ಒಂಬತ್ತನೆಯ ಸಂಧಿ

ಸಂಪಾದಿಸಿ

ಪದ್ಯ :-:ಸೂಚನೆ:

ಸಂಪಾದಿಸಿ

:ಸೂಚನೆ : ಜ್ವಾಲೆ ನಿಜ ಕಾಂತನಂ ಚಲದಿಂದೆ ಬಿಟ್ಟು ತ | ನ್ನಾಲಯದೊಳಿರದೆ ಪೊರಮಟ್ಟು ಬಂದರ್ಜುನನ | ಮೇಲೆ ತಂತ್ರವನಿಕ್ಕಿ ಶಾಪಮಂ ಕುಡಿಸಿದಳ್ ದೇವ ನದಿಯಂ ಕೆರಳ್ಚಿ ||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸೂಚನೆ : ಜ್ವಾಲೆ ನಿಜ ಕಾಂತನಂ ಚಲದಿಂದೆ ಬಿಟ್ಟು ತನ್ನಾಲಯದೊಳು ಇರದೆ ಪೊರಮಟ್ಟು=[ನೀಲಧ್ವಜನ ರಾಣಿ ಜ್ವಾಲೆ ಎಂಬ ಹೆಂಗಸು, ತನ್ನ ಪತಿಯನ್ನು ಕೋಪ ಮತ್ತು ಹಠದಿಂದ ಬಿಟ್ಟು ತನ್ನ ಮನೆಯಲ್ಲಿ ಇರದೆ ಹೊರಹೊರಟು ]; ಬಂದರ್ಜುನನ ಮೇಲೆ ತಂತ್ರವನಿಕ್ಕಿ ಶಾಪಮಂ ಕುಡಿಸಿದಳ್ ದೇವ ನದಿಯಂ ಕೆರಳ್ಚಿ=[ಗಂಗೆಯ ಬಳಿ ಬಂದು ಅರ್ಜುನನ ಮೇಲೆ ತಂತ್ರವನ್ನು ಮಾಡಿ ಗಂಗೆಯಿಂದ ಶಾಪವನ್ನು ಕೊಡಿಸಿದಳು].
  • ತಾತ್ಪರ್ಯ: ಸೂಚನೆ :ನೀಲಧ್ವಜನ ರಾಣಿ ಜ್ವಾಲೆ ಎಂಬ ಹೆಂಗಸು, ತನ್ನ ಪತಿಯನ್ನು ಕೋಪ ಮತ್ತು ಹಠದಿಂದ ಬಿಟ್ಟು ತನ್ನ ಮನೆಯಲ್ಲಿ ಇರದೆ ಹೊರಹೊರಟು ಗಂಗೆಯ ಬಳಿ ಬಂದು ಅರ್ಜುನನ ಮೇಲೆ ತಂತ್ರವನ್ನು ಮಾಡಿ ಗಂಗೆಯಿಂದ ಅವನಿಗೆ ಶಾಪವನ್ನು ಕೊಡಿಸಿದಳು]

(ಪದ್ಯ - ಸೂಚನೆ)

&&&&

ಪದ್ಯ :-:೧:

ಸಂಪಾದಿಸಿ

ಇಂದುಕುಲತಿಲಕ ಜನಮೇಜಯ ನರೇಂದ್ರ ಕೇ | ಳಂದು ನೀಲಧ್ವಜಂ ತಿರುಗಿ ತನ್ನರಮನೆಗೆ | ಬಂದು ವೈಶ್ವಾನರನನುಜ್ಞೆಯಿಂ ಪಾರ್ಥನ ತುರಂಗಮಂ ಬಿಡುವೆನೆಂದು ||
ನಿಂದು ಮಂತ್ರಿಗಳ ಕರಸಲ್ಕದಂ ಕೇಳ್ದು ನಡೆ | ತಂದು ನುಡಿದಳ್ ಜ್ವಾಲೆಯೆಂಬರಸಿ ಪತಿಗೆ ನೀ | ನಿಂದು ಸಿತವಾಹನಂಗೀಯದಿರ್ ಕುದುರೆಯಂ ಬೆದರದಿರೆನುತೆ ತಡೆದಳು ||1||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಚಂದ್ರಕುಲದ ತಿಲಕಪ್ರಾಯನಾದ ಜನಮೇಜಯ ನರೇಂದ್ರನೇ, ಕೇಳು ಅಂದು ನೀಲಧ್ವಜಂ ತಿರುಗಿ ತನ್ನ ಅರಮನೆಗೆ ಬಂದು ವೈಶ್ವಾನರನ ಅನುಜ್ಞೆಯಿಂ=[ಕೇಳು ಅಂದು ನೀಲಧ್ವಜನು ತಿರುಗಿ ತನ್ನ ಅರಮನೆಗೆ ಬಂದು ಅಗ್ನಿಯ ಅನುಮತಿಯಿಂದ]; ಪಾರ್ಥನ ತುರಂಗಮಂ ಬಿಡುವೆನೆಂದು ನಿಂದು ಮಂತ್ರಿಗಳ ಕರಸಲ್ಕೆ ಅದಂ ಕೇಳ್ದು ನಡೆ ತಂದು ನುಡಿದಳ್ ಜ್ವಾಲೆಯೆಂಬ ಅರಸಿ ಪತಿಗೆ=[ಪಾರ್ಥನ ತುರಗವನ್ನು ಬಿಡುವೆನೆಂದು ನಿಶ್ಚಯಿಸಿ, ಮಂತ್ರಿಗಳ ಕರಸಲು, ಅದನ್ನು ಕೇಳಿ ಅಲ್ಲಿಗೆ ಬಂದು ಜ್ವಾಲೆಯೆಂಬ ರಾಣಿ ಪತಿಗೆ ಹೇಳಿದಳು]; ನೀನು ಇಂದು ಸಿತವಾಹನಂಗೆ ಈಯದಿರ್ ಕುದುರೆಯಂ ಬೆದರದಿರು ಎನುತೆ ತಡೆದಳು=[ ನೀನು ಇಂದು ಅರ್ಜುನನಿಗೆ ಈಯದಿರ್ ಕುದುರೆಯನ್ನು ಕೊಡಬೇಡ; ಹೆದರದಿರು ಎನ್ನುತ್ತಾ ಕುದುರೆಕೊಡುವುದನ್ನು ತಡೆದಳು].
  • ತಾತ್ಪರ್ಯ:ಚಂದ್ರಕುಲದ ತಿಲಕಪ್ರಾಯನಾದ ಜನಮೇಜಯ ನರೇಂದ್ರನೇ, ಕೇಳು ಅಂದು ನೀಲಧ್ವಜನು ತಿರುಗಿ ತನ್ನ ಅರಮನೆಗೆ ಬಂದು ಅಗ್ನಿಯ ಸಲಹೆಯಿಂದ ಪಾರ್ಥನ ತುರಗವನ್ನು ಬಿಡುವೆನೆಂದು ನಿಶ್ಚಯಿಸಿ, ಮಂತ್ರಿಗಳ ಕರಸಲು, ಅದನ್ನು ಕೇಳಿ ಅಲ್ಲಿಗೆ ಜ್ವಾಲೆಯೆಂಬ ರಾಣಿ ಬಂದು ಪತಿಗೆ ಹೇಳಿದಳು, 'ನೀನು ಇಂದು ಅರ್ಜುನನಿಗೆ ಕುದುರೆಯನ್ನು ಕೊಡಬೇಡ; ಹೆದರದಿರು ಎನ್ನುತ್ತಾ ಕುದುರೆ ಕೊಡುವುದನ್ನು ತಡೆದಳು].

(ಪದ್ಯ - ೧ )

ಪದ್ಯ :-:೨:

ಸಂಪಾದಿಸಿ

ಅನ್ನೆಗಂ ಕೇಳ್ದು ಜನಮೇಝಯ ನರೇಶ್ವರಂ | ತನ್ನ ಮನದೊಳ್ ಸಂದೆಗಂಬಟ್ಟು ಬೆಸಗೊಂಡ | ನಿನ್ನೊಮ್ಮೆ ತಿಳಿಪೆಲೆ ಮುನೀಂದ್ರ ಪಾವಕನೇತಕಾ ಪಟ್ಟಣದೊಳಿರ್ದನು ||
ಮನ್ನಣೆಯ ಮನೆಯಳಿಯನೆಂತಾದನಾ ನೃಪನ | ಕನ್ನಿಕೆಯದೇನ ಮಾಡಿದಳಿದರ ವೃತ್ತಾಂತ | ಮನ್ನಿರೂಪಿಸವೇಳ್ವುದೆನೆ ಮತ್ತೆ ಜೈಮಿನಿ ಧರಾಧಿಪಂಗಿಂತೆಂದನು ||2||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅನ್ನೆಗಂ ಕೇಳ್ದು ಜನಮೇಝಯ ನರೇಶ್ವರಂ ತನ್ನ ಮನದೊಳ್ ಸಂದೆಗಂಬಟ್ಟು=[ಅಲ್ಲಿಯವರೆಗೆ ಕೇಳಿ ಜನಮೇಝಯ ನರೇಶ್ವರನು, ತನ್ನ ಮನಸ್ಸಿನಲ್ಲಿ ಸಂದೇಹಪಟ್ಟು,]; ಬೆಸಗೊಂಡನು ಇನ್ನೊಮ್ಮೆ ತಿಳಿಪೆಲೆ ಮುನೀಂಧ್ರ ಪಾವಕನೇತಕಾ ಪಟ್ಟಣದೊಳಿರ್ದನು=[ಕೇಳಿದನು ಇನ್ನೊಮ್ಮೆ ತಿಳಿಸಿ, ಎಲೆ ಮುನೀಂದ್ರ, ಅಗ್ನಿಯು ಏತಕ್ಕೆ ಆ ಪಟ್ಟಣದಲ್ಲಿ ಇದ್ದನು,]; ಮನ್ನಣೆಯ ಮನೆಯ ಅಳಿಯನು ಎಂತಾದನ ಆ ನೃಪನ ಕನ್ನಿಕೆಯು ಅದೇನ ಮಾಡಿದಳು=[ಆ ರಾಜನ ಗೌರವವುಳ್ಳ ಮನೆಯ ಅಳಿಯನು ಹೇಗಾದನು, ಆ ರಾಜನ ಮಗಳು/ಕನ್ನಿಕೆಯು ಅದೇನ ಮಾಡಿದಳು]; ಇದರ ವೃತ್ತಾಂತಮಂ ನಿರೂಪಿಸವೇಳ್ವುದು ಎನೆ ಮತ್ತೆ ಜೈಮಿನಿ ಧರಾಧಿಪಂಗೆ ಇಂತೆಂದನು=[ಇದರ ವೃತ್ತಾಂತವನ್ನು ನಿರೂಪಿಸಿ ಹೇಳಬೇಕು ಎನ್ನಲು,ಮತ್ತೆ ಜೈಮಿನಿ ರಾಜನಿಗೆ ಹೀಗೆ ಹೇಳಿದನು.]
  • ತಾತ್ಪರ್ಯ: ಅಲ್ಲಿಯವರೆಗೆ ಕೇಳಿ ಜನಮೇಝಯ ನರೇಶ್ವರನು, ತನ್ನ ಮನಸ್ಸಿನಲ್ಲಿ ಸಂದೇಹಪಟ್ಟು, ಕೇಳಿದನು ಇನ್ನೊಮ್ಮೆ ತಿಳಿಸಿ, ಎಲೆ ಮುನೀಂದ್ರ, ಅಗ್ನಿಯು ಏತಕ್ಕೆ ಆ ಪಟ್ಟಣದಲ್ಲಿ ಇದ್ದನು, ಆ ರಾಜನ ಗೌರವವುಳ್ಳ ಮನೆಯ ಅಳಿಯನು ಹೇಗಾದನು, ಆ ರಾಜನ ಮಗಳು/ಕನ್ನಿಕೆಯು ಅದೇನ ಮಾಡಿದಳು; ಇದರ ವೃತ್ತಾಂತವನ್ನು ನಿರೂಪಿಸಿ ಹೇಳಬೇಕು ಎನ್ನಲು,ಮತ್ತೆ ಜೈಮಿನಿ ರಾಜನಿಗೆ ಹೀಗೆ ಹೇಳಿದನು.

(ಪದ್ಯ - ೨ )XIII-IIX

ಪದ್ಯ :-:೩:

ಸಂಪಾದಿಸಿ

ಆಲಿಸಿನ್ನಾದೊಡೆಲೆ ಭೂಪ ನೀಲಧ್ವಜಂ | ಜ್ವಾಲೆಯೆಂಬರಸಿಯೊಳ್ ಪಡೆದನತಿರೂಪ ಗುಣ | ಶೀಲಂಗಳಿಂದೆಸೆವ ತನುಜೆಯಂ ಸ್ವಾಹಾಭಿಧಾನದಿಂ ಬಳೆಯುತಿರುವ ||
ಆ ಲೋಲ ಲೋಚನೆಗೆ ಜೌವನಂ ಬರೆ ಪಿತಂ | ಮೂಲೋಕದೊಳಗುಳ್ಳ ಪುರುಷರ್ಕಳಂ ಪಟದ | ಮೇಲೆ ರೂಪಿಸಿ ತೋರಿಸಿದನಿದರೊಳಾರ್ ನಿನಗೆ ವಲ್ಲಭಂ ಪೇಳ್ವುದೆಂದು ||3||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಆಲಿಸು ಇನ್ನು ಆದೊಡೆ ಎಲೆ ಭೂಪ ನೀಲಧ್ವಜಂ ಜ್ವಾಲೆಯೆಂಬ ಅರಸಿಯೊಳ್ ಪಡೆದನು ಅತಿರೂಪ ಗುಣಶೀಲಂಗಳಿಂದ ಎಸೆವ ತನುಜೆಯಂ ಸ್ವಾಹಾ ಅಭಿಧಾನದಿಂ=[ಎಲೈ ರಾಜನೇ, ಹಾಗಿದ್ದರೆ ಇನ್ನು ಕೇಳು, ನೀಲಧ್ವಜನು ಜ್ವಾಲೆಯೆಂಬ ಅರಸಿಯಲ್ಲಿ ಒಳ್ಳೆಯರೂಪ ಗುಣಶೀಲಂಗಳಿಂದ ಶೋಭಿಸುವ ಸ್ವಾಹಾಎಂಬ ಹೆಸರಿನ ಮಗಳನ್ನು ಪಡೆದನು]; ಬಳೆಯುತಿರುವ

ಆ ಲೋಲ ಲೋಚನೆಗೆ ಜೌವನಂ ಬರೆ=[ಬೆಳೆಯುತ್ತಿರುವ ಆ ಲೋಲಲೋಚನೆಯಾದ ಜ್ವಾಲೆಗೆ ಯೌವನವು ಬರಲು ]; ಪಿತಂ ಮೂಲೋಕದೊಳಗೆ ಉಳ್ಳ ಪುರುಷರ್ಕಳಂ ಪಟದ ಮೇಲೆ ರೂಪಿಸಿ ತೋರಿಸಿದನು ಇದರೊಳಾರ್ ನಿನಗೆ ವಲ್ಲಭಂ ಪೇಳ್ವುದೆಂದು=[ತಂದೆಯು, ಮೂರು ಲೋಕದೊಳಗೆ ಪಟದ ಮೇಲೆ ಚಿತ್ರಬರೆದು ರೂಪಿಸಿರುವ ಇರುವ ಪುರುಷರನ್ನು ತೋರಿಸಿದನು; ಇದರೊಳು ಯಾರು ನಿನಗೆ ಗಂಡನು ಆಗಬಹುದು ಹೇಳು ಎಂದನು.].

  • ತಾತ್ಪರ್ಯ: ಎಲೈ ರಾಜನೇ, ಹಾಗಿದ್ದರೆ ಇನ್ನು ಕೇಳು, ನೀಲಧ್ವಜನು ಜ್ವಾಲೆಯೆಂಬ ಅರಸಿಯಲ್ಲಿ ಒಳ್ಳೆಯರೂಪ ಗುಣಶೀಲಂಗಳಿಂದ ಶೋಭಿಸುವ ಸ್ವಾಹಾಎಂಬ ಹೆಸರಿನ ಮಗಳನ್ನು ಪಡೆದನು. ಬೆಳೆಯುತ್ತಿರುವ ಆ ಲೋಲಲೋಚನೆಯಾದ ಜ್ವಾಲೆಗೆ ಯೌವನವು ಬರಲು ತಂದೆಯು, ಮೂರು ಲೋಕದೊಳಗೆ ಪಟದ ಮೇಲೆ ಚಿತ್ರಬರೆದು ರೂಪಿಸಿರುವ ಇರುವ ಪುರುಷರನ್ನು ತೋರಿಸಿದನು; ಇದರೊಳು ಯಾರು ನಿನಗೆ ಗಂಡನು ಆಗಬಹುದು ಹೇಳು ಎಂದನು.

(ಪದ್ಯ - ೩ )

ಪದ್ಯ :-:೪:

ಸಂಪಾದಿಸಿ

ವಿಪುಲ ಗಂಧರ್ವ ಯಕ್ಷೋರಗ ಸುರಾಸುರರ | ನಪಹಾಸ್ಯಮಂ ಮಾಡಿ ಸಕಲ ಭೂಮಂಡಲದ | ನೃಪ ವರ್ಗಮಂ ಪಳಿದು ಹರಿ ಹರ ವಿರಿಂಚಿ ಶಕ್ರಾಧಿಗಳನಿಳಿಕೆಗೆಯ್ದು ||
ತಪನೇಂದು ಮನ್ಮಥ ವಸಂತರ್ಕಳಂ ಜರೆದ | ನುಪಮ ದಿಕ್ಪಾಲಕರ ನಡುವೆ ಕುಳ್ಳಿರ್ದು ರಾ | ಜಿಪ ವೀತಿಹೋತ್ರನಂ ಕಂಡಳ್ ತೋರಿಸಿದಳೆನಗಿವಂ ಕಾಂತನೆಂದು ||4||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಿಪುಲ ಗಂಧರ್ವ ಯಕ್ಷ ಉರಗ ಸುರ ಅಸುರರನು ಅಪಹಾಸ್ಯಮಂ ಮಾಡಿ=[ಆನೇಕ ಗಂಧರ್ವ, ಯಕ್ಷ, ಉರಗ, ಸುರ, ಅಸುರರನ್ನು ಅಪಹಾಸ್ಯವನ್ನು ಮಾಡಿ]; ಸಕಲ ಭೂಮಂಡಲದ ನೃಪ ವರ್ಗಮಂ ಪಳಿದು ಹರಿ ಹರ ವಿರಿಂಚಿ ಶಕ್ರಾಧಿಗಳನು ಇಳಿಕೆಗೆಯ್ದು=[ಸಕಲ ಭೂಮಂಡಲದ ರಾಜ ಸಂತತಿಯನ್ನು ಹಳಿದು, ಹರಿ ಹರ ಬ್ರಹ್ಮ, ಇಂದ್ರಾದಿಗಳನ್ನು ಸಾಮಾನ್ಯರೆಂದು ಹೇಳಿ]; ತಪನೇಂದು (ತಪನ:ಸೂರ್ಯ ಇಂದು:ಚಂದ್ರ) ಮನ್ಮಥ ವಸಂತರ್ಕಳಂ ಜರೆದು ಅನುಪಮ ದಿಕ್ಪಾಲಕರ ನಡುವೆ ಕುಳ್ಳಿರ್ದು ರಾಜಿಪ ವೀತಿಹೋತ್ರನಂ ಕಂಡಳ್ ತೋರಿಸಿದಳು ಎನಗೆ ಇವಂ ಕಾಂತನು ಎಂದು=[ಸೂರ್ಯ, ಚಂದ್ರ, ಮನ್ಮಥ, ವಸಂತರನ್ನು ನಿಂದಿಸಿ, ಅಸಾಧಾರಣ ದಿಕ್ಪಾಲಕರ ನಡುವೆ ಕುಳಿತಿದ್ದ ಶೋಭಿಸುತ್ತಿದ್ದ ವೀತಿಹೋತ್ರನಾದ ಅಗ್ನಿಯನ್ನು ಕಂಡಳು, 'ನನಗೆ ಇವನು ಪತಿ', ಎಂದು ತೋರಿಸಿದಳು.
  • ತಾತ್ಪರ್ಯ:ಆನೇಕ ಗಂಧರ್ವ, ಯಕ್ಷ, ಉರಗ, ಸುರ, ಅಸುರರನ್ನು ಅಪಹಾಸ್ಯವನ್ನು ಮಾಡಿ, ಸಕಲ ಭೂಮಂಡಲದ ರಾಜ ಸಂತತಿಯನ್ನು ಹಳಿದು, ಹರಿ ಹರ ಬ್ರಹ್ಮ, ಇಂದ್ರಾದಿಗಳನ್ನು ಸಾಮಾನ್ಯರೆಂದು ಹೇಳಿ, ಸೂರ್ಯ, ಚಂದ್ರ, ಮನ್ಮಥ, ವಸಂತರನ್ನು ನಿಂದಿಸಿ, ಅಸಾಧಾರಣ ದಿಕ್ಪಾಲಕರ ನಡುವೆ ಕುಳಿತಿದ್ದ ಶೋಭಿಸುತ್ತಿದ್ದ ವೀತಿಹೋತ್ರನಾದ ಅಗ್ನಿಯನ್ನು ಕಂಡಳು, 'ನನಗೆ ಇವನು ಪತಿ', ಎಂದು ತೋರಿಸಿದಳು.

