ಜೈಮಿನಿ ಭಾರತ ನಾಲ್ಕನೆಯ ಸಂಧಿ
ಸಂಪಾದಿಸಿಪದ್ಯ - ಸೂಚನೆ
ಸಂಪಾದಿಸಿ- ಜಡಿದು ಭದ್ರಾವತಿಯೊಳಮಲತರ ವಾಜಿಯಂ |
- ಪಿಡಿದುಕಲಿಯೌವನಾಶ್ವನ ಚಾತುರಂಗಮಂ |
- ಬಡಿದವನನದಲ್ಲಿ ಕಾಣಿಸಿಕೊಂಡು ಹಸ್ತಿನಾವತಿಗೆ ಭೀಮಂ ಬಂದನು ||
ಜಡಿದು= ಹೊಡೆದು,ಯುದ್ಧಮಾಡಿ, ಭದ್ರಾವತಿಯೊಳಮಲತರ-: ಭದ್ರಾವತಿಯೊಳು ಅಮಲತರ ವಾಜಿಯಂ= ಭದ್ರಾವತಿಯಲ್ಲಿದ್ದ ಶ್ರೇಷ್ಟವಾದ ಕುದುರೆಯನ್ನು,
ಪಿಡಿದು= ಹಿಡಿದು, ಕಲಿಯೌವನಾಶ್ವನ= ಶೂರನಾದ ಯೌವನಾಶ್ವನ, ಚಾತುರಂಗಮಂ= ಚತುರಂಗಸೈನ್ಯವನ್ನು (ರಥ,ಕುದುರೆ,ಆನೆ,ಪದಾತಿ ಸೈನ್ಯ) ಬಡಿದವನನದಲ್ಲಿ-: ಬಡಿದು= ಸೊಲಿಸಿ ಅವನನು ಅಲ್ಲಿ, ಕಾಣಿಸಿಕೊಂಡು= ನೋಡಿಕೊಂದು ಹಸ್ತಿನಾವತಿಗೆ ಭೀಮಂ= ಹಸ್ತನಾವತಿಗೆ ಭೀಮನು ಬಂದನು
(ಪದ್ಯ - ಸೂಚನೆ), |
ಪದ್ಯ - ೧
ಸಂಪಾದಿಸಿಜನಮೇಜಯಕ್ಷಿತಪ ಕೇಳ್ ಪ್ರಣಯ ಕಲಹದೊಳ್ |
ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್ |
ಮಿನುಗುವೆಳನಗೆ ತೋರುವನ್ನೆಗಂ ಚಿತ್ತದೊಳ್ ಕುದಿವ ನಾಗರಿಕನಂತೆ ||
ಅನಿಲಸುತನಾಹಯಂ ಪೊಳಲ ಪೊರಮಡುವಿನಂ |
ಮನದುಬ್ಬೆಗದೊಳೆ ಚಿಂತಿಸಿ ಮತ್ತೆ ಕರ್ಣಜಾ |
ತನ ವದನಮಂ ನೋಡುತನುತಾಪದಿಂ ತನ್ನ ಪಳಿದುಕೊಳುತಿಂತೆಂದನು ||1||
ಜನಮೇಜಯಕ್ಷಿತಪ ಕೇಳ್= ಜನಮೇಜಯ ರಾಜನೇ ಕೇಳು,ಬೆಟ್ಟದ ಮೇಲಿಂದ ನಾಡಿದಾಗ ಯಜ್ಞಾಶ್ವವು ಕಾಣದಿರಲು, ಪ್ರಣಯ ಕಲಹದೊಳ್ ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್-:ಪ್ರಣಯ ಕಲಹದಲ್ಲಿ ಪತ್ನಿಯ ಮುಖದಲ್ಲಿ, ಮಿನುಗುವೆಳನಗೆ ತೋರುವನ್ನೆಗಂ= ಮಿನುಗವ ಎಳೆನಗೆ ಕಾಣುವ ಅನ್ನೆಗಂ=ಅಲ್ಲಿಯವರೆಗೆ, ಚಿತ್ತದೊಳ್=ಮನಸ್ಸಿನಲ್ಲಿ, ಕುದಿವ=ವ್ಯಥೆಪಡುವ, ನಾಗರಿಕನಂತೆ= ಮನುಷ್ಯನಂತೆ,(ಚಿಂತೆಪಡುವಂತೆ) ಅನಿಲಸುತನಾಹಯಂ-; ಅನಿಲಸುತ=ಭೀಮನು, ಆ ಹಯಂ= ಆಕುದುರೆಯು, ಪೊಳಲ ಪೊರಮಡುವಿನಂ= ಪಟ್ಟಣದಿಮದ ಹೊರಬರುವವರೆಗೆ, ಮನದುಬ್ಬೆಗದೊಳೆ ಚಿಂತಿಸಿ-: ಮನದ ಉಬ್ಬೆಗದೊಳ್= ಉದ್ವೇಗದಿಂದ ಚಿಂತಿತನಾಗಿ, ಮತ್ತೆ ಕರ್ಣಜಾತನ ವದನಮಂ= ವೃಷಕೇತುವಿನ ಮುಖವನ್ನು, ನೋಡುತನುತಾಪದಿಂ= ನೋಡುತ ಅನುತಾಪದಿಂದ, ತನ್ನ ಪಳಿದುಕೊಳುತಿಂತೆಂದನು-: ತನ್ನ ಪಳಿದು= ಹಳಿದುಕೊಂಡು, ಇಂತೆಂದನು= ಹೀಗೆ ಹೇಳಿದನು.
(ಪದ್ಯ - ೧), |
ಪದ್ಯ - ೨
ಸಂಪಾದಿಸಿಉದ್ರೇಕದಿಂ ಮುನಿವರನೊಳಾಡಿ ತಪ್ಪಿದ ಗು |
ರುದ್ರೋಹಮೊಂದಚ್ಯುತನೊಳಾಡಿ ಹೊಳೆದ ದೈ |
ವದ್ರೋಹಮೆರಡರಸನವಸರಕೊದಗದ ಸ್ವಾಮಿದ್ರೋಹಮೈದೆ ಮೂರು ||
ಮದ್ರಚಿತ ವೀರಪ್ರತಿಜ್ಞೆ ಕೈಗೂಡದಾ |
ತ್ಮದ್ರೋಹಮದುವೆ ನಾಲ್ಕಿದರ ಸಂಗಡಕೆ ಧ |
ರ್ಮದ್ರೋಹಮೈದಾಗದಿಹುದೆ ತನಗಶ್ವಮಂ ಕಂಡು ಕೊಂಡೊಯ್ಯದಿರಲು ||2||
ಉದ್ರೇಕದಿಂ= ಅತಿ ಉತ್ಸಾಹದಿಂದ, ಮುನಿವರನೊಳಾಡಿ-: ಮುನಿವರನೊಳು ಆಡಿ =ಗುರುವೇದವ್ಯಾಸರ ಹತ್ತಿರ ಪ್ರತಿಜ್ಞೆಮಾಡಿ, ತಪ್ಪಿದ ಗುರುದ್ರೋಹಂ=ಪ್ರತಿಜದ್ಞೆಗೆ ತಪ್ಪಿದ ಗುರುದ್ರೋಹ ಒಂದು, ಅಂದುದಚ್ಯುತನೊಳಾಡಿ ಹೊಳೆದ ದೈವದ್ರೋಹಮೆರಡು-:ಅಂದು ಅಚ್ಯುತನೊಳು= ಕೃಷ್ಣನ ಹತ್ತಿರ,ಆಡಿ= ವಚನತಪ್ಪೆನು ಎಂದು ಹೇಳಿ, ಹೊಳೆದ/ಹೋದ/ ಹೊರಳಿದ= ಮಾತಿಗೆ ತಪ್ಪಿದ, ದೈವದ್ರೋಹಂ ಎರಡು=ದೈವದ್ರೋಹವು ಎರಡನೆಯದು; ಅರಸನವಸರಕೊದಗದ ಸ್ವಾಮಿದ್ರೋಹಮೈದೆ ಮೂರು-: ಅರಸನ ಅವಸರಕೆ ಒದಗದ ಸ್ವಾಮಿದ್ರೋಹಂ ಐದೆ ಮೂರು-:ಅರಸನಾದ ಧರ್ಮಜನ ಅವಸರಕೆ= ಕಾರ್ಯಕ್ಕೆ, ಒದಗದ= ಸಹಕರಿಸದ, ಸ್ವಾಮಿದ್ರೋಹಂ=ಸ್ವಾಮಿದ್ರೋಹವು, ಐದೆ= ಮಾಡಿದರೆ, ಮೂರು= ಮೂರನೆಯದು; ಮದ್ರಚಿತ= ನನ್ನಿಂದ ಮಾಡಲ್ಪಟ್ಟ, ವೀರಪ್ರತಿಜ್ಞೆ= ಪ್ರತಿಜ್ಞೆಯನ್ನು, ಕೈಗೂಡದ ಆತ್ಮದ್ರೋಹಂ= ಪೂರ್ಣ ಮಾಡದಿರುವುದು ಆತ್ಮದ್ರೋಹ, ಅದುವೆ= ಅದು ನಾಲ್ಕಿದರ-:ನಾಲ್ಕು ಇದರ ಸಂಗಡಕೆ ಧರ್ಮದ್ರೋಹಮೈದಾಗದಿಹುದೆ-:ಇದರ ಸಂಗಡಕೆ ಧರ್ಮದ್ರೋಹಂ= ಇದರ ಜೊತೆಯಲ್ಲಿ ಧರ್ಮದ್ರೋಹವು ಸೇರಿ, ಐದು ಪಾಪಕೃತ್ಯವು, ತನಗಶ್ವಮಂ-:ತನಗೆ=ತನಗೆ ಬರುವುದು, ತಾನು ಅಶ್ವಮಂ= ಅಶ್ವವನ್ನು, ಕಂಡು=ಹುಡುಕಿ, ಕೊಂಡೊಯ್ಯದಿರಲು-: ಕೊಂಡೊಯ್ಯದೆ ಇರಲು= ತೆಗೆದುಕೊಂಡು ಹೋಗದಿದ್ದರೆ, ಎಂದನು ಭೀಮ.
(ಪದ್ಯ - ೧), |
ಪದ್ಯ - ೩
ಸಂಪಾದಿಸಿಪುಸಿದನೆ ಬಯಲ್ಗೆ ವೇದವ್ಯಾಸಮುನಿ ಪುಸಿದೊ |
ಡಸುರಾರಿ ಸೈರಿಪನೆ ಸೈರಿಸಿದೊಡೊಳ್ಳಿತೆಂ |
ಮಸಿರುವುದೆ ಶಕುನಂಗಳುಸಿರಿದೊಡಭಾಗ್ಯಬೇ ಭುವರನಭಾಗ್ಯನಾಗೆ ||
ಮಸುಳಿಪುದೆ ಶಶಿಕುಲಂ ಮಸುಳಿಸಿದೊಡದ್ದಪುದೆ |
ವಸುಧೆಯದ್ದೊಡೆ ತನ್ನ ನುಡಿ ಬಂಜೆಯಪ್ಪುದಿದು |
ಪೊಸತದೇಂ ಪಾಪದಿಂ ಕಾಣಿಸದೊ ತುರಗಮೆಂದನಿಲಜಂ ಚಿಂತಿಸಿದನು ||3||
ಪುಸಿದನೆಬಯಲ್ಗೆ ವೇದವ್ಯಾಸಮುನಿ=ವೇದವ್ಯಾಸಮುನಿ ಇಲ್ಲದಿರವಕುದುರೆ ಇದೆಯೆಂದು,ಪುಸಿದನೆ= ಸುಳ್ಳು ಹೇಳಿದನೇ? ಪುಸಿದೊಡಸುರಾರಿ= ಸುಳ್ಳು ಹೇಳಿದರೆ,ಅಸುರಾರಿ= ಸರ್ವಜ್ಞ ಕೃಷ್ಣ, ಸೈರಿಪನೆ= ಸಹಿಸುತ್ತಾನೆಯೇ? ಸೈರಿಸಿದೊಡೊಳ್ಳಿತೆಂಮಸಿರುವುದೆ-:ಸೈರಿಸಿದೊಡ ಒಳ್ಳಿತೆಂಮ ಉಸಿರುವುದೆ ಶಕುನಂಗಳು= ಒಮ್ಮೆ ಕೃಷ್ಣ ಸುಮ್ಮನಿದ್ದರೆ, ಶಕುನಗಳು ಒಳ್ಳಿತು ಎಂದು= ಒಳ್ಳೆಯದಾಗುವುದು ಎಂದು, ಉಸಿರುವುದೇ? ಉಸಿರಿದೊಡಭಾಗ್ಯನೇ= ಹಾಗೊಮ್ಮೆಹೇಳಿದರೆ, ಧರ್ಮಜನು ಭಾಗ್ಯಹೀನನೇ? ಭೂವರನಭಾಗ್ಯನಾಗೆ ಮಸುಳಿಪುದೆ ಶಶಿಕುಲಂ= ಭೂಪಾಲ ಧರ್ಮಜನು ಅಭಾಗ್ಯನದರೆ, ಮಸುಳಿಪುದೆ ಶಶಿಕುಲಂ=ಚಂದ್ರವಂಶ ಹೆಸರು ಪಡೆಯುವುದೇ? ಮಸುಳಿಸಿದೊಡದ್ದಪುದೆ ವಸುಧೆಯದ್ದೊಡೆ-:ಮಸುಳಿಸಿದೊಡೆ=ಶಶಿಕುಲ ಪ್ರಕಾಶಹೀನವಾದರೆ, ಅದ್ದಪುದೆ ವಸುಧೆಯದ್ದೊಡೆ-:ಅದ್ದಪುದೆ ವಸುಧೆ ಅದ್ದೊಡೆ= ಭೂಮಿ ಭೂಮಿ ಕುಸಿದರೆ ಒಳಿತಾಗವುದೇ? ಆಗವುದೇ ತನ್ನ ನುಡಿ ಬಂಜೆಯಪ್ಪುದಿದು-:ತನ್ನ ಮಾತು ಹುಸಿಯಾಗುವುದು- ಇದು ಪೊಸತದೇಂ-:ಇದು ಹೊಸ ಬಗೆ; ಅದೇಂ ಪಾಪದಿಂ ಕಾಣಿಸದೊ ತುರಗಮೆಂದನಿಲಜಂ_:ತುರಗಂ ಎಂದು ಅನಿಲಜಂ ಚಿಂತಿಸಿದನು-:ಅದು ಏನು ಪಾಪದಿಮದ ಕುದುರೆಯು ಕಾಣಿಸದೆ ಇರುವುದು ಎಂದು ಭೀಮನು ಚಿಂತಿತನಾದನು.
(ಪದ್ಯ - ೩), |
ಪದ್ಯ - ೪
ಸಂಪಾದಿಸಿಪಾತಕಿಗೆ ನುಡಿದ ಸೊಲ್ ಪುಸಿಯಹುದು ಪರದಾರ |
ಸೂತಕಿಗೆ ನೆನೆದೆಣಿಕೆ ಬಯಲಹುದು ಗುರುವಿಪ್ರ |
ಪಾತಕಿಗೆ ಕಾಣ್ಬೊಡವೆ ಮರೆಯಹುದು ತಥ್ಯಮಿದು ಜಗದೊಳೆನಗಾವ ಭವದ ||
ಜಾತಕಿಲ್ಬಿಷವೊ ಯಾದವಕುಲ ಮಹಾಂಬುನಿಧಿ |
ಶೀತಕಿರಣಂ ತನ್ನ ಶರಣರನುಳದನೊ ಹಯ |
ಮೇತಕಿಂತಕಟ ಕಾಣಿಸದೊ ಶಿವಶಿವಾಯೆಂದು ಪವನಜಂ ಚಿಂತಿಸಿದನು ||4||
ಪಾತಕಿಗೆ= ಪಾಪಿಗೆ ನುಡಿದ ಸೊಲ್ ಪುಸಿಯಹುದು= ಆಡಿದ ಮಾತು ಸುಳ್ಳಾಗುವುದು, (ಮಾತಿಗೆ ತಪ್ಪುವಂತಾಗುವುದು.) ಪರದಾರ ಸೂತಕಿಗೆ ನೆನೆದೆಣಿಕೆ ಬಯಲಹುದು= ಪರರಪತ್ನಿಯ ಸಂಗಮಾಡಿದವನಿಗೆ ಬಯಸಿದ ಕಾರ್ಯ ಆಗದು, ಗುರುವಿಪ್ರ ಪಾತಕಿಗೆ ಕಾಣ್ಬೊಡವೆ ಮರೆಯಹುದು= ಗುರುಗಳು ವಿಪ್ರರಿಗೆದ್ರೋಹ ಮಾಡಿದವಗೆ (ಸತ್ಯ)ಕಾಣದು, ತಥ್ಯಮಿದು ಜಗದೊಳೆನಗಾವ-:ಜಗದೊಳಗೆ ಆವ= ಜಗತ್ತಿನಲ್ಲಿ ಇದು ನಡೆಯವ ಸತ್ಯತೆ, ಆವ ಭವದ ಜಾತಕಿಲ್ಬಿಷವೊ-:ಜಾತ ಕಿಲ್ಬಿಷ= ಯಾವ ಭವ=ಜನ್ಮದ ಹುಟ್ಟು ಪಾಪವೋ, ಯಾದವಕುಲ ಮಹಾಂಬುನಿಧಿ ಶೀತಕಿರಣಂ ತನ್ನ ಶರಣರನುಳದನೊ=ಯದುವಂಶದ ಸಾಗರದಂತ ತಂಪಿಕಿರಣದ (ಕರುಣೆಯುಳ್ಳ ಕೃಷ್ಣನು)ತನ್ನ ಶರಣರನ್ನ ಉಳುಹನೋ= ಕಾಪಾಡನೋ? ಹಯ ಮೇತಕಿಂತಕಟ ಕಾಣಿಸದೊ= ಕುದುರೆಯು ಏತಕ್ಕೆ ಹೀಗೆ ಕಾಣಿಸದೆಇರುವುದೋ? ಶಿವಶಿವಾಯೆಂದು ಪವನಜಂ= ಶಿವಶಿವಾಯೆಂದು ಭೀಮನು ಚಿಂತಿಸಿದನು.
(ಪದ್ಯ - ೪), |
ಪದ್ಯ - ೫
ಸಂಪಾದಿಸಿತಲ್ಲಕ್ಷಣಂಗಳಿಂ ಸಲ್ಲಲಿತಮಾದ ಹಯ |
ಮಿಲ್ಲಿ ವಿಧಿವಶದಿಂದಮಿಲ್ಲದಿರ್ದೊಡೆ ಧರಾ |
ವಲ್ಲಭನ ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ ಮಹೀತಳದೊಳು ||
ಎಲ್ಲಿರ್ದೊಡಾ ತಾಣದಲ್ಲಿ ಪೊಕ್ಕರಸಿ ತಂ |
ದಲ್ಲದೆನ್ನಯ ಭಾಷೆ ಸಲ್ಲದಿದಕೆಂತೆನುತೆ |
ಘಲ್ಲಿಸುವ ಚಿಂತೆಯಿಂ ನಿಲ್ಲದೆ ವೃಕೋದರಂ ತಲ್ಲಣಿಸುತಿರುತಿರ್ದನು ||5|||
ತಲ್ಲಕ್ಷಣಂಗಳಿಂ-:ತತ್ = ಆ (ಯಜ್ಞದ ಕುದುರೆಯ), ಲಕ್ಷಣಂಗಳಿಂ= ಲಕ್ಷಣಗಳಿಂದ, ಸಲ್ಲಲಿತಮಾದ= ಯೋಗ್ಯವಾದ, ಹಯಮಿಲ್ಲಿ= ಹಯಂ, ಇಲ್ಲಿ, ವಿಧಿವಶದಿಂದಮಿಲ್ಲದಿರ್ದೊಡೆ-:ವಿಧಿವಶದಿಂದಂ= ದೈವಯೊಗದಿಂದ, ಇಲ್ಲದಿರ್ದೊಡೆ= ಇಲ್ಲದಿದ್ದರೆ, ಧರಾವಲ್ಲಭನ= ಧರ್ಮಜನ, ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ=ಹೊಳೆಯುವ ಮೃದು ಪಾದಗಲನ್ನು ನಾನು ನೋಡಬಲ್ಲೆನೇ? (ನೊಡಲಾರೆನು). ಮಹೀತಳದೊಳು=ಭೂಮಿಯಮೇಲೆ, ಎಲ್ಲಿರ್ದೊಡಾ= ಎಲ್ಲಿ ಇದ್ದರೂ, ತಾಣದಲ್ಲಿ= ಆ ಜಾಗದಲ್ಲಿ, ಪೊಕ್ಕರಸಿ-:ಕೊಕ್ಕು ಅರಸಿ=ಹೊಕ್ಕು ಹುಡುಕಿ, ತಂದಲ್ಲದೆನ್ನಯ=:ತಂದಲ್ಲದೆ ಎನ್ನಯ= ತರದಿದ್ದರೆ ನನ್ನ, ಭಾಷೆ ಸಲ್ಲದಿದಕೆಂತೆನುತೆ-:ಭಾಷೆ ಸಲ್ಲದು=ನೆರವೇರದು, ಇದಕೆ ಎಂತು ಎನುತ= ಇದಕ್ಕೆ ಏನು ಮಾಡಬೇಕು ಎಂದು, ಘಲ್ಲಿಸುವ= ಗಾಢವಾದ ಚಿಂತೆಯಿಂ= ಚಿಂತೆಯಿಂದ, ನಿಲ್ಲದೆ= ಚಡಪಡಿಕೆಯಿಂದ, ವೃಕೋದರಂ=ಭೀಮನು ತಲ್ಲಣಿಸುತಿರುತಿರ್ದನು= ಕಳವಳಿಸುತ್ತಿದ್ದನು.
(ಪದ್ಯ - ೫), |
ಪದ್ಯ - ೬
ಸಂಪಾದಿಸಿಅನಿತರೊಳನೇಕ ಸೇನೆಗಳ ಸನ್ನಾಹದಿಂ |
ಘನವಾದ್ಯ ರಭಸದಿಂ ಸೂತರ ಪೊಗಳ್ಕೆಯಿಂ |
ದನುಕರಿಸಿದಮಲ ವಸ್ತ್ರಾಭರಣ ಗಂಧಮಾಲ್ಯಾನಿಗಳ ಪೂಜೆಯಿಂದೆ ||
ವಿನುತಾತಪತ್ರ ಚಮರಂಗಳಿಂದೆಡಬಲದೊ |
ಳನುವಾಗಿ ವಾಘೆಯಂ ಪಿಡಿದು ನಡೆತಪ್ಪ ನೃಪ |
ತನುಜರಿಂದಾ ಹಯಂ ನೀರ್ಗೆ ಪೊರಮಟ್ಟು ಸಂಭ್ರಮದೊಳೈತರುತಿರ್ದುದು ||6||
ಅನಿತರೊಳನೇಕ-:ಅನಿತರೊಳ್ ಅನೇಕ ಸೇನೆಗಳ ಸನ್ನಾಹದಿಂ= ಅಷ್ಟರಲ್ಲಿ, ಅನೇಕ ಸೇನೆಗಳ ಒಡಗೂಡಿಕೊಂಡು, ಘನವಾದ್ಯ ರಭಸದಿಂ ಸೂತರ ಪೊಗಳ್ಕೆಯಿಂದ= ದೊಡ್ಡ ವಾದ್ಯ ಮೊಳಗುತ್ತಾ, ಹೊಗಳುಭಟ್ಟರ ಹೊಗಳಿಕೆಯಿಂದ ಅನುಕರಿಸಿದಮಲ-:ಅನುಕರಿಸಿದ ಅಮಲ ವಸ್ತ್ರಾಭರಣ ಗಂಧಮಾಲ್ಯಾನಿಗಳ ಪೂಜೆಯಿಂದೆ= ಹಿಂಬಾಲಿಸಿದ ಒಳ್ಳೆಯ ವಸ್ತ್ರಾಭರಣ ಮತ್ತು ಗಂಧ ಮಾಲೆಗಳ ಪೂಜೆಯಿಂದೆ, ವಿನುತಾತಪತ್ರ-:ವಿನುತ ಆತಪತ್ರ ಚಮರಂಗಳಿಂದೆಡಬಲದೊಳನುವಾಗಿ -:ಚಮರಂಗಳಿಂದ ಎಡಬಲದೊಳು ಅನುವಾಗಿ= ಹಿಂಬಾಲಿಸಿದ ಒಳ್ಳೆಯ ವಸ್ತ್ರಾಭರಣ ಮತ್ತು ಗಂಧ ಮಾಲೆಗಳ ಪೂಜೆಯಿಂದ, ಒಳ್ಳೆಯ (ಆತಪತ್ರ) ಛತ್ರಿ ಚಾಮರಗಳಿಂದ ಎಡಬಲದೊಳಗೆ ಅನುಕೂಲಕರವಾಗಿ
ವಾಘೆಯಂ ಪಿಡಿದು ನಡೆತಪ್ಪ= ಲಗಾಮನ್ನು ಹಿಡಿದು ನಡೆದು ಬರುತ್ತಿರುವ, ನೃಪತನುಜರಿಂದಾ= ರಾಜನ ಮಕ್ಕಳಿಂದ. ಹಯಂ= ಕುದುರೆಯು ನೀರ್ಗೆ= ನೀರಿಗೆ, ಪೊರಮಟ್ಟು= ಹೊರಬಂದು ಸಂಭ್ರಮದೊಳೈತರುತಿರ್ದುದು-:ಸಂಭ್ರಮದೊಳು ಐತರುತಿರ್ದುದು= ಸಂಭ್ರಮದಿಂದ ಬರುತ್ತಿತ್ತು.
(ಪದ್ಯ - ೬), |
ಪದ್ಯ - ೭
ಸಂಪಾದಿಸಿವಿಧುಬಿಂಬದುದಯಮಂ ಕಂಡೊತ್ತರಿಸಿ ಪಯೋ |
ನಿಧಿ ಮೇರೆವರಿದುಕ್ಕುವಂತೆ ನಿರ್ಮಳವಾದ |
ಸುಧೆಯೇಳ್ಗೆಯಂ ಕಂಡ ಪುಳಕುಂ ನೆಗಳ್ದು ಜಂಭಾರಿ ಸಂಭ್ರಮಿಸುವಂತೆ |
ಅಧಿಕಬಲ ಯೌವನಾಶ್ವಾವನಿಪನೈಶ್ವರ್ಯ |
ಪಧುವಿನ ಕಟಾಕ್ಷದಂತೊಪ್ಪುವ ತುರಂಗಮಂ |
ಕುಧರೋಪಮಾನ ಪವಮಾನಜಂ ಕಂಡು ನೆರೆ ಸುಮ್ಮಾನಮಂ ತಾಳ್ದನು ||7||
ವಿಧುಬಿಂಬದುದಯಮಂ= ವಿಧುಬಿಂಬದ= ಪೂರ್ಣಚಂದ್ರನ ಉದಯಮಂ= ಉದಯವನ್ನು, ಕಂಡೊತ್ತರಿಸಿ=ಕಂಡು, ಒತ್ತರಿಸಿ=ಉಬ್ಬಿ, ಪಯೋನಿಧಿ= ಸಮುದ್ರವು ಮೇರೆವರಿದುಕ್ಕುವಂತೆ-: ಮೇರೆವರಿದು= ಗಡಿಮೀರಿ, ಉಕ್ಕುವಂತೆ= ಉಬ್ಬರಹೊಂದುವಂತೆ, ನಿರ್ಮಳವಾದ= ಶುದ್ಧವಾದ, ಸುಧೆಯೇಳ್ಗೆಯಂ ಕಂಡ=ಅಮೃತದ ಉದ್ಭವವನ್ನು ಕಂಡ, ಪುಳಕುಂ ನೆಗಳ್ದು ಜಂಭಾರಿ ಸಂಭ್ರಮಿಸುವಂತೆ= ಪುಳಕಗೊಂಡು ಇಂದ್ರನು ಸಂತಸಗೊಂಡಂತೆ, ಅಧಿಕಬಲ= ದೊಡ್ಡ ಸೈನ್ಯವನ್ನು ಹೊಂದಿದ, ಯೌವನಾಶ್ವಾವನಿಪನೈಶ್ವರ್ಯ ಪಧುವಿನ-: ಯೌವನಾಶ್ವ ಅವನಿಪನ=ರಾಜನ, ಐಶ್ವರ್ಯಕಟಾಕ್ಷದಂತೆ= ಸಂಪತ್ತೆಂಬ ವಧುವಿನ ಕಟಾಕ್ಷ= ಕಣ್ಣಿನಂತೆ, ಒಪ್ಪುವ= ಇರುವ, ತುರಂಗಮಂ= ಕುದುರೆಯನ್ನು, ಕುಧರೋಪಮಾನ= ಕುಧರ= ಬೆಟ್ಟಕ್ಕೆ,ಉಪಮಾನ=ಸಮನಾದ, ಪವಮಾನಜಂ= ಭೀಮನು, ಕಂಡು ನೆರೆ= ತುಂಬಾ ಸುಮ್ಮಾನಮಂ ತಾಳ್ದನು=ಸಂತೋಷ ಪಟ್ಟನು.
(ಪದ್ಯ - ೭), |
ಪದ್ಯ - ೮
ಸಂಪಾದಿಸಿಚತುರಪದಗತಿಯ ಸರಸಧ್ವನಿಯ ವರ್ಣಶೋ |
ಭಿತದಲಂಕಾರದ ಸುಲಕ್ಷಣದ ಲಾಲಿತ |
ಶ್ರುತಿರಂಜನದ ವಿಶೇಷಾರ್ಥಸಂಚಿತದ ವಿಸ್ತಾರದಿಂ ಪೊಸತೆನಿಸುವ ||
ನುತ ಸತ್ಕವಿಪ್ರೌಢತರ ಸುಪ್ರಬಂಧದಂ |
ತತಿ ಮನೋಹರಮೆನಿಪ ವಾಜಿಯಂ ಕಂಡು ಹ |
ರ್ಷಿತನಾಗಿ ನೋಡುತಿರ್ದಂ ಕಲಾವಿದನಪ್ಪ ಮಾರುತಿ ಮಹೋತ್ಸವದೊಳು ||8||
ಚತುರಪದಗತಿಯ= ಚುರುಕಿನ ಜಾಣತನದ ನಡೆಯುಳ್ಳದ್ದು, ಸರಸಧ್ವನಿಯ= ಇಂಪಾದ ಧ್ವನಿಯುಳ್ಳದ್ದು, ವರ್ಣಶೋಭಿತದಲಂಕಾರದ= ಶೋಬಿಸುವ ಬಣ್ನದಿಂದ ಕೂಡಿದ್ದು, ಸುಲಕ್ಷಣದ= ಒಳ್ಳೆಯ ಲಕ್ಷಣದ್ದು, ಲಾಲಿತಶ್ರುತಿರಂಜನದ= ಕೇಳಲು ಇಂಪಾದ ಕಂಠಶೃತಿಯುಳ್ಳದ್ದು, ವಿಶೇಷಾರ್ಥಸಂಚಿತದ= ಹೆಚ್ಚಿನ ಅರ್ಥಸಂಚಯವುಳ್ಳದ್ದು - ಧರ್ಮ,ಅರ್ಥ,ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಕೊಡುವಂಥದ್ದು, ವಿಸ್ತಾರದಿಂ ಪೊಸತೆನಿಸುವ= ಲಕ್ಷಣ ವಿವರಣೆಯಲ್ಲಿ ಹೊಸತು, ನುತ ಸತ್ಕವಿಪ್ರೌಢತರ ಸುಪ್ರಬಂಧದಂತತಿ-:ನುತ=ಹೊಗಳಬಹುದಾದ,ಸತ್ಕವಿ ಪ್ರೌಢತರ= ಸುಕವಿಯ ಕಾವ್ಯದಂತೆ, ಮನೋಹರಮೆನಿಪ= ಮನೋಹರ ಎನಿಪ= ಎನ್ನಬಹುದಾದ, ವಾಜಿಯಂ= ಕುದುರೆಯನ್ನು, ಕಂಡು ಹರ್ಷಿತನಾಗಿ,ಸಂತಸಹೊಂದಿ, ನೋಡುತಿರ್ದಂ ಕಲಾವಿದನಪ್ಪ ಮಾರುತಿ ಮಹೋತ್ಸವದೊಳು-: ಕಲಾವಿದನಂತೆ ಭೀಮನು ಅತಿಸಂತಸದಿಂದ (ಕುದುರೆಯನ್ನು) ನೋಡುತ್ತಿದ್ದನು.
