರುದ್ಗಣ ರುದ್ರ ಮನು ಭಾ
ಸ್ಕರ ಸುಧಾಕರ ತಾರಕಾ ಗ್ರಹ
ಸುರಮಿನಿಪ ದಿಕ್ಪಾಲತತಿ ನೆರೆದುದು ವಿಮಾನದಲಿ ೨೪

ಚಾರಣರ ಕೈವಾರ ತುಂಬುರ
ನಾರದರ ಸಂಗೀತ ರಂಭೆಯ
ಚಾರು ನರ್ತನ ಚಿತ್ರರಥನ ಮೃದಂಗ ಮೃದು ಶಬ್ದ
ಆರುಭಟೆ ಮಿಗಿಲಳ್ಳಿರಿವ ಜಂ
ಭಾರಿಯೋಲಗದಲಿ ತದೀಯ ಮ
ಹಾ ರಭಸವಿತರೇತರ ಪ್ರತಿಬಿಂಬವಾಯ್ತೆಂದ ೨೫

ರಚಿಸಿದರು ಮಂಟಪವನವರವ
ರುಚಿತ ವೃತ್ತಿಯೊಳವನಿಪಾಲ
ಪ್ರಚಯವನು ಮನ್ನಿಸಿದನಿವರನು ವಿಪ್ರಸಭೆಯೊಳಗೆ
ಪ್ರಚುರ ಮಣಿಯಿದೆ ಪದ್ಮರಾಗದ
ರುಚಿರ ರತ್ನವು ಜಾತರೂಪದಿ
ಖಚಿತವಾದೊಡೆ ಪುಣ್ಯವೆನುತಾ ದ್ರುಪದ ಚಿಂತಿಸಿದ ೨೬

ನೋಡಿ ಸಂಪಾದಿಸಿ

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು ಸಂಪಾದಿಸಿ

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ ಸಂಪಾದಿಸಿ

ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