ಜೈಮಿನಿ ಭಾರತ/ಇಪ್ಪತ್ತೆಂಟನೆಯ ಸಂಧಿ

ಇಪ್ಪತ್ತೆಂಟನೆಯ ಸಂಧಿ

ಸಂಪಾದಿಸಿ

ಪದ್ಯ:-:ಸೂಚನೆ:

ಸಂಪಾದಿಸಿ

ಸೂಚನೆ || ಇಂದ್ರಜಂ ತುರಗಂಗಳಂ ಕಾಣದಿರೆ ನಾರ |
ದಂ ದೃಷ್ಟಿಗೋಚರಕ್ಕೈದಿ ವಿಸ್ತರಿಸಿದಂ |
ಚಂದ್ರಹಾಸ ಕಥಾ ವಿಶೇಷಮಂ ಕರ್ಣ ಪೀಯೂಷಮಂ ಪ್ರೀತಿಯಿಂದೆ ||

ಪದವಿಭಾಗ-ಅರ್ಥ:
ಇಂದ್ರಜಂ ತುರಗಂಗಳಂ ಕಾಣದಿರೆ ನಾರದಂ ದೃಷ್ಟಿಗೋಚರಕ್ಕೆ ಐದಿ ವಿಸ್ತರಿಸಿದಂ ಚಂದ್ರಹಾಸ ಕಥಾ ವಿಶೇಷಮಂ ಕರ್ಣ ಪೀಯೂಷಮಂ ಪ್ರೀತಿಯಿಂದೆ=[ಅರ್ಜುನನು ಯಜ್ನಾಶ್ವಗಳು ಕಾಣದಿರಲು, ನಾರದನು ಜ್ಞಾನದೃಷ್ಟಿಯಿಂದ ನೋಡಿ, ಕರ್ಣಕ್ಕೆ ಅಮೃತವಾದ ಚಂದ್ರಹಾಸ ಕಥಾ ವಿಶೇಷವನ್ನು ಪ್ರೀತಿಯಿಂದೆ ವಿಸ್ತಾರವಾಗಿ ಹೇಳಿದನು.]
  • ತಾತ್ಪರ್ಯ:ಅರ್ಜುನನು ಯಜ್ನಾಶ್ವಗಳು ಕಾಣದಿರಲು, ನಾರದನು ಜ್ಞಾನದೃಷ್ಟಿಯಿಂದ ನೋಡಿ, ಕರ್ಣಕ್ಕೆ ಅಮೃತವಾದ ಚಂದ್ರಹಾಸ ಕಥಾ ವಿಶೇಷವನ್ನು ಪ್ರೀತಿಯಿಂದೆ ವಿಸ್ತಾರವಾಗಿ ಹೇಳಿದನು.
  • (ಪದ್ಯ:ಸೂಚನೆ:V -XII

ಪದ್ಯ:-::

ಸಂಪಾದಿಸಿ

ಭೂಮಿಪತಿ ಕೇಳ್ ಬಳಿಕ ಸೌರಾಷ್ಟ್ರದಿಂದೆ ಸು |
ತ್ರಾಮ ಸುತನಸುರಾರಿ ಸಹಿತ ಕುದುರೆಗಳ ಕೂ |
ಡಾ ಮಹಾನದವನುತ್ತರಿಸಿ ನಡೆತರುತಿರ್ದನಾ ಪಥದೊಳೈಕಿಲಿಂದೆ ||
ಹೇಮಂತ ಶೈಶಿರದ ಮಾಗಿ ಮಡಲಿಡೆ ತರಣಿ |
ಸೋಮನಂತಿರೆ ಬಿಸಿಲ್ ಬೆಳುದಿಂಗಳವೊಲಾಗೆ |
ತಾಮರಸ ರಾಜಿ ನಸಿದುವು ಕುಗ್ಗಿದುವು ಕೋಗಿಲೆಯ ಕಂಠಕಲರವಗಳು ||1||

ಪದವಿಭಾಗ-ಅರ್ಥ:
ಭೂಮಿಪತಿ ಕೇಳ್ ಬಳಿಕ ಸೌರಾಷ್ಟ್ರದಿಂದೆ ಸುತ್ರಾಮ ಸುತನಸುರಾರಿ ಸಹಿತ ಕುದುರೆಗಳ ಕೂಡಾ ಮಹಾನದವನು ಉತ್ತರಿಸಿ ನಡೆತರುತಿರ್ದನು ಆ ಪಥದೊಳೈಕಿಲಿಂದೆ =[ಭೂಮಿಪತಿ ಜನಮೇಜಯನೇ ಕೇಳು, ಬಳಿಕ ಸೌರಾಷ್ಟ್ರದಿಂದ ಅರ್ಜುನ ಅಸುರಾರಿ ಸಹಿತ ಕುದುರೆಗಳ ಜೊತೆ, ಮಹಾನದವನ್ನು ದಾಟಿ ಬರುತ್ತಿದ್ದನು. ಆ ದಾರಿಯಲ್ಲಿ ಹಿಮದಿಂದ ಕೂಡಿತ್ತು,||];;ಹೇಮಂತ ಶೈಶಿರದ ಮಾಗಿ ಮಡಲಿಡೆ ತರಣಿ |ಸೋಮನಂತಿರೆ ಬಿಸಿಲ್ ಬೆಳುದಿಂಗಳವೊಲಾಗೆ ತಾಮರಸ ರಾಜಿ ನಸಿದುವು ಕುಗ್ಗಿದುವು ಕೋಗಿಲೆಯ ಕಂಠಕಲರವಗಳು=[ಹೇಮಂತ ಶಿಶಿರ ಋತುಗಳ ಮಾಗಿ/ಚಳಿಯು ಆವರಿಸಲು, ಸೂರ್ಯನು ಚಂದ್ರನಂತೆ ಕಾಣಲು, ಬಿಸಿಲು ಬೆಳುದಿಂಗಳಂತೆ ತಣ್ಣಗಿರಲು, ಕಮಲದ ಹೂವುರಾಶಿ ಕುಗ್ಗಿದುವು, ಕೋಗಿಲೆಯ ಕಂಠಕಲರವಗಳುಡಿಮೆಯಾದವು.]
  • ತಾತ್ಪರ್ಯ:ಭೂಮಿಪತಿ ಕೇಳ್ ಬಳಿಕ ಸೌರಾಷ್ಟ್ರದಿಂದೆ ಸುತ್ರಾಮ ಸುತನಸುರಾರಿ ಸಹಿತ ಕುದುರೆಗಳ ಕೂಡಾ ಮಹಾನದವನು ಉತ್ತರಿಸಿ ನಡೆತರುತಿರ್ದನು ಆ ಪಥದೊಳೈಕಿಲಿಂದೆ =[ಭೂಮಿಪತಿ ಜನಮೇಜಯನೇ ಕೇಳು, ಬಳಿಕ ಸೌರಾಷ್ಟ್ರದಿಂದ ಅರ್ಜುನ ಅಸುರಾರಿ ಸಹಿತ ಕುದುರೆಗಳ ಜೊತೆ, ಮಹಾನದವನ್ನು ದಾಟಿ ಬರುತ್ತಿದ್ದನು. ಆ ದಾರಿಯಲ್ಲಿ ಹಿಮದಿಂದ ಕೂಡಿತ್ತು,||];;ಹೇಮಂತ ಶೈಶಿರದ ಮಾಗಿ ಮಡಲಿಡೆ ತರಣಿ |ಸೋಮನಂತಿರೆ ಬಿಸಿಲ್ ಬೆಳುದಿಂಗಳವೊಲಾಗೆ ತಾಮರಸ ರಾಜಿ ನಸಿದುವು ಕುಗ್ಗಿದುವು ಕೋಗಿಲೆಯ ಕಂಠಕಲರವಗಳು=[ಹೇಮಂತ ಶಿಶಿರ ಋತುಗಳ ಮಾಗಿ/ಚಳಿಯು ಆವರಿಸಲು, ಸೂರ್ಯನು ಚಂದ್ರನಂತೆ ಕಾಣಲು, ಬಿಸಿಲು ಬೆಳುದಿಂಗಳಂತೆ ತಣ್ಣಗಿರಲು, ಕಮಲದ ಹೂವುರಾಶಿ ಕುಗ್ಗಿದುವು, ಕೋಗಿಲೆಯ ಕಂಠಕಲರವಗಳುಡಿಮೆಯಾದವು.]
  • (ಪದ್ಯ:೧:) V

ಪದ್ಯ:-::

ಸಂಪಾದಿಸಿ

ಬಾಲೆಯರ ಕಡೆಗಣ್ಣ ಬಾಣದಿಂದಂಗಜಂ |
ರೋಲಂಬರಾಜಿ ಸೊಕ್ಕಾನೆಗಳ ಸೊಗಡಿಂದೆ |
ಕಾಲಮಂ ಕಳೆವೊಲಾದುದು ಪೂಗಳಿಲ್ಲದೆ ಮಸುಳ್ದುವಿನ ಶಶಿ ರುಚಿಗಳು ||
ಜ್ವಾಲೆ ಶೀತಳಮಾದುದಗ್ನಿಯಿಂ ಬಿಟ್ಟು ಕಾಂ |
ತಾಲಿಂಗನವನೆ ಬಯಸಿದುದು ಕಾಮುಕ ಜನಂ |
ಮೂಲೋಕಮಂ ಮಾಗಿ ನಡುಗಿಸಿತು ಮೇಣುಡುಗಿಸಿತು ಪೆರ್ಚಿದೈಕಿಲಿಂದೆ ||2||]

ಪದವಿಭಾಗ-ಅರ್ಥ:
ಬಾಲೆಯರ ಕಡೆಗಣ್ಣ ಬಾಣದಿಂದ ಅಂಗಜಂ ರೋಲಂಬರಾಜಿ (ರೋಲಂಬ:ಭ್ರಮರ,ಜೇನು, ರಾಜಿ:ಸಾಲು) ಸೊಕ್ಕಾನೆಗಳ ಸೊಗಡಿಂದೆ ಕಾಲಮಂ ಕಳೆವೊಲಾದುದು ಪೂಗಳಿಲ್ಲದೆ ಮಸುಳ್ದುವು (ಕುಗ್ಗಿದವು) ಇನ ಶಶಿ ರುಚಿಗಳು(ಕಾಂತಿ)=[ಅಂಗಜನಾದ ಮನ್ಮಥನು, ಹುಡುಗಿಯಯರ ಕಡೆಗಣ್ಣ ನೋಟದ ಬಾಣದಿಂದ, ಜೇನುಹುಳುಗಳ ಸಾಲುಗಳಿಂದ ಮದಗಜಗಳ ಸುವಾಸನೆಯಿಂದ, ಹೂವುಗಳಿಲ್ಲದೆ, ಕಾಲವನ್ನು ಕಳೆಯುವಂತಾಯಿತು; ಸೂರ್ಯ ಚಂದ್ರರ ಕಾಂತಿಗಳು ಕುಂದಿದವು,];; ಜ್ವಾಲೆ ಶೀತಳಮಾದುದು ಅಗ್ನಿಯಿಂ ಬಿಟ್ಟು ಕಾಂತಾ ಆಲಿಂಗನವನೆ ಬಯಸಿದುದು ಕಾಮುಕ ಜನಂ ಮೂಲೋಕಮಂ ಮಾಗಿ ನಡುಗಿಸಿತು ಮೇಣ್ ಉಡುಗಿಸಿತು ಪೆರ್ಚಿದ ಐಕಿಲಿಂದೆ(ಐಕಲು:ಹಿಮ)=[ಬೆಂಕಿ ತಣ್ಣಗಾಯಿತು, ಕಾಮುಕ ಜನರು ಬೆಂಕಿಯನ್ನು ಬಿಟ್ಟು ಕಾಂತೆಯರ ಆಲಿಂಗನವನ್ನು ಬಯಸಿದರು, ಮೂರು ಲೋಕವನ್ನೂ ಮಾಗಿ/ಚಳಿಗಾಲ ಆವರಿಸಿ ನಡುಗಿಸಿತು. ಮತ್ತೆ ಹೆಚ್ಚಿದ ಹಿಮಬಿದ್ದು ದೇಹವನ್ನು ಉಡುಗಿಸಿತು/ಕುಗ್ಗಿಸಿತು. ಹೀಗೆ ಚಳಿಗಾಲ ಬಂತು.]
  • ತಾತ್ಪರ್ಯ:ಅಂಗಜನಾದ ಮನ್ಮಥನು, ಹುಡುಗಿಯಯರ ಕಡೆಗಣ್ಣ ನೋಟದ ಬಾಣದಿಂದ, ಜೇನುಹುಳುಗಳ ಸಾಲುಗಳಿಂದ ಮದಗಜಗಳ ಸುವಾಸನೆಯಿಂದ, ಹೂವುಗಳಿಲ್ಲದೆ, ಕಾಲವನ್ನು ಕಳೆಯುವಂತಾಯಿತು; ಸೂರ್ಯ ಚಂದ್ರರ ಕಾಂತಿಗಳು ಕುಂದಿದವು, ಬೆಂಕಿ ತಣ್ಣಗಾಯಿತು, ಕಾಮುಕ ಜನರು ಬೆಂಕಿಯನ್ನು ಬಿಟ್ಟು ಕಾಂತೆಯರ ಆಲಿಂಗನವನ್ನು ಬಯಸಿದರು, ಮೂರು ಲೋಕವನ್ನೂ ಮಾಗಿ/ಚಳಿಗಾಲ ಆವರಿಸಿ ನಡುಗಿಸಿತು. ಮತ್ತೆ ಹೆಚ್ಚಿದ ಹಿಮಬಿದ್ದು ದೇಹವನ್ನು ಉಡುಗಿಸಿತು/ಕುಗ್ಗಿಸಿತು. ಹೀಗೆ ಚಳಿಗಾಲ ಬಂತು.
  • (ಪದ್ಯ:೨:)

ಪದ್ಯ:-::

ಸಂಪಾದಿಸಿ

ಉತ್ತಮಾಂಗದ ಗಂಗೆಯಂ ಸಾಗರಕೆ ಕಳುಹಿ |
ಪೊತ್ತ ಶಶಿಕಲೆಯನಂಬರಕಿಟ್ಟು ತನ್ನ ನಡು |
ನೆತ್ತಿಯೊಳ್ ಕಣ್ಣತೆರೆದಗ್ನಿಯಂ (ನೆತ್ತಿಗಣ್ಣೊಳ್ಕಯೊಳಗ್ನಿಯಂ*) ತಾಳ್ದುದಲ್ಲದೆ ಕಾಂತೆಗರೆಮೆಯ್ಯನು ||
ತೆತ್ತು ಬಿಡದಪ್ಪಿಕೊಂಡಿರ್ಪನೀಶ್ವರನೆನಲ್ |
ಮತ್ತೆ ಕಾಮಿನಿಯರ ಕುಚಾಲಿಂಗನವ ನುಳಿದೊ |
ಡೆತ್ತಣದು ಹಿಮಕೆ ಭೇಷಜಮೆಂದು ವಿರಹಿಗಳ್ ಕೂರ್ಪರನರಸುತಿರ್ದರು ||3||

  • (ನೆತ್ತಿಗಣ್ಣ ಒಳ್ಕಯೊಳ(ಒಳಗಿನ) ಅಗ್ನಿಯಂ)
ಪದವಿಭಾಗ-ಅರ್ಥ:
ಉತ್ತಮಾಂಗದ (ತಲೆ) ಗಂಗೆಯಂ ಸಾಗರಕೆ ಕಳುಹಿ ಪೊತ್ತ ಶಶಿಕಲೆಯನು ಅಂಬರಕೆ ಇಟ್ಟು ತನ್ನ ನಡು ನೆತ್ತಿಯೊಳ್ ಕಣ್ಣ ತೆರೆದು ಅಗ್ನಿಯಂ ತಾಳ್ದುದು=[ಈ ಚಳಿಗಾಲ ಬಂದಾಗ; ತಲೆಯ ಮೇಲಿದ್ದ ತಣ್ಣನೆಯ ಗಂಗೆಯನ್ನು ಸಾಗರಕ್ಕೆ ಕಳುಹಿಸಿ, ತಲೆಯ ಮೇಲೆ ಹೊತ್ತ ತಣ್ಣನೆಯ ಚಂದ್ರನನ್ನು ಆಕಾಶದಲ್ಲಿ ಇಟ್ಟು, ತನ್ನ ನಡು ಹಣೆಯಲ್ಲಿದ್ದ ಕಣ್ಣನ್ನು ತೆರೆದು ಅದರ ಅಗ್ನಿಯನ್ನು ಬಿಚ್ಚಗೆ ಕಾಸಿಕೊಂಡು];; ಅಲ್ಲದೆ ಕಾಂತೆಗೆ ಅರೆ ಮೆಯ್ಯನು ತೆತ್ತು ಬಿಡದೆ ಅಪ್ಪಿಕೊಂಡಿರ್ಪನು ಈಶ್ವರನೆನಲ್ ಮತ್ತೆ ಕಾಮಿನಿಯರ ಕುಚಾಲಿಂಗನವನು ಉಳಿದೊಡೆ ಎತ್ತಣದು ಹಿಮಕೆ ಭೇಷಜಮೆಂದು (ಔಷಧಿ) ವಿರಹಿಗಳ್ ಕೂರ್ಪರನು (ಕೂರ್ಮೆಯುಳ್ಳವರು-ಪ್ರಿಯರನ್ನು) ಅರಸುತಿರ್ದರು=[(ಅಲ್ಲದೆ) ಇಷ್ಟು ಬೆಚ್ಚಗೆ ಮಾಡಿಕೊಂಡರೂ ಸಾಲದೆ, ಕಾಂತೆ ಪಾರ್ವತಿಗೆ ಅರ್ಧ ಮೆಯ್ಯನು ಕೊಟ್ಟು, ಮತ್ತೆ ಬಿಡದೆ ಅಪ್ಪಿಕೊಂಡಿರುವನು ಈಶ್ವರನು ಎನ್ನುವಂತೆ ಇತ್ತು ಚಳಿಗಾಲ; ಮತ್ತೆ ಹೆಂಗಸರ ಕುಚಾಲಿಂಗನವನ್ನು ಬಿಟ್ಟರೆ ಮತ್ತೆ ಯಾವುದೂ ಇಲ್ಲ ಚಳಿಗೆ ಔಷಧವೆಂದು, ವಿರಹಿಗಳು ಪ್ರಿಯರನ್ನು ಹುಡುಕುತ್ತಿದ್ದರು].
  • ತಾತ್ಪರ್ಯ:ಈ ಚಳಿಗಾಲ ಬಂದಾಗ; ತಲೆಯ ಮೇಲಿದ್ದ ತಣ್ಣನೆಯ ಗಂಗೆಯನ್ನು ಸಾಗರಕ್ಕೆ ಕಳುಹಿಸಿ, ತಲೆಯ ಮೇಲೆ ಹೊತ್ತ ತಣ್ಣನೆಯ ಚಂದ್ರನನ್ನು ಆಕಾಶದಲ್ಲಿ ಇಟ್ಟು, ತನ್ನ ನಡು ಹಣೆಯಲ್ಲಿದ್ದ ಕಣ್ಣನ್ನು ತೆರೆದು ಅದರ ಅಗ್ನಿಯನ್ನು ಬೆಚ್ಚಗೆ ಕಾಸಿಕೊಂಡು, (ಅಲ್ಲದೆ) ಇಷ್ಟು ಬೆಚ್ಚಗೆ ಮಾಡಿಕೊಂಡರೂ ಸಾಲದೆ, ಕಾಂತೆ ಪಾರ್ವತಿಗೆ ಅರ್ಧ ಮೆಯ್ಯನು ಕೊಟ್ಟು, ಮತ್ತೆ ಬಿಡದೆ ಅವಳನ್ನು ಅಪ್ಪಿಕೊಂಡಿರುವನು ಈಶ್ವರನು ಎನ್ನುವಂತೆ ಇತ್ತು ಚಳಿಗಾಲ; ಮತ್ತೆ ಹೆಂಗಸರ ಕುಚಾಲಿಂಗನವನ್ನು ಬಿಟ್ಟರೆ ಮತ್ತೆ ಯಾವುದೂ ಇಲ್ಲ ಚಳಿಗೆ ಔಷಧವೆಂದು, ವಿರಹಿಗಳು ಪ್ರಿಯರನ್ನು ಹುಡುಕುತ್ತಿದ್ದರು].
  • (ಪದ್ಯ:೩:)

ಪದ್ಯ:-::

ಸಂಪಾದಿಸಿ

ನೆರೆ ಲೋಭಿ ವಿತ್ತಮಂ ಸುಯ್ದಾನಮಂ ಮಾಳ್ಪ |
ತೆರದಿಂದೆ ಕಾಮಿನೀ ಪ್ರಣಯಮಂ ನಂಬಿರ್ಪ |
ನರಿವನಂತಿಡಿದ ಶೈಶಿರದ ಶೀತಕೆ ಪಗಲಿರುಳ್‍ತಮ್ಮ ಗೂಡುಗಳನು ||
ಪೊರಮಟ್ಟು ಪಾರಲೊಲ್ಲದೆ ವಾಯಸ ಪ್ರತತಿ |
ಗರಿಗಳಂ ಪೊದಿಸಿ ಮಗ್ಗುಲೊಳಿಟ್ಟು ಕೋಗಿಲೆಯ |
ಮರಿಗಳಂ ಮೆಯ್ಯೊಳ್ ಪುದುಗಿಕೊಂಡು ಮರುಕದಿಂದೈದೆ ಪಾಲಿಸುತಿರ್ದುವು ||4||

ಪದವಿಭಾಗ-ಅರ್ಥ:
ನೆರೆ ಲೋಭಿ ವಿತ್ತಮಂ ಸುಯ್ದಾನಮಂ ಮಾಳ್ಪ ತೆರದಿಂದೆ ಕಾಮಿನೀ ಪ್ರಣಯಮಂ ನಂಬಿರ್ಪನ ಅರಿವನಂತೆ ಇಡಿದ ಶೈಶಿರದ ಶೀತಕೆ ಪಗಲಿರುಳ್‍ ತಮ್ಮ ಗೂಡುಗಳನು ಪೊರಮಟ್ಟು ಪಾರಲೊಲ್ಲದೆ=[ಬಹಳ ಜಿಪುಣನು ಹಣವನ್ನು ಸಂಕಟದಿಂದ ಬಿಸುಸುಯ್ಯುತ್ತಾ ದಾನವನ್ನು ಮಾಡುವ ರೀತಿಯಲ್ಲಿ, ಕಾಮಿನಿಯರ ಪ್ರಣಯವನ್ನು ನಂಬಿರುವವನ ತಿಳುವಳಿಕೆಯಂತೆ, ಶಿಶಿರಕಾಲದ ಅತಿಯಾದ ಶೀತಕ್ಕೆ ಹಗಲಿರುಳೂ ತಮ್ಮ ಗೂಡುಗಳನ್ನು ಬಿಟ್ಟು ಹೊರಗೆ ಹಾರಲು ಇಷ್ಟಪಡದೆ];; ವಾಯಸ ಪ್ರತತಿ ಗರಿಗಳಂ ಪೊದಿಸಿ ಮಗ್ಗುಲೊಳ್ ಇಟ್ಟು ಕೋಗಿಲೆಯ ಮರಿಗಳಂ ಮೆಯ್ಯೊಳ್ ಪುದುಗಿಕೊಂಡು ಮರುಕದಿಂದ ಐದೆ ಪಾಲಿಸುತಿರ್ದುವು=[ಕಾಗೆಗಳ ಸಮೂಹ ಗರಿಗಳನ್ನು ಮಗ್ಗುಲಲ್ಲಿ ಹೊದಿಸಿಟ್ಟು ತನ್ನ ಗೂಡಿನಲ್ಲಿರುವ ಕೋಗಿಲೆಯ ಮರಿಗಳನ್ನು ಮಯ್ಯಲ್ಲಿ ಹುದುಗಿಸಿಕೊಂಡು ಪ್ರೀತಿಯಿಂದ ಇದ್ದು ಪಾಲಿಸುತಿದ್ದವು].
  • ತಾತ್ಪರ್ಯ:ಬಹಳ ಜಿಪುಣನು ಹಣವನ್ನು ಸಂಕಟದಿಂದ ಬಿಸುಸುಯ್ಯುತ್ತಾ ದಾನವನ್ನು ಮಾಡುವ ರೀತಿಯಲ್ಲಿ, ಕಾಮಿನಿಯರ ಪ್ರಣಯವನ್ನು ನಂಬಿರುವವನ ತಿಳುವಳಿಕೆಯಂತೆ, ಶಿಶಿರಕಾಲದ ಅತಿಯಾದ ಶೀತಕ್ಕೆ ಹಗಲಿರುಳೂ ತಮ್ಮ ಗೂಡುಗಳನ್ನು ಬಿಟ್ಟು ಹೊರಗೆ ಹಾರಲು ಇಷ್ಟಪಡದೆ ಕಾಗೆಗಳ ಸಮೂಹ ಗರಿಗಳನ್ನು ಮಗ್ಗುಲಲ್ಲಿ ಹೊದಿಸಿಟ್ಟು ತನ್ನ ಗೂಡಿನಲ್ಲಿರುವ ಕೋಗಿಲೆಯ ಮರಿಗಳನ್ನು ಮಯ್ಯಲ್ಲಿ ಹುದುಗಿಸಿಕೊಂಡು ಪ್ರೀತಿಯಿಂದ ಆ ಮರಿಗಳು ಅವನ್ನು ಪಾಲಿಸುತಿದ್ದವು. {{ಇಲ್ಲಿ ಉಪಮಾನ ಉಪಮೇಯ ಸ್ಪಷ್ಟವಿಲ್ಲ; ಸಂಕಟದಿಂದ ಕೊಡುವ ದಾನ ಪ್ರಯೋಜನವಿಲ್ಲದ್ದು, ಹಾಗೆಯೇ ಚಳಿಯಿಂದ ಪಾರಾಗಲು ಕಾಮಿನಿಯರ ಪ್ರಣಯ ನಿರೀಕ್ಷೆ ಪ್ರಯೋಜನವಿಲ್ಲದ್ದು, ಕಾಗೆಯು ಚಳಿಗಾಗಿ ಮರಿಗೆ ಕಾವುಕೊಡುವುದು ಪ್ರಯೋಜನವಿಲ್ಲದ್ದು, ಕಾರಣ ಅವುಅದರ ಮರಿ ಅಲ್ಲ, ಕೋಗಿಲೆಯ ಮರಿಗಳು; ಕವಿ ಇಲ್ಲಿ ಏನು ಹೇಳಲು ಉದ್ದೇಶಿಸಿದ್ದಾನೆಂಬುದ ಸ್ಪಷ್ಟವಿಲ್ಲ}}
  • (ಪದ್ಯ:೪:)

ಪದ್ಯ:-::

ಸಂಪಾದಿಸಿ

ಭುವನಮಂ ತೀವಿರ್ದ ಹಿಮಮುಮಂ ತಮಮುಮಂ |
ತವಿಸುವ ತವಕದಿಂದಮವಗಡಿಸಿ ಜವಗೆಡಿಸಿ |
ಬವಣೆಗೊಂಡಭ್ರದೊಳ್‍ತೊಳಲುತ್ತೆ ಬಳಲುತ್ತೆ ಬಂದೊಡಂ ಮತ್ತೆ ಬಿಡದೆ ||
ಕವಿಯಲ್ ಪ್ರತಾಪದೇಳಿಗೆ ನಂದಿ ಮಿಗೆ ಕುಂದಿ |
ರವಿ ತಣ್ಣಗಾದನೆನೆ ಕಾಣಿಸಿತು ಮಾಣಿಸಿತು |
ತವೆ ತಕ್ಕೆಯೊಳ್ ನೆರೆಯ ಬಲ್ಲರೊಳ್ ನಲ್ಲರೂಳ್‍ಮುನಿಸನಾ ಶೈಶಿರದೊಳು ||5||

ಪದವಿಭಾಗ-ಅರ್ಥ:
ಭುವನಮಂ ತೀವಿರ್ದ ಹಿಮಮುಮಂ ತಮಮುಮಂ ತವಿಸುವ ತವಕದಿಂದಮ್ ಅವಗಡಿಸಿ ಜವಗೆಡಿಸಿ ಬವಣೆಗೊಂಡ ಅಭ್ರದೊಳ್‍ ತೊಳಲುತ್ತೆ ಬಳಲುತ್ತೆ ಬಂದೊಡಂ ಮತ್ತೆ ಬಿಡದೆ=[ಭೂಮಿಯನ್ನು ತುಂಬಿದ ಹಿಮವನ್ನು/ಚಳಿಯನ್ನು, ಕತ್ತಲೆಯನ್ನು, ಪರಿಹರಿಸುವ, ತವಕದಿಂದ ತೊಂದರೆಕೊಟ್ಟು, ವೇಗ/ಶಕ್ತಿ ಕುಂದಿಸಿ, ಆಯಾಸಗೊಂಡು ಆಕಾಶದಲ್ಲಿ ತೊಳಲುತ್ತಾ ಬಳಲುತ್ತಾ ಬಂದಾಗ ಮತ್ತೆ ಬಿಡದೆ ];; ಕವಿಯಲ್ ಪ್ರತಾಪದ ಏಳಿಗೆ ನಂದಿ ಮಿಗೆ ಕುಂದಿ ರವಿ ತಣ್ಣಗಾದನು ಎನೆ ಕಾಣಿಸಿತು ಮಾಣಿಸಿತು ತವೆ ತಕ್ಕೆಯೊಳ್ ನೆರೆಯ (ಜೊತೆಸೇರು) ಬಲ್ಲರೊಳ್ ನಲ್ಲರೂಳ್‍ ಮುನಿಸನು ಆ ಶೈಶಿರದೊಳು=[ಹಿಮ-ಚಳಿ/ಕತ್ತಲೆ ಕವಿಯಲು ತನ್ನ ಶೌರ್ಯದ ಬೆಳವಣಿಗೆ ಹೊಗಿ ಮತ್ತೂ ಶಕ್ತಿಕುಂದಿ ರವಿಯು ತಣ್ಣಗಾದನು ಎನ್ನುವಂತೆ ಕಾಣಿಸಿತು. ಆ ಶೈಶಿರದ ಚಳಿಗಾಲದಲ್ಲಿ ಒಬ್ಬರಿಗೊಬ್ಬರು ಸೇರುಲು ಬಲ್ಲವರಲ್ಲಿ, ನಲ್ಲರಲ್ಲಿ, ಅತಿಶಯವಾಗಿ ಅಪ್ಪಿಕೊಂಡವರಲ್ಲಿ ಪರಸ್ಪರ ಇದ್ದ ಸಿಟ್ಟನ್ನು ಹೊಗಲಾಡಿಸಿತು.]
  • ತಾತ್ಪರ್ಯ:ಭೂಮಿಯನ್ನು ತುಂಬಿದ ಹಿಮವನ್ನು/ಚಳಿಯನ್ನು, ಕತ್ತಲೆಯನ್ನು, ಪರಿಹರಿಸುವ, ತವಕದಿಂದ ತೊಂದರೆಕೊಟ್ಟು, ವೇಗ/ಶಕ್ತಿ ಕುಂದಿಸಿ, ಆಯಾಸಗೊಂಡು ಆಕಾಶದಲ್ಲಿ ತೊಳಲುತ್ತಾ ಬಳಲುತ್ತಾ ಬಂದಾಗ ಮತ್ತೆ ಬಿಡದೆ ಹಿಮ-ಚಳಿ/ಕತ್ತಲೆ ಕವಿಯಲು ತನ್ನ ಶೌರ್ಯದ ಬೆಳವಣಿಗೆ ಹೊಗಿ ಮತ್ತೂ ಶಕ್ತಿಕುಂದಿ ರವಿಯು ತಣ್ಣಗಾದನು ಎನ್ನುವಂತೆ ಕಾಣಿಸಿತು. ಆ ಶೈಶಿರದ ಚಳಿಗಾಲದಲ್ಲಿ ಒಬ್ಬರಿಗೊಬ್ಬರು ಸೇರುಲು ಬಲ್ಲವರಲ್ಲಿ, ನಲ್ಲರಲ್ಲಿ, ಅತಿಶಯವಾಗಿ ಅಪ್ಪಿಕೊಂಡವರಲ್ಲಿ ಪರಸ್ಪರ ಇದ್ದ ಸಿಟ್ಟನ್ನು ಹೊಗಲಾಡಿಸಿತು.
  • (ಪದ್ಯ:೫:)

ಪದ್ಯ:-::

ಸಂಪಾದಿಸಿ

ಉರ್ವೀಶ ಕೇಳ್‍ಬಳಿಕ ಸೇನಾ ಸಮಗ್ರದಿಂ |
ಗೀರ್ವಾಣ ಪತಿ ನಂದನಂ ಬಹಳದೇಶ ವನ |
ಪರ್ವತ ನದೀ ನಂದಗಳನುತ್ತರಿಸಿ ಕುದುರೆಗಳ ಹಿಂದುಗೊಂಡು ಬರಲು ||
ತರ್ವಾಯೊಳವು ಹಾಯ್ದು ವನಿಲ ಜವದಿಂ ಪಡೆಯೊ |
ಳೊರ್ವರುಮುರಿಯದಂತೆ ಕುಂತಳ ನಗರಕೆ ಬಲ |
ಗರ್ವಿತಂ ಚಂದ್ರಹಾಸಾಖ್ಯನರಸಲ್ಲಿಗವನಾ ಹರಿಗಳಂ ತಡೆದನು ||6||

ಪದವಿಭಾಗ-ಅರ್ಥ:
ಉರ್ವೀಶ ಕೇಳ್‍ ಬಳಿಕ ಸೇನಾ ಸಮಗ್ರದಿಂ ಗೀರ್ವಾಣಪತಿ ನಂದನಂ (ಇಂದ್ರನ ಮಗ) ಬಹಳದೇಶ ವನ ಪರ್ವತ ನದೀ ನದಂಗಳನು (ಪುರುಷ ಹೆಸರಿನ ನದಿಗಳು) ಉತ್ತರಿಸಿ ಕುದುರೆಗಳ ಹಿಂದುಗೊಂಡು ಬರಲು=[ರಾಜನೇ ಕೇಳ್ಉ, ಬಳಿಕ ಸಮಗ್ರ ಸೇನೆ ಸಹಿತ, ಅರ್ಜುನನು ಬಹಳ ದೇಶ ವನ ಪರ್ವತ ನದಿ ನದಗಳನ್ನು ದಾಟಿ ಕುದುರೆಗಳನ್ನು ಹಿಂಬಾಲಿಸಿಕೊಂಡು ಬರಲು ];; ತರ್ವಾಯ ಒಳವು ಹಾಯ್ದುವು ಅನಿಲಜವದಿಂ ಪಡೆಯೊಳು ಒರ್ವರುಮಂ ಅರಿಯದಂತೆ ಕುಂತಳ ನಗರಕೆ ಬಲಗರ್ವಿತಂ ಚಂದ್ರಹಾಸಾಖ್ಯನು ಅರಸ ಅಲ್ಲಿಗೆ ಅವನು ಆ ಹರಿಗಳಂ ತಡೆದನು=[ತರುವಾಯ ಅನೇಕರಾಜ್ಯಕ್ಕೆ ಒಳಪಟ್ಟ ಪ್ರದೇಶವನ್ನು ಹಾದು ವಾಯುವೇಗದಿಂದ ಸೈನ್ಯದಲ್ಲಿ ಒಬ್ಬರೂ ಅರಿಯದಂತೆ ಕುಂತಳ ನಗರಕ್ಕೆ ಹೋದವು. ಅಲ್ಲಿಗೆ ಬಲಾಢ್ಯನಾದ ಚಂದ್ರಹಾಸ ಹೆಸರಿನವನು ಅರಸನು. ಅವನು ಆ ಕುದುರೆಗಳನ್ನು ತಡೆದನು].
  • ತಾತ್ಪರ್ಯ:ರಾಜನೇ ಕೇಳು, ಬಳಿಕ ಸಮಗ್ರ ಸೇನೆ ಸಹಿತ, ಅರ್ಜುನನು ಬಹಳ ದೇಶ ವನ ಪರ್ವತ ನದಿ ನದಗಳನ್ನು ದಾಟಿ ಕುದುರೆಗಳನ್ನು ಹಿಂಬಾಲಿಸಿಕೊಂಡು ಬರಲು, ತರುವಾಯ ಅನೇಕರಾಜ್ಯಕ್ಕೆ ಒಳಪಟ್ಟ ಪ್ರದೇಶವನ್ನು ಹಾದು ವಾಯುವೇಗದಿಂದ ಸೈನ್ಯದಲ್ಲಿ ಒಬ್ಬರೂ ಅರಿಯದಂತೆ ಕುಂತಳ ನಗರಕ್ಕೆ ಹೋದವು. ಅಲ್ಲಿಗೆ ಬಲಾಢ್ಯನಾದ ಚಂದ್ರಹಾಸ ಹೆಸರಿನವನು ಅರಸನು. ಅವನು ಆ ಕುದುರೆಗಳನ್ನು ತಡೆದನು].
  • (ಪದ್ಯ:೬:)

ಪದ್ಯ:-::

ಸಂಪಾದಿಸಿ

ಬೆಂಗಾವಲಾಗಿರ್ದ ಪಟುಭಟರ್ ಮೀರಿದ ತು |
ರಂಗಯುಗಮಂ ಕಾಣದೈತಂದು ಸಿತವಾಹ |
ನಂಗೆ ಬಿನ್ನೈಸಿದರ್‍ಜೀಯ ಪೋದುವು ಹರಿಗಳರಸಿದೊಡೆ ಗೋಚರಿಸವು ||
ಮುಂಗೈವ ಕಜ್ಜಮಂ ಬೆಸಸೆನೆ ಧನಂಜಯಂ |
ಮಂಗಳಾತ್ಮಕನ ಮೊಗನೋಡಿ ಚಿಂತಿಸುವಿನಂ |
ಕಂಗೊಳಿಸಿತಾಗಸದೊಳೊಂದು ಬೆಳಗೆರಡನೆಯ ದಿನಮಣಿಯ ತೇಜದಂತೆ ||7||

ಪದವಿಭಾಗ-ಅರ್ಥ:
ಬೆಂಗಾವಲಾಗಿರ್ದ ಪಟುಭಟರ್ ಮೀರಿದ ತುರಂಗಯುಗಮಂ ಕಾಣದೆ ಐತಂದು ಸಿತವಾಹ ನಂಗೆ ಬಿನ್ನೈಸಿದರ್‍ ಜೀಯ ಪೋದುವು ಹರಿಗಳು ಅರಸಿದೊಡೆ ಗೋಚರಿಸವು=[ಬೆಂಗಾವಲಾಗಿ ಇದ್ದ ವೀರ ಸೈನಿಕರು ಕಣ್ಣತಪ್ಪಿಸಿ ಹೋದ ಎರಡೂ ತುರಗಗಳನ್ನು ಕಾಣದೆ ಬಂದು ಅರ್ಜುನನಿಗೆ ಬಿನ್ನಹ ಮಾಡಿದರು,'ಜೀಯ ಕುದುರೆಗಳು ಓಡಿ ಹೋದುವು; ಹಡುಕಿದರೆ ಕಾಣಲಿಲ್ಲ.'];; ಮುಂಗೈವ ಕಜ್ಜಮಂ ಬೆಸಸು ಎನೆ ಧನಂಜಯಂ ಮಂಗಳಾತ್ಮಕನ ಮೊಗನೋಡಿ ಚಿಂತಿಸುವಿನಂ ಕಂಗೊಳಿಸಿತು ಆಗಸದೊಳೊಂದು ಬೆಳಕು(ಗು) ಎರಡನೆಯ ದಿನಮಣಿಯ ತೇಜದಂತೆ=[ಮುಂದೆ ಏನು ಮಾಡಬೇಕೆಂದು ಹೇಳು ಎನ್ನಲು, ಧನಂಜಯನು ಕೃಷ್ನನ ಮುಖನೋಡಿ ಚಿಂತಿಯನಾಗಲು, ಆಕಾಶದಲ್ಲಿ ಎರಡನೆಯ ಸೂರ್ಯನ ತೇಜಸ್ಸಿನಂತೆ ಬೆಳಕು ಕಂಗೊಳಿಸಿತು].
  • ತಾತ್ಪರ್ಯ:ಬೆಂಗಾವಲಾಗಿ ಇದ್ದ ವೀರ ಸೈನಿಕರು ಕಣ್ಣತಪ್ಪಿಸಿ ಹೋದ ಎರಡೂ ತುರಗಗಳನ್ನು ಕಾಣದೆ ಬಂದು ಅರ್ಜುನನಿಗೆ ಬಿನ್ನಹ ಮಾಡಿದರು,'ಜೀಯ ಕುದುರೆಗಳು ಓಡಿ ಹೋದುವು; ಹಡುಕಿದರೆ ಕಾಣಲಿಲ್ಲ. 'ಮುಂದೆ ಏನು ಮಾಡಬೇಕೆಂದು ಹೇಳು ಎನ್ನಲು, ಧನಂಜಯನು ಕೃಷ್ನನ ಮುಖನೋಡಿ ಚಿಂತಿತನಾಗಲು, ಆಕಾಶದಲ್ಲಿ ಎರಡನೆಯ ಸೂರ್ಯನ ತೇಜಸ್ಸಿನಂತೆ ಬೆಳಕು ಕಂಗೊಳಿಸಿತು.
  • (ಪದ್ಯ:೭:)

ಪದ್ಯ:-::

ಸಂಪಾದಿಸಿ

ಕ್ರೀಡೆಯಿಂ ಮಾಧವನುತ ಪ್ರಸಂಗವನುಂಟು |
ಮಾಡುತ್ತೆ ಸುಮನೋನುರಾಗದಿಂದಿರದೆ ನಲಿ |
ದಾಡುತ್ತೆ ಕುಜವಂಶ ಭೇದನಂಗೆಯ್ಯುತ್ತ ಸಾಮಜೋಲ್ಲಾಸದಿಂದೆ ||
ಪಾಡುತ್ತೆ ವಿಷ್ಣುಪದ ಕಮಲ ಮಧುಕರನೆಂಬ |
ರೂಢಿಯಂ ನಿಜವಾಗಿ ಕಾಣಿಸುವ ತೆರದಿಂದೆ |
ನೋಡುವರ ಕಣ್ಗೆ ಗೋಚರಿಸಿದಂ ನಾರದ ಮುನೀಶ್ವರಂ ಬಾಂದಳದೊಳು ||8||