(ಪದ್ಯ - ೮), |
ಪದ್ಯ - ೯
ಸಂಪಾದಿಸಿಮೂಜಗದೊಳೀ ತುರಂಗಮವೆ ಪೊಸತೆಂದು ವರ |
ವಾಜಿಯಂ ನಿಟ್ಟಿಸುವ ಭೀಮಸೇನನ ಪದಸ |
ರೋಜಯುಗಳಕ್ಕೆರಗಿ ಮೇಘನಾದಂ ನೀವು ನೋಳ್ಪುದೆನ್ನಧಟನೀಗ ||
ವಾಜಿಯಂ ತಹೆನೆನುತ್ತಲ್ಲಿಂ ತಳರ್ದು ಮಾ |
ಯಜಾಲಮಂ ಬೀಸಿದಂ ನಭೋಮಂಡಲ |
ಕ್ಕಾಜನಪನಶ್ವರಕ್ಷೆಯಬಲಂ ಕಂಗೆಡಲ್ ಭೂಪ ಕೇಳದ್ಭುತವನು ||9||
ಮೂಜಗದೊಳೀ ತುರಂಗಮವೆ ಪೊಸತೆಂದು ವರ ವಾಜಿಯಂ ನಿಟ್ಟಿಸುವ ಭೀಮಸೇನನ= ಮೂರು ಲೋಕದಲ್ಲಿ ಈ ಕುದುರೆ ಹೊಸತು ಎಂದು ದೃಷ್ಟಿಯಿಟ್ಟು ನೋಡುತ್ತಿರುವ ಭೀಮಸೇನನ, ಪದಸರೋಜಯುಗಳಕ್ಕೆರಗಿ-: ಪದಸರೋಜಯಗಳ= (ಯುಗಳ)ಎರಡು,ಪದಸರೋಜ= ಪಾದಪದ್ಮಗಳಿಗೆ, ಎರಗಿ= ನಮಿಸಿ. ಮೇಘನಾದಂ ನೀವು ನೋಳ್ಪುದೆನ್ನಧಟನೀಗ= ನೀವು ನೋಳ್ಪುದು= ಮೇಘನಾದನು, ನೋಡುವುದು, ಎನ್ನ= ನನ್ನ, ಅಧಟನು= ಶೌರ್ಯವನ್ನು,(ಎಂದು ಹೇಳಿ) ಈಗ, ವಾಜಿಯಂ ತಹೆನೆನುತ್ತಲ್ಲಿಂ ತಳರ್ದು-:ಈಗ ವಾಜಿಯಂ= ಕುದುರೆಯನ್ನು , ತಹೆನು= ತರುವೆನು, ಎನುತ್ತ= ಎಂದು ಹೇಳುತ್ತ, ಅಲ್ಲಿಂ= ಅಲ್ಲಿಂದ, ತಳರ್ದು= ಹೊರಟು, ಮಾಯಜಾಲಮಂ ಬೀಸಿದಂ= ಮಾಯಾಜಾಲವನ್ನು ಹರಡಿದನು; ಹೇಗೆಂದರೆ, ನಭೋಮಂಡಲಕ್ಕೆ= ಆಕಾಶಮಂಡಲಕ್ಕೆ, ಆಜನಪನಶ್ವರಕ್ಷೆಯಬಲಂ= ಆ ಜನಪನ = ರಾಜನ ಅಶ್ವಬಲಂ= ಕುದುರೆ ಸೈನ್ಯವು, ಕಂಗೆಡಲ್= ದಿಕ್ಕುತೋರದಂತೆ; ಭೂಪ = ಜನಮೇಜಯರಾಜನೇ ಕೇಳದ್ಭುತವನು-;ಕೇಳು ಅಧ್ಭುತವನು=ಆಶ್ಚರ್ಯವನ್ನು.
(ಪದ್ಯ - ೯), |
ಪದ್ಯ - ೧೦
ಸಂಪಾದಿಸಿತುರುಗಿತೆತ್ತೆತ್ತಲುಂ ಪ್ರಳಯಕಾಲದ ಮೇಘ |
ಮೆರಗುತಿವೆ ಬರಿಯ ಬರಸಿಡಲ್ಪಳೆತ್ತೆತ್ತಲುಂ |
ಕರೆಯುತಿದೆ ಬಿರುಗಾಳಿ ದೂಳನೆತ್ತೆತ್ತಲುಂ ಕತ್ತಲೆಗಳಿಟ್ಟಣಿಸಿವೆ ||
ತೆರೆಯಬಾರದು ಕಣ್ಣ ಮರೆದು ಕಣ್ದೆರೆಯೆ ದಿ |
ಕ್ಕರಿಯಬಾರದು ಮಹಾದ್ಭುತಮಿದೆತ್ತಣದೊ ಜಗ |
ದೆರೆಯನೇ ಬಲ್ಲನೆನುತಿರ್ದುದಾ ಸೈನಿಕಂ ಹೈಡಿಂಬಿಕೃತ ಮಾಯೆಗೆ ||10||
ತುರುಗಿತೆತ್ತೆತ್ತಲುಂ ಪ್ರಳಯಕಾಲದ ಮೇಘ ಮೆರಗುತಿವೆ-:ಎತ್ತೆತ್ತೆಲು= ಎಲ್ಲಾಕಡೆ, ಪ್ರಳಯಕಾಲದ ಮೋಡಗಳು ತುರುಗಿತು=ವ್ಯಾಪಿಸಿತು. ಬರಿಯ ಬರಸಿಡಲ್ಗಳೆತ್ತೆತ್ತಲುಂ-: ಬರಿಯ ಬರಸಿಡಿಲ್ ಗಳು, ಎತ್ತೆತ್ತಲುಂ= ಎಲ್ಲಾಕಡೆ, ಕರೆಯುತಿದೆ ಬಿರುಗಾಳಿ ದೂಳನೆತ್ತೆತ್ತಲುಂ= ಬಿರುಗಾಳಿ ಬೀಸಿ ಧೂಳನು ಎತ್ತೆತ್ತೆಲುಂ ಎಲ್ಲಾಕಡೆ ಕರೆಯುತಿದೆ=ಬೀರುತ್ತಿದೆ, ಕತ್ತಲೆಗಳಿಟ್ಟಣಿಸಿವೆ= ಕತ್ತಲೆಗಳು ಕತ್ತಲೆ, ಇಟ್ಟಣಿಸಿದೆ= ದಟ್ಟವಾಗಿದೆ, ತೆರೆಯಬಾರದು ಕಣ್ಣ ಮರೆದು ಕಣ್ದೆರೆಯೆ ದಿಕ್ಕರಿಯಬಾರದು, ಕಣ್ಣುಬಿಡುವಂತಿಲ್ಲ, ಬಿಟ್ಟರೆ ದಿಕ್ಕು ಅರಿಯಬಾರದು=ತಿಳಿಯಲಾರದು, ಮಹಾದ್ಭುತಮಿದೆತ್ತಣದ-: ಮಹಾದ್ಭುತಂ ಇದು ಎನೆ=ಎನ್ನಲಾಗಿ, ಜಗದೆರೆಯನೇ= ಜಗದ ಎರೆಯನೇ= ಜಗತ್ತಿನ ತಂದೆಯೇ, ಬಲ್ಲನೆನುತಿರ್ದುದಾ= ಬಲ್ಲನು ಎನುತಿರ್ದುದು ಆ ಸೈನಿಕಂ ಹೈಡಿಂಬಿಕೃತ= ಹೈಡಿಂಬಿ ಕೃತ ಮಾಯೆಗೆ= ಎನ್ನುತ್ತಿತ್ತು ಆ ಸೈನಿಕ ಸಮೂಹ ಮೇಘನಾದ ಮಾಡಿದ ಮಾಯೆಗೆ.
(ಪದ್ಯ - ೧೧), |
ಪದ್ಯ - ೧೧
ಸಂಪಾದಿಸಿಗಗನದೊಳ್ ಸುಳಿಯುತನಿಮಿಷನೊರ್ವನಿವನ ಮಾ |
ಯೆಗೆ ಭಯಂಗೊಂಡು ಕಡುವೇಗದಿಂ ಪೋಗಿ ವ |
ಜ್ರಿಗೆ ದೂರಲಾತಂ ಚರರ ಕಳುಪಿ ಕೇಳಿದೊಡೀತ ನಾಂ ಭೀಮಸುತನ ||
ಮಗನಧ್ವರಕೆ ಹಯವನೊಯ್ದಪೆನೆನಲ್ಕವಂ |
ಮಗುಳದಂ ಪೋಗಿ ಸುರಪತಿಗೆ ಬಿನ್ನೈಸೆ ನಸು |
ನಗುತವಂ ದೇವರ್ಕಳೊಡಗೂಡಿ ಬಂದನಲ್ಲಿಗೆ ಸಮರಮಂ ನೋಡಲು ||11||
ಗಗನದೊಳ್=ಆಕಾಶದಲ್ಲಿ ಸುಳಿಯುತ= ಸಂಚರಿಸುವ, ಅನಿಮಿಷನು ಓರ್ವನು ಇವನ ಮಾಯೆಗೆ ಭಯಂಗೊಂಡು= ದೇವತೆಗಳಲ್ಲಿಒಬ್ಬನು ಇವನ ಮಾಯೆಗೆ ಭಯಪಟ್ಟು, ಕಡುವೇಗದಿಂ= ಬುಹು ವೇಗದಿಂದ, ಪೋಗಿ ವಜ್ರಿಗೆ= ಹೋಗಿ ಇಂದ್ರನಿಗೆ, ದೂರಲು ಆತಂ ಚರರ ಕಳುಪಿ= ದೂರಲು ಆತನು ಸೇವಕರನ್ನು ಕಳುಹಿಸಿ, ಕೇಳಿದೊಡೀತ= ಅವನು ವಿಚಾರಿಸಿದಾಗ, ನಾಂ ಭೀಮಸುತ= ನಾನು ಭೀಮಸೇನನ ಮಗ, ನಮಗನಧ್ವರಕೆ= ನಮಗೆ ಅಧ್ವರಕೆ= ಯಜ್ಞಕ್ಕೆ, ಹಯವನೊಯ್ದಪೆನೆನಲ್ಕವಂ-:ಹಯವನು ಒಯ್ದಪೆನು= ಕುದುರೆಯನ್ನು ಒಯ್ಯುವೆನು, ಮಗುಳದಂ ಪೋಗಿ ಸುರಪತಿಗೆ ಬಿನ್ನೈಸೆ= ಹಿಂತಿರುಗಿ ಹೋಗಿ ಇಂದ್ರನಿಗೆ ಹೇಳು ಎನಲು, ನಸುನಗುತವಂ= ನಸುನಗುತ ಅವಂ=ಅವನು, ದೇವರ್ಕಳೊಡಗೂಡಿ-: ದೇವರ್ಕಳ ಒಡಗೂಡಿ= ದೇವತೆಗಳನ್ನು ಕೂಡಿಕೊಂಡು, ಬಂದನಲ್ಲಿಗೆ-:ಬಂದನು ಅಲ್ಲಿಗೆ ಸಮರಮಂ ನೋಡಲು= ಯುದ್ಧವನ್ನು ನೋಡಲು ಅಲ್ಲಿಗೆ ಬಂದನು.
(ಪದ್ಯ - ೧೧), |
ಪದ್ಯ - ೧೨
ಸಂಪಾದಿಸಿಇತ್ತಲೀಕುದುರೆಗಾಪಿನ ಭಟರ ಕಣ್ಗೆ ಬ |
ಲ್ಗತ್ತಲೆಗಳಂ ಧೂಳ್ಗಳಂ ಕವಿಸಿ ಭೀತಿಯಂ |
ಬಿತ್ತಿ ನೆಲಕಿಳಿದು ಪಡಿವಾಘೆಯಂ ಪಿಡಿದರಸುಮಕ್ಕಳಂ ಬೀಳೆಹೊಯ್ದು |
ತತ್ತುರಗಮಂ ಕೊಂಡು ಚಿಗಿದನಾಗಸಕೆಸರ |
ದತ್ತಣಿಂದಂಚೆ ಬೆಳುದಾವರೆಯನಳ್ತಿಯಿಂ |
ಕಿತ್ತು ನಭಕೇಳ್ವಂತೆ ಮೇಗನಾದಂ ಭೀಮಕರ್ಣಜರ್ ಬೆರೆಗಾಗಲು ||12||
ಇತ್ತಲೀಕುದುರೆಗಾಪಿನ= ಇತ್ತಲು ಈಕಡೆ ಕುದುರೆಗಾಪಿನ= ಕಾವಲಿನವರ, ಭಟರ ಕಣ್ಗೆ ಬಲ್ಗತ್ತಲೆಗಳಂ=ಯೋಧರ ಕಣ್ಣಿಗೆ ಬಲು= ಬಹಳ ಕತ್ತಲೆಗಳಂ= ಕತ್ತಲೆಯನ್ನು, ಧೂಳ್ಗಳಂ= ಧೂಳನ್ನು, ಕವಿಸಿ ಭೀತಿಯಂ=ಹೆದರಿಕೆಯನ್ನು, ಬಿತ್ತಿ=ಉಂಟುಮಾಡಿ, ನೆಲಕಿಳಿದು= ಆಕಾಶದಲ್ಲಿದ್ದ ಮೇಘನಾದನು ನೆಲಕ್ಕೆ ಇಳಿದು, ಪಡಿವಾಘೆಯಂ=(ಕುದುರೆಯನ್ನು) ರಿಕಾಬು (ಕಾಲಿಗಸಿಕ್ಕಿಸಿಕೊಳ್ಳುವ ಕುಣಿಕೆ) ಲಗಾಮುಗಳನ್ನು, ಪಿಡಿದರಸುಮಕ್ಕಳಂ ಬೀಳೆಹೊಯ್ದು= ಅರಸು ಮಕ್ಕಳನ್ನು ಕೆಳಗೆ ಬೀಳುವಂತೆ ಹೊಡೆದು, ತತ್ತುರಗಮಂ-:ತತ್ ಆ ತುರಗಮಂ= ಕುದುರೆಯನ್ನು, ಕೊಂಡು= ತೆಗೆದುಕೊಂಡು, ಚಿಗಿದನಾಗಸಕೆ ಸರದತ್ತಣಿಂದಂಚೆ -:ಚಿಗಿದನು ಆಗಸಕೆ=ಆಕಾಶಕ್ಕೆ ಹಾರಿದನು, ಹೇಗೆಂದರೆ, ಸರದಿಂದ= ಸರೋವರದಿಂದ ಅಂಚೆ= ಹಂಸವು, ಬೆಳುದಾವರೆಯನಳ್ತಿಯಿಂ-:ಬೆಳು ತಾವರಯ= ಬಿಳಿತಾವರೆಯನ್ನು, ಕಿತ್ತು ನಭಕೇಳ್ವಂತೆ-:ನಭಕೆ ಏಳ್ವಂತೆ=ಆಕಾಶಕ್ಕೆ ಹಾರುವಂತೆ ಮೇಗನಾದಂ= ಮೇಘನಾದನು, ಭೀಮಕರ್ಣಜರ್ ಬೆರೆಗಾಗಲು= ಭೀಮ ಮತ್ತು ಕರ್ಣಜನಾದ ವೃಷಕೇತುಗಳು ಬೆರಗಾಗಲು.
(ಪದ್ಯ - ೧೨), |
ಪದ್ಯ - ೧೩
ಸಂಪಾದಿಸಿರಾಹು ತುಡುಕಿದ ಚಂದ್ರಮಂಡಲವೊ ಗರುಡನು |
ತ್ಸಾಹದಿಂದೆತ್ತಿ ಕೊಂಡೊಯ್ವಮೃತಕಲಶವೊ ಬ |
ಲಾಹಕಂ ತಾಳ್ದ ಬಿಳ್ಮಿಂಚಿನೊಬ್ಬುಳಿಯೊ ಪೊಸತೆನೆ ಘಟೋತ್ಕಚತನಯನು ||
ಬಾಹುಬಲದಿಂದೆಡದ ಕಕ್ಷದೊಳಿರುಂಕಿದ ಮ |
ಹಾಹಯಂ ಗಗನಮಾರ್ಗ ದೊಳ್ಬೆದುತಿರೆ ಕುದುರೆ |
ಗಾಹಿನ ಚತುರ್ಬಲಂ ಕಂಡು ಬೊಬ್ಬರಿದಾರ್ದು ಕಾಳಗಕೆ ಮಂಕೊಂಡುದು ||13||
ರಾಹು ತುಡುಕಿದ=ಹಿಡಿದ ಚಂದ್ರಮಂಡಲವೊ ಗರುಡನುತ್ಸಾಹದಿಂದೆತ್ತಿ-:ಗುರುಡನು ಉತ್ಸಾಹದಿಂದ ಎತ್ತಿ, ಕೊಂಡೊಯ್ವಮೃತಕಲಶವೊ-:ಕೊಂಡೊಯ್ವ=ತೆಗೆದುಕೊಂಡು ಹೋಗುವ ಅಮೃತ ಕಲಶವೋ, ಬಲಾಹಕಂ=ಮೋಡವು ತಾಳ್ದ= ಹೊಂದಿರುವ ಬಿಳ್ಮಿಂಚಿನೊಬ್ಬುಳಿಯೊ-:ಬಿಳ್ ಮಿಂಚಿನ ಒಬ್ಬುಳಿಯೊ= ಬಿಳಿಯ ಮಿಂಚಿನ ಗೊಂಚಲೊ! ಪೊಸತೆನೆ-:ಹೊಸತು ಎನೆ= ಎನ್ನುವಂತೆ, ಘಟೋತ್ಕಚತನಯನುಘಟೋದ್ಘಜ ತನಯನು= ಮೇಘನಾದನು, ಬಾಹುಬಲದಿಂದೆಡದ-:ಬಾಹುಬಲದಿಂದೆ ಎಡದ, ಕಕ್ಷದೊಳಿರುಂಕಿದಕಕ್ಷದೊಳ್ ಇರುಂಕಿಸಿದ= ಬಾಹುಬಲದಿಂಸ ಎಡದ ಕಕ್ಷದೊಳ್= ಎಡದ ಕಂಕುಳಲ್ಲಿ ಅವಚಿಕೊಂಡ, ಮಹಾಹಯಂ= ಮಹಾ ಕುದುರೆಯು, ಗಗನಮಾರ್ಗದೊಳೈದುತಿರೆ=ಗಗನಮಾರ್ಗದಲ್ಲಿ ಐದುತಿರೆ= ಬರುತ್ತಿರಲು, ಕುದುರೆಗಾಹಿನ= ಕದರೆಕಾವಲಿನ ಚತುರ್ಬಲಂ=ಚತರ್ಬಲಸೈನ್ಯವೂ, ಕಂಡು ಬೊಬ್ಬರಿದಾರ್ದು-: ಬೊಬ್ಬಿರಿದು ಆರ್ದು=ಕೂಗಿ, ಕಾಳಗಕೆ ಮಂಕೊಂಡುದು= ಯುದ್ಧಕ್ಕೆ ಸಿದ್ಧವಾಯಿತು.
(ಪದ್ಯ - ೧೩), |
ಪದ್ಯ - ೧೪
ಸಂಪಾದಿಸಿಜೋಡಾಗಿ ಪೂಡುವೊಡೆ ಸಾಲದೇಳೇ ಹಯಂ |
ಜೋಡಿಸುವೆನೀ ತುರಗಮಂ ತನ್ನ ತೇರ್ಗೆಂದು |
ಗಾಢದಿಂ ಬಾಂಗೆತ್ತಿ ಕೊಂಡೊಯ್ಯದಿರನಬ್ಜಸಖನೆಂಬ ಶಂಖೆಯಿಂದೆ ||
ರೂಢಿಸಿದ ಮಂದೇಹಸೇನೆ ಬಂದೆಣ್ದೆಸೆಗ |
ಮಾಡಿದುದೊ ಮುತ್ತಿಗೆಯನೆನೆ ಮೇಘನಾದನ ವಿ |
ಭಾಡಿಸಿ ಚತುರ್ಬಲಂ ಕವಿಯೆ ಲೆಕ್ಕಿಸದವಂ ಸೈವರಿದನಾಗಸದೊಳು ||14||
ಜೋಡಾಗಿ=ಜೋಡಿ ಜೋಡಿಯಾಗಿ , ಪೂಡುವೊಡೆ=(ಹೂಡುವೊಡೆ)ಕಟ್ಟಲು, ಸಾಲದೇಳೇ ಹಯಂ= ಏಳೇ ಕುದುರೆ ಇದೆ,ಎಂಟು ಬೇಕು ಸೂರ್ಯನ ರಥಕ್ಕೆ
ಜೋಡಿಸುವೆನೀ-: ಜೋಡಿಸುವೆನು ಈ ತುರಗಮಂ ತನ್ನ ತೇರ್ಗೆಂದು= ಈ ಕುದುರೆಯನ್ನು ತನ್ನ ರಥಕ್ಕೆ ಸೇರಿಸುವೆನು ಎಂದು, ಗಾಢದಿಂ= ವೇಗದಿಂದ ಬಾಂಗೆತ್ತಿ-:ಬಾನಿಗೆ ಎತ್ತಿ= ಆಕಾಶಕ್ಕೆ ಎತ್ತಿ, ಕೊಂಡೊಯ್ಯದಿರನಬ್ಜಸಖನೆಂಬ ಶಂಖೆಯಿಂದೆ-:ಕೊಂಡು ಒಯ್ಯದಿರನು ಅಬ್ಜ ಸಖನು ಎಂಬ ಶಂಕೆಯಿಂದ= ಅಬ್ಜಸಖ = ಸೂರ್ಯನು (ಈ ಕುದುರೆಯನ್ನು) ತೆಗೆದುಕೊಂಡು ಹೋಗದೆ ಇರಲಾರನು ಎಂಬ ಅನುಮಾನದಿಂದ, ರೂಢಿಸಿದ= ಯುದ್ಧಕ್ಕೆ ಸಿದ್ಧವಾದ, ಮಂದೇಹಸೇನೆ=ಒಗ್ಗೂಡಿದ ಸೈನ್ಯ, ಬಂದೆಣ್ದೆಸೆಗ-:ಬಂದು ಎಣ್(ಎಂಟು) ದೆಸೆಗೆ= ಎಂಟೂ ದಿಕ್ಕಿಗೆ ನುಗ್ಗಿ, ಮಾಡಿದುದೊ ಮುತ್ತಿಗೆಯನೆನೆ= ಮತ್ತಿಗೆಯನ್ನು ಮಾಡಿತೋ ಎನೆ= ಎನ್ನುವಮತೆ, ಮೇಘನಾದನ ವಿಭಾಡಿಸಿ=ಧಿಕ್ಕರಿಸಿ ಚತುರ್ಬಲಂ= ಚತುರ್ಬಲವು, ಕವಿಯೆ= ಮುತ್ತಲು, ಲೆಕ್ಕಿಸದವಂ-:ಲೆಕ್ಕಿಸದೆ ಅವಂ=ಅವನು ಅದನ್ನು ಲಕ್ಷಿಸದೆ, ಸೈವರಿದನಾಗಸದೊಳು-:ಸೈವರಿದನು ಆಗಸದೊಳು= ಆಕಾಶದಲ್ಲಿ ಮುಂದುವರಿದನು.
(ಪದ್ಯ - ೧೪), |
ಪದ್ಯ - ೧೫
ಸಂಪಾದಿಸಿಬಳಿಕಾಬಲಂ ಕಂಡುದಭ್ರಮಾರ್ಗದೊಳೆ ಮುಂ |
ದಳೆಯುತಿಹ ಮೇಘನಾದನನೆಲವೊ ಬರಿಮಾಯೆ |
ಗಳನೆಸಗಿ ಮೋಸದೊಳ್ ತುರಗಮಂ ಕೊಂಡು ಬಾಂದಳಕಡರ್ದೊಡೆ ನಿನ್ನನು||
ಉಳುಹುವರೆ ಯೌವನಾಶ್ವನ ಸುಭಟರಕಟ ನಿ |
ನ್ನಳವನರಿಯದೆ ಬಂದು ಕೆಣಕಿದೆಯಲಾ ಜೀವ |
ದುಳಿವನಾರೈದುಕೊಳ್ಳೆನುತಾತನಂ ಮುತ್ತಿಕೊಂಡು ಕವಿದಿ(ದೆ)ಸುತಿರ್ದುದು ||15||
ಬಳಿಕಾಬಲಂ-: ಬಳಿಕ ಆ ಬಲಂ= ಸೈನ್ಯವು, ಕಂಡುದಭ್ರಮಾರ್ಗದೊಳೆ-:ಕಂಡುದು=ನೋಡಿತು,ಅಭ್ರ ಮಾರ್ಗದೊಳ್= ಆಕಾಶಮಾರ್ಗದಲ್ಲಿ, ಮುಂದಳೆಯುತಿಹ= ಮಂದುವರಿಯುತ್ತಿರುವ, ಮೇಘನಾದನನೆಲವೊ-: ಮೇಘನಾದನನು=ಮೇಘನಾದನನ್ನು ಎಲವೋ ಬರಿಮಾಯೆಗಳನೆಸಗಿ-: ಬರಿ ಮಾಯೆಗಳನು=ಮಾಯಾವಿದ್ಯೆಯನ್ನು ಎಸಗಿ=ಮಾಡಿ ಮೋಸದೊಳ್=ಮೋಸದಿಂದ, ತುರಗಮಂ=ಕುದುರೆಯನ್ನು, ಕೊಂಡು= ತೆಗೆದುಕೊಂಡು, ಬಾಂದಳಕಡರ್ದೊಡೆ-:ಬಾಂದಳಕ್ಕೆ = ಆಕಾಶಕ್ಕೆ ಅಡರ್ದೊಡೆ= ಹೋದರೆ, ನಿನ್ನನು ಉಳುಹುವರೆ= ಉಳಿಸುವರೆ, ಯೌವನಾಶ್ವನ ಸುಭಟರಕಟ= ಸುಭಟರು ಅಕಟಕಟ! ನಿನ್ನಳವನರಿಯದೆ_; ನಿನ್ನ ಅಳವನು=ಶಕ್ತಿಯನ್ನು ಅರಿಯದೆ, ಬಂದು ಕೆಣಕಿದೆಯಲಾ=ಕೆಣಕದೆಯಲ್ಲಾ! ಜೀವದುಳಿವನಾರೈದುಕೊಳ್ಳೆನುತಾತನಂ-:ಜೀವದುಳಿವನು= ಜೀವವನ್ನು ಉಳಿಸಿಕೊಳ್ಳುವುದನ್ನು ಆರೈದುಕೊಳ್ಳು=ಪ್ರಯತ್ನಮಾಡು, ಎನುತ= ಎನ್ನುತ್ತಾ (ಆ ಸೈನ್ಯವು) ಕವಿದಿ(ದೆ)ಸುತಿರ್ದುದು-:ಕವಿದು= ಮುತ್ತಿಕೊಂಡು,ಎಸೆತಿರ್ದುದು= ಆಯುಧಗಳನ್ನು ಪ್ರಯೋಗಿಸುತ್ತಿದ್ದರು.
(ಪದ್ಯ - ೧೫), |
ಪದ್ಯ - ೧೬
ಸಂಪಾದಿಸಿಪಿಂತಿರುಗಿ ನೋಡಿದಂ ಕಂಡೆನಲ್ಲವೆ ಜೀವ |
ಮಂ ತೆಗೆದುಕೊಂಡೊಯ್ವ ಕಾಲನಂ ಪೆಣನಟ್ಟು |
ವಂತಾಯ್ತಲಾ ನಿಮ್ಮ ಸಾಹಸಂ ಜಾಗುಜಾಗೆನುತೆ ಹೈಡಿಂಬಿ ನಗುತೆ ||
ಸಂತತಂ ಕರೆವ ಕಲ್ಮಳೆಗಳಂ ಸೃಜಿಸಿ ಬಲ |
ಮಂ ತವೆ ಪೊರಳ್ಚಿ ಮುಂದಳೆಯಲಾಪುಯ್ಯಲೂ |
ರಂ ತಾಗೆ ಪೊರಮಟ್ಟುದಾ ನೃಪನ ಸೈನ್ಯಮಕ್ಷೌಹಿಣಿಯ ಗಣನೆಯಿಂದೆ ||16||
ಪಿಂತಿರುಗಿ= ಹೀತಿರುಗಿ ನೋಡಿದಂ= ನೋಡಿದನು, ಕಂಡೆನಲ್ಲವೆ-:ಕಂಡೆನು ಅಲ್ಲವೆ,=ಇದು ಹೀಗಲ್ಲವೇ? ಜೀವಮಂ= ಜೀವವನ್ನು, ತೆಗೆದುಕೊಂಡೊಯ್ವ ಕಾಲನಂ=ತೆಗೆದುಕೋಡು ಹೋಗುತ್ತಿರುವ ಯಮನನ್ನು, ಪೆಣನಟ್ಟುವಂತಾಯ್ತಲಾ-:ಪೆಣನು ಅಟ್ಟುವಂತೆ ಆಯ್ತಲಾ= ಹೆಣವು ಅಟ್ಟಿಸಿಕೊಂಡು ಹೋಗುವಂತೆ ಆಯಿತಲ್ಲಾ; ನಿಮ್ಮ ಸಾಹಸಂ ಜಾಗುಜಾಗೆನುತೆ=ನಿಮ್ಮ ಸಾಹಸವು ಭೇಷ್-ಭೇಷ್ ಎನುತ= ಎನ್ನುತ್ತಾ, ಹೈಡಿಂಬಿ ನಗುತೆ= ಮೇಘನಾದನು ನಗುತ್ತಾ, ಸಂತತಂ= ಒಂದೇಸಮನೆ ಕರೆವ= ಸುರಿಯುವ, ಕಲ್ಮಳೆಗಳಂ ಸೃಜಿಸಿ= ಕಲ್ಲಿನ ಮಳೆಯನ್ನು ಸೃಷ್ಟಿಸಿ, ಬಲಮಂ ತವೆ ಪೊರಳ್ಚಿ=ಸೈನ್ಯವನ್ನು ಮತ್ತೆ ಹೊರಳಿಸಿ ಹಿಂತಿರುಗುವಂತೆಮಾಡಿ ಮುಂದಳೆಯಲಾಪುಯ್ಯಲೂರಂ-:ಮುಂದಳೆಯಲ್= ಮುಂದುವರೆಯಲು, ಆ ಸುದ್ದಿ, ಊರಂ ತಾಗೆ= ಊರಿಗೆ ಮುಟ್ಟಲು, ಪೊರಮಟ್ಟುದಾ-:ಪೊರಮಟ್ಟುದು = ಹೊರಹೊರಟಿತು ಆ, ನೃಪನ= ರಾಜನ, ಸೈನ್ಯಮಕ್ಷೌಹಿಣಿಯ-:ಸೈನ್ಯಂ= ಸೈನ್ಯವು, ಅಕ್ಷೌಹಿಣಿಯ ಗಣನೆಯಿಂದೆ= ಸೈನ್ಯವು ಅಕ್ಷೋಹಿಣಿಯ ಲೆಕ್ಕದಲಿ ಪೊರಮಟ್ಟುದು= ಹೊರಟಿತು.
