ಮೊದಲನೆಯ ಸಂಧಿ
ಸಂಪಾದಿಸಿ- ಪೀಠಿಕೆ
ಪದ್ಯ ೧ ಮಹಾವಿಷ್ಣು ಸ್ತುತಿ
ಸಂಪಾದಿಸಿ
ಶ್ರೀವಧುವಿನಂಬಕ ಚಕೋರಕಂ ಪೂರೆಯೆ ಭ ।
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ ।
ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ ॥
ಆವಗಂ ಸರಸ ಕರುಣಾಮೃತದ ಕಲೆಗಳಿಂ ।
ತೀವಿದೆಳನಗೆಯ ಬೆಳಂದಿಂಗಳಂ ಪಸರಿಸುವ ।
ದೇವಪುರ ಲಕ್ಷ್ಮೀರಮಣನಾಸ್ಯ ಚಂದ್ರನಾನಂದಮಂ ನಮಗೀಯಲಿ ॥೧॥
* ಶ್ರೀವಧುವಿನ (ಲಕ್ಷ್ಮಿಯ), ಅಂಬಕ (ಕಣ್ಣು) ಚಕೋರಕಂ- ಪಕ್ಷಿಯು (ಕಣ್ಣೋಟವು / ಕೃಪಾಕಟಾಕ್ಷವು), ಭಕ್ತ ಆವಳಿಯ - ಭಕ್ತಸಮೂಹದ, ಹೃತ್ ಕುಮುದ - ಹೃದಯ ಕಮಲವನ್ನು, ಬಿರಿಯೆ - ಅರಳಿಸುತ್ತಿರಲು, ಜಗತೀ ವಲಯದ - ಜಗತ್ತಿನ, ಸೌಭಾಗ್ಯ ರತ್ನಾಕರಂ - ಜಗತ್ತಿನ ಭಾಗ್ಯದ ಸಮುದ್ರವು, ಪೆರ್ಚಿನಿಂ ಮೇರೆವರಿಯೆ - ಉಕ್ಕಿ ಹರಿಯುತ್ತಿರಲು; ಆವಗಂ - ಯಾವಾಗಲೂ, ಸರಸ ಕರುಣಾಮೃತದ -ಅಮೃತದಂತೆ ಸಂತಸ ಕೊಡುವ, ಕಲೆಗಳಿಂ - ಲಕ್ಷಣಗಳಿಂದ, ತೀವಿದ- ತುಂಬಿದ ಎಳೆ ನಗೆಯ - ಬೆಳುದಿಂಗಳಂ, ಬೆಳುದಿಂಗಳಂತಿರುವ (ಸಂತಸಕೊಡುವ ಎಳೆ ನಗೆಯ ಬೆಳುದಿಂಗಳು), ಪಸರಿಸುವ - ಎಲ್ಲಡೆ ಹರಡುವ, ದೇವಪುರ ಲಕ್ಷ್ಮೀರಮಣನ ಆಸ್ಯ ಚಂದ್ರನ - ಮುಖವೆಂಬ ಚಂದ್ರನ (ಮುಗುಳು ನಗೆಯು) ಆನಂದವನ್ನು - ತಂಪಾದ ಉಲ್ಲಾಸವನ್ನು ನಮಗೆ ಈಯಲಿ, ದೇವಪುರವೆಂಬ ಊರಿನಲ್ಲಿ ನೆಲಸಿರುವ ಲಕ್ಷ್ಮಿಯ ಪತಿಯಾದ ಮಹಾವಿಷ್ಣುವು ಚಂದ್ರಾನಂದನ್ನು-ತಂಪಾದ ಉಲ್ಲಾಸವನ್ನು, ನಮಗೆ ಈಯಲಿ -ನಮಗೆ ಕೊಡಲಿ.
(ಪದ್ಯ೧) |
ಪದ್ಯ ೨, ಉಮೆ ಮತ್ತು ಶಿವ ಸ್ತುತಿ
ಸಂಪಾದಿಸಿಪಾವನತುಲಾಭರಣಮಂ ಮಾಡಿಕೊಂಡೆಸೆವ ।
ಪಾವನತರಸ್ವರೂಪಂ ನಾರದಾದಿ ಮುನಿ ।
ಪಾವನತ ಪಾದ ಪಂಕೇರುಹದ್ವಂದ್ವನಿಂದು ಕಲಾವತಂಸಮುಮೆಯ ॥
ಭಾವನೆಯನೊಡಗೂಡಿಸುವ ಸಕಲ ಸುರರ ಸಂ ।
ಭಾವನೆಯ ಕೈಗೊಂಬ ಲೋಕವಿಸ್ತರಣ ಪ್ರ ।
ಭಾವ ನಯನತ್ರಯಂ ದೇವ ಗಂಗಾಧರಂ ಬಿಡದೆ ಪೊರೆಗೆ ನಿಚ್ಚಂ ನಮ್ಮನು ॥೨॥(ಸಲಹುಗೆ / ಪೊರೆಗೆ ನಿಚ್ಚಂ)
**ಪಾವನು ಅತುಲ ಆಭರಣಮಂ ಮಾಡಿಕೊಂಡು ಎಸೆವ ಪಾವನತರ ಸ್ವರೂಪಂ=[ಹಾವನ್ನು ಅಸಾಧಾರಣ ಆಭರಣವನ್ನಾಗಿ ಮಾಡಿಕೊಂಡು ಶೋಭಿಸುತ್ತಿರುವವನೂ,ಪಾವನತರ ಸ್ವರೂಪನಾದ,]; ನಾರದ ಆದಿ (ಮೊದಲಾದ) ಮುನಿಪ ಅವನತ ಪಾದ ಪಂಕೇರುಹ ದ್ವಂದ್ವನು (ಎರಡು ಪಾದಕಮಲ) ಇಂದು ಕಲಾ ವಸಂತ=[ನಾರದನೇ ಮೊದಲಾದ ಮುನಿಗಳಿಂದ ಬಾಗಿ (ಶಿವನ) ಎರಡು ಪಾದಕಮಲಗಳಿಗೆ ನಮಸ್ಕರಿಸಲ್ಪಡುತ್ತಿರುವ ಚಂದ್ರನನ್ನು(ಧರಿಸಿ) ವಸಂತನಂತೆ (ಶೋಭಿಸುತ್ತಿರುವ)]; ಉಮೆಯ ಭಾವನೆಯ (ಶಕ್ತಿ) ಒಡಗೂಡಿಸುವ ಸಕಲ ಸುರರ ಸಂಭಾವನೆಯ ಕೈಗೊಂಬ ಲೋಕ ವಿಸ್ತರಣದ ಪ್ರಭಾವ ನಯನತ್ರಯಂ ದೇವ ಗಂಗಾಧರಂ ಬಿಡದೆ ಪೊರೆಗೆ ನಿಚ್ಚಂ ನಮ್ಮನು=[ತನ್ನ ಪ್ರಭಾವದಿಂದ ಜಗತ್ತನ್ನು ಆವರಿಸಿರುವ, ಸಕಲ ದೇವತೆಗಳಿಂದ ಗೌರವ ಪಡೆಯುತ್ತಿರುವ ಮೂರುಕಣ್ಣಿನ ದೇವನಾದ, ಗಂಗೆಯನ್ನು ಧರಿಸಿದ ಗಂಗಾಧರನು ಉಮೆಯ/ಪಾರ್ವತಿಯ ಶಕ್ತಿಯೊಡಗೂಡಿ ನಮ್ಮನ್ನು ನಿತ್ಯವೂ ಪಾಲಿಸಲಿ].