ಪದವಿಭಾಗ-ಅರ್ಥ:
ಕ್ರೀಡೆಯಿಂ (ಉಲ್ಲಾಸದಿಂದ) ಮಾಧವ ನುತ ಪ್ರಸಂಗವನು (ಕಥೆ-ಗೀತೆ) ಉಂಟು ಮಾಡುತ್ತೆ ಸುಮನೋನುರಾಗದಿಂದ ಇರದೆ (ಸುಮ್ಮನಿರದೆ: ಸದಾ) ನಲಿದಾಡುತ್ತೆ ಕುಜವಂಶ ಭೇದನಂ (ಬೆರುಳಿನಿಂದ ಮೀಟು) ಗೆಯ್ಯುತ್ತ ಸಾಮಜ (ಆನೆ) ಉಲ್ಲಾಸದಿಂದೆ=[ ಮಾಧವನನ್ನು ಹೊಗಳುವ ಕಥನಗೀತೆಗಳನ್ನು ಉಲ್ಲಾಸದಿಂದ ವೀಣೆಯಲ್ಲಿ ಉಂಟುಮಾಡುತ್ತ (ನುಡಿಸುತ್ತ), ಮನಸ್ಸಿಗೆ ಸುಖಕೊಡುವ ರಾಗದಿಂದ ಸದಾ ನಲಿದಾಡುತ್ತ ಮರದವೀಣೆಯನ್ನು ಮೀಟುತ್ತಾ ಮದಗಜದ ಉಲ್ಲಾಸದಿಂದ ];; ಪಾಡುತ್ತೆ ವಿಷ್ಣುಪದ ಕಮಲ ಮಧುಕರನೆಂಬ ರೂಢಿಯಂ ನಿಜವಾಗಿ ಕಾಣಿಸುವ ತೆರದಿಂದೆ ನೋಡುವರ ಕಣ್ಗೆ ಗೋಚರಿಸಿದಂ ನಾರದ ಮುನೀಶ್ವರಂ ಬಾಂದಳದೊಳು=[ಹಾಡುತ್ತ ವಿಷ್ಣುಪದವೆಂಬ ಕಮಲದಲ್ಲಿರವ ಜೇನುಯೆಂಬ ರೂಢಿಯುಮಾತು ನಿಜವಾಗಿ ಕಾಣಿಸುವ ತೆರದಿಂದ ನೋಡುವರ ಕಣ್ಣಿಗೆ ಆಕಾಶದಲ್ಲಿ ಗೋಚರಿಸಿದನು - ನಾರದ ಮುನೀಶ್ವರನು!].
  • ತಾತ್ಪರ್ಯ: ಮಾಧವನನ್ನು ಹೊಗಳುವ ಕಥನಗೀತೆಗಳನ್ನು ಉಲ್ಲಾಸದಿಂದ ವೀಣೆಯಲ್ಲಿ ಉಂಟುಮಾಡುತ್ತ (ನುಡಿಸುತ್ತ), ಮನಸ್ಸಿಗೆ ಸುಖಕೊಡುವ ರಾಗದಿಂದ ಸದಾ ನಲಿದಾಡುತ್ತ ಮರದವೀಣೆಯನ್ನು ಮೀಟುತ್ತಾ ಮದಗಜದ ಉಲ್ಲಾಸದಿಂದ ಹಾಡುತ್ತ ವಿಷ್ಣುಪದವೆಂಬ ಕಮಲದಲ್ಲಿರವ ದುಂಬಿಯೆಂಬ ರೂಢಿಯುಮಾತು ನಿಜವಾಗಿ ಕಾಣಿಸುವ ತೆರದಿಂದ ನೋಡುವರ ಕಣ್ಣಿಗೆ ಆಕಾಶದಲ್ಲಿ ಗೋಚರಿಸಿದನು - ನಾರದ ಮುನೀಶ್ವರನು!].
  • (ಪದ್ಯ:೮:)

ಪದ್ಯ:-::

ಸಂಪಾದಿಸಿ

ಕೆಂಜೆಡೆಯ ಸುಲಿಪಲ್ಲ ಚೀರ ಕೃಷ್ಣಾಜಿನದ |
ಮಂಜುಲ ತುಲಸಿಯ ದಂಡೆಯ ಕೊರಳ ತಾವಡದ |
ರಂಜಿಸುವ ಪದ್ಮಾಕ್ಷಗಳ ಲಲಿತ ಮೇಖಲೆಯ ಚಾರುತರದುಪವೀತದ ||
ಕಂಜನಾಭ ಧ್ಯಾನದಮಲ ವೀಣಾಕ್ವಣೀತ |
ಸಂಜಾತ ಗಾನಸುಖದೆಸೆವ ತೇಜೋಮಯದ |
ಪುಂಜವೆನಿಪಮರಮುನಿ ನಾರದಂ ಪಾರ್ಥಾದಿಗಳ ಕಣ್ಗೆ ಕಾಣಿಸಿದನು ||9||

ಪದವಿಭಾಗ-ಅರ್ಥ:
ಕೆಂಜೆಡೆಯ ಸುಲಿಪಲ್ಲ (ಸುಲಿ:ಬಿರ್ಚು;ಎಸಕಪದ(ದೇ) ೯. ಪ್ರಕಟಗೊಳಿಸು) ವ್ಯಕ್ತಪಡಿಸುಚೀರ ಕೃಷ್ಣಾಜಿನದ ಮಂಜುಲ ತುಲಸಿಯ ದಂಡೆಯ ಕೊರಳ ತಾವಡದ (ತೂಗಾಡುವ) ರಂಜಿಸುವ ಪದ್ಮಾಕ್ಷಗಳ ಲಲಿತ ಮೇಖಲೆಯ ಚಾರುತರದ ಉಪವೀತದ=[ಕೆಂಪು ಕೂದಲಿನ; ನಗುವಿನಿಂದ ತೋರುವ ಹಲ್ಲಿನ; ನಾರುಬಟ್ಟೆ ಮತ್ತು ಕೃಷ್ಣಾಜಿನ ಧರಿಸಿದ; ಮನೋಹರ ತುಲಸಿಯ ದಂಡೆಯನ್ನು ಕೊರಳಲ್ಲಿ ಧರಿಸಿ ತೂಗಾಡುವ; ಆನಂದ ಕೊಡುವ ಪದ್ಮದಂತಿರುವ ಕಣ್ಣುಗಳ, ಅಂದದ ಉಡುದಾರದ; ಚಂದದ ಉಪವೀತದ];; ಕಂಜನಾಭ ಧ್ಯಾನದ ಅಮಲ ವೀಣಾಕ್ವಣೀತ ಸಂಜಾತ ಗಾನಸುಖದೆ ಝಸೆವ ತೇಜೋಮಯದ ಪುಂಜವೆನಿಪ ಅಮರಮುನಿ ನಾರದಂ ಪಾರ್ಥಾದಿಗಳ ಕಣ್ಗೆ ಕಾಣಿಸಿದನು=[ವಿಷ್ಣುವನ ಧ್ಯಾನದ ಶುದ್ಧವಾದ ವೀಣಾಸ್ವರದಿಂದ ಹುಟ್ಟಿದ ಗಾನಸುಖದಿಂದ ಶೋಭಿಸುವ ತೇಜೋಮಯ ಗೊಂಚಲು ಎನ್ನಿಸುಪ ದೇವಲೋಕದ ಮುನಿ ನಾರದನು ಪಾರ್ಥಾದಿಗಳ ಕಣ್ಣಿಗೆ ಕಂಡನು.]
  • ತಾತ್ಪರ್ಯ: ಕೆಂಪು ಕೂದಲಿನ; ನಗುವಿನಿಂದ ತೋರುವ ಹಲ್ಲಿನ; ನಾರುಬಟ್ಟೆ ಮತ್ತು ಕೃಷ್ಣಾಜಿನ ಧರಿಸಿದ; ಮನೋಹರ ತುಲಸಿಯ ದಂಡೆಯನ್ನು ಕೊರಳಲ್ಲಿ ಧರಿಸಿ ತೂಗಾಡುವ; ಆನಂದ ಕೊಡುವ ಪದ್ಮದಂತಿರುವ ಕಣ್ಣುಗಳ, ಅಂದದ ಉಡುದಾರದ; ಚಂದದ ಉಪವೀತದ, ವಿಷ್ಣುವನ ಧ್ಯಾನದ ಶುದ್ಧವಾದ ವೀಣಾಸ್ವರದಿಂದ ಹುಟ್ಟಿದ ಗಾನಸುಖದಿಂದ ಶೋಭಿಸುವ ತೇಜೋಮಯದ ಗೊಂಚಲು ಎನ್ನಿಸುಪ ದೇವಲೋಕದ ಮುನಿ ನಾರದನು ಪಾರ್ಥಾದಿಗಳ ಕಣ್ಣಿಗೆ ಕಂಡನು.
  • (ಪದ್ಯ:೯:)

ಪದ್ಯ:-:೧೦:

ಸಂಪಾದಿಸಿ

ಅಂಭೋಜಮಿತ್ರ ನಾಸರೊಳಾಗಸವನುಳಿದು |
ಕುಂಭಿನಿಗೆ ಬಂದಪನೊ ಪೇಳೆನಲ್ ಗಗನ ಪಥ |
ದಿಂ ಬಾಸುರಪ್ರಭೆಯೊಳಾ ಮುನಿಪನಿಳಿತಂದೊಡಸುರಾಂತಕಾದಿ ನೃಪರು ||
ಸಂಭಾವಿಸಿದರಾ ತಪೋನಿಧಿಯ ನತಿವಿನಯ |
ಗಂಭೀರ ವಾಕ್ಯದಿಂ ಬೆಸಗೊಂಡ ನುಪಚರಿಸಿ |
ಜಂಭಾರಿ ನಂದನಂ ನಾರದನನಖಿಳ ಲೋಕಸ್ಥಿತಿ ವಿಶಾರದನನು ||10||

ಪದವಿಭಾಗ-ಅರ್ಥ:
ಅಂಭೋಜಮಿತ್ರನು ಅಸರೊಳು (ಆಯಾಸದಿಂದ) ಆಗಸವನು ಉಳಿದು ಕುಂಭಿನಿಗೆ (ನೆಲ) ಬಂದಪನೊ ಪೇಳೆನಲ್, ಗಗನ ಪಥದಿಂ ಬಾಸುರ (ಪ್ರಕಾಶ) ಪ್ರಭೆಯೊಳು ಮುನಿಪನು ಇಳಿತಂದೊಡ=[ಸೂರ್ಯನು ಆಯಾಸದಿಂದ ಆಕಾಶವನ್ನು ಬಿಟ್ಟು ನೆಲಕ್ಕೆ ಬರುವನೋ/ ಬಂದಿರುವನೊ ಹೇಳು ಎನ್ನುವಂತೆ, ಆಕಾಶ ಮಾರ್ಗದಿಂದ ಪ್ರಕಾಶಿಸುವ ಪ್ರಭೆಯಿಂದ ನಾರದಮುನಿಯು ಇಳಿದುಬಂದಾಗ,];; ಅಸುರಾಂತಕ ಆದಿ ನೃಪರು ಸಂಭಾವಿಸಿದರು ಆ ತಪೋನಿಧಿಯನು ಅತಿವಿನಯ ಗಂಭೀರ ವಾಕ್ಯದಿಂ ಬೆಸಗೊಂಡನು ಉಪಚರಿಸಿ ಜಂಭಾರಿ ನಂದನಂ ನಾರದನನು ಅಖಿಳ ಲೋಕಸ್ಥಿತಿ ವಿಶಾರದನನು=[ಕೃಷ್ಣನೇ ಮೊದಲಾದ ರಾಜರು, ಆ ತಪೋನಿಧಿಯನ್ನು ಗೌರವಿಸಿದರು. ಅರ್ಜುನನು ನಾರದನನ್ನು ಅಖಿಲ ಲೋಕಸ್ಥಿತಿ ವಿಶಾರದನನನ್ನು ಅತಿವಿನಯ ಗಂಭೀರ ವಾಕ್ಯದಿಂದ ಮಾತನಾಡಿಸಿ ಉಪಚರಿಸಿದನು.]
  • ತಾತ್ಪರ್ಯ:ಸೂರ್ಯನು ಆಯಾಸದಿಂದ ಆಕಾಶವನ್ನು ಬಿಟ್ಟು ನೆಲಕ್ಕೆ ಬರುವನೋ/ ಬಂದಿರುವನೊ ಹೇಳು ಎನ್ನುವಂತೆ, ಆಕಾಶ ಮಾರ್ಗದಿಂದ ಪ್ರಕಾಶಿಸುವ ಪ್ರಭೆಯಿಂದ ನಾರದಮುನಿಯು ಇಳಿದುಬಂದಾಗ, ಕೃಷ್ಣನೇ ಮೊದಲಾದ ರಾಜರು, ಆ ತಪೋನಿಧಿಯನ್ನು ಗೌರವಿಸಿದರು. ಅರ್ಜುನನು ನಾರದನನ್ನು ಅಖಿಲ ಲೋಕಸ್ಥಿತಿ ವಿಶಾರದನನನ್ನು ಅತಿವಿನಯ ಗಂಭೀರ ವಾಕ್ಯದಿಂದ ಮಾತನಾಡಿಸಿ ಉಪಚರಿಸಿದನು.
  • (ಪದ್ಯ:೧೦:)

ಪದ್ಯ:-:೧೧:

ಸಂಪಾದಿಸಿ

ಎಲೆ ಮುನೀಶ್ವರ ತನ್ನ ಕುದುರೆಗಳ್ ಪೋದುವೀ |
ನೆಲದೊಳಾವೆಡೆಯೊಳಿರ್ದಪುವೆಂದರಿಯೆನಿನ್ನು |
ಬಲವಂತರೀ ಸ್ಥಳದೊಳಿಲ್ಲವೇ ಕಂಡುದಂ ತನಗೊರೆಯವೇಳ್ವುದೆಂದು ||
ಫಲುಗುಣಂ ಕೇಳ್ದೊಡಾ ನಾರದಂ ನಸುನಗುತೆ |
ಸುಲಲಿತಾಶ್ವಂಗಳೈದಿದುವು ಕುಂತಳಪುರಕೆ |
ಕಲಿ ಚಂದ್ರಹಾಸಾಖ್ಯ ನರಸಲ್ಲಿಗಾ ನೃಪಂ ಕಟ್ಟಿಕೊಂಡಿಹನೆಂದನು ||11||

ಪದವಿಭಾಗ-ಅರ್ಥ:
ಎಲೆ ಮುನೀಶ್ವರ ತನ್ನ ಕುದುರೆಗಳ್ ಪೋದುವು ಈ ನೆಲದೊಳು ಆವೆಡೆಯೊಳಿರ್ದಪುವು ಎಂದರಿಯೆನು ಇನ್ನು ಬಲವಂತರು ಈ ಸ್ಥಳದೊಳು ಇಲ್ಲವೇ ಕಂಡುದಂ ತನಗೆ ಒರೆಯವೇಳ್ವುದು ಎಂದು ಫಲುಗುಣಂ ಕೇಳ್ದೊಡೆ=[ಎಲೆ ಮುನೀಶ್ವರನೇ, ತನ್ನ ಕುದುರೆಗಳು ಈ ಪ್ರದೇಶದಲ್ಲಿ ಯಾವಕಡೆಯಲ್ಲಿ ಹೋದವು, ಎಲ್ಲಿ ಇರುವುವು ಎಂದು ತಿಳಿಯೆನು, ಇನ್ನು ಬಲಶಾಲಿಗಳು ಈ ಸ್ಥಳದಲ್ಲಿ ಇಲ್ಲವಲ್ಲವೇ? ಕಂಡುದನ್ನು ತನಗೆ ತಿಳಿಸಿಹೇಳಬೇಕು ಎಂದು ಫಲ್ಗುಣನು ಕೇಳಿದಾಗ];; ಆ ನಾರದಂ ನಸುನಗುತೆ ಸುಲಲಿತಾಶ್ವಂಗಳು ಐದಿದುವು ಕುಂತಳಪುರಕೆ ಕಲಿ ಚಂದ್ರಹಾಸಾಖ್ಯನು ಅರಸ ಅಲ್ಲಿಗೆ ಆ ನೃಪಂ ಕಟ್ಟಿಕೊಂಡಿಹನು ಎಂದನು=[ಆ ನಾರದನು ನಸುನಗುತ್ತಾ ಆ ಸುಂದರ ಅಶ್ವಗಳು ಕುಂತಳಪುರಕ್ಕೆ ಹೋಗಿರುವುವು; ಶೂರನಾದ ಚಂದ್ರಹಾಸ ಹೆಸರಿನವನು ಅಲ್ಲಿಗೆ ಅರಸ; ಆ ನೃಪನು ಕಟ್ಟಿಕೊಂಡಿರುವನು ಎಂದನು].
  • ತಾತ್ಪರ್ಯ:ಎಲೆ ಮುನೀಶ್ವರನೇ, ತನ್ನ ಕುದುರೆಗಳು ಈ ಪ್ರದೇಶದಲ್ಲಿ ಯಾವಕಡೆಯಲ್ಲಿ ಹೋದವು, ಎಲ್ಲಿ ಇರುವುವು ಎಂದು ತಿಳಿಯೆನು, ಇನ್ನು ಬಲಶಾಲಿಗಳು ಈ ಸ್ಥಳದಲ್ಲಿ ಇಲ್ಲವಲ್ಲವೇ? ಕಂಡುದನ್ನು ತನಗೆ ತಿಳಿಸಿಹೇಳಬೇಕು ಎಂದು ಫಲ್ಗುಣನು ಕೇಳಿದಾಗ, ಆ ನಾರದನು ನಸುನಗುತ್ತಾ ಆ ಸುಂದರ ಅಶ್ವಗಳು ಕುಂತಳಪುರಕ್ಕೆ ಹೋಗಿರುವುವು; ಶೂರನಾದ ಚಂದ್ರಹಾಸ ಹೆಸರಿನವನು ಅಲ್ಲಿಗೆ ಅರಸ; ಆ ನೃಪನು ಕಟ್ಟಿಕೊಂಡಿರುವನು ಎಂದನು].
  • (ಪದ್ಯ:೧೨:)

ಪದ್ಯ:-:೧೨:

ಸಂಪಾದಿಸಿ

ಹಿಂದಣರಸುಗಳ ಬಲಮಿವನ ಹದಿನಾರರೊಳ |
ಗೊಂದು ಕಳೆಯಲ್ಲಿವಂ ಪರಮ ವೈಷವನಿವನ |
ಮುಂದದಟರಂ ಕಾಣೆನಾಹವದೊಳೀತನ ಚರಿತ್ರಮತಿಚಿತ್ರಮೆಂದು ||
ಮಂದಸ್ಮಿತದೊಳಾ ತಪೋಧನಂ ಪೇಳ್ದೊಡೆ ಪು |
ರಂದರಾತ್ಮಜನವನ ವರ್ತನವನಾದ್ಯಂತ |
ದಿಂದೆನಗೆ ವಿಸ್ತರಿಸಿ ಪೇಳ್ವುದೆನಲರ್ಜುನಂಗಾ ತಪೋನಿಧಿ ನುಡಿದನು ||12||

ಪದವಿಭಾಗ-ಅರ್ಥ:
ಹಿಂದಣ ಅರಸುಗಳ ಬಲಂ ಇವನ ಹದಿನಾರರೊಳಗೆ ಒಂದು ಕಳೆಯಲ್ಲ; ಇವಂ ಪರಮ ವೈಷವನು ಇವನ ಮುಂದೆ ಅದಟರಂ ಕಾಣೆನು ಆಹವದೊಳು ಈತನ ಚರಿತ್ರಮ್ ಅತಿಚಿತ್ರಮೆಂದು ಮಂದಸ್ಮಿತದೊಳು ಆ ತಪೋಧನಂ ಪೇಳ್ದೊಡೆ=[ಹಿಂದೆ ನೀನು ಕಂಡ ಅರಸುಗಳ ಬಲವು, ಇವನ ಬಲದ ಹದಿನಾರರಲ್ಲಿ ಒಂದು ಒಂದು ಭಾಗವೂ ಇಲ್ಲ; ಇವನು ಪರಮ ವೈಷವನು; ಇವನ ಎದುರು ಯುದ್ಧದಲ್ಲಿ ನಿಲ್ಲುವ ಶೂರರನ್ನು ನಾನು ಕಾಣೆನು; ಈತನ ಚರಿತ್ರವು ಅತಿವಿಚಿತ್ರವಾಗಿದೆ ಎಂದು ಮುಗುಳುನಗುತ್ತಾ ಆ ತಪೋಧನನು ಹೇಳಿದಾಗ];; ಪುರಂದರಾತ್ಮಜನು ಅವನ ವರ್ತನವನು ಆದ್ಯಂತದಿಂದ ಎನಗೆ ವಿಸ್ತರಿಸಿ ಪೇಳ್ವುದು ಎನಲು ಅರ್ಜುನಂಗೆ ಆ ತಪೋನಿಧಿ ನುಡಿದನು=[ಅರ್ಜುನನು, ಅವನ ಚರಿತ್ರೆಯನ್ನು ಮೊದಲಿಂದದ ನನಗೆ ವಿಸ್ತಾರವಾಗಿ ಹೇಳಬೇಕು ಎನ್ನಲು, ಅರ್ಜುನನಿಗೆ ಆ ತಪೋನಿಧಿ ಹೀಗೆ ಹೇಳಿದನು].
  • ತಾತ್ಪರ್ಯ:ಹಿಂದೆ ನೀನು ಕಂಡ ಅರಸುಗಳ ಬಲವು, ಇವನ ಬಲದ ಹದಿನಾರರಲ್ಲಿ ಒಂದು ಒಂದು ಭಾಗವೂ ಇಲ್ಲ; ಇವನು ಪರಮ ವೈಷವನು; ಇವನ ಎದುರು ಯುದ್ಧದಲ್ಲಿ ನಿಲ್ಲುವ ಶೂರರನ್ನು ನಾನು ಕಾಣೆನು; ಈತನ ಚರಿತ್ರವು ಅತಿವಿಚಿತ್ರವಾಗಿದೆ ಎಂದು ಮುಗುಳುನಗುತ್ತಾ ಆ ತಪೋಧನನು ಹೇಳಿದಾಗ ಅರ್ಜುನನು, ಅವನ ಚರಿತ್ರೆಯನ್ನು ಮೊದಲಿಂದದ ನನಗೆ ವಿಸ್ತಾರವಾಗಿ ಹೇಳಬೇಕು ಎನ್ನಲು, ಅರ್ಜುನನಿಗೆ ಆ ತಪೋನಿಧಿ ಹೀಗೆ ಹೇಳಿದನು.
  • (ಪದ್ಯ:೧೨:)

ಪದ್ಯ:-:೧೩:

ಸಂಪಾದಿಸಿ

ಸಮಯಮಲ್ಲಿದು ನಿನಗೆ ಪಾರ್ಥ ಸಿಕ್ಕಿರ್ದಪುವು |
ವಿಮಲಮುಖ ವಾಜಿಗಳ್ ಚಿಂತಿಸುತಿಹಂ ಮಹೀ |
ರಮಣನಿಭಪುರದೊಳೆನೆ ಫಲುಗುಣಂ ನರರ ಬಾಳ್ ಚಿರಕಾಲಮಿಪ್ಪುದಿಲ್ಲ ||
ಭ್ರಮೆಯಿಂದೆ ಕೇಳದಿರಬಹುದೆ ವೈಷ್ಣವ ಕಥೆಯ |
ನಮಮ ತನಗಾವ ಪೊಳ್ತುಭಯ ಬಲಮಧ್ಯದೊಳ್ |
ಕಮಲಾಕ್ಷನೊರೆದ ಗೀತಾಮೃತವನಾಲಿಸಲ್ಕೆನೆ ಮುನಿಪನಿಂತೆಂದನು ||13||

ಪದವಿಭಾಗ-ಅರ್ಥ:
ಸಮಯಂ ಅಲ್ಲ ಇದು ನಿನಗೆ ಪಾರ್ಥ ಸಿಕ್ಕಿರ್ದಪುವು ವಿಮಲಮುಖ ವಾಜಿಗಳ್ ಚಿಂತಿಸುತಿಹಂ ಮಹೀರಮಣನು ಇಭಪುರದೊಳು ಎನೆ ಫಲುಗುಣಂ ನರರ ಬಾಳ್ ಚಿರಕಾಲಂ ಇಪ್ಪುದಿಲ್ಲ=[ ನಿನಗೆ ಚಂದ್ರಹಾಸನ ಇತಿಹಾಸ ಕೇಳಲು ಇದು ಸಮಯವಲ್ಲ; ಪಾರ್ಥ ಕುಂತಲಪುರದಲ್ಲಿ ಶ್ರೇಷ್ಟವಾದ ಯಜ್ಞದ ಅಶ್ವಗಳು ಸಿಕ್ಕಿಕೊಂಡಿವೆ. ಭೂರಮಣನಾದ ಧರ್ಮಜನು ಹಸ್ತಿನಾವತಿಯಲ್ಲಿ ಚಿಂತಿಸುತ್ತಿರುವನುನ, ಎನ್ನಲು ಫಲ್ಗುಣನು ನರರ ಬಾಳು ಚಿರಕಾಲ ಇರುವುದಿಲ್ಲ.];; ಭ್ರಮೆಯಿಂದೆ ಕೇಳದೆ ಇರಬಹುದೆ ವೈಷ್ಣವ ಕಥೆಯನು ಅಮಮ ತನಗ ಆವ ಪೊಳ್ತುಭಯ ಬಲಮಧ್ಯದೊಳ್ ಕಮಲಾಕ್ಷನು ಒರೆದ ಗೀತಾಮೃತವನು ಆಲಿಸಲ್ಕೆ ಎನೆ ಮುನಿಪನು ಇಂತೆಂದನು=[ಪ್ರಾಪಂಚಿಕ ಭ್ರಮೆಯಿಂದ ವೈಷ್ಣವ ಕಥೆಯನ್ನು ಕೇಳದೆ ಇರಬಹುದೆ ಅಮಮ! ತನಗೆ ಕಮಲಾಕ್ಷನಾದ ಕೃಷ್ಣನು ಹೇಳಿದ ಯಾವ ಗೀತಾಮೃತವನ್ನು ಸೈನ್ಯಮಧ್ಯದಲ್ಲಿ ಆಲಿಸಿದ್ದರಿಂದ ಭಯಹೋಯಿತು, ಎನ್ನಲು, ಮುನಿಪನು ಹೀಗೆ ಹೇಳಿದನು].
  • ತಾತ್ಪರ್ಯ:ನಿನಗೆ ಚಂದ್ರಹಾಸನ ಇತಿಹಾಸ ಕೇಳಲು ಇದು ಸಮಯವಲ್ಲ; ಪಾರ್ಥ ಕುಂತಲಪುರದಲ್ಲಿ ಶ್ರೇಷ್ಟವಾದ ಯಜ್ಞದ ಅಶ್ವಗಳು ಸಿಕ್ಕಿಕೊಂಡಿವೆ. ಭೂರಮಣನಾದ ಧರ್ಮಜನು ಹಸ್ತಿನಾವತಿಯಲ್ಲಿ ಚಿಂತಿಸುತ್ತಿರುವನುನ, ಎನ್ನಲು ಫಲ್ಗುಣನು ನರರ ಬಾಳು ಚಿರಕಾಲ ಇರುವುದಿಲ್ಲ. ಪ್ರಾಪಂಚಿಕ ಭ್ರಮೆಯಿಂದ ವೈಷ್ಣವ ಕಥೆಯನ್ನು ಕೇಳದೆ ಇರಬಹುದೆ ಅಮಮ! ತನಗೆ ಕಮಲಾಕ್ಷನಾದ ಕೃಷ್ಣನು ಸೈನ್ಯ ಮಧ್ಯದಲ್ಲಿ ಹೇಳಿದ ಯಾವ ಗೀತಾಮೃತವಿದಯೋ ಅದನ್ನು ಆಲಿಸಿದ್ದರಿಂದ ಭಯಹೋಯಿತು, ಎನ್ನಲು, ಮುನಿಪನು ಹೀಗೆ ಹೇಳಿದನು].
  • (ಪದ್ಯ:೧೩:)

ಪದ್ಯ:-:೧೪:

ಸಂಪಾದಿಸಿ

ಇನ್ನೊರೆವೆನಾಲಿಸಾದೊಡೆ ಪಾರ್ಥ ಧಾರ್ಮಿಕಂ |
ಮುನ್ನೊರ್ವನುಂಟು ಕೇರಳ ದೇಶದವನಿಪಂ |
ಸನ್ನುತ ಗುಣೋದಯಂ ಮೇಧಾವಿಯೆಂಬವಂ ಬಲಯುತಂ ಬಳಿಕವಂಗೆ ||
ತನ್ನ ಪಟ್ಟದ ರಾಣಿಯೊಳ್ ಬಹಳ ಭಾಗ್ಯ ಸಂ |
ಪನ್ನನೆಡೆದಂಘ್ರಿಗರುವೆರಳಾಗಿ ದಿವದೊಳು |
ತ್ಪನ್ನನಾದಂ ಮೂಲನಕ್ಷತ್ರದಿಂದರಿಷ್ಟಾಂಶದೊಳ್ ಸುಕುಮಾರನು ||14||

ಪದವಿಭಾಗ-ಅರ್ಥ:
ಇನ್ನು ಒರೆವೆನು ಆಲಿಸು ಆದೊಡೆ (ಹಾಗಾದರೆ) ಪಾರ್ಥ, ಧಾರ್ಮಿಕಂ ಮುನ್ನ ಓರ್ವನುಂಟು ಕೇರಳ ದೇಶದ ಅವನಿಪಂ ಸನ್ನುತ ಗುಣೋದಯಂ ಮೇಧಾವಿಯೆಂಬವಂ ಬಲಯುತಂ=[ಹಾಗಾದರೆ, ಇನ್ನು ಹೇಳುವೆನು ಆಲಿಸಿಕೇಳು, ಪಾರ್ಥ, ಹಿಂದೆ ಕೇರಳ ದೇಶದಲ್ಲಿ ಒಬ್ಬ ಧಾರ್ಮಿಕ ರಾಜನು ಒಬ್ಬನಿದ್ದ. ಅವನು ಹೊಗಳಿಕೆಗೆ ಯೋಗ್ಯನು, ಗುಣೋದಯನು, ಬಲಯುತನು ಮೇಧಾವಿಯೆಂಬುವವನು.];; ಬಳಿಕ ಅವಂಗೆ ತನ್ನ ಪಟ್ಟದ ರಾಣಿಯೊಳ್ ಬಹಳ ಭಾಗ್ಯ ಸಂಪನ್ನನು ಎಡೆದಂಘ್ರಿಗೆ ಅರುವೆರಳಾಗಿ ದಿವದೊಳು ಉತ್ಪನ್ನನಾದಂ ಮೂಲನಕ್ಷತ್ರದಿಂದ ಅರಿಷ್ಟಾಂಶದೊಳ್ ಸುಕುಮಾರನು=[ಕೆಲವು ಸಮಯದ ನಂತರ ಅವನಿಗೆ ತನ್ನ ಪಟ್ಟದ ರಾಣಿಯಲ್ಲಿ ಬಹಳ ಭಾಗ್ಯ ಸಂಪನ್ನನಾದ, ಎಡ ಪಾದದಲ್ಲಿ ಆರುಬೆರಳು ಇರುವ, ಮೂಲಾ ನಕ್ಷತ್ರದಲ್ಲಿ ಹಗಲು ಸಮಯದಲ್ಲಿ ಅರಿಷ್ಟಾಂಶದಲ್ಲಿ ಸುಕುಮಾರನು ಜನಿಸಿದನು.]
  • ತಾತ್ಪರ್ಯ:ಹಾಗಾದರೆ, ಇನ್ನು ಹೇಳುವೆನು ಆಲಿಸಿಕೇಳು ಪಾರ್ಥ, ಹಿಂದೆ ಕೇರಳ ದೇಶದಲ್ಲಿ ಒಬ್ಬ ಧಾರ್ಮಿಕ ರಾಜನು ಒಬ್ಬನಿದ್ದ. ಅವನು ಹೊಗಳಿಕೆಗೆ ಯೋಗ್ಯನು, ಗುಣೋದಯನು, ಬಲಯುತನು ಮೇಧಾವಿ ಎಂದು ಹೆಸರು. ಕೆಲವು ಸಮಯದ ನಂತರ ಅವನಿಗೆ ತನ್ನ ಪಟ್ಟದ ರಾಣಿಯಲ್ಲಿ ಬಹಳ ಭಾಗ್ಯ ಸಂಪನ್ನನಾದ, ಎಡ ಪಾದದಲ್ಲಿ ಆರುಬೆರಳು ಇರುವ, ಮೂಲಾ ನಕ್ಷತ್ರದಲ್ಲಿ ಹಗಲು ಸಮಯದಲ್ಲಿ ಅರಿಷ್ಟಾಂಶದಲ್ಲಿ ಸುಕುಮಾರನು ಜನಿಸಿದನು.
  • (ಪದ್ಯ:೧೪:)VI

ಪದ್ಯ:-:೧೫:

ಸಂಪಾದಿಸಿ

ಪುತ್ರೋತಸ್ವಂ ಮಾಡಿ ಕೆಲವು ದಿನಮಿರೆ ನೃಪಂ |
ಶತ್ರುಗಳ್ ಬಂದು ನಿಜನಗರ ಮಂ ಮುತ್ತಿದೊಡೆ |
ಕ್ಷತ್ರಧರ್ಮದೊಳವರೊಡನೆ ಯುದ್ಧರಂಗದೊಳ್ ಪೊಯ್ದಾಡಿ ಮಡಿಯೆ ಕೇಳ್ದು ||
ಚಿತ್ರಭಾನು ಪ್ರವೇಶಂಗೈದಳಂದು ಶತ |
ಪುತ್ರಲೋಚನೆ ಪತಿವ್ರತೆಯಾಗಿ ಬಳಿಕೆಲೆ ಧ |
ರಿತ್ರೀಶ್ವರನ ರಾಜ್ಯಮಂ ತೆಗೆದುಕೊಂಡಹಿತರಾಳ್ದರದನೇವೇಳ್ವೆನು ||15||

ಪದವಿಭಾಗ-ಅರ್ಥ:
ಪುತ್ರೋತಸ್ವಂ ಮಾಡಿ ಕೆಲವು ದಿನಮಿರೆ ನೃಪಂ ಶತ್ರುಗಳ್ ಬಂದು ನಿಜನಗರ ಮಂ ಮುತ್ತಿದೊಡೆ ಕ್ಷತ್ರಧರ್ಮದೊಳು ಅವರೊಡನೆ ಯುದ್ಧರಂಗದೊಳ್ ಪೊಯ್ದಾಡಿ ಮಡಿಯೆ ಕೇಳ್ದು=[ಮಗನು ಹುಟ್ಟಿದ ಕೆಲವು ದಿನಗಳ ನಂತರ ರಾಜನ ಶತ್ರುಗಳು ಬಂದು ಅವನ ನಗರವನ್ನು ಮುತ್ತಿದರು; ಕ್ಷಾತ್ರಧರ್ಮದಂತೆ ಅವನು ಅವರೊಡನೆ ಯುದ್ಧಮಾಡಿ ಯುದ್ಧರಂಗದಲ್ಲಿ ಹೋರಾಡಿ ಮಡಿದನು. ಅದನ್ನು ಕೇಳಿ ತಿಳಿದು,];; ಚಿತ್ರಭಾನು ಪ್ರವೇಶಂಗೈದಳಂದು ಶತಪುತ್ರಲೋಚನೆ ಪತಿವ್ರತೆಯಾಗಿ ಬಳಿಕೆಲೆ ಧರಿತ್ರೀಶ್ವರನ ರಾಜ್ಯಮಂ ತೆಗೆದುಕೊಂಡ ಅಹಿತರಾಳ್ದರು ಅದನು ಏವೇಳ್ವೆನು=[ರಾಜನ ಪತ್ನಿ, ಕಮಲ ಲೋಚನೆಯಾದ ಚಿತ್ರಭಾನು ಪತಿವ್ರತೆಯಾಗಿ ಅಗ್ನಿ ಪ್ರವೇಶಮಾಡಿದಳು. ಬಳಿಕ ಆ ರಾಜನ ರಾಜ್ಯವನ್ನು ಗೆದ್ದ ಶತ್ರುಗಳುಅಲ್ಲಿ ಆಳಿದರು. ಅದನ್ನು ಏನು ಹೇಳಲಿ!].
  • ತಾತ್ಪರ್ಯ:ಆರಾಜನಿಗೆ ಮಗನು ಹುಟ್ಟಿದ ಕೆಲವು ದಿನಗಳ ನಂತರ ರಾಜನ ಶತ್ರುಗಳು ಬಂದು ಅವನ ನಗರವನ್ನು ಮುತ್ತಿದರು; ಕ್ಷಾತ್ರಧರ್ಮದಂತೆ ಅವನು ಅವರೊಡನೆ ಯುದ್ಧಮಾಡಿ ಯುದ್ಧರಂಗದಲ್ಲಿ ಹೋರಾಡಿ ಮಡಿದನು. ಅದನ್ನು ಕೇಳಿ ತಿಳಿದು, ರಾಜನ ಪತ್ನಿ, ಕಮಲ ಲೋಚನೆಯಾದ ಚಿತ್ರಭಾನು ಪತಿವ್ರತೆಯಾಗಿ ಅಗ್ನಿ ಪ್ರವೇಶಮಾಡಿದಳು. ಬಳಿಕ ಆ ರಾಜನ ರಾಜ್ಯವನ್ನು ಗೆದ್ದ ಶತ್ರುಗಳುಅಲ್ಲಿ ಆಳಿದರು. ಅದನ್ನು ಏನು ಹೇಳಲಿ!
  • (ಪದ್ಯ:೧೫:)

ಪದ್ಯ:-:೧೬:

ಸಂಪಾದಿಸಿ

ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮುಟ್ಟು |
ತೊಳಲಿ ಬಳಲುತೆ ಮೆಲ್ಲಮೆಲ್ಲನೈತಂದು ಕುಂ |
ತಳ ನಗರಮಂ ಪೊಕ್ಕಳಲ್ಲಿ ಸಾಕಿದಳರ್ಭಕನನತಿ ಪ್ರೇಮದಿಂದೆ ||
ಎಳೆಯಂಗೆ ಬೇಕಾದುದಿಲ್ಲದಿರೆ ಮರುಗುವಳ್ |
ಪೊಳಲೊಳಗೆ ತಿರುದು ಹೊರೆದಳಲುವಳ್ ಮುದ್ದಿಸಿ ಪ |
ಸುಳೆಯಭಿನಯಂಗಳ್ಗೆ ಹಿಗ್ಗಿ ಬಿಸುಸುಯ್ವಳವಳನುದಿನದೊಳಾರ್ತೆಯಾಗಿ ||16||

ಪದವಿಭಾಗ-ಅರ್ಥ:
ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮುಟ್ಟು ತೊಳಲಿ ಬಳಲುತೆ ಮೆಲ್ಲಮೆಲ್ಲನೆ ಐತಂದು ಕುಂತಳ ನಗರಮಂ ಪೊಕ್ಕಳಲ್ಲಿ ಸಾಕಿದಳು ಅರ್ಭಕನನ ಅತಿ ಪ್ರೇಮದಿಂದೆ=[ಬಳಿಕ ಒಬ್ಬ ದಾದಿಯು ಆ ರಾಜನ ಶಿಶುವನ್ನು ಎತ್ತಿಕೊಂಡು ಅಲ್ಲಿಂದ ಹೊರಟು ತೊಳಲುತ್ತ ಬಳಲುತ್ತ ಮೆಲ್ಲಮೆಲ್ಲನೆ ಬಂದು ಕುಂತಳನಗರವನ್ನು ಹೊಕ್ಕಳು. ಅಲ್ಲಿ ಆ ಶಿಶುವನ್ನು ಅತಿ ಪ್ರೇಮದಿಂದೆ ಸಾಕಿದಳು.];; ಎಳೆಯಂಗೆ ಬೇಕಾದುದು ಇಲ್ಲದಿರೆ ಮರುಗುವಳ್ ಪೊಳಲೊಳಗೆ ತಿರುದು ಹೊರೆದು ಅಳಲುವಳ್ ಮುದ್ದಿಸಿ ಪಸುಳೆಯ ಅಭಿನಯಂಗಳ್ಗೆ ಹಿಗ್ಗಿ ಬಿಸುಸುಯ್ವಳು ಅವಳು ಅನುದಿನದೊಳು ಆರ್ತೆಯಾಗಿ=[ಆ ಎಳೆಯ ಮಗುವಿಗೆ ಬೇಕಾದುದು ಇಲ್ಲದಿದ್ದರೆ ಮರುಗುತ್ತಿದ್ದಳು; ನಗರದೊಳಗೆ ತಿರುದು ತಂದು ಆಮಗುವನ್ನು ಸಾಕಿದಳು. ಅದನ್ನು ಮುದ್ದಿಸಿ ಅಳುವಳು, ಮಗುವಿನ ಅಭಿನಯಕ್ಕೆ/ಆಟಕ್ಕೆ ಹಿಗ್ಗಿ, ಅವಳು ಅನುದಿನವೂ ಹಿಂದಿನದನ್ನು ನೆನೆದು ಆರ್ತೆಯಾಗಿ(ಕಷ್ಟಕ್ಕೆ) ಬಿಸುಸುಯ್ಯುವಳು.]
  • ತಾತ್ಪರ್ಯ:ಬಳಿಕ ಒಬ್ಬ ದಾದಿಯು ಆ ರಾಜನ ಶಿಶುವನ್ನು ಎತ್ತಿಕೊಂಡು ಅಲ್ಲಿಂದ ಹೊರಟು ತೊಳಲುತ್ತ ಬಳಲುತ್ತ ಮೆಲ್ಲಮೆಲ್ಲನೆ ಬಂದು ಕುಂತಳನಗರವನ್ನು ಹೊಕ್ಕಳು. ಅಲ್ಲಿ ಆ ಶಿಶುವನ್ನು ಅತಿ ಪ್ರೇಮದಿಂದೆ ಸಾಕಿದಳು. ಆ ಎಳೆಯ ಮಗುವಿಗೆ ಬೇಕಾದುದು ಇಲ್ಲದಿದ್ದರೆ ಮರುಗುತ್ತಿದ್ದಳು; ನಗರದೊಳಗೆ ತಿರುದು ತಂದು ಆಮಗುವನ್ನು ಸಾಕಿದಳು. ಅದನ್ನು ಮುದ್ದಿಸಿ ಅಳುವಳು, ಮಗುವಿನ ಅಭಿನಯಕ್ಕೆ/ಆಟಕ್ಕೆ ಹಿಗ್ಗಿ, ಅವಳು ಅನುದಿನವೂ ಹಿಂದಿನದನ್ನು ನೆನೆದು ಆರ್ತೆಯಾಗಿ ಬಿಸುಸುಯ್ಯುವಳು.]
  • (ಪದ್ಯ:೧೬:)