(ಪದ್ಯ - ೧೬), |
ಪದ್ಯ - ೧೭
ಸಂಪಾದಿಸಿತನ್ನೊಳಿರ್ದಮಲ ಹಯರತ್ನಮಂ ಕೊಂಡು ಕಳ |
ವಿನ್ನಭಸ್ಥಳಕೊಯ್ದನೆಂಬ ಕಡುಗೋಪದಿಂ |
ಬೆನ್ನಬಿಡದೆದ್ದುನಡೆದುದೊ ಗಗನಕೀಧರಣಿಯೆನೆ ಘಟೋತ್ಕಚತನುಜನು||
ಮುನ್ನ ಮಾಡಿದ ರಜದ ಮಾಯೆಗಿಮ್ಮಡಿಸಿ ಪಡಿ |
ಯನ್ನೆಗಳ್ಚಿದರೊ ವೈರಿಗಳೆನೆ ರಣೋತ್ಸಾಹ |
ದಿನ್ನಡೆವ ಚಾತುರಂಗದ ಪದಹತಕ್ಕೇಳ್ವ ಧೂಳ್ ಮಸಿಗಿತಂಬರದೊಳು ||17||
ತನ್ನೊಳಿರ್ದಮಲ ಹಯರತ್ನಮಂ ಕೊಂಡು-:ತನ್ನೊಳು ಇರ್ದ ಅಮಲ ಹಯರತ್ನಮಂ ಕೊಂಡು ಕಳವಿಂ ನ್ನಭಸ್ಥಳಕೆ ಒಯ್ದನು ಎಂಬ=ತನ್ನಲ್ಲಿದ್ದ ಶ್ರೇಷ್ಟವಾದರತ್ದಂತಹ ಕುದುರೆಯನ್ನು ಕಳವಿನಿಂದ ತೆಗೆದುಕೊಂಡು ಆಕಾಶಕ್ಕೆ ಒಯ್ದನು= ತೆಗೆದುಕೊಂಡು ಹೋದನು ಎಂಬ,(ವಿಚಾರ ತಿಳಿದು), ಕಡುಗೋಪದಿಂ = ಬಹಳ ಸಿಟ್ಟಿನಿಂದ, ಬೆನ್ನಬಿಡದೆದ್ದುನಡೆದುದೊಗಗನಕೀಧರಣಿಯೆನೆ-: ಬೆನ್ನಬಿಡದೆ ಎದ್ದು ನಡೆದುದೊ= ಹಿಂಬಾಲಿಸಿಕೊಂಡು ಹೋದರು, ಹೇಗೆಂದರೆ ಗಗನಕೀಧರಣಿಯೆನೆ= ಗಗನಕೆ ಈ ಧರಣಿ ಎನೆ= ಆಕಾಶಕ್ಕೆ ಈ ಭೂಮಿಯೇ ಹೋಯಿತೋ ಎನ್ನುವಂತೆ; ಘಟೋತ್ಕಚತನುಜನು-ಘಟೋತ್ಕಜನ ಅನುಜನು= ಘಟೋತ್ಕಚನ ತಮ್ಮ ಮೇಘನಾದನು, ಮುನ್ನ ಮಾಡಿದ ರಜದ ಮಾಯೆಗಿಮ್ಮಡಿಸಿ= ಮೊದಲು ಮಾಡಿದ ಮಾಯಾತಂತ್ರಕ್ಕೆ, ಇಮ್ಮಡಿಸಿ= ಎರಡರಷ್ಟು, ಪಡಿಯನ್ನೆಗಳ್ಚಿದರೊ ವೈರಿಗಳೆನೆ-: ಪಡಿಯನ್ನು ನೆಗಳ್ಚಿದರೋ ಎನೆ= ಪ್ರತಿ ತಂತ್ರವನ್ನು ಮಾಡಿದರೋ ಎನ್ನುವಮತೆ, ರಣೋತ್ಸಾಹದಿನ್ನಡೆವ-:ರಣೋತ್ಸಾಹದಿಂ ನೆಡೆದ= ಯುದ್ಧದಾವೇಶದಿಂದ ನೆಡೆದ, ಚಾತುರಂಗದ ಪದಹತಕ್ಕೇಳ್ವ ಧೂಳ್= ಚತುರಂಗ ಸೈನ್ಯದ ನೆಡಿಗೆಯಿಂದ ಎದ್ದ ಧೂಳು, ಮಸಿಗಿತಂಬರದೊಳು-:ಮಸುಗಿತು ಅಂಬರದೊಳು=ಆಕಾಶದಲ್ಲಿ ಮುಸುಗಿ ತುಂಬಿಕೊಂಡಿತು.
(ಪದ್ಯ - ೧೭), |
ಪದ್ಯ - ೧೮
ಸಂಪಾದಿಸಿಪಟಹ ನಿಸ್ಸಾಳ ತಮ್ಮಟ ಭೇರಿಗಳ ಸಮು |
ತ್ಕಟನಾದಮುಗ್ರಗಜಘಟೆಯ ಘಂಟಾರವಂ |
ಚಟುಲ ವಾಜಿಗಳ ಖುರಪುಟದ ರಭಸಂ ಹರಿವ ಸುಟಿಯ ರಥಚಕ್ರಧ್ವನಿ ||
ಲಟಕಟಪ ಸಮರಲಂಪಟರ ಭುಜಗಳ ಹೊಯ್ಲ |
ಧಟರ ಚಾಪಸ್ವನಂ ಪಟುಭಟರ ಬೊಬ್ಬೆಯಾ |
ರ್ಭಟೆಗಳೊಂದಾಗಿ ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ ||18||
ಯುದ್ಧದಲ್ಲಿ ಬಾರಿಸುವ ಪಟಹ, ನಿಸ್ಸಾಳ, ತಮ್ಮಟ, ಭೇರಿಗಳ, ಸಮುತ್ಕಟನಾದಮುಗ್ರಗಜಘಟೆಯ-:ಸಮುತ್ಕಟ= ಒಟ್ಟುಸೇರಿದ ದೊಡ್ಡ, ನಾದಂ= ಶಬ್ದ, ಅಗ್ರಗಜಘಟೆಯ=ಮುಂಭಾಗದಲ್ಲಿ ಆನಗೆ ಕಟ್ಟಿದ ಗಂಟೆಯ, ಘಂಟಾರವಂ= ಘಂಟೆಯ ನಾದ; ಚಟುಲ ವಾಜಿಗಳ ಖುರಪುಟದ ರಭಸಂ= ಓಡುವ ಕುದುರೆಗಳ ಗೊರಸಿನ ಖುರಪುಟದ ಶಬ್ದ; ಹರಿವ ಸುಟಿಯ ರಥಚಕ್ರಧ್ವನಿ= ವೇಗದ ರಥದ ಗಾಲಿಯ ಶಬ್ದ; ಲಟಕಟಪ ಸಮರಲಂಪಟರ ಭುಜಗಳ ಹೊಯ್ಲು= ಭುಜಕೀರ್ತಿಗಳನ್ನು ಕಟ್ಟದ ಯೋಧರ ಕೂಗು; ಅಧಟರ ಚಾಪಸ್ವನಂ=ಶೂರರ ಬಿಲ್ಲಿ ಠೇಂಕಾರ; ಪಟುಭಟರ ಬೊಬ್ಬೆಯಾರ್ಭಟೆಗಳು ಒಂದಾಗಿ= ಕಾಲಾಳುಗಳ ಬೊಬ್ಬೆ-ಕೂಗು;ಈ ಎಲ್ಲಾ ಸದ್ದು ಒಂದಾಗಿ, ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ= ಸಂಘಟಿಸಿತು ಈ ಬ್ರಹ್ಮಾಂಡ= ಈ ಬ್ರಹ್ಮಾಂಡವೇ ಒಂದಕ್ಕೊಂದು ಡಿಕ್ಕಿಯಾಯಿತೋ, ಈ ಬ್ರಹ್ಮಾಂಡದ ಘಟಂ(ಮಡಕೆ, ದೇಹ) ಇಂದು ಒಡೆಯದೆ ಇರದೇ?= ಶರೀರವು ಒಡೆಯದೇ ಇರುವುದೇ? ಎಂಬತಿತ್ತು.
(ಪದ್ಯ - ೧೮), |
ಪದ್ಯ - ೧೯
ಸಂಪಾದಿಸಿಎತ್ತಿಬಹ ಸತ್ತಿಗೆಯ ಮೊತ್ತಂಗಳೆತ್ತಲುಂ |
ಕತ್ತಲಿಸೆ ಪೊತ್ತ ಮಸೆವೆತ್ತ ಬಲ್ಗತ್ತಿಗಳ |
ಕಿತ್ತು ಭಟರೆತ್ತಿ ಜಡಿಯುತ್ತಿರಲ್ಕತ್ತ ಬೆಳೆಗಿತ್ತುವವು ಮತ್ತೆ ಬಲಕೆ ||
ಸುತ್ತಲುಂ ಕೆತ್ತವೋಲ್ ಮತ್ತಗಜಮೊತ್ತರಿಸಿ |
ಮುತ್ತಿನಡೆಯುತ್ತೆಲರನೊತ್ತಿ ನಿಲಿಸುತ್ತಿರಲು |
ದತ್ತ ಚಮರೋತ್ಥಿತ ಮರುತ್ತತಿಯೊಳುತ್ತಮ ಹಿಮೋತ್ತರಂ ಬಿತ್ತರಿಸಿತು ||19||
ಎತ್ತಿಬಹ= ಎತ್ತಿಕೊಂಡು ಬರುವ, ಸತ್ತಿಗೆಯ= ಛತ್ರಿಯ, ಮೊತ್ತಂಗಳೆತ್ತಲುಂ-:ಮೊತ್ತಂಗಳು=ಗುಂಪುಗಳು, ಎತ್ತಲುಂ= ಎಲ್ಲಾ ಕಡೆಯೂ, ಕತ್ತಲಿಸೆ= ಕತ್ತಲುಂಟಾಗಲು, ಪೊತ್ತ=ಹೊತ್ತಿರುವ, ಮಸೆವೆತ್ತ= ಮಸೆದ, ಬಲ್ಗತ್ತಿಗಳ= ಬಲ್ ಗತ್ತಿಗಳ= ದೊಡ್ಡ ಕತ್ತಿಗಳನ್ನು, ಕಿತ್ತು= ಒರೆಯಿಂದ ತೆಗೆದು ಭಟರೆತ್ತಿ= ಯೋಧರು ಎತ್ತಿ, ಜಡಿಯುತ್ತಿರಲ್ಕತ್ತ-: ಝಳಿಪಿಸುತ್ತರಲು, ಅತ್ತ= ಆ ಪ್ರದೇಶದಲ್ಲಿ ಬೆಳೆಗಿತ್ತುವವು_: ಬೆಳಗಿ ಇತ್ತವವು= ಬೆಳಕನ್ನು ಉಂಟುಮಾಡುವುವು- ಮತ್ತೆ ಬಲಕೆ= ಸೈನ್ಯಕ್ಕೆ; ಸುತ್ತಲುಂ= ಸುತ್ತಲೂ, ಕೆತ್ತವೋಲ್= ಜೋಡಿಸಿದಂತೆ, ಮತ್ತಗಜಮೊತ್ತರಿಸಿ-:ಮತ್ತಗಜಂ ಒತ್ತರಿಸಿ= ಮದಿಸಿದ ಆನೆಯ, ಸುತ್ತಲುಂ= ಸುತ್ತ, ಮುತ್ತಿನಡೆಯುತ್ತೆಲರನೊತ್ತಿ-:ಮತ್ತಿ ನೆಡಯುತ್ತಿರೆ ಅಲರನು=ಗಾಳಿಯನ್ನು, ಒತ್ತಿ ನಿಲಿಸುತ್ತಿರಲು=ಚಲಿಸಲು ಬಿಡದಂತೆ ಹೋಗುತ್ತಿರಲು, ದತ್ತಚಮರೋತ್ಥಿತ-:ದತ್ತ ಚಮರೋತ್ಥತಮರುತ್= ಚಾಮರಗಳಿಂದ ಹೊರಟ ಗಾಳಿಯು, (ಮರುತ್ ತತಿಯೊಳ್ ಉತ್ತಮ) ತತಿಯೊಳ್=ಸಮೂಹದಲ್ಲಿ, ಉತ್ತಮ=ಸೊಗಸಾದ ಹಿಮೋತ್ತರಂ= ತಂಪಾದ (ಗಾಳಿಯನ್ನು) ಬಿತ್ತರಿಸಿತು=(ಹರಡುವಂತೆ ಮಾಡಿತು) ಬೀಸಿತು
(ಪದ್ಯ - ೧೯), |
ಪದ್ಯ - ೨೦
ಸಂಪಾದಿಸಿತಡೆಯೊಳಿರ್ದಖಿಳ ಮೇಘಂಗಳಂ ಪ್ರಳಯದೊಳ್ |
ಬಿಡಲು ಘುಡಿಘುಡಿಸುತ್ತೆ ನಡೆವಂದದಿಂದೆ ಬೊ |
ಬ್ಬಿಡುತವಧಿಯಿಲ್ಲದೈತರುತಿರ್ಪ ಯೌವನಾಶ್ವನ ಸೈನ್ಯಮಂ ನೋಡುತೆ ||
ಎಡಗಯ್ಯ ತುರುಗಮಂ ಬಲಿದಡವಳಿಸಿ ತನ್ನ |
ಕಡುಗಮಂ ಜಡಿದನಿಬರೆಲ್ಲರಂ ಚಿತ್ತದೊಳ್ |
ಗಡಣಿಸದೆ ಕಲಿಘಟೋತ್ಕಚಸುತಂ ನಸುನಗುತೆ ಗಗನದೊಳ್ ಬರುತಿರ್ದನು||20||
ತಡೆಯೊಳಿರ್ದಖಿಳ-:ತಡೆಯೊಳ್= ನಿರ್ಬಂಧದಲ್ಲಿ, ಇರ್ದ= ಇದ್ದ, ಮೇಘಂಗಳಂ= ಮೋಡಗಲನ್ನು, ಪ್ರಳಯದೊಳ್=ಪ್ರಳಯಕಾಲದಲ್ಲಿ, ಬಿಡಲು= ಬಿಟ್ಟಾಗ, ಘುಡಿಘುಡಿಸುತ್ತೆ ನಡೆವಂದದಿಂದೆ=(ಗುಡುಗು ಸಿಡಲಿನಿಂದ) ಆರ್ಭಟ ಮಾಡುತ್ತಾ ಚಲಿಸುವಂತೆ, ಬೊಬ್ಬಿಡುತವಧಿಯಿಲ್ಲದೈತರುತಿರ್ಪ-:ಬೊಬ್ಬಿಡುತ ಅವಧಿಯಿಲ್ಲದೆ ಐತರುತಿರ್ಪ= ಆರ್ಭಟಿಸುತ್ತಾ ವೇಗವಾಗಿ ಬರುತ್ತಿರುವ, ಯೌವನಾಶ್ವನ ಸೈನ್ಯಮಂ= ಸೈನ್ಯವನ್ನು, ನೋಡುತೆ= ನೋಡಿ, ಎಡಗಯ್ಯ ತುರುಗಮಂ=ಎಡದ ಕೈ ಕಂಕುಳಲ್ಲಿದ್ದ ಕುದುರೆಯನ್ನು, ಬಲಿದಡವಳಿಸಿ-: ಬಲಿದು ಅಳವಡಿಸಿ= ಅಲ್ಲಿ ಗಟ್ಟಿಯಾಗಿ ಹಿಡಿದುಕೊಂಡು, ತನ್ನ ಕಡುಗಮಂ= ತನ್ನ ಖಡ್ಗವನ್ನು, ಜಡಿದನಿಬರೆಲ್ಲರಂ-: ಜಡಿದು ಅನಿಬರ ಎಲ್ಲರಂ= ಅವರೆಲ್ಲರನ್ನೂ ಹೊಡೆದು, ಚಿತ್ತದೊಳ್= ಮನದಲ್ಲಿ, ಗಡಣಿಸದೆ= ಲಕ್ಷಮಾಡದೆ, ಕಲಿಘಟೋತ್ಕಚಸುತಂ=ವೀರ ಮೇಘನಾದನು, ನಸುನಗುತೆ= ನಸುನಗತ್ತಾ ಗಗನದೊಳ್=ಆಕಾಶದಲ್ಲಿ, ಬರುತಿರ್ದನು= ಬರುತ್ತಿದ್ದನು.
(ಪದ್ಯ - ೨೦), |
ಪದ್ಯ - ೨೧
ಸಂಪಾದಿಸಿಡಿಳ್ಳಮಾದುದೆ ಯೌವನಾಶ್ವಭೂಪತಿಯ ಬಲ |
ಮೊಳ್ಳೆಗರ ನೂಕು ನೂಕು ನೂಕಾವೆಡೆಯೊಳಾ ಕುದುರೆ |
ಗಳ್ಳನಂ ತೋರು ತೋರೆನುತೆ ನಡೆತಂದು ಹೈಡಿಂಬಿಯಂ ಮುತ್ತಿಕೊಂಡು ||
ಒಳ್ಳಿತೋ ವೀರ ಹಯಚೋರ ಜೀವದೊಳಾಸೆ |
ಯುಳ್ಳೊಡೀಕುದುರೆಯಂ ಬಿಟ್ಟು ಸಾಗಲ್ಲದೊಡೆ |
ಕೊಳ್ಳಾ ಮಹಾಸ್ತ್ರಪ್ರತತಿಯನೆಂದಂಬರವನಂಬಿನಿಂ ತುಂಬಿಸಿದರು ||21||
ಡಿಳ್ಳಮಾದುದೆ=ಅಶಕ್ತವಾದುದೇ? ಯೌವನಾಶ್ವ ಭೂಪತಿಯ ಬಲಂ=ಯೌವನಾಶ್ವ ರಾಜನ ಸೈನ್ಯವು ಅಶಕ್ತವಾದುದೇ? (ಅಲ್ಲ). ಒಳ್ಳೆಗರ(ನೀರುಹಾವು = ಅಶಕ್ತರು) ನೂಕು ನೂಕು ನೂಕು= ಅಶಕ್ತರನ್ನು ಅತ್ತ ಸರಿಸು, ಆವೆಡೆಯೊಳ= ಆ ಕುದುರೆಗಳ್ಳನಂ ತೋರು ತೋರೆನುತೆ-:ತೋರು ಎನುತೆ= ಆ ಕುದರೆಗಳ್ಳನು ಯಾವಕಡೆ ಇರುವನು,ತೋರಿಸು, ತೋರಿಸು ಎನುತೆ= ಎನ್ನುತ್ತಾ ನಡೆತಂದು= ಬಂದು ಹೈಡಿಂಬಿಯಂ= ಮೇಘನಾದನನ್ನು ಮುತ್ತಿಕೊಂಡು, ಒಳ್ಳಿತೋ ವೀರ= ಒಳ್ಳೆಯದೋ? ವೀರ! ಹಯಚೋರ= ಕುದುರೆ ಕಳ್ಳ, ಜೀವದೊಳಾಸೆಯುಳ್ಳೊಡೀಕುದುರೆಯಂ-: ಜೀವದಾಸೆ ಉಳ್ಳೊಡೆ ಕುದುರೆಯಂ= ಜೀವದಾಸೆ ಇದ್ದರೆ ಕುದುರಯನ್ನು, ಬಿಟ್ಟು ಸಾಗಲ್ಲದೊಡೆ-:ಸಾಗು ಅಲ್ಲದೊಡೆ ಕೊಳ್ಳಾ=ಇಲ್ಲದಿದ್ದರೆ, ತೆಗೆದುಕೋ ಮಹಾಸ್ತ್ರಪ್ರತತಿಯನೆಂದಂಬರವನಂಬಿನಿಂ-: ಮಹಾಸ್ತ್ರಪ್ರತತಿಯನು ಎಂದು ಅಂಬರವನು ಅಂಬಿನಿಂ ತುಂಬಿಸಿದರು =ಅನೇಕ ಮಹಾಸ್ತ್ರಗಳ ಹೊಡೆತವನ್ನು ಎಂದು ಆಕಾಶವನ್ನು ಬಾಣಗಳಿಂದ ತುಂಬಿಸಿದರು.
(ಪದ್ಯ - ೨೧), |
ಪದ್ಯ - ೨೨
ಸಂಪಾದಿಸಿನಿಮ್ಮರಾಯನ ಪೊರೆಯ ಪರಿವಾರದೊಳ್ ನೀವೆ |
ದಿಮ್ಮಿದರೊ ಮತ್ತೆ ಕೆಲರೊಳರೊ ಕಳವಲ್ಲ ಹಯ |
ಮಮ್ಮೊಗದ ಮುಂದೆ ಕಂಡೊಯ್ವೆನಾರ್ಪೊಡೆ ಶಕ್ತಿಯಿಂ ಬಿಡಿಸಿಕೊಳ್ಳಿ ಬರಿದೆ ||
ಉಮ್ಮಳಿಸಬೇಡ ನೀವತಿಸಾಹಸಿಗಳಾದೊ |
ಡೊಮ್ಮೆ ಹಮ್ಮೈಸದಿರಿ ಸಾಕೆಂದು ಮೇಘನಾ |
ದಮ್ಮಹಾಮಾಯಾ ಭಯಂಗಳಂ ಸೃಜಿಸಿದಂ ಮೂಜಗಂ ತಲ್ಲಣಿಸಲು ||22||
ನಿಮ್ಮರಾಯನ= ನಿಮ್ಮ ರಾಜನ, ಪೊರೆಯ= ರಕ್ಷಣೆಯ, ಪರಿವಾರದೊಳ್= ಸೈನ್ಯ ಪರಿವಾರದಲ್ಲ, ನೀವೆ ದಿಮ್ಮಿದರೊ= ನೀವೇ ಶೂರರೋ, ಮತ್ತೆ ಕೆಲರೊಳರೊ= ಮತ್ತೂ ಕೆಲವರು ಇದ್ದಾರೋ? ಕಳವಲ್ಲ= ಇದು ಕಳ್ಳತನವಲ್ಲ, ಹಯಮಮ್ಮೊಗದ-:ಹಯಂ ಮೊಗದ ಮುಂದೆ= ಕುದುರೆಯನ್ನು ನಿಮ್ಮ ಎದುರೇ, ಕಂಡೊಯ್ವೆನಾರ್ಪೊಡೆ-:ಕೊಂಡು ಒಯ್ವೆನು ಆರ್ಪಡೆ= ತೆಗೆದುಕೊಂಡು ಹೋಗುತ್ತೇನೆ; ಆರ್ಪೊಡೆ ಶಕ್ತಿಯಿಂ ಬಿಡಿಸಿಕೊಳ್ಳಿ= ಸಾದ್ಯವಾದರೆ ಶಕ್ತಿಯಿಂದ ಬಿಡಿಸಿಕೊಳ್ಳಿ; ಬರಿದೆ ಉಮ್ಮಳಿಸಬೇಡ= ಸುಮ್ಮನೆ ಮಾತನ್ನಾಡಬೇಡಿ; ನೀವತಿಸಾಹಸಿಗಳಾದೊಡೊಮ್ಮೆ-: ನೀವು ಅತಿ ಸಾಹಸಿಗಳು ಆದೊಡೆ ಒಮ್ಮೆ ಹಮ್ಮೈಸದಿರಿ= ನೀವು ಬಹಳ ಶೂರರಾದರೆ ಒಮ್ಮೆ ಸುಮ್ಮನೆ ಮಾತಾಡಬೇಡಿ, ಸಾಕೆಂದು= ಸಾಕು ಮಾತು ಎಂದು, ಮೇಘನಾದಮ್ಮಹಾಮಾಯಾ= ಮೇಘನಾದಂ ಮಹಂ ಮಾಯಾ ಭಯಂಗಳಂ ಸೃಜಿಸಿದಂ ಮೂಜಗಂ ತಲ್ಲಣಿಸಲು= ಮೇಘನಾದನು ಮೂರು ಲೋಕವೂ ಭಯಪಡುವಂತೆ ಮಹಾ ಮಾಯೆಯನ್ನು ಸೃಷ್ಟಿಸಿದನು.
(ಪದ್ಯ - ೨೨), |
ಪದ್ಯ - ೨೩
ಸಂಪಾದಿಸಿಪೊಡೆವ ಸಿಡಲ್ ಕರೆವ ಮಳೆ ಜಡಿವ ಕಲ್ಗುಂಡು ಧೂ |
ಳಿಡುವ ಬಿರುಗಾಳಿ ಕಂಗೆಡಿಪ ಕತ್ತಲೆ ಮೇಲೆ |
ಕೆಡೆವ ಗಿರಿತರುಗಳುರೆ ಕಡಿವ ವಿವಿಧಾಯುಧಂ ನಡುವ ಶಸ್ತ್ರಾಸ್ತ್ರಂಗಳು ||
ಪಿಡಿವ ಪುಲಿಕರಡಿ ಬಾಯ್ವಿಡುವ ಭೂತಂಗಳಸು |
ಗುಡಿವ ಪಾವುಗಳಟ್ಟಿ ಸುಡುವ ಕಾಳ್ಕಿಚ್ಚುಳಿಯ |
ಗುಡದವನ ಮಾಯೆಯಂ ತಡೆವರಿಲ್ಲಾಬಲಂ ಪುಡಿವಡೆದುದೇವೇಳ್ವೆನು ||23||
ಪೊಡೆವ ಸಿಡಲ್= ಅವನ ಮಾಯೆಯಿಂದ, ಹೊಡೆಯುವ ಸಿಡಲು, ಕರೆವ ಮಳೆ= ಸುರಿಯುವ ಮಳೆ, ಜಡಿವ ಕಲ್ಗುಂಡು= ಬೀಳುವ ಕಲ್ಗುಂಡು, ಧೂಳಿಡುವ ಬಿರುಗಾಳಿ=ಧೂಳಿನಂದ ಕೂಡಿದ ಬಿರುಗಾಳಿ, ಕಂಗೆಡಿಪ ಕತ್ತಲೆ=ಕಂಗೆಡಿಸುವ ಕತ್ತಲೆ, ಮೇಲೆ
ಕೆಡೆವ ಗಿರಿತರುಗಳು= ಇದಲ್ಲದೆ ಮೇಲಿಂದ ಬೀಳುವ ಬೆಟ್ಟ ಮರಗಳು, ಉರೆ ಕಡಿವ ವಿವಿಧಾಯುಧಂ=ಹೆಚ್ಚು, ಕತ್ತರಿಸುವ ನಾನಾ ಆಯುಧಗಳು, ನಡುವ ಶಸ್ತ್ರಾಸ್ತ್ರಂಗಳು= ಚುಚ್ಚುವ ಶಸ್ತ್ರಾಸ್ತ್ರಗಳು, ಪಿಡಿವ ಪುಲಿಕರಡಿ= ಹಿಡಿಯುವ ಹುಲಿಕರಡಿಗಳು, ಬಾಯ್ವಿಡುವ ಭೂತಂಗಳಸು= ದೊಡ್ಡದಾಗಿ ಬಾಯಿಕಳೆದುಕೊಂಡು ಬರುವ ಭೂತಗಳು, ಅಸುಗುಡಿವ ಪಾವುಗಳಟ್ಟಿ= ಪ್ರಾಣ ಹೀರುವ ಹಾವುಗಳ ರಾಶಿ, ಸುಡುವ ಕಾಳ್ಕಿಚ್ಚು=ಸುಡುವ ಕಾಳ್ಗಚ್ಚಿ ನಂತಹ ಬೆಂಕಿ; , ಉಳಿಯ= ಉಳಿಯ ಗುಡದವನ ಮಾಯೆಯಂ= ಬದುಕಲು ಬಿಡದ ಅವನ ಮಾಯರಯಂ ತಡೆವರಿಲ್ಲ ಆ =ಮಾಯೆಯನ್ನು, ತಡೆಯುವವರು ಇಲ್ಲ; ಪುಡಿವಡೆದುದೇವೇಳ್ವೆನು-: ಪುಡಿ ಪುಡಿ ವಡೆದುದು ಏ ವೇಳ್ವೆನು= ಆ ಸೈನ್ಯ, ಪುಡಿಪುಡಿಯಾಯಿತು ಏನೆಂದು ಹೇಳಲಿ.
(ಪದ್ಯ - ೨೩), |
ಪದ್ಯ - ೨೪
ಸಂಪಾದಿಸಿಮಾಯೆಯಿಂ ಪಡೆಯೆಲ್ಲಮಂ ಕೊಂದು ಹಯಮಂ ವಿ |
ಹಾಯಸಪಥದೊಳೊಯ್ವ ಹೈಡಿಂಬಿಯಂ ಕಂಡ |
ಜೇಯರಂಬರದ ವಿವರಂಗಳಂ ಪುಗುವೆಂಟುಸಾವಿರ ಮಹಾರಥರನು ||
ಆ ಯೌವನಾಶ್ವ ನೃಪನಟ್ಟಿದೊಡೆ ನಭದೊಳಸ |
ಹಾಯಶೂರನ ಮಾರ್ಗಮಂ ಕಟ್ಟಿ ನಿಲ್ಲು ಖಳ ||
ಸಾಯದಿರ್ ಬಿಡುಬಿಡು ತುರಂಗಮವನೆನುತೆ ಸೈಗರೆದರಂಬಿನ ಮಳೆಯನು ||24||
ಮಾಯೆಯಿಂ ಪಡೆಯೆಲ್ಲಮಂ ಕೊಂದು= ಮಾಯೆಯಿಂದ ಶತ್ರುಸೈನ್ಯವನ್ನು ಕೊಂದು, ಹಯಮಂ ವಿಹಾಯಸಪಥದೊಳ್(ಆಕಾಶಮಾರ್ಗ) ಒಯ್ವ ಹೈಡಿಂಬಿಯಂ= ಕುದುರೆಯನ್ನು ಆಕಾಶಮಾರ್ಗದಲ್ಲಿ ಒಯ್ಯುವ ಮಾಘನಾದನನ್ನು, ಕಂಡಜೇಯರಂಬರದ-:ಕಂಡು ಅಜೇಯರ್ ಅಂಬರದ= ಆಕಾಶದಲ್ಲಿ ಅಜೇಯರಾದ, ವಿವರಂಗಳಂ= ಆಕಾಶದ ಪ್ರದೇಶಗಳನ್ನು, ಪುಗುವೆಂಟುಸಾವಿರ ಮಹಾರಥರನು-:ಪುಗುವ ಎಂಟು ಸಾವಿರ= ಹೊಗುವ ಎಂಟುಸಾವಿರ ಮಹಾರಥರನ್ನು, ಆ ಯೌವನಾಶ್ವ ನೃಪನಟ್ಟಿದೊಡೆ= ಆ ಯೌವನಾಶ್ವ ನೃಪನು ಅಟ್ಟಿದೊಡೆ= ಕಳಿಸಿದಾಗ, ನಭದೊಳ್ ಅಸಹಾಯಶೂರನ ಮಾರ್ಗಮಂ=ಆಕಾಶದಲ್ಲಿ ಅಸಹಾಯಶೂರನನ್ನು, ಕಟ್ಟಿ= ಅಡ್ಡಗಟ್ಟಿ, ನಿಲ್ಲು ಖಳ ಸಾಯದಿರ್ ಬಿಡುಬಿಡು ತುರಂಗಮವನೆನುತೆ- ತುರಂಗಮನು ಎನುತೆ= ನಿಲ್ಲು ನೀಚನೇ,ಸಾಯಬೇಡ, ಬಿಟ್ಟುಬಿಡು ಕುದುರೆಯನ್ನು ಎನ್ನುತ್ತಾ, ಸೈಗರೆದರಂಬಿನ ಮಳೆಯನು-: ಸೈಗರೆದರು ಅಂಬಿನ ಮಳೆಯನು= ಬಾಣದ ಮಳೆಯನ್ನು ಸುರಿಸಿದರು.
(ಪದ್ಯ - ೨೪), |
ಪದ್ಯ - ೨೫
ಸಂಪಾದಿಸಿಪದ್ಯ - ೨೫[ಸಂಪಾದಿಸಿ]
ವೀರರಹುದೋ ಜಗಕೆ ನೀವಲಾ ಸ್ವಾಮಿಹಿತ |
ಕಾರಿಗಳ್ ತಲೆಯಾಸೆಯಿಲ್ಲೆನುತೆ ಹೈಡಿಂಬಿ |
ತೋರಗದೆಯಿಮದವರ ತೇರ್ಗಳಂ ಚಾಪಬಾಣಂಗಳಂ ಕುದುರೆಗಳನು ||
ಸಾರಥಿಗಳಂ ಧ್ವಜಪತಾಕೆಗಳನಪ್ಪಳಿಸಿ |
ವಾರುವಂಬೆರಸಿ ಕಡುವೇಗದಿಂದೈತಂದು |
ಮಾರುತಸುತನ ಮುಂದೆ ನಿಲುತಿರ್ದನನ್ನೆಗಂ ಮತ್ತೆ ಪಡಿಬಲಮೊದವಿತು ||25||
ವೀರರಹುದೋ ಜಗಕೆ ನೀವಲಾ= ಜಗತ್ತಿದಲ್ಲಿ ನೀವು ವೀರರು ಆಗಿದ್ದೀರೋ? ಸ್ವಾಮಿಹಿತಕಾರಿಗಳ್ ನಿಮಗೆ ತಲೆಯಾಸೆಯಿಲ್ಲೆನುತೆ-:ತಲೆಯಾಸೆ= ಜೀವದಾಸೆ ಇಲ್ಲ ಇಲ್ಲವೇ ಎನ್ನುತ್ತಾ, ಹೈಡಿಂಬಿ ತೋರಗದೆಯಿಮದವರ-: ಹೈಡಿಂಬಿ=ಮೇಘನಾದನು, ತೋರಗದೆಯಿಮದವರ-:ತೋರ= ದೊಡ್ಡ, ಗದೆಯಿಂದ ಅವರ, ತೇರ್ಗಳಂ= ರಥಗಳನ್ನು, ಚಾಪಬಾಣಂಗಳಂ= ಬಿಲ್ಲ ಬಾಣಗಳನ್ನು, ಕುದುರೆಗಳನು ಸಾರಥಿಗಳಂ= ಕುದರೆ ಸಾರಥಿಗಳನ್ನು, ಧ್ವಜಪತಾಕೆಗಳನಪ್ಪಳಿಸಿ= ಧ್ವಜ ಪತಾಕೆಗಳನ್ನು ಅಪ್ಪಳಿಸಿ, ವಾರುವಂಬೆರಸಿ-:ವಾರುವಂ ಬೆರಸಿ= ಕುದುರೆಯ ಜೊತೆಗೂಡಿ, ಕಡುವೇಗದಿಂದೈತಂದು- ಕಡು= ಹೆಚ್ಚಿನ,ವೇಗದಿಂದ,ಐತಂದು= ಬಂದು, ಮಾರುತಸುತನ= ವಾಯುಸುತನ= ಭೀಮನ ಮುಂದೆ, ನಿಲುತಿರ್ದನನ್ನೆಗಂ-:ನಿಂತಿರ್ದನು ಅನ್ನೆಗಂ= ಆ ಸಮಯಕ್ಕೆ. ಮತ್ತೆ= ಪುನಃ, ಪಡಿಬಲಮೊದವಿತು-: ಪಡಿಬಲ= ಮತ್ತೊಂದು ಸೈನ್ಯ, ಒದವಿತು= ಬಂದಿತು.
