- ~ ॐ ~
ಆದಿಪರ್ವ: ಆರನೆಯ ಸಂಧಿ
ಸಂಪಾದಿಸಿಸೂಚನೆ: ಭೀಮ ದುರ್ಯೋಧನ ಸೆಣಸಿನ
ತಾಮಸಿಕೆ ಹೆಚ್ಚಿದುದು ಕದನೋ
ದ್ದಾಮರಸ್ತ್ರಾಭ್ಯಾಸವನು ಮಾಡಿದರು ದ್ರೋಣನಲಿ||
ಕೇಳು ಜನಮೇಜಯ ಮಹೀಪತಿ
ಬಾಲಕರು ನೂರಾರು ಮೆರೆದರು
ಬಾಲಕೆಳೀವ್ಯಸನಿಗಳು ಹೊರ ವಳಯದಲಿ ಪುರದ |
ಆಳಿನೇರಿಕೆ ಹಿಡಿಗವಡೆ ಗುರಿ
ಯಾಳು ಚೆಂಡಿನ ಹೊಣಕೆ ಚಿಣಿ ಕೋ
ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ || (೧)
ಗುಡುಗು ಗುತ್ತಿನಚೆಂಡು ಗುಮ್ಮನ
ಬಡಿವ ಕತ್ತಲೆ ಗುದ್ದುಗಂಬದ
ಗಡಣಿ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣಿ |
ಕೆಡಹು ಕುಟ್ಟಿಗನಾದಿಯಾದವ
ಗಡ ವಿನೋದದಲಾಡಿದರು ಪಂ
ಗಡದಲೈವರು ನೂರ್ವರಿವರಿತ್ತಂಡವೋಂದಾಗಿ || (೨)
ಅದರೊಳೊಬ್ಬನೆ ಭೀಮನನಿಬರ
ಸದೆವ ತಾ ಸೋತರೆ ವಿಭಾಡಿಸಿ
ಕೆದರುವನು ಗೆದ್ದೋಡಿದರೆ ಬೆಂಬತ್ತಿ ಹಿಡಿದೆಳದು |
ಸದೆದು ಬಿಡುವನು ಮುನ್ನ ಭೀಷ್ಮಂ
ಗೊದರಿ ದೂರವನನಿಬರನು ಮೇ
ಳದಲಿ ಮಗುಳೊಂದಾಗಿ ಸಂಗಡವಹರು ಸೂರುಳಿದು || (೩)
ಕೆಣಕಿ ದುರ್ಯೋಧನನ ನೆತ್ತಿಯ
ನಣಿದು ಹಾಯ್ವನು ನಿಮ್ಮ ನೂರ್ವರ
ಬಣಗುಗಳಿಗೆಡಗಾಲ ತೊಡರಿದೆ ಬನ್ನಿ ನೀವೆನುತ |
ಗುಣವ ನುಡಿದೊಂದಾಗಿ ಕೆಳೆಗೊಂ
ಡಣಕಿಸದೆ ಮೈಮರೆಸಿ ಮರೆಯಲಿ
ಹಣಿದು ಬಿಡುವರು ಭೀಮನನು ದುರ್ಯೋಧನಾದಿಗಳು || (೪)
ಹೇಳುವರು ಯಮಜಂಗೆ ನಿನ್ನವ
ನೂಳಿಗವ ನಿಲಿಸೆಂದು ಪಾರ್ಥಗೆ
ಹೇಳುವರು ಬಳಿಕವರು ಭೀಮನ ಕರೆದು ಗಾರುಡಿಸೆ |
ಕೇಳುವನು ಹೈಯೆಂದು ತನ್ನಯ
ಸೋಲದಲಿ ಮೈಯೊಡ್ಡುವನು ಮೇ
ಲಾಳನೇರಿಸಿ ಹರಿದು ಸದೆವನು ಗುತ್ತಿನಲಿ ಕೆಡಹಿ || (೫)
ಅಳುತ ಧೃತರಾಷ್ಟ್ರಂಗೆ ಭೀಮನು
ಕಳೆದ ಹಲುಗಳನೊಡೆದ ಮೊಳಕಾ