(ಪದ್ಯ - ೪ )

ಪದ್ಯ :-:೫:

ಸಂಪಾದಿಸಿ

ನೀಲಕೇತು ನೃಪನವಳ ನುಡಿಗೇರ್ಳದಣುಗೆ | ನೀನಘಟಿತದ ವರನನುನ್ನಿಸಿದೆ ಪೇಳ್ದೊಡಿ | ನ್ನೇನಪ್ಪುದೆಂದು ಚಿಂತಿಸುತಿರ್ಪ ತಾತನಂ ಜರೆದು ಬೀಳ್ಕೊಂಡು ಬಳಿಕ ||
ಮಾನಿಸಿ ಪುರೋದ್ಯಾನದೊಳ್ ಪ್ರವಹಿಸುವ ನರ್ಮ | ದಾ ನದಿಗೆ ಬಂದಲ್ಲಿ ಮಿಂದು ಸುವ್ರತೆಯಾಗಿ | ನಾನಾ ವಿಧಾನದಿಂದರ್ಚಿಸಿದಳಗ್ನಿಯಂ ಭಕ್ತಿಯಿಂದನುದಿನದೊಳು ||5||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನೀಲಕೇತು ನೃಪನು ಅವಳ ನುಡಿಗೇಳ್ದು ಅಣುಗೆ ನೀನು ಅಘಟಿತದ ವರನನು ಉನ್ನಿಸಿದೆ (ತೀರ್ಮಾನಿಸಿದೆ)=[ನೀಲಕೇತು ನೃಪನು ಅವಳ ಮಾತುಕೇಳಿ ಮಗಳೆ ನೀನು ಅಘಟಿತವಾದ ಅಸಾಧ್ಯವಾದ ವರನನ್ನು ವಿವಾಹವಾಗಲು ತೀರ್ಮಾನಿಸಿದೆ]; ಪೇಳ್ದೊಡೆ ಇನ್ನೇನು ಅಪ್ಪುದು ಎಂದು ಚಿಂತಿಸುತಿರ್ಪ ತಾತನಂ ಜರೆದು ಬೀಳ್ಕೊಂಡು=[ ಎಂದು ಹೇಳಿದಾಗ, ಅಗ್ನಿಯನ್ನು ತೋರಿಸಿದಳಲ್ಲಾ ಇನ್ನು ಮುಂದೆ ಏನು ಆಗುವುವದು,ಏನು ಮಾಡುವುದು, ಎಂದು ಚಿಂತಿಸುತ್ತದ್ದ ತಂದೆಯನ್ನು, ನಿನ್ನ ಕೈಲಾಗದು ಎಂದು ಜರೆದು ಅವನನ್ನು ಬಿಟ್ಟು ಹೊರಟಳು.]; ಬಳಿಕ ಮಾನಿಸಿ ಪುರೋದ್ಯಾನದೊಳ್ ಪ್ರವಹಿಸುವ ನರ್ಮದಾ ನದಿಗೆ ಬಂದಲ್ಲಿ ಮಿಂದು ಸುವ್ರತೆಯಾಗಿ=[ಬಳಿಕ ಆ ಮಾನವಂತೆ ಪುರೋದ್ಯಾನದಲ್ಲಿ ಪ್ರವಹಿಸುವ ನರ್ಮದಾ ನದಿಗೆ ಬಂದಳು. ಅಲ್ಲಿ ಸ್ನಾನಮಾಡಿ, ವ್ರತಬದ್ಧೆಯಾಗಿ] ನಾನಾ ವಿಧಾನದಿಂದರ್ಚಿಸಿದಳ್ ಅಗ್ನಿಯಂ ಭಕ್ತಿಯಿಂದ ಅನುದಿನದೊಳು=[ಅಗ್ನಿಯನ್ನು ನಾನಾ ವಿಧಾನದಿಂದ ಭಕ್ತಿಯಿಂದ ಅನುದಿನವೂ ಪೂಜಿಸಿದಳು.].
  • ತಾತ್ಪರ್ಯ:ನೀಲಕೇತು ನೃಪನು ಅವಳ ಮಾತು ಕೇಳಿ ಮಗಳೆ ನೀನು ಅಘಟಿತವಾದ, ಅಸಾಧ್ಯವಾದ ವರನನ್ನು ವಿವಾಹವಾಗಲು ತೀರ್ಮಾನಿಸಿದೆ ಎಂದು ಹೇಳಿದಾಗ, ಅಗ್ನಿಯನ್ನು ತೋರಿಸಿದಳಲ್ಲಾ ಇನ್ನು ಮುಂದೆ ಏನು ಆಗುವುವದು,ಏನು ಮಾಡುವುದು, ಎಂದು ಚಿಂತಿಸುತ್ತದ್ದ ತಂದೆಯನ್ನು, ನಿನ್ನ ಕೈಲಾಗದು ಎಂದು ಜರೆದು ಅವನನ್ನು ಬಿಟ್ಟು ಹೊರಟಳು. ಬಳಿಕ ಆ ಮಾನವಂತೆ ಪುರೋದ್ಯಾನದಲ್ಲಿ ಪ್ರವಹಿಸುವ ನರ್ಮದಾ ನದಿಗೆ ಬಂದಳು. ಅಲ್ಲಿ ಸ್ನಾನಮಾಡಿ, ವ್ರತಬದ್ಧೆಯಾಗಿ,ಅಗ್ನಿಯನ್ನು ನಾನಾ ವಿಧಾನದಿಂದ ಭಕ್ತಿಯಿಂದ ಅನುದಿನವೂ ಪೂಜಿಸಿದಳು.].

(ಪದ್ಯ - ೫ )

ಪದ್ಯ :-:೬:

ಸಂಪಾದಿಸಿ

ಪಾವಕಂ ಬಳಿಕ ಮೆಚ್ಚಿದನವಳ ನೋಂಪಿಗೆ ಮ | ಹೀ ವಿಬುಧ ವೇಷಮಂ ತಾಳ್ದು ನೀಲಧ್ವಜನ | ಚಾವಡಿಗೆ ಬರಲಾತನಿದಿರೆದ್ದು ಸತ್ಕರಿಸಿ ಕೈಮುಗಿದು ವಿನಯದಿಂದೆ ||
ನೀವು ಬಿಜಯಂಗೈದ ಕಾರ್ಯಮಂ ಬೆಸಸಿಮೆನ | ಲಾವು ಕನ್ಯಾರ್ಥಿಗಳ್ ಕುಡು ನಿನ್ನ ಸುತೆಯನಿದ | ಕಾವೆಣಿಕೆ ಬೇಡ ಭೂಭುಜರೀಯಬಹುದು ವಿಪ್ರರ್ಗೆಂಡೊಡಿಂತೆಂದನು ||6||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಾವಕಂ ಬಳಿಕ ಮೆಚ್ಚಿದನು ಅವಳ ನೋಂಪಿಗೆ(ವ್ರತ) ಮಹೀವಿಬುಧ ವೇಷಮಂ ತಾಳ್ದು ನೀಲಧ್ವಜನ ಚಾವಡಿಗೆ ಬರಲು=[ಬಳಿಕ ಅಗ್ನಿಯು ಅವಳ ವ್ರತಕ್ಕೆ ಮೆಚ್ಚಿದನು; ಬ್ರಾಹ್ಮಣ ವೇಷವನ್ನು ತಾಳಿ ನೀಲಧ್ವಜನ ಅರಮನೆಗೆ ಬಂದನು.]; ಆತನು ಇದಿರೆದ್ದು ಸತ್ಕರಿಸಿ ಕೈಮುಗಿದು ವಿನಯದಿಂದೆ ನೀವು ಬಿಜಯಂಗೈದ ಕಾರ್ಯಮಂ ಬೆಸಸಿ ಎನಲು=[ಆಗ ರಾಜನು ಇದಿರು ಬಂದಾಗ ಎದ್ದು ಸತ್ಕರಿಸಿ ಕೈಮುಗಿದು ವಿನಯದಿಂದ, ನೀವು ಬಂದ ಕಾರ್ಯವನ್ನು ಹೇಳಿ ಎನ್ನಲು]; ಆವು ಕನ್ಯಾರ್ಥಿಗಳ್ ಕುಡು ನಿನ್ನ ಸುತೆಯನು ಇದಕೆ ಆವೆಣಿಕೆ ಬೇಡ ಭೂಭುಜರು ಈಯಬಹುದು ವಿಪ್ರರ್ಗೆ ಎಂದೊಡೆ ಇಂತೆಂದನು=[ನಾವು ಕನ್ಯಾರ್ಥಿಗಳು, ನಿನ್ನ ಮಗಳನ್ನು ನನಗೆ ಕೊಡು; ಇದ್ದಕ್ಕೆ ಚಿಂತೆ ಬೇಡ ಕ್ಷತ್ರಿಯರು, ಬ್ರಾಹ್ಮಣರಿಗೆ ಮಗಳನ್ನು ಕೊಡಬಹುದು ಎನ್ನಲು,ರಾಜನು ಇಂತೆಂದನು.]
  • ತಾತ್ಪರ್ಯ:ಬಳಿಕ ಅಗ್ನಿಯು ಅವಳ ವ್ರತಕ್ಕೆ ಮೆಚ್ಚಿದನು; ಬ್ರಾಹ್ಮಣ ವೇಷವನ್ನು ತಾಳಿ ನೀಲಧ್ವಜನ ಅರಮನೆಗೆ ಬಂದನು. ಆಗ ರಾಜನು ಅಗ್ನಿಯು ಇದಿರು ಬಂದಾಗ ಎದ್ದು ಸತ್ಕರಿಸಿ ಕೈಮುಗಿದು ವಿನಯದಿಂದ, ನೀವು ಬಂದ ಕಾರ್ಯವನ್ನು ಹೇಳಿ ಎನ್ನಲು; ನಾವು ಕನ್ಯಾರ್ಥಿಗಳು, ನಿನ್ನ ಮಗಳನ್ನು ನನಗೆ ಕೊಡು; ಇದ್ದಕ್ಕೆ ಚಿಂತೆ ಬೇಡ ಕ್ಷತ್ರಿಯರು, ಬ್ರಾಹ್ಮಣರಿಗೆ ಮಗಳನ್ನು ಕೊಡಬಹುದು ಎನ್ನಲು,ರಾಜನು ಇಂತೆಂದನು.

(ಪದ್ಯ - ೬ )

ಪದ್ಯ :-:೭:

ಸಂಪಾದಿಸಿ

ಕನ್ಯಾರ್ಥಿಯಾಗಿ ನೀಂ ಬಂದು ಬೇಡುವುದಿಳೆಯೊ | ಳನ್ಯಾಯಮಲ್ಲ ವಿಪ್ರರ್ಗೆ ಕೊಡಬಹುದು ರಾ | ಜನ್ಯರದಕೇನೊಂದು ಛಲದಿಂದೆ ತನ್ನ ಕುವರಿಗೆ ಮರುತ್ಸಖನಲ್ಲದೆ ||
ಅನ್ಯರಂ ಪತಿಯಾಗಿ ವರಿಸಬೇಕೆಂಬ ಚೈ | ತನ್ಯಮಿಲ್ಲೇನು ಮಾಡುವೆನಿನ್ನು ನಿನಗೀವ | ಧನ್ಯತೆಗೆ ಬಾಹಿರಂ ತಾನಾದೆನೆನಲಾ ಕಪಟ ವಿಪ್ರನಿಂತೆಂದನು ||7||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕನ್ಯಾರ್ಥಿಯಾಗಿ ನೀಂ ಬಂದು ಬೇಡುವುದು ಇಳೆಯೊಳು ಅನ್ಯಾಯಮಲ್ಲ;=[ಕನ್ಯಾರ್ಥಿಯಾಗಿ ನೀನು ಬಂದು ಬೇಡುವುದು ಈ ಭೂಮಿಯಲ್ಲಿ ಅನ್ಯಾಯವಲ್ಲ;]; ವಿಪ್ರರ್ಗೆ ಕೊಡಬಹುದು ರಾಜನ್ಯರು ಅದಕೇನು ಒಂದು ಛಲದಿಂದೆ ತನ್ನ ಕುವರಿಗೆ ಮರುತ್ಸಖನು (ಅಗ್ನಿ) ಅಲ್ಲದೆ=[ವಿಪ್ರರಿಗೆ ರಾಜರು ಕೊಡಬಹುದು ಅದಕ್ಕೇನು? ಆದರೆ ಒಂದು ಹಠದಿಂದ ತನ್ನ ಕುಮಾರಿಗೆ ಅಗ್ನಿ ಅಲ್ಲದೆ] ; ಅನ್ಯರಂ ಪತಿಯಾಗಿ ವರಿಸಬೇಕೆಂಬ ಚೈತನ್ಯಂ ಇಲ್ಲ ಏನು ಮಾಡುವೆನು ಇನ್ನು ನಿನಗೀವ ಧನ್ಯತೆಗೆ ಬಾಹಿರಂ ತಾನಾದೆನು ಎನಲು ಆ ಕಪಟ ವಿಪ್ರನಿಂತೆಂದನು=[ಬೇರೆಯವರನ್ನು ಪತಿಯಾಗಿ ವರಿಸಬೇಕೆಂಬ ಆಸೆ ಇಲ್ಲ. ಏನು ಮಾಡಲಿ? ಇನ್ನು ನಿನಗೆ ಮಗಳನ್ನು ಕೊಡುವ ಪುಣ್ಯವನ್ನು ತಾನು ಹೊಂದಲಾರೆನು; ಎನ್ನಲು ಆ ಕಪಟ ಬ್ರಾಹ್ಮಣನು ಹೀಗೆ ಹೇಳಿದನು.]
  • ತಾತ್ಪರ್ಯ:ಕನ್ಯಾರ್ಥಿಯಾಗಿ ನೀನು ಬಂದು ಬೇಡುವುದು ಈ ಭೂಮಿಯಲ್ಲಿ ಅನ್ಯಾಯವಲ್ಲ; ವಿಪ್ರರಿಗೆ ರಾಜರು ಕನ್ಯೆಯನ್ನು ಕೊಡಬಹುದು ಅದಕ್ಕೇನು? ಆದರೆ ಒಂದು ಹಠದಿಂದ ಇದ್ದಾಳೆ; ತನ್ನ ಕುಮಾರಿಗೆ ಅಗ್ನಿ ಅಲ್ಲದೆ ಬೇರೆಯವರನ್ನು ಪತಿಯಾಗಿ ವರಿಸಬೇಕೆಂಬ ಆಸೆ ಇಲ್ಲ. ಏನು ಮಾಡಲಿ? ಇನ್ನು ನಿನಗೆ ಮಗಳನ್ನು ಕೊಡುವ ಪುಣ್ಯವನ್ನು ತಾನು ಹೊಂದಲಾರೆನು; ಎನ್ನಲು ಆ ಕಪಟ ಬ್ರಾಹ್ಮಣನು ಹೀಗೆ ಹೇಳಿದನು.]

(ಪದ್ಯ - ೭ )

ಪದ್ಯ :-:೮:

ಸಂಪಾದಿಸಿ

ಪ್ರಾಪ್ತಮಾದುದು ನಿನ್ನ ಮಗಳಿಣಿಕೆ ಸುವ್ರತ ಸ | ಮಾಪ್ತಿಯಂ ಮಾಡಿಸಿನ್ನಾನಗ್ನಿ ಸಂಶಯ || ವ್ಯಾಪ್ತಿಯಂ ಬಿಡು ಕುಡು ನಿಜಾತ್ಮಜೆಯನೆನೆ ನಂಬದಾನೃಪಂ ಬಳಿಕ ತನ್ನ ||
ಆಪ್ತ ಮಂತ್ರಿಯೊಳೀಗ ಳಿವನಂ ಪರೀಕ್ಷಿಸೆನೆ | ಗೊಪ್ತಾರನಾಜ್ಞೆಯಿಂ ಬಂದವಂ ನೋಡೆ ಶೀಖಿ | ದೀಪ್ತಿಯಂ ತೋರಲೆವೆ ಗಡ್ಡ ಮೀಸೆಗಳುರಿಯಲನಲನೆಂದರಿದನಂದು ||8||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪ್ರಾಪ್ತಮಾದುದು ನಿನ್ನ ಮಗಳ ಎಣಿಕೆ ಸುವ್ರತ ಸಮಾಪ್ತಿಯಂ ಮಾಡಿಸಿನ್ನು ನಾನು ಅಗ್ನಿ ಸಂಶಯ ವ್ಯಾಪ್ತಿಯಂ ಬಿಡು=[ಪ್ರಾಪ್ತವಾಯಿತು, ನಿನ್ನ ಮಗಳ ಆಸೆ; ನಿನ್ನ ಮಗಳು ಮಾಡುತ್ತಿದ್ದ ಸುವ್ರತವನ್ನು ಸಮಾಪ್ತಿಯನ್ನು ಮಾಡಿಸು. ನಾನು ಅಗ್ನಿ ಸಂಶಯ ಭಾವನೆಯನ್ನು ಬಿಡು]; ಕುಡು ನಿಜಾತ್ಮಜೆಯನು ಎನೆ ನಂಬದ ಆ ನೃಪಂ ಬಳಿಕ ತನ್ನ ಆಪ್ತ ಮಂತ್ರಿಯೊಳು ಈಗಳು ಇವನಂ ಪರೀಕ್ಷಿಸು ಎನೆ=['ಕೊಡು ನಿನ್ನ ಮಗಳನ್ನು', ಎನ್ನಲು, ನಂಬದ ಆ ರಾಜನು ಬಳಿಕ ತನ್ನ ಆಪ್ತ ಮಂತ್ರಿಯಬಳಿ ಈಗ ಇವನನ್ನು ಪರೀಕ್ಷಿಸು ಎನ್ನಲು]; ಗೊಪ್ತಾರನ ಆಜ್ಞೆಯಿಂ ಬಂದವಂ ನೋಡೆ ಶಿಖಿ ದೀಪ್ತಿಯಂ ತೋರಲೆವೆ ಗಡ್ಡ ಮೀಸೆಗಳು ಉರಿಯಲು ಅನಲನೆಂದು ಅರಿದನು ಅಂದು=[ ರಾಜನ ಆಜ್ಞೆಯಿಂದ ಬಂದು ಅವನು ವಿಪ್ರನನ್ನು ನೋಡಲು ಅವನ ಶಿಖಿ/ಅಗ್ನಿಯು ದೀಪ್ತಿಯ ತೇಜಸ್ಸನ್ನು ತೋರಲು,ಅಂದು ಅವನ ಎವೆ ಗಡ್ಡ ಮೀಸೆಗಳು ಉರಿಯಲು ಇವನು ಅಗ್ನಿಯೇ ಎಂದು ಅರಿತನು].
  • ತಾತ್ಪರ್ಯ:ಪ್ರಾಪ್ತವಾಯಿತು, ನಿನ್ನ ಮಗಳ ಆಸೆ; ನಿನ್ನ ಮಗಳು ಮಾಡುತ್ತಿದ್ದ ಸುವ್ರತವನ್ನು ಸಮಾಪ್ತಿಯನ್ನು ಮಾಡಿಸು. ನಾನು ಅಗ್ನಿ ಸಂಶಯ ಭಾವನೆಯನ್ನು ಬಿಡು; 'ಕೊಡು ನಿನ್ನ ಮಗಳನ್ನು', ಎನ್ನಲು, ನಂಬದ ಆ ರಾಜನು ಬಳಿಕ ತನ್ನ ಆಪ್ತ ಮಂತ್ರಿಯಬಳಿ ಈಗ ಇವನನ್ನು ಪರೀಕ್ಷಿಸು ಎನ್ನಲು; ರಾಜನ ಆಜ್ಞೆಯಿಂದ ಬಂದು ಅವನು ವಿಪ್ರನನ್ನು ನೋಡಲು ಶಿಖಿಯು/ ಅಗ್ನಿಯು ದೀಪ್ತಿಯ ತೇಜಸ್ಸನ್ನು ತೋರಲು, ಅಂದು ಅವನ ಎವೆ ಗಡ್ಡ ಮೀಸೆಗಳು ಉರಿಯುತ್ತರಲು, ಇವನು ಅಗ್ನಿಯೇ ಎಂದು ಅರಿತನು.