(ಪದ್ಯ - ೨೫), |
ಪದ್ಯ - ೨೬
ಸಂಪಾದಿಸಿಹರಿಗಳೀಂ ನಾಗಂಗಳಿಂ ಸ್ಯಂದನಂಗಳಿಂ |
ಶರಝಾಲ ಕದಳಿದಳ ಪುಂಡರೀಕಂಗಳಿಂ|
ಸುರಗಿಖಡ್ಗಂಗಳಿಂ ನಡೆವ ಕಾಂತಾರದಂತೆಸವ ಚತುರಂಗದೊಡನೆ ||
ಭರದಿಂ ಸುವೇಗನೆಂಬಾ ಯೌವನಾಶ್ವ ಭೂ |
ವರನ ತನುಜಾತನಾಹನಕೆ ನಿರ್ಭೀತನು |
ಬ್ಬರದ ಬಿಲ್ದಿರುವಿನಬ್ಬರದ ಕೋಳಾಹಳಕೆ ಧರೆ ಬಿರಿಯೆ ನಡೆತಂದನು ||26||
ಹರಿಗಳೀಂ= ಸಿಂಹಗಳಿಂದ / ಕುದುರೆಗಳಿಂದ, ನಾಗಂಗಳಿಂ= ಹಾವುಗಳಿಂದ/ ಆನೆಗಳಿಂದ, ಸ್ಯಂದನಂಗಳಿಂ= ಹುಳಗಳಿಂದ /ರಥಗಳಿಂದ, ಶರಝಾಲ= ಹುಲ್ಲುಗಳ /ಬಾಣಗಳಿಂದಲೂ,
ಕದಳಿದಳ=ಬಾಳೆ ಎಲೆಗಳಿಂದ / ಗಿಡ್ಡ ಖಡ್ಗದಿಂದ, ಪುಂಡರೀಕಂಗಳಿಂ=ಹುಲಿಗಳಿಂದಲೂ /ಬಿಳಿ ಪತಾಕೆಗಳಿಂದಲೂ, ಸುರಗಿ ಮರದಿಂದಲೂ,/ ಹುಲಿಗಳಿಂದಲೂ, ಸುರಗಿಖಡ್ಗಂಗಳಿಂಸುರಗಿಮರದಿಂದಲೂ / ಖಡ್ಗಗಳಿಂದಲೂ,ಕೂಡಿರುವ ಈ ಸೈನ್ಯ, ನಡೆವ ಕಾಂತಾರದಂತೆಸವ-:ನಡೆವ ಕಾಂತಾರದಂತೆ ಎಸೆವ=ಕಾಣುವ, ಚತುರಂಗದೊಡನೆ=ಚತುರಂಗ ಸೈನ್ಯದೊನೆ, ಭರದಿಂ= ವೇಗವಾಗಿ ಸುವೇಗನೆಂಬಾ= ಸುವೇಗನು ಎಂಬ ಯೌವನಾಶ್ವ ಭೂವರನ ತನುಜಾತನು= ಮಗನು, ಆಹವಕೆ= ಯುದ್ಧಕ್ಕೆ, ನಿರ್ಭೀತನುಬ್ಬರದ-:ನಿರ್ಭೀತನು ಉಬ್ಬರದ ಬಿಲ್ದಿರುವಿನಬ್ಬರದ= ಬಿಲ್ಲು ತಿರುಗಿಸುವ= ನಾಣಿನ ಹಗ್ಗಕ್ಕೆ, ಕೋಳಾಹಳಕೆ= ಗಲಾಟೆಯ ಗದ್ದಲಕ್ಕೆ, ಧರೆ= ಭೂಮಿ ಬಿರಿಯೆ=ಒಡೆತುವಂತೆ, ರಾಜನು ನಡೆತಂದನು ||26||
(ಪದ್ಯ - ೨೬), |
ಪದ್ಯ - ೨೭
ಸಂಪಾದಿಸಿಅಂಬರದೊಳಡ್ಡೈಸಿದೊಡೆ ನಮ್ಮ ರಥಿಕರ್ಕ |
ಳಂ ಬಗೆಯದಹಿತಂ ಹಯಂಬೆರಸಿ ಸೈವರಿದ |
ನೆಂಬುದಂ ಕೇಳ್ದಾಗಳಾ ಯೌವನಾಶ್ವಭೂಪಂ ತಾನೆ ಕೋಪದಿಂದೆ ||
ತುಂಬಿವರಿ ಸಂಪಗೆಯಲರ ಪರಿಮಳದ ಸೂರೆ |
ಗಂ ಬಯಸಿ ಬಂದುದಿದು ಮಿಗೆ ಪೊಸತೆನುತೆ ಹರಿಸಿ |
ದಂ ಬೇಗದಿಂ ಮಣೀವರೂಥಮಂ ಕೆಲಬಲದ ಮನ್ನೆಯರ ಗಡಣದಿಂದೆ ||27||
ಅಂಬರದೊಳ್= ಆಕಾಶದಲ್ಲಿ, ಅಡೈಸಿದೊಡೆ= ಅಡ್ಡಹಾಕಿದಾಗ, ನಮ್ಮ ರಥಿಕರ್ಕಳಂ= ನಮ್ಮ ರಥಿಕರನ್ನು, ಬಗೆಯದಹಿತಂ-:ಬಗೆಯದೆ=ಲೆಕ್ಕಿಸದೆ, ಅಹಿತಂ+ಶತ್ರುವು, ಹಯಂಬೆರಸಿ-ಹಯಂ=ಕುದುರೆಯ, ವೆರಿಸಿ= ಸಹಿತ, ಸೈವರಿದನೆಂಬುದಂ-:ಸೈವರಿದನು ಎಂಬುದಂ= ಹೋದನು ಎಂಬುದಂ, ಕೇಳ್ದಾಗಳಾ-:ಕೇಳ್ದು ಆಗಳು ಆ ಯೌವನಾಶ್ವಭೂಪಂ= ಕೇಳಿ ಆಗ ಆ ಯೌವನಾಶ್ವರಾಜನು, ತಾನೆ ಕೋಪದಿಂದೆ= ಕೋಪದಿಂದ ತಾನೆ, ತುಂಬಿವರಿಸಂಪಗೆಯಲರ-:ತುಂಬಿ, ಅರಿ(ಶತ್ರು) ಸಂಪಿಗೆಯ= ತನ್ನ ಸಾವಿಗೆಕಾರಣವಾಗುವ ಸಂಪಿಗೆಯ ಅಲರ= ಹೂವುಗಳ, ಪರಿಮಳದ ಸೂರೆಗಂ= ಕಂಪಿಗೆ ಅದನ್ನು ಹೀರಲು, ಬಯಸಿ ಬಂದುದಿದು-:ಬಂದುದು =ಮಂದಂತಾಗಿದೆ. ಇದು ಮಿಗೆ= ಬಹಳ ಪೊಸತೆನುತೆ-:ಪೊಸತು ಎನುತೆ= ಹೊಸದು ಎಂದು, ಹರಿಸಿದಂ= ಓಡಿಸಿದನು, ಬೇಗದಿಂ= ಅವಸದಿಂದ, ಮಣೀವರೂಥಮಂ= ತನ್ನ ಮಣಿರಥವನ್ನು, ಕೆಲಬಲದ ಮನ್ನೆಯರ ಗಡಣದಿಂದೆ= ಅಕ್ಪಕ್ಕದಲ್ಲಿದ್ದ ಹೊಗಳಿಹಾಡುವ ಹೆಂಗಸರ ಗುಂಪು ಹೊಗಳಿ ಹಾಡುತ್ತಿರಲು.
(ಪದ್ಯ - ೨೭), |
ಪದ್ಯ - ೨೮
ಸಂಪಾದಿಸಿಇದು ಭಗೀರಥ ರಥವ ಬೆಂಕೊಂಡು ಪರಿವ ಸುರ |
ನದಿಯ ಪ್ರವಾಹಮೆನಲಾ ನೃಪನ ವರವರೂ |
ಥದ ಪಿಂತೆ ಬಹುವಾದ್ಯರಭಸದಿಂದೆಡೆವರಿಯದೈತಪ್ಪ ಚತುರಂಗದ ||
ಪದಹತಿಗೆ ಧರೆ ನಡುಗುತಿರೆ ಜಹ್ನುಮುನಿಪನಂ |
ತದರ ಸಂಭ್ರಮಕೆ ಸೈರಿಸದಂತರಂಗದೊಳ್ |
ಕುದಿಯುತಿರ್ದಂ ಕರ್ಣಸುತನವನ ಭಾವಮಂ ಪವನಜಾತಂ ಕಂಡನು ||28||
(ಯೌವನಾಶ್ವನ ಸೈನ್ಯ) ಇದು ಭಗೀರಥನ ರಥವನ್ನು ಬೆಂಕೊಂಡು= ಅನುಸರಿಸಿ, ಪರಿವ= ಹರಿವ ಸುರನದಿಯ= ಗಂಗೆಯ, ಪ್ರವಾಹಮೆನಲಾ- ಪ್ರವಾಹಂ ಎನಲು ಆ ನೃಪನ ವರವರೂ ಥದ ಪಿಂತೆ= ಪ್ರಹಾವೋ ಎನ್ನುವಂತೆ ಆ ರಾಜನ ವರ= ಉತ್ತಮ ರಥದ ಹಿಂದೆ, ಬಹುವಾದ್ಯರಭಸದಿಂದೆಡೆವರಿಯದೈತಪ್ಪ-:ಬಹುವಾದ್ಯ ರಭಸದಿಂದ ಎಡವರಿಯದೆ ಐತಪ್ಪ= ಬಹುವಾದ್ಯ ರಭಸದಿಂದ ಮಧ್ಯೆ ಎಡೆಯಿಲ್ಲದಂತೆ ಬರುತ್ತಿರುವ, ಚತುರಂಗದ ಪದಹತಿಗೆ ಧರೆ ನಡುಗುತಿರೆ= ಚತುರಂಗಸೈನ್ಯದ ಹೆಜ್ಜೆಯಹೊಡೆತಕ್ಕೆ ಭೂಮಿ ನಡುಗುತ್ತಿದೆ, ಜಹ್ನುಮುನಿಪನಂತದರ ಸಂಭ್ರಮಕೆ= ಜಹ್ನು ಋಷಿಯು ಗಂಗೆಅವನ ಆಶ್ರಮಕ್ಕೆ ಹರಿದು ಬರಲು ಅದನ್ನು ಸಹಿಸದ ಋಷಿ ಗಂಗೆಯನ್ನು ಕುಡಿದುಬಿಟ್ಟ, ಅದೇರೀತಿ, ಸೈರಿಸದಂತರಂಗದೊಳ್ ಕುದಿಯುತಿರ್ದಂ ಕರ್ಣಸುತನು-:ಸೈರಿಸದೆ ಅಂತರಂಗದೊಳ್ ಕುದಿಯುತಿರ್ದಂ ಕರ್ಣಸುತ= ಕರ್ಣನಮಗ ವೃಷಕೇತು ಗಂಗಾಪ್ರವಾಹದಂತೆ ಬರುತ್ತಿರುವ ಅನುಸಾಲ್ವನ ಸೈನ್ಯವನ್ನು ತಡೆಯಲು ಕುದಿಯುತಿರ್ದಂ= ಉದ್ವೇಗದಿಂದ ಉತ್ಸಾಹಭರಿತನಾಗಿದ್ದನು. ಅವನ ಭಾವಮಂ= ಇ ಭಾವನೆಯನ್ನು, ಪವನಜಾತಂ= ಭೀಮನು ಕಂಡನು= ನೋಡಿದನು.
(ಪದ್ಯ - ೨೮), |
ಪದ್ಯ - ೨೯
ಸಂಪಾದಿಸಿಕಟ್ಟಿ ತರುಮೂಲಕಶ್ವಮನದರ ಕಾವಲ್ಗೆ |
ದಿಟ್ಟಹೈಡಿಂಬಿಯಂ ಬೈಚಿಟ್ಟು ತಮ್ಮನುರೆ |
ಯಟ್ಟಿ ಬಹಯೌವನಾಶ್ವನ ಪಡೆಗೆ ಕಾರ್ಣಿಯಂ ಕಳುಹಿ ಕಾಲಾಗ್ನಿಯಂತೆ ||
ಇಟ್ಟಿಣಿಸುತೈದುವ ಸುವೇಗನ ಬಲೌಘಕಿದಿ |
ರಿಟ್ಟು ನಿಂದಂ ಭೀಮನುತ್ಸಾಹದಿಂದೆ ಪೆ |
ರ್ಬೆಟ್ಟೊತ್ತಿ ನೂಕುವ ಮಹಾವಾತಘಾತಮಂ ತಡೆದೊಲೆಯದಿಪ್ಪಂತಿರೆ ||29||
ಕಟ್ಟಿ ತರುಮೂಲಕೆ=ಮರದಬುಡಕ್ಕೆ ಅಶ್ವಮನು ಅದರ ಕಾವಲ್ಗೆ ದಿಟ್ಟಹೈಡಿಂಬಿಯಂ ಬೈಚಿಟ್ಟು= ಕುದುರೆಯನ್ನುಮರದಬುಡಕ್ಕೆ ಕಟ್ಟಿ, ದಿಟ್ಟ=ದೈರ್ಯಶಾಲಿ ಮೇಘನಾದನನ್ನು ಅದರ ಕಾವಲಿಗೆ ಗುಟ್ಟಾಗಿ ಇಟ್ಟು, ತಮ್ಮನರೆಯಟ್ಟಿ-:ತಮ್ಮನು= ತಮ್ಮನ್ನು, ಉರೆಯಟ್ಟಿ= ವೇಗವಾಗಿ ಅಟ್ಟಿಸಿಕೊಂಡು, ಬಹಯೌವನಾಶ್ವನ-: ಬಹ= ಬರುತ್ತಿರುವ ಯೌವನಾಶ್ವನ, ಪಡೆಗೆ= ಸೈನ್ಯಕ್ಕೆ ಕಾರ್ಣಿಯಂ= ಕರ್ಣನಮಗನನ್ನು ಕಳುಹಿ= ಕಳುಹಿಸಿ, ಕಾಲಾಗ್ನಿಯಂತೆ= ಪ್ರಳಯಕಾಲದ ಬೆಂಕಿಯಂತೆ ಇಟ್ಟಿಣಿಸುತೈದುವ-: ಇಟ್ಟನಿಸುತ ಐದುವ= ಒತ್ತೊತ್ತಾಗಿ ಬರುತ್ತಿರುವ, ಸುವೇಗನ ಬಲೌಘಕಿದಿರಿಟ್ಟು-:ಬಲ ಔಘಕೆ= ಸೈನ್ಯದ ಸಮೂಹಕ್ಕೆ,ಇದಿರಿಟ್ಟು= ಎದುರಾಗಿ, ನಿಂದಂ ಭೀಮನುತ್ಸಾಹದಿಂದೆ-:ನಿಂತನು, ಭೀಮನು ಉತ್ಸಾಹದಿಂದೆ= ಬೀಮನು (ಯುದ್ಧದ)ಉತ್ಸಾಹದಿಂದ ನಿಂತನು,ಹೇಗೆಂದರೆ, ಪೆರ್ಬೆಟ್ಟೊತ್ತಿ ನೂಕುವ ಮಹಾವಾತಘಾತಮಂ ತಡೆದೊಲೆಯದಿಪ್ಪಂತಿರೆ-: ಪೆರು ಬೆಟ್ಟು ಒತ್ತಿ= ದೊಡ್ಡಬೆಟ್ಟವು ಒತ್ತಿ ನೂಕುವ,ಮಹಾವಾತ ಆಘಾತವಂ= ಮಹಾಬಿರುಗಳಿಯ ಹೊಡೆತವನ್ನು,ತಡೆದು, ಒಲೆಯದೆ ಇಪ್ಪಂತೆ ಇರೆ= ಅಲುಗಾಡದೆ ಇರುವಂತೆ (ಭೀಮನು ನಿಂತನು).
(ಪದ್ಯ - ೨೯), |
ಪದ್ಯ - ೩೦
ಸಂಪಾದಿಸಿಕೇಳ್ ಮಹೀಪಾಲಕ ಸುವೇಗನ ಭಟರ್ ಚೂಣಿ |
ಯೊಳ್ ಮುತ್ತಿಕೊಂಡರ್ ವೃಕೋದರನನಿತ್ತ ಕೆಂ |
ಧೂಳ್ ಮುಸುಕಲೆಣ್ದೆಸೆಗಳಂ ನೃಪರ ಮಣಿಭೂಷಣದಕಾಂತಿ ಝಗಝಗಿಸಲು||
ತೋಳ್ ಮಿಡುಕಿನಿಂದಾರ್ದು ಝಳಪಿಸುವ ಭಟರ ಕರ |
ವಾಳ್ ಮಿಂಚೆ ಛತ್ರಚಮರಂಗಳ ವಿಡಾಯಿ ಮಿಗೆ |
ಸೂಳ್ ಮೆರೆಯೆ ನಿಸ್ಸಾಳಠೋಟಿ ಕಲಿಯೌವನಾಶ್ವಕ್ಷಿತಿಪನೈತಂದನು ||30||
ಕೇಳ್ ಮಹೀಪಾಲಕ= ಜನಮೇಜಯ ರಾಜನೇ ಕೇಳು, ಸುವೇಗನ ಭಟರ್= ಸೈನ್ಯದ ಭಟರು, ಚೂಣಿಯೊಳ್=ಮುಂದಿನ ಸಾಲಿನವರು ತಮ್ಮೆದುರು ಇರುವ, ಮುತ್ತಿಕೊಂಡರ್ ವೃಕೋದರನನು= ಭೀಮನನ್ನು ಮುತ್ತಿಕೊಂಡರು, ಇತ್ತ ಕೆಂಧೂಳ್ ಮುಸುಕಲೆಣ್ದೆಸೆಗಳಂ-: ಮುಸುಕಲು ಎಣ್ ದೆಸೆಗಳಂ= ಈ ಕಡೆ ಕೆಂಪು ಧೂಳು ಎಂಟು ದಿಕ್ಕುಗಳಲ್ಲೂ ಮುಸುಕುತ್ತಿರಲು, ನೃಪರ= ರಾಜರು ಧರಿಸಿದ ಮಣಿಭೂಷಣದ ಕಾಂತಿ ಝಗಝಗಿಸಲು, ತೋಳ್ ಮಿಡುಕಿನಿಂದ ಆರ್ದು=ಬಾಹು ಬಲದ ಪರಾಕ್ರಮದಿಂದ ಝಳಪಿಸುವ ಭಟರ= ಯೋದರ ಕರವಾಳ್= ಕತ್ತಿಗಳು ಮಿಂಚೆ ಛತ್ರಚಮರಂಗಳ= ಛತ್ರ ಚಾಮರಗಳ, ವಿಡಾಯಿ= ಸಾಲುಗಳು, ಮಿಗೆ ಸೂಳ್ ಮೆರೆಯೆ= ಬಹಳ ಕೂಗಿನ ಆರ್ಭಟ ಹೆಚ್ಚಲು, ನಿಸ್ಸಾಳಠೋಟಿ= ಕಹಳೆ ಮೊದಲಾದ ವಾದ್ಯಗಳು, ಕಲಿಯೌವನಾಶ್ವಕ್ಷಿತಿಪನೈತಂದನು-: ಕಲಿ= ಶೂರ, ಯೌವನಾಶ್ವ ಕ್ಷಿತಿಪ= ಯೌವನಾಶ್ವ ರಾಜನು, ಐತಂದನು= ಬಂದನು. .
(ಪದ್ಯ - ೩೦), |
ಪದ್ಯ - ೩೦
ಸಂಪಾದಿಸಿಒತ್ತಿಬಹ ಯೌವನಾಶ್ವನ ಪಡೆಯ ಚೂಣಿಯಂ |
ಕಿತ್ತು ನಿಂದಂ ಕರ್ಣಸುತನದಂ ಕಂಡು ಕವಿ |
ದತ್ತವನಮೇಲೆ ಕರಿ ತುರಗ ರಥ ಪಾಯದಳವೊಂದಾಗಿ ಸಂದಣಿಯೊಳು ||
ಹತ್ತಿಸಿದ ಚಾಪಮಂ ಜೇಗೈದು ಕೂಡೆ ಮಸೆ |
ವೆತ್ತ ಕೂರಂಭುಗಳನಾರ್ದಿಸಲ್ ಸೇನೆ ಮುರಿ |
ದತ್ತವನ ಬಾಣಘಾತಿಗೆ ಹಯದ ಚೋರನೇಂ ವೀರನೋ ಜಗದೊಳೆನುತೆ ||31||
ಒತ್ತಿಬಹ= ಮುಂದಕ್ಕೆ ಬರುತ್ತಿರುವ ಯೌವನಾಶ್ವನ ಪಡೆಯ= ಸೈನ್ಯದ, ಚೂಣಿಯಂ ಕಿತ್ತು= ಎದುರುಭಾಗದವರನ್ನು ಓಡಿಸಿ, ನಿಂದಂ+ ಧೃಡವಾಗಿನಿಂತನು ಕರ್ಣಸುತನು; ಅದಂ= ಅದನ್ನು, ಕಂಡು ಕವಿದತ್ತವನಮೇಲೆ-:ಕವಿದು ಅತ್ತ ಅವನ ಮೇಲೆ= ಅದನ್ನು ಕಂಡು, ಅವನ ಮೇಲೆ ಕರಿ ತುರಗ ರಥ ಪಾಯದಳ ಒಂದಾಗಿ ಸಂದಣಿಯೊಳು= ಸಮೂಹದಲ್ಲಿ ಕವಿದು ಬಿದ್ದರು, ಆಗ ಹತ್ತಿಸಿದ= ಹೆದೆ ಏರಿಸಿದ ಚಾಪಮಂ= ಬಿಲ್ಲನ್ನು, ಜೇಗೈದು= ಠೇಂಕಾರ ಮಾಡಿ, ಕೂಡೆ ಮಸೆವೆತ್ತ= ಕೂಡಲೆ ಮಸೆದ, ಕೂರಂಭುಗಳನಾರ್ದಿಸಲ್-: ಕೂರಂಬುಗಳನು= ಚೂಪಾದ= ಬಾಣಗಳನ್ನು ಆರ್ದಿಸಲು=ಜೋರಾಗಿ ಬಿಡಲು, ಸೇನೆ ಮುರಿದತ್ತವನ= ಹಿಮ್ಮಟ್ಟಿತು, ಬಾಣಘಾತಿಗೆ= ಬಾಣದ ಹೊಡೆತಕ್ಕೆ, ಹಯದ= ಕುದುರೆಯ, ಚೋರನೇಂ= ಕಳ್ಳನುಏಂ= ಎಷ್ಟೊಂದು ವೀರನೋ= ವೀರನಪ್ಪಾ, ಜಗದೊಳೆನುತೆ= ಲೋಕದಲ್ಲಿ.
(ಪದ್ಯ - ೩೦), |
ಪದ್ಯ - ೩೨
ಸಂಪಾದಿಸಿಎಲ್ಲಿ ಹಯಚೋರನಂ ತೋರವನ ನೆತ್ತರಂ |
ಚೆಲ್ಲುವೆಂ ಭೂತಗಣಕೆನುತೆ ಖತಿಯಿಂದೆ ನಿಂ |
ದಲ್ಲಿ ನಿಲ್ಲದೆ ಬರ್ಪ ಯೌವನಾಶ್ವನ ರಥಕೆ ಮಾರಾಂತು ಕರ್ಣಸೂನು ||
ಬಿಲ್ಲೊಳಂಬಂ ಪೂಡಲಾರು ನೀನೆಲವೊ ನ |
ಮ್ಮಲ್ಲಿ ಸೆಣಸಿದೆ ನೋಡಿದೊಡೆ ಬಾಲಕಂ ನಿನ್ನೊ |
ಳೊಲ್ಲೆನಾಹವಕೆಮ್ಮ ಕುದುರೆಯಂ ಬಿಟ್ಟು ಪೋಗೆಂದೊಡವನಿಂತೆಂದನು ||32||
ಎಲ್ಲಿ ಹಯಚೋರನಂ= ಕುದುರೆ ಕಳ್ಳನನ್ನು ತೋರಿಸು, ತೋರವನ ನೆತ್ತರಂ ಚೆಲ್ಲುವೆಂ ಭೂತಗಣಕೆ= ಅವನ ರಕ್ತವನ್ನು ಭೂತಗಣಕ್ಕೆ ಹಾಕುವೆ, ಎನುತೆ= ಎನ್ನುತ್ತಾ, ಖತಿಯಿಂದೆ = ಸಿಟ್ಟಿನಿಂದ, ನಿಂದಲ್ಲಿ ನಿಲ್ಲದೆ ಬರ್ಪ= (ಕೂಗುತ್ತಾ) ನಿಂತಲ್ಲಿ ನಿಲ್ಲದೆಬರುತ್ತಿರುವ, ಯೌವನಾಶ್ವನ ರಥಕೆ ಮಾರಾಂತು ಕರ್ಣಸೂನು= ಯೌವನಾಶ್ವನ ರಥಕ್ಕೆ, ಮಾರಾಂತು= ಎದುರುಬಂದು ಕರ್ಣಸೂನು= ವೃಷಕೇತು, ಬಿಲ್ಲೊಳಂಬಂ-:ಬಿಲ್ಲೊಳು ಅಂಬಂ=ಬಿಲ್ಲಿನಲ್ಲಿ ಬಾಣವನ್ನು ಪೂಡಲಾರು-ಪೊಡಲು ಆರು ನೀನೆಲವೊ=ನೀನು ಎಲವೊ=ಹೂಡಲು, ಎಲವೊ ನೀನು ಯಾರು, ನಮ್ಮಲ್ಲಿ ಸೆಣಸಿದೆ ನೋಡಿದೊಡೆ ಬಾಲಕಂ= ನಮ್ಮೊಡನೆ ಯುದ್ಧಕ್ಕೆಬಂದೆ, ನೋಡಿದರೆ ಬಾಲಕನು; ನಿನ್ನೊಳೊಲ್ಲೆನಾಹವಕೆಮ್ಮ-:ನಿನ್ನೊಳು=ನಿನ್ನೊಡನೆ, ಒಲ್ಲೆನು= ಇಷ್ಟವಿಲ್ಲ, ಆಹವಕೆ= ಯುದ್ಧಕ್ಕೆ, ಕುದುರೆಯಂ ಬಿಟ್ಟು= ಕುದುರೆಯನ್ನು ಬಿಟ್ಟು, ಪೋಗೆಂದೊಡವನಿಂತೆಂದನು-:ಪೋಗು ಎಂದೊಡೆ ಇಂತೆಂದನು= ಹೋಗು ಎಂದಾಗ, ಹೀಗೆ ಹೇಳಿದನು.
(ಪದ್ಯ - ೩೨), |
ಪದ್ಯ - ೩೩
ಸಂಪಾದಿಸಿಆರಾದೊಡೇನಶ್ವಮಂ ಬಿಡುವನಲ್ಲ ಮದ |
ವಾರಣಂ ಪಿರಿದಾದೊಡೆಳಸಿಂಗಮಂಜಿ ಕೆಲ |
ಸಾರುವುದೆ ನಿನ್ನ ತನುವಿನ ತೋರದಾಯತಕೆ ಕಲಿಗಳೆದೆ ಕಾತರಿಪುದೆ ||
ವೀರನಾದೊಡೆ ಕೈದುಮುಟ್ಟಿಗಳ ಘೋರ ಪ್ರ |
ಹಾರಮಂ ತೋರಿಸೀ ಸ್ಥೂಲಸೂಕ್ಷ್ಮಂಗಳ ವಿ |
ಚಾರಮೇಕೆನುತ ವೃಷಕೇತು ತೆಗೆದೆಚ್ಚನಾ ನೃಪನ ಕಾಯಂ ನೋಯಲು ||33||
ಆರಾದೊಡೇನಶ್ವಮಂ-: ಆರಾದೊಡೆ ಏನು ಅಶ್ವಮಂ ಬಿಡುವನಲ್ಲ= ನಾನು ಯಾರಾದರೇನು ಕುದುರೆಯನ್ನು ಬಿಡುವವನಲ್ಲ, ಮದವಾರಣಂ= ಮದಗಜವು ಪಿರಿದಾದೊಡೆಳಸಿಂಗಮಂಜಿ-: ಪಿರಿದಾದೊಡೆ ಎಳೆಸಿಂಗಂ ಅಂಜಿ= ಮದಗಜವು ದೊಡ್ಡದಾರೆ, ಸಿಂಹದ ಮರಿಯು, ಕೆಲಸಾರುವುದೆ= ಓಡಿಹೋಗುವುದೇ? ನಿನ್ನ ತನುವಿನ ತೋರದ ಆಯತಕೆ= ನಿನ್ನ (ದೇಹದ) ದೊಡ್ಡ ಆಕಾರಕ್ಕೆ, ಕಲಿಗಳೆದೆ-:ಕಲಿಗಳ ಎದೆ= ಶೂರರ ಎದೆ, ಕಾತರಿಪುದೆ= ಹೆದರುವುದೆ?/ನಡುಗುವುದೆ? ವೀರನಾದೊಡೆ= ವೀರನಾಗಿದ್ದರೆ, ಕೈದುಮುಟ್ಟಿಗಳ: ಕೈದು= ಆಯುಧ, ಮಟ್ಟಿಗಳ= ಮಷ್ಟಿಗಳ, ಘೋರ ಪ್ರಹಾರಮಂ= ಶಕ್ತಿಯುಳ್ಳಹೊಡೆತದಿಂದ, ತೋರಿಸೀ-:ತೋರಿಸು ಈ ಸ್ಥೂಲಸೂಕ್ಷ್ಮಂಗಳ= ದೊಡ್ಡವನು ಚಿಕ್ಕವನು ಎನ್ನುವ ವಿಚಾರಮೇಕೆನುತ-:ವಿಚಾರಂ ಏಕೆ ಎನುತ= ವಿಚಾರಗಳು ಏಕೆ ಎನ್ನುತ್ತಾ, ವೃಷಕೇತು ತೆಗೆದೆಚ್ಚನಾ-:ತೆಗೆದು ಎಚ್ಚನು= ಹೊಡೆದನು ನೃಪನ ಕಾಯಂ ನೋಯಲು= ವೃಷಕೇತು ವೃಷಕೇತುವಿಗೆ ನೋವಾಗುವಂತೆ ಬಾಣದ ಪ್ರಯೋಗ ಮಾಡಿದನು.
(ಪದ್ಯ - ೩೩), |
ಪದ್ಯ - ೩೪
ಸಂಪಾದಿಸಿಲೋಕದೊಳ್ ತನ್ನೊಳ್ ಪೊಣರ್ವ ಭಟರಿಲ್ಲ ನೀ |
ನೇ ಕಲಿಕಣಾ ಪಸುಳೆಯೆಂದು ಸೈರಿಸಿದೆ ನಿನ |
ಗಾಕೆವಾಳಿಕೆಯ ಧೀರತ್ವಮುಂಟಾದೊಡದು ಬಳಿಕೆಮ್ಮ ಪುಣ್ಯಮೆನಂತೆ ||
ಆಕರ್ಣಪೂರದಿಂ ತೆಗೆದೆಚ್ಚನಾ ಭೂಪ |
ನೀಕರ್ಣಸಂಭವಂ ಕಡಿದನೆಡೆಯೊಳ್ ಸರಳ |
ನೇಕಾರ್ಣವಂ ಮೇರೆದಪ್ಪಿತೆನೆ ಮುಸುಕಿದಂ ಕಣೆಯಿಂದವನ ರಥವನು ||34||
ಲೋಕದೊಳ್= ಈ ಜಗತ್ತಿನಲ್ಲಿ, ತನ್ನೊಳ್= ತನ್ನೊಡನೆ ಪೊಣರ್ವ= ಹೋರಾಡುವ ಭಟರಿಲ್ಲ= ಯೋಧರಿಲ್ಲ, ನೀನೇ ಕಲಿಕಣಾ= ಶೂರನು ಕಣಯ್ಯಾ, ಪಸುಳೆಯೆಂದು= ಎಳೆಯ ಪ್ರಾಯದವನೆಂದು,ಸೈರಿಸಿದೆ= (ನಿನ್ನ ಕುದುರೆ ಕದ್ದ ತಪ್ಪನ್ನು) ಸಹಿಸಿದೆ ನಿನಗಾಕೆವಾಳಿಕೆಯ-: ನಿನಗೆ ಆಕೆವಾಳಿಕೆಯ= ಶೂರತನದ, ಧೀರತ್ವಮುಂಟಾದೊಡದು-: ಧೀರತ್ವಂ ಉಂಟಾದೊಡೆ ಅದು= ಶೌರ್ಯದ ಧೀರತನವಿದ್ದರೆ ಅದು, ಬಳಿಕೆಮ್ಮ ಪುಣ್ಯಮೆನಂತೆ= ಬಳಿಕ ಎಮ್ಮ= ನಮ್ಮ ಪುಣ್ಯಮಂತೆ= ಅದು ನಮ್ಮ ಪುಣ್ಯವೆಂದು ಹೇಳುತ್ತಾ, ಆಕರ್ಣಪೂರದಿಂ= ಕಿವಿಯವರೆಗೂ ಬಾಣವನ್ನು . ತೆಗೆದೆಚ್ಚನಾ ಭೂಪನು= ಎಳೆದು ಬಿಟ್ಟನು ಆ ರಾಜನು, ಈ ಕರ್ಣಸಂಭವಂ=ವೃಷಕೇತು, ಕಡಿದನೆಡೆಯೊಳ್=ಕಡಿದನು ಎಡೆಯೊಳ್=(ಅದನ್ನು) ಮಧ್ಯದಲ್ಲಿ. ಸರಳನೇಕಾರ್ಣವಂ-: ಸರಳನು ಏಕಾರ್ಣವ= ಸಮುದ್ರಗಳೆಲ್ಲಾ ಮೇರೆದಪ್ಪಿತೆನೆ= ಒಂದಾಗಿ ಉಕ್ಕಿಬಂದಿತೋ ಎನ್ನುವಂತೆ ಬಾಣಗಳನ್ನು, ಮುಸುಕಿದಂ=ಮುಚ್ಚಿದನು, ಕಣೆಯಿಂದವನ-:ಕಣೆಯಿಂದ= ಬಾಣದಿಂದ, ಅವನ ರಥವನು= ರಥವನ್ನು.