(ಪದ್ಯ೨) |
ಪದ್ಯ ೩, ವಿನಾಯಕ ಸ್ತುತಿ
ಸಂಪಾದಿಸಿಪ್ರಸ್ತುತದೊಳೊಗೆದ ಮುಂಬೆಳಗಮಲದಂತದ ಗ ।
ಭಸ್ತಿ ನವ ಪೂರ್ವ ಸಂಧ್ಯಾರುಣಂ ಭಾಳವಿ ।
ನ್ಯಸ್ತ ಸಿಂಧೂರಮಂಕುರಿಪ ಪೊಂಬಿಸಿಲೊಡನೆ ಮೂಡುವೆಳನೇಸರೆಸೆವ ।
ಮಸ್ತಕದ ಮಣಿಮಕುಟಮಾಗಲುದಯಾಚಲದ ।
ವಿಸ್ತಾರದಂತೆ ಭದ್ರಾಕೃತಿಯೊಳೊಪ್ಪುವ ಸ।
ಮಸ್ತಸಿದ್ಧಿಪ್ರದಾಯಕ ವಿನಾಯಕ ಮಾಳ್ಪುದೆಮಗೆ ನಿರ್ವಿಘ್ನತೆಯನು ॥೩॥
ಪ್ರಸ್ತುತದೊಳು,(ಈಗ - ಸದಾಕಾಲದಲ್ಲೂ) ಒಗೆದ ಮುಂಬೆಳಗು, ಅಮಲ (ಶ್ರೇಷ್ಠವಾದ) ದಂತದ ಗಭಸ್ತಿ (ಕಿರಣ)=[ಸದಾಕಾಲದಲ್ಲೂ ಬೆಳಗಿನ ಸೂರ್ಯನ ಕಿರಣದಂತೆ ಪ್ರಕಾಶಮಾವಾಗಿ ಪ್ರಕಾಶಿಸುತ್ತಿರುವ ಶ್ರೇಷ್ಠವಾದ ದಂತಗಳನ್ನು ಹೊಂದಿರುವ]; ನವ ಪೂರ್ವ ಸಂಧ್ಯಾರುಣಂ ಭಾಳವಿನ್ಯಸ್ತ ಸಿಂಧೂರಮಂಕುರಿಪ ಪೊಂಬಿಸಿಲ ಒಡನೆ ಮೂಡುವ ಎಳನೇಸರು ಎಸೆವ, ಮಸ್ತಕದ ಮಣಿಮಕುಟಂ=[ಹಣೆಯ ಮೇಲೆ ಹೊಂಬಿಸಿಲಿನಂತೆ ತೋರುವ ಸಿಂಧೂರವನ್ನು (ಚಂದನ) ಧರಿಸಿರುವ ಎಳೆಬಿಸಿಲಿನ ಪ್ರಕಾಶದಂತೆ ಮನೋಹರವಾದ ಮಣಿಗಳ ಕಿರೀಟವನ್ನು ಧರಿಸಿರುವ]; ಆಗಲು ಉದಯಾಚಲದ ವಿಸ್ತಾರದಂತೆ ಭದ್ರಾಕೃತಿಯೊಳು ಒಪ್ಪುವ ಸಮಸ್ತ ಸಿದ್ಧಿಪ್ರದಾಯಕ ವಿನಾಯಕ ಮಾಳ್ಪುದು ಎಮಗೆ ನಿರ್ವಿಘ್ನತೆಯನು=[ಎಲ್ಲರ ಅಭೀಷ್ಟಗಳನ್ನು ನೆರವೇರಿಸುವ ವಿನಾಯಕನು ನಮಗೆ (ನನಗೆ) (ಈ ಕಾವ್ಯರಚನೆಯಲ್ಲಿ) ತೊಂದರೆ ಬಾರದಂತೆ ಮಾಡಲಿ].