(ಪದ್ಯ - ೮ )

ಪದ್ಯ :-:೯:

ಸಂಪಾದಿಸಿ

ಸಪ್ತರಸನಂ ತಪ್ಪದೆಂದಾ ನೃಪಂ ತಿಳಿದು | ಗುಪ್ತದಿಂದ ತನ್ನ ಸತಿಯನುಜೆಯಂ ಕರಸಿ ಲೋ | ಲುಪ್ತಿಯಿಂ ಬಂದನಿವಗೀಯಬೇಕಣುಗಿಯಂ ಶಿಖಿಯಹುದೆ ನೋಡೆನಲ್ಕೆ ||
ದೃಪ್ತ ಭಾವದೊಳಾಕೆ ನಡೆತಂದು ನಿಟ್ಟಿಸಲ್ | ತಪ್ತಮಾದುದು ಮೇಲುದಿನ ವಸನಮಾಗಳಾ| ಕ್ಷಿಪ್ತಮಂಮಾಡಿ ನಗುತಿರ್ದನಾ ಭೂವಂ ಸಭೆಯೊಳ್ ವಿನೋದದಿಂದೆ ||9||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಸಪ್ತರಸನಂ(ಏಳು ನಾಲಿಗೆವ:ಅಗ್ನಿ) ತಪ್ಪದೆಂದು ಆ ನೃಪಂ ತಿಳಿದು ಗುಪ್ತದಿಂದ ತನ್ನ ಸತಿಯ ಅನುಜೆಯಂ ಕರಸಿ=[ಏಳು ನಾಲಿಗೆಯ ಅಗ್ನಿ ಇವನಿಗೆ ಮಗಳನ್ನು ಕೊಡುವುದು ತಪ್ಪದೆಂದು, ಆ ರಾಜನು ತಿಳಿದು ಇನ್ನೂ ಪರೀಕ್ಷೆ ಮಾಡಲು, ಗುಪ್ತವಾಗಿ ತನ್ನ ಪತ್ನಿಯ ತಂಗಿಯನ್ನು ಕರಸಿ]; ಲೋಲುಪ್ತಿಯಿಂ(ಆಸೆಯಿಂದ) ಬಂದನು ಇವಗೆ ಈಯಬೇಕು ಅಣುಗಿಯಂ (ಮಗಳು) ಶೀಖಿಯಹುದೆ ನೋಡೆನಲ್ಕೆ=[ಈ ಬ್ರಾಹ್ಮಣನು ಮದುವೆಯಾಗುವ ಆಸೆಯಿಂದ ಬಂದು ತಾನು ಅಗ್ನಿಯೆಂದು ಹೇಳುತ್ತಿದ್ದಾನೆ, ಇವನಿಗೆ ಮಗಳನ್ನು ಕೊಡಬೇಕು ಅಗ್ನಿ ನಿಜವೇ, ಪರೀಕ್ಷಿಸು ಎಂದನು];ದೃಪ್ತ(ಸೊಕ್ಕು) ಭಾವದೊಳು ಆಕೆ ನಡೆತಂದು ನಿಟ್ಟಿಸಲ್ ತಪ್ತಮಾದುದು ಮೇಲುದಿನ ವಸನಮ್ (ಮೇಲುಹೊದಿಕೆ- ಶಾಲು)= ಅವಳು ಸೊಕ್ಕಿನ ಭಾವದಿಂದ ಆಕೆ ನಡೆಯುತ್ತಾ ಬಂದು ಅವನನ್ನು ದಿಟ್ಟಿಸಿ ನೋಡಿದಳು, ಆಗ ಅವಳ ಮೇಲೆಹೊದೆದ ಹೊದಿಕೆಯ ಬಟ್ಟೆ ಸುಟ್ಟುಹೋಯಿತು.]; ಆಗಳ್ ಆಕ್ಷಿಪ್ತಮಂ(ನಾಶ) ಮಾಡಿ ನಗುತಿರ್ದನು ಆ ಭೂವರಂ ಸಭೆಯೊಳ್ ವಿನೋದದಿಂದೆ=[ಆಗ ಆ ಬ್ರಾಹ್ಮಣನು ಬಟ್ಟೆಯನ್ನು ಸುಟ್ಟು ಬೂದಿಮಾಡಿ ಮಾಡಿ ಸಭೆಯಲ್ಲಿ ವಿನೋದದಿಂದ ನಗುತ್ತಿದ್ದನು.]
  • ತಾತ್ಪರ್ಯ: ಏಳು ನಾಲಿಗೆಯ ಅಗ್ನಿ ಇವನಿಗೆ ಮಗಳನ್ನು ಕೊಡುವುದು ತಪ್ಪದೆಂದು, ಆ ರಾಜನು ತಿಳಿದು ಇನ್ನೂ ಪರೀಕ್ಷೆ ಮಾಡಲು, ಗುಪ್ತವಾಗಿ ತನ್ನ ಪತ್ನಿಯ ತಂಗಿಯನ್ನು ಕರಸಿ, ಈ ಬ್ರಾಹ್ಮಣನು ಮದುವೆಯಾಗುವ ಆಸೆಯಿಂದ ಬಂದು ತಾನು ಅಗ್ನಿಯೆಂದು ಹೇಳುತ್ತಿದ್ದಾನೆ, ಇವನಿಗೆ ಮಗಳನ್ನು ಕೊಡಬೇಕು ಅಗ್ನಿ ನಿಜವೇ, ಪರೀಕ್ಷಿಸು ಎಂದನು; ಅವಳು ಸೊಕ್ಕಿನ ಭಾವದಿಂದ ನಡೆಯುತ್ತಾ ಬಂದು ಅವನನ್ನು ದಿಟ್ಟಿಸಿ ನೋಡಿದಳು, ಆಗ ಅವಳ ಮೇಲೆಹೊದೆದ ಹೊದಿಕೆಯ ಬಟ್ಟೆ ಸುಟ್ಟುಹೋಯಿತು. ಆ ಬ್ರಾಹ್ಮಣನು ಬಟ್ಟೆಯನ್ನು ಸುಟ್ಟು ಬೂದಿಮಾಡಿ ಮಾಡಿ ಸಭೆಯಲ್ಲಿ ವಿನೋದದಿಂದ ನಗುತ್ತಿದ್ದನು.

(ಪದ್ಯ - ೮ )

ಪದ್ಯ :-:10:

ಸಂಪಾದಿಸಿ

ಭೂಕಾಂತ ಕೇಳ್ ಬಳಿಕ ನೀಲಧ್ವಜಾವನಿಪ | ನಾ ಕಪಟ ವಿಪ್ರನಂ ಕರೆದಗ್ನಿ ನೀನಾದೊ | ಡೀ ಕುವರಿಯಂ ಕುಡುವೆನಿಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ ||
ಪ್ರಾಕಾರವಾಗಿ ಯೆನ್ನರಮನೆಯೊಳೆಂದುಮಿರ | ಬೇಕೆಂದು ಬೇಡಿಕೊಳಲೊಪ್ಪಿ ಪವಮಾನ ಸಖ | ನಾ ಕಮಲವದನೆಯಂ ಮದುವೆಯಾದಂ ವಿಧಿ ವಿಧಾನ ವಿಭವಂಗಳಂದೆ ||10||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಭೂಕಾಂತ ಕೇಳ್ ಬಳಿಕ ನೀಲಧ್ವಜ ಅವನಿಪನು ಆ ಕಪಟ ವಿಪ್ರನಂ ಕರೆದು=[ರಾಜನೇ ಕೇಳು, ಬಳಿಕ ನೀಲಧ್ವಜ ರಾಜನು ಆ ಮಾರವೇಷದ ವಿಪ್ರನನ್ನು ಕರೆದು]; ಅಗ್ನಿ ನೀನಾದೊಡೆ ಈ ಕುವರಿಯಂ ಕುಡುವೆನು ಇಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ ಪ್ರಾಕಾರವಾಗಿ ಯೆನ್ನರಮನೆಯೊಳು ಎಂದುಂ ಇರಬೇಕೆಂದು ಬೇಡಿಕೊಳಲು=[ನೀನು ಅಗ್ನಿಯೇ ಆಗಿದ್ದರೆ ಈ ಮಗಳನ್ನು ಕೊಡುವೆನು. ಇಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ ಕೋಟೆಯ ಗೋಡೆಯಂತೆ ರಕ್ಷಿಸುತ್ತಾ ನನ್ನ ಅರಮನೆಯಲ್ಲಿ ಯಾವಾಗಲೂ ಇರಬೇಕು ಎಂದು ಬೇಡಿಕೊಳ್ಳಲು];ಒಪ್ಪಿ ಪವಮಾನ ಸಖ | ನಾ ಕಮಲವದನೆಯಂ ಮದುವೆಯಾದಂ ವಿಧಿ ವಿಧಾನ ವಿಭವಂಗಳಂದೆ= [ಒಪ್ಪಿ ಅಗ್ನಿಯು ಆ ಕಮಲವದನೆಯಾದ ಸ್ವಾಹಾಳನ್ನು ವಿಧಿ ವಿಧಾನ ವೈಭವಗಳಿಂದ ಮದುವೆಯಾದನು.]
  • ತಾತ್ಪರ್ಯ:ರಾಜನೇ ಕೇಳು, ಬಳಿಕ ನೀಲಧ್ವಜ ರಾಜನು ಆ ಮಾರವೇಷದ ವಿಪ್ರನನ್ನು ಕರೆದು, ನೀನು ಅಗ್ನಿಯೇ ಆಗಿದ್ದರೆ ಈ ಮಗಳನ್ನು ಕೊಡುವೆನು. ಇಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ ಕೋಟೆಯ ಗೋಡೆಯಂತೆ ರಕ್ಷಿಸುತ್ತಾ ನನ್ನ ಅರಮನೆಯಲ್ಲಿ ಯಾವಾಗಲೂ ಇರಬೇಕು ಎಂದು ಬೇಡಿಕೊಳ್ಳಲು ಒಪ್ಪಿ ಅಗ್ನಿಯು ಆ ಕಮಲವದನೆಯಾದ ಸ್ವಾಹಾಳನ್ನು ವಿಧಿ ವಿಧಾನ ವೈಭವಗಳಿಂದ ಮದುವೆಯಾದನು.

(ಪದ್ಯ - 10 )

ಪದ್ಯ :-:೧೧:

ಸಂಪಾದಿಸಿ

ಶ್ರೀ ಹೈಮವತಿಯರಂ ದುಗ್ದಾಭ್ಧಿ ಹಿಮಗಿರಿಗ | ಳಾ ಹರಿಹರರ್ಗೆ ಕೊಟ್ಟಿಂಬಿಟ್ಟು ಕೊಂಡಿಹವೊ | ಲೀ ಹುತವಹಂಗಾತ್ಮಜೆಬುನಿತ್ತು ನಿಲಿಸಿಕೊಂಡು ನೀಲಕೇತು ಬಳಿಕ ||
ಸ್ವಾಹಾ ವನಿತೆಯ ಸಮ್ಮೇಳೆದತಿಸೌಖ್ಯದಿಂ | ಮಾಹಿಷ್ಮತೀ ಪಟ್ಟಣದೊಳಿರ್ಪನನಲಂ ಮ | ನೋಹರದ ವಿವಿಧ ಭೋಗದೊಳಂದು ಮೊದಲಾಗಿ ಸಂದು ಸಂತೋಷದಿಂದ ||11||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಶ್ರೀ(ಲಕ್ಷ್ಮಿ), ಹೈಮವತಿಯರಂ ದುಗ್ದಾಭ್ಧಿ ಹಿಮಗಿರಿಗಳು ಆ ಹರಿಹರರ್ಗೆ ಕೊಟ್ಟು ಇಂಬಿಟ್ಟು(ತಮ್ಮಲ್ಲಿ ಇಟ್ಟುಕೊಳ್ಳುವುದು) ಕೊಂಡಿಹವೊಲು=[ಲಕ್ಷ್ಮಿ, ಹಿಮವಂತನ ಮಗಳು ಪಾರ್ವತಿ,ಇವರನ್ನು ಕ್ಷೀರಸಮುದ್ರನು ಮತ್ತು ಹಿಮಗಿರಿಯು ಆ ಹರಿ ಮತ್ತು ಹರರಿಗೆ ಮದುವೆಮಾಡಿ ಕೊಟ್ಟು ತಮ್ಮಲ್ಲಿ ಇಟ್ಟುಕೊಂಡಂತೆ,]; ಈ ಹುತವಹಂಗೆ ಆತ್ಮಜೆಯನು ಇತ್ತು ನಿಲಿಸಿಕೊಂಡು ನೀಲಕೇತು=[ಈ ಅಗ್ನಿಗೆ ತನ್ನ ಮಗಳನ್ನು ಕೊಟ್ಟು ಅವನನ್ನು ನೀಲಕೇತು ತನ್ನಲ್ಲಿಯೇ ನಿಲ್ಲಿಸಿಕೊಂಡನು]; ಬಳಿಕ ಸ್ವಾಹಾ ವನಿತೆಯ ಸಮ್ಮೇಳೆದ ಅತಿಸೌಖ್ಯದಿಂ ಮಾಹಿಷ್ಮತೀ ಪಟ್ಟಣದೊಳಿರ್ಪ ನನಲಂ ಮನೋಹರದ ವಿವಿಧ ಭೋಗದೊಳು ಅಂದು ಮೊದಲಾಗಿ ಸಂದು ಸಂತೋಷದಿಂದ= [ಬಳಿಕ ಸ್ವಾಹಾ ಪತ್ನಿಯ ಜೊತೆಗೂಡಿ ಅತಿಸೌಖ್ಯದಿಂದ ಮಾಹಿಷ್ಮತೀ ಪಟ್ಟಣದಲ್ಲಿ ಅಗ್ನಿಯು ಮನೋಹರವಾದ ವಿವಿಧ ಭೋಗದಲ್ಲಿ ಅಂದು ಮೊದಲಾಗಿ ಸಂತೋಷದಿಂದ ಇರುತ್ತಿದ್ದನು].
  • ತಾತ್ಪರ್ಯ: ಲಕ್ಷ್ಮಿ, ಹಿಮವಂತನ ಮಗಳು ಪಾರ್ವತಿ,ಇವರನ್ನು ಕ್ಷೀರಸಮುದ್ರನು ಮತ್ತು ಹಿಮಗಿರಿಯು ಆ ಹರಿ ಮತ್ತು ಹರರಿಗೆ ಮದುವೆಮಾಡಿ ಕೊಟ್ಟು ತಮ್ಮಲ್ಲಿ ಇಟ್ಟುಕೊಂಡಂತೆ, ಈ ಅಗ್ನಿಗೆ ತನ್ನ ಮಗಳನ್ನು ಕೊಟ್ಟು ಅವನನ್ನು ನೀಲಕೇತು ತನ್ನಲ್ಲಿಯೇ ನಿಲ್ಲಿಸಿಕೊಂಡನು. ಬಳಿಕ ಸ್ವಾಹಾ ಪತ್ನಿಯ ಜೊತೆಗೂಡಿ ಅತಿಸೌಖ್ಯದಿಂದ ಮಾಹಿಷ್ಮತೀ ಪಟ್ಟಣದಲ್ಲಿ ಅಗ್ನಿಯು ಮನೋಹರವಾದ ವಿವಿಧ ಭೋಗವನ್ನು ಪಡೆದು ಅಂದು ಮೊದಲಾಗಿ ಸಂತೋಷದಿಂದ ಇರುತ್ತಿದ್ದನು.

(ಪದ್ಯ - ೧೧ )XIV,

ಪದ್ಯ :-:೧೨:

ಸಂಪಾದಿಸಿ

*ಅಲ್ಲಿ ಪಾವಕನಿರ್ಪ ಕಾರಣಮಿದೀಗ ಮುಂ | ದಿಲ್ಲಿಯ ಕಥಾಂತರವನರಸ ಕೇಳಾ ರಾತ್ರಿ | ಯಲ್ಲಿ ನೀಲಧ್ವಜಂ ಮನೆಯೊಳಾ ಜ್ವಾಲೆಯ ನಿರೂಪಮಂ ಶಿರದೊಳಾಂತು ||
ಸಲ್ಲಲಿತ ವಾಜಿಯಂ ಬಿಡೆನೆನ್ನೊಡನೆ ಕಾದಿ | ದಲ್ಲದೆಂದಾ ಕಿರೀಟಿಗೆ ಪೇಳಿಸಿದನಿತ್ತ | ಪಲ್ಲವಿಸಿತಮಲ ಪೂರ್ವಾಶಾಲತಿಕೆಯೆನಲ್ ಕೆಂಪಡರ್ದುದು ಮೂಡಲು ||12||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಲ್ಲಿ ಪಾವಕನು ಇರ್ಪ ಕಾರಣಂ=[ಅಲ್ಲಿ ಅಗ್ನಿಯು ಇರುವ ಕಾರಣವು ಹೀಗಿದೆ.]; ಇದೀಗ ಮುಂದೆ ಇಲ್ಲಿಯ ಕಥಾಂತರವನು ಅರಸ ಕೇಳು=[ಈಗ ಮುಂದೆ ಇಲ್ಲಿಯ ಕಥೆಯ ಬೆಳವನಿಗೆಯನ್ನು ಅರಸನೇ ಕೇಳು.]; ಆ ರಾತ್ರಿಯಲ್ಲಿ ನೀಲಧ್ವಜಂ ಮನೆಯೊಳ ಆ ಜ್ವಾಲೆಯ ನಿರೂಪಮಂ ಶಿರದೊಳು ಆಂತು=[ಆ ರಾತ್ರಿಯಲ್ಲಿ ನೀಲಧ್ವಜನು ಮನೆಯಲ್ಲದ್ದ ಆ ಜ್ವಾಲೆಯ ಆದೇಶವನ್ನು ತಲೆಯಮೇಲೆ ಹೊತ್ತು,]; ಸಲ್ಲಲಿತ ವಾಜಿಯಂ ಬಿಡೆನು ಎನ್ನೊಡನೆ ಕಾದಿದಲ್ಲದೆ ಎಂದಾ ಕಿರೀಟಿಗೆ ಪೇಳಿಸಿದನು=[ಕೋಮಲವಾದ ಕುದುರೆಯನ್ನು ನನ್ನೊಡನೆ ನೀನು ಯುದ್ಧಮಾಡದೆ ಬಿಡುವುದಿಲ್ಲ, ಎಂದು ಅರ್ಜುನನಿಗೆ ಹೇಳಿಕಳಿಸಿದನು]; ಇತ್ತ ಪಲ್ಲವಿಸಿತು ಅಮಲ ಪೂರ್ವ (ಆಶಾಂತ:ದಿಕ್ಕಿನ ಕೊನೆ)ಆಶಾಲತಿಕೆಯೆನಲ್ ಕೆಂಪು ಅಡರ್ದುದು ಮೂಡಲು=[ಇತ್ತ ಮೂಡಲು / ಪೂರ್ವದಿಕ್ಕಿನಬಳ್ಳಿ ಚಿಗುರಿತೋ ಎಂಬಂತೆ ಪೂರ್ವದಿಕ್ಕು ಕೆಂಪಾಯಿತು];
  • ತಾತ್ಪರ್ಯ: ಅಲ್ಲಿ ಅಗ್ನಿಯು ಇರುವ ಕಾರಣವು ಹೀಗಿದೆ. ಈಗ ಮುಂದೆ ಇಲ್ಲಿಯ ಕಥೆಯ ಬೆಳವನಣಿಗೆಯನ್ನು ಅರಸನೇ ಕೇಳು. ಆ ರಾತ್ರಿಯಲ್ಲಿ ನೀಲಧ್ವಜನು ಮನೆಯಲ್ಲದ್ದ ಆ ಜ್ವಾಲೆಯ ಆದೇಶವನ್ನು ತಲೆಯಮೇಲೆ ಹೊತ್ತು, ನನ್ನೊಡನೆ ನೀನು ಯುದ್ಧಮಾಡದೆ ಕೋಮಲವಾದ ಕುದುರೆಯನ್ನು ಬಿಡುವುದಿಲ್ಲ, ಎಂದು ಅರ್ಜುನನಿಗೆ ಹೇಳಿಕಳಿಸಿದನು; ಇತ್ತ ಮೂಡಲು / ಪೂರ್ವದಿಕ್ಕಿನಬಳ್ಳಿ ಚಿಗುರಿತೋ ಎಂಬಂತೆ ಪೂರ್ವದಿಕ್ಕು ಕೆಂಪಾಯಿತು.

(ಪದ್ಯ - ೧೨ )

ಪದ್ಯ :-:೧೩:

ಸಂಪಾದಿಸಿ

*ತನ್ನ ಪಗೆಯಾದ ಕತ್ತಲೆಯ ಸಾರೂಪೈದಿಂ | ದಿನ್ನಿರ್ದೊಡೆಮಗಿನಂ ಮುಳಿಯದಿರನೆಂದಂಜಿ | ಕನ್ನೆಯ್ದಿಲಿಯ ಮೊಗಂ ಬಾಡಿದುದು ಕೂಡೆ ನಗುತಿರ್ದುವರವಿಂದಂಗಳು ||
ಗನ್ನದೊಳ್ ನೆರೆವ ಜಾರೆಯರ ಕುಂಟಣಿಯಂತೆ | ಸನ್ನೆ ಗೈದುವು ತಾಮ್ರ ಚೂಡಂಗಳೊಂದಿದುವು | ಮುನ್ನಿನಂತಿರೆ ಜಕ್ಕಮಕ್ಕಿಗಳ್ ಪಾಡಿದುವು ತುಂಬಿಗಳ್ ಬಂಡನರಸಿ ||13||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತನ್ನ ಪಗೆಯಾದ ಕತ್ತಲೆಯ ಸಾರೂಪ್ಯದಿಂದ ಇನ್ನು ಇರ್ದೊಡೆ ಎಮಗೆ ಇನಂ ಮುಳಿಯದಿರನು ಎಂದು ಅಂಜಿ=[ತನ್ನ ಶತ್ರುವಾದ ಕತ್ತಲೆಯ ಸಮಾನ ರೂಪದಿಂದ ಇನ್ನು ಇದ್ದರೆ ನಮಗೆ ರವಿಯು ಕೋಪಮಾಡುವನ್ನು ಎಂದು ಹೆದರಿ]; ಕನ್ನೆಯ್ದಿಲಿಯ ಮೊಗಂ ಬಾಡಿದುದು ಕೂಡೆ ನಗುತಿರ್ದುವು ಅರವಿಂದಂಗಳು=[ಕನೈದಿಲೆಯು ಮುಖವು ಬಾಡಿತು, (ಮಚ್ಚಿಕೊಓಡಿತು), ಆಗಲೇ ಕಮಲಗಳು ಅರಳಿ ನಗುತ್ತಿದ್ದವು.];ಗನ್ನದೊಳ್ ನೆರೆವ ಜಾರೆಯರ ಕುಂಟಣಿಯಂತೆ ಸನ್ನೆ ಗೈದುವು ತಾಮ್ರ ಚೂಡಂಗಳೊಂದಿದುವು=[ರಾತ್ರಿಯಲ್ಲಿ ಮೋಸದಿಂದ ಕಣ್ಣುತಪ್ಪಿಸಿ ಬಂದಿರುವ ಜಾರೆಯರ ದಾಸಿಯರಂತೆ (ಮನೆಗೆ ಹಿಂತಿರುಗಲು)ಕೂಗಿ ತಲೆ ಅಲ್ಲಾಡಿಸಿ ಸನ್ನೆ ಮಾಡಿದವು ಕೋಳಿಗಳು}, ಒಂದಿದುವು ಮುನ್ನಿನಂತಿರೆ ಜಕ್ಕಮಕ್ಕಿಗಳ್ ಪಾಡಿದುವು ತುಂಬಿಗಳ್ ಬಂಡನರಸಿ=[ಬೆಳಗಾಗಲು ಚಕ್ರವಾಕಗಳು ಮತ್ತೆ ಸೇರಿದವು,ಜೇನುಗಳು ಹೂವಿನ ಬಂಡನ್ನು ಹುಡುಕಲು ಹಾರಿ ಝೇಕಾರ ಹಾಡಿದವು.].
  • ತಾತ್ಪರ್ಯ: ತನ್ನ ಶತ್ರುವಾದ ಕತ್ತಲೆಯ ಸಮಾನ ರೂಪದಿಂದ ಇನ್ನು ಇದ್ದರೆ ನಮಗೆ ರವಿಯು ಕೋಪಮಾಡುವನ್ನು ಎಂದು ಹೆದರಿ, ಕನೈದಿಲೆಯು ಮುಖವು ಬಾಡಿತು, (ಮಚ್ಚಿಕೊಓಡಿತು), ಆಗಲೇ ಕಮಲಗಳು ಅರಳಿ ನಗುತ್ತಿದ್ದವು. ರಾತ್ರಿಯಲ್ಲಿ ಮೋಸದಿಂದ ಕಣ್ಣುತಪ್ಪಿಸಿ ಬಂದಿರುವ ಜಾರೆಯರ ದಾಸಿಯರಂತೆ (ಮನೆಗೆ ಹಿಂತಿರುಗಲು)ಕೂಗಿ ತಲೆ ಅಲ್ಲಾಡಿಸಿ ಸನ್ನೆ ಮಾಡಿದವು ಕೋಳಿಗಳು, ಬೆಳಗಾಗಲು ಚಕ್ರವಾಕಗಳು ಮತ್ತೆ ಸೇರಿದವು,ಜೇನುಗಳು ಹೂವಿನ ಬಂಡನ್ನು ಹುಡುಕಲು ಹಾರಿ ಝೇಕಾರ ಹಾಡಿದವು.