(ಪದ್ಯ - ೩೪), |
ಪದ್ಯ - ೩೫
ಸಂಪಾದಿಸಿಮಾರ್ಗದೊಳ್ ಮಾರ್ಗಣಂಗಳನರಿದು ಕರ್ಣಜಂ |
ಕೂರ್ಗಣೆಯ ಕಾರ್ಗಾಲಮಂ ಸೃಜಿಸಲಾ ನೃಪನ |
ತೇರ್ಗೆರಗಿ ಕೂರ್ಗೊಂಡು ಮುತ್ತಿತು ಶರೌಘಮದನೇನೆಂಬೆನಾಕ್ಷಣದೊಳು ||
ಏರ್ಗಳಿಂದೊರ್ಗುಡಿಸಿ ಸಾರಥಿ ಬೀಳಲ್ಕೆ ಕೆ |
ನ್ನೀರ್ಗಾರಿ ದೀರ್ಘಶಯನಂಗೆಯ್ಯೆ ಕುದುರೆಗಳ್ |
ನೇರ್ಗೋಲ ಪೋರ್ಗಳಾ ನೃಪನಂಗದೊಳ್ ಕಾಣಿಸಿದುವು ಜಾಳಂದ್ರದಂತೆ ||35||
ಕರ್ಣಜಂ= ವೃಷಕೇತು, ಮಾರ್ಗದೊಳ್= ದಾರಿಮಧ್ಯದಲ್ಲಿ, ಮಾರ್ಗಣಂಗಳನು ಅರಿದು= ಬಾಣಗಳನ್ನು ಕತ್ತರಿಸಿ, ಕೂರ್ಗಣೆಯ= ಚೂಪಾದ ಬಾಣಗಳ, ಕಾರ್ಗಾಲಮಂ=ಮಳೆಯನ್ನು ಸೃಜಿಸಲಾ= ಉಂಟುಮಾಡಲು ಆ ನೃಪನ=ರಾಜನ, ತೇರ್ಗೆರಗಿ-:ತೇರ್ಗೆ ಎರಗಿ, ಕೂರ್ಗೊಂಡು=ಹೊಕ್ಕು, ಮುತ್ತಿತು ಶರೌಘಮದನೇನೆಂಬೆನಾಕ್ಷಣದೊಳು-: ಶರೌಘಂ ಅದನು ಏನೆಂಬೆನು ಆ ಕ್ಷಣದೊಳು=ಆಕ್ಷಣದಲ್ಲಿ ಬಾಣಗಳು ಮುತ್ತಿತು, ಅದನ್ನು ಏನಂದು ಹೇಳಲಿ. ಏರ್ಗಳಿಂದೊರ್ಗುಡಿಸಿ-: ಏರ್ಗಳಿಂದ=ಬಾಣಗಳಿಂದ ಓರ್ಗುಡಿಸಿ=ಒಲೆದಾಡಿ, ಸಾರಥಿ=ಸಾರಥಿಯು ಬೀಳಲ್ಕೆ= ಬೀಳಲು, ಕೆನ್ನೀರ್ಗಾರಿ-:ಕೆನ್ನೀರ್ ಕಾರಿ, ದೀರ್ಘಶಯನಂಗೆಯ್ಯೆ-:ದೀರ್ಘಶಯನಂ=ಎಚ್ಚರಾದ ನಿದ್ದೆ (ಮರಣ)ಗೈಯೆ= ಮಾಡಲು, ಕುದುರೆಗಳ್=ಕುದುರಗಳು ನೇರ್ಗೋಲ- ನೇರ ಕೋಲ= ಉದ್ದ ಬಾಣಗಳು, ಪೋರ್ಗಳಾ-:ಪೋರ್ಗಳ್=ಹೊಗಲು, ಆ ನೃಪನಂಗದೊಳ್ ಆ ರಾಜನ ಅಂಗದೊಳ್ = ದೇಹದಲ್ಲಿ, ಕಾಣಿಸಿದುವು= ಕಾಣಿಸುವಂತೆ ಮಾಡಿದವು ಜಾಳಂದ್ರದಂತೆ= ತೂತುಗಳ ಜರಡಿಯಂತೆ.
(ಪದ್ಯ - ೩೫), |
ಪದ್ಯ - ೩೬
ಸಂಪಾದಿಸಿಒಡಲೊಳಿಡಿದಸ್ತ್ರಮಂ ಕಿತ್ತೊಡನೆ ಚಿತ್ತದೊಳ್ |
ಕಿಡಿಯಿಡುವ ಕಡುಗೋಪದುರಿ ಮೆಯೊೈಳಿರದೆ ಪೊರ |
ಮಡುವುದೋ ಕಣ್ಗಳಿಂದೆನೆ ಕೆಂಪಡರ್ದಾಲಿಗಳ್ ಭಯಂಕರಮಾಗಲು ||
ತುಡುಕಿ ಪಾವಕಮಹಾಬಾಣಮಂ ತಿರುವಿನೊಳ್ |
ತುಡಿಸಿ ಕಿವಿವರೆಗೆ ತೆಗೆದೆಚ್ಚೊಡವನಂದು ಕೈ |
ಗೆಡದೆ ಕರ್ಣಾತ್ಮಜಂ ವಾರುಣಾಸ್ತ್ರ ಪ್ರಯೋಗದೊಳದಂ ತಂಪಿಸಿದನು||36||
ಒಡಲೊಳಿಡಿದ= ದೇಹದೊಳಗೆ ಅಸ್ತ್ರಮಂ= ಬಾಣವನ್ನು, ಕಿತ್ತೊಡನೆ-: ಕಿತ್ತು=ತೆಗೆದು, ಒಡನೆ=ಕೂಡಲೆ ಚಿತ್ತದೊಳ್ ಕಿಡಿಯಿಡುವ= ಮನಸ್ಸಿನಲ್ಲಿ ಕಿಡಿ ಏಳುವಷ್ಟು, ಕಡುಗೋಪದುರಿ-:ಕಡು= ಬಹಳ, ಕೋಪದ ಉರಿ= ಬೆಂಕಿ ಮೆಯೊೈಳಿರದೆ-: ಮೈಯೊಳ್= ಸಿಟ್ಟಿನ ಬೆಂಕಿ ಮೈಯೊಳಗೆ ಇರದೆ, ಪೊರ ಮಡುವುದೋ= ಹೊರಬರುವುದೋ ಕಣ್ಗಳಿಂದೆನೆ-: ಕಂಣ್ಗಳಿಂದ ಎನೆ= ಕಣ್ಣುಗಳಿಂದ ಎನ್ನುವಂತೆ, ಕೆಂಪಡರ್ದಾಲಿಗಳ್-: ಕೆಂಪು ಅಡರ್ದ ಆಲಿಗಳ್=ಕಣ್ನಾಲಿಗಳು ಕೆಂಪು ಆಗಿ, ಭಯಂಕರಮಾಗಲು= ಭಯಯಾನಕವಾಗಿ ಕಾಣಲು, ತುಡುಕಿ ಪಾವಕ(ಅಗ್ನಿ) ಮಹಾಬಾಣಮಂ= ಅಗ್ನಿಯ ಅಸ್ತ್ರದ ಬಾಣವನ್ನು ತೆಗೆದುಕೊಂಡು, ತಿರುವಿನೊಳ್ ತುಡಿಸಿ= ನಾಣಿಗೆ ಹೂಡಿ, ಕಿವಿವರೆಗೆ ತೆಗೆದೆಚ್ಚೊಡೆ= ಎಳದು ಬಾಣಹೊಡೆಯಲು, ಅವನಂದು=ಅವನು/ ವೃಷಕೇತು ಕೈಗೆಡದೆ= ಎಚ್ಚರತಪ್ಪದೆ ಕರ್ಣಾತ್ಮಜಂ=ವೃಷಕೇತು ವಾರುಣಾಸ್ತ್ರ ಪ್ರಯೋಗದೊಳದಂ ತಂಪಿಸಿದನು= ವರುಣಾಸ್ತ್ರ ಪ್ರಯೋಗಿಸಿ ಅದನ್ನು ಶಾಂತಗೊಳಿಸಿದನು.
(ಪದ್ಯ - ೩೬), |
ಪದ್ಯ - ೩೭
ಸಂಪಾದಿಸಿಹವ್ಯವಾಹಾಸ್ತ್ರಮಂ ವರುಣಾಸ್ತ್ರದಿಂ ಗೆಲ್ದು |
ನವ್ಯಮೇಘಾಸ್ತ್ರಮಂ ಕರ್ಣಜಂ ಪೂಡೆ ವಾ |
ಯವ್ಯಾಸ್ತ್ರದಿಂದೆ ಬರಿಕೈದವಂ ತಿಮಿರಾಸ್ತ್ರಮಂ ಜೋಡಿಸಲ್ಕೀತನು ||
ರವ್ಯಸ್ತ್ರದಿಂದೆ ಬರಿಕೈದವಂ ಶೈಲಾಸ್ತ್ರಮಂ ತುಡಲ್ |
ದಿವ್ಯ ಕುಲಿಶಾಸ್ತ್ರದಿಂ ಮುರಿದಾ ನೃಪಾಲನು |
ಗ್ರವ್ಯಾಳದಸ್ತ್ರಮಂ ತೆಗೆಯಲ್ಕೆ ಗರುಡಾಸ್ತ್ರದಿಂದಿವಂ ಖಂಡಿಸಿದನು ||37||
ಹವ್ಯವಾಹಾಸ್ತ್ರಮಂ= ಆಗ್ನೇಯಾಸ್ತ್ರವನ್ನು, ವರುಣಾಸ್ತ್ರದಿಂ ಗೆಲ್ದು= ವರುಣಾಸ್ತ್ರದಿಂದ ಗೆದ್ದು, ನವ್ಯಮೇಘಾಸ್ತ್ರಮಂ= ನವ್ಯಮೇಘಾಸ್ತ್ರವನ್ನು ಕರ್ಣಜಂ= ವೃಷಕೇತು ಪೂಡೆ= ಹೂಡಲು, ವಾಯವ್ಯಾಸ್ತ್ರದಿಂದೆ= ವಾಯವ್ಯಾಸ್ತ್ರದಿಂದ ಅದನ್ನು ಬರಿಕೈದವಂ= ಶಾಂತಗೋಳಿಸಿದನು, ತಿಮಿರಾಸ್ತ್ರಮಂ= ತಿಮಿರಾಸ್ತ್ರವನ್ನು(ಕತ್ತಲೆ) ಜೋಡಿಸಲ್ಕೀತನು-:ಜೋಡಿಸಲ್ಕೆ= ಬಿಡಲು, ಈತನು ಅದನ್ನು ರವ್ಯಸ್ತ್ರದಿಂದೆ= ರವ್ಯಸ್ತ್ರದಿಂದ(ಸೂರ್ಯ) ಬರಿಕೈದವಂ= ಶಾಂತಗೊಳಿಸಿದನು, ಶೈಲಾಸ್ತ್ರಮಂ= ಶೈಲಾಸ್ತ್ರವನ್ನು ತುಡಲ್= ತೊಡಲು ಅದನ್ನು ದಿವ್ಯ ಕುಶಾಸ್ತ್ರದಿಂ= ವಜ್ರಾಸ್ತ್ರದಿಂದ ಅದನ್ನು ಮುರಿದಾ= ಮುರಿದನು ಆ ನೃಪಾಲನು= ರಾಜನು, ಗ್ರವ್ಯಾಳದಸ್ತ್ರಮಂ= ಸರ್ಪಗಳ ಅಸ್ತ್ರವನ್ನು ತೆಗೆಯಲ್ಕೆ= ತೆಗೆಯಲು, ಅದನ್ನು ಗರುಡಾಸ್ತ್ರದಿಂದ ಇವಂ ಗರುಡಾಸ್ತ್ರದಿಂದ ಖಂಡಿಸಿದನು= ನಿಶ್ಕ್ರಿಯಗೊಳಿಸಿದನು.
(ಪದ್ಯ - ೩೭), |
ಪದ್ಯ - ೩೮
ಸಂಪಾದಿಸಿಫೂತುರೇ ತರುಣ ಮಂತ್ರಾಸ್ತ್ರಪ್ರತೀಕಾರ |
ಚಾತುರ್ಯಮುಂಟಲಾ ನಿನ್ನೊಳದು ಲೇಸು ಗೆ |
ಲ್ವಾತುರಮದೇಕೆ ನಿನಗೆನುತವಂ ಕೈದೋರಿಸಲ್ ಕಣೆಗಳಾಗಸದೊಳು ||
ಸೇತುವಂ ಕಟ್ಟಿದವೊಲಿಟ್ಟಣಿಸಲಾಗ ವೃಷ |
ಕೇತು ತರಿದೊಡ್ಡುತಿರಲವರಿರ್ವರೆಡೆಯೊಳ |
ಡ್ಡಾತು ನಿಂದುದು ಬಳೆದು ಚಿನಗಡಿದ ಶರಗಿರಿಯದೇನೆಂಬೆನದ್ಭುತವನು ||38||
ಫೂತುರೇ=ಭಲೇ! ತರುಣ= ತರುಣನೇ, ಮಂತ್ರಾಸ್ತ್ರಪ್ರತೀಕಾರ ಚಾತುರ್ಯಮುಂಟಲಾ= ಮಂತ್ರಾಸ್ತ್ರಗಳಿಗೆ ಪ್ರತೀಕಾರ ಮಂತ್ರಾಸ್ತ್ರ ಪ್ರಯೋಗಿಸುವ ಚತುರತೆ ನಿನಗೆ ಉಂಟಲ್ಲವೇ! ನಿನ್ನೊಳದು ಲೇಸು ಗೆಲ್ವಾತುರಮದೇಕೆ-: ಗೆಲ್ವ ಆತುರವು ಅದು ಏಕೆ= ಗೆಲ್ಲಲು ಅವಸರ ಮಾಡಬೇಡ, ನಿನಗೆನುತವಂ-:ನಿನಗೆ, ಎನುತ ಅವಂ=ಎಂದು ಹೇಳುತ್ತಾ ಅವನು, ಕೈದೋರಿಸಲ್= ಕೈತೋರಿಸುತ್ತಾ, ಕಣೆಗಳಾಗಸದೊಳು= ಕಣೆಗಳು ಆಗಸದೊಳು ಸೇತುವಂ ಕಟ್ಟಿದವೊಲಿಟ್ಟಣಿಸಲಾಗ_:ಕಟ್ಟಿದವೊಲ್ ಇಟ್ಟಣಿಸಲು ಆಗ= ಆಕಾಶದಲ್ಲಿ ಬಾಣಗಳ ಸೇತುವೆ ಕಟ್ಟಿದಂತೆ ತುಂಬಿಹೋಗಲು, ವೃಷಕೇತು ತರಿದೊಡ್ಡುತಿರಲವರಿರ್ವರೆಡೆಯೊಳಡ್ಡಾತು-:ತರಿದು ಒಡ್ಡುತಿರಲ್ ಅವರ ಇರ್ವರ= ಈರ್ವರ ಎಡೆಯೊಳಡ್ಡ ಆತು ನಿಂದುದು ಬಳೆದು ಚಿನಗಡಿದ=ಸಣ್ಣದಾಗಿ ಕತ್ತರಿಸಿದ ಶರಗಿರಿಯು ಅದೇನೆಂಬೆನು ಅದ್ಭುತವನು=ವೃಷಕೇತು ಆ ಬಾಣಗಳನ್ನು ಕತ್ತರಿಸಿ ಹಾಕುತ್ತಿರಲು, ಅವರಿಬ್ಬರ ಮಧ್ಯದಲ್ಲಿ ಸಣ್ಣದಾಗಿ ಕತ್ತರಿಸಿದ ಬಾಣಗಳ ಬೆಟ್ಟವು ರಾಶಿಯಾಗಿ ಬೆಳೆದು ನಿಂತಿತು. ಅದ್ಭುತವನ್ನು ಏನೆಂಬೆನು= ಏನೆಂದು ಹೇಳಲಿ
(ಪದ್ಯ - ೩೮), |
ಪದ್ಯ - ೩೯
ಸಂಪಾದಿಸಿಅವರಿರ್ವರೆಸುಗೆಯೊಳ್ ಮಂಡಲಾಕೃತಿಯೊಳೊ |
ಪ್ಪುವ ಕಾರ್ಮುಕಂಗಳುದಯಾಸ್ತಮಯಮಪ್ಪ ಶಶಿ |
ರವಿಬಿಂಬದಾಯತದೊಲಿರೆ ನಡುವಣಂಬುಗಳ್ ತನ್ಮರೀಚಿಗಳಂತಿರೆ ||
ಅವಯವದ ಗಾಯದೊಳುಗುವ ರಕ್ತಧಾರೆಗಳ್ |
ತವೆ ಸಂಜೆಗೆಂಪಿಡಿದ ತೆರದಿಂದೆ ಕಂಗೊಳಿಸೆ |
ಭುವನದೊಳ್ ಪೊಸತಾಯ್ತು ಸಂಗರಂ ಸಂಧ್ಯಾಗಮವನಂದು ಸೂಚಿಪಂತೆ||39||
ಅವರಿರ್ವರ= ಅವರಿಬ್ಬರ, ಎಸುಗೆಯೊಳ್=(ಬಾಣಗಳ) ಪ್ರಯೋಗದಲ್ಲಿ ಮಂಡಲಾಕೃತಿಯೊಳ್=ವೃತ್ತದಂತೆ, ಒಪ್ಪುವ=ಕಾಣುವ ಕಾರ್ಮುಕಂಗಳು= ಬಾಣಗಳು, ಉದಯಾಸ್ತಮಯಮಪ್ಪ ಶಶಿರವಿಬಿಂಬದ ಆಯತದ ಒಲ್ ಇರೆ=ಉದಯ ಅಸ್ತಮ ಸಮಯದ ಚಂದ್ರ ಸೂರ್ಯರ ಬಿಂಬ/ಮಂಡಲದಂತೆ ಇರಲು, ನಡುವಣಂಬುಗಳ್= ನಡುವಿನ ಅಂಬುಗಳು/ಬಾಣಗಳು, ತನ್ಮರೀಚಿಗಳಂತಿರೆ-ತನ್ ಮರೀಚಿಗಳಂತೆ ಇರೆ= ಅದರ ಕಿರಣಗಳಂತೆ ಇರಲು, ಅವಯವದ= ದೇಹದ, ಗಾಯದೊಳು ಉಗುವ= ಗಾಯದಿಂದ ಹೊರಡುವ, ರಕ್ತಧಾರೆಗಳ್,= ರಕ್ತದ ಹರಿವು, ತವೆ= ಅತಿಯಾದ, ಸಂಜೆಗೆಂಪಿಡಿದ= ಸಂಜೆಯ ಕೆಂಪು ಇಡಿದ=ಹಚ್ಚಿದ, ತೆರದಿಂದೆ= ರೀತಿಯಲ್ಲಿ, ಕಂಗೊಳಿಸೆ= ಪ್ರಕಾಶಿಸಲು, ಭುವನದೊಳ್= ಭೂಮಿಯಮೇಲೆ, ಪೊಸತಾಯ್ತು ಸಂಗರಂ= ಯುದ್ಧವು ಹೊಸಬಗೆಯಾಯಿತು, ಹೇಗೆಂದರೆ ಅದು, ಸಂಧ್ಯಾಗಮವನಂದು ಸೂಚಿಪಂತೆ= ಪ್ರಕೃತಿಯಲ್ಲಿ ಸಂದ್ಯಾಗಮನವನ್ನು ಸೂಚಿಸುವಂತಿತ್ತು.
(ಪದ್ಯ - ೩೯), |
ಪದ್ಯ - ೪೦
ಸಂಪಾದಿಸಿಎಚ್ಚು ಕೈಗೆಡನಾ ನೃಪಾಲನಾ ಕಣಿಗಳಂ |
ಕೊಚ್ಚಿ ಬೇಸರನೀ ವೃಷಧ್ವಜಂ ಬಳಿಕದಕೆ |
ಮೆಚ್ಚಿ ಕೇಳ್ದಂ ಯೌವನಾಶ್ವನೆಲೆ ಬಾಲ ನೀಂ ಪಸುಳೆಯಾಗಿರ್ದೊಡೇನು ||
ಕೆಚ್ಚೆದೆಯ ಭಟನಪ್ಪೆ ನಿನ್ನ ಪಡೆದವನಾವ |
ನೆಚ್ಚರಿಸು ನಿಮ್ಮ ಮುತ್ತಯ್ಯನಾರೆನುತೆ ತೆಗೆ |
ದೆಚ್ಚೊಡಾತನ ಕೋಲ್ಗಳಂ ಕಡಿದು ನಸುನಗುತೆ ಕರ್ಣಸುತನಿಂತೆಂದನು ||40||
ವೃಷಕೇತುವು, ಎಚ್ಚು= ಬಾಣದಿಂದ ಹೊಡೆದು ಕೈಗೆಡನಾ= ಕೈಸೋಲನು, ನೃಪಾಲನಾ ಕಣಿಗಳಂ ಕೊಚ್ಚಿ ಬೇಸರನೀ ವೃಷಧ್ವಜಂ= ರಾಜನ ಬಾಣಗಳನ್ನು ಕತ್ತರಿಸಿ ಬೇಸರಪಡನು (ಈ ವೃಷಧ್ವಜನು), ಬಳಿಕದಕೆಬಳಿಕ= ನಂತರ ಅದಕೆ= ಅದರಿಂದ, ಮೆಚ್ಚಿ ಕೇಳ್ದಂ= ಅದನ್ನು ಮೆಚ್ಚಿ, ಯೌವನಾಶ್ವನೆಲೆ=ಯೌವನಾಶ್ವನು ಎಲೆ, ಬಾಲ ನೀಂ ಪಸುಳೆಯಾಗಿರ್ದೊಡೇನು ಕೆಚ್ಚೆದೆಯ ಭಟನಪ್ಪೆ= ಎಲೈ ಬಾಲಕನೆ ನೀನು ಹರೆಯದವನಾದರೂ,ಕೆಚ್ಚದೆಯುಳ್ಳ ಯೋಧನಾಗಿರುವೆ, ನಿನ್ನ ಪಡೆದವನ=ಹೆತ್ತವನು, ಆವನು= ಯಾರು ಎಚ್ಚರಿಸು= ಹೇಳು, ನಿಮ್ಮ= ನಿನ್ನ ಮುತ್ತಯ್ಯನಾರೆನುತೆ= ಮುತ್ತಯ್ಯನು=ಅಜ್ಜನು ಯಾರು, ಎನುತ= ಎನ್ನುತ್ತಾ, ತೆಗೆದೆಚ್ಚೊಡಾತನ= ತೆಗದುಎಚ್ಚೊಡೆ= ಬಾಣದಿಂದ ಹೊಡೆದಾಗ,ಆತನ= ಅವನ, ಕೋಲ್ಗಳಂ=ಬಾಣಗಳನ್ನು, ಕಡಿದು= ಕತ್ತರಿಸಿ, ನಸುನಗುತೆ= ನಸುನಗುತ್ತಾ, ಕರ್ಣಸುತನಿಂತೆಂದನು= ಕರ್ಣನಮಗನು, ಇಂತು= ಹೀಗೆ, ಎಂದನು= ಹೇಳಿದನು.
(ಪದ್ಯ - ೩೭), |
ಪದ್ಯ - ೪೧
ಸಂಪಾದಿಸಿಪುಯ್ಯಲೊಳ್ ಬಂದಳವುದೋರುತಿರ್ಪಾಗ ನಿ |
ಮ್ಮಯ್ಯ ಮುತ್ತಯ್ಯನಾರೆಂದು ತನ್ನಂ ಕೇಳ್ವೆ |
ಕಯ್ಯರಿದು ಕಾಣಬೇಡವೆ ಕರ್ಣ ಕಮಲಹಿತಕರರವರನುಸಿರಬಹುದೆ ||
ಪೊಯ್ಯಲೆಳಸಿದ ವಿರೋಧಿಯ ಕಿವಿಗೆ ವಿರಹಿತಂ |
ಗೆಯ್ಯಬೇಕಲ್ಲದೆಲೆ ಮರುಳೆ ಕೋವಿದನಾದೊ |
ಡೊಯ್ಯನೆ ಪರೋಕ್ಷದೊಳ್ ತಿಳಿದುಕೊಳ್ ಸಾಕೆನುತೆ ವೃಷಕೇತುತೆಗೆದೆಚ್ಚನು||41||
ಪುಯ್ಯಲೊಳ್= ಯುದ್ಧದಲ್ಲಿ, ಬಂದಳವುದೋರುತಿರ್ಪಾಗ-:ಬಂದು ಅಳವು ತೋರುತಿರ್ಪಾಗ= ಬಂದು ಶಕ್ತಿ ಪ್ರದರ್ಶಿಸತ್ತಿರುವಾಗ, ನಿಮ್ಮಯ್ಯ= ನಮ್ಮ ತಂದೆ, ಮುತ್ತಯ್ಯನಾರೆಂದು-: ಅಜ್ಜನು ಯಾರೆಂದು, ತನ್ನಂ=ತನ್ನನ್ನು, ಕೇಳ್ವೆ= ಕೇಳುವೆ, ಕಯ್ಯರಿದು= ಕೈಚಳಕನೋಡಿ, ಕಾಣಬೇಡವೆ= ತಿಳಿದುಕೊಳ್ಳಬೇಡವೇ? ಕರ್ಣ ಕಮಲಹಿತಕರರವರನುಸಿರಬಹುದೆ-:ಕರ್ಣನು, ಕಮಲಹಿತಕರ= ಸೂರ್ಯನ (ಹೆಸರ) ಉಸಿರಬಹುದೆ= ಹೆಸರು ಹೇಳಬಹುದೇ, ಪೊಯ್ಯಲು= ಯುದ್ಧಕ್ಕೆ, ಎಳಸಿದ=ಮಾಡಲು ಬಂದ, ವಿರೋಧಿಯ ಕಿವಿಗೆ ವಿರಹಿತಂ= ಅಹಿತವನ್ನು ಗೆಯ್ಯಬೇಕಲ್ಲದೆಲೆ-: ಗೈಯ್ಯಬೇಕು= ಮಾಡಬೇಕು, ಅಲ್ಲದೆ= ಅದಲ್ಲದೆ, ಮರುಳೆ ಕೋವಿದನಾದೊಡೆ= ತಿಳಿದವನಾದೊಡೆ ಒಯ್ಯನೆ=ಉಪಾದಲ್ಲಿ, ಪರೋಕ್ಷದೊಳ್= ಪ್ರತ್ಯೇಕವಾಗಿ, ತಿಳಿದುಕೊಳ್= ತಿಳಿದುಕೋ. ಸಾಕೆನುತೆ= ಸಾಕು ಎನತೆ=ಎನ್ನುತ್ತಾ, ವೃಷಕೇತುತೆಗೆದೆಚ್ಚನು=ವೃಷಕೇತು ಬಾಣತೆಗೆದು ಎಚ್ಚನು= ಹೊಡೆದನು.
(ಪದ್ಯ - ೪೧), |
ಪದ್ಯ - ೪೨
ಸಂಪಾದಿಸಿಅಪ್ರತಿಮನಪ್ಪೆ ಬಾಲಕ ಲೇಸುಲೇಸು ಬಾ |
ಣಪ್ರಯೋಗಂಗಳೆನುತೊಂದು ಕಣಿವೂಡಿ ಕ |
ರ್ಣಪ್ರದೇಶಕೆ ತೆಗೆದವಂ ಬಿಡಲ್ಕಿವನುರವನುಗಿಯೆ ಮೈಮರೆದು ಕೂಡೆ ||
ಸಪ್ರಾಣಿಸುತೆ ಕೆರಳ್ದಿನ್ನು ನೋಡೀ ಸಾಯ |
ಕಪ್ರಭಾವವನೆನುತೆ ದೆಸೆದೆಸೆಗುಗುಳ್ವ ಕನ |
ಕಪ್ರಭೇಯೊಳೆಸೆವ ಸರಳಂ ತೊಟ್ಟು ಕೆನ್ನೆಗೆಳೆದಾರ್ದೆಚ್ಚನಾನೃಪನನು ||42||
ಅಪ್ರತಿಮನಪ್ಪೆ ಬಾಲಕ ಲೇಸುಲೇಸು= ಬಾಲಕನೇ ನೀನು ಸರಿಸಾಟಿ ಇಲ್ಲದವನು, ಬಾಣಪ್ರಯೋಗಂಗಳು ಲೇಸು ಲೇಸು! ಎನುತ, ಒಂದು ಕಣಿವೂಡಿ= ಒಂದು ಬಾಣ ಹೂಡಿ, ಕರ್ಣಪ್ರದೇಶಕೆ ತೆಗೆದವಂ= ಕಿವಿಯವರೆಗೆ (ತೆಗೆದು)ಎಳೆದು ಅವಂ=ಅವನು ಬಿಡಲ್ಕಿವನುರವನುಗಿಯೆ-:ಬಿಡಲ್ಕೆ=ಬಿಡಲು ಇವನು, ಉರವನು= ಎದೆಯನ್ನು, ಉಗಿಯೆ=ಹೊಗಲು, ಮೈಮರೆದು=ಎಚ್ಚರತಪ್ಪಿ ಕೂಡೆ= ತಕ್ಷಣ, ಸಪ್ರಾಣಿಸುತೆ= ಚೇತರಿಸಿಕೊಂಡು, ಕೆರಳ್ದಿನ್ನು- ಕೆರಳ್ದು ಇನ್ನುನಂತರ ಸಿಟ್ಟಿನಿಂದ, ನೋಡೀ=ನೋಡು ಈ ಸಾಯಕಪ್ರಭಾವವನು= ಬಾಣದ ಶಕ್ತಿಯನ್ನು ನೋಡು ಎನುತೆ= ಎನ್ನುತ್ತಾ, ದೆಸೆದೆಸೆಗುಗುಳ್ವ= ದಿಕ್ಕುದಿಕ್ಕಿಗೆ /ಎಲ್ಲಾದಿಕ್ಕುಗಳಿಗೆ ಉಗುಳ್ವ= ಸೂಸುವ, ಕನಕಪ್ರಭೇಯೊಳೆಸೆವ= ಚಿನ್ನದ ಪ್ರಬೆಯನ್ನು ಎಸೆವ= ಬೀರುವ, ಸರಳಂ= ಬಾಣವನ್ನು ತೊಟ್ಟು= ಹೂಡಿ, ಕೆನ್ನೆಗೆಳೆದು ಕೆನ್ನವರೆಎಳೆದು,ಆರ್ದು= ಆರ್ಭಟಿಸಿ, ಎಚ್ಚನಾನೃಪನನು= ಎಚ್ಚನು= ಹೊಡೆದನು ಆ ನೃಪನನು= ಆ ರಾಜನನ್ನು.