ಲ್ಗಳನು ತೋರಿಸಿ ದೂರುವರು ದುರ್ಯೋಧನಾದಿಗಳು |
ಮುಳು ಮೊನೆಗಳಲಿ ಗೀರಿ ನೆತ್ತರ
ಗಳೆದು ಹುಡಿಯಲಿ ಹೊರಳಿ ತಾ ಬಂ
ದುಳುತ ಧೃತರಾಷ್ಟ್ರಂಗೆ ಭೀಷ್ಮಗೆ ದೂರುವನು ಭೀಮ || (೬)
ಆಕೆವಾ(ಳು)ಳರು ಭೀಷ್ಮ ವಿದುರರು
ಸಾಕು ನಿಮ್ಮೊಳು ನೂರು ನಾಲ್ವರು
ಆ ಕುಮಾರರು ಬೇರೆ ನೀನಿಹುದೊಬ್ಬ ಬೇರೆಂದು |
ನೂಕಿ ಸೂರುಳು ಮಾಡಿ ಬಿಟ್ಟರೆ
ನಾಕು ಜಾವದೊಳಿಹರು ಮರುದಿನ
ವಾ ಕುಮಾರರು ತಮ್ಮೊಳೊಂದಾಗಿಹರು ಗೆಳೆಯಾಗಿ || (೭)
ಒಂದು ದಿನ ನೂರಾರು ಮಾನಿಸ
ರೊಂದು ಗೆಳೆಯಲಿ ಪುರದ ಹೊರಗಿಹು
ದೊಂದು ಠಾವು ಪ್ರಮಾಣ ವೃಕ್ಷವ ಕಂಡು ನಡೆತರಲು |
ಬಂದು ನಿಂದರು ಕೋಲ ಬಿಸುಟೀ
ವೃಂದ ಹತ್ತಿತ್ತು ಮರನನಿವನೈ
ತಂದು ತಂದೆಡೆಯಾಡಿ ಬಳಲಿದು ನೋಡಿದನು ಭೀಮ || (೮)
ಮರನ ಹಿಡಿದಲುಗಿದರೆ ಬಿದ್ದರು
ಭರತಕುಲಪಾಲಕರು ನೂರೈ
ವರು ಮಹಾವಾತದಲಿ ತರುಫಲನಿಕರ ಬೀಳ್ವಂತೆ |
ಶಿರವೊಡೆದು ಬೆನ್ನೊಡೆದು ಮೊಳಕಾ
ಲ್ಜರಿದು ಕೈಗಳು ಮುರಿದು ನೆತ್ತರು
ಸುರಿದು ಧೃತರಾಷ್ಟ್ರಂಗೆ ದೂರಿದರನಿಬರೀ ಹದನ || (೯)
ದುರುಳನವನೊಡನಾಡ ಬೇಡೆಂ
ದರಸನನಿಬರ ಸಂತವಿಟ್ಟನು
ಹರಿದು ಹೆಚ್ಚಿತು ಭೀಮ ದುರ್ಯೋಧನರಿಗತಿ ವೈರ |
ಮರಳಿ ತಾವೊಂದಾಗುತಾತನ
ಕರಸಿ ವಿವಿಧ ಕ್ರೀಡೆಯಲಿ ಮೈ
ಮರೆಸಿ ಭೀಮನ ಕಟ್ಟಿಹಾಯ್ಕಿದರೊಂದು ಮಡುವಿನಲಿ || (೧೦)
ಪಾಶವನು ಹರಿದೆದ್ದು ಬಂದತಿ
ರೋಷಿ ಸದೆದನು ಮತ್ತೆ ತಮ್ಮೊಳು
ಭಾಷೆಗಳಲೊಂದಾಗಿ ಕೂಡಿದರೊಂದು ದಿವಸದಲಿ |
ಆ ಸಿತಗ ಮೈಮರೆದ ಹೊತ್ತು ಮ
ಹಾಸುರದ ಫಣಿಗಳಲಿ ಕಚ್ಚಿಸಿ
ಘಾಸಿ ಮಾಡಲು ಬದುಕಿ ಬೇಸರನಡಿಗಡಿಗೆ ಭೀಮ || (೧೧)
ಅರಸ ಕೇಳ್ ಆಯುಷ್ಯವುಳ್ಳರೆ
ಹರಿಹರಬ್ರಹ್ಮಾದಿಗಳು ಸಂ
ಹರಿಸಲರಿಯರು ಬರಿದೆ ದೈನ್ಯಂಬಡುವುದೀ ಲೋಕ |
ಭರತ ವಂಶದ ಬಾಹಿರರು ನಿ