(ಪದ್ಯ - ೧೩)

ಪದ್ಯ :-:೧೪:

ಸಂಪಾದಿಸಿ

ರಾಹು ಮುನ್ನೊಮ್ಮೆ ತನ್ನಂ ತುಡುಕಿ ಬಿಟ್ಟನೆಂ | ಬಾಹಗೆಯ ಮಗುಚಲೊಳವೊಕ್ಕು ಪಾತಾಳದ ಮ | ಹಾಹಿ ಸಂಕುಲಮನಾಕ್ರಮಿಸಿ ಪೆಡೆವಣಿಗಳಂ ತೆಗೆದುಕೊಡಾಗಳವನು ||
ಸಾಹಸಂ ಮಿಗೆ ದೆಸೆದೆಸೆಗೆ ಚೆಲ್ಲುತೈತರ್ಪ | ನೋ ಹರಿದ್ವಾಜಿ ಪೇಳೆನೆ ಪಸುಳೆವಿಸಿಲ ಪ್ರ | ವಾಹಂಗಳೆತ್ತಲುಂ ಪರಿವಿನಂ ದಿನಪನುದಯಂಗೈದು ಬರುತಿರ್ದನು ||14||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ರಾಹು ಮುನ್ನೊಮ್ಮೆ ತನ್ನಂ ತುಡುಕಿ ಬಿಟ್ಟನೆಂಬ ಆಹಗೆಯಂ ಅಗುಚಲ್(ಹದ್ದಿನಲ್ಲಿಡಲು)=[ರಾಹು ಮುಂಚೆ ಒಮ್ಮೆ ತನ್ನನ್ನು ಹಿಡಿದು ಬಿಟ್ಟನೆಂಬ ಸೇಡಿಗೆ ರಾಹುವನ್ನು ಹದ್ದಿನಲ್ಲಿಡಲು ಸೂರ್ಯನು]; ಒಳವೊಕ್ಕು ಪಾತಾಳದ ಮಹಾ ಅಹಿ ಸಂಕುಲಮನು ಆಕ್ರಮಿಸಿ ಪೆಡೆವಣಿಗಳಂ ತೆಗೆದುಕೊಂಡು=[ಪಾತಾಳದ ಒಳಹೊಕ್ಕು ದೊಡ್ಡ ನಾಗಗಳ ಸಮೂಹವನ್ನು ಆಕ್ರಮಿಸಿ ಹೆಡೆಯ ಮಣಿಗಳನ್ನು ತೆಗೆದುಕೊಂಡು]; ಆಗಳವನು ಸಾಹಸಂ ಮಿಗೆ ದೆಸೆದೆಸೆಗೆ ಚೆಲ್ಲುತೈತರ್ಪನೋ ಹರಿದ್ವಾಜಿ(ರವಿ) ಪೇಳೆನೆ=[ಆಗ ಅವನು ಸಾಹಸವು ಹೆಚ್ಚಲು ಆ ಮಣಿಗಳನ್ನು ದಿಕ್ಕುದಿಕ್ಕಿಗೆ ಚೆಲ್ಲುತ್ತಾ ಸೂರ್ಯನು ಬರುತ್ತಿರುವನೋ ಹೇಳು ಎಂಬಂತೆ] ಪಸುಳೆವಿಸಿಲ ಪ್ರವಾಹಂಗಳು ಎತ್ತಲುಂ ಪರಿವಿನಂ ದಿನಪನು ಉದಯಂಗೈದು ಬರುತಿರ್ದನು=[ಎಳೆಬಿಸಿಲ ಪ್ರವಾಹಗಳು ಎಲ್ಲೆಡೆ ಹರಿಸುತ್ತಾ ಸುರ್ಯನು ಉದಯವಾಗಿ ಬರುತ್ತಿದ್ದನು].
  • ತಾತ್ಪರ್ಯ: ರಾಹು ಮುಂಚೆ ಒಮ್ಮೆ ತನ್ನನ್ನು ಹಿಡಿದು ಬಿಟ್ಟನೆಂಬ ಸೇಡಿಗೆ ರಾಹುವನ್ನು ಹದ್ದಿನಲ್ಲಿಡಲು ಸೂರ್ಯನು ಪಾತಾಳದ ಒಳಹೊಕ್ಕು ದೊಡ್ಡ ನಾಗಗಳ ಸಮೂಹವನ್ನು ಆಕ್ರಮಿಸಿ ಹೆಡೆಯ ಮಣಿಗಳನ್ನು ತೆಗೆದುಕೊಂಡನು; ಆಗ ಅವನು ಸಾಹಸವು ಹೆಚ್ಚಲು ಆ ಮಣಿಗಳನ್ನು ದಿಕ್ಕುದಿಕ್ಕಿಗೆ ಚೆಲ್ಲುತ್ತಾ ಸೂರ್ಯನು ಬರುತ್ತಿರುವನೋ ಹೇಳು ಎಂಬಂತೆ, ಎಳೆಬಿಸಿಲ ಪ್ರವಾಹಗಳನ್ನು ಎಲ್ಲೆಡೆ ಹರಿಸುತ್ತಾ ಸುರ್ಯನು ಉದಯವಾಗಿ ಬರುತ್ತಿದ್ದನು.

(ಪದ್ಯ - ೧೪)

ಪದ್ಯ :-:೧೫:

ಸಂಪಾದಿಸಿ

ಇತ್ತಲವನೀಶ ಕೇಳುದಯವಾಗದ ಮುನ್ನ | ಮತ್ತೆ ಮಾಹಿಸ್ಮತಿಯ ಪಟ್ಟಣದ ಕೋಟಿಯಂ | ಮುತ್ತಿಕೊಂಡುದು ನರನ ಚತುರಂಗಮೋಜೆಯೊಳ್ ನೀಲಕೇತುವಿನ ಸೇನೆ ||
ಒತ್ತಿ ಕವಿದುದು ವೀರರೊದಗಿದರ್ ಪೊಯ್ದಾಡಿ | ತಿತ್ತಂಡಮೊಡವೆರಸಿ ಚೂಣೆಗಾಳಗದ ಭಟ | ರೆತ್ತಿದರ್ ಪಂತಪಾಡುಗಳನಸಿತಧ್ವಜಂ ನಡೆದನರ್ಜನನಮೇಲೆ ||15||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಇತ್ತಲು ಅವನೀಶ ಕೇಳು ಉದಯವಾಗದ ಮುನ್ನ ಮತ್ತೆ ಮಾಹಿಸ್ಮತಿಯ ಪಟ್ಟಣದ ಕೋಟಿಯಂ ಮುತ್ತಿಕೊಂಡುದು ನರನ ಚತುರಂಗಂ ಓಜೆಯೊಳ್=[ ರಾಜನೇ, ಕೇಳು ಈಕಡೆ ಉದಯವಾಗುವುದಕ್ಕೂ ಮೊದಲು ಮತ್ತೆ ಮಾಹಿಸ್ಮತಿಯ ಪಟ್ಟಣದ ಕೋಟಿಯನ್ನು ಅರ್ಜುನನ ಆಜ್ಞೆಯಂತೆ ಅವನ ಚತುರಂಗ ಸೈನ್ಯ ಮುತ್ತಿತು,}; ನೀಲಕೇತುವಿನ ಸೇನೆ

ಒತ್ತಿ ಕವಿದುದು ವೀರರು ಒದಗಿದರ್ ಪೊಯ್ದಾಡಿತು ಇತ್ತಂಡಂ ಒಡವೆರಸಿ=[ನೀಲಕೇತುವಿನ ಸೇನೆ ಮಂದಕ್ಕೆ ಬಂದು ಧಾಳಿಮಾಡಿತು. ಎರಡೂಕಡೆ ವೀರರು ಒಬ್ಬರನ್ನೊಬ್ಬರು ಎದೆಗೆದೆಕೊಟ್ಟು ಹೋರಾಡಿದರು]; ಚೂಣೆ ಕಾಳಗದ ಭಟರೆತ್ತಿದರ್ ಪಂತಪಾಡುಗಳನು ಅಸಿತಧ್ವಜಂ ನಡೆದನು ಅರ್ಜನನ ಮೇಲೆ=[ಮುಂಭಾಗದ ಯುದ್ಧಮಾಡುವ ವೀರರು ಪಂಥಮಾಡಿ ಯುದ್ಧಮಾಡಿದರು. ನೀಲಧ್ವಜನು ಅರ್ಜನನ ಮೇಲೆ ಎರಗಿದನು.]

  • ತಾತ್ಪರ್ಯ: ರಾಜನೇ, ಕೇಳು ಈಕಡೆ ಉದಯವಾಗುವುದಕ್ಕೂ ಮೊದಲು ಮತ್ತೆ ಮಾಹಿಸ್ಮತಿಯ ಪಟ್ಟಣದ ಕೋಟಿಯನ್ನು ಅರ್ಜುನನ ಆಜ್ಞೆಯಂತೆ ಅವನ ಚತುರಂಗ ಸೈನ್ಯ ಮುತ್ತಿತು; ನೀಲಕೇತುವಿನ ಸೇನೆ ಮಂದಕ್ಕೆ ಬಂದು ಧಾಳಿಮಾಡಿತು. ಎರಡೂಕಡೆ ವೀರರು ಒಬ್ಬರನ್ನೊಬ್ಬರು ಎದೆಗೆದೆಕೊಟ್ಟು ಹೋರಾಡಿದರು; ಮುಂಭಾಗದ ಯುದ್ಧಮಾಡುವ ವೀರರು ಪಂಥಮಾಡಿ ಯುದ್ಧಮಾಡಿದರು. ನೀಲಧ್ವಜನು ಅರ್ಜನನ ಎರಗಿದನು.

(ಪದ್ಯ - ೧೫)

ಪದ್ಯ :-:೧೬:

ಸಂಪಾದಿಸಿ

ತರಣಿ ತಗಿದ ಬಳಿಕ ಮಿಂಚುಂಬುಳುವಿಗೆ ತಮಂ | ತೆರಳಬಲ್ಲುದೆ ಕೃಶಾನುಜ್ವಾಲೆಗಳುಕದಾ | ನರನುಳಿದ ವೀರರಂ ಬಗೆವನೇ ಪಡೆವೆರಸಿ ನೂಗೆದಂ ಕಡೆಗೆರಯುತೆ ||
ಮುರಿದುದುರವಣಿಗವನ ಸೇನೆ ಬಳಿಕಳಲಿಗರ್ | ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್ | ದುರದೊಳಾಂತಳಿದರರ್ಜುನನೊಳಾತಂ ಕಾದಿ ನೊಂದುಮೂರ್ಛಿತನಾದನು ||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ತರಣಿ ತಗಿದ ಬಳಿಕ ಮಿಂಚುಂಬುಳುವಿಗೆ ತಮಂ ತೆರಳಬಲ್ಲುದೆ=[ತರಣಿ ತಗಿದ ಬಳಿಕ ಮಿಂಚುಂಬುಳುವಿಗೆ ತಮಂ ತೆರಳಬಲ್ಲುದೆ]; ಕೃಶಾನುಜ್ವಾಲೆಗೆ ಅಳುಕದ ಆನರನು ಉಳಿದ ವೀರರಂ ಬಗೆವನೇ ಪಡೆವೆರಸಿ ನೂಗೆದಂ ಕಡೆಗೆರಯುತೆ ಮುರಿದುದು ಉರವಣಿಗೆ=[ಕೃಶಾನುಜ್ವಾಲೆಗೆ ಅಳುಕದ ಆನರನು ಉಳಿದ ವೀರರಂ ಬಗೆವನೇ ಪಡೆವೆರಸಿ ನೂಗೆದಂ ಕಡೆಗೆರಯುತೆ ಮುರಿದುದು ಉರವಣಿಗೆ]; ಅವನ ಸೇನೆ ಬಳಿಕಳಲಿಗರ್ ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್=[ಅವನ ಸೇನೆ ಬಳಿಕ ಅಳವಿಗರ್ ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್]; ದುರದೊಳು ಆಂತು ಅಳಿದರು ಅರ್ಜುನನೊಳು ಆತಂ ಕಾದಿ ನೊಂದು ಮೂರ್ಛಿತನಾದನು.
  • ತಾತ್ಪರ್ಯ: ತರಣಿ ತಗಿದ ಬಳಿಕ ಮಿಂಚುಂಬುಳುವಿಗೆ ತಮಂ ತೆರಳಬಲ್ಲುದೆ=[ತರಣಿ ತಗಿದ ಬಳಿಕ ಮಿಂಚುಂಬುಳುವಿಗೆ ತಮಂ ತೆರಳಬಲ್ಲುದೆ]; ಕೃಶಾನುಜ್ವಾಲೆಗೆ ಅಳುಕದ ಆನರನು ಉಳಿದ ವೀರರಂ ಬಗೆವನೇ ಪಡೆವೆರಸಿ ನೂಗೆದಂ ಕಡೆಗೆರಯುತೆ ಮುರಿದುದು ಉರವಣಿಗೆ=[ಕೃಶಾನುಜ್ವಾಲೆಗೆ ಅಳುಕದ ಆನರನು ಉಳಿದ ವೀರರಂ ಬಗೆವನೇ ಪಡೆವೆರಸಿ ನೂಗೆದಂ ಕಡೆಗೆರಯುತೆ ಮುರಿದುದು ಉರವಣಿಗೆ]; ಅವನ ಸೇನೆ ಬಳಿಕಳಲಿಗರ್ ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್=[ಅವನ ಸೇನೆ ಬಳಿಕ ಅಳವಿಗರ್ ತರಹರಿಸಿ ಸುತ ಸಹೋದರ ಮಂತ್ರಿ ಬಾಂಧವರ್]; ದುರದೊಳು ಆಂತು ಅಳಿದರು ಅರ್ಜುನನೊಳು ಆತಂ ಕಾದಿ ನೊಂದು ಮೂರ್ಛಿತನಾದನು

(ಪದ್ಯ - ೧೬)

ಪದ್ಯ :-:೧೭:

ಸಂಪಾದಿಸಿ

ಬಳಿಕ ಸಾರಧಿ ಮನೆಗೆ ತಂದನಾ ಭೂಪನಂ | ಪೊಳಲ ಪೆರ್ಬಾಗಿಲ್ಗಳಿಕ್ಕಿದುವುಕೋಟೆ ಕೊ | ತ್ತಳದ ಕಾವಲ್ಗಳಂ ಬಲಿದರಲ್ಲಲ್ಲಿ ಗಜಬಜವಾಯ್ತು ನಗರದೊಳಗೆ ||
ತಿಳಿದುದಾತನ ಮೂರ್ಛೆ ಕಣ್ದೆರೆದು ನೋಡಿ ಕೋಳು | ಗುಳದ ಪರಿಭವಕೆ ಬೆಂಡಾಗಿ ನಿಜ ತನಯರಳಿ | ದಳಲಿನಿಂ ಬೈದನಸಿತಧ್ವಜಂ ಜ್ವಾಲೆಯಂ ಪ್ರತಿಕೂಲೆಯಂ ಖತಿಯೊಳು ||17||
||16||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಳಿಕ ಸಾರಧಿ ಮನೆಗೆ ತಂದನು ಆ ಭೂಪನಂ ಪೊಳಲ=[ಬಳಿಕ ಸಾರಧಿಯು ಆ ರಾಜನನ್ನು ಮನೆಗೆ ತಂದನು.]; ಪೊಳಲಪೆರ್ಬಾಗಿಲ್ಗಳು ಇಕ್ಕಿದುವು ಕೋಟೆ ಕೊತ್ತಳದ ಕಾವಲ್ಗಳಂ ಬಲಿದರು=[ನಗರದ ಹೆಬ್ಬಾಗಿಲುಗಳು ಮುಚ್ಚಿದವು. ಕೋಟೆ ಕೊತ್ತಳದ ಕಾವಲುಗಳನ್ನು ಭದ್ರಪಡಿಸಿದರು]; ಅಲ್ಲಲ್ಲಿ ಗಜಬಜವಾಯ್ತು ನಗರದೊಳಗೆ ತಿಳೀದುದು ಅತನ ಮೂರ್ಛೆ ಕಣ್ದೆರೆದು ನೋಡಿ ಕೋಳುಗುಳದ ಪರಿಭವಕೆ ಬೆಂಡಾಗಿ ನಿಜ ತನಯರ ಅಳಿದ ಅಳಲಿನಿಂವ=[ನಗರದೊಳಗೆ, ಅರಮನೆಯ ಅಲ್ಲಲ್ಲಿ ಗುಸುಗುಸು ಮಾತು ನಡೆದವು, ಅತನ ಮೂರ್ಛೆ ತಿಳದು ಕಣ್ದೆರೆದು ನೋಡಿದನು; ಯುದ್ಧದ ಸೋಲಿಗೆ ಆಯಾಸಗೊಂಡ, ತನ್ನ ಮಕ್ಕಳ ಸಾವಿನ ದುಃಖದಿಂದ]; ಬೈದನು ಅಸಿತಧ್ವಜಂ ಜ್ವಾಲೆಯಂ ಪ್ರತಿಕೂಲೆಯಂ ಖತಿಯೊಳು=[ನೀಲಧ್ವಜನು ಪ್ರತಿಕೂಲೆಯಾದ ಜ್ವಾಲೆಯನ್ನು ಸಿಟ್ಟಿನಂದ ಬೈದನು].
  • ತಾತ್ಪರ್ಯ:ಬಬಳಿಕ ಸಾರಧಿಯು ಆ ರಾಜನನ್ನು ಮನೆಗೆ ತಂದನು; ನಗರದ ಹೆಬ್ಬಾಗಿಲುಗಳು ಮುಚ್ಚಿದವು. ಕೋಟೆ ಕೊತ್ತಳದ ಕಾವಲುಗಳನ್ನು ಭದ್ರಪಡಿಸಿದರು; ನಗರದೊಳಗೆ, ಅರಮನೆಯ ಅಲ್ಲಲ್ಲಿ ಗುಸುಗುಸು ಮಾತು ನಡೆದವು, ಅತನ ಮೂರ್ಛೆ ತಿಳದು ಕಣ್ದೆರೆದು ನೋಡಿದನು; ಯುದ್ಧದ ಸೋಲಿಗೆ ಆಯಾಸಗೊಂಡ, ತನ್ನ ಮಕ್ಕಳ ಸಾವಿನ ದುಃಖದಿಂದ, ನೀಲಧ್ವಜನು ಪ್ರತಿಕೂಲೆಯಾದ ಜ್ವಾಲೆಯನ್ನು ಸಿಟ್ಟಿನಂದ ಬೈದನು.