(ಪದ್ಯ - ೪೨), |
ಪದ್ಯ - ೪೩
ಸಂಪಾದಿಸಿಏನೆಂಬೆನರಸ ಕರ್ಣಜನ ಬಾಣದ ಘಾತ |
ಕಾ ನರೇಂದ್ರಂ ಕರದ ಚಾಪಮಂ ಬಿಟ್ಟು ಮೂ |
ರ್ಛಾನುಗತನಾಗಲಾತನ ಬಲಂ ಮುಂಕೊಂಡು ಬಂದಿವನಮೇಲೆ ಕವಿಯೆ ||
ಆನೆಯಂ ವೊಯ್ದೆಳೆವ ಸಿಂಗಮಂ ಮುತ್ತುವ ಮೃ |
ಗಾನೀಕಮಂ ಕಂಡೆವಿಂದೆನುತೆ ತುಳುಕಿದನ |
ನೂನ ಶರಜಾಲಮಂ ಕರಿ ತುರಗ ರಥ ಪದಾತಿಗಳ ಸಂದಣಿ ದಣಿಯಲು ||43||
ಏನೆಂಬೆನರಸ= ಏನನು=ಏನನ್ನು, ಎಂಬೆನು= ಹೇಳಲಿ, ಅರಸ ಜನಮೇಜಯನೇ, ಕರ್ಣಜನ= ವೃಷಕೇತುವಿನ, ಬಾಣದ ಘಾತಕೆ= ಬಾಣದ ಪಟ್ಟಿಗೆ, ನರೇಂದ್ರಂ= ರಾಜನು, ಕರದ ಚಾಪಮಂ ಬಿಟ್ಟು= ಕೈಯಲ್ಲರುವ ಬಿಲ್ಲನ್ನು ಬಿಟ್ಟು, ಮೂರ್ಛಾನುಗತನಾಗಲಾತನ-: ಮೂರ್ಛಾನುಗತನು ಆಗಲು= ಮೂರ್ಛೆಹೋಗಲು, ಆತನ ಬಲಂ=ಆತನ ಸೈನ್ಯ, ಮುಂಕೊಂಡು ಬಂದಿವನಮೇಲೆ-:ಬಂದು ಇವನ ಮೇಲೆ ಕವಿಯೆ= ಮುಂದೆ ಬಂದು,ಇವನ ಮೇಲೆ ಮುತ್ತಿಗೆ ಹಾಕಲು, ಆನೆಯಂ ವೊಯ್ದೆಳೆವ= ಆನೆಯನ್ನು ಪೊಯ್ದು=ಹೊಡೆದು,ಎಳೆವ= ಎಳೆದುಕೊಂಡುಹೋಗುವ, ಸಿಂಗಮಂ= ಸಿಂಹವನ್ನು, ಮುತ್ತುವ ಮೃಗಾನೀಕಮಂ-: ಮೃಗ= ಜಿಂಕೆಗಳ ಸಮೂಹವನ್ನು, ಕಂಡೆವಿಂದೆನುತೆ= ಕಂಡೆವು ಇಂದು ಎನುತೆ=ಎನ್ನುತ್ತಾ, (ತುಳುಕಿದನು,) ಅನೂನ= ಮಿತಿ ಇಲ್ಲದಷ್ಟು ಶರಜಾಲಮಂ= ಬಾಣಗಳ ಜಾಲವನ್ನು ಕರಿ=ಆನೆ ತುರಗ=ಕುದುರೆ ರಥ ಪದಾತಿಗಳ=ಭಟರ ಸಂದಣಿ=ಗುಂಪು ದಣಿಯಲು= ಬಳಲುವಂತೆ ತುಳುಕಿದನು= ತುಂಬಿದನು/ಪ್ರಯೋಗಿಸಿದನು.
(ಪದ್ಯ - ೪೩), |
ಪದ್ಯ - ೪೪
ಸಂಪಾದಿಸಿತರಿತರಿದು ಕತ್ತರಿಸಿ ಚುಚ್ಚಿ ನಟ್ಟುಚ್ಚಳಿಸಿ |
ಕೊರೆದರೆದು ಕಡಿದಿರಿದು ಬಗಿದುಗಿದು ಗಬ್ಬರಿಸಿ |
ಪರಿದು ಸೀಳ್ದುತ್ತರಿಸಿ ಕೆತ್ತಿ ಖಂಡಿಸಿ ಬಿಳಿಚಿ ತಿವಿದಿಕ್ಕಿ ಕೊಯ್ದು ಪೊಯ್ದು ||
ಎರಗಿ ಕವಿದಿಡಿದೊತ್ತಿ ಕದುಕಿ ಕೀಲಿಸಿ ಕೇರಿ |
ತುರುಗಿ ತುಂಡಿಸಿ ತುಳುಕಿ ನಾಂಟಿ ಮರುಮೊನೆಗೊಂಡು |
ನೆರೆ ಪೊರಳ್ಚಿದುವರಿಚತುರ್ಬಲವನೆಲ್ಲಮಂ ಕರ್ಣಜನಿಸುವ ಕಣೆಗಳು ||44||
ಕರ್ಣಜನಿಸುವ= ವೃಷಕೇತು ಬಿಟ್ಟ ಕಣೆಗಳು= ಬಾನಗಳು, ತರಿತರಿದು=ಸೀಳಿಸೀಳಿ, ಕತ್ತರಿಸಿ ಚುಚ್ಚಿ ನಟ್ಟುಚ್ಚಳಿಸಿ= ನಾಟಿ ಗಾಯವನ್ನು ಉಬ್ಬಿಸಿ, ಕೊರೆದು ಅರೆದು=ಪಡಿಮಾಡಿ, ಕಡಿದಿರಿದು= ಕಡಿದು ಅರಿದು= ಕತ್ತರಿಸಿ, ಬಗಿದುಗಿದು=ದೇಹವನ್ನು ಬಗೆದು ಕಿತ್ತು, ಗಬ್ಬರಿಸಿ=ರಕ್ತಬರಿಸಿ/ಗಾಯಮಾಡಿ, ಪರಿದು= ಹರಿದು, ಸೀಳ್ದುತ್ತರಿಸಿ= ಸೀಳಿ, ಉತ್ತರಿಸಿ= ಪೆಟ್ಟುಮಾಡಿ, ಕೆತ್ತಿ ಖಂಡಿಸಿ= ತುಂಡುಮಾಡಿ, ಬಿಳಿಚಿ= ಬಿಳುಚುವಂತೆಮಾಡಿ, ತಿವಿದಿಕ್ಕಿ= ತಿವಿದು ಇಕ್ಕಿ= ಹೊಡೆದು, ಕೊಯ್ದು= ಕತ್ತರಿಸಿ, ಪೊಯ್ದು= ಹೊಡೆದು, ಎರಗಿ= ಮೇಲೆಬಿದ್ದು, ಕವಿದಿಡಿದೊತ್ತಿ= ಕವಿದು ಇಡಿದು ಒತ್ತಿ=ಒತ್ತೊತ್ತಿ, ಕದುಕಿ= ಅಲ್ಲಾಡಿಸಿ, ಕೀಲಿಸಿ= ನಾಟಿಸಿ, ಕೇರಿ ತುರುಗಿ= ತಿಕ್ಕಿ, ತುಂಡಿಸಿ= ತುಂಡುಮಾಡಿ, ತುಳುಕಿ ನಾಂಟಿ= ನೆಟ್ಟು, ಮರುಮೊನೆಗೊಂಡು=ಮತ್ತೆಮತ್ತೆ ಚುಚ್ಚಿ, ನೆರೆ= ಬಹಳ ಪೊರಳ್ಚಿದುವರಿಚತುರ್ಬಲವನೆಲ್ಲಮಂ-: ಚತುರ್ಬಲವನು = ಚತುರ್ಬಲ ಸೈನ್ಯವನ್ನೂ ಪೊರಳ್ಚಿ=ಹೊರಳಿಸಿದುವು ಹಿಮ್ಮಟಿಸಿದವು (ಕರ್ಣಜನಿಸುವ ಕಣೆಗಳು)
(ಪದ್ಯ - ೪೪), |
ಪದ್ಯ - ೪೫
ಸಂಪಾದಿಸಿತಲೆ ಬೀಳಲಟ್ಟೆಗಳ್ ಕಾದಿದುವು ಮೇಣಟ್ಟೆ |
ನೆಲಕುರುಳೆ ತಲೆಗಳೆದ್ದಾಡಿದುವು ಕೈದುಗಳ |
ನಲುಗಿದುವು ಖಂಡಿಸಿದ ತೋಳ್ಗಳುರೆ ಕಡಿದ ಕಾಲ್ಗಳ್ ಮುಂದಕಡಿಯಿಟ್ಟುವು ||
ಕಲಿತನಮದೆಂತೊ ಪಟುಭಟರಳವಿಗೊಟ್ಟಾಗಿ |
ಸಲೆ ಸರಳ ಸಾರದಿಂ ಮುಡಿಯುತಿರ್ದರು ಸಮು |
ಜ್ವಲ ದೀಪದೆಡೆಗೆ ಮುಗ್ಗುವ ಪತಂಗಪ್ರಸರಮೆನೆ ವೃಷಧ್ವಜನಿದಿರೊಳು ||45||
ತಲೆ ಬೀಳಲ್= ತಲೆ ಕಡಿದು ಬಿದ್ದಾಗ, ಅಟ್ಟೆಗಳ್ ಕಾದಿದುವು= ಮುಂಡಗಳೇ ಹೊಡೆದಾಡಿದವು, ಮೇಣ್ ಅಟ್ಟೆ ನೆಲಕುರುಳೆ= ಮುಂಡಗಳು ನೆಲಕ್ಕೆ ಬಿದ್ದರೆ, ತಲೆಗಳೆದ್ದಾಡಿದುವು= ತಲೆಗಳು ಎದ್ದು ಆಡಿದವು= ಕಾದಿದವು, ಖಂಡಿಸಿದ ತೋಳ್ಗಳುರೆ= ಕತ್ತರಿಸಿದ ತೋಳುಗಳು ಉರೆ=ಹೆಚ್ಚು,ಕೈದುಗಳನು ಅಲುಗಿದುವು= ಆಯುಧಗಳನ್ನು ಬೀಇದವು, ಕಡಿದ ಕಾಲ್ಗಳ್= ಕತ್ತರಿಇದ ಕಾಲುಗಳು, ಮುಂದಕಡಿಯಿಟ್ಟುವು= ಮುಂದಕ್ಕೆ ಅಡಿ ಇಟ್ಟವು= ನಡೆದವು, ಕಲಿತನಮದೆಂತೊ= ಕಲಿತನವನು ಅದು ಎಂತೊ= ವೃಷಕೇತುವಿನ ಶೌರ್ಯ ಅದು ಎಂತೊ=ಎಷ್ಟೊ! ಪಟುಭಟರ = ಯೋದರ ಅಳವಿಗೆ =ಸಾಮರ್ಥ್ಯದಿಂದ ಒಟ್ಟಾಗಿ ಸಲೆ=ಪೂರಾ ಸರಳ= ಬಾಣದಿಂದ, ಸಾರದಿಂ= ಶಕ್ತಿಯಿಂದ/ಏಟಿನಿಂದ ಮುಡಿಯುತಿರ್ದರು= ಸಾಯುತ್ತಿದ್ದರು, ಹೇಗೆಂದರೆ, ಸಮುಜ್ವಲ= ದೊಡ್ಡದಾಗಿ ಉರಿಯುತ್ತಿರುವ, ದೀಪದೆಡೆಗೆ= ದೀಪದ ಎಡೆಗೆ=ಕಡೆಗೆ ಮುಗ್ಗುವ= ಮತ್ತುವ, ಪತಂಗಪ್ರಸರಮೆನೆ= ಪತಂಗ ಪ್ರಸರಂ=ಸಮೂಹ ಎನೆ= ಎಂಬಂತೆ ವೃಷಧ್ವಜನಿದಿರೊಳು-:ವೃಷಧ್ವಜನ ಇದಿರೊಳು.
(ಪದ್ಯ - ೪೫), |
ಪದ್ಯ - ೪೬
ಸಂಪಾದಿಸಿಕಡಿಕಿಡದು ಬಿದ್ದ ಕೈಕಾಲ್ಗಳಿಂ ತೋಳ್ಗಳಿಂ |
ಪೊಡಗೆಡೆದ ಹೇರೊಡಲ ಸೀಳ್ಗಳಿಂ ಪೋಳ್ಗಳಿಂ |
ಮಡಿಮಡಿದುರುಳ್ವ ಕಟ್ಟಾಳ್ಗಳಿಂ ಬಾಳ್ಗಳಿಂದೊಡೆದ ತಲೆವೋಳ್ಗಳಿಂದೆ ||
ಕಡುಭಯಂಕರಮಾಗಲಾರಣದ ಮಾರಣದ |
ನಡುವೆ ಕಲ್ಪಾಂತಭೈರವನಂತೆ ಜವನಂತೆ |
ಕಡುಮುಳಿದವನ ಕಾಣುತವೆ ಬಿಟ್ಟು ಸಲೆ ಕೆಟ್ಟು ಸರಿದರೆಣ್ದೆಸೆಗೆ ಭಟರು ||46||
ಕಡಿಕಡಿದು ಬಿದ್ದ ಕೈಕಾಲ್ಗಳಿಂ ತೋಳ್ಗಳಿಂ= ಕೈಕಾಲುಗಳಿಂದ ಮತ್ತು ತೋಳುಗಳಿಂದ ಪೊಡಗೆಡೆದ-:ಪೊಡೆ ಕಡೆದ= ಬಿದ್ದ ಹೇರೊಡಲ=ಹಡೆದು ಬಿದ್ದ ದೊಡ್ಡ ಹೊಟ್ಟಗಳ, ಸೀಳ್ಗಳಿಂ= ಸೀಳುಗಳು, ಪೋಳ್ಗಳಿಂ= ಹೋಳುಗಳಿಂದ
ಮಡಿಮಡಿದು ಉರುಳ್ವ= ಸತ್ತು ಉರುಳಿಬಿದ್ದ ಕಟ್ಟಾಳ್ಗಳಿಂ= ಯೋಧರಿಂದ, ಬಾಳ್ಗಳಿಂದೊಡೆದ-:ಬಾಳ್ಗಳಿಂದ ಬಾಳ್‍ಗಳಿಂದ=ಕತ್ತರಿಸಿದ,ಒಡೆದ ತಲೆವೋಳ್ಗಳಿಂದೆ= ತಲೆಯ ಹೋಳುಗಳಿಂದ,ಕಡು= ಬಹಳ ಭಯಂಕರಂ= ಭಯಾನಕ ಆಗಲು ಆ ರಣದ= ರಣರಂಗದ, ಮಾರಣದ= ಸತ್ತವರ ನಡುವೆ, ಕಲ್ಪಾಂತಭೈರವನಂತೆ= ಪ್ರಳಯ ಕಾದ ಭೈರವನಂತೆ, ಜವನಂತೆ= ಯಮನಂತೆ, ಕಡು ಮುಳಿದವನ= ಬಹಳ ಕೋಪದ ಅವನ ಕಾಣುತವೆ= ನೋಡುತ್ತಲೆ, ಬಿಟ್ಟು= ಯುದ್ಧವನ್ನು ಬಿಟ್ಟು ಸಲೆ=ಬಹಳ ಕೆಟ್ಟು= ಬಹಳ ನೊಂದು, ಸರಿದರೆಣ್ದೆಸೆಗೆ= ಸರಿದರು= ಓಡಿದರು,ಎಣ್ ದೆಸೆಗೆ= ಎಂಟುದಿಕ್ಕಿಗೆ ಭಟರು= ಯೋಧರು.
(ಪದ್ಯ - ೪೬), |
ಪದ್ಯ - ೪೭
ಸಂಪಾದಿಸಿಮೈಮರೆದ ಭೂಪನಂ ಬಿಟ್ಟು ಪಟುಭಟರುಳಿದೆ |
ವೈಮಹಾದೇವೆನುತೆ ಸರಿದರೆಣ್ದೆಸೆಗಿವಂ |
ಕೈಮಾಡಲೋರ್ವರಂ ಕಾಣದೆ ಬಳಲ್ದ ರಿಪು ಚೇತರಿಸಿಕೊಳ್ಳದಿರಲು ||
ವೈಮನಸ್ಯದೊಳಕಟ ತಪ್ಪಿತೆ ರಣಾಟೋಪ |
ವೈಮೊಗಂ ಬಲ್ಲನೆನುತವನೆಡೆಗೆ ಬಂದಿದೇ |
ನೈಮೂರ್ಛೆ ನಿನಗೆನಲ್ ನುಡಿಯದಿರಲೊಯ್ಯನಾ ನೃಪನುಸಿರನಾರೈದನು ||47||
ಮೈಮರೆದ= ಎಚ್ಚರತಪ್ಪಿದ ಭೂಪನಂ= ರಾಜನನ್ನು ಬಿಟ್ಟು, ಪಟುಭಟರು= ಯೋಧರು, ಉಳಿದೆವೈಮಹಾದೇವೆನುತೆ= ಉಳಿದೆವು ಮಹಾದೇವ ಎನ್ನುತ್ತಾ ಸರಿದರೆಣ್ದೆಸೆಗಿವಂ-:ಎಣ್ ದೆಸೆಗೆ ಸರಿದರು ಇವಂ= ದಿಕ್ಕು ದಿಕ್ಕಿಗೆ ಓಡಿದರು. ಇವನು ಕೈಮಾಡಲು ಓರ್ವರಂ= ಒಬ್ಬರನ್ನೂ ಕಾಣದೆ, ಬಳಲ್ದ= ಬಳಲಿದ ರಿಪು= ಶತ್ರುವು ಚೇತರಿಸಿಕೊಳ್ಳದಿರಲು, ವೈಮನಸ್ಯದೊಳಕಟ= ವೈಮನಸ್ಸಿನೊಳು= ಸಿಟ್ಟಿನಲ್ಲಿ ಅಕಟ ತಪ್ಪಿತೆ= ತಪ್ಪಾಯಿತೆ, ರಣಾಟೋಪವು= ಶೂರತನ, ಐಮೊಗಂ ಬಲ್ಲನೆನುತ= ಶಿವನೇ ಬಲ್ಲನು ಎನ್ನುತ್ತಾ, ಅವನೆಡೆಗೆ= ಅವನ ಹತ್ತಿರ ಬಂದು ಇದೇನೈಮೂರ್ಛೆ ನಿನಗೆನಲ್= ಏನಯ್ಯಾ ನಿನಗೆ ಎಚ್ಚರತಪ್ಪಿತೇ ಎನ್ನಲು, ನುಡಿಯದಿರಲೊಯ್ಯನಾ= ನುಡಿಯದೆ ಇರಲು- ಮಾತಾಡದಿರಲು, ನೃಪನುಸಿರನಾರೈದನು-:ನೃಪನ ಉಸಿರನು ಆರೈದನು= ರಾಜನು ಉಸಿರಾಟವನ್ನು ಮಾಡುವಂತೆ ಉಪಚರಿಸಿದನು.
(ಪದ್ಯ - ೪೭), |
ಪದ್ಯ - ೪೮
ಸಂಪಾದಿಸಿಸತ್ಯಮೆನಗಂಟಾದೊಡಾಂ ಧೀರನಾದೊಡಾ |
ದಿತ್ಯಂಗೆ ಪೌತ್ರನಾದೊಡೆ ತನ್ನ ತಾತಂಗ |
ಪತ್ಯ ನಾನಾದೊಡೀ ನೃಪತಿ ಜೀವಿಸಲೆನುತ ಕರ್ಣಜಂ ಪಗೆಮಾಡುವ ||
ಕೃತ್ಯಮಂ ಬಿಟ್ಟಾ ಮಹೀಶನ ಬಳಲ್ಕೆಗೌ |
ಚಿತ್ಯಮಾದುಪಚಾರದಿಂದೆ ಸಮರಶ್ರಮ ಪ |
ರಿತ್ಯಾಗಮಪ್ಪಂತೆ ಸಂತೈಸುತಿರಲಾ ಧರಾಧಿಪಂ ಮೈಮುರಿದನು ||48||
ವೃಷಕೇತುವು ರಾಜನ ಸ್ಥಿತಿಗೆ ನೊಂದು, ಸತ್ಯಮೆನಗಂಟಾದೊಡಾಂ ಧೀರನಾದೊಡಾದಿತ್ಯಂಗೆ-:ಸತ್ಯಂಎನಗೆಉಂಟುಆದೊಡೆ= ನಾನು ಸತ್ಯವಂತನಾಗಿದ್ದರೆ,ಆಂ=ನಾನು ಧೀರನಾದೊಡೆ ಆದಿತ್ಯಂಗೆ= ನಾನು ಧೀರನಾಗಿದ್ದರೆ,ಸೂರ್ಯನಿಗೆ,ಪೌತ್ರನಾದೊಡೆ= ಮೊಮ್ಮೊಗನಾಗಿದ್ದರೆ, ತನ್ನತಾತಂಗಪತ್ಯನಾನಾದೊಡೆ= ನನ್ನತಂದೆಯ ಮಗನೇ ಆಗಿದ್ದರೆ, ನೃಪತಿ ಜೀವಿಸಲಿ ಎನುತ= ರಾಜನು ಜೀವಿಸಲಿ ಎನ್ನತ್ತಾ, ಕರ್ಣಜಂ= ವೃಷಕೇತು, ಪಗೆಮಾಡುವ= ಶತ್ರು ಮಾಡುವ, ಕೃತ್ಯಮಂ= ಕಾರ್ಯವನ್ನು ಬಿಟ್ಟಾ= ಬಿಟ್ಟು ಆ ಮಹೀಶನ= ರಾಜನ, ಬಳಲ್ಕೆಗೌಚಿತ್ಯಮಾದುಪಚಾರದಿಂದೆ-:ಬಳಲ್ಕೆಗೆ=ಬಳಲಿಕೆಗೆ, ಔಚಿತ್ಯಮಾದ=ಉಚಿತವಾದ ಉಪಚಾರದಿಂದೆ= ಉಪಚಾರದಿಂದ, ಸಮರಶ್ರಮ= ಯುದ್ಧದ ಆಯಾಸವು, ಪರಿತ್ಯಾಗಮಪ್ಪಂತೆ= ಹೋಗುವಂತೆ, ಸಂತೈಸುತಿರಲಾ= ಸಂತೈಸುತಿರಲು ಆ ಧರಾಧಿಪಂ= ರಾಜನು, ಮೈಮುರಿದನು= ಎಚ್ಚರಗೊಂಡನು
(ಪದ್ಯ - ೪೮), |
ಪದ್ಯ - ೪೯
ಸಂಪಾದಿಸಿಅರಸ ಕೇಳಾ ಯೌವನಾಶ್ವನಿಂತಾಗ ಮೈ |
ಮುರಿದು ಕಣ್ದೆರೆವನಿತರೊಳಗಾತನರಿಯದಂ |
ತಿರೆ ಕರ್ಣಸಂಭವಂ ಮುನ್ನ ತಾನಿರ್ದ ಪ್ರದೇಶಕೈತಂದು ನಿಂದು ||
ಕರದ ಕಾರ್ಮುಕವನೊದರಿಸಿ ದಿವ್ಯಬಾಣಮಂ |
ತಿರುಪುತಾರ್ದಿಸುವ ತೆರದಿಂ ಬರಿದೆ ಮುಳಿಸಿನು |
ಬ್ಬರಮಂ ನೆಗಳ್ಚಿ ತನ್ನಾಳ್ತನದ ಬಿಂಕಮಂ ಕಾಣಿಸಿದನೇವೇಳ್ವೆನು ||49||
ಅರಸ ಕೇಳಾ-:ಅರಸನೇ ಕೇಳು ಆ ಯೌವನಾಶ್ವನು ಇಂತು= ಈ ರೀತಿಯಲ್ಲಿ ಆಗ ಮೈಮುರಿದು ಕಣ್ದೆರೆವ= ಕಣ್ಣು ತೆರೆಯುವ ಅನಿತರೊಳಗೆ= ಅಷ್ಟರಲ್ಲಿ, ಆತನು ಅರಿಯದಂತೆ= ತಿಳಿಯದಂತೆ ಇರೆ= ಇರಲು, ಕರ್ಣಸಂಭವಂ= ವೃಷಕೇತು, ಮುನ್ನ ತಾನು ಇರ್ದ= ಮೊದಲು ತಾನು ಇದ್ದ, ಪ್ರದೇಶಕೆ ಐತಂದು= ಬಂದು ನಿಂದು= ನಿಂತುಕೊಂಡು, ಕರದ ಕಾರ್ಮುಕವನು ಒದರಿಸಿ= ಕೈಯಲ್ಲಿದ್ದ ಬಿಲ್ಲನ್ನು ಠೇಂಕಾರ ಮಾಡಿ, ದಿವ್ಯಬಾಣಮಂ ತಿರುಪುತ= ದಿವ್ಯವಾದ ಬಾಣವನ್ನು ತಿರಗಿಸುತ್ತಾ, ಆರ್ದಿಸುವ= ಘರ್ಜಿಸುವ ತೆರದಿಂ= ರೀತಿಯಲ್ಲಿ, ಬರಿದೆ ಮುಳಿಸಿನ= ಸುಳ್ಳೇ ಸಿಟ್ಟಿನ ಉಬ್ಬರಮಂ= ಆವೇಶವನ್ನು ನೆಗಳ್ಚಿ= ಮಾಡಿ, ತನ್ನ ಆಳ್ತನದ= ಶೌರ್ಯದ ಬಿಂಕಮಂ= ಗಾಂಭೀರ್ಯವನ್ನು ಕಾಣಿಸಿದನು= ಪ್ರದರ್ಶಿಸಿದನು; ಏವೇಳ್ವೆನು= ಏನೆಂದು ಹೇಳಲಿ?
(ಪದ್ಯ - ೪೯), |
ಪದ್ಯ - ೫೦
ಸಂಪಾದಿಸಿಕೂಡೆ ಕಣ್ದೆರೆದೆದ್ದು ಚೇತರಿಸಿ ದೆಸೆಗಳಂ |
ನೋಡಿ ತನ್ನವರೊರ್ವರಂ ಕಾಣದಿದಿರೆ ಕೈ |
ಮಾಡದೆ ವೃಥಾಟೋಪಮಂ ನೆಗಳ್ಚುವ ವಿರೋಧಿಯ ವಿಕ್ರಮವನೆ ಕಂಡು ||
ಮೂಡಿದ ವಿರಕ್ತಿಯಿಂ ನಾಚಿ ಮನದೊಳ್ ಪಂತ |
ಪಾಡಿವನೊಳಿನ್ನು ಸಲ್ಲದು ತನಗೆ ಕಾರುಣ್ಯ |
ಕೀಡಾದ ಬಳಿಕದೇತಕೆ ಸಮರವೆನುತವಂ ಕರ್ಣಜಂಗಿಂತೆಂದನು ||50||
ರಾಜನು,ಕೂಡೆ ಕಣ್ದೆರೆದು= ಸ್ವಲ್ಪದರಲ್ಲಿ ಕಣ್ಣುಬಿಟ್ಟು, ಎದ್ದು ಚೇತರಿಸಿ ದೆಸೆಗಳಂ= ಎದ್ದು ಚೇತರಿಸಿಕೊಂಡು ನೋಡಿ= ಸುತ್ತಲೂ ನೋಡಿದಾಗ ತನ್ನವರು ಓರ್ವರಂ= ಒಬ್ಬರನ್ನೂ ಕಾಣದೆ ಇದಿರೆ= ಎದುರಿನಲ್ಲಿ, ಕೈಮಾಡದೆ= ತನ್ನ ಮೇಲೆ ಪ್ರಹಾರಮಾಡದೆ, ವೃಥಾಟೋಪಮಂ ಸುಮ್ಮನೆ ಆಟೋಪವನ್ನು, ನೆಗಳ್ಚುವ= ನಟಿಸುತ್ತಾ ಇರುವ ವಿರೋಧಿಯ= ಶತ್ರುವಿನ ವಿಕ್ರಮವನೆ= ಪರಾಕ್ರಮವನ್ನು ಕಂಡು, ಮೂಡಿದ=ತನ್ನಲ್ಲಿ ಉಂಟಾದ ವಿರಕ್ತಿಯಿಂ= ಯುದ್ಧದ ಅನಾಸ್ಥೆಯನ್ನು ಕಂಡು, ನಾಚಿ= ನಾಚಿಕೆ ಪಟ್ಟು ಮನದೊಳ್= ಮನಸ್ಸಿನಲ್ಲಿ ಪಂತಪಾಡಿವನೊಳಿನ್ನು= ಇನೊಳು ಇನ್ನು ಯುದ್ಧಮಾಡುವುದು ಸಲ್ಲದು= ಸರಿಯಲ್ಲ. ತನಗೆ ಕಾರುಣ್ಯಕೀಡಾದ= ತಾನು ಅವನ ಕರುಣೆಗೆ ಒಳಪಟ್ಟ ಬಳಿಕ, ಅದೇತಕೆ= ಏಕೆ ಸುಮ್ಮನೆ ಸಮರವು ಎನುತ ಅವಂ= ಅವನು ಕರ್ಣಜಂಗೆ ಇಂತೆಂದನು= ಹೀಗೆ ಹೇಳಿದನು.
(ಪದ್ಯ - ೫೦), |
ಪದ್ಯ - ೫೧
ಸಂಪಾದಿಸಿಮೂಲೋಕದೊಳ್ ತನಗೆ ಸಮರಾದ ಮೇದಿನೀ ||
ಪಾಲರಂ ಸುಭಟರಂ ಕಾಣೆನೆಂದಾನಿನಿತು |
ಕಾಲಮುಂ ಬೆರೆತಿರ್ದೆನೆನ್ನುವಂ ಗೆಲ್ದು ನೀನತಿಬಲನೆನಿಸಿಕೊಂಡೆಲಾ ||
ಬಾಲ ನೀನಾರವಂ ನಿನ್ನ ಪೇಸರೇನಿಳೆಗೆ |
ಮೇಲೆನಿಸುವೀ ಹಯಂ ನಿನಗದೇತಕೆ ನಿನ್ನ |
ಶೀಲಕಾಂ ಮಾರುವೋದೆಂ ಕಾದಲೊಲ್ಲೆನಿನ್ನುಸಿರೆಂದೊಡೆಂತೆಂದನು ||51||
ಮೂಲೋಕದೊಳ್= ಮೂರುಲೋಕದಲ್ಲಿ ತನಗೆ ಸಮರಾದ ಮೇದಿನೀಪಾಲರಂ ಸುಭಟರಂ= ರಾಜರನ್ನಾಗಲಿ, ಶೂರರನ್ನಾಗಲಿ ಕಾಣೆನೆಂದಾನಿನಿತು-: ಕಾಣೆನು ಎಂದು ಆನು= ನಾನು ಇನಿತು= ಇಷ್ಟು ಕಾಲಮುಂ=ಕಾಲ ಬೆರೆತಿರ್ದೆನು= ಗರ್ವಪಡುತ್ತಿದ್ದೆನು. ಎನ್ನುವಂ= ನನ್ನನ್ನು ಗೆಲ್ದು= ಗೆದ್ದು ನೀನತಿಬಲನೆನಿಸಿಕೊಂಡೆಲಾ= ನೀನು ಅತಿಬಲನು ಎನಿಸಿಕೊಂಡೆಲಾ= ನಿಸಿಕೊಂಡೆಯಲ್ಲಾ; ಬಾಲ= ಬಾಲಕನೇ ನೀನಾರವಂ= ನೀನು ಯಾರ ಕಡೆಯವನು? ನಿನ್ನ ಪೇಸರೇನ್ ಇಳೆಗೆ= ನಿನ್ನ ಹೆಸರೇನು? ಭೂಮಿಯಲ್ಲಿ ಮೇಲೆನಿಸುವೀ= ಶ್ರೇಷ್ಟವೆನಿಸಿರುವ ಹಯಂ= ಕುದುರೆಯು ನಿನಗದೇತಕೆ= ನಿನಗೆ ಅದು ಏತಕೆ? ನಿನ್ನ ಶೀಲಕಾಂ= ಸಜ್ಜನಿಕೆಯ ನಡತೆಗೆ ಮಾರುವೋದೆಂ= ಮಾರುಹೋದೆನು. ಕಾದಲೊಲ್ಲೆನು ಇನ್ನು ಉಸಿರು ಎಂದೊಡೆ ಇಂತು ಎಂದನು= ಇನ್ನು ಯುದ್ಧವನ್ನು ಮಡುವುದಿಲ್ಲ, ನಿನ್ನವಿಚಾರ ಹೇಳು ಎಂದಾಗ ವೃಷಕೇತು ಹೀಗೆ ಹೇಳಿದನು.