(ಪದ್ಯ ೩) |
ಪದ್ಯ೪, ಶಾರದಾ ಸ್ತುತಿ
ಸಂಪಾದಿಸಿಭೂವ್ಯೋಮ ಪಾತಾಳ ಲೋಕಂಗಳಲ್ಲಿ ಸಂ ।
ಭಾವ್ಯರೆಂದೆನಿಸಿಕೊಳ್ವಖಿಳದೇವರ್ಕಳಿಂ । (ಕೊಂಬಖಿಳ ದೇವರ್ಕಳಿಂ)
ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಾಣಿ ಫಣಿವೇಣಿ ವಾಣಿ ॥
ಕಾವ್ಯಮಿದು ಭುವನದೊಳ್ ಸಕಲ ಜನರಿಂದೆ ಸು ।
ಶ್ರಾವ್ಯಮಪ್ಪಂತೆನ್ನ ವದನಾಬ್ಜದಲ್ಲಿ ನೀ ।
ನೇ ವ್ಯಾಪಿಸಿರ್ದಮಲಸುಮತಿಯಂ ತಾಯೆನಗೆ ತಾಯೆ ನಗೆಗೂಡಿ ನೋಡಿ ॥೪॥
ಭೂ, ವ್ಯೋಮ (ಆಕಾಶ) ಪಾತಾಳ ಲೋಕಂಗಳಲಿ, ಸಂಭಾವ್ಯರೆಂದು (ಪೂಜ್ಯರು) ಎನಿಸಿಕೊಳ್ವ ದೇವರ್ಕಳಿಂ, ಸೇವ್ಯನಾದ (ಸೇವೆಮಾಡಲು ಯೋಗ್ಯನಾದ) ಅಜನ (ಬ್ರಹ್ಮನ)ಪಟ್ಟದ ರಾಣಿ, ವರದೆ ಕಲ್ಯಾಣಿ, ಫಣಿವೇಣಿ (ಹಾವಿನಂತೆ ಉದ್ದ ಜಡೆ) ವಾಣಿ (ಶಾರದೆ); ಕಾವ್ಯಂ ಇದು ಭುವನದೊಳ್ (ಭೂಮಿಯಲ್ಲಿ), ಸಕಲ ಜನರಿಂದೆ ಸುಶ್ರಾವ್ಯಂ ಅಪ್ಪಂತೆ ಎನ್ನ ವದನಾಬ್ಜದಲ್ಲಿ (ವದನ + ಅಬ್ಜ =ಮುಖಕಮಲ;ಅಬ್ಜ: ಅಪ್+ಜ ನೀರಿನಲ್ಲಿ ಹುಟ್ಟಿದ್ದು), ನೀನೇ ವ್ಯಾಪಿಸಿ (ನೆಲಸಿ) ಇರ್ದು ಅಮಲ ಸುಮತಿಯಂ ತಾ ಎನಗೆ ತಾಯೆ ನಗೆಗೂಡಿ (ನಗೆಯಿಂದ ಕೂಡಿ - ಸಂತೋಷದಿಂದ)
(ಪದ್ಯ ೩) |
ಪದ್ಯ ೫ ಕಾವ್ಯ ಲಕ್ಷಣ
ಸಂಪಾದಿಸಿಪಾರದೆ ಪರಾರ್ಥಮಂ ವರಯತಿಗೆ ಭಂಗಮಂ ।
ತಾರದೆ ನಿಜಾನ್ವಯಕ್ರಿಯೆಗಳ್ಗೆ ದೂಷಣಂ ।
ಬಾರದೆ ವಿಶೇಷಗುಣ ಗಣ ಕಲಾ ಗೌರವಂ ತೀರದೆ ದುರುಕ್ತಿಗಳ್ಗೆ ॥
ಸೇರದೆ ಸುಮಾರ್ಗದೊಳ್ ನಡೆವ ಸತ್ಪುರುಷನ ಗ ।
ಭೀರದಶೆಯಂ ಪೋಲ್ವ ಕಾವ್ಯಪ್ರಬಂಧಮಂ ।
ಶಾರದೆಯ ಕರುಣದಿಂ ಪೇಳ್ವೆ ನಾಂ ದೋಷಮಂ ತೊರೆದೆಲ್ಲರುಂ ಕೇಳ್ವುದು ॥೫॥
ಪಾರದೆ ಪರರ ಅರ್ಥಮಂ (ಎಂದರೆ ಹಣವನ್ನು ಅಪಹರಿಸದ), ವರ ಯತಿಗೆ) (ವರ - ಪೂಜ್ಯ; ಯತಿ - ಮನಿಗಳಿಗೆ) ಭಂಗಮಂ ತಾರದೆ(ಅಗೌರವ ತೋರದ), ನಿಜ ಅನ್ವಯ ಕ್ರಿಯೆಗಳ್ಗೆ ದೂಷಣಂ ಬಾರದೆ(ನಿತ್ಯದ ಕರ್ತವ್ಯಗಳನ್ನು ಬಿಡದ), ವಿಶೇಷ ಗುಣ ಗಣ ಗೌರವಂ ತೀರದೆ (ಉತ್ತಮ ಗುಣಗಳ ನಡತೆಗೆ ತಪ್ಪದ), ದುರುಕ್ತಿಗಳ್ಗೆ -ದುರ್ ಉಕ್ತಿ-ಮಾತು ಸೇರದೆ (ಕೆಟ್ಟ ಮಾತನ್ನಾಡದ), ಸುಮಾರ್ಗದೊಳ್ ನಡೆವ ಸತ್ಪುರುಷನ ಗಭೀರದಶೆಯಂ ಪೋಲ್ವ (ಸನ್ಮಾರ್ಗಲ್ಲಿ ನೆಡವ ಸತ್ಪುರುಷ ಗಂಭೀರ ಲಕ್ಷಣವನ್ನು ಹೋಲುವ ಸತ್ಪುರುಷನಂತೆ), -(ಪುನಃ ಅದೇ ಪದಗಳಿಗೆ ಬೇರೆ ಅರ್ಥ) ಪಾರದೆ ಪರರ ಅರ್ಥಮಂ (ಕೃತಿಚೌರ್ಯ ಮಾಡದೆ - ಪಾರದೆ -ಅಪಹರಿಸದೆ, ಪರರ ಅರ್ಥವನ್ನು), ವರ ಯತಿಗೆ ಭಂಗಮಂ ತಾರದೆ (ಕಾವ್ಯದ ಯತಿಗೆ ಭಂಗಬರದಂತೆ (ಯತಿ:ಓದಿನಲ್ಲಿ ಛಂದಸ್ಸಿಗೆ ತಕ್ಕ ನಿಲುಗಡೆ), ನಿಜ ಅನ್ವಯ ಕ್ರಿಯೆಗಳ್ಗೆ ದೂಷಣಂ ಬಾರದೆ (ವ್ಯಾಕರಣ ದೋಷವಿಲ್ಲದೆ), ವಿಶೇಷ ಕಾವ್ಯಲಕ್ಷಣದಿಂದ, ಅಪಶಬ್ಧ-ಕೀಳು/ತಪ್ಪು ಭಾಷೆ ಇರದಂತೆ (ದುರುಕ್ತಿ),ಸತ್ಪುರುಷನ ಗಭೀರ ದಶೆಯಂ (ಲಕ್ಷಣವನ್ನು) ಪೋಲ್ವ (ಹೋಲುವ)ಗಂಭೀರ ಲಕ್ಷಣದ ಸತ್ಪುರುಷನಂತಿರುವ), ಕಾವ್ಯಪ್ರಬಂಧಮಂ (ದೀರ್ಘವಾದ ಕಾವ್ಯವನ್ನು) ಶಾರದೆಯ ಕರುಣದಿಂ ಪೇಳ್ವೆ ನಾಂ ದೋಷಮಂ ತೊರೆದು ಎಲ್ಲರುಂ ಕೇಳ್ವುದು (ಶಾರದಾದೇವಿಯ ಕೃಪೆಯಿಂದ ಹೇಳುವೆನು- ದೋಷವಿದ್ದರೆ ಅದನ್ನು ಬಿಟ್ಟು (ತೊರೆದು), ಪೂರ್ಣವಾಗಿ ಆಲಿಸಿರಿ.