(ಪದ್ಯ - ೧೭)XV

ಪದ್ಯ :-:೧೮:

ಸಂಪಾದಿಸಿ

ನಿನ್ನೆ ಪಾರ್ಥನ ಹಯವನಾತಂಗೆ ಬಿಢಲೀಯ | ದೆನ್ನ ಕೆಡಿಸಿದೆಯಲಾ ಪಾತಕಿಯೆ ಸುತರಳಿದ | ರಿನ್ನೇನು ಘಾತಕಿಯೇ ಮತ್ಕುಲಕರಿಷ್ಟೆ ನೀನತಿಕಷ್ಟೆ ಪೋಗು ದುಷ್ಟೆ ||
ಎನ್ನರಮನೆಯೊಳಿರದಿರೆಂದಾಗಲಾ ಜ್ವಾಲೆ | ಯನ್ನೀಲಕೇತು ಧಟ್ಟಿಸಿ ಬೈದು ಬಳಿಕಶ್ವ | ಮನ್ನರನೆಡೆಗೆ ಕಳುಪಿ ತಾನಾ ಕಿರೀಟಿಯಂ ಕಾಣಲೈ ಪೊರಮಟ್ಟನು ||18||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಿನ್ನೆ ಪಾರ್ಥನ ಹಯವನು ಆತಂಗೆ ಬಿಢಲೀಯದೆ ಎನ್ನ ಕೆಡಿಸಿದೆಯಲಾ ಪಾತಕಿಯೆ ಸುತರಳಿದರು ಇನ್ನೇನು=[ರಾಜನು ಪತ್ನಿ ಜ್ವಾಲೆಗೆ, 'ನಿನ್ನೆ ಪಾರ್ಥನ ಹಯವನ್ನು ಅವನಿಗೆ ಬಿಢಲು ಅವಕಾಶ ಕೊಡದೆ,ನನ್ನನ್ನು ಕೆಡಿಸಿದೆ, ಪಾತಕಿಯೆ ಮಕ್ಕಳು ಯುದ್ಧಲ್ಲಿ ಸತ್ತರು, ಇನ್ನೇನು ಉಳಿಯಿತು!]; ಘಾತಕಿಯೇ ಮತ್ಕುಲಕೆ ಅರಿಷ್ಟೆ ನೀನು ಅತಿಕಷ್ಟೆ ಪೋಗು ದುಷ್ಟೆ ಎನ್ನ ಅರಮನೆಯೊಳು ಇರದಿರು ಎಂದಾಗಲು ಆ ಜ್ವಾಲೆಯನ್ನು ಅನಿಲಕೇತು ಧಟ್ಟಿಸಿ ಬೈದು=[ಎಲೈಘಾತಕಿಯೇ (ಕೆಡುಕಿಯೇ) ನನ್ನ ಕುಲಕ್ಕೆ ಅರಿಷ್ಟೆ; ನೀನು ಅತಿಕಷ್ಟ ಕೊಡುವವಳು; ಹೋಗು ದುಷ್ಟೆ, ನನ್ನ ಅರಮನೆಯಲ್ಲಿ ಇರಬೇಡ', ಎಂದು ಆಗ ಆ ಜ್ವಾಲೆಯನ್ನು ಅನಿಲಕೇತು ಗದರಿಸಿ ಬೈದು]; ಬಳಿಕಶ್ವಮಂ ನರನ ಎಡೆಗೆ ಕಳುಪಿ ತಾನಾ ಕಿರೀಟಿಯಂ ಕಾಣಲೈ ಪೊರಮಟ್ಟನು=[ಬಳಿಕ ಕುದುರೆಯನ್ನು ಅರ್ಜುನನ ಬಳಿಗೆ ಕಳುಹಿಸಿ ತಾನ ಅವನನ್ನು ನೋಡಲು ಹೊರಟನು.]
  • ತಾತ್ಪರ್ಯ:ರಾಜನು ಪತ್ನಿ ಜ್ವಾಲೆಗೆ, 'ನಿನ್ನೆ ಪಾರ್ಥನ ಹಯವನ್ನು ಅವನಿಗೆ ಬಿಢಲು ಅವಕಾಶ ಕೊಡದೆ,ನನ್ನನ್ನು ಕೆಡಿಸಿದೆ, ಪಾತಕಿಯೆ ಮಕ್ಕಳು ಯುದ್ಧಲ್ಲಿ ಸತ್ತರು, ಇನ್ನೇನು ಉಳಿಯಿತು! ಎಲೈಘಾತಕಿಯೇ (ಕೆಡುಕಿಯೇ) ನನ್ನ ಕುಲಕ್ಕೆ ನೀನು ಅರಿಷ್ಟೆ; ನೀನು ಅತಿಕಷ್ಟ ಕೊಡುವವಳು; ಹೋಗು ದುಷ್ಟೆ, ನನ್ನ ಅರಮನೆಯಲ್ಲಿ ಇರಬೇಡ', ಎಂದು ಆಗ ಆ ಜ್ವಾಲೆಯನ್ನು ಅನಿಲಕೇತು ಗದರಿಸಿ ಬೈದು, ಬಳಿಕ ಕುದುರೆಯನ್ನು ಅರ್ಜುನನ ಬಳಿಗೆ ಕಳುಹಿಸಿ ತಾನ ಅವನನ್ನು ನೋಡಲು ಹೊರಟನು.

(ಪದ್ಯ - ೧೮)

ಪದ್ಯ :-:೧೯:

ಸಂಪಾದಿಸಿ

ಕೊಂಡು ಬರಿಸಿದನಖಿಳ ವಸ್ತುಗಳ ನಮಲ ಮಣಿ | ಮಂಡನಾಳಿಗಳಂ ವಿವಿಧ ದುಕೂಲಂಗಳಂ | ಹಿಂಡಾಕಳಂ ಮಹಿಷಿಗಳನುತ್ತಮಸ್ತ್ರೀಯರಂ ಗಜ ಹಯಾವಳಿಯನು ||
ಭಂಡಾರದರ್ಥಮಂ ಗುಡ ತೈಲ ಧಾನ್ಯಮಂ | ಬಂಡಿಗಳ ಮೇಲೆ ತುಂಬಿಸಿ ಪಾರ್ಥನಂ ಬಂದು | ಕಂಡನಸಿತ ಧ್ವಜಂ ಬಳಿಕವನನರ್ಜುನಂ ಪ್ರೀತಿ ಮಿಗೆ ವನ್ನಿಸಿದನು ||19||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೊಂಡು ಬರಿಸಿದನು ಅಖಿಳ ವಸ್ತುಗಳನು ಅಮಲ ಮಣಿ ಮಂಡನಾಳಿಗಳಂ ವಿವಿಧ ದುಕೂಲಂಗಳಂ=[ನಿಲಧ್ವಜನು,ನಾನಾಬಗೆಯ ಅಖಿಲವಸ್ತುಗಳನ್ನು ತರಿಸಿದನು. ಅವು,ಉತ್ತಮ ಮಣಿ ಅಲಂಕಾರವಸ್ತುಗಳು, ವಿವಿಧ ಬಟ್ಟೆಗಳು]; ಹಿಂಡು ಆಕಳಂ ಮಹಿಷಿಗಳನು ಉತ್ತಮ ಸ್ತ್ರೀಯರಂ ಗಜ ಹಯಾವಳಿಯನು ಭಂಡಾರದ ಅರ್ಥಮಂ ಗುಡ ತೈಲ ಧಾನ್ಯಮಂ=[ ಆಕಳ ಹಿಂಡು, ಎಮ್ಮೆಗಳು, ಉತ್ತಮ ಸ್ತ್ರೀಯರು, ಗಜ ಕುದುರೆಗಳು, ಭಂಡಾರದ ಹಣ, ಬೆಲ್ಲ, ಎಣ್ಣೆ, ಧಾನ್ಯ,]; ಬಂಡಿಗಳ ಮೇಲೆ ತುಂಬಿಸಿ ಪಾರ್ಥನಂ ಬಂದು ಕಂಡನು ಅಸಿತಧ್ವಜಂ ಬಳಿಕ ಅವನನು ಅರ್ಜುನಂ ಪ್ರೀತಿ ಮಿಗೆ ವನ್ನಿಸಿದನು=[ಇವುಗಳನ್ನು ಬಂಡಿಗಳ ಮೇಲೆ ತುಂಬಿಸಿ ನೀಲಧ್ವಜನು ಪಾರ್ಥನನ್ನು ಬಂದು ಕಂಡನು. ಬಳಿಕ ಅವನನ್ನು ಅರ್ಜುನನು ಬಹಳ ಪ್ರೀತಿಯಿಂದ ಸತ್ಕರಿಸಿದನು].
  • ತಾತ್ಪರ್ಯ:ನಿಲಧ್ವಜನು,ನಾನಾಬಗೆಯ ಅಖಿಲವಸ್ತುಗಳನ್ನು ತರಿಸಿದನು. ಅವು,ಉತ್ತಮ ಮಣಿ ಅಲಂಕಾರವಸ್ತುಗಳು, ವಿವಿಧ ಬಟ್ಟೆಗಳು, ಆಕಳ ಹಿಂಡು, ಎಮ್ಮೆಗಳು, ಉತ್ತಮ ಸ್ತ್ರೀಯರು, ಗಜ ಕುದುರೆಗಳು, ಭಂಡಾರದ ಹಣ, ಬೆಲ್ಲ, ಎಣ್ಣೆ, ಧಾನ್ಯ, ಇವುಗಳನ್ನು ಬಂಡಿಗಳ ಮೇಲೆ ತುಂಬಿಸಿ ನೀಲಧ್ವಜನು ಪಾರ್ಥನನ್ನು ಬಂದು ಕಂಡನು. ಬಳಿಕ ಅವನನ್ನು ಅರ್ಜುನನು ಬಹಳ ಪ್ರೀತಿಯಿಂದ ಸತ್ಕರಿಸಿದನು.

(ಪದ್ಯ - ೧೯)

ಪದ್ಯ :-:೨೦:

ಸಂಪಾದಿಸಿ

ವಾಜಿ ನಡೆದುದು ಬಳಿಕ ತೆಂಕಮೊಗಮಾಗಿ ಸೇ | ನಾ ಜಾಲಸಹಿತ ನೀಲದ್ವಜಂ ಪೊರಮೊಟ್ಟ | ನಾ ಜನಪನಂ ಕೂಡಿಕೊಂಡು ಮುಂದಕೆ ಸವ್ಯಸಾಚಿ ತೆರಳಿದನಿತ್ತಲು ||
ತೇಜಮಿಲ್ಲದೆ ಮನೆಯೊಳೀಂ ಪೆಣ್ಣೊಡಲ್ಯೆಳಸು | ವೀ ಜೀವಮೇತಕೆನಗೆನುತೆ ನಿಜ ಪಲ್ಲಭನ | ರಾಜ ಗೃಹಮಂ ಬಿಟ್ಟು ಪೋದಳಾ ಜ್ವಾಲೆಯುನ್ಮುಖನೆಂಬ ತಮ್ಮನೆಡೆಗೆ ||20||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಾಜಿ ನಡೆದುದು ಬಳಿಕ ತೆಂಕಮೊಗಮಾಗಿ ಸೇನಾ ಜಾಲಸಹಿತ=[ಯಜ್ಞಾಶ್ವವು, ಬಳಿಕ ದಕ್ಷಿಣದಿಕ್ಕಿಗೆ ಸೇನೆ ಜಾಲಸಹಿತ ನಡೆಯಿತು]; ನೀಲದ್ವಜಂ ಪೊರಮೊಟ್ಟನಾ ಜನಪನಂ ಕೂಡಿಕೊಂಡು ಮುಂದಕೆ ಸವ್ಯಸಾಚಿ ತೆರಳಿದನು=[ನೀಲದ್ವಜನೂ ಜೊತೆಗೆ ಹೊರಟನು. ಆ ರಾಜನನ್ನು ಕೂಡಿಕೊಂಡು ಅರ್ಜುನನು ಮುಂದಕ್ಕೆ ತೆರಳಿದನು]; ಇತ್ತಲು ತೇಜಮ್ ಇಲ್ಲದೆ ಮನೆಯೊಳಿಂ ಪೆಣ್ಣೊಡಲ್ ಎಳಸುವೀ ಜೀವಮೇತಕೆ ಎನಗೆ ಎನುತೆ=[ಇತ್ತ ಕಳೆಇಲ್ಲದ ಮನೆಯಲ್ಲಿ, ಹೆಣ್ಣೊಡಲು/ ದೇಹ ಬೆಳೆಸುವ ಜೀವ ತನಗೆ ಏಕೆ ಎನುತ್ತಾ]; ನಿಜ ಪಲ್ಲಭನ ರಾಜ ಗೃಹಮಂ ಬಿಟ್ಟು ಪೋದಳು ಆ ಜ್ವಾಲೆಯು ಉನ್ಮುಖನೆಂಬ ತಮ್ಮನೆಡೆಗೆ=[ತನ್ನ ಪತಿಯ ರಾಜಗೃಹವನ್ನು ಬಿಟ್ಟು ಆ ಜ್ವಾಲೆಯು ಉನ್ಮುಖನೆಂಬ ತಮ್ಮನ ಕಡೆಗೆ ಹೋದಳು].
  • ತಾತ್ಪರ್ಯ:ಯಜ್ಞಾಶ್ವವು, ಬಳಿಕ ದಕ್ಷಿಣದಿಕ್ಕಿಗೆ ಸೇನೆ ಜಾಲಸಹಿತ ನಡೆಯಿತು; ನೀಲದ್ವಜನೂ ಜೊತೆಗೆ ಹೊರಟನು. ಆ ರಾಜನನ್ನು ಕೂಡಿಕೊಂಡು ಅರ್ಜುನನು ಮುಂದಕ್ಕೆ ತೆರಳಿದನು; ಇತ್ತ ಕಳೆಇಲ್ಲದ ಮನೆಯಲ್ಲಿ, ಹೆಣ್ಣೊಡಲು/ ದೇಹ ಬೆಳೆಸುವ ಜೀವ ತನಗೆ ಏಕೆ ಎನುತ್ತಾ; ತನ್ನ ಪತಿಯ ರಾಜಗೃಹವನ್ನು ಬಿಟ್ಟು ಆ ಜ್ವಾಲೆಯು ಉನ್ಮುಖನೆಂಬ ತಮ್ಮನ ಕಡೆಗೆ ಹೋದಳು.

(ಪದ್ಯ - ೨೦)

ಪದ್ಯ :-:೨೧:

ಸಂಪಾದಿಸಿ

ಉನ್ಮುಖಂ ಕಂಡಿದಿರ್ಗೊಂಡಗ್ರಜಾತೆಯಂ | ಸನ್ಮಾನಿಸಿದನೇಕೆ ಬಂದೆಯೆನೆ ಫಲುಗುಣಂ | ಮನ್ಮನೋರಥಮೆಲ್ಲಮಂ ಕಿಡಿಸಿ ಮಕ್ಕಳಂ ಕೊಂದು ಪತಿಯಂ ಗೆಲ್ದನು ||
ತನ್ಮರಣಕೊಂದು ದಾಯವನೆಸಗದಿರಲೆನ್ನ | ಜನ್ಮವೇತಕೆ ನಿನ್ನದೆಸೆಯಿಂದೆ ನರನ ವಿಲ | ಸನ್ಮೌಳಿ ಮಸ್ತಕವನರಿಸದಿರೆನೆಂದೊಡಾ ಜ್ವಾಲೆಗವನಿಂತೆಂದನು ||21||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉನ್ಮುಖಂ ಕಂಡು ಇದಿರ್ಗೊಂಡು ಅಗ್ರಜಾತೆಯಂ ಸನ್ಮಾನಿಸಿದನು=[ಉನ್ಮುಖನು ಅಕ್ಕನನ್ನು ಕಂಡು ಎದುರುಗೊಂಡು ಸನ್ಮಾನಿಸಿದನು]; ಏಕೆ ಬಂದೆಯೆನೆ ಫಲುಗುಣಂ ಮನ್ಮನೋರಥಮಂ(ನನ್ನ ಬಯಕೆಯನ್ನು) ಎಲ್ಲಮಂ ಕಿಡಿಸಿ ಮಕ್ಕಳಂ ಕೊಂದು ಪತಿಯಂ ಗೆಲ್ದನು=[ಅವನು ಆಕ್ಕಾ ನೀನು ಏಕೆ ಬಂದೆಯೆನ್ನಲು, ಫಲ್ಗುಣನು ನನ್ನ ಬಯಕೆಯನ್ನು ಎಲ್ಲವನ್ನೂ ಕೆಡಿಸಿ ಮಕ್ಕಳನ್ನು ಕೊಂದು ಪತಿಯನ್ನು ಗೆದ್ದನು]; ತನ್ (ಅವನ)ಮರಣಕೆ ಒಂದು ಉಪಾಯವನು ಎಸಗದಿರಲು ಎನ್ನ ಜನ್ಮವೇತಕೆ=[ಅವನ ಸಾವಿಗೆ ಒಂದು ದಾರಿಯನ್ನು ಮಾಡದಿದ್ದರೆ ನನ್ನ ಜನ್ಮವೇತಕ್ಕೆ ಇರಬೇಕು?]; ನಿನ್ನದೆಸೆಯಿಂದೆ ನರನ ವಿಲಸನ್ಮೌಳಿ ಮಸ್ತಕವನರಿಸದಿರೆನು ಎಂದೊಡಾ ಜ್ವಾಲೆಗೆ ಅವನಿಂತೆಂದನು=[ನಿನ್ನಕೈಯಿಂದ ಆ ನರನ ಚಂದಕಿರೀಟದ ಅವನ ತಲೆಯನ್ನು ಕಡಿಸುವೆನು, ಎಂದಾಗ ಆ ಜ್ವಾಲೆಗೆ ಅವನು ಹೀಗೆ ಹೇಳಿದನು.].
  • ತಾತ್ಪರ್ಯ:ಉನ್ಮುಖನು ಅಕ್ಕನನ್ನು ಕಂಡು ಎದುರುಗೊಂಡು ಸನ್ಮಾನಿಸಿದನು; ಅವನು ಆಕ್ಕಾ ನೀನು ಏಕೆ ಬಂದೆಯೆನ್ನಲು, ಫಲ್ಗುಣನು ನನ್ನ ಬಯಕೆಯನ್ನು ಎಲ್ಲವನ್ನೂ ಕೆಡಿಸಿ ಮಕ್ಕಳನ್ನು ಕೊಂದು ಪತಿಯನ್ನು ಗೆದ್ದನು; ಅವನ ಸಾವಿಗೆ ಒಂದು ದಾರಿಯನ್ನು ಮಾಡದಿದ್ದರೆ ನನ್ನ ಜನ್ಮವೇತಕ್ಕೆ ಇರಬೇಕು? ನಿನ್ನ ಕೈಯಿಂದ ಆ ನರನ ಚಂದಕಿರೀಟವಿರುವ ತಲೆಯನ್ನು ಕಡಿಸುವೆನು, ಎಂದಾಗ ಆ ಜ್ವಾಲೆಗೆ ಅವನು ಹೀಗೆ ಹೇಳಿದನು.].

(ಪದ್ಯ - ೨೧)

ಪದ್ಯ :-:೨೨:

ಸಂಪಾದಿಸಿ

ವಾಯಕರ್ಜುನನ ತಲೆ ಬೀಳ್ದಪುದೆ ಕೃಷ್ಣನ ಸ| ಹಾಯಮಿರಲೆಲೆ ಮರುಳೆ ಹರಿಯ ಹಗೆಗೊಂಡು ಕೆಡು | ವಾಯಸಂ ತನಗೇಕೆ ರಾಘವಂ ಮಾಡಿದುಪಹತಿಯಂ ದಶಾನನಂಗೆ ||
ದಾಯಮಂ ಪೇಳ್ದವನ ವಂಶಮಂ ಸವರಿಸಿದ | ಮಾಯಕಾತಿಯವೊಲೆನ್ನಾಲಯಕೆ ಬಂದೆನಗ | ಪಾಯಮಂ ತಾರದಿಲ್ಲಿಂದ ಪೋಗೆಂದವಳನುನ್ಮುಖಂ ಕೋಪಿಸಿದನು ||22||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ವಾಯಕೆ ಅರ್ಜುನನ ತಲೆ ಬೀಳ್ದಪುದೆ ಕೃಷ್ಣನ ಸಹಾಯಂ ಇರಲು ಎಲೆ ಮರುಳೆ ಹರಿಯ ಹಗೆಗೊಂಡು ಕೆಡುವಾಯಸಂ ತನಗೇಕೆ=[ಅವನಿಗೆ ಕೃಷ್ಣನ ಸಹಾಯ ಇರಲು, ಗಾಳಿಗೆ ಹಾರಿಸಿದಂತೆ ಸುಲಭದಲ್ಲಿ ಅರ್ಜುನನ ತಲೆ ಬೀಳುವುದೇ? ಎಲೆ ಮರುಳೆ ಹರಿಯನ್ನು ಶತ್ರುಮಾಡಿಕೊಂಡು ಕೆಡುವ ಕಷ್ಟ ತನಗೇಕೆ ಬೇಕು?]; ರಾಘವಂ ಮಾಡಿದ ಉಪಹತಿಯಂ ದಶಾನನಂಗೆ ದಾಯಮಂ(ಲಾಭ) ಪೇಳ್ದವನ ವಂಶಮಂ ಸವರಿಸಿದ=[ಹಿಂದೆ ರಾಘವನು/ ರಾಮನು ಮಾಡಿದ ತೊಂದರೆಗೆ ಶೂರ್ಪನಖಿಯು ರಾವನನಿಗೆ ಸೀತೆಯ ಲಭಿಸುವಳೆಂಬ ಲಾಬವನ್ನು ಹೇಳಿ ಅವನ ವಂಶವನ್ನು ಸವರಿಸಿದಳು]; ಮಾಯಕಾತಿಯವೊಲ್ ಎನ್ನಾಲಯಕೆ ಬಂದು ಎನಗೆ ಅಪಾಯಮಂ ತಾರದೆ ಇಲ್ಲಿಂದ ಪೋಗೆಂದು ಅವಳನು ಉನ್ಮುಖಂ ಕೋಪಿಸಿದನು=[ ಆ ಮಾಯಗಾತಿಯಂತೆ ನನ್ನ ಮನೆಗೆ ಬಂದು ನನಗೆ ಅಪಾಯವನ್ನು ತರದೆ ಇಲ್ಲಿಂದ ಹೋಗು ಎಂದು ಅವಳಿಗೆ ಉನ್ಮುಖನು ಕೋಪದಿಂದ ಹೇಳಿದನು].
  • ತಾತ್ಪರ್ಯ: ಅವನಿಗೆ ಕೃಷ್ಣನ ಸಹಾಯ ಇರಲು, ಗಾಳಿಗೆ ಹಾರಿಸಿದಂತೆ ಸುಲಭದಲ್ಲಿ ಅರ್ಜುನನ ತಲೆ ಬೀಳುವುದೇ? ಎಲೆ ಮರುಳೆ ಹರಿಯನ್ನು ಶತ್ರುಮಾಡಿಕೊಂಡು ಕೆಡುವ ಕಷ್ಟ ತನಗೇಕೆ ಬೇಕು? ಹಿಂದೆ ರಾಘವನು/ ರಾಮನು ಮಾಡಿದ ತೊಂದರೆಗೆ ಶೂರ್ಪನಖಿಯು ರಾವಣನಿಗೆ ಸೀತೆಯು ಲಭಿಸುವಳೆಂಬ ಲಾಭವನ್ನು ಹೇಳಿ ಅವನ ವಂಶವನ್ನು ಸವರಿಸಿದಳು. ಆ ಮಾಯಗಾತಿಯಂತೆ ನನ್ನ ಮನೆಗೆ ಬಂದು ನನಗೆ ಅಪಾಯವನ್ನು ತರದೆ ಇಲ್ಲಿಂದ ಹೋಗು ಎಂದು ಅವಳಿಗೆ ಉನ್ಮುಖನು ಕೋಪದಿಂದ ಹೇಳಿದನು].