ಮ್ಮರಸುಗಳು ಭೀಮಂಗೆ ಮಾಡಿದ
ಹುರಿಯನಾ ಹುರಿ ಹರಿದ ಪರಿಯನು ಮತ್ತೆ ಕೇಳೆಂದ || (೧೨)
ಕಾಳಿಕೂಟ ಹಾಲಹಲವ ಕಾ
ರ್ಕೊಲ ದಾರದ ವತ್ಸನಾಭಿ ಕ
ರಾಳ ಸೌರಾಷ್ಟ್ರಿಕಾವ ಶೌಕ್ಲಿಕ ಸುಪ್ರದೀಪಕವ |
ಹೇಳಲರಿದೆನಿಪೆಂಟು ವಿಷವನು
ಮೇಳವಿಸಿ ಬಳಿಕುಳಿದ ಮಧುರ ವಿ
ಶಾಲವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ || (೧೩)
ದಿಟ್ಟಿಸಿದರೆವೆ ಸೀವುದಂಗೈ
ಮುಟ್ಟಿದರೆ ಹುಗುಳಹುದು ಬಳಿಕವ
ನಟ್ಟ ಕೈಕರಣದ ಸುವಾರದ ವಿದ್ಯವೇ(ವ)ನರಿದೊ |
ಕೊಟ್ಟರೀತಂಗೆಲ್ಲವನು ಜಗ
ಜಟ್ಟಿ ಹಾಯಿಕಿ ಕೊಂಡು ನುಣ್ಣನೆ
ಚಿತ್ತು ಮುರಿಯಾಟದಲಿ ಸದೆದನು ಮತ್ತೆ ಕೌರವರ || (೧೪)
ಮಡುವಿನಲಿ ಹಾಯ್ಕಿ ದಿರಿ ಹಾವಿನ
ಹೆಡೆಯ ಕೊಂಡೂರಿದಿರಿ ಬಲು ವಿಷ
ದಡಿಗೆಗಳ ಮೆಲಿಸಿದಿರಿ ಬಲ್ಲಂದದ ವಿಕಾರದಲಿ |
ಕೆಡಹಲನು ಮಾಡಿದಿರಿ ನೂರ್ವರ
ಕಡಿದು ಶಾಕಿನಿಯರಿಗೆ ರಕುತವ
ಕುಡಿಸಿದಲ್ಲದೆ ಮುನ್ನ ಸಾವೆನೆ ಕೇಳಿ ನೀವೆಂದ || (೧೫)
ಒಳಗೆ ಬೆಳೆದುದು ವೈರಶಿಖಿ ಕಡೆ
ಗಳಿಕೆ ಹಾಯ್ದುದು ಜನನಿ ಜನಕರ
ಬಲು ನುಡಿಗಳಲಿ ನೂರ್ವರಿರ್ದರು ಶಕುನಿ ಮತವಿಡಿದು |
ಬಲುಹುಗುಂದದೆ ಬೀಷ್ಮ ವಿದುರರ
ಬಳಕೆಯಲಿತಾವಡಗಿ ಗುಣದಲಿ
ಕೆಲನ ಮೆಚ್ಚಿಸಿ ನಡೆದಗಿವರು ಯುಧಿಷ್ಠಿರಾದಿಗಳು || (೧೬)
ಆಟದಲಿ ತೊಡಗಿದರು ಮೊದಲಲಿ
ತೋಟಿಯನು ಸಾಕೀತಗಳ ಕಾ
ಲಾಟವನು ನಿಲಿಸುವೆನು ಶಸ್ತ್ರಾಸ್ತ್ರ ಪ್ರಸಂಗದಲಿ |
ಆಟವಿಕರಿವದಿರಲಿ ಬಲಿದೊಳ
ತೋಟಿ ಬರಿದೇ ಬಿಡದು ಮೃತ್ಯುವಿ
ನೂಟ ಮುಂದಿಹುದೆಂದು ಕರೆಕರೆಗುಂದಿದನು ಭೀಷ್ಮ || (೧೭)
ಧರಣಿಪತಿ ಚಿತ್ತೈಸು ಗೌತಮ
ವರಮುನಿಗೆ ಜನಿಸಿದ ಶರದ್ವನು
ಪರಮಋಷಿಯಾತನು ತಪೋಯುತನಾಗಿ ಧನು ಸಹಿತ |
ಇರುತ ಕಂಡನು ದೈವ ಗತಿಯಲಿ
ಸುರವಧುವನಾ ಕ್ಷಣಕೆ ಕಾಮ
