ಜೈಮಿನಿ ಭಾರತ/ಇಪ್ಪತ್ತೆರಡನೆಯ ಸಂಧಿ

ಇಪ್ಪತ್ತೆರಡನೆಯ ಸಂಧಿ

ಸಂಪಾದಿಸಿ

ಪದ್ಯ:-:ಸೂಚನೆ:

ಸಂಪಾದಿಸಿ

ಸೂಚನೆ : ಸತ್ವದಿಂದೊದಗಿದರ್ ತಮತಮಗೆ ಭುಜ ಸಾಹ |
ಸತ್ವದಿಂ ಪ್ರದ್ಯುಮ್ನ ಮೊದಲಾದ ಪಟುಭಟರ್ |
ಸತ್ವರದೊಳೆಚ್ಚಾಡಿದರ್ ಬಭ್ರುವಾಹನ ಧನಂಜಯರ್ ಸಂಗರದೊಳು ||

ಪದವಿಭಾಗ-ಅರ್ಥ:
ಸತ್ವದಿಂದ ಒದಗಿದರ್ ತಮತಮಗೆ ಭುಜ ಸಾಹಸತ್ವದಿಂ ಪ್ರದ್ಯುಮ್ನ ಮೊದಲಾದ ಪಟುಭಟರ್ ಸತ್ವರದೊಳು ಎಚ್ಚಾಡಿದರ್ ಬಭ್ರುವಾಹನ ಧನಂಜಯರ್ /:ಅನ್ವಯ:/ಸಂಗರದೊಳು ಸತ್ವದಿಂದ ಪ್ರದ್ಯುಮ್ನ ಮೊದಲಾದ ಪಟುಭಟರ್,ತಮತಮಗೆ ಭುಜ ಸಾಹಸತ್ವದಿಂ ಒದಗಿದರ್, ಬಭ್ರುವಾಹನ ಧನಂಜಯರ್-ಸತ್ವರದೊಳು ಎಚ್ಚಾಡಿದರ್={ಯುದ್ಧದಲ್ಲಿ ಪರಾಕ್ರಮದಿಂದ ಪ್ರದ್ಯುಮ್ನ ಮೊದಲಾದ ವೀರಭಟರು,ತಮತಮಗೆ ಇರುವ ಸಾಮರ್ಥ್ಯದ ಭುಜ ಸಾಹಸತ್ವದಿಂದ ಯುದ್ಧಕ್ಕೆ ಸೇರಿದರು. ಬಭ್ರುವಾಹನ ಮತ್ತು ಧನಂಜಯರು-ಬಾಣಪ್ರಯೋಗದ ಚತುರತೆಯಿಂದ ಹೋರಾಡಿದರು.]
  • ತಾತ್ಪರ್ಯ:ಯುದ್ಧದಲ್ಲಿ ಪರಾಕ್ರಮಿಗಳಾದ ಪ್ರದ್ಯುಮ್ನ ಮೊದಲಾದ ವೀರಭಟರು, ತಮತಮಗೆ ಇರುವ ಸಾಮರ್ಥ್ಯದ ಭುಜ ಸಾಹಸತ್ವದಿಂದ ಯುದ್ಧಕ್ಕೆ ಸೇರಿದರು. ಬಭ್ರುವಾಹನ ಮತ್ತು ಧನಂಜಯರು-ಬಾಣಪ್ರಯೋಗದ ಚತುರತೆಯಿಂದ ಹೋರಾಡಿದರು.

(ಪದ್ಯ - ಸೂಚನೆ)

ಪದ್ಯ:-:೧:

ಸಂಪಾದಿಸಿ

ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ |
ತರಿಸಿದ ಸುವಸ್ತುಗಳ ನಧ್ವರದ ತುರಗಮಂ |
ತಿರುಗಿ ನಿಜನಗರಿಗೆ ಕಳುಹಿ ಬಭ್ರುವಾಹನಂ ಸಮರಕನುವಾಗಿ ನಿಲಲು ||
ಧರಣಿಮಂಡಲಮಂ ಚತುರ್ಬಲಂ ಗೀರ್ವಾಣ |
ಸರಣಿ ಮಂಡಲಮಂ ಧ್ವಜ ಛತ್ರ ಚಾಮರಂ |
ತರಣಿಮಂಡಲಮಂ ಚಮೂ ಪದ ಹತೋದ್ಧೂತ ರೇಣುವ್ರಜಂ ಮುಸುಕಿತು ||1||

ಪದವಿಭಾಗ-ಅರ್ಥ:
ಅರಸ ಕೇಳು, ಅರ್ಜುನಂ ಬೈದು ನೂಕಿದ ಬಳಿಕ ತರಿಸಿದ ಸುವಸ್ತುಗಳನ ಅಧ್ವರದ ತುರಗಮಂ ತಿರುಗಿ ನಿಜನಗರಿಗೆ ಕಳುಹಿ=[ಅರಸನೇ ಕೇಳು, ಅರ್ಜುನನು ಬಬ್ರುವಾಹನನ್ನು ಹೇಡಿಯೆಂದೂ, ಅವನ ತಾಯಿಯನ್ನು ಗಣಿಕೆ ಎಂದೂ ಬೈದು ನೂಕಿದ ಬಳಿಕ ಅರ್ಜುನನ ಸ್ವಾಗತಕ್ಕೆ ತರಿಸಿದ ಉತ್ತಮ ವಸ್ತುಗಳನ್ನೂ, ಯಜ್ಞದಕುದುರೆಯನ್ನೂ ತಿರುಗಿ ತನ್ನ ನಗರಕ್ಕೆ ಕಳುಹಿಸಿದನು.]; ಬಭ್ರುವಾಹನಂ ಸಮರಕೆ ಅನುವಾಗಿ ನಿಲಲು ಧರಣಿಮಂಡಲಮಂ ಚತುರ್ಬಲಂ ಗೀರ್ವಾಣ ಸರಣಿ ಮಂಡಲಮಂ ಧ್ವಜ ಛತ್ರ ಚಾಮರಂ ತರಣಿ ಮಂಡಲಮಂ ಚಮೂಪದ ಹತೋದ್ಧೂತ ರೇಣುವ್ರಜಂ (ಧೂಳಿನ ಕಣಗಳು) ಮುಸುಕಿತು=[ಬಭ್ರುವಾಹನನು ಯುದ್ಧಕ್ಕೆ ಅನುವಾಗಿ ನಿಲ್ಲಲು ಅವನ ಚತುರಂಗ ಸೇನೆಯು ಧರಣಿಮಂಡಲವನ್ನೂ, ಧ್ವಜ ಛತ್ರ ಚಾಮರಗಳು ದೇವತೆಗಳ ಸಮೂಹದ ಪ್ರದೇಶವನ್ನೂ, ಸೈನ್ಯದ ಸೈನಿಕರ ಕಾಲುತುಳಿತದಿಂದ ಎದ್ದ ಧೂಳು ಸೂರ್ಯ ಮಂಡಲವನ್ನೂ ಆವರಿಸಿತು.];
  • ತಾತ್ಪರ್ಯ:ಅರಸನೇ ಕೇಳು, ಅರ್ಜುನನು ಬಬ್ರುವಾಹನನ್ನು ಹೇಡಿಯೆಂದೂ, ಅವನ ತಾಯಿಯನ್ನು ಗಣಿಕೆ ಎಂದೂ ಬೈದು ನೂಕಿದ ಬಳಿಕ ಅರ್ಜುನನ ಸ್ವಾಗತಕ್ಕೆ ತರಿಸಿದ ಉತ್ತಮ ವಸ್ತುಗಳನ್ನೂ, ಯಜ್ಞದಕುದುರೆಯನ್ನೂ ತಿರುಗಿ ತನ್ನ ನಗರಕ್ಕೆ ಕಳುಹಿಸಿದನು. ಬಭ್ರುವಾಹನನು ಯುದ್ಧಕ್ಕೆ ಅನುವಾಗಿ ನಿಲ್ಲಲು ಅವನ ಚತುರಂಗ ಸೇನೆಯು ಧರಣಿಮಂಡಲವನ್ನೂ, ಧ್ವಜ ಛತ್ರ ಚಾಮರಗಳು ದೇವತೆಗಳ ಸಮೂಹದ ಪ್ರದೇಶವನ್ನೂ, ಸೈನ್ಯದ ಸೈನಿಕರ ಕಾಲುತುಳಿತದಿಂದ ಎದ್ದ ಧೂಳು ಸೂರ್ಯ ಮಂಡಲವನ್ನೂ ಆವರಿಸಿತು.

(ಪದ್ಯ - ೧)

ಪದ್ಯ:-:೨:

ಸಂಪಾದಿಸಿ

ಅರ್ಬುದಗಜಂ ಪತ್ತು ಕೋಟಿ ಸುವರೂಥಮೆರೆ |
ದರ್ಬುದ ತುರಂಗಮಂ ಕೂಡಿತು ಪದಾತಿ ಮೂ |
ರರ್ಬುದಂ ಜೋಡಿಸಿದ ರಾಹವಪ್ರೌಢರ್ ಸುಬುದ್ಧಿ ಮೊದಲಾದ ಭಟರು ||
ಸರ್ಬಸ್ನಾಹದಿಂದೊತ್ತಿರಿಸಿದೆತ್ತಣ ಚ |
ತುರ್ಬಲಮೊ ಕಮಲಜನ ಸೃಷ್ಟಿಯೊಳದೃಷ್ಟಮೆನೆ |
ಪರ್ಬಿದುದು ನೆಲದಗಲಕಾ ಬಭ್ರುವಾಹನಂ ತರಿಸಿದಂ ಮಣಿರಥವನು ||2||

ಪದವಿಭಾಗ-ಅರ್ಥ:
ಅರ್ಬುದಗಜಂ ಪತ್ತು ಕೋಟಿ ಸುವರೂಥಂ ಅರೆ ದರ್ಬುದ ತುರಂಗಮಂ ಕೂಡಿತು ಪದಾತಿ ಮೂರರ್ಬುದಂ ಜೋಡಿಸಿದರು(ಸೇರು) ಆಹವ ಪ್ರೌಢರ್ ಸುಬುದ್ಧಿ ಮೊದಲಾದ ಭಟರು=[ನೂರು ಕೋಟಿ ಗಜಗಳು, ಹತ್ತು ಕೋಟಿ ಉತ್ತಮ ರಥ ಕುದುರೆ, ಐವತ್ತುಕೋಟಿ ತುರಗಗಳು ಕೂಡಿತು, ಪದಾತಿ ಸೈನ್ಯ ಮೂರನೂರುಕೋಟಿ, ಮತ್ತು ಯುದ್ಧ ಪರಿಣತರಾದ ಭಟರು, ಸುಬುದ್ಧಿ ಮೊದಲಾದವರು ಸೇರಿದರು]; ಸರ್ಬಸ್ನಾಹದಿಂದ ಒತ್ತಿರಿಸಿದ ಎತ್ತಣ ಚತುರ್ಬಲಮೊ ಕಮಲಜನ ಸೃಷ್ಟಿಯೊಳು ಅದೃಷ್ಟಂ ಎನೆ ಪರ್ಬಿದುದು ನೆಲದಗಲಕೆ ಆ ಬಭ್ರುವಾಹನಂ ತರಿಸಿದಂ ಮಣಿರಥವನು=[ಸರ್ವಸ್ನಾಹದಿಂದ ಒಟ್ಟಾಗಿಬಂದ ಎಲ್ಲಿಯ ಚತುರ್ಬಲವೋ, ಬ್ರಹ್ಮನ ಸೃಷ್ಟಿಯಲ್ಲಿ ಕಾಣಲು ಅಸಾದ್ಯ ಎನ್ನುವಂತೆ ಭೂಮಿಯ ಅಗಲಕ್ಕೆ ಅವನ ಸೇನೆ ಹಬ್ಬಿತ್ತು! ಬಭ್ರುವಾಹನನು ಯುದ್ಧಕ್ಕೆ ತನ್ನ ಮಣಿರಥವನ್ನು ತರಿಸಿದನು].
  • ತಾತ್ಪರ್ಯ:ಆ ಸೈನ್ಯದಲ್ಲಿ ನೂರು ಕೋಟಿ ಗಜಗಳು, ಹತ್ತು ಕೋಟಿ ಉತ್ತಮ ರಥ ಕುದುರೆ, ಐವತ್ತುಕೋಟಿ ತುರಗಗಳು ಕೂಡಿತು, ಪದಾತಿ ಸೈನ್ಯ ಮೂರುನೂರುಕೋಟಿ, ಮತ್ತು ಯುದ್ಧ ಪರಿಣತರಾದ ಭಟರು, ಸುಬುದ್ಧಿ ಮೊದಲಾದವರು ಸೇರಿದರು; ಸರ್ವಸ್ನಾಹದಿಂದ ಒಟ್ಟಾಗಿ ಬಂದ ಎಲ್ಲಿಯ ಚತುರ್ಬಲವೋ, ಬ್ರಹ್ಮನ ಸೃಷ್ಟಿಯಲ್ಲಿ ಕಾಣಲು ಅಸಾದ್ಯ ಎನ್ನುವಂತೆ ಭೂಮಿಯ ಅಗಲಕ್ಕೆ ಅವನ ಸೇನೆ ಹಬ್ಬಿತ್ತು! ಬಭ್ರುವಾಹನನು ಯುದ್ಧಕ್ಕೆ ತನ್ನ ಮಣಿರಥವನ್ನು ತರಿಸಿದನು.

(ಪದ್ಯ - ೨)

ಪದ್ಯ:-:೨:

ಸಂಪಾದಿಸಿ

ಚಿತ್ರಶೋಭಿತಮಾದ ಮಣಿಮಯ ವರೂಥಮಂ |
ಚಿತ್ರಾಂಗದೆಯ ತನೂಭವ ನಡರ್ದಂ ಕೂಡೆ |
ಚಿತ್ರಮಾದುದು ಸಮರ ಮೆರಡುಥಟ್ಟಿನ ಚೂಣಿ ಸಂದಣಿಸಿತುರವಣೆಯೊಳು ||
ಮಿತ್ರಮಂಡಲವನೊಡೆದೈದುವತಿಭರದಿಂದೆ |
ಮಿತ್ರಭಟರಂ ತಾಗಿದರ್ ಕಡುಗಲಿಗಳಾಗ |
ಮಿತ್ರಭಾವದ ನೇಹದಿಂದೆ ಮರುಗದೆ ಮಾಣವಂಭೋರುಹಂಗಳೆನಲು ||3||

ಪದವಿಭಾಗ-ಅರ್ಥ:
ಚಿತ್ರಶೋಭಿತಮಾದ ಮಣಿಮಯ ವರೂಥಮಂ ಚಿತ್ರಾಂಗದೆಯ ತನೂಭವ ನಡರ್ದಂ=[ಚಿತ್ರಾಂಗದೆಯ ಮಗನು ಚಿತ್ರಗಳಿಂದ ಅಲಮಕರಿಸಿದ ಮಣಿಮಯ ರಥವನ್ನು ಹತ್ತಿದನು.]; ಕೂಡೆ ಚಿತ್ರಮಾದುದು ಸಮರಂ ಎರಡುಥಟ್ಟಿನ ಚೂಣಿ ಸಂದಣಿಸಿತು ಉರವಣೆಯೊಳು=[ಕೂಡಲೆ ಯುದ್ಧವು ಅದ್ಭುತವಾಗಿ ನಡೆಯಿತು. ಎರಡುಕಡೆಯ ಸೈನ್ಯ ಆಕ್ರಮಣಮಾಡುತ್ತಾ ಸಂದಣಿಸಿದವು/ ಹೋರಾಇದವು. ]; ಮಿತ್ರಮಂಡಲವನು ಒಡೆದು ಐದುವ ಅತಿಭರದಿಂದೆ ಮಿತ್ರಭಟರಂ ತಾಗಿದರ್ ಕಡುಗಲಿಗಳು ಆಗ ಮಿತ್ರಭಾವದ ನೇಹದಿಂದೆ ಮರುಗದೆ ಮಾಣವ- ಅಂಭೋರುಹಂಗಳು (ಅರಳದೆಗಟ್ಟಿಯಾದ ಕಮಲಗಳು) ಎನಲು=[ಮಿತ್ರರಾಗಿದ್ದವರು ಅದನ್ನು ಬಿಟ್ಟು/ಒಡೆದು ಅತಿಭರದಿಂದ ಬರುವ ಮಿತ್ರರಾಗಿದ್ದ ಭಟರನ್ನೂ ಎದುರಿಸಿದರು; ಕಡುಶೂರರು ಆಗ ಮಿತ್ರಭಾವದ ಸ್ನೇಹದಿಂದ ಮರುಗದೆ ಮಿತ್ರ/ಸೂರ್ಯನ ಮಿತ್ರರಾದ ಕಮಲಗಳು ಸೂರ್ಯನನ್ನು ನೋಡಿ ಸಂತಸದಿಂದ ಮಾಣವ/ ಅರಳದಿರುವಂತೆ ವಿರೋಧದಿಂದ ಕಾದಾಡಿದರು.]
  • ತಾತ್ಪರ್ಯ:ಚಿತ್ರಾಂಗದೆಯ ಮಗನು ಚಿತ್ರಗಳಿಂದ ಅಲಮಕರಿಸಿದ ಮಣಿಮಯ ರಥವನ್ನು ಹತ್ತಿದನು. ಕೂಡಲೆ ಯುದ್ಧವು ಅದ್ಭುತವಾಗಿ ನಡೆಯಿತು. ಎರಡುಕಡೆಯ ಸೈನ್ಯ ಆಕ್ರಮಣಮಾಡುತ್ತಾ ಸಂದಣಿಸಿದವು/ ಹೋರಾಇದವು. ಮಿತ್ರರಾಗಿದ್ದವರು ಅದನ್ನು ಬಿಟ್ಟು/ಒಡೆದು ಅತಿಭರದಿಂದ ಬರುವ ಮಿತ್ರರಾಗಿದ್ದ ಭಟರನ್ನೂ ಎದುರಿಸಿದರು; ಕಡುಶೂರರು ಆಗ ಮಿತ್ರಭಾವದ ಸ್ನೇಹದಿಂದ ಮರುಗದೆ ಮಿತ್ರ/ಸೂರ್ಯನ ಮಿತ್ರರಾದ ಕಮಲಗಳು ಸೂರ್ಯನನ್ನು ನೋಡಿ ಸಂತಸದಿಂದ ಮಾಣವ/ ಅರಳದಿರುವಂತೆ ವಿರೋಧದಿಂದ ಕಾದಾಡಿದರು.

(ಪದ್ಯ - ೩)

ಪದ್ಯ:-:೪:

ಸಂಪಾದಿಸಿ

ತೇರ ವಂಗಡದ ಜರ್ಜಾರವಂ ಗಜದ ಘಂ |
ಟಾರವಂ ಹಯದ ಹೇಷಾರವಂ ನಡೆವ ಸೇ |
ನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ ಸಂಗಡಿಸಿದ ||
ಜ್ಯಾರವಂ ಭಟರ ಬಾಹಾರವಂ ದಳದ ಬಂ |
ಭಾರವಂ ರಣ ಕಿಲಕಿಲಾ ರವಂ ಪಟಹ ಢ |
ಕ್ಕಾರವಂ ಪುದಿದ ನಾನಾ ರವಂ ಕಿವಿಗತಿ ಕಠೋರವಂ ತೀವಿತಂದು ||4||

ಪದವಿಭಾಗ-ಅರ್ಥ:
ತೇರ ವಂಗಡದ (ಸಮೂಹದ:ಜಿ.ವೆ.ಸು.ನಿಘಂಟು) ಜರ್ಜಾರವಂ (ರವ=ಸದ್ದು) ಗಜದ ಘಂಟಾರವಂ ಹಯದ ಹೇಷಾರವಂ ನಡೆವ ಸೇನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ ಸಂಗಡಿಸಿದ=[ಆ ಯುದ್ಧದಲ್ಲಿ, ರಥ ಸಮೂಹದ ಜರ್ಜರ ಸದ್ದು, ಆನೆಯ ಕುತ್ತಿಗೆಗೆಕಟ್ಟಿದದ ಘಂಟೆಯ ಸದ್ದು, ಕುದುರೆಯ ಹೇಷಾರವ, ಸೇನೆಯ ನಡೆಯುವ ಸದ್ದು, ಭೇರಿಯ ಮಹಾಶಬ್ದ, ಬಹಳ ಕಹಳೆಯ ಶಬ್ದ, ಸೇರಿದ ಬಿಲ್ಲುಗಾರರ]; ಜ್ಯಾರವಂ (ಧನುವಿನ ಠೇಂಕಾರ) ಭಟರ ಬಾಹಾರವಂ (ಬಾಹು ರವ) ದಳದ ಬಂಭಾರವಂ (ಭೋಂ-ಶಂಖ) ರಣ ಕಿಲಕಿಲಾ ರವಂ ಪಟಹ ಢಕ್ಕಾರವಂ ಪುದಿದ ನಾನಾ ರವಂ ಕಿವಿಗತಿ ಕಠೋರವಂ ತೀವಿತು ಅಂದು =[ಧನುವಿನ ಠೇಂಕಾರ, ಭಟರ ಬಾಹು ತಟ್ಟುವಶಬ್ದ, ದಳದಲ್ಲೂದುವ ಭೋಂ-ಶಂಖದ ಶಬ್ದ, ರಣದ ಆಯುಧಗಳ ಕಿಲಕಿಲ ಸದ್ದು, ಪಟಹಗಳ ಢಕ್ಕೆಗಳ ಸದ್ದು, ಹೀಗೆ ಸೇರಿದ ನಾನಾಬಗೆಯ ಸದ್ದುಗಳು ಕಿವಿಗೆ ಅತಿ ಕಠೋರವಾಗಿ ಅಂದು ವ್ಯಾಪಿಸಿತ್ತು ].
  • ತಾತ್ಪರ್ಯ:ಆ ಯುದ್ಧದಲ್ಲಿ, ರಥ ಸಮೂಹದ ಜರ್ಜರ ಸದ್ದು, ಆನೆಯ ಕುತ್ತಿಗೆಗೆಕಟ್ಟಿದದ ಘಂಟೆಯ ಸದ್ದು, ಕುದುರೆಯ ಹೇಷಾರವ, ಸೇನೆಯ ನಡೆಯುವ ಸದ್ದು, ಭೇರಿಯ ಮಹಾಶಬ್ದ, ಬಹಳ ಕಹಳೆಯ ಶಬ್ದ, ಸೇರಿದ ಬಿಲ್ಲುಗಾರರ ಧನುವಿನ ಠೇಂಕಾರ, ಭಟರ ಬಾಹು ತಟ್ಟುವಶಬ್ದ, ದಳದಲ್ಲಿ ಊದುವ ಭೋಂ-ಶಂಖದ ಶಬ್ದ, ರಣದ ಆಯುಧಗಳ ಕಿಲಕಿಲ ಸದ್ದು, ಪಟಹಗಳ ಢಕ್ಕೆಗಳ ಸದ್ದು, ಹೀಗೆ ಸೇರಿದ ನಾನಾಬಗೆಯ ಸದ್ದುಗಳು ಕಿವಿಗೆ ಅತಿ ಕಠೋರವಾಗಿ ಅಂದು ವ್ಯಾಪಿಸಿತ್ತು .

(ಪದ್ಯ - ೪)

ಪದ್ಯ:-:೫:

ಸಂಪಾದಿಸಿ

ಸಿಂಧ ಸೀಗುರಿ ಛತ್ರಚಾಮರ ಪತಾಕೆಗಳ್ |
ಸಂದಣಿಸಿ ಗಗನಮಂ ಮುಸುಗಲ್ಕೆ ತವೆ ಮೂಡಿ |
ದಂಧಕಾರಂಗಳಂ ಕಿಡಿಸಿದುವು ರತ್ನಾಭರಣಕಾಂತಿಗಳ್ ಭೂಪರ ||
ಕೆಂದೂಳಡರ್ದು ನಭಮಂ ಮುಸುಕಿತಾಗ ಸುರ |
ಸಿಂಧುಪ್ರವಾಹ ಮುತ್ತುಂಗ ಶೋಣಾಚಲದ |
ಬಂಧುರ ತಟಪ್ರದೇಶದೊಳೊಪ್ಪುವೊಜ್ಜರದ ನದಿಯೆಂಬ ತೆರನಾಗಲು ||5||

ಪದವಿಭಾಗ-ಅರ್ಥ:
ಸಿಂಧ ಸೀಗುರಿ (ಬಿಳಿ ಚಾಮರ) ಛತ್ರಚಾಮರ ಪತಾಕೆಗಳ್ ಸಂದಣಿಸಿ ಗಗನಮಂ ಮುಸುಗಲ್ಕೆ ತವೆ ಮೂಡಿ ದಂಧಕಾರಂಗಳಂ ಕಿಡಿಸಿದುವು ರತ್ನಾಭರಣಕಾಂತಿಗಳ್ ಭೂಪರ=[ಆ ಸೈನ್ಯಗಳಲ್ಲಿ, ಸಿಂಧವೆಂಬಗುರತುಪಟ, ಸೀಗುರಿಯೆಂಬ ಬಿಳಿ ಚಾಮರ, ಛತ್ರಚಾಮರಗಳು, ಪತಾಕೆಗಳು, ಎಲ್ಲಾ ಒಟ್ಟಾಗಿ ಆಕಾಸವನ್ನು ಮುಸುಗಲು/ಆವರಿಸಲು, ಮತ್ತು ಭೂಪತಿಗಳ ರತ್ನಾಭರಣಗಳ ಕಾಂತಿಗಳು ಹೆಚ್ಚಾಗಿ ಮೂಡಿದ ಅಂಧಕಾರವನ್ನು ಹೊಗಲಾಡಿಸಿದವು.]; ಕೆಂದೂಳು ಅಡರ್ದು ನಭಮಂ ಮುಸುಕಿತು ಆಗ ಸುರ ಸಿಂಧುಪ್ರವಾಹಂ ಉತ್ತುಂಗ ಶೋಣಾಚಲದ ಬಂಧುರ ತಟಪ್ರದೇಶದೊಳು ಒಪ್ಪುವ ಒಜ್ಜರದ (ವಜ್ರದ) ನದಿಯೆಂಬ ತೆರನಾಗಲು=[ಭಟರ, ಪ್ರಾಣಿದಳ,ರಥಗಳ ನೆಡೆಯಿಂದ ಕೆಂದೂಳು ಆಕಾಶವನ್ನು ಅಡರಿ ಆವರಿಸಿತು. ಆಗ ಸುರ ನದಿಪ್ರವಾಹವು ಎತ್ತರದ ಶೋಣಾಚಲದ/ಕೆಂಪು ಬೆಟ್ಟದಿಂದ ಇಳಿದು ಮನೋಹರವಾಗಿ ಅಂಕುಡೊಕಾಗಿ ಹರಿದು ತಟ ಪ್ರದೇಶದಲ್ಲಿ ಕಾಣುವ ವಜ್ರದ ನದಿಯೆಂಬಂತೆ ಕಾಣುತ್ತಿತ್ತು.];
  • ತಾತ್ಪರ್ಯ:ಆ ಸೈನ್ಯಗಳಲ್ಲಿ, ಸಿಂಧವೆಂಬಗುರತುಪಟ, ಸೀಗುರಿಯೆಂಬ ಬಿಳಿ ಚಾಮರ, ಛತ್ರಚಾಮರಗಳು, ಪತಾಕೆಗಳು, ಎಲ್ಲಾ ಒಟ್ಟಾಗಿ ಆಕಾಸವನ್ನು ಮುಸುಗಲು/ಆವರಿಸಲು, ಮತ್ತು ಭೂಪತಿಗಳ ರತ್ನಾಭರಣಗಳ ಕಾಂತಿಗಳು ಹೆಚ್ಚಾಗಿ ಮೂಡಿದ ಅಂಧಕಾರವನ್ನು ಹೊಗಲಾಡಿಸಿದವು. ಭಟರ, ಪ್ರಾಣಿದಳ,ರಥಗಳ ನೆಡೆಯಿಂದ ಕೆಂದೂಳು ಆಕಾಶವನ್ನು ಅಡರಿ ಆವರಿಸಿತು. ಆಗ ಸುರನದಿಪ್ರವಾಹವು ಎತ್ತರದ ಶೋಣಾಚಲದ/ಕೆಂಪು ಬೆಟ್ಟದಿಂದ ಇಳಿದು ಮನೋಹರವಾಗಿ ಅಂಕುಡೊಕಾಗಿ ಹರಿದು ತಟ ಪ್ರದೇಶದಲ್ಲಿ ಕಾಣುವ ವಜ್ರದ ನದಿಯೆಂಬಂತೆ ಕಾಣುತ್ತಿತ್ತು.

(ಪದ್ಯ - ೫)

ಪದ್ಯ:-:೬:

ಸಂಪಾದಿಸಿ

ಚೂಣಿಯೊಳ್ ಬೆರಸಿ ಪೊಯ್ದಾಡಿದರ್ ತಮತಮಗೆ |
ಬಾಣ ತೋಮರ ಪರಶೂ ಚಕ್ರವಸಿ ಮುದ್ಗರ ಕೃ |
ಪಾಣ ಡೊಂಕಣಿ ಕುರಿತ ಸುರಗಿ ಸಲ್ಲೆಹ ಶಕ್ತಿ ಮೊದಲಾದ ಕೈದುಗಳೊಳು ||
ಕೇಣಮಿಲ್ಲದೆ ಚಾರಿ ಚಳಕ ಚಾಳೆಯ ಚದುರ್ |
ಪಾಣಿಲಾಘವ ಪಂಥ ಪಾಡುಗಳನರಿದು ಬಿ |
ನ್ನಾಣದಿಂ ಗಾಯಗಾಣಿಸಿದರತಿಬಲರಲ್ಲಿ ನಾನಾ ಪ್ರಹಾರದಿಂದ ||6||

ಪದವಿಭಾಗ-ಅರ್ಥ:
ಚೂಣಿಯೊಳ್ (ಸೇನಾಮುಖ) ಬೆರಸಿ ಪೊಯ್ದಾಡಿದರ್ ತಮತಮಗೆ ಬಾಣ ತೋಮರ ಪರಶೂ ಚಕ್ರವಸಿ ಮುದ್ಗರ ಕೃ ಪಾಣ ಡೊಂಕಣಿ ಕುರಿತ ಸುರಗಿ ಸಲ್ಲೆಹ ಶಕ್ತಿ ಮೊದಲಾದ ಕೈದುಗಳೊಳು=[ಅಲ್ಲಿ ಸೇನಾಮುಖ ಭಾಗದಲ್ಲಿ ಒಟ್ಟಾಗಿ ಸೇರಿ ಶತ್ರುಗಳೊಡನೆ ತಮ-ತಮಗೆ (ಬೇರೆ-ಬೇರೆ) ಬಾಣ, ತೋಮರ, ಪರಶು, ಚಕ್ರವಸಿ,ಮುದ್ಗರ, ಕೃಪಾಣ, ಡೊಂಕಣಿ, ಕುರಿತ, ಸುರಗಿ, ಸಲ್ಲೆಹ, ಶಕ್ತಿ, ಮೊದಲಾದ ಆಯುಧಗಳಿಂದ ಹೊಡೆದಾಡಿದರು;]; ಕೇಣಮಿಲ್ಲದೆ (ದ್ವೇಷವಿಲ್ಲದೆ) ಚಾರಿ ಚಳಕ ಚಾಳೆಯ ಚದುರ್ ಪಾಣಿಲಾಘವ ಪಂಥ ಪಾಡುಗಳನು ಅರಿದು ಬಿನ್ನಾಣದಿಂ ಗಾಯಗಾಣಿಸಿದರು ಅತಿಬಲರಲ್ಲಿ ನಾನಾ ಪ್ರಹಾರದಿಂದ=[ನಿಜವಾದ ದ್ವೇಷವಿಲ್ಲದೆ ಯದ್ಧಚಮತ್ಕಾರದಿಂದ ಚಾರಿ, ಚಳಕ, ಚಾಳೆಯ, ಚತುರತೆ, ಪಾಣಿ/ಹಸ್ತಲಾಘವ, ಪಂಥ, ಪಾಡು/ ಪಟ್ಟುಗಳನ್ನು ಅರಿತು ಚತುರತೆಯಿಂದ ಅತಿಬಲರು ಅಲ್ಲಿ ನಾನಾ ಪ್ರಹಾರದಿಂದ ಗಾಯಮಾಡಿ ಹೋರಾಡಿದರು.]
  • ತಾತ್ಪರ್ಯ:ಅಲ್ಲಿ ಸೇನಾಮುಖ ಭಾಗದಲ್ಲಿ ಒಟ್ಟಾಗಿ ಸೇರಿ ಶತ್ರುಗಳೊಡನೆ ತಮ-ತಮಗೆ (ಬೇರೆ-ಬೇರೆ) ಬಾಣ, ತೋಮರ, ಪರಶು, ಚಕ್ರವಸಿ,ಮುದ್ಗರ, ಕೃಪಾಣ, ಡೊಂಕಣಿ, ಕುರಿತ, ಸುರಗಿ, ಸಲ್ಲೆಹ, ಶಕ್ತಿ, ಮೊದಲಾದ ಆಯುಧಗಳಿಂದ ಹೊಡೆದಾಡಿದರು; ನಿಜವಾದ ದ್ವೇಷವಿಲ್ಲದೆ ಯದ್ಧಚಮತ್ಕಾರದಿಂದ ಚಾರಿ, ಚಳಕ, ಚಾಳೆಯ, ಚತುರತೆ, ಪಾಣಿ/ಹಸ್ತಲಾಘವ, ಪಂಥ, ಪಾಡು/ ಪಟ್ಟುಗಳನ್ನು ಅರಿತು ಚತುರತೆಯಿಂದ ಅತಿಬಲರು ಅಲ್ಲಿ ನಾನಾ ಪ್ರಹಾರದಿಂದ ಗಾಯಮಾಡಿ ಹೋರಾಡಿದರು.