ಪದ್ಯ:-:೧೭:

ಸಂಪಾದಿಸಿ

ಇಡೆ ತೊಟ್ಟಲಿಲ್ಲಾಡಿಸುವರಿಲ್ಲ ನಿನಗೆ ಪೊಂ |
ದೊಡಿಗೆಯಿಲ್ಲಿರೆ ನಿಳಯಮಿಲ್ಲ ಬಿಡದೆರೆವ ನೀ |
ರ್ಕುಡಿವಾಲ್ಗಳೆಣ್ಣೆ ಬೆಣ್ಣೆಗಳಿಲ್ಲ ಲಾಲಿಸಿನಲಿವ ತಂದೆತಾಯ್ಗಳಿಲ್ಲ ||
ಪೊಡವಿಪತಿ ಕೇರಳಾಧೀಶ್ವರಂ ಪರಕೆಯೊಳ್ |
ಪಡೆದೆನಿದಕೀಗ ನಿನ್ನಂ ನೋಡುವೆನ್ನ ಕ |
ಣ್ಣೊಡೆಯದಕಟಕಟೆಂದು ಬಿಸುಸುಯ್ದಳಲ್ದು ಮರುಗುವಳಾಕೆ ದಿನದಿನದೊಳು ||17||

ಪದವಿಭಾಗ-ಅರ್ಥ:
ಇಡೆ ತೊಟ್ಟಲಿಲ್ಲ ಆಡಿಸುವರಿಲ್ಲ ನಿನಗೆ ಪೊಂದೊಡಿಗೆಯಿಲ್ಲ ಇರೆ ನಿಳಯಮಿಲ್ಲ ಬಿಡದೆರೆವ ನೀರ್ಕುಡಿವ ಆಲ್ಗಳೆಣ್ಣೆ ಬೆಣ್ಣೆಗಳಿಲ್ಲ ಲಾಲಿಸಿ ನಲಿವ ತಂದೆತಾಯ್ಗಳಿಲ್ಲ=[ದಾದಿಯು ಮಗುವನ್ನು ನೋಡಿ,ದುಃಖಿಸುವಳು: ಮಗುವನ್ನು ಇಡಲು ತೊಟ್ಟಲಿಲ್ಲ; ಆಡಿಸುವವರಿಲ್ಲ; ನಿನಗೆ ಹೊನ್ನಿನ ಉಡಿಗೆಯಿಲ್ಲ; ಇರಲು ಒಂದು ಮನೆಯೂ ಇಲ್ಲ; ತಪ್ಪದೆ ಎರೆದು ಸ್ನಾನಮಾಡಿಸವವರು ಇಲ್ಲ, ನೀರನ್ನು ಹಾಕುವ ಹಾಲುಮೈಗೆ ಎಣ್ಣೆ ಬೆಣ್ಣೆ ಹಾಕುವವರಿಲ್ಲ; ಹಾಡಿ ಲಾಲಿಸಿ ಸಂತಸಪಡುವ ತಂದೆತಾಯಿಗಳಿಲ್ಲ!];;ಪೊಡವಿಪತಿ ಕೇರಳಾಧೀಶ್ವರಂ ಪರಕೆಯೊಳ್ ಪಡೆದೆನು ಇದಕೆ ಈಗ ನಿನ್ನಂ ನೋಡುವ ಎನ್ನ ಕಣ್ಣೊಡೆಯದೆ ಅಕಟಕಟ ಎಂದು ಬಿಸುಸುಯ್ದು ಅಳಲ್ದು ಮರುಗುವಳಾಕೆ ದಿನದಿನದೊಳು=[ರಾಜ ಕೇರಳದ ಒಡೆಯನು ಹರಕೆಯಿಂದ ನಿನ್ನನ್ನು ಪಡೆದೆನು; ಈ ನಿನ್ನ ಕಷ್ಟಕ್ಕೆ ಈಗ ನಿನ್ನನ್ನು ನೋಡುವ ತನ್ನ ಕಣ್ಣೊಡೆಯಬಾರದೆ ಅಕಟಕಟ! ಎಂದು ಬಿಸುಸುಯ್ದು ಅಳುವಳು ದಿನದಿನವೂ,ಆಕೆ ದಾದಿ ಮರುಗುವಳು].
  • ತಾತ್ಪರ್ಯ:ದಾದಿಯು ಮಗುವನ್ನು ನೋಡಿ,ದುಃಖಿಸುವಳು: ಮಗುವನ್ನು ಇಡಲು ತೊಟ್ಟಲಿಲ್ಲ; ಆಡಿಸುವವರಿಲ್ಲ; ನಿನಗೆ ಹೊನ್ನಿನ ಉಡಿಗೆಯಿಲ್ಲ; ಇರಲು ಒಂದು ಮನೆಯೂ ಇಲ್ಲ; ತಪ್ಪದೆ ಎರೆದು ಸ್ನಾನಮಾಡಿಸವವರು ಇಲ್ಲ, ನೀರನ್ನು ಹಾಕುವ ಹಾಲುಮೈಗೆ ಎಣ್ಣೆ ಬೆಣ್ಣೆ ಹಾಕುವವರಿಲ್ಲ; ಹಾಡಿ ಲಾಲಿಸಿ ಸಂತಸಪಡುವ ತಂದೆತಾಯಿಗಳಿಲ್ಲ! ರಾಜ ಕೇರಳದ ಒಡೆಯನು ಹರಕೆಯಿಂದ ನಿನ್ನನ್ನು ಪಡೆದೆನು; ಈ ನಿನ್ನ ಕಷ್ಟಕ್ಕೆ ಈಗ ನಿನ್ನನ್ನು ನೋಡುವ ತನ್ನ ಕಣ್ಣೊಡೆಯಬಾರದೆ ಅಕಟಕಟ! ಎಂದು ಬಿಸುಸುಯ್ದು ಅಳುವಳು ದಿನದಿನವೂ,ಆಕೆ ದಾದಿ ಮರುಗುವಳು.
  • (ಪದ್ಯ:೧೭:)

ಪದ್ಯ:-:೧೮:

ಸಂಪಾದಿಸಿ

ಮೊಳೆವಲ್ಲುಗುವಜೊಲ್ಲು ದಟ್ಟಡಿ ತೊದಲ್ವ ನುಡಿ |
ತೊಳತೊಳಗುತಿಹ ಸೊಬಗು ಮೆರೆವ ನಗೆಮೊಗದ ಬಗೆ |
ಪೊಳವ ಕರ್ಣಮಿಸುಪ ನುಣ್ಗದಪಿಗೆಣೆ ಚೆಲ್ವಪಣೆ ಕುರುಳ ಜೋಲಂ(ಲ್ವಂ)ಬೆಗಾಲು ||
ಸುಳಿ ನಾಭಿ ಮಿಗೆ ಶೋಭಿಪಧರದೆಡೆ ಬಟ್ಟದೊಡೆ|
ನಳಿತೋಳಿಡಿದ ಧೂಳಿ ಸೊಗಯಿಸುವ ವರ ಶಿಶುವ |
ನಲಿದಾಡಿಸುವ ರೂಢಿಯಿಲ್ಲೆಂದು ನೆರೆ ನೊಂದು ಮರುಗವಳಜಸ್ರಮವಳು ||18||

ಪದವಿಭಾಗ-ಅರ್ಥ:
ಬೆಳೆಯುತ್ತಿರುವ ಅನಾಥ ರಾಜಶಿಶು ಹೇಗಿತ್ತು ಎಂದರೆ:ಮೊಳೆವಲ್ಲು ಉಗುವಜೊಲ್ಲು, ದಟ್ಟಡಿ ತೊದಲ್ವ ನುಡಿ ತೊಳತೊಳಗುತಿಹ ಸೊಬಗು ಮೆರೆವ ನಗೆಮೊಗದ ಬಗೆ ಪೊಳವ ಕಣ್ ಮಿಸುಪ ನುಣ್ಗದಪಿಗೆಣೆ ಚೆಲ್ವಪಣೆ ಕುರುಳ ಜೋಲಂ(ಲ್ವಂ)ಬೆಗಾಲು=[ಬೆಳೆಯುತ್ತಿರುವ ಅನಾಥ ರಾಜಶಿಶು ಹೇಗಿತ್ತು ಎಂದರೆ: ಅಂಕುರಿಸುತ್ತಿರುವ ಹಲ್ಲು, ಸುರಿಯುವ ಜೊಲ್ಲು, ತಪ್ಪುತಪ್ಪುಹೆಜ್ಜೆ, ತೊದಲುವಮಾತು, ಥಳಥಳಿಸುವ ಸೊಬಗು, ಶೋಬಿಸುವ ನಗೆಮೊಗದ ರೀತಿ, ಹೊಳೆಯುವ ಕಣ್ಣು, ಮಿಂಚುವ ನುಣ್ನನೆಯ ಕೆನ್ನೆ, ಚೆಲುವಾದ ಹಣೆ, ಜೋಲುವ ಕುರುಳು, ಅಂಬೆಗಾಲು ಸಂಚಾರ,];; ಸುಳಿ ನಾಭಿ ಮಿಗೆ ಶೋಭಿಪಧರದೆಡೆ ಬಟ್ಟದೊಡೆ ನಳಿತೋಳಿಡಿದ ಧೂಳಿ ಸೊಗಯಿಸುವ ವರ ಶಿಶುವ |ನಲಿದಾಡಿಸುವ ರೂಢಿಯಿಲ್ಲೆಂದು ನೆರೆ ನೊಂದು ಮರುಗವಳ ಅಜಸ್ರಮವಳು(ಅಜಸ್ರ:ಸದಾಕಾಲ)=[ಸುಂದರ ಸುಳಿಯ ಹೊಕ್ಕಳು, ಮತ್ತೆ ಶೋಭಿಸುವ ತುಟಿಗಳು, ದಪ್ಪದೊಡೆ, ನಳಿತೋಳು ಮೈಗೆ ಅಂಟಿದ ಧೂಳು, ಹೀಗೆ ಸೊಗಯಿಸುವ ಶ್ರೇಷ್ಠ ಶಿಶುವನ್ನು ಆನಂದದಿಂದ ಆಡಿಸುವ ರೂಢಿ ತನಗೆ ಇಲ್ಲ ಎಂದು, ಬಹಳ ನೊಂದು ಸದಾಕಾಲ ಸಂಕಟಪಡುವಳು ಆ ದಾಸಿ.]
  • ತಾತ್ಪರ್ಯ:ಬೆಳೆಯುತ್ತಿರುವ ಅನಾಥ ರಾಜಶಿಶು ಹೇಗಿತ್ತು ಎಂದರೆ: ಅಂಕುರಿಸುತ್ತಿರುವ ಹಲ್ಲು, ಸುರಿಯುವ ಜೊಲ್ಲು, ತಪ್ಪುತಪ್ಪುಹೆಜ್ಜೆ, ತೊದಲುವಮಾತು, ಥಳಥಳಿಸುವ ಸೊಬಗು, ಶೋಬಿಸುವ ನಗೆಮೊಗದ ರೀತಿ, ಹೊಳೆಯುವ ಕಣ್ಣು, ಮಿಂಚುವ ನುಣ್ನನೆಯ ಕೆನ್ನೆ, ಚೆಲುವಾದ ಹಣೆ, ಜೋಲುವ ಕುರುಳು, ಅಂಬೆಗಾಲು ಸಂಚಾರ, ಸುಂದರ ಸುಳಿಯ ಹೊಕ್ಕಳು, ಮತ್ತೆ ಶೋಭಿಸುವ ತುಟಿಗಳು, ದಪ್ಪದೊಡೆ, ನಳಿತೋಳು ಮೈಗೆ ಅಂಟಿದ ಧೂಳು, ಹೀಗೆ ಸೊಗಯಿಸುವ ಶ್ರೇಷ್ಠ ಶಿಶುವನ್ನು ಆನಂದದಿಂದ ಆಡಿಸುವ ರೂಢಿ ತನಗೆ ಇಲ್ಲ ಎಂದು, ಬಹಳ ನೊಂದು ಸದಾಕಾಲ ಸಂಕಟಪಡುವಳು ಆ ದಾಸಿ.
  • (ಪದ್ಯ:೧೮:)

ಪದ್ಯ:-:೧೯:

ಸಂಪಾದಿಸಿ

ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ |
ಲಾಲನೆಗಳಿಲ್ಲೆಂದಳಲ್ದು ಮರುಗುವಳೊಮ್ಮೆ |
ಪಾಲಿಸಿದಳಿಂತು ನಡೆನುಡಿಗಳಂ ಕಲಿವಲ್ಲಿ ಪರಿಯಂತಮಾ ಶಿಶುವನು ||
ಮೇಲೆ ರುಜೆ ಬಂದಡಸಿ ವಿಧೀವಶದೊಳಾ ಧಾತ್ರಿ |
ಕಾಳನರಮನೆಗೈದಿದಳ್ ಬಳಿಕ ಪಸುಳೆಗೆ ನಿ |
ರಾಳಂಬಮಾಗಲಾ ಪಟ್ಟಣದೊಳೆಲ್ಲರ್ಗೆ ಕಾರುಣ್ಯಕೀಡಾದನು ||19||

ಪದವಿಭಾಗ-ಅರ್ಥ:
ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ ಲಾಲನೆಗಳಿಲ್ಲೆಂದು ಅಳಲ್ದು ಮರುಗುವಳೊಮ್ಮೆ ಪಾಲಿಸಿದಳು ಇಂತು ನಡೆನುಡಿಗಳಂ ಕಲಿವಲ್ಲಿ ಪರಿಯಂತಮಾ ಶಿಶುವನು=[ಬಾಲಕನ ಆಟವನ್ನು ಕಂಡು ಹಿಗ್ಗುವಳು, ಮತ್ತೊಮ್ಮೆ ಸರಿಯಾದ ಪಾಲನೆಗಳು ಇಲ್ಲ ಎಂದು ಅತ್ತು ಮರುಗುವಳು, ಹೀಗೆ ಆ ದಾಸಿ ಶಿಶುವನ್ನು ನಡೆನುಡಿಗಳನ್ನು ಕಲಿಯುವ ಪರಿಯಂತರ ಪಾಲಿಸಿದಳು];; ಆಮೇಲೆ ಆ ಧಾತ್ರಿ ಅನಾರೋಗ್ಯ ಮೇಲೆ ರುಜೆಬಂದು ಅಡಸಿ ವಿಧೀವಶದೊಳು ಕಾಳನರಮನೆಗೆ ಐದಿದಳ್ ಬಳಿಕ ಪಸುಳೆಗೆ ನಿರಾಳಂಬಮಾಗಲು ಆ ಪಟ್ಟಣದೊಳು ಎಲ್ಲರ್ಗೆ ಕಾರುಣ್ಯಕೆ ಈಡಾದನು=[ಆಮೇಲೆ ಆ ಧಾತ್ರಿಯನ್ನು ರೋಗ ಬಂದು ಆವರಿಸಿ ವಿಧಿವಶವಾಗಿ ಯಮನ ಅರಮನೆಗೆ ಹೋದಳು. ಬಳಿಕ ಮಗುವಿಗೆ ಆಸರೆ ಇಲ್ಲದಂತಾಗಲು ಆ ಪಟ್ಟಣದಲ್ಲಿ ಎಲ್ಲರ ದಯೆಗೆ ಒಳಗಾದನು].
  • ತಾತ್ಪರ್ಯ:ಆ ದಾದಿಯು, ಬಾಲಕನ ಆಟವನ್ನು ಕಂಡು ಹಿಗ್ಗುವಳು, ಮತ್ತೊಮ್ಮೆ ಸರಿಯಾದ ಪಾಲನೆಗಳು ಇಲ್ಲ ಎಂದು ಅತ್ತು ಮರುಗುವಳು, ಹೀಗೆ ಆ ದಾಸಿ ಶಿಶುವನ್ನು ನಡೆನುಡಿಗಳನ್ನು ಕಲಿಯುವ ಪರಿಯಂತರ ಪಾಲಿಸಿದಳು. ಆಮೇಲೆ ಆ ಧಾತ್ರಿಯನ್ನು ರೋಗ ಬಂದು ಆವರಿಸಿ ವಿಧಿವಶವಾಗಿ ಯಮನ ಅರಮನೆಗೆ ಹೋದಳು. ಬಳಿಕ ಮಗುವಿಗೆ ಆಸರೆ ಇಲ್ಲದಂತಾಗಲು ಆ ಪಟ್ಟಣದಲ್ಲಿ ಎಲ್ಲರ ದಯೆಗೆ ಪಾತ್ರನಾದನು.
  • (ಪದ್ಯ:೧೯:)

ಪದ್ಯ:-:೨೦:

ಸಂಪಾದಿಸಿ

ಚೆಲ್ವಶಿಶು ಬೀದಿಯೊಳ್ ಬಂದು ದೇಸಿಗನಾಗಿ |
ನಿಲ್ವಿನಂ ಕಂಡ ಕಂಡಬಲೆಯರ್ ಕರೆಕರೆದು |
ಮೆಲ್ವ ತನಿವಣ್ಗಳಂ ಕಜ್ಜಾಯ ಸಕ್ಕರೆಗಳಂ ಕುಡುವರೆತ್ತಿಕೊಂಡು ||
ಸೊಲ್ವ ಮಾತುಗಳನಾಲಿಸಿ ಮುದ್ದಿಸುವ ರೀವ |
ರೊಲ್ವುದಂ ಮಜ್ಜನಂಗೈಸಿ ಮಡಿಯಂ ಪೊದಿಸಿ |
ಮೆಲ್ವಾಸಿನೊಳ್ ಮಲಗಿಸುವರಳ್ತಿಯಿಂದೊಸೆದು ತಂತಮ್ಮ ಮಕ್ಕಳೊಡನೆ ||20||

ಪದವಿಭಾಗ-ಅರ್ಥ:
ಚೆಲ್ವಶಿಶು ಬೀದಿಯೊಳ್ ಬಂದು ದೇಸಿಗನಾಗಿ ನಿಲ್ವಿನಂ ಕಂಡಕಂಡ ಅಬಲೆಯರ್ ಕರೆಕರೆದು ಮೆಲ್ವ ತನಿವಣ್ಗಳಂ ಕಜ್ಜಾಯ ಸಕ್ಕರೆಗಳಂ ಕುಡುವರು ಎತ್ತಿಕೊಂಡು=[ಚೆಲುವಾದ ಆ ಮಗುವು ಬೀದಿಯಲ್ಲಿ ಬಂದು ಪರದೇಸಿಗನಾಗಿ ನಿಲ್ಲುವುದನ್ನು ಕಂಡಕಂಡ ಹೆಂಗಸರು ಕರೆದ ಕರೆದು, ಎತ್ತಿಕೊಂಡು ತಾವು ತಿನ್ನುವ ತನಿ ಹಣ್ಣುಗಳನ್ನೂ ಕಜ್ಜಾಯಗಳನ್ನೂ ಸಕ್ಕರೆಗಳನ್ನೂ ಕೊಡುವರು.];; ಸೊಲ್ವ (ಹೇಳುವ ) ಮಾತುಗಳನು ಆಲಿಸಿ ಮುದ್ದಿಸುವರು ಈವರು ಒಲ್ವುದಂ (ಒಲುವು/ಇಷ್ಟ ಪಟ್ಟುದನ್ನು) ಮಜ್ಜನಂ (ಸ್ನಾನ) ಗೈಸಿ ಮಡಿಯಂ ಪೊದಿಸಿ ಮೆಲ್ವಾಸಿನೊಳ್ ಮಲಗಿಸುವರು ಅಳ್ತಿಯಿಂದ (ಪ್ರೀತಿ) ಒಸೆದು ತಂತಮ್ಮ ಮಕ್ಕಳೊಡನೆ=[ಆ ಮಗು ಹೇಳುವ ಮಾತುಗಳನ್ನು ಆಲಿಸಿ ಮುದ್ದಿಸುವರು. ಆ ಪುಟ್ಟ ಬಾಲಕನಿಗೆ ಇಷ್ಟ ಪಟ್ಟುದನ್ನು ಕೊಡುವರು; ಮತ್ತೆ ಪ್ರೀತಿಯಿಂದ ಮಾನಾಡಿಸಿ, ತಂತಮ್ಮ ಮಕ್ಕಳೊಡನೆ ಅವರು ಸ್ನಾನ ಮಾಡಿಸಿ, ಶುದ್ಧ ಬಟ್ಟೆಯ ಹೊದಿಕೆ ಹೊದಿಸಿ ಮೆತ್ತನೆ ಹಾಸಿನಲ್ಲಿ ಮಲಗಿಸುವರು; ].
  • (ಪ್ರೊ. ಜಿ. ವೆಂಕಟಸುಬ್ಬಯ್ಯ ಇಂಗ್ಲಿಷ್-ಕನ್ನಡ ನಿಘಂಟು;message ಹೆಸರುಪದ;ಒಸಗೆ: 1) ಒಸಗೆ, ಸುದ್ದಿ, ವಾರ್ತೆ, ಸಂದೇಶ, ವರ್ತಮಾನ 2) ದಿವ್ಯಸಂದೇಶ 3) ಉಪದೇಶ,)(ಒಸಗೆ->ಒಸೆದು:ಮಾತನಾಡಿಸಿ?)
  • (ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು; ಒಸೆ: ಎಸಕಪದ;(ದೇ) ೧ ಪ್ರೀತಿಸು ೨ ಮೆಚ್ಚು ೩ ಹಿಗ್ಗು ೪ ಸೊಗಸು)
  • ತಾತ್ಪರ್ಯ:ಚೆಲುವಾದ ಆ ಮಗುವು ಬೀದಿಯಲ್ಲಿ ಬಂದು ಪರದೇಸಿಗನಾಗಿ ನಿಲ್ಲುವುದನ್ನು ಕಂಡಕಂಡ ಹೆಂಗಸರು ಕರೆದ ಕರೆದು, ಎತ್ತಿಕೊಂಡು ತಾವು ತಿನ್ನುವ ತನಿ ಹಣ್ಣುಗಳನ್ನೂ ಕಜ್ಜಾಯಗಳನ್ನೂ ಸಕ್ಕರೆಗಳನ್ನೂ ಕೊಡುವರು. ಆ ಮಗು ಹೇಳುವ ಮಾತುಗಳನ್ನು ಆಲಿಸಿ ಮುದ್ದಿಸುವರು. ಆ ಪುಟ್ಟ ಬಾಲಕನಿಗೆ ಇಷ್ಟ ಪಟ್ಟುದನ್ನು ಕೊಡುವರು; ಮತ್ತೆ ಪ್ರೀತಿಯಿಂದ ಮಾನಾಡಿಸಿ, ತಂತಮ್ಮ ಮಕ್ಕಳೊಡನೆ ಅವರು ಸ್ನಾನ ಮಾಡಿಸಿ, ಶುದ್ಧ ಬಟ್ಟೆಯ ಹೊದಿಕೆ ಹೊದಿಸಿ ಮೆತ್ತನೆ ಹಾಸಿನಲ್ಲಿ ಮಲಗಿಸುವರು;
  • (ಪದ್ಯ:೨೦:)

ಪದ್ಯ:-:೨೧:

ಸಂಪಾದಿಸಿ

ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ |
ತಿರುಗುತಿಹ ಬಾಲಕನ ರೂಪಮಂ ಕಂಡು ಕರೆ |
ಕರೆದು ಭವನಂಗಳ್ಗೆ ಕೊಂಡೊಯ್ದು ಗಣಿಕೆಯರ್ ತಮತಮಗೆ ಮೋಹದಿಂದೆ ||
ಸರಸ ಪರಿಮಳ ಸುಗಂಧಂಗಳಂ ತೀಡಿ ಕ |
ತ್ತುರಿಯ ತಿಲಕವನಿಟ್ಟು ಕಂಮಲರ್ ಮುಡಿಸಿ ಕ |
ಪ್ಪುರ ವೀಳೆಯಂಗೊಟ್ಟು ಮಡಿತೊಡಿಗೆಗಳಿನೈದೆ (ಮಡಿತೊಡಂಗಳೊಳೈದೆ) ಸಿಂಗರಿಸಿ ಕಳುಹುತಿಹರು ||21||

ಪದವಿಭಾಗ-ಅರ್ಥ:
ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ ತಿರುಗುತಿಹ ಬಾಲಕನ ರೂಪಮಂ ಕಂಡು ಕರೆ ಕರೆದು ಭವನಂಗಳ್ಗೆ ಕೊಂಡೊಯ್ದು ಗಣಿಕೆಯರ್ ತಮತಮಗೆ ಮೋಹದಿಂದೆ=[ಹೀಗೆ ಪರಪುಟ್ಟನಾಗಿ ಪಟ್ಟಣದ ಬೀದಿಗಳಲ್ಲಿ ತಿರುಗಾಡುತ್ತಿದ್ದ ಬಾಲಕನ ರೂಪವನ್ನು ಕಂಡು ಗಣಿಕೆಯರು ಕರೆದು ಕರೆದು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ, ತಾವು ತಾವೇ ಪ್ರೀತಿಯಿಂದ ];; ಸರಸ ಪರಿಮಳ ಸುಗಂಧಂಗಳಂ ತೀಡಿ ಕತ್ತುರಿಯ ತಿಲಕವನಿಟ್ಟು ಕಂಮಲರ್ ಮುಡಿಸಿ ಕಪ್ಪುರ ವೀಳೆಯಂಗೊಟ್ಟು ಮಡಿತೊಡಿಗೆಗಳಿನೈದೆ (ಮಡಿತೊಡಂಗಳೊಳೈದೆ) ಸಿಂಗರಿಸಿ ಕಳುಹುತಿಹರು=[ಸರಸ ಪರಿಮಳದ ಸುಗಂಧಗಳನ್ನು ಹಚ್ಚಿ ಕತ್ತೂರಿಯ ತಿಲಕವನಿಟ್ಟು, ಸುವಾಸನೆಯ ಹೂವನ್ನು ಮುಡಿಸಿ, ಕರ್ಪೂರ ವೀಳೆಯ ತಾಂಬೂಲಗಳನ್ನು ಕೊಟ್ಟು, ತೊಳೆದ ಉಡುಗೆ ತೊಡಿಗೆಗಳನ್ನು ಹಾಕಿ ಸಿಂಗರಿಸಿ ಕಳುಹಿಸುತ್ತಿದ್ದರು.]
  • ತಾತ್ಪರ್ಯ:ಹೀಗೆ ಪರಪುಟ್ಟನಾಗಿ ಪಟ್ಟಣದ ಬೀದಿಗಳಲ್ಲಿ ತಿರುಗಾಡುತ್ತಿದ್ದ ಬಾಲಕನ ರೂಪವನ್ನು ಕಂಡು ಗಣಿಕೆಯರು ಕರೆದು ಕರೆದು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ, ತಾವು ತಾವೇ ಪ್ರೀತಿಯಿಂದ ಸರಸ ಪರಿಮಳದ ಸುಗಂಧಗಳನ್ನು ಹಚ್ಚಿ ಕತ್ತೂರಿಯ ತಿಲಕವನಿಟ್ಟು, ಸುವಾಸನೆಯ ಹೂವನ್ನು ಮುಡಿಸಿ, ಕರ್ಪೂರ ವೀಳೆಯ ತಾಂಬೂಲಗಳನ್ನು ಕೊಟ್ಟು, ತೊಳೆದ ಉಡುಗೆ ತೊಡಿಗೆಗಳನ್ನು ಹಾಕಿ ಸಿಂಗರಿಸಿ ಕಳುಹಿಸುತ್ತಿದ್ದರು.]
  • (ಪದ್ಯ:೨೧)

ಪದ್ಯ:-:೨೨:

ಸಂಪಾದಿಸಿ

ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ |
ಆಡುವೆಳೆಮಕ್ಕಳೊಡನಾಡುವಂ ಲೀಲೆ ಮಿಗೆ |
ನೋಡುವಚ್ಚರಿಗಳಂ ನೋಡುವಂ ಬಾಲಕರ |
ಕೂಡೆ ಮನೆಮನೆಗಳೊಳಗಾಡುತಿಹನೆಲ್ಲರ್ಗೆಮುದ್ದಾಗಿ ಮೋಹಿಸುವನು ||
ನೋಡುವರ ಪಾಡುವರನಾಡ ಸಾಧನೆಗಳಂ |*
ಮಾಡುವರ್ ನರ್ಥಿಯಿಂ ಬೇಡುವರ ನೆರವಿಯೊಳ್ |
ಕ್ರೀಡಿಸುವನಾಪುರದ ರೂಢಿಸಿದ ಬೀದಯೊಳ್ ಪಸುಳೆ ಪರಪುಟ್ಟನಾಗಿ||22||

  • (ಪಾಡುವರ ನೋಡುವರ ನಾಡ ಸಾಧನೆಗಳಂ|ಮಾಡುವರ ನೆರವಿಯೊಳ್ ಕ್ರೀಡಿಸುವನಾಪುರದ ರೂಢಿಸಿದ ಬೀದಿಯೊಳ್ ಕೂಡದೆಲ್ಲೆಡೆಯೊಳಂ ಪಸುಳೆ ಪರಪುಟ್ಟನಾಗಿ)
ಪದವಿಭಾಗ-ಅರ್ಥ:
ಆಡುವ ಎಳೆಮಕ್ಕಳೊಡನೆ ಆಡುವಂ ಲೀಲೆ ಮಿಗೆ ನೋಡುವ ಅಚ್ಚರಿಗಳಂ ನೋಡುವಂ ಬಾಲಕರ ಕೂಡೆ ಮನೆಮನೆಗಳೊಳಗೆ ಆಡುತಿಹನು ಎಲ್ಲರ್ಗೆ ಮುದ್ದಾಗಿ ಮೋಹಿಸುವನು=[ಆಡುವ ಎಳೆಮಕ್ಕಳೊಡನೆ ಆಡುವನು, ಬಹಳ ಸಂತೋಷವಾಗುವುದನ್ನು ನೋಡುವನು; ಬಾಲಕರ ಜೊತೆಸೇರಿ ಅಶ್ಚರ್ಯಗಳನ್ನು ನೋಡುವನು; ಮನೆಮನೆಗಳಲ್ಲಿ ಆಡುತ್ತಿದ್ದನು; ಎಲ್ಲರಿಗೂ ಮುದ್ದಾಗಿ ಪ್ರೀತಿ ಪಾತ್ರನಾಗಿದ್ದನು.];; ನೋಡುವರ ಪಾಡುವರ ನಾಡ ಸಾಧನೆಗಳಂ ಮಾಡುವರನು ಅರ್ಥಿಯಿಂ ಬೇಡುವರ ನೆರವಿಯೊಳ್ ಕ್ರೀಡಿಸುವನು(->) ಆಪುರದ ರೂಢಿಸಿದ ಬೀದಯೊಳ್ ಪಸುಳೆ ಪರಪುಟ್ಟನಾಗಿ=[ನೋಡುವವರ ಜೊತೆ ನೋಡುವನು;ಹಾಡುವವರ ಜೊತೆ ಹಾಡುವನು; ಜನರ ಉಪಯೋಗದ ವಸ್ತುಗಳನ್ನು /ಸಾಧನೆಗಳನ್ನು ಮಾಡುವವರನನ್ನು ಅಪೇಕ್ಷೆಪಟ್ಟು ಬೇಡುವರ ಗುಂಪಿನಲ್ಲಿ ಸೆರುವನು; ನಗರದದ ದೊಡ್ಡ ಪ್ರಸಿದ್ಧ ಬೀದಿಯಲ್ಲಿ ಈ ಚಿಕ್ಕ ಬಾಕ ಪರಪುಟ್ಟನಾಗಿ ಆಡುವನು.].
  • ತಾತ್ಪರ್ಯ: ಆಡುವ ಎಳೆಮಕ್ಕಳೊಡನೆ ಆಡುವನು, ಬಹಳ ಸಂತೋಷವಾಗುವುದನ್ನು ನೋಡುವನು; ಬಾಲಕರ ಜೊತೆಸೇರಿ ಅಶ್ಚರ್ಯಗಳನ್ನು ನೋಡುವನು; ಮನೆಮನೆಗಳಲ್ಲಿ ಆಡುತ್ತಿದ್ದನು; ಎಲ್ಲರಿಗೂ ಮುದ್ದಾಗಿ ಪ್ರೀತಿ ಪಾತ್ರನಾಗಿದ್ದನು.ನೋಡುವವರ ಜೊತೆ ನೋಡುವನು;ಹಾಡುವವರ ಜೊತೆ ಹಾಡುವನು; ಜನರ ಉಪಯೋಗದ ವಸ್ತುಗಳನ್ನು /ಸಾಧನೆಗಳನ್ನು ಮಾಡುವವರನನ್ನು ಅಪೇಕ್ಷೆಪಟ್ಟು ಬೇಡುವರ ಗುಂಪಿನಲ್ಲಿ ಸೆರುವನು; ನಗರದದ ದೊಡ್ಡ ಪ್ರಸಿದ್ಧ ಬೀದಿಯಲ್ಲಿ ಈ ಚಿಕ್ಕ ಬಾಕ ಪರಪುಟ್ಟನಾಗಿ ಆಡುವನು.
  • (ಪದ್ಯ:೨೨)

ಪದ್ಯ:-:೨೩:

ಸಂಪಾದಿಸಿ

ಬಟ್ಟೆಯೊಳ್ ಪುಣ್ಯವಶದಿಂದರ್ಭಕನ ಕಣ್ಗೆ |
ಪುಟ್ಟ ಸಾಲಗ್ರಾಮದೊಂದು ರಮಣೀಯ ಶಿಲೆ |
ಕಟ್ಟಿಸಕದಿಂದೆ ಕಾಣಿಸಲದಂ ತಾನೆತ್ತಿಕೊಂಡು ಕೆಳೆಯರ್ಗೆ ತೋರಿ ||
ಬಟ್ಟೆಗಲ್ಲಿಂತು ವರ್ತುಳದಿಂದೆ ಚೆಲ್ವಾಗಿ |
ಪುಟ್ಟುವುದೆ ಪೊಸತೆಂದು ಪಿಡಿದಾಡುತೊಡನೆ ಬೈ |
ತಿಟ್ಟು ಕೊಂಬಂ ಬಾಯೊಳನವರತಮಿರಿಸಲ್ಕೆ ತನಗೆ ಮನೆಯಿಲ್ಲವಾಗಿ ||23||

ಪದವಿಭಾಗ-ಅರ್ಥ:
ಬಟ್ಟೆಯೊಳ್ (ಬಟ್ಟೆ:ದಾರಿ) ಪುಣ್ಯವಶದಿಂದ ಅರ್ಭಕನ ಕಣ್ಗೆ ಪುಟ್ಟ ಸಾಲಗ್ರಾಮದ ಒಂದು ರಮಣೀಯ ಶಿಲೆ ಕಟ್ಟಿಸಕದಿಂದೆ ಕಾಣಿಸಲು ಅದಂ ತಾನೆತ್ತಿಕೊಂಡು ಕೆಳೆಯರ್ಗೆ ತೋರಿ=[ದಾರಿಯಲ್ಲಿ ಪುಣ್ಯವಶದಿಂದ ಆ ಮಗುವಿನ ಕಣ್ಗಿಗೆ ಪುಟ್ಟ ಸಾಲಗ್ರಾಮದ ಒಂದು ರಮಣೀಯ ಶಿಲೆಯು ಬಹಳ ಶೋಭೆಯಿಂದ ಕಾಣಿಸಲು ಅದನ್ನು ತಾನು ಎತ್ತಿಕೊಂಡು ಗೆಳೆಯರಿಗೆ ತೋರಿಸಿದನು.];; ಬಟ್ಟೆಗಲ್ಲು ಇಂತು ವರ್ತುಳದಿಂದೆ ಚೆಲ್ವಾಗಿ ಪುಟ್ಟುವುದೆ ಪೊಸತೆಂದು ಪಿಡಿದಾಡುತ ಒಡನೆ ಬೈತಿಟ್ಟು ಕೊಂಬಂ ಬಾಯೊಳು ಅನವರತಂ ಇರಿಸಲ್ಕೆ ತನಗೆ ಮನೆಯಿಲ್ಲವಾಗಿ=[ಬೀದಿಯ ಕಲ್ಲು ಹೀಗೆ ದುಂಡಾಗಿ ಚೆಲುವಾಗಿ ಹುಟ್ಟುವುದೆ! ಇದು ಹೊಸತು, ಎಂದು ಅದನ್ನು ಹಿಡಿದುಕೊಂಡು ಆಡತ್ತಾ, ಆ ಕೂಡಲೆ ಅದನ್ನು ಬಾಯಲ್ಲಿ ಯಾವಾಗಲೂ ಬೈತಿಟ್ಟು ಕೊಳ್ಳವನು; ಏಕೆಂದರೆ ತನಗೆ ಅದನ್ನು ಇಟ್ಟುಕೊಳ್ಳಲು ಮನೆಯಿಲ್ಲವಾಗಿ ಬಾಯಲ್ಲಿ ಇಟ್ಟುಕೊಳ್ಳವನು.]
  • ತಾತ್ಪರ್ಯ: ದಾರಿಯಲ್ಲಿ ಪುಣ್ಯವಶದಿಂದ ಆ ಮಗುವಿನ ಕಣ್ಗಿಗೆ ಒಂದು ಪುಟ್ಟ ಸಾಲಗ್ರಾಮದ ರಮಣೀಯ ಶಿಲೆಯು ಬಹಳ ಶೋಭೆಯಿಂದ ಕಾಣಿಸಲು ಅದನ್ನು ತಾನು ಎತ್ತಿಕೊಂಡು ಗೆಳೆಯರಿಗೆ ತೋರಿಸಿದನು. ಬೀದಿಯ ಕಲ್ಲು ಹೀಗೆ ದುಂಡಾಗಿ ಚೆಲುವಾಗಿ ಹುಟ್ಟುವುದೆ! ಇದು ಹೊಸತು, ಎಂದು ಅದನ್ನು ಹಿಡಿದುಕೊಂಡು ಆಡತ್ತಾ, ಆ ಕೂಡಲೆ ಅದನ್ನು ಬಾಯಲ್ಲಿ ಯಾವಾಗಲೂ ಬೈತಿಟ್ಟು ಕೊಳ್ಳವನು; ಏಕೆಂದರೆ ತನಗೆ ಅದನ್ನು ಇಟ್ಟುಕೊಳ್ಳಲು ಮನೆಯಿಲ್ಲವಾಗಿ ಬಾಯಲ್ಲಿ ಇಟ್ಟುಕೊಳ್ಳವನು.
  • (ಪದ್ಯ:೨೩)

ಪದ್ಯ:-:೨೪:

ಸಂಪಾದಿಸಿ

ತೊಳಪ ಸಾಲಗ್ರಾಮ ಫಲದಿಂದ ಬಾಲಕಂ |
ಕೆಳೆಮಕ್ಕಳೊಡನಾಟದಶ್ಮಗೋಳಕಮೆಂದು |
ತಿಳೆದಣ್ಣೆ ಕಲ್ಲೊಡ್ಡಿಗಳನಾಡುತದರಿಂದೆ ಗೆಲ್ದೆಲ್ಲರಂ ಜರೆಯುತ |
ಕಳಕಳಿಸಿ ನಗುತತಿಸ್ನೇಹದಿಂ ಕ್ರೀಡೆಯಂ |
ತಳೆದಾಗಳುಣಿಸುಗಳನುಂಬಲ್ಲಿ ತನ್ನ ಕೈ |
ದಳಕೆ ತಂದುಳಿದ ಪೊಳ್ತಿನೊಳಾವಗಂ ಬಾಯೊಳಿಸಿರಿಕೊಂಡಿರುತಿರ್ಪನು ||24||