ಜ್ವರಿತನಾದನು ಚಲಿಸಿತಾತನ ವೀರ್ಯವವನಿಯಲಿ || (೧೮)
ಅದು ಶರಸ್ತಂಭದಲಿ ನೆಲೆಯಾ
ದುದು ಮುನಿಚ್ಯುತ ವೀರ್ಯ ಮುನಿಸುತ
ರುದಿಸಿದರು ಶಂತನು ಮಹೀಪತಿ ಕಂಡು ಕೃಪೆಯಿಂದ |
ಸದನದಲಿ ತನ್ಮಿಥುನವನು ಸಲ
ಹಿದನು ಕೃಪ ಕೃಪೆಯೆಂಬ ಹೆಸರಾ
ದುದು ಮಹಾ ಬಳನಾದನಾತನ ಕರೆಸಿದನು ಭೀಷ್ಮ || (೧೯)
ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯಗಳನರಿದು |
ಲೋಕ ವೈದಿಕಮುಖ್ಯ ಸಕಲ ಕ
ಲಾ ಕುಶಲರಾದರು ಧನುಃ ಪ್ರವಿ
ವೇಕ ನಿಪುಣರನರಸುತಿದ್ದನು ಮತ್ತೆ ಗಾಂಗೇಯ || (೨೦)
ಮುನಿ ಭರದ್ವಾಜಾಖ್ಯನಿರ್ದನು
ಘನ ತಪೋನಿಷ್ಠೆಯಲಿ ದಿವಿಜಾಂ
ಗನೆಯ ಕಂಡನು ಗಾಯವಡೆದನು ಮದನನೆಸುಗೆಯಲಿ |
ತನು ಪರಿಚ್ಯುತ ವೀರ್ಯವನು ಸ
ತ್ಕನಕ ಕಲಶದೊಳಿರಿಸಲಲ್ಲಿಯೆ
ಜನಿಸಿದನು ದ್ರೋಣಾಬಿದಾನನು ಮುನಿಯ ದೆಸೆಯಿಂದ || (೨೧)
ದ್ರೋಣಕಲಶದೊಳಾದದೆಸೆಯಿಂ
ದ್ರೋಣನಾದನು ಬಳಿಕ ಮುನಿಯಾ
ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ |
ದ್ರೋಣನೋಡನೋದಿಸಿ ನೃಪಾಲ
ಶ್ರೇಣಿಯನು ಶಾಸ್ತ್ರಾಸ್ತ್ರ ಕಳೆಯಲಿ
ಜಾಣರನು ಮಾಡಿದನು ಭಾರದ್ವಾಜ ಮುನಿಯಂದು || (೨೨)
ಕೃಪನನುಜೆಯನು ತಂದು ದ್ರೋಣಂ
ಗುಪಯಮವ ಮಾಡಿದನು ಹರ್ಷದಿ
ದ್ರುಪದ ಬಂದೀ ದ್ರೋಣನೊಡನರಿದನು ಧನುಶ್ರುತಿಯ |
ಕೃಪೆಯಲೀ ದ್ರೋಣಂಗೆ ಜನಿಸಿದ
ನಪರ ಶಂಕರ ರೂಪನಾಹವ
ನಿಪುಣನಶ್ವತ್ಥಾಮ ಭಾರದ್ವಾಜ ಗೋತ್ರದಲಿ || (೨೩)
ತಂದೆಯೊಳ್ ಶ್ರಮ ಮಾಡಿದರು ನೃಪ
ವೃಂದಸಹಿತೀ ದ್ರೋಣ ದ್ರುಪದರು
ನಿಂದನಾ ದ್ರುಪದಾಖ್ಯನಯ್ಯನು ದಿವಿಜ ನಗರಿಯಲಿ
ಅಂದು ಸಖ್ಯಪ್ರೀತಿಯನು ಸಾ
ನಂದದಲಿ ದ್ರೋಣಂಗೆ ವಿರಚಿಸಿ
ಬಂದು ನಿಜ ರಾಜ್ಯಭಿಷೇಕವ ಧರಿಸಿದನು ದ್ರುಪದ || (೨೪)