(ಪದ್ಯ - ೬)

ಪದ್ಯ:-:೭:

ಸಂಪಾದಿಸಿ

ತೂಳಿಸಿದರಾನೆಯಂ ಜೋದರುರವಣಿಸಿ ದೂ |
ವಾಳಿಸಿದರುಬ್ಬೆದ್ದು ರಾವುತರ್ ತೇಜಿಯಂ |
ಕೇಳಿಸಿದರಾಹವದ ನಾಟ್ಯಮಂ ರಣರಂಗದೊಳ್ ಚಟುಲ ಪಟುರಥಿಕರು||
ಏಳಿಸಿದರಾಳ್ ತನದ ಪಂತಮಂ ಕಾಲವರ್ |
ಬೀಳಿಸಿದ ರಹಿತರಂ ಪೊಯ್ದಾಡಿ ತಲೆಯಂ ನಿ |
ವಾಳಿಸಿದ ರಾಳ್ದಂಗೆ ಕೈದುಗಳ ಹೋರಟೆಯ ಖಣಿ ಕಟಿಲ ರಭಸದಿಂದೆ ||7||

ಪದವಿಭಾಗ-ಅರ್ಥ:
ತೂಳಿಸಿದರು ಆನೆಯಂ ಜೋದರು (ಮಾವುಟಿಗರು) ಉರವಣಿಸಿ, ದೂವಾಳಿಸಿದರು (ದವಡಾಯಿಸಿದರು ಉಬ್ಬೆದ್ದು (ಹುರಿದುಂಬಿಸು) ರಾವುತರ್ ತೇಜಿಯಂ, ಕೇಳಿಸಿದರ ಆಹವದ ನಾಟ್ಯಮಂ ರಣರಂಗದೊಳ್ ಚಟುಲ ಪಟುರಥಿಕರು,=[ ಮಾವುಟಿಗರು ಮೇಲೆಬಿದ್ದು ಆನೆಯನ್ನು ನೂಕಿ ಭಟರನ್ನು ತಳಿಸಿದರು, ರಾವುತರು ಕುದುರೆಯನ್ನು ಚಮಕಾಯಿಸಿ ಓಡಿಸಿದರು, ರಣರಂಗದಲ್ಲಿ ಚಟುಲ-ಚುರುಕಾದ ಪಟುಭಟರು, ರಥಿಕರು ತಮ್ಮನಡೆಯಿಂದ ಯುದ್ಧದ ನಾಟ್ಯದಂತಿರುವ ನಡಿಗೆಯ ಶಬ್ದವನ್ನು ಕೇಳಿಸಿದರು,]; ಏಳಿಸಿದರು (ಇಲ್ಲವಾಗಿಸು?) ಆಳ್ ತನದ (ಪೌರುಷದ) ಪಂತಮಂ ಕಾಲವರ್ ಬೀಳಿಸಿದರ ಅಹಿತರಂ ಪೊಯ್ದಾಡಿ ತಲೆಯಂ ನಿವಾಳಿಸಿದರು ಆಳ್ದಂಗೆ ಕೈದುಗಳ ಹೋರಟೆಯ ಖಣಿ ಕಟಿಲ ರಭಸದಿಂದೆ=[ಪೌರುಷದ ಪಂಥವನ್ನು ಸುಳ್ಳುಮಾಡಿದರು, ಕಾಲುಭಟರು ಶತ್ರುಗಳನ್ನು ಬೀಳಿಸಿದರು; ಆಳ್ದ/ಯಜಮಾನನಿಗೆ ಆಯುಧಗಳ ಹೋರಾಟದಲ್ಲಿ ಖಣಿ ಕಟಿಲ ರಭಸದಿಂದ ಹೋರಾಡಿ ತಲೆಯನ್ನು ಕಡಿದರು,].
  • ತಾತ್ಪರ್ಯ:ಮಾವುಟಿಗರು ಮೇಲೆಬಿದ್ದು ಆನೆಯನ್ನು ನೂಕಿ ಭಟರನ್ನು ತಳಿಸಿದರು, ರಾವುತರು ಕುದುರೆಯನ್ನು ಚಮಕಾಯಿಸಿ ಓಡಿಸಿದರು, ರಣರಂಗದಲ್ಲಿ ಚಟುಲ-ಚುರುಕಾದ ಪಟುಭಟರು, ರಥಿಕರು ತಮ್ಮನಡೆಯಿಂದ ಯುದ್ಧದ ನಾಟ್ಯದಂತಿರುವ ನಡಿಗೆಯ ಶಬ್ದವನ್ನು ಕೇಳಿಸಿದರು, ಪೌರುಷದ ಪಂಥವನ್ನು ಸುಳ್ಳುಮಾಡಿದರು, ಕಾಲುಭಟರು ಶತ್ರುಗಳನ್ನು ಬೀಳಿಸಿದರು; ಆಳ್ದ/ಯಜಮಾನನಿಗೆ ಆಯುಧಗಳ ಹೋರಾಟದಲ್ಲಿ ಖಣಿ ಕಟಿಲ ರಭಸದಿಂದ ಹೋರಾಡಿ ತಲೆಯನ್ನು ಕಡಿದರು,

(ಪದ್ಯ - ೭)

ಪದ್ಯ:-:೮:

ಸಂಪಾದಿಸಿ

ಕಾರ್ಮುಗಿಲ ಸಿಡಿಲ ರವದಂದಮಾಗಿರೆ ಕರೆದ |
ಕಾರ್ಮುಕಧ್ವನಿ ಮಿಂಚಿನಂತೆ ಪೊಳೆಪೊಳೆವ ಪೊಂ |
ದೇರ್ಮೆರೆಯೆ ಶರವರ್ಷಮಂ ಕರೆಯುತರ್ಜುನನ ಸಮ್ಮುಖಕೆ ಬಂದು ನಿಂದ ||
ಮಾರ್ಮಲೆಯಬಾರದಯ್ಯನೊಳೆಂದು ಕಂಡು ನಾಂ |
ಕೂರ್ಮೆಯಂದೆರಗಿದೊಡೆ ಜರೆದೆಲಾ ರಣದೊಳಿ |
ನ್ನಾರ್ಮೊಗೆದೊಡಂ ಜೈಸದೊಡೆ ನಿನ್ನಸುತನಲ್ಲೆನುತೆ ಪಾರ್ಥಿ ತೆಗೆದೆಚ್ಚನು ||8|||

ಪದವಿಭಾಗ-ಅರ್ಥ:
ಕಾರ್ಮುಗಿಲ ಸಿಡಿಲ ರವದಂದಂ ಆಗಿರೆ ಕರೆದ ಕಾರ್ಮುಕಧ್ವನಿ=[ಬಬ್ರುವಾಹನನ (ಕರದ-ಕೈಯಲ್ಲದ್ದ) ಕರೆದ/ಆಹ್ವಾನದ ಬಿಲ್ಲಿನಧ್ವನಿ ದಟ್ಟಕಪ್ಪುಮೋಡದಿಂದ ಬರುವಸಿಡಿಲ ಶಬ್ದದಂತೆ ಆಗಿರಲು]; ಮಿಂಚಿನಂತೆ ಪೊಳೆಪೊಳೆವ ಪೊಂದೇರ್ ಮೆರೆಯೆ ಶರವರ್ಷಮಂ ಕರೆಯುತ ಅರ್ಜುನನ ಸಮ್ಮುಖಕೆ ಬಂದುನಿಂದ=[ಮಿಂಚಿನಂತೆ ಪಳಪಳನೆ ಹೋಳೆಯುವ ಹೊನ್ನಿನಥವು ಶೋಭಿಸುತ್ತಿರಲು, ಬಾಣಗಳ ಮಳೆಯನ್ನು ಕರೆಯುತ್ತಾ ಅರ್ಜುನನ ಎದುರಿಗೆ ಬಬ್ರುವಾಹನ ಬಂದುನಿಂತನು.]; ಮಾರ್ಮಲೆಯಬಾರದ ಅಯ್ಯನೊಳು ಅಂದು ಕಂಡು ನಾಂ ಕೂರ್ಮೆಯಂದ ಎರಗಿದೊಡೆ ಜರೆದೆಲಾ=[ಮಾರ್ಮಲೆತು/ಅತಿಕ್ರೋದದಿಂದ ಹೋರಾಡಬಾರದ ತಂದೆಯೊಡನೆ ಅಂದು ನಿನ್ನನ್ನು ಕಂಡು ನಾನು ಪ್ರೀತಿಯಿಂದ ನಮಸ್ಕರಿದರೆ, ನಿಂದಿಸಿದೆಯಲ್ಲವೇ?]; ರಣದೊಳಿನ್ನು ಆರುಂ ಒಗೆದೊಡಂ ಜೈಸದೊಡೆ ನಿನ್ನ ಸುತನು ಅಲ್ಲೆನುತೆ ಪಾರ್ಥಿ ತೆಗೆದು ಎಚ್ಚನು=[ರಣರಂಗದಲ್ಲಿ ಇನ್ನು ಯಾರು ಎದುರುಬಂದರೂ ಜಯಿಸದಿದ್ದರೆ ತಾನು ನಿನ್ನ ಮಗನೇ ಅಲ್ಲ ಎನ್ನುತ್ತಾ ಪಾರ್ಥಿ/ ಪಾರ್ಥನಮಗ ಬಬ್ರವಾಹನನು ಬಾಣವನ್ನು ತೆಗೆದುಹೊಡೆನು].
  • ತಾತ್ಪರ್ಯ:ಬಬ್ರುವಾಹನನ (ಕರದ-ಕೈಯಲ್ಲದ್ದ) ಕರೆದ/ಆಹ್ವಾನದ ಬಿಲ್ಲಿನಧ್ವನಿ ದಟ್ಟಕಪ್ಪುಮೋಡದಿಂದ ಬರುವಸಿಡಿಲ ಶಬ್ದದಂತೆ ಆಗಿರಲು, ಮಿಂಚಿನಂತೆ ಪಳಪಳನೆ ಹೋಳೆಯುವ ಹೊನ್ನಿನಥವು ಶೋಭಿಸುತ್ತಿರಲು, ಬಾಣಗಳ ಮಳೆಯನ್ನು ಕರೆಯುತ್ತಾ ಅರ್ಜುನನ ಎದುರಿಗೆ ಬಬ್ರುವಾಹನ ಬಂದುನಿಂತನು. ಮಾರ್ಮಲೆತು/ಅತಿಕ್ರೋದದಿಂದ ಹೋರಾಡಬಾರದ ತಂದೆಯೊಡನೆ ಅಂದು ನಿನ್ನನ್ನು ಕಂಡು ನಾನು ಪ್ರೀತಿಯಿಂದ ನಮಸ್ಕರಿದರೆ, ನಿಂದಿಸಿದೆಯಲ್ಲವೇ? ರಣರಂಗದಲ್ಲಿ ಇನ್ನು ಯಾರು ಎದುರುಬಂದರೂ ಜಯಿಸದಿದ್ದರೆ ತಾನು ನಿನ್ನ ಮಗನೇ ಅಲ್ಲ ಎನ್ನುತ್ತಾ ಪಾರ್ಥಿ/ ಪಾರ್ಥನ ಮಗ ಬಬ್ರವಾಹನನು ಬಾಣವನ್ನು ತೆಗೆದುಹೊಡೆdನು].

(ಪದ್ಯ - ೮)

ಪದ್ಯ:-:೯:

ಸಂಪಾದಿಸಿ

ಪಾರ್ಥಿವರ ಪಂಥಮಲ್ಲೆಂದು ಪೇಳಲ್ಕೆ ಪುರು |
ಷಾರ್ಥಮಂ ಮಾಳ್ಪೆಲಾ ನಿನ್ನ ಪೌರುಷವ ನಪ |
ಕೀರ್ತಿಗಂಜುವನಲ್ಲ ಪಿತನಂ ಪಚಾರಿಸುವೆ ಮತ್ತೆ ಕಾಳಗಕೆ ಬಂದು ||
ಧೂರ್ತನಹೆ ನೀನೆನುತೆ ನಸುನಗೆಯೊಳಿದಿರಾಗಿ |
ಸುಕುಮಾರನಂ ಘಾತಿಸಿದನೊಂಬತ್ತು |
ಕಾರ್ತಸ್ವರಾಂಕಿತ ಸುಪುಂಖದಿಂದೆಸೆವ ಬಾಣಗಳಿಂದನುಸಾಲ್ವನು ||9||

ಪದವಿಭಾಗ-ಅರ್ಥ:
ಪಾರ್ಥಿವರ (ಪಾರ್ಥಿವ= ರಾಜ) ಪಂಥಮಲ್ಲೆಂದು ಪೇಳಲ್ಕೆ ಪುರುಷಾರ್ಥಮಂ ಮಾಳ್ಪೆಲಾ ನಿನ್ನ ಪೌರುಷವನಪಕೀರ್ತಿಗೆ ಅಂಜುವನಲ್ಲ=[ಅಷ್ಟರಲ್ಲಿ ಅನುಸಾಲ್ವನು ಅಡ್ಡಬಂದು,ಕುದುರೆಯನ್ನು ಕಟ್ಟಿ, ಯುದ್ಧಮಾಡದೆ ಅದನ್ನು ಹಿಂದಕ್ಕೆ ಕೊಡುವುದು,ರಾಜರ ಪಂಥವು ಅಲ್ಲವೆಂದು ಅರ್ಜುನನು ಹೇಳಲು, ಈಗ ಯುದ್ಧವೆಂಬ ಪುರುಷಾರ್ಥದ/ ಕ್ಷಾತ್ರಧರ್ಮದ ಕಾರ್ಯವನ್ನು ಮಾಡಲು ಹೊರಟಿರುವೆ; ಇದು ನಿನ್ನ ಪೌರುಷವನು ತೋರಿಸುವುದು; ನೀನು ಅಪಕೀರ್ತಿಗೆ ಅಂಜುವನಲ್ಲ;]; ಪಿತನಂ ಪಚಾರಿಸುವೆ ಮತ್ತೆ ಕಾಳಗಕೆ ಬಂದು ಧೂರ್ತನಹೆ ನೀನು=[ತಂದೆಯೆಂದು ಹೇಳಿ ಈಗ ಪಿತನನ್ನು ದೂಷಿಸುವೆ; ಮತ್ತೆ ಕಾಳಗಕೆ ಬಂದು ಧೂರ್ತನಹೆ/ಕಪಟಿಯಾಗಿರುವೆ ನೀನು]; ಎನುತೆ ನಸುನಗೆಯೊಳು ಇದಿರಾಗಿ ಸುಕುಮಾರನಂ ಘಾತಿಸಿದನು ಒಂಬತ್ತು ಕಾರ್ತಸ್ವರಾಂಕಿತ ಸುಪುಂಖದಿಂದ ಎಸೆವ ಬಾಣಗಳಿಂದ ಅನುಸಾಲ್ವನು=[ಎನ್ನುತ್ತಾ ಅನುಸಾಲ್ವನು ನಸುನಗೆಯಿಂದ ಬಬ್ರುವಾಹನನಿಗೆ ಇದಿರಾಗಿ ಸುಕುಮಾರನನ್ನು ಚಿನ್ನದ ಹೆಸರುಳ್ಳ ಸುಪುಂಖದಿಂದ ಶೋಭಿಸುವ ಒಂಬತ್ತು ಬಾಣಗಳಿಂದ ಹೊಡೆದನು].
  • ತಾತ್ಪರ್ಯ:ಅಷ್ಟರಲ್ಲಿ ಅನುಸಾಲ್ವನು ಅಡ್ಡಬಂದು, ಕುದುರೆಯನ್ನು ಕಟ್ಟಿ, ಯುದ್ಧಮಾಡದೆ ಅದನ್ನು ಹಿಂದಕ್ಕೆ ಕೊಡುವುದು,ರಾಜರ ಪಂಥವು ಅಲ್ಲವೆಂದು ಅರ್ಜುನನು ಹೇಳಲು, ಈಗ ಯುದ್ಧವೆಂಬ ಪುರುಷಾರ್ಥದ/ ಕ್ಷಾತ್ರಧರ್ಮದ ಕಾರ್ಯವನ್ನು ಮಾಡಲು ಹೊರಟಿರುವೆ; ಇದು ನಿನ್ನ ಪೌರುಷವನು ತೋರಿಸುವುದು; ನೀನು ಅಪಕೀರ್ತಿಗೆ ಅಂಜುವನಲ್ಲ; ತಂದೆಯೆಂದು ಹೇಳಿ ಈಗ ಪಿತನನ್ನು ದೂಷಿಸುವೆ; ಮತ್ತೆ ಕಾಳಗಕೆ ಬಂದು ಧೂರ್ತನಹೆ/ಕಪಟಿಯಾಗಿರುವೆ ನೀನು; ಎನ್ನುತ್ತಾ ಅನುಸಾಲ್ವನು ನಸುನಗೆಯಿಂದ ಬಬ್ರುವಾಹನನಿಗೆ ಇದಿರಾಗಿ ಸುಕುಮಾರನನ್ನು ಚಿನ್ನದ ಹೆಸರುಳ್ಳ ಸುಪುಂಖದಿಂದ ಶೋಭಿಸುವ ಒಂಬತ್ತು ಬಾಣಗಳಿಂದ ಹೊಡೆದನು.

(ಪದ್ಯ - ೯)

ಪದ್ಯ:-:೧೦:

ಸಂಪಾದಿಸಿ

ಕೈತವದೆಸುಗೆಯೊ ನಿಜ ಸಾಹಸಮಿನಿತೊ ನಿನ್ನ |
ಮೈತಲೆಗಲಸಿ ಬಂದುದಾಹವಕೆ ಪೊಸತೆನುತ |
ಕೈತವಕದಿಂದೆಚ್ಚ ನನುಸಾಲ್ವನಂ ನೂರುಬಾಣದಿಂ ಪಾರ್ಥಸೂನು ||
ಐತರಲವಂ ಮಧ್ಯಮಾರ್ಗದೊಳ್ ತಡೆಗಡಿದು |
ದೈತೇಯರಾಜಂ ಕನಲ್ದಾಗ ಬರಸಿಡಿಲ |
ಹೊಯ್ತೆಗಿಮ್ಮಡಿಯಾಗಿ ಕಣೆಗಳಂ ಕವಿಸಿದಂ ಬಭ್ರುವಾಹನನ ಮೇಲೆ ||10||

ಪದವಿಭಾಗ-ಅರ್ಥ:
ಕೈತವದ ಎಸುಗೆಯೊ ನಿಜ ಸಾಹಸಂ ಇನಿತೊ ನಿನ್ನ ಮೈತಲೆಗೆ ಅಲಸಿ ಬಂದುದು ಆಹವಕೆ ಪೊಸತು ಎನುತ ಕೈತವಕದಿಂದೆ ಎಚ್ಚ ನನುಸಾಲ್ವನಂ=[ಕೈಚಳಕದ ಬಾಣಪ್ರಯೋಗವೊ, ತನ್ನ ಸಾಹಸವು ಇಷ್ಟೇಯೊ, ನಿನ್ನ ಮೈಗೆ ಮತ್ತು ತಲೆಗೆ ಬೇಸರಿಸಿ, ಅದನ್ನು ಕಳದುಕೊಳ್ಳಲು ಈ ಯುದ್ಧಕ್ಕೆ ನೀನು ಬಂದಿರುವುದು, ಇದು ಹೊಸಬಗೆ ಎನ್ನುತ್ತಾ ಬಬ್ರುವಾಹನನು, ಕೈಚಳಕದಿಂದ ಹೊಡೆದ ನನುಸಾಲ್ವನನ್ನು]; ನೂರುಬಾಣದಿಂ ಪಾರ್ಥಸೂನು ಐತರಲು ಅವಂ ಮಧ್ಯಮಾರ್ಗದೊಳ್ ತಡೆಗಡಿದು=[ನೂರುಬಾಣದಿಂದ ಹೊಡೆದನು; ಪಾರ್ಥಸೂನು ಬಬ್ರುವಾಹನನು ಹೊಡೆದ ಬಾಣಗಳು ಬರಲು, ಅವನು ಅವನ್ನು ಮಧ್ಯಮಾರ್ಗದಲ್ಲಿ ತಡೆದು ಕಡಿದನು]; ದೈತೇಯರಾಜಂ ಕನಲ್ದಾಗ ಬರಸಿಡಿಲ ಹೊಯ್ತೆಗೆ ಇಮ್ಮಡಿಯಾಗಿ ಕಣೆಗಳಂ ಕವಿಸಿದಂ ಬಭ್ರುವಾಹನನ ಮೇಲೆ=[ದೈತ್ಯರಾಜನು ಸಿಟ್ಟಿನಿಂದ ಆಗ ಬರಸಿಡಿಲ ಹೊಡೆತಕ್ಕೆ ಇಮ್ಮಡಿಯಾಗಿ ಬಾಣಗಳನ್ನು ಬಭ್ರುವಾಹನನ ಮೇಲೆ ಬಿಟ್ಟು ಕವಿಸಿದನು/ ಮುಚ್ಚಿದನು ].
  • ತಾತ್ಪರ್ಯ:ಕೈಚಳಕದ ಬಾಣಪ್ರಯೋಗವೊ, ತನ್ನ ಸಾಹಸವು ಇಷ್ಟೇಯೊ, ನಿನ್ನ ಮೈಗೆ ಮತ್ತು ತಲೆಗೆ ಬೇಸರಿಸಿ, ಅದನ್ನು ಕಳದುಕೊಳ್ಳಲು ಈ ಯುದ್ಧಕ್ಕೆ ನೀನು ಬಂದಿರುವುದು, ಇದು ಹೊಸಬಗೆ ಎನ್ನುತ್ತಾ ಬಬ್ರುವಾಹನನು, ಕೈಚಳಕದಿಂದ ಹೊಡೆದ ನನುಸಾಲ್ವನನ್ನು ನೂರುಬಾಣಗಳಿಂದ ಹೊಡೆದನು; ಪಾರ್ಥಸೂನು ಬಬ್ರುವಾಹನನು ಹೊಡೆದ ಬಾಣಗಳು ಬರಲು, ಅವನು ಅವನ್ನು ಮಧ್ಯಮಾರ್ಗದಲ್ಲಿ ತಡೆದು ಕಡಿದನು. ದೈತ್ಯರಾಜನು ಸಿಟ್ಟಿನಿಂದ ಆಗ ಬರಸಿಡಿಲ ಹೊಡೆತಕ್ಕೆ ಇಮ್ಮಡಿಯಾಗಿ ಬಾಣಗಳನ್ನು ಬಭ್ರುವಾಹನನ ಮೇಲೆ ಬಿಟ್ಟು ಕವಿಸಿದನು/ ಮುಚ್ಚಿದನು.

(ಪದ್ಯ - ೧೦)

ಪದ್ಯ:-:೧೧:

ಸಂಪಾದಿಸಿ

ಉಬ್ಬಿದುದು ಮೈರೋಷದಿಂದೆ ಗಂಟಿಕ್ಕಿದುವು |
ಹುಬ್ಬುಗಳ್ ಬಭ್ರುವಾಹಂಗೆ ತೆಗೆತೆಗೆದಿಸುತೆ |
ಬೊಬ್ಬಿರಿದನುನುಸಾಲ್ವನಂ ಮುಸುಕಿದುವು ಕೋಟಿಸಂಖ್ಯೆಯ ಪೊಗರ್ಗಣೆಗಳು ||
ಅಬ್ಬರಿಸಿ ದೈತ್ಯನದಕಿಮ್ಮಡಿಸಿ ಕೋಲ್ಗರೆದ |
ನೊಬ್ಬೊಬ್ಬರಂ ಜಯಿಸುವಾತುರದೊಳೆಚ್ಚಾಡ |
ಲಿಬ್ಬರಂಗದೊಳಿಡಿದುವಂಬುಗಳ್ ಬಂದುವರುಣಾಂಬುಗಳ್ ಸಂಗರದೊಳು ||11||

ಪದವಿಭಾಗ-ಅರ್ಥ:
ಉಬ್ಬಿದುದು ಮೈರೋಷದಿಂದೆ ಗಂಟಿಕ್ಕಿದುವು ಹುಬ್ಬುಗಳ್ ಬಭ್ರುವಾಹಂಗೆ ತೆಗೆತೆಗೆದು ಇಸುತೆ ಬೊಬ್ಬಿರಿದನು ಅನುಸಾಲ್ವನಂ ಮುಸುಕಿದುವು ಕೋಟಿಸಂಖ್ಯೆಯ ಪೊಗರ್ಗಣೆಗಳು=[ರೋಷದಿಂದ ಬಬ್ರವಾಹನ ಮೈ ಉಬ್ಬಿತು, ಹುಬ್ಬುಗಳು ಗಂಟಿಕ್ಕಿದುವು; ಬಭ್ರುವಾಹನನು ತೆಗೆತೆಗೆದು ಬಾಣಪ್ರಯೋಗಿಸಿ ಬೊಬ್ಬಿರಿದನು. ಅನುಸಾಲ್ವನನ್ನು ಕೋಟಿಸಂಖ್ಯೆಯ ಗಟ್ಟಿಬಾಣಗಳು ಮುಚ್ಚಿದುವು]; ಅಬ್ಬರಿಸಿ ದೈತ್ಯನದಕೆ ಇಮ್ಮಡಿಸಿ ಕೋಲ್ಗರೆದನು ಒಬ್ಬೊಬ್ಬರಂ ಜಯಿಸುವಾತುರದೊಳು ಎಚ್ಚಾಡಲಿಬ್ಬರಂಗದೊಳ್ ಇಡಿದುವಂಬುಗಳ್ ಬಂದುವರುಣಾಂಬುಗಳ್ ಸಂಗರದೊಳು=[ ದೈತ್ಯನು ಅದಕ್ಕೆ ಅಬ್ಬರಿಸಿ ಇಮ್ಮಡಿಯಾಗಿ ಬಾಣಗಳನ್ನು ಬಬ್ರುವಾಹನನ ಮೇಲೆ ಕರೆದನು. ಹೀಗೆ ಒಬ್ಬರು ಒಬ್ಬರನ್ನು ಜಯಿಸುವ ಆತುರದಲ್ಲಿ ಹೊಡೆದಾಡಲು, ಈ ಯುದ್ಧದಲ್ಲಿ ಇಬ್ಬರ ದೇಹದಲ್ಲಿ ಇಳಿದುವು ಅಂಬುಗಳು; ಅದರಿಂದ ಅರುಣಾಂಬು/ ರಕ್ತವು ಹೊರಬಂದವು.];
  • ತಾತ್ಪರ್ಯ:ರೋಷದಿಂದ ಬಬ್ರವಾಹನ ಮೈ ಉಬ್ಬಿತು, ಹುಬ್ಬುಗಳು ಗಂಟಿಕ್ಕಿದುವು; ಬಭ್ರುವಾಹನನು ತೆಗೆತೆಗೆದು ಬಾಣಪ್ರಯೋಗಿಸಿ ಬೊಬ್ಬಿರಿದನು. ಅನುಸಾಲ್ವನನ್ನು ಕೋಟಿಸಂಖ್ಯೆಯ ಗಟ್ಟಿಬಾಣಗಳು ಮುಚ್ಚಿದುವು; ದೈತ್ಯನು ಅದಕ್ಕೆ ಅಬ್ಬರಿಸಿ ಇಮ್ಮಡಿಯಾಗಿ ಬಾಣಗಳನ್ನು ಬಬ್ರುವಾಹನನ ಮೇಲೆ ಕರೆದನು. ಹೀಗೆ ಒಬ್ಬರು ಒಬ್ಬರನ್ನು ಜಯಿಸುವ ಆತುರದಲ್ಲಿ ಹೊಡೆದಾಡಲು, ಈ ಯುದ್ಧದಲ್ಲಿ ಇಬ್ಬರ ದೇಹದಲ್ಲಿ ಇಳಿದುವು ಅಂಬುಗಳು; ಅದರಿಂದ ಅರುಣಾಂಬು/ ರಕ್ತವು ಹೊರಬಂದವು.