(ಪದ್ಯ ೫) |
ಪದ್ಯ ೬: ಕವಿಯ ಆಶಯ
ಸಂಪಾದಿಸಿಛಂದಸ್ಸುಲಕ್ಷಣಮಲಂಕಾರ ಭಾವರಸ ।
ಮೊಂದಿ ಕಲೆವೆತ್ತ ಸತ್ಕೃತಿ ಚಮತ್ಕೃತಿ ಯುಕ್ತಿ ।
ಯೊಂದುಮಿಲ್ಲದ ಕಾವ್ಯಮಶ್ರಾವ್ಯಮಕ್ಕೆಂದು ಜರೆದು ಕವಿತೆಯನು ಬರಿದೆ ॥
(ಕಾವ್ಯಮಶ್ರಾವ್ಯಹುದೆದರಿಯವೆ?)
ದಂದುಗಕ್ಕೊಳಗಾಗಿ ಪೇಳ್ದನೆಂದೆನ್ನ ನಗು ।
ವಂದಮಂ ಮಾಡದೆನಗೊಲಿದಿತ್ತನಮಲಮತಿ ।
ಯಂ ದೇವಪುರದ ಲಕ್ಷ್ಮೀರಮಣನೆಂದರಿದು ಕೇಳ್ವುದೆಲ್ಲಾ ಸುಜನರು ॥೬॥
ಛಂದ(ಸ್ಸು)(ಪದ್ಯದ ಲಕ್ಷಣ), ಸುಲಕ್ಷಣಂ (ಕಾವ್ಯದ ರೀತಿ), ಅಲಂಕಾರ ( ಉಪಮೆ ರೂಪಕ ಇತ್ಯಾದಿ ಕಾವ್ಯ ಲಕ್ಷಣ), ಭಾವರಸಂ ಹೊಂದಿ,ಕಾವ್ಯದ ಶೃಂಗಾರ,ವೀರ ಕರುಣ ಇತ್ಯಾದಿ ರಸಗಳು) ಕಲೆವೆತ್ತ (ಕಾವ್ಯಲಕ್ಷಣದಿಂದ ತುಂಬಿದ) ಸತ್ಕೃತಿ ಚಮತ್ಕೃತಿ ಯುಕ್ತಿಯು ಒಂದುಂ ಇಲ್ಲದ ಕಾವ್ಯಂ ಅಶ್ರಾವ್ಯಂ ಅಕ್ಕೆಂದು ಜರೆದು ಕವಿತೆಯನು,(ಈ ಕಾವ್ಯವನ್ನು ಸತ್ಕೃತಿ ಚಮತ್ಕೃತಿ ಇತ್ಯಾದಿ, ಇಲ್ಲದ ಕಾವ್ಯವೆಂದು ತೆಗಳಿ), ಬರಿದೆ ದಂದುಗಕ್ಕೆ (ಹಾಸ್ಯಕ್ಕೆ) ಒಳಗಾಗಿ ಪೇಳ್ದನು (ಹಾಸ್ಯಕ್ಕೆ ಒಳಗಾಗುವಂತೆ ಹೇಳಿದ್ದಾನೆ) ಎಂದು ಎನ್ನ ನಗುವ ಅಂದಮಂ ಮಾಡದೆ ( ತಿರಸ್ಕಾರದಿಂದ ಉಪೇಕ್ಷೆ ಮಾಡದೆ) ಎನಗೆ (ಕವಿಗೆ) ಒಲಿದು ಇತ್ತನು (ಕೊಟ್ಟನು)ಅಮಲ (ಶ್ರೇಷ್ಟವಾದ) ಮತಿಯಂ (ಬುದ್ಧಿಶಕ್ತಿಯನ್ನು-ಜ್ಞಾನವನ್ನು ) ದೇವಪುರದ ಲಕ್ಷ್ಮೀರಮಣನೆಂದು (ಲಕ್ಷ್ಮೀರಮಣನು ಪ್ರೀತಿಯಿಂದ ಈ ಕಾವ್ಯ ರಚನೆಯ ಶಕ್ತಿಯನ್ನು (ಕವಿಗೆ) ಕೊಟ್ಟಿರುವನೆಂದು) ಅರಿದು ಕೇಳ್ವುದು ಎಲ್ಲಾ ಸುಜನರು. (ತಿಳಿದು ಸಜ್ಜನರು ಕೇಳಬೇಕು)
(ಪದ್ಯ ೬) |
ಪದ್ಯ ೭:ಕವಿಯ ಆಶಯ
ಸಂಪಾದಿಸಿಕೆನೆವಾಲ ಕಡೆದು ನವನೀತಮಂ ತೆಗೆದು ಬಾ ।
ಯ್ಗಿನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ ।
ವನೆ ಕೆಡಿಸಿದೊಡೆ ಕರೆದ ಸುರಭಿಗುಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ॥
ಜನಿಸಿದ ಪದಾರ್ಥವಂ ತಿಳಿದು ನೋಡದೆ ವಿನೂ ।
ತನ ಕವಿತೆಯೆಂದು ಕುಂದಿಟ್ಟು ಜರೆದೊಡೆ ಪೇಳ್ದ ।
ವನೊಳಾವುದೂಣೆಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು ॥೭॥