(ಪದ್ಯ - ೨೨)

ಪದ್ಯ :-:೨೩:

ಸಂಪಾದಿಸಿ

ಜ್ವಾಲೆ ಬಳಿಕನುಜನಂ ಬೈದು ಕೋಪದೊಳಾತ | ನಾಲಯದೊಳಿರದೆ ಪೊರಮುಟ್ಟು ನಡೆತರೆ ಮುಂದೆ | ಲೀಲೆ ಮಿಗೆ ನಲಿನಲಿದು ಸುಳಿದಿಳಿದು ಬೆಳೆವಳಿದು ತೆಳೆದೆಳೆದು ಪೊಳೆದು ಸೆಳೆದು||
ಮೇಲೆಮೇಲೊದಗುವ ಘನಪ್ರವಾಹದ ಸುಕ | ಲ್ಲೋಲ ಮಾಲಾಕುಲದ ಬುದ್ದುದದ ಜಲ ಜಂತು | ಜಾಲದ ಲಳಿಯ ಲುಳಿಯ ಲಹರಿಗಳ ವಿಸ್ತರದವರ ಗಂಗೆಯಂ ಕಂಡಳು ||23||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಜ್ವಾಲೆ ಬಳಿಕ ಅನುಜನಂ ಬೈದು ಕೋಪದೊಳ್ ಆತನ ಆಲಯದೊಳು ಇರದೆ ಪೊರಮುಟ್ಟು ನಡೆತರೆ=[ಜ್ವಾಲೆಯು ಬಳಿಕ ಅಣ್ಣನನ್ನು ಬೈದು ಕೋಪದಿಂದ ಆತನ ಅರಮನೆಯಲ್ಲಿ ಇರದೆ ಹೊರಟು ನಡೆಯಲು,]; ಮುಂದೆ ಲೀಲೆ ಮಿಗೆ ನಲಿನಲಿದು ಸುಳಿದ ಇಳಿದು ಬೆಳೆವಳಿದು ತೆಳೆದೆಳೆದು ಪೊಳೆದು ಸೆಳೆದು ಮೇಲೆಮೇಲೆ ಒದಗುವ ಘನಪ್ರವಾಹದ ಸುಕಲ್ಲೋಲ ಮಾಲಾಕುಲದ ಬುದ್ದುದದ ಜಲ ಜಂತು ಜಾಲದ ಲಳಿಯ ಲಹರಿಗಳ ವಿಸ್ತರದ ವರ ಗಂಗೆಯಂ ಕಂಡಳು=[ ಮುಂದೆ ಅತಿಯಾದ ಲೀಲೆಯಿಂದ (ಸಂತಸದಿಂದ) ನಲಿನಲಿದು ಸುಳಿದು ಸುತ್ತಿ, ಇಳಿದು-ಧುಮುಕಿಜಾರುತ್ತಾ ಬೆಳೆವಳಿದು-ಅಗಲವಾಗಿ ಮತ್ತೆ ಕಿರಿದಾಗಿ ಹರಿದು, ತೆಳೆದೆಳೆದು-ತೆಳ್ಳಗಾದಂತೆ ಮತ್ತೆ ಎಳದುವೇಗವಾಗಿ, ಹೊಳೆಯುತ್ತಾ ಸೆಳೆವಿನಿಂದ ಕೂಡಿ, ಮೇಲೆಮೇಲೆ ಹೆಚ್ಚಾಗುವ ಘನಪ್ರವಾಹದ ಸೊಗಸಾದ ಕಲ್ಲೋಲ ಶಬ್ದದಿಂದ ಸಾಲು ಸಾಲಾಗಿ ಬರುವ ಬುದ್ದುದದ ಗುಳ್ಳೆಗಳ ಜಲ ಜಂತು ಜಾಲದ, ಸುಳಿಯ ಲಹರಿಗಳ ವಿಸ್ತಾರವಾದ ಪೂಜ್ಯ ಗಂಗೆಯನ್ನು ಕಂಡಳು.
  • ತಾತ್ಪರ್ಯ:ಜ್ವಾಲೆಯು ಬಳಿಕ ಅಣ್ಣನನ್ನು ಬೈದು ಕೋಪದಿಂದ ಆತನ ಅರಮನೆಯಲ್ಲಿ ಇರದೆ ಹೊರಟು ನಡೆಯಲು, ಮುಂದೆ ಅತಿ ಲೀಲೆಯಿಂದ (ಸಂತಸದಿಂದ) ನಲಿನಲಿದು ಸುಳಿದು ಸುತ್ತಿ, ಇಳಿದು-ಧುಮುಕಿಜಾರುತ್ತಾ ಅಗಲವಾಗಿ ಮತ್ತೆ ಕಿರಿದಾಗಿ ಹರಿದು,ತೆಳ್ಳಗಾದಂತೆ ಮತ್ತೆ ಎಳದು ವೇಗವಾಗಿ, ಹೊಳೆಯುತ್ತಾ ಸೆಳೆವಿನಿಂದ ಕೂಡಿ, ಮೇಲೆಮೇಲೆ ಹೆಚ್ಚಾಗುವ ಘನಪ್ರವಾಹದ ಸೊಗಸಾದ ಕಲ್ಲೋಲ ಶಬ್ದದಿಂದ ಸಾಲು ಸಾಲಾಗಿ ಬರುವ ಬುದ್ದುದದ ಗುಳ್ಳೆಗಳಿಂದಕೂಡಿ, ಜಲ ಜಂತು ಜಾಲವನ್ನು ಹೊಂದಿದ, ಸುಳಿಯ ಲಹರಿಗಳ ವಿಸ್ತಾರವಾದ ಪೂಜ್ಯ ಗಂಗೆಯನ್ನು ಕಂಡಳು.

(ಪದ್ಯ - ೨೩)

ಪದ್ಯ :-:೨೪:

ಸಂಪಾದಿಸಿ

ತೆಳುವುಡಿಯ ಮಳಲಿಡಿಯಲಿತ್ತಡಿಯ ತಳಗಡಿಯ | ಪÉÇಳೆ ನೆರೆಯಲುರೆ ಪೊರೆಯಲೊಳ್ದೊರೆಯ ಬೆಳ್ನೊರೆಯ | ತೊಳಪೆಳೆಯ ಮೀನ್ವೊಳೆಯಲಿರದೆಳೆಯಲೆಡೆ ಸೆಳೆಯ ತುಂತುರಿನ ತನಿಗೆದರಿನ ||
ಸುಳಿಸುಳಿಯಸವ್ಯಳಿಯ ಬೊಬ್ಬುಳಿಯ ಕಡಲುಳಿಯ | ಜಳಚರದ ತರತರದ ಶೀಖರದ ಭೀಕರದ | ತುಳ ಗಂಗೆ ಸುತರಂಗೆ ನೋಳ್ಪಂಗೆ ಶಲೆ ಕಂಗೆಸೆದಳಂದು ದಿವಿಜಸಿಂಧು ||24||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • (ಒಂದೇ ಪದಕ್ಕೆ ಎರರೆರಡು ಅರ್ಥದಲ್ಲಿ- ಆದರೆ ಹೊಂದಾಣಿಕೆ ಕಷ್ಟ; ಸ್ಥಾವರದ ವಸ್ತುಗಳು-ಮಾನವ ರೂಪಕ್ಕೆ- ಹೋಲಿಕೆ))ತೆಳುವುಡಿಯ= (ನೊರೆಯ)ತೆಳು ವುಡಿಯ- ಉಡುಗೆ, ಮಳಲ ಇಡಿಯಲಿ ಇತ್ತಡಿಯ ತಳಗಡಿಯ ಪೊಳೆ ನೆರೆಯಲುರೆ ಪೊರೆಯಲೊಳ್ದೊರೆಯ ಬೆಳ್ನೊರೆಯ ತೊಳಪೆಳೆಯ=[ನೊರೆಯ ತೆಳುವಾದ ಉಡಿಗೆಯ, ತಳದಲ್ಲಿರುವ ಮಳಲ ಇಡುವ ನೆಲಸುವ ಪೀಠ; ಇತ್ತಡಿಯ-ಎರಡು ತಡೆಯುಳ್ಳ ದಡಗಳು, ತಳಗಡಿಯ-ಕೆಳಗೆ ಎಂದರೆ ಅಡಿಯ ಪೊಳೆ-ಹೊಳೆ ತಳದಲ್ಲಿ ಎಂದರೆ ಅಡಿ(ಅದೇ ಪಾದಕ್ಕೆ) ನೆರೆಯಲು- ಬಹಳ ನೀರು ಬರಲು, (ಜನಸೇರಲು) ಉರೆ/ ಹೆಚ್ಚು (ಪೊರೆಯಲು-ಕಾಪಾಡಲು), ಒಳ್ದೊರೆಯ- ಒಳ್ಳೆ ತೊರೆ-ಉಪನದಯಿಂದ ಕೂಡಿದ, ಹೊಳೆಯ (ಒಳ್ಳೆ ದೊರೆಯ) ಬೆಳ್ನೊರೆಯ= ಬಿಳಿ ನೊರಯ, ತೊಳಪೆಳೆಯ- ಹೊಳೆಯುವ ಎಳಯ]: ಮೀನ್ವೊಳೆಯಲಿರದೆಳೆಯಲೆಡೆ-ಮೀನ್ ಒ/ಹೊಳೆಯಲಿರದೆ ಎಳೆಯಲು ಎಡೆ ಸೆಳೆಯ(ಸಾಯಲು) ತುಂತುರಿನ ತನಿಗೆದರಿನ ಸುಳಿಸುಳಿಯಸವ್ಯಳಿಯ ಬೊಬ್ಬುಳಿಯ ಕಡಲುಳಿಯ (ಉಳಿ- ಹಕ್ಕಿ)=[ಮೀನ್ ಒಳೆಯಲು ಇರದೆ, ಎಳೆಯಲು (ಹೊರತೆಗೆದಾಗ) ಎಡೆಸೆಳೆಯ(ಸಾವುಬರಲು), ತುಂತುರಿನ ತನಿಗೆದರಿನ- ನೀರಿನ ಹನಿಗಳ ಸುಳಿಸುಳಿಯ-ಸುಳಿಗಳ, ಸವ್ಯಳಿಯ- ಸುಳಿಯ ಸುತ್ತವಿಕೆ ಬೊಬ್ಬುಳಿಯ-ನೊರೆಗಳ, ಕಡಲುಳಿಯ- ಸಮುದ್ರದ ಹಕ್ಕಿಯ],ಜಳಚರದ ತರತರದ ಸೀಕರದ ಭೀಕರದ ಅತುಳ ಗಂಗೆ ಸುತರಂಗೆ ನೋಳ್ಪಂಗೆ ಶಲೆ ಕಂಗೆಸೆದಳಂದು ದಿವಿಜಸಿಂಧು.=[ಜಲಚರದ ನೀರನಲ್ಲಿರುವ ಜೀವಿಗಳ, ತರತರದ/ನಾನಾಬಗೆಯ, ಸೀಕರದ/ ತುಂತುರಿನ, ಭೀಕರದ-ಭಯಹುಟ್ಟಿಸುವ ಅತುಳ/ದೊಡ್ಡ ಗಂಗೆ ಸುತರಂಗೆ/ ಒಳ್ಳೆಯ ತರಂಗದ ಅಥವಾ ತೆರೆಯುಳ್ಳ, ನೋಡುವವರಿಗೆ ಅಂದು ಆ ದೇವಗಂಗೆ ಬಹಳ ಚೆನ್ನಾಗಿ ಕಾಣಿಸಿದಳು.]
  • ತಾತ್ಪರ್ಯ:(ಒಂದೇ ಪದಕ್ಕೆ ಎರರೆರಡು ಅರ್ಥದಲ್ಲಿ ಚಮತ್ಕಾರಗಿ ಉಪಯೋಗಿಸಿದಂತೆ ಕಾಣುವುದು;ಆದರೆ ಹೊಂದಾಣಿಕೆ ಕಷ್ಟ; ಸ್ಥಾವರದ ವಸ್ತುಗಳು-ಮಾನವ ರೂಪಕ್ಕೆ- ಹೋಲಿಕೆ -ಗಂಗಾನದಿಯ ವರ್ಣನೆ)ನೊರೆಯ ತೆಳುವಾದ ಉಡಿಗೆಯ, ತಳದಲ್ಲಿರುವ ಮಳಲ ಇಡುವ ನೆಲಸುವ ಪೀಠ; ಇತ್ತಡಿಯ-ಎರಡು ತಡೆಯುಳ್ಳ ದಡಗಳು, ತಳಗಡಿಯ-ಕೆಳಗೆ ಎಂದರೆ ಅಡಿಯ ಪೊಳೆ-ಹೊಳೆ ತಳದಲ್ಲಿ ಎಂದರೆ ಅಡಿ(ಅದೇ ಪಾದಕ್ಕೆ) ನೆರೆಯಲು- ಬಹಳ ನೀರು ಬರಲು, (ಜನಸೇರಲು) ಉರೆ/ ಹೆಚ್ಚು (ಪೊರೆಯಲು-ಕಾಪಾಡಲು), ಒಳ್ದೊರೆಯ- ಒಳ್ಳೆ ತೊರೆ-ಉಪನದಯಿಂದ ಕೂಡಿದ, ಹೊಳೆಯ (ಒಳ್ಳೆ ದೊರೆಯ) ಬೆಳ್ನೊರೆಯ= ಬಿಳಿ ನೊರಯ, ತೊಳಪೆಳೆಯ- ಹೊಳೆಯುವ ಎಳಯ ಮೀನ್ ಒಳೆಯಲು ಇರದೆ, ಎಳೆಯಲು (ಹೊರತೆಗೆದಾಗ) ಎಡೆಸೆಳೆಯ(ಸಾವುಬರಲು), ತುಂತುರಿನ ತನಿಗೆದರಿನ- ನೀರಿನ ಹನಿಗಳ ಸುಳಿಸುಳಿಯ-ಸುಳಿಗಳ, ಸವ್ಯಳಿಯ- ಸುಳಿಯ ಸುತ್ತವಿಕೆ ಬೊಬ್ಬುಳಿಯ-ನೊರೆಗಳ, ಕಡಲುಳಿಯ- ಸಮುದ್ರದ ಹಕ್ಕಿಯ], ಜಲಚರದ ನೀರನಲ್ಲಿರುವ ಜೀವಿಗಳ, ತರತರದ/ನಾನಾಬಗೆಯ, ಸೀಕರದ/ ತುಂತುರಿನ, ಭೀಕರದ-ಭಯಹುಟ್ಟಿಸುವ ಅತುಳ/ದೊಡ್ಡ ಗಂಗೆ ಸು-ತರಂಗೆ/ ಒಳ್ಳೆಯ ತರಂಗದ ಅಥವಾ ತೆರೆಯುಳ್ಳ, ನೋಡುವವರಿಗೆ ಆ ದೇವಗಂಗೆ ಅಂದು ಬಹಳ ಚೆನ್ನಾಗಿ ಕಾಣಿಸಿದಳು.

(ಪದ್ಯ - ೨೪)

ಪದ್ಯ :-:೨೫:

ಸಂಪಾದಿಸಿ

ಕೂರ್ಮೆಗಡಿಯಾಗಿರ್ಪ ಗುಣ್ಪಿಂದ ತನ್ನೆಡೆಯೊ | ಳಾರ್ಮುಳುಗಲವರಿಂದ್ರರಹರೆಂಬ ಪೆಂಪಿಂದೆ | ಘೂರ್ಮಿಸುವ ಗಂಗಾಪ್ರವಾಹಮಂ ಕಂಡಳಾ ಜ್ವಾಲೆ ಬಳಿಕಲ್ಲಿ ನಿಂದು ||
ಧಾರ್ಮಿಕರಿವರೊಳುಂಟೆ ತನ್ನ ನೆಂತಾದೊಡಂ | ನೀರ್ಮುಟ್ಟದಂತೊಯ್ಯನಾ ತಡಿಗೆ ದಾಂಟಿಸುವ | ಕೂರ್ಮೆಯುಳ್ಳವರೆಂದೊಡಲ್ಲಿರ್ದ ನಾವಿಕರ್ ಕೇಳ್ದವಳ್ಗಿಂತೆಂದರು ||25||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಕೂರ್ಮೆಗೆ ಅಡಿಯಾಗಿ ಇರ್ಪ ಗುಣ್ಪಿಂದ ತನ್ನೆಡೆಯೊಳು ಆರ್ಮುಳುಗಲು ಅವರು ಇಂದ್ರರಹರೆಂಬ ಪೆಂಪಿಂದೆ ಘೂರ್ಮಿಸುವ (ಸುರುಳಿಸುರಳಿಯಾಗಿ ಹರಿಯುವ) ಗಂಗಾಪ್ರವಾಹಮಂ ಕಂಡಳಾ ಜ್ವಾಲೆ ಬಳಿಕಲ್ಲಿ=[ದಯೆ ಪ್ರೀತಿಗಳಿಗೆ ಆಧಾರವಾಗಿರುವ ತನ್ನ ಗೂಣದಿಂದ ತನ್ನಲ್ಲಿ ಯಾರೇ ಸ್ನಾನ ಮಾಡಲು, ಅವರು ಇಂದ್ರಸಮಾನರು ಆಗುವರು ಎಂಬ, ಪ್ರಸಿದ್ಧಿಯಿಂದ ಹರಿಯುವ ಗಂಗಾಪ್ರವಾಹವನ್ನು ಆ ಜ್ವಾಲೆ ಕಂಡಳು. ಬಳಿಕ ಅಲ್ಲಿ]; ನಿಂದು ಧಾರ್ಮಿಕರು ಇವರೊಳು ಉಂಟೆ ತನ್ನನು ಎಂತಾದೊಡಂ ನೀರ್ಮುಟ್ಟದಂತೆ ಒಯ್ಯನೆ ಆ ತಡಿಗೆ ದಾಂಟಿಸುವ ಕೂರ್ಮೆಯುಳ್ಳವರು ಎಂದೊಡೆ ಅಲ್ಲಿರ್ದ ನಾವಿಕರ್ ಕೇಳ್ದು ಅವಳ್ಗೆ ಇಂತೆಂದರು=[ಬಳಿಕ ಅಲ್ಲಿ ನಿಂತು ತನ್ನನು ಹೇಗಾದರೂ ನೀರನ್ನು ಮುಟ್ಟದಂತೆ ಜೋಪಾನವಾಗಿ ಆ ದಡಕ್ಕೆ ದಾಟಿಸುವ ಧಾರ್ಮಿಕರು ದಯವಿರುವವರು ಇಲ್ಲಿರವವರಲ್ಲಿ ಇದ್ದಾರೆಯೇ? ಎಂದಾಗ ಅಲ್ಲಿದ್ದ ನಾವಿಕರು ಕೇಳಿ ಅವಳಿಗೆ ಹೀಗೆ ಹೇಳಿದರು.]
  • ತಾತ್ಪರ್ಯ:ದಯೆ ಪ್ರೀತಿಗಳಿಗೆ ಆಧಾರವಾಗಿರುವ ತನ್ನ ಗೂಣದಿಂದ ತನ್ನಲ್ಲಿ ಯಾರೇ ಸ್ನಾನ ಮಾಡಲು, ಅವರು ಇಂದ್ರಸಮಾನರು ಆಗುವರು ಎಂಬ, ಪ್ರಸಿದ್ಧಿಯಿಂದ ಹರಿಯುವ ಗಂಗಾಪ್ರವಾಹವನ್ನು ಆ ಜ್ವಾಲೆ ಕಂಡಳು. ಬಳಿಕ ಅಲ್ಲಿ ನಿಂತು, ಬಳಿಕ ಅಲ್ಲಿ ನಿಂತು ತನ್ನನು ಹೇಗಾದರೂ ನೀರನ್ನು ಮುಟ್ಟದಂತೆ ಜೋಪಾನವಾಗಿ ಆ ದಡಕ್ಕೆ ದಾಟಿಸುವ ಧಾರ್ಮಿಕರು ದಯವಿರುವವರು ಇಲ್ಲಿರವವರಲ್ಲಿ ಇದ್ದಾರೆಯೇ? ಎಂದಾಗ ಅಲ್ಲಿದ್ದ ನಾವಿಕರು ಕೇಳಿ ಅವಳಿಗೆ ಹೀಗೆ ಹೇಳಿದರು.