(ಪದ್ಯ - ೧೧)

ಪದ್ಯ:-:೧೨:

ಸಂಪಾದಿಸಿ

ಬಾಣದೊಳ್ ಬಣಿತೆಯೊಳ್ ಬಿಲ್ಗಾರತನದ ಬಿ |
ನ್ನಾಣದೊಳ್ ಬಿಂಕದೊಳ್ ತಾಳಿಕೆಯೊಳುರುತರ |
ತ್ರಾಣದೊಳ್ ಜಯದೊಳ್ ಚಮತ್ಕೃತಿಯೊಳದಟಿನೊಳ್ ವೀರದೊಳ್ ಭಾರಣೆಯೊಳು ||
ಪಾಣಿಲಾಘವದೊಳ್ ಪರಾಕ್ರಮದ ಪಂತದೊಳ್ |
ಕಾಣೆ ನವರಿರ್ವರ್ಗೆ ಸುಮರಾದ ಕಲಿಗಳಂ |
ಕ್ಷೋಣಿಯೊಳೆನಲ್ ಬಭ್ರುವಾಹಾನುಸಾಲ್ವರೆಚ್ಚಾಡಿದರ್ ಕೊಳುಗುಳದೊಳು ||12||

ಪದವಿಭಾಗ-ಅರ್ಥ:
ಬಾಣದೊಳ್ ಬಣಿತೆಯೊಳ್ ಬಿಲ್ಗಾರತನದ ಬಿನ್ನಾಣದೊಳ್ ಬಿಂಕದೊಳ್ ತಾಳಿಕೆಯೊಳು ಉರುತರ ತ್ರಾಣದೊಳ್ ಜಯದೊಳ್ ಚಮತ್ಕೃತಿಯೊಳ್ ಅದಟಿನೊಳ್ ವೀರದೊಳ್ ಭಾರಣೆಯೊಳು=[ಬಾಣಪ್ರಯೊಗದಲ್ಲಿ, ಪರಿಣತೆಯಲ್ಲಿ, ಬಿಲ್ಗಾರತನದಲ್ಲಿ, ತಂತ್ರ/ಬಿನ್ನಾಣದಲ್ಲಿ , ಹೆಮ್ಮೆ/ಬಿಂಕದಲ್ಲಿ, ತಾಳ್ಮೆ/ತಾಳಿಕೆಯಲ್ಲಿ, ಹೆಚ್ಚಿನ ತ್ರಾಣದಲ್ಲಿ, ಜಯದಲ್ಲಿ, ಚಮತ್ಕೃತಿಯಲ್ಲಿ, ಶೌರ್ಯ/ಅದಟಿನಲ್ಲಿ, ವೀರತ್ವದಲ್ಲಿ ವೇಗ/ಭಾರಣೆಯಲ್ಲಿ ]; ಪಾಣಿಲಾಘವದೊಳ್ ಪರಾಕ್ರಮದ ಪಂತದೊಳ್ ಕಾಣೆನು ಅವರ್ ಇರ್ವರ್ಗೆ ಸುಮರಾದ ಕಲಿಗಳಂ ಕ್ಷೋಣಿಯೊಳ್ ಎನಲ್ ಬಭ್ರುವಾಹ ಅನುಸಾಲ್ವರು ಎಚ್ಚಾಡಿದರ್ ಕೊಳುಗುಳದೊಳು=[ಹಸ್ತಲಾಘವದಲ್ಲಿ, ಪರಾಕ್ರಮದ ಹಟದಲ್ಲಿ, ಅವರು ಇಬ್ಬರಿಗೆ ಸುಮರಾದ ಕಲಿಗಳನ್ನು ಭೂಮಿಯಲ್ಲಿ ಕಾಣೆನು ಎನ್ನುವಂತೆ ಬಭ್ರುವಾಹನ, ಅನುಸಾಲ್ವರು ಕೊಳುಗುಳದೊಳು/ಯುದ್ಧದಲ್ಲಿ ಹೊಡೆದಾಡಿದರು ].
  • ತಾತ್ಪರ್ಯ:ಬಾಣಪ್ರಯೊಗದಲ್ಲಿ, ಪರಿಣತೆಯಲ್ಲಿ, ಬಿಲ್ಗಾರತನದಲ್ಲಿ, ತಂತ್ರ/ಬಿನ್ನಾಣದಲ್ಲಿ , ಹೆಮ್ಮೆ/ಬಿಂಕದಲ್ಲಿ, ತಾಳ್ಮೆ/ತಾಳಿಕೆಯಲ್ಲಿ, ಹೆಚ್ಚಿನ ತ್ರಾಣದಲ್ಲಿ, ಜಯದಲ್ಲಿ, ಚಮತ್ಕೃತಿಯಲ್ಲಿ, ಶೌರ್ಯ/ಅದಟಿನಲ್ಲಿ, ವೀರತ್ವದಲ್ಲಿ ವೇಗ/ಭಾರಣೆಯಲ್ಲಿ, ಹಸ್ತಲಾಘವದಲ್ಲಿ, ಪರಾಕ್ರಮದ ಹಟದಲ್ಲಿ, ಅವರು ಇಬ್ಬರಿಗೆ ಸುಮರಾದ ಕಲಿಗಳನ್ನು ಭೂಮಿಯಲ್ಲಿ ಕಾಣೆನು ಎನ್ನುವಂತೆ ಬಭ್ರುವಾಹನ, ಅನುಸಾಲ್ವರು ಕೊಳುಗುಳದೊಳು/ಯುದ್ಧದಲ್ಲಿ ಹೊಡೆದಾಡಿದರು.

(ಪದ್ಯ - ೧೨)

ಪದ್ಯ:-:೧೩:

ಸಂಪಾದಿಸಿ

ಕಾಳಗಂ ಸಮಮಾಗಿ ಬರೆ ಕೆರಳ್ದನುಸಾಲ್ವ |
ನೇಳಂಬಿನಿಂ ಪಾರ್ಥಸುತನ ಬತ್ತಳಿಕೆಯಂ |
ಕೋಲೆಂಟರಿಂದೆ ಟೆಕ್ಕೆಯವ ನೀರೇಳು ಮಾರ್ಗಣದಿಂದ ಕಾರ್ಮುಕವನು ||
ಬೀಳಲಿಕ್ಕಡಿಯಾಗಿ ಕತ್ತರಿಸಿ ಕವಚಮಂ |
ಸೀಳಿದಂ ಕೈಯೊಡನೆ ಸಾಸಿರ ಸರಲ್ಗಳಿಂ |
ಪೂಳಿದಂ ಸಾರಥಿ ವರೂಥ ವಾಜಿಗಳಂ ಶಿಲೀಮುಖ ವ್ರಾತದಿಂದೆ ||13||

ಪದವಿಭಾಗ-ಅರ್ಥ:
ಕಾಳಗಂ ಸಮಮಾಗಿ ಬರೆ ಕೆರಳ್ದ ಅನುಸಾಲ್ವನು ಏಳು ಅಂಬಿನಿಂ ಪಾರ್ಥಸುತನ ಬತ್ತಳಿಕೆಯಂ ಕೋಲು ಎಂಟರಿಂದೆ ಟೆಕ್ಕೆಯವನು ಈರೇಳು/ಎರಡು ಏಳು ಮಾರ್ಗಣದಿಂದ ಕಾರ್ಮುಕವನು=[ಕಾಳಗವು ಸಮವಾಗಿ ಬರಲು, ಸಿಟ್ಟುಗೊಂಡ ಅನುಸಾಲ್ವನು ಏಳು ಬಾಣದಿಂದ ಪಾರ್ಥಸುತನ ಬತ್ತಳಿಕೆಯನ್ನೂ,ಎಂಟುಬಾಣದಿಂದ ಧ್ವಜವನ್ನೂ, ಹದಿನಾಲ್ಕು ಬಾಣದಿಂದ ಬಿಲ್ಲನ್ನೂ,]; ಬೀಳಲು ಇಕ್ಕಡಿಯಾಗಿ ಕತ್ತರಿಸಿ ಕವಚಮಂ ಸೀಳಿದಂ ಕೈಯೊಡನೆ ಸಾಸಿರ ಸರಲ್ಗಳಿಂ ಪೂಳಿದಂ ಸಾರಥಿ ವರೂಥ ವಾಜಿಗಳಂ ಶಿಲೀಮುಖ ವ್ರಾತದಿಂದೆ=[ ಎರಡಾಗಿ ಕತ್ತರಿಸಿ ಬೀಳಿಸಲು, ಕವಚವನ್ನು ಸೀಳಿದನು, ಕೈಯೊಡನೆ ಸಾವಿರ ಬಾಣಗಳಿಂದ ಸಾರಥಿ, ರಥ ಕುದುರೆಗಳನ್ನು ಶಿಲೀಮುಖದ ಬಾಣಗಳಿಂದ ಹೂಳಿದನು/ಮುಚ್ಚಿದನು].
  • ತಾತ್ಪರ್ಯ:ಕಾಳಗವು ಸಮವಾಗಿ ಬರಲು, ಸಿಟ್ಟುಗೊಂಡ ಅನುಸಾಲ್ವನು ಏಳು ಬಾಣದಿಂದ ಪಾರ್ಥಸುತನ ಬತ್ತಳಿಕೆಯನ್ನೂ,ಎಂಟುಬಾಣದಿಂದ ಧ್ವಜವನ್ನೂ, ಹದಿನಾಲ್ಕು ಬಾಣದಿಂದ ಬಿಲ್ಲನ್ನೂ, ಎರಡಾಗಿ ಕತ್ತರಿಸಿ ಬೀಳಿಸಲು, ಕವಚವನ್ನು ಸೀಳಿದನು, ಕೈಯೊಡನೆ ಸಾವಿರ ಬಾಣಗಳಿಂದ ಸಾರಥಿ, ರಥ ಕುದುರೆಗಳನ್ನು ಶಿಲೀಮುಖದ ಬಾಣಗಳಿಂದ ಮುಚ್ಚಿದನು.

(ಪದ್ಯ - ೧೩)

ಪದ್ಯ:-:೧೪:

ಸಂಪಾದಿಸಿ

ಕ್ಷಣದೊಳಾಗಲೆ ಬಭ್ರುವಾಹನಂ ಮತ್ತೊಂದು |
ಮಣಿವರೂಥವನಡರ್ದಿಸುತಿರ್ದ ನಿತ್ತಲುರ |
ವಣಿಸುವನುಸಾಲ್ವ ವಿರಥನಾಗಿ ಕೊಂಡನುರುಗದೆಯ ನೀ ಪಾರ್ಥಸುತನ ||
ರಣ ಚಮತ್ಕಾರಮೆಂತುಟೊ ತನ್ನ ಮೇಲಕಿ |
ಟ್ಟಣಿಸಿ ಬಹ ದಾನವನನೆಚ್ಚೊಡುಚ್ಚಳಿಸಿ ಕೂ |
ರ್ಗಣಿಗಳಡಗಿದುವಿಳೆಯೊಳಸುರೇಂದ್ರನಸವಳಿದು ವಸುಧೆಯಂ ಪಸೆಗೆಯ್ದನು ||14||

ಪದವಿಭಾಗ-ಅರ್ಥ:
ಕ್ಷಣದೊಳು ಆಗಲೆ ಬಭ್ರುವಾಹನಂ ಮತ್ತೊಂದು ಮಣಿವರೂಥವನು ಅಡರ್ದು ಇಸುತಿರ್ದನು=[ಆಗಲೆ ಒಂದು ಕ್ಷಣದಲ್ಲಿ ಬಭ್ರುವಾಹನನು ಮತ್ತೊಂದು ಮಣಿರಥವನ್ನು ಹತ್ತಿ ಬಾನಪ್ರಯೋಗಮಾಡುತ್ತಿದ್ದನು]; ಇತ್ತಲು ಉರವಣಿಸುವ ಅನುಸಾಲ್ವಂ ವಿರಥನಾಗಿ ಕೊಂಡನು ಉರುಗದೆಯನು=[ಇತ್ತ ಮೇಲೆಬೀಳಲುಬರುವ ಅನುಸಾಲ್ವನು ವಿರಥನಾಗಿ ದೊಡ್ಡಗದೆಯನ್ನು ತೆಗೆದುಕೊಂಡನು.]; ಈ ಪಾರ್ಥಸುತನ ರಣ ಚಮತ್ಕಾರಂ ಎಂತುಟೊ ತನ್ನ ಮೇಲಕಿಟ್ಟಣಿಸಿ ಬಹ ದಾನವನನು ಎಚ್ಚೊಡೆ ಉಚ್ಚಳಿಸಿ ಕೂರ್ಗಣಿಗಳು ಅಡಗಿದುವು ಇಳೆಯೊಳು ಅಸುರೇಂದ್ರನು ಅಸವಳಿದು ವಸುಧೆಯಂ ಪಸೆಗೆಯ್ದನು=[ಈ ಪಾರ್ಥಸುತನ ರಣಚಮತ್ಕಾರವು ಎಷ್ಟುಂಟೊ ತನ್ನ ಮೇಲೆ ಒತ್ತಿಕೊಂಡು ಬರುತ್ತಿರುವ ದಾನವನನ್ನು ಬಾಣದಿಂದ ಹೊಡೆದಾಗ ಬೇಧಿಸಿಕೊಂಡು ಚೂಪಾದಬಾಣಗಳು ಅವನಲ್ಲಿ ಹೊಕ್ಕು ಭೂಮಿಗೆಇಳಿದವು; ಅಸುರೇಂದ್ರ ಅನುಸಾಲ್ವನು ಶಕ್ತಿಗೊಂದಿ ಭೂಮಿಯನ್ನು ಸೇರಿದನು/ ರಕ್ತದಿಂದ ಒದ್ದೆಮಾಡಿದನು.].
  • ತಾತ್ಪರ್ಯ:ಆಗಲೆ ಒಂದು ಕ್ಷಣದಲ್ಲಿ ಬಭ್ರುವಾಹನನು ಮತ್ತೊಂದು ಮಣಿರಥವನ್ನು ಹತ್ತಿ ಬಾನಪ್ರಯೋಗಮಾಡುತ್ತಿದ್ದನು; ಇತ್ತ ಮೇಲೆಬೀಳಲುಬರುವ ಅನುಸಾಲ್ವನು ವಿರಥನಾಗಿ ದೊಡ್ಡಗದೆಯನ್ನು ತೆಗೆದುಕೊಂಡನು. ಈ ಪಾರ್ಥಸುತನ ರಣಚಮತ್ಕಾರವು ಎಷ್ಟುಂಟೊ; ತನ್ನ ಮೇಲೆ ಒತ್ತಿಕೊಂಡು ಬರುತ್ತಿರುವ ದಾನವನನ್ನು ಬಾಣದಿಂದ ಹೊಡೆದಾಗ ಬೇಧಿಸಿಕೊಂಡು ಚೂಪಾದಬಾಣಗಳು ಅವನಲ್ಲಿ ಹೊಕ್ಕು ಭೂಮಿಗೆಇಳಿದವು; ಅಸುರೇಂದ್ರ ಅನುಸಾಲ್ವನು ಶಕ್ತಿಗೊಂದಿ ಭೂಮಿಯನ್ನು ಸೇರಿ ರಕ್ತದಿಂದ ಒದ್ದೆಮಾಡಿದನು.

(ಪದ್ಯ - ೧೪)III-XI

ಪದ್ಯ:-:೧೫:

ಸಂಪಾದಿಸಿ

ಅನುಸಾಲ್ವನಳವಳಿಯೆ ಚಾಪಮಂ ಜೇಗೈದು |
ದನುಜಾರಿತನಯ ನಿದಿರಾಗಿ ನಿಲ್ಲೆಲವೊ ತ |
ನ್ನನೆ ಮೊದಲೆ ವಂದಿಸದೆ ಪಾರ್ಥನಂ ಕಂಡು ಕೆಡಿಸಿದೆ ರಾಜಕಾರಿಯ ವನು ||
ತನುವನುರೆ ನೋಯಿಸೆಂ ಮೈದುನನಲಾ ಸರಸ |
ಕನುವರದೊಳೆಚ್ಚಾಡಿ ನೋಡುವೆಂ ಕಂಗೆಡದಿ |
ರೆನುತೆ ನಾಲ್ಕೈದು ಬಾಣಮಗಳಂ ಬೀರಿದಂ ಬಭ್ರವಾಹನನ ಮೇಲೆ ||15||

ಪದವಿಭಾಗ-ಅರ್ಥ:
ಅನುಸಾಲ್ವನು ಅಳವಳಿಯೆ ಚಾಪಮಂ ಜೇಗೈದು ದನುಜಾರಿತನಯನು ಇದಿರಾಗಿ ನಿಲ್ಲ ಎಲವೊ ತನ್ನನೆ ಮೊದಲೆ ವಂದಿಸದೆ ಪಾರ್ಥನಂ ಕಂಡು ಕೆಡಿಸಿದೆ ರಾಜಕಾರಿಯವನು=[ಅನುಸಾಲ್ವನು ಎಚ್ಚರತಪ್ಪಿ ಬೀಳಲು, ದನುಜಾರಿತನಯಪ್ರದ್ಯುಮ್ನನು ಬಿಲ್ಲು ಠೇಂಕಾರ ಮಾಡಿ, ತನಗೆ ಇದಿರಾಗಿ ನಿಲ್ಲಲು ಬಬ್ರುವಾಹನನಿಗೆ ಹೇಳುತ್ತಾ, ಎಲವೊ ತನ್ನನ್ನು ಮೊದಲು ವಂದಿಸದೆ ಪಾರ್ಥನನ್ನು ಕಂಡು ರಾಜಕಾರಿಯವನ್ನು ಕೆಡಿಸಿಬಿಟ್ಟೆ!]; ತನುವನ ಉರೆ ನೋಯಿಸೆಂ ಮೈದುನನಲಾ ಸರಸಕೆ ಅನುವರದೊಳು ಎಚ್ಚಾಡಿ ನೋಡುವೆಂ ಕಂಗೆಡದಿರು ಎನುತೆ ನಾಲ್ಕೈದು ಬಾಣಮಗಳಂ ಬೀರಿದಂ ಬಭ್ರವಾಹನನ ಮೇಲೆ=[ನಿನ್ನ ದೇಹಕ್ಕೆ ಬಹಳನೋವು ಮಾಡುವುದಿಲ್ಲ, ನೀನು ಮಾವನಮಗ -ಮೈದುನನಲ್ಲವೇ! ಸರಸಕ್ಕಾಗಿ ಯುದ್ಧಲ್ಲಿ ಹಡೆದಾಡಿ ನೋಡುವೆನು, ಹೆದರಬೇಡ ಎನುತ್ತಾ, ನಾಲ್ಕೈದು ಬಾಣಗಳನ್ನು ಬಭ್ರವಾಹನನ ಮೇಲೆ ತೂರಿದನು.].
  • ತಾತ್ಪರ್ಯ:ಅನುಸಾಲ್ವನು ಎಚ್ಚರತಪ್ಪಿ ಬೀಳಲು, ದನುಜಾರಿತನಯ ಪ್ರದ್ಯುಮ್ನನು ಬಿಲ್ಲು ಠೇಂಕಾರ ಮಾಡಿ, ತನಗೆ ಇದಿರಾಗಿ ನಿಲ್ಲಲು ಬಬ್ರುವಾಹನನಿಗೆ ಹೇಳುತ್ತಾ, ಎಲವೊ! ತನ್ನನ್ನು ಮೊದಲು ವಂದಿಸದೆ ಪಾರ್ಥನನ್ನು ಕಂಡು ರಾಜಕಾರಿಯವನ್ನು ಕೆಡಿಸಿಬಿಟ್ಟೆ! ನಿನ್ನ ದೇಹಕ್ಕೆ ಬಹಳನೋವು ಮಾಡುವುದಿಲ್ಲ, ನೀನು ಮಾವನಮಗ -ಮೈದುನನಲ್ಲವೇ! ಸರಸಕ್ಕಾಗಿ ಯುದ್ಧಲ್ಲಿ ಹಡೆದಾಡಿ ನೋಡುವೆನು, ಹೆದರಬೇಡ ಎನುತ್ತಾ, ನಾಲ್ಕೈದು ಬಾಣಗಳನ್ನು ಬಭ್ರವಾಹನನ ಮೇಲೆ ತೂರಿದನು. (ಕೃಷ್ನನಮಗ ಪ್ರದ್ಯುಮ್ನ, ಕೃಷ್ಣನ ತಂಗಿ ಸುಬಧ್ರೆಯ ಗಂಡ ಅರ್ಜುನ, ಪ್ರದ್ಯಮ್ನನಿಗೆ ಮಾವ ಅರ್ಜುನ, ಅವನ ಮಗ ಬಬ್ರುವಾಹನನು ಮೈದುನ)

(ಪದ್ಯ - ೧೫)

ಪದ್ಯ:-:೧೬:

ಸಂಪಾದಿಸಿ

ಸರಸಭಾವದೊಳೆ ಭಾವಿಸೆ ಭಾವನವರಿಗಿದು|
ವಿರಸವಾಗದೆ ಮಾಣದೀಗ ಸಂಗ್ರಮದೋ|
ಳ್ಸರಸ ಕಾರ್ಮುಕಮಿಲ್ಲ ಸರಸ ಸಿಂಜನಿಯಿಲ್ಲ ಸರಸ ಬಾಣಂಗಳಿಲ್ಲ||
ಸರಸ ಯುವತಿಯ ಕಟಾಕ್ಷದ ನೆಮ್ಮಗೆಗಳಿಲ್ಲ|
ಪರುಷಮಾಗದೆ ನೋಡುರಣವೆನುತ ಪತ್ತು ಸಾ |
ಸಿರ ಕೋಲ್ಗಳಂ ಮುಸುಕಿಹರಿತನಯಂದಿಟದನಂಗನೆನಿಸಿದನಾರ್ಜುನಿ||16||

ಪದವಿಭಾಗ-ಅರ್ಥ:
ಸರಸಭಾವದೊಳೆ ಭಾವಿಸೆ ಭಾವನವರಿಗೆ ಇದು ವಿರಸವಾಗದೆ ಮಾಣದು=[ಹಾಸ್ಯ/ಸರಸಭಾವದಲ್ಲಿ ಭಾವಿಸಿ ಯುದ್ಧಮಾಡಿದರೆ, ಭಾವನವರಿಗೆ ಇದು ವಿರಸ/ನೋವಾಗದೆ ಇರುವುದಿಲ್ಲ]; ಈಗ ಸಂಗ್ರಮದೋಳ್ ಸರಸ ಕಾರ್ಮುಕಂ ಇಲ್ಲ ಸರಸ ಸಿಂಜನಿಯಿಲ್ಲ ಸರಸ ಬಾಣಂಗಳಿಲ್ಲ ಸರಸ ಯುವತಿಯ ಕಟಾಕ್ಷದ ನೆಮ್ಮಗೆಗಳಿಲ್ಲ ಪರುಷಮ ಆಗದೆ ನೋಡು ರಣಂ=[ಈಗ ಯುದ್ಧದಲ್ಲಿ ಸರಸ/ಪ್ರೀತಿಮಾಡುವ ಬಿಲ್ಲು ಇಲ್ಲ; ಸರಸ ಬಿಲ್ಲಿನದಾರಯಿಲ್ಲ; ಸರಸ ಬಾಣಗಳಿಲ್ಲ; ಸರಸವಾಡವ ಯುವತಿಯ ಕಣ್ಣೋಟದ ಸಂತಸ ನಮ್ಮದಿಗಳಿಲ್ಲ; ಕಠಿನವಾಗದೆ ಇರುವುದೆ ನೋಡು ಯುದ್ಧವು!];ಎನುತ ಪತ್ತು ಸಾಸಿರ ಕೋಲ್ಗಳಂ ಮುಸುಕಿ ಹರಿತನಯಂ ದಿಟದ ಅನಂಗನು ಎನಿಸಿದನು ಅರ್ಜುನಿ=[ಎನ್ನುತ್ತಾ ಹತ್ತು ಸಾವಿರ ಬಾಣಗಳಿಂದ ಮುಸುಕಿ ಹರಿತನಯ ಪ್ರದ್ಯುಮ್ನನ್ನು ಮುಚ್ಚಿ, ಅವನು ನಿಜವಾಗಿ ದೇಹವಿಲ್ಲದವನು (ಅರೆಜೀವ)ಎನ್ನಿಸಿದನು ಬಬ್ರುವಾಹನ].
  • ತಾತ್ಪರ್ಯ:ಬಬ್ರುವಾಹನ ಅದಕ್ಕೆ ಉತ್ತರವಾಗಿ, ಹಾಸ್ಯರಸಭಾವದಲ್ಲಿ ಭಾವಿಸಿ ಯುದ್ಧಮಾಡಿದರೆ, ಭಾವನವರಿಗೆ ಇದು ವಿರಸ/ನೋವಾಗದೆ ಇರುವುದಿಲ್ಲ; ಈಗ ಯುದ್ಧದಲ್ಲಿ ಸರಸ/ಪ್ರೀತಿಮಾಡುವ ಬಿಲ್ಲು ಇಲ್ಲ; ಸರಸ ಬಿಲ್ಲಿನದಾರಯಿಲ್ಲ; ಸರಸ ಬಾಣಗಳಿಲ್ಲ; ಸರಸವಾಡವ ಯುವತಿಯ ಕಣ್ಣೋಟದ ಸಂತಸ ನಮ್ಮದಿಗಳಿಲ್ಲ; ಕಠಿನವಾಗದೆ ಇರುವುದೆ ನೋಡು ಯುದ್ಧವು! ಎನ್ನುತ್ತಾ ಹತ್ತು ಸಾವಿರ ಬಾಣಗಳಿಂದ ಮುಸುಕಿ ಹರಿತನಯ ಪ್ರದ್ಯುಮ್ನನ್ನು ಮುಚ್ಚಿ, ಅವನು ನಿಜವಾಗಿ ದೇಹವಿಲ್ಲದವನು (ಅರೆಜೀವಿ)ಎನ್ನಿಸಿದನು ಬಬ್ರುವಾಹನ].

(ಪದ್ಯ - ೧೬)

ಪದ್ಯ:-:೧೭:

ಸಂಪಾದಿಸಿ

ಮುಸುಕಿದ ಸರಳ್ಗಳಂ ಕುಸುರಿದರಿದಂ ಕೂಡೆ |
ದೆಸೆಗಳೇನಾದುವಾಗಸಮೆತ್ತಲಡಗಿದುದು |
ವಸುಮತಿಯದೆಲ್ಲಿಹುದು ಶಶಿರವಿಗಳೆಡೆಯಾಟದೆಸಕಂಗಳಾವೆಡೆಯೊಳು ||
ಅಸುರರೊಳ್ ನಿರ್ಜರ ಪ್ರಸರದೊಳ್ ಮನುಜರೊಳ್ |
ಪೆಸರುಳ್ಳವರ ಸಮರದಿಸುಗೆಯೊಳ್ ಕಾಣಿನಿದು |
ಪೊಸತೆಂಬ ತೆರನಾಗೆ ವಿಶಿಖಮಂ ಕೆದರಿದಂ ಬಿಸರುಹಾಕ್ಷನ ತನಯನು ||17||

ಪದವಿಭಾಗ-ಅರ್ಥ:
ಮುಸುಕಿದ ಸರಳ್ಗಳಂ ಕುಸುರಿದರಿದಂ ಕೂಡೆ ದೆಸೆಗಳೇನಾದುವು ಆಗಸಂ ಎತ್ತಲ ಅಡಗಿದುದು=[ಚೇತರಿಸಿಕೊಂಡ ಪ್ರದ್ಯುಮ್ನನು ತನ್ನನು ಆವರಿದದ ಬಾಣಗಳನ್ನು ಹೊಸಕಿ ಕತ್ತರಿಸಿದನು; ಆ ಸಂದರ್ಭದಲ್ಲಿ/ ಆಗ ದಿಕ್ಕುಗಳು ಏನಾದವು-ಯಾವುದು? ಆಗಸ/ಆಕಾಶ ಎಲ್ಲಿ ಅಡಗಿತು!]; ವಸುಮತಿಯು ಅದೆಲ್ಲಿಹುದು ಶಶಿರವಿಗಳೆ ಎಡೆಯಾಟದ ಎಸಕಂಗಳು ಆವೆಡೆಯೊಳು=[ಭೂಮಿ ಅದು ಎಲ್ಲಿದೆ! ಚಂದ್ರ ಸೂರ್ಯರ ಸಂಚಾರದ ಪ್ರಕಾಶ ಎಲ್ಲಿ!]; ಅಸುರರೊಳ್ ನಿರ್ಜರ ಪ್ರಸರದೊಳ್ ಮನುಜರೊಳ್ ಪೆಸರುಳ್ಳವರ ಸಮರದಿ ಇಸುಗೆಯೊಳ್ ಕಾಣಿನಿದು=[ದಾನವರಲ್ಲಿ, ದೇವತೆಗಳ ಸಮೂಹದಲ್ಲಿ, ಮನುಷ್ಯರಲ್ಲಿ ಹೆಸರಾಂತವರ ಸಮರದಲ್ಲಿ ಈ ಬಗೆಉ ಬಾಣಪ್ರಯೋಗ ಕಾಣದು!]; ಪೊಸತೆಂಬ ತೆರನಾಗೆ ವಿಶಿಖಮಂ ಕೆದರಿದಂ ಬಿಸರುಹಾಕ್ಷನ ತನಯನು=[ಇದು ಹೊಸತೆಂಬ ರೀತಿಯಲ್ಲಿ ಕೃಷ್ಣನ ಮಗನು ತಿರುಗಿ ಬಾಣಗಳನ್ನು ಹರಡಿದನು.].
  • ತಾತ್ಪರ್ಯ:ಚೇತರಿಸಿಕೊಂಡ ಪ್ರದ್ಯುಮ್ನನು ತನ್ನನು ಆವರಿದದ ಬಾಣಗಳನ್ನು ಹೊಸಕಿ ಕತ್ತರಿಸಿದನು; ಆ ಸಂದರ್ಭದಲ್ಲಿ/ಅವನು ಆಗ ದಿಕ್ಕುಗಳು ಏನಾದವು-ಯಾವುದು? ಆಗಸ/ಆಕಾಶ ಎಲ್ಲಿ ಅಡಗಿತು! ಭೂಮಿ ಅದು ಎಲ್ಲಿದೆ! ಚಂದ್ರ ಸೂರ್ಯರ ಸಂಚಾರದ ಪ್ರಕಾಶ ಎಲ್ಲಿ! ದಾನವರಲ್ಲಿ, ದೇವತೆಗಳ ಸಮೂಹದಲ್ಲಿ, ಮನುಷ್ಯರಲ್ಲಿ ಹೆಸರಾಂತವರ ಸಮರದಲ್ಲಿ ಈ ಬಗೆಉ ಬಾಣಪ್ರಯೋಗ ಕಾಣದು! ಇದು ಹೊಸತೆಂಬ ರೀತಿಯಲ್ಲಿ ಕೃಷ್ಣನ ಮಗನು ತಿರುಗಿ ಬಾಣಗಳನ್ನು ಹರಡಿದನು.