ಪದವಿಭಾಗ-ಅರ್ಥ:
ತೊಳಪ ಸಾಲಗ್ರಾಮ ಫಲದಿಂದ ಬಾಲಕಂ ಕೆಳೆಮಕ್ಕಳೊಡನೆ (ಕೆಳೆ:ಸ್ನೇಹ; ಮಕ್ಕಳು: ಗೆಳೆಯ ಮಕ್ಕಳು) ಆಟದ ಅಶ್ಮಗೋಳಕಮೆಂದು ತಿಳೆದು ಅಣ್ಣೆಕಲ್ಲ ಒಡ್ಡಿಗಳನು ಆಡುತ ಅದರಿಂದೆ ಗೆಲ್ದು ಎಲ್ಲರಂ ಜರೆಯುತ=[ಹೊಳೆಯವ ಸಾಲಗ್ರಾಮ ಫಲದಿಂದ ಬಾಲಕನು ಗೆಳಯರೊಡನೆ ಆಟದಲ್ಲಿ ಶಾಲಗ್ರಾಮವನ್ನು ಕಲ್ಲಿನ ಗೋಲಿಯೆಂದು ತಿಳೆದು ಅಣ್ಣೆಕಲ್ಲಾಟ ಮತ್ತು ಪಂದ್ಯದಲ್ಲಿ ಒಡ್ಡು*/ಪಣಗಳನ್ನು ಇಟ್ಟು ಆಡುವಾಗ ಅದರಿಂದ ಗೆದ್ದು ಎಲ್ಲರನ್ನೂ ಹೀಯಾಳಿಸುತ್ತದ್ದನು.];; ಕಳಕಳಿಸಿ ನಗುತ ಅತಿಸ್ನೇಹದಿಂ ಕ್ರೀಡೆಯಂ ತಳೆದು (ಆಡಿ) ಆಗಳು(ನಂತರ) ಉಣಿಸುಗಳನು ಉಂಬಲ್ಲಿ ತನ್ನ ಕೈದಳಕೆ ತಂದು ಉಳಿದ ಪೊಳ್ತಿನೊಳು ಆವಗಂ ಬಾಯೊಳು ಇಸಿರಿಕೊಂಡು ಇರುತಿರ್ಪನು=[ಕಳಕಳಿಸಿ,ಗೆಲುವಿನಿಂದ ನಗುತ್ತಾ ಅತಿ ಸ್ನೇಹದಿಂದ ಆಟವನ್ನು ಆಡಿ, ನಂತರ ಆಹಾರಗಳನ್ನು ಉಣ್ಣುವಾಗ, ತನ್ನ ಕೈಯ್ಯಲ್ಲಿ ಇಟ್ಟುಕೊಂಡು, ಉಳಿದ ಹೊತ್ತಿನಲ್ಲಿ ಯಾವಾಗಲೂ ಬಾಯಲ್ಲಿ ಇಟ್ಟುಕೊಂಡು ಇರುತ್ತಿದ್ದನು].
  • {ಒಡ್ಡು:ನಾ.ಒಡ್ಡು:ಪಣ; ಕ್ರಿ.ಪಣವನ್ನು ಒಡ್ಡು. ಸಾ.ಪ.ನಿಘಂಟು)
  • ತಾತ್ಪರ್ಯ:ಹೊಳೆಯವ ಸಾಲಗ್ರಾಮ ಫಲದಿಂದ ಬಾಲಕನು ಗೆಳಯರೊಡನೆ ಆಟದಲ್ಲಿ ಶಾಲಗ್ರಾಮವನ್ನು ಕಲ್ಲಿನ ಗೋಲಿಯೆಂದು ತಿಳೆದು ಅಣ್ಣೆಕಲ್ಲಾಟ ಮತ್ತು ಪಂದ್ಯದಲ್ಲಿ ಒಡ್ಡು*/ಪಣಗಳನ್ನು ಇಟ್ಟು ಆಡುವಾಗ ಅದರಿಂದ ಗೆದ್ದು ಎಲ್ಲರನ್ನೂ ಹೀಯಾಳಿಸುತ್ತದ್ದನು. ಕಳಕಳಿಸಿ,ಗೆಲುವಿನಿಂದ ನಗುತ್ತಾ ಅತಿ ಸ್ನೇಹದಿಂದ ಆಟವನ್ನು ಆಡಿ, ನಂತರ ಆಹಾರಗಳನ್ನು ಉಣ್ಣುವಾಗ, ತನ್ನ ಕೈಯ್ಯಲ್ಲಿ ಇಟ್ಟುಕೊಂಡು, ಉಳಿದ ಹೊತ್ತಿನಲ್ಲಿ ಯಾವಾಗಲೂ ಬಾಯಲ್ಲಿ ಇಟ್ಟುಕೊಂಡು ಇರುತ್ತಿದ್ದನು.
  • (ಪದ್ಯ:೨೪)VII

ಪದ್ಯ:-:೨೫:

ಸಂಪಾದಿಸಿ

ಕುಂತೀಕುಮಾರ ಕೇಳಾಮಹಾ ಪತ್ತನದೊ |
ಳಿಂತರ್ಭಕರೊಳಾಡುತಿಹ ಪಸುಳೆಗೈದು ಬರಿ |
ಸಂ ತುಂಬಿತಾ ಸಮಯದೊಳ್ ಪ್ರಬಲದಿಂ ಪ್ರವರ್ತಿಪ ದುಷ್ಟಬುದ್ಧಿಯೆಂಬ ||
ಕುಂತಳೇಂದ್ರನ ಮಂತ್ರಿ ತನ್ನ ಮನೆಯೊಳ್ ವಿಪ್ರ |
ಸಂತರ್ಪಣಂಗೆಯ್ಯಲಾ ದ್ವಿಜರ್ ಭೋಜನಾ |
ನಂತರದೊಳೈದೆ ಸತ್ಕೃತರಾಗಿ ಕುಳ್ಳಿರ್ದು ಪರಸುತಲ್ಲಿರುತಿರ್ದರು ||25|||

ಪದವಿಭಾಗ-ಅರ್ಥ:
ಕುಂತೀಕುಮಾರ ಕೇಳು ಆ ಮಹಾ ಪತ್ತನದೊಳು ಇಂತು ಅರ್ಭಕರೊಳು ಆಡುತಿಹ ಪಸುಳೆಗ ಐದು ಬರಿಸಂ ತುಂಬಿತು ಆ ಸಮಯದೊಳ್ ಪ್ರಬಲದಿಂ ಪ್ರವರ್ತಿಪ ದುಷ್ಟಬುದ್ಧಿಯೆಂಬ=[ಕುಂತೀಕುಮಾರ ಅರ್ಜುನನೇ ಕೇಳು, ಆ ಮಹಾ ಪಟ್ಟಣದಲ್ಲಿ ಹೀಗೆ ಮಕ್ಕಳ ಜೊತೆ ಆಡುತ್ತಿರುವ ಹಸುಳೆಗೆ ಐದು ವರ್ಷ ತುಂಬಿತು. ಆ ಸಮಯದಲ್ಲಿ ಕ್ರೂರವಾಗಿ ಪ್ರವರ್ತಿಸುವ ದುಷ್ಟಬುದ್ಧಿಯೆಂಬ ];; ಕುಂತಳೇಂದ್ರನ ಮಂತ್ರಿ ತನ್ನ ಮನೆಯೊಳ್ ವಿಪ್ರಸಂತರ್ಪಣಂ ಗೆಯ್ಯಲು ಆ ದ್ವಿಜರ್ ಭೋಜನಾನಂತರದೊಳು ಐದೆ ಸತ್ಕೃತರಾಗಿ ಕುಳ್ಳಿರ್ದು ಪರಸುತ ಅಲ್ಲಿ ಇರುತಿರ್ದರು=[ಕುಂತಳ ರಾಜನ ಮಂತ್ರಿ ತನ್ನ ಮನೆಯಲ್ಲಿ ವಿಪ್ರಸಂತರ್ಪಣೆಯನ್ನು ಮಾಡಿದನು. ಭೋಜನದ ನಂತರ ಆ ವಿಪ್ರರು ಬಂದು ಸತ್ಕಾರ ಪಡೆದು ಕುಳಿತು ಮಂತ್ರಿಯನ್ನು ಹರಸುತ ಅಲ್ಲಿ ಇದ್ದರು].
  • ತಾತ್ಪರ್ಯ:ಕುಂತೀಕುಮಾರ ಅರ್ಜುನನೇ ಕೇಳು, ಆ ಮಹಾ ಪಟ್ಟಣದಲ್ಲಿ ಹೀಗೆ ಮಕ್ಕಳ ಜೊತೆ ಆಡುತ್ತಿರುವ ಹಸುಳೆಗೆ ಐದು ವರ್ಷ ತುಂಬಿತು. ಆ ಸಮಯದಲ್ಲಿ ಕ್ರೂರವಾಗಿ ಪ್ರವರ್ತಿಸುವ ದುಷ್ಟಬುದ್ಧಿಯೆಂಬ ಕುಂತಳ ರಾಜನ ಮಂತ್ರಿ ತನ್ನ ಮನೆಯಲ್ಲಿ ವಿಪ್ರಸಂತರ್ಪಣೆಯನ್ನು ಮಾಡಿದನು. ಭೋಜನದ ನಂತರ ಆ ವಿಪ್ರರು ಬಂದು ಸತ್ಕಾರ ಪಡೆದು ಕುಳಿತು ಮಂತ್ರಿಯನ್ನು ಹರಸುತ್ತ ಅಲ್ಲಿ ಇದ್ದರು.
  • (ಪದ್ಯ:೨೫)

ಪದ್ಯ:-:೨೬:

ಸಂಪಾದಿಸಿ

ಅಲ್ಲಿ ಕೆಳೆಯರೊಳಾಡುತಿರ್ದ ಶಿಶುವಂ ಕಂಡ |
ರುಲ್ಲಾಸದಿಂದೆಸೆವ ಭೂಸುರರ್ ಬಾಲಕನ |
ಸಲ್ಲಲಿತ ರಾಜಲಕ್ಷಣಕೆ ಬೆರಗಾದರವನಂಗಂಮಂ ನೋಡಿನೋಡಿ ||
ನಿಲ್ಲದನುರಾಗದಿಂದಾರ ಸುತನೀ ತರುಣ |
ನೆಲ್ಲಿಂದ ಬಂದನೆಂದಾ ದುಷ್ಟಬುದ್ಧಿಯಂ |
ಮೆಲ್ಲನೆ ವಿಚಾರದಿಂ ಕೇಳ್ದೊಡಾ ವಿಪ್ರರ್ಗೆ ನಗುತಾತನಿಂತೆಂದನು ||26||

ಪದವಿಭಾಗ-ಅರ್ಥ:
ಅಲ್ಲಿ ಕೆಳೆಯರೊಳು ಆಡುತಿರ್ದ ಶಿಶುವಂ ಕಂಡರು ಅಲ್ಲಾಸದಿಂದೆ ಎಸೆವ ಭೂಸುರರ್ ಬಾಲಕನ ಸಲ್ಲಲಿತ ರಾಜಲಕ್ಷಣಕೆ ಬೆರಗಾದರು ಅವನ ಅಂಗಂಮಂ ನೋಡಿನೋಡಿ=[ಅಲ್ಲಿ ಗೆಳೆಯರ ಜೊತೆ ಆಡುತ್ತಿದ್ದ ಸಂತೋಷದಿಂದಿರುವ ತೇಜಸ್ವಿ ಚಿಕ್ಕಬಾಲಕನನ್ನು ಕಂಡರು. ವಿಪ್ರರು ಬಾಲಕನ ಕೋಮಲವಾದ ರಾಜಲಕ್ಷಣ ನೋಡಿ ಬೆರಗಾದರು. ಅವನ ಅವನ ದೇಹ ಲಕ್ಷನವನ್ನು ಪದೇ ಪದೇ ನೋಡಿ];;ನಿಲ್ಲದೆ ಅನುರಾಗದಿಂದ ಆರ ಸುತನು ಈ ತರುಣನು ಎಲ್ಲಿಂದ ಬಂದನು ಎಂದಾ ದುಷ್ಟಬುದ್ಧಿಯಂ ಮೆಲ್ಲನೆ ವಿಚಾರದಿಂ ಕೇಳ್ದೊಡೆ ಆ ವಿಪ್ರರ್ಗೆ ನಗುತ ಆತನು ಇಂತೆಂದನು=[ಮನಸ್ಸು ತಡೆಯದೆನ ಪ್ರೀತಿಯಿಂದ, ಇವನು ಯಾರ ಮಗನು? ಈ ತರುಣ ಬಾಲಕನು ಎಲ್ಲಿಂದ ಬಂದನು? ಎಂದು ಆ ದುಷ್ಟಬುದ್ಧಿಯನ್ನು ಮೆಲ್ಲನೆ ವಿಚಾರಸಿ ಕೇಳಿದಾಗ ಆ ವಿಪ್ರರಿಗೆ ನಗುತ್ತಾ ಆತನು ಹೀಗೆ ಹೇಳಿದನು].
  • ತಾತ್ಪರ್ಯ:ಅಲ್ಲಿ ಗೆಳೆಯರ ಜೊತೆ ಆಡುತ್ತಿದ್ದ ಸಂತೋಷದಿಂದಿರುವ ತೇಜಸ್ವಿ ಚಿಕ್ಕಬಾಲಕನನ್ನು ಕಂಡರು. ವಿಪ್ರರು ಬಾಲಕನ ಕೋಮಲವಾದ ರಾಜಲಕ್ಷಣ ನೋಡಿ ಬೆರಗಾದರು. ಅವನ ಅವನ ದೇಹ ಲಕ್ಷನವನ್ನು ಪದೇ ಪದೇ ನೋಡಿ, ಮನಸ್ಸು ತಡೆಯದೆನ ಪ್ರೀತಿಯಿಂದ, ಇವನು ಯಾರ ಮಗನು? ಈ ತರುಣ ಬಾಲಕನು ಎಲ್ಲಿಂದ ಬಂದನು? ಎಂದು ಆ ದುಷ್ಟಬುದ್ಧಿಯನ್ನು ಮೆಲ್ಲನೆ ವಿಚಾರಸಿ ಕೇಳಿದಾಗ ಆ ವಿಪ್ರರಿಗೆ ನಗುತ್ತಾ ಆತನು ಹೀಗೆ ಹೇಳಿದನು.
  • (ಪದ್ಯ:೨೬)

ಪದ್ಯ:-:೨೭:

ಸಂಪಾದಿಸಿ

ಈ ಪುರದೊಳೆನಿತಿಲ್ಲನಾಥರಾಗಿಹ ಬಾಲ |
ರೀಪರಿಯೊಳೆತ್ತಣವ ನಾರಸುತನೆಂದರಿಯೆ |
ವೀ ಪಸುಳೆಯಂ ರಾಜಕಾರ್ಯದೊಳಗಿಹೆವಿದರ ಚಿಂತೆ ನಮಗೇತಕೆನಲು ||
ಆ ಪಾರ್ವರೆಂದಿರ್ದೊಡಂ ಚಾರುಲಕ್ಷಣದೊ |
ಳೀ ಪೊಳಲ್ಗೀ ಕುಂತಳಾಧಿಶನಾಳ್ವ ನ |
ಮ್ಮೀ ಪೊಡವಿಗೊಡೆಯನಹ ನೀತನಂ ನೀನಿರಿಸಿಕೊಂಡು ರಕ್ಷಿಪುದೆಂದರು ||27|||

ಪದವಿಭಾಗ-ಅರ್ಥ:
ಈ ಪುರದೊಳು ಎನಿತಿಲ್ಲ ಅನಾಥರಾಗಿ ಇಹ ಬಾಲರು ಈ ಪರಿಯೊಳು ಎತ್ತಣವನು ಆರ ಸುತನೆಂದು ಅರಿಯೆವು ಈ ಪಸುಳೆಯಂ ರಾಜಕಾರ್ಯದೊಳಗೆ ಇಹೆವು ಇದರ ಚಿಂತೆ ನಮಗೇತಕ ಎನಲು=[ಈ ನಗರದಲ್ಲಿ ಈ ಪರಿಯೊಳು ಅನಾಥರಾಗಿ ಇರುವ ಬಾಲಕರು ಎಷ್ಟುಮಂದಿ ಇಲ್ಲ! ಬಹಳ ಇರುವರು. ಇವನು ಎಲ್ಲಿಯವನು, ಈ ಹಸುಳೆಯು ಯಾರ ಮಗನೆಂದು ತಿಳಿಯೆವು. ರಾಜಕಾರ್ಯದಲ್ಲಿ ಇರುವೆವು; ಇದರ ಚಿಂತೆ ನಮಗೇತಕ್ಕೆ, ಎನ್ನಲು,];; ಆ ಪಾರ್ವರು ಎಂದಿರ್ದೊಡಂ ಚಾರುಲಕ್ಷಣದೊಳು ಈ ಪೊಳಲ್ಗೆ ಈ ಕುಂತಳಾಧಿಶನು ಆಳ್ವನು ನಮ್ಮ ಈ ಪೊಡವಿಗೆ ಒಡೆಯನಹನು ಈತನಂ ನೀನು ಇರಿಸಿಕೊಂಡು ರಕ್ಷಿಪುದು ಎಂದರು=[ಆ ವಿಪ್ರರು ಎಂದಾದರು ಉತ್ತಮ ಲಕ್ಷಣದ ಈ ಬಾಲನು ಈ ನಗರಕ್ಕೆ ಕುಂತಳಾಧಿಶನಾಗಿ ಆಳುವನು. ನಮ್ಮ ಈ ಭೂಮಿಗೆ ಒಡೆಯನಾಗುವನು; ಈತನನ್ನು ನೀನು ಇರಿಸಿಕೊಂಡು ರಕ್ಷಿಸಬೇಕು, ಎಂದರು].
  • ತಾತ್ಪರ್ಯ:ಈ ನಗರದಲ್ಲಿ ಈ ಪರಿಯೊಳು ಅನಾಥರಾಗಿ ಇರುವ ಬಾಲಕರು ಎಷ್ಟುಮಂದಿ ಇಲ್ಲ! ಬಹಳ ಇರುವರು. ಇವನು ಎಲ್ಲಿಯವನು, ಈ ಹಸುಳೆಯು ಯಾರ ಮಗನೆಂದು ತಿಳಿಯೆವು. ನಾವು ರಾಜಕಾರ್ಯದಲ್ಲಿ ಇರುವೆವು; ಇದರ ಚಿಂತೆ ನಮಗೇತಕ್ಕೆ, ಎನ್ನಲು, ಆ ವಿಪ್ರರು ಎಂದಾದರು ಉತ್ತಮ ಲಕ್ಷಣದ ಈ ಬಾಲನು ಈ ನಗರಕ್ಕೆ ಕುಂತಳಾಧಿಶನಾಗಿ ಆಳುವನು. ನಮ್ಮ ಈ ಭೂಮಿಗೆ ಒಡೆಯನಾಗುವನು; ಈತನನ್ನು ನೀನು ಇರಿಸಿಕೊಂಡು ರಕ್ಷಿಸಬೇಕು, ಎಂದರು.
  • (ಪದ್ಯ:೨೭)

ಪದ್ಯ:-:೨೮:

ಸಂಪಾದಿಸಿ

ಕ್ರೂರ ನಕ್ರಾಕುಲದೊಳಿಡಿದಿರ್ದ ಪೆರ್ಮಡು ಗ |
ಭೀರ ನಿರ್ಮಲ ಜಲದೊಳೆಸೆವಂತೆ ಮನದೊಳ್ ಕ |
ಠೋರತರ ಭಾವಮಂ ತಳೆದು ಬಹಿರಂಗದೊಳ್ ವಿನಯಮುಳ್ಳಾತನಾಗಿ ||
ಚಾರು ಲಕ್ಷಣದ ಶಿಶುವಂ ನೋಡಿ ಧರೆಯ ಬೃಂ |
ದಾರಕರ ನುಡಿಗೊಪ್ಪಿದವೊಲಿರ್ದು ಬಳಿಕ ಸ |
ತ್ಕಾರದಿಂದಾವಿಪ್ರಂ ಕಳುಹಿದಂ ದುಷ್ಟಬುದ್ಧಿ ನಿಜಭವನದಿಂದೆ ||28||

ಪದವಿಭಾಗ-ಅರ್ಥ:
ಕ್ರೂರ ನಕ್ರ ಆಕುಲದೊಳು(ಸಮೂಹ) ಇಡಿದು ಇರ್ದ ಪೆರ್ಮಡು ಗಭೀರ ನಿರ್ಮಲ ಜಲದೊಳು ಎಸೆವಂತೆ ಮನದೊಳ್ ಕಠೋರತರ ಭಾವಮಂ ತಳೆದು ಬಹಿರಂಗದೊಳ್ ವಿನಯಮುಳ್ಳಾತನಾಗಿ=[ಕ್ರೂರವಾದ ಮೊಸಳೆಗಳನ್ನು ತುಂಬಿಕೊಂಡಿರುವ ದೊಡ್ಡ ಮಡು/ಕರೆ ಗಂಭೀರವಾಗಿ ನಿರ್ಮಲವಾದ ನೀರಿನಿಂದಕೂಡಿದಂತೆ ಕಾಣುವಂತೆ, ದುಷ್ಟಬುದ್ಧಿಯು ಮನಸ್ಸಿನಲ್ಲಿ ಕಠೋರವಾದ ಭಾವನೆಯನ್ನು ಹೊಂದಿದ್ದರೂ ಬಹಿರಂಗದಲ್ಲಿ ವಿನಯವುಳ್ಳವನಂತೆ];; ಚಾರು ಲಕ್ಷಣದ ಶಿಶುವಂ ನೋಡಿ ಧರೆಯ ಬೃಂದಾರಕರ ನುಡಿಗೆ ಒಪ್ಪಿದವೊಲು ಇರ್ದು ಬಳಿಕ ಸತ್ಕಾರದಿಂದಾವಿಪ್ರಂ ಕಳುಹಿದಂ ದುಷ್ಟಬುದ್ಧಿ ನಿಜಭವನದಿಂದೆ=[ಸುಂದರ ಲಕ್ಷಣದ ಮಗುವನ್ನು ನೋಡಿ, ಭೂದೇವತೆಗಳಾದ ವಿಪ್ರರ ಮಾತಿಗೆ ಒಪ್ಪಿದಂತೆ ಇದ್ದು, ಬಳಿಕ ದುಷ್ಟಬುದ್ಧಿ ಸತ್ಕಾರಮಾಡಿ ಆ ವಿಪ್ರನ್ನು ತನ್ನ ಮನೆಯಿಂದ ಕಳುಹಿಸಿದನು].
  • ತಾತ್ಪರ್ಯ:ಕ್ರೂರವಾದ ಮೊಸಳೆಗಳನ್ನು ತುಂಬಿಕೊಂಡಿರುವ ದೊಡ್ಡ ಮಡು/ಕರೆ ಗಂಭೀರವಾಗಿ ನಿರ್ಮಲವಾದ ನೀರಿನಿಂದ ಕೂಡಿದಂತೆ ಕಾಣುವಂತೆ,ದುಷ್ಟಬುದ್ಧಿಯು ಮನಸ್ಸಿನಲ್ಲಿ ಕಠೋರವಾದ ಭಾವನೆಯನ್ನು ಹೊಂದಿದ್ದರೂ ಬಹಿರಂಗದಲ್ಲಿ ವಿನಯವುಳ್ಳವನಂತೆ, ಸುಂದರ ಲಕ್ಷಣದ ಮಗುವನ್ನು ನೋಡಿ, ಭೂದೇವತೆಗಳಾದ ವಿಪ್ರರ ಮಾತಿಗೆ ಒಪ್ಪಿದಂತೆ ಇದ್ದು, ಬಳಿಕ ದುಷ್ಟಬುದ್ಧಿ ಸತ್ಕಾರಮಾಡಿ ಆ ವಿಪ್ರನ್ನು ತನ್ನ ಮನೆಯಿಂದ ಕಳುಹಿಸಿದನು.
  • (ಪದ್ಯ:೨೮)

ಪದ್ಯ:-:೨೯:

ಸಂಪಾದಿಸಿ

ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯ ಮೆನ |
ಗೇಕಾಧಿಪತ್ಯಮಾಗಿರ್ದಪುದು ಮುಂದಿವಂ |
ಭೂಕಾಂತನಾದಪಂ ಗಡ ವಿಪ್ರರೆಂದ ನುಡಿ ತಪ್ಪದೆನ್ನಾತ್ಮಜರ್ಗೆ ||
ಬೇಕಾದ ಸಂಪದಂ ಬಯಲಾಗಿ ಪೋಪುದೆಂ|
ದಾ ಕುಮತಿ ಬೇರೊಂದುಪಾಯಂ ಚಿಂತಿಸಿ ಭ |
ಯಾಕಾರದೊಡಲ ಚಂಡಾಲರಂ ಕರೆಸಿ ಬೆಸಸಿದನಾರುಮರಿಯದಂತೆ ||29||

ಪದವಿಭಾಗ-ಅರ್ಥ:
ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯಂ ಎನಗೆ ಏಕಾಧಿಪತ್ಯಂ ಆಗಿರ್ದಪುದು ಮುಂದೆ ಇವಂ ಭೂಕಾಂತನಾದಪಂ ಗಡ ವಿಪ್ರರೆಂದ ನುಡಿ ತಪ್ಪದು ಎನ್ನ ಆತ್ಮಜರ್ಗೆ=[ಈ ಕುಂತಳ ರಾಜನಿಗೆ ಮಕ್ಕಳಿಲ್ಲ; ರಾಜ್ಯವು ತನಗೇ ಏಕಾಧಿಪತ್ಯವು ಆಗಿರುವುದು, ಮುಂದೆ ಈ ಬಾಲಕನು ರಾಜನಾಗುವನು ಗಡ! ವಿಪ್ರರು ಹೇಳಿದ ಮಾತು ತಪ್ಪದು, ನನ್ನ ಮಕ್ಕಳಿಗೆ ];; ಬೇಕಾದ ಸಂಪದಂ ಬಯಲಾಗಿ ಪೋಪುದೆಂದು ಆ ಕುಮತಿ ಬೇರೊಂದು ಉಪಾಯಂ ಚಿಂತಿಸಿ ಭಯಾಕಾರದೊಡಲ ಚಂಡಾಲರಂ ಕರೆಸಿ ಬೆಸಸಿದನು ಆರುಂ ಅರಿಯದಂತೆ.=[ಸಿಗಬೇಕಾದ ಸಂಪತ್ತು ಇಲ್ಲದಂತಾಗಿ ಹೋಗುವುದೆಂದು ಆ ಕುಮತಿ/ಕಟ್ಟಬುದ್ಧಿಯವನು ಬೇರೊಂದು ಉಪಾಯವನ್ನು ಚಿಂತಿಸಿ ಭಯಂಕರರೂಪದ ಚಂಡಾಲರನ್ನು ಕರೆಸಿ ಯಾರೂ ಅರಿಯದಂತೆ ಅವರಿಗೆ ಹೇಳಿದನು.].
  • ತಾತ್ಪರ್ಯ:ಈ ಕುಂತಳ ರಾಜನಿಗೆ ಮಕ್ಕಳಿಲ್ಲ; ರಾಜ್ಯವು ತನಗೇ ಏಕಾಧಿಪತ್ಯವು ಆಗಿರುವುದು, ಮುಂದೆ ಈ ಬಾಲಕನು ರಾಜನಾಗುವನು ಗಡ! ವಿಪ್ರರು ಹೇಳಿದ ಮಾತು ತಪ್ಪದು, ನನ್ನ ಮಕ್ಕಳಿಗೆ, ಸಿಗಬೇಕಾದ ಸಂಪತ್ತು ಇಲ್ಲದಂತಾಗಿ ಹೋಗುವುದೆಂದು ಆ ಕುಮತಿ/ಕಟ್ಟಬುದ್ಧಿಯವನು ಬೇರೊಂದು ಉಪಾಯವನ್ನು ಚಿಂತಿಸಿ ಭಯಂಕರರೂಪದ ಚಂಡಾಲರನ್ನು ಕರೆಸಿ ಯಾರೂ ಅರಿಯದಂತೆ ಅವರಿಗೆ ಹೇಳಿದನು.
  • (ಪದ್ಯ:೨೯)VIII

ಪದ್ಯ:-:೩೦:

ಸಂಪಾದಿಸಿ

ಕಾನನಾಂತರದೊಳೀ ತರಳನಂ ಕೊಂದು ನೀ |
ವೇನಾದೊಡಂ ಕುರುಪ ತಂದೆನಗೆ ತೋರ್ಪುದೆಂ |
ದಾ ನರೇಂದ್ರನ ಮಂತ್ರಿ ಬೆಸಸಿದೊಡೆ ಪಶುಘಾತಕಿಗಳಾಡುತಿಹ ಶಿಶುವನು ||
ಹೀನ ದಯದಿಂದೆ ಪಿಡಿದೆತ್ತಿಕೊಂಡೊಯ್ದರ್ ಭ |
ಯಾನಕದೊಳಂದು ಕೊಲೆಗೆಳಸಿ ಪ್ರಹ್ಲಾದನಂ |
ದಾನವೇಶ್ವರನಾಜ್ಞೆಯಿಂ ಕಾಳರಕ್ಕಸರ್ ಬಂದು ಕೈದುಡುಕಿದಂತೆ ||30||

ಪದವಿಭಾಗ-ಅರ್ಥ:
ಕಾನನಾಂತರದೊಳು(ಕಾನನ ಆಂತರದಲ್ಲಿ) ಈ ತರಳನಂ ಕೊಂದು ನೀವು ಏನಾದೊಡಂ ಕುರುಪ ತಂದೆನಗೆ ತೋರ್ಪುದು ಎಂದು ಆ ನರೇಂದ್ರನ ಮಂತ್ರಿ ಬೆಸಸಿದೊಡೆ=[ಆ ದೇಶದ ರಾಜನಮಂತ್ರಿ ದುಷ್ಟಬುದ್ಧಿಯು ಕಟುಕರಿಗೆ, 'ಕಾಡಿನೊಳಗೆ ಈ ಬಾಲಕನನ್ನು ಕೊಂದು ನೀವು ಕೊಂದಿದ್ದಕ್ಕೆ ಏನಾದರೊಂದು ಕುರುಹನ್ನು ತಂದು ತನಗೆ ತೊರಿಸುವುದು, ಎಂದು ಆ ಹೇಳಿದಾಗ];; ಪಶುಘಾತಕಿಗಳು ಆಡುತಿಹ ಶಿಶುವನು ಹೀನ ದಯದಿಂದೆ ಪಿಡಿದೆತ್ತಿಕೊಂಡು ಒಯ್ದರ್ ಭಯಾನಕದೊಳು ಅಂದು ಕೊಲೆಗೆಳಸಿ ಪ್ರಹ್ಲಾದನಂ ದಾನವೇಶ್ವರನ ಆಜ್ಞೆಯಿಂ ಕಾಳರಕ್ಕಸರ್ ಬಂದು ಕೈದುಡುಕಿದಂತೆ=[ಕೊಲೆಗಡುಕರು, ಆಡುತತ್ತರುವ ಬಾಲಕನನ್ನು ದಯೆಯಿಲ್ಲದೆ ಹಿಡಿದು ಅಂದು ಕೊಲೆಮಾಡಲು ಭಯಂಕರ ರೀತಿಯಲ್ಲಿ ಎತ್ತಿಕೊಂಡು ಹೋದರು. ಅದು ಹಿಂದೆ ಪ್ರಹ್ಲಾದನನ್ನು ದಾನವೇಶ್ವರ ಹಿರ್ಣ್ಯಕಶಿಪುವಿನ ಆಜ್ಞೆಯಿಂದ ಕಾಳರಕ್ಕಸರು ಬಂದು ಬೆಟ್ಟದೀದ ಎಸೆಯಲು ಕೈದುಡುಕಿ ಎತ್ತಿಕೊಂಡು ಹೋದಂತೆ ಇತ್ತು.]
  • ತಾತ್ಪರ್ಯ:ಆ ದೇಶದ ರಾಜನಮಂತ್ರಿ ದುಷ್ಟಬುದ್ಧಿಯು ಕಟುಕರಿಗೆ, 'ಕಾಡಿನೊಳಗೆ ಈ ಬಾಲಕನನ್ನು ಕೊಂದು ನೀವು ಕೊಂದಿದ್ದಕ್ಕೆ ಏನಾದರೊಂದು ಕುರುಹನ್ನು ತಂದು ತನಗೆ ತೊರಿಸುವುದು, ಎಂದು ಆ ಹೇಳಿದಾಗ, ಕೊಲೆಗಡುಕರು, ಆಡುತತ್ತರುವ ಬಾಲಕನನ್ನು ದಯೆಯಿಲ್ಲದೆ ಹಿಡಿದು ಅಂದು ಕೊಲೆಮಾಡಲು ಭಯಂಕರ ರೀತಿಯಲ್ಲಿ ಎತ್ತಿಕೊಂಡು ಹೋದರು. ಅದು ಹಿಂದೆ ಪ್ರಹ್ಲಾದನನ್ನು ದಾನವೇಶ್ವರ ಹಿರ್ಣ್ಯಕಶಿಪುವಿನ ಆಜ್ಞೆಯಿಂದ ಕಾಳರಕ್ಕಸರು ಬಂದು ಬೆಟ್ಟದೀದ ಎಸೆಯಲು ಕೈದುಡುಕಿ ಎತ್ತಿಕೊಂಡು ಹೋದಂತೆ ಇತ್ತು.
  • (ಪದ್ಯ:೩೦)

ಪದ್ಯ:-:೩೧:

ಸಂಪಾದಿಸಿ

ಪಾತಕಿಗಳೋಡಲೊಳಿಹ ಪರಮಾತ್ಮನಂತೆ ಯಮ |
ದೂತರೆಳೆತಂದಜಾಮಿಳನಂತೆ ಕಾಕ ಸಂ |
ಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ ನಲುಗಿ ಕತ್ತಲೆಯೊಳಿರ್ದ ||
ಶೀತಲ ಮರೀಚಿ ಲಾಂಛನದಂತೆ ಬಹಳ ಕೋ |
ಪಾತಿಶಯದೊಳಗಿಹ ವಿವೇಕದಂತಾ ಪಶು |
ಘಾತಕಿಗಳೆತ್ತಿಕೊಂಡೊಯ್ವ ಬಾಲಕನಿರ್ದನವರೆಡೆಯೊಳಂಜುತಳುತ ||31||

ಪದವಿಭಾಗ-ಅರ್ಥ:
ಪಾತಕಿಗಳ ಒಡಲೊಳು ಇಹ ಪರಮಾತ್ಮನಂತೆ ಯಮದೂತರು ಎಳೆತಂದ ಅಜಾಮಿಳನಂತೆ ಕಾಕ ಸಂಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ ನಲುಗಿ ಕತ್ತಲೆಯೊಳಿರ್ದ ಶೀತಲ ಮರೀಚಿ ಲಾಂಛನದಂತೆ=[ಆ ಕೊಲೆಗಡುಕರು ಎತ್ತಿಕೊಂಡು ಹೋಗುತ್ತಿದ್ದ ಬಾಲಕನು ಅವರ ಬಳಿ ಅಂಜುತ್ತಾ ಅಳುತ್ತಾ ಇದ್ದ; ಹೇಗಿದ್ದನೆಂದರೆ: ಪಾತಕಿಗಳ ದೇಹದಲ್ಲಿರುವ ಪರಿಶುದ್ಧ ಪರಮಾತ್ಮನಂತೆ ಇದ್ದ; ಯಮದೂತರು ಎಳೆದುತಂದ ಅಜಾಮಿಳನಂತೆ ಇದ್ದ; ಕಾಗೆಗಳ ಮಧ್ಯೆ ಸಿಕ್ಕಿದ ನಲುಗಿದ ಕೋಗಿಲೆಯ ಮರಿಯಂತೆ ಇದ್ದ; ಕತ್ತಲೆಯೊಳಿದ್ದ ಶೀತಲ ಬೆಳಕಿನ ಕಿರಣದ ತೇಜಸ್ಸಿನಂತೆ (ಚಂದ್ರ?)ಇದ್ದ];; ಬಹಳ ಕೋಪಾತಿಶಯದೊಳಗೆ ಇಹ ವಿವೇಕದಂತೆ ಆ ಪಶುಘಾತಕಿಗಳು ಎತ್ತಿಕೊಂಡು ಒಯ್ವ ಬಾಲಕನಿರ್ದನು ಅವರೆಡೆಯೊಳು ಅಂಜುತ ಅಳುತ=[ಬಹಳ ಕೋಪಾತಿಶಯದಲ್ಲಿ ಇರುವ ವಿವೇಕದಂತೆ ಇದ್ದ; (ಆ ಕೊಲೆಗಡುಕರು ಎತ್ತಿಕೊಂಡು ಹೋಗುತ್ತಿದ್ದ ಬಾಲಕನು ಅವರ ಬಳಿ ಅಂಜುತ ಅಳುತ್ತಾ, ಇದ್ದ)].
  • ತಾತ್ಪರ್ಯ:ಆ ಕೊಲೆಗಡುಕರು ಎತ್ತಿಕೊಂಡು ಹೋಗುತ್ತಿದ್ದ ಬಾಲಕನು ಅವರ ಬಳಿ ಅಂಜುತ್ತಾ ಅಳುತ್ತಾ ಇದ್ದ; ಹೇಗಿದ್ದನೆಂದರೆ: ಪಾತಕಿಗಳ ದೇಹದಲ್ಲಿರುವ ಪರಿಶುದ್ಧ ಪರಮಾತ್ಮನಂತೆ ಇದ್ದ; ಯಮದೂತರು ಎಳೆದುತಂದ ಅಜಾಮಿಳನಂತೆ ಇದ್ದ; ಕಾಗೆಗಳ ಮಧ್ಯೆ ಸಿಕ್ಕಿದ ನಲುಗಿದ ಕೋಗಿಲೆಯ ಮರಿಯಂತೆ ಇದ್ದ; ಕತ್ತಲೆಯೊಳಿದ್ದ ಶೀತಲ ಬೆಳಕಿನ ಕಿರಣದ ತೇಜಸ್ಸಿನಂತೆ (ಚಂದ್ರ?)ಇದ್ದ; ಬಹಳ ಕೋಪಾತಿಶಯದಲ್ಲಿ ಇರುವ ವಿವೇಕದಂತೆ ಇದ್ದ.
  • (ಪದ್ಯ-೩೧

ಪದ್ಯ:-:೩೨:

ಸಂಪಾದಿಸಿ

ಪೆಗೆಲೊಳೇರಿಸಿ ಬನಕೆ ಚಂಡಾಲರೊಯ್ಯುತಿರೆ |
ಮಿಗೆ ಬೆದರಿ ಭಯದಿಂದೆ ಬಾಲಕಂ ಬಾಯೊಳಾ |
ವಗಮಿರಿಸಿಕೊಂಡಿರ್ಪ ದಿವ್ಯ ಸಾಳಗ್ರಾಮದುಪಲದತಿಯಮಹಿಮೆಯಿಂದೆ ||
ಬಗೆದೋರಲಾಗ ಮುರಹರ ಕೃಷ್ಣ ಕಮಲಾಕ್ಷ |
ಖಗರಾಜಗಮನ ಸಲಹೆಂದು ಚೀರಿದೊಡವನ |
ಮೊಗನೋಡಿ ಕರುಣದಿಂ ಕಟುಕರೆದೆ ಕರಗಿದುದದೆಂತೊ ಹರಿನಾಮದೇಳ್ಗೆ ||32||

ಪದವಿಭಾಗ-ಅರ್ಥ:
ಪೆಗೆಲೊಳು ಏರಿಸಿ ಬನಕೆ ಚಂಡಾಲರು ಒಯ್ಯುತಿರೆ ಮಿಗೆ ಬೆದರಿ ಭಯದಿಂದೆ ಬಾಲಕಂ ಬಾಯೊಳು ಆವಗಂ ಇರಿಸಿಕೊಂಡಿರ್ಪ ದಿವ್ಯ ಸಾಳಗ್ರಾಮದ ಉಪಲದತಿಯ ಮಹಿಮೆಯಿಂದೆ ಬಗೆದೋರಲ= [ಬಾಲಕನನ್ನು ಹೆಗೆಲಮೇಲೆ ಏರಿಸಿಕೊಂಡು ಕಾಡಿಗೆ ಚಂಡಾಲರು ಒಯ್ಯುತ್ತಿರಲು, ಅವನು ಬಹಳ ಹೆದರಿ ಭಯದಿಂದ. ಬಾಲಕನು ಬಾಯಲ್ಲಿ ಯಾವಾಗಲೂ ಇರಿಸಿಕೊಂಡಿದ್ದ ದಿವ್ಯ ಸಾಲಿಗ್ರಾಮದ ವಿಶೇಷ ಫಲದ ಮಹಿಮೆಯಿಂದೆ ದಾರಿತೋರಲು];; ಆಗ ಮುರಹರ ಕೃಷ್ಣ ಕಮಲಾಕ್ಷ ಖಗರಾಜಗಮನ ಸಲಹು ಎಂದು ಚೀರಿದೊಡೆ ಅವನ ಮೊಗನೋಡಿ ಕರುಣದಿಂ ಕಟುಕರ ಎದೆ ಕರಗಿದುದು ಅದೆಂತೊ ಹರಿನಾಮದ ಏಳ್ಗೆ=[ಆಗ, 'ಮುರಹರ ಕೃಷ್ಣ ಕಮಲಾಕ್ಷ ಖಗರಾಜಗಮನ ಸಲಹು' ಎಂದು ಕೂಗಿದಾಗ ಅವನ ಮುಖವನ್ನು ನೋಡಿ ಕರುಣದಿಂದ ಕಟುಕರ ಎದೆ ಕರಗಿ ದಯೆ ಉಂಟಾಯಿತು, ಅದೆಂತಹುದೋ ಆ ಹರಿನಾಮದ ಮಹಿಮೆ!].
  • ತಾತ್ಪರ್ಯ:ಬಾಲಕನನ್ನು ಹೆಗೆಲಮೇಲೆ ಏರಿಸಿಕೊಂಡು ಕಾಡಿಗೆ ಚಂಡಾಲರು ಒಯ್ಯುತ್ತಿರಲು, ಅವನು ಬಹಳ ಹೆದರಿ ಭಯದಿಂದ. ಬಾಲಕನು ಬಾಯಲ್ಲಿ ಯಾವಾಗಲೂ ಇರಿಸಿಕೊಂಡಿದ್ದ ದಿವ್ಯ ಸಾಲಿಗ್ರಾಮದ ವಿಶೇಷ ಫಲದ ಮಹಿಮೆಯಿಂದೆ ದಾರಿತೋರಲು,ಆಗ, 'ಮುರಹರ ಕೃಷ್ಣ ಕಮಲಾಕ್ಷ ಖಗರಾಜಗಮನ ಸಲಹು' ಎಂದು ಕೂಗಿದಾಗ ಅವನ ಮುಖವನ್ನು ನೋಡಿ ಕರುಣದಿಂದ ಕಟುಕರ ಎದೆ ಕರಗಿ ದಯೆ ಉಂಟಾಯಿತು, ಅದೆಂತಹುದೋ ಆ ಹರಿನಾಮದ ಮಹಿಮೆ!
  • (ಪದ್ಯ-೩೨)

ಪದ್ಯ:-:೩೩:

ಸಂಪಾದಿಸಿ

ಒಯ್ದು ಪಸುಳೆಯನರಣ್ಯದೊಳಿರಿಸಿ ಮರುಗಿ ಬಿಸು |
ಸುಯ್ದು ಪಶುಘಾತಕಿಗಳಾ ದುಷ್ಟಬುದ್ಧಿಯಂ |
ಬಯ್ದು ಶಿಶುವಧೆಗಳುಕಿ ನಿಂದು ನೋಡಂತೆ ಕಂಡರರ್ಭಕನೆಡೆದ ಕಾಲೊಳು ||
ಅಯ್ದಲ್ಲದೊಂದು ಬೆರಲಿರ್ಪುದಂ ಬಳಿಕದಂ |
ಕುಯ್ದು ಕುರುಪಂ ಕೊಂಡು ತಮ್ಮ ದಾತಾರನೆಡೆ |
ಗೆಯ್ದಿ ತೋರಿದೊಡವನವರ್ಗಳಂ ಮನ್ನಿಸಿ ಮಹೋತ್ಸವದೊಳಿರುತಿರ್ದನು ||33||