(ಪದ್ಯ - ೫೧), |
ಪದ್ಯ - ೫೨
ಸಂಪಾದಿಸಿಆದೊಡೀ ಜಗಕೆ ಲೋಚನನೆನಿಸಿ ನಭದೊಳೆಸೆ |
ವಾದಿತ್ಯನಿಂದೊಗೆದ ಕರ್ಣನಂ ಕೇಳ್ದರಿವೆ |
ಯಾದೊಡಾತನಸುತಂ ಪೆಸರೆನಗೆ ವೃಷಕೇತುವೆಂದು ನರಲೀಲೆಗಾಗಿ ||
ಯಾದವರ್ಗರಸಾದ ಕೃಷ್ಣಂ ಭರತಕುಲದ |
ಮೇದಿನೀಶ್ವರ ಯುಧಿಷ್ಠರನಿಂ ಮಖಂಗೈಸ |
ಲೀ ದಿವ್ಯಹಯಕೆ ಭೀಮನಟ್ಟಲವನೊಡನೆ ಬಂದೆನಿದು ಹದನೆಂದನು ||52||
ಆದೊಡೀ-:ಆದೊಡೆ ಈ= ಹಾಗಿದ್ದರೆ ಕೇಳು, ಈ ಜಗಕೆ= ಜಗತ್ತಿಗೆ ಲೋಚನನೆನಿಸಿ= ಕಣ್ಣು ಎನಿಸಿರುವ, ನಭದೊಳು ಎಸೆವ ಆದಿತ್ಯನಿಂದ ಒಗೆದ=ಆಕಾಸದಲ್ಲಿ ತೋರುವ ಆದಿತ್ಯನಿಂದ ಜನಿಸಿದ ಕರ್ಣನಂ= ಕರ್ಣನ ಹೆಸರನ್ನು ಕೇಳ್ದು ಅರಿವೆಯಾದೊಡೆ= ಕೇಳಿ ತಿಳಿದಿದ್ದರೆ ಆತನಸುತಂ= ಅವನ ಮಗ ನಾನು. ಪೆಸರೆನಗೆ= ಹೆಸರು ಎನಗೆ= ನನಗೆ ವೃಷಕೇತುವೆಂದು; ನರಲೀಲೆಗಾಗಿ ಯಾದವರ್ಗೆ=ಯಾದವರಿಗೆ ಅರಸಾದ ಕೃಷ್ಣಂ= ಕೃಷ್ಣನು ಭೂಲೋಕದ ಲೀಲೆಗಾಗಿ ಭರತಕುಲದ ಮೇದಿನೀಶ್ವರ= ರಾಜನಾದ ಯುಧಿಷ್ಠರನಿಂ= ಯುಧಿಷ್ಟಿರನಿಂದ ಮಖಂ= ಯಜ್ಞವನ್ನು ಗೈಸಲೀ=ಮಾಡಿಸಲಯ ಈ ದಿವ್ಯಹಯಕೆ= ದಿವ್ಯ ಕುದುರೆಯನ್ನು ತರಲು, ಭೀಮನಟ್ಟಲು= ಭೀಮನನ್ನು ಕಳಿಸಲು ಅವನೊಡನೆ ಬಂದೆನು ಇದು ಹದನು= ವಿಚಾರ ಎಂದನು.
(ಪದ್ಯ - ೫೨), |
ಪದ್ಯ - ೫೩
ಸಂಪಾದಿಸಿಎಂದೊಡೆಲೆ ಕುವರ ನೀನಿನ್ನೆಗಂ ತನ್ನೊಳಿಂ |
ತೆಂದುದಿಲ್ಲಕಟ ಧರ್ಮದ ರೂಪು ತಾನೀತ |
ನೆಂದೆಂಬರಾ ಯುಧಿಷ್ಠಿರಮಹೀಪತಿಯನವನಿಂ ಮಖಂಗೈಸಿದಪನೆ ||
ಇಂದಿರಾವಲ್ಲಭನ ಪದಕೆ ನಮ್ಮೀಹಯವ |
ನೊಂದನೊಯ್ವರೆ ತನ್ನ ಸರ್ವಸ್ವಮಂ ತಾನೆ |
ತಂದು ಹರಿಪದಕರ್ಪಿಸುವೆನೆಲ್ಲಿ ಭೀಮನಂ ತೋರೆಂದನಾ ಭೂಪನು ||53||
ಎಂದೊಡೆಲೆ-:ಎಂದೊಡೆ= ವೃಷಕೇತು ಹೀಗೆ ಹೇಳಲು, ಎಲೆ ಕುವರ= ಕುಮಾರ ನೀನಿನ್ನೆಗಂ= ನೀನು ಇನ್ನೆಗಂ = ಇದುವರೆಗೂ ತನ್ನೊಳಿಂತೆಂದುದಿಲ್ಲಕಟ-:ಎನ್ನೊಳು ಇಂತು = ಹೀಗೆ ಎಂದುದಿಲ್ಲ = ಹೇಳಿದುದಿಲ್ಲ; ಧರ್ಮದ ರೂಪು ತಾನೀತನೆಂದೆಂಬರಾ-:ತಾನು ಈತನು ಎಂದು ಎಂಬರು ಯುಧಿಷ್ಠಿರಮಹೀಪತಿಯನು= ಯುಧಿಷ್ಠಿರಮಹೀಪತಿಯನ್ನು ಈತನು ಧರ್ಮದ ರೂಪು ಎನ್ನುವರು, ಅವನಿಂ= ಅವನಿಂದ ಮಖಂಗೈಸಿದಪನೆ= ಯಜ್ಞವನ್ನು ಮಾಡಿಸುವನೇ ಕೃಷ್ಣನು? ಆ ಇಂದಿರಾವಲ್ಲಭನ= ಲಕ್ಷ್ಮೀಪತಿಯ ಪದಕೆ= ಪಾದಕ್ಕೆ ನಮ್ಮೀಹಯವನೊಂದನೊಯ್ವರೆ= ನಮ್ಮ ಈ ಕುದುರಯನ್ನು ಒಂದನ್ನೇ ಒಯ್ವರೇ= ತೆಗೆದುಕೊಂಡು ಹೋಗುವರೇ? ತನ್ನ ಸರ್ವಸ್ವಮಂ ತಾನೆ ತಂದು= ತನ್ನ ಸರ್ವಸ್ವವನ್ನೂ ಹರಿಪದಕೆ= ಹರಿಯ ಪಾದಕ್ಕೆ ಅರ್ಪಿಸುವೆನು. ಎಲ್ಲಿ ಭೀಮನಂ= ಭೀಮನನ್ನು ತೋರು= ತೊರಿಸು ಎಂದನು ಆ ಭೂಪನು=ರಾಜನು.
(ಪದ್ಯ - ೫೩), |
ಪದ್ಯ - ೫೪
ಸಂಪಾದಿಸಿಎನಲಚ್ಯುತನ ಪದಕೆ ಸರ್ವಸ್ವಮೊಪ್ಪಿಸುವ |
ಮನಮುಳ್ಳನಾವನಾತಂಗೆ ಪಾಂಡವರೊಳೆರ |
ವಿನಿತಿಲ್ಲಮಾ ಪಾರ್ಥಿವರ ಸಖ್ಯಮಾವಂಗೆ ದೊರೆವುದಾತಂಗೆ ಹರಿಯ ||
ಮುನಿಸಿಲ್ಲಮವರಿಂದೆ ಭೀಮನಂ ಕಾಣ್ಬುದೀ |
ಗನುನಯಂ ನಿನಗೆಂದು ಕರ್ಣಜಂ ನುಡಿದೊಡಾ |
ಜನಪನುತ್ಸವದೊಳಳವಡಿಸಿದಂ ತನ್ನ ಮಣಿರಥವನಿರ್ವರುಮೈದಲು ||54||
|
ಎನಲು=ಎನ್ನಲು, ಅಚ್ಯುತನ ಪದಕೆ ಸರ್ವಸ್ವಮಂ ಒಪ್ಪಿಸುವ ಮನಂ ಉಳ್ಳನು= ಅfಯನ ಪಾದಕ್ಕೆ ಸರ್ವಸ್ವವನ್ನು ಒಪ್ಪಿಸುವ ಮನಸ್ಸು ಉಳ್ಳವನು, ಆವನು= ಯಾವನೋ ಆತಂಗೆ= ಅವನಿಗೆ ಪಾಂಡವರೊಳು ಎರವು= ಬೇಧವು ಇನಿತಿಲ್ಲಂ= ವಿರೋಧವು ಸ್ವಲ್ಪವೂ ಇಲ್ಲ. ಆ ಪಾರ್ಥಿವರ= ಆ ದೊರೆಗಳ ಸಖ್ಯಮು= ಸ್ನೇಹವು ಆವಂಗೆ= ಯಾರಿಗೆ ದೊರೆವುದು ಆತಂಗೆ= ದೊರೆವುದೋ= ದೊರಕುವುದೋ ಅವನಿಗೆ, ಹರಿಯ ಮುನಿಸಿಲ್ಲಂ ಅವರಿಂದೆ= ಕೃಷ್ಣನ ಅಪ್ರಸನ್ನತೆ ಇಲ್ಲದಿರುವುದರಿಂದ ಭೀಮನಂ= ಭೀಮನನ್ನು ಕಾಣ್ಬುದು= ಕಾಣುವುದು ಈಗ ಅನುನಯಂ= ಉಚಿತವು, ನಿನಗೆಂದು= ನಿನಗೆ ಎಂದು ಕರ್ಣಜಂ= ವೃಷಕೇತು ನುಡಿದೊಡೆ= ಹೇಳೀದಾಗ ಆ ಜನಪನು= ರಾಜನು ಉತ್ಸವದೊಳು= ಉತ್ಸಾಹದಿಂದ ಅಳವಡಿಸಿದಂ= ಸಿದ್ಧಪಡಿಸಿದನು, ತನ್ನ ಮಣಿರಥವನು= ಮಣಿರಥವನ್ನು ಇರ್ವರುಂ= ಇಬ್ಬರೂ ಐದಲು= ಬೀಮನ ಬಳಿಗೆ ಬರಲು.
(ಪದ್ಯ - ೫೪), |
ಪದ್ಯ - ೫೫
ಸಂಪಾದಿಸಿಮಾನವಾಧೀಶ ಕೇಳ್ ಬಳಿಕ ವೃಷಕೇತು ಸು |
ಮ್ಮಾನದಿಂದಾ ಯೌವನಾಶ್ವಭೂಪತಿಗೆ ಪವ |
ಮಾನಸುತನಂ ಕಾಣಿಸುವೆನೆಂಬ ತವಕದಿಂದಾತನ ವರೂಥದೊಳಗೆ ||
ಮಾನದಿಂದಡರ್ದವಂವೆರಸಿ ನಡೆತರುತಿರೆ ವಿ |
ಮಾನದಿಂ ನೋಡುವನಿಮಿಷನಿಕರಮೀತನ ಸ |
ಮಾನದವರಿಲ್ಲೆಂದು ಕೊಂಡಾಡುತಾಗಸದೊಳಲರ ಸರಿಯಂ ಕರೆದರು ||55||
|
ಮಾನವಾಧೀಶ=ರಾಜನೇ ಕೇಳ್= ಕೇಳು ಬಳಿಕ ವೃಷಕೇತು ಸುಮ್ಮಾನದಿಂದ= ಸಂತೋಷದಿಂದ, ಆ ಯೌವನಾಶ್ವಭೂಪತಿಗೆ ಪವಮಾನಸುತನಂ= ಭೀಮನನ್ನು ಕಾಣಿಸುವೆನು= ಭೇಟಿಮಾಡಿಸುವೆನು ಎಂಬ ತವಕದಿಂದ ಆತನ ವರೂಥದೊಳಗೆ= ರಾಜನ ರಥದೊಳಗೆ ಮಾನದಿಂದ= ಗವರವ ಪೂರ್ವಕವಾಗಿ ಅಡರ್ದು= ಹತ್ತಿ ಅವಂವೆರಸಿ= ಅವನ ಗೊತೆಯಲ್ಲಿ ನಡೆತರುತಿರೆ= ಬರುತ್ತಿರಲು, ವಿಮಾನದಿಂ= ವಿಮಾನದಲ್ಲಿ ನೋಡುವ ಅನಿಮಿಷ ನಿಕರಂದೇವತೆಗಳ ಗುಂಪು ಈತನ ಸಮಾನದವರಿಲ್ಲ ಎಂದು ಕೊಂಡಾಡುತ= ಕೊಂಡಾಡುತ್ತಾ ಆಗಸದೊಳು= ಆಕಾಶದಲ್ಲಿ ಅಲರ= ಹೂವಿನ ಸರಿಯಂ=ಮಳೆಯನ್ನು ಕರೆದರು.
(ಪದ್ಯ - ೫೫), |
ಪದ್ಯ - ೫೬
ಸಂಪಾದಿಸಿಪದ್ಯ - ೫೬[ಸಂಪಾದಿಸಿ]
ಅನ್ನೆಗಂ ಭದ್ರಾವತೀಶ್ವರನ ಸುತನ ಸೈ |
ನ್ಯನ್ನಡೆದು ಬಂದಾ ವೃಕೋದರನ ಮುತ್ತಿದೊಡ |
ವನ್ನಿಜಗದಾದಂಡಮಂ ಕೊಂಡು ದಿಂಡುಗೆಡಪಿದೊಡಾ ನೃಪಾಲಸೂನು ||
ತನ್ನ ಸಾಹಸದೊಳನಿಲಜನ ಕೋಪಾಟೋಪ |
ಮನ್ನಿಲಿಸಿ ಕಾದುತಿರಲಾ ಸಮಯಕಿವರೊಂದೆ |
ರನ್ನದೇರೊಳಗಿರ್ವರುಂ ಬರುತಿರಲ್ ಕಂಡು ಬೆರಗಾದರವರತ್ತಲು ||56||
ಅನ್ನೆಗಂ= ಆಸಮಯದಲ್ಲಿ ಭದ್ರಾವತೀಶ್ವರನ ಸುತನಯವನಾಸ್ವನ ಮಗ ಸುವೇಗನ ಸೈನ್ಯ ನೆಡೆದು ಬಂದು ಆ ವೃಕೋದರನ= ಭೀಮನನ್ನು ಮುತ್ತಿದೊಡೆ= ಮುತ್ತಿದಾಗ, ಅವನು ನಿಜ= ತನ್ನ ಗದಾದಂಡಮಂ= ಗದೆಯನ್ನು ಕೊಂಡು= ತೆಗೆದುಕೊಂಡು, ದಿಂಡುಗೆಡಪಿದೊಡೆ= ಅವರ ಶಕ್ತಿಯನ್ನು ಕೆಡುಪಿದೊಡೆ= ಇಲ್ಲದಂತೆ ಮಾಡಿದಾಗ ಆ ನೃಪಾಲಸೂನು= ಸುವೇಗನು ತನ್ನ ಸಾಹಸದೊಳ್= ತನ್ನ ಸಾಹಸದಿಂದ ಅನಿಲಜನ= ಭೀಮನ ಕೋಪಾಟೋಪಮಂ ನಿಲಿಸಿ= ತಡೆದು ಕಾದುತಿರಲು= ಯುದ್ಧಮಾಡುತ್ತಿರಲು, ಆ ಸಮಯಕೆ= ಅದೇ ಸಮಯದಲ್ಲಿ ಇವರು ಒಂದೆ ರನ್ನದೇರೊಳಗಿರ್ವರುಂ= ರಥದಲ್ಲಿ ಬರುತಿರಲ್=ಇದ್ದುದನ್ನು ಕಂಡು ಬೆರಗಾದರು ಅವರು ಅತ್ತಲು.
(ಪದ್ಯ - ೫೬), |
ಪದ್ಯ - ೫೭
ಸಂಪಾದಿಸಿಪವಮಾನನಂದನ ಸುವೇಗರನ್ನೋನ್ಯಮಾ |
ಹವದ ಬೇಳಂಬಮಂ ಮರೆದೊಂದೆ ಪೊಂದೇರೊ |
ಳವರಿರ್ವರುಂ ಬರಲ್ ಕಂಡು ವಿಸ್ಮಿತರಾಗಿ ನಿಂದರನಿತರೊಳಿತ್ತಲು ||
ರವಿಸುತನ ಸೂನು ಕಲಿಯೌವನಾಶ್ವಂಗೆ ಪಾಂ |
ಡವರಾಯನನುಜನಂ ತೋರಿಸಿದೊಡಾ ವರೊ |
ಘೌನಿಳಿದು ನಡೆಯುತಾ ಭೂವರಂ ತನ್ನ ತನುಸಂಭವಂಗಿಂತೆಂದನು ||57||
ಪವಮಾನನಂದನ=ಭೀಮ ಸುವೇಗರು ಅನ್ನೋನ್ಯಂ=ಪರಸ್ಪರ ಆಹವದ= ಯುದ್ಧದ ಬೇಳಂಬಮಂ= ಪ್ರಯತ್ನವನ್ನು ಮರೆದು= ಮರೆತು ಒಂದೆ ಪೊಂದೇರೊಳು= ಒಂದೇ ಹೊನ್ನುರಥದಲ್ಲಿ ಅವರಿರ್ವರುಂ=ಅವರಿಬ್ಬರೂ ಬರಲ್ ಕಂಡು= ಬಂದುದನ್ನು ಕಂಡು, ವಿಸ್ಮಿತರಾಗಿ ನಿಂದರು= ಆಶ್ಚರ್ಯದಿಂದ ನಿಂತುಬಿಟ್ಟರು. ಅನಿತರೊಳಿತ್ತಲು= ಅಷ್ಟರಲ್ಲಿ ಇತ್ತ ರವಿಸುತನ ಸೂನು= ವೃಷಕೇತುವು, ಕಲಿಯೌವನಾಶ್ವಂಗೆ= ಶೂರನಾದ ಯೌವನಾಶ್ವಂನಿಗೆ ಪಾಂಡವರಾಯನ ಅನುಜನಂ= ಭೀಮನನ್ನು ತೋರಿಸಿದೊಡೆ= ತೋರಿಸಿದಾಗ ಆ ವರೊಘೌನು ಇಳಿದು ನಡೆಯುತಾ ಭೂವರಂ= ಆ ಶ್ರೇಷ್ಠರಥವನ್ನು ಇಳಿದು, ತನ್ನ ತನುಸಂಭವಂಗೆ= ತನ್ನ ಮಗ ಸುವೇಗನಿಗೆ ಇಂತೆಂದನು= ಹೀಗೆ ಹೇಳಿದನು.
(ಪದ್ಯ - ೫೭), |
ಪದ್ಯ - ೫೮
ಸಂಪಾದಿಸಿತನಯ ದಿವ್ಯಾಶ್ವಮಂ ಪಿಡಿದರಿವರೆಂಬ ಮನ |
ದನುತಾಪವಂ ಬಿಡು ಸರೋಜಾಂಬಕಂ ಪಾಂಡು |
ಜನಪನಂದನ ಯುಧಿಷ್ಠಿರನರೇಶ್ವರನ ಮಖಕೆಂದು ನಮ್ಮೀ ಕುದುರೆಗೆ ||
ಅನಿಲಸುತನಂ ಕಳುಹಿದೊಡೆ ಬಂದನಾತಂಗೆ |
ವಿನಯದಿಂದೆಮ್ಮ ಸರ್ವಸ್ವಮಂ ಕುಡುವೆವಿ |
ನ್ನುನುವರವದೇಕೆ ನಿಲ್ಲೆನಲವಂ ಶರಧನುವನಿಳುಹಿ ಪಿತನಂ ಸಾರ್ದನು ||58||
ದನುತಾಪವಂ ಬಿಡು= ನಮ್ಮ ದಿವ್ಯ ಅಶ್ವವನ್ನು ಇವರು ಹಿಡಿದರು ಎಂಬ ಕೋಪವನ್ನು ಬಿಡು. ಸರೋಜಾಂಬಕಂ= ಕೃಷ್ಣನು ಪಾಂಡು ಜನಪನಂದನ= ಪಾಂಡುರಾಜನ ಮಗ ಯುಧಿಷ್ಠಿರ ನರೇಶ್ವರನ ಮಖಕೆಂದು= ಯುಧಿಷ್ಟಿರರಾಜನ ಯಜ್ಞಕ್ಕೆಂದು, ನಮ್ಮ ಈ ಕುದುರೆಗೆ ಅನಿಲಸುತನಂ= ಭೀಮನನ್ನು ಕಳುಹಿದೊಡೆ= ಕಳಹಿಸಿದಾಗ ಅವನು ಬಂದನು= ಬಂದಿರುವನು. ಆತಂಗೆ ವಿನಯದಿಂದ ಎಮ್ಮ ಸರ್ವಸ್ವಮಂ ಕುಡುವೆವು= ಅವನಿಗೆ ನಮ್ಮ ಸರ್ವಸ್ವವನ್ನೂ ಕೊಡುವೆವು. ಇನ್ನು ಅನುವರವು ಅದೇಕೆ=ಸಂಶಯವು ಅದೇಕೆ- ಬೇಡ. ನಿಲ್ಲ ಎನಲು ಅವಂ= ನಿಲ್ಲು ಎನಲು ಅವನು, ಶರಧನುವನು ಇಳುಹಿ ಪಿತನಂ ಸಾರ್ದನು= ಬಿಲ್ಲ ಬಾಣಗಳನ್ನು ಕೆಳಗಿಳಿಸಿ ತಂದೆಯ ಹತ್ತಿರ ಹೋದನು.
(ಪದ್ಯ - ೫೮), |
ಪದ್ಯ - ೫೯
ಸಂಪಾದಿಸಿಬಳಿಕ ತನುಜಾತನಂ ಕೂಡಿಕೊಂಡಾ ನೃಪಂ |
ನಳಿನಸುಖಸುತನ ಮಗನೊಡನೆ ಬಂದನಿಲಜನ |
ಬಳಿಸಾರ್ದು ಕಾಲ್ಗೆರಗಲವನೀ ವೃಷಧ್ವಜನ ಮೊಗನೋಡುತಿವರಾರೆನೆ ||
ಎಳನಗೆಯೊಳ್ ಆತನಿವನೀಗಳೀ ಮೇದಿನೀ |
ತಳಕರಸೆನಿಪ ಯೌವನಾಶ್ವನೀತಂಗೆ ಮೈ |
ನೆಳಲೆನಿಪ ಕುವರಂ ಸುವೇಗನೆಂಬವನೀತನೆನುತೆ ಮಣಿದಂ ಪದದೊಳು ||59||
ಬಳಿಕ= ನಂತರ ತನುಜಾತನಂ= ಮಗನನ್ನ ಕೂಡಿಕೊಂಡಾ= ಒಡಗೊಂಡು ನೃಪಂ= ರಾಜನು ನಳಿನಸುಖಸುತನ(ನಳಿನಸಖ= ಸೂರ್ಯ-ಅವನಮಗನ ಮಗ) ವೃಷಕೇತುವಿನೊಡನೆ ಬಂದು, ಬಂದು ಅನಿಲಜನ ಬಳಿಸಾರ್ದು= ಭೀಮನ ಬಳಿಬಂದು ಕಾಲ್ಗೆ ಎರಗಲು=ಕಾಲಿಗೆ ನಮಸ್ಕರಿಸಲು, ಅವನು ಈ ವೃಷಧ್ವಜನ ಮೊಗನೋಡುತ ಇವರು ಆರೆನೆ= ಭೀಮನು ವೃಷಧ್ವಜನ ಮುಖ ನೋಡುತ್ತಾ 'ಇವರು ಯಾರು?' ಎನ್ನಲು; ಎಳನಗೆಯೊಳ್ ಆತನು ಇವನು , ಈಗಳ ಈ ಮೇದಿನೀ ತಳಕೆ ಅರಸು ಎನಿಪ ಯೌವನಾಶ್ವನು= ಮುಗುಳುನಗುತ್ತಾ ಇವನು ಈಗ ಈ ರಾಜ್ಯಕ್ಕೆ ಅರಸನು, ಯೌವನಾಶ್ವನು, ಈತಂಗೆ ಮೈನೆಳಲು ಎನಿಪ ಕುವರಂ ಸುವೇಗನೆಂಬವನು ಈತನು= ಇವನು ಅವನಿಗೆ ಮೈನೆರಳಿನಂತಿರುವ ಮಗ ಸುವೇಗನೆಂಬ ಹೆಸರಿನವನು, ಎನುತೆ= ಎನ್ನುತ್ತಾ ಮಣಿದಂ ಪದದೊಳು= ಕಾಲಿಗೆ ವೃಷಕೇತು ನಮಸ್ಕರಿಸಿದನು.
(ಪದ್ಯ - ೫೯), |
ಪದ್ಯ - ೬೦
ಸಂಪಾದಿಸಿಇವರಚ್ಯುತಾಂಘ್ರಿ ದರ್ಶನಲಂಪಟ್ಟತ್ವದಿಂ |
ದವನಿಪತಿಕುಲಶಿರೋಮಣಿಯೆನಿಪ ಧರ್ಮಸಂ |
ಭವನಡಿಯನೊಳೈಸಲೆಂದು ನಿನ್ನಂ ಕಾಣಲೋಸುಗಂ ಬಂದರೆಂದು ||
ಪವನಜಂಗಾ ವೃಷಧ್ವಜನೊರೆದೊಡಾತನು |
ತ್ಸವದೊಳಾ ಭೂಪಾಲನಂ ತೆಗೆದು ತಕ್ಕೈಸು |
ತವನ ತನುಜಾತನಂ ಬಿಗಿಯಪ್ಪಲಾ ನೃಪಂ ಬಕವೈರಿಗಿಂತೆಂದನು ||60||
ಇವರು ಅಚ್ಯುತಾಂಘ್ರಿ= ಕೃಷ್ಣನ ಪಾದಗಳ, ದರ್ಶನಲಂಪಟತ್ವದಿಂ= ದರ್ಶನದ ಅತಿ ಬಯಕೆಯಿಂದ, ಅವನಿಪತಿಕುಲಶಿರೋಮಣಿಯೆನಿಪ= ರಾಜರಕುಲಕ್ಕೆ ಭೂಷಣನಾದ ಧರ್ಮಸಂಭವನ ಅಡಿಯನೋಲೈಸಲೆಂದು= ಧರ್ಮಜನ ಪಾದಸೇವೆಮಾಡಲು, ನಿನ್ನಂ ಕಾಣಲೋಸುಗಂ= ನಿನ್ನನ್ನು ಕಾಣಲು ಬಂದರು ಎಂದು ಪವನಜಂಗೆ= ಆ ಭೀಮನಿಗೆ ಆ ವೃಷಧ್ವಜನು ಒರೆದೊಡೆ ಆತನು ಉತ್ಸವದೊಳು=ಹೇಳಲು ಭೀಮನು ಸಂತಸದಿಂದ, ಆ ಭೂಪಾಲನಂ ತೆಗೆದು ತಕ್ಕೈಸುತ= ಅವನು ಆ ರಾಜನನ್ನು ಅಪ್ಪಿಕೊಂಡು ಉಪಚರಿಸುತ್ತಾ, ತನುಜಾತನಂ ಬಿಗಿಯಪ್ಪಲ ಆ= ಅವನ ಮಗನನ್ನೂ ಬಿಗಿದಪ್ಪಿಕೊಳ್ಳಲು, ನೃಪಂ= ರಾಜನು ಬಕವೈರಿಗೆ=ಭೀಮನಿಗೆ ಗಿಂತೆಂದನು= ಹೀಗೆ ಹೇಳಿದನು
(ಪದ್ಯ - ೬೦), |
ಪದ್ಯ - ೬೦
ಸಂಪಾದಿಸಿಎಲೆ ವೈಕೋದರ ಬಾಹುಬಲಮುಳ್ಳ ವೀರರುಂ |
ಪಲಬರುಂಟಿಳೆಯೊಳವರಂ ಕಂಡು ಬಲ್ಲೆನಾಂ |
ಕಲಹದೊಳ್ ಮಲೆತವಂ ಮೈಮರೆದೊಡಿರಿವರಲ್ಲದೆ ಪಗೆಯ ಪೊರೆಗೆ ಬಂದು||
ಅಲಸಿದವನಿವಂ ಧುರದೊಳೆಂದವನನುಪಚರಿಸಿ |
ಸಲಹಿದ ಪರಾಕ್ರಮಿಗಳಾರ್ ಮಹೀತಲದೊಳೀ |
ಕಲಿವೃಷಧ್ವಜನಲ್ಲದಮರ ದಾನವ ಮಾನವರೊಳೊಗೆದ ಪಟುಭಟರೊಳು ||61||
ಎಲೆ ವೈಕೋದರ= ಭೀಮನೇ ಬಾಹುಬಲಂ ಉಳ್ಳ ವೀರರುಂ=ಬಾಹುಬಲವನ್ನು ಉಳ್ಳ ವೀರರನ್ನು ಪಲಬರುಂಟು= ಹಲವರು ಇದ್ದಾರೆ, ಟಿಳೆಯೊಳು ಭೂಮಿಯಲ್ಲಿ ಅವರಂ ಕಂಡು ಬಲ್ಲೆನಾಂ= ನಾನು ಅವರನ್ನು ನೋಡಿದ್ದೇನೆ. ಕಲಹದೊಳ್ ಮಲೆತವಂ =ಯುದ್ಧದಲ್ಲಿ ಎದುರಿನವನು, ಮೈಮರೆದೊಡೆ ಇರಿವರಲ್ಲದೆ= ಎಚ್ಚರ ತಪ್ಪಿದರೆ ಇರಿದುಕೊಲ್ಲುವರು ಅದಲ್ಲದೆ, ಪಗೆಯ ಶತ್ರುವಿನ, ಪೊರೆಗೆ= ಹತ್ತಿರ ಬಂದು, ಅಲಸಿದವನಿವಂ= ಆಯಾಸಪಟ್ಟಿದ್ದಾನೆ ಇವಂ=ಇವನು, ಧುರದೊಳೆಂದು ಅವನನು ಉಪಚರಿಸಿ ಸಲಹಿದ= ಯುದ್ಧದಲ್ಲಿ ಎಂದು ಅವನನ್ನು ಉಪಚರಿಸಿ ಸಲಹಿದ, ಪರಾಕ್ರಮಿಗಳಾರ್ ಮಹೀತಲದೊಳು= ಈ ಭೂಮಂಡಲದಲ್ಲಿ ಪರಾಕ್ರಮಿಗಳು ಯಾರು, ಈ ಕಲಿವೃಷಧ್ವಜನಲ್ಲದೆ= ಈ ಶೂರ ವೃಷಧ್ಜನನ್ನು ಬಿಟ್ಟು? ಅಮರ ದಾನವ ಮಾನವರೊಳು ಒಗೆದ ಪಟುಭಟರೊಳು= ದೇವ ದಾನವ ಮನುಷ್ಯರಲ್ಲಿರುವ ವೀರರಲ್ಲಿ?
(ಪದ್ಯ - ೬೦), |
ಪದ್ಯ - ೬೨
ಸಂಪಾದಿಸಿಆವನ ವಿನೋದಮಾತ್ರದೊಳೀ ಸಮಸ್ತಭುವ |
ನಾವಳಿಗಳಾಗಿ ಬಾಳ್ದಳಿವುದಾ ವಿಭು ನಿಮ್ಮ |
ಸೇವೆಯಾಳ್ ಗಡ ನಾನದೇಸರವನೆಂದೆನ್ನ ಮೇಲೆ ಸಾಹಸವನೆಸಗಿ ||
ಈ ವಾಜಿಯಂಪಿಡಿದಿರಕಟ ತಪ್ಪಿದಿರಿ ಲ |
ಕ್ಷ್ಮೀವರನ ಕಿಂಕರರ್ಗೀಯದನೆ ತಾನೆನ್ನ |
ಜೀವಮಂ ಸಮರದೊಳ್ ಕಾಮಳಿಪಿದಂ ಕರ್ಣತನಯನದನೇವೇಳ್ವೆನು ||62||
ಆವನ= ಯಾವನ ವಿನೋದಮಾತ್ರದೊಳು= ವಿನೋದಮಾತ್ರದಿಂದ ಈ ಸಮಸ್ತ, ಭುವನಾವಳಿಗಳು=ಲೋಕಗಳು, ಆಗಿ ಬಾಳ್ದಳಿವುದು= ಉಂಟಾಗಿ ಬಾಳಿ ಅಳಿವುವೊ, ಆ ವಿಭು=ಆ ಕೃಷ್ಣನು, ನಿಮ್ಮ ಸೇವೆಯಾಳ್ ಗಡ= ನಿಮ್ಮ ಸೇವೆ ಸಹಾಕನಾಗಿದ್ದಾನಲ್ಲಾ ಗಡ (ಅಚ್ಚರಿ)!, ನಾನು ಅದು ಏಸರವನು ಎಂದು ಎನ್ನ ಮೇಲೆ ಸಾಹಸವನು ಎಸಗಿ= ನಾನು ಅದು ಎಷ್ಟರವನು ಎಂದು ನನ್ನ ಮೇಲೆ ಯುದ್ಧವನ್ನು ಮಾಡಿ, ಈ ವಾಜಿಯಂಈ ಕುದುರೆಯನ್ನು ಪಿಡಿದಿರಕಟ= ಹಿಡಿದಿರಿ ಅಕಟ(ಅಯ್ಯೋ)! ತಪ್ಪಿದಿರಿ= ತಪ್ಪು ಮಾಡಿದಿರಿ! ಲಕ್ಷ್ಮೀವರನ=ಕೃಷ್ಣನ ಕಿಂಕರರಿಗೆ= ಭಕ್ತರಿಗೆ, ಈಯದನೆ=ಕೊಡದೆ ಇರುವೆನೆ ತಾನು? ಎನ್ನ ಜೀವಮಂ ಸಮರದೊಳ್ ಕಾದು(ಎಚ್ಚರಕೆಯಿಂದ ಉಪಚರಿಸಿ) ಉಳಿಪಿದಂ ಕರ್ಣತನಯನು ಅದನು ಏವೇಳ್ವೆನು= ಕರ್ಣನ ಮಗನು ಯುದ್ಧದಲ್ಲಿ ನನ್ನ ಜೀವವನ್ನು ಉಪಚರಿಸಿ ಉಳಿಸಿದನು!