(ಪದ್ಯ - ೧೭)

ಪದ್ಯ:-:೧೮:

ಸಂಪಾದಿಸಿ

ಕರ್ಕಶದೊಳೆಸುವ ಕೃಷ್ಣಾತ್ಮಜನ ಬಾಣಸಂ |
ಪರ್ಕದಿಂದಾದ ಕತ್ತಲೆಯಂ ಕೆಡಿಸಿದುವಮ |
ರರ್ಕಳಹುದೆನೆ ಸವ್ಯಸಾಚಿಯ ತನುಜನ ಪೊಸಮಸೆಯ ವಿಶಿಖಪ್ರಭೆಗಳು ||
ಅರ್ಕರಶ್ಮಿಗಳಂಧಕಾರಂಗಳಡಿಗಡಿಗೆ |
ತರ್ಕಮಂ ಮಾಳ್ಪಂತೆ ಕಂಗೊಳಿಸಲಾಗ ವೀ |
ರರ್ಕಳೆಚ್ಚಾಡಿದರ್ ಬಭ್ರುವಾಹನ ರುಕ್ಮಿಣೀಸುತರ್ ಸಂಗರದೊಳು ||18||

ಪದವಿಭಾಗ-ಅರ್ಥ:
ಕರ್ಕಶದೊಳು ಎಸುವ ಕೃಷ್ಣಾತ್ಮಜನ ಬಾಣಸಂಪರ್ಕದಿಂದ ಆದ ಕತ್ತಲೆಯಂ ಕೆಡಿಸಿದುವು ಅಮರರ್ಕಳು ಅಹುದೆನೆ ಸವ್ಯಸಾಚಿಯ ತನುಜನ ಪೊಸಮಸೆಯ ವಿಶಿಖಪ್ರಭೆಗಳು=[ಕಠಿನವಾಗಿ ಬಾಣಬಿಡುವ ಪ್ರದ್ಯುಮ್ನನ ಬಾಣಗಳಜೋಡನೆಯಿಂದ ಆದ ಕತ್ತಲೆಯನ್ನು, ದೇವತೆಗಳು ಅಹುದು ಎಂದು ಮೆಚ್ಚುವಂತೆ ಬಬ್ರವಾಹನನ ಹೊಸಮಸೆದ ಬಾಣಗಳ ಪ್ರಕಾಶವು ಹೋಗಲಾಡಿಸಿದುವು; ಹೇಗೆಂದರೆ, ]; ಅರ್ಕರಶ್ಮಿಗಳು ಅಂಧಕಾರಂಗಳ ಅಡಿಗಡಿಗೆ ತರ್ಕಮಂ ಮಾಳ್ಪಂತೆ ಕಂಗೊಳಿಸಲು ಆಗ ವೀರರ್ಕಳು ಎಚ್ಚಾಡಿದರ್ ಬಭ್ರುವಾಹನ ರುಕ್ಮಿಣೀಸುತರ್ ಸಂಗರದೊಳು=[ಸೂರ್ಯಕಿರಣಗಳು ಕತ್ತಲೆಯನ್ನು ಮತ್ತೆಮತ್ತೆ ಹೋಗಲಾಡಿಸುವಂತೆ ಶೋಬಿಸಲು, ಆಗ ವೀರರಾದ ಬಭ್ರುವಾಹನ ರುಕ್ಮಿಣೀಸುತರು ಯುದ್ಧದಲ್ಲಿ ಹೊಡೆದಾಡಿದರು].
  • ತಾತ್ಪರ್ಯ:ಕಠಿನವಾಗಿ ಬಾಣಬಿಡುವ ಪ್ರದ್ಯುಮ್ನನ ಬಾಣಗಳಜೋಡನೆಯಿಂದ ಆದ ಕತ್ತಲೆಯನ್ನು, ದೇವತೆಗಳು ಅಹುದು ಎಂದು ಮೆಚ್ಚುವಂತೆ ಬಬ್ರವಾಹನನ ಹೊಸಮಸೆದ ಬಾಣಗಳ ಪ್ರಕಾಶವು ಹೋಗಲಾಡಿಸಿದುವು; ಹೇಗೆಂದರೆ, ಸೂರ್ಯಕಿರಣಗಳು ಕತ್ತಲೆಯನ್ನು ಮತ್ತೆಮತ್ತೆ ಹೋಗಲಾಡಿಸುವಂತೆ ಶೋಬಿಸಲು, ಆಗ ವೀರರಾದ ಬಭ್ರುವಾಹನ ರುಕ್ಮಿಣೀಸುತರು ಯುದ್ಧದಲ್ಲಿ ಹೊಡೆದಾಡಿದರು.

(ಪದ್ಯ - ೧೮)

ಪದ್ಯ:-:೧೯:

ಸಂಪಾದಿಸಿ

ಅಚ್ಚರಿಯನಿನ್ನು ಜನಮೇಜಯ ನರೇಂದ್ರ ಕೇ |
ಳಚ್ಯುತನ ಸುತನ ಬಾಣಂಗಳಂ ನಡುವೆ ಮುರಿ |
ಯೆಚ್ಚನಾತನ ಮಣಿ ವರೂಥ ಭೈತ್ರವ ನಂಬಿನಂಬುಧಿಯ ವೀಚಿಯಿಂದೆ ||
ಮುಚ್ಚಿದನೊಡನೆ ಮದನನಂಗದೊಳ್ ಕಣಿಗಳಂ |
ಪೊಚ್ಚಿದಂ ಕೆಲಬಲದೊಳಿಡಿದ ರಿಪುಸೇನೆಯಂ |
ಕೊಚ್ಚಿದಂ ಕೊಂದನಗಣಿತಬಲವನಾ ಬಭ್ರುವಾಹನಂ ಕೊಳುಗುಳದೊಳು ||19||

ಪದವಿಭಾಗ-ಅರ್ಥ:
ಅಚ್ಚರಿಯನ ಇನ್ನು ಜನಮೇಜಯ ನರೇಂದ್ರ ಕೇಳು=[ ಇನ್ನು ಮುಂದಿನ ಅಚ್ಚರಿಯನ್ನು ಜನಮೇಜಯ ನರೇಂದ್ರನೇ ಕೇಳು,]; ಅಚ್ಯುತನ ಸುತನ ಬಾಣಂಗಳಂ ನಡುವೆ ಮುರಿಯೆ ಎಚ್ಚನು ಆತನ ಮಣಿ ವರೂಥ ಭೈತ್ರವನು ಅಂಬಿನಂಬುಧಿಯ ವೀಚಿಯಿಂದೆ=[ಪ್ರದ್ಯುಮ್ನನ ಬಾಣಗಳನ್ನು ನಡುವೆಯೇ ಕಡಿದು, ಆತನ ಎಚ್ಚನಾತನ ಮಣಿರಥವೆಂಬ ಹಡಗನ್ನು ಬಾಣದ ಸಮುದ್ರದ ಅಲೆಗಳಿಂದ ಹೊಡೆದನು]; ಮುಚ್ಚಿದನೊಡನೆ ಮದನನ ಅಂಗದೊಳ್ ಕಣಿಗಳಂ ಪೊಚ್ಚಿದಂ ಕೆಲಬಲದೊಳು ಇಡಿದ ರಿಪುಸೇನೆಯಂ ಕೊಚ್ಚಿದಂ ಕೊಂದನು ಅಗಣಿತ ಬಲವನು ಆ ಬಭ್ರುವಾಹನಂ ಕೊಳುಗುಳದೊಳು=[ಒಡನೆಯೇ ಮುಚ್ಚಿದನು ಮದನನ್ನು, ಪ್ರದ್ಯುಮ್ನನ ದೇಹದಲ್ಲಿ ಬಾಣಗಳನ್ನು ಹೊಚ್ಚಿದನು/ ಹೊಕ್ಕಿಸಿದನು; ಆಚೆ ಈಚೆ ಮುತ್ತಿದ ಶತ್ರುಸೇನೆಯನ್ನು ಕೊಚ್ಚಿದನು; ಆ ಬಭ್ರುವಾಹನನು ಯುದ್ಧದಲ್ಲಿ ಲೆಕ್ಕವಿಲ್ಲದಷ್ಟು ಸೈನ್ಯವನ್ನು ಕೊಂದನು].
  • ತಾತ್ಪರ್ಯ:ಇನ್ನು ಮುಂದಿನ ಅಚ್ಚರಿಯನ್ನು ಜನಮೇಜಯ ನರೇಂದ್ರನೇ ಕೇಳು, ಪ್ರದ್ಯುಮ್ನನ ಬಾಣಗಳನ್ನು ನಡುವೆಯೇ ಕಡಿದು, ಆತನ ಮಣಿರಥವೆಂಬ ಹಡಗನ್ನು ಬಾಣದ ಸಮುದ್ರದ ಅಲೆಗಳಿಂದ ಹೊಡೆದನು; ಒಡನೆಯೇ ಮುಚ್ಚಿದನು ಮದನನನ್ನು, ಪ್ರದ್ಯುಮ್ನನ ದೇಹದಲ್ಲಿ ಬಾಣಗಳನ್ನು ಹೊಚ್ಚಿದನು/ ಹೊಕ್ಕಿಸಿದನು; ಆಚೆ ಈಚೆ ಮುತ್ತಿದ ಶತ್ರುಸೇನೆಯನ್ನು ಕೊಚ್ಚಿದನು; ಆ ಬಭ್ರುವಾಹನನು ಯುದ್ಧದಲ್ಲಿ ಲೆಕ್ಕವಿಲ್ಲದಷ್ಟು ಸೈನ್ಯವನ್ನು ಕೊಂದನು.
  • (ಪದ್ಯ-೧೯)

ಪದ್ಯ:-:೨೦:

ಸಂಪಾದಿಸಿ

ಕಂಡುರೆ ಕನಲ್ದಾತನಿಸುವಿಸುವ* ಕೋಲ್ಗಳಂ |
ಖಂಡಿಸುತೆ ಮಿಡುಕದಂತವನ ತೇರೊಡನೊಡನೆ |
ಚಂಡ ಶರಜಾಲಮಂ ಸೈಗೆರೆಯುತುಚ್ಚಳಿಸಿ ಮತ್ತೆ ರಿಪುಬಲದ ಮೇಲೆ ||
ಹಿಂಡುಗಣೆಯಂ ಕವಿಸಿ ಮಂದಿಯಂ ಕೊಲುತಿರ್ದ |
ನಂಡಲೆದು ಮೂಜಗವನೈದೆ ಕುಸುಮಾಸ್ತ್ರದಿಂ |
ದಿಂಡುರುಳ್ಚವ ಶಂಬರಾರಿಗಿದಿರಾರೆನಲ್ ಪುಂಡರೀಕಾಕ್ಷಸೂನು ||20||

  • (ಕನಲ್ದಾತನೆಸುವೆಸುವ)
ಪದವಿಭಾಗ-ಅರ್ಥ:
ಕಂಡು ಉರೆ ಕನಲ್ದು ಆತನ ಇಸುವ ಇಸುವ ಕೋಲ್ಗಳಂ ಖಂಡಿಸುತೆ=[ಪ್ರದ್ಯುಮ್ನನು ಬಬ್ರುವಾಹನನ ಆಟೋಪವನ್ನು ಕಂಡು,ಬಹಳ ಕೋಪದಿಂದ ಬಬ್ರವಾಹನನು ಬಿಡುವ ಮತ್ತೆ ಬಿಡುವ ಬಾಣಗಳನ್ನು ಕತ್ತರಿಸುತ್ತಾ]; ಮಿಡುಕದಂತೆ ಅವನ ತೇರ ಒಡನೊಡನೆ ಚಂಡ ಶರಜಾಲಮಂ ಸೈಗೆರೆಯುತ ಉಚ್ಚಳಿಸಿ ಮತ್ತೆ ರಿಪುಬಲದ ಮೇಲೆ ಹಿಂಡುಗಣೆಯಂ ಕವಿಸಿ ಮಂದಿಯಂ ಕೊಲುತಿರ್ದನು=[ಮಿಡುಕ/ಚಲಿಸದಂತೆ ಅವನ ರಥವನ್ನು ಮತ್ತೆಮತ್ತೆ ಉಗ್ರ ಬಾನದಜಾಲವನ್ನು ಕರೆಯುತ್ತಾ ನುಗ್ಗಿ ಮತ್ತೆ ಶತ್ರುಸೈನ್ಯದ ಮೇಲೆ ನೂರಾರುಕಣೆಗಳನ್ನು ಬಿಟ್ಟು ಮುಚ್ಚಿ ಜನರನ್ನು ಕೊಲ್ಲುತ್ತಿದ್ದನು]; ಅಂಡಲೆದು ಮೂಜಗವನು ಐದೆ ಕುಸುಮಾಸ್ತ್ರದಿಂ ದಿಂಡುರುಳ್ಚವ ಶಂಬರಾರಿಗೆ ಇದಿರಾರು ಎನಲ್ ಪುಂಡರೀಕಾಕ್ಷೆಸೂನು=[ಎಲ್ಲಕಡೆ ಸಂಚರಿಸಿ, ಮೂರುಜಗತ್ತನ್ನು ಸುತ್ತಿ ಕುಸುಮಾಸ್ತ್ರದಿಂದ ದೇಹ ಉರುಳಿಸುವ ಶಂಬರಾರಿ ಪ್ರದ್ಯುಮ್ನನಿಗೆಗೆ ಎದುರು ನಿಲ್ಲುವವರು ಯಾರು ಎನ್ನುವಂತೆ ಪುಂಡರೀಕಾಕ್ಷನ ಮಗ ಪ್ರದ್ಯುಮ್ನನು ಕೊಲ್ಲುತ್ತಿದ್ದನು.]
  • ತಾತ್ಪರ್ಯ:ಪ್ರದ್ಯುಮ್ನನು ಬಬ್ರುವಾಹನನ ಆಟೋಪವನ್ನು ಕಂಡು,ಬಹಳ ಕೋಪದಿಂದ ಬಬ್ರವಾಹನನು ಬಿಡುವ ಮತ್ತೆ ಬಿಡುವ ಬಾಣಗಳನ್ನು ಕತ್ತರಿಸುತ್ತಾ, ಮಿಡುಕ/ಚಲಿಸದಂತೆ ಅವನ ರಥವನ್ನು ಮತ್ತೆಮತ್ತೆ ಉಗ್ರ ಬಾಣದಜಾಲವನ್ನು ಕರೆಯುತ್ತಾ ನುಗ್ಗಿ ಮತ್ತೆ ಶತ್ರುಸೈನ್ಯದ ಮೇಲೆ ನೂರಾರುಕಣೆಗಳನ್ನು ಬಿಟ್ಟು ಮುಚ್ಚಿ ಜನರನ್ನು ಕೊಲ್ಲುತ್ತಿದ್ದನು; ಎಲ್ಲಕಡೆ ಸಂಚರಿಸಿ, ಮೂರುಜಗತ್ತನ್ನು ಸುತ್ತಿ ಕುಸುಮಾಸ್ತ್ರದಿಂದ ದೇಹ ಉರುಳಿಸುವ ಶಂಬರಾರಿ ಪ್ರದ್ಯುಮ್ನನಿಗೆಗೆ ಎದುರು ನಿಲ್ಲುವವರು ಯಾರು ಎನ್ನುವಂತೆ ಪುಂಡರೀಕಾಕ್ಷನ ಮಗ ಪ್ರದ್ಯುಮ್ನನು ಕೊಲ್ಲುತ್ತಿದ್ದನು.]
  • (ಪದ್ಯ-೨೦)

ಪದ್ಯ:-:೨೧:

ಸಂಪಾದಿಸಿ

ಕಡಿಯೆ ರಾವುತರ ತಲೆ ನೆಲಕುದುರೆ ಕುದುರೆಗಳ್ |
ಮಡಿಯೆ ಜೋದರ್ ಕೆಡೆಯಲಾನೆಗಳ್ ನೆಗಳ್ದರ್ ರಣ |
ದೆಡೆಯೊಳ್ ಪೊರಳ್ ಶಿರಂ ಪರಿಯಲ್ಕೆ ಸಾರಥಿಯ ರಥಿಯ ತನು ಸೀಳ್ಗಳಾಗೆ ||
ಕಡುಪಾಂತ ಕಾಲಾಳ್ಗಳೊಡಲಳಿಯೆಲಳಿಯೆದ್ದು |
ಪಡೆಯನುರೆ ಕೊಂದವು ಶರಧಿ ಭವನ ಭವನ ಪೊಗ
ರಿಡಿದಂಬುಗಳ್ ಪ್ರಳಯ ಶತಕೋಟಿ ಕೋಟಿಯಂ ಪೊಲ್ತು ಸಂಗರದೊಳು ||21||

ಪದವಿಭಾಗ-ಅರ್ಥ:
ಕಡಿಯೆ ರಾವುತರ ತಲೆ ನೆಲಕೆ ಉದುರೆ ಕುದುರೆಗಳ್ ಮಡಿಯೆ ಜೋದರ್ ಕೆಡೆಯಲು ಆನೆಗಳ್ ನೆಗಳ್ದರ್ ರಣದೆಡೆಯೊಳ್ ಪೊರಳ್ ಶಿರಂ ಪರಿಯಲ್ಕೆ ಸಾರಥಿಯ ರಥಿಯ ತನು ಸೀಳ್ಗಳಾಗೆ=[ಪ್ರದ್ಯುಮ್ನನ ಬಾಣಗಳಿಂದ, ರಾವುತರ ತಲೆಕಡಿಯಲು ಅದು ನೆಲಕ್ಕೆ ಬೀಳಲು, ಕುದುರೆಗಳು ಸಾಯಲು, ಆನೆಗಳು ಮೇಲಿದ್ದ ಮಾವುತರು ಬೀಳಲು, ರಣದಭೂಮಿಯಲ್ಲಿ ತಲೆಯು ಹೊರಳಲು, ಸಾರಥಿಯನ್ನು ಹರಿಯಲು, ರಥದಲ್ಲಿರುವ ಭಟನ ದೇಹ ತನು ಸೀಳುಗಳಾಗಲು,]; ಕಡುಪು ಆಂತ (ಕ್ರೌರ್ಯದಿಂದ ಸತ್ತ) ಕಾಲಾಲ್ಗಳ ಒಡಲಳಿಯೆ ಲಳಿಯೆದ್ದು ಪಡೆಯನು ಉರೆ ಕೊಂದವು ಶರಧಿ ಭವನ ಭವನ (ಸಮುದ್ರಮನೆಯವ-ವಿಷ್ಣುವಿನ ಮಗನ-ಮನ್ಮಥನ/ಪ್ರದ್ಯುಮ್ನನ) ಪೊಗರಿಡಿದ ಅಂಬುಗಳ್ ಪ್ರಳಯ ಶತಕೋಟಿ ಕೋಟಿಯಂ ಪೊಲ್ತು ಸಂಗರದೊಳು=[ಕ್ರೌರ್ಯದಿಂದ ಸತ್ತ ಕಾಲಾಳ್ಗಳ ದೇಹದ ಜೀವ ಹೋಗಲು, ಮುಂಡಯೆದ್ದು ಸೈನ್ಯವನ್ನು ಬಹಳಷ್ಟು ಕೊಂದವು; ಪ್ರದ್ಯುಮ್ನನ ಶಕ್ತಿಶಾಲಿ ಬಾಣಗಳು ಯುದ್ಧದಲ್ಲಿ ಪ್ರಳಯದ ಶತಕೋಟಿ ಕೋಟಿಯನ್ನು ಹೋಲುತ್ತಿತ್ತು.];
  • ತಾತ್ಪರ್ಯ:ಪ್ರದ್ಯುಮ್ನನ ಬಾಣಗಳಿಂದ, ರಾವುತರ ತಲೆಕಡಿಯಲು ಅದು ನೆಲಕ್ಕೆ ಬೀಳಲು, ಕುದುರೆಗಳು ಸಾಯಲು, ಆನೆಗಳು ಮೇಲಿದ್ದ ಮಾವುತರು ಬೀಳಲು, ರಣದಭೂಮಿಯಲ್ಲಿ ತಲೆಯು ಹೊರಳಲು, ಸಾರಥಿಯನ್ನು ಹರಿಯಲು, ರಥದಲ್ಲಿರುವ ಭಟನ ದೇಹ ತನು ಸೀಳುಗಳಾಗಲು, ಕ್ರೌರ್ಯದಿಂದ ಸತ್ತ ಕಾಲಾಳ್ಗಳ ದೇಹದ ಜೀವ ಹೋಗಲು, ಮುಂಡಯೆದ್ದು ಸೈನ್ಯವನ್ನು ಬಹಳಷ್ಟು ಕೊಂದವು; ಪ್ರದ್ಯುಮ್ನನ ಶಕ್ತಿಶಾಲಿ ಬಾಣಗಳು ಯುದ್ಧದಲ್ಲಿ ಪ್ರಳಯದ ಶತಕೋಟಿ ಕೋಟಿಯನ್ನು ಹೋಲುತ್ತಿತ್ತು.
  • (ಪದ್ಯ-೨೧) ನೆಗಳು

ಪದ್ಯ:-:೨೨:

ಸಂಪಾದಿಸಿ

ಧರಣಿತಳದಂತೆ ನವಖಂಡ ಮಯಮಾಗಿ ಯಮ |
ಪುರದಂತೆ ಬಹು ನರಕಪಾಲಮಯಮಾಗಿ ಸಾ |
ಗರದಂತೆ ಭೂರಿಜೀವನ ಭಂಗ ಮಯಮಾಗಿ ಸಂಸಾರಚಕ್ರದಂತೆ ||
ಭರಿತ ಪಾತಕ ಬಂಧ ಮಯದೂಗಿ ಕೈಲಾಸ |
ಗಿರಿಯಂತೆ ಶಿವಗಣ ವಿಲಾಸ ಮಯಮಾಗಿ ವಿ |
ಸ್ತರದ ನೈಮಿಶದಂತೆ ಪ್ರಾವೃತ ವಿರಕ್ತ ಮಯವಾಗಿ ರಣಮೆಸೆದಿರ್ದುದು ||22||

ಪದವಿಭಾಗ-ಅರ್ಥ:
ರಣರಂಗವು,ಧರಣಿತಳದಂತೆ ನವಖಂಡ ಮಯಮಾಗಿ ಯಮಪುರದಂತೆ ಬಹು ನರಕಪಾಲಮಯಮಾಗಿ ಸಾಗರದಂತೆ ಭೂರಿಜೀವನ ಭಂಗ ಮಯಮಾಗಿ ಸಂಸಾರಚಕ್ರದಂತೆ=[ಭೂಮಿಯನೆಲ ಒಂಭತ್ತು ಖಂಡವಾದಂತೆ- ರಣರಂಗವು ಖಂಡಮಯವಾಗಿತ್ತು; ಯಮಪುರವು ನರಕಪಾಲಮಯವಾದಂತೆ,ಇಲ್ಲಿ ನರ ಕಪಾಲ/ತಲೆಮಯವಾಗಿತ್ತು; ಸಾಗರದಲ್ಲಿ ಇಲ್ಲಿಭೂರಿ ಜೀವನ(=ನೀರು)/ನೀರಿನ ಅಲೆಗಳ ಭಂಗದಂತೆ, ಇಲ್ಲಿ ಭೂರಿ ಜೀವಗಳ ಭಂಗ/ನಾಶಮಯಮಾಗಿತ್ತು; ಸಂಸಾರಚಕ್ರದಂತೆ]; ಭರಿತ ಪಾತಕ ಬಂಧ ಮಯದೂಗಿ ಕೈಲಾಸಗಿರಿಯಂತೆ ಶಿವಗಣ ವಿಲಾಸ ಮಯಮಾಗಿ ವಿಸ್ತರದ ನೈಮಿಶದಂತೆ ಪ್ರಾವೃತ ವಿರಕ್ತ ಮಯವಾಗಿ ರಣಂ ಎಸೆದಿರ್ದುದು=[ಸಂಸಾರಚಕ್ರದಲ್ಲಿ ಪಾತಕ/ಕಷ್ಟ ಬಂಧನ/ದುಃಖ ಇರುವಂತೆ, ಇಲ್ಲಿ ಪಾತಕ, ಬಂಧಭರಿತ ಮಯವಾಗಿತ್ತು; ಕೈಲಾಸಗಿರಿಯಲ್ಲಿ ಶಿವಗಣ ಗಳಿರುವಂತೆ, ಇಲ್ಲಿ ಭೂತ-ನರಿಗಳ ವಿಲಾಸ ಮಯಮಾಗಿತ್ತು; ವಿಸ್ತಾರದ ನೈಮಿಶಅರಣ್ಯದಲ್ಲಿ ವಿರಕ್ತರಿಂದ ಆವೃತ ಮಯವಾಗಿದ್ದರೆ,ಇಲ್ಲಿ ವಿರಕ್ತ/ವಿಶೇಷ ರಕ್ತ-ವಿ-ರಕ್ತವು ಪ್ರ-ಹೆಚ್ಚು ಆವೃತ ಮಯವಾಗಿ ರಣರಂಗವು ವಿಶೇಷವಾಗಿಕಾಣುತ್ತಿತ್ತು].
  • ತಾತ್ಪರ್ಯ:ಭೂಮಿಯನೆಲ ಒಂಭತ್ತು ಖಂಡವಾದಂತೆ- ರಣರಂಗವು ಖಂಡಮಯವಾಗಿತ್ತು; ಯಮಪುರವು ನರಕಪಾಲಮಯವಾದಂತೆ,ಇಲ್ಲಿ ನರ ಕಪಾಲ/ತಲೆಮಯವಾಗಿತ್ತು; ಸಾಗರದಲ್ಲಿ ಇಲ್ಲಿಭೂರಿ ಜೀವನ(=ನೀರು)/ನೀರಿನ ಅಲೆಗಳ ಭಂಗದಂತೆ, ಇಲ್ಲಿ ಭೂರಿ ಜೀವಗಳ ಭಂಗ/ನಾಶಮಯಮಾಗಿತ್ತು; ಸಂಸಾರಚಕ್ರದಂತೆ; ಸಂಸಾರಚಕ್ರದಲ್ಲಿ ಪಾತಕ/ಕಷ್ಟ ಬಂಧನ/ದುಃಖ ಇರುವಂತೆ, ಇಲ್ಲಿ ಪಾತಕ, ಬಂಧಭರಿತ ಮಯವಾಗಿತ್ತು; ಕೈಲಾಸಗಿರಿಯಲ್ಲಿ ಶಿವಗಣ ಗಳಿರುವಂತೆ, ಇಲ್ಲಿ ಭೂತ-ನರಿಗಳ ವಿಲಾಸ ಮಯಮಾಗಿತ್ತು; ವಿಸ್ತಾರದ ನೈಮಿಶಅರಣ್ಯದಲ್ಲಿ ವಿರಕ್ತರಿಂದ ಆವೃತ ಮಯವಾಗಿದ್ದರೆ,ಇಲ್ಲಿ ವಿರಕ್ತ/ವಿಶೇಷ ರಕ್ತ-ವಿ-ರಕ್ತವು ಪ್ರ-ಹೆಚ್ಚು ಆವೃತ ಮಯವಾಗಿ ರಣರಂಗವು ವಿಶೇಷವಾಗಿಕಾಣುತ್ತಿತ್ತು. (ಶ್ಲೇಷೆ - ದ್ವಂದಾರ್ಥ ಚಮತ್ಕಾರಕ್ಕಾಗಿ- ಖಂಡ, ವಿರಕ್ತ, ಮೊದಲಾದ ಪದಗಳನ್ನು ಬಳಸಿದೆ)
  • (ಪದ್ಯ-೨೨)

ಪದ್ಯ:-:೨೩:

ಸಂಪಾದಿಸಿ

ಪೆಣಮಯಂ ಮೀರಿ ಮೆದೆಗೆಡೆದಿರ್ದ ವಾಜಿ ವಾ |
ರಣಮಯಂ ಬಿಡದೆ ಕುಣಿದಾಡುವಟ್ಟೆಗಳ ರಿಂ |
ಗಣಮಯಂ ನಿಡುಗರುಳ್ ಖಂಡಮಿದುಳಡಗು ಸುಂಟಿಗೆ ಮಜ್ಜೆ ಮಾಂಸಗಳ ||
ನೆಣಮಯಂ ಪರಿವ ನೆತ್ತರ ಬಸೆಯ ಜಿಗಿಯ ದಾ |
ರುಣ ಮಯಂ ಯಕ್ಷರಾಕ್ಷಸ ಭೂತಭೇತಾಳ |
ಗಣಮಯಂ ಸಲೆ ಭಯಂಕರಮಾದುದಂದು ರಣರಂಗಮಾ ಪ್ರದ್ಯುಮ್ನನ ||23||

ಪದವಿಭಾಗ-ಅರ್ಥ:
ಅಂದು ಪ್ರದ್ಯುಮ್ನನ ರಣರಂಗವುಪೆಣಮಯಂ ಮೀರಿ ಮೆದೆಗೆಡೆದಿರ್ದ (ಮೆದೆ/ರಾಸಿ+ ಕೆಡೆದಿರ್ದ) ವಾಜಿ ವಾರಣ (ಆನೆ)ಮಯಂ ಬಿಡದೆ ಕುಣಿದಾಡುವಟ್ಟೆಗಳ ರಿಂಗಣಮಯಂ ನಿಡುಗರುಳ್ ಖಂಡಮಿದುಳಡಗು ಸುಂಟಿಗೆ (ಕುತ್ತಿಗೆ) ಮಜ್ಜೆ ಮಾಂಸಗಳ ನೆಣ(ಮಜ್ಜೆ)ಮಯಂ=[ಅಂದು ಪ್ರದ್ಯುಮ್ನನ ರಣರಂಗವು ರಣರಂಗವು, ಹೆಣದ ಮಯವು, ಬಹಳ ರಾಶಿ ಬಿದ್ದ ಕುದುರೆ, ಆನೆ ಮಯವು; ಒಂದೇಸಮನೆ ಕುಣಿದಾಡುವ ದೇಹಗಳ ರಿಂಗಣ ಕುಣಿತಮಯವು, ಉದ್ದ ಕರುಳು ಮಾಂಸ ಮಿದುಳ ಮುದ್ದೆ, ಕುತ್ತಿಗೆ, ಮಜ್ಜೆ ಮಾಂಸಗಳ ನೆಣಮಯವು]; ಪರಿವ ನೆತ್ತರ ಬಸೆಯ ಜಿಗಿಯ ದಾರುಣ ಮಯಂ ಯಕ್ಷರಾಕ್ಷಸ ಭೂತಭೇತಾಳ ಗಣಮಯಂ ಸಲೆ ಭಯಂಕರಮಾದುದಂದು ರಣರಂಗಮಾ ಪ್ರದ್ಯುಮ್ನನ=[ಹರಿಯುವ ನೆತ್ತರಪಸೆಯ ಚಿಮ್ಮುವರಕ್ತದ ಕ್ರೂರಮಯವು; ಯಕ್ಷರಾಕ್ಷಸ ಭೂತಭೇತಾಳ ಗಣಮಯವು; ಬಹಳ ಭಯಂಕರವಾಗಿತ್ತು.
  • ತಾತ್ಪರ್ಯ:ಅಂದು ಪ್ರದ್ಯುಮ್ನನ ರಣರಂಗವು ರಣರಂಗವು, ಹೆಣದ ಮಯವು, ಬಹಳ ರಾಶಿ ಬಿದ್ದ ಕುದುರೆ, ಆನೆ ಮಯವು; ಒಂದೇಸಮನೆ ಕುಣಿದಾಡುವ ದೇಹಗಳ ರಿಂಗಣ ಕುಣಿತಮಯವು, ಉದ್ದ ಕರುಳು ಮಾಂಸ ಮಿದುಳ ಮುದ್ದೆ, ಕುತ್ತಿಗೆ, ಮಜ್ಜೆ ಮಾಂಸಗಳ ನೆಣಮಯವು; ಹರಿಯುವ ನೆತ್ತರಪಸೆಯ ಚಿಮ್ಮುವರಕ್ತದ ಕ್ರೂರಮಯವು; ಯಕ್ಷರಾಕ್ಷಸ ಭೂತಭೇತಾಳ ಗಣಮಯವು; ಬಹಳ ಭಯಂಕರವಾಗಿತ್ತು.
  • (ಪದ್ಯ-೨೩)

ಪದ್ಯ:-:೨೪:

ಸಂಪಾದಿಸಿ

ಅರಿದ ಸುಂಡಿಲ ಕಹಳೆವಿಡಿದೂದಿದವು ಕೆಲವು |
ಕರಿಯ ರದನಂಗಳ್ಗೆ ತಲೆಯೋಡ ಸೊರೆಗಟ್ಟಿ |
ನರದ ತಂತ್ರಿಯ ಪೂಡಿ ದಂಡಿಗೆವಿಡಿದು ಪಾಡಿದುವು ಕೆಲವು ತುರಗಂಗಳ ||
ಖರಮಂ ಪಿಡಿದು ತಾಳವಿಕ್ಕಿದುವು ಕೆಲವು ಕುಂ |
ಜರಶಿರದ ಮುರಜಂಗಳಂ ಬಾರಿಸಿದುವು ಕೆಲ |
ವಿರದೆ ಕುಣಿದಾಡಿದುವು ಮರುಳ್ಗಳಾ ರಣಗಂಗದೊಳ್ ನಾಟ್ಯರಚನೆ ಮೆರೆಯೆ ||24||

ಪದವಿಭಾಗ-ಅರ್ಥ:
ಅರಿದ ಸುಂಡಿಲ ಕಹಳೆವಿಡಿದು ಊದಿದವು ಕೆಲವುಕರಿಯ ರದನಂಗಳ್ಗೆ ತಲೆಯೋಡ ಸೊರೆಗಟ್ಟಿ ನರದ ತಂತ್ರಿಯ ಪೂಡಿ ದಂಡಿಗೆವಿಡಿದು ಪಾಡಿದುವು=[ಮರುಳುಗಳು / ಪ್ರೇತಗಳು,ಕತ್ತರಿಸಿದ ಸುಂಡಿಲನ್ನು ಕಹಳೆಮಾಡಿಕೊಂಡು ಊದಿದವು; ಕೆಲವು ಆನೆಗಳ ದಂತಗಳಿಗೆ ತಲೆಯೋಡನ್ನು ಸೊರೆಬುರುಡೆಯಂತೆ ಕಟ್ಟಿ ನರದ ತಂತಿಯಂತೆ ಹೂಡಿ ದಂಡಿಗೆಯಂತೆ ಅದನ್ನು ಹಿಡಿದು ಹಾಡಿದುವು]; ಕೆಲವು ತುರಗಂಗಳ ಖರಮಂ ಪಿಡಿದು ತಾಳವಿಕ್ಕಿದುವು ಕೆಲವು ಕುಂಜರಶಿರದ ಮುರಜಂಗಳಂ ಬಾರಿಸಿದುವು ಕೆಲ ವಿರದೆ ಕುಣಿದಾಡಿದುವು ಮರುಳ್ಗಳಾ ರಣಗಂಗದೊಳ್ ನಾಟ್ಯರಚನೆ ಮೆರೆಯೆ=[ಕೆಲವು ಕುದುರೆಗಳ ಗೊರಸುಗಳನ್ನು ಹಿಡಿದು ತಾಳಬಡಿದವು; ಕೆಲವು ಆನೆಯ ತಲೆಯನ್ನುಡೋಲು, ಮೃದಂಗ ಮಾಡಿ ಬಾರಿಸಿದವು; ಕೆಲವು ಮರುಳುಗಳು ಸುಮ್ಮನಿರದೆ ಕುಣಿದಾಡಿದುವು, ಹೀಗೆ ಮರುಳುಗಳು /ಪ್ರೇತಗಳು ರಣಗಂಗದಲ್ಲಿ ನಾಟ್ಯರಚನೆಮಾಡಿ ಮೆರೆದವು.]
  • ತಾತ್ಪರ್ಯ:.ಮರುಳುಗಳು / ಪ್ರೇತಗಳು,ಕತ್ತರಿಸಿದ ಸುಂಡಿಲನ್ನು ಕಹಳೆಮಾಡಿಕೊಂಡು ಊದಿದವು; ಕೆಲವು ಆನೆಗಳ ದಂತಗಳಿಗೆ ತಲೆಯೋಡನ್ನು ಸೊರೆಬುರುಡೆಯಂತೆ ಕಟ್ಟಿ ನರದ ತಂತಿಯಂತೆ ಹೂಡಿ ದಂಡಿಗೆಯಂತೆ ಅದನ್ನು ಹಿಡಿದು ಹಾಡಿದುವು; ಕೆಲವು ಕುದುರೆಗಳ ಗೊರಸುಗಳನ್ನು ಹಿಡಿದು ತಾಳಬಡಿದವು; ಕೆಲವು ಆನೆಯ ತಲೆಯನ್ನುಡೋಲು, ಮೃದಂಗ ಮಾಡಿ ಬಾರಿಸಿದವು; ಕೆಲವು ಮರುಳುಗಳು ಸುಮ್ಮನಿರದೆ ಕುಣಿದಾಡಿದುವು, ಹೀಗೆ ಮರುಳುಗಳು /ಪ್ರೇತಗಳು ರಣಗಂಗದಲ್ಲಿ ನಾಟ್ಯರಚನೆಮಾಡಿ ಮೆರೆದವು.
  • (ಪದ್ಯ-೨೪)IV

ಪದ್ಯ:-:೨೫:

ಸಂಪಾದಿಸಿ

ಹರಿಸುತಂ ತನ್ನ ಮೋಹಕರವನಿಂತೈದೆ ಸಂ |
ಹರಿಸುತಂತಕನೊಲಿರೆ ಕಾಣುತೆ ವರೂಥಮಂ |
ಹರಿಸುತಂತಾ ಬಭ್ರುವಾಹನಂ ಖಾತಿಯಂ ಕೈಕೊಂಡು ಕಣೆಗೆರೆಯುತೆ ||
ಪರದಳವನೊಳಪೊಕ್ಕು ಸುಭಟರಂ ಸದೆದು ಸೂ(ಸೊ) |
ಪ್ಪರೆದಳವಳಿಸಲಾಗ ಭೀತಿಯಿಂ ದೆಸೆದೆಸೆಗೆ |
ಪರೆದಳವಡಿಸಿದರ್ ಪಲಾಯನವನತಿಬಲರ್ ಪಾರ್ಥನ ಪತಾಕಿನಿಯೊಳು ||25||

ಪದವಿಭಾಗ-ಅರ್ಥ:
ಹರಿಸುತಂ ತನ್ನ ಮೋಹಕರವನು ಇಂತೈದೆ ಸಂಹರಿಸುತ ಅಂತಕನೊಲು ಇರೆ=[ಹರಿಸುತ ಪ್ರದ್ಯುಮ್ನನು ತನ್ನ(ಶತ್ರು) ಸೈನ್ನವನ್ನು ಈರಿತಿ ಸಂಹರಿಸುತ್ತಾ ಯಮನಂತೆ ಇರಲು,]; ಕಾಣುತೆ ವರೂಥಮಂ ಹರಿಸುತಂ ಖಾತಿಯಂ ಕೈಕೊಂಡು ಕಣೆಗೆರೆಯುತೆ ಪರದಳವನು ಒಳಪೊಕ್ಕು ಸುಭಟರಂ ಸದೆದು ಸೊಪ್ಪರೆದು ಅಳವಳಿಸಲು=[ ಬಭ್ರುವಾಹನು ತಾನು ಅದನ್ನು ಕಾಣುತ್ತಾ ರಥವನ್ನು ಹರಿಸುತ್ತಾ ಸಿಟ್ಟಿನಿಂದ ಯುದ್ಧವನ್ನು ಕೈಕೊಂಡು ಬಾಣಗಳನ್ನು ಕರೆಯುತ್ತಾ ಶತ್ರು ದಳವನ್ನು ಒಳಹೊಕ್ಕು ವೀರಭಟರನ್ನು ಕೊಂದು ನಾಶಮಾಡಿ ಸವರುತ್ತಿರಲು]; ಆಗ ಭೀತಿಯಿಂ ದೆಸೆದೆಸೆಗೆ ಪರೆದು ಅಳವಡಿಸಿದರ್ ಪಲಾಯನವನು ಅತಿಬಲರ್ ಪಾರ್ಥನ ಪತಾಕಿನಿಯೊಳು(ಸೈನ್ಯ)=[ಆಗ ಪಾರ್ಥನ ಸೈನ್ಯದಲ್ಲಿ ಅತಿಬಲರೂ ಭೀತಿಯಿಂದ ದಿಕ್ಕು ದಿಕ್ಕಿಗಗೆ ಓಡಿ ಪಲಾಯನಕ್ಕೆ ತೊಡಗಿದರು.].
  • ತಾತ್ಪರ್ಯ:ಹರಿಸುತ ಪ್ರದ್ಯುಮ್ನನು ತನ್ನ(ಶತ್ರು) ಸೈನ್ನವನ್ನು ಈರಿತಿ ಸಂಹರಿಸುತ್ತಾ ಯಮನಂತೆ ಇರಲು, ಬಭ್ರುವಾಹನು ತಾನು ಅದನ್ನು ಕಾಣುತ್ತಾ ರಥವನ್ನು ಹರಿಸುತ್ತಾ ಸಿಟ್ಟಿನಿಂದ ಯುದ್ಧವನ್ನು ಕೈಕೊಂಡು ಬಾಣಗಳನ್ನು ಕರೆಯುತ್ತಾ ಶತ್ರು ದಳವನ್ನು ಒಳಹೊಕ್ಕು ವೀರಭಟರನ್ನು ಕೊಂದು ನಾಶಮಾಡಿ ಸವರುತ್ತಿರಲು; ಆಗ ಪಾರ್ಥನ ಸೈನ್ಯದಲ್ಲಿ ಅತಿಬಲರೂ ಭೀತಿಯಿಂದ ದಿಕ್ಕು ದಿಕ್ಕಿಗಗೆ ಓಡಿ ಪಲಾಯನಕ್ಕೆ ತೊಡಗಿದರು.
  • (ಪದ್ಯ-೨೫)

ಪದ್ಯ:-:೨೬:

ಸಂಪಾದಿಸಿ

ಕೆಡೆದ ಕರಿಗಳ ಬೆಟ್ಟವಳಿಯ ಗುಂಡುಗಳೊಳಗೆ |
ಮಡಿದ ಕುದುರೆಗಳ ಪೊಡೆಗಲ್ಲ ಪೊರಳಿಗಳೊಳಗೆ |
ಕಡಿದ ಕೈಕಾಲ ನರರಟ್ಟೆಗಳ ತುಂಡುಗಳ ಮರಮಟ್ಟೆಗಳ ನೆಳೆಯುತ ||
ಒಡೆದ ತಲೆಯೋಡದೋಣಿಗಳಿಂದೆ ತಡಿಗೈದು |
ತಿಡಿದ ಪೆಣವಸೆ ಮಿದುಳ್ಗಳ ಕರ್ದಮಂಗಳಿಂ |
ಬಿಡದೆ ರುಧಿರ ಪ್ರವಾಹಂ ಪರಿಯೆ ಸವರಿದಂ ಪಾರ್ಥಜಂ ಪರಬಲವನು ||26||

ಪದವಿಭಾಗ-ಅರ್ಥ:
ಕೆಡೆದ ಕರಿಗಳ ಬೆಟ್ಟವಳಿಯ (ಬೆಟ್ಟ+ಅವಳಿ/ ಆವಳಿ) ಗುಂಡುಗಳೊಳಗೆ (ಗುಂಡು=ಗುಂಪು) ಮಡಿದ ಕುದುರೆಗಳ ಪೊಡೆಗಲ್ಲ (ಹೊಡೆ+ಕಲ್ಲು) ಪೊರಳಿಗಳೊಳಗೆ (ಹೊರಳಿ=ಸಮೂಹ,ಗುಂಪು) ಕಡಿದ ಕೈಕಾಲ ನರರಟ್ಟೆಗಳ ತುಂಡುಗಳ ಮರಮಟ್ಟೆಗಳ ನೆಳೆಯುತ=[ಬಿದ್ದ ಆನೆಗಳ ಬೆಟ್ಟಗಳ ರಾಶಿಗಳ, ಗುಂಪುಗಳಲ್ಲಿ ಸತ್ತಿರುವ ಕುದುರೆಗಳ ದೊಡ್ಡಕಲ್ಲುಗಳು, ರಾಶಿಗಳಾಗಿ ಕಡಿದ ಕೈಕಾಲುಗಳು ಮನುಷ್ಯರ ದೇಹಗಳ ತುಂಡುಗಳ ಮರಮಟ್ಟುಗಳು, ಅವನ್ನು ಎಳೆಯುತ್ತಾ ]; ಒಡೆದ ತಲೆಯೋಡುಗಳು ದೋಣಿಗಳಂತಿವೆ, ತಡಿಗೈದುತ ಇಡಿದ ಪೆಣವಸೆ ಮಿದುಳ್ಗಳ ಕರ್ದಮಂಗಳಿಂ (ಮಿದುಳಿನ ಕೆಸರು) ಬಿಡದೆ ರುಧಿರ (ರಕ್ತ) ಪ್ರವಾಹಂ ಪರಿಯೆ ಸವರಿದಂ ಪಾರ್ಥಜಂ ಪರಬಲವನು=[ಒಡೆದ ತಲೆಯೋಡ ದೋಣಿಗಳಿಂದೆ ದಡಕ್ಕೆ ಬರುತ್ತಿರುವ ಹೆಣದನೀರು,(/ಪೆಣವಸೆ-ನೆಣದಪಸೆ-ರಸ) ಮಿದುಳುಗಳ ಕೆಸರಿನಿಂದ ಬಿಡದೆ ಹರಿಯುತ್ತಿರುವ ರಕ್ತದ ಪ್ರವಾಹವು ಹರಿಯುವಂತೆ ಬಬ್ರವಾಹನನು ಶತ್ರುಸೈನ್ಯವನ್ನು ಕೊಂದನು].
  • ತಾತ್ಪರ್ಯ:ರಣರಂಗದಲ್ಲಿ, ಬಿದ್ದ ಆನೆಗಳ ಬೆಟ್ಟಗಳ ರಾಶಿಗಳು, ಗುಂಪುಗಳಲ್ಲಿ ಸತ್ತಿರುವ ಕುದುರೆಗಳ ದೊಡ್ಡಕಲ್ಲುಗಳು, ರಾಶಿಗಳಾಗಿ ಕಡಿದ ಕೈಕಾಲುಗಳು ಮನುಷ್ಯರ ದೇಹಗಳ ತುಂಡುಗಳ ಮರಮಟ್ಟುಗಳು, ಅವನ್ನು ಎಳೆಯುತ್ತಾ, ಒಡೆದ ತಲೆಯೋಡ ದೋಣಿಗಳಿಂದೆ ದಡಕ್ಕೆ ಬರುತ್ತಿರುವ ಹೆಣದನೀರು,(/ಪೆಣವಸೆ-ನೆಣದಪಸೆ-ರಸ) ಮಿದುಳುಗಳ ಕೆಸರಿನಿಂದ ಬಿಡದೆ ಹರಿಯುತ್ತಿರುವ ರಕ್ತದ ಪ್ರವಾಹವು ಹರಿಯುವಂತೆ ಬಬ್ರವಾಹನನು ಶತ್ರುಸೈನ್ಯವನ್ನು ಕೊಂದನು. (ರಣರಂಗವನ್ನು ರಕ್ತದ ಪ್ರವಾಹದ ನದಿಗೆ ಹೋಲಿಸಿದೆ; ನದಿಯ ಅಕ್ಕಪಕ್ಕ ಬೆಟ್ಟಗಳು, ತೇಲುವ ಮರಮಟ್ಟುಗಳು, ದೋಣಿ, ಕೆಸರು,ಕೇಂಪುನೀರು)
  • (ಪದ್ಯ-೨೬)

ಪದ್ಯ:-:೨೭:

ಸಂಪಾದಿಸಿ

ಶಕ್ರತನಯನ ಸಂಭವಂ ಬಳಿಕ ರೋಷದಿಂ |
ಚಕ್ರಾಯುಧನ ಸುತನ ಸೂತನಂ ಕುದುರೆಯಂ |
ನಕ್ರಧ್ವಜನ ನತುಲ ಚಾಪಮಂ ಕತ್ತಿರಿಸಿ ವಿರಥನಂ ಮಾಡೆ ಕೂಡೆ ||
ವಿಕ್ರಮದೊಳಾಗ ಮತ್ತೊಂದು ಮಣಿರಥದಿಂದು |
ಪಕ್ರಮಿಸಿದಂ ಕಾಳಗಕೆ ಕೃಷ್ಣನಂದನನ |
ತಿಕ್ರಮಿಸಿ ಮಗುಳಾ ವರೂಥಮಂ ತಡೆಗಡಿದನಾಪಾರ್ಥಿ ಕೊಳುಗುಳದೊಳು ||27||

ಪದವಿಭಾಗ-ಅರ್ಥ:
ಶಕ್ರತನಯನ ಸಂಭವಂ(ಇಂದ್ರನ ಮಗನ ಮಗ-ಬಬ್ರುವಾಹನ) ಬಳಿಕ ರೋಷದಿಂ ಚಕ್ರಾಯುಧನ ಸುತನ ಸೂತನಂ (ಚಕ್ರಾಯುಧ-ಕೃಷ್ಣನ ಮಗ ಪ್ರದ್ಯುಮ್ನನ ಸಾರಥಿ) ಕುದುರೆಯಂ=[ಇಂದ್ರನ ಮಗನ ಮಗ-ಬಬ್ರುವಾಹನನು ಬಳಿಕ ರೋಷದಿಂದ ಪ್ರದ್ಯುಮ್ನನ ಸಾರಥಿಯನ್ನೂ, ಕುದುರೆಯನ್ನೂ,]; ನಕ್ರಧ್ವಜನ (ಮೊಸಳೆ/ಮೀನು ಧ್ಜಜದವನು-ಪ್ರದ್ಯುಮ್ನ) ನತುಲ ಚಾಪಮಂ ಕತ್ತಿರಿಸಿ ವಿರಥನಂ ಮಾಡೆ ಕೂಡೆ ವಿಕ್ರಮದೊಳು ಆಗ ಮತ್ತೊಂದು ಮಣಿರಥದಿಂದ ಉಪಕ್ರಮಿಸಿದಂ ಕಾಳಗಕೆ=[ಪ್ರದ್ಯುಮ್ನನ ಉತ್ತಮ ಬಿಲ್ಲನ್ನೂ ಕತ್ತಿರಿಸಿ ರಥವಿಹೀನನ್ನಾಗಿ ಮಾಡಲು, ಕೂಡಲೆ ಪರಾಕ್ರಮದಿಂದ ಆಗ ಮತ್ತೊಂದು ರಥದಿಂದ ಕಾಳಗಕ್ಕೆ ಆರಂಭಿಸಿದನು.]; ಕೃಷ್ಣನಂದನನು ಅತಿಕ್ರಮಿಸಿ ಮಗುಳಾ ವರೂಥಮಂ ತಡೆಗಡಿದನು ಆಪಾರ್ಥಿ ಕೊಳುಗುಳದೊಳು=[ ಆ ಪಾರ್ಥಿ/ಬಬ್ರವಾಹನನು ಕೃಷ್ಣನಂದನನ್ನು ಮೀರಿ ಮತ್ತೆ ತಡೆದು ರಥವನ್ನು ನಾಶಮಾದಿದನು.]
  • ತಾತ್ಪರ್ಯ:ಬಬ್ರುವಾಹನನು ಬಳಿಕ ರೋಷದಿಂದ ಪ್ರದ್ಯುಮ್ನನ ಸಾರಥಿಯನ್ನೂ, ಕುದುರೆಯನ್ನೂ, ಪ್ರದ್ಯುಮ್ನನ ಉತ್ತಮ ಬಿಲ್ಲನ್ನೂ ಕತ್ತಿರಿಸಿ ರಥವಿಹೀನನ್ನಾಗಿ ಮಾಡಲು, ಕೂಡಲೆ ಪರಾಕ್ರಮದಿಂದ ಆಗ ಮತ್ತೊಂದು ರಥದಿಂದ ಕಾಳಗಕ್ಕೆ ಆರಂಭಿಸಿದನು. ಆ ಬಬ್ರವಾಹನನು ಕೃಷ್ಣನಂದನನ್ನು ಮೀರಿ ಮತ್ತೆ ತಡೆದು ರಥವನ್ನು ನಾಶಮಾದಿದನು.
  • (ಪದ್ಯ-೨೭)

ಪದ್ಯ:-:೨೮:

ಸಂಪಾದಿಸಿ

ಪೊಸರಥವನಳವಡಿಸಿ ತಂದು ಹರಿಸೂನು ಬಂ |
ದಿಸುವನಾ ತೇರನೊಡನೊಡನೆ ಪಾರ್ಥನ ಸುತಂ |
ಕುಸುರಿದರಿವಂ ಧುರದೊಳಿಂತು ಬಯಲಾದುದು ವರೂಥಮೆಪ್ಪತ್ತು ಬಳಿಕ ||
ಅಸವಳಿದನಾ ಬಭ್ರುವಾಹನನ ಬಾಣದಿಂ |
ದಸುರಾರಿ ನಂದನಂ ಕೂಡೆ ಸಂತೈಸಿಕೊಂ |
ಡಸಮ ಬಲನೊಳ್ ಪಳಂಚಿದನಾಗಳಿರ್ವರ್ಗೆ ಮಸೆದುದಂಕಂ ಖತಿಯೊಳು ||28||

ಪದವಿಭಾಗ-ಅರ್ಥ:
ಪೊಸರಥವನು ಅಳವಡಿಸಿ ತಂದು ಹರಿಸೂನು ಬಂದು ಇಸುವನು ಆ ತೇರನು ಒಡನೊಡನೆ ಪಾರ್ಥನ ಸುತಂ ಕುಸುರಿದು ಅರಿವಂ ಧುರದೊಳು=[ಪ್ರದ್ಯುಮ್ನನು, ಹೊಸರಥವನ್ನು ಸಿದ್ಧಪಡಿಸಿ ತಂದು ಬಂದು ಬಾಣಗಳನ್ನು ಬಿಟ್ಟಾಗ, ಆ ರಥವನ್ನೂ,ಕೂಡಕೂಡಲೆ ಬಬ್ರುವಾಹನನು ಚೂರುಚೂರಾಗುವಂತೆ ಯುದ್ಧದಲ್ಲಿ ಹೊಡೆದನು.]; ಇಂತು ಬಯಲಾದುದು ವರೂಥಮೆಪ್ಪತ್ತು ಬಳಿಕ ಅಸವಳಿದನು ಆ ಬಭ್ರುವಾಹನನ ಬಾಣದಿಂದ ಅಸುರಾರಿ ನಂದನಂ=[ಹೀಗೆ ಎಪ್ಪತ್ತು ರಥ ನಾಶವಾಯಿತು; ಬಳಿಕ ಆ ಬಭ್ರುವಾಹನನ ಬಾಣದಿಂದ ಪ್ರದ್ಯುಮ್ನನು ಎಚ್ಚರತಪ್ಪಿಬಿದ್ದನು;]; ಕೂಡೆ ಸಂತೈಸಿಕೊಂಡು ಅಸಮ ಬಲನೊಳ್ ಪಳಂಚಿದನು ಆಗಳು ಇರ್ವರ್ಗೆ (ಇಬ್ಬರಿಗೆ) ಮಸೆದುದು ಅಂಕಂ ಖತಿಯೊಳು=[ಆದರೆ ಕೂಡಲೆ ಸುಧಾರಿಸಿಕೊಂಡು ಬಹಳ ಶಕ್ತಿ ಉಪಯೋಗಿಸಿ, ಯುದ್ಧಮಾಡಿದನು; ಆಗ ಇಬ್ಬರಿಗೆ ಕ್ರೋಧದ ಕಠಿಣವಾದ ಯುದ್ಧವು ನೆಡೆಯಿತು.]
  • ತಾತ್ಪರ್ಯ:ಪ್ರದ್ಯುಮ್ನನು, ಹೊಸರಥವನ್ನು ಸಿದ್ಧಪಡಿಸಿ ತಂದು ಬಂದು ಬಾಣಗಳನ್ನು ಬಿಟ್ಟಾಗ, ಆ ರಥವನ್ನೂ,ಕೂಡಕೂಡಲೆ ಬಬ್ರುವಾಹನನು ಚೂರುಚೂರಾಗುವಂತೆ ಯುದ್ಧದಲ್ಲಿ ಹೊಡೆದನು. ಹೀಗೆ ಎಪ್ಪತ್ತು ರಥ ನಾಶವಾಯಿತು; ಬಳಿಕ ಆ ಬಭ್ರುವಾಹನನ ಬಾಣದಿಂದ ಪ್ರದ್ಯುಮ್ನನು ಎಚ್ಚರತಪ್ಪಿಬಿದ್ದನು;ಆದರೆ ಕೂಡಲೆ ಸುಧಾರಿಸಿಕೊಂಡು ಬಹಳ ಶಕ್ತಿ ಉಪಯೋಗಿಸಿ, ಯುದ್ಧಮಾಡಿದನು; ಆಗ ಇಬ್ಬರಿಗೆ ಕ್ರೋಧದ ಕಠಿಣವಾದ ಯುದ್ಧವು ನೆಡೆಯಿತು.
  • (ಪದ್ಯ-೨೮)

ಪದ್ಯ:-:೨೯:

ಸಂಪಾದಿಸಿ

ಎದ್ದು ನಭದೊಳ್ ಪಳಂಚುವರೊಮ್ಮೆ ಭೂತಳದೊ |
ಳಿದ್ದು ಹೆಣಗುವರೊಮ್ಮೆ ಬಳಸಿ ಮಂಡಲದಿಂದೆ |
ಹೊದ್ದಿ ಹೋರುವರೊಮ್ಮೆ ತಗಳುಮಗುಳಾಗಿ*ತಾಗುವರೊಮ್ಮೆ ಸರಿಬರಿಯೊಳು ||
ತಿದ್ದಿ ತುಡುಕುವರೊಮ್ಮೆ ಬಾಣಾಂಬುಧಿಯ ತೆರೆಯೊ |
ಳದ್ದಿ ಪೊಣರುವರೊಮ್ಮೆ ಮೂರ್ಛೆಯಿಂ ಮೈಮರೆದು |
ಬಿದ್ದು ಚೇತರಿಸಿ ಕಾದುವರೊಮ್ಮೆ ಕೃಷ್ಣ ಪಾರ್ಥರ ತನಯರಾಹವದೊಳು ||29||

  • (ತಗಳುಮಗುಳಾಗಿ/ತರುಳುನಗುಳಾಗಿ)
ಪದವಿಭಾಗ-ಅರ್ಥ:
ಎದ್ದು ನಭದೊಳ್ ಪಳಂಚುವರೊಮ್ಮೆ ಭೂತಳದೊಳಿದ್ದು ಹೆಣಗುವರೊಮ್ಮೆ ಬಳಸಿ ಮಂಡಲದಿಂದೆ ಹೊದ್ದಿ ಹೋರುವರೊಮ್ಮೆ=[ಒಮ್ಮೆ ಎದ್ದು ಆಕಾಶದಲ್ಲಿ ಎದುರಿಸುವರು; ಒಮ್ಮೆ ಭೂಮಿಯಮೇಲೆ ನಿಂತು ಹೆಣಗುವರು; ಒಮ್ಮೆ ಸುತ್ತುಹಾಕಿ, ಬಳಸಿ ನಿಂತು ಹೋರಾಡುವರು]; ತರುಳುನಗುಳಾಗಿ ತಾಗುವರೊಮ್ಮೆ ಸರಿಬರಿಯೊಳು ತಿದ್ದಿ ತುಡುಕುವರೊಮ್ಮೆ ಬಾಣಾಂಬುಧಿಯ ತೆರೆಯೊಳದ್ದಿ ಪೊಣರುವರೊಮ್ಮೆ=[ಒಮ್ಮೆ ಹಿಂದೆಮುಂದೆ ತಿರುಗಿ ಹೊಡೆಯುವರು, ಒಮ್ಮೆ ಸಮಸಮವಾಗಿ ತಿದ್ದಿ ಮೇಲೆಬೀಳುವರು, ಒಮ್ಮೆ ಬಾಣಗಳ ಸಮುದ್ರದ ತೆರೆಯಲ್ಲಿ ಮುಳುಗಿ ಎದ್ದು ಹೊಡೆಯುವರು]; ಮೂರ್ಛೆಯಿಂ ಮೈಮರೆದು ಬಿದ್ದು ಚೇತರಿಸಿ ಕಾದುವರೊಮ್ಮೆ ಕೃಷ್ಣ ಪಾರ್ಥರ ತನಯರಾಹವದೊಳು=[ಒಮ್ಮೆ ಮೂರ್ಛೆಯಿಂದ ಮೈಮರೆತು ಬಿದ್ದು ಮತ್ತೆ ಚೇತರಿಸಿಕೊಂಡು ಕಾದಾಡುವರು, ಈ ರೀತಿ ಕೃಷ್ಣ ಪಾರ್ಥರ ಮಕ್ಕಳು ಯುದ್ಧದಲ್ಲಿ ಕಾದಾಡಿದರು.]
  • ತಾತ್ಪರ್ಯ:ಬಬ್ರವಾಹನ ಪ್ರದ್ಯುಮ್ನರು, ಒಮ್ಮೆ ಎದ್ದು ಆಕಾಶದಲ್ಲಿ ಎದುರಿಸುವರು; ಒಮ್ಮೆ ಭೂಮಿಯಮೇಲೆ ನಿಂತು ಹೆಣಗುವರು; ಒಮ್ಮೆ ಸುತ್ತುಹಾಕಿ, ಬಳಸಿ ನಿಂತು ಹೋರಾಡುವರು; ಒಮ್ಮೆ ಹಿಂದೆಮುಂದೆ ತಿರುಗಿ ಹೊಡೆಯುವರು, ಒಮ್ಮೆ ಸಮಸಮವಾಗಿ ತಿದ್ದಿಕೊಂಡು ಮೇಲೆಬೀಳುವರು, ಒಮ್ಮೆ ಬಾಣಗಳ ಸಮುದ್ರದ ತೆರೆಯಲ್ಲಿ ಮುಳುಗಿ ಎದ್ದು ಹೊಡೆಯುವರು; ಒಮ್ಮೆ ಮೂರ್ಛೆಯಿಂದ ಮೈಮರೆತು ಬಿದ್ದು ಮತ್ತೆ ಚೇತರಿಸಿಕೊಂಡು ಕಾದಾಡುವರು, ಈ ರೀತಿ ಕೃಷ್ಣ ಪಾರ್ಥರ ಮಕ್ಕಳು ಯುದ್ಧದಲ್ಲಿ ಕಾದಾಡಿದರು.
  • (ಪದ್ಯ-೨೯)

ಪದ್ಯ:-:೩೦:

ಸಂಪಾದಿಸಿ

ಕೃತಚಾಪ ಚಾಪಲರ್ ಶಸ್ತ್ರಾಸ್ತ್ರ ನಿಪುಣರು |
ನ್ನತ ಸತ್ವಸತ್ವರರ್ ದುಸ್ಸಹರಜೇಯರ |
ಪ್ರತಿಸಮರ ಸಮರಥರ್ ಸಾಹಸಿಗಳಿರ್ವರುಂ ಗಗನ ಗಮನದ ವೀರರು ||
ಧೃತಮಾನ ಮಾನಸರ್ ಕುಪಿತ ಮುಖಕರ್ಕಶರ್ |
ವಿತತ ರಣ ತರಣಕರ್ ಚಂಡಭುಜ ಬಲಯುತರ್ |
ನುತ ಕಾರ್ಷ್ಣಿ ಕಾರ್ಷ್ಣಿಗಳ್ ಕಡುಪಿಂದೆ ಕಾದಿದರ್ ಬೇಸರದೆ ಸಂಗರಡೊಳು ||30||