(ಪದ್ಯ - ೨೫)

ಪದ್ಯ :-:೨೬:

ಸಂಪಾದಿಸಿ

*ಬಿಂದುಮಾತ್ರಂ ಮೇಲೆ ಬೀಳಲ್ಕೆ ವಿಪ್ರನಂ ಕೊಂದ ಪಾಪಂ ಪೋಪುದಿಲ್ಲಿ ಮಿಂದವನ ಗತಿ | ಯಂದಮಂ ಬಣ್ಣಿಸುವೊಡಜನ ಪವಣಲ್ಲ ನೀನಿಲ್ಲಿಗೇನಂ ಪ್ರಾರ್ಥಿಸಿ ||
ಬಂದೆ ಗಂಗಾಂಬುವಂ ಮುಟ್ಟದಿರಬಹುದೆ ಪೇ | ಳೆಂದೊಡಾ ಜ್ವಾಲೆ ನುಡಿದಳ್ ಜಾಹ್ನವಿಗೆ ದೋಷ | ಮೊಂದಿಹುದು ನಿಮಗೊರೆವುದಿಲ್ಲಮವಳೆನಗೆ ಮೈದೋರಲುಸಿರುವೆನೆಂದಳು ||26||

  • ತಾತ್ಪರ್ಯ:
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಿಂದುಮಾತ್ರಂ ಮೇಲೆ ಬೀಳಲ್ಕೆ ವಿಪ್ರನಂ ಕೊಂದ ಪಾಪಂ ಪೋಪುದಿಲ್ಲಿ=[ಗಂಗಾಜಲವು ಬಿಂದುಮಾತ್ರ ಮೈಮೇಲೆ ಮೇಲೆ ಬೀಳಲು ವಿಪ್ರನನ್ನು ಕೊಂದ ಪಾಪವೂ ಇಲ್ಲಿ ಹೋಗುವುದು]; ಮಿಂದವನ ಗತಿಯಂದಮಂ ಬಣ್ಣಿಸುವೊಡೆ ಅಜನ ಪವಣಲ್ಲ ನೀನಿಲ್ಲಿಗೇನಂ ಪ್ರಾರ್ಥಿಸಿ ಬಂದೆ ಗಂಗಾ ಅಂಬುವಂ ಮುಟ್ಟದೆ ಇರಬಹುದೆ ಪೇಳೆಂದೊಡೆ=[ಸ್ನಾನ ಮಾಡಿದವನ ಸದ್ಗತಿಯನ್ನು ಬಣ್ಣಿಸಲು ಬ್ರಹ್ಮನಿಗೂ ಆಗದು. ನೀನು ಇಲ್ಲಿಗೆ ಏನನ್ನು ಪ್ರಾರ್ಥಿಸಿಕೊಳ್ಳು ಬಂದಿರುವೆ? ಗಂಗಾ ಜಲವನ್ನು ಮುಟ್ಟದೆ ಇರಬಹುದೆ ಹೇಳು ಎಂದು ಅಂಬಿಗರು ಹೇಳಿದಾಗ]; ಜ್ವಾಲೆ ನುಡಿದಳ್ ಜಾಹ್ನವಿಗೆ ದೋಷಮ್ ಒಂದಿಹುದು ನಿಮಗೆ ಓರೆವುದಿಲ್ಲಮು ಅವಳೆನಗೆ ಮೈದೋರಲು ಉಸಿರುವೆನು ಎಂದಳು=[ಜ್ವಾಲೆ ಹೇಳಿದಳು- ಜಾಹ್ನವಿಗೆ ಒಂದು ದೋಷವು ಇದೆ ನಿಮಗೆ ಹೇಳುವುದಿಲ್ಲ. ಗಂಗೆಯೇ ನನಗೆ ಮೈದೋರಿದರೆ ಹೇಳುವೆನು ಎಂದಳು].
  • ತಾತ್ಪರ್ಯ:ಗಂಗಾಜಲವು ಬಿಂದುಮಾತ್ರ ಮೈಮೇಲೆ ಮೇಲೆ ಬೀಳಲು ವಿಪ್ರನನ್ನು ಕೊಂದ ಪಾಪವೂ ಇಲ್ಲಿ ಹೋಗುವುದು; ಸ್ನಾನ ಮಾಡಿದವನ ಸದ್ಗತಿಯನ್ನು ಬಣ್ಣಿಸಲು ಬ್ರಹ್ಮನಿಗೂ ಆಗದು. ನೀನು ಇಲ್ಲಿಗೆ ಏನನ್ನು ಪ್ರಾರ್ಥಿಸಿಕೊಳ್ಳು ಬಂದಿರುವೆ? ಗಂಗಾ ಜಲವನ್ನು ಮುಟ್ಟದೆ ಇರಬಹುದೆ ಹೇಳು ಎಂದು ಅಂಬಿಗರು ಹೇಳಿದಾಗ; ಜ್ವಾಲೆ ಹೇಳಿದಳು- ಜಾಹ್ನವಿಗೆ ಒಂದು ದೋಷವು ಇದೆ, ನಿಮಗೆ ಹೇಳುವುದಿಲ್ಲ. ಗಂಗೆಯೇ ನನಗೆ ಮೈದೋರಿದರೆ ಹೇಳುವೆನು ಎಂದಳು.

(ಪದ್ಯ - ೨೬)

ಪದ್ಯ :-:೨೭:

ಸಂಪಾದಿಸಿ

*ನ್ಯೆಜದಿಂದಜನ ಕರಪಾತ್ರದಗ್ರೋದಕಂ | ವೈಜಯಂತೀಧರನ ಪಾದಾಂಬು ಶಿವನ ತಲೆ | ಯೈಡೆಟೆವೆಳೆಸಿಗೆರೆದ ಜೀವನಂ ತಾನಂತುಮಲ್ಲದತಿ ಪಾಪಂಗಳ ||
ಮೈಜೋಡನುಗಿದು ಬಿಸುಡುವ ಗಂಗೆ ಬೆದರಿದೆಳ್ |ತ್ರೈಜಗದೊಳಪವಾದಕಂಜದವರುಂಟೆ ಕೇ|ಳೈಜನಪ ಪೊರಮುಟ್ಟಳವಳೆಂದ ನುಡಿಗೆ ನಡುಗಿ ||27||(ತ್ರೈಜನಪ ಜಲದೆ ಜಾಹ್ನವಿ ಕೇಳ್ದು)

  • ತಾತ್ಪರ್ಯ:
ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನ್ಯೆಜದಿಂದ ಅಜನ ಕರಪಾತ್ರದ ಅಗ್ರೋದಕಂ, ವೈಜಯಂತೀಧರನ ಪಾದಾಂಬು, ಶಿವನ ತಲೆಗೆ ಐಜಡೆವೆಳೆಸಿ ಏಗೆರೆದ ಜೀವನ=[ನಿಜರೋಪದಲ್ಲಿ ಬ್ರಹ್ಮನನ ಕಮಂಡಲದಿಂದ ಬಂದ ಶ್ರೇಷ್ಟ ಜಲ; ವಿಷ್ಣುವುನ ಪಾದದಿಂದ ಉದಿಸಿದವಳು, ಶಿವನ ತಲೆಯ ಐದುಜಡೆಯೆಳೆಯಲ್ಲಿ ಸುತ್ತಿದ್ದರಲ್ಲಿ ಮೇಲೆ ನಿಂತವಳು]; ತಾನಂತುಂ ಅಲ್ಲದ ಅತಿ ಪಾಪಂಗಳ ಮೈಜೋಡನು ಉಗಿದು ಬಿಸುಡುವ ಗಂಗೆ ಬೆದರಿದೆಳ್,=[ತಾನು ನಿಜದಲ್ಲಿ ಎಲ್ಲಾ ಅತಿ ಪಾಪಗಳು ಮೈಗೆ ಅಂಟಿದುದನ್ನು ಎಳದು ತೆಗೆದು ಬಿಸುಡುವ ಗಂಗೆ ಬೆದರಿದೆಳು]; ತ್ರೈಜಗದೊಳಪವಾದಕಂಜದವರುಂಟೆ ಕೇಳೈಜನಪ ಪೊರಮುಟ್ಟಳವಳೆಂದ ನುಡಿಗೆ ನಡುಗಿ=[ತ್ರೈಜಗದೊಳು ಅಪವಾದಕೆ ಅಂಜದವರು ಇರುವರೇ?, ರಾಜನೇ ಕೇಳು,ಗಂಗೆ ಅವಳ ಹೇಳಿದ ಮಾತಿಗೆ ನಡುಗಿ ಹೊರಬಂದಳು].
  • ತಾತ್ಪರ್ಯ:ನಿಜರೋಪದಲ್ಲಿ ಬ್ರಹ್ಮನನ ಕಮಂಡಲದಿಂದ ಬಂದ ಶ್ರೇಷ್ಟ ಜಲ; ವಿಷ್ಣುವುನ ಪಾದದಿಂದ ಉದಿಸಿದವಳು, ಶಿವನ ತಲೆಯ ಐದುಜಡೆಯೆಳೆಯಲ್ಲಿ ಸುತ್ತಿದ್ದರಲ್ಲಿ ಮೇಲೆ ನಿಂತವಳು; ತಾನು ನಿಜದಲ್ಲಿ ಎಲ್ಲಾ ಅತಿ ಪಾಪಗಳು ಮೈಗೆ ಅಂಟಿದುದನ್ನು ಎಳದು ತೆಗೆದು ಬಿಸುಡುವ ಗಂಗೆ ಬೆದರಿದೆಳು; ಮೂರುಜಗತ್ತಿನಲ್ಲಿ ಅಪವಾದಕ್ಕೆ ಅಂಜದವರು ಇರುವರೇ?, ರಾಜನೇ ಕೇಳು, ಗಂಗೆ ಅವಳ ಹೇಳಿದ ಮಾತಿಗೆ ನಡುಗಿ ಹೊರಬಂದಳು.

(ಪದ್ಯ - ೨೭)XVI

ಪದ್ಯ :-:೨೮:

ಸಂಪಾದಿಸಿ

*ಅಂಬುರುಹ ರೋಲಂಬ ಮತ್ಸ್ಯ ಕಚ್ಛಪ ವಾರಿ | ಕಂಬು ಶೀಕರ ಚಕ್ರವಾಕ ಶೈವಾಲ ಕಾ | ದಂಬ ಗಂಭೀರ ಸೈಕತ ಮೃಣಾಳಂಗಳಿವು ತನಗವಯಂಗಳಾಗೆ ||
ಇಂಬಾದ ಸೌಂದರ್ಯಮಾ ನದಿಯ ನಡುವೆ ಪ್ರತಿ | ಬಿಂಬಿಸಿದೊಲಿರೆ ದಿವ್ಯ ರೂಪನಳವಡಿಸಿ ಜಗ | ದಂಬೆ ಜಾಹ್ನವಿ ಸಲಿಲ ಮದ್ಯದಿಂದೆದ್ದು ಬಂದಾ ಜ್ವಾಲೆಯಂ ಕೇಳ್ದುಳು ||28||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಅಂಬುರುಹ=ಕಮಲ, ರೋಲಂಬ=ಜೇನು, ಮತ್ಸ್ಯ= ಮೀನು, ಕಚ್ಛಪ= ಆಮೆ, ವಾರಿಕಂಬು= ನೀರಿನಲ್ಲಹುಟ್ಟಿದ- ಶೀಕರ= ನೀರತುಂತುರು ಹನಿ, ಚಕ್ರವಾಕ= ಪಕ್ಷಿ, ಶೈವಾಲ= ಪಾಚಿ, ಕಾದಂಬ= ಹಂಸ, ಕದಂಬ ಪುಷ್ಪದ ಸೊಗಸು, ಗಂಭೀರ ಸೈಕತ= ಮರಳು ಮರಳು ದಿನ್ನೆ, ಮೃಣಾಳಂಗಳು= ತಾವರೆದಂಟು, ಇವು ತನಗೆ ಅವಯಂಗಳು ಆಗೆ= ಗಂಗೆಗೆ ದೇಹದ ಅಂಗಾಂಗಳು ಆಗಿರಲು, ಇಂಬಾದ= ಮನೋಹರ ಸೌಂದರ್ಯಮು= ಅಂದವು, ಆ ನದಿಯ ನಡುವೆ ಪ್ರತಿ ಬಿಂಬಿಸಿದೊವೊಲ್ ಇರೆ= ಆ ನದಿಯ ನಡುವೆ ಇದೆಲ್ಲಾ ಮೈಗೂಡಿದಂತೆ; ದಿವ್ಯ ರೂಪನು ಅಳವಡಿಸಿ ಜಗದಂಬೆ ಜಾಹ್ನವಿ= ದಿವ್ಯ ರೂಪವನ್ನು ಪಡೆದುಕೊಂಡು, ಜಗದಂಬೆಯಾದ ಜಾಹ್ನವಿಯಾಧ ಗಂಗೆಯು; ಸಲಿಲ ಮದ್ಯದಿಂದೆದ್ದು ಬಂದಾ ಜ್ವಾಲೆಯಂ ಕೇಳ್ದುಳು= ನದಿಯ ಮಧ್ಯದಿಂದ ದೆದ್ದು ಬಂದು ಆ ಜ್ವಾಲೆಯನ್ನು ಕೇಳಿದಳು.
  • ತಾತ್ಪರ್ಯ:ಗಂಗಾ ನದಿಯಲ್ಲರುವ,ಕಮಲ,ಕಮಲದಜೊತೆ ಜೇನು, ಮೀನು, ಆಮೆ, ನೀರಿನಲ್ಲಹುಟ್ಟಿದ- ನೀರತುಂತುರು ಹನಿ, ಪಕ್ಷಿ, ಪಾಚಿ,ಹಂಸ, ಕದಂಬ ಪುಷ್ಪದ ಸೊಗಸು, ಮರಳು ಮರಳು ದಿನ್ನೆ, ತಾವರೆದಂಟು ಎಲೆ, ಇವು ಗಂಗೆಗೆ ದೇಹದ ಅಂಗಾಂಗಳು ಆಗಿರಲು,ಮನೋಹರ ಸೌಂದರ್ಯವು ಆ ನದಿಯ ನಡುವೆ ಇದೆಲ್ಲಾ ಮೈಗೂಡಿದಂತೆ, ದಿವ್ಯ ರೂಪವನ್ನು ಪಡೆದುಕೊಂಡು, ಜಗದಂಬೆಯಾದ ಜಾಹ್ನವಿಯಾದ ಗಂಗೆಯು, ನದಿಯ ಮಧ್ಯದಿಂದ ಎದ್ದು ಬಂದು ಆ ಜ್ವಾಲೆಯನ್ನು ಕೇಳಿದಳು.

(ಪದ್ಯ - ೨೮)

ಪದ್ಯ :-:೨೯:

ಸಂಪಾದಿಸಿ

*ದೋಷ ಹರೆ ತಾನೆಂದು ವೇದ ಶಾಸ್ತ್ರಂಗಳುರೆ | ಘೋಷಿಫುವು ಮುಟ್ಟಲಾಗದು ತನ್ನನೆಂದು ನೀಂ | ದೂಷಿಸುವ ಕಾರಣಮದಾವುದೌ ಜ್ವಾಲೆ ಪೇಳೆಂದು ಜಾಹ್ನವಿ ನುಡಿಯಲು ||
ದೂಷಣದ ಮಾತನಾಡುವಳಲ್ಲ ಲೋಕದ ಸು | ಭಾಷಿತವನುಸಿರಬೇಹುದು ಪುತ್ರರಿಲ್ಲದಿಹ | ಯೋಷೆಯಂಗಸ್ಪರ್ಶನಂ ಪಾಪಮೆಂಬರದಕಾಗಿ ಬೆದರಿದೆನೆಂದಳು ||29||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ದೋಷಹರೆ ತಾನೆಂದು ವೇದ ಶಾಸ್ತ್ರಂಗಳು ಉರೆ ಘೋಷಿಫುವು=[ದೋಷಗಳನ್ನು ಪರಿಹರಿಸುವಳು ಗಂಗೆವೇದ ಶಾಸ್ತ್ರಗಳು ಹೇಳುವುವು.]; ಮುಟ್ಟಲಾಗದು ತನ್ನನೆಂದು ನೀಂ ದೂಷಿಸುವ ಕಾರಣಮ್ ಅದಾವುದೌ ಜ್ವಾಲೆ ಪೇಳೆಂದು ಜಾಹ್ನವಿ ನುಡಿಯಲು=[ ತನ್ನನ್ನು ಮುಟ್ಟಬಾರದು ಎಂದು ನೀನು ದೂಷಿಸುವ ಕಾರಣ ಅದು ಯಾವುದು, ಜ್ವಾಲೆ ಹೇಳು ಎಂದು ಜಾಹ್ನವಿ ನುಡಿದಾಗ,]; ದೂಷಣದ ಮಾತನಾಡುವಳಲ್ಲ ಲೋಕದ ಸುಭಾಷಿತವನು ಉಸಿರಬೇಹುದು ಪುತ್ರರಿಲ್ಲದಿಹ ಯೋಷೆಯ ಅಂಗಸ್ಪರ್ಶನಂ ಪಾಪಮೆಂಬರು ಅದಕಾಗಿ ಬೆದರಿದೆನು ಎಂದಳು=[ತಾನು ಸುಮ್ಮನೆ ದೂರುವುದಕ್ಕಾಗಿ ಮಾತನಾಡುವವಳಲ್ಲ; ಲೋಕದ ಸುಭಾಷಿತವೇ ಇದೆ, ಅದನ್ನು ಹೇಳುವುದಾದರೆ :'ಪುತ್ರರು ಇಲ್ಲದಿರುವ ಬಂಜೆಯ(ಯೋಷೆಯ) ದೇಹಸ್ಪರ್ಶವು ಪಾಪ',ಎನ್ನುವರು. ಅದಕ್ಕಾಗಿ ಹೆದರಿದೆನು ಎಂದಳು].
  • ತಾತ್ಪರ್ಯ:ದೋಷಗಳನ್ನು ಪರಿಹರಿಸುವಳು ಗಂಗೆವೇದ ಶಾಸ್ತ್ರಗಳು ಹೇಳುವುವು. ತನ್ನನ್ನು ಮುಟ್ಟಬಾರದು ಎಂದು ನೀನು ದೂಷಿಸುವ ಕಾರಣ ಅದು ಯಾವುದು, ಜ್ವಾಲೆ ಹೇಳು ಎಂದು ಜಾಹ್ನವಿ ನುಡಿದಾಗ, ತಾನು ಸುಮ್ಮನೆ ದೂರುವುದಕ್ಕಾಗಿ ಮಾತನಾಡುವವಳಲ್ಲ; ಲೋಕದ ಸುಭಾಷಿತವೇ ಇದೆ, ಅದನ್ನು ಹೇಳುವುದಾದರೆ :'ಪುತ್ರರು ಇಲ್ಲದಿರುವ ಬಂಜೆಯ(ಯೋಷೆಯ) ದೇಹಸ್ಪರ್ಶವು ಪಾಪ',ಎನ್ನುವರು. ಅದಕ್ಕಾಗಿ ಹೆದರಿದೆನು ಎಂದಳು.

(ಪದ್ಯ - ೨೯)

ಪದ್ಯ :-:೩೦:

ಸಂಪಾದಿಸಿ

ಎಂದೊಡೆ ಕೆರಳ್ದು ಭಾಗೀರಥಿ ಸಮಸ್ತ ನೃಪ| ಬೃಂದದೊಳ್ತನ್ನ ಮಗನುದ್ದಾಮನಾಗಿರ್ಪ| ನೆಂದುಮಳಿವವನಲ್ಲವಂ ಯದೃಚ್ಛಾಮರಣಿ ಭಾಗವತ ಮಸ್ತಕ ಮಣಿ||
ಬೃಂದಾರಕೋಪಮಂ ಸತ್ಯಸಂಧಂ ಭೀಷ್ಮ| ನೆಂದು ಮೂಲೋಕದೋಳ್ಪ್ರಖ್ಯಾತ ನಾಗಿಹಂ| ಮಂದಮತಿ ನೀನೆನಗೆ ಸುತರಿಲ್ಲೆನಲ್ಬಹುದೆ ಪೋಗೆಂದೊಡಿಂತೆಂದಳು||೩೦||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಎಂದೊಡೆ ಕೆರಳ್ದು ಭಾಗೀರಥಿ ಸಮಸ್ತ ನೃಪಬೃಂದದೊಳ್ ತನ್ನ ಮಗನು ಉದ್ದಾಮನಾಗಿರ್ಪನು=[ಗಂಗೆಗೆ ನೀನು ಬಂಜೆ ಎಂದಾಗ, ಭಾಗೀರಥಿ ಕೆರಳಿ, 'ಸಮಸ್ತ ರಾಜ ಸಮೂಹದಲ್ಲಿ ತನ್ನ ಮಗನು ಉದ್ದಾಮನು -ಶ್ರೇಷ್ಠನು,]; ಎಂದುಂ ಅಳಿವವನು ಅಲ್ಲವಂ ಯದೃಚ್ಛಾಮರಣಿ ಭಾಗವತ ಮಸ್ತಕ ಮಣಿ ಬೃಂದಾರಕ(ದೇವತೆಗಳು) ಉಪಮಂ ಸತ್ಯಸಂಧಂ=[ಅವನು ಎಂದಿಗೂ ಸಾಯದವನು, ಯದೃಚ್ಛಾಮರಣಿ ಭಗವದ್ಭಕ್ತರಲ್ಲಿ ಶ್ರೇಷ್ಠನು, ದೇವತೆಗಳ ಸಮಾನನು, ಸತ್ಯಸಂಧನು]; ಭೀಷ್ಮನೆಂದು ಮೂಲೋಕದೋಳ್ ಪ್ರಖ್ಯಾತನಾಗಿಹಂ ಮಂದಮತಿ ನೀನು ಎನಗೆ ಸುತರಿಲ್ಲ ಎನಲ್ಬಹುದೆ ಪೋಗೆಂದೊಡೆ ಇಂತೆಂದಳು=[ ಅವನು ಭೀಷ್ಮನೆಂದು ಮೂರು ಲೋಕದಲ್ಲಿಯೂ ಪ್ರಖ್ಯಾತನಾಗಿರುವನು ಮಂದಮತಿಯೇ, ದಡ್ಡಳೇ ನೀನು ನನಗೆ ಮಕ್ಕಳಿಲ್ಲ ಎನ್ನಬಹುದೆ? ಹೋಗು ಎಂದಾಗ ಹೀಗೆ ಹೇಳಿದಳು.]
  • ತಾತ್ಪರ್ಯ:ಗಂಗೆಗೆ ನೀನು ಬಂಜೆ ಎಂದಾಗ, ಭಾಗೀರಥಿ ಕೆರಳಿ, 'ಸಮಸ್ತ ರಾಜ ಸಮೂಹದಲ್ಲಿ ತನ್ನ ಮಗನು ಉದ್ದಾಮನು -ಶ್ರೇಷ್ಠನು; ಅವನು ಎಂದಿಗೂ ಸಾಯದವನು,ಯದೃಚ್ಛಾಮರಣಿ ಭಗವದ್ಭಕ್ತರಲ್ಲಿ ಶ್ರೇಷ್ಠನು, ದೇವತೆಗಳ ಸಮಾನನು, ಸತ್ಯಸಂಧನು; ಅವನು ಭೀಷ್ಮನೆಂದು ಮೂರು ಲೋಕದಲ್ಲಿಯೂ ಪ್ರಖ್ಯಾತನಾಗಿರುವನು ಮಂದಮತಿಯೇ, ದಡ್ಡಳೇ ನೀನು ನನಗೆ ಮಕ್ಕಳಿಲ್ಲ ಎನ್ನಬಹುದೆ? ಹೋಗು ಎಂದಾಗ ಹೀಗೆ ಹೇಳಿದಳು.