ಇತ್ತಲೀ ದ್ರೋಣನ ಸಿತನು ಸುರ
ರತ್ತ ಸರಿದನು ಕೆಲವು ದಿವಸಕೆ
ತತ್ತಪೋವನದಲ್ಲಿ ವಿಪ್ರಕ್ರಿಯೆಗಳನು ಮಾಡಿ |
ಹೊತ್ತ ದಾರಿದ್ರ್ಯದಲಿ ಮನಮರು
ಗುತ್ತ ದೇಶಾಂತರದೊಳೆಗೆ ತೊಳ ದ್ರೋಣ
ಲುತ್ತ ಬಂದನು ತನ್ನ ಮಗ ಸಹಿತಡವಿಯಲಿ || (೨೫)
ಪರುಶುರಾಮಾಶ್ರಮಕೆ ಮುನಿಯೈ
ತರಲು ಭಾರದ್ವಾಜನನು ಸ
ತ್ಕರಿಸಿ ನುಡಿದನು ಜಾಮದಗ್ನ್ಯನು ಮಧುರ ವಚನದಲಿ |
ಧರೆಯನಿತ್ತನು ದ್ವಿಜರಿ ಗೀಯವ
ಸರದೊಳಾ ನಿರ್ಧನನು ನೀನೇ
ಪರಮ ಋಷಿಯಾತಿಥ್ಯ ಪೂಜೆಗಭಾಗ್ಯ ನಾನೆಂದ || (೨೬)
ಧನರಹಿತ ನಾ ಹೊತ್ತ ಭಾರಿಯ
ಧನುವಿದೊಂದಿದೆ ದಿವ್ಯ ಶರವಿದೆ
ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ |
ಎನಗೆ ನಿಮ್ಮಡಿಗಳ ಕೃಪಾಲೋ
ಕನವಲೇ ಪರಿಯಾಪ್ತಿ ಲೋಕದ
ಜನ ಮನೋರನ್ಜನವೇ ಬೇಹುದು ಶರವ ಕೊಡಿಯೆಂದ || (೨೭)
ಇವು ಮಹಾ ನಿಸ್ಸೀಮತರ ವೈ
ಷ್ಣವವಲೇ ದಿವ್ಯಾಸ್ತ್ರ ನಿವಹವ
ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ |
ಇವು ಮಹಾ ರಣರಂಗದಲಿ ಶಾ
ತ್ರವ ನಿವಾರಣವೈಸಲೆಮ್ಮೀ
ವ್ಯವಹೃತಿಗೆ ತಾನೇನುಪಾಯುವೆನುತ್ತ ಚಿಂತಿಸಿದ || (೨೮)
ಮಗನೆ ಬಲೈlದು ದ್ರುಪದ ಭೂಪತಿ
ಮಗುವುತನದಿಂದೆಮ್ಮ ಸಖನೋ
ಲಗಿಸುವೆವು ನಾವಲ್ಲಿ ಸಲಹನೆ ಮಿತ್ರ ಭಾವದಲಿ |***
ಹೋಗುವ ನಡೆ ಪಂಚಾಲರಾಯನ
ನಗರಿಯನು ನಾವೆಂದು ಮುನಿ ಮೌ
ಳಿಗಳ ಮಣಿಯನು ಬೀಳು ಕೊಂಡನು ರೇಣುಕಾ ಸುತನ || (೨೯)
ಬಂದನೀತನು ದ್ರುಪದ ರಾಯನ
ಮಂದಿರಕೆಯಾ ಬಾಗಿಲವನೊಡ
ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ |
ಸಂದ ಮಿತ್ರರು ದ್ರೋಣಮುನಿಪತಿ
ಯೆಂದು ನಮ್ಮಭಿಧಾನ ನೀ ಹೇ
ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ || (೩೦)
ಸಿರಿಯ ಮದವಧಿಕ ಪ್ರತಾಪೋ
ತ್ಕರದ ಮದ ಮೊದಲಾದ ಮದ ಸಂ
ಚರಣ ರಜದಲಿ ಮಾಸಿತೀತನ ಮನದ ಮಡಿ ವರ್ಗ |
ತಿರಿವ ಹಾರುವರೊಡನೆ ಭೂಮೀ
ಶ್ವರರಿಗೆತ್ತಣ ಮೈತ್ರಿ ಹೋಗಲಿ
ಕರೆಯ ಬೇಡನೆ ಬಂದು ಬಾಗಿಲಲವ ನಿವಾರಿಸಿದ || (೩೧)
ಮರೆದನೇ ತಪ್ಪೇನು ನಾ ಕಂ
ಡರುಹಿ ಮರಳುವೆವೈಸಲೇಯೆನು
ತುರುಬಿದರೆ ತರುಬಿದರು ಕಂಬಿಯನಿಕ್ಕಿ ಬಾಗಿಲಲಿ |
ಒರೆಯನುಗುಳಿಚಿ ಖಡ್ಗದಲಿ ಬಿಡ
ದರಿದನಿಕ್ಕೆಲದವರನೋಲಗ
ಕುರವಣಿಸಿದನು ಮುಂದೆ ನಿಂದನು ದ್ರುಪದ ಭೂಪತಿಯ || (೩೨)
ಏನೆಲವೋ ಪಾಂಚಾಲ ಚಿಕ್ಕಂ
ದಾನು ನೀನೊಂದಾಗಿ ತಂದೆಯೋ
ಳೇನನರಿದೆವು ಮರೆದು ಕಳೆದಾ ಹಾ ಮಹಾದೇವ |
ಏನು ಬಂದಿರಿಯೆಂಬ ಗುಣವಚ
ನಾನುರಾಗವು ಸಾಲದೇ ಧನ
ವೇನು ಫಲ ಕಕ್ಕುಲಿತೆಮಗಿಲ್ಲೆಂದನಾ ದ್ರೋಣ || (೩೩)
ಸೂರಿಗಳಿಗತಿ ಮೂರ್ಖರಿಗೆ ಗಂ
ಭೀರರಿಗೆ ಭಂಡರಿಗೆ ವೇದಾ
ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ |
ಧೀರರಿಗೆ ಹಂದೆಗಳಿಗೆತ್ತಣ
ಸೇರುವೆಗಳೈ ಭೂಪರಿಗೆ ಬಡ
ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ || (೩೪)
ಎಲವೋ ನಿನ್ನಾಸ್ಥಾನ ಸಹಿತೀ
ಹೊಳಲ ಸುಡುವೆನು ನಿನ್ನ ಸೀಳಿದು
ಬಲಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ |
ಕಲಿತ ವಿದ್ಯದ ಕೋಲ ಮಕ್ಕಳ
ಕಳುಹಿ ಕಟ್ಟಿಸಿ ವಾಮ ಪಾದದಿ
ತಲೆಯನೊದೆವೆನು ಮರೆಯದಿರು ನೀನೆಂದನಾ ದ್ರೋಣ || (೩೫)
ಎಂದು ಭಾಷೆಯ ಮಾಡಿ ತನ್ನಯ
ನಂದನನೊಡಗೊಂಡು ಜನಪದ
ವೃಂದ ಹಲವನು ಕಳೆದು ಬಂದನು ಹಸ್ತಿನಾಪುರಿಗೆ |
ಅಂದು ಸಕಲ ಕುಮಾರಕರು ನಲ
ವಿಂದ ನಗರಿಯ ಹೊರೆಗೆ ಗುರಿಗಳ
ಮುಂದುವರಿದೆಸುತಿರಲು ಮುದದಲಿ ಕಂಡನಾ ದ್ರೋಣ || (೩೬)