ಪದವಿಭಾಗ-ಅರ್ಥ:
ಕೃತಚಾಪ ಚಾಪಲರ್ ಶಸ್ತ್ರಾಸ್ತ್ರ ನಿಪುಣರು ಉನ್ನತ ಸತ್ವಸತ್ವರರ್ ದುಸ್ಸಹರು ಅಜೇಯರ ಪ್ರತಿಸಮರ ಸಮರಥರ್ ಸಾಹಸಿಗಳು ಈರ್ವರುಂ ಗಗನ ಗಮನದ ವೀರರು=[ಉತ್ತಮ ಬಿಲ್ಲುವಿದ್ಯೆಯ ಪರಿಣಿತರು; ಶಸ್ತ್ರಾಸ್ತ್ರ ನಿಪುಣರು; ಉನ್ನತ ಸತ್ವವುಳ್ಳ ಜಾಗ್ರತರು; ಶತ್ರುಗಳಿಗೆ ದುಸ್ಸಹರು/ಸಹಿಸಲಾಗದವರು; ಅಜೇಯರು; ಪ್ರತಿಅಸ್ತ್ರಬಲ್ಲ ಸಮರ ಸಮರ್ಥರು; ಸಾಹಸಿಗಳು; ಇಬ್ಬರೂ ಆಕಾಶ ಸಂಚಾರವುಳ್ಳ ವೀರರು]; ಧೃತಮಾನ ಮಾನಸರ್ ಕುಪಿತ ಮುಖಕರ್ಕಶರ್=[ಧೃತ/ಧೃತಿ-ಮಾನ/ಮರ್ಯಾದೆ ಉಳ್ಳವರು; ಯುದ್ಧದಲ್ಲಿ ಕ್ರೋಧ ಮುಖವನ್ನೂ ಕಠಿಣಸ್ವಭಾವದವರು;] ವಿತತ ರಣ ತರಣಕರ್ ಚಂಡಭುಜ ಬಲಯುತರ್ ನುತ ಕಾರ್ಷ್ಣಿ(ಕಪ್ಪುಬಣ್ಣದವನ ಮಗ,ಕೃಷ್ಣ-ಕಾರ್;ಷ್ಣಿ ಕಾರ್ಷ್ಣಿಗಳ್ --೧ ಬೆಳ್ಳಗಿರುವುದು ೩ ಪಾಂಡವರಲ್ಲಿ ಒಬ್ಬ;ಜಿ.ವೆಂ.ನಿಘಂಟು) ಕಡುಪಿಂದೆ ಕಾದಿದರ್ ಬೇಸರದೆ ಸಂಗರಡೊಳು=[ವಿಸ್ತಾರ ರಣತಂತ್ರವನ್ನು ದಾಟಬಲ್ಲವರು; ಶೂರಭುಜ ಬಲಯುತರು; ಹೊಗಳಿಕೆಗೆ ಯೋಗ್ಯವಾದ ಕೃಷ್ಣನ ಮಗ, ಅರ್ಜುನನ ಮಕ್ಕಳು ಕಾಠಿಣ್ಯದಿಂದ ಯುದ್ಧದಲ್ಲಿ ಬೇಸರ ಪಡದೆ ಕಾದಿದರು];
  • ತಾತ್ಪರ್ಯ: ಉತ್ತಮ ಬಿಲ್ಲುವಿದ್ಯೆಯ ಪರಿಣಿತರು; ಶಸ್ತ್ರಾಸ್ತ್ರ ನಿಪುಣರು; ಉನ್ನತ ಸತ್ವವುಳ್ಳ ಜಾಗ್ರತರು; ಶತ್ರುಗಳಿಗೆ ದುಸ್ಸಹರು/ಸಹಿಸಲಾಗದವರು; ಅಜೇಯರು; ಪ್ರತಿಅಸ್ತ್ರಬಲ್ಲ ಸಮರ ಸಮರ್ಥರು; ಸಾಹಸಿಗಳು; ಇಬ್ಬರೂ ಆಕಾಶ ಸಂಚಾರವುಳ್ಳ ವೀರರು; ಧೃತ/ಧೃತಿ-ಮಾನ/ಮರ್ಯಾದೆ ಉಳ್ಳವರು; ಯುದ್ಧದಲ್ಲಿ ಕ್ರೋಧ ಮುಖವನ್ನೂ ಕಠಿಣಸ್ವಭಾವದವರು; ವಿಸ್ತಾರ ರಣತಂತ್ರವನ್ನು ದಾಟಬಲ್ಲವರು; ಶೂರಭುಜ ಬಲಯುತರು; ಹೊಗಳಿಕೆಗೆ ಯೋಗ್ಯವಾದ ಕೃಷ್ಣನ ಮಗ, ಅರ್ಜುನನ ಮಕ್ಕಳು ಕಾಠಿಣ್ಯದಿಂದ ಯುದ್ಧದಲ್ಲಿ ಬೇಸರ ಪಡದೆ ಕಾದಿದರು];
  • (ಪದ್ಯ-೩೦)

ಪದ್ಯ:-:೩೧:

ಸಂಪಾದಿಸಿ

ಏಳುವರ್ ಬೀಳುವರ್ ಮೂದಲೆಯ ನುಡಿಗಳಂ |
ಪೇಳುವರ್ ಕೇಳುವರ್ ನಾಂಟಿದ ಶರಂಗಳಂ |
ಕೀಳುವರ್ ತಾಳುವರ್ ಗಾಯವಂ ವಿಕ್ರಮಾಗ್ನಿಗೆ ಪಗೆಯೊಡಲ ಹವಿಯನು |
ಬೇಳುವರ್ ಬಾಳುವರ್ ವೀರಸಿರಿಯಂ ತಳೆದು |
ಸೀಳುವರ್ ತೂಳುವರ್ ಕಣಿಯಿಂದರುಣ ಜಲದೊ |
ಳಾಳುವರ್ ಪೊಳುವರ್ ಕೋಲ್ಗಳಿಂದಹಿತರಂ ಪ್ರದ್ಯುಮ್ನ ಪಾರ್ಥ ಸುತರು ||31||

ಪದವಿಭಾಗ-ಅರ್ಥ:
ಏಳುವರ್ ಬೀಳುವರ್ ಮೂದಲೆಯ ನುಡಿಗಳಂ ಪೇಳುವರ್ ಕೇಳುವರ್ ನಾಂಟಿದ ಶರಂಗಳಂ ಕೀಳುವರ್ ತಾಳುವರ್ ಗಾಯವಂ ವಿಕ್ರಮಾಗ್ನಿಗೆ ಪಗೆಯೊಡಲ ಹವಿಯನು=[ಯುದ್ಧದಲ್ಲಿ ಬಿದ್ದು ಏಳುವರು; ಮತ್ತೆ ಬೀಳುವರು; ಮೂದಲಿಕೆಯ ನುಡಿಗಳನ್ನು ಒಬ್ಬರಿಗೊಬ್ಬರು ಹೇಳುವರು; ಪ್ರಶ್ನೆಗಳನ್ನು ಕೇಳುವರು; ನಾಟಿದ ಬಾಣಗಳನ್ನು ಕೀಳುವರು; ಗಾಯದ ನೋವನ್ನು ತಾಳುವರು; ಪರಾಕ್ರಮವೆಂಬ ಅಗ್ನಿಗೆ ಶತ್ರುವಿನ ದೇಹದ ಹವಿಸ್ಸನ್ನು ಹಾಕುವರು.];ಬೇಳುವರ್ ಬಾಳುವರ್ ವೀರಸಿರಿಯಂ ತಳೆದು ಸೀಳುವರ್ ತೂಳುವರ್ ಕಣಿಯಿಂದರುಣ ಜಲದೊಳು ಆಳುವರ್ ಪೊಳುವರ್(ಹೂಳುವರು) ಕೋಲ್ಗಳಿಂದ ಅಹಿತರಂ, ಪ್ರದ್ಯುಮ್ನ ಪಾರ್ಥ ಸುತರು=[ಬೀಳುವರು, ಸದ್ದು ಬಾಳುವರು, ವೀರಲಕ್ಮಿಯನ್ನು ಪಡೆದು ಸೀಳುವರು; ತೂಳುವರು/ತುಳಿಯುವರು/ತಳ್ಳುವರು; ಬಾಣದಿಂದ ರಕ್ತದಲ್ಲಿ ಮುಳುಗುವರು; ಪ್ರದ್ಯುಮ್ನ ಮತ್ತು ಪಾರ್ಥನ ಮಕ್ಕಳು ಬಾಣಗಳಿಂದ ಶತ್ರುಗಳನ್ನು ಹೂಳುವರು.]
  • ತಾತ್ಪರ್ಯ: ಯುದ್ಧದಲ್ಲಿ ಬಿದ್ದು ಏಳುವರು; ಮತ್ತೆ ಬೀಳುವರು; ಮೂದಲಿಕೆಯ ನುಡಿಗಳನ್ನು ಒಬ್ಬರಿಗೊಬ್ಬರು ಹೇಳುವರು; ಪ್ರಶ್ನೆಗಳನ್ನು ಕೇಳುವರು; ನಾಟಿದ ಬಾಣಗಳನ್ನು ಕೀಳುವರು; ಗಾಯದ ನೋವನ್ನು ತಾಳುವರು; ಪರಾಕ್ರಮವೆಂಬ ಅಗ್ನಿಗೆ ಶತ್ರುವಿನ ದೇಹದ ಹವಿಸ್ಸನ್ನು ಹಾಕುವರು. ಬೀಳುವರು, ಸದ್ದು ಬಾಳುವರು, ವೀರಲಕ್ಮಿಯನ್ನು ಪಡೆದು ಸೀಳುವರು; ತೂಳುವರು/ತುಳಿಯುವರು/ತಳ್ಳುವರು; ಬಾಣದಿಂದ ರಕ್ತದಲ್ಲಿ ಮುಳುಗುವರು; ಪ್ರದ್ಯುಮ್ನ ಮತ್ತು ಪಾರ್ಥನ ಮಕ್ಕಳು ಬಾಣಗಳಿಂದ ಶತ್ರುಗಳನ್ನು ಹೂಳುವರು. (ಯಮಕ ಅಲಂಕಾರಕ್ಕಾಗಿ ಈಬಗೆಯ ಪ್ರಯೋಗ ಬಂದಿದೆ)
  • (ಪದ್ಯ-೩೧)

ಪದ್ಯ:-:೩೨:

ಸಂಪಾದಿಸಿ

ಇಂತೊರ್ವರೊರ್ವರ್ಗೆ ಸೋಲದೆ ಸುಪರ್ಣ ಹನು |
ಮಂತರ ಕದನದಂತೆ ಧರೆಯೊಳ್ ಪೊಣರ್ದು ಮೇ |
ಣಂತರಿಕ್ಷವನಡರ್ದುರೆ ಪೆಣಗಿದರ್ ಬಳಿಕ ರೌಕ್ಮಿಣೀಯನ ಚಾಪದ ||
ತಂತುವಂ ಕತ್ತರಿಸಲಾರ್ಜುನಿಯ ಮೇಲೆ ಗದೆ |
ಯಂ ತೆಗೆದಿಡಲ್ಕವನದಂ ನಡುವೆ ಕಡಿಗೈಯ್ಯ |
ಲೆಂತೊದಗಿದನೊ ಮತ್ತೆ ಬಿಲ್ವಿಡಿದು ಹರಿಸೂನು ಪಾರ್ಥಿಯಂ ತೆಗೆದೆಚ್ಚನು ||32||

ಪದವಿಭಾಗ-ಅರ್ಥ:
ಇಂತು ಓರ್ವರು ಓರ್ವರ್ಗೆ ಸೋಲದೆ ಸುಪರ್ಣ ಹನುಮಂತರ ಕದನದಂತೆ ಧರೆಯೊಳ್ ಪೊಣರ್ದು ಮೇಣ್ ಅಂತರಿಕ್ಷವನು ಅಡರ್ದು ಉರೆ ಪೆಣಗಿದರ್=[ಹೀಗೆ ಒಬ್ಬರಿಗೊಬ್ಬರೂ ಸೋಲದೆ ಸುಪರ್ಣ/ಗರುಡ ಹನುಮಂತರ ಕದನದಂತೆ ಬೂಮಿಯಲ್ಲಿ ಹೋರಾಡಿ, ಮತ್ತೂ ಆಕಾಶಕ್ಕೆ ನೆಗೆದು ಹೋರಾಡಿದರು.];ಬಳಿಕ ರೌಕ್ಮಿಣೀಯನ ಚಾಪದ ತಂತುವಂ ಕತ್ತರಿಸಲು ಆರ್ಜುನಿಯ ಮೇಲೆ ಗದೆಯಂ ತೆಗೆದಿಡಲ್ಕೆ ಅವನದಂ ನಡುವೆ ಕಡಿಗೈಯ್ಯಲು ಎಂತೊದಗಿದನೊ ಮತ್ತೆ ಬಿಲ್ವಿಡಿದು ಹರಿಸೂನು ಪಾರ್ಥಿಯಂ ತೆಗೆದೆಚ್ಚನು=[ಬಳಿಕ ಪ್ರದ್ಯುಮ್ನನ ಬಿಲ್ಲಿನ ದಾರವನ್ನು ಕತ್ತರಿಸಲು ಬಬ್ರುವಾಹನನ ಮೇಲೆ ಗದೆಯನ್ನು ತೆಗೆದು ಹೊಡೆಯಲು, ಅವನದನ್ನು ನಡುವೆ ಕಡಿದನು; ಆಗ ಹೇಗೆ ಮತ್ತೆ ಸಿದ್ದನಾದನೋ; ಪ್ರದ್ಯುಮ್ನನು ಬಿಲ್ಲನ್ನು ಹಿಡಿದು ಬಬ್ರುವಾಹನನ್ನು ಹೊಡೆದನು].
  • ತಾತ್ಪರ್ಯ:ಹೀಗೆ ಒಬ್ಬರಿಗೊಬ್ಬರೂ ಸೋಲದೆ ಸುಪರ್ಣ/ಗರುಡ ಹನುಮಂತರ ಕದನದಂತೆ ಬೂಮಿಯಲ್ಲಿ ಹೋರಾಡಿ, ಮತ್ತೂ ಆಕಾಶಕ್ಕೆ ನೆಗೆದು ಹೋರಾಡಿದರು. ಬಳಿಕ ಪ್ರದ್ಯುಮ್ನನ ಬಿಲ್ಲಿನ ದಾರವನ್ನು ಕತ್ತರಿಸಲು ಬಬ್ರುವಾಹನನ ಮೇಲೆ ಗದೆಯನ್ನು ತೆಗೆದು ಹೊಡೆಯಲು, ಅವನದನ್ನು ನಡುವೆ ಕಡಿದನು; ಆಗ ಹೇಗೆ ಮತ್ತೆ ಸಿದ್ದನಾದನೋ; ಪ್ರದ್ಯುಮ್ನನು ಬಿಲ್ಲನ್ನು ಹಿಡಿದು ಬಬ್ರುವಾಹನನ್ನು ಹೊಡೆದನು.
  • (ಪದ್ಯ-೩೨)

ಪದ್ಯ:-:೩೩:

ಸಂಪಾದಿಸಿ

ಪೊಡವಿಗಧಿನಾಥ ಕೇಳ್ ಬಳಿಕಿರ್ವರುಂ ಗಗನ |
ಕಡರಿ ನಿಜಸತ್ವದಿಂದನ್ನೋನ್ಯಮಾರ್ದಿಸಲ್ |
ಸಿಡಿಲ ರಭಸದೊಳಂಬುಗಳ್ ತಾಗಲುಭಯ ವೀರರ್ ಕ್ರೋಶಮಾತ್ರಕಾಗಿ ||
ಸಿಡಿದಂತರಿಕ್ಷದಿಂ ಧಾರಿಣೀತಳಕೆಪೊಡೆ |
ಗೆಡೆದರಾಕ್ಷಣದೊಳ್ ಪುರಂದರನ ವಜ್ರದಿಂ |
ಕಡಿವಡೆದು ಮೇದಿನಿಗೆ ಬೀಳ್ವ ಕುಲಗಿರಿಗಳಂತೊಬ್ಬೂಬ್ಬರೊಂದು ಕಡೆಗೆ ||33||

ಪದವಿಭಾಗ-ಅರ್ಥ:
ಪೊಡವಿಗಧಿನಾಥ ಕೇಳ್ ಬಳಿಕ ಇರ್ವರುಂ ಗಗನ ಕಡರಿ ನಿಜಸತ್ವದಿಂದ ಅನ್ನೋನ್ಯಮಾರ್ದಿಸಲ್ ಸಿಡಿಲ ರಭಸದೊಳ್ ಅಂಬುಗಳ್ ತಾಗಲು=[ಭೂಮಿಯ ಒಡೆಯ ಜನಮೇಜಯನೇ ಕೇಳು, ಬಳಿಕ ಇಬ್ಬರೂ ಆಕಾಶಕ್ಕೆ ನೆಗೆದು, ತಮ್ಮ ಸತ್ವದಿಂದ ಒಬ್ಬರಿಗೊಬ್ಬರು ಹೊಡೆಯಲು,ಸಿಡಿಲ ರಭಸದಲ್ಲಿ ಬಾಣಗಳು ತಾಗಲು]; ಉಭಯ ವೀರರ್ ಕ್ರೋಶಮಾತ್ರಕಾಗಿ ಸಿಡಿದು ಅಂತರಿಕ್ಷದಿಂ ಧಾರಿಣೀತಳಕೆ ಪೊಡೆಗೆಡೆದರು=[ಇಬ್ಬರ ವೀರರೂ ಯೋಜನದೂರ ಸಿಡಿದು ಅಂತರಿಕ್ಷದಿಂದ ಭೂಮಿಗೆ ಹೊಡೆ-ಬಿದ್ದರು]; ಆಕ್ಷಣದೊಳ್ ಪುರಂದರನ ವಜ್ರದಿಂ ಕಡಿವಡೆದು ಮೇದಿನಿಗೆ ಬೀಳ್ವ ಕುಲಗಿರಿಗಳಂತ ಒಬ್ಬೂಬ್ಬರು ಒಂದು ಕಡೆಗೆ=[ಆ ಕ್ಷಣದಲ್ಲಿ ಇಂದ್ರನ ವಜ್ರಾಯುದದಿಂದ ರೆಕ್ಕೆಕಡಿದು ಭೂಮಿಗೆ ಬಿದ್ದ/ಬೀಳ್ವ ಕುಲಗಿರಿಗಳಂತೆ ಒಬ್ಬೂಬ್ಬರು ಒಂದು ಕಡೆಗೆ ಬಿದ್ದರು].
  • ತಾತ್ಪರ್ಯ: ಭೂಮಿಯ ಒಡೆಯ ಜನಮೇಜಯನೇ ಕೇಳು, ಬಳಿಕ ಇಬ್ಬರೂ ಆಕಾಶಕ್ಕೆ ನೆಗೆದು, ತಮ್ಮ ಸತ್ವದಿಂದ ಒಬ್ಬರಿಗೊಬ್ಬರು ಹೊಡೆಯಲು,ಸಿಡಿಲ ರಭಸದಲ್ಲಿ ಬಾಣಗಳು ತಾಗಲು, ಇಬ್ಬರ ವೀರರೂ ಯೋಜನದೂರ ಸಿಡಿದು ಅಂತರಿಕ್ಷದಿಂದ ಭೂಮಿಗೆ ಹೊಡೆ-ಬಿದ್ದರು; ಹೇಗೆಂದರೆ ಆ ಕ್ಷಣದಲ್ಲಿ ಇಂದ್ರನ ವಜ್ರಾಯುದದಿಂದ ರೆಕ್ಕೆಕಡಿದು ಭೂಮಿಗೆ ಬಿದ್ದ/ಬೀಳ್ವ ಕುಲಗಿರಿಗಳಂತೆ ಒಬ್ಬೂಬ್ಬರು ಒಂದು ಕಡೆಗೆ ಬಿದ್ದರು].
  • (ಪದ್ಯ-೩೩)

ಪದ್ಯ:-:೩೪:

ಸಂಪಾದಿಸಿ

ಸಾಸಹಮದೆಂತೊ ಭೂತಳಕೆ ಬೀಳುತೆ ಭಭ್ರು |
ವಾಹನಂ ತರಹರಿಸುತೆಚ್ಚರಿಕೆಗುಂದದೆ ಮ |
ಹಾಹವಕೆ ಬೇರೊಂದು ಮಣಿವರೂಥವನಡರ್ದಾಗ ತನ್ನಭಿಮುಖದೊಳು ||
ಆ ಹರಿಕುಮಾರನಂ ಕಾಣದೆ ಧನಂಜಯನ |
ಮೋಹರವನೈದಿದಂ ಪಸಿದ ಪೆರ್ಬುಲಿ ಮೃಗಸ |
ಮೂಹಮಂ ಪುಗುವಂತೆ ಕಾಡಾನೆ ಕದಳಿಗಳ ತುರುಗಳಂ ತುಡುಕುವಂತೆ ||34||

ಪದವಿಭಾಗ-ಅರ್ಥ:
ಸಾಸಹಮದೆಂತೊ ಭೂತಳಕೆ ಬೀಳುತೆ ಭಭ್ರುವಾಹನಂ ತರಹರಿಸುತ ಎಚ್ಚರಿಕೆಗುಂದದೆ ಮಹಾಹವಕೆ ಬೇರೊಂದು ಮಣಿವರೂಥವನು ಅಡರ್ದು=[ಅದೇನು ಸಾಸಹವೊ! ಭೂಮಿಗೆ ಬೀಳುತ್ತಲೆ ಭಭ್ರುವಾಹನನು ಸುಧಾರಿಸಿಕೊಂಳ್ಳುತ್ತಾ ಎಚ್ಚರಿಕೆಗುಂದದೆ ಮಹಾಯುದ್ಧಕ್ಕೆ ಮತ್ತೊಂದು ಮಣಿರಥವನ್ನು ಹತ್ತಿ,]; ಆಗ ತನ್ನ ಅಭಿಮುಖದೊಳು ಆ ಹರಿಕುಮಾರನಂ ಕಾಣದೆ ಧನಂಜಯನ ಮೋಹರವನು ಐದಿದಂ ಪಸಿದ ಪೆರ್ಬುಲಿ ಮೃಗಸಮೂಹಮಂ ಪುಗುವಂತೆ ಕಾಡಾನೆ ಕದಳಿಗಳ ತುರುಗಳಂ ತುಡುಕುವಂತೆ=[ಆಗ ತನ್ನ ಎದುರಿನಲ್ಲಿ ಆ ಹರಿಕುಮಾರ ಪ್ರದ್ಯುಮ್ನನ್ನು ಕಾಣದೆ ಧನಂಜಯನ ಸೈನ್ಯವನ್ನು ಪ್ರವೇಸಿಸಿದನು. ಅದು ಹೇಗೆಂದರೆ, ಹಸಿದ ಹೆಬ್‍ಹುಲಿ ಜಿಂಕಗಳಸಮೂಹವನ್ನು ಹೊಗುವಂತೆ, ಕಾಡಾನೆ ಬಾಳೆಯತೋಟಗಳ ಮರಗಳನ್ನು ಮುರಿಯುವಂತೆ ಇತ್ತು. ],
  • ತಾತ್ಪರ್ಯ:ಅದೇನು ಸಾಸಹವೊ! ಭೂಮಿಗೆ ಬೀಳುತ್ತಲೆ ಭಭ್ರುವಾಹನನು ಸುಧಾರಿಸಿಕೊಂಳ್ಳುತ್ತಾ ಎಚ್ಚರಿಕೆಗುಂದದೆ ಮಹಾಯುದ್ಧಕ್ಕೆ ಮತ್ತೊಂದು ಮಣಿರಥವನ್ನು ಹತ್ತಿ, ಆಗ ತನ್ನ ಎದುರಿನಲ್ಲಿ ಆ ಹರಿಕುಮಾರ ಪ್ರದ್ಯುಮ್ನನ್ನು ಕಾಣದೆ ಧನಂಜಯನ ಸೈನ್ಯವನ್ನು ಪ್ರವೇಸಿಸಿದನು. ಅದು ಹೇಗೆಂದರೆ, ಹಸಿದ ಹೆಬ್‍ಹುಲಿ ಜಿಂಕಗಳಸಮೂಹವನ್ನು ಹೊಗುವಂತೆ, ಕಾಡಾನೆ ಬಾಳೆಯತೋಟಗಳ ಮರಗಳನ್ನು ಮುರಿಯುವಂತೆ ಇತ್ತು.
  • (ಪದ್ಯ-೩೪)

ಪದ್ಯ:-:೩೫:

ಸಂಪಾದಿಸಿ

ಕವಿದರಾಂತರ್ ನಿಂದರುರುಬಿದರ್ ತರುಬಿದರ್ |
ತಿವಿದರೆಚ್ಚರ್‍ಪೊಯ್ದುರೊತ್ತಿದರ್ ಮುತ್ತಿದರ್ |
ವಿವಧಾಯುಧಂಗಳಂ ಬೀರಿದರ್ ಮೀರಿದರ್ ವಿಗ್ರಹಾವೇಶದಿಂದ ||
ತವೆ ತಾಗಿದರ್ ತಡೆದರಡರಿದರ್ ತೊಡರಿದರ್ |
ತವಕದಿಂ ತಮತಮಗೆ ಕಾದಿದರ್ ಮೋದಿದರ್ |
ಬವರದೊಳ್ ಪಾರ್ಥಿಯಂ ಬಳಸಿದರ್ ಸೆಳಸಿದರ್ ನರನ ಸೇನೆಯ ಸುಭಟರು ||35||

ಪದವಿಭಾಗ-ಅರ್ಥ:
(ನರನ ಸೇನೆಯ ಸುಭಟರು) ಕವಿದರ್ ಆಂತರ್ ನಿಂದರು ಉರುಬಿದರ್ ತರುಬಿದರ್ ತಿವಿದರು ಎಚ್ಚರ್‍ ಪೊಯ್ದುರ್ ಒತ್ತಿದರ್ ಮುತ್ತಿದರ್ ವಿವಧ ಆಯುಧಂಗಳಂ ಬೀರಿದರ್ ಮೀರಿದರ್ ವಿಗ್ರಹಾವೇಶದಿಂದ=[ಅರ್ಜುನನ ಸೇನೆಯ ಸೈನಿಕರು, ಬಬ್ರವಾಹನನ್ನು, ಸುತ್ತಿದರು, ಎದುರು ನಿಂತರು, ಮೇಲರಬಿದ್ದರು, ತರುಬಿ ಅಡ್ಡನಿಂತರುದ, ತಿವಿದರು, ಹೊಡೆದರು, ಹೊಯ್ದರು, ಒತ್ತಿಬಂದರು, ಮುತ್ತಿದರು ವಿವಧ ಆಯುಧಗಳನ್ನು ಅವನ ಮೇಲೆ ಬೀರಿದರು, ಯುದ್ಧದ ಆವೇಶದಿಂದ ಮೀರಿನುಗ್ಗಿದರು.]; ತವೆ ತಾಗಿದರ್ ತಡೆದರು ಅಡರಿದರ್ ತೊಡರಿದರ್ ತವಕದಿಂ ತಮತಮಗೆ ಕಾದಿದರ್ ಮೋದಿದರ್ ಬವರದೊಳ್ ಪಾರ್ಥಿಯಂ ಬಳಸಿದರ್ ಸೆಳಸಿದರ್ ನರನ ಸೇನೆಯ ಸುಭಟರು=[ಬಹಳ ಹೊಡೆದರು, ತಡೆದರು, ಮುತ್ತಿದರು, ಅಡ್ಡಹಾಕಿತೊಡರಿದರು, ಅವಸರದಿಂದ ಭಟರು ಭಟರೊಳಗೆ ಹೊಡೆದಾಡಿದರು, ಅರ್ಜುನನ ಸೇನೆಯ ವಿರಭಟರು ಆಮೋದಪಟ್ಟರು ಯುದ್ಧದಲ್ಲಿ ಬಬ್ರುವಾಹನನ್ನು ಬಳಸಿದರು/ ಸುತ್ತುವರಿದು ಎಳೆದರು.]
  • ತಾತ್ಪರ್ಯ:ಅರ್ಜುನನ ಸೇನೆಯ ಸೈನಿಕರು, ಬಬ್ರವಾಹನನ್ನು, ಸುತ್ತಿದರು, ಎದುರು ನಿಂತರು, ಮೇಲರಬಿದ್ದರು, ತರುಬಿ ಅಡ್ಡನಿಂತರುದ, ತಿವಿದರು, ಹೊಡೆದರು, ಹೊಯ್ದರು, ಒತ್ತಿಬಂದರು, ಮುತ್ತಿದರು ವಿವಧ ಆಯುಧಗಳನ್ನು ಅವನ ಮೇಲೆ ಬೀರಿದರು, ಯುದ್ಧದ ಆವೇಶದಿಂದ ಮೀರಿನುಗ್ಗಿದರು. ಬಹಳ ಹೊಡೆದರು, ತಡೆದರು, ಮುತ್ತಿದರು, ಅಡ್ಡಹಾಕಿತೊಡರಿದರು, ಅವಸರದಿಂದ ಭಟರು ಭಟರೊಳಗೆ ಹೊಡೆದಾಡಿದರು, ಅರ್ಜುನನ ಸೇನೆಯ ವಿರಭಟರು ಆಮೋದಪಟ್ಟರು ಯುದ್ಧದಲ್ಲಿ ಬಬ್ರುವಾಹನನ್ನು ಬಳಸಿದರು/ ಸುತ್ತುವರಿದು ಎಳೆದರು.
  • (ಪದ್ಯ-೩೫)

ಪದ್ಯ:-:೩೬:

ಸಂಪಾದಿಸಿ

ಒತ್ತರಿಸಿ ಫಲುಗುಣನ ಸೂನುವಂ ಭಾನುವಂ |
ಮುತ್ತಿದುವು ಚಾತುರಂಗಾಳಿಯಂ ಧೂಳಿಯಂ |
ಬಿತ್ತರದ ಮಣಿಪುರ ಸ್ವಾಮಿಯಂ ಭೂಮಿಯಂ ಸಲೆ ಮುಸುಕಿತಾ ಕ್ಷಣದೊಳು ||
ಮೊತ್ತದ ಶರಾವಳಿಯ ಸೋನೆಯುಂ ಸೇನೆಯಂ |
ಮತ್ತೆ ಚಿತ್ರಾಂಗದೆಯ ಜಾತನಂ ಧಾತನಂ |
ಹತ್ತಿ ಹರಿದುದು ಬಲಮಶೇಷಮುಂ ಘೋಷಮುಂ ಘೋರತರ ಸಂಗರದೊಳು||36||