ಕೆನೆವಾಲ (ಕೆನೆಹಾಲು) ಕಡೆದು ನವನೀತಮಂ (ಬೆಣ್ಣೆ) ತೆಗೆದು ಬಾಯ್ಗಿನಿದಾಗಿ- ಬಾಯ್ಗೆ ಇನಿದಾಗಿ (ಸವಿಯಾಗಿ) ಸವಿಯದೆ ಅದರೊಳಗೆ ಪುಳಿವಿಳಿದು - ಪುಳಿ (ಹುಳಿ) ಇಡಿದು (ಹಿಡಿದು ಇದೆ ಎಂದು ತಿಳಿದು) ರಸವನೆ (ಬೆಣ್ಣೆಯಲ್ಲಿರುವ ಸವಿಯನ್ನು) ಕೆಡಿಸಿದೊಡೆ ಕರೆದ ಸುರಭಿಗೆ(ಹಸುವಿಗೆ) ಅಪ್ಪುದೆ (ಆಗುವುದೇ?) ಕೊರತೆ ಕಾವ್ಯಮಂ ಕೇಳ್ದು ಮಥಿಸಿ (ಕಡೆದು - ಚೆನ್ನಾಗಿ ವಿಮರ್ಶೆಮಾಡಿ) ಜನಿಸಿದ ಪದಾರ್ಥವಂ (ಕಡೆದಿದ್ದರಿಂದ ಬಂದ ವಸ್ತುವನ್ನು) ತಿಳಿದು ನೋಡದೆ ವಿನೂತನ ಕವಿತೆಯೆಂದು ಕುಂದಿಟ್ಟು ಜರೆದೊಡೆ (ದೂಷಿಸಿದೊಡೆ) ಪೇಳ್ದವನೊಳಾವುದೂಣೆಯಂ - ಪೇಳ್ದವನೊಳು ಆವುದು ಊಣೆಯಂ (ಹೇಳಿದವನಲ್ಲಿ ಯಾವುದು ತಪ್ಪು) ಜಾಣರಿದನರಿದು -ಜಾಣರು ಇದನು ಅರಿದು (ತಿಳಿದು) ಮತ್ಸರವ (ಹೊಟ್ಟೆಕಿಚ್ಚು) ಮರೆದು (ಬಿಟ್ಟು), ಆಲಿಪುದು (ಕೇಳುವುದು).
(ಪದ್ಯ ೭) |
ಪದ್ಯ ೮: ಕವಿಯ ಕೋರಿಕೆ
ಸಂಪಾದಿಸಿಜಾಣರಂ ತಲೆದೂಗಿಸದೆ ನುಡಿದೊಡಾಪದ ।
ಕ್ಕೂಣೆಯಂ ಬಹುದೆಂದು ಸರಸೋಕ್ತಿಯಿಂದೆ ಗೀ ।
ರ್ವಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು ॥
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ ।
ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು ।
ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳ್ವುದು ಸುಜನರು ॥೮॥
ಜಾಣರಂ ತಲೆದೂಗಿಸದೆ (ಮೆಚ್ಚಿಸದೆ) ನುಡಿದೊಡಾಪದಕ್ಕೂಣೆಯಂ -ನುಡಿದೊಡೆ ಆ ಪದಕ್ಕೆ ಊಣೆಯಂ (ಹೇಳಿದರೆ ಆ ಪದಕ್ಕೆ ಕೊರತೆ) ಬಹುದೆಂದು ( ಬರುವುದೆಂದು) ಸರಸೋಕ್ತಿಯಿಂದೆ-ಸರಸ ಉಕ್ತಿಯಿಂದೆ ಗೀರ್ವಾಣ ಪುರನಿಲಯ(ದೇವಲೋಕದಲ್ಲಿ ವಾಸಿಸುವ) ಲಕ್ಷ್ಮೀವರಂ (ಲಕ್ಷ್ಮೀಪತಿ -ವಿಷ್ಣು) ತಾನೆ ಸಂಗೀತ ಸುಕಲಾ (ಉತ್ತಮ ಸಂಗೀತ ಸಾಹಿತ್ಯ ಕಲೆ) ನಿಪುಣನು ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ ನುಡಿಸುವ ಅಂದದಲ್ಲಿ(ವೀಣೆಯಿಂದ ಗಾನವನ್ನೂ ನುಡಿಸುವ ರೀತಿಯಲ್ಲಿ) ವಾಣಿಯಿಂ (ಕನ್ನಡ ಬಾಷೆಯಿಂದ ಅಥವಾ ಸರಸ್ವತೀ ಕೃಪೆಯಿಂದ) ಕವಿತೆಯಂ ಪೇಳಿಸಿದನೆಂದರಿದು - ಪೇಳಿಸಿದನು ಎಂದು ಅರಿದು (ಹೇಳಿಸಿದನು ಎಂದು ತಿಳಿದುಕೊಂಡು/ಭಾವಿಸಿ) ಕೇಣಮಂ ತೊರೆದು (ಅಸೂಯೆ ಪಡದೆ) ಪುರುಡಿಸುವರಂ ಜರೆದು (ದೂಷಿಸುವವರನ್ನು ನಿಂದಿಸಿ) ಕಿವಿದೆರೆದು ಕೇಳ್ವುದು ಸುಜನರು.