ಬೆರಸಿದನು ನೆರವಿಯನು ನೋಡು
ತ್ತಿರೆ ಯುಧಿಷ್ಠಿರನೃಪನ ಹರಳುಂ
ಗುರ ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ |
ನೆರೆದು ತಡಿಯಲಿ ನಿಂದು ನೂರರು
ವರು ನಿರೀಕ್ಷಿಸಿ ಸಾಧ್ಯವಲ್ಲೆನು
ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು || (೩೭)
ಸರಳ ತೊಡಚಿ ತದೀಯ ಮಣಿ ಬಂ
ಧುರದ ಮುದ್ರಿಕೆಗೆಚ್ಚು ಹಿಳುಕಿನ
ಶಿರಕೆ ಶರವಾ ಹಿಳುಕಿನಲಿ ಕಣಿಯೆಚ್ಚು ಬಂಧದಲಿ |
ಸರಳ ಸಂದರ್ಭದಲಿ ನಿಮಿಷಾಂ
ತರಕೆ ಫಣಿಪನ ಹೆಡೆವಣಿಯನು
ದ್ಧರಿಸುವಂತಿರೆ ತೆಗೆದು ಬಿಸುಟನು ರತುನ ಮುದ್ರಿಕೆಯ (೩೮)
ಕಂಡು ಬೆರಗಾದುದು ಕುಮಾರರ
ತಂಡ ತನತನಗೈದಿ ಭೀಷ್ಮನ
ನಂಡಲೆದುದೀ ಮುನಿಯನೀಗಲೆ ಸಂತವಿಡಿಯೆಂದು |
ಚಂಡ ಭುಜಬಲನವರ ಕಾಣಿಸಿ
ಕೊಂಡು ಕೊಟ್ಟನು ಭೀಷ್ಮನವರಿಗೆ
ಖಂಡ ವಿಭವವನತುಳ ಧನಪತಿಯಾದನಾ ದ್ರೋಣ || (೩೯)
ವರ ಮುಹೂರ್ತದೊಳವರ ನೂರರು
ವರನು ಕೊಟ್ಟನು ಶಸ್ತ್ರವಿದ್ಯಾ
ಪರಿಣತರ ಮಾಡೆಂದ ದ್ರೋಣನ ಕೈಯಲಾ ಭೀಷ್ಮ |
ಗರುಡಿ ಕಟ್ಟಿತು ನೂರು ಯೋಜನ
ವರೆಯ ವಿಸ್ತಾರದಲಿ ಸಾವಿರ
ಕುರಿಯ ಹೊಯ್ದರು ಪೂಜಿಸಿದರಾ ಚದುರಚಂಡಿಕೆಯ || (೪೦)
ಗರುಡಿ ಪೂಜಾ ವಿಭವ ಸಮನಂ
ತರದಲನಿಬರು ಸಮವ ತೊಡಗಿದ
ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ |
ಬರುತಲಿದ್ದರು ಕೊಡೆ ಹಸ್ತಿನ
ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ
ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ || (೪೧)
ರಾಯ ಬಲ್ಲೈ ಮುನ್ನ ಶಿಶುವನು
ತಾಯಿ ಬಿಸುಟಳು ಗಂಗೆಯಲಿ ರಾ
ಧೇಯನಾದನು ರಾಧೆಯೆಂಬವಳೊಲಿದು ಸಾಕಿದರೆ |
ಅಯತಾಕ್ಷನು ಪರಶುರಾಮನೊ
ಳಾಯಧದ ಶ್ರಮಗಲಿತು ಬಳಿಕದು