ಪದವಿಭಾಗ-ಅರ್ಥ:
ಒತ್ತರಿಸಿ ಫಲುಗುಣನ ಸೂನುವಂ ಭಾನುವಂ ಮುತ್ತಿದುವು ಚಾತುರಂಗ ಆಳಿಯಂ(ಗುಂಪು) ಧೂಳಿಯಂ ಬಿತ್ತರದ ಮಣಿಪುರ ಸ್ವಾಮಿಯಂ ಭೂಮಿಯಂ ಸಲೆ ಮುಸುಕಿತಾ ಕ್ಷಣದೊಳು=[ಭಾನುವಿನಂತಿರುವ ಬಬ್ರವಾಹನನ್ನು ಒತ್ತಿಬಂದು ಅರ್ಜುನನ ಸೈನಿಕರು ಮುತ್ತಿದುವು; ಚತುರಂಗ ವಿತ್ತಾರವಾದ ಸೈನ್ಯವು ಮಣಿಪುರ ಸ್ವಾಮಿಯನ್ನು, ಅವನ ಭೂಮಿಯನ್ನು ಮುತ್ತಿದುವು; ಆ ಸಮಯದಲ್ಲಿ ಬಹಳ ಧೂಳಿಯು ಆವರಿಸಿತು]; ಮೊತ್ತದ ಶರಾವಳಿಯ ಸೋನೆಯುಂ ಸೇನೆಯಂ ಮತ್ತೆ ಚಿತ್ರಾಂಗದೆಯ ಜಾತನಂ ಧಾತನಂ ಹತ್ತಿ ಹರಿದುದು ಬಲಮ್ ಅಶೇಷಮುಂ ಘೋಷಮುಂ ಘೋರತರ ಸಂಗರದೊಳು=[ಬಹಳ ಬಾಣಗಳ ರಾಶಿಯ ಮಳೆಯು ಸೇನೆಯಂ ಮತ್ತೆ ಚಿತ್ರಾಂಗದೆಯ ಮಗ ಬಬ್ರುವಾಹನ ರಾಜನನ್ನು,ಯುದ್ಧದಲ್ಲಿ ಬೆನ್ನುಹತ್ತಿ ಎಲ್ಲ ಸೈನ್ಯವೂ ಘೋರತರವಾದ ಘೋಷ/ ಧ್ವನಿವನ್ನುಮಾಡುತ್ತಾ ಅವನ ಮೇಲೆ ನುಗ್ಗಿತು;].
  • ತಾತ್ಪರ್ಯ: ಭಾನುವಿನಂತಿರುವ ಬಬ್ರವಾಹನನ್ನು ಒತ್ತಿಬಂದು ಅರ್ಜುನನ ಸೈನಿಕರು ಮುತ್ತಿದುವು; ಚತುರಂಗ ವಿತ್ತಾರವಾದ ಸೈನ್ಯವು ಮಣಿಪುರ ಸ್ವಾಮಿಯನ್ನು, ಅವನ ಭೂಮಿಯನ್ನು ಮುತ್ತಿದುವು; ಆ ಸಮಯದಲ್ಲಿ ಬಹಳ ಧೂಳಿಯು ಆವರಿಸಿತು; ಬಹಳ ಬಾಣಗಳ ರಾಶಿಯ ಮಳೆಯು, ಸೇನೆಯು ಮತ್ತೆ ಚಿತ್ರಾಂಗದೆಯ ಮಗ ಬಬ್ರುವಾಹನ ರಾಜನನ್ನು ಯುದ್ಧದಲ್ಲಿ ಬೆನ್ನುಹತ್ತಿ ಎಲ್ಲ ಸೈನ್ಯವೂ ಘೋರತರವಾದ ಘೋಷ/ ಧ್ವನಿವನ್ನುಮಾಡುತ್ತಾ ಅವನ ಮೇಲೆ ನುಗ್ಗಿತು;].
  • (ಪದ್ಯ-೩೬)

ಪದ್ಯ:-:೩೭:

ಸಂಪಾದಿಸಿ

ರಿಪುಬಲದ ಮುತ್ತಿಗೆಯ ಕೋಲಾಹಲಂಗಳಂ |
ವಿಪುಲ ಶಸ್ತ್ರಾಸ್ತ್ರ ಪ್ರಯೋಗಂಗಳುರುಬೆಯಂ |
ಸಪದಿ ಪ್ರಹಾರದಾಯುಧ ಸಮೂಹಂಗಳಂ ಕಂಡು ಫಲುಗುಣನ ಸೂನು ||
ಕುಪಿತ ಬುದ್ಧ ಭ್ರಕುಟಿ ಮುಖನಾಗಿ ವಹಿಲದಿಂ |
ದ್ವಿಪಹಯ ವರೂಥ ಪತ್ತಿಗಳೆನಿತು ಕವಿದುವನಿ |
ತಪರಿಮಿತ ಬಾಣಮಂ ಸುರಿದನರಿದಂ ಪೊರೆದನಂತಕ ಪುರದ ಸಿರಿಯನು ||37||

ಪದವಿಭಾಗ-ಅರ್ಥ:
ರಿಪುಬಲದ ಮುತ್ತಿಗೆಯ ಕೋಲಾಹಲಂಗಳಂ ವಿಪುಲ ಶಸ್ತ್ರಾಸ್ತ್ರ ಪ್ರಯೋಗಂಗಳುರುಬೆಯಂ ಸಪದಿ (ಆಗ) ಪ್ರಹಾರದಾಯುಧ ಸಮೂಹಂಗಳಂ ಕಂಡು ಫಲುಗುಣನ ಸೂನು=[ಶತ್ರು ಸೈನ್ಯವು ಮುತ್ತಿರುವುದನ್ನು, ಅವರ ಆರ್ಬಟಗಳನ್ನೂ, ಹೇರಳ ಶಸ್ತ್ರಾಸ್ತ್ರ ಪ್ರಯೋಗಗಳ ಉತ್ಸಾಹವನ್ನೂ, ಆಗ ಪ್ರಹಾರದ ಆಯುಧ ಸಮೂಹಗಳನ್ನೂ ಕಂಡು ಬಬ್ರುವಾಹನನು ];

ಕುಪಿತ ಬುದ್ಧ ಭ್ರಕುಟಿ ಮುಖನಾಗಿ ವಹಿಲದಿಂ ದ್ವಿಪಹಯ ವರೂಥ ಪತ್ತಿಗಳೆನಿತು ಕವಿದುವನಿ ತಪರಿಮಿತ ಬಾಣಮಂ ಸುರಿದನರಿದಂ ಪೊರೆದನು ಅಂತಕ ಪುರದ ಸಿರಿಯನು=[ಸಿಟ್ಟಿನಿಂದ ಹುಬ್ಬುಗಂಟಿಕ್ಕಿ, ಬಹುವೇಗದಲ್ಲಿ ಆನೆ ಕುದುರೆ ರಥ ಪದಾತಿಳು ಎಷ್ಟು ಕವಿದಿತ್ತೋ ಅಷ್ಟನ್ನೂ ಲೆಕ್ಕವಿಲ್ಲದಷ್ಟು ಬಾಣಗಳನ್ನು ಸುರಿದನು/ಹೊಡೆದನು. ಹೀಗೆ ಹೊಡೆದು ಮೃತರನ್ನು ಕಳಿಸಿ ಯಮನ ಪಟ್ಟಣದ ಸಂಪತ್ತನ್ನು ಹೆಚ್ಚುಮಾಡಿದನು.]

  • ತಾತ್ಪರ್ಯ:ಶತ್ರು ಸೈನ್ಯವು ಮುತ್ತಿರುವುದನ್ನು, ಅವರ ಆರ್ಬಟಗಳನ್ನೂ, ಹೇರಳ ಶಸ್ತ್ರಾಸ್ತ್ರ ಪ್ರಯೋಗಗಳ ಉತ್ಸಾಹವನ್ನೂ, ಆಗ ಪ್ರಹಾರದ ಆಯುಧ ಸಮೂಹಗಳನ್ನೂ ಕಂಡು ಬಬ್ರುವಾಹನನು ಸಿಟ್ಟಿನಿಂದ ಹುಬ್ಬುಗಂಟಿಕ್ಕಿ, ಬಹುವೇಗದಲ್ಲಿ ಆನೆ ಕುದುರೆ ರಥ ಪದಾತಿಳು ಎಷ್ಟು ಕವಿದಿತ್ತೋ ಅಷ್ಟನ್ನೂ ಲೆಕ್ಕವಿಲ್ಲದಷ್ಟು ಬಾಣಗಳನ್ನು ಸುರಿಸಿ ಹೊಡೆದನು. ಹೀಗೆ ಹೊಡೆದು ಮೃತರನ್ನು ಕಳಿಸಿ ಯಮನ ಪಟ್ಟಣದ ಸಂಪತ್ತನ್ನು ಹೆಚ್ಚುಮಾಡಿದನು.
  • (ಪದ್ಯ-೩೭)

ಪದ್ಯ:-:೩೮:

ಸಂಪಾದಿಸಿ

ಅರಸ ಕೇಳಾಶ್ಚರ್ಯಮಂ ಬಳಿಕ ಪಾರ್ಥಜನ |
ಶರವರ್ಷದೊಳ್ ನನೆಯದವರಿಲ್ಲ ಪಾಂಡವನ |
ಪರಿವಾರದೊಳ್ ಕರಿ ತುರಗ ರಧದ ಪಾಳೆಯದೊಳಿರ್ದ ಜನಜಂಗುಳಿಯೊಳು ||
ಅರರೆ ಬಿಲ್ಗಾರತನದೇಳ್ಗೆಯೆಂತುಟೊ ಜಗ |
ದ್ಭರಿತನಾಗಿಹ ವಿಷ್ಣು ಮಾಯಾ ಪ್ರಭಾವದಂ |
ತಿರೆ ಬಭ್ರುವಾಹನನ ಬಾಣಂಗಳೆಲ್ಲರಂ ಮುಸುಕಿ ಮೋಹಿಸುತಿರ್ದುವು ||38||

ಪದವಿಭಾಗ-ಅರ್ಥ:
ಅರಸ ಕೇಳು ಆಶ್ಚರ್ಯಮಂ ಬಳಿಕ ಪಾರ್ಥಜನ ಶರವರ್ಷದೊಳ್ ನನೆಯದವರಿಲ್ಲ ಪಾಂಡವನ ಪರಿವಾರದೊಳ್ ಕರಿ ತುರಗ ರಧದ ಪಾಳೆಯದೊಳು ಇರ್ದ ಜನಜಂಗುಳಿಯೊಳು=[ಅರಸ ಆಶ್ಚರ್ಯವನ್ನು ಕೇಳು! ಬಳಿಕ ಬಬ್ರವಾಹನನ ಬಾಣಗಳ ಮಳೆಯಿಂದ ಪಾಂಡವನ ಪರಿವಾರದಲ್ಲಿ ನನೆಯದವರೇ ಇಲ್ಲ; ಆನೆ ಕುದುರೆ, ರಧದಲ್ಲಿ ರಕ್ಷಣೆಯಲ್ಲಿದ್ದ ಜನಜನಸಮೂಹದಲ್ಲಿ ಎಲ್ಲರಿಗೂ ಬಾನ ತಾಗಿದೆ.]; ಅರರೆ ಬಿಲ್ಗಾರತನದೇಳ್ಗೆಯೆಂತುಟೊ ಜಗದ್ಭರಿತನಾಗಿಹ ವಿಷ್ಣು ಮಾಯಾ ಪ್ರಭಾವದಂತಿರೆ ಬಭ್ರುವಾಹನನ ಬಾಣಂಗಳೆಲ್ಲರಂ ಮುಸುಕಿ ಮೋಹಿಸುತಿರ್ದುವು=[ಅರರೆ! ಬಿಲ್ಗಾರತನ -ಬಿಲ್ಲುವಿದ್ಯೆಯ ಪರಿಣತಿ ಎಷ್ಟು ಉಂಟೊ! ಜಗತ್ತನ್ನು ಆವರಿಸಿದ ವಿಷ್ಣುವಿನ ಮಾಯಾಪ್ರಭಾವದಂತೆ ಬಭ್ರುವಾಹನನ ಬಾಣಗಳು ಎಲ್ಲರನ್ನು ಅಪ್ಪಿಆವರಿಸಿ ಮೋಹಿಸುತಿದ್ದವು].
  • ತಾತ್ಪರ್ಯ:ಅರಸ ಆಶ್ಚರ್ಯವನ್ನು ಕೇಳು! ಬಳಿಕ ಬಬ್ರವಾಹನನ ಬಾಣಗಳ ಮಳೆಯಿಂದ ಪಾಂಡವನ ಪರಿವಾರದಲ್ಲಿ ನನೆಯದವರೇ ಇಲ್ಲ; ಆನೆ ಕುದುರೆ, ರಧದಲ್ಲಿ ರಕ್ಷಣೆಯಲ್ಲಿದ್ದ ಜನಜನಸಮೂಹದಲ್ಲಿ ಎಲ್ಲರಿಗೂ ಬಾನ ತಾಗಿದೆ. ಅರರೆ! ಬಿಲ್ಗಾರತನ -ಬಿಲ್ಲುವಿದ್ಯೆಯ ಪರಿಣತಿ ಎಷ್ಟು ಉಂಟೊ! ಜಗತ್ತನ್ನು ಆವರಿಸಿದ ವಿಷ್ಣುವಿನ ಮಾಯಾಪ್ರಭಾವದಂತೆ ಬಭ್ರುವಾಹನನ ಬಾಣಗಳು ಎಲ್ಲರನ್ನು ಅಪ್ಪಿಆವರಿಸಿ ಮೋಹಿಸುತಿದ್ದವು.
  • (ಪದ್ಯ-೩೮)

ಪದ್ಯ:-:೩೯:

ಸಂಪಾದಿಸಿ

ರಂಭಾದಿಗಳ ಕುಚದ ಕುಂಕುಮದೊಳಾಳ್ದಹಾ |
ರಂ ಭಾರಿಯಂಕದೊಳ್ ಮಡಿದ ವೀರಾಂಗ ಪರಿ |
ರಂಭಾತಿಶಯದ ಸಮ್ಮರ್ದನದೊಳಾತನಂ ಪರಿದು ಸೂಸುವ ತೆರೆದೊಳು ||
ಕುಂಭಿಕುಂಭದ ಸುಮುಕ್ತಾಫಲಂಗಳ್ ಶಾತ |
ಕುಂಭ ಚಿತ್ರಿತ ಮಾರ್ಗಣದ ರುಚಿಗಳೊಡನೆ ರಣ |
ಕುಂಭಿನಿಗೆ ಬೀಳುತಿರ್ದುವು ಬಭ್ರುವಾಹನನ ತೀವ್ರತರದೆಸುಗೆಯಿಂದೆ ||39||

ಪದವಿಭಾಗ-ಅರ್ಥ:
ರಂಭಾದಿಗಳ (ರಂಭೆಯೇ ಮೊದಲಾದವರ) ಕುಚದ ಕುಂಕುಮದೊಳು (ಮೊಲೆಯ ಕುಂಕುಮದಲ್ಲಿ) ಆಳ್ದಹಾರಂ(ಆಳಿರುವ ಹಾರವು) ಭಾರಿಯ (ಭಾರಿ/ದೊಡ್ಡ) ಅಂಕದೊಳ್ ಮಡಿದ (ಯುದ್ಧದಲ್ಲಿ ಸತ್ತ) ವೀರಾಂಗ (ವೀರರ ಅಂಗ -ಶರೀರದ) ಪರಿರಂಭ (ಆಲಿಂಗನದ) ಅತಿಶಯದ (ಹೆಚ್ಚಿನ) ಸಮ್ಮರ್ದನದೊಳು (ತಾಗುವುದರಿಂದ) ಆತನಂ(ಆತಂಕ)/ ಆ ತನಂ (ಚಿಂತೆ/ ಆಭರಣ- ಮತ್ತಿನ ಹಾರವು) ಪರಿದು ಸೂಸುವ ತೆರೆದೊಳು(ಚಿಂತೆಯು ಹರಿದುಹೋಗುವಂತೆ) ಕುಂಭಿಕುಂಭದ (ಆನೆಯ ನೆತ್ತಿಯ) ಸುಮುಕ್ತಾಫಲಂಗಳ್ (ಒಳ್ಳೆಯ ಮುತ್ತುಗಳು) ಶಾತ ಕುಂಭ(ಹೊನ್ನಿನಿಂದ ಚೆನ್ನಾಗಿ) ಚಿತ್ರಿತ (ಕೆತ್ತಿದ) ಮಾರ್ಗಣದ (ಬಾಣಗಳ) ರುಚಿಗಳೊಡನೆ ೯ಕಾಂತಿಗಳೊಡನೆ) ರಣ ಕುಂಭಿನಿಗೆ (ಯುದ್ಧ ಭೂಮಿಗೆ) ಬೀಳುತಿರ್ದುವು (ಬೀಳುತ್ತಿತ್ತು) ಬಭ್ರುವಾಹನನ ತೀವ್ರತರದ (ಅತಿವೇಗದ) ಎಸುಗೆಯಿಂದೆ (ಬಾಣಪ್ರಯೋಗದಿಂದ)
  • ತಾತ್ಪರ್ಯ: ರಂಭೆಯೇ ಮೊದಲಾದವರ ಮೊಲೆಯ ಕುಂಕುಮದಲ್ಲಿ ಆಳುವ(ಓಲಾಡುವ) ಹಾರವು ದೊಡ್ಡ ಯುದ್ಧದಲ್ಲಿ ಸತ್ತ ವೀರರ ಶರೀರದ ಆಲಿಂಗನದಿಂದ ತಾಗುವುದರಿಂದ ಆತನ ನೋವಿನ ಚಿಂತೆಯು ಹರಿಯುವಂತೆ/ಮುತ್ತಿಹಾರವು ಹರಿದುಹೋಗುವಂತೆ, ಆನೆಯ ನೆತ್ತಿಯ ಒಳ್ಳೆಯ ಮುತ್ತುಗಳು (ಕುಂಕುಮದಂತೆ ರಕ್ತಸಿಕ್ತವಾಗಿ?), ಬಭ್ರುವಾಹನನ ತೀವ್ರತರದ ಅತಿವೇಗದ ಬಾಣಪ್ರಯೋಗದಿಂದ ಹೊನ್ನಿನಿಂದ ಚೆನ್ನಾಗಿ ಕೆತ್ತಿದ ಬಾಣಗಳ ಕಾಂತಿಗಳೊಡನೆ ಯುದ್ಧ ಭೂಮಿಗೆ ಬೀಳುತ್ತಿತ್ತು. (ಯುದ್ಧಲ್ಲಿ ಸತ್ತವರು ವೀರ ಸ್ವರ್ಗ ಪಡೆದು ಅವರು ಸ್ವರ್ಗದ ಅಪ್ಸರ ಸ್ತ್ರೀಯರ ಆಲಿಂಗನ ಮಾಡುವರು, ಆಗ ಬಿಗಿಯಪ್ಪುಗೆಯಲ್ಲಿ ರಂಭೆಯಂತಹವರ ಎದೆಯ ಮೇಲಿನ ಹಾರ ಹರಿದು ಬೀಳುವುದು; ಅದೇ ರೀತಿ ಇಲ್ಲಿ ಯುದ್ಧದಲ್ಲಿ ಆನೆಯ ತಲೆಗೆ (ರಂಭೆಯ ಮೊಲೆಗೆ ಹೋಲಿಕೆ)ಕಟ್ಟಿದ ಮುತ್ತಿನಹಾರ ಬಾಣದಿಂದ ಹರಿದು ಬೀಳುವುದು ಎಂಬ ಉಪಮಾನ ಇರಬಹುದು- ಅದರೆ ಈ ಹೋಲಿಕೆ ಅರ್ಥವಾಗದು; ಎಳೆದು ತಂದು ಸೇರಿಸಿದ ಉಪಮಾನ -ಉಪಮೇಯ)
  • (ಪದ್ಯ-೩೯)V

ಪದ್ಯ:-:೪೦:

ಸಂಪಾದಿಸಿ

ಮುರಿದುವಗಣಿತ ರಥದ ರಾಜಿಗಳ್ ತೇಜಿಗಳ್ |
ತೊರೆದುವಸುವಂ ಮಡಿದುವಾನೆಗಳ್ ಸೇನೆಗಳ್ |
ಕುರಿದರಿವೊಲಾದರಿರಿವೀರರೊಳ್ ಪಾರ್ಥ ನಂದನನ ಮುಂದೆ ||
ಇರಿದು ಮೆರೆಯಲ್ಕಾಣಿನೊರ್ವರು ಸರ್ವರುಂ |
ನೆರೆ ಗೆಲ್ದತುಳ ಮಾರ್ಗಣದಿಂದೆ ರಣದಿಂದೆ |
ಹೆರದೆಗೆದು ಕಂಡಕಡೆಗೋಡಿದರ್ ನೋಡಿದರ್ ಜೀವದುಳಿವಂ ಸುಭಟರು ||40||

ಪದವಿಭಾಗ-ಅರ್ಥ:
ಮುರಿದುವು ಅಗಣಿತ ರಥದ ರಾಜಿಗಳ್ ತೇಜಿಗಳ್ ತೊರೆದುವು ಅಸುವಂ, ಮಡಿದುವು ಆನೆಗಳ್ ಸೇನೆಗಳ್ ಕುರಿ+ ತರಿವೊಲ ಆದರು ಅರಿವೀರರೊಳ್ ಪಾರ್ಥ ನಂದನನ ಮುಂದೆ=[ಅರ್ಜುನನ ಮಗನ ಮುಂದೆ ಲೆಕ್ಕವಿಲ್ಲದಷ್ಟು ರಥದ ಸಾಲುಗಳು, ಕುದುರೆಗಳು ಜೀವ ಬಿಟ್ಟವು, ಸತ್ತವು ಆನೆಗಳು, ಸೇನೆಗಳಲ್ಲಿ ಶತ್ರುವೀರರು ಕುರಿ,ತರಿವಂತೆ-ಕತ್ತರಿಸಿದಂತೆ ಆದರು (ಅರ್ಜುನನ ಮಗನ ಮುಂದೆ) ]; ಇರಿದು ಮೆರೆಯಲ್ ಕಾಣಿನು ಓರ್ವರು ಸರ್ವರುಂ ನೆರೆ ಗೆಲ್ದು ಅತುಳ ಮಾರ್ಗಣದಿಂದೆ ರಣದಿಂದೆ ಹೆರದೆಗೆದು ಕಂಡಕಡೆಗೆ ಓಡಿದರ್ ನೋಡಿದರ್ ಜೀವದುಳಿವಂ ಸುಭಟರು=[ಹೀಗೆ ಇರಿದು-ಕತ್ತರಿಸಿ ಬಾಣದಿಂದ ಚುಚ್ಚಿ ಪ್ರತಾಪಿಸುವವರನ್ನು ಒಬ್ಬರನ್ನೂ ಕಾಣಿನು; ಸರ್ವರನ್ನೂ ಅಸಮಾನ ಬಾಣದಿಂದ ಪೂರ್ಣ ಗೆದ್ದನು; ಜೀವದಿಂದ ಉಳಿವ ಸುಭಟರು ನೋಡಿದರು, ರಣಭೂಮಿಯಿಂದ ಹೆರದೆಗೆದು/ಬೇರೆದಾರಿಹಿಡಿದು ಕಂಡಕಡೆಗೆ ಓಡಿದರು].
  • ತಾತ್ಪರ್ಯ: ಅರ್ಜುನನ ಮಗನ ಮುಂದೆ ಲೆಕ್ಕವಿಲ್ಲದಷ್ಟು ರಥದ ಸಾಲುಗಳು, ಕುದುರೆಗಳು ಜೀವ ಬಿಟ್ಟವು, ಸತ್ತವು ಆನೆಗಳು, ಶತ್ರುವೀರರು ಸೇನೆಗಳಲ್ಲಿ ಕುರಿ,ತರಿವಂತೆ-ಕತ್ತರಿಸಿದಂತೆ ಆದರು; ಹೀಗೆ ಇರಿದು-ಕತ್ತರಿಸಿ ಬಾಣದಿಂದ ಚುಚ್ಚಿ ಪ್ರತಾಪಿಸುವವರನ್ನು ಒಬ್ಬರನ್ನೂ ಕಾಣಿನು; ಸರ್ವರನ್ನೂ ಅಸಮಾನ ಬಾಣದಿಂದ ಪೂರ್ಣ ಗೆದ್ದನು; ಜೀವದಿಂದ ಉಳಿವ ಸುಭಟರು ನೋಡಿದರು, ರಣಭೂಮಿಯಿಂದ ಬೇರೆದಾರಿ ಹಿಡಿದು ಕಂಡಕಡೆಗೆ ಓಡಿದರು.
  • (ಪದ್ಯ-೪೦)

ಪದ್ಯ:-:೪೧:

ಸಂಪಾದಿಸಿ

ತಾಗಿ ದಂದುಗಗೊಂಡ ನನುಸಾಲ್ವನಂಗೈಸಿ |
ಬೀಗಿದಂ ಕರ್ಣಜಂ ಹಂಸಧ್ವಜಂ ಕೆಣಕಿ |
ನೀಗಿದಂ ಮಾನಮಂ ಯೌವನಾಶ್ವಂ ತಡೆದು ಸೋಲ್ದಂ ಸುವೇಗನಾಂತು ||
ಸಾಗಿದಂ ಧುರದಿಂದೆ ಸಿತಕೇತು ಸೆಣಸಿ ತಲೆ |
ದೂಗಿದಂ ಪರಿಭವಕ್ಕನಿರುದ್ಧ ನಿರದಿಳೆಗೆ |
ಬಾಗಿದಂ ಮೈಮರೆದು ಕೃತವರ್ಮ ಸಾತ್ಯಕಿ ಗಳಿದಿರಾಗಿ ದೆಸೆಗೆಟ್ಟರು ||41||

ಪದವಿಭಾಗ-ಅರ್ಥ:
ತಾಗಿ ದಂದುಗಗೊಂಡನು ಅನುಸಾಲ್ವನು=[ತಾಗಿ ದಂದುಗಗೊಂಡನು ಅನುಸಾಲ್ವನು ಬಬ್ರುವಾಹನನ್ನು ತಾಗಿ ಎದುರಿಸಿ ಸೋತುಹಾಸ್ಯಕ್ಕೆ ಒಳಗಾದನು;]; ಅಂಗೈಸಿ (ಭಯಪಟ್ಟು) ಬೀಗಿದಂ ಕರ್ಣಜಂ ಹಂಸಧ್ವಜಂ ಕೆಣಕಿ ನೀಗಿದಂ ಮಾನಮಂ=[ಬಬ್ರುವಾಹನನು ಕರ್ಣಜನಾದ ವೃಷಕೇತುವನ್ನು ಭಯಪಡಿಸಿ ಬೀಗಿದನು, ಹಂಸಧ್ವಜರು ಅವನನ್ನು ಕೆಣಕಿ ಸೋತು ಮಾನವನ್ನು ಕಳೆದುಕೊಂಡರು. ]; ಯೌವನಾಶ್ವಂ ತಡೆದು ಸೋಲ್ದಂ ಸುವೇಗನು ಆಂತು(ಎದುರಿಸಿ) ಸಾಗಿದಂ ಧುರದಿಂದೆ ಸಿತಕೇತು ಸೆಣಸಿ ತಲೆದೂಗಿದಂ ಪರಿಭವಕ್ಕೆ ಅನಿರುದ್ಧನು ಇರದೆ ಇಳೆಗೆ ಬಾಗಿದಂ ಮೈಮರೆದು=[ಯೌವನಾಶ್ವನು ಅವನನ್ನು ತಡೆದು ಸೋತನು; ಸುವೇಗನು ಅವನನ್ನು ಎದುರಿಸಿ ಯುದ್ಧದಿಂದ ಹೊರಹೋದನು; ಸಿತಕೇತು ಅವನೊಡನೆ ಸೆಣಸಿ ಸೋತು ಅವನ ಶೌರ್ಯಕ್ಕೆ ತಲೆದೂಗಿದನು; ಅನಿರುದ್ಧನು ಯುದ್ಧದಲ್ಲಿ ಎಚ್ಚರತಪ್ಪಿ ಭೂಮಿಗೆ ಬಿದ್ದನು;]; ಕೃತವರ್ಮ ಸಾತ್ಯಕಿಗಳು ಇದಿರಾಗಿ ದೆಸೆಗೆಟ್ಟರು=[ನಂತರ ಕೃತವರ್ಮ ಸಾತ್ಯಕಿಗಳು ಬಬ್ರುವಾಹನಮಿಗೆ ಎದಿರುನಿಂತು ಸೋತು ಹೊರಟುಹೋದರು.]
  • ತಾತ್ಪರ್ಯ:ಅನುಸಾಲ್ವನು ಬಬ್ರುವಾಹನನ್ನು ತಾಗಿ ಎದುರಿಸಿ ಸೋತು ಹಾಸ್ಯಕ್ಕೆ ಒಳಗಾದನು; ಬಬ್ರುವಾಹನನು ಕರ್ಣಜನಾದ ವೃಷಕೇತುವನ್ನು ಭಯಪಡಿಸಿ ಬೀಗಿದನು, ಹಂಸಧ್ವಜರು ಅವನನ್ನು ಕೆಣಕಿ ಸೋತು ಮಾನವನ್ನು ಕಳೆದುಕೊಂಡರು. ಯೌವನಾಶ್ವನು ಅವನನ್ನು ತಡೆದು ಸೋತನು; ಸುವೇಗನು ಅವನನ್ನು ಎದುರಿಸಿ ಯುದ್ಧದಿಂದ ಹೊರಹೋದನು; ಸಿತಕೇತು ಅವನೊಡನೆ ಸೆಣಸಿ ಸೋತು ಅವನ ಶೌರ್ಯಕ್ಕೆ ತಲೆದೂಗಿದನು; ಅನಿರುದ್ಧನು ಯುದ್ಧದಲ್ಲಿ ಎಚ್ಚರತಪ್ಪಿ ಭೂಮಿಗೆ ಬಿದ್ದನು; ನಂತರ ಕೃತವರ್ಮ ಸಾತ್ಯಕಿಗಳು ಬಬ್ರುವಾಹನಮಿಗೆ ಎದಿರುನಿಂತು ಸೋತು ಹೊರಟುಹೋದರು.
  • (ಪದ್ಯ-೪೧)

ಪದ್ಯ:-:೪೨:

ಸಂಪಾದಿಸಿ

ಏನೆಂಬೆನಾರಣ ವಸಂತದೊಳ್ ನೆರೆದ ಜಯ |
ಮಾನಿನಿ ವಿಮುಖಮಾದ ವಿರಹದಿಂ ತಪಿಸುವ ಭ |
ಟಾನೀಕಮಂ ಬೆದರಿಸದೆ ಮಾಣದೆಂಬಿನಂ ಪಾರ್ಥಿಯ ಶಿಲೀಮುಖಾಳಿ ||
ದಾನ ಮಾತಂಗ ಘಟೆಗೆರೆಗಿದುದು ಸ್ಯಂದನ ವಿ |
ತಾನಮಂ ಡೋರುಗಳೆದು ಗರಿಯ ಗಾಳಿಯಿಂ |
ಬಾನೆಡೆಗೆ ತೀಡಿದುದು ಶತಪತ್ರದಳದ ಮೇಲೈದಿ ವಿಸಟಂ ಬರಿದುದು||42||