ಪದವಿಭಾಗ-ಅರ್ಥ:
ಒಯ್ದು ಪಸುಳೆಯನು ಅರಣ್ಯದೊಳಿರಿಸಿ ಮರುಗಿ ಬಿಸುಸುಯ್ದು ಪಶುಘಾತಕಿಗಳಾ ದುಷ್ಟಬುದ್ಧಿಯಂ ಬಯ್ದು ಶಿಶುವಧೆಗೆ ಅಳುಕಿ ನಿಂದು ನೋಡಂತೆ ಕಂಡರು ಅರ್ಭಕನ ಎಡೆದ ಕಾಲೊಳು ಅಯ್ದಲ್ಲದೆ ಒಂದು ಬೆರಲಿರ್ಪುದಂ=[ಆ ಮಗುವನ್ನು ತೆಗೆದುಕೊಂಡು ಹೋಗಿ ಅರಣ್ಯದಲ್ಲಿ ಇಟ್ಟರು. ಅವನಿಗಾಗಿ ಮರುಗಿ ದುಃಖದಿಂದ ನಿಟ್ಟುಸಿರುಬಿಟ್ಟು ಕಟುಕರು ಆ ದುಷ್ಟಬುದ್ಧಿಯನ್ನು ನಿಂದಿಸಿ, ಮಗುವಿನ ಕೊಲೆಗೆ ಅಳುಕಿದರು. ಹಾಗೇ ನಿಂತು ಆ ಮಗುವನ್ನು ನೋಡುತ್ತಿರಲು, ಅವರು ಕಂಡರು ಮಗುವಿನನ ಎಡೆದ ಪಾದದಲ್ಲಿ ಅಯ್ದಲ್ಲದೆ ಒಂದು ಹೆಚ್ಚಿಗೆ ಆರು ಬೆರಳು ಇರುವುದನ್ನು ಕಂಡರು.];; ಬಳಿಕದಂ ಕುಯ್ದು ಕುರುಪಂ ಕೊಂಡು ತಮ್ಮ ದಾತಾರನ ಎಡೆಗೆ ಯಯ್ದಿ ತೋರಿದೊಡೆ ಅವನವರ್ಗಳಂ ಮನ್ನಿಸಿ ಮಹೋತ್ಸವದೊಳು ಇರುತಿರ್ದನು=[ಬಳಿಕ ಅದನ್ನು ಕೊಯ್ದು ಮಗುವನ್ನು ಕೊಂದ ಕುರುಹು ಎಂದು ತೆಗೆದುಕೊಂಡು ತಮ್ಮ ದಾತಾರನಾದ ದುಷ್ಟಬುದ್ಧಿ ಮಂತ್ರಿಯ ಬಳಿಗೆ ಹೋಗಿ ತೋರಿಸಿದರು. ಅವನು ಅವರನ್ನು ಬಹುಮಾನ ಕೊಟ್ಟು ಮನ್ನಿಸಿ ಬಹಳ ಸಂತೋಷದಿಂದ ಇರುತ್ತಿದ್ದನು.]
  • ತಾತ್ಪರ್ಯ:ಆ ಮಗುವನ್ನು ತೆಗೆದುಕೊಂಡು ಹೋಗಿ ಅರಣ್ಯದಲ್ಲಿ ಇಟ್ಟರು. ಅವನಿಗಾಗಿ ಮರುಗಿ ದುಃಖದಿಂದ ನಿಟ್ಟುಸಿರುಬಿಟ್ಟು ಕಟುಕರು ಆ ದುಷ್ಟಬುದ್ಧಿಯನ್ನು ನಿಂದಿಸಿ, ಮಗುವಿನ ಕೊಲೆಗೆ ಅಳುಕಿದರು. ಹಾಗೇ ನಿಂತು ಆ ಮಗುವನ್ನು ನೋಡುತ್ತಿರಲು, ಅವರು ಕಂಡರು ಮಗುವಿನನ ಎಡೆದ ಪಾದದಲ್ಲಿ ಅಯ್ದಲ್ಲದೆ ಒಂದು ಹೆಚ್ಚಿಗೆ ಆರು ಬೆರಳು ಇರುವುದನ್ನು ಕಂಡರು.ಬಳಿಕ ಅದನ್ನು ಕೊಯ್ದು ಮಗುವನ್ನು ಕೊಂದ ಕುರುಹು ಎಂದು ತೆಗೆದುಕೊಂಡು ತಮ್ಮ ದಾತಾರನಾದ ದುಷ್ಟಬುದ್ಧಿ ಮಂತ್ರಿಯ ಬಳಿಗೆ ಹೋಗಿ ತೋರಿಸಿದರು. ಅವನು ಅವರನ್ನು ಬಹುಮಾನ ಕೊಟ್ಟು ಮನ್ನಿಸಿ ಬಹಳ ಸಂತೋಷದಿಂದ ಇರುತ್ತಿದ್ದನು.
  • (ಪದ್ಯ-೩೩)

ಪದ್ಯ:-:೩೪:

ಸಂಪಾದಿಸಿ

ಇತ್ತಲಾ ವಿಪಿನದೊಳ್ ತನ್ನ ವದನದೊಳಿರ್ದ |
ವೃತ್ತಸಾಲಗ್ರಾಮ ಶಿಲೆಯ ಪ್ರಭಾವದಿಂ |
ದುತ್ತಮಶ್ಲೋಕನಂ ಭಜಿಸೆ ದಯೆಗೈದೆಡದ ಕಾಲ ಷಷ್ಠಾಂಗುಳಿಯನು ||
ಕತ್ತರಿಸಿಕೊಂಡುಳುಹಿ ಪೋದರಂತ್ಯರ್ ಬಳಿಕ |
ತುತ್ತಿಸಿದ ರಾಹು ತೊಲಗಿದ ಶಶಿವೊಲಿರ್ದನವ |
ನೆತ್ತಣದು ಬಾಧೆಗಳ್ ನರ ನಿನ್ನ ಮಿತ್ರನಂ ಮರೆವೊಕ್ಕ ಜೀವಿಗಳ್ಗೆ ||34|

ಪದವಿಭಾಗ-ಅರ್ಥ:
ಇತ್ತಲಾ ವಿಪಿನದೊಳ್ ತನ್ನ ವದನದೊಳು ಇರ್ದ ವೃತ್ತಸಾಲಗ್ರಾಮ ಶಿಲೆಯ ಪ್ರಭಾವದಿಂದ ಉತ್ತಮಶ್ಲೋಕನಂ ಭಜಿಸೆ ದಯೆಗೈದ ಎಡದ ಕಾಲ ಷಷ್ಠಾಂಗುಳಿಯನು ಕತ್ತರಿಸಿಕೊಂಡು ಉಳುಹಿ ಪೋದರು ಅಂತ್ಯರ್=[ಇತ್ತ ಕಾಡಿನಲ್ಲಿ ತನ್ನ ಬಾಯಿಯಲ್ಲಿ ಇದ್ದ ದುಂಡನೆಯ ಸಾಲಗ್ರಾಮ ಶಿಲೆಯ ಪ್ರಭಾವದಿಂದ ವಿಷ್ಣುವನ್ನು ಭಜಿಸಲು ಕಟುಕರರು ದಯೆತೋರಿ, ಎಡದ ಕಾಲ ಆರನೇ ಬೆರಳನ್ನು ಕತ್ತರಿಸಿಕೊಂಡು ಮಗುವನ್ನು ಉಳಿಸಿ ಹೋದರು.];; ಬಳಿಕ ತುತ್ತಿಸಿದ ರಾಹು ತೊಲಗಿದ ಶಶಿವೊಲು ಇರ್ದನು ಅವನು ಎತ್ತಣದು ಬಾಧೆಗಳ್ ನರ (ಅರ್ಜುನ) ನಿನ್ನ ಮಿತ್ರನಂ ಮರೆವೊಕ್ಕ ಜೀವಿಗಳ್ಗೆ=[ಬಳಿಕ ಬಾಲಕನು ನುಂಗಿದ ರಾಹು ಬಿಟ್ಟ ಚಂದ್ರನಂತೆ ಇದ್ದನು. ಅರ್ಜುನನೇ ನಿನ್ನ ಮಿತ್ರ ಕೃಷ್ಣನನ್ನು ಮರೆಹೊಕ್ಕ ಜೀವಿಗಳಿಗೆ ಬಾಧೆಗಳು ಎಲ್ಲಿ ಬರುವುದು.!].
  • ತಾತ್ಪರ್ಯ:ಇತ್ತ ಕಾಡಿನಲ್ಲಿ ತನ್ನ ಬಾಯಿಯಲ್ಲಿ ಇದ್ದ ದುಂಡನೆಯ ಸಾಲಗ್ರಾಮ ಶಿಲೆಯ ಪ್ರಭಾವದಿಂದ ವಿಷ್ಣುವನ್ನು ಭಜಿಸಲು ಕಟುಕರರು ದಯೆತೋರಿ, ಎಡದ ಕಾಲ ಆರನೇ ಬೆರಳನ್ನು ಕತ್ತರಿಸಿಕೊಂಡು ಮಗುವನ್ನು ಉಳಿಸಿ ಹೋದರು. ಬಳಿಕ ಬಾಲಕನು ನುಂಗಿದ ರಾಹು ಬಿಟ್ಟ ಚಂದ್ರನಂತೆ ಇದ್ದನು. ಅರ್ಜುನನೇ ನಿನ್ನ ಮಿತ್ರ ಕೃಷ್ಣನನ್ನು ಮರೆಹೊಕ್ಕ ಜೀವಿಗಳಿಗೆ ಬಾಧೆಗಳು ಎಲ್ಲಿ ಬರುವುದು.!
  • (ಪದ್ಯ-೩೪)

ಪದ್ಯ:-:೩೫:

ಸಂಪಾದಿಸಿ

ಬಸಿವ ನೆತ್ತರ ಗಾಯದೆಡದಡಿಯ ವೇದನೆಗೆ |
ಪಸುಳೆ ಹರಿಹರಿಯೆಂದೊರಲ್ದಳುತಿರಲ್ ಕಣ್ಣೊ |
ಳೊಸರ್ವ ಬಾಷ್ಪಂಗಳಂ ಕಂಡು ಮಿಗವಕ್ಕಿಗಳ್ ನೊಂದು ಕಡು ಶೋಕದಿಂದೆ ||
ಪಸಿವು ನೀರಡಿಕೆಯಂ ತೊರೆದಲ್ಲಿ ನಿಂದುಪಚ |
ರಿಸುತಿರ್ದುವಾ ಶಿಶುವನೆಂದೊಡೆಲೆ ಪಾರ್ಥ ಕೇಳ್ |
ವಸುಮತಿಯೊಳಾರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ ||35||

ಪದವಿಭಾಗ-ಅರ್ಥ:
ಬಸಿವ ನೆತ್ತರ ಗಾಯದ ಎಡದ ಅಡಿಯ ವೇದನೆಗೆ ಪಸುಳೆ ಹರಿಹರಿಯೆಂದು ಒರಲ್ದು ಅಳುತಿರಲ್ ಕಣ್ಣೊಳು ಒಸರ್ವ ಬಾಷ್ಪಂಗಳಂ ಕಂಡು ಮಿಗವಕ್ಕಿಗಳ್ ನೊಂದು ಕಡು ಶೋಕದಿಂದೆ=[ಎಡದ ಕಾಲಿನಲ್ಲಿ ಗಾಯದಿಂದ ರಕ್ತ ಸುರಿಯುವ ವೇದನೆಗೆ, ಮಗು ಹರಿಹರಿಯೆಂದು ಕೂಗಿ ಅಳುತ್ತಿರಲು, ಕಣ್ಣಲ್ಲಿ ಸುರಿವ ನೀರನ್ನು ಕಂಡು ಮಿಗ/ಜಿಂಕೆ ಹಕ್ಕಿಗಳು, ನೊಂದು ಬಹಳ ಶೋಕದಿಂದ];; ಪಸಿವು ನೀರಡಿಕೆಯಂ ತೊರೆದಲ್ಲಿ ನಿಂದು ಉಪಚರಿಸುತಿರ್ದುವು ಆ ಶಿಶುವನು ಎಂದೊಡೆ ಎಲೆ ಪಾರ್ಥ ಕೇಳ್ ವಸುಮತಿಯೊಳು ಆರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ=[ಹಸಿವು ನೀರಡಿಕೆಯನ್ನು ಬಿಟ್ಟು ಆಮಗುವನ್ನು ಅಲ್ಲಿ ನಿಂತು ಉಪಚರಿಸುತಿದ್ದವು ಎಂದರೆ, ಎಲೆ ಪಾರ್ಥ ಕೇಳು ಭೂಮಿಯಲ್ಲಿ ಆರ್ತರನ್ನು ನೋಡಿ ಮತ್ತೆ ಮರುಗದಿರುವ ಮಾನವನು ಪಾಪಿಯಲ್ಲವೇ! ].
  • ತಾತ್ಪರ್ಯ:ಎಡದ ಕಾಲಿನಲ್ಲಿ ಗಾಯದಿಂದ ರಕ್ತ ಸುರಿಯುವ ವೇದನೆಗೆ, ಮಗು ಹರಿಹರಿಯೆಂದು ಕೂಗಿ ಅಳುತ್ತಿರಲು, ಕಣ್ಣಲ್ಲಿ ಸುರಿವ ನೀರನ್ನು ಕಂಡು ಮಿಗ/ಜಿಂಕೆ ಹಕ್ಕಿಗಳು, ನೊಂದು ಬಹಳ ಶೋಕದಿಂದ; ಹಸಿವು ನೀರಡಿಕೆಯನ್ನು ಬಿಟ್ಟು ಆಮಗುವನ್ನು ಅಲ್ಲಿ ನಿಂತು ಉಪಚರಿಸುತಿದ್ದವು ಎಂದರೆ, ಎಲೆ ಪಾರ್ಥ ಕೇಳು ಭೂಮಿಯಲ್ಲಿ ಆರ್ತರನ್ನು ನೋಡಿ ಮತ್ತೆ ಮರುಗದಿರುವ ಮಾನವನು ಪಾಪಿಯಲ್ಲವೇ! ].
  • (ಪದ್ಯ-೩೫)

ಪದ್ಯ:-:೩೬:

ಸಂಪಾದಿಸಿ

ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲ್ಗೆ ನವಿ |
ಲೆರಕೆಯಿಂ ಬೀಸಿ ಬಿಜ್ಜಣವಿಕ್ಕಿತಂಚೆ ತುಂ |
ತುರನುದುರ್ಚಿತು ಸಾರಸಂ ಸಲಿಲದೊಳ್ ನೆನೆದ ಪಕ್ಕಂಗಳಂ ಬಿದಿರ್ಚಿ ||
ಮರುಗಿ ಮೆಲ್ನುಡಿಯೊಳುಪಚರಿಸಿದುವು ಗಿಳಿಗಳ |
ಕ್ಕರೊಳಳಿಗಳರ್ಭಕನ ರೋದನದ ಕೂಡಳುವ |
ತೆರದೊಳ್ ಮೊರೆದುವಲ್ಲಿ ಕರುಬರಿದ್ದೂರಿಂದೆ ಕಾಡೊಳ್ಳಿತೆನಿಸುವಂತೆ ||36||

ಪದವಿಭಾಗ-ಅರ್ಥ:
ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲ್ಗೆ ನವಿಲೆ ರಕೆಯಿಂ ಬೀಸಿ ಬಿಜ್ಜಣವಿಕ್ಕಿತು ಅಂಚೆ ತುಂತುರನು ಉದುರ್ಚಿತು ಸಾರಸಂ ಸಲಿಲದೊಳ್ ನೆನೆದ ಪಕ್ಕಂಗಳಂ ಬಿದಿರ್ಚಿ=[ಅಲ್ಲಿ, ನವಿಲು ರಕ್ಕೆಯನ್ನು ಗರಿಗೆದರಿ ಬಿಸಿಲಿಗೆ ಕೊಡೆ ಹಿಡಿದು ನಿಂತವು. ಹಂಸಗಳು ರೆಕ್ಕೆಯ ಬೀಸಣಿಕೆಯಿಂದ ಗಾಳಿ ಬೀಸಿದವು. ಸಾರಸ ಪಕ್ಷಿಗಳು ನೀರಿನಲ್ಲಿ ನೆನೆದ ರೆಕ್ಕೆಗಳನ್ನು ಬಿಚ್ಚಿ ತುಂತುರನ್ನು ಉದುರಿಸಿತು.];; ಮರುಗಿ ಮೆಲ್ನುಡಿಯೊಳು ಉಪಚರಿಸಿದುವು ಗಿಳಿಗಳು ಅಕ್ಕರೊಳು ಅಳಿಗಳು ಅರ್ಭಕನ ರೋದನದ ಕೂಡ ಅಳುವ ತೆರದೊಳ್ ಮೊರೆದುವು ಅಲ್ಲಿ ಕರುಬರಿದ್ದ ಊರಿಂದೆ ಕಾಡೊಳ್ಳಿತು ಎನಿಸುವಂತೆ=[ಗಿಳಿಗಳು ಮರುಗಿ ಅಕ್ಕರೆಯಿಂದ ಮೆಲುನುಡಿಯಿಂದ ಉಪಚರಿಸಿದುವು. ದುಂಬಿಗಳು ಮಗುವಿನ ಅಳುವಿನ ಕೂಡೆ ತಾವೂ ಅಳುವ ರೀತಿಯಲ್ಲಿ ಸದ್ದುಮಾಡಿದುವು. ಇದು ಕರುಬರು/ ಕೊಟ್ಟೆಕಿಚ್ಚಿನವರು ಇದ್ದ ಊರಿಗಿಂತ ಕಾಡು ಒಳ್ಳೆಯದು ಎನ್ನುವಂತೆ ಇತ್ತು.]
  • ತಾತ್ಪರ್ಯ:ಅಲ್ಲಿ, ನವಿಲು ರಕ್ಕೆಯನ್ನು ಗರಿಗೆದರಿ ಬಿಸಿಲಿಗೆ ಕೊಡೆ ಹಿಡಿದು ನಿಂತವು. ಹಂಸಗಳು ರೆಕ್ಕೆಯ ಬೀಸಣಿಕೆಯಿಂದ ಗಾಳಿ ಬೀಸಿದವು. ಸಾರಸ ಪಕ್ಷಿಗಳು ನೀರಿನಲ್ಲಿ ನೆನೆದ ರೆಕ್ಕೆಗಳನ್ನು ಬಿಚ್ಚಿ ತುಂತುರನ್ನು ಉದುರಿಸಿತು. ಗಿಳಿಗಳು ಮರುಗಿ ಅಕ್ಕರೆಯಿಂದ ಮೆಲುನುಡಿಯಿಂದ ಉಪಚರಿಸಿದುವು. ದುಂಬಿಗಳು ಮಗುವಿನ ಅಳುವಿನ ಕೂಡೆ ತಾವೂ ಅಳುವ ರೀತಿಯಲ್ಲಿ ಸದ್ದುಮಾಡಿದುವು. ಇದು ಕರುಬುವವರು/ ಕೊಟ್ಟೆಕಿಚ್ಚಿನವರು ಇದ್ದ ಊರಿಗಿಂತ ಕಾಡು ಒಳ್ಳೆಯದು ಎನ್ನುವಂತೆ ಇತ್ತು.
  • (ಪದ್ಯ-೩೬)

ಪದ್ಯ:-:೩೭:

ಸಂಪಾದಿಸಿ

ನಿಲ್ಲದೆ ನರಳ್ವ ಪಸುಳೆಯ ನಿರ್ಮಲಾಸ್ಯಮಂ |
ಪುಲ್ಲೆಗಳ್ ಕಂಡು ಕಾನನಕೆ ಕಾಮಿಸಿ ತಮ್ಮ |
ನಲ್ಲನೈತರಲುಮ್ಮಳೀಸಿ ವಾಹನವನರಸ ಬಂದ ಪೂರ್ಣೇಂದುವೆಂದು |
ವಲ್ಲಭ ಸ್ವಾಮಿಯಂ ಬೇಡಿಕೊಳುತಿರ್ಪುವೆನೆ |
ಮೆಲ್ಲಮೆಲ್ಲನೆ ಪೊರೆಗೆ ಪೊದ್ದಿ ಬಾಳಕನಂಘ್ರಿ |
ಪಲ್ಲವದ ರುಧಿರಮಂ ಕುಡಿ ನಾಲಗೆಗಳಿಂದೆ ಮಿಗೆ ಲೇಪನಂಗೈದುವು ||37||

ಪದವಿಭಾಗ-ಅರ್ಥ:
ನಿಲ್ಲದೆ ನರಳ್ವ ಪಸುಳೆಯ ನಿರ್ಮಲ ಆಸ್ಯಮಂ (ಮುಖ) ಪುಲ್ಲೆಗಳ್ ಕಂಡು ಕಾನನಕೆ ಕಾಮಿಸಿ ತಮ್ಮ ನಲ್ಲನೈತರಲು ಉಮ್ಮಳಿಸಿ ವಾಹನವನು ಅರಸ ಬಂದ ಪೂರ್ಣೇಂದುವೆಂದು ವಲ್ಲಭ ಸ್ವಾಮಿಯಂ ಬೇಡಿಕೊಳುತಿರ್ಪುವು ಎನೆ=[ನಿಲ್ಲದೆ ಒಂದೇ ಸಮನೆ, ನರಳುವ ಬಾಲಕನ ನಿರ್ಮಲವಾದ ಮುಖವನ್ನು ಜಿಂಕೆಗಳು ಕಂಡು, ಕಾಡಿಗೆ ಕಾಮಿಸಿ ತಮ್ಮ ಗಂಡುಜಿಂಕೆಗಳು ಬರಲು ಕಳವಳಪಟ್ಟು ತನ್ನ ವಾಹನವನ್ನು ಅರಸಲು/ ಹುಡುಕಲು ಬಂದ ಪೂರ್ಣಚಂದ್ರನೆಂದು ತಮ್ಮ ವಲ್ಲಭಸ್ವಾಮಿಯನ್ನು (ಪತಿಯನ್ನು?) ಬೇಡಿಕೊಳುತ್ತಿದ್ದವು ಎನ್ನುವಂತೆ];; ಮೆಲ್ಲಮೆಲ್ಲನೆ ಪೊರೆಗೆ ಪೊದ್ದಿ ಬಾಳಕನ ಅಂಘ್ರಿ ಪಲ್ಲವದ ರುಧಿರಮಂ ಕುಡಿ ನಾಲಗೆಗಳಿಂದೆ ಮಿಗೆ ಲೇಪನಂಗೈದುವು=[ಮೆಲ್ಲಮೆಲ್ಲನೆ ಹತ್ತಿರಕ್ಕೆ ಬಂದು ಬಾಲಕನ ಪಾದಪಲ್ಲವದ ರಕ್ತವನ್ನು ಕುಡಿನಾಲಗೆಗಳಿಂದ ಮತ್ತೆಮತ್ತೆ ಜೊಲ್ಲಿನ ಲೇಪನವನ್ನು ಮಾಡಿದವು.]
  • (ಚಂದ್ರನ ವಾಹನ ಗಂಡು ಜಿಂಕೆ, ಅದನ್ನು ಹುಡುಕಲು ಬಂದ ಚಂದ್ರನೋ ಎನ್ನುವಂತೆ ಇದ್ದ ಬಾಲಕ)
  • ತಾತ್ಪರ್ಯ:ನಿಲ್ಲದೆ ಒಂದೇ ಸಮನೆ, ನರಳುವ ಬಾಲಕನ ನಿರ್ಮಲವಾದ ಮುಖವನ್ನು ಜಿಂಕೆಗಳು ಕಂಡು, ಕಾಡಿಗೆ ಕಾಮಿಸಿ ತಮ್ಮ ಗಂಡುಜಿಂಕೆಗಳು ಬರಲು ಕಳವಳಪಟ್ಟು ತನ್ನ ವಾಹನವನ್ನು ಅರಸಲು/ ಹುಡುಕಲು ಬಂದ ಪೂರ್ಣಚಂದ್ರನೆಂದು ತಮ್ಮ ವಲ್ಲಭಸ್ವಾಮಿಯನ್ನು (ಪತಿಯನ್ನು?) ಬೇಡಿಕೊಳುತ್ತಿದ್ದವು ಎನ್ನುವಂತೆ, ಮೆಲ್ಲಮೆಲ್ಲನೆ ಹತ್ತಿರಕ್ಕೆ ಬಂದು ಬಾಲಕನ ಪಾದಪಲ್ಲವದ ರಕ್ತವನ್ನು ಕುಡಿನಾಲಗೆಗಳಿಂದ ಮತ್ತೆಮತ್ತೆ ಜೊಲ್ಲಿನ ಲೇಪನವನ್ನು ಮಾಡಿದವು.
  • (ಪದ್ಯ-೩೭)

ಪದ್ಯ:-:೩೮:

ಸಂಪಾದಿಸಿ

ಕೋಗಿಲೆಯ ನಿಡುಸರಂ ಪಾರಿವದ ಕಲ್ಲುಣಿಸು |
ಗೂಗೆಗಳ ಕಣ್ದೊಳಸು ಬಕನ ಮೌನದ ಬೆರಗು |
ನಾಗದ ನಿರಾಹಾರ ಮಳಿಗಳ ಪರಿಭ್ರಮಣ ಮಿಭದ ಸೀತ್ಕಾರಂಗಳು ||
ಪೋಗಲಡಿಯಿಡಲರಿಯದಾರೈವ ಜನಮಿಲ್ಲ |
ದಾಗಹನ ಗಹ್ವರದೊಳಳುವ ಶಿಶುವಂ ನೋಡ |
ಲಾಗಿ ಬಂದೆಡೆಗೊಂಡ ದುಃಖಾತಿರೇಕಮೆಂಬಂತೆ ಕಾಣಿಸುತಿರ್ದುದು ||38||

ಪದವಿಭಾಗ-ಅರ್ಥ:
ಕೋಗಿಲೆಯ ನಿಡುಸರಂ ಪಾರಿವದ ಕಲ್ಲುಣಿಸು ಗೂಗೆಗಳ ಕಣ್ ತೊಳಸು ಬಕನ ಮೌನದ ಬೆರಗು ನಾಗದ ನಿರಾಹಾರಂ ಅಳಿಗಳ ಪರಿಭ್ರಮಣಂ ಇಭದ ಸೀತ್ಕಾರಂಗಳು=[ಕೋಗಿಲೆಯ ಉದ್ದರಾಗ, ಪಾರಿವದ ಕಲ್ಲುಹರಳು ನುಂಗುವಿಕೆ, ಗೂಗೆಗಳ ಕಣ್ದ ಹೊಳಪು, ಬಕನ ಮೌನದಲ್ಲಿ ಮೀನುಹಿಡಿಯುವ ಬೆರಗು, ನಾಗದ ನಿರಾಹಾರವು, ದುಂಬಿಗಳ ಗುಂಪು ಸಂಚಾರದ ಸದ್ದು, ಆನೆಗಳ ಘೀಳಿದುವಿಕೆಗಳು, ];; ಪೋಗಲು ಅಡಿಯಿಡಲು ಅರಿಯದ ಆರೈವ ಜನಮಿಲ್ಲದ ಗಹನ ಗಹ್ವರದೊಳು ಅಳುವ ಶಿಶುವಂ ನೋಡಲಾಗಿ ಬಂದೆಡೆಗೊಂಡ ದುಃಖಾತಿರೇಕಂ ಎಂಬಂತೆ ಕಾಣಿಸುತಿರ್ದುದು=[ಈ ಕಾಡಿನಲ್ಲಿ ಹೊಗಲು, ಹೆಜ್ಜೆಯಿಡಲು ತಿಳಿಯದ ಆರೈಕೆ ಮಾಡುವ ಜನವಿಲ್ಲದ ಗಹನವಾದ ಕಾಡಿನಲ್ಲಿ ಅಳುವ ಮಗುವನ್ನು ನೋಡಲಾಗಿ, ಈ ಮಗುವು ಕಾಡಿಗೆ ಬಂದು ನಿಂತಿರುವ ದುಃಖಾತಿರೇಕದ ರೂಪವೋ ಎಂಬಂತೆ ಕಾಣಿಸುತ್ತಿತ್ತು].
  • ತಾತ್ಪರ್ಯ:ಕೋಗಿಲೆಯ ಉದ್ದರಾಗ, ಪಾರಿವದ ಕಲ್ಲುಹರಳು ನುಂಗುವಿಕೆ, ಗೂಗೆಗಳ ಕಣ್ದ ಹೊಳಪು, ಬಕನ ಮೌನದಲ್ಲಿ ಮೀನುಹಿಡಿಯುವ ಬೆರಗು, ನಾಗದ ನಿರಾಹಾರವು, ದುಂಬಿಗಳ ಗುಂಪು ಸಂಚಾರದ ಸದ್ದು, ಆನೆಗಳ ಘೀಳಿದುವಿಕೆಗಳು, ಈ ಕಾಡಿನಲ್ಲಿ ಹೊಗಲು, ಹೆಜ್ಜೆಯಿಡಲು ತಿಳಿಯದ ಆರೈಕೆ ಮಾಡುವ ಜನವಿಲ್ಲದ ಗಹನವಾದ ಕಾಡಿನಲ್ಲಿ ಅಳುವ ಮಗುವನ್ನು ನೋಡಲಾಗಿ, ಈ ಮಗುವು ಕಾಡಿಗೆ ಬಂದು ನಿಂತಿರುವ ದುಃಖಾತಿರೇಕದ ಸಾಕಾರ ರೂಪವೋ ಎಂಬಂತೆ ಕಾಣಿಸುತ್ತಿತ್ತು.
  • (ಪದ್ಯ-೩೮)

ಪದ್ಯ:-:೩೯:

ಸಂಪಾದಿಸಿ

ಬಾಲಕನ ರೋದನದ ಕೂಡೆ ಬನದೇವಿಯರ್ |
ಗಾಳಿ ತೀಡಿದೊಡೆ ಭೋರೆಂಬ ತರುಲತೆಗಳಿಂ |
ಗೋಳಿಟ್ಟರಗ್ನಿ ಜಲ ಭೂಗಗನ ವಾಯು ರವಿಶಶಿಗಳ್‍ದೆಸೆವೆಣ್ಗಳು ||
ಹೇಳಲೇನಡವಿಯ ಚರಾಚರಂಗಳ ಜೀವ |
ಜಾಲಂಗಳುರೆ ಮರುಗುತಿರ್ದುವನಿತರೊಳೊಂದು |
ಕೋಲಾಹಲದ ಘೋಷಮೆಲ್ಲಿಯುಂ ಕಿವಿಗಿಡಿದುದಾ ಮಹಾ ಕಾನನದೊಳು ||39||

ಪದವಿಭಾಗ-ಅರ್ಥ:
ಬಾಲಕನ ರೋದನದ ಕೂಡೆ ಬನದೇವಿದುರ್ ಗಾಳಿ ತೀಡಿದೊಡೆ ಭೋರೆಂಬ ತರುಲತೆಗಳಿಂ ಗೋಳೀಟ್ಟರ್ ಅಗ್ನಿ ಜಲ ಭೂ ಗಗನ ವಾಯು ರವಿಶಶಿಗಳ್‍ ದೆಸೆವೆಣ್ಗಳು=[ಬಾಲಕನ ಅಳುವಿನ ಜೊತೆ ವನದೇವಿಯರು ಗಾಳಿ ಬೀಸಿದಾಗ ಭೋರೆಂಬ ಸದ್ದಿನೊಡನೆ ಮರದೆಲೆಗಳಿಂದ ಗೋಳಿಟ್ಟರು, ಅಗ್ನಿ ಜಲ ಭೂ ಗಗನ ವಾಯು ರವಿ ಚಂದ್ರರು, ದಿಕ್ಕಿನಹೆಣ್ಣುಗಳು];;ಹೇಳಲೇನು ಅಡವಿಯ ಚರಾಚರಂಗಳ ಜೀವ ಜಾಲಂಗಳ್ ಉರೆ ಮರುಗುತಿರ್ದುವು ಅನಿತರೊಳು ಒಂದು ಕೋಲಾಹಲದ ಘೋಷಂ ಎಲ್ಲಿಯುಂ ಕಿವಿಗೆ ಇಡಿದುದು ಆ ಮಹಾ ಕಾನನದೊಳು=[ ಇನ್ನೂ ಏನು ಹೇಳಲಿ, ಆ ಕಾಡಿನ ಚರಾಚರಗಳು ಜೀವ ಜಾಲಗಳು ಬಹಳ ಮರುಗುತ್ತಿದ್ದವು; ಅಷ್ಟರಲ್ಲಿ ಒಂದು ಕೋಲಾಹಲದ ದೊಡ್ಡ ಸದ್ದು ಎಲ್ಲಾಕಡೆ ಮಹಾ ಕಾಡಿನಲ್ಲಿ ಕಿವಿ ಗಿಡಿಚಿಕ್ಕುವಂತೆ ಕೇಳಿತು].
  • ತಾತ್ಪರ್ಯ:ಬಾಲಕನ ಅಳುವಿನ ಜೊತೆ ವನದೇವಿಯರು ಗಾಳಿ ಬೀಸಿದಾಗ ಭೋರೆಂಬ ಸದ್ದಿನೊಡನೆ ಮರದೆಲೆಗಳಿಂದ ಗೋಳಿಟ್ಟರು, ಅಗ್ನಿ ಜಲ ಭೂ ಗಗನ ವಾಯು ರವಿ ಚಂದ್ರರು, ದಿಕ್ಕಿನಹೆಣ್ಣುಗಳು, ಇನ್ನೂ ಏನು ಹೇಳಲಿ, ಆ ಕಾಡಿನ ಚರಾಚರಗಳು ಜೀವ ಜಾಲಗಳು ಬಹಳ ಮರುಗುತ್ತಿದ್ದವು; ಅಷ್ಟರಲ್ಲಿ ಒಂದು ಕೋಲಾಹಲದ ದೊಡ್ಡ ಸದ್ದು ಎಲ್ಲಾಕಡೆ ಮಹಾ ಕಾಡಿನಲ್ಲಿ ಕಿವಿ ಗಿಡಿಚಿಕ್ಕುವಂತೆ ಕೇಳಿತು].
  • (ಪದ್ಯ-೩೯)

ಪದ್ಯ:-:೪೦:

ಸಂಪಾದಿಸಿ

ದಿನಪನುಪಟಳದಿಂದೆ ನೆಲೆಗೆಟ್ಟು ಪಲವು ರೂ |
ಪನೆ ತಾಳ್ದು ವನವಾಸದುರುತಪದ ಸಿದ್ಧಿಯಿಂ |
ಘನತೆಯಂ ಪಡೆದು ಮಿಗೆ ಪಗೆಯಾದ ಪಗಲಂ ತೊಲಗಿಪಂಧಕಾರಮೆನಲು ||
ಅನುಪಮದ ಕಾರೊಡಲ ಬೇಡವಡೆ ಬೇಂಟೆಗೆ ವಿ |
ಪಿನದೊಳೈತರುತಿರ್ದುದಬ್ಬರದ ಬೊಬ್ಬೆಗಳ |
ನಿನದದಿಂ ಜೀವಿಗಳ ಕೊಲೆಗೆಳಸಿದಂತಕನ ದೂತ ಸಂಘಾತದಂತೆ ||40||

ಪದವಿಭಾಗ-ಅರ್ಥ:
ದಿನಪನ ಉಪಟಳದಿಂದೆ ನೆಲೆಗೆಟ್ಟು ಪಲವು ರೂಪನೆ ತಾಳ್ದು ವನವಾಸದ ಉರು ತಪದ ಸಿದ್ಧಿಯಿಂ ಘನತೆಯಂ ಪಡೆದು ಮಿಗೆ ಪಗೆಯಾದ ಪಗಲಂ ತೊಲಗಿ ಪಂಧಕಾರಂ ಎನಲು=[ಸೂರ್ಯನ ಉಪಟಳದಿಂದ ನೆಲೆಗೆಟ್ಟು ಹಲವು ರೂಪವನ್ನು ತಾಳಿ ವನವಾಸದ ವಿಶೇಷ ತಪದ ಸಿದ್ಧಿಯಿಂದ ಘನತೆಯನ್ನು ಪಡೆದು ಕತ್ತಲೆಯ ಬಹಳ ಶತ್ರುವಾದ ಹಗಲನ್ನು ತೊಲಗಿಸುವ ಕಗ್ಗತ್ತಲೆಯೊ ಎನ್ನುವಂತೆ,];; ಅನುಪಮದ ಕಾರೊಡಲ ಬೇಡವಡೆ ಬೇಂಟೆಗೆ ವಿಪಿನದೊಳು ಐತರುತಿರ್ದುದು ಅಬ್ಬರದ ಬೊಬ್ಬೆಗಳ ನಿನದದಿಂ ಜೀವಿಗಳ ಕೊಲೆಗೆಳಸಿದ ಅಂತಕನ ದೂತ ಸಂಘಾತದಂತೆ=[ಅಸಾಧಾರಣವಾದ ಕಪ್ಪು ದೇಹದ ಬೇಡರ ಪಡೆ ಬೇಟೆಗೆ ಆ ಕಾಡಿನಲ್ಲಿ ಬರುತ್ತಿತ್ತು. ಅದರ ಸದ್ದು ಅಬ್ಬರದಿಂದ ಬೊಬ್ಬೆಹೊಡೆಯುವ ಸದ್ದಿನಿಂದ ಆ ಕಾಡಿನ ಜೀವಿಗಳ ಕೊಲೆ ಮಾಡಲು ಯಮನ ದೂತರ ನದೆಯುವ ಸದ್ದಿನಂತೆ ಇತ್ತು.]
  • ತಾತ್ಪರ್ಯ:ಸೂರ್ಯನ ಉಪಟಳದಿಂದ ನೆಲೆಗೆಟ್ಟು ಹಲವು ರೂಪವನ್ನು ತಾಳಿ ವನವಾಸದ ವಿಶೇಷ ತಪದ ಸಿದ್ಧಿಯಿಂದ ಘನತೆಯನ್ನು ಪಡೆದು ಕತ್ತಲೆಯ ಬಹಳ ಶತ್ರುವಾದ ಹಗಲನ್ನು ತೊಲಗಿಸುವ ಕಗ್ಗತ್ತಲೆಯೊ ಎನ್ನುವಂತೆ, ಅಸಾಧಾರಣವಾದ ಕಪ್ಪು ದೇಹದ ಬೇಡರ ಪಡೆ ಬೇಟೆಗೆ ಆ ಕಾಡಿನಲ್ಲಿ ಬರುತ್ತಿತ್ತು. ಅದರ ಸದ್ದು ಅಬ್ಬರದಿಂದ ಬೊಬ್ಬೆಹೊಡೆಯುವ ಸದ್ದಿನಿಂದ ಆ ಕಾಡಿನ ಜೀವಿಗಳ ಕೊಲೆ ಮಾಡಲು ಯಮನ ದೂತರ ನದೆಯುವ ಸದ್ದಿನಂತೆ ಇತ್ತು.
  • (ಪದ್ಯ-೪೦)

ಪದ್ಯ:-:೪೧:

ಸಂಪಾದಿಸಿ

ತಪ್ಪತಪ್ಪಲೊಳಲ್ಲಿಗಲ್ಲಿಗೆ ಮಂಜುಗಳೆಸೆವ |
ಕಪ್ಪ ಕಪ್ಪನೆಯ ಗಿರಿಗಳ ಪರ್ಬುಗೆಗಳಂತೆ |
ಬಪ್ಪಬಪ್ಪೆಳನಾಯ್ಗಳಂ ಹಾಸೊಳಾಂತು ಬಂದುದು ಶಬರ ಸೇನೆ ಬಳಿಕ ||
ಸೊಪ್ಪು ಸೊಪ್ಪುಗಳ ಮೆಳೆ ಮೆಳೆಗಳಂ ಸೋವುತ್ತೆ |
ತಪ್ಪತಪ್ಪದೆ ಶರ ಶರಂಗಳಂ ತೆಗೆದೆಚ್ಚು |
ತೊಪ್ಪತೊಪ್ಪನೆ ಮೃಗ ಮೃಗಂಗಳಂ ಕೆಡಹಿದರ್ ಕಾನನದೊಳೇವೇಳ್ವೆನು ||41||