ವಾಯುವಾದೊಡೆ ಬಂದನಾ ಗಜಪುರಿಗೆ ಕಲಿಕರ್ಣ || (೪೨)
ಬಂದು ಹಸ್ತಿನಪುರಿಗೆ ರಾಧಾ
ನಂದನನು ದುರ್ಯೋಧನನನೈ
ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ |
ಅಂದು ಮೊದಲಾಗವರ ಸಖ್ಯಕೆ
ಸಂದ ಕಾಣಿನು ಕರ್ಣ ಕುರುಪತಿ
ಗೊಂದೆ ಜೀವನವೊಂದೆ ಮನ ಮತವೊಂದೆ ಕೇಳೆಂದ || (೪೩)
ಬೇಟೆ ಕರ್ಣನ ಕೊಡೆ ಹಗಲಿರು
ಳಾಟ ಕರ್ಣನ ಕೊಡೆ ಷಡು ರಸ
ದೂಟ ಕರ್ಣನ ಕೊಡೆ ಶಾಸ್ತ್ರಾಭ್ಯಾಸವವ ಕೊಡೆ |
ತೋಟಿ ಮನದಲಿ ನಗೆಯ ಮಧುರದ
ನೋಟ ಕಣ್ಣಿನೊಳುಳಿದವರ ಕೂ
ಡಾಟಗಳು ತಾವಿಬ್ಬರೊಂದೆನಿಸಿದರು ಜಗವರಿಯೆ || (೪೪)
ಸುರಗಿ ಸಬಳ ಕಠಾರಿಯುಬ್ಬಣ
ಹರಿಗೆ ಹಿರಿಯುಬ್ಬಣವಡಾಯುಧ
ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳ ಚಯ |
ಪರಶು ಕಕ್ಕಡೆ ಮುಸಲ ಹಲ ಮು
ದ್ಗರ ಧನುರ್ದಂಡಾದಿ ಶಾಸ್ತ್ರೋ
ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ || (೪೫)
ಜನಪ ಕೇಳೈ ಭೀಮ ದುರ್ಯೋ
ಧನರು ಗದೆಯಲಿ ಮಿಗಿಲು ಕರ್ಣಾ
ರ್ಜುನರು ಧನುವಿನಲಧಿಕರಾದರು ನೃಪ ಕುಮಾರರಲಿ |
ತನತನಗೆ ಸರ್ವಾಯುಧಂಗಳ
ಲನಿಬರರಿದರು ಕೊಡೆ ಗುರುವಿನ
ಮನಕೆ ಹತ್ತೆಯವಾದನರ್ಜುನನಸ್ತ್ರ ಶಿಕ್ಷೆಯಲಿ || (೪೬)
ನೋಡಿ
ಸಂಪಾದಿಸಿಆದಿಪರ್ವ ಸಂಧಿಗಳು>: | ೧ | ೨ | ೩ | ೪ | ೫ | ೬ | ೭ | ೮ | ೯ | ೧೦ |
> | ೧೧ | ೧೨ | ೧೩ | ೧೪ | ೧೫ | ೧೬ | ೧೭ | ೧೮ | ೧೯ | ೨೦ |
ಪರ್ವಗಳು
ಸಂಪಾದಿಸಿಪರ್ವಗಳು: | ಆದಿಪರ್ವ | ಸಭಾಪರ್ವ | ಅರಣ್ಯಪರ್ವ | ವಿರಾಟಪರ್ವ | ಉದ್ಯೋಗಪರ್ವ | ಭೀಷ್ಮಪರ್ವ | ದ್ರೋಣಪರ್ವ | ಕರ್ಣಪರ್ವ | ಶಲ್ಯಪರ್ವ | ಗದಾಪರ್ವ |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