ಪದವಿಭಾಗ-ಅರ್ಥ:
ಏನೆಂಬೆನು ಆರಣ (ಯುದ್ಧ) ವಸಂತದೊಳ್ ನೆರೆದ (ತಮ್ಮೊಡನೆ ಇದ್ದ-ಇದ್ದ) ಜಯಮಾನಿನಿ ವಿಮುಖಮಾದ (ಹೋದ) ವಿರಹದಿಂ ತಪಿಸುವ ಭಟಾನೀಕಮಂ (ಸೈನ್ಯವು) ಬೆದರಿಸದೆ ಮಾಣದು ಎಂಬಿನಂ ಪಾರ್ಥಿಯ ಶಿಲೀಮುಖ ಆಳಿ (ಬಾಣಸಮೂಹ)=[ಏನೆಂಬೆನು, ಯುದ್ಧವೆಂಬ ವಸಂತದಲ್ಲಿ ತಮ್ಮೊಡನೆ ಇದ್ದ (ಜಯವು) ಜಯಮಾನಿನಿ ಎಂಬ ವಧು, ಹೊರಟುಹೋದ ವಿರಹದ ದುಃಖದಿಂದ ಸಂಕಟಪಡುತ್ತಿರುವ ಸೈನ್ಯವನ್ನು ಹೆದರಿಸದೆ ಬಿಡುವುದಿಲ್ಲ! ಎನ್ನುವ ರೀತಿಯಲ್ಲಿ ಪಾರ್ಥಿಯ/ಬಬ್ರುವಾಹನನ ಚೂಪಾದ ಬಾಣ ಸಮೂಹದ ಹೊಡೆತ ಇತ್ತು]; ದಾನಮಾತಂಗಘಟೆಗೆ (ಮತ್ತಗಜಕ್ಕೆ) ಎರೆಗಿದುದು ಸ್ಯಂದನ ವಿತಾನಮಂ (ರಥಸಮೂಹ) (ಡ:ಆಗಮ) ಓರುಗಳೆದು ನಾಶಮಾಡಿ) ಗರಿಯ ಗಾಳಿಯಿಂ ಬಾನೆಡೆಗೆ ತೀಡಿದುದು ಶತಪತ್ರದಳದ (ಕಮಲದಳ) ಮೇಲೈದಿ ವಿಸಟಂಬರಿದುದು (ವಿಸಟ= ೧ ಮನಬಂದಂತೆ; ವಿಸ್ಮೃತಿ)(ಬ:ಆಗಮ) ಅಂಬರಿದುದು (ಅಂಬರ ಆಕಾಶದಲ್ಲಿ+ಚಲಿಸಿತು?) =[ಶಿಲೀಮುಖ ಬಾಣಗಳ ಧಾಳಿ ಮತ್ತಗಜಕ್ಕೆ ಎರೆಗಿ ಹೊಕ್ಕಿತು, ರಥ ಸಮೂಹಗಳನ್ನು ನಾಶಮಾಡಿ, ಆ ಬಾಣಗಳ ಗರಿಯ ಗಾಳಿಯು ಆಕಾಶದಕಡೆಗೆ ಹರಡಿತು; ಮತ್ತೆ ಅಲ್ಲಿ ಆಕಾಶಗಂಗೆಯಲ್ಲಿರುವ ಕಮಲದಳದ ಮೇಲೆಹೋಗಿ ಮನಬಂದಂತೆ ಆಕಾಶದಲ್ಲಿ ಕಮಲದ ಪರಿಮಳ ಹರಡಿತು.
  • ತಾತ್ಪರ್ಯ:ಜೈಮಿನಿ ಏನು ಹೇಳಲಿ ಎಂದನು; ಯುದ್ಧವೆಂಬ ವಸಂತದಲ್ಲಿ ತಮ್ಮೊಡನೆ ಇದ್ದ (ಜಯವು) ಜಯಮಾನಿನಿ ಎಂಬ ವಧು, ಹೊರಟುಹೋದ ವಿರಹದ ದುಃಖದಿಂದ ಸಂಕಟಪಡುತ್ತಿರುವ ಸೈನ್ಯವನ್ನು ಹೆದರಿಸದೆ ಬಿಡುವುದಿಲ್ಲ! ಎನ್ನುವ ರೀತಿಯಲ್ಲಿ ಪಾರ್ಥಿಯ/ಬಬ್ರುವಾಹನನ ಚೂಪಾದ ಬಾಣ ಸಮೂಹದ ಹೊಡೆತ ಇತ್ತು; ಶಿಲೀಮುಖದ ಬಾಣಗಳ ಧಾಳಿ ಮತ್ತಗಜಕ್ಕೆ ಎರೆಗಿ ಹೊಕ್ಕಿತು, ರಥ ಸಮೂಹಗಳನ್ನು ನಾಶಮಾಡಿ, ಆ ಬಾಣಗಳ ಗರಿಯ ಗಾಳಿಯು ಆಕಾಶದಕಡೆಗೆ ಹರಡಿತು; ಮತ್ತೆ ಅಲ್ಲಿ ಆಕಾಶಗಂಗೆಯಲ್ಲಿರುವ ಕಮಲದಳದ ಮೇಲೆಹೋಗಿ ಮನಬಂದಂತೆ ಆಕಾಶದಲ್ಲಿ ಕಮಲದ ಪರಿಮಳ ಹರಡಿತು.].
  • (ಪದ್ಯ-೪೨)

ಪದ್ಯ:-:೪೧:

ಸಂಪಾದಿಸಿ

ಜೋದ ರಾವುತ ರಥಿಕರಳಿದಾನೆ ಕುದುರೆ ತೇರ್ |
ಪೋದುವೆಣ್ದೆಸೆಗೆ ತಮ್ಮಿಚ್ಛೆಯಿಂ ಪಟ್ಟಣದ |
ಬೀದಿಗರ್ ಕೂಡಿದರ್ ಲಾಯದೊಳ್ ಸೂರೆಗೊಂಡರ್ ಭೂಷಣಾದಿಗಳನು ||
ಕಾದುವ ಕಲಿಗಳಿಲ್ಲ ಪಡೆಯೊಳ್ ಪಲಾಯನವ |
ನಾದಿರಿಸಿದರ್ ಭಟರ್ ಪ್ರದ್ಯುಮ್ನ ಮೊದಲಾದ |
ರಾದಿಯೊಳ್ ಬಿದ್ದು ಮೋಹಿತರಾದರಾ ಬಭ್ರುವಾಹನನ ಕೋಲ್ಗಳಿಂದ ||43||

ಪದವಿಭಾಗ-ಅರ್ಥ:
ಜೋದ (ಮಾವಟಿಗ- ಆನೆಸವಾರ) ರಾವುತ ರಥಿಕರು ಅಳಿದು ಆನೆ ಕುದುರೆ ತೇರ್ ಪೋದುವು ಎಣ್ದೆಸೆಗೆ ತಮ್ಮಿಚ್ಛೆಯಿಂ ಪಟ್ಟಣದ ಬೀದಿಗರ್ ಕೂಡಿದರ್ ಲಾಯದೊಳ್ ಸೂರೆಗೊಂಡರ್ ಭೂಷಣಾದಿಗಳನು=[ಮಾವಟಿಗ ಕುದುರೆಸವಾರ ರಥಿಕರು ಸತ್ತು, ಆನೆ ಕುದುರೆ ರಥ ಹೋದವು ಎಂಟುದಿಕ್ಕಿಗೆ ತಮ್ಮಿಚ್ಛೆಯಂತೆ, ಪಟ್ಟಣದ ದಾರಿಗರು ಅವನ್ನು ಲಾಯದಲ್ಲಿ ಕೂಡಿಹಾಕಿದರು; ಅವುಗಳಮೇಲಿದ್ದ ಭೂಷಣಾದಿಗಳನ್ನು ತೆಗೆದುಕೊಂಡರು]; ಕಾದುವ ಕಲಿಗಳಿಲ್ಲ ಪಡೆಯೊಳ್ ಪಲಾಯನವನು ಆದಿರಿಸಿದರ್ ಭಟರ್ ಪ್ರದ್ಯುಮ್ನ ಮೊದಲಾದರು ಆದಿಯೊಳ್ ಬಿದ್ದು ಮೋಹಿತರಾದರು ಆ ಬಭ್ರುವಾಹನನ ಕೋಲ್ಗಳಿಂದ=[ಯುದ್ಧಮಾಡುವ ಶೂರರುಗಳಿಲ್ಲ ಸೈನ್ಯದಲ್ಲಿ; ಪಲಾಯನವನ್ನು ಮಾಡಿದರು ಸೈನಿಕರು,ಆ ಬಭ್ರುವಾಹನನ ಬಾಣಗಳಿಂದ ಪ್ರದ್ಯುಮ್ನ ಮೊದಲಾದರು ಆರಂಭದಲ್ಲೆ ಸೋತು ಬಿದ್ದು ಮೂರ್ಛಿತರಾದರು. (ಆ ಬಭ್ರುವಾಹನನ ಬಾಣಗಳಿಂದ)];
  • ತಾತ್ಪರ್ಯ:ಮಾವಟಿಗ ಕುದುರೆಸವಾರ ರಥಿಕರು ಸತ್ತು, ಆನೆ ಕುದುರೆ ರಥ ಹೋದವು ಎಂಟುದಿಕ್ಕಿಗೆ ತಮ್ಮಿಚ್ಛೆಯಂತೆ, ಪಟ್ಟಣದ ದಾರಿಗರು ಅವನ್ನು ಲಾಯದಲ್ಲಿ ಕೂಡಿಹಾಕಿದರು; ಅವುಗಳಮೇಲಿದ್ದ ಭೂಷಣಾದಿಗಳನ್ನು ತೆಗೆದುಕೊಂಡರು; ಯುದ್ಧಮಾಡುವ ಶೂರರುಗಳಿಲ್ಲ ಸೈನ್ಯದಲ್ಲಿ; ಪಲಾಯನವನ್ನು ಮಾಡಿದರು ಸೈನಿಕರು,ಆ ಬಭ್ರುವಾಹನನ ಬಾಣಗಳಿಂದ ಪ್ರದ್ಯುಮ್ನ ಮೊದಲಾದರು ಆರಂಭದಲ್ಲೆ ಸೋತು ಬಿದ್ದು ಮೂರ್ಛಿತರಾದರು.
  • (ಪದ್ಯ-೪೧)

ಪದ್ಯ:-:೪೪:

ಸಂಪಾದಿಸಿ

ಪಡೆ ಪಡಪುಗೆಟ್ಟು ದೆಸೆದೆಸೆಗೋಡುತಿರ್ಪು ದಂ |
ತಡೆತಡೆದು ಕಡುಗಲಿಗಳಡಗೆಡಹುತಿರ್ಪು ದಂ |
ಹೊಡೆಹೊಡೆದು ಪುರಕಾನೆ ಕುದುರೆಯಂ ಕೂಡಿಕೊಳುತಿರ್ಪುದಂ ದೊರೆದೊರೆಗಳು ||
ನಿಡುನಿಡುಸರಳ್ ನಾಂಟಿ ಮೂರ್ಛೆವಡೆದಿರ್ಪುದಂ |
ನಡುನಡುಗುತತಿಬಲರ್ ಕೈ ಮರೆಯುತಿರ್ಪುದಂ |
ಬಿಡಬಿಡದೆ ಫಲುಗುಣಂ ನೋಡಿ ಖತಿಯಿಂದೆ ಘುಡಿಘುಡಿಸಿ ಕಿಡಿಕಿಡಿಯಾದನು ||44||

ಪದವಿಭಾಗ-ಅರ್ಥ:
(ಅರ್ಜುನನು ತನ್ನ) ಪಡೆ ಪಡಪುಗೆಟ್ಟು ದೆಸೆದೆಸೆಗೆ ಓಡುತಿರ್ಪುದಂ ತಡೆತಡೆದು ಕಡುಗಲಿಗಳು ಎಡಗೆಡಹುತ ಇರ್ಪುದಂ ಹೊಡೆಹೊಡೆದು ಪುರಕಾನೆ ಕುದುರೆಯಂ ಕೂಡಿಕೊಳುತ ಇರ್ಪುದಂ=[ಸೈನ್ಯವು ಆಸರೆಯಿಲ್ಲದೆ ದಿಕ್ಕುದಿಕ್ಕಿಗೆ ಓಡುತ್ತಿರುವುದನ್ನೂ, ತಡೆದು ತಡೆದು ಬಹಳಶೂರರು ಬೀಳುತ್ತಾ ಇರುವುದನ್ನೂ, ಪುರಕ್ಕೆ ಆನೆ ಕುದುರೆಗಳನ್ನು ಹೊಡೆದು ಹೊಡೆದು ಲಾಯದಲ್ಲಿ ಕೂಡಿಕೊಳುತ್ತಾ ಇರುವುದನ್ನೂ,]; ದೊರೆದೊರೆಗಳು ನಿಡುನಿಡುಸರಳ್ ನಾಂಟಿ ಮೂರ್ಛೆವಡೆದು ಇರ್ಪುದಂ ನಡುನಡುಗುತ ಅತಿಬಲರ್ ಕೈ ಮರೆಯುತಿರ್ಪುದಂ ಬಿಡಬಿಡದೆ ಫಲುಗುಣಂ ನೋಡಿ ಖತಿಯಿಂದೆ ಘುಡಿಘುಡಿಸಿ ಕಿಡಿಕಿಡಿಯಾದನು=[ಎಲ್ಲಾ ದೊರೆಗಳು ಉದ್ದುದ್ದ ಬಾಣ ನಾಟಿ ಮೂರ್ಛೆವಡೆದಿರುವುದನ್ನೂ, ಬಹಳ ಬಲಷ್ಠರೂ ನಡುನಡುಗುತ್ತಾ ಕೈಸೋತಿರುವುದನ್ನೂ, ಒಂದೇಸಮನೆ ಅರ್ಜುನನು ನೋಡಿ ಕೋಪದಿಂದ ಘುಡಿಘುಡಿಸಿ ಆರ್ಭಟಿಸಿ ಬೆಂಕಿಯಕಿಡಿಯಂತಾದನು].
  • ತಾತ್ಪರ್ಯ:(ಅರ್ಜುನನು ತನ್ನ) ಸೈನ್ಯವು ಆಸರೆಯಿಲ್ಲದೆ ದಿಕ್ಕುದಿಕ್ಕಿಗೆ ಓಡುತ್ತಿರುವುದನ್ನೂ, ತಡೆದು ತಡೆದು ಬಹಳಶೂರರು ಬೀಳುತ್ತಾ ಇರುವುದನ್ನೂ, ಪುರಕ್ಕೆ ಆನೆ ಕುದುರೆಗಳನ್ನು ಹೊಡೆದು ಹೊಡೆದು ಲಾಯದಲ್ಲಿ ಕೂಡಿಕೊಳುತ್ತಾ ಇರುವುದನ್ನೂ, ಎಲ್ಲಾ ದೊರೆಗಳು ಉದ್ದುದ್ದ ಬಾಣ ನಾಟಿ ಮೂರ್ಛೆವಡೆದಿರುವುದನ್ನೂ, ಬಹಳ ಬಲಷ್ಠರೂ ನಡುನಡುಗುತ್ತಾ ಕೈಸೋತಿರುವುದನ್ನೂ, ಒಂದೇಸಮನೆ ಅರ್ಜುನನು ನೋಡಿ ಕೋಪದಿಂದ ಘುಡಿಘುಡಿಸಿ ಆರ್ಭಟಿಸಿ ಬೆಂಕಿಯಕಿಡಿಯಂತಾದನು.
  • (ಪದ್ಯ-೪೪)

ಪದ್ಯ:-:೪೫:

ಸಂಪಾದಿಸಿ

ಗಾಂಡೀವಮಂ ತುಡುಕಿ ಟಂಕಾರಮಂಬುಜ ಭ |
ವಾಂಡಮಂ ತುಂಬದಿರನೆಂಬಿನಂ ಜೇಗೈದು |
ತಾಂಡವದ ಮೃಡನ ಸಾರೂಪ್ಯಮಂ ಕೈಕೊಂಡು ರೋಷತಾಮ್ರಾಕ್ಷನಾಗಿ ||
ಪಾಂಡವಂ ಮಣಿರಥದೊಳೆಸೆವ ನಡುವಗಲ ಮಾ |
ರ್ತಾಂಡನಂತುಜ್ವಲಿಸುತೈದಿದಂ ಕಾಳಗಕೆ |
ಖಾಂಡವದಹನದಂದು ತನ್ನ ಮೇಲಮರಪತಿ ಮುಳಿದು ಕದನಕೆ ಬಹವೊಲು ||45||

ಪದವಿಭಾಗ-ಅರ್ಥ:
ಗಾಂಡೀವಮಂ ತುಡುಕಿ ಟಂಕಾರಮಂ ಅಂಬುಜಭವಾಂಡಮಂ ತುಂಬದಿರನು ಎಂಬಿನಂ ಜೇಗೈದು ತಾಂಡವದ ಮೃಡನ ಸಾರೂಪ್ಯಮಂ ಕೈಕೊಂಡು ರೋಷತಾಮ್ರಾಕ್ಷನಾಗಿ=[ಗಾಂಡೀವವನ್ನು ತೆಗೆದುಕೊಂಡು, ಧನುಸ್ಸಿನ ಟಂಕಾರವನ್ನು ಮಾಡಿ, ಆ ಠೇಂಕಾರ ಅಂಬುಜ ಭವನಾದ/ಕಮಲದಲ್ಲಿ ಹುಟ್ಟಿದ ಬ್ರಹ್ಮನಸೃಷ್ಟಿ ಬ್ರಹ್ಮಾಂಡವನ್ನು ತುಂಬದೆ ಇರದು ಎಂಬಂತೆ ಝೇಂಕರಿಸಿ. ತಾಂಡವನೃತ್ಯಮಾಡುವ ಮೃಡನ/ಶಿವನ ರೂಪವನ್ನು ತಾಳಿ ರೋಷದಿಂದ ಕೆಂಪಾದ ಕಣ್ಣುಲವನಾಗಿ]; ಪಾಂಡವಂ ಮಣಿರಥದೊಳು ಎಸೆವ ನಡುವಗಲ ಮಾರ್ತಾಂಡನಂತೆ ಉಜ್ವಲಿಸುತೆ ಐದಿದಂ ಕಾಳಗಕೆ ಖಾಂಡವದಹನದಂದು ತನ್ನ ಮೇಲಮರಪತಿ ಮುಳಿದು ಕದನಕೆ ಬಹವೊಲು=[ಪಾಂಡವನಾದ ಅರ್ಜುನನು ಮಣಿರಥದಲ್ಲಿ ಪ್ರಕಾಶಿಸುವ ನಡುಹಗಲ ಸೂರ್ಯನಂತೆ ಉರಿಯುತ್ತ ಯುದ್ಧಕ್ಕೆ ಬಂದನು. ಅದು ಹೇಗಿತ್ತೆಂದರೆ ಖಾಂಡವದಹನ ಮಾಡುವಾಗ ತನ್ನ ಮೇಲೆ ಅಮರಪತಿ ಇಂದ್ರನು ಸಿಟ್ಟಿನಿಂದ ಹುದ್ಧಕ್ಕೆ ಬಂದಂತೆ ಇತ್ತು.]
  • ತಾತ್ಪರ್ಯ:ಗಾಂಡೀವವನ್ನು ತೆಗೆದುಕೊಂಡು, ಧನುಸ್ಸಿನ ಟಂಕಾರವನ್ನು ಮಾಡಿ, ಆ ಠೇಂಕಾರ ಅಂಬುಜ ಭವನಾದ/ಕಮಲದಲ್ಲಿ ಹುಟ್ಟಿದ ಬ್ರಹ್ಮನಸೃಷ್ಟಿ ಬ್ರಹ್ಮಾಂಡವನ್ನು ತುಂಬದೆ ಇರದು ಎಂಬಂತೆ ಝೇಂಕರಿಸಿ. ತಾಂಡವನೃತ್ಯಮಾಡುವ ಮೃಡನ/ಶಿವನ ರೂಪವನ್ನು ತಾಳಿ ರೋಷದಿಂದ ಕೆಂಪಾದ ಕಣ್ಣುಳ್ಳವನಾಗಿ, ಪಾಂಡವನಾದ ಅರ್ಜುನನು ಮಣಿರಥದಲ್ಲಿ ಪ್ರಕಾಶಿಸುವ ನಡುಹಗಲ ಸೂರ್ಯನಂತೆ ಉರಿಯುತ್ತ ಯುದ್ಧಕ್ಕೆ ಬಂದನು. ಅದು ಹೇಗಿತ್ತೆಂದರೆ ಖಾಂಡವದಹನ ಮಾಡುವಾಗ ತನ್ನ ಮೇಲೆ ಅಮರಪತಿ ಇಂದ್ರನು ಸಿಟ್ಟಿನಿಂದ ಹುದ್ಧಕ್ಕೆ ಬಂದಂತೆ ಇತ್ತು.
  • (ಪದ್ಯ-೪೫)

ಪದ್ಯ:-:೪೬:

ಸಂಪಾದಿಸಿ

ಆ ನರಂ ಕೋಪಮಂ ತಾಳ್ದು ನಿಜಚಾಪಮಂ |
ಜ್ಯಾ ನಾದಮಂ ಮಾಡೆ ಹಂಸಧ್ವಜಂ ಕೂಡೆ |
ಸೇನೆ ಸಹಿತುರುಬಿದಂ ಪಾರ್ಥಿಯಂ ತುರುಬಿದಂ ಕೂರ್ಗಣಿಗಳಂ ಕರೆಯುತೆ ||
ಬಾನೆಡೆಯೊಳೆತ್ತಲುಂ ದೆಸೆದೆಸೆಯ ಸುತ್ತಲುಮ |
ನೂನ ಶರಜಾಲಮಯಮಾಗಿರ್ದುದಾ ಸಮಯ |
ಮೇನೆಂಬೆನಚ್ಚರಿಯ ಕಾಳಗದ ಹೊಸಪರಿಯನತಿ ಭಯಂಕರಮಾಗಲು ||46|||

ಪದವಿಭಾಗ-ಅರ್ಥ:
ಆ ನರಂ ಕೋಪಮಂ ತಾಳ್ದು ನಿಜಚಾಪಮಂ ಜ್ಯಾನಾದಮಂ ಮಾಡೆ ಹಂಸಧ್ವಜಂ ಕೂಡೆ ಸೇನೆ ಸಹಿತ ಉರುಬಿದಂ ಪಾರ್ಥಿಯಂ ತುರುಬಿದಂ ಕೂರ್ಗಣಿಗಳಂ ಕರೆಯುತೆ=[ಆ ಅರ್ಜುನನು ಕೋಪವನ್ನು ಹೊಂದಿ ತನ್ನ ಬಿಲ್ಲಿನಿಂದ ಧನುಷ್ಟಂಕಾರವನ್ನು ಮಾಡಿ, ಹಂಸಧ್ವಜನ ಜೊತೆಯಲ್ಲಿ ಸೇನೆ ಸಹಿತ ಪರಾಕ್ರಮಿಸಿದನು, ಮೊನಚಾದ ಬಾಣಗಳನ್ನು ಬಿಡುತ್ತಾ ಬಬ್ರುವಾಹನನ್ನು ಅಡ್ಡಗಟ್ಟಿದನು. ]; ಬಾನೆಡೆಯೊಳು ಎತ್ತಲುಂ ದೆಸೆದೆಸೆಯ ಸುತ್ತಲುಂ ಅನೂನ ಶರಜಾಲಮಯಂ ಆಗಿರ್ದುದು ಆ ಸಮಯಂ ಏನೆಂಬೆನು ಅಚ್ಚರಿಯ ಕಾಳಗದ ಹೊಸಪರಿಯನು ಅತಿ ಭಯಂಕರಮಾಗಲು=[ಆ ಸಮಯಲ್ಲಿ, ಆಕಾಶದತುಂಬ ಎಲ್ಲೆಲ್ಲೂ ದಿಕ್ಕುದಿಕ್ಕುಗಳಲ್ಲಿ ಸುತ್ತಲೂ ಲೆಕ್ಕವಿಲ್ಲದಷ್ಟು ಬಾಣಗಳ ಜಾಲಮಯ ಆಗಿತ್ತು; ಅತಿ ಭಯಂಕರಮಾಗಲು ಯುದ್ಧದ ಹೊಸಪರಿಯು ಈ ಅಚ್ಚರಿಯನ್ನು ಏನು ಹೇಳಲಿ!].
  • ತಾತ್ಪರ್ಯ:ಆ ಅರ್ಜುನನು ಕೋಪವನ್ನು ಹೊಂದಿ ತನ್ನ ಬಿಲ್ಲಿನಿಂದ ಧನುಷ್ಟಂಕಾರವನ್ನು ಮಾಡಿ, ಹಂಸಧ್ವಜನ ಜೊತೆಯಲ್ಲಿ ಸೇನೆ ಸಹಿತ ಪರಾಕ್ರಮಿಸಿದನು, ಮೊನಚಾದ ಬಾಣಗಳನ್ನು ಬಿಡುತ್ತಾ ಬಬ್ರುವಾಹನನ್ನು ಅಡ್ಡಗಟ್ಟಿದನು. ಆ ಸಮಯಲ್ಲಿ, ಆಕಾಶದತುಂಬ ಎಲ್ಲೆಲ್ಲೂ ದಿಕ್ಕುದಿಕ್ಕುಗಳಲ್ಲಿ ಸುತ್ತಲೂ ಲೆಕ್ಕವಿಲ್ಲದಷ್ಟು ಬಾಣಗಳ ಜಾಲಮಯ ಆಗಿತ್ತು; ಅತಿ ಭಯಂಕರಮಾಗಲು ಯುದ್ಧದ ಹೊಸಪರಿಯು ಈ ಅಚ್ಚರಿಯನ್ನು ಏನು ಹೇಳಲಿ!
  • (ಪದ್ಯ-೪೬)

ಪದ್ಯ:-:೪೭:

ಸಂಪಾದಿಸಿ

ಬಳಿಕ ಹಂಸಧ್ವಜಂಗಾ ಬಭ್ರುವಾಹನಂ |
ಗಳವಿಯೊಳ್ ಕಾಳೆಗಂ ಪೂಣ್ದುದು ಕಠೋರಮೆನೆ |
ದಳಕೆ ದಳಮಗ್ಗಳಿಕೆಗಗ್ಗಳಿಕೆ ಧೃತಿಗೆ ಧೃತಿ ಕೊಲೆಗೆ ಕೊಲೆ ಕೋಲ್ಗೆ ಕೋಲು ||
ಮುಳಿಸಿಂಗೆ ಮುಳಿಸು ಗಾಯಕೆ ಗಾಯ ಮದಟಿಗದ |
ಟಳವಡಿಕೆಗಳವಡಿಕೆ ಸಮಮಾಗೆ ದೇವಪುರ |
ನಿಳಯ ಲಕ್ಷ್ಮೀವರನ ಮೈದುನಂ ತಲೆದೂಗೆ ಮೆಚ್ಚಿ ಸುರರುಲಿಯೆ ಮೇಗೆ ||47||

ಪದವಿಭಾಗ-ಅರ್ಥ:
ಬಳಿಕ ಹಂಸಧ್ವಜಂಗೆ ಆ ಬಭ್ರುವಾಹನಂಗೆ ಅಳವಿಯೊಳ್ ಕಾಳೆಗಂ ಪೂಣ್ದುದು ಕಠೋರಂ ಎನೆ ದಳಕೆ ದಳಂ, ಅಗ್ಗಳಿಕೆ ಅಗಗ್ಗಳಿಕೆ, ಧೃತಿಗೆ ಧೃತಿ, ಕೊಲೆಗೆ ಕೊಲೆ, ಕೋಲ್ಗೆ ಕೋಲು,=[ಬಳಿಕ ಹಂಸಧ್ವಜನಿಗೂ ಆ ಬಭ್ರುವಾಹನನಿಗೂ ಶಕ್ತಿ-ಶೌರ್ಯದಿಂದ ಯುದ್ಧವು ಕಠೋರ ಎನ್ನುವಂತೆ ಉಂಟಾಯಿತು; ಹೇಗೆಂದರೆ ದಳಕೆ ದಳವು, ಅಗ್ಗಳಿಕೆಗೆ ಅಗಗ್ಗಳಿಕೆ(ಪ್ರತಿಷ್ಠೆ-ಹೆಚ್ಚುಗಾರಿಕೆ), ಧೃತಿಗೆ ಧೃತಿ(ಸ್ಥೈರ್ಯ, ತಾಳುವಿಕೆ), ಕೊಲೆಗೆ ಕೊಲೆ, ಬಾಣಕ್ಕೆ ಬಾಣ,]; ಮುಳಿಸಿಂಗೆ ಮುಳಿಸು, ಗಾಯಕೆ ಗಾಯಂ ಅದಟಿಗೆ ಅದಟು ಅಳವಡಿಕೆಗೆ ಅಳವಡಿಕೆ ಸಮಂಆಗೆ ದೇವಪುರ ನಿಳಯ ಲಕ್ಷ್ಮೀವರನ ಮೈದುನಂ ತಲೆದೂಗೆ ಮೆಚ್ಚಿ ಸುರರುಲಿಯೆ ಮೇಗೆ=[ಸಿಟ್ಟಿಗೆ ಸಿಟ್ಟು, ಗಾಯಕ್ಕೆ ಗಾಯ, ಅದಟಿಗೆ ಅದಟು(ಶೌರ್ಯ), ಅಳವಡಿಕೆಗೆ ಅಳವಡಿಕೆ(ಆಯುಧಹೊಂದಾಣಿಕೆ),ನೋಡಿ, ದೇವಪುರ ನಿಳಯ ಲಕ್ಷ್ಮೀವರನ ಮೈದುನ ಅರ್ಜುನ ತಲೆದೂಗಲು, ಮೇಲೆ ಆಗಸದಲ್ಲಿ ಮೆಚ್ಚಿ ದೇವತೆಗಳು ಉದ್ಗಾರಮಾಡಲು, ಅವರಿಬ್ಬರಿಗೆ ಯುದ್ಧವು ಸಮಸಮವಾಯಿತು,].
  • ತಾತ್ಪರ್ಯ:ಬಳಿಕ ಹಂಸಧ್ವಜನಿಗೂ ಆ ಬಭ್ರುವಾಹನನಿಗೂ ಶಕ್ತಿ-ಶೌರ್ಯದಿಂದ ಯುದ್ಧವು ಕಠೋರ ಎನ್ನುವಂತೆ ಉಂಟಾಯಿತು; ಹೇಗೆಂದರೆ ದಳಕೆ ದಳವು, ಅಗ್ಗಳಿಕೆಗೆ ಅಗಗ್ಗಳಿಕೆ(ಪ್ರತಿಷ್ಠೆ-ಹೆಚ್ಚುಗಾರಿಕೆ), ಧೃತಿಗೆ ಧೃತಿ(ಸ್ಥೈರ್ಯ, ತಾಳುವಿಕೆ), ಕೊಲೆಗೆ ಕೊಲೆ, ಬಾಣಕ್ಕೆ ಬಾಣ, ಸಿಟ್ಟಿಗೆ ಸಿಟ್ಟು, ಗಾಯಕ್ಕೆ ಗಾಯ, ಅದಟಿಗೆ ಅದಟು(ಶೌರ್ಯ), ಅಳವಡಿಕೆಗೆ ಅಳವಡಿಕೆ (ಆಯುಧಹೊಂದಾಣಿಕೆ), ಇದನ್ನು ನೋಡಿ, ದೇವಪುರ ನಿಳಯ ಲಕ್ಷ್ಮೀವರನ ಮೈದುನ ಅರ್ಜುನ ತಲೆದೂಗಲು, ಮೇಲೆ ಆಗಸದಲ್ಲಿ ಮೆಚ್ಚಿ ದೇವತೆಗಳು ಉದ್ಗಾರಮಾಡಲು, ಅವರಿಬ್ಬರಿಗೆ ಯುದ್ಧವು ಸಮಸಮವಾಯಿತು,
  • (ಪದ್ಯ-೪೭)VI-XI
  • []
  • []
  • ಸಂಧಿ ೨೨ಕ್ಕೆ ಪದ್ಯಗಳು:೧೧೬೪.
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.