ಪದವಿಭಾಗ-ಅರ್ಥ:
ತಪ್ಪತಪ್ಪಲೊಳು ಎಲ್ಲಿಗಲ್ಲಿಗೆ ಮಂಜುಗಳು ಎಸೆವ ಕಪ್ಪ ಕಪ್ಪನೆಯ ಗಿರಿಗಳ ಪರ್ಬುಗೆಗಳಂತೆ (ಹರ್ಬುಗೆ-ಹಬ್ಬುಗೆ) ಬಪ್ಪ ಬಪ್ಪ ಎಳನಾಯ್ಗಳಂ ಹಾಸೊಳು (ಹಗ್ಗದಲ್ಲಿ-ಸರಪಳಿ) ಆಂತು ಬಂದುದು ಶಬರ ಸೇನೆ=[ಬೆಟ್ಟದ ಪ್ರತಿ ತಪ್ಪಲು ತಪ್ಪಲಿನಲ್ಲಿ, ಎಲ್ಲಿ ಎಲ್ಲಿ ಮಂಜು ಮುಸುಕಿದಂತೆ ತೋರುವ ಕಪ್ಪು (ಕತ್ತಲೆ) ಕಪ್ಪುಪ್ರದೇಶದ ಬೆಟ್ಟಗಳ ಹಬ್ಬಿದಪೊದೆಗಳಲ್ಲಿ ಬರುವ, ಬೆನ್ನಟ್ಟಿಬರುವ ಪ್ರಾಯದನಾಯಿಗಳನ್ನು ಹಗ್ಗದಲ್ಲಿ-ಸರಪಳಿಯಲ್ಲಿ ಹಿಡಿದುಕೊಂಡು ಬಂದಿತು ಬೇಡರ ಸೇನೆ.];; ಬಳಿಕ ಸೊಪ್ಪು ಸೊಪ್ಪುಗಳ ಮೆಳೆ ಮೆಳೆಗಳಂ ಸೋವುತ್ತೆ ತಪ್ಪತಪ್ಪದೆ ಶರ ಶರಂಗಳಂ ತೆಗೆದೆಚ್ಚು ತೊಪ್ಪತೊಪ್ಪನೆ ಮೃಗ ಮೃಗಂಗಳಂ ಕೆಡಹಿದರ್ ಕಾನನದೊಳು ಏವೇಳ್ವೆನು=[ ಅದು ಬಳಿಕ ಸೊಪ್ಪುತುಂಬಿದ ಮಟ್ಟಿ ಸೊಪ್ಪುಗಳಮೆಳೆ ಮೆಳೆ/ ಪೊದೆಗಳನ್ನು ಸೋವುತ್ತಾ ತಪ್ಪದೆ ತಪ್ಪದೆ ಬಾಣ-ಬಾಣಗಳನ್ನು ತೆಗೆದ ಹೊಡೆದು ತೊಪ್ಪ-ತೊಪ್ಪನೆ ಮೃಗ ಪ್ರಾಣಿಗಳನ್ನು ಆ ಕಾಡಿನಲ್ಲಿ ಕೊಂದು ಕೆಡವುತ್ತಿದ್ದರು. ಏನು ಹೇಳಲಿ ಎಂದನು ನಾರದ ಅರ್ಜುನನಿಗೆ.]
  • ತಾತ್ಪರ್ಯ:ಬೆಟ್ಟದ ಪ್ರತಿ ತಪ್ಪಲು ತಪ್ಪಲಿನಲ್ಲಿ, ಎಲ್ಲಿ ಎಲ್ಲಿ ಮಂಜು ಮುಸುಕಿದಂತೆ ತೋರುವ ಕಪ್ಪು (ಕತ್ತಲೆ) ಕಪ್ಪುಪ್ರದೇಶದ ಬೆಟ್ಟಗಳ ಹಬ್ಬಿದಪೊದೆಗಳಲ್ಲಿ ಬರುವ, ಬೆನ್ನಟ್ಟಿಬರುವ ಪ್ರಾಯದನಾಯಿಗಳನ್ನು ಹಗ್ಗದಲ್ಲಿ-ಸರಪಳಿಯಲ್ಲಿ ಹಿಡಿದುಕೊಂಡು ಬಂದಿತು ಬೇಡರ ಸೇನೆ. ಅದು ಬಳಿಕ ಸೊಪ್ಪುತುಂಬಿದ ಮಟ್ಟಿ ಸೊಪ್ಪುಗಳಮೆಳೆ ಮೆಳೆ/ ಪೊದೆಗಳನ್ನು ಸೋವುತ್ತಾ ತಪ್ಪದೆ ತಪ್ಪದೆ ಬಾಣ-ಬಾಣಗಳನ್ನು ತೆಗೆದ ಹೊಡೆದು ತೊಪ್ಪ-ತೊಪ್ಪನೆ ಮೃಗ ಪ್ರಾಣಿಗಳನ್ನು ಆ ಕಾಡಿನಲ್ಲಿ ಕೊಂದು ಕೆಡವುತ್ತಿದ್ದರು. ಏನು ಹೇಳಲಿ ಎಂದನು ನಾರದ ಅರ್ಜುನನಿಗೆ.
  • (ಪದ್ಯ-೪೧)

ಪದ್ಯ:-:೪೨:

ಸಂಪಾದಿಸಿ

ಚಾಪ ಬಾಣಂಗಳೇತಕೆ ಬೇಂಟೆ ಗಂಗಜನ |
ಚಾಪ ಬಾಣಂಗಳೀರ್ದಪುವೆಮ್ಮೊಳೆಂಬೊಲಿಹ |
ಚಾಪಲ ಭ್ರೂಲತೆಯ ಚಂಚಲಾಪಾಂಗದ ಪುಳಿಂದಿಯರ್ ತಮ್ಮ ತಮ್ಮ ||
ಓಪರಂ ಬಳಿವಿಡಿದು ಬರುತಿರ್ದರಾಗ ಸ |
ಲ್ಲಾಪದಿಂದೆಸೆವ ಹರಿ ಹರಿಣ ಕರಿ ಚಮರಿಗಳ |
ರೂಪಂಗಳವಯವದೊಳಾರಾಜಿಸಲ್ಕವಕೆ ತಾವೆ ದೇಹಂಗಳೆನಲು ||42||

ಪದವಿಭಾಗ-ಅರ್ಥ:
ಚಾಪ ಬಾಣಂಗಳು ಏತಕೆ ಬೇಂಟೆಗೆ ಅಂಗಜನ ಚಾಪ ಬಾಣಂಗಳೀರ್ದಪುವು ಎಮ್ಮೊಳೆಂಬೊಲು ಇಹ ಚಾಪಲ ಭ್ರೂಲತೆಯ ಚಂಚಲ ಆಪಾಂಗದ ಪುಳಿಂದಿಯರ್ ತಮ್ಮ ತಮ್ಮ

ಓಪರಂ ಬಳಿವಿಡಿದು ಬರುತಿರ್ದರು=[ಬೇಟೆಗೆ ಬಿಲ್ಲು ಬಾಣಗಳೇಕೆ? ಮನ್ಮಥನ ಬಿಲ್ಲು ಬಾಣಗಳು ಇವೆ, ನಮ್ಮಲ್ಲಿ ಎಂಬಂತೆ ಇರು ಚಪಲ ಹುಬ್ಬಿನ ಬಳ್ಳಿಯ ಚಂಚಲ ಕಡೆಗಣ್ಣೋಟದ ಬೇಡತಿಯರು ತಮ್ಮ ತಮ್ಮ ಪ್ರಿಯರ/ ಪತಿಗಳನ್ನು ಅನುಸರಿಸಿ ಬರುತ್ತಿದ್ದರು];; ಆಗ ಸಲ್ಲಾಪದಿಂದ ಎಸೆವ ಹರಿ ಹರಿಣ ಕರಿ ಚಮರಿಗಳ ರೂಪಂಗಳ ಅವಯವದೊಳು ಆರಾಜಿಸಲ್ಕೆ ಅವಕೆ ತಾವೆ ದೇಹಂಗಳೆನಲು=[ಆಗ ಆ ಬೇಡತಿಯರ ಸಲ್ಲಾಪದಿಂದ ಶೋಭಿಸುವ, ಹರಿ, ಹರಿಣ, ಕರಿ, ಚಮರಿಗಳ ರೂಪಗಳು ಅವರ ಅವಯವದಲ್ಲಿಯೇ ಕಾಣುತ್ತಿರಲು, ಅವಕೆ ತಾವೆ ದೇಹಗಳು ಎನ್ನುವಂತೆ ಆಪ್ರಾಣಿದಳುಇದ್ದವು.]

  • ತಾತ್ಪರ್ಯ:ಬೇಟೆಗೆ ಬಿಲ್ಲು ಬಾಣಗಳೇಕೆ? ಮನ್ಮಥನ ಬಿಲ್ಲು ಬಾಣಗಳು ಇವೆ, ನಮ್ಮಲ್ಲಿ ಎಂಬಂತೆ ಇರು ಚಪಲ ಹುಬ್ಬಿನ ಬಳ್ಳಿಯ ಚಂಚಲ ಕಡೆಗಣ್ಣೋಟದ ಬೇಡತಿಯರು ತಮ್ಮ ತಮ್ಮ ಪ್ರಿಯರ/ ಪತಿಗಳನ್ನು ಅನುಸರಿಸಿ ಬರುತ್ತಿದ್ದರು. ಆಗ ಆ ಬೇಡತಿಯರ ಸಲ್ಲಾಪದಿಂದ ಶೋಭಿಸುವ, ಹರಿ, ಹರಿಣ, ಕರಿ, ಚಮರಿಗಳ ರೂಪಗಳು ಅವರ ಅವಯವದಲ್ಲಿಯೇ ಕಾಣುತ್ತಿರಲು, ಅವಕೆ ತಾವೆ ದೇಹಗಳು ಎನ್ನುವಂತೆ ಆಪ್ರಾಣಿದಳುಇದ್ದವು.
  • (ಪದ್ಯ-೪೨)

ಪದ್ಯ:-:43:

ಸಂಪಾದಿಸಿ

ಸೊಕ್ಕಾನೆಗಳ ಸೊಗಡನುರ್ವ ಕತ್ತುರಿಯ ಮೃಗ |
ದಿಕ್ಕೆಗಳ ನಲ್ಲಲ್ಲಿ ಪುಣುಗಿನ ಜವಾದಿಗಳ |
ಬೆಕ್ಕುಗಳ ಬಿಡೆಯದಾಡುಂಬೊಲನನರಸುವ ಕಿರಾತರಂಗಚ್ಛವಿಗಳು ||
ಅಕ್ಕರಿಂದವರವರ ತನು ಪರಿಮಳಂಗಳ್ಗೆ |
ತುಕ್ಕುವೆಳದುಂಬಿಗಳ ಬಳಗಂಗಳೆಂಬಂತೆ |
ಪೊಕ್ಕಡವಿಯೊಳ್ ಕಣ್ಗೆ ಕಾಣಿಸುತಿರ್ದುವೇನೆಂಬೆ ನಚ್ಚರಿಯನು ||43||

ಪದವಿಭಾಗ-ಅರ್ಥ:
ಸೊಕ್ಕಾನೆಗಳ ಸೊಗಡನು, ಉರ್ವ ಕತ್ತುರಿಯ ಮೃಗದ ಇಕ್ಕೆಗಳ ನಲ್ಲಲ್ಲಿ ಪುಣುಗಿನ ಜವಾದಿಗಳ ಬೆಕ್ಕುಗಳ ಬಿಡೆಯದ ಆಡುಂಬೊಲನನು ಅರಸುವ ಕಿರಾತರ ಅಂಗಚ್ಛವಿಗಳು=[ಮದ್ದಾನೆಗಳ ಮದೋದಕದ ಪರಿಮಳವನ್ನು, ಕಾಡಿನಲ್ಲಿರುವ ಕತ್ತೂರಿಯ ಮೃಗದ ಇರುವಿಕೆಗಳನ್ನು, ಅಲ್ಲಲ್ಲಿ ಪುಣುಗಿನ ಜವಾದಿಗಳ/ಸುವಾಸನೆಯ ಬೆಕ್ಕುಗಳ ಸಮೂಹದ ಮೇಯುವ ಬಯಲನ್ನು, ಹುಡುಕುವ ಕಿರಾತರ ದೇಹದ];; ಅಕ್ಕರಿಂದ ಅವರವರ ತನು ಪರಿಮಳಂಗಳ್ಗೆ ತುಕ್ಕುವ ಎಳದುಂಬಿಗಳ ಬಳಗಗಳು ಎಂಬಂತೆ ಪೊಕ್ಕು ಅಡವಿಯೊಳ್ ಕಣ್ಗೆ ಕಾಣಿಸುತಿರ್ದುವು ಏನೆಂಬೆನು ಅಚ್ಚರಿಯನು=[ ಪರಿಮಳಕ್ಕೆ ಪ್ರಿತಿಯಿಂದ ಅವರವರ ದೇಹದ ಪರಿಮಳಗಳಿಗೆ ಎರಗುತ್ತಿರುವ ಎಳದುಂಬಿಗಳ ಬಳಗಗಳು ಎಂಬಂತೆ ಹೊಕ್ಕು ಅಡವಿಯಲ್ಲಿ ಕಣ್ಣಿಗೆ ಕಾಣಿಸುತ್ತಿದ್ದವು ಏನೆಂಬೆನು ಅಚ್ಚರಿಯನು, ಎಂದನು ನಾರದ.]
  • ತಾತ್ಪರ್ಯ:ಮದ್ದಾನೆಗಳ ಮದೋದಕದ ಪರಿಮಳವನ್ನು, ಕಾಡಿನಲ್ಲಿರುವ ಕತ್ತೂರಿಯ ಮೃಗದ ಇರುವಿಕೆಗಳನ್ನು, ಅಲ್ಲಲ್ಲಿ ಪುಣುಗಿನ ಜವಾದಿಗಳ/ಸುವಾಸನೆಯ ಬೆಕ್ಕುಗಳ ಸಮೂಹದ ಮೇಯುವ ಬಯಲನ್ನು, ಹುಡುಕುವ ಕಿರಾತರ ದೇಹದ ಪರಿಮಳಕ್ಕೆ ಪ್ರೀತಿಯಿಂದ ಅವರವರ ದೇಹದ ಪರಿಮಳಗಳಿಗೆ ಎರಗುತ್ತಿರುವ ಎಳೆದುಂಬಿಗಳ ಬಳಗಗಳು ಎಂಬಂತೆ ಹೊಕ್ಕು ಅಡವಿಯಲ್ಲಿ ಕಣ್ಣಿಗೆ ಕಾಣಿಸುತ್ತಿದ್ದವು ಏನೆಂಬೆನು ಅಚ್ಚರಿಯನು, ಎಂದನು ನಾರದ.]
  • (ಪದ್ಯ-೪೨)IX

ಪದ್ಯ:-:೪೪:

ಸಂಪಾದಿಸಿ

ಇದೆ ಪಂದಿ ಕೆದರಿದ ನೆಲಂ ನೋಡಲಿದೆ ದಂತಿ |
ಕದಡಿದ ಕೊಳಂ ತೋರಲಿದೆ ಪುಲಿಯುಗಿದ ಮೃಗದ |
ಮಿದುಳಿತ್ತಲಿದೆ ಸಿಂಗಮೆರಗಿದಾನೆಯ ತಲೆಯ ಮುತ್ತುದುರಿ ನೆತ್ತರೊಡನೆ ||
ಇದೆ ವನಮಹಿಷನುದ್ದಿಕೊಂಡ ಮರದಿಗುಡಿತ್ತ |
ಲಿದೆಕೊ ಸಾರಂಗಮಿಕ್ಕಡಿಗೈದ ಪಾವಿತ್ತ |
ಲಿದೆ ಪುಲ್ಲೆಗಳ ಪಕ್ಕೆ ಮರೆಗಳಿಕ್ಕೆಗಳೆಂದು ಪರಿದರ್ ಪುಳಿಂದರಂದು ||44||

ಪದವಿಭಾಗ-ಅರ್ಥ:
ಇದೆ ಪಂದಿ ಕೆದರಿದ ನೆಲಂ ನೋಡಲು ಇದೆ ದಂತಿ ಕದಡಿದ ಕೊಳಂ ತೋರಲಿದೆ ಪುಲಿಯುಗಿದ ಮೃಗದ ಮಿದುಳು ಇತ್ತಲಿದೆ ಸಿಂಗಂ ಎರಗಿದಾನೆಯ ತಲೆಯ ಮುತ್ತುದುರಿ ನೆತ್ತರೊಡನೆ=[ಬೇಟೆಯಾಡುವ ಬೇಡರು ಕೂಗುವ ಸದ್ದು: ಇದು ಹಂದಿ, ಕೆದರಿದ ನೆಲ ನೋಡು; ಇದೇ ಆನೆ ಕದಡಿದ ಕೊಳವು, ನೋಡ ಇದೇ ಹುಲಿ ತಿಂದುಬಿಟ್ಟ ಮೃಗದ ಮಿದುಳು, ಈ ಕಡೆ ಇದೆ, ಸಿಂಹವು ಎರಗಿದ ಆನೆಯ ತಲೆಯ ಮುತ್ತು ಉದುರಿ ರಕ್ತದೊಡನೆ ಇದೆ ];; ವನಮಹಿಷನುದ್ದಿಕೊಂಡ ಮರದಿಗುಡಿತ್ತಲಿದೆಕೊ ಸಾರಂಗಮಿಕ್ಕಡಿಗೈದ ಪಾವಿತ್ತಲಿದೆ ಪುಲ್ಲೆಗಳ ಪಕ್ಕೆ ಮರೆಗಳಿಕ್ಕೆಗಳೆಂದು ಪರಿದರ್ ಪುಳಿಂದರಂದು=[ಇದೇ ಕಢು ಕೋಣವು ಉದ್ದಿಕೊಂಡ ಮರದ ಗುರುತು, ಇತ್ತ ಇದೆ ನೋಡು ಸಾರಂಗವು ಎರಡು ತುಂಡು ಮಾಡಿದ ಹಾವು; ಇತ್ತ ಇದೆ ಹುಲ್ಲೆಗಳ ಮರಿಗಳು ಹಾಕಿದ ಹಿಕ್ಕೆಗಳು, ಎಂದು ಬೇಡರು ಅಲ್ಲಿ ಸಂಚರಿಸುತ್ತಿದ್ದರು].
  • ತಾತ್ಪರ್ಯ:ಬೇಟೆಯಾಡುವ ಬೇಡರು ಕೂಗುವ ಸದ್ದು ಆ ಕಾಡಿನ ಎಲ್ಲೆಡೆ ತಂಬಿತ್ತು : ಇದು ಹಂದಿ, ಕೆದರಿದ ನೆಲ ನೋಡು; ಇದೇ ಆನೆ ಕದಡಿದ ಕೊಳವು, ನೋಡ ಇದೇ ಹುಲಿ ತಿಂದುಬಿಟ್ಟ ಮೃಗದ ಮಿದುಳು, ಈ ಕಡೆ ಇದೆ, ಸಿಂಹವು ಎರಗಿದ ಆನೆಯ ತಲೆಯ ಮುತ್ತು ಉದುರಿ ರಕ್ತದೊಡನೆ ಇದೆ. ಇದೇ ಕಢು ಕೋಣವು ಉದ್ದಿಕೊಂಡ ಮರದ ಗುರುತು, ಇತ್ತ ಇದೆ ನೋಡು ಸಾರಂಗವು ಎರಡು ತುಂಡು ಮಾಡಿದ ಹಾವು; ಇತ್ತ ಇದೆ ಹುಲ್ಲೆಗಳ ಮರಿಗಳು ಹಾಕಿದ ಹಿಕ್ಕೆಗಳು, ಎಂದು ಬೇಡರು ಅಲ್ಲಿ ಸಂಚರಿಸುತ್ತಿದ್ದರು.
  • (ಪದ್ಯ-೪೪)

ಪದ್ಯ:-:೪೫:

ಸಂಪಾದಿಸಿ

ನಡೆ ಪಜ್ಜೆವಿಡೆ ಪೋಗು ತಡೆ ನಿಲ್ಲು ಜಡಿ ಬೊಬ್ಬೆ |
ಗುಡು ಪೊದರೊಳಡುಗು ಕೈಗೆಡದಿರಿಸು ನಿಡು ಸರಳ |
ತುಡು ಕೆಲಕೆ ಸಿಡಿಯದಿರ್ ಪೊಡೆ ಸಾರ್ಚು ತುಡುಕು ಮೊಗಸಡಗು ಮರಕಡರೊಡರ್ಚು ||
ಅಡಗಿ ಪೊಯ್ಜಡಿ ಕೋಲನಿಡು ಮುಂದುಗಡೆ ನಾಯ |
ಬಿಡು ಕೂಡೆ ಪಡಿತಳಿಸು ಸೆಡೆಯದಿರ್ ಕೆಡೆಪೆಂಬ |
ನುಡಿಗಳಡಿಗಡಿಗೆ ಕಿವಿಗಿಡಿದುವೆಲ್ಲೆಡೆಯೊಳಿಂದಡವಿಯೊಳ್ ಕಡುಪೊಸತೆನೆ ||45|||

ಪದವಿಭಾಗ-ಅರ್ಥ:
ನಡೆ ಪಜ್ಜೆವಿಡೆ ಪೋಗು ತಡೆ ನಿಲ್ಲು ಜಡಿ ಬೊಬ್ಬೆಗುಡು ಪೊದರೊಳು ಅಡುಗು ಕೈಗೆಡದಿರು ಇಸು ನಿಡು ಸರಳತುಡು ಕೆಲಕೆ ಸಿಡಿಯದಿರ್ ಪೊಡೆ ಸಾರ್ಚು ತುಡುಕು ಮೊಗಸಡಗು ಮರಕೆ ಅಡರು ಒಡರ್ಚು=[ನಡೆ ಹೆಜ್ಜೆಯಗುರತುನೋಡಿ ಹೋಗು, ತಡೆ ನಿಲ್ಲು, ಹೊಡಿ ಬೊಬ್ಬೆಹಾಕು, ಪೊದೆಯಲ್ಲಿ ಅಡುಗು, ಕೈ ಗುರಿ ತಪ್ಪಬೇಡ, ಹೊಡೆ ಉದ್ದಬಾಣತೊಡು, ಬದಿಗೆ ಹೋಗಬೇಡ, ಹೊಡೆ, ಸಾರ್ಚು/ಪಕ್ಕಕ್ಕೆ ಸರಿ, ಹಿಡಿ, ಮೊಗಸು ಅಡಗಿಕೋ, ಮರಕ್ಕೆ ಹತ್ತು, ಪ್ರಯತ್ನಿಸು, ನೀಡು.];; ಅಡಗಿ ಪೊಯ್ಜು ಇಡಿ ಕೋಲನು ಇಡು ಮುಂದುಗಡೆ ನಾಯ ಬಿಡು ಕೂಡೆ ಪಡಿತಳಿಸು (ಕಾಲಿಗೆ ಹಗ್ಗ ಹಾಕು) ಸೆಡೆಯದಿರ್ ಕೆಡೆಪು ಎಂಬ ನುಡಿಗಳು ಅಡಿಗಡಿಗೆ ಕಿವಿಗೆ ಇಡಿದುವು (ಹೊಕ್ಕಿತು ಕಿವಿಗೆಬಿತ್ತು ) ಎಲ್ಲೆಡೆಯೊಳು ಇಂದು ಅಡವಿಯೊಳ್ ಕಡು ಪೊಸತು ಎನೆ=[ಅಡಗಿದ್ದು ಹೊಡೆದು ಹಿಡಿ, ಕೋಲನ್ನು ಇಡು ಮುಂದುಗಡೆ, ನಾಯನ್ನು ಬಿಡು, ಮತ್ತೆ ಕಾಲಿಗೆ ಹಗ್ಗ ಹಾಕು, ಎಳೆಯಬೇಡ, ಕೆಳಕ್ಕೆ ಕೆಡೆವು, ಎಂಬ ನುಡಿಗಳು ಎಲ್ಲಾಕಡೆ ಅಂದು ಕಾಡಿನಲ್ಲಿ ಬಹಳ ಹೊಸತು ಎನ್ನುವಂತೆ ಮತ್ತೆ ಮತ್ತೆ ಕಿವಿಗೆ ಬೀಳುತ್ತಿದ್ದವು].
  • ತಾತ್ಪರ್ಯ:ಕಾಡಿನಲ್ಲಿ ಅಂದು; ನಡೆ ಹೆಜ್ಜೆಯಗುರತುನೋಡಿ ಹೋಗು, ತಡೆ ನಿಲ್ಲು, ಹೊಡಿ ಬೊಬ್ಬೆಹಾಕು, ಪೊದೆಯಲ್ಲಿ ಅಡುಗು, ಕೈ ಗುರಿ ತಪ್ಪಬೇಡ, ಹೊಡೆ ಉದ್ದಬಾಣತೊಡು, ಬದಿಗೆ ಹೋಗಬೇಡ, ಹೊಡೆ, ಸಾರ್ಚು/ಪಕ್ಕಕ್ಕೆ ಸರಿ, ಹಿಡಿ, ಮೊಗಸು ಅಡಗಿಕೋ, ಮರಕ್ಕೆ ಹತ್ತು, ಪ್ರಯತ್ನಿಸು, ನೀಡು. ಅಡಗಿದ್ದು ಹೊಡೆದು ಹಿಡಿ, ಕೋಲನ್ನು ಇಡು ಮುಂದುಗಡೆ, ನಾಯನ್ನು ಬಿಡು, ಮತ್ತೆ ಕಾಲಿಗೆ ಹಗ್ಗ ಹಾಕು, ಎಳೆಯಬೇಡ, ಕೆಳಕ್ಕೆ ಕೆಡೆವು, ಎಂಬ ನುಡಿಗಳು ಎಲ್ಲಾಕಡೆ ಅಂದು ಕಾಡಿನಲ್ಲಿ ಬಹಳ ಹೊಸತು ಎನ್ನುವಂತೆ ಮತ್ತೆ ಮತ್ತೆ ಕಿವಿಗೆ ಬೀಳುತ್ತಿದ್ದವು.
  • (ಪದ್ಯ-೪೫)

ಪದ್ಯ:-:೪೬:

ಸಂಪಾದಿಸಿ

ಉಬ್ಬಿದುರದೇರದೆಗೆದೊಡಲ ಬಾಗಿದ ಬೆನ್ನ |
ಹಬ್ಬುಗೆಯ ಪಚ್ಚಳದ ಸೆಡೆದ ಬಾಲದ ಕೊನೆಯ |
ಕೊಬ್ಬಿದ ಕೊರಳ ಸಣ್ಣಜಂಘೆಗಳ ಕೊಂಕುಗುರ ಮಡಿಗಿವಿಯ ಕಿಡಿಗಣ್ಗಳ ||
ಹೆಬ್ಬಲ್ಲ ಬಿಡುವಾಯ ಜೋಲ್ವ ಕೆನ್ನಾಲಗೆಯ |
ಗಬ್ಬಿನಾಯ್ಗಳ ಹಾಸನುಗಿದು ಬಿಡೆ ಪಂದಿಗಳ |
ನಬ್ಬರಿಸಿ ತುಡುಕಿದುವು ಕೇಸರಿಗಡರ್ದು ಮೇಲ್ವಾಯ್ದು ಪುಲಿಯಂ ಕೊಂದುವು ||46||

ಪದವಿಭಾಗ-ಅರ್ಥ:
ಉಬ್ಬಿದ ಉರದ ಏರದೆಗೆದು (ಏರ ತೆಗದ:ಸಣ್ಣ ಒಡಲ:ಸೊಂಟದ) ಒಡಲ ಬಾಗಿದ ಬೆನ್ನ ಹಬ್ಬುಗೆಯ ಪಚ್ಚಳದ (ಪಕ್ಕ,ಬದಿ) ಸೆಡೆದ ಬಾಲದ ಕೊನೆಯ ಕೊಬ್ಬಿದ ಕೊರಳ ಸಣ್ಣಜಂಘೆಗಳ ಕೊಂಕು ಉಗುರ ಮಡಿಗಿವಿಯ ಕಿಡಿಗಣ್ಗಳ=[ಉಬ್ಬಿದ ಎದೆಯ, ಸಣ್ನ ಸೊಂಟದ, ಬಾಗಿದ ಬೆನ್ನ, ವಿಶಾಲ ಪಕ್ಕೆಯ, ಸೆಡೆವಿನ ಉದ್ದ ಬಾಲದ ತುದಿಯ, ಕೊಬ್ಬಿದ ದಪ್ಪ ಕೊರಳ, ಸಣ್ಣ ಮೊಣಕಾಲುಗಳ, ಕೊಂಕು,ಬಾಗಿದ ಉಗುರುಳ್ಳ, ಮಡಿಸಿದ ಕಿವಿಗಳ, ಕೆಂಪುಕಿಡಿಯಂತಿರು ಕಣ್ಣುಗಳ];; ಹೆಬ್ಬಲ್ಲ ಬಿಡುವಾಯ ಜೋಲ್ವ ಕೆನ್ನಾಲಗೆಯ ಗಬ್ಬಿನಾಯ್ಗಳ ಹಾಸನುಗಿದು ಬಿಡೆ ಪಂದಿಗಳ ನಬ್ಬರಿಸಿ ತುಡುಕಿದುವು ಕೇಸರಿಗಡರ್ದು ಮೇಲ್ವಾಯ್ದು ಪುಲಿಯಂ ಕೊಂದುವು=[ಕೋರೆದಾಡೆಯ ಹೆಬ್ಬಲ್ಲ, ಬಿಟ್ಟಿರುವ ಬಾಯಿಯ, ಅದರಲ್ಲಿ ಜೋಲುವ ಕೆನ್ನಾಲಗೆಯ, ಗಬ್ಬಿದ/ಕೊಬ್ಬಿದ ನಾಯಿಗಳ ಹಗ್ಗವನ್ನು ಉಗಿದು/ಕಳಚಿ ಬಿಡಲು ಹಂದಿಗಳನ್ನು ಕೂಗುತ್ತಾ ಆಕ್ರಮಿಸಿದುವು ಸಿಂಹಕ್ಕೆ ಮೇಲೆಬಿದ್ದು/ಹಾಯಿದವು ಹುಲಿಯನ್ನು ಕೊಂದುವು].
  • ತಾತ್ಪರ್ಯ:ಉಬ್ಬಿದ ಎದೆಯ, ಸಣ್ನ ಸೊಂಟದ, ಬಾಗಿದ ಬೆನ್ನ, ವಿಶಾಲ ಪಕ್ಕೆಯ, ಸೆಡೆವಿನ ಉದ್ದ ಬಾಲದ ತುದಿಯ, ಕೊಬ್ಬಿದ ದಪ್ಪ ಕೊರಳ, ಸಣ್ಣ ಮೊಣಕಾಲುಗಳ, ಕೊಂಕು,ಬಾಗಿದ ಉಗುರುಳ್ಳ, ಮಡಿಸಿದ ಕಿವಿಗಳ, ಕೆಂಪುಕಿಡಿಯಂತಿರು ಕಣ್ಣುಗಳ, ಕೋರೆದಾಡೆಯ ಹೆಬ್ಬಲ್ಲ, ಬಿಟ್ಟಿರುವ ಬಾಯಿಯ, ಅದರಲ್ಲಿ ಜೋಲುವ ಕೆನ್ನಾಲಗೆಯ, ಗಬ್ಬಿದ/ಕೊಬ್ಬಿದ ನಾಯಿಗಳ ಹಗ್ಗವನ್ನು ಉಗಿದು/ಕಳಚಿ ಬಿಡಲು ಹಂದಿಗಳನ್ನು ಕೂಗುತ್ತಾ ಆಕ್ರಮಿಸಿದುವು ಸಿಂಹಕ್ಕೆ ಮೇಲೆಬಿದ್ದು/ಹಾಯಿದವು ಹುಲಿಯನ್ನು ಕೊಂದುವು.
  • (ಪದ್ಯ-೪೬)

ಪದ್ಯ:-:೪೭:

ಸಂಪಾದಿಸಿ

ಬಿಡದೆ ಕುತ್ತುಗುರುಗಳಂ ಸೋವಿದರ್ ತೀವಿದರ್ |
ಗಿಡಗಳ ಪೊದರ್ಗಳಿಂದೆಬ್ಬಿಸಿದರುಬ್ಬಿಸಿದ |
ರೊಡನೊಡನೆ ಖಗ ಮೃಗ ವ್ರಾತಮಂ ಪಾತಮಂ ಮಾಡಿದರ್ ಕೂಡೆಕೂಡೆ ||
ಸಿಡಿಗುಂಡು ಬಡಿಗೋಲ್ಗಳುರುಬೆಯಿಂದಿರುಬೆಯಿಂ |
ದಿಡು ಗವಣೆ ನೇಣುರುಲ್ಗೊಲೆಗಳಿಂ ಬಲೆಗಳಿಂ |
ಜಡಿದಾರ್ದು ಬೊಬ್ಬೆಯಬ್ಬರದಿಂದೆ ಶರದಿಂದೆ ಕಾಡೊಳ್ ಕಿರಾತರಂದು ||47||

ಪದವಿಭಾಗ-ಅರ್ಥ:
ಬಿಡದೆ ಕುತ್ತುಗುರುಗಳಂ (ಕುತ್ತು:ಪೊದೆ.) ಸೋವಿದರ್ ತೀವಿದರ್ ಗಿಡಗಳ ಪೊದರ್ಗಳಿಂದ ಎಬ್ಬಿಸಿದರು ಉಬ್ಬಿಸಿದರು (ಉಬ್ಬಿಸು: ಆಕ್ರಮಿಸು) ಒಡನೊಡನೆ ಖಗ ಮೃಗ ವ್ರಾತಮಂ ಪಾತಮಂ (ಪಾತ: ಕೆಡವು) ಮಾಡಿದರ್ ಕೂಡೆಕೂಡೆ=[ಒಂದನ್ನೂ ಬಿಡದೆ ಪೊದೆಗಳನ್ನು ಸೋವಿದರು/ಹುಡುಕಿದರು; ಎಲ್ಲಕಡೆ ತುಂಬಿಕೊಂಡರು, ಗಿಡಗಳ ಪೊದಗಳಿಂದ ಪ್ರಾಣಿಗಳನ್ನು ಎಬ್ಬಿಸಿದರು. ಅದರ ಜೊತೆ ಜೊತೆಗೆ ಖಗ/ಪಕ್ಷಿ ಮೃಗ ಸಮೂಹವನ್ನು ಆಕ್ರಮಿಸಿದರು; ಕೂಡಕೂಡಲೆ ಹೊಡೆದು ಬೀಳುವಂತೆ ಮಾಡಿದರು.];; ಸಿಡಿಗುಂಡು ಬಡಿಯುವ ಗೋಲುಗಳ ಉರುಬೆಯಿಂದ ಇರುವಬೆಯಿಂದ (ಸಿಕ್ಕು (ಬಲೆಗೆ ಸಿಕ್ಕಿದ ಮೀನು; ಇರುಬೆಗೆ ಸಿಕ್ಕಿದ ಹುಲಿ),) ಇಡುಗವಣೆ ನೇಣುರುಲ್ಗೊಲೆಗಳಿಂ ಬಲೆಗಳಿಂ ಜಡಿದಾರ್ದು ಬೊಬ್ಬೆಯಬ್ಬರದಿಂದೆ ಶರದಿಂದೆ ಕಾಡೊಳ್ ಕಿರಾತರಂದು=[ಸಿಡಿಗುಂಡು ಬಡಿಗೋಲ್ಗಳ ಉರುಬೆಯಿಂದ ಬೀಸುವ ಆರ್ಭಟದಿಂದ, ಇರುಬೆ/ಬಲೆಯಿಂದ, ಇಡುಗವಣೆ/ ಕವಣೆಗಳಿಂದ, ನೇಣು ಉರುಲುಕೊಲೆಗಳಿಂದ, ಪ್ರಾಣಿಗಳನ್ನುಹಿಡಿಯುವ ಬಲೆಗಳಿಂದ, ಹೊಡೆದು ಆರ್ಭಟಿಸಿ ಬೊಬ್ಬೆಹೊಡೆಯುವ ಅಬ್ಬರದ ಸದ್ದಿನಿಂದ, ಬಾಣದಿಂದ, ಕಾಡಲ್ಲಿ ಕಿರಾತರು ಅಂದು ಸೋಬೇಟೆಯಾಡಿದರು].
  • ತಾತ್ಪರ್ಯ:ಒಂದನ್ನೂ ಬಿಡದೆ ಪೊದೆಗಳನ್ನು ಸೋವಿದರು/ಹುಡುಕಿದರು; ಎಲ್ಲಕಡೆ ತುಂಬಿಕೊಂಡರು, ಗಿಡಗಳ ಪೊದಗಳಿಂದ ಪ್ರಾಣಿಗಳನ್ನು ಎಬ್ಬಿಸಿದರು. ಅದರ ಜೊತೆ ಜೊತೆಗೆ ಖಗ/ಪಕ್ಷಿ ಮೃಗ ಸಮೂಹವನ್ನು ಆಕ್ರಮಿಸಿದರು; ಕೂಡಕೂಡಲೆ ಹೊಡೆದು ಬೀಳುವಂತೆ ಮಾಡಿದರು. ಸಿಡಿಗುಂಡು ಬಡಿಗೋಲ್ಗಳ ಉರುಬೆಯಿಂದ ಬೀಸುವ ಆರ್ಭಟದಿಂದ, ಇರುಬೆ/ಬಲೆಯಿಂದ, ಇಡುಗವಣೆ/ ಕವಣೆಗಳಿಂದ, ನೇಣು ಉರುಲುಕೊಲೆಗಳಿಂದ, ಪ್ರಾಣಿಗಳನ್ನುಹಿಡಿಯುವ ಬಲೆಗಳಿಂದ, ಹೊಡೆದು ಆರ್ಭಟಿಸಿ ಬೊಬ್ಬೆಹೊಡೆಯುವ ಅಬ್ಬರದ ಸದ್ದಿನಿಂದ, ಬಾಣದಿಂದ, ಕಾಡಲ್ಲಿ ಕಿರಾತರು ಅಂದು ಸೋಬೇಟೆಯಾಡಿದರು].
  • (ಪದ್ಯ-೪)

ಪದ್ಯ:-:೪೮:

ಸಂಪಾದಿಸಿ

ಕುತ್ತುರಳ್ ಪುದುಗಿರ್ದು ಪುಲಿ ಪೊರಮಡಲ್ ಕಂಡು |
ಕಿತ್ತು ಕೂರ್ಗಣೆಗಳಂ ಪೂಡಿ ಲುಬ್ಧಕರಿರ್ವ |
ರಿತ್ತತ್ತಲಿರ್ದು ಸರಿಸದೊಳೆಚ್ಚೊಡದರೊಡಲ ನುಚ್ಚಳಿಸಿದಂಬು ತಾಗಿ ||
ಇತ್ತಂಡಮುಂ ವ್ಯಾಘ್ರದೊಡನಿಳೆಗುರುಳ್ದುದು |
ದ್ವೃತ್ತದಿಂದುಭಯ ಜನಮೇಕಾರ್ಥಕೆಳಸಿದೊಡೆ |
ಮತ್ತೆ ಲೇಸಾದಪುದೆ ಜಗದೊಳೀ ಮೂವರುಪಹತಿ ಚಿತ್ರಮಲ್ಲೆಂದನು ||48||

ಪದವಿಭಾಗ-ಅರ್ಥ:
ಕುತ್ತುರಳ್ ಪುದುಗಿರ್ದು ಪುಲಿ ಪೊರಮಡಲ್ ಕಂಡು ಕಿತ್ತು ಕೂರ್ಗಣೆಗಳಂ ಪೂಡಿ ಲುಬ್ಧಕರು ಇರ್ವರು ಇತ್ತತ್ತಲಿರ್ದು ಸರಿಸದೊಳು ಎಚ್ಚೊಡೆ=[ಪೊದೆಯಲ್ಲಿ ಅಡಗಿದ್ದ ಹುಲಿ ಹೊರ ಹೊರಡಲು, ಕಂಡು ಬತ್ತಳಿಕೆಯಿಂದ ತೆಗೆದು ಚೂಪಾದ ಬಾಣಗಳನ್ನು ಹೂಡಿ ಬೇಡರು ಇಬ್ಬರು, ಈ ಕಡೆ ಆ ಕಡೆ ಹತ್ತಿರದಲ್ಲಿದ್ದು ಹೊಡೆದಾಗ];; ಅದರ ಒಡಲನು ಉಚ್ಚಳಿಸಿದ ಅಂಬು ತಾಗಿ ಇತ್ತಂಡಮುಂ ವ್ಯಾಘ್ರದೊಡನೆ ಇಳೆಗೆ ಉರುಳ್ದುದು ಉದ್ವೃತ್ತದಿಂದ ಉಭಯ ಜನಂ ಏಕಾರ್ಥಕೆ ಎಳಸಿದೊಡೆ ಮತ್ತೆ ಲೇಸಾದಪುದೆ ಜಗದೊಳೀ ಮೂವರುಪಹತಿ ಚಿತ್ರಮಲ್ಲೆಂದನು=[ಅದರ ದೇಹವನ್ನು ಬೇಧಿಸಿ ದಾಟಿ ಹೊರಟ ಅಂಬು ತಾಗಿ ಎರಡೂಕಡೆಯವರು ವ್ಯಾಘ್ರದೊಡನೆ ಭೂಮಿಗೆ ಉರುಳಿ ಬಿದ್ದರು. ಉದ್ಧಟತನದಿಂದ ಎರಡು ಜನರು ಒಂದೇ ವಸ್ತುವಿನ ಲಾಭಕ್ಕೆ ಹೋರಾಡಿದರೆ ಮತ್ತೆ ಒಳ್ಳೆಯದಾಗುವುದೇ ಈ ಜಗತ್ತಿನಲ್ಲಿ, ಅದರ ಪರಿಣಾಮ ಮೂವರ ಸಾವು, ಇದು ವಿಚಿತ್ರವಲ್ಲ, ಸ್ವಾಭಾವಿಕ ಎಂದನು,ಅರ್ಜುನನಿಗೆ ನಾರದ].
  • ತಾತ್ಪರ್ಯ:ಪೊದೆಯಲ್ಲಿ ಅಡಗಿದ್ದ ಹುಲಿ ಹೊರ ಹೊರಡಲು, ಕಂಡು ಬತ್ತಳಿಕೆಯಿಂದ ತೆಗೆದು ಚೂಪಾದ ಬಾಣಗಳನ್ನು ಹೂಡಿ ಬೇಡರು ಇಬ್ಬರು, ಈ ಕಡೆ ಆ ಕಡೆ ಹತ್ತಿರದಲ್ಲಿದ್ದು ಹೊಡೆದಾಗ, ಅದರ ದೇಹವನ್ನು ಬೇಧಿಸಿ ದಾಟಿ ಹೊರಟ ಅಂಬು ತಾಗಿ ಎರಡೂ ಕಡೆಯವರು ವ್ಯಾಘ್ರದೊಡನೆ ಭೂಮಿಗೆ ಉರುಳಿ ಬಿದ್ದರು. ಉದ್ಧಟತನದಿಂದ ಎರಡು ಜನರು ಒಂದೇ ವಸ್ತುವಿನ ಲಾಭಕ್ಕೆ ಹೋರಾಡಿದರೆ ಮತ್ತೆ ಒಳ್ಳೆಯದಾಗುವುದೇ ಈ ಜಗತ್ತಿನಲ್ಲಿ, ಅದರ ಪರಿಣಾಮ ಮೂವರ ಸಾವು, ಇದು ವಿಚಿತ್ರವಲ್ಲ, ಸ್ವಾಭಾವಿಕ ಎಂದನು,ಅರ್ಜುನನಿಗೆ ನಾರದ].
  • (ಪದ್ಯ-೪೮)

ಪದ್ಯ:-:೪೯:

ಸಂಪಾದಿಸಿ

ನಳಿತೊಳ ಬಲ್ಮೊಲೆಯ ಸೊಕ್ಕುಜವ್ವನದ ಪರಿ |
ಮಳ ಗಾತ್ರವಳಿಕುಂತಳದ ಮೆಲ್ನಡೆಯ ಶಬರಿ |
ಹಳುವದೊಳ್ ತನ್ನ ಕಾಂತನ ಬಳಿಯೆ ಬರಲೊಂದು ಸಿಂಗಮತಿ ಭರದೊಳೆರಗಿ ||
ಬಳಿಕವಳ ಮಧ್ಯಮಂ ಕಂಡು ಸಾಮಾನ್ಯಮಂ |
ತಳೆದು ಮತ್ತಾಕೆಯ ಚಲಾಪಾಂಗಮಂ ನೋಡಿ |
ಮುಳಿದಡರಲಾ ಕೇಸರಿಯನೆಚ್ಚು ಕೆಡಹಿದಂ ಕ್ರೋಧದಿಂದಾ ವ್ಯಾಧನು||49||

ಪದವಿಭಾಗ-ಅರ್ಥ:
ನಳಿತೊಳ ಬಲ್ಮೊಲೆಯ ಸೊಕ್ಕುಜವ್ವನದ ಪರಿಮಳ ಗಾತ್ರವು ಅಳಿಕುಂತಳದ ಮೆಲ್ನಡೆಯ ಶಬರಿ ಹಳುವದೊಳ್ ತನ್ನ ಕಾಂತನ ಬಳಿಯೆ ಬರಲು ಒಂದು ಸಿಂಗಂ ಅತಿ ಭರದೊಳು ಎರಗಿ=[ಕಮಲದಂಟಿನಂತೆ ನಿಡಿದಾದ ತೊಳುಗಳನ್ನೂ, ದೊಡ್ಡಮೊಲೆಯನ್ನು ಸೊಕ್ಕುಯೌವ್ವನದ, ಪರಿಮಳ ದೇಹದ, ಗುಂಗರು ಕೂದಲಿನ ಮೆಲುನೆಡಿಗೆಯ, ಶಬರಿ ಕಾಡಿನ ಪೊದೆಯಲ್ಲಿ ತನ್ನ ಗಂಡನ ಬಳಿಯೆಲ್ಲಿಯೇ ಬರುತ್ತಿರುವಾಗ ಒಂದು ಸಿಂಹವು ಅತಿ ವೇಗವಾಗಿ ಅವಳಮೇಲೆ ಧಾಳಿಮಾಡಲು ಬಂತು.];; ಬಳಿಕ ಅವಳ ಮಧ್ಯಮಂ ಕಂಡು ಸಾಮಾನ್ಯಮಂ ತಳೆದು ಮತ್ತೆ ಆಕೆಯ ಚಲಾಪಾಂಗಮಂ ನೋಡಿ ಮುಳಿದಡರಲಾ ಕೇಸರಿಯನೆಚ್ಚು ಕೆಡಹಿದಂ ಕ್ರೋಧದಿಂದಾ ವ್ಯಾಧನು=[ಆದರೆ ಬಳಿಕ ಅವಳ ಸಣ್ಣ ಸೊಂಟವನ್ನು ನೋಡಿ ಇವಳು ತನಗೆ ಸಮಾನಳು, ಎಂಬ ಭಾವ ತಳೆದು ಸುಮ್ಮನಾಯಿತು; ಆದರೆ ಮತ್ತೆ ಆಕೆಯ ಚಂಚಲ ಕಡೆಗಣ್ಣಿನೋಟವುಳ್ಳ ಕಣ್ಣುಗಳನ್ನು ಕಂಡು, ಸಿಟ್ಟಾಗಿ ಧಾಳಿಮಾಡಲು, ಆ ಕೇಸರಿಯನ್ನು ಕ್ರೋಧದಿಂದ ವ್ಯಾಧನು ಹೊಡೆದು ಕೆಡಗಿದನು.]
  • ತಾತ್ಪರ್ಯ:ಕಮಲದ ದಂಟಿನಂತೆ ನಿಡಿದಾದ ತೊಳುಗಳನ್ನೂ, ದೊಡ್ಡಮೊಲೆಯನ್ನು ಸೊಕ್ಕುಯೌವ್ವನದ, ಪರಿಮಳ ದೇಹದ, ಗುಂಗರು ಕೂದಲಿನ ಮೆಲುನೆಡಿಗೆಯ, ಶಬರಿ ಕಾಡಿನ ಪೊದೆಯಲ್ಲಿ ತನ್ನ ಗಂಡನ ಬಳಿಯೆಲ್ಲಿಯೇ ಬರುತ್ತಿರುವಾಗ ಒಂದು ಸಿಂಹವು ಅತಿ ವೇಗವಾಗಿ ಅವಳಮೇಲೆ ಧಾಳಿಮಾಡಲು ಬಂತು. ಆದರೆ ಬಳಿಕ ಅವಳ ಸಣ್ಣ ಸೊಂಟವನ್ನು ನೋಡಿ ಇವಳು ತನಗೆ ಸಮಾನಳು, ಎಂಬ ಭಾವ ತಳೆದು ಸುಮ್ಮನಾಯಿತು; ಆದರೆ ಮತ್ತೆ ಆಕೆಯ ಚಂಚಲ ಕಡೆಗಣ್ಣಿನೋಟವುಳ್ಳ ಕಣ್ಣುಗಳನ್ನು ಕಂಡು ಸಹಿಸದೆ, ಸಿಟ್ಟಾಗಿ ಧಾಳಿಮಾಡಲು, ಆ ಕೇಸರಿಯನ್ನು ಕ್ರೋಧದಿಂದ ವ್ಯಾಧನು ಹೊಡೆದು ಕೆಡಗಿದನು. (ಬೇಡತಿಯ ಸಿಂಹಕಟಿಯನ್ನು ಕಂಡು ಸಿಂಹವು, ತನ್ನಜಾತಿಯವಳೆಂದು ಭಾವಿಸಿತು, ಆದರೆ ಚಂಚಲ ಕಡೆಗಣ್ಣೋಟದ ಅವಳ ಕಣ್ನನ್ನು ನೋಡಿ ಇವಳು ತನ್ನ ಜಾತಿಯವಲಲ್ಲವೆಂದು ತಿಳಿದು ಧಾಳಿ ಮಾಡಿತು:::ಇದು ಕವಿಸಮಯ ವೆಂಬ ಕಾವ್ಯ ಭಾಷೆ- ಉತ್ಪ್ರೇಕ್ಷೆಯ ಅಲಂಕಾರ)
  • (ಪದ್ಯ-೪೯)

ಪದ್ಯ:-:೫೦:

ಸಂಪಾದಿಸಿ

ಮರಿಗೆ ಮರೆಯಾಗಿ ಮೈಯೊಡ್ಡಿ ಮಡಿದುವು ಕೆಲವು |
ಬರಿಯಬಿಲ್ದನಿಗೆ ರಮಣನ ತಾಗಿತಂಬೆಂದು |
ನೆರ ಮೋಹದಿಂ ಪೊರಳ್ದುವು ಕೆಲವು ರಾಪುಗೊಂಡೊಂದೊಂದಿನಿಯನನಗಲ್ದು ||
ಮರಗಿ ಮದನಾಸ್ತ್ರದಿಂದಿರದೆ ಬಿದ್ದುವು ಕೆಲವು |
ಬಿರುಸರಳ್ ತಮ್ಮ ಕೂರ್ಪರ ಮೇಲೆ ಬರಲದಕೆ |
ಗುರಿಯಾಗಿ ತೊರೆದುವಸುವಂ ಕೆಲವು ಪುಲ್ಲೆಗಳ್ ಬೇಡರಿಸುವೆಸುಗೆಯಿಂದೆ ||50||

ಪದವಿಭಾಗ-ಅರ್ಥ:
ಮರಿಗೆ ಮರೆಯಾಗಿ ಮೈಯೊಡ್ಡಿ ಮಡಿದುವು ಕೆಲವು ಬರಿಯ ಬಿಲ್ದನಿಗೆ ರಮಣನ ತಾಗಿತು ಅಂಬೆಂದು ನೆರ ಮೋಹದಿಂ ಪೊರಳ್ದುವು ಕೆಲವು ರಾಪುಗೊಂಡ (ರಾಪು:ಹೆದರು, ರಾಹುಬಡಿ?) ಒಂದೊಂದಿನಿಯನನು ಅಗಲ್ದು=[ಮರಿಗೆ ಮರೆಯಾಗಿ ತಮ್ಮ ಮೈಯ್ಯನ್ನು ಬಾಣಕ್ಕೆ ಒಡ್ಡಿ ಸತ್ತವು; ಕೆಲವು ಬರಿಯ ಬಿಲ್ಲಿನ ದನಿಗೆ ರಮಣನಿಗೆ ಬಾಣ ತಾಗಿತು ಎಂದು ಭಾವಿಸಿ ಬಹಳ ಪ್ರೇಮಿ ಮಡಿದನೆಂದು ಪ್ರಾಣಬಿಟ್ಟು ಹೊರಳಿಬಿದ್ದವು; ಕೆಲವು ಹೆದರಿ ಒಂದೊಂದು ಇನಿಯನನು ಅಗಲಿದ ದುಃಖದಿಂದ];; ಮರಗಿ ಮದನಾಸ್ತ್ರದಿಂದ ಇರದೆ ಬಿದ್ದುವು ಕೆಲವು ಬಿರುಸರಳ್ ತಮ್ಮ ಕೂರ್ಪರ ಮೇಲೆ ಬರಲು ಅದಕೆ ಗುರಿಯಾಗಿ ತೊರೆದುವು ಅಸುವಂ ಕೆಲವು ಪುಲ್ಲೆಗಳ್ ಬೇಡರ ಇಸುವ ಎಸುಗೆಯಿಂದೆ=[ಮರಗಿ ಮದನನ ಮೊಹದ ಅಸ್ತ್ರದಿಂದ ವಿಯೋಗ ತಾಳಲಾರದೆ ಸತ್ತುಬಿದ್ದುವು; ಕೆಲವು ಬಿರುಸಿನ ಬಾಣಗಳು ತಮ್ಮ ಪ್ರೀತಿಯವರ ಮೇಲೆ ಬರಲು ಅದಕ್ಕೆ ತಾವೇ ಗುರಿಯಾಗಿ ಜೀವ ತೊರೆದುವು! ಕೆಲವು ಹುಲ್ಲೆಗಳು ಬೇಡರ ಬಾಣದ ಹೊಡೆತದಿಂದ ಸತ್ತವು.]
  • ತಾತ್ಪರ್ಯ:ಮರಿಗೆ ಮರೆಯಾಗಿ ತಮ್ಮ ಮೈಯ್ಯನ್ನು ಬಾಣಕ್ಕೆ ಒಡ್ಡಿ ಸತ್ತವು; ಕೆಲವು ಬರಿಯ ಬಿಲ್ಲಿನ ದನಿಗೆ ರಮಣನಿಗೆ ಬಾಣ ತಾಗಿತು ಎಂದು ಭಾವಿಸಿ ಬಹಳ ಪ್ರೇಮಿ ಮಡಿದನೆಂದು ಪ್ರಾಣಬಿಟ್ಟು ಹೊರಳಿಬಿದ್ದವು; ಕೆಲವು ಹೆದರಿ ಒಂದೊಂದು ಇನಿಯನನು ಅಗಲಿದ ದುಃಖದಿಂದ ಮರಗಿ ಮದನನ ಮೊಹದ ಅಸ್ತ್ರದಿಂದ ವಿಯೋಗ ತಾಳಲಾರದೆ ಸತ್ತುಬಿದ್ದುವು; ಕೆಲವು ಬಿರುಸಿನ ಬಾಣಗಳು ತಮ್ಮ ಪ್ರೀತಿಯವರ ಮೇಲೆ ಬರಲು ಅದಕ್ಕೆ ತಾವೇ ಗುರಿಯಾಗಿ ಜೀವ ತೊರೆದುವು! ಕೆಲವು ಹುಲ್ಲೆಗಳು ಬೇಡರ ಬಾಣದ ಹೊಡೆತದಿಂದ ಸತ್ತವು.
  • (ಪದ್ಯ-೫೦)

ಪದ್ಯ:-:೫೧:

ಸಂಪಾದಿಸಿ

ಕರಿಯ ಕುಂಭಸ್ಥಳದ ಮುಕ್ತಾಫಲಂಗಳಂ |
ಬರುಹಿಗಳ ಗರಿಗಳಂ ಚಮರಿ ವಾಲಂಗಳಂ |
ದ್ವಿರದ ನವ ದಂತಾಂಕುರಂಗಳಂ ಮೃಗಸಾರ ಮೃತ್ತಿಕೆಗಳಂ ಬನದೊಳು ||
ಇರದೆತ್ತಿಕೊಂಡು ಬರುತಿರ್ದಪರೊ ಶಬರಿಯರ್ |
ದರಹಾಸ ಕಬರಿ ಕುಂತಳ ಕುಚ ಶ್ಯಾಮತನು |
ಪರಿಮಳಂಗಳನಾಂತು ಬಂದಪರೊ ತಿಳಿಯಲರಿದೆಂಬಂತೆ ಕಾಣಿಸಿದರು ||51||

ಪದವಿಭಾಗ-ಅರ್ಥ:
ಕರಿಯ ಕುಂಭಸ್ಥಳದ ಮುಕ್ತಾಫಲಂಗಳಂ ಬರುಹಿಗಳ(ನವಿಲು) ಗರಿಗಳಂ ಚಮರಿ ವಾಲಂಗಳಂ ದ್ವಿರದ ನವ ದಂತ ಅಂಕುರಂಗಳಂ ಮೃಗಸಾರ ಮೃತ್ತಿಕೆಗಳಂ ಬನದೊಳು=[ಆನೆಯ ಕುಂಭಸ್ಥಳದ ಮದೋದಕದಿಂದ ಉದುರುವ ಮುತ್ತುಗಳನ್ನು, ನವಿಲುಗಳ ಗರಿಗಳನ್ನು, ಚಮರಿಮೃಗದ ಬಾಲಗಳ ಕೂದಲುಗಳನ್ನು, ಮರಿಯಾನೆಯ ನವ ದಂತದ ಮೊಳಕೆಗಳನ್ನು, ಕಸ್ತೂರಿಮೃಗಗಳ ಸಾರದಮೃತ್ತಿಕೆಗಳನ್ನು, ಕಾಡಿನಲ್ಲಿ ];; ಇರದೆತ್ತಿಕೊಂಡು ಬರುತಿರ್ದಪರೊ ಶಬರಿಯರ್ ದರಹಾಸ ಕಬರಿ ಕುಂತಳ ಕುಚ ಶ್ಯಾಮತನು ಪರಿಮಳಂಗಳನಾಂತು ಬಂದಪರೊ ತಿಳಿಯಲರಿದೆಂಬಂತೆ ಕಾಣಿಸಿದರು=[ಬಿಡದೆ ತೆಗೆದುಕೊಂಡು ಬರುತ್ತಿರುವರೊ ಶಬರಿಯರು, ಅಥವಾ ಮಂದಹಾಸದ, ಗುಂಗರು ಕೂದಲಿನ, ತುರುಬಿನ, ಕುಚದ, ಕಪ್ಪು ದೇಹದ, ಪರಿಮಳಗಳನ್ನು ಹೊತ್ತು ಬರುವರೊ, ತಿಳಿಯಲು ಆಗದು ಎಂಬಂತೆ ತೋರುತ್ತಿದ್ದರು.]
  • ತಾತ್ಪರ್ಯ:ಆನೆಯ ಕುಂಭಸ್ಥಳದ ಮದೋದಕದಿಂದ ಉದುರುವ ಮುತ್ತುಗಳನ್ನು, ನವಿಲುಗಳ ಗರಿಗಳನ್ನು, ಚಮರಿಮೃಗದ ಬಾಲಗಳ ಕೂದಲುಗಳನ್ನು, ಮರಿಯಾನೆಯ ನವ ದಂತದ ಮೊಳಕೆಗಳನ್ನು, ಕಸ್ತೂರಿಮೃಗಗಳ ಸಾರದಮೃತ್ತಿಕೆಗಳನ್ನು, ಕಾಡಿನಲ್ಲಿ ಬಿಡದೆ ತೆಗೆದುಕೊಂಡು ಬರುತ್ತಿರುವರೊ ಶಬರಿಯರು, ಅಥವಾ ಮಂದಹಾಸದ, ಗುಂಗರು ಕೂದಲಿನ, ತುರುಬಿನ, ಕುಚದ, ಕಪ್ಪು ದೇಹದ, ಪರಿಮಳಗಳನ್ನು ಹೊತ್ತು ಬರುವರೊ, ತಿಳಿಯಲು ಆಗದು ಎಂಬಂತೆ ತೋರುತ್ತಿದ್ದರು.
  • (ಪದ್ಯ-೫೧)

ಪದ್ಯ:-:೫೨:

ಸಂಪಾದಿಸಿ

ಪುಲಿ ಕರಡಿ ಕರಿ ಸಿಂಗ ಸಾರಂಗ ಮರಿ ಪಂದಿ |
ಮೊಲ ಹುಲ್ಲೆ ಕಾಡೆಮ್ಮೆ ಚಮರಿಗಳ್ ಮೊದಲಾದ |
ಪಲವು ಮೃಗಜಾತಿಯಂ ಕ್ರೌಂಚ ಶಿಖಿ ತಿತ್ತಿರಿ ಕಪೋತಾದಿ ಪಕ್ಷಿಗಳನು ||
ಕೊಲುತೆ ಬಹ ಬೇಡರ್ಗೆ ಸಿಕ್ಕದೋಡಿದುದೊಂದೆ |
ರಳೆ ಕುಳಿಂದಕನೆಂಬ ದೊರೆ ಕಂಡು ತನ್ನ ಚಾ |
ಪಲ ಹಯದೊಳಿದರ ಬಳಿಸಂದನತಿವೇಗದಿಂ ಬಿಲ್ವಿಡಿದು ಕೊಲ್ವೆನೆಂದು ||52||

ಪದವಿಭಾಗ-ಅರ್ಥ:
ಪುಲಿ ಕರಡಿ ಕರಿ ಸಿಂಗ ಸಾರಂಗ ಮರಿಪಂದಿ ಮೊಲ ಹುಲ್ಲೆ ಕಾಡೆಮ್ಮೆ ಚಮರಿಗಳ್ ಮೊದಲಾದ ಪಲವು ಮೃಗಜಾತಿಯಂ ಕ್ರೌಂಚ ಶಿಖಿ ತಿತ್ತಿರಿ ಕಪೋತಾದಿ ಪಕ್ಷಿಗಳನು=[ಹುಲಿ ಕರಡಿ ಆನೆ, ಸಿಂಹ, ಸಾರಂಗ, ಮರಿಹಂದಿ, ಮೊಲ, ಹುಲ್ಲೆ, ಕಾಡೆಮ್ಮೆ, ಚಮರಿಗಳು ಮೊದಲಾದ ಹಲವು ಮೃಗಜಾತಿಯನ್ನೂ, ಕ್ರೌಂಚ, ನವಿಲು, ತಿತ್ತಿರಿ, ಕಪೋತ ಮೊದಲಾದ ಪಕ್ಷಿಗಳನ್ನೂ,];; ಕೊಲುತೆ ಬಹ ಬೇಡರ್ಗೆ ಸಿಕ್ಕದೆ ಓಡಿದುದು ಒಂದು ಎರಳೆ ಕುಳಿಂದಕನೆಂಬ ದೊರೆ ಕಂಡು ತನ್ನ ಚಾಪಲ ಹಯದೊಳು ಇದರ ಬಳಿಸಂದನು ಅತಿವೇಗದಿಂ ಬಿಲ್ವಿಡಿದು ಕೊಲ್ವೆನೆಂದು=[ಕೊಲ್ಲುತ್ತಾ ಬರುವ ಬೇಡರಿಗೆ ಒಂದು ಎರಳೆ ಸಿಕ್ಕದೆ ಓಡಿತು. ಕುಳಿಂದಕನೆಂಬ ದೊರೆ ಅದನ್ನು ಕಂಡು ತನ್ನ ಚುರಕಾದ ಕುದುರೆಯ ಮೇಲೆ ಅತಿವೇಗದಿದ ಬಿಲ್ಲು ಹಿಡಿದು, ಅದನ್ನು ಕೊಲ್ಲಲು ಇದರ ಬಳಿಗೆ ಬಂದನು/ಹಿಂಬಾಲಿಸಿದನು.]
  • ತಾತ್ಪರ್ಯ:ಹುಲಿ ಕರಡಿ ಆನೆ, ಸಿಂಹ, ಸಾರಂಗ, ಮರಿಹಂದಿ, ಮೊಲ, ಹುಲ್ಲೆ, ಕಾಡೆಮ್ಮೆ, ಚಮರಿಗಳು ಮೊದಲಾದ ಹಲವು ಮೃಗಜಾತಿಯನ್ನೂ, ಕ್ರೌಂಚ, ನವಿಲು, ತಿತ್ತಿರಿ, ಕಪೋತ ಮೊದಲಾದ ಪಕ್ಷಿಗಳನ್ನೂ, ಕೊಲ್ಲುತ್ತಾ ಬರುವ ಬೇಡರಿಗೆ ಒಂದು ಎರಳೆ ಸಿಕ್ಕದೆ ಓಡಿತು. ಕುಳಿಂದಕನೆಂಬ ದೊರೆ ಅದನ್ನು ಕಂಡು ತನ್ನ ಚುರಕಾದ ಕುದುರೆಯ ಮೇಲೆ ಅತಿವೇಗದಿದ ಬಿಲ್ಲು ಹಿಡಿದು, ಅದನ್ನು ಕೊಲ್ಲಲು ಇದರ ಬಳಿಗೆ ಬಂದನು/ಹಿಂಬಾಲಿಸಿದನು.
  • (ಪದ್ಯ-೫೨)

ಪದ್ಯ:-:೫೩:

ಸಂಪಾದಿಸಿ

ಆ ಕುಳಿಂದಂ ದುಷ್ಟಬುದ್ಧಿಯ ನಿಯೋಗದಿಂ |
ದಾ ಕಾನನದ ನಾಡ ವಳಿತಮಂ ಕೈಕೊಂಡು |
ಭೂಕಾಂತನಾಗಿಹಂ ಚಂದನಾವತಿಯೆಂಬ ಪುರದೊಳವನಳ್ತಿಯಿಂದೆ ||
ಈ ಕಿರಾತ ಪ್ರಕರದೊಡನೆ ಪೊರಮಟ್ಟು ಮೃಗ |
ಯಾ ಕಾಮನಾಗಿ ಬಂದಿರ್ದವಂ ಸಿಡಿದೋಡು |
ವಾ ಕುರಂಗದ ಬೆನ್ನನೈದಿದಂ ತೇಜಿಯ ಜವಂ ಗಾಳಿಯಂ ಮುಂಚಲು ||53||

ಪದವಿಭಾಗ-ಅರ್ಥ:
ಆ ಕುಳಿಂದಂ ದುಷ್ಟಬುದ್ಧಿಯ ನಿಯೋಗದಿಂದ ಆ ಕಾನನದ ನಾಡ ವಳಿತಮಂ ಕೈಕೊಂಡು ಭೂಕಾಂತನಾಗಿಹಂ ಚಂದನಾವತಿಯೆಂಬ ಪುರದೊಳು ಅವನು ಅಳ್ತಿಯಿಂದೆ=[ಆ ಕುಳಿಂದನು ದುಷ್ಟಬುದ್ಧಿಯ ನೇಮಕ/ ನಿಯೋಜನೆಯಿಂದ ಆ ಕಾಡಿನ ಮತ್ತು ಆ ನಾಡಿನ ಆಡಳಿತವನ್ನು ಸಂತೋಷದಿಂದ ಪಡೆದು ಚಂದನಾವತಿಯೆಂಬ ಪುರದಲ್ಲಿ ಸಾಮಂತ ರಾಜನಾಗಿರುವನು.];; ಈ ಕಿರಾತ ಪ್ರಕರದೊಡನೆ ಪೊರಮಟ್ಟು ಮೃಗಯಾ ಕಾಮನಾಗಿ ಬಂದಿರ್ದವಂ ಸಿಡಿದೋಡುವ ಆ ಕುರಂಗದ (ಜಿಂಕೆ, ಹುಲ್ಲೆ) ಬೆನ್ನನೈದಿದಂ ತೇಜಿಯ ಜವಂ ಗಾಳಿಯಂ ಮುಂಚಲು=[ಈ ಬೇಡರ ಸಮುಹದೊಡನೆ ಹೊರಟು ಮೃಗಗಳ ಅಪೇಕ್ಷೆಗಾಗಿ ಬಂದಿದ್ದವನು ಕುದುರೆಯ ವೇಗವು ಗಾಳಿಯನ್ನು ಮೀರುವಂತೆ, ತಪ್ಪಿಸಿಕೊಂಡು ಓಡುವ ಆ ಜಿಂಕೆಯನ್ನು ಬೆನ್ನಟ್ಟಿ ಹೋದನು. ].
  • ತಾತ್ಪರ್ಯ:ಆ ಕುಳಿಂದನು ದುಷ್ಟಬುದ್ಧಿಯ ನೇಮಕ/ ನಿಯೋಜನೆಯಿಂದ ಆ ಕಾಡಿನ ಮತ್ತು ಆ ನಾಡಿನ ಆಡಳಿತವನ್ನು ಸಂತೋಷದಿಂದ ಪಡೆದು ಚಂದನಾವತಿಯೆಂಬ ಪುರದಲ್ಲಿ ಸಾಮಂತ ರಾಜನಾಗಿರುವನು. ಈ ಬೇಡರ ಸಮುಹದೊಡನೆ ಹೊರಟು ಮೃಗಗಳ ಅಪೇಕ್ಷೆಗಾಗಿ ಬಂದಿದ್ದವನು ಕುದುರೆಯ ವೇಗವು ಗಾಳಿಯನ್ನು ಮೀರುವಂತೆ, ತಪ್ಪಿಸಿಕೊಂಡು ಓಡುವ ಆ ಜಿಂಕೆಯನ್ನು ಬೆನ್ನಟ್ಟಿ ಹೋದನು.
  • (ಪದ್ಯ-೫೩)

ಪದ್ಯ:-:೫೪:

ಸಂಪಾದಿಸಿ

ಹರಿಣನಂ ಬೆಂಬತ್ತಿ ಬರಲಾ ಕುಳಿಂದಕಂ |
ಹರಿಯನೇ ಜಪಿಸುತಳುತಿಹ ಬಾಲನಂ ಕಂಡು |
ಹರಿಯನಲ್ಲಿಯೆ ನಿಲಿಸಿ ನೋಡಿ ನಿಜ ಶಿರವ ನಲ್ಲಾಡಿ ತಾಂ ಮೃಗದ ಕೊಲೆಗೆ ||
ಹರಿತಂದ ಪಾಪಮತಿ ಪುಣ್ಯಮೊದವಿಸಿತುಸುವಿ |
ಹರಿಸುವೊಡೆ ಶಿವಶಿವಾ ಪೊಸತೆಂದು ಹರ್ಷದ ಲ |
ಹರಿಯೊಳೋಲಾಡಿದಂ ಕಡವರವನೆಡಹಿ ಸಂಧಿಸಿದ ಕಡುಬಡವನಂತೆ ||54||

ಪದವಿಭಾಗ-ಅರ್ಥ:
ಹರಿಣನಂ ಬೆಂಬತ್ತಿ ಬರಲಾ ಕುಳಿಂದಕಂ ಹರಿಯನೇ ಜಪಿಸುತ ಅಳುತಿಹ ಬಾಲನಂ ಕಂಡು ಹರಿಯನು (ಕುದುರೆಯನ್ನು) ಅಲ್ಲಿಯೆ ನಿಲಿಸಿ=[ಜಿಂಕೆಯನ್ನು ಬೆನ್ನುಹತ್ತಿ ಬರಲು ಆ ಕುಳಿಂದಕನು ಹರಿಯನ್ನು ಜಪಿಸುತ್ತಾ ಅಳುತ್ತಿರುವ ಬಾಲಕನನ್ನು ಕಂಡು ಕುದುರೆಯನ್ನು ಅಲ್ಲಿಯೆ ನಿಲ್ಲಿಸಿ];; ನೋಡಿ ನಿಜ ಶಿರವ ನಲ್ಲಾಡಿ ತಾಂ ಮೃಗದ ಕೊಲೆಗೆ ಹರಿತಂದ ಪಾಪಂ ಅತಿ ಪುಣ್ಯಂ ಒದವಿಸಿತು ಉಸುವಿಹರಿಸುವೊಡೆ (ಉಸು ವಿಹರಿಸುವೊಡೆ-ಉಸು:ಉಸುಕು,ಮರಳು, ವಿಹರಿಸುವೊಡೆ, ಮರುಭೂಮಿಯಲ್ಲಿ ವಿಹರಿಸುವಾಗ ಜಲಕಂಡಂತೆ? ಪುಣ್ಯ ಒದಗಿತು ಸುವಿಹರಿಸುವೊಡೆ (ಸುವಿಹರಿಸುವೊಡೆ: ಸುವಿಹರಿಸುವಾಗ:ಸುಖವಾಗಿ ಸಂಚರಿಸಿದಾಗ ಪುಣ್ಯ ಒದಗಿತು?) ಶಿವಶಿವಾ ಪೊಸತು ಎಂದು ಹರ್ಷದ ಲಹರಿಯೊಳು ಓಲಾಡಿದಂ=[ಆ ಮಗುವನ್ನು ನೋಡಿ ತನ್ನ ತಲೆಯನ್ನು ಅಲ್ಲಡಿಸುತ್ತಾ ತಾನು ಮೃಗದ ಕೊಲೆಗಾಗಿ ಇಲ್ಲಿಗೆ ಬಂದ ಪಾಪದ ಕೆಲಸಕ್ಕಾಗಿ ಸುಮ್ಮನೆ ವಿಹರಿಸಿದರೆ, ಅತಿ ಪುಣ್ಯವಾಗಿ ಪರಿಣಮಿಸಿತು ಶಿವಶಿವಾ! ಇದು ಹೊಸತು ಎಂದು ಹರ್ಷದ ಲಹರಿಯಲ್ಲಿ ಓಲಾಡಿದನು.(ಓಲಾಡು:ಆನಂದದ ಪ್ರವಾಹದಲ್ಲಿ ತೂಗುಯ್ಯಾಲೆ)];; ಕಡವರವನು (ಕಡವರ:ಹೂಳಿಟ್ಟ ನಿಧಿ) ಎಡಹಿ ಸಂಧಿಸಿದ ಕಡುಬಡವನಂತೆ=[ಇದು ಪುಳಿಂದಕನಿಗೆ, ಹೂಳಿಟ್ಟ ನಿಧಿಯನ್ನು ಎಡವಿ ಕಂಡ ಕಡುಬಡವನಂತೆ ಆಯಿತು].
  • ತಾತ್ಪರ್ಯ:ಜಿಂಕೆಯನ್ನು ಬೆನ್ನುಹತ್ತಿ ಬರಲು ಆ ಕುಳಿಂದಕನು ಹರಿಯನ್ನು ಜಪಿಸುತ್ತಾ ಅಳುತ್ತಿರುವ ಬಾಲಕನನ್ನು ಕಂಡು ಕುದುರೆಯನ್ನು ಅಲ್ಲಿಯೆ ನಿಲ್ಲಿಸಿ, ಆ ಮಗುವನ್ನು ನೋಡಿ ತನ್ನ ತಲೆಯನ್ನು ಅಲ್ಲಡಿಸುತ್ತಾ ತಾನು ಮೃಗದ ಕೊಲೆಯ ಪಾಪದ ಕೆಲಸಕ್ಕಾಗಿ ಇಲ್ಲಿಗೆ ಬಂದು ಸುಮ್ಮನೆ ವಿಹರಿಸಿದರೆ, ಅದು ಅತಿ ಪುಣ್ಯವಾಗಿ ಪರಿಣಮಿಸಿತು ಶಿವಶಿವಾ! ಇದು ಹೊಸತು ಎಂದು ಹರ್ಷದ ಲಹರಿಯಲ್ಲಿ ಓಲಾಡಿದನು. ಇದು ಪುಳಿಂದಕನಿಗೆ, ಹೂಳಿಟ್ಟ ನಿಧಿಯನ್ನು ಎಡವಿ ಕಂಡ ಕಡುಬಡವನಂತೆ ಆಯಿತು.
  • (ಪದ್ಯ-೫೪)

ಪದ್ಯ:-:೫೫:

ಸಂಪಾದಿಸಿ

ಇಳಿದು ನಿಜವಾಜಿಯಂ ಸಾರ್ದು ಮೈದಡವಿ ಬರೆ |
ಸೆಳೆದು ಬಿಗಿಯಪ್ಪಿ ಕಂಬನಿದೊಡೆದು ಕೂಡೆ ಸ |
ಗ್ಗಳೆಯ ನೀರಿಂದ ಕಾಲ್ತುದಿಯೊಳ್ ಬಸಿವ ನೆತ್ತರಂ ತೊಳೆದು ಮೋಹದಿಂದೆ ||
ಗಳದೊಳುಬ್ಬುವ ಗದ್ಗದಂಗಳಂ ಸೈತಿಟ್ಟು |
ತಿಳಿಪಿ ಲಾಲಿಸಿದಂ ಕುಳಿಂದಕಂ ಸೌಭಾಗ್ಯ ||
ನಿಳಯದರಕೆಯ ವಸುವನೊದವಿದಗ್ಗದ ಪುಣ್ಯದೊಡಲಸುವನಾ ಶಿಶುವನು ||55||

ಪದವಿಭಾಗ-ಅರ್ಥ:
ಇಳಿದು ನಿಜವಾಜಿಯಂ ಸಾರ್ದು ಮೈದಡವಿ ಬರೆ ಸೆಳೇದು ಬಿಗಿಯಪ್ಪಿ ಕಂಬನಿದೊಡೆದು ಕೂಡೆ ಸಗ್ಗಳೆಯ ನೀರಿಂದ ಕಾಲ್ತುದಿಯೊಳ್ ಬಸಿವ ನೆತ್ತರಂ ತೊಳೆದು ಮೋಹದಿಂದೆ=[ತನ್ನ ಕುದುರೆಯಿಂದ ಇಳಿದು, ಮಗುವಿನ ಹತ್ತಿರ ಹೊಗಿ, ಮೈಯನ್ನು ತಡವಿ, ಬರೆಸೆಳೆದು ಬಿಗಿಯಾಗಿ ಅಪ್ಪಿಕೊಂಡು, ಕಂಬನಿಯನ್ನು ಒರೆಸಿ, ಕೂಡಲೆ ನೀರಿನಚೀಲದ ನೀರಿನಿಂದ ಮಗುವಿನ ಕಾಲು ತುದಿಯಲ್ಲಿ ಬಸಿಯುತ್ತಿದ್ದ ರಕ್ತವನ್ನು ತೊಳೆದು ಪ್ರೀತಿಯಿಂದ ];; ಗಳದೊಳು ಉಬ್ಬುವ ಗದ್ಗದಂಗಳಂ ಸೈತಿಟ್ಟು ತಿಳಿಪಿ ಲಾಲಿಸಿದಂ ಕುಳಿಂದಕಂ ಸೌಭಾಗ್ಯ ನಿಳಯದ ಅರಕೆಯ ವಸುವನು (ವಸು:ಸಂಪತ್ತು) ಒದವಿದ ಅಗ್ಗದ ಪುಣ್ಯದೊಡಲ ಅಸುವನು ಆ ಶಿಶುವನು=[ಮಗುವಿನ ಗಂಟಲಲ್ಲಿ ದುಃಖದಿಂದ ಉಮ್ಮಳಿಸುವ ಉಬ್ಬುವ ಗದ್ಗದಗಳನ್ನು ಸಂತೈಸಿ, ಭಯಬೇಡವೆಂದು ತಿಳಿಸಿ, ಕುಳಿಂದಕನು ಮುದ್ದುಮಾಡಿದನು; ಸೌಭಾಗ್ಯ ನಿಲಯದ ಕೊರತೆಯನ್ನು ತುಂಬುವ ಸಂಪತ್ತುನ್ನು ಒದಗಿಸಿದ ಶ್ರೇಷ್ಟವಾದ ಪುಣ್ಯದೇಹದ ಆ ಜೀವವನ್ನು ಅಂದರೆ ಆ ಶಿಶುವನ್ನು ಮುದ್ದುಮಾಡಿದನು.]
  • ತಾತ್ಪರ್ಯ:ಕುಳಿಂದಕನು ತನ್ನ ಕುದುರೆಯಿಂದ ಇಳಿದು, ಮಗುವಿನ ಹತ್ತಿರ ಹೊಗಿ, ಮೈಯನ್ನು ತಡವಿ, ಬರೆಸೆಳೆದು ಬಿಗಿಯಾಗಿ ಅಪ್ಪಿಕೊಂಡು, ಕಂಬನಿಯನ್ನು ಒರೆಸಿ, ಕೂಡಲೆ ನೀರಿನಚೀಲದ ನೀರಿನಿಂದ ಮಗುವಿನ ಕಾಲು ತುದಿಯಲ್ಲಿ ಬಸಿಯುತ್ತಿದ್ದ ರಕ್ತವನ್ನು ತೊಳೆದು ಪ್ರೀತಿಯಿಂದ ಮಗುವಿನ ಗಂಟಲಲ್ಲಿ ದುಃಖದಿಂದ ಉಮ್ಮಳಿಸುವ ಉಬ್ಬುವ ಗದ್ಗದಗಳನ್ನು ಸಂತೈಸಿ, ಭಯಬೇಡವೆಂದು ತಿಳಿಸಿ, ಕುಳಿಂದಕನು ಮುದ್ದುಮಾಡಿದನು; ತನ್ನ ಸೌಭಾಗ್ಯ ನಿಲಯದ ಕೊರತೆಯನ್ನು ತುಂಬುವ ಸಂಪತ್ತುನ್ನು ಒದಗಿಸಿದ ಶ್ರೇಷ್ಟವಾದ ಪುಣ್ಯದೇಹದ ಆ ಜೀವವನ್ನು ಅಂದರೆ ಆ ಶಿಶುವನ್ನು ಮುದ್ದುಮಾಡಿದನು.]
  • (ಪದ್ಯ-೫೫)

ಪದ್ಯ:-:೫೫:

ಸಂಪಾದಿಸಿ

ಎಡಬಲದೊಳಿಹ ತನ್ನವರೊಳಾ ಕುಳಿಂದಕಂ |
ನುಡಿದನೀ ಬಾಲಕಂ ತನ್ನ ತಾಯ್ತಂದೆಗಳ |
ನೊಡಹುಟ್ಟಿದವರ ಹಂಬಲಿಸದೆ ಮುರಾರಿಯಂ ನೆನೆವನದರಿಂದಿವಂಗೆ ||
ಒಡೆಯನಚ್ಯುತನಾದ ಕಾರಣಂ ಮೃತನಾಗ |
ದಡವಿಯೊಳ್‍ಜೀವಿಸಿದನೆಲ್ಲರ್ಗೆ ತನುಜರಂ |
ಕುಡುವವಂ ಕೃಷ್ಣನೈಸಲೆ ತನಗೆ ಮಕ್ಕಳಿಲ್ಲೀತನೇ ಸುತನೆಂದನು ||56||

ಪದವಿಭಾಗ-ಅರ್ಥ:
ಎಡಬಲದೊಳು ಇಹ ತನ್ನವರೊಳು ಆ ಕುಳಿಂದಕಂ ನುಡಿದನು ಈ ಬಾಲಕಂ ತನ್ನ ತಾಯ್ತಂದೆಗಳನು ಒಡಹುಟ್ಟಿದವರ ಹಂಬಲಿಸದೆ ಮುರಾರಿಯಂ ನೆನೆವನು=[ಆ ಕುಳಿಂದಕನು ತನ್ನ ಎಡಬಲದಲ್ಲಿ ಇದ್ದ ತನ್ನ ಜನರ ಹತ್ತಿರ (<-ಆ ಕುಳಿಂದಕಂ)ಹೇಳಿದನು,'ಈ ಬಾಲಕನು ತನ್ನ ತಾಯಿ ತಂದೆಯರನ್ನು ಒಡಹುಟ್ಟಿದವರನ್ನು ಹಂಬಲಿಸದೆ ಮುರಾರಿಯನ್ನು ನೆನೆಯುವನು.];; ಅದರಿಂದ ಇವಂಗೆ ಒಡೆಯನು ಅಚ್ಯುತನಾದ ಕಾರಣಂ ಮೃತನಾಗದೆ ಅಡವಿಯೊಳ್‍ ಜೀವಿಸಿದನು ಎಲ್ಲರ್ಗೆ ತನುಜರಂ ಕುಡುವವಂ ಕೃಷ್ಣನೈಸಲೆ ತನಗೆ ಮಕ್ಕಳಿಲ್ಲ ಈತನೇ ಸುತನೆಂದನು=[ಅದ್ದರಿಂದ ಇವನಿಗೆ ಒಡೆಯನು ಅಚ್ಯುತನು. ಆದಕಾರಣ ಈ ಕಾಡಿನಲ್ಲಿ ಮೃತನಾಗದೆ ಜೀವಿಸಿರುವನು. ಎಲ್ಲರಿಗೆ ಮಕ್ಕಳನ್ನು ದಯಪಾಲಿಸುವವನು ಕೃಷ್ಣನೇ ಅಲ್ಲವೇ! ತನಗೆ ಮಕ್ಕಳಿಲ್ಲ ಆದ್ದರಿಂದ ಈತನೇ ತನ್ನ ಸುತನು ಎಂದನು].
  • ತಾತ್ಪರ್ಯ:ಆ ಕುಳಿಂದಕನು ತನ್ನ ಎಡಬಲದಲ್ಲಿ ಇದ್ದ ತನ್ನ ಜನರ ಹತ್ತಿರ (<-ಆ ಕುಳಿಂದಕಂ) ಹೇಳಿದನು,'ಈ ಬಾಲಕನು ತನ್ನ ತಾಯಿ ತಂದೆಯರನ್ನು ಒಡಹುಟ್ಟಿದವರನ್ನು ಹಂಬಲಿಸದೆ ಮುರಾರಿಯನ್ನು ನೆನೆಯುವನು. ಆದ್ದರಿಂದ ಇವನಿಗೆ ಒಡೆಯನು ಅಚ್ಯುತನು. ಆದಕಾರಣ ಈ ಕಾಡಿನಲ್ಲಿ ಮೃತನಾಗದೆ ಜೀವಿಸಿರುವನು. ಎಲ್ಲರಿಗೆ ಮಕ್ಕಳನ್ನು ದಯಪಾಲಿಸುವವನು ಕೃಷ್ಣನೇ ಅಲ್ಲವೇ! ತನಗೆ ಮಕ್ಕಳಿಲ್ಲ ಆದ್ದರಿಂದ ಈತನೇ ತನ್ನ ಸುತನು ಎಂದನು.
  • (ಪದ್ಯ-೫೫)