(ಪದ್ಯ - ೩೦)

ಪದ್ಯ :-:೩೧:

ಸಂಪಾದಿಸಿ

ಉಂಟು ನೀನಾಡಿದಿನಿತೆಲ್ಲಮುಂ ತಥ್ಯವಹು | ದೆಂಟಕೊಂದುಳಿದುದಂ ಬಲ್ಲೆ ನಾನದೆರಿಂದೆ | ವೆಂಟಣಿಸಿತಿನ್ನೆಗಂ ನಿನ್ನೇಳ್ಗೆ ಮೂಜಗದೊಳೀಗ ದಾಯಾದ್ಯರೊಳಗೆ
ಗಂಟೆಕ್ಕಿದಾಹವದೊಳರ್ಜುನಂ ತವ ಸೂನು | ವಂ ಟಕ್ಕಿನಿಂ ಕೊಂದನಲ್ಲದಿರ್ದೊಡೆ ಮತ್ತೆ ! ಕಂಟಕಮದೆತ್ತಣದು ಕೇಳ್ ತವಾಭ್ಯುದಯಕೆಂದಾಜ್ವಾಲೆ ಕಾಳ್ಗಡದಳು ||31||*

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಉಂಟು ನೀನಾಡಿದ ಅನಿತು ಎಲ್ಲಮುಂ ತಥ್ಯವಹುದು ಎಂಟಕೊಂದು ಉಳಿದುದಂ ಬಲ್ಲೆ=[ಮಗ ಉಂಟು- ಇದ್ದ; ನೀನಾಡಿದ ಅಷ್ಟೂ, ಎಲ್ಲವೂ ಸತ್ಯವು, ಎಂಟು ಮಕ್ಕಳಲ್ಲಿ ಒಂದು ಉಳಿದುದನ್ನು ಬಲ್ಲೆ ನಾನು]; ಅದೆರಿಂದೆ ವೆಂಟಣಿಸಿತು(ಪ್ರಸಿದ್ಧಿ) ಇನ್ನೆಗಂ ನಿನ್ನ ಏಳ್ಗೆ ಮೂಜಗದೊಳು=[ಅದೆರಿಂದ- ಆ ಮಗನಿಂದ, ಈ ವರೆಗೆ, ನಿನ್ನ ಏಳ್ಗೆ ಮೂರು ಜಗದಲ್ಲಿ ಪ್ರಸಿದ್ಧಿಯಾಯಿತು]; ಈಗ ದಾಯಾದ್ಯರೊಳಗೆ ಗಂಟೆಕ್ಕಿದ ಆಹವದೊಳು ಅರ್ಜುನಂ ತವಸೂನುವಂ ಟಕ್ಕಿನಿಂ ಕೊಂದನು=[ಈಗ ಕೌರವ ಪಾಂಡವ ದಾಯಾದಿಗಳಲ್ಲಿ ಉಂಟಾದ ಯುದ್ಧದಲ್ಲಿ, ಅರ್ಜುನನು ನಿನ್ನ ಮಗನನ್ನು ಟಕ್ಕಿನಿಂದ ಯಾ ಮೋಸದಿಂದ ಕೊಂದನು]; ಅಲ್ಲದೆ ಇರ್ದೊಡೆ ಮತ್ತೆ ಕಂಟಕಂ ಅದೆತ್ತಣದು ಕೇಳ್ ತವಾಭ್ಯುದಯಕೆ ಎಂದು ಆ ಜ್ವಾಲೆ ಕಾಲ್ಗೆಡದಳು=[ಕೇಳು,ಅದಲ್ಲದಿದ್ದರೆ ನಿನ್ನ ಅಭ್ಯುದಯಕ್ಕೆ ಕಂಟಕ ಬರುವುದು ಅದು ಹೇಗೆ ಸಾದ್ಯ, ಎಂದು ಆ ಜ್ವಾಲೆ (ಕಾಲುಕೆದರಿದಳು) ಗಂಗೆಗೆ ಕೋಪಬರುವಂತೆ ಮಾಡಿದಳು.]
  • ತಾತ್ಪರ್ಯ:ನಿನಗೆ ಮಗ ಉಂಟು- ಇದ್ದ; ನೀನಾಡಿದ ಅಷ್ಟೂ, ಎಲ್ಲವೂ ಸತ್ಯವು, ಎಂಟು ಮಕ್ಕಳಲ್ಲಿ ಒಂದು ಉಳಿದುದನ್ನು ಬಲ್ಲೆ ನಾನು; ಅದರಿಂದ- ಆ ಮಗನಿಂದ, ಈ ವರೆಗೆ, ನಿನ್ನ ಏಳ್ಗೆ ಮೂರು ಜಗದಲ್ಲಿ ಪ್ರಸಿದ್ಧಿಯಾಯಿತು; ಈಗ ಕೌರವ ಪಾಂಡವ ದಾಯಾದಿಗಳಲ್ಲಿ ಉಂಟಾದ ಯುದ್ಧದಲ್ಲಿ, ಅರ್ಜುನನು ನಿನ್ನ ಮಗನನ್ನು ಟಕ್ಕಿನಿಂದ ಯಾ ಮೋಸದಿಂದ ಕೊಂದನು; ಕೇಳು,ಅದಲ್ಲದಿದ್ದರೆ ನಿನ್ನ ಅಭ್ಯುದಯಕ್ಕೆ ಕಂಟಕ ಬರುವುದು ಅದು ಹೇಗೆ ಸಾದ್ಯ, ಎಂದು ಆ ಜ್ವಾಲೆ (ಕಾಲುಕೆದರಿದಳು) ಗಂಗೆಗೆ ಕೋಪಬರುವಂತೆ ಮಾಡಿದಳು.

(ಪದ್ಯ - ೩೧)

ಪದ್ಯ :-:೩೨:

ಸಂಪಾದಿಸಿ

ಪಚ್ಚೆಲೆಯ ತರುವನೊಣಗಿದ ಪೊರೆಯ ಮರದ ಕಾ | ಳ್ಕಿಚ್ಚು ಕೊಂಡುರಿವವೊಲ್ ಜ್ಯಾಲೆಯ ಮುಳಿಸಿನೊಡನೆ ! ಪೆಚ್ಚಿತವರಾಪಗೆಯ ಕೋಪಮೆತ್ತಿದ ಹಸ್ತದಿಂ ಭೀಷ್ಮನಂ ದುರದೊಳು ||
ಎಚ್ಚು ಕೊಂದರ್ಜುನನ ತಲೆಯನಾತನ ಸುತಂ | ಕೊಚ್ಚಿ ಕೆಡಹಲಿ ತಿಂಗಳಾರಕಾಹವದೊಳೆಂ | ದುಚ್ಚರಿಸಿ ಶಾಪಮಂ ಕೊಟ್ಟಡಗಿದಳ್ ಜಲದಮದ್ಯದೊಳ್ ದಿವಿಜತಟಿನಿ ||32||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಪಚ್ಚೆಲೆಯ ತರುವನು ಒಣಗಿದ ಪೊರೆಯ ಮರದ ಕಾಳ್ಕಿಚ್ಚು ಕೊಂಡು ಉರಿವವೊಲ್=[ಹಸಿರು ಎಲೆಯ ಮರವನ್ನು, ಪಕ್ಕದ ಒಣಗಿದ ಮರದ ಕಾಳ್ಕಿಚ್ಚು ಅದಕ್ಕೆ ಹಬ್ಬಿ ಹತ್ತಿಕೊಂಡು ಉರಿಯುವಂತೆ]; ಜ್ಯಾಲೆಯ ಮುಳಿಸಿನೊಡನೆ ಪೆಚ್ಚಿತಮರಾಪಗೆಯ ಕೋಪಮೊತ್ತಿದ ಹಸ್ತದಿಂ=[ಜ್ಯಾಲೆಯ ಸಿಟ್ಟಿನೊಡನೆ, ಗಂಗೆಯ ಕೋಪವು ಹೆಚ್ಚಿತು, ಮೇಲೆ ಎತ್ತಿದ ಹಸ್ತದಿಂದ]; ಭೀಷ್ಮನಂ ದುರದೊಳು ಎಚ್ಚು ಕೊಂದರ್ಜುನನ ತಲೆಯನಾತನ ಸುತಂ ಕೊಚ್ಚಿ ಕೆಡಹಲಿ ತಿಂಗಳು ಆರಕೆ ಆಹವದೊಳು ಎಂದು ಉಚ್ಚರಿಸಿ=[,'ಭೀಷ್ಮನನ್ನು ಯುದ್ಧದಲ್ಲಿ ಹೊಡೆದು ಕೊಂದ ಅರ್ಜುನನ ತಲೆಯನ್ನು ಯುದ್ಧದಲ್ಲಿ ಆತನ ಮಗನೇ ಕೊಚ್ಚಿ ಕೆಡಗಲಿ ಆರು ತಿಂಗಳಲ್ಲಿ', ಎಂದು ಉಚ್ಚರಿಸಿ]; ಶಾಪಮಂ ಕೊಟ್ಟು ಅಡಗಿದಳ್ ಜಲದಮದ್ಯದೊಳ್ ದಿವಿಜತಟಿನಿ=[ಶಾಪವನ್ನು ಕೊಟ್ಟು ಗಂಗೆಯು ನದಿಯ ನೀರಿನಲ್ಲಿ ಅಡಗಿದಳು].
  • ತಾತ್ಪರ್ಯ:ಹಸಿರು ಎಲೆಯ ಮರವನ್ನು, ಪಕ್ಕದ ಒಣಗಿದ ಮರದ ಕಾಳ್ಕಿಚ್ಚು ಅದಕ್ಕೆ ಹಬ್ಬಿ ಹತ್ತಿಕೊಂಡು ಉರಿಯುವಂತೆ; ಜ್ಯಾಲೆಯ ಸಿಟ್ಟಿನೊಡನೆ, ಗಂಗೆಯ ಕೋಪವು ಹೆಚ್ಚಿತು, ಮೇಲೆ ಎತ್ತಿದ ಹಸ್ತದಿಂದ,'ಭೀಷ್ಮನನ್ನು ಯುದ್ಧದಲ್ಲಿ ಹೊಡೆದು ಕೊಂದ ಅರ್ಜುನನ ತಲೆಯನ್ನು ಯುದ್ಧದಲ್ಲಿ ಆತನ ಮಗನೇ ಆರು ತಿಂಗಳಲ್ಲಿ ಕೊಚ್ಚಿ ಕೆಡಗಲಿ', ಎಂದು ಉಚ್ಚರಿಸಿಶಾಪವನ್ನು ಕೊಟ್ಟು ಗಂಗೆಯು ನದಿಯ ನೀರಿನಲ್ಲಿ ಅಡಗಿದಳು.

(ಪದ್ಯ - ೩೨)

ಪದ್ಯ :-:೩೩:

ಸಂಪಾದಿಸಿ

ನಾರಿಯರ ಚಲಮೆಂತುಟೋ ಕೇಳ್ ಮಹೀಶ ಭಾ | ಗೀರಥಿಗೆ ಕೋಪಮಂ ಬರಿಸಿ ಕೊಡಿಸಿದಳತಿ ಕ | ಠೋರತರ ಶಾಪಮಂ ಜ್ವಾಲೆ ಬಳಿಕದು ಸಾಲದಾ ನರನ ತಲೆಯನರಿವ ||
ಕೂರಲಗಿನಸ್ತ್ರವಾದಪೆನೆಂದು ಸುರನದಿಯ | ತೀರದೊಳ್ ವಹಿ ಪ್ರವೇಶಮಂ ಮಾಡಿ ಜಂ | ಭಾರಿ ತನಯನ ಸೂನು ಬಭ್ರವಾನನ ಮೂಡಿಗೆಯೊಳಂಬಾಗಿರ್ದುಳು ||33||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ನಾರಿಯರ ಚಲಂ ಎಂತುಟೋ ಕೇಳ್ ಮಹೀಶ ಭಾಗೀರಥಿಗೆ ಕೋಪಮಂ ಬರಿಸಿ ಕೊಡಿಸಿದಳತಿ ಕಠೋರತರ ಶಾಪಮಂ=[ನಾರಿಯರ ಹಟ ಎಷ್ಟಿದೆಯೋ ಹೇಳಲು ಬಾರದು, ಮಹೀಶನೇ ಕೇಳು, ಭಾಗೀರಥಿಗೆ ಕೋಪವನ್ನು ಬರಿಸಿ ಅತಿ ಕಠೋರವಾದ ಶಾಪವನ್ನು ಕೊಡಿಸಿದಳು]; ಜ್ವಾಲೆ ಬಳಿಕದು ಸಾಲದಾ ನರನ ತಲೆಯನರಿವ ಕೂರಲಗಿನ ಅಸ್ತ್ರವಾದಪೆನು ಎಂದು ಸುರನದಿಯ ತೀರದೊಳ್ ವಹಿ ಪ್ರವೇಶಮಂ ಮಾಡಿ=[ಜ್ವಾಲೆಯು ಬಳಿಕ ಅದು ಸಾಲದು ಎಂದು ಅರ್ಜುನನ ತಲೆಯನ್ನು ಕತ್ತರಿಸುವ ಕೂರಲಗಿನ(ಹರಿತವಾದ ತುದಿಯುಳ್ಳ) ಅಸ್ತ್ರವಾಗಿ ಹುಟ್ಟುವೆನು ಎಂದು ಅದೇ ಗಂಗಾನದಿಯ ತೀರದಲ್ಲಿ ಅಗ್ನಿಕುಂಡವನ್ನು ರಚಿಸಿ ಅದರಲ್ಲಿ ಪ್ರವೇಶ ಮಾಡಿ]; ಜಂಭಾರಿ ತನಯನ ಸೂನು ಬಭ್ರವಾನನ ಮೂಡಿಗೆ(ಬತ್ತಳಿಕೆ)ಯೊಳು ಅಂಬಾಗಿ ಇರ್ದುಳು=[ಇಂದ್ರನಮಗ ಅರ್ಜುನನ ಮಗನಾದ ಬಭ್ರವಾನನ ಬತ್ತಳಿಕೆಯಲ್ಲಿ ಬಾನವಾಗಿ ಇದ್ದಳು].
  • ತಾತ್ಪರ್ಯ:ನಾರಿಯರ ಹಟ ಎಷ್ಟಿದೆಯೋ ಹೇಳಲು ಬಾರದು, ಮಹೀಶನೇ ಕೇಳು, ಭಾಗೀರಥಿಗೆ ಕೋಪವನ್ನು ಬರಿಸಿ ಅತಿ ಕಠೋರವಾದ ಶಾಪವನ್ನು ಕೊಡಿಸಿದಳು; ಜ್ವಾಲೆಯು ಬಳಿಕ ಅದು ಸಾಲದು ಎಂದು ಅರ್ಜುನನ ತಲೆಯನ್ನು ಕತ್ತರಿಸುವ ಕೂರಲಗಿನ(ಹರಿತವಾದ ತುದಿಯುಳ್ಳ) ಅಸ್ತ್ರವಾಗಿ ಹುಟ್ಟುವೆನು ಎಂದು ಅದೇ ಗಂಗಾನದಿಯ ತೀರದಲ್ಲಿ ಅಗ್ನಿಕುಂಡವನ್ನು ರಚಿಸಿ ಅದರಲ್ಲಿ ಪ್ರವೇಶ ಮಾಡಿ, ಇಂದ್ರನಮಗ ಅರ್ಜುನನ ಮಗನಾದ ಬಭ್ರವಾನನ ಬತ್ತಳಿಕೆಯಲ್ಲಿ ಬಾಣವಾಗಿ ಇದ್ದಳು.

(ಪದ್ಯ - ೩೩)

ಪದ್ಯ :-:೩೪:

ಸಂಪಾದಿಸಿ

ಬಂದುದು ನರಂಗೆ ವಾಯದೊಳೀಗಶಾಪಮೀ | ಮಂದಾಕಿನಿಯ ಮಾತು ತಾಗಿದಲ್ಲದೆ ಮಾಣ | ದಿಂದು ಕುಲಮಳಿವುದೀತನ ಕೂಡೆ ದರ್ಮಜಾದಿಗಳಸುವಿಡಿಯಲರಿಯರು ||
ಮುಂದೆ ಸುರಪುರದ ಲಕ್ಷ್ಮೀಕಾಂತನಾವ ತೆರ | ದಿಂದೆ ಪರಿಹರಿಸುವೆನೂ ತನ್ನ ಶರಣಾಗತರ| ನೊಂದುಪಾಯದೊಳುಳಿಪದಿರನೆಂದು ಧೈರ್ಯಮಂ ತಾಳ್ದರಿಂದ್ರಾದಿ ಸುರರು ||34||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];=
  • ಬಂದುದು ನರಂಗೆ ವಾಯದೊಳು ಈಗ ಶಾಪಂ=[ಅರ್ಜುನನಿಗೆ ಜ್ವಾಲೆಯ ಯುಕ್ತಿಯಿಂದ ಈಗ ಶಾಪವು ಬಂದುಬಿಟ್ಟಿತು]; ಈ ಮಂದಾಕಿನಿಯ ಮಾತು ತಾಗಿದಲ್ಲದೆ ಮಾಣದು ಇಂದುಕುಲಂ ಅಳೀವುದು ಈತನ ಕೂಡೆ ದರ್ಮಜಾದಿಗಳು ಅಸುವಿಡಿಯಲು ಅರಿಯರು=[ಈ ಗಂಗೆಯ ಶಾಪ ತಾಗದೆ ಇರುವುದಿಲ್ಲ. ಚಂದ್ರವಂಶ ಅಳವುದು ಈತನ ಜೊತೆಯಲ್ಲೇ ನಾಶಹೊಂದುವುದು; ಏಕೆಂದರೆ ದರ್ಮಜಾದಿಗಳು ಅರ್ಜುನ ಸಾಯಲು ತಾವು ಜೀವದಿಂದ ಇರುವುದಿಲ್ಲ.]; ಮುಂದೆ ಸುರಪುರದ (ದೇವನೂರಿನ) ಲಕ್ಷ್ಮೀಕಾಂತನು ಯಾವ ತೆರದಿಂದೆ ಪರಿಹರಿಸುವೆನೂ ತನ್ನ ಶರಣಾಗತರನು ಒಂದು ಉಪಾಯದೊಳು ಉಳಿಪದೆ ಇರನೆಂದು ಧೈರ್ಯಮಂ ತಾಳ್ದರು ಇಂದ್ರಾದಿ ಸುರರು=[ಮುಂದೆ ಸುರಪುರದ (ದೇವನೂರಿನ) ಲಕ್ಷ್ಮೀಕಾಂತನು ಯಾವ ರೀತಿಯಲ್ಲಿ ಈ ಸಂಕಷ್ಟವನ್ನು ಪರಿಹರಿಸುವೆನೂ! ತನ್ನ ಶರಣಾಗತರನ್ನು ಯಾವುದಾದರೂ ಒಂದು ಉಪಾಯದಲ್ಲಿ ಉಳಿಸದೆ ಇರಲಾರನೆಂದು ಇಂದ್ರಾದಿ ಸುರರು ಧೈರ್ಯವನ್ನು ತಾಳಿದರು.]
  • ತಾತ್ಪರ್ಯ: ಅರ್ಜುನನಿಗೆ ಜ್ವಾಲೆಯ ಯುಕ್ತಿಯಿಂದ ಈಗ ಶಾಪವು ಬಂದುಬಿಟ್ಟಿತು; ಈ ಗಂಗೆಯ ಶಾಪ ತಾಗದೆ ಇರುವುದಿಲ್ಲ. ಚಂದ್ರವಂಶ ಈತನ ಜೊತೆಯಲ್ಲೇ ನಾಶಹೊಂದುವುದು; ಏಕೆಂದರೆ ಅರ್ಜುನ ಸಾಯಲು ದರ್ಮಜಾದಿಗಳು ತಾವು ಜೀವದಿಂದ ಇರುವುದಿಲ್ಲ. ಮುಂದೆ ಸುರಪುರದ (ದೇವನೂರಿನ) ಲಕ್ಷ್ಮೀಕಾಂತನು ಯಾವ ರೀತಿಯಲ್ಲಿ ಈ ಸಂಕಷ್ಟವನ್ನು ಪರಿಹರಿಸುವೆನೂ! ತನ್ನ ಶರಣಾಗತರನ್ನು ಯಾವುದಾದರೂ ಒಂದು ಉಪಾಯದಲ್ಲಿ ಉಳಿಸದೆ ಇರಲಾರನೆಂದು ಇಂದ್ರಾದಿ ಸುರರು ಧೈರ್ಯವನ್ನು ತಾಳಿದರು.

(ಪದ್ಯ - ೩೪) XVII

  • []
  • []
  • ಸಂಧಿ ೯ ಕ್ಕೆ ಪದ್ಯ:೪೭೧.
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ

ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

ಸಂಪಾದಿಸಿ


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.