(ಪದ್ಯ ೮) |
ಪದ್ಯ ೯ ಕಾವ್ಯ ಸಮರ್ಥನೆ
ಸಂಪಾದಿಸಿದುಷ್ಟಾಹಿ ಘೋರತರ ವಿಷವದನದಿಂದೆ ಸಂ ।
ದಷ್ಟಮಾಗಿರುತಿರ್ದೊಡಂ ದೋಷಮಿರ್ದೊಡಂ ।
ನಷ್ಟ ಕಲೆಯಾದೊಡಂ ಚಂದ್ರನಂತೆನ್ನ ಕಾವ್ಯವ ರಸಂ ಸುಮನಸರ್ಗೆ ॥
ಇಷ್ಟಮಾಗದೆ ಮಾಣದಿನ್ನಾವನಾದೊಡಂ ।
ಕಷ್ಟಮಂ ಬಗೆವವಂ ಚೋರಂಗೆ ವಿರಹಿಗಂ ।
ದೃಷ್ಟಾಂತಮಾಗಿ ಸಲ್ವಂ ಧರಾವಲಯದೊಳ್ ಸಂದೇಹಮೇನಿದರೊಳು ॥೯॥
ದುಷ್ಟಾಹಿ -ದುಷ್ಟ ಅಹಿ (ಸರ್ಪ - ರಾಹು) ಘೋರತರ ವಿಷವದನದಿಂದೆ ವಿಷ ವದನದಿಂದ (ವಿಷವುಳ್ಳ ಮುಖ / ಬಾಯಿ) ಸಂದಷ್ಟಮಾಗಿರುತಿರ್ದೊಡಂ - ಸಂದಷ್ಟಂ ಆಗಿರ್ದೊಡಂ (ಕಚ್ಚಿಸಿಕೊಂಡಿದ್ದರೂ) ದೋಷಮಿರ್ದೊಡಂ- ದೋಷಂ ಇರ್ದೊಡಂ (ದೋಷವಿದ್ದರೂ ತಪ್ಪುಗಳಿದ್ದರೂ) ನಷ್ಟ ಕಲೆಯಾದೊಡಂ (ಕಲೆ -ಸಾಹಿತ್ಯ ಕಳೆಗುಂದಿದ್ದರೂ) ಚಂದ್ರನಂತೆನ್ನ ಕಾವ್ಯವ ರಸಂ (ಚಂದ್ರನಂತೆ ಎನ್ನ ಕಾವ್ಯ ರಸಂ (ಚಂದ್ರನಂತೆ ತನ್ನ ಕಾವ್ಯಸೌಂದರ್ಯವು), ಸುಮನಸರ್ಗೆ (ಸು= ಒಳ್ಳೆಯ ಮನಸರ್ಗೆ=ಮನಸ್ಸು ಉಳ್ಳವರಿಗೆ ಸಜ್ಜನರಿಗೆ), ಇಷ್ಟಮಾಗದೆ ಮಾಣದಿನ್ನಾವನಾದೊಡ - ಇಷ್ಟಂ ಆಗದೆ,ಮಾಣದು; ಇನ್ನಾವನಾದೊಡಂ (ಇಷ್ಟವಾಗದೆ ಇರದು, ಮತ್ತೆ ಯಾರಾದರೂ) ಕಷ್ಟಮಂ ಬಗೆವವಂ (ಕಷ್ಟವೆಂದು ತಿಳಿದರೆ) ಚೋರಂಗೆ ವಿರಹಿಗಂ ದೃಷ್ಟಾಂತಮಾಗಿ ಸಲ್ವಂ ಧರಾವಲಯದೊಳ್ ಸಂದೇಹಮೇನಿದರೊಳು, (ಕಳ್ಳನಿಗೆ, ಪ್ರಿಯಳಿಂದ ದೂರವಾದ ವಿರಹಿಗೆ ದೃಷ್ಟಾಂತವಾಗಿರುವನು) -ಸಂದೇಹಂ ಏನು ಇದರೊಳು (ಇದರಲ್ಲಿ ಸಂದೇಹವಿಲ್ಲ).
(ಪದ್ಯ ೯) |
ಪದ್ಯ ೧೦: ಹಿಂದಿನ ಕವಿಗಳಿಗೆ ಕವಿಯ ನಮನ
ಸಂಪಾದಿಸಿಮೊಗಮಾವ ಲೀಲೆಯಿಂದೆಸೆವುದಾ ಭಾವಮಂ ।
ಮಗುಳೆ ತೋರುವುದಲ್ಲದನ್ಯ ಪ್ರಕಾರದಿಂ ।
ಸೊಗಯಿಪುದೆ ರನ್ನಗನ್ನಡಿ ಧರೆಯೊಳಾರಾಜಿಸುವ ಕನ್ನಡದ ನುಡಿಗಳ ॥
ಬಗೆಯರಿದ ಕಾವ್ಯ ಲಕ್ಷಣದಿಂದೆ ಮುನ್ನ ಕ ।
ಬ್ಬಗಳನುಸುರಿದರದೇ ಲಕ್ಷ್ಯಮಲ್ಲದೆ ಪೆರತೆ ।
ನಗೆ ಸಲ್ಲದದರಿಂದೆ ಪೂರ್ವ ಸತ್ಕವಿಗಳ್ಗೆ ನಮಿಸಿ ನಾಂ ಕೃತಿವೇಳ್ವೆನು ॥೧೦॥
ಮೊಗಮಾವ - ಮೊಗಂ + ಆವ (ಮುಖವು ಯಾವ); ಲೀಲೆಯಿಂದೆಸೆವುದಾ ಭಾವಮಂ - ಲೀಲೆಯಿಂದ + ಎಸೆವುದು + ಆ ಭಾವಮಂ +(ಲೀಲೆಯಿಂದ- ರೀತಿಯಿಂದ; ಎಸೆವುದೂ-ತೋರುವುದೋ); ಮಗುಳೆ ತೋರುವುದಲ್ಲದನ್ಯ ಪ್ರಕಾರದಿಂ ಸೊಗಯಿಪುದೆ:- ಮಗುಳ್ (ಪುನಃ)+ ತೋರುವುದು- ಕಾಣಿಸುವುದು =ಪ್ರತಿಬಿಂಬಿಸುವುದು; ಅಲ್ಲದೆ +ಅನ್ಯ ಪ್ರಕಾರದಿ- ಬೇರೆ ರೀತಿಯಿಂದ ತೋರಿಸುವುದೇ ರನ್ನಗನ್ನಡಿ -ಕನ್ನಡಿ? ಧರೆಯೊಳಾರಾಜಿಸುವ ಕನ್ನಡದ ನುಡಿಗಳ:- ಧರೆಯೊಳಗೆ + ಆರಾಜಿಸುವ ಕನ್ನಡದ ನುಡಿಗಳ (ಭೂಮಿಯಲ್ಲಿ ಪ್ರಸಿದ್ಧವಾಗಿರುವ ಕನ್ನಡದ ನುಡಿಗಳ/ ಕಾವ್ಯಗಳ,) ಬಗೆ+ ಅರಿದ + ಕಾವ್ಯ ಲಕ್ಷಣದಿಂದೆ ಮುನ್ನ= ಹಿಂದೆ ((ಬಗೆಯ -ರೀತಿಯ + ಅರಿದ-ತಿಳಿದ ಕಾವ್ಯ ಲಕ್ಷಣಗಳನ್ನು= ಈ ಹಿಂದೆ ಹೇಳಿದ ರೀತಿಯನ್ನು) ಕಬ್ಬಗಳನುಸುರಿದರದೇ ಲಕ್ಷ್ಯಮಲ್ಲದೆ (ಕಬ್ಬಗಳನು - ಕಾವ್ಯಗಳನ್ನು ಉಸುರಿದರೆ - ಹೇಳಿದರೆ ಅದೇ ಲಕ್ಷ್ಯಂ ಅಲ್ಲದೆ - ಕ್ರಮವು , ಅಲ್ಲದೆ; ಪೆರತೆನಗೆ- ಪೆರತು ಎನಗೆ ( ಬೇರೆ ರೀತಿ ಎನಗೆ), ಸಲ್ಲದದರಿಂದೆ (ಸಲ್ಲದು- ಒಪ್ಪಿತವಾಗದು,) + ಅದರಿಂದೆ ಪೂರ್ವ ಸತ್ಕವಿಗಳ್ಗೆ (ಸತ್ -ಕವಿಗಳ್ಗೆ) ನಮಿಸಿ ನಾಂ ಕೃತಿವೇಳ್ವೆನು; (ಆದ್ದರಿಂದ ಪೂರ್ವ=ಹಿಂದಿನ ಕವಿಗಳಿಗೆ ನಮಿಸಿ=ನಮಸ್ಕರಿಸಿ ನನ್ನ ಕೃತಿಯನ್ನು ಪೇಳ್ವೆನು=ಹೇಳುವೆನು).
(ಪದ್ಯ ೧೦) |
ಪದ್ಯ ೧೧: ಕವಿಯ ಪರಿಚಯ
ಸಂಪಾದಿಸಿವಿದ್ವತ್ಸಭಾವಲಯಮರಿಯೆ ವಿರಚಿಸಿದಂ ಭ ।
ರದ್ವಾಜ ಗೋತ್ರಭವನಣ್ಣಮಾಂಕನ ಸುತಂ ।
ಸದ್ವಿನುತ ಕರ್ಣಾಟಕವಿ ಚೂತವನಚೈತ್ರ ಲಕ್ಷ್ಮೀಶನೆಂಬೊರ್ವನು ॥
ಹೃದ್ವನಜದೊಳ್ ದೇವಪುರದ ಲಕ್ಷ್ಮೀಶನ ಪ ।
ದದ್ವಯವನಾವಗಂ ಧ್ಯಾನಿಸುವರಡಿಗಳಂ ।
ಸದ್ವಿನಯದಿಂ ಭಜಿಪ ಬಲ್ಪಿಂದೆ ವಿಮಲ ಜೈಮಿನಿ ಭಾರತದ ಕಥೆಯನು ॥೧೧॥
ಪದವಿಭಾಗ ಮತ್ತು ಅರ್ಥ: :ವಿದ್ವತ್‍ಸಭಾ ವಲಯಂ ಅರಿಯೆ ವಿರಚಿಸಿದಂ=ವಿದ್ವಾಂಸರ ಸಭೆಯ ಸಮೂಹವು ತಿಳಿಯುವಂತೆ ರಚಿಸಿದನು, ಭರದ್ವಾಜ ಗೋತ್ರಭವನು ಅಣ್ಣಮಾಂಕನ ಸುತಂ ಸದ್ವಿನುತ 'ಕರ್ಣಾಟಕವಿ ಚೂತವನಚೈತ್ರ' ಲಕ್ಷ್ಮೀಶನೆಂಬ ಓರ್ವನು = ಭರದ್ವಾಜ ಗೋತ್ರದ ಅಣ್ಣಮಾಂಕನ ಮಗನಾದ ಸಜ್ಜನರಿಂದ ಗೌರವಪಡೆದ 'ಕರ್ನಾಟಕವಿ ಚೂತವನಚೈತ್ರ' (ಎಂಬ ಬಿರುದಿನ)-(ಕನ್ನಡ ಕವಿಗಳ ಮಾವಿನ ತೋಟಕ್ಕೆ ವಸಂತ ಋತುವಿನಂತಿರುವವನು) ಲಕ್ಷ್ಮೀಶನೆಂಬ ಒಬ್ಬ (ಕವಿಯು); ಹೃದ್‍ವನಜದೊಳ್ ದೇವಪುರದ ಲಕ್ಷ್ಮೀಶನ ಪದದ್ವಯವನು ಆವಗಂ ಧ್ಯಾನಿಸುವರ ಅಡಿಗಳಂ ಸದ್‍ವಿನಯದಿಂ ಭಜಿಪ ಬಲ್ಪಿಂದೆ ವಿಮಲ ಜೈಮಿನಿ ಭಾರತದ ಕಥೆಯನು = ಹೃದ್‍ವನಜದೊಳ್- ಹೃದಯಕಮಲದಲ್ಲಿ ದೇವಪುರದಲ್ಲಿರುವ (ದೇವಾಲಯದಲ್ಲಿರುವ) ಲಕ್ಷ್ಮೀಶನ ಎರಡು ಪಾದಗಳನ್ನು ಯಾವಾಗಲೂ ಸದ್‍ಭಾವ ಮತ್ತು ವಿನಯದಿಂದ ಭಜಿಸುತ್ತಿರುವ-ಧ್ಯಾನಿಸುತ್ತಿರುವವರ (ವಿಷ್ಣು ಭಕ್ತರ) ಪಾದಗಳನ್ನ ಭಜಿಸುವ ಬಲದಿಂದ ಪರಿಶುದ್ಧವಾದ ಜೈಮಿನಿ ಭಾರತದ ಕಥೆಯನ್ನು.