ಪದ್ಯ:-:೫೭:

ಸಂಪಾದಿಸಿ

ಪತ್ತುವಿಧಮುಂಟು ಸುತೆರದರೊಳೌರಸ ಪುತ್ರ |
ನುತ್ತಮಂ ಮೇಣಾತನಿಲ್ಲದೊಡೆ ಬಳಿಕಮೊಂ |
ಬತ್ತು ಬಗೆಯೊಳಗೊಂದು ತೆರದ ಮಗನಾದೊಡಂ ಬೇಕಲಾ ಮಾನವರ್ಗೆ ||
ತತ್ತನಯರೊಳ್ ತನಗೆ ತಾನೆ ದೊರೆಕೊಂಡವಂ |
ದತ್ತನಂದನನಿವಂ ತನಗೆಂದವಂ ಮುದದೊ |
ಳೆತ್ತಿಕೊಂಡಶ್ವನಡರ್ದು ಪರಿಜನಸಹಿತ ನಿಜಪುರಕೆ ಬರುತಿರ್ದನು ||57||

ಪದವಿಭಾಗ-ಅರ್ಥ:
ಪತ್ತು ವಿಧಮುಂಟು ಸುತೆರು ಅದರೊಳು ಔರಸ ಪುತ್ರನು ಉತ್ತಮಂ, ಮೇಣಾತನು ಇಲ್ಲದೊಡೆ ಬಳಿಕಂ ಒಂಬತ್ತು ಬಗೆಯೊಳಗೆ ಒಂದು ತೆರದ ಮಗನಾದೊಡಂ ಬೇಕಲಾ ಮಾನವರ್ಗೆ=[ಹತ್ತು ವಿಧವಿದೆ ಮಕ್ಕಳಲ್ಲಿ; ಅದರಲ್ಲಿ ಔರಸ (ಸ್ವಂತ ಮಗ) ಪುತ್ರನು ಉತ್ತಮನು, ಮತ್ತೆ ಆವನು ಇಲ್ಲದಿದ್ದರೆ ಬಳಿಕ, ಒಂಬತ್ತು ಬಗೆಯ ಪುತ್ರರಲ್ಲಿ, ಒಂದು ಬಗೆಯ ಮಗನಾದರೂ ಬೇಕಲ್ಲವೇ ಮಾನವರಿಗೆ.];; ತತ್ ತನಯರೊಳ್ ತನಗೆ ತಾನೆ ದೊರೆಕೊಂಡವಂ ದತ್ತನಂದನನು ಇವಂ ತನಗೆಂದು ಅವಂ ಮುದದೊಳು ಎತ್ತಿಕೊಂಡು ಅಶ್ವನಡರ್ದು ಪರಿಜನಸಹಿತ ನಿಜಪುರಕೆ ಬರುತಿರ್ದನು=[ಆ ಬಗೆಯ ಮಕ್ಕಳಲ್ಲಿ ತನಗೆ ತಾನೆ ದೊರೆತಿರುವುದು ದತ್ತಕನಂದನನು. ಇವನು ತನಗೆ ಹಾಗೆ ದೊರಕಿದವನು, ಎಂದು ಅವನು ಸಂತೋಷದಿಂದ ಎತ್ತಿಕೊಂಡು ಕುದುರೆಯನ್ನು ಹತ್ತಿ ಪರಿಜನರ ಸಹಿತ ತನ್ನ ನಗರಕ್ಕೆ ಬರುತ್ತಿದ್ದನು.]
  • ತಾತ್ಪರ್ಯ:ಹತ್ತು ವಿಧವಿದೆ ಮಕ್ಕಳಲ್ಲಿ&&; ಅದರಲ್ಲಿ ಔರಸ (ಸ್ವಂತ ಮಗ) ಪುತ್ರನು ಉತ್ತಮನು, ಮತ್ತೆ ಆವನು ಇಲ್ಲದಿದ್ದರೆ ಬಳಿಕ, ಒಂಬತ್ತು ಬಗೆಯ ಪುತ್ರರಲ್ಲಿ, ಒಂದು ಬಗೆಯ ಮಗನಾದರೂ ಬೇಕಲ್ಲವೇ ಮಾನವರಿಗೆ. ಆ ಬಗೆಯ ಮಕ್ಕಳಲ್ಲಿ ತನಗೆ ತಾನೆ ದೊರೆತಿರುವುದು ದತ್ತಕನಂದನನು. ಇವನು ತನಗೆ ಹಾಗೆ ದೊರಕಿದವನು, ಎಂದು ಅವನು ಸಂತೋಷದಿಂದ ಎತ್ತಿಕೊಂಡು ಕುದುರೆಯನ್ನು ಹತ್ತಿ ಪರಿಜನರ ಸಹಿತ ತನ್ನ ನಗರಕ್ಕೆ ಬರುತ್ತಿದ್ದನು.
  • (ಪದ್ಯ-೫೭)X

ಪದ್ಯ:-:೫೮:

ಸಂಪಾದಿಸಿ

ಮೃಗಯಾ ವ್ಯಸನದಿಂದೆ ಕಾನನಕೆ ತಾಂ ಕೃಷ್ಣ |
ಮೃಗದ ಕೂಡೈದಿದೊಡೆ ದೊರೆಕೊಂಡನೀ ಕೃಷ್ಣ |
ಮೃಗ ಭಾವದರ್ಭಕಂ ಪಾಪಕೆಳಸಿದೊಡಾಯ್ತು ಪುಣ್ಯಮೆನುತಲ್ಲಿ ಮಡಿದ ||
ಮೃಗಜೀವಿಗಳನವರವರ್ಗೆ ವೆಚ್ಚಿಸಿ ನೆರೆದ |
ಮೃಗಜೀವಿಗಳನೆಲ್ಲರಂ ಕಳುಹಿ ನಿಜಪುರಕೆ |
ಮೃಗಧರನೊಲೆಸೆವ ಶಿಶುವಂ ಕೊಂಡು ಪರಿಜನದೊಡನೆ ಬಂದನುತ್ಸವದೊಳು ||58||

ಪದವಿಭಾಗ-ಅರ್ಥ:
ಮೃಗಯಾ ವ್ಯಸನದಿಂದೆ ಕಾನನಕೆ ತಾಂ ಕೃಷ್ಣಮೃಗದ ಕೂಡೆ ಐದಿದೊಡೆ ದೊರೆಕೊಂಡನು ಈ ಕೃಷ್ಣಮೃಗಭಾವದ ಅರ್ಭಕಂ ಪಾಪಕೆ ಎಳಸಿದೊಡೆ ಆಯ್ತು ಪುಣ್ಯಂ ಎನುತ=[ಕುಳಿಂದಕನು ಯೋಚಿಸಿದನು, ಬೇಟೆಯ ಹವ್ಯಾಸದಿಂದ ಕಾಡಿಗೆ ತಾನು ಜಿಂಕೆಯನ್ನು ಬೆನ್ನಟ್ಟಿ ಬಂದರೆ, ಸಿಕ್ಕಿದನಲ್ಲಾ ಈ ಕೃಷ್ಣಮೃಗಭಾವದ/ಸಾತ್ವಿಕ ಭಾವನೆಯುಳ್ಳ ಬಾಲಕನು, ಪಾಪಕ್ಕೆ ಅಪೇಕ್ಷಿಸಿದರೆ, ಫಲವು ಆಯಿತು ಪುಣ್ಯವು, ಎನ್ನುತ್ತಾ,];; ಅಲ್ಲಿ ಮಡಿದ ಮೃಗಜೀವಿಗಳನು ಅವರವರ್ಗೆ ವೆಚ್ಚಿಸಿ ನೆರೆದ ಮೃಗಜೀವಿಗಳನೆಲ್ಲರಂ ಕಳುಹಿ ನಿಜಪುರಕೆ ಮೃಗಧರನೊಲ್ ಎಸೆವ ಶಿಶುವಂ ಕೊಂಡು ಪರಿಜನದೊಡನೆ ಬಂದನು ಉತ್ಸವದೊಳು=[ಬೇಟಿಯಲ್ಲಿ ಸತ್ತ ಮೃಗಗಳನ್ನು, ಅವರವರಿಗೆ ಕೊಟ್ಟು ಅಲ್ಲಿ ಸೇರಿದ್ದ ಮೃಗಬೇಟೆಯಿಂದ ಜೀವಿಸುವ ಬೇಡರೆಲ್ಲರನ್ನೂ ಕಳುಹಿಸಿ, ತನ್ನ ನಗರಕ್ಕೆ ಚಂದ್ರನಂತೆ ಶೋಭಿಸುವ ಬಾಲಕನನ್ನು ಎತ್ತಿಕೊಂಡು ಪರಿವಾರದ ಜನರೊಡನೆ ಸಂತೋಷದಿಂದ ಬಂದನು].
  • ತಾತ್ಪರ್ಯ:ಕುಳಿಂದಕನು ಯೋಚಿಸಿದನು, ಬೇಟೆಯ ಹವ್ಯಾಸದಿಂದ ಕಾಡಿಗೆ ತಾನು ಜಿಂಕೆಯನ್ನು ಬೆನ್ನಟ್ಟಿ ಬಂದರೆ, ಸಿಕ್ಕಿದನಲ್ಲಾ ಈ ಕೃಷ್ಣಮೃಗಭಾವದ/ಸಾತ್ವಿಕ ಭಾವನೆಯುಳ್ಳ ಬಾಲಕನು, ಪಾಪಕ್ಕೆ ಅಪೇಕ್ಷಿಸಿದರೆ, ಫಲವು ಆಯಿತು ಪುಣ್ಯವು, ಎನ್ನುತ್ತಾ, ಬೇಟಿಯಲ್ಲಿ ಸತ್ತ ಮೃಗಗಳನ್ನು, ಅವರವರಿಗೆ ಕೊಟ್ಟು ಅಲ್ಲಿ ಸೇರಿದ್ದ ಮೃಗಬೇಟೆಯಿಂದ ಜೀವಿಸುವ ಬೇಡರೆಲ್ಲರನ್ನೂ ಕಳುಹಿಸಿ, ತನ್ನ ನಗರಕ್ಕೆ ಚಂದ್ರನಂತೆ ಶೋಭಿಸುವ ಬಾಲಕನನ್ನು ಎತ್ತಿಕೊಂಡು ಪರಿವಾರದ ಜನರೊಡನೆ ಸಂತೋಷದಿಂದ ಬಂದನು.
  • (ಪದ್ಯ-೫೮)

ಪದ್ಯ:-:೫೯:

ಸಂಪಾದಿಸಿ

ಮುಂದೆ ಪರಿತಂದು ಚರರರುಪೆ ಸಿಂಗರಿಸಿದರ್ |
ಚಂದನಾವತಿಗೆ ಸಂಭ್ರಮದಿಂ ಕುಳಿಂದಕಂ |
ಬಂದು ನಿಜ ಭವನಮಂ ಪುಗಲಿದಿರ್ವಂದು ನಲಿದವನ ಸತಿ ಮೇಧಾವಿನಿ ||
ಕಂದನಂ ತೆಗೆದೆತ್ತಿಕೊಳುತ ಬಿಗಿಯಪ್ಪಿ ಸಾ |
ನಂದದಿಂ ಪೊರೆಯೇರಿದಳ್ ತನ್ನ ಬಂಜೆತನ |
ಮಿಂದು ಪೋದುದು ಪುತ್ರವತಿಯಾದೆನೆನ್ನ ಪುಣ್ಯದೃಮಂ ಫಲಿಸಿತೆಂದು ||59||

ಪದವಿಭಾಗ-ಅರ್ಥ:
ಮುಂದೆ ಪರಿತಂದು ಚರರ ಅರುಪೆ ಸಿಂಗರಿಸಿದರ್ ಚಂದನಾವತಿಗೆ ಸಂಭ್ರಮದಿಂ ಕುಳಿಂದಕಂ ಬಂದು ನಿಜ ಭವನಮಂ ಪುಗಲು ಇದಿರ್ವಂದು ನಲಿದು ಅವನ ಸತಿ ಮೇಧಾವಿನಿ=[ಕುಳಿಂದಕನಿಗಿಂತ ಮೊದಲು ಬಂದು ಅವನ ಚಾರರು ಮಗು ಸಿಕ್ಕದ ವಿಷಯ ತಿಳಿಸಿದಾಗ ಅರಮನೆಯನ್ನು ಸಿಂಗರಿಸಿದರು; ಚಂದನಾವತಿಗೆ ಸಂಭ್ರಮದಿಂದ ಕುಳಿಂದಕನು ಬಂದು ತನ್ನ ಅರಮನೆಯನ್ನು ಹೊಗುವಾಗ, ಅವನ ಸತಿ ಮೇಧಾವಿನಿ ಅವನನ್ನು ಎದುರುಗೊಂಡು, ಸಂತೋಷಪಟ್ಟು ];; ಕಂದನಂ ತೆಗೆದೆತ್ತಿಕೊಳುತ ಬಿಗಿಯಪ್ಪಿ ಸಾನಂದದಿಂ ಪೊರೆಯೇರಿದಳ್ ತನ್ನ ಬಂಜೆತನ ಮಿಂದು ಪೋದುದು ಪುತ್ರವತಿಯಾದೆನು ಎನ್ನ ಪುಣ್ಯದೃಮಂ ಫಲಿಸಿತೆಂದು=[ಕಂದನನ್ನು ತೆಗೆದು ಎತ್ತಿಕೊಳ್ಳುತ್ತಾ ಅವನನ್ನು ಬಿಗಿಯಾಗಿ ಅಪ್ಪಿಕೊಂಡು ಬಹಳ ಆನಂದದಿಂದ ಉಬ್ಬಿಹೋದಳು, ಅವಳು ತನ್ನ ಬಂಜೆತನವು ಇಂದು ಹೊಯಿತು; ತಾನು ಪುತ್ರವತಿಯಾದೆನು; ತನ್ನ ಪುಣ್ಯದಗಿಡ ಹಣ್ಣುಬಿಟ್ಟಿತು ಎಂದು ಉಬ್ಬಿದಳು.]
  • ತಾತ್ಪರ್ಯ:ಕುಳಿಂದಕನಿಗಿಂತ ಮೊದಲು ಬಂದು ಅವನ ಚಾರರು ಮಗು ಸಿಕ್ಕದ ವಿಷಯ ತಿಳಿಸಿದಾಗ ಅರಮನೆಯನ್ನು ಸಿಂಗರಿಸಿದರು; ಚಂದನಾವತಿಗೆ ಸಂಭ್ರಮದಿಂದ ಕುಳಿಂದಕನು ಬಂದು ತನ್ನ ಅರಮನೆಯನ್ನು ಹೊಗುವಾಗ, ಅವನ ಸತಿ ಮೇಧಾವಿನಿ ಅವನನ್ನು ಎದುರುಗೊಂಡು, ಸಂತೋಷಪಟ್ಟು ಕಂದನನ್ನು ತೆಗೆದು ಎತ್ತಿಕೊಳ್ಳುತ್ತಾ ಅವನನ್ನು ಬಿಗಿಯಾಗಿ ಅಪ್ಪಿಕೊಂಡು ಬಹಳ ಆನಂದದಿಂದ ಉಬ್ಬಿಹೋದಳು, ಅವಳು ತನ್ನ ಬಂಜೆತನವು ಇಂದು ಹೊಯಿತು; ತಾನು ಪುತ್ರವತಿಯಾದೆನು; ತನ್ನ ಪುಣ್ಯದಗಿಡ ಹಣ್ಣುಬಿಟ್ಟಿತು ಎಂದು ಉಬ್ಬಿದಳು.
  • (ಪದ್ಯ-೫೯)

ಬಳಿಕ ನಗರದೊಳಾದುದುತ್ಸವಣ ಪಾರ್ವರ್ಗೆ |
ನಿಳಯದ ಸಮಸ್ತ ವಸ್ತುಗಳನೊಲಿದಿತ್ತನೊಂ |
ದುಳಿಯದೆ ವಿಹಿತ ಜಾತಕರ್ಮಮಂ ಮಾಡಿಸಲ್ ಬುಧರುತ್ತರೋತ್ತರವನು ||
ತಿಳಿದು ನಿರ್ಮಲ ಮುಖಾಂಬುಜದಿಂ ಶಶಾಂಕನಂ |
ಕಳಕಳಿಸಿ ನಗುವನದರಿಂ ಚಂದ್ರಹಾಸನೆಂ |
ದಿಳೆಯೊಳೀತಂಗೆ ಹೆಸರಾಗಲೆಂದುಚ್ಚರಿಸಿ ನಾಮಕರಣಂಗೈದರು ||60||

ಪದವಿಭಾಗ-ಅರ್ಥ:
ಬಳಿಕ ನಗರದೊಳು ಆದುದು ಉತವ್ಸಂ ಪಾರ್ವರ್ಗೆ ನಿಳಯದ ಸಮಸ್ತ ವಸ್ತುಗಳನು ಒಲಿದಿತ್ತನು ಒಂದುಳಿಯದೆ (ಲೋಪವಿಲ್ಲದಂತೆ) ವಿಹಿತ ಜಾತಕರ್ಮಮಂ ಮಾಡಿಸಲ್ ಬುಧರು ಉತ್ತರೋತ್ತರವನು(ಹಿಂದಿನಇತಿಹಾಸ)=[ಕುಳಿಂದಕನು ಮಗುವನ್ನು ತಂದ ಬಳಿಕ ನಗರದಲ್ಲಿ ದೊಡ್ಡ ಉತ್ಸವಗಳು ನಡೆದವು. ವಿಪ್ರರಿಗೆ ಅರಮನೆಯಲ್ಲಿದ್ದ ಸಮಸ್ತ ವಸ್ತುಗಳನ್ನೂ ಲೋಪವಿಲ್ಲದಂತೆ ಕುಳಿಂದಕ ಪ್ರೀತಿಯಿಂದ ದಾನ ಮಾಡಿದನು. ನಂತರ ಶಾಸ್ತ್ರಕ್ರಮದಂತೆ ಜಾತಕರ್ಮವನ್ನು ಮಾಡಿಸಲು, ಬುಧರು ಮಗುವಿನ ಮತ್ತು ಕುಳಿಂದಕನ ಉತ್ತರೋತ್ತರವನು ];; ತಿಳಿದು ನಿರ್ಮಲ ಮುಖಾಂಬುಜದಿಂ ಶಶಾಂಕನಂ ಕಳಕಳಿಸಿ ನಗುವನು ಅದರಿಂ ಚಂದ್ರಹಾಸನೆಂದು ಇಳೆಯೊಳು ಈತಂಗೆ ಹೆಸರಾಗಲಿ ಎಂದು ಉಚ್ಚರಿಸಿ ನಾಮಕರಣಂಗೈದರು=[ತಿಳಿದಕೊಂಡು, ಪರಿಶುದ್ಧವಾದ ಮಂದಹಾಸದ ಕಮಲದಂತಿರುವ ಮಗುವಿನ ಮುಖವನ್ನು ನೋಡಿ, ಅವನು ಚಂದ್ರನಂತೆ ಗೆಲುವಿನಿಂದ ನಗುವನು, ಅದರಿಂದ 'ಚಂದ್ರಹಾಸನೆಂದು ಈ ಭೂಮಿಯಲ್ಲಿ ಈತನಿಗೆ ಹೆಸರಾಗಲಿ ಎಂದು ಉಚ್ಚರಿಸಿ', ನಾಮಕರಣವನ್ನು ಮಾಡಿದರು.]
  • ತಾತ್ಪರ್ಯ:ಕುಳಿಂದಕನು ಮಗುವನ್ನು ತಂದ ಬಳಿಕ ನಗರದಲ್ಲಿ ದೊಡ್ಡ ಉತ್ಸವಗಳು ನಡೆದವು. ವಿಪ್ರರಿಗೆ ಅರಮನೆಯಲ್ಲಿದ್ದ ಸಮಸ್ತ ವಸ್ತುಗಳನ್ನೂ ಲೋಪವಿಲ್ಲದಂತೆ ಕುಳಿಂದಕ ಪ್ರೀತಿಯಿಂದ ದಾನ ಮಾಡಿದನು. ನಂತರ ಶಾಸ್ತ್ರಕ್ರಮದಂತೆ ಜಾತಕರ್ಮವನ್ನು ಮಾಡಿಸಲು, ಬುಧರು ಮಗುವಿನ ಮತ್ತು ಕುಳಿಂದಕನ ಉತ್ತರೋತ್ತರವನು ತಿಳಿದಕೊಂಡು, ಪರಿಶುದ್ಧವಾದ ಮಂದಹಾಸದ ಕಮಲದಂತಿರುವ ಮಗುವಿನ ಮುಖವನ್ನು ನೋಡಿ, ಅವನು ಚಂದ್ರನಂತೆ ಗೆಲುವಿನಿಂದ ನಗುವನು, ಅದರಿಂದ 'ಚಂದ್ರಹಾಸನೆಂದು ಈ ಭೂಮಿಯಲ್ಲಿ ಈತನಿಗೆ ಹೆಸರಾಗಲಿ ಎಂದು ಉಚ್ಚರಿಸಿ', ನಾಮಕರಣವನ್ನು ಮಾಡಿದರು.
  • (ಪದ್ಯ-೬೦)

ಪದ್ಯ:-:೬೧:

ಸಂಪಾದಿಸಿ

ಪಸುಳೆತನದಂದಿಂದೆ ವೃದ್ಧಾಪ್ಯದನ್ನೆಗಂ |
ಬಿಸಜನಾಭನ ಭಕ್ತಿ ದೊರೆಕೊಳದ ಮನುಜರಂ |
ನಸುನಗುವ ಧವಳದೊಳ್ಪಿಂ ಚಂದ್ರಹಾಸನಿವನಖಳ ಭೂಮಂಡಲದೊಳು ||
ಪಸರಿಸುವ ಜಸದ ಬೆಳ್ಪಿಂ ಚಂದ್ರಹಾಸನಿವ |
ನಸಮ ನಕ್ಷೀಣನಕಳಂಕನತಿಶಾಂತನೆಂ |
ಬೆಸೆವ ಸದ್ಗುಣದೇಳ್ಗೆಯಿಂ ಚಂದ್ರಹಾಸನಿವನಹುದೆಂದು ಬುಧರೊರೆದರು ||61||

ಪದವಿಭಾಗ-ಅರ್ಥ:
ಪಸುಳೆತನದ ಅಂದದಿಂದೆ, ವೃದ್ಧಾಪ್ಯದನ್ನೆಗಂ ಬಿಸಜನಾಭನ ಭಕ್ತಿ ದೊರೆಕೊಳದ ಮನುಜರಂ ನಸುನಗುವ ಧವಳದೊಳ್ಫಿಂ ಚಂದ್ರಹಾಸನಿವನು,=[ ಬಾಲ್ಯದಲ್ಲಿರುವ ಹಸುಳೆತನದಿಂದ ವೃದ್ಧಾಪ್ಯದತನಕವೂ ವಿಷ್ಣುವಿನ ಭಕ್ತಿಯನ್ನು ಪಡೆಯದ ಜನರನ್ನು ಕುರಿತು (ಕರುಣೆಯಿಂದ) ನಸುನಗುವ (ಬಿಳಿಬಣ್ಣದ ಒಳಿತಿನಿಂದ) ಸತ್ವಗುಣದ ಸ್ವಭಾವದಿಂದ ಇವನು ಚಂದ್ರಹಾಸನು.];; ಅಖಳ ಭೂಮಂಡಲದೊಳು ಪಸರಿಸುವ ಜಸದ ಬೆಳ್ಪಿಂ ಚಂದ್ರಹಾಸನಿವನು,=[ಅಖಲ ಭೂಮಂಡಲದಲ್ಲಿ ಹರಡುವ ಯಶಸ್ಸಿನ ಬೆಳುಪಿನ ಗುಣದಿಂದ ಇವನು ಚಂದ್ರಹಾಸನು,];; ಅಸಮನು ಅಕ್ಷೀಣನು ಅಕಳಂಕನು ಅತಿಶಾಂತನೆಂಬ ಎಸೆವ ಸದ್ಗುಣದೇಳ್ಗೆಯಿಂ ಚಂದ್ರಹಾಸನಿವನು ಅಹುದೆಂದು ಬುಧರೊರೆದರು=[ಅಸಮನು/ ಸಮಾನರಿಲ್ಲದವನು, ಅಕ್ಷೀಣನು/ ದುರ್ಬಲತೆಯಿಲ್ಲದವನು, ಕಳಂಕವಿಲ್ಲದವನು, ಅತಿಶಾಂತನು ಎಂಬ ಸದ್ಗುಣಗಳ ಏಳಿಗೆಯಿಂದ ಶೋಭಿಸುವ ಚಂದ್ರಹಾಸನು ಇವನು ಅಹುದು ಎಂದು ವಿಪ್ರರು ಹೇಳಿದರು.]
  • ತಾತ್ಪರ್ಯ:ಬಾಲ್ಯದಲ್ಲಿರುವ ಹಸುಳೆತನದಿಂದ ವೃದ್ಧಾಪ್ಯದತನಕವೂ ವಿಷ್ಣುವಿನ ಭಕ್ತಿಯನ್ನು ಪಡೆಯದ ಜನರನ್ನು ಕುರಿತು (ಕರುಣೆಯಿಂದ) ನಸುನಗುವ (ಬಿಳಿಬಣ್ಣದ ಒಳಿತಿನಿಂದ) ಸತ್ವಗುಣದ ಸ್ವಭಾವದಿಂದ ಇವನು ಚಂದ್ರಹಾಸನು. ಅಖಲ ಭೂಮಂಡಲದಲ್ಲಿ ಹರಡುವ ಯಶಸ್ಸಿನ ಬೆಳುಪಿನ ಗುಣದಿಂದ ಇವನು ಚಂದ್ರಹಾಸನು, ಅಸಮನು/ ಸಮಾನರಿಲ್ಲದವನು, ಅಕ್ಷೀಣನು/ ದುರ್ಬಲತೆಯಿಲ್ಲದವನು, ಕಳಂಕವಿಲ್ಲದವನು, ಅತಿಶಾಂತನು ಎಂಬ ಸದ್ಗುಣಗಳ ಏಳಿಗೆಯಿಂದ ಶೋಭಿಸುವ ಚಂದ್ರಹಾಸನು ಇವನು ಅಹುದು ಎಂದು ವಿಪ್ರರು ಹೇಳಿದರು.
  • (ಪದ್ಯ-೬೧)

ಪದ್ಯ:-:೬೨:

ಸಂಪಾದಿಸಿ

ಮಂಜು ವಹಿಮಾಸ್ಪದಂ ಚಾರು ವೃತ್ತಂ ಕಲಾ |
ಪುಂಜಂ ಸದಾನಭೋಗಂ ಕುವಲಯ ಪ್ರಿಯಂ |
ರಂಜಿಸುವ ರಾಜನೆನ್ನ ವೊಲಾದೊಡಂ ಮಿತ್ರತೇಜ ಕಳವಳಿದು ಪಗೆಯ ||
ಭಂಜನೆಗೆ ಸಿಕ್ಕಿ ಬಡತನವಟ್ಟು ಕಂದಿ ಪಳಿ |
ವಂ ಜಗವರಿಯೆ ಪೊತ್ತನೆಂದು ಬಿಡದಮೃತಾರ್ಚಿ |
ಯಂ ಜರೆದು ನಗುವನದರಿಂ ಚಂದ್ರಹಾಸನಿವನಹನೆನೆ ಪೆಸರ್ ಮೆರೆದುದು ||62||

ಪದವಿಭಾಗ-ಅರ್ಥ:
ಮಂಜು (ಮನೋಹರ) ಮಹಿಮಾಸ್ಪದಂ ಚಾರು ವೃತ್ತಂ ಕಲಾಪುಂಜಂ ಸ ದಾನ ಭೋಗಂ ಕುವಲಯ ಪ್ರಿಯಂ=[ಮನೋಹರವಾದ (ವಿಷ್ಣುಭಕ್ತನೆಂಬ) ಮಹಿಮೆಗೆ ಆಸ್ಪದನು; ಶ್ರೇಷ್ಠವಾದ ಚಿತ್ತವೃತ್ತಿ, ದಯೆ, ಕನಿಕರ,ಉಳ್ಳವನು,/ ಸುಂದರವಾದ ದುಂಡಾದ ಮುಖವುಳ್ಳವನು; ಅನೇಕವಿದ್ಯೆಗಳನ್ನು ಬಲ್ಲವನು, ಉತ್ತಮ ದಾನದಿಂದ ಸಂತೋಷಿಸುವವನು; ಭೂಮಂಡಲದಲ್ಲಿ ಪ್ರಿಯನು; ];;ಕುವಲಯ ಪ್ರಿಯಂ ರಂಜಿಸುವ ರಾಜನೆನ್ನ ವೊಲಾದೊಡಂ ಮಿತ್ರತೇಜ ಕಳವಳಿದು ಪಗೆಯ ಭಂಜನೆಗೆ ಸಿಕ್ಕಿ ಬಡತನವಟ್ಟು ಕಂದಿ ಪಳಿವಂ (ಹಳಿವು:ನಿಂದೆ)=[ನೈದಿಲೆಗೆ ಪ್ರಿಯನಾದ ಪ್ರಕಾಶಿಸುವ ರಾಜ ಚಂದ್ರನು ನನ್ನಂತೆ ಇದ್ದರೂ ಸೂರ್ಯನ ಪ್ರಕಾಶಕ್ಕೆ ಕಾಂತಿಯನ್ನು ಕಳೆದುಕೊಂಡು, ಶತ್ರುವಿನ ತಿರಸ್ಕಾರಕ್ಕೆ ಸಿಕ್ಕಿ ಕೃಷ್ಣಪಕ್ಷದಲ್ಲಿ ಬಡತನವಟ್ಟು/ ಕೃಶನಾಗಿ ಕಂದಿ ನಿಂದೆಯನ್ನು];; ಜಗವರಿಯೆ ಪೊತ್ತನೆಂದು ಬಿಡದೆ ಅಮೃತಾರ್ಚಿಯಂ ಜರೆದು ನಗುವನು ಅದರಿಂ ಚಂದ್ರಹಾಸನು ಇವನು ಅಹನು ಎನೆ ಪೆಸರ್ ಮೆರೆದುದು=[ಜಗತ್ತೇ ತಿಳಿಯುವಂತೆ ಹೊತ್ತನೆಂದು, ಬಿಡದೆ ಚಂದ್ರನನ್ನು ನಿಂದಿಸಿ ಇವನು ನಗುವನು ಅದರಿಂದ ಚಂದ್ರಹಾಸನು ಇವನು ಆಗಿರುವನುಎನ್ನುವಂತೆ ಈ ಮಗುವಿನ ಹೆಸರು ಮೆರೆಯಿತು.]
  • ತಾತ್ಪರ್ಯ:ಮನೋಹರವಾದ (ವಿಷ್ಣುಭಕ್ತನೆಂಬ) ಮಹಿಮೆಗೆ ಆಸ್ಪದನು; ಶ್ರೇಷ್ಠವಾದ ಚಿತ್ತವೃತ್ತಿ, ದಯೆ, ಕನಿಕರ,ಉಳ್ಳವನು,/ ಸುಂದರವಾದ ದುಂಡಾದ ಮುಖವುಳ್ಳವನು; ಅನೇಕವಿದ್ಯೆಗಳನ್ನು ಬಲ್ಲವನು, ಉತ್ತಮ ದಾನದಿಂದ ಸಂತೋಷಿಸುವವನು; ಭೂಮಂಡಲದಲ್ಲಿ ಪ್ರಿಯನು; ನೈದಿಲೆಗೆ ಪ್ರಿಯನಾದ ಪ್ರಕಾಶಿಸುವ ರಾಜ ಚಂದ್ರನು ನನ್ನಂತೆ(ಮಗುವಿನಂತೆ) ಇದ್ದರೂ ಸೂರ್ಯನ ಪ್ರಕಾಶಕ್ಕೆ ಕಾಂತಿಯನ್ನು ಕಳೆದುಕೊಂಡು, ಶತ್ರುವಿನ ತಿರಸ್ಕಾರಕ್ಕೆ ಸಿಕ್ಕಿ ಕೃಷ್ಣಪಕ್ಷದಲ್ಲಿ ಬಡತನವಟ್ಟು/ ಕೃಶನಾಗಿ ಕಂದಿ ನಿಂದೆಯನ್ನು ಜಗತ್ತೇ ತಿಳಿಯುವಂತೆ ಹೊತ್ತನೆಂದು, ಬಿಡದೆ ಚಂದ್ರನನ್ನು ನಿಂದಿಸಿ ಇವನು ನಗುವನು ಅದರಿಂದ ಚಂದ್ರಹಾಸನು ಇವನು ಆಗಿರುವನು ಎನ್ನುವಂತೆ ಈ ಮಗುವಿನ ಹೆಸರು ಮೆರೆಯಿತು.(ಚಂದ್ರನಿಗೆ ಕಳೆಗುಂದುವ ದೋಷವಿದೆ ಆದರೆ ಈ ಮಗುವಿಗೆ ಅದಿಲ್ಲ, ಅದಕ್ಕಾಗಿ ಇವನು ಚಂದ್ರನನ್ನೂ ನೋಡಿ ನಗುವನೋ ಎಂಬಂತೆ ಚಂದ್ರಹಾಸ, ಎಂದು ಭಾವ)
  • (ಪದ್ಯ-೬೧)

ಪದ್ಯ:-:೬೩:

ಸಂಪಾದಿಸಿ

ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ |
ಬತ್ತಿದ ಸರೋವರಕೆ ನವ ಜಲಮೊದವಿದಂತೆ |
ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳ್ದಂತೆ ಭೂತಳದೊಳು ||
ಮತ್ತೆ ಸಂತಾನಮಿಲ್ಲದ ಕುಳಿಂದನ ಬಾಳ್ಕೆ |
ಗುತ್ತಮ ಕುಮಾರನಾದಂ ಚಂದ್ರಹಾಸನೆನ |
ಲುತ್ತರೋತ್ತರಮಪ್ಪುದಚ್ಚರಿಯೆ ಸುರಪುರದ ಲಕ್ಷ್ಮೀವರನ ಭಕ್ತರು ||63||

ಪದವಿಭಾಗ-ಅರ್ಥ:
ಕತ್ತಲೆಯ ಮನೆಗೆ ಮಣಿದೀಪಂ ಆದಂತೆ ಸಲೆ ಬತ್ತಿದ ಸರೋವರಕೆ ನವ ಜಲಂ ಒದವಿದಂತೆ ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳ್ದಂತೆ ಭೂತಳದೊಳು=[ಕತ್ತಲೆಯು ತುಂಬಿದ ಮನೆಗೆ ಮಣಿದೀಪವು ಬಂದು ಬೆಳಗಿದಂತೆ, ಪೂರಾ ಬತ್ತಿದ ಸರೋವರಕ್ಕೆ ಹೊಸ ಜಲವು ಒದಗಿದಂತೆ, ವಿತ್ತಾರವಾದ ಕಾವ್ಯರಚನೆಗೆ ದೇವತಾಸ್ತುತಿ ವಿಖ್ಯಾತ (ಕಳೆ)ಗೊಳಿಸಿದಂತೆ, ಭೂಮಿಯಮೇಲೆ ];; ಮತ್ತೆ ಸಂತಾನಂ ಇಲ್ಲದ ಕುಳಿಂದನ ಬಾಳ್ಕೆಗೆ ಉತ್ತಮ ಕುಮಾರನಾದಂ ಚಂದ್ರಹಾಸನು ಎನಲು ಉತ್ತರೋತ್ತರಂ ಅಪ್ಪುದು ಅಚ್ಚರಿಯೆ ಸುರಪುರದ ಲಕ್ಷ್ಮೀವರನ ಭಕ್ತರು=[ಮತ್ತೆ ಸಂತಾನವು ಇಲ್ಲದ ಕುಳಿಂದನ ಬಾಳಿಗೆ ಚಂದ್ರಹಾಸನು ಉತ್ತಮ ಕುಮಾರನಾದನು ಎನ್ನಲು, ಸುರಪುರದ ಲಕ್ಷ್ಮೀವರನ ಭಕ್ತರು ಉತ್ತರೋತ್ತರ ಏಳಿಗೆ ಅಗುವುದು ಅಚ್ಚರಿಯೆ].
  • ತಾತ್ಪರ್ಯ:ಕತ್ತಲೆಯು ತುಂಬಿದ ಮನೆಗೆ ಮಣಿದೀಪವು ಬಂದು ಬೆಳಗಿದಂತೆ, ಪೂರಾ ಬತ್ತಿದ ಸರೋವರಕ್ಕೆ ಹೊಸ ಜಲವು ಒದಗಿದಂತೆ, ವಿತ್ತಾರವಾದ ಕಾವ್ಯರಚನೆಗೆ ದೇವತಾಸ್ತುತಿ ಕಳೆಗೊಳಿಸಿದಂತೆ, ಭೂಮಿಯಮೇಲೆ ಮತ್ತೆ ಸಂತಾನವು ಇಲ್ಲದ ಕುಳಿಂದನ ಬಾಳಿಗೆ ಚಂದ್ರಹಾಸನು ಉತ್ತಮ ಕುಮಾರನಾದನು ಎನ್ನಲು, ಸುರಪುರದ ಲಕ್ಷ್ಮೀವರನ ಭಕ್ತರು ಉತ್ತರೋತ್ತರ ಏಳಿಗೆ ಅಗುವುದು ಅಚ್ಚರಿಯೆ. ಆಶ್ಚರ್ಯವಿಲ್ಲ.
  • (ಪದ್ಯ-೬೩)XI
  • &&:ಹತ್ತು ಬಗೆಯ ಪುತ್ರರು:೧) ತನ್ನ ಮದುವೆಯಾದ ಹೆಂಡತಿಯಲ್ಲಿ ಹುಟ್ಟಿದವ ಔರಸಪುತ್ರ;೨)ನಿಯೋಗದಿಂದ ಅಥವಾ ಮರಣದ ನಂತರ ಪತ್ನಿಯಲ್ಲಿ ಹುಟ್ಟಿದವ ಕ್ಷೇತ್ರಜ; ೩)ಬೇರೆಯವರು ಕೊಟ್ಟಮಗುವನ್ನು ಶಾಸ್ತ್ರ ಬದ್ಧವಾಗಿ ಪಡೆದರೆ ಅದು ದತ್ತಪುತ್ರ; ೪) ಅದಿಲ್ಲದೆ ಹಾಗೇ ತನ್ನ ಮಗನೆಂದು ಸಾಕಿಕೊಂಡರೆ ಅವನು ಕೃತ್ರಿಮಸುತ; ೫)ತಂದೆತಾಯಿಗಳು ಪರಿತ್ಯಾಗ ಮಾಡಿದವನನ್ನು ಮಗನಾಗಿ ಸ್ವೀಕರಿಸಿದರೆ ಅವನು ಅಪವಿದ್ಧನು;ಮದುವೆಯಾದ ಪತ್ನಿಗೆ ಮದುವೆಗೆ ಮೊದಲೇ ಹುಟ್ಟಿದವನು ಕಾನೀನ ಪುತ್ರನು;೬) ತನ್ನ ಪತ್ನಿಗೆ ಅನ್ಯರಿಂದ ಹುಟ್ಟಿ ಅವನಿಗೆ ಸಂಸ್ಕಾರ ಮಾಡಿದರೆ, ಅವನು ಸಹೋಡಪುತ್ರನು; ೭)ಹುಡುಗನನ್ನು ಅವನ ತಂದೆತಾಯಿಗಳಿಂದ ಹಣ ಕೊಟ್ಟು ಪಡೆದರೆ ಅವನು ಕ್ರೀತ ಪುತ್ರನು; ೮)ಗಂಡನು ಬಿಟ್ಟನಂತರ ಅಥವಾ ಗಂಡನು ಸತ್ತ ನಂತರ ಬೇರೆಯವನ ಜೊತೆಇದ್ದು ಪಡೆದ ಮಗ ಪೌನರ್ಬವ ಪುತ್ರ; ೯) ತಂದೆತಾಯಿಗಳಿಲ್ಲದೆ , ಅಥವಾ ಅವರು ಅವನನ್ನು ಬಿಟ್ಟ ಮೇಲೆ ಆ ಹುಡುಗನೇ ಬಂದು ತಾನು ನಿನ್ನ ಮಗನಾಗಿರುವೆನು ಎಂದಾಗ ಸ್ವೀಕರಿಸಿದರೆ ಅವನು ಸ್ವಯಂದತ್ತ ಪುತ್ರನು ; ೧೦)ಬ್ರಾಹ್ಮಣನು ಶೂದ್ರಸ್ತ್ರೀಯಿಂದ ಪಡೆದ ಮಗ ಪಾರಶ ಪುತ್ರನು ; ಇದರಲ್ಲಿ ಈ ಕಾಲದಲ್ಲಿ ಔರಸಪುತ್ರ ಮತ್ತು ದತ್ತ ಪುತ್ರ ಮಾತ್ರಾ ಗ್ರಾಹ್ಯರು. (ದಶ ಪುತ್ರರಲ್ಲಿ ಬೇರೆಬಗೆಯೂ ಉಂಟು.ಅದಕ್ಕೆ ವಿಕಿಪೀಡಿಯಾದಲ್ಲಿ "ಸಮುಚ್ಚಯ ಪದಗಳು -ದಶ" ನೋಡಿ.)
  • []
  • []
  • ಸಂಧಿ ೨೮ಕ್ಕೆ ಪದ್ಯಗಳು:೧೫೬೮.
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.