(ಪದ್ಯ - ೬೨), |
ಪದ್ಯ - ೬೩
ಸಂಪಾದಿಸಿಈ ವೃಷಧ್ವಜನಿಂದು ಸಮರದೊಳ್ ಕಾಯದೊಡೆ |
ಹಾ ವೃಥಾಕೃತಮಾಗಿ ಪೋಗುತಿರ್ದುದು ಜನ್ಮ |
ಮಾವೃತಸಮಸ್ತಯಾದವನಾಗಿ ನಿಮ್ಮೊಳಗೆ ನರಲೀಲೆಯಂ ನಟಿಸುವ ||
ಶ್ರೀ ವೃತ್ತಕುಚ ಕುಂಕುಮಾಂಕನಂ ಕಂಡಪೆನ |
ಲಾ ವೃಕೋದರ ನೀವು ಮಾಡಿದುಪಕಾರಕಬ |
ಲಾವೃಂದ ಸಹಿತ ಬಂದೆನ್ನ ಸರ್ವಸ್ವಮಂ ಹರಿಗರ್ಪಿಸುವೆನೆಂದನು ||63||
ಈ ವೃಷಧ್ವಜನು ಇಂದು ಸಮರದೊಳ್ ಕಾಯದೊಡೆ ಹಾ ವೃಥಾಕೃತಮಾಗಿ ಪೋಗುತಿರ್ದುದು ಜನ್ಮಂ = ಈ ವೃಷಧ್ವಜನು ಈ ದಿನ ಯುದ್ಧದಲ್ಲಿ ಕಾಪಾಡದಿದ್ದರೆ ಹಾ/ಅಯೋ! ನಿಷ್ಪ್ರಯೋಜಕವಾಗಿ ಹೋಗುತ್ತಿತ್ತು ಈ ಜನ್ಮ, ಆವೃತ ಸಮಸ್ತಯಾದವನಾಗಿ= ಒಟ್ಟಾಗಿರುವ ಎಲ್ಲಾ ಯಾದವರಿಗಾಗಿ ಮತ್ತು, ನಿಮ್ಮೊಳಗೆ ನರಲೀಲೆಯಂ ನಟಿಸುವ= ನಿಮ್ಮ ಜೊತೆ ನರಲೀಲೆಯನ್ನು ನಟಿಸುತ್ತಿರುವ, ಶ್ರೀ ವೃತ್ತಕುಚ ಕುಂಕುಮಾಂಕನಂ ಕಂಡಪೆನಲಾ= ಪೂಜ್ಯ ದುಂಡಾದ ಎದೆಯುಳ್ಳ ಕುಂಕುಮ ಅಲಂಕಾರವುಳ್ಳವನನ್ನು ನೋಡುವೆನಲ್ಲಾ! ವೃಕೋದರ ನೀವು ಮಾಡಿದ ಉಪಕಾರಕೆ ಅಬಲಾವೃಂದ ಸಹಿತ ಬಂದು ಎನ್ನ ಸರ್ವಸ್ವಮಂ ಹರಿಗರ್ಪಿಸುವೆನು ಎಂದನು= ಭೀಮ ನೀವಿ ಮಾಡಿದ ಉಪಕಾರಕ್ಕೆ ಎಲ್ಲರೊಂದಿಗೆ ಬಂದು ನನ್ನ ಸರ್ವಸ್ವವನ್ನೂ ಶ್ರೀ ಕೃಷ್ಣನಿಗೆ ಅರ್ಪಿಸುತ್ತೇನೆ ಎಂದನು.
ಭೀಮ ನೀವು ಮಾಡಿದ ಉಪಕಾರಕ್ಕೆ ಎಲ್ಲರೊಂದಿಗೆ ಬಂದು ನನ್ನ ಸರ್ವಸ್ವವನ್ನೂ ಶ್ರೀ ಕೃಷ್ಣನಿಗೆ ಅರ್ಪಿಸುತ್ತೇನೆ ಎಂದನು. (ಪದ್ಯ - ೬೩), |
ಪದ್ಯ - ೬೪
ಸಂಪಾದಿಸಿಎಂದೊಡರಸಂಗೆ ಸೋದರರಾವು ನಾಲ್ವರುಂ |
ಟಿಂದುವರೆಗಿನ್ನು ನೀಂ ಸಹಿತೈವರಾದೆವಿದ|
ರಿಂದೆ ಹರಿದರ್ಶನಮಸಾಧ್ಯಮಪ್ಪುದೆ ನಿನಗೆ ಧಮರ್ಜನ ವರಮಖವನು ||
ನಿಂದು ಮಾಡಿಸುವ ಭಾರಕನಸುರಹರನಾ ಮು |
ಕುಂದನಂ ಕಾಣ್ಬುದುಳ್ಳೊಡೆ ತನ್ನ ಕೂಡೆ ನೀಂ |
ಬಂದು ಸೇವಿಪುದೆನಲ್ ಮಾರುತಿಗೆ ವಿನಯದಿಂದಾ ಭೂಪನಿಂತೆಂದನು ||64||
ಎಂದೊಡೆ ಅರಸಂಗೆ ಸೋದರರು ಆವು(ನಾವು ನಾಲ್ವರುಂಟು ಇಂದುವರೆಗೆ= ಅರಸ ಧರ್ಮಜನಿಗೆ ಸೋದರರು ನಾವು ನಾಲ್ವರು ಇದ್ದೇವೆ. ಇನ್ನು ನೀಂ=ನಿನ್ನ ಸಹಿತ ಐವರಾದೆವು=ಐದುಜನರಾದೆವು. ಇದರಿಂದೆ ಹರಿದರ್ಶನಂ ಅಸಾಧ್ಯಮಪ್ಪುದೆ ನಿನಗೆ= ಇದರಿಂದ ನಿನಗೆ ಹರಿಯನ್ನು ನೋಢವುದು ಕಷ್ಟವೇ? (ಸುಲಭ); ಧಮರ್ಜನ ವರಮಖವನು= ಶ್ರೇಷ್ಟಯಜ್ಞವನ್ನು, ನಿಂದು= ನಿಂತು ಮಾಡಿಸುವ ಭಾರಕನು= ಹೊಣೆಗಾರನು, ಅಸುರಹರನು= ಕೃಷ್ಣನು. ಆ ಮುಕುಂದನಂ= ಅವನನ್ನು, ಕಾಣ್ಬುದು=ಕಾಣುವುದು ಉಳ್ಳೊಡೆ= ಇದ್ದರೆ, ತನ್ನ ಕೂಡೆ ನೀಂಬಂದು ಸೇವಿಪುದು= ನನ್ನ ಜೊತೆ ಬಂದು ಸಹಕರಿಸುವುದು, ಎನಲ್= ಎನ್ನಲು, ಮಾರುತಿಗೆ= ಭೀಮನಿಗೆ ವಿನಯದಿಂದ ಆ ಭೂಪನು ಇಂತೆಂದನು= ಹೀಗೆ ಹೇಳಿದನು.
(ಪದ್ಯ - ೬೪), |
ಪದ್ಯ - ೬೫
ಸಂಪಾದಿಸಿಅಹುದು ನೀನೆಂದುದಂ ಮೀರೆನೆನ್ನೂರ್ವುಗದೆ |
ಬಹಿರಂಗದಿಂ ತೆರಳ್ವುದು ನೀತಿಯಲ್ಲೆನ್ನೊ |
ಳಹ ಸೇವೆಯಂ ಪುರದೊಳೊಂದೆರಡು ದಿವಸಂಗಳಿರ್ದು ಕೈಕೊಂಡ ಬಳಿಕ ||
ಬಹುವಸ್ತುಚಯ ಸಹಿತ ಪಡೆವೆರಸಿ ನಿನ್ನೊಡನೆ |
ಬಹೆನೆನ್ನನೊಡಗೊಂಡು ಮುದದೆ ಪೋಪಂತನು |
ಗ್ರಹಿಸೆಂದವಂ ಬೇಡಿಕೊಳಲೊಪ್ಪಿದಂ ಕೀಚಕಾಂತಕಂ ಸಂತಸದೊಳು ||65||
ಅಹುದು ನೀನೆಂದುದಂ ಮೀರೆನು ಎನ್ನ ಊರ್ ವೊಗದೆ ಬಹಿರಂಗದಿಂ ತೆರಳ್ವುದು ನೀತಿಯಲ್ಲ= ನಿಜ ನೀನು ಹೇಳಿದುದನ್ನು ಮೀರುವುದಿಲ್ಲ, (ಆದರೆ ಸ್ನೇಹಿತರಾದ ಮೇಲೆ) ನೀವು,ನನ್ನ ಊರನ್ನು ಪ್ರವೇಶಿಸದೆ ಹೊರಗಿನಿಂದಲೇ ಹೋಗುವುದು ಉಚಿತವಲ್ಲ. ಎನ್ನೊಳಹ ಸೇವೆಯಂ ಪುರದೊಳ್ ಒಂದೆದೆರಡು ದಿವಸಂಗಳ್ ಇರ್ದು ಕೈಕೊಂಡ ಬಳಿಕ ಬಹುವಸ್ತುಚಯ ಸಹಿತ ಪಡೆವೆರಸಿ ನಿನ್ನೊಡನೆ ಬಹೆನು= ಪುರದಲ್ಲಿ ಒಂದೆರಡು ದಿವಸಂಗಳಕಾಲ ಇದ್ದು ನನ್ನಿಂದಾಗುವ ಸೇವೆಯನ್ನು ಪಡೆದ ಬಳಿಕ ಬಹುಧನಕನಕವಸ್ತುಗಳ ಸಹಿತ ಸೈನ್ಯಸಮೇತ ನಿನ್ನೊಡನೆ ಬರುವೆನು.
ಎನ್ನನೊಡಗೊಂಡು ಮುದದೆ ಪೋಪಂತೆ ಅನುಗ್ರಹಿಸೆಂದು ಅವಂ ಬೇಡಿಕೊಳಲು ಒಪ್ಪಿದಂ ಕೀಚಕಾಂತಕಂ ಸಂತಸದೊಳು= ನನ್ನನ್ನೂ ಸೇರಿಸಿಕೊಡು ಸಂತಸದಿಂದ ಹೋಗುವಂತೆ ಅನುಗ್ರಹಿಸೆಂದು ಅವನು ಬೇಡಿಕೊಳ್ಳಲು ಭೀಮನು ಸಂತಸದಿಂದ ಒಪ್ಪಿದನು.
(ಪದ್ಯ - ೬೫), |
ಪದ್ಯ - ೬೬
ಸಂಪಾದಿಸಿತರಿಸಿ ಕೋಳ್ವಿಡಿದ ಹಯಮಂ ಸುವೇಗನ ವಶದೊ |
ಳಿರಿಸಿ ಬಳಿಕನಿಲಜಂ ಹೈಡಿಂಬಿಕರ್ಣಜ |
ರ್ವೆರಸಿ ಭದ್ರಾವತಿಗೆ ಬರಲಾನೃಪಂ ಪೊಳಲ ಸಿಂಗರಿಸಿ ಮೇಣಿವರನು ||
ಅರಸಿಯರ ಗಡಣದೊಳಿದಿರ್ಗೊಂಡು ಮನೆಯೊಳಾ |
ದರಿಸಿ ದಿವಸತ್ರಯಂ ತಡೆದೊಡನೆ ಮಂತ್ರಿಯಂ |
ಕರೆಸಿ ರಾಜ್ಯದ ಭಾರಮಂ ಪೊರಿಸಿ ಹಸ್ತಿನಾಪುರಕೈದಲನುವಾದನು ||66||
ತರಿಸಿ ಕೋಳ್= ಕೊಳ್ಳೆಯಲ್ಲಿ ವಿಡಿದ= ಹಿಡಿದ ಹಯಮಂ=ಕುದುರೆಯನ್ನು, ಸುವೇಗನ ವಶದೊಳಿರಿಸ;ವಶದೊಳ್=ವಶದಲ್ಲಿ ಇರಿಸಿ ಬಳಿಕ ಅನಿಲಜಂ=ಭೀಮನು ಹೈಡಿಂಬಿ=ಮೇಘನಾದ, ಕರ್ಣಜರ್ವೆರಸಿ-:ಕರ್ಣಜರ್=ನೃಷಕೇತುಗಳ ವೆರೆಸಿ= ಜೊತೆಗೊಂಡು, ಭದ್ರಾವತಿಗೆ ಬರಲು ಆ ನೃಪಂ=ರಾಜನು ಪೊಳಲ= ನಗರವನ್ನು ಸಿಂಗರಿಸಿ ಮೇಣ್ ಇವರನು= ಮತ್ತೆ ಇವರನ್ನು,ಅರಸಿಯರ= ರಾಣಿಯರ ಗಡಣದೊಳ್=ಸಮೂಹದ ಜೊತೆ ಇದಿರ್ಗೊಂಡು= ಎದುರುಗೊಂಡು ಮನೆಯೊಳು ಆದರಿಸಿ ದಿವಸತ್ರಯಂ= ಮೂರುದಿವಸದ ತಡೆದು=ಕಳೆದ ನಂತರ ಒಡನೆ= ಕೂಡಲೆ ಮಂತ್ರಿಯಂ= ಮಂತ್ರಿಯನ್ನು
ಕರೆಸಿ ರಾಜ್ಯದ ಭಾರಮಂ= ಆಡಳಿತವನ್ನು, ಪೊರಿಸಿ= ಹೊರಿಸಿ, ಹಸ್ತಿನಾಪುರಕ್ಕೆ ಐದಲು= ಹೋಗಲು ಆನುವಾದನು.
(ಪದ್ಯ - ೬೬), |
ಪದ್ಯ - ೬೭
ಸಂಪಾದಿಸಿತೀವಿರ್ದ ನಿಖಿಳಭಂಡಾರಮಂ ತೆಗಿಸಿ ನಾ |
ನಾವಸ್ತುನಿಚಯಮಂ ಪೇರಿಸಿ ಸಮಸ್ತಸೇ |
ನಾವಿತತಿ ಸಹಿತಾಹಯಂ ಸಹಿತ ಸುತ ಸಹೋದರ ಬಂಧುವರ್ಗ ಸಹಿತ ||
ಆ ವಸುಮತೀವಲ್ಲಭಂ ಪ್ರಭಾವತಿಯೆಂಬ |
ದೇವಿಸಹಿತಗಣಿತ ವಧೂಜಾಲಸಹಿತ ಭ |
ದ್ರಾವತಿಯ ಪುರಜನಂಸಹಿತ ಪೊರಮಟ್ಟನೊಲವಿಂ ಭೀಮಸೇನನೊಡನೆ ||67||
ತೀವಿರ್ದ= ತುಂಬಿದ ನಿಖಿಳಭಂಡಾರಮಂ= ಎಲ್ಲಾ ಸಂಪತ್ತನ್ನೂ ತೆಗಿಸಿ ನಾನಾವಸ್ತುಗಳ ನಿಚಯಮಂ= ಸಂಗ್ರಹವನ್ನು ಪೇರಿಸಿ= (ಬಂಡಿಯಲ್ಲಿ) ಹೇರಿಸಿ ಸಮಸ್ತ ಸೇನಾವಿತತಿ= ಸೇನಾಸಮುಹದ ಸಹಿತ ಆ ಹಯಂ= ಕುದುರೆಯ ಸಹಿತ ಸುತ=ಮಗ, ಸಹೋದರ= ತಮ್ಮ, ಬಂಧುವರ್ಗ= ಬಂಧುಗಳ ಸಹಿತ ಆ ವಸುಮತೀವಲ್ಲಭಂ=(ಭೂಮಿಯ ಒಡೆಯ) ರಾಜನು ಪ್ರಭಾವತಿಯೆಂಬ ದೇವಿ= ಪತ್ನಿ ಸಹಿತ ಅಗಣಿತ ವಧೂಜಾಲ= ಅನೇಕ ಹೆಂಗಸರ ಸಹಿತ ಭದ್ರಾವತಿಯ ಪುರಜನಂ=ಪುರಜನರ ಸಹಿತ ಪೊರಮಟ್ಟನು= ಹೊರಟನು ಒಲವಿಂ= ಸಂತೋಷದಿಂದ ಭೀಮಸೇನನೊಡನೆ.
(ಪದ್ಯ - ೬೭), |
ಪದ್ಯ - ೬೮
ಸಂಪಾದಿಸಿಎಲ್ಲರುಂ ಪೊರಮಟ್ಟ ಬಳಿಕಾನೃಪಂ ರಮಾ |
ವಲ್ಲಭನ ದರ್ಶನಕೆ ಮಾತೆಯಂ ಕರೆಯಲವ |
ಳೊಲ್ಲೆ ನಾನಿಲ್ಲಿರದೊಡೀಬದುಕ ಸಾಗಿಸುವರಾರೆಂದು ಚಂಡಿಗೊಳಲು ||
ಪುಲ್ಲನಾಭಂಗೆ ಸರ್ವಸ್ವಮೊಪ್ಪಿಸುವೊಡಿವ |
ಳಿಲ್ಲದಿರಬಾರದೆಂದಾಕೆಯಂ ಬಲ್ಪಿನಿಂ |
ನಿಲ್ಲದಂದಳವನೇರಿಸಿ ಮತ್ತೆ ಮಾರುತಿಯೊಡನೆ ಪಯಣಕನುವಾದನು ||68|||
ಎಲ್ಲರುಂ= ಎಲ್ಲರೂ ಪೊರಮಟ್ಟ= ಹೊರಟ ಬಳಿಕ ಆ ನೃಪಂ= ರಾಜನು ರಮಾವಲ್ಲಭನ= ಕೃಷ್ಣನ ದರ್ಶನಕೆ= ದರ್ಶನಕ್ಕೆ ಮಾತೆಯಂ= ತಾಯಿಯನ್ನು ಕರೆಯಲು ಅವಳು ಒಲ್ಲೆನು= ಬರಲಾರೆ ಆನು= ನಾನು ಇಲ್ಲಿ ಇರದೊಡೆ=ಇರದಿದ್ದರೆ, ಈ ಬದುಕ= ಅರಮನೆಯ ಕೆಲಸವನ್ನು ಸಾಗಿಸುವರು= ನೋಡಿಕೊಳ್ಳುವವರು ಆರೆಂದು= ಯಾರಿದ್ದಾರೆ ಎಂದು ಚಂಡಿಗೊಳಲು= ಹಠಮಾಡಲು, ಪುಲ್ಲನಾಭಂಗೆ(ಪದ್ಮನಾಭಂಗೆ =ವಿಷ್ಣು) ಸರ್ವಸ್ವಮಂ ಒಪ್ಪಿಸುವೊಡೆ ಇವಳಿಲ್ಲದೆ ಇರಬಾರದೆಂದು ಆಕೆಯಂ ಬಲ್ಪಿನಿಂ ನಿಲ್ಲದೆ ಅಂದಳವನು(ಪಲ್ಲಕ್ಕಿ) ಏರಿಸಿ= ಕೃಷ್ಣನಿಗೆ ಸರ್ವಸ್ವನ್ನೂ ಅರ್ಪಿಸುವಾಗ ತಾಯಿಯು ಇಲ್ಲದೆ ಇರಬಾರದು, ಅವಳೂ ಇರಬೇಕು ಎಂದು ಅವಳನ್ನು ಒತ್ತಾಯದಿಂದ ಪಲ್ಲಕ್ಕಿಯಲ್ಲಿ ಹತ್ತಿಸಿ, ಮತ್ತೆ ಮಾರುತಿಯೊಡನೆ= ಭೀಮನೊಡನೆ ಪಯಣೆ ಅನುವಾದನು= ಪ್ರಯಾಣಮಾಡಲು ಸಿದ್ಧನಾದನು.
(ಪದ್ಯ - ೬೮), |
ಪದ್ಯ - ೬೯
ಸಂಪಾದಿಸಿಪಟ್ಟಣದೊಳಾರುಮಿಲ್ಲೆನಿಸಿ ತನ್ನೊಡನೆ ವೊರ |
ಮಟ್ಟುವಖಿಳಪ್ರಜೆಗಳಿವರ ನಡೆಸಲ್ ದಿನಂ |
ತಟ್ಟಿದಲ್ಲದೆ ಮಾಣದನ್ನೆಗಂ ಧರ್ಮಜಂಗೀ ರಾಜಕಾರ್ಯದನುವ ||
ಮುಟ್ಟಿಸದಿರಲ್ ಬಾರದೆಂದಾ ಮಹೀಶ್ವರನ |
ಬಟ್ಟೆಗಾವಲ್ಗೆ ಕರ್ಣಜ ಮೇಘನಾದರಂ |
ಕೊಟ್ಟು ನಿಂದಲ್ಲಿನಿಲ್ಲದೆ ಬಂದು ಭೀಮಸೇನಂ ವೊಕ್ಕನಿಭಪುರಿಯನು ||69||
ಪಟ್ಟಣದೊಳು ಆರುಂ ಇಲ್ಲೆನಿಸಿ ತನ್ನೊಡನೆ ವೊರಮಟ್ಟುವು ಅಖಿಳಪ್ರಜೆಗಳು ಇವರ ನಡೆಸಲ್ ದಿನಂತಟ್ಟಿತು ಅಲ್ಲದೆ ಮಾಣದು= ಪಟ್ಟಣದಲ್ಲಿ ಯಾರೂ ಇಲ್ಲದೆ ತನ್ನೊಡನೆ ಎಲ್ಲಾ ಪ್ರಜೆಗಳೂ ಹೊರಟವು,ಇವರನ್ನು ನಡೆಸಿಕೊಂಡು ಹೋಗಲು, ಅನೇಕದಿನಗಳಾಗದೆ ಇರದು. ಅನ್ನೆಗಂ ಧರ್ಮಜಂಗೆ ಈ ರಾಜಕಾರ್ಯದ ಅನುವ ಮುಟ್ಟಿಸದಿರಲ್ ಬಾರದು ಎಂದು= ಅಲ್ಲಿಯ ವರೆಗೆ ಧರ್ಮಜನಿಗೆ ಈ ಕುದುರೆ ವಿಜಯದ ರಾಜಕಾರ್ಯದಲ್ಲಿ ಆದ ಅನುಕೂಲತೆಯ ವಿಷಯವನ್ನು ತಿಳಿಸದೆ ಇರಬಾರದು ಎಂದು, ಆ ಮಹೀಶ್ವರನ= ರಾಜನ, ಬಟ್ಟೆಗಾವಲ್ಗೆ= ದಾರಿಕಾವಲಿಗೆ, ಕರ್ಣಜ ಮೇಘನಾದರಂ ಕೊಟ್ಟು= ಕರ್ಣಜ ಮೇಘನಾದರಿಗೆ ವಹಿಸಿ, ನಿಂದಲ್ಲಿ ನಿಲ್ಲದೆ ಬಂದು ಭೀಮಸೇನಂ= ಭೀಮಸೇನನು ವೊಕ್ಕನು ಇಭಪುರಿಯನು (ಇಭ=ಆನೆ) = ಹಸ್ತಿನಾವತಿಯನ್ನು ಸೇರಿದನು.
(ಪದ್ಯ - ೬೯), |
ಪದ್ಯ - ೭೦
ಸಂಪಾದಿಸಿನುತವಸಂತಾಗಮವನೆಚ್ಚರಿಪ ಮಲಯಮಾ |
ರುತನುಪವನಸ್ಥಳಕೆ ಸುಳಿವಂತೆ ಪವನಜಂ |
ಕ್ಷಿತಿಪನಾಸ್ಥಾನಮಂ ಪೊಕ್ಕರಸನಂ ಕಂಡು ಪಾದಪಲ್ಲವಕೆರಗಲು ||
ಅತಿಶಯಪ್ರೀತಿಯಿಂ ತೆಗೆದು ಬಿಗಿಯಪ್ಪಿ ರವಿ |
ಸುತಜ ಹೈಡಿಂಬಿಗಳದೆಲ್ಲಿ ನೀಂ ಪೋದಸಂ |
ಗತಿಯದೆಂತೈ ನಿನ್ನ ಭಾಷೆಗಳಿವಿಲ್ಲಲಾ ತುರಗವಿಷಯದೊಳೆಂದನು ||70||
ನುತವಸಂತಾಗಮವನು ಎಚ್ಚರಿಪ ಮಲಯಮಾರುತನು ಉಪವನಸ್ಥಳಕೆ ಸುಳಿವಂತೆ=(ಹೊಗಳಲ್ಪಡುವ) ಇಷ್ಟವಾದ ವಸಂತಕಾಲದ ಆಗಮನವನ್ನು ಸೂಚಿಸುವ ಮಲಯಮಾರುತವು ವನದಲ್ಲಿ ಬೀಸುವಂತೆ, ಪವನಜಂ= ಭೀಮನು ಕ್ಷಿತಿಪನ ಆಸ್ಥಾನಮಂ ಪೊಕ್ಕು ಅರಸನಂ ಕಂಡು ಪಾದಪಲ್ಲವಕೆ ಎರಗಲು= ಭೀಮನು ಧರ್ಮರಾಜನ ಆಸ್ಥಾನವನ್ನು ಹೊಕ್ಕು ಅರಸನನ್ನು ಕಂಡು ಅವನ ಪಾದಪದ್ಮಕ್ಕೆ ನಮಿಸಲು, ಅತಿಶಯಪ್ರೀತಿಯಿಂ ತೆಗೆದು ಬಿಗಿಯಪ್ಪಿ= ಅತಿಯಾದ ಪ್ರೀತಿಯಿಂದ ಅವನನ್ನು ಬಿಗಿಯಾಗಿ ಅಪ್ಪಿಕೊಂಡು, ರವಿಸುತಜ ಹೈಡಿಂಬಿಗಳು ಅದೆಲ್ಲಿ= ವೃಷಕೇತು ಮೇಘನಾದರು ಎಲ್ಲಿ? ನೀಂ ಪೋದಸಂಗತಿಯದೆಂತೈ= ನೀನು ಹೋದ ವಿಚಾರ ಸದು ಏನಾಯಿತು? ನಿನ್ನ ಭಾಷೆಗೆ ಅಳಿವಿಲ್ಲಲಾ ತುರಗವಿಷಯದೊಳು ಎಂದನು= ನೀನು ಕುದುರೆ ತರುವೆನೆಂದು ನುಡಿದ ಮಾತು ಸುಳ್ಳಾಗದು ಅಲ್ಲವೇ, ಎಂದನು
(ಪದ್ಯ - ೭೦), |
ಪದ್ಯ - ೭೧
ಸಂಪಾದಿಸಿಎನಲವನಿಪತಿಗೆ ಬಿನ್ನೈಸಿದಂ ಪವಮಾನ |
ತನಯನಲ್ಲಿಂದೆ ಭದ್ರಾವತಿಗೆ ನಡೆದುದಂ |
ವಿನುತ ಹಯರತ್ನಮಂ ಪಿಡಿದುದಂ ಮುಂಕೊಂಡು ಸೇನೆಯಂ ಸದೆಬಡಿದುದಂ ||
ಅನುವರದೊಳಹಿತನಂ ಜಡಿದುದಂ ಬಳಿಕವಂ |
ತನಗೆರಗಿ ನುಡಿದುದಂ ತನ್ನ ಸರ್ವಸ್ವಮಂ |
ದನುಜಾರಿಗೀಯಲ್ ಕುದುರೆವೆರಸಿ ಹೈಡಿಂಬಿಕರ್ಣಜರೊಡನೆ ಬಹುದನು ||71||
ಎನಲು ವನಿಪತಿಗೆ ಬಿನ್ನೈಸಿದಂ= ಧರ್ಮಜ ವಿಚಾರಿದ್ದಕ್ಕೆ ಪವಮಾನತನಯನು= ಭೀಮನು, ಅಲ್ಲಿಂದೆ ಭದ್ರಾವತಿಗೆ ನಡೆದುದಂ= ಹಸ್ಇನಾವತಿಯಿಂದ ಭದ್ರಾವತಿಗೆ ಹೋದುದನ್ನೂ, ವಿನುತ ಹಯರತ್ನಮಂ ಪಿಡಿದುದಂ= ಉತ್ತಮ ಆಶ್ವವನ್ನು ಹಿಡಿದುದನ್ನೂ, ಮುಂಕೊಂಡು ಸೇನೆಯಂ ಸದೆಬಡಿದುದಂ= ಮೇಲೆಬಿದ್ದು ಸೇನೆಯನ್ನು ಸೋಲಿಸಿದುದನ್ನೂ, ಅನುವರದೊಳ್ ಅಹಿತನಂ ಜಡಿದುದಂ= ಯುದ್ಧದಲ್ಲಿ ವಿರೋಧಿಯನ್ನು ಸೋಲಿಸಿದುದನ್ನೂ, ಬಳಿಕ ಅವಂ ತನಗೆ ಎರಗಿ ನುಡಿದುದಂ= ನಂತರ ಅವನು ತನಗೆ ನಮಸ್ಕರಿಸಿ ಹೇಳಿದುದನ್ನೂ, ತನ್ನ ಸರ್ವಸ್ವಮಂ ದನುಜಾರಿಗೀಯಲ್= ಅವನು ತನ್ನ ಸರ್ವಸ್ವವನ್ನೂ ಕೃಷ್ಣನಿಗೆ ಕೊಡಲು, ಕುದುರೆವೆರಸಿ ಹೈಡಿಂಬಿಕರ್ಣಜರೊಡನೆ ಬಹುದನು= ಕುದುರೆ ಸಹಿತ ಮೇಘನಾದ,ಕರ್ಣಜರ ಸಂಗಡ ಬರುತ್ತಿರುವುದನ್ನೂ ತಿಳಿಸಿದನು.
(ಪದ್ಯ - ೭೧) |
ಪದ್ಯ - ೭೨
ಸಂಪಾದಿಸಿಕೇಳಿನೃಪನುತ್ಸವದೊಳನುಜನಂ ತಕ್ಕೈಸಿ |
ಬೀಳುಕೊಡಲರಸಿಯರ ತಂಡದಾರತಿಗಳ ನೀ |
ವಾಳಿಗಳ ಸಡಗರದೊಳರಮನೆಗೆ ಬಂದು ಪಾಂಚಾಲಿಗೀ ಸಂಗತಿಯನು ||
ಹೇಳಿ ಮುರಹರನ ಮಂದಿರಕೆ ನಡೆತಂದು ನಿಜ |
ಭಾಳಮಂ ಚರಣದೊಳ್ ಚಾಚಿ ತಮ್ಮಯ ವಿಜಯ |
ದೇಳಿಗೆಯನೊರೆಯಲ್ಕೆ ಮನ್ನಿಸಿದತಾತನಂ ದೇವಪುರ ಲಕ್ಷ್ಮೀಶನು ||72||
ಕೇಳಿ ನೃಪನು ಉತ್ಸವದೊಳು ಅನುಜನಂ ತಕ್ಕೈಸಿ ಬೀಳುಕೊಡಲು= ಧರ್ಮಜನು ಕೇಳಿ, ಸಂತಸದಿಂದ ಉಪಚರಿಸಿ ಕಳಹಿಸಲು, ಅರಸಿಯರ ತಂಡದಾರತಿಗಳ ನೀವಾಳಿಗಳ ಸಡಗರದೊಳು= ಹೆಂಗಸರು ಒಟ್ಟಾಗಿ ಎತ್ತಿದಾರತಿಯನ್ನೂ ದೃಷ್ಠಿನಿವಾಳಿಕೆಯನ್ನೂ ಸ್ವೀಕರಿಸಿ, ಅರಮನೆಗೆ ಬಂದು ಪಾಂಚಾಲಿಗೆ ಈ ಸಂಗತಿಯನ್ನು ಹೇಳಿ, ಮುರಹರನ ಮಂದಿರಕೆ ನಡೆತಂದು= ಕೃಷ್ಣನಿದ್ದ ಮನೆಗೆಬಂದು, ನಿಜ=ತನ್ನ ಭಾಳಮಂ= ಹಣೆಯನ್ನು, ಚರಣದೊಳ್ ಚಾಚಿ= ಅವನ ಪಾದಗಳಿಗೆ ಚಾಚಿ, ತಮ್ಮಯ ವಿಜಯ ದೇಳಿಗೆಯನ್ನು = ತಾವು ವಿಜಯವಾದುದನ್ನು, ನೊರೆಯಲ್ಕೆ= ಹೇಳಲು, ಮನ್ನಿಸಿದನು ಆತನಂ ದೇವಪುರ ಲಕ್ಷ್ಮೀಶನು. ಕೃಷ್ಣನು ಆತನನ್ನು ಗೌರವಿಸಿದನು.
|
- ಸಂಧಿ ೪ಕ್ಕೆ ಒಟ್ಟು ಪದ್ಯ-೧೯೩
- ♥♥♥ ॐ ♥♥♥
- XV-VII- II0XVII
ಹೋಗಿ
ಸಂಪಾದಿಸಿನೋಡಿ
ಸಂಪಾದಿಸಿಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.