|
ಪದ್ಯ ೧೨:ಕವಿಯ ಆತ್ಮ ವಿಶ್ವಾಸ
ಸಂಪಾದಿಸಿವರ ವರ್ಣದಿಂದೆ ಶೋಭಿತಮಾಗಿ ರೂಪ ವಿ ।
ಸ್ತರದಿಂದೆ ಚೆಲ್ವಾಗಿ ಮಧುರತರ ನವರಸೋ ।
ದರಭರಿತದಿಂದೆ ವಿಲಸಿತಮಾಗಿ ಸುಮನೋನುರಾಗದಿಂ ಪ್ರಚುರಮಾಗಿ ॥
ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ ।
ಚರಿಸುವ ಸುಲಲಿತ ಷಟ್ಪದಿಗಳೆಡೆಬಿಡದೆ ಝೇಂ ॥
ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು ॥೧೨॥
(ಷಟ್ಪದಿ=ಛಂದಸ್ಸು/ ಜೇನುಹುಳು): ವರ ವರ್ಣದಿಂದೆ ಶೋಭಿತಮಾಗಿ:=ವಾರ್ಧಕ ಷಟ್ಪದಿ ಛಂದಸ್ಸಿನ ಕಾವ್ಯ-> ಉತ್ತಮ ಅಕ್ಷರಗಳಿಂದ/ ಪದಗಳಿಂದ ಶೋಭಿಸುತ್ತಿರುವ; (ಜೇನುಹುಳದ ರೂಪಕಕ್ಕೆ->ಉತ್ತಮ ಬಣ್ಣದಿಂದ /ಮನೋಹರವಾದ ನೀಲಿಬಣ್ಣದಿಂದ ಶೋಭಿಸುತ್ತಿರುವ);ರೂಪ ವಿಸ್ತರದಿಂದೆ ಚೆಲ್ವಾಗಿ = (ವಾರ್ಧಕ ಷಟ್ಪದಿ ಛಂದಸ್ಸು)ರೂಪದ ವಿವರದಲ್ಲಿ ಅಂದವಾಗಿ;ಜೇನುಹುಳದ ರೂಪಕಕ್ಕೆ-> ರೂಪದಲ್ಲಿ ಚೆಲುವಾಗಿರುವ; ಮಧುರತರ ನವರಸೋದರಭರಿತದಿಂದೆ ವಿಲಸಿತಮಾಗಿ -ಮಧುರತರ ನವ ರಸ ಉದರಭರಿತದಿಂದ= ಕಿವಿಗೆ ಇಂಪಾದ ಶೃಂಗಾರಾದಿ ನವರಸಗಳಿಂದ ಕೂಡಿ;ಜೇನುಹುಳದ ರೂಪಕಕ್ಕೆ-> ಸಿಹಿಯಾದ ಹೊಸ ಮಧುರಸದಿಂದ ಭರಿತವಾಗಿರುವ; ಮಧರವಾದ ಸುಮನೋನುರಾಗದಿಂ ಪ್ರಚುರಮಾಗಿ ನಿರುತ ಮಂಜುಳ ಶಬ್ದದಿಂದೆ ಕಿವಿಗಿಂಪಾಗಿ= (ಕಾವ್ಯವು)ಮಧುರವಾದ ಉತ್ತಮ ರಾಗಗಳಿಂದ ಕೂಡಿದ್ದು ಮನೋಜ್ಞವಾಗಿದ್ದು :ಜೇನುಹುಳದ ರೂಪಕಕ್ಕೆ->ಜೇನಿನ ಸುಮಧುರವಾದ ಝೇಂಕಾರ ಸುಶ್ರಾವ್ಯ ಶಬ್ದದಿಂದ ಕೂಡಿ ಕೇಳುವಂತಿದ್ದು; ಚರಿಸುವ ಸುಲಲಿತ ಷಟ್ಪದಿಗಳೆಡೆಬಿಡದೆ = (ಚರಿಸುವ)ಛಂದಸ್ಸಿನ ಲಯದಲ್ಲಿ ಹಾಡಲ್ಪಡುವ ಸರಳವಾದ ಷಟ್ಪದಿಯಲ್ಲಿರುವ ಪದ್ಯಗಳು; ಜೇನುಹುಳದ ರೂಪಕಕ್ಕೆ->ಇಂಪಾದ ಲಯದಲ್ಲಿ ಹಾರುತ್ತಿರುವ ಜೇನುಹುಳುಗಳು ಝೇಂಕಾರಮಾಡದಿರುವುವೇ ; ಝೇಂಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು - ಝೇಂಕರಿಸದೆ ಇರುವುವೇ, ವಿದ್ವತ್ ಸಭಾ ನೀರೇರುಹ ಆಕರದೊಳು = ವಿದ್ವಾಂಸರೆಂಬ ಕಮಲಗಳಿಂದ ತುಂಬಿದ ಸರೋವರದಲ್ಲಿ (ಝೇಂಕರಿಸದೆ ಇರುವುವೇ)
(ಪದ್ಯ ೧೨) |
ಹೋಗಿ
ಸಂಪಾದಿಸಿನೋಡಿ
ಸಂಪಾದಿಸಿಸಂಧಿಗಳು* 